ನೇಮಿಚಂದ್ರ : ನಮ್ಮ ನಡುವಿನ ಕನ್ನಡದ ವಿಶಿಷ್ಟ ಲೇಖಕಿ ಮತ್ತು ವಿಜ್ಞಾನಿ – ವಿನತೆ ಶರ್ಮ

ಲೇಖಕರು: ವಿನತೆ ಶರ್ಮ

(ವಿನತೆ ಶರ್ಮ, ನಮ್ಮ ಅನಿವಾಸಿ ಬಳಗದ ಬರಹಗಾರರು. ಅಂತರಜಾಲದ ಅವಧಿ ಮತ್ತು ಕೆಂಡಸಂಪಿಗೆ ಗೆ ನಿಯಮಿತವಾಗಿ ಬರೆಯುತ್ತಾರೆ.ಇಂಗ್ಲಂಡನ್ನು ಬಿಟ್ಟು ಆಸ್ಟ್ರೇಲಿಯಾಗೆ ಹೋಗಿದ್ದರೂ,  ಇತ್ತೀಚೆ ಕನ್ನಡ ಬಳಗದ ಆಶ್ರಯದಲ್ಲಿ ಕೆ ಎಸ್ ಎಸ್ ವಿ ವಿ ನಡೆಸಿದ ಕನ್ನಡದಲ್ಲಿ ಮಹಿಳಾ ಲೇಖಕಿಯರು ಎಂಬ ಚರ್ಚೆಗಾಗಿ ಈ ಬರಹವನ್ನು ಬರೆದು ಕಳಿಸಿದ್ದರು. ಅದನ್ನು ಕಾರ್ಯಕ್ರಮದ ಅತಿಥಿಗಳಾದ ಸುಧಾ ಬರಗೂರರು ಆಲಿಸಿ ತುಂಬ ಸಂತೋಷಪಟ್ಟರು. – ಸಂ) 

ಎಂಭತ್ತರ ಮತ್ತು ತೊಂಭತ್ತರ ದಶಕಗಳಲ್ಲಿ ನಾನು ನೇಮಿಚಂದ್ರರನ್ನು ನೋಡಿದಾಗಲೆಲ್ಲ ನನಗೆನಿಸುತ್ತಿದ್ದದ್ದು ಈಕೆ ಅಪ್ಪಟ ತಮಿಳರಂತೆ ಕಾಣುತ್ತಾರೆ ಎಂದು. ಆದರೆ ನೇಮಿಚಂದ್ರ ಅಪ್ಪಟ ಕನ್ನಡದ ಲೇಖಕಿ ಎಂದು ಕೂಡ ನನಗೆ ಗೊತ್ತಿತ್ತು. ಅವರ ಸಣ್ಣಕತೆಗಳನ್ನು ನಾನು ಇಷ್ಟಪಟ್ಟು ಓದುತ್ತಿದ್ದೆ. ತಮ್ಮ ಕತೆಗಳಲ್ಲಿ ಅವರು ವಿಭಿನ್ನವಾಗಿ ರೂಪಿಸುತ್ತಿದ್ದ ಮತ್ತು ಆ ಕಾಲಕ್ಕೆ ಬೋಲ್ಡ್ ಎನಿಸುತ್ತಿದ್ದ ವೃತ್ತಿಪರ, ತಾಂತ್ರಿಕ ಹುದ್ದೆಗಳಲ್ಲಿ ತೊಡಗಿಸಿಕೊಂಡ ಮಹಿಳಾ ಪಾತ್ರಗಳು ನನಗೆ ಇಷ್ಟವಾಗುತ್ತಿದ್ದವು. ಜಾತಿ ಪದ್ಧತಿಯ ಕಟ್ಟಾ ಅನುಸರಣೆಯನ್ನು, ಲಿಂಗ ತಾರತಮ್ಯತೆ, ಪುರುಷ ಪ್ರಾಬಲ್ಯವನ್ನು ಅನುಮೋದಿಸುತ್ತಿದ್ದ ಸಮಾಜವನ್ನು ಮತ್ತು ಸುತ್ತಲೂ ಆವರಿಸಿದ್ದ ಅವೇ ಸ್ಟೀರಿಯೊಟೈಪ್ ನಂಬಿಕೆಗಳನ್ನು ಮತ್ತು ಧೋರಣೆಗಳನ್ನು ನಾನು ಒಪ್ಪಿಕೊಳ್ಳದೇ, ಅವನ್ನು ವಿರೋಧಿಸಿ, ಪ್ರಶ್ನಿಸುತ್ತಿದ್ದ ಕಾಲ ಅದು. ಹಾಗಾಗಿ ಯುವ ಲೇಖಕಿ ನೇಮಿಚಂದ್ರ ತಮ್ಮ ಕಥೆಗಳ ಮುಖ್ಯಪಾತ್ರಗಳನ್ನು ಲಿಬರಲ್ ಆಗಿ ಪೋಷಿಸುತ್ತಿದ್ದದ್ದು ಮೆಚ್ಚುವಂತಿತ್ತು. ಜೊತೆಗೆ ಅವರು ತಮ್ಮದೇ ಅನುಭವಗಳ ಮೂಸೆಯಿಂದ ಹೊರಹೊಮ್ಮಿದ ವೈಜ್ಞಾನಿಕ ಮತ್ತು ಸಂಶೋಧನಾ ಅಧ್ಯಯನದ ಒಳನೋಟಗಳನ್ನು, ದೃಷ್ಟಿಕೋನಗಳನ್ನು ಆ ಪಾತ್ರಗಳಲ್ಲಿ ಹರಿಬಿಟ್ಟು ಅವು ಹಿಂಜರಿಕೆಗಳನ್ನು ಹಿಂದೆ ಬಿಟ್ಟು ಧೈರ್ಯದಿಂದ ಬದುಕುವುದನ್ನು ಚಿತ್ರಿಸುತ್ತಿದ್ದರು. ಆ ಪಾತ್ರಗಳಲ್ಲಿ ತುಂಬಿದ್ದ ಆತ್ಮವಿಶ್ವಾಸ, ದೃಢ ಮನೋಭಾವ ಮತ್ತು ಹೆಣ್ಣುಮಕ್ಕಳಿಗೆ ಬದುಕಿನಲ್ಲಿ ಇರುವ ಅನೇಕ ಆಯ್ಕೆಗಳು – ಇವುಗಳನ್ನು ಹೊಮ್ಮಿಸುತ್ತಿದ್ದ ದಿಟ್ಟ ದನಿ ಆಗ ಮಧ್ಯಮವರ್ಗದ ಸಾಂಪ್ರದಾಯಕ ಕುಟುಂಬಗಳಲ್ಲಿ ಬೆಳೆಯುತ್ತಿದ್ದ ನಮ್ಮಂತಹ ಹುಡುಗಿಯರಿಗೆ ಬಹಳ ಅವಶ್ಯವಾಗಿ ಬೇಕಿತ್ತು.

