ಕೈ ಹಿಡಿದು ನಡೆಸಿದ ಗುರುವಿನ ಕುರಿತು..

ಎಲ್ಲರಿಗೂ ನಮಸ್ಕಾರ,
ನಾನು ಇಂದು ಬರೆಯುತ್ತಿರುವುದು, ನನ್ನ ಪ್ರೀತಿಯ ಗುರುಗಳಾದ ಡಾ. ಶಾಲಿನಿ ರಘುನಾಥ್ ಅವರ ಕುರಿತು. ಡಾ. ಶಾಲಿನಿ ರಘುನಾಥ್ ಅವರು
ನಮ್ಮ ಕನ್ನಡ ನಾಡಿನ ಹೆಸರಾಂತ ಜಾನಪದ ವಿದ್ವಾಂಸರು. ಭಾಷಾ ವಿಜ್ಞಾನದಲ್ಲಿ ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.
ಜಾನಪದ ಸಂಶೋಧನೆ ಮತ್ತು ಸಂಗ್ರಹಕಾರ್ಯದಲ್ಲೂ ಅವರು ತಮ್ಮ ವಿಶೇಷ ಛಾಪು ಮೂಡಿಸಿದ್ದಾರೆ. ತಮ್ಮ ಉದ್ಯೋಗವನ್ನು ತಪಸ್ಸಿನಂತೆ
ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನದ ರುಚಿ ಹತ್ತಿಸಿದವರು. ಕಲಿತ ವಿದ್ಯೆಯನ್ನು ಬದುಕಿಗೆ ಅಳವಡಿಸಿಕೊಂಡು ನಿರಂತರವಾಗಿ ಚಿಂತನೆ ಮಾಡುವ ಹಾದಿಯಲ್ಲಿ ನನ್ನನು ಕೈಹಿಡಿದು ನಡೆಸಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ವಿದ್ಯಾರ್ಥಿಯಾಗಿ ನಾನು
ಕಳೆದ ಎರಡು ವರ್ಷಗಳು ಆ ನಂತರದ ಈ 14 ವರ್ಷಗಳೂ ನನ್ನನು ಅದೇ ಕಲಿಕೆಯ ಹಾದಿಯಲ್ಲಿಟ್ಟಿವೆ. ಅಂತಹ ಗುರುವಿನ ಜೊತೆಗೆ ನನ್ನ ಒಡನಾಟದ ಕುರಿತು ನನ್ನ ಈ ಲೇಖನ.
- ಅಮಿತಾ ರವಿಕಿರಣ್
ಚಿತ್ರಕೃಪೆ; ಗೂಗಲ್
ಪದವಿಯು ಮುಗಿದು ನಾಲ್ಕು ವರ್ಷಗಳ ಧೀರ್ಘ ಅಂತರದ ನಂತರ ಮತ್ತೆ ಕಾಲೇಜ್ ಸೇರಿಕೊಳ್ಳುವ ಸುಯೋಗ ಬಂದಿತ್ತು ಕಲಿಯಬೇಕೆಂಬ ಆಸೆ
ಇತ್ತಾದರೂ ಅದನ್ನು ಆಚರಣೆಗೆ ಹೇಗೆ ತರುವುದು ಎಂಬುದು ತಿಳಿದಿರಲಿಲ್ಲ. ಪದವಿ ಪಡೆದಿದ್ದು ಸಂಗೀತದಲ್ಲಿ ಆದರೆ ಸ್ನಾತಕೋತ್ತರ
ಅಧ್ಯಯನವನ್ನು ಸಂಗೀತದಲ್ಲೇ ಮುಂದುವರಿಸುವ ಮನಸ್ಸಿರಲಿಲ್ಲ ಸಂಗೀತ ಬಿಡುವ ಮನಸ್ಸು ಇರಲಿಲ್ಲ. ಈ ನಡುವೆ ಅತಿಯಾಗಿ ನನ್ನ ಮನಸನ್ನ
ಆವರಿಸಿದ್ದ ವಿಷಯ ಜಾನಪದ. ಆಗ ನನಗೆ ಜನಪದ ಜಾನಪದ ದ ನಡುವಿನ ವ್ಯತ್ಯಾಸವು ತಿಳಿದಿರಲಿಲ್ಲ.
ನನ್ನ ದನಿ ಕೇಳಿದ ಹಲವು ಮಂದಿ ಜನಪದ ಸಂಗೀತವನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳುತ್ತಿದ್ದರು ಮತ್ತು ಯಾವ
ಕಾರ್ಯಕ್ರಮಕ್ಕೆ ಹೋದರೂ ಜಾನಪದ ಗೀತೆಗಳನ್ನು ಹಾಡು ಎಂಬ ಅಪೇಕ್ಷೆ ಮುಂದಿಡುತ್ತಿದ್ದರು. ಆ ಒಂದು ಹಿನ್ನೆಲೆಯಲ್ಲಿ ಜನಪದ ಸಂಗೀತದ
ಬಗೆಗೆ ಏನಾದರು ಹೆಚ್ಚಿನದ್ದು ಕಲಿಯಬೇಕು ಎಂಬ ಸ್ಪಷ್ಟ ಉದ್ದೇಶದೊಂದಿಗೆ ನಾನು ಜಾನಪದ ಅಧ್ಯಯನ ಪೀಠದ ಹೊಸ್ತಿಲನ್ನು ತುಳಿದಿದ್ದೆ.

ಆ ದಿನ ನಮ್ಮ ಪ್ರವೇಶ ಪ್ರಕ್ರಿಯೆ ಆರಂಭವಾದ ದಿನ. ನಾನು ಮೊದಲ ಬಾರಿ ಶಾಲಿನಿ ಮೇಡಂ ಅವರನ್ನು ನೋಡಿದ್ದು ಹಸಿರು ಕೆಂಪಂಚಿನ
ಧಾರವಾಡ ಸೀರೆಯಲ್ಲಿ ನಗು ಮೊಗದಿಂದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿದ್ದರು. ಅದೆಷ್ಟು ಸರಳತೆಯಿಂದ ಅವರು ನಮ್ಮೊಂದಿಗೆ
ಮಾತನಾಡಿದ್ದರೆಂದರೆ, ಅವರು ಅಧ್ಯಯನ ಪೀಠದ ಅಧ್ಯಕ್ಷೆ ಎಂಬುದು ನನಗೆ ತಿಳಿಯಲೇ ಇಲ್ಲ.
ಅಡ್ಮಿಷನ್ ಆಗಿ ಮನೆಗೆ ಹೋದಾಗ ಅದೇ ತಿಂಗಳ ಕಸ್ತೂರಿ ಮಾಸಪತ್ರಿಕೆಯಲಿ ಭಾಷಾ ಶಾಸ್ತ್ರ ಕುರಿತಾದ ಒಂದು ಲೇಖನದಲ್ಲಿ ಅವರ ಹೆಸರು
ಉಲ್ಲೇಖಿಸಲಾಗಿತ್ತು. ಅವರಲ್ಲಿರುವ ಅಪರೂಪದ ಪುಸ್ತಕ ಸಂಗ್ರಹದ ಬಗ್ಗೆ ಲೇಖಕ ತುಂಬಾ ಚನ್ನಾಗಿ ಬರೆದಿದ್ದರು. ಅವರೇ ಇವರು ಎಂದು
ತಿಳಿದಾಗ ಮನಸ್ಸು ಸಂಭ್ರಮಿಸಿತ್ತು.

ಕಾಲೇಜ್ ಶುರುವಾದ ನಂತರ ನಾವು ಅವರನ್ನು ಭೇಟಿ ಮಾಡಲು ಅವರ ಚೇಂಬರ್ ಗೆ ಹೋದಾಗ ಅವರು ಮಾತನಾಡಿದ ಶೈಲಿ, ಅವರ
ಆತ್ಮೀಯತೆ ನನ್ನ ಶಿಕ್ಷಣ ಮುಂದುವರಿಸುವ ಕುರಿತು ಇದ್ದ ಹಲವು ದುಗುಡ ಕಡಿಮೆ ಮಾಡಿದ್ದವು. ಜೊತೆಗೆ ಅಷ್ಟೇ ಕಳಕಳಿಯಲ್ಲಿ ಹೇಳಿದ್ದರು.
ಜಾನಪದವನ್ನು ಸುಲಭ , ಡಿಗ್ರಿ ಮುಗಿಸಲು ಒಂದು ಸರಳ ವಿಷಯ ಎಂಬ ಭಾವನೆ ಸಾಮಾನ್ಯ. ಮತ್ತು ಅಧ್ಯಯನ ಪೀಠಕ್ಕೆ ಬರುವ ಹಲವರಲ್ಲಿ
ಈ ಆಲೋಚನೆಯೇ ಇರುತ್ತದೆ ಆದರೆ ನೀವು ಅದನ್ನು ನಿಜಕ್ಕೂ ಇಷ್ಟಪಟ್ಟು ಅಭ್ಯ್ಯಸಿಸಿ ಏನಾದರು ಹೊಸ ದಿಶೆಯಲ್ಲಿ ಆಲೋಚಿಸಬೇಕು. ಬರೀ
ಜಾಬ್ ಗಿಟ್ಟಿಸಲು ಒಂದು ಡಿಗ್ರಿ ಅಂದುಕೊಳ್ಳದೆ ಪ್ರೀತಿಯಿಂದ ಅಧ್ಯಯನ ಶುರು ಮಾಡಿ, ಎಲ್ಲಿ ನೋಡಿದರೂ ನಿಮಗೆ ಜನಪದವೇ ಕಾಣಬೇಕು. ಈ
ವಿಷಯವನ್ನು ಮನದಟ್ಟು ಮಾಡಿಕೊಂಡೆ ಕ್ಲಾಸಿಗೆ ಬನ್ನಿ ಮತ್ತು ತರಗತಿಗಳನ್ನು ತಪ್ಪಿಸಬೇಡಿ ಅಂದರು.

