ಇನ್ನು ಯಾಕ ಬರಲಿಲ್ಲವ್ವ…

-ಅಮಿತಾ ರವಿಕಿರಣ್ 
ಅನಿವಾಸಿಗಳಾದ ನಮಗೆ ನಮ್ಮ ಜನ್ಮಭೂಮಿ ಭೇಟಿ ಮಾಡುವ ಅವಕಾಶ ಒದಗಿ, ಒಂದಷ್ಟು ದಿನ ತಾಯಿನೆಲದ ಗಾಳಿ ಬೆಳಕಿನಲ್ಲಿ ನಾವು ತೋಯ್ದು ಬರುವ ಗಳಿಗೆಗಳು ಒದಗಿ ಬಂದಾಗ ವ್ಯಕ್ತಪಡಿಸಲಾಗದ ಒಂದು ಖುಷಿ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಅದಕ್ಕೆ ನಾನು ಕೂಡ  ಹೊರತಲ್ಲ. ನಾನು ಈ ಬಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದು ನಾಲ್ಕು ವರ್ಷ ಒಂಬತ್ತು ತಿಂಗಳುಗಳ ಧೀರ್ಘ ಅಂತರದ ನಂತರ. ಯುಕೆ ಗೆ ಬಂದ ನಂತರ ನಾನು ಭಾರತಕ್ಕೆ ಹೋಗಿದ್ದು ಮೂರೇ ಬಾರಿ ಹೋದಾಗಲೆಲ್ಲ ಕೆಲವು ಜವಾಬ್ದಾರಿಗಳನ್ನು ಹೊತ್ತುಕೊಂಡೇ ಹೋಗಿದ್ದೆ, ತಂಗಿ ಮದುವೆ, ಮಗನ ಉಪನಯನ, ಪುಟ್ಟ ಮಗಳನ್ನು ಎತ್ತಿಕೊಂಡು ಹೀಗೆ ಏನಾದರೊಂದು ಕಾರಣಗಳಿಂದ ನನಗೆ ಬೇಕಾದೆಡೆ ಬೇಕಾದಂತೆ ನನ್ನ ರಜಾ ಕಾಲವನ್ನು ಕಳೆಯುವುದು ಸಾಧ್ಯವಾಗಿರಲಿಲ್ಲ. ಜೊತೆಗೆ ಅದು ಅಗತ್ಯ ಅಂತ ಕೂಡ ಅನಿಸಿರಲಿಲ್ಲ. ಹೋದಾಗಲೆಲ್ಲ ಅಮ್ಮನ ಕಯ್ಯಡಿಗೆ ತಿಂದು. ಅತ್ತೆಮನೆಗೆ ಹೋದಾಗ ಏಕಮೇವ ಸೊಸೆಯಾದ ಕಾರಣ ಅವರ ಇಚ್ಛೆ, ಬಯಕೆಗಳಂತೆ  ಸುತ್ತಮುತ್ತಲಿನ ದೇವಸ್ಥಾನ ಸುತ್ತಿ ,ಸಂಬಂಧಿಕರ ಮನೆಗೆ ಹೋಗಿ ಅವಕಾಶ ಆದರೆ  ಯಾವುದೋ ಒಂದೆರಡು ಪೂಜೆಯಲ್ಲಿ ಆರತಿ ಹಾಡು ಹೇಳಿದರೆ  ನನ್ನ ಭಾರತ ಪ್ರಯಾಣ ಮುಗಿದಿರುತ್ತಿತ್ತು. ಇದಕ್ಕಿಂತ ಭಿನ್ನವಾಗಿ ನಾನು ಕೂಡ ಎಂದೂ ಯೋಚಿಸಿಯೂ ಇರಲಿಲ್ಲ.
ಆದರೆ ಈ ಬಾರಿ ಭಾರತ ಭೇಟಿ ನನ್ನ ಪಾಲಿಗೆ ಅತೀ ವಿಶೇಷ, ಕೋವಿಡ್,lockdown ಅಂತೆಲ್ಲ ಎರಡುಬಾರಿ ನನ್ನ ವಿಮಾನ ರದ್ದಾಗಿತ್ತು,ಮಕ್ಕಳ ಶಾಲೆ ,ಪತಿಯ ಉದ್ಯೋಗ ,ಇದೆಲ್ಲ ನನ್ನ ಮನಸಿಗೆ ಬಂದಾಗ ಟ್ರಿಪ್ ಪ್ಲಾನ್ ಮಾಡಲು ಸಹಕಾರಿಯಾಗಿರಲಿಲ್ಲ. ಹೀಗಾಗಿ ನಾಲ್ಕು ವರ್ಷ ಒಂಬತ್ತು ತಿಂಗಳ ನಂತರ ನಾನು ತಾಯ್ನೆಲವನ್ನು ನೋಡಲಿದ್ದೆ , ತನ್ನ ಪರಿವಾರ ಕುಟುಂಬವನ್ನು ಭೇಟಿಯಾಗಲಿದ್ದೆ. ಗೋವಿನ ಹಾಡು ಪೂರ್ಣ ಪಾಠವನ್ನ ರೆಕಾರ್ಡ್ ಮಾಡಬೇಕೆನ್ನುವ ಪೂರ್ವ ನಿಯೋಜನೆ ಬಿಟ್ಟರೆ ನಾನು ಬೇರೆ ಯಾವುದೇ ಪ್ಲಾನ್ಗಳನ್ನು ಮಾಡದೆ ಸುಮ್ಮನೆ ಹೋಗಿದ್ದೆ. ಸಮಷ್ಟಿ ತನ್ನಷ್ಟಕ್ಕೆ ತಾನೇ ನನ್ನ ೫೦ ದಿನಗಳನ್ನು ಅತ್ಯಂತ ಸುಂದರವಾಗಿ  ಯೋಜಿಸಿ ಕೊಟ್ಟಿತ್ತು . ನಾನು ಖುಷಿಯನ್ನ ಆಸ್ವಾಧಿಸಲೋ ಸಮಷ್ಟಿಗೆ ಧನ್ಯವಾದ ಹೇಳಲೋ ತಿಳಿಯದಾಗಿತ್ತು . ಸಿಕ್ಕ ಗಳಿಗೆಗಳನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಫ್ರೀಜ್ ಮಾಡಿ ಇಡುವುದೊಂದೇ ನನಗಿದ್ದ ಆಯ್ಕೆ ಎಷ್ಟೋ ಬಾರಿ ಅದು ಕೂಡ ಆಗಲಿಲ್ಲ. ಅನಿವಾಸಿ ಗುಂಪು ನನ್ನ ಮಟ್ಟಿಗೆ ನನ್ನ ಯುಕೆಯ ತವರುಮನಿ ಇದ್ದಂತೆ, ನನ್ನ ಪುಟ್ಟ ಪುಟ್ಟ ಪ್ರಯತ್ನಗಳನ್ನು ಶ್ಲಾಘಿಸಿ ಮತ್ತಷ್ಟು ಸಾಧನೆಗೆ, ಓದಿಗೆ ಹಚ್ಚುವ ನನ್ನ ಅತ್ಯಾಪ್ತ ಬಳಗ, ನಿಮ್ಮೆಲ್ಲರೊಂದಿಗೆ ನನ್ನ ಭಾರತ ಭೇಟಿಯ ಅತ್ಯಂತ ಖುಷಿಯ ಕೆಲ ತಾಸುಗಳ ಅನುಭವ ಹಂಚಿಕೊಳ್ಳುವ ಇಚ್ಛೆ ನನ್ನದು. 

