ಭಾವನಾ ಗಂಗೋತ್ರಿ

——————————————————————————————————————–

——————————————————————————————————————–

ಅಂದು ಬೆಳಿಗ್ಗೆ ವಾರಾಣಸಿಯ ನಮೋಘಾಟ್ ನಲ್ಲಿ,
ಕಣ್ಣು ಹಾಯಿಸಿದಷ್ಟೂ ದೂರ ರಭಸದಿಂದ ಪ್ರವಹಿಸುತ್ತಿದ್ದ ಗಂಗೆ, ಉದಯರವಿಯ ಕೇಸರಿಯ ರಂಗವರ್ಷದಲ್ಲಿ ಮಿರಿಮಿರಿಯಾಗಿ ಮಿಂದು ಪುಳಕಗೊಳ್ಳುತ್ತಿದ್ದಳು. ಅಲ್ಲಿಲ್ಲೊಂದು ಬಾನಾಡಿಯ ಹಿಂಡು, ತುಂಬು ಅವಸರದಿಂದ ಚಿಲಿಪಿಲಿಗೈದು ಕ್ಷಣಾರ್ಧದಲ್ಲಿಯೇ ಅದೃಶ್ಯವಾಗುತ್ತದ್ದವು. ಒಂದೆರಡು ದೋಣಿಗಳು ಮತ್ತೊಂದುಬಾರಿ ಗಂಗೆಯ ಅಲೆಅಲೆಗಳಿಗೆ ಕೆನ್ನೆದೊರಲು ತವಕಿಸುತ್ತ ದಡದಲ್ಲೇ ಪ್ರವಾಸಿಗಳ ಬರುವಿಗೆ ಕಾಯುತ್ತಿದ್ದವು. ಹಿಮ್ಮೇಳದಲ್ಲಿ ಸೇತುವೆಯ ಮೇಲೆ ಶಬ್ದಪ್ರಳಯಗೈಯುತ್ತ ಹೋದ ರೈಲಾಗಲಿ ಅಥವಾ ದೋಣಿಪರ್ಯಟನೆಯ ಸವಾರಿಗಾಗಿ ಕೂಗುತ್ತಿದ್ದ ಕೇವಟರ ಆರ್ಭಟವಾಗಲಿ, ಅದೊಂದೂ ಅವಳ ಕಿವಿಗೆ ತಾಕುತ್ತಿರಲಿಲ್ಲ. ಹರಿವ
ನೀರಿಗೆ ಕಾಲ್ಗಳನ್ನು ಇಳಿಬಿಟ್ಟು ಕುಳಿತ ಅವಳ ಮನ ನೆನ್ನೆ ಸಂಜೆ ಕಂಡು ಅತ್ಯದ್ಭುತ ಗಂಗಾರತಿಯನ್ನು ಮೆಲುಕು ಹಾಕುತ್ತಿತ್ತು. ಆ ಸಂಧ್ಯಾರತಿ ಸಮಯದ ರಸಾವೇಶ ರಾತ್ರಿ ಕಳೆದು ಬೆಳಗಾದರೂ ಅವಳ ಅಂತಃಪ್ರಜ್ಞೆಯನ್ನು ಆವರಿಸಿ ಸ್ಥಂಭಿಭೂತಳನ್ನಾಗಿ ಮಾಡಿತ್ತು. ತನ್ನ ಪಾತ್ರಕ್ಕೂ ಮೀರಿ ಹರಿಯುತ್ತಿದ್ದ ಭಾಗಿರಥಿಯಂತೆಯೇ
ಅವಳ ಕಣ್ಣಾಲಿಗಳೂ ಭರಪೂರ ತುಂಬಿ ತುಳುಕಿಯಿಸಲು ತವಕಿಸುತ್ತಿದ್ದವು. ಅದು ಗಂಗಾರತಿಯಿಂದ ಒದಗಿದ ಅನುಭಾವಕ್ಕಿಂತ, ಬರಲಿರುವ ಅವನನ್ನು ಕಾಣುವ ಕಾತರತೆಯೇ ಮುಖ್ಯ ಕಾರಣವಾಗಿತ್ತು!


ನಲವತ್ತು ಸಂವತ್ಸರಗಳನ್ನು ಕಂಡ ಮೇಲೆ ಚಿಗುರೊಡೆದ ಅವರಿಬ್ಬರ ಒಲುಮೆಯು ಪ್ರಬುದ್ಧತೆಯೇ ಮೈವೆತ್ತಂತೆ,
ಅಪರಂಜಿಯಂತೆ ಪರಿಶುದ್ಧವಾಗಿ ದಿನೇದಿನೇ ಪರಿಪಕ್ವವಾಗುತ್ತಿತ್ತು. ಜಗನ್ನಯನಕ್ಕೆ ಅಪ್ರಸ್ತುತವೆಂದೆನಿಸಿದರೂ ಅವರಿಬ್ಬರ ಅಂತರ್ ನಯನಕ್ಕೆ ಈ ಬಂಧ, ಜಗನ್ನಿಯಮಕ್ಕೆ ಪೂರಕವಾಗಿಯೇ ಇದ್ದು ಭಾವಪರಿಧಿಯ ವಿಸ್ತರಣೆಗೆ, ವಿಕಸನಕ್ಕೆ ಒಂದು ಸಾಧನವಾಗಿತ್ತು. ಪೂರ್ವಾಗ್ರಹವಿಲ್ಲದ ನಿರಪೇಕ್ಷಿತವಾದ ವಿವೇಚನಾತ್ಮಕವಾದ ಇವರ ಸಾಂಗತ್ಯ ಇವರಿರ್ವರ ಮಧ್ಯೆ ಅಪರೂಪದ ಭಾವಸೇತುವೊಂದನ್ನು ನಿರ್ಮಿಸಿತ್ತು. ಪದೇಪದೇ ಕೆನ್ನೆಯೆಡೆಗೆ ಜಾರುತ್ತಿದ್ದ ಹರ್ಷಬಿಂದುಗಳನ್ನು ತೋರುಬೆರಳಿಂದ ಮೀಟಿ ಹರಿವ ನೀರಿಗೆ ಸಿಂಚಯಿಸುತ್ತಿದ್ದಳು. ತೀವ್ರಗತಿಯಲ್ಲಿ ಪ್ರವಹಿಸುತ್ತಿದ್ದ ಹೊನ್ನಲೆಗಳನ್ನು ನೆಟ್ಟ ನೋಟದಿಂದ ಸಂಭ್ರಮದಿಂದ ನಿರುಕಿಸುತ್ತಿದ್ದಾಗ, ಬಿಸಿಯುಸಿರೊಂದು
ತನ್ನಾವರಣವನ್ನು ಆವರಿಸಿದಂತಾಯಿತು. ಮೃದುವಾದ ಬಿಸುಪಿನ ಕೈಗಳೆಡು ತನ್ನ ಕಣ್ಣುಗಳನ್ನು ಮುಚ್ಚಿ ಹಿಂದೆಳೆದಾಗ ಮೈಮನಗಳಲ್ಲಿ ಶಕ್ತಿ ಸಂಚಾರವಾದಂತಾಯಿತು. ಅವನು ಇರುವಿನ ಅರಿವಿನಿಂದ ಸುತ್ತಲೆಲ್ಲ ವಸಂತಕಾಲದ ಪ್ರಫುಲ್ಲತೆ ಮೈದೋರಿದಂತಾಯಿತು. ಕಂಗಳನ್ನು ಅಂಗೈಗಳಿಂದ ಬಿಡಿಸಿಕೊಂಡು ಹಿಂತಿರುಗಿ ನೋಡಿದಾಗ ಅದೇ ಆ ಮನದಂಗಳದ ಮಂಗಳಮೂರುತಿ, ನಿಂತಿತ್ತು ಹರುಷದಿ ಚೆಲ್ಲುತ ಬೆಳದಿಂಗಳ ಕಾಂತಿ…
ಕುಶಲಕ್ಷೇಮ,ಸಂಸಾರ ಗ್ರಹಚಾರ, ಸ್ನೇಹಪರರ ಲಘುವ್ಯಾಖ್ಯಾನ ಮತ್ತಿತರ ಲೋಕಾಭಿರಾಮದ ವಿಚಾರಣೆಗಳೊಂದಿಗೆ
ಸಂಭಾಷಣೆಯು ಮೇಲೇರಿ ಕೆಳಿಗಿಳಿಯುತಲಿತ್ತು.

ಈ ಖಾಲಿಹರಟೆಗಳೆಲ್ಲವೂ ಬರೀ ಹೊರಮೇಲ್ಮೆಯ ಔಪಚಾರಿಕ ಮಾತುಗಳೆಂದು ಅವರಿಬ್ಬರೂ ಬಲ್ಲರು. ಕಲಕಿದ ನೀರು ತಿಳಿಯಾಗಿ ಪಾರದರ್ಶಕತೆ ಹೊಂದಿ ಮೇಲೆಯೇ ತಮ್ಮಿಬ್ಬರ ಅಂತರಂಗದ ಪ್ರತಿಬಿಂಬಗಳನ್ನು ಪರಸ್ಪರ ಕಾಣಬಲ್ಲರು ಎಂಬ ಸತ್ಯವನ್ನು ಅರಿತವರಾಗಿದ್ದರು. ಆ ಬಿಂಬಗಳ ಪ್ರತಿಫಲನವನ್ನು ನಿರೀಕ್ಷಿಸುವ ಅವಧಿಯಲ್ಲಿ “ಮೌನ”ವೆಂಬ ಅಶೃತಮಾತು ಅನಿವಾರ್ಯವಾಗಿದ್ದರೂ ಔಚಿತ್ಯವಾಗಿತ್ತು. ಇಂಥ ಬಾಂಧವ್ಯಗಳಲ್ಲಿ ಮಾತ್ರವೇ,
ಮುಜುಗರವನ್ನುಂಟು ಮಾಡುವ ಮೌನವೂ ಕೂಡ ಮುದವಾಗಿ ಮಧುರವಾಗಿ ಆಹ್ಲಾದಕರವೆಂದೆನಿಸುವುದು! ಸುತ್ತಲಿನ ಲೌಕಿಕ ಜಗತ್ತೆಲ್ಲ ತನ್ನ ಪ್ರವೃತ್ತಿಗೆ ಒಪ್ಪಿದಂತೆ ಅನಾಯಾಸವಾಗಿ ಓಡುತ್ತಿದ್ದರೂ ಇದರ ಪರಿವೆಯೇ ಇಲ್ಲದೆ ತಮ್ಮತಮ್ಮ ಮನದ ಮಂದ ಓಘಕ್ಕೆ ಇವರಿರ್ವರು ಸಂಬದ್ಧರಾಗಿದ್ದರು.
“ಗಂಗಾನದಿಯೆಂದರೆ ನಿನ್ನಲ್ಲಿ ಮೊಟ್ಟಮೊದಲಿಗೆ ಮೂಡುವ ಭಾವ ಯಾವುದು?” ಎಂಬ ಪ್ರಶ್ನೆಯ ಮೂಲಕ ಅವಳ
ಸುಪ್ತಪ್ರಜ್ಞೆಯನ್ನು ಜಾಗರೂಕಗೊಳಿಸಲು ಪ್ರಾರಂಭಿಸಿದನು. ಕ್ಷಣಕಾಲ ಅವನ ಕಂಗಳಲ್ಲಿ ಇಣುಕಿ ಅಲ್ಲಿರುವ ಪ್ರಾಮಾಣಿಕ ಕುತೂಹಲವನ್ನು ಕಂಡು ನಿಡುಸಿರುಗೈದಳು. ತನ್ನಲ್ಲಿ ಅದಾಗಲೇ ಹರಿಯುತ್ತಿದ್ದ ವಿಚಾರ ಲಹರಿ ಇವನಲ್ಲಿ ಪ್ರಶ್ನೆಯ ರೂಪವನ್ನು ಹೇಗೆ ತಳೆಯಿತು ಎಂದು ನಸುನಗುತ್ತಾ,
“ನನ್ನ ಅತಿಸಾಮಾನ್ಯ ಅತ್ಯಲ್ಪ ಪ್ರಮಾಣದ ವಿಚಾರದ ಹಂದರದಲ್ಲಿ ಆ ಮಹತ್ ಶಕ್ತಿಯನ್ನು ಹೇಗೆ ಬಣ್ಣಿಸಲಿ ಹೇಳು? ನಮ್ಮ ದಿನನಿತ್ಯದ ಕ್ಷುಲ್ಲಕ ಜನಜೀವನದಲ್ಲಿ ಅವಳು ಧರೆಗಿಳಿದ ಪಾಪ ವಿಮೋಚನೆಯಂದೊ, ನಮ್ಮನ್ನುದ್ಧರಿಸುವ ಭಾಗಿರಥಿಯೆಂದೊ ಅಥವಾ ಸ್ವರ್ಗಕ್ಕೆ ತಲುಪಿಸುವ ಮೋಕ್ಷದಾಯಿನಿಯಾಗಿಯೋ ಪೂಜಿಸಲ್ಪಡುತ್ತಾಳೆ. ನಮ್ಮ ಸಂಸ್ಕೃತಿಯ ಪ್ರತಿಯೊಂದು ಆಚರಣೆಯಲ್ಲಿ ಅಗ್ರಸ್ಥಾನವನ್ನು ಪಡೆದು ಪರಿಶುದ್ಧಿಯನ್ನು ವರದಯಿಸುತ್ತಾಳೆ. ದೇವವ್ರತನಂತಹ ಮಗನನ್ನು ಹೆತ್ತು ಮಹಾಭಾರತ ಕಾವ್ಯಕ್ಕೆ ಯೋಗ್ಯವಾದ ಅನುದಾನವನ್ನು ನೀಡುತ್ತಾಳೆ. ಅಖಿಲ ಭರತಖಂಡದ ಪ್ರತಿ ಆಗುಹೋಗುಗಳಿಗೆ ಆದಿಯಿಂದ ಅಂತ್ಯದವರೆಗೂ ಪ್ರತ್ಯಕ್ಷಸಾಕ್ಷಿಯಾಗಿ ಮೂಕಪ್ರೇಕ್ಷಕಳಾಗಿ ನಿಲ್ಲುವ ಅವಳು ನಿತ್ಯನಿರಂತರತೆಯ ಪ್ರತೀಕವಾಗುತ್ತಾಳೆ. ಇನ್ನು
ನಮ್ಮ ಅತಿನಾಗರಿಕವಾದ ಜೀವನದ ಸ್ವಾರ್ಥಕ್ಕೆ ತುತ್ತಾಗಿ ಅವಳ ಇಂದಿನ ಕರುಣಾಜನಕ ಸ್ಥಿತಿಗೆ ಹೃದಯದುಂಬಿ ಬರುತ್ತದೆ.
ಆದರೆ ಭಾವಜೀವಿಯಾದ ನಾನು ಅವಳನ್ನು ಒಂದು ಹೆಣ್ಣುಜೀವದಂತೆ ನೋಡಲು ಇಚ್ಛಿಸುತ್ತೇನೆ. ಅವಳ ಮತ್ತು ಪರಶಿವನ ಅವಿನಾಭಾವ ಸಂಬಂಧ ನನಗೆ ಸದಾ ಅಚ್ಚರಿಯನ್ನುಂಟು ಮಾಡುತ್ತದೆ. ಅರ್ಧನಾರೀಶ್ವರರೂಪಿಯಾದ ಪಾರ್ವತಿಗೂ ಕೂಡ ಅಲಭ್ಯವಾದ ಶಿವನ ಶಿರೋಮಣಿ ಸ್ಥಾನವನ್ನು ಗಂಗೆಯು ಸಮಂಜಸವಾಗಿ ಅಲಂಕರಿಸುತ್ತಾಳೆ. ಗಂಗಾವತರಣದ ಸಮಯದಲ್ಲಿ, ಮಹಾದೇವನೆಡೆಗೆ ಇದ್ದ ಅದಮ್ಯ ಅನಂತತೆಯ ಒಲವನ್ನು ತನ್ನ ಸಜಲಕಾಯದಲ್ಲಿ ತುಂಬಿಕೊಂಡು ಅದೆಷ್ಟು ತೀವ್ರತೆಯಿಂದ ಅವನತ್ತ ಧುಮುಕಿದ್ದಳೋ… ಅದನ್ನು ಕಣ್ಣಾರೆ ಕಂಡು ಗಂಗಾಧರನಾದ ಶಿವನೇ ವಿಸ್ತರಿಸಿ ಹೇಳಬೇಕು! ಅವನ ಜಟೆಯ ಸಮಕ್ಷಮದಲ್ಲಿ ಅವಳ ಕ್ಷುಬ್ಧಮನಃಸಮುದ್ರ ಶಾಂತವಾಗಿ ಶೀತಲಚಿತ್ತೆಯಾಗಿ ಧರೆಗಿಳಿದಿರಬಹುದು.ಪುರುಷ-ಪ್ರಕೃತಿಯ ಲೀಲೆಗಳಿಗೆ ಅಡೆತಡೆಯಾಗದೇ ವರ್ಷಧಾರೆಯಾಗಿ ಹರಿದು ಪೂರಕಳಾಗಿದ್ದಾಳೆ. ಇದೇ ಕಲ್ಪನೆಯ ಕಾರಣದಿಂದಲೇ ನನಗೆ ಪ್ರತಿ ಗಿರಿಶೃಂಗವು
ಶಂಕರನ ಶಿರದಂತೆ, ಅದನ್ನು ಹೊಂದಿಕೊಂಡು ಹರಿವ ಸಲೀಲಧಾರೆಗಳೆಲ್ಲ ಗಂಗೆಯಂತೆ ಭಾಸವಾಗುತ್ತವೆ.”
“ಆದರೆ ಸಂಕುಚಿತ ಮನೋಭಾವದ ನಮ್ಮ ಸಮಾಜದಲ್ಲಿ “ಗಂಗಾಶಂಕರ” ನೆಂಬ ಕಲ್ಪನೆಯೇ ಒಂದು ಅಪಸ್ವರದಂತೆ ಕೇಳಬಹುದು ಎಂದು ನನ್ನ ಮನ ಅಳುಕುತ್ತದೆ” ಎಂದು ಅವನೆಡೆಗೆ ನೋಡಿದಳು.

ಕ್ಷಣಕಾಲ ಗೊಂದಲಕ್ಕೊಳಗಾದ ಅವನು ಪ್ರಶ್ನಾರ್ಥಕವಾಗಿ ಅವಳ ಅರ್ಥಗರ್ಭಿತವಾದ ನೋಟವನ್ನು ಎದುರಿಸಿದಾಗ ಅವಳ ಮನದಿಂಗಿತ ಅರಿವಾಯಿತು. ಕವಿಯ ಭಾವ ಎಲ್ಲಿಂದೆಲ್ಲಿಗೆಯೋ ವಿಹರಿಸಿ ಕೊನೆಗೆ ಅವನಲ್ಲಿ ಶಿವಶಂಕರನನ್ನು ಮತ್ತು ಅವಳನ್ನು ಪ್ರೇಮವನ್ನೆರೆಯುವ ಗಂಗೆಯನ್ನಾಗಿ ಪ್ರತಿಬಿಂಬಿಸುತ್ತಿತ್ತು. ಇದನ್ನು ಒಪ್ಪಿಕೊಂಡ ಅವನು ನಿರುತ್ತರನಾದನು. ಕೆಲಕಾಲ ಕಣ್ಣೋಟದ ವಿನಿಮಯವನ್ನು ನಿಲ್ಲಿಸಿ ದೂರದಿಗಂತದಲ್ಲಿ ತನ್ನ ದೃಷ್ಟಿಯನ್ನು ವಿರಮಿಸಿ ಮತ್ತೆ ಹೀಗೆಂದನು.
” ವೈವಾಹಿಕ ಬಂಧನವೊಂದು ನಮ್ಮ ಸಮಾಜವನ್ನು ಸುವ್ಯವಸ್ಥಿತವಾಗಿ ನಡೆಸಲು ಕಟ್ಟಿದ ಒಂದು ಅನಿವಾರ್ಯವಾದ ಕಟ್ಟಳೆಯಷ್ಟೆ. ಎರಡು ಜೀವಗಳು ತಮ್ಮ ಸ್ವಂತಿಕೆಯನ್ನು ಅಭಿಪ್ರಾಯಗಳನ್ನು ಮತ್ತು ದೃಷ್ಟಿಕೋನವನ್ನು ಸ್ವಲ್ಪಮಟ್ಟಿಗೆ ಬದಿಗೊತ್ತಿ ಪರಸ್ಪರರಿಗೆ ಹೊಂದಿಕೊಳ್ಳುತ್ತ ಭವಿಷ್ಯದ ಕನಸುಗಳನ್ನು ಒಟ್ಟಿಗೆ ಹೆಣೆಯುವುದೇ ವಿವಾಹದ ಧ್ಯೇಯವಲ್ಲವೇ! ಸತಿಪತಿಯರು ವಿಭಿನ್ನ ವ್ಯಕ್ತಿತ್ವ, ಮನಸ್ಥಿತಿ, ಹಿನ್ನೆಲೆ, ಆಸಕ್ತಿ ಅಭಿರುಚಿಯುಳ್ಳವರಾದರೂ ಕುಟುಂಬದ ಒಳಿತಿಗಾಗಿ ಸ್ವರಕ್ಕೆ ಸ್ವರ ಸೇರಿಸಿ ಸಂಸಾರದ ಸಂಗೀತವನ್ನು ನಿಭಾಯಿಸಲು ಯತ್ನಸುತ್ತಾರೆ . ಅದು ಅಲ್ಲಲ್ಲಿ ತಾರಕಕ್ಕೇರಿ ಮಂದ್ರಕ್ಕಿಳಿಯುವುದು ಸಹಜವಾಗಿಯೇ
ಇದೆ. ಹೀಗೆ ಸಂಸಾರಭಾರ ನಿಭಾಯಿಸಲು ಏರ್ಪಡಿಸಲಾಗಿರುವ ಹೆಣ್ಣು-ಗಂಡಿನ ಸಂಬಂಧಗಳಲ್ಲಿ ಹೆಚ್ಚಿನ ಮಟ್ಟಿನವು ದೂರು ದೂಷಣೆ ಶೋಷಣೆಗಳಲ್ಲಿಯೇ ಅವಸಾನಗೊಳ್ಳುತ್ತವೆ. ಇನ್ನು ಕೆಲವು, ಸಾಮಾಜಿಕ ಮತ್ತು ವೈಯಕ್ತಿಕ ಮಾನದಂಡಗಳ ಮಿತಿಗಳನ್ನು ಮೀರಿ ಸಂಬಂಧಗಳ ಅರ್ಥವೇ ಸೋರಿಕೆಯಾಗಿ ದುರ್ಗಂಧವನ್ನು ಬೀರುತ್ತವೆ. ಮತ್ತೇ ಕೆಲವು “ಎಮ್ಮೆ ಏರಿಗೆ ಏರಿದರೆ ಕೋಣ ಕೆರೆಗೆ ಇಳಿಯಿತು” ಎಂಬಂತೆ ಹೊಂದಾಣಿಕೆಯಿಲ್ಲದೇ ಏದುಸಿರು ಬಿಡುತ್ತಾ ಏಗುತ್ತ ಜೀವಂತ ಶವಗಳಾಗಿರುತ್ತವೆ.

ಹೆಬ್ಭಿತ್ತಿಯಲ್ಲಿ,ಸಮಾಜದ ಸಂತೋಲನಕ್ಕಾಗಿ ಕಟ್ಟಿದ ಈ ವ್ಯವಸ್ಥೆ, ಸಕ್ಷಮವಾಗಿ ನಿರ್ವಹಿಸಿದರೂ ಮನದ ಮತ್ತು ಮನೆಯ ಕಿರುಭಿತ್ತಿಗಳಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡುತ್ತಿರುವುದು ಕಟುಸತ್ಯವಾಗಿದೆ.ಇವೆಲ್ಲವೂ ದಿನನಿತ್ಯದ ಲೌಕಿಕಜೀವನದಲ್ಲಿ ಸಂಭವಿಸುವ ಸತ್ಯಾಂಶಗಳೇ ಆಗಿವೆ. ಆದರೆ ಈ ಎಲ್ಲ ವೈಪರಿತ್ಯಗಳ ಮೇರೆಯನ್ನು ಮೀರಿದ ಉನ್ನತವಾದ ಮೇಲುಸ್ತರವೊಂದಿದೆ. ಅದು ಈ ಎಲ್ಲ ಬಾಧ್ಯತೆಗಳನ್ನು ನೀಗಿ ಮೇಲೇರಿದ ಜೀವಿಗಳಿಗಷ್ಟೇ ನಿಲುಕುವಂತದ್ದು. ಅಲ್ಲಿ ಬೆರೆಯುವ ಎರಡು ಸ್ನೇಹಜೀವಿಗಳು ನನ್ನ ನಿನ್ನ ಹಾಗೆ ಆತ್ಮವಿಕಸನದ
ಹಾದಿಯ ಅನ್ವೇಷಣೆಯಲ್ಲಿವವರು ಮಾತ್ರ. ಅಲ್ಲಿರುವ ಸಮ್ಮಥನದ ಸಂಭಾಷಣೆಯಲ್ಲಿ ದಿನನಿತ್ಯದ ಜಂಜಾಟಗಳು ಗೌಣವಾಗುತ್ತವೆ, ಜೀವನದ ಅನುಭವಗಳು ಅನಾನುಕೂಲತೆಗಳು ತಮ್ಮ ವಕ್ರರೂಪವನ್ನು ತೋರದೆ ಚಿಂತನ-ಮನನಕ್ಕೆ ವೇದಿಕೆಯಾಗುತ್ತವೆ. ಕಡುಪ್ರಾಮಾಣಿಕತೆಯಿಂದ ಜೀವನದ ಕುರೂಪತೆಯನ್ನೂ ನಗ್ನತೆಯನ್ನೂ ಜೊತೆಗೂಡಿ ಎದುರಿಸಿದಾಗ ಶಾಂತಚಿತ್ತದಿ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಡುತ್ತವೆ. ಪ್ರಬುದ್ಧತೆ ಪಕ್ವಗೊಂಡಂತೆ ಅವರಿಬ್ಬರೂ ಸಾಕ್ಷಾತ್ ಸತ್ಯವನ್ನು ನಿರ್ದಾಕ್ಷಿಣ್ಯವಾಗಿ ತೋರುವ ಕನ್ನಡಿಯ ಪ್ರತಿಬಂಬದಂತೆ ನಿಲ್ಲಬಲ್ಲರು. ಈ ಎರಡು ಭಾವಜೀವಿಗಳು ಹರಿವ ಆನಂದಪ್ರೇಮನದಿಯ ಎರಡು ಕಿನಾರೆಗಳಿದ್ದಂತೆ, ಸಮಾನಾಂತರದಲ್ಲಿ ಜೊತೆ ಜೊತೆಯಾಗಿ ಅನ್ಯೋನ್ಯತೆಯಿಂದ ಹರಿಯುದಷ್ಟೇ ಅವರ ಗುರಿ. ಸೀಮಾತೀತರಾಗಿ ಗತಿಗೆಟ್ಟು ಪ್ರವಹಿಸಿದರೆ ಪ್ರಳಯಕ್ಕೆ ಕಾರಣರಾಗುವರೆಂದು ಅರಿತ ಪ್ರೌಢರು ಅವರು.ಪರಸ್ಪರರ
ಸಮಾವೇಶದಿಂದ ಪ್ರತ್ಯೇಕತೆಯಲ್ಲಿಯೂ ಏಕತ್ವವನ್ನು ಅವರಿಬ್ಬರು ಕಂಡುಕೊಳ್ಳುವರು,

“ಗಂಗಾವತರಣ” ಪ್ರಸಂಗದಿಂದ ಪ್ರ‌ಳಯಾಂಕಿತ ಗಂಗೆಯು ಪಾವನದಾಯಿನಿಯಾದಂತೆ, ಶಂಕರನು
ಲೋಕೋದ್ಧಾರಕನಾದಂತೆ!! ” ಅವನ ಮನದಾಳದ ಮಾತುಗಳೆಲ್ಲ ಮಾಣಿಕ್ಯಗಳಂತೆ ಉದುರುದುರಿ ನೆಲದ ಮೇಲೆ ಪುಟಿಪುಟಿದು ಕರ್ಣಾನಂದಕರ ಕೋಲಾಹಲವನ್ನು ಉಂಟುಮಾಡಿದ್ದವು. ಕ್ಷಣಕಾಲ ಅವರ ಕಣ್ಣಿಗೆ ಸ್ಥಗಿತವಾಗಿದ್ದ ಜಗತ್ತು ಮತ್ತೇ ಚಲಿಸಲಾರಂಭಿಸಿತು. ಉದಯರವಿ ತನ್ನ ಶೈಶವದ ಮೃದುತ್ವನನ್ನು ತೊರೆದು ನಿಧಾನಕ್ಕೆ ಪ್ರಖರಲಾರಂಭಿಸಿದ್ದ. ಗುರುತರವಾದ ನಿಶ್ಯಬ್ದವನ್ನು ಚಹಾ ಮಾರಾಟಮಾಡುತ್ತಿದ್ದ ಬಾಲಕನೊಬ್ಬ “ಚಾಯ್ ಚಾಯ್” ಎಂದು ಭೇಧಿಸಿದ. ಬೆಳಗಿನ ತಣ್ಣನೆಯ ವಾತಾವರಣಕ್ಕೆ ಚಹಾದ ಬಿಸುಪು ಚೇತೋಹಾರಿಯೆಂದೆನಿಸಿತು. ಶವದಹನಕ್ಕಾಗಿ ಕಟ್ಟಿಗೆಯನ್ನು ಹೊತ್ತ ದೋಣಿಯೊಂದು ಮಣಿಕರ್ಣಿಕಾ ದೆಡೆಗೆ ನಿರಸವಾಗಿ ನಿರ್ಭಾವವಾಗಿ ತೇಲುತ್ತಿತ್ತು. ಭಕ್ತರ ಬಳಗವೊಂದರ “ಕಾಶಿ ವಿಶ್ವನಾಥ ಗಂಗೆ” ಎಂದೆಂಬ ಜಯಕಾರವನ್ನು ಕೇಳಿ ಇವರಿರ್ವರು ಮುಗುಳ್ನಕ್ಕರು.
——– ದೀವಿ

ಯು.ಕೆ*ಯ ಅಡ್ಡಹೆಸರುಗಳನ್ನು ಅಡ್ರೆಸಿಸುತ್ತ – ಡಾ. ಉಮೇಶ್ ನಾಗಲೂತಿಮಠ ಅವರ ಬರಹ

ಸಾಮಾನ್ಯವಾಗಿ ಜಗತ್ತಿನ ಅನೇಕ ಭಾಗಗಳಲ್ಲಿ ಅಡ್ಡಹೆಸರುಗಳು ಉಪಯೋಗಿಸಲ್ಪಡುತ್ತದೆ. ಇದು ಆ ವಂಶಾವಳಿ ಕಂಡುಹಿಡಿಯಲು ಸಹಾಯವಾಗುತ್ತದೆ. ಈ ಅಡ್ಡ ಹೆಸರು (surname/family name) ಅನೇಕ ಕಾರಣಗಳಿಂದ ಬರುತ್ತದೆ. ಅದು ಊರಿನ ಹೆಸರು ಅಥವಾ ಕುಲಕಸುಬಿನ ಹೆಸರಿನಿಂದ ಬಂದಿರಬಹುದು.

ಉದಾಹರಣೆಗೆ:
ಬಡಿಗೇರ (ಕಟ್ಟಿಗೆ ಕೆಲಸ)
ಕಮ್ಮಾರ (ಕಬ್ಬಿಣದ ಕೆಲಸ)
ಕುಂಬಾರ (ಮಣ್ಣಿನ ಪಾತ್ರೆ ಮಾಡುವ ಕೆಲಸ)
ಹೂಗಾರ (ಹೂವಿನ ಕೆಲಸ) ಇತ್ಯಾದಿ.

ಹಲವು ಅಡ್ಡಹೆಸರುಗಳು ಕುಲಕಸುಬಿನಿಂದ ಬಂದರೂ, ನಮಗೆ ಅವು ತಕ್ಷಣವೇ ತಿಳಿಯುವುದಿಲ್ಲ.

ಉದಾಹರಣೆಗೆ: ಪಾಟೀಲ. ನೂರಾರು ವರ್ಷಗಳ ಹಿಂದೆ ತೆರಿಗೆ ಸಂಗ್ರಹಕ್ಕೆ ಭೂಭಾಗಗಳನ್ನು “ಪಟ್ಟಿ”ಯಾಗಿ ವಿಭಜಿಸಿ, ಪ್ರತಿಯೊಂದು ಪಟ್ಟಿಯನ್ನು ಒಬ್ಬರಿಗೆ ಕೊಡಲಾಗುತ್ತಿತ್ತು. ಇದರಿಂದ ಅದು ಕುಲಕಸುಬು ಆಗಿ ‘ಪಟೆಲ’ ಅಥವಾ ‘ಪಾಟೀಲ’ ಎಂದು ರೂಪುಗೊಂಡಿತು.

ಗಾಂಧಿ ಅಡ್ಡಹೆಸರು ಗಂಧ ಅಂದರೆ ಸುಗಂಧದ್ರವ್ಯ ವ್ಯಾಪಾರಿಯಿಂದ ಬಂದಿದೆ.

ಪೂಜಾರಿ, ಪುರೋಹಿತ, ಸ್ವಾಮಿ, ಶಾಸ್ತ್ರೀ – ಅವರ ಧಾರ್ಮಿಕ ಕಸುಬಿನಿಂದ ಬಂದವು.

ಕರಣಿಕರು ಎಂದರೆ accountants. ಕುಲದಿಂದಲೇ ಕರಣಿಕರಾಗಿದ್ದರೆ ಅವರು ಕುಲಕರ್ಣಿ, ನಾಡಿನ ಕರಣಿಕರಿಗೆ ನಾಡಕರ್ಣಿ, ಬರಿಕರಣಿಕರಿಗೆ ಕರಣೆ/ಕರಣಿಕರ ಎಂಬ ಹೆಸರು ಬಂದವು ಎಂದು ಇತಿಹಾಸದ ಹೇಳಿಕೆ.

ಪಾಶ್ಚಿಮಾತ್ಯ ಉದಾಹರಣೆಗಳು:

ಪಶ್ಚಿಮ ದೇಶಗಳಲ್ಲೂ ಇಂತಹ ಕಸುಬಿನಿಂದ ಬಂದ ಹೆಸರುಗಳಿವೆ. ಉದಾಹರಣೆಗಳಿಗೆ:

Taylor (ದರ್ಜಿ/ಶಿಂಪಿಗೇರ)
Blacksmith (ಕಬ್ಬಿಣದ ಕೆಲಸಗಾರ)
Goldsmith (ಅಕ್ಕಸಾಲಿಗ)
Smith (ಲೋಹದ ಕೆಲಸಗಾರ)
Fisher (ಮೀನುಗಾರ)
Hunter (ಬೇಡರ, ಉದಾ: ಬೇಡರ ಕಣ್ಣಪ್ಪ)
Carter (ಚಕ್ಕಡಿ ಹೊಳೆಯುವವ, ಸಾರಥಿ) ಇತ್ಯಾದಿ.

ಅಡ್ಡಹೆಸರು ಮತ್ತು ವ್ಯಾಪಾರಗಳು:

ಉತ್ತರ ಕರ್ನಾಟಕದ ಹಲವಾರು ಅಡ್ಡಹೆಸರುಗಳು ಹಿಂದಿನ ತಲೆಮಾರಿನ ವ್ಯಾಪಾರಗಳ ಮೇಲೆ ಆಧಾರಿತವಾಗಿವೆ.

ಉದಾಹರಣೆಗೆ: ಉಪ್ಪಿನ, ಬೆಲ್ಲದ, ಜೀರಿಗೆ, ಉಳ್ಳಾಗಡ್ಡಿ, ಮೆಣಸಿನಕಾಯಿ, ಗೋಧಿ, ಅಕ್ಕಿ, ಬಳ್ಳೊಳ್ಳಿ.

ಪಾಶ್ಚಿಮ ದೇಶಗಳಲ್ಲೂ ಇದಕ್ಕೊಂದು ಸಮಾನತೆ:
Rice (ಅಕ್ಕಿ)
Salt (ಉಪ್ಪಿನ)
Beans (ಅವರೆಕಾಯಿ)
Oliver (ಆಲಿವ್)
Pepper (ಮೆಣಸಿನಕಾಯಿ)
Kale (ಕೆಲ್ ಸೊಪ್ಪು)

ವೈಚಿತ್ರ್ಯಗಳು ಮತ್ತು ನುಡಿಸುಳುಗಳು:

ಮೊನ್ನೆ ರುಮೇನಿಯಾದ ನರ್ಸ್ ಒಬ್ಬರು ಹೇಳಿದರು, ಅವರ ಅಡ್ಡಹೆಸರು Cabbage. ಶಾಲಾ ಕಾಲೇಜಿನಲ್ಲಿ ಅವರಿಗೆ ಈ ಹೆಸರುದಿಂದ ಮಜುಗರವಾಗುತ್ತಿತ್ತು. ದುವೆ ನಿಶ್ಚಯವಾದಾಗ ಅಡ್ಡಹೆಸರು ಬದಲಾಗುವುದು ಎಂಬ ವಿಚಾರವೇ ಅವರಿಗೊಂದು ಸಂತೋಷ. ಅವರು ಹೇಳಿದರು: ರುಮೇನಿಯಾದಲ್ಲಿ ಅನೇಕ ಅಡ್ಡಹೆಸರುಗಳು ಕಾಯಿಪಲ್ಲೆ, ಧಾನ್ಯ, ತಿನಿಸುಗಳ ಹೆಸರುಗಳಿಂದ ಬಂದಿವೆ.

ಒಂದೊಂದು ಸಲ, ವ್ಯಕ್ತಿಯ ಹೆಸರು ಮತ್ತು ಅವರ ವೃತ್ತಿ/ಅಭಿರುಚಿ ಸೇರಿ ಹೋಗದ ಅವಸ್ಥೆ ಬರುವುದೂಂಟು:

ಬ್ರಿಟನ್‌ನ Clarks ಕಂಪನಿ ಬೂಟು ತಯಾರಿಸುತ್ತದೆ, ಆದರೆ Boots ಕಂಪನಿ ಔಷಧ ಮಾರುತ್ತೆ! Ted Baker ಬಟ್ಟೆ ತಯಾರಿಸುತ್ತಾನೆ, ಆದರೆ Taylor ಎಂಬ ಬೇಕರಿಗಳಿವೆ!

ಭಾರತದಲ್ಲೂ ವೈದ್ಯ ಎಂಬ ಸೈನಿಕರು ಇದ್ದರೆ, ಸುಬೇದಾರ್ ಎಂಬ ವೈದ್ಯರು ಸಿಗುತ್ತಾರೆ! “ಮಂತ್ರಿ” ಎಂಬ ಕಟ್ಟಡ ನಿರ್ಮಾಣ ಕಂಪನಿಯೂ ಇದೆ. ಉಪ್ಪಾರ (ಮನೆ ಕಟ್ಟುವವರ ಹೆಸರು) ಎಂಬವರು ರಾಜಕೀಯ ಮಂತ್ರಿಯಾಗುತ್ತಾರೆ!

ಬ್ರಿಟನ್ನಿನಲ್ಲಿ: White ಎಂದರೆ ಕರಿ ಕೋಟಿನಲ್ಲಿ ಕಾಣಸಿಗಬಹುದು. Black ಎಂದರೆ ಬಿಳಿ ಬಟ್ಟೆ ಹಾಕಿ ನಡೆಯುತ್ತಿರಬಹುದು! Green ಕೆಂಪು ಕಾರು ಇಷ್ಟಪಡಬಹುದು, Red ಕಪ್ಪು ಕಾರು ಓಡಿಸಬಹುದು!

ಊರಿನ ಆಧಾರದ ಮೇಲೆ ಹೆಸರುಗಳು: ಅನೇಕ ಅಡ್ಡಹೆಸರುಗಳು ಊರಿನ ಹೆಸರುಗಳಿಂದ ಬಂದಿವೆ: ಕಿತ್ತೂರು, ಧಾರವಾಡಕರ, ಬೆಳಗಾಂವ್ಕರ್, ಹುಕ್ಕೇರಿ, ಹಾವೇರಿ, ಪುಣೇಕರ್. ನನ್ನ ಸ್ನೇಹಿತರಾದ ಪುಣೇಕರ್ ಅವರು ಬೆಳಗಾವಿಯಲ್ಲಿ ನೆಲೆಸಿದ್ದಾರೆ, ಬೆಳಗಾಂವ್ಕರ್ ಪುಣೆಯಲ್ಲಿ ನೆಲೆಸಿದ್ದಾರೆ!

ವಿದೇಶಿಗಳ ಹೆಸರಿನ ಅಪಾರ್ಥಗಳು:

ವಿದೇಶಿಯರಿಗೆ ನಮ್ಮ ಹೆಸರು ಹೇಳುವುದು ಕಷ್ಟ. ಡಾ. ಶ್ರೀವತ್ಸ ದೇಸಾಯಿಗೆ “This eye, not that eye – Des ai!” ಎಂದು ನರ್ಸ್ ಕರೆದರು ಎನ್ನುವುದು ಪ್ರಸಿದ್ಧ ಕತೆಯಂತೆ. ಆಫ್ರಿಕಾ, ಪೋಲಂಡ್, ರಷ್ಯಾ ದೇಶಗಳ ಅಡ್ಡಹೆಸರುಗಳ ಓದುವಂತಷ್ಟೇ ಕಷ್ಟ! ಆದರ ಛಾಯೆ ಇಂಗ್ಲೆಂಡಿನಲ್ಲೂ! ಇಂಗ್ಲೆಂಡಿನ ಹೆಸರುಗಳಲ್ಲೂ ಊರಿನ ಪ್ರಭಾವ: Holland, Garton, Harlow, London. Jameson, Harrison, Davidson – ಇವುಗಳಲ್ಲಿ “son” ಅಂದರೆ “ಮಗ”. ನಮ್ಮಲ್ಲಿ ಹರಿಯಪ್ಪ, ದೇವಪ್ಪ, ಭೀಮಪ್ಪ – “ಅಪ್ಪ” ಇದ್ದಂತೆ. ಐರ್ಲೆಂಡ್ ಮತ್ತು ಸ್ಕಾಟ್‌ಲ್ಯಾಂಡ್: MacDonald, MacMillan (Mac/Mc = Son of…) ಐರ್ಲೆಂಡ್: O’Sullivan, O’Brien, O’Callaghan – ಇಲ್ಲಿ “O” ಅಂದರೆ “ವಂಶದವ”.

ವಿನೋದಭರಿತ ಅನುಭವಗಳು:
ಚೆಸ್ಟರ್ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ತನ್ನ ಹೊಸ ಬೂಟುಗಳು ಕಳೆದುಹೋದವೆಂದು ಹೇಳಿದ. ನರ್ಸ್ ಕೇಳಿದಳು: “ಎಲ್ಲಿ?” ಅವರು ಉತ್ತರಿಸಿದರು: Shoebury! ಆ ವ್ಯಕ್ತಿ ಹೆಸರೇನಪ್ಪಾ ಎಂದರೆ: Mr. Shoeman! ನರ್ಸ್ ನಗುತ್ತ ಹೇಳಿದರು: “Mr. Shoeman lost his shoes in Shoebury!”

ಮತ್ತೊಂದು:
Mr. Drinkwater ಎಂಬ ವ್ಯಕ್ತಿಗೆ ಪಿತ್ತದ ಸಮಸ್ಯೆ. ಅವರು ದಿನಪೂರ್ತಿ ಕಾಫಿ ಕುಡಿಯುತ್ತಿದ್ದರು.ನಾನು ಹೇಳಿದೆ: “Drinkwater, please reduce coffee and drink water.” ಆತ ನಕ್ಕು: “ನನ್ನ ಆಫೀಸಿನಲ್ಲಿ ನೀರು ಕುಡಿದರೆ ಎಲ್ಲರೂ Mr. Drinkwater drink water! ಎನ್ನುತ್ತಾರೆ. ಆದ್ದರಿಂದ ಕಾಫಿಯತ್ತ ತಿರುಗಿದ್ದೇನೆ!”

  • * ಯು.ಕೆ = ಉತ್ತರ ಕರ್ನಾಟಕ / United Kingdom

ರುಕ್ಮಾದಿಂದ ಆರಂಭವಾದ ವಿಚಾರಗಳು

ಕೆಲವು ದಿನಗಳ ಹಿಂದೆ ವೆಬ್ ಸೀರೀಸ್ “ಫ್ಯಾಮಿಲಿ ಮ್ಯಾನ್ – ೩” ನೋಡುತ್ತಿದ್ದೆ, ಅದರಲ್ಲಿ ಬರುವ ಒಂದು ಪಾತ್ರ “ರುಕ್ಮಾ”… ಅದರ ಕೊನೆಯ ಸಂಚಿಕೆ ಬಂದಾಗ ರುಕ್ಮಾ ಪೂರ್ತಿ ಹೆಸರು ರುಕುಮಾಂಗದ ಎಂದು ತಿಳಿಯಿತು. ಅವನ ಪೂರ್ಣ ಹೆಸರು ಕೇಳಿದ ಮೇಲೆ ತಲೆಯಲ್ಲಿ ಇದು ಎಲ್ಲೋ ಕೇಳಿದ ಹಾಗಿದೆ ಅನಿಸ್ತಾ ಇತ್ತು. ಕೂತಲ್ಲಿ, ನಿಂತಲ್ಲಿ ಅದೇ ವಿಚಾರ…

ನಿತ್ಯ ಜೀವನದಲ್ಲಿ ನಾವು ಹತ್ತು ಹಲವು ವಿಷಯಗಳನ್ನು ನೋಡುತ್ತೇವೆ, ಕೇಳುತ್ತೇವೆ… ನಮ್ಮ ಮೆದಳು ಅದನ್ನು ತನ್ನ ಸಂಗ್ರಹದಲ್ಲಿ ಇಟ್ಟಿಕೊಳ್ಳುತ್ತದೆ ಮತ್ತು ನಮಗೆ ಅವಶ್ಯಕತೆ ಇದ್ದಾಗ ಅದನ್ನು ಒದಗಿಸುತ್ತದೆ, ಇದು ಸಾಮಾನ್ಯ ಕ್ರಿಯೆ. ನಮ್ಮ ಮೆದಳು ಪ್ರಜ್ಞೆ ಮತ್ತು ಸುಪ್ತಾವಸ್ಥೆ ಈ ಎರಡು ಸ್ಥಿತಿಯಲ್ಲೂ ವಿಷಯ ಸಂಗ್ರಹಣೆ ಮಾಡುತ್ತದೆ, ಅದನ್ನು ಸೋಸಿ, ಹೊಂದಿಸಿ ಇಡುತ್ತದೆ.

Memories, pressed between the pages of my mind
Memories, sweetened through the ages just like wine
(ಎಲ್ವಿಸ್ ಪ್ರೆಸ್ಲೇಯ್)

ನಮ್ಮ ಸಿಹಿ ನೆನಪುಗಳು ಮೇಲಿನ ಸಾಲುಗಳಂತೆ ಆಚೊತ್ತಿ ಕೂತಿರುತ್ತವೆ, ಯಾಕೆಂದರೆ ಅದನ್ನು ಮತ್ತೆ ಮತ್ತೆ ತೆಗೆದು ನೋಡುತ್ತಿರುತ್ತೇವೆ. ಮತ್ತೆ ಕೆಲವು ವಿಷಯಗಳು ಮನಸ್ಸಿನಲ್ಲಿ ಸೇರಿಕೊಂಡು, ಬೇಕಾದಾಗ ನೆನಪಾಗುವದಿಲ್ಲ… ಬೇರೆ ಏನೂ ವಿಚಾರ ಮಾಡುವಾಗ ಚಕ್ಕಂತ ಮನದ ಪರದೆಯ ಮೇಲೆ ಮೂಡುತ್ತವೆ. ನಾನು ಹೆಚ್ಚಿನ ವ್ಯಾಸಂಗ ಓದಿದ್ದು ಬೆಲ್ಫಾಸ್ಟ್ ನಲ್ಲಿ, ಒಂದು ದಿನ ನಮ್ಮ ಉಪನ್ಯಾಸಕರು ನಾವು ಯೂನಿವರ್ಸಿಟಿಗೆ ಬರುವ ರಸ್ತೆಯಲ್ಲಿನ ಅಂಗಡಿಗಳ ಹೆಸರು ಹೇಳಿರೆಂದು ಕೇಳಿದರು. ಪ್ರತಿದಿನ ಅದೇ ರಸ್ತೆಯಲ್ಲಿ ಓಡಾಡಿದ್ದರೂ, ಅಂಗಡಿಗಳನ್ನು ನೋಡಿದ್ದರೂ ನಮಗೆ ಎಲ್ಲಾ ಅಂಗಡಿಗಳ ವಿವರ ಆ ಸಮಯಕ್ಕೆ ನೆನಪು ಬರಲಿಲ್ಲ. ನಮ್ಮ ಸಂಕೀರ್ಣ ವ್ಯವಸ್ಥೆ ನಮಗೆ ಯಾವುದು ಅವಶ್ಯ, ಯಾವುದು ಅಲ್ಲ ಎಂದು ನಿರ್ಧರಿಸಿ ಉಳಿದಿದ್ದನ್ನು ಪಕ್ಕಕ್ಕಿರಿಸುತ್ತದೆ. ರುಕುಮಾಂಗದ ಹೆಸರು ಕೂಡ ಸ್ವಲ್ಪ ಕ್ಷಣ ನನ್ನ ನೆನಪಿನಲ್ಲಿ ಇದ್ದರೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.

ಒಂದು ಕ್ಷಣ, ಈ ಹೆಸರು ಕೇಳಿದ್ದರೂ ನೆನಪಾಗುತ್ತಿಲ್ಲ ಎಂದು ಸಂಧ್ಯಾ ಜೊತೆ (ಏನಾದರೂ ಸಿಗದಿದ್ದರೆ ಅಥವಾ ಹೊಳೆಯದಿದ್ದರೆ ವಿಚಾರಿಸುವದು ಪತ್ನಿಯೊಂದಿಗೆ) ಮಾತನಾಡುತ್ತಿದಾಗ ಯುರೇಕಾ ಕ್ಷಣ ಅಥವಾ ಆಹಾ!! ಕ್ಷಣ ಬಂತು….

ಕರುಣಿಸೋ ರಂಗ ಕರುಣಿಸೋ ಕೃಷ್ಣ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ….

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಲೂ ಅರಿಯೆನೋ ಕೃಷ್ಣ

ರುಕುಮಾಂಗದನಂತೆ ವ್ರತವ ನಾನರಿಯೆ … ಈ ಒಂದು ಸಾಲು ನೆನಪಿನ ಆಳದಿಂದ ಹೊರಬಂದು, ಮನಸ್ಸನ್ನು ನಿರಾಳಗೊಳಿಸಿತು.

ರುಕುಮಾಂಗದ ಯಾರು? ನಾರದ ಪುರಾಣದ ಒಂದು ಉಲ್ಲೇಖದಲ್ಲಿ ಬರುವ ರಾಜ ರುಕುಮಾಂಗದ ಸೂರ್ಯವಂಶಿಯ ರಾಜ, ಏಕಾದಶಿಯ ದಿನದ ಉಪವಾಸ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದವನು. ಅವನ ವ್ರತ ಭಂಗ ಮಾಡಿಸಲು ಅಪ್ಸರೆ ಮೋಹಿನಿ ಬಂದು ಪ್ರಯತ್ನಿಸಿ ಸೋತಾಗ, ಕೊನೆಗೆ ಅವನ ವ್ರತ ನಿಷ್ಠೆಗೆ ವಿಷ್ಣು ಪ್ರತ್ಯಕ್ಷನಾಗಿ ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾನೆ.

ವ್ರತ ಅಥವಾ ಉಪವಾಸ ಮಾಡುವುದು ಎಲ್ಲ ಸಂಸ್ಕೃತಿಯಲ್ಲೂ ಒಂದಲ್ಲ ಒಂದು ರೀತಿ ಸಾಮಾನ್ಯವಾಗಿ ನಡೆದುಕೊಂಡ ಬಂದ ರೂಢಿ. ಒಬ್ಬ ವ್ಯಕ್ತಿ ೧೬-೧೮ ಗಂಟೆ ಉಪವಾಸವಿದ್ದಾಗ ಅವನ ದೇಹದ ಕೋಶಗಳು ತಮ್ಮೊಳಗಿನ ಹಳೆಯದು, ಹಾನಿಗೊಂಡ ಭಾಗಗಳನ್ನು ತಾವೇ ಜೀರ್ಣಿಸಿಕೊಂಡು ಪುನರ್‌ಬಳಕೆ ಮಾಡಿಕೊಳ್ಳುತ್ತವೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಆಟೋಫ್ಯಾಜಿ (Autophagy) ಎನ್ನುತ್ತಾರೆ. ಅಂದರೆ ಕಟ್ಟುನಿಟ್ಟಾಗಿ ವ್ರತ (ಉಪವಾಸ) ಮಾಡುವದರಿಂದ ನಮ್ಮ ದೇಹದ ಕೋಶ ಶುದ್ಧೀಕರಣಕ್ಕೆ ದಾರಿ ಮಾಡಿದಂತಾಗುತ್ತದೆ, ಒಳ್ಳೆಯ ಆರೋಗ್ಯದ ಬುನಾದಿ ಆಗುತ್ತದೆ. ನಾರದ ಪುರಾಣದ ಉಲ್ಲೇಖವನ್ನು ಸದ್ಯದ ಪರಿಸ್ಥಿತಿಯಲ್ಲಿ ನೋಡಿದಾಗ, ನಮ್ಮ ಜೀವನದಲ್ಲಿ ವ್ರತ (ಉಪವಾಸ) ಕಟ್ಟುನಿಟ್ಟಾಗಿ ಪಾಲಿಸಲು ಪ್ರಯತ್ನಿಸಿದಾಗ ಬರುವ ಅದೇ ತಡೆಗಳನ್ನು ಅಪ್ಸರೆ “ಮೋಹಿನಿ” ಅಂದುಕೊಂಡು, ಅದನ್ನು ಲೆಕ್ಕಿಸದೆ (ಅಥವಾ ಮಾರು ಹೋಗದೆ) ವ್ರತ ಮಾಡಿದಾಗ ಒಳ್ಳೆಯ ಆರೋಗ್ಯದಿಂದ ಜೀವಿಸಿ, ಕೊನೆಗೆ ಸುಖಕರ ಸಾವನ್ನು (ಅನಾರೋಗ್ಯ ಇರದ) ಪಡೆದುಕೊಳ್ಳುವದೇ ವೈಕುಂಠ ಸೇರಿಕೊಂಡ ಹಾಗೆ ಇರಬೇಕು.

ಆಟೋಫ್ಯಾಜಿಯ ಕಾರ್ಯವಿಧಾನಗಳ ಆವಿಷ್ಕಾರಗಳಿಗಾಗಿ ಜಪಾನಿನ ಜೀವಕೋಶ ಜೀವಶಾಸ್ತ್ರಜ್ಞ ಯೋಶಿನೋರಿ ಒಹ್ಸುಮಿ ಅವರಿಗೆ 2016 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಏಕಾದಶಿ ಅಥವಾ ಈ ತರಹದ ಉಪವಾಸದ ರೂಢಿ ಬಹಳ ಹಳೆಯ ಆಚರಣೆ, ಅದನ್ನು ಕಡೆಗಣಿಸಿದ ನಾವು ಮತ್ತೆ ಅದನ್ನೇ ಅವಿಷ್ಕಾರವೆಂದು ಪರಿಗಣಿಸಿ ಆಚರಣೆಗೆ ತರಲು ಪ್ರಯತ್ನಿಸುತ್ತಿದ್ದೇವೆ… ಇದನ್ನೇ “ರಿಇನ್ವೆಂಟಿಂಗ್ ದಿ ವೀಲ್” ಅನ್ನುವದು.

ನಮ್ಮ ಅತೀ ಜಾಣತನದಿಂದ ಎಷ್ಟೋ ಈ ತರಹದ ಹಳೆಯ (ಹಿರಿಯರ) ಆಚರಣೆಗಳನ್ನು ಕಡೆಗಣಿಸಿ, ಮತ್ತಾರೂ ಅದನ್ನು ಸರಿ ಎಂದಾಗ ಅನುಸರಿಸಲು ಆರಂಭಿಸುತ್ತೇವೆ. ನನ್ನ ಮನಸಿನ್ನಲ್ಲಿ ಓಡಿದ ಕೆಲವು ಇದೆ ತರಹದ ವಿಷಗಳನ್ನು ಹಂಚಿಕೊಳ್ಳಣ ಅನಿಸಿತು. ಇತ್ತೀಚಿಗೆ ಬಂದ ಕರ್ನಾಟಕ ಸರ್ಕಾರದ ಒಂದು ಕಾರ್ಯ ನೀತಿ… ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜೆ ಘೋಷಿಸಿದ್ದು, ಹಿಂದಿನ ಜನರು ಇದೇ ರಜೆ ಮನೆಯ ಹೆಣ್ಣು ಮಕ್ಕಳಿಗೆ ಕೊಡಲು ಮಡಿಯಲ್ಲಿ ಕೂಡಿಸಿದಾಗ ಅದನ್ನು ಪ್ರಶ್ನೆ ಮಾಡಿದವರೇನು ಕಡಿಮೆಯಿಲ್ಲ. ಅರೋಗ್ಯ ಈಗಿನ ಜನರ ಆದ್ಯತೆ ಆಗಿದೆ, ಇಡ್ಲಿ ಅಂತಹ ತಿಂಡಿ ಮಹತ್ವ ಜನರಿಗೆ ಈಗ ಆಗಿ ಪ್ರೋಬೈಯೋಟಿಕ್ ಎಂದು ಸೇವಿಸುವ ಅಭಿಮಾನಿಗಳು ಬೆಳೆಯುತ್ತಿದ್ದಾರೆ.

ಎಲ್ಲ ಆಚರಣೆ ಕಣ್ಣು ಮುಚ್ಚಿ ಪಾಲಿಸಬೇಕಿಲ್ಲ, ಅಂತಹ ಒಂದು ಸಣ್ಣ ಕಥೆ ನೋಡೋಣ. ಒಂದು ಆಶ್ರಮ, ಹಿರಿಯ ಸನ್ಯಾಸಿ ತೀರಿದ ನಂತರ ಯುವ ಸನ್ಯಾಸಿಗೆ ದೀಕ್ಷೆ ಕೊಟ್ಟರು. ಹಿರಿಯ ಸನ್ಯಾಸಿ ಪ್ರತಿದಿನ ಪ್ರವಚನದಲ್ಲಿ ಇಲಿಗಳನ್ನು ಹೆದರಿಸಲು ಬೆಕ್ಕು ತರುತ್ತಿದ್ದರು, ಕೆಲವು ಕಾಲದ ನಂತರ ಬೆಕ್ಕು ತಾನಾಗಿ ಬರಲು ಆರಂಭಿಸಿತು. ಹಿರಿಯ ಸನ್ಯಾಸಿ ತೀರಿದ ನಂತರ ಬೆಕ್ಕು ಪ್ರವಚನಕ್ಕೆ ಬರಲಿಲ್ಲ. ಯುವ ಸನ್ಯಾಸಿಯ ಬೆಕ್ಕು ಬಾರದ ಕಾರಣ ಪ್ರವಚನ ಆರಂಭಿಸಲು ತಯಾರಾಗಲಿಲ್ಲ, ಬೆಕ್ಕು ಬರುವುದು ಒಂದು ಆಚರಣೆಯ ಭಾಗ ಎಂದು ಕುಳಿತರು. ಆಚರಣೆ ವಿವೇಚಿಸಿ, ಅರಿತುಕೊಂಡು, ಪರಸ್ಥಿತಿಗೆ ಅನುಗುಣವಾಗಿ ಮಾಡಬೇಕು… ಅದು ಅಂಧಶ್ರದ್ಧೆ ಆಗಬಾರದು.

ನನ್ನ ಈ ವಿಚಾರಧಾರೆ ಒಂದು ಹೆಸರಿನೊಂದಿಗೆ ಆರಂಭವಾಯಿತು, ಅದರ ಹರಿವಿಗೆ ಸಿಕ್ಕ ಎಲ್ಲ ವಿಷಯಗಳನ್ನು ಬರೆಯುತ್ತ ಹೋದೆ… ಅದನ್ನೇ ಇಲ್ಲಿ ಲೇಖನ ಮಾದರಿಯಲ್ಲಿ ಬರೆಯಲು ಪ್ರಯತ್ನಿಸಿದೆ, ಇಷ್ಟ ಆಗಬಹುದು ಎಂದು ಭಾವಿಸುವೆ.

ರಿಚರ್ಡ್ ಬರ್ಟನ್ನಿಗೆ ಗೌರವಾರ್ಪಣೆ – ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಮತ್ತು ಎರಡು ಕವಿತೆಗಳು -ರಾಜಶ್ರೀ ಪಾಟೀಲ

ಭಿತ್ತಿ ಭರ್ತಿ ತುಂಬಿದ ಬೃಹದ್ ರಿಚರ್ಡ್ (ಚಿತ್ರ೧: ಲೇಖಕಿ)

ಮಿಸ್ಟರ್ ಬರ್ಟನ್ ಚಿತ್ರವು ರಿಚರ್ಡ್ ಬರ್ಟನ್ ಅವರ ಜೀವನವನ್ನು ವಿವರಿಸುತ್ತದೆ—ಪೋನ್ಟ್ರೈಡಿವೆನ್ ಹಳ್ಳಿಯಿಂದ ಇಂಗ್ಲೆಂಡ್‌ನ ರಂಗಮಂದಿರಗಳವರೆಗೆ ಯುವಕ ರಿಚರ್ಡ್ ಜೆಂಕಿನ್ಸ್ ಅವರ ಜೀವನದಲ್ಲಿ ಅವರ ಶಾಲಾ ಶಿಕ್ಷಕರು ಪ್ರೇರಣಾದಾಯಕ ಪಾತ್ರ ವಹಿಸಿದರು—ಅವರ ಪ್ರತಿಭೆಯನ್ನು ಗುರುತಿಸಿ, ಅಭಿನಯವನ್ನು ಮುಂದುವರಿಸಲು ಪ್ರೋತ್ಸಾಹಿಸಿ, “ಬರ್ಟನ್” ಎಂಬ ತಮ್ಮ ಹೆಸರನ್ನೂ ನೀಡಿದರು. ಅವರ ಆಳವಾದ, ಪ್ರತಿಧ್ವನಿಸುವ ಧ್ವನಿ ಅವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.

ಈ ಚಿತ್ರವನ್ನು ನೋಡಿದ ನನಗೆ ರಿಚರ್ಡ್ ಬರ್ಟನ್ ಅವರ Pontrhydyfen ಪಾಂಟ್ರಿಡ್ ವೆನ್ (ವೆಲ್ಶ್ ಭಾಷೆಯಲ್ಲಿ ’f’ ಗೆ ವ ಎನ್ನುವ ಉಚ್ಚಾರ) ಜನ್ಮಸ್ಥಳವನ್ನು ಅನ್ವೇಷಿಸಲು ಪ್ರೇರಣೆ ನೀಡಿತು. ಈ ವರ್ಷ 2025 ಅವರ ಜನ್ಮ ಶತಮಾನೋತ್ಸವದ ಸಂದರ್ಭವಾಗಿದ್ದು, ಪೋರ್ಟ್ ಟಾಲ್ಬಾಟ್ ಕೌನ್ಸಿಲ್ ಅನೇಕ ಸಂಬಂಧಿತ ಸ್ಥಳಗಳನ್ನು ‘ರಿಚರ್ಡ್ ಬರ್ಟನ್ ಟ್ರೈಲ್(trail)’ ಆಗಿ ಏರ್ಪಡಿಸಿದೆ.

ಮೇಲಿನ ಚಿತ್ರ-ಲೇಖಕಿ ಕೃಪೆ: ಇಂದಿನ ದೃಶ್ಯ; ಕೆಳಗೆ: ರಿಚರ್ಡ್ ಮತ್ತು ತಂದೆ ತನ್ನೂರಿನ ಅದೇ ಸೇತುವೆಯ ಮೇಲೆ c1950 ದಶಕದಲ್ಲಿ.
ರಿಚರ್ಡ್ ಬರ್ಟನ್ ಟ್ರೈಲ್(trail) —ಫೋಟೋ: ಶಾಲಿನಿ ಜ್ಞಾನಸುಬ್ರಹ್ಮಣಿಯನ್
ಶ್ರೀವತ್ಸ ದೇಸಾಯಿ ತಮ್ಮ ವೇಲ್ಸ್ ನೆನಪುಗಳನ್ನು ಜೋಡಿಸುತ್ತಾರೆ. 
ನಾನು ಈ ದೇಶದ ಮಣ್ಣಿನ ಮೇಲೆ ಕಾಲಿಟ್ಟದ್ದು 1974 ರಲ್ಲಿ ಆಗಸ್ಟ್ ತಿಂಗಳ ಮೊದಲ ವಾರ. ಮಾಡ್ ಕವಿಡ್ ಆಕಾಶ ಜಿಟಿ ಜಿಟಿ ಮಳೆ. ಧಾರವಾಡದ ಶ್ರಾವಣವನ್ನು ನೆನೆಯುತಿತ್ತು ಮನ. ಎಲ್ಲೆಡೆ ಹಸಿರು ಹುಲ್ಲು. ನಾನು ಮೊದಲು ಕಂಡ ನ್ಯೂಪೋರ್ಟ್, ಕಾರ್ಡಿಫ್ ಗಳು ದಕ್ಷಿಣ ವೇಲ್ಸ್ ಪ್ರಾಂತದಲ್ಲಿವೆ. ನಾನು ಭೇಟಿಯಾದ ಎಳೆದೆಳೆದು ಇಂಗ್ಲಿಷ್ ಮಾತಾಡುವ ವೆಲ್ಶ್ ಜನರ ಮಾತಿನಲ್ಲಿlilt ಒಂದು ತರದ ಲಯ. ಅಂದು ಎಲ್ಲೆಡೆಗೆ eisteddfod (ಐಸ್ಟೆಡ್ವಡ್) ಎನ್ನುವ ವೆಲ್ಶ್ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದ ಪ್ರಚಾರ, ಉತ್ಸಾಹ. ಆ ಭಾಷೆಯನ್ನಾಡುವ ಸುಪ್ರಸಿದ್ಧ ಸಾಹಿತಿ, ಸಂಗೀತ, ಕಲಾಕಾರರ ಕೂಟ. ಸ್ಫರ್ಧೆಗಳು, ಕವನಗೋಷ್ಠಿ, ಇತ್ಯಾದಿ. ಹೆಮ್ಮೆಯ ಪುತ್ರ ರಿಚರ್ಡ್ ಬರ್ಟನ್ ಸಹ ಹುಡುಗರ ಸೊಪ್ರಾನೊ ಹಾಡುಗಾರಿಕೆಯಲ್ಲಿ ಗೆದ್ದಿದ್ದ. ಆತನ ದನಿ ಸುಪ್ರಸಿದ್ಧ.ಇಂದಿಗೂ ಸಹ ವೇಲ್ಸ್ನಲ್ಲಿ ಹುಟ್ಟಿದ ಶ್ರೇಷ್ಠ ಕವಿ ಡಿಲನ್ ಥಾಮಸ್ಸನ ರೇಡಿಯೋ ನಾಟಕ 'ಅಂಡರ್ ಮಿಲ್ಕ್ ವುಡ್ 'ನ ಆತನ ವಾಚನವನ್ನು Voice of Wales: mellifluous, baritone, ಎಂದು ಕರೆದು ಪದೇ ಪದೇ ಕೇಳಲಾಗುತ್ತದೆ, ಬಿತ್ತರಿಸಲಾಗುತ್ತದೆ. (ಮೇಲಿನ ಚಿತ್ರ ನೋಡಿರಿ.)
ನಾನು ಕಾಲೇಜಿನಲ್ಲಿದ್ದಾಗ ರಿಚರ್ಡ್ ಬರ್ಟನ್ ಮತ್ತು ಎಲಿಝಬೆತ್ ಟೇಲರ್ ಯಾವಾಗಲೂ ಸುದ್ದಿಮಾಡುತ್ತಿದ್ದರು; ಅವರ ಸಿನಿಮಾಗಳು ಅಥವಾ ವೈಯಕ್ತಿಕ ವಿಷಯಗಳು ಯಾವಾಗಲೂ ಹಾಲಿವುಡ್ ಮಸಾಲೆಯನ್ನು ಹಂಡೆ ಗಟ್ಟಲೆ ನೀಡುತ್ತಿದ್ದವು. ಆಕೆಯ 7 ಗಂಡಂದಿರು, ಈತನಿಗೆ ಮೂವರು ಹೆಂಡತಿಯರು ಇತ್ಯಾದಿ. ಮೊದಲ ಸಲ ಇವರಿಬ್ಬರು ಮದುವೆಯಾದಾಗ ಆಕೆಯ ಐದನೆಯವನು, ಈತನ ಎರಡನೆಯವಳು ಇತ್ಯಾದಿ. ಡಿವೋರ್ಸ್ ಮಾಡಿದ ಒಂದು ವರ್ಷದಲ್ಲಿ ಮರುಮದುವೆ, ಇತ್ಯಾದಿ. ಕ್ಲಿಯೋಪಾತ್ರಾ ಸಿನಿಮಾ ಅಲ್ಲಿಯವರೆಗಿನ ಅತ್ಯಂತ ಅಧಿಕ ವೆಚ್ಚದ ಯೋಜನೆಯಾಗಿತ್ತು. ರಿಚರ್ಡ್ಗೆ ಅದರಲ್ಲಿ ಮಾರ್ಕ್ ಆಂಥನಿ ಪಾತ್ರ. ಸತ್ಯವೋ ಮಿಥ್ಯವೋ ರಾಣಿ ಕ್ಲಿಯೋಗೆ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುವ ರೂಢಿ ಇತ್ತಂತೆ. ಅದು ಚರ್ಮಕ್ಕೆ ಪೋಷಕ ಎಂದು ಆಕೆಯ ನಂಬಿಕೆ. ಆ ದೃಶ್ಯದ ಚಿತ್ರಣಕ್ಕೆ ಸ್ನಾನದ ಟಬ್ ತುಂಬಲು ನೂರಾರು ಹಾಲು ಕೊಡುವ ಗಾರ್ಧಭಗಳನ್ನು ರೋಮ್ ನಗರದಲ್ಲಿ ಎಲ್ಲಿಂದ ಹಿಡಿದು ತರುವುದು? ಕೊನೆಗೆ ಕೃತಕ ಹಾಲನ್ನು ಉಪಯೋಗಿಸಲಾಯಿತು. ಕೆಲವಷ್ಟೇ ಸಿನಿಮಾ ಸಿಬ್ಬಂದಿಗಷ್ಟೇ ಶೂಟಿಂಗ್ ಸಮಯದಲ್ಲಿ ಪ್ರವೇಶ, ಒಬ್ಬ ಕುರುಡ ಕವಿ ಪಾತ್ರಧಾರಿಯನ್ನು ಹೊರತಾಗಿ. ಆಮೇಲೆ ಗೊತ್ತಾದುದು ಆತನ ಪಾತ್ರವಷ್ಟೇ ಕುರುಡು, ನಿಜವಾಗಿಯೂ ಅಲ್ಲ ಅಂತ!
ನಾನು ನಾಲ್ಕು ವರ್ಷಗಳನ್ನು ದಕ್ಷಿಣ ವೇಲ್ಸ್ ನಲ್ಲಿ ಕಳೆದಿದ್ದೇನೆ. ಅವರಿಗೆ ತಮ್ಮ ಭಾಷೆಯಲ್ಲದೆ ಮೂರು ವಿಷಯಗಳು ಅತಿಪ್ರಿಯವಾದವು - ರಗ್ಬಿ ಆಟ, ದಿನದ ದುಡಿತವಾದ ಮೇಲೆ ಪಬ್ ನಲ್ಲಿ ಭೇಟಿಯಾಗುವದು. ಅದಕ್ಕೆ ಅವರಲ್ಲಿ ಒಂದು ನಾಣ್ನುಡಿ ಇದೆ: ವಲಸೆ ಹೋದರೂನು ಮೂವರು ವೆಲ್ಷ್ ಜನ ಕೂಡಿದರೆ ಸಾಕು ಅಲ್ಲೇ ಮೂರನ್ನು ಸ್ಥಾಪಿಸಿಬಿಡುತ್ತಾರಂತೆ: ರಗ್ಬಿ ಕ್ಲಬ್ಬು, ಪಬ್ಬು ಮತ್ತು ಒಂದು ಐಸ್ಟೆಡ್ವಡ್! ಇವೆಲ್ಲವೂ ಚಿರಾಯುವಾಗಿರಲಿ!

ಶ್ರೀವತ್ಸ ದೇಸಾಯಿ




1. ಮಿತಿಯ ಪರಿಮಿತಿ 

ತಿಳಿದಿತ್ತು ಹರಿವ ನದಿ, ಸಾಗರ ಸೇರುವದೇ ಗುರಿಯೆಂದು,
ಅದಕೇನು ಗೊತ್ತಿತ್ತು ಸಾಗರದಲೆ ಸೇರುವದರೊಟ್ಟಿಗೆ,
ಅದಕುಂಟು ಮೇಘ ಕಟ್ಟುವ, ಮಳೆ ಸುರಿಸುವ ಸಾಮರ್ಥ್ಯ
ಕಣ್ಮುಚ್ಚಿ ಕಾಣುವ ಕನಸುಗಳ ನನಸಾಗಿಸುವ,
ಕೈಗೆಟುವ ಕಾರ್ಯಗಳ ಪೂರೈಸುವ ಭರದಲ್ಲಿ
ಅರಿವಾರಿಗುಂಟು ಪ್ರತಿ ಜೀವದ ಸಾಮರ್ಥ್ಯದ ಮಿತಿಯೆಲ್ಲಿ ?

ರಾಜಶ್ರೀ ಪಾಟೀಲ
ಚಿತ್ರ: AI ಕೃಪೆ
2. ಅರಿವಿನ ಪರದೆ 

ಅಲಂಕಾರಕ್ಕೆ ಅಟ್ಟಣಿಗೆಯಲ್ಲಿ ಅಂದ ತೋರಿಸೋ ಹಿತ್ತಾಳೆ ಚರಿಗೆ,
ದೇವರ ಕೋಣೆಯಲ್ಲಿ ದರ್ಬಾರು ನಡೆಸೋ ತಾಮ್ರದ ಚರಿಗೆ,
ಬಯಲಿನ ಬಿಸಿಲುರಿಯ ದಾಹ ನೀಗುವ ಅಡುಗೆ ಮನೆಯ ಸ್ಟೀಲಿನ ಚರಿಗೆ ,
ಬೆಳ್ಳಂಬೆಳಗ್ಗೆ ತಪ್ಪದೆ ಹಿತ್ತಲ ಪ್ರವಾಸಕ್ಕೆ ಉಪಯೋಗಿಸೋ ಪ್ಲಾಸ್ಟಿಕ್ ಚರಿಗೆ ,
ಮರೆಯದೆ ಪ್ರತಿ ಅಮವಾಸೆ, ಹುಣ್ಣಿಮೆಗೆ ಬಯಲಿನ ಜೀವಜಂತುಗಳಿಗೆ ಅವ್ವ ಕಳಿಸುವ ಚರಗದ ಮಣ್ಣಿನ ಚರಿಗೆ ,
ಬಣ್ಣ ತರಾವರಿ, ಆಕಾರ ತರಾವರಿ, ಮೈಮಾಟ ತರಾವರಿ
ಆದರೆ ಪರಿ ಪರಿಯಾಗಿ ತುಂಬಿ ನೀಡುವದಲ್ಲವೇ ಗುರಿ ?

ರಾಜಶ್ರೀ ಪಾಟೀಲ
ಹೆಸರು ಉಲ್ಲೇಖಿಸದ ಚಿತ್ರಗಳು: ಇಂಟರ್ ನೆಟ್

ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

ನಮಸ್ಕಾರ.  ನಮ್ಮ ಅನಿವಾಸಿ ಬಳಗದ ಉತ್ಸಾಹಿ ಬರಹಗಾರ, ಇತಿಹಾಸದ ಅಧ್ಯೇತೃ (ಬೇಸಿಂಗ್‍ಸ್ಟೋಕ್) ರಾಮಮೂರ್ತಿ ಅವರು ಬರೆದಿರುವ ಇನ್ನೊಂದು ಲೇಖನ. ಪಂಜಾಬಿನ ಕೊನೆಯ ರಾಜ ದುಲೀಪ್ ಸಿಂಹರ ಮಗಳು ರಾಜಕುಮಾರಿ ಸೋಫಿಯಾ ಅವರ ಜೀವನ ಚಿತ್ರಣ ಇಲ್ಲಿದೆ.  ಬರಿಯ ರಾಜಕುಮಾರಿಯಾಗಿ ಉಳಿಯದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ, ಮೊದಲ ಮಹಾಯುದ್ಧದ ವೇಳೆಯಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ, ಆ ಕಾರಣಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೌರವಿಸಲ್ಪಟ್ಟ ಮಹಿಳೆ.  
ಎಂದಿನಂತೆ ಓದಿ, ಪ್ರತಿಕ್ರಯಿಸಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಈ ವಾರದ ಸಂಪಾದಕಿ ಅಮಿತಾ ರವಿಕಿರಣ ಅವರ ಪರವಾಗಿ).

********************

ದುಲೀಪ್ ಸಿಂಹ ಮತ್ತು ರಾಜಕುಮಾರಿ ಸೋಫಿಯಾ (ಚಿತ್ರಕೃಪೆ: ವಿವಿಧ ಅಂತರ್ಜಾಲತಾಣಗಳು)
೨೦ನೇ ಶತಮಾನದ ಆದಿಯಲ್ಲಿ ಇಂಗ್ಲೆಂಡ್ ದೇಶದ ಮಹಿಳೆಯರು ಮೂಲಭೂತ ಮತ್ತು ಮತದಾನದ ಹಕ್ಕು ಪಡೆಯಲು ನಡೆಸಿದ ಚಳುವಳಿಗಳಿಗೆ (Suffragette Movement) ಹೋರಾಡಿದ ಭಾರತ ಮೂಲದ ರಾಜಕುಮಾರಿ ಸೋಫಿಯಾ.  ಈಕೆ, ಭಾರತದ ಮತ್ತು ಇಂಗ್ಲೆಂಡಿನ ಶ್ರೀಮಂತ ಕುಟುಂಬದ ಆಶ್ರಯದಲ್ಲಿ ಬೆಳೆದರೂ ಅವಳ ಹೋರಾಟ ರಾಜಕೀಯ ಚಟುವಟಿಕೆಯಲ್ಲೇ ಇತ್ತು.

ಇವಳ ತಂದೆ ಪಂಜಾಬಿನ ಕೊನೆಯ ಮಹಾರಾಜ ದುಲೀಪ್ ಸಿಂಗ್. ಪಂಜಾಬಿನ “ಸಿಂಹ” ಮಹಾರಾಜ ರಂಜಿತ್ ಸಿಂಗ್‍ರ (೧೭೮೦-೧೮೩೯) ನಿಧನವಾದಮೇಲೆ ಆ ಪಟ್ಟಕ್ಕೇರಲು ಅನೇಕರು ಹೋರಾಡಿ, ಕೊನೆಗೆ ಐದು ವರ್ಷದ ದುಲೀಪ್ ಸಿಂಗ್‍ನನ್ನು ರಾಜನನ್ನಾಗಿ ಮಾಡಿದರು. ಆದರೆ ರಾಜ್ಯದಲ್ಲಿ ಅಸ್ಥಿರತೆ ಇರುವುದನ್ನು ಕಂಡು ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಎರಡನೆಯ ಆಂಗ್ಲೋ-ಸಿಖ್ ಯುದ್ಧದ ನಂತರ ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಹತ್ತು ವರ್ಷದ ದುಲೀಪ್ ಸಿಂಗ್‍ನಿಂದ ಅವನ ಜಮೀನು ಮತ್ತು ಕೊಹಿನೂರ್ ವಜ್ರವನ್ನು ಕಸಿದುಕೊಂಡರು. ನಂತರ ದುಲೀಪ್ ಸಿಂಗನಿಗೆ ಪಿಂಚಿಣಿ ಕೊಟ್ಟು ಇಂಗ್ಲೆಂಡ್‍ನಲ್ಲಿ ವಾಸಮಾಡುವುದಕ್ಕೆ ಏರ್ಪಾಡು ಮಾಡಿದರು, ಇದಲ್ಲದೆ ಸಿಖ್ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ, ಬಹುಶಃ ಬಲವಂತದಿಂದ, ಮಾಡಿದರು.

ಸೋಫಿಯಾ ೮/೦೮/೧೮೭೬ ರಂದು ಲಂಡನ್ ನಗರದ ಬೆಲ್‍ಗ್ರೇವಿಯದಲ್ಲಿ ಜನಿಸಿದಳು. ತಾಯಿ, ಬಾಂಬ ಮುಲ್ಲರ್ (ಜರ್ಮನ್ ಮತ್ತು ಇಥಿಯೋಪಿಯಾ ಮೂಲದವಳು). ದುಲೀಪ್ ಸಿಂಗ್ ೧೮೬೩ರಲ್ಲಿ Suffolk ನಲ್ಲಿ ಇರುವ ೧೭,೦೦೦ ಎಕರೆ Elvedon Hall ಕೊಂಡಿದ್ದ (ಲಂಡನ್‍ನಲ್ಲಿದ್ದ India Office ನ ಸಹಾಯದಿಂದ). ಅವನ ಕುಟುಂಬ ಲಂಡನ್‍ನಿಂದ ಇಲ್ಲಿಗೆ ಬಂದು ನೆಲೆಸಿದರು. ರಾಣಿ ವಿಕ್ಟೊರಿಯಾ ದುಲೀಪ್ ಸಿಂಗನ ಮಕ್ಕಳನ್ನು, ಅದರಲ್ಲೂ ಸೋಫಿಯಾಳನ್ನು, ಸಾಕುಮಕ್ಕಳಂತೆ ಪರಿಗಣಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಳು.

೧೮೮೭ ರಲ್ಲಿ ಬಾಂಬ ಮುಲ್ಲರ್ ಜ್ವರದಿಂದ ನಿಧನಳಾದ ಮೇಲೆ, ದುಲೀಪ್ ಸಿಂಗ್ ೧೮೮೯ರಲ್ಲಿ ಪುನಃ ಮದುವೆಯಾದ. ಆದರೆ ಇವನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು ೧೮೮೦ ರಲ್ಲಿ Elvendon Hall ಬಿಡಬೇಕಾಯಿತು. ಸೋಫಿಯಾ ಹತ್ತು ವರ್ಷವಾಗಿದ್ದಾಗ, ದುಲೀಪ್ ಸಿಂಗ್ ತನ್ನ ಸಂಸಾರದ ಜೊತೆಯಲ್ಲಿ ಪಂಜಾಬಿಗೆ ಹಿಂತಿರುಗಲು ಮಾಡಿದ ಪ್ರಯತ್ನ ವಿಫಲವಾಯಿತು. ಹಡಗು ಏಡನ್ ತಲಪಿದಾಗ ಇವರ ಬಂಧನಕ್ಕೆ ಬ್ರಿಟಿಷ್ ಸರ್ಕಾರದ ವಾರಂಟ್ ಕಾದಿತ್ತು. ನಂತರ ದುಲೀಪ್ ಸಿಂಗ್ ಪ್ಯಾರಿಸ್ ನಗರದಲ್ಲಿ ಹಲವು ವರ್ಷಗಳನ್ನು ಕಳೆದು ೫೫ ನೇ ವಯಸ್ಸಿನಲ್ಲಿ ೧೮೯೩ರಲ್ಲಿ ನಿಧನನಾದ.

ರಾಣಿ ವಿಕ್ಟೋರಿಯಾ ಈ ಮಕ್ಕಳ ಯೋಗಕ್ಷೇಮವನ್ನು ಆಲಿಫಂಟ್ ಕುಟುಂಬಕ್ಕೆ ವಹಿಸಿ, ಬ್ರೈಟನ್ ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಮತ್ತು ವಾಸಕ್ಕೆ ರಾಜ ಮನೆತನದ ಹ್ಯಾಂಪ್ಟನ್ ಕೋರ್ಟ್ ಆವರಣದಲ್ಲಿ ಏರ್ಪಾಡು ಮಾಡಲಾಯಿತು.

ಸೋಫಿಯಾ ಮೊದಲ ಕೆಲವು ವರ್ಷಗಳು ಅತ್ಯಂತ ಆರಾಮದ ಜೀವನವನ್ನು ಕಳೆದಳು. ಆದರೆ ೧೯೦೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಬಡತನ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಅವಳ ಮನಸ್ಸು ಪರಿವರ್ತನೆ ಆಯಿತು.
೧೯೧೦ ರವರೆಗೂ ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳೂ ಇರಲಿಲ್ಲ. ಇದನ್ನು ಪ್ರತಿಭಟಿಸಿ "Women's Social and Political Union" (WSPU) ಅನ್ನುವ ಸಂಸ್ಥೆ ಎಮೆಲೀನ್ ಪ್ಯಾಂಕ್‍ಹರ್ಸ್ಟ್ (Emmeline Pankhurst) ಳ ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಸೋಫಿಯಾ ಈ ಚಳುವಳಿಯಲ್ಲಿ ಭಾಗವಹಿಸಿವುದಕ್ಕೆ ನಿರ್ಧರಿಸಿ, ಈ ಸಂಸ್ಥೆಯ ಸದಸ್ಯೆ ಆಗಿ ಅನೇಕ ರೀತಿಯಲ್ಲಿ ಸಹಾಯ ಮಾಡಿದಳು. ಸೋಫಿಯಾ ತಾನು ವಾಸವಾಗಿದ್ದ ಹ್ಯಾಂಪ್ಟನ್ ಕೋರ್ಟ್ ಹೆಬ್ಬಾಗಿಲಿನ ಮುಂದೆ ನಿಂತು The Suffragette ಪತ್ರಿಕೆಯ ಮಾರಾಟವನ್ನು ಸಹ ಮಾಡುತಿದ್ದಳು.

೧೯೧೦ ರಲ್ಲಿ ಲಂಡನ್ ನಗರದಲ್ಲಿ ನಡೆದ Black Friday ಪ್ರತಿಭಟನೆಯಲ್ಲಿ ೩೦೦ ಮಹಿಳೆಯರ ತಂಡದೊಂದಿಗೆ ಸೋಫಿಯಾ ಭಾಗವಹಿಸಿ ಕ್ಯಾಸ್ಟನ್ ಹಾಲ್‍ನಿಂದ ಪಾರ್ಲಿಮೆಂಟಿನವರೆಗೆ ನಡೆದು, ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು. ಆದರೆ ಅವರು ನಿರಾಕರಿಸಿದ್ದರಿಂದ ಈ ತಂಡ ಅಲ್ಲೇ ಕುಳಿತು ಘೋಷಣೆಗಳನ್ನು ಕೂಗುವುದಕ್ಕೆ ಪ್ರಾರಂಭಿಸಿದಾಗ ಪೊಲೀಸರು ಇವರ ಮೇಲೆ ಅತ್ಯಂತ ದೌರ್ಜನ್ಯದಿಂದ ವರ್ತಿಸಿದರು. ಈ ತಂಡದ ಅನೇಕರು ಗಾಯಗೊಂಡು ಇಬ್ಬರ ಮರಣಕ್ಕೂ ಪೋಲೀಸರ ದೌರ್ಜನ್ಯ ಕಾರಣವಾಯಿತು. ಅಂದಿನ ಗೃಹಮಂತ್ರಿ ಸರ್ ವಿನ್ಸ್ಟನ್ ಚರ್ಚಿಲ್ ಪೊಲೀಸರಿಗೆ ಉತ್ತೇಜನ ಕೊಟ್ಟರು ಅನ್ನುವ ಆರೋಪ ಸಹ ಬಂದಿತ್ತು.

೧೯೧೧ ರಲ್ಲಿ ನಡೆದ ಜನಗಣತಿಯಲ್ಲಿ (Census) ಭಾಗವಹಿಸುವುದಕ್ಕೆ ಸೋಫಿಯಾ ಮತ್ತು ಸಂಸ್ಥೆಯವರು ನಿರಾಕರಿಸಿದರು. ಸೋಫಿಯಾ ಜನಗಣತಿಯ ಚೀಟಿಯ ಮೇಲೆ ಈ ರೀತಿ ಬರೆದು ಚೀಟಿಯನ್ನು ಹಿಂತಿರಿಗಿಸಿದಳು (ಕೆಳಗೆ ಚಿತ್ರ ನೋಡಿ) - No Vote, No Census. As women do not count, they refuse to be counted; I have a conscientious objection to filling up this form.
No Vote, No Tax.

ಮತದಾನದ ಹಕ್ಕು ಇಲ್ಲದೆ ವರಮಾನ ತೆರಿಗೆ ಕೊಡುವುದಕ್ಕೂ ಸೋಫಿಯಾ ನಿರಾಕರಿಸಿದ್ದರಿಂದ ನ್ಯಾಯಾಲಯ £೧೨ ದಂಡ ಹಾಕಿತು. ಆದರೆ ಇದನ್ನು ಪ್ರತಿಭಟಿಸಿ ದಂಡವನ್ನು ಕಟ್ಟಲಿಲ್ಲವಾದ ಕಾರಣದಿಂದಿಂದ ಅವಳ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ಹರಾಜು ಮಾಡಲಾಯಿತು. ಆದರೆ WSPUನ ಕಾರ್ಯದರ್ಶಿ ಈ ಹರಾಜಿನಲ್ಲಿ ಭಾಗವಹಿಸಿ ಆಭರಣಗಳನ್ನು ಕೊಂಡುಕೊಂಡು ಸೋಫಿಯಾಗೆ ವಾಪಸ್ಸು ಕೊಟ್ಟರು.

೧೯೧೪ ನಲ್ಲಿ ಮೊದಲನೇ ಮಹಾಯುದ್ಧ ಪ್ರಾರಂಭವಾದ್ದರಿಂದ ಮಹಿಳೆಯರು ತಮ್ಮ ಹೋರಾಟವನ್ನು ನಿಲ್ಲಿಸಿ, ದೇಶದ ಮತ್ತು ಸರಕಾರದ ಪರವಾಗಿ ನಿಂತು ಸಹಾಯ ಮಾಡುವುದಕ್ಕೆ ಸಿದ್ದರಾದರು. ಲಕ್ಷಾಂತರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು, ಇವರ ಯೋಗಕ್ಷೇಮ ಕಾಯಲು ಸೋಫಿಯಾ ನೆರವಾಗಿ Red Cross ಸಂಸ್ಥೆಯ ಪರವಾಗಿ ಹಣ ಸಂಗ್ರಹಣೆ ಮಾಡಿದಳು. ಸ್ವತಃ ೧೯೧೫ರಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ರೆಡ್‍ಕ್ರಾಸ್ ನರ್ಸ್ ಆಗಿ ಸೇರಿ ಸೇವೆ ಮಾಡಿದಳು. ೧೯೧೮ ರಲ್ಲಿ YMCA War Emergency Committee ಯ ಕಾರ್ಯದರ್ಶಿಯಾಗಿ, ಲಂಡನ್‍ನಲ್ಲಿ “ಧ್ವಜ ದಿವಸ” (Flag Day) ನಡೆದ ನಂತರ “ಭಾರತೀಯ ದಿವಸ” (India day)ದ ಆಚರಣೆಯನ್ನು ಮಾಡಿ, ೫೦೦೦೦ ವಸತಿಗೃಹಗಳನ್ನು ಗಾಯಗೊಂಡ ಭಾರತೀಯ ಸೈನಿಕರು ವಾಸಕ್ಕೆ ಒದಗಿಸಲು ಕಾರಣಳಾದಳು.
ಯುದ್ಧ ಮುಗಿದ ಮೇಲೆ (೧೯೧೮) ಆಂಗ್ಲ ಸರ್ಕಾರ "The Representation of the People Act" ಕಾನೂನು ಜಾರಿಯಾದಾಗ ೩೦ ವರ್ಷ ಮೀರಿದ ಮಹಿಳೆಯರಿಗೂ, ೧೯೨೮ ರ “Franchise Act” ಕಾನೂನು ಹೊರಬಂದಾಗ ೨೧ ವರ್ಷ ಮೀರಿದ ಮಹಿಳೆಯರಿಗೂ ಮತದಾನದ ಹಕ್ಕು ಬಂತು.

ಈ ದೇಶದಲ್ಲಿ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಸ್ವಾತಂತ್ರಕ್ಕೆ ಕಾರಣ ಸೋಫಿಯಾ ಮತ್ತು ಅವಳ ಸಂಗಡಿಗರ ಹೋರಾಟವೇ ಕಾರಣ ಅನ್ನುವುದರಲ್ಲಿ ಸಂದೇಹವೇ ಇಲ್ಲ.
೨೨/೦೮/೧೯೪೮ ರಲ್ಲಿ ಸೋಫಿಯಾ ಬಕಿಂಗ್‍ಹ್ಯಾಮ್‍ಶೈರ್ನಲ್ಲಿರುವ ಪೆನ್ನ್ ಊರಿನಲ್ಲಿ ಅವಳ ತಂಗಿಯ ಮನೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ನಿಧನಾದಳು.  ರಾಜಕುಮಾರಿ ಸೋಫಿಯಾಳ ಅಂತ್ಯಕ್ರಿಯೆ Golders Green crematorium ನಲ್ಲಿ ೨೬/೦೮/೧೯೪೮ ರಂದು ನಡೆಯಿತು. ಅವಳ ಕೊನೆ ಇಚ್ಛೆ ತನ್ನ ಅಂತಕ್ರಿಯೆಯು ಸಿಖ್ ಪದ್ಧತಿಯಲ್ಲಿ ನಡೆಯಬೇಕೆಂದು ಇತ್ತು. 

ಸೋಫಿಯಾಗೆ ದೊರೆತ ಮರಣೋತ್ತರ ಮಾನ್ಯತೆಗಳು ಅನೇಕ; ರಾಯಲ್ ಮೇಲ್‍ನವರ "Votes for Women" ದಿನಾಚರಣೆಯಲ್ಲಿ ೧೫/೦೨/೨೦೧೮ ಸೋಫಿಯಾ The Suffragette ಪತ್ರಿಕೆಯನ್ನು ಮಾರುತ್ತಿರುವ ಚಿತ್ರವುಳ್ಳ ಅಂಚೆಚೀಟಿ (postage stamp) ಬಿಡುಗಡೆ ಆಯಿತು.

ಏಪ್ರಿಲ್ ೨೦೧೮ ರಲ್ಲಿ ಪಾರ್ಲಿಮೆಂಟ್ ಮುಂದಿರುವ ಕಂಬದ ಮೇಲೆ ಸೋಫಿಯಾಳ ಚಿತ್ರ ಮತ್ತು ಹೆಸರನ್ನು ಕೆತ್ತಲಾಗಿದೆ.
A Princess' Guide to Burning Issue ಅನ್ನುವ ಮಕ್ಕಳಿಗಾಗಿ ಮಾಡಿದ ನಾಟಕ ಅನೇಕ ಶಾಲೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
English Heritage ನವರು ಹ್ಯಾಂಪ್ಟನ್ ಕೋರ್ಟ್‍ನ ಹತ್ತಿರದ ಮನೆಯ ಮೇಲೆ ನೀಲಿ ಫಲಕದ (Blue Plaque) ಅನಾವರಣೆಯನ್ನು ೨೦೨೩ರಲ್ಲಿ ಮಾಡಿದರು.

ಸೋಫಿಯಾ ಜೀವನ ಚರಿತ್ರೆಯ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳು ಪ್ರಕಟವಾಗಿವೆ. ಉದಾಹರಣೆಗೆ, ಅನಿತಾ ಆನಂದ್ ಅವರ Suffragette Revolutionary (೨೦೧೫, ISBN ೯೭೮೧೪೦೮೮೩೫೪೫೬).

ಕೊನೆಯ ಮಾತು: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ೧೯೨೮ರಲ್ಲಿ, ಅದೂ ೨೧ ವರ್ಷಕ್ಕೆ ಮೀರಿದವರಿಗೆ ಮಾತ್ರ ದೊರೆತಿತ್ತು; ದಕ್ಷಿಣ ಭಾರತದಲ್ಲಿ, ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ೧೯೨೩ ರಲ್ಲಿಯೇ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದರ ಮಹತ್ವವನ್ನು ಇಲ್ಲಿ ಮರೆಯಬಾರದು.

- ರಾಮಮೂರ್ತಿ ಎಚ್ ಎನ್.
ಕಾಂಗಲ್‍ಟನ್, ಚೆಶೈರ್.

********************

ಕ್ರಿಕೆಟಿನ ತವರುಮನೆಯ ಕಳವಳಗಳು – ಯೋಗೀಂದ್ರ ಮರವಂತೆ

ಆಶಸ್ ಟ್ರೋಫಿ

ಆಶಸ್ ನಡೆಯುತ್ತಿರುವಾಗ ಕ್ರಿಕೆಟಿನ ಬಗ್ಗೆ ಮಾತನಾಡಿದರೆ, ಬೇಸಿಗೆಯ ಕ್ರಿಕೆಟ್ ಮಾಸ
ಮುಗಿದು ಮೂರು ತಿಂಗಳು ಕಳೆದ ಚಳಿಗಾಲದ ಇಂಗ್ಲೆಂಡಿನಲ್ಲಿ ವಿಷಯಾಂತರವೇನೂ
ಆಗಲಿಕ್ಕಿಲ್ಲ.  ಕಡುಚಳಿಯ ಪರೀಕ್ಷೆ ನಿರೀಕ್ಷೆಯಲ್ಲಿ ಮುಸುಕುಹೊದ್ದು ಮಲಗಿರುವ
ಇಂಗ್ಲೆಂಡಿನ  ಕ್ರಿಕೆಟ್ ಮೈದಾನಗಳಿಂದ  ಹದಿನೈದು ಸಾವಿರ ಕಿಲೋಮೀಟರು ದೂರದ ಬೆಚ್ಚನೆ
ಬಿಸಿಲಿನ ಆಸ್ಟ್ರೇಲಿಯದಲ್ಲಿ ಈ ಸಲದ ಆಶಸ್ ಸರಣಿ ಶುರು ಆಗಿದೆ. “ಆಶಸ್” ಆಂಗ್ಲ ಶಬ್ದದ
ಕನ್ನಡ ರೂಪ “ಬೂದಿ” ಎಂದಾದರೂ , ಈ ಎರಡು ತಂಡಗಳ ನಡುವೆ ನಡೆಯುವ  ಸ್ಪರ್ಧೆ  ಬೂದಿ
ಮುಚ್ಚಿದ ಕೆಂಡದಂತೆ ಯಾವಾಗಲೂ ನಿಗಿನಿಗಿ.  ಆದರೆ, ಸಾಂಪ್ರದಾಯಿಕ ಮತ್ತು ಕಲಾತ್ಮಕ
ಕ್ರಿಕೆಟಿನ ಹೆಮ್ಮೆಯ ಐದು ದಿನಗಳ ಟೆಸ್ಟ್ ಮಾದರಿಯಲ್ಲಿಯೇ  ವಿಶಿಷ್ಟ ಪರಂಪರೆ ಇರುವ
ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಪ್ರಸಕ್ತ ಹಣಾಹಣಿಯ ಮೊದಲ ಪಂದ್ಯ, ಎರಡೇ ದಿನಗಳಲ್ಲಿ
ಮುಗಿದು ಹೋಗಿ ಇತಿಹಾಸಪ್ರಿಯ ಆಂಗ್ಲರ  ಮಟ್ಟಿಗೆ ಕರಾಳ ಚರಿತ್ರೆಯಾಗಿ ದಾಖಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಗಳ ನಡುವಿನ ಮೊತ್ತಮೊದಲ
ಟೆಸ್ಟ್ ಪಂದ್ಯ ೧೮೭೭ರಲ್ಲಿ  ನಡೆದಿದ್ದರೂ , ಆಶಸ್ ಮಾದರಿಯ ಸರಣಿ ಶುರು ಆದದ್ದು
೧೮೮೨ರಲ್ಲಿ . ಲಂಡನ್ನಿನ ಓವಲ್ ಅಲ್ಲಿ ನೆಡೆದಿದ್ದ  ಆ ಪಂದ್ಯದಲ್ಲಿ ಇಂಗ್ಲೆಂಡ್
ಸೋತಿತ್ತು. ಸ್ಪೋರ್ಟಿಂಗ್ ಟೈಮ್ಸ್ ಪತ್ರಿಕೆ ಅಂದಿನ  ಸೋಲನ್ನು ಆಂಗ್ಲ ಕ್ರಿಕೆಟಿನ
ಸಾವೆಂದು  ಗೇಲಿ ಮಾಡಿತ್ತು. “ಆಂಗ್ಲ ಕ್ರಿಕೆಟಿನ ಶವಸಂಸ್ಕಾರ  ಮಾಡಲಾಗುತ್ತದೆ,
ಬೂದಿಯನ್ನು ಆಸ್ಟ್ರೇಲಿಯಾಕ್ಕೆ  ಒಯ್ಯಲಾಗುತ್ತದೆ ” ಎಂದು ಅಣಕು ಸಂತಾಪ ಸೂಚಿಸಿತ್ತು.
ಪತ್ರಿಕೆ ಪ್ರಕಟಿಸಿದ ಅಣಕು ಪದವನ್ನೇ ಬಳಸಿಕೊಂಡು ಆಗಿನ ಇಂಗ್ಲೆಂಡ್ ತಂಡದ  ನಾಯಕ,
ಮುಂದಿನ ತಿರುಗಾಟದಲ್ಲಿ “ಬೂದಿ”ಯನ್ನು ಮರಳಿ ತರುತ್ತೇವೆ ಎಂದು ಆಂಗ್ಲ ಕ್ರಿಕೆಟ್
ಪ್ರೇಮಿಗಳಿಗೆ ಭರವಸೆ ನೀಡಿದ್ದ. ೧೮೮೨ರ ಮೊದಲ ಸೋಲಿನ ನಂತರದ ಎಂಟು ಆಶಸ್ ಸರಣಿಗಳಲ್ಲಿ
ಇಂಗ್ಲೆಂಡ್ ನಿರಂತರ ಜಯಗಳಿಸಿತ್ತು.  ಜಿದ್ದು ಮತ್ತು ಮುಯ್ಯಿಗಳ ಸರಣಿ ಪಾರಂಪರಿಕ
ಸ್ಪರ್ಧೆಯಾಗಿ ಬೆಳೆಯಿತು ಮುಂದುವರಿಯಿತು. ಎರಡು ವರ್ಷಕ್ಕೊಮ್ಮೆ ನಡೆಯುವ  ಕ್ರಿಕೆಟ್
ಸರಣಿಯಲ್ಲಿ  ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳು ಉತ್ಸುಕತೆ ಆತಂಕದಲ್ಲಿ ಕಾಯುವ
ವಾತಾವರಣವನ್ನು ಹುಟ್ಟಿಸಿತು.

 ಕ್ರೀಡೆಯೊಂದರ ಕಲೆ ಕ್ಷಮತೆ ಕೌಶಲ ಸೇಡು ಪ್ರತಿಷ್ಠೆಗಳ ಪರಾಕಾಷ್ಠೆಗಳಿಗೆ
ಹೆಸರಾಗಿದ್ದ ಆಶಸ್ ನ ದೀರ್ಘ ಇತಿಹಾಸದ ಹೊಚ್ಚ ಹೊಸ ಪುಟವಾದ ಮೊನ್ನೆಮೊನ್ನಿನ ಸೋಲು
ಕ್ರಿಕೆಟಿನ ಹುಟ್ಟೂರಿನಲ್ಲಿ ಕ್ರಿಕೆಟಿನ ಪ್ರಸ್ತುತ ಪರಿಸ್ಥಿತಿಯ ಬಗೆಗಿನ
ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಅನಿರೀಕ್ಷಿತ ತಿರುವುಗಳು , ಊಹಿಸಲಾಗದ
ಫಲಿತಾಂಶಗಳ ಕಾರಣಕ್ಕೆ ಕೆಲವೊಮ್ಮೆ ಮನುಷ್ಯ ಜೀವನಕ್ಕೆ ಹೋಲಿಸಲ್ಪಡುವ ಕ್ರಿಕೆಟ್
ಪಂದ್ಯದಲ್ಲಿ  ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕಾದ  ಪಾಠ, ಭಗ್ನ ಹೃದಯಿಯ
ಯಾತನೆಗೆ ಹೋಲಿಸಬಹುದಾದ ಹತಾಶೆಯ ಅನುಭವ  ಸಾಮಾನ್ಯ ಆದರೂ ಮತ್ತೆ ಆ ಕಾರಣಗಳಿಗಾಗಿಯೇ
ಜನಾಕರ್ಷಣೆ ಪಡೆದಿರುತ್ತಿದ್ದ ಇಂಗ್ಲಿಷ್ ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಹೊಸ
ತಲೆಮಾರಿನ ಪ್ರೇಕ್ಷಕರನ್ನು  ಸೆಳೆಯುವಲ್ಲಿ ವಿಫಲ ಆಗುತ್ತಿದೆ. ಇಂಗ್ಲೆಂಡಿನ  ಜನರ
ನಿತ್ಯದ ಹರಟೆಯೊಳಗೆ ಸ್ಥಾನ ಪಡೆಯುವಲ್ಲಿ ಸೋಲುತ್ತಿದೆ. ಯುವಜನತೆಯ ಆಸಕ್ತಿ  ಮತ್ತು
ನೆನಪುಗಳಿಂದ ದೂರ ಆಗುತ್ತಿದೆ.  ಬೇಸಿಗೆಯಲ್ಲಿ ಕ್ರಿಕೆಟ್ ಪಂದ್ಯಗಳು ಹಿಂದಿಗಿಂತ
ಹೆಚ್ಚೇ ನಡೆದರೂ  ಕ್ರೀಡಾಂಗಣದ ಆಸನದಲ್ಲಿ ದಕ್ಷಿಣ ಏಷ್ಯಾ ಮೂಲದ ಪ್ರೇಕ್ಷಕರೇ
ಹೆಚ್ಚಾಗಿ ಕಾಣಿಸುವುದು ಸಾಮನ್ಯ ಆಗಿದೆ.

೭೦-೮೦ರ ದಶಕದಲ್ಲಿ ಜೆಫ್  ಬಾಯ್ಕಾಟ್ ಅಥವ ಇಯಾನ್ ಬೋಥಮ್ ರು ಇಂಗ್ಲೆಂಡಿನ
ಮನೆಮಾತಾಗಿದ್ದವರು, ಆ ಕಾಲದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ತಾರೆಯರಷ್ಟೇ ಜನಪ್ರಿಯತೆ
ಪಡೆದಿದ್ದವರು. ಆದರೆ ಪ್ರಸ್ತುತ ಇಂಗ್ಲೆಂಡ್ ತಂಡದ ನಾಯಕ ಅಥವಾ ಮುಖ್ಯ ಆಟಗಾರರ ಹೆಸರು
ಇಂಗ್ಲೆಂಡಿನ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಜೋ ರೂಟ್ ಎಲ್ಲಾದರೂ
ಬೀದಿಯಲ್ಲಿಯೋ ಅಂಗಡಿಯಲ್ಲಿಯೋ ಎದುರಾದರೆ ಹಸ್ತಾಕ್ಷರಕ್ಕೆ ದುಂಬಾಲು ಬೀಳುವುದು ಬಿಡಿ
ಗುರುತು ಹಿಡಿಯುವವರೇ ವಿರಳ ಇರಬಹುದು.  ಇಂಗ್ಲೆಂಡಿನಲ್ಲಿ ಹುಟ್ಟಿ ಬಲಿತ ,
ಇಂಗ್ಲಿಷರು ತಕ್ಕಡಿ ಹಿಡಿದು ಹೋದಲ್ಲೆಲ್ಲ ಬಿತ್ತಿ ಬೆಳೆದ ಕ್ರೀಡೆಯೊಂದು ಯಾಕೆ
ಅಸಡ್ಡೆಗೆ ಗುರಿ ಆಗುತ್ತಿರಬಹುದು ಎನ್ನುವುದರ ವಿಶ್ಲೇಷಣೆಯೂ ಆಶಸ್ ನ ಮೊದಲ ಪಂದ್ಯದ
ಅಪಮಾನಕರ ಸೋಲಿನಿಂದ , ಸ್ಟುಡಿಯೋದಲ್ಲಿ ಕುಳಿತು ಕ್ರಿಕೆಟನ್ನು ಚರ್ಚಿಸುವ ಬಿಳಿಕೂದಲ
ಗತಕಾಲದ ಇಂಗ್ಲಿಷ್ ಕ್ರೀಡಾ  ಪಂಡಿತರ ಕಾಮೆಂಟರಿಯೊಳಗೆ ಸೇರಿಕೊಂಡಿದೆ , ದಿನಪತ್ರಿಕೆಯ
ಮೂಲೆಯಲ್ಲಿ ಅಭಿಮತವಾಗಿ ಜಾಗ ಪಡೆದಿದೆ. ಆಂಗ್ಲರು ನಿಜವಾದ ಕ್ರಿಕೆಟ್ ಎಂದು ಕರೆಯುವ,
ಐದು ದಿನಗಳ ಟೆಸ್ಟ್ ಪಂದ್ಯಗಳು ಒಂದು ಕಾಲದಲ್ಲಿ ಉಚಿತವಾಗಿ ದೂರದರ್ಶನದಲ್ಲಿ
ಪ್ರಸಾರಗೊಳ್ಳುತ್ತಿದ್ದವು. ಆಶಸ್ ನ ವೀರೋಚಿತ ಸೋಲು ಗೆಲುವುಗಳು ಟಿವಿ ಇರುವ ಪ್ರತಿ
ಮನೆಯನ್ನೂ  ರೇಡಿಯೋ ಆಲಿಸುವ ಜೋಡಿ ಕಿವಿಗಳನ್ನೂ ಸುಲಭವಾಗಿ ತಲುಪುತ್ತಿದ್ದವು. ಈ
ಕಾಲದಲ್ಲಿ ಪ್ರಸಾರದ ಹಕ್ಕುಗಳನ್ನು ಚಂದಾ ನೀಡಬೇಕಾದ ಚಾನೆಲ್ ಗಳಿಗೆ ಮಾರಲಾಗಿದೆ.
ಕ್ರಿಕೆಟ್ ನಿಯಂತ್ರಣ ಮಂಡಳಿಗಳಿಗೆ ಅಲ್ಪಾವಧಿಯಲ್ಲಿ ಹಣ ಹರಿದು ಬರುವುದು
ಹೆಚ್ಚಿದೆಯಾದರೂ  ದೀರ್ಘಾವಧಿಯಲ್ಲಿ ಕ್ರಿಕೆಟಿನ ಜನಪ್ರಿಯತೆಯನ್ನು  ಕುಗ್ಗಿಸಿದೆ.
೨೦೧೯ರ ವಿಶ್ವಕಪ್ ಫೈನಲ್ಸ್ ಚಾನೆಲ್ ೪ರಲ್ಲಿ ಉಚಿತವಾಗಿ ಪ್ರಸಾರವಾಗಿದ್ದು , ತಮ್ಮ
ತಂಡ ಜಯಗಳಿಸಿದ್ದನ್ನು  ಇಂಗ್ಲೆಂಡಿನ ಉದ್ದಗಲಕ್ಕೆ  ಸಂಭ್ರಮಿಸಿದ್ದು , ಇಂಗ್ಲಿಷ್
ಮಣ್ಣಿನ ಕ್ರೀಡೆಗೆ ಸಿಕ್ಕ ಆತ್ಮೀಯತೆಯ ಕೊನೆಯ ಉದಾಹರಣೆ ಇರಬಹುದು.

ಹಾಗೆ ನೋಡಿದರೆ ಕ್ರಿಕೆಟ್  ಆಂಗ್ಲರ  ಕೈಬಿಟ್ಟು … ಆಂಗ್ಲರು  ಕ್ರಿಕೆಟಿನ ಕೈ
ಬಿಟ್ಟು  ದಶಕಗಳೇ  ಕಳೆದಿವೆ. ಇದು ಕ್ರಿಕೆಟಿಗೂ ಮತ್ತು ಅದರ ಅಳಿದುಳಿದ ಆಂಗ್ಲ
ಅಭಿಮಾನಿಗಳಿಗೂ ಬಹಳ ಬೇಸರದ  ವಿಷಯವೇನೂ  ಇರಲಿಕ್ಕಿಲ್ಲ. ಇಂಗ್ಲೆಂಡಿನಲ್ಲಿ ಈ  ಬಗ್ಗೆ
ಕಳವಳ ಪಡುತ್ತಿರುವುದಿದ್ದರೆ  ಅದು  “ಕ್ರಿಕೆಟಿನ  ತವರು ” ಎಂದು ಶತಮಾನದಿಂದ
ಕರೆಸಿಕೊಳ್ಳುತ್ತ  ಹೊಗಳಿಕೆ  ಪ್ರೀತಿ ಹೆಮ್ಮೆ ಮತ್ತು ಹೊಣೆಗಾರಿಕೆಯ  ಭಾರ ಹೊತ್ತ
ಲಾರ್ಡ್ಸ್  ಮೈದಾನ ಇರಬಹುದು .  ಲಾರ್ಡ್ಸ್  ನ ಪೆವಿಲಿಯನ್ ಗೆ ನೀವು ಭೇಟಿ
ನೀಡಿದ್ದರೆ ಆ ಐತಿಹಾಸಿಕ ಮೈದಾನದಲ್ಲಿ ಸಾಹಸ  ಮೆರೆದ  ಕ್ರಿಕೆಟಿಗರ  ಹೆಸರುಗಳ
ಫಲಕವನ್ನು ಗೋಡೆಗೆ   ತೂಗು  ಹಾಕಿದ್ದು ಗಮನಿಸಿರುತ್ತೀರಿ  , ಮತ್ತೆ ಅದರಲ್ಲಿ  ವರ್ಷ
ಕಳೆದಂತೆ ಆಂಗ್ಲರ  ಹೆಸರು ಕಡಿಮೆ  ಆಗುತ್ತಿರುವುದನ್ನೂ .  ಕಣ್ಣುಕುಕ್ಕುವ ಹಚ್ಚ
ಹಸಿರಿನ ಹುಲ್ಲಿನ ಹೊದಿಕೆಯ ಕೆಳಗೆ , ಮೆತ್ತಗೆ ಹೆಜ್ಜೆ  ಇಟ್ಟು ನಡೆಯುವ ಮತ್ತೆ
ಬೀಸುವ ತಂಗಾಳಿಗೆ  ಮೈ ಸೆಟೆದು ಪಟ ಪಟ ರೆಕ್ಕೆ ಬಡಿದು ಹಾರುವ  ಪಾರಿವಾಳಗಳ ಗುಂಪಿನ
ನೆರಳಲ್ಲಿ   ಮತ್ತು ಮೈದಾನವನ್ನು ಕೋಟೆಯಂತೆ ಸುತ್ತುವರಿದ ಹಳೆಯ ಕಟ್ಟಡಗಳು ,
ಪವಿಲಿಯನ್ ಮತ್ತು  ಡ್ರೆಸಿಂಗ್ ರೂಂಗಳ ಸುತ್ತಿನ ಕೋಟೆಯ ಒಳಗೆ  ಹುದುಗಿ  ಸೆರಗಿನ
ತುದಿಯನ್ನು ಬೆರಳಿಗೆ ಸುತ್ತುತ್ತ ಯೋಚಿಸುತ್ತಿರುವುದಿದ್ದರೆ  ಅದು  ಲಾರ್ಡ್ಸ್ ಮಾತ್ರ
ಇರಬಹುದು .

ಭಾರತದಲ್ಲಿ  ಮಣ್ಣಿನ ಆಟವಾದ  ಹಾಕಿಯನ್ನು ಹಿಂದೆ  ತಳ್ಳಿ   ಕ್ರಿಕೆಟ್
ಮೆರೆಯುವಂತೆ, ಇಂಗ್ಲೆಂಡಿನ ಕ್ರಿಕೆಟ್ ಮೈದಾನಗಳಲ್ಲಿನ  ಸಣ್ಣ ಪುಟ್ಟ ಚಪ್ಪಾಳೆ
ಶಿಳ್ಳೆಗಳನ್ನು ಮಿಕ್ಕಿಮೀರಿ  ಫುಟ್ಬಾಲ್ ರಗ್ಬಿಗಳ ಉನ್ಮಾದ ಉತ್ಸಾಹ
ಮುಗಿಲುಮುಟ್ಟುತ್ತದೆ . ಎಲ್ಲೆಂದರಲ್ಲಿ ಯಾವಾಗ ಬೇಕಾದರೂ ಅತಿ ಸುಲಭದಲ್ಲಿ ಕಡಿಮೆ
ಖರ್ಚಿನಲ್ಲಿ ಆಡಬಹುದಾದ  ಫುಟ್ಬಾಲ್  ಮಕ್ಕಳನ್ನು ಎಚ್ಚರದಲ್ಲೂ ಸ್ವಪ್ನದಲ್ಲೂ
ಕಾಡುತ್ತದೆ.  ಲೀಗ್  ಫುಟ್ಬಾಲಲ್ಲಿರುವ  ಅಪಾರ  ಹಣ , ಜನಪ್ರಿಯತೆ , ಜಾಹಿರಾತು
,ವ್ಯಾಪಾರೀ ತಂತ್ರ ಎಲ್ಲವೂ ಸೇರಿ  ಹೊಸ ಪ್ರೇಕ್ಷಕರನ್ನು ಸೇರಿಸಿಕೊಳ್ಳುತ್ತದೆ.
ಟಿವಿ, ಸಾಮಾಜಿಕ ಮಾಧ್ಯಮ , ಪಬ್ಬಿನಲ್ಲಿ ಶುಕ್ರವಾರ ಸಂಜೆಯ ಹರಟೆ ಹೀಗೆ ಎಲ್ಲೆಡೆಯೂ
ಹರಡುತ್ತದೆ.   ಜೆಂಟಲ್ ಮ್ಯಾನ್ ಗಳ ಆಟ ಎಂದು ಹೆಸರಾದ ಕ್ರಿಕೆಟ್  ಆಟದ ಈಗಿನ
ಇಂಗ್ಲಿಷ್ ಪ್ರೇಕ್ಷಕ ವರ್ಗದಲ್ಲಿ ಬಹುಪಾಲು ಜನರು ನಲವತ್ತು ಐವತ್ತು ವರ್ಷ ಮೇಲಿನವರು
ಅಂದರೆ ನಿಜವಾಗಲೂ ಪ್ರಬುಧ್ಧ  ವಯಸ್ಕ ಜೆಂಟಲ್ ಮ್ಯಾನ್ ಗಳು.

ಕ್ರೀಡೆ ಯಾವುದೇ ಇದ್ದರೂ , ಗತಕಾಲದ ಘಟನೆಗಳಿಂದಾಗಿ ಆಯಾ ಕ್ರೀಡೆಗೆ ತಕ್ಕಂತೆ  ಕೆಲವು
 ದೇಶಗಳ  ವಿರುದ್ಧ  ಆಡುವಾಗ  ತಾವು ಗೆಲ್ಲಲೇ  ಬೇಕೆಂದು  ಇಂಗ್ಲಿಷ್
ಕ್ರೀಡಾಭಿಮಾನಿಗಳು  ಹಾರೈಸುತ್ತಾರೆ. ಕ್ರಿಕೆಟಿನ  ಮಟ್ಟಿಗೆ  ಅದು  ಆಸ್ಟ್ರೇಲಿಯದ
ವಿರುದ್ಧ , ಫುಟ್ಬಾಲ್  ಆದರೆ  ಜರ್ಮನಿ, ಫ್ರಾನ್ಸ್ ಗಳ  ವಿರುದ್ಧ. ತಮ್ಮ ಬದ್ದ
ವೈರಿಯ ಜೊತೆ ಒಂದು ವೇಳೆ ಸೋತರೆ,  ವಿಶೇಷ ಟಿಪ್ಪಣಿ ಅಥವಾ ವ್ಯಂಗ್ಯದಲ್ಲೇ  ಪಂದ್ಯ
ಮತ್ತು ವಿಶ್ಲೇಷಣೆ  ಎರಡನ್ನೂ ಮುಗಿಸುತ್ತಾರೆ.  ಈ ಹಿಂದೊಮ್ಮೆ  ಇಂಗ್ಲಂಡ್
ಆಸ್ಟ್ರೇಲಿಯಾಕ್ಕೆ ಸೋತಾಗ ಬೇಸರಗೊಂಡ ನನ್ನ ಕಚೇರಿಯ  ಕ್ರಿಕೆಟ್ ಅಭಿಮಾನಿ,
ಕ್ರಿಕೆಟ್  ಮಟ್ಟಿಗೆ ಆಸ್ಟ್ರೇಲಿಯಾಕ್ಕೆ ಎಷ್ಟು  ಅದೃಷ್ಟ  ಇದೆಯೋ  ತಮ್ಮ   ದೇಶಕ್ಕೆ
 ಅಷ್ಟೇ ಪಾಲಿನ  ದುರಾದೃಷ್ಟ   ಇದೆ  ಎಂದು ಸಮರ್ಥನೆ ನೀಡಿದ್ದ ! ಹಾಗಂತ ಇಂತಹ ಹಲವು
ಸೋಲುಗಳನ್ನು ಅರಗಿಸಿಕೊಂಡಿರುವ ಲಾರ್ಡ್ಸ್ ಮೈದಾನ ಇದನ್ನು  ತನ್ನ ದುರಾದೃಷ್ಟ ಎಂದೇ
ತಿಳಿಯಬಹುದು.  ಲಾರ್ಡ್ಸ್ ನಲ್ಲಿ ನಡೆದ ೨೦೦೨ ರ  ನಾಟ್ ವೆಸ್ಟ್  ಸರಣಿಯ  ಕೊನೆಯ
ಪಂದ್ಯದಲ್ಲಿ  ಭಾರತ  ಇಂಗ್ಲೆಂಡನ್ನು ವೀರೋಚಿತವಾಗಿ ಹೋರಾಡಿ ಸೋಲಿಸಿತ್ತು. ಯುವರಾಜ್
ಮತ್ತು  ಕೈಫ್ ಅಂದಿನ ಪಂದ್ಯದ  ಜೋಡಿ ಹೀರೋಗಳು . ಈ ಪಂದ್ಯವನ್ನು  ಭಾರತ ತಂಡದ
ಡ್ರೆಸಿಂಗ್ ರೂಮಿನ ಬಾಲ್ಕನಿಯಲ್ಲಿ ನಿಂತು ಉಗುರು ಕಚ್ಚುತ್ತ ನೋಡಿ ಮುಗಿಸಿದ್ದ ಆಗಿನ
 ನಾಯಕ  ಗಂಗೂಲಿ , ತಡೆಯಲಾಗದ ಉದ್ವೇಗ  ಸಂತೋಷದಲ್ಲಿ  ಬಾಲ್ಕನಿಯಲ್ಲೇ  ನಿಂತು
ಎಲ್ಲರೆದುರೇ   ಅಂಗಿಯನ್ನು  ಕಳಚಿ  ಕೈಯಲ್ಲಿ ಹಿಡಿದು ಗರಗರ  ತಿರುಗಿಸಿದ್ದು . ಈಗಲೂ
 ಆ  ಕಾರಣಕ್ಕೆ  ಅತಿಥಿ ತಂಡದ  ಬಾಲ್ಕನಿಯನ್ನು ‘ಗಂಗೂಲಿ  ಬಾಲ್ಕನಿ ‘ ಎಂದೇ
ಅನೌಪಚಾರಿಕವಾಗಿ ಕರೆಯುತ್ತಾರೆ . ಎಷ್ಟೇ ಆನಂದ  ಆಗಲಿ    ಇಂಗ್ಲೆಂಡಿನ  ಕ್ರಿಕೆಟಿನ
ಸಂಪ್ರದಾಯಸ್ಥ   ಪ್ರೇಕ್ಷಕರು   ಹೆಚ್ಚೆಂದರೆ  ಕೂತಲ್ಲೇ ,ಅಲ್ಲದಿದ್ದರೆ ಎದ್ದು
ನಿಂತು ಕೈ  ತಟ್ಟಿ  ಅತಿಯಾದ ಹರ್ಷವನ್ನು ಸೂಚಿಸುವವರು , ಕ್ರಿಕೆಟಿನ “ಜೆಂಟಲ್
ಮ್ಯಾನ್ ” ಪರಂಪರೆಯನ್ನು ಮುರಿದ ಆ ಘಟನೆಗೆ ಬೆರಗಾಗಿದ್ದರು .  ಲಾರ್ಡ್ಸ್ ಮೈದಾನವಂತೂ
 ಆಂಗ್ಲ ಸಂಪ್ರದಾಯ ರಿವಾಜನ್ನು ಮೀರಿದ ಭಾರತೀಯನ ನಡವಳಿಕೆಗೆ ನಾಚಿ ಮುದ್ದೆ
ಆಗಿರಬಹುದು. ಇದೇ  ಮೈದಾನದಲ್ಲಿ ನಡೆದ ಇನ್ನೊಂದು  ಪಂದ್ಯದಲ್ಲಿ , ಆಸ್ಟ್ರೇಲಿಯ
ತಂಡದ  ರೋಚಕ  ಗೆಲುವನ್ನು ಸಂಭ್ರಮಿಸಲು   ಶೇನ್   ವಾರ್ನ್  ಕೂಡ  ಅತಿಥಿ ತಂಡದ
ಬಾಲ್ಕನಿಯಲ್ಲಿ  ಗಂಗೂಲಿಯಂತೆ  ಅಂಗಿ  ಕಳಚಿ  ಎಸೆದಿದ್ದ  . ಆಮೇಲೆ   ಕೆಲವರು ಈ
ಬಾಲ್ಕನಿಯನ್ನು  ‘ವಾರ್ನ್  ಬಾಲ್ಕನಿ’ಯಂತಲೂ ಕರೆಯತೊಡಗಿದ್ದರು .

ಹೀಗೆ ಕ್ರಿಕೆಟ್ ಚರಿತ್ರೆಯ ಮಾಹಾಸಂಪುಟವನ್ನು ತನ್ನೊಳಗೆ ಹುದುಗಿಸಿಕೊಂಡಿರುವ
ಲಾರ್ಡ್ಸ್ ಗೆ ಇಂಗ್ಲೆಂಡಿನ ಚರಿತ್ರೆಯಲ್ಲಿಯೂ  ವಿಶಿಷ್ಟ  ಪಾಲುದಾರಿಕೆ ಇದೆ.
ಇತಿಹಾಸದ ಜೊತೆಗೆ   ಸಣ್ಣ  ಸಂಬಂಧ  ಹೊಂದಿದ  ವಸ್ತುವನ್ನೂ  ವಿಷಯವನ್ನೂ
ವೈಭವೀಕರಿಸಿ ಪ್ರವಾಸೋದ್ಯಮದಲ್ಲಿ  ಸೇರಿಸಿಕೊಳ್ಳುವ  ಇಂಗ್ಲೆಂಡಿನಲ್ಲಿ  ,
ಕ್ರಿಕೆಟಿನ ಜನಪ್ರಿಯತೆ  ಕುಗ್ಗಿದ್ದರೂ   ಲಂಡನ್ ಪ್ರವಾಸೋದ್ಯಮದ ನಕ್ಷೆಯಲ್ಲಿ
ಲಾರ್ಡ್ಸ್ ಮೈದಾನಕ್ಕೆ  ವಿಶೇಷ ಗುರುತು ಇದೆ. ಈ ಗುರುತಿನ ಬೆನ್ನು ಹಿಡಿದು  ದುಬಾರಿ
ಎಂದು ತೋರುವ ಟಿಕೇಟು ಪಡೆದು ಮೈದಾನದ ಒಳ ನಡೆದರೆ  ಅಲ್ಲೊಬ್ಬ   ಗೈಡ್   ಲಾರ್ಡ್ಸ್
ಒಳಗೆಲ್ಲ  ಸುತ್ತಾಡಿಸಿ   ಗೋಡೆ ಫಲಕ ಮೈದಾನ ಕಂಬ ಕಿಟಕಿಗಳ ಇತಿಹಾಸ ಕಥೆ  ಹೇಳಿ
ನಿಮ್ಮನ್ನು ರಂಜಿಸುತ್ತಾನೆ. ಮತ್ತೆ  ಲಾರ್ಡ್ಸ್  ಒಳಗಿನ  ಅಂಗಡಿಯಲ್ಲಿ  ನಮ್ಮ  ನಮ್ಮ
 ರುಚಿಗೆ ಮತ್ತು  ಕಿಸೆಗೆ  ತಕ್ಕಂತೆ  ದೊರೆಯುವ ಸ್ಮರಣಿಕೆಗಳ ಕಡೆಗೂ ಗಮನ
ಸೆಳೆಯುತ್ತಾನೆ . ಲಾರ್ಡ್ಸ್ ಮೈದಾನಕ್ಕೆ ಇನ್ನಷ್ಟು ಮುಜುಗರ ಹುಟ್ಟಿಸುತ್ತಾನೆ.
ಲಾರ್ಡ್ಸ್ ನ ಹಳೆಯ ವೈಭವನ್ನು ಮೆಲುಕು ಹಾಕುತ್ತ ಗೈಡನ ಹಿಂದೆ  ಕೈ ಕಟ್ಟಿಕೊಂಡು
ದೂರದೂರದ ಪ್ರವಾಸಿ ಕ್ರಿಕೆಟ್ ಪ್ರೇಮಿಗಳು ಹಿಂಬಾಲಿಸುವಾಗ  ಲಾರ್ಡ್ಸ್ ಒಂದು
ನಿಟ್ಟುಸಿರು ಬಿಡುತ್ತದೆ, ಕ್ಯಾಮೆರ ಹಿಡಿದು ಮೈದಾನದ ವಿವಿಧ ದಿಕ್ಕುದೆಸೆಗಳ ಭಂಗಿಗಳ
ಛಾಯಾಚಿತ್ರ ತೆಗೆಯ ಹೊರಟವರಿಗೂ ಲಾರ್ಡ್ಸ್ ಮನದುಂಬಿ ನಕ್ಕಿದ್ದನ್ನು ಕ್ಲಿಕ್ಕಿಸುವುದು
 ಸಾಧ್ಯ ಆಗಲಿಕ್ಕಿಲ್ಲ . ಪ್ರೇಮಿಗಳಿಗೆ  ಕಾಶ್ಮೀರದ  ಕಣಿವೆಯಲ್ಲೋ ,
ಸ್ವಿಜರ್ಲ್ಯಾಂಡಿನ  ಹಿಮ ಶಿಖರದಲ್ಲೋ  ಸಿಗುವ ರೋಮಾಂಚನವನ್ನು ಲಾರ್ಡ್ಸ್ ಮೈದಾನ
ಕ್ರಿಕೆಟ್  ಆಟಗಾರರಿಗೆ ,  ಪ್ರೇಕ್ಷಕರಿಗೆ  ನೀಡುತ್ತಲೇ ಬಂದಿದೆ.  ಕ್ರಿಕೆಟ್
ಆಟಗಾರರು  ಪಂದ್ಯವೊಂದರಲ್ಲಿ ಶತಕವನ್ನೋ  ಅಥವಾ  ಐದು  ವಿಕೆಟುಗಳನ್ನೋ  ಪಡೆದು
ಅಲ್ಲಿನ ಶಾಶ್ವತ ಫಲಕದಲ್ಲಿ  ತಮ್ಮ  ಹೆಸರು  ಸೇರಿದರೆ  ತಮ್ಮ ಕ್ರೀಡಾ ಜನುಮಕ್ಕೆ
ಮೋಕ್ಷ  ಸಿಕ್ಕಿದವರಂತೆ  ಖುಶಿ  ಪಡುತ್ತಾರೆ . ಕ್ರಿಕೆಟಿನ  ಅಪ್ಪಟ  ಪ್ರೇಮಿಗಳು
ಲಾರ್ಡ್ಸ್ ಅಲ್ಲಿ ಕುಳಿತು  ಒಂದು  ಪಂದ್ಯವನ್ನಾದರು  ನೋಡಬೇಕೆಂದು  ಕನಸು
ಕಾಣುತ್ತಾರೆ. ಕೋಟ್ಯಾಂತರ ಜನರ ತಲೆಯಲ್ಲಿ ಗುಂಯ್ ಗುಂಯ್ ಗುಟ್ಟುವ  ಇಂತಹ ಕನವರಿಕೆಗೆ
 ತಾನೇ ಕಾರಣ  ಎನ್ನುವ ಹೆಮ್ಮೆಯಲ್ಲಿದ್ದ ಲಾರ್ಡ್ಸ್ , ತವರಿನ ತಂಡದ ಕಳಪೆ ಸಾಧನೆ,
ವಿಮುಖರಾದ ಅಭಿಮಾನಿಗಳು ಮತ್ತೆ ಕರಗುತ್ತಿರುವ ಆಸಕ್ತಿ ಜನಪ್ರಿಯತೆಗಳಿಂದ
ಸೊರಗಿಹೋಗಿದೆ  .

ಇಂಗ್ಲೆಂಡಿನ ಕ್ರಿಕೆಟ್ ಮತ್ತೆ ತನ್ನ ವೈಭವದ ದಿನಗಳನ್ನು ಮತ್ತು ಯಶಸನ್ನು
ಕಂಡುಕೊಳ್ಳುತ್ತದೋ ಇಲ್ಲವೋ , ಹೊಸ ಕ್ರಿಕೆಟ್ ಹೀರೋಗಳ ಫೋಟೋಗಳು ಚಿಣ್ಣರ ಬ್ಯಾಟುಗಳ
ಮೇಲೆ, ಶಾಲಾ  ಪುಸ್ತಕದ ಒಳಪುಟಗಳಲ್ಲಿ  ಅವಿತು  ಮಂದಹಾಸ ಬೀರುತ್ತವೋ ಇಲ್ಲವೋ ಆದರೆ
ಕ್ರಿಕೆಟ್ ಎನ್ನುವುದು ದೇಹ ಮನಸುಗಳಿಗೆ ಉಲ್ಲಾಸ ಆರೋಗ್ಯ ತರುವ   ಕ್ರೀಡೆಯಾಗಿ
ಉಳಿಯಲಿ ಎಂದು  ಕ್ರಿಕೆಟಿನ ತವರು  ಆಶಿಸುತ್ತಿರಬಹುದು.  ಜನಪ್ರಿಯತೆಯ
ಉತ್ತುಂಗದಲ್ಲಿರುವ ಫುಟ್ಬಾಲ್ ,   ಕ್ರೀಡೆಯ ಆಯ ಆಕಾರ ಗಾತ್ರವನ್ನು ಮೀರಿ ಬೆಳೆದ
ಬಲಿಷ್ಠ ದೊಡ್ಡ ಉದ್ಯಮವಾದ  ಹೊತ್ತಿನಲ್ಲಿ  , ಕ್ರಿಕೆಟ್ ಕೂಡ ಶುದ್ಧ ಮಾರುಕಟ್ಟೆಯಾಗಿ
ಬದಲಾಗುತ್ತಿರುವುದು,  ಇಂಗ್ಲೆಂಡ್ ನ ಮೈದಾನಗಳಲ್ಲಿ ಕ್ರಿಕೆಟನ್ನು ಆಸ್ವಾದಿಸುವ
ಆಂಗ್ಲ ಪ್ರೇಕ್ಷಕರು ಬಹಳ ಕಡಿಮೆ ಇದ್ದರೂ ಜಗತ್ತಿನ ಮೈದಾನದಲ್ಲಿ ಕ್ರಿಕೆಟ್
ದಿನನಿತ್ಯದ ವ್ಯಾಪಾರವಾಗಿ ಬಹಳ ಬೇಗ ಬೆಳೆಯುತ್ತಿರುವುದು , ಲಾರ್ಡ್ಸ್ ನ ಕಳವಳವನ್ನು
ಹೆಚ್ಚಿಸುತ್ತಿರಬಹುದು. ಇಷ್ಟರಲ್ಲೇ  ಕ್ರಿಕೆಟಿನ ತವರುಮನೆಯ ಮೊದಮೊದಲಿನ ಕಸಿವಿಸಿ
ಮುನಿಸುಗಳು  ಬೇಸರವೂ ಆಗಿ ಪರಿವರ್ತನೆ ಹೊಂದಿರಬಹುದು  . ಲಾರ್ಡ್ಸ್ ನ ಮೋಹಕ ಹಸಿರು
ಸೆರಗಿನ ತುದಿಯಲ್ಲಿ ಗಂಟುಗಳು ಒಂದು ಎರಡು ಮೂರು .. ಇನ್ನೂ ಹೆಚ್ಚಿರಬಹುದು.