ಮೊದಲ ಸೆಮಿಸ್ಟರ್ ನಲ್ಲಿ ಜಗತ್ತಿನ ಜಾನಪದ ಇತಿಹಾಸ ಎಂಬ ವಿಷದೊಂದಿಗೆ ಮೇಡಂ ಮೊದಲಬಾರಿ ನಮ್ಮ ಮುಂದಿದ್ದರು , ಯುರೋಪ್
ಅಮೇರಿಕ ಮತ್ತು ರಷ್ಯ ಭಾರತದ ಜನಪದ ಇತಿಹಾಸವನ್ನು ಹೇಳುವುದರೊಂದಿಗೆ ಇತಿಹಾಸ ಓದುವುದು ನಮ್ಮ ವರ್ತಮಾನಕ್ಕೆ ಹೇಗೆ
ಉಪಯೋಗಕಾರಿ ? ಅನ್ನುವ ವಿಷಯವನ್ನು ಅದೆಷ್ಟೋ ಉದಾಹರಣೆಗಳೊಂದಿಗೆ ವಿವರಿಸಿದ್ದರು ಅದರಲ್ಲೂ ಎಂದೋ ಕಳೆದು ಹೋದ ಫಿನ್ಲ್ಯಾಂಡ್
ನ ಕಲೆವಾಲ್ ಎಂಬುವ ಕಥನಗೀತೆಯನ್ನು ಸಂಪಾದಿಸಿದ ರೀತಿ ಅದು ಅಲ್ಲಿನ ಜನಮಾನಸದ ಮೇಲೆ ಬೀರಿದ ಪರಿಣಾಮ. ಮತ್ತು ಅದೇ
ಕ್ರಮವನ್ನು ಬಳಸಿ ತುಳುನಾಡಿನ ಸಿರಿ ಪಾಡ್ದನಗಳನ್ನು ಸಂಗ್ರಹಿಸಿದ ಕ್ರಮವನ್ನು ಅದರ ಸುತ್ತಲಿನ ವಿಷಯವನ್ನು ಮನಮುಟ್ಟುವಂತೆ
ಅರ್ಥಮಾಡಿಸಿದ್ದರು.

ನಾನು ಎಂ ಎ ಸೇರಿಕೊಂಡ ವರುಷವೇ ಮೊದಲಬಾರಿ ವಿಶ್ವವಿದ್ಯಾಲಯ ಮುಕ್ತ ವಿಷಯೊಂದನ್ನು ಆಯ್ಕೆಮಾಡಿಕೊಳ್ಳುವ ಹೊಸ ವಿಧಾನವನ್ನು
ಪರಿಚಯಿಸಿತ್ತು. ಅದನ್ನು open elective subject ಎಂದು ಕರೆದಿದ್ದರು ನಾವು ಆಯ್ದುಕೊಂಡ ವಿಷಯದ ಜೊತೆಗೆ open elective ವಿಷಯದ
ತರಗತಿಯ ಹಾಜರಿ ಮತ್ತು ಅದರ ಅಂಕಗಳು ಮುಖ್ಯವಾಗಿದ್ದವು. ಆ ಹೊತ್ತಿನಲ್ಲಿ ನನ್ನ ಕರೆದು ಮೇಡಂ ಹೇಳಿದ್ದರು 'ಯಾವ ವಿಷಯ ತಗೋಬೇಕು ಅನ್ನುವುದರ ಬಗ್ಗೆ ನಿಮಗೆ ಪೂರ್ಣ ಸ್ವಾತಂತ್ರವಿದೆ ಆದರೆ ನಿಮಗೊಂದು ಸಲಹೆ ಕೊಡುತ್ತೇನೆ. ಯಾವುದಾದರು ವಿದೇಶಿ
ಭಾಷೆಯನ್ನು ಆಯ್ಕೆಮಾಡಿ. ಅದರಿಂದ ನಿಮ್ಮ ಕಲಿಕೆ ಇನ್ನು ಉತ್ತಮಗೊಳ್ಳುತ್ತದೆ, ಮತ್ತು ಜಾನಪದ ವಿಧ್ಯಾರ್ಥಿಗಳು ಆಂಗ್ಲ ಭಾಷೆ ಮತ್ತು ಇತರ
ಭಾಷೆಗಳನ್ನು ಕಲಿಯಬೇಕು ಅದರಿಂದ ಅಧ್ಯಯನದಲ್ಲಿ ಹೊಸತನ ಕಾಣ ಸಿಗುತ್ತದೆ ಎಂದರು. ಅವರ ಮಾತಿನ ಅರ್ಥ,ದೂರದರ್ಶಿತ್ವ ಆಗ ನನಗೆ ನಿಜಕ್ಕೂ ಅರ್ಥವಾಗಿರಲಿಲ್ಲ. ಆದರೆ ಅವರ ಮಾತನ್ನು ಮೀರದೆ ಅವರ ಸಲಹೆಯಂತೆ ನಾನು ಕ್ರಮವಾಗಿ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಆ ಭಾಷೆಗಳ ಪ್ರಾರಂಭಿಕ ಕಲಿಕೆ ಮಾಡಲು ಸಾಧ್ಯವಾಯಿತು ,

`The dream begins with a teacher who believes in you ,who tugs and pushes and leads you to the next plateau sometimes poking you with a sharp stick' ಅನ್ನುವ ಮಾತು ಅದೆಷ್ಟು ಸತ್ಯ ನನ್ನಲ್ಲಿ ಅವರು ಕನಸುಗಳನ್ನು ಬಿತ್ತುತ್ತಿದ್ದರು ಸ್ನಾತಕೋತ್ತರ ಜಾನಪದ ಪದವಿ ಪಡೆದವರಿಗೆ ಲೆಕ್ಚರರಿಕೆ ಒಂದೇ ಆಯ್ಕೆ ಅಲ್ಲ! ಅದಲ್ಲದೆ ಹಲವಾರು ಕ್ರಿಯಾಶೀಲ ಕ್ಷೇತ್ರಗಳು ಕಾಯುತ್ತಿವೆ. ಆದರೆ ನಾವು ಅದರ ಬಗ್ಗೆ ಧೇನಿಸುತ್ತಿರಬೇಕು. ಸದಾಕಾಲ ಒಂದು ಎಚ್ಚರಿಕೆ ನಮ್ಮಲ್ಲಿರಬೇಕು. ಆ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ? ಯಾಕೆ ಹೀಗಲ್ಲದಿದ್ದರೆ ಹೇಗೆ ಆಗಬಹುದಿತ್ತು? ಅನ್ನುವ ಪ್ರಶ್ನೆಗಳನ್ನು ಪ್ರತಿ ವಿಷಯಕ್ಕೂ ನಮ್ಮನ್ನು ನಾವು ಕೇಳಿಕೊಳ್ಳಬೇಕು ಅದು ನಮ್ಮ ಆಲೋಚನೆಯನ್ನು ಮೊನಚು ಮಾಡುತ್ತದೆ ಎಂಬುದು ವಿದ್ಯಾರ್ಥಿಗಳಿಗೆಲ್ಲರಿಗೂ ಅವರು ಹೇಳುತ್ತಿದ್ದ ಕಿವಿಮಾತು.

