ನಿದಿರೆಯೆಂಬ ಮಾಯಾದೇವಿ

ನಮಸ್ಕಾರ ಅನಿವಾಸಿ ಬಂಧುಗಳಿಗೆ. ನಾನೀಗ ಭಾರತದಲ್ಲಿದ್ದು ದಿನಕ್ಕೊಂದು ಊರು ಸುತ್ತುತ್ತಿರುವೆ. ಮೊನ್ನೆ ಫ್ಯಾಮಿಲಿ ಗೆಟ್ ಟುಗೆದರ್ ಎಂದು  ಶ್ರೀರಂಗಪಟ್ಟಣದಲ್ಲಿದ್ದೆವು. ರಂಗನಾಥ ಮಂದಿರದಲ್ಲಿ  ಏಳು ಹೆಡೆಗಳ ಆದಿಶೇಷನ ಮೇಲೆ ಹಾಯಾಗಿ ಮಲಗಿರುವ ಆ ಆದಿರಂಗನನ್ನು ಕಂಡು  ಕಣ್ಮನ ತುಂಬಿದವು.  ಈ ಸಲ ಮಳೆಯಿಲ್ಲದೇ ಕಾವೇರಿ ತೀರದಲ್ಲೂ ಶೆಖೆಗೆ  ಬೆವರಿಳಿಯುತ್ತಿತ್ತು. ರಂಗನಾಥನನ್ನು ಕಂಡಾಕ್ಷಣ “ ಆಹಾ! ಎಂಥ ಸುಖವಪ್ಪಾ ಇವನದು.. ಮಲಗಲು ನುಣುಪಾದ, ದಪ್ಪನೆಯ, ಥಣ್ಣಗಿನ ಆದಿಶೇಷನ ಮಂಚ, ಕಾಲೊತ್ತ ಲು ಕುಳಿತ ಸಿರಿದೇವಿ.. ಯಾರಿಗುಂಟು ಯಾರಿಗಿಲ್ಲ ಇಂಥ ಭಾಗ್ಯ” ಎನ್ನಿಸಿತು. ಸಕಲ ಜೀವ ಜಂತುಗಳನ್ನೂ ಮೇಲು -ಕೀಳು, ಬಡವ- ಬಲ್ಲಿದನೆಂಬ  ಭೇದವಿಲ್ಲದೇ ಆವರಿಸಿಕೊಂಡು ದಣಿವಾರಿಸಿ ಹೊಸ ಚೈತನ್ಯ ತುಂಬುವ  ಈ ನಿದಿರೆಯೆಂಬ ಮಾಯಾದೇವಿಯ ಸುತ್ತಲೇ ನನ್ನ ಚಿತ್ತ ಸುತ್ತುತಿತ್ತು. ಆದರೆ ತಲೆಯ ವಿಚಾರಗಳನ್ನು, ಮನದ ಭಾವಗಳನ್ನು ಹಾಳೆಗಿಳಿಸಲು ಸಮಯವಿಲ್ಲದಷ್ಟು ವ್ಯಸ್ತವಾಗಿರುವುದರಿಂದ  ಈ ಸಲದ ಸಂಚಿಕೆಯಲ್ಲಿ ನಿದ್ದೆಗೆ ಪರ್ಯಾಯವಾಚಿಯಾದ  ಕುಂಭಕರ್ಣನ ಬಗ್ಗೆ  ಶ್ರೀನಿವಾಸ ಉಡುಪರು ಬರೆದ ಒಂದು ಚಂದದ ಕವನವನ್ನು ಹಂಚಿಕೊಳ್ಳುತ್ತಿರುವೆ. ಓದಿ ಆನಂದಿಸುವಿರೆಂದು ನಂಬಿದ್ದೇನೆ.

ಕುವೆಂಪುರವರ ' ಬೊಮ್ಮನಹಳ್ಳಿಯ ಕಿಂದರಿಜೋಗಿ'ಯೋಪಾದಿಯಲಿ ಇದನ್ನೋದಿಕೊಳ್ಳಬಹುದು.