ನೇಮಿಚಂದ್ರ (ಕೃಪೆ: ಗುಡ್ ರೀಡ್)

ನೇಮಿಚಂದ್ರ ಈಗಿನ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಪ್ರಮುಖ ಲೇಖಕಿ ಎಂದು ಗುರುತಿಸಲ್ಪಡುತ್ತಾರೆ. ಅವರ ಬರವಣಿಗೆಯ ದಾಸ್ತಾನಿನಲ್ಲಿ ಶೇಖರವಾಗಿರುವುದು ಅನೇಕ ಪ್ರಕಾರಗಳ ಕನ್ನಡ ಸಾಹಿತ್ಯ – ಸಣ್ಣ ಕಥೆಗಳ ಸಂಕಲನಗಳು, ಮಹಿಳಾ ಲೇಖಕಿಯರ ಬಗೆಗಿನ ಬರಹಗಳು, van Gogh ನ ಜೀವನಗಾಥೆ, ವಿಜ್ಞಾನದ ವಿಷಯಗಳ ಬಗ್ಗೆ ಪುಸ್ತಕಗಳು, ಹೊತ್ತಿಗೆಗಳು, ಮಹಿಳಾ ಅಧ್ಯಯನದ ಬಗ್ಗೆ ಕೃತಿಗಳು, ಬಹು ಜನಪ್ರಿಯವಾದ ಅವರ ಪ್ರವಾಸಿಕಥೆಗಳ ಪುಸ್ತಕ ರೂಪ ಮತ್ತು ಅವರು ಆಗಾಗ ಬರೆಯುವ ಕವನಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ಸೇರಿಸಿದ ಮಹಿಳಾ ವಿಜ್ಞಾನಿಗಳ ಜೀವನ ಚರಿತ್ರೆಗಳು ಬಹಳ ವಿಶಿಷ್ಟವಾದ ಕೊಡುಗೆ ಎನ್ನಬಹುದು.

ನೇಮಿಚಂದ್ರ ತುಮಕೂರಿನಲ್ಲಿ ಹುಟ್ಟಿದ್ದು. ಅವರ ಮನೆಯಲ್ಲಿ ರಾಶಿರಾಶಿ ಪುಸ್ತಕಗಳಿದ್ದವು. ಮುಂದೆ ಮೈಸೂರಿನಲ್ಲಿ  ವಿದ್ಯಾಭ್ಯಾಸವನ್ನು ಮುಂದುವರೆಸಿ, ಅಲ್ಲೇ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪದವಿ ಪಡೆದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಕಾಲಿಟ್ಟು ಅಲ್ಲಿನ ಸಂಶೋಧನೆಗಳಲ್ಲಿ ತೊಡಗಿಸಿಕೊಂಡರು. ಅವರು ಆರಿಸಿಕೊಂಡದ್ದು ವೈಮಾನಿಕ ಕ್ಷೇತ್ರ. ಬೆಂಗಳೂರಿನ HAL ಸಂಸ್ಥೆಯಲ್ಲಿ ವೈಮಾನಿಕ ಇಂಜಿನಿಯರ್, ಹೆಲಿಕಾಪ್ಟರ್ ರಚನೆಯ ವಿಜ್ಞಾನಿ ಎಂಬಂತೆ ಗುರುತರ ಜವಾಬ್ದಾರಿಯ ಕೆಲಸಗಳ ನಿರ್ವಹಣೆ. ಕುಟುಂಬದ ನಿರ್ವಹಣೆಯ ಜೊತೆಗೆ ಆಗಾಗ್ಗೆ ಮಹಿಳಾ ವಿಜ್ಞಾನಿಗಳ ಜೀವನದ ಎಳೆಗಳನ್ನು  ಹಿಡಿದು, ಅವರನ್ನು ಹುಡುಕುತ್ತಾ ಪ್ರಪಂಚದಾದ್ಯಂತ ತಿರುಗಾಟ. ನೇಮಿಚಂದ್ರ ತಮ್ಮ ಸ್ನೇಹಿತೆಯರೊಂದಿಗೆ ಕೈಜೋಡಿಸಿ ಬೆಳೆಸಿದ ‘ಅಚಲ’ ಪತ್ರಿಕೆ ಮತ್ತು ಈ ವರ್ಷ ಆರಂಭವಾಗಿರುವ ‘ಹಿತೈಷಿಣಿ’ ಅಂತರ್ಜಾಲ ಪತ್ರಿಕೆಯ ರೊವಾರಿ ಕೂಡ.