ಪ್ರೆಸ್ಟನ್ ಭಾರತೀಯ ನೃತ್ಯ ಪರಂಪರೆ: ಭರತನಾಟ್ಯ – ಶಿಲ್ಪಾ ಜಗದೀಶ್

ಸಹೃದಯಿ ಅನಿವಾಸಿ ಬಳಗಕ್ಕೆ ನಮಸ್ಕಾರ.  ಪ್ರೆಸ್ಟನ್ನಿನ ಕುಚಿಪುಡಿ ನೃತ್ಯಗಾತಿಯರ ಬಗ್ಗೆ ಮುಂಚೆಯೇ ಬರೆದಿದ್ದೆ. ಅದೇ ಥೀಮನ್ನು ಮುಂದುವರೆಸುತ್ತ, ಇಲ್ಲಿನ ಭರತನಾಟ್ಯದ ತರಗತಿಗಳನ್ನು ಪರಿಚಯಿಸುತ್ತಿರುವೆ, ಆದರೆ ಈ ಬಾರಿ ಸ್ವತಃ ಅಲ್ಲಿ ಉತ್ಸಾಹಿ ವಿದ್ಯಾರ್ಥಿನಿಯಾಗಿರುವ ಶಿಲ್ಪಾ ಜಗದೀಶ್ ಅವರ ಮೂಲಕ. ಎಂದಿನಂತೆ ಓದಿ, ಪ್ರತಿಕ್ರಯಿಸಿ; ಮೊದಲ ಬಾರಿಗೆ ಅನಿವಾಸಿಗೆ ಬರೆಯುತ್ತಿರುವ ಶಿಲ್ಪಾ ಅವರನ್ನು ಪ್ರೋತ್ಸಾಹಿಸಿರೆಂದು ಕೋರುವ - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
*****************************************

ಮೈಸೂರಿನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದು, ಈಗ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಂಗ್ಲಂಡಿನಲ್ಲಿ ನೆಲೆಸಿರುವ ಶಿಲ್ಪಾ ಜಗದೀಶ್ ವೃತ್ತಿಯಿಂದ ಸಂಧಿವಾತಶಾಸ್ತ್ರ (Rheumatologist) ವೈದ್ಯೆ ಮತ್ತು ಪ್ರವೃತ್ತಿಯಿಂದ ಭರತನಾಟ್ಯ ವಿದ್ಯಾರ್ಥಿನಿ. ಓದುವ ಮತ್ತು ಆಗಾಗ ಬರೆಯುವ ಗೀಳು ತಂದೆಯಿಂದ ಬಂದದ್ದು ಎಂದು ಅವರ ನಂಬಿಕೆ.

*****************************************
ಪ್ರೆಸ್ಟನ್ ಭಾರತೀಯ ನೃತ್ಯ ಪರಂಪರೆ, ಭಾಗ ೨: ಭರತನಾಟ್ಯ 

ಭರತಮುನಿ ವಿರಚಿತ ನಾಟ್ಯಶಾಸ್ತ್ರ ಭಾರತೀಯ ಕಲೆಗಳ ಮೂಲಗ್ರಂಥ. ಅದನ್ನು ಆಧರಿಸಿ ಪ್ರಚಲಿತವಾಗಿರುವ ಭಾರತೀಯ ನೃತ್ಯಪರಂಪರೆಯಲ್ಲಿ ಭರತನಾಟ್ಯ ಒಂದು ಪ್ರಸಿದ್ಧ ಪ್ರಕಾರ.

ಭರತನಾಟ್ಯದ ನಾಲ್ಕು ಪ್ರಸಿದ್ಧ ಶೈಲಿಗಳಲ್ಲಿ ಮೈಸೂರು ಶೈಲಿಯೂ ಒಂದು. ಕಲಾಕ್ಷೇತ್ರ, ಪಂದನಲ್ಲೂರು ಮತ್ತು ತಂಜಾವೂರು ಶೈಲಿಗಳು ಭರತನಾಟ್ಯದ ಉಗಮ ಸ್ಥಾನವಾದ ತಮಿಳುನಾಡಿನಲ್ಲಿ ಉದಯಿಸಿದವು.

ಅಂದಿನ ಕಾಲದಲ್ಲಿ ರಾಜಾಶ್ರಯದಲ್ಲಿ ಏಳಿಗೆ ಪಡೆದ ಭರತನಾಟ್ಯ ಇಂದು ಆಸಕ್ತ ಗುರುಗಳಿಂದ ಅಭಿವೃದ್ಧಿ ಹೊಂದುತ್ತಿದೆ.

ಪ್ರೆಸ್ಟನ್ನಿನ ಗುಜರಾತ್ ಹಿಂದೂ ಸೊಸೈಟಿಯ ದೇವಸ್ಥಾನದಲ್ಲಿ ಭರತನಾಟ್ಯ ಕಲಿಸುತ್ತಿರುವ ಗುರು ಡಾ|| ಸ್ವಾತಿ ರಾವುತ್ ನನ್ನ ಗುರುಗಳು. ಬುಧವಾರ ಗೂಧೂಳಿಯ ಸಮಯದಲ್ಲಿ (ಸಾಯಂಕಾಲ) ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳ ಆಸಕ್ತಿ ಅರಿತು ಪೋಷಿಸುವುದಲ್ಲಿ ಅವರು ಕರಗತರು. ಪ್ರೆಸ್ಟನ್ ಅಲ್ಲದೆ ವಿಗನ್ ಮತ್ತು ಲಿವರ್ಪೂಲ್‍ನಲ್ಲಿಯೂ ಅವರು ಭರತನಾಟ್ಯ ಕಲಿಸುತ್ತಾರೆ. ಕಳೆದ ಎರಡು ದಶಕಗಳಿಂದ ಈ ನೃತ್ಯ ಪ್ರಕಾರದ ಏಳಿಗೆಗೆ ಅವಿರತ ಶ್ರಮಿಸಿದ್ದಾರೆ. ಸ್ವಾತಿ ಡಾನ್ಸ್ ಅಕಾಡೆಮಿ ಕಟ್ಟಿ ತಾರತಮ್ಯವಿಲ್ಲದೆ ಎಲ್ಲಾ ವಯಸ್ಸಿನ ಶಿಷ್ಯರಿಗೂ ನಾಟ್ಯಸುಧೆ ಉಣಿಸುತಿದ್ದಾರೆ. ಶಿಷ್ಯರ ಸರ್ವಾoಗೀಣ ವ್ಯಕ್ತಿತ್ವ ಅಭಿವೃದ್ಧಿಗೆ ಪೂರಕ ವಾತಾವರಣ ತರಗತಿಗಳಲ್ಲಿ ಇರುತ್ತದೆ.

ನೃತ್ಯಕ್ಷೇತ್ರದ ಹಲವು ಉಪಾಧಿಗಳು ಅವರನ್ನರಸಿ ಬಂದಿವೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಅವರಿಗೆ ಅನ್ವರ್ಥ. ಪಂದನಲ್ಲೂರು ಬನಿಯೊಂದಿಗೆ ಕೊಂಚ ಕಲಾಕ್ಷೇತ್ರ ಮಿಳಿತವಾಗಿದೆ ನಮ್ಮ ಕಲಿಕೆಯಲ್ಲಿ. ಒಂದು ನೃತ್ಯ ಪ್ರಕಾರ ಕಲಿಯುವುದೇ ಜೀವಮಾನದ ಸಾಧನೆ ಎಂದು ತಿಳಿದಿದ್ದ ನನಗೆ ನಮ್ಮ ಗುರುಗಳು ಎರಡು ಭರತನಾಟ್ಯ ಶೈಲಿಗಳೊಂದಿಗೆ ಮೋಹಿನಿಯಾಟ್ಟಮ್ ಸಹ ಕಲಿತಿದ್ದಾರೆಂದು ತಿಳಿದಾಗ ಅಚ್ಚರಿಯಾಯಿತು ಹಾಗೆ ಗೌರವವು ದುಪ್ಪಟ್ಟಾಯಿತು. ನೃತ್ಯಕ್ಷೇತ್ರದಲ್ಲಿ ಗುರು ಪರಂಪರೆ ಇನ್ನೂ ಚಾಲ್ತಿಯಲ್ಲಿದೆ.

ನೃತ್ಯ ಕಲಿಕೆಗೆ ನನ್ನ ಪ್ರವೇಶ ಬಹಳ ತಡವಾಗಿಯೇ ಆಯಿತೆಂದು ಹೇಳಬಹುದು. ಒಂಬತ್ತನೆ ತರಗತಿಯ ಕೊನೆಯಲ್ಲಿ ಪುತ್ತೂರಿನ ನಮ್ಮ ಮನೆಯ ಬಳಿ ಹೊಸ ಭರತನಾಟ್ಯ ಶಾಲೆ ಶುರುವಾಯಿತು. ಕುಂಟೇಬಿಲ್ಲೆ, ಥ್ರೋ ಬಾಲ್ ಅಡಿ ಮಣ್ಣಿನ ಶಿಲ್ಪದಂತೆ ಮನೆಗೆ ಬರುವ ನಮ್ಮನ್ನು ಈ ಶಾಲೆಗೆ ಸೇರಿಸಿದರು.

ಎಂಟನೇ ಮತ್ತು ಒಂಬತ್ತನೇ ವರ್ಗದಲ್ಲಿ ಶಾಲಾ ನೃತ್ಯದಿಂದ ನಿನಗೆ ಬರುವುದಿಲ್ಲ ಎಂದು ಹೊರದೂಡಿಸಿಕೊಂಡಿದ್ದ ನನಗೆ, ಕಲಿಯೋಣ ಎಂಬ ಆಸಕ್ತಿ ಇದ್ದರೂ ಅನುಕೂಲ ಇರಲಿಲ್ಲ. ನೃತ್ಯ ಕಲಿಯುವ ಹುಮ್ಮಸ್ಸು ಬಹಳ ಇತ್ತು, ಈಗಲೂ ಇದೆ - ಎಂದಿಗೂ ಬತ್ತದಿರುವ ಒರತೆಯಂತೆ.
ವೈದ್ಯಳಾಗುವ ಹಂಬಲ ಮತ್ತು ಅದಕ್ಕೆ ಬೇಕಾಗುವ ತನ್ಮಯತೆಯಿಂದಾಗಿ ನೃತ್ಯ ಕಲಿಕೆ ಅರ್ಧಕ್ಕೆ ನಿಂತು ಹೋಯಿತು. ಮದುವೆಯಾಗಿ ಇಂಗ್ಲೆಂಡಿಗೆ ಬಂದಿಳಿದು, ಕೆಲಸಕ್ಕಾಗಿ ಊರೂರು ಅಲೆದು, ಎರಡು ಮಕ್ಕಳಾದ ಮೇಲೆಯೂ ನಾನಿರುವ ಊರಿನಲ್ಲಿ ಯಾರಾದರೂ ಗುರುಗಳು ಇದ್ದಾರಾ ಎಂದು ಹುಡುಕಾಡುತ್ತಿದ್ದೆ. ಗೆಳತಿಯೊಬ್ಬಳು ಸ್ವಾತಿ ಗುರುಗಳ ಚರದೂರವಾಣಿ ಸಂಖ್ಯೆ ಕೊಟ್ಟಾಗ ಸ್ವರ್ಗಕ್ಕೆ ಮೂರೇ ಗೇಣು ಎಂದೆನಿಸಿತು. ನೀನು ಎಳೆ ಹುಡುಗಿಯoತೆಯೇ ಕಾಣುತ್ತಿಯ, ಅವರೊಂದಿಗೆ ಸೇರಿ ಕಲಿ ಎಂದು ನಾನು ಎಲ್ಲಿಗೆ ಕಲಿಕೆ ನಿಲ್ಲಿಸಿದ್ದೆನೋ ಅದೇ ಸ್ತರಕ್ಕೇ ಸೇರಿಸಿಕೊಂಡರು.

ಕಲಿಕೆ ನಿಂತೇ ಇಲ್ಲವೇನೋ ಎಂಬಂತೆ ಮುಂದುವರೆಯಿತು. ಒಂದು ದಶಕದ ಕಂದಕ ಅಷ್ಟು ಬೇಗ ಕಾಣದಂತೆ ಮಾಯವಾದದ್ದು ನೋಡಿ ಅಚ್ಚರಿಯಾಯಿತು. ಬ್ಲಾಕ್‍ಪೂಲ್‍ನಲ್ಲಿ ದೀಪಾವಳಿ ಆಚರಣೆಗೆ ಭಾರತೀಯ ನೃತ್ಯ ತಂಡಗಳಿಗೆ ವಿಶೇಷ ಆಹ್ವಾನವಿತ್ತು. ಅಂದಿನ ದಿನ ಬ್ಲಾಕ್‍ಪೂಲ್ ಟವರ್ ಎದುರು ಹಾಕಿದ್ದ ರಂಗಮಂಚದಲ್ಲಿ ನೂರಾರು ಜನರೆದುರಲ್ಲಿ ತಿಲ್ಲಾನ ನೃತ್ಯ ಪ್ರಸ್ತುತಪಡಿಸಿದೆವು. ಭರತನಾಟ್ಯ ಮಾರ್ಗದ ಉತ್ತರಾರ್ಧದಲ್ಲಿ ತಿಲ್ಲಾನ ಸಂತೋಷ ವ್ಯಕ್ತಪಡಿಸುವ ನಾಟ್ಯ. ರಂಗಪ್ರವೇಶದಲ್ಲಿ ಪ್ರಸ್ತುತ ಪಡಿಸುವ ನೃತ್ಯಸರಣಿಗೆ ಮಾರ್ಗo ಎನ್ನುತ್ತಾರೆ. ತಾತ್ಕಾಲಿಕ ತೆರೆದ ವೇದಿಕೆ ಆದ್ದರಿಂದ ಹತ್ತಿರದಲ್ಲಿ ಯಾವ ಸೌಲಭ್ಯ ಇರಲಿಲ್ಲ. ದೂರದಲ್ಲಿ ಕಾರು ನಿಲ್ಲಿಸಿ ಪೂರ್ತಿ ಭರತನಾಟ್ಯ ವೇಷಭೂಷಣದಲ್ಲಿ ಬ್ಲಾಕ್‍ಪೂಲ್ ರಸ್ತೆಗಳಲ್ಲಿ ನಡೆದು ಬ್ಲಾಕ್‍ಪೂಲ್ ಟವರ್ ತಲುಪಿದ್ದಾಯಿತು, ಅಚ್ಚರಿ ತುಂಬಿದ ನೋಟಗಳ ನಡುವೆ. ನೂರಾರು ಸ್ಥಳೀಯರ ಸಮಕ್ಷಮದಲ್ಲಿ ಭಾರತೀಯ ನೃತ್ಯಗಳ ಪ್ರಸ್ತುತಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವಾದ ಮೇಲೆ ಮೆರವಣಿಗೆಯಂತೆ ವಾಪಸ್ ಕಾರಿನೆಡೆಗೆ ಬರುವಾಗ ಬಹಳ ಜನ ನನ್ನ ಗುರುತು ಹಿಡಿದು ನಮ್ಮ ನೃತ್ಯ ಅದ್ಭುತವಾಗಿತ್ತು, ಪ್ರತಿವರ್ಷ ನೋಡಲು ಬರುತ್ತೇವೆ ಎಂದು ಕೊಂಡಾಡಿದಾಗ ನಮ್ಮ ಶ್ರಮ ಸಾರ್ಥಕವಾಯಿತು ಎಂದು ಆನಂದವಾಯಿತು.

ನಾವು ಪ್ರತಿವರ್ಷ ಎದುರು ನೋಡುವ ಸಂದರ್ಭ ನಮ್ಮ ಸ್ವಾತಿ ಡಾನ್ಸ್ ಕಂಪನಿ ನೃತ್ಯಶಾಲೆಯ ವಾರ್ಷಿಕ ಕಲಾಪ್ರದರ್ಶನ ‘ಸಮಯೋಗ’. ವರ್ಷದ ಕಲಿಕೆಯನ್ನು ನಮ್ಮ ಕುಟುಂಬ ಮತ್ತು ಅತಿಥಿಗಳೆದುರು ಪ್ರದರ್ಶಿಸುವ ಸದವಕಾಶವನ್ನು ಈ ಕಾರ್ಯಕ್ರಮ ಒದಗಿಸುತ್ತದೆ. ಇದನ್ನು ವಿಶ್ವ ನೃತ್ಯ ದಿನದ ಆಸುಪಾಸಿನಲ್ಲಿ ಸ್ವಾತಿ ಗುರುಗಳು ಆಯೋಜಿಸುತ್ತಾರೆ.

ಈ ವರ್ಷ ಭಾರತದಿಂದ ತಂದೆಯವರು ಬಂದು ವೀಕ್ಷಿಸಿದ್ದು ನನ್ನ ಭಾಗ್ಯ.

ನೃತ್ಯಾಸಕ್ತರಿಗೆಲ್ಲ ಪ್ರಣಾಮಗಳು. ನಿಮಗೂ ಕಲಿಯುವ ಆಸಕ್ತಿ ಇದ್ದರೆ ಕೆಳಗೆ ಕೆಲವು ವೆಬ್ ವಿಳಾಸಗಳನ್ನು ಉಪಯೋಗಿಸಿ ಸಮೀಪ ಇರುವ ಗುರುಗಳ ಮಾಹಿತಿ ಹುಡುಕಿ. ಕಲಾಸಕ್ತರು ಆಯೋಜನೆ ಮಾಡುವ ಕಾರ್ಯಕ್ರಮಗಳ ಮೂಲಕ ನಮ್ಮ ಪ್ರಾಚೀನ ಕಲೆ ಉಳಿಯಲಿ, ಬೆಳೆಯಲಿ ಎಂದು ಆಶಿಸುತ್ತೇನೆ.

ನಮ್ಮ ಶಾಲೆ - https://swatidance.com/
ಡಾನ್ಸ್ ಸ್ಕೂಲ್ ಡೈರೆಕ್ಟರಿ - https://www.akademi.co.uk/resources/dance-school-directory/
ಸಿoಫೊನಿ ಒಫ್ ಮೂವ್ಮೆಂಟ್ ಟ್ರೈಲರ್ - https://youtu.be/XWTo83YkQCE

************************************

ಕೃತಜ್ಞತೆಗಳು –
ನನ್ನ ತಂದೆ ಜಗದೀಶ್ ಅವರಿಗೆ, ಅತ್ಯಮೂಲ್ಯ ಸಲಹೆ ಸೂಚನೆ ನೀಡಿ ಈ ಬರಹ ತಿದ್ದಿದ್ದಕ್ಕಾಗಿ.
ಡಾ. ಗುಡೂರ್ ಅವರಿಗೆ, ಬರೆಯಲು ನಿರಂತರ ಪ್ರೋತ್ಸಾಹ ನೀಡಿದ್ದಕ್ಕೆ.
ಗುರು ಡಾ. ಸ್ವಾತಿ ರೌತ್ ಮತ್ತು ನನ್ನ ಸಹಪಾಠಿಗಳಿಗೆ - ಚಿತ್ರಗಳನ್ನ ಬಳಸಲು ಅನುಮತಿ ನೀಡಿದ್ದಕ್ಕಾಗಿ.

- ಶಿಲ್ಪಾ ಜಗದೀಶ್, ಪ್ರೆಸ್ಟನ್ ಯು ಕೆ.
ಗುರು ಡಾ. ಸ್ವಾತಿ ರಾವುತ್.
ಡಾ. ಸ್ವಾತಿ ರಾವುತ್ ಅವರ ವಿದ್ಯಾರ್ಥಿನಿಯರು.
*****************************************

ಕನ್ನಡ ಬಳಗ ದೀಪಾವಳಿ/ರಾಜ್ಯೋತ್ಸವ ನವೆಂಬರ್ ೨೦೨೫: ಅನಿವಾಸಿಯಿಂದ ಭೈರಪ್ಪನವರಿಗೆ ಶ್ರದ್ಧಾಂಜಲಿ

ಕನ್ನಡ ಬಳಗ, ಮಿಲ್ಟನ್ ಕಿನ್ಸ್ ನ ಅನಿಕೇತನ ಸಂಸ್ಥೆಯ ಜೊತೆ ಕೈ ಗೂಡಿಸಿ, ನವೆಂಬರ್ ೮ ರಂದು ದೀಪಾವಳಿ ಹಾಗು ರಾಜ್ಯೋತ್ಸವಗಳನ್ನು ಆಚರಿಸಿತು. ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ‘ಅನಿವಾಸಿ’ ಯ ಸಮಾನಾಂತರ ಸಭೆ ಈಗ ಸಂಪ್ರದಾಯವೇ ಆಗಿದೆ. ಹೆಚ್ಚಾಗಿ, ಮುಖ್ಯ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿತನುಡಿಗಳ ನಂತರದ ಸಮಯ ಇದಕ್ಕಾಗೇ ಮೀಸಲು. ಇತ್ತೀಚಿಗೆ ಕಾಣದ ಲೋಕಕ್ಕೆ ತೆರಳಿದ ಭೈರಪ್ಪನವರ ಅಗಲಿಕೆ ಕನ್ನಡಿಗರಿಗೆ ಅತೀವ ದುಃಖದಾಯಕ ಕಾರಣವಾಗಿದೆ. ಕನ್ನಡದ ಮಹಾನ್ ಕಾದಂಬರಿಕಾರರಲ್ಲಿ ಒಬ್ಬರಾದ ಭೈರಪ್ಪನವರಿಗೆ ಶ್ರದ್ಧಾಂಜಲಿ ಅರ್ಪಿಸುವುದೇ ಈ ಬಾರಿಯ ಅನಿವಾಸಿ ಕಾರ್ಯಕ್ರಮಕ್ಕೆ ತಕ್ಕುದಾದ ವಿಷಯವೆಂದು ಮೊದಲೇ ತೀರ್ಮಾನವಾಗಿತ್ತು. ಸದಸ್ಯರು ತಮಗೆ ಇಷ್ಟವಾದ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು ಮೊದಲ ಭಾಗ. ಮುಖ್ಯ ಅತಿಥಿಯಾಗಿ ಬರುವ ಶ್ರೀ. ಮತ್ತೂರು ನಂದಕುಮಾರರಿಂದ ಅವರ- ಭೈರಪ್ಪನವರ ಒಡನಾಟದ ವಿಶಿಷ್ಟ ಅನುಭವಗಳ ಅವಲೋಕನೆ ಎರಡನೇ ಭಾಗದಲ್ಲಿ ಎಂದು ನಿಶ್ಚಯಿಸಿದ್ದೆವು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ಆನಂದ್ ಕೇಶವಮೂರ್ತಿ ಹಾಗೂ ಅನ್ನಪೂರ್ಣ ಆನಂದ್, ಮುಖ್ಯ ಅತಿಥಿಯವರ ಅನುಮೋದನೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಿದರು. ಈ ಸಂಚಿಕೆಯಲ್ಲಿ ಕಾದಂಬರಿಗಳ ವಿಶ್ಲೇಷಣೆ ಹಾಗೂ ಮತ್ತೂರರ ಭಾಷಣವದ ವಿವರಗಳಿವೆ. ಜೊತೆಯಲ್ಲೇ ಆತಿಥೇಯ ನಗರ ಮಿಲ್ಟನ್ ಕೀನ್ಸ್ ನವರೇ ಆದ ನಾಗರಾಜ ಬಸವರಾಜು ಅವರು ಬರೆದ ಇಡೀ ದಿನದ ಕಾರ್ಯಕ್ರಮಗಳ ವರದಿಯೂ ಇದೆ. ಕೊನೆಯಲ್ಲಿ ಡಾ . ಶ್ರೀವತ್ಸ ದೇಸಾಯಿ ಅವರು ಚಿತ್ರೀಕರಿಸಿದ ಕಾರ್ಯಕ್ರಮದ ಮುಖ್ಯಾಂಶಗಳ ಚಿಕ್ಕ ವಿಡಿಯೋವನ್ನು ನೋಡಲು ಮರೆಯದಿರಿ. -ರಾಮಶರಣ ಲಕ್ಷ್ಮೀನಾರಾಯಣ

ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಪರಿಚಯವನ್ನು ಆನಂದ್ ಮಾಡಿಕೊಟ್ಟರು. ಮುಖ್ಯ ಅತಿಥಿಗಳ ಪರಿಚಯವನ್ನು ಶ್ರೀವತ್ಸ ದೇಸಾಯಿಯವರು ನೆರವೇರಿಸಿದರು. ಕೊನೆಯಲ್ಲಿ ಜಿ.ಎಸ್.ಶಿವಪ್ರಸಾದ್ ಸಾಂಗವಾಗಿ ಆಭಾರ ಮನ್ನಿಸಿದರು. 

ಪರ್ವ: ಸಾರ್ವಕಾಲಿಕ ನೆಚ್ಚಿನ ಕಾದಂಬರಿ – ಅನ್ನಪೂರ್ಣ ಆನಂದ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಹೈಸ್ಕೂಲಿನಿಂದ ಕಾದಂಬರಿ ಓದುವ ಗೀಳು ಹತ್ತಿತ್ತು. ನನಗೆ ಮೊದಲು ಸಿಕ್ಕಿದ ಭೈರಪ್ಪನವರ ಕಾದಂಬರಿ ‘ವಂಶವೃಕ್ಷ’. ಅವರ ಬರಹದ ಶೈಲಿ, ಪಾತ್ರ ಪೋಷಣೆ, ಕಥೆಯ ಹಂದರ ನನ್ನ ಮನತಟ್ಟಿದವು. ‘ಧರ್ಮಶ್ರೀ’ ಹಾಗು ‘ದೂರಸರಿದರು’ ಗಳ ನಂತರ ಕೈಗೆಟುಕಿದ್ದು ‘ಪರ್ವ’. ಭಾರತೀಯ ಮಕ್ಕಳೆಲ್ಲ ಮಹಾಭಾರತದ ಕಥೆಗಳನ್ನು ಓದಿ, ಕೇಳಿಯೇ ಬೆಳೆಯುತ್ತಾರೆ. ಮಂತ್ರ ಪ್ರಭಾವದಿಂದ ಮಕ್ಕಳಾಗುವುದು, ಗಾಂಧಾರಿ ಹೊಟ್ಟೆ ಕಿವುಚಿಕೊಂಡು ನೂರು ಮಕ್ಕಳನ್ನು ಪಡೆಯುವುದು, ಕೃಷ್ಣನ ಚಮತ್ಕಾರಗಳು, ಇವೆಲ್ಲ ಕಲ್ಪನೆಗೆ ಮೀರಿದ ವಿಚಿತ್ರ ಭಾವನೆಗಳನ್ನು ಮೂಡಿಸುತ್ತಿದ್ದವು. ‘ಪರ್ವ’ ಮಹಾಭಾರತದ ಪಾತ್ರಗಳನ್ನೆಲ್ಲ ಮಾನವ ಸದೃಶಗೊಳಿಸುತ್ತವೆ. ಇಲ್ಲಿ ಚಮತ್ಕಾರಗಳಿಲ್ಲ. ಕೃಷ್ಣ, ಚಾಣಾಕ್ಷನೂ, ಮುತ್ಸದ್ದಿಯೂ ಆದ ವ್ಯಕ್ತಿ. ಕಥೆಯೂ  ಅಂತಃ ಸಂವಾದ, ಕೆದಕಿದ ನೆನಪು, ಪ್ರತಿಕ್ರಿಯೆಯ ರೂಪದಲ್ಲಿ ಸಾಗುವುದರಿಂದ, ಪುರಾಣವಾಗದೇ ಒಂದು ಐತಿಹಾಸಿಕ ಕಥೆಯಾಗಿ ಅನಾವರಣಗೊಳ್ಳುತ್ತದೆ. ಕುರುಕ್ಷೇತ್ರ ಯುದ್ಧ ವೈಭವೀಕರಣಗೊಳ್ಳದೇ ಕೊಳೆತು ನಾರುವ ಹೆಣದ ರಾಶಿ, ಯುದ್ಧ ತರುವ ಗೋಳು, ಹೊಲಸು ಇವನ್ನೆಲ್ಲ ತೋರುತ್ತ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ. ಸ್ತ್ರೀಪಾತ್ರಗಳಿಗೆ ಇಲ್ಲಿ ಪುರುಷ ಪಾತ್ರಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಇದೆ. ದ್ರೌಪದಿಯ ಪ್ರತೀಕಾರ, ಕುಂತಿಯ ಆಂತರಿಕ ತಲ್ಲಣ, ಗಾಂಧಾರಿಯ ಮಾತೃತ್ವದ ಬಂಧನ ಮನತಟ್ಟುತ್ತವೆ. ‘ಪರ್ವ’ ವನ್ನು ನಾನು ಹಲವು ಬರಿ ಓದಿದ್ದೇನೆ; ಪ್ರತಿಸಲವೂ ಹೊಸತನ್ನು ಕಂಡಿದ್ದೇನೆ. ಭೈರಪ್ಪನವರ ಕಾದಂಬರಿಗಳಲ್ಲೆಲ್ಲ ಇದು ನನ್ನ ಸಾರ್ವಕಾಲಿಕ ನೆಚ್ಚಿನ ಕೃತಿ.   

ಧರ್ಮಶ್ರೀ: ೬೦ರ ಭಾರತದ ಚಿತ್ರಣ – ಆನಂದ್ ಕೇಶವಮೂರ್ತಿ 

ನಾನು ‘ಧರ್ಮಶ್ರೀ’ಯನ್ನು ಮೊದಲ ಬಾರಿಗೆ ಓದಿದ್ದು ೩೫-೪೦ ವರ್ಷಗಳ ಹಿಂದೆ. ಕಳೆದ ವಾರ ಮತ್ತೊಮ್ಮೆ ಓದಿದಾಗ ಕಂಡದ್ದು ಹಲವು ಹೊಸ ವಿಷಯಗಳು. ೧೯೬೧ ರಲ್ಲಿ ಈ ಕೃತಿ ಬೆಳಕು ಕಂಡಿತು. ಹಾಗಾಗಿ ಇದನ್ನು ಭೈರಪ್ಪನವರು ೧೯೫೯ ಅಥವಾ ೧೯೬೦ರಲ್ಲಿ ಬರೆದಿರಬಹುದು. ಆಗ ಅವರಿಗೆ ೩೦ರ ಹರೆಯ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಎಷ್ಟೊಂದು ಓದಿದ್ದರು, ಪ್ರೌಢಿಮೆ ಹೊಂದಿದ್ದರು ಎಂಬ ವಿಷಯ ಈ ಕಾದಂಬರಿಯನ್ನು ಓದಿದಾಗ ಅನಿಸುತ್ತದೆ. ೬೦ರ ದಶಕದ ಸಾಮಾಜಿಕ ಬದುಕು, ಕಿತ್ತು ತಿನ್ನುವ ಬಡತನ, ಹಿಂದೂ ಧರ್ಮದಲ್ಲಿ ತಂಡವವಾಡುತ್ತಿದ್ದ ಜಾತೀಯತೆ ಇವನ್ನೆಲ್ಲ ಧರ್ಮಶ್ರೀ ಪ್ರತಿಫಲಿಸುತ್ತದೆ. ಕಾದಂಬರಿಯ ಮೊದಲ ಪುಟಗಳು ಭೈರಪ್ಪನವರ ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಬರುವವರೆಗಿನ ಆತ್ಮ ಕಥೆಯೇ ಎಂದು ತಮ್ಮ ‘ಭಿತ್ತಿ’ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ಕಥಾನಾಯಕ ಕ್ರಿಸ್ತ ಧರ್ಮಕ್ಕೆ ಮತಾಂತರ ಹೊಂದಿದ ಮೇಲೆ ಅವನಿಗಾಗುವ ತಳಮಳ, ಅದರ ಪರಿಣಾಮಗಳು ಇದರಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿವೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಧ್ಯೇಯೋದ್ದೇಶ, ಸಂಘವನ್ನು ಹತ್ತಿಕ್ಕಲು ಅಂದಿನ ಸರಕಾರ ಮಾಡಿದ ಪ್ರಯತ್ನಗಳು ಇದರಲ್ಲಿವೆ. ಕ್ರಿಶ್ಚಿಯನ್ ಮಿಷನರಿಗಳು ಶೋಷಿತರನ್ನು ಗುರಿಯಾಗಿಸಿಕೊಂಡು, ಆಮಿಷಗಳನ್ನೊಡ್ಡಿ ಮತಾಂತರಗೊಳಿಸುತ್ತಿದ್ದ ಬಗೆ; ಸಮಾನ ಅಂತಸ್ತಿನ ಭರವಸೆ ನೀಡಿದರೂ ಶೋಷಿತರನ್ನು ಶೋಷಿಸುತ್ತಲೇ ಇದ್ದ ಸಂಗತಿಗಳನ್ನು ವಿವರಿಸುತ್ತಾರೆ. ದಿಸ್ತೀನ್ ಗೌಡನ ಪಾತ್ರದ ಮೂಲಕ ಧಾರ್ಮಿಕ ವ್ಯವಸ್ಥೆಯ ಕೊರತೆಗಳನ್ನು ಎತ್ತಿ ತೋರಿಸುತ್ತಾರೆ. ಈ ಕಾದಂಬರಿ ೬೦ರ ದಶಕದ ಸಮಾಜ ವ್ಯವಸ್ಥೆಯ ಅಧ್ಯಯನ, ಧಾರ್ಮಿಕ ಶೋಷಣೆಗೆ ಹಿಡಿಯುವ ಕೈಗನ್ನಡಿ ಎಂದು ಹೇಳಬಹುದು. 

ಮತದಾನ ಹಾಗೂ ಇತರ ಕಾದಂಬರಿಗಳು: ಹಾಜರಿ ಕಡಿಮೆಯಾಗಲು ಕಾರಣೀಭೂತ – ವಿನಯ್ ರಾಯಚೂರ್ 

ಭೈರಪ್ಪನವರ ಕಾದಂಬರಿಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೆಂದರೆ, ನಾನು ಕ್ಲಾಸಿಗೆ ಹೋಗದೇ ಪಟ್ಟಾಗಿ ಕುಳಿತು ಮುಗಿಸುತ್ತಿದ್ದೆ. ನನ್ನ ಹಾಜರಿ ಕಡಿಮೆಯಾಗಲು ಇವೇ ಮೂಲ ಕಾರಣ. ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ‘ಮತದಾನ’ ಇಷ್ಟವಾಗುವುದಕ್ಕೆ ಮೂರೂ ಕಾರಣಗಳಿವೆ: ಚಿಕ್ಕದಾದರೂ ಚೊಕ್ಕದು ಈ ಕೃತಿ; ಆದರ್ಶಕ್ಕೆ ಜೋತು ಬಿದ್ದರೆ ಬದುಕು ಸಾಗದು; ರಾಜಕೀಯ ಎಂದಿಗೂ ಹೊಲಸೇ ಎನ್ನುವುದನ್ನು ಸಾಬೀತು ಮಾಡುತ್ತದೆ. ‘ಗೃಹಭಂಗ’ ದಲ್ಲಿ ಸಂಘರ್ಷದ ಬದುಕಿನ ಚಿತ್ರಣದ ಜೊತೆಗೆ, ಅಂತಹ ಅನುಭವಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಧ್ವನಿಯಿದೆ. ಭೈರಪ್ಪನವರ ಕಾದಂಬರಿಗಳಲ್ಲಿ ತತ್ವಶಾಸ್ತ್ರದ ಹೊಳವು ಸರ್ವೇ ಸಾಮಾನ್ಯ. ‘ಸಾಕ್ಷಿ’ ಹಾಗೂ ‘ನಾಯಿ ನೆರಳು’ ಇವೆರಡರಲ್ಲಿ ಆಧ್ಯಾತ್ಮಿಕತೆ, ತತ್ವಶಾಸ್ತ್ರಗಳ ಪ್ರಭಾವವನ್ನು ದಟ್ಟವಾಗಿ ಕಾಣಬಹುದು. ಪುನರ್ಜನ್ಮದ ಜಿಜ್ಞಾಸೆ ಕೂಡ ನಾಯಿನೆರಳಿನಲ್ಲಿ ತೀವ್ರವಾಗಿದೆ. ಅವರ ಯಾವುದೇ ಕಾದಂಬರಿಗಳಲ್ಲಿ ಅಂತಿಮ ನಿಷ್ಕರ್ಷ ಕಾಣ ಬರುವುದಿಲ್ಲ. ಓದುಗರ ಊಹೆಗೆ, ಚರ್ಚೆಗೆ ಅವು ತೆರೆದುಕೊಳ್ಳುತ್ತವೆ. ಅವರ ಕಾದಂಬರಿಗಳಿಂದ ಪ್ರೇರಿತನಾಗಿ, ನಾನು ತತ್ವಶಾಸ್ತ್ರ, ವೈಚಾರಿಕತೆ ಇವನ್ನೆಲ್ಲ ಇನ್ನು ಹೆಚ್ಚಾಗಿ ಅರಿಯುವ ಪ್ರಯತ್ನ ಮಾಡಿದ್ದೇನೆ. 

ಉತ್ತರಕಾಂಡ: ಭೈರಪ್ಪನವರ ಕೊನೆಯ ಕಾದಂಬರಿ – ಕೇಶವ ಕುಲಕರ್ಣಿ 

‘ಪರ್ವ’ದಲ್ಲಿ ಮಹಾಭಾರತವನ್ನು ಬರೆದ ಭೈರಪ್ಪನವರು, ‘ಉತ್ತರಕಾಂಡ’ದಲ್ಲಿ ರಾಮಾಯಣವನ್ನು ಬರೆದದ್ದು ೪೦ ವರ್ಷಗಳ ನಂತರ. ಭಾರತದ ಉದ್ದಗಲಕ್ಕೂ ಗದ್ಯ ಹಾಗೂ ಕಾವ್ಯದ ರೂಪದಲ್ಲಿ ನೂರಾರು ರಾಮಾಯಣಗಳ ಆವೃತ್ತಿಗಳನ್ನು ಕಾಣಬಹುದು. ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಆಗುವವರೆಗೂ ರಾಮ ದೈವಾಂಶ ಸಂಭೂತನಾಗಿದ್ದ. ಆಧುನಿಕ ಕಾಲದಾರಂಭದಲ್ಲಿ ಪುರುಷೋತ್ತಮನಾದ. ವಿಚಾರವಾದ, ಹೊಸ ಸಿದ್ಧಾಂತಗಳ ಪ್ರಭಾವದಲ್ಲಿ ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಲಾಗಿದೆ. ಪೌರಾಣಿಕ ನೋಟದಿಂದ ಹೊರತಾಗಿ, ಐತಿಹಾಸಿಕ ಅಥವಾ ಸಮಕಾಲೀನ ಕಥಾನಕದಂತೆ ಕಂಡವರಿದ್ದಾರೆ. ಕನ್ನಡದಲ್ಲೇ ಪೋಲಂಕಿ ರಾಮಮೂರ್ತಿಯವರು ‘ಸೀತಾಯಣ’ ಬರೆದು ಸಾಕಷ್ಟು ಚರ್ಚೆಗೊಳಗಾಗಿದ್ದರು. 

ಉತ್ತರಕಾಂಡದ ವೈಶಿಷ್ಟ್ಯತೆಯೆಂದರೆ, ಕಥೆ ಪ್ರಾರಂಭವಾಗುವುದೇ ಲವ-ಕುಶ ರ ಜನ್ಮವಾದನಂತರ. ರಾಮಾಯಣವು ಇಲ್ಲಿ ಸೀತೆಯ ಸ್ವಗತದಲ್ಲಿ rewind ಆಗುತ್ತದೆ. ‘ಪರ್ವ’ದಂತೆ ಇಲ್ಲಿನ ಪಾತ್ರಗಳೆಲ್ಲ ಮಾನವೀಕೃತಗೊಂಡಿವೆ. ಸೀತೆಯ ದೃಷ್ಟಿಕೋನದಿಂದ ಭೈರಪ್ಪ ರಾಮನನ್ನು ‘ಕಟ್ಟುತ್ತ’ ಹೋಗುತ್ತಾರೆ. ರಾಜನಾಗಿ ಗೆಲ್ಲುವ ರಾಮ, ಗಂಡನಾಗಿ ಸೋಲುತ್ತಾನೆ. ಅವರು ಈ ಕೃತಿಯಲ್ಲಿ ಸಾಕಷ್ಟು ಕಥೆಗಾರನ ಸ್ವಾತಂತ್ರ್ಯವನ್ನು ಬಳಸಿದ್ದಾರೆ. ಇದನ್ನು ಓದಿದಾಗ, ಭೈರಪ್ಪನವರು ಸಾಹಿತ್ಯ ಓದುಗರ ಕಟ್ಟುಪಾಡನ್ನು ಮೀರಿ ಒಳಗಾಗದೇ ಪಂಥ ಮೀರಿ ಬರೆದದ್ದನ್ನು ಗುರುತಿಸಬಹುದು. ಕೊನೆಯಲ್ಲಿ ವಾಲ್ಮೀಕಿ “ಈ ಕಥೆಗೆ ಸುಖಾಂತವನ್ನೊದಗಿಸಲೆಂದು ಅಯೋಧ್ಯೆಗೆ ಹೋಗಿ ಧರ್ಮಸಭೆ ಏರ್ಪಡಿಸಿದೆ. ಆದರೂ ಕಥೆಯ ದಿಕ್ಕನ್ನು ಬದಲಾಗಿಸಲಾಗಲಿಲ್ಲ” ಎಂದು ಸೋಲೊಪ್ಪಿಕೊಳ್ಳುತ್ತಾನೆ. 

ಈ ಕಾದಂಬರಿ, ಭೈರಪ್ಪನವರ ಒಳ್ಳೆಯ ಕಾದಂಬರಿ ಎಂದು ನನಗೆನ್ನಿಸುವುದಿಲ್ಲ; ಇದು ಅಷ್ಟಾಗಿ ಚರ್ಚೆಗೋ, ವಿಮರ್ಶೆಗೋ ಒಳಗೊಳ್ಳಲಿಲ್ಲ. 

ಮಂದ್ರ, ಹೆಸರೇ ಸೂಚಿಸುವಂತೆ ಸಂಗೀತದ ತಳಹದಿಯ ಮೇಲೆ ನಿಂತ ಕೃತಿ. ಮುಖ್ಯ ಪಾತ್ರದಾರಿ ಮೋಹನಲಾಲ, ಅಪ್ರತಿಮ ಪ್ರತಿಭೆಯ ಸಂಗೀತಗಾರ. ಹರಿದ್ವಾರ ಘಾಟಿಯಿಂದ ಮುಂಬಯಿಯ ಶಾಸ್ತ್ರೀಯ ಸಂಗೀತ ಲೋಕದ ಮಹಾನ್ ತಾರೆಯಾಗಿ ಬೆಳಗಿದವ. ಆತನ ಬೆಳವಣಿಗೆಯ ಮೂಲಕ ಭೈರಪ್ಪನವರು ಹಿಂದೂಸ್ತಾನಿ ಸಂಗೀತದ ಒಳ ನೋಟದ ಪರಿಚಯ ಮಾಡಿಕೊಡುತ್ತಾರೆ. ಇಲ್ಲಿ ಗುರು-ಶಿಷ್ಯ ಪರಂಪರೆಯ ಚಿತ್ರಣವಿದೆ; ಘರಾಣೆಗಳ ವಿವರವಿದೆ. ಹಲವು ರಾಗಗಳ ವಿವರ, ರಾಗಗಳ ರಸ, ಸಂಗೀತಗಾರ ಹೇಗೆ ಸ್ವರಗಳ ಹಂದರದಲ್ಲಿ ಸ್ವಯಂ ರಸಾಸ್ವಾಧನೆ ಮಾಡುತ್ತ, ಶ್ರೋತೃಗಳಿಗೂ ಉಣಬಡಿಸುತ್ತಾನೆ ಎಂದು ತೋರಿಸುತ್ತಾರೆ. ಜೊತೆಗೇ, ಕಲಾವಿದರ ನಡುವಿನ ಈರ್ಷ್ಯೆ, ಅನಾರೋಗ್ಯಕರ ಸ್ಪರ್ಧೆ ಇವನ್ನೆಲ್ಲ ಕಾಣಬಹುದು. 

ಮೋಹನಲಾಲನ ವಿಷಯ ಲಂಪಟತನ, ಅವಕಾಶವಾದಿ ಮನೋಭಾವ ಸಂಗೀತಕ್ಕಿಂತಲೂ ಮುಖ್ಯವಾದ ವಸ್ತುವಾಗಿ ಕಾಣಬಹುದು. ಆತ ಮಧು ಷಾ ಎಂಬ ಶಿಷ್ಯೆಯನ್ನು ತನ್ನ ಆಪ್ತ ಶಿಷ್ಯೆಯೆಂದು ಕರೆಯುತ್ತ, ಸಂಗೀತದ ಸಂಪೂರ್ಣ ಜ್ಞಾನವನ್ನು ಕೊಡುವ ನೆಪದಲ್ಲಿ ಶೋಷಿಸುವುದನ್ನು ಓದಿದಾಗ, ಇತ್ತೀಚಿಗೆ ಸುದ್ದಿಯಾದ ಸಂಗೀತ ಲೋಕದ ಲೈಂಗಿಕ ಶೋಷಣೆಯ ಕಥೆಗಳ ನೆನಪಾಗುವುದು ಸಹಜ. ಮೋಹನಲಾಲ ತನ್ನ ವೃತ್ತಿ ಜೀವನದ ಮಧ್ಯದಲ್ಲೇ ಮನೋಹರಿ ದಾಸ್ ಎಂಬ ನರ್ತಕಿಯ ಹಿಂದೆ ಓಡಿ  ಹೋಗುತ್ತಾನೆ. ಆಕೆ ತನ್ನ ವೃತ್ತಿಯಲ್ಲಿ ಮುಂದೆಬರಲು ಪಟ್ಟ ಕಷ್ಟಗಳು, ಶೋಷಣೆಗೆ ಒಳಗಾದ ಸಂಗತಿಗಳು; ತದನಂತರ ಆಕೆಯೇ ಸಹ ನರ್ತಕರನ್ನು ಶೋಷಿಸುವ ಪ್ರಸಂಗಗಳು ಕಥೆಯನ್ನು ನೈಜವಾಗಿಡಲು ಸಹಕರಿಸುತ್ತವೆ. 

ಈ ಕಾದಂಬರಿಯಲ್ಲೂ, ಭೈರಪ್ಪನವರ ಇತರ ಕಾದಂಬರಿಗಳಂತೇ ಹಿಂದಿರುವ ಸಂಶೋಧನೆಯ ಆಳ, ವಿಷಯದ ಮೇಲಿರುವ ಹಿಡಿತ, ಪಾತ್ರಗಳು ತಂದಿಡುವ ನೈತಿಕ ಸಂಧಿಗ್ತತೆ ಗಹನವಾಗಿವೆ. ಸಂಗೀತ ಪ್ರಿಯರೆಲ್ಲ ಓದಬೇಕಾದ ಕೃತಿಯೆಂದು ನನ್ನ ಅನಿಸಿಕೆ.  

ಭೈರಪ್ಪನವರೊಡನೆ ಸಹಚಾರ: ಡಾ.ಮತ್ತೂರು ನಂದಕುಮಾರ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಇಂದು ಅನಿವಾಸಿಯ ಸದಸ್ಯರು ಸುಂದರವಾಗಿ ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣೆ, ಅನಿಸಿಕೆಗಳನ್ನು ಹಂಚಿಕೊಂಡರು. ಭೈರಪ್ಪನವರು ನನಗೆ ಆತ್ಮೀಯರು. ಅವರು ಮಿತಭಾಷಿ. ಎಂದೂ ಜನರ ಗಮನದ ಕೇಂದ್ರದಿಂದ ದೂರವುಳಿಯುತ್ತಿದ್ದರು. ಅವರ ಪ್ರಥಮ ಭೆಟ್ಟಿ, ನಾನು ಮೈಸೂರಿನಲ್ಲಿ ವ್ಯಾಸಂಗಕ್ಕೆ ಅಣ್ಣನ ಮನೆಯಲ್ಲಿದ್ದಾಗ. ಅಲ್ಲಿ ನಡೆದ ಕಾರ್ಯಕ್ರಮಕ್ಕೆ ದಿನವೂ ಬಂದು ಕುಳಿತು, ಕೇಳಿ ಸದ್ದಿಲ್ಲದೇ ಮರೆಯಾಗುತ್ತಿದ್ದರು. ಎಲ್ಲವನ್ನೂ ಗಮನವಿಟ್ಟು ಕೇಳುತ್ತಿದ್ದರು, ನೋಡುತ್ತಿದ್ದರು. ಸ್ಪಂಜಿನಂತೆ ವಿಚಾರಗಳನ್ನು ಹೀರಿಕೊಳ್ಳುತ್ತಿದ್ದರು. ಸಾಮಾನ್ಯರೊಡನೆ ಸಾಮಾನ್ಯರಾಗಿ ಬೆರೆಯುತ್ತಿದ್ದರು. ಪ್ರವಾಸಕ್ಕೆ ಹೋದಾಗ ಸ್ಥಳಿಯರೊಂದಿಗೇ ಉಳಿದು, ಅಲ್ಲಿನ ಆಚಾರ, ವಿಚಾರ, ವೈಶಿಷ್ಟ್ಯತೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು, ಹೊಟೇಲುಗಳಲ್ಲಿ ತಂಗಿ ನೀರ ಮೇಲಿನ ಕಮಲದ ಎಲೆಯಂತಿರುತ್ತಿರಲಿಲ್ಲ. ಮತ್ತೂರಿಗೆ ಬಂದಾಗ, ನಮ್ಮ ಮನೆಯಲ್ಲೇ ಅವರ ವಾಸ್ತವ್ಯ. ದಿನವೂ ಬೆಳಗ್ಗೆ ನನ್ನೊಡನೆ ಊರಿನ ಕೆರೆಯ ಸುತ್ತ ವಾಕಿಂಗ್ ಹೋಗಲೇ ಬೇಕಿತ್ತು. ಆಗ ಎದುರಾಗುವ ಜನರೊಡನೆ ಕಳೆಯುತ್ತಿದ್ದರು; ವಯಸ್ಸಿನ ಭೇದವಿಲ್ಲದೇ ಚರ್ಚೆ ಮಾಡುತ್ತಿದ್ದರು. ಲಂಡನ್ನಿಗೆ ಬಂದಾಗ ಕೂಡ ನಮ್ಮ ಮನೆಯಲ್ಲೇ ತಂಗುತ್ತಿದ್ದರು. ಆಗ ಅವರು ನನ್ನೊಡನೆ ನೀರನ್ನು ಯಾಕೆ ಪೋಲು ಮಾಡಬಾರದು ಎಂಬ ವಿಷಯವನ್ನು ವರ್ಣಿಸಿದ ನೆನಪು ಮನದಲ್ಲಿ ತೇವವಾಗಿಯೇ ಇದೆ. ದಿನವೂ ವಾಕಿಂಗ್ ಹೋದಾಗ ಹಲವಾರು ವಿಷಯಗಳ ಚರ್ಚೆ ಆಗುತ್ತಿತ್ತು. ಅವರು ಮಂದ್ರ ಬರೆಯುವ ಮೊದಲು ಬೇಕಿದ್ದ ಸಾಮಗ್ರಿಯನ್ನು ಕಲೆ ಹಾಕಲು ನಾನು ಸ್ವಲ್ಪ ಸಹಾಯ ಮಾಡಿದ್ದನ್ನು ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದು  ನನಗೆ ಹೆಮ್ಮೆಯ ಸಂಗತಿ – ಹೂವಿನೊಡನೆ ನಾರೂ ದೇವರ ಮುಡಿಗೇರಿದಂತೆ. ಅವರು ನಂಗೆ ತುಂಬಾ ಆತ್ಮೀಯರು. ಆತ್ಮೀಯರ ಬಗ್ಗೆ ಮಾತನಾಡುವಾಗ ಕಾಲ ಕಳೆದ ಅರಿವೇ ಇರುವುದಿಲ್ಲ.  ಇವತ್ತಿನ ಭೈರಪ್ಪನವರ ಸ್ಮರಣೆ ಅರ್ಥಪೂರ್ಣವಾಗಿದೆ. ಅವರನ್ನು ಓದಬೇಕು, ಓದಿ ಅವರ ನೆನಪನ್ನು ಹಸಿರಾಗಿಡಬೇಕು. 

ಆಂಗ್ಲನಾಡಿನಲ್ಲಿ ಕರುನಾಡ ಸೊಗಡು: ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ – ನಾಗರಾಜ ಬಸವರಾಜು

 ದೀಪಗಳ ಹಬ್ಬ ದೀಪಾವಳಿ ಮತ್ತು ನಮ್ಮೆಲ್ಲರ ಹೆಮ್ಮೆಯ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ — ಈ ಎರಡೂ ಹಬ್ಬಗಳು ಅನಿವಾಸಿ ಕನ್ನಡಿಗರಿಂದ ನವೆಂಬರ್ ೦೮, ೨೦೨೫ರಂದು ಮಿಲ್ಟನ್ ಕೀನ್ಸ್‌ನಲ್ಲಿ ಅದ್ಧೂರಿಯಾಗಿ ಆಚರಿಸಲ್ಪಟ್ಟವು. ದೂರದ ಬ್ರಿಟನ್ ನೆಲದಲ್ಲಿ, ಅನಿಕೇತನ ಮಿಲ್ಟನ್ ಕೀನ್ಸ್ (ಸ್ಥಳೀಯ ಸಮುದಾಯ ಸಂಸ್ಥೆ) ಮತ್ತು ೪೦ ವರ್ಷಗಳ ಸುದೀರ್ಘ ಇತಿಹಾಸವಿರುವ ಪ್ರತಿಷ್ಠಿತ ಕನ್ನಡ ಬಳಗ ಯು.ಕೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮವು ಕನ್ನಡಿಗರ, ಕರುನಾಡ ಕುಡಿಗಳ ಹೃದಯಗಳನ್ನು ಬೆಸೆದ ಬೃಹತ್ ಸಾಂಸ್ಕೃತಿಕ ಸೇತುವೆಯಾಗಿತ್ತು.

 ಆದಿಪೂಜಿತ ವಿನಾಯಕನ ಆರಾಧನೆಯೊಂದಿಗೆ, ಉಪಸ್ಥಿತರಿದ್ದ ಗೌರವಾನ್ವಿತ ಅತಿಥಿಗಳಾದ ಡಾ. ಎಂ. ಎನ್. ನಂದಕುಮಾರ್ ಹಾಗೂ ಗಾಯಕ ಶ್ರೀ ಸಂತೋಷ್ ವೆಂಕಿಯವರು ಎರಡೂ ಸಂಘ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ವಿದೇಶ ನೆಲದಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಆಚರಣೆಗಳು ಮೈಲಿಗಲ್ಲು. ಯುವ ಪೀಳಿಗೆಗೆ ನಮ್ಮ ನಾಡು-ನುಡಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಉತ್ಸವಕ್ಕೆ ಅಪಾರ ಸಂಖ್ಯೆಯ ಸ್ಥಳೀಯ ಕನ್ನಡಿಗರು ಹಾಗು ದೂರದೂರಿನ ಕನ್ನಡ ಬಳಗದ ಸದಸ್ಯರು ಕುಟುಂಬ ಸಮೇತ ಆಗಮಿಸಿ ಕರುನಾಡ ಸೊಗಡನ್ನು ಮೆರೆಸಿದರು. ಕಾರ್ಯಕ್ರಮದ ಗೌರವ ಅತಿಥಿ, ಡಾ. ಎಂ. ಎನ್. ನಂದಕುಮಾರ್ (ಕಾರ್ಯನಿರ್ವಾಹಕ ನಿರ್ದೇಶಕರು, ಭಾರತೀಯ ವಿಧ್ಯಾ ಭವನ, ಲಂಡನ್) ನೆರೆದವರನ್ನು ಉದ್ದೇಶಿಸುತ್ತ, ಈ ರೀತಿಯ ಕಾರ್ಯಕ್ರಮಗಳು ಮತ್ತು ಕನ್ನಡ/ಕರ್ನಾಟಕ ಕುರಿತಾದ ಕಾರ್ಯಕ್ರಮಗಳು ನಾಡಿನಿಂದ ದೂರದ ದೇಶದದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸೇತುವೆಯಾಗಿ, ಕರ್ನಾಟಕ ಭಾಷೆಗಳ, ಕಲಾ ಸಂಸ್ಕೃತಿ ಪರಂಪರೆಗಳ ಪರಿಚಯವಾಗಿ, ಈ ಅಭಿರುಚಿಗಳ ಬೆಳವಣಿಗೆಗೆ ಪೂರಕವಾಗಿರಲಿ ಎಂದು ಆಶಿಸಿದರು.

 ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಲವಾರು ಕಲಾವಿದರ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು. ಮಕ್ಕಳು, ಯುವಕರು ಮತ್ತು ಹಿರಿಯರು ಜಾನಪದ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಛದ್ಮವೇಶ, ಜನಪದ ಹಾಗು ಸಿನಿಮಾ ನೃತ್ಯಗಳು, ವಯಸ್ಕರ ಗಾಯನ, ದಂಪತಿಗಳ ಜೋಡಿ ನೃತ್ಯ, ನವರಸ ರೂಪಕ, ರಾಮಾಯಣ ಸಂಗೀತ ನೃತ್ಯ ಹಾಗು ಕರುನಾಡ ವೈಭವ ಕುರಿತಾದ ಫಿನಾಲೆ ನೃತ್ಯ ಸಭಿಕರ ಮನ ಸೂರೆಗೊಂಡವು. ಪ್ರತಿಯೊಂದು ಪ್ರದರ್ಶನವೂ ಕನ್ನಡಿಗರ ಕಲಾಭಿರುಚಿ ಮತ್ತು ನಾಡಿನ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾದವು. ದೀಪಾವಳಿಯ ಬೆಳಕು ಮತ್ತು ರಾಜ್ಯೋತ್ಸವದ ಕೆಂಪು-ಹಳದಿ ವರ್ಣಗಳು, ಎಲ್ಲರ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳು ಹಾಗೂ ಅದಕ್ಕನುಗುಣವಾಗಿ ಒಳಾಂಗಣ ಅಲಂಕಾರಗಳು ಸಮಾರಂಭದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು.

ಸ್ಮರಣಾಂಜಲಿ: ಕನ್ನಡದ ದಿಗ್ಗಜರಿಗೆ ನಮನ

ಈ ವರ್ಷ ನಮ್ಮಿಂದ ದೂರವಾದ, ಈ ಹಿಂದೆ ಕನ್ನಡ ಬಳಗ ಯು ಕೆ ಗೆ ಆಹ್ವಾನಿತ ಅತಿಥಿಯಾಗಿ ಬಂದಿದ್ದ ನಾಡೋಜ ಡಾ. ಎಸ್. ಎಲ್. ಭೈರಪ್ಪ ಮತ್ತು ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಲ್ಲದೆ, ಕನ್ನಡ ಬಳಗ ಯು.ಕೆಯ ಬೆಳವಣಿಗೆಗೆ ಶ್ರಮಿಸಿ, ಇತ್ತೀಚೆಗೆ ಅಗಲಿದ ಹಿರಿಯ ಸದಸ್ಯರ ಆತ್ಮಗಳಿಗೆ ಒಂದು ನಿಮಿಷದ ಮೌನ ಮತ್ತು ನುಡಿನಮನದ ಮೂಲಕ ಗೌರವ ಸಲ್ಲಿಸಲಾಯಿತು. ತಮ್ಮ ನೆಚ್ಚಿನ ಹಿರಿಯರನ್ನು ನೆನೆದು ಅನೇಕರು ಭಾವುಕರಾದರು.

ಬಹುಭಾಷಾ ಗಾಯಕ ಶ್ರೀಯುತ ಸಂತೋಷ್ ವೆಂಕಿ ಅವರ ಸಂಗೀತ ರಸಸಂಜೆ ಮೂಲಕ ನೆರೆದಿದ್ದ ಚಿಣ್ಣರು, ಯುವಕರು ಹಾಗೂ ಹಿರಿಯರೆಲ್ಲ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಕಾರ್ಯಕ್ರಮ ಕೇವಲ ಹಬ್ಬದ ಆಚರಣೆಯಾಗಿರದೆ, ಹೊರನಾಡ ಕನ್ನಡಿಗರು ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡು, ಹೊಸ ಪೀಳಿಗೆಗೆ ಕರುನಾಡ ವೈಭವಯುತ ಸಂಸ್ಕೃತಿಯ, ಪರಂಪರೆಯ ಮಹತ್ವವನ್ನು ತಿಳಿಸುವ ಶ್ಲಾಘನೀಯ ಪ್ರಯತ್ನವಾಯಿತು.

‘ಭೈರಪ್ಪನವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮಕ್ಕೆ ನೆರೆದ ಸಭಿಕರು – ಚಿತ್ರಕೃಪೆ ಆನಂದ ಕೇಶವಮೂರ್ತಿ

ಒಂದು ಸಿನಿಮಾ ಕಥೆ

ಓಟಿಟಿಯ ಕಾಲದಲ್ಲಿ ಥ್ರಿಲ್ಲರ್, ಸಸ್ಪೆನ್ಸ್ , ಕ್ರೈಂ ಅನ್ನೋ ಜಾನ್ರದಲ್ಲಿ ಹಾಗು vfx ಗಳ ಮಾಯಾಲೋಕದಲ್ಲಿ ಮುಳುಗಿದ ನಾನು ಹಾಗೆ ಸ್ಕ್ರಾಲ್ ಮಾಡುತ್ತಿದ್ದಾಗ ಅಕಸ್ಮಾತಾಗಿ ಸಿಕ್ಕ ಸಿನಿಮಾದ ಬಗ್ಗೆ ಒಂದು ವರದಿ ಈ ವಾರ ನಿಮ್ಮೆಲ್ಲರ ಓದಿಗಾಗಿ.
ಸಿನಿಮಾದ ಟೆಕ್ನಿಕಲ್ ವಿವರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ಅಲ್ಲಿರುವ ಪಾತ್ರಗಳು ನನ್ನ ಆಲೋಚನೆಯನ್ನು ಬದಲಿಸಿದೆ.
– ಸಂ

ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೆ

ಈ ಶ್ಲೋಕವನ್ನು ಬಾಲ್ಯದಿಂದಲೇ ಕೇಳುತ್ತಿದ್ದೇವೆ. ಕಾಶ್ಮೀರ ವಿದ್ಯೆ ಹಾಗು ಜ್ಞಾನದ ಉತ್ತುಂಗ ಹಾಗು ವಿಶಾಲ ದೈವಿಕ ಹಿಮಾಲಯಕ್ಕೆ ಆಶ್ರಯ ಕೊಟ್ಟಂತಹ ಒಂದು ಅದ್ಭುತ ಪ್ರದೇಶ.
ಕಾಶ್ಮೀರದ ಸೌನ್ದರ್ಯದ ಬಗ್ಗೆ ಬಹಳಷ್ಟು ಕವಿಗಳು ವಿಭಿನ್ನ ಬಗೆಯಲ್ಲಿ ವರ್ಣಿಸಿದ್ದಾರೆ.
ಇತಿಹಾಸದ ಕಥೆಗಳಲ್ಲಿ ಹಿಮಾಲಯ ಬಗ್ಗೆ ಹಾಗು ಶ್ರೀಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠದ ಬಗೆಗಿನ ಕಥೆಗಳು ನಮ್ಮನ್ನು ಕಾಶ್ಮೀರವನ್ನು ಪೂಜಿಸುವ ಪುಣ್ಯ ಕ್ಷೇತ್ರವನ್ನಾಗಿಸಿದರೆ ಮತ್ತೊಂದೆಡೆ ಸಿನೆಮಾಗಳು ಎಲ್ಲ ಋತುವನ್ನು ವಿಶೇಷವಾಗಿ ಹಿಮ ಪರ್ವತಗಳ ಮಡಿಲಲ್ಲಿ ಹರಡಿರುವ ಹಸಿರಿನ ಕಣಿವೆಗಳು, ಚಳಿಗಾಲದಲ್ಲಿ ಮುತ್ತಿನಂತೆ ಹೊಳೆಯುವ ಹಿಮಕಣಗಳು, ಬೇಸಿಗೆಯಲ್ಲಿ ಬಣ್ಣ ಬಣ್ಣದ ಪುಷ್ಪಗಳಿಂದ ಅರಳಿದ ತೋಟಗಳು—ಇವೆಲ್ಲವನ್ನು ಎಷ್ಟು ಅದ್ಭುತವಾಗಿ ಸೆರೆ ಹಿಡಿದು ನೋಡುವವರಿಗೆ ಒಂದು ಅಲೌಕಿಕ ಅನುಭವನ್ನು ಕೊಡುವುದಲ್ಲದೆ ಅಲ್ಲಿಗೆ ಆ ತಕ್ಷಣ ಹೋಗುವ ಹಂಬಲವನ್ನುಂಟುಮಾಡುತ್ತದೆ.
ದಾಲ್ ಸರೋವರದ ನೀರಿನ ಮೇಲೆ ತೇಲುವ ಹೌಸ್‌ಬೋಟ್‌ಗಳು ಮತ್ತು ಶಿಕಾರಾಗಳ ಸುಂದರ ನೋಟ ಹೃದಯವನ್ನು ಶಾಂತಗೊಳಿಸುತ್ತವೆ. ಚೀನಾರ್ ಮರಗಳ ಕೆಂಪು ಎಲೆಗಳು, ಮೋಡಗಳನ್ನು ಮುಟ್ಟುವ ಪರ್ವತ ಶಿಖರಗಳು ಮತ್ತು ಕಣಿವೆ ಮೇಲೆ ಹರಡುವ ಮಳೆಯ ಪರಿಮಳನನ್ನ ಕೂತಲ್ಲಿಯೇ ಅನುಭವಿಸುವ ದೃಶ್ಯಗಳು ನಮ್ಮನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.
“गर फिरदौस बर-रूऐ ज़मीं अस्त
हमी अस्तो, हमी अस्तो, हमी अस्त”

ಸಿನಿಮಾ ಮೂಲಕವೇ ಈ ಪ್ರದೇಶವನ್ನು ಬಹಳಷ್ಟು ಜನ ನೋಡಿದ್ದೇವೆ.
ನನ್ನ ಮೊದಲ ಕಾಶ್ಮೀರದ ದೃಶ್ಯ ಶಮ್ಮಿ ಕಪೂರ್ ‘ಯಾಹೂ’ ಎಂದು ಜೋರಾಗಿ ಹಿಮಪಾತದಲ್ಲಿ ಬಿದ್ದು ಹಾಡೋದು ನಂತರ ಕಾಶ್ಮೀರ ಕಿ ಕಲಿ ಚಿತ್ರದಲ್ಲಿ ಶರ್ಮಿಳಾ ಟ್ಯಾಗೋರ್ ನ ಸುಂದರ ಫೇರನ್ ಹಾಗು ಶಿಕಾರದಲ್ಲಿ ಹೂವುಗಳ ಮಧ್ಯೆ ಹಾಡೋದೆ ಕಣ್ಣು ಮುಂದೆ ಬರುತ್ತದೆ.
ಕಾಶ್ಮೀರವನ್ನು ಒಂದು ಕನಸುಗಳ ಲೋಕದ ರೂಪದಲ್ಲಿ ನೋಡುತ್ತಿದ್ದೆ. ಅಲ್ಲಿ ಹೋಗುವ ಆ ಸೌಂದರ್ಯವನ್ನು ಅನುಭವಿಸುವ ನನ್ನ ಕನಸು ಇನ್ನು ಕನಸಾಗಿಯೇ ಉಳಿದಿದೆ.
ಒಂದೆಡೆ ಕಾಶ್ಮೀರ ಒಂದು ಮಾಯಾಲೋಕವಾದರೆ ಮತ್ತೊಂದೆಡೆ ಅದೊಂದು ನಿಗೂಢ ನಗರಿ ಕೂಡ.
ಭಾರತದ ಸ್ವಾತಂತ್ರದ ಸಮಯದಿಂದ ಇಂದಿನ ತನಕ ರಾಜಕೀಯ ಗೊಂದಲ ಮತ್ತು ದ್ವಂದ್ವಗಳು ಮಧ್ಯೆ ಒಂದು ಸ್ಥಿರ ಪರಿಸ್ಥಿತಿ ಈ ಪ್ರದೇಶದಕ್ಕೆ ದೊರಕಿಸಿಕೊಡುವ ಹೋರಾಟ ದಶಕಗಳಿಂದ ನಡೆಯುತ್ತಲೇಯಿದೆ. ಭಗೀರಥನ ಪ್ರಯತ್ನದಿಂದ ಆಕಾಶದ ಆ ಗಂಗೆಯು ಧರೆಗೆ ಬಂದು ಇಲ್ಲಿ ನೆಲಸಿ ಜನರನ್ನು ಹರಿಸಿದ್ದಾಳೆ, ಆದರೆ ಭಗೀರಥನಂತಹ ವ್ಯಕ್ತಿಯೊಬ್ಬ ಬಂದು ಶಾಂತಿಯೆಂಬ ಗಂಗೆಯನ್ನು ಈ ಭೂಮಿಯಲ್ಲಿ ಯಾವಾಗ ಹರಿಸುತ್ತಾರೋ ಎಂಬ ಹಂಬಲ ನನಗೂ ಇದೆ..
ಅದನ್ನು ಮಡಿಯ ಪ್ರದೇಶವನ್ನಾಗಿ ಮಾಡಿದ್ದೇವೆ. ಈ ಸ್ವರ್ಗಲೋಕವನ್ನು ಭಯೋತ್ಪಾದನೆ ಹಾಗು ಆತಂಕದ ತಾಣ ಎನ್ನುವ ದೃಶ್ಯಗಳು ನಂತರ ಬಂದಂತಹ ಜನಪ್ರಿಯ ರೋಜಾ, ದಿಲ್ ಸೆ, ಕಾಶ್ಮೀರ ಫೈಲ್ಸ್ ಚಲನ ಚಿತ್ರಗಳು ಮೂಲಕ ಕಾಶ್ಮೀರವನ್ನು ಮತ್ತಷ್ಟು ಮೂಲೆಗೆ ಒತ್ತುವಂತೆ ಮಾಡಿತು.
ಕೆಲ ವರ್ಷಗಳ ಹಿಂದೆ ಬಂದ ವಿಶೇಷ ಸಿನಿಮಾ ‘ರಾಜಿ’ ಕಾಶ್ಮೀರಿ ಹೆಣ್ಣಿನಲ್ಲಿರುವ ದೇಶಪ್ರೇಮ ಧೃಢತೆ ಹಾಗು ಶೌರ್ಯದ ಪರಿಚಯ ಮಾಡಿಸಿತು.
ಭಾರತ ಸರ್ಕಾರದ ಹಾಗು ಗಡಿಯಾಚೆಗಿನ ದೇಶಗಳ ಮಧ್ಯೆಯಿರುವ ಮತ ಭೇಧಗಳ ಫಲ ಸ್ವರೂಪ ಅಲ್ಲಿಯ ಮೂಲದವರಿಗೆ ನೆಲೆಯಿಲ್ಲದಂತಾಗಿದೆ. ಎಂಬತ್ತರ ದಶಕದ ಹಿಮಾಲಯ್ ದರ್ಶನ ಧಾರವಾಹಿ ಒಂದು ಒಳ್ಳೆಯ ಉದ್ದೇಶದಿಂದ ಮಾಡಿದಂತಹ ಪ್ರಯತ್ನ. ಅಲ್ಲಿಯವರ ಜೀವನ ದಿನನಿತ್ಯದ ವ್ಯವಸಾಯ ಅಷ್ಟೇ ಅಲ್ಲ ಅಲ್ಲಿಯ ಕಲೆ ಹಾಗು ಪ್ರತಿಭೆಯ ಬಗ್ಗೆ ಭಾರತದ ಬೇರೆ ರಾಜ್ಯದ ಜನರ ಪರಿಚಯವಿರುವಂತೆ ಕಾಶ್ಮೀರಿ ನಾಗರೀಕರ ಪರಿಚಯ ಮಾಡುವ ಇತ್ತೀಚಿಗೆ ಬಿಡುಗಡೆಯಾದ ‘ ಸಾಂಗ್ಸ್ ಆಫ್ ಪ್ಯಾರಡೈಸ್’ ಒಂದು ಸರಳ ಸ್ವಚ್ಛ ಸುಂದರ ಜೀವನ ಚರಿತ್ರೆ ಆಧಾರಿತ ಚಲನ ಚಿತ್ರ. ನಾನು ಸಿನಿಮಾ ವಿಮರ್ಶಕಳಲ್ಲ. ಸಿನಿಮಾದ ತಾಂತ್ರಿಕ ಸೂಕ್ಷ್ಮತೆಗಳ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಒಂದು ಸಿನಿಮಾ ನೋಡಿದರೆ ಅದು ಬಹುಕಾಲ ನಿಮ್ಮ ಮನಸಿನ್ನಲ್ಲಿ ಉಳಿದರೆ ಆ ಸಿನಿಮಾದಲ್ಲಿ ಏನೋ ವಿಶೇಷತೆ ಇರಬೇಕು ಎಂಬ ಭಾವನೆ ನನ್ನದು. ಒಂದು ಸಿನಿಮಾ ನೋಡಲು ಯೋಗ್ಯ ಅನ್ನಿಸಿಕೊಳ್ಳಲು ಮುಖ್ಯ ಅಂಶವೇನೆಂದರೆ ಕಥೆ ಹಾಗು ಸಂಭಾಷಣೆ. ಇವೆರಡರ ಹಿಡಿತವಿರಬೇಕು. ಮಾತಿಗಳು ಮನಸ್ಸು ಮುಟ್ಟುವಂತಿರವಬೇಕು.ಈ ಸಿನಿಮಾದಲ್ಲಿ ಕೆಲ ಸಂಭಾಷಣೆ ನನಗೆ ಹಾಗೆನಿಸಿದವು.

ಪದ್ಮಶ್ರೀ ರಾಜ್ ಬೇಗಮ್ ಹೆಸರು ನಾನು ಅದಕ್ಕೆ ಮುಂಚೆ ಕೇಳಿರಲಿಲ್ಲ. ‘ಗಾನ ಕೋಗಿಲೆ ‘, ‘ಮಾಧುರ್ಯದ ಅರಸಿ’ ಹೀಗೆ ಹತ್ತು ಹಲವು ಬಿರುದಗಳು ಅಷ್ಟೇ ಅಲ್ಲ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ಕೂಡ . ರಾಜ್ ಬೇಗಮ್ ನ ಜೀವನ ಕಥೆ ಒಂದು ಆದರ್ಶ. ಪರಕೀಯರ ದಾಳಿ ಸದಾ ಭಯೋತ್ಪಾದನೆಯಲ್ಲಿ ಮುಳುಗಿದ ವಾತಾವರಣದಲ್ಲಿ ವ್ಯಕ್ತಿ, ವ್ಯಕ್ತಿತ್ವ, ಕಲೆ, ಪ್ರತಿಭೆ ಇವೆಲ್ಲವನ್ನು ಸಾಧಿಸುವುದು ಬಿಡಿ, ಊಹಿಸಿಕೊಳ್ಳುವುದು ಕೂಡ ಒಂದು ಕನಸೇ !
ಅಲ್ಲಿ ಪುರುಷರ ಸಾಮ್ರಾಜ್ಯ ! ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಸುಡು ಬೆಂಕಿಯಲ್ಲಿ ಒಂದು ಸುಂದರ ಬಳ್ಳಿಯಾಗಿ ನಾಜೂಕಾದ ಕುಸುಮಗಳ ಹೂವಿನ ರೀತಿಯಲ್ಲಿ ಹಬ್ಬಿ ಸಂಗೀತದಂತಹ ತಾಂತ್ರಿಕ ಕಲೆಯ ಸೂಕ್ಷ್ಮಗಳನ್ನು ತಿಳಿದು ಅದನ್ನು ಕಲಿತು ರಸ ರಾಗಲಹರಿಯ ಸುಗಂಧವನ್ನು ಪಸರಿಸುತ್ತಾ ಅದನ್ನೇ ವೃತ್ತಿ ಮಾಡುವುದಲ್ಲದೆ, ತಾನಿರುವ ದೇಶದ ಪರಿಸ್ಥಿಯಲ್ಲಿ ಹೋರಾಡುವುದಕ್ಕೆ ಮತ್ತೊಂದು ಮಟ್ಟದ ಧೈರ್ಯ ಹಾಗು ಮನಸ್ಥಿತಿ ಹೊಂದಿದ ದಿಟ್ಟ ಮಹಿಳೆ.

ಸಿನೆಮಾಗಳಲ್ಲಿಯೇ ಪುನಃ ಪುನಃ ಉಪಯೋಗಿಸುವ “when you want something, all the universe conspires in helping you to achieve it.”
ಈ ನುಡಿಯು ಈ ಕಥೆಯಲ್ಲಿ ನೈಜ ರೂಪ ತಾಳಿದೆ.
ಒಂದು ಬಡ ಕುಟುಂಬದಿಂದ ಬಂದ ಸಾಧಾರಣ ಮಹಿಳೆ ಒಬ್ಬ ಸಂಗೀತಗಾರನ ಮನೆಕೆಲಸದವಳಾಗಿ ದುಡಿಯುತ್ತಿದ್ದಾಗ , ಆ ಸಂಗೀತಕಾರನು ಅವರ ಪ್ರತಿಭೆಯನ್ನು ಅಕಸ್ಮಾತಾಗಿ ಗುರುತಿಸಿ ಅವಳಿಗೆ ತನ್ನ ಜ್ಞಾನವನ್ನು ಧಾರೆಯೆರೆಯುವುದಲ್ಲದೆ ಅವಳಿಗೆ ಅವಕಾಶಗಳನ್ನು ಒದಗಿಸಿ ಕೊಟ್ಟು ಒಂದು ಅದ್ಭುತ ಕಲಾಕಾರಳನ್ನಾಗಿ ಮಾಡುವುದರಲ್ಲಿ ಬಹಳ ಶ್ರಮಿಸುತ್ತಾನೆ.
ಇದಕ್ಕೆ ಪೂರಕವಾಗಿ ಸುತ್ತಲಿನ ಜನಗಳಿಂದ ಅವಳಿಗೆ ಸಿಕ್ಕ ಪ್ರೋತ್ಸಾಹ, ಅವಳ ತಂದೆಯ ಸಹಕಾರ ಈ ದಿಕ್ಕಿನಲ್ಲಿ ಅವಳಿಗೆ ಮೊದಲ ಹೆಜ್ಜೆ ಇಡಲು ಧೈರ್ಯ ತಂದಿತು. ನಂತರ ಬಂದ ಪುರುಷರು ಅಭಿಮಾನಿ ಹಾಗು ಪ್ರೇಮಿ ನಂತರ ಪತಿ ಹಾಗೆ ಅವಳು ಕಾಶ್ಮೀರ ರೇಡಿಯೋಗೆ ಕೆಲಸ ಮಾಡುವ ಅಲ್ಲಿನ ಸಹೋದ್ಯೋಗಿಗಳು ತುಂಬಿದ ಉತ್ಸಾಹ, ಹುಮ್ಮಸ್ಸು ಅವಳಿಗೆ ಆಕಾಶದೆತ್ತರ ಬೆಳೆಯಲು ಸಹಕಾರಿಯಾಯಿತು.
ಅಷ್ಟೇ ಅಲ್ಲ ತನಗೆ ಅಥವಾ ಅವಳ ಸುತ್ತಮುತ್ತಲಿನ ಜನರಿಗೆ ಆಗುವ ಅನ್ಯಾಯವನ್ನು ವಿರೋಧಿಸಿ ನ್ಯಾಯ ದೊರಕಿಸುವಲ್ಲಿ ಅವರ ಸ್ವಚ್ಛಂದ ಭಾವನೆ ಶ್ಲಾಘನೀಯ.
ಅವಳ ತಾಯಿಯು ಸಾಮಾಜಿಕ ಕಟ್ಟುಪಾಡಿನ ದಿಗ್ಬಂಧನದಲ್ಲಿ ಸಿಲುಕಿ ಮಗಳ ಪ್ರತಿಭೆ ಕಂಡರೂ ಕಾಣದಂತೆ ಅವಳನ್ನು ಕುಗ್ಗಿಸುವ ನಡುವಳಿಕೆ ಹಾಗು ಕಿರಿದಾದ ಚಿಂತನೆ ರಾಜ್ ಬೇಗಮ್ ಪ್ರತಿಭೆಯನ್ನು ತಡೆಯಲಾಗಲಿಲ್ಲ.
ಅಕ್ಕಪಕ್ಕದ ಮನೆಯವರ ಅವಹೇಳನೆ ಹಾಗು ಒಂದು ಹೆಣ್ಣು ಪ್ರಗತಿಶೀಲಳಾಗುವುದನ್ನು ನೋಡಲು ಸಹಿಸದ ಜನ ಇವಲ್ಲೆವನ್ನು ಮೆಟ್ಟಿ ನಿಂತ ಒಂದು ಸುಂದರ ಜೀವಿಯ ಕಥೆಯೇ ‘ಸಾಂಗ್ಸ್ ಒಫ್ ಪ್ಯಾರಡೈಸ್ ‘
ಅಗಾಧ ಪ್ರತಿಭೆಯುಳ್ಳ ಪ್ರದೇಶವಾಗಿರುವ ಕಾಶ್ಮೀರ, ಕಲಾವಿದರಿಗೆ ಪ್ರೋತ್ಸಾಹ ಹಾಗು ಅವಕಾಶಗಳನ್ನು ಕೊಡುವುದರಲ್ಲಿ ಎಷ್ಟು ಸಾಮರ್ಥ್ಯ ಹೊಂದಿದೆ ಅನ್ನುವುದು ಈ ಸಿನಿಮಾದ ಮೂಲಕ ತಿಳೀತು.

ಸಿನಿಮಾದ ತಾಂತ್ರಿಕತೆಯ ಬಗ್ಗೆ ಹೇಳಹೊರಟರೆ ಎಲ್ಲರ ಅಭಿನಯ ಅದ್ಭುತವಾಗಿದೆ. ಹಿರಿಯ ರಾಜ್ ಬೇಗಮ್ ಪಾತ್ರದಲ್ಲಿ ನುರಿತ ಅಭಿನೇತ್ರಿ ಸೋನಿ ರಾಜ್ದಾನ್ ಬಹಳ ಸುಂದರವಾಗಿ ಅಭಿನಯಿಸಿದ್ದಾರೆ. ಇಳಿವಯಸ್ಸಿನ ರಾಜ್ ಬೇಗಮ್ ಆಗಿ ಸಬಾ ಆಜಾದ್ ತಮ್ಮ ಪಾತ್ರವನ್ನು ಇನ್ನು ಸ್ವಲ್ಪ ಬಿಗಿಯಾಗಿ ನಿಭಾಯಿಸಬಹುದಾಗಿತ್ತು. ಕೆಲೆವೆಡೆ ಅವಳ ಭಾವನೆಯನ್ನು ವ್ಯಕ್ಪಡಿಸುವ ರೀತಿ ಇನ್ನೂ ಪ್ರಭಾವಕಾರಿಯಾಗಬಹುದಿತ್ತು. ರಾಜ್ ಬೇಗಮ್ ಸಾಧನೆಯ ಎತ್ತರಕ್ಕೆ ಬೆಳದ ಮೇಲು ತನ್ನ ಗುರುವಿನ ಮನೆಯ ಕೆಲಸ ಮಾಡುತ್ತಿದ್ದಾಗ, ಆ ಗುರುವು ನೀನು ಇನ್ನೂ ಹೀಗೆಲ್ಲ ಕೆಲಸ ಮಾಡಬಾರದು. ಒಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದೀಯ ಅಂದಾಗ ಅವಳು ಯಾವುದೇ ಕೆಲಸ ದೊಡ್ಡದು ಚಿಕ್ಕದು ಇರುವುದಿಲ್ಲ ನಾನು ಖುಷಿಯಿಂದ ಈ ಕೆಲಸ ಮಾಡುತ್ತೇನೆ ಎಂದಾಗ ಆ ಗುರುವಿನ ಕಣ್ಣಲ್ಲಿ ಹೆಮ್ಮಯ ಆ ಹೊಳಪು ತಾನು ತರಬೇತಿ ನೀಡಿದ ಶಿಷ್ಯೆ ಎಂಬ ಖುಷಿ ನೋಡುವವರಿಗೆ ಅಂತಹ ಘೋರ ಭೀತಿಯ ಪ್ರದೇಶದ ಸೂಕ್ಷ್ಮ ಭಾವನೆಯ ಮನುಷ್ಯರನ್ನು ಪರಿಚಯಿಸುತ್ತದೆ.
ಅವರ ತಾಯಿ, ತಂದೆ, ಗುರು, ಪತಿ ಇವರೆಲ್ಲರು ಕೂಡ ಅನುಭವಿ ನಟರಾದ ಕಾರಣ ಎಲ್ಲವು ನೈಜವಾಗಿ ಮೂಡಿಬಂದಿದೆ. ಕಾಶ್ಮೀರಿನಂತೆಯೇ ಅಲ್ಲಿಯ ಸಂಗೀತ ವಿಭಿನ್ನ ಹಾಗು ವಿಶಾಲ. ಮಾಧುರ್ಯ ಹಾಗು ಸೌಂದರ್ಯದಿಂದ ಅಲಂಕೃತವಾದ ಒಂದು ಸರಳ ಸ್ವಚ್ಛ ಯಾವುದೇ ಕಲ್ಮಶವಿಲ್ಲದ ಪವಿತ್ರ ದೇವನಾದ ಅನಿಸುತ್ತದೆ.
ಕಾಶ್ಮೀರಿ ಭಾಷೆಯ ಸೊಗಡೇ ಬೇರೆ! ಹಿಂದಿ ಉರ್ದು ಕಿಂತಬೇರೆಯಾಗಿದ್ದು ಈ ಚಲಚಿತ್ರದಲ್ಲಿ ಸಲೀಲದಂತೆ ಹರಿದಿದೆ.
ಯಾವುದೇ ದೃಶ್ಯವು ಅತೀಯನಸದೆ ಯಾವುದೊಂದು ಭಾವನೆಯನ್ನು ಅತಿರೇಕಕ್ಕೆ ಕರೆದೊಯ್ಯದೆ ಅವಾಚ್ಯ ಅಶ್ಲೀಲತೆಯ ಸುಳಿವಿಲ್ಲದ ಒಂದು ಸರಳ ಸಿನಿಮಾ. ಕಾಶ್ಮೀರವನ್ನು ವಿಭಿನ್ನ ದೃಷ್ಟಿಯಲ್ಲಿ ತೋರಿಸಿದ ಕೆಲವೇ ಸಿನೆಮಾಗಳಲ್ಲಿ ಇದು ಒಂದು.
ಒಮ್ಮೆ ನೋಡಬಹುದು.

Pic courtesy: Internet

ವಿಜಯ್ ಖುರ್ಸಾಪೂರ ಬರೆದ ಕವಿತೆಗಳು

ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್ ಆಗಿರುವ ವಿಜಯ್ ಖುರ್ಸಾಪೂರ, ಹುಟ್ಟಿದ ಊರು ಶಿಗ್ಗಾವಿ (ಜಿಲ್ಲೆ ಹಾವೇರಿ ), ಓದಿದ್ದು ಧಾರವಾಡ, ಗದಗ. ಬೆಂಗಳೂರು. ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ ಮಾಡಿ, ಅವರು ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಅವರ ಕೆಲವು ಕವನಗಳು ಇಲ್ಲಿವೆ, ನಿಮ್ಮ ಓದಿಗೆ. ನಿಮ್ಮ ಪ್ರೋತ್ಸಾಹ ಮತ್ತು ವಿಮರ್ಶೆ ಅವರಿಗೆ ಇನ್ನಷ್ಟು ಬರೆಯಲು ಮತ್ತು ತಿದ್ದಿಕೊಳ್ಳಲು ಅನುವುಮಾಡಿಕೊಡುತ್ತದೆ. – ಸಂ 

ಹಣತೆ

ಬೆಳಗಿದಾಗಲೆಲ್ಲ ಬೆಳಕು
ತನ್ನ ತಾ ಸುಟ್ಟರೂ ಜಗಕೆಲ್ಲ
ತೋರುತಿಹುದು ದಾರಿ,
ನಿರಂತರವಾಗಿ ಹೊಡೆದಾಡುತ
ಕತ್ತಲನು ಕಳೆಯಲು ಹೆಣಗಾಡುತಿದೆ..

ಸುತ್ತಲೂ ಕತ್ತಲು ಕವಿದ
ಬಡ ಹೃದಯಗಳಿಗೆ
ಬೆಳಕಿನ ಕಣ್ಣಂತೆ
ನಾಳೆಯ ಮುಟ್ಟುವ
ಭರವಸೆಯ ಆಸರೆಯಂತೆ
ಬೆಳಗುತಿದೆ ತನ್ನ ತಾ ಸುಡುತ

ದಾರಿ ತಪ್ಪಿಸುವುದಿಲ್ಲ
ನಂಬಿ ಹಿಂಬಾಲಿಸಿ ನೆಡೆದರೆ
ತುಂಬಿದ ಆಸೆಯ
ಕಣ್ಣುಗಳಿಗೆ ಶಾಂತಿಯ ಸಿರಿ
ತೋರುತ ಬೆಳಗಿದೆ
ತನ್ನ ತಾ ಸುಡುತ

ಮೇಲು ಕೀಳು ವರ್ಣ
ಸಂಪತ್ತಿಗೆ ಬದಲಾಗದ
ಬೆಳಕನು ಚಲ್ಲುತ ಸಾಗಿದೆ
ಕತ್ತಲೆಯ ಹಿಮ್ಮೆಟ್ಟಲು
ದುಡಿಯುತಿದೆ
ತನ್ನ ತಾ ಸುಡುತ.

ನೆಮ್ಮದಿಯ ಉಸಿರು

ಬೆಳಕ ನಾಚಿಸುವ
ನಗುವೊಂದು ಹರೆದಿದಿತ್ತು
ಕಲ್ಲೆದೆಯ ನಾಟಿ
ಹೃದಯಾನ ಮೀಟಿ
ನಡುಕಾನ ಹುಟ್ಟಿಸಿತ್ತು

ಕಾಣಲಾರದ ಚಂದಕೆ,
ಬೆರಗಾಗಿ ಕಣ್ಣು ಅರಳಿತ್ತು
ಹೊಸ ರಾಗದ ಮದ್ದಳೆ
ಮನಸಲ್ಲಿ ಮೂಡಿ ಎದೆ
ಗೂಡು ಕನಸೊಂದ ಕಟ್ಟಿತ್ತು

ಕತ್ತಲೆಯ ಮನಕೆ
ಕಿಟಕಿಯ ಮೂಲೆಯಲಿ
ನಂಬಿಕೆಯ ಆಸರೆ ಹನಿ
ಹನಿಯಾಗಿ ಸೊರಿತ್ತು
ಬೆಚ್ಚಗಿನ ಸೂರಲ್ಲಿ
ಹೊದಿಕೆಯ ಅಡಿಯಲ್ಲಿ
ನೆಮ್ಮದಿಯ ಉಸಿರು ಬಿಟ್ಟಿತ್ತು

ಆಸೆಯ ಗುರಿ

ಹಚ್ಚ ಹಸುರಿನ ತೋಟದಲ್ಲಿ, ಅತ್ತಿತ್ತ
ಹರಿದಾಡಿದ್ದ ಚಿಟ್ಟೆಯನು,
ಅರಳಿದ್ದ ಸೊಗಸೊಂದು ಒಲವಿನ
ನಗೆಯ ಬೀರಿ ಕರೆಯುತಿರಲು
ಆಗದಿರಲಿ ಕನಸಿನ ಸುಲಿಗೆ; ತೆರೆ
ಬಿಳದಿರಲಿ, ಇನ್ನೇನು ಉಲ್ಲಾಸದಿ ತೇಲುವ ಆಸೆಯ ಗುರಿಗೆ

ಸಾಧನೆಯ ಫಲಗಳೆಲ್ಲ ಕಣ್ಮುಂದೆ ಕಂಡು,
ಸಂತಸದಲಿ ಮನ, ಗರಿ ಬಿಚ್ಚಿ
ಕುಣಿಯಲು ಅಣಿಯಾಗುತಿರಲು
ಆಗದಿರಲಿ ಕನಸಿನ ಸುಲಿಗೆ; ತೆರೆ
ಬಿಳದಿರಲಿ, ಇನ್ನೇನು ಉಲ್ಲಾಸದಿ ತೇಲುವ ಆಸೆಯ ಗುರಿಗೆ

ನಿದ್ದೆ

ಗೊತ್ತು ಗುರಿ ಇಲ್ಲದೆ
ನಾ ಸುಮ್ಮನೆ ಗುಮ್ಮನಂತೆ
ಸಾಗುತ್ತಿರಲು ನಿನ್ನ
ದರುಶನದ ಭಯಕೆಯೇ
ನನಗೆ ಸ್ಫೂರ್ತಿ .

ಹೊತ್ತು ಹೋದಂತೆ
ದೇಹ ಸೋತು,
ನಿನಗಾಗಿ ಅರಸಿ ನಾ
ಸೊರಗಿರುವೆ ಪೂರ್ತಿ

ತಡವಾದರೂ ಚಿಂತೆಯಿಲ್ಲ
ಮಲಗುವ ವೇಳೆ ಮೀರಿದರೆ
ಹಿತವಲ್ಲ,
ಮರೆಯದೆ ಬಂದು
ಆವರಿಸಿ ಬೆಳಗು ಕೀರ್ತಿ

ಭಾವನೆಗೆ ಬೆಲೆ

ಸಂತಸವ ಅರಸಿ ಬಾಳನ್ನು ಸವೆಸಿ
ನೆಡೆಯುತ್ತ ಹೋದ ದಾರಿಯಲಿ
ಕಲ್ಲು ಮುಳ್ಳು ಗಳೇ ಹೆಚ್ಚು ಇಲ್ಲಿ
ದಾಹ ಮರೆತು ಹೆಜ್ಜೆ ಮುಂದಿಡುತ್ತ
ನೆಡೆದರೂ ಹನಿ ನೀರ ಎರಚುವರ
ಸಂಖ್ಯೆ ಅತೀ ಕಡಿಮೆ ಇಲ್ಲಿ
ಬಿದ್ದಾಗ ಚುಚ್ಚುತ್ತ ಗೆದ್ದಾಗ
ಕಿಚ್ಚಿನಲ್ಲಿ ಹೊರಳಾಡುವರರ
ಸಂಖ್ಯೆಗೇನು ಕಮ್ಮಿ ಇಲ್ಲಿ?
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ

ಕ್ಷಣಿಕ ಸುಖಕ್ಕೆ ಬೆಲೆ ಕೊಟ್ಟು
ನಂಬಿದವರ ಕೈ ಬಿಟ್ಟು
ಮತ್ತೆ೦ಬ ಮದವ ಕುಡಿದು
ಕಾಣದ ಆಸೆಗೆ ತುಡಿದು
ಮೋಸ ಮಾಡುವವರೇ ಹೆಚ್ಚು ಇಲ್ಲಿ
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ

ಅಳುತಿರಲು ಹೃದಯ ಮೌನದಲಿ
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ?

ಹಣತೆ ಮತ್ತು ಬೆಳಕು  

ಡಾ ಜಿ ಎಸ್ ಶಿವಪ್ರಸಾದ್

ಈ ವಾರದ ಸಂಚಿಕೆಯಲ್ಲಿ ಹಣತೆ ಮತ್ತು ಬೆಳಕು ಎಂಬ ಬರಹವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಹಣತೆ ಮತ್ತು ಬೆಳಕು ಪ್ರಪಂಚದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ವಿಜೃಂಭಿಸಿದೆ. ಕನ್ನಡ ಸಾಹಿತ್ಯದಲ್ಲಿ ಶತಮಾನಗಳಿಂದಲೂ ಈ ಬೆಳಕು, ಹಣತೆ ಎಂಬ ಪ್ರತಿಮೆಯನ್ನು (ದೀಪ, ದೀವಿಗೆ, ಪ್ರಣತಿ ಜ್ಯೋತಿ ಇತ್ಯಾದಿ ಹೆಸರಿನಲ್ಲೂ) ಬಳಸಲಾಗಿದೆ. ಈ ಒಂದು ಹಿನ್ನೆಲೆಯಲ್ಲಿ ಈ ಬರಹ ಮೂಡಿಬಂದಿದೆ. ಈಗ ತಾನೇ ದೀಪಾವಳಿ ಮುಗಿದಿದೆ, ನೀವು ನಿಮ್ಮ ಹಣತೆಯನ್ನು ಉಜ್ಜಿ ತೊಳೆದು ಎತ್ತಿಡುತ್ತಿರುವ ಸಂದರ್ಭದಲ್ಲಿ ಈ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವು ಎಲ್- ಈ- ಡಿ ಲೈಟುಗಳನ್ನು ಬಳಸಿದ್ದರೂ ಚಿಂತೆಯಲ್ಲ. ಈ ಹಣತೆಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳಿ. ಈ ಹಣತೆಯಲ್ಲಿ ನೀವು ಬೆಳಕನ್ನು ಕಂಡಿದ್ದರೆ ಹಣತೆ ಹಚ್ಚಿದ ನಾನು ತೃಪ್ತ. ನಿಮ್ಮ ಬೆಳಕನ್ನೂ ಹಂಚಿಕೊಳ್ಳಿ. 

-ಸಂ

ಕನ್ನಡ ಸಾಹಿತ್ಯದಲ್ಲಿ ಹಣತೆ, ಬೆಳಕು ಎಂಬ ವಿಷಯವಸ್ತುವನ್ನು, ಕಲ್ಪನೆಯನ್ನು ನೂರಾರು ವರ್ಷಗಳಿಂದ ಕವಿ ಮತ್ತು ಕಥೆಗಾರರು ಬಳಸುತ್ತ ಬಂದಿದ್ದಾರೆ. ಅನಾದಿಕಾಲದಿಂದಲೂ ಬೆಂಕಿ ಮತ್ತು ಅದು ಹೊರ ಹೊಮ್ಮುವ ಬೆಳಕು ನಮ್ಮ ಆಸಕ್ತಿಯನ್ನು ಕೆರಳಿಸಿದೆ. ಅಲ್ಲಿ ಒಂದು ಆಕರ್ಷಣೆಯಿದೆ, ಸೆಳೆತವಿದೆ. ಅದರ ಬಗ್ಗೆ ಭಯ ಗೌರವಗಳಿವೆ. ಇವು ಮನುಷ್ಯವರ್ಗವಲ್ಲದೆ ಇತರ ಜೀವಿಗಳಲ್ಲೂ ಇದೆ. ‘ಬೆಳಕು’ ಎಂಬ ಶಬ್ದ ಹಲವಾರು ಭಾವನೆಗಳನ್ನು ಉಂಟುಮಾಡುತ್ತದೆ. ಕತ್ತಲು ಮತ್ತು ಬೆಳಕಿನ ನಡುವೆ ಒಂದು ವೈರುಧ್ಯವಿದೆ.  'ಬೆಂಕಿಯಲ್ಲಿ ಅರಳಿದ ಹೂ' ಎನ್ನುವ ಅಭಿವ್ಯಕ್ತಿಯಲ್ಲೇ ಅದೆಷ್ಟೋ ಭಾವನೆಗಳನ್ನು, ವೈರುಧ್ಯವನ್ನು ಕಾಣಬಹುದು. ನಮ್ಮ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವುಗಳ ನಮ್ಮ ಕಾವ್ಯ ಕಲ್ಪನೆಗಳಲ್ಲಿ ವಿಜೃಂಭಿಸಿವೆ. ಪ್ರಪಂಚದ ನಾನಾ ಭಾಷೆಗಳ ಸಾಹಿತ್ಯದಲ್ಲಿ ಹಣತೆ ಅಥವಾ ದೀಪವನ್ನು ಒಂದು ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ಬಳಸಿಕೊಂಡು ಬೆಳಕಿನ ಬೆಲೆಯನ್ನು ಅದರ ಹಿರಿಮೆಯನ್ನು ಕುರಿತು ಕವಿ ಕಥೆಗಾರರು ಬರೆದಿದ್ದಾರೆ. 

ಹಣತೆ ಬೆಳಕಿನ ಸಂಕೇತ ಅಷ್ಟೇ ಅಲ್ಲ ಅದು ಅರಿವಿನ ಪ್ರತಿಮೆಯಾಗಿಯೇ ಹೆಚ್ಚುನಿಲ್ಲುವುದು. ಆ ಬೆಳಕಿನಲ್ಲಿ ಒಂದು ಶಕ್ತಿ ಇದೆ, ಆದುದರಿಂದಲೇ ಅದನ್ನು ನಾವು ದೇವ, ದೇವತೆಗಳಿಗೆ, ಅಳಿದವರಿಗೆ ನೆನಪಿನ ಗೌರವದ ಸೂಚಕವಾಗಿ ಬೆಳಗುತ್ತೇವೆ. ದೀಪವನ್ನು ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಶುರುಮಾಡುತ್ತೇವೆ. ಆ ಜ್ಯೋತಿಯಲ್ಲಿ ಪವಿತ್ರತೆಯನ್ನು ಕಂಡು ಮಂಗಳಾರತಿಯಾಗಿ ಸ್ವೀಕರಿಸುತ್ತೇವೆ. ಚರ್ಚುಗಳಲ್ಲಿ ಮೇಣದ ಬತ್ತಿಯನ್ನು ಹಚ್ಚುತ್ತೇವೆ. ಕಡ್ಡಿ ಗೀಚಿದ ಕೂಡಲೇ ಶೂನ್ಯದಿಂದ ಹಠಾತ್ತನೆ ಮೂಡುವ ಬೆಂಕಿ, ಜ್ಯೋತಿ, ಬೆಳಕು ನಿಗೂಢವಾದದ್ದು ಮತ್ತು ಅತ್ಯಂತ ವಿಸ್ಮಯಕಾರಿ. ಒಂದು ಹಣತೆಯಿಂದ ಇನ್ನೊಂದು ಹಣತೆಗೆ ಹಬ್ಬುತ್ತಾ ಹೆಚ್ಚಾಗುವ ಬೆಳಕಿನ ಗುಣ ಮೆಚ್ಚುವಂತಹುದು. ಈ ಹಣತೆಯಲ್ಲಿ ನಮ್ಮ ನಿಮ್ಮ ಬದುಕಿನಂತೆ ಕೊಂಡಿಗಳಿರುತ್ತವೆ. ಒಂದು ಇನ್ನೊಂದನ್ನು ಅವಲಂಬಿಸಿರುತ್ತದೆ. ಹಣತೆಯಲ್ಲಿ ತೈಲವಿರಬೇಕು, ಆ ತೈಲದಲ್ಲಿ ಬತ್ತಿ ಕುಳಿತಿರಬೇಕು, ತೈಲವಿರುವವರೆಗೂ ಆ ಬತ್ತಿ ಉರಿಯುವುದು. ವಚನ ಸಾಹಿತ್ಯದಲ್ಲಿ ಅಲ್ಲಮ ಪ್ರಭುಗಳು ತಮ್ಮ ವಚನಗಳಲ್ಲಿ ಅನೇಕ ಉತ್ಕೃಷ್ಟ ಉಪಮೆಗಳನ್ನು ಬಳಸಿದ್ದಾರೆ. ಅವರು ಹಣತೆಯನ್ನು ಪ್ರಣತಿ ಎಂದು ಕರೆದಿದ್ದು, ತೈಲ ಎಣ್ಣೆ ಬತ್ತಿಯ ಸಂಬಂಧವನ್ನು ತಮ್ಮ ಒಂದು ವಚನದಲ್ಲಿ ಬಳಸಿದ್ದಾರೆ, ಅದು ಹೀಗಿದೆ;

ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯು ಬೆಳಗುವೆಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ?

ಎಣ್ಣೆ, ಬತ್ತಿ, ಮತ್ತು ಹಣತೆಯ ಬಗ್ಗೆ ಸಿನಿಮಾ ಸಾಹಿತ್ಯದಲ್ಲಿ ಮೂಡಿಬಂದ ಒಂದೆರಡು ಸಾಲು ಸೊಗಸಾಗಿದೆ. 'ಕನ್ನಡ ಕುಲದೇವಿ ಕಾಪಾಡು ತಾಯಿ' ಎಂದು ಶುರುವಾಗುವ ಸ್ಕೂಲ್ ಮಾಸ್ಟರ್ ಗೀತೆಯಲ್ಲಿ ವಿಜಯ ಭಾಸ್ಕರ್ ಬರೆದ ಸಾಲುಗಳು ಹೀಗೆದೆ;

"ಯಾವ ಎಣ್ಣೆಯಾದರೂ ಬೆಳಗುವುದು ಗುರಿಯೆಂಬ
ತತ್ವವನು ನೀನೆತ್ತಿ ತೋರು ಬಾ ತಾಯೆ"
ನಮ್ಮ ಅನಿವಾಸಿ ಬಳಗದ ಲೇಖಕ ಕವಿ ಡಾ ಕೇಶವ್ ಕುಲಕರ್ಣಿಯವರು ದೀಪಾವಳಿಯಂದು ಹಂಚಿಕೊಂಡ ಕವಿತೆಯೊಂದು ಹೀಗಿದೆ;
ಜಗಮಗಿಸುವ 
ಕಣ್ಣುಕುಕ್ಕುವ
ನೂರಾರು ಬಣ್ಣ ಬದಲಿಸುವ
ಈ ಸಾಲು ಸಾಲು
ಎಲ್-ಈ-ಡಿ ಲೈಟುಗಳ ನಡುವೆ
ನನ್ನ ಹಣತೆ ಯಾರಿಗೂ ಕಾಣುವುದಿಲ್ಲ
ಎಂದು ನನಗೆ ಚೆನ್ನಾಗಿ ಗೊತ್ತು

ಆದರೂ

ತವರಿನಿಂದ ತಂದ ಬತ್ತಿಗೆ
ಊರಿಂದ ತಂದ ತುಪ್ಪ ಹಾಕಿ
ಅಜ್ಜಿಯಿಂದ ಬಳುವಳಿಯಾದ ಹಣತೆಗೆ
ಮಗನಿಂದ ದೀಪ ಹಚ್ಚಿಸಿ
ದೀಪಾವಳಿ ಆಚರಿಸುತ್ತೇನೆ

ಇಲ್ಲಿ ಆಧುನಿಕ ಎಲ್-ಈ-ಡಿ ದೀಪಗಳನ್ನು ಮತ್ತು ಹಳೆಯ ಹಣತೆಯನ್ನು ಜೊತೆಗಿಟ್ಟು ಹಳತು ಮತ್ತು ಹೊಸತರ ನಡುವಿನ ಸಂಬಂಧವನ್ನು ಕವಿ ಕೇಶವ್ ಅನ್ವೇಷಿಸಿದ್ದಾರೆ. ಎಲ್ -ಈ -ಡಿ ಲೈಟುಗಳಿಗೆ ಬಣ್ಣ ಬದಲಿಸುವ ಗುಣವಿದೆ, ಅಲ್ಲಿ ತೋರ್ಪಡಿಕೆ ಇದೆ. ಅಲ್ಲಿ ಬಹಿರಂಗ ಪ್ರದರ್ಶನಕ್ಕೆ ಹೆಚ್ಚು ಅವಕಾಶವಿದೆ. ಇವುಗಳನ್ನು ಹತ್ತಿರ ಹೋಗಿ ಸ್ಪರ್ಶಸಿದಾಗ ಮಾತ್ರ ಇವು ತಣ್ಣಗೆ ಉರಿಯುವ ಲೈಟುಗಳೇ ಹೊರತು ಇಲ್ಲಿ ಬೆಚ್ಚನೆಯ ಅನುಭವವಿಲ್ಲ ಎಂಬುದು ತಿಳಿಯುತ್ತದೆ.  ಎಣ್ಣೆ ಬತ್ತಿ ಇರುವ ಹಳೆ ಹಣತೆಗೆ ಘನತೆ, ಬಾಂಧವ್ಯ, ಪರಂಪರೆ, ಒಂದಿಷ್ಟು ಇತಿಹಾಸ, ಅನುಭವ, ಮತ್ತು ಬಣ್ಣ ಬದಲಿಸಿದಂತೆ ಒಂದೇ ರೀತಿಯ ಬೆಳಕನ್ನು ನೀಡುವ ಸಾಮರ್ಥ್ಯವಿದೆ. ಎಣ್ಣೆ ಇರುವವರೆಗೂ ಶ್ರದ್ಧೆಯಿಂದ ಉರಿಯುವ ಮತ್ತು ಸುಡುವ ಶಕ್ತಿ ಇದೆ. ಅದರ ಹಿಂದೆ ಅನೇಕ ಕಥೆ, ಕವನಗಳಿವೆ. ಈ ಬಣ್ಣ ಬದಲಿಸುವ, ಬೂಟಾಟಿಕೆ ಪ್ರಪಂಚದಲ್ಲಿ ಅಬ್ಬರಗಳ ನಡುವೆ ಹಣತೆ ಕಾಣದಾಗಿದೆ ಎಂಬುದು ವಿಷಾದದ ಸಂಗತಿ. ಈ ಕವನ ನಮ್ಮ ವಾಸ್ತವ ಬದುಕಿಗೆ ಕನ್ನಡಿ ಹಿಡಿದಿದೆ.
ಬಿ ಎಂ ಶ್ರೀ ಅವರು 'ಕರುಣಾಳು ಬಾ ಬೆಳಕೇ' ಎಂಬ ಅನುವಾದಿತ ಕವಿತೆಯಲ್ಲಿ ಮುಸಿಕಿದ ಮಬ್ಬಿನಲ್ಲಿ ಕೈ ಹಿಡಿದು ನಡೆಸುವಂತೆ ಬೆಳಕನ್ನು ಬೇಡಿಕೊಳ್ಳುವ ಪ್ರಾರ್ಥನೆಯಿದೆ. ಈ ಮೂಲ ಕವಿತೆಯನ್ನು ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಪಾದ್ರಿ ಮತ್ತು ಕವಿ ಜಾನ್ ಹೆನ್ರಿ ನ್ಯೂಮನ್ Lead, Kindly Light ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾನೆ. ಈ ಕವಿತೆಯನ್ನು ಬರೆದ ಹಿನ್ನೆಲೆ ಎಂದರೆ 1833 ಯಲ್ಲಿ ನ್ಯೂ ಮ್ಯಾನ್ ಇಟಲಿಯ ಪಲೆರ್ಮೊ ಎಂಬ ನಗರದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದು ಆತ ಇಂಗ್ಲೆಂಡಿಗೆ ತುರ್ತಾಗಿ ಮರಳಬೇಕಾಗಿರುತ್ತದೆ. ಅವನು ಹಿಂದಿರುಗುವಾಗ ಸಮುದ್ರಮಾರ್ಗದಲ್ಲಿ ಮಬ್ಬು ಕವಿದು ಗಾಳಿ ಸ್ಥಬ್ದವಾಗಿ ಹಡಗು ಚಲಿಸಲಾರದೆ ನಿಂತುಕೊಂಡು ಬಿಡುತ್ತದೆ. ಆ ಒಂದು ಅನಿಶ್ಚಿತ ಸನ್ನಿವೇಶದಲ್ಲಿ ನ್ಯೂಮನ್ ಈ ಕವಿತೆಯನ್ನು ರಚಿಸಿದ್ದಾನೆ. ಅದರ ಅನುವಾದ ಹೀಗಿದೆ; 
ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ 
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯಾ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ
ಈ ಕವಿತೆಯನ್ನು ಮುಂದಕ್ಕೆ ವಿಸ್ತರಿಸಿನೋಡುವುದಾದರೆ, ಈ ಕವಿತೆಯಲ್ಲಿ ನ್ಯೂಮನ್ ತನ್ನ ನಂಬಿಕೆಗಳನ್ನು ಮತ್ತೆ ಅವಲೋಕಿಸುತ್ತಾನೆ. ಕರುಣಾಳು ಬೆಳಕು ಇಲ್ಲಿ ಅದ್ವಿತೀಯವಾದ, ಅಗೋಚರವಾದ  ಶಕ್ತಿ ಅಥವಾ ದೈವತ್ವದ  ಕಲ್ಪನೆ.

ಇದು ಒಂದು ಅಂತರಂಗದ ಅನ್ವೇಷಣೆಯೂ ಆಗಿದೆ. ನನ್ನಲ್ಲಿ ದೂರದೃಷ್ಟಿಯನ್ನಿಡಿಸು ಆದರೆ ನನಗೆ ಈಗ ಬೇಕಾಗಿರುವುದು ಸಣ್ಣ ಹೆಜ್ಜೆ, ನನಗೆ ಅದೇ ಸಾಕು ಎನ್ನುವ ಸಾಲುಗಳು ನಮ್ಮ ಮನುಷ್ಯ ಪ್ರಯತ್ನದ ಇತಿಮಿತಿಗಳನ್ನು ಇಲ್ಲಿ ನೆನಪಿಸುತ್ತದೆ. ದೂರದ ತಾರೆಗಳನ್ನು ಹಿಡಿಯುವುದಕ್ಕೆ ಮುನ್ನ ಕೈಯಲ್ಲಿರುವ ಹಣತೆಗೆ ಬತ್ತಿ, ಎಣ್ಣೆಯನ್ನು ಹುಡುಕುವುದು ಸರಿಯಾದ ವಿಚಾರವೆಂದು ಇನ್ನೊಬ್ಬ ಕವಿ ಹೇಳುತ್ತಾರೆ. ಹಿಂದೆ ನಾನು ನಿನ್ನನ್ನು ಬೇಡದೆ ಹೋದೆ, ಇದುವರೆವಿಗೂ ನನ್ನ ದಾರಿಯನ್ನು ನಾನೇ ಕಂಡುಕೊಳ್ಳಲು ಪ್ರಯತ್ನಿಸಿದೆ ಎನ್ನುವ ಸಾಲುಗಳು ಸ್ವಪ್ರಯತ್ನದ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಎತ್ತಿಹಿಡಿಯುತ್ತದೆ. ಎಲ್ಲ ಸಮಸ್ಯೆಗಳಿಗೆ ನಂಬಿಕೆ ಅಷ್ಟೇ ಸಾಲದು, ನಮ್ಮ ಬದುಕನ್ನು ನಾವೇ ನಡೆಸಬೇಕು ಎಂಬುದು ನಿಜ. ನಮ್ಮಲ್ಲಿರುವ ಗರ್ವ ಅಹಂಕಾರ ಮೂರ್ಖತನ ನಮ್ಮ ಆತ್ಮವಿಶ್ವಾಸಗಳನ್ನು ಹಿಡಿದಿಟ್ಟಿರುತ್ತವೆ ಆದರೆ ಯಾವುದೋ ಒಂದು ಆತಂಕದ ಘಳಿಗೆಯಲ್ಲಿ ಅದು ಸಾಲದೇ ಹೋಗಬಹುದು. ಇಂತಹ ಒಂದು ಸನ್ನಿವೇಶದಲ್ಲಿ ಆ ಕರುಣಾಳು ಆ ಬೆಳಕು ನಮ್ಮನ್ನು ಕಷ್ಟಗಳೆಂಬ ಅಡವಿ, ಬೆಟ್ಟ ಮತ್ತು ಹೊಳೆಗಳನ್ನು ದಾಟಿಸಿ ಕೈ ಹಿಡಿದು ನಡೆಸಬೇಕಾಗುತ್ತದೆ. ಇರುಳು ಕಳೆದು ಆ ದೈವತ್ವದ ಚಹರೆಗಳು ಕೊನೆಗೂ ಕಾಣಿಸಿಕೊಂಡವು ಎಂಬ ಹಾರೈಕೆಯಲ್ಲಿ ಈ ಕವನ ಮುಕ್ತಾಯಗೊಳ್ಳುತ್ತದೆ. ಈ ಕವಿತೆ ಆಂಗ್ಲ ಭಾಷೆಯ ಸ್ತುತಿ ಗೀತೆಯಾಗಿ ಜನಪ್ರೀಯವಾಗಿದೆ. ಈ ಕವಿತೆಯನ್ನು ಇಂಗ್ಲೆಂಡಿನಲ್ಲಿ ಕಲ್ಲಿದ್ದಲು ಗಣಿ ಕುಸಿದಾಗ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಗಣಿ ಕೆಲಸಗಾರರು ಈ ಗೀತೆಯನ್ನು ಹಾಡಿದ್ದರು. ಟೈಟಾನಿಕ್ ಎಂಬ ಹಡಗು ಅಟ್ಲಾಂಟಿಕ್ ಸಮುದ್ರದ ನಡುವೆ ಮುಳುಗಡೆಯಾಗುವ ಸಮಯದಲ್ಲಿ ಇನ್ನೊಂದು ದೊಡ್ಡ ರೆಸ್ಕ್ಯೂ ಹಡಗಿನ ನಿರೀಕ್ಷೆಯಲ್ಲಿ ಚಿಕ್ಕ ರೆಸ್ಕ್ಯೂ ದೋಣಿಯಲ್ಲಿ ನಡುರಾತ್ರಿ ಕಳೆದ ಪಯಣಿಗರು ಈ ಸ್ತುತಿ ಗೀತೆಯನ್ನು ಹಾಡುತ್ತ ಇರುಳನ್ನು ನೂಕಿದರು. ನಮ್ಮ ಭಾರತದ ಹಲವಾರು ಶಾಲಾ ಕಾಲೇಜುಗಳಲ್ಲಿ ಈ ಸ್ತುತಿಗೀತೆಯನ್ನು ದೈನಂದಿಕ ಪ್ರಾರ್ಥನೆಯಾಗಿ ಅಳವಡಿಸಿಕೊಳ್ಳಲಾಗಿದೆ. ಇದು ಕನ್ನಡ ಭಾವಗೀತೆಯಾಗಿಯೂ ಜನಪ್ರೀಯವಾಗಿದೆ.

ಬೆಳಕು ಆರಿದಾಗ ಆವರಿಸುವ ಅಂಧಕಾರ ತಲ್ಲಣವನ್ನು ಉಂಟುಮಾಡುವಂತಹುದು. ಬೆಳಕು ಆರುವುದನ್ನು ಸಾವಿನೊಂದಿಗೆ ರೂಪಕವಾಗಿ ಸಾಹಿತ್ಯದಲ್ಲಿ ಮತ್ತು ಚಿತ್ರರಂಗದಲ್ಲಿ ಬಳಸಲಾಗುತ್ತಿದೆ. ಅದು ಮತ್ತೆ ಆವರಿಸುವ ಅಜ್ಞಾನದ ಸಂಕೇತವೂ ಆಗಿರಬಹುದು. ಖ್ಯಾತ ಕವಿ ಕೆ ಎಸ್ ನರಸಿಂಹಸ್ವಾಮಿ ಅವರ ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಎಂಬ ಪ್ರಖ್ಯಾತ ಕವಿತೆಯ ಈ ಹಿನ್ನೆಲೆಯಲ್ಲಿ ಈ ಕೆಳಗಿನ ಸಾಲುಗಳನ್ನು ಇಲ್ಲಿ ಗಮನಿಸುವುದು ಸೂಕ್ತ:

ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ ಮುಳುಗದಿರಲಿ ಬದುಕು

ಕೆ ಎಸ್ ಎನ್ ಅವರ ಕವಿತೆಗಳ ತುಂಬಾ ಜೀವನೋತ್ಸಾಹ, ಜೀವನ ಪ್ರೀತಿ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ಆ ಹಿನ್ನೆಲೆಯಲ್ಲೂ ಈ ಸಾಲುಗಳನ್ನು ನಾವು ಅರ್ಥೈಸಿಕೊಳ್ಳ ಬಹುದು. ಈ ಕವಿತೆ ಹಲವಾರು ಆಶಯಗಳಿಂದ ತುಂಬಿದೆ.

ಪುರುಷ ಪ್ರಧಾನವಾದ ಸಮಾಜದಲ್ಲಿ, ಶೋಷಣೆಗೆ ಒಳಗಾಗಿ, ಎಲ್ಲರಿಂದ ತಿರಸ್ಕೃತಳಾಗಿ ಪ್ರೀತಿಯನ್ನು ಕಳೆದುಕೊಂಡು ತನ್ನಲ್ಲಿನ ಆತ್ಮವಿಶ್ವಾಸವೆಂಬ ಎದೆಯ ಹಣತೆ ಸಂಪೂರ್ಣವಾಗಿ ಬತ್ತಿಹೋಗಿ ಬದುಕಿನಲ್ಲಿ ಕವಿಯುವ ಅಂಧಕಾರವನ್ನು ನಿಭಾಯಿಸಲಾಗದ ದಾರುಣ ಕಥೆಯಲ್ಲಿ ಲೇಖಕಿ ಬಾನು ಮುಷ್ತಾಕ್ ಹಣತೆ, ಎದೆಯ ಹಣತೆ ಎಂಬ ರೂಪಕವನ್ನು ಬಳಸಿದ್ದಾರೆ. ಅದು ಕಥೆಯ ಶೀರ್ಷಿಕೆಯೂ ಆಗಿದೆ. ಬದಲಾಗುವ ಸನ್ನಿವೇಶದಲ್ಲಿ ಛಲವನ್ನು ಮತ್ತೆ ರೂಢಿಸಿಕೊಂಡು ಎದ್ದುನಿಲ್ಲುವ ನಾಯಕಿಯೊಳಗಿನ ಎದೆಯ ಹಣತೆ ಮತ್ತೆ ಹತ್ತಿ ಉರಿಯಿತೇ ಎನ್ನುವುದನ್ನು ಓದುಗರಿಗೆ ಬಾನು ಬಿಟ್ಟಿರುತ್ತಾರೆ. ಇದೇ ಕೃತಿಯನ್ನು ದೀಪಾ ಬಾಷ್ಟಿ ಅವರು ಇಂಗ್ಲಿಷಿಗೆ ಅನುವಾದಿಸಿ 'ಹಾರ್ಟ್ ಲ್ಯಾಂಪ್' ಎಂಬ ಕೃತಿಗೆ ಬುಕ್ಕರ್ ಪ್ರಶಸ್ತಿ ದೊರಕಿದೆ.

ಕನ್ನಡ ಕವಿ ಸೇಡಿಯಾಪು ಕೃಷ್ಣಭಟ್ಟರು ಒಂದು ಹೊರಗಿನ ಸಾಂಸ್ಕೃತಿಕ ಧಾಳಿಯ ಬಗ್ಗೆ ತಮ್ಮವರನ್ನು ಎಚ್ಚರಿಸಲು ದೀಪವನ್ನು ರೂಪಕವಾಗಿಟ್ಟುಕೊಂಡು ಎಣ್ಣೆ ಹುಯ್ಯುವ ದೀಪಕ್ಕೆ ಎನ್ನುತ್ತಾರೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಸನ್ನಿವೇಶದಲ್ಲಿ ಹಲವಾರು ಕಡೆ ಪಂಜಿನ ಮೆರವಣಿಗೆ ನಡೆದಿರುವುದನ್ನು ನೆನೆಯಬಹುದು. ಅದು ಒಗ್ಗಟಿನ ಸಂಕೇತವಾಗಿಯೂ ನಿಲ್ಲುತ್ತದೆ. ಕೃಷ್ಣ ಭಟ್ಟರ ಕವನದಲ್ಲಿ 'ಎಣ್ಣೆ ಹೊಯ್ಯುವ ದೀಪಕ್ಕೆ' ಎನ್ನುವುದು ಜಾಗೃತಿಯನ್ನು ಮೂಡಿಸುವ ಕರೆಯಾಗಿ ಕೇಳಿ ಬರುತ್ತದೆ. ಹೊರಗಿನ ಸಾಂಸ್ಕೃತಿಕ ಆಕ್ರಮಣವು ಬಿರುಗಾಳಿಯಾಗಿ ಗಿಡ ಮರ ಕೊಂಬೆಗಳನ್ನು ಬಡಿದಾಡಿಸುತ್ತಾ ಬಂದು ಆ ಬಿರುಗಾಳಿಯಲ್ಲಿ ಕಾರ್ಮೋಡಗಳು ಗಿರಿಯ ಅಂಚಿಗೆ ಮೆಟ್ಟಿ ಮಿಂಚಿನಂತೆ ಗಹಗಹಿಸುತ್ತದೆ. ನಮ್ಮಲ್ಲೇ ಇರುವ ಪ್ರೌಢ ಸಾಹಿತ್ಯವನ್ನು (ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವನ್ನು) ಮುಂದಿನ ಪೀಳಿಗೆ ಕಡೆಗಣಿಸಿ ಮುಗ್ಗುರಿಸುತ್ತಿದೆ ಎನ್ನುವ ಬಗ್ಗೆ ಕವಿಗೆ ವಿಷಾದವಿದೆ. ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ನಂದುತ್ತಿರುವ ದೀಪಕ್ಕೆ ಎಣ್ಣೆ ಹುಯ್ಯುವ ಎಂಬ ಆಶಯ ಮನೋಜ್ಞವಾಗಿ ಮೂಡಿಬಂದಿದೆ, ಆ ಕವಿತೆಯ ಸಾಲುಗಳು ಹೀಗಿವೆ;
ಹೊರಗಲ್ಲಿ ಗಿಡಮರಗಳ ಕೊಂಬೆರಂಬೆಗಳ್ 
ಬಡಿದಾಡಿಕೊಂಡು ಭೋರಿಡುತಲಿವೆ
ಪಡುಬಾನ ಕಾರ್ಮುಗಿಲು ಅರಿಲೊಂದೊಂದನೇ ಮೆಟ್ಟಿ
ಕಾಡುಮಿಂಚಿನಲಿ ಗಹ ಗಹಗಹಿಸುತಿದೆ
ಎಣ್ಣೆ ಹುಯ್ಯುವ ದೀಪಕ್ಕೆ!

ಹಸಿದ ಮಕ್ಕಳು ಬಟ್ಟಲೆನ್ನದು
ತನ್ನದೆಂದೆಳದಾಡಿಕೊಂಡು ಗುದ್ದಾಡುತ್ತಿವೆ
ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವ
ಕಡಗಾಲೊಳೆಡವಿ ಚೆಲ್ಲಾಡುತ್ತಿವೆ
ಎಣ್ಣೆ ಹುಯ್ಯುವ ದೀಪಕ್ಕೆ!
ಜಿ ಎಸ್ ಎಸ್ ಅವರ ‘ನನ್ನ ಹಣತೆ’ ಕನ್ನಡ ಕಾವ್ಯಲೋಕದಲ್ಲಿನ ಗಮನಾರ್ಹವಾದ ಕವಿತೆ. ಅದನ್ನು ಪ್ರಾಜ್ಞರು ಅನೇಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಜಿ ಎಸ್ ಎಸ್ ಅವರ ಬಹುಪಾಲು ಕವಿತೆಗಳು ಸರಳವಾಗಿದ್ದು ಸಂಗೀತಕ್ಕೂ ಒದಗಿಕೊಂಡು ಜನಪ್ರೀಯ ಭಾವಗೀತೆಗಳಾಗಿವೆ. ಆದರೆ ‘ನನ್ನ ಹಣತೆ’ ಎಂಬುದು ಪ್ರಸಿದ್ಧ ಕವಿತೆಯಾಗಿಯೇ ಉಳಿದು ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದುಕೊಂಡು ದೀಪಾವಳಿಯ ಆಸುಪಾಸಿನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂಕೀರ್ಣವಾಗಿರುವ ಕವಿತೆಯ ಹಲವಾರು ಸಾಲುಗಳಲ್ಲಿ ದೀಪಾವಳಿಯ, ಪಟಾಕಿಯ ಉಲ್ಲೇಖವಿದ್ದರೂ ಅದು ದೀಪಾವಳಿಯನ್ನು ಕುರಿತಾದ ಕವನವಲ್ಲ! ದೀಪಾವಳಿ ಹಬ್ಬವನ್ನು ಮತ್ತು ಅಲ್ಲಿಯ ಸಂಭ್ರಮಗಳನ್ನು ಕುರಿತಾದ ಬೇರೆ ಕವಿತೆಗಳನ್ನು ಜಿ ಎಸ್ ಎಸ್ ರಚಿಸಿದ್ದಾರೆ.  ಆದುದರಿಂದ ಈ ಕವನವನ್ನು ಮೊದಲು ಗಮನಿಸಿ ನಂತರ ಅದರ ಬಗ್ಗೆ ಚರ್ಚೆ ಮಾಡೋಣ. 
ನನ್ನ ಹಣತೆ 

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಿಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
"ತಮಸೋ ಮಾ ಜ್ಯೋತಿರ್ಗಮಯ" ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ ಮತ್ತೆ
ನಾನು ಯಾರೋ.
ಈ ಕವಿತೆಯಲ್ಲಿ ಎರಡು ಮೂರು ವಿಚಾರಗಳು ಅಡಗಿವೆ. ಇಲ್ಲಿ ಕತ್ತಲೆ, ಅಜ್ಞಾನದ ಸಂಕೇತ. ಹಣತೆ ಮತ್ತು ಬೆಳಕು, ಜ್ಞಾನದ ಸಂಕೇತ. ಇಲ್ಲಿ ವಾಸ್ತವ ಪ್ರಜ್ಞೆ, ಜೀವನ ಪ್ರೀತಿ ಮತ್ತು ವ್ಯವಹಾರಿಕವಾದ ಚಿಂತನೆಗಳಿವೆ. ಒಟ್ಟಾರೆ ಮನುಷ್ಯ ಅನಾದಿಕಾಲದಿಂದಲೂ ಅಜ್ಞಾನದ ಜೊತೆ ಹೋರಾಡಿಕೊಂಡು, ಹಣತೆಯನ್ನು ಹಚ್ಚುತ್ತಾ ಬಂದಿದ್ದಾನೆ. ಈ ಹೋರಾಟವನ್ನು ಜಯಿಸಲು ಸಾಧ್ಯವೇ ಎನ್ನುವುದು ಮುಖ್ಯವಾದ ವಿಚಾರ. ಕವಿ ತಾನೂ ಹಣತೆ ಹಚ್ಚುವ, ಅಜ್ಞಾನವನ್ನು ತೊಲಗಿಸುವ ಪ್ರಯತ್ನವನ್ನು ಮಾಡುತ್ತಾರೆ. "ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ" ಎನ್ನುವ ಮೂಲಕ ಮನುಷ್ಯ ಪ್ರಯತ್ನಕ್ಕೆ ಮಿತಿ ಇದೆ ಅನ್ನುವುದನ್ನು ಕವಿ ಇಲ್ಲಿ ಒಪ್ಪಿಕೊಳ್ಳುತ್ತಾರೆ. ಹಿಂದೆ ಈ ಪ್ರಯತ್ನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದ್ದು (ದೀಪಾವಳಿಯ ಹಡಗುಗಳು ಮುಳುಗಿದ್ದು) ಅದೂ ಕೂಡ ವಿಫಲವಾಗಿದೆ ಎನ್ನುವುದನ್ನು ನೆನಪಿಸುತ್ತಾರೆ.  ಮುಂದಿನ ಪಂಕ್ತಿಯಲ್ಲಿ ಕವಿ, ಮನುಷ್ಯ ಈ ಅಜ್ಞಾನವನ್ನು ತೊಲಗಿಸಲು ಇಲ್ಲಿಯವರೆಗೆ ಏನೆಲ್ಲ ಪ್ರಯತ್ನಗಳನ್ನು ಕೈಗೊಂಡಿದ್ದಾನೆ ಎಂಬ ಪ್ರಶ್ನೆಯನ್ನು ಓದುಗರ ಮುಂದೆ ನಿಲ್ಲಿಸಿ, ನಾವು ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನ ಇವುಗಳನ್ನೆಲ್ಲಾ ಕೆದಕಿದ್ದೇವೆ, ಉತ್ತರವಂತೂ ಸಿಕ್ಕಿಲ್ಲ ಬದಲಾಗಿ 'ಬರೀ ಬೂದಿಯನ್ನೇ ಕಂಡಿದ್ದೇವೆ' ಎನ್ನುತ್ತಾರೆ. ಇಲ್ಲಿ ಕವಿ ಬದುಕಿನ ಒಳಾರ್ಥ, ಜೀವನದ ಮಹದೋದ್ದೇಶ ಇವುಗಳನ್ನು ಕುರಿತು ಚಿಂತಿಸುತ್ತಿರಬಹುದು. 'ಕತ್ತಲಿಗೆ ಕೊನೆಯಿಲ್ಲದ ಬಾಯಾರಿಕೆ' ಎಂದು ಹೇಳುವುದರ ಮೂಲಕ ನಮ್ಮ ಕಲ್ಪನೆಗೂ ಮೀರಿದ ಕತ್ತಲೊಂದಿದೆ ಅದು ಸರ್ವವ್ಯಾಪಿ 'ತಿಂದರೂ ಕುಡಿದರೂ, ಉಟ್ಟರೂ, ತೊಟ್ಟರು ಇದಕ್ಕೆ ಇನ್ನೂ ಬೇಕು, ಇನ್ನು ಬೇಕು ಎನ್ನುವ ಬಯಕೆ' ಎಂದು ಕವಿ ಹೇಳುತ್ತಿದ್ದಾರೆ. ಇಲ್ಲಿ, ವೈಜ್ಞಾನಿಕ ಪರಿಭಾಷೆಯಲ್ಲಿ ನೋಡುವುದಾದರೆ ಕಾಸ್ಮಿಕ್ ಬ್ಲಾಕ್ ಹೋಲ್ ಇಮೇಜ್ ನಮ್ಮ ಮುಂದೆ ಬಂದು ನಿಲ್ಲುತ್ತದೆ.  ಹೀಗಿದ್ದರೂ ಕವಿ ಹಣತೆ ಏಕೆ ಹಚ್ಚಬೇಕು? ಕವಿ ಹೇಳುತ್ತಾರೆ; "ಆದರೂ ಹಣತೆ ಹಚ್ಚುತ್ತೇನೆ ನಾನು; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ"ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ" ಕವಿ ಇಲ್ಲಿ ವಾಸ್ತವ ಪ್ರಜ್ಞೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ನಮ್ಮ ಬದುಕಿನಲಿ ಇರುವಷ್ಟು ಹೊತ್ತು ನಾನು-ನೀನು (ನಾವು-ನೀವು) ಮುಖ ಕೆಡಸಿಕೊಳ್ಳದೆ, ಒಬ್ಬರು ಇನ್ನೊಬ್ಬರನ್ನು ಮುಖ ಮುಖಿಯಾಗಿ ನೋಡುವಷ್ಟು ಪ್ರೀತಿ ವಿಶ್ವಾಸಗಳನ್ನು, ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳೋಣ. ಏಕೆಂದರೆ ಅಳಿದ ಮೇಲೆ (ಹಣತೆ ಆರಿದ ಮೇಲೆ) ನೀನು ಯಾರೂ ಮತ್ತು ನಾನು ಯಾರೋ! ಮುಂದಕ್ಕೆ ಇನ್ನು ಯಾರೋ ಬಂದು ಅವರೂ ಹಣತೆ ಹಚ್ಚುತ್ತಾರೆ. ಹೀಗೆ ಮನುಷ್ಯ ಪ್ರಯತ್ನ ನಿರಂತರವಾಗಿ ಸಾಗುತ್ತದೆ.  

