ಪಶ್ಚಿಮಕ್ಕೊಂದು ಇಣುಕು : ಜಿ. ಎಸ್. ಜಯದೇವ್

ಅನಿವಾಸಿ ಕನ್ನಡಿಗರಿಗೆ ಜಯದೇವ್ ಅವರು ಈಗಾಗಲೇ ಚಿರಪರಿಚಿತರು. ಒಬ್ಬ ಸಮಾಜ ಸೇವಕನಾಗಿ, ದೀನಬಂಧುವಾಗಿ, ಪರಿಸರ ಪ್ರೇಮಿಯಾಯಾಗಿ, ಶಿಕ್ಷಣ ತಜ್ಞನಾಗಿ, ಲೇಖಕನಾಗಿ, ಅಂಕಣಕಾರನಾಗಿ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ್ದಾರೆ. ವೈಜ್ಞಾನಿಕ ಸತ್ಯ ಮತ್ತು ಅಧ್ಯಾತ್ಮ ಇವೆರಡನ್ನೂ ಒಂದೇ ದೃಷ್ಟಿಕೋನದಲ್ಲಿಟ್ಟುಕೊಂಡು ಇವೆರಡರ ನಡುವೆ ಇರುವ ಸಮಾನಾಂಶಗಳ ಬಗ್ಗೆ ಚಿಂತಿಸಿದ್ದಾರೆ. ಮೂಲದಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ, ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡ ಜಯದೇವ್ ಅವರು ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡಿ, ಮುಂಚಿತವಾಗಿಯೇ ನಿವೃತ್ತಿ ಪಡೆದು ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ. ಗಿರಿಜನರ ಸಂಪರ್ಕದಿಂದ ಒದಗಿದ ಅಮೂಲ್ಯವಾದ ಅನುಭವ ಅವರಿಗೆ ಪರಿಸರದ ಅಳಿವು ಉಳಿವಿನ ಬಗ್ಗೆ ಚಿಂತಿಸಲು ಅನುವುಮಾಡಿಕೊಟ್ಟಿತು. ಇಲ್ಲಿಂದ ಮುಂದೆ ಹಲವಾರು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಅವರು ತೊಡಗಿಕೊಂಡರು. ಗಿರಿಜನರ ಸಂಪರ್ಕದಿಂದ ಒದಗಿದ ಹಲವಾರು ಅಮೂಲ್ಯ ಅನುಭವಗಳನ್ನು, ಪರಿಸರದ ಬಗ್ಗೆ ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿ "ಸೋಲಿಗ ಚಿತ್ರಗಳು" ಎಂಬ ಕೃತಿಯನ್ನು ರಚಿಸಿದ್ದು ಅದು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರ ಪ್ರಶಂಸೆಯನ್ನು ಪಡೆಯಿತು. 

ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇರುವ ಜಯದೇವ್ ಅವರು ಅನಾಥ ಮಕ್ಕಳ ಬಗ್ಗೆ ತೀವ್ರವಾದ ಕಾಳಜಿಯಿಂದ ಮತ್ತು ಅನುಕಂಪೆಯಿಂದ ದೀನಬಂಧು ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಅಲ್ಲಿ ನೂರಾರು ಗಂಡು ಮತ್ತು ಹೆಣ್ಣು ಮಕ್ಕಳ ಆಶ್ರಯ, ವಿದ್ಯಾಭ್ಯಾಸ, ವ್ಯಕ್ತಿವಿಕಾಸ ಇವುಗಳಿಗೆ ಅನುವುಮಾಡಿಕೊಟ್ಟು ಈ ಮಕ್ಕಳ ಪೋಷಣೆ ನಿರಂತರವಾಗಿ ನಡೆದಿದೆ.  ನೊಂದ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಮನಶಾಸ್ತ್ರ ತಜ್ಞರ ಜೊತೆ ಸಮಾಲೋಚನೆ ನಡೆಸಿ ಮಾನಸಿಕವಾಗಿ ಘಾಸಿಗೊಂಡ ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಅವರಿಗೆ ಈ ದಿಕ್ಕಿನಲ್ಲಿ ದೊರೆತ ಅನುಭವವನ್ನು "ನಾವೇಕೆ ಹೀಗೆ?" ಎಂಬ  ಕೃತಿಯಲ್ಲಿ ದಾಖಲಿಸಿದ್ದಾರೆ. ಗಾಂಧಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಬುದ್ಧ, ಜೀಸಸ್ ಮುಂತಾದ  ಮಹಾತ್ಮರ ಬದುಕು ಬರಹವನ್ನು ದೀರ್ಘವಾಗಿ  ಅವಲೋಕಿಸಿ ತಮ್ಮ ಬದುಕಿನಲ್ಲಿ ಮತ್ತು ತಮ್ಮ ಆಶ್ರಮದಲ್ಲಿ ಈ ಮೌಲ್ಯಗಳನ್ನು ಅನುಷ್ಠಾತಾನಕ್ಕೆ ತಂದಿದ್ದಾರೆ. ಮೈಸೂರಿನ ಶಕ್ತಿ ಧಾಮ ಎಂಬ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಸಹಾಯಕ ಶೋಷಿತ ಮಹಿಳೆಯರಿಗೆ ಪುನರ್ವಸತಿಯನ್ನು ನೀಡಿ ಅವರಿಗೆ ಆಶ್ರಯನೀಡಿದ್ದಾರೆ.  ಹೀಗೆ ಮಹಿಳೆಯರ ಅಭಿವೃದ್ಧಿ ಕಾರ್ಯದಲ್ಲೂ ತಮನ್ನು ತೊಡಗಿಕೊಂಡಿದ್ದಾರೆ.

ಅವರು ಮೈಸೂರಿನ ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಜಯದೇವ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಯನ್ನು ನೀಡಿದೆ. ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಿವೆ. ಅಮೇರಿಕ, ಯುರೋಪ್ ಮತ್ತು ಯುಕೆ ದೇಶಗಳಿಂದ ಅವರಿಗೆ ಆರ್ಥಿಕ ನೆರವು ಬಂದಿರುವುದಲ್ಲದೆ ಹಲವಾರು ವಿದೇಶಿಯರು ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ. ಜರ್ಮನಿಯ ಹಲವಾರು ವಿದ್ಯಾರ್ಥಿನಿಯರು ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಲ್ಲಿ ದೀನಬಂಧುವಿನಲ್ಲಿ ಸೇವೆ ಸಲ್ಲಿಸಿದ್ದಾರೆ.  

