ಪುಸ್ತಕ ಪರಿಚಯ ಮತ್ತು ಒಂದು ಕವಿತೆ

ಡಾ ಜಿ ಎಸ್ ಪ್ರಸಾದ್

ಆತ್ಮೀಯ ಅನಿವಾಸಿ ಓದುಗರೇ, ಈ ವಾರದ ಸಂಚಿಕೆಯಲ್ಲಿ ಡಾ ಪ್ರೇಮಲತಾ ಅವರ ಇತ್ತೀಚಿನ ಕೃತಿ 'ವಿದೇಶ ಪ್ರಯಾಣ ಕೈತುಂಬಾ ಕಾಂಚಾಣ' ಕುರಿತಾಗಿ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಇದನ್ನು ಪುಸ್ತಕ ಪರಿಚಯವೆಂದು ಕೂಡ ಪರಿಗಣಿಸಬಹುದು. ಈ ಪುಸ್ತಕವನ್ನು ಸಾವಣ್ಣ ಎಂಟರ್ಪ್ರೈಜ್ ಬೆಂಗಳೂರು ಸಂಸ್ಥೆ ಪ್ರಕಟಿಸಿದೆ. ಇನ್ನೂರು ಪುಟಗಳ ಈ ಪುಸ್ತಕಕ್ಕೆ ಖ್ಯಾತ ಲೇಖಕ ಎಸ್ ದಿವಾಕರ್ ಅವರು ಮುನ್ನುಡಿ ಬರೆದಿದ್ದಾರೆ. 

ಇಂದು ವಿಶ್ವ ಪರಿಸರ ದಿನ, ಈ ಒಂದು ಸಂದರ್ಭದಲ್ಲಿ ನಾನು ಹಿಂದೆ ರಚಿಸಿದ 'ಪರಿಸರ ಗೀತೆ' ಎಂಬ ಕವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ಹಿಂದೆ ಅನಿವಾಸಿ ತಾಣದಲ್ಲಿ ಪ್ರಕಟಗೊಂಡಿರಬಹುದಾದರೂ, ಇಲ್ಲಿ ಹೊಸ ಓದುಗರು ಅನೇಕರು ನಮ್ಮೊಡನೆ ಇರುವುದರಿಂದ ಅವರಿಗೆ ಅದು ಹೊಸತು ಎಂಬ ಭಾವನೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಪರಿಸರ ನಾಶದ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುವುದು ಸೂಕ್ತ. ಕವಿತೆ ಹಳೆಯದಾದರೂ ಭಾವ ಹೊಸತು. ಕವಿತೆಯ ಆಶಯ ಹಿರಿದು.

-ಸಂ
ಪ್ರೇಮಲತಾ ಅವರ 'ವಿದೇಶ ಪ್ರಯಾಣ ಕೈ ತುಂಬಾ ಕಾಂಚಾಣ' ಎಂಬ ಪುಸ್ತಕವನ್ನು ತಡವಾಗಿಯಾದರೂ ಈಗ ಓದಿ ಮುಗಿಸಿದೆ. ಎಲ್ಲಾ ಕನ್ನಡಿಗರು ಓದಲೇ ಬೇಕಾಗಿರುವ ಪುಸ್ತಕ. ಕಾಂಚಾಣಕ್ಕಾಗಿ ನಾವೆಲ್ಲಾ ವಿದೇಶಕ್ಕೆ ಬಂದಿರುವುದೇನೋ ನಿಜ ಆದರೆ ಅದರ ಜೊತೆ ಜೊತೆಗೆ ಈ ವಿದೇಶ ನೆಲದಲ್ಲಿ ನಾವು ನಮ್ಮ ಚಿಂತನೆಗಳಲ್ಲಿ, ನಡವಳಿಕೆಗಳಲ್ಲಿ, ಸಂಸ್ಕೃತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಕೆಲವೊಮ್ಮೆ ನಮ್ಮ ಅರಿವಿಗೆ ತಿಳಿಯದೆ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಗಳು ಉಂಟಾಗಿವೆ. 

ಡಾ ಪ್ರೇಮಲತಾ ಅವರನ್ನೂ ಒಳಗೊಂಡು ಭಾರತದಲ್ಲಿ ಬ್ಯುಸಿ ವೈದ್ಯರಾಗಿದ್ದ ನಮ್ಮಂತಹ ಕೆಲವರಿಗೆ ವಿದೇಶದಲ್ಲಿ ದೊರಕುವ ವಾರಾಂತ್ಯ ಮತ್ತು ಸಂಜೆ ವೇಳೆಯ ಬಿಡುವು ನಮ್ಮ ಸಾಹಿತ್ಯಿಕ ಹವ್ಯಾಸಗಳನ್ನು ಉದ್ದೀಪನಗೊಳಿಸಲು ಪೂರಕವಾಗಿದೆ. ನಮ್ಮಲ್ಲಿ ಹಲವಾರು ಮಂದಿ ಕನ್ನಡ ಸಾಹಿತ್ಯವನ್ನು, ಬರವಣಿಗೆಯನ್ನು ಅಭ್ಯಾಸಮಾಡಿಕೊಂಡು ಪುಸ್ತಕವನ್ನು ರಚಿಸಲು ಸಾಧ್ಯವಾಗಿದೆ. ಇದರ ಪರಿಣಾಮವೇ ಪ್ರೇಮಲತಾ ಅವರ 'ವಿದೇಶ ಪ್ರಯಾಣ ಕೈ ತುಂಬಾ ಕಾಂಚಾಣ'