ಇದು 'ನನ್ನ ಹಣತೆಯ'ಯನ್ನು ಕುರಿತಾದ ನನ್ನ ಒಂದು ವಿಶ್ಲೇಷಣೆ. ಜಿ ಎಸ್ ಎಸ್ ಅವರ ಕವಿತೆಯ ವಿಶೇಷವೆಂದರೆ ಅದು ಹಲವಾರು ದೃಷ್ಟಿ ಕೋನಗಳನ್ನು ತೆರೆದಿಡುತ್ತದೆ. ಆದುದರಿಂದ ಓದುಗರು ತಮ್ಮ ಕಲ್ಪನೆಗೆ ಒದಗುವ ವಿಶ್ಲೇಷಣೆಯನ್ನೂ ಕಟ್ಟಿಕೊಳ್ಳಬಹುದು.

ಕೊನೆಯದಾಗಿ 'ದೀಪಾವಳಿಯ ಹಣತೆ' ಎಂಬ ನನ್ನ ಕವನದೊಂದಿಗೆ ಈ ಬರಹವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಅದೆಷ್ಟೋ ವೈಜ್ಞಾನಿಕ ಸತ್ಯಗಳು ಸಾಧು ಸಂತರು ಮಹಾಪುರುಷರು ಬಿಟ್ಟುಹೋದ ಬೆಳಕಿನ ರೂಪಕವಾಗಿ ನಿಂತಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಅದೆಷ್ಟೋ ವಿಚಾರಗಳು ಮೇಲ್ನೋಟಕ್ಕೆ ಭ್ರಮೆಯಾದರೂ ಅದು ನಿಖರವಾದ ಸತ್ಯ. ಎಲ್ಲರೊಳಗೊಂದು ದೀಪ ಉರಿಯುತ್ತಲೇ ಇರುತ್ತದೆ. ಆದರೆ ಆ ಅಂತರಂಗದ ಬೆಳಕನ್ನು ಕಾಣಲು ವಿಶೇಷ ಒಳನೋಟಗಳು ಬೇಕು. ಆ ಬೆಳಕನ್ನು ಇತರರೊಡನೆ ಹಂಚಿಕೊಳ್ಳಬೇಕು ಎನ್ನುವುದು ಈ ಕವಿತೆಯ ಮತ್ತು ಈ ಬರಹದ ಒಟ್ಟಾರೆ ಆಶಯ.
ದೀಪಾವಳಿಯ ಹಣತೆ  

ಕಾರ್ತಿಕದ ಕಗ್ಗತ್ತಲಲ್ಲಿ
ಮುಗಿಲ ತುಂಬೆಲ್ಲಾ
ಮಿಣಕುವ ಬೆಳ್ಳಿ ನಕ್ಷತ್ರಗಳು
ಅಲ್ಲೊಂದು ಕಣ್ತಣಿಸುವ
ನೀರವ ದೀಪಾವಳಿ

ವಿಜ್ಞಾನಿಗಳು ಹೇಳುತ್ತಾರೆ;
“ಆ ನಕ್ಷತ್ರಗಳು ಉರಿದು ಬೂದಿಯಾಗಿವೆ
ನೀವೀಗ ಕಾಣುತ್ತಿರುವುದು
ಅದು ಹೊಮ್ಮಿಸಿದ ಬೆಳಕನ್ನಷ್ಟೆ"
ದೀಪ ಉರಿದಿದ್ದು ಅಂದು
ಬೆಳಕು ಕಾಣುತ್ತಿರುವುದು ಇಂದು!
ಇದು ಭ್ರಮೆಯಲ್ಲ, ನಿಖರ ಸತ್ಯ

ಕವಿಗಳು, ವಿಜ್ಞಾನಿಗಳು, ಸಂತರು
ಹಣತೆಯನ್ನು ಹಚ್ಚಿದ್ದಾರೆ
ಆ ಹಣತೆ ಆರಿಹೋಗಿದ್ದರೂ
ಅದರ ಬೆಳಕು ಇಂದಿಗೂ ಕಾಣುತ್ತಿದೆ,
ನಕ್ಷತ್ರದ ಬೆಳಕಿನಂತೆ.
ಇದು ಭ್ರಮೆಯಲ್ಲ, ನಿಖರ ಸತ್ಯ

ಜಡಗಟ್ಟಿದ ಚಿತ್ತದಲ್ಲಿ
ಅಂಧಕಾರದ ಆಳದಲ್ಲಿ
ನಾವು ಹಚ್ಚಿಕೊಂಡ ಒಳಗಿನ ದೀಪ
ನಮಗೇ ಕಾಣಿಸಲು ಸಮಯಬೇಕು

ನಾವು ಹಚ್ಚುವ ದೀಪ ನಮಗಷ್ಟೇ ಅಲ್ಲ,
ಮುಂದೊಮ್ಮೆ ಇತರರಿಗೂ
ಕಾಣಿಸಬಹುದೆಂಬ ಭರವಸೆಯಿಂದ
ಬನ್ನಿ ಹಚ್ಚೋಣ ದೀಪಾವಳಿಯ ಹಣತೆ


ಜಿ ಎಸ್ ಎಸ್ ಅವರ 'ನನ್ನ ಹಣತೆಯ'ಕೆಲವು ಆಯ್ದ ಸಾಲುಗಳ ಭಾವಾನುವಾದವನ್ನು ಕವಿ ಡಾ ಶ್ರೀವತ್ಸ ದೇಸಾಯಿ ಅವರು ಕೈಗೊಂಡಿದ್ದು ಅದು ಹೀಗಿದೆ;
I know, this darkness has such endless thirst
That no one can quench!
No matter what amount of light it is draped in or is fed or it devoured
Still wants more and more!
But yet, I light a clay lamp, Me too,
Not that I will transcend the darkness,
As long as we are together
I can see your face
And so can you mine, that is the sole desire
After the lamp breathes its last
We remain as just strangers
Unknown to each other!
ಫೋಟೋ ಕೃಪೆ:  ಡಾ ಶ್ರೀವತ್ಸ  ದೇಸಾಯಿ 

ಆಹಾರದ ಜೊತೆಗೊಂದು ವಿಹಾರ

ಪ್ರಿಯ ಓದುಗರಿಗೆ,

ಈ ವಾರದ ಅನಿವಾಸಿಯಲ್ಲಿ ಡಾ. ದೀಪಾ ಸಣ್ಣಕ್ಕಿಯವರ ಆಹಾರವನ್ನು ಕುರಿತು, ಅವರದೇ ಆದ ವಿಶಿಷ್ಟ ಶೈಲಿಯ ಒಂದು ಸುಂದರ ಬರಹವನ್ನು ಮುಂದಿಟ್ಟಿರುತ್ತೇನೆ. ವಿಹಾರದೊಂದಿಗೆ ಆಹಾರದ ಬಗ್ಗೆ ಓದಿ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ

—- ಇಂತಿ ಸಂಪಾದಕ

——————————————————————————————————————–

ಕೆಲವು ವಾರಗಳ ಹಿಂದೆ ಯೋರ್ವಿಕ್ ವೈಕಿಂಗ್ ಸೆಂಟರ್ ನಲ್ಲಿ(Jorvik viking center, York) ಸಾವಿರದ ಇನ್ನೂರು ವರ್ಷಗಳಷ್ಟು ಹಳೆಯ ಒಂದು ಪಳಿಯುಳಿಕೆಯೊಂದನ್ನು ಕಂಡು ಅಚ್ಚರಿಗೊಂಡಿದ್ದೆ. ಅಪರೂಪವಾದ ಈ ವಸ್ತುವಿನ ಹೆಸರು, “Lloyds bank Coprolite” ಎಂದು. Coprolite ಎಂದರೆ ಶಿಲಾಜಾತಗೊಂಡ (fossilised) ಮನುಷ್ಯನ ಮಲ ಅಥವಾ ಕಕ್ಕಸು ಎಂದು ಹೇಳಬಹುದು. 1972ರಲ್ಲಿ ಯೋರ್ಕ ನಲ್ಲಿ Lloyds bank ಆವರಣದಲ್ಲಿ ನಡೆದ ಉತ್ಖನನದಲ್ಲಿ ದೊರೆತ ಈ ವಸ್ತು, ವೈಕಿಂಗ್ ಜನಾಂಗದ ಜನಜೀವನದ ಆಹಾರ ಪದ್ಧತಿ,ಅವರು ಊಟದಲ್ಲಿದ್ದ ಪೋಷಕಾಂಶಗಳು,ಅವರಿಗೆ ಹೊಟ್ಟೆಬಾಧೆ ನೀಡಿರಬಹುದಾದದ ಜಂತುಹುಳು ಇತರ ರೋಗರುಜಿನಗಳು ಹೀಗೆ ಹಲವಾರು ಮಹತ್ವಪೂರ್ಣ ಅಂಶಗಳ ಮೇಲೆ ಬೆಳಕು ಚೆಲ್ಲಿದೆಯಂತೆ! ಆ ಪುಣ್ಯಾತ್ಮನಿಗೆ ರಾತ್ರಿಯ ಊಟ ಮಾಡುವಾಗ ತಾನೊಂದು ದಿನ “ಮುಂಬರುವ ಪೀಳಿಗೆಗೆ ಇಷ್ಟೊಂದು ದೊಡ್ಡ ಐತಿಹಾಸಿಕ ಕೊಡುಗೆ ನೀಡಲಿದ್ದೇನೆ” ಎಂಬುದರ ಪರಿವೆಯೇ ಇರಲಿಕ್ಕಿಲ್ಲ ಎಂದು ಮನಸ್ಸಿನಲ್ಲೇ ಲಘುಲಹರಿಯೊಂದು ಅಂದು ಮಿಂಚಿ ಹೋಗಿತ್ತು.

ಆದರೆ ಈ ಲಹರಿಯೇ ಪದೇಪದೇ ಕುಟುಕಿ, ಮಾನವ ಮತ್ತವನ ಆಹಾರದ ಅನುರೂಪವಾದ ಸಂಬಂಧದ ಬಗ್ಗೆ ಯೋಚಿಸಲು ಪ್ರೇರೇಪಿಸಿ ಇಂದಿನ ಬರಹಕ್ಕೂ ಕಾರಣವಾಗಿದೆ. ಮನುಷ್ಯನ ವಿಕಸನದ ಜೊತೆಜೊತೆಗೆ ಅವನು ಸೇವಿಸುವ ಆಹಾರದಲ್ಲಿಯೂ ತಕ್ಕ ಬದಲಾವಣೆಯಾಗಿದ್ದು ಅಚ್ಚರಿಯ ವಿಷಯವೇನಲ್ಲ. ಆದಿಮಾನವನ ಸಮಯದಲ್ಲಿ ಆಹಾರ ಸಂಪಾದನೆ ಮತ್ತು ಶೇಖರಣೆಯೇ ನೆಮ್ಮದಿ ಬದುಕಿನ ಏಕೈಕ ಧ್ಯೇಯವಾಗಿದ್ದಿರಬಹುದು. ಸಂತಾನದ ಪಾಲನೆಪೋಷಣೆಗೆ ಮತ್ತು ಪ್ರಾಣಿ ಬೇಟೆಗೆ ಅತ್ಯಾವಶ್ಯಕವಾದ ಸಂಘಜೀವನವನ್ನು ಪ್ರೇರೆಪಿಸಿರಬಹುದು. ವಿಕಾಸ ವಾದದಲ್ಲಿ ಮಾನವನು ಆಹಾರಸರಣಿಯ ಪ್ರಭುತ್ವ ಗಳಿಸಲು ನೆರವಾದ ಶೀಘ್ರಗತಿಯ ಮೆದುಳಿನ ಬೆಳವಣಿಗೆಗೆ, ಮಾಂಸಾಹಾರದ ಪೌಷ್ಟಿಕಾಂಶಗಳೇ ಕಾರಣವಿರಬಹುದು ಎಂದು ತಜ್ಞರ ಅನಿಸಿಕೆಯಾಗಿದೆ. ಕಾಲಕ್ರಮೇಣ ಬೇಟೆಗಿಂತ ಸುಲಭವಾದ ಕೃಷಿಗಾರಿಕೆಯ ಉಪಾಯವನ್ನು ಕಂಡುಕೊಂಡ ಮನುಷ್ಯನ ಜೀವನದ ಓಘವೇ ಬದಲಾಯಿಸಿರಬಹುದು.‌ ಕೃಷಿಯಿಂದ ಆಹಾರಸಂಪಾದನೆ ಸುಲಭವಾದ ಮೇಲೆ, ಆತನ ಲಕ್ಷ್ಯ ಸಾಕುಪ್ರಾಣಿಗಳನ್ನು ಪಳಗಿಸುವದರಲ್ಲೋ ಅಥವಾ ಸಾಧನೆ ಸಲಕರಣೆಗಳನ್ನು ತಯಾರಿಸುವ ನೈಪುಣ್ಯತೆಯಲ್ಲಿಯೋ ತೊಡಗಿರಬೇಕು. ಒಟ್ಟಿನಲ್ಲಿ ಆದಿಮಾನವನ ಉದಯೋನ್ಮುಖ ಪ್ರಗತಿಯಲ್ಲಿ ಆಹಾರದ ಪಾತ್ರ ಬಹುದೊಡ್ಡದು.

ಸುಮಾರು ನೂರು ವರ್ಷಗಳಷ್ಟು ಹಿಂದಿನವರೆಗೂ, ಧಾನ್ಯಸಂಪತ್ತಿನ ಕೊರತೆ ಇರುವವರೆಗೂ ಜನಮಾನಸದಲ್ಲಿ ಅನ್ನಕ್ಕೆ ಬಹುಮುಖ್ಯ ಪ್ರಾಧಾನ್ಯತೆ ಇತ್ತು. ಅವರ ಆಡುಮಾತುಗಳಲ್ಲಿ ಅನ್ನದ ಮಹತ್ವ ತುಂಬಿ ತುಳುಕುತ್ತಿತ್ತು ಮತ್ತು ಹಾಸುಹೊಕ್ಕಾಗಿತ್ತು. ಇದಕ್ಕೆ ನಮ್ಮ ಕನ್ನಡದ ಗಾದೆಮತುಗಳೇ ಸಾಕ್ಷಿ! ಅನ್ನ ಇಕ್ಕಿದ ಮನೆಗೆ ಕನ್ನ ಕೊರೆದ, ಕೈ ಕೆಸರಾದರೆ ಬಾಯಿ ಮೊಸರು, ಹಾಗಲಕಾಯಿಗೆ ಬೇವು ಸಾಕ್ಷಿ, ಹೊಟ್ಟಿಗೆ ಹಿಟ್ಟು ಇಲ್ಲದೆ ಬರೀ ಜುಟ್ಟಿಗೆ ಮಲ್ಲಿಗೆ ಇರುವುದು, ಹೊಳೆಯಲ್ಲಿ ಹುಣಸೆಹಣ್ಣು ತೊಳೆಯುವುದು, ಉಪ್ಪು ಉಂಡ ಮನೆಗೆ ಬಗೆಯುವ ದ್ರೋಹ, ಮನೆಮನೆಗಳಲ್ಲಿ ತೂತಾದ ದೋಸೆಗಳು, ಮುಪ್ಪಾದರೂ ಹುಳಿಯನ್ನು ತ್ಯಜಿಸದ ಹುಣಸೆ ಇತ್ಯಾದಿ ಇತ್ಯಾದಿ ಇತ್ಯಾದಿ.

ಮೌಲ್ಯಭರಿತವಾದ ನಮ್ಮ ಅಂದಿನ ಸಮುದಾಯದಲ್ಲಿ ಒಂದೊಪ್ಪತ್ತಿನ ಊಟವನ್ನಷ್ಟೇ ಮಾಡಿದರೂ ಘನತೂಕದ ಆಡುಮಾತುಗಳಿತ್ತಿದ್ದವು. ನೀತಿ ಮೌಲ್ಯಗಳೇ ನಶಿಸುತ್ತಿರುವ ಈಗಿನ ಕಾಲದಲ್ಲಿ ಪಿಜ್ಜಾ, ಬರ್ಗರ್, ಪ್ರೋಟಿನ್ ಷೇಕ್ ಗಳ ಮೇಲೆ ಏನೂಂತ ಗಾದೆಗಳು ಹುಟ್ಟಬಹುದು ಹೇಳಿ? ನಮ್ಮ ಮನೆಯ ಹಿರಿಯಜ್ಜಿಯೊಬ್ಬಳ ಕಥೆಯ ಪ್ರಕಾರ ಮನುಷ್ಯನಿಗೆ ಹಣೆಬರಹ ಬರೆದ ದೇವರು ಪ್ರತಿ ಧಾನ್ಯಕ್ಕೂ ಸ್ವರ್ಗ ನರಕ ವಿಧಿಸಿರುತ್ತಾನಂತೆ.‌ ಕಾಳು ಮೂಡಿ ಪೈರಿನಿಂದ ಬೇರ್ಪಟ್ಟು ನಾನಾ ತರಹದ ಸಂಸ್ಕರಣೆಗೊಳಗಾಗಿ ಒಲೆಯ ಬೇಗೆಯಲ್ಲಿ ಬೆಂದು, ಉಂಡವನ ಹೊಟ್ಟೆ ಸೇರಿದಾಗ ಮಾತ್ರ ಅದಕ್ಕೆ ಸ್ವರ್ಗಸುಖವಂತೆ, ಮೋಕ್ಷವಂತೆ! ಚಿಕ್ಕಂದಿನಲ್ಲಿ ಮುಗುಳ್ನಗೆ ತರಿಸುತ್ತಿದ್ದ ಈ ಕಥೆ ಇಂದು ಗೃಹಿಣಿಯಾದ ನನಗೆ ನೈತಿಕ ಭಾರವೊಂದನ್ನು ನೆನಪಿಸುತ್ತದೆ. ಅಳಿದುಳಿದ ಅಡಿಗೆಯನ್ನು “ಬಿನ್ ಇಟ್” ಎಂದು ತಾತ್ಸಾರವಾಗಿ ಹೇಳುವ ಮುನ್ನ ಯೋಚಿಸುವಂತೆ ಮಾಡುತ್ತದೆ. ಅಜ್ಞಾತರಾಗಿದ್ದೇ, ನಮಗರಿಯದೆಯೇ ನಮ್ಮ ಬದುಕನ್ನು ಮಜಬೂತಾಗಿ ಕಟ್ಟಿದ ಆ ಹಿರಿಜೀವಗಳಗೆ ಒಂದು ನಮನ.

ಇನ್ನು ಕುಟುಂಬದ ಆಗುಹೋಗುಗಳಲ್ಲಿ ದಿನನಿತ್ಯದ ಅಡುಗೆಯ ಹಿನ್ನಲೆಯನ್ನು ಬರೆಯಲೇ ಬೇಕಾಗಿದೆ. ನಾವೆಲ್ಲರೂ ಅಮ್ಮನ ಕೈ ರುಚಿಯ ಸೌಭಾಗ್ಯವನ್ನು ಪಡೆದವರೇ ಆಗಿದ್ದೇವೆ ಎಂದುಕೊಳ್ಳುತ್ತೇನೆ. ಅವಳು ಮಾಡಿ ಬಡಿಸಿದ ತುತ್ತು ಕೇವಲ ಹಲವು ಅಡುಗೆಯ ಪದಾರ್ಥಗಳ ಸಮ್ಮಿಶ್ರಣವಷ್ಟೇ ಆಗಿರದೇ ಅದರಲ್ಲಿ ಅವಳ ಮಮತೆ, ವಾತ್ಸಲ್ಯ, ವಾಂಛಲ್ಯ, ಅಪ್ಯಾಯಮಾನತೆ, ಮಾತೃ ಸಹಜ ಕಾಳಜಿ, ಅನುಕಂಪ ಇವೆಲ್ಲವೂ ಸೇರಿ ಅಮೃತಸೇವನೆಯ ಅನುಭವವನ್ನು ನೀಡುತ್ತದೆ.ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮನೆಯ ಒಳಗೂ ಹೊರಗೂ ಗಾಣದ ಎತ್ತಿನಂತೆ ಒಂದೇ ಸಮನೆ ತಿರುಗುತ್ತಿರುವ ತಾಯಂದಿರು, ಮಗುವಿಗೆ ಪುರಸೊತ್ತಿಂದ ಒಂದು ಕೈತುತ್ತು ನೀಡುವುದು ಅಪರೂಪದ ದೃಶ್ಯವಾಗಿದೆ. ಆರ್ಥಿಕ ಸಬಲತೆಯೆಂಬ ಹೆಸರಿನಲ್ಲಿ ನಾವೇ ತಂದುಕೊಂಡ ಈ ಮೂರಾಬಟ್ಟೆಯ ಪರಿಸ್ಥಿತಿಗೆ ಕೊರಗಿದರೂ ಕಂದಮ್ಮಗಳನ್ನು “ಅಮ್ಮನ ಕೈರುಚಿ”ಎಂಬ ಸುವರ್ಣಾವಕಾಶದಿಂದ ವಂಚಿಸಿ ನ್ಯಾಯಸಲ್ಲಿಸದೇ ಉಳಿದ ವ್ಯಥೆಯು ಪ್ರಶ್ನಾರ್ಹವಾಗಿದೆ. ಆದರೆ ಅದೇ “ಅಮ್ಮನ ಕೈರುಚಿ” ಅತಿಯಾಗಿ ಅಸಂಬದ್ಧ ಪರಿಸ್ಥಿತಿಯಲ್ಲಿ ಒಕ್ಕರಿಸಿದರೆ ಸಂಬಂಧಗಳಿಗೆ ಧಕ್ಕೆ ತರಲು ಸಾಧ್ಯವಿದೆ.

ಹೆಡ್ಡನಾದ ಗಂಡ, ಹೊಸಹೆಂಡತಿ ಮಾಡಿದ ಬಿಸಿಬಿಸಿ ಸಾಂಬಾರನ್ನು ಪ್ರಶಂಸಿಸುವ ಬದಲು “ನಮ್ಮಮ್ಮನ ಸಾಂಬಾರ್ ಬೊಂಬಾಟ್” ಎಂದುಬಿಟ್ಟರೆ ಅವಳ ಉತ್ಸಾಹಕ್ಕೆ ಶಾಶ್ವತವಾಗಿ ತಣ್ಣೀರು ಎರಚಿದಂತೆ ಅಲ್ಲವೇ? ಹಾಗೆಯೇ ಚಹಾ ಉಕ್ಕಿಸಿದ ಯಜಮಾನ್ರ ಮೇಲೆ ಕೊಂಕು ನುಡಿಯುವ ಪತ್ನಿಯು, ಸೊಪ್ಪಿನ ಪಲ್ಯ ನೋಡಿ ಮೂಗುಮುರಿಯುವ ಮಕ್ಕಳು, ಕಾರಣವೇ ಇಲ್ಲದೆಯೇ ಸೋಗು ಹಾಕುವ ಅತ್ತೆ ಮಾವಂದಿರು ಮತ್ತು ಇನ್ನೀತರರು ಅದ್ಯಾಕೋ ಈ ಸೂಕ್ಷ್ಮವಾದ ಸಂವೇದನೆಯನ್ನು ಗುರುತಿಸದೇ ಸಂಬಂಧಗಳಲ್ಲ ಸೋತುಹೋಗುತ್ತಾರೆ. ತನ್ನವರಿಗೆ ಅಡುಗೆ ಮಾಡಿ ಬಡಿಸುವುದು ಕೇವಲ ಒಂದು ಜವಾಬ್ದಾರಿಯಾಗಿರದೇ ಕುಟುಂಬಗಳನ್ನು ಭದ್ರವಾಗಿ ಬೆಸೆಯುವ ಒಂದು ಅಭಿವ್ಯಕ್ತಿಯ ಸಾಧನವಾಗಿದೆ ಎಂಬುವುದು ನನ್ನ ಪ್ರಾಮಾಣಿಕ ಅನಿಸಿಕೆ. ಇತ್ತೀಚೆಗೆ ಗಮನಸೆಳೆದ ಡೊಕ್ಯುಮಂಟರಿ ಒಂದನ್ನು ನೋಡಿ, ಮಾನವನು ತನ್ನ ಸ್ವಂತ ಆಹಾರ ಪೂರೈಕೆಗಾಗಿ ಎಷ್ಟು ಸ್ವಾರ್ಥಿಯಾಗಬಲ್ಲನು ಎಂಬುದನ್ನು ನೋಡಿ ದಂಗಾಗಿದ್ದೇನು! ಅದು ಅನೇಕ ಕೋಳಿ ಫಾರಂ, ಡೈರಿ ಫಾರಂ ಗಳನ್ನು ಚಿತ್ರೀಕರಿಸಿ ಅಲ್ಲಿ ನಡೆಯುತ್ತಿರುವ ಅಮಾನವೀಯತೆಯ ಮೇಲೆ ಬೆಳಕು ಚೆಲ್ಲಿತ್ತು. ಮಜಬೂತಾದ ಚಿಕನ್ breast ಉತ್ಪಾದಿಸಲು ಅದೇ ಜೆನೆಟಿಕ್ ಕೊಡ್ ಇರುವ ಕೋಳಿಗಳನ್ನು ಮಾತ್ರ ಹುಟ್ಟಿಸಿ ಬೆಳೆಸಲಾಗುತ್ತಿತ್ತು. ಅವುಗಳು ಪೂರ್ಣವಾಗಿ ಬೆಳೆದಾಗ ತಮ್ಮ ವಿಪರೀತವಾದ ಮೈಭಾರವನ್ನು ಅಶಕ್ತ ಕಾಲುಗಳ ಮೇಲೆ ಹೊರಲಾರದೇ ಓಲಾಡುತ್ತ ಉರುಳುರುಳಿ ಬೀಳುತ್ತಿದ್ದವು. ಅಷ್ಟೇ ಅಲ್ಲದೇ, ಕಡಿಮೆ ವಿಸ್ತೀರ್ಣದ ಫಾರ್ಮನಲ್ಲಿ ನಿಗದಿತ ಸಂಖ್ಯೆಗೂ ಜಾಸ್ತಿ ಕೋಳಿಗಳನ್ನು ಸಾಕುತ್ತಿದ್ದರಿಂದ ಪ್ರತಿ ಪಕ್ಷಿಗೆ ಕೇವಲ ಯಕಶ್ಚಿತ್ A4 sheet ನಷ್ಟೇ ಜಾಗ ದೊರಕುತ್ತಿತ್ತು! ಹಾಗೆಯೇ ಡೈರಿ ಫಾರಂನಲ್ಲಿ ಬಂಧಿಯಾಗಿದ್ದ ಸಾವಿರಾರು ಹಸುಗಳು ಹುಲ್ಲು ಮೇಯಲೋಸುಗ ನಿಗದಿತ ಸಮಯದ ಕರೆಘಂಟೆಗೆ ಎದುರು ನೋಡುವ ಪರಿ ಕರುಣಾಜನಕವಾಗಿತ್ತು.

ನೈಸರ್ಗಿಕವಾಗಿ ನಡೆಯುವ ಸಂತಾನೋತ್ಪತ್ತಿಗೆ ಸಂಪೂರ್ಣವಾಗಿ ಕೊಡಲಿಯೇಟು ಕೊಟ್ಟು ಆ ಪ್ರಾಣಿಪಕ್ಷಿಗಳ ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ಹಾಗಿತ್ತು. ಇದೇ ತರಹದ ಘಟನಾವಳಿಗಳನ್ನು ಭೈರಪ್ಪನವರು “ಭಿತ್ತಿ”ಯಲ್ಲಿ ಬಿತ್ತರಿಸಿದ್ದಾರೆ. ಹೊಟ್ಟೆ ಹಸಿವಿನ ದಾಹ ತಣಿಸಿಕೊಳ್ಳಲು ಹಲವಾರು ಸುಲಭೋಪಾಯಗಳನ್ನು ಕಂಡುಕೊಂಡ ಮಾನವ ದುಡ್ಡಿನ ದಾಹ ತೀರಿಸಿಕೊಳ್ಳುವ ಪರಿಹಾರಕ್ಕೆ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದಾನೆ ಎಂಬುವುದು ಬ‌ಹುದುಃಖಕರವಾದ ಸಂಗತಿ. ಕೊನೆಯದಾಗಿ ಒಂದು ಹೃತ್ಪೂರ್ವಕ ವಿನಂತಿಯೊಂದಿಗೆ, ತಾನುಂಡು ಅರಗಿಸಿದ ಊಟ ಶಿಲಾಜಾತಗೊಂಡು, ಮುಂದೊಂದು ದಿನ ಅದು ಜನಾಂಗವನ್ನೇ ಪ್ರತಿನಿಧಿಸುವ ಅತ್ಯಮೂಲ್ಯ ವಸ್ತು ಆಗಬಹುದೆಂಬುರ ಪರಿವೆಯೇ ಇಲ್ಲದ ವೈಕಿಂಗ್ ವೀರನಾಗದೇ; ನಾವೆಲ್ಲ ನಮ್ಮ ತಟ್ಟೆಯವರೆಗೆ ಅನ್ನವನ್ನು ತಲುಪಿಸಿದ ಮಾತೆಮಹನೀಯರನ್ನೂ, ಬೆವರಿಳಿಸಿದ ಕೃಷಿಕಮಹೋದಯನನ್ನೂ, ಬಲಿಯಾದ ಪ್ರಾಣಪಕ್ಷಿಗಳನ್ನೂ ಮತ್ತು ಕ್ಷಮಯಾಧರಿತ್ರಿಯನ್ನು ಮನದುಂಬಿ ನಮಿಸೋಣ.

ಎರಡು ಕವನಗಳು – ಕೇಶವ ಕುಲಕರ್ಣಿ

ಕಿನ್ಸುಗಿ

ಹೇಳದೇ ಉಳಿದ ಮಾತು
ಧಡಕ್ಕನೇ ಹಾಕಿದ ಬಾಗಿಲು
ಕಣ್ಣಲ್ಲೇ ಉಳಿದ ಕಂಬನಿ
ಎದೆಯಲ್ಲೇ ಕುದಿವ ಅವಮಾನ
ತಲೆಯನ್ನು ತಿನ್ನುವ ಅನುಮಾನ

ಒಂದು ದಿನ ನಮ್ಮ ಬದುಕುಗಳು
ಅಕಾಲದಲ್ಲಿ ಚೆಲ್ಲಾಪಿಲ್ಲಿಯಾಗಿ
ಬಿದ್ದ ಪಾರಿಜಾತದ ಹೂಗಳಂತೆ
ನಿಶ್ಶಬ್ದವಾಗಿ ಪಚ್ಚೆಯಾಗಿ ಬಣ್ಣ ಒಣಗಿ ಬಿದ್ದುಕೊಂಡಿರುತ್ತವೆ
ಎತ್ತಿಕೊಳ್ಳಲು ಹೋದರೆ ನೆಲಕ್ಕೆ ಅಂಟಿಕೊಂಡು ನರಳುತ್ತವೆ
ಹಸಿ ಕೊಳಕು

ಡೈನಿಂಗ್ ಟೇಬಲ್ಲಿನ ಊಟಕ್ಕೆ ನಿಶ್ಶಬ್ದದ ರುಚಿ
ಸಾಂಬಾರಿಗೆ ಹಿಂದಿನ ದಿನದ ಸುಳ್ಳಿನ ವಾಸನೆ
ಸಾಮಾಜಿಕ ತಾಣಗಳು ಸಾವಿರ ಕಣ್ಣುಗಳಿಂದ
ದುರುಗುಟ್ಟಿ ನೋಡುತ್ತವೆ ಅಪ್-ಡೇಟಿಗೆ ಕಾಯುತ್ತ

ಮೂವ್ ಆನ್ ಅನ್ನುತ್ತಾನೆ ಥೆರಪಿಸ್ಟು
ದುಃಖ ಎನ್ನುವುದೇನು ನೇರ ದಾರಿಯೇ?
ಅದೊಂದು ಕಾಲುದಾರಿಯೂ ಇರದ ಬೆಟ್ಟ
ಪ್ರತಿಯೊಂದು ಹೆಜ್ಜೆಯೂ
ಸೋಲುಗಳನ್ನು ನೋವುಗಳನ್ನು ಅವಮಾನಗಳನ್ನು
ನೆನಪಿಸುತ್ತಲೇ ಇರುತ್ತದೆ
“ಏಕೆ, ಹೇಗೆ, ನನಗೇ ಯಾಕೆ, ನಾನೇನು ತಪ್ಪು ಮಾಡಿದೆ?”
ಎಂದು ಪ್ರತಿಧ್ವನಿಸುತ್ತವೆ

ಗಾಜಿನಂತೆ ಒಂದೇ ಸಲ ಚೂರು ಚೂರಾಗುವುದಿಲ್ಲ
ಮೊದಲು ನೆಗ್ಗುತ್ತೇವೆ
ಆಮೇಲೆ ನಿಧಾನವಾಗಿ ಸೀಳುತ್ತೇವೆ
ಬಿ ರು ಕು ಬಿಡುತ್ತೇವೆ
ತುಂಡಾ
ಗುತ್ತೇವೆ

ಜಪಾನೀಜರು ಬಿರುಕುಗಳನ್ನು
ಚಿನ್ನದಿಂದ ಕಿನ್ಸುಗಿ ಮಾಡುತ್ತಾರಂತೆ
ಬಿರುಕುಗಳು ಎದ್ದು ಕಾಣುವಂತೆ ಸುಂದರ
ಅಚ್ಚಹೊಸ ಬದುಕನ್ನು ಕಟ್ಟಲು
ಭೂತವನ್ನು ಅಳಿಸಬೇಕಾಗಿಲ್ಲ

ಬಹುಶಃ ಎಲ್ಲವನ್ನೂ
ಮೊದಲಿನಂತೆಯೇ ಜೋಡಿಸಬೇಕಾಗಿಲ್ಲ
ಹೊಸ ಆಕಾರದಲ್ಲೂ
ದೀಪವನ್ನು ಹಚ್ಚಬಹುದು
ಬಿರುಕುಗಳಲ್ಲಿಯೇ
ಪ್ರೀತಿ ಬೆಳಗಬಹುದಲ್ಲವೇ ಸಖಿ?

ಎತ್ತಿಕೊಳ್ಳಬಹುದಾದುದನ್ನು ಎತ್ತಿಕೊಳ್ಳೋಣ
ಒಂದು ನೆನಪಿನ ನಗು
ಕಾರಣವಿಲ್ಲದೆ ಹಿಡಿದ ಕೈ
ವಿನಾಕರಣ ನಗು
ಅಕಾರಣ ಪ್ರೀತಿ
ನಿಧಾನವಾಗಿ ಜೋಪಾನವಾಗಿ
ಒಂದೊಂದಾಗಿ ಒಟ್ಟುಗೂಡಿಸೋಣ

ಅನ್ನೋ ಜನರು

`ನಿನಗೆ ಹೇಗೆ ಬೇಕೋ ಹಾಗೆ ನಗು,
ಆದರೆ ಗಂಡಸರ ಮುಂದೆ ಅಷ್ಟು ಜೋರಾಗಿ ನಗಬೇಡ.

ನಿನಗೇನು ಬೇಕೋ ಹಾಕಿಕೊ,
ಆದರೆ ಸ್ಕರ್ಟನ್ನು ಮೊಣಕಾಲ ಕೆಳಗೆ ಹಾಕಿಕೊ,
ಎದೆಯ ಸೀಳು ಮತ್ತು ಹೊಕ್ಕುಳ ಕಾಣದಂಥ ಟಾಪ್ ಹಾಕಿಕೊ,`

ಎಂದ ಅಮ್ಮನ ಮಾತಿಗೆ ಸುಮ್ಮನೆ ನಕ್ಕೆ.
ಪೇಪರ್ ಓದುತ್ತ ಕೂತ ಅಪ್ಪ ಸಮ್ಮತಿಸುತ್ತಿದ್ದ.

`ನಿನ್ನ ಗಂಡ ಏನೂ ಅನ್ನುವುದಿಲ್ಲವೇನೇ?
ಎಂದು ಮತ್ತೆ ಕೇಳಿದಳು.

`ಮಕ್ಕಳನ್ನೂ ಸಲಹಬಲ್ಲೆ,
ಮನೆಯನ್ನೂ ನಡೆಸಬಲ್ಲೆ,
ವಾಹನವನ್ನೂ ಓಡಿಸಬಲ್ಲೆ,
ಆಫೀಸನ್ನೂ ನಡೆಸಬಲ್ಲೆ,

ಮಣಭಾರದ ಸೀರೆಯುಟ್ಟು
ಕಲ್ಯಾಣಮಂಟಪದಲ್ಲಿ
ದಿನವಿಡೀ ಓಡಾಡಬಲ್ಲೆ,
ಹೈಹೀಲ್ಸ್ ಹಾಕಿಕೊಂಡು
ಕ್ಲಬ್ಬಿನಲ್ಲಿ ಪಾರ್ಟಿಯಲ್ಲಿ
ರಾತ್ರಿಯಿಡೀ ಕುಣಿಯಬಲ್ಲೆ.

ಎಲ್ಲರ ಮಾತು ಕೇಳುವಂತೆ
ನಿನ್ನ ಮಾತನ್ನೂ
ನನ್ನ ಗಂಡನ ಮಾತನ್ನೂ
ಕೇಳಿಸಿಕೊಳ್ಳುತ್ತೇನೆ
(ನನ್ನ ಗಂಡ ನಿನ್ನಂತೆ ನೇರ ಹೇಳುವುದಿಲ್ಲ, ಅಷ್ಟೇ)
ಅನ್ನೋ ಜನರು ಅನ್ನಲಿ ಬಿಡಿ, ಅಮ್ಮ.

ದಿ. ಎಸ್ ಎಲ್ ಭೈರಪ್ಪ – ನೆನಪುಗಳ ಅಚ್ಚಿನ ನುಡಿನಮನ.

ನಮಸ್ಕಾರ.  ಕನ್ನಡ ಸಾಹಿತ್ಯಾಸಕ್ತರಿಗೆ ಹೋದವಾರ ಎರಗಿದ ಆಘಾತ ಇನ್ನೂ ಪೂರ್ತಿ ಕಡಿಮೆಯಾಗಿಲ್ಲ.  ಶಕ್ತಿಯುತ ಕಾದಂಬರಿಗಳನ್ನು ನೀಡಿದ, ಸರಸ್ವತೀ ಸಮ್ಮಾನ ಪುರಸ್ಕೃತ ಶ್ರೀ ಎಸ್ ಎಲ್ ಭೈರಪ್ಪ ಈ ಲೋಕವನ್ನು ಬಿಟ್ಟು ಹೊರಟರೂ, ಅವರ ಲೆಗಸಿ, ಓದುಗರ ಮೇಲಿನ ಅವರ ಪ್ರಭಾವ, ಅವರ ಕಾದಂಬರಿಗಳ ಪರಿಣಾಮ ಇವ್ಯಾವೂ ಅವರ ಜೊತೆಗೆ ಹೋಗಲಾರವು.  ಅವರ ಪುಸ್ತಕಗಳನ್ನು ಓದುವವರ ಮನಸ್ಸಿನ ಮೇಲೆ ಅದರಲ್ಲಿನ ಪಾತ್ರಗಳು, ಸನ್ನಿವೇಶಗಳು ಹಾಕುವ ಮೋಡಿ ಮರೆಯಾಗಲಾರದು.  ನನ್ನ ಸೋದರತ್ತೆಯ ಮನೆಯಲ್ಲಿ ನಮ್ಮ ಮಾವ ಪೇರಿಸಿಟ್ಟಿದ್ದ ಪುಸ್ತಕ ರಾಶಿಯನ್ನು ಸೇರಿರುವ ಹೊಸ ಹೊತ್ತಗೆಗಳನ್ನು ಓದಿ ಮುಗಿಸುವ ಸ್ಪರ್ಧೆ ಪ್ರತೀ ಬೇಸಿಗೆ ರಜೆಯಲ್ಲಿ ನನಗೂ ನನ್ನ ತಂಗಿಗೂ ಇದ್ದದ್ದೇ.  ಅಷ್ಟು ದಪ್ಪನೆಯ ಪುಸ್ತಕ ಪರ್ವವನ್ನು ಎಡಬಿಡದೆ, ಊಟ ತಿಂಡಿ ಬಿಟ್ಟು ೨೪ ಗಂಟೆಗಳಲ್ಲಿ ಓದಿದ್ದನ್ನು ಮರೆಯಲಾರೆ.  

ನಮ್ಮಲ್ಲಿನ ಹಲವಾರು ಅನಿವಾಸಿ ಸದಸ್ಯರು ತಮ್ಮ ನೆನಪುಗಳನ್ನು, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಕೆಳಗೆ. ಈ ಸಂಚಿಕೆಯನ್ನು ಹೋದವಾರ ಶ್ರೀಮತಿ ಗೌರಿ ಪ್ರಸನ್ನ ಅವರು ಬರೆದ ನುಡಿನಮನಕ್ಕೆ ಜೋಡಿಸಿಕೊಂಡು, ಆಸಕ್ತರು ಒಂದೆಡೆ ಇಟ್ಟುಕೊಳ್ಳಬಹುದು. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).

ಕೊಸರು: ಇಲ್ಲಿ ಪ್ರಕಟಿಸಿರುವ ಲೇಖನಗಳು ಯಾವುದೇ order ನಲ್ಲಿ ಇರುವುದಿಲ್ಲ, ಅವನ್ನು ನನಗೆ ತಲುಪಿದಂತೆ ಬಳಸಿದ್ದೇನೆ.
**********************
ಒಂದು ಮಹಾನ್ ದೀಪವು ಇತರ ಲೋಕಗಳನ್ನು ಪ್ರಕಾಶಮಾನಗೊಳಿಸಲು ಸಾಗಿದೆ. ಕನ್ನಡ ಭಾಷೆಯ ಮೇಲಿನ ನನ್ನ ಪ್ರೀತಿಯು ಎಸ್.ಎಲ್. ಭೈರಪ್ಪ ಅವರ ಬರವಣಿಗೆಯ ಮೂಲಕ ಆಕಾಶಕ್ಕೇರಿತು. ಅವರ ಸಂಶೋಧನೆಯ ಆಳತೆ, ಸತ್ಯವನ್ನು ಅಸಂಪ್ರದಾಯಿಕವಾಗಿ ಮತ್ತು ಅಚಲವಾದ ದೃಢತೆಯಿಂದ ಪ್ರಸ್ತುತಪಡಿಸುವ ಅವರ ನಿಶ್ಚಯವನ್ನು ತೋರಿಸುತ್ತದೆ, ಜೊತೆಗೆ ಕಾದಂಬರಿಯ ಸಾಹಿತ್ಯದ ಸೌಂದರ್ಯವನ್ನು ಕಸಿದುಕೊಳ್ಳದೆ. 'ಅವರಣ' ಓದಿದಾಗ, ಇತಿಹಾಸವನ್ನು ಎಷ್ಟು ಮಟ್ಟಿಗೆ ವಿಕೃತಗೊಳಿಸಲಾಗಿದೆ ಎಂಬುದನ್ನು ನಾನು ಅರಿತುಕೊಂಡೆ ಮತ್ತು ಇದನ್ನು ಎಲ್ಲರಿಗೂ, ವಿಶೇಷವಾಗಿ ಇತಿಹಾಸದ ಕೇವಲ ಒಂದು ಭಾಗವನ್ನು ಮಾತ್ರ ಕೇಳಿರುವ ಯುವಜನತೆಗೆ ಓದಬೇಕೆಂದು ಶಿಫಾರಸು ಮಾಡುವೆ. ಕಥೆಯೊಳಗಿನ ಕಥೆ ಬರೆಯುವ ಕಠಿಣ ತಂತ್ರವನ್ನು ಡಾ. ಭೈರಪ್ಪ ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಇನ್ನೂ ಅವರ ಅನೇಕ ಕಾದಂಬರಿಗಳನ್ನು ನಾನು ಓದಿಲ್ಲ, ಈಗ ಅವುಗಳನ್ನು ಓದುವ ನಿಶ್ಚಯ ಮಾಡಿಕೊಂಡಿದ್ದೇನೆ. ನಮ್ಮ ನಡುವೆ ಎಸ್‌ ಎಲ್‌ ಭೈರಪ್ಪನವರು ಇದ್ದರು ಎಂಬುದು ನಮಗೆ ಆಶೀರ್ವಾದವೇ ಅಲ್ಲವೇ? ಅವರು ಕರುನಾಡಿನಲ್ಲಿ ಹುಟ್ಟಿದ್ದು, ಅವರ ಸಾಹಿತ್ಯದ ಅಪಾರ ಕೊಡುಗೆ ನಮ್ಮ ಕನ್ನಡ ಭಾಷೆಯಲ್ಲಿ ಎಂಬದು ಕನ್ನಡಿಗರಾದ ನಮೆಲ್ಲರಿಗೆಷ್ಟು ಹೆಮ್ಮೆ! ಅವರು 2019ರಲ್ಲಿ ಯುಕೆಗೆ ಭೇಟಿ ನೀಡಿದಾಗ ಅವರನ್ನು ನೋಡುವ ಮತ್ತು ಕೇಳುವ ಅವಕಾಶ ನನ್ನದಾಯಿತು. ಇದಕ್ಕೆ ನಾನು ಚಿರಋಣಿ. ಅವರ ಬಗ್ಗೆ ಹೆಚ್ಚು ತಿಳಿದಷ್ಟು, ಹೆಚ್ಚು ವಿನಮ್ರತೆಯ ಭಾವನೆ ಉಂಟಾಗುತ್ತದೆ. ಅವರ ಗಮನವು ಒಂದು ಯುಗದ ಅಂತ್ಯದಂತೆ ಅನಿಸುತ್ತದೆ.

ಓಂ ಶಾಂತಿ.

- ಶಾಲಿನಿ ಜ್ಞಾನಸುಬ್ರಮಣಿಯನ್.
**********************
ಡಾ ಎಸ್ ಎಲ್ ಭೈರಪ್ಪ; ಕೆಲವು ಚಿಂತನೆಗಳು ಮತ್ತು ನೆನಹುಗಳು
ಡಾ ಜಿ ಎಸ್ ಶಿವಪ್ರಸಾದ್


ಭೈರಪ್ಪನವರು ಬಹಳ ಜನಪ್ರಿಯ ಲೇಖಕರು ಮತ್ತು ಕನ್ನಡ ಸಾರಸ್ವತ ಲೋಕದ ದಿಗ್ಗಜರು. ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟವರು. ಅವರು ಪದ್ಮಶ್ರೀ ಮತ್ತು ಪದ್ಮವಿಭೂಷಣ ಪುರಸ್ಕೃತರೂ ಆಗಿದ್ದರು. ಭೈರಪ್ಪನವರು ಸಮಾಜದಲ್ಲಿನ ವಿವಿಧ ಸಮುದಾಯಗಳ ಅನುಭವವನ್ನು ಪಡೆಯಲು ಹತ್ತಾರು ನೆಲೆಗಳಲ್ಲಿ ಹೋಗಿ ಬದುಕನ್ನು ಹತ್ತಿರದಿಂದ ಕಂಡು, ಅದನ್ನು ಧರ್ಮ, ತರ್ಕ ಶಾಸ್ತ್ರ, ಮತ್ತು ಸಾಂಸ್ಕೃತಿಕ ವಿಷಯಗಳ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ ಒಳಪಡಿಸಿದ ಲೇಖಕ. ಅವರ ಕಾದಂಬರಿ ವಸ್ತು ವಿಷಯದ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಮಾಡಿ ಬದುಕಿನ ಅನುಭವಗಳ ವಿಸ್ತಾರವನ್ನು ಓದುಗರಿಗೆ ಪರಿಚಯಿಸುತ್ತಿದ್ದರು. ತಮ್ಮ ನಿಲುವಿಗೆ ಬದ್ಧರಾಗಿ ನಿಂತವರು ಭೈರಪ್ಪನವರು. ಪಂಡಿತರು, ವಿಮರ್ಶಕರು, ಮೀಮಾಂಸಕರು ಭೈರಪ್ಪನವರ ಕೃತಿಗಳ ತಿರುಳುಗಳನ್ನು ಚರ್ಚಿಸಿದ್ದು ಅದನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅದರ ಪ್ರಸ್ತುತತೆಯನ್ನು ಪರಿಣಾಮಗಳನ್ನು ನೋಡಿ ವಿಶ್ಲೇಷಿಸಿದ್ದಾರೆ. ಅಲ್ಲಿ ಕೆಲವು ವಿವಾದಗಳು ಹುಟ್ಟುಕೊಂಡಿರುವುದು ನಿಜ. ಹಲವಾರು ಸಾಂಸ್ಕೃತಿಕ, ಧಾರ್ಮಿಕ, ಮತ, ಜಾತಿ ವ್ಯವಸ್ಥೆಗಳ ನಡುವೆ ಬಹುತ್ವ ಉಳ್ಳ ಭಾರತೀಯ ಸಮಾಜದಲ್ಲಿ ಇತಿಹಾಸ, ಧರ್ಮ, ಸಂಪ್ರದಾಯ ಎಂಬ ವಿಚಾರಗಳು ಭಾವನೆಗಳನ್ನು ಕಲಕುವುದು ಸಹಜವೇ.

ಜಾಗತೀಕರಣದ ಹಿನ್ನೆಲೆಯಲ್ಲಿ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಿದೆ. ರಾಷ್ತ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಕೂಡ ಬದಲಾಗುತ್ತಿದೆ. ಈ ಬದಲಾವಣೆಗಳ ನಡುವೆ ಬದುಕುತ್ತಿರುವ ಸೃಜನ ಶೀಲ ಲೇಖಕರು ಆ ಬದಲಾವಣೆಗಳಿಗೆ ಸ್ಪಂದಿಸಿ ಅದನ್ನು ತಮ್ಮ ಕಲ್ಪನಾ ಶಕ್ತಿಯಿಂದ ಅದರ ವಿವಿಧ ಆಯಾಮಗಳನ್ನು ಗ್ರಹಿಸಿ ಕಥೆ, ಕವನ, ಕಾದಂಬರಿಗಳಲ್ಲಿ ಪ್ರಸ್ತುತಿ ಪಡಿಸುತ್ತಾರೆ. ಅಲ್ಲಿ ಪ್ರಭುತ್ವದ, ಬಹುಸಂಖ್ಯಾತರ, ಅಲ್ಪಸಂಖ್ಯಾತರ ಪರ ಅಥವಾ ವಿರೋಧ ಭಾವನೆಗಳು ಉಂಟಾಗುವುದು ಅನಿವಾರ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ, ಒಂದು ಸಿದ್ಧಾಂತಕ್ಕೆ ಜನರು,
ಓದುಗರು ತಮ್ಮ ವೈಯುಕ್ತಿಕ ಬದುಕಿನ ಅನುಭವದ ಆಧಾರದಮೇಲೆ, ಹುಟ್ಟಿನಿಂದಲೇ ಪ್ರಾಪ್ತವಾಗಿರುವ ಕೆಲವು ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಪ್ರಭಾವಗಳ ಆಧಾರದ ಮೇಲೆ, ತಮ್ಮ ಶಿಕ್ಷಣ, ಸಾಹಿತ್ಯದ ಅರಿವು, ತಮ್ಮ ಪರಿಸರ, ಒಡನಾಟ, ಬದುಕಿನ ಮೌಲ್ಯ, ದೃಷ್ಟಿಕೋನ ಇವುಗಳ ಆಧಾರದ ಮೇಲೆ ತಮಗೆ ಒಪ್ಪುವಂಥ ನಿಲುವನ್ನು ಕಟ್ಟಿಕೊಂಡಿರುತ್ತಾರೆ. ಇಂಥ ಒಂದು ಸನ್ನಿವೇಶದಲ್ಲಿ ಒಂದು ಕಥಾವಸ್ತುವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಆಯ್ಕೆಯನ್ನು ಅವರು ಪಡೆದಿರುತ್ತಾರೆ. ಹಿಂದೆ ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ, ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲೂ ನಡೆಯುತ್ತಿವೆ. ಈ ಚರ್ಚೆಗಳು ಘನವಾಗಿದ್ದಲ್ಲಿ ಅದು ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹಿಂದೆ, ಭಿನ್ನಾಭಿಪ್ರಾಯಗಳ ನಡುವೆಯೂ ಹಿರಿಯ ಸಾಹಿತಿಗಳ ನಡುವೆ ಪರಸ್ಪರ ಗೌರವ, ಸ್ನೇಹ, ವಿಶ್ವಾಸಗಳಿರುತ್ತಿದ್ದವು.

ಒಂದು ಕಥೆಯಲ್ಲಿ ಕಥಾವಸ್ತು, ಬರವಣಿಗೆಯ ಶೈಲಿ, ಪಾತ್ರಪೋಷಣೆ, ಸರಳತೆ, ಸಂಕೀರ್ಣತೆ ಹೀಗೆ ಅನೇಕ ಆಯಾಮಗಳಿರುತ್ತವೆ. ಕೆಲವೊಮ್ಮೆ ಕಥಾವಸ್ತು ಇಷ್ಟವಾಗಬಹುದು, ಅಥವಾ ಇಷ್ಟವಾಗದಿರಬಹುದು, ಶೈಲಿ ಇಷ್ಟವಾಗ ಬಹುದು, ಅಥವಾ ಸನ್ನಿವೇಶಗಳ ಸಂಕೀರ್ಣತೆ ಮತ್ತು ಪಾತ್ರಗಳ ಪೋಷಣೆ ಓದುಗನ ಆಸಕ್ತಿಯನ್ನು ಸೆಳೆಯಬಹುದು. ಬದುಕಿನಲ್ಲಿ ಎದುರಾಗುವ ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳ, ನಂಬಿಕಗಳ ಘರ್ಷಣೆಗಳು ದ್ವಂದ್ವಗಳು ಎಲ್ಲರನ್ನು ಕಾಡುವುದು ಸಹಜ. ಆ ರೀತಿ ವಿಚಾರಗಳನ್ನು ಲೇಖಕರು ತೀವ್ರ ವಿಮರ್ಶೆಗೆ ಒಳಪಡಿಸಿ ಅದನ್ನು ತಮ್ಮ ಅಭಿಪ್ರಾಯ ಎಂದು ಹೇಳದೆಯೇ ಪಾತ್ರಗಳ ಮುಖೇನ ತೆರೆದಿಡುತ್ತಾರೆ. ಓದುಗರನ್ನು ಆ ಆಳಕ್ಕೆ ಲೇಖಕರು ಕರೆದೊಯ್ಯುತ್ತಾರೆ. ಓದುಗರು ತಮ್ಮ ಅನುಭವಕ್ಕೆ ತಕ್ಕಂತೆ ಅದನ್ನು ಅರ್ಥೈಸಿಕೊಳ್ಳಬಹುದು.

ಕೆಲವು ಲೇಖಕರ ಕೃತಿಗಳನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಾಂಸ್ಕೃತಿಕ ಪ್ರಜ್ಞೆ ಅಗತ್ಯ. ಕೆಲವು ಕೃತಿಗಳಿಗೆ ಸಾಂಸ್ಕೃತಿಕ ಗಡಿಗಳನ್ನು ದಾಟಿ ನಿಲ್ಲುವ ಶಕ್ತಿ ಇರುತ್ತದೆ, ಕೆಲವು ಕೃತಿಗಳನ್ನು ಅದರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ
ನೋಡಿ ಅರ್ಥೈಸಿಕೊಳ್ಳಬೇಕು. ಎಲ್ಲ ಕೃತಿಗಳಿಗೂ ಇತಿಮಿತಿಗಳಿರುತ್ತದೆ, ಅದರ ಮಧ್ಯದಲ್ಲಿ ಅದು ಎಷ್ಟರ ಮಟ್ಟಿಗೆ ಜನರ ಮನ್ನಣೆ ಪಡೆದಿದೆ, ಕೃತಿಗಳು ಎಷ್ಟು ಜನರನ್ನು ತಲುಪಿದೆ, ಎಷ್ಟು ಮರು ಮುದ್ರಣವನ್ನು ಕಂಡಿದೆ, ಎಷ್ಟು ಭಾಷೆಗಳಿಗೆ ಭಾಷಾಂತರಗೊಂಡಿದೆ ಮತ್ತು ಮುಂದಕ್ಕೆ ಎಲ್ಲಿಯವರೆಗೆ ಜನರಿಂದ ಸ್ವೀಕೃತವಾಗಿರುತ್ತದೆ ಅನ್ನುವುದು ಕಡೆಗೆ ಉಳಿಯುವ ವಿಚಾರ. ಈ ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ನಾವು ಭೈರಪ್ಪನವರನ್ನು ಒಬ್ಬ ಲೇಖಕನಾಗಿ ಮತ್ತು ಅವರು ಬರೆದಿರುವ ಕೃತಿಗಳನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ.

ನಾನು ಭೈರಪ್ಪನವರನ್ನು ಹತ್ತಿರದಿಂದ ಕಂಡದ್ದು ಅವರು ನಮ್ಮ ಕನ್ನಡ ಬಳಗದ ಮೂವತ್ತನೇ ವಾರ್ಷಿಕೋತ್ಸವದ ಅತಿಥಿಯಾಗಿ ಬಂದ ಸಂದರ್ಭದಲ್ಲಿ. ನಾನು ಆಗ ಸ್ಮರಣ ಸಂಚಿಕೆಯ ಸಂಪಾದಕನಾಗುವುದರ ಜೊತೆಗೆ ಸಾಹಿತ್ಯ ಕಾರ್ಯಕ್ರಮಗಳ ಜವಾಬ್ದಾರಿಯನ್ನೂ ಹೊತ್ತಿದ್ದೆ. ಆಗ ಮುಖ್ಯ ಮಂತ್ರಿ ಚಂದ್ರು ಮತ್ತು ಪ್ರೊ ಕೃಷ್ಣೇಗೌಡರು ನಮ್ಮ ಅತಿಥಿಯಾಗಿ ಆಗಮಿಸಿದ್ದರು. ಡಾ ಭಾನುಮತಿ ಅವರು ಬಳಗದ ಅಧ್ಯಕ್ಷರಾಗಿದ್ದರು. ಆ ಒಂದು ಸಂಧರ್ಭದಲ್ಲಿ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ನಾನು ಭೈರಪ್ಪನವರನ್ನು ಸಾಹಿತ್ಯ ವಿಚಾರವಾಗಿ ಮಾತನಾಡಬೇಕೆಂದು ವಿನಂತಿಸಿಕೊಂಡಾಗ ಅವರು ಅದಕ್ಕೆ ಬದಲಾಗಿ ಅವರ ಕೃತಿಯ ಬಗ್ಗೆ ಸಾರ್ವಜನಿಕ ಸಂವಾದ ಒಂದನ್ನು ಏರ್ಪಡಿಸುವುದು ಸೂಕ್ತವೆಂದು ಸಲಹೆ ನೀಡಿದ್ದರು. ಅಂದಿನ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಡಾ ವತ್ಸಲಾ ರಾಮಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಒಳ್ಳೆ ಸಂವಾದ ನಡೆಯಿತು.

೨೦೧೯ರಲ್ಲಿ ಭೈರಪ್ಪನವರನ್ನು ಕುರಿತು ಲಂಡನ್ನಿನ ನೆಹರು ಸೆಂಟರಿನಲ್ಲಿ ಒಂದು ಇಂಗ್ಲಿಷ್ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅದಕ್ಕೆ ಭೈರಪ್ಪನವರು ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ನನಗೆ ಭೈರಪ್ಪನವರ ಕೃತಿಯ ಬಗ್ಗೆ ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ಅಹ್ವಾನ ಒದಗಿ ಬಂತು. ಸಂತೋಷದಿಂದ ಒಪ್ಪಿಕೊಂಡೆ. ಅಂದು ಖ್ಯಾತ ಲೇಖಕ ಅಮಿಶ್ ತ್ರಿಪಾಠಿ ಅಧ್ಯಕ್ಷತೆ ವಿಹಿಸಿದ್ದು ಅಲ್ಲಿ ಶತಾವಧಾನಿ ಗಣೇಶ್ ಮತ್ತು ಸಾಹಿತಿಗಳಾದ ಗಿರೀಶ್ ಭಟ್ ಅವರೂ ಮಾತನಾಡಿದರು. ನಾನು ಒಬ್ಬ ಅನಿವಾಸಿ ಲೇಖಕನಾಗಿ ‘ತಬ್ಬಲಿಯು ನೀನಾದೆ ಮಗನೆ’ ಕೃತಿಯ ಬಗ್ಗೆ ಒಂದು ಪುನರಾವಲೋಕನೆಯನ್ನು ಮಂಡಿಸಿದೆ. ಐದು ದಶಕಗಳ ನಂತರ ಆ ಕಥೆಯನ್ನು ಅವಲೋಕನೆ ಮಾಡಿದಾಗ ಅದು ತನ್ನ ಸ್ವರೂಪವನ್ನು ಹೇಗೆ ಉಳಿಸಿಕೊಂಡಿದೆ ಎನ್ನುವುದರ ಬಗ್ಗೆ ಮಾತನಾಡಿದೆ. ನನ್ನ ಮಾತುಗಳ ನಂತರ ಭೈರಪ್ಪನವರು ನನ್ನನ್ನು ಅಭಿನಂದಿಸಿದರು, ತಮ್ಮ ಮಾತುಗಳಲ್ಲೂ ಉಲ್ಲೇಖಿಸಿದರು. ಇದು ನನಗೆ ಗೌರವದ ವಿಷಯವಾಗಿದೆ.

ಕೋವಿಡ್ ಸಮಯದಲ್ಲಿ 'ಪಯಣ' ಎಂಬ ನನ್ನ ಕಿರುಕಾದಂಬರಿಯನ್ನು ಸಪ್ನಾ ಬುಕ್ ಹೌಸ್ ಭೈರಪ್ಪನವರ ಗಮನಕ್ಕೆ ಕಳುಹಿಸಿದ್ದು ಅದನ್ನು ಬಿಡುವಿನಲ್ಲಿ ಓದಿ, ಅದು ತಮಗೆ ಇಷ್ಟವಾಯಿತೆಂದು ನನ್ನ ಪರಿವಾರ ಮಿತ್ರದವರ ಮೂಲಕ ತಿಳಿಸಿದ್ದು ನನಗೆ ಖುಷಿ ಮತ್ತು ತೃಪ್ತಿಯನ್ನು ನೀಡಿತು. ಕೋವಿಡ್ ನಂತರದ ಸಮಯದಲ್ಲಿ ನನ್ನ ಅಣ್ಣ ಜಯದೇವ್ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕೆಂಬ ಒಂದು ಮನವಿಯನ್ನು ಭೈರಪ್ಪನವರ ಬಳಿ ಪ್ರಸ್ತಾಪಿಸಿ ಆ ಚಾಲನೆಗೆ ನೆರವು ಕೇಳಲು ಅವರ ಮನೆಗೆ ಹೋಗಬೇಕಿತ್ತು. ನನಗಾಗಲೇ ಪರಿಚಿತರಾಗಿದ್ದ ಅವರನ್ನು ಕಾಣಲು ಅವರ ಕುವೆಂಪು ನಗರದ ಮನೆಗೆ ಹೋದಾಗ ಅಣ್ಣ ಜಯದೇವನ ಯತ್ನವನ್ನು ಮೆಚ್ಚಿ ಕಂಬಾರರ ಜೊತೆ ಸಮಾಲೋಚಿಸಿ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆಯನ್ನು ನೀಡಿದರು. ಮಾತುಕತೆಯ ನಂತರ ಅವರೇ ಅಡುಗೆ ಮನೆಗೆ ಹೋಗಿ ಕಾಫಿ ತುಂಬಿದ ಕಪ್ಪುಗಳನ್ನು ಹೊತ್ತು ತಂದರು, ಅದನ್ನು ಕೂಡಲೇ ಗಮನಿಸಿದ ನನ್ನ ಶ್ರೀಮತಿ ತುರ್ತಾಗಿ ಅವರಿಂದ ಕಾಫಿ ಟ್ರೇ ಪಡೆದಳು. ಅವರು ಅಂದು, ಒಂದು ಪಂಚೆ ಬನಿಯನ್ ಹಾಕಿಕೊಂಡು ಸರಳವಾಗಿದ್ದರು, ಮನೆಯಲ್ಲಿ ಒಬ್ಬ ಆಳಿಗೆ ಅಥವಾ ಹೆಂಡತಿಗೆ ಕಾಫಿ ತರಲು ಆಜ್ಞಾಪಿಸುವ ಬದಲು ತಾವೇ ಕಾಫಿ ಟ್ರೇ ಹೊತ್ತು ತಂದದ್ದು ಅವರ ಸರಳ ಬದುಕಿಗೆ ಸಾಕ್ಷಿಯಾಗಿತ್ತು. ಅವರ ವಿನಯ ಶೀಲತೆಯನ್ನು ನಾನು ಬಹಳವಾಗಿ ಮೆಚ್ಚಿಕೊಂಡೆ. ಅಲ್ಲಿ ಪ್ರೀತಿ ವಿಶ್ವಾಸವೇ ಪ್ರಧಾನವಾಗಿತ್ತು. ಅವರ ಮನೆಯ ಅಂಗಳದಲ್ಲಿ ತೂಗು ಹಾಕಿದ್ದ ಒಂದು ಸ್ಕಾಟ್ಲ್ಯಾಂಡಿನ ಸ್ಟಾಗ್ ಚಿತ್ರ ನನ್ನ ಗಮನವನ್ನು ಸೆಳೆಯಿತು, ಅದರ ಬಗ್ಗೆ ನಾನು ಮಾತೆತ್ತಿದಾಗ ಈ ಜಿಂಕೆಯ ಚಿತ್ರ ಅವರು ಉತ್ತರಕಾಂಡವನ್ನು ಬರೆಯಲು ಪ್ರೇರಣೆ ನೀಡಿತೆಂದು ತಿಳಿಸಿದರು. ನನ್ನ ತಂದೆ ಜಿ ಎಸ್ ಎಸ್ ಮತ್ತು ಭೈರಪ್ಪ ಆಪ್ತ ಗೆಳೆಯರಾಗಿದ್ದರು, ಜಿ ಎಸ್ ಎಸ್ ಅವರ ಅರೋಗ್ಯ ಕ್ಷೀಣಿಸುತ್ತಿರುವಾಗ ಭೈರಪ್ಪನವರು ಮನೆಗೆ ಬಂದು ಅವರನ್ನು ವಿಚಾರಿಸಿಕೊಂಡು ಸಂತೈಸಿದ್ದರು. ಪಿ ಶೇಷಾದ್ರಿ ನಿರ್ದೇಶನದ, ಸಾಹಿತ್ಯ ಅಕೆಡೆಮಿ ಹೊರತಂದ ಭೈರಪ್ಪನವರ ಸಾಕ್ಷ್ಯ ಚಿತ್ರದಲ್ಲಿ ಭೈರಪ್ಪನವರು ‘ನನ್ನ ಬದುಕಿನಲ್ಲಿ ಹಲವಾರು ಗೆಳೆತನವನ್ನು ನಾನು ಪಡೆದುಕೊಂಡೆ’ ಎನ್ನುತ್ತಾ ಬದುಕಿನ ಪ್ರೀತಿಯ ಬಗ್ಗೆ ಮಾತನಾಡುವಾಗ ಮೂಡುವ ಭೈರಪ್ಪ ಮತ್ತು ಜಿ ಎಸ್ ಎಸ್ ಹಸ್ತಲಾಘ ಮಾಡುತ್ತಿರುವ ಚಿತ್ರ ಅರ್ಥಪೂರ್ಣವಾಗಿದೆ. ಎಲ್ಲ ಕನ್ನಡಿಗರಲ್ಲಿ ಹೆಮ್ಮೆಯನ್ನು ಉಂಟುಮಾಡುತ್ತದೆ.
**********************
ನಾನು ಮೊದಲ ಬಾರಿ ಭೈರಪ್ಪನವರ ಪುಸ್ತಕ ಓದಿದ್ದು 9ನೇ ತರಗತಿಯಲ್ಲಿರುವಾಗ. ದಸರಾ ರಜೆ ಕಳೆದು ಶಾಲೆಗೆ ವಾಪಸಾದಾಗ ಒಮ್ಮಿಂದೊಮ್ಮೆಲೆ ನನ್ನ ತರಗತಿಯ ಒಂದಿಷ್ಟು ಜನರಿಗೆ ಕನ್ನಡ ಕಾದಂಬರಿಯ ಓದುವ ಹವ್ಯಾಸ ಸ್ಪರ್ಧೆಯಾಗಿ ಮಾರ್ಪಟ್ಟಿತು - ನಾನೆಷ್ಟು ಓದಿದೆ ನೀನೆಷ್ಟು ಓದಿದೆ ಎಂಬ ತೋರಿಕೆಯ ಹುಚ್ಚು.  ಅದಕ್ಕೆ ಸರಿಯಾಗಿ ನಮ್ಮ ಶಾಲೆಯಲ್ಲಿ ತುಂಬಾ ಸುಂದರವಾದ ವಾಚನಾಲಯವಿತ್ತು. ಪುಸ್ತಕಗಳನ್ನು ಮನೆಗೂ ಒಯ್ಯಲು ಕೊಡುತ್ತಿದ್ದರು.  ನಾನು ಆ ತನಕ ಓದಿದ ಯಾವುದೇ ಶಾಲೆಯಲ್ಲಿ, ವಾಚನಾಲಯ, ಪುಸ್ತಕವನ್ನು ಮನೆಗೆ ಕೊಂಡೊಯ್ಯುವ ಆಯ್ಕೆ ಇರಲಿಲ್ಲವಾದ್ದರಿಂದ ಈಗ ಅದೊಂದು ರೀತಿ ಒಮ್ಮಿಂದೊಮ್ಮೆಲೆ ಶ್ರೀಮಂತಿಕೆ ಬಂದಂತೆ ಅನಿಸುತ್ತಿತ್ತು. 

ಬರೀ ಪುಸ್ತಕ ತೆಗೆದುಕೊಂಡರೆ ಮುಗಿಯುತ್ತಿರಲಿಲ್ಲ, ಪುಸ್ತಕ ಮರಳಿಸುವಾಗ ಲೈಬ್ರರಿ ಜವಾಬ್ದಾರಿ ಹೊತ್ತಿದ್ದ ಟೀಚರ್ ನಮ್ಮನ್ನು ಪುಸ್ತಕದ ಸಾರಾಂಶದ ಕುರಿತು ಕೇಳುತ್ತಿದ್ದರು. Test ಗಳಲ್ಲಿ ಕಮ್ಮಿ ಮಾರ್ಕ್ಸ್ ಬಂದಾಗ ಕಾದಂಬರಿ ಓದಿದ್ದು ಜಾಸ್ತಿ ಆಯ್ತು ಅನಿಸುತ್ತೆ ಎಂದು ಹಂಗಿಸುತ್ತಿದ್ದರು ಕೂಡ.

ನನ್ನ ಪಪ್ಪ ಭೈರಪ್ಪನವರ ಅಭಿಮಾನಿ, ಜೊತೆಗೆ ಅವರಷ್ಟು ಒಳ್ಳೆಯ ಓದುಗರೆಂದರೆ, ಅವರು ಓದಿದ ಪುಸ್ತಕದ ಕಥೆ ಸಾರಾಂಶವನ್ನು ಅತ್ಯಂತ ಸುಂದರವಾಗಿ ನಮಗೆ narrate ಮಾಡುತ್ತಿದ್ದರು. ಎಷ್ಟು ಚೆನ್ನಾಗಿ ಹೇಳುತ್ತಿದ್ದರು ಎಂದರೆ ಕೊನೆಯಲ್ಲಿ ನಾವು ಕೂಡ ಪುಸ್ತಕ ಓದಿ ಮುಗಿಸಿದ್ದೇವೆ ಅನ್ನುವ ಭಾವ ಮನಸನ್ನು ತುಂಬಿಕೊಳ್ಳುತ್ತಿತ್ತು. ದಾಟು, ಭಿತ್ತಿ, ತಬ್ಬಲಿಯು ನೀನಾದೆ ಮಗನೆ, ನಾಯಿ ನೆರಳು, ಗ್ರಹಣ, ಇವೆಲ್ಲ ಕಾದಂಬರಿ ನಾನು ಓದಿದ್ದು ಪಪ್ಪನ ಕಥೆಗಳ ಮೂಲಕವೇ!

ಅವರನ್ನು ಮೆಚ್ಚಿಸಲು, ಅಥವಾ ನಾನೂ ದೊಡ್ಡ ಓದುಗಳು ಎಂದು ತೋರಿಸಲೋ ಭೈರಪ್ಪನವರ ಪುಸ್ತಕ ಓದುವೆ ಎಂದು ಆ ಸಲ ವಾಚನಾಲಯಕ್ಕೆ ಹೋಗಿ ಭೈರಪ್ಪನವರ ಧರ್ಮಶ್ರೀ ಕಾದಂಬರಿ ತಂದು ಓದಲು ಶುರು ಮಾಡಿದೆ. ನಾನು ಮುಗಿಸುವ ಮೊದಲೇ ಪಪ್ಪ ಅದನ್ನು ಓದಿ ಮುಗಿಸಿದರು, ಜೊತೆಗೆ ಚಿಕ್ಕಪ್ಪ, ಅಕ್ಕ ಪಕ್ಕದಲ್ಲಿದ್ದ ಅಣ್ಣ, ಅಂಕಲ್ ಎಲ್ಲರೂ ಅದನ್ನು ಓದಿ, ಅದ್ಬುತ ಅದ್ಬುತ ಅನ್ನುವಾಗ. ಅದನ್ನು ವಾಪಸ್ ಕೊಡುವ ಸಮಯ ಬಂದೇ ಬಿಟ್ಟಿತ್ತು. ಆ ದಿನ ರಾತ್ರಿ ಪೂರ್ತಿ ಕೂತು ಪುಸ್ತಕ ಮುಗಿಸಿದೆ. ಆ ಪುಸ್ತಕ ಆಪ್ತವಾಗಲು ಹಲವು ಕಾರಣಗಳಿತ್ತು, ಮುಂಡಗೋಡ, ಹಳಿಯಾಳ, ಯಲ್ಲಾಪುರದ ಹಲವೆಡೆ ಈ ಮತಾಂತರದ ವಿರುದ್ಧ ಹಲವಾರು protest ಗಳು ನಡೆಯುತ್ತಿದ್ದವು. ನಮ್ಮ ಜೊತೆಗೆ ಓದುತ್ತಿದ್ದ ಸಹಪಾಠಿಗಳ ಕುಟುಂಬಗಳು ಮತಾಂತರವಾಗಿ ಒಮ್ಮಿಂದೊಮ್ಮೆಲೆ ಹೆಸರು ಬದಲಿಸಿಕೊಂಡು ಚರ್ಚ್ ಗೆ ಹೋಗುತ್ತಿದ್ದ ದೃಶ್ಯಗಳು, ಅದರ ಬಗ್ಗೆ ನಾವು ಕ್ಲಾಸಿನಲ್ಲಿ ಗುಸು ಗುಸು ಮಾಡುತ್ತಿದ್ದುದು. ಕ್ರೈಸ್ತ ಮಿಷನರಿ ಶಾಲೆಯಲ್ಲಿಯೇ ಓದುತ್ತಿದ್ದ ಕಾರಣ ಅದನ್ನು ಮುಕ್ತ ಚರ್ಚೆ ಮಾಡುವ ಧೈರ್ಯವೂ ಇಲ್ಲದ ವಯಸ್ಸು, ಸಂದರ್ಭ, ವೈಪರೀತ್ಯಗಳ ನಡುವೆಯೇ ಮತಾಂತರ ಎಂಬುದು ಹೇಗೆ ಸಾಂಸ್ಕೃತಿಕ ಘರ್ಷಣೆಯನ್ನು ತಂದು ಒಬ್ಬ ವ್ಯಕ್ತಿಯನ್ನು ಟೊಳ್ಳು ಮಾಡುತ್ತದೆ ಎಂಬ ಸಾರಾಂಶದ ಧರ್ಮಶ್ರೀ ನಮ್ಮ ಸುತ್ತಲಿನ ಕಥೆಯೇ ಆಗಿ ಮನಸನ್ನು ಆವರಿಸಿಕೊಂಡಿತು. ಅಲ್ಲಿನ ನಾಯಕನಂತೆಯೇ, ನನ್ನ ಸುತ್ತಲಿನ ಒಬ್ಬ ವ್ಯಕ್ತಿಯೂ ಹೀಗೆ ಅಮ್ಮನ ಮಡಿಲಿಗೆ ಮರಳಬಹುದೇ? ಯಾರಿರಬಹುದು ಅವರು? ಹೀಗೆಲ್ಲ ಪ್ರಶ್ನೆ ಮನದಲ್ಲಿ ಹುಟ್ಟುತ್ತಿತ್ತು.

ಪುಸ್ತಕ ವಾಪಸ್ ಕೊಟ್ಟ ಮೇಲೆ ಟೀಚರ ಕಥೆ ಕೇಳಿದರು, ನಾನೂ ಅನುಮಾನದಲ್ಲಿ ಕಥೆ ಶುರು ಮಾಡಿದೆ. ಅವರು ಅರ್ಧದಲ್ಲೇ ನಿಲ್ಲಿಸಿ "ಸಾಕು ಸಾಕು, ಸ್ವಲ್ಪ ಓದಿನ ಕಡೆಗೆ ಗಮನವಿರಲಿ. ಬರೀ ಕಾದಂಬರಿ ಓದಿ ವಿಮರ್ಶೆ ಮಾಡೋದಲ್ಲ" ಎಂದು ಜೋರ್ ಮಾಡಿದರು.
ಆಮೇಲೆ ಕೆಂಪು ಬಣ್ಣದ ಮುಖಪುಟವಿದ್ದ ಧರ್ಮಶ್ರೀ ನಮ್ಮ ಲೈಬ್ರರಿಯಲಿ ಕಾಣಲೇ ಇಲ್ಲ.

‘ಭಿತ್ತಿ’ ಓದಿ ನನ್ನ ಪಪ್ಪ ಅದೆಷ್ಟು ಪ್ರಭಾವಿತರಾಗಿದ್ದರು ಎಂದರೆ, ಭೈರಪ್ಪನವರಿಗೆ ಪತ್ರ ಬರೆದು ಅವರ ಫೋಟೋ ಒಂದನ್ನು ಕಳಿಸಲು ವಿನಮ್ರ ವಿನಂತಿ ಮಾಡಿದ್ದರು. ಅವರಿಗೆ ಅದೆಷ್ಟೋ ಜನ ಈ ರೀತಿ ಪತ್ರ ಬರೆಯುತ್ತಾರೋ, ನಿರೀಕ್ಷಿಸಿದಂತೆಯೇ ಅವರಿಂದ ಯಾವ ಉತ್ತರವೂ ಬರಲಿಲ್ಲ.
ಮತ್ತೊಂದಿಷ್ಟು ದಿನ ಬಿಟ್ಟು, ಸ್ವವಿಳಾಸದ ಲಕೋಟೆಗೆ ಅಂಚೆ ಚೀಟಿ ಹಚ್ಚಿ ಮತ್ತೊಂದು ಪತ್ರ ಬರೆದು ಮತ್ತದೇ ಮನವಿ ಮಾಡಿದಾಗ, ಭೈರಪ್ಪನವರು ತಮ್ಮದೊಂದು ಭಾವಚಿತ್ರ ಮತ್ತು ಅದರ ಹಿಂದೆ ತಮ್ಮ ಸಹಿ ಹಾಕಿ ಕಳಿಸಿದ್ದರು.

ಆ ಚಿತ್ರ ಇಂದಿಗೂ ನಮ್ಮ ಆಲ್ಬಮ್ ನಲ್ಲಿ ಬೆಚ್ಚಗಿದೆ. ಭೀಮಕಾಯ, ಯಾನ, ಮತದಾನ ಬಿಟ್ಟು ನಾನು ಅವರೆಲ್ಲ ಪುಸ್ತಕಗಳನ್ನು ಓದಿರುವೆ. (ಕೆಲವು ಪಪ್ಪನ ಬಾಯಲ್ಲಿ ಕೇಳಿರುವೆ) ಮಂದ್ರ ಕಾಲೇಜ್ ದಿನಗಳಲ್ಲಿ ಎರಡೇ ದಿನಕ್ಕೆ ಓದಿ ಮುಗಿಸಿದ್ದು, ಈಗ ಓದಲು ಕುಳಿತರೆ ಎರಡೆರಡು ಪುಟಕ್ಕೆ ಇಪ್ಪತ್ತು ಪ್ರಶ್ನೆ ಮನದಲ್ಲಿ ಮೂಡುತ್ತವೆ. ಸಂಗೀತಲೋಕದ ಕರಾಳತೆ, ಸುಂದರತೆ ಎರಡನ್ನೂ ಅದ್ಭುತವಾಗಿ ತೋರಿಸುತ್ತಾ ಚಿತ್ರಿತಗೊಂಡಿರುವ ಪಾತ್ರಗಳು, ನಮ್ಮ ಸುತ್ತಲಿರುವ ಮಂದಿಯೇ ಅನಿಸಿಬಿಡುತ್ತದೆ.

ನನ್ನ ಅತೀ ಪ್ರೀತಿಯ ಕಾದಂಬರಿಗಳು ಎಂದರೆ, ಆವರಣ, ಮತ್ತು ಸಾರ್ಥ; time travel ಮಾಡಿಸುವ ಪುಸ್ತಕಗಳಿವು. ಸಾರ್ಥದ ಚಂದ್ರಿಕೆಯ ಕುರಿತು ನನಗೆ ಈಗಲೂ, ಕನಸುಗಳು ಬರುತ್ತವೆ. ಆವರಣ ಓದಿ ಒಮ್ಮೆಯಾದರೂ ಕಾಶಿಯ ಬೀದಿಗಳಲ್ಲಿ ಗಮ್ಯದ ಹಂಗಿಲ್ಲದೇ ಓಡಾಡಬೇಕು ಎನ್ನುವ ತುಡಿತ ಇನ್ನೂ ಉಳಿದುಕೊಂಡಿದೆ.

ಸರಸ್ವತಿಪುತ್ರರನ್ನ ಸಾರಸ್ವತ ಲೋಕ ಸದಾ ಸ್ಮರಿಸುತ್ತದೆ. ತುಂಬು ಜೀವನ ನಡೆಸಿದ ಗಟ್ಟಿ ವ್ಯಕ್ತಿತ್ವದ ಭೈರಪ್ಪನವರು, ಸರಸ್ವತಿಯ ಮಡಿಲಲ್ಲಿ ಸದ್ಗತಿ ಪಡೆಯಲಿ ಎಂಬ ಪ್ರಾರ್ಥನೆ.

- ಅಮಿತಾ ರವಿಕಿರಣ್, ಬೆಲ್‍ಫಾಸ್ಟ್.
ಅಮಿತಾ ರವಿಕಿರಣ ಅವರ ಸಂಗ್ರಹ.

**********************

’ಪರ್ವ’
ಚಿಕ್ಕವನಾಗಿದ್ದಾಗ ಓದಿದ ಪರ್ವದಲ್ಲಿನ ಪಾತ್ರಗಳು, ನನ್ನ ನೆಚ್ಚಿನ ಮಹಾಕಾವ್ಯ ಮಹಾಭಾರತವನ್ನು ಪೂರ್ತಿ humanise ಮಾಡಿದ ಕಾದಂಬರಿ. ಆದರೂ, ಕಥೆಗೆ, ಪಾತ್ರಗಳಿಗೆ ಒಂಚೂರೂ ಮರ್ಯಾದಾಭಂಗವಾಗದಂತೆ ಬರೆದ ಶ್ರೇಯಸ್ಸು ಭೈರಪ್ಪನವರಿಗೆ ಸಲ್ಲುತ್ತದೆ. ಯುದ್ಧ ಶುರುವಾಗುವ ಹೊತ್ತಿಗಿನ ಬಕ್ಕಾಗುತ್ತಿರುವ ತಲೆಯ ಭೀಮ, ವಯಸ್ಸಾಗುತ್ತಿರುವಾಗ ರಾಜ್ಯ ಗೆದ್ದು ಏನು ಮಾಡುವುದು ೫ ಹಳ್ಳಿ ಕೇಳು ಸಾಕು ಎಂದು ಕೃಷ್ಣನಿಗೆ ಹೇಳುವ ಯುಧಿಷ್ಠಿರ, ಮುದುಕನಾದರೂ ಮೋಹ ಬಿಡದ ಧೃತರಾಷ್ಟ್ರ ಮುಂತಾವರ ಪಾತ್ರಗಳನ್ನು ನಮ್ಮ ದೃಷ್ಟಿಯಲ್ಲಿ ಪೌರಾಣಿಕದಿಂದ ಐತಿಹಾಸಿಕ ಪಾತ್ರಗಳನ್ನಾಗಿಸಿದ್ದು ಸರಳವೇನಲ್ಲ. ಪರ್ವವನ್ನು ದೂರದರ್ಶನದಲ್ಲಿ ೮೦ರ ದಶಕದಲ್ಲಿ ಪ್ರಸಾರವಾದ ಶ್ಯಾಮ್ ಬೆನೆಗಾಲ್ ನಿರ್ದೇಶನದ ’ಭಾರತ್ ಏಕ್ ಖೋಜ್’ ನೊಂದಿಗೆ ಹೋಲಿಸುತ್ತದೆ ನನ್ನ ಮನಸ್ಸು.

ಯುದ್ಧ ನಡೆದಾಗಿನ ಒಂದು ಸನ್ನಿವೇಶ: ಸೈನಿಕರೊಂದಷ್ಟು ಜನ ಯುದ್ಧಕ್ಕೆ ಶುರುವಾಗುವ ಮುನ್ನ (ದಿನದ ಯುದ್ಧ ಮುಗಿಸಿಯೋ, ನೆನಪಾಗುತ್ತಿಲ್ಲ) ಬೆಂಕಿಯ ಸುತ್ತ ಕೈಕಾಯಿಸಿಕೊಳ್ಳುತ್ತ ಮಾತಾಡುತ್ತಿರುತ್ತಾರೆ.
ಸೈನಿಕ ೧: ಯಾರ ಮಧ್ಯ ಯುದ್ಧ ಈಗ?
ಸೈನಿಕ ೨: ಕುಂತಿಯ ಮಕ್ಕಳಿಗೂ, ಕೌರವರಿಗೂ ಮಧ್ಯ ಅಂತೆ, ರಾಜ್ಯ ಕೊಟ್ಟಿಲ್ಲವಂತೆ.
ಸೈನಿಕ ೩: ಅಲ್ಲ, ಈ ಕುಂತಿ ಅನ್ನುವವನು ಯಾರು, ಯಾವ ಊರಿನ ರಾಜ?

ಇನ್ನೂ ಎಷ್ಟೋ ಕಾದಂಬರಿಗಳನ್ನು ನಾನು ಓದಿಲ್ಲ. ಅದರ ತಪ್ಪನ್ನು ನಮ್ಮ ಸೋದರತ್ತೆಯ ಗಂಡನಿಗೆ ಕಟ್ಟಬೇಕೋ ಅಂತ ವಿಚಾರ ಮಾಡುತ್ತಿರುವೆ. ಈ ನಡುವೆ ಓದುವ ಚಟ ಕಡಿಮೆಯಾಗಿದೆ (ಆ ತಪ್ಪು ನನ್ನ ಸ್ವಂತದ್ದು). ಓದಬೇಕೆನ್ನುವ ಹುಮ್ಮಸ್ಸು ಮತ್ತೆ ಹುಟ್ಟುತ್ತಿದೆ, ಭೈರಪ್ಪನವರ ಪುಸ್ತಕಗಳನ್ನು ಹುಡುಕಬೇಕು ಇನ್ನು.

ಎಸ್ ಎಲ್ ಭೈರಪ್ಪನವರ ಆತ್ಮಕ್ಕೆ ಶಾಂತಿಯನ್ನು ಕೋರುವೆ.

- ಲಕ್ಷ್ಮೀನಾರಾಯಣ ಗುಡೂರ್.
**********************

ವರಮನೋಹರೆ ಕೇಳು ಪಾರಿಜಾತವಿದು – ಯೋಗೀಂದ್ರ ಮರವಂತೆ

ಆಶ್ವೀಜ ಮಾಸದ ಸಂಜೆಯ ಹೊತ್ತಿಗೆ ಮರವಂತೆ ಮನೆಯ ಹೊರಗೆ ಯಾರದೋ  ಕಾಲ ಸದ್ದು ಕೇಳಿದರೂ ಇವರೇ ಬಂದರೇನೋ ಎಂದು ರೋಮಾಂಚನಗೊಳ್ಳುವುದು; ಬಗಲಿಗೆ ಮದ್ದಳೆ, ಹಾರ್ಮೋನಿಯಂ ಧರಿಸಿದ ಗುಂಪು , ಕೈಯಲ್ಲಿ ಅಲಂಕಾರಗೊಂಡ ಪುಟ್ಟ ಕೋಲನ್ನು ಹಿಡಿದ ಇಬ್ಬರು ಮಕ್ಕಳನ್ನು ಕೂಡಿಕೊಂಡು  ಮನೆಯ ಗೇಟು ದೂಡಿಕೊಂಡು ಯಾವಾಗ ಒಳಬರುತ್ತಾರೆ ಎಂದು ಕಾಯುವುದು. ನಮ್ಮಮನೆಗೆ ಬರುವ ಮೊದಲು ಮದ್ದಳೆಯ ‘ತೋಂ ತೋಂ’ ನೆರೆಮನೆಯಲ್ಲಿ ಕೇಳುವಾಗ, ಇನ್ನೊಂದು ಅರ್ಧ ಘಂಟೆಯಲ್ಲಿ ಇವರು ನಮ್ಮ ಮನೆಗೂ ಬರುತ್ತಾರಲ್ಲ ಎಂಬ ಖುಷಿಯಲ್ಲಿ ನಿಂತಲ್ಲಿ ನಿಲ್ಲಲಾಗದೆ , ಬಾಗಿಲ ಅಡ್ಡ ನಿಂತು ಎರಡು ತೈ ತೈ ಹೆಜ್ಜೆ ಹಾಕುವುದು.  ಕೇರಿಯ ಮಕ್ಕಳಿಗೆ ನವರಾತ್ರಿ ಎಂದರೆ  ಪ್ರತೀಕ್ಷೆಯಾದ ನನ್ನ ಬಾಲ್ಯ ಕಾಲದ  ನೆನಪುಗಳಿವು. ನರಸಿಂಹದಾಸರ ತಂಡದ ಹರಿದ ಚಪ್ಪಲಿಗಳ ಚರಪರ ಸದ್ದು, ಇನ್ನೊಂದು ಮನೆಯಲ್ಲಿ ಹಾಡಲು ಸಿದ್ಧ ಆಗುತ್ತಿರುವಾಗ ಅವರ ಹೊಟ್ಟೆಯಿಂದ ಗಂಟಲವರೆಗೆ ತುಂಬಿಕೊಂಡು ಹೊರಬರುವ ಕೆಮ್ಮು , ನಮ್ಮ ಮನೆಯ ಆವರಣದ  ಒಳಗೆ ಕೇಳಿಸಿತೆಂದರೆ ಮೈಯೆಲ್ಲಾ ಕಿವಿಯಾಗಿ , ಮನಸೆಲ್ಲ ಖಾಲಿಯಾಗಿ ನಾವು ತಯಾರು.

“ಗುರುದೈವ ಗಣಪತಿಗೆ ಶರಣು ಶರಣೆಂದು ” ಎನ್ನುತ್ತಾನೆ ಕುಳಿತ ಒಬ್ಬ ಹುಡುಗ
“ಲೇಸಾಗಿ ಹರಸಿದರು ಬಾಲಕರು ಬಂದು …” ಎಂದು ಮೊದಲಿನವನ ಎದುರು ಕುಳಿತ ಇನ್ನೊಬ್ಬ ಹುಡುಗ .

ಬಿಳಿ ಟೊಪ್ಪಿ, ಬಿಳಿ ವಸ್ತ್ರ  ಧರಿಸಿ, ಬೆಂಡು ಬಣ್ಣದ ಕಾಗದಗಳಿಂದ ಅಲಂಕಾರಗೊಂಡ ಹೂವಿನ ಕೋಲನ್ನು ಹಿಡಿದು ಎದುರು ಬದುರು ಕುಳಿತ ಮಕ್ಕಳಿಬ್ಬರು ಸವಾಲು ಜವಾಬುಗಳ ಧಾಟಿಯಲ್ಲಿ ಹೇಳುವ ಚೌಪದಿಯ  ಸಾಲುಗಳವು. ಅದು ಮುಗಿಯುವ ಹೊತ್ತಿಗೆ, ಮಕ್ಕಳ ಹತ್ತಿರದಲ್ಲಿ ಕುಳಿತ ನರಸಿಂಹದಾಸರು ಶ್ರುತಿ ಮೀಟುವವನ ಕಡೆಗೊಮ್ಮೆ , ಮದ್ದಲೆಗಾರನ ಕಡೆಗೊಮ್ಮೆ ಓರೆ ನೋಟ ಬೀರಿ , ಗತ್ತಿನಲ್ಲಿ ಹಾಡು ಆರಂಭಿಸುತ್ತಾರೆ ….

” ವಹ್ಹವ್ವಾರೆ ನೋಡಿರೋ ಈ ಕಡೆಯ
ಬಹ ನಾರಿ ಯಾರ್ ಇವಳು ನೀವ್ ಪೇಳಿರಯ್ಯ ,
ಉಡುಗಳ ಮಧ್ಯದಿ ಶಶಿಯಂತೆ
ಸ್ತ್ರೀಯರ ನಡುವೆ ದಂಡಿಗೆ ಏರಿ ಮಿಂಚಿನಂತೆ “

ಉದ್ಯಾನವದಲ್ಲಿ ಸಖಿಯರೊಂದಿಗೆ ತಿರುಗುತ್ತಿರುವ ಚಂದ್ರಾವಳಿಯನ್ನು ಮರೆಯಲ್ಲಿ ನಿಂತು ನೋಡಿದ ಕೃಷ್ಣ ,ಗೆಳೆಯರೊಂದಿಗೆ ಆಡುವ ಮಾತುಗಳಿವು. ಅವಳ ಸೌಂದರ್ಯಕ್ಕೆ ಸೋತವನು, ನಂತರ ಧೈರ್ಯ ಮಾಡಿ ಚಂದ್ರಾವಳಿಯ ಎದುರಿಗೇ ಬಂದು ನಿಂತು, ಅಳುಕು, ಭಂಡತನ, ಪ್ರೀತಿ, ಸೇರಿದ ಭಾವದಲ್ಲಿ ತನಗುಂಟಾಗಿರುವ ಪ್ರೇಮವನ್ನು ತಿಳಿಸುತ್ತಾನೆ. “ಭಳಿರೆ ಚಂದ್ರಾವಳಿ ನಿನ್ನನು ಕಾಣದೆ ಕಳವಳಿಸಿದೆ ಮನವು ….” ಎಂದು ಆ ಸಂದರ್ಭಕ್ಕೆ ಭಾಗವತರು ಹಾಡುತ್ತಾರೆ. ಕೃಷ್ಣ ಮತ್ತು ಚಂದ್ರಾವಳಿಯರ ಪಾತ್ರವಾಗಿರುವ ಮಕ್ಕಳು ಹಾಡುಗಳಿಗೆ ಅನುಗುಣವಾಗಿ  ಸಂಭಾಷಿಸುತ್ತಾರೆ.  ರಾಧೆಯ ತಂಗಿ ಚಂದ್ರಾವಳಿಯನ್ನು, ಕೃಷ್ಣನು ಕಾಡುವ ಶೃಂಗಾರಭರಿತ ಸನ್ನಿವೇಶ ಇರುವ  “ಚಂದ್ರಾವಳಿ ವಿಲಾಸ”  ಪ್ರಸಂಗದ ಕಥೆ ಹೀಗೆ “ಹೂವಿನ ಕೋಲು” ಎಂದು ಕರೆಯಲ್ಪಡುವ ಯಕ್ಷಗಾನದೊಳಗಿನ ಸಣ್ಣ ಪ್ರಕಾರದ ಮೂಲಕ ಮುಂದುವರಿಯುತ್ತದೆ. ಯಕ್ಷಗಾನ ತಾಳಮದ್ದಳೆಯಲ್ಲಿ ಕಾಣುವಂತಹ  ಕಥಾ ವಿಸ್ತಾರ, ಪಾತ್ರ ಚಿತ್ರಣ, ಪಾಂಡಿತ್ಯ, ಜಿಜ್ಞಾಸೆ, ವಿಮರ್ಶೆಗಳಿಗೆ  “ಹೂವಿನ ಕೋಲು” ಹೋಲಿಕೆ ಅಲ್ಲದಿದ್ದರೂ ವೇಷವನ್ನು ಧರಿಸದೇ ಎದುರು ಬದುರು ಕುಳಿತು, ಭಾಗವತರ ಹಾಡನ್ನು ಹೊಂದಿಕೊಂಡು ಪಾತ್ರಗಳಾಗಿ ಮಾತನಾಡುವ ಕಾರಣಕ್ಕೆ ತಾಳಮದ್ದಲೆಯನ್ನು ಈ ಪ್ರಕಾರ ನೆನಪಿಸುತ್ತದೆ.  “ಹೂವಿನ ಕೋಲು” ಸಂಪ್ರದಾಯದಲ್ಲಿ, ಯಕ್ಷಗಾನ ಪ್ರಸಂಗಗಳ ಸಣ್ಣ
ತುಣುಕುಗಳನ್ನು ಆಯ್ದು, ಚಿಕ್ಕ ಮಕ್ಕಳನ್ನು ತರಬೇತುಗೊಳಿಸುತ್ತಾರೆ. ಅವರನ್ನು ಕರೆದುಕೊಂಡು ನವರಾತ್ರಿಯ ಸಮಯದಲ್ಲಿ ಊರೆಲ್ಲ ತಿರುಗುತ್ತಾರೆ. ಪಾರಿತೋಷಕವಾಗಿ ಹಣ ತೆಂಗಿನಕಾಯಿ ಅಕ್ಕಿಯನ್ನು  ಪಡೆಯುತ್ತಾರೆ.

ನರಸಿಂಹದಾಸರು ಯಕ್ಷಗಾನ ಮೇಳಗಳಲ್ಲಿ ಹಾಡುವುದು ದುರಾದೃಷ್ಟವಶಾತ್ ನಿಲ್ಲಿಸಿದ ಮೇಲೆ, ನವರಾತ್ರಿಗೆ ಹೂವಿನಕೊಲಿನ ತಂಡ ಕಟ್ಟಿಕೊಂಡು ತಿರುಗುತ್ತಿದ್ದರು. ಹಾಗಾಗಿಯೇ ನರಸಿಂಹ ದಾಸರ ನೆನಪಾದಾಗಲೆಲ್ಲ ನವರಾತ್ರಿಯಲ್ಲಿ ಅವರು ಮನೆಗೆ ಬರುತ್ತಿದ್ದ ದಿನಗಳ
ನೆನಪಾಗುತ್ತದೆ.  ಒಂದು ಕಾಲಕ್ಕೆ ಯಕ್ಷಗಾನದ ತೆಂಕು ಬಡಗು ತಿಟ್ಟುಗಳ ಅಪೂರ್ವಸಿದ್ಧಿಯೊಂದಿಗೆ ಅಪ್ರತಿಮ ಭಾಗವತರೆನಿಸಿಕೊಂಡಿದ್ದ (ಯಕ್ಷಗಾನ ಹಾಡುಗಾರ ಮತ್ತು ಸೂತ್ರಧಾರ)  ನರಸಿಂಹದಾಸರು ಬದುಕಿನ ಕೊನೆಯ ಮೂವತ್ತು ವರ್ಷಗಳಲ್ಲಿ ಯಕ್ಷಗಾನದೊಟ್ಟಿಗೆ
ನಿರಂತರ ಸಂಬಂಧ ಇಟ್ಟುಕೊಂಡದ್ದು ನವರಾತ್ರಿಯ ಹೂವಿನಕೋಲಿನ ಮೂಲಕ ಮಾತ್ರ. ನರಸಿಂಹದಾಸರು ಕಲಾಸಂಪನ್ನತೆಯ  ಉತ್ತುಂಗದ ದಿನಗಳಲ್ಲಿ ಇರುವಾಗಲೇ ತಮ್ಮ ಅತ್ಯಮೂಲ್ಯವಾದ ಧ್ವನಿಯನ್ನು ಕಳೆದು ಕೊಂಡವರು. ಇಂದಿಗೆ ಸುಮಾರು 70 ವರ್ಷಗಳ ಹಿಂದೆ,
ಧ್ವನಿವರ್ಧಕಗಳು ಇಲ್ಲದ ಕಾಲದ ರಾತ್ರಿ ಬೆಳಗಿನವರೆಗೆ ಯಕ್ಷಗಾನ. ಇನ್ನು ಎರಡು ಮೇಳಗಳು ಜಿದ್ದಿನಲ್ಲಿ ಪ್ರದರ್ಶಿಸುವ ಜೋಡಾಟಗಳಲ್ಲಂತೂ ಎದುರಿನ ಮೇಳದ ಸದ್ದನ್ನು ಅಡಗಿಸಿ ದೂರದೂರದವರೆಗೆ ತನ್ನ ಕಂಠವನ್ನು ಮುಟ್ಟಿಸ ಬೇಕಾದ ಅನಿವಾರ್ಯತೆ, ಅವರ ಅತ್ಯಂತ ಬೇಡಿಕೆಯ ದಿನಗಳಾದ್ದರಿಂದ ಅವಿರತ ತಿರುಗಾಟ. ಮತ್ತೆ ಆಟ ಮುಗಿದ ಮೇಲೆ ಬೆಳಿಗ್ಗೆ ನಿದ್ರೆ ಮಾಡುವ ಗೋಜಿಗೆ ಹೋಗದೆ ಅನಾರೋಗ್ಯದ ದಿನಗಳನ್ನು ಹತ್ತಿರ ತರುವಂತಹ ಕಾಲಹರಣದ ಮಾಧ್ಯಮಗಳ ಸಹವಾಸ, ತನ್ನ ಪ್ರತಿಭೆಯ ಬಗ್ಗೆ ಅವರಿಗೇ  ಇದ್ದ ನಿರ್ಲಕ್ಷ್ಯ ಅಸಡ್ಡೆ … ಇಂತಹ ದಿನಚರಿ-ದುಡಿತದಲ್ಲಿ ನರಸಿಂಹದಾಸರ ಸುಸ್ವರ ಅನಿರೀಕ್ಷಿತವಾಗಿ ಬಿದ್ದುಹೋಯಿತು. ಮಾತನಾಡಿದರೂ ಕ್ಷೀಣವಾಗಿ ಕೇಳಿಸುವಂತಹ ಭಗ್ನ ಸ್ವರೂಪಕ್ಕೆ
ಮಾರ್ಪಾಟಾಯಿತು. ಇಂತಹ  ಆಕಸ್ಮಿಕ ಸನ್ನಿವೇಶದಲ್ಲಿ ಮೇಳಗಳ ತಿರುಗಾಟದಿಂದ ಅವರು ಹೊರಬರಬೇಕಾಯಿತು .

ಮರವಂತೆ ನರಸಿಂಹದಾಸರು, ಯಕ್ಷಗಾನ ವಲಯದಲ್ಲಿ ಕರೆಯಲ್ಪಡುತ್ತಿದ್ದುದು ದಾಸ ಭಾಗವತರೆಂದು. 1955-70 ರ ನಡುವೆ ದಾಸಭಾಗವತರು ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಮುಖ್ಯ ಭಾಗವತರಾಗಿ
ಅಲ್ಲದಿದ್ದರೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಆಗ ದಾಸಭಾಗವತರ ಆಟ ಎಂದರೆ ಜನರು ದುಂಬಾಲು ಬೀಳುತ್ತಿದ್ದರಂತೆ. ಸಾರಿಗೆ ಸಂಪರ್ಕ ಸುಸೂತ್ರ ಇಲ್ಲದ ಕಾಲದಲ್ಲಿ, ಕಾರು ಮಾಡಿಕೊಂಡಾದರೂ ಅವರ ಆಟ ನೋಡಿ ಬರುತ್ತಿದ್ದವರ ದೊಡ್ಡ ಸಂಖ್ಯೆ ಇತ್ತಂತೆ. ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಅದ್ಭುತವಾಗಿ ಹಾಡಬಲ್ಲವರಾಗಿದ್ದ ದಾಸಭಾಗವತರು, ಬಡಗು ತಿಟ್ಟಿನೊಳಗಿನ ವಿಶಿಷ್ಟ ಪ್ರಬೇಧಗಳಾದ ಬಡಾಬಡಗು  ಮತ್ತು ಕುಂದಾಪುರ ಮಟ್ಟು ಎರಡನ್ನೂ ಸಮವಾಗಿ ನಿರ್ವಹಿಸಬಲ್ಲವರಾಗಿದ್ದರು. ಮೂವತ್ತಕ್ಕಿಂತ ಹೆಚ್ಚು ಪ್ರಸಂಗಗಳ ಕಂಠಪಾಠ, ತಾವೇ ಬೆಳೆಸಿಕೊಂಡ ಯಕ್ಷಗಾನಕ್ಕೊಪ್ಪುವ ಆಕರ್ಷಕ ಹಾಡಿನ ಶೈಲಿ, ಸಮುದ್ರದ ಭೋರ್ಗರೆತಕ್ಕೆ ಹೋಲಿಸಲ್ಪಡುತ್ತಿದ್ದ ತುಂಬು ಸ್ವರ, ಅಪ್ರತಿಮ ಲಯ ಸಿದ್ಧಿ ಮತ್ತು
ರಂಗಸ್ಥಳದ ಮೇಲಿನ ಬಿಗಿ ಹಿಡಿತಗಳಿಂದ ಅಪಾರ ಯಕ್ಷಗಾನ ಪ್ರೇಮಿಗಳ ಮಾತ್ರವಲ್ಲದೇ ಯಕ್ಷಗಾನದ ಇತಿಹಾಸದಲ್ಲಿ ಅತ್ಯಂತ ಹೆಸರು ಗೌರವ ಪಡೆದ ಕಲಾವಿದರ ಮೆಚ್ಚಿನ ಭಾಗವತರು ಕೂಡ ಆಗಿದ್ದರು. ಆ ಸಮಯದಲ್ಲಿ ಮೋಡಿಯ ಕುಣಿತ, ಭಾವಪೂರ್ಣ ಅಭಿನಯಗಳಿಂದ ಪ್ರೇಕ್ಷಕರಿಗೆ ವಿದ್ಯುತ್ ಸಂಚಾರ ಮಾಡಿಸುತ್ತಿದ್ದ ಕೆರೆಮನೆ ಶಿವರಾಮ ಹೆಗಡೆ (ಬಡಾಬಡಗು ಶೈಲಿ ) ಮತ್ತು ಅದ್ಭುತ ಚಲನೆಯ ವಿಶಿಷ್ಟ ಕುಣಿತದ ಕಲಾವಿದ ಎನ್ನುವ ಕೀರ್ತಿ ಇದ್ದ ವೀರಭಧ್ರನಾಯ್ಕರನ್ನು (ಕುಂದಾಪುರದ ಮಟಪಾಡಿ ಮಟ್ಟು ) ದಾಸ ಭಾಗವತರು ಕುಣಿಸಿದವರು. ನರಸಿಂಹದಾಸರ ಭಾಗವತಿಕೆಗೆ ತಿಮ್ಮಪ್ಪ ನಾಯ್ಕರ ಮದ್ದಳೆ, ಯಕ್ಷಗಾನ ಹಿಮ್ಮೇಳದಲ್ಲಿ ಜನರು ಬಯಸುವ ಚಿರಂತನ ಜೋಡಿಯಾಗಿತ್ತು. ದಾಸಭಾಗವತರ ಕಲಾ ಜೀವನದ ಉಚ್ಚ್ರಾಯದ ಕಥೆಗಳನ್ನು ನಮ್ಮ ಹಿಂದಿನ ತಲೆಮಾರಿನ ಪ್ರೇಕ್ಷಕರಿಂದ, ಹಿರಿಯ ಕಲಾವಿದರಿಂದಲೇ ಕೇಳಬೇಕು. ನನ್ನ ಪೀಳಿಗೆಯವರಿಗೆ ದಾಸ ಭಾಗವತರ ಹಾಡುಗಾರಿಕೆ ಕೇಳಲು ಸಿಕ್ಕಿರುವ ಸಾಧ್ಯತೆಗಳು ಬಹಳ ಕಡಿಮೆ. 1992ರಲ್ಲಿ  ಮಂಗಳೂರಿನಲ್ಲಿ ನಡೆದ
“ಯಕ್ಷಧ್ವನಿ” ಎನ್ನುವ  ಶ್ರುತಿ ರಾಗ ಲಯ ತಾಳಗಳ ವಿಶಿಷ್ಟ ಕಾರ್ಯಕ್ರಮದಲ್ಲಿ ಇವರು ಹಾಡಿದ “ಶ್ರೀಕೃಷ್ಣ  ಪಾರಿಜಾತ” ಪ್ರಸಂಗದ ಹಾಡುಗಳ ವಿಡಿಯೋಗಳು ಈಗಲೂ ವಾಟ್ಸಾಪ್ ಮುಖಾಂತರ ಸುತ್ತು ಹೊಡೆಯುತ್ತವೆ.  ಕೃಷ್ಣ ಸತ್ಯಭಾಮೆಯರು  ಸುರಲೋಕಕ್ಕೆ ಹೋದಾಗ ಅಲ್ಲೆಲ್ಲ  ತುಂಬಿರುವ ಪರಿಮಳದ ಬಗ್ಗೆ ಸತ್ಯಭಾಮೆಗೆ ಮೂಡುವ ಕುತೂಹಲ, ಕೃಷ್ಣನು ಉತ್ತರಿಸುವ ಸಂದರ್ಭದ ಹಾಡುಗಳು ಅವು.  ದಾಸ ಭಾಗವತರ ಸ್ವರ ಮಾಧುರ್ಯ ಶಿಥಿಲಗೊಂಡಿದ್ದರೂ  ಅಂದಿನ  ಕಾರ್ಯಕ್ರಮದಲ್ಲಿ  ಹಾಡಿದ ಎಲ್ಲ ಹಾಡುಗಳೂ ಅವರ ಕಲಾ ಔನ್ನತ್ಯದ ಕಾಲವನ್ನು  ನೆನಪಿಸಿತ್ತು. “ವರಮನೋಹರೆ ಕೇಳು ಪಾರಿಜಾತವಿದು” ಎನ್ನುವ ಪದ್ಯ ಹಾಡುವಾಗ ಪುರಾಣ ಪ್ರಪಂಚಕ್ಕೆ ಎಳೆದೊಯ್ದು  ಶರಧಿ ಮಥನದಲ್ಲಿ
ಹುಟ್ಟಿದ ಅತ್ಯಂತ ಅಪೂರ್ವವಾದ  ಪಾರಿಜಾತ ವೃಕ್ಪದೆದುರು ನಮ್ಮನ್ನೂ ನಿಲ್ಲಿಸುವ ಪ್ರಯತ್ನ ನಡೆಯುತ್ತದೆ. ತೆಂಕು ಬಡಗು ತಿಟ್ಟುಗಳ ಹಿರಿಯ ಕಿರಿಯ ಭಾಗವತರ ಹಾಡುಗಾರಿಕೆಯ ಸಮ್ಮಿಲನದ ಆ ಕಾರ್ಯಕ್ರಮ ಯಕ್ಷಗಾನ ಲೋಕದಲ್ಲಿ ಲಭ್ಯ ಇರುವ ಒಂದು ಅಮೂಲ್ಯ ಅಪೂರ್ವ ದಾಖಲೀಕರಣವೂ ಹೌದದು. ಅಂದಿನ ಕಾರ್ಯಕ್ರಮದಲ್ಲಿ ನರಸಿಂಹ ದಾಸರನ್ನು ಪರಿಚಯಿಸುವಾಗ  ಹಿರಿಯ ಅರ್ಥಧಾರಿಗಳೂ ವಿದ್ವಾಂಸರೂ ಆದ ಪ್ರಭಾಕರ ಜೋಶಿಯವರು, ಅವರನ್ನು ಯಕ್ಷಗಾನ ಕಂಡ “ಸರ್ವಶ್ರೇಷ್ಠ ಭಾಗವತರು ಎಂದು ತರ್ಕಿಸಬಹುದು” ಎಂದಿದ್ದರು
(arguably the greatest ). ದಾಸ ಭಾಗವತರು ರಂಗಸ್ಥಳದಲ್ಲಿ ಸಾಮ್ರಾಟರಾಗಿ ಮೆರೆಯುತ್ತಿದ್ದ ಕಾಲದಲ್ಲಿ ಅವರ ಭಾಗವತಿಕೆ ಕೇಳಲೆಂದೇ ಪಾರಿಜಾತ ಪ್ರಸಂಗವನ್ನು ಆಡಿಸುತ್ತಿದ್ದರು ಎಂದಿದ್ದರು. ಯಕ್ಷಗಾನದ ವಿಮರ್ಶಕರು ಪತ್ರಕರ್ತರು ಆದ ರಾಘವನ್ ನಂಬಿಯಾರ್ ಮತ್ತು ಹೆಸರಾಂತ ಹಿರಿಯ ಮದ್ದಲೆಗಾರ ಹಿರಿಯಡ್ಕ ಗೋಪಾಲರಾಯರು ಕೂಡ, ದಾಸಭಾಗವತರ ಲಯಗಾರಿಕೆಗೆ ಯಕ್ಷಗಾನ ಲೋಕದಲ್ಲಿ ಸಾಟಿಯೇ ಇರಲಿಲ್ಲ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ್ದಾರೆ ಬರೆದಿದ್ದಾರೆ .

ದಾಸ ಭಾಗವತರು ತಮ್ಮ ಭಗ್ನ  ಸ್ವರದಲ್ಲೂ ಅಂದಿನ ಕಾರ್ಯಕ್ರಮದಲ್ಲಿ ಹಾಡಿದ ಹಾಡುಗಳನ್ನು ನೇರವಾಗಿ ಕೇಳಿದ  ಪ್ರೇಕ್ಷಕರು ಈಗಲೂ ಆ ಕಾರ್ಯಕ್ರಮದ ರಸಘಳಿಗೆಗಳನ್ನು ಮೆಲುಕು ಹಾಕುತ್ತಾರೆ.  ಯೂಟ್ಯೂಬ್  ಮೂಲಕ ಮತ್ತೆ ಮತ್ತೆ ಅಂದಿನ ಕಾರ್ಯಕ್ರಮದ ಮರುವೀಕ್ಷಣೆ ಮಾಡುತ್ತಾರೆ. ಮಂಗಳೂರಿನಲ್ಲಿ “ಯಕ್ಷಧ್ವನಿ” ಕಾರ್ಯಕ್ರಮ ನಡೆದ ನಂತರ ಉಡುಪಿಯಲ್ಲಿ  ಹಳೆಯ ಹೊಸ ತಲೆಮಾರಿನ ಭಾಗವತರ ಕೂಟದಲ್ಲಿ ನಡೆದ ಗಾನ ವೈವಿಧ್ಯ ಕಾರ್ಯಕ್ರಮದಲ್ಲೂ ದಾಸಭಾಗವತರ   ಹಾಡುಗಾರಿಕೆ ಅತ್ಯಂತ ಪ್ರಶಂಸೆಯನ್ನು ಪಡೆದಿತ್ತು .
ಧ್ವನಿಮುದ್ರಣ ಕಂಡು ಅಂಗಡಿಯಲ್ಲಿ ಮಾರಾಟವಾದ ದಾಸ ಭಾಗವತರ ಏಕೈಕ ಅಥವಾ ಬೆರಳೆಣಿಕೆಯ ಆಡಿಯೋ ಕ್ಯಾಸೆಟ್ ಗಳಲ್ಲಿ  ಅದೂ ಒಂದು ಇರಬೇಕು. ಇನ್ನು ದಾಸ ಭಾಗವತರು ಆಕಾಶವಾಣಿಯಲ್ಲಿ ಅನೇಕ ಪ್ರಸಂಗಗಳನ್ನು ಹಾಡಿದ್ದರಾದರೂ  ಅವ್ಯಾವುವೂ  ಈ ಕಾಲದ
ಪ್ರೇಕ್ಷಕರನ್ನು ತಲುಪದಿದ್ದುದು ದಾಸಭಾಗವತರನ್ನು ಸುತ್ತುವರಿದಿದ್ದ ಹಲವು ದುರಂತಗಳಲ್ಲಿನ ಒಂದು ದುರಂತ ಮತ್ತೆ ಯಕ್ಷಗಾನ ಪ್ರೇಕ್ಷಕರ  ದೌರ್ಭಗ್ಯ.   ೯೦ರ ದಶಕದ ಆ ಎರಡು ದಾಖಲೀಕರಣಗಳ ಸಮಯದಲ್ಲಿ ತಮ್ಮ ಆಕರ್ಷಕವಾದ ಸ್ವರವನ್ನು ಕಳೆದುಕೊಂಡಿದ್ದರೂ, ದಾಸ ಭಾಗವತರ  ವರ್ಚಸ್ಸು ಲಯ ಹುಮ್ಮಸ್ಸು, ಸಿದ್ಧಿ, ಆತ್ಮ ವಿಶ್ವಾಸ  ಕುಂದಿರಲಿಲ್ಲ. ಅವರು  ಪ್ರತಿ ಹಾಡನ್ನು ನಿರ್ವಹಿಸಿದ ರೀತಿಯೂ ಯಕ್ಷಗಾನದ ಇತಿಹಾಸದಲ್ಲಿ ಎಲ್ಲೋ ಮರೆಯಾಗಿರುವ ಪುರಾತನ ಸುವರ್ಣ ಕಾಲವನ್ನು ನೆನಪಿಸುತ್ತಿತ್ತು.  ಹಾಡಿನ ನಡುವೆ, ಅತ್ಯಂತ ಸ್ಪಷ್ಟವಾಗಿ ಕೇಳಿಸುವ  ತಾಳದ ಪ್ರತಿ ಪೆಟ್ಟಿನ  ಸದ್ದು, ನಿಧಾನದಲ್ಲಿಯೂ ವೇಗದಲ್ಲಿಯೂ ನಿಖರವಾಗಿರುವ ತಾಳದ ಚಲನೆ, ಗತಿ ಅವರ ಲಯಗಾರಿಕೆಯ ಕಿರು ಝಲಕ್
ಒದಗಿಸುತ್ತಿದ್ದವು.  ಹಾಡುವಾಗ ಸುತ್ತಲಿನ ವಿದ್ಯಮಾನವನ್ನು ಕುತ್ತಿಗೆ ಕಣ್ಣುಗಳ ನಿಧಾನ  ಚಲನೆಯಲ್ಲಿ  ಗಮನಿಸುವ, ಯಾರಿಗೂ ಯಾವುದಕ್ಕೂ ಅಂಜದ ಅಳುಕದ ಆತ್ಮವಿಶ್ವಾಸ ಹೊತ್ತು  ಇಲ್ಲಿ ನಾನೇ  ಸೂತ್ರಧಾರ ಎನ್ನುವ ನಿಲುವಿನಲ್ಲಿ  ಅವರು ಭಾಗವತಿಕೆ ನಡೆಸುತ್ತಿದ್ದ ರೀತಿ  ಕಣ್ಣಿಗೆ ಕಟ್ಟುತ್ತಿತ್ತು. ಪದ್ಯ ಸಾಹಿತ್ಯದ ಸ್ಪಷ್ಟತೆಯ ಬಗ್ಗೆ ಶಬ್ದಗಳ ರೂಪದ ಕುರಿತು ಅವರಿಗಿದ್ದ ಎಚ್ಚರ ಕಾಳಜಿ ಆ ಪ್ರಸ್ತುತಿಗಳಲ್ಲೂ ಕಾಣಿಸುತ್ತಿತ್ತು.

 ಒಮ್ಮೆ ಮೇರು ಕಲಾವಿದ, ಕುಣಿತದ ಗುರು ವೀರಭಧ್ರನಾಯ್ಕರಿಗೂ ಅವರನ್ನು ಕುಣಿಸುವ ದಾಸಭಾಗವತರಿಗೂ ಸ್ಪರ್ಧೆ ಬಿದ್ದಿದ್ದಂತೆ. ಅಂದಿನ ಯಕ್ಷಗಾನದಲ್ಲಿ ದಾಸ ಭಾಗವತರು ಮತ್ತು ಮದ್ದಲೆಗಾರ ತಿಮ್ಮಪ್ಪ ನಾಯ್ಕರು ಸೇರಿ ವೀರಭಧ್ರನಾಯ್ಕರ ಕುಣಿತದ ತಾಳ
ತಪ್ಪಿಸುತ್ತೆವೆಂದು ಪಂಥ ಹಾಕಿಕೊಂಡಿದ್ದರಂತೆ. ಭಾಗವತ ಮತ್ತು ಮದ್ದಲೆಗಾರರ ಸಾಮರ್ಥ್ಯ ಮತ್ತು  ನಾಜೂಕಿನ ಹೊಂದಾಣಿಕೆಯಲ್ಲಿ ಅಂದು ವೀರಭಧ್ರನಾಯ್ಕರು ತಾಳ ತಪ್ಪಿದರಂತೆ. ಅನಿರೀಕ್ಷಿತ ಮುಖಭಂಗದಿಂದ ಬೇಸರಗೊಂಡ ವೀರಭಧ್ರ ನಾಯ್ಕರು ದಾಸಭಾಗವತರಲ್ಲಿ ಮಾತು ಬಿಟ್ಟರಂತೆ. ಕೆಲವು ಸಮಯದ ನಂತರ ಮಾರಣಕಟ್ಟೆ ದೇವಸ್ಥಾನದ ಮೊಕ್ತೇಸರರ ಸಮಕ್ಷಮದಲ್ಲಿ ಮೇರು ಕಲಾವಿದರ ನಡುವೆ ರಾಜಿ ಆಯಿತಂತೆ. ಇನ್ನು ನಮ್ಮ ಕಾಲದ ಶ್ರೇಷ್ಠ ಭಾಗವತರಲ್ಲೊಬ್ಬರಾಗಿದ್ದ ಕಡತೋಕ ಮಂಜುನಾಥ ಭಾಗವತರಿಗೆ ದಾಸಭಾಗವತರು
ಪ್ರೇರಣೆ ಆಗಿದ್ದವರು. ಇಡುಗುಂಜಿ ಮೇಳದಲ್ಲಿ ಕೆರೆಮನೆಯ ನಾಲ್ಕು ತಲೆಮಾರುಗಳನ್ನು ಕುಣಿಸಿದ, ಇನ್ನೋರ್ವ ಅತ್ಯುತ್ತಮ  ಭಾಗವತ  ನೆಬ್ಬೂರು ನಾರಾಯಣ ಭಾಗವತರನ್ನು ಸಂದಶನವೊಂದರಲ್ಲಿ ನಿಮ್ಮ ನೆಚ್ಚಿನ ಭಾಗವತರು ಯಾರು ಎಂದು ಕೇಳಿದಾಗ, ಅವರು ಮೊದಲು
ಹೇಳಿದ್ದ  ಹೆಸರು ದಾಸಭಾಗವತರದು .ದಾಸ ಭಾಗವತರ ಭಾಗವತಿಕೆಯ ತಾಳಮದ್ದಲೆಯೊಂದರಲ್ಲಿ ಪ್ರಸಿದ್ಧ ಅರ್ಥದಾರಿಯಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರು ತಮ್ಮ ಒಂದು ಪದ್ಯಕ್ಕೆ ಸರಿಯಾದ ಅರ್ಥ ಹೇಳಲಿಲ್ಲ ಎನ್ನುವ ಕಾರಣಕ್ಕೆ, ಮುಂದಿನ ಪದವನ್ನು ಹಾಡದೇ, ಶೇಣಿಯವರಿಗೆ “ಈಗ ನನ್ನ ಪದಕ್ಕೊಂದು ಅರ್ಥ ಹೇಳಿ” ಎಂದು ಸೂಚಿಸಿದ ಘಟನೆಯನ್ನು ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಒಮ್ಮೆ ನೆನಪು ಮಾಡಿಕೊಂಡಿದ್ದರು. ಅಪ್ರತಿಮ ಪ್ರತಿಭೆ, ಕಲಾ ಸಂಪನ್ನತೆ, ಸಿದ್ಧಿಯ ಔನ್ನತ್ಯ ಎಲ್ಲವೂ ಮೇಳೈಸಿದ ಪ್ರಸಂಗವನ್ನು ಬಿಗಿ ಕಳೆದುಕೊಳ್ಳದಂತೆ ಪ್ರಸ್ತುತ ಪಡಿಸುವ, ರಂಗದಲ್ಲಿ ಭಾಗವತನಾಗಿರುವ ತಾನೇ ನಿರ್ದೇಶಕ ಎಂದು ಆತ್ಮವಿಶ್ವಾಸದಲ್ಲಿ  ಸಾರಿಹೇಳುವ ಹಲವು ಘಟನೆಗಳು ಹುಡುಕುತ್ತ ಹೋದರೆ ಕಣ್ಣು ಮುಂದೆ ಬರುತ್ತವೆ. ದಾಸ ಭಾಗವತರ ನೇರ ಅನುಭವ ಭಾಗ್ಯ ಈ ಕಾಲದ ಯಕ್ಷಗಾನ ಆಸಕ್ತರಿಗೆ  ಇಲ್ಲದಿದ್ದರೂ, ಅವರನ್ನು ಗೌರವಿಸುತ್ತಿದ್ದ ಅವರ ಸಿದ್ಧಿ ಪ್ರಸಿದ್ಧಿಗಳನ್ನು ಹತ್ತಿರದಿಂದ ಕಂಡು ಆಕರ್ಷಿತರಾಗಿದ್ದ ಪ್ರಭಾವಿಸಲ್ಪಟ್ಟಿದ್ದ ಕೆಲವು ಹಿರಿಯ ಕಲಾವಿದರು, ಪ್ರೇಕ್ಷಕರ ಮೂಲಕವಷ್ಟೇ ದಾಸ ಭಾಗವತರು  ಸದ್ಯಕ್ಕೆ ಸಿಗುತ್ತಾರೆ. ಇಲ್ಲದಿದ್ದರೆ, ವೃದ್ಧಾಪ್ಯದ ಸಮಯದಲ್ಲಿ ದಾಖಲೀಕರಣಗೊಂಡ ಕೆಲವು ಹಾಡುಗಳ ಮೂಲಕ, ವೈಭವದಲ್ಲಿ ಹಿಂದೆಂದೋ ನಳನಳಿಸುತ್ತಿದ್ದ ಅರಮನೆಯೊಂದು ಅಕಸ್ಮಾತ್ ಕುಸಿದುಬಿದ್ದು ಅವಶೇಷವಾಗಿರುವುದನ್ನು ನೆನಪಿಸುತ್ತಾರೆ.

ತನ್ನ ಪ್ರತಿಭೆ, ವರ್ಚಸ್ಸುಗಳಿಂದ ಚಿರಸ್ಮರಣೀಯ ಪ್ರದರ್ಶನಗಳನ್ನು ನೀಡುತ್ತಾ ಜನರಿಗೆ ಕಥೆ ಪಾತ್ರಗಳನ್ನು ಸಾಕ್ಷಾತ್ಕರಿಸುತ್ತಿದ್ದ ದಾಸ ಭಾಗವತರು ರಂಗದ ಮೇಲೆ ಸಾಮ್ರಾಟರಾಗಿದ್ದವರು. ದಂತಕತೆಯಾಗಿ ಯಕ್ಷಗಾನದ ಸೀಮೆಯಲ್ಲಿ ಹಬ್ಬಿಹರಡಿದವರು. ಇಂದಿಗೆ
60-70ವರ್ಷಗಳ ಹಿಂದೆ ಅಪಾರ ಜನಾಕರ್ಷಣೆ, ಮೇರು ತಾರಾಮೌಲ್ಯವನ್ನು ಪಡೆದಿದ್ದವರು. ಆದರೆ ರಂಗಸ್ಥಳದಿಂದ ಕೆಳಗೆ,ಚೌಕಿಯ ಹೊರಗೆ  ಬದುಕಿನ ಬಹುತೇಕ ಕಾಲವನ್ನು ಹುಲ್ಲಿನ ಸೋರುವ ಮಾಡು ಮುರುಕು ಮನೆಯಲ್ಲಿ ತೀವ್ರ ಬಡತನದಲ್ಲಿ ಕಳೆದವರು. ಬದುಕಿನ ಕೊನೆಯ
ಕಾಲದಲ್ಲಿ ಗ್ರಾಮಸ್ಥರು ಹಣ ಸಂಗ್ರಹಿಸಿ ಮತ್ತೆ ಸರಕಾರದಿಂದ ಸಹಾಯ ಪಡೆದು ಅವರಿಗೊಂದು ಮನೆ ಕಟ್ಟಿಸಿಕೊಟ್ಟರು. ರಂಗದ ಮೇಲೆ ಚಕ್ರವರ್ತಿಗಳಂತೆ ಮೆರೆಯುವ ಅಪ್ರತಿಮ ಪ್ರತಿಭಾನ್ವಿತರ ಬಣ್ಣದ ಹೊರಗಿನ ಬದುಕಿನಲ್ಲಿ ದಾರಿದ್ಯ್ರ ದುರಂತಗಳೇ ತುಂಬಿರುವ
ಉದಾಹರಣೆಗಳಲ್ಲಿ ದಾಸಭಾಗವತರೂ ಒಬ್ಬರು. ಏರು ತಗ್ಗಿನ ಬದುಕಿನ ನಡುವೆಯೇ ಕಲೆಯ ಒಟ್ಟಿಗೆ ಸಂಬಂಧವನ್ನು ಬದುಕಿದಷ್ಟು ಕಾಲ ಮುಂದುವರಿಸಿದರು. ಹೊಳೆಯುವ ಬೆಳಕಿನ ರಂಗಸ್ಥಳದ ವೈಭವದದಲ್ಲಿ, ಗುಂಗು ಹತ್ತಿಸಿಕೊಂಡು ಅವರನ್ನೇ ಹುಡುಕಿಕೊಂಡು ಬರುತ್ತಿದ್ದ
ಪ್ರೇಕ್ಷಕರ ಕರತಾಡನದ ನಡುವೆ, ಅಲ್ಲದಿದ್ದರೆ ನವರಾತ್ರಿಯ ಹೂವಿನಕೋಲು ತಿರುಗಾಟದಲ್ಲಿ. ದಾಸ ಭಾಗವತರಿಗೆ ಕಂಠಪಾಠವಾಗಿದ್ದ, ಅವರು ಇಷ್ಟಪಟ್ಟು ಆಡಿಸುತ್ತಿದ್ದ, ಪ್ರೇಕ್ಷಕರು ಅವರ ಭಾಗವತಿಕೆಗೋಸ್ಕರ ಮುಗಿಬಿದ್ದು  ನೋಡಬಯಸುತ್ತಿದ್ದ  ಅನೇಕ ಪ್ರಸಂಗಗಳು ಈಗಲೂ
ಬೇರೆಬೇರೆ ರಂಗಸ್ಥಳಗಳಲ್ಲಿ ಆಡಲ್ಪಡುತ್ತವೆ. ಚಂದ್ರಾವಳಿ ವಿಲಾಸ, ಪಾರಿಜಾತ ಪ್ರಸಂಗದ ಹಾಡುಗಳೂ ಕೇಳಿಸುತ್ತವೆ. ಮತ್ತೆ ನವರಾತ್ರಿಯೂ  ಈ ವರ್ಷ ಇನ್ನೇನು ಬರುವ ತಯಾರಿಯಲ್ಲಿದೆ; ಆದರೆ ದಾಸಭಾಗವತರು ಮರಳಿ ಬರಲಾರು, ಮುನಿಸಿಕೊಂಡು ಎಂದೋ ಬಿಟ್ಟು ಹೋದ ಅವರ ಸ್ವರದಂತೆ.

ದಾಸ ಭಾಗವತರ ಕೊನೆಯ ಕಾಲದ ಒಂದು ವಿಡಿಯೋ:

ಹೂವಿನ ಕೋಲು ಪ್ರಕಾರ:

ಬಾಬ್ ಎಂಬ  ಡೊಂಕು ಬಾಲದ ನಾಯಕರ ಕಥಾನಕ.

-ಅಮಿತ ರವಿಕಿರಣ್  

 

ಶಾಲೆಯಿಂದ ಮಗಳನ್ನು ಕರೆದುಕೊಂಡು ವಾಪಸ್ ಮನೆಗೆ ಬರುವಾಗ ದೂರದಿಂದಲೇ ಪ್ಯಾಟ್ರಿಕ್ ಮತ್ತು ಬಾಬ್ (BOB) ಕಾಣಿಸಿದರು. ಪ್ರತಿಸಲದಂತೆ ಮಗಳು ನನ್ನ ಕೈ ಬಿಡಿಸಿಕೊಂಡು ಅವರತ್ತ ಓಡಿ ಹೋದಳು. ಪ್ಯಾಟ್ರಿಕ್ ನನ್ನೆಡೆಗೆ ನೋಡುತ್ತಾ ನಿಮ್ಮನ್ನೇ ಕಾಯುತ್ತಿದ್ದೆ, ನೋಡಿ ನಿನ್ನೆ ರಾತ್ರಿಯಿಂದ ಇವ ಊಟವೇ ಮಾಡಿಲ್ಲ ಅನ್ನುತ್ತಾ ಕಿಸೆಯಿಂದ ತಿಂಡಿ ಪೊಟ್ಟಣ ತೆಗೆದು ನನ್ನ ಮಗಳ ಹತ್ತಿರ ಕೊಟ್ಟು "ನೀ ತಿನ್ನಿಸಿ ನೋಡ್ತೀಯ, ಆಡುವ ಗುಂಗಿನಲ್ಲಿ ಸ್ವಲ್ಪ ತಿಂದರೂ ತಿನ್ನಬಹುದು" ಅಂದ. ನನ್ನ ಮಗಳು ನಿಯತಿ ಮತ್ತು ಬಾಬ್ ಒಂದು ಒಣ ಕಟ್ಟಿಗೆಯ ತುಂಡನ್ನು ಹಿಡಿದು ಆಟ ಆಡುತ್ತ ಮಧ್ಯ ಮಧ್ಯ ನಿಯತಿ ಅವನಿಗೆ ತಿಂಡಿ ತಿನ್ನಿಸುತ್ತ ಹದಿನೈದು ನಿಮಿಷದಲ್ಲಿ ಬಾಬ್ ಪೂರ್ತಿ ಪೊಟ್ಟಣ ತಿಂದು ಮುಗಿಸಿದ್ದನ್ನ ನೋಡಿ ಪ್ಯಾಟ್ರಿಕ್ ಮುಖದಲ್ಲಿ ಸಮಾಧಾನದ ನಗು ಹರಡಿತ್ತು. 