ಜಯದೇವ್ ಅವರಿಗೆ ನಿವೃತ್ತಿ ಎನ್ನುವುದಿಲ್ಲ, ಅವರ ತಮ್ಮನಾಗಿ ನಾನು ಅವರನ್ನು ಇಂಗ್ಲೆಂಡಿಗೆ ಹಲವಾರು ಬಾರಿ ಆಹ್ವಾನಿಸಿದ್ದು,  ಕೊನೆಗೂ ಈ ಬೇಸಿಗೆಯಲ್ಲಿ ದೀನಬಂಧು ಸಂಸ್ಥೆ ಯಿಂದ  ತಾತ್ಕಾಲಿಕವಾಗಿ ಬಿಡುಗಡೆ ಪಡೆದು    ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಯುಕೆ ಮತ್ತು ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಬದುಕಿನಲ್ಲಿ ದಟ್ಟವಾದ ಅನುಭವವನ್ನು ಪಡೆದ ಜಯದೇವ್ ಅವರು ಯುಕೆ ಮತ್ತು ಯೂರೋಪಿನ ಬಗ್ಗೆ ಅವರ  ಮೊಟ್ಟ  ಮೊದಲ ಭೇಟಿಯ ಅನಿಸಿಕೆಗಳೇನು ಎಂದು ಹಲವಾರು ಅನಿವಾಸಿ ಮತ್ತು ವಿದೇಶಿ ಮಿತ್ರರು ಕೇಳಿದ್ದು ಜಯದೇವ್ ಅವರು ತಮ್ಮ ವಿಶೇಷ ಒಳನೋಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದನ್ನು ಒಂದು ಲೇಖನವಾಗಿ ಬರೆಯಬೇಕೆಂದು ನಾನು ಒತ್ತಾಯಿಸಿದರೆ ಫಲವಾಗಿ, ಈ ಹಿನ್ನೆಲೆಯಲ್ಲಿ ಅವರ ಕೆಳಗಿನ ಲೇಖನವನ್ನು ಪ್ರಕಟಿಸಿಲಾಗಿದೆ, ದಯವಿಟ್ಟು ಓದಿ ಮತ್ತು ಪ್ರತಿಕ್ರಿಯಿಸಿ.

 -ಸಂಪಾದಕ
      * * *
ಅಮೇರಿಕಾ ದೇಶಕ್ಕಿಂತಲೂ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಯೂರೋಪ್ ದೇಶಗಳನ್ನು ನೋಡಬೇಕೆಂಬ ಬಯಕೆ ನನಗೆ ಆಗಾಗ ಮೂಡುತ್ತಿತ್ತು. ಆದರೆ ಸಾಧ್ಯವಾಗಿದ್ದು ಈಗ. ಕಳೆದ ಇಪ್ಪತೈದು ವರ್ಷಗಳಿಂದಲೂ ನನ್ನ ತಮ್ಮ, ಅವನ ಕುಟುಂಬದ ಎಲ್ಲರೂ ನನ್ನನ್ನು ಕರೆಯುತ್ತಲೇ ಇದ್ದಾರೆ. ದೀನಬಂಧು ಸಂಸ್ಥೆಯ ಜವಬ್ದಾರಿಯಿಂದ ಬಿಡಿಸಿಕೊಂಡು ನನ್ನ ತಂಗಿಯ ನೆರವಿನಿಂದ ಈಗ ಪ್ರಯಾಣ ಸಾಧ್ಯವಾಗಿದೆ. ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಪ್ರಯಾಣ ಬಹಳ ಸುಲಭ. ಮೊಬೈಲ್-ಇಂಟರ್ ನೆಟ್ ಗಳಿಂದಾಗಿ ಪ್ರತಿ ಹೆಜ್ಜೆಯನ್ನು ಪ್ಲಾನ್ ಮಾಡಿ ಪ್ರಯಾಣ ಮಾಡಬಹುದು. 
ಹೊಸ ಸ್ಥಳಗಳನ್ನು ಅಲ್ಲಿಯ ಜನರನ್ನು ಅವರ ರೀತಿ ನೀತಿಗಳನ್ನು ನೋಡಿ ವಸ್ತು ನಿಷ್ಠವಾಗಿ ಗ್ರಹಿಸಬೇಕೆಂದರೆ ಅದಕ್ಕೆ ಹೊಸ ಕಣ್ಣುಗಳೇ ಬೇಕು. ಭಾರತೀಯ ಸಂಸ್ಕೃತಿ ಮತ್ತು ಅದರ ನೀತಿ ರೀತಿಗಳನ್ನೇ ಕಣ್ಣಿನ ತುಂಬಾ ತುಂಬಿಕೊಂಡಿದ್ದರೆ ನಾವು ಈ ಆಗಂತುಕ ಸಂಸ್ಕೃತಿಯ ಬಗ್ಗೆ ತೀರ್ಪು ನೀಡಲು ಪ್ರಾರಂಭಿಸುತ್ತೇವೆ. ಮೊದಲನೆಯದಾಗಿ ಯಾರೂ ನಮ್ಮನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಲ್ಲ; ಎರಡನೆಯದಾಗಿ ಇಂತಹ ಪೂರ್ವಾಗ್ರಹಗಳಿಂದಾಗಿ ನಾವು ಹೊಸದನ್ನು ನೋಡುವ ಸುಂದರ ಅವಕಾಶವನ್ನೇ ಕಳೆದುಕೊಂಡುಬಿಡುತ್ತೇವೆ. ಇಂತಹ ಒಂದು ಮುಕ್ತಮನಸ್ಸು ನನಗಿದ್ದರೂ ಮೊದಲು ಕೆಲವು ದಿನ ನನಗೆ ಕಷ್ಟವಾಯಿತು. ಭಾರತೀಯ ದೃಶ್ಯಾವಳಿಗಳಿಗೆ ಬಂಧಿಯಾಗಿದ್ದ ನನ್ನ ನೋಟವನ್ನು ನನ್ನ ಗ್ರಹಿಕೆಯ ಕ್ರಮವನ್ನು, ಸರಿ-ತಪ್ಪುಗಳ ನಿಷ್ಕರ್ಷೆಯನ್ನು ಬಹಿಷ್ಕರಿಸಿ ಮುಕ್ತ ಮನಸ್ಸಿನಿಂದ ನೋಡಲು ಪ್ರಾರಂಭಿಸಿದೆ. ಆಗ ಆತಂಕಕ್ಕೆ ಕಾರಣವಿಲ್ಲದ, ಸುಂದರವಾದ ಇಂಗ್ಲೆಂಡ್-ಯೂರೋಪ್ ಗಳು ಗೋಚರಿಸಲು ಪ್ರಾರಂಭವಾಯಿತು. ಹಿಂದೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಇತ್ಯಾದಿ ಇತ್ಯಾದಿ ವಿಚಾರಗಳು ಚರಿತ್ರೆಗೆ ಸಂಬಂಧಪಟ್ಟ ವಿಷಯಗಳು; ಚರಿತ್ರೆಯ ಪಾಠಗಳಾಗಿ ಇವನ್ನು ಬ್ರಿಟಿಷರು-ಭಾರತೀಯರು ಇಬ್ಬರೂ ತಿಳಿಯಬೇಕು. ಆದರೆ ವರ್ತಮಾನದ ಮನುಷ್ಯ ಸಂಬಂಧಗಳಲ್ಲಿ ಈ ವಿವರಗಳಿಗೆ ಯಾವ ಸ್ಥಾನವೂ ಇರಬೇಕಾಗಿಲ್ಲ  ಎಂಬ ವಿವೇಕ ನಮಗೆ ಹುಟ್ಟಬೇಕು. ಈ ನನ್ನ ಗಾಢವಾದ ನಂಬಿಕೆ ನನಗೆ ಮತ್ತಷ್ಟು ತೆರೆದ ಮನಸ್ಸನ್ನು ದಯಪಾಲಿಸಿದೆ. ಹಾಗಾಗಿ ಪ್ರವಾಸದ ತುಂಬ ಸುಂದರ ಚಿತ್ರಗಳೇ ಪ್ರಧಾನವಾಗಿವೆ. ಯಾವುದೇ ಸಮಾಜದ ಒಟ್ಟಾರೆ ಮಾನಸಿಕ  ಸ್ವಾಸ್ಥ್ಯವನ್ನು ಕಲುಕುವ ಆಚಾರ ವಿಚಾರಗಳ ಬಗ್ಗೆ ನನಗೆ ಕಳಕಳಿ ಇದೆ, ಮುಚ್ಚುಮರೆ ಇಲ್ಲದೆ ಇವುಗಳನ್ನು ವಿರೋಧಿಸುತ್ತೇನೆ. ಭಾರತದಲ್ಲಂತೂ ಇಂತವುಗಳನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಪಾಶ್ಚತ್ಯ ದೇಶಗಳಲ್ಲಿ ಕಂಡುಬಂದರೆ ಅವುಗಳನ್ನೂ ಸಹ ಪ್ರಶ್ನಿಸುತ್ತೇನೆ 