ನಾನು ಹಿಂದೆ ಒಂದು ಪ್ರವಾಸ ಕಥನ ಮತ್ತು ಇಂಗ್ಲೆಂಡ್ ಜೀವನದ ಬಗ್ಗೆ ನನ್ನ ಕೃತಿಗಳಲ್ಲಿ ಬರೆದಿದ್ದೇನೆ. ಹೀಗೆ
ಬರೆಯುವಾಗ ನಮ್ಮಂಥ ಅನಿವಾಸಿಗಳು ನಮ್ಮ ಜನ್ಮ ಭೂಮಿ ಮತ್ತು ಕರ್ಮಭೂಮಿಗಳ ನಡುವಿನ ತುಲನಾತ್ಮಕ ವಿಮರ್ಶೆಗೆ ತೊಡಗುವುದು ಅನಿವಾರ್ಯ. ಇದು ನಮ್ಮ ಬದುಕಿನ ಒಂದು ಸ್ವಮಿರ್ಶೆಯೂ, ಆತ್ಮಾವಲೋಕನವೂ ಆಗಿರುತ್ತದೆ. ಇಲ್ಲಿ ಬಂದು ವಾಸಮಾಡುವ ಪ್ರೇಮಲತಾ ರೀತಿಯ ಸೂಕ್ಷ್ಮ ಮತಿಗಳಿಗೆ, ನೋಡುವ ಕಣ್ಣು, ಕೇಳುವ ಕಿವಿಗಳು ಇದ್ದವರಿಗೆ ವಿದೇಶ ಮತ್ತು ಸ್ವದೇಶದ ನಡುವೆ ಇರುವ ವ್ಯತ್ಯಾಸಗಳು ಅರ್ಥವಾಗುತ್ತವೆ. ಈ ಪುಸ್ತಕದಲ್ಲಿ ಅವುಗಳ ಉಲ್ಲೇಖ ಹೇರಳವಾಗಿದ್ದು ಅನೇಕ ಚಿಂತನೆಗಳಿಗೆ ಎಡೆಮಾಡಿಕೊಡುತ್ತದೆ. ಬ್ರಿಟಿಷ್ ಸಂಸ್ಕೃತಿಯನ್ನು ಇತಿಹಾಸದ ದುರ್ಬಿನ್ನುಗಳಲ್ಲಿ ನೋಡಿ, ಪೂರ್ವಗ್ರಹಪೀಡಿತ ಆಲೋಚನಗಳಿಂದ, ಅನುಮಾನದಿಂದ ನೋಡುವವರು, ಬ್ರಿಟಿಷರು ರೇಸಿಸ್ಟ್ಗಳು ಅಂದುಕೊಂಡವರು, ಇಲ್ಲಿಯ ಲೈಂಗಿಕ ಸ್ವೇಚ್ಛೆ, ಮದ್ಯಪಾನ, ಮಾಂಸಾಹಾರ ಇವುಗಳ ಹಿನ್ನೆಲೆಯಲ್ಲಷ್ಟೇ ನೋಡಿ ಬ್ರಿಟನ್ನಿನ ಜನರನ್ನು ಅಳೆಯುವವರು ಮೊದಲು ಈ ಪುಸ್ತಕವನ್ನು ಓದಬೇಕಾಗಿದೆ.

ಕರ್ನಾಟಕದಲ್ಲಿ ಬ್ರಿಟನ್ ಕುರಿತಾದ ಕೆಲವು ತಪ್ಪು ಕಲ್ಪನೆಗಳನ್ನು, ಕಟ್ಟು ಕತೆಗಳನ್ನು ತೊಡೆದುಹಾಕುವಲ್ಲಿ ಪ್ರೇಮಲತಾ ಯಶಸ್ವಿಯಾಗಿದ್ದಾರೆ. ಈಗ ಭಾರತದ ಆಚೆ ಪ್ರವಾಸ ಮಾಡುವುದು ಹೆಚ್ಚಿನ ವಿಚಾರವೇನಲ್ಲ, ಹಾಗೆಯೇ ವಿದೇಶಕ್ಕೆ ಬಂದು ಬದುಕನ್ನು ಕಟ್ಟಿಕೊಳ್ಳಲು ಅತಿ ಹೆಚ್ಚಿನ ಪ್ರತಿಭೆ ಮತ್ತು ಬುದ್ಧಿವಂತಿಕೆಗಳು ಬೇಕಾಗಿಲ್ಲ. ಇಷ್ಟು ಪ್ರಬುದ್ಧವಾಗಿರುವ ನಾಡಿನಲ್ಲೂ ನಮ್ಮ ಅನಿವಾಸಿಗಳಲ್ಲಿ ಅಂಧ ಶ್ರದ್ದೆ, ವ್ಯಕ್ತಿಪೂಜೆ ಇದೆ, ಕನ್ನಡ ಸಂಘಗಳಲ್ಲಿ ಬಿರುಕುಗಳಿವೆ ಎನ್ನುವ ವಿಚಾರಗಳು ಅವರಿಗೆ ಅಸಮಾಧಾನವನ್ನು ನೀಡಿದಂತಿದೆ. ವಿದೇಶದಲ್ಲಿ ಹಣ ಗಳಿಸಿದರೂ ತೆರಿಗೆ ಕಾರಣದಿಂದ ಇಲ್ಲಿ ಅತಿ ಶ್ರೀಮಂತಿಕೆ ಸಾಧ್ಯವಿಲ್ಲ. ಬ್ರಿಟಿಷ್ ಜನರಲ್ಲೂ ಅನಕ್ಷರತೆ, ಬಡತನವಿದೆ ಎಂಬ ವಿಚಾರಗಳು ಪ್ರಸ್ತಾಪಗೊಂಡಿದೆ. ಭಾರತದಲ್ಲೇ ನೆಲಸಿ ಅಲ್ಲೇ ವೃತ್ತಿಯನ್ನು ಮುಂದುವರಿಸಿದ ಕೆಲವರು ಅನಿವಾಸಿ ವೃತ್ತಿಪರರಿಗಿಂತ ಅನುಕೂಲವಾಗಿರುವ ಪರಿಸ್ಥಿಯಲ್ಲಿದ್ದಾರೆ, ಎನ್ನುತ್ತಾರೆ ಪ್ರೇಮಲತಾ.