ವಿರಾಮವಿರದ ಅವರ ದಿನಚರಿಯಲ್ಲೂ ಕ್ಲಾಸ್ ಗೆ ಒಮ್ಮೆಲೇ ಬಂದು ಯಾವುದಾದರೂ ವಿಷಯಗಳನ್ನು ಕೊಟ್ಟು ಅದರ ಬಗ್ಗೆ ಬರೆದು ತರಲು
ಹೇಳುತ್ತಿದ್ದರು ಮತ್ತು ಪ್ರತಿ ಬರಹವನ್ನು ಕೂಲಂಕಷವಾಗಿ ಪರಿಶಿಲಿಸಿ ತಿದ್ದುಪಡಿ ಹೇಳುತಿದ್ದರು.
ಆ ನಿಟ್ಟಿನಲ್ಲಿ ನಾನು ಹಲವು ಚಿಕ್ಕಪುಟ್ಟ ಲೇಖನ ಬರೆಯುತ್ತಿದ್ದೆ. ಅದರಲ್ಲಿ ಮುಖ್ಯವಾದದ್ದು ಚಿತ್ರರಂಗ ಮತ್ತು ಜಾನಪದ ಎಂಬ ವಿಷಯದ ಬಗ್ಗೆ
ವಿವರವಾಗಿ ಬರೆದ ನಿಬಂಧ. ಅದನ್ನು ನೆನೆಸಿಕೊಂಡರೆ ಈಗಲೂ ನನಗೆ ನಗು ಬರುತ್ತದೆ. ಸಾಕಷ್ಟು ವಿಷಯಗಳನ್ನು ಇಂಟರ್ನೆಟ್ ನಿಂದ
ಸಂಗ್ರಹಿಸಿದ್ದೆ. ಮೇಡಂ ಅವರಿಂದ ಸಾಕಷ್ಟು ಮೆಚ್ಚುಗೆಯನ್ನೂ ನಿರೀಕ್ಷಿಸಿದ್ದೆ. ಆದರೆ ಅವರು ಮಾತ್ರ 'ಸಂಗ್ರಹ ಚನ್ನಾಗಿದೆ ತುಂಬಾ ವಿಷಯ ಹುಡುಕಿದೀರಿ ಅನ್ನೋದನ್ನು ಬಿಟ್ಟು ಬೇರೇನೂ ಹೇಳಲೇ ಇಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು.
ಕೆಲವು ವಾರಗಳ ನಂತರ ನನ್ನ ಕರೆದು ಹೇಳಿದರು ‘ನೀವು ತುಂಬಾ ಶ್ರಮ ಪಡ್ತೀರಿ,ವಿಷಯ ಸಂಗ್ರಹಿಸ್ತೀರಿ ಬರೀತೀರಿ ಕೂಡ ಆದರೆ ಅದನ್ನು
ವ್ಯವಸ್ತಿತವಾಗಿ ಜೋಡಿಸುವುದರಲ್ಲಿ ಮುಗ್ಗರಿಸುತ್ತೀರಿ ಇದೊಂಥರ ಇಟ್ಟಿಗೆ ಸಿಮೆಂಟ್ ಕಲ್ಲು ಎಲ್ಲ ವನ್ನು ತಂದು ರಾಶಿ ಹಾಕಿ ಒಮ್ಮೆಲೇ ಮನೆ
ಕಟ್ಟುವ ಹುರುಪಿನಂತೆ. ಆದರೆ ಮನೆ ಕಟ್ಟಲು ಒಂದು ಕ್ರಮವಿದೆ ಅದನ್ನು ನೀವು ಕಲಿಬೇಕು ಅದಕ್ಕೆ ನೀವು ಬಹಳ ಓದಬೇಕು ಅಂದು ತಮ್ಮಲ್ಲಿದ್ದ
ಹಲವಾರು ಪುಸ್ತಕಗಳನ್ನು ನನಗೆ ಓದಲು ಕೊಟ್ಟಿದ್ದರು. ಬರವಣಿಗೆಯ ಮುನ್ನ ಸಂಗ್ರಹಿಸಿದ ವಿಷಯವನ್ನು ಹೇಗೆ ವಿಂಗಡಿಸುವುದು. ಕ್ರಮವಾಗಿ
ಜೋಡಿಸುವುದು ಮತ್ತು ನಿರೂಪಿಸುವುದು ಹೇಗೆ ಅನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದರು.

'A teacher is who gives you something to take home to Think about ,besides homework'
ಅವರು ಕಲಿಸುತ್ತಿದ್ದುದೆ ಹಾಗೆ, ಪಾಠಗಳು ನಿಮಿತ್ಯ ಮಾತ್ರ ಆದರೆ ನಿಜವಾದ ಪಾಠಶಾಲೆ ಸಮಾಜ, ಜನಪದವನ್ನು ನಾಲ್ಕು ಗೋಡೆಗಳ ಮಧ್ಯೆ
ಕುಳಿತು ಕಲಿಯಾಲಾಗದು, ನಿಮಗೆ ಅದರ ಗುಂಗು ಹಿಡಿಯಬೇಕು ಅನ್ನುತ್ತಿದ್ದರು ಮತ್ತು ಅದು ನನಗೆ ಹಿಡಿದೇ ಬಿಟ್ಟಿತು. ಕಾಲೇಜಿಗೆ ಹೋಗಲು
ನಾನು ದಿನ ಮುಂಡಗೊಡಿನಿಂದ ಧಾರವಾಡಕ್ಕೆ, ಮತ್ತೆ ವಾಪಸ್ ಮನೆಗೆ ಬರಲು ಬಸ್ನಲ್ಲಿ 150ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಆ
ಪಯಣದಲ್ಲಿ ದಿನದ ನಾಲ್ಕು ಘಂಟೆಗಳು ವ್ಯಯವಾಗುತಿದ್ದವು, ಅಷ್ಟು ಸಮಯ ನನ್ನ ಆಲೋಚನೆ ಓದು ಬರೀ ಜನಪದವೇ. ಕುರಿಮಂದೆಯ
ಹೆಣ್ಣುಮಗಳ ಕಿವಿಯಲ್ಲಿಯುವ ಬುಗುಡಿ ಯಿಂದ ಅದ್ಯಾರೊ ಹಿಡಿದು ಬಂದ ಕಸೂತಿ ಚೀಲದವರೆಗೆ. ಆಟೋ ರಿಕ್ಷಾ ಹಿಂಬದಿಯ ತಮಾಷೆ
ಬರಹಗಳಿಂದ ಹಿಡಿದು, ಜಗಳದಲ್ಲಿ ಬಳಸಲ್ಪಡುವ ಬೈಗುಳದಲ್ಲಿಯೂ, ಎಲ್ಲಿ ನೋಡಿದರಲ್ಲಿ ಜನಪದವೇ ಕಾಣುತಿತ್ತು.

ಮೇಡಂ ಅವರು ನನ್ನ ಮೇಲೆ ಅಷ್ಟು ಪರಿಣಾಮ ಬೀರಿದ್ದರು ಮಾತಿನಲ್ಲಿ, ಹಾಡಿನಲ್ಲಿ,ಕುಣಿತದಲ್ಲಿ ,ನಡೆಯಲ್ಲಿ ,ಹಿತ್ತಲ ಕಸದಲ್ಲೂ ಜನಪದೀಯ
ಅಂಶಗಳು ಕುಣಿದಾಡುತ್ತಿದ್ದವು. ಆಗ ನನ್ನ ಮನಸು ಬುದ್ದಿ ಅನುಭವಿಸಿದ ಆ ಖುಷಿ, ಆತ್ಮ ಸಂತೃಪ್ತಿಯನ್ನು ಬರಹದಲ್ಲಿ ಹಿಡಿದಿದಲಾಗದು. ಇಷ್ಟು
ವರ್ಷ ನಾನು ಹುಡುಕುತ್ತಿದ್ದುದು ಇದೆ ಏನೋ ಅನ್ನ್ನಿಸುವುದಕ್ಕೆ ಶುರುವಾಗಿದ್ದು ನನ್ನ ಎಲ್ಲ ಚಡಪಡಿಕೆಗಳಿಗೆ ಉತ್ತರ ಜಾನಪದ ಮಾತ್ರವೇ
ನೀಡಬಲ್ಲದು ಎಂಬ ಸತ್ಯ ಅರಿವಾಗಿತ್ತು.

ಇದೆ ಸಮಯದಲ್ಲಿ ಮೇಡಂ ಅವರ ಮತ್ತೊಂದು ಯೋಜನೆಯಿಂದ ನಾನು ಜಾನಪದದ ಮತ್ತೂಂದು ಮಗ್ಗಲು ನೋಡುವಂತಾಯಿತು. ಪ್ರವಾಸೋದ್ಯಮ ಮತ್ತು ಜಾನಪದ ಎಂಬ ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರ, ನನ್ನ ಸ್ನಾತಕೋತ್ತರ ಅಧ್ಯಯನದ ಇನ್ನೊಂದು ತಿರುವು ಅದು.
ಅಲ್ಲಿ ನಾ ತಿಳಿದ ,ನೋಡಿದ ,ಕಲಿತ ವಿಷಯ ಹಲವು ಅಲ್ಲಿಯ ತನಕ ಸಂಗೀತ ಮತ್ತು ಜಾನಪದವನ್ನು ಜೊತೆಮಾಡಿ ಅದನ್ನೇ ನನ್ನ ಮುಖ್ಯ
ಅಧ್ಯಯನದ ವಿಷಯವನ್ನಾಗಿ ಮಾಡಿಕೊಳ್ಳಬೇಕು, ಸಂಶೋಧನೆಗೆ ಅಣಿಯಾಗಬೇಕು ಅಂದುಕೊಂಡ ನನಗೆ ಜನಪದ ವೈದ್ಯದ ಮೇಲೆ ಪ್ರೀತಿ
ಹುಟ್ಟಿತು. ಅದಕ್ಕೆ ಕಾರಣವಾಗಿದ್ದು ಹೊನ್ನಾವರದ ಜನಪದ ತಜ್ಞೆ ಶ್ರೀಮತಿ ಶಾಂತಿ ನಾಯಕ್ .