೧೯೭೯ರಲ್ಲಿ ಆರಂಭವಾದ ಕರ್ನಾಟಕ ಲೇಖಕಿಯರ ಸಂಘದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ ನೇಮಿಚಂದ್ರ ಸಂಘದ ಇತರ ಸದಸ್ಯರೊಡನೆ ಸೇರಿ ಇಪ್ಪತ್ತನೇ ಶತಮಾನದ ಆರಂಭ ಕಾಲದ ಕನ್ನಡ ಲೇಖಕಿಯರ ಬಗ್ಗೆ ಅಧ್ಯಯನಗಳನ್ನು ಕೈಗೊಂಡರು. ಅವರುಗಳ ತಂಡಗಳು ರಾಜ್ಯದ ಹಲವೆಡೆ ತಿರುಗಾಡಿ, ಮೌಖಿಕ ಮತ್ತು ಬರಹದ ದಾಖಲೆಗಳನ್ನು ಸಂಗ್ರಹಿಸಿ ಅಪರೂಪದ ಸಂಗ್ರಹಗಳನ್ನು ಹೊರತಂದರು. ಭಾರತ ಸ್ವಾತಂತ್ರ್ಯದ ಮುನ್ನಾ ದಶಕಗಳಲ್ಲಿ ಬದುಕಿದ್ದ ಬೆಳೆಗೆರೆ ಜಾನಕಮ್ಮ ಎಂಬವರ ಬಗ್ಗೆ ನೇಮಿಚಂದ್ರ ಆಳವಾದ ಅಧ್ಯಯನವನ್ನು ಕೈಗೊಂಡು ಕನಿಷ್ಠ ಶಿಕ್ಷಣವನ್ನು ಪಡೆದಿದ್ದರೂ ಕೂಡ ಜಾನಕಮ್ಮ ಎಂತಹ ಅಪರೂಪದ ಕವಯಿತ್ರಿಯಾಗಿದ್ದರು ಎಂಬ ಅಪರೂಪದ ಜ್ಞಾನವನ್ನು ಕನ್ನಡ ಸಾರಸ್ವತ ಲೋಕಕ್ಕೆ ತಂದರು. ನೇಮಿಚಂದ್ರ ಸ್ವತಃ ತೀಕ್ಷ್ಣವಾದ ಮಹಿಳಾಪರ ಧೋರಣೆಯನ್ನು ಹೊಂದಿದ್ದರೂ ತಮ್ಮನ್ನು ಪ್ರತ್ಯೇಕವಾಗಿ ಸ್ತ್ರೀವಾದಿ ಎಂದು ಕರೆದುಕೊಂಡಿಲ್ಲ.

ನಮ್ಮ ದೇಶಕ್ಕೆ ಹೆಮ್ಮೆ ತರುವ ಅಂತರಿಕ್ಷಯಾನ ಇಂಜಿನಿಯರ್ ಆಗಿ, ಹೆಲಿಕಾಪ್ಟರ್ ವಿಜ್ಞಾನಿಯಾಗಿ ಅತ್ಯಂತ ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸುತ್ತಾ ಇದ್ದರೂ ನಿಸ್ವಾರ್ಥದಿಂದ ನೇಮಿಚಂದ್ರ ಕನ್ನಡ ಸಾಹಿತ್ಯಕ್ಕೆ ಅನವರತ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರು ಸೇರಿಸುತ್ತಾ ಬಂದಿರುವ ಸಾಹಿತ್ಯದ ಅನರ್ಘ್ಯ ಮುತ್ತುಗಳನ್ನು ಗೌರವಿಸಿ ಅವರನ್ನ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಕೆಲವು – ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಮೇರಿ ಕ್ಯೂರಿ ಜೀವನ ಚರಿತ್ರೆ), ಗೊರೂರು ಪ್ರಶಸ್ತಿ (ಸಣ್ಣ ಕಥೆಗಳ ಸಂಗ್ರಹ), ರತ್ನಮ್ಮ ಹೆಗಡೆ ಪ್ರಶಸ್ತಿ (ಯುರೋಪ್ ಪ್ರವಾಸ ಅನುಭವಗಳ ಪುಸ್ತಕ).

ನೇಮಿಚಂದ್ರರಿಗೆ ಇನ್ನೂ ಹೆಚ್ಚಿನ ಕೀರ್ತಿಯನ್ನು, ಜನಪ್ರಿಯತೆಯನ್ನು ತಂದಿರುವುದು ಅವರ ದಕ್ಷಿಣ ಅಮೆರಿಕೆಯ ಮತ್ತು ಪೆರು ಕಣಿವೆಯನ್ನು ಸುತ್ತಿದ ಪ್ರವಾಸಿ ಅನುಭವಗಳ ಪುಸ್ತಕ ‘ಪೆರುವಿನ ಪವಿತ್ರ ಕಣಿವೆಯಲ್ಲಿ’, ಬೆಂಗಳೂರಿನಿಂದ ಆರಂಭವಾಗುವ ಯಹೂದಿಗಳ ನೋವಿನ ಕಥೆಯನ್ನು ಹಿಂಬಾಲಿಸುತ್ತಾ ಜರ್ಮನಿಯನ್ನು, ಇಸ್ರೇಲನ್ನು ಸುತ್ತಿ ಅಲ್ಲಿನ ಯಹೂದಿಗಳ ಅನುಭವಗಳನ್ನು, ಅವರ ಹಿರಿಯರು ಮತ್ತು ಜರ್ಮನಿಯ ಹಿಟ್ಲರ್ ಕಾಲದ ಮರೆಯಲಾಗದ ಸಾವಿನ ವಾಸನೆಯ ಕಥೆಗಳನ್ನು ಹೇಳುವ ‘ಯಾದ್ ವಶೇಮ್’,  ಗಂಡುಹೆಣ್ಣು ಭೇದವಿಲ್ಲದೆ ಎಲ್ಲರಲ್ಲೂ ಆತ್ಮ ಸ್ಥೈರ್ಯ ಮತ್ತು ಆಶಾವಾದವನ್ನು ತುಂಬುವ ‘ಬದುಕು ಬದಲಿಸಬಹುದು’ ಸರಣಿ ಪುಸ್ತಕಗಳು.  


