ಈ ವಾರದ ಬರಹ, ಇದೇ ಸಪ್ಟೇಂಬರ್ ೨೬ರಂದು ಮೆಂಚೆಸ್ಟರ್ ನಲ್ಲಿ ಕನ್ನಡ ಬಳಗದ ಆಶ್ರಯದಲ್ಲಿ ನಡೆದ ಅನಿವಾಸಿ ಕನ್ನಡಿಗರ ಕವಿಗೋಷ್ಠಿಯ ವರದಿಯಾಗಿದೆ . ಕಳೆದ ಶುಕ್ರವಾರ ವೈಶಾಲಿಯವರು ಪ್ರಸ್ತುತ ಪಡಿಸಿದ ಕಾರ್ಯಕ್ರಮದ ಸಂಪೂರ್ಣ ವರದಿಯನ್ನು ನೀವೆಲ್ಲ ಆಗಲೇ ಓದಿರುತ್ತೀರಿ ಎಂದುಕೊಳ್ಳುತ್ತೇನೆ. ಇದು ನಾನು ಸಂಪಾದಕಿಯಾಗಿ ಹೊರಡಿಸುತ್ತಿರುವ ಚೊಚ್ಚಲ ಲೇಖನವು ಕೂಡ ಆಗಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹದ ಆಶಯದೊಂದಿಗೆ ಲೇಖನವನ್ನು ನಿಮ್ಮೆದುರಿಗೆ ಇಡುತ್ತಿರುವೆನು. – (ಸಂ)
ಕವಿಗೋಷ್ಠಿಯ ಕವನಗಳ ಯಾದಿ ಈ ಲೇಖನ ಕೊನೆಯಲ್ಲಿದೆ.


ಅನಿವಾಸಿ ಬರಹಗಾರರು ಆಯೋಜಿಸಿದ ಈ ಕವಿಗೋಷ್ಠಿಯು ‘ಕನ್ನಡ ವೈಭವ’ ಕಾರ್ಯಕ್ರಮದ ಉತ್ತರಾರ್ಧದಲ್ಲಿ ಮಧ್ಯಾಹ್ನ ೨ ರಿಂದ ೩.೩೦ರ ವರೆಗೆ AGM ಮೀಟಿಂಗ್ ಹಾಲ್ ನಲ್ಲಿ ಜರುಗಿತು. ಈ ಸಾಹಿತ್ಯಿಕ ಸಭೆಗೆ ಶ್ರೀಮತಿ M.R.ಕಮಲಾರವರು ಸಭಾಧ್ಯಕ್ಷರಾಗಿ ವೇದಿಕೆಯನ್ನು ಅಲಂಕರಿಸಿದ್ದರೆ ಪ್ರೇಕ್ಷಕವೃಂದದಲ್ಲಿ ಅನಿವಾಸಿ ಸನ್ಮಿತ್ರರ ಮಧ್ಯದಲ್ಲಿ ಡಾ.ಕರಜಗಿಯವರು ಕುತೂಹಲಾಸಕ್ತಿಯಿಂದ ಆಸೀನರಾಗಿ ಸಭೆಗೊಂದು ಮೆರುಗು ತಂದಿದ್ದರು. ಮುಖ್ಯವೇದಿಕೆಯ ಮೇಲೆ ಆಕರ್ಷಕ ನೃತ್ಯನಾಟಕಗಳ ಪ್ರದರ್ಶನವಾಗುತ್ತಿದ್ದರೂ ತಾರತಮ್ಯ ಮಾಡದೇ ಸಾಹಿತ್ಯಾಸಕ್ತರು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕನ್ನಡದ ಪ್ರೇಮವನ್ನು ಮೆರೆದರು. ತೊಂಬತ್ತು ನಿಮಿಷಗಳ ಕಾಲ ನಡೆದ ಈ ಚರ್ಚೆಗೆ ಸಭಾನಿರ್ವಾಹಕಳಾಗಿ ನಾನು ಉತ್ಸಾಹದಿಂದ ನಡೆಯಿಸಿಕೊಟ್ಟೆನು.