ಊರಿಗೆ ಹೋದರೆ ಧಾರವಾಡಕ್ಕೆ ಹೋಗದಿದ್ದರೆ ನನ್ನ ಪ್ರವಾಸವೇ ಅಪೂರ್ಣ,ನನ್ನ ಊರಿಂದ ಧಾರವಾಡ ೭೦ಕಿಲೋಮೀಟರ ದೂರ, ಹೀಗೆ ಮನಸು ಬಂದಾಗಲೆಲ್ಲ ಹೋಗಿ ಬರಬಹುದು.ಮತ್ತು ಧಾರವಾಡ್ ಹೋಗಲು ಯಾವುದೇ ಕಾರಣ ನೆವಗಳು,ಬೇಡ ಇದೊಂದು ರೀತಿ ಮನಸು ಬಂದಾಗ ಗುಡಿಗೆ ಹೋಗುತ್ತೀವಲ್ಲ ಹಾಗೆ. ಆದರೆ ಈ ಸಲದ ಮೊದಲ ಧಾರವಾಡದ ಭೇಟಿ ಸಾಧ್ಯ ಆಗಿದ್ದು  ಪ್ರಜಾವಾಣಿಯ ೭೫ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಏರ್ಪಡಿಸಿದ್ದ ಒಂದು ಚಂದದ ಕವಿಗೋಷ್ಠಿ, ಮತ್ತು ಸಂಗೀತ ವಿದ್ಯಾಲಯದ ಮಕ್ಕಳಿಂದ ವಿಶೇಷ ಗಾಯನ ಕಾರ್ಯಕ್ರಮ ಜೊತೆಗೆ ನನ್ನ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಿದ್ದರಿಂದ. 