~ ಸಂಪಾದಕಿ

ಕುಂಭಕರ್ಣನ ನಿದ್ದೆ

ಸೀತಾಮಾತೆಯ ರಾವಣ ಕದ್ದು
ಅಶೋಕವನದಲಿ ಬಚ್ಚಿಟ್ಟಿದ್ದು
ಆಂಜನೇಯನು ಸೀತೆಯ ಕಂಡು
ಲಂಕಾನಗರಕ್ಕೆ ಕಿಚ್ಚಿಟ್ಟಿದ್ದು
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
2
ಕಪಿಗಳು ಕಡಲಿಗೆ ಸೇತುವೆ ಕಟ್ಟಿ
ಲಂಕಾನಗರಿಗೆ ದಾಳಿಯಿಟ್ಟಿದ್ದು
ಹನುಮ ರಾವಣನ ದವಡೆಗೆ ತಟ್ಟಿ
ರಾವಣೇಶ್ವರನ ಹಲ್ಲುದುರಿದ್ದು
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
3
ರಾವಣಗಂತೂ ತುಂಬಾ ಕೋಪ
(ಅಲ್ಲವೆ ಮತ್ತೆ, ಅಯ್ಯೊ ಪಾಪ!)
ಮೀಸೆಯ ತಿರುವಿ, ಮುಷ್ಟಿಯ ಬಿಗಿದು
ಕರಕರ ಕರಕರ ಹಲ್ಲನು ಕಡಿದು
ಗಟಗಟ ಗಟಗಟ ನೀರನು ಕುಡಿದು
“ಏಳಿಸಿರೊ ಆ ಕುಂಭಕರ್ಣನನು
ಹೊಸೆದು ಹಾಕಲಿ ನರವಾನರರನು”
ಎಂದು ಕಿರುಚಿದುದು, ಒದರಾಡಿದುದು
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
4
ಒಡಯನ ಮಾತಿಗೆ ಅಪ್ಪಣೆಯೆಂದು
ಧಡ ದಢ ಹೊರಟಿತು ರಾಕ್ಷಸ ದಂಡು
ಕೊಕ್ಕರೆಕಾಲಿನ ತೆಳು ರಾಕ್ಷಸರು
ಗೂಬೆಯ ಮೂತಿಯ ಮುದಿರಾಕ್ಷಸರು
ಹೋತನ ಗಡ್ಡದ ಹಿರಿ ರಾಕ್ಷಸರು
ಕುರುಚಲು ಮೀಸೆಯ, ಕೋರೆಯದಾಡಿಯ
ತರತರ ರೀತಿಯ ಯುವರಕ್ಕಸರು
ಪುಟಪುಟ ನಡೆಯುವ ಮರಿರಕ್ಕಸರು
ಕುಂಭಕರ್ಣನನು ಎಬ್ಬಿಸಲೆಂದು
ಅವರೆಲ್ಲರು ಏನ್ ಮಾಡಿದರೆಂದು
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
5
ಹಕ್ಕಿತುಪ್ಪಳದ ಹಾಸಿಗೆಯಲ್ಲಿ 
ಬೆಟ್ಟದಂತಹ ದೇಹವ ಚೆಲ್ಲಿ
ನಿದ್ರಿಸುತಿದ್ದ ಆ ಮಹರಾಯ
ಎಚ್ಚರವಾದರೆ ಬಹಳ ಅಪಾಯ!
(ಆರು ತಿಂಗಳದ ನಿದ್ದೆಯ ನಡುವೆ
ಎದ್ದನೆಂದರೆ ಅಪಾರ ಹಸಿವೆ!)
ಭೋರ್ಭೋರ್ ಎನ್ನುವ ಭಾರೀ ಗೊರಕೆಗೆ
ಇಡೀ ಅರಮನೆ ನಡುಗುತ್ತಿತ್ತು
ಕರೀಮಂಚ ನರಳುತ್ತಿತ್ತು
“ನೀ ಹೋಗಯ್ಯ, ನೀ ನಡೆ ಮುಂದೆ”
ಒಬ್ಬರನೊಬ್ಬರು ತಿವಿಯುತ ಹಿಂದೆ
ಹಿಂದೆಯೆ ಉಳಿದರು ಬಹಳ ರಕ್ಕಸರು
ಕುಂಭಕರ್ಣನನೆಬ್ಬಿಸ ಬಂದವರು
ಆತನಿಗೇನೂ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
6
“ಕುಂಭಕರ್ಣನೋ ಹೊಟ್ಟೇಬಾಕ
ನಡೆಯಲಿ ಮೊದಲು ಅಡುಗೇಪಾಕ!”
ಎಂದು ಭೋಜನವ ತಂದೇ ತಂದರು
ನೂರು ಜಿಂಕೆ, ಕುರಿ ಕೋಳಿಯ ಕೊಂದರು
(ಕೊಂಚ ಕೊಂಚವೂ ತಾವೇ ತಿಂದರು
ಹುಡುಹುಡುಗಾಟದ ಹುಡುಗ ರಾಕ್ಷಸರು!)
ಹೆಡಿಗೆಗಟ್ಟಲೇ ಲಾಡಿನ ಕಾಳು
ತಪ್ಪಲೆತಪ್ಪಲೆ ಬಿಸಿ ಬಿಸಿ ಕೂಳು
ಹಂಡೆಹಂಡೆಗಳ ಖಾರದ ಸಾರು
ಕಡಾಯಿ ತುಂಬಾ ಘಮಘಮ ಖೀರು
ರಾಶೀರಾಶಿಯ ರಾಗೀ ಮುದ್ದೆ
ಎದ್ದನೆಂಬೆಯೋ ಅಯ್ಯೋ ಪೆದ್ದೆ
ಕುಂಭಕರ್ಣನಿಗೆ ಗೊತ್ತೇ ಇಲ್ಲ
ಎಂಥಾ ನಿದ್ದೆಯೊ ದೇವರೆ ಬಲ್ಲ!
7
ಬೆಟ್ಟದ ದೇಹಕೆ ಗಂಧವ ಬಳಿದು
ಕಣ್ಣುಗಳನು ತಣ್ಣೀರಲಿ ತೊಳೆದು
ಸುತ್ತಲು ಧೂಪದ ಹೊಗೆಯನು ಹಾಕಿ
ಮಂಚದ ಕೆಳಗೇ ಬೆಂಕಿಯ ನೂಕಿ
‘’ಪರಾಕು ಪರಾಕು’’ ಎನ್ನುತ ಕಿರುಚಿ
ಮೀಸೆಯನೆಳೆದು ಕಿವಿಯನು ತಿರುಚಿ
ಭೋಂಭೋಂ ಭೋಂಭೋ ಶಂಖವನೂದಿ
ಧಮ್ಧಮ್ ಧಮ್ಧಮ್ ಜಾಗಟೆ ಬಡಿದು
ಕಹಳೆಯ ಕೂಗಿಸಿ, ನಗಾರಿ ಹೊಡೆದು
ಹೊಟ್ಟೆಯ ಮೇಲೆ ತಕತಕ ಕುಣಿದು
ಮೂಗಿನ ಹೊಳ್ಳೆಗೆ ಬಿರಡೇ ಜಡಿದು
-ಏನು ಮಾಡಿದರು ಎಚ್ಚರವಿಲ್ಲ,
ಅದೆಂಥ ನಿದ್ದೆಯೊ ದೇವರೆ ಬಲ್ಲ!
8
ಬಂದೇ ಬಂದ ಮಂತ್ರಿ ಪ್ರಹಸ್ತ
ರಾಜ ರಾವಣನ ನಿಜ ಬಲಹಸ್ತ
ಕುಂಭಕರ್ಣನನು ಎಬ್ಬಿಸಲೆಂದು
ನಡೆಯುತ್ತಿದ್ದ ಫಜೀತಿಯ ಕಂಡು
ಹೇಳಿದನಾತ- “ಹೀಗೋ ವಿಷಯ
ನನಗೆ ಗೊತ್ತು ಬಿಡಿ ಇದರ ರಹಸ್ಯ”
ಬರಲಿ ನೂರು ತೊಲ ಉಂಡೇ ನಶ್ಯ
ಮರದ ಸೌಟಿನಲಿ ಮೊಗೆದೂ ಮೊಗೆದೂ
ಎರಡೂ ಮೂಗಿಗೆ ಗಿಡಿದೂ ಗಿಡಿದೂ
ಬೆವರುತ ಬೆದರುತ ಠೊಣೆ ರಕ್ಕಸರು
ಉಂಡೇ ನಶ್ಯವ ತುಂಬಿದರು
ಗೊರಕೆಯು ನಿಂತಿತು ಒಂದು ಕ್ಷಣ
ಗೆದ್ದೆನೆಂದಿತು ದನುಜಗಣ
“ಛಟ್ ಛಟ ಛಟಾರ್” ಅಯ್ಯೊ ಏನು?
ಬಿರಿಯಿತೆ ಕೆಳಗಿನ ನೆಲ ಮೇಲ್ ಬಾನು?
(ಸಿಡಿಲಿಗು ಮೀರಿದ ಭಯಂಕರ ಸೀನು)
ಅರಮನೆ ಕಂಭಗಳುರುಳಿದವು
ಆನೆ ಕುದುರೆಗಳು ಕೆರಳಿದವು
“ಅಯ್ಯೋ ಅಮ್ಮ, ನಾ ಸತ್ತೆ!
ಕಿರುಚುತ ಎಲ್ಲರು ನಾಪತ್ತೆ!
ಏನಾದರು ಸರಿ ಫಲವಿಲ್ಲ,
ಕುಂಭಕರ್ಣ ಮೇಲೇಳಲೆ ಇಲ್ಲ!
9
ಹೇಳಿದನೊಬ್ಬ ಪುಟಾಣಿ ರಾಕ್ಷಸ
ಕೊಡುವಿರಾದರೆ ನನಗೊಂದವಕಾಶ
ನನ್ನದೂ ಒಂದಿದೆ ಕೊನೇ ಉಪಾಯ
ಬರಲಿ ಇಲ್ಲಿಗೆ ಆನೆಯ ಲಾಯ
ಸಾವಿರ ಆನೆಯ ತರಿಸಿದರು
ಹುಳೀ ಹೆಂಡವ ಕುಡಿಸಿದರು
ಕುಂಭಕರ್ಣನ ಮೈಬೆಟ್ಟವ ಹತ್ತಿಸಿ
ಬೇಕಾಬಿಟ್ಟಿ ತುಳಿಸಿದರು!
10
ಗೊರಕೆಯ ನಿಲ್ಲಿಸಿ ಪರಪರ ಕೆರೆದು
ಕಣ್ಣುತುಟಿಗಳನು ಅರಬರೆ ತೆರೆದು
“ಯಾಕೆ ಈ ದಿನ ಇಷ್ಟೊಂದ್ ಜಿರಲೆ
ನಿದ್ದೆ ಮಾಡಲೂ ಇವುಗಳ ತರಲೆ!”
ಎಂದು ಮುಷ್ಟಿಯಲಿ ಅವುಗಳ ಹಿಡಿದು
ದಿಕ್ಕುದಿಕ್ಕಿಗೂ ಎಸೆದೇ ಬಿಟ್ಟ!
ಅಂತೂ ಕೊನೆಗೂ ಕಣ್ಣನು ಬಿಟ್ಟ!
ಕೂಳು ತಿಂಡಿಗಳ ಗಬಗಬ ತಿಂದು
ಸಾರುಖೀರುಗಳ ಗಟಗಟ ಕುಡಿದು
ಹೊಟ್ಟೆಯ ನೀವಿ, ಡರ್ರನೆ ತೇಗಿ
ಹೊರಟೇಬಿಟ್ಟ ಗದೆಯನು ತೂಗಿ
ಕುಂಭಕರ್ಣ ಆ ನಿದ್ರಾಯೋಗಿ! 