ಡಾ. ಲಕ್ಷ್ಮೀನಾರಾಯಣ ಗುಡೂರ್ ಅವರ ಸ್ವಾಗತ ಭಾಷಣದಿಂದ ಕಾರ್ಯಕ್ರಮವು ಮೊದಲುಗೊಂಡಿತು. ಗುಡೂರ್ ರವರು ಶ್ರೀಮತಿ M.R.ಕಮಲಾರವರ ವ್ಯಕ್ತಿ ಪರಿಚಯವನ್ನು ಮತ್ತು ಸಾಹಿತ್ಯಿಕ ಸಾಧನೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು. ಅದಲ್ಲದೇ ಅನಿವಾಸಿ ನಡೆದು ಬಂದ ದಾರಿಯನ್ನು, ನೆನಹುಗಳನ್ನು ಸಭಿಕರಿಗೆ ಪರಿಚಯಿಸಿದರು. ತದನಂತರ ಕಾರ್ಯಕ್ರಮದ ಜೀವಾಳವಾದ ಕವಿತಾವಾಚನದ ಕ್ರಮವು ಸುಲಲಿತವಾಗಿ ಮನೋಹರವಾಗಿ ಮೂಡಿಬಂದಿತು. ಕವಿತೆಗಳು ಸ್ತ್ರೀ ಶಕ್ತಿಯನ್ನು ವಂದಿಸುತ್ತ ಇಂದು-ನೆನ್ನೆಯ ಜೀವನದ ತುಮುಲಗಳಿಗೆ ಸ್ಪಂದಿಸುತ್ತ, ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಮತ್ತು ಸಂಘಟನೆಗಳನ್ನು ಕೆಣಕುತ್ತ, ಕೊನೆಗೆ ನಿರಂತರಗತಿಯಲ್ಲಿ ಓಡುತ್ತಿರುವ ಕಾಲವನ್ನೇ ನಿಲ್ಲಿಸಿ ಚಿಲ್ಲರೆಯ “ಹಿಸಾಬು-ಕಿತಾಬು” ಕೇಳುತ್ತ ಕೇಳುಗರ ಮನವನ್ನು ಚಿಂತನೆಗೆ ಒಡ್ಡಿದವು. ಕವಿತೆಗಳ ಭಾವವನ್ನು ನನ್ನ ಸ್ವಂತ ಪದಗಳಲ್ಲಿ ರೂಪಾಂತರಗೊಳಿಸಿ ಅಂದಗೆಡಿಸುವ ಸಂಪೂರ್ಣ ಸಾಧ್ಯತೆಯಿರುವ ಕಾರಣದಿಂದ ಆ ಸಾಹಸವನ್ನು ಇಲ್ಲಿಯೇ ಕೈಬಿಟ್ಟಿದ್ದೇನೆ. ಕವಿತೆಗಳನ್ನು ಓದಲಿಚ್ಛಿಸುವವರಿಗೆ ಕೆಳಗಿರುವ ಲಿಂಕ್ ನ್ನು ನೀಡಿದ್ದೇನೆ , ಅದರ ಮೂಲಕ ಕವನಗಳನ್ನು ಓದಬಹುದಾಗಿದೆ.