ಈ ಬರಹದಲ್ಲಿ ಬ್ರಿಟಿಷ್ ಜನರ ಸಜ್ಜನಕೆ, ಮುತ್ತಿನಹಾರದಂತಿರುವ ನುಡಿಗಳು, ಶಿಷ್ಟಾಚಾರ, ನೆಲದ ರಮ್ಯತೆ, ಇಲ್ಲಿನ ವಿಶಿಷ್ಟತೆ, ಕರ್ತವ್ಯ ನಿಷ್ಠೆ, ಸಮಯಪ್ರಜ್ಞೆ, ವೈಜ್ಞಾನಿಕ ದೃಷ್ಟಿ ಕೋನ ಇವುಗಳನ್ನು ಪ್ರೇಮಲತಾ ತಮ್ಮ ಸ್ವಂತ ಅನುಭವಗಳೊಂದಿಗೆ ವಿವರಿಸಿ ಹೇಳಿರುವುದು ಪರಿಣಾಮಕಾರಿಯಾಗಿದೆ. ಅನಿವಾಸಿಗಳ ಬದುಕಿನ ಸಾಂಸ್ಕೃತಿಕ ಸಂದಿಗ್ಧತೆಗಳನ್ನೂ ಇಲ್ಲಿ ಕಾಣಬಹುದು. ಅನಿವಾಸಿ ಕನ್ನಡ ಓದುಗರಿಗೆ ಇದರ ನೇರ ಪರಿಚಯವಿದ್ದರೂ ಪ್ರೇಮಲತಾ ಅವರ ಮಾತುಗಳಿಂದ ಕೇಳುವುದರಲ್ಲಿ ಒಂದು ಹೊಸತನವಿದೆ. ಹೀಗಾಗಿ ಈ ಪುಸ್ತಕವು ನಿವಾಸಿ ಮತ್ತು ಅನಿವಾಸಿ ಕನ್ನಡಿಗರ ಕಲ್ಪನೆಗೆ ನಿಲುಕುತ್ತದೆ.

ಪ್ರೇಮಲತಾ ಅವರು ಇಂಗ್ಲೆಂಡಿಗೆ ವಲಸೆ ಬರುವ ಹೊಸ್ತಿಲಲ್ಲಿ ನಡೆದ ಕೆಲವು ವೈಯಕ್ತಿಕ ಘಟನೆಗಳನ್ನು, ಜೊತೆಗೆ ಅವರ ಕರ್ಮ ಭೂಮಿ ಅನುಭವವನ್ನು, ಸ್ಕಾಟ್ಲೆಂಡ್ ಬಗ್ಗೆ ಅವರಿಗಿರುವ ವಿಶೇಷ ಪ್ರೀತಿಯನ್ನು ವಿವರವಾಗಿ ದಾಖಲಿಸಿದ್ದಾರೆ. ಈ ಕಾರಣದಿಂದಾಗಿ ಪುಸ್ತಕದ ಕೆಲವು ಭಾಗಗಳು ಆತ್ಮಕಥೆಯಂತೆ ಓದಿಕೊಳ್ಳುತ್ತದೆ. ಪ್ರೇಮಲತಾ ಕೆಲವು ಕಡೆ ಕರ್ನಾಟಕದ ಓದುಗರಿಗೆ ಇಂಗ್ಲೆಂಡ್ ಪರಿಚಯಿಸುವ ಪ್ರಯತ್ನದಲ್ಲಿ ಅನೇಕ ಮಾಹಿತಿಗಳನ್ನು ವಿವರಗಳನ್ನು ನೀಡುವುದು ಅನಿವಾರ್ಯವಾಗಿದೆ. ಇನ್ನೇನು ಅದು ರಸಹೀನವಾಗುತ್ತಿದಂತೆ ಭಾಷೆ ಥಟ್ಟನೆ ಬದಲಾಗಿ ಅಲ್ಲಿ ಕಾವ್ಯ ಸ್ವರೂಪವೊಂದು ಹುಟ್ಟಿಕೊಂಡು ಓದು ಚುರುಕಾಗುತ್ತದೆ.

ಪುಸ್ತಕ ಶೀರ್ಷಿಕೆ ಬಹಳ ಅರ್ಥಪೂರ್ಣವಾಗಿದೆ. ವಿದೇಶಕ್ಕೆ ವಲಸೆ ಬರುವವರ ಕನಸುಗಳನ್ನು ಆಶಯಗಳನ್ನು ಬಿಂಬಿಸುತ್ತದೆ. ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಉಪಸಂಹಾರ/ಸಾರಾಂಶ ರೂಪದಲ್ಲಿ ಪುಸ್ತಕದ ಒಟ್ಟಾರೆ ವಿಚಾರಗಳನ್ನು ಸಂಕ್ಷಿಪ್ತವಾಗಿ 12 ಪಾಯಿಂಟುಗಳಲ್ಲಿ "ದೊರಕಿತೆ ಕೈತುಂಬಾ ಕಾಂಚಾಣ" ಎಂಬ ಪ್ರಶ್ನೆಗೆ ಕಾಂಚಾಣವೇನೊ ದೊರಕಿತು ಆದರೆ ಅದರ ಮೌಲ್ಯ, ಅದರಿಂದ ಪಡೆದದ್ದು ಏನು, ಕಳಕೊಂಡದ್ದು ಏನು ಎಂಬ ವಿಶ್ಲೇಷಣೆ ವಿಶೇಷವಾಗಿದೆ.