ಸೆಮಿನಾರ್ ಮುಗಿಸಿ ಬಂದ ದಿನದಿಂದಲೇ ನಾನು ಮೇಡಂ ಅವರ ಬೆನ್ನು ಬಿದ್ದೆ. ಜನಪದ ವೈದ್ಯದ ಕುರಿತು ಅವರಲ್ಲಿದ್ದ ಅಪರೂಪದ ಪುಸ್ತಕಗಳು
,ಲೇಖನಗಳು, ಅವರಿಗೆ ತಿಳಿದಿದ್ದ ಹಲವಾರು ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಚರ್ಚಿಸುತ್ತಿದ್ದರು.ಮತ್ತು ಜನಪದ ವೈದ್ಯದ ಕುರಿತು
ಸಂಶೋಧನೆ ಅಥವಾ ಅಧ್ಯಯನ ಮಾಡುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಅವರು ನನಗೆ ಎಚ್ಚರಿಸಲು ಮರೆಯಲಿಲ್ಲ.
ಅವರ ಕಾರಣದಿಂದಲೇ ನಾನು ಶಾಂತಿ ನಾಯಕ್ ,ಏನ್ ಆರ್ ನಾಯಕ್, ಅರವಿಂದ್ ನಾವಡ, ಅಂಬಳಿಕೆ ಹಿರಿಯಣ್ಣ ,ಮತ್ತು ಜಾನಪದ ಲೋಕದ ಹಲವು ದಿಗ್ಗಜರನ್ನು ಭೇಟಿ ಮಾಡಿದೆ.
ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ ಎಂಬ ವಿಷಯದ ಬಗ್ಗೆ ವಿಚಾರ ಕಮ್ಮಟ ಏರ್ಪಡಿಸಿದಾಗ ಅಲ್ಲಿ ಚರ್ಚಿಸಬೇಕಾದ
ವಿಷಯಗಳನ್ನು ಮೇಡಂ ಅದೆಷ್ಟು ಚನ್ನಾಗಿ ಆಯ್ಕೆ ಮಾಡಿದ್ದಾರೆ ವಾಹ್ ಅನ್ನಿಸುತ್ತಿತ್ತು. ಪ್ರತಿಯೊಂದು ವಿಷಯವು ಅನನ್ಯ. ಟಿ ಎಸ ನಾಗಭರಣ
ಅವರನ್ನು ನೇರ ಸಂವಾದಕ್ಕೆ ಕರೆದು ಅದೆಷ್ಟು ಚಂದದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳ ಮುಂದೆ ಇಟ್ಟಿದ್ದರು ಮತ್ತು ಅದು ಅಷ್ಟೇ
ಉಪಯುಕ್ತವಾಗಿತ್ತು.
ಅಂಥದೇ ಇನ್ನೊಂದು ಅನನ್ಯ ಕಾರ್ಯಕ್ರಮ ಶಿರಸಿಯ ಅಜ್ಜಿಮನೆಯಲ್ಲಿ ನಡೆದ ಸ್ಥಳೀಯ ಪರಂಪರಾಗತ ಜ್ಞಾನ ಮತ್ತು ಆರೋಗ್ಯ. ಇಲ್ಲಿ
ಚರ್ಚಿತವಾದ ವಿಷಯಗಳೂ ಅಷ್ಟೇ ಈಗಲೂ ಹಸಿರು ಹಸಿರು ಕೆಲವೊಮ್ಮೆ ಶಿಬಿರದ ನಡುವೆ ಮೇಡಂ ನಮಗೆ ವಿಷಯ ಸಂಬಂಧಿ ಪ್ರಶ್ನೆ
ಕೇಳುತ್ತಿದ್ದರು, ಮತ್ತು ಸಂಪನ್ಮೂಲ ವ್ಯಕ್ತಿ ಮಾತನಾಡುತ್ತಿರುವ ವಿಷಯಕ್ಕೆ ನಾವು ಎಷ್ಟರ ಮಟ್ಟಿಗೆ ಕನೆಕ್ಟ್ ಆಗಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ
ಪರಿಶೀಲಿಸುತ್ತಿದ್ದರು , ಈ ದಿಸೆಯಲ್ಲಿ ನಾವು ಭೇಟಿಯಾದದ್ದು ಅಪರೂಪದ ವಿಜ್ಞಾನಿ ಪಲ್ಲತಡ್ಕ ಕೇಶವ ಭಟ್ಟ್ ಅವರನ್ನ , ಈ ರೀತಿಯ ಅನನ್ಯ
ವಿಚಾರ ಮತ್ತು ದೃಷ್ಟಿಕೋನ ಮತ್ತು ಸರಳತೆ ಮೇಡಂ ಅವರನ್ನು ಮತ್ತೂ ಹೆಚ್ಚು ಗೌರವಿಸುವಂತೆ ಮಾಡುತ್ತಿದ್ದವು ,

ಆ ವರೆಗೆ ಮೇಡಂ ಅಂದರೆ ನನಗೆ ನನ್ನ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆ ರೂಪದಲ್ಲೇ ಕಂಡಿದ್ದರು. ಅವರು ಯಾವತ್ತು ಸಿಟ್ಟು ಮಾಡಿದ್ದು,
ಜೋರಾಗಿ ಮಾತಾಡಿದ್ದು,ತಾಳ್ಮೆ ಕಳೆದುಕೊಂಡಿದ್ದು ನಾನು ನೋಡೇ ಇಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಅವರೊಂದು ಹೊಸ ವಿಚಾರ ಹುಡುಕಿ
ಅದನ್ನು ಹಿಂಬಾಲಿಸಲು ಹೊರಡುತ್ತಿರುವಂತೆ ನನಗೆ ಭಾಸವಾಗುತಿತ್ತು.
ಅದು ನನ್ನ ಕೊನೆ ಸೆಮಿಸ್ಟರ್. ನಾವು ಕ್ಷೇತ್ರ ಕಾರ್ಯ ಮಾಡಿ ನಿಬಂಧವಿ ಬರೆದು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಬೇಕಿತ್ತು. ನಾನು ಆಯ್ದು
ಕೊಂಡಿದ್ದು ಬಾಣಂತಿ, ನವಜಾತ ಶಿಶುವಿನ ಆರೈಕೆ ಮತ್ತು ಜನಪದ ವೈದ್ಯ ಪದ್ಧತಿ. ಆಗ ಮಾತ್ರ ಮೇಡಂ ಅವರ ಇನ್ನೊಂದು ರೂಪ ನೋಡಿದ್ದು.
ನಾನು ಅತಿ ಭಾವುಕಿ, ಸಿನಿಮ ಕಾದಂಬರಿ ಭಾವಗೀತೆ,ಗಝಲ್ ಹುಚ್ಚು ಇದ್ದಿದ್ದಕ್ಕೋ ಏನೋ ನನ್ನ ಬರವಣಿಗೆ ಒಂದು ವಿಚಿತ್ರ ಧಾಟಿಯಲ್ಲಿ
ಇರುತಿತ್ತು.