ನಿಗದಿ ಪಡಿಸಿದ ನಲವತ್ತು ನಿಮಿಷಗಳಲ್ಲಿ ಶ್ರೀಮತಿ ಕಮಲಾರವರು ಕವನಗಳ ಸುಂದರ ವಿಶ್ಲೇಷಣೆಯನ್ನು ಸಲ್ಲಿಸಿದರು. ವಿಮರ್ಶಕರ ಸ್ಥಾನದಲ್ಲಿ ನಿಂತ ತಮ್ಮನ್ನು ತಾವು “ಅಂಗುಲದ ಹುಳು”ವಿನ ಸಮನಾರ್ಥಕದಲ್ಲಿ ಬಳಸಿಕೊಂಡು ನೀಡಿದ ಅವರ ವಿಶ್ಲೇಷಣೆಗಳು ಅನನ್ಯವಾಗಿದ್ದವು. “ನಾನೇಕೆ ಬರೆಯುತ್ತೇನೆ” ಎಂಬ ಜಿಜ್ಞಾಸೆಗೆ ಡಾ. ಜಿ.ಎಸ್. ಶಿವರುದ್ರಪ್ಪ., ರಾಮಚಂದ್ರ ಶರ್ಮ ಮತ್ತು ಯಶವಂತ ಚಿತ್ತಾಲರ ನುಡಿಗಳನ್ನುಚ್ಛರಿಸಿ ಕವಿಗಳೆಲ್ಲರೂ ಕೇಳಿಕೊಳ್ಳಬೇಕಾದ ಈ ಮೂಲಪ್ರಶ್ನೆಯ ಪ್ರಜ್ಞೆಯನ್ನು ಎಚ್ಚರಗೊಳಿಸಿದರು.ಹೃದಯಾಳದಿಂದ ಹುಟ್ಟಿದ ಎಲ್ಲ ಹಾಡು ಕವನಗಳೆಲ್ಲವೂ ಕ್ಲೇಶದಿಂದಬಿಡುಗಡೆ ಹೊಂದುವ ದಾರಿಗಳೆಂದು ಮನವರಿಕೆ ಮಾಡಿಕೊಟ್ಟರು.
ಇನ್ನು ಪ್ರತಿ ಕವನದ ಬಗ್ಗೆ ಕಮಲಾರವರ ವಿಮರ್ಶೆಗಳು ಈ ಕೆಳಗಿನಂತಿವೆ.
ದೇಸಾಯಿಯವರು ರಚಿಸಿ ವಾಚಿಸಿದ ಕವನ , ಪು.ತಿ.ನ ರವರ “ದಿನಪತ್ರಿಕೆ” ಎಂಬ ಕವನದಿಂದ ಪ್ರೇರೇಪಿತವಾಗಿದ್ದು. ಇವೆರಡು ಕವನಗಳ ಕಾಲಘಟ್ಟಗಳಲ್ಲಿ ಇರುವ ಸಾಮ್ಯತೆಯ ಲಕ್ಷಣಗಳನ್ನು ಕಮಲಾರವರು ಸ್ಪಷ್ಟಪಡಿಸಿ ಮಾತನಾಡಿದರು. ಕೇಶವ ರವರ ಕವಿತೆಯಲ್ಲಿ, ಉತ್ತರಿಸಲಾರದ ಪ್ರಶ್ನೆಗಳನ್ನು ಕಾಲನಿಗೆ ಕೇಳಿ, ಪ್ರಶ್ನೆಗಳಲ್ಲಿಯೇ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮನಸಾರೆ ಮೆಚ್ಚಿದರು. ಕೇಶವರಂತೆಯೇ ಕಾಲನಿಗೆ ಒಂದು ವ್ಯಕ್ತಿತ್ವದ ಮಿತಿಯಲ್ಲಿ ಕಟ್ಟಿಹಾಕಿ ಕವನವೊಂದನ್ನು ಬರೆದ ಚನ್ನವೀರ ಕಣವಿಯವರನನ್ನು ನೆನಪಿಸಿಕೊಂಡರು. ‘ನಲವತ್ತರ ಹೊಸ್ತಿಲಲ್ಲಿ ‘ ಎಂಬ ನನ್ನ ಕವನವನ್ನು ವಿಮರ್ಶಿಸುತ್ತ ತಮ್ಮ ‘ಅವಳಿಗೀಗ ಐವತ್ತು’ ಎಂಬ ಕವನವನ್ನು ಜ್ಞಾಪಿಸಿಕೊಂಡರು. ನಾಗರಾಜರವರ ಕವಿತೆಯಲ್ಲಿ ಹೆತ್ತವರ ಇಳಿಗಾಲದಲ್ಲಿ ಸಲಹುತ್ತಿರುವ ಇಂದಿನ “ಶ್ರವಣಿ”ಯರ ಬಗ್ಗೆ ಹೆಮ್ಮೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ರಾಂ ರವರ ಕವಿತೆಯ ರೂಪದಲ್ಲಿ ಮೂಡಿಬಂದ ಅನಿಸಿಕೆಗಳು, ಶೇಕ್ಸಪೀಯರ್ ನ soliliquyಗಳಿಗಿಂತ ಬೇರೆಯಲ್ಲ ಎಂದು ಮನವರಿಕೆ ಮಾಡಿಕೊಟ್ಟು, ಸ್ವಗತ ಸಂಭಾಷಣೆಗಳೇ ಕಾವ್ಯದ ಹುಟ್ಟಿನ ಮೊದಲನೆಯ ಹೆಜ್ಜೆ ಎಂದು ತಿಳಿಸಿಕೊಟ್ಟರು. ಪ್ರೇಮಲತಾರವರ ಬ್ಯಾಗು ಪ್ಯಾಕಿನ ರೂಪಕವನ್ನು ಮೆಚ್ಚಿಕೊಂಡು ಅಟೆಲ್ಲಾ ಎಂಬ ಕವಯಿತ್ರಿಯ ‘ಎಂದೂ ತೆರೆಯದ ನೋವಿನ ಪೆಟ್ಟಿಗೆ’ ಎಂಬ ಕವನದೆಡೆಗೆ ನಮ್ಮ ಗಮನವನ್ನು ಸೆಳೆದರು.