ಪರಿಸರದ ಗೀತೆ 

(ಡಾ ಜಿ ಎಸ್ ಪ್ರಸಾದ್)

ಮರಗಳು, ಮರಗಳು, ಮರಗಳು
ಎಲ್ಲೆಡೆ ಹಸುರಿನ ಮರಗಳು
ಗಿರಿಯನು ತಬ್ಬಿದ ತರುಗಳು
ಕಣಿವೆಯ ತುಂಬಿದ ವನಗಳು

ಉಸಿರನ್ನೀಯುವ ಮರಗಳು
ಸಿಹಿ ಕಹಿಯನ್ನುಣಿಸುವ ಮರಗಳು
ಸ್ಥಾವರ ಹಸುರಿನ ಸಂತಾನಗಳು
ನಿಶ್ಚಲ ಮೌನ ತಪಸ್ವಿಗಳು

ಹೂವನು ತೊಟ್ಟು ಮೆರೆಯುವ ಮರಗಳು
ಹಣ್ಣನು ಕೊಟ್ಟು ಹರಸಿದ ಮರಗಳು
ಋತು ಋತುವಿಗು ಬದಲಾಗುವ ಮರಗಳು
ಸಾರ್ಥಕ ಪರಾರ್ಥಕ ಜೀವಿಗಳು

ಬಂದೇ ಬಂದ ಸ್ವಾರ್ಥ ಮಾನವ
ಕೊಡಲಿಯ ಹಿಡಿದ ಧೂರ್ತ ದಾನವ
ಕೊಚ್ಚಿದ, ಚಚ್ಚಿದ ಮರಗಳ ಬುಡವ
ಸ್ತಬ್ಧವಾಯಿತು ಕಾನನ ಕಲರವ

ಉರುಳುತ ಬಿದ್ದವು ಮರಗಳು
ಕಂಬನಿಗರೆದವು ಮಳೆ ಹನಿಗಳು
ನಿಡುಸುಯ್ದವು ಕಾನನ ಸ್ವರಗಳು
ವಿಕಾರ ವಿನಾಶದ ಚಿತ್ತಾರಗಳು

ಕಾಡಿಗೆ ಹಚ್ಚಿದ ಬೆಂಕಿಯ ಕಿಚ್ಚು
ತಾಯಿಯ ಬೆತ್ತಲೆಗೊಳಿಸುವ ಹುಚ್ಚು
ಅಂದಿನ ಸುಂದರ ಸಮೃದ್ಧಿಯ ಕಾಡು
ಇಂದಿನ ದಾರುಣ ಸುಡುಗಾಡು

ಕುಗ್ಗಿವೆ, ತಗ್ಗಿವೆ, ಹಸುರಿನ ನೆಲೆಗಳು
ಬತ್ತಿವೆ ನದಿ ಹೊಳೆ ಕೆರೆಗಳು
ಪ್ರಗತಿಯ ಹೆಸರಲಿ ವಿಶ್ವ ವಿನಾಶ
ಬಿಸಿಲು ಮಳೆಗಳ ತೀವ್ರ ಆಕ್ರೋಶ

ಬನ್ನಿರಿ ತರುಣರೆ ಛಲವನು ಹಿಡಿದು
ಹಸುರಿನ ಕ್ರಾಂತಿಯು ನಡೆಯಲಿ ಇಂದು
ತೊಲಗಲಿ ಸ್ವಾರ್ಥ ಪ್ರಲೋಭಗಳು
ಚಿಮ್ಮಲಿ ಹಸುರಿನ ಸಸಿಗಳು

ನಾಳಿನ ನಾಡಿದು ನಿಮ್ಮಯದು
ಉಳಿಸುವ ಹೊಣೆ ನಮ್ಮೆಲ್ಲರದು
ಪರಿಸರ ಪ್ರೇಮವ ಬೆಳೆಸೋಣ
ಮರಗಳ ಹಸಿರನು ಉಳಿಸೋಣ

ಸ್ವರ್ಗಸ್ಥ ತಂದೆಯ ಅಭಯ ಹಸ್ತ

ಈ ವಾರದ ಪ್ರಸ್ತುತಿ ಕಥೆಗಳಲ್ಲೊಂದು ಕಥೆ, ಸ್ವಲ್ಪ ಆತ್ಮ ಕಥೆ ಸಹ. ಇದನ್ನು ಬರೆಯುವಾಗ ನನಗೆ ಸ್ವಲ್ಪ ಮುಜುಗರವಾಗುತ್ತಿದೆ. ಯಾಕೆ ಅಂತ ಮುಂದೆ ಓದಿದರೆ ನಿಮಗೇ ಗೊತ್ತಾಗುತ್ತದೆ. ಈ ವಾರವೂ ಒಂದು ಪುಸ್ತಕ ಪರಿಚಯ ಬರೆಯಲೂ ಹಿಂದೇಟು ಹಾಕುತ್ತಿದ್ದೇನೆ.ದಯವಿಟ್ಟು ಎಂದಿನಂತೆ ಓದಿ ಕಮೆಂಟ್ ಮಾಡಲು  ಮರೆಯ ಬೇಡಿ! (ಸಂ)