~ ಶ್ರೀನಿವಾಸ ಉಡುಪ 

ನಾವು ಸಣ್ಣವರಿದ್ದಾಗ ಜವಾಬ್ದಾರಿ ತಗೊಂಡು, ನಾವ್ ನಾವೇ ತಿಳಕೊಂಡು ಕೆಲಸ ಬೊಗಸಿ ಮಾಡಲಿಲ್ಲಂದ್ರ ದೊಡ್ಡವರು ' ಅಕಿಗೆ(ಅವಂಗ) ಗೊತ್ತಿರೂದು, ಮಾಡೂದು ಮೂರೇ ಮೂರು ಕೆಲಸ. ಊ, ಮ, ಹೇ. ( ಊಟ, ಮಲಗೂದು, 3 ನೇದ್ದು ನೀವ ತಿಳಕೋರಿ.)ಅಂತ ಕಾಲೆಳೆಯೋರು. ಆದ್ರ ಈಗ ಅನಸತದ  ಆ ಮೂರು ಕೆಲಸಾನೇ ಸರಿಯಾಗಿ ಮಾಡೂದು ಎಂಥಾ ಕಷ್ಟದ್ದು ಅದ ಅಂತ. ಅವು ಮೂರು ಸರಿಯಿದ್ದರ ನಾವೂ ದೈಹಿಕ, ಮಾನಸಿಕವಾಗಿ ಆರೋಗ್ಯವಂತರಾಗಿದ್ದು  ಆರೋಗ್ಯವಂತ ಸಮಾಜವನ್ನು ಸೃಷ್ಟಿಸಬಹುದು.  ನೀವೇನಂತೀರಿ?  

~ ಗೌರಿಪ್ರಸನ್ನ

ಹೀಗೊಂದು ಹರಟೆ

ನಮಸ್ಕಾರ ಅನಿವಾಸಿ ಬಳಗಕ್ಕೆ. 
ಮೇ ಮಾಸ( ತಿಂಗಳಿನ) ದಲ್ಲಿ ಕವೀಂದ್ರ ರವೀಂದ್ರರ ಜನುಮದಿನದ ಸಂಭ್ರಮಾಚರಣೆಯ ಜೊತೆಗೇ ಭಾರತದಲ್ಲಿ 'ತಾಯಂದಿರ ದಿನ' ದ ಸಡಗರವೂ. ಈ ಬಳಗದೆಲ್ಲ ತಾಯಂದಿರಿಗೂ, ತಾಯಂಥಕರಣದ ಎಲ್ಲ ಸಹೃದಯರಿಗೂ ಶುಭಾಶಯಗಳು. ಸುಜಲಾಂ ಸುಫಲಾಂ ವಂದೇ ಮಾತರಂ ಎಂದು ತಾಯ್ನಾಡಿಗೆ ವಂದಿಸುತ್ತ ' ಜಡೆಯಾಚೆ ಮೊಗದಿರುಹಿಯೂ' ಜಗವನ್ನೆಲ್ಲ ಪೊರೆಯುತ್ತಿರುವ ಜಗನ್ಮಾತೆಗೆ ಮಣಿಯುತ್ತ ನನ್ನದೊಂದು ಹಳೆಯ ಬರಹವನ್ನು ಹಂಚಿಕೊಳ್ಳುತ್ತಿರುವೆ..

~ ಸಂಪಾದಕಿ.

ಹೆರಳು – ಮಾರಿ. 

ಏನಪಾ ಇದು ಅಂತ ನೀವು ತಲಿ ತುರಸಕೊಳ್ಳೂದರಾಗೇ  ನಾನೇ ಹೇಳಿಬಿಡತೀನಿ. ನಮ್ಮ ಉತ್ತರ ಕರ್ನಾಟಕದ ಮಂದಿಗೆ ಈ ಪದ ಚಿರಪರಿಚಿತ. ಇನ್ನ ಉಳದವರಿಗೆ ಹೆರಳು ಗೊತ್ತಿರತದ. ಮಾರಿ ತಿಳೀಲಿಕ್ಕಿಲ್ಲ. ಆದ್ರೂ ಇಲ್ಲಿನ ಸದಸ್ಯರೆಲ್ಲ ಬೇಂದ್ರೆ ಅಜ್ಜನ ‘ ಮುಗಿಲ ಮಾರಿಗೆ ರಾಗರತಿಯ’ ಕೇಳೇ ಇರತೀರಿ. ಹೂಂ.. ನಾನೂ ಅದೇ ಮಾರಿ ಅಂದ್ರ ಮುಖದ ಬಗ್ಗೆನೇ ಹೇಳುತ್ತಿರುವುದು.  

ಈ ‘ ಹೆರಳು – ಮಾರಿ’ ದು ಒಂದು ದೊಡ್ಡ ಸುದ್ದಿ. ಮುಂಜಾನಿ ಆಗತಿದ್ದ ಹಂಗೇ “ ಕ್ಯಾಮಾರಿ ಮಾಡಕೊಂಡು ಕೂಡಬ್ಯಾಡ್ರಿ. ಲಗೂ ಲಗೂ ಹೆರಳು-ಮಾರಿ ಮಾಡಕೋರಿ” ಅನ್ನಾಕಿ ನಮ್ಮಾಯಿ. ಮಧ್ಯಾಹ್ನ 4 ಆಯಿತಿಲ್ಲೋ “ ಮೂರುಸಂಜಿ ಆಗಲಿಕ್ಕೆ ಬಂತು, ಎದ್ದು ಹೆರಳು-ಮಾರಿ ಮಾಡಕೋರಿನ್ನ” ಅನ್ನಾಕಿ. ಹೀಂಗs ಮುಂಜಾನೆದ್ರ ಹೆರಳು-ಮಾರಿ, ಸಂಜಿ ಆದ್ರ ಹೆರಳು-ಮಾರಿ, ಹೊರಗ ಹೊಂಟ್ರ ಹೆರಳು-ಮಾರಿ, ಯಾರರೇ ಮನಿಗೆ ಬರತಾರಂದ್ರ ಹೆರಳು-ಮಾರಿ.. ಹೆರಳು-ಮಾರಿ ಸಂಭ್ರಮವೇ ಸಂಭ್ರಮ.