ಆನಂದಕಂದರು ಬರೆದ 'ನಲ್ವಾಡಗಳು' ಕವನ ಸಂಕಲನವನ್ನು ಕೆಲವರ್ಷಗಳಿಂದ ಹುಡುಕುತ್ತಿದ್ದೆ, ಎಲ್ಲಿ ಪ್ರಯತ್ನಿಸಿದರೂ ಸಿಗಲಿಲ್ಲ. ಫೇಸಬುಕ್ ನಿಂದ ಪರಿಚಿತರಾದ ರಾಜ್ ಕುಮಾರ್ ಮಡಿವಾಳರ್ ಅವರಿಗೆ ಬೆಲ್ಫಾಸ್ಟ್ ನಲ್ಲಿ ಇರುವಾಗಲೇ ಒಂದು ಮೆಸೇಜ್ ಮಾಡಿ ಕೇಳಿದ್ದೆ ನಿಮ್ಮಲ್ಲಿ ಅಪ್ಪಿತಪ್ಪಿ ನಲ್ವಾಡುಗಳು ಸಂಕಲನ ಇದ್ದರೇ ಅದರದೊಂದು copy ಸಿಗಬಹುದೇ ? ಎಂದು. ಬಂದಾಗ ಬರ್ರಿ ಐತಿ ಕೊಡ್ತೀನಿ ಅಂದ್ರು.
ಸಪ್ತಾಪುರದಲ್ಲಿ ಇರುವ ಅವರ ಅಂಗಡಿಗೆ ಹೋಗಿ ಪುಸ್ತಕ collect ಮಾಡಲು ಹೋದವಳು ಅವರು ಹೇಳುವ ಸಾಹಿತ್ಯ ಲೋಕದ ಚಂದದ ಕಥೆಗಳನ್ನ ಕೇಳುತ್ತ,ಹಾಡುಗಳ ಬಗ್ಗೆ ಮಾತಾಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅವರಿಗೆ ಎಂದು ತಂದುಕೊಂಡಿದ್ದ ಬುತ್ತಿಯಲ್ಲಿ ನನಗೊಂದು ಪಾಲು ಕೊಟ್ಟು ಅವರ ಶ್ರೀಮತಿ ಸುಮಾ ಮತ್ತು ರಾಜ್ಕುಮಾರ್ ಅವರು ನನ್ನ ಜೀವ ಬಂಧುಗಳೇ ಆಗಿದ್ದರು. 
ಇನ್ನೇನು ಹೊರಡಬೇಕು ಅನ್ನುವಾಗ 'ಇಲ್ಲೇ ಹಳ್ಳಿಯೊಳಗ ಒಂದು ಕನ್ನಡ ಸಾಲಿ ಐತ್ರಿ ನಿಮಗ ಆಗತದ ಅಂದ್ರ ಒಂದೈದು ನಿಮಿಷ ಹೋಗಿ ಬರೋಣ,?' ಅಂದ್ರು ನನಗೆ ಇಲ್ಲ ಅನ್ನುವ ಮನಸು ಇಚ್ಛೆ ಎರಡು ಇರಲಿಲ್ಲ. ಅವರ ಕಾಕಾನ ಕಾರಿನಲ್ಲಿ ನಾನು ಹೊರಟಿದ್ದು ಧಾರವಾಡ ಹತ್ತಿರದ ಹಳ್ಳಿ ಮುಗಧ ಕ್ಕೆ. ಹೆಸರಿನಷ್ಟೇ ಚಂದ ಊರು ಅದು. 'ಬೇಂದ್ರೆಯವರು ಮೇಘದೂತ ಬರೆಯಲು ಶುರು ಮಾಡಿದ್ದು ಇದೆ ಊರಿನ ದೇವಿ ಗುಡಿಯ ಕಟ್ಟಿ ಮ್ಯಾಲೆ' ಅನ್ನುವ ಮಾತು ಕೇಳುತ್ತಲೇ ನನಗೆ ಮಾತೆ ಹೊರಡಲಿಲ್ಲ .ಒಂದುರೀತಿಯ ಖುಷಿಯ ಗುಂಗು. 
 
