ಇಕ್ಕಿಗಾಯ್, ಒಂದು ಪರಿಚಯ – ಶ್ವೇತ ಕಿರಣ್

ಪ್ರಿಯರೇ, ಪ್ರತಿಯೊಂದು ಪ್ರಾಚೀನ ಇತಿಹಾಸವುಳ್ಳ ಸಮಾಜದ ಬಗ್ಗೆ, ಅಲ್ಲಿನ ಜನರ ನಡೆ-ನುಡಿಗಳ, ಜೀವನಶೈಲಿಯ ಬಗ್ಗೆ ಜಗತ್ತಿನ ಉಳಿದ ಭಾಗಗಳ ಜನರ ಕುತೂಹಲ ಸಹಜವಾದದ್ದೇ. ಅದರಲ್ಲೂ, ಅಲ್ಲಿನ ಜನರ ಬದುಕಿನ ಮೇಲೆ ಅ ಶೈಲಿಯ ಪರಿಣಾಮ ಒಳ್ಳೆಯದಾಗಿದ್ದು, ಶತಾಯುಷಿಗಳಾಗಿ ಉತ್ತಮ ಅರೊಗ್ಯದಿಂದ ಬದುಕುತ್ತಿದ್ದರಂತೂ, ಸರಿಯೇ ಸರಿ. ಈ ಬಗ್ಗೆ ಅಭ್ಯಸಿಸುವ, ಬರೆಯುವ ಆಸಕ್ತರ ತಂಡವೇ ಹುಟ್ಟಿಬಿಡುತ್ತದೆ. ಮೆಡಿಟರೇನಿಯನ್ ದೇಶಗಳಾಗಲಿ, ಪೂರ್ವ ಏಶಿಯಾದ ದೇಶಗಳಾಗಲಿ ಅಲ್ಲಿಗೆ ಹೋಗಿ, ನೆಲೆಸಿ, ಜೀವನಕ್ರಮವನ್ನು ಅಭ್ಯಾಸ ಮಾಡಿ, ಅದನ್ನು ಉಳಿದ ಜಗತ್ತಿನೊಂದಿಗೆ ಹಂಚುವ ಪ್ರಯತ್ನದ ಬಗೆಗಿನ ಒಂದು ಇಂತಹುದೇ ಪುಸ್ತಕದ ಪರಿಚಯ ಕೊಡಲಿದ್ದಾರೆ, ಶ್ವೇತ ಕಿರಣ್. ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ - ಸಂಪಾದಕ.

ಕಿರುಪರಿಚಯ: ಶ್ವೇತ ಕಿರಣ್: ನಾನು ಮೂಲತಃ ಬೆಂಗಳೂರಿನ ಹುಡುಗಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಎಂ ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದೆ. ೨೦೧೦ ನೇ ಇಸವಿಯಿಂದ ನಾನು ಇಂಗ್ಲೆಂಡ್‌ನಲ್ಲಿ ನೆಲಸಿದ್ದೇನೆ. ಕಳೆದ ಕೆಲವು ವರ್ಷಗಳಿಂದ, ನಾನು ಸಾಮಾನ್ಯ ವೈದ್ಯೆಯಾಗಿ (GP) ಆಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಪತಿ ಹಾಗು ಮಗಳೊಂದಿಗೆ ಲಂಕಾಷೈರಿನ ಒಂದು ಸುಂದರವಾದ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದೇನೆ. ನಾನು ಕೆಲಸದಲ್ಲಿ ಇಲ್ಲದಿರುವಾಗ ಪ್ರಕೃತಿಯ ಮಡಿಲಲ್ಲಿ ಅಥವಾ ಒಳ್ಳೆಯ ಪುಸ್ತಕದಲ್ಲಿ ಮುಳುಗಿರುವುದನ್ನು ನೋಡಬಹುದು. ಇದಲ್ಲದೆ ನೃತ್ಯ, ತೋಟಗಾರಿಕೆ, ವಿವಿಧ ರೀತಿಯ ವ್ಯಾಯಾಮ, ಜೀವನಶೈಲಿ ವಿಧಾನಗಳು- ಇವುಗಳ ಬಗ್ಗೆ ಕೂಡ ಬಹಳ ಆಸಕ್ತಿ ಹೊಂದಿದ್ದೇನೆ.