ಸಣ್ಣವರಿದ್ದಾಗ ಅಮ್ಮನೋ, ಮಾಮಿಯೋ, ಮಾಂಶಿಯೋ ಯಾರೋ ಒಬ್ಬರು ಜಿಪುಣತನ ಮಾಡದೇ ಛಂದಾಗಿ ಖೊಬ್ರಿ ಎಣ್ಣಿ ಹಚ್ಚಿ, ಹಣಗೀಲೇ ತೀಡಿ ತೀಡಿ ಹಿಕ್ಕಿ ಬಿಗತಾನ ಬಿಗದು ಎರಡು ಹೆರಳು ಹಾಕಿ ರಿಬ್ಬನ್ನು ಕಟ್ಟಿದರಂದ್ರ ಎಂಥ ಗಾಳಿಗೂ ಆ ಕೂದಲನ್ನ ಹಾರಾಡಿಸೋ ಶಕ್ತಿ ಇರತಿರಲಿಲ್ಲ. ಮುಂಗುರುಳು- ಪಿಂಗುರುಳು, ಪುಡಿಗೂದಲು ಎಲ್ಲ ಮಾಯ ಆಗಿಬಿಟ್ಟಿರತಿದ್ವು. ಎಷ್ಟೋ ಸಲ ಕುತಿಗಿ ಸೈತ ಅಲ್ಲಾಡಿಸಲಿಕ್ಕೆ ಬರತಿರಲಿಲ್ಲ. ಹಿಂತಲೆಯ ಕೂದಲು ಜಗ್ಗಿ ಗುಳ್ಳೆಗಳೆದ್ದು ಬಿಡಬೇಕು ಹಂಗ ಹೆರಳು ಹಾಕಿರತಿದ್ರು. “ ಮ್ಯಾಲ ಕಟ್ಟಬ್ಯಾಡ, ಕೆಳಗೇ ಬಿಡು, ರಿಬ್ಬನ್ ನಾಗ 4 ಅಲ್ಲ 6 ಹೂವು ಮಾಡು, ಅಷ್ಟ ಬಿಗಿ ಬ್ಯಾಡ ಸ್ವಲ್ಪ ಸಡಿಲ ಹಾಕು” ಅಂತೆಲ್ಲ ನಾವು ಏನು ಹೇಳಿದರೂ ‘ಹಾಂ ಹೂಂ’ ಸಹಿತ ಅನ್ನದೇ ತಮ್ಮದೇ ಮನಮಾನಿ ಮಾಡತಿದ್ರು. “ ನಿಮಗೇನ ತಿಳೀತದ? ನೀವು ಹೇಳಿದ್ಹಾಂಗ ಮಾಡಿದ್ರ ಮುಗೀತು. ತಲ್ಯಾಗ ಎರಡು ಕೂದಲ ಉಳ್ಯಂಗಿಲ್ಲ ಆಮ್ಯಾಲೆ” ಅಂತ ಹೆದರಸತಿದ್ರು. ಬಾಬ್ ಕಟ್, ಪೋನಿ ಟೇಲ್, ಸ್ಟೆಪ್ ಕಟ್ ಗಳಾಗಲಿ, ಶಾಂಪೂ ಮಾಡಿಕೊಂಡು ಸಿಲ್ಕಿ ಸಿಲ್ಕಿ ಕೂದಲಾ ಹಾರಾಡಿಸೂದಾಗಲಿ, ಬೆನ್ನಹಿಂದ ಕೂದಲ ಹರವಿಕೊಂಡು ಅಡ್ಡಾಡೂದಾಗಲಿ, ಮುಂಗುರುಳು ತೀಡಿಕೊಳ್ಳೂದಾಗಲಿ ಬಿಲ್ಕುಲ್ ಮಾಡೂಹಂಗಿರಲಿಲ್ರೀ.
ಒಮ್ಮೆ ಯಾರೋ ತಿರುಪತಿಗೆ ಹೋಗಿದ್ವಿ ಅಂತ ಪ್ರಸಾದದ ಲಾಡು ಕೊಡ್ಲಿಕ್ಕೆ ಬಂದಿದ್ದರು. ಅವರು ಹಂಗs ಮಾತಾಡಕೋತ ಅವರ ಮನೆಯಾಗ ತಿರುಪತಿಗೆ ಹೋದರೆ ಹೆಣ್ಣು ಮಕ್ಕಳು ಗಂಡಸರು ಅನ್ನಲಾರದೆ ಎಲ್ಲಾರು ಮುಡಿ ಒಪ್ಪಿಸೋ ಪದ್ಧತಿ ಅದ ತಮ್ಮ ಮನ್ಯಾಗ ಅಂತ ಹೇಳುತ್ತಿದ್ದರು. ಅವರು ಹೋದಮೇಲೆ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ನನ್ನ ಮಗ “ ನೀನೋ! ನಿನ್ನ ವೆಂಕಪ್ಪನೋ!” ಎಂದು ನಗೆಯಾಡಿ “ ಏನೇ ಅನ್ನು ಅವನ ಲಡ್ಡು ಮಾತ್ರ ಮಸ್ತ ಇರ್ತಾವ” ಅಂತ ನನಗೆ ಅಣಕಿಸಿ ಉಂಡಿ ಮೆದ್ದು ಎದ್ದು ಹೋದ. ಆಮೇಲೆ ‘ಓ ಮೈ ಗಾಡ್’ ಸಿನಿಮಾದಾಗ ಇದೇ ಮುಡಿ ಕೊಡುವ ಪದ್ಧತಿಯ ಬಗ್ಗೆ ಪರೇಶ್ ರಾವಲ್ ‘ಮುಂಜಾನೆದ್ದು ಬಾಗಲ ತೆಗೆದು ಕೂಡಲೇ ರಾಶಿ ರಾಶಿ ಕೂದಲು ನಿಮ್ಮ ಮನೆ ಮುಂದೆ ಹರಡಿದ್ದರೆ ನಿಮಗೆ ಖುಷಿ ಅನಿಸುವುದೇ’ ಎಂಬರ್ಥ ಬರುವ ಮಾತಿನ ಮೂಲಕ ವ್ಯಂಗ್ಯವಾಡುವ ಸೀನ್ ಅದ. ಆಗಾಗ ಹೌದು, ಯಾಕಿರಬಹುದು ಇಂಥ ಪದ್ಧತಿ ಅಂತ ಯೋಚಿಸಿದಾಗಲೆಲ್ಲ ಅನ್ನಿಸುವುದಿಷ್ಟೇ. ಮನುಷ್ಯ ಅಥವಾ ಭಕ್ತ ಅಲ್ಲಿ ಮುಡಿ ಕೊಡುತ್ತಿರುವುದು ಬರಿ ತನ್ನ ಕೂದಲಿನ ರಾಶಿಯನ್ನಲ್ಲ, ತನ್ನ ರೂಪವನ್ನು.. ಸೌಂದರ್ಯವನ್ನು. ಒಂದರ್ಥದಾಗ ತನ್ನತನವನ್ನು, ತನ್ನ ಅಸ್ತಿತ್ವವನ್ನು ಅಂತ. ನೋಡಿ ಕೂದಲು ದೇಹದ ನಿರ್ಜೀವವಾದ ಒಂದು ಭಾಗ. ಆದರೆ ಅದು ನಮಗೆ ಕೊಡುವ ಖುಷಿ, ಆತ್ಮವಿಶ್ವಾಸ, ಹೆಮ್ಮೆಗಳು ಅಷ್ಟಿಷ್ಟಲ್ಲ. ಕನ್ನಡಿ ಮುಂದೆ ನಿಂತು ಕೂದಲು ತೀಡದ, ಮುಂಗುರುಳನ್ನು ಬೆರಳಲ್ಲಿ ಸುತ್ತದ ಒಂದೇ ಒಂದು ಮಾನವ ಜೀವಿಯನ್ನು ತೋರಿಸಿ ಬಿಡಿ ಸಾಕು. ಹುಡುಗಿಯರಿಗಂತೂ ಅವರ ಜಡೆ, ಕೂದಲು ಸರ್ವಸ್ವ. ಹಂಗಂತ ಹುಡುಗರೇನೂ ಕಮ್ಮಿ? ದಿನಕ್ಕ ನೂರು ಸಲ ಹೋಗುತ್ತಾ ಬರುತ್ತಾ ಕನ್ನಡಿ ಮುಂದೆ ನಿಂದ್ರೋದೇನು? ಒಮ್ಮೆ ಕೈಯಿಂದ, ಒಮ್ಮೆ ಬ್ರಷ್ ನಿಂದ, ಒಮ್ಮೆ ಪಾಕೆಟ್ ನ ಪುಟ್ಟ ಬಾಚಣಿಕೆಯಿಂದ ಕ್ರಾಪ್ ತೀಡಿದ್ದೇ ತೀಡಿದ್ದು. ಹಿಂಗ ಕೂದಲು ಸೌಂದರ್ಯದ ಪ್ರತೀಕ. ಅದನ್ನೇ ತೆಗೆದು ದೇವನಡಿ ಇಡುವುದು ನಾವು ನೀವು ಚ್ಯಾಷ್ಟಿ ಮಾಡಿ ನಕ್ಕಷ್ಟು ಸುಲಭದ ಕೆಲಸ ಏನಲ್ಲ.