ಮುಗದದ  ಶಾಲೆಯ ಅತೀ ಉತ್ಸಾಹಿ ,ಸಾಹಿತ್ಯಪ್ರೇಮಿ ಶಿಕ್ಷಕರು ನನ್ನನು ೧೦ ನೇ ತರಗತಿಯ ಮಕ್ಕಳೊಂದಿಗೆ ಮಾತಾಡಲು ತರಗತಿಗೆ ಕರೆದುಕೊಂಡು ಹೋದರು, ಮಕ್ಕಳು ಬೇಂದ್ರೆಯವರ ಎರಡು ಗೀತೆಗಳನ್ನು ಚಂದದ ರಾಗದಲ್ಲಿ ಹಾಡಿದರು. ಹಕ್ಕ್ಕಿಹಾರುತಿದೆ ನೋಡಿದಿರಾ? ಎಂಬ ಗೀತೆ ಕೇಳಿದ್ದ ನನಗೆ, ಮಕ್ಕಳು ಆ ಗೀತೆಯ ಹಿಂದೆಯೇ  ಬೆಕ್ಕು ಹಾರುತಿದೆ ನೋಡಿದಿರಾ ಅಂತೇ ಅದೇ ರಾಗದಲ್ಲಿ ಹಾಡಿದಾಗ ಮತ್ತು ಈ ಗೀತೆಯು ಬೇಂದ್ರೆಯವರೇ ಬರೆದದ್ದು ಎಂದು ತಿಳಿದಾಗ ಅತೀವ ಆಶ್ಚರ್ಯವಾಯಿತು. ಮಕ್ಕಳಿಗೆ ನಾನೂ ಒಂದೆರಡು ಹಾಡು ಹೇಳಿಕೊಟ್ಟೆ. ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸುವಾಗ , ಕೆಲವೇ ವರ್ಷಗಳ ಹಿಂದೆ ನಾನುಕೂಡ  ಈ  ಮಕ್ಕಳಂತೆ ಇಂಥದೇ ಶಾಲೆಯಲ್ಲಿ ಹೀಗೆ ಖುಷಿ ಖುಷಿಯಾಗಿ ಹಾಡು ಹೇಳುತ್ತಾ ಕುಳಿತಿದ್ದಿದು ನೆನಪಾಯಿತು. ಆ ಶಾಲೆಯಿಂದ ವಾಪಸ್ ಧಾರವಾದ ತಲುಪುವ ಹೊತ್ತಿಗೆ ಮನಸೆಲ್ಲ ಬೇಂದ್ರೆ , ಮೇಘದೂತ , ರಾಜಕುಮಾರ್ ಅಣ್ಣ ಹೇಳಿದ ಬೇಂದ್ರೆ ಅಜ್ಜನ ಕಥೆಗಳು. ಇಷ್ಟು ಹತ್ತಿರ ಬಂದು ಬೇಂದ್ರೆಅಜ್ಜನ ಮನೆಯ ಆವರಣಕ್ಕೆ ಒಮ್ಮೆ ಹೋಗಿ ಬರದಿದ್ದರೆ ಅಂತ ಅನ್ನಿಸಿದ್ದರೂ ಆದಿನ ಸಮಯ ಮೀರಿ ಹೋಗಿತ್ತಾದ್ದರಿಂದ ಸುಮ್ಮನೆ ಮನೆಗೆ ಮರಳಿದೆ. 

ಇನ್ನೇನು ಸೂಟಿ ಮುಗೀತು ಮತ್ತ ಗಂಟುಮೂಟಿ ಕಟಗೊಂಡು ವಾಪಸ್ ಕರ್ಮಭೂಮಿಗೆ ಹೊರಡ್ಲಿಕ್ಕೆ ಬರೀ ಐದ ದಿನ ಉಳದಾವು ಅನ್ನೋ ಹೊತ್ತಿನಲ್ಲಿ ಮತ್ತೊಮ್ಮೆ ಧಾರವಾಡ ಹೋಗುವ ಗಳಿಗೆ ಕೂಡಿ ಬಂತು., ದೂರದಿಂದ ಬಂದ ಸ್ನೇಹಿತರೊಬ್ಬರಿಗೆ ಬೇಂದ್ರೆಯವರ ಮನೆ ನೋಡಬೇಕಿತ್ತು, ಬೇಂದ್ರೆ ಭವನದಲ್ಲಿ ಇದ್ದ ಸಿಬ್ಬಂದಿಯನ್ನು ಮನೆಯ ಗೇಟಿನೊಳಕ್ಕೆ ಹೋಗಲು ಅನುಮತಿ ಕೇಳಿದೆವು, ಆರಂ ಆಗಿ ಹೋಗಿ ಬರ್ರಿ , ನೀವು ಒಳಗೂ ಹೋಗಬಹುದು. ಅಲ್ಲೇ ಬೇಂದ್ರೆಯವರು ಬಳಸಿದ ವಸ್ತುಗಳು ಅದಾವು ಅದನ್ನೂ ನೋಡಿ ಬರ್ರಿ, ಆಮೇಲೆ ಅವರ ಭಾವಚಿತ್ರಗಳ ಸಂಗ್ರಹ ನೋಡ್ಲಿಕ್ಕೆ ಇಲ್ಲಿ ಬರ್ರಿ ಎಂದರು. 