Advertisements

ಸುಧಾ ಬರಗೂರ್ ಸಮ್ಮುಖದಲ್ಲಿ ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಚರ್ಚೆ – ಶ್ರೀನಿವಾಸ ಮಹೇಂದ್ರಕರ್ ಬರೆದ ವರದಿ

ಲೇಖಕರು: ಶ್ರೀನಿವಾಸ ಮಹೇಂದ್ರಕರ್

ಕಳೆದ ಹತ್ತು ವರುಷಳಿಂದ ನಾನು ಲಂಡನ್ನಿನಲ್ಲಿ ನೆಲೆಸಿ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತಿದ್ದೇನೆ. ಈ ಹತ್ತು ವರುಷಗಳಲ್ಲಿ ಹಲವಾರು ಕನ್ನಡ ಕಾರ್ಯಕ್ರಮಗಳಿಗೆ ಹಾಜರಾಗಿದ್ದೇನೆ ಮತ್ತು ಕೆಲವು ಕಾರ್ಯಕ್ರಮಗಳಲ್ಲಿ ಸಣ್ಣ ಪುಟ್ಟ ಹಾಸ್ಯನಾಟಕಗಳಲ್ಲಿ ಭಾಗಿಯೂ ಆಗಿದ್ದೇನೆ. ಇದೇ ಸಮಯಾಂತರ್ಯದಲ್ಲಿ ಹಲವಾರು ಬಾರಿ ಕನ್ನಡ ಬಳಗ ಯು.ಕೆ ಬಗ್ಗೆ ಅನೇಕ ಸ್ನೇಹಿತರಿಂದ ಕೇಳಿದ್ದೆ. ಆದರೆ ಬೇರೆ ಕನ್ನಡ ಸಂಘಗಳಿಂದ ಕನ್ನಡ ಕಾರ್ಯಕ್ರಮಗಳು ಲಂಡನ್ನಿನಲ್ಲಿ ಆಯೋಜನೆಗೊಳ್ಳುತ್ತಿದುದರಿಂದ ಮತ್ತು ಕನ್ನಡ ಬಳಗವು ಕಾರ್ಯಕ್ರಮಗಳನ್ನು ಹೆಚ್ಚಾಗಿ ಉತ್ತರ ಯು.ಕೆ ಅಥವಾ ಮಧ್ಯ ಯು.ಕೆಯಲ್ಲಿ ಆಯೋಜಿಸುತ್ತಿದ್ದುದ್ದರಿಂದ ನನಗೆ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.

ನನಗೆ ಕನ್ನಡ ಪುಸ್ತಕ ಓದುವದರಲ್ಲಿ ಅಲ್ಪ ಸ್ವಲ್ಪ ಆಸಕ್ತಿ ಇದೆ ಮತ್ತು ಆಗೊಮ್ಮೆ ಈಗೊಮ್ಮೆ ಕವನ ಗೀಚುವ ಗೀಳೂ ಕೂಡ ಇದೆ. ಇತ್ತೀಚೆಗಷ್ಟೇ ಗೆಳೆಯರಾದ ಡಾ. ವಿಶ್ವನಾಥ್ (ಆರ್ಪಿಂಗ್ಟಾನ್) ಅವರೊಡನೆ ಲೋಕಾಭಿರಾಮವಾಗಿ ಮಾತಾಡುತ್ತಿರುವಾಗ, ಅವರು ಕನ್ನಡ ಬಳಗದ ಸಾಹಿತ್ಯ ವೇದಿಕೆ (ಕೆ ಎಸ ಎಸ್ ವಿ ವಿ) ಬಗ್ಗೆ ಮತ್ತು ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಸಮಾನಾಂತರವಾಗಿ ನಡೆಸುವ ವಿಚಾರಗೋಷ್ಟಿಗಳ ಬಗ್ಗೆ ಮಾಹಿತಿ ಕೊಟ್ಟಿದ್ದರು. ಅಷ್ಟರಲ್ಲೇ ಒಂದು ದಿನ ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರು ಕರೆ ಮಾಡಿ ಈ ಬಾರಿ ದೀಪಾವಳಿ ಕಾರ್ಯಕ್ರಮ ಕೇಂಬ್ರಿಡ್ಜಿನಲ್ಲಿ ನಡೆಯುತ್ತಿದ್ದು, ಹಾಜರಾಗಲು ನೋಂದಾಯಿಸುವಂತೆ ಕೋರಿದರು. ನಾನು ಅವರಿಗೆ ಈ ಬಾರಿಯೂ ಕೂಡಾ ಸಾಹಿತ್ಯ ವಿಚಾರ ಗೋಷ್ಟಿ ನಡೆಯುತ್ತಿದೆಯೇ ಎಂದು ಕೇಳಿದೆ. ಹೌದು ಎಂಬ ಉತ್ತರ ಬಂತು. ನನ್ನ ಆಸಕ್ತಿ ಅರಿತ ತಿಪ್ಪೇಸ್ವಾಮಿ ಅವರು ಶ್ರೀವತ್ಸ ದೇಸಾಯಿಯವರಿಗೆ ನನ್ನನ್ನು ಪರಿಚಯುಸಿದರು. ನಂತರ ಶ್ರೀವತ್ಸ ದೇಸಾಯಿಯವರು ಮತ್ತು ಕೇಶವ ಕುಲಕರ್ಣಿಯವರು ಅನಿವಾಸಿ ಇ-ತಾಣವನ್ನು ಪರಿಚಯಿಸಿ ನನ್ನ ಎರೆಡು ಕವನಗಳನ್ನು ಕೂಡಾ ಆ ತಾಣದಲ್ಲಿ ಪ್ರಕಟಿಸಿದರು.