ದಿ.ಕಾವಳೆಯವರ ಕವಿತೆಯಲ್ಲಿ ಬರುವ ವಿದೇಶಿ ಕನ್ನಡಿಗನ ದ್ವಂದ್ವಗಳನ್ನು ಮನೋಹರವಾಗಿ ಮಂಡಿಸಿ ನಗೆಗಡಲಿನಲ್ಲಿ ತೇಲಿಸಿದರು. ಗುಡೂರ್ ರವರು, ವಿಡಂಬನಾತ್ಮಕ ಧಾಟಿಯ ತಮ್ಮ ಕವಿತೆಯ ಕೊನೆಗೆ ಕೆ.ಎಸ್. ನರಸಿಂಹಸ್ವಾಮಿರವರ ‘ಶಾರದೆ’ಯನ್ನು ಉಲ್ಲೇಖಿಸಿ ಮನವನ್ನು ಹಗುರವಾಗಿಸಿ, ರಮ್ಯತೆಯನ್ನು ಕಾಯ್ದುಕೊಂಡ ಅವರ ಕವಿಹೃದಯಕ್ಕೆ ನಮಿಸಿದರು. ಕೊನೆಯದಾಗಿ ಪ್ರಸಾದ್ ರವರ ತಂದೆಯವರಾದ ಜಿ.ಎಸ್.ಎಸ್ ರವರ ಆಸರೆಯ ನೆರಳಲ್ಲಿ ಮೂಡಿದ ತಮ್ಮ ಸವಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ‘ಬಾವುಟಗಳು’ ಕವನದ ವಿಮರ್ಶೆಯನ್ನು ಮಾಡಿದರು. ಗಡಿರೇಖೆಯೊಳಗೆಯೂ ಮತ್ತು ಗಡಿರೇಖೆಯಾಚೆಯೂ ನಡೆಯುತ್ತಿರುವ ಸಂಘರ್ಷಗಳಿಗೆ ಬಾವುಟಗಳು ಸಾಂಕೇತಿಕವಾಗಿ , ಹೇಗೆ ದಿಕ್ಕು ತೋರಬೇಕಾದ ಕ್ಷಣದಲ್ಲಿ ದಿಕ್ಕು ತಪ್ಪಿಸುತ್ತಿವೆ ಎಂಬುದನ್ನು ಅಡಿಗರ ಮಾತಿನೊಂದಿಗೆ ಹೇಳಿ ಕೊನೆಗೊಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಅನಿವಾಸಿ ಬಳಗದಿಂದ ಪುಟ್ಟ ಕಾಣಿಕೆಯೊಂದನ್ನು ನೀಡಲಾಯಿತು. ಕನ್ನಡ ಬಳಗದ ಹಿರಿಯ ಸದಸ್ಯರಾದ ಜಯರಾಂ ಅವರು ಅನಿವಾಸಿ ವೃಂದಕ್ಕೆ ಕಿಟ್ಟೆಲ್ ಅವರ ಕನ್ನಡದ ಶಬ್ದಕೋಶವನ್ನು ಕೊಡುಗೆಯನ್ನಾಗಿ ನೀಡಿದರು.