ಈ ಕೂದಲಿನ ರಗಳೆ ಇರಲಿಲ್ಲ ಅಂದರೆ 108 ತರದ ಹೇರ್ ಆಯಿಲ್ ಗಳು, ಸಾವಿರಾರು ತರದ ಶಾಂಪೂ, ಕಂಡಿಷನರ್, ಹೇರ್ ಜೆಲ್,ಹೇರ್ ಕ್ರೀಮ್, ಹೇರ್ ಡೈಗಳು ಇತ್ಯಾದಿಗಳನ್ನೆಲ್ಲ ಉತ್ಪಾದಿಸುವ ಕಾರ್ಖಾನೆಗಳು, ಅವುಗಳ ಮೂಲಕ ಅನ್ನ ಸಂಪಾದಿಸುವ ಲಕ್ಷಾಂತರ ಕುಟುಂಬಗಳ ಗತಿ ಏನಾಗುತ್ತಿತ್ತು? ಸಲೂನ್ ಗಳು, ಹೇರ್ ಹೆಡ್ ಮಸಾಜ್ ಸೆಂಟರ್ ಗಳು, ಹೇರ್ ಸ್ಪಾ, ಬ್ಯೂಟಿ ಪಾರ್ಲರ್ ಗಳು ಇವುಗಳೆಲ್ಲ ಬಾಗಿಲು ಬಂದ್ ಮಾಡಿಕೊಂಡು ಹೋಗಬೇಕಾಗುತ್ತಿತ್ತು. ನಾನಾ ತರದ ಹೂವುಗಳು, ಕಸ್ತೂರಿದವನಗಳು, ಕ್ಯಾದಿಗೆಗಳು, ಆಭರಣಗಳು, ನೂರಾರು ತರದ ಫ್ಯಾಶನೇಬಲ್ hair accessories, ಕ್ಲಿಪ್ಸ್, ರಬ್ಬರ್ ಬ್ಯಾಂಡ್, ಹೇರ್ ಪಿನ್ ಕೇಳುವವರಿಲ್ಲದೆ ಅನಾಥವಾಗುತ್ತಿದ್ದವು. ಕವಿಗಳಿಗೆ ಬರೆಯಲು ಮುಖ್ಯವಾದ ಒಂದು ವಿಷಯ ಕಮ್ಮಿಯಾಗುತ್ತಿತ್ತು. ನಲ್ಲ ಬಂದು ಹೂ ಮುಡಿಸಿ ನಲ್ಲೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲಾಗುತ್ತಿರಲಿಲ್ಲ. ಮೊಗ್ಗಿನ ಜಡೆ ಹೆಣೆಯುವವರ, ದಂಡೆ ಮಾಲೆ ಕಟ್ಟುವವರ ಕಸುಬಿಗೆ ಕಲ್ಲು ಬೀಳುತ್ತಿತ್ತು.
ಎಲ್ಲೆರೇ ಊಟ ತಿನಿಸಿನಲ್ಲಿ ಒಂದೆಳೆ ಕೂದಲು ಕಂಡರೆ ಕಸಿವಿಸಿ ಪಡ್ತೀವಿ. ಆದರೆ ಕೂದಲವಿಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ. ಈ ಕೇಶದ ಮಹಿಮೆ, ಸಾಮರ್ಥ್ಯ ಅಗಾಧವಾದದ್ದು. ಪುರಾಣ, ಇತಿಹಾಸಗಳು ಇದಕ್ಕೆ ಸಾಕ್ಷಿಯಾಗಿವೆ. ಸುರಗಂಗೆ ಭೂಲೋಕಕ್ಕೆ ಅವತರಿಸಬೇಕಾದರೆ ಶಿವನ ಜಡೆಯೇ ಬೇಕಾಯಿತು. ರಭಸದಿಂದ ಧಮ್ಮಿಕ್ಕುವ ಅವಳನ್ನು ತಡೆಯಲು ಶಿವನ ಜಡೆ ಇರದಿದ್ದರೆ ಆ ಮಂದಾಕಿನಿಯ ರಭಸದ ಸೊಕ್ಕಿಗೆ ಜಗತ್ತೇ ದಿಕ್ಕೇಡಿಯಾಗುತ್ತಿತ್ತೇನೋ? ಪಕ್ಷಕ್ಕೊಮ್ಮೆ ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದ ಚಂದ್ರನಿಗೂ ಆಶ್ರಯ ಈ ಜಡೆಯೇ. ನಮ್ಮ ನಾಡಿನ ಅನೇಕ ಮನೆತನಗಳ ಕುಲದೈವವಾದ ವೀರಭದ್ರನೂ ಕೂಡ ಶಿವನ ಜಟೆಯಿಂದಲೇ ಹುಟ್ಟಿದವನೆಂಬ ಪ್ರತೀತಿ.