ಇಷ್ಟೆಲ್ಲಾ ನಡೆಯುವಾಗ ನಾನು ಕೆ ಎಸ್ ಎಸ್ ವಿ ವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೀವ್ರ ಕುತೂಹಲದಿಂದ ಕಾಯುತ್ತಿದ್ದೆ. ಅಂದು ನವೆಂಬರ್ ೧೦, ಶನಿವಾರ ಬೆಳೆಗ್ಗೆ, ನನ್ನ ಕರಿ ಸುಂದರಿ ಲೆಕ್ಸಸ್- ನೊಳಗೆ ಕುಳಿತು, ಚುಕ್ಕಾಣಿ (ಸ್ಟೇರಿಂಗ್) ಹಿಡಿದು ಕೇಂಬ್ರಿಡ್ಜ್ ಕಡೆಗೆ ಪ್ರಯಾಣ ಹೊರಟೆ. ಕಾರಲ್ಲಿ ನಾನೊಬ್ಬನೇ ಇದ್ದೆ. ನನ್ನ ಹೆಂಡತಿ ಮತ್ತು ಮಕ್ಕಳು ಆರ್ಪಿಂಗ್ಟಾನ್-ನಲ್ಲೆ ನಡೆಯುತಿದ್ದ ಸ್ಥಳೀಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುತ್ತಿದ್ದುದರಿಂದ, ಅವರು ನನ್ನ ಜೊತೆ ಬರಲು ಸಾಧ್ಯವಾಗಿರಲಿಲ್ಲ. ಎಲ್ಲಾ ಅನಿವಾಸಿ ಭಾರತೀಯ ಗಂಡಂದಿರಂತೆ, ಪ್ರತೀ ಶನಿವಾರ ನನ್ನ ಮಗನನ್ನು ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಕರೆದುಕೊಂಡು ಹೋಗಲು ಚಾಲಕನ ಕೆಲಸ ಮಾಡುತಿದ್ದ ನನಗೆ, ಇಂದು ಕೇಂಬ್ರಿಡ್ಜ್-ಗೆ ಒಬ್ಬನೇ ಹೋಗುತ್ತಿರುವುದು, ಗೊತ್ತಿಲ್ಲದಂತೆ ಯಜಮಾನನ ಗತ್ತನ್ನು ನನ್ನೊಳು ಹೊಕ್ಕಿಸಿತ್ತು. ರಾತ್ರಿಯಲ್ಲ ಅಭೋ ಎಂದು ಸುರಿದ ಮಳೆಯಿಂದಾಗಿ ತೋಯ್ದು ಹೋಗಿದ್ದ ರಸ್ತೆಗಳು, ಆ ಸೂರ್ಯನ ಕಿರಣಗಳ ಸೊಬಗಿನಿಂದ, ಟೂತ್-ಪೇಸ್ಟ್ ಜಾಹಿರಾತಿನಲ್ಲಿ ನಟಿಸುವ ಬೆಡಗಿಯ ಹಲ್ಲುಗಳಂತೆ ಫಳಫಳನೆ ಹೊಳೆಯುತ್ತಿದ್ದವು. ಅದು ನನ್ನೊಳಗಾವರಿಸಿದ್ದ ಗತ್ತಿನ ಪ್ರತಿಫಲನವೋ ಅಥವಾ ಕ್ಷಣಿಕವಾಗಿ ಬೀಗುತ್ತಿದ್ದ ನನ್ನನ್ನು ಅವಹೇಳಿಸುವ ಪರಿಯೋ ಗೊತ್ತಾಗಲಿಲ್ಲ.

M25 ವರ್ತುಲ ಹೆದ್ದಾರಿಯನ್ನು ಸೇರುವ ದಾರಿಯಲ್ಲಿ ಶರತ್ಕಾಲದ ತಂಗಾಳಿಗೆ ಹಣ್ಣಾದ ಸಾಲು ಮರಗಳ ಮಂಜುಗೆಂಪು ಬಣ್ಣದ ಎಲೆಗಳು, ಸಿನೆಮಾಗಳಲ್ಲಿ ಕಾಣಸಿಗುವ ದೃಶ್ಯ ವೈಭವೀಕರಣ (visual effects) ದಂತೆ, ಸುತ್ತಲಿನ ದೃಶ್ಯಾವಳಿಗಳನ್ನು ಸಿಂಗರಿಸಿದ್ದವು. M25 ನಿಂದ M11 ಸೇರಿ, ಒಟ್ಟಾರೆ ಒಂದುವರೆ ಗಂಟೆ ಟ್ರಾಫಿಕ್ ಜಾಮ್ ಇಲ್ಲದ ನಿರಾಯಾಸ ಪ್ರಯಾಣದ ಬಳಿಕ ಸುಮಾರು ಹತ್ತು ಗಂಟೆಯ ಹೊತ್ತಿಗೆ ಕೇಂಬ್ರಿಡ್ಜ್-ನ ಕಂಬೇರ್-ಟೋನ್ ವಿಲೇಜ್ ಕಾಲೇಜ್ ತಲುಪಿದೆ. ಬಂದವರನ್ನು ಸ್ವಾಗತಿಸಿ, ಅವರ ನೋಂದಣಿಯನ್ನು ಪರಿಶೀಲಿಸುತ್ತಿದ್ದ ನಗುಮೊಗದ ವನಿತೆಯರಿಬ್ಬರು, ಉಪಹಾರವಿನ್ನೂ ಚಾಲ್ತಿಯಲ್ಲಿದೆ ಎಂದು ತಿಳಿಸಿದಾಗ, ತೆಳುವಾಗಿ ಮೂಗಿಗೆ ಬಡೆಯುತ್ತಿದ್ದ ತಿಂಡಿ ವಾಸನೆಯ ರಭಸ ಒಮ್ಮೆಲೇ ಜೋರಾಗಿ, ನನ್ನನ್ನು ಉಪಹಾರ ಕೋಣೆಯ ಕಡೆ ಸೆಳೆದೊಯ್ದಿತ್ತು. ತಡವಾಗಿ ಹೋದರೂ ನನ್ನ ಪಾಲಿನ ಬಿಸಿ ಬಿಸಿ ದೋಸೆ ಮತ್ತು ರುಚಿ ರುಚಿ ಪೊಂಗಲ್ ನನಗಾಗಿ ಕಾದಿತ್ತು. ಕಾರ್ಯಕ್ರಮ ಆಗಲೇ ಪ್ರಾರಂಭವಾಗಿರಬಹುದೇನೋ ಎಂದೆಣಿಸಿ, ಬೇಗ ಬೇಗನೆ ಉಪಹಾರ ಸೇವಿಸಿ, ಸ್ವಲ್ಪ ಕಾಫಿಗೂ ಕೂಡಾ ಪುರುಸೊತ್ತು ಮಾಡಿಕೊಂಡೆ.