ನಾವು ಗೇಟಿನೊಳಗೆ ಕಾಲು ಇಟ್ಟಾಗ ಚಂದದ  ಬೆಳಗು ಹಳದಿ ಗೋಡೆಯ ಮನೆಯನ್ನು ಇನ್ನೂ ಚಂದ ಮಾಡಿತ್ತು, ಅವರ ಮೊಮ್ಮೊಗಳು ಮತ್ತವರ ಪತಿ ತುಂಬಾ ಆತ್ಮೀಯವಾಗಿ ಮಾತನಾಡಿದರು, ನಾನು ಮೆತ್ತಗೆ 'ನಾನು ಹುಟ್ಟಿದ್ದು ಬೇಂದ್ರೆಯವರ ಜನ್ಮದಿನದಂದು' ಅಂದೆ.  ಹಂಗಾದ್ರ ನೀವೂ ಬರೀತೀರಿ? ಅಂದ್ರು, ನಾನು `ಇಲ್ಲ ರೀ ಹಾಡ್ತೀನಿ` ಅಂದೇ, ಅದು ಹೆಂಗ ಸಾಧ್ಯ ? ಅವರ ಹುಟ್ಟಿದ ದಿನ ಹುಟ್ಟಿ ಬರೆಯಲ್ಲ ಅಂದ್ರ ? ಅಂದು ನಕ್ಕರು. ಫೋಟೋ ವಿಡಿಯೋಗ್ರಫಿ ಹುಚ್ಚು ಇರುವ, ಅದಕ್ಕಿಂತ ಹೆಚ್ಚು ಬೇಂದ್ರೆ ಅವರನ್ನು ಪ್ರೀತಿಸುವ ನನ್ನ ಸ್ನೇಹಿತರು `ನಾವು ಕೆಲ ಹಾಡುಗಳನ್ನ ರೆಕಾರ್ಡ್ ಮಾಡ್ಕೊಬಹುದಾ? ಎಂದು ಕೇಳಿದಾಗ ಬೇಂದ್ರೆ ಅಜ್ಜನ ಮೊಮ್ಮಗಳು ಅರ್ರೆ ,ಅದ್ಯಾಕ್ ಕೇಳ್ತೀರಿ ಮಾಡ್ಕೋರಿ ಅಂತ ಖುಷಿಯಿಂದ ಒಪ್ಪಿಕೊಂಡರು. 
ಹಾಡುವ ಯಾವುದೇ ತಯಾರಿ ಮಾಡಿಕೊಳ್ಳದ ನಾನು ಅವರು ಹಾಡು ಅಂದ ತಕ್ಷಣ ನೆನಪಿಗೆ ಬಂದಿದ್ದು - ಇನ್ನು ಯಾಕ ಬರಲಿಲ್ಲವ್ವ ... ಕವಿತೆಯ ಸಾಲುಗಳು. 
ವಾಹನಗಳ  ಸದ್ದಿನ ನಡುವೆ ನಾನು ಹಾಡಿದ್ದು ಅದೆಷ್ಟು ಸರಿಯಾಗಿದೆಯೋ ಗೊತ್ತಿಲ್ಲ ,ಆದರೆ ಕನ್ನಡದ ಇಬ್ಬರು ಮೇರು ಕವಿಗಳು ವಾಸಿಸಿದ, ಓಡಾಡಿದ ಸ್ಥಳದಲ್ಲಿ ನನಗೆ ಅವರ ಹಾಡುಗಳನ್ನು ಹಾಡುವ ಅವಕಾಶ, ಅದೃಷ್ಟ ಭಗವಂತ ಒದಗಿಸಿಕೊಟ್ಟಿದ್ದಕ್ಕೆ ನಾ ಅವನಿಗೆ ಋಣಿ. (ಇಲ್ಲಿಗೆ ಬರುವ ಮೊದಲು ಮೈಸೂರಲ್ಲಿ ಕುವೆಂಪು ಅವರ ಮನೆಯ ಆವರಣದಲ್ಲಿ ಕೂತು ಸಹ ಅವರ ಒಂದು ಕವನವನ್ನು ಹಾಡಿದ್ದೆ.)
ಡಾ ದ ರಾ ಬೇಂದ್ರೆ ಅವರ ಮನೆಯ ಆವರಣ ,ಸಾಧನಕೇರಿ ಧಾರವಾಡ 

ವ್ಯಾಕುಲತೆ ಫಲಿತಾಂಶ  ಮಂಕುತಿಮ್ಮ

ನಲ್ಮೆಯ ಓದುಗರಿಗೆ ನಮಸ್ಕಾರ. 