ಇನ್ನು ಮಹಾಭಾರತ ನಡೆದದ್ದೇ ದ್ರೌಪದಿಯ ಮುಡಿಯಿಂದ. ಅವಳು ಮುಡಿಬಿಚ್ಚಿದಾಗ ಭಾರತ ಆರಂಭವಾಯಿತು, ಕಟ್ಟಿದಾಗ ಮುಕ್ತಾಯವಾಯಿತೆಂಬ ಮಾತಿದೆ. ತನ್ನ ಕೂದಲಿಗೆ ಕೈ ಹಾಕಿ ಎಳೆದೊಯ್ದ ದುರುಳನ ಕರುಳ ಬಿಗಿದು ಅವನ ರಕ್ತದಿಂದ ಅದನ್ನುತೊಯ್ಯಿಸದೇ ತಾನು ಮುಡಿ ಕಟ್ಟಲಾರೆನೆಂಬ ದ್ರೌಪದಿಯ ಪ್ರತಿಜ್ಞೆಗೆ 18 ಅಕ್ಷೋಹಿಣಿ ಸೈನ್ಯದ ಭಾರತ ಯುದ್ಧವೇ ನಡೆಯಬೇಕಾಯಿತು. ಹೌದಲ್ಲವೇ? ದುಶ್ಯಾಸನ ಕೈ ಹಾಕಿದ್ದು ಬರೀ ಹೆಣ್ಣೋರ್ವಳ ತಲೆ ಕೂದಲಿಗೆ ಅಲ್ಲ, ಯುಗದ ಅಸ್ಮಿತೆಗೆ.. ಸ್ತ್ರೀತನದ ಗರಿಮೆಗೆ.. ಸಂಸ್ಕಾರ ಸಂಸ್ಕೃತಿಗಳ ಬುಡಕ್ಕೇ ಕೈ ಹಾಕಿದ್ದ. ಅದಕ್ಕೆಂದೇ ಅದಕ್ಕೆ ಸಾಕ್ಷಿಯಾದ, ನೇರವಾಗಿ ಪರೋಕ್ಷವಾಗಿ ಭಾಗಿಯಾದ ಎಲ್ಲರೂ ಅದಕ್ಕೆ ಬೆಲೆ ತೆರಲೇಬೇಕಾಯಿತು ಮಾಡಿದ್ದುಣ್ಣೋ ಮಹಾರಾಯ ಅನ್ನೋ ಹಂಗ.

ಧನನಂದನಿಂದ ಅಪಮಾನಕ್ಕೆ ಒಳಗಾದ ಆಚಾರ್ಯ ಚಾಣಕ್ಯನೂ ಸಹ ವೈರಿಯನ್ನು ಅಮೂಲಾಗ್ರವಾಗಿ ನಾಶ ಮಾಡದೆ ಶಿಖೆ ಕಟ್ಟಲಾರೆನೆಂದು ಪ್ರತಿಜ್ಞೆಗೈದು ಶಿಖೆಯ ಕೂದಲು ಬಿಟ್ಟದ್ದು. ಯಾವ ಅಸ್ತ್ರಗಳಿಗೂ ಇರದ ಮೊನಚನ್ನು ಅವನ ಶಿಖೆಯ ಕೇಶದಲ್ಲಿ ಕಂಡಿತು ಮನುಕುಲದ ಇತಿಹಾಸ. ಭಾರತದ ಇತಿಹಾಸಕ್ಕೆ ಚಂದ್ರಗುಪ್ತ ಮೌರ್ಯ, ಅಶೋಕರಂತಹ ಅರಸರ ಸುವರ್ಣ ಯುಗವನ್ನು ದಯಪಾಲಿಸಿದ್ದು ಇದೇ ಕೇಶ ಎಂದಾಯಿತಲ್ಲವೇ?

ಕೆಡುವ ಗಂಡರನ್ನು ತೊರೆದು ಚೆನ್ನಮಲ್ಲಿಕಾರ್ಜುನನತ್ತ ಮೊಗದಿರುಹಿ ಹೊರಟ ಅಕ್ಕಳನ್ನು ಸಂರಕ್ಷಿಸಿದ್ದೇ ಈ ಕೇಶ ರಾಶಿ. ಇನ್ನು ನಮ್ಮ ಸಾಹಿತ್ಯದಲ್ಲಿ ಈ ಜಡೆಯ, ಕೇಶರಾಶಿಯ, ಮುಂಗುರುಳಿನ ವರ್ಣನೆಗಳು ಹೇರಳವಾಗಿ ದೊರೆಯುತ್ತವೆ. ನೀಲವೇಣಿ, ನಾಗವೇಣಿ ಇತ್ಯಾದಿ ಹೆಸರುಗಳನ್ನು ಕೇಳಿದೊಡನೆ ತೊನೆದಾಡುವ ಜಡೆಗಳ ಚಿತ್ರ ಕಣ್ಮುಂದೆ ಬರುತ್ತದೆ. “ ಅವಳೊಮ್ಮೆ ಹರಳಕೆದರಿ ಕಪ್ಪು ಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ” ಎಂದು ಮನದನ್ನೆಯನ್ನು ವರ್ಣಿಸುವ ಕೆ ಎಸ್ ಎನ್ “ನಾಗರ ಕುಚ್ಚಿನ ನಿಡು ಜಡೆಯವಳು ಈಕೆಯು ಬಂದುದು ಎಲ್ಲಿಂದ” ಎಂದು ಅಚ್ಚರಿ ಪಡುತ್ತಾರೆ. “ ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ ಸಿಂಗಾರ ಕಾಣದ ಹೆರಳು “ ಎಂದು ಅಕ್ಕಿ ಆರಿಸುವಾಗ ಕವಿತೆಯಲ್ಲಿ ಬಣ್ಣಿಸುತ್ತಾರೆ.

ಮುಂಗುರುಳು ದುಂಬಿಗಳಂತೆ ಅಂತಲೂ, ಯೆ ಜುಲ್ಫೆಹೈ ಜೈಸೆ ಕಾಂಧೋ ಪೆ ಬಾದಲ್ ಗಿರೆ ಹುವೆ’ ಅಂತಲೂ, ಉಡೆ ಜಬ್ ಜಬ್ ಜುಲ್ಫೆ ತೇರಿ ಎಂದೂ, ಯೆ ಗೇಸುವೋಂಕಿ ಘನಿ ಛಾವ್ ಹೈ ಮೇರೆ ಖಾತಿರ್ ಅಂತಲೂ ನೂರಾರು ಸಿನೆಮಾ ಹಾಡುಗಳು ಈಗಲೂ ರಸಿಕರ ಹೃದಯಕ್ಕ ಲಗ್ಗೆ ಹಾಕತಾವ. ಸರ್ ಜೋ ತೇರಾ ಚಕರಾಯೆ ಯಾ ದಿಲ್ ಡೂಬಾ ಜಾಯೆ ಆಜಾ ಪ್ಯಾರೆ ಪಾಸ್ ಹಮಾರೆ ಕಾಹೆ ಘಬರಾಯೆ ಅಂತ ಚಂಪಿ ( ಮಸಾಜ್) ಮಾಡತಾ ಹಾಡು ಹೇಳೋ ಜಾನಿ ವಾಕರ್ ನನ್ನು ಮೆಚ್ಚದವರೇ ಇಲ್ಲ.