ತರಾತುರಿಯಲ್ಲಿ ಕಾರ್ಯಕ್ರಮ ಜರುಗಬೇಕಾಗಿದ್ದ ಆಡಿಟೋರಿಯಂ ಕಡೆ ಧಾವಿಸಿದೆ. ಕಾರ್ಯಕ್ರಮ ಇನ್ನೂ ಪ್ರಾರಂಭವಾಗದಿರುವುದನ್ನು ಅರಿತು ಸಮಾಧಾನವಾದಾಗ, ಕಂಗಳು ವಿಶಾಲವಾದ, ಬಣ್ಣದ ಲಾಂಛನಗಳಿಂದ ಸಿಂಗಾರ ಗೊಂಡಿದ್ದ ವೇದಿಕೆಯ ಕಡೆ ಹರಿಯಿತು. ಕಡಿಮೆಯೆಂದರೂ ಅರುನೂರು ಜನರು ಕೂರಲು ಅವಕಾಶವಿದ್ದ ಆಡಿಟೋರಿಯಂ, ಮುಕ್ಕಾಲು ತುಂಬಿಹೋಗಿತ್ತು. ತಿಪ್ಪೇಸ್ವಾಮಿಯವರು ವೇದಿಕೆಗೆ ಆಗಮಿಸಿ, ಕಾರ್ಯಕ್ರಮದ ಕೇಂದ್ರಬಿಂದುಗಳಾಗಿದ್ದ ಸುಧಾ ಬರಗೂರ್ ಅವರನ್ನೂ, ಗಾಯಕ ಅಜಿತ್ ವಾರಿಯರ್ ಅವರನ್ನೂ, ಕನ್ನಡ ಬಳಗ ಯು.ಕೆಯ ಅಧ್ಯಕ್ಷರಾದ ವಿವೇಕ್ ತೋಂಟದಾರ್ಯ ಅವರನ್ನೂ ಹಾಗೂ ಉಪಾಧ್ಯಕ್ಷರಾದ ಪ್ರಜೋತಿ ಮಧುಸೂದನ್ ಅವರನ್ನೂ ವೇದಿಕೆಗೆ ಬರಮಾಡಿಕೊಂಡು, ಸಮಾರಂಭದ ಉದ್ಘಾಟನೆಗೆ ಚಾಲನೆ ನೀಡಿದರು. ಅಧ್ಯಕ್ಷರ ಭಾಷಣದ ನಂತರ, ಕನ್ನಡ ನಾಡಿನ ಹರಟೆಮಲ್ಲಿ ಸುಧಾ ಬರಗೂರ್ ಅವರು ತಮ್ಮ ಯು.ಕೆ ಪ್ರಯಾಣಕ್ಕೆ ಎದುರಾದ ತೊಡಕುಗಳನ್ನು ಅತ್ಯಂತ ಹಾಸ್ಯಮಯವಾಗಿ ನಿರೂಪಿಸುತ್ತ , ದೀಪಾವಳಿಯ ಮನೋರಂಜನೆಯನ್ನು ತಮ್ಮ ಹಾಸ್ಯ ಚಾಟಾಕಿಗೊಳಡನೆ ಪ್ರಾರಂಭಿಸಿಯೇ ಬಿಟ್ಟರು. ಅವರ ಭಾಷಣ ಕೇವಲ ಹತ್ತು ಹದಿನೈದು ನಿಮಿಷಗಳಿಗೆ ಸೀಮಿತವಾಗಿದ್ದು, ಸಂಜೆ ನಡೆಯಬೇಕಾಗಿದ್ದ ಹಾಸ್ಯವೋತ್ಸವದ ಒಂದು ಝಲಕ್ ನಂತಿತ್ತು.

 

                                                                         ಅನಿವಾಸಿ ತಂಡ (ಕೃಪೆ: ರಾಮಶರಣ)

ಸರಿಯಾಗಿ ಹನ್ನೊಂದುವರೆಗೆ, ಉಧ್ಘಾಟನಾ ಸಮಾರಂಭ ಸಂಪೂರ್ಣವಾಗಿ ಮುಗಿದು, ನಾನು ಎದುರು ನೋಡುತ್ತಿದ್ದ ಕೆ ಎಸ್ ಎಸ್ ವಿ ವಿ ಕಾರ್ಯಕ್ರಮ, ಸುಮಾರು ಮೂವತ್ತೈದು ಜನರು ಕೂರಬಲ್ಲ ಒಂದು ಕೋಣೆಯೊಳಗೆ ಆಯೋಜನೆ ಗೊಂಡಿತ್ತು. ಸುಧಾ ಬರಗೂರ್ ರವರು ಮತ್ತು ಡಾ|| ವತ್ಸಲಾ ರಾಮಮೂರ್ತಿಯವರು ಚಿಕ್ಕ ವೇದಿಕೆಯಲ್ಲಿ ಆಸೀನರಾಗಿದ್ದರು.