ಬಾಬ್ ಮತ್ತು ಪ್ಯಾಟ್ರಿಕ್ ಪರಿಚಯವಾದದ್ದು ೨ ವರುಷಗಳ ಹಿಂದೆ. ಆಗ ನನ್ನ ಮಗಳು ನರ್ಸರಿಯಲ್ಲಿದ್ದಳು, ''ಅಮ್ಮ ನನಗೊಂದು pet ಬೇಕು" ಎಂದು ಗಂಟು ಬಿದ್ದಿದ್ದಳು. ಓಹ್ ಪೆಟ್ಟು ಬೇಕಾ, ಬಾ ನಾನಾ ಹತ್ತಿರ ಡಿಸೈನ್ ಡಿಸೈನ್ ಪೆಟ್ಟುಗಳ ಸಂಗ್ರಹ ಇದೆ, ನನ್ನ ಅಮ್ಮ ನನಗೆ ಕೊಟ್ಟಿದ್ದು, ನಾನು ಈ ವರೆಗೆ ಯಾರಿಗೂ ಕೊಡದೆ ನನ್ನಲ್ಲೇ ಎಲ್ಲಾ ಉಳಿದು ಹೋಗಿವೆ. ಬಾ ಪೆಟ್ಟು ಕೊಡುವೆ ಎಂದು ತಮಾಷೆ ಮಾಡಿ ಆ ಗಳಿಗೆ ನೂಕಿ ಬಿಡುತ್ತಿದ್ದೆ. ಊರಿನಲ್ಲಿ ಆಗಿದ್ದರೆ ಬೆಕ್ಕೋ, ಕೋಳಿಮರಿ, ನಾಯಿಮರಿ ತಂದು ಸಾಕಬಹುದಿತ್ತು. ಆದರೆ ಇಲ್ಲಿ? ನಾಯಿ ಸಾಕುತ್ತಿರುವವರ ಅನುಭವಗಳನ್ನ ಕೇಳಿಯೇ, ಅಯ್ಯೋ! ಇಷ್ಟೊಂದು ಕಷ್ಟವೇ? ಎಂದು ಎನ್ನಿಸಿ ಯಾವತ್ತೂ ಗೋಲ್ಡ್ ಫಿಶ್ ಗಿಂತ ಮೇಲಿನದನ್ನು ಯೋಚಿಸಲಾಗಿರಲಿಲ್ಲ. ಆದರೆ ಆಗಾಗ ಈ ವಿಷಯವಾಗಿ ನನಗೆ ಬೇಸರವೂ ಆಗ್ತಿತ್ತು. ಮಲೆನಾಡ ಸೆರಿಗಿನಲ್ಲಿರುವ ನನ್ನ ತವರಿನಲ್ಲಿ ಸಾಕು ಪ್ರಾಣಿಗಳು ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದವು, ನಾವು ಸಾಕಿದ ಪ್ರತೀ ನಾಯಿ, ಬೆಕ್ಕುಗಳ ಸುತ್ತ, ಆಕಳು, ಕರುಗಳ ಜೊತೆ ನಮ್ಮ ನೂರಾರು ನೆನಪುಗಳಿವೆ. ಅಂಥ ಅನುಭವಗಳನ್ನ ನನ್ನ ಮಕ್ಕಳಿಗೆ ಅವರು ಬಯಸಿದ್ದಾಗ್ಯೂ ಕೊಡಲಾಗುತ್ತಿಲ್ಲವಲ್ಲ ಎಂಬ ಸಣ್ಣ ನಿರಾಸೆ ನನಗೆ ಇದ್ದೇ ಇತ್ತು. 

ಆ ದಿನ ಎಂದಿನಂತೆ ನರ್ಸರಿಯಿಂದ ವಾಪಸ್ ಬರುವ ಹೊತ್ತು. ಮೇಪಲ್ ಮರಗಳ ಕೆಳಗೆ ಕುಳಿತು ಅರಳುಗಣ್ಣುಗಳಿಂದ ಆಚೀಚೆ ಬರುವವರನ್ನು ನೋಡುತ್ತಾ ಅವರು ರಸ್ತೆಯ ತುದಿಯಲ್ಲಿ ತಿರುಗಿ ಮರೆಯಾಗುವ ತನಕ ಅವರತ್ತ ಕಣ್ಣು ನೆಟ್ಟು ಮತ್ತೆ ಇನ್ನ್ಯಾರೋ ಬಂದರೆನಿಸಿದರೆ ಪಟ್ಟನೆ ಕತ್ತು ಹೊರಳಿಸಿ ನೋಡುತ್ತಿದ್ದ ಕಪ್ಪು ಬಿಳುಪಿನ ಬಾಬ್ ಯಾಕೋ ನಮ್ಮ ಮನೆಯಲ್ಲಿದ್ದ 'ಬುಧ' ಎಂಬ ನಾಯಿಯನ್ನು ನೆನಪಿಸಿ ಬಿಟ್ಟಿದ್ದ.

 ಮೊದಲ ಭೇಟಿಯಲ್ಲೇ ಬಾಬ್ ನನ್ನ ಮಗಳಿಗೂ ತನ್ನ ಗುಂಗು ಹಿಡಿಸಿದ್ದ. ಮಾತೆತ್ತಿದರೆ ಬಾಬ್ ಅನ್ನುವಷ್ಟು ಸಲಿಗೆ. ಆಗ ಬಾಬ್ ನ ಬಲಗಾಲು ಮುರಿದಿತ್ತು. “ಗುಡ್ಡದಲ್ಲಿ ನಡೆದಾಡಲು ಕರೆದುಕೊಂಡು ಹೋಗಿದ್ದೆ, ಇವ ತನಗೆ ರೆಕ್ಕೆಯೂ ಇದೆ ಅಂದುಕೊಂಡು ಹಾರಾಡಲು ಹೋಗಿ ಬಿದ್ದು ಕಾಲು ಮುರಿದುಕೊಂಡ. ಈಗ ಪ್ಲಾಸ್ಟರ್ ಬಿಚ್ಚಿದ್ದಾರೆ ಆದರೆ ಇನ್ನು ಓಡಾಡಲು ಆಗುತ್ತಿಲ್ಲ. ಅದಕ್ಕೆ ತನ್ನ ಬಳಿ ಯಾರಾದರೂ ಆಡಲಿ, ಮಾತಾಡಲಿ ಅನ್ನುವ ಅತಿಯಾಸೆ ಇವನಿಗೆ, ಶಾಲೆ ಮಕ್ಕಳು ಬರುವ ಹೊತ್ತು ಹೇಗೆ ಗೊತ್ತಾಗುತ್ತದೋ ಗೊತ್ತಿಲ್ಲ, ಒದರಲು ಶುರು ಮಾಡುತ್ತಾನೆ, ಇನ್ನೆರಡು ಘಂಟೆ ಹೊರಗೆ ಇರಬೇಕು ನಾನು,” ಎಂದು ಪಾಟ್ರಿಕ್ ಒಂದೇ ಸಮನೆ ಮಾತಾಡಿದ. ನಾವು ಆ ನೆರಳಲ್ಲೇ ಬಾಬ್ ಪಕ್ಕದಲ್ಲೇ ಕುಳಿತು ಅವನ ಕತ್ತು ಸವರಿ ಮುದ್ದು ಮಾಡಿ ಬಂದಿದ್ದೆವು. ಹೀಗೆ ಆಗಿತ್ತು ನಮ್ಮ ಮೊದಲ ಭೇಟಿ.

ಆ ದಿನದಿಂದ, ಶಾಲೆಯಿಂದ ಬರುವಾಗ ಬಾಬ್ ನೊಂದಿಗೆ ೧೦ ನಿಮಿಷವಾದರೂ ಆಟ ಆಡಿ ಬರುವ ರೂಡಿ ಆಯಿತು. ಬಾಬ್ ಒಬ್ಬ ತುಂಟ ಪೋರನಂತೆ. ಆಟ ಆಡುತ್ತಲೇ ಇರಬೇಕು. ಕಣ್ಣುಗಳು ಸದಾ ನೂರು ವಾಲ್ಟಿನ ಬಲ್ಬಿನಂತೆ ಕುತೂಹಲದಿಂದ ಮಿನುಗುತ್ತಲೇ ಇರುತ್ತವೆ. ಅವನ ಹತ್ತಿರ ಒಂದು ರಬ್ಬರ್ ಚಂಡು, ದಪ್ಪ ಹಗ್ಗದ ತುಂಡು ಇದೆ ಅದವನ ಆಟಿಕೆಗಳು, ಆದರೆ ಅವನಿಗೆ ಈ ಮಕ್ಕಳು ಎಸೆಯುವ ಕಟ್ಟಿಗೆ ತುಂಡು, ಪೇಪರ್ ಚೂರುಗಳೆಂದರೆ ವೀಪರೀತ ಪ್ರೀತಿ. ಹಾಗೆ ದೂರ ಎಸೆದ ಕಟ್ಟಿಗೆಯನ್ನು ಆರಿಸಿ ತಂದು ಹಲ್ಲಿನಿಂದ ಕಚ್ಚಿ ಚೂರು ಚೂರು ಮಾಡಿ ಎಸೆದು ವಿಜಯದ ನಗೆ ಬೀರಿ ಮತ್ತೆ ಮಾಡು ಅಂತ ಪುಟ್ಟ ಮಕ್ಕಳಂತೆ ಗೋಗರೆಯುತ್ತ ನಿಲ್ಲುವ ಹೊತ್ತಿಗೆ ಇತ್ತ ಪ್ಯಾಟ್ರಿಕ್ ಹೆಮ್ಮೆಯಿಂದ ಬಾಬ್ ಬಗ್ಗೆ ಹೇಳಿಕೊಳ್ಳಲು ಶುರು ಮಾಡುತ್ತಾನೆ. ಈ ಜಾಣ ಮಕ್ಕಳ ಅಪ್ಪ ಅಮ್ಮಂದಿರು ಸ್ನೇಹಿತರು ಸಂಭಂದಿಕರೆದುರು ತಮ್ಮ ಮಕ್ಕಳನ್ನು ಹೊಗಳುತ್ತಾರಲ್ಲ ಹಾಗೆ. ಮಧ್ಯ ಮಧ್ಯ ತನ್ನ ಒಂಟಿತನ, ತನ್ನ ಆರೋಗ್ಯದ ಬಗ್ಗೆ ಹೇಳುತ್ತಾನೆ. ಕೆಲವೊಮ್ಮೆ ವಿಷಾದ ಆವರಿಸಿಕೊಳ್ಳುವುದು ನನ್ನ ಅರಿವಿಗೆ ಬರುತ್ತದೆ ಕೂಡ. ಮರು ನಿಮಿಷದಲ್ಲೇ ಬಾಬ್ ನ ಸುದ್ದಿ ಅವನ ಹೊಗಳಿಕೆ ಶುರುವಾಗುತ್ತದೆ. 

“ನನಗೆ ಹೋದವಾರ ಜ್ವರವಿತ್ತು, ಬಾಬ್ ನನ್ನ ಪಕ್ಕವೇ ಮಲಗಿದ್ದ, ನಾ ಕೆಮ್ಮಿದರೂ ಏಳುತ್ತಿದ್ದ ನನಗೆನನ್ನ ಮಕ್ಕಳು ಹತ್ತಿರವಿಲ್ಲದಿದ್ದರೆ ಏನಾಯಿತು ಇವನಿದ್ದಾನಲ್ಲ ನನ್ನ ಕಾಳಜಿ ಮಾಡಲು.” ಹಾಗೆಲ್ಲ ಹೇಳುವಾಗ ನನಗೆ ಪಿಚ್ಚೆನಿಸುತ್ತದೆ. ಮತ್ತೆ ಅವನು ಹೇಳುವುದು ಸುಳ್ಳಲ್ಲ ಎಂಬುದೂ ನನಗೇನು? ಆ ಏರಿಯಾದಲ್ಲಿರುವ ಎಲ್ಲರಿಗು ಗೊತ್ತು.

ನನ್ನ ಮನೆ ಹತ್ತಿರ ಒಂದು old age home ಇದೆ ಅಲ್ಲಿರುವ ಸುಮಾರು ಅಜ್ಜಿಯರಿಗೆ ಬಾಬ್ ಎಂದರೆ ಪ್ರಾಣ, ಅವನಿಗೆ ಒಳ್ಳೊಳ್ಳೆ ಬಿಸ್ಕೆಟ್,  ಕೇಕ್ ತಂದು ಕೊಡುತ್ತಾರೆ ಅದನ್ನು ನಾನೂ ನೋಡಿದ್ದೇನೆ. ಪಾಟ್ರಿಕ್ ಹೇಳುವಂತೆ, ಅಲ್ಲಿ ಒಂದು ಅಜ್ಜಿ ಗಟ್ಟಿಮುಟ್ಟಾಗಿದ್ದಾಳೆ ಬಾಬ್ ಸೀದಾ ಅವಳ ಮೇಲೆ ಮುದ್ದಿನಿಂದ ಜಿಗಿದು ಆಕೆಯ ಹೊಟ್ಟೆ ಮೇಲೆ ಕಾಲಿಟ್ಟು ನಿಂತು ಅವಳ ಹತ್ತಿರ ತಲೆ ನೇವರಿಸಿಕೊಳ್ಳುತ್ತಾನೆ, ವೀಲ್ಚೇರ್ ಮೇಲೆ ಇರುವ ಅಜ್ಜಿಯಾ ಹತ್ತಿರ ಸುಮ್ಮನೆ ನಡೆದು ಹೆಚ್ಚಿನ ಆರ್ಭಟ ವಿಲ್ಲದೆ ವಿಧೇಯ ಮಗುವಿನಂತೆ ಅಕ್ಕ ಪಕ್ಕ ಸುತ್ತುತ್ತಾನೆ. ಇನ್ನೊಬ್ಬರು ಅಜ್ಜಿ ಹಾಸಿಗೆ ಹಿಡಿದಿದ್ದಾರೆ ಅವರ ಹತ್ತಿರ ಹೋಗುವಾಗ ಸೀದಾ ಮಂಚದ ಮೇಲೆ ಕಾಲಿಟ್ಟು ನಿಂತು ಮುದ್ದು ಮಾಡಿಸಿಕೊಂಡು ಬರುತ್ತಾನೆ. ಅದಕ್ಕೆ ಅವರು ಅವನಿಗೆ ತಿಂಡಿ ತರುವುದು. ಇವನಿಗೂ ಇದು ಅಭ್ಯಾಸ ಆಗಿ ಹೋಗಿದೆ. ಯಾರು ಹೇಳಿದ್ದು ಪ್ರಾಣಿಗಳಿಗೆ ಸಭ್ಯತೆ ಇಲ್ಲ ಅಂತ! ನೋಡು ನನ್ನ ಹುಡುಗ ಎಷ್ಟು ಜಾಣ. ಎಂದು ಹೆಮ್ಮೆಯಿಂದ ಬಾಬ್ ಕಡೆಗೆ ನೋಡುತ್ತಾನೆ ಬಾಬ್ ಎಲ್ಲ ಅರ್ಥವಾದವರಂತೆ ಬಾಲ ಅಲ್ಲಾಡಿಸಿ ಕಣ್ಣರಳಿಸುತ್ತಾನೆ. 

ಪ್ರತಿದಿನ ಭೇಟಿ ಬಾಬ್ ನನ್ನು ಭೇಟಿ ಮಾಡುವುದು ಅಭ್ಯಾಸ ಆಗಿಬಿಟ್ಟಿತ್ತು, ಆ ದಿನ ನಿತ್ಯದ ೧೦ ಆಟ ಮುಗಿಸಿ ಇನ್ನೇನು ಹೋರಡಬೇಕು ಅನ್ನುವಷ್ಟರಲ್ಲಿ ಬಾಬ್ ಒಂಥರಾ ವಿಚಿತ್ರ ಧ್ವನಿ ತೆಗೆದು ಕುಸು ಕುಸು ಮಾಡತೊಡಗಿದ, “Oh he is crying…ಒಹ್ god!” ಅವನಿಗೆ ನೀವು ಹೋಗ್ತೇನೆ ಅಂದಿದ್ದು ಇಷ್ಟ ಆಗ್ತಿಲ್ಲ ಅಂದು ನಗಲು ಶುರು ಮಾಡಿದ. ನನಗು ಬಾಬ್ನ ನ ಈ ವಿಚಿತ್ರ ನಡುವಳಿಕೆ ನೋಡಿ ನಗು ಬಂದಿತ್ತು. ಮತ್ತೆ ಆ ದಿನ ಶುರುವಾದ ಈ ಅಳುವ ಕ್ರಮ ಈಗಲೂ ಜಾರಿಯಲ್ಲಿದೆ. 

  ಬಾಬ್ ಸ್ವಲ್ಪ ಚಟುವಟಿಕೆ ಕಡಿಮೆ ಮಾಡಿದರೂ ಸಾಕು, ಪ್ಯಾಟ್ರಿಕ್ ಅವನನ್ನು ಕರೆದುಕೊಂಡು ಟ್ರಿಪ್ ಹೊರಡುತ್ತಾನೆ. ಸಮುದ್ರ ತೀರದಲ್ಲಿ ಕ್ಯಾರಾವ್ಯಾನ್ ನಲ್ಲಿ ತಿಂಗಳುಗಟ್ಟಲೆ ಉಳಿದು ಬರುತ್ತಾರೆ. ಬಂದ ನಂತರ ಬಾಬ್ ನ ವೀರಗಾಥೆಗಳನ್ನು ಕಣ್ಣೆದುರೇ ನಡೆದಂತೆ ಬಣ್ಣಿಸುತ್ತಾನೆ. ಈ ಒಂದು ವರುಷದ lockdown ಸಮಯದಲ್ಲಿ ಇಬ್ಬರು ಅದೆಷ್ಟು ಹಳಹಳಿಸಿದ್ದಾರೋ. ಪ್ಯಾಟ್ರಿಕ್ ನ ಕಡುಹಸಿರು ಬಣ್ಣದ ಕಾರಿನ ಮುಂದಿನ ಸೀಟಿನಲ್ಲಿ ಬಾಬ್ ಗತ್ತು ಗಾಂಭೀರ್ಯದಿಂದ ಕುಳಿತುಕೊಳ್ಳುವುದನ್ನು ನೋಡಿದ್ರೆ ಅವನ ಮೇಲೆ ಮುದ್ದು ಉಕ್ಕುತ್ತದೆ. 

ಮೊನ್ನೆ ಒಂದು ದಿನ ಹೀಗೆ ಮಾತಾಡುತ್ತ “ನನ್ನ ಮಗಳು ನಿಯತಿ ಕೂಡ ಒಂದು ನಾಯಿ ಮರಿ ಬೇಕು ಅಂತಾಳೆ, ಆದ್ರೆ ನಮಗೆ ಧೈರ್ಯ ಇಲ್ಲ, ಅದನ್ನು ನೋಡಿಕೊಳ್ಳಬಲ್ಲೆವೇ? ಅಂತ ಅನಿಸುತ್ತೆ,” ಎಂದೆ. ಅದಕ್ಕೆ ಪಾಟ್ರಿಕ್ ಗಂಭೀರವಾಗಿ “ನಾವು ಮಕ್ಕಳನ್ನು ಬೆಳೆಸುತ್ತೇವೆ, ಕೇಳಿದ್ದೆಲ್ಲ ಕೊಡಿಸುತ್ತೇವೆ , ನಮಗಾದ ನೋವು ಅವರಿಗಾಗಬಾರದು ಅಂತ ದಿನ ರಾತ್ರಿ ಕಷ್ಟಪಟ್ಟು ಕೆಲಸ ಮಾಡ್ತೇವೆ ಒತ್ತಡದಲ್ಲಿ ಬದುಕುತ್ತೇವೆ , ಆದರೆ ಮಕ್ಕಳು ಏನು ಮಾಡ್ತಾರೆ ಹೇಳು ? ಒಂದೇ ನಮ್ಮನ್ನು ಒಂಟಿ ಯಾಗಿ ಬಿಟ್ಟು ತಮ್ಮ ಕನಸುಗಳನ್ನ ಅರಸಿ ಹೊರಡುತ್ತಾರೆ, ಅಥವಾ ಚಟಗಳಿಗೆ ಬಿದ್ದು ದಾರಿ ಹೆಣವಾಗಿ ಹೋಗ್ತಾರೆ.” 

ಬಾಬ್ ನೋಡು ನಾನು ಬರುವುದನ್ನ ಎದುರು ನೋಡ್ತಾನೆ. ಸದಾ ಹಿಂದೆ ಮುಂದೆ ಓಡಾಡ್ತಾನೆ. ಆದರೆ ಎಲ್ಲಿದ್ದಾರೆ ನಾ ಬೆಳೆಸಿದ ನನ್ನ ಮಕ್ಕಳು? ಎಂದು ಬೇಸರಿಸಿದ . 'Dog shelter home' ಗೆ ಹೋಗಿ ಒಂದು ಸಣ್ಣ ಮರಿಯನ್ನು ತಂದುಕೊಡಿ, ಅವಳ ಬಾಲ್ಯ ಇನ್ನು ಸುಂದರವಾಗುತ್ತದೆ ಎಂದು ಹೇಳಿ ಅವನೇನೋ ಸುಮ್ಮನಾದ. 

ಆದರೆ ನನ್ನ ತಲೆಯಲ್ಲಿ ಮಹಾಪೂರ ಹರಿಬಿಟ್ಟ ನಾನು ಬಿಟ್ಟು ಬಂದಿರುವ ನನ್ನ ಅಪ್ಪ ಅಮ್ಮ, ನನ್ನ ಮನೆ, ಮಗಳಾಗಿ ನನಗಿರುವ ಕರ್ತವ್ಯ. ಏನೇನೋ ತಲೆಯಲ್ಲಿ ಸುಳಿದಾಡಿತು. ನಮ್ಮ ತಂದೆ ತಾಯಿ ನಮ್ಮ ಬಗ್ಗೆ ಹೀಗೆ ಅಂದುಕೊಂಡರೆ? ನಾ ಅವರನ್ನು ಪ್ರೀತಿಸುವುದು ಸುಳ್ಳಲ್ಲ ಆದ್ರೆ ಜೊತೆಗಿರಲು ಆಗುವುದಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಸ್ವಲ್ಪ ಹೊತ್ತು ಹಿಡಿಯಿತು.  

ಬಾಬ್ ಗೆ ಈಗ ಒಬ್ಬ girlfriend ಆಗಿದ್ದಾಳೆ ಆಕೆಯ ಹೆಸರು violet ಎಂದು. Weekend ಗಳಲ್ಲಿ ಪ್ಯಾಟ್ರಿಕ್ ಅವನನ್ನು ಹೊರಗೆ ಕರೆದುಕೊಂಡು ಹೋಗಿ ವೈಲೆಟ್ ಜೊತೆ ಪಾರ್ಕಿನಲ್ಲಿ ಆಟ ಆಡಲು ಬಿಡುತ್ತಾನೆ. 

ಪ್ಯಾಟ್ರಿಕ್ ಗೆ ಬಾಬ್ ಸಿಕ್ಕ ಘಟನೆಯು ತುಂಬಾ ಮಜವಾಗಿದೆ. ಇಲ್ಲಿ ಕುರಿ ಕಾಯುವ shephard ಗಳು ನಾಯಿಯನ್ನು ಸಾಕುತ್ತಾರೆ. ಆ ನಾಯಿಗಳ ಕೆಲಸ ಕುರಿಗಳನ್ನ ನರಿಗಳಿಂದ ರಕ್ಷಿಸುವುದು ಅವುಗಳು ಹಳ್ಳ ಕೊಳ್ಳಗಳಿಗೆ ಬೀಳದಂತೆ ಎಚ್ಚರಿಸಿ ಅವುಗಳನ್ನ ಒಂದೇ ಕಡೆ ಇರುವಂತೆ ನೋಡಿಕೊಳ್ಳುವುದು. ಈ ನಾಯಿಗಳು ಮರಿ ಹಾಕಿದಾಗ ಒಂದಿಷ್ಟು ವಾರಗಳ ನಂತರ ಅವುಗಳ ಪರೀಕ್ಷೆ ನಡೆಸಲಾಗುತ್ತದಂತೆ, ಮತ್ತು ಆ ದಿನದ ಫಲಿತಾಂಶವೇ ಆ ನಾಯಿಮರಿಯ ಮುಂದಿನ ಭವಿಷ್ಯ ನಿರ್ಧರಿಸುತ್ತದೆ.

ಓಡುವ ಕುರಿ ಮಂದೆಯ ಹಿಂದೆ ಈ ಪುಟ್ಟ ನಾಯಿ ಮರಿಗಳನ್ನು ಓಡಿಸಲಾಗುತ್ತದೆ. ಕೆಲವು ನಾಯಿ ಮರಿಗಳು ಗುಂಪಿನಲ್ಲಿರುವ ದೊಡ್ಡ ನಾಯಿಗಳನ್ನು ಅನುಕರಿಸಿ ಕುರಿಮಂದೆಯ ಹಿಂದೆಯೇ ಜೋರಾಗಿ ಓಡಿ ಬೊಗಳುತ್ತಾ ಸಾಗುತ್ತವೆ ಆದರೆ ಕೆಲವೊಂದು ನಾಯಿಮರಿಗಳು ಮನೆ ಕಡೆಗೆ ಓಡಿ ಬರುತ್ತವಂತೆ. ಹಾಗೆ ಮನೆ ಕಡೆಗೆ ಓಡಿ ಬಂದ ನಾಯಿ ಮರಿಗಳನ್ನು ಶಫರ್ಡ್ ಗಳು ತಮ್ಮ ಜೊತೆಗೆ ಇಟ್ಟುಕೊಳ್ಳುವುದಿಲ್ಲ. ಅವುಗಳನ್ನ ಬೇಗ ಆದಷ್ಟು ಬೇಗ ಸಾಗಿ ಹಾಕಿಬಿಡುತ್ತಾರೆ. ಹಾಗೆ ಕುರಿಗಳ ಹಿಂದೆ ಹೋಗದೆ ಕೂಗುತ್ತಾ ಹೆದರಿ ಮನೆಗೆ ಬಂದು ಮುದುಡಿ ಮಲಗಿದ ಮುದ್ದು ನಾಯಿ ಮರಿ ನಮ್ಮ ಈ ಬಾಬ್ ಅಂದು ಕುರಿಗಳನ್ನು ನೋಡಿಕೊಳ್ಳಕಾಗ್ದಿದ್ರು ಇವತ್ತು ಕ್ಯಾನ್ಸರ್ ಸರ್ವೈವರ್ ಪ್ಯಾಟ್ರಿಕ್ ನ  ಸಂಪೂರ್ಣ ಜವಾಬ್ದಾರಿ ಹೊತ್ತು ಅವನೊಂದಿಗೆ ಸರಿಸಮವಾಗಿ ನಡೆಯುತ್ತಿದ್ದಾನೆ. ಅದಕ್ಕೆ 10 ಪಟ್ಟು ಹೆಚ್ಚು ಪ್ರೀತಿಯೂ ಗಳಿಸುತ್ತಿದ್ದಾನೆ.

ಬಾಬ್ ಈಗಲೂ ನಮಗಾಗಿ ಕಾಯುತ್ತಾನೆ , ನಾವು ಅವನಿಗೆ ಕೊಡುವ ಬರೀ ಕೆಲ ನಿಮಿಷದ ಬದಲು, ಬದುಕಿನ ಅತಿ ಸುಂದರ ಪಾಠ ಹೇಳಿಕೊಟ್ಟ ಜೀವಿ ಬಾಬ್. ಈಗ ಒಂದೈದಾರು ತಿಂಗಳ ಹಿಂದೆ ಮನೆ ಮುಂದೆ ಸಿಕ್ಕ ಬಾಬ್ ಕಣ್ಣುಗಳು ಗಾಜಿನ ಗೋಲಿಯಂತೆ ಹೊಳೆಯುತ್ತಿದ್ದ ಕಣ್ಣುಗಳು, ಖಾಲಿ  ಖಾಲಿ ಅನ್ನಿಸಿದವು. ಹುಷಾರಿಲ್ವಾ? ಬಾಬ್ ಸಪ್ಪಗಿದ್ದಾನೆ ಅಲ್ಲ? ಎಂದು ಕೇಳಿದ್ದೆ ತಡ 'ಬಾಬ್ ಗೆ ಕುರುಡು ಆವರಿಸುತ್ತಿದೆ. ಸ್ವಲ್ಪ ದಿನಗಳಲ್ಲಿ ಅವನಿಗೆ ಏನೇನೂ ಕಾಣುವುದಿಲ್ಲ’  ಎಂದು ಹೇಳಿದ ಮರುಗಳಿಗೆಯೇ, ನಾನಿದ್ದೇನಲ್ಲ ಅವನ ಕಣ್ಣಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ ಪ್ಯಾಟ್ರಿಕ್ ದನಿಯಲ್ಲಿ ಮಮಕಾರ ಉಕ್ಕುತ್ತಿತ್ತು. 

ಈಗ ಬಾಬ್ ಪೂರ್ತಿ ದೃಷ್ಟಿ ಕಳೆದುಕೊಂಡಿದ್ದಾನೆ. ಆದರೆ ಪ್ಯಾಟ್ರಿಕ್ ಮಾತ್ರ ಅವನನ್ನು ನಿತ್ಯದಂತೆ ವಾಕಿಂಗ್ ಕರೆದುಕೊಂಡು ಹೋಗುತ್ತಾನೆ. ಆದರೆ ಕಣ್ಣು ಕಾಣದ ಅವನಿಗೆ ಮೂಗು, ಕಿವಿಗಳೇ ದಾರಿದೀಪ. ಎಲ್ಲವನ್ನು ಮೂಸುತ್ತ ಮೂಸುತ್ತ, ಏನಾದರೂ ಸದ್ದು ಕೇಳಿದ ಕೂಡಲೇ ಅವ ಪ್ರತಿಕ್ರಿಯಿಸುತ್ತಾನೆ ಈ ಕಾರಣದಿಂದಲೇ ಅವರ    ವಾಕುಗಳು ಬೇಗನೆ ಮುಗಿಯುವುದೇ ಇಲ್ಲ.

ಎಷ್ಟೋ ಸಲ ಅವನನ್ನು ಮನೆಗೆ ಕರೆದುಕೊಂಡು ಹೋಗುವುದೇ ಪ್ಯಾಟ್ರಿಕ್ ಗೆ ದೊಡ್ಡ ಸವಾಲು.
ತುಂಬ ಕಷ್ಟವೆನಿಸಿದರೆ ಪ್ಯಾಟ್ರಿಕ್ ತನ್ನ ಕ್ಯಾರವಾನ್ ಗೆ ಮರಳಿ ಬಿಡುತ್ತಾನೆ. ವಾಹನಗಳು ಇರದ, ಜನ ಸಂಚಾರವೇ ಇಲ್ಲದ  ಹೊಲಗಳಲ್ಲಿ ಬಾಬ್ ಸ್ವಚ್ಛಂದವಾಗಿ ವಿಹರಿಸಲು ಕಣ್ಣುಗಳು ಬೇಕೆಂದೇನೂ ಇಲ್ಲವಂತೆ. ಇದೆಲ್ಲ ಕೇಳುವಾಗ ನನ್ನ ಕಣ್ಣು ಒದ್ದೆಯಾಗುತ್ತವೆ. ಬಾಬ್ ಮಾತ್ರ ಆ ಕುತೂಹಲದ ನಗು ಇನ್ನೂ ಉಳಿಸಿಕೊಂಡಿದ್ದಾನೆ. ಬಾಬ್ ನನ್ನ ಮತ್ತು ಮಗಳ best friend.

ಆ ನಾಯಿಗೆ ನನ್ನ ದೇಶ, ಭಾಷೆ, ಚರ್ಮದ ಬಣ್ಣ, ನಮ್ಮ ಧಿರಿಸು ಯಾವುದೂ ಮುಖ್ಯವಲ್ಲ. ನಾವು ಅದಕ್ಕೆ ಕೊಡುವ ಪ್ರೀತಿಯಷ್ಟೇ ಬೇಕು. ಅಷ್ಟೇ! ಇನ್ನ್ಯಾವ ನಿರೀಕ್ಷೆಯೂ ಇಲ್ಲ. ಒಮ್ಮೆಯೂ ಅವನಿಗೆ ನಾ ತಿಂಡಿಯನ್ನ ಹಾಕಿಲ್ಲ, ಆಟಿಕೆಯ ಉಡುಗೊರೆಯನ್ನೂ ಕೊಟ್ಟಿಲ್ಲ. ಆದರೂ ಅವ ನಮಗಾಗಿ ಕಾಯುತ್ತಾನೆ, ಆ ಹತ್ತು ನಿಮಿಷ ನಮ್ಮೊಂದಿಗೆ ಕಳೆಯಲು. ಅವನ ಇಚ್ಛೆಯಂತೆ ಪ್ಯಾಟ್ರಿಕ್ ಚಳಿ ಗಾಳಿ ಮಳೆ ಎನ್ನದೆ ಶಾಲೆ ಬಿಡುವ ಹೊತ್ತಿನಲ್ಲಿ ಹೊರಗೆ ಬಂದು ನಿಲ್ಲುತ್ತಾನೆ. ಬಾಬ್ ಪರಿಚಯವಾಗಿ ಈಗ 6 ವರ್ಷಗಳಾದವು.

ಬಾಬ್ ನ ಅಭಿಮಾನಿ ಬಳಗ ತುಂಬಾ ದೊಡ್ಡದು. ದೇಶ ಬಿಟ್ಟು ದೇಶ ಕ್ಕೆ ಬಂದಿರುವ ನನಗೆ ಬರೀ ಮನುಷ್ಯ ಬಾಂಧವ್ಯಗಳಷ್ಟೇ ಅಲ್ಲ. ಕಾಲ ಕಾಲಕ್ಕೆ ಅರಳುವ ಹೂ, ಚಿಗುರಿ ಬರಿದಾಗಿ ಮತ್ತೆ ಹಸಿರಾಗುವ ಮರಗಿಡಗಳು, ಹಕ್ಕಿ ಚಿಟ್ಟೆ ಮಾತು ಬಾರದ ಈ ಪ್ರಾಣಿಗಳೂ, ನನ್ನ ಮನಸ್ಸನ್ನು, ಬದುಕನ್ನೂ ಬೆಚ್ಚಗಿಟ್ಟಿವೆ.

ಯುಕೆದಲ್ಲೊಂದು ಅಪರೂಪದ ಯಾತ್ರಾ ಸ್ಥಳ- ಸ್ಕಂದವೇಲ್ – ಶಾಲಿನಿ ಜ್ಞಾನಸುಬ್ರಮಣಿಯನ್ ಲೇಖನ

ಪ್ರವಾಸಕಥನ, ಇತಿಹಾಸ, ಆಧ್ಯಾತ್ಮ ಇವೆಲ್ಲ ಮೇಳೈಸಿವೆ ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಅವರ ಈ ಲೇಖನದಲ್ಲಿ. ಐವತ್ತು ವರ್ಷಗಳ ಹಿಂದೆ ನಾನು ಈ ವೇಲ್ಸ್ ನಾಡಿಗೆ ಬಂದಾಗ ಸ್ಕಂದವೇಲ್ ಎನ್ನುವ ಜಾಗದ ಹೆಸರು ಕೇಳಿದಾಗ 

Read More »

ಒಂದು ಸುಂದರ ಪ್ರವಾಸ

ಸೂರಜ್ ಏಕ್, ಚಂದಾ ಏಕ್, ತಾರೆ ಅನೇಕ್,
ಏಕ್ ಗಿಲಹರಿ, ಅನೇಕ್ ಗಿಲಹರಿಯಾ,
ಏಕ್ ತಿತ್ಲಿ, ಅನೇಕ್ ತೀತಲಿಯಾ ,
ಏಕ್ ಚಿಡಿಯಾ, ಅನೇಕ್ ಚಿಡಿಯಾ…

ಈ ಮೇಲಿನ ಹಾಡನ್ನು ಎಲ್ಲರೂ ಕೇಳಿರಬಹುದು, ಈ ಹಾಡು ೧೯೭೪ ರಲ್ಲಿ ಜನರಲ್ಲಿ ಐಕ್ಯತೆ ಮೂಡಿಸಲು ಹೊರತಂದ ಸುಂದರ ಹಾಡು. ಇದರಲ್ಲಿ ಬರುವ ಕೆಲವು ಸಾಲು ಇಂತಿದೆ

ಹೊ ಗಯೇ ಏಕ್ … ಬನ್ ಗಯೀ ತಾಕತ್.. ಬನ್ ಗಯೀ ಹಿಮ್ಮತ್…
ಹಿಂದ್ ದೇಶ್ ಕೆ ನಿವಾಸಿ ಸಭಿ ಜನ ಏಕ್ ಹೈ,
ರಂಗ್-ರೂಪ್ ವೇಷ-ಭಾಷ ಛಾಹೀ ಅನೇಕ್ ಹೈ

ಬೇಸಿಗೆಯ ರಜೆ ಮುಂಚೆ ಮಕ್ಕಳಿಗೆ ನಮ್ಮ ವಿಸ್ತೃತ ಕುಟುಂಬ ಪರಿಚಯ ಮತ್ತು ಅವರೊಡನೆ ಹೆಚ್ಚು ಬೆರೆಯಲು ಏನು ಮಾಡಬಹುದೆಂದು ವಿಚಾರ ಮಾಡುತ್ತಿದ್ದೆವು, ಆಗ ಎಲ್ಲರನ್ನು ಒಂದು ಸ್ಥಳದಲ್ಲಿ ಸೇರಿಸುವ ವಿಚಾರ ಬಂದಿತು. ಈ ವಿಚಾರವನ್ನು ಬೇಸಿಗೆಯ ರಜೆಯಲ್ಲಿ ಯಶಸ್ವಿಯಾಗಿ ಮುಗಿಸಿದೆವು, ಅದರ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ನಮ್ಮ ಉದ್ದೇಶ ಇಂತಿದೆ… ನಾವೆಲ್ಲೇ ಇರಲಿ, ನಾವೆಲ್ಲರೂ ಒಂದೇ…
“ಹಮಾರೆ ಕುಟುಂಬ ಕೆ ಸದಸ್ಯ ಸಭಿ ಜನ ಏಕ್ ಹೈ,
ದೇಶ್-ಭಾಷ ಛಾಹೀ ಅನೇಕ್ ಹೈ”

ನಮ್ಮ ಅಜ್ಜಿಯ ಮನೆ ಬಾಗಲಕೋಟೆಯಲ್ಲಿ ಇತ್ತು (ಮುಳುಗಡೆ ಆದ ಕಾರಣ ಈಗ ಇಲ್ಲ), ಎಲ್ಲರನ್ನು ಬಾಗಲಕೋಟೆ ಇಲ್ಲದಿದ್ದರೆ ಅದರ ಹತ್ತಿರ ಸೇರಿಸುವ ಪ್ರಯತ್ನ, ಕೊನೆಗೆ ನಾವೆಲ್ಲರೂ ಸೇರಿದ್ದು ಬಾದಾಮಿಯಲ್ಲಿ. “ದೇಶ್-ಭಾಷ ಛಾಹೀ ಅನೇಕ್ ಹೈ” ಸಾಲಿನಂತೆ ಬಂದವರು ಮುಂಬೈ, ದೆಹಲಿ, ಕರ್ನಾಟಕ, ಯು ಕೆ ತರಹ ಸ್ಥಳದಿಂದ, ಕೆಲವರಿಗೆ ಕನ್ನಡ ಭಾಷೆ ಕೂಡ ಅಪರೂಪ. ತೊಂಬತ್ತು ವರುಷದವರಿಂದ ೨ ವರುಷದ ವಯಸ್ಸಿನ್ನ ಒಟ್ಟು ೫೦ಕ್ಕೋ ಹೆಚ್ಚು ಸದಸ್ಯರು ಸೇರಿದ್ದರು. ಜೊತೆಯಾಗಿ ನೆನಪಿನ ದೋಣಿಯಲಿ ಸಾಗಲು ನಮ್ಮ ತಂಡ ಸಿದ್ದವಾಗಿತ್ತು

ನಮ್ಮ ತಂಗುದಾಣ (ರೆಸಾರ್ಟ್) ಹೊಲಗಳ ನಡುವೆ ಇತ್ತು, ಸುಂದರವಾದ ಸ್ಥಳ. ಪ್ರತಿದಿನದ ವೇಗದ ಜೀವನದಿಂದ ಹೊರಬಂದು ಇಂತಹ ಒಂದು ಸ್ಥಳದಲ್ಲಿ ನಿಂತಾಗ ನಮ್ಮ ಸುತ್ತಲಿನ ಜಗತ್ತಿನ ಕಲ್ಪನೆಯೇ ಬದಲಾಗುತ್ತದೆ. ಆ ಮಣ್ಣಿನ ವಾಸನೆ, ಸುತ್ತಲಿನ ಸದ್ದಿನ ಸಂಗೀತ, ಆಕಾಶದಲ್ಲಿ ಸೂರ್ಯನ ಬಣ್ಣ ಬಣ್ಣದ ಚಿತ್ತಾರ ಎಲ್ಲವನ್ನು ಮರೆಸುತ್ತದೆ. ನಸುಕಿನಲ್ಲಿ ಹೊರಗೆ ಬಂದು ನಿಂತಾಗ ಮನ ಗುನುಗುನುಸಿದ್ದು,

ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವ ಹೊಯ್ದ
ಬಾಗಿಲು ತೆರೆದು ಬೆಳೆಕು ಹರಿದು
ಜಗವೆಲ್ಲ ತೊಯ್ದ, ದೇವನು ಜಗವೆಲ್ಲ ತೊಯ್ದ

ಇಂತಹ ಸುಂದರ ಪರಿಸರದಲ್ಲಿ ನಾವೆಲ್ಲರೂ ಸೇರಿದ್ದವು, ನಾವೆಲ್ಲರೂ ಎನ್ನುವ ವಿಚಾರಕ್ಕೆ ಬರೋಣ. ಹಿಂದಿನ ಒಂದು ಲೇಖನದಲ್ಲಿ ಸಾಮಾಜಿಕ ಮಾಧ್ಯಮ ಇಂದ ಈಗಿರುವ ಸಮಸ್ಯೆಗಳ ಬಗ್ಗೆ ಬರೆದಿದ್ದೆ, ಈಗಿನ ಮಕ್ಕಳು ಸಾಮಾಜಿಕ ಮಾಧ್ಯಮದ ಸ್ನೇಹಿತರನ್ನೇ ತಮ್ಮ ಹತ್ತಿರದ ಬಳಗವೆಂದು ತಿಳಿದಿದ್ದಾರೆ, ಪ್ರತಿಯೊಬ್ಬರೂ ೮೦೦ – ೧೦೦೦ ಸಾಮಾಜಿಕ ಮಾಧ್ಯಮದ ಸ್ನೇಹಿತರನ್ನು ನೋಡುತ್ತಾ ಬೆಳೆಯುತ್ತಿದ್ದಾರೆ. ಒಂದು ಸಂಶೋಧನೆ ಪ್ರಕಾರ, ಮನುಷ್ಯ ಸಂಕೀರ್ಣ ಸಮಾಜದಲ್ಲಿ ಬೆಳೆದರೂ, ಒಬ್ಬ ಮನುಷ್ಯ ೧೫೦ಕ್ಕೋ ಹೆಚ್ಚಿನ ಜನರೊಡನೆ ಸಮತೋಲಿತ ಸಾಮಾಜಿಕ ಸಂಬಂಧ ಇಟ್ಟುಕೊಳ್ಳಲು ಆಗುವದಿಲ್ಲ. ಆದುದರಿಂದ ಅವರ ಸಾಮಾಜಿಕ ಸಂಬಂಧ ಸಣ್ಣ ಪ್ರಮಾಣದಲ್ಲಿ ಮತ್ತು ಪರಿಚಿತ ಸಂಪರ್ಕದಲ್ಲಿ ಇದ್ದರೆ ಅದು ಆರೋಗ್ಯಕರ ಎಂದು ಪರಿಗಣಿಸಲಾಗಿದೆ.

ನಮ್ಮ ಮಕ್ಕಳಿಗೂ ಅವರ ದೂರದಲ್ಲಿ ನೆಲೆಸಿರುವ, ಪರಿಚಿತ ಸಂಬಂಧ ಬೆಳೆಸಲು ಅವಕಾಶ ಕೊಡುವ ಪ್ರಯತ್ನ ಮಾಡಿದೆವು. ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಹೇಳಿದ ಮಾತು, ಭಾರತಕ್ಕೆ ಹೋದಾಗ ನಾವು ಸಂಬಂಧಿಕರನ್ನು ಭೇಟಿ ಮಾಡುತ್ತೇವೆ, ಆದರೆ ಅವರ ಮಕ್ಕಳ ಹೆಸರು ಮರೆತುಹೋಗಿರುತ್ತದೆ… ಅವಾಗ ಚಿಕ್ಕವರನ್ನು ಪುಟ್ಟ ಬಾ, ಪುಟ್ಟಿ ಬಾ ಎನ್ನಬೇಕಾಗುತ್ತದೆ. ಇಂತಹ ಒಂದು ಸಂದಿಗ್ದ ಪರಿಸ್ಥಿತಿ ಬರುವುದು ಅವರ ಸಂಪರ್ಕ ಕಳೆದುಕೊಂಡಾಗ. ವರ್ಷಕೊಮ್ಮೆ ನಮ್ಮವರೂ ಎನಿಸುವರನ್ನು ಭೇಟಿ ಮಾಡುತ್ತಿದ್ದರೆ, ಒಂದು ಆರೋಗ್ಯಕರ ಮತ್ತು ಸುಂದರ ಪರಿಸರದಲ್ಲಿ ಹೊಸ ಪೀಳಿಗೆ ಬೆಳೆಯಬಹುದು. ನಮ್ಮವರು ಎಂದರೆ ಇಲ್ಲಿ ಬಂಧುಗಳು ಆಗಬಹುದು ಅಥವಾ ಯಾರಾದರೂ ಆಪ್ತರು ಆಗಬಹದು.
ಈಗಿನ ಚಿಕ್ಕ ಸಂಸಾರ ಇರುವ ರೀತಿಯಲ್ಲಿ ನಾನು, ನನ್ನ ಹೆಂಡತಿ ಮತ್ತು ಮಕ್ಕಳು ಎಂದು ನಮ್ಮನ್ನು ಒಂದು ಸೀಮಿತದಲ್ಲಿ ಇಟ್ಟುಕೊಂಡರೆ ಅದು ಕಷ್ಟ ಆಗಬಹುದು. ನಮ್ಮಲ್ಲಿ ಬೆಳೆಯುವ ಒಂಟಿತನ; ಹೇಳದಿದ್ದರೂ, ಆಡದಿದ್ದರೂ ಕೆಳಗಿನ ಸಾಲುಗಳು ನಮ್ಮಲ್ಲಿ ಹುಟ್ಟುವ ಭಾವನೆ ಪ್ರತಿಬಿಂಬಿಸುತ್ತದೆ

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ……..
ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ ಮನ ವಿಭ್ರಾಂತ.

ಇನ್ನೊಂದು ಹಂಚಿಕೊಳ್ಳಬೇಕಾದ ವಿಷಯ ಎಂದರೆ ನಮ್ಮ ಮುತ್ತಜ್ಜಿಯ ಸಾಹಸ ಕಥೆ. ಸುಮಾರು ೭೦ ವರುಷಗಳ ಹಿಂದೆ ಅವರು ಬದರಿ, ಕೇದಾರ, ಕಾಶಿ ಯಾತ್ರೆಗೆ ಹೋಗಿದ್ದರು. ಆಗಿನ ಬದರಿ ಯಾತ್ರೆಯಲ್ಲಿ ಅವರು ತಮ್ಮ ಅಡುಗೆ ಪಾತ್ರೆ, ಅಕ್ಕಿ, ಬೇಳೆ ಮುಂತಾದ ಸಾಮಾನು ಒಯ್ಯುತ್ತಿದ್ದರು. ಈಗಿನಂತೆ ಬಸ್ಸು, ಕುದರೆ, ಪಲ್ಲಕ್ಕಿ… ಮುಂತಾದ ವ್ಯವಸ್ಥೆ ಇರದೇ ಅವರು ಹೆಚ್ಚಿನ ಪ್ರವಾಸ ನಡೆದುಕೊಂಡು ಹೋಗುತ್ತಿದ್ದರು. ಭಾಷೆ ಬರುವದಿಲ್ಲ, ಒಬ್ಬೊಬ್ಬರೇ ಹೋಗುವಂತಿಲ್ಲ, ಆದುದರಿಂದ ಅವರು ಗುಂಪು ಮಾಡಿಕೊಂಡು ಜೊತೆ ಜೊತೆಗೆ ಪ್ರಯಾಣ ಮಾಡುತ್ತಿದ್ದರು. ಇಂತಹ ವ್ಯವಸ್ಥೆಯಲ್ಲಿ ಅವರಿಗೆ ಒಂದು ಶಿವಲಿಂಗ ಸಿಕ್ಕಿತು, ಆಗ ಅವರ ಹಳ್ಳಿಯಲ್ಲಿ ಶಿವನ ಗುಡಿ ಇರಲಿಲ್ಲ (ಸುತಗೊಂಡರ್ ಹಳ್ಳಿ ಹೆಸರು, ಇದು ಆಲಮಟ್ಟಿ ಹತ್ತಿರ ಇದೆ). ಅವರು ಅಲ್ಲಿ ಸಿಕ್ಕ ಶಿವಲಿಂಗ ಹೊತ್ತು ಉತ್ತರ ಭಾರತದಿಂದ ಕರ್ನಾಟಕದ ಸಣ್ಣ ಹಳ್ಳಿಗೆ ತಂದಿದ್ದರು. ನಾವೆಲ್ಲ ಹಳ್ಳಿಗೆ ಭೇಟಿ ಕೊಟ್ಟಾಗ ಹಳ್ಳಿಯ ಜನ ನಮೆಲ್ಲರಿಗೂ ಶಿವನ ಗುಡಿ ತೋರಿಸಿ ನಮಗೆ ಅವರ ಸಾಹಸ ಯಾತ್ರೆ ವಿವರಿಸಿ ತಿಳಿಸಿದರು. ಇದು ನಮ್ಮ ಹಳ್ಳಿ ಭೇಟಿಯ ವಿಶೇಷ ಅನುಭವ ಆಯಿತು.

ನಮ್ಮ ಬಾದಾಮಿ ಪ್ರವಾಸದಲ್ಲಿ ನೆನಪಿಸಿಕೊಳ್ಳಬೇಕಾದ ವಿಶಿಷ್ಟ ವ್ಯಕ್ತಿ ಎಂದರೆ ಡಾ|| ಶೀಲಕಾಂತ್ ಪತ್ತಾರ್, ಇವರು ನಮ್ಮ ಅಮ್ಮ ಮತ್ತು ಅವರ ಅಣ್ಣನೊಡನೆ ಓದಿದವರು, ಅವರೊಡನೆ ಮನೆಯ ಮಗನಂತೆ ಬೆಳೆದವರು. ಬಾದಾಮಿ ಮತ್ತು ಸುತ್ತು ಮುತ್ತಲಿನ ಚರಿತ್ರೆ, ಶಿಲ್ಪಕಲೆ ಬಗ್ಗೆ ಚೆನ್ನಾಗಿ ತಿಳಿದುಕೊಡವರು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ವರುಷಗಳ ಹಿಂದೆ ಅವರು ತೀರಿಕೊಂಡರು. ಅವರು ಬರೆದ ಕೆಲವು ಪುಸ್ತಕಗಳು “The Singing Rocks of Badami “, “ಬಾದಾಮಿ ಶಿಲ್ಪಕಾಶಿ”, “ಸಪ್ತಕ” ಮುಂತಾದವುಗಳು. ಅವರು ಬರೆದ ಸಪ್ತಕ ಪುಸ್ತಕದ ಒಂದು ಭಾಗ ಹಂಚಿಕೊಳ್ಳುತ್ತಿದ್ದೇನೆ

“ಚಾಲುಕ್ಯ ದೊರೆಗಳು ಕಲಾರಾಧಕರಾಗಿದ್ದರು. ಅವರ ಕಾಲಾವಧಿಯಲ್ಲಿ ಪಟ್ಟದಕಲ್ಲು ವಾಸ್ತು ಹಾಗು ಶಿಲ್ಪಗಳ ಪ್ರಧಾನ ಪ್ರಯೋಗಶಾಲೆಯಾಗಿತ್ತು. ಈ ಪ್ರಯೋಗಗಳು ಬಾದಾಮಿ ಮತ್ತು ಐಹೊಳೆಯಲ್ಲೂ ನಡೆದವು. ಉತ್ತರದಲ್ಲಿ ಗುಪ್ತರು ಮತ್ತು ದಕ್ಷಿಣದಲ್ಲಿ ಪಲ್ಲವರು ತಮ್ಮದೇ ಆದ ವಾಸ್ತುಪರಂಪರೆಯನ್ನು ಪ್ರತಿಷ್ಠಾಪಿಸಿದರು. ಗುಪ್ತರ ವಾಸ್ತು ಶೈಲಿಯನ್ನು ನಾಗರ ಶೈಲಿಯೆಂದು, ಪಲ್ಲವರ ವಾಸ್ತು ಪದ್ದತಿಯನ್ನು ದ್ರಾವಿಡ ಶೈಲಿಯೆಂದು ಕರೆಯಲಾಗುತ್ತಿತ್ತು.”

ಐಹೊಳೆ ಕೆತ್ತನೆ ಪರಿಪೂರ್ಣ ವಾಸ್ತುಶಿಲ್ಪ ಅಲ್ಲವೆಂದು ನೋಡಿದರೆ ಗೊತ್ತಾಗಿ ಬಿಡುತ್ತದೆ. ಅಲ್ಲಿ ವಿಧ ವಿಧವಾದ ವಿನ್ಯಾಸ, ಕೆತ್ತನೆ ಪ್ರಯೋಗಗಳು ನಡೆಸಿ ಶಿಲ್ಪಿಗಳು ನಂತರದ ವಾಸ್ತುಶಿಲ್ಪದ ಬೆಳವಣಿಗೆಗಳಿಗೆ ಅಡಿಪಾಯ ಹಾಕಿದರು. ಅಲ್ಲಿ ಹೊರಹೊಮ್ಮಿದ ಮಿಶ್ರ ಶೈಲಿ ಕೆತ್ತನೆಗಳು ಐಹೊಳೆಗೆ “ಭಾರತೀಯ ವಾಸ್ತುಶಿಲ್ಪದ ತೊಟ್ಟಿಲು” ಎಂಬ ಬಿರುದನ್ನು ತಂದುಕೊಟ್ಟಿತು.

ಡಾ|| ಶೀಲಕಾಂತ್ ಪತ್ತಾರ್ ಅವರನ್ನು ಇಲ್ಲಿ ಪರಿಚಯಿಸಿದ ಕಾರಣ ಅವರು ಮಾಡಿದ ಸಂಶೋಧನೆ, ಪ್ರಕಟಿಸಿದ ಕೃತಿ ಬಗ್ಗೆ ತಿಳಿಸಲು. ಚಿಕ್ಯಾಗೋ ವಿಶ್ವವಿದ್ಯಾಲಯದ ಇತಿಹಾಸದ ಪ್ರೊಫೆಸರ್ ಅವರ “The Singing Rocks of Badami” ಗ್ರಂಥದ ಕುರಿತು ಈ ರೀತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ “The reader will be greatly enlightened regarding the historical context and religious meaning of the fine art at Badami”.

ಹೀಗೇ ನಾವು ಮಧುರ ಕ್ಷಣ ಜೊತೆಗೆ ಕಳೆದು, ಸುಂದರ ಸ್ಥಳಗಳನ್ನು ವೀಕ್ಷಿಸಿ, ಸಂಬಂಧಗಳನ್ನು ಹದಗೊಳಿಸಿ… ನೆನಪುಗಳೊಂದಿಗೆ ಎಲ್ಲರೂ ಮತ್ತೆ ನಮ್ಮ ಜಗತ್ತಿಗೆ ಮರಳಿದೆವು.

ಒಂದು ಮರೆಯಲಾಗದ ಪ್ರವಾಸ ಇದಾಗಿತ್ತು. ಎಲ್ಲರೂ ಮುಂದಿನ ಆಪ್ತ ಸಮಾಗಮಕ್ಕೆ ಕಾಯುತ್ತಿದ್ದಾರೆ.

ಇನ್ಸ್ಟಾ ರೀಲ್ ಮಂಡಲದ ಹೊರಗಿನ ಐತಿಹಾಸಿಕ ರೋಮ್

  • ರಾಮಶರಣ ಲಕ್ಷ್ಮೀನಾರಾಯಣ

ರೋಮ್ ಕ್ರಿ.ಪೂ ೨೫೦ ರಿಂದ ಇಲ್ಲಿಯವರೆಗೆ ಸತತವಾಗಿ ರಾಜಧಾನಿಯಾಗಿ ಮೆರೆದ ನಗರ. ಪ್ರಜಾಪ್ರಭುತ್ವ, ರಾಜಾಡಳಿತ, ಧರ್ಮಶಾಹಿ ಹೀಗೆ ಹಲವು ರೀತಿಯ ಪ್ರಭುತ್ವಗಳ ಕೇಂದ್ರವಾಗಿತ್ತು, ರೋಮ್ ನಗರ. ಇಲ್ಲಿ ಹೆಜ್ಜೆಯಿಟ್ಟಲ್ಲೆಲ್ಲ ಇತಿಹಾಸದ ಕುರುಹು. ಕಲ್ಲೆಸೆದಲ್ಲಿ ಪುರಾತನ ಕಟ್ಟಡ; ಕಿವಿಗೊಟ್ಟರೆ ಅವು ಹೇಳುವ ಕಥೆಗಳು; ಕಣ್ಣು ಹಾಯಿಸಿದಲ್ಲೆಲ್ಲ ಕಾಣುವ ಪ್ರತಿಮೆಗಳು, ಚರ್ಚುಗಳು,  ಮಂದಿರಗಳು; ಆಘರಾಣಿಸಿದರೆ ಸವರುವ ಪುರಾತನ ಕಂಪು; ತಡವಿದರೆ ಉದುರುವ ನೆನಪುಗಳು. ಹೇಳುತ್ತಾ ಹೋದರೆ ಮುಗಿಯದ ದ್ರಶ್ಯಗಳು, ಮೊಗೆದಷ್ಟೂ ಮುಗಿಯದ ಅನುಭವಗಳು ಒಂದೇ ನಗರದಲ್ಲಿ ಸಿಗುವ ಅವಕಾಶ ಇನ್ನೊಂದೆಡೆ ಸಿಗುವುದು ಅಪರೂಪ. ಜನಪ್ರಿಯವಾದ ರೋಮ್ ನಗರದಲ್ಲಿ ಇನ್ಸ್ಟಾಗ್ರಾಮ್ ಕಣ್ಣಿಗೆ ಬೀಳದ, ಚಾಟ್ ಜಿಪಿಟಿ ಕೊಡುವ ಪ್ರಯಾಣ ಯೋಜನೆಯ ಹರವಿಗೆ ಸಿಗದ ಕುತೂಹಲಕಾರಿ ತಾಣಗಳಿವೆಯೇ?

ಯಾವುದೇ ಪ್ರವಾಸಿ ತಾಣವನ್ನು ಸಂದರ್ಶಿಸುವ ಮೊದಲು ಊರಿನ ವಿವರ, ವಸತಿ, ವಿಮಾನ ಯಾನಗಳನ್ನು ಅನ್ವೇಷಿಸಲು  ಅಂತರ್ಜಾಲದ ಮೊರೆ ಹೋಗುವುದು ಸರ್ವೇ ಸಾಮಾನ್ಯ. ನಮ್ಮ ಫೋನ್, ಕಂಪ್ಯೂಟರ್, ಗೂಗಲ್ ಹೋಮ್, ಅಲೆಕ್ಸ್ ಇವುಗಳಲ್ಲೆಲ್ಲ ಹುದುಗಿ, ನಮ್ಮ ಬದುಕಿನ ಅಂತರಂಗದ ಶೋಧನೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಗೂಗಲ್, ಮೆಟಾದಂತಹ ಕಂಪನಿಗಳು, ಮಾಂತ್ರಿಕ ದೀಪದ ಗುಲಾಮನಂತೆ, ಇನ್ಸ್ಟಾ, ಯೂ ಟ್ಯೂಬ್ ಇತರ ತಾಣಗಳ ಮೂಲಕ ಆ ಊರಿನಲ್ಲಿ ನೋಡಲು ಯೋಗ್ಯವಾದ ಸ್ಥಾನಗಳು ಯಾವುದು ಎಂಬ ವಿಡಿಯೋಗಳನ್ನು ನಿಮ್ಮ ಫೋನಿಗೋ, ಟ್ಯಾಬ್ಲೆಟ್ಟಿಗೋ ಕಳಿಸುತ್ತ ತಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸುತ್ತಲೇ ಇರುತ್ತವೆ. ಜಾಲತಾಣಗಳು ಪ್ರಚಲಿತಗೊಳಿಸಿದ ಜಾಗೆಗಳನ್ನು ಕಂಡಾಗ ಇದರ ಥಳುಕು ಇಷ್ಟೇನೆ; ಅಂತಹ ಜಾಗೆಗಳನ್ನು ಮಾತ್ರ ನೋಡಿ ಮರಳಿದರೆ ನಮ್ಮ ಲೈಫು ಇಷ್ಟೇನೇ ಎಂಬ ಅನುಮಾನ ಬಂದೀತು. ಗಿಜಿಮಿಜಿಗುಡುವ ಜಾಗೆಗಳಲ್ಲಿ ಊರಿನ ವೈಶಿಷ್ಠ್ಯವನ್ನು ಕಾಣದೇ, ಅರಿಯದೇ ‘ನಾ ಬಂದೆ, ನಾ ಕಂಡೆ, ನಾ ಹೋದೆ’ ಎಂದು ಷರಾ ಹಾಕಿ ಹೋಗುವ ಭೇಟಿಗಳು ಮನದಾಳದಲ್ಲಿ ಮನೆ ಮಾಡಲು ಸಾಧ್ಯವೇ? ಜನ ಜಂಗುಳಿಯಿಂದ ದೂರವಾಗಿಯೋ, ಗದ್ದಲದ ನಡುವೆಯೇ ಕಂಬಳಿ ಹೊದ್ದು ಅಡಗಿರುವ ಅನುಭವಗಳನ್ನು ಕೆದಕಿದಾಗ ಅವು ಹೇಳುವ ಕಥೆಗಳು ಸೃಷ್ಟಿಸುವ ನೆನಪು, ಆಪ್ತವಾಗಿ, ಬಾಳಿನುದ್ದಕ್ಕೂ ಸವಿಯುವ ಬುತ್ತಿಯಾಗುವವು. ರೋಮ್ ನ ಟ್ರೆವಿ ಕಾರಂಜಿ, ಕೊಲೋಸಿಯಂ, ವ್ಯಾಟಿಕನ್, ಪ್ಯಾಂಥಿಯನ್ ಗಳ ಹೊಳಪಿನ ನಡುವೆ ಯುಗಗಳೇ ಕಳೆದರೂ ಬದಲಾಗದ ಮಾನವನ ವರ್ತನೆಗೆ ಒಂದು ಚರ್ಚ್ ಹಾಗೂ ಒಂದು ಪ್ರತಿಮೆ ದ್ಯೋತಕವಾಗಿವೆ. ಈ ಅನುಭವಗಳನ್ನು ಅನಾವರಣಗೊಳಿಸಿದವನು ‘ರೋಮ್ ನಗರದ ಅಡಗಿದ ರತ್ನಗಳು’ ಎಂಬ ಕಾಲ್ನಡಿಗೆ ಪ್ರಯಾಣದ ಮಾರ್ಗದರ್ಶಿ. ಆತನಿಗೆ ನಾನು ಋಣಿ.

ಕ್ರಿಸ್ತನ ದೇಹತ್ಯಾಗದ ನಂತರ ಆತನ ಪ್ರಮುಖ ಶಿಷ್ಯ ಪೀಟರ್ ಕ್ರಿ.ಶ ೪೦ ರ ಸುಮಾರಿಗೆ ರೋಮ್ ನಗರದ ಹೊರ ವಲಯಕ್ಕೆ ಬಂದ ಎಂಬ ಐತಿಹ್ಯವಿದೆ. ಹಿಂದೂ ಧರ್ಮದಂತೆ, ಹಲವಾರು ದೇವರುಗಳನ್ನು ಪೂಜಿಸುವ ವಾಡಿಕೆ ರೋಮನ್ನರ ಧರ್ಮದಲ್ಲೂ ಇತ್ತು. ಮೂರ್ತಿ ಪೂಜೆ, ಸಾಂಪ್ರದಾಯಿಕ ಆಚರಣೆಗಳು ಸಾಮಾನ್ಯವಾಗಿದ್ದ ಕಾಲವದು. ಜಗತ್ತಿಗೊಬ್ಬನೇ ದೇವ, ಆತನ ಪುತ್ರ ಕ್ರಿಸ್ತ ಎಂಬ ಕ್ರಿಶ್ಚಿಯನ್ ನಂಬಿಕೆ ಆಗ ಹೊಸದು. ಹೊಸದನ್ನು ನಂಬುವುದು, ವಿಚಾರಗಳಿಗೆ ತೆರೆದುಕೊಳ್ಳುವುದು ಸುಲಭವಲ್ಲ. ಈ ವೈಚಾರಿಕತೆಯ ಸಂಘರ್ಷದಲ್ಲಿ ರೋಮನ್ನರು ಕ್ರಿಸ್ತನ ಅನುಯಾಯಿಗಳನ್ನು ಸಹಿಸಲಿಲ್ಲ. ವ್ಯವಸ್ಥಿತವಾಗಿ ಕ್ರಿಶ್ಚಿಯನ್ನರನ್ನು ಹಿಂಸಿಸಿ, ಅಟ್ಟಿಸಿಕೊಂಡು ಹೋಗಿ ಹತ್ಯೆ ಮಾಡತೊಡಗಿದರು. ಸಂತ ಪೀಟರ್ ಕೂಡ ಚಕ್ರವರ್ತಿ ನೀರೋನ ಕಾಲದಲ್ಲಿ ಈ ಹಿಂಸಾಕಾಂಡಕ್ಕೆ ಶಿಲುಬೆಯೇರಿ ಬಲಿಯಾದ.

(ನೆಲಮಳಿಗೆಯಲ್ಲಿನ ಪ್ರಾರ್ಥನಾ ಗೃಹದ ಭಿತ್ತಿಯಲ್ಲಿ ಸಿಸಿಲಿಯಾ, ವ್ಯಾಲೆರಿಯನ್ ಹಾಗೂ ಟಿಬರ್ಟಿಯಸ್ ರ ಮೊಸಾಯಿಕ್ ಭಾವಚಿತ್ರ)
ಸಂತ ಸಿಸಿಲಿಯ ಬೆಸಿಲಿಕಾದಲ್ಲಿ ಸಿಸಿಲಿಯಾಳ ಪ್ರತಿಮೆ (ಕತ್ತಿನಲ್ಲಿ ಮಚ್ಚಿನ ಗುರುತನ್ನು ನೋಡಿ )

ರೋಮ್ ನ ಒಂದು ಶ್ರೀಮಂತ ಕುಟುಂಬದಲ್ಲಿ ಕ್ರಿ.ಶ ೧೮೦ರಲ್ಲಿ ಸಿಸಿಲಿಯ ಎಂಬ ಕನ್ಯೆ ಹುಟ್ಟಿದಳು. ಕ್ರಿಸ್ತನ ಸಂದೇಶಗಳಿಂದ ಆಕರ್ಷಿತಳಾದ ಸಿಸಿಲಿಯ, ಉತ್ತಮ ಹಾಡುಗಾರ್ತಿ. ಆಕೆ ಜೀವನವಿಡೀ ಕನ್ಯೆಯಾಗಿಯೇ ಇದ್ದು, ಕ್ರಿಸ್ತನ ಸಂದೇಶವನ್ನು ಹರಡುವ ತೀರ್ಮಾನ ಮಾಡಿದಳು. ಆಕೆಯ ಪೋಷಕರಿಗೆ ಅದೇ ಊರಿನ ವ್ಯಾಲೇರಿಯನ್ ಎಂಬ ಯುವಕನಿಗೆ ಅವಳನ್ನು ಕೊಟ್ಟು ಮದುವೆ ಮಾಡುವ ಇಚ್ಛೆ. ಆಕೆ ವ್ಯಾಲೇರಿಯನ್ ಗೆ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದರೆ ಮಾತ್ರ ಮದುವೆ ಆಗುವೆ ಎನ್ನುವ ಷರತ್ತನ್ನೊಡ್ಡುತ್ತಾಳೆ. ಅವಳ ಪ್ರೀತಿಗೆ ಸಿಕ್ಕಿದ ವ್ಯಾಲೆರಿಯನ್ ಒಪ್ಪಿ ಅವಳನ್ನು ಮದುವೆಯಾಗುತ್ತಾನೆ. ಅದಲ್ಲದೇ ಆತನ ಸಹೋದರ ಟಿಬರ್ಟಿಯಸ್ ಕೂಡ ಆತನೊಡನೆ ಧರ್ಮಾಂತರ ಮಾಡುತ್ತಾನೆ. ಸಿಸಿಲಿಯ ಇವರೊಂದಿಗೆ ಕ್ರಿಸ್ತನ ಸಂದೇಶಗಳನ್ನು ಹಾಡುತ್ತ ಧರ್ಮ ಪ್ರಚಾರ ಮುಂದುವರೆಸಿದಳು. ರೋಮನ್ನರ ಕೆಂಗಣ್ಣಿಗೆ ಬಿದ್ದ ಮೂವರಿಗೂ ಮರಣದಂಡನೆಯಾಗುತ್ತದೆ (ಕ್ರಿ.ಶ ೨೩೦). ಸಿಸಿಲಿಯಾಳ ಹತ್ಯೆಗೈಯ್ಯುವ ಮೊದಲ ಪ್ರಯತ್ನ ವಿಫಲವಾಗುತ್ತದೆ. ನಂತರ ಅವಳ ಶಿರಚ್ಛೇದನ ಮಾಡುವ ಪ್ರಯತ್ನಗಳೂ ವಿಫಲವಾಗುತ್ತವೆ. ಆಕೆ ಮತ್ತೆ ಮೂರು ದಿನಗಳ ಕಾಲ ಬದುಕಿದ್ದು, ಹಾಡುತ್ತ ಕ್ರಿಸ್ತನ ಸಂದೇಶವನ್ನು ಪಸರಿಸುತ್ತಾಳೆ. ಪವಾಡ ಸದೃಶವಾಗಿ ಮಾರಣಾಂತಿಕ ಪ್ರಯತ್ನಗಳನ್ನು ಮೀರಿ ಬದುಕಿದ ಸಿಸಿಲಿಯಾಳನ್ನು ತದನಂತರ ಕ್ಯಾಥೋಲಿಕ್ ಚರ್ಚ್ ಸಂತಳನ್ನಾಗಿಸಿತು. ಸಂತ ಸಿಸಿಲಿಯ ಇಂದು ಸಂಗೀತದ ಪೋಷಕ ಸಂತಳೆಂದು (patron saint) ಗುರುತಿಸಲ್ಪಡುತ್ತಾಳೆ. ಆಕೆಯ ಚರ್ಚ್ ರೋಮ್ ನಗರದ ಟ್ರಾಸ್ಟವೇರ್ ಎಂಬಲ್ಲಿ ಇದೆ. ರವಿವಾರದ ಪ್ರಾರ್ಥನೆ ಕಾಲದಲ್ಲಿ ಇಲ್ಲಿನ ಕಾನ್ವೆಂಟ್ ನ ಸಾಧ್ವಿಗಳು ಹಾಡುವ ಪ್ರಾರ್ಥನೆಗಳು ವಿಶೇಷವಂತೆ. ಸಿಸಿಲಿಯಾಳ ಗೌರವಾರ್ಥ ಹಲವಾರು ಪ್ರಸಿದ್ಧ ಸಂಗೀತಕಾರರು ಕೃತಿಗಳನ್ನು ರಚಿಸಿದ್ದಾರೆ. ನೀವು ಈ ಚರ್ಚಿಗೆ ಭೇಟಿಯಿತ್ತರೆ, ಅಮೃತ ಶಿಲೆಯಲ್ಲಿ ಕಟೆದ ಸಿಸಿಲಿಯಾಳ ಪುತ್ಥಳಿಯನ್ನು ಕಾಣಬಹುದು. ಸಿಸಿಲಿಯಾಳ ಕತ್ತಿನಲ್ಲಿ ಮಚ್ಚಿನ ಗುರುತೂ ಇದೆ. ನೆಲ ಮಾಳಿಗೆಯಲ್ಲಿ ರೋಮನ್ ಬಂಗಲೆಯ ಪಳೆಯುಳಿಕೆಗಳಿವೆ (ಇದು ಸಿಸಿಲಿಯಾಳ ಮನೆಯಾಗಿತ್ತೆನ್ನುವ ಐತಿಹ್ಯವಿದೆ), ಸುಂದರವಾದ ಹೊಳೆಯುವ ಮೊಸಾಯಿಕ್ ನಿಂದ ಅಲಂಕರಿಸಿದ ಪ್ರಾರ್ಥನಾ ಗೃಹವೂ ಇದೆ.

ಸಿಸಿಲಿಯಾಳ ಅವನತಿಯೊಂದಿಗೆ ಕ್ರಿಸ್ತನ ಬೋಧನೆಗಳು ಅಂದು ಮಣ್ಣಾಗಲಿಲ್ಲ. ತದನಂತರ ಸುಮಾರು ಕ್ರಿ.ಶ ೩೩೦ ರಲ್ಲಿ ಕಾನ್ಸ್ಟಂಟಿನ್ ಚಕ್ರವರ್ತಿ ಕ್ರೈಸ್ತ ಧರ್ಮವನ್ನು ಅಂಗೀಕರಿಸುತ್ತಾನೆ (ಆ ಕಥೆಗೆ ಈಗ ಸಮಯವಿಲ್ಲ), ರೋಮನ್ನರು ಕ್ರಮೇಣ ಕ್ರೈಸ್ತ ಧರ್ಮವನ್ನನುಸರಿಸುತ್ತಾರೆ .

ರೋಮ್ ನಗರದ ಮಧ್ಯದಲ್ಲಿ (ಪ್ಯಾಂಥೆಯಾನ್ ದೇವಾಲಯದ ಸಮೀಪ) ಕ್ಯಾಮ್ಪೋ ಡಿ ಫಿಯೋರಿ ಎಂಬ ಪುರಾತನ ಸಂತೆ ಮಾಳವಿದೆ. ಇಂದಿಗೂ ಅಲ್ಲಿ ಪ್ರತಿದಿನ ಸಂತೆ ಕೂರುತ್ತದೆ. ಆ ಮಾರುಕಟ್ಟೆಯ ನಡುವೆ ಭಿಕ್ಷುವಿನ ಮೆಲುವಂಗಿ ಧರಿಸಿ ತಲೆ ತಗ್ಗಿಸಿ ನಿಂತ ವ್ಯಕ್ತಿಯ ತಾಮ್ರದ ಪುತ್ಥಳಿಯನ್ನು ಕಾಣುತ್ತೀರಿ. ಈತನೇ ಜೋರ್ಡಾನೋ ಬ್ರೂನೋ. ಈತ ೧೫೪೮ರಲ್ಲಿ ನೇಪಲ್ಸ್ ಪ್ರಾಂತ್ಯದ ನೋಲ ಎಂಬಲ್ಲಿ ಹುಟ್ಟಿದ. ಅವನನ್ನು ವಿದ್ಯಾಭ್ಯಾಸಕ್ಕಾಗಿ ನೇಪಲ್ಸಿಗೆ ಕಳಿಸುತ್ತಾರೆ. ಆಗಿನ ಕಾಲದಲ್ಲಿ ಚರ್ಚುಗಳೇ ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದವು. ಬ್ರೂನೋ ನೇಪಲ್ಸ್ ನಲ್ಲಿ ಧರ್ಮ ಮೀಮಾಂಸೆಯನ್ನು ಅಭ್ಯಾಸ ಮಾಡಿದ. ಆತನ ಸ್ಮರಣ ಶಕ್ತಿ ಅಗಾಧ. ಅದನ್ನು ಬೆಳೆಸಲು ಆತ ತನ್ನದೇ ಆದ ವಿಶೇಷ ತಂತ್ರಗಳನ್ನು ಬೆಳೆಸಿಕೊಂಡಿದ್ದ. ಹೆಚ್ಚಿನ ಅಭ್ಯಾಸಕ್ಕಾಗಿ ಬ್ರೂನೋ ರೋಮ್ ನಗರಕ್ಕೆ ಬಂದಾಗ, ಅಂದಿನ ಪೋಪ್ ಆತನ ಸ್ಮರಣ ಶಕ್ತಿಯ ಪ್ರತಿಭೆಗೆ ಆಕರ್ಷಿತನಾಗಿ, ಬ್ರುನೋನ ಅಧ್ಯಯನಕ್ಕೆ ವಿಶೇಷ ವ್ಯವಸ್ಥೆ ಮಾಡಿಸುತ್ತಾನೆ. ಕ್ರೈಸ್ತ ಧರ್ಮದ ಉಚ್ಛ್ಛ್ರಾಯ ಕಾಲವದು. ಪೋಪ್ ಧರ್ಮಾಧಿಕಾರಿಯಾಗಿದ್ದನಲ್ಲದೇ ಮಧ್ಯ ಇಟಲಿಯ ರಾಜನೂ ಆಗಿದ್ದ. ಅದರೊಟ್ಟಿಗೆ ತನ್ನ ಪ್ರಭಾವವನ್ನು ಯೂರೋಪಿನ ಸಾಕಷ್ಟು ದೇಶಗಳ ರಾಜಕೀಯದಲ್ಲೂ ಬೀರಿದ್ದ. ಕ್ರಿಸ್ತನ ಬೋಧನೆಗೆ ವಿರುದ್ಧವಾಗಿ, ಕ್ರೈಸ್ತ ಧರ್ಮದಲ್ಲಿ ಅಸಹಿಷ್ಣುತೆ, ಕಂದಾಚಾರ, ಅಧಿಕಾರ ಲೋಲುಪತೆ ಬೇರು ಬಿಟ್ಟಿದ್ದವು. ಬ್ರೂನೋ ಪಾದ್ರಿಯಾಗಿ ಚರ್ಚ್ ಸೇರಿದ್ದರೂ, ವ್ಯಾಟಿಕನ್ ನಗರದಲ್ಲಿನ ಗ್ರಂಥಾಲಯಗಳಲ್ಲಿ ಹೆಚ್ಚು ಕಾಲ ಕಳೆದನೇ ಹೊರತು ಚರ್ಚುಗಳಲ್ಲಲ್ಲ. ಅಂದಿನ ಕ್ರೈಸ್ತ ಧರ್ಮದ ನಂಬಿಕೆಗಳಿಗೆ ವ್ಯತಿರಿಕ್ತವಾದ ವಿಚಾರಗಳತ್ತ ಬ್ರೂನೋ ಆಕರ್ಷಿತನಾಗಿ, ಆ ವಿಷಯಗಳ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಾನೆ. ಎರಾಸ್ಮಸ್, ಕೋಪರ್ನಿಕಸ್ ರಂತಹ ದಾರ್ಶನಿಕರ ದೃಷ್ಟಿಕೋನವನ್ನು ತನ್ನದಾಗಿಸಿಕೊಂಡ ಬ್ರೂನೋ ಪೋಪ್ ನ ಅವಕೃಪೆಗೆ ಒಳಗಾಗಲು ತಡವಾಗಲಿಲ್ಲ.

ಸೈದ್ಧಾಂತಿಕ ರಾಜಿಗೆ ಒಪ್ಪದ ಜೋರ್ಡಾನೋ ಬ್ರೂನೋ

೧೫೭೬ ರಲ್ಲಿ  ರೋಮ್ ನಿಂದ ತಪ್ಪಿಸಿಕೊಂಡು ಓಡಿದ ಬ್ರೂನೋ, ಸ್ವಿಟ್ಝರ್ಲ್ಯಾನ್ಡ್, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ದೇಶಗಳನ್ನೆಲ್ಲ ಸುತ್ತಿ, ಪ್ರಾಚಾರ್ಯನಾಗಿ, ಹೆಚ್ಚಿನ ಅಭ್ಯಾಸ ಮಾಡಿ, ೧೫೯೧ ರಲ್ಲಿ ವೆನಿಸ್ ನಗರಕ್ಕೆ ಮರಳಿದ. ಆಗ ವೆನಿಸ್, ವ್ಯಾಟಿಕನ್ನಿನ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಬ್ರೂನೋ ಹಾಗಾಗೇ ತಾನು ಅಲ್ಲಿ ಸುರಕ್ಷಿತವೆಂಬ ಭಾವನೆಯಲ್ಲಿ ಹಿಂದಿರುಗಿರಬಹುದು. ‘ಕ್ರಿಸ್ತ ದೇವನ ಸೃಷ್ಟಿ – ಮಗನಲ್ಲ, ಮೇರಿ ಕನ್ಯೆಯಾಗಿರಲಿಲ್ಲ, ಪವಿತ್ರ ಟ್ರಿನಿಟಿಗೆ ಅರ್ಥವಿಲ್ಲ, ಭೂಮಿ ಸೂರ್ಯನ ಸುತ್ತು ಸುತ್ತುತ್ತಿದೆ, ಬ್ರಹ್ಮಾಂಡದಲ್ಲಿ ಹಲವಾರು ಸೌರ ಮಂಡಲಗಳಿವೆ, ಹಾಗೆಯೇ ದೇವರೂ ಹಲವಾರು ಇರಬಹುದು’ ಇವೆಲ್ಲ ಬ್ರೂನೋನ ಬೋಧನೆಗಳಾಗಿದ್ದವು. ಪೋಪ್ ಹಾಗೂ ಆತನ ಸಹಚರರರು ಇದನ್ನು ಸಹಿಸಿಯಾರೇ? ಯಾವುದೋ ತಂತ್ರ ಹೂಡಿ, ವೆನಿಸ್ ನಗರದಲ್ಲಿ ಬ್ರುನೋನನ್ನು ಬಂಧಿಸಿದರು. ಸತತವಾಗಿ ಏಳು ವರ್ಷಗಳ ಕಾಲ ವ್ಯಾಟಿಕನ್ನಿನ ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟರೂ ಬ್ರೂನೋ ತನ್ನ ಆತನ ವಿಚಾರಧಾರೆಯನ್ನು ಬದಲಿಸಲು, ತಾನು ಪಡೆದ ಜ್ಞಾನವನ್ನು ಅಸತ್ಯ, ಪಾಪ ಎಂದು ಒಪ್ಪಿಕೊಳ್ಳಲಿಲ್ಲ. ಬ್ರುನೋನನ್ನು ಬಗ್ಗಿಸಲಾಗದೆ ಹತಾಶೆಯಿಂದ ಪೋಪ್ ಕ್ರಿ.ಶ ೧೬೦೦ ರಲ್ಲಿ ಆತನಿಗೆ ಮರಣದಂಡನೆ ವಿಧಿಸುತ್ತಾನೆ. ಆತನನ್ನು ಕ್ಯಾಮ್ಪೋ ಡಿ ಫಿಯೋರಿಗೆ ಕರೆದೊಯ್ಯುವಾಗ, ದಾರಿಯಲ್ಲಿ ತನ್ನ ವಿಚಾರಗಳಿಂದ ಬ್ರೂನೋ ಜನರ ಮೇಲೆ ಪ್ರಭಾವ ಬೀರದಿರಲಿ ಎಂದು ಆತನ ಬಾಯಿಯನ್ನು ಹೊಲಿಯುತ್ತಾರೆ. ಮಾರುಕಟ್ಟೆಯ ಮಧ್ಯದಲ್ಲಿ ಆತನ ಸಜೀವ ದಹನವಾಗುತ್ತದೆ, ಆದರೆ ಬ್ರುನೋನ ವಿಚಾರಗಳು ಅಲ್ಲಿ ದಹನವಾಗಲಿಲ್ಲ .

೧೮೮೯ರಲ್ಲಿ ರೋಮ್ ನಗರದ ಸ್ವತಂತ್ರ ಚಿಂತಕರ ಸಂಘ; ಜಡ್ಡು ಗಟ್ಟಿದ ಚರ್ಚಿನ ಸಂಪ್ರದಾಯಗಳಿಗೆ ಸೆಡ್ಡು ಹೊಡೆದು, ವೈಚಾರಿಕತೆಯ ಪ್ರತಿಪಾದನೆಗೆ ಜೀವನವನ್ನು ಮುಡಿಪಾಗಿಸಿದ ಬ್ರುನೋನ ಪುತ್ಥಳಿಯನ್ನು ಆತನನ್ನು ಬಲಿಕೊಟ್ಟ ಜಾಗದಲ್ಲಿ ಪ್ರತಿಷ್ಠಾಪಿತು. ಬ್ರುನೋನ ಪುತ್ಥಳಿ ವ್ಯಾಟಿಕನ್ ನಗರದತ್ತ ನೋಡುವಂತೆ ನಿಲ್ಲಿಸಿದ್ದನ್ನು ಅಂದಿನ ಪೋಪ್ ಸಹಿಸಲಿಲ್ಲವಂತೆ. ಅವನ ದೃಷ್ಟಿಯನ್ನು ಕಟ್ಟಿಹಾಕಲು ಮೂರ್ತಿಯ ಎದುರು ವ್ಯಾಟಿಕನ್ ಕಾಣದಂತೆ ಒಂದು ಅಪಾರ್ಟ್ಮೆಂಟ್ ಸಂಕೀರ್ಣವನ್ನು ಕಟ್ಟಿಸಿದ ಎನ್ನುತ್ತಾರೆ. ಈ ಕಥೆಯ ಸತ್ಯಾಸತ್ಯತೆಯನ್ನು ನಾನು ಒರೆಗಿಟ್ಟಿಲ್ಲ.

ರೋಮ್ ನಗರ ಇಂತಹ ಅದ್ಭುತ ಕಥೆಗಳ ತಳವಿಲ್ಲದ ಗುಡಾಣ. ಇವನ್ನು ನೋಡಲು, ಅನುಭವಿಸಲು ಒಂದೆರಡು ದಿನಗಳು ಸಾಲವು. ಸಿಸಿಲಿಯ ಹಾಗೂ ಬ್ರೂನೋ ಅವರ ನಡುವಿನ ಅಂತರ ಸರಿ ಸುಮಾರು ಒಂದೂವರೆ ಸಾವಿರ ವರ್ಷಗಳು . ಸಮಕಾಲೀನ ವಿಚಾರಗಳಿಗೆ ವ್ಯತಿರಿಕ್ತವಾದ ವಿಚಾರಗಳನ್ನು ಸಮಾಜದ ಒಳಿತಿಗಾಗಿ ಪಸರಿಸಲು ಇಬ್ಬರೂ ತಮ್ಮ ಜೀವನವನ್ನು ಬಲಿಗೊಟ್ಟರು. ಹಳತು – ಹೊಸತುಗಳ ನಡುವಿನ ಘರ್ಷಣೆ ಕೊನೆಗೊಂಡಿಲ್ಲ. ಸಿಸಿಲಿಯ ಹಾಗೂ ಬ್ರೂನೋ ಬದಲಾಗದ ಮಾನವನ ವರ್ತನೆಗೆ ಹಿಡಿದ ಕನ್ನಡಿಗಳಾಗಿದ್ದಾರೆ, ಇಂದಿಗೂ ಪ್ರಸ್ತುತವಾಗಿದ್ದಾರೆ.   

(ಎಲ್ಲ ಚಿತ್ರಗಳು ಲೇಖಕ ಸೆರೆ ಹಿಡಿದದ್ದು )

ವೇದಕ್ಕನ ನೆನಪಿನೊಂದಿಗೆ – ಉಮೈರಾ ಬರೆದ ಲೇಖನ

ಈ ವಾರ ಪ್ರಥಮ ಬಾರಿ 'ಅನಿವಾಸಿಗೆ' ಮೂಲತಃ ಮಂಗಳೂರಿನವರಾದ ಹೊಸ ಲೇಖಕಿ  ಉಮೈರಾವನ್ನು ಸ್ವಾಗತಿಸುತ್ತಿದ್ದೇವೆ. ಅವರು ಮೂರು ವರ್ಷಗಳಿಂದ ಗ್ಲಾಸ್ಟರಿನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಬಗ್ಗೆ ಅವರಮಾತಿನಲ್ಲೇ ಅವರ ಪರಿಚಯವನ್ನು ಕೇಳೋಣ:
"ನಾನು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಇಲೆಕ್ಟ್ರಾನಿಕ್ & ಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು ಈಗ UKಯಲ್ಲಿ Aerospace Engineer ಆಗಿ ಕೆಲಸ ಮಾಡುತ್ತಿದ್ದೇನೆ‌. ಪತಿ ಹನೀಫ್ ಕೂಡ ಇಲ್ಲಿ Aerospace Engineer. ನನಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಮೈಗೂಡಿಸಿಕೊಂಡಿದ್ದೇನೆ‌.
ನನ್ನ ಜೀವನದ ಅನುಭವಗಳನ್ನು, ಮನದಲ್ಲಿ ಮೂಡುವ ಭಾವನಾತ್ಮಕ ವಿಚಾರಗಳನ್ನು ಅಕ್ಷರಗಳಲ್ಲಿ ವ್ಯಕ್ತಪಡಿಸಿ ಬರೆಯುವಲ್ಲಿ ಆಸಕ್ತಳಾಗಿದ್ದೇನೆ. ಪುಸ್ತಕಗಳ ಓದುವುದು ಮತ್ತು ಬರವಣಿಗೆ ನನ್ನ ಪ್ರಮುಖ ಹವ್ಯಾಸಗಳು."

ತಮ್ಮ ನೆರೆಹೊರೆಯಲ್ಲೇ ವಾಸಿಸುವ ವೇದಕ್ಕನ ಹೃದಯಸ್ಪರ್ಶಿ ವ್ಯಕ್ತಿಚಿತ್ರವನ್ನು ಇಲ್ಲಿ ಬರೆದಿದ್ದಾರೆ. ಓದಿ ಪ್ರೋತ್ಸಾಹಿಸಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಸಂಪಾದನೆಗೆ ಸಹಾಯ ಮಾಡಿ, ಸ್ವಲ್ಪೇ ಸಮಯದಲ್ಲಿ ಚಿತ್ರವನ್ನು ಬರೆದು ಶೋಭೆಹೆಚ್ಚಿಸಿದ ಗುಡೂರ್ ಅವರಿಗೆ ಋಣಿ. (-ಸಂ )
******************************************
ಮುಂಜಾನೆ ಹಂಡೆಯಲ್ಲಿ ಕಾದ ಬಿಸಿನೀರ ಸ್ನಾನ ಮುಗಿಸಿ ಬಂದ ನನಗೆ, ಬಿಸಿ ಬಿಸಿಯಾದ ನೀರ್ದೋಸೆ ಮಾಡಿಟ್ಟ ಅಮ್ಮ, ‘ಬೇಗ ರೆಡಿಯಾಗಿ ಇದನ್ನು ತಿಂದು ಹೋಗು’ ಅಂದಾಗ, ‘ಅಮ್ಮಾ…… ನಾನು ಮತ್ತು ಸ್ಮಿತಾ ಒಂದೇ ಬಸ್ಸಲ್ಲಿ ಹೋಗ್ಬೇಕು’ ಅಂತ ಹೇಳಿ ‘ಒಂದೇ ಒಂದು ದೋಸೆ ಸಾಕಮ್ಮ’ ಅಂದು ಬೇಗ ಬೇಗನೆ ತಿಂದು ಬಸ್ಸಿಗೆ ಓಡಿಬಿಟ್ಟೆ.

ಅಮ್ಮ ಏನೋ ಗೊಣಗುತ್ತಿರುವುದು ಕೇಳಿಸ್ತಿತ್ತು. ‘ಇವರಿಬ್ಬರ ಮಾತು ಮುಗಿಯೋದೇ ಇಲ್ಲ ಎಂದಿರಬಹುದು’ ಅಂತ ಮನಸ್ಸಲ್ಲೇ ಮುಸಿಮುಸಿ ನಗ್ತಾ ಓಡಿ ಹೋದೆ.
ನಾನು ಮತ್ತು ಸ್ಮಿತಾ ಇಬ್ಬರೂ ಮಾತಿನಲ್ಲಿ ಒಬ್ಬರನ್ನೊಬ್ಬರು ಮೀರಿಸುವವರು. ನನ್ನ ಮಾತಿನಲ್ಲಿ ನಾನು ಕಂಡದ್ದು, ಕೇಳಿದ್ದು, ಸಂಬಂಧಿಕರು, ನೆರೆಹೊರೆಯವರೆಲ್ಲರ ವಿಷಯವೂ ಒಳಗೊಂಡಿರುತ್ತಿದ್ದರೆ ಅವಳು ನನಗಿಂತಲೂ ಇನ್ನೂ ಎರಡು ಹೆಜ್ಜೆ ಮುಂದೆ. ಅದೆಷ್ಟೋ ವಿಷಯ ತಂದು ಸಾಸಿವೆ ಹುರಿದಂತೆ ಮಾತನಾಡುತ್ತಿದ್ದಳು.

ಆ ದಿನ ಕಾಲೇಜು ಮುಗಿಸಿ ಬರುವಾಗ ನಾನು ಆ ತಿಂಗಳ ‘ತುಷಾರ’ ಎತ್ತಿಕೊಂಡೆ.

ಅದೇನೋ ಮಾತಾಡುವಾಗ ಅವಳು ಕೇಳಿದ್ಲು “ಉಮೈರಾ, ಅದು ಹೇಗೆ ಮೊನ್ನೆ ನೀನು ಮಹಾಭಾರತದ ಕ್ವಿಜ್ ಅಲ್ಲಿ ಬಹುಮಾನ ತಗೊಂಡೆ? ನೀವು ನಮ್ಮ ಹಿಂದೂ ಗ್ರಂಥಗಳನ್ನು ಓದಲ್ಲ ಅಲ್ವಾ?’

‘ಹ್ಮ್, ಹಾಗೇನಿಲ್ಲ ಸ್ಮಿತಾ, ನಮ್ಮ ಕುರಾನಿನ ಮೊದಲ ಸೂಕ್ತವೇ “ಇಖ್ರಅ್” ಅಂದ್ರೆ “ಓದು” ಎಂದಾಗಿದೆ. ನಮ್ಮಜ್ಜಿಯ ಹತ್ರ ಪುರಾಣ ಸೇರಿದಂತೆ ಹಲವಾರು ಪುಸ್ತಕಗಳಿವೆ. ಅದರಲ್ಲಿದ್ದ “ಸಂಕ್ಷಿಪ್ತ ಮಹಾಭಾರತ“ ಅನ್ನುವ ಒಂದು ಪುಸ್ತಕ ನಾನು ಓದಿದ್ದೆ’ ಅಂದೆ.

ಹೀಗೆ ನಮ್ಮ ಮಾತಿನ ಸರಣಿಗಳು ದಿನದಿನವೂ ಇಂತಹ ವಿಭಿನ್ನ ಸಂಪ್ರದಾಯದ ಪರಸ್ಪರರ ನಡುವಿನ ಕೌತುಕದ ನಾನಾ ಸುದ್ದಿಗಳೊಂದಿಗೆ ಸಾಗುತ್ತಲೇ ಇರುತ್ತಿತ್ತು.

‘ಅಜ್ಜಿನೂ ಓದ್ತಾರೆ’ ಅಂತ ಕೇಳಿದಾಗ ಚಕಿತಗೊಂಡಿದ್ದ ಅವಳಿಗೆ ಅವರಿಗಿದ್ದ ಅತಿಯಾದ ಓದಿನ ಹವ್ಯಾಸವನ್ನು ನಾನು ಬಲು ಖುಶಿ ಮತ್ತು ಹೆಮ್ಮೆಯಿಂದ ಹೇಳಿದ ಆ ನೆನಪು ಮೊನ್ನೆ ಮೊನ್ನೆ ನಡೆದಂತಿದೆ.

ನನ್ನ ಮಾತುಗಳ ನಡುವೆ ಪದೇಪದೇ ಅಜ್ಜಿಯ ವಿಷಯ ಬರುತ್ತಿದ್ದರೆ, ಅವಳ ಮಾತುಗಳ ನಡುವೆ ಪದೇಪದೇ ಬರುತಿದ್ದ ಹೆಸರು ಅವಳ ಇಷ್ಟದ ‘ವೇದಾ’ ಎಂಬ ಹೆಂಗಸಿನದ್ದು.

ಆ ವೇದಕ್ಕನಿಗೂ ಅವಳು ನನ್ನ ಬಗ್ಗೆ ಹೇಳಿ ಹೇಳಿ, ವೇದಕ್ಕನಲ್ಲಿ ನನ್ನ ಬಗ್ಗೆ ಒಂದು ಕುತೂಹಲದ ಪ್ರಪಂಚವನ್ನೇ ಸೃಷ್ಟಿಸಿದ್ದಳು ಸ್ಮಿತಾ.

ನನಗಂತೂ ಆ ವೇದಕ್ಕನ್ನ ಅಲ್ಲೀ ತನಕ ನಾನು ನೋಡದೇ ಇದ್ರೂ, ಅವರಂದ್ರೆ ಅದೇನೋ ತೀವ್ರ ಕುತೂಹಲ ಹುಟ್ಟಿ ಬಿಟ್ಟಿತ್ತು. ವೇದಕ್ಕ ಏನೋ ಒಬ್ಬ ಮಹಾನ್ ಸಾಧಕಿ ಎಂಬ ಮನೋಭಾವ ಬೆಳೆದು ಬಿಟ್ಟಿತ್ತು.

ಒಂದು ದಿನ ಸ್ವಲ್ಪ ಲೇಟಾಗಿ ಶಾಲೆಗೆ ಬಂದ ಸ್ಮಿತ, ನಾನು ಸಿಕ್ಕಿದ ಕೂಡಲೇ ‘ಅಯ್ಯೋ, ಇವತ್ತೇನ್ ಗೊತ್ತ ವೇದಕ್ಕನ ಮಗಳು ಮೊದಲ ಬಾರಿ ಶಾಲೆಗೆ ಹೋಗ್ತಿದ್ದಾಳೆ. ಅವ್ಳು ಹೊರಟು ನಿಂತು ಅಳೋದೇನು, ವೇದಕ್ಕನೂ ಅಳೋದೇನು… ಅದನ್ನು ನೋಡ್ತಾ ಮನೆಯಲ್ಲಿ ನಾವೆಲ್ಲ ತಮಾಷೆ ಮಾಡ್ತಾ ನಿಂತುಕೊಂಡೆವು. ಹಾಗೆ ಸ್ವಲ್ಪ ಲೇಟ್ ಆಯಿತು’ ಅಂದಳು.

ಯಕ್ಷಗಾನದಲ್ಲಿ ಮಹಿಷಾಸುರ, ರಾವಣ ಹೀಗೆ ಯಾವುದೇ ಕಠೋರಹೃದಯಿಯ ಪಾತ್ರವನ್ನು ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುವ ವೇದಕ್ಕ ಮಾತ್ರ ನಿಜ ಜೀವನದಲ್ಲಿ ಬಲು ಭಾವ ಜೀವಿ. ಬದುಕಿನ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಅರಿತವರಂತೆ ಇರುವ ಅವರ ಆಪ್ತತೆ ಉಕ್ಕಿಸುವ ಮಾತುಗಳು, ಯಾವುದೇ ಕುಹಕ-ಕುತಂತ್ರಗಳಿಲ್ಲದ ಅವರ ನೈಜ ಸಾಧುಸ್ವಭಾವ ಯಾರ ಹೃದಯದಲ್ಲೇ ಆದರೂ ಅವರ ಬಗ್ಗೆ ಪ್ರೀತಿ ಹುಟ್ಟಿಸುವಂತಿತ್ತು. ಮನಸ್ಸಲ್ಲಿರೋದನ್ನೆಲ್ವಾ ಒಮ್ಮೆಲೇ ಸುರಿಯುವ ಮಳೆಯಂತೆ ಅವರ ಮೆಲು ಮಾತುಗಳಲ್ಲೇ ಸುರಿಸಿಬಿಡುತ್ತಿದ್ದರು.

ನನ್ನ ಮತ್ತು ವೇದಕ್ಕನ ಮೊದಲ ಭೇಟಿಯನ್ನಂತೂ ನಾನೆಂದೂ ಮರೆಯಲು ಸಾಧ್ಯವೇ ಇಲ್ಲ.

“ಅಷ್ಟಮಿ ಹಬ್ಬಕ್ಕೆ ನಾವು ಕೊಟ್ಟಿಗೆ ಮಾಡ್ತೇವೆ, ಉಮೈರಾಳನ್ನು ಇನ್ವೈಟ್ ಮಾಡಿದ್ರೆ ಏನು ಅಂದ್ಕೊಂಡೆ ಆಂದ್ರಂತೆ”
ಹಾಗೆ ನಮ್ಮ‌ ಭೇಟಿ‌‌ ಅವರ ಮನೆಯಲ್ಲಿ ಅಷ್ಟಮಿ ದಿನದಂದಾಗಿತ್ತು .

ಮೂರು ಕಲ್ಲುಗಳ ಆ ಮೂಗುತಿ, ಕಣ್ಣಿಗೆ ಕಾಡಿಗೆ, ದೊಡ್ಡ ಬಿಂದಿ, ಕರ್ಲಿ (ಗುಂಗುರು) ಕೂದಲು ಮತ್ತು ಕಲಾವಿದೆ ಎಂದು ಗುರುತಿಸಲು ಸಾಧ್ಯವಾಗುವ ಅವರ ಚೈತನ್ಯಯುತ ಲವಲವಿಕೆಯ ಮಾತುಗಳು.

ಅದೆಷ್ಟು ಲವಲವಿಕೆ, ಅತಿಯಾದ ಅತಿಥಿ ಸತ್ಕಾರ, ಪ್ರೀತಿ ವಾತ್ಸಲ್ಯ ತುಂಬಿದ ವೇದಕ್ಕನ ಆಗಾಗ ತಾರಕಕ್ಕೇರುವ ನಗು ನಮ್ಮ ಆ ದಿನವನ್ನು ಸಂಪನ್ನವಾಗಿಸಿತು.

“ನಾನೆಷ್ಟು ಮಾತಾಡ್ತೇನೆ ಅಲ್ವಾ? ನನ್ನ ಗಂಡ ಹೇಗೆ ಸಹಿಸಿಕೊಳ್ತಾರೋ ಪಾಪ” ಅಂತ ತನ್ನನ್ನೇ ತಮಾಷೆ ಮಾಡಿಕೊಂಡರು.
“ನಂಗೆ ಮಾಸ್ಟರ್ಸ್ ಮಾಡ್ಬೇಕು ಅಂತ ತುಂಬಾ ಇಷ್ಟ ಇತ್ತು “

“ಇನ್ನೂ ಮಾಡ್ಬಹುದಲ್ವಾ?” ಅಂದೆ.

“ಅಯ್ಯೋ ಈ ಮರುಭೂಮಿಗೆ ಎಷ್ಟು ನೀರು ಸುರಿದರೂ ಸರಿಯೇ ಇನ್ನು” ಅಂತ ಮತ್ತೊಮ್ಮೆ ನಗು.

“ಅಲ್ಲ ಅಕ್ಕ, ಮಕ್ಕಳು ಸ್ಕೂಲ್ಗೆ ಹೋದ್ರೆ ಇಡೀ ದಿನ ನೀವೇನ್ ಮಾಡ್ತೀರ?” ಅಂತ ಅಮ್ಮನನ್ನು ಕೇಳಿದಾಗ “ಬೆಳಗ್ಗೆ ಬಂದ ಉದಯವಾಣಿಯನ್ನು ದಿನದಲ್ಲಿ ೪ ಸಲ ಓದಿ ಮುಗಿಸುತ್ತೇನೆ” ಎಂದರು.

ಯಕ್ಷಗಾನ ಲೋಕದಲ್ಲಿ ಅವರ ಸಾಧನೆಗೆ ಸಂದ ಪ್ರಶಸ್ತಿಗಳನ್ನು ತೋರಿಸಿ ಅವರ ಪ್ರೊಫೆಷನಲ್ ವಲಯದ ಬಗ್ಗೆ ಮಾತಾಡಿಕೊಂಡರು. ಅದು ಹೇಗಪ್ಪ ಆ ತರ ಪಾತ್ರಗಳೆಲ್ಲ ಮಾಡುತ್ತಾರೋ ಈಕೆ ಅಂತ ನಾನು ಯೋಚಿಸುವಂತಾಯಿತು.

ಮಾತಲ್ಲಿ ಪ್ರೀತಿ, ವಾತ್ಸಲ್ಯ ತುಂಬಿಕೊಂಡೇ ಮಾತಾಡುವ ಅವರ ಜೊತೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.


ಮನುಷ್ಯರಿಗೇನು ಬೇಕು ಮತ್ತೆ – ತನ್ನ (ಸುತ್ತಲೂ) ಸರೌಂಡಿಂಗ್ನಲ್ಲಿ ಪ್ರೀತಿ, ಕರುಣೆ, ವಾತ್ಸಲ್ಯ ತೋರುವವರಿದ್ದರೆ ಎಲ್ಲವನ್ನೂ ಜಯಿಸಿದಂತೆ ಖುಷಿ ಅಲ್ಲವೇ?

ಅದೆಷ್ಟೋ ಭೇಟಿಗಳು; ಆ ನಂತರದ ದಿನಗಳಲ್ಲಿ ನಮ್ಮದು ನಡೆಯುತ್ತಲೇ ಇತ್ತು. ಮನೆಯಲ್ಲಿ ಏನಾದ್ರೂ ತರಕಾರಿ ಬೆಳೆದ್ವಿ ಅಂದ್ರೆ ವೇದಕ್ಕನ ಮನೆಗೂ ಕಳುಹಿಸಿಕೊಡುವ ಪದ್ದತಿ ಇತ್ತು.

ಪಿಯುಸಿ ಮುಗಿದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರುವ ದಿನವೊಂದು ಬಂದಿತ್ತು. ಮನೆಯವರ ಬೀಳ್ಕೊಡುಗೆಯ ಜೊತೆಗೆ ನಮ್ಮ ಆಪ್ತರಾಗಿದ್ದ ವೇದಕ್ಕ ಕೂಡ ಬೀಳ್ಕೊಡಲು ಬಂದಿದ್ದರು. ನಮ್ಮನ್ನು ನೆನಪಿಸ್ಕೊಳ್ತಾ ಇರು, ಕಾಲ್ ಮಾಡು ನಂಗೆ, ಲ್ಯಾಂಡ್ಲೈನ್ ನಂಬರ್ ಗೊತ್ತಿದೆ ಅಲ್ವಾ ಅಂದಿದ್ದರು.


ಅದೊಂದು ದಿನ ಅಮ್ಮ ಕಾಲ್ ಮಾಡಿದವರು ’ವೇದಕ್ಕನಿಗೆ ತುಂಬಾ ಹುಷಾರಿಲ್ಲ, ಕ್ಯಾನ್ಸರ್ ಅದೇನೋ ಫೈನಲ್ ಸ್ಟೇಜಲ್ಲಿ ಇದೆ ಅಂತೆ’, ಅಂತ ಆಘಾತಕಾರಿ ಸುದ್ದಿಯನ್ನು ಹೇಳಿದ್ರು. ನನ್ನ ಮನಸ್ಸಲ್ಲೇನೋ ವೇದಕ್ಕನಿಗೇನಾಗುತ್ತೋ ಅನ್ನುವ ಭಯ. ಆ ದಿನದಿಂದ ಹಾಸ್ಟೆಲಲ್ಲಿ ಅವರದ್ದೇ ನೆನಪು, ಫ್ರೆಂಡ್ ಒಬ್ಬಳತ್ರ ನನ್ನ ದುಗುಡವನ್ನು ಹಂಚಿಕೊಂಡಿದ್ದೆ ಕೂಡ.

ದೇವ್ರೇ ಅವ್ರು ಬೇಗ ಗುಣಮುಖರಾಗಿ ಬರಲಿ ಅಂತ ಮನಸ್ಸು ಪೂರ್ತಿಯಾಗಿ ಬೇಡ್ಕೊಂಡಿದ್ದೆ.
ಕೆಲವೇ ದಿನದ ಪರಿಚಯವಾದ್ರೂ, ಮರೆಯಲಾಗದಂತಹ ಆಪ್ತತೆ ಇತ್ತು ನಮ್ಮಲ್ಲಿ.

ಮತ್ತಿನ ದಿನಗಳಲ್ಲಿ ಕಿಮೊತೆರಪಿ ಮಾಡಿಸಿಕೊಂಡ ವೇದಕ್ಕನನ್ನು ನೋಡಲು ಅಮ್ಮ ಹೋಗಿದ್ರಂತೆ.

ಆದ್ರೆ ಕೆಲವೇ ದಿನಗಳಲ್ಲಿ ವೇದಕ್ಕ ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ಬಂದಾಗ ಅರಗಿಸಿಕೊಳ್ಳಲು ಆಗಲಿಲ್ಲ. ಕೂದಲು ಎಲ್ಲ ಹೋಯ್ತಕ್ಕ, ಟೋಪನ್ ಹಾಕಿ ಆದ್ರೂ ನಿಮ್ಮ ಮಗಳ ಮದುವೆಗೆ ಬರ್ತೇನೆ ಅಮ್ಮನಿಗೆ ಹೇಳಿದ ಅವರ ಮಾತು, ಇನ್ನೂ ನೆನಪಾಗಿಯೇ ಉಳಿದಿದೆ.

- ಉಮೈರಾ.

**************************************

ನೀಲಿಆರ್ಕಿಡ್ (ಸಣ್ಣಕಥೆ): ಡಾ ಜಿ ಎಸ್ ಪ್ರಸಾದ್

ಆತ್ಮೀಯ ಓದುಗರೇ 
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನನ್ನ ಚೊಚ್ಚಲ ಸಣ್ಣ ಕಥೆ 'ನೀಲಿ ಆರ್ಕಿಡ' ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿಯವರೆಗೆ ಕವನ, ಬಿಡಿಬರಹ, ಪ್ರವಾಸ ಕಥನಗಳನ್ನು ಬರೆಯುತ್ತಿದ್ದ ನನಗೆ ಎಲ್ಲಿಂದಲೋ ಸಣ್ಣ ಕಥೆಯನ್ನು ಬರೆಯಲು ಪ್ರೇರಣೆ ದೊರೆಯಿತು. ಹಾಗೆ ನೋಡಿದರೆ ಕಥೆ ಬರೆಯುವುದು ನನಗೆ ಹೊಸತೇನಲ್ಲ. 'ಪಯಣ' ಎಂಬ ಕಿರು ಕಾದಂಬರಿಯನ್ನು ಬರೆದು ಕೈತೊಳೆದು ಕೂತ್ತಿದ್ದ ನನಗೆ ಇದ್ದಕ್ಕಿಂದಂತೆ ಸಣ್ಣ ಕಥೆ ಬರೆಯುವ ಸ್ಫೂರ್ತಿ ಮೂಡಿತು. ಮೊನ್ನೆ ಊಟಕ್ಕೆ ಬಂದ ಅತಿಥಿಯೊಬ್ಬರು ಒಂದು ನೀಲಿ ಆರ್ಕಿಡ್ ಗಿಡವನ್ನು ವಿಶ್ವಾಸದಲ್ಲಿ ಕೊಟ್ಟು ಹೋದರು. ಈ ಸುಂದರವಾದ ಹೂಗಳು ನನ್ನ ಮೇಲೆ ಕಥೆ ಬರಿ ಎಂದು ಹಠ ಹಿಡಿದಿದ್ದವು. ಅವುಗಳ ಆಸೆಯನ್ನು ಪೂರೈಸಿದೆ. ನನ್ನ ಕಥೆ ಬರೆಯುವ ಆಸಕ್ತಿ ಇಲ್ಲಿಗೆ ಮುಗಿಯುವುದೋ ಅಥವಾ ಮುಂದಕ್ಕೆ ಒಂದು ಸಣ್ಣ ಕಥೆಗಳ ಸಂಕಲನ ಮೂಡಿ ಬರುವುದೋ ನನಗೆ ಗೊತ್ತಿಲ್ಲ. ನಿಮ್ಮ ಉತ್ತೇಜನ ಮತ್ತು ಸಮಯ ಇದನ್ನು ನಿರ್ಧರಿಸಬಹುದು. ಸಣ್ಣ ಕಥೆ ಎಷ್ಟು ಉದ್ದವಿರಬೇಕು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಕಥೆ ಹೇಳುವಷ್ಟೂ ಉದ್ದ ಇದ್ದರೆ ಸಾಕು ಎನ್ನ ಬಹುದು. ಕಾದಂಬರಿಗೆ ಹೋಲಿಸಿದರೆ ಸಣ್ಣ ಕಥೆಯಲ್ಲಿ ಸನ್ನಿವೇಶಕ್ಕೆ ಹೆಚ್ಚು ಪ್ರಾಮುಖ್ಯತೆ, ಅಲ್ಲಿ ಪಾತ್ರ ಪೋಷಣೆಗೆ ಅಷ್ಟು ಅವಕಾಶವಿಲ್ಲ ಎಂಬುದು ನನ್ನ ಅನಿಸಿಕೆ. ಕಥೆ ಎಂಬುದು ಓದಿನ ಅನುಭವದ ಜೊತೆ ಹಲವಾರು ಚಿಂತನೆಗೆ ಅನುವುಮಾಡಿಕೊಟ್ಟಲ್ಲಿ ಮತ್ತು ಸಾಮಾಜಿಕ ಅರಿವನ್ನು ಉಂಟುಮಾಡಿದ್ದಲ್ಲಿ ಅದು ಸಾರ್ಥಕ. ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆಯನ್ನು ಹೆಣೆದಿದ್ದೇನೆ. ನಾನು ವೃತ್ತಿಯಲ್ಲಿ ವೈದ್ಯನಾಗಿರುವುದರಿಂದ ನನ್ನ ಕಥೆ ವೈದ್ಯಕೀಯ ವೃತ್ತಿಯ ಆಸುಪಾಸಿನಲ್ಲಿ ಸುಳಿದಿದೆ. ಮುಂದಕ್ಕೆ ನನ್ನ ಈ ವೃತ್ತಿಯ ಕವಚವನ್ನು ಹೊರತೆಗೆದಿಟ್ಟು ಪ್ರಜ್ಞಾಪೂರ್ವಕವಾಗಿ ಇತರ ಸಾಮಾಜಿಕ ಕಥಾವಸ್ತುಗಳನ್ನು ಪರಿಗಣಿಸಬೇಕೆಂಬ ಹಂಬಲವಿದೆ. ದಯವಿಟ್ಟು ಈ ಕಥೆಯನ್ನು ಓದಿ, ಕಥೆಯ ಹಂದರವನ್ನು ಬಿಟ್ಟುಕೊಡದೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಸಂ
ರೆಸಿಡೆನ್ಸಿ ರಸ್ತೆಯ ಮಾನ್ವಿತಾ ಕಾಂಪ್ಲೆಕ್ಸ್ ಒಳಗಿನ ಖಾಸಗಿ ಮೆಂಟಲ್ ಹೆಲ್ತ್ ಕ್ಲಿನಿಕ್ ನಲ್ಲಿ ತನ್ನ ಮೊಬೈಲ್ ಫೋನನ್ನು ತೀಡುತ್ತಾ ಚಿಂತಾಕ್ರಾಂತನಾಗಿ ಕುಳಿತ್ತಿದ್ದ ಸಚ್ಚಿನ್ ಗೆ 'ಮಿಸ್ಟರ್ ಸಚ್ಚಿನ್, ಡಾ ಮೋಹನ್ ಅವರು ನಿಮ್ಮನ್ನು ನೋಡಲು ರೆಡಿಯಿದ್ದಾರೆ, ನೀವು ಅವರ ಕೋಣೆಯೊಳಗೆ ಹೋಗಬಹುದು’ ಎಂದಳು ರೆಸೆಪ್ಷನಿಸ್ಟ್ ಜಯ. 

ಸಚಿನ್ ತನ್ನ ಮೊಬೈಲ್ ಫೋನನ್ನು ಆಫ್ ಮಾಡಿ, ಆತುರದಿಂದ ಮೋಹನ್ ಅವರ ಕೋಣೆಯೊಳಗೆ ಧಾವಿಸಿ 'ಹಲೋ ಡಾಕ್ಟರ್ ನಾನು ಸಚ್ಚಿನ್, ನೀವು ಹೆಗ್ಗಿದ್ದೀರಾ ಎಂದ.

' ನಾನು ಚೆನ್ನಾಗಿದ್ದೇನೆ ಸಚ್ಚಿನ್, ನೀವು ಹೇಗಿದ್ದೀರಾ ಹೇಳಿ’ ಎಂದರು ಮೋಹನ್.

‘ನಾಟ್ ವೆರಿ ವೆಲ್ ಡಾಕ್ಟರ್, ಕಳೆದ ಕೆಲವು ವಾರಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ, ನಿದ್ದೆ ಬರುತ್ತಿಲ್ಲ, ಮಧ್ಯ ಕೆಟ್ಟ ಕನಸುಗಳು ಬೇರೆ. ಈ ನಡುವೆ ಅಪಿಟೈಟ್ ಕಡಿಮೆ, ಒಂದು ರೀತಿ ನಿರುತ್ಸಾಹ ಅದನ್ನು ಜಿಗುಪ್ಸೆ ಎಂತಲೂ ಕರೆಯಬಹುದು. ಇತ್ತೀಚಿಗೆ ವಿನಾಕಾರಣ ಬಹಳ ಬೇಗ ಮೂಡ್ ಬದಲಾಗುತ್ತಿದೆ, ಎಮೋಷನಲ್ ಆಗುತ್ತಿದ್ದೇನೆ’.

ಹೀಗೆ ಶುರುವಾದ ಧೀರ್ಘ ಸಂವಾದದಲ್ಲಿ ಡಾಕ್ಟರ್ ಮೋಹನ್, ಸಚ್ಚಿನ್ನಿನ ವೈಯುಕ್ತಿಕ ಹಿನ್ನೆಲೆಗಳನ್ನು, ಪರಿವಾರದ ಸಂಬಂಧಗಳನ್ನು, ವೃತ್ತಿ ಜೀವನವನ್ನು ಕೆದಕಿ ಬಹಳಷ್ಟು ಹಿನ್ನೆಲೆ ಮಾಹಿತಿಗಳನ್ನು ಸಂಗ್ರಹಿಸಿದರು. ಸಚ್ಚಿನ್ ತಾನು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಎಂದು, ಅವನು ಬೆಂಗಳೂರಿನ ಡಿಲಾಯ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ. ಹೆಂಡತಿಯೊಡನೆ ಸಚ್ಚಿನ್ ವಿಚ್ಛೇದನವಾಗಿ ಎರಡು ವರ್ಷಗಳು ಕಳೆದಿದ್ದವು. ಕೋರ್ಟು ಅವರಿಗಿದ್ದ ಹತ್ತು ವರ್ಷದ ಒಬ್ಬಳೇ ಮಗಳನ್ನು ತಾಯಿಯ ಆರೈಕೆಯಲ್ಲಿ ಇಡುವುದು ಸೂಕ್ತವೆಂದು ನಿರ್ಧರಿಸಿತ್ತು. ಸಚ್ಚಿನ್ ತಾಯಿಗೆ ಕ್ಯಾನ್ಸರ್ ಆಗಿ ತೀರಿಕೊಂಡಿದ್ದು ಸಚ್ಚಿನ್ ತಂದೆ ರಾಮಚಂದ್ರ ಶಾನಭಾಗ್ ಅವರು ವಿಲ್ಸನ್ ಗಾರ್ಡನ್ ಅಪಾರ್ಟ್ಮೆಂಟ್ ಒಂದರಲ್ಲಿ ಒಬ್ಬರೇ ವಾಸವಾಗಿದ್ದರು, ಅವರಿಗೆ ಹಲವಾರು ಅರೋಗ್ಯ ಸಮಸ್ಯೆಗಳಿದ್ದವು. ಡಾಕ್ಟರ್ ಮೋಹನ್ ಸಾಕಷ್ಟು ವಿಚಾರಗಳನ್ನು ಕೆದಕಿದ ಮೇಲೆ ನೋಡಿ ಸಚ್ಚಿನ್ ‘ನನ್ನ ಒಂದು ಅಭಿಪ್ರಾಯದಲ್ಲಿ ನಿಮಗೆ ಡಿಪ್ರೆಶನ್ ಎಂದು ಗುರುತಿಸಬಹುದಾದ ಮಾನಸಿಕ ಅಸ್ವಸ್ಥತೆ ಇರುವ ಸಾಧ್ಯತೆ ಹೆಚ್ಚು. ಇದನ್ನು ಕೆಲವು ಮೆಡಿಸಿನ್ ಮತ್ತು ಕೌನ್ಸಿಲಿಂಗ್ ಮೂಲಕ ಹತೋಟಿಯಲ್ಲಿ ಇಡಬಹುದು. ಇದು ಹಲವಾರು ವರ್ಷಗಳಿಂದ ಸುಪ್ತವಾಗಿದ್ದು ಪರಿಸರದ ಒತ್ತಡದಿಂದ ಬಹಿರಂಗಗೊಂಡಿರಬಹುದು. ನೀವು ನಮ್ಮಲ್ಲಿ ಶೀಲಾ ಎಂಬ ಕೌನ್ಸಿಲರ್ ಇದ್ದಾರೆ, ಅವರನ್ನು ಮುಂದಕ್ಕೆ ಕಾಣಬಹುದು. ಸಧ್ಯಕ್ಕೆ ಮೆಡಿಸಿನ್ಗಳನ್ನು ಉಪಯೋಗಿಸಿ ಎರಡುವಾರದ ನಂತರ ಮತ್ತೆ ಭೇಟಿಯಾಗೋಣ. ನನ್ನ ಕನ್ಸಲ್ಟೇಶನ್ ಸಮ್ಮರಿ ದಾಖಲೆಯನ್ನು ನಿಮಗೆ ಈ ಮೇಲ್ ಮಾಡಲೇ' ಎಂದಾಗ 'ಬೇಡ ಡಾಕ್ಟರ್ ನನ್ನ ವಿಳಾಸಕ್ಕೆ ಪೋಸ್ಟ್ ಮಾಡಿ'. ಮತ್ತೆ ಇನ್ನೊಂದು ವಿಚಾರ ಡಾಕ್ಟರ್ ‘ನನ್ನ ಈ ಅಸ್ವಸ್ಥತೆ ನನ್ನ ಭಾವಿ ಹೆಂಡತಿಗೆ, ಕೋರ್ಟಿಗೆ, ಅಥವಾ ಅವಳ ಕುಟುಂಬಕ್ಕೆ ತಿಳಿಯಬಾರದು’ ಎಂದ. ‘ಅಫ್ ಕೋರ್ಸ್ ನನ್ನ ರೋಗಿಗಳ ಆರೋಗ್ಯದ ಬಗ್ಗೆ ನಾನು ಗಾಸಿಪ್ ಮಾಡುವುದಿಲ್ಲ. ಅದರ ಬಗ್ಗೆ ಆಶ್ವಾಸನೆ ಇರಲಿ’ ಎಂದರು ಮೋಹನ್. ಸಚ್ಚಿನ್ ಡಾಕ್ಟರಿಗೆ ಧನ್ಯವಾದಗಳನ್ನು ತಿಳಿಸಿ ನಿರ್ಗಮಿಸಿದ.

ಡಾ ಮೋಹನ್ ಅವರು ಖ್ಯಾತ ಮನೋ ವೈದ್ಯರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹಲವಾರು ವರುಷ ತಜ್ಞರಾಗಿ, ಪ್ರಾಧ್ಯಾಪಕರಾಗಿ ಐವತ್ತರ ಅಂಚಿನಲ್ಲಿ ಸ್ವಯಿಚ್ಛೆಯಿಂದ ನಿವೃತ್ತಿಯನ್ನು ಪಡೆದು ಖಾಸಗಿ ಪ್ರಾಕ್ಟೀಸಿನಲ್ಲಿ ತೊಡಗಿಕೊಂಡಿದ್ದರು. ಅವರ ಪತ್ನಿ ಡಾ ಶೀಲಾರವರು ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿದ್ದು ಮೋಹನ್ ಅವರ ಕ್ಲಿನಿಕ್ಕಿನಲ್ಲಿ ಮನೋರೋಗಿಗಳಿಗೆ ಕೌನ್ಸೆಲಿಂಗ್ ಥೆರಪಿ ನೀಡುತ್ತಿದ್ದರು. ಮೋಹನ್ ಮತ್ತು ಶೀಲಾ ದಂಪತಿಗಳಿಗೆ ಇದ್ದ ಒಬ್ಬನೇ ಪುತ್ರ ಡಾ ಶ್ರೇಯಸ್. ಅವನು ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಅವನ ಕೆಲವು ಹತ್ತಿರದ ಗೆಳೆಯರು ಇಂಗ್ಲೆಂಡಿನ ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಶ್ರೇಯಸ್ಸಿಗೆ ಇಂಗ್ಲೆಂಡಿಗೆ ಬರುವಂತೆ ಒತ್ತಾಯಿಸಿ ಅವನಿಗೆ ಎಲ್ಲ ರೀತಿಯ ನೆರವು ಮಾರ್ಗದರ್ಶನ ನೀಡುವ ಆಶ್ವಾಸನೆಯನ್ನು ಕೊಟ್ಟಿದ್ದರು. ಶ್ರೇಯಸ್, ಅಪ್ಪ ಅಮ್ಮನೊಂದಿಗೆ ಸಮಾಲೋಚಿಸಿ ಇಂಗ್ಲೆಂಡಿನ "ಪ್ಲ್ಯಾಬ್" ಪ್ರವೇಶ ಪರೀಕ್ಷೆಯನ್ನು ಲಂಡನ್ನಿನಲ್ಲಿ ತೆಗೆದುಕೊಳ್ಳಲು ನಿರ್ಧರಿಸಿದ. ಶ್ರೇಯಸ್, ಇಂಗ್ಲೆಂಡಿನಲ್ಲಿ ವೈದ್ಯಕೀಯ ಉನ್ನತ ಶಿಕ್ಷಣವನ್ನು ಮುಗಿಸಿ ತಾನು ನ್ಯೂರೋ ಸರ್ಜನ್ ಆಗಬೇಕೆಂಬ ಕನಸನ್ನು ಕಾಣುತ್ತಿದ್ದ. ಪರೀಕ್ಷೆ ತಯಾರಿಗೆ ಬೇಕಾದ ಪರಿಶ್ರಮವನ್ನು ಕೈಗೊಂಡ. ಕೊನೆಗೂ ಪ್ಲ್ಯಾಬ್ ಬರೆಯುವ ಅವಕಾಶ ಒದಗಿ ಬಂದಿತು. ಶ್ರೇಯಸ್ ಇಂಗ್ಲೆಂಡಿನ ವೀಸಾ ಪಡೆದುಕೊಂಡ. ಅವನು ಹೊರಡಲು ಇನ್ನು ಕೆಲವೇ ದಿನಗಳು ಉಳಿದಿದ್ದವು ಅಷ್ಟರೊಳಗೆ ಮೋಹನ್ ಅವರ ಹುಟ್ಟು ಹಬ್ಬ ಬಂದಿತ್ತು.

‘ಶ್ರೇಯಸ್ ನೀನು ಇಂಗ್ಲೆಂಡಿಗೆ ಹೋಗಿ ಬರಲು ಎಷ್ಟೊಂದು ದಿನಗಳಾಗುತ್ತದೆ, ಹೇಗೂ ನಿಮ್ಮ ಅಪ್ಪನ ಬರ್ತ್ ಡೇ ಬಂದಿದೆ ವೈ ಡೋಂಟ್ ವೀ ಪಾರ್ಟಿ’ ಎಂದರು ಶೀಲಾ. ‘ಒಳ್ಳೆ ಅವಕಾಶ ಅಮ್ಮ ಸೆಲೆಬ್ರೆಟ್ ಮಾಡೋಣ, ಅಪ್ಪನ ಹತ್ತಿರದ ಸ್ನೇಹಿತರನ್ನೂ ಕರೆಯೋಣ’ ಎಂದ. ಮನೆಯಲ್ಲೇ ಮೋಹನ್ ಅವರ ಬರ್ತ್ ಡೇ ಪಾರ್ಟಿ ಅದ್ದೂರಿಯಿಂದ ನಡೆಯಿತು. ಬಂದವರೆಲ್ಲ ಶ್ರೇಯಸ್ ಇಂಗ್ಲೆಂಡಿಗೆ ಹೊರಡುತ್ತಿರುವ ಬಗ್ಗೆ ವಿಚಾರಿಸಿ ತಮ್ಮ ಶುಭ ಕಾಮನೆಗಳನ್ನು ತಿಳಿಸಿದರು. ಶ್ರೇಯಸ್ ಅಂದು ಬೊಟೀಕ್ ಶಾಪಿನಿಂದ ಸುಂದರವಾದ ಹೂಗಳನ್ನು ಬಿಟ್ಟಿದ್ದ ನೀಲಿ ಆರ್ಕಿಡ್ ಗಿಡವನ್ನು ಪ್ಲಾಸ್ಟಿಕ್ ಮತ್ತು ಬಣ್ಣದ ರಿಬ್ಬನ್ ಸುತ್ತಿ ಅಲಂಕರಿಸಿದ್ದು ಅದನ್ನು ಮೋಹನ್ ಅವರ ಕೈಗಿತ್ತು ‘ಹ್ಯಾಪಿ ಬರ್ತ್ ಡೇ ಅಪ್ಪ, ಈ ಆರ್ಕಿಡ್ಡನ್ನು ನಾನು ಇಂಗ್ಲೆಂಡಿನಿಂದ ಬರುವವರೆಗೂ ಸರಿಯಾಗಿ ಆರೈಕೆ ಮಾಡಿ ನೋಡಿಕೊ’ ಎಂದನು. ಇದನ್ನು ಗಮನಿಸಿದ ಶೀಲಾ ‘ಮೋಹನ್ ನೋಡಿ, ಶ್ರೇಯಸ್ ನಿಮಗೆ ನೀಲಿ ಬಣ್ಣದ ಆರ್ಕಿಡ್ ಹುಡುಕಿ ತಂದಿದ್ದಾನೆ. ಸೈಕಿಯಾಟ್ರಿಸ್ಟ್ ಗಳಿಗೆ ನೀಲಿ ಬಣ್ಣದ ಆರ್ಕಿಡ್ ಇಸ್ ಎ ಪರ್ಫೆಕ್ಟ್ ಗಿಫ್ಟ್’ ಎಂದು ಅದನ್ನು ಮುಂದಕ್ಕೆ ವಿಸ್ತರಿಸಿ ‘ಸೈಕಾಲಜಿಯಲ್ಲಿ ನೀಲಿ ಮಹತ್ವದ್ದು, ಅದು ಪ್ರಶಾಂತತೆ, ನೀರವತೆ, ಸಮಾಧಾನ ಚಿತ್ತ ಮತ್ತು ಅನಂತತೆಯನ್ನು ಪ್ರತಿನಿಧಿಸುವ ಬಣ್ಣ, ಅದಕ್ಕೆ ಮನೋರೋಗಿಗಳಿಗೆ ಸಾಂತ್ವನ ನೀಡುವ ಶಕ್ತಿಯಿದೆ’ ಎಂದರು. ಶ್ರೇಯಸ್ ಕೂಡಲೇ ‘ಅಮ್ಮ ನೀನು ಸೈಕಾಲಜಿ ಲೆಕ್ಚರ್ ಕೊಡಬೇಡ, ನೀಲಿ ಬಣ್ಣ ಹುಡುಗರಿಗೆ, ಪಿಂಕ್ ಬಣ್ಣ ಹುಡುಗಿಯರಿಗೆ, ಸಿಂಪಲ್’ ಎಂದು ನಕ್ಕ. ಶ್ರೇಯಸ್ ಹೊರಡುವ ಸಮಯ ಹತ್ತಿರವಾಗುತ್ತಿತ್ತು. ಶ್ರೇಯಸ್ಸಿನ ಜೊತೆ ಮುಕ್ತವಾಗಿ ಕಾಲ ಕಳೆಯುವ ಉದ್ದೇಶದಿಂದ ಡಾ ಮೋಹನ್ ಒಂದೆರಡು ದಿನಗಳ ಮಟ್ಟಿಗೆ ತಮ್ಮ ಕ್ಲಿನಿಕ್ ಅಪಾಯಿಂಟ್ಮೆಂಟುಗಳನ್ನು ರದ್ದು ಮಾಡಲು ರಿಸೆಪ್ಷನಿಸ್ಟ್ ಜಯಾಳಿಗೆ ಆದೇಶ ನೀಡಿದರು. ಮೋಹನ್ ಅವರು ಶ್ರೇಯಸ್ಸಿನ ಜೊತೆ ಸೆಂಟ್ರಲ್ ಮಾಲಿನಲ್ಲಿದ್ದಾಗ, ಜಯಾ, ಮೋಹನ್ ಅವರಿಗೆ ಫೋನ್ ಮಾಡಿ ‘ಸರ್ ನಿಮ್ಮ ಪೇಶಂಟ್ ಸಚ್ಚಿನ್ ಅವರು ನಿಮ್ಮನ್ನು ತುರ್ತಾಗಿ ಕಾಣಬೇಕಂತೆ ಮೆಡಿಸಿನ್ ಕೆಲಸ ಮಾಡುತ್ತಿಲ್ಲವಂತೆ ಎಂದಳು. ನೋಡು ಜಯ ನಾನು ಈಗ ನನ್ನ ಮಗನ ಜೊತೆ ಕಾಲ ಕಳೆಯುವುದು ಮುಖ್ಯ, ಸಚ್ಚಿನ್ನಿಗೆ ಡಾಕ್ಟರ್ ಮೈಸೂರಿಗೆ ಹೋಗಿದ್ದಾರೆ, ಸೋಮವಾರ ಬೆಳಗ್ಗೆಯೇ ಸಿಗುವುದು ಎಂದು ಹೇಳಿಬಿಡು ಎಂದರು.