********************************************************************

೨೦೨೨ ನೇ ವರ್ಷ ಮುಗಿದು ಹೊಸ ವರ್ಷ ಆರಂಭವಾಗಿದೆ. ತಿಳಿದು ತಿಳಿಯದಂತೆ ಕಾಲ ಎಷ್ಟು ವೇಗವಾಗಿ ಸರಿಯುತ್ತಿದೆ ಅಲ್ಲವೇ? ಈಗ ತಾನೆ ೨೦೨೨ ನೇ ವರ್ಷದ ಸಂಕಲ್ಪಗಳನ್ನು ಶುರು ಮಾಡಿದ ಹಾಗಿದೆ. ಆದರೆ ೨೦೨೩ ನೇ ವರ್ಷ ಶುರುವಾಗಿ ಆಗಲೆ ಆರು ತಿಂಗಳು ಕಳೆದಿವೆ. ವರ್ಷಾಂತ್ಯದಲ್ಲಿ ನಾವು ಕಳೆದ ೧೨ ತಿಂಗಳುಗಳ ಬಗ್ಗೆ ಪ್ರತಿಫಲಿಸುತ್ತೇವೆ. ನಾವು ಯಾರು, ಇಲ್ಲಿಗೆ ಬಂದಿರುವ ಉದ್ದೇಶವೇನು? ನಾವು ಏನು ಮಾಡಬೇಕು, ಹೇಗೆ ಬದುಕಬೇಕು, ಜೀವನದ ಅರ್ಥ ಏನು? ಈ ತರಹದ ಪ್ರಶ್ನೆಗಳು ಇಂತಹ ಸಂದರ್ಭದಲ್ಲಿ ನಮ್ಮನ್ನು ಕಾಡುವುದು  ಸಹಜ. ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಬಹಳಷ್ಟು ಪುಸ್ತಕಗಳು ಕೂಡ ಪ್ರಕಟವಾಗಿವೆ. ಸ್ವಸಹಾಯ ಹಾಗೂ ಸ್ವಾವಲಂಬನೆಯನ್ನು ಪ್ರೇರೇಪಿಸುವ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಗೊಳಿಸಿಕೊಳ್ಳುವುದು ಸಮಂಜಸವೆ. ಇತ್ತೀಚೆಗೆ ನಾನು ಓದಿದ ಪುಸ್ತಕ ಇಕಿಗಾಯ್ ಈ ಗುಂಪಿಗೆ ಸೇರಿದೆ.

ಇಕಿಗಾಯ್‌ ಪುಸ್ತಕವನ್ನು ಬರೆದವರು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ. ಇವರು ಜಪಾನ್ ದೇಶದ “ಒಕಿನಾವ” ಎನ್ನುವ ಪ್ರದೇಶಕ್ಕೆ ಭೇಟಿಕೊಟ್ಟು ಅಲ್ಲಿನ ಜನರ ನಡೆ-ನುಡಿ ದಿನನಿತ್ಯದ ಅಭ್ಯಾಸಗಳನ್ನು ಪರಿಶೀಲಿಸಿ ಇವುಗಳ ಬಗ್ಗೆ ಈ ಕೃತಿಯಲ್ಲಿ ಮಾತನಾಡುತ್ತಾರೆ. ಒಕಿನಾವ ಪ್ರದೇಶದ ವಿಶಿಷ್ಟತೆ ಏನೆಂದರೆ, ಅದು ಜಗತ್ತಿನಲ್ಲಿ ಅತಿ ಹೆಚ್ಚು ದೀರ್ಘಾಯುಷಿಗಳಿರುವಂತಹ ಜಾಗ. ಬಹಳ ಜನ ಅಲ್ಲಿ ಶತಾಯುಷಿಗಳಾಗಿದ್ದಾರೆ. ಇವರುಗಳ ದೀರ್ಘಾಯುಷ್ಯದ ಗುಟ್ಟೇನು ಎನ್ನುವುದೇ ಈ ಪುಸ್ತಕದ ಸಾರಾಂಶ.