ರಜಾ ಅರ್ಜಿಯನ್ನೂ ಕವಿತೆಯಂತೆ ಬರೆಯುತ್ತಿದ್ದೆ. ನಿಬಂದ ಬರೆಯುವಾಗ ನನ್ನ ಅದೇ ಬರವಣಿಗೆ ಮುಂದುವರಿಯಿತು , ಮೇಡಂ ನಾಲ್ಕು ಬಾರಿ
ನನ್ನ ಕರಡು ಪ್ರತಿಯನ್ನು ಸರಿ ಇಲ್ಲ ಎಂದು ಮರಳಿಸಿ ಬಿಟ್ಟರು. ಅದು ಕೊನೆ ಹಂತ ನನ್ನಲ್ಲಿ ಸಾಕಷ್ಟು ಮಾಹಿತಿ ಇತ್ತು ಬರವಣಿಗೆ ಸಂಪೂರ್ಣ
ಗೊಂಡಿತ್ತು. ಯಾಕೆ ?ಏನು ತಪ್ಪು ಎಂಬುದು ಅರಿವಿಗೆ ಬರಲಿಲ್ಲ ,ಮತ್ತೆ ಕೊಟ್ಟೆ ಆಗ ಅಂದರು; ನಿಮ್ಮ ತಪ್ಪು ನಿಮಗೆ ಗೊತ್ತಾಗುತ್ತೆ ಅಂದುಕೊಂಡೆ.
ನೀವು ಅದನ್ನು ಗಮನಿಸಿಯೇ ಇಲ್ಲ ಆದಷ್ಟು ಸರಳ ವಾಕ್ಯಗಳನ್ನು ಬಳಸಿ. ನೇರ ವಿಷಯಗಳನ್ನು ಹೇಳುವಾಗ ಅಷ್ಟೇ ದೃಡವಾಗಿ ನೇರವಾಗಿ
ಹೇಳಬೇಕು ಮತ್ತು ಅದಕ್ಕೊಂದು ಚೌಕಟ್ಟಿರಬೇಕು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬರೆಯೋದಲ್ಲ ಅಂದು ಮತ್ತೆ ವಾಪಸ್ ಮಾಡಿದ್ದರು.
ಬಸ್ಸಿನಲ್ಲಿ ಕುಳಿತು ಮತ್ತೆ ಹಾಳೆಗಳನ್ನು ತಿರುವಿದೆ ಪ್ರತಿ ಪುಟದಲ್ಲೂ ಅವರ ಅಕ್ಷರಗಳು. ಅಷ್ಟೂ ಪುಟಗಳನ್ನು ಓದಿ ಮಾರ್ಕ್ ಮಾಡಿ ಕೊಟ್ಟಿದ್ದರು.
ಅದನ್ನು ಹೇಗೆ ಬರೆಯಬಹುದು ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದರು ಆಗಲೇ ಅನ್ನಿಸಿದ್ದು, ಕಾವ್ಯಾತ್ಮಕ ಬರವಣಿಗೆ ಮತ್ತು ನೇರ ಬರವಣಿಗೆ
ಅದೆಷ್ಟು ದೂರ ದೂರ. ಸ್ವಲ್ಪ ಆಯ ತಪ್ಪಿದರು ಅರ್ಥ ಅಪಾರ್ಥ ಆಗುವ ಸಂಭವ ಇರುತ್ತದೆ ಅಧ್ಯಯನ ಪ್ರಬಂಧ ಲಲಿತ ಪ್ರಬಂಧವಾಗುವ
ಸಾಧ್ಯತೆ ಇರುತ್ತದೆ. ಅದನ್ನು ಮೇಡಂ ನನಗೆ ಅದೆಷ್ಟು ಚನ್ನಾಗಿ ಅರ್ಥ ಮಾಡಿಸಿದ್ದರು.

ಜಾನಪದ ದ ಬಗ್ಗೆ ಮಾತಾಡುವ ಹಲವರು ಜನಪದ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಜನಪದ
ಉಳಿಸಿ ಬೆಳೆಸಿ ಅನ್ನುತ್ತಾ ಭಾಷಣ ಮಾಡಿ ಹಾರ ತುರಾಯಿ ಹಾಕಿಸಿಕೊಂಡು, ಕಾರಿಡಾರಿನಲ್ಲಿ ನಡೆಯುವಾಗ ಅದೇ ಮಗ್ಗುಲಲ್ಲಿ ಕುಳಿತ ಜನಪದ
ಕಲಾವಿದರಿಗೆ ನಕ್ಕು ನಮಸ್ಕರಿಸಿದ ದೊಡ್ಡ ವಿದ್ವಾಂಸರೂ ಈ ಕ್ಷೇತ್ರದಲ್ಲಿ ಇದ್ದಾರೆ.
ಅಂಥಹ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾಲಯಕ್ಕೆ ಜನಪದ ಕಲೆಗಳು ಪ್ರಾಯೋಗಿಕ ಪರೀಕ್ಷೆಗಳಿಗೆಂದು ಹಾಲಕ್ಕಿ ಸುಗ್ಗಿ, ಕೋಲಾಟ ಕಲಿಸಲು ಬಂದ ಕಲಾವಿದರನ್ನು ಅದೆಷ್ಟು ಆತ್ಮೀಯವಾಗಿ ಮಾತನಾಡಿಸಿ, ಅವರ ಯೋಗಕ್ಷೇಮ ವಿಚಾರಿಸಿ ,ಅವರೊಂದಿಗೆ ಅದೆಷ್ಟು ಸರಳತೆಯಿಂದ
ಸಜ್ಜನಿಕೆಯಿಂದ ವರ್ತಿಸುವ ಮೇಡಂ.ಅವರ ಊಟ ತಿಂಡಿ ವಸತಿ ಬಗೆಗೆ ಮನೆ ಮಂದಿಯ ಬಗ್ಗೆ ವಹಿಸುವ ಕಾಳಜಿಯನ್ನೇ ತೋರಿಸುವುದು
ನೋಡಿದಾಗ ಅವರು ತುಂಬಿದ ಕೊಡ ಅನಿಸಿದ್ದು ಅದೆಷ್ಟು ಸಲವೂ.

ಹಾಗೆ ಒಂದು ದಿನ ಅವರ ಆಫೀಸ್ ನಲ್ಲಿ ನಾನು ಯಾವುದೊ ವಿಷಯ ಅವರೊಂದಿಗೆ ಚರ್ಚಿಸುತ್ತಿದ್ದಾಗ ,ಆಗಷ್ಟೇ ಪಿ ಹೆಚ್ ಡಿ ಸೇರಿಕೊಂಡ ನನ್ನ
ಸಿನಿಯರ್ ಒಬ್ಬರಿಗೆ ಲಕೊಟೆ ಒಂದನ್ನು ಕೊಟ್ಟರು. ನಿಮ್ಮ ಸ್ಕಾಲರ್ಷಿಪ್ ಬರೋತನಕ ಸುಮಾರು ಕೆಲಸ ಮಾಡಲಿಕ್ಕೆ ಇರುತ್ತದೆ, ಮತ್ತು ಖರ್ಚು
ಆಗುತ್ತೆ ಇದು ನನ್ನ ಪುಟ್ಟ ಸಹಾಯ ನಿಮಗೆ.ಅಧ್ಯಯನ ಚೆನ್ನಾಗಿ ನಡೀಲಿ ಎಂದು ಆಶೀರ್ವದಿಸಿದರು. ಆ ವಿದ್ಯಾರ್ಥಿ ಹೊರಗೆ ಹೋದ ನಂತರ
ಪ್ರತಿ ವರ್ಷ ಯೋಗ್ಯ ಅನಿಸಿದ ಒಬ್ಬ ವಿದ್ಯಾರ್ಥಿಗೆ ನನ್ನ ಪತಿಯ ಸ್ಮರಣಾರ್ಥ ಒಂದಷ್ಟು ಸಹಾಯ ಮಾಡ್ತೇನೆ ನನ್ನ ಮನಸಿನ ನೆಮ್ಮದಿಗೆ ಅಂದರು ಆ ದಿನ ಅವರ ಮತ್ತೊಂದು ಅನನ್ಯತೆ ನನಗೆ ಕಾಣಿಸಿತ್ತು.

ನನಗನಿಸಿದ ಪ್ರಕಾರ ಅವರ ಸೃಜನ ಶೀಲತೆ ,ಮತ್ತು ನವೀನ ಆಲೋಚನೆಗಳು ಅವುಗಳನ್ನು ಕಾರ್ಯಗತ ಮಾಡುವಲ್ಲಿ ಹಲವಾರು ಬಾರಿ
ಪೂರಕ ವಾತಾವರಣ ಇರುತ್ತಿರಲಿಲ್ಲ ಸಿಬ್ಬಂದಿ ಸಹಕಾರ ,ಕೆಲವೊಮ್ಮೆ ವಿದ್ಯಾರ್ಥಿಗಳ ನಿರಾಸಕ್ತಿ ಅವರಿಗೆ ಬೇಸರ ತರುತ್ತಿತ್ತು, ಆದರೆ ಎಂದು ಆ
ಕಾರಣ ಕೊಟ್ಟು ಯಾವುದೇ ಯೋಜನೆಯನ್ನು ಅವರು ಕೈಬಿಟ್ಟಿಲ್ಲ. ಜನಪದ ಸಂಗ್ರಹಾಲಯ ಮತ್ತು ಅದಕ್ಕೆ ವಸ್ತುಗಳನ್ನು ಪೇರಿಸುವ ಕೆಲಸದಲ್ಲಿ
ಅವರು ತೋರಿಸುತ್ತಿದ್ದ ಆಸಕ್ತಿ ಪುಟ್ಟ ಮಗು ಹೊಸ ವಿಷಯಕ್ಕೆ ತೋರುವ ಉತ್ಸಾಹದಂಥದ್ದು.