ಶ್ರೇಯಸ್ ಹೊರಡುವ ದಿನ ಬಂದೇಬಿಟ್ಟಿತು. ಶ್ರೇಯಸ್ಸನ್ನು ಮೋಹನ್ ಮತ್ತು ಶೀಲಾ ಬೆಂಗಳೂರಿನ ಏರ್ಪೋರ್ಟಿಗೆ
ತಲುಪಿಸಿ ಬಿಳ್ಕೊಟ್ಟರು. ಶ್ರೇಯಸ್ ಹೊಸದಾಗಿ ಕಂಡು ಕೊಂಡಿದ್ದ ಸ್ವಾತಂತ್ರದ ರುಚಿ ಅನುಭವಿಸಲು ಶುರುಮಾಡಿದ. ಏರ್ಪೋರ್ಟ್ ಡ್ಯೂಟಿ ಫ್ರೀ ಶಾಪಿನಲ್ಲಿ ತಿರುಗಿ ಅಲ್ಲಿ ಕೊಡುವ ಫ್ರೀ ಪೆರ್ಫ್ಯೂಮ್ ಗಳನ್ನು ಪರೀಕ್ಷಿಸಿ, ಕೆಲವು ಸ್ಯಾಂಪಲ್ ಗಿಟ್ಟಿದ್ದ ಬಾಟಲ್ಗಳಿಂದ ಧಾರಾಳವಾಗಿ ಮೈಗೆ ಸ್ಪ್ರೇ ಮಾಡಿಕೊಂಡ. ಕೆಲವು ರೆಬಾನ್ ಕಪ್ಪು ಕನ್ನಡಕವನ್ನು ಪ್ರಯತ್ನಿಸಿ ಕನ್ನಡಿಯಲ್ಲಿ ತನ್ನನ್ನು ತಾನೇ ಮೆಚ್ಚಿಕೊಂಡ. ಕಿರಿಯ ಸೇಲ್ಸ್ ಹುಡುಗಿಯರತ್ತ ನೋಡಿ ಕಿರು ನಗೆ ಬೀರಿದ. ಕೊನೆಗೆ ತನ್ನ ಗಡಿಯಾರ ನೋಡಿಕೊಂಡು ಲಂಡನ್ ಗೆ ಹೊರಟಿದ್ದ ಏರ ಇಂಡಿಯಾದ ವಿಮಾನದ ಗೇಟ್ ನಂಬರ್ 10 ರ ಕಡೆಗೆ ಬಿರಿಸುನ ಹೆಜ್ಜೆಯನ್ನು ಹಾಕಿ, ಚೆಕಿನ್ ಮುಗಿಸಿ ವಿಮಾನದ ಒಳಗೆ ಆಸೀನನಾದ. ತನ್ನ ಅಪ್ಪನಿಗೆ ಮೆಸೇಜ್ ಮಾಡಿ ಸರಾಗವಾಗಿ ಚೆಕಿನ್ ಆಗಿದೆಯೆಂದು ಅಮ್ಮನಿಗೂ ತಿಳಿಸುವಂತೆ ಹೇಳಿದ. ವಿಮಾನದಲ್ಲಿನ ಒಂದು ಹೆಣ್ಣು ಮಧುರ ಧ್ವನಿ ಲಂಡನ್ನಿಗೆ ಹೊರಟಿರುವ ಏರ ಇಂಡಿಯಾ 133 ವಿಮಾನಕ್ಕೆ ಎಲ್ಲರನ್ನು ಸ್ವಾಗತಿಸಿದ ನಂತರ ರಕ್ಷಣಾ ನಿಯಮಗಳನ್ನು ಬಿತ್ತರಿಸಲಾಯಿತು. ಸ್ವಲ್ಪ ದೂರ ಚಲಿಸಿದ ವಿಮಾನ ರನ್ವೇ ಬಳಿ ಆದೇಶಕ್ಕೆ ಕಾಯುತ್ತಿತ್ತು. ಒಂದು ಗಡುಸಾದ ಧ್ವನಿ ‘ಕ್ಯಾಬಿನ್ ಕ್ರೂ ರೆಡಿ ಫಾರ್ ಟೇಕ್ ಆಫ್’ ಎಂದಿತು. ಕಗ್ಗತ್ತಲಿನಲ್ಲಿ, ಗುಡುಗಿನ ಶಬ್ದದಲ್ಲಿ, ಶರವೇಗದಲ್ಲಿ ವಿಮಾನ ಕವಿದಿದ್ದ ಮೋಡಗಳನ್ನು ಭೇಧಿಸಿಕೊಂಡು ಮೇಲಕ್ಕೇರಿತು!

ಅಂದು ವಾರಾಂತ್ಯವಾದುದರಿಂದ ಮೋಹನ್ ಇನ್ನು ಹಾಸಿಗೆಯಲ್ಲೇ ಹೊರಳಾಡುತ್ತಾ ನಿಧಾನದಲ್ಲಿ ಎದ್ದರಾಯಿತು ಎನ್ನುವ ಅನಿಸಿಕೆಯಲ್ಲಿ ನಿದ್ದೆ ಎಚ್ಚರಗಳ ನಡುವಿನಲ್ಲಿದ್ದರು. ಅವರಿಗೆ ಒಂದು ಕರೆ ಬಂತು. ಏರ ಇಂಡಿಯಾ ಫ್ಲೈಟ್ 133 ವಿಮಾನವು ಬೆಂಗಳೂರನ್ನು ಬಿಟ್ಟ ಅರ್ಧಗಂಟೆಯೊಳಗೆ ತನ್ನ ಸಾಮರ್ಥ್ಯವನ್ನು ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ ಬೆಂಕಿ ಹತ್ತಿಕೊಂಡಿರುವ ವಿಷಯವನ್ನು ತಿಳಿಸಿ, ಶ್ರೇಯಸ್ಸಿನ ಎಮರ್ಜೆನ್ಸಿ ಕಾಂಟ್ಯಾಕ್ಟ್ ವಿವರದಲ್ಲಿ ಡಾ ಮೋಹನ್ ಅವರ ಸಂಪರ್ಕದ ಮಾಹಿತಿ ಇದ್ದು ಅದನ್ನು ಬಳಿಸಿಕೊಂಡು ಫೋನ್ ಮಾಡಿರುವುದಾಗಿ ತಿಳಿಸಲಾಯಿತು. ಇನ್ನು ಹೆಚ್ಚಿನ ಮಾಹಿತಿ ಮತ್ತು ವಿವರಗಳೊಂದಿಗೆ ಮತ್ತೆ ಫೋನ್ ಮಾಡುವುದಾಗಿ ತಿಳಿಸಲಾಯಿತು. ಶ್ರೇಯಸ್ ಬದುಕ್ಕಿದ್ದಾನೋ ಇಲ್ಲವೋ ಎಂಬ ಸ್ಪಷ್ಟವಾದ ಉತ್ತರದ ನಿರೀಕ್ಷೆಯಲ್ಲಿ ನಿಮಿಷಗಳು ಗಂಟೆಗಳಾದವು. ಕೊನೆಗೂ ಅವರು ನಿರೀಕ್ಷಿಸಿದಂತೆ ಈ ಅನಾಹುತದಲ್ಲಿ ಪೈಲೆಟ್ಟನ್ನು ಒಳಗೊಂಡು ಎಲ್ಲರೂ ಮೃತರಾಗಿರುವರೆಂದು ತಿಳಿದು ಬಂತು. ಮೋಹನ್ ಮತ್ತು ಶೀಲಾ ದಂಪತಿಗಳಿಗೆ ತೀವ್ರ ಮಾನಸಿಕ ಆಘಾತ ಉಂಟಾಯಿತು. ಮನಶಾಸ್ತ್ರವನ್ನು ಆಳವಾಗಿ ಅರಿತುಕೊಂಡಿದ್ದ ದಂಪತಿಗಳು ತಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿಡಲು ಹೆಣಗಿ ಕಂಗಾಲಾದರು. ಮಳೆ ಸುರಿಸಿದ ಕಾರ್ಮೋಡಗಳು ಕರಗಬಹುದಾದರೂ ಮೋಹನ್ ದಂಪತಿಗಳ ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡಗಳು ಅದೆಷ್ಟು ಕಣ್ಣೀರು ಸುರಿಸಿದರೂ ಕರಗಲಿಲ್ಲ. ಮತ್ತೆ ಮತ್ತೆ ಆವರಿಸುವ ಖಿನ್ನತೆಯನ್ನು ನಿಭಾಯಿಸುವುದು ಕಷ್ಟಕರವಾಯಿತು. ಬೇರೆಯವರಿಗೆ ಸರಾಗವಾಗಿ ಕೌನ್ಸಿಲ್ ಮಾಡುತ್ತಿದ್ದ ಅವರಿಗೆ ತಮ್ಮನ್ನು ತಾವೇ ಸಂತೈಸಿಕೊಳ್ಳುವುದು ಅಸಾಧ್ಯವೆನಿಸಿತು. ಮೋಹನ್ ಅವರ ಸ್ಟಡಿ ಕೋಣೆಯಲ್ಲಿದ್ದ ನೀಲಿ ಆರ್ಕಿಡ್ ತನ್ನ ದಳಗಳನ್ನು ಉದುರಿಸುತ್ತಾ ಮುರುಟಿಕೊಂಡಿತ್ತು. ಕಾವೇರಿಯ ಸಿಹಿ ನೀರಿನ ಜೊತೆ ತಮ್ಮ ಕಣ್ಣೀರನ್ನೂ ಕೂಡಿಸಿ ಎಷ್ಟು ಧಾರೆ ಎರೆದರೂ ಆರ್ಕಿಡ್ ಮತ್ತೆ ಚಿಗುರಲಿಲ್ಲ!

ಏರ ಇಂಡಿಯಾ ವಿಮಾನ ಅನಾಹುತದ ಬಗ್ಗೆ ಸಿವಿಲ್ ಏವಿಯೇಷನ್ ವಿಭಾಗದಿಂದ ಅಧಿಕೃತ ವರದಿ ಹೊರಗೆ ಬಂದು ಎಲ್ಲ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತು. ಈ ವಿಚಾರವನ್ನು ಅರಿತ ಡಾ ಮೋಹನ್ ದಂಪತಿಗಳ ಪರಿವಾರದವರು, ಗೆಳೆಯರು ಮನೆಗೆ ಬಂದು ಅವರನ್ನು ಸಂತೈಸಲು ಪ್ರಯತ್ನಿಸಿದರು. ಹೀಗೆ ಶೋಕದಲ್ಲಿ ದಿನಗಳು ಕಳೆದವು. ಸಿವಿಲ್ ಏವಿಯೇಷನ್ ವಿಭಾಗದಿಂದ ಮೊದಲ ಹಂತದ ತನಿಖಾ ರಿಪೋರ್ಟ್ ಪ್ರಕಟಗೊಂಡಿತು. ಏರ್ ಇಂಡಿಯಾ 133 ವಿಮಾನದ ಎರಡು ಎಂಜಿನ್ಗಳ ವೈಫಲ್ಯದಿಂದ ಈ ಅಪಘಾತ ಉಂಟಾಯಿತು, ಆದರೆ ಈ ವೈಫಲ್ಯದ ಮೂಲ ಕಾರಣವನ್ನು ಬ್ಲ್ಯಾಕ್ ಬಾಕ್ಸ್ ರೆಕಾರ್ಡರ್ ಪರೀಕ್ಷೆಯ ನಂತರೆವೇ ಬಹಿರಂಗಪಡಿಸಲಾಗುವುದು ಎಂದು ನಿರ್ಧರಿಸಲಾಯಿತು. ಈ ವರದಿಯು ಸೋಷಿಯಲ್ ಮೀಡಿಯಾಗಳನ್ನು ತಲುಪಿ ಜನರು ತಮಗೆ ತಿಳಿದಂತೆ ಕಾರಣಗಳನ್ನು ವ್ಯಾಖ್ಯಾನಿಸ ತೊಡಗಿದರು. ಮೋಹನ್ ಅವರನ್ನು ಕಾಣಲು ಬಂದಿದ್ದ ವೆಂಕಟೇಶ್ ‘ಮೋಹನ್ ಈ ಅನಾಹುತಕ್ಕೆ ಮುಸ್ಲಿಂಮರೆ ಕಾರಣ. ಪಹಲ್ಗಾಮ್ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಸರಿಯಾಗಿ ಪೆಟ್ಟು ತಿಂದ ಪಾಕಿಸ್ತಾನಿಗಳು ಮತ್ತು ಇಂಡಿಯಾದಲ್ಲಿರುವ ಅವರ ಕುಲ ಬಾಂಧವರು ಏನೋ ಒಳಸಂಚು ನಡೆಸಿ ವಿಮಾನದಲ್ಲಿ ಕುತಂತ್ರ ನಡೆಸಿದ್ದಾರೆ. ಎರಡು ಇಂಜನ್ ಫೇಲ್ ಆಗುವುದು ಅಂದರೇನು, ಇದು ಲಂಡನ್ನಿಗೆ ಹೋರಾಟ ಅಂತರಾಷ್ಟ್ರಿಯ ಡ್ರೀಮ್ ಲೈನರ್, ಇಲ್ಲಿ ಅದೆಷ್ಟೋ ತಾಂತ್ರಿಕ ಚೆಕಿಂಗ್ ಮತ್ತು ಕ್ಲಿಯರೆನ್ಸ್ ಇರುತ್ತೆ. ಇಲ್ಲಿ ಖಂಡಿತ ಸಾಬರ ಕೈವಾಡವಿದೆ. ಇದು ಸಾಬೀತಾಗಿದ್ದಲ್ಲಿ ಈ ಬಡ್ಡಿಮಕ್ಕಳಿಗೆ ಹಿಂದೂಗಳು ಸರಿಯಾದ ಬುದ್ಧಿ ಕಲಿಸಬೇಕು’ ಎಂದು ಬಹಳ ಆವೇಶದಿಂದ ವೆಂಕಟೇಶ್ ನುಡಿದರು. ಅದಕ್ಕೆ ಮೋಹನ್ ‘ಅಲ್ಲಾ ವೆಂಕಿ ನೀ ಸ್ವಲ್ಪ ಸುಮ್ಮನಿರು, ಈ ಅನಾಹುತಕ್ಕೆ ಕಾರಣ ಇನ್ನು ಸ್ಪಷ್ಟವಾಗಿಲ್ಲ, ಇಂತಹ ಸನ್ನಿವೇಶದಲ್ಲಿ ನೀನು ನಿನ್ನ ಊಹೆಗಳ ಮೇಲೆ ಅವರಿವರನ್ನು ಅನುಮಾನಿಸುವುದು ತಪ್ಪು. ಫೈನಲ್ ರಿಪೋರ್ಟ್ ಬರುವವರೆಗೂ ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪು, ಇದು ನನ್ನ ಪರ್ಸನಲ್ ಟ್ರ್ಯಾಜಿಡಿ, ದಯವಿಟ್ಟು ಇದನ್ನು ಹಿಂದೂ ಮುಸ್ಲಿಂ ಸಮಸ್ಯೆಯಾಗಿ ಮಾಡಿ ರಾಜಕೀಯ ತರಬೇಡ. ಸ್ವಲ್ಪ ಸಂಯಮದಿಂದ ವರ್ತಿಸುವುದು ಒಳ್ಳೇದು’ ಎಂದರು.

ಅನಾಹುತದನಂತರ ಹಲವಾರು ವಾರಗಳೇ ಕಳೆದವು. ಶೋಕ ತಪ್ತರಾಗಿದ್ದ ಮೋಹನ್ ದಂಪತಿಗಳು ಸಾವಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಮೋಹನ್ ತಮ್ಮ ಕೆಲಸಕ್ಕೆ ಮರಳಿದ್ದರು. ಒಂದು ದಿನ ಮೋಹನ್ ಕೆಲಸದಲ್ಲಿ ನಿರತರಾದಾಗ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಮೋಹನ್ ಕಾಲ್ ಸ್ವೀಕರಿಸಿದರು.

‘ಗುಡ್ ಮಾರ್ನಿಂಗ್ ಡಾಕ್ಟರ್ ಮೋಹನ್, ನಾನು ಅಜಯ್ ತಿವಾರಿ ಏರ್ ಕ್ರ್ಯಾಷ್ ತನಿಖೆ ವಿಭಾಗದಿಂದ ಮಾತನಾಡುತ್ತಿದ್ದೇನೆ, ನಿಮ್ಮ ಜೊತೆ ಕಾನ್ಫಿಡೆಂಶಿಯಲ್ ವಿಚಾರ ಚರ್ಚೆ ಮಾಡಬೇಕು’ ಎಂದರು

‘ಪ್ಲೀಸ್ ಗೋ ಅಹೆಡ್’ ಎಂದರು ಮೋಹನ್

'ಮೊದಲಿಗೆ ನಿಮಗೂ ಮತ್ತು ನಿಮ್ಮ ಪತ್ನಿ ಶೀಲಾ ಅವರಿಗೂ ನನ್ನ ಸಂತಾಪವನ್ನು ಸೂಚಿಸಲು ಇಚ್ಛಿಸುತ್ತೇನೆ, ಸಾರೀ ಟು ಹಿಯರ್ ಎಬೌಟ್ ಯುವರ್ ಸನ್ ಶ್ರೇಯಸ್’

ಧೀರ್ಘ ನಿಟ್ಟುಸಿರು ಬಿಟ್ಟ ಮೋಹನ್ ‘ಧನ್ಯವಾದಗಳು, ಹೇಳಿ ಅಜಯ್’ ಎಂದರು

‘ಡಾಕ್ಟರ್, ಲಂಡನ್ನಿಗೆ ಹೊರಟಿದ್ದ ಏರ ಇಂಡಿಯಾ 133 ವಿಮಾನದ ಆಕ್ಸಿಡೆಂಟ್ ಬಗ್ಗೆ ಇದುವರೆಗಿನ ತನಿಖೆಯ ಪ್ರಕಾರ ವಿಮಾನದ ಎರಡು ಎಂಜಿನ್ಗಳ ವೈಫಲ್ಯ ಕಾರಣವಾಗಿದೆ. ಎರಡು ಎಂಜಿನ್ಗಳಿಗೆ ಇಂಧನ ಸರಬರಾಜಾಗಲು ಕಾಕ್ ಪಿಟ್ಟಿನ ಪ್ಯಾನೆಲ್ ಒಳಗಿನ ಇಂಧನ ನಿಯಂತ್ರಣದ ಸ್ವಿಚ್ ಆನ್ ಆಗಿರಬೇಕು. ಆದರೆ ಈ ಸನ್ನಿವೇಶದಲ್ಲಿ ಅದು ಆಫ್ ಆಗಿತ್ತು. ಅದು ಏಕೆ ಇದ್ದಕ್ಕಿದಂತೆ ಅಂತರಿಕ್ಷದಲ್ಲಿ ಆಫ್ ಆಯಿತು ಎನ್ನುವುದಕ್ಕೆ ವಿವರಣೆ ಇರಲಿಲ್ಲ. ಇತ್ತೀಚಿಗೆ ಕಾಕ್ ಪಿಟ್ ಬ್ಲಾಕ್ ಬಾಕ್ಸ್ ಪರೀಕ್ಷಿಸಿದಾಗ ಇಬ್ಬರ ಪೈಲೆಟ್ಗಳ ನಡುವಿನ ಸಂಭಾಷಣೆಯನ್ನು ಆಧರಿಸಿ ಆ ಇಂಧನ ಸ್ವಿಚ್ಚನ್ನು ಒಬ್ಬ ಪೈಲೆಟ್ ಉದ್ದೇಶ ಪೂರ್ವಕವಾಗಿ ಸ್ವಿಚ್ ಆಫ್ ಮಾಡಿರುವುದಾಗಿ ತಿಳಿದುಬಂದಿದೆ. ಇದಕ್ಕೆ ತಾಂತ್ರಿಕ ತೊಂದರೆಗಳು ಕಾರಣವಲ್ಲ ಎಂಬುದು ತಜ್ಞರ ಅಭಿಪ್ರಾಯ. ಒಬ್ಬ ನುರಿತ ಪೈಲೆಟ್ ಹೀಗೇಕೆ ತನ್ನ ವಿಮಾನವನ್ನು ತಾನೇ ನೆಲಕ್ಕೆ ಉರುಳಿಸಿದ, ಇದು ಆತ್ಮ ಹತ್ಯೆಯೇ, ಅವನಿಗೆ ಮಾನಸಿಕ ತೊಂದರೆಗಳಿತ್ತೆ ಎಂಬ ಸಹಜ ಪ್ರಶ್ನೆಗಳು ಉದ್ಭವಿಸಿವೆ. ಈ ಸೀನಿಯರ್ ಅನುಭವಿ ಕ್ಯಾಪ್ಟನ್ ಹೆಸರು ಸಚ್ಚಿನ್, ಸಚ್ಚಿನ್ ಶಾನಭಾಗ್. ಕ್ಯಾಪ್ಟನ್ ಸಚ್ಚಿನ್ನಿಗೆ ಮಾನಸಿಕ ಅಸ್ವಸ್ಥತೆ ಇತ್ತು ಎಂಬ ವಿಚಾರ ಹಿಂದೆ ಗೌಪ್ಯವಾಗಿದ್ದು ಈಗ ಅದರ ಬಗ್ಗೆ ಅನುಮಾನವಿದೆ. ನಮ್ಮ ಮೆಡಿಕಲ್ ರೆಕಾರ್ಡಿನಲ್ಲಿ ಅವನಿಗೆ ಮಾನಸಿಕ ತೊಂದರೆ ಇತ್ತು ಎಂಬುದು ದಾಖಲಾಗಿಲ್ಲ. ಹಿಂದಿನ ವೈದ್ಯಕೀಯ ಪರೀಕ್ಷೆಯಲ್ಲಿ ನಮ್ಮ ವೈದ್ಯರು ಅವನಿಗೆ ಮೆಂಟಲ್ ಹೆಲ್ತ್ ಕ್ಲಿಯರೆನ್ಸ್ ಕೊಟ್ಟಿದ್ದಾರೆ’

‘ಹೌ ಡಿಡ್ ಹೀ ಸ್ಲಿಪ್ ಥ್ರೂ ದಿ ನೆಟ್!’ ಎಂದು ಅಚ್ಚರಿಗೊಂಡರು ಮೋಹನ್

‘ಡಾಕ್ಟರ್, ಅನಾಹುತವಾದ ಮೇಲೆ ನಾವು ಸಚ್ಚಿನ್ ಮನೆಗೆ ತೆರಳಿ ಅವನ ಲ್ಯಾಪ್ ಟಾಪ್ ಮತ್ತು ಇತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡು ನೋಡಿದಾಗ ನಿಮ್ಮ ಮೆಡಿಕಲ್ ಸಮ್ಮರಿ ಮತ್ತು ಪ್ರಿಸ್ಕ್ರಿಪ್ಷನ್ ಗಳು ದೊರಕಿದವು. ಅವನ ವೃದ್ಧ ತಂದೆಯವರು ಬಹಳಷ್ಟು ಸಹಕರಿಸಿದರು. ನೀವು ಸಚ್ಚಿನ್ನಿನ ಖಾಸಗಿ ಸೈಕ್ಯಾಟರಿಸ್ಟ್ ಎಂದು ತಿಳಿದು ಬಂತು. ದಯವಿಟ್ಟು ನೀವು ಹೇಳಿಕೆ ಕೊಟ್ಟು ಖಾತ್ರಿಪಡಿಸಬೇಕು’

‘ಖಂಡಿತ ಅಜಯ್, ಇದು ನನಗೆ ಆಶ್ಚರ್ಯದ ಸಂಗತಿ. ಸಚಿನ್ ನನ್ನ ಪೇಶಂಟ್ ಎಂಬುದು ಸರಿ, ಆದರೆ ಅವನು ನನ್ನ ಬಳಿ ತಾನು ಸಾಫ್ಟ್ ವೆರ್ ಎಂಜಿನಿಯರ್ ಎಂದು ಸುಳ್ಳು ಹೇಳಿದ್ದಾನೆ, ನನಗೆ ಅವನು ಪೈಲೆಟ್ ಎಂಬ ವಿಚಾರ ಒಂದು ವೇಳೆ ಗೊತ್ತಾಗಿದ್ದರೂ ನಾನು ಅದನ್ನು ಪೇಶಂಟ್ ಕಾನ್ಫಿಡೆಂಶಿಯಾಲಿಟಿ ಬದ್ಧತೆಯಲ್ಲಿ ಬಹಿರಂಗ ಪಡಿಸುವುದು ಕಷ್ಟಕರವಾಗುತ್ತಿತ್ತು’

‘ಹೌದು ಡಾಕ್ಟರ್ ನಮ್ಮ ಎಷ್ಟೋ ಪೈಲೆಟ್ಗಳು ತಮಗೆ ಮಾನಸಿಕ ತೊಂದರೆ ಇದೆ ಎನ್ನುವುದನ್ನು ಬಹಿರಂಗ ಪಡಿಸುವುದಿಲ್ಲ. ನಮ್ಮ ಪೈಲೆಟ್ಗಳಲ್ಲಿ ಅದು ಇನ್ನೂ ಬಾಹಿರವಾದ ಸಂಗತಿ. ಆರ್ಥಿಕವಾಗಿ ಕಷ್ಟದಲ್ಲಿರುವ ಪೈಲೆಟ್ಗಳಿಗೆ ತಮ್ಮ ಕೆಲಸ ಕಳೆದುಕೊಳ್ಳುವ ಭಯ’

‘ಅದು ಹಾಗಿರಬೇಕಿಲ್ಲ ಇಟ್ ಇಸ್ ಸ್ಯಾಡ್’ ಎಂದರು ಮೋಹನ್

‘ಒಹ್ ಇನ್ನೊಂದು ವಿಚಾರ ಈಗ ಥಟ್ ಅಂತ ಹೊಳೆಯಿತು ಅಜಯ್. ಶ್ರೇಯಸ್ ಹೊರಡವು ಒಂದೆರಡು ದಿನಗಳ ಮುಂಚೆ ಕ್ಲಿನಿಕ್ಕಿಗೆ ಸಚ್ಚಿನ್ ಫೋನ್ ಮಾಡಿ ನನ್ನನ್ನು ಅರ್ಜೆಂಟ್ ಆಗಿ ನೋಡಬೇಕು, ಆಂಟಿ ಡೆಪ್ರೆಸ್ಸೆಂಟ್ ಮೆಡಿಸಿನ್ ಕೆಲಸ ಮಾಡುತ್ತಿಲ್ಲ ಎಂದು ಮೆಸೇಜ್ ಬಿಟ್ಟಿದ್ದ. ನಾನು ಆಗ ಶ್ರೇಯಸ್ ಜೊತೆ ಸಮಯ ಕಳೆಯಲು ರಜೆಯಲ್ಲಿದ್ದೆ. ಆ ಹಂತದಲ್ಲಿ ಬಹುಶ ಸಚ್ಚಿನ್ ಕ್ರೈಸಿಸ್ ಪಾಯಿಂಟ್ ತಲುಪಿ ಅವನಿಗೆ ಸೂಯಿಸೈಡ್ ಆಲೋಚನೆಗಳು ಉಂಟಾಗಿರಬಹುದು. ಓಹ್ ಮೈ ಗಾಡ್!! ನೋಡಿ ಅಜಯ್ ನಾನು ಎಂಥ ತಪ್ಪು ಕೆಲಸ ಮಾಡಿದೆ. ನಾನು ಅಂದು ಸಚ್ಚಿನನ್ನು ತುರ್ತಾಗಿ ನೋಡಿದ್ದರೆ, ಅವನಿಗೆ ಕೌನ್ಸಿಲ್ ಮಾಡಬಹುದಿತ್ತು, ಮೆಡಿಸಿನ್ ಬದಲಾಯಿಸಬಹುದಿತ್ತು ಬಹುಶಃ ಈ ಏರ್ ಆಕ್ಸಿಡೆಂಟನ್ನು ತಪ್ಪಿಸಬಹುದಾಗಿತ್ತು. ಇಟ್ ವಾಸ್ ಎ ಮಿಸ್ಡ್ ಆಪರ್ಚುನಿಟಿ, ಶ್ರೇಯಸ್ ಅಷ್ಟೇ ಅಲ್ಲ ನೂರಾರು ಪ್ರಯಾಣಿಕರು ಸಾಯಬೇಕಿರಲಿಲ್ಲ’ ಎಂದು ಮೋಹನ್ ಗದ್ಗದಿಸುವ ದನಿಯಲ್ಲಿ ಹೇಳುವಾಗ ಅವರ ಕಣ್ಣುಗಳು ಒದ್ದೆಯಾದವು.

ಅಜಯ್ ಕೂಡಲೇ ‘ಡಾಕ್ಟರ್ ನಿಮ್ಮನ್ನು ನೀವು ಬ್ಲೆಮ್ ಮಾಡಿಕೊಳ್ಳಬೇಡಿ. ಇದು ವ್ಯವಸ್ಥೆಯ ವೈಫಲ್ಯ. ಇದರ ಬಗ್ಗೆ ಧೀರ್ಘವಾಗಿ ಆಲೋಚಿಸ ಬೇಕಾಗಿದೆ. ಈ ವಿಚಾರವನ್ನು ದಯವಿಟ್ಟು ಬಹಿರಂಗಪಡಿಸಬೇಡಿ. ತನಿಖೆಯ ರಿಪೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಪ್ರಕಟವಾಗುತ್ತಿದೆ. ನಾನು ಹೊರಡಬೇಕು, ಮತ್ತೆ ಕರೆ ಮಾಡುತ್ತೇನೆ, ಥ್ಯಾಂಕ್ಯೂ ಎನ್ನುತ್ತಾ ಕರೆಯನ್ನು ಮುಗಿಸಿದರು.


ಕೆಲವು ವರುಷಗಳ ತರುವಾಯ;
ಭಾರತ ಸರ್ಕಾರದ ಸಿವಿಲ್ ಏವಿಯೇಷನ್ ವಿಭಾಗದ ವೈದ್ಯಕೀಯ ಬೋರ್ಡಿನಲ್ಲಿ ಮೋಹನ್ ಅವರನ್ನು ತಜ್ಞರಾಗಿ ಆಯ್ಕೆಮಾಡಲಾಯಿತು. ಅವರ ಮಾರ್ಗದರ್ಶನದಲ್ಲಿ ಪೈಲೇಟ್ಗಳ ದೈಹಿಕ ಮತ್ತು ಮಾನಸಿಕ ಅರೋಗ್ಯ ತಪಾಸಣೆ, ಏನು, ಹೇಗೆ ಎಂಬ ವಿಷಯಗಳನ್ನು ಕುರಿತು ಹಲವಾರು ಸಲಹೆ ಸೂಚನೆಗಳನ್ನು ಒಳಗೊಂಡ ನೂತನ ದಾಖಲೆಯನ್ನು ಹೊರತರಲಾಯಿತು. ಪೈಲೆಟ್ಗಳು ತಮಗೆ ಮಾನಸಿಕ ಅಸ್ವಸ್ಥತೆ ಇದ್ದಲ್ಲಿ ಅದನ್ನು ಯಾವುದೇ ಮಾನಭಂಗ ಅಥವಾ ಒತ್ತಡಗಳಿಲ್ಲದೆ ಬಹಿರಂಗಗೊಳಿಸಲು ಉತ್ತೇಜನ ನೀಡಲಾಯಿತು, ಹಾಗೆ ಸಹಾನುಭೂತಿಯಿಂದ ಎಲ್ಲ ರೀತಿಯ ಸಹಕಾರ, ಕೌನ್ಸಿಲಿಂಗ್ ಮತ್ತು ನೆರವು ನೀಡುವುದರ ಬಗ್ಗೆ ಆಶ್ವಾಸನೆ ನೀಡಲಾಯಿತು. ಇದರ ಜೊತೆ ಜೊತೆಗೆ ವೈದ್ಯರಿಗೂ ಕೆಲವು ವಿಶೇಷ ಸನ್ನಿವೇಶಗಳಲ್ಲಿ ಕಾನ್ಫಿಡೆಂಶಿಯಾಲಿಟಿ ಬದ್ಧತೆಯನ್ನು ಏಕೆ, ಯಾವಾಗ ಮುರಿಯಬಹುದು ಎಂಬ ವಿಚಾರದಲ್ಲಿ ಮಾರ್ಗದರ್ಶನ ನೀಡಲಾಯಿತು. ಇಂಡಿಯನ್ ಪೈಲೆಟ್ ಅಸೋಸಿಯೇಷನ್ ಡಾ ಮೋಹನ್ ಅವರ ವರದಿಯನ್ನು ಸಂತೋಷದಿಂದ ಸ್ವಾಗತಿಸಿತು. ಮೋಹನ್ ದಂಪತಿಗಳು ಭಾರತೀಯ ಪೈಲೆಟ್ಗಳ ಮಾನಸಿಕ ತೊಂದರೆಗಳಿಗೆ ನೆರವು ನೀಡುವ ಸಲುವಾಗಿ 'ಬ್ಲೂ ಆರ್ಕಿಡ್' ಎಂಬ ಹೆಸರಲ್ಲಿ ಚಾರಿಟಿ ಸಂಸ್ಥೆಯನ್ನು ಹುಟ್ಟುಹಾಕಿದರು.
***

ಈ ಕಥೆಯ ಬಹುಭಾಗಗಳು ಲೇಖಕರ ಕಲ್ಪನೆಯಾಗಿದ್ದು ಇದರಲ್ಲಿನ ಕೆಲವು ಸನ್ನಿವೇಶಗಳು ನೈಜ ಘಟನೆಯನ್ನು ಆಧರಿಸಿವೆ



ಕನಸಾದ ಮೊಗ್ಗಿನ ಜಡೆ, ಮರೆಯಾದವಳು ಮತ್ತೆ ಕಂಡಾಗ

ಪ್ರಿಯ ಓದುಗರಿಗೆ,

——————————————————————————————————————————————————–

——————————————————————————————————————-

—- ಶಿವಶಂಕರ್ ಮೇಟಿ

ಕಪಡೋಕಿಯ ಎಂಬ ವಿಸ್ಮಯ! – ಅನ್ನಪೂರ್ಣಾ ಮತ್ತು ಆನಂದ್ ಬರೆದ ಚಾರಣ ಚಿತ್ರ-ಕಥನ

ಟರ್ಕಿದೇಶದ ಅನಾಟೋಲಿಯಾ (Anatolia) ಪ್ರಾಂತ್ಯದಲ್ಲಿರುವ ಕಪಡೋಕಿಯ (Cappadocia) ಪ್ರಾಂತ್ಯವು ಚಾರಣಿಗರ ಸ್ವರ್ಗವೆಂದರೆ ಅತಿಶಯೋಕ್ತಿಯಾಗದು! ಅಗ್ನಿಪರ್ವತದ ವಿಸ್ಫೋಟ ಮತ್ತು ಹಲವಾರು ಸಹಸ್ರಮಾನ ವರ್ಷಗಳ ಕ್ಷರಣದಿಂದ ಭೂಮಿಯು ಮಾರ್ಪಟ್ಟು ಸಾವಿರಾರು ಕಣಿವೆಗಳ (valley) ಬೀಡಾಗಿದೆ ಈ ಪ್ರಾಂತ್ಯ. ಎಲ್ಲಿ ನೋಡಿದರಲ್ಲಿ ಕಣಿವೆಗಳು, ಕೊರೆದ ಬೃಹದಾಕಾರದ ಬಂಡೆಗಳು, ಹಲವಾರು ಆಕಾರಗಳ ಚಿಮಣಿಗಳ ನೆಲವಾಗಿದೆ. ಈ ಎಲ್ಲ ಭೌಗೋಳಿಕ ಅದ್ಭುತಗಳನ್ನು ಕಾಲ್ನಡಿಗೆಯಲ್ಲಿ ನಡೆದು ಈ ರುದ್ರ ರಮಣೀಯ ಪ್ರದೇಶವನ್ನು ನೋಡಿ ವಿಸ್ಮಿತರಾದೆವು!

ಗೋರೇಮೇ (Goreme) ಮತ್ತು ಉಚೈಸರ್ (Uchisar), ಈ ಪ್ರಾಂತ್ಯದ ಪ್ರಮುಖ ಊರುಗಳು. ಗೋರೇಮೇ ಉಚೈಸರ್-ಗಿಂತ ದೊಡ್ಡ ಊರು ಮತ್ತು ಪ್ರಖ್ಯಾತ ಕೂಡ . ಇಲ್ಲಿ ಉಳಿದುಕೊಂಡು ಸುತ್ತ ಮುತ್ತಲ ಜಾಗಗಳನ್ನು ನೋಡಬಹುದು. ನಮ್ಮದೇ ವಾಹನವಿದ್ದರೆ ಅನುಕೂಲ. ಇಲ್ಲವಾದರೆ ಸಾಕಷ್ಟು ಸ್ಥಳೀಯ ಪ್ರವಾಸಿ ಸಂಸ್ಥೆಗಳು ಬಸ್ಸಿನಲ್ಲಿ ಕರೆದೊಯ್ಯುವ ವ್ಯವಸ್ಥೆ ಇದೆ. ರೆಡ್ ಟೂರ್ ಮತ್ತು ಗ್ರೀನ್ ಟೂರ್ ಮೂಲಕ ಕಪಡೋಕಿಯದ ಪ್ರಮುಖ ಸ್ಥಳಗಳನ್ನು ನೋಡಬಹುದು. ಆದರೆ ಕಣಿವೆಗಳಲ್ಲಿ ನಡೆದು ಹತ್ತಿರದಿಂದ ನೋಡುವ ಅವಕಾಶವಿಲ್ಲ! ಸಮಯದ ಅಭಾವದಿಂದ view point ಗಳಲ್ಲಿ ಬಸ್ ನಿಲ್ಲಿಸುತ್ತಾರೆ, ಅಷ್ಟೇ.

ನಮ್ಮ ಬಳಿ ಕಾರು ಇದ್ದಿದ್ದರಿಂದ ನಾವು ಬಸ್-ಟೂರ್ ತೆಗೆದುಕೊಳ್ಳಲಿಲ್ಲ. ಕಾರಿನಲ್ಲಿ ಕಣಿವೆಗಳ ಬಳಿ ಕಾರು ನಿಲ್ಲಿಸಿ ನಡೆದೆವು. ರಸ್ತೆಗಳು ಬಹಳ ಚೆನ್ನಾಗಿವೆ ಮತ್ತು ಜನರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ. ಊರುಗಳಲ್ಲಿ ಸ್ವಲ್ಪ ನುಗ್ಗಾಟವಿದೆ, ಆದರೆ ಹೆದ್ದಾರಿಗಳಲ್ಲಿ ಶಿಸ್ತಿದೆ.

ಉಚೈಸರ್ ಕೋಟೆ (castle) ಬಹಳ ಚೆನ್ನಾಗಿದೆ. ನಮ್ಮ ಹೋಟೆಲಿನಿಂದ ೧೦ ನಿಮಿಷದ ನಡಿಗೆ. ಟಿಕೆಟ್ ತೆಗೆದುಕೊಂಡು ಕೋಟೆಯನ್ನು ಹತ್ತಿ, ಸೂರ್ಯಾಸ್ತವನ್ನು ನೋಡಿದೆವು. ಅಚ್ಚುಕಟ್ಟಾದ ಮೆಟ್ಟಿಲುಗಳಿವೆ. ಹಾಗಾಗಿ ಕಷ್ಟವಿಲ್ಲದೆ ಹತ್ತಬಹುದು. ಮೋಡಗಳಿಲ್ಲದ ದಿನವಾದ್ದರಿಂದ ಸೂರ್ಯಾಸ್ತ ಬಹಳ ಚೆನ್ನಾಗಿ ಕಂಡಿತು.

ಗೋರೇಮೇ ಸುತ್ತ ಬಹಳಷ್ಟು ಕಣಿವೆಗಳಿವೆ: Love Valley, Mushroom Valley, Pigeon Valley – ಆಕಾರಕ್ಕೆ ತಕ್ಕಂತೆ ಹೆಸರು! Red Valley, Rose Valley, White Valley – ಮಣ್ಣಿನ ಬಣ್ಣಕ್ಕೆ ತಕ್ಕಂತೆ ಹೆಸರು! ಕಣ್ಮನ ತಣಿಸುವ ಪ್ರಕೃತಿಯ ವಿಸ್ಮಯ! ಪ್ರತಿಯೊಂದು ಕಣಿವೆಗೂ ಅದರದೇ ಆದ ಅಂದ ಚಂದ ಮತ್ತು ವಿಶಿಷ್ಟತೆ ಇದೆ.

ಕಣಿವೆಗಳಲ್ಲಿ ಬಂಡೆಗಳನ್ನು ಕೊರೆದು, ಮನೆ ಮಾಡಿಕೊಂಡು ಜನರು ಜೀವನ ನಡೆಸುತ್ತಿದ್ದರಂತೆ! ಆ ಮನೆಗಳು ಈಗಲೂ ಇವೆ. ಹಗ್ಗ ಮತ್ತು ಹಗ್ಗದ ಏಣಿಗಳ ಸಹಾಯದಿಂದ ಮನೆಗೆ ಹೋಗುತ್ತಿದ್ದರೇನೋ?

Love Valley-ಗೆ ಪ್ರವೇಶ ಉಚಿತ. ಗೋರೇಮೇ ಊರಿನ ಹೊರಗೆ ರಸ್ತೆಯ ಬದಿ ಕಾರು ನಿಲ್ಲಿಸಿ ಸುಮಾರು ೩ ಗಂಟೆ ನಡೆದೆವು. ಇನ್ನೂ ಹೆಚ್ಚು ನಡೆಯಲಿಚ್ಛಿಸಿವವರು ನಡೆಯಲು ಬಹಳ ಹಾದಿಗಳಿವೆ. ಈ ಹಾದಿ ಬಹಳವೇ ಸಮತಟ್ಟಾಗಿತ್ತು. ಸುಮಾರು ೪೦ – ೫೦ ಮೀಟರ್ ಉದ್ದದ ನೂರಾರು ಚಿಮಣಿಗಳು! ಈ ಕಣಿವೆ ಬಹುಪ್ರಖ್ಯಾತ. ಗೂಗಲಿಸಿದರೆ ಈ ಕಣಿವೆಯ ಚಿತ್ರಗಳು ಅಂತರಜಾಲದಲ್ಲಿ ತುಂಬಿದೆ! ಇಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅವರ ಟೈಗರ್ ೩ ಚಿತ್ರದ ‘ಲೇಕೆ ಪ್ರಭು ಕಾ ನಾಮ್’ ಚಿತ್ರಗೀತೆಯ ಚಿತ್ರೀಕರಣ ನಡೆದಿದೆ.

Mushroom Valley-ಗೆ ಟಿಕೆಟ್ ತೆಗೆದುಕೊಳ್ಳಬೇಕು. ಇಲ್ಲಿನ ಚಿಮಣಿಗಳ ತಲೆ ನಾಯಿಕೊಡೆಯಾಕಾರದಲ್ಲಿದೆ. Love Valley ಅಷ್ಟು ಉದ್ದದ ಚಿಮಣಿಗಳಲ್ಲ ಮತ್ತು ಸಂಖ್ಯೆಯೂ ಕಡಿಮೆ. ಸುಮಾರು ಒಂದೂವರೆ ಗಂಟೆಯಲ್ಲಿ ಎಲ್ಲವನ್ನೂ ನೋಡಲಾಯಿತು.

Pigeon Valley-ಗೆ ಪ್ರವೇಶ ಉಚಿತ. ಇಲ್ಲಿಯ ಚಿಮಣಿಗಳ ತಲೆ ಸ್ವಲ್ಪ ಪಾರಿವಾಳದ ಆಕಾರದಲ್ಲಿದೆ. ಊಹಿಸಿಕೊಳ್ಳಲು ಸ್ವಲ್ಪ ಕಲ್ಪನಾಶಕ್ತಿಯೂ ಬೇಕು. ಉಚೈಸರ್-ನಿಂದ ಪ್ರಾರಂಭವಾಗುವ ಹಾದಿಯನ್ನು ಹುಡುಕಲು ಸ್ವಲ್ಪ ಕಷ್ಟವಾಯಿತು. ಸ್ವಲ್ಪ ಹುಡುಕಾಡಿ, ಕಡೆಗೆ ಸರಿಯಾದ ದಾರಿಯನ್ನು ಹುಡುಕಿ ಕಣಿವೆಯ ಸುತ್ತ ಓಡಾಡಿದೆವು. ಉಚೈಸರ್-ನಿಂದ ಪ್ರಾರಂಭಿಸಿ ಗೋರೇಮೇ ಮುಟ್ಟಿ ಹಿಂದಿರುಗಿದೆವು. ಸುಮಾರು ೬ -೭ km ನಡಿಗೆ. ಇದು ಸ್ವಲ್ಪ ಕಡಿದಾದ ಕಣಿವೆ. ನಡೆಯಲು ಸ್ವಲ್ಪ ಶ್ರಮ ಪಡಬೇಕು. ಕೆಲವೊಂದು ಜಾಗಗಳಲ್ಲಿ ಹಗ್ಗ ಹಿಡಿದುಕೊಂಡು ಇಳಿಯಬೇಕು ಮತ್ತು ಹತ್ತಬೇಕು.

Red/Rose Valley-ಯ ಮಣ್ಣು ತಿಳಿ ಕೆಂಪು/ಕೆಂಪು ಬಣ್ಣದ್ದಾಗಿದೆ. ಗೋರೇಮೇ ಇಂದ ಸ್ವಲ್ಪ ದೂರದಲ್ಲಿರುವ ಕಾವುಸಿನ್ (Cavusin) ಅನ್ನುವ ಊರಿನ ಹತ್ತಿರ ಕಾರು ನಿಲ್ಲಿಸಿ ನಡಿಗೆ ಶುರು ಮಾಡಿದೆವು. ತಪ್ಪು ಕೈಮರದಿಂದ ಸ್ವಲ್ಪ ಹಾದಿ ತಪ್ಪಿ, ಜಾಸ್ತಿ ನಡೆದು, ಕಡೆಗೆ ಸರಿಯಾದ ದಾರಿಯಲ್ಲಿ ಹೋದೆವು. Rose Valley ನೋಡಲು ಹೋಗಿ, ದಾರಿ ತಪ್ಪಿ, ಕಡೆಗೆ Rose ಮತ್ತು Red Valley ಎರಡನ್ನೂ ನೋಡಿದೆವು. ಸುಮಾರು ೧೪ ಕಿಮಿ ನಡಿಗೆ! ಈ ಹಾದಿ ಬಹಳ ಕಡಿದಾಗಿತ್ತು ಮತ್ತು ಜಾರಿಕೆ ಕೂಡ! ನೆತ್ತಿಯ ಮೇಲಿನ ಸೂರ್ಯನ ಝಳ ಇನ್ನಷ್ಟು ತೊಂದರೆ ಕೊಟ್ಟಿತೆಂದರೆ ತಪ್ಪಾಗಲಾರದು. ಕಡೆಗೆ ಸುಮಾರು ೫ ಘಂಟೆಗಳ ಕಾಲ ನಡೆದಿದ್ದೆವು!

ನಮ್ಮ ಹಾಗೆ ದಾರಿ ತಪ್ಪಿ ಬಹಳಷ್ಟು ಜನ ನಮ್ಮೊಂದಿಗಿದ್ದಿದ್ದು, ನಾವೊಬ್ಬರೆ ಅಲ್ಲ ಎನ್ನುವ ಸಮಾಧಾನ ಕೊಟ್ಟಿತು. ಈ ಕಣಿವೆಯಲ್ಲಿ ನಮಗೆ ಅತ್ಯಂತ ರಮಣೀಯ ದೃಶ್ಯಗಳನ್ನು ನೋಡುವ ಅವಕಾಶ ಸಿಕ್ಕಿತು. Breathtaking views ಅನ್ನಬಹುದು. Rose Valley-ಇಂದ Red Valley-ಗೆ ಹೋದರೆ ಪ್ರವೇಶ ಉಚಿತ. ವಿರುದ್ಧ ದಿಕ್ಕಿನಲ್ಲಿ ಹೋದರೆ ಟಿಕೆಟ್ ತೆಗೆದುಕೊಳ್ಳಬೇಕು! ಕೆಲವು ಕಡೆ ಚಾರಣದ ಹಾದಿ ಬಹಳ ಕಡಿದಾಗಿದೆ. ಜಾರಿಕೆ ಕೂಡ !! ಒಳ್ಳೆಯ trekking shoes ಬೇಕೇ ಬೇಕು . walking poles ಇದ್ದರೆ ಇನ್ನೂ ಉತ್ತಮ.

ಕೆಲವಕ್ಕೆ ಪ್ರವೇಶ ಶುಲ್ಕವಿದೆ, ಮತ್ತೆ ಕೆಲವು ಉಚಿತ. ಮೂರು ದಿನದ ಪಾಸ್ ತೆಗೆದುಕೊಂಡರೆ ಸ್ವಲ್ಪ ಕಡಿಮೆ ವೆಚ್ಚದಲ್ಲಿ ಬಹಳಷ್ಟು ಜಾಗಗಳನ್ನು ನೋಡಬಹುದು. ಈ ಪಾಸ್-ನಲ್ಲಿ ಕೆಲವು ಕಣಿವೆಗಳಿಗೆ, ಕೆಲವು ಸಂಗ್ರಹಾಲಯಗಳಿಗೆ ಮತ್ತು ಕೆಲವು ಭೂಗತ (underground) ನಗರಗಳಿಗೆ ಪ್ರವೇಶವಿದೆ.

ಕಪಡೋಕಿಯ ಪ್ರಾಂತ್ಯದಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಭೂಗತ ನಗರಗಳಿವೆ. ಡೆರಿನ್-ಕುಯು (Derinkuyu) ಮತ್ತು ಕಾಯ್ಮಲ್ಕಿ (Kaymakli) ಎರಡು ಸುಪ್ರಸಿದ್ಧವಾದವು. ಉಚೈಸರ್-ನಿಂದ ಸುಮಾರು ೨೦ ಕಿಮಿ ದೂರದಲ್ಲಿ Kaymakli ಮತ್ತು ೩೦ ಕಿಮಿ ದೂರದಲ್ಲಿ ಡೆರಿನ್-ಕುಯು. ಮೊದಲ ಶತಮಾನದಲ್ಲಿ ನಿರ್ಮಿಸಿರುವ ಈ ಭೂಗತ ನಗರಗಳು ಈಗಲೂ ಸುಸ್ಥಿತಿಯಲ್ಲಿವೆ. ಯುದ್ಧಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದ ಈ ನಗರಗಳಲ್ಲಿ ಸುಮಾರು ೨೦೦೦೦ ಜನ, ಅವರ ಹಸುಕರುಗಳೆಲ್ಲ ತಿಂಗಳುಗಟ್ಟಲೆ ಇರುತ್ತಿದ್ದರಂತೆ! ಡೆರಿನ್-ಕುಯುನಲ್ಲಿ ೮ ಮಾಳಿಗೆಗಳಿವೆ, ಭೂಮಿಯ ಕೆಳಗೆ! ಶಾಲೆ, ಚರ್ಚು, ಅಡಿಗೆಮನೆ, ಕೊಠಡಿಗಳು, wine cellar ಎಲ್ಲ ಇದೆ! ಗಾಳಿಯಾಡಲು ಮೇಲಿನಿಂದ ಕೆಳಗಿನವರೆಗೂ ಚಿಮಣಿ ಕೂಡ ಇದೆ. ಶೌಚಕ್ಕೆ ಏನು ಮಾಡ್ತಿದ್ರೋ ದೇವರಿಗೇ ಗೊತ್ತು!

ಇಹ್ಲಾರ (Ihlara ) ಕಣಿವೆ ಉಚೈಸರ್-ನಿಂದ ೭೦ ಕಿಮಿ ದೂರವಿದೆ. ಮೇಲೆ ಹೆಸರಿಸಿರುವ ಕಣಿವೆಗಳಿಗಿಂತ ತುಂಬಾ ಭಿನ್ನವಾಗಿದೆ. ಹಸ್ಸನ್ ಪರ್ವತದಿಂದ ಹಿಮ ಕರಗಿ ನದಿ ಹರಿಯುವುದರಿಂದ ಇಲ್ಲಿ ಸಸ್ಯ ಸಂಪತ್ತು ಹೇರಳವಾಗಿದೆ. ಸುಮಾರು ೧೪ ಕಿಮಿ ನಡಿಗೆಯ ದಾರಿ ಇದೆ. ನದಿಯ ಪಕ್ಕದಲ್ಲೇ, ಎರಡೂ ಕಡೆ ಸುವ್ಯವಸ್ಥಿತ ಹಾದಿ. ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚುಗಳು, ಟೀ/ಹಣ್ಣಿನ ರಸ ಮಾರುವ ಅಂಗಡಿಗಳು, ಶೌಚಾಲಯಗಳ ಸೌಲಭ್ಯವಿದೆ.

ಅಕ್ಸಾರ್ಸೆ (Aksaray) ಇಂದ ಇಹ್ಲಾರದವರೆಗೂ ಸುಮಾರು ೧೪ ಕಿಮಿ ದೂರದ ಹಾದಿ. ನಾವು ಬಿಲಿಸಿರ್ಮಾ (bilisirma) ಎಂಬ ಊರಲ್ಲಿ ಕಾರು ನಿಲ್ಲಿಸಿ, ೭ km ನಡೆದು ಇಹ್ಲಾರ ತಲುಪಿ, ಅಲ್ಲಿ ಸ್ಥಳೀಯ ರೆಸ್ಟಾರಂಟಿನಲ್ಲಿ ನಿಜವಾದ ಟರ್ಕಿಷ್ ಊಟ ಮಾಡಿ ಮತ್ತೆ ೭ km ನಡೆದು ಕಾರು ತಲುಪಿ ಹಿಂದಿರುಗಿದೆವು, ಒಟ್ಟು ೪ ಗಂಟೆಗಳ ಹಾದಿ. ಈ ಕಣಿವೆಯಲ್ಲಿ ಹಲವಾರು ಮಾನವ ನಿರ್ಮಿತ ಗುಹೆಗಳು ಹಾಗೂ ಗುಹೆಗಳಲ್ಲಿ ಈಗರ್ಜಿಗಳು ಇವೆ. ಈಗರ್ಜಿಗಳಲ್ಲಿನ ಬಣ್ಣ ಬಣ್ಣದ ಚಿತ್ತಾರಗಳು ಈಗಲೂ ಉಳಿದಿವೆ.

ಇಷ್ಟೆಲ್ಲಾ ನಡೆದಮೇಲೆ ಕೈ ಕಾಲುಗಳಿಗೆ ವಿಶ್ರಾಂತಿ ಕೊಡಲು ಟರ್ಕಿಷ್ ಹಮಾಮಿ ಒಂದು ಒಳ್ಳೆಯ ಸಾಧನ. ಮೈ, ಕೈಗಳಿಗೆ ಎಣ್ಣೆ ತೀಡಿ, ಮಸಾಜ್ ಮಾಡಿ, sauna ನಲ್ಲಿ ಕೂರಿಸಿ ಬೆವರಿಳಿಸಿ, ಸೋಪಿನ ನೊರೆ ನೊರೆಯಲ್ಲಿ ಮುಳುಗಿಸಿ ಸ್ನಾನ ಮಾಡಿಸಿಕೊಳ್ಳುವ ಐಷಾರಾಮ ಯಾರಿಗೆ ಬೇಡ!

Hot air ಬಲೂನ್ ಗಳಿಗೆ ಕಪಡೋಕಿಯ ಬಹಳ ಪ್ರಸಿದ್ಧ. ಬೆಳಗಿನ ಜಾವ ೫ ಘಂಟೆಗೆ ಹೊರಟು, ೬ ಘಂಟೆಗೆ ಬಲೂನಿನ ಬುಟ್ಟಿಗಳಲ್ಲಿ ನಿಂತು, ನಿಧಾನವಾಗಿ ಗಾಳಿಯಲ್ಲಿ ತೇಲುತ್ತಾ, ಮೇಲೇರುವ ನೂರಾರು ಬಲೂನ್ ಗಳನ್ನು ನೋಡುವುದೇ ಒಂದು ಆನಂದ, ವಿಸ್ಮಯ! ಸುತ್ತ ಮುತ್ತ ನಡೆದು ನೋಡಿದ valley ಗಳನ್ನು ಮೇಲಿನಿಂದ, ಹಕ್ಕಿಯಂತೆ ನೋಡುವ ಮಜವೇ ಬೇರೆ! Quad bike ride, range rover ride, ಕುದುರೆ ಸವಾರಿ, microlight flying – ಹೀಗೆ ಹಲವು ಹತ್ತಾರು ಚಟುವಟಿಗೆಗಳಿಗೆ ಅವಕಾಶವಿದೆ .

ಇದ್ದ ಏಳು ದಿನಗಳಲ್ಲಿ ತಾಪಮಾನ ೧೭ರಿಂದ ೨೭ ಡಿಗ್ರಿ ಸೆಲ್ಸಿಯಸ್ ತಲುಪಿತ್ತು! ಆದರೆ ಬೆಳಿಗ್ಗೆ ಮತ್ತು ರಾತ್ರಿ ತಂಪಾಗಿರುತ್ತದೆ. ಒಂದು ಶಾಲ್/ಜಾಕೆಟ್ ಬೇಕೆನಿಸುತ್ತದೆ . ಒಂದೆರಡು ದಿನ ೧೦ -೧೫ ನಿಮಿಷ ಮಳೆಯೂ ಬಂತು. ಬೇಸಿಗೆಯಲ್ಲಿ ೩೨ ಡಿಗ್ರಿವರೆಗೂ ಹೋಗತ್ತದೆ, ಆದರೆ ಅಷ್ಟು ಸೆಖೆ ಆಗಲ್ಲ ಎಂಬುದು ಸ್ಥಳೀಯರ ಅಂಬೋಣ.

ಒಟ್ಟಿನಲ್ಲಿ ಚಾರಣಿಗರು ಸುಲಭವಾಗಿ ೫ -೬ ದಿನಗಳನ್ನ ಕಪಡೋಕಿಯದಲ್ಲಿ ಕಳೆಯಬಹುದು . ಗೋರೇಮೇ ಮತ್ತು ಉಚೈಸರ್ ನಲ್ಲಿ ಬಹಳಷು ಹೋಟೆಲ್ ಮತ್ತು ರೆಸ್ಟೋರೆಂಟುಗಳಿವೆ . ಭಾರತೀಯ ರೆಸ್ಟೋರೆಂಟುಗಳೂ ಇವೆ . ಕೊಮ್ಗೆನೆ (Komgene) ಅನ್ನುವ ಸ್ಥಳೀಯ food chain ನಲ್ಲಿ ‘ದುರಂ’ (veg wrap) ಮತ್ತು ayran (ಮಜ್ಜಿಗೆ) ನಮ್ಮ ಮಧ್ಯಾಹ್ನದ ಊಟವಾಗಿತ್ತು. ಕಡಿಮೆ ವೆಚ್ಚ, ರುಚಿಕರ ಊಟ, ಕಡಿಮೆ ಸಮಯದಲ್ಲಿ! ಪ್ರವಾಸಿಗರ ಜಾಗವಾಗಿರುವುದರಿಂದ, ಎಲ್ಲ ದರಗಳೂ ಯುರೋ ಅಥವಾ ಯುಎಸ್ ಡಾಲರುಗಳಲ್ಲಿ! ಸ್ವಲ್ಪ ದುಬಾರಿ ಎಂದೇ ಹೇಳಬಹುದು. ಆದರೂ ಈ ಪ್ರಕೃತಿಯ ಅದ್ಭುತವನ್ನು ಒಮ್ಮೆ ಖಂಡಿತ ನೋಡಬೇಕಾದ್ದೇ.

ಕತೆಯಾಯಿತು  ಮರ

  • ಯೋಗೀಂದ್ರ ಮರವಂತೆ

ನೂರ್ಕಾಲ ಬದುಕಿದರೆ ಮಾನವರಿಗೊಂದು ವಿಶೇಷ ಸಾಧನೆ. ಕೇವಲ ಆಯಸ್ಸು ವಿಶೇಷತೆಯ ಮಾನದಂಡವಾಗದು. ಸ್ಥಳದ ನಾವಿನ್ಯತೆ, ಜನಪ್ರಿಯತೆ ಅಲ್ಲಿನ ವೈಶಿಷ್ಟ್ಯವನ್ನು ಅವಲಂಬಿಸಿರುತ್ತದೆ. ಇಂಗ್ಲೆಂಡ್, ಸ್ಕಾಟ್ಲೆಂಡಿನ ಗಡಿಯುದ್ದಕ್ಕೂ ರೋಮನ್ನರು ಕಟ್ಟಿದ ಹೆಡ್ರಿಯನ್ ಗೋಡೆ (ಪಾಗಾರ) ಐತಿಹಾಸಿಕ ಕುರುಹು. ಆ ಪಾಗಾರ ಮುರಿದು ಬಿದ್ದ, ಎರಡು ಗುಡ್ಡಗಳ ನಡುವೇ ಬಳುಕುವ ಸೊಂಟದಂದದ ಜಾಗೆಯಲ್ಲಿ ಸುಮಾರು ನೂರೈವತ್ತು ವರ್ಷಗಳಿಂದ ಸ್ವತಂತ್ರವಾಗಿ ಹರಡಿ ಸೊಂಪಾಗಿ ಬೆಳೆದಿದ್ದ ಚೆಲುವೆ ಸಿಕಮೋರ್ ಗ್ಯಾಪ್ ಮರ. ಸಿಕಮೋರ್ ಮರಗಳು ಸರಿ ಸುಮಾರು ೩ ೦ ೦ -೪ ೦ ೦ ವರ್ಷಗಳ ಕಾಲ ಬಾಳ ಬಲ್ಲವು. ಮರಗಳ ಜಗತ್ತಿನಲ್ಲಿ ೩ ಶತಮಾನಗಳ ಬಾಳ್ವೆ ಏನೇನೂ ಅಲ್ಲ. ಸಹಸ್ರಾರು ವರ್ಷಗಳ ಕಾಲ ಬದುಕಿ ಮನುಕುಲದ ಉನ್ನತಿ ಅವನತಿಯ ಹಾದಿಯನ್ನೆಲ್ಲ ಅವಲೋಕಿಸುವ ಮರಗಳು ಜಗತ್ತಿನ ತುಂಬೆಲ್ಲ ಕಾಣ ಸಿಗುತ್ತವೆ. ಇಂದಿನ ಲೇಖನ ನೀವು ಊಹಿಸಿದಂತೆ ನಾರ್ಥಂಬಲ್ಯಾನ್ಡ್ ನ ಪ್ರಸಿದ್ಧ ಸಿಕಮೋರ್ ಗ್ಯಾಪ್ ಮರದ ಕಥೆ. ಯೋಗೀಂದ್ರ ಅವರ ಬರಹದಲ್ಲಿ ಹಿಂದೆ ನಾವು ಕಂಡಂತೆ ಅಮೂರ್ತವನ್ನು ಮೂರ್ತವಾಗಿಸುವ, ನಿರ್ಜಿವವನ್ನು ಸಜೀವಗೊಳಿಸುವ ವೈಶಿಷ್ಟ್ಯತೆ ಇದೆ. ಅದೇ ಹೊಳಹಿನಲ್ಲಿ ಮರವನ್ನು ಅವರು ಮಾನವ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಿಸಿದ್ದಾರೆ. ಈ ಲೇಖನವನ್ನು ಓದುವಾಗ ಕರುಣೆ, ಜಿಗುಪ್ಸೆ, ಕ್ರೌರ್ಯ, ಮತ್ಸರ, ಕುಹಕತೆ, ಇನ್ನಿತರ ಭಾವಗಳು ನಿಮ್ಮಲ್ಲಿ ಹೊಮ್ಮುವುದು ಖಚಿತ. ಕೊನೆಯಲ್ಲಿ ಮಾನವನ ಕ್ರೌರ್ಯಕ್ಕೆ ಸರಿ ಸಮನಾಗಿ ಪ್ರಕೃತಿ ಹಾಗೂ ಮಾನವನ ಧನ್ವಂತರಿ ಸ್ಪರ್ಶದ ಪರಿಣಾಮವನ್ನೂ ಕಾಣಬಹುದು.

-ಸಂಪಾದಕ

ಸಿಕಾಮೋರ್ ಗ್ಯಾಪ್ ಮರ ತನ್ನ ಉಚ್ಛ್ಛ್ರಾವಸ್ಥೆಯಲ್ಲಿ (ಚಿತ್ರ ಕೃಪೆ : ಅಂತರ್ಜಾಲ)

ಈಗಷ್ಟೇ ಕಳೆದ,  ಮೇ ತಿಂಗಳ ಒಂಬತ್ತನೆಯ ತಾರೀಕಿನಂದು  ಜಗತ್ತಿನ ಯಾವ ಯಾವ ನ್ಯಾಯಾಲಯದಲ್ಲಿ ಎಷ್ಟೆಷ್ಟು  ವಾದ ಪ್ರತಿವಾದ ನಡೆಯಿತೋ  ಗೊತ್ತಿಲ್ಲ, ಯಾರು ಕೊಲೆಗಾರ ಅಲ್ಲದಿದ್ದರೆ  ವಂಚಕ ಎಂದು ಸಾಬೀತಾಯಿತೋ ತಿಳಿದಿಲ್ಲ . ಎಷ್ಟು ಆಪಾದಿತರಿಗೆ ಶಿಕ್ಷೆಯ  ಘೋಷಣೆ , ಇನ್ನೆಷ್ಟು ನಿರಪರಾಧಿಗಳ ಖುಲಾಸೆ ಎಂದು ಹೇಳುವುದು ಅಸಾಧ್ಯ.
ಆದರೆ ಇಂಗ್ಲೆಂಡ್ ನ ಉತ್ತರ ಗಡಿಯ ನ್ಯೂ ಕಾಸಲ್ ಕ್ರೌನ್  ಕೋರ್ಟಿನ  ನ್ಯಾಯಾಧೀಶರು ಆ ದಿನದ  ಅತ್ಯಂತ ವಿಶಿಷ್ಟ ತೀರ್ಪೊಂದನ್ನು ನೀಡಿದ್ದರು. ಆ ತೀರ್ಪು , ಆ ದಿನದ ಮಾತ್ರವಲ್ಲ ,  ಇಡೀ ವರ್ಷದ, ದಶಕದ, ಶತಮಾನದ,  ಅಲ್ಲದಿದ್ದರೆ ಯಾವ ನ್ಯಾಯ ವ್ಯವಸ್ಥೆಯೂ ಎಂದೂ ಉಚ್ಛರಿಸಿರಲಾರದ  ಅಪೂರ್ವ ತೀರ್ಪೂ  ಆಗಿದ್ದಿರಬೇಕು. ಅಂದು ಕಟಕಟೆಯಲ್ಲಿ ನಿಂತಿದ್ದ ಇಂಗ್ಲೆಂಡ್ ನ ಉತ್ತರ-ಪಶ್ಚಿಮ (ವಾಯುವ್ಯ) ಪ್ರಾಂತ್ಯದ ಇಬ್ಬರು ಸಾಮಾನ್ಯ ವ್ಯಕ್ತಿಗಳ ಕಿಡಿಗೇಡಿತನ ಸಾಬೀತಾಗಿತ್ತು.  ಅವರೇ  ಅಪರಾಧಿಗಳು ಎಂದು ತೀರ್ಪು ಹೊರಬಿದ್ದಿತ್ತು ,  ಅಪರಾಧಕ್ಕೆ ತಕ್ಕುದಾದ ಶಿಕ್ಷೆ ಮುಂದಿನ ತಿಂಗಳು ಜುಲೈಯಲ್ಲಿ ನಿರ್ಧಾರವಾಗಲಿದೆ  ಎಂದೂ ತಿಳಿಸಲಾಗಿತ್ತು.

ಆರೋಪಿಗಳಿಗೆ ಶಿಕ್ಷೆ ಆಗುವುದೇನೂ ಹೊಸತಲ್ಲ ಬಿಡಿ.  ಅಂದು ಆರೋಪಿಯಿಂದ ಅಪರಾಧಿಗಳಾಗಿ ಬದಲಾದವರು ವಾಯುವ್ಯ ಇಂಗ್ಲೆಂಡ್ ನ ಕಂಬ್ರಿಯ  ಅಥವಾ ಅದೇ ಪ್ರಾಂತ್ಯದ ವಿಶ್ವವಿಖ್ಯಾತ ಹೆಸರಾದ  ಲೇಕ್ ಡಿಸ್ಟ್ರಿಕ್ಟ್ ಪ್ರದೇಶದ  ವಾಸಿಗಳು . ಅವರೊಂದು   ಕುಚೋದ್ಯವನ್ನು ಮಾಡಿದ್ದರು. ಸುಮಾರು ಎರಡು ವರ್ಷಗಳ ಹಿಂದಿನ ನಡುರಾತ್ರಿಗೆ, ತುಸು ದೂರ  ಕಾರು ಓಡಿಸಿಕೊಂಡು ಹೋಗಿ  ಆಮೇಲೆ ಇಪ್ಪತ್ತು ನಿಮಿಷ ನಡೆದು  ಗರಗಸ ಹಿಡಿದು ನಾರ್ಥಂಬರಲ್ಯಾಂಡ್ ಎನ್ನುವ ಪ್ರದೇಶಕ್ಕೆ ಬಂದಿದ್ದರು. ಜೋರು ಗಾಳಿ ಬೀಸುವ ತಣ್ಣಗಿನ ಹವೆಯ ಆ ರಾತ್ರಿ  ಅಲ್ಲಿದ್ದ ಒಂದು ಪುರಾತನ ವೃಕ್ಷವನ್ನು ವಿನಾಕಾರಣ ಕಡಿದಿದ್ದರು. ಸಕಾರಣವಾಗಿಯಾದರೂ ಒಂದು ಮರವನ್ನು ಕಡಿಯಬಹುದೇ ಎನ್ನುವುದೇ ಒಂದು ದೊಡ್ಡ ಜಿಜ್ಞಾಸೆ. ಮರಗಳಿಗೆ ವಿವೇಚನೆ ಇದ್ದರೆ , ಅದಕ್ಕೆ ತಕ್ಕುದಾಗಿ ಮಾತೂ  ಬಂದಿದ್ದರೆ ಅವುಗಳ ಅಭಿಪ್ರಾಯ  ಏನಿರುತ್ತಿತ್ತೋ? ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದೇ  ಎನ್ನುವ ಪ್ರಶ್ನೆಗೆ ಮನುಷ್ಯರು ನೀಡಬಹುದಾದ  ಉತ್ತರಕ್ಕಿಂತ ಮರಗಳು  ನೀಡುವ ಉತ್ತರ ಬಹಳ ಭಿನ್ನ ಇರಲಿಕ್ಕಿಲ್ಲ. ಹಾಗಂತ  ಭೂಮಿ ಆಕಾಶಗಳ ಪ್ರತಿ ಅಂಗುಲಕ್ಕೂ  ಅನಭಿಷಕ್ತ ದೊರೆಯಂತೆ ವರ್ತಿಸುವ ಮನುಷ್ಯರಿಗೆ ಮರಗಳನ್ನು ಕಡಿಯಬಹುದೇ ಎನ್ನುವ ಪ್ರಶ್ನೆಯೇ  ಅಪ್ರಸ್ತುತ ವಿಲಕ್ಷಣ ವಿನೋದವಾಗಿ ಕಂಡೀತು.

ಇರಲಿ, ಅಂತೂ ಆ ಇಬ್ಬರು ಜೊತೆಯಾಗಿ ಎಲ್ಲ ಅರ್ಥ ಜಿಜ್ಞಾಸೆಗಳನ್ನು ಮೀರಿ ಮರವೊಂದನ್ನು ಕಡಿದಿದ್ದರು. ಹಾಗೆ ತಾವು ಕಡಿದು ಒರಗಿಸಿದ ಮರದ ದಿಮ್ಮಿ ,ತೊಗಟೆ, ಎಲೆ, ಟೊಂಗೆ, ಟಿಸಿಲು, ಬೇರು ನಾರು ಯಾವುದೂ ಆ ಮರಕಟುಕರಿಗೆ ಬೇಕಿರಲಿಲ್ಲ. ಕಟ್ಟಿಗೆಗಾಗಿ ಮಾರಿ ಹಣ ಮಾಡುವ ಉದ್ದೇಶವೂ  ಅವರದಾಗಿರಲಿಲ್ಲ. ಯಾರೋ ನೆಟ್ಟ, ಯಾರದೋ ಇಚ್ಛೆಯಿಂದಾಗಿ ಆ ಸ್ಥಳದಲ್ಲಿ ಬೆಳೆದ, ನಿತ್ಯ ಜೀವನ್ಮುಖಿ  ಪ್ರಕೃತಿಗೆ ಆ ಪ್ರದೇಶದಲ್ಲೊಂದು ಹೊಸ ಆಯಾಮ ನೀಡಿದ, ಭೂಮಿ ಬಾನು ,ನಾಡು ಕಾಡು, ಹುಲ್ಲು ಹಸಿರು, ಕಲ್ಲು ಮಣ್ಣುಗಳು ಒಂದಾಗಿ ನಲಿಯುವ, ಬೆಟ್ಟ ಕಣಿವೆಗಳು ಒಂದಾಗಿ ಕುಣಿಯುವ  ಜಾಗದಲ್ಲಿ  ಬಲಿತ, ಯಾರಿಗೆ ಯಾವ ತೊಂದರೆಯನ್ನೂ ಕೊಡದ, ಸಾಧ್ಯ ಆದರೆ ತಂಪು ನೆರಳು ಶುದ್ಧ ಗಾಳಿ ಮತ್ತೆ ನಯನ ಮನೋಹರ ದೃಶ್ಯವನ್ನು ಸಹಜವಾಗಿ ಬಿಡಿಸುತ್ತ  ಅಸಂಖ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತ ಪ್ರಸಿದ್ಧವಾಗಿದ್ದ ಮರವೊಂದು  ಅಚಾನಕ್ ಇಲ್ಲದಿದ್ದರೆ ಜಗತ್ತು ಹೇಗೆ ಪ್ರತಿಕ್ರಿಯಿಸಬಹುದು  ಎಂದು ಆ ಇಬ್ಬರಿಗೆ ನೋಡಬೇಕಿತ್ತು. ಅಷ್ಟೇ. ಬರೇ ಅಷ್ಟೇ. ಒಂದು ಮರವನ್ನು ಕಡಿಯಲು ಅವರಿಗಿದ್ದದ್ದು ಅದೊಂದೇ  ಕ್ಷುಲ್ಲಕ ಕಾರಣ-ಪ್ರೇರಣೆ. ಕಾಲ, ಭೂಮಿ, ಜೀವಿ, ಜೀವನ  ಸಂದರ್ಭ ಎಲ್ಲವನ್ನು  ಒಂದು ಕ್ಷಣಕ್ಕಾದರೂ ಅಪಹಾಸ್ಯ ಮಾಡಲು ಅವರು ಕಂಡುಕೊಂಡ ದಾರಿ, ಪುರಾತನ ಚಾರಿತ್ರಿಕ ಸಿಕಮೋರ್ ಮರವನ್ನು ಕಡಿಯುವುದು. ಮತ್ತೆ  ಆ ಮರದ ಬಗ್ಗೆ ಕೇಳಿದವರ, ನೋಡಿದವರ, ಫೋಟೋ ತೆಗೆದವರ, ನೆರಳಲ್ಲಿ ಒಂದು ಘಳಿಗೆ ಕುಳಿತವರ, ತಮ್ಮ ಮೃತ ಆಪ್ತರ ಬೂದಿಯನ್ನು ಮರದ ಆಸುಪಾಸಲ್ಲಿ ಚೆಲ್ಲಿ ಆರ್ದ್ರರಾದವರ ಅಸಹಾಯಕತನ ಸಂಕಟವನನ್ನು ನೆನೆದು ಖುಷಿ ಪಡುವುದಿತ್ತು.  ಒಟ್ಟಾರೆ ಆ  ಮರಕಟುಕರಿಂದ ,
ಸುಮಾರು ೧೫೦ ವರ್ಷಗಳ ಹಿಂದೆ ನೆಡಲ್ಪಟ್ಟ ಸಸಿ ಮರ ಹೆಮ್ಮರವಾಗಿ ಬೆಳೆದು ಜಗತ್ತಿನ ಮೂಲೆಮೂಲೆಯ  ಪ್ರವಾಸಿಗಳಿಗೆ ಪರಿಸರ ಪ್ರೇಮಿಗಳಿಗೆ, ಸಿನೆಮಾ ನಿರ್ದೇಶಕರಿಗೆ, ಇವರ್ಯಾರೂ ಅಲ್ಲದ ಜನಸಾಮಾನ್ಯರಿಗೆ,  ಅಷ್ಟೇ ಏಕೆ ಇಡೀ ಈಶಾನ್ಯ ಇಂಗ್ಲೆಂಡಿಗೆ
ಹೆಗ್ಗುರುತೇ  ಆಗಿದ್ದ “ಸಿಕಮೋರ ಗ್ಯಾಪ್ ಮರ ” ಅಂದು ಕಡಿಯಲ್ಪಟ್ಟು ನೆಲದ ಮೇಲೆ ಧೊಫ್ ಎಂದು ಬಿದ್ದಿತ್ತು. ಕಡಿಯಲ್ಪಟ್ಟ ನಡುರಾತ್ರಿಯಿಂದ ಬೆಳಗಿನ ತನಕವೂ ಆ ಮರವನ್ನು ತಿಳಿದವರು ಎಲ್ಲೆಲ್ಲಿ ಹೇಗೇಗೆ ಇದ್ದರೂ ಅವರಿಗೆಲ್ಲ ತಮ್ಮ ಜಗತ್ತು ಏನೂ ಬದಲಾಗದೆ ನಿನ್ನೆಯಂತೆಯೇ ಇದೆ ಎನ್ನುವ ಭ್ರಮೆಯೇ  ಮುಂದುವರಿದಿತ್ತು.  ಹಾಗಂತ ಬೆಳಗಾಗುತ್ತಲೇ, ಒಂದು ಕೆಟ್ಟ ಹಾಸ್ಯಕ್ಕಾಗಿ ಮಾಡಿದ ಕೃತ್ಯ ನೂರೈವತ್ತು  ವರ್ಷಗಳ ಇತಿಹಾಸದ ಹಾದಿ ಬದಲಿಸಿತ್ತು. ೨೦೨೩ರ ಸೆಪ್ಟೆಂಬರ್ ೨೮ ರ ಬೆಳಿಗ್ಗೆ ಆ ಮರವನ್ನು ನೋಡಿ, ಕೇಳಿ, ತಿಳಿದಿದ್ದ ಎಲ್ಲರಿಗೂ ಆಘಾತ, ದುಗುಡ, ಹತಾಶೆ ಕಾದಿತ್ತು.

ನಿತ್ಯವೂ ಜಗತ್ತಿನ ಮೂಲೆಮೂಲೆಗಳಲ್ಲಿ  ಮರಗಳು ಉರುಳುವುದು, ಗಿಡಗಳನ್ನು ಸವರುವುದು, ಕಟ್ಟಡವನ್ನು ಎಬ್ಬಿಸುವುದು, ರಸ್ತೆಯನ್ನು ಹಾಸುವುದು ಅಭಿವೃದ್ಧಿಯ ಸಂಕೇತವಾಗಿರುವಾಗ ಈಶಾನ್ಯ ಇಂಗ್ಲೆಂಡಿನ ಸಣ್ಣ ಊರಿನ ಹಳೆಯ ಮರವನ್ನು ಉರುಳಿಸಿದವರು ಯಾಕೆ
ಬಂಧನಕ್ಕೊಳಗಾದರು?  ಬಂಧಿಸಲ್ಪಟ್ಟವರನ್ನು ನ್ಯಾಯಾಲಯ ಏಕೆ  ಅಪರಾಧಿ ಎಂದು ತೀರ್ಮಾನಿಸಿತು? ಮನುಷ್ಯರಿಗೆ ಹೀಗೊಂದು ಪ್ರಶ್ನೆ ಬರುವ ಸಾಧ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ ನಿತ್ಯವೂ ಕಡಿಯಲ್ಪಡುವ ಅಷ್ಟೇನೂ ಪ್ರಸಿದ್ಧವಲ್ಲದ ಅತಿ ಸಾಮಾನ್ಯ ಮರಗಳ
ಸಂತತಿಗಾದರೂ ಹೀಗೊಂದು ಸಂದೇಹ ಕಾಡೀತು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ , ಇಂತಹದ್ದೆಂದು ದಾಖಲಾಗದ ದಿನದಂದು ವಕೀಲ, ಅನ್ವೇಷಕ ಮತ್ತೆ ಸದ್ರಿ ಸ್ಥಳದ ಅಂದಿನ ಮಾಲೀಕ ಜಾನ್ ಕ್ಲೇಟನ್ ಅಲ್ಲಿನ ಸುಂದರ ಪರಿಸರಕ್ಕೆ ಪೂರಕವಾಗಲಿ ಎಂದು  ಈ ಆ ಸಿಕಮೊರ್ ಸಸಿಯನ್ನು  ನೆಟ್ಟಿದ್ದ, ಇತಿಹಾಸ
ಪ್ರಸಿದ್ಧ ಹ್ಯಾಡ್ರಿಯನ್ ಗೋಡೆಯ ಪಕ್ಕದಲ್ಲಿ.   ರೋಮನ್ನರು ಇಂಗ್ಲೆಂಡಗೆ ಕಾಲಿಟ್ಟ ಆರಂಭಿಕ ಕಾಲವಾದ  ಒಂದನೆಯ ಶತಮಾನದಷ್ಟು ಹಿಂದೆಯೇ ೧೩೫ ಕಿಲೋಮೀಟರು ಉದ್ದದ ಆ ಗೋಡೆ  ಕಟ್ಟಲ್ಪಟ್ಟಿತ್ತು. ಆಧುನಿಕ ಕಾಲದಲ್ಲಿ  ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಗಳ
ಗಡಿಯಂತೆಯೂ ಕಾಣುವ ಹ್ಯಾಡ್ರಿಯನ್ ಗೋಡೆಯ ಉತ್ಖತನದಲ್ಲಿ  ಜಾನ್ ಕ್ಲೇಟನ್ ಐವತ್ತು ವರ್ಷ ತೊಡಗಿಸಿಕೊಂಡವನು. ಅನಾದಿ ಕಾಲದ ಗೋಡೆಯ ಸುದೀರ್ಘ ಭವಿಷ್ಯದ ಬಗ್ಗೆ ಕಾಳಜಿ ಇದ್ದವನು. ಆ ಗೋಡೆಯ ಕಲ್ಲುಗಳನ್ನು ಅವರಿವರು ಒಂದೊಂದೇ ಜಾರಿಸಿ ಕೊಂಡುಹೋಗಿ
ಮುಂದೊಂದೊಂದು ದಿನ ಗೋಡೆಯೇ ನಶಿಸಿ ಹೋಗುವ ಬಗ್ಗೆ ಅವನಿಗೆ ಆತಂಕ ಇತ್ತು. ಶ್ರೀಮಂತ ಹಿನ್ನೆಲೆಯ ಆತ  ಕೆಲವು ಕೋಟೆಗಳ ಜೊತೆಗೆ ಹ್ಯಾಡ್ರಿಯನ್  ಗೋಡೆಯ ಇಪ್ಪತ್ತು ಮೈಲಿ ಉದ್ದದ ಭಾಗದ ವಾರೀಸುದಾರನೂ ಆಗಿದ್ದ. ಸಹಜವಾಗಿ ಗುಡ್ಡ ಕಣಿವೆಗಳು ಹತ್ತಿಳಿಯುವ ಆ  ಗೋಡೆಯ ಒಂದು ನೈಸರ್ಗಿಕ ತಗ್ಗಿನಲ್ಲಿ ಸಿಕಮೊರ್  ಸಸಿಯನ್ನು ನೆಟ್ಟಿದ್ದ.  ಸಸಿ ಬೆಳೆದದ್ದು, ಬಲವಾದದ್ದು, ಜಗತ್ತಿನ ದಿಕ್ಕುದೆಸೆಯ ಪ್ರವಾಸಿಗಳಿಗೆ ಆಗಂತುಕರಿಗೆ, ಅಭ್ಯಾಗತರಿಗೆ ನಿರ್ಮಲ ಘಳಿಗೆಯನ್ನು ಹಂಚಿದ್ದು,  ಮತ್ತೆ ಎರಡು ವರ್ಷಗಳ ಹಿಂದೆ ಇಬ್ಬರ ಗರಗಸಕ್ಕೆ ಬಲಿಯಾಗಿ ಹ್ಯಾಡ್ರಿಯನ್ ಗೋಡೆಯ ಮೇಲೆಯೇ  ಉರುಳಿ ಬಿದ್ದದ್ದು  ಎಲ್ಲವೂ ಮರವೊಂದರ ದೀರ್ಘ ಇತಿಹಾಸದ ಅನಿರೀಕ್ಷಿತ ಇತ್ತೀಚಿನ ಮುಂದುವರಿಕೆ.

ಉರುಳಿ ಬಿದ್ದ ಮರದ ಭವಿಷ್ಯವನ್ನು ಸಜ್ಜುಗೊಳಿಸುವ ಕಾರ್ಯ

೨೦೨೩ರ ೨೮ ಸೆಪ್ಟೆಂಬರ್ ಬೆಳಿಗ್ಗೆ, ಬಿದ್ದಿದ್ದ ಮರವನ್ನು ನೋಡಿದ ಸ್ಥಳೀಯರು ಆರಕ್ಷಕರಿಗೆ  ದೂರು ಕೊಟ್ಟಿದ್ದರು. ಸಣ್ಣ ಸಣ್ಣ ಇತಿಹಾಸ ಕತೆ ದಂತಕಥೆಗಳನ್ನೂ ಗೌರವಯುತವಾಗಿ ಸ್ಮರಿಸುವ, ಆರೈಕೆ ಮಾಡಿ ಕಾಯ್ದಿಟ್ಟು ಮತ್ತೆ ಪ್ರವಾಸಿಗರಿಗೂ ಆಸ್ಥೆಯಿಂದ ತೋರಿಸಿ ಹೆಮ್ಮೆ ಪಡುವ  ಸಂಸ್ಕೃತಿಯ ಇಂಗ್ಲೆಂಡನಲ್ಲಿ ಜಗತ್ಪ್ರಸಿದ್ಧ ಮರ ಉರುಳಿದ್ದು “ಹೈ ಪ್ರೊಫೈಲ್ ಕೇಸ್” ಆಗಿತ್ತು; ಮತ್ತೆ ಅಪರೂಪದ್ದೂ.  ತನಿಖೆಯಲ್ಲಿ
ಭಾಗವಹಿಸಿದ ವಿಧಿವಿಜ್ಞಾನ ತಂಡದ ಅಧಿಕಾರಿ ಹೇಳುವಂತೆ “ನನ್ನ ಮೂವತ್ತೊಂದು ವರ್ಷದ ಸೇವೆಯಲ್ಲಿ ಅಪರಾಧದ ಕುರುಹಿಗಾಗಿ ಮರವೊಂದರ ಪರೀಕ್ಷೆಯನ್ನು ಹಿಂದೆಂದೂ ಮಾಡಿದ್ದಿಲ್ಲ”. ತನಿಖೆ ಮುಂದುವರಿದು , ಸುಳಿವು ಸಿಕ್ಕಿ ೨೦೨೪ರ ಏಪ್ರಿಲ್ ಅಲ್ಲಿ
ಡೇನಿಯಲ್ ಮತ್ತು ಆಡಮ್ ಎನ್ನುವ ಕಂಬ್ರಿಯದ  ವಾಸಿಗಳನ್ನು   ಐತಿಹಾಸಿಕ ಮರವನ್ನು ಕಡಿದ, ಮರವನ್ನು ಬೀಳಿಸಿ ಚಾರಿತ್ರಿಕ  ಹ್ಯಾಡ್ರಿಯನ್  ಕಲ್ಲುಗೋಡೆಗೆ ಹಾನಿ ಮಾಡಿದ ಕ್ರಿಮಿನಲ್ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಕೋರ್ಟಿನಲ್ಲಿ  ವಾದ-ಪ್ರತಿವಾದಗಳು ಜರುಗಿ ಅವರ ಅಪರಾಧ ಸಾಬೀತಾದದ್ದು ಮೊನ್ನೆಮೊನ್ನೆಯ ಅಂದರೆ ಇದೇ ವರ್ಷದ ಮೇ ತಿಂಗಳಿನಲ್ಲಿ. ವಿಚಾರಣೆಯ ಉದ್ದಕ್ಕೂ ಅಪರಾಧವನ್ನು ಅಲ್ಲಗಳೆಯುತ್ತಿದ್ದ, ಒಬ್ಬರು ಇನ್ನೊಬ್ಬರನ್ನು ದೂಷಿಸುತ್ತಿದ್ದ , ೩೯ ಹಾಗು ೩೨ ವರ್ಷದ ಅಪರಾಧಿ ಜೋಡಿ, ಮರ ಬೀಳುವ  ಸಂದರ್ಭವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಬಿದ್ದ
ಮರದ ಗೆಲ್ಲೊಂದನ್ನು ಪದಕದಂತೆ ತಮ್ಮೊಡನೆ ಒಯ್ದಿದ್ದರು. ೧೯೯೧ರಲ್ಲಿ ನಿರ್ಮಾಣಗೊಂಡ ರಾಬಿನ್ ಹುಡ್ ಸಿನೆಮಾದ ಒಂದು ಮುಖ್ಯ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿದ್ದ ಮರ, ೨೦೨೩ರ ಸೆಪ್ಟೆಂಬರ್ ೨೭ರ ಜೋರು ಗಾಳಿಯ ನಡುಇರುಳಿನಲ್ಲಿ ಕಿಡಿಗೇಡಿಗಳ ಬ್ಯಾಟರಿ ಚಾಲಿತ ಗರಗಸಕ್ಕೆ ತುತ್ತಾಗಿ ಮುನ್ನಲೆಯಲ್ಲಿ ಅಂತಿಮ ಉಸಿರಳೆದದ್ದು ಎಂತಹ ವಿಪರ್ಯಾಸ! ನಿಮಿಷಗಳಲ್ಲಿ ಆರಂಭವಾಗಿ ಮುಗಿಯುವ ಮರ ಕಡಿಯುವ ಸಂದರ್ಭವನ್ನು ನೋಡಿದವರಲ್ಲಿ ವಿಭಿನ್ನ  ಭಾವನೆಗಳು ಹುಟ್ಟಬಹುದಾದರೂ, ಇನ್ನೇನು ಬೀಳಲಿರುವ ಮರಕ್ಕೆ, ಒಂದು ಕ್ಷಣಕ್ಕೆ ತನ್ನನು ಬದುಕಿಸಲು ಆ ರಾಬಿನ್ ಹುಡ್ ಆದರೂ ಬರಬಾರದಿತ್ತೇ ಎಂದೂ ಅನಿಸಿರಬಹುದು, ತನ್ನನ್ನು ನೆಟ್ಟು ಬೆಳೆಸಿದ  ಜಾನ್ ಕ್ಲೇಟನ್ ಕಣ್ಣೆದುರು ಬಂದಿರಬಹುದು. ತನ್ನ ನೆರಳಲ್ಲಿ ತಂಗಿ ಮುಂದುವರಿದ ಕಾಲ್ನಡಿಗೆಯವರು, ತನ್ನ ಆಸುಪಾಸಿನ ಕ್ಷಣಭಂಗುರದಲ್ಲಿ ಲೀನರಾಗಿ ಮೈಮರೆತ ಲಕ್ಷ ಲಕ್ಷ ಅನಾಮಿಕ ಅಜ್ಞಾತ ಪ್ರವಾಸಿಗರು ಸ್ಮರಣೆಗೆ ಬಂದಿರಬಹುದು. ಬಿಡಿ,  ಫೋನು ತಪಾಸಣೆಯಲ್ಲಿ  ದೊರೆತ ಆ ವಿಡಿಯೋ ತುಣುಕು, ಜನರಲ್ಲಿ
ಎಬ್ಬಿಸುವ ಭಾವಲಹರಿ ಏನೇ ಇದ್ದರೂ ಕಾನೂನು ತನಿಖೆಯ ಮಟ್ಟಿಗೆ ಅತಿ ಅಗತ್ಯವಾದ ಪುರಾವೆಯನ್ನು  ಒದಗಿಸಿತ್ತು. ಮತ್ತೆ ನ್ಯೂ ಕಾಸಲ್ ಕ್ರೌನ್  ಕೋರ್ಟ್ ಆ ಇಬ್ಬರನ್ನು ಅಪರಾಧಿ ಎಂದು ಘೋಷಿಸಲು ಪ್ರಮುಖ ಆಧಾರವಾಗಿ ಒದಗಿತ್ತು.

ಪ್ರಸಿದ್ಧ ಮರದ ಅಕಾಲಿಕ ಸಾವಿನ  ಸುದ್ದಿ ಇಂಗ್ಲೆಂಡಿನ ಒಳಗಿನಿಂದ, ಹೊರಗಿನಿಂದ ತೀವ್ರ ಪ್ರತಿಕ್ರಿಯೆ ಪಡೆದಿತ್ತು. ಸಿಟ್ಟು, ಆಘಾತ, ಆಶ್ಚರ್ಯಗಳು ಸಾಮಾಜಿಕ ಜಾಲತಾಣವನ್ನು ತುಂಬಿದವು. ಸುದ್ದಿ ಪತ್ರಿಕೆಯ ಮುಖಪುಟದಲ್ಲಿ, ವೆಬ್ ಪೇಜ್ ಗಳಲ್ಲಿ ವಸಂತ ವೈಶಾಖದ ಹಸಿರಿನಲ್ಲಿ,  ಶರತ್ ಶಿಶಿರಗಳ  ಹಿಮಹೊದಿಕೆಯಲ್ಲಿ ವಿಭಿನ್ನ ರೂಪದ ಮರದ  ಚಿತ್ರಗಳು ಕಾಣಿಸಿಕೊಂಡವು. ಕೆಲವರು ಭಾವುಕರಾಗಿ ಕವಿತೆಗಳನ್ನು ಕಟ್ಟಿ ಹಾಡಿದ್ದರು. ಕವಿತೆಯ ಸಾಲುಗಳನ್ನು  ಕೇಳಿದ ಕೆಲವರು ಕಣ್ಣೀರು ಹಾಕಿದರು. ಪ್ರಕೃತಿ ಸೃಜಿತ ಗಾಳಿಯ ನಿನಾದ, ಮನುಷ್ಯ ನಿರ್ಮಿತ  ಗರಗಸದ ಕರ್ಕಶ ಸದ್ದುಗಳು ಜೊತೆಯಾದ ಹಿನ್ನೆಲೆ ಸಂಗೀತದಲ್ಲಿ ಶವವಾಗುವ ಮರದ ಚಿತ್ರತುಣುಕು , ಸಾಮಾಜಿಕ ಮಾಧ್ಯಮದಲ್ಲಿ ಅನಾಥ ಅಸಹಾಯಕ ಸಾಕ್ಷಿಗಳಂತೆ ಓಡಾಡಿದವು.

೨೦೨೩ರ ಅಕ್ಟೋಬರನಲ್ಲಿ , ಕಡಿದುಬಿದ್ದ ಮರವನ್ನು ಖಂಡ ತುಂಡು ಮಾಡಿ ಕ್ರೇನ್ ಮೂಲಕ ಸಾಗಿಸಲಾಯಿತು. ಅಕಾಲಿಕ ಸಾವಿನ ಪುರಾತನ ಮರದ ಕತೆಯ ಮುಂದುವರಿದ ಪುಟವಾಗಿ, ಇಲ್ಲಿನ ಹಲವು ನೈಸರ್ಗಿಕ ತಾಣಗಳ ಉಸ್ತುವಾರಿ ವಹಿಸಿಕೊಂಡಿರುವ ನ್ಯಾಷನಲ್ ಟ್ರಸ್ಟ್ ಸಂಸ್ಥೆ ಆ
ಮರದಿಂದ ನಲವತ್ತೊಂಬತ್ತು ಸಸಿಗಳನ್ನು ಬೆಳೆಸಿ ದೇಶದ ಬೇರೆ ಬೇರೆ ಚ್ಯಾರಿಟಿ ಮತ್ತಿತರ ಸಂಸ್ಥೆಗಳಿಗೆ ನೀಡಿತು. ತನ್ನ ಕೊನೆಯ ಕಾಲದಲ್ಲಿ ನಲವತ್ತೊಂಬತ್ತು ಅಡಿ ಉದ್ದ ಇದ್ದ ಮರದ ನೆನಪಿಗಾಗಿ ಬೆಳೆಸಿದ  ೪೯ ಸಸಿಗಳನ್ನು ಚ್ಯಾರಿಟಿ   ಸಂಸ್ಥೆಗಳಿಂದ ಪಡೆಯಲು ಜನರಿಂದ  ಅರ್ಜಿಗಳನ್ನು ಆಹ್ವಾನಿಸಲಾಯಿತು. ೪೯ ಗಿಡಗಳನ್ನು ಪಡೆಯಲು ಯುನೈಟೆಡ್ ಕಿಂಗ್ಡಮ್ ನ ಬೇರೆಬೇರೆ ಭಾಗಗಳಿಂದ  ೫೦೦ ಅರ್ಜಿಗಳು ಬಂದಿದ್ದವು. ಪ್ರತಿಯೋರ್ವ ಅರ್ಜಿದಾರರೂ ತಮಗ್ಯಾಕೆ ಒಂದು ಸಸಿ ಬೇಕು ಎಂದು ಬರೆದಿದ್ದರು. ಸಸಿ ಹಂಚುವ ಅಭಿಯಾನವನ್ನು “ನಾಳಿನ ಭರವಸೆಗಾಗಿ ಮರಗಳು” ಎಂದೂ ಕರೆಯಲಾಗಿತ್ತು. ನಲವತ್ತೊಂಬತ್ತರಲ್ಲಿ ಒಂದು ಸಸಿ, ಹ್ಯಾಡ್ರಿಯನ್ ಗೋಡೆಯಿಂದ ಬಹಳವೇನೂ ದೂರದಲ್ಲಿರದ ಹೆಕ್ಸ್ಹಮ್ ಪ್ರಾಂತ್ಯದಲ್ಲಿ ಮುಂದಿನ ಚಳಿಗಾಲಕ್ಕೆ ನೆಲ ನೆಲೆ ಕಾಣಲಿದೆ.  ಹೋಲಿ ನ್ಯೂಟನ್ ಎನ್ನುವಾಕೆಯ ಸಮಾಧಿಯ ಬಳಿ. ಹದಿನೈದು ವರ್ಷದವಳಿದ್ದಾಗ ಸಂಬಂಧ ಕೊನೆಗೊಂಡದ್ದನ್ನು ಒಪ್ಪಲಾಗದ ಮಾಜಿ ಪ್ರಿಯಕರ ಆಕೆಯನ್ನು ಕೊಲೆ ಮಾಡಿದ್ದ. ಕೊಲೆಯಾದ
ಮಗಳ ನೆನಪಿನಲ್ಲಿ ಬದುಕುತ್ತಿರುವ ಆಕೆಯ ಹೆತ್ತವರು ತಾವು ಪಡೆಯಲಿರುವ ಸಿಕಮೋರ್ ಸಸಿ ಅಳಿದ  ಮಗಳನ್ನು ಸ್ಮರಿಸುವ ಹೊಸ ದಾರಿಯಾಗಿದೆ ಎಂದು ಖುಷಿ ಪಡುತ್ತಿದ್ದಾರೆ. ಇನ್ನುಳಿದ ನಲವತ್ತೆಂಟು ಸಸಿಗಳೂ ಯು.ಕೆಯ ಬೇರೆ ಬೇರೆ ಭಾಗಗಳನ್ನು ಸೇರಿ ಅಲ್ಲೆಲ್ಲ,
ನಾಶವಾದ ಮರದ ಕತೆಯನ್ನು ಹೇಳಲಿವೆ  ನೆನಪನ್ನು ಹಸಿರಾಗಿಡಲಿವೆ .

ಒಂದು ಸಣ್ಣ ಸಹಜ ಸುಂದರ ಖುಷಿಯನ್ನು  ನಿರಂತರವಾಗಿ  ನೂರೈವತ್ತು ವರ್ಷಗಳ ಕಾಲ ಹಂಚಿದ,  ಪ್ರಾಕೃತಿಕ ದ್ರಶ್ಯಕಾವ್ಯದಲ್ಲಿ ಭೂಮಿ ಆಕಾಶದಷ್ಟೇ ಚಿರಂತನ ಎನಿಸಿದ ಮರ, ಕ್ಷುಲ್ಲಕ ಕಿಡಿಗೇಡಿತನದ ಪರಿಣಾಮವಾಗಿ  ಇಲ್ಲದಾದಾಗ, ನಿತ್ಯವೂ ನಮ್ಮನ್ನು ಕಾಯುವ
ಬದುಕಿನ ಭರವಸೆಯೇ ಕರಗಿ ಹೋಗುವ ಸಾಧ್ಯತೆ ಇದೆ. ಆದರೆ ಅಂತಹ ವಿಷಣ್ಣ ಸಾಧ್ಯತೆಯನ್ನು ಎದುರಿಸುವ ,ಮತ್ತೆ ಚೇತೋಹಾರಿ ಉತ್ಸಾಹವನ್ನು ನಮ್ಮ ಒಳಹೊರಗೆ ತುಂಬಿಸುವ  ಹೋರಾಟವನ್ನು ನಲವತ್ತೊಂಬತ್ತು ಸಸಿಗಳು ಆಗಲೇ ಆರಂಭಿಸಿವೆ. ಇನ್ನು ಈಶಾನ್ಯ ಇಂಗ್ಲೆಂಡಿನ ಹ್ಯಾಡ್ರಿಯನ್ ಗೋಡೆಯ ಪಕ್ಕದ  ಕಡಿದ ಬುಡದಲ್ಲೂ  ಚಿಗುರೆಲೆಗಳು  ಮೊಳೆತು “ಹೊಸತು ಜನ್ಮ”ದ  ಸೂಚನೆ ಕಾಣುತ್ತಿದೆ. ಒಂದು ವೇಳೆ ಆ ಮೊಳಕೆಗಳು ಚಿಗುರೆಲೆಗಳು ಬೆಳೆಯುತ್ತಲೇ ಹೋದರೆ ಮುಂದಿನ ಇನ್ನೂರು ವರ್ಷಗಳಲ್ಲಿ, ಎರಡು ವರ್ಷದ ಹಿಂದೆ ಬೀಳುವ ಮೊದಲಿನ  ಮರದಷ್ಟೇ ದೊಡ್ಡ ಮರವೊಂದು ಆಕಾರ ತಳೆಯಬಹುದು ಎಂದು ವೃಕ್ಷ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬರಡು ಬುಡವನ್ನೋ ಎಳೆಯ ಚಿಗುರನ್ನೋ ಅಥವಾ ಮುಂದೆಂದೋ ಅಲ್ಲೊಂದು ಮರ ಎದ್ದು ನಿಲ್ಲುವುದನ್ನೋ ಕನವರಿಸುತ್ತ  ಬರುತ್ತಿರುವವರಿಗೆ  “ಗೌರವದಿಂದ ನಡೆದುಕೊಳ್ಳಿ”ಎನ್ನುವ ಎಚ್ಚರಿಕೆಯ ಫಲಕ ಅಲ್ಲೇ  ತೂಗುಹಾಕಲ್ಪಟ್ಟಿದೆ. ಬಂದು ಮರಳುವವರಿಗೂ ,ಮರಳಿ ಬರುವವರಿಗೂ ,  ನಾಳಿನ  ಭರವಸೆ ಜೀವಂತವಾಗಿದೆ.

—————————

ಯೋಗೀಂದ್ರ ಮರವಂತೆ

ಬುಲಂದ್ ಭಾರತ್ ಕಿ ಬುಲಂದ್ ತಸ್ವೀರ್

ಇತ್ತೀಚಿಗೆ ದೂರದರ್ಶನ ನೋಡುತ್ತಿರುವಾಗ, ನಡು ನಡುವೆ ಬರುವ ಜಾಹಿರಾತುಗಳನ್ನು ನೋಡುತ್ತಿದ್ದೆ. ಡೋಮಿನೋಸ್ ಜಾಹಿರಾತಿನಲ್ಲಿ ಸ್ನಾನ ಮಾಡುತ್ತಿರುವ ಟಬ್ನಲ್ಲಿ ಡೆಲಿವೆರಿಯವನು ಪ್ರತ್ಯಕ್ಷನಾಗಿ ಡೆಲಿವರಿ ಕೊಡುತ್ತಾನೆ, ಇನ್ನೊಂದು ಜಾಹಿರಾತಿನಲ್ಲಿ ನಮ್ಮ ಬಾಲಿವುಡ್ ನಟ ಬಚ್ಚಲು ತಿಕ್ಕಲು ಹಾರ್ಪಿಕ್ ಎಷ್ಟು ಉತ್ತಮ ಎಂದು ತೋರಿಸುತ್ತಾನೆ… ಹೀಗೇ ನೋಡುತ್ತಿದ್ದರೆ ನೀವು ಇನ್ನೂ ವಿಚಿತ್ರವಾದ ಇಂತಹ ಜಾಹಿರಾತು ನೋಡಬಹುದು.ಜಾಹೀರಾತು ಕೆಲವು ವಿಚಿತ್ರವಾದರೆ, ಇನ್ನೂ ಕೆಲವು ಮರೆಯದ ಸುಂದರ ಕಥೆ ತರಹ ಇರುತ್ತವೆ.

ಅಲಿಕ್ ಪದಂಸೀ, ಆರ್ ಬಾಲ್ಕಿ. ಪ್ರಹ್ಲಾದ್ ಕಕ್ಕರ್, ಗೌರಿ ಶಿಂಧೆ, ರಾಮ್ ಮಾಧ್ವಾನಿ ಇವರು ಜಾಹಿರಾತು ಜಗತ್ತಿನ ಕೆಲವು ಪ್ರಮುಖರು. ಸೃಜನಾತ್ಮಕ ಜಾಹಿರಾತು ಸೃಷ್ಟಿಸಿ ಮುಂದೆ ಒಳ್ಳೆಯ ಚಲನಚಿತ್ರಗಳನ್ನೂ ಕೂಡ ಮಾಡಿದ್ದಾರೆ. “ಜಾಹಿರಾತು” ಮತ್ತು “ಸಾಹಿತ್ಯ” ಇದರ ಒಂದು ಸಂಬಂಧ ಹೇಗೆ ಇರಬಹುದು.. ಇಂದಿನ ಲೇಖನ ಇದೆ ವಿಷಯದ ಬಗ್ಗೆ ಬರೆಯೋಣ ಅಂತ ವಿಚಾರ ಬಂತು…ಬರೆದಿದ್ದೇನೆ.

ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲೂ ಸಂಗೀತವೇ…

ಮಲಯ ಮಾರುತದ ಚಿತ್ರದ ಹಾಡು, ಇದೆ ಹಾಡಿನ ಸಾಲುಗಳನ್ನು ಸ್ವಲ್ಪ ಬದಲಿಸಿದರೆ

ಎಲ್ಲೆಲ್ಲೂ ಸಾಹಿತ್ಯವೇ, ಎಲ್ಲೆಲ್ಲೂ ಮಾಹಿತಿಯೇ,
ಓದುವ ಕಣ್ಣಿರಲು, ಅರಿಯುವ ಮನವಿರಲು,
ಎಲ್ಲೆಲ್ಲೂ ಸಾಹಿತ್ಯವೇ…

ಜೀವನದಲ್ಲಿ ಪ್ರತಿ ಶಬ್ದ ಸಂಗೀತವಾದರೆ, ಪ್ರತಿ ಸಾಲು ಸಾಹಿತ್ಯ ಆಗಬಹುದು… ಅದು ಕೇಳುಗನ, ಓದುಗನ ಆಸಕ್ತಿ, ಅಭಿರುಚಿಯ ಅನುಗುಣವಾಗಿ ಅವಲಂಬಿತವಾಗಿದೆ.
ನಾವು ಚಿಕ್ಕವರಿದ್ದಾಗ ಚಲನಚಿತ್ರದ ನೋಡಲು ಚಿತ್ರಮಂದಿರಕ್ಕೆ ಹೋದಾಗ, ನಾವು ನೋಡಿದ
ಜಾಹಿರಾತಿನ ಸಾಲುಗಳಿಂದ ಈ ವಿಚಾರ ಆರಂಭಿಸೋಣ.

“ವಜ್ರದಂತಿ, ವಜ್ರದಂತಿ, ವಿಕೋ ವಜ್ರದಂತಿ,
ವಿಕೋ ಪೌಡರ್, ವಿಕೋ ಪೇಸ್ಟ್,
ಆಯುರ್ವೇದಿಕ್ ಜಡಿಬೂಟಿಯೊಂ ಸೆ ಬನಾ ಸಂಪೂರ್ಣ್ ಸ್ವದೇಶೀ,
ವಿಕೋ ಪೌಡರ್, ವಿಕೋ ಪೇಸ್ಟ್, ವಿಕೋ ವಜ್ರದಂತಿ!!!”

“ವಾಷಿಂಗ್ ಪೌಡರ್ ನಿರ್ಮಾ, ದೂಧ್ ಸಿ ಸಫೆದಿ
ನಿರ್ಮಾ ಸೆ ಆಯಿ, ರಂಗೀನ್ ಕಪಡಾ ಭೀ ಖಿಳ್ ಖಿಳ್ ಜಾಯೆ,
ಹೇಮಾ, ರೇಖಾ, ಜಯಾ ಔರ್ ಸುಷ್ಮಾ
ಸಬ್ಕಿ ಪಸಂದ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮಾ”

ಈ ಸಾಲುಗಳಲ್ಲಿ ಸಾಹಿತ್ಯ ಕಾಣಬಹುದೇ?
ಈ ಪ್ರಶ್ನೆಗೆ ಉತ್ತರಿಸಲು ಸಾಹಿತ್ಯ ಅಂದರೆ ಸರಳವಾದ ಉತ್ತರ ಏನು ಎಂದು ನೋಡೋಣ.

“Literature is a body of work that transmits culture “
ಅಥವಾ “Literature is the collective term for written works valued for their artistic or intellectual merit.”

ವಿಕೋ ವಜ್ರದಂತಿ ಸಾಲುಗಳನ್ನು ನೋಡಿದಾಗ “ಸಂಸ್ಕೃತಿ” ಪದದ ಬದಲಾಗಿ “ನಡೆದು ಕೊಂಡ ಬಂದ ಪದ್ಧತಿ” ಎಂದು ಓದಿದಾಗ ನಮಗೆ ಕಾಣಿಸುವುದು ಆ ಸಮಯದ ಆಯುರ್ವೇದ, ಗಿಡ ಮೂಲಿಕೆ ಉಪಯೋಗ. ನನಗೆ ಇನ್ನೂ ನೆನಪಿರುವುದು ಬೇವಿನ ಕಡ್ಡಿ ಉಪಯೋಗಿಸಿ ಹಲ್ಲುಜ್ಜುತ್ತಿದಿದ್ದು, ಅದರ ಖುಷಿಯೇ ಬೇರೆ. ಇನ್ನು “ಸ್ವದೇಶೀ” ಪದ ನೋಡಿದಾಗ ಅಂದಿನ ಸ್ಥಳೀಯ ಉತ್ಪನ್ನ ಉಳಿಸುವ, ಬೆಳೆಸುವ ಉದ್ದೇಶ. ನಮ್ಮ ದೇಶದ ಪರಂಪರೆಯಾದ ಆಯುರ್ವೇದ ವಿಜ್ಞಾನವನ್ನು ಶ್ರೀ ಜಿ ಕೆ ಪೆಂಡಾರ್ಕರ್ (ವಿಕೋ ಸಂಸ್ಥೆಯ ಸಂಸ್ಥಾಪಕ) ಅವರು ಉತ್ಸಾಹದಿಂದ ಸ್ವದೇಶೀ ಪ್ರಚಾರ ಇದರಲ್ಲಿ ಮಾಡಿದ್ದಾರೆ. ೧೯೬೦ ರ ಸುಮಾರು, ಭಾರತೀಯ ಕಂಪನಿಗಳು ವಿದೇಶಿ ತಂತ್ರಜ್ಞಾನಕ್ಕೆ ಮಾರುಹೋಗುತ್ತಿದ್ದಾಗ, ಶ್ರೀ ಪೆಂಡಾರ್ಕರ್ ಅವರು ಆಯುರ್ವೇದವನ್ನು ನಿರಂತರವಾಗಿ ಪ್ರಚಾರ ಮಾಡಿದರು.

ಇನ್ನು ನಿರ್ಮಾ, ಸಂಸ್ಥೆಯ ಸಂಸ್ಥಾಪಕನ ಮಗಳ ಕಥೆ ಎಂದು ಕೆಲವರಿಗೆ ಗೊತ್ತಿರಬಹುದು. ಕರ್ಸನ್ ಭಾಯ್ ಮಗಳು ನಿರುಪಮಾ, ಅವಳ ನೆನಪು ವರುಷ ವರುಷಗಳ ತನಕ ಇರಲೆಂದು ತಂದೆ ಮಗಳ ಪ್ರೀತಿಯ ಹೆಸರಾದ ನಿರ್ಮಾ ಸಂಸ್ಥೆ ಆರಂಭಿಸಿ, ಅದನ್ನು ಮನೆ ಮನೆಗೆ ತಲುಪಿಸಿದರು. ಇಲ್ಲಿ “ಹೇಮಾ, ರೇಖಾ, ಜಯಾ ಔರ್ ಸುಷ್ಮಾ” ಅಂದರೆ ಪ್ರತಿ ಹೆಣ್ಣು ಮೆಚ್ಚುವ, ಅವರ ಮನೆಯಲ್ಲಿ ಲಭ್ಯವಿರುವದು ನಿರ್ಮಾ ಎಂದು. ಇಲ್ಲಿಯೂ ಕೂಡ ಸುಂದರ ಮತ್ತು ಸರಳ ಪದಗಳ ಪದ್ಯ, “ನಿರ್ಮಾ” ಎಲ್ಲರ ಚಿರಪರಿಚಿತ ಹೆಸರಾಯಿತು.

ಇನ್ನು ಸರಳವಾಗಿ ಜಾಹೀರಾತು ವಿವರಿಸಿದರೆ “ಇದೊಂದು ಸಾಮಾನ್ಯವಾಗಿ ವಿಷಯ ತಿಳಿಯಪಡಿಸುವ ಒಂದು ಕ್ರಿಯೆ. ಇದು ಸಾರ್ವಜನಿಕರ ಗಮನಕ್ಕೆ ಮಾಡುವ ಒಂದು ಕರೆ, ಸಾಮೂಹಿಕ ಮನವಿ”. ಹಾಗಾದರೆ ಜಾಹಿರಾತು ಒಂದು ವಸ್ತು ಅಥವಾ ಉತ್ಪನ್ನ ಮಾರುವ ಒಂದು ಪ್ರಕ್ರಿಯೆ ಅಲ್ಲವೇ?
ಜಾಹೀರಾತುಗಳು, ಉತ್ಪನ್ನವನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಸೀಮಿತ ಅಲ್ಲ. ಅದರ ಮುಖ್ಯ ಉದ್ದೇಶ ಭಾವನೆಗಳನ್ನು ಹುಟ್ಟು ಹಾಕುವದು, ಮನವನ್ನು ಸಂತೋಷದಿಂದ ತುಂಬಿ,ನೆನಪುಗಳ ಆಗರದೆಡೆಗೆ ನಮ್ಮನ್ನು ಕರೆದುಕೊಂಡು ಹೋಗುವುದು…ಭಾವನಾತ್ಮಕ (emmotional) ಸೆಳೆತದಿಂದ ಉತ್ಪನ್ನ ಮತ್ತು ಅಪೇಕ್ಷಿತ (desire) ಭಾವನೆಯ ನಡುವೆ ಉಪಪ್ರಜ್ಞೆಯ (Subconscious) ಸಂಪರ್ಕವನ್ನು ಸೃಷ್ಟಿಸುವದು, ಅದನ್ನು ಹೆಚ್ಚು ಸ್ಮರಣೀಯ ಮತ್ತು ಅಪೇಕ್ಷಣೀಯವಾಗಿಸುವದು. ಅದು ಭಾವನೆಗಳು, ಸಾಮಾಜಿಕ ಸೂಚನೆಗಳು ಮತ್ತು ಅರಿವಿನ ಪೂರ್ವಾಗ್ರಹಗಳ ಮೇಲೆ ಕೇಂದ್ರೀಕರಿಸುತ್ತದೆ.

ಏ ಝಮೀನ್ ಏ ಆಸ್ಮಾನ್
ಹಮಾರಾ ಕಲ್ ಹಮಾರಾ ಆಜ್
ಬುಲಂದ್ ಭಾರತ್ ಕಿ ಬುಲಂದ್ ತಸ್ವೀರ್
ಹಮಾರಾ ಬಜಾಜ್

ಅಲಿಕ್ ಪದಂಸೀ ಅವರ ಬಜಾಜ್ ಜಾಹಿರಾತು ಮನೆ ಮನೆಯ ಹಾಡಾಯಿತು. ದ್ವಿಚಕ್ರ ವಾಹನ ಮಾರುಕಟ್ಟೆ ಅಂತರರಾಷ್ಟ್ರೀಯ ಮಾರಾಟಗಾರರಿಗೆ ತೆರೆದುಕೊಳ್ಳುತ್ತಿದ್ದಾಗ ಈ ಒಂದು ಜಾಹಿರಾತು ಬಜಾಜ್ ಸ್ಕೂಟರ್ ಹೊರತಂದಿತು. ಭಾರತದ ಈ ವಾಹನ ಸಾಮಾನ್ಯ ಜನರನ್ನು ಸಶಕ್ತರಾಗಿ ಮಾಡುತ್ತದೆ ಎಂದು ತೋರಿಸಲು ಅವರು ಇಲ್ಲಿ ಸಾಮಾನ್ಯ ಜನರನ್ನೇ ತೋರಿಸಿದರು…

ಫೆವಿಕಾಲ್, ಲಿಮ್ಕಾ, ಹ್ಯಾಪಿಡೆಂಟ್, ಕ್ಯಾಡ್ಬರಿ ಮುಂತಾದ ಇಂತಹ ಸುಂದರ ಜಾಹಿರಾತು ನೀವು ನೋಡಿರಬಹುದು. ಎಲ್ಲವನ್ನು ಒಂದೇ ಲೇಖನದಲ್ಲಿ ಬರೆಯಲಾಗುವುದಿಲ್ಲ… ಆದರೂ ನೋಡಿದ ಸುಂದರ, ಸಣ್ಣ ಕಥೆಯಂಥ ಒಂದೆರಡು ಹಂಚಿಕೊಳ್ಳುತ್ತಿದ್ದೇನೆ.

ನೀರು – ಅದರ ಮೂಲ ಅವಶ್ಯಕತೆ, ವಿವಿಧ ಜನರು ಅದನ್ನು ಉಪಯೋಗಿಸುವ ಪರಿ ತೋರಿಸಿದ ಒಂದು ಸುಂದರ ಚಿತ್ರ ಈ ಕೆಳಗಿನ ಜಾಹಿರಾತು

ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ಸುಂದರ ಸಂಬಂಧ ಬಗ್ಗೆ ಪಾರ್ಲೆ ಜಿ ಅವರು ಸುಂದರ ಕಥೆ ಹೆಣೆದಿದ್ದಾರೆ.

ಎಲ್ಲರೂ ಒಂದೇ ಎಂದು ತೋರಿಸುವ ಈ ಕಿರುಚಿತ್ರ ಕಣ್ಣಂಚಲಿ ನೀರು ತಂದರೆ ಆಶ್ಚರ್ಯವಿಲ್ಲ

ಕೊನೆಯದಾಗಿ ನಾನು ಇಷ್ಟ ಪಟ್ಟ ಇನ್ನೊಂದು ಜಾಹಿರಾತು

ಜಾಲಿಯನ್‍ವಾಲಾ ಬಾಗ್ ನೆನಪುಗಳು, ಕೇಸರಿ-2 ಮತ್ತು ಸತ್ಯ-ಮಿಥ್ಯ -ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಲೇಖನ

ಶಾಲಿನಿ ಜ್ಞಾನಸುಬ್ರಮಣಿಯನ್ ‘ಅನಿವಾಸಿ’ಗೆ ಹೊಸಬರು. ಅವರ ಪ್ರಥಮ ಲೇಖನವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಅವರ ಸ್ವಪರಿಚಯ: “ನನ್ನ ಹುಟ್ಟೂರು ಬೆಂಗಳೂರು, ಓದಿದ್ದು ಬೆಳೆದಿದ್ದು ಎಲ್ಲಾ ಅಲ್ಲೇ. ಕಳೆದ ಇಪ್ಪತ್ತು ವರ್ಷಗಳಿಂದ ಯುಕೆ ನಲ್ಲಿ ಪರಿವಾರಸಹಿತವಾಗಿ ನೆಲೆಸಿರುವ ಕನ್ನಡತಿ. ಪ್ರಸ್ತುತ ನಾವು ಕಾರ್ಡಿಫ್ ನಲ್ಲಿ ನೆಲೆಸಿದ್ದೇವೆ. ವೃತ್ತಿಯಿಂದ ನಾನೊಬ್ಬ ಕಲಿಕೆ ಮತ್ತು ಅಭಿವೃದ್ಧಿ ತರಬೇತುದಾರಳು (Learning & development Trainer). ಶಾಸ್ತ್ರೀಯ ಸಂಗೀತದಲ್ಲಿ ನನಗೆ ತುಂಬಾ ಆಸಕ್ತಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತೇನೆ ಮತ್ತು ಹಾಡುತ್ತೇನೆ.”

ಚಿಕ್ಕಂದಿನಲ್ಲೇ ಜಾಲಿಯನ್ವಾಲಾ ಬಾಗ್ ಹತ್ಯಾಕಾಂಡದ ವಿವರಗಳು ಒಬ್ಬ ಪ್ರತ್ಯಕ್ಷದರ್ಶಿಯಿಂದ ಕೇಳಿ ಪ್ರಭಾವಿತರಾಗಿ ಕೆಲ ವರ್ಷಗಳ ಹಿಂದೆ ಸ್ವತಃ ತಮ್ಮ ಪರಿವಾರದೊಡನೆ ಹೋಗಿ ನೋಡಿಬಂದಿದ್ದಾರೆ. ಇತ್ತೀಚೆಗೆ ಯು ಕೆ ದಲ್ಲಿ ರಿಲೀಸಾದ ಚಿತ್ರ ”ಕೇಸರಿ – 2” ನೋಡಿದ ನಂತರ ಈ ಲೇಖನವನ್ನು ಬರೆದು ಕಳಿಸಿದ್ದಾರೆ. ಆ ಸಿನಿಮಾದ ಹಿನ್ನೆಲೆಯನ್ನರಿತವರಿಗೆ ಅಲ್ಲಿಯ ವಾಸ್ತವತೆ ಮತ್ತು ಅದರಲ್ಲಿಯ ಕಾಲ್ಪನಿಕ ಘಟನೆಗಳ ಬಗ್ಗೆ ಓದಿ ತಿಳಿದಿರ ಬಹುದು. ಇಲ್ಲಿ ಇನ್ನೊಂದು ಸ್ಪಷ್ಟೀಕರಣವೆಂದರೆ: ಬಹಳ ಜನರು ಜಾಲಿಯನ್ವಾಲಾ ಬಾಗ್ ನಲ್ಲಿ ಗೋಲೀಬಾರಿಗೆ ಆಜ್ಞೆ ಕೊಟ್ಟ ಕರ್ನಲ್ ( ಆಗ ತಾತ್ಕಾಲಿಕ ಬ್ರಿಗೇಡಿಯರ್ ಜನರಲ್ ಆಗಿದ್ದ) ರೆಜಿನಾಲ್ಡ್ ಡೈಯರ್ (Dyer) ಮತ್ತು ಆಗಿನ ಪಂಜಾಬ್ ಪ್ರಾಂತದ ಗವರ್ನರಾಗಿದ್ದವ ಮತ್ತು ರೆಜಿನಾಲ್ಡನ ಕುಕೃತ್ಯವನ್ನು ಸಮರ್ಥಿಸಿದ ಮೈಕೇಲ್ ಓ’ಡ್ವೈಯರ್ (O’Dwyer) ಹೆಸರುಗಳನ್ನು ಕನ್ಫ್ಯೂಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.-ಸಂ)

ಜಾಲಿಯನ್‍ವಾಲಾ ಬಾಗ್ ನೆನಪುಗಳು -ಶಾಲಿನಿ ಅವರ ಲೇಖನ

ಕೆಲವೊಂದು ಚಲನ ಚಿತ್ರಗಳು ಹೀಗೂ ಇರುತ್ತವೆ. ಅದನ್ನು ನೋಡಿದಾಗ ನಮ್ಮೊಳಗಿನ ಭಾವನೆಗಳು ಹೊಮ್ಮುಕ್ಕುವುದಲ್ಲದೆ ನಮ್ಮನ್ನು ಸತ್ಯದೆಡೆಗೆ ಕರೆದೊಯ್ದು, ದೇಶಾಭಿಮಾನವನ್ನು ಕೆರಳಿಸಿ, ಪ್ರಜ್ವಲಿಸಿ ಭಾರತದ ಬಗ್ಗೆ ಹೆಮ್ಮೆಯಿಂದ ಎದೆಯುಬ್ಬಿಸುತ್ತದೆ. ನಿಮಗೂ ಒಮ್ಮೆಯಾದರೂ ಅಂಥ ಅಭಿಮಾನವುಂಟಾಗಿರಲು ಸಾಕು.
”Kesari 2: The untold story of Jallianwala Bagh” ಇಂತಹ ಒಂದು ಚಲನ ಚಿತ್ರ. ಅದನ್ನು ನೋಡುವಾಗ 1919 ರಲ್ಲಿ ಜಾಲಿಯನ್ವಾಲಾ ಬಾಗ್ದಲ್ಲಿ ನಡೆದ ಆ ಕರಾಳ ಘಟನೆಯನ್ನು ಹತ್ತಿರದಿಂದ ’ನೋಡಿ’ ಪ್ರಮಾಣಿಸಿ, ಪ್ರಶ್ನಿಸುವ, ಮತ್ತೊಮ್ಮೆ ಉದ್ವೇಗಿತರಾಗುವ ಅನುಭವ ನಮ್ಮದಾಗುತ್ತದೆ.
ಜಾಲಿಯನ್‍ವಾಲಾ ಬಾಗ್! ಈ ಶೀರ್ಷಿಕೆಯೇ ಸಾಕು, ಭಾರತದ ಸ್ವಾತಂತ್ರ್ಯ ಚಳುವಳಿಯ ಅತ್ಯಂತ ದುಃಖದ ಅಧ್ಯಾಯದ ಸ್ಮರಣೆಯನ್ನು ತಂದು ನಮಗೆಲ್ಲ ಭಾರತೀಯರಿಗೆ ವಿವಿಧ ಭಾವನೆಗಳನ್ನೆಬ್ಬಿಸುತ್ತದೆ. ನನಗೆ ಇದರೊಡನೆ ವೈಯಕ್ತಿಕ ಸಂಬಂಧವಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ ಎಂದು ಭಾವಿಸುತ್ತೇನೆ. ಶಾಲೆಯಲ್ಲಿದ್ದಾಗ ಇತಿಹಾಸದ ಪುಟಗಳಲ್ಲಿ ಓದಿದ್ದು ಪ್ರಾಯಶಃ ದಾಖಲೆಯಾಗಿರಬಹುದೇನೋ, ಆದರೆ ಅದಕ್ಕಿಂತ ಹೆಚ್ಚಾಗಿ ಆ ಹತ್ಯಾಕಾಂಡವನ್ನು ಸ್ವತಃ ವೀಕ್ಷಿಸಿದವರ ವರ್ಣನೆಯನ್ನು ಅವರ ಬಾಯಿಂದಲೇ ಕೇಳಿದ್ದೆನಲ್ಲ ಅದರಿಂದಲೇ ಏನೋ! ಅದು ಹೇಗೆ, ಅಂತೀರೋ? ಮುಂದೆ ಓದಿ!

ಪಂಡಿತ್ ಸುಧಾಕರ ಚತುರ್ವೇದಿ (1897 - 2020)

ನನ್ನ ಹದಿಹರೆಯದ ವರ್ಷಗಳಲ್ಲಿ ನಮ್ಮ ತಾಯಿ ನಮ್ಮನ್ನು(ನನ್ನ ತಮ್ಮ ಮತ್ತು ನಾನು) ಹುರಿದುಂಬಿಸಿ ಪಂಡಿತ್ ಸುಧಾಕರ ಚತುರ್ವೇದಿ (20th April 1897-27th February 2020) ಯವರ ಸತ್ಸಂಗಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅದು ನಮ್ಮ ಜೀವನದಲ್ಲಿ ಬಲವಾದ ಮೌಲ್ಯಗಳ ಅಡಿಪಾಯವನ್ನೇ ಹಾಕಿತ್ತು. ಕನ್ನಡಿಗರಾದ ಪಂಡಿತ್ ಜಿ ಅವರು ವೇದಪಾರಂಗತರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಂಧಿತರಾಗಿ ಎರವಾಡ ಜೈಲಿನಲ್ಲಿದ್ದಾಗ 'ಜ್ಯೋತಿ ಸ್ವರೂಪ ಭಗವಾನ್, ಆ ದಿವ್ಯ ಜ್ಯೋತಿ ನೀಡು' ಎಂಬ ಕೃತಿಯನ್ನು ರಚಿಸಿದವರು. ಗಾಂಧೀಜಿಯವರ ಪತ್ರಗಳನ್ನು ರಹಸ್ಯವಾಗಿ ಒಂದೆಡೆಯಿಂದ ಇನ್ನೊಂದೆಡೆ ತಲುಪಿಸುತ್ತಿದ್ದರಿಂದ ಅವರನ್ನು ’ಗಾಂಧೀಜಿಯವರ Postman’ ಎಂದು ಕರೆಯುತ್ತಿದ್ದರು! ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಗಾಂಧೀಜಿ ಅವರ ಮನವಿಯಂತೆ ಲಾಹೋರಿಗೆ ಭೇಟಿನೀಡಿದಾಗ, ಪಾಕಿಸ್ತಾನದಲ್ಲಿ ಅವರ ಮೇಲೆ ದಾಳಿಯಾಗಿ ಅವರನ್ನು ಕತ್ತಿನವರೆಗೆ ಮಣ್ಣಿನಲ್ಲಿ ಜೀವಂತ ಸಮಾಧಿ ಮಾಡಲಾಯಿತು. ಆದರೆ ಹೇಗೋ ಅಲ್ಲಿಗೆ ಬಂದ ಭಾರತೀಯ ಸೈನ್ಯ ಪಡೆಯವರು ಅವರನ್ನು ಪಾರುಮಾಡಿ ರಕ್ಷಿಸಿ ಮುಂದಿನ ರೈಲು ಗಾಡಿಯಲ್ಲಿ ವಾಪಸ್ ಕಳಿಸಿದರು! (ಇದನ್ನು ಶ್ರೀ ಶ್ರೀ ರವಿಶಂಕರವರ ವಿಡಿಯೋದಲ್ಲಿ ಕೇಳಬಹುದು). ಪ್ರತಿ ಶನಿವಾರದಂದು, ಬೆಂಗಳೂರಿನ ಅವರ ಮನೆಯಲ್ಲಿ ನಡೆಯುತ್ತಿದ್ದ ಸತ್ಸಂಗದಲ್ಲಿ, ವೇದಮಂತ್ರಗಳ ಉಪನ್ಯಾಸದ ಜೊತೆಗೆ ಪಂಡಿತ್ ಜಿ ಅವರು ತಮ್ಮ ಜೀವನದ ವಿವಿಧ ರೋಚಕ ಅನುಭವಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.
13-4-1919 ರಂದು, ಅಂದರೆ ಇಂದಿಗೆ 106 ವರ್ಷಗಳ ಹಿಂದೆ ಜನರಲ್ ಡೈಯೆರ್ ನಡೆಸಿದ ಜಾಲಿಯಾನ್ ವಾಲಾ ಬಾಗ್ ಸಾಮೂಹಿಕ ಹತ್ಯೆಯನ್ನು ಪ್ರತ್ಯಕ್ಷವಾಗಿ ನೋಡಿ, ದೈಹಿಕ ಮತ್ತು ಮಾನಸಿಕ ನೋವುಂಡವರು ಆಗಿನ ತರುಣ ಪಂಡಿತ್ ಜಿ ಅವರು. ಆ ದಿನ ಸುತ್ತಲೂ ಬಂದೂಕಿನ ಸುರಿಮಳೆಯಾಗುತ್ತಿದ್ದಂತೆ ಒಂದು ಚರಂಡಿಯಲ್ಲಿ ಬಚ್ಚಿಟ್ಟುಕೊಂಡು ಪಾರಾದರು. ಈ ಹತ್ಯಾಕಾಂಡದ ನಂತರ ಅನೇಕರಿಗೆ ಅಂತ್ಯಕ್ರಿಯೆ ವಿಧಿಯನ್ನು ಸಹ ನಿರ್ವಹಿಸಿದ ಸ್ವಯಂಸೇವಕರು ಅವರು!
ಹಲವು ಬಾರಿ ಈ ಘಟನೆಗಳನ್ನು ಅವರ ಬಾಯಿಂದ ಕೇಳಿದ ನನಗೆ ಮನದಾಳದಲ್ಲೆದ್ದ ಭಾವನೆ: ಎಂದೂ ನಮ್ಮ ಇತಿಹಾಸವನ್ನು, ನಮ್ಮ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರನ್ನು ಮರೆಯಬಾರದೆಂದು.
ಜಾಲಿಯನ್ವಾಲಾ ಬಾಗ್ ನಲ್ಲಿಗೋಡೇಗಳ ಮೇಲೆ ಬುಲೆಟ್ಟುಗಳ ಗುರುತು


ಇತ್ತೀಚೆಗೆ ನಾವು ಕಂಡ ಚಲನ ಚಿತ್ರ- ಕೇಸರಿ -2

ಎಪ್ರಿಲ್ ತಿಂಗಳಿನಲ್ಲಿ ವರ್ಷಾಬ್ದಿಯಂದು ರಿಲೀಸ್ ಆದ ಈ ಚಲನ ಚಿತ್ರದ ಅಧಿಕೃತ ಹೆಸರು Kesari Chapter 2: The Untold Story of Jallianwala Bagh. ನನ್ನ ಪತಿ ಸೇಕರ್ ಮತ್ತು ಮಗಳೊಂದಿಗೆ ಕಾರ್ಡಿಫ್ ನ ಚಿತ್ರಮಂದಿರದಲ್ಲಿ ನೋಡಿದೆವು. ಚಿತ್ರದ ಆರಂಭದಲ್ಲಿ 13-4-1919ರ ಆ ಕರಾಳ ದಿನದ ಘಟನೆಗಳನ್ನು ತೋರಿಸಿದ್ದಾರೆ. ಹೇಗೆ ಮರೆಯಲಾದೀತು ಈ ದೃಶ್ಯಗಳನ್ನು? ಸಿನಿಮಾ ಮುಗಿದ ನಂತರವೂ ಕಣ್ಣ ಮುಂದೆ ಅನವರತ ರೀಲುಗಳಂತೆ ಅದೇ ದೃಶ್ಯ!
ಸಿನಿಮಾದ ಕಥಾ ವಸ್ತು ಮೇಲಿನ ಘಟನೆಗಳ ಹಂದರದಲ್ಲಿ ಹೆಣೆದ ರೋಚಕ ಚಲನಚಿತ್ರ (docudrama). ಸಿನಿಮಾದ ’ನಾಯಕ’ ಶಂಕರನ್ ನಾಯರ್(ಅಕ್ಷಯ್ ಕುಮಾರ್). ಆತ ವೃತ್ತಿಯಿಂದ ವಕೀಲ. ಬ್ರಿಟಿಷರಿಂದ ನಿಯುಕ್ತನಾದ ವೈಸರಾಯ್ ಕೌನ್ಸಿಲ್ ನ ಹಿರಿಯ ಸದಸ್ಯ ಹಾಗು ತನ್ನ ’ಸೇವೆಗೆ’ ಬ್ರಿಟಿಶ್ ಸರಕಾರದಿಂದ ನೈಟ್( knighthood) ಪದವಿನ್ನು ಪಡೆದಿದ್ದ ಸಹ. ಜಾಲಿಯಾನ್ವಾಲಾ ಬಾಗ್ ನ ಕ್ರೂರ ಹತ್ಯಾಕಾಂಡದ ನಂತರ ಸತ್ಯಾನ್ವೇಷಣೆಯ ವಿಚಾರಣೆ ನಡೆಸಿ (ತಮ್ಮ ಪರವಾಗಿ)ವರದಿಮಾಡಲು ಸರಕಾರದಿಂದ ನೇಮಿತವಾದವನು ಬರಬರುತ್ತ ಘಟನೆಗಳ ಹಿಂದಿನ ಸತ್ಯ ತೆರೆದುಕೊಂಡಂತೆ ಭಾರತೀಯರ ಪರವಾಗಿ ಹೋರಾಡುತ್ತಾನೆ. ಅಂಥ ಭಾರತಮಾತೆಯ ಧೀರ ಪುತ್ರನ ಕಥೆ ಅದು. ಜಾಲಿಯನ್ವಾಲಾ ಬಾಗ್ನಲ್ಲಿ ಕೂಡಿದ್ದ ಸಿಖ್ ಜನರು ಶಸ್ತ್ರಧಾರಿಗಳಾಗಿದ್ದರೆಂದು ನಂಬುವಂತೆ ಸರಕಾರದಿಂದ ಪ್ರಚಾರ ಮಾಡಲಾಗಿತ್ತು. ನಿಜ ಸಂಗತಿಯಲ್ಲಿ ಬೈಸಾಕಿ ದಿನದಲ್ಲಿ, ಅವರೆಲ್ಲ ರೌಲಟ್ಟ್ ಆಕ್ಟ್ ನ ಕುರಿತು ಶಾಂತಿಯುತ ಪ್ರತಿಭಟನೆಗಾಗಿ ಕೂಡಿದ್ದರು, ಮತ್ತು ಬ್ರಿಟಿಷ್ ಸರ್ಕಾರದ ಜನರಲ್ ಡೈಯರ್ ನೀಡಿದ ಆದೇಶ ಜನಾಂಗೀಯ ಘೋರ ನರಮೇಧಕ್ಕೆ ಕಾರಣವಾಯಿತೆನ್ನುವ ಸತ್ಯವನ್ನು ಮುಚ್ಚಿಡುವ ಪ್ರಯತ್ನಗಳು ಎನ್ನುವದನ್ನು ಸಿನಿಮಾ ಸ್ಪಷ್ಟಪಡಿಸುತ್ತದೆ. ಇದೊಂದು ಮನಸೆಳೆಯುವ ಕೋರ್ಟ್ ರೂಂ ನಾಟಕ. ಬ್ರಿಟಿಷರ ಪರ ವಕೀಲರಾಗಿ ನೆವಿಲ್ ಮೆಕಿನ್ಲಿ (ಮಾಧವನ್) ಮತ್ತು ಬಾರತೀಯರ ಪರವಾಗಿ ಶಂಕರನ್ ನಾಯರ್ (ಅಕ್ಷಯ್ ಕುಮಾರ್) ಅವರ ಮಧ್ಯೆ ನಡೆಯುವ ಘರ್ಷಣೆ ವೀಕ್ಷಿಸಲು ಯೋಗ್ಯವಾಗಿದೆ.
ದಿಲ್ರೀತ್ ಕೌರ್ ಗಿಲ್ (ಅನನ್ಯ ಪಾಂಡೆ ) ಕಿರಿಯ ವಕೀಲಳು, ಆದರೆ ನೂರು ವರ್ಷಗಳ ಹಿಂದೆ, ಸತ್ಯಕ್ಕಾಗಿ ಶಂಕರನ್ ನಾಯರ್ ಜೊತೆ ಸೇರಿ, ಅವರನ್ನು ಪ್ರೇರೇಪಿಸಿದ ವೀರ ಯೋಧೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾಳೆ. ಚಿತ್ರಕಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದರಿಂದ, (ಉದಾಹರಣೆಗಾಗಿ, ಮೆಕಿನ್ಲಿ ಮತ್ತು ದಿಲ್ರೀತ್ ಗಿಲ್ ಪಾತ್ರಗಳು ಕಾಲ್ಪನಿಕ) ಇದನ್ನು ಸಾಕ್ಷಿಚಿತ್ರ (documentary) ಎಂದು ಪರಿಗಣಿಸಲಾಗದು. ಆದರೂ ಅಜ್ಞಾತವಾಗಿದ್ದ ಯೋಧರ ಬಗ್ಗೆ, ಮುಚ್ಚಿಟ್ಟ ನಮ್ಮ ಭಾರತದ ಸ್ವಾತಂತ್ರದ ಹೋರಾಟದ ಪ್ರಮುಖ ಅಧ್ಯಾಯವನ್ನು ಬಹಿರಂಗ ಪಡಿಸಿರುವ ಈ ಚಲನ ಚಿತ್ರವನ್ನು ಎಲ್ಲ ಭಾರತೀಯರು ನೋಡಲೇ ಬೇಕು. 15 ವರ್ಷದ ಮೇಲಿನ ಮಕ್ಕಳಿದ್ದರೆ ಅವರನ್ನ ಕರೆದುಕೊಂಡು ಹೋಗಿರಿ. ( ಹತ್ಯಾಕಾಂಡದ ತೀವ್ರ ಗ್ರಾಫಿಕ್ ಚಿತ್ರಣದಿಂದಾಗಿ ಯುಕೆನಲ್ಲಿ ಸೆನ್ಸಾರ್ ಬೋರ್ಡ್ನಿಂದ ’15 certificate ಕೊಡಲಾಗಿದೆ). ನೀವೂ ಪರಿವಾರ ಸಮೇತವಾಗಿ ನೋಡಿ ಎಂದು ಶಿಫಾರಸ್ಸು ಮಾಡ ಬಲ್ಲೆ.
106 ವರ್ಷಗಳಾದ ನಂತರವೂ ನ್ಯಾಯಕ್ಕಾಗಿ ಭಾರತೀಯರ ಹೋರಾಟ ಮುಂದುವರಿಯುತ್ತಿದೆ. ಚಿತ್ರದ ಕೊನೆಯಲ್ಲಿ ಬ್ರಿಟಿಷ್ ಸರ್ಕಾರವು ಇನ್ನೂ ಕ್ಷಮಾಪಣೆ ಕೇಳಿಲ್ಲ ಎಂಬ ವಾಸ್ತವವನ್ನು ತಿಳಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಶಂಕರ್ ನಾಯರ್ ಅವರಂತಹ ಉತ್ಕಟ ದೇಶಪ್ರೇಮಿಯ ಕೊಡುಗೆಯ ಬಗ್ಗೆ ಇಲ್ಲಿಯವರೆಗೂ ಕೇಳಿರಲಿಲ್ಲವಲ್ಲ ಎಂದು ನನಗೆ ಬೇಸರವಾಯಿತು.