ಪಶ್ಚಿಮಕ್ಕೆ ಬಂದನಂತರ ಯೂರೋಪಿನ ಕಿರು ಪ್ರವಾಸ ಹೊರತುಪಡಿಸಿದರೆ ನಾನು ಹೆಚ್ಚಾಗಿ ಓಡಾಡಿದ್ದು ನನ್ನ ತಮ್ಮನ ಮನೆ ಇರುವ ಶಫೀಲ್ಡ್ ನಲ್ಲಿ. ಇದೊಂದು ಸುಂದರವಾದ ಹಸಿರಿನಿಂದ ಕಂಗೊಳಿಸುವ ಊರು. ಮತ್ತೊಂದು ವಿಶೇಷ ಎಂದರೆ ನಿಶ್ಶಬ್ದತೆ.. ಮನೆಯೊಳಗಿದ್ದಾಗಲಂತೂ ನಿರಂತರವಾದ ನಿಶ್ಶಬ್ದತೆಯನ್ನು ಅನುಭವಿಸಿ ಆನಂದಪಟ್ಟಿದ್ದೇನೆ. ಭಾರತದ ಉದ್ದಗಲಕ್ಕೂ ಅಸಹನೀಯವಾದ ಗದ್ದಲವನ್ನು ಅನುಭವಿಸಿದ ನನಗೆ ಇದೊಂದು ಆಪ್ಯಾಯ ಮಾನವಾದ ಅನುಭವ. ಬ್ರಿಟಿಷರು ಸ್ನೇಹಜೀವಿಗಳು ಎದುರಿಗೆ ಎಲ್ಲರಿಗೂ ನಗುಮುಖದಿಂದ ಹಲೋ ಹೇಳುತ್ತಾರೆ, ಸರಿದು ದಾರಿಬಿಡುತ್ತಾರೆ. ಪ್ರತಿಯೊಬ್ಬ ವಾಹನ ಚಾಲಕನೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಇಕ್ಕಾಟ್ಟಾದ ರಸ್ತೆಗಳಲ್ಲಿ ಇದುರಿನಿಂದ ವಾಹನ ಬಂದಾಗ ನಿಲ್ಲಿಸಿ ಇತರರಿಗೆ ಅನುವು ಮಾಡಿ ಕೊಡುವ ಸಭ್ಯತೆಯ ಸಂಪ್ರದಾಯವಂತೂ ಅನುಕರಣಯೋಗ್ಯವಾದುದು. ಬ್ರಿಟಿಷರ ಈ ಶಿಸ್ತಿನ ಒಂದನೇ ಹತ್ತುಭಾಗವಾದರೂ ನಮ್ಮ ದೇಶದಲ್ಲಿ ಆಚರಣೆಗೆ ಬರುವುದಾದರೆ ನಮ್ಮ ದೇಶದ ಹಾರನ್ ಹೊಂಕಾರಗಳು ಸ್ವಲ್ಪವಾದರೂ ಕಡಿಮೆಯಾಗಬಹುದು. ನನ್ನ ಅನಿಸಿಕೆ ಏನೆಂದರೆ ನಿಶ್ಯಬ್ದತೆಯಿಂದ ಮನಃಶಾಂತಿ ಉಂಟಾಗುತ್ತದೆ. ಕರ್ಕಶವಾದ ಶಬ್ದಗಳ ನಡುವೆ ಬಹಳಕಾಲ ಸಂಚಾರ ಮಾಡಿದರೆ ಮನಶ್ಯಾಂತಿ ಹಾರಿಹೋಗುತ್ತದೆ, ಮತ್ತು ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಬಹುದು. 
ಇರಲಿ ಬ್ರಿಟಿಷರು ಸ್ನೇಹಜೀವಿಗಳು ಎಂದೆ. ನೆನ್ನೆಯ ದಿನ ಲಿನ್ ಮತ್ತು ಜೇನ್ ಇಬ್ಬರು ಧೀಮಂತ ಮಹಿಳೆಯರು ಸ್ಕಾಟ್ ಲ್ಯಾಂಡ್ ನಿಂದ ನೂರಾರು ಮೈಲು ಡ್ರೈವ್ ಮಾಡಿಕೊಂಡು ನನ್ನನ್ನು ನೋಡಲು ನನ್ನ ತಮ್ಮನ ಮನೆಗೆ ಬಂದಿದ್ದರು. ದೀನಬಂಧುವಿನಲ್ಲಿ ಕೆಲವು ತಿಂಗಳುಗಳ ಕಾಲ ವಾಲಂಟರಿ ಸರ್ವಿಸ್ ಮಾಡಿದ್ದ ಇವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಗಂಟೆಗಳನ್ನೇ ಕಳೆದರು. ಒಂದೂವರೆ ದಶಕದ ನಂತರವೂ ತಾವು ಒಡನಾಡಿದ  ಎಷ್ಟೊಂದು ಮಕ್ಕಳ, ಸಿಬ್ಬಂದಿಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಅತ್ಯಂತ ಪ್ರೀತಿಯಿಂದ ನೆನೆದರು. ಇಲ್ಲಿಯ ಸರಾಸರಿ ಜೀವನವನ್ನು ನೋಡಿದಾಗ ಈ ಜನ ನೆರೆಹೊರೆಯವರನ್ನು ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ ಎಂದು ಅನ್ನಿಸುವುದುಂಟು. ಆದರೆ ಮತ್ತೊಬ್ಬರಿಗೆ ನೆರವಾಗುವ ಸಂದರ್ಭ ಒದಗಿಬಂದಾಗ ತಮ್ಮ ಶಿಷ್ಟಾಚಾರವನ್ನು ಬದಿಗೊತ್ತಿ ಮನುಷ್ಯ ಸಂಬಂಧಗಳಿಗೆ ಮಿಡಿಯುತ್ತಾರೆ. ಬೂಟಾಟಿಕೆ ಎಂಬುದು ಎಳ್ಳಷ್ಟು ಇರುವುದಿಲ್ಲ. ಕೆಲವೊಮ್ಮೆ ವ್ಯತಿರಿಕ್ತ ಪ್ರಕರಣಗಳೂ ಕಂಡುಬರಬಹುದು, ಆದರೆ ಅಪರೂಪ. 