‘ಕನ್ನಡ ನಾಡಿನ ವೀರ ರಮಣಿಯ 
ಗಂಡುಭೂಮಿಯ ವೀರನಾರಿಯ 
ಚರಿತೆಯ ನಾನು ಹಾಡುವೆ’.. 
ಈ ಗೀತೆ ಆಕಾಶವಾಣಿಯಲ್ಲಿ ಹರಿದು ಬರುತ್ತಿದ್ದರೆ ಮಕ್ಕಳಾದ ನಮಗೆ  ಮೈಯೆಲ್ಲಾ ರೋಮಾಂಚನ..ಧಮನಿ ಧಮನಿಯಲ್ಲೂ ನಾಡಭಕ್ತಿಯ ಸಂಚಲನ. ಈ ಚಿತ್ರದುರ್ಗ, ಕೋಟೆ , ಮದಕರಿನಾಯಕರನ್ನು ಜನ ಮಾನಸದಲ್ಲಿ ಶಾಶ್ವತವಾಗಿಸಿದ್ದೇ ನಮ್ಮ ತ.ರಾ.ಸು. ಅವರು. ಅದೆಂಥ ಅದ್ಭುತ ಪಾತ್ರಪ್ರಪಂಚದ ಸೃಷ್ಟಿಕರ್ತ !! ಹಂಸಗೀತೆಯ ಭೈರವಿ ವೆಂಕಟಸುಬ್ಬಯ್ಯನವರನ್ನು , ದುರ್ಗಾಸ್ತಮಾನದ ಓಬವ್ವ ನಾಗತಿಯನ್ನು ಮರೆಯಲಾದೀತೇ? ಐತಿಹಾಸಿಕ ಕಾದಂಬರಿಗಳ ನಿಜವಾದ ಛವಿ ಅರಿಯಬೇಕಾದರೆ ಅವರ ‘ನೃಪತುಂಗ'ದಂಥ ಕಾದಂಬರಿಗಳನ್ನೋದಬೇಕು. ನಾಡು ತನ್ನ ಪುಣ್ಯಪ್ರಭೆಯಿಂದ ಕಂಡ  ಅಂಥ ಅಸಾಮಾನ್ಯ ಸಾಹಿತಿಗೆ ಜನುಮದಿನದ (ಏಪ್ರಿಲ್ 21, 1920) ಶುಭಾಶಯಗಳು.

‘ಬೇಸನ್ ಕಿ ಸೊಂಧಿ ರೋಟಿ ಪರ್ ಖಟ್ಟಿ ಚಟ್ನಿ ಜೈಸಿ ಮಾ
ಯಾದ್ ಆತಿ ಹೈ ಚೌಕಾ -ಬಾಸನ್
ಚಿಮಟಾ ಫುಕನಿ ಜೈಸಿ ಮಾ
ಆಧಿ ಸೋಯಿ ಆಧಿ ಜಾಗಿ
ಥಕಿ ದೋಪೆಹರ್ ಜೈಸಿ ಮಾ...
ಪಂಕಜ್ ಉದಾಸ್ ರ ಗಜಲ್ ನಂತೆ ಯಾವ್ಯಾವುದೋ ಕಾರಣಕ್ಕೆ  ಎಲ್ಲೆಲ್ಲೋ ಕಾಡುತ್ತದೆ ಅಮ್ಮನ ನೆನಪು ನಮ್ಮೆಲ್ಲರಿಗೂ.  ನಮ್ಮನ್ನು ಹೆತ್ತು, ಹೊತ್ತು ತಿರುಗಿದ ಅಮ್ಮನ ಬೆನ್ನು ಬಾಗಿ, ಮೊಣಕಾಲು ಮುಷ್ಕರ ಹೂಡಿದಾಗ, ಬೇಕೆಂದಾಗ ಅವರ ಸಮಯಕ್ಕೆ ಆಗದ ನಮ್ಮಂಥ ಅನಿವಾಸಿಗಳ ಆ ‘ಗಿಲ್ಟ್’ ಬಹುಶ: ಬೇರಾರಿಗೂ ಸುಲಭಕ್ಕೆ ಅರ್ಥವಾಗುವಂಥದ್ದಲ್ಲ. ಆ ತಳಮಳ, ತಹತಹಿಕೆಗಳನ್ನೂ, ಅದಕ್ಕೆ ಕಂಡುಕೊಂಡ ತಾತ್ಕಾಲಿಕ  ಉಪಶಮನಗಳನ್ನೂ ತುಂಬ ಮಾರ್ಮಿಕವಾಗಿ ಮನಮುಟ್ಟುವಂತೆ ತಮ್ಮ ಚಿಕ್ಕ-ಚೊಕ್ಕ ಲೇಖನದಲ್ಲಿ ಚಿತ್ರಿಸಿದ್ದಾರೆ ಉಮೇಶ ನಾಗಲೋತಿಮಠ ಅವರು.

ಜೀವನ ಚಕ್ರದಲ್ಲಿ ಏರು-ಇಳಿವು, ನೋವು-ನಲಿವು, ಸರಸ-ವಿರಸ, ಸಿಹಿ-ಕಹಿ ಎಲ್ಲ ಇರತಕ್ಕದ್ದೇ. ಮನವ ಮಾಗಿಸಲು, ಹಣ್ಣಾಗಿಸಲು ಪ್ರಕೃತಿ ಹೂಡಿದ ತಂತ್ರವಿರಬಹುದೇನೋ?! ಬನ್ನಿ..ತಾವೇ ರಚಿಸಿ ಜೊತೆಗೆ ಸುಂದರವಾದ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ ಮೇಟಿಯವರು. ಅವರ ‘ ಜೀವನ ಚೈತ್ರ’ ದಲ್ಲೊಂದು ಜೀಕು ಜೀಕಿ ಬರೋಣ. ಹಾಡಿದವರಾರೆಂದಿರಾ? ಚೈತ್ರದಲ್ಲಿ ಕೋಗಿಲೆ ತಾನೇ ಹಾಡುವುದು? ಅನಿವಾಸಿಯ ಕೋಗಿಲೆ ಅಮಿತಾ ರವಿಕಿರಣ ಅವರ ದನಿಯಲ್ಲಿ.
ಓದಿ..ಆಸ್ವಾದಿಸಿ..ಎರಡು ಸಾಲು ಅನಿಸಿಕೆ ಬರೆಯಲು ಮರೆಯದಿರಿ.