- ಶಾಲಿನಿ ಜ್ಞಾನಸುಬ್ರಹ್ಮಣಿಯನ್
Learning & Development Trainer
Cardiff
Wales, U K


ಚಿತ್ರ ಕೃಪೆ:  ಎಲ್ಲ ಫೋಟೋಗಳೂ ಲೇಖಕಿಯವರವು: (ಚತುರ್ವೇದಿಯವರದನ್ನು ಬಿಟ್ಟು - CC). ಲೇಖನದ ಅಡಿಯಲ್ಲಿಯ ಚಿತ್ರಗಳು ಜಾಲಿಯನ್ ವಾಲಾ ಬಾಗ್ ದೃಶ್ಯಗಳು. ಭಿತ್ತಿ ಶಿಲ್ಪಗಳು ಮತ್ತು ಸ್ಮಾರಕಗಳು ಮತ್ತು ಒಂದು ಅಮರಜ್ಯೋತಿ 

ಚಿತ್ರ ಬರೆಸಿದ ಕವಿತೆ

 ಓದುಗರಿಗೆಲ್ಲ ಆತ್ಮೀಯ ನಮಸ್ಕಾರ,
ಸಾಮಾಜಿಕ ಜಾಲತಾಣಗಳು ಮನುಷ್ಯನ ಭಾವಾಭಿವ್ಯಕ್ತಿಗೆ ಸಶಕ್ತ ಮಾಧ್ಯಮಗಾಳಾಗಿವೆ. ಬರವಣಿಗೆ, ಹಾಡು, ಅನಿಸಿಕೆ ಅಭಿಪ್ರಾಯಗಾಲ ಜೊತೆಗೇ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವುದು, ಬಹಳಷ್ಟು ಜನರ ಪ್ರಮುಖವಾದ ಹವ್ಯಾಸವಾಗಿ ಬದಲಾಗಿದೆ. ಫೋಟೋ ವಿಡಿಯೋ ಹಾಕುವ ಕಾಯಕವೇ ಹಣಗಳಿಸುವ ಉತ್ತಮ ವೇದಿಕೆಯಾಗಿಯೂ ಮಾರ್ಪಟ್ಟಿದೆ. ಒಂದಿಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಚಿತ್ರಗಳ ಮೂಲಕ ಜಗತ್ತಿನ ಮುಂದೆ ಅನಾವರಣ ಗೊಳಿಸಿದರೆ, ಮತ್ತೊಂದಷ್ಟು ಜನ ಹೂವು, ಹಣ್ಣು, ನೀರು, ಆಕಾಶ, ಕೀಟ, ಹಕ್ಕಿ ಅಂತೆಲ್ಲ ನಮ್ಮ ಸುತ್ತಲಿನ ಸುಂದರ ಜಗತ್ತನ್ನು ಇನ್ನೂ ಸುಂದರವಾಗಿ ತಮ್ಮ ಚಿತ್ರಗಳ ಮೂಲಕ ಚಿತ್ರಿಸಿ ನಮ್ಮ ಮುಂದಿಟ್ಟು ರಂಜಿಸುತ್ತಾರೆ. ಈ ಚಿತ್ರಗಳು ಪರಿಚಯವೇ ಇಲ್ಲದ ಜಗತ್ತಿನ ಅದ್ಯಾವುದೋ ಮೂಲೆಯಲ್ಲಿದ್ದುಕೊಂಡು ಮತ್ತೊಬ್ಬ ಸಮಾನಸಕ್ತನ ಭಾವಕೋಶದ ಪದರನ್ನು ಮೆತ್ತಗೆ ತಟ್ಟಿ, ಸ್ಫೂರ್ತಿ ಕೊಡುತ್ತವೆ. ಕವಿಮನಸನ್ನು ಆವರಿಸಲು ಯಶಸ್ವಿಯಾದ ಒಂದೇ ಒಂದು ಭಾವಚಿತ್ರ ಸಾವಿರ ಭಾವಗಳನ್ನು ಪದಗಳಲ್ಲಿ ಹೊಮ್ಮಿಸಲೂಬಹುದು.

ನಾನು ಆಗಾಗ್ಯೆ, ನನ್ನ ಕ್ಯಾಮೆರಾ ಮತ್ತು ಫೋನಿನಲ್ಲಿ ತೆಗೆದ ಚಿತ್ರಗಳನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎಂಬ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುತ್ತಾ ಇರುತ್ತೇನೆ. ಅಲ್ಲಿರುವ ಕೆಲ ಕವಿ ಹೃದಯಗಳಿಗೆ ನಾನು ಹಂಚಿಕೊಂಡ ಚಿತ್ರಗಳು ಇಷ್ಟವಾಗಿ ಅವರ ಮನ ಸೃಜಿಸಿದ ಭಾವವನ್ನು ಅಕ್ಷರರೂಪಕ್ಕಿಳಿಸಿ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.
ಇತ್ತೀಚಿಗೆ ಲ್ಯಾಂಡ್ ಸ್ಕೇಪ್, ಹೂ, ನದಿ, ಚಿಕ್ಕ ಚಂದ್ರರ ಫೋಟೋ ಕ್ಲಿಕ್ ಮಾಡುವಾಗಲೆಲ್ಲ, ಈ ಸ್ನೇಹಿತರು ನೆನಪಾಗಿ ಬಿಡುತ್ತಾರೆ. ಈ ಚಿತ್ರ ಇವರಿಗೆ ಇಷ್ಟ ಆಗಬಹುದು/ಆಗುತ್ತದೆ ಎಂದು ಮನಸ್ಸು ಹೇಳುತ್ತದೆ.

ನಾನು ಕ್ಲಿಕ್ಕಿಸಿದ ಭಾವಚಿತ್ರವನ್ನು ಸ್ಫೂರ್ತಿಯಾಗಿ ಕವಿತೆಯನ್ನು
ಬರೆದು ಕಳಿಸುವ ನನ್ನ ಮೆಚ್ಚಿನ ಮೇದಿನಿ, ಈಶ್ವರ ಭಟ್ ಕೆ, ಮತ್ತು ಗುರುರಾಜ ಹೇರ್ಳೆ ಅವರನ್ನು ಅನಿವಾಸಿ ಬಳಗಕ್ಕೆ ಪರಿಚಯಿಸಿ,
ಚಿತ್ರಗಳೊಂದಿಗೆ, ಅವರ ಕವಿತೆ ಹಂಚಿಕೊಳ್ಳುತ್ತಿರುವೆ .
—ಅಮಿತಾ ರವಿಕಿರಣ್ ( ವಾರದ ಸಂಪಾದಕಿ)
ಈ ನೀಲಿಯಾಚೆಗೆ....

ಈ ನೀಲಿಯಾಚೆಗೆ ಆ ಮೋಡದೀಚಿಗೆ
ನಗುತಿರುವ ಸಗ್ಗವೊಂದಿದೆ ಅಲ್ಲಿ ಬಾ
ನೀಲಿಯೊಳು ಮೈಮರೆತು ಮೋಡದೊಳು
ಮರೆಯಾಗಿ ಜಗವನ್ನೆ ಹೊರನೂಕಿ ಮೆರೆಯೋಣ ಬಾ

ಬಾನು ಭುವಿ ಮೈಮರೆತು ಮಾತನಾಡುವುದಲ್ಲಿ
ಮರದ ಮಾತೆಲ್ಲವೂ ಮೋಡದೊಡನೆ ಧುಮ್ಮಿಕ್ಕಿ
ಹಾಲ್ನೊರೆಯ ತೇಲಿಸುವ ನದಿಯೊಂದು
ಸಂಭಾಷಿಸಿಹುದು ತೀರದೊಡನೆ

ಮಾತು ಮರೆತಿಹ ಮನಸು
ನೋಟ ಮರೆತಿಹ ಅಕ್ಷಿ
ಕಾಲ ಪ್ರವಾಹದಲಿ ಕಳೆಯೋಣ ಬಾ
ಮೌನದಾಚೆಯ ಮಾತು ಕಣ್ಣಿನಾಚೆಯ ನೋಟ
ಹೇಳುತಿದೆ ಏನನ್ನೊ ಕೇಳೋಣ ಬಾ

ಕುಂತಲ್ಲಿ ಏನಿಹುದು, ನಿಂತಲ್ಲಿ ಸೊಗಸೇನು
ಸಾಗಿ ಹೋಗೋಣ ಆ ತೀರದೆಡೆಗೆ
ನೀಲಿಯಾಚೆಯ ನಾಡು ಮೋಡದೀಚೆಯ
ಜಾಗ ಸೃಷ್ಟಿಯಾಗಿಹ ನೀಲ ಸ್ವರ್ಗದೆಡೆಗೆ

ತಬ್ಬುವುದೆಂದರೇನು ಸಖೀ?!

ತಬ್ಬುವುದೆಂದರೇನು ಸಖೀ?!
ತೋಳುಗಳ ಬಂಧನವೇ?
ಹೃದಯದ ಬೆಸುಗೆಯೇ
ಅಗಲಿರಲಾರೆನೆಂದು ಕೈ ಮೇಲೆ ಕೈಯಿಟ್ಟ ಪ್ರಮಾಣವೇ?

ತಬ್ಬುವುದೆಂದರೇನು ಸಖೀ?
ದಿನದ ಅಷ್ಟೂ ಘಳಿಗೆಯಲ್ಲೂ
ಜೊತೆಗಿದ್ದು
ಅಂಟಿಯೂ ಅಂಟದಂತೆ
ನವಿರಾಗಿ ತಾಗುತ್ತಾ
ಕಣ್ಣಲ್ಲೇ ಹೊರಡಿಸುವ ಪ್ರೇಮದ ನೋಟವೇ?

ತಬ್ಬುವುದೆಂದರೇನು ಸಖೀ?
ನೀಲಾಕಾಶವು
ನೀಲಸಮುದ್ರವ ಕರೆಯುತ್ತಾ
ನಾ ಕೆಳಗಿಳಿದೆ, ನೀ ಮೇಲೆ ಬಾ ಎನ್ನುವ
ಸಂಭ್ರಮದಿ
ತಾಗಿಯೂ, ತಾಗದಿರುವುದೇ
ತಬ್ಬುವುದೆಂದರೇನು ಸಖೀ?!

ಈಶ್ವರ ಭಟ್ ಕೆ (ಕಿರಣ),

ಮೂಲತಃ ಕಾಸರಗೋಡು ಕೇರಳದವರು. ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸ ಬರಹ, ತಿರುಗಾಟ.
ಗಡಿನಾಡಿನ ಸೀಮೆಯವರು ಆಗಿದ್ದಕ್ಕೂ ಏನೋ, ಕಿರಣರಿಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳೂ ಮಾತಾಡಲು ಮತ್ತು ಓದಲು ಬರೆಯಲು ಬರುತ್ತದೆ ಅದೇ ಕಾರಣದಿಂದ ಆ ಭಾಷೆಯ ಕಥೆ, ಕವನ, ಭಜನೆಗಳನ್ನು ತುಂಬಾ ಸುಂದರವಾಗಿ ಕನ್ನಡಕ್ಕೆ ಅನುವಾದಿಸುತ್ತಾರೆ.
ಇವರ ಕವಿತೆಗಳು ಸರಳವಾಗಿ ಹಾಡಿಸಿಕೊಂಡು ಹೋಗುತ್ತವೆ. ರಾಗಕ್ಕೆ, ತಾಳಕ್ಕೆ ಹೊಂದುವ ಸಾಹಿತ್ಯ ಬರೆಯುವ ಇವರು, ಹಾಸ್ಯಬರಹ, ಮತ್ತೆ ಅಷ್ಟೇ ಗಂಭೀರ ವಿಷಯಗಳನ್ನೂ ಬರೆಯಬಲ್ಲರು.

ಮಲ್ಲಿಗೆಯವಳು.

ಹೂವಬುಟ್ಟಿಯ ಹೊತ್ತು ಮಲ್ಲಿಗೇ ಮಲ್ಲಿಗೇ
ಎಂದೆನುತ ಬಂದಳೋ ಬಿಂಕದವಳು
ಮೊಳಕೆ ಎಷ್ಟೆಂದರೆ ಕಣ್ಣಲ್ಲೆ ಗದರಿಸುತ
ಹಣದ ಲೆಕ್ಕಾಚಾರ ಯಾಕೆಂಬಳು!

ಮೊಳಕೆ ಮೂವತ್ತಾಯ್ತೆ? ಮೊನ್ನೆ ಇಷ್ಟಿರಲಿಲ್ಲ
ಪಿಸುಮಾತಿಗಳಿಗಿಷ್ಟು ಕೋಪಗೊಂಡು;
ಮಲ್ಲಿಗೆಯ ಗಿಡಕೆಲ್ಲ ರೋಗ ಬಂದಿದೆ ಒಡೆಯ
ಮೊನ್ನೆಯಷ್ಟಿಲ್ಲ ಹೂ ಎಂದೆಂಬಳು.

ಒಂದು ಮೊಳ ಸಾಕೆನಗೆ, ತೆಗೆದುಕೋ ನಲುವತ್ತು
ಎಂದಾಡಿದರೆ ಮತ್ತೆ ಜನ್ಮ ಹೊರಗೆ;
ಮಾಲೆ ಕಟ್ಟುವ ಸಮಯ ಪರಿಮಳವ ಕುಡಿದೆಹೆನು
ನಾ ಹೇಳುವಷ್ಟನೇ ಕೊಡು ಎಂದಳು.

ಮೊಳ ಕತ್ತರಿಸುವಾಗ ಒಂದಿಷ್ಟು ಹೆಚ್ಚಿಸುತ
ಜೊತೆಗಷ್ಟು ಗುಲಾಬಿ ತೆಗೆದಿಡುತಲಿ;
ಹೂವನ್ನು ಹೆಚ್ಚಿಸುವ ಖುಷಿ ತುಂಬುಮೊಗದಲ್ಲಿ
ನಾಳಿನಾ ಭರವಸೆಯ ನಗು ನಕ್ಕಳು.
ಸೂರ್ಯಾಸ್ತ!

ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ
ಮರದ ಹಸಿರನು ಕಪ್ಪು ಮಾಡುವಾಸೆ
ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ
ಹತ್ತಿರಕೆ ಕಳಿಸುವುದು, ಒಲವಿನಾಸೆ!

ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ
ಮತ್ತೆ ಮಾತಿನ ದೋಣಿ ತೇಲಿಹೋಗಿ
ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು
ಅವಳ ಸಾಮೀಪ್ಯವನೆ ಅಲೆವ ರೋಗಿ

ಹಾರುವುದು ಎದೆಗನಸು ನೂರು ಮೈಲಿಗಳಾಚೆ
ಅಲ್ಲಿಯೂ ನೇಸರನು ಮುಳುಗುತಿಹನು
ಅವಳಿಗೂ ಇದೆ ನೆಪವು, ಇಂತಹದೆ ಬೇಸರವು
ಏನನೋ ಕಾಯುವುದು, ಹೆಳವ ನಾನು.

ಒಂದು ದಿನವಾದರೂ ಸಂಜೆಯಾಗದೆ ಇರಲಿ
ದೂರವಿಹ ವಿರಹಿಗಳ ಎದೆಯ ಸುಡದೆ ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ
ನನ್ನ ಕಾಡಲುಬೇಡ, ಅವಳು ಸಿಗದೆ




ಗುರುರಾಜ ಹೇರ್ಳೆ

 ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮ ಎಂಬ ಊರಿನವರು. ಪ್ರಸ್ತುತ  ಬಹರೈನ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಉದ್ಯೋಗಿ  ವಾಸ. ಪ್ರಾರಂಭಿಕ ಓದು, ಬೆಳವಣಿಗೆ ಎಲ್ಲ ಉಡುಪಿಯಲ್ಲೇ ಆದರೂ, ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿಯೂ ಒಂದಷ್ಟು ಕಾಲ ವಾಸಮಾಡಿದ್ದಾರೆ. 
ಇವರು ಒಳ್ಳೆಯ ಹಾಡುಗಾರರು. ಭಾವಗೀತೆಗಳ ಮೇಲೆ ಒಲವು ಜಾಸ್ತಿ. ಮಕ್ಕಳ ಹಾಡುಗಳು, ಪ್ರೇಮಗೀತೆಗಳನ್ನು ಬರೆಯುತ್ತಾರೆ. ಬರೆದ ಪದ್ಯಕ್ಕೆ ರಾಗ ಹಾಕಿ ಹಾಡುತ್ತಾರೆ ಕೂಡ

ಸಾಗರ ಸನ್ನಿಧಿ

ನೀಲ ಸಾಗರವನ್ನು ನೆಚ್ಚಿ ದೋಣಿಯೊಂದು ಸಾಗಿದೆ,
ಹಾಯಿ ಬಿಚ್ಚಿ ಗಾಳಿ ಬೀಸೋ ದಿಕ್ಕಿನತ್ತೇ ನಡೆದಿದೆ

ನಾಂತದಲ್ಲಿ ಬಾನು ಬುವಿಯು ಸೇರಿದಂತೆ ಭಾಸವು
ತೀರ ಸಿಗದ ದಾರಿಯಲ್ಲಿ ಮುಗಿಯದಿರುವ ಯಾನವು

ಒಮ್ಮೆ ಇಳಿತ ಒಮ್ಮೆ ಭರತ, ಏಳು ಬೀಳಿನಲೆಗಳು
ಒಮ್ಮೆ ನೋವು ಒಮ್ಮೆ ನಲಿವು, ಇದುವೇ ಜೀವನ ರೀತಿಯು

ಕಣ್ಣು ಹಾಯಿಸಿದಷ್ಟು ನೀರು ಕುಡಿಯಲಿನಿತು ಸಾಧ್ಯವೇ ?
ಬಾಳಿನಲ್ಲೂ ನೂರು ಜನರು, ಎಲ್ಲ ಜೊತೆಗೆ ಬರುವರೇ ?

ಅಲ್ಲಿ ಇಲ್ಲಿ ಸಿಗಲು ಬಂಡೆ ದಣಿವನಾರಿಸಬೇಕಿದೆ,
ಹಳೆಯ ತಪ್ಪನೆಲ್ಲ ಮರೆಯದೆ ದಾರಿ ಸಾಗಬೇಕಿದೆ
ಗಮ್ಯ ತಲುಪಬೇಕಿದೆ.
ಬಂದೇ ಬರುತಾವ ಕಾಲ.

ಈ ಸಮಯವೂ ಸರಿದು ಹೋಗಲೇಬೇಕು
ನಮಗೆಂದೇ ಒಂದು ಕಾಲ ಬರಲೇಬೇಕು

ಕರೆದ ಹಾಲದು ಕೆನೆಯ ಕಟ್ಟಲುಬೇಕು
ಹೆಪ್ಪುತಾಗೆ ಗಟ್ಟಿಮೊಸರು ಆಗಲೇಬೇಕು,
ಕಡೆಯಲದನು ಬೆಣ್ಣೆ ಮೇಲೆ ತೇಲಲೇಬೇಕು
ಬಿಸಿತಾಕಲು ಕರಗಿ ತುಪ್ಪವಾಗಲೇಬೇಕು

ಹರುಷ ಹೊನಲಿನ ನದಿಯು ಉಕ್ಕಲೇಬೇಕು
ಮುನಿದ ದೈವವು ಮುಗುಳು ನಗಲುಬೇಕು
ಬಾಡಿದಂತ ಲತೆಯು ಮತ್ತೆ ಚಿಗುರಲುಬೇಕು
ಮುದುಡಿದ ತಾವರೆ ಅರಳುತ ನಲಿಯಲೇಬೇಕು

ಇರುಳಲಿ ಕರಗಿದ ತಿಂಗಳು ಮೂಡಲೇಬೇಕು
ಮುಳುಗಿದ ರವಿ ಮೂಡಣದಿ ಹುಟ್ಟಲೇಬೇಕು
ಧಗೆಯೇರಲು ಮೇಘ ಕರಗಿ ಸುರಿಯಲೇಬೇಕು,
ಸುಖ ಶಾಂತಿ ನೆಮ್ಮದಿಯ ತರಲೇಬೇಕು


ಬೆಂಗಳೂರು ನಾಗರತ್ನಮ್ಮ – ರಾಮಮೂರ್ತಿ

ನಮಸ್ಕಾರ ಅನಿವಾಸಿಯ ಬಂಧುಗಳಿಗೆ.  ಶರಣ-ದಾಸ-ಸಂತರ ಸಾಹಿತ್ಯ ಸಂಗೀತದೊಂದಿಗೆ ಆರಂಭವಾಗಿ, ಇತ್ತೀಚೆಗೆ ನಮ್ಮನ್ನಗಲಿದ ಕವಿ ಎಚ್ಚೆಸ್ವಿ ಅವರಿಗೆ ಅರ್ಪಿಸಿದ ನುಡಿನಮನದ ಪುಷ್ಪಗಳ ಪಕ್ಕದಲ್ಲಿ ಹಾಯ್ದು ಬಂದ ನಮ್ಮನ್ನು ಸಂಗೀತದ ಒಬ್ಬ ಕಲಾವಿದೆಯ ಪರಿಚಯಕ್ಕೆ ಕರೆದೊಯ್ಯುತ್ತಿದ್ದಾರೆ, ನಮ್ಮ ಅನಿವಾಸಿ ಬಳಗದ ಇತಿಹಾಸಕಾರ (resident historian) ಶ್ರೀ ರಾಮಮೂರ್ತಿಯವರು. ಅವರಿದ್ದ ಕಾಲಮಾನದಲ್ಲಿ ಬದಲಾವಣೆ ತರಲು, ಒಬ್ಬ ಸಂಗೀತಗಾರ್ತಿಯಾಗಿ ಹೋರಾಡಿ, ಹಲವಾರು ವಿಷಯಗಳಲ್ಲಿ ಮೊದಲಿಗರಾದ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ನೋಡೋಣ ಬನ್ನಿ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸುವುದು. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಸಂ.) 
******************************
******************************
ಬೆಂಗಳೂರು ನಾಗರತ್ನಮ್ಮನ ಹೆಸರು ನಿಮಗೆ ಪರಿಚಯ ಇಲ್ಲದಿರಬಹುದು. ಆದರೆ  ಹತ್ತೊಂಬತ್ತನೇ ಶತಮಾನದಲ್ಲಿ ಒಬ್ಬ ದೇವದಾಸಿಯ ಮಗಳಾಗಿ ಬೆಳದು  ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿ, ತಿರುವಾಯೂರಿನಲ್ಲಿ ನಡೆಯುವ ಪ್ರಸಿದ್ಧ ತ್ಯಾಗರಾಜ ಆರಾಧನೆಯಲ್ಲಿ ಮಹಿಳಾ ಸಂಗೀತಗಾರರು ಮೊಟ್ಟಮೊದಲಿಗೆ ಭಾಗವಹಿಸುವಂತೆ ಹೋರಾಡಿದವಳು ಈ ಕನ್ನಡತಿ. ಕಾವೇರಿ ನದಿ ದಡದಲ್ಲಿ ತ್ಯಾಗರಾಜರ ಸಮಾಧಿಯ ಮಂಟಪವನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದೇ  ಈಕೆ.  ಗ್ರಾಮೋಫೋನ್  ಆಗ ತಾನೇ , ಅಂದರೆ ೧೯೦೦ ರಲ್ಲಿ , ಬಂದಾಗ ತನ್ನ  ಧ್ವನಿಯನ್ನು ರೆಕಾರ್ಡ್ ಮಾಡಿದ ಆರಂಭಿಕರಲ್ಲಿ ಒಬ್ಬಳು.  

೧೮೭೮ ರ ನವಂಬರ್ ೩ ರಂದು ನಂಜನಗೂಡಿನಲ್ಲಿ ಜನನ; ತಾಯಿ ಪುಟ್ಟ ಲಕ್ಷ್ಮಿ. ಪ್ರಾರಂಭದಲ್ಲಿ ಇವರ ಪೋಷಕ ವಕೀಲ್ ಸುಬ್ಬರಾಯರು. ಆದರೆ, ಬೆಳಸಿದ್ದು ತಾಯಿ ಪುಟ್ಟ ಲಕ್ಷ್ಮಿ. ನಂತರ ಮೈಸೂರಿನಲ್ಲಿ ನೆಲಸಿ ಮೈಸೂರು ಅರಮನೆಯ ಒಬ್ಬ ವಿದ್ವಾಂಸರಿಂದ ಕನ್ನಡ ಮತ್ತು ಸಂಸ್ಕೃತ ಅಧ್ಯಯನ ಕೆಲವು ವರ್ಷ ನಡೆಯಿತು. ಆದರೆ, ಈತ ದೇವದಾಸಿಯ ಮಗಳನ್ನು ಶಿಷ್ಯೆ ಆಗಿ ಮುಂದುವರಿಸಲು ಹಿಂಜರಿದರು, ಬಹುಶಃ ಸಮಾಜದ ಒತ್ತಡದಿಂದಿರಬಹುದು. ನಂತರ ನಾಗರತ್ನಮ್ಮನ ವಿದ್ಯಾಭ್ಯಾಸ ಅವಳ ಸೋದರ ಮಾವ "ಪಿಟೀಲು" ವೆಂಕಟಸ್ವಾಮಿ ಅವರಿಂದ ಮುಂದುವರೆಯಿತು. ನಂತರ, ತ್ಯಾಗರಾಜರ ಶಿಷ್ಯ ಪರಂಪರೆಯ (ಮೂರನೆಯ ಪೀಳಿಗೆ ) ಮುನಿಸ್ವಾಮಿ ಅವರಿಂದ ಸಂಗೀತ ಮತ್ತು ನೃತ್ಯ ಕಲಿಯಲು ಪ್ರಾರಂಭವಾಯಿತು.
ಹೆಸರಾಂತ ಮೈಸೂರು ಆಸ್ಥಾನ ವಿದ್ವಾನ್ ಬಿಡಾರಂ ಕೃಷ್ಣಪ್ಪನವರು ಇವಳ ಪ್ರತಿಭೆಗೆ ಮೆಚ್ಚಿ ನಾಗರತಮ್ಮನನ್ನು ತಮ್ಮ ಶಿಷ್ಯ ವರ್ಗಕ್ಕೆ ಸೇರಿಸಿಕೊಂಡರು. ಇವಳ ಹದಿನೈದನೇ ವಯಸ್ಸಿನಲ್ಲಿ ಮೊದಲ ಕಚೇರಿ (Public Performance ) ಕೊಟ್ಟಾಗ ಮೈಸೂರು ಪ್ರಜೆಗಳಲ್ಲದೆ, ಅಂದಿನ ಮಹಾರಾಜರು ಚಾಮರಾಜ ಒಡೆಯರಿಂದಲೂ ಸಹ ಮೆಚ್ಚುಗೆ ಪಡೆದಳು. ಕೆಲವು ವರ್ಷಗಳ ನಂತರ ಆಸ್ತಾನ ವಿದುಷಿ ಅನ್ನುವ ಮನ್ನಣೆ ಸಹ ಬಂತು. ಈ ಗೌರವ ಪಡೆಯುವುದಕ್ಕೆ ಈಕೆಯೇ ಮೊದಲನೆಯ ಮಹಿಳೆ.
ನಂತರ, ಮೈಸೂರಿನಲ್ಲಿ ಆಗ ಸಾಕಷ್ಟು ಅವಕಾಶಗಳು ಇಲ್ಲದಿರುವ ಕಾರಣದಿಂದ ನಾಗರತ್ನಮ್ಮ ಬೆಂಗಳೂರಿನಲ್ಲಿ ಮನೆ ಮಾಡಿದಳು. ಇಲ್ಲಿ ಅವಳ ಪ್ರತಿಭೆ ಬೇಗ ಹರಡಿ ಅನೇಕ ಗಣ್ಯ ವ್ಯಕ್ತಿಗಳ ಪರಿಚಯವಾಯಿತು. ಮುಖ್ಯವಾಗಿ, ಡಿ ವಿ ಗುಂಡಪ್ಪ , ಜಸ್ಟಿಸ್ ಚಂದ್ರಶೇಖರ್ ಐಯ್ಯರ್ ಮುಂತಾದವರು. ಡಿ ವಿ ಜಿ ಅವರ "ಜ್ಞಾಪಕ ಚಿತ್ರಶಾಲೆ"ಯಲ್ಲಿ ಇವಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ೧೯೦೮/೯ ರಲ್ಲಿ ಇವರು ಚಿಕ್ಕಪೇಟೆಯಲ್ಲಿ ಸಹೂಜಿ ಅನ್ನುವರ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗೆ ಹೋಗುತ್ತಿದ್ದರಂತೆ. ಇವರಿಬ್ಬರ ಸ್ನೇಹ ಬಹಳ ವರ್ಷ ಮುಂದುವರೆಯಿತು. ಇನ್ನೊಂದು ಸ್ವಾರಸ್ಯವಾದ ಸಂಗತಿ ಇಲ್ಲಿ ಹೇಳಬೇಕು. ನಾಗರತ್ನಮ್ಮನ ಅಭಿಮಾನಿಗಳಲ್ಲಿ ಹೈಕೋರ್ಟಿನ ಜಸ್ಟಿಸ್ ನರಹರಿ ರಾಯರೂ ಒಬ್ಬರಾಗಿದ್ದರು. ಆಗಾಗ್ಯೆ ಕೋರ್ಟ್ ಮುಗಿದ ಮೇಲೆ ತಮ್ಮ ಅಧಿಕೃತ ಗಾಡಿಯಲ್ಲಿ (Official Vehicle) ಚಿಕ್ಕಪೇಟೆಗೆ ಬಂದು ನಾಗರತ್ನಮ್ಮ ನ ಸಂಗೀತ ವನ್ನು ಕೇಳುತ್ತಿದ್ದರು. ನಂತರ ಸ್ನೇಹವೂ ಹೆಚ್ಚಾಯಿತು. ಈ ಸ್ನೇಹ ಮುಂದುವರೆದಾಗ ನರಹರಿ ರಾಯರು ತಮ್ಮ ಪತ್ನಿಯ ಮುಂದೆ ಇದರ ವಿಚಾರ ಹೇಳಿ ಅವರ ಅನುಮತಿ ಕೇಳಿದರಂತೆ. ಏನಾದರೂ ಆಕ್ಷೇಪಣೆ ಇದ್ದರೆ ನಾಗರತ್ನಮ್ಮನ ಸ್ನೇಹವನ್ನು ಮುಂದೆ ಬೆಳುಸುವುದಿಲ್ಲ ಅಂದರಂತೆ. ಪತ್ನಿಯಿಂದ ಅನುಮತಿ ಪಡೆದ ಮೇಲೆ ಇವರ ಸ್ನೇಹ ಇನ್ನೂ ಮುಂದೆವರಿಯಿತು. ಈ ಸಂಭಾಷಣೆಯ ವಿವರವನ್ನು ಡಿ.ವಿ.ಜಿ.ಬರೆದಿದ್ದಾರೆ.

ನಿಮಗೆ ಬೆಂಗಳೂರಿನ ಬಸವನಗುಡಿಯ ನರಹರಿ ಗುಡ್ಡ ಮತ್ತು Mount Joy ಹೆಸರು ಪರಿಚಿತ ಇದ್ದರೆ ಅದರ ಹಿನ್ನೆಲೆ ಇಲ್ಲಿದೆ. ನರಹರಿ ರಾಯರ ಗಾಡಿ ಆಗಾಗ್ಯೆ ಚಿಕ್ಕ ಪೇಟೆಯಲ್ಲಿ ಬಂದು ನಿಲ್ಲುತ್ತಿದ್ದುದು ಜನರಿಗೆ ಸಂಶಯ ಬಂದು ಅನೇಕ ವದಂತಿಗಳು ಶುರುವಾದವು. ಈ ವಿಚಾರ ಅಂದಿನ ದಿವಾನ್ ಶೇಷಾದ್ರಿ ಐಯ್ಯರ್ ಅವರ ಕಿವಿಗೆ ಬಿದ್ದಾಗ, ರಾಜ್ಯದ ಉನ್ನತ ಪದವಿಯಲ್ಲಿರುವ ಒಬ್ಬ ಹೈ ಕೋರ್ಟ್ ನ್ಯಾಯಾಧೀಶನಿಗೆ ಕೆಟ್ಟ ಹೆಸರು ಬರಬಾರದು ಅನ್ನುವ ಉದ್ದೇಶದಿಂದ ದಿವಾನರು, ಗುಟ್ಟಾಗಿ ನರಹರಿ ರಾಯರನ್ನು ಭೇಟಿಮಾಡಿ ಈ ವದಂತಿಗಳ ಬಗ್ಗೆ ಪ್ರಸ್ತಾಪಿಸಿದರಂತೆ. ನಂತರ ನರಹರಿರಾಯರು, ನಾಗರತ್ನಮ್ಮನ ಸಂಗೀತವನ್ನು ಖಾಸಗಿಯಾಗಿ (in private ) ಕೇಳುವುದಕ್ಕೆ ಒಂದು ಮನೆಯನ್ನು ಗುಡ್ಡದ ಮೇಲೆ ಕಟ್ಟಿ ಅದನ್ನು Mount Joy ಅಂತ ಹೆಸರಿಟ್ಟರು. ಈಗ ನರಹರಿ ಗುಡ್ಡ ಮತ್ತು ಇಲ್ಲಿಗೆ ಹೋಗುವ ರಸ್ತೆ, ಹಣಮಂತನಗರದಲ್ಲಿ, Mount Joy ರಸ್ತೆ.
ಶಾಸ್ತ್ರೀಯ ಸಂಗೀತಕ್ಕೆ ಬಹಳ ವರ್ಷಗಳಿಂದ ಈಗಿನ ಚೆನ್ನೈ (Madras) ನಲ್ಲಿ ಪ್ರಾಮುಖ್ಯತೆ ಇದೆ. ಈ ಕಾರಣದಿಂದ ನಾಗರತ್ನಮ್ಮ, ನರಹರಿರಾಯರ ಸಲಹೆಯ ಮೇಲೆ ಮದ್ರಾಸಿನಲ್ಲಿ ನೆಲಸುವುದಕ್ಕೆ ನಿರ್ಧಾರ ಮಾಡಿದಳು. ಅಲ್ಲಿ ಮೊದಲಿಯಾರ್ ಪಂಗಡದವರಿಂದ ಆಶ್ರಯ ಪಡೆದು ಬಹಳ ಬೇಗ ಒಬ್ಬ ಹೆಸರಾಂತ ಸಂಗೀತಗಾರಳಾದಳು. ೧೯೦೫ ರಿಂದ ಅಲ್ಲಿರುವ ಸಂಗೀತ ಸಭೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಕಂಡಳು. ಆ ಕಾಲದಲ್ಲೇ ವರಮಾನ ತೆರಿಗೆ (Income tax) ಕೊಡುವಷ್ಟು ಹಣ ಸಂಪಾದನೆ ಇತ್ತು. ಆಗಿನ ಕಾಲದಲ್ಲಿ , ದೇವದಾಸಿ ಪಂಗಡದಲ್ಲಿ ಇರಲಿ, ಯಾವುದೇ ಮಹಿಳೆಯರಲ್ಲಿ ಈ ತೆರಿಗೆ ಕೊಡುತ್ತಿದ್ದವರು ಬಹಳ ವಿರಳ. ನಾಗರತ್ನಮ್ಮ ಒಂದು ಭವ್ಯವಾದ ಮನೆಯನ್ನು ಕಟ್ಟಿ ಅದರ ಗೃಹ ಪ್ರವೇಶಕ್ಕೆ ಮೈಸೂರು ಬಿಡಾರಂ ಕೃಷ್ಣಪ್ಪನವರವನ್ನು ಆಹ್ವಾನಿಸಿದ್ದಳು. ಪುರಂದರ ದಾಸರ ದೇವರನಾಮಗಳನ್ನು ಮದ್ರಾಸಿನಲ್ಲಿ ಮೊದಲಿಗೆ ಕೇಳಿದ್ದು ಇವರಿಂದ ಎಂದು ಅನೇಕರು ಪ್ರಶಂಸಿದರು.

ತ್ಯಾಗರಾಜರ ಕೃತಿಗಳನ್ನು ಹಾಡುವುದು ಇವಳ ವಿಶೇಷತೆ ಆಗಿತ್ತು. ತ್ಯಾಗರಾಜರ ಸಮಾಧಿ ತಿರುವಾಯೂರಿನಲ್ಲಿ ನಿರ್ಲಕ್ಷ ಸ್ಥಿತಿಯಲ್ಲಿ ಇರುವ ವಿಷಯ ಅವಳ ಗುರು ಬಿಡಾರಂ ಕೃಷ್ಣಪ್ಪ ನವರಿಂದ ತಿಳಿಯುತು. ಅಲ್ಲಿಯವರೆಗೆ ಈ ಸಮಾದ್ಜಿ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಈಗ ಈ ಸಮಾಧಿಯನ್ನು ನವೀಕರಿಸುವುದನ್ನು ತನ್ನ ಜೀವನ ಧ್ಯೇಯವನ್ನಾಗಿಸಿಕೊಂಡಳು. ತಿರುವಾಯೂರಿಗೆ ಬಂದು ಸಮಾಧಿಯನ್ನು ಗುರುತಿಸಿ ಅಲ್ಲಿ ಒಂದು ಮಂದಿರವನ್ನು ಕಟ್ಟುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದಳು. ಮದ್ರಾಸಿನಲ್ಲಿದ್ದ ಮನೆ ಮತ್ತು ಬಳಿ ಇದ್ದ ಒಡವೆಗಳನ್ನು ಮಾರಿ ಬಂದ ಹಣದಿಂದ ಈ ಕಟ್ಟಡದ ನಿರ್ಮಾಣ ೨೭/೧೦/೧೯೨೧ ರಲ್ಲಿ ಪ್ರಾರಂಭವಾಗಿ ೭/೦೧/೧೯೨೫ ರಲ್ಲಿ ಪೂರ್ಣಗೊಂಡಿತು. ನಂತರ, ಅನೇಕರ ಸಹಾಯದಿಂದ, ತಿರುವಾಯೂರಿನಲ್ಲಿ ಮೈಸೂರು ಛತ್ರವನ್ನೂ ಕಟ್ಟಿದಳು.

೧೮೪೭ರಲ್ಲಿ ತ್ಯಾಗರಾಜರು ತೀರಿಹೋದ ಹಲವಾರು ವರ್ಷಗಳ ನಂತರ ಕೆಲವು ಸಂಗೀತಗಾರರು ಅಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಹಾಡುತ್ತಿದ್ದರು. ಆದರೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಸ್ವಂತ ಖರ್ಚಿನಲ್ಲಿ ಮಂದಿರ ನಿರ್ಮಾಣ ಮಾಡಿದ ಮೇಲೂ ಸಹ ನಾಗರತ್ನಮ್ಮನಿಗೆ ಇವರ ಜೊತೆಯಲ್ಲಿ ಹಾಡುವುದಕ್ಕೆ ಅವಕಾಶ ಸಿಗಲಿಲ್ಲ. ನಂತರ ೧೯೨೭ ಜನವರಿ ತಿಂಗಳಲ್ಲಿ ಮಹಿಳೆಯರದ್ದೇ ಒಂದು ಗುಂಪು ಮಾಡಿಕೊಂಡು, ಇದರಲ್ಲಿ ಅನೇಕರು ದೇವದಾಸಿಯರು, ಮಂದಿರದ ಆವರಣದಲ್ಲಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು. ನಂತರ ಎರಡೂ ಪಂಗಡಗಳು ಸೇರಿ ಒಪ್ಪಂದಕ್ಕೆ ಬಂದು ಈ ಆರಾಧನೆ ಒಂದಾಗಿ, ಇಂದು ಈ ಆರಾಧನೆ ಉನ್ನತ ಮಟ್ಟಕ್ಕೆ ಏರಿದೆ. ನೂರಾರು ಪ್ರಸಿದ್ಧ ಗಾಯಕರು ಅಲ್ಲಿ ಸೇರಿ ಸಾವಿರಾರು ಪ್ರೇಕ್ಷಕರ ಮುಂದೆ ಪಂಚರತ್ನ ಕೀರ್ತನೆಗಳನ್ನು ಹಾಡುವುದನ್ನ ನೋಡುವುದು ಒಂದು ಅದ್ಭುತ ದೃಶ್ಯ. ತ್ಯಾಗರಾಜರ ಆರಾಧನೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತದೆ.

ಹದಿನೆಂಟನೇ ಶತಮಾನದ ಒಬ್ಬ ದೇವದಾಸಿ ಪಂಗಡದ ತೆಲಗು ಕವಿ ಮುದ್ದುಪಲನಿ ( ೧೭೩೦-೧೭೯೦) ರಚಿಸಿದ "ರಾಧಿಕಾ ಸಂತ್ವನಂ" ನಾಗರತ್ನಮ್ಮನ ಗಮನಕ್ಕೆ ಬಂತು. ಇದರಲ್ಲಿ ರಾಧೆಯ ದೈಹಿಕ ಬಯಕೆಯ ಪ್ರಸ್ತಾವನೆ ಇತ್ತು. ಆದರೆ ೧೮೮೭ ರಲ್ಲಿ ಪ್ರಕಟಿಸಿದ ಭಾಷಾಂತರದಲ್ಲಿ "ರಸವತ್ತವಾದ" ವರ್ಣನೆಗಳನ್ನು ತೆಗೆದುಹಾಕಿದ್ದಲ್ಲದೇ, ಮುದ್ದುಪಲನಿ ಪ್ರತಾಪಸಿಂಹನ ಆಸ್ಥಾನದಲ್ಲಿ ಕವಿಯಾಗಿದ್ದಳು ಅನ್ನುವ ವಿಚಾರವನ್ನು ಸಹ ಬರೆದಿರಿಲಿಲ್ಲ. ಕಾರಣ ಬ್ರಿಟಿಷರ "Victorian Values" ಮತ್ತು "ಕೀಳು ದರ್ಜೆಯ" ದೇವದಾಸಿ ಬರೆದ ರಸವತ್ತಾದ ಕವಿತೆಗಳನ್ನು ಪ್ರಕಟಿಸುವುದು ಸಮಾಜದ ದೃಷ್ಟಿಯಲ್ಲಿ ಸರಿಯಲ್ಲ ಅನ್ನುವ ಊಹೆ ಕೆಲವರಿಗಿತ್ತು. ಉದಾಹರಣೆಗೆ ಇಂಗ್ಲೆಂಡ್ನಲ್ಲಿ ೧೯೨೮ರಲ್ಲಿ DH Lawrence ಬರೆದ Lady Chatterley's Lover ಪುಸ್ತಕ ನಿಷೇಧಿತವಾಗಿತ್ತು. ಎರಡು ಆವೃತ್ತಿಗಳನ್ನೂ ಓದಿ ನಾಗರತ್ನಮ್ಮನಿಗೆ ಅಸಮಾಧಾನವಾಗಿ ಮುದ್ದುಪಲನಿಯ ಮೂಲ ರಾಧಿಕಾ ಸಂತ್ವನಂ ಅನ್ನು ೧೯೧೦ ರಲ್ಲಿ Ramaswamy & Sons ಎಂಬ ಪ್ರಕಾಶಕರಿಂದ ಪ್ರಕಟಣೆ ಮಾಡಿಸಿದಳು. ಆದರೆ ಅನೇಕ ಸಂಪ್ರದಾಯವಾದಿ ವಿದ್ವಾಂಸರು ಇದನ್ನು ಪ್ರತಿಭಟಿಸಿ, ಮುದ್ದುಪಲನಿ ಒಬ್ಬ ವೈಶ್ಯೆ, ಅಂತಹ ಕೀಳು ದರ್ಜೆಯ ಮಹಿಳೆ ಬರೆದಿರುವುದನ್ನು ಜನರು ಓದಬಾರದು ಎಂದು ಹೇಳಿ ಸರ್ಕಾರ ಇದನ್ನು ಬಹಿಷ್ಕಾರ ಮಾಡಬೇಕು ಅನ್ನುವ ಒತ್ತಡ ತಂದರು. ನಾಗರತ್ನಮ್ಮ ಮತ್ತು ದೇವದಾಸಿ ಪಂಗಡದವರು ಒಬ್ಬ ದೇವದಾಸಿ ಮಹಿಳೆ ಇದನ್ನು ಬರೆದ್ದರಿಂದ ಪ್ರತಿಭಟನೆ ಮಾಡುತ್ತೀರ ಎಂದು ವಾದಿಸಿದರು. ಆದರೆ ಸರ್ಕಾರ ಇದನ್ನು ಒಪ್ಪಲಿಲ್ಲ. ೧೯೧೧ ರಲ್ಲಿ ಪೊಲೀಸ್ ಅಧಿಕಾರಿಗಳು, ಐಪಿಸಿ ೨೯೨ ಕಾನೂನಿನ ಪ್ರಕಾರ ಈ ಪುಸ್ತಕದ ವ್ಯಾಪಾರ ನಿಲ್ಲಿಸುವುದಕ್ಕೆ ಆಜ್ಞೆ ಮಾಡಿ ಮಾರಾಟಕ್ಕಿದ್ದ ಪುಸ್ತಕಗಳನ್ನು ವಶ ಮಾಡಿಕೊಂಡರು. ೧೯೪೭ರ ನಂತರ ಈ ಪುಸ್ತಕ ನಿಷೇಧವನ್ನು ರದ್ದು ಮಾಡಲಾಯಿತು.

ಇಪ್ಪತ್ತನೇ ಶತಮಾನದ ಮೊದಲಿನಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಕೆಲವು ಹಿಂದು ಪಂಗಡದವರಿಂದ ದೇವದಾಸಿಯರು ವೇಶ್ಯೆಯರು, ಇವರಿಂದ ಸಮಾಜಕ್ಕೆ ಹಾನಿ ಎಂದು ಇವರ ಪದ್ದತಿಗಳನ್ನು ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರು. ನಾಗರತ್ನಮ್ಮ ಇದನ್ನು ಪ್ರತಿಭಟಿಸಿ ತಮ್ಮದೇ ಸಂಘವನ್ನು (Union )ಕಟ್ಟಿ ಅದರ ಅಧ್ಯಕ್ಸಳಾಗಿ ಅವರ ಹಕ್ಕುಗಳಿಗಾಗಿ ಹೋರಾಡಿದಳು.
೧೯೨೭ರಲ್ಲಿ ತಮ್ಮ ಹಕ್ಕುಗಳನ್ನು ಕಾಪಾಡುವುದಕ್ಕೆ ಇಂಗ್ಲಿಷ್ ನಲ್ಲಿ ಬರೆದ "A Humble Memorandum of Devadasis" ಅನ್ನುವ ಪತ್ರವನ್ನು ಸರ್ಕಾರಕ್ಕೆ ಕೊಟ್ಟು ತನ್ನ ಪಂಗಡದವರ ಮಾನವ ಹಕ್ಕುಗಳನ್ನು ( Human Rights ) ಕಾಪಾಡಿ ಎಂದು ಮನವಿ ಮಾಡಿಕೊಂಡಳು.
ಅವಳ ಕೊನೆಕಾಲದಲ್ಲಿ ಡಿ.ವಿ.ಜಿ. ಇವಳನ್ನು ಭೇಟಿಮಾಡಿ ಆರೋಗ್ಯವನ್ನು ವಿಚಾರಿಸಿದರು. ಈ ಸಂಭಾಷಣೆಯನ್ನು ಡಿ.ವಿ.ಜಿ. ಹೀಗೆ ಬರೆದಿದ್ದಾರೆ:
"ನಾನು ಹುಟ್ಟಿದಾಗ ನಾಗರತ್ನ, ನಂತರ ಭೋಗರತ್ನ ಆದರೆ ಈಗ ರೋಗರತ್ನ" ಅಂತ ನಾಗರತ್ನಮ್ಮ ಹೇಳಿದ್ದಕ್ಕೆ, ಡಿ.ವಿ.ಜಿ. ಹೇಳಿದರಂತೆ - "ನೀನು ಇನ್ನೆರಡು ರತ್ನಗಳನ್ನು ಮರೆತೆ; ಒಂದು ರಾಗರತ್ನ ಮತ್ತು ತ್ಯಾಗರತ್ನ"
ಇದನ್ನು ಯಾರಿಗೂ ಹೇಳಬೇಡಿ ಅಂದಳಂತೆ ನಾಗರತ್ನಮ್ಮ!
ಈಕೆ ಒಬ್ಬ ಮಹಿಳೆಯರ ಹಕ್ಕುಗಳಿಗೆ ಹೋರಾಡಿದ ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದನ್ನು ಪ್ರತಿಪಾದಿಸಿದ ಕನ್ನಡತಿ ಮತ್ತು ಕ್ರಾಂತಿಕಾರಿಣಿ.
ನಾಗರತ್ನಮ್ಮ ೧೯/೫/೧೯೫೨ ರಂದು ತನ್ನ ೭೩ರನೇ ವಯಸ್ಸಿನಲ್ಲಿ ತಿರುವಾಯೂರಿನಲ್ಲಿ ನಿಧನಳಾದಳು. ತ್ಯಾಗರಾಜರ ಸಮಾಧಿ ಪಕ್ಕದಲ್ಲೇ ಇವಳ ಸ್ಮಾರಕವನ್ನು ನಿರ್ಮಿಸಲಾಗಿದೆ.

ಈಕೆಯ ಜೀವನ ಚರಿತ್ರೆ ಬಗ್ಗೆ ಬೆಂಗಳೂರಿನ ರಂಗಶಂಕರದಲ್ಲಿ ನಾಗಾಭರಣರ ನಿರ್ದೇಶದಲ್ಲಿ ಒಂದು ನಾಟಕ ಪ್ರದರ್ಶನ ನಡೆಯಿಲಿದೆ.
ರಾಮಮೂರ್ತಿ
ಕಾಂಗಲ್ಟನ್ , ಚೆಶೈರ್
******************************
******************************

 ಎಚ್ಚೆಸ್ವಿ ಎಂಬ ಜೀವಪರತೆ..ಭಾವದೊರತೆ

ಎಚ್ಚೆಸ್ವಿ ಕೆಲವು ಆತ್ಮೀಯ ನೆನಪುಗಳು

ಎಚ್ಚೆಸ್ವಿ ಅವರು ನನ್ನ ತಂದೆ ಜಿ ಎಸ್ ಎಸ್ ಅವರ ಪ್ರತಿಭಾವಂತ ಮತ್ತು ಆಪ್ತ ಶಿಷ್ಯರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ   ಕನ್ನಡ ಎಂ.ಎ ವಿದ್ಯಾರ್ಥಿಯಾದ ಮೇಲೆ (1971-1973) ನಮ್ಮ ಕುಟುಂಬಕ್ಕೆ ಪರಿಚಿತರಾದರು. ಕುವೆಂಪು ಅವರಿಗೆ ವೆಂಕಣಯ್ಯ ನವರು ಹೇಗೋ, ಜಿ ಎಸ್ ಎಸ್ ಅವರಿಗೆ ಕುವೆಂಪು ಹೇಗೋ , ಹಾಗೆ ಎಚ್ಚೆಸ್ವಿ ಅವರಿಗೆ ಜಿ ಎಸ್ ಎಸ್ ಪೂಜ್ಯ ಗುರುಗಳು. ಅದು ಅನನ್ಯವಾದ ಗುರು ಶಿಷ್ಯ ಸಂಬಂಧ. ಅಲ್ಲಿ ಪರಸ್ಪರ ಪ್ರೀತಿ, ಗೌರವ, ಸಲಿಗೆ, ಗೆಳೆತನ ಒಂದು ಹದದಲ್ಲಿ  ಇರುವಂತಹ ಒಡನಾಟ. ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವುದಾದರೆ "ಅಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಹತ್ತಿರವಾದದ್ದು ಬರಿಯ ವಿದ್ಯಾರ್ಥಿ ದೆಸೆಯಿಂದಲ್ಲ, ಅದಕ್ಕೆ ಮುಖ್ಯಕಾರಣ ಎಚ್ಚೆಸ್ವಿ ಒಬ್ಬ ಸೃಜನಶೀಲ ಕವಿ, ಅವರು ಸ್ನೇಹಪರರು ಮತ್ತು ಮೃದು ಸ್ವಭಾವದವರು. ಗುರು ಶಿಷ್ಯರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಸಮ್ಮೇಳನಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಒಬ್ಬರ ಕವಿತೆಯನ್ನು ಇನ್ನೊಬ್ಬರು ಮೆಚ್ಚಿಕೊಂಡವರು. ಕಾಲಕ್ರಮೇಣ ಎಚ್ಚೆಸ್ವಿ ಅವರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಪಕರಾಗಿದ್ದಾಗ ನಾವು ವಾಸವಾಗಿದ್ದ ಬನಶಂಕರಿ ಎರಡನೆಹಂತದ ೧೮ನೇ ಮುಖ್ಯ ರಸ್ತೆಯಲ್ಲಿ, ಪಕ್ಕದಲ್ಲೇ ಅವರೂ, ಮಡದಿ ರಾಜಲಕ್ಷ್ಮಿ ಮತ್ತು ಮಕ್ಕಳ ಜೊತೆ ಒಂದು ಬಾಡಿಗೆ ಮನೆಯಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ವಾಸವಾಗಿದ್ದರು. ಗುರು ಶಿಷ್ಯರು ಸಾಹಿತ್ಯ ಸಮ್ಮೇಳನಗಳ ನಡುವೆ ಹಲವಾರು ಪ್ರವಾಸವನ್ನು ಕೈಗೊಳ್ಳುತ್ತಿದ್ದರು, ಕೆಲವೊಮ್ಮೆ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಸೂರ್ಯದಯವನ್ನು ಒಟ್ಟಿಗೆ ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ಎಚ್ಚೆಸ್ವಿ ಏನಾದರೂ ಹರಟೆಗೆ ತೊಡಗಿದರೆ, ಜಿ ಎಸ್ ಎಸ್ ಅವರು 'ಶುಶ್ ಸುಮ್ಮನಿರಿ ಸೂರ್ಯೋದಯವನ್ನು ನಿಶಬ್ದದಲ್ಲಿ ನೋಡೋಣ' ಎನ್ನುತ್ತಿದ್ದರಂತೆ! (ಇದರ ಬಗ್ಗೆ ಎಚ್ಚೆಸ್ವಿ ಅವರು ಒಂದು ಕಡೆ ಬರೆದಿದ್ದಾರೆ) ವಾಕಿಂಗ್ ಬಳಿಕ ಗುರು ಶಿಷ್ಯರು ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿ ಮಸಾಲೆ ದೋಸೆ ಕಾಫಿ ಸವಿದು ಬರುತ್ತಿದ್ದರು. ಜಿ ಎಸ್ ಎಸ್ ಅವರೇ ವಿದ್ಯಾರ್ಥಿಭವನದ ಬಿಲ್ಲು ಕಟ್ಟುತ್ತಿದ್ದರೆಂದು ಎಚ್ಚೆಸ್ವಿ "ಬಿಲ್ಲೋಜ ಜಿ ಎಸ್ ಎಸ್ " ಎಂಬ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಾರಸ್ಯಕರವಾದ ಸಂಗತಿ ಎಂದರೆ ಗುರು ಶಿಷ್ಯರಿಬ್ಬರೂ ತಮ್ಮ ಪತ್ನಿಯರಿಗೆ ವಿದ್ಯಾರ್ಥಿ ಭವನಕ್ಕೆ ಹೋಗುತ್ತಿದ್ದೇವೆ ಎಂಬ ಸುಳಿವು ಕೊಡುತ್ತಿರಲಿಲ್ಲವಂತೆ. (ಹೋಟೆಲ್ಗೆ ಹೋಗಿ ಯಾಕೆ ತಿನ್ನ ಬೇಕು ಕೇಳಿದ್ದರೆ ಮನೆಯಲ್ಲೇ ಮಾಡಿಕೊಡುತ್ತಿದ್ದೆವಲ್ಲ ಎಂಬ ಮಡದಿಯ ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ) ನಮ್ಮ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಗೆ ಮಾವಿನ ಹಣ್ಣಿನ ಸೀಸನ್ ಮಧ್ಯದಲ್ಲಿ ಅಪ್ಪ, ಅವರ ಆತ್ಮೀಯ ಸಾಹಿತಿ ಮಿತ್ರರನ್ನು ಹೋಳಿಗೆ ಸೀಕರಣೆ ಊಟಕ್ಕೆ ಆಹ್ವಾನಿಸುತ್ತಿದ್ದರು, ಅದರಲ್ಲಿ ಎಚ್ಚೆಸ್ವಿ ಅವರು ಇದ್ದೇ ಇರುತ್ತಿದ್ದರು. ಅಪ್ಪ ಶುರುವಿನಲ್ಲಿ ಎಚ್ಚೆಸ್ವಿ ಅವರಿಗೆ ಹೇಗೆ ಹೋಳಿಗೆಗೆ ತುಪ್ಪಕಲೆಸಿ ನಂತರ ಸೀಕರಣೆಯನ್ನು ಕಿವುಚಿ ಒಂದು ಹದದಲ್ಲಿ ಮಿಕ್ಸ್ ಮಾಡಿ ತಿನ್ನಬೇಕು ಎಂಬುದನ್ನು ತಿಳಿಸಿಕೊಟ್ಟದ್ದನ್ನು ಎಚ್ಚೆಸ್ವಿ ತಮ್ಮ ಒಂದು ಬರಹದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಗುರು ಶಿಷ್ಯರಿಬ್ಬರು ತಮ್ಮ ಕೃತಿಗಳನ್ನು ಪರಸ್ಪರ ವಿಮರ್ಶೆ ಮಾಡಿದ್ದಾರೆ. ಎಚ್ಚೆಸ್ವಿ ಅವರು 'ಜಿ ಎಸ್ ಎಸ್ ಬದುಕು ಬರಹ' ಎಂಬ ವಿಮರ್ಶೆ ಕೃತಿಯನ್ನು ೨೦೧೨ರಲ್ಲಿ ಪ್ರಕಟಿಸಿದ್ದಾರೆ. 'ಎಚ್ಚೆಸ್ವಿ ಸಮಗ್ರ ಕವಿತೆಗಳು' ಎಂಬ ಬೃಹತ್ ಕೃತಿಯನ್ನು ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಅರ್ಪಣೆಮಾಡಿರುವುದು ಆ ಗುರು ಶಿಷ್ಯರ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿ ಎಸ್ ಎಸ್ ಅವರೂ ಎಚ್ಚೆಸ್ವಿ ಅವರ ಕೃತಿಗಳನ್ನು ಕುರಿತು ಅನೇಕ ಬರಹಗಳನ್ನು ಬರೆದಿದ್ದಾರೆ.

ವಾರಾಂತ್ಯ ಹತ್ತುಗಂಟೆಯ ನಂತರ ಎಚ್ಚೆಸ್ವಿ ನಮ್ಮ ಮನೆ ಬಾಗಿಲು ಬಡಿದಾಗ ನಾನು ಅಥವಾ ಅಮ್ಮ ಬಾಗಿಲು ತೆರದ ಕೂಡಲೇ 'ಮೇಷ್ಟ್ರು ಇದಾರ' ಎಂದು ಮುಗುಳ್ನಗುತ್ತಿದ್ದರು, 'ಬನ್ನಿ ಒಳಗೆ' ಎಂದಾಗ ಅವರು ನೇರವಾಗಿ ಅಪ್ಪನ ಲೈಬ್ರರಿ/ಸ್ಟಡಿ ಕೋಣೆಯೊಳಗೆ ಕೂತು ಅಪ್ಪನನ್ನು ಭೇಟೆಯಾಗುತ್ತಿದ್ದರು. ಈ ಗುರು ಶಿಷ್ಯರು ಗಂಟೆಗಟ್ಟಲೆ ಸಾಹಿತ್ಯ ಸಂವಾದದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇವರ ಜೊತೆ ಸಿ ಅಶ್ವಥ್, ಸುಮತೀನ್ದ್ರ ನಾಡಿಗ, ಎಚ್ ಎಸ್ ರಾಘವೇಂದ್ರ ರಾವ್ ಮತ್ತಿತರು ಬಂದು ಸೇರಿಕೊಳ್ಳುತ್ತಿದ್ದರು. ಸಂವಾದ ಮುಗಿದನಂತರ ನಾನು ವೆರಾಂಡದಲ್ಲಿ ಅಥವಾ ಅಂಗಳದ ಗೇಟು ಹಾಕಲು ಬಂದಾಗ ಡಾಕ್ಟ್ರೇ ಹೇಗಿದ್ದೀರಾ, ಕ್ಲಿನಿಕ್ ಹೇಗೆ ನಡೀತಾಯಿದೆ ಇತ್ಯಾದಿ ಸಾಹಿತ್ಯದ ಆಚೆಯ ಮಾತುಗಳನ್ನು ಆಡುತ್ತಿದ್ದರು. ಯೌವ್ವನದಲ್ಲಿ ನನ್ನ ವೈದ್ಯಕೀಯ ವೃತ್ತಿ ನನ್ನನ್ನು ಆವರಿಸಿಕೊಂಡಿದ್ದು ನನಗೆ ಸಾಹಿತ್ಯದ ಬಗ್ಗೆ ಗಮನ ಕೊಡಲು ಸಮಯದ ಅವಕಾಶವೇ ಇರಲಿಲ್ಲ, ಸಾಹಿತ್ಯಾಸಕ್ತಿ ಹಿಂದೆಯೇ ಉಳಿದಿದ್ದ ಕಾಲವದು. ನಾನು ಮತ್ತು ಎಚ್ಚೆಸ್ವಿ ಸಾಹಿತ್ಯ ಸಂವಾದಕ್ಕೆ ತೊಡಗಿದ್ದು ನಾನು ಇಂಗ್ಲೆಂಡಿಗೆ ಬಂದಮೇಲೆ ಎನ್ನ ಬಹುದು. ಆ ಕಾಲಕ್ಕೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿತ್ತು, ಓದಲು ಬರೆಯಲು ಸಮಯ ಮತ್ತು ಅವಕಾಶ ಎರಡು ದಕ್ಕಿದ್ದವು.

ಅಂದಹಾಗೆ ನನಗೆ ಎಚ್ಚೆಸ್ವಿ ಅವರ ಸಾಹಿತ್ಯ ಪರಿಚಯವಾದದ್ದು ಸುಗಮ ಸಂಗೀತದ ಮೂಲಕವೇ. ನನಗೆ ಅವರು ಹೆಚ್ಚು ಹತ್ತಿರವಾದದ್ದು ನಾನು ಕನ್ನಡದಲ್ಲಿ ಕವನಗಳನ್ನು ಪ್ರಬಂಧಗಳನ್ನು ರಚಿಸಲು ಶುರುವಾದಾಗ. ಈ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಎಚ್ಚೆಸ್ವಿ ಅವರು ಇಂಗ್ಲೆಂಡಿಗೆ ಕನ್ನಡ ಬಳಗದ ಆಹ್ವಾನದ ಮೇರೆಗೆ ಇಲ್ಲಿ ಬಂದಾಗ ನಮ್ಮ ಬಾಂಧವ್ಯ ಹೆಚ್ಚಾಯಿತು. ನಾನು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ, ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಜೋಗಿ ಇವರೊಡನೆ ಅನೇಕ ಕ್ಲಬ್ ಮತ್ತು ಹೋಟೆಲಿನಲ್ಲಿ ಭೋಜನ ಕೂಟಗಳಲ್ಲಿ ಒಡನಾಡುವ ಅವಕಾಶ ಒದಗಿ ಬಂತು. ವಿಸ್ಕಿ ಸೇವೆನಯಲ್ಲೂ ಎಚ್ಚೆಸ್ವಿ ಮಿತವಾಗಿ ಒಂದು ಪೆಗ್ ಸೇವಿಸಿ ನಂತರ ಎರಡನೇ ಪೆಗ್ಗಿಗೆ ಒತ್ತಾಯಿಸಿದಾಗ ಬೇಡವೆಂದು ‘ನನ್ನದು ಅದ್ವೈತ ಫಿಲಾಸಫಿ’ ಎಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು. ಎಚ್ಚೆಸ್ವಿ ಉತ್ತಮ ವಾಗ್ಮಿಗಳು, ಸಾಮಾನ್ಯವಾಗಿ ಅವರು ಸಭೆಗಳಲ್ಲಿ ಸುಮಾರು 15-20 ನಿಮಿಷಕ್ಕಿಂತ ಹೆಚ್ಚು ಮಾತನಾಡಿದ್ದನ್ನು ನಾನು ಕೇಳಿಲ್ಲ. ಆ ಮಿತವಾದ ಭಾಷಣದಲ್ಲಿ ಸರಳತೆ, ಸ್ಪಷ್ಟತೆ, ಪದಗಳ ಬಳಕೆ ಮತ್ತು ವಿಚಾರಗಳು ಸೊಗಸಾಗಿರುತ್ತಿತ್ತು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತಿತ್ತು.

ನಾನು ಬರೆಯಲು ಶುರುಮಾಡಿದಾಗ ನನ್ನ ಕೋರಿಕೆಯ ಮೇಲೆ ಎಚ್ಚೆಸ್ವಿ ನನ್ನ ಎಲ್ಲ ಬರಹಗಳನ್ನು ಓದಿ, ಸೂಕ್ತ ಸಲಹೆಗಳನ್ನು ನೀಡಿ, ಪ್ರಕಟಿಸಲು ಉತ್ತೇಜನ ನೀಡುತ್ತಿದ್ದರು. ನನ್ನ ಚೊಚ್ಚಲ ಕವನ ಸಂಕಲನ 'ಇಂಗ್ಲೆಂಡಿನಲ್ಲಿ ಕನ್ನಡಿಗ' ಕೃತಿಗೆ ಮುನ್ನುಡಿಯನ್ನು ಬರೆದು, ನನ್ನ ‘ಪಯಣ’ ಕಾದಂಬರಿಗೆ ಬೆನ್ನುಡಿಯನ್ನು ಕೂಡ ಬರೆದುಕೊಟ್ಟರು. ನಾನು ಒಂದು ರೀತಿ ಅವರ ಶಿಷ್ಯನೂ ಹೌದು. ಅವರಿಗೆ ಕಾಣಿಕೆಯಾಗಿ ನನ್ನ ಇತ್ತೀಚಿನ 'ಮೊನಾಲೀಸಾ' ಎಂಬ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದೇನೆ. ಎಚ್ಚೆಸ್ವಿ ಅವರು ಶೆಫೀಲ್ಡ್ ನಗರಕ್ಕೆ ಆಗಮಿಸಿ ಯುಕೆ ಕನ್ನಡ ಬಳಗದ ಆಶ್ರಯದಲ್ಲಿ ನಡೆದ 2013 ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅನಿವಾಸಿ ಸಾಹಿತ್ಯ ಅಂಗದ ಉದ್ಘಾಟನೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಈ ಸಾಹಿತ್ಯ ಅಂಗ ಈಗ ಎತ್ತರಕ್ಕೆ ಬೆಳದಿದೆ. ಆ ಸಂದರ್ಭದಲ್ಲಿ ಎಚ್ಚೆಸ್ವಿ ಅವರು ‘ಬೆಂಗಳೂರಿಗಿಂತ ಇಲ್ಲಿ ಹೆಚ್ಚು ಕನ್ನಡ ಕೇಳಿ ಬರುತ್ತಿದೆ’ ಎಂದು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ವಿಚಾರ ನಮ್ಮ ಯುಕೆ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ನನ್ನ ಮತ್ತು ಎಚ್ಚೆಸ್ವಿ ನಡುವಿನ ವಾಟ್ಸ್ ಆಪ್ ಸಂದೇಶಗಳನ್ನು ನೆನೆದು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ. ಸಂದರ್ಭ; ನನ್ನ ‘ಪಯಣ’ ಎಂಬ ಕಾದಂಬರಿ ತಯಾರಾಗುತ್ತಿದ್ದ ಸಮಯ.

"ಪ್ರಿಯ ಡಾ.ಪ್ರಸಾದ್
ನಿಮ್ಮ ಕಾದಂಬರಿಯನ್ನು ಒಂದೇ ಪಟ್ಟಿನಲ್ಲಿ ಓದಿ ಆನಂದಿಸಿದೆ. ಇನ್ನು ನೀವು ವೈದ್ಯಕೀಯದೊಂದಿಗೆ ಸಾಹಿತ್ಯ ಕೃಷಿ ಯಲ್ಲೂ ತೊಡಗಬೇಕು. ಲೀಲಾ ಜಾಲವಾಗಿ, ಎಲ್ಲೂ ಓದುಗರ ಆಸಕ್ತಿ ಕುಂದದಂತೆ ಕಥೆಯನ್ನು ನಿರೂಪಿಸಿದ್ದೀರಿ. ನಾಯಿಯು ಇಲ್ಲಿ ನಮಗೆಲ್ಲ ಆಪ್ತವಾಗುತ್ತದೆ. ಅದರ ನೋವು ನಮ್ಮ ನೋವಾಗುತ್ತದೆ. ಮಕ್ಕಳಿಗೆ ನಾಯಿ ಯಾಕೆ ಪ್ರಿಯವಾಗುತ್ತದೆ ಎಂಬುದು ನನಗೆ ಈಗ ಮನದಟ್ಟಾಯಿತು. ಮುಗ್ಧತೆ ಮತ್ತು ಸಹಜ ಪ್ರೀತಿ ಎರಡು ಜೀವಕ್ಕೂ ಸಮಾನ. ಸಿನಿಮಾಕ್ಕೆ ಲಾಯಕ್ಕಾಗಿದೆ. ಸಿನಿಮೀಯ ಎನ್ನಿಸದು. ಇದೊಂದು ಲೋಕಪ್ರೀತಿಯ ಸಹಜ ಕಲಾಕೃತಿ"

"ಧನ್ಯವಾದಗಳು ಎಚ್ಚೆಸ್ವಿ ತುಂಬಾ ಖುಷಿಯಾಯಿತು. ಈ ಕೃತಿಗೆ ‘ಸಾರ್ಥಕ ಪಯಣ’ ಎಂಬ ಹೆಸರನ್ನು ಆಯ್ಕೆ ಮಾಡಿರುವೆ"

" ಹೆಸರು ತುಂಬಾ ಗದ್ಯಮಯ. ಯಾನ…ಅಷ್ಟೇ ಸಾಕು. ಅಥವಾ ಪಯಣ ಎಂದು ಇಡಬಹುದು"

“ಪಯಣ ಬಹುಶಃ ಸೂಕ್ತವಾಗಿರಬಹುದು. ‘ಯಾನ’ ಎನ್ನುವ ಹೆಸರಲ್ಲಿ ಭೈರಪ್ಪನವರ ಕಾದಂಬರಿ ಇದೆ. ನನ್ನ ಈ ಕಥೆ ಸರಳವಾಗಿರಬಹುದು"

"ಸರಳತೆ ಗುಣವೋ ದೋಷವೋ ಎಂಬ ವಾಗ್ವಾದ ಇನ್ನೂ ಬಗೆಹರಿದಿಲ್ಲ...!"


ಎಚ್ಚೆಸ್ವಿ ಅವರ ಹಲವಾರು ಬರಹಗಳಲ್ಲಿ, ಮಾತುಗಳಲ್ಲಿ ಸರಳತೆ ಇದ್ದುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಥೆ, ಕವನ ಸಂಕೀರ್ಣವಾಗಿರಬೇಕು, ಆಗ ಅದಕ್ಕೆ ಹೆಚ್ಚು ಬೆಲೆ, ಸರಳತೆ ಒಂದು ದೋಷ ಎಂಬ ನನ್ನಲ್ಲಿದ್ದ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಅರ್ಥಪೂರ್ಣವಾಗಿ ತೋರಿದವು. ಸರಳವಾಗಿ ಬರೆಯುವುದೂ ಒಂದು ಕಲೆ ಎಂಬ ಆಲೋಚನೆ ಮೂಡಿಬಂತು. ಎಚ್ಚೆಸ್ವಿ ಅವರು ಬಹಳ ಶ್ರದ್ಧಾವಂತರು. ಅವರು ಶೇಫಿಲ್ಡ್ ನಗರದ ನಮ್ಮ ಮನೆಯಲ್ಲಿ ಒಂದು ವಾರ ತಂಗಿದ್ದಾಗ ‘ಶೆಫೀಲ್ಡ್ ಕವಿತೆಗಳು’ ಎಂಬ ನೀಳ್ಗವನದ ರಚನೆಯಲ್ಲಿ ತೊಡಗಿದ್ದರು. ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕುಳಿತು, ತೀಕ್ಷ್ಣ ಕವಿಸಮಯದಲ್ಲಿ ಮೂಡಿತ್ತಿದ್ದ ಸಾಲುಗಳನ್ನು ದಾಖಲಿಸುತ್ತಿದ್ದರು. ಮುಂದಕ್ಕೆ ‘ಶೆಫೀಲ್ಡ್ ಕವಿತೆಗಳು’ ಎಂಬ ಕೃತಿಯನ್ನು ಅವರು ಹೊರತಂದರು. ಆ ಕೃತಿಯನ್ನು ಕುರಿತು ‘ಎಚ್ಚೆಸ್ವಿ ಅವರ ಶೇಫಿಲ್ಡ್ ಕವಿತೆಗಳ ಬಗ್ಗೆ ಶೆಫೀಲ್ಡ್ ನಿವಾಸಿಯ ಅನಿಸಿಕೆಗಳು’ ಎಂಬ ಬರಹವನ್ನು ನಾನು ‘ಸಮಾಹಿತ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಎಚ್ಚೆಸ್ವಿ ಅವರು ಫೋನ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಕೃತಿಯನ್ನು ನನಗೆ ಮತ್ತು ನನ್ನ ಶ್ರೀಮತಿ ಪೂರ್ಣಿಮಾಗೆ ಅರ್ಪಣೆಮಾಡಿದ್ದು ಅದು ನನಗೆ ಅತ್ಯಂತ ಗೌರವದ ವಿಷಯ.
*
~ ಡಾ ಜಿ ಎಸ್ ಪ್ರಸಾದ್

ಎಚ್ಚೆಸ್ವಿಯವರ ಸಂದರ್ಶನ 

ಸಂದರ್ಶಕಿ – ಡಾ. ಪ್ರೇಮಲತಾ

‘ ಉರಿಯ ಉಯ್ಯಾಲೆ’ಯ  ಆಯ್ದ ಭಾಗಗಳು

~ ಚಿನ್ಮಯಿ

~ ಅಕ್ಷತಾ

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿಮಗೆ? 

“ ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೇ.
ಕೃತಿ ಮುಗಿದ ತೃಪ್ತಿ ಬರೆದವಗೆ.
ಇಷ್ಟು ದಿನ ಎಡೆಬಿಡದೇ ಬರೆದ ಬೆರಳಿಗೆ ಬಿಡುವು.
ಹೊರೆ ಇಳಿದ ಗೆಲುವು ಮುಖದೊಳಗೆ.”
( ಒಂದು ಕಥೆ – ಉತ್ತರಾಯಣ ಮತ್ತು...)
HSV ಹೋದರಂತೆ.. ಎಂಬ ಸುದ್ದಿ ಕೇಳಿದಾಗಿನಿಂದ ಅದೇನೋ ನನ್ನ ಮನದ ಭಾವಗಳೆಲ್ಲ ಹೆಪ್ಪುಗಟ್ಟಿದಂಥ ಅನುಭವ. ಎರಡಕ್ಷರದ ಶ್ರದ್ಧಾಂಜಲಿಯನ್ನೂ ಬರೆಯಲಾಗದ ಭಾವ ಜಡತೆ. ಬರೆದು ಮುಗಿಸಿಬಿಟ್ಟರೆ ಅದೆಲ್ಲಿ ಕವಿಯೊಡನೆಯ ಕೊನೆಯ ಋಣವೂ ಹರಿದುಕೊಂಡು ಬಿಡುತ್ತದೋ ಎನ್ನುವ ತಳಮಳ..ಆತಂಕ. ಬರೆಯದೇ ಹೋದರೆ ಅತೀ ಮಹತ್ವದ ಕಾರ್ಯವನ್ನೇನೋ ಬೇಕೆಂದೇ ಅಲಕ್ಷ್ಯ ಮಾಡುತ್ತಿರುವ ಚಡಪಡಿಕೆ..ಅಪರಾಧೀ ಭಾವ. ಅಂತೂ ಕೊನೆಗೂ ಪ್ರೀತಿಯ ಕಣ್ಣ ಕಂಬನಿಯಷ್ಟೇ ಅವರಿಗೆ ನಾವು ನೀಡಬಹುದಾದ ಕಾಣಿಕೆ.
ಜೀವ-ಜೀವನ ಪ್ರೀತಿ, ಜಗದ ಚೆಲುವು- ಒಲವು, ಅತೀ ಸೂಕ್ಷ್ಮ ಅಷ್ಟೇ ಬಲವತ್ತರವಾದ ಮಾನವ ಭಾವಲೋಕದ ಅನಾವರಣ, ತಾಳುವಿಕೆ, ಒಗ್ಗುವಿಕೆ ತನ್ಮೂಲಕ ಮಾಗುವಿಕೆ ಈ ಕವಿಯ ಸಾಹಿತ್ಯದ ಮುಖ್ಯ ಪ್ರತಿಪಾದನೆಗಳು. ಈ ಜೀವ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೂ ಇವರು ಕಿವಿಯಾಗುತ್ತಾರೆ; ಕಣ್ಣಾಗುತ್ತಾರೆ; ದನಿಯಾಗುತ್ತಾರೆ; ಹಾಡಾಗುತ್ತಾರೆ. ‘ಶ್ರೀ ಸಂಸಾರಿ’ಯ ಶ್ರೀರಾಮಚಂದ್ರನನ್ನು, ‘ ಆಪ್ತ ಗೀತೆ’ ಯ ಶ್ರೀಕೃಷ್ಣನನ್ನು, ‘ ಬುದ್ಧ ಚರಣದ’ ತಥಾಗತನನ್ನು ಎಷ್ಟು ಮಣ್ಣಿನ ಮಕ್ಕಳನ್ನಾಗಿ ಮಾಡಿ ಮರ್ತ್ಯರಾದ ನಮಗೆ ಅವರೆಲ್ಲರನ್ನು ಅತ್ಯಾಪ್ತರಾಗಿಸುತ್ತಾರೆ.ಧನುರ್ಧಾರಿ ರಾಮನ ಹೆಗಲಮೇಲಿನ ಬಿಲ್ಲು-ಬಾಣ ಕೆಳಗಿಳಿಸಿ ಅಲ್ಲೊಂದು ಪುಟ್ಟ ಅಳಿಲನ್ನು ಕೂಡಿಸುತ್ತಾರೆ. ರಾಜಸೇವೆಗಷ್ಟೇ ಮಿಗಿಲಾದ ‘ ಪುಷ್ಪಕ’ ದಲ್ಲಿ ವಾನರ – ಭಲ್ಲೂಕಾದಿಗಳಿಗೂ ಸೀಟು ಕೊಡಿಸಿಬಿಡುತ್ತಾರೆ. ಗೊಲ್ಲರ ಹುಡುಗ ‘ ಯಾದವ’, ‘ಕಾದವ’, ‘ ಸೇವಕ’ , ಶ್ರಾವಕ’ ನಾದ ಕಥೆ ಬಣ್ಣಿಸುತ್ತಾರೆ. ಲೋಕದ ಕಣ್ಣಿಗೆ ಕೇವಲ ಹೆಣ್ಣಾದ ರಾಧೆಯನ್ನು ಕೃಷ್ಣನನ್ನು ಕಾಣಿಸುತ್ತಾರೆ. ದ್ರೌಪದಿ, ಪೃಥೆ, ಮಂಥರೆ, ಊರ್ಮಿಳೆಯರ ಎದೆಯಾಳಕ್ಕಿಳಿದು ಮಂಥನ ನಡೆಸುತ್ತಾರೆ; ಹೃದಯ ಸಮುದ್ರದ ಹಾಲಾಹಲ - ಸುಧಾರಸಗಳನ್ನು ಹೊರ ಚೆಲ್ಲುತ್ತಾರೆ. “ ಕೊಂದವನದಲ್ಲ ಕಾದವನದ್ದು ಹಕ್ಕಿಯ ಹಕ್ಕು” ಎಂದು ಹೇಳಿ ಬುದ್ಧನ ಶಾಂತಿ- ಕರುಣೆಗಳಲ್ಲಿ ಮನ ತೊಯ್ಯಿಸುತ್ತಾರೆ.
“ ತಾನು ಕರಗದೇ ಮಳೆ ಸುರಿಸುವುದೇ ಶ್ರಾವಣದ ಸಿರಿ ಮುಗಿಲು?”, ‘ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ’, ‘ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ’, ‘ತಾನೇ ಕಡಲಾಗಲು ಹೊರಟ ಗಂಗೆಗೆ ಆಣೆಕಟ್ಟು ಕಟ್ಟುವರಾರು?’, ‘ ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೇ? ‘....ಎಂಥೆಂಥ ಅದ್ಭುತ ಸಾಲುಗಳನ್ನವರು ಕೊಟ್ಟಿದ್ದು..ಪಟ್ಟಿ ಮಾಡುತ್ತ ಹೋದರೆ ಬೆಳಗಾಗುತ್ತದೆ. ಅವರ ಜೀವನ ಹಾಗೂ ಕೃತಿಗಳ ಕಿರುಪರಿಚಯ ಇಂತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್‌ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ.
ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್‌ ಆಗಿ ಉದ್ಯೋಗ ಆರಂಭಿಸಿದರು.
ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಗಳಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಮಹಾಕಾವ್ಯ: ಬುದ್ಧ ಚರಣ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ).
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).
ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು.
ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.‌‌ ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.
ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಕವಿಯ ಭೌತಿಕ ಶರೀರಕ್ಕೆ ಮಾತ್ರ ಕೊನೆ ಯಶ: ಕಾಯಕ್ಕಲ್ಲ ಎನ್ನುವುದು ಸರ್ವವಿದಿತ . ಅಕ್ಷರಗಳ ಅಕ್ಷಯವಾದ ಅಪೂರ್ವ ನಿಧಿಯನ್ನು ನಮಗಾಗಿ ಬಿಟ್ಟು ಹೋದ ನೆಚ್ಚಿನ ಕವಿಗೆ ಅಶ್ರುಪೂರ್ಣ ಭಾವನಮನ.
“ ಮುಳುಗಿದರೆ ಮುಳುಗಬೇಕೀ ರೀತಿ
ಹತ್ತು ಜನ ನಿಂತು ನೋಡುವ ಹಾಗೆ..
ಗೌರವ ಬೆರೆತ ಬೆರಗಲ್ಲಿ.
ಸೂರ್ಯ ಮುಳುಗುವ ಮುನ್ನ,
ಓಡೋಡಿ ಬರುವ ಜನ ಕೈ ಮುಗಿವ ಹಾಗೆ
ಮುಳುಗಲ್ಲಿ ಮುಳುಗಿ”
( ಆಗುಂಬೆಯ ಸೂರ್ಯಾಸ್ತ ).
ಓಂ ಶಾಂತಿರಸ್ತು
~ ಗೌರಿಪ್ರಸನ್ನ

ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫ ಸಾಹೇಬರು – ಶ್ರೀವತ್ಸ ದೇಸಾಯಿ ಲೇಖನ

”ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ” ಸರಣಿಯಲ್ಲಿ ಭಾಗ - 4. ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ (ಮೇ 3, 2025) ಅನಿವಾಸಿ ಸಾಹಿತ್ಯಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಕ್ಗಾಳ್ಲೆೆದ ಮೂರು ವಾರಗಳಲ್ಲಿ ಮೂರು ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಇದು ಕೊನೆಯ ಭಾಗ. ಇದರಲ್ಲಿ ತತ್ವಪದಕಾರ ಶಿಶುನಾಳ ಶರೀಫ್ ಸಾಹೇಬರ ಕೊಡುಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಆ ದಿನ ಮಂಡಿಸಿದ ಭಾಗದ ವಿಸ್ತೃತ ಆವೃತ್ತಿ ಇದು.

ಶರಣರು ಮತ್ತು ದಾಸರ ನಂತರದ ಕಾಲ ಶಿಶುನಾಳ ಶರೀಫರದು. ಅವಾಗಾಗಲೇ ಬ್ರಿಟಿಷರು ಭಾರತದಲ್ಲಿ ತಳವೂರಿ ವಿಕ್ಟೊರಿಯಾ ಮಹಾರಾಣಿಯ ಆಡಳಿತ ಪ್ರಾರಂಭವಾಗಿತ್ತು. ಅವರ ಒಂದು ಕೃತಿಯಲ್ಲಿ (ತತ್ವಪದದಲ್ಲಿ) ಸಹ ಅದರ ಪರೋಕ್ಷ ಉಲ್ಲೇಖವನ್ನು ಗುರುತಿಸಲಾಗಿದೆ. ಅವರಿಗೆ ನೂರಾರು ‘ಗೀತೆ’ಗಳನ್ನು ರಚಿಸಿದ ವರಿಂದಕೀರ್ತಿ ಸಲ್ಲುತ್ತದೆ. ಕಂಬಾರ ಮುದುಕಪ್ಪನ ಮಗಳಾದ ಬಸಮ್ಮಳ ಸುಶ್ರಾವಕ ದನಿಯಲ್ಲಿ ಹಾಡಿಸಿದ್ದವುಗಳ ದಾಖಲೆ ಸಿಗುತ್ತವೆ. ಆದರೆ ಎಲ್ಲವನ್ನೂ ಯಾರೂ ಬರೆದಿಟ್ಟಿಲ್ಲವಾದ್ದರಿಂದ ನಿಖರವಾದ ಸಂಖ್ಯೆ ದೊರೆಯುವದಿಲ್ಲವಂತೆ.
ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದ್ದರೂ ಅವರ ತಂದೆ ‘ಹಿಂದುಗಳ ಮಂತ್ರ, ತಂತ್ರ ಶಾಸ್ತ್ರ, ಜ್ಯೋತಿಷ, ಪುರಾಣ ಇವೆಲ್ಲವಕ್ಕೂ ಮನಸ್ಸು ತೆತ್ತಿದ್ದರಿಂದ’ ಅವರ ಪ್ರಭಾವದಿಂದ ಶರೀಫರು ಎರಡೂ ಮತಗಳನ್ನು ಕಲೆಸಿ ಉಂಡಿದ್ದರು.’ ಅವರ ರಚನೆಗಳನ್ನು ತತ್ವಪದಗಳೆಂದು ಕರೆಯುವ ವಾಡಿಕೆ.

ಬೋಧ ಒಂದೇ ಬ್ರಹ್ಮನಾದ ಒಂದೇ
ಸಾಧನ ಮಾಡುವ ಹಾದಿ ಒಂದೇ
ಆದಿ ಪದ ಒಂದೇ …
ಶಿಶುನಾಳಧೀಶನ ಭಾಷೆ ಒಂದೇ

ಶಿಶುನಾಳ ಶರೀಫರು

ತತ್ವಪದಗಳೆಂದರೇನು?
ಈ ಪದಕ್ಕೆ ಅನೇಕ ವ್ಯಾಖ್ಯೆಗಳಿರಬಹುದು. ತತ್ವಪದಗಳು ನಮ್ಮ ಅಂತರಂಗವನ್ನು ದರ್ಶಿಸುವ ಮೂಲಕ ಅಸ್ಮಿತೆಯ ಅರಿವನ್ನುಂಟುಮಾಡುತ್ತವೆ. ಅವು ತಾತ್ವಿಕ ದೃಷ್ಟಿಯಿಂದಲೇ ಜೀವನದ ರಹಸ್ಯಗಳನ್ನು ಭೇದಿಸಲು ಪ್ರೇರಿಸುತ್ತವೆ. ದೇವರು, ಅನುಭವ, ಅನುಭಾವ, ಜ್ಞಾನ, ಮುಕ್ತಿ ಬಗ್ಗೆ ಹೇಳುತ್ತವೆ. ಆದರೆ ಇಲ್ಲಿ ತತ್ತ್ವಪದ ರಚಯಿತರಿಗೆ ಯಾರಿಗೂ ಅಂಕಿತ ಪ್ರದಾನ ವಗೈರೆ ಮಾಡದಿದ್ದರೂ ತಮ್ಮಿಂದ ತಾವೇ ತಮ್ಮ ಆರಾಧ್ಯ ದೈವದ ಹೆಸರಿನಲ್ಲಿ, ತಮ್ಮ ಗುರುಗಳ ಹೆಸರಿನಲ್ಲಿ ತತ್ವಪದಗಳನ್ನು ಬರೆದರು. ಇದು ಪ್ರಮುಖವಾಗಿ ಗುರು ಶಿಷ್ಯ ಪರಂಪರೆಯ ಪ್ರತಿಪಾದಕ ಪಂಥ ಅನಬಹುದು.ಕನ್ನಡದಲ್ಲಿ ತತ್ವಪದಕಾರರೇ ಬೇರೆ ಭಾಷೆಗಳಲ್ಲಿ ಬೇರೆ ಹೆಸರಿನಿಂದ ಕರೆಯಲ್ಪಟ್ಟರು. ಅವಧೂತರು, ಸಂತರು, ವಾರಕರಿ, ಸೂಫಿ ಇತ್ಯಾದಿ. ಕಬೀರರ ದೋಹಾ, ತುಕಾರಾಮನ ಅಭಂಗ, ಜ್ಞಾನದೇವ ಇವರೆಲ್ಲರವೂ ತತ್ವಪದಗಳೇ. ಇಲ್ಲಿ ಯಾವುದೇ ದೀಕ್ಷೆ, ವ್ರತದ ಹಂಗಿಲ್ಲ. ಕನಕದಾಸರೂ ಕೆಳವರ್ಗದವರೇ ಆದರೂ ವೈದಿಕ ಸಂಸ್ಕೃತಿಯ, ಮಧ್ವಮತದ ಹರಿಕಾರರೆನಿಸಿ ಹರಿದಾಸರಾದರು ಅವರು. ಆ ಮಟ್ಟದ ವೇದಾಧ್ಯಯನದಿಂದ ದೂರವಿದ್ದೂ ಚಿಂತನೆಯ ಆಯಾಮಗಳ ದಾಟುತ್ತ ಅನುಭಾವಿಕರೆನಿಸಿದವರ ಅಭಿವ್ಯಕ್ತಿಯ ಪದಗಳೇ ಈ ತತ್ವಪದಗಳು.

ಹುಟ್ಟು ಮತ್ತು ಬೆಳವಣಿಗೆ
ಆಗಿನ ಧಾರವಾಡ ಜಿಲ್ಲೆಯ (ಈಗ ಹಾವೇರಿ) ಶಿಗ್ಗಾವಿ ತಾಲೂಕಿನಲ್ಲಿ ಗುಡಿಗೇರಿ ರೇಲ್ವೆ ಸ್ಟೇಶನ್ನಿನಿಂದ ಮೂರು ಮೈಲಿ ದೂರದಲ್ಲಿರುವ ಚಿಕ್ಕ ಹಳ್ಳಿಯೇ ಶಿಶುನಾಳ. ಅಲ್ಲಿ ವಾಸಿಸುತ್ತಿದ್ದ ತಂದೆ ಇಮಾಮ ಸಾಹೇಬ ಮತ್ತು ತಾಯಿ ಹಜ್ಜುಮಾ ಅವರು ತಮ್ಮ ಪಾಲಿಗಿದ್ದ ಭೂಮಿಯ ಸಾಗುವಳಿಯಿಂದಲೇ ಬದುಕುತ್ತಿದ್ದರು. ಅವರಿಗೆ ಬಹುಕಾಲ ಮಕ್ಕಳಾಗಿರಲಿಲ್ಲ. ಇಮಾಮ ಸಾಹೇಬರು ಹುಲಗೂರ ಖಾದರ ಷಾವಲಿ ಸಂತರಲ್ಲಿ ಹರಕೆ ಹೊತ್ತರು. ಹಜರತ್ ಖಾದರಿಯವರು ಸಹ ಹಿಂದೊಮ್ಮೆ ಹಿಂದು ಮುಸ್ಲಿಮ್ ಧರ್ಮಗಳ ಸಂಗಮದ ಕನಸು ಕಂಡಿದ್ದರಂತೆ. ಒಮ್ಮೆ ಯಾರೋ ಛೇಡಿಸಿದ್ದಕ್ಕೆ ಬಯಸಿ ಬಂದವರಿಗೆ ಲಿಂಗ ದೀಕ್ಷೆ ಕೊಟ್ಟು ಖಾದರಲಿಂಗ ಅನ್ನಿಸಿಕೊಂಡರು ಮತ್ತು ಮುಂದೆ ಶಿಶುನಾಳರ ಹಾಡುಗಳಲ್ಲಿ ಅವರ ಉಲ್ಲೇಖ ಬರುತ್ತದೆ.
ಇಮಾಮ್ ಮತ್ತು ಹಜ್ಜುಮಾ ದಂಪತಿಗಳು ೧೮೧೯ರ ಮಾರ್ಚ ಏಳನೆಯ ತಾರೀಕಿಗೆ ಜನಿಸಿದ ತಮ್ಮ ಗಂಡು ಮಗುವಿಗೆ ಮೊಹಮ್ಮದ್ ಶರೀಫ್ ಎಂದು ಹೆಸರಿಟ್ಟರು. ಆತನೇ ಮುಂದೆ ಶಿಶುನಾಳ ಶರೀಫ್ ಎಂದು ಪ್ರಸಿದ್ಧರಾದರು. ಹುಡುಗನಾಗಿದ್ದಾಗಲೇ ಎರಡೂ ಮತಗಳ ಪ್ರಭಾವ ಆತನ ಮೇಲಿತ್ತು. ತಂದೆಯಿಂದ ರಾಮಾಯಣ, ಭಾರತ, ಪುರಾಣದ ಕತೆಗಳು ಮತ್ತು ಶಿವ ಶರಣರ ಜೀವನದ ಸಂಗತಿಗಳನ್ನು ಅರಿತು ಆ ಹುಡುಗ ’ತನಗರಿವಿಲ್ಲದೆಯೇ ಮತ ಮರುಳತನದಿಂದ ತನ್ನನ್ನು ಪಾರು ಮಾಡ ಬಲ್ಲ ನಿಜ ಧರ್ಮದ ರಕ್ಷಾವಸ್ತ್ರವನ್ನು ಸಿದ್ಧ ಮಾಡಿಕೊಂಡ’ ಎಂದು ಇತಿಹಾಸಕಾರರು ಹೇಳುತ್ತಾರೆ.

’ದೊರಕಿದ, ಗುರು ದೊರಕಿದಾ ’
ಶರೀಫನಿಗೆ ಒಬ್ಬ ಗುರುವಿನ ತಲಾಷ್ ಇತ್ತು. ಆತನ ಮನಸ್ಸಿನಲ್ಲಿ ಫಲವತ್ತಾದ ಭೂಮಿ ತಯಾರಾಗಿತ್ತು. ಅದರಲ್ಲಿ ಬೀಜ ಬಿತ್ತ ಬೇಕಾಗಿತ್ತು. ಅದೃಷ್ಟವಶಾತ್ ಈ ಹುಡುಗನ ಊರಿಗೆ ಪಕ್ಕದ ಊರಿನಿಂದ ಒಬ್ಬ ಬ್ರಾಹ್ಮಣ ಬಂದನು. ಆತ ಜಾತಿ ಮತಗಳ ಕಟ್ಟುಪಾಡುಗಳಿಗೆ ಸೊಪ್ಪು ಹಾಕದ ಮತ್ತು ವೇದ ಶಾಸ್ತ್ರಗಳನ್ನೆಲ್ಲ ಅರೆದು ಕುಡಿದ ಸ್ಮಾರ್ತ ಬ್ರಾಹ್ಮಣ; ದೇವಿ ಉಪಾಸಕ. ಆತನೇ ಬಹು ಮಹಿಮಾವಂತ ಎಂದು ಹೆಸರು ಗಳಿಸಿದ ಗೋವಿಂದ ಭಟ್ಟ. ಆತ ಕಟ್ಟುಪಾಡುಗಳಿಗೆ ಹೊರತಾಗಿದ್ದ. ಕೆಲವರು ಹಬ್ಬಿಸಿದ ವದಂತಿ ’ಸೆರೆ ಕುಡೀತಾನೆ, ಗಾಂಜಾ ಸೇದತಾನೆ, ಯಾರಂದರೆ ಅವರಿಂದ ಮುಟ್ಟಿಸಿಗೋತಾನ,’ ಅಂತ. ಆದರೂ ಜನರಿಗೆ ಆತನ ವಿದ್ವತ್ತಿನ ಬಗ್ಗೆ ಗೌರವ. ಅಂತೆಯೇ ಆತನ ತಂದೆ ಶರೀಫನನ್ನು ಅವರ ಹತ್ತಿರ ಕರೆದು ಕೊಂಡು ಹೋದನು. ಮೊದಲ ಭೇಟಿಯಲ್ಲೇ ಹುಡುಗನ ವೇದಾಂತ ನೆಲೆಯನ್ನು ಕಂಡು ಭಟ್ಟರಿಗೆ ಅಚ್ಚರಿ. ತನ್ನಲ್ಲಿ ಅನುಗ್ರಹ ಬೇಡಿ ಬಂದ ಇಮಾಮ ಸಾಹೇಬನನ್ನು ’ಈ ಹುಡುಗನ್ನ ನನ್ನ ಉಡಿಗೆ ಹಾಕಿ ಬಿಡು’ ಅಂತ ಗೋವಿಂದ ಭಟ್ಟ ಕೇಳಿದೊಡನೆ ತಂದೆ ಒಪ್ಪಿಬಿಟ್ಟನು. ಶರೀಫನೋ ಆತನನ್ನು ಗುರುವೆಂದು ಕೂಡಲೇ ಒಪ್ಪಿದನಂತೆ. ಅವರ ಬಗ್ಗೆ ಒಂದು ಪದ್ಯದಲ್ಲಿ ಹೀಗೆ ಹಾಡಿದನು :
”ದೊರಕಿದ ಗುರು ದೊರಕಿದಾ
ಪರಮಾನಂದ ಬೋಧ ಅರುವಿನೊಳಗೆ ಬಂದು
ದೊರಕಿದಾ ಗುರು ದೊರಕಿದಾ
ಕರಪಾತ್ರೆ ಹಿಡಿದು ಈ ನರ ಶರೀರದಿ ತನ್ನ
ಅರುವ ತನಗೆ ತೋರಿ ಪರಮ ನಂಬುಗೆಯಲಿದೆ”ಯೆಂದು. ಗುರು ಶಿಷ್ಯರು ಹತ್ತಿರವಾದರು.
ಸ್ವಲ್ಪ ಕಾಲದ ನಂತರ ಗುರು ಆತನ ಕೊರಳಿಗೆ ತಮ್ಮ ಮೈಮೇಲಿದ್ದ ಜನಿವಾರವನ್ನು ಹಾಕಿ ಬಿಟ್ಟರು! ಈ ಸಾಂಕೇತಿಕ ಉಪನಯನದಿಂದ ಭಾವ ಪರವಶನಾಗಿ ಗುರುವಿಗೆ ಉದ್ದಂಡ ನಮಸ್ಕಾರ ಹಾಕಿಬಿಟ್ಟ ಶರೀಫ ಉದ್ಗಾರ ತೆಗೆದು ಕವನ ರಚಿಸಿದ:
”ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ ನೂಕಿದ ಭವ ಭಾರವ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದು.”
ಅವರೀರ್ವರ ಸಂಬಂಧ ಗಾಢವಾಗಿ ಕೊನೆಯ ವರೆಗೆ ಉಳಿಯಿತು.

ಆಧ್ಯಾತ್ಮದ ಕಡೆಗೇ ಒಲವು ಇದ್ದ ಶರೀಫರು ಊರೂರು ತಿರುಗುತ್ತಿದ್ದರು. ತಂದೆ ತಾಯಿಗಳು ಚಿಂತೆಗೀಡಾಗಿ ಕುಂದುಗೋಳದ ಫಕೀರಸಾಹೇಬರ ಮಗಳು ಫಾತಿಮಾಳೊಂದಿಗೆ ಮದುವೆ ಮಾಡಿದರು. ಸ್ವಲ್ಪ ಸಮಯದ ನಂತರ ಲತ್ತುಮಾ ಎಂಬ ಮಗಳೂ ಹುಟ್ಟಿದಳು. ಆದರೆ ಅನತಿ ಕಾಲದಲ್ಲೆ ಇಬ್ಬರೂ ಮರಣ ಹೊಂದಿದರು. ಹೆಂಡತಿ ಸತ್ತಾಗಲೂ ಶರೀಫರು ದುಃಖಿಸಲಿಲ್ಲ:
’ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ’
ಎಂದು ಹಾಡಿದರು.
ಕಾಲರಾದಿಂದ ಮಗಳ ಮರಣದ ನಂತರವೂ ನಿರ್ಲಿಪ್ತತೆ! ಸಂಸಾರ ಬಂಧನದಿಂದ ಮುಕ್ತನಾದೆನೆಂದು ಉರ್ದುದಲ್ಲಿ ಆಶು ಕವನ ರಚಿಸಿದರು:
’ದುಃಖಮೆ ಪಡಾ ಮನ್ ಸುಖ ನಹಿ ಮಾಯಾ
ಟಕತಿ ಮರನ ರಖವಾಲರೆ’ (ದುಃಖ ಸಾಗರದಲ್ಲಿ ಬಿದ್ದಿದೆ ಮನಸ್ಸು; ಮರಣ ತುಂಬಿದ ಮಾಯಾಮಯ ಸಂಸಾರದಲ್ಲಿ ಸುಖವೇ ಇಲ್ಲ,ಪರಮಾತ್ಮನೇ!) ಕುಡಿಯುವುದು, ತಿನ್ನುವುದು ಇದರಲ್ಲೆ ಕಾಲ ಹರಣ ಮಾಡಿದರೆ ಮರಣ ಸದಾ ನಮ್ಮನ್ನು ದೃಷ್ಟಿಸುವಾಗ ಭಗವಂತನರಿಯುವುದು ಯಾವಾಗ ಎಂದರು.
ಶರೀಫ ಸಹೇಬರು ನವಲಗುಂದದ ನಾಗಲಿಂಗ ಶಿವಯೋಗಿಗಳು ಮತ್ತು ಗರಗದ ಮಡಿವಾಳೇಶ್ವರರ ಜೊತೆ ತ್ರಿಮೂರ್ತಿಗಳಂತೆ ಊರೂರು ತಿರುಗಿದರು. ಗುರುವಿನ ಸಂಬಂಧವೂ ಇತ್ತು.”ಗುರುವೆಂದರೆ ನಿಜಕೆ ಈತನೇ, ದೊರೆಯೆಂದರು ನಿಜಕೆ ಈತನೇ, ಕಟಕಿ ನುಡಿಗೆ ಬಾಗದಿರುವನು–ಏನು ದಿಟ್ಟ!” ಎಂದು ಹಾಡಿದರು.
ಗೋವಿಂದ ಭಟ್ಟ ಗುರುಗಳನ್ನು ಅವರು ಸಾಯುವ ವರೆಗೆ ಸೇವೆ ಮಾಡಿದರು. ನೂರಾರು ಕವಿತೆಗಳನ್ನು ರಚಿಸಿದರು.

+++
ಶರೀಫರ ಅನೇಕ ಕವಿತೆಗಳು ಅವರ ಬಾಳಿನ ಘಟನೆಗಳ ಕಾರಣವಾಗಿ ಹುಟ್ಟಿದವು ( topical) ಎಂಬ ಮಾತಿದೆ. ಘಟನೆಗಳನ್ನು ಆಧರಿಸಿ ಪದ್ಯಗಳು ಹುಟ್ಟಿದವೋ ಅಥವಾ ಪದ್ಯವನ್ನು ನೋಡಿ ಜನ ಕಥೆ ಕಟ್ಟಿದರೋ ಹೇಳುವಂತಿಲ್ಲ. ನಂತರದ ಅನೇಕ ಪದ್ಯಗಳನ್ನೋದಿದಾಗ ಈ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಅವರ ಅನೇಕ ಪದ್ಯಗಳು ಆಶು ಕವನಗಳು ಎನ್ನುವದರಲ್ಲಿ ಸಂದೇಹವಿಲ್ಲ. ಉದಾಹರಣೆಯಾಗಿ ಈ ಮೊದಲೇ ಉಲ್ಲೇಖಿಸಿದ ಉರ್ದು ಕವನಗಳು ಅಂಥವೇ.
ಇನ್ನೊಂದು ಪದ್ಯ. ಶರೀಫರನ್ನು ಮೆಚ್ಚಿಕೊಂಡ ಚೆಲುವೆಯೊಬ್ಬಳು ಅವರು ಕಾರಡಿಗೆಯ ಶಾಲೆಯಿಂದ ಎಂದಿನಂತೆ ಊರಿಗೆ ಮರಳುವಾಗ ಒಂದು ರಾತ್ರಿ ಕತ್ತಲೆಯಲ್ಲಿ ಎದುರಾಗಿ ತನ್ನ ಮನಸ್ಸಿನ ಮಾತು ಹೇಳಿಕೊಂಡಾಗ ಬರೆದ ಕವಿತೆಯೇ ’ಹಾವು ತುಳಿದೆನೇ ಮಾನಿನಿ’ ಎನ್ನುವ ರಚನೆ.
”ಹಾವು ತುಳಿದೆನೇ/ ಹಾವು ತುಳಿದು ಹಾರಿನಿಂತೆ/ ಜೀವ ಕಳವಳಿಸಿತೇ ಗೆಳತಿ” ಎಂದು ಪ್ರಾರಂಭ ಮಾಡುತ್ತಾರೆ ಆ ಕವಿತೆಯಲ್ಲಿ. ಆಕೆಗೆ ಸಾಂತ್ವನ ಹೇಳಿ ನುಂಗ ಬಂದಿದ್ದ ಮೋಹದಿಂದ ಪಾರಾದೆ ಅಂತ ಕೊನೆಯಲ್ಲಿ ಹೇಳುತ್ತಾರೆ:
”ದೇವಾ ನೀನೇ ಗತಿಯೋ ಎಂದೆ … ಹಾವಿನ
’ಶಿರವ ಮೆಟ್ಟಿದೆ ಶಿವನ ದಯದಿ.”
ಇದೇ ತರಹದ ಅನೇಕ ಪ್ರಾಣಿ ಪ್ರತೀಕಗಳು ಅವರ ಕವನಗಳಲ್ಲಿ ಸಿಗುತ್ತವೆ. ಚೋಳು (ಚೇಳು), ಕುದುರೆ, ನರಿ, ನಾಯಿ ಎಲ್ಲವೂ ರೂಪಕಗಳಾಗುತ್ತವೆ. ಶರೀಫರು ಅನುಭಾವಿ ಕವಿ. ಲೌಕಿಕದ ಎಲ್ಲ ಬೆಡಗು ಬಿನ್ನಾಳಗಳನ್ನುಬಲ್ಲವರಾಗಿದ್ದರು. ತಮ್ಮ ಲೌಕಿಕ ಅನುಭವಗಳ ಸಾರವನ್ನು ತತ್ವಪದಗಳಲ್ಲಿ ಎರಕ ಹೊಯ್ದು ಹಾದಿ ಜನರಿಗೆ ತಲುಪಿಸಿದರು. ಎಲ್ಲ ಮತಗಳಬಗ್ಗೆ ಸಮನ್ವಯ ದೃಶ್ಟಿಯಿಂದ ನೋಡಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿ ಅಳಿಲು ಸೇವೆಯನ್ನು ಮಾಡಿದರು. ಉಳಿದ ಕವಿವರ್ಯರಂತೆ ಅವರನ್ನು ಹಿಂಬಾಲಿಸುವ ಅನುಯಾಯಿಗಳಿರಲಿಲ್ಲವೆಂತಲೇ ಪರಂಪರೆಯಾಗಲು ಸಾಧ್ಯವಿರಲಿಲ್ಲ. ಅದಲ್ಲದೆ ಅವರು ಬದುಕಿದ ಕಾಲವೂ ಪ್ರತಿಕೂಲವಾಗಿರಬೇಕು,ಎನ್ನುವುದು ಇನ್ನೊಂದು ಕಾರಣವಿರಬೇಕು.

ಶಿಶುನಾಳರ ಕವನಗಳ ಆಕರ್ಷಣೆ
ಬರಕೋ ಪದ ಬರಕೋ -ಜತೆಗೆ
ಅದರನ್ವಯ ತಿಳಕೋ;

ಗುರು ಗೋವಿಂದನ ಸ್ತುತಿ ಬರಕೋ
ಧರೆಯೊಳು ಶಿಶುನಾಳಾಧೀಶನ ಪಾದಕೆ
ಕರಕೊಂಡು ಹೋಗೋ ವರ ಪಡಕೋ.

ಅವರ ಕವನಗಳು ಬಾಯಿಂದ ಬಾಯಿಗೆ ಹರಿದು ಜನರನ್ನು ತಲುಪಿ ಪ್ರಸಿದ್ಧಿ ಪಡೆದವು. ಅವುಗಳನ್ನು ಅವರಂತೂ ಬರೆದಿಡಲಿಲ್ಲ. ಕುಂಬಾರ ಮುದುಕಪ್ಪ ಮತ್ತು ಆತನ ಮಗಳು ಬಸಮ್ಮ ಹಾಡಿದ ನಂತರ ಎಚ್ ಟಿ ಮಹಾಂತೇಶ ಶಾಸ್ತ್ರಿಗಳು ಸಂಗ್ರಹಿಸಿದ್ದನ್ನು ಗದುಗಿನ ಶಾಬಾದಿಮಠ ಬುಕ್ ಡಿಪೋ ಮುದ್ರಿಸಿ, ಮರುಮುದ್ರಣಮಾಡುತ್ತ ಬಂದುದು ತಿಳಿದು ಬರುತ್ತದೆ. ಕವಿಯ ಉತ್ತರ ಕರ್ನಾಟಕ ಭಾಷೆಯನ್ನು ಮತ್ತು ಅವರು ಉಪಯೋಗಿಸುವ ಅಸಾಮಾನ್ಯ ರೂಪಕಗಳನ್ನು ಅರ್ಥಮಾಡಿಕೊಳ್ಳಲು ಸಮಾನ್ಯ ಓದುಗನಿಗೆ ಬಹುಕಾಲ ಕಷ್ಟವಾಗಿರಬೇಕು. ಉದಾಹರಣೆಗಾಗಿ ’ಕೋಡಗನ ಕೋಳಿ ನುಂಗಿತ್ತ” ಕವನ. ಇಲ್ಲಿ ಕೋಡಗ ಎಂದರೆ ಚಂಚಲ ಮನಸ್ಸನ್ನು ಸೂಚಿಸುವ, ಟೊಂಗೆಯಿಂದ ಟೊಂಗೆಗೆ ಹಾರುವ ಮರ್ಕಟ. ಕೋಳಿಯೆಂದರೆ ಸೂರ್ಯೋದಯಕ್ಕೆ ಕೂಗುವ ಕೋಳಿ ಅಂದರೆ ಕತ್ತಲೆಯೆಂಬ ಅಜ್ಞಾನವನ್ನು ನುಂಗಿ ತಿಳುವಳಿಕೆಯನ್ನು ಬೆಳಗುವುದು. ಮುಂದಿನ ಚರಣದಲ್ಲಿ ನರ್ತಕಿಯ (ಪಾತರದವಳು) ಗತಿಗೆಡಿಸುವ ಶಕ್ತಿ ಮದ್ದಲಿಯಲ್ಲಿದೆ. ಲೌಕಿಕದಲ್ಲಿ ಎಷ್ಟೇ ದೊಡ್ಡ ವ್ಯಕ್ತಿತ್ವವನ್ನುಳ್ಳವನಾಗಿದ್ದರೂ ಶಿಷ್ಯನ ಮೋಹ ಅಥವಾ ಅಹಂಭಾವವನ್ನು ಗುರುವಿನ ಪಾದದ ಮಹಿಮೆ ನುಂಗಿಹಾಕುತ್ತದೆ ಎನ್ನುವ ತಾತ್ಪರ್ಯ! ಅದೇ ಅರ್ಥ ಉಳಿದ ರೂಪಕಗಳಾದ ಒನಕೆ-ಒರಳು, ಬೀಸುವ ಕಲ್ಲು-ಗೂಟಗಳಲ್ಲಿಯೂ ಇದೆ.
ಅವರ ಅನೇಕ ಪದ್ಯಗಳಲ್ಲಿ ಮೇಲಿಂದ ಮೇಲೆ ಸಂಖ್ಯೆಗಳು ಆರು (ಅರಿಷಡ್ವರ್ಗಗಳು), ಎಂಟು (ಮದಗಳು), ಮೂರು (ತ್ರಿಕರಣಗಳು, ದೇಹಗಳು) ಬರುತ್ತವೆ. ಮಾನವನಿಗೆ ಇಂದ್ರಿಯ ನಿಗ್ರಹ ಎಷ್ಟು ಮುಖ್ಯ, ಅದಿಲ್ಲದಿದ್ದರೆ ಕಾಮ ಆತನನ್ನು ಅವನತಿಗಿಳಿಸುತ್ತದೆ ಎನ್ನುವ ಸೂಚನೆಯನ್ನು ’ಕುಕ್ಷಿಯ ಕೆಳಗಿನ ಇಕ್ಷುವೆ ತಾನಾದ’ ಮಂಗವನ್ನು ಒಂದು ಕವಿತೆಯಲ್ಲಿ ವರ್ಣಿಸಿದರೆ ಇನ್ನೊಂದರಲ್ಲಿ ’ಶಿವನ ತೊಡೆಯ ಕೆಳಗಿರುವಂಥ ಕಪ್ಪೆ’ಯ ಪ್ರತಿಮೆಯಲ್ಲಿ ಅದನ್ನೇ ಸಂಕೇತಿಸುತ್ತಾರೆ. ಹುಚ್ಚು ನಾಯಿಯ ಪ್ರತಿಮೆಯಲ್ಲೂ ಅದೇ ವಸ್ತು ’ಇಳೆಯೊಳೆಲ್ಲರ ತೊಡೆ ಹಿಡಿಯುತ ಹಲ್ಲೊಳು ತಳಮಳಗೊಳಿಸಿತು ಹುಚ್ಚಿಡಿಸಿ’ ಎಂದು.

ದೇಹವೆನ್ನುವ ದೇವಾಲಯ
ಗುಡಿಯ ನೋಡಿರಣ್ಣಾ-ದೇಹದ
ಗುಡಿಯ ನೋಡಿರಣ್ಣಾ…
ಧೀರ ನಿರ್ಗುಣನ ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರಾಗಿರುತಿಹ
ಗುಡಿಯ ನೋಡಿರಣ್ಣಾ
ಎನ್ನುವಲ್ಲಿ ಬಸವಣ್ಣನವರ ’ಉಳ್ಳವರು ಶಿವಾಲಯವ ಮಾಡಿಹರು/ ನಾನೇನು ಮಾಡುವೆ ಬಡವನಯ್ಯಾ/ ಎನ್ನ ಕಾಲೇ ಕಂಬ ದೇಹವವೇ ದೇಗುಲ’ ಎನ್ನುವ ಭಾವವನ್ನು ಕಾಣುತ್ತೇವೆ. ’ಧರಣಿ ವಿಸ್ತಾರ ನೋಡಮ್ಮ’ ಎನ್ನುವ ಪದ್ಯದಲ್ಲಿ ಬರುವ ಸಾಲುಗಳಿವು: ”ಧರಣೀಶ ರಾಣಿ ಕರುಣದಿ ರಾಜ್ಯಕ/ ತರಿಸಿದ ಘನಚೋದ್ಯವೋ, ಚೀನಾದ ವಿದ್ಯವೋ’ ಇವು ಬ್ರಿಟಿಶ್ ರಾಣಿಕಕಾಲದಲ್ಲಿ ಬರೆದುದು. ಗಿರಣಿ ಶರೀರದ ವರ್ಣನೆಯೊಂದಿಗೆ ಯೋಗ ಸಾಧನೆಯ ಅಂಶಗಳನ್ನೂ ನುಡಿಯುತ್ತದೆ ಎನ್ನುತ್ತಾರೆ ವಿಮರ್ಶಕರು. ಶಿಶುನಾಳ ಋಷಿಯನ್ನು ಅದರಲ್ಲಿ ನೇಯ್ಗೆಗಾರನೆಂದು ಅರ್ಥೈಸುತ್ತಾರೆ.

ಅವಸಾನ – ’ಶರಣರ ಬದುಕನ್ನು ಮರಣದಲ್ಲಿ ನೋಡು’
೧೮೮೯ರಲ್ಲಿ ಅವಸಾನದ ಗಳಿಗೆ ಬಂದಾಗ ವಿಭೂತಿ ವೀಳ್ಯ ಆಚರಿಸಿ ದೇಹತ್ಯಾಗ ಮಾಡಲು ಬಯಸಿದರು. ಶರೀಫರಂಥ ದೊಡ್ಡವರಿಂದ ಪೂಜಿಸಿಕೊಳ್ಳಲು, ಅವರತಲೆಯನ್ನು ಕಾಲ ಮೇಲೆ ಇರಿಸಿಕೊಳ್ಳಲುಯಾವ ಜಂಗಮರೂ ಒಪ್ಪಲಿಲ್ಲ. ಕಡೆಗೆ ಅವರ ಮಾತು ಮೀರಲಾರದೆ ಹಿರೆಮಠ ಕರಿಬಸಯ್ಯನವರು ಹಿಂಜರಿಯುತ್ತ ಒಪ್ಪಿದರಂತೆ. ಅವರ ಇಚ್ಛೆಯ ಪ್ರಕಾರ ಅವರತಲೆಯ ಮೇಲೆ ಪಾದವಿಟ್ಟರಂತೆ. ಅಂತ್ಯಕ್ರಿಯೆ ಎರಡೂ ಮತಗಳ ವಿಧಿಯ ಪ್ರಕಾರ ಆಯಿತಂತೆ. ಈಗ ಶರೀಫರ ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಕುರಾನದಿಂದ ಕಲಮಾ ಓದಿ ಸಕ್ಕರೆ ಓದಿಸಿ ಹಂಚುತ್ತಾರೆ; ಬಲಬದಿಗೆ ಹಿಂದುಗಳು ಹಣ್ಣು ಕಾಯಿ ಹೂ ಅರ್ಪಿಸಿ ಪೂಜಿಸುತ್ತಾರೆ. ಶಿಶುನಾಳ ಊರಲ್ಲಿ ಕಟ್ಟಿದ ಭವ್ಯ ಸಮಾಧಿಯ ಹತ್ತಿರ ಮುಸಲ್ಮಾನ ಮತ್ತು ಹಿಂದುಗಳು ಜೊತೆಯಾಗಿಯೇ ಶಿವರಾತ್ರಿಯ ಹುಣ್ಣಿವೆಯ ಆಸು ಪಾಸು ಮೂರು ದಿನಗಳ ಜಾತ್ರೆ ಆಚರಿಸುತ್ತಾರೆ. ಭಿನ್ನ ಮತೀಯರು ಕಲೆತು ಕೂಡುವದು ಈ ಆದಿ ’ಸಮನ್ವಯ ಕವಿಗೆ’ ಗೌರವ ಅರ್ಪಿಸಿದಂತೆಯೂ ಆಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಸಿ. ಅಶ್ವಥ್ ಅವರ ರಾಗ ಸಂಯೊಜನೆಯಿಂದ ಶರೀಫರ ಆಡಿಯೋ ಕೆಸೆಟ್ಟುಗಳಿಂದ ಶರೀಫರನ್ನು ಜನರು ಗುರುತಿಸುತ್ತಿದ್ದಾರೆ. ಅವರ ಜೀವನ ಚರಿತ್ರೆ ಹೇಳುವ ಸಿನಿಮಾ ಸಹ ಆಗಿದೆ.
ಶರೀಫರ ಜೀವನ ಮತ್ತು ’ಗೀತೆ’ಗಳ ಆಳ ಅಭ್ಯಾಸ ಮಾಡಿದ ಡಾ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರು ಹೇಳುವ ಪ್ರಕಾರ: ”ನೀತಿಬೋಧೆ ಮಾಡುತ್ತಲೇ ತಮ್ಮ ಪದಗಳಿಗೆ ಕಾವ್ಯದ ಹೊಳಪನ್ನು ನೀಡಿದ ಶರೀಫರ ಕೃತಿಗಳನ್ನು ಪುರಂದರ, ಕನಕರಂಥ ಹಿರಿಯ ಕೀರ್ತನಕಾರರ ಕೃತಿಗಳ ಜೊತೆ ಅಭ್ಯಾಸಮಾದುವ ಅಗತ್ಯವಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅವರಿಗೆ ಸಲ್ಲಬೇಕಾದ ಸ್ಥಾನವನ್ನು ನಾವು ಸಮರ್ಪಕವಾಗಿ ಗೊತ್ತು ಮಾಡಬೇಕಾಗಿದೆ.”

ಲೇಖನ: ಶ್ರೀವತ್ಸ ದೇಸಾಯಿ

ಈ ಲೇಖನಕ್ಕೆ ಸಹಾಯ ಮಾಡಿದ ಪುಸ್ತಕಗಳನ್ನು ಮತ್ತು ಅಮೂಲ್ಯ ಒದಗಿಸಿದ ಡಾ ಶಿವಪ್ರಸಾದ್, ಸರೋಜಿನಿ ಪಡಸಲಗಿ ಮತ್ತು ಡಾ C ನವೀನ್ ಅವರಿಗೆ ಋಣಿ.

ಭಕ್ತಿಪಂಥ ಮತ್ತು ಹರಿದಾಸರು; ಸಾಹಿತ್ಯ ಮತ್ತು ಸಂಗೀತ – ಲಕ್ಷ್ಮೀನಾರಾಯಣ ಗುಡೂರ್

ಸಂಪಾದಕೀಯ - ರಾಧಿಕಾ ಜೋಶಿ

ಶತಮಾನಗಳ ಹಿಂದೆ ಶರಣರ ದಾಸರ ಸಾಹಿತ್ಯದ ಚಳುವಳಿ ಪ್ರಾರಂಭವಾಗಿ ಸಮಾಜದ ಸಾಹಿತ್ಯದ ಸುಧಾರಣೆಯಾಯಿತು. ಅನಿವಾಸಿಯಲ್ಲಿ ಯುಗಾದಿಯ ಸಂಭ್ರಮದ ಜೊತೆ ಶುರುವಾದ ಸಂತರ ಸಾಹಿತ್ಯದ ಗೋಷ್ಠಿ ಅಲೆಯಾಗಿ ಸೆಲೆಯಾಗಿ ವಾರಾಂತ್ಯವಾರ ನಮ್ಮ ಮನೆಗಳಲ್ಲಿ ಹರಿಯುತ್ತಾ ಕುತೂಹಲದ ಚಳುವಳಿ ಶುರುವಾಗಿದೆ.
ಈ ವಾರ ಡಾ.ಗುಡೂರ್ ಅವರ ಲೇಖನ ದಾಸ ಸಾಹಿತ್ಯದ ಕೇವಲ ಒಂದು ಪರಿಚಯವಲ್ಲ ಒಂದು ಪ್ರಬಂಧ ಅಥವಾ ಸಂಶೋಧನಾ ಬರಹ ಎಂದರೆ ತಪ್ಪಾಗಲಾರದು.
ಓದುಗರಲ್ಲಿ ಕುತೂಹಲ, ಆಶ್ಚರ್ಯ ಎಲ್ಲಾ ನವರಸ ಭಾವನೆಗಳನ್ನು ಮೂಡಿಸುವ ಒಂದು ವಿವರವಾದ ವರದಿ.
ಸಾಹಿತ್ಯಕ್ಕೆ ತಕ್ಕಂತೆ ಸುಂದರ ಚಿತ್ರವನ್ನು ಒದಗಿಸಿದ ಡಾ. ಗುಡೂರ್ ಅವರಿಗೆ ಶರಣು

ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ. ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು.
*********************************************************************************
ಉತ್ಪನ್ನಾ ದ್ರಾವಿಡೇ ಸಾಹಂ ವೃದ್ಧಿಂ ಕರ್ನಾಟಕೇ ಗತಾ |  
ಭಕ್ತಿಪಂಥವು ದ್ರಾವಿಡದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆಯಿತು
(ಪದ್ಮಪುರಾಣ ೧-೧೮)

೧೨ನೆಯ ಶತಮಾನದಲ್ಲಿ ಉಡುಪಿಯ ಹತ್ತಿರದ ಪಾಜಕ ಕ್ಷೇತ್ರದಲ್ಲಿ ಹುಟ್ಟಿ, ಅಖಂಡ ಅಧ್ಯಯನ ಮಾಡಿ, ದೇಶಾದ್ಯಂತ ಪರ್ಯಟನ ಮಾಡಿ ಉಡುಪಿಯಲ್ಲಿ ನೆಲೆಸಿದ ಆಚಾರ್ಯ ಮಧ್ವರು ಪ್ರತಿಪಾದಿಸಿದ ದ್ವೈತ ವೈಷ್ಣವ ತತ್ತ್ವ ಒಂದು ಹೊಸ ಪಂಥಕ್ಕೆ ಕಾರಣವಾಯಿತು. ಭಕ್ತಿಪಂಥ ಹೊಸದೇನಲ್ಲ, ಅದಾಗಲೇ ತಮಿಳುನಾಡು ಕರ್ನಾಟಕಗಳಲ್ಲಿ ಸಾಕಷ್ಟು ಪ್ರಚಲಿತವಾಗಿತ್ತು. ಆ ಸುತ್ತಮುತ್ತಲಿನ ಆರು ಶತಮಾನಗಳು ಭಕ್ತಿಪಂಥದ ಸುವರ್ಣಯುಗವೆಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ, ಸಂಸ್ಕೃತದಲ್ಲಿ ಆಗಲೇ ಬರೆದು ಪ್ರಚಲಿತವಿದ್ದ ಅನೇಕ ಗ್ರಂಥಗಳನ್ನು, ತತ್ತ್ವಗಳನ್ನು ಸಾಮಾನ್ಯ ಮನುಷ್ಯನ ದಿನಬಳಕೆಯ ಭಾಷೆಗೆ ತಂದವರು ಈ ಕಾಲದಲ್ಲಿ ಕಂಡುಬರುತ್ತಾರೆ.

ಭಾರತದ ವಿವಿಧ ಭಾಗಗಳ ಭಕ್ತಿಪಂಥದ ಪ್ರಮುಖರು:
ತಮಿಳುನಾಡಿನ – ನಾಯನಾರರು ಮತ್ತು ಆಳ್ವಾರರು
ಕರ್ನಾಟಕದಲ್ಲಿ – ಶರಣರು ಮತ್ತು ಹರಿದಾಸರು
ಆಂಧ್ರಪ್ರದೇಶ – ತ್ಯಾಗರಾಜರು, ಅಣ್ಣಮಾಚಾರ್ಯ, ಭದ್ರಗಿರಿ ರಾಮದಾಸರು, ಪೋತನ,
ಮಹಾರಾಷ್ಟ್ರದಲ್ಲಿ – ಜ್ಞಾನದೇವ, ಮುಕ್ತಾಬಾಯಿ, ನಾಮದೇವ ಇತರ ಅಭಂಗ ಕೀರ್ತನಕಾರರು
ಗುಜರಾತಿನಲ್ಲಿ – ನರಸಿಂಹ ಮೆಹತಾ ಮತ್ತಿತರರು
ರಾಜಸ್ಥಾನ – ಮೀರಾಬಾಯಿ
ಉತ್ತರ ಪ್ರದೇಶ – ಕಬೀರ, ಸೂರದಾಸ, ತುಲಸಿದಾಸ
ಬಂಗಾಲದಲ್ಲಿ – ಕೃಷ್ಣ ಚೈತನ್ಯ, ಚಂಡೀದಾಸ, ಜಯದೇವಕವಿ

ಕರ್ನಾಟಕದ ಹರಿದಾಸ ಪಂಥ:
ಈ ಪಂಥದಲ್ಲಿ ಎರಡು ಮುಖ್ಯ ಬಣಗಳಿವೆ –
೧) ವ್ಯಾಸಕೂಟ: ಇದರಲ್ಲಿ ಇರುವವರು ಸನ್ಯಾಸಿಗಳು, ಸಂಸ್ಕೃತ ಪಾಂಡಿತ್ಯವುಳ್ಳವರು. ಕನ್ನಡದಲ್ಲಿ ದಾಸಸಾಹಿತ್ಯದ ರಚನೆಗೆ ಮೊದಲ ಹೆಜ್ಜೆಯಿಟ್ಟವರು.
೨) ದಾಸಕೂಟ: ಇವರು ಸಂಸಾರಿಗಳು; ಈ ಜಗತ್ತಿನಲ್ಲಿ ಇದ್ದುಕೊಂಡೇ ದಾಸಪಂಥದ ಜೀವನಕ್ಕೆ ಒಪ್ಪಿಸಿಕೊಂಡವರು.
ಹರಿದಾಸ ಎಂದರೆ ಮೊದಲು ಮನಸ್ಸಿಗೆ ಬರುವವರು ಎರಡನೆಯ ಗುಂಪಿಗೆ ಸೇರಿದವರು. ಪ್ರತಿದಿನ ಬೆಳಗ್ಗೆ ಶುಚಿರ್ಭೂತರಾಗಿ, ಸರಳ ಉಡುಗೆಯನ್ನುಟ್ಟು, ತಾಳ-ತಂಬೂರಿಗಳನ್ನು ಹಿಡಿದು ಹೊರಟು, ದೇವರ ನಾಮ ಸಂಕೀರ್ತನೆಗಳನ್ನು ಹಾಡಿ-ಕುಣಿದು ಬಂದರೆಂದರೆ ಆಯಿತು.