ಒಮ್ಮೆ ನನಗೆ ರಂಗಗೀತೆ ಗಳ ಬಗ್ಗೆ ಸ್ವಲ್ಪ ವಿವರಣೆಗಳು ಬೇಕಿದ್ದವು. ನಾನು ಅವರನ್ನು ಆ ಬಗ್ಗೆ ಕೇಳಿದ್ದೆ ಮತ್ತು ಅದನ್ನು ಮರೆತು ಬಿಟ್ಟಿದ್ದೆ. ಆದರೆ
ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕ ಹುಡುಕಿ ಮತ್ತೆ ಸಂಜೆ ನನಗೆ ಫೋನ್ ಮಾಡಿದ್ದರು ನಾಳೆ ಪುಸ್ತಕ ತಗೊಂಡ್ ಹೋಗು ಅದು ಸಿಕ್ಕಿದೆ ಎಂದಾಗ ಅವರು ಆಸಕ್ತ ವಿದ್ಯಾರ್ಥಿಗಳಿಗಾಗಿ ಕೊಡುತ್ತಿದ್ದ ಸಮಯ ಮತ್ತು ಪ್ರಾಮುಖ್ಯತೆ ಅರಿವಿಗೆ ಬಂದಿತ್ತು.
ಕಲಿಯುವ ಮನಸ್ಸಿರುವ ವಿದ್ಯಾರ್ಥಿಗೆ ಇಂಥ ಒಬ್ಬ ಗುರು ದಕ್ಕಿದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲ ವಾದಂತೆಯೇ. ಕಲಿಯುವ ಪಾಠ
ಪಾಠವಾಗಿರದೆ ಅದು ಬದುಕಿಗೆ ಇಂಬುಕೊಡುವ ವಿದ್ಯೆಯಾಗಿತ್ತದೆ.

ನನ್ನ ನೆರವೇರದ ಆಸೆ ಎಂದರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಬೇಕು ಎಂಬುದು. ಸ್ನಾತಕೋತ್ತರ ಅಧ್ಯಯನ ಮುಗಿದ ನಂತರ ನಾನು ಬೆಲ್ಫಾಸ್ಟ್ ಬಂದು ಸೇರಿದೆ. ವಿಶ್ವವಿದ್ಯಾಲಯದ ಕೆಲವು ನಿಯಮಗಳು ಕಲಿಯುವ ತುಡಿತವಿರುವ ವಿದ್ಯಾರ್ಥಿಗಳಿಗೆ ಬೇಲಿ ಹಾಕಿಬಿಡುತ್ತವೆ.
ಆದರೂ ಇಂದಿಗೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವೆ. ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ಜನಪದ ನನ್ನ ಕೈಹಿಡಿದು
ಮುನ್ನಡೆಸಿದೆ ಈಗಲೂ ನಾ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರೆ ಅದೇ ಆತ್ಮೀಯತೆ ಅಷ್ಟೇ ಆಪ್ಯಾಯತೆ ಅಕ್ಕರೆ. “ಶಾನಭಾಗ್ ಊರಿಗೆ
ಬಂದೀರ?” ಎನ್ನುತ್ತಲೇ ಮಾತು ಶುರುಮಾಡಿ ಅದೆಷ್ಟು ವಿಷಯ, ಉಲ್ಲೇಖ, ನೆನಪು ಹಂಚಿಕೊಳ್ತಾರೆ. ನನ್ನ ಬಾಲಿಶ ಪ್ರಶ್ನೆಗಳಿಗೆ ತಾಳ್ಮೆಯಿಂದ
ಉತ್ತರಿಸುತ್ತಾರೆ , ಅವರ ಶಿಷ್ಯೆ ಅವರ ವಿದ್ಯಾರ್ಥಿನಿ ಅನ್ನಲು ನನಗೆ ಯಾವತ್ತಿಗೂ ಹೆಮ್ಮೆ.

ಉಫಿಜಿ ಎಂಬ ಕಲೆಯ ಉಗ್ರಾಣ – ಲಕ್ಷ್ಮೀನಾರಾಯಣ ಗುಡೂರ

ನನಗೆ ಇಟಲಿ ಹಲವಾರು ಕಾರಣಗಳಿಗೆ ಇಷ್ಟ. ಆ ದೇಶಕ್ಕೂ, ಭಾರತಕ್ಕೂ ಇರುವ ಸಾಮ್ಯತೆಗಳು ಒಂದು ಮುಖ್ಯ ಕಾರಣ. ಉಳಿದೆಲ್ಲ ಅಲ್ಲಿಂದ ಮುಂದೆ – ಉಪಕಾರಣಗಳು ಅನ್ನಬಹುದು. ಅಲ್ಲಿನ ಪುರಾಣಕಥೆಗಳು, ಕಲೆ, ಕಟ್ಟಡಗಳು, ಇತಿಹಾಸ, ದೇವರ ಜಾಗಗಳು, ಜನರ ಸಾಮಾಜಿಕ ಜೀವನ, ಊಟ-ತಿಂಡಿಗಳ ಬಗೆಗಿನ ಉತ್ಸಾಹ … ಹೀಗೆ ಪಟ್ಟಿ ಮುಂದುವರಿಯುತ್ತದೆ.   

ಹೀಗೆಯೇ ಪ್ರಯಾಣದಲ್ಲಿ ಒಮ್ಮೆ ಸಿಕ್ಕ ಕರ್ನಾಟಕ ಮೂಲದ ಇಟಲಿಯ ನಿವಾಸಿಯೊಬ್ಬರು ನನಗೆ ಹೇಳಿದಂತೆ, ಅಲ್ಲೂ ಭಾರತೀಯರಂತೆಯೇ 6ಕ್ಕೆ ಬರುವೆನೆಂದು ಹೇಳಿ 8ಕ್ಕೆ ಹೋಗಬಹುದು, ಹೇಳದೆಯೆ ನಿಮ್ಮ ಮಿತ್ರನನ್ನು ಅವರ ಮನೆಗೆ ಔತಣಕ್ಕೆ ಕರೆದೊಯ್ಯಬಹುದು! ಬ್ರಿಟಿಶರ ಜೀವನಕ್ರಮಕ್ಕೆ ಹೊಂದಿಕೊಂಡಿರುವ ನಾನು ಹಾಗೇನೂ ಮಾಡಿಲ್ಲವೆನ್ನಿ.  

ಚಿತ್ರಕಲೆ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ನನಗೆ ಎಷ್ಟು ಬಾರಿ ಬೇಕಾದರೂ ಹೋಗಿ ಅಲ್ಲಿನ ಸ್ಥಳಗಳನ್ನು, ಅದರಲ್ಲೂ ಗ್ಯಾಲರಿಯಾಗಳನ್ನು (museum) ನೋಡಲು ಬೇಜಾರಾಗದು.

ಅಲ್ಲಿ ಯಾವ ಊರಿಗೆ ಹೋದರೂ, ಮೇಲೆ ಹೇಳಿದ ಪಟ್ಟಿಯ ಹೆಚ್ಚು ಕಡಿಮೆ ಎಲ್ಲಾ ಅಂಶಗಳೂ ನೋಡಲು ಸಿಗುತ್ತವೆ.  ಈ ಬಾರಿ (ಎರಡನೇ ಬಾರಿ, ಮೊದಲೊಮ್ಮೆ ಯಾವುದೋ ಕೋರ್ಸಿಗೆ ಹೋಗಿದ್ದೆ – ಲೇ.) ಕುಟುಂಬಸಹಿತನಾಗಿ ಫ್ಲಾರೆನ್ಸ್ ನೋಡಲು ಹೋಗಿದ್ದೆ. ಮೊದಲ ಸಲ ಹೋದಾಗ ಮೈಕೆಲೇಂಜಲೋ ಕೆತ್ತಿರುವ ವಿಶ್ವವಿಖ್ಯಾತ ಡೇವಿಡ್ ಮೂರ್ತಿಯಿರುವ ಅಕಾದೆಮಿಯಾ ಗ್ಯಾಲರಿಗೆ ಹೋಗಿ ಆಗಿತ್ತು. ಹೀಗಾಗಿ, ಈ ಬಾರಿ ಹೋದಾಗ ಮನೆಯವರನ್ನೆಲ್ಲ ಅಲ್ಲಿಗೆ ಕಳಿಸಿ, ಇನ್ನೊಂದು ದೊಡ್ಡ ಗ್ಯಾಲರಿಯಾ ಆದ ಉಫಿಜಿ (Uffizi Galleria) ವಸ್ತುಸಂಗ್ರಹಾಲಯಕ್ಕೆ ನಾನೊಬ್ಬನೇ – ನನ್ನ ಕ್ಯಾಮರಾದೊಂದಿಗೆ – ಹೋದೆ. ಈ ಲೇಖನ ಅದರ ಬಗ್ಗೆ ಮಾತ್ರ.