ವತ್ಸಲಾ ರಾಮಮೂರ್ತಿಯವರ ನೇತೃತ್ವದಲ್ಲಿ “ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಒಂದು ನೋಟ” ಎಂಬ ವಿಷಯವಾಗಿ ಸಭೆ ಚರ್ಚೆ ನಡೆಸಲು ಅಣಿಯಾಗಿತ್ತು. ಸುಧಾ ಬರಗೂರ್ ಅವರನ್ನು ಸ್ವಾಗತಿಸಿದ ವತ್ಸಲಾರವರು ಹಳೆಗನ್ನಡ, ನಡುಗನ್ನಡ ಮತ್ತು ಆಧುನಿಕ ಶತಮಾನಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಅನೇಕ ಮಹಿಳಾ ಲೇಖಕಿಯರ ಪರಿಚಯ ಮಾಡಿಕೊಡುವುದರ ಮೂಲಕ ಚರ್ಚೆಗೆ ಚಾಲನೆ ನೀಡಿದರು. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಹೇಗೆ ಅನೇಕ ಲೇಖಕಿಯರು ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾದರು ಹಾಗೂ ಆಯಾ ಕಾಲಘಟ್ಟಕ್ಕೆ ಹೊರಬಂದ ವಿಭಿನ್ನ ಕೃತಿಗಳು ಹಾಗು ಲೇಖಕಿಯರ ಬಗ್ಗೆ ವತ್ಸಲಾರವರು ತುಂಬಾ ಸೊಗಸಾಗಿ ಮನಮುಟ್ಟುವಂತೆ ವಿಶ್ಲೇಷಿಸಿದರು.

ನಂತರ ನಾನು ಸುಧಾ ಬರಗೂರ್ ಅವರನ್ನು ಪರಿಚಯಿಸುವ ಒಂದು ಪುಟ್ಟ ಕವನವನ್ನು ಸಭಿಕರೊಡನೆ ಹಂಚಿಕೊಂಡೆ.

ಹನ್ನೆರಡು ವರುಷದ ಹುಡುಗಿ ದೀಕ್ಷಾ ಬಿಲ್ಲಹಳ್ಳಿ, ತಾನೇ ಸೃಷ್ಟಿಸಿದ `ಸೃಷ್ಟಿ` ಎಂಬ ಕವನವನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಳು. ನಮ್ಮ ಮಕ್ಕಳು ಕನ್ನಡ ಮಾತನಾಡಿದರೆ ಸಾಕು ಎಂದೆಣಿಸುವ ಅನಿವಾಸಿ ತಂದೆ ತಾಯಂದಿರ ನಡುವೆ, ಕವನ ಬರೆಯಲು ಪ್ರೋತ್ಸಾಹಿಸಿದ ಅವಳ ತಂದೆ ತಾಯಿಯ ಬಗ್ಗೆ ಗೌರವವೆನಿಸಿತು. ನೆರೆದ ಸಹೃದಯರು ಚಪ್ಪಾಳೆಗಳೊಂದಿಗೆ ದೀಕ್ಷಾಳನ್ನು ಪ್ರೋತ್ಸಾಹಿಸಿದರು.

ಡಾ|| ಅರವಿಂದ ಕುಲಕರ್ಣಿಯವರು ಸುನಂದಾ ಬೆಳಗಾವಕರ್ ಅವರ ಬಗ್ಗೆ ಮಾತನಾಡುತ್ತಾ, ತಮ್ಮ ಕುಟುಂಬದವರಿಗೆ ಅವರೊಡನಿದ್ದ ಒಡನಾಟವನ್ನು ಬಿಚ್ಚಿಟ್ಟಾಗ, ಅಂಥವರ ಸಂಗ ದೊರೆತ ತಾವೇ ಧನ್ಯರು ಎಂದೆನಿಸುತ್ತಿತ್ತು.

ಡಾ|| ಕೇಶವ ಕುಲಕರ್ಣಿಯವರು ಪ್ರತಿಭಾ ನಂದಕುಮಾರ್ ಅವರ ಕೆಲವು ಹಾಸ್ಯಭರಿತ ಕವನಗಳನ್ನು ಪ್ರಸ್ತುತ ಪಡಿಸುವುದರ ಜೊತೆಗೆ, ಆ ಕವನಗಳ ವಿಶ್ಲೇಷಣೆಯಲ್ಲಿ ಸಿಡಿಸಿದ ಕೆಲವು ಹಾಸ್ಯ ಚಟಾಕಿಗಳು ನಮ್ಮೆಲ್ಲರ ದಂತ ಪಂಕ್ತಿಗಳು ಮತ್ತು ಮುಖದ ಮಾಂಸಖಂಡಗಳು ಸಡಿಲಗೊಳ್ಳುವಂತೆ ಮಾಡಿದ್ದವು.

ನಂತರ ನಾನು ಹಿಂದಿಯ ಪ್ರಖ್ಯಾತ ಕವಯತ್ರಿ ಸುಭದ್ರಾ ಕುಮಾರಿ ಚೌಹಾನ್ ಅವರ “ಮೇರಾ ನಯಾ ಬಚಪನ್ ” ಎಂಬ ಕವಿತೆಯ ಭಾವಾನುವಾದ “ನಮ್ಮೆಲ್ಲರ ಬಾಲ್ಯ” ಎಂಬ ಕವನವನ್ನು ಪ್ರಸ್ತುತ ಪಡಿಸಿದೆ.

ಪ್ರೇಕ್ಷಕರು (ಕೃಪೆ: ಶ್ರೀವತ್ಸ ದೇಸಾಯಿ)

ಡಾ|| ಪ್ರೇಮಲತಾ ಅವರು ಇತ್ತೀಚೆಗಷ್ಟೇ ನಮ್ಮನ್ನಗಲಿದ ಗೌರಿ ಲಂಕೇಶ್ ಅವರ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಅವರು ಬರೆದ “ದ ವೇ ಐ ಸೀ ಇಟ್” ಎಂಬ ಕೃತಿಯ ಬಗ್ಗೆ ಮಾತನಾಡುತ್ತಾ, ಅವರ ಕೊನೆಯ ದಿನಗಳಲ್ಲಿನ ಆರ್ಥಿಕ ಪರಿಸ್ಥಿತಿ, ಗೌರಿ ಅವರ ವೈಚಾರಿಕ ಶುದ್ಧತೆಯನ್ನು ತೋರುತ್ತದೆ ಎಂದು ವಿಶ್ಲೇಷಿಸಿದರು.