~ ಸಂಪಾದಕಿ

ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು

ನನ್ನ ವಯಸ್ಸಾದ ತಾಯಿಯನ್ನ ಊರಲ್ಲೇ ಬಿಟ್ಟು ವಿದೇಶಕ್ಕೆ ಕಾರಣಾಂತರದಿಂದ ಬಂದ ವೈದ್ಯ ನಾನು.ತಾಯಿಯನ್ನ ನನ್ನಲ್ಲಿಗೆ ಕರೆಸಿಕೊಂಡರೂ ಅವಳಿಗೆ ಇಲ್ಲಿ ಯಾರೂ ಮಾತನಾಡಲು ಇಲ್ಲವೆಂದು ಎರುಡು ಮೂರು ತಿಂಗಳಲ್ಲೇ ಬೇಸರವಾಗಿ ಮರಳಿ ತನ್ನ ಊರಿಗೆ ಹೊರಟು ನಿಲ್ಲುತ್ತಿದ್ದಳು. 

ಕೊರೊನ ನಂತರ ಊರಲ್ಲಿ ಒಬ್ಬಳೇ . ಪಕ್ಕದ ಮನೆಯವರ ಹತ್ತಿರ ಮಾತನಾಡಬಹುದು ಅಷ್ಟೇ . 
ಇದನ್ನೇ ವಿಷಯ ತಲೆಯಲ್ಲಿ ಇಟ್ಟುಕೊಂಡು ವೈದ್ಯನಾದ ನಾನು ಆಸ್ಪತ್ರೆಗೆ ಕೊರೊನ ರೋಗಿಗಳ ಸೇವೆಗೆ ಹೋಗಿದ್ದೆ. ಅಂದು ಇಲ್ಲಿಯ ಬಿಳಿ ಅಜ್ಜಿ (ಗಂಟಲು ಕ್ಯಾನ್ಸರ ಚಿಕಿತ್ಸೆ ಮುಗಿದ ಮೇಲೆ )ಮೂಗಿನಲ್ಲಿ ಹಾಕಿದ ನಳಿಕೆ ಯಾವುದೊ ಕಾರಣದಿಂದ ಬಂದ ಆಗಿ ೧ದಿನ ಪೂರ್ತಿ ಅನ್ನ ನೀರಿಲ್ಲದೆ ಬಳಲಿ ಆಸ್ಪತ್ರೆಗೆ ಬಂದಿದ್ದಳು . 
ನಾನು ನನ್ನ ಸ್ವ ರಕ್ಷಣಾ ಕವಚ (personal protective equipment)ಧರಿಸಿ ಅವಳಿದ್ದ ಕೊಠಡಿಗೆ ಹೋಗಿ ಮಾತನಾಡಿಸಿದಾಗ ಅವಳು ನನ್ನ ಕೈ ಗಟ್ಟಿಯಾಗಿ ಹಿಡಿದು “ಅಯ್ಯೋ ಮಗನೇ ಬೇಗ ಬಂದಿದಕ್ಕೆ ಧನ್ಯವಾದಗಳು , ೧-೨ ದಿನದಿಂದ ನನ್ನ ಹೊಟ್ಟೆಗೆ ಏನೂ ನೀರೂ ಆಹಾರ ಹೋಗಿಲ್ಲ , ದಯಮಾಡಿ ಬೇಗ ಇದಕ್ಕೆ ಪರಿಹಾರ ಹುಡುಕು , ನನಗೆ ಬಹಳ ಭಯವಾಗುತ್ತಿದೆ “ಎಂದಳು . ನಾನು ಅವಳನ್ನು ನೋಡುವಾಗ ನನ್ನ ತಾಯಿಯ ಮುಖವೇ ಕಾಣತೊಡಗಿತು ನಾನು ವೈದ್ಯನಾದರೂ ದೇವರನ್ನು ನಂಬುವ ಆಸ್ತಿಕ . ನನ್ನ ಕೆಲಸ ಪ್ರಾರಂಭಿಸುವ ಮೊದಲು ಮನದಲ್ಲೇ ದೇವರನ್ನ ಪ್ರಾರ್ಥಿಸಿ “ನೀನೇ ಈ ಅಜ್ಜಿಯ ಚಿಕಿತ್ಸೆ ಮಾಡುತ್ತಿರುವೆ ಭಗವಂತಾ , ನಾನು ನಿಮಿತ್ತ ಮಾತ್ರ “ ಎಂದೆ . ಅವಳ ಕೈಗಳು ನನ್ನ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದವು . ನನಗೆ ನನ್ನ ತಾಯಿಯೇ ನನ್ನ ಕೈ ಹಿಡಿದುಕೊಂಡಿದ್ದಾಳೆ ಎಂದೆನಿಸತೊಡಗಿತು. ನನ್ನ ಕೆಲಸ ಪ್ರಾರಂಭಿಸಿದೆ 
ನಾನು ಕ್ಷ ಕಿರಣ ಪರೀಕ್ಷೆ , ಅಂತರದರ್ಶಕ ಪರೀಕ್ಷೆ , ರಕ್ತ ಪರೀಕ್ಷೆ ಇತ್ಯಾದಿ ಮಾಡಿ ಕ್ಯಾನ್ಸರ ಗಡ್ಡೆ ಏನಾಗಿದೆ ಎಂದು ತಿಳಿದುಕೊಂಡು ಕೊನೆಗೆ ಅವಳಿಗೆ ಹೊಸ ನಳಿಕೆಯನ್ನು ಬಹಳ ಜಾಗರೂಕತೆಯಿಂದ ಹಾಕಿ ಅವಳ ಹೊಟ್ಟೆಗೆ ಅನ್ನ ನೀರು ಹೋಗುವಂತೆ ಮಾಡಿದೆವು . 