ಹರಿದಾಸರೆಲ್ಲರಲ್ಲೂ ಕಂಡುಬರುವ ಸಾಮಾನ್ಯ ಅಂಶಗಳು (common factors):
೧) ಭಕ್ತ ಮತ್ತು ದೇವರುಗಳ ಮಧ್ಯದ ಸಂಬಂಧ – ನಿರ್ವ್ಯಾಜ ಪ್ರೀತಿ / ಭಕ್ತಿ / ಸಮರ್ಪಣಗಳ ಮಿಶ್ರಣ
೨) ವೈಷ್ಣವ ಅದರಲ್ಲೂ ಮಾಧ್ವ ಸಂಪ್ರದಾಯ – ದ್ವೈತ ಪದ್ಧತಿ ಮುಖ್ಯ (ಬೇರೆಯವರೂ ಇದ್ದರು)
೩) ಹರಿದಾಸ ವೃತ್ತಿ / ಜೀವನ ಶೈಲಿ – ಮಧುಕರ ವೃತ್ತಿಯಿಂದ ಬಂದದ್ದು ಅಂದಿನದು ಅಂದಿಗೆ; ನಾಳೆಗಿಡದೆ, ಸಾಲ ಮಾಡದೆ, ಆಸೆಯಿಲ್ಲದೆ ಇರುವ ಬದುಕು. (ಮಧುಕರ ವೃತ್ತಿ ಎನ್ನದು ಬಲು ಚೆನ್ನದು.)
೪) ಜೀವನ ತತ್ತ್ವಗಳು, ವೈರಾಗ್ಯ, ವಿಷ್ಣುವಿನ ಅವತಾರಗಳು, ಮೋಕ್ಷದ ಗುರಿ – ಈ ವಿಷಯಗಳ ಕುರಿತು ರಚಿಸಿದ ಪದಗಳನ್ನು ಕನ್ನಡದಲ್ಲಿ ಹಾಡಿ ಹಂಚುವುದು.
೫) ಹರಿದಾಸ ದೀಕ್ಷೆ, ಅಂಕಿತಗಳ ಬಳಕೆ: ಉದಾಹರಣೆಗೆ – ಪುರಂದರವಿಟ್ಠಲ (ಪುರಂದರ ದಾಸರು), ವಿಜಯವಿಟ್ಠಲ (ವಿಜಯದಾಸರು) ಇತ್ಯಾದಿ ವಿಟ್ಠಲ ನಾಮಾಂಕಿತಗಳು; ಕಾಗಿನೆಲೆಯಾದಿಕೇಶವ (ಕನಕ ದಾಸರು), ಕೃಷ್ಣ (ವ್ಯಾಸರಾಜರು), ಹಯವದನ (ವಾದಿರಾಜರು), ವೇಣುಗೋಪಾಲ (ರಾಘವೇಂದ್ರರು).
೬) ಹೆಚ್ಚನವರು ಬ್ರಾಹ್ಮಣರು, ಆದರೆ ಎಲ್ಲರೂ ಅಲ್ಲ.
ಧನಿಕರು (ಪುರಂದರ ದಾಸರು), ಕಡು ಬಡವರು (ವಿಜಯ / ಗೋಪಾಲ ದಾಸರು)
ಉದ್ದಾಮ ಪಂಡಿತರು (ಜಗನ್ನಾಥ ದಾಸರು) ಅಥವಾ ವಿದ್ಯೆಯಿಲ್ಲದವರು (ಪ್ರಸನ್ನ ವೇಂಕಟ ದಾಸರು) ರೋಗಿ (ಮೋಹನ ದಾಸರು),

ಕಾಲಮಾನ:
ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ ಮುಖ್ಯವಾದುವು.

೧೩ ರಿಂದ ೧೫ನೆಯ ಶತಮಾನ:
ಅಚಲಾನಂದ ದಾಸರು ಮತ್ತು ನರಹರಿ ತೀರ್ಥರು ಮೊದಲ ಕನ್ನಡ ದಾಸಸಾಹಿತ್ಯದ ಹೆಸರುಗಳು.
ಶ್ರೀಪಾದರಾಜರು (ರಂಗವಿಠಲ) – ಕನ್ನಡ ಹಾಡುಗಳು ರಚನೆ ಮತ್ತು ದಿನನಿತ್ಯದ ಪೂಜೆಯಲ್ಲಿ ನೃತ್ಯ - ಸಂಗೀತ ಸಹಿತ ಹಾಡುಗಳ ಬಳಕೆಯನ್ನು ಆರಂಭಿಸಿದವರು.
ವ್ಯಾಸರಾಜರು (ಶ್ರೀಕೃಷ್ಣ): ವಿಜಯನಗರದ ಅರಸ ಕೃಷ್ಣದೇವರಾಯನ ಸಮಕಾಲೀನರು.
ವಾದಿರಾಜರು (ಹಯವದನ), ಪುರಂದರ ದಾಸರು, ಕನಕ ದಾಸರು (ಕಾಗಿನೆಲೆ ಆದಿಕೇಶವ), ವೈಕುಂಠ ದಾಸರು ಮುಂತಾದವರು.
೧೬ - ೧೭ನೆಯ ಶತಮಾನ:
ರಾಘವೇಂದ್ರ ತೀರ್ಥರು (ಧೀರವೇಣುಗೋಪಾಲ): ಪುರಂದರದಾಸರ ಕಾಲದ ನಂತರ ಸ್ವಲ್ಪ ಕಡಿಮೆಯಾಗಿದ್ದ ದಾಸಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು.
ವಿಜಯ ದಾಸರು (ವಿಜಯವಿಟ್ಠಲ), ಪ್ರಸನ್ನವೇಂಕಟ ದಾಸರು, ಹೆಳವನಕಟ್ಟೆ ಗಿರಿಯಮ್ಮ, ನರಸಿಂಹ ದಾಸರು, ಜಗನ್ನಾಥ ದಾಸರು, ಪಂಗನಾಮದ ತಿಮ್ಮಣ್ಣದಾಸರು, ಗೋಪಾಲದಾಸರು, ಮೋಹನದಾಸರು, ಮುಂತಾದವರು.
೧೮ ನೆಯ ಶತಮಾನದಿಂದ ಮುಂದೆ:
ಹಲವಾರು ದಾಸರುಗಳು – ಲಿಂಗಸೂಗೂರು ಯೋಗೇಂದ್ರ (ಪ್ರಾಣೇಶವಿಟ್ಠಲ), ಕರ್ಜಗಿ ದಾಸಪ್ಪ (ಶ್ರೀದವಿಟ್ಠಲ), ಗದ್ವಾಲ ಸುಬ್ಬಣ್ಣದಾಸರು (ಕೇಶವವಿಟ್ಠಲ), ಹುಂಡೇಕಾರದಾಸರು (ಶ್ರೀಶವಿಟ್ಠಲ), ಸುರಪುರದ ಭೀಮದಾಸರು (ಶ್ರೀಶಕೇಶವವಿಟ್ಠಲ), ಸಂತೆಬೆನ್ನೂರು ರಾಮಾಚಾರ್ಯರು (ಕಮಲಾಪತಿವಿಠಲ), ಗರ್ಗೆಶ್ವರಿ ಕೇಶವರಾಯರು (ಮಧ್ವೇಶವಿಠಲ), ಇನ್ನೂ ಹಲವಾರು ದಾಸರುಗಳು ಈ ಪರಂಪರೆಯನ್ನು ಮುಂದುವರೆಸಿದರು.

ಹರಿದಾಸ ಸಾಹಿತ್ಯ:
ಸಾಹಿತ್ಯ ರೂಪಗಳು – ವಚನ, ರಗಳೆ, ಚಂಪೂ, ಷಟ್ಪದಿ ಇತ್ಯಾದಿ ಛಂದೋಬದ್ಧ ರಚನೆಗಳು ಇದ್ದರೂ, ಸಂಗೀತವನ್ನು ಮುಖ್ಯವಾಗಿ ಇಟ್ಟುಕೊಂಡು ರಚಿಸಿದ ಸಾಹಿತ್ಯ ಕನ್ನಡದಲ್ಲಿ ಹರಿದಾಸ ಸಾಹಿತ್ಯ ಮೊದಲು.
ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ಭಕ್ತಿಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತಗೊಳಿಸುವುದು. ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.

ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ.

ದಾಸ ಸಾಹಿತ್ಯದ ಮೂಲ ತತ್ವ – ಧರ್ಮ – ಮೋಕ್ಷಗಳ ಪ್ರಚಾರ ನೆಲದ ಭಾಷೆಯಲ್ಲಿ ತಂದ ಕೆಲಸದಲ್ಲಿ ದಾಸರು ಮೊದಲಿನವರಲ್ಲ – ಬೌದ್ಧರು ಪಾಲಿಯಲ್ಲೂ, ಜೈನರು ಪ್ರಾಕೃತದಲ್ಲೂ, ಶರಣರು ಕನ್ನಡದಲ್ಲೂ ಆಗಲೇ ಶುರು ಮಾಡಿದ್ದ ಕಾರ್ಯವನ್ನೇ ಮುಂದುವರೆಸಿದವರು ಹರಿದಾಸರು. ಇವರಲ್ಲಿ ಅನೇಕರು ಸಂಸ್ಕೃತ ಪಂಡಿತರಾಗಿದ್ದೂ, ಗ್ರಂಥಗಳನ್ನು ರಚಿಸಿದ್ದೂ ಜನಸಾಮಾನ್ಯರಿಗೆ ತಲುಪಿಸುವುದಕ್ಕೋಸ್ಕರ ಕನ್ನಡವನ್ನು ಮಾಧ್ಯಮವಾಗಿಸಿಕೊಂಡು ರಚನೆಗಳನ್ನು ಮಾಡಿದರು.

ಈ ಮುಂಚೆ ಹೇಳಿದಂತೆ, ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆ ಇರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ. ಇದಲ್ಲದೇ ಕನಕದಾಸರ ಹರಿಭಕ್ತಿಸಾರ, ಮೋಹನತರಂಗಿಣಿ ಮತ್ತು ಜಗನ್ನಾಥದಾಸರ ಹರಿಕಥಾಮೃತಸಾರದಂತಹ ದೊಡ್ಡ ಕೃತಿಗಳೂ ಇವೆ. ಸುವ್ವಿಪದ, ಕೋಲಾಟದ ಪದ, ಜೋ ಜೋ ಕೊರವಂಜಿ ಪದಗಳಂತಹ ಜಾನಪದ ಸಾಹಿತ್ಯಿಕ ರಚನೆಗಳೂ ಇವೆ.

ಹರಿದಾಸ ಸಾಹಿತ್ಯ ಮತ್ತು ಕನ್ನಡ: (ಆರ್ ರಾಮಕೃಷ್ಣ – ದಾಸಸಾಹಿತ್ಯ ದರ್ಶನ – ed. ಎಚ್ಚೆಸ್ಕೆ)
ಹರಿದಾಸರ ಸಾಹಿತ್ಯದ ಮಾಧ್ಯಮ ಕನ್ನಡವಾಯಿತು, ಅದರಲ್ಲೂ ನಡುಗನ್ನಡವೇ ಮುಖ್ಯವಾದರೂ, ಹೊಸಗನ್ನಡದ ಬಳಕೆಯಿದೆ.

ಸಂಸ್ಕೃತವಿದಲ್ಲೆಂದು ಕುಹಕ ತಿ-
ರಸ್ಕರಿಸಲೇನಹುದು ಭಕ್ತಿಪು-
ರಸ್ಕರದಿ ಕೇಳ್ವರಿಗೆ ಒಲಿವನು ಪುಷ್ಕರಾಕ್ಷ ಸದಾ ||
ಅಂದಿದ್ದಾರೆ ಜಗನ್ನಾಥ ದಾಸರು.

ಶರಣರಂತೆ ದಾಸರೂ ಕನ್ನಡವನ್ನು ಬಳಸಿ ಬೆಳೆಸಿದರು. ಹಲವಾರು ತರಹದ ಪ್ರಯೋಗಗಳನ್ನು ದಾಸ ಸಾಹಿತ್ಯದಲ್ಲಿ ಕಾಣಬಹುದು:
೧) ಕನ್ನಡದ ಕುರುಹಾದ ವ್ಯಂಜನಾಂತ ಪದಗಳಿಗೆ ಸ್ವರಾಂತ್ಯದ ಬಳಕೆ – ನಾನ್ – ನಾನು, ಪೆಣ್ – ಹೆಣ್ಣು, ಪಾಲ್ – ಪಾಲು, ಕೇಳ್ – ಕೇಳು,

೨) ಪಕಾರ ಶಬ್ದಗಳು ಹಕಾರಗಳಾಗಿ ಬದಲಾವಣೆ: ಪಕ್ಕಿ – ಹಕ್ಕಿ, ಪೆಣ್ಣು – ಹೆಣ್ಣು

೩) ಹೆಚ್ಚಿನವರು ಉತ್ತರ ಕರ್ನಾಟಕದವರಾಗಿದ್ದರಿಂದ, ಉತ್ತರ ಕರ್ನಾಟಕದ ಭಾಷಾವೈಶಿಷ್ಟ್ಯ (dialect) ದಾಸರ ರಚನೆಗಳಲ್ಲಿ ಬಳಕೆಯಾಗುತ್ತದೆ. ಉದಾ. ಕಂಡೀರ್ಯಾ, ತಂದೀರ್ಯಾ ಇತ್ಯಾದಿ

೪) ಛಂದಸ್ಸಿಗನುಗುಣವಾಗಿ ಪದಗಳ ಬದಲಾವಣೆ – ಘನ್ನ, ವಿಟ್ಠಲನ್ನ ಇತ್ಯಾದಿ ಸಜಾತೀಯ ಒತ್ತಕ್ಷರಗಳ ಬಳಕೆ.

೫) ಇನ್ನು ಮುದ್ದುಕೃಷ್ಣನ ಬಾಲಲೀಲೆಗಳನ್ನು ಹೇಳುವಾಗ ಮುದ್ದು ಮಾತಿನ ಬಳಕೆ ಬೇಕೇಬೇಕಲ್ಲ? ಗುಮ್ಮ, ಬೂಚಿ, ಮಮ್ಮು, ಅಮ್ಮಿ, ತಾಚಿ, ಪಾಚಿಕೊ ಇತ್ಯಾದಿ ಪದಗಳ ಬಳಕೆ ಹೇರಳವಾಗಿ ಕಾಣುತ್ತವೆ.

೬) ಸಂಸ್ಕೃತ ಪದಗಳ ಬಳಕೆ ಹರಿದಾಸರ ಸಂಸ್ಕೃತ ಪಾಂಡಿತ್ಯವನ್ನು ತೋರುತ್ತವೆ. ಅಲ್ಲದೇ ಸಾಕಷ್ಟು ಪದಗಳ ತದ್ಭವಗಳ ಉಪಯೋಗವನ್ನೂ ಕಾಣುತ್ತೇವೆ: ಉದಾ – ಬ್ರಹ್ಮ – ಬೊಮ್ಮ, ಸರಸ್ವತಿ – ಸರಸತಿ, ಮುಖ – ಮೊಗ, ವಿನಾಯಕ – ಬೆನಕ ಇತ್ಯಾದಿ.

೭) ಗಡಿಪ್ರದೇಶದಲ್ಲಿ ಸಹಜವಾಗಿಯೇ ಕಂಡುಬರುವ ಬೇರೆ ಭಾಷೆಯ ಪದಗಳ ಬಳಕೆ: ಮರಾಠಿ – ಛಪ್ಪನ್ನ ದೇಶಗಳು, ಬತ್ತೀಸು ರಾಗಗಳು ಮತ್ತು ಉರ್ದು – ಫಕೀರ, ಭಂಗಿ (ಭಾಂಗ್), ಲುಂಗಿ ಇತ್ಯಾದಿ.

ಕನ್ನಡವು ಎಳೆದಂತೆ ಬೆಳೆವ, ಸುಲಲಿತ ಭಾಷೆಯೆಂಬುದನ್ನು ದಾಸ ಸಾಹಿತ್ಯ ಸಾಧಿಸಿ ತೋರಿಸಿಕೊಟ್ಟಿದೆ. ಛಂದೋಬದ್ಧವಾದ, ಮಧುರ ಶಬ್ದಗಳ ಜೋಡಣೆಯಿಂದ, ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಹರಿದಾಸ ಸಾಹಿತ್ಯದ ಶೈಲಿ:
ಭಾಷೆ – ಭಾವಗಳ ಸಮರಸ ಸಂಯೋಜನೆಯೇ ಶೈಲಿ, ಕಾವ್ಯಕ್ಕೆ ರಸವನ್ನು ತುಂಬುತ್ತದೆ. ಚಲುವಾದ ಭಾವನೆಗೆ ಚಲುವಾದ ಭಾಷೆಯೇ ಜೊತೆಯಾಗಬೇಕು. ಬರೆಯುವವರಿಗೆ ಭಾಷೆಯ ಮೇಲೆ ಸಮರ್ಪಕ ಹಿಡಿತ ಬೇಕು, ಇಲ್ಲದಿದ್ದರೆ ಮನದ ಆಲೋಚನೆಯನ್ನು ಅಂದುಕೊಂಡಂತೆ ಹಂಚಲಾಗದು. ಎಲ್ಲ ದಾಸರೂ ಈ ವಿಷಯದಲ್ಲಿ ಪಾಂಡಿತ್ಯ ಇದ್ದವರೆಂದೇ ಹೇಳಬಹುದು. ಆದಿಪ್ರಾಸ (ಎರಡನೆಯ ಅಕ್ಷರ ಪ್ರಾಸ), ಅಂತ್ಯಪ್ರಾಸ, ಮತ್ತೂ ಮಧ್ಯಪ್ರಾಸಗಳು ರಚನೆಯ ಅಂದವನ್ನು ಹೆಚ್ಚಿಸುತ್ತವೆ. ಸಂಗೀತದ ಸಹಕಾರವೂ ಸೇರಿ ರಸಮಯವಾಗುತ್ತವೆ.

ಈಶ ನಿನ್ನ ಚರಣಭಜನೆ ಆಶೆಯಿಂದ ಮಾಡುವೇನು
ದೋಷರಾಶಿ ನಾಶ ಮಾಡೊ ಶ್ರೀಶ ಕೇಶವ ||

ಇನ್ನು ಭಾವಗಳು:
ಈಶ್ವರನನ್ನು ಬರಿಯ ಬುದ್ಧಿಗಮ್ಯನೆಂದು ದಾಸರು ತಿಳಿಯದೇ, ಅನುಭಾವದ ಮಾರ್ಗವನ್ನು ಹಿಡಿದರು. ಹೃದಯದಲ್ಲಿ ಉಕ್ಕಿಬಂದ ಭಾವನೆಗಳನ್ನು ನಿಸ್ಸಂಕೋಚವಾಗಿ ಹಾಡಿದರು. ಇದು ದಾಸರ ಹಾಡುಗಳ ವಿಶಿಷ್ಟವಾದ ಲಕ್ಷಣ. ಇಲ್ಲಿ ಭಕ್ತ - ಭಗವಂತನ ಅನಿರ್ವಚನೀಯ ಸಂಬಂಧ ವ್ಯಕ್ತವಾಗುತ್ತದೆ. ದೇವರು ದಾಸರಿಗೆ ತಾಯಿ-ತಂದೆಯೂ ಹೌದು, ಮಿತ್ರನೂ ಹೌದು, ಒಂದು ರೀತಿಯಲ್ಲಿ ಒಡೆಯನೂ ಹೌದು. ಅವನನ್ನು ಗೌರವಿಸಲು, ಮುದ್ದು ಮಾಡಲು, ಹೊಗಳಲು ಅಷ್ಟೇ ಅಲ್ಲ ಬೈಯಲೂ ಹಿಂಜರಿಯಲಾರರು.

ಕೃಷ್ಣನ ಬಾಲಲೀಲೆಗಳು, ಜೀವನ, ಉಪದೇಶ, ತಾಯಿಯ ಮಮತೆ, ಮಗುವಿನ ಆಟ (ಸ್ವಭಾವೋಕ್ತಿ) – ತಾನೇ ತಾಯಾಗಿ, ಮಗುವಾಗಿ, ಪ್ರಿಯೆಯಾಗಿ, ಕಾಡಿಸಿಕೊಂಡ ಗೋಪಿಯಾಗಿ, ದಾಸನಾಗಿ ನಿಂತು ಬರೆದ ಪದ್ಯಗಳು.
ಶೃಂಗಾರ – ಕೃಷ್ಣನ ರಾಸಲೀಲೆಗಳ ವಿವರವುಳ್ಳ ಗೀತೆಗಳಲ್ಲಿ ಇದು ಮುಖ್ಯ. ಮೆಲ್ಲ ಮೆಲ್ಲನೇ ಬಂದನೇ ಗೋಪೆಮ್ಮ ಕೇಳೇ.. ಗಲ್ಲಕೆ ಮುದ್ದು ಕೊಟ್ಟು ನಿಲ್ಲದೆ ಓಡಿಪೋದ
ದೇವರ ಅವತಾರ ಕ್ರಿಯೆಗಳು- ಬಾರೆ ಗೋಪಿ ಬಾಲಯ್ಯ ಅಳುತಾನೆ ಅನ್ನುವ ಅನೇಕ ಕೃತಿಗಳಲ್ಲಿ ದಶಾವತಾರದ ವರ್ಣನೆ ಕಂಡುಬರುತ್ತದೆ.
ಆಶ್ಚರ್ಯ, ಪ್ರಶ್ನೆ: ಏಕೆ ಮನವಿತ್ತೆ ಲಲಿತಾಂಗಿ ಎಂದು ಲಕ್ಷ್ಮಿಯನ್ನು ಕಾರಣ ಕೇಳುತ್ತಾರೆ.
ದೈನ್ಯತೆ, ಸಮರ್ಪಣಾ ಭಾವಗಳು – ದಾಸ ಎಂದರೇ ಸಂಪೂರ್ಣ ಸಮರ್ಪಣೆಯನ್ನು ನಂಬಿದವನು, ಶರಣಾಗತ ಅನ್ನುವುದನ್ನು ಪ್ರತಿಬಿಂಬಿಸುವ ಪದಗಳು. ಉದಾ: ನಿನ್ನನ್ನೆ ನಂಬಿದೆ ಕೃಷ್ಣಾ, ಕಂಡು ಕಂಡು ನೀ ಎನ್ನ ಕೈಬಿಡುವರೇ ಕೃಷ್ಣಾ (ವಾದಿರಾಜರು); ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವೈರಾಗ್ಯ – ನೀರೊಳಗಿನ ಕಮಲದೆಲೆಯಂತೆ ಬದುಕಬೇಕೆಂಬುವ ಆಶಯ ಕಾಣುತ್ತದೆ. ಉದಾ: ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ (ಪುರಂದರ ದಾಸರು); ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ
ಸಾಮಾಜಿಕ ಅನ್ಯಾಯಗಳ / ಕಂದಾಚಾರಗಳ ವಿರುದ್ಧ ಎತ್ತಿದ ಧ್ವನಿ; ಇದರಲ್ಲಿ ಸುತ್ತಲೂ ಸಮಾಜದಲ್ಲಿ ಕಂಡುಬಂದ ಢಂಬಾಚಾರಗಳ ಬಗ್ಗೆ ದಾಸರಿಗಿದ್ದ ದೃಷ್ಟಿಯನ್ನು ಕಾಣಬಹುದು – ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ …; ಉದರ ವೈರಾಗ್ಯವಿದು; ನಿಂದಕರಿರಬೇಕು ಊರೊಳಗೆ
ನಿಂದಾ ಸ್ತುತಿ – ದಾಸರು ತಮ್ಮ frustration ಅನ್ನು ದೇವರಿಗೆ ಬೈದು ತೀರಿಸಿಕೊಂಡರು ಅನ್ನುವಂತೆ ಮೇಲುನೋಟಕ್ಕೆ ಕಂಡರೂ, ಈ ಪದಗಳು ಸ್ತುತಿಗಳೇ. ಉದಾ: ಆರು ಬದುಕಿದರಯ್ಯ ಹರಿ ನಿನ್ನ ನಂಬಿ, ಕರುಣಾಕರ ನೀನೆಂಬುವದ್ಯಾತಕೋ ಭರವಸೆಯಿಲ್ಲೆನಗೆ
ಹಾಸ್ಯ / ವಿಡಂಬನೆ: ಹಾಸ್ಯದ ಮೂಲಕ ದೇವರ ಸ್ತುತಿ ಮಾಡುವ ಪದಗಳು. ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ, ಶೃಂಗಾರ ಪುರುಷರು ಬಹು ಮಂದಿಯಿರಲು; ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ
ಚಿತ್ರಕವಿತೆ – descriptive poetry – ಆಗಿಹೋದ ಘಟನೆಗಳನ್ನು ಕಣ್ಣಮುಂದೆ ಕಟ್ಟುವಂತೆ ಬಣ್ಣಿಸುವುದು ಅದು ದಾಸರ ಪದಗಳ ಒಂದು ಸ್ಟ್ರಾಂಗ್ ಪಾಯಿಂಟ್ ಅನ್ನುವುದರಲ್ಲಿ ಅನುಮಾನವೇ ಇಲ್ಲ.
ಗ್ರಾಮ್ಯ, ಬಳಕೆಯ ಭಾಷೆಯ ಬಳಕೆ – ಕನಕ ದಾಸರ ದೇವಿ ನಮ್ಮ ದ್ಯಾವರು ಬಂದಾನ ಬನ್ನೀರೆ ನೋಡ ಬನ್ನೀರೆ (ಡೊಳ್ಳಿನ ಪದದ ಧಾಟಿಯಲ್ಲಿ)
ಗಾದೆಮಾತು / ನುಡಿಗಟ್ಟುಗಳ ಬಳಕೆ: ರೊಕ್ಕ ಎರಡಕ್ಕೂ ದುಃಖ ಕಾಣಕ್ಕ; ಕುನ್ನಿ ಕಚ್ಚಿದರಾನೆ ಅಳುಕುವುದೇ
ತತ್ತ್ವಪದಗಳು – ಮುಖ್ಯವಾಗಿ ಕನಕದಾಸರ ಮುಂಡಿಗೆಗಳು ಮತ್ತು ಕೃತಿಗಳು ಜಟಿಲವಾದುವು – ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಇತ್ಯಾದಿ.

ಈಗಲೂ ಖಂಡಿತ ಒಪ್ಪುವ ಮಾತುಗಳನ್ನು ಹೇಳಿದ್ದಾರೆ –
ಪಿತ ಮಾತೆ ಸತಿಸುತರ ಅಗಲಿ ಇರಬೇಡ
ಯತಿಯಾಗಿ ಆ..ರಣ್ಯ ಚರಿಸಲು ಬೇಡ
ವ್ರತನೇಮವ.. ಮಾಡಿ ದಣಿಯಲೂ ಬೇಡ
ಸತಿಯಿಲ್ಲದವಗೆ ಸದ್ಗತಿಯಿಲ್ಲವೋ ಮೂಢ (ಪುರಂದರ ದಾಸರು)

ಒಳ್ಳೆಯ ಕೆಲಸಕ್ಕೆ ಕಾರಣವಾದದ್ದಕ್ಕೆ “ಹೆಂಡತಿ ಸಂತತಿ ಸಾವಿರವಾಗಲಿ” ಎಂದು ಹೊಗಳಿದ್ದಾರೆ.

ಹರಿದಾಸ ಸಾಹಿತ್ಯ ಮತ್ತು ಸಂಗೀತ:
ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ,
ಕುಳಿತು ಪಾಡಲು ನಿಲುವ, ನಿಂತರೆ ನಲಿವ,
ನಲಿದರೆ ಒಲಿವೆ ನಾ ನಿಮಗೆಂಬ | (ಹರಿಕಥಾಮೃತಸಾರ - ಜಗನ್ನಾಥ ದಾಸರು)

ಕೀರ್ತನೆಗಳು ಸಂಗೀತಪ್ರಧಾನವಾದ ರಚನೆಗಳು, ದೇವರು ಸಂಗೀತ – ನೃತ್ಯಗಳಿಗೆ ಒಲಿಯುವನೆಂಬ ನಂಬುಗೆಯಿಂದ ಬೆಳೆದು ಬಂದ ಸಾಹಿತ್ಯ. ಹರಿದಾಸರ ಜೀವನಶೈಲಿಯೂ ಇದಕ್ಕೆ ಅನುಗುಣವಾಗಿಯೇ ಇತ್ತು (ಮಧುಕರ ವೃತ್ತಿ ಎನ್ನದು – ಪುರಂದರ ದಾಸರು).

ಇಲ್ಲಿ ನೆನಪಿಸಿಕೊಳ್ಳಬೇಕಾದ ಹೆಸರು ಶ್ರೀಪಾದರಾಜರದ್ದು. ಇವರು ಕನ್ನಡದಲ್ಲಿ ಸರಳ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಸಂಗೀತಕ್ಕೆ ಅಳವಡಿಸಿ ದಿನನಿತ್ಯದ ಪೂಜೆಯ ವೇಳೆಯಲ್ಲಿ ಬಳಕೆಯಲ್ಲಿ ತಂದರು ಸಹ.

ತತ್ತ್ವೋಪದೇಶ, ನೈತಿಕ ಉಪದೇಶಗಳಿಗೆ ಮಾಧ್ಯಮವಾಗಿ ಸಂಗೀತವನ್ನು ಹೊರತಂದ ಶ್ರೇಯ ಪುರಂದರ ದಾಸರದ್ದು. ಕಾವ್ಯವಾದರೆ ಪಂಡಿತರಲ್ಲಿ ಮಾತ್ರ ಉಳಿದು ಹೋಗಬಹುದು ಅನ್ನುವ ಯೋಚನೆಯಿಂದ ಸಂಗೀತವನ್ನು ಆರಿಸಿಕೊಂಡರು ಅನ್ನವುದು ಸರಿಯೇ. ಹಾಡುಗಳು ಬಾಯಿಂದ ಬಾಯಿಗೆ ಕಲಿತು ಬೆಳೆಯುತ್ತವೆ, ಉಳಿಯುತ್ತವೆ ಅನ್ನುವುದೇ ಅವರ ವಿಚಾರವಾಗಿತ್ತು. ದಾಸರ ಗೆಜ್ಜೆಕಟ್ಟಿಕೊಂಡು ಕುಣಿಯುವ ಜೀವನ ಶೈಲಿಗೆ, ಪ್ರಾಸಬದ್ಧ ಸಂಗೀತಮಯ ಹಾಡುಗಳು ಸಮರ್ಪಕ ಜೊತೆಯಾದವು.

ತಾಳ ಬೇಕು ತಕ್ಕ ಮೇಳ ಬೇಕು…
ಯತಿಪ್ರಾಸವಿರಬೇಕು, ಗತಿಗೆ ನಿಲ್ಲಿಸಬೇಕು,
ರತಿಪತಿಯ ಪಿತನೊಳು ಅತಿಪ್ರೇಮವಿರಬೇಕು.. (ಗುರುಮಧ್ವಪತಿ)

ಸಂಗೀತಕ್ಕೆ ಅಳವಡಿಸಬೇಕೆಂದರೆ, ಛಂದಸ್ಸುಗಳ ಬದ್ಧತೆ ಬೇಕು. ಆದಿ, ಅಂತ್ಯ ಅಥವಾ ಮಧ್ಯ ಪ್ರಾಸಗಳ ಬಳಕೆಯಿರಬೇಕು. ದ್ವಿಪದಿ, ಚೌಪದಿಗಳ, ಷಟ್ಪದಿಯ ಬಳಕೆ ಕಾವ್ಯದ ಅಂದವನ್ನು ಹೆಚ್ಚಿಸುತ್ತವೆ. ದಾಸರ ರಚನೆಗಳು ಪಲ್ಲವಿ, ಅನುಪಲ್ಲವಿ ಹಾಗೂ ಚರಣಗಳು ಈ ಕ್ರಮದಲ್ಲಿದ್ದು, ಪಲ್ಲವಿ ತತ್ತ್ವವನ್ನೂ, ಅನುಪಲ್ಲವಿ ವಿವರಣೆಯನ್ನೂ ಕೊಟ್ಟರೆ, ಚರಣಗಳು ಉದಾಹರಣೆಗಳೊಂದಿಗೆ ಮೇಲಿನದನ್ನು ಸಮರ್ಥಿಸುತ್ತವೆ ಅನ್ನಬಹುದು.

ಸಂಗೀತಾಭ್ಯಾಸಿಗಳಿಗೆ ಅನುಕೂಲವಾಗುವಂತೆ ಗೀತೆಗಳನ್ನು ರೂಢಿಗೆ ತಂದ ಶ್ರೇಯಸ್ಸು ಪುರಂದರ ದಾಸರಿಗೆ ಸಲ್ಲುತ್ತದೆ. ಲಂಬೋದರ ಲಕುಮಿಕರ ಅನ್ನುವ ರಚನೆಯಿಂದಲೇ ಅಲ್ಲವೆ ಪ್ರತಿಯೊಬ್ಬ ಸಂಗೀತಾಭ್ಯಾಸಿ ಆರಂಭಿಸುವುದು?
ಜೊತೆಯಲ್ಲಿ ಪುರಂದರ ದಾಸರು ಆಗ ಬಳಕೆಯಲ್ಲಿದ್ದ ತಾಳಗಳನ್ನು ಸರಳೀಕರಿಸಿ, ಸಪ್ತತಾಳಗಳನ್ನು ಬಳಕೆಗೆ ತಂದರು. ಖಂಡಛಾಪು, ಮಿಶ್ರಛಾಪು ಈ ಎರಡು ಛಾಪುತಾಳದ ವಿಧಗಳಲ್ಲಿ ಅನೇಕ ಕೀರ್ತನೆಗಳು ಇವೆ. ಮಾಯಾಮಾಳವ ಗೌಳ ರಾಗವನ್ನು ಆಧರಿಸಿ ಸರಳೀ ಸ್ವರಗಳು ಮತ್ತು ಜಂಟಿ ಸ್ವರಗಳನ್ನು ಹಾಕಿಕೊಟ್ಟು, ಹೊಸತಾಗಿ ಕಲಿಯುವವರಿಗೆ ಸುಲಭವಾಗಿಸಿದ ಶ್ರೇಯವೂ ಪುರಂದರ ದಾಸರದ್ದೇ ಅನ್ನಲಾಗಿದೆ. ಪುರಂದರ ದಾಸರ ಈ ಕಾರ್ಯದಿಂದಲೇ, ಅವರನ್ನು "ಕರ್ನಾಟಕ ಸಂಗೀತದ ಪಿತಾಮಹ" ಅನ್ನುವುದು ಸಹಜವೇ.

ಅನೇಕ ರಾಗಗಳು ಆಗ ಪ್ರಚಲಿತವಾಗಿ ಇದ್ದಿರಬಹುದಾದರೂ, ದಾಸರು ಜಾನಪದ ಮೂಲವಾದ ರಾಗಗಳನ್ನು ತಮ್ಮ ಕೀರ್ತನೆಗಳಿಗೆ ಬಳಸಿಕೊಂಡರು. ಅಲ್ಲಿ ಹೆಸರಿಸಿದ ಈ ರಾಗಗಳ ಸಂಖ್ಯೆ ೧೦೦ನ್ನು ಮೀರಲಿಕ್ಕಿಲ್ಲ; ಇದಕ್ಕೆ ಕಾರಣ ರಾಗ ಕ್ಲಿಷ್ಟವಾದರೆ ಜನಸಾಮಾನ್ಯರ ಬಾಯಲ್ಲಿ ಹಾಡು ಉಳಿಯಲಿಕ್ಕಿಲ್ಲ ಅನ್ನುವುದಿರಬಹುದು. ಈಗೀಗ ವಿದ್ವಾಂಸರು ಹತ್ತು ರಾಗಗಳಲ್ಲಿ ಒಂದೇ ಕೃತಿಯನ್ನು ಹಾಡುವುದು ಕಂಡುಬರುತ್ತದೆ. ಅವು ಮೆಚ್ಚುಗೆಯನ್ನೂ ಗಳಿಸುತ್ತವೆ.

ಗೀತ – ವಾದ್ಯಗಳೊಂದಿಗೆ, ನೃತ್ಯವೂ ಸಂಗೀತದ ಒಂದು ಅಂಗವಾಗಿಯೇ ಬೆಳೆದುಬಂದಿತ್ತಾದರೂ, ಮುಂದೆ ನೃತ್ಯ – ಸಂಗೀತಗಳು ಬೇರೆಯಾದವು ಅನ್ನುವುದು ವಿದ್ವಾಂಸರ ಅಭಿಪ್ರಾಯ. ದಾಸರ ರಚನೆಗಳಲ್ಲಿ ಇರುವ ಬಾಲಕೃಷ್ಣನ ಲೀಲೆಗಳು ಮುಖ್ಯವಾಗಿ ನೃತ್ಯಕ್ಕೆ ತಕ್ಕ ಸಾಮಗ್ರಿಯನ್ನು ಒದಗಿಸುತ್ತವೆ. ದಾಸರುಗಳೇ ಗೆಜ್ಜೆಕಟ್ಟಿಕೊಂಡು, ಕುಣಿದು ಹಾಡಿ ಹಂಚಿದರು. ಹಾಗಾಗಿ ನೃತ್ಯ ಆ ಕೀರ್ತನೆಗಳ ಮೂಲ ಉದ್ದೇಶವಲ್ಲದಿದ್ದರೂ, ಗೀತ – ವಾದ್ಯಗಳ ಜೊತೆಗೂಡಿದಾಗ ಕೀರ್ತನೆಗಳ ಭಾವ ಸಶಕ್ತವಾಗಿ ತೋರಿ, ಪರಿಣಾಮಕಾರಿಯಾಯಿತು.

ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ . ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು

- ಲಕ್ಷ್ಮೀನಾರಾಯಣ ಗುಡೂರ್

***************

(ಈ ಲೇಖನ ಸ್ವಲ್ಪ ಉದ್ದವಾಯಿತೇನೊ ಅನ್ನಿಸಿದರೆ, ಕ್ಷಮೆಯಿರಲಿ. ವಿಷಯದ ಕಾರಣದಿಂದ ಅಷ್ಟು ಸಾಲುಗಳು ಬೇಕಾದವು; ಅದರಲ್ಲೂ ನಾನು ಬರಿಯ ಸಾಹಿತ್ಯ-ಸಂಗೀತಗಳ ಬಗ್ಗೆ ಮಾತ್ರ ಬರೆದಿರುವುದು – ಲಕ್ಷ್ಮೀನಾರಾಯಣ)

ಹೆಚ್ಚಿನ ಓದಿಗೆ:
ಈ ಕೆಳಗಿನ ಗ್ರಂಥಗಳೆಲ್ಲವೂ ಉಚಿತವಾಗಿ archive.org ಯಲ್ಲಿ ಲಭ್ಯವಿವೆ.
೧. ದಾಸ ಸಾಹಿತ್ಯ - ಸಂ: ದಿ. ವಿ ಸೀತಾರಾಮಯ್ಯ ಮತ್ತು ಪ್ರೊ. ಜಿ ವೆಂಕಟಸುಬ್ಬಯ್ಯ
೨. ದಾಸ ಸಾಹಿತ್ಯ ದರ್ಶನ - ಸಂ: ಎಚ್ಚೆಸ್ಕೆ
೩. ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು - ಡಾ. ಆರ್ ಸುನಂದಮ್ಮ
೪. ದಾಸ ಸಾಹಿತ್ಯ ಸೌರಭ - ಸಂ: ಶ್ರೀನಿವಾಸ ಸು ಮಠದ
೫. ದಾಸ ಸಾಹಿತ್ಯ ಸುಧೆ - ಸಂ: ಟಿ ಎನ್ ನಾಗರತ್ನ
೬. ಕರ್ನಾಟಕದ ಹರಿದಾಸರು - ಡಾ. ಹೆಚ್ ಕೆ ವೇದವ್ಯಾಸಾಚಾರ್ಯ
*********************************************************************************

ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ  ಮತ್ತು ಮಹಾದೇವಿ -ಡಾ /  ದಾಕ್ಷಾಯಿನಿ  ಗೌಡ ಅವರ ಲೇಖನ


ಈ ವರ್ಷ ಮೇ ತಿಂಗಳಿನ ಅನಿವಾಸಿಯ ಉಗಾದಿ ಕಾರ್ಯಕ್ರಮದಲ್ಲಿ ಶರಣರ, ದಾಸರ, ಸಂತರ ಸಾಹಿತ್ಯದ ಬಗ್ಗೆ ಚರ್ಚಾಗೋಷ್ಟಿಯಲ್ಲಿ ನಾನು, ಶರಣ ಸಾಹಿತ್ಯದಲ್ಲಿ  ಮಹಿಳೆಯರ ಪಾತ್ರ  ಮತ್ತು ಅಕ್ಕಮಹಾದೇವಿಯಯ ಬಗ್ಗೆ ನನ್ನ ಕೆಲ ಮಾತುಗಳನ್ನು ಹಂಚಿಕೊಂಡೆ. ಅದನ್ನು ಮತ್ತೊಮ್ಮೆ ಬರವಣಿಗೆಯ  ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.

ವಚನ ಸಾಹಿತ್ಯದ ಮೂಲಕ ಕರ್ನಾಟಕದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಮಹಿಳೆಯರು ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಇದಕ್ಕೆ ಮುಂಚೆ ದಿಗಂಬರ ಜೈನ ಧರ್ಮವು ಜನಪ್ರಿಯವಾಗಿದ್ದು , ಈ ಧರ್ಮದಲ್ಲಿ ಸ್ತ್ರೀಯರಿಗೆ ಯಾವ ರೀತಿಯ ಸ್ಥಾನಮಾನಗಳಿರಲಿಲ್ಲ. ಜೈನಧರ್ಮವು, ಯಾವ ಹೆಣ್ಣಿಗೂ ಮೋಕ್ಷ ದೊರೆಯುವುದು ಸಾಧ್ಯವಿಲ್ಲವೆಂದು ನಂಬಿದ್ದಿತು.

೧೧ನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿದ ವಚನ ಸಾಹಿತ್ಯವು, ಹೊಸ ಚಳುವಳಿಯನ್ನು ಆರಂಭಿಸಿ, ಸಂಪ್ರದಾಯ ಸಮಾಜದ ವಿರುದ್ಧ ಬಂಡೆದ್ದು, ಹೆಣ್ಣು ಗಂಡಿನಂತೆಯೇ ಮೋಕ್ಷ ಗಳಿಸಬಲ್ಲಳೆಂದು ಸಾರಿದರು. ಈ ಮನೋಭಾವದಿಂದಾಗಿ ವಚನಯುಗದಲ್ಲಿ ಹಿಂದೆಂದೂ ಇಲ್ಲದಷ್ಟುಸಂಖ್ಯೆಯಲ್ಲಿ ಸ್ತ್ರೀಯರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡರು.

ಬದಲಾವಣೆಯ ಹೊಸ ರೂಪವನ್ನು ಜನ ಸಾಮಾನ್ಯರಿಗೆ ಪರಿಚಯಿಸಿತು. ಈ ಪ್ರಭಾವಶಾಲಿ ಮಾಧ್ಯಮ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೂ ಬಹಳಷ್ಟು ಪ್ರಭಾವನ್ನು ಬೀರಿದೆಯೆನ್ನುವುದಲ್ಲಿ ಸಂದೇಹವಿಲ್ಲ. ವಚನಕಾರರು ಧರ್ಮ ಮತ್ತು ನೀತಿ ಸಮಾಜದಲ್ಲಿ ಆಳವಾಗಿ ಬೇರೂರ ಬೇಕೆಂದರೆ, ಸಾಹಿತ್ಯ ಪಂಡಿತರ ಭಾಷೆಯಾಗಿರದೆ, ಜನಸಾಮಾನ್ಯರು ಬಳಸುವ ಭಾಷೆಯಲ್ಲಿರಬೇಕೆನ್ನುವುದನ್ನು ಅರಿತಿದ್ದರು .

ಬರಿಯ ಧರ್ಮವನ್ನಲ್ಲದೆ ವಚನಗಳು ಸಾಮಾಜಿಕ ಜವಾಬ್ದಾರಿ, ಕೌಟುಂಬಿಕ ಮೌಲ್ಯ , ಜಾತಿವರ್ಗಗಳ ಸಮಾನತೆ, ದಾಸೋಹ, ಕಾಯಕ ಮತ್ತು  ಸ್ತ್ರೀ ಸ್ವಾತಂತ್ರ್ಯನ್ನು ಬೋಧಿಸಿದವು.

೨೦೦ಕ್ಕೊ ವಚನಕಾರರಿದ್ದಾರೆಂದು ಹೇಳುತ್ತಾರೆ, ಅದರಲ್ಲಿ ೩೦ ಕ್ಕೊ ಹೆಚ್ಚಿನವರು ಮಹಿಳೆಯರಾಗಿದ್ದರೆನ್ನುವುದು ಈ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ. ಎಲ್ಲಾ ಜಾತಿಯ ಮತ್ತು ವರ್ಗದ ಮಹಿಳೆಯರು ವಚನಗಳನ್ನು ರಚಿಸಿರುವುದು ಹೊಸ ಬೆಳವಣಿಗೆಯ, ಹೊಸಚಳುವಳಿಯ ಸಂಕೇತವೆಂದು ಹೇಳಬಹುದು.

ಕೆಲ ಪರಿಚಿತ ಹೆಸರುಗಳೆಂದರೆ ನೀಲಮ್ಮ, ನಾಗಾಂಬಿಕೆ, ಗಂಗಾಬಿಕೆ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ಬೊಂತಾದೇವಿ ಮತ್ತು ಮಹಾದೇವಿ ಮುಂತಾದವರು.

ಮಹಾದೇವಿ ಕನ್ನಡದ ಪ್ರಪ್ರಥಮ ಕವಯಿತ್ರೀ. ೪೦೦ ಕ್ಕೊ ಹೆಚ್ಚಿನವಚನಗಳನ್ನು ಈಕೆ ರಚಿಸಿದ್ದಾಳೆ. ’ಯೋಗಾಂಗ ತ್ರಿವಿಧಿ’ ಮಹಾದೇವಿಯ ಪ್ರಮುಖ ಕೃತಿ.

ಮಹಾದೇವಿಯದು ಆ ಕಾಲಕ್ಕೆ  ಅಸಾಧಾರಣ ವ್ಯಕ್ತಿತ್ವ. ಯಾರ ಕೈ ಕೆಳಗೂ ಇರಬಯಸದೆ, ಧೈರ್ಯದಿಂದ, ತನಗೆ ಸರಿಯೆನ್ನಿಸಿದ ಜೀವನಮಾರ್ಗವನ್ನು ಅನುಸರಿಸಿದ ಆಕೆಯದು ಅಸಾಮಾನ್ಯ ಸಾಹಸವೆಂದು ಹೇಳಬಹುದು.

ಶರಣ ಪಥವನ್ನು ತುಳಿಯುವ ಮುನ್ನ ಆಕೆ ವೈವಾಹಿಕ ಜೀವನ, ಕುಟುಂಬ, ವೈಭವ, ಸಂಪತ್ತುಗಳನ್ನ ತ್ಯಜಿಸಿ ಹೊರ ನಡೆದ ಘಟನೆಗಳು ಬಹುಶಃ ಬಹಳ ಜನರಿಗೆ ತಿಳಿದ ವಿಷಯ.

ಸಾಮಾನ್ಯರಲ್ಲಿ, ಸಾಮಾನ್ಯರಂತೆ ಬದುಕಿದ ಆಕೆಯದು ಅಲೆಮಾರಿ ( ಜಿಪ್ಸಿ) ಜೀವನವೆಂದು ಹೇಳಬಹುದು. ಈ ವಚನದಲ್ಲಿ ಇದನ್ನು ಕಾಣಬಹುದು.

"ಹಸಿವಾದೊಡೆ  ಭಿಕ್ಷಾನ್ನಗಳoಟು,  ತೃಷೆಯಾದೊಡೆ ಕೆರೆ ಭಾವಿಗಳು೦ಟು,

ಶಯನಕೆ ಪಾಳು ದೇಗುಲಗಳು೦ಟು, ಚೆನ್ನಮಲ್ಲಿಕಾರ್ಜುನ ದೇವಾ, ದೇವಾ

ಆತ್ಮಸಂಗಾತಕೆ ನೀನೆನಗುಂಟು "

೧೨ನೇ ಶತಮಾನದಲ್ಲಿ, ಒಂಟಿ ಸ್ತ್ರೀ ಯಾಗಿ, ಸಂಸಾರ ತ್ಯಜಿಸಿ , ಸ್ವಯಂಮಾರ್ಗವನ್ನು ಅರಸಿ ಹೋರಾಟ ಮಹಾದೇವಿ ಯಾವ ರೀತಿಯ, ಟೀಕೆಗಳನ್ನು, ನಿಂದನೆಗಳನ್ನು ಎದುರಿಸಿರ ಬಹುದೆನ್ನುವುದು ನಮ್ಮ ಊಹೆಗೂ ನಿಲುಕದ್ದು.  ನನ್ನನ್ನೇಕೆ ಕಾಡುವಿರಿ ಎಂದು ಈ ವಚನದಲ್ಲಿ ಆಕೆ ಸಮಾಜವನ್ನು ಪ್ರಶ್ನಿಸುವುದರ ಜೊತೆಗೆ ತನ್ನ ದೈಹಿಕ ಮಾನಸಿಕ ಸ್ಥಿತಿಯನ್ನು ನಮಗೆ ತಿಳಿಸುತ್ತಾಳೆ.

" ಮುಡಿಬಿಟ್ಟು ಮೊಗಬಾಡಿ ಕೃಶ ಕರಗಿದವಳ,

ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ

ಎನ್ನನೇಕೆ  ಕಾಡುವಿರಿ ಎಲೆ ತಂದೆಗಳಿರಾ

ಬಲುಹಳಿದು, ಭವಗೆಟ್ಟು , ಛಲಬಿಟ್ಟು , ಚೆನ್ನಮಲ್ಲಿಕಾರ್ಜುನನ ಕೂಡಿಕುಲವಳಿದವಳ."

ಕಾಡು ನಾಡನ್ನು, ದಾಟಿ ಕಲ್ಯಾಣ ನಗರದಲ್ಲಿನ "ಅನುಭವ ಮಂಟಪ"ಕ್ಕೆ ಆಕೆ ಬಂದಾಗ, ಪುರುಷ ಪ್ರಧಾನ ಮತ್ತು ಮೇಧಾವಿಗಳ ಈ ಸಭೆಯಲ್ಲಿ ಆಕೆ ಪ್ರತಿಯೊಂದು ಪ್ರಶ್ನೆಗೂ , ಟೀಕೆಗಳಿಗೂ ಸಮಂಜಸವಾದ ಉತ್ತರವನ್ನು ಕೊಟ್ಟು ಅಧ್ಯಕ್ಷ ಅಲ್ಲಮ ಪ್ರಭು, ಸದಸ್ಯರಾದ ಕಿನ್ನರಿ ಬೊಮ್ಮಯ್ಯ, ದಾಸಿಮಯ್ಯ, ಬಸವಣ್ಣ ಮತ್ತಿತರ ಪ್ರಶಂಸೆಯನ್ನ ಗಳಿಸುತ್ತಾಳೆ. ಈ ಕಠಿಣ ಸಂದರ್ಶನದ ಬಗ್ಗೆ ಸಾಹಿತ್ಯದಲ್ಲಿ ಸಾಕಷ್ಟು ಮಾಹಿತಿಯುಂಟು. ಅಕ್ಕ ಮಾಹಾದೇವಿ ಧೈರ್ಯಶಾಲಿ, ಮೇಧಾವಿ ಮತ್ತು ಪ್ರತಿಭಾವಂತೆಯೆನ್ನುವದನ್ನು ಮತ್ತೆ ಮತ್ತೆ ಜಗತ್ತಿಗೆ ಸಾರಿ ತಿಳಿಸುತ್ತಾಳೆ.

ಅಕ್ಕ ಮಾಹಾದೇವಿಯನ್ನು ಕುರಿತು ಬರೆದ H. ತಿಪ್ಪೇಸ್ವಾಮಿಯವರ " ಕದಳಿಯ ಕರ್ಪೂರ " ಮತ್ತು ಹರಿಹರನ "ಮಹಾದೇವಿಯಕ್ಕನರಗಳೆ”ಯಲ್ಲಿ ಹೆಚ್ಚಿನ ಮಾಹಿತಿಯನ್ನು ಗಳಿಸಬಹುದು.

ಈ ಕೆಳಗಿನ ವಚನವನ್ನು ಕವಿತೆಯೆಂದೂ ಹೇಳಬಹುದು. ಕನ್ನಡದ ಪ್ರಪ್ರಥಮ ಕವಿಯತ್ರಿ ಬರೆದ ಈ ಬಹು ಸುಂದರವಾದ, ಅರ್ಥಗರ್ಭಿತ ಕವಿತೆಯನ್ನೋದಿ:

"ಈಳೆ - ನಿಂಬೆ -ಮಾದಲಕ್ಕೆ ಹುಳಿ ನೀರೆರೆದವರಾರಯ್ಯ

ಕಬ್ಬು -ಬಾಳೆ -ನಾರಿವಾಳಕ್ಕೆ ಸಿಹಿ ನೀರೆರೆದವರಾರಯ್ಯ

ಮಾರ್ಗ-ಮಲ್ಲಿಗೆ - ಪಚ್ಚೆ -ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ

ಈ ಜಲ ಒಂದೆ , ನೆಲ ಒಂದೆ ,ಆಕಾಶ ಒಂದೆ,

ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾದಂಗೆ

ಎನ್ನದೇವ ಚೆನ್ನಮಲ್ಲಿಕಾರ್ಜುನ ಹಲವು ಜಗಂಗಳಲ್ಲಿ ಕೂಡಿದ್ದರೇನು - ತನ್ನ ಪರಿ ಬೇರೆ "

ನಾನು ಆಯ್ದು ಬರೆದ ಈ ಕೆಲ ವಚನಗಳ ಮೂಲಕ ವಚನಕಾರರು ತಮ್ಮ ವಚನಗಳ , ಧರ್ಮವನ್ನು ಮಾತ್ರವಲ್ಲ  ತಮ್ಮ ಬದುಕಿನ ಪರಿಯನ್ನು ನಮಗೆ ತಿಳಿಸಿದರು,  ಸಮಾಜದ ಕಟ್ಟಳೆಗಳನ್ನು ಪ್ರಶ್ನಿಸಿದರು, ಅನಾಚರಗಳನ್ನು ಪ್ರತಿಭಟಿಸಿದರು ಮತ್ತು ಬದಲಾವಣೆಗಾಗಿ ಶ್ರಮಿಸಿದರು. ವಚನಗಳಿಗೆ ಜಾತಿಯಿಲ್ಲ, ವರ್ಗವಿಲ್ಲ. ವಚನ ಸಾಹಿತ್ಯ  ಶತಮಾನಗಳಿಗೆ ಸೀಮಿತವಲ್ಲ, ಅಂದಿನಂತೆ  ಮತ್ತು ಇಂದಿನ ಸಮಾಜಕ್ಕೂ ಬಹು ಪ್ರಸ್ತುತ .

ವಂದನೆಗಳು.

ಡಾ /  ದಾಕ್ಷಾಯಿನಿ  ಗೌಡ

ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ ಭಾಗ 1

ಡಾ ಜಿ ಎಸ್ ಶಿವಪ್ರಸಾದ್ (ಫೋಟೋ ಕೃಪೆ ಗೂಗಲ್)

ಕೆಲವು ದಿನಗಳ ಹಿಂದೆ ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ ಅನಿವಾಸಿ ಸಾಹಿತ್ಯಗೋಷ್ಠಿಯನ್ನು    ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಅನಿವಾಸಿ ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಈ ಗೋಷ್ಠಿಯಲ್ಲಿ ಶರಣರ  
ಕೊಡುಗೆಯ ಬಗ್ಗೆ ನಾನು ಮಾತನಾಡಿದೆ, ಶರಣೆಯರ ಬಗ್ಗೆ ದಾಕ್ಷಾಯಿಣಿ ಗೌಡ, ದಾಸ ಸಾಹಿತ್ಯದ ಬಗ್ಗೆ ಲಕ್ಷ್ಮೀ ನಾರಾಯಣ ಗುಡೂರ್, ಕೊನೆಯದಾಗಿ ಸಂತ ಶಿಶುನಾಳ ಶರೀಫರ ಬಗ್ಗೆ ಶ್ರೀವತ್ಸ ದೇಸಾಯಿ ಅವರು ಮಾತನಾಡಿದರು. ಚರ್ಚೆಗಳ ಮಧ್ಯೆ ದಾಸರ ಮತ್ತು ಶರಣರ ಗೀತೆಗಳನ್ನು ಗಾಯಕಿಯರಾದ ರಶ್ಮಿ ಮಂಜುನಾಥ್ ಮತ್ತು ಅನ್ನಪೂರ್ಣ ಆನಂದ್ ಪ್ರಸ್ತುತಪಡಿಸಿದರು. ಸದಸ್ಯರು ಮಂಡಿಸಿದ ಈ ಚರ್ಚೆಗಳನ್ನು ಅನಿವಾಸಿ ತಾಣದಲ್ಲಿ ನಾಲ್ಕು ಹಂತಗಳಲ್ಲಿ ಪ್ರಕಟಿಸುವುದೆಂದು ಗೋಷ್ಠಿಯಲ್ಲಿ ಸಮ್ಮತಿಸಲಾಯಿತು. ಈ ನಾಲ್ಕು ವಿಷಯಗಳಿಗೆ ಪೂರಕವಾದ ಹಿನ್ನೆಲೆಯನ್ನು ಒದಗಿಸಿ ನಾನು ಮಂಡಿಸಿರುವ "ಶರಣ ಸಾಹಿತ್ಯದ ಒಟ್ಟಾರೆ ಆಶಯಗಳು, ಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು" ಎಂಬ ಬರಹವನ್ನು ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನಿಮಗೆ ತಲುಪಿಸುತ್ತಿದ್ದೇನೆ.

ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ - ಕೆಲವು ಹಿನ್ನೆಲೆ ವಿಚಾರಗಳು;
ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ. ಇಲ್ಲಿ ಹಳೆಗನ್ನಡ (400 – 1100CE), ನಡುಗನ್ನಡ (1100 -1700 CE) ಮತ್ತು ಹೊಸಗನ್ನಡ (1700 - ಇಲ್ಲಿಯವರೆಗೆ) ಎಂಬ ಮೂರು ಕಾಲಘಟ್ಟಗಳನ್ನು ಗುರುತಿಸಬಹುದು. ಹಳೆಗನ್ನಡ ಕಾಲಘಟ್ಟದಲ್ಲಿ ಜೈನರು ಪ್ರಧಾನವಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಇವರಲ್ಲಿ ಪಂಪ, ರನ್ನ ಮತ್ತು ಪೊನ್ನ ಮುಖ್ಯವಾದ ಕವಿಗಳು. ಅವರು ಜೈನ ತೀರ್ಥಂಕರರನ್ನು ಕುರಿತಾಗಿ ಅಷ್ಟೇ ಅಲ್ಲದೆ ಮಹಾಭಾರತದ ವಿಷಯವನ್ನು ಆಯ್ಕೆಮಾಡಿ ಮಹಾ ಕಾವ್ಯವನ್ನು ರಚಿಸದರು. ಇನ್ನು 12ನೇ ಶತಮಾನದಲ್ಲಿ ಶರಣರು ಅಂದರೆ ಬಸವಣ್ಣನವರ ಅನುಯಾಯಿಗಳಾದ ವೀರಶೈವ ಮತ್ತು ಹೊಸದಾಗಿ ಹುಟ್ಟಿಕೊಂಡ ಲಿಂಗಾಯಿತ ಎಂಬ ಮತದವರು ವಚನಗಳನ್ನು ರಚಿಸಿದರು. ಈ ವಚನಗಳು ಸಾಮಾಜಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಸಾಹಿತ್ಯ ಎನ್ನಬಹುದು. ಇನ್ನು 15ನೇ ಶತಮಾನದಲ್ಲಿ ವೈಷ್ಣವರು (ಹರಿದಾಸರು ಎಂದು ಕೂಡ ಗುರುತಿಸ ಬಲ್ಲವರು) ಪ್ರಧಾನವಾಗಿ ಭಕ್ತಿರಸವನ್ನು ಮತ್ತು ಕೆಲವು ಸಾಮಾಜಿಕ ಹಿತೋಪದೇಶಗಳನ್ನು ಒಳಗೊಂಡ ಕೀರ್ತನೆಗಳನ್ನು ರಚಿಸಿದರು. ಇವು ಮುಖ್ಯವಾಗಿ ಮಧ್ವಾಚಾರ್ಯರ ದ್ವೈತ ಅಧ್ಯಾತ್ಮ ಪರಿಕಲ್ಪನೆಯನ್ನು ಆಧರಿಸಿರುವ ಕೀರ್ತನೆಗಳು ಎಂದು ಗುರುತಿಸಬಹುದು. ಇದು ಹುಟ್ಟಿಕೊಂಡದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ನ ಬಹುದು. ಶರಣ ಮತ್ತು ದಾಸ ಸಾಹಿತ್ಯಕ್ಕೆ ಪರ್ಯಾಯವಾಗಿ, ಸಮಾಜದ ಅನಕ್ಷರಸ್ತ ರೈತಾಪಿ ಮತ್ತು ಜನ ಸಾಮಾನ್ಯರು ನಡುವೆ ಕರ್ನಾಟಕ ಪ್ರಾದೇಶಿಕ ನೆಲೆಗಳಲ್ಲಿ ಹುಟ್ಟಿಕೊಂಡ ಮತ್ತು ಜಾನಪದ ಸಂಪ್ರದಾಯವನ್ನು ಹೋಲುವ ಸಾಹಿತ್ಯವನ್ನು ತತ್ವ ಪದಗಳು ಎಂದು ಗುರುತಿಸಬಹುದು. ಇದರಲ್ಲಿ ಭಕ್ತಿ ಮತ್ತು ಸಾಮಾಜಿಕ ವಿಷಯಗಳನ್ನು ಆಧರಿಸಿದ ಕೃತಿಗಳಿವೆ. ಶಿಶುನಾಳ ಶರೀಫರ ತತ್ವ ಪದಗಳನ್ನು ಈ ಗುಂಪಿಗೆ ಸೇರಿಸಬಹುದು. ಶಿಶುನಾಳ ಶರೀಫರು 19ನೇ ಶತಮಾನದಲ್ಲಿ ಬಾಳಿದವರು. ಶರಣ ದಾಸರ ಸಂತರ ಕೊಡುಗೆ ಅಪಾರವಾದದ್ದು, ಅವರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎದ್ದು ನಿಲ್ಲುವ ಬರಹಗಾರರು. ದೇವರು, ಧರ್ಮ ಎಂಬ ವಿಷಯಗಳಲ್ಲದೆ ಸಾಮಾಜಿಕ ಬದುಕಿಗೆ ಬೇಕಾದ ಮಾನವೀಯ ಮೌಲ್ಯಗಳನ್ನು ಸದ್ಭಾವನೆಗಳನ್ನು ಎತ್ತಿಹಿಡಿದಿದ್ದಾರೆ. ಅವರ ಬರಹಗಳಲ್ಲಿ ಸಾಹಿತ್ಯಿಕ ಮೌಲ್ಯಗಳು ಇವೆ. ಆದುದರಿಂದಲೇ ಅವು ಕಾಲಾತೀತವಾದ ಉತ್ತಮ ಸಾಹಿತ್ಯಗಳಾಗಿವೆ.

- ಸಂ


*

“ಶರಣ ಸಾಹಿತ್ಯದ ಒಟ್ಟಾರೆ ಆಶಯಗಳುಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು

ಡಾ ಜಿ ಎಸ್ ಶಿವಪ್ರಸಾದ್

ಶರಣ ಸಾಹಿತ್ಯದ ಮುಖ್ಯಾಂಶಗಳು ಎಂದರೆ: ಎಲ್ಲರನ್ನು ಒಳಗೊಳ್ಳುವಿಕೆ, ವೈಚಾರಿಕ ಪ್ರಜ್ಞೆ, ಸಂಪ್ರದಾಯವನ್ನು ಪ್ರಶ್ನಿಸುವ, ಧಿಕ್ಕರಿಸುವ ದಿಟ್ಟ ನಿಲುವು, ಧರ್ಮದ ನಿರಪೇಕ್ಷೆ, ದೇವಸ್ಥಾನದ ನಿರಾಕರಣೆ, ಜಾತಿ ವ್ಯವಸ್ಥೆಯ ನಿರಾಕರಣೆ, ಮೂಢ ನಂಬಿಕೆಗಳ ನಿರಾಕರಣೆ, ಸಮಾಜ ಮತ್ತು ಸಂಸಾರ ಮುಖಿಯಾಗಿರುವ ಚಿಂತನೆಗಳು, ಸ್ತ್ರೀ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಪ್ರಜಾ ಪ್ರಭುತ್ವದ ಪರಿಕಲ್ಪನೆ, ಮಾನವೀಯ ಮೌಲ್ಯಗಳಾದ ದಯೆ, ಅನುಕಂಪೆ, ವಚನ ನಿಷ್ಠೆ, ದಾಸೋಹ, ಕಾಯಕವೇ ಕೈಲಾಸ ಎಂಬ ಧ್ಯೇಯಗಳ ಬೋಧನೆ ಮತ್ತು ಆಚರಣೆ. ಇವೆಲ್ಲವನ್ನೂ ಒಟ್ಟಾರೆ ನೋಡಿದಾಗ ಬಹಳ ಉದಾರವಾದ ನೀತಿ ಎಂದು ಗುರುತಿಸಬಹುದು. 20ನೇ ಶತಮಾನದ ಯುರೋಪಿನಲ್ಲಿ ಹಲವಾರು ಪ್ರೌಢ ಚಿಂತಕರು ಧೀರ್ಘ ಕಾಲ ಚರ್ಚೆ ಮಾಡಿ ಹುಟ್ಟುಹಾಕಿದ ಉದಾರನೀತಿಗೆ (Liberalism) ಹತ್ತಿರವಾದದ್ದು ಎನ್ನಬಹುದು. ಇವರಿಗಿಂತ ೮೦೦ ವರ್ಷಗಳ ಹಿಂದೆಯೇ ಶರಣರು ಪ್ರಗತಿ ಪರರಾಗಿದ್ದರು ಮತ್ತು ಉದಾರನೀತಿಯ ಬಗ್ಗೆ ಆಗಿನ ಶರಣರು ಆಲೋಚಿಸಿದ್ದರು ಅನ್ನುವ ವಿಚಾರ ಅಚ್ಚರಿಯನ್ನು ಉಂಟುಮಾಡುತ್ತದೆ.

12ನೇ ಶತಮಾನದಲ್ಲಿ ಶರಣರು ಜಡ್ಡು ಹಿಡಿದಿದ್ದ ಸಮಾಜಕ್ಕೆ ಒಂದು ಹೊಸ ಬದಲಾವಣೆಯನ್ನು ತಂದುಕೊಟ್ಟು ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದರು. ಮುಂದಕ್ಕೆ ಹಿಂದೂ ಧರ್ಮದಲ್ಲಿ /ಸಮಾಜದಲ್ಲಿ/ಸಂಸ್ಕೃತಿಯಲ್ಲಿ ಆಚರಣೆಯೊಳಗಿದ್ದ ಸತಿ ಪದ್ಧತಿ, ಬಾಲ್ಯ ವಿವಾಹ, ವಿಧವೆ ಮರು ವಿವಾಹ, ಜಾತೀಯತೆ ಮತ್ತು ಅಸ್ಪೃಶ್ಯತೆಯ ನಿವಾರಣೆ, ಸ್ತ್ರೀ ಶಿಕ್ಷಣ ಮುಂತಾದ ಸಾಮಾಜಿಕ ಪರಿವರ್ತನೆಗಳನ್ನು ರಾಜಾರಾಂ ಮೋಹನ್ ರಾಯ್, ದಯಾನಂದ ಸರಸ್ವತಿ, ಫುಲೆ, ರಾಮಕೃಷ್ಣ ಪರಮಹಂಸರು, ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರು ತಂದುಕೊಟ್ಟರು. ಯಾವುದೇ ಒಂದು ಧರ್ಮ ಮತ್ತು ಅದನ್ನು ಆಧರಿಸಿದ ಸಂಸ್ಕೃತಿ ಕಾಲ ಕಾಲಕ್ಕೆ ಪರಿಷ್ಕರಣೆಗೆ ಒಳಗಾಗುವುದು ಆರೋಗ್ಯಕರ. ನಮ್ಮ ಸಾಮಾಜಿಕ ಮೌಲ್ಯಗಳು ತೀವ್ರಗತಿಯಲ್ಲಿ ಬದಲಾಗುತ್ತಿದೆ, ಆದುದರಿಂದ ಅದಕ್ಕೆ ತಕ್ಕಂತೆ ಧರ್ಮಗಳಲ್ಲೂ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಧರ್ಮ ಸೂತ್ರಗಳನ್ನು ದೈವ ಸ್ವರೂಪರು ಬರೆದದ್ದು, ಅದನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಕೆಲವರು ವಾದ ಮಾಡಬಹುದು, ಕಾಲಕ್ಕೆ ಹೊಂದಿಕೊಳ್ಳದ ಧರ್ಮ ಸಂಘರ್ಷಣೆಗಳಿಗೆ ಕಾರಣವಾಗುತ್ತದೆ.


ಇತಿಹಾಸವನ್ನು ಗಮನಿಸಿದಾಗ ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು ಉದಾರ ಮತ್ತು ಸಂಕುಚಿತ ಸಾಂಪ್ರದಾಯಿಕ ನಿಲುವುಗಳ ನಡುವೆ ಗಡಿಯಾರದ ಪೆಂಡ್ಯುಲಮ್ ರೀತಿಯಲ್ಲಿ ತುಯ್ದಾಡುತ್ತಿತು, ಈಗಲೂ ತುಯ್ದಾಡುತ್ತಿದೆ. ಇದನ್ನು ಹಿಂದೂ ಧರ್ಮವಲ್ಲದೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಲ್ಲೂ ಕಾಣಬಹುದು. ಧರ್ಮ, ಸಂಕಟಕ್ಕೆ ಒಳಗಾದಾಗ (ಅಥವಾ ಒಳಗಾಗಿದೆ ಎಂದು ಭಾವಿಸಿದಾಗ) ಧರ್ಮ ರಕ್ಷಕರು ಮುಂದಾಗಿ ತೀವ್ರವಾದ ಧರ್ಮ ಪ್ರಚೋದನೆಯಲ್ಲಿ ತೊಡಗಿರುವುದನ್ನು ಪ್ರಪಂಚದ ಎಲ್ಲ ಸಂಸ್ಕೃತಿಯಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾ ಬಳಸುವ ಈ ಸಮಯದಲ್ಲಿ ತೀವ್ರವಾದ ಧರ್ಮ ಪ್ರಚೋದನೆಯನ್ನು ವಾಟ್ಸ್ ಆಪ್ ಸಂದೇಶಗಳಲ್ಲಿ ಪ್ರತ್ಯಕ್ಷವಾಗಿ ನಾವು ಭಾರತೀಯರು ಅನುಭವಿಸುತ್ತಿದ್ದೇವೆ. ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉದ್ದೇಶವೆಂದರೆ ಬಹುಶಃ ಹಿಂದೆ ಧರ್ಮದ ಅತಿಯಾದ ಬಳಕೆಯಾಗಿ ಸಂಪ್ರದಾಯಸ್ಥರ ದಬ್ಬಾಳಿಕೆ ಶೋಷಣೆ ಹೆಚ್ಚಾಗಿದ್ದ ಸಮಯದಲ್ಲಿ ಶರಣರು ಬೇಸತ್ತು ಈ ಒಂದು ಕ್ರಾಂತಿಯನ್ನು ಕೈಗೊಂಡಿರಬಹುದು. 11ನೇ ಶತಮಾನದಲ್ಲಿ ಚಾತುರ್ವಣ ಪದ್ಧತಿ ಜಾರಿಯಲ್ಲಿದ್ದಾಗ, ಜ್ಯಾತಿ ವ್ಯವಸ್ಥೆ ತೀವ್ರವಾಗಿದ್ದಾಗ ಶರಣರು ಅದನ್ನು ಪ್ರತಿಭಟಿಸಿ, ಜಾತಿ ವ್ಯವಸ್ಥೆಯ ತರತಮಗಳನ್ನು ಪ್ರಶ್ನಿಸುತ್ತ ಸಮಾನತೆಯನ್ನು ಎತ್ತಿಹಿಡಿದರು. ಶರಣರ ಆ ಪ್ರತಿಭಟನೆಯ ಭಾವನೆಗಳನ್ನು, ಅಸಮಾಧಾನಗಳನ್ನು ವಚನಗಳಲ್ಲಿ ಕಾಣಬಹುದು. ಈ ಸಾಮಾಜಿಕ ಕ್ರಾಂತಿಯ ಫಲವಾಗಿ ಅನುಭವ ಮಂಟಪ ಮತ್ತು ಮಹಾಮನೆಯ ಸ್ಥಾಪನೆಯಾಯಿತು. ಹಲವಾರು ವಚನಗಳಲ್ಲಿ ಈ ಮಹಾಮನೆಯ ಉಲ್ಲೇಖವಿದೆ. ಈ ಅನುಭವ ಮಂಟಪ ಸಮಾಜದ ಕೆಳವರ್ಗದವರ ಮತ್ತು ಸಾಮಾನ್ಯರ ಸಮ್ಮುಖದಲ್ಲಿ ನಡೆಯಿತು ಎಂಬುದಕ್ಕೆ ವಚನಕಾರರ ವೈಯುಕ್ತಿಕ ಹಿನ್ನೆಲೆಗಳು ಸಾಕ್ಷಿಯಾಗಿವೆ. ಈ ವಿಚಾರಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದ ಸಂಶೋಧನೆಯಿಂದ ಮತ್ತು ಪ್ರಾಜ್ಞರಿಂದ ಅನುಮೋದಿತವಾಗಿದೆ. ಹೀಗೆ 11ನೇ ಶತಮಾನದ ಕರ್ನಾಟಕದಲ್ಲಿ, ಪ್ರಜಾ ಪ್ರಭುತ್ವದ ಪರಿಕಲ್ಪನೆ ಉಂಟಾಯಿತು. ಈ ಎಲ್ಲ ಮೇಲಿನ ಹಿನ್ನೆಲೆಯಲ್ಲಿ ಶರಣರು ವಚನ ಸಾಹಿತ್ಯದಲ್ಲಿ ತೊಡಗಿ ಕೊಂಡರು.

ಈಗ ಶರಣರ ಸಾಮಾಜಿಕ ನಿಲುವುಗಳನ್ನು ಗಮನಿಸೋಣ. ಶರಣರು ದೇವಸ್ಥಾನಗಳನ್ನು ಧಿಕ್ಕರಿಸುವ ದಿಟ್ಟತನವನ್ನು ತೋರಿದರು. ಶರಣರು ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಮುಖ್ಯವಾಹಿನಿಯ ಒಳಗೇ ಇದ್ದರೂ ಏಕೆ ದೇವಸ್ಥಾನವನ್ನು ನಿರಾಕರಿಸಿದರು? ಎಂಬ ಪ್ರಶ್ನೆ ಮೂಡುವುದು ಸಹಜ. ಆಗಿನ ಕಾಲಕ್ಕೆ ದೇವಸ್ಥಾನಗಳಿಗೆ ಮೇಲ್ಜಾತಿ ಜನಕಷ್ಟೇ ಪ್ರವೇಶವಿತ್ತು. ದೇವರ ಮತ್ತು ಭಕ್ತರ ನಡುವೆ ಮಧ್ಯವರ್ತಿಗಳು ಹುಟ್ಟಿಕೊಂಡು ಅವರು ದೇವಸ್ಥಾನಗಳನ್ನು ನಿಯಂತ್ರಿಸುತ್ತಿದ್ದರು. ದೇವರ ಹೆಸರಿನಲ್ಲಿ ಮುಗ್ಧರ ಶೋಷಣೆ ನಡೆದಿತ್ತು.

"ಭಕ್ತನಿರ್ದ ತಾಣವೇ ದೇವಲೋಕ
ಭಕ್ತನಂಗಳವೇ ವಾರಣಾಸಿ
ದೇಹವೇ ದೇಗುಲ"

ಎಂದು ಹೇಳುತ್ತಾ ದೇವರ ಮತ್ತು ದೇವಸ್ಥಾನಗಳ ವೈಭವೀಕರಣ ನಡೆಯುತ್ತಿರುವಾಗ ಇಷ್ಟ ಲಿಂಗವೆಂಬ ನಿರಾಕಾರ ದೇವರ ಪರಿಕಲ್ಪನೆಯನ್ನು ಹುಟ್ಟುಹಾಕಿ, ಶರಣರು ದೇವರನ್ನೇ ಜನಸಾಮಾನ್ಯರ ಹತ್ತಿರ ತಂದು ನಿಲ್ಲಿಸಿದರು. ದೇವರು ಒಂದು ವ್ಯಾಪಾರದ, ವಾಣಿಜ್ಯ ಉತ್ಪನ್ನವಾಗಿದ್ದ ಸಮಯದಲ್ಲಿ ಮುಗ್ಧರ ಶೋಷಣೆಯನ್ನುನಿವಾರಿಸಿದರು. 'ಭಕ್ತನಿರುವ ತಾಣವೇ ವಾರಣಾಸಿ' ಎಂಬ ಸಂದೇಶವನ್ನು ಕೊಟ್ಟರು.

ಮನುಷ್ಯನಿಗೆ ನಂಬಿಕೆ ಮುಖ್ಯ; ಆದರೆ ನಂಬಿಕೆಗಳನ್ನು ಕಟ್ಟು ಕಥೆಗಳನ್ನು ಹುಟ್ಟುಹಾಕಿ ಅದರಿಂದ ಲಾಭ ಪಡೆಯುವುದಾದರೆ ಆ ನಂಬಿಕೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಬೇಕಾಗುತ್ತದೆ. ಕೆಲವೊಮ್ಮೆ ಆ ನಂಬಿಕೆ ವೈಯುಕ್ತಿಕ ನೆಲೆಯಿಂದ ಜಿಗಿದು ಸಾಮೂಹಿಕ ನೆಲೆಯಲ್ಲಿ ಕೆಲವರಿಗಷ್ಟೇ ಅನುಕೂಲವಾದಾಗ, ಧಾರ್ಮಿಕ ಪ್ರಚೋದನೆಗೆ ಬಳಸಿದಾಗ, ಅಥವಾ ಒಂದು ರಾಜಕೀಯ ಪಕ್ಷ ಅದನ್ನು ಬಂಡವಾಳ ಮಾಡಿಕೊಂಡಾಗ ಆ ನಂಬಿಕೆಯನ್ನು ಪ್ರಶ್ನಿಸಬೇಕಾಗುತ್ತದೆ. ನಂಬಿಕೆ ವೈಯುಕ್ತಿಕ ನೆಲೆಯಲ್ಲಿ ಸೀಮಿತವಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದು, ಅದರಿಂದ ಸಮಾಜಕ್ಕೆ ಹಾನಿ ಉಂಟಾಗುವ ಸಾಧ್ಯತೆ ಕಡಿಮೆ. ನಂಬಿಕೆ ಅವೈಜ್ಞಾನಿಕವಾಗಿ, ಸರಳ ತರ್ಕಗಳಿಗೆ ಸಿಗದೇ ಕೆಲವರ ಲಾಭಕ್ಕಾಗಿ ಅದನ್ನು ಬಳಸಿಕೊಂಡಲ್ಲಿ ಅದನ್ನು ಧಿಕ್ಕರಿಸ ಬೇಕಾಗುತ್ತದೆ. ನಂಬಿಕೆಗಳಿಂದ ಮೌಢ್ಯ ಉಂಟಾಗಿ ಕೆಲವು ಯಾಂತ್ರಿಕ ಆಚರಣೆಗಳು ಹುಟ್ಟಿ ಕೊಂಡಿವೆ. ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ಕೆಳಗಿನ ವಚನ ನೂರಾರು ವರ್ಷಗಳ ನಂತರವೂ ಈ ವೈಜ್ಞಾನಿಕ ಯುಗದಲ್ಲೂ ಪ್ರಸ್ತುತವಾಗಿದೆ ಎನ್ನುವುದು ಶೋಚನೀಯ ಸಂಗತಿ.

"ನೀರ ಕಂಡಲ್ಲಿ ಮುಳುಗುವರಯ್ಯ, ಮರ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ ನೆಚ್ಚುವರು
ನಿಮ್ಮನೆತ್ತ ಬಲ್ಲರು ಕೂಡಲ ಸಂಗಮ ದೇವಾ"

ಶರಣರು ಸ್ವರ್ಗ ನರಕ, ಪಾಪ, ಪುಣ್ಯ ಸಂಪಾದನೆ ಬಗ್ಗೆ ವೈಚಾರಿಕವಾಗಿ ಆಲೋಚಿಸಿ;
"ದೇವ ಲೋಕ ಮರ್ತ್ಯಲೋಕವೆಂಬುದು ಬೇರೆ ಉಂಟೆ
ಸತ್ಯ ನುಡಿವುದೇ ದೇವಲೋಕ ಮಿತ್ಯನುಡಿವುದೆ ಮರ್ತ್ಯ ಲೋಕ
ಆಚಾರವೇ ಸ್ವರ್ಗ ಅನಾಚಾರವೇ ನರಕ "

ಎಂದು ಹೇಳುತ್ತಾ, ಮುಂದಕ್ಕೆ "ಅಯ್ಯಎಂದರೆ ಸ್ವರ್ಗ ಎಲವೋ ಎಂದರೆ ನರಕ" ಎಂಬ ಉಕ್ತಿಯನ್ನು ನೀಡಿದ್ದಾರೆ. ಶರಣ ಸಾಹಿತ್ಯದಲ್ಲಿ ಬಳಸುವ ಅಯ್ಯ, ಅಕ್ಕ, ಅಣ್ಣ ಸಮಾಜದಲ್ಲಿ ಒಂದು ಭ್ರಾತೃತ್ವವನ್ನು, ಆತ್ಮೀಯ ಭಾವನೆಯನ್ನು ಉಂಟುಮಾಡುತ್ತದೆ. ಜನರ ನಡುವೆ 'ಎಲವೋ' ಎನ್ನದೆ, ದ್ವೇಷ ಅಸೂಯೆಗಳನ್ನು ಬದಿಗಿಟ್ಟು ಎಲ್ಲರು "ಸರ್ವಜನಾಂಗದ ಈ ಶಾಂತಿಯ ತೋಟದಲ್ಲಿ'' ಸೌಹಾರ್ದತೆಯಿಂದ ಬದುಕಿದರೆ ಅದೇ ಸ್ವರ್ಗ! ಇಹ ಮತ್ತು ಪರಲೋಕವೆಂಬ ಕಾಲ್ಪನಿಕ ಲೋಕವನ್ನು ಶರಣು ನಿರಾಕರಿಸಿದರು. ಇಹಲೋಕದಲ್ಲಿ ಬದುಕುತ್ತಾ ಬರಿ ಪರಲೋಕವನ್ನೇ ಕುರಿತು ಚಿಂತಿಸುವವರನ್ನು ಕುರಿತು ಅಲ್ಲಮ ಪ್ರಭುಗಳು ಮಾರ್ಮಿಕವಾಗಿ "ಕೊಟ್ಟ ಕುದುರೆಯನು ಏರಲಾಗದವನು ಧೀರನು ಅಲ್ಲ ಶೂರನೂ ಅಲ್ಲ" ಎನ್ನುತ್ತಾರೆ. ಇಲ್ಲಿ ‘ಕೊಟ್ಟ ಕುದುರೆ’ ಎಂದರೆ ನಮಗೆ ದಕ್ಕಿರುವ ಬದುಕು, ಅದು ಕಾಡು ಕುದುರೆ ಇದ್ದಹಾಗೆ, ಅದನ್ನು ಪಳಗಿಸಿ ಅದರ ಮೇಲೆ ಕುಳಿತು ಬದುಕನ್ನು ಕ್ರಯಿಸಬೇಕು, ಅದನ್ನು ಬಿಟ್ಟು ಬೇರೊಂದು ಪರಲೋಕವೆಂಬ ಕುದುರೆಯನ್ನು ಬಯಸುವುದು ನಿರರ್ಥಕ ಎಂದು ತಿಳಿಸಿದ್ದಾರೆ.

ಶರಣರು ತೀಕ್ಷ್ಣ ವಿಮರ್ಶಕರು, ಅವರು ತಮ್ಮ ಬದುಕನ್ನು, ತಮ್ಮ ಆಚಾರ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಿಕೊಂಡವರು, ಆತ್ಮ ಶೋಧನೆಯಲ್ಲಿ ತೊಡಗಿಕೊಂಡವರು. ಇದಕ್ಕೆ ನಿದರ್ಶನವಾಗಿ ಕೆಳಗಿನ ವಚನವನ್ನು ಇಲ್ಲಿ ಪ್ರಸ್ತಾಪಮಾಡುವುದು ಸೂಕ್ತ;

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದೆಡೆ ನಡೆ ಎಂಬರು
ಉಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ

ನಮ್ಮ ಆಚರಣೆಗಳಲ್ಲಿ ಇರುವ ವೈರುಧ್ಯವನ್ನು ಸ್ವಾರ್ಥತೆಯನ್ನು ಮತ್ತು ಅರ್ಥಹೀನತೆಯನ್ನು ಶರಣರು ಖಂಡಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಮನುಷ್ಯನಿಗೆ ಮಾರಕವಾಗಿರುವ ಹಾವು, ಆನೆ, ಸಿಂಹ ಎಂಬ ಕಂಡ ಕಂಡ ಪ್ರಾಣಿಗಳನೆಲ್ಲಾ ಪೂಜಿಸುವ ಬಗ್ಗೆ ಶರಣರಿಗೆ ಅಸಮಾಧಾನವಿದ್ದಿರಬಹುದು.

ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದವರು. ಹಿಂದೆ ಈ ಜಾತಿ ವ್ಯವಸ್ಥೆ ಅವರವರ ವೃತ್ತಿಗೂ ಸಂಬಂಧಪಟ್ಟಿದ್ದು, ಇದನ್ನು ಚಾತುರ್ವರ್ಣ ಪದ್ಧತಿ ಎಂದು ಗುರುತಿಸಲಾಗಿತ್ತು. ಈ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವಿಂಗಡಣೆಗಳು ಇದ್ದವು. ಶರಣರು 'ಕಾಯಕವೇ ಕೈಲಾಸ' ಎಂಬ ಪರಿಕಲ್ಪನೆಯನ್ನು ತಂದು ತಮ್ಮ ವೃತ್ತಿಯನ್ನು ಮೇಲು-ಕೀಳು ಎಂದು ಪರಿಗಣಿಸದೆ ಅವರವರ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಆಗ ಅವರವರ ಕಾಯಕ ಅವರಿಗೆ ಶ್ರೇಷ್ಠ, ಆಗ ಎಲ್ಲರೂ ಸಮಾನರೇ ಎಂಬ ಸಂದೇಶವನ್ನು ಬಿತ್ತಿದರು. ಇಂದು ನಾವು ಅನಿವಾಸಿಗಳು ಪಾಶ್ಚ್ಯಾತ್ಯ ದೇಶಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಕೆಲಸ ಮಾಡುವವರು ವೈದ್ಯರೇ ಆಗಿರಬಹುದು, ಅಥವಾ ವಾರ್ಡ್ ಬಾಯ್ ಆಗಿರಬಹುದು ಆದರೂ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಘನತೆ ನಮಗಿದೆ. ಇದೇ ವಿಚಾರವನ್ನು 900 ವರ್ಷಗಳ ಹಿಂದೆ ಶರಣರು ಕಾಯಕದಲ್ಲಿರುವ ಘನತೆ (Dignity of labour) ಮತ್ತು ಸಮಾನತೆಯನ್ನು ತೋರಿಸಿಕೊಟ್ಟರು. ಈ ಜಾತಿ ಪದ್ದತಿಯನ್ನು ಪ್ರಶ್ನಿಸುತ್ತ ಶರಣರು;

ನೆಲೆ ಒಂದೇ: ಹೊಲಗೇರಿ, ಶಿವಾಲಯಕ್ಕೆ
ಜಲ ಒಂದೇ: ಶೌಚ, ಚಮನಕ್ಕೆ
ಕುಲವೊಂದೇ: ತನ್ನ ತಾನ್ ಅರಿದವಂಗೆ

ಎನ್ನುತ್ತಾ ಹೊಲಗೇರಿಗೂ, ಶಿವಾಲಯಕ್ಕೂ ನೆಲ ಒಂದೇ ಆಗಿದ್ದಲ್ಲಿ, ಶೌಚಕ್ಕೂ, ತೀರ್ಥಕ್ಕೂ, ಶುದ್ಧಿಗೂ ಜಲ ಒಂದೇ ಆಗಿದ್ದಲ್ಲಿ, ಮನುಷ್ಯ ಮನುಷ್ಯರ ನಡುವೆ ಕುಲವೊಂದೇ ಏಕೆ ಆಗಬಾರದು ಎಂದು ಪ್ರಶ್ನಿಸುತ್ತಾರೆ. ಸದರಿ ಪ್ರಪಂಚದಲ್ಲಿ, ಧರ್ಮದ ಹೆಸರಿನಲ್ಲಿ, ಪ್ರಪಂಚದ ನಾನಾ ಭಾಗಗಳಲ್ಲಿ ಧರ್ಮ ಯುದ್ಧ ನಡೆದಿದೆ. "ನಾವು-ಅವರು" ಎಂಬ ಪ್ರತ್ಯೇಕತೆ ಪ್ರಜ್ಞೆ ಹೆಚ್ಚಾಗಿದೆ. ದೇಶಗಳು, ಸಮಾಜ ಧ್ರುವೀಕರಣಗೊಂಡಿದೆ. ಇಂತಹ ಒಂದು ಸನ್ನಿವೇಶದಲ್ಲಿ ಬಸವಣ್ಣನವರ ಈ ವಚನ ಬಹಳ ಪ್ರಸ್ತುತವಾಗಿದೆ;

ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
ಕೂಡಲ ಸಂಗಮ ದೇವಾ ನಿಮ್ಮ ಮನೆಯ
ಮಗನೆನಿಸಯ್ಯ

‘ಸರ್ವೇ ಜನಃ ಸುಖಿನೋ ಭವಂತು’ ಎನ್ನುತ್ತಲೇ, ಸಮಾನತೆಯ ಸಂದೇಶವನ್ನು ಸಾರುತ್ತಲೇ "ನಾವು - ಅವರು" ಎಂಬ ಈ ಪ್ರತ್ಯೇಕತೆಯ ಪ್ರಜ್ಞೆಯನ್ನು (Tribalism) ಹುಟ್ಟುಹಾಕಿದ್ದೇವೆ. ಈ ಧ್ರುವೀಕರಣಕ್ಕೆ(Polarization) ಕಾರಣಗಳೇನು ಎಂಬುದನ್ನು ಡಾರ್ವಿನ್ ನೀಡಿರುವ ಜೈವಿಕ ತತ್ವಗಳ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. "ಯಾವುದು ಪ್ರಬಲವಾಗಿದೆಯೋ ಅದ್ಕಕಷ್ಟೇ ಉಳಿಗಾಲ" (Survival of the fittest) ಎನ್ನುವ ಸೈಧಾಂತಿಕ ಹಿನ್ನೆಲೆಯಲ್ಲಿ ಮನುಷ್ಯ ತನ್ನ ಒಂದು ಸಂರಕ್ಷಣೆಗೆ ಅನಾದಿ ಕಾಲದಿಂದ ಬುಡಕಟ್ಟು, ವರ್ಣ, ಧರ್ಮ, ರಾಷ್ಟ್ರ, ಜಾತಿ
ಎಂಬ ಗುಂಪುಗಾರಿಕೆ ಮಾಡಿಕೊಂಡು ಬಂದಿದ್ದಾನೆ. ತನ್ನ ಒಂದು ಬದುಕಿನ ರೀತಿನೀತಿಗಳಿಗೆ ಒಗ್ಗಲಾರದವರನ್ನು ಅನ್ಯರೆಂದು ಪರಿಗಣಿಸಿ ಈ ಅನ್ಯರಿಗೆ ಅಸಹ್ಯ ಪಡುತ್ತಾ ಬಂದಿದ್ದಾನೆ. ತನನ್ನು ಬಣ್ಣಿಸಿಕೊಂಡು, ಇತರರನ್ನು ಹಳಿಯುತ್ತ, ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಹಿರಂಗ ಶುದ್ಧಿಯನ್ನು ಪಡೆದು ಕೊಂಡನೇ ಹೊರೆತು ಅಂತರಂಗ ಶುದ್ಧಿಯನ್ನು ಪಡೆದುಕೊಳ್ಳಲಿಲ್ಲ! ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ವಚನವನ್ನು ಗಮನಿಸಿ;

"ಕಳ ಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಹಿ, ಇದೇ ಬಹಿರಂಗ ಶುದ್ಧಿ"

‘ಸರ್ವೇ ಜನಃ ಸುಖಿನೋ ಭವಂತು’ ಎಂದಾಗಬೇಕಾದರೆ, ನಮ್ಮ-ನಿಮ್ಮ ನಡುವಿನ ಗೋಡೆಗಳನು ಕೆಡವಬೇಕು.

ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟ ಮೊದಲಿಗೆ ಗುರುತಿಸಿ, ಗೌರವಿಸಿ, ಅನುಷ್ಠಾನಕ್ಕೆ ತಂದವರು ಶರಣರು, "ಸ್ತ್ರೀ ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ, ಮುಪ್ಪಿನಲ್ಲಿ ಮಗನ ಅಧೀನಳು, ಹೆಣ್ಣು ಮಾಯೆ, ಎಂದು ಹೇಳುತ್ತಿದ್ದ ಕಾಲದಲ್ಲಿ ಅಲ್ಲಮರು; "ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ' ಎಂದು, ಹೆಣ್ಣಿಗೆ ಸಮಾಜದಲ್ಲಿ ಸಮಾನ ಸ್ಥಾನ-ಮಾನಗಳನ್ನು, ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಬಸವಣ್ಣನವರು ಅಕ್ಕ ಮಹಾದೇವಿ ಮತ್ತು ಇತರ ಶರಣೆಯರನ್ನು ಅನುಭವಮಂಟಪದಲ್ಲಿ ಆಹ್ವಾನಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟರು. ಶರಣೆಯರೂ ಹಲವಾರು ವಚನಗಳನ್ನು ರಚಿಸಿದರು. ಇಷ್ಟಾಗಿಯೂ ಹೆಣ್ಣು-ಗಂಡಿನ ನಡುವೆ ಏನು ವ್ಯತ್ಯಾಸ, ಅವರನ್ನೇಕೆ ಸಾಮಾಜಿಕ ಆಚರಣೆಯಿಂದ ಹೊರಗಿಡಬೇಕು? ಎಂದು ಪ್ರಶ್ನಿಸಬಹುದು. ಅದಕ್ಕೆ ಉತ್ತರವಾಗಿ ಜೇಡರ ದಾಸಿಮಯ್ಯ ಹೀಗೆ ಹೇಳುತ್ತಾನೆ; "ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಮೂಡಿಬಂದರೆ ಗಂಡೆಂಬರು, ಇವೆರಡರ ನಡುವೆ ಸುಳಿವಾತ್ಮ ಹೆಣ್ಣು ಅಲ್ಲ ಗಂಡು ಅಲ್ಲ!”

ಶರಣರ ಚಿಂತನೆಗಳು ಸಮಾಜಮುಖಿ ಅಷ್ಟೇ ಅಲ್ಲದೆ ಅದು ಸಂಸಾರ ಮುಖಿ ಕೂಡ ಎನ್ನುವುದಕ್ಕೆ ಕೆಳಗಿನ ಸಾಲುಗಳು ಸಾಕ್ಷಿಯಾಗಿವೆ;

ಮಠವೇಕೋ, ಪರ್ವತವೇಕೋ,
ಜನವೇಕೊ, ನಿರ್ಜನವೇಕೊ,
ಚಿತ್ತ ಸಮಾಧಾನ ಉಳ್ಳ ಶರಣಂಗೆ?

ಬಹಳಷ್ಟು ಶರಣರು ಕಾವಿ ತೊಡಲಿಲ್ಲ (ಇದಕ್ಕೆ ಕೆಲವು ಹೊರತುಗಳಿರಬಹುದು) ಸನ್ಯಾಸಿಗಳಾಗಿ ಕಾಡಿಗೆ, ಪರ್ವತಗಳಿಗೆ ಹೋಗಿ, ದೇಹವನ್ನು ದಂಡಿಸಿ ಘೋರ ತಪಸ್ಸನ್ನು ಮಾಡಲಿಲ್ಲ. ಬದಲಾಗಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ ಸಂಸಾರದೊಳಗೇ ಇದ್ದುಕೊಂಡು ಸತ್ಯಶೋಧನೆಯನ್ನು ನಡೆಸಿ, ಅನುಭವ ಮತ್ತು ಅನುಭಾವವನ್ನು ಪಡೆದುಕೊಂಡರು. ದೇಹ ದಂಡನೆಯ ಕ್ರಮವನ್ನು ಅವರು ಅನುಮೋದಿಸಲಿಲ್ಲ. ದೇಹದಂಡನೆಯನ್ನು ಕುರಿತು ಬಸವಣ್ಣನವರು; 'ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ'? ಎಂದು ಪ್ರಶ್ನಿಸುತ್ತಾರೆ. ಮನದೊಳಗೆ ಹಾವೆಂಬ ವಿಷವನ್ನು ಇಟ್ಟುಕೊಂಡು, ದೇಹವೆಂಬ ಹುತ್ತವನ್ನು ಬಡಿದರೆ ಪ್ರಯೋಜನವೇನು ಎನ್ನುತ್ತಾರೆ.

ಶರಣರು ರಚಿಸಿರುವ ವಚನಗಳಲ್ಲಿ ಸಾಹಿತ್ಯ ಮೌಲ್ಯಗಳೂ ಇವೆ. 11ನೇ ಶತಮಾನದ ಶುರುವಿನಲ್ಲಿ ಸಾಹಿತ್ಯ, ಹೆಚ್ಚಾಗಿ ಹಳೆಗನ್ನಡ ಸಂಸ್ಕೃತಮಯವಾಗಿದ್ದ ಸಮಯದಲ್ಲಿ ಕನ್ನಡ ಆಡು ಭಾಷೆಯನ್ನು ವಚನಕಾರರು ಬಳಸಿಕೊಂಡರು. ಅವರ ಬರಹದಲ್ಲಿ ಸರಳತೆ ಮತ್ತು ಸ್ಪಷ್ಟತೆ ಕಾಣುತ್ತದೆ. ಎಲ್ಲರ ಗ್ರಹಿಕೆಗೆ ನಿಲುಕುವಂತೆ ನಾಲ್ಕಾರು ಸಾಲುಗಳ ವಚನಗಳನ್ನು ರಚಿಸಿದ್ದಾರೆ. ಅಲ್ಲಮ ಪ್ರಭುಗಳ ರಚನೆಯು ಹಲವಾರು ರೂಪಕಗಳನ್ನು ಒಳಗೊಂಡು ಸಂಕೀರ್ಣವಾಗಿ ಮತ್ತು ಒಗಟಿನ ರೀತಿಯಲ್ಲಿದ್ದು ಸಾಹಿತ್ಯ ಪ್ರೌಢವಾಗಿದೆ.

ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಮಹತ್ವವಾದದ್ದು. ಅವರು ರಚಿಸಿದ ವಚನ ಸಾಹಿತ್ಯದಲ್ಲಿ ಮಾನವೀಯತೆ, ಅನುಕಂಪೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಸಮಾನತೆ, ಪ್ರಜಾಪ್ರಭುತ್ವ ಪರಿಕಲ್ಪನೆಗಳನ್ನು ಒಳಗೊಂಡು, ಎಲ್ಲರೂ ಸಮಾನರೇ ಎಂಬ ಸಮಾಜ ಮುಖಿ ಚಿಂತನೆಗಳಿವೆ. ಕಾಯಕವೇ ಕೈಲಾಸ ಎಂದು ದುಡಿಯುತ್ತಾ, ದುಡಿದದ್ದನ್ನು ದಾಸೋಹ ಅನ್ನುವ ಭಾವನೆಯಲ್ಲಿ ಇತರೊಡನೆ ಹಂಚಿಕೊಳ್ಳುತ್ತಾ ಪ್ರಾಮಾಣಿಕವಾಗಿ ಬದುಕಿ, ಸಮಾಜಕ್ಕೆ ಆದರ್ಶಪ್ರಾಯರಾಗಿ ಬೆಳಕನ್ನು ನೀಡಿದವರು. ಈ ಕಾರಣಗಳಿಂದಲೇ ಅವರು ಕೊಟ್ಟಿರುವ ಸಾಹಿತ್ಯ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಪ್ರಸ್ತುತವಾಗಿದೆ.

ಒಲುಮೆಯಿಂದ ಆತ್ಮಸಾಂಗತ್ಯದತ್ತ…

ಪ್ರಿಯ ಓದುಗರೆ
ಈ ವಾರದ ಅನಿವಾಸಿಯಲ್ಲಿ, ಇತ್ತೀಚಿಗೆ ಬಳಗಕ್ಕೆ ಸೇರಿದ ಹೊಸ ಬರಹಗಾರ್ತಿಯ ಬರಹವನ್ನು ಪರಿಚಯಿಸುತ್ತಿದ್ದೇನೆ.
ವೃತ್ತಿಯಲ್ಲಿ ಅರಿವಳಿಕೆ ವಿಭಾಗದಲ್ಲಿ ತಜ್ಞ ವೈದ್ಯೆಯಾಗಿರುವ ದೀಪಾ ಸಣ್ಣಕ್ಕಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕಿನವರು. ಸದ್ಯ ಇಂಗ್ಲೆಂಡಿನ ಸ್ಟಾಕ್ಟನ್ ಆನ್ ಟೀಸ್ ಅಲ್ಲಿ ವಾಸವಾಗಿದ್ದಾರೆ. ಇತ್ತೀಚಿಗೆ ವೈದ್ಯ ಸಂಪದದಲ್ಲಿ ಅವರ ಕವನವೂ ಕೂಡಾ ಪ್ರಕಟವಾಗಿತ್ತು. ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತಿ. ಮನತುಂಬಿ ಬರೆಯುವುದು ಹವ್ಯಾಸ. ದಯವಿಟ್ಟು ಓದಿ ಹರಸಿ

ಪ್ರಸಂಗ ೧
ಕಡಿದಾದ ಬೆಟ್ಟದ ಏರಿನ ಕಾಲುದಾರಿ ಸವೆಸುತ ಸಮಯ ಸಂದಿದ್ದೇ ಗೊತ್ತಾಗಲಿಲ್ಲ. ಅವರಿಬ್ಬರು ಬೆಟ್ಟದ ಪಾದದಡಿ ಸೇರಿದಾಗ ಬೆಳಗಿನ ಐದು ಕಳೆದಿರಬೇಕು. ಆಗಿನ್ನೂ ನಸುಗಪ್ಪು ಕತ್ತಲು. ಒಬ್ಬರನ್ನೊಬ್ಬರು ನೋಡದೇ ಮೂರು ವರ್ಷವೇ ಕಳೆದು ಹೋಗಿ, ಮುಖಚಹರೆಯ ನೆನಪು ಮಾಸಿಹೋದಂತಿತ್ತು‌‌. ಆದರೂ, ಫೋನಿನ ಸಂಭಾಷಣೆಯ ಚಿರಪರಿಚಿತ ಧ್ವನಿಯೊಂದಿಗೆ ಸಂಭ್ರಮದಿಂದ ಪರಸ್ಪರ ಬರಮಾಡಿಕೊಂಡಿದ್ದರು. ಪೂರ್ವಾಭಿಮುಖವಾದ ಬೆಟ್ಟವನ್ನು ಮೇಲೆರಿದಂತೆ, ಸೂರ್ಯೋದಯದ ಸೊಬಗು ಕಣ್ಣಿಗೆ ಕಾಣದಿದ್ದರೂ ಸೃಷ್ಟಿಯ ಎಲ್ಲಾ
ಸಂಕೇತಗಳೂ ಅರುಣೋದಯವನ್ನು ಸಾರುತಿದ್ದವು. ಬಾನಿನಂಚಿನಲ್ಲಿ ಬೆಳಗು ಮೂಡಲು ಕಾಯದೇ, ಹಕ್ಕಿಗಳು ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿದ್ದವು. ದಟ್ಟವಾಗಿ ಹಬ್ಬಿದ ಮರಗಳ ಸಂದುಗೊಂದಿನಂದ ಉದಯರವಿಯ ಕಿರಣಗಳು ತೂರಿ ಬರುತ್ತಿದ್ದವು. ಇಬ್ಬನಿಯಲಿ ತೋಯ್ದ ಇಳೆ, ಕಾಡುಹೂವುಗಳ
ಮಿಶ್ರಸುಗಂಧ, ಮರಿ ಹಕ್ಕಿಗಳ ಕೊರಳ ಇಂಪನ,ಇವೆಲ್ಲವೂ ಇಬ್ಬರ ಮನಸ್ಸನ್ನು ಆಹ್ಲಾದಕರವನ್ನಾಗಿ ಮಾಡಿದ್ದವು. ಕಳೆದ ಮೂರು ವರ್ಷದಿಂದ ಬರೀ ಫೋನಿನ ಸಂಭಾಷಣೆಯಲ್ಲಿ ತೊಡಗಿ, ಇಂದು ಮುಖಾಮುಖಿಯಾಗುವ ಅಪರೂಪದ ಸುದಿನವಾಗಿತ್ತು.‌ ಅದೇ ಕಾರಣಕ್ಕಾಗಿಯೇ, ಮಾಗಿಯ ಚಳಿಯು ನಡುಕವನ್ನುಂಟು ಮಾಡದೆ, ಮನಸನ್ನು ಪ್ರಫುಲ್ಲಿತಗೊಳಿಸುತ್ತಿತ್ತು. ಮನಮಂದಿರದಲ್ಲಿ ಸ್ಥಾಪಿಸಿದ ಮೂರ್ತಿಯು ಇಂದು ಜೀವತಳೆದು ಕಣ್ಮುಂದೆ ಅವತರಿಸಲು ಅವಳ ಮನವು ಭಾವೋನ್ಮತ್ತವಾಗಿತ್ತು.‌ಒಡಲಲ್ಲಿ ಭಾವನೆಗಳ ಮಹಾಪೂರ ಹರಿಯುತ್ತಿದ್ದರೂ ಮಾತುಗಳಿಗೆ ಬರ ಬಂದು ಮೌನವೇ ಪ್ರಧಾನವಾಗಿತ್ತು.

“ನಾನಿರುವ ಊರಲ್ಲಿ ಆಕಾಶ, ಅದೆಷ್ಟು ವಿಸ್ತಾರವಾಗಿ ಕಾಣ್ತದೆ ಗೊತ್ತಾ? ಆ ಬಾನಿನಂಚಿನಿಂದ ಈ ಬಾನಿನಂಚಿನವರೆಗಿನ ಅಗಾಧತೆಯನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ ಕಣೋ!”
ಅವಳ ಮಾತಿಗೆ ಬರಿ ಹೂಂಗುಟ್ಟಿ ಅವನು ಮತ್ತೇ ದೃಷ್ಟಿಯನ್ನು ಆಗಸದೆಡೆಗೆ ನೆಟ್ಟ. ಭಾವಪ್ರವಾಹ ತುಂಬಿ ಬಂದಾಗ ಅವನು ಮೌನಕ್ಕೆ ಶರಣಾಗುವುದನ್ನು ಅವಳು ಮನಃ ಪೂರ್ತಿ ಬಲ್ಲಳು, ಒಪ್ಪಿಕೊಂಡಿರುವಳು ಕೂಡ! ಸಂಭಾಷಣೆಯಲ್ಲಿ ತೊಡಗದಿದ್ದರೂ ಅವಳ ಧ್ವನಿಯ ಅನುರಣಿತಕ್ಕೆ ಅವನು ಬಯಸಿಹನು ಎಂದರಿತು ಮತ್ತೇ ಮುಂದುವರೆಸಿದಳು.
” ಈ ವಿಸ್ಮಯಶೀಲ ನಿಸರ್ಗಕ್ಕೂ ನಿನ್ನ ಘನತೂಕದ ವ್ಯಕ್ತಿತ್ವಕ್ಕೂ ತುಂಬಾ ಸಾಮ್ಯವುಂಟು ಕಣೋ! ಈ ಅಗಾಧ ಆಕಾಶದಂತೆಯೇ, ಆ ಅಗಣಿತ ನಕ್ಷತ್ರಗಳೂ, ಅಪರಿಮಿತ ಆಳವುಳ್ಳ ಸಾಗರವೂ, ಗಗನಚುಂಬಿ ಪರ್ವತ ಶಿಖರಗಳೂ, ಅದ್ವಿತೀಯ ಶಕ್ತಿಸಾರವಾದ ಅಗ್ನಿಯೂ,ಕೈಗೆಟುಕದ ಸೂರ್ಯೋದಯ-ಅಸ್ತಗಳೂ; ಎಲ್ಲವೂ , ಎಲ್ಲವೂ ನಿನ್ನ ಇರುವಿನ ನೆನಪನ್ನು ಹೊತ್ತು ತರುತ್ತವೆ. ಈ ಸಾಂದರ್ಭಿಕ ಮಾತು, ಅತಿರೇಕವೆಂದೆನಿದರೂ ಸುಳ್ಳಲ್ಲ.‌ ನೀನೆಂದೂ ನಿನ್ನ ಘನತೆಗೆ ವ್ಯತಿರಿಕ್ತವಾಗಿ ನಡೆದಿಲ್ಲವಾದರೂ, ನಿನ್ನ ಚಿತ್ರ ನನ್ನ ಸ್ಮೃತಿ ಪಟಲದಲ್ಲಿ ಯಾವಾಗಲೂ ‘ಅನಾದಿಅನಂತ ಯೋಗೇಶ್ವರ’ ನಾಗಿಯೇ ಇದ್ದೀತು.”
ಪ್ರತ್ಯುತ್ತರವಾಗಿ ಅವಳಿಗೆ ಮತ್ತೆ ಮೌನವೇ ದೊರಕಿತು. ಆದರೆ ಈ ಬಾರಿ ಅವನ ಕಂಗಳಲ್ಲಿ ಅವಳ ಪ್ರತಿಬಿಂಬದ ಬದಲು ಅಮೃತ ಬಿಂದುಗಳ ಕೊಳವೊಂದು ಕಂಡಿತು. ತುಸುಕಾಲ ಮಾತುಗಳ ಅವಶ್ಯಕತೆ ಇಲ್ಲವಾಗಿ ಮೌನವೇ ಸನ್ನಿವೇಶದ ಅಧಿಪತ್ಯವನ್ನು ವಹಿಸಿತ್ತು. ರಾತ್ರಿಯಲ್ಲಿ ಮಾತ್ರ ಕೇಳುವ ಕೀಟಗಳ ಜೀರ್ದನಿ, ಬೀಸುತ್ತಿದ್ದ ಗಾಳಿಗೆ ತೂಗುತ್ತಿದ್ದ ಮರಗಳ ಪಿಸುದನಿ, ಹತ್ತಿರದಲ್ಲೇ ಹರಿಯುತ್ತಿದ್ದ ತಾಯಿಕಾವೇರಿಯ ಮಂಜುಳದನಿ, ದೂರದಲ್ಲೆಲ್ಲೋ ಸೀಳಿ ಬರುತ್ತಿದ್ದ ನರಿಯ ಊಳುದನಿ ಇವೆಲ್ಲವೂ ಆ ನೀರವತೆಯ ಅವಿಭಾಜ್ಯ ತರಂಗಗಳಾಗಿದ್ದವು. ಇವುಗಳ ಮಧ್ಯೆ ನಿಟ್ಟುಸಿರುಗಳ ಸ್ವರವೂ ಆಗೀಗ ಕೇಳಿಬರುತ್ತಿತ್ತು.
” ನಮ್ಮಿಬ್ಬರ ಕವಲೊಡೆದ ದಾರಿಗಳನ್ನು ಮತ್ತೆ ಸಮಾನಾಂತರಗೊಳಿಸಿದ ಚೈತನ್ಯ ಶಕ್ತಿ ಯಾವುದೋ…?” ಎಂದವಳ ಪ್ರಶ್ನೆಗೆ
” ಆ ಶಕ್ತಿ ಯಾವುದೇ ಇರಲಿ‌‌. ಈ ನಮ್ಮಿಬ್ಬರ ವಿಶಿಷ್ಟವಾದ ಸ್ನೇಹ, ಇರುವ ಹಾಗೆಯೇ ಅತ್ಯಂತ ಮಧುರವಾಗಿದೆ‌. ಜಗತ್ತಿನ ಸಂಶೋಧಕ ಕಣ್ಣಿಗೆ ನಾವು ಸತಿಪತಿಯಾಗದಿದ್ದರೂ, ನಮ್ಮನಮ್ಮ ಅಂತರ್ ದೃಷ್ಟಿಯಲ್ಲಿ ನಮಗೆ ಅದರ ಅನಿವಾರ್ಯತೆ ಇಲ್ಲ. ಈ ಸಂಬಂಧ, ಅದಕ್ಕಿಂತಲೂ ಉತ್ಕೃಷ್ಟವಾದದ್ದು, ಭವಬಂಧನದ ಮೇರೆ ಮೀರಿದ್ದು.
ಇಲ್ಲಿ ಬೇಡಿಕೆ, ಅಪೇಕ್ಷೆ, ನಿಗ್ರಹ ,ಪೂರ್ವಾಗ್ರಹ ಇತ್ಯಾದಿ ಋಣಾತ್ಮಕ ಗುಣಗಳಿಗೆ ಅವಕಾಶವಿಲ್ಲ. ಬರೀ ನಿಃಸ್ವಾರ್ಥವಾದ, ನಿಃವ್ಯಾಜ್ಯವಾದ ಅನುರಾಗ , ಸಾದರನೀಯ ಆರಾಧನೆ ಮತ್ತು ಹೃತ್ಪೂರ್ವಕ ಸಮರ್ಪಣೆಯುಳ್ಳ ಬಾಂಧವ್ಯದ ಬೆಸುಗೆಯುಂಟು‌. ಅದೇ ಕಾರಣಕ್ಕಾಗಿಯೇ ಈ ನಂಟು, ನಿಯಮಾವಳಿ/ ಕಟ್ಟುಪಾಡುಗಳಿಗೆ ಒಳಪಡದೇ ಯಾವುದೋ ಕ್ಷುಲ್ಲಕ ಪರಿಧಿಗೋ, ಪ್ರಮಾಣಕ್ಕೊ, ಪುರಾವೆಗಳಿಗೊ ಸಿಲುಕದೇ ಅತೀತವಾದದ್ದು!

ಕಿವಿನೋವು ಮತ್ತು ಕೆಲವು ಕವನಗಳು

ಈ ವಾರದ ಅನಿವಾಸಿಯಲ್ಲಿ ಹೊಸ ಬರಹಗಾರರು, ವಿಜಯ್ ಖುರ್ಸಾಪೂರರ ಕವಂಗಳಿವೆ, ಓದಿ ಹರಸಿ. ಉಮೇಶ ನಾಗಲೋಟಿಮಠ ಈ ಮೊದಲು ಒಂದು ಸಲ ಅನಿವಾಸಿಗೆ ಬರೆದಿದ್ದಾರೆ, ಅವರಿಗೆ ಮತ್ತೊಮ್ಮೆ ಸ್ವಾಗತ. ಇಬ್ಬಾರೂ ಇನ್ನಷ್ಟು ಕನ್ನಡದಲ್ಲಿ ಬರೆಯಲಿ ಎಂದು ಆಶಿಸುತ್ತೇನೆ. – ಸಂ.

ಕಿವಿನೋವು: ಡಾ ಉಮೇಶ ನಾಗಲೋಟಿಮಠ ಬರೆದ ಲೇಖನ

ಲೇಖಕರ ಪರಿಚಯ: ಕಿವಿ ಮೂಗು ಗಂಟಲು ವೈದ್ಯರು, ಹುಬ್ಬಳ್ಳಿಯಲ್ಲಿ ಜನನ, ಬೆಳಗಾವಿಯಲ್ಲಿ ವಿದ್ಯಾಭ್ಯಾಸ . ಭಾರತದಲ್ಲಿ ಸುಮಾರು ೧೭ ವರ್ಷ ಸೇವೆ, ಕಳೆದ ಸುಮಾರು ೯ ವರ್ಷಗಳಿಂದ ಇಂಗ್ಲೆಂಡಿನ ವಿವಿಧ ಆಸ್ಪತ್ರೆಗಳಲ್ಲಿ ಸೇವೆ. MBBS ಮಾಡುವಾಗಿನಿಂದ ಕನ್ನಡ ಬರೆಯುವ ಚಟ. ಹಲವಾರು ಲೇಖನಗಳು/ಪದ್ಯಗಳು ಪತ್ರಿಕೆಯಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗಿವೆ , ಆಕಾಶವಾಣಿಯಲ್ಲಿ ಹಲವು ಭಾಷಣ /ಸಂದರ್ಶನ. ವೃತ್ತಿಯಲ್ಲಿ ಇಂಗ್ಲೆಂಡಿನ ರೊವಿನಾ ರೇಯನ್ ಪ್ರಶಸ್ತಿ

ನಾನು ಇಂಗ್ಲೆಂಡಿನ ಚೆಸ್ಟರ್ ಎಂಬ ಊರಿನಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞನಾಗಿ ಒಂದು ರವಿವಾರ ಕರ್ತವ್ಯದ ಮೇಲಿದ್ದೆ. ಸಂಜೆ ಸುಮಾರು ೧೦ ವರ್ಷದ ಹುಡುಗ ಕಿವಿನೋವು ಮತ್ತು ಜ್ವರದಿಂದ ದಾಖಲಾಗಿದ್ದ. ಆತನಿಗೆ ಬೇಕಾದ ರೋಗನಿರೋಧಕ ಔಷಧಿ (ಆಂಟಿಬಯೋಟಿಕ್) ಕೊಡುತ್ತಿದ್ದೆವು. ಸಿ.ಟಿ ಸ್ಕ್ಯಾನ್ ಮಾಡಿಸಿದಾಗ ಕಿವಿಯಲ್ಲಿ ಕೀವು ತುಂಬಿಕೊಂಡದ್ದು ಗೊತ್ತಾಗಿ ಆತನಿಗೆ ಶಸ್ತ್ರಕ್ರಿಯೆ (ಆಪೆರೇಷನ್) ಮಾಡುವುದೋ ಅಥವಾ ಇನ್ನೊಂದಿಷ್ಟು ಔಷಧಿ ಕೊಟ್ಟು ಸ್ವಲ್ಪ ಕಾಯ್ದು ನೋಡೋವುದೋ ಎಂಬ ವಿಚಾರದಲ್ಲಿದ್ದೆವು . ರಾತ್ರಿ ಆದರೂ ಆ ಹುಡುಗನ ಕಿವಿನೋವು ಹೆಚ್ಚಾಯಿತೇ ವಿನಹ ಕಡಿಮೆಯಾಗಲಿಲ್ಲ . ಆಗ ನನ್ನ ಬಾಸ್ ನನಗೆ ಆಪೆರೇಷನ್ ಮಾಡಲು ಹೇಳಿದರು. ನಾನು ರಾತ್ರಿ ಸುಮಾರು ೩ ಗಂಟೆಗೆ ಆಪೆರೇಷನ್ ಕೊಠಡಿಗೆ ಹೋಗಿ ಬಾಲಕನಿಗೆ ಅರಿವಳಿಕೆ (anesthesia) ನೀಡಿ ಕಿವಿಯ ಪರದೆಯಲ್ಲಿ ಸಣ್ಣ ಛೇದವನ್ನು ಮಾಡಿದಾಗ ಬಹಳ ಕೀವು ಹೊರಗಡೆ ಬಂದಿತು. ಅಲ್ಲಿಯವರೆಗೆ ಹಾಸಿಗೆ ಹಿಡಿದು ಮಲಗಿದ ಆ ಬಾಲಕ ಮರುದಿನ ಮುಂಜಾನೆ ವಾರ್ಡಿನಲ್ಲಿ ಓಡಾಡತೊಡಗಿದ್ದ. ಆತನ ತಂದೆ ತಾಯಿ ನನಗೆ “ಒಹೋ, ಏನು ಮ್ಯಾಜಿಕ್ ಮಾಡಿದಿರಿ ಡಾಕ್ಟ್ರೇ ?” ಎಂದು ತುಂಬಾ ಖುಷಿಯಿಂದ ಕೇಳಿದರು.

ನಾನು ಮಾಡಿದ ಆ ಚಿಕ್ಕ ಶಸ್ತ್ರಕ್ರಿಯೆಗೆ ಮೈರಿಂಗೋಟೋಮಿ (Myringotomy) ಎನ್ನುತ್ತಾರೆ. ಕಿವಿಯಲ್ಲಿ ಕೀವು ತುಂಬಿ ಒತ್ತಡಲ್ಲಿದ್ದಾಗ ರೋಗಿ ಅತೀವ ಕಿವಿನೋವಿನಿಂದ ಬಳಲುತ್ತಾನೆ. ಔಷಧಿಗಳಿಂದ ಆ ಕೀವು ಕಡಿಮೆಯಾಗದಿದ್ದರೆ ಈ ಆಪೆರೇಷನ್ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡುತ್ತ ಕಿವಿಯ ಪರದೆಯಲ್ಲಿ ಒಂದು ಸಣ್ಣ ಛೇದವನ್ನು ಮಾಡುತ್ತಾರೆ, ಇದರಿಂದ ಆ ಕೀವು ಹೊರಗಡೆ ಬಂದು ನೋವು, ಜ್ವರ ಕಡಿಮೆಯಾಗುತ್ತದೆ. ಈ ಆಪೆರೇಷನ್ ಮಾಡದಿದ್ದರೆ ಹಲವು ಬಾರಿ ಕಿವಿ ಪರದೆ ಕೊಳೆತು ಅದರಲ್ಲಿ ದೊಡ್ಡ ತೂತಾಗುತ್ತದೆ. ನಂತರದಲ್ಲಿ ಈ ತೂತಿನಿಂದ ಕಿವುಡುತನ, ಮೇಲಿಂದ ಮೇಲೆ ಕಿವಿಯ ಸೋಂಕು ಇತ್ಯಾದಿ ತೊಂದರೆಗಳು ಬರುತ್ತವೆ. ಇದರ ಒಟ್ಟು ಸಾರಾಂಶ ಎಂದರೆ ಕಿವಿಯಲ್ಲಿ ಸೋಂಕಾಗಿ ಕೀವು ತುಂಬಿ ಅದು ಔಷಧಿಗೆ ಕಡಿಮೆಯಾಗದಿದ್ದರೆ ಕಿವಿಪರದೆಯಲ್ಲಿ ಛೇದ ಮಾಡಿ ಆ ಕೀವನ್ನು ಹೊರತೆಗೆಯಬೇಕು. ಇದನ್ನು ಯಾಕೆ ಹೇಳುತ್ತಿರುವೆ ಎಂದು ನಿಮಗೆ ಮುಂದೆ ಗೊತ್ತಾಗುತ್ತದೆ.

ನಾನು ಈಗ ಹಲವು ವರ್ಷಗಳ ಹಿಂದೆ ಹೋಗುವೆ. ನಾನು ಬೆಳಗಾವಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಇದ್ದಾಗಿನಿಂದ ಹಿಡಿದು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕನಾಗಿರುವವರೆಗೆ ನಾನು ನೋಡಿದ್ದೇನೆಂದರೆ ಹಲವಾರು ರೋಗಿಗಳು ಕಿವಿ ನೋವಾದಾಗ ಕಿವಿಯಲ್ಲಿ ಬಿಸಿ ಎಣ್ಣೆ, ಬಿಸಿ ಎಣ್ಣೆಯಲ್ಲಿ ಬಳ್ಳೊಳ್ಳಿ, ಇಲ್ಲವೇ ಬಳ್ಳೊಳ್ಳಿ ಜಜ್ಜಿ ಅದರ ರಸ ಕಿವಿಯಲ್ಲಿ ಹಾಕುವುದು, ಎಣ್ಣೆಗೆ ಜೊತೆಗೆ ಸ್ವಲ್ಪ ಅರಿಶಿಣ – ಹೀಗೆ ಹಲವು ಮನೆ ಮದ್ದು ಮಾಡುತ್ತಿದ್ದರು. ನಮಗೋ ಇದು ಬಲು ವಿಚಿತ್ರವಾಗಿತ್ತು. ಯಾಕೆಂದು ಅವರಿಗೆ ಕೇಳಿದಾಗ ಅವರು ನಮ್ಮ ಅಜ್ಜ, ಅಜ್ಜಿ, ತಾಯಿ ಹೀಗೆ ಮಾಡಿರೆಂದು ಹೇಳಿದಕ್ಕೆ ನಾವು ಮಾಡಿದೆವು ಎನ್ನುತ್ತಿದ್ದರು. ಅವರಾರಿಗೂ ಯಾಕೆ ಎಂದು ಗೊತ್ತಿರಲಿಲ್ಲ, ಆದರೆ ಹಿರಿಯರು ಹೇಳಿದಂತೆ ಮಾಡುತ್ತಿದ್ದರು. ಆ ಹಿರಿಯರನ್ನು ಕೇಳಿದಾಗ ಅವರಿಗೂ ಇದು ಯಾಕೆ ಎಂದು ಗೊತ್ತಿರಲಿಲ್ಲ ಆದರೆ ಇದನ್ನು ಮುಂದುವರೆಸುತ್ತಿದ್ದರು.

ಇದರ ಬಗ್ಗೆ ನಾವು ಸ್ವಲ್ಪ ಅಧ್ಯಯನ/ ಹುಡುಕಾಟ ನಡೆಸಿದೆವು. ನಮಗೆ ಸಿಕ್ಕ ಮಾಹಿತಿ ಬಹಳಷ್ಟು ಕುತೂಹಲಕಾರಿಯಾಗಿತ್ತು. ಆಯುರ್ವೇದದಲ್ಲಿ ಕಿವಿ ನೋವಿನ ಮೂಲವನ್ನು ಹೇಗೆ ಕಂಡು ಹಿಡಿಯುವುದು ಎಂಬ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಕಿವಿ ನೋವು ಹಲವಾರು ಕಾರಣಗಳಿಂದ ಬರಬಹುದು. ಕೆಲವು ರೋಗಗಳಲ್ಲಿ ಜ್ವರ ಇದ್ದರೆ, ಇನ್ನು ಕೆಲವು ಕಡೆ ನಾಡಿಮಿಡಿತ ಹೆಚ್ಚಾಗಿರುತ್ತದೆ. ಇನ್ನು ಹಲವೆಡೆ ಕಿವಿ ಸ್ವಲ್ಪ ಮಂದವಾಗಿರುತ್ತದೆ. ಇನ್ನು ಹಲವು ಕಡೆ ಕಿವಿ ಹೊರಗೆ ಬಾವು ಕಾಣಿಸುತ್ತದೆ. ಇವುಗಳ ಮೇಲೆ ನಾವು ರೋಗಿಗೆ ಏನಾಗಿದೆ ಎಂದು ಸುಮಾರು ೯೦% ವರೆಗೂ ಸರಿಯಾಗಿ ನಿದಾನಿಸಬಹುದು (ಈ ಕೋವಿಡ್ ಮಹಾಮಾರಿ ನಂತರ ಇಡೀ ಜಗತ್ತಿನಲ್ಲೆಲ್ಲ ವೈದ್ಯರು ಫೋನ್ ಅಥವಾ ಇಂಟರನೆಟ್ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಈ ತರಹದ ವ್ಯವಸ್ಥೆಯಲ್ಲಿ ಅವರು ಬಹಳಷ್ಟು ಬಾರಿ ಪ್ರಶ್ನೋತ್ತರಗಳ ಮೇಲೆಯೇ ರೋಗವನ್ನು ಗುರುತಿಸುತ್ತಾರೆ.)

ಬೆಳ್ಳೊಳ್ಳಿ ರಸ ಒಂದು ಕೆರೆಟೊಲೈಟಿಕ್ (kerolytic), ಅಂದರೆ ಅದು ಚರ್ಮದ ಹೊರಪದರನ್ನು ಕರಗಿಸುವ ಶಕ್ತಿ ಹೊಂದಿದೆ. ಅರಿಶಿಣ ಒಂದು ಆಂಟಿಸೆಪ್ಟಿಕ್ (antiseptic ), ಅಂದರೆ ರೋಗಾಣುಗಳನ್ನು ನಾಶ ಮಾಡುವ ಶಕ್ತಿ ಹೊಂದಿದೆ. ಈಗ ಆಯುರ್ವೇದದಲ್ಲಿ ಈ ರೀತಿಯ ಕಿವಿಯ ಸೋಂಕಿಗೆ (acute otitis media , not responding to antibiotics ) ಯಾವ ಚಿಕಿತ್ಸೆ ಹೇಳಿದ್ದಾರೆ ಎಂದು ನೋಡೋಣ. ಒಂದು ಪಾತ್ರೆಯಲ್ಲಿ ಎಣ್ಣೆ , ಬಳ್ಳೊಳ್ಳಿ ರಸ/ಬಳ್ಳೊಳ್ಳಿ ,ಅರಿಶಿನ ಹಾಕಿ ಕಾಯಿಸಿ ಆ ಕಾಯ್ದ ಒಂದು ಹನಿ ಎಣ್ಣೆಯನ್ನು ಕಿವಿಯ ಪರದೆಯ ಮೇಲೆ ಹಾಕಬೇಕು. ಇಲ್ಲಿ ರೋಗಿ ಹೇಗೆ ಮಲಗಬೇಕು, ಕಿವಿಯಲ್ಲಿ ಎಣ್ಣೆ ಯಾವ ರೀತಿ ಹಾಕಬೇಕು , ಯಾವ ಸಲಕರಣೆ ಹೇಗೆ ಉಪಯೋಗಿಸಬೇಕೆಂದು ಎಂದು ಸವಿಸ್ತಾರವಾಗಿ ತಿಳಿಸಿದ್ದಾರೆ. ಆ ಕಾಯ್ದ ಎಣ್ಣೆ ಹನಿ ಕಿವಿ ಪರದೆಯ ಮೇಲೆ ಬಿದ್ದ ತಕ್ಷಣ ಹೊರಗಿನ ಪದರು (ಕಿವಿ ಪರದೆಗೆ ೩ ಪದರುಗಳು ಇರುತ್ತವೆ ) ಬೆಳ್ಳೊಳ್ಳಿ ರಸದಿಂದ ಕರಗಿ ಹೋಗಿ ಉಳಿದ ಪದರುಗಳು ಬಿಸಿ ಎಣ್ಣೆಯಿಂದ ಕರಗಿ ಕಿವಿ ಪರದೆಯಲ್ಲಿ ಅತಿ ಸಣ್ಣ ಛೇದವಾಗಿ ಕಿವಿಯ ಒಳಗಿನ ಕೀವು ಹೊರಗೆ ಬರುತ್ತದೆ ಹಾಗು ರೋಗಿಗೆ ನೋವು ತಕ್ಷಣ ಶಮನವಾಗುತ್ತದೆ. ಅದರಲ್ಲಿನ ಅರಿಶಿನ ಕಿವಿಯಲ್ಲಿ ಸೋಂಕು ಮಾಡಿದ ರೋಗಾಣುಗಳ ವಿರುದ್ಧ ಹೋರಾಡುತ್ತದೆ ಹಾಗು ಈ ಎಲ್ಲ ಚಟುವಟಿಕೆ ಹೊರಗಿನ ಸೋಂಕುರಹಿತವಾಗಿ (in sterile condition) ನಡೆಯಲು ಸಹಾಯ ಮಾಡುತ್ತದೆ. ಈಗ ಇದನ್ನು ಮೈರಿಂಗೋಟೋಮಿ (myringotomy ) ಶಸ್ತ್ರ ಕ್ರಿಯೆಗೆ ಹೋಲಿಸಿದಾಗ ಎಲ್ಲವು ಒಂದೇ ಆಗಿದೆ ಅನ್ನಿಸುವುದು. ನಾವು ಇಂದು ಮೈಕ್ರೋಸ್ಕೋಪ್, ಅನಾಸ್ಥೆಸಿಯಾ , ಸ್ಟೆರಿಲೈಸಷನ್ , ಆಂಟಿಸೆಪ್ಟಿಕ್ ಇತ್ಯಾದಿ ಪಾಶ್ಚಿಮಾತ್ಯ ಪದಗಳನ್ನು ಮತ್ತು ವಿಧಾನಗಳನ್ನು ಬಳಸಿ ಆಪೆರೇಶನ್ ಮಾಡುತ್ತೇವೆ. ಆದರೆ ಎರೆಡೂ ಚಿಕಿತ್ಸಾ ಪದ್ಧತಿಗಳಲ್ಲಿ ಇದನ್ನು ಮಾಡುವ ವಿಧಾನ ಬೇರೆ ಇದ್ದರೂ ಚಿಕಿತ್ಸಾ ತತ್ವ ಒಂದೇ ಇದೆ.

ಈ ಚಿಕಿತ್ಸಾ ಪದ್ಧತಿ ಅಪಭ್ರಮಶವಾಗಿ ಜನರು ತಮಗೆ ತೋಚಿದ್ದನ್ನು ಮಾಡುತ್ತಾ ಆಯುರ್ವೇದವನ್ನು ಮೂರಾಬಟ್ಟೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಯುರ್ವೇದ ಆಧುನಿಕ ಚಿಕಿತ್ಸಾ ಪದ್ದತಿಯ ಅಂಶಗಳನ್ನು ತನ್ನೊಳಗೆ ಕೂಡಿಸಿಕೊಳ್ಳದೆ ಹಳೆಯ ಮುದುಕನಂತೆ ಆಗಿದೆ. ಇನ್ನು ಭಾರತದಲ್ಲಿ ಅಲೋಪಥಿ ಮತ್ತು ಆಯುರ್ವೇದ ವೈದ್ಯರು ಹೊಡೆದಾಡುತ್ತ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆಯುರ್ವೇದಕ್ಕೆ ಸರಕಾರದ ಪ್ರೋತ್ಸಾಹ, ಸಂಶೋಧನೆಗೆ ಧನ ಸಹಾಯ, ಜನರ ಪ್ರೋತ್ಸಾಹ ಇದಾವುದೂ ಸಿಗದೇ ಅದು ಮುರುಕುಲು ಮನೆಯಲ್ಲಿನ, ಹರಕಲು ಉಟ್ಟ ಮುದಿ ಜಾಣನಂತೆ ಆಗಿದೆ.