ಡಾ|| ರಾಮಶರಣ ಲಕ್ಷ್ಮೀನಾರಾಯಣ ಅವರು ಅನುಪಮಾ ನಿರಂಜನ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ವೆಂಕಟಲಕ್ಷ್ಮಿಯವರ ಬಗ್ಗೆ ಮಾತನಾಡಿದರು. ಆಗಿನ ದಿನಗಳಲ್ಲಿ ಅವರಿಗಿದ್ದ ಧೈರ್ಯ ಮತ್ತು ಸಮಾಜದ ಕಟ್ಟುಪಾಡುಗಳನ್ನು ಕಿತ್ತೊಗೆದು, ತಮ್ಮದೇ ರೀತಿಯಲ್ಲಿ ಬದುಕುವ ಆತ್ಮಸ್ಥೈರ್ಯದ ಬಗ್ಗೆ ವಿಶ್ಲೇಷಿಸಿದರು.

ವಿಜಯನಾರಸಿಂಹ ಅವರು ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ಸುಧಾಮೂರ್ತಿಯವರ ಸಾಹಿತ್ಯ ಆಸಕ್ತಿ ಮತ್ತು ಅವರು ಹೊರತಂದಿರುವ ಅನೇಕ ಕೃತಿಗಳ ಬಗ್ಗೆ ಮಾತನಾಡಿದರು.

ಅನಿವಾಸಿ ತಂಡದ ವಿನುತೆ ಶರ್ಮ (ಈಗ ಅವರು ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ) ಅವರ ಪರವಾಗಿ ರಾಮಶರಣ್ ಅವರು ಬ್ಯಾಟಿಂಗ್ ಮಾಡುತ್ತಾ, ನೇಮಿಚಂದ್ರರ ಬದುಕು ಮತ್ತು ಸಾಹಿತ್ಯದ ಬಗ್ಗೆ ಮಾತನಾಡಿದರು.

ಡಾ|| ವತ್ಸಲಾ ರಾಮಮೂರ್ತಿಯವರು ಭುವನೇಶ್ವರಿ ಹಗ್ಗಡೆಯವರ ಹಾಸ್ಯ ಬರಹಗಳು, ವಿಚಾರ ಧಾರೆಗಳು ಮತ್ತು ಹೊರತಂದ ಕೃತಿಗಳ ಬಗ್ಗೆ ಮಾತನಾಡಿದರು.

ಇಷ್ಟೆಲ್ಲಾ ನಡೆಯುತ್ತಿರುವಾಗ, ನನಗೆ ನಾನೆಲ್ಲೋ ಬೆಂಗಳೂರಿನ ಕನ್ನಡ ಭವನದಲ್ಲಿರುವೆನೇನೋ ಎಂಬಂತೆ ಭಾಸವಾಗುತ್ತಿತ್ತು. ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಟಿಕೆಟ್ ಇಲ್ಲದೇ ಬೆಂಗಳೂರಿಗೆ ಹೋಗಿ ಬಂದಂತಾಗುತಿತ್ತು.

ಸುಧಾ ಬರಗೂರ್ ಮಾತುಗಳ ತುಣುಕು (ಕೃಪೆ: ಶ್ರೀವತ್ಸ ದೇಸಾಯಿ)

ನಮ್ಮ ಪ್ರಮುಖ ಅತಿಥಿ ಸುಧಾ ಬರಗೂರ್ ಅವರು ಇದನ್ನೆಲ್ಲಾ ಆಲಿಸುತ್ತಾ, ಟಿಪ್ಪಣಿ ಮಾಡಿಕೊಳ್ಳುತ್ತ ಸಾವಧಾನವಾಗಿ ಕಾಯುತ್ತಾ ಕುಳಿತಿದ್ದರು. ಮಾತೇ ತಮ್ಮ ಬಂಡವಾಳ ಎಂದು ಹೇಳಿಕೊಳ್ಳುವ ಅವರ ಮೌನ, ಕೆ.ಎಸ್.ಎಸ್.ವಿ.ವಿ-ಯ ಈ ವಿಚಾರಗೋಷ್ಠಿಯ ವಿಚಾರಗಳ ಗಾಢತೆಗೆ ಕನ್ನಡಿ ಹಿಡಿದಂತಿತ್ತು. ಕೊನೆಗೂ ಮೈಕ್ ಹಿಡಿದ ಸುಧಾ ಬರಗೂರರು ತಮ್ಮ ಸಾಹಿತ್ಯ ಆಸಕ್ತಿ ಮತ್ತು ಕನ್ನಡ ಪುಸ್ತಕಗಳಿಂದ ಸಮೃದ್ಧವಾಗಿದ್ದ ತಮ್ಮ ಜೀವನದ ಬಗ್ಗೆ ಮಾತನಾಡಿದರು. ಇಂಗ್ಲೆಂಡಿನಲ್ಲಿ ನೆಲೆಯೂರಿ ಗರಿಗೆದರುತ್ತಿರುವ ಸಾಹಿತ್ಯಾಸಕ್ತಿಗೆ ಬೆರಗು ವ್ಯಕ್ತ ಪಡಿಸಿದರು. ಕೆ.ಎಸ್.ಎಸ್.ವಿ.ವಿ-ಯನ್ನು ಹುಟ್ಟು ಹಾಕಿ, ಪಾಲಿಸಿ ಪೋಷಿಸುತ್ತಿರುವ ಎಲ್ಲ ಹಿರಿಯರಿಗೂ ತಮ್ಮ ಧನ್ಯವಾದ ತಿಳಿಸಿದರು. ಹೀಗೆ ಸಾಹಿತ್ಯದ ಜಾತ್ರೆಗೆ ತೆರೆಬಿದ್ದು, ಮತ್ತೊಮ್ಮೆ ಹಬ್ಬದ ಊಟ ಮಾಡಲು ನಾವೆಲ್ಲರೂ ಭೋಜನ ಶಾಲೆಗೆ ತೆರಳಿದೆವು.