ಅನಿರೀಕ್ಷಿತವಾಗಿ ಕೈಗೆ ಬಂತು ಪುಸ್ತಕ
Written in stone ಎನ್ನುವ ಆಂಗ್ಲ ನುಡಿಗಟ್ಟು ಇದೆ. ಅಂದರೆ ಒಮ್ಮೆ ಹೇಳಿದ್ದು, ನಿರ್ಧರಿಸಿದ್ದು ಅದನ್ನು ಬದಲಾಗಿಸಲಾಗುವದಿಲ್ಲಂತ. ಒಮ್ಮೊಮ್ಮೆ ಅದನ್ನು carved in stone ಎನ್ನುತ್ತಾರೆ. ಭಾರತದಲ್ಲಿ ಕಾಗದ ಮತ್ತು ಅದರ ಮೇಲೆ ಪ್ರಿಂಟಿಂಗ್ ಮಾಡುವುದು ತಡವಾಗಿ ಬಂದಿತು ಅಂತ ವಸುಧೇಂದ್ರರವರು ತಮ್ಮ ’ರೇಶ್ಮೆ ಬಟ್ಟ’ ಚರ್ಚಿಸುತ್ತ ಹೇಳಿದಂತೆ ನೆನಪು. ಅದಕ್ಕೇ ನಮ್ಮ ದೇಶದಲ್ಲಿ ಐತಿಹಾಸಿಕ ದಾಖಲೆಗಳು ತಾಮ್ರ ಶಾಸನ, ಶಿಲಾ ಶಾಸನ ಅಥವಾ ತಾಳೆಗೆರೆಯ ಬರಹಗಳನ್ನು ಆಧರಿಸಿ ರೂಪಗೊಂಡಿರುವದು ಸಹಜ. ನನ್ನ ದಿವಂಗತ ತಂದೆಯವರು ಒಬ್ಬ ಇತಿಹಾಸಜ್ಞರು, ಶಾಸನತಜ್ಞರು ಅಂತ ಪ್ರಸಿದ್ಧರಾಗಿದ್ದರು. ನಾನು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಅವರ ಶಿಲಾಶಾಸನದ ಪ್ರತಿಗಳ ವೈಯಕ್ತಿಕ ಸಂಗ್ರಹವನ್ನು ನೋಡಿದ್ದು ನೆನಪಿದೆ. ಶಾಸನಗಳ ಪ್ರಾರಂಭದಲ್ಲಿ ಮೊದಲು ’ಓಮ್, ಸ್ವಸ್ತಿ, ಶ್ರೀ’ ಇತ್ಯಾದಿ ಹೇಳಿದ ನಂತರ ಒಂದು ಶಿವ ಅಥವಾ ವಿಷ್ಣು ದೇವಸ್ತುತಿಯಿರುತ್ತದೆ:
’ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ
ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭವೇ’

ಅಂತ ಕಂಡರೆ ಅದು ಶಿವಾರಾಧಕರಿಂದ. ಈ ಎರಡು ಸಾಲಿನ ಶ್ಲೋಕವನ್ನಷ್ಟೇ ಕಲಿತು ಮನನ ಮಾಡಿ ಅದರ ಆಧಾರದ ಮೇಲೆಯೇ ಕಲಿತು ಕುಕನೂರಿನ ಸುತ್ತಮುತ್ತಲ್ಲಿನ, ಗುಡಿಗಳ ಮುಂದೆ ಇದ್ದ, ಕಣ್ಣಿಗೆ ಕಂಡ, ವಿಪುಲವಾಗಿ ಅಲ್ಲಲ್ಲಿ ಸಿಕ್ಕ ಶಿಲಾಶಾಸನಗಳನ್ನು ಓದುವದನ್ನು ಅವರು ಸ್ವಾಧ್ಯಾಯದಿಂದಲೇ ಕಲಿತು ಕರಗತ ಮಾಡಿಕೊಂಡಿದ್ದಂತರಂತೆ. ನನಗೆ ಅವರ ವಿವಿಧ ಭಾಷೆಗಳಲ್ಲಿ ಬರೆದ ಐತಿಹಾಸಿಕ ಸಂಶೋಧನಾತ್ಮಕ ಲೇಖನ ಮತ್ತು ಪುಸ್ತಕಗಳ ಪರಿಚಯವಿದ್ದರೂ, (ಒಂದೆರಡು ಕಥೆಗಳನ್ನು ಬಿಟ್ಟರೆ) ಅವರು ಕಥೆಗಾರರು ಸಹ ಆಗಿದ್ದರು ಎನ್ನುವದರ ಬಗ್ಗೆ ಗಂಧವೇ ಇರಲಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆ ರಹಸ್ಯ ಬಯಲಾದದ್ದು, ಅಕಸ್ಮಾತ್ತಾಗಿ ಕಳೆದವಾರದಲ್ಲಷ್ಟೇ ನನ್ನ ಕೈಗೆ ಬಂದ ಯಾರೋ ಒಬ್ಬರು ಅವರ ಕಥಾಸಂಗ್ರಹವನ್ನು ಸಂಪಾದಿಸಿ ಅಚ್ಚು ಹಾಕಿಸಿದ ಪ್ರತಿ! ಅದರ ಬಗ್ಗೆ ಹೇಳುವ ಮೊದಲು ನನ್ನ ಕನ್ನಡ ಕಲಿಕೆಯ ಬಗ್ಗೆ ಒಂದು ಚಿಕ್ಕ ವಿಷಯವನ್ನು ಹೇಳಬೇಕೆಂದಿರುವೆ.