ಬ್ರಿಟಿಷ್ ಜನ ಮಕ್ಕಳ ರಕ್ಷಣೆಗಾಗಿ ಅತಿಯಾದ ಕಾನೂನು, ಕಟ್ಟಳೆಗಳನ್ನು ಮಾಡಿಕೊಂಡಿದ್ದಾರೆ ಎಂದೆನಿಸುತ್ತದೆ. ಇದಕ್ಕೆ ಕಾರಣಗಳೂ ಇವೆ ಎಂಬುದು ಒಂದು ಸಮಜಾಯಿಷಿ. ಎಲ್ಲೆಲ್ಲೂ ಅಪಾಯಗಳನ್ನೇ ನೋಡುತ್ತ, ಸದಾಕಾಲವೂ ಗುರಾಣಿಯನ್ನು ಅಡ್ಡಹಿಡಿದೇ  ಬದುಕುವ  ಜೀವನ ವಿಧಾನ ಬದುಕಿನ ಪ್ರೀತಿಯನ್ನು ನಂಬಿಕೆಯನ್ನು ಗಟ್ಟಿಗೊಳಿಸುವ ಬದಲು ಸ್ವರಕ್ಷಣೆಯ ಗೀಳನ್ನು ಹೆಚ್ಚಿಸಬಹುದಲ್ಲವೆ? ನಂಬಿಕೆ ಮತ್ತು ಪರಸ್ಪರತೆಗಳಿಗೆ ಸ್ಥಳವಿಲ್ಲದೆ ಜೀವನ ಶುಷ್ಕವಾಗಿ ಬಿಡಬಹುದಲ್ಲವೆ? ನಂಬಿಕೆ ಭರವಸೆಗಳಿಲ್ಲದ ಜೀವನದಲ್ಲಿ ಪರಕೀಯತೆ (Alienation) ಹತಾಶೆಗಳು ಸುಪ್ತವಾಗಿ ಮನೆಮಾಡಿ ಆತ್ಮವನ್ನೇ ಕೊರೆಯಬಹುದೋ ಏನೋ? ಈ ಪ್ರಶ್ನೆಗೆ ನನಗೆ ಉತ್ತರ ದೊರೆತಿಲ್ಲ. 

ಪಾಶ್ಚಿತ್ಯ ಜಗತ್ತಿನ ಇಂದಿನ ವ್ಯವಸ್ಥೆ ಮತ್ತು ಸಂಸ್ಕೃತಿ ‘ಅನುಭಾವ’ ಎಂದು ನಾವು ಯಾವುದನ್ನು ಕರೆಯುತ್ತೇವೆಯೊ ಆ ಮನಸ್ಥಿತಿಯನ್ನು ಕೆಲವರಾದರೂ ಪಡೆಯಬಹುದಾದ ಸಾಧ್ಯತೆಯನ್ನು ದೂರ ಸರಿಸುತ್ತದೆ. ಬ್ರದರ್ ಲಾರೆನ್ಸ್ ಅಥವಾ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸ್ಸಿ ಅವರಂತಹ ಅನುಭಾವಿಗಳು ಪಶ್ಚಿಮದಲ್ಲೂ ಇದ್ದುದು ಉಂಟು. ಆದರೆ ಇಂದಿನ ವಾತಾವರಣದಲ್ಲಿ ಭೌತಿಕತೆಯೇ ಪ್ರಧಾನವಾಗಿದ್ದು ಅಂತರ್ಮುಖತೆ ಗೌಣವಾಗಿದೆ.  ಹಾಗಾಗಿ ಒಂದು ಮಿತಿಯೊಳಗೆ ಇವರು ಅಧ್ಯಾತ್ಮವನ್ನು ಮೆಚ್ಚುತ್ತಾರಾದರೂ ತಮ್ಮ ನಡುವೆಯೇ ಇರಬಹುದಾದ ರಮಣಮಹರ್ಷಿಯವರಂತಹ ಅನುಭಾವಿಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಬಹದೋ ಏನೋ! ಭಾರತೀಯ ಸಂಸ್ಕೃತಿಯಲ್ಲಿ ನೆಲೆಯೂರಿದ ನನ್ನಂತಹವರಿಗೆ ಇದೊಂದು ದೊಡ್ಡ ಕೊರತೆಯಾಗಿ ಕಾಣುತ್ತದೆ. ಬದುಕಿನ ನಿರರ್ಥಕತೆಯ ಅರಿವು ನಮ್ಮನ್ನು ಆಧ್ಯಾತ್ಮಿಕತೆಗೆ ಕೊಂಡೊಯ್ದರೆ ಆಲ್ಬರ್ಟ ಕಾಮು  ಅವರಂತಹ ಪಾಶ್ಚಾತ್ಯ ಚಿಂತಕರನ್ನು ಅಸಂಗತ (Absurd) ತತ್ತ್ವಕ್ಕೆ ಕೊಂಡೊಯ್ದು ಆತ್ಮಹತ್ಯೆಯ ಪ್ರಶ್ನೆಯನ್ನು ಎದುರಿಸಬೇಕಾದ ಅನಿವಾರ್ಯತೆಯನ್ನುಂಟು ಮಾಡುತ್ತದೆ. ಕರ್ಮ ಮಾಡುತ್ತಲೇ ನೂರು ವರ್ಷಕಾಲ ಬಾಳಬೇಕು ಎಂದು ಹೇಳುವ ನಮ್ಮ ಈಶೋಪನಿಷತ್ತಿನ ಮಂತ್ರಕ್ಕೂ ಬದುಕಿನ ನಿರರ್ಥಕತೆಯನ್ನು ಆತ್ಮಹತ್ಯೆಯ ಪ್ರಶ್ನೆಯಾಗಿ ಎದುರಿಸುವುದಕ್ಕೂ ಎಷ್ಟು ವೆತ್ಯಾಸವಿದೆ!