ತಾಯ್ನಾಡಿನಲ್ಲಿ ನಡೆಯುತ್ತಿರುವ ಕನ್ನಡ ಸಂವಾದ ಗಳಿಗಿಂತಲೂ ಹೆಚ್ಚು ಆಸ್ಥೆಯಿಂದ ಅನಿವಾಸಿ ವೃಂದದಲ್ಲಿ ಕನ್ನಡವು ನಳನಳಿಸುತ್ತಿದೆ ಎಂದು ಕಮಲಾರವರು ತುಂಬ ಹೆಮ್ಮೆಪಟ್ಟರು. ಅನಿವಾಸಿ ಕನ್ನಡಿಗರ ಈ ಸಮಾರಂಭವನ್ನು, ಅಕಾಲದಲ್ಲಿ ಸುರಿದು ಮನವನ್ನು ನವಿರಾಗಿಸಿದ ಮಳೆಗೆ ಹೋಲಿಸಿ, ಕನ್ನಡ ಸಾಹಿತ್ಯದ ಬಗ್ಗೆ ಅನಿವಾಸಿ ಕನ್ನಡಿಗರಿಗೆ ಇರುವ ಒಲವನ್ನು ಪ್ರಶಂಸಿಸುತ್ತ ಕವಿಗೋಷ್ಠಿ ಯನ್ನು ಯಶಸ್ವಿಯನ್ನಾಗಿಸಿದರು. ಕೊನೆಗೆ ಮುಖ್ಯ ಅತಿಥಿಗಳಗೆ, ಸಭಿಕರಿಗೆ ,ಈ ಸಾಹಿತ್ಯಿಕ ಸಭೆಯ ಯಶಸ್ಸಿಗೆ ವೇದಿಕೆಯನ್ನು ನೀಡಿದ ಕನ್ನಡ ಬಳಗಕ್ಕೂ ಧನ್ಯವಾದಗಳನ್ನು ರಾಂ ರವರು ಅರ್ಪಿಸುವದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಮಲಾರವರ ಮಾತುಗಳನ್ನು ಕೇಳಲು ಕೆಳಗಿನ ಲಿಂಕ್ ಅನ್ನು ಉಪಯೋಗಿಸಿ.
https://drive.google.com/file/d/1J1mfwKurT-IaArsdpT4hCKANCFYvJdX5/view?usp=sharing

ಕವಿಗೋಷ್ಠಿಯ ಕವನಗಳು
- ವಿದೇಶೀ ಕನ್ನಡಿಗನ ಕೊರಗು – (ದಿ) ರಾಜಾರಾಂ ಕಾವಳೆ
- ಜೀವನದ ಸಮಾಚಾರ- ಲಕ್ಷ್ಸ್ಮಿ ನಾರಾಯಣ ಗುಡೂರ್
- ಕಾಲದ ಜೇಬಿನಲ್ಲಿ ಉಳಿದ ಚಿಲ್ಲರೆ – ಕೇಶವ ಕುಲಕರ್ಣಿ
- ಅನಿಸಿಕೆ – ರಾಂ
- ರಮಣಿ- ಶ್ರವಣಿ – ನಾಗರಾಜ ಗೌಡ
- ಬಾವುಟಗಳು -ಡಾ ಜಿ ಎಸ್ ಶಿವಪ್ರಸಾದ್
- ಹೀಗಿದ್ದರೆ ಚೆನ್ನಿತ್ತು – ಡಾ ಪ್ರೇಮಲತ ಬಿ
- ನಲವತ್ತರ ಹೊಸ್ತಿಲಲ್ಲಿ – ದೀಪಾ
- ಪು ತಿ ನ, ದಿನಪತ್ರಿಕೆ, ವಾಟ್ಸಪ್ ಮತ್ತು ಸತ್ಯ – ಶ್ರೀವತ್ಸ ದೇಸಾಯಿ











































































