ಆರ್ನೊ ನದಿಯ ದಂಡೆಯ ಮೇಲಿರುವ ಮಹಾನ್ ಕಟ್ಟಡಗಳ ಸಂಕುಲವೇ ಈಗಿನ ಉಫಿಜಿ ಸಂಗ್ರಹಾಲಯ.  ಇದು 16ನೆಯ ಶತಮಾನದ ಇಟಲಿಯ ವಾಸ್ತುಶಿಲ್ಪ ನೈಪುಣ್ಯದ ಉತ್ತಮ ಉದಾಹರಣೆ ಅನ್ನಬಹುದು.  
ಉಫಿಜಿಯ ಇತಿಹಾಸ:  
1550ರ ಇಸವಿಯಲ್ಲಿ ಫ್ಲಾರೆನ್ಸ್ ನಗರದ ಡ್ಯೂಕ್ ಆಗಿದ್ದ ಕಾಸಿಮೊ I ಡಿ’ಮೆಡಿಚಿ, ಹಂಚಿ ಹೋಗಿದ್ದ ನಗರದ ನ್ಯಾಯಾಲಯಗಳನ್ನೆಲ್ಲ ಒಂದೇ ಕಚೇರಿಯ ಆವರಣಕ್ಕೆ ತರಲೆಂದು, ಆಗಿನ ವಾಸ್ತುಶಿಲ್ಪಿ ಜಿಯಾರ್ಜಿಯೋ ವಸಾರಿಯ ಉಸ್ತುವಾರಿಯಲ್ಲಿ ಕಟ್ಟಿಸಿದ Office ಅಥವಾ Uffici / Uffizi ಕಟ್ಟಡಗಳೇ ಇವು. ದೊಡ್ಡ ದೊಡ್ಡ ಕಿಟಕಿಗಳ ನೈಸರ್ಗಿಕ ಗಾಳಿ-ಬೆಳಕಿನ ಅಗಲವಾದ ಆವಾರಗಳು ಇಲ್ಲಿಯ ವೈಶಿಷ್ಟ್ಯ. ಇದರ ನಿರ್ಮಾಣ modular ಆಗಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಬಹುದಾದ future-proofing ಇಲ್ಲಿದೆ.  ಈ ಕಟ್ಟಡ ಇಂಗ್ಲಿಷಿನ U ಆಕಾರದಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ಭಾಗಗಳು ಮಾತ್ರ ನೆಲದ ಮೇಲಿವೆ. ನದಿಯಂಚಿನಲ್ಲಿ ಇರುವ ಇವೆರಡನ್ನೂ ಜೋಡಿಸುವ, U ಅಕ್ಷರದ ಬುಡದ ಭಾಗ ಮೇಲಿನ ಅಂತಸ್ತುಗಳಿಗೆ ಮಾತ್ರವೇ ಸೀಮಿತವಾಗಿದೆ, ಅಲ್ಲದೇ ಎತ್ತರದ ಭಾರೀ ಕಂಬಗಳ ಮೇಲೆ ಕಟ್ಟಲಾಗಿದೆ. ಮಧ್ಯದ ತೆರೆದ ಅಂಕಣವು ಒಂದೆಡೆ ನದಿಯ ಮೇಲಿರುವ ಪುರಾತನ ಕಲ್ಲಿನ ಸೇತುವೆಯ (ಪಾಂಟೆ ವೆಕ್ಕಿಯೋ) ಮೂಲಕ ಹಸಿರು ಹೊದಿಸಿರುವ ಬೆಟ್ಟಗಳ, ತೋಟಗಳ ಕಡೆಗೆ ಹೋದರೆ, ಇನ್ನೊಂದು ತುದಿ ಫ್ಲಾರೆನ್ಸಿನ ಮುಖ್ಯ ಮಂದಿರ ಸಾಂತಾ ಮರಿಯಾ ದೆಲ್ ಫಿಯೊರೆಯ ಕಡೆಗೆ ಕರೆದೊಯ್ಯುತ್ತದೆ. ಕಟ್ಟಡದೊಳಗಿನ ಒಳಛಾವಣಿಯನ್ನು ಅಸಂಖ್ಯಾತ ಚಿತ್ರಗಳಿಂದ ಅಲಂಕರಿಸುವ ಕಾರ್ಯ 1581ರಲ್ಲಿ ಶುರುವಾಯಿತು. ಕಾಸಿಮೊ I ಡಿ’ಮೆಡಿಚಿಯ ಮರಣಾನಂತರ ಅವನ ಮಗ ಡ್ಯೂಕ್ ಫ್ರಾನ್ಸೆಸ್ಕೋ I ಮತ್ತವನ ತಮ್ಮಂದಿರು ಈ ಕಟ್ಟಡದ ಕಾರ್ಯವನ್ನು ಇನ್ನೊಬ್ಬ ವಾಸ್ತುಶಿಲ್ಪಿ ಬರ್ನಾರ್ಡೋ ಬುಆಂಟಾಲೆಂಟಿಯ ನೇತೃತ್ವದಲ್ಲಿ ಮುಗಿಸಿ, ಅದನ್ನು ಗ್ಯಾಲರಿಯಾ ಆಗಿ ಬದಲಾಯಿಸುತ್ತಾರೆ.
ತಿರುಗಿ ವರ್ತಮಾನಕ್ಕೆ:
ನಾನೊಬ್ಬನೇ ಹೋಗುವ ವಿಚಾರವಿದ್ದುದರಿಂದ, ಮುಂಚೆಯೇ ಟಿಕೆಟ್ ತೆಗೆಸಿಕೊಂಡಿದ್ದೆ, ಅಷ್ಟೇ ಅಲ್ಲ ಬೆಳಗ್ಗೆ ಬಾಗಿಲು ತೆರೆಯುತ್ತಲೆ ಒಳಕಾಲಿಡುವ ಪ್ರಯತ್ನವನ್ನೂ ಮಾಡುವವನಿದ್ದೆ.  ಅಲ್ಲಿಗೆ ಹೋದಾಗ, ಆ ರೀತಿ ವಿಚಾರ ಮಾಡಿದವ ನಾನೊಬ್ಬನೇ ಇರಲಿಕ್ಕಿಲ್ಲ ಅನ್ನುವ ಅನುಮಾನ ಗಟ್ಟಿಯಾಗಿ ಸಾಬೀತಾಯಿತು. ಆದರೂ, ಅಲ್ಲಿನ ಕಾರ್ಯಕರ್ತರ ಚಾಕಚಕ್ಯತೆಯಿಂದಾಗಿ ಐದಾರು ನಿಮಿಷದಲ್ಲಿಯೇ ಒಳಗಿದ್ದೆ. ಬೆಳಗ್ಗೆ ಬೇಗ ಎದ್ದು ಓಡಿದ್ದು ನಿಜಕ್ಕೂ ಒಳ್ಳೆಯದೇ ಆಯಿತೆನ್ನಿ, ಪ್ರಾಕಾರಗಳೆಲ್ಲ ಜನರಿಲ್ಲದೆ, ಪ್ರತಿಯೊಂದು ಮೂರ್ತಿ, ಚಿತ್ರವನ್ನು ಮನಸೋಇಚ್ಛೆ ನೋಡುವುದು ಸಾಧ್ಯವಾಯಿತು.  

ಮೂರು ಮಹಡಿಗಳ ಆರು ಪ್ರಾಕಾರಗಳು ಮತ್ತು ಅವಕ್ಕಂಟಿದ ಕೊಠಡಿಗಳಲ್ಲಿ ಸುಮಾರು 2300 ವರ್ಷಗಳ ಇತಿಹಾಸ ತುಂಬಿದೆ.  ಗ್ರೀಕರ ಮತ್ತು ರೋಮನ್ನರ ಸಂಗಮವರಿ ಕಲ್ಲಿನ ಮೂರ್ತಿಗಳು ಅಂದಿನ ಶಿಲ್ಪಿಗಳ ಕೌಶಲ್ಯವನ್ನು ಹಾಡಿಹೊಗಳುತ್ತವೆ.  ಹಾಲುಗಲ್ಲು ಮತ್ತು ಕಡುಗಪ್ಪು ಸಂಗಮವರಿ ಕಲ್ಲಿನ ಮೂರ್ತಿಗಳನ್ನು ನೋಡುತ್ತ ಗಂಟಗಟ್ಟಲೆ ಕೂಡುವವರಿದ್ದಾರೆ.  ಇವುಗಳ ಜೊತೆಯಲ್ಲೆ ಸುಮಾರು ಸಾವಿರ ವರ್ಷಗಳಿಂದ ಇತ್ತೀಚಿನ (!) ರೆನೈಸ್ಸಾನ್ಸ್ ಪ್ರಕಾರದವರೆಗಿನ ಕಲಾವಿದರ ತೈಲಚಿತ್ರಗಳಿವೆ. ಇವುಗಳಲ್ಲಿ ಬಹುಪಾಲು ಗ್ರೀಕರ, ರೋಮನ್ನರ ಪೌರಾಣಿಕ, ಐತಿಹಾಸಿಕ ಪಾತ್ರಗಳ / ವ್ಯಕ್ತಿಗಳ ಮೂರ್ತಿಗಳೇ ಹೆಚ್ಚು. ನಂತರದ ಚಿತ್ರಕಲೆಗಳಲ್ಲಿ ಬೈಬಲ್ಲಿನ ಕಥೆಗಳು ಕಂಡುಬರುತ್ತವೆ.  