ಅಣ್ಣ-ತಮ್ಮ, ಅಕ್ಕ ತಂಗಿಯರ ಜಗಳಕ್ಕ ಈ ಕೂದಲ ಬೇಕೇ ಬೇಕು ಅವರ ಜುಟ್ಟು ಇವರ ಕೈಯಾಗ ಇವರ ಜುಟ್ಟು ಅವರ ಕೈಯಾಗ ಅಂದಾಗನೇ ಅದು ಖರೇ ಸೋದರ ಪ್ರೇಮ. ಕೈ ಕೈ ಜಗಳಕ್ಕಿಂತ ಕೂದಲ ಕೂದಲ ಜಗಳಾನೇ ಬಹಳ ಆಗ್ಯಾವರಿ ನಾವು ಸಣ್ಣವರಿದ್ದಾಗ. ಈಗಲೂ ಅಷ್ಟೇ ಬಹಳ ಸಿಟ್ಟು ಬಂತಂದ್ರ ಮೈ ಹರಕೊಂಡು ಕೂದಲ ಕಿತ್ತುಕೊಳ್ಳುವಷ್ಟs ಸಂತಾಪ ಆಗುತದ್ರೀ.

ಇನ್ನೊಂದ ವಿಷಯ.. ಈ ಕೂದಲಾನ್ನ ಕತ್ತರಿಸೂದು ಅಂದ್ರ ಹೇರ್ ಕಟ್ ಎಲ್ಲಾ ಯಾವಾಗ ಬೇಕಂದ್ರ ಆವಾಗ ಮಾಡೂ ಹಂಗಿರಲಿಲ್ರೀ. ಹುಣ್ಣಿಮೆ, ಅಮವಾಸಿ, ಏಕಾದಶಿ, ದ್ವಾದಶಿ, ವೆಂಕಪ್ಪನ ಒಕ್ಕಲದವರಿದ್ರ ಶನಿವಾರ ಹೀಂಗ ದಿನಾ ನೋಡಿ ಸಲೂನ್ ಗೆ ಹೋಗಬೇಕಾಗಿತ್ತು. ಹೆಣ್ಣು ಮಕ್ಕಳಂತೂ ಕೂದಲಿಗೆ ಕತ್ತರಿನೇ ಹಚ್ಚೂ ಹಂಗಿರಲಿಲ್ರೀ. ಗಂಡಸರೂ ಸಹ ಹಜಾಮತಿ ಮಾಡಿಸಿಕೊಂಡು ಬಂದಮ್ಯಾಲೆ ಹಾಕಿದ್ದ ಬಟ್ಟೆ ಎಲ್ಲ ತೊಯ್ಯಿಸಿಟ್ಟು ಕೈಯಾಗ ಒಂದ ಹನಿ ಖೊಬ್ರಿ ಎಣ್ಣಿ ಹಾಕಿಸಿಕೊಂಡು ತಲಿಗೆ ಹಚಗೊಂಡು ಎರಡು ತಂಬಿಗೆ ಯಾರದರೇ ಕಡೆ ನೀರು ಹಾಕಿಸಿಕೊಂಡ ಮ್ಯಾಲೆನೇ ಗಂಗಾಳು – ತಂಬಿಗಿ ಮುಟ್ಟೂದು. ನಮ್ಮ ಮಕ್ಕಳಿಗೆ ಈಗ ಇವನ್ನೆಲ್ಲ ಹೇಳಿದ್ರ’ ಐಯ್’ ಅಂತ ಬಾಯಿ ತಕ್ಕೊಂಡು ನಂಬಲಾರದ ಕೂತಿರತಾರ ಕೇಳಕೋತ. ನಮಗೂ ಅಷ್ಟೇ. ತಲಿಗೆ ಹರಸಿ ಒಂದ್ಹನಿ ಎಣ್ಣಿ ಹಚಗೊಳ್ಳದ ತಲಿಸ್ನಾನ ಮಾಡೂ ಹಂಗಿರಲಿಲ್ಲ. ಒಣ ನೀರು ಹಾಕಿಕೊಳ್ಳೂದು ಅನಿಷ್ಟ ಅಂತ ನಂಬಿಕೆ. ದ್ವಾದಶಿ ಅಂತೂ ಅಪ್ಪಿ ತಪ್ಪಿನೂ ಎರಕೊಳ್ಳೂ ಹಂಗಿರಲಿಲ್ಲ. ಇವಕ್ಕೆಲ್ಲ ಕಾರಣಗಳೂ ಹಲವಾರು ಇದ್ದಾವು! ಹುಡುಕಿ ನೋಡಿದರೆ ಸಿಕ್ಕಾವು!!

ನಮ್ಮ ಬಲಕುಂದ್ಯಾಗ ಒಬ್ಬ ಮುತ್ಯಾ ಬರತಿದ್ದರೀ. ಬಾಂಬೆ ಮಿಠಾಯಿ, ಅಜ್ಜೀ ಕೂದಲಾ ( cotton candy )ಎಲ್ಲಾ ತಗೊಂಡು. ಅವನಿಗೆ ಹೋಗಿ ನಮ್ಮ ಉದುರಿದ ಕೂದಲನ್ನ ಕೊಟ್ರ ಆ ತಿಂಡಿ ತಿನಿಸುಗಳನ್ನೆಲ್ಲ ಪುಗಸೆಟ್ಟೆ ಕೊಡತಿದ್ದ. ಅದಕ್ಕಂತ ಹೆರಳ ಆದ ಕೂಡಲೇ ನಾವೆಲ್ಲ ಮಕ್ಕಳು ಹಣಿಗೆ ಒಳಗಿನ ಕೂದಲಾ ತೆಗೆದು ಸುರಳಿ ಸುತ್ತಿ ನಮ್ಮ ನಮ್ಮ ಕೂದಲನ್ನ ಬ್ಯಾರೆ ಬ್ಯಾರೆ ಮಾಡಿಕೊಂಡು ಮನಿ ಹಿಂದಿನ ಮಾಡದಾಗ ಒಯ್ದು ಇಡತಿದ್ದ ನೆನಪು. ಬಹುಶ: ಅವುಗಳಿಂದ ಚೌರಿ ಇತ್ಯಾದಿಗಳನ್ನು ಮಾಡುತ್ತಿದ್ದರೋ ಏನೋ? ತಿರುಪತಿ – ತಿರುಮಲಗಳಲ್ಲಂತೂ ಈ ಕೂದಲುಗಳದೇ ಕೋಟ್ಯಂತರ ರೂಪಾಯಿಗಳ ಆದಾಯ ಅದ ಅಂತ್ರೀ. ಅದರಿಂದಲೇ ತಿರುಪತಿ _ತಿರುಮಲ ದೇವಸ್ಥಾನದವರು ಅನೇಕ ಆಸ್ಪತ್ರೆ, ಶಾಲಾಕಾಲೇಜುಗಳು ಧರ್ಮಛತ್ರಗಳು, ಪುನರುಜ್ಜೀವನಗಳಂಥ ಚಾರಿಟಿ ಟ್ರಸ್ಟ್ ಗಳನ್ನು ನಡೆಸುತ್ತಾರೆಂದು ಎಲ್ಲೋ ಓದಿದ ನೆನಪು.