ಜನರು ಆರೋಗ್ಯವಂತರಾಗಿ, ಸಂತಸದಿಂದ ದೀರ್ಘಕಾಲ ಬದುಕಿರಬೇಕಾದರೆ ಏನು ಮಾಡಬೇಕು ಎಂಬುದನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತಾರವಾಗಿ ಪ್ರಸ್ತುತಪಡಿಸಿದ್ದಾರೆ. ನಮಗೆಲ್ಲ ಇದರ ಬಗ್ಗೆ ಆಗಲೇ ಅಲ್ಪ ಸ್ವಲ್ಪ ಗೊತ್ತಿರಬಹುದು. ಆದರೆ, ಇವುಗಳ ಬಗ್ಗೆ, ಉದಾಹರಣೆಗಳ ಮೂಲಕ ಅರ್ಥಗರ್ಭಿತವಾಗಿ ಹೇಳುವುದು ಒಂದು ರೀತಿಯ ಕಲೆ ಅಂತಾನೆ ಹೇಳಬಹುದು. ಲೇಖಕರು ಆಹಾರ ಪದ್ಧತಿ, ವ್ಯಾಯಾಮ, ಪ್ರಕೃತಿ, ಸಾಮಾಜಿಕ ಬೆಂಬಲ, ಶಾಂತಿಯುತ ಜೀವನದ ಮೌಲ್ಯಗಳು - ಹೀಗೆ ಹಲವಾರು ವಿಷಯಗಳ ಬಗ್ಗೆ ಬಹಳ ಚೆನ್ನಾಗಿ ವಾದಿಸಿದ್ದಾರೆ. ಉದಾಹರಣೆಗೆ, ನಾವು ವ್ಯಾಯಾಮ ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವೇನು ಮ್ಯಾರಥಾನ್ ಓಡಬೇಕಿಲ್ಲ ಅಥವಾ ಪ್ರತಿದಿನ ಜಿಮ್ ಗೆ ಹೋಗಿ ಬೆವರು ಸುರಿಸಬೇಕಾಗಿಲ್ಲ. ನಾವು ಆದಷ್ಟು ಸಕ್ರಿಯರಾಗಿರಬೇಕು. ಕಾಲ್ನಡಿಗೆ, ತೋಟಗಾರಿಕೆ, ನೃತ್ಯ, ಯೋಗ ಹಾಗೂ ತಾಯ್‌ಚಿ, ತರಹದ ಸರಳ ಅಭ್ಯಾಸಗಳನ್ನು ಮಾಡಿದರೆ ಸಾಕು, ಎಷ್ಟೊ ಅನುಕೂಲವಾಗುತ್ತದೆ. ಊಟದಲ್ಲಿ ಕೂಡ ವಿಧವಿಧವಾದ ಆಹಾರಗಳನ್ನು ಸೇವಿಸಬೇಕು. ಹೊಟ್ಟೆ ೮೦ ಪ್ರತಿಶತ ತುಂಬಿದಾಗಲೇ ಊಟ ಮಾಡುವುದನ್ನು ನಿಲ್ಲಿಸಬೇಕು. ಈ ರೀತಿ ಹಲವಾರು ಉತ್ತಮ ಅಭ್ಯಾಸಗಳ ಬಗ್ಗೆ ಮಾತನಾಡುತ್ತಾ, ಲೇಖಕರು, ಜಪಾನ್ ದೇಶದ ಜನರ ಅಭಿಪ್ರಾಯಗಳನ್ನು ತಿಳಿಸುತ್ತಾರೆ.

ಇಕಿಗಾಯ್ ಅಂದರೇನು? “ಬದುಕು” ಹಾಗೂ “ಸಾರ್ಥಕ ಪಡಿಸುವುದು” ಎನ್ನುವ ಎರಡು ಪದಗಳ ಜೋಡಣೆಯಿಂದ ಮೂಡಿರುವ ಪದವೇ ಇಕಿಗಾಯ್‌. ಜೀವನದಲ್ಲಿ ನಾವು ಆರೋಗ್ಯವಾಗಿ, ಸಂತೋಷದಿಂದ, ಶಾಂತಿಯುತ ಬಾಳ್ವೆ ನಡೆಸಬೇಕಾದರೆ ನಾವು ನಮ್ಮ ಜೀವನದ ಉದ್ದೇಶವನ್ನು ಹಾಗು ಧ್ಯೇಯವನ್ನು ಕಂಡುಕೊಳ್ಳಬೇಕು. ಇದೇ ನಮ್ಮ ಇಕಿಗಾಯ್‌. ಹಾಗಾದರೆ ನಾವು ಇಕಿಗಾಯನ್ನು ಹೇಗೆ ಹುಡುಕುವುದು? ಇದನ್ನು ಲೇಖಕರು ಪುಸ್ತಕದಲ್ಲಿ ಒಂದು ಚಿತ್ರದ ಮೂಲಕ ವ್ಯಕ್ತಪಡಿಸುತ್ತಾರೆ. ಈ ಕೆಳಕಂಡ ೪ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಹಿಡಿಯಬೇಕಾಗಿದೆ:
೧) ನೀವು ಏನನ್ನು ಪ್ರೀತಿಸುತ್ತೀರಿ? (ಧ್ಯೇಯ)
೨) ನೀವು ಯಾವುದರಲ್ಲಿ ಪರಿಣಿತರಿದ್ದೀರಿ? (ಗೀಳು)
೩) ನಿಮಗೆ ಏತಕ್ಕಾಗಿ ಸಂಭಾವನೆ ನೀಡಬಲ್ಲರು? (ಉದ್ಯೋಗ)
೪) ಲೋಕದ ಅಗತ್ಯವೇನು? (ವೃತ್ತಿ)