ತಮಿಳು (ಬಾಲಿಶ) ತಲೆಗಳ ನಡುವೆ 
ಈ ಶಿರ್ಷಿಕೆ ನಿಮಗೆ ಬಿ ಜಿ ಎಲ್ ಸ್ವಾಮಿ ಅವರ ಇದೇ ತರದ ಹೆಸರಿನ ಪುಸ್ತಕವನ್ನು ನೆನಪಿಗೆ ತರಬಹುದು. ಅವರು ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ತಮಿಳು ನಾಡಿಗೆ ಹೋಗುವ ಮೊದಲೇ ನಾನು ಹುಟ್ಟಿದ್ದು ಧಾರವಾಡದಲ್ಲಿಯಾದರೂ ಆ ನಂತರ ಊಟಿಯಲ್ಲಿ ಬಾಲ್ಯಾವಸ್ಥೆಯನ್ನು ಆರಂಭಿಸಿದ್ದೆ! ನನಗೆ ಕನ್ನಡದಲ್ಲಿ ಅಕ್ಷರಾಭ್ಯಾಸವಾದದ್ದೇ ನೆನಪಿಲ್ಲ. ತಿರುವಳ್ಳುವರ ಮೊದಲ ದ್ವಿಪದಿ ’ಅಗರ ಮೊದಲೆಳುತ್ತೆಲ್ಲಾಮ್’ ಹೇಳುವಂತೆ ಕಲಿತು, ತಮಿಳು ಶಾಲೆಗಳಲ್ಲಿಯೇ ಟೀನೇಜರ್ ಆಗುವ ವರೆಗೆ ಕಲಿತೆ. ತಮಿಳು ಮಗ್ಗಿಗಳಿಂದ ಹಿಡಿದು (ಇಂದಿಗೂ ಗುಣಾಕಾರಕ್ಕೆ ಅವುಗಳೇ ಮೊದಲು ನೆನಪಾಗುವವು) ಸಂಗಮ್ ತಮಿಳಿನ ಭೋ ಪರಾಕ್ ಹೇಳುತ್ತ ಬೆಳೆದೆ. ನಿಮಗೆಲ್ಲ ಗೊತ್ತಿರುವಂತೆ ತಮಿಳಿನಲ್ಲಿ ಮಹಾಪ್ರಾಣದ ಉಚ್ಚಾರವಿಲ್ಲ. ಕಾಗುಣಿತ ಎಂದರೇನು ಸಹ ಗೊತ್ತಿರದ ನನಗೆ ವರ್ಣಮಾಲೆಯ ನಾಲ್ಕೂ ವ್ಯಂಜನಕ್ಷರಗಳಿಗೆ ಒಂದನ್ನೇ ಉಪಯೋಗಿಸಿ ರೂಡಿ. ನಾವು ಮೂವರು ಅಣ್ಣತಮ್ಮಂದಿರು ನಮ್ಮೊಳಗೆ ಮಾತನಾಡುತ್ತಿದ್ದುದು ತಮಿಳಿನಲ್ಲಿಯೇ. ಇಲ್ಲಿಯ ನಮ್ಮ ಮಕ್ಕಳಲ್ಲೂ ಸಾಮಾನ್ಯವಾಗಿ ಇದೇ ತರಹದ ಅನುಭವವನ್ನು ಕಾಣುತ್ತೇವೆ ಎನ್ನ ಬಹುದು, ಕೆಲವು ಅಪವಾದಗಳನ್ನು ಬಿಟ್ಟರೆ. ಅದಕ್ಕೇ ನಮ್ಮ ತಂದೆ ನಮ್ಮನ್ನು ’ಅಲ್ಪಪ್ರಾಣಿಗಳು ನೀವು’ ಕೊಂಗರ ಭಾಷೆಯನ್ನು ಮಾತಾಡ ಬೇಡಿ, ಅಂತೆಲ್ಲ ಟೀಕಿಸುತ್ತಿದ್ದರು. ತಾವಾಯಿತು, ತಮ್ಮ ಲೇಖನಗಳಾಯಿತು ಅಂತ ಯಾವಾಗಲೂ ಬರಹದಲ್ಲಿ ಮುಳುಗಿರುತ್ತಿದ್ದ ಅವರು ಒಂದು ಉಪಕಾರವನ್ನು ಮಾಡದಿರಲಿಲ್ಲ. ಕನ್ನಡ ಅಕ್ಷರಗಳನ್ನು ಕಲಿಸಿದ್ದು ಮತ್ತೆ ತಾವು ವಿಪುಲವಾಗಿ ಕನ್ನಡ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣಗಳು ಮತ್ತು ಕರ್ಮವೀರದಂಥ ನಿಯತ ಕಾಲಿಕಗಳಲ್ಲಿ ಮತ್ತು ಎರಡು ಮೂರು ಪತ್ರಿಕೆಗಳ ದೀಪಾವಳಿ ವಿಶೇಷಾಂಕಗಳಲ್ಲಿ ಬರೆಯುತ್ತಿದ್ದ ಲೇಖನಗಳನ್ನು ನನಗೆ ಕೊಟ್ಟು ಅವುಗಳ ಕಾಪಿ ಮಾಡಿಸುತ್ತಿದ್ದರು, ನಮಗೆ ಕನ್ನಡದ ರೂಢಿಯಾಗಲೆಂದು. ಆದರೆ ಕಥೆ ಪುಸ್ತಕ, ಕನ್ನಡ ಪಠ್ಯ ಪುಸ್ತಕಗಳನ್ನು ಧಾರವಾಡಕ್ಕೆ ಹನ್ನೆರಡನೇ ವರ್ಷದಲ್ಲಿ ಬರುವ ವರೆಗೆ ಕಂಡಿರಲಿಲ್ಲ.