ಚಿಕಿತ್ಸೆ ಫಲಕಾರಿಯಾಗಿ ಆ ಮಹಾಮಾತೆ ನನ್ನ ಕೈ ಹಿಡಿದು ತನ್ನ ತುಟಿಗಳಿಂದ ಚುಂಬನದ ಮಳೆಗರೆದು ಧನ್ಯವಾದ ಹೇಳಿ ನನ್ನ ಆಶೀರ್ವದಿಸಿದಳು. . ಅವಳ ಆಶೀರ್ವಾದದ ಸ್ಪರ್ಶ ನಾನು ಹಾಕಿಕೊಂಡ ಎರೆಡೆರೆಡು ಗಾವ್ನ್ ದಾಟಿ ಬಂದು ನನಗೆ ತಲುಪಿದಂತೆ ಅನ್ನಿಸಿತು . ನನಗೋ ಚಿಕಿತ್ಸೆ ಫಲಕಾರಿಯಾದ ಖುಷಿ , ನನ್ನ ತಾಯಿ ದೂರದಲ್ಲಿರುವ ದುಃಖ , ಆ ಅಜ್ಜಿಯ ಪ್ರೀತ್ಯಾಶೀರ್ವಾದ , ಈ ಎಲ್ಲವೂ ಒಟ್ಟಿಗೆ ಬಂದು ಕಣ್ಣಂಚು ಒದ್ದೆಯಾದವು . 
ದೇವರು ನೀಡಿದ್ದ ಸಂದೇಶ ಬಲು ಸ್ಪಷ್ಟವಾಗಿತ್ತು .

ನಮ್ಮಲ್ಲಿ ಅನೇಕರು ನಮ್ಮ ಊರು ಬಿಟ್ಟು ಬೇರೆ ಊರಿಗೆ , ದೇಶ ಬಿಟ್ಟು ಬೇರೆ ದೇಶಕ್ಕೆ ಕಾರಣಾಂತರಗಳಿಂದ ಚಲಿಸಿದ್ದೇವೆ , ನೆಲೆಸಿದ್ದೇವೆ . ನಮ್ಮಗಳ ತಂದೆ ತಾಯಂದಿರು ಹಲವು ಕಾರಣದಿಂದ ನಮ್ಮಗಳ ಜೊತೆ ಇರದಿದ್ದರೂ , ಅವರ ಹಾರೈಕೆ , ಆಶೀರ್ವಾದ ನಮ್ಮ ಮೇಲೆ ಸದಾ ಇರುತ್ತದೆ . ಹಾಗೆಯೇ ನಮ್ಮ ಮನದ ಮಿಡಿತ , ಪ್ರಾರ್ಥನೆ ಅವರಿಗಾಗಿ ಸದಾ ಇರುತ್ತದೆ . 

ನಮ್ಮೆಲ್ಲರ ತಂದೆ-ತಾಯಿ , ಗುರು ಹಿರಿಯರನ್ನು ಸದಾ ದೇವರು ಆಯುರಾರೋಗ್ಯದಿಂದ ಇಡಲಿ ಎಂಬುದೇ ನಮ್ಮೆಲ್ಲರ 
ಆಶಯವಲ್ಲವೇ ?

~ ಇಂಗ್ಲೆಂಡ ಕನ್ನಡಿಗ 
Dr Umesh Nagalotimath

ಜೀವನ ಚೈತ್ರ

ರಚನೆ ಹಾಗೂ ಸಂಗೀತ ಸಂಯೋಜನೆ ಶಿವ್ ಮೇಟಿ, ಗಾಯನ – ಅಮಿತ ರವಿಕಿರಣ