ಧ್ಯೇಯ, ಗೀಳು, ಉದ್ಯೋಗ ಹಾಗೂ ವೃತ್ತಿ, ಇವುಗಳಿಗೆ ನಮ್ಮಲ್ಲಿ ಒಂದೇ ಉತ್ತರವಿದ್ದರೆ, ಅದು ನಮ್ಮ ಇಕಿಗಾಯ್ ಆಗುತ್ತದೆ. ಪ್ರತಿಯೊಬ್ಬರ ಇಕಿಗಾಯ್‌ ಬೇರೆಯಾದರೂ ಜೀವನದ ಅರ್ಥದ ಹುಡುಕಾಟದಲ್ಲಿ ನಾವೆಲ್ಲರೂ ಒಂದೇ. ನಿಮ್ಮಲ್ಲಿ ಕೆಲವರಿಗೆ ಆಗಲೇ ಇಕಿಗಾಯ್‌ ದೊರಕಿರಬಹುದು, ಇನ್ನು ಕೆಲವರು ಹುಡುಕಾಡುತ್ತಿರಬಹುದು, ಕೆಲವರಿಗೆ ಇದರ ಬಗ್ಗೆ ಅರಿವಿರದಿರಬಹುದು. ಈ ಪಯಣದಲ್ಲಿ ನಾವು ಎಲ್ಲೇ ಇದ್ದರೂ ಈ ಪುಸ್ತಕ ನಿಮಗೆ ಸ್ಪೂರ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ನಿಮಗೆ ಸಾಧ್ಯವಾದಲ್ಲಿ ಈ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ.

ಇಂತಿ ನಿಮ್ಮ, 
ಶ್ವೇತ

**************************************************************************

One thought on “ಇಕ್ಕಿಗಾಯ್, ಒಂದು ಪರಿಚಯ – ಶ್ವೇತ ಕಿರಣ್

  1. ಇಕಿಗಾಯ್ ಬಗ್ಗೆ ತಿಳಿದಿದ್ದೆ, ಆದರೆ ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ ಅವರು ಬರೆದ ಪಿಸ್ತಕ ಓದಿಲ್ಲ. ಪರಿಚಯಿಸಿದ ಶ್ವೇತಾ ಕಿರಣ್ ಅವರಿಗೆ ಧನ್ಯವಾದಗಳು ಮತ್ತು ಅನಿವಾಸಿಗೆ ಸುಸ್ವಾಗತ. ಈ ಚಿಕ್ಕ ಪರಿಚಯದಲ್ಲಿ ದೀರ್ಘಾಯುಷ್ಯದ ಗುಟ್ಟನ್ನು ಆ ನಾಲ್ಕು ಪಾಯಿಂಟುಗಳಲ್ಲಿ ವಿವರಿಸಿದ್ದಾರೆ. ಆ ನಾಲ್ಕನ್ನೂ ಒಂದುಗೂಡಿಸುವ ಹವ್ಯಾಸ- ವೃತ್ತಿಯನ್ನು ಆರಿಸಿಕೊಳ್ಳುವದು ಕಷ್ಟ. ಇನ್ನೊಮ್ಮೆ ಅವಕಾಶ ಸಿಕ್ಕರೆ ತೋಟಗಾರಿಗೆಯನ್ನು (professional gardening) ಆರಿಸಿಕೊಳ್ಳುತ್ತೇನೆ! ಒಳ್ಳೆಯ ಸಲಹೆಗಳು. ಅನಿವಾಸಿಗೆ ಬರೆಯುವದರಲ್ಲಿ ಆ ನಾಲ್ಕೂ ಸಿಕ್ಕರೆ ಇನ್ನೂ ಉತ್ತಮ! ಮತ್ತೆ ಬರೆಯುತ್ತಿರಿ ಶ್ವೇತಾ ಅವರೇ!

    Like

Leave a comment

This site uses Akismet to reduce spam. Learn how your comment data is processed.