ಪ್ರಾಕಾರಗಳ ಒಳತಾರಸಿಯನ್ನೆಲ್ಲ ಒಂದಿಂಚೂ ಬಿಡದಂತೆ ಪೌರಾಣಿಕ ಪಾತ್ರಗಳ ಪೇಂಟಿಂಗುಗಳ ಜೊತೆಗೆ, ಇದನ್ನು ಕಟ್ಟುವಾಗಿನ ಸಮಯದ ಮೆಡಿಚಿ ಕುಟುಂಬದ ಪ್ರಮುಖರ ಚಿತ್ರಗಳಿಂದ ತುಂಬಲಾಗಿದೆ. 

ಮೂರು ಅಂತಸ್ತುಗಳನ್ನು ಎರಡು ಬಾರಿ ಮೇಲಿಂದ ಕೆಳಗೆ, ಈ ತುದಿಯಿಂದ ಆ ತುದಿಯವರೆಗೆ ಮನಃಪೂರ್ವಕವಾಗಿ ನೋಡಿ, ಬೇಕಾದ್ದನ್ನು ಕ್ಯಾಮರಾದಲ್ಲಿ, ಫೊನಿನಲ್ಲಿ ಸೆರೆಹಿಡಿಯುತ್ತ ಓಡಾಡಿ ಮುಗಿಸಿದೆ. ಮೂರನೆಯ ಬಾರಿಯ ಸುತ್ತುವಿಕೆಯ ಸಮಯಕ್ಕೆ ಆಗಲೇ ಸಾವಿರಾರು ಜನ-ಜಾತ್ರೆ ಸೇರಿಯಾಗಿತ್ತು. ಈ ಬಾರಿ ನನಗೆ ಫೋಟೊ ತೆಗೆದುಕೊಳ್ಳುವ ಅವಸರವಿರಲಿಲ್ಲವಾಗಿ, ಸುಮ್ಮನೆ ಜನರ ಮಧ್ಯ ಓಡಾಡಿ, ಅಲ್ಲಲ್ಲಿ ಬೆಂಚಿನಮೇಲೆ ಕೂತು ನೋಡಿ ಕೆಳಗೆ ಬಂದೆ.
ಎಲ್ಲಾ ಮ್ಯೂಸಿಯಮ್ಮುಗಳಲ್ಲಿ ಇರುವಂತೆ ಅಲ್ಲಿಯೂ ಒಂದು ನೆನಪುಕಾಣಿಕೆ ಅಂಗಡಿ ಇತ್ತಲ್ಲ, ಅಲ್ಲಿಗೆ ಹೋದೆ. ಎದುರಿಗೆ ಕಲಾವಿದ ಸಾಂಡ್ರೋ ಬಾಟಿಚೆಲ್ಲಿಯ ವಿಶ್ವಪ್ರಸಿದ್ದ ವೀನಸ್ಸಳ ಹುಟ್ಟು (The Birth of Venus by Botticelli, circa 1480s) ಪೇಂಟಿಂಗಿನ ದೊಡ್ಡ ಚಿತ್ರ ಕಾಣಿಸಬೇಕೇ? ಅದನ್ನು ಹೇಗೆ ಬಿಟ್ಟೆ ಅಂದುಕೊಳ್ಳುತ್ತಾ, ಮತ್ತೆ ತಿರುಗಿ ಎರಡನೆಯ ಮಹಡಿಗೆ ಓಡಿದೆ (ಸುಳ್ಳು – ಲಿಫ್ಟಿನಲ್ಲಿ ಹೋದೆ – ಲೇ.). ಅದುವರೆಗೂ ಮುಚ್ಚಿದ್ದ ಕೊಠಡಿಯೊಂದು ಈಗ ತೆರೆದಿದ್ದು ಅದರ ಮುಂದೆ ಒಂದರವತ್ತು ಜನರ ಸಾಲಿತ್ತು. ಸರಿ, ಮತ್ತೇನು, ನೋಡದೆಯಂತೂ ಹೋಗುವಂತಿಲ್ಲವಲ್ಲ, ನಿಂತೆ. ಒಳಗೆ ಒಂದು ನೂರರಷ್ಟು ಇದ್ದ ಗುಂಪಿನ ಮಧ್ಯ ನುಗ್ಗಿಕೊಂಡು ಹೋಗಿ ಆ ಸುಮಾರು ಮೂರು ಮೀಟರ್ ಅಗಲ, ಎರಡು ಮೀಟರ್ ಎತ್ತರದ ಚಿತ್ರದ ಮುಂದೆ ನಿಂತಾಗ ಆದ ಅನುಭವ ವರ್ಣಿಸಲಾಗದು.
ಅರ್ಧ ದಿನದ, ಮೂರು-ಮತ್ತೊಂದು ಸಲದ ಓಡಾಟ ಮುಗಿಸಿ ಹೊರಬಂದು, ಅಲ್ಲಿಯೇ ಕಟ್ಟೆಯ ಮೇಲೆ ಕುಳಿತೆ – ನನ್ನ ಆ ಬೆಳಗ್ಗಿನ overwhelming ಅನುಭವದ ಮೆಲುಕು ಹಾಕುತ್ತ.

ಮಧ್ಯದ ತೆರೆದ ಅಂಕಣದಲ್ಲಿ ದಿನವೂ ಸಂಗೀತಗಾರರು ಅಮೋಘವಾಗಿ ಹಾಡುತ್ತಲೋ, ವಾದ್ಯಗಳನ್ನು ನುಡಿಸುತ್ತಲೋ ಕೇಳುಗರ ಮನತಣಿಸುತ್ತಿರುತ್ತಾರೆ. ಒಂದರ್ಧ ಗಂಟೆ ಕೂತು ಕೇಳಿ, ಅವರ ಮುಂದಿನ ವಯೋಲಿನ್ ಡಬ್ಬಿಗೊಂದಿಷ್ಟು ಕಾಣಿಕೆ (definitely worth, by any means – ಲೇ.) ಹಾಕಿ, ಮನೆಯ ಉಳಿದ ಸದಸ್ಯರನ್ನು ಹುಡುಕುತ್ತಾ ಹೊರಟೆ. ಅವರೆಲ್ಲ ಅಕಾದೆಮಿಯಾ ಗ್ಯಾಲರಿ ಮುಗಿಸಿ ಬಂದು, ಒಂದು ಪುಟ್ಟ ಜೆಲಾಟೇರಿಯಾದಲ್ಲಿ ಝಂಡಾ ಊರಿದ್ದರು. ನಾನೂ ಒಂದು ಬಟ್ಟಲು ತೊಗೊಂಡು, ಅವರೊಡನೆ ಕೂತು, ಇಟಾಲಿಯನ್ನರಂತೆ (ಅಥವಾ ಭಾರತೀಯರಂತೆ) ಕೈಗಳನ್ನು ಬೀಸಿ, ಜೋರಾಗಿ ಆಡುತ್ತಿದ್ದ ಮಾತಿನಲ್ಲಿ ಸೇರಿಕೊಂಡೆ.
ಮತ್ತೇನಾದರೂ ಫ್ಲಾರೆನ್ಸಿಗೆ ಹೋದರೆ (ಇನ್ನೂ ಸಾಕಷ್ಟು ಊರುಗಳಿವೆ ನಿಜ – ಲೇ.), ಇನ್ನೂ ಎರಡಿವೆ ಗ್ಯಾಲರಿಯಾಗಳು ನೋಡಲು!

- ಲಕ್ಷ್ಮೀನಾರಾಯಣ ಗುಡೂರ

(ವಿಸೂ: ಮೇಲೆ ಹಾಕಿರುವ ಎಲ್ಲಾ ಚಿತ್ರಗಳೂ ನಾನೇ ಸೆರೆಹಿಡಿದವು. ಜಾಗ ಹಿಡಿಯುತ್ತದೆಂದು ಕೆಲವೇ ಚಿತ್ರಗಳನ್ನು ಹಾಕಿದ್ದು, ಪ್ರತಿಯೊಂದರ ಹೆಸರು ಹಾಕುವುದನ್ನು ಕೈಬಿಟ್ಟಿದ್ದೇನೆ. ಕ್ಷಮೆಯಿರಲಿ. ಅಲ್ಲದೇ, ನನ್ನ ಚಿತ್ರಗಳು ಎದುರಿಗೆ ನೋಡಿದಾಗ ಆಗುವ ಆನಂದದ ಅನುಭವದ ಕಾಲುಭಾಗಕ್ಕೂ ನ್ಯಾಯ ಒದಗಿಸವು. – ಲೇ.)
***************************************************