ನಾನು ಅಂದು ನನ್ನ ಬಾಸ್ ಅವರಿಗೆ ಈ ಸುಮಾರು ೩-೪ ಸಾವಿರ ವರ್ಷ ಹಳೆಯದಾದ ಆಯುರ್ವೇದ ಚಿಕಿತ್ಸಾ ಪದ್ಧತಿ ಬಗ್ಗೆ ಹೇಳಿ ಕಿವಿಯ ಸೋಂಕಿಗೆ ಯಾವ ರೀತಿ ಚಿಕಿತ್ಸಾ ಪದ್ಧತಿ ಹೇಳಿದ್ದಾರೆ ಎಂದು ವಿವರಿಸಿದೆ. ಆಗ ಅವರು ನನ್ನನ್ನು ಕುರಿತು , “ಹೌದಾ? ‘ಎಂದು ಸಂಶಯದಲ್ಲಿ ಹೇಳಿದರು. ಆಗ ನನಗೆ ಯಾವ ದುಃಖವಾಗಲಿಲ್ಲ. ಏಕೆಂದರೆ ಇದನ್ನು ಮೊದಲು ಅನೇಕ ಭಾರತೀಯರೇ ನಂಬುತ್ತಿಲ್ಲ, ಇನ್ನು ಬಹಳಷ್ಟು ವಿದೇಶಿಜನರ ಬಗ್ಗೆ ಏನು ಹೇಳಬೇಕು? ಇದು ಅವರ ತಪ್ಪು ಅಲ್ಲ. ಏಕೆಂದರೆ ಇದರ ಬಗ್ಗೆ ಬಹಳ ಜನ ತಿಳಿದುಕೊಂಡಿಲ್ಲ. ಭಾರತದಲ್ಲಿ ನಕಲಿ ಆಯುರ್ವೇದ ಪಂಡಿತರು ಬಹಳವಾಗಿದ್ದು ಜನರಿಗೆ ಬಾರಿ ಮೋಸ ಮಾಡುತ್ತಾರೆ. ಇದರಿಂದ ಜನ ಆಯುರ್ವೇದದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ. ಇದನ್ನು ಸುಧಾರಿಸುವುದೆಂದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕೆಲಸ.

ಇನ್ನು ಅನೇಕರಿಗೆ ಪ್ಲಾಸ್ಟಿಕ್ ಸರ್ಜರಿ ಜಗತ್ತಿಗೆ ಯಾವ ದೇಶದಿಂದ ಬಂತು ಎಂದು ಕೇಳಿದರೆ ಗೊತ್ತಿಲ್ಲ ಎಂಬ ಉತ್ತರವೇ ಬರುತ್ತದೆ. ಇನ್ನು ಹಲವು ಭೂಪರು ಇಂಗ್ಲೆಂಡ್, ಅಮೇರಿಕಾ, ಯುರೋಪ್ ದೇಶಗಳು ಎಂದೆಲ್ಲ ಹೇಳಬಹುದು. ಇದು ಭಾರತದಿಂದ ಜಗತ್ತಿಗೆ ಕಲಿಸಲ್ಪಟ್ಟಿತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೂಗಿನ ಪ್ಲಾಸ್ಟಿಕ್ ಸರ್ಜರಿ (rhinoplasty ) ಭಾರತದ ಕರ್ನಾಟಕದಿಂದ (ಮೊದಲಿನ ಮೈಸೂರು) ಇಂಗ್ಲೆಂಡಿಗೆ ಹೋಯಿತು. ಈ ಶಸ್ತ್ರಕ್ರಿಯೆಯನ್ನು ಭಾರತದ ಅನೇಕ ಪ್ರದೇಶಗಳಲ್ಲಿ ಮಾಡುತ್ತಿದ್ದರು. ಇದಲ್ಲದೆ ಇನ್ನು ಅನೇಕ ಶಸ್ತ್ರಕ್ರಿಯೆ ನಡೆಯುತ್ತಿದ್ದವು. ೧೭೯೪ರಲ್ಲಿ ಲಂಡನ್ನಿನ ಜಂಟಲ್ಮನಾಸ್ ಮ್ಯಾಗಜಿನ್ ದಲ್ಲಿ ಪ್ರಕಾಶನವಾದ ಒಂದು ಲೇಖನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಒಬ್ಬ ನೌಕರನ ಕತ್ತರಿಸಲ್ಪಟ್ಟ ಮೂಗನ್ನು ಕರ್ನಾಟಕದಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಮೂಲಕ ಪೂರ್ತಿ ಸರಿ ಮಾಡಲಾದ ಬಗ್ಗೆ ವಿವರಿಸಿದ್ದಾರೆ . ಈ ಶಸ್ತ್ರ ಚಿಕಿತ್ಸೆ ನೋಡಿದ ಬ್ರಿಟಿಷ್ ಸ್ವಾಸ್ಥ್ಯ ಅಧಿಕಾರಿಗಳು ತಮ್ಮ ಸರಕಾರಕ್ಕೆ ಇದನ್ನು ತಿಳಿಸಿದಾಗ ಆಗಿನ ಬ್ರಿಟಿಷ್ ಸರಕಾರ ಒಂದು ವೈದ್ಯರ ತಂಡವನ್ನು ಭಾರತಕ್ಕೆ ಕಳುಹಿಸಿ ಈ ಶಸ್ತ್ರಕ್ರಿಯೆ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ಬರಲು ಹೇಳಿದರು. ತದನಂತರ ಪ್ಲಾಸ್ಟಿಕ್ ಸರ್ಜರಿ ಯೂರೋಪಿನಲ್ಲಿ ಬೆಳೆಯಿತು ಹಾಗು ದುರದೃಷ್ಟದಿಂದ ಭಾರತದಲ್ಲಿ ಅಳಿಯಿತು. ಇದರ ಬಗ್ಗೆ ನಾನು ಕೇಳಿದ್ದೆ, ಅದರ ಬಗ್ಗೆ ನೋಡುವ ಭಾಗ್ಯ ನನಗೆ ಲಂಡನ್ನಿನ ವೆಲ್ ಕಮ್ ವಸ್ತುಸಂಗ್ರಹಾಲಯದಲ್ಲಿ ಲಭಿಸಿತು. ನಾನು ಆ ಮ್ಯೂಸಿಯಂಗೆ ಭೆಟ್ಟಿ ಕೊಟ್ಟಾಗ ಅಲ್ಲಿ ಆಯುರ್ವೇದದ ಬಗ್ಗೆ ಪ್ರದರ್ಶನವೊಂದು ನಡೆಯುತ್ತಿದ್ದದ್ದು ಕಾಕತಾಳೀಯ. ಅಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಹೇಗೆ ಇಂಗ್ಲೆಂಡಿಗೆ ಬಂದಿತು ಎಂದು ವಿವರಿಸಿದ್ದಾರೆ. ಅಲ್ಲಿ ಹಾಕಿರುವ ಭಾರತೀಯ ಆಯುರ್ವೇದ ಬಗ್ಗೆ ಮಾಹಿತಿ ಮತ್ತು ಫೋಟೋಗಳನ್ನೂ ನೋಡಿದಾಗ ನನ್ನ ಮನಸ್ಸು ಹೊಯ್ದಾಡಿತು. ಒಂದಡೆ ಖುಷಿ, ಒಂದೆಡೆ ದುಃಖ ಆಗುತ್ತಿತ್ತು. ಜಗತ್ತಿಗೆ ಜ್ಞಾನ ದೀಪ ಹಚ್ಚಿ ತನ್ನ ಮನೆಯನ್ನೇ ಕತ್ತಲಾಗಿಸಿಕೊಂಡಿತು ನನ್ನ ಭಾರತ. ಅದಕ್ಕೆ ಅನೇಕ ಕಾರಣಗಳಿವೆ, ಅವುಗಳನ್ನು ಇಲ್ಲಿ ಚರ್ಚಿಸುವುದು ಈ ಲೇಖನದ ಚೌಕಟ್ಟನ್ನು ದಾಟುತ್ತದೆ.

ವಿಜಯ್ ಖುರ್ಸಾಪೂರ ಬರೆದ ಕೆಲವು ಕವಿತೆಗಳು

ಕವಿಯ ಪರಿಚಯ: ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್, ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನೆಲೆ, ಹುಟ್ಟಿದ ಊರು ಶಿಗ್ಗಾವಿ (ಹಾವೇರಿ ಜಿಲ್ಲೆ), ಓದಿದ್ದು ಧಾರವಾಡ, ಗದಗ, ಇಲ್ಲಿವವರೆಗೆ ಬೆಂಗಳೂರು, ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯನ್ನ ಓದುವದರಲ್ಲಿ ಆಸಕ್ತಿ ಮತ್ತು ಕೆಲವು ಚಿಕ್ಕ ಕವನಗಳನ್ನ ಬೆರೆಯುವ ಪ್ರಯತ್ನ.

ಹೊಸ ಗಾಳಿ

ಬಿಸಿಗಾಳಿಯ ಉಸಿರ ಈ ಜೀವಕೆ
ತಂಗಾಳಿಯಾಗಿ ನೀ ಬಾ
ಹೊಸ ಬಯಕೆಯ ಹೊಸ ಕನಸನ ನೀ ಹೊತ್ತು ತಾ

ಕಾಮೋ೯ಡ ಕವಿದ ಈ ಮನಕೆ
ಬೆಳಕಾಗಿ ನೀ ಬಾ
ಹೊಸ ಗುರಿಯ ಹೊಸ ಹುರುಪನ ನೀ ಹೊತ್ತು ತಾ

ಭಾರವಾದ ಹೃದಯದ ಈ ಗೂಡಿಗೆ
ಹರುಷವಾಗಿ ನೀ ಬಾ
ಹೊಸ ದಾರಿಯ ಹೊಸ ತಿರುವನ ನೀ ಹೊತ್ತು ತಾ

ಜಡವಾದ ಈ ದೇಹಕೆ
ಚೆೃತನ್ಯ ವಾಗಿ ನೀ ಬಾ
ಹೊಸ ಶೋಧನೆಯ ಹೊಸ ವಿವೇಚನೆಯನ ನೀ ಹೊತ್ತು ತಾ

ಸದಾ ಅರಸುತಿದೆ ಈ ಮನ ಹೊಸ ತನಕ್ಕಾಗಿ ಹೊಸ ಗಾಳಿಗಾಗಿ

ಹೊದಿಕೆ

ಆಳುವವನಿಗೊಂದು ಹೊದಿಕೆ
ಅಳುವವನಿಗೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ

ಕಾಯುವನಿಗೊಂದು ಹೊದಿಕೆ
ಕದೀಮನಿಗೊಂದು ಹೊದಿಕೆ
ಈ ಬದುಕಿಗೆ ಏನೆಲ್ಲ ಹೊದಿಕೆ

ಮನಸ್ಸಿಗೊಂದು ಹೊದಿಕೆ
ಮಾನಕೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ

ಧನಿಕನಿಗೊಂದು ಹೊದಿಕೆ
ದಾನಿಗೊಂದು ಹೊದಿಕೆ
ಈ ಬದುಕಿಗೆ ಏನೆನಿಲ್ಲ ಹೊದಿಕೆ

ಹೊದಿಕೆ ಇಂದ ಹೊರಬಂದಾಗ
ಸಿಗುವುದೇ ಆ ಹೊದಿಕೆಗಿದ್ದ
ಆಲಿಕೆ?

ಹೊದಿಕೆಯ ಮೇಲೆದ್ದ ಹೊದಿಕೆಗಳ
ಬಿಚ್ಚಲೊಲ್ಲೆಯಾ ನಿಜವಾಗಿ ನಿನ್ನ
ತಿಳಿಯೋದಕೆ

ಮಜಾ

ಮೊದಲ ಮಳೆ ಸುರಿಯುವಾಗ
ಬೆಚ್ಚಗೆ ಮನೆಯಲ್ಲಿ ಕೂರುವದಕ್ಕಿಂತ
ಹೊರಗಡೆ ಮಳೆಯಲಿ ನೆನೆಯುವುದೇ ಮಜಾ
ಆ ಮಣ್ಣಿನ ಸುವಾಸನೆಯಲಿ ಮನವು
ವಿಲೀನವಾಗುವಾಗ

ಬೆಳಿಗ್ಗೆ ಮೊಬೈಲ್ನಲ್ಲಿ ಅಲರಾಮು ಆಗುವಾಗ
ತಟ್ಟನೇ ಎದ್ದೇಳುವುದಕ್ಕಿಂತ
ಸ್ನೂಜ್ ಮಾಡಿ ಮತ್ತೆ ಮತ್ತೆ ನಿದ್ದೆಗೆ ಜಾರುವುದೇ ಮಜಾ
ಕನಸಿನಲ್ಲಿ ಹೊಸ ಕನಸೊಂದು ಶುರುವಾಗುವಾಗ

ಸಿನೆಮಾ ನೋಡೋಕೆ ಹೋದಾಗ
ಸಬ್ಯರ ಜೊತೆ ಬಾಲ್ಕನಿಯಲ್ಲಿ ಕೂರೋದಕ್ಕಿಂತ
ಗಾಂಧಿ ಕ್ಲಾಸ್ ನಲ್ಲಿ ಕೂರೋದೇ ಮಜಾ
ಹರುಷದ ಶಿಳ್ಳೆಗಳಲ್ಲಿ ಮನಸ್ಸು ಯವ್ವನಕ್ಕೆ ಜಾರುವಾಗ

ಭರವಸೆ

ಬಿಸಿಲಿಗೆ ಬಸವಳಿದ ತಾವರೆ
ಮುದುಡುತಿದೆ, ಜಲವನರಿಸಿ,
ಕೈ ಚಲ್ಲಿದೆ ಮೆಲ್ಲಗೆ
ಸುರಿಯಬಾರದೇ, ಮಲ್ಲಿಗೆಯ ಮಳೆ
ಅರಳಬಾರದೇ ಮೆಲ್ಲಗೆ, ಭರವಸೆಯ ಕಳೆ

ಬೆಳಕಿನೆಡೆಗೆ

ಮರುಕಳಿಸಿದ ಬೆಳಕಿನ ಬಾನ,
ಹರಡಿದೆ ಕಲರವಗಳ ಗಾನ.
ಮೌನದಲಿ ಅರಿಯುವ ಧ್ಯಾನ,
ಸವಿದಂತೆ ಹಾಲು ಜೇನ.
ಹರಿಯುವ ತಿಳಿನೀರಿನ ಸ್ನಾನ,
ಈ ಜಗದ ಮಧುರ ದಾನ.
ಇತಿ ಮಿತಿಯ ಬದುಕುವ ತನ
ಇರಿಸುವದೇ ಕೇಳಲು? ಇನ್ನೇನ

ಲ್ಯಾಂಕಶಾಯರಿನ ಭಾರತೀಯ ನೃತ್ಯ ಪರಂಪರೆ

ನಮ್ಮ ಕನಸನ್ನು ಮಕ್ಕಳ ಮೂಲಕ ನನಸಾಗಿಸುವುದು ಒಂದು ಪ್ರಶ್ನಾರ್ಹ ಪ್ರಯತ್ನ ಅನ್ನುತ್ತಾರೆ.  ಆದರೆ ಮಕ್ಕಳ ಶ್ರಮದ ಯಶಸ್ಸು ತಾಯ್ತಂದೆಯರಿಗೆ ಹೆಮ್ಮೆಯ ವಿಷಯ ಅನ್ನುವುದರಲ್ಲಿ ಎರಡು ಮಾತಿಲ್ಲ. 

ನಮಸ್ಕಾರ. ವಿಶ್ವಾವಸು ಸಂವತ್ಸರದ ಹೊಸವರ್ಷದ ಶುಭಾಶಯಗಳು. ಈ ಸಲದ ಆವೃತ್ತಿಯಲ್ಲಿ ನಮ್ಮ ಕೌಂಟಿಯ ನೃತ್ಯ ಶಾಲೆಗಳಲ್ಲಿ ಒಂದಾದ ಅಭಿನಂದನಾ ಡಾನ್ಸ್ ಅಕ್ಯಾಡೆಮಿಯ ಮತ್ತು ಅದರ ಸಂಚಾಲಕರಾದ ಶ್ರೀಮತಿ ಅಭಿನಂದನಾ ಕೋದಂಡ ಅವರ ಒಂದು ಕಿರು ಪರಿಚಯ – ವಿದ್ಯಾರ್ಥಿಯೊಬ್ಬಳ ಪಾಲಕರ ಅನುಭವದ ಸಹಿತ.  ಓದಿ ತಮ್ಮ ಅಭಿಪ್ರಾಯವನ್ನು ತಿಳಿಸುವುದು. ಧನ್ಯವಾದಗಳೊಂದಿಗೆ – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).
****************************
ಅಭಿನಂದನಾ ಡಾನ್ಸ್ ಅಕ್ಯಾಡೆಮಿ – ನಾಟ್ಯರಸ

*********************************

ಇಂಗ್ಲಂಡಿನಲ್ಲಿ ನನ್ನ ಕಲಿಕೆಯ ಸುತ್ತನ್ನು (training rotation) ಮುಗಿಸಿ ಪ್ರೆಸ್ಟನ್ನಿಗೆ ಬಂದು ಕನ್ಸಲ್ಟಂಟ್ ಆಗಿ ಸೇರಿದಾಗ ನಮ್ಮ ಮಗಳಿಗೆ ೩ ವರ್ಷ. ಎಲ್ಲಾ ಅನಿವಾಸಿ ಭಾರತೀಯರಂತೆ ನಾವೂ ನಮ್ಮೂರಿನಲ್ಲಿರುವ ಹಿಂದಿನ ಪೀಳಿಗೆಗೂ, ಇಲ್ಲಿ ಹುಟ್ಟಿರುವ ಮುಂದಿನ ಪೀಳಿಗೆಗೂ ಮಧ್ಯ ಪೂರ್ವ – ಪಶ್ಚಿಮಗಳಿಗೆ ಸೇತುವೆಯಾಗಿ ಬದುಕುವ ಜೀವನದ ಹಂತದಲ್ಲಿ ಇದ್ದೆವು ಅನ್ನಿ. ಆದಷ್ಟು ಭಾರತೀಯ ಪರಂಪರೆಯ ಕುರುಹುಗಳನ್ನು ಮಕ್ಕಳಿಗೆ ಪರಿಚಯಿಸಬೇಕೆಂಬ ಆಶಯವನ್ನು ನಮ್ಮ ಜೀವನದ ಓಟದ ಜೊತೆಗೇ ಹೊತ್ತುಕೊಂಡು ಓಡುತ್ತಿದ್ದೆವು.  ಮಕ್ಕಳು ಇಲ್ಲಿಯ ಸಂಗೀತ, ನೃತ್ಯ, ಸಂಸ್ಕೃತಿಯನ್ನು ಹೇಗೋ ಕಲಿತುಬಿಡುತ್ತವೆ.  ಭಾರತೀಯ ಸಂಗೀತ – ನೃತ್ಯದ ಹುಚ್ಚು ಹತ್ತಿಸಬೇಕೆಂದರೆ, ಮೊದಲು ನಮಗೆ ಆ ಹುಚ್ಚಿರಬೇಕು, ಹತ್ತಿರದಲ್ಲಿ ಎಲ್ಲಾದರೂ ಕಲಿಯುವ ಅವಕಾಶವಿರಬೇಕು ಮತ್ತು ಛಲ ಬಿಡದೆ ವಾರವೂ ಪ್ರತಿ ತರಗತಿಗೆ ಕರೆದೊಯ್ಯುವ ತಾಳ್ಮೆಯಿರಬೇಕು. ಇದು ಬೀಜ ಬಿತ್ತಿ, ನೀರು-ಗೊಬ್ಬರ ಹಾಕಿ ಸಸಿ ಏಳುವವರೆಗಿನ ಹಂತ ಅಷ್ಟೇ.  ಅಲ್ಲಿಂದ ಮುಂದೆ ಅದು ಬೆಳೆದು ಮರವೂ ಆಗಬಹುದು ಇಲ್ಲವೇ, ಮುರುಟಿ ಮಾಯವೂ ಆಗಬಹುದು.  ಆರಂಭದಲ್ಲಿ ಆಟ-ಸಂಗೀತ-ನೃತ್ಯ ಅಲ್ಲದೇ ಇನ್ನೂ ಇತರ ಪಠ್ಯೇತರ ತರಗತಿಗಳಿಗೆ ವಾರದಲ್ಲಿ ೮ ಬಾರಿ (ಶನಿವಾರ ಎರಡು!) ಕರೆದೊಯ್ದರೂ, ೧೦ನೆಯ ತರಗತಿಗೆ ಬರುವ ಹೊತ್ತಿಗೆ ಒಂದೆರಡು ಮಾತ್ರ ಉಳಿಯುತ್ತವೆ ಅನ್ನುವುದು ಸತ್ಯ; ಎಲ್ಲಾ ಅನಿವಾಸಿ ತಂದೆ-ತಾಯಂದಿರ ಅನುಭವವೂ ಹೆಚ್ಚು ಕಡಿಮೆ ಇದೇ ಇರಲಿಕ್ಕೆ ಸಾಕು. 

ಹೀಗಿರುವಾಗ, ಪ್ರೆಸ್ಟನ್ನಿನಲ್ಲಿ ಕೇಳಿಬಂದ ಹೆಸರು ಅಭಿನಂದನಾ. ಶ್ರೀಮತಿ ಅಭಿನಂದನಾ ಕೋದಂಡ ಅವರು ನಡೆಸುತ್ತಿದ್ದ ಕುಚಿಪುಡಿ ತರಗತಿಗಳಿಗೆ ನಮ್ಮ ಪರಿಚಯದ ಹಲವರ ಮಕ್ಕಳು ಹೋಗುತ್ತಿದ್ದದ್ದು ತಿಳಿದು, ನಮ್ಮ ಮಗಳನ್ನೂ ಸೇರಿಸಿದೆವು. ಅಭಿನಂದನಾ ಅವರು ಮಕ್ಕಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ಶಿಸ್ತು, ಕಲಿಸುವ ಶೈಲಿ ಇವೆಲ್ಲ ಕ್ರಮೇಣ ನಮಗೂ, ಮುಖ್ಯವಾಗಿ ಮಗಳಿಗೂ ಮೆಚ್ಚುಗೆಯಾಗಿ ಅವಳ ಕಲಿಕೆ ನಿಲ್ಲದೆ ಮುಂದುವರೆಯಿತು. ವರ್ಷದಲ್ಲಿ ಹಲವಾರು ಚಿಕ್ಕಪುಟ್ಟ ಪ್ರದರ್ಶನಗಳೊಂದಿಗೆ ಶುರುವಾಗಿದ್ದು ಅದೊಂದು ನಮ್ಮ ಜೀವನಕ್ರಮವೇ ಆಗಿಹೋಯಿತೆನ್ನಬಹುದು. ವಾರದ ತರಗತಿಗಳು ಅಷ್ಟೇ ಅಲ್ಲದೇ ಸಂಕ್ರಾಂತಿ, ೨೬ ಜನವರಿಯ ಗಣತಂತ್ರ ದಿವಸ, ಯುಗಾದಿ, ೧೫ ಆಗಸ್ಟ್, ದೀಪಾವಳಿ, ಹೊಸ ವರ್ಷ ಹೀಗೆ ಅನೇಕ ಕಾರ್ಯಕ್ರಮಗಳಿಗೆ ತಯಾರಿ ನಮ್ಮನ್ನೂ, ಮಕ್ಕಳನ್ನೂ ವಾರಾಂತ್ಯದಲ್ಲಿ ಸಮಯವೇ ಇಲ್ಲದಂತೆ ಇಟ್ಟವು. ಎಲ್ಲ ಪಾಲಕರಂತೆ ನಮ್ಮ ಜೀವನದ ಪರಿಕ್ರಮಣವೂ ಮಕ್ಕಳ ಚಟುವಟಿಕೆಗಳ ಸುತ್ತಲೇ ಸುತ್ತುವಂತಾಯಿತು. ಹೀಗಿದ್ದರೂ, ಪ್ರತಿಯೊಂದು ಕಾರ್ಯಕ್ರಮದ ಯಶಸ್ಸು ನಮ್ಮ ಹೆಮ್ಮೆಯನ್ನು ಹೆಚ್ಚಿಸಿತೆಂದೇ ಹೇಳಬಹುದು.

ಕುಚಿಪುಡಿಯ ನೃತ್ಯ ಪ್ರಕಾರದಲ್ಲಿ, ವಿದ್ಯಾರ್ಥಿಗೆ ಮೊದಲಿನಿಂದ ಕಾಲ್ಗೆಜ್ಜೆ ದೊರೆಯದು. ಅದನ್ನು ವಿದ್ಯಾರ್ಥಿ ಗಳಿಸಬೇಕು. ಅಂದರೆ, ಒಂದು ಹಂತ ತಲುಪಿದಾಗ ಮಕ್ಕಳಿಗೆ ಗುರುವಿನಿಂದ ಗೆಜ್ಜೆ ಕಟ್ಟಿಸಲಾಗುತ್ತದೆ, ನಟರಾಜನ ಪೂಜೆಯೊಂದಿಗೆ. ಇದುವರೆಗೆ ಗುಂಪಿನಲ್ಲಿ ನಾಟ್ಯಪ್ರದರ್ಶನ ಮಾಡಿದ್ದ ವಿದ್ಯಾರ್ಥಿ, ಮೊದಲ ಬಾರಿಗೆ ಸ್ಪಾಟ್‍ಲೈಟ್‍ನಲ್ಲಿ ಬರುತ್ತಾರೆ; ಸೋಲೋ ನೃತ್ಯ ಮಾಡುತ್ತಾರೆ; ಮಾಡಬಲ್ಲೆನೆಂಬ ಆತ್ಮಸ್ಥೈರ್ಯ ಗಳಿಸುತ್ತಾರೆ. ನಾನು ನೋಡಿದಂತೆ, ಮಕ್ಕಳು ನೃತ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಅಲ್ಲಿಂದಲೇ. ಅಲ್ಲಿಂದ ಪ್ರತಿ ಹಾವ-ಭಾವದಲ್ಲಿ, ಪ್ರತಿಯೊಂದು ಪ್ರದರ್ಶನದಲ್ಲಿ ಮನಸುಕೊಟ್ಟು ಮಾಡಿದ ಪ್ರಯತ್ನದ ಫಲ ಕಾಣಲು ಶುರುವಾಗುತ್ತದೆ.

ಅಲ್ಲಿಂದ ಮುಂದಿನ ಹಂತ ರಂಗಪ್ರವೇಶದ್ದು. ಭರತನಾಟ್ಯದಿಂದಾಗಿ ಆರಂಗೇಟ್ರಮ್ ಎಂದು ಹೆಚ್ಚು ಪ್ರಚಲಿತವಾಗಿರುವ ಈ ಹಂತ, ವಿದ್ಯಾರ್ಥಿಯ ಕಲಿಕೆ ಪೂರ್ಣವಾಯಿತು ಅನ್ನುವುದಕ್ಕೆ ಸಮ. ಸುಮಾರು ೩ ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮ ವಿದ್ಯಾರ್ಥಿಯ ಪರಿಶ್ರಮವನ್ನು ಒರೆಗೆ ಹಚ್ಚುತ್ತದೆ. ಲೈವ್ ಹಾಡುಗಾರ ಮತ್ತು ಸಂಗೀತಗಾರರೊಂದಿಗೆ ನಡೆಯುವ ನೃತ್ಯ ವಿದ್ಯಾರ್ಥಿಯನ್ನು, ಅಲ್ಲಾಗಬಹುದಾದ ಹೆಚ್ಚು-ಕಡಿಮೆಗಳಿಗೆ ಹೊಂದಿಕೊಂಡು ಕಾರ್ಯಕ್ರಮವನ್ನು ಸರಿಯಾಗಿ ನಡೆಸಿ, ಮುಗಿಸುವ ಚಾಣಾಕ್ಷತೆಯನ್ನು ಕಲಿಸುತ್ತದೆ. ಕಾರ್ಯಕ್ರಮಕ್ಕೆ ಸುಮಾರು ೧೦-೧೨ ತಿಂಗಳ ಮುಂಚೆ ಆರಂಭವಾಗುವ ರಂಗಪ್ರವೇಶದ ತಯಾರಿ, ವಿದ್ಯಾರ್ಥಿ ಮತ್ತು ಗುರು ಇಬ್ಬರ ಸಮಯ, ಸಾಮರ್ಥ್ಯ ಎರಡರಲ್ಲೂ ಸಂಪೂರ್ಣ ಹೊಂದಾಣಿಕೆ, ತಾಳ್ಮೆ ಮತ್ತು ಸಮರ್ಪಣೆಯನ್ನು ನಿರೀಕ್ಷಿಸುತ್ತದೆ. ಪಾಲಕರಿಗೆ ಇದೊಂದು ಸಣ್ಣ ಪ್ರಮಾಣದಲ್ಲಿ ಮದುವೆಯನ್ನೇ ಮಾಡಿದ ಅನುಭವ – ತಯಾರಿ, ಖರೀದಿ ಎಲ್ಲದರಲ್ಲೂ. ಕೊನೆಯ ವಾರವಂತೂ, ದಿನಕ್ಕೆ ೮-೧೦ ಗಂಟೆಗಳ ಕಾಲ ಸಂಗೀತಗಾರರೊಂದಿಗೆ ನಡೆಯುವ ನೃತ್ಯದ ಅಭ್ಯಾಸ ನೋಡುವ ಪಾಲಕರಿಗೇ ಬೆವರಿಳಿಸುತ್ತದೆ! ಎಲ್ಲ ಯಶಸ್ವಿಯಾಗಿ ಮುಗಿದು, ನೆರೆದ ಪ್ರೇಕ್ಷಕವೃಂದದ ಚಪ್ಪಾಳೆಗಳನ್ನು ಕೇಳಿದಾಗ ಆಗುವ ಹೆಮ್ಮೆಯ ಅನುಭವ ಬರೆದು ಹೇಳಿ ವರ್ಣಿಸಲಾಗದು.

ಮೇಲಿನ ಎರಡು ಹಂತಗಳಲ್ಲೂ ಒಬ್ಬೊಬ್ಬಳು ಮಗಳು ಇರುವ ನಮಗೆ, ಈಗ ಕುಚಿಪುಡಿಯಿಲ್ಲದ ವಾರ ಏನೆಂದೇ ನೆನಪಿಲ್ಲ. ಯೂನಿವರ್ಸಿಟಿಯಲ್ಲಿರುವ ದೊಡ್ಡ ಮಗಳು ಕಲಿತ ವಿದ್ಯೆಯನ್ನು ಉತ್ಸಾಹದಿಂದ ಅಲ್ಲೂ ಪ್ರದರ್ಶನ ಮಾಡುತ್ತಿದ್ದಾಳೆ. ಕುಚಿಪುಡಿ ಕಲಿಸಿದ ಶಿಸ್ತು, ಏಕಾಗ್ರತೆಯ ಅರಿವು ಜೀವನಕ್ಕೆ ಎಷ್ಟು ಉಪಯುಕ್ತ ಎನ್ನುವ ಅರಿವು ಅವಳಿಗಿದೆ. ಇದಕ್ಕೆ ಕಾರಣವಾದ ಗುರು ಶ್ರೀಮತಿ ಅಭಿನಂದನಾ ಕೋದಂಡ ಮತ್ತು ಅವರು ನಡೆಸುವ ಅಭಿನಂದನಾ ಡಾನ್ಸ್ ಅಕ್ಯಾಡೆಮಿಗೆ ನಮ್ಮ ಧನ್ಯವಾದಗಳು.

ಅಭಿನಂದನಾ ಡಾನ್ಸ್ ಅಕ್ಯಾಡೆಮಿ (ADA):
ಸಧ್ಯಕ್ಕೆ ಇಂಗ್ಲೆಂಡಿನಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಶಾಸ್ತ್ರೀಯ ನಾಟ್ಯ ಕಲಿಸುವ ಶಾಲೆಗಳಲ್ಲಿ ಒಂದು. ೨೦೦೭ರಲ್ಲಿ ಆರಂಭವಾದ ಈ ಶಾಲೆ ತನ್ನ ಶಿಸ್ತು ಮತ್ತು ಕಲಿಕೆಯ ವಿಧಾನದಿಂದಾಗಿ ಹಿರಿಮೆಯನ್ನು ಕಾಯ್ದುಕೊಂಡು ಬಂದಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಕುಚಿಪುಡಿ ನೃತ್ಯವನ್ನು ಕಲಿಸುವ ಈ ಶಾಲೆ, ವಾಯವ್ಯ ಇಂಗ್ಲಂಡಿನ ಲ್ಯಾಂಕಶಾಯರ್‌ನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ದೇಶದಾದ್ಯಂತ ಹಲವಾರು ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶಿಸಿದ್ದಾರೆ – ಉದಾಹರಣೆಗೆ, ಲಂಡನ್ ಇಂಟರ್ನ್ಯಾಶನಲ್ ಆರ್ಟ್ಸ್ ಫೆಸ್ಟಿವಲ್, ಟೂರ್ ಡಿ ಫ್ರಾನ್ಸ್ ಫೆಸ್ಟಿವಲ್ (ಹ್ಯಾಲಿಫ್ಯಾಕ್ಸ್), ಬ್ಯಾರೊ ಫೆಸ್ಟಿವಲ್ ಆಫ್ ಕಲರ್ಸ್, ಲ್ಯಾಂಕಶಾಯರ್ ಎನ್ಕೌಂಟರ್, ಪ್ರೆಸ್ಟನ್ ಗಿಲ್ಡ್ ಮತ್ತು ಹೌಸ್ ಆಫ್ ಕಾಮನ್ಸ್ ದೀಪಾವಳಿ ಉತ್ಸವ.

ಅಭಿನಂದನಾ ಅಕ್ಯಾಡೆಮಿಯ ಮೂಲಮಂತ್ರ ಸಂಪ್ರದಾಯಬದ್ಧ ಕುಚಿಪುಡಿ ನಾಟ್ಯವನ್ನು ಕಲಿಸುವ, ಈ ನೆಲದಲ್ಲಿ ಬೆಳೆಸುವ ಅವಿಚ್ಚಿನ್ನ ಆಶಯ. ವಿದ್ಯಾರ್ಥಿಗಳನ್ನು ಥಿಯರಿ ಮತ್ತು ಪ್ರಾಕ್ಟಿಕಲ್‍ಗಳೆರಡರಲ್ಲೂ ಪ್ರವೀಣರನ್ನಾಗಿಸುವ ಅವಿರತ ಪ್ರಯತ್ನ. ೧೫ ವರ್ಷಗಳಿಂದ ಕಲಿಯುತ್ತಿರುವ ಮೊದಲೆರಡು ತರಗತಿಗಳ ವಿದ್ಯಾರ್ಥಿನಿಯರು ಕಳೆದ ಹಲ ವರ್ಷಗಳಲ್ಲಿ ತಮ್ಮ ರಂಗಪ್ರವೇಶವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರತಿಯೊಂದು ರಂಗಪ್ರವೇಶದಲ್ಲೂ ಇದ್ದಂತಹ ಕಾಮನ್ ಫ್ಯಾಕ್ಟರ್ ಅಂದರೆ ಲಂಡನ್ನಿನಿಂದ ಬರುವ ಕರ್ನಾಟಿಕ್ ಸಂಗೀತಗಾರರು – ಹಾಡುಗಾರ ಶ್ರೀ ವಂಶೀಕೃಷ್ಣ ವಿಷ್ಣುದಾಸ್, ವೇಣುವಾದಕ ಶ್ರೀ ವಿಜಯ ವೆಂಕಟ ಮತ್ತು ಮೃದಂಗ ವಾದಕ ಶ್ರೀ ಪ್ರತಾಪ ರಾಮಚಂದ್ರ. ಈ ಮೂವರ ಸಂಗತಿ ರಂಗಪ್ರವೇಶದ ಕಾರ್ಯಕ್ರಮಕ್ಕೆ ಖಳೆ ತರುವುದರಲ್ಲಿ ಸಂದೇಹವೇ ಇಲ್ಲ.

ಕೆಳಗೆ ಕೊಟ್ಟಿರುವ ಹಲವು ಲಿಂಕುಗಳಲ್ಲಿ ವಿದ್ಯಾರ್ಥಿನಿಯರ ಇತ್ತೀಚಿನ ಕಾರ್ಯಕ್ರಮದ ಪಟಚಿತ್ರಗಳೂ, ಯುಟ್ಯೂಬ್ ಲಿಂಕ್ ಇವೆ. ಮಿತ್ರ ರಾಮಶರಣ ಬರೆದಿದ್ದ ನನ್ನ ಮಗಳು ಅದಿತಿಯ ರಂಗಪ್ರವೇಶದ ವಿವರಣೆಯನ್ನೂ ನೋಡಬಹುದು.

ಶೀಮತಿ ಅಭಿನಂದನಾ ಕೋದಂಡ:
ಆಭಿನಂದನಾ ಅವರೊಬ್ಬ ಅತ್ತ್ಯುತ್ತಮ ಕಲಾವಿದೆ, ನೃತ್ಯಸಂಯೋಜಕಿ ಮತ್ತು ಕಲಾನಿರ್ದೇಶಕಿ. ಭಾರತದಲ್ಲಿ ಹೆಸರಾಂತ ಗುರುಗಳಾದ ಶ್ರೀ ಪಸುಮರ್ತಿ ವೆಂಕಟೇಶ್ವರ ಶರ್ಮ, ಶ್ರೀ ವೇದಾಂತಂ ರಾಘವ ಮತ್ತು ಪದ್ಮಭೂಷಣ ಡಾ. ವೆಂಪಟಿ ಚಿನ್ನ ಸತ್ಯಮ್ ಅವರೊಂದಿಗೆ ಕಲಿತಿದ್ದಾರೆ, ಕೆಲಸ ಮಾಡಿದ್ದಾರೆ. ಎಂಟು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಅವರದು. ದೂರದರ್ಶನ, ಈ-ಟಿವಿ, ಸ್ಟಾರ್ ಪ್ಲಸ್, ಜೆಮಿನಿ ಟಿವಿ ಮುಂತಾದ ಹಲವಾರು ಚಾನಲ್‍ಗಳಲ್ಲಿ ಇವರ ನೃತ್ಯಗಳು ಪ್ರದರ್ಶಿತವಾಗಿವೆ. ಭಾರತ, ಯುನೈಟೆಡ್ ಕಿಂಗ್‍ಡಮ್ ಮತ್ತು ಅಮೆರಿಕಗಳಲ್ಲಿ ಪ್ರದರ್ಶನ ಮತ್ತು ಕಮ್ಮಟಗಳನ್ನ ನಡೆಸಿಕೊಟ್ಟಿದ್ದಾರೆ. ತಮ್ಮ ಪ್ರತಿಭೆ ಮತ್ತು ಕೊಡುಗೆಗೆ ಹಲವಾರು ಬಾರಿ ಪ್ರಶಸ್ತಿ ಮತ್ತು ಬಿರುದು ಗಳಿಸಿದ್ದಾರೆ (Indian National Award for dance, Outstanding Young Person, Ugaadi puraskaar, Yuva Tarang puraskaar, Woman of the Future award to name a few). ದಿ. ಶ್ರೀ ಪಿ ವಿ ನರಸಿಂಹ ರಾವ್, ದಿ. ಶ್ರೀ ಅಬ್ದುಲ್ ಕಲಾಮ್ ಆಜಾದ್ ಮುಂತಾದವರಿಂದ ಸನ್ಮಾನಿತರಾಗಿದ್ದಾರೆ.

ಎಮ್ ಬಿ ಎ ಪದವೀಧರೆಯಾಗಿರುವ ಅಭಿನಂದನಾ ಪ್ರೆಸ್ಟನ್ನಿನ ಗುಜರಾತ್ ಹಿಂದು ಸೊಸೈಟಿಯ ಮಂದಿರದಲ್ಲಿ ಮುಖ್ಯಸ್ಥೆಯಾಗಿ ದಿನದ ಕೆಲಸ ಮಾಡುತ್ತಾರೆ. ಇವರ ಯಶಸ್ಸಿನ ಹಿಂದೆ ಪತಿ ಡಾ. ಪ್ರಫುಲ್ ಅವರ ಸಂಪೂರ್ಣ ಸಹಕಾರ ಇರುವುದು ವಿದಿತ.

ಕೈಬೆರಳಿಂದ ಎಣಿಸಬಹುದಾದಷ್ಟು ವಿದ್ಯಾರ್ಥಿಗಳೊಂದಿಗೆ ಅಭಿನಂದನಾ ಅವರ ಮನೆಯಲ್ಲಿ ಶುರುವಾದ ಈ ಶಾಲೆಯ ಸಸಿ ಈಗ ನೂರಕ್ಕೂ ಹೆಚ್ಚು ಮಕ್ಕಳೊಂದಿಗೆ ಬೆಳೆದು ಹೆಮ್ಮರವಾಗಿದೆ. ಹೊಸ ಪೀಳಿಗೆಯ ಯುವ ನಾಟ್ಯಗಾತಿಯರ ಪ್ರದರ್ಶನ ನೋಡಿದಾಗ ಪಾಲಕರ, ವಿದ್ಯಾರ್ಥಿಗಳ ಮತ್ತು ಗುರುವಿನ ಶ್ರಮ ಖಂಡಿತ ಫಲ ಕೊಡುತ್ತಿವೆ ಅನ್ನಿಸುತ್ತದೆ. ಕಾರಣಾಂತರಗಳಿಂದ ನಮಗಿರದ ಅವಕಾಶಗಳು ಮಕ್ಕಳಿಗೆ ದೊರೆತು, ಅವರ ಕನಸು ನನಸಾಗುವುದನ್ನು ನೋಡುವ ನಮ್ಮ ಆಸೆ ಪೂರೈಸುತ್ತಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಹಾರೈಸುವಾ.

- ಲಕ್ಷ್ಮೀನಾರಾಯಣ ಗುಡೂರ.

*********************************

ಗುರು ಶ್ರೀಮತಿ ಅಭಿನಂದನಾ ಕೋದಂಡ

********************************

ಶುಭ ಶುಕ್ರವಾರ (Good Friday) ಪ್ರಯುಕ್ತ ಪ್ರಸಾದ್ ನಂಜನಗೂಡು ಅವರು ರಚಿಸಿರುವ ಕವನ.

ಶುಭ ಶುಕ್ರವಾರ

ಮೇರಿ-ಜೋಸೆಫರ ಮುದ್ದು ಕುವರ
ಯೇಸು ಕ್ರಿಸ್ತ ನೀ ಅಜರಾಮರ

ಭುವಿಗೆ ಇಳಿದೆ ನೀ ಬೆತ್ಲೆಹೇಮಿನಲಿ
ನಡು ರಾತ್ರಿಯ ನೀರವದಿ
ಸತ್ಯವನರಸುತ ದೇಶವ ಸುತ್ತಿದೆ
ಸುವಾರ್ತೆ ನುಡಿದೆ ಸರಳದಲಿ

ತನ್ನಂತೆಯೇ ನೆರೆಯವರನ್ನು
ಪ್ರೀತಿಯಿಂದಲೇ ಕಾಣೆಂದೆ
ಒಂದು ಕೆನ್ನೆಗೆ ಹೊಡೆದವರಿಗೆ ನೀ
ಇನ್ನೊಂದು ಕೆನ್ನೆಯ ತೋರೆಂದೆ

ಶಿಲುಬೆಗೆ ಏರಿಸಿದವರಾ ಪಾಪವ
ಮನ್ನಿಸಿಬಿಡೆಂದ ಶಾಂತಿದೂತ
ಹಿಂಸಿಸಿದವರ ರೋಮ್ ನಗರವ
ಪುನೀತಗೊಳಿಸಿದ ಪವಾಡ ಪುರುಷ

ಕರ್ತನ ವಚನವ ಪಾಲನೆ ಮಾಡಲು
ಭಯ ಆಮಿಷಗಳು ಬೇಕಿಲ್ಲ
ಕ್ರಿಸ್ತನ ಪ್ರೀತಿ ಸಂದೇಶವ ಸಾರಲು
ವಿದ್ಯಾ-ವೈದ್ಯ ಸೇವೆಗಿಂತಿಲ್ಲಾ !

- ಪ್ರಸಾದ್ ನಂಜನಗೂಡು

*******************************

ಒಂದು ಬಸ್ಸಿನ ಕಥೆ

ನಮಸ್ಕಾರ  ಅನಿವಾಸಿ ಬಳಗಕ್ಕೆ. ಎಲ್ಲರಿಗೂ ಹೊಸ ಸಂವತ್ಸರದ , ಚೈತ್ರಮಾಸದ ಹಾರ್ದಿಕ ಶುಭಾಶಯಗಳು. 
“ ದಿನಾ ಸಮಯಕ್ಕೆ ಬರುವ ಬಸ್ಸು ಹತ್ತು ನಿಮಿಷ ತಡ ಮಾಡಿದರೆ ಅಲ್ಲೊಂದು ಕಥೆ ಹುಟ್ಟುತ್ತದೆ” ಎನ್ನುತ್ತಾರೆ ನಮ್ಮ ನೆಚ್ಚಿನ ಕಥೆಗಾರ ಕಾಯ್ಕಿಣಿಯವರು. ಹೌದಲ್ಲವೇ ಕಥೆಯೊಂದು ಹುಟ್ಟಲು ಅದೆಷ್ಟು ಕಾರಣಗಳು?! ಅಂತೆಯೇ ನೀವೆಲ್ಲೋ ನೋಡಿದ, ಒಡನಾಡಿದ ಜೀವಗಳೂ ಅಚಾನಕ್ ಆಗಿ ಪಾತ್ರಗಳಾಗಿ ನಿಮ್ಮ ಕಥೆಯಲ್ಲಿ ನುಸುಳಿ ಸೋಜಿಗವನ್ನುಂಟು ಮಾಡುತ್ತವೆ ಎನ್ನುತ್ತಾರವರು.
ಅಂಥದೇ ಒಂದು ಹಳೆಯ ಕಥೆ ನಿಮ್ಮ ಓದಿಗಾಗಿ. ಓದಿ..ಹೇಗನ್ನಿಸಿತು ಹೇಳಿ.

~ ಸಂಪಾದಕಿ.

ಹಿರೇಕೆರೂರ ಬಸ್ಸು

ನಕಾಶೆಯಲ್ಲಿ ಹಗಲು ಹೊತ್ತಿನಲ್ಲಿ ದೀಪ ಹಚ್ಚಿಕೊಂಡು ಹುಡುಕಿದರೂ ಸಿಗದ ಒಂದು ಪುಟ್ಟ ಗ್ರಾಮ ಬಲಕುಂದಿ. ನಕಾಶೆಯಲ್ಲಿ ಅದರ ಅಸ್ತಿತ್ವ ಇರದಿದ್ದರೇನಂತೆ? ನಾರಣಪ್ಪ, ಹನುಮಪ್ಪ , ಈರಭದ್ರ, ದ್ಯಾಮವ್ವ-ದುರ್ಗವ್ವ ಇತ್ಯಾದಿ ದೇವ -ದೇವತೆಗಳ ಸಮೇತ ಬ್ರಾಂಬರು , ಶೆಟ್ಟರು, ಗೌಡರು, ಅಗಸರು , ಬ್ಯಾಗಾರು, ಮ್ಯಾಲಿನ ಓಣಿ, ಕೆಳಗಿನ ಓಣಿ , ಸಿನೀರ ಭಾವಿ, ಸಾದಾ ಭಾವಿ ,ಹಳ್ಳ , ದನಕರು, ಕೋಳಿ-ನಾಯಿ, ಜಗಳ-ಬಡಿದಾಟ, ಪ್ರೀತಿ-ಪ್ರೇಮ, ಹಾದರ…ಮಾನವ ಲೋಕದ ಸಕಲ ಸಲ್ಲಕ್ಷಣಗಳಿಂದ ಜೀವಂತವಿದ್ದ ಹಳ್ಳಿಯದು. 

ಅವತ್ತೊಂದು ದಿನ ರವಿವಾರ. ಎಂದಿನಂತೆ ಬಸ್ ಸ್ಟ್ಯಾಂಡಿನ ತನ್ನ ಗೂಡಂಗಡಿಯ  ಬಾಗಿಲು ತೆರದು, ಈಚಲು ಬಾರಿಗೆ ತಗೊಂಡು ಅಂಗಡಿ ಮುಂದ ಪರ ಪರ ಕಸ ಬಳಿದು, ನಾಲಕ್ಕು ತಂಬಿಗೆ ನೀರು ಹೊಡೆದು ಅಂಗಡಿ ಮೂಲ್ಯಾಗಿನ ಗ್ವಾಡಿಗೆ ಅಂಟಿಸಿದ್ದ ಬುತ್ತಿ ಬಸಪ್ಪನ ಫೋಟೊಕ್ಕೊಂದಿಷ್ಟು ಈಬತ್ತಿ ಬಳದು ‘ಸಿವ ಸಿವ’ ಅಂತ ಗುಬ್ಬವ್ವ ಕೈ ಮುಗಿತಿದ್ದಾಗ “ಹಿರೇಕೆರೂರ ಬಸ್ ಹೋತೇನ ಬೇ ಯತ್ತಿ” ಅಂತ ದನಿ ಕೇಳಿ ಈ ಕಡೆ ಹೊಳ್ಳಿ ನೋಡಿದಳು. ಆ ಪ್ರಶ್ನೆಗೆಉತ್ತರ  ಕೊಡೂದು ತನ್ನ  ಕೆಲಸವೇ ಅಲ್ಲ  ಅನ್ನೂಹಂಗ ‘ಅಯ್ಯ ಮುತ್ತಪ್ಪಾ ನೀನಾ? ಇವತ್ತ್ಯಾಕಲೇ ಮುಂಜಮುಂಜಾನೆ ಬ್ಯಾಗ್ ಹಾಕ್ಕೊಂಡ ತಯಾರಾಗಿಬಂದಿ? ಆಯಿತವಾರ ಸಾಲಿ-ಕಾಲೇಜು ಸೂಟಿ ಅಂತ ಮರತ ಹೋದ್ಯಾ ಏನು?’  ಅಂತ  ಕೇಳಿದಳು.  ‘ಏಯ್ ಅದ್ಹೆಂಗ ಮರೀತೈತಿ ಬೇ ,  ನೀ ಒಂದ s  ಇವತ್ತ ಬ್ಯಾಂಕಿನ exam ಐತೆ. ಅದಕ್ಕs ಹೊಂಟೀನಿ. 10:30 ಗೆ ಚಾಲೂ ಆಕ್ಕೈತಿ’ ಅಂದ.  ‘ಹೀಂಗs, ಹಂಗಾರ ಆಫೀಸರ್ ಆಗಾವಾ ಬಿಡಪಾ. ಒಂದೀಟುನಮಗೂ ಏನರೇ ಕಡಿಮಿ ಬಡ್ಡಿಗೆ ಸಾಲಾ-ಗೀಲಾ ಕೊಡಸೋ ಯಪ್ಪಾ. ದರಾ ಮಳಿಗಾಲದಾಗ ಮನಿ ಸೋರಿ ಮನ್ಯಾಗ ಇಟ್ಟ ಮಾಲು, ಕಾಳು-ಕಡಿ ಹಾಳಆಗಾಕ್ಹತ್ತಾವ. ನೀ ಏನರೇ ಹಂಗ ಸಾಲಾ ಕೊಡಿಸಿದೆಂದ್ರ ಸಿಮಿಟ್ ಗಾರೀನೇ ಹಾಕಸತೀನೋ ಯಪ್ಪಾ ನಿನ್ನ ಹೆಸರಲೇ’…. ಬಸ್ಸು ಹೋತೋ ಇಲ್ಲೋಹೇಳೂದ ಬಿಟ್ಟು ತನ್ನದೇ ಸಮಸ್ಯೆಗಳ ಸಾಗರದಾಗ ಮುಳುಗಿ ಹೋಗಿದ್ಲು ಅಕಿ. ‘ಬಸ್ ಹೋಗಿದ್ರ ನಡಕೊಂಡ ಹೊಂಟ ಬಿಡತೀನೀ ಬೇ ..ಇಲ್ಲಕಂದ್ರಒಳಗ ಬಿಡಂಗಿಲ್ಲ ಪೇಪರ್ ಬರಿಯಾಕ’  ಅಂದ ಮುತ್ತಪ್ಪನ ಮಾತಿಗೆ ‘ಅಯ್ಯ ಸಿವನ, ಈ ಹಿರೇಕೆರೂರ ಬಸ್ಸು ಎಂದರs  ಟೈಂ ಗೆ ಬಂದೈತೇನೋ ಯಪ್ಪಾ? 8 ರ  ಬಸ್ಸು ಹೆಸರಿಗಷ್ಟೇ. ಹತ್ತು  ವರಸ ಆತು,  ನಿಮ್ಮಾಂವ ಹೋದಾಗಿನಿಂದ ಈ ಅಂಗಡ್ಯಾಗ ಕುಂಡ್ರಾಕಂತು ..ಒಂದಿನಾ ಅರೇ 9 ಕ್ಕಿಂತ ಮದಲಹೋಗಿಲ್ಲ ತಗಿ ತಮ್ಮಾ’ ಅಂದು ತನ್ನ ಅಂಗಡಿಯ ಗುಟ್ಕಾ ಪ್ಯಾಕೆಟ್ ಗಳ ಸರವನ್ನು ತೂಗು ಹಾಕೂದರಾಗ, ಪಚ್ಚ ಬಾಳೆಹಣ್ಣುಗಳನ್ನು ಜೋಡಿಸಿಡೂದರಾಗಮಗ್ನ ಆದ್ಲು. ಇರುವ ಎರಡು ಗೇಣಿನ ಅವಳ ಅಂಗಡ್ಯಾಗ ಏನೇನಿಲ್ಲ? ಸುಂಠಿ ಪೆಪ್ಪರ್ ಮಿಂಟು, ಲಿಂಬಿಹುಳಿ, ಅಲೇಪಾಕು, ಸಿಹಿ ಬಿಸ್ಕೀಟು, ಖಾರಾಬಿಸ್ಕೀಟು, ಸಣ್ಣಸಣ್ಣ  ಸಿಹಿ ಬಡೇಸೋಪಿನ ಪ್ಯಾಕೆಟ್ ಗಳು, ಚಕ್ಕಲಿ,ಪಾಪಡಿ, ನಿಂಬು ಸೋಡಾ, ವೀಳ್ಯದೆಲಿ, ಅಡಿಕಿ, ಸುಣ್ಣ ಅಂತ ಪಾನಪಟ್ಟಿಗೆ ಬೇಕಾಗೂಸಾಮಾನುಗಳು, ತಂಬಾಕು, ಗಣೇಶ ಬೀಡಿ, ವ್ಹಿಲ್ಸ್ ಫ್ಲೇಕ್ ನಂಥ ಸಿಗರೇಟ್ ಪ್ಯಾಕ್ ಗಳು, ಕಡ್ಡಿಪೆಟ್ಟಿಗೆಗಳು,  ಹಿಂದಿನ ದಿನದ ವರ್ತಮಾನ ಪತ್ರಿಕೆ, ಒಂದೆರಡು ಹಳೆಯ ರಾಗಸಂಗಮಗಳು,  ಒಂದ್ನಾಕು ಥರದ ಸೀಟಿ-ಪೀಪೀಯಂಥ ಮಕ್ಕಳ ಆಟಿಕೆಗಳು, ಊದುಬತ್ತಿ, ಕಲ್ಲುಸಕ್ಕರೆ,  ಟೆಂಗಿನಕಾಯಿಗಳು..

ಅಲ್ಲಿರುವ ಮಸೀದಿಗೆ, ಹೊಸೂರಿನ ಹಣಮಪ್ಪಗ ಗುರುವಾರ, ಶನಿವಾರ ಸುತ್ತಮುತ್ತಲ  ಊರುಗಳಿಂದ ಬರುವ ಜನಕ್ಕೆಲ್ಲ ಈಕಿನೇ ಊದುಬತ್ತಿ-ಸಕ್ಕರೆ-ಕಾಯಿ ಸರಬರಾಜು ಮಾಡಾಕಿ.ಮೋಟರ್ ಸೈಕಲ್ ಮೇಲೆ ಫುರ್ ಅಂತ ಓಡಾಡೋ ಪಡ್ಡೆ ಹುಡುಗರಿಗೆ, ಕಾರು-ಜೀಪಿನಾಗ ಓಡಾಡೂ ದೊಡ್ಡಸಾಹೇಬರುಗಳಿಗೆ ಇವಳಂಗಡಿಯ ಪಾನಪಟ್ಟಿ, ಬೀಡಿ  ಸಿಗರೇಟ್ ಗಾಗಿ ಒಂದು ಬ್ರೇಕ್ ತಗೋನೇಬೇಕು.

 ಬಸ್ ನ ದಾರಿ ಕಾಯಕೋತ ಕೈಯಾಗಿನ ಪುಸ್ತಕ ತಗದು ಮ್ಯಾಲ ಕೆಳಗ ಏನೋ ಲೆಕ್ಕಾ ಮಾಡಕೋತ ಅಲ್ಲೇ ಇದ್ದ ಕಲ್ಲಬಂಡಿಮ್ಯಾಲ ಕೂತ ಮುತ್ತಪ್ಪ. ಬಡಿಗ್ಯಾರ ಈರಪ್ಪನ ಮಗನಾದ ಈ ಮುತ್ತ ಸಣ್ಣತನದಿಂದಲೂ ಓದಿನಾಗ ಮುಂದು. ಮನ್ಯಾಗೂ ಅಷ್ಟೇ ..ಜೋಡ ಕೊಡ ಹೊತ್ತು ನೀರು ತರುವಅವ್ವನಿಗೂ, ಬಡಿಗತನದ ಕೆಲಸದಲ್ಲಿ ಅಪ್ಪನಿಗೂ ತನ್ನಿಂದಾದಷ್ಟು ಸಹಾಯ ಕೇಳದೇ ಮಾಡುವವ. ಫಸ್ಟ್ ಕ್ಲಾಸಿನಾಗ ಮ್ಯಾಟ್ರಿಕ್ ಪರೀಕ್ಷಾ ಪಾಸ್ ಆಗಿ ವಿಜಯ ಮಹಾಂತೇಶ ಕಾಲೇಜಿನಾಗ ಕಾಮರ್ಸ್ ಗೆ ಎಡ್ಮಿಶನ್ ಮಾಡಿಸಿದ್ದ. ಹುಡುಗನ ಚುರುಕುತನ ಕಂಡ ಹೈಸ್ಕೂಲಿನ ಹಾದಿಮನಿ ಮಾಸ್ತರು ಹೆಂಗಓದಬೇಕು, ಫ್ರೀಶಿಪ್, ಸ್ಕಾಲರ್ ಶಿಪ್ ಗಳಿಗೆಲ್ಲ ಅರ್ಜಿ ಹೆಂಗ ತುಂಬಬೇಕು, B.com ಮಾಡಕೋತನs ಬ್ಯಾಂಕಿನ ಪರೀಕ್ಷಾಕ್ಕ ಹೆಂಗ ತಯಾರಿಮಾಡಕೋಬೇಕು ಇತ್ಯಾದಿಯಾಗಿ ಎಲ್ಲ ಸೂಕ್ತ ಮಾರ್ಗದರ್ಶನ, ಆಗಾಗ ಒಂದಿಷ್ಟು ರೊಕ್ಕದ ಸಹಾಯ ಎಲ್ಲ ಮಾಡುತ್ತಿದ್ದರು. ‘ಗುಣಕ್ಕೆ ಮತ್ಸರವೇ?’ ಅನ್ನೂಹಂಗ ಯೋಗ್ಯತೆಯಿದ್ದ ಎಲ್ಲ ಮಕ್ಕಳ ಬಗ್ಗೆಯೂ ಅವರಿಗೆ ಅಷ್ಟೇ ಕಾಳಜಿ. ‘ಹಿಂದಿನ ದಿನವೇ ಬೇಕಾರ ಇಲ್ಲೇ  ಬಂದು ಮನ್ಯಾಗಿರು..ಅಲ್ಲೆ ಹಳ್ಳ್ಯಾಗಲೈಟೇ ಇರಂಗಿಲ್ಲ  ಓದಾಕ’ ಅಂತ ಇಲಕಲ್ಲಿನಲ್ಲಿರುವ ತಮ್ಮ ಮನೆಗೆ ಬಂದು ಇರುವಂತೆ ಮುತ್ತಪ್ಪನನ್ನು ಕರೆದಿದ್ದರೂ ಹಾಗೆಲ್ಲ ಹೋಗಿ ಅವರಿಗೆ, ಅವರಮನೆಯವರಿಗೆ ಒಜ್ಜೆ ಆಗಬಾರದು ಅನ್ನೋದು ಮುತ್ತನ ಸಭ್ಯತೆ.

‘ಒಂದೀಟು ಕೈ ಕೊಡ ಬೇ ಇಳಸಾಕ’  ವೀಳ್ಯದೆಲೆಯ ಬುಟ್ಟಿಯನ್ನು ಹೊರಲಾರದೇ ಹೊತಗೊಂಡು ಬಂದ ಪಾತಜ್ಜಿ ಗುಬ್ಬವ್ವನ್ನ ಕರದ್ಲು.’ಅಯ್ಯ, ಒಂದ್ನಾಕುಪಿಂಡಿ ಕಮ್ಮಿ ಹೊತಗೊಂಡ ಬರಬೇಕಿಲ್ಲs,  ಈ ವಯಸ್ಸನಾಗ ನಡ ಗಿಡ ಮುರದ್ರ ಯಾರ ದಿಕ್ಕ ಅದಾರ ನಿಂಗ? ಇದ್ದೊಬ್ಬ ಮಗಳನ್ನ ದೂರ ಕೊಟ್ಟ ಕುಂತಿ’ ಅಂತ ಬಯ್ಯಕೋತನ ಕಾಳಜಿ ತೋರಸಿ ಕೈ ಹಿಡದು ಬುಟ್ಟಿ ಇಳುಹಾಕ ನೆರವಾದ್ಲು. ‘ಅಂದ ಹಂಗ ಏಟರಾಗ ಗಿರಿಜಿಗೆ ಈಗ? ಆರಾಂ ಅದಾಳ ಅಕಿ? ಗಂಡ,ಅತ್ತಿ ಭೇಷ್ ನೋಡಕೋಂತಾರ?’ಎಂದು ಕೇಳಿ ‘ ಇಷ್ಟ ಯಾಕ  ಹೊತಗೊಂಡ ಹೊಂಟಿ? ಇವತ್ತೇನ ಸಂತಿನೂ ಇಲ್ಲ’  ಎಂದು ಕೇಳಿದಳು. ಜೋಶಿಗಲ್ಲಿ ಜಾಗೀರದಾರರ  ಮನ್ಯಾಗ ಲಗ್ನ ಐತಿ. ಅವರ ಎರಡೂ ಹೆಣ್ಣಮಕ್ಕಳದೂ ಒಮ್ಮೇ ಲಗ್ನ ಇಟಗೊಂಡಾರು. ಇವತ್ತ ದೇವರ ಕಾರ್ಯ ಐತಿ ಬೇ. ಎರಡ ಸಾವಿರ ಎಲಿ ಕೇಳ್ಯಾರು. ಅದಕ್ಕs  ಹೊಂಟೀನಿ. ಆ ಜಾಗೀರದಾರರು ದೊಡ್ಡ ಮನಷಾರು. ‘ತಾಜಾ ಹಸರ ಎಲಿ ತಂದುಕೊಡು. ಛಲೋ ಕಾರ್ಯ. ನಾ ಏನ ಚೌಕಾಸಿ ಮಾಡಂಗಿಲ್ಲ. ಹಂಗs ಬಳಿ ಇಟಗೊಂಡು, ಊಟಾ ಮಾಡಿ, ಸೀರಿ ಉಟಗೊಂಡು ಹೋಗು’ ಅಂದಾಳ ಯವ್ವಾ ಆ ಪುಸ್ಪಕ್ಕ. ‘ಆತಯವ್ವಾ ತರತೀನಿ.ಒಂದು ಮಾತು ಸೀರಿ ಜರದ ಅಂಚಿಂದು, ಹಸರದು ಕೊಟ್ರ..ನನ್ನ ಮಗಳು ಇನ್ನೊಂದು ತಿಂಗಳದಾಗ ಹಡ್ಯಾಕ ಬರಾಕ್ಹತ್ತಾಳು. ಅಕಿಗೆಅದನ್ನೇ ಉಡಿಅಕ್ಕಿ ಹಾಕತೀನಿ’ ಅಂದಿದ್ದಕ್ಕ , ನಕ್ಕೋತ ‘ಆಗಲೇಳು, ಛಲೋ ಸೀರಿನೇ ಕೊಡತೀನಿ ನಿನ್ನ ಮಗಳು ಉಡೋ ಅಂಥಾದ್ದು’ ಅಂದಾಳವ್ವ. ಅಕಿನ್ನ ಹೊಟ್ಟಿ ತಣ್ಣಗಿರಲಿ. ಬಸ್ಸೇನೂ ಹೋಗಿಲ್ಲ ಹೌದಿಲ್ಲ ಬೇ..’ ಅಂತ ಕೇಳಿದ್ಲು. ‘ ನಾ ಅಂಗಡಿ ಕದಾ ತಗದು ತಾಸೊಪ್ಪತ್ತು ಆದಮ್ಯಾಗs ಬರತೈತಿಅದು.ಆ ಮುತ್ತಪ್ಪನೂ ಇಲ್ಲೇ ಅಡ್ಡಾಡಕ್ಹತ್ತಾನು..ನೋಡಲ್ಲೆ.’ ಅಂದು ಎಲೆಗಳ ತುದಿ ಕತ್ತರಿಸಿ ನೀರು ತುಂಬಿದ ಪ್ಲಾಸ್ಟಿಕ್ ಬುಟ್ಟಿಯೊಳಗ ಇಟ್ಟು , ಅಡಕೊತ್ತಿನಿಂದ ಅಡಿಕೆ ಕತ್ತರಿಸತೊಡಗಿದಳು.

 ಮದುವೆಯಾಗಿ ಹದಿನೈದು ವರುಷವಾದರೂ ಮಕ್ಕಳಾಗದ ಪಾರೋತವ್ವ, ಪಾತಜ್ಜಿ  ಸಂತಾನಕ್ಕಾಗಿ ಹರಸಿಕೊಳ್ಳದ ದೈವಗಳಿರಲಿಲ್ಲ; ಮಾಡಲಾಗದನಾಟಿವೈದ್ಯವಿರಲಿಲ್ಲ. ಅಂತೂ ದೈವ ಕಣ್ತೆರೆದು ಅಕಿ ಬಸುರಿ ಅಂತ ತಿಳಿಯೂದರಾಗ ನಾಟಕದ ಖಯಾಲಿಯಿಂದ ಪಾತ್ರಕ್ಕಂತ ಊರೂರು ಅಲೆಯುತ್ತಿದ್ದಅವಳ ಗಂಡ ನಿಂಗಪ್ಪ ಏನಾಯ್ತೋ ಗೊತ್ತಿಲ್ಲ  ಊರಿಗೆ ಮರಳಲೇ ಇಲ್ಲ.  ಯಾರೋ ಪಾತರದವಳ ಬೆನ್ನು ಹತ್ತಿ ಹಾಳಾದ ಅಂತಲೂ, ಏನೋ ಬರಬಾರದರೋಗ ಬಂದು ಸತ್ತ ಅಂತಲೂ, ಮಕ್ಕಳಿಲ್ಲದ ಗೊಡ್ಡಿ ಅಂತ ಇಕಿನ್ನ ಬಿಟ್ಟು ಬೇರೊಂದು ಸಂಸಾರ ಕಟಗೊಂಡು ದೂರದೂರಿನಾಗ ಇದ್ದಾನೆಂತಲೂ.. ಜನತಲೆಗೊಂದರಂತೆ ಆಡಿ ಅಂತೂ ಕೊನೆಗೆ ಮೌನವಾದರು. ಹೀಗಾಗಿ ಪಾರೋತಿಗೆ ಮಗಳು ಗಿರಿಜೆಯೇ ಸರ್ವಸ್ವ. ಗುಣ, ರೂಪದಲ್ಲಿ ಅಪ್ಪಟಬಂಗಾರದಂತಿರುವ ಅಕಿಯನ್ನು ಮಹಾಂತೇಶ ತಾನಾಗಿಯೇ ಕೇಳಿಕೊಂಡು ಬಂದು ಮದುವೆಯಾದ. ದೂರದ ಗೋಕಾಕ್ ನ ಸಕ್ಕರೆ ಫ್ಯಾಕ್ಟರಿಯಲ್ಲಿ ಅವನಕೆಲಸ. ತನ್ನ ಮನೆಯ ಹಿತ್ತಲು, ಅಂಗಳದಲ್ಲೇ ವೀಳ್ಯದೆಲೆಯ ಬಳ್ಳಿಗಳನ್ನು ಹಬ್ಬಿಸಿರುವ ಪಾರೋತೆವ್ವ ಹಳ್ಳಿಯ ಯಾರ ಮನೆಯಲ್ಲೇಮಂಗಳಕಾರ್ಯಗಳಾಗಲಿ, ಬಾಣಂತನವಾಗಲಿ ಹೋಗಿ ಹಸಿರಾದ ನಳನಳಿಸೋ ವೀಳ್ಯದೆಲೆಗಳನ್ನು ಒಂದು ತುಂಡು ಅಡಿಕೆಯಿಟ್ಟು ಬಾಯಿ ತುಂಬ ಹರಸಿಕೊಟ್ಟು ಬರುತ್ತಾಳೆ. ಉಳಿದಂತೆ ಗುಬ್ಬವ್ವನಂಥಾ ಸಣ್ಣ ಗೂಡಂಗಡಿಗಳಿಗೆ, ಇಲಕಲ್, ಹನುಮಸಾಗರದ ಸಂತೆಗಳಿಗೆ ಹೋಗಿ ಮಾರಾಟ ಮಾಡಿ ಬರುತ್ತಾಳೆ. ಈಗ ಮಗಳ ಚೊಚ್ಚಲ ಬಾಣಂತನದ ಸಂಭ್ರಮದಲ್ಲಿದ್ದಾಳೆ.

‘ ಯಕ್ಕಾ, ಈ ಸೂಟಕೇಸ್ ನೋಡತಿರಬೇ..ಇನ್ನೂ ಎರಡು ಬ್ಯಾಗ್ ಅದಾವು ಗೌರಕ್ಕಂದು. ತಗೊಂಡ ಬರತೀನಿ’ ಅಂತ ಹೇಳಿದ ಮಾದಪ್ಪನ ಕಡೆ ನೋಡಿದಗುಬ್ಬವ್ವ ‘ಹೌದಾ? ಊರಿಗೆ ಹೊಂಟಾಳೇನ ಇವತ್ತ? ಭಾಳ ಸಾಮಾನು ಮಾಡಕೊಂಡಾಳಲ್ಲಾ? ಕೂಸಿನ ಕಟಗೊಂಡು ಹೆಂಗ ಒಯ್ತಾಳೋ?’ ಅಂತಸ್ವಗತದಲ್ಲೇ ಗೊಣಗುತ್ತ ಕಾಲಾಗಿನ ಸೂಟಕೇಸ್ ಸರಿಸಿ ಬಾಜೂಕಿಡೂದರಾಗ ಒಂದೂವರೆ ವರುಷದ ಮಗನ ಜೋಡಿ ಗೋಣಿಚೀಲದಂಥ ವ್ಯಾನಿಟಿಬ್ಯಾಗ್ ಹೊತಗೊಂಡು ಗೌರಿ ಅಲ್ಲಿಗೆ ಬಂದ್ಲು. ಜೋಡಿಗೆ ತಂಗ್ಯಂದ್ರು, ಅವ್ವ-ಅಪ್ಪನೂ ಇದ್ರು.  ‘ಅಯ್ಯ, ಇಷ್ಟ ಜಲ್ದಿ ಹೊಂಟ್ಯಾ? ಇನ್ನೊಂದ ನಾಕದಿನಾಇರಬೇಕ ಬ್ಯಾಡ’ ಅಂದ ಗುಬ್ಬವ್ವನಿಗೆ – ‘ಅಯ್ಯ, ಅಕಿನ್ನ ಗಂಡ ಇಷ್ಟ ದಿನಾ ಬಿಟ್ಟದ್ದs ಹೆಚ್ಚು. ದಿನಾ ಬೆಳಗಾದ್ರ ಫೋನ್ ಬರೂದು ಗೌಡ್ರ ಮನೀಗೆ’  ಉತ್ತರ ಕೊಟ್ಟ ದೇವಕ್ಕನ ದನಿಯಲ್ಲಿ ಮಗಳನ್ನು ಪ್ರೀತಿಸುವ ಅಳಿಯನ ಬಗ್ಗೆ ಅಭಿಮಾನ ಎದ್ದು ಕಾಣುತ್ತಿತ್ತು. ‘ಅಲ್ಲ ಯವ್ವಾ, ಇವತ್ತ ಆಯಿತವಾರ. ಇವತ್ತ್ಯಾಕ ಕಳಸಾಕತ್ತೀ ಗೌರಕ್ಕನ್ನ? ಆಯಿತವಾರ ತಾಯಿ-ಮಗಳು ಅಗಲಬಾರದು’ ಅಂದ್ಲು ಗುಬ್ಬವ್ವ.  ‘ಹೌದವಾ, ಆದ್ರ ಈಗಿನ ಕಾಲದ ಹುಡುಗೂರುಅದನ್ನೆಲ್ಲ ಎಲ್ಲಿ ನಂಬತಾರ? ಅಲ್ಲದ s   ನೌಕರದಾರ ಮಂದಿ ನೋಡು. ನಾಳೆ ಸ್ವಾಮವಾರದಿಂದ ಈಕಿನೂ ಕಾಲೇಜಿಗೆ ಹೋಗಬೇಕು ಕೆಲಸಕ್ಕ. ಇನ್ನಅಕಿನ್ನ ಗಂಡಗೂ ಆಯಿತವಾರ ಅಂದ್ರ ಆಫೀಸ್ ಇರಂಗಿಲ್ಲ. ಬಸ್ ಸ್ಟ್ಯಾಂಡಿಗೆ ಬಂದು ಕರಕೊಂಡು ಹೋಗಲಿಕ್ಕೆ ಅನುಕೂಲ ಆಗತದ ನೋಡು. ಅದಕ್ಕs  ಮೊನ್ನೆನೇ ಪ್ರಯಾಣಕ್ಕ ಛಲೋ ದಿವಸ ಅಂತ ಪ್ರಸ್ಥಾನಗಂಟು ತಗದು ತುಳಸಿಕಟ್ಟ್ಯಾಗ ಇಟ್ಟಿದ್ದೆ ನೋಡು.’ ಅಂದ ದೇವಕ್ಕ ಮಗಳೆಡೆ ತಿರುಗಿ, ಅಂದಹಂಗಆ ಪ್ರಸ್ಥಾನಗಂಟು ಇಟಗೊಂಡಿ ಇಲ್ಲೊ?  ಆ ಕೂಸಿನ half-sweater ಅಲ್ಲೇ ಶೇಂಗಾ ಚೀಲದ ಮ್ಯಾಲಿತ್ತು.ತಗೊಂಡ್ಯೋ ಇಲ್ಲೋ’ ಅಂತ ಕಾಳಜಿ ಶುರುಮಾಡಿದ್ಲು. ‘ ಸಣ್ಣ ಡಬ್ಬ್ಯಾಗ ಇಡ್ಲಿಗೆ ತುಪ್ಪ ಹಚ್ಚಿಟ್ಟೀನಿ ಆ ಕೂಸಿನ ಸಲುವಾಗಿ. ಪಾರ್ಲೆ ಜಿ ಬಿಸ್ಕೀಟೂ ಅವ. ನಿಂಗ ಅವಲಕ್ಕಿ, ಖೊಬ್ರಿವಡಿ ಹಾಕೀನಿ.ಬಸ್ನಾಗ ಮಂದಿ ಇರತಾರ ಹೆಂಗ ತಿನ್ನೂದಂತ  ಉಪವಾಸ ಕೂಡಬ್ಯಾಡ. ಹಸಿವಾದ್ರ ತಿನ್ನು..ಅದಕ್ಕೂ ತಿನಸು. ಅಮ್ಮ-ಅಪ್ಪ-ತಂಗ್ಯಂದಿರ ಅಂತ:ಕರಣಕ್ಕೆಮೂಕವಾಗಿದ್ದ ಗೌರಿಗೆ ತೌರ ಬಿಟ್ಟು ಹೊರಡುವ ದು:ಖ. ಕಣ್ಣಂಚಲ್ಲಿ ಇಳಿಯಲು ತಯಾರಾಗಿ ನಿಂತಿದ್ದ ಗಂಗಾ-ಭಾಗೀರಥಿ. “ಯವ್ವಾ ದೇವಕ್ಕಾ,  ಏಟಇದ್ರೂ ಹೆಣಮಕ್ಕಳು ಬ್ಯಾರೆಯವರ ಸ್ವತ್ತs  ನೋಡು. ಆ ಸಿವಾ ಒಂದು ಗಣಮಗಾ ಕೊಡಲಿಲ್ಲ ನೋಡು ನಿನಗ’ ಅಂದ ಗುಬ್ಬವ್ವ ಮತ್ತೆ ತನಗೆ ತಾನೇ ‘ ಇರಲಿ ತಗಿ, ಎದಿ ಸೀಳಿದ್ರ ಎರಡಕ್ಷರ ಇರಲಾರದ ಅಡ್ನಾಡಿ ಗಂಡಮಕ್ಕಳಿಗಿಂತ ಇದ್ಯಾ,ಬುದ್ಧಿ, ನಯಾ-ನಾಜೂಕು ಎಲ್ಲಾ ಇದ್ದ ಇಂಥಾ ಹೆಣಮಕ್ಕಳ ಎಷ್ಷೋಬೇಸಿ ಬೇ ಯವ್ವಾ’ ಅಂದು ‘ಅಂದ್ಹಂಗ ಈಕಿ ಸಾಲಿ ಕಲಸಾಕ ಹೋದ್ರ ಕೂಸಿನ್ನ ಯಾರು ನೋಡಕೊಂತಾರು?’ ಅಂತ ತೆಹಕೀಕಾತ್ ಶುರು ಮಾಡಿದ್ಲು. ‘ಅಕಿನ ಅತ್ತಿ ಅದಾರವ್ವಾ. ಮೊಮ್ಮಗ ಅಂದ್ರ ಜೀವಾ. ಅವರ ಮನ್ಯಾಗೂ ಮದಲನೇ ಕೂಸು ನೋಡು. ಅಂಗೈಯಾಗ ಇಟಗೊಂಡಾರ. ಈಕಿ ಸಾಲಿಗೆಹೋಗಿ ಬರೂತನಾ ಏನು ಬಂದ ಮ್ಯಾಲೂ ಅದರ ದೇಖರೇಕಿ ಎಲ್ಲಾ ಅವರ ಅಜ್ಜೀದೇ..’ಮಗಳು ಒಳ್ಳೆಯ ಮನೆಗೆ ಸೇರಿ ಒಳ್ಳೆಯ ಜನರ ನಡುವೆ ಇರುವಸಮಾಧಾನ ಆ ತಾಯಿಗೆ. 

ಅಷ್ಟರಲ್ಲೇ ಎದುರಿಗಿನ ‘ ಸಂಗಮೇಶ್ವರ ಟೀ ಕ್ಲಬ್’ ನಿಂದ ಹೊರಬಂದ ನಾಲ್ಕು ಜನರ ಗುಂಪು ಕಂಡು ‘ ನೀವೆಲ್ಲ ಅತ್ತಾಗ ಸರೀರಿ ಬೇ. ಗೌರಕ್ಕ ಬೇಕಾರಕುಂದರಲಿ ಕೂಸಿನ್ನ ತಗೊಂಡು. ಗಿರಾಕಿ ಬರತಾವು’ ಅಂತ ಅಷ್ಟೊತ್ತು ಆಪ್ತವಾಗಿ ಮಾತಾಡುತ್ತಿದ್ದವಳು ಈಗ ಯಾವ ಮುಲಾಜಿಲ್ಲದೆಯೂ ಎಲ್ಲರನ್ನೂತನ್ನಂಗಡಿಯ ಕಟ್ಟೆಯ ಮೇಲಿಂದ ಎಬ್ಬಿಸಿದಳು.

ಹಂಗ ನೋಡಿದ್ರ ಬಸ್ಸು ನಿಲ್ಲತಾವು ಅಂತ ಬಸ್ ಸ್ಟ್ಯಾಂಡ್ ಅನ್ನಬೇಕೇ ಹೊರತು ಅಲ್ಲಿ ಮಾಮೂಲು ಬಸ್ ಸ್ಟ್ಯಾಂಡಿನ ಯಾವ ಕುರುಹುಗಳೂ ಇರಲಿಲ್ಲ. ಊದ್ದಕ್ಕೂ ಹಾಸಿದ ಡಾಂಬರ್ ರಸ್ತೆ, ರಸ್ತೆ ಆಚೆ ಬದಿ ‘ ಸಂಗಮೇಶ್ವರ ಟೀ ಕ್ಲಬ್ಬು’.. ‘ಏರಿ ಮೇಲೆ ಏರಿ ಮೇಲೆಕೆಳಗೆ ಹಾರಿ ಹಕ್ಕಿ ಬಂದು ಕುಂತೈತಲ್ಲೋ ಓಮಾವಾ’ ಅಂತ ಯಾವಾಗಲೂ ನಡೆಯುತ್ತಿದ್ದ ಜೋರಾದ  ಹಾಡಿನ ರೆಕಾರ್ಡು. ಅನತಿ ದೂರದಲ್ಲೇ ಸದಾ ನೆರಳು ಕೊಡುವ ಒಂದು ದೊಡ್ಡಅರಳೀಮರ.ಅದರ ಕೆಳಗಿನ ಕಟ್ಟೆಯಲ್ಲಿ ಹೆಗಲ ಮೇಲೆ  ಟವೆಲ್ಲು ಹಾಕಿಕೊಂಡು ಪ್ಯಾಟಿ ಧಾರಣಿ ಮಾತಾಡುತ್ತಲೋ, ಇಸ್ಪೀಟು ಆಡುತ್ತಲೋ ಕುಳಿತ,ಹಲಕೆಲವು ಜನರು..ರಸ್ತೆಯ,ಈ ಕಡೆ ಗುಬ್ಬವ್ವನ ಅಂಗಡಿ. ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಓಡಾಡೋ ಬಸ್ಸುಗಳಿಗೆ ಬರವೇನಿರಲಿಲ್ಲ. ಆದರೆ ಎಲ್ಲಾ nonstop express ಬಸ್ಸುಗಳೇ. ಇಲ್ಲಿ, ಈ ಹಳ್ಳಿಯಲ್ಲಿ ನಿಲ್ಲಬೇಕಾದ ಕಿಂಚಿತ್ ಪ್ರಮೇಯವೂ ಅವುಗಳಿಗಿರಲಿಲ್ಲ. ಎಲ್ಲೋ ಹಿರೇಕೆರೂರು, ಅಕ್ಕಿಆಲೂರನಂಥಒಂದೆರಡು ಬಸ್ಸುಗಳು ಮಾತ್ರ ನಿಲ್ಲುತ್ತಿದ್ದವು. ಇಷ್ಟಕ್ಕೂ ಅವೂ ಕೂಡ ಬಸ್ಸಿನೊಳಗೆ ಜಾಗ ಇದ್ರ, ಕಂಡಕ್ಟರ್ ಗ ಸೀಟಿ ಊದಿ ಬಸ್ಸು ನಿಲ್ಲಿಸೋ ಮೂಡ್ಇದ್ರ, ಕೈ ಮಾಡುತ್ತಿದ್ದ ಯಾವುದೋ ಪ್ರಯಾಣಿಕರ ಆಸೆಕಂಗಳು ಡ್ರೈವರ್ ನಿಗೆ ಕರುಣೆ ಉಕ್ಕಿಸಿದ್ರ ನಿಲ್ಲತಿದ್ವು ಅನ್ನಿ. ಇಳಿವ ಒಬ್ಬಿಬ್ರು ಪ್ಯಾಸೆಂಜರಗಳನ್ನುಅರ್ಧ ಕಿಲೋ ಮೀಟರ್ ಹಿಂದೆ ಅಥವಾ ಮುಂದೆ ಇಳಿಸಿ ಪಿ.ಟಿ. ಉಷಾನಗತೆ ಓಡಿಹೋದ ಒಬ್ಬಿಬ್ಬರನ್ನು ಮಾತ್ರ ಹತ್ತಿಸಿಕೊಂಡು ಬುರ್ ಅಂತಧೂಳೆಬ್ಬಿಸಿಕೊಂಡು ಹೋಗಿಬಿಡೂದು ಅಂದ್ರ ಆ KSRTC ಬಸ್ ಗಳಿಗೆ ಆಟವಾಗಿತ್ತೇನೋ?! ಆದ್ರೂ ಕೆಲವು ಮಂದಿಗೆ ಅವುಗಳನ್ನು ನೆಚ್ಚದೇ ಬ್ಯಾರೆಹಾದಿಯಿದ್ದಿಲ್ಲ. ಹಂಗಂತ ಯಾರೂ ಅವುಗಳ ಬಗ್ಗೆ ಕಂಟ್ರೋಲರ್ ಮುಂದಾಗಲೀ, KSRTC ಗಾಗಲೀ ಕಂಪ್ಲೇಂಟ್ ಕೊಡಲೂಹೋಗುತ್ತಿರಲಿಲ್ಲ.ಯಾಕಂದ್ರ ಭಾಳಷ್ಟು ಊರಾಗಿನ ಮಂದಿಗೆ ಬಸ್ಸಿನ ದರಕಾರನೇ ಇದ್ದಿಲ್ಲ  ಗೌಡ್ರು, ಶೆಟ್ಟರಂಥ ದೊಡ್ಡ ಕುಳಗಳು ಹೊಂಡಾ, ರಾಜದೂತ್ನಂಥ ಮೋಟಾರುಬೈಕ್ ಗಳನ್ನೋ, ಒಂದಿಬ್ಬರು ಮಾರುತಿ 800 ನ್ನೋ ಇಟ್ಟುಕೊಂಡಿದ್ದರು. ಗ್ರೈನೆಟ್ ವ್ಯವಹಾರದ Gem ಕಂಪನಿ ಲಾರಿಗಳಂತೂತಾಸಿಗೊಮ್ಮೆ ಓಡಾಡೂವು. ಎಷ್ಟೋ ಜನ ಅವುಗಳನ್ನೇರಿ ಹೊರಟುಬಿಡುವರು. ಕೆಲವು ಶ್ರಮಜೀವಿಗಳು, ಬಿಸಿರಕ್ತದ ಉತ್ಸಾಹಿಗಳು ‘ಈ ಬಸ್ಸಿನ ಹೆಣಾಯಾರು ಕಾಯತಾರು? ದೊಡ್ಡದೊಡ್ಡ ಹೆಜ್ಜಿ ಇಟ್ರ ಬಾಯಾಗಿನ ಅಡಿಕಿ ಮುಗಿಯೂದ್ರಾಗ ಇಲಕಲ್ ಮುಟ್ಟತೀವಿ’ ಅಂತ ಒಳಹಾದಿ ಹಿಡಿದುನಡೆದುಬಿಡುವವರು.ಇನ್ನು ಟೆಂಪೊಗಳಂತೂ ಗಜೇಂದ್ರಗಡ, ಹನುಮಸಾಗರದಿಂದ ಇಲಕಲ್ ಗೆ ಸಾಕಷ್ಟು ಓಡಾಡತಿದ್ವು. ಆದ್ರ 15 ಸೀಟಿನ ಅದರೊಳಗಕ್ಲೀನರ್ರು ಕನಿಷ್ಠ 35 ಮಂದಿಯನ್ನಾದರೂ ತುರುಕುತ್ತಿದ್ದ. ಒಮ್ಮೊಮ್ಮೆ ಕೋಳಿ, ಕುರಿಗಳೂ ಇರತಿದ್ವು.

  ಹೊತ್ತು ಸರಿಯುತ್ತಿದ್ದಂತೆ ತಮ್ಮ ತಮ್ಮ ಗಮ್ಯಗಳತ್ತ ಹೊರಡಲು ತಯಾರಾಗಿ ನಿಂತಿದ್ದ ಮೂರೂ ಜನ ಪ್ರಯಾಣಿಕರಿಗೂ ಸ್ವಲ್ಪ ಸ್ವಲ್ಪವೇ ಆತಂಕ. ಮುತ್ತಪ್ಪನಿಗೆ ಪರೀಕ್ಷೆಯ ಸಮಯ ಮೀರಿದರೆ ಅಂತ ಚಡಪಡಿಕೆಯಾದರೆ, ‘ 10 ಗಂಟೆ ಒಳಗೆ ಎಲಿ ತಂದುಬಿಡು. ಬಳೆಗಾರ ಸಾಬನೂ ಅಪ್ಟೊತ್ತಿಗೆಬರತಾನು.ಹಂದರ ಪೂಜಾ,ಗಣಪತಿ ಪೂಜಾ, ಮುತ್ತೈದೆಯರಿಗೆ ಅರಿಶಿನ-ಕುಂಕುಮ ಕೊಡಲಿಕ್ಕೆ ..ಎಲ್ಲಾಕ್ಕೂ ಎಲಿ ಬೇಕಾಗತಾವ – ಅಂತ ಜಾಗೀರದಾರಅವ್ವ ಮದಲೇ ಹೇಳ್ಯಾಳು..ಹೊತ್ತಿಗೆ ಹೋಗದಿದ್ರ ಅವರೇನು ರೊಕ್ಕಸ್ತರು..ಒಂದಕ್ಕ ಎರಡು ಕೊಟ್ಟ ಯಾಕಾಗವಲ್ತು ಬ್ಯಾರೆ ಎಲ್ಲಿಂದರ ಪ್ಯಾಟಾಗಿಂದ ಎಲಿತರಸಗೊಂಡು ನಂಗ ‘ಬ್ಯಾಡ  ಯವ್ವಾ, ನೀ ಭಾಳ ತಡಮಾಡಿದಿ’ ಅಂತ ವಾಪಸ್ ಕಳಿಸಿಬಿಟ್ರ ಅನ್ನೂ ಆತಂಕ ಪಾತಜ್ಜಿಗೆ. ಹತ್ತು ಸಲ ಎದ್ದು ನಿಂತು ಕಣ್ಣಿಗೆಕೈ ಅಡ್ಡ ಹಿಡಿದು ದೂರದತನಕಾ ದಿಟ್ಟಿಸಿದರೂ ಬಸ್ಸಿನ ಸುಳಿವೇ ಇಲ್ಲ. ‘ತಡ ಆದಷ್ಟು ಬಸ್ಸು ಭಾಳ ರಶ್ ಆಗಿಬಿಡತದ ಸುಡ್ಲಿ. ನೀವು ಡೈರೆಕ್ಟ್ ಬಿಜಾಪೂರಸೀಟ್ ಅದ ಅಂತ ಆ ಕಂಡಕ್ಟರ್ ಗ ಹೇಳ್ರಿ’ ಅಂತ ತನ್ನ ಪತಿಯತ್ತ ಹೊರಳಿ ನಿರ್ದೇಶನ ಕೊಡಲಿಕ್ಹತ್ತಿದ್ಲು ದೇವಕ್ಕ. 

8:30 ಹೋಗಿ 9 ಆಗಿ 9:30 ಹೊಡಿಲಿಕ್ಕೆ ಬಂದ್ರೂ ಬಸ್ ಬರಲಿಲ್ಲ. ಆದ್ರ ಬಸ್ ಸ್ಟ್ಯಾಂಡ್ ಮಾತ್ರ ಗಿಜಿಗಿಜಿ ಅನತಿತ್ತು. ಹಂಗಂತ ಬಸ್ಸ್ಟ್ಯಾಂಡಿನಲ್ಲಿದ್ದವರೆಲ್ಲ ಬಸ್ ಹತ್ತಲಿಕ್ಕೇನೂ ಬಂದಿರಲಿಲ್ಲ. ಸಂಗಮೇಶ್ವರ ಟೀ ಕ್ಲ ಬ್ಬಿನ ಚಾ-ಮಿರ್ಚಿ, ಖಾರಾ-ಚುನಮುರಿಗಳ ಸಲುವಾಗಿ ಬಂದವರೆಷ್ಟೋ? ಗುಬ್ಬವ್ವ ನಂಗಡಿ ಗುಟಕಾದ ಸಲುವಾಗಿ ಬಂದವರೆಷ್ಟೋ? ಹಂಗs ಮುಂಜಾನೆದ್ದು ಒಂಚೂರು ಗಾಳಿ ಕುಡದು ಗಾಸಿಪ್ ಮಾಡಿ ತಾಜಾ ಆಗಲುಬಂದವರೆಷ್ಟೋ? ಬಯಲುಕಡೆ ಹೋಗಿ ಹಂಗs ಒಂದಿಷ್ಟು ಪಟ್ಟಾಂಗ ಹೊಡೀತಾ ನಿಂತವರೆಷ್ಟೋ? ಹೊತ್ತಾರೆ ಎದ್ದು ಬಿಸಿಲು ಮ್ಯಾಲೆ ಬರೂದರಾಗಕಟ್ಟಿಗೆ ಮಾಡಿಕೊಂಡು ದೊಡ್ಡ ಹೊರೆ ತಲೆಯಮೇಲಿಟ್ಟುಕೊಂಡು , ಸುಂದರ,  ಕಸೂತಿ-ಕನ್ನಡಿಗಳ ಬಣ್ಣ ಬಣ್ಣದ ಲಂಗಗಳನ್ನು ಧರಿಸಿ, ಸೊಗಸಾದಲಂಬಾಣಿ ಭಾಷೆಯಲ್ಲಿ ಹಾಡುತ್ತ ಕ್ಯಾಟ್ ವಾಕ್ ಮಾಠುತ್ತ ನಡೆವ  ಲಂಬಾಣಿ ಯುವತಿಯರನ್ನು ನೋಡಲೆಂದೇ ಬರುವರೆಷ್ಟು ಮಂದಿನೋ? ಅಂತೂಬಸ್ ಸ್ಟ್ಯಾಂಡ್ ಅಂತೂ ಗಿಜಿಗುಡುತ್ತಿತ್ತು.ಇನ್ನು ಇಷ್ಟು ಜನರನ್ನು ನೋಡಿ ಡ್ರೈವರ್ ಬಸ್ ನಿಲ್ಲಿಸಿಯಾನೇ ಎಂಬ ಚಿಂತೆ ಮೂವರನ್ನೂ ಕಾಡುತ್ತಿತ್ತು.

  ‘ಫಟ್ ಫಟ್ ಫಟ್’ ಸಪ್ಪಳ ಮಾಡುತ್ತ ತನ್ನ ಫಟಫಟಿಯನ್ನು ಒಂಟಿಗಾಲಿಯ ಮೇಲೆ ತಂದು ಸೀದಾ ಗೂಡಂಗಡಿಯ ಬಾಗಿಲಿಗೇ ಹಚ್ಚಿ ‘ಹೆಂಗದಿ ಬೇಯತ್ತಿ’ ಅಂದ ಲಮಾಣ್ಯಾರ ಪರಶ್ಯಾಗೆ ‘ಲೇ ಕುರಸ್ಯಾಲಾ, ಮೈಮ್ಯಾಗ ಖಬರ್ ಐತೆ ಇಲ್ಲೋ? ಹೀಂಗಾ ಗಾಡಿ ಹೊಡ್ಯೂದು..ಅದರ ಸಂಗಾಟs ನೀನೂಕುಣ್ಯಾಗ ಹೋಕ್ಕಿಯಲೇ ಒಂದಿನಾ’ ಎಂದು ಬಯ್ದಳು. ‘ಸಿನೆಮಾದಾಗ ಹೀಂಗs ಹೊಡಿತಾರಬೇ ಹಿರೋಗಳು..’  ಅಂದ ಅವನಿಗೆ, ‘ಅವರಿಗೇನಲೇಆಸ್ತಿ,ರೊಕ್ಕ ಅಳತಿರತೈತಿ ಹಿಂದ..ಆ ಯಮಧರ್ಮಗೂ ತಿನಿಸಿ ಬಚಾವ್ ಆಕ್ಕಾರು. ನಿಂದs ನೋಡಕೋಲೆ’  ಅಂದ ಅವಳ ಮಾತಲ್ಲಿ ಕಟುಸತ್ಯ ಅಡಗಿತ್ತು. ‘ಎನಗಿಂತ ಮಿಗಿಲಾದ ಯಮಧರ್ಮನವನಾರಿಹನು? ಹೇಳೈಎಲೆ ಬಾಲೆ’ ಎಂದು ಬಯಲಾಟದ ದಾಟಿಯಲ್ಲಿ ಹಾಡಿದ ಪರಶ್ಯಾಗೆ ‘ದೀಡ್ ಶ್ಯಾಣ್ಯಾ ಅದಿಬಿಡು. ರ ಅಂದ್ರ ಠ ಅನ್ನಾಕ ಬರದಿದ್ರೂ ಇಂಥದ್ದಕ್ಕೇನೂ  ಕಮ್ಮಿ ಇಲ್ಲ. ತಗೋ..ನಡಿ ಅತ್ತಾಗ..ಗಿರಾಕಿಗೆ ಜಾಗಾ ಬಿಡು.’ ಅಂತ ಹುಸಿಮುನಿಸಿನಿಂದಬಯ್ಯುತ್ತ ಗುಟಕಾ ಪ್ಯಾಕೆಟ್ ಗಳನ್ನು ಕೊಟ್ಟಳು. ಊರಿನ ಪಡ್ಡೆ ಹುಡುಗರಿಗೆಲ್ಲ ಈ ಗುಬ್ಬವ್ವ ಯತ್ತಿನೇ; ಯಾರಿಗೂ ಚಿಗವ್ವ,ದೊಡ್ಡವ್ವ ಅಲ್ಲ.  ಚೆಲುವೆಯರಾದ ಹದಿಹರೆಯಕ್ಕೆ ಕಾಲು ಇಡುತ್ತಿರುವ ಹೆಣ್ಣುಮಕ್ಕಳಿಬ್ಬರ ತಾಯಿ ಅಕಿ ಅಂತ ಬೇರೆ ಹೇಳಬೇಕಾಗಿಲ್ಲ.

‘ ಈ ಬಸ್ ಏನ ಇವತ್ತ ಬರಾಂಗ ಕಾಣಂಗಿಲ್ಲ. ನೀ ಇಲಕಲ್ ಗ ಹೊಂಟಿದ್ರ ನಾನೂ ನಿನ್ನ ಜತೀಲೇ ಬರತೀನಲೇ’ ಅಂದ ಮುತ್ತಪ್ಪನಿಗೆ ಪರಶ್ಯಾ ‘ಕುಂಡ್ರಹಂಗಾರ’ ಅಂತ ತನ್ನ ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡು ಭರ್ರನೇ ಗಾಡಿ ಚಾಲೂ ಮಾಡಿದ. ‘ಆ ಹುಡುಗಂದು ಪರೀಕ್ಸಾ ಐತಿ ಅಂತಲೇ. ಜ್ವಾಕ್ಯಾಗಿಕರಕೊಂಡ ಹೋಗಲೇ ಪರಶ್ಯಾ’ ಅಂತ ಅವನನ್ನು ಎಚ್ಚರಿಸಲು ಮರೆಯಲಿಲ್ಲ ಗುಬ್ಬವ್ವ.

 ಹತ್ತೂವರೆಯಾದರೂ ಬಸ್ಸು ಬರದಿದ್ದಾಗ ‘ಯವ್ವಾ, ಇವತ್ತೇನ ಆತs ಈ ಬಸ್ಸಿಗೆ’ ಅಂತ ಬಸ್ಸಿಗೂ, ತನ್ನ ಹಣೆಬರಹಕ್ಕೂ ಹಿಡಿಶಾಪ ಹಾಕುತ್ತ  ಒಮ್ಮೆ ಎದ್ದು, ಒಮ್ಮೆ ಕೂತು, ಮಗದೊಮ್ಮೆ ನಾಕ್ಹಜ್ಜೆ ಹಿಂದೆ ಮುಂದೆ ಓಡಾಡಿ ತನ್ನ ಆತಂಕವನ್ನು ಮರೆಸುತ್ತಿದ್ದಳು ಪಾತಜ್ಜಿ. ಬೆಳಗ್ಗೆ ಕುಡಿದ ಹಾಲು ಅರಗಿ ಪುಟ್ಟ ಪ್ರಣವ್ನೂ ಹಸಿವು-ನಿದ್ದೆಗಾಗಿ  ಕಿರಿಕಿರಿ-ಚಿರಿಪಿರಿ ಶುರು ಮಾಡಿದ.  ಬಿಸಿಲಿನ  ಝಳವೂ  ಏರಿದಂತೆ  ಹಂಗೇ ಒಟ್ಟಿಬಂದ ಕೆಲಸವನ್ನೆಲ್ಲ ನೆನೆದು ದೇವಕ್ಕನೂಚಡಪಡಿಸತೊಡಗಿದಳು. ಅಷ್ಟರಲ್ಲಾಗಲೇ 2-3 ಟೆಂಪೊಗಳು ತುಂಬಿ ತುಳುಕುತ್ತ ಬಂದು ನಿಂತವಾದರೂ ಅವು ಪಾತಜ್ಜಿಯನ್ನು ಹತ್ತಿಸಿಕೊಳ್ಳುವ ಸಾಹಸಮಾಡಲಿಲ್ಲ- ಅವಳ ದೊಡ್ಡ ಎಲೆಬುಟ್ಟಿಯನ್ನು ನೋಡಿ.’ತಮ್ಮಾ, ಒಂದೆರಡು ರೂಪಾಯಿ ಹೆಚ್ಚಿಗಿ ತಗೋಳೋ ಬುಟ್ಟೀದೂ’ ಅಂತ ಅಕಿಅಲವತ್ತುಕೊಂಡರೂ .. ‘ಏಯ್ ರೊಕ್ಕದ್ದಲ್ಲ ಬೇ, ಬುಟ್ಟಿ ಇಡಾಕ ಜಾಗಾ ಎಲ್ಲೈತಿ? ನೋಡಿದ್ಯೋ ಇಲ್ಲೋ ಟೆಂಪೋ ಮ್ಯಾಗನೂ ಹೆಂಗ ಕುಂತಾರ ಮಂದಿ’ ಅಂತ ಉತ್ತರ ಕೊಟ್ಟು ‘ರೈಟ್ ರೈಟ್’ ಅಂತ ಕೂಗಿ ಗಾಡಿ ಹೊರಡಿಸಿಯೇಬಿಟ್ಟರು ಆ ಕಿನ್ನರುಗಳು. ಗೌರಿಗಂತೂ ಡೈರೆಕ್ಟ್ ಬಿಜಾಪೂರಕ್ಕೇಹೋಗಬೇಕಾದ್ದರಿಂದ ಟೆಂಪೊ ಹತ್ತಿ ಇಲಕಲ್ಲದಲ್ಲಿಳಿವ ಮಾತೇ ಇರಲಿಲ್ಲ.ಹೀಗಾಗಿ ಪಾತಜ್ಜಿ- ಗೌರಿಯರಿಬ್ಬರಿಗೂ ಹಿರೇಕೆರೂರ ಬಸ್ಸನ್ನು ಧ್ಯಾನಿಸುತ್ತಕುಳಿತಿರಬೇಕಾಯಿತು. ಮಧ್ಯಾಹ್ನದ ಊಟಕ್ಕೆಂದು ಗುಬ್ಬವ್ವನೂ ಅಂಗಡಿ ಬಂದ್ ಮಾಡುವ ಗಡಿಬಿಡಿಯಲ್ಲಿ ‘ ಇವತ್ತೇನ ಬಸ್ ಬರಂಗಿಲ್ಲ ಬಿಡ ಯವ್ವಾ, ಮನಿಗಿ ಹೋಗಿ ಉಂಡ ಮಕ್ಕೊ. ನಾಳಿಗಿ ಹೋಗಾಕಂತಿ.’ಅಂದಳು ಗೌರಿಗೆ. ಗೌರಿ ಸಮ್ಮಿಶ್ರ  ಭಾವದಲ್ಲಿದ್ದಳು. ಒಂದೆಡೆ ಒಂದಿನ ಹೆಚ್ಚಿಗೆ ತೌರಲ್ಲಿ ಉಳಿವಸಂಭ್ರಮ ಮತ್ತೊಂದೆಡೆ ದಾರಿ ಕಾಯ್ದು ನಿರಾಶನಾಗುವ ಮನದನ್ನನ ಸಲುವಾಗಿ ಬೇಸರ. ಅಂತೂ ಬಂದ ದಾರಿಗೆ ಸುಂಕವಿಲ್ಲ ಎಂದು 12 ಗಂಟೆಯಹೊತ್ತಿಗೆ ಬಸ್ ಸ್ಟ್ಯಾಂಡ ಖಾಲಿ ಮಾಡಿದರು. ಬಿಸಿಲು ರಣರಣ ಅನತಿತ್ತು. ಪಾತಜ್ಜಿ ಮರುದಿನದ ಹನುಮಸಾಗರದ ಸಂತೀಗರೆ ಹೋಗಿ ಎಲೆ ಮಾರುವವಿಚಾರ ಮಾಡುತ್ತ ಸೋತ ಕಾಲುಗಳೊಂದಿಗೆ ವಾಪಸ್ ಹೊರಟಳು.

ಇಡೀ ದಿನ ರಣರಣ ಬಿಸಿಲು ಕಾಯ್ದು ಸಂಜೆ ಆಗುತ್ತಿದ್ದಂತೆಯೇ ಅಚಾನಕ್ ಆಕಾಶವೆಲ್ಲ ಕಪ್ಪು ಆವರಿಸಿ, ಮಂದಿಗೆ ಬೆಳಕಿಂಡಿ ಹಾಕಲಿಕ್ಕೂ ಪುರುಸೊತ್ತುಕೊಡದೇ ಧಪಾಧಪಾ ಅಂತ ಒಮ್ಮಿಂದೊಮ್ಮೆಲೇ  ಶುರುವಾದ ಮಳಿ ಎರಡು ದಿನ ಒಂದು ನಿಮಿಷನೂ ನಿಲ್ಲದs ಸುರದೇ ಸುರೀತು.  ಊರ ಮುಂದಿನಬೆಣ್ಣಿ ಹಳ್ಳ ಕಟ್ಟಿ ಬಸ್ಸು, ಟೆಂಪೊ ಎಲ್ಲಾ ಬಂದ್ ಆಗಿ, ಸೂರ್ಯನೂ ಇಲ್ಲದs, ಕರೆಂಟೂ ಇಲ್ಲದs ಇಡೀ ಹಳ್ಳಿ ಎರಡು ದಿನ ಪೂರಾ ‘ಗವ್’ ಅಂತ ಕತ್ತಲಾಗಇರೂ ಹಂಗ ಆಗಿ ಅಂತೂ ಬುಧವಾರದ ಹೊತ್ತಿಗೆ ಮಳಿಯ ಆರ್ಭಟ ಕಡಿಮೆಯಾಗಿ ಗುರುವಾರ ಮತ್ತ ಯಥಾಪ್ರಕಾರ ಸೂರ್ಯ ಹೊಳಕೋತ ಬಂದುಹಳ್ಳ ಇಳಿದು ಬಸ್ಸು ಗಿಸ್ಸು ಎಲ್ಲಾ ಚಾಲೂ ಆದ್ವು.

 ಇತ್ತ,ಪಾತಜ್ಜಿಯ ಎಲೆಗಳೆಲ್ಲ ಪಾಪ ಅಕಿನ ಕನಸಿನ ಹಂಗೆನೇ ಬುಟ್ಟ್ಯಾಗೇ ಅರ್ಧ ಕೊಳೆತು, ಅರ್ಧ ಹಳದಿಯಾಗಿ ಕೂತಿದ್ವು. ಒಮ್ಮಿಂದೊಮ್ಮೆ ಅಡ್ಡಮಳಿಶುರು ಆದಾಗ, ಮಗಳ ಬಾಣಂತನಕ್ಕ ಅಗ್ಗಿಷ್ಟಿಗಿಗೆ ಬೇಕಂತ ಆಯ್ದು ತಂದ ಕಾಕುಳ್ಳು,ಇದ್ಲಿಚೀಲ ಎಲ್ಲ ಒಳಗ ತರಬೇಕಂತ ಗಡಿಬಿಡಿನಾಗ ಮಳ್ಯಾಗಹಿತ್ತಲದಾಗ ಹೋಗಿ ಅವನ್ನ ಹೊತಗೊಂಡು ಅವಸರಲೇ ಒಳಗ  ಬರೂಮುಂದ ಕಾಲು ಜರದು ಬಿದ್ದು, ಕಾಲು ಉಳಕಿಸಿಕೊಂಡು ತಿಂಗಳುಗಟ್ಟಲೇಸರಿಯಾಗಿ ಅಡ್ಡಾಡಲಾಗದೇ ಪೂರಾ ಲುಕ್ಸಾನದಾಗ ಮುಳುಗಿಹೋದ್ಲು ಪಾತಜ್ಜಿ. ಮಗಳ ಕುಬಸದ ಕಾರ್ಯ,ಅಳ್ಯಾಗೊಂದು ಬಂಗಾರದ ಉಂಗುರ, ಮಗಳ ಸಿಜೇರಿಯನ್ ಹೆರಿಗೆ, ಕೂಸಿನ ತೊಟ್ಟಲಾ-ಬಟ್ಟಲಾ , ಕೂಸಿಗೊಂದು ಜರದಂಗಿ ಕುಂಚಗಿ, ಮುತ್ತಿನ ಜಬಲಾ, ಆಲದೆಲಿ ದುಬಟಿ,ಬೆಳ್ಳಿ ಗಿಲಕಿ, ಹಾಲ್ಗಡಗ.. ಅಂತೆಲ್ಲ ಸಿಕ್ಕಾಪಟ್ಟೆ ಖರ್ಚು ಬಂದು ಊರ ಸಾವಕಾರ ಈಶಪ್ಪನ ಹತ್ರ ಸಾಲ ಮಾಡಬೇಕಾತು. ಅದಕ್ಕಂತ ಇದ್ದೊಂದು ಮನೀದೂ ಪತ್ರ ಅಡಇಡಬೇಕಾತು.

  ಆ ಕಡೆ ಪರಶ್ಯಾನ ಗಾಡಿ ಮ್ಯಾಲೆ ಹೊಂಟಿದ್ದ ಮುತ್ತ, ‘ಲೇ ಸಾವಕಾಶಲೇ ಪರಶ್ಯಾ’ ಅಂತ ಹೇಳತಿದ್ರೂ ವೇಗ ತಗ್ಗಿಸದೇ ಇಲಕಲ್ ಕ್ರಾಸ್ ನ ಮಹಾಂತೇಶಟಾಕೀಜ್ ಹತ್ರ ತಿರುವು ತಗೋ ಮುಂದ ಒಮ್ಮಿಂದೊಮ್ಮೆಲೇ ಎದುರಾದ ಟ್ರ್ಯಾಕ್ಟರಿಗೆ ಢಿಕ್ಕಿ ಹೊಡದು ಗಾಡಿ ಉರುಳಿಬಿದ್ದು ಪಕ್ಕದಲ್ಲಿದ್ದ

ದೊಡ್ಡ ಕಲ್ಲುಬಂಡೆಗೆ ಮುತ್ತನ ಬಲಗೈ ಬಡಿದು ‘ಯವ್ವಾ’ ಅಂದವನೇ ಅಸಾಧ್ಯ ನೋವಿನಿಂದ ಒದ್ದಾಡಿದ. ಸಣ್ಣಪುಟ್ಟ ತರಚು ಗಾಯಗಳಾಗಿದ್ದ ಪರಶ್ಯಾಟಾಕೀಜಿನ ಕಾವಲುಗಾರನ ಸಹಾಯದಿಂದ ಗಾಡಿ ಎತ್ತಿ ನಿಲ್ಲಿಸಿ ಮುತ್ತನ್ನ ಮೆತ್ತಗ ನಡೆಸಿಕೊಂಡು ಗಾಡಿ ಮೇಲೆ ಕೂಡಿಸಿಕೊಂಡು ಅಲ್ಲೇ ಹತ್ರ ಇದ್ದಕಾಖಂಡಕಿ ಡಾಕ್ಟರ್ ಹತ್ರ ಕರಕೊಂಡು ಹೋದ. ಕೈಯ ಬಾವು,ನೋವು ಗಮನಿಸಿದ ಅವರು ‘ಕೈಗೆ ಫ್ರಾಕ್ಚರ್ ಆದ್ಹಂಗ ಕಾಣಸತದ. ದೊಡ್ಡಾಸ್ಪತ್ರೆಗೆಕರಕೊಂಡು ಹೋಗು.’ಅಂತ್ಹೇಳಿ ಮುತ್ತನಿಗೆ ನೀರು ಕುಡಿಸಿ, ಪ್ರಥಮೋಪಚಾರ ಮಾಡಿ ಕಳಿಸಿದ್ರು. ಪಾಪ! ಬ್ಯಾಂಕಿನ ಪರೀಕ್ಷೆ ಬರೀಬೇಕಾಗಿದ್ದ ಮುತ್ತ ಕೈಗೆಬ್ಯಾಂಡೇಜ್ ಸುತಕೊಂಡು ಸರಕಾರಿ ದವಾಖಾನಿ ಕಾಟ್ ಮ್ಯಾಲ ಮಕ್ಕೊಳ್ಳೂ ಹಂಗ ಆತು.

  ಇತ್ತ ಗೌರಿ ಅಳುಕಿನಿಂದ ಗಂಡನ ಫೋನ್ ಕಾಯ್ದದ್ದೇ ಬಂತು.ಅವನು ಸಿಟ್ಟಿಗೆದ್ದು ಮಾಡಲಿಲ್ಲವೋ, ಮಳಿ ಸಲುವಾಗಿ ಲೈನ್ ಕಟ್ ಆಗಿ ಫೋನ್ಬರವಲ್ತೋ ತಿಳೀಲಾರದೇ ಚಡಪಡಿಸಿದಳು. ಎರಡು ದಿನ ಹೆಚ್ಚಿಗೆ ತೌರಿನಲ್ಲಿರುವ ಸುಖ ವರುಣರಾಯ ಕರುಣಿಸಿದ್ದರೂ ಅದನ್ನು ಅನುಭವಿಸಲಾಗದೇಒಳಗೊಳಗೇ ತಳಮಳಿಸುತ್ತಿದ್ದಳು. ಅಂತೂ ಗುರುವಾರ ಹಿರೇಕೆರೂರು ಬಸ್ಸು 9 ಕ್ಕೆಲ್ಲ ಬಂದು, ಸೀಟೂ ಸಿಕ್ಕು 12 ಅನ್ನೂದರಾಗ ಬಿಜಾಪೂರದ ಬಸ್ಸ್ಟ್ಯಾಂಡ್ ಮಟ್ಟಿಯೂ  ಆತು. ತಾನೇ ಬ್ಯಾಗು, ಕೂಸು ಎಲ್ಲ ಹೆಂಗೋ ಸಾವರಿಸಿಕೊಂಡು ಆಟೋ ಹತ್ತಿ ಮನೆಗೆ ಬಂದಿಳಿದಾಗ ಮನೆಯಲ್ಲಿಅತ್ತಿಯವರನ್ನು ಬಿಟ್ಟು ಯಾರೂ ಇರಲಿಲ್ಲ. ಅವರ ಗಂಟಿಕ್ಕಿದ ಮುಖದಿಂದಲೇ ಅವರ ಮನಸ್ಥಿತಿ ಅರಿಯಬಹುದಿತ್ತು. ‘ಬಂದ್ಯಾ ಕೂಸುಮರೀ, ಒಂದುಯುಗ ಆಗಿಹೋಗಿತ್ತಲ್ಲಾ ನಿನ್ನ ನೋಡದs?’ಅಂತ ಮೊಮ್ಮಗನನ್ನು ಎತ್ತಿ ಮಾತಾಡಿಸಿದ  ಅವರು ಸೊಸೆಯತ್ತ ತಿರುಗಿ ‘ಹೇಳಿದ ಸಮಯಕ್ಕ ಬರಬೇಕು. ಆಗದಿದ್ರ ಮದಲs  ಹೇಳಿಬಿಡಬೇಕು ಬರಂಗಿಲ್ಲ ಅಂತ..ಪ್ರಸನ್ನ ಎಷ್ಟ ಕಿರಿಕಿರಿ ಮಾಡಿಕೊಂಡಾನ ನಾಕ ದಿನದಿಂದ ಅನ್ನೂ ಅಂದಾಜರೇ ಅದನ ನಿನಗ?’ ಅಂತ ತುಸು ಬಿರುಸಾಗೇ ಅಂದು ಅವಳ ಉತ್ತರವನ್ನೂ ಕೇಳಲಿಷ್ಟವಿಲ್ಲದವರಂತೆ ಮಗುವನ್ನೆತ್ತಿಕೊಂಡು ತಮ್ಮ  ರೂಮಿಗೆ ನಡೆದರು. ಗೌರಿಗೆ ಯಾಕೋಎಲ್ಲಾ ಖಾಲಿಖಾಲಿ ಎನಿಸಿ ಅಳು ಬರುವಂತಾಯ್ತು. ಸಂಜೆ ಮನೆಗೆ ಬಂದ ಯಜಮಾನರು ‘ಅಂತೂ ಬರಬೇಕನ್ನಿಸಿತಾ ತೌರುಮನೆ ಬಿಟ್ಟು ..ನೆನಪಾತಾನಮ್ಮದು. ಥ್ಯಾಂಕ್ಸ್ ವಾ ಬಂದಿದ್ದಕ್ಕ’ ಎಂದು ಕಹಿಯಾಗೇ ನುಡಿದಾಗ ಗೌರಿಗೆ ನೋವಿನೊಡನೆ ಸಿಟ್ಟೂ ಬಂತು. ಬಸ್ಸೇ ಬರದಿದ್ದುದು, ಎರಡು ದಿನ ಮಳಿಹಚ್ಚಿಹೊಡದು ಹಳ್ಳ ಕಟ್ಟಿದ್ದು ತನ್ನ ತಪ್ಪೇ ಅಂತ ಚೀರಿ  ಹೇಳಬೇಕೆನ್ನಿಸಿತಾದರೂ ಮನೆತುಂಬ ಜನರಿರುವಾಗ ಹಾಗೆ ದನಿಯೇರಿಸಿ ಮಾತಾಡುವುದುಉಚಿತವಲ್ಲವೆನಿಸಿ ಏಕಾಂತದ ಗಳಿಗೆಗಾಗಿ ಕಾಯುತ್ತಿದ್ದಳು. ರಾತ್ರಿ ರೂಮಲ್ಲಿ, ತಾನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಸ್ಸಿಗಾಗಿ ಕಾಯ್ದ  ಬವಣೆಯನ್ನುಕಥಿ ಮಾಡಿ ಹೇಳುತ್ತಿದ್ದಾಗ – ‘ಇರಬೇಕು ಅನ್ನಿಸಿದ್ರ ಇದ್ದು ಬಾ ಗೌರಾ. ಆದ್ರ ಬಸ್ ಬಂದಿಲ್ಲ ಅಂತ ಸುಳ್ಳು ಹೇಳೂದು, ಅದೂ ನನ್ನ ಮುಂದ..ನಿನ್ನಕಡೆಯಿಂದ ಇದನ್ನ ನಿರೀಕ್ಷಿಸಿರಲಿಲ್ಲ.ಅವತ್ತ 11:30 ಅಂದ್ರ ಬಸ್ ಬಂದಿತ್ತು. ಕೊನೆಯ ವ್ಯಕ್ತಿ ಇಳದು ಕಂಡಕ್ಟರ್ ಬಾಗಿಲಾ ಬಂದ್ ಮಾಡೂತನಾ ಮೈಯೆಲ್ಲಕಣ್ಣಾಗಿ ಕಾಯತಿದ್ದೆ ನಿನ್ನ, ಪ್ರಣೂನ ಸಲೂವಾಗಿ.ಈಗ ನೋಡಿದ್ರ ನೀ ಹೀಂಗ ಹೇಳಲಿಕ್ಹತ್ತೀ.ನಮ್ಮ ನಡುವನೂ ಇಂಥ ಸುಳ್ಳುಗಳು ಬೇಕಾ? ಇಷ್ಟ ಏನನಮ್ಮ ಪ್ರೀತಿ ಅರ್ಥ?’ ಅಂತಂದು ಪ್ರಸನ್ನ ಹೊಳ್ಳಿ ಮುಸುಕು ಹಾಕಿಕೊಂಡಾಗ ಗೌರಿಗೆ ಎಲ್ಲ ಅಯೋಮಯ!! 4-6 ದಿನ ಇಬ್ಬರ ನಡುವೆಮಾತಿಲ್ಲ-ಕತೆಯಿಲ್ಲ. ನಡೆದದ್ದು ಬರೀ ಹಾಡು. ಅದೂ ಟೇಪ್ ರಿಕಾರ್ಡರಿನಲ್ಲಿ.. ‘ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ..ಕುರುಡು ಹಮ್ಮುಬೇಟೆಯಾಡಿ ಪ್ರೀತಿ ನರಳಿದೆ’ ಅಂತ ಅಶ್ವತ್ಥ ಹಗಲೂ ರಾತ್ರಿ ಹಾಡಿದ್ದೇ ಹಾಡಿದ್ದು.

ತಪ್ಪು ಇಲ್ಲಿ ಯಾರದ್ದೂ ಅಲ್ಲ. ನಡೆದದ್ದು ಇಷ್ಟೇ..ಒಂದಿನವೂ ಸರಿಯಾದ ಸಮಯಕ್ಕೆ ಬಾರದೇ ಇದ್ದ ಹಿರೇಕೆರೂರ  ಬಸ್ಸು ಅಂದು ಅದ್ಯಾವ ಹೊಸಕಂಡಕ್ಟರ್,ಡ್ರೈವರ್ ಇದ್ದರೋ ಗೊತ್ತಿಲ್ಲ  8 ಗಂಟೆಗೆ, ಸರಿಯಾದ ಸಮಯಕ್ಕೇ ಬಂದು ಎರಡು ನಿಮಿಷ ಬಸ್ ಸ್ಟ್ಯಾಂಡಿನಾಗ ನಿಂತು ಇಳಿವವರು, ಹತ್ತುವವರು ಯಾರೂ ಇಲ್ಲದೇ  ಬುರ್ ಅಂತ ಹೊರಟು ಹೋಗಿದೆ. ಪಾಪ! ಗುಬ್ಬವ್ವಗಾದರೂ ಹೆಂಗ ತಿಳದೀತು ಅದು! ದಿನಾ ತಡಾಮಾಡೂ ಆಹಿರೇಕೆರೂರ ಬಸ್ಸು ಒಂದಿನಾ ಸರಿಯಾದ ಸಮಯಕ್ಕೆ ಬಂದು ಮೂರೂ ಜನರ ಜೀವನದಾಗ ಏನೇನೋ ಆವಾಂತರ ಮಾಡಿ ಹೋತು ಅನ್ರಿ.

ಈಗ ಗುಬ್ಬವ್ವನ ಗೂಡಂಗಡಿ ಜಾಗದಲ್ಲಿ ಸಿಮೆಂಟಿನ ಕಟ್ಟಡ ಎದ್ದಿದೆ. ‘ಕಾಮಧೇನು ಹಾಲಿನ ಡೈರಿ’ಯಲ್ಲಿ ಗುಬ್ಬವ್ವನ ಅಳಿಯಂದಿರು ಹಾಲು-ಮೊಸರು, ಬ್ರೆಡ್ಡು-ಬನ್ನು, ಜಾಮ್-ಸಾಸ್ ಗಳ ಭರ್ಜರಿ ಮಾರಾಟ ನಡೆಸಿದ್ದಾರೆ. ಪಾತಜ್ಜಿಯ ಮೊಮ್ಮಗ  ಸುನೀಲ ಈಗ ಚಿಗುರು ಮೀಸೆಯ ಯುವಕ. ಧಾರವಾಡದಕೃಷಿವಿಶ್ವವಿದ್ಯಾಲಯದಲ್ಲಿ Bsc Agri ಮಾಡಿದ ಅವನು ತನ್ನ ಅಪ್ಪನ ನೆರವಿನಿಂದ ಗೌಡ ಈಶಪ್ಪನಿಂದ ಅಜ್ಜಿಯ ಮನೆ-ಎಲೆಯ ಪುಟ್ಟ ತೋಟಬಿಡಿಸಿಕೊಂಡದ್ದಲ್ಲದೇ ಅದನ್ನು ಎಕರೆಗಟ್ಟಲೆ ಬೆಳೆಸುವ ಹವಣಿಕೆಯಲ್ಲಿದ್ದಾನೆ. ಮರುವರುಷ ಬ್ಯಾಂಕ್ ಪರೀಕ್ಷೆ ಬರೆದು ಪಾಸಾದ ಮುತ್ತಪ್ಪ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿ ಆಫೀಸರ್ ಆಗಿದ್ದಾನೆ. ಪುಟ್ಟ ಪ್ರಣವ್ ಈಗ ಸ್ನಾತಕೋತ್ತರ ಪದವೀಧರ. ಕಾಲೇಜುಓದುವ ಅಕ್ಕರೆಯ ಅವಳಿ-ಜವಳಿ ತಂಗ್ಯಂದಿರಿದ್ದಾರೆ. ಅವರ ಮನೆಯಲ್ಲೀಗ CD ಪ್ಲೇಯರ್ ‘ಒಲವೇ ಜೀವನ ಸಾಕ್ಷಾತ್ಕಾರ’ ಹಾಡುತ್ತಿದೆ.

  ಹೀಗೆ ಎಲ್ಲ ಬದಲಾಗಿದೆ ಈಗ. ಆದರೆ ಈಗಲೂ ಬದಲಾಗದೇ ಇದ್ದದ್ದು ಒಂದೇ ಒಂದು—ಸಮಯಕ್ಕೆ ಸರಿಯಾಗಿ ಬರದ ಆ ಬಸ್ಸು;ಅದೇ ಹಿರೇಕೆರೂರಬಸ್ಸು.

~ ಗೌರಿ ಪ್ರಸನ್ನ

ಪ್ರೀತಿಗೊಂದು ಚಮಚೆ -ಅಮಿತಾ ರವಿಕಿರಣ್

ಪ್ರೀತಿಗೊಂದು ವ್ಯಾಖ್ಯೆ ಬೇಕೆ? ಅದಕ್ಕೊಂದು ಪ್ರತಿಮೆ ಬೇಕೆ?  ಕಬೀರನಿಂದ ಆರಂಭಿಸಿ ಬೀಟಲ್ಸ್ ಬ್ರಿಟಿಷ್ ’ಪಾಪ್ ಬ್ಯಾಂಡ್’ (Beatles) ವರೆಗೆ ಅವರು ಹಾಡಿದ್ದನ್ನು ಗುನುಗುನಿಸುತ್ತ ಬಂದಿದ್ದೇವೆ. ಜಾನ್ ಲೆನನ್ ಮತ್ತು ಪಾಲ್ ಮೆಕ್ಕಾರ್ಟ್ನಿಯವರ All you need is Love ಹಾಡು ಅನಿವಾಸಿಯ ಹಿರಿಯ ಓದುಗರ ತುಟಿಯ ಮೇಲೆ ಸದಾ ಇರುತ್ತಿತ್ತು!ಎರಡೂ ಕೈಗಳನ್ನು ಜೋಡಿಸಿ ಹಾರ್ಟ್ ಲಾಂಛನವನ್ನು ತೋರಿಸದ ಈಗಿನ ಯುವಕರೇ ಇಲ್ಲ. ಅದೇ ತರಹ ಬಹುಕಾಲದಿಂದ ಯುಕೆ ದೇಶದ ವೇಲ್ಸ್ ಪ್ರಾಂತದಲ್ಲಿ ಚಮಚಗಳನ್ನು ಕೆತ್ತಿ ಪ್ರೀತಿಯ ದ್ಯೋತಕವಾಗಿ ಕೊಡುವ ರೋಚಕ ಇತಿಹಾಸವನ್ನು ಈ ವಾರ ಬೆಲ್ ಫ಼ಾಸ್ಟ್ ನಲ್ಲಿ ವಾಸಿಸುತ್ತಿರುವ ಅಮಿತಾ ರವಿಕಿರಣ್ ಅವರು ಬರೆದಿದ್ದಾರೆ. ಅದು ನಿಮಗೆಲ್ಲ ಹಿಡಿಸೀತು ಎನ್ನುವ ನಮ್ಮ ಆಶಯ. (ಸಂ)
'ಪ್ರೀತಿ' ಎಂಬ ಈ ಎರಡೂವರೆ ಅಕ್ಷರದ*  ಪದವನ್ನು ಕೇಳಿದಾಗ ಮನಸ್ಸು ಉಲ್ಲಸಿತವಾಗುತ್ತದೆ.  ಪ್ರೀತಿ ಎಂದರೇನು? ಹಾಗೆಂದು ಯಾರಾದರೂ ಒಂದೇ ವಾಕ್ಯದಲ್ಲಿ ಉತ್ತರಿಸಿ ಎಂಬ ಪ್ರಶ್ನೆ ಹಾಕಿದರೆ,  ಪ್ರೀತಿ ಎಂಬ ಪದ ಒಂದೇ ಆದರೂ ಹಾಗೆಂದರೇನು ಎಂಬ ಪ್ರಶ್ನೆಗೆ  ಸಿಗುವ ಉತ್ತರಗಳು ಲೆಕ್ಕಕ್ಕೆ ಸಿಗದಷ್ಟು.
ಜೊತೆಗೆ ಪ್ರತಿ ಉತ್ತರವೂ ಅನನ್ಯ!

ಪ್ರೀತಿ ಎಂದರೇ ಹಾಗಲ್ಲವೇ? ಭಾಷೆಗೆ ನಿಲುಕದ ಭಾವವದು! ಆದರೂ ಮನುಷ್ಯ ತನ್ನ ಒಲವು ವ್ಯಕ್ತಪಡಿಸಿ ಪ್ರೀತಿಯನ್ನು ಪಡೆಯಲು, ಅದನ್ನು ಬೆಳೆಸಲು, ಒಂದು ಬಹು ಸುಂದರ ಉಪಾಯ ಹುಡುಕಿಕೊಂಡಿದ್ದಾನೆ ಅದೇ ಉಡುಗೊರೆ;

ಅದು ಸಂಗೀತ, ಸಾಹಿತ್ಯ, ಮಾತು, ಚಿತ್ರಕಲೆಯ ಮೂಲವಾದರೂ ಸರಿ. ಅಥವಾ ಒಂದು ವಸ್ತು ರೂಪದಲ್ಲಾದರೂ ಸರಿ. ಉಡುಗೊರೆಯ
ಮೂಲಕ ತನ್ನಲ್ಲಿ ಮೂಡಿದ ಪ್ರೀತಿಯನ್ನು ತಾನು ಪ್ರೀತಿಸುವ ಜೀವಕ್ಕೆ ತಿಳಿಸಲು ಹವಣಿಸುತ್ತಾನೆ.
ಈ ಪ್ರೀತಿ ಅಭಿವ್ಯಕ್ತಿಯಲ್ಲಿ ತನ್ನಿಷ್ಟದ ಜೀವಕ್ಕೆ, ಉಡುಗೊರೆ ಕೊಟ್ಟು, ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುವ ಬಗೆ ಇಂದು ನಿನ್ನಯದಲ್ಲ.

ಪುರಾಣ ಕಾಲದಲ್ಲಿ ಪಾರ್ವತಿ ಶಿವನ ಕುರಿತು ತಪಸ್ಸು ಮಾಡುವಾಗ ಆತನನ್ನು ಒಲಿಸಿಕೊಂಡು ಅವನ ಪ್ರೀತಿ ಸಾಂಗತ್ಯದ ಅಭಿಲಾಷಿಯಾಗಿ ಅಪರೂಪದ ಫಲ ಪುಷ್ಪಗಳನ್ನು ಆತನಿಗೆ ಉಡುಗೊರೆಯಾಗಿ ಸಮರ್ಪಿಸಿದಳಂತೆ!

ಅಂತೆಯೇ, ಕೃಷ್ಣ ರಾಧೆಯ ಪ್ರೇಮಕಥೆಯಲ್ಲಿ ಬರುವ ವೈಜಯಂತಿ ಹಾರ ಮತ್ತು ಕೊಳಲು ಕೂಡ ಪರಸ್ಪರ ಕೊಟ್ಟು ಪಡೆದ ಪ್ರೀತಿಯ ಉಡುಗೊರೆಗಳೇ. ಕೃಷ್ಣ-ರುಕ್ಮಿಣಿ- ಸತ್ಯಭಾಮೆಯ ಪಾರಿಜಾತದ ಕಥೆ, ದುಶ್ಯಂತ ಶಾಕುಂತಲೆಯ ಪ್ರೇಮಕಥೆಯಲ್ಲಿ ಬರುವ ಉಂಗುರದ ಉಲ್ಲೇಖಗಳನ್ನು ಕೇಳಿದಾಗ ಪ್ರೇಮ ನಿವೇದನೆಗೆ, ಸಾಮರಸ್ಯ ತುಂಬಿದ ಜೀವನಕ್ಕೆ ಉಡುಗೊರೆ ಎಂಬುದು ಅದೆಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ.
ಇದೇ ಹಿನ್ನೆಲೆಯಲ್ಲಿ ಹುಟ್ಟಿದ ಒಂದು ಅಪರೂಪದ ಸಂಪ್ರದಾಯ, ಕಲೆ, ರೂಡಿ ವೇಲ್ಸ್ ದೇಶದಲ್ಲಿ ಕಂಡುಬರುತ್ತದೆ.
ಈ ಸಂಪ್ರದಾಯ ಶುರುವಾದದ್ದು ಹದಿನಾರನೇ ಶತಮಾನದ ಅಂತ್ಯದಲ್ಲಿ. ಬೇಸಾಯ, ಹೈನುಗಾರಿಕೆ, ಗಣಿಗಾರಿಕೆ, ಮತ್ತು ನಾವಿಕ ವೃತ್ತಿಯೇ ಮುಖ್ಯವಾಗಿದ್ದ ವೇಲ್ಸ ದೇಶದಲ್ಲಿ, ಅಕ್ಟೋಬರ್ ತಿಂಗಳು ಕಳೆಯುವ ಹೊತ್ತಿಗೆ ಒಂದು ರೀತಿಯ ಬೇಸರದ ಛಾಯೆ ಆವರಿಸುತ್ತಿತ್ತು. ಕಾರಣ ಇಲ್ಲಿ ಆಗ ಚಳಿಗಾಲ ಶುರುವಾಗುತ್ತದೆ. ಮಧ್ಯಾನ್ಹ ಎರಡಕ್ಕೆ ಆವರಿಸುವ ಕತ್ತಲು, ಮತ್ತು ಹವಾಮಾನ ವೈಪರಿತ್ಯ, ಶ್ರಮಜೀವಿಗಳನ್ನು ಏಕತಾನತೆ ಮತ್ತು ಖಿನ್ನತೆಗೆ ನೂಕುತ್ತಿತ್ತು.
Courtesy: Paul Curtis
ಅದೇ ಸಂದರ್ಭದಲ್ಲಿ, ಅಲ್ಲಿಯ ಕ್ರಿಯಾಶೀಲ ಯುವಕನೊಬ್ಬ