ಸರಾಸರಿಯಾಗಿ ಬ್ರಿಟಿಷ್ ಜನ ತಮ್ಮ ಪರಂಪರೆಯ ಬಗ್ಗೆ, ಗತಕಾಲದ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾರೆ. ಯಾವಾಗಲೂ ಗೆಲ್ಲುಗರಾಗಿಯೇ ಬೆಳೆದು ಬಂದ ಈ ಜನಾಂಗ ಹೆಮ್ಮೆ ಪಡುವುದರಲ್ಲಿ ಆಶ್ಚರ್ಯವಿಲ್ಲ. ಇಂದಿನ ಅವರ ವ್ಯವಸ್ಥೆಯ ಆದ್ಯತೆಗಳನ್ನು ಗಮನಿಸಿದರೆ ಇದು ಅರಿವಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಲು ಸ್ವಯಂಪ್ರೇರಣೆಯಿಂದ ಸಂಘಟಿತ ಪ್ರಯತ್ನಗಳೂ ನಡೆಯುವುದುಂಟು. ನ್ಯಾಷನಲ್ ಟ್ರಸ್ಟ್ ಇಂತಹ ಒಂದು ಸಾರ್ವಜನಿಕ ಸಂಸ್ಥೆ. ಹಳೆಯ ಕಾಲದ ಮನೆಯನ್ನು ಹಣದ ಮುಗ್ಗಟ್ಟು ಅಥವಾ ಇತರ ಕಾರಣಗಳಿಗಾಗಿ ಯಾರಾದರೂ ಮಾರಿಬಿಟ್ಟಿದ್ದರೆ ಅದನ್ನು ಟ್ರಸ್ಟ್ ಹೆಚ್ಚು ಹಣ ಕೊಟ್ಟು ಕೊಂಡು ಕೊಂಡು ಹಾಗೇಯೇ ಉಳಿಸುತ್ತದೆ. ಹಳೆಯ ಕಾಲದ ಮನೆಗಳನ್ನು ಹಾಗೆಯೇ ಉಳಿಸಿಕೊಂಡು ಮುಂದಿನ ಪೀಳಿಗೆಯವರಿಗೆ ಗತ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಈ ಟ್ರಸ್ಟ್ ನ ಉದ್ದೇಶ. ಈ ಮನೆಗಳ ಜೊತೆ ಹಿಂದೆ ಬಳಸುತ್ತಿದ್ದ “ಮಿಲ್ ಸ್ಟೋನ್” ಅಥವಾ ಹಿಟ್ಟು ಮಾಡುವ ಬೃಹತ್ ಬೀಸೆ ಕಲ್ಲುಗಳನ್ನು ಸಂರಕ್ಷಿಸಿದ್ದಾರೆ. ಇಷ್ಟೆ ಅಲ್ಲ ಹಿಂದೆ ಕುರಿಗಳನ್ನು ಕಟ್ಟುತ್ತಿದ್ದ ರೊಪ್ಪವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಜೊತೆಗೆ ಇವುಗಳ ಸಾಂಸ್ಕೃತಿಕ ಚರಿತ್ರೆಯನ್ನು ಹೇಳುವ ಚಿಕ್ಕ ಚಿಕ್ಕ ಫಲಕಗಳು, ಆಯಾ ಪ್ರದೇಶಗಳ ಚಿತ್ರ ಸಹಿತ ನಕ್ಷೆಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಜೊತೆಗೆ ಜೀವ ವೈವಿಧ್ಯದ ರಕ್ಷಣೆಗೂ ಬಹಳ ಮಹತ್ವ ನೀಡಿದ್ದಾರೆ. ನ್ಯಾಷನಲ್ ಟ್ರಸ್ಟ್ ವಿಶಾಲವಾದ ಭೂಮಿಯನ್ನು ಕೊಂಡುಕೊಂಡು ಇರುವ ನೈಸರ್ಗಿಕ ಸಂಪತ್ತನ್ನು ಕಾಪಾಡುತ್ತದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದನ್ನು ತಡೆದರೆ ಸಾಕು ಆ ಪ್ರದೇಶದ ಜೀವ ವೈವಿಧ್ಯ ಮತ್ತು ಪ್ರಕೃತಿ ಸಂಪತ್ತು ಉಳಿಯುತ್ತದೆ. ಭಾರತದಂತಹ ಅದ್ಭುತ ಜೀವವೈವಿಧ್ಯದ ತಾಣದಿಂದ ಬಂದ ನನ್ನಂತಹವರಿಗೆ ಇವರ ಜೀವ ವೈವಿಧ್ಯ ಸಂರಕ್ಷಣೆಯ ಕಾನೂನುಗಳು ಸ್ವಲ್ಪ ಅತಿ ಎನಿಸುವುದುಂಟು. ಆದರೆ ಪಶ್ಚಿಮ ಘಟ್ಟಗಳಂತಹ ಅಮೂಲ್ಯ ಜೀವ ವೈವಿಧ್ಯದ ಬಿಸಿ ತಾಣಗಳ (Hot spot) ಸಂರಕ್ಷಣೆಯ ಬಗ್ಗೆ ನಮ್ಮ ಸರ್ಕಾರಗಳೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು, ಶ್ರೀ ಸಾಮಾನ್ಯರು ಸ್ವಲ್ಪವೂ ಸಹಕರಿಸದಿರುವುದು ಅತ್ಯಂತ ಆತಂಕದ ಸಂಗತಿ. ಅಲ್ಲದೆ ಅನೇಕ ಶತಮಾನಗಳ ಸಾಂಸ್ಕೃತಿಕ ಚರಿತ್ರೆಯಿರುವ ನಮ್ಮ ಸಾವಿರಾರು ದೇವಸ್ಥಾನಗಳು, ಸಾಂಸ್ಕೃತಿಕ ತಾಣಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸದೇ ಇರುವುದು ವಿಷಾದನೀಯ. ಹೊರಗಿನಿಂದ ಬಂದ ದಾಳಿಕೋರರು ನಮ್ಮ ದೇಶದ ಸಾಂಸ್ಕೃತಿಕ ತಾಣಗಳನ್ನು ನಾಶಪಡಿಸಿದರೆಂದು ನಿರಂತರವಾಗಿ ದೂರುತ್ತಲೇ ಕುಳಿತುಕೊಳ್ಳುವುದಕ್ಕಿಂತ ಇರುವ ಸಾಂಸ್ಕೃತಿಕ ತಾಣಗಳ ರಕ್ಷಣಾ ಕಾರ್ಯವನ್ನು ಮುತುವರ್ಜಿಯಿಂದ ಮಾಡುವುದು ಹೆಚ್ಚು ಲಾಭದಾಯಕವಾದೀತು. 