ಕ್ಲಾಸ್ ತುಂಬ ಹಲ್ ಕಟ್ಟರು!
ಹಟಾತ್ತನೆ ಪಠ್ಯಕ್ರಮದ ಮಾಧ್ಯಮ ಒಮ್ಮೆಲೆ ತಮಿಳಿನಿಂದ ಕನ್ನಡಕ್ಕೆ ಓವರ್ನೈಟ್ ಬದಲಾದ ಕೂಡಲೇ ನಮಗೆ ಆದದ್ದು systemic shock! ಯಾರಾದರೂ ಮಾತನಾಡಿಸಿದರೆ ಉತ್ತರ ಹೇಳಲು ಬಾಯಿ ತೆರೆದಾಗ ಬಾಯಿಂದ ಹೊರಬೀಳುತ್ತಿದ್ದುದು ತಮಿಳಿನ ’ಜಿಬ್ಬರಿಷ್’ ಅಂತ ಸಹಪಾಠಿಗಳ ಕಂಪ್ಲೇಂಟ್! ಏನು ಬಡಬಡಿಸುತ್ತಾ ಇದ್ದೀಯಾ, ಅನ್ನಬೇಕು ಅರ್ಥವಾಗದ ಹುಡುಗರೆಲ್ಲ! ತಮಿಳು ನಾಡಿನಲ್ಲಿ ಅವರಿಗೆ ಅಡ್ಡ ಹೆಸರಿಲ್ಲ. ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳವಾದ ಧಾರವಾಡದಲ್ಲಿ ಒಂದಕ್ಕೆ ನಾಲ್ಕು ಅಥವಾ ಆರರವರೆಗೆ ಒಂದು ಕ್ಲಾಸಿನಲ್ಲಿ ಕುಲಕರ್ಣಿ, ಪಾಟೀಲ, ’ಮನಿ’ಗಳು (ಮುಂದಿನ ಮನಿ, ಹಿತ್ತಲಮನಿ, ಮಿಟ್ಟಿಮನಿ,ಮೇಲ್ಮನಿ, ದೊಡ್ಮನಿ ಇತ್ಯಾದಿ) ಇರುತ್ತಿದ್ದರು! ವಿವಿಧ ’ಕಟ್ಟಿ’ಗಳ ಅಡ್ಡಹೆಸರಿನ ನಾಮಧೇಯ ಹೊತ್ತ ಸಾಧು ಹುಡುಗರು ಸಹ ಇದ್ದರು. ಇದೆಲ್ಲ ನಮಗೆ ಹೊಸತು; ಮತ್ತು ತಮಾಷೆ, ಸಹ! ಕ್ಲಾಸಿನಲ್ಲಿ ಪೀರಿಯಡ್ ಗಳ ಮಧ್ಯೆ, ’ಬ್ರೆಕ್’ ವಿರಾಮದಲ್ಲಿ ಗೋಲಿ (marbles) ಆಟ. ಅಂದರೆ ಜಗಳಾಟ. ಒಬ್ಬ ಹುಡುಗನನ್ನು ರೇಗಿಸುತ್ತಿದ್ದಾಗ ಆತ ಎಲ್ಲರನ್ನೂ ಬೈಯುತ್ತ ’ಅಂವ ಒಬ್ಬ ಹಲಕಟ್ಟ, ಇಂವ ಒಬ್ಬ ಹಲಕಟ್ಟ, ಎಲ್ಲರೂ ಸೂ...ಮಕ್ಕಳು’ ಅಂತ ಶಿಷ್ಟ ಭಾಷೆಯಲ್ಲಿ ಮಂತ್ರ ಪುಷ್ಪ ತೂರುತ್ತಿದ್ದ. ಆ ದಿನ ಸಂಜೆಗೆ ಮನೆಗೆ ಹೋಗಿ ನಾವು ಆ ದಿನದ ಶಾಲೆಯ ವೃತ್ತಾಂತವೆಲ್ಲವನ್ನೂ ತಾಯಿಗೆ ಒಪ್ಪಿಸುವುದು. ಆಕೆ ಎಲ್ಲವನ್ನು ಲಕ್ಷ್ಯಗೊಟ್ಟು ಕೇಳಿ ನಮ್ಮನ್ನು ಸಾಂತ್ವನ ಮಾಡುತ್ತ ಹುರಿದುಂಬಿಸುತ್ತಿದ್ದರು. ತಾಳ್ಮೆಯಿಂದ ಕೇಳುತ್ತಿದ್ದರು ಅವ್ವ. ಆಕೆಗೆ ಗೊತ್ತು, ಕನ್ನಡ ನಾಡಿನಲ್ಲಿ ತಮಿಳು ತಲೆಗಳಾಗಿದ್ದ ನಮ್ಮ ಪರದಾಟ! ಟಾಕು ಮಸಿ ದೌತಿ, ಬರೆಯಲು ಕಾಗದ, ಇವುಗಳ ಸಮುದ್ರದಲ್ಲಿ ತಂದೆಯವರು ಯಾವಾಗಲೋ ಕಳೆದು ಹೋಗಿರುತ್ತಿದ್ದರು. ಆ ದಿನ ನಾನು ಕೊಟ್ಟ ವರದಿ ನಮ್ಮ ಕ್ಲಾಸಿನಲ್ಲಿ ಒಂದೇ ಅಡ್ಡ ಹೆಸರಿನ ನಾಮಧಾರಿಗಳ ಲೇಟೆಸ್ಟ್ ’ಸ್ಕೋರ್’ ಹೇಳುತ್ತ, ’ನಮ್ಮ ಕ್ಲಾಸಿನಾಗ ಈಗ ನಾಲ್ಕು ಹಲಕಟ್ಟರು ಭರ್ತಿಯಾಗ್ಯಾರ’ ಅಂದೆ. ಅದನ್ನು ಕೇಳಿ ಬಿದ್ದು ಬಿದ್ದು ನಕ್ಕ ನಮ್ಮ ತಾಯಿ ’ಬರೀ ನಾಲ್ಕೇ? ನೀವು ಹೋಗೋ ಆ ಸಾಲಿ ಪ್ರಸಿದ್ಧ ಅದs. ಒಂದಿಪ್ಪತ್ತು ಹಲಕಟ್ಟರಾದರೂ ಸಿಗತಾರ ಆ ಸಾಲ್ಯಾಗ!’ ಅಂತ ಹೇಳಿ, ಆ ’ಬಿರುದಿನ’ ಅರ್ಥವನ್ನು ತಿಳಿಸಿ ಹೇಳಿದ್ದು ಇನ್ನೂ ನೆನಪಾಗುತ್ತದೆ, ಇದನ್ನು ಬರೆಯುವಾಗ. ವಾಯವ್ಯ ಗೊತ್ತಿಲ್ಲ; ಅವಯವದಂತೆ ಅವ್ವುಯ್ಯನೂ ಒಂದು ದೇಹದ ಭಾಗವನ್ನೇ ಸೂಚಿಸುತ್ತದೆಯೇ ಅಂತ ನಮಗೆ ಗೊಂದಲ. ಅವೆಲ್ಲವನ್ನು ಹಿಂದೆ ಹಾಕಿ ಅದು ಹೇಗೆ ಕನ್ನಡ ಕಲಿತೆವು ಅನ್ನುವ ವಿಷಯ ನನಗೆ ಇನ್ನೂ ವಿಸ್ಮಯದಾಯಕ!