ನಾವು ಸಣ್ಣವರಿದ್ದಾಗ ಓದೂ ಚಂದಮಾಮಾ, ಬಾಲಮಿತ್ರ ಕಥಿ ಒಳಗ ಈ ಕೂದಲೆಳೆ ತಗೊಂಡು ಕಾಲಾ ಜಾದೂ, ಮಾಟಮಂತ್ರ, ಭಾನಾಮತಿ ಮಾಡಿದಂಥ ಕಥೆಗಳನ್ನೋದಿ ಮೈ ಜುಮ್ ಅನ್ನಿಸಿಕೊಂಡಿದ್ದೂ ನೆನಪಿದೆ. ಎಲ್ಲೆರೇ ನಮ್ಮ ಕೂದಲೆಳೆಯನ್ನೂ ಯಾರರೇ ತಗೊಂಡು ಕಾಲಾಜಾದೂ ಮಾಡಿದ್ರ ಅನಸತಿತ್ತು. ಆದ್ರ ಹಂಗಾಗಲಿಕ್ಕೆ ನಾವೇನು ರಾಜಕುಮಾರಿಯರೋ, ಶ್ರೀಮಂತ ವಣಿಕ್ ಪುತ್ರಿಯರೋ, ಸುರಸುಂದರಿಯರೋ ಇರಲಿಲ್ಲ ಅನ್ನೋದು ಅರ್ಥವಾಗದ ವಯಸ್ಸು ಅದು.
ತಾಯ ಹೊಟ್ಟೆಯಲ್ಲಿ ಮಗುವಿದ್ದಾಗಲಿಂದಲೇ ಮಗುವಿನ ಕೂದಲಿನ ಅಂದಾಜು ನಡದಿರತದ್ರೀ. ನಮ್ಮ ಕಡೆಯೆಲ್ಲ 7-8 ತಿಂಗಳಿಗೆಲ್ಲ ಸ್ವಲ್ಪ ಎದೆ ಯುರಿ ಎಲ್ಲಾ ಬಂದ್ರ ‘ ಕೂಸಿಗೆ ಜಾವಳ ಭಾಳ ಇರಬೇಕು. ಅದಕ್ಕs ಎದಿ ಉರೀತದ ಅಂತಾರ ಮನ್ಯಾಗಿನ ಹಿರಿಯರು. ಕೂಸು ಹುಟ್ಟಿದ ಮ್ಯಾಲೆನೂ ಅಷ್ಟೇ. ಕೂಸು ಆರಾಂ ಅದನ? ಯಾರಂಗ ಅದ? ಜಾವಳ ಭೇಷ್ ಅವನ?ಅಂತಾನೇ ಎಲ್ಲರ ಪ್ರಶ್ನೆ. ಮುಂದ ಜಾವಳ, ಮುಂಜವಿ ಅಂತ ಈ ಕೂದಲಿಗೆ ಸಂಬಂಧಿಸಿದ ಕಾರ್ಯಕ್ರಮ ಗಳೇ. ಹೆಣ್ಣು ಮಗು ಇದ್ರ ದಿನಕ್ಕೊಂದು ಕೇಶಾಲಂಕಾರ.. ಹೂವು.. ಶೖಂಗಾರ.

“ ಹೆಣ್ಣು ಮಕ್ಕಳಿಗೆ ಕೂದಲು ಉದ್ದಾ ಇದ್ರೆ ನೋಡೋಕೇನೋ ಚಂದ. ಆದ್ರೆ ಆರೈಕೆ ಭಾಳ ಕಷ್ಟ” ಎನ್ನುತ್ತಾರೆ ನಮ್ಮ ಹೆಂಗರುಳ ಕವಿ ಎಚ್ಚೆಸ್ವಿ ತಮ್ಮ ‘ ಉರಿಯ ಉಯ್ಯಾಲೆ’ಯಲ್ಲಿ. “ ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ” ಎಂದು ಕರಡಿ ಕುಣಿತದಲ್ಲಿ ಹೇಳುತ್ತಾರೆ ನಮ್ಮ ವರಕವಿ. ಅಂದಹಂಗ ಜಿ. ಎಸ್. ಎಸ್. ರ ಜಡೆ ನಿಮಗೆಲ್ಲ ಗೊತ್ತಿರತದ. ಆದ್ರೂ ನನ್ನ ಖುಷಿಗೆ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿರುವೆ.
“ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ ಅತ್ತಿತ್ತ ಹರಿದ ಜಡೆ
ಚೇಳ್ ಕೊಂಡಿಯಂಥ ಜಡೆ ಮೋಟು ಜಡೆ, ಚೋಟು ಜಡೆ ಚಿಕ್ಕವರ ಚಿನ್ನ ಜಡೆ
ಎಣ್ಣೆ ಕಾಣದೇ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ, ಧೂಳಿನಲಿ ನೆನೆದುಕೊಂಡಿರುವ ಗಂಟು ಜಡೆ ಅಕ್ಕತಂಗಿಯ ಮುಡಿಯ ಹಿಡಿದು ನಾನೆಳೆದಂಥ ಮಲ್ಲಿಗೆಯ ಕಂಪು ಜಡೆ
ಮಾತೖಮಮತಾವೖಕ್ಷ ಬಿಟ್ಟ ಬಿಳಲಿನಂತೆ ಹರಿವ ತಾಯ್ ಜಡೆ ‘ ಕುರುಕುಲ ಜೀವಾಕರ್ಷಣ ಪರಿಣತ’ ಆ ಪಾಂಚಾಲಿಯ ಜಡೆ ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಪ್ಪು ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ ಬರುವಂಥ ಬೆಳ್ಳಕ್ಕಿಗಳ ಜಡೆ
ಕ್ರೌಂಚಗಳ ಜಡೆ
ಮಾಮರದಿ ಬಳುಕುತಿಹ ಹೂ ಬಿಟ್ಟ ಬಳ್ಳಿ ಜಡೆ
ಕಾಡು ಬಯಲಿನ ಹಸುರು ಹಸುರಲಿ ಹರಿ ಹರಿದು ಮುನ್ನಡೆವ ಹೊಳೆಯ ಜಡೆ
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ
ಗಿರಿಶಿವನ ಶಿರದಿಂದ ಹಬ್ಬಿ ಪಸರಿಸಿದ ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ ಹರಡಿರುವ ಮಳೆಯ ಜಡೆ
ಚಂದ್ರಚೂಡನ ವ್ಯೋಮಕೇಶನ ವಿಶ್ವವನೇ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ, ಕಾವ್ಯಗಳ, ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ! ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ!!

ಒಟ್ಟಿನಾಗ ಈ ಹೆರಳು ಮಾರಿಯಿಂದ ಇಷ್ಟೆಲ್ಲ ಮಾತು ಆತು ನೋಡ್ರಿ. ಓದಿ ಹೆಂಗನ್ನಸ್ತು ಅಂತ ನಿಮ್ಮದೂ ಎರಡು ಮಾತು ಸೇರಸ್ರಿ.

~ ಗೌರಿಪ್ರಸನ್ನ