ಬ್ರಿಟಿಷರಂತೆ ಯೂರೋಪಿನ ಇತರ ಕೆಲವು ದೇಶದ ಜನರು  ತಮ್ಮ ಪಾರಂಪರಿಕ ಕಟ್ಟಡಗಳನ್ನು ಬಹುವಾಗಿ ಪ್ರೀತಿಸುತ್ತಾರೆ. ನೆದರ್ಲ್ಯಾಂಡ್ ದೇಶದ ಆಮ್ ಸ್ಟರ್ ಡ್ಯಾಮ್ ನ ಕಟ್ಟಡಗಳಂತೂ ಇನ್ನೂರು-ಮುನ್ನೂರು ವರ್ಷ ಹಳೆಯವು. ಈ ಜನ ತಮ್ಮ ಹಳೆಯ ಮನೆಗಳನ್ನು ಅವು ಇದ್ದ ಹಾಗೆಯೇ ಕಾಪಾಡಿಕೊಂಡು ಬರಲು ಕಂಕಣ ಬದ್ಧರಾಗಿರುವಂತೆ ಕಂಡುಬರುತ್ತದೆ.  ಆಮ್ ಸ್ಟರ್ ಡ್ಯಾಮ್ ನ ಒಂದು ಕಡೆ ಒಂದರ ಪಕ್ಕ ಒಂದು ಇರುವ ಮೂರು ಮನೆಗಳು ವಾಲಿಕೊಂಡಿವೆ. ಇವುಗಳು ಬಹುಶಃ ಮುನ್ನೂರು ವರ್ಷ ಹಳೆಯ ಮನೆಗಳು. ಇವುಗಳನ್ನು “ಡ್ಯಾನ್ಸಿಂಗ್ ಹೌಸಸ್” ಎನ್ನುತ್ತಾರೆ. ಕೆಲವು ಕಡೆ ನಾಲ್ಕು ಮಹಡಿ ಏರಿ ಹೋಗಬೇಕು. ಆದರೆ ಅವರಿಗೆ ಲಿಫ್ಟ್ ಹಾಕಿಸಿಕೊಳ್ಳಲು ಸರ್ಕಾರ ಅನುಮತಿ ಕೊಡುವುದಿಲ್ಲ. ಏಕೆಂದರೆ ಇಂತಹ ಯಾವುದೇ ಪುನರ್ ನವೀಕರಣ ಕಾರ್ಯಕ್ಕೆ ಹಳೆಯ ರಚನೆಗಳನ್ನು ಒಡೆಯಬೇಕಲ್ಲ! ಹಾಗಾಗಿ ಈ ಇಕ್ಕಾಟ್ಟಾದ ಮೆಟ್ಟಿಲುಗಳನ್ನು ಹತ್ತಿಯೇ ಹೋಗಬೇಕು. ಫ್ರಾನ್ಸ್ ಆಧುನಿಕ ನಗರವಾದರೂ ಅಲ್ಲಿಯೂ ಸಹ ನೂರಾರು ಹಳೆಯ ಕಟ್ಟಡಗಳನ್ನು ಉಳಿಸಿಕೊಂಡಿದ್ದಾರೆ. ಯೂರೋಪಿನ ವಿಶೇಷವೆಂದರೆ ಆಧುನಿಕತೆ ಅವರ ಸಾಂಸ್ಕೃತಿಕ ಸ್ಮೃತಿಗಳಿಗೆ, ಸಾಂಸ್ಕೃತಿಕ ಅಸ್ಮಿತೆಗೆ ಮಾರಕವಾಗಿಲ್ಲ. ಆದರೆ ನಮ್ಮ ದೇಶದಲ್ಲ್ಲೋ ಆಧುನಿಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳು ಒಂದಕ್ಕೊಂದು ವಿರುದ್ಧವೋ ಎಂಬಂತೆ ಭಾವಿಸುತ್ತೇವೆ. ಆಧುನಿಕತೆ ಎಂಬುದು ಹಳೆಯದೆಲ್ಲದರ ಮೇಲೆ ಕಟ್ಟಿದ ಗೋರಿಯೋ ಎಂಬಂತೆ ನಾವು ವರ್ತಿಸುತ್ತೇವೆ. 