ಅದ್ಯಾವ ಪುಸ್ತಕ?
ನನ್ನ ಕೈಗೆ ಸಿಕ್ಕ ಪುಸ್ತಕವೆಂದರೆ ಈಗ ತಾನೆ ಅಚ್ಚಿನ ಮನೆಯಿಂದ ಹೊರಬಿದ್ದ ೧೯೫೧ ರಿಂದ ೧೯೫೩ರರ ಮಧ್ಯದಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ಕರ್ಮವೀರ ವಾರ ಪತ್ರಿಕೆಯಲ್ಲಿ ನನ್ನ ತಂದೆಯವರು (ಡಾ ಪಾಂಡುರಂಗ ದೇಸಾಯಿ) ಮಕ್ಕಳಿಗಾಗಿ ವಾರ ತಪ್ಪದೆ ಬರೆದ ಕಥೆಗಳ ಗುಚ್ಛ. ಬೇರೆ ಒಂದು ಪ್ರಾಜೆಕ್ಟ್ ಸಲುವಾಗಿ ಧಾರವಾಡದ ಕಿಟಲ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದ ಲೇಖಕ-ವಿಮರ್ಶಕ ಡಾ ಜಿ ಎಂಹೆಗಡೆಯವರು ಹುಬ್ಬಳ್ಳಿಗೆ ಹೋಗಿ ಹೋಗಿ ಈಗ ಝಿರಾಕ್ಸ್ ಮಾಡಿ ಪುಡಿಪುಡಿಯಾಗುತ್ತಿರುವ ಹಾಳೆಗಳ ಪ್ರತಿಗಳನ್ನು ಸಂಗ್ರಹಿಸಿ ಸಂಪಾದಿಸಿದ್ದು. ಅದು ಇನ್ನೂ ಲೋಕಾರ್ಪಣೆಯಾಗಿಲ್ಲ. ನನಗೆ ತುರ್ತು ಸುದ್ದಿ ತಲುಪಿಸೋಣ ಎಂದು ಫೋನು ಮಾಡಿದಾಗ ಅವರಿಗೆ ತಿಳಿಸಿ ವಿನಂತಿಸಿದೆ. ಅಕಸ್ಮಾತ್ತಾಗಿ ಒಂದು ವಾರದ ನಂತರ ಯು ಕೆ ಗೆ ಪ್ರಯಾಣಮಾಡುತ್ತಿದ್ದ ನನ್ನ ಮಿತ್ರರಿಗೆ ಆ ಪುಸ್ತಕದ ಎರಡು ಪ್ರತಿಗಳನ್ನು ಕಳಿಸಿದರು. ಅದರ ಹೊದಿಕೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅದರ ಹಿನ್ನುಡಿಯಲ್ಲಿ ಮೂಲ ಲೇಖಕರ ವಿವರದೊಂದಿಗೆ ಕಥೆಗಳ ವಿಸ್ತಾರದ ಪರಿಚಯ ಸಹ ನಿಮಗೆ ಓದಲು ಸಿಗುತ್ತದೆ. ಅವುಗಳ ಬಗ್ಗೆ ಸವಿಸ್ತಾರದ ವಿಮರ್ಶೆ ಮಾಡಲಾರೆ ಮತ್ತು ನನ್ನಿಂದ ಅದು ಉಚಿತವೂ ಅಲ್ಲ. ಅದನ್ನು ಓದುಗ ಪ್ರಾಜ್ಞರಿಗೆ ಬಿಟ್ಟಿದ್ದು. ನನಗೆ ಮಾತ್ರ ನನ್ನ ತಂದೆ ಮಕ್ಕಳ ಕಥೆಗಳನ್ನು ಸಹ ಬರೆದಿದ್ದರು ಎನ್ನುವ ಸುದ್ದಿ ಗೊತ್ತೇ ಇರಲಿಲ್ಲ, ಅದು ಮಾತ್ರ ಸತ್ಯ. ಇತಿಹಾಸದ ಸಂಬಂದಿಸಿದ ಕಥೆ ಕಾದಂಬರಿ, ಮತ್ತು ವೈಚಾರಿಕ, ಸಂಶೋಧನಾತ್ಮಕ ಕೃತಿಗಳನ್ನು ಬರೆದುದ್ದುದು ಮಾತ್ರ ನನಗೆ ಗೊತ್ತಿತ್ತು. ಈಗ ೭೫ ವರ್ಷಗಳ ಹಿಂದಿನ ವಿವಿಧ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಅವರು ಬರೆದ ಕಥೆಗಳು ಇದರಲ್ಲಿವೆ. ಕೆಲವುಗಳಲ್ಲಿ ಹಿತೋಪದೇಶದಲ್ಲಿದ್ದಂತೆ ಮಾತಾಡುವ ಪ್ರಾಣಿಗಳ ಪಾತ್ರಗಳನ್ನು ಸೃಜಿಸಿದ್ದಿದೆ. ಪುಸ್ತಕದ ಪರಿಚಯವನ್ನಷ್ಟೇ ಮಾಡುವುದು ಈ ಲೇಖನದ ನನ್ನ ಉದ್ದೇಶವಾಗಿತ್ತು. ಆಸಕ್ತರಿಗೆ ಬೇಕಾದ ಉಳಿದ ವಿವರಗಳು ಕವರ್ ಚಿತ್ರದಲ್ಲಿ ಸಿಗುತ್ತವೆ. ಸಂಪಾದಿಸಿ ಪ್ರಕಟಿಸಿದ ಡಾ ಜಿ ಎಂ ಹೆಗಡೆಯವರಿಗೆ ಮತ್ತು ಇಲ್ಲಿಗೆ ತಂದು ಪೋಸ್ಟ್ ಮಾಡಿದ ನನ್ನ ಮಿತ್ರ ಡಾ ಶಿವಶಂಕರ್ ಅವರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ಲೇಖನ ಮತ್ತು ಚಿತ್ರಗಳು: ಶ್ರೀವತ್ಸ ದೇಸಾಯಿ