ಭಾರತ ಬಹು ಸಂಸ್ಕೃತಿಗಳ ದೇಶ. ನಾಲ್ಕು ಪ್ರಮುಖ ಜಾಗತಿಕ ಧರ್ಮಗಳ ಉಗಮಸ್ಥಾನ. ವಿಭಿನ್ನ ಸಂಸ್ಕೃತಿಗಳು, ಉಪಸಂಸ್ಕೃತಿಗಳು, ನೂರಾರು ಆಚಾರ ವಿಚಾರಗಳು ಒಟ್ಟಿಗೆ ಸಾವಿರಾರು ವರ್ಷಗಳ ಪರ್ಯಂತ ಬೆಳೆದು ಬಂದ ದೇಶ. ಅನ್ಯ ವಿಚಾರಗಳು, ಅನ್ಯ ಸಂಸ್ಕೃತಿಯ ಪದ್ಧತಿ ಆಚರಣೆಗಳು ಈ ದೇಶದಲ್ಲಿ ಅಕ್ಕಪಕ್ಕದಲ್ಲೇ ಇರುವುದನ್ನು ನೋಡಬಹುದು. ಪ್ರತಿರೋಧಗಳು ಬಹಳ ಕಡಿಮೆ ಎಂದೇ ಹೇಳಬಹುದು. ಈ ಅನಿವಾರ್ಯವಾದ ಸಹ ಬಾಳ್ವೆ ಭಾರತೀಯರಿಗೆ ಅಪಾರವಾದ ತಾಳ್ಮೆ, ಸಹಿಷ್ಣುತೆಯ ಮನೋಧರ್ಮವನ್ನು ಕೊಟ್ಟಿದೆ. ಏಕರೂಪ ಸಂಸ್ಕೃತಿಯ ವಾತಾವರಣ ‘ಅನ್ಯ’ ರನ್ನು ಸಹಿಸುವ ಸಹಿಷ್ಣುತೆಯ ಮನೋಧರ್ಮವನ್ನು ನೀಡಲಾರದು. ಸಾವಿರಾರು ವರ್ಷಗಳ ಪರ್ಯಂತ ‘ಅನ್ಯ’ರಾರೂ ಇಲ್ಲದ, ನಮ್ಮವರಷ್ಟೇ ಇರುವ ವಾತಾವರಣದಲ್ಲಿ ಬೆಳೆದ ಮನೋಧರ್ಮ ‘ಅನ್ಯ’ ಎಂಬ ಎಲ್ಲವನ್ನೂ ಗುಮಾನಿಯಿಂದಲೇ ನೋಡುವುದನ್ನು ಅಭ್ಯಾಸಮಾಡಿಕೊಂಡಿರುತ್ತದೆ. ಭಾರತೀಯ ಪರಿಸರದ ಸಹಿಷ್ಣುತೆಯ ಮನೋಧರ್ಮವನ್ನು ಸ್ವಾಮಿ ವಿವೇಕಾನಂದರು ಸುಮಾರು ನೂರ ಮೂವತ್ತು ವರ್ಷದ ಹಿಂದೆಯೇ ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು. “I am proud to belong to religion which has taught the world both tolerance and universal acceptance. We believe not only in universal toleration but we accept all religions as true. I am proud to belong to a nation which has sheltered the persecuted and the refugees of all religions and all nations of the earth.

ಇಂದಿನ ಭಾರತದ ರಾಜಕೀಯ ಸಾಮಾಜಿಕ ಪರಿಸರದಲ್ಲಿ “ಅನ್ಯರು –ನಮ್ಮವರು ಎಂಬ ಭಿನ್ನತೆಯ ಮನೋಧರ್ಮವನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ. ಈ ಭಿನ್ನತೆಯ ಮನೋಧರ್ಮ ನಮ್ಮ ಸಹಜ ಧರ್ಮವಲ್ಲ ಎಂಬುದನ್ನು ಎಂಟನೆಯ ಶತಮಾನದ ಕವಿರಾಜ ಮಾರ್ಗದ ಈ ಸಾಲುಗಳನ್ನು ಗಮನಿಸಿದರೆ ತಿಳಿಯುತ್ತದೆ” “ಕಸವರಮೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಮಂ, ಧರ್ಮಮುಮಂ” ಕಸವರ ಎಂದರೆ ಚಿನ್ನ ಅಥವಾ ಸಂಪತ್ತು. ಇದು ಯಾವುದು ಎಂದರೆ ಪರವಿಚಾರವನ್ನು, ಪರಧರ್ಮದ ಸಾನಿಧ್ಯವನ್ನು ಸಹಿಸಿಕೊಳ್ಳುವುದು ಅಥವಾ ಸಹಿಷ್ಣುತೆಯೇ ಆಗಿದೆ ಎಂಬುದು ಈ ಸಾಲುಗಳತಾತ್ಪರ್ಯ. ಇಂದು ಬ್ರಿಟನ್ ಮತ್ತು ಯೂರೋಪಿನ ಅನೇಕ ದೇಶಗಳು ವಲಸಿಗರನ್ನು ಉದಾರವಾಗಿ ಸ್ವೀಕರಿಸುತ್ತಿರುವುದು ಆದರಣೀಯ. ಯಾವುದೇ ಜನಾಂಗವಾಗಲಿ, ದೇಶವಾಗಲಿ ತನ್ನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ, ದ್ವೀಪ ದೋಪಾದಿಯಲ್ಲಿ ತಾನಷ್ಟೇ ಸುಖ ಸಮೃದ್ಧಿಯಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲರನ್ನು, ಎಲ್ಲವನ್ನೂ ಒಳಗೊಳ್ಳುವುದೇ ಬದುಕು. ನಿಧಾನವಾಗಿಯಾದರೂ ಈ ಸತ್ಯಕ್ಕೆ ತೆರೆದುಕೊಳ್ಳುತ್ತಿರುವ ಪಾಶ್ಚಾತ್ಯ ಜಗತ್ತು ಸರಿಮಾರ್ಗದಲ್ಲೇ ಇದೆ ಎಂಬುದು ನನ್ನ ಅಭಿಪ್ರಾಯ. 

       -   ಜಿ. ಎಸ್. ಜಯದೇವ್ 

                     * * *


4 thoughts on “ಪಶ್ಚಿಮಕ್ಕೊಂದು ಇಣುಕು : ಜಿ. ಎಸ್. ಜಯದೇವ್

  1. ಇತ್ತೀಚೆಗೆ ಓದಿದ ಲೇಖನಗಳಲ್ಲಿ ನನಗೆ ತುಂಬಾ ಇಷ್ಟವಾದ ಲೇಖನವಿದು.

    ಇದು ಪ್ರವಾಸ ಕಥನವಲ್ಲ. ಲೇಖಕರ ಅಗಾಧ ಅಧ್ಯಯನ, ಮಾನಸಿಕ ಸಂತುಲನ, ಸಮಾಜ ಪ್ರಜ್ಞೆ ಇವೆಲ್ಲ ಈ ಲೇಖನದಲ್ಲಿ ಪ್ರತಿಫಲಿಸಿವೆ.

    ಶಿವಪ್ರಸಾದ ಅವರು ಹೇಳಿದಂತೆ, ಹೆಚ್ಚಿನ ಕಾಲ ಒಂದು ದೇಶದಲ್ಲಿ ನೆಲೆಸಿದಾಗ ಅಲ್ಲಿನ ಬಹುರೂಪಗಳು ಅನಾವರಣವಾದಾಗ ನೋಡುಗನ ದೃಷ್ಟಿಕೋನ ಬದಲಾಗುವುದು ಸಹಜ. ಒಳ್ಳೆಯವನ್ನು ಹೆಕ್ಕಿ, ಬೇಡದ ಜೊಳ್ಳನ್ನು ತೂರಿ ಬಿಡುವ ಲೇಖಕರ ಮನೋಧರ್ಮ ಅನ್ವಯಯೋಗ್ಯ.

    – ರಾಂ

    Like

    • ಪ್ರಸಾದ್ ಅವರಿಗೆ ಧನ್ಯವಾದಗಳು, ತಮ್ಮ ಸಹೋದರ ಜಯದೇವ್ ಅವರಿಂದ ಇಂಥ ಲೇಖನವನ್ನು ಅನಿವಾಸಿಗೆ ತಂದಿದ್ದಕ್ಕೆ. ಸಾಮಾಜಿಕ ಕಳಕಳಿಯ ಜಯದೇವ್ ಅವರು ಎಷ್ಟೊಂದು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವುದನ್ನು ನೋಡಿದರೇ ಆಶ್ಚರ್ಯವಾಗುತ್ತದೆ!

      ಸರಿ ತಪ್ಪುಗಳ ನಮ್ಮ ಪೂರ್ವಗ್ರಹಗಳನ್ನು ಬದಿಗಿಟ್ಟು ನಿರ್ತೀರ್ಪ ಮನಸ್ಸಿನಿಂದ ಪ್ರಪಂಚವನ್ನು ಗ್ರಹಿಸುವುದು ಸುಲಭಸಾಧ್ಯವಲ್ಲ, ಅದನ್ನು ಹೇಗೆ ಸ್ವಲ್ಪ ಮಟ್ಟಿಗಾದರೂ ಬಗೆಹರಿಸಿಕೊಳ್ಳಬಹುದೆಂದು ಜಯದೇವ್ ಅವರ ಸಲಹೆ ತುಂಬ ಸಮಂಜಸ.

      ಬ್ರಿಟನ್ನಿನ ಹಸಿರು, ನಿಶ್ಶಬ್ದತೆ, ಸ್ನೇಹಪರತೆ, ಸಾಂಸ್ಕೃತಿಕ ಕಾಳಜಿ, ಶಿಸ್ತುಗಳನ್ನು ಆನಂದಿಸುತ್ತಲೇ ಅಪನಂಬಿಕೆ, ಪರಕೀಯತೆ ಮತ್ತು ಅತಿಯಾದ ಲೌಕಿಕತೆಯ ಬಗೆಗಿನ ಗೊಂದಲವನ್ನೂ ಕಾಣಿಸುತ್ತಾರೆ. ರಮಣ ಮಹರ್ಷಿ ಮತ್ತು ಕಾಮೂರನ್ನು ಒಟ್ಟಿಗಿಟ್ಟು ನೋಡುತ್ತಾರೆ.

      ಕೊನೆಯಲ್ಲಿ‌ ಪ್ರಚಲಿತ ಭಾರತದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತ, ಯುರೋಪ್ ಉದಾರವಾದಿ ಸಹಿಷ್ಣುತೆಯತ್ತ ವಾಲುತ್ತಿರುವುದರ ಆಶಾವಾದವನ್ನೂ ಹೊಂದಿದ್ದಾರೆ.

      ಸಾಕಷ್ಟು ಚಿಂತನೆಗಳನ್ನು ಚರ್ಚೆಗಳನ್ನು ಹುಟ್ಟುಹಾಕುವ ಲೇಖನ.

      – ಕೇಶವ

      Like

  2. ಜಿ ಎಸ್ ಜಯದೇವ ಅವರ ಈ ಲೇಖನದಲ್ಲಿ ಅವರ ದಶಕಗಳ ಜೀವನಾನುಭವ, ಅನುಭಾವ, ಸೂಕ್ಷ್ಮಸಂವೇದನೆ ಎಲ್ಲ ಮೊದಲ ಕೆಲಸಾಲುಗಳಲ್ಲೇ ಕಾಣುತ್ತದೆ. ‘ಸ್ವದೇಶದ ದೃಶ್ಯಗಳನ್ನು ಕಣ್ಣಿಗೆ ತುಂಬಿಕೊಂಡು ತೀರ್ಪುಗಾರರಾಗದೆ’ ‘ಆಳಿದವರ- ಭಾರತದ ಇತಿಹಾಸದವನ್ನು ಇತಿಹಾಸ ಪುಟಗಳಲ್ಲಿ ಬಿಟ್ಟು’ ಪೂರ್ವಾಗ್ರಹದಿಂದ ಮುಕ್ತರಾಗಿ ಹೊಸದನ್ನು ಹೊಸದೃಷ್ಟಿಯಿಂದ “ಪಶಿಮವನ್ನು ಇಣುಕಿ ನೋಡಿ” ಬರೆದು ಓದುಗರಿಗೆ ಮತ್ತೆ ಆತ್ಮಾವಲೋಕನಕ್ಕೆ ಕರೆ ಕೊಟ್ಟಂತಿದೆ. ಹೊರಗಿನವರ ದೃಷ್ಟಿ ಬೇರೆಯೇ ಆಗಿರುತ್ತದೆ. ಆಲಿವರ್ ಗೋಲ್ಡ್ ಸ್ಮಿತ್ತನ Citizen of the world ,೧೮ ಶ.; ಇತ್ತೀಚಿನ ಬಿಲ್ ಬ್ರೈಸನ್ , ಇವರೆಲ್ಲ ಸಹ ಬರೆದುದು ‘ಹಳೆಯ’ದಾದರೂ ಹೊಸತು. ಇಂಗ್ಲೆಂಡಿನ ತಮ್ಮನ ಊರಿನ ನಿಶಬ್ದತೆ, ‘ಗುರಾಣಿ ಹಿಡಿದುಕೊಂಡೇ ನಡೆವ’ ಇಲ್ಲಿಯ ಕಟ್ಟುಪಾಡುಗಳು ಇವುಗಳ ಬಗ್ಗೆ ಸ್ವಾರಸ್ಯಕವಾಗಿ ನಮ್ಮ ವಿಚಾರಗಳನ್ನು ಹರಿಬಿಟ್ಟಿದ್ದಾರೆ. ಇನ್ನೂ ಅನೇಕ ವಿಚಾರಗಳು, ಮತ್ತೆ ಮತ್ತೆ ಓದಿದೆ. ಜಯದೇವ ಅವರಿಗೆ ಅಭಿನಂದನೆಗಳು ಮತ್ತು ಥ್ಯಾಂಕ್ಸ್. ಬಂದು ನೋಡಿದ ಕೆಲವೇ ದಿನಗಳಲ್ಲಿ ಅವರಿಂದ ಬರೆಯಿಸಿದ ‘ತಮ್ಮ’ ಪ್ರಸಾದರಿಗೂ ಧನ್ಯವಾದಗಳನ್ನು ಹೇಳಬೇಕು.

    Like

Leave a comment

This site uses Akismet to reduce spam. Learn how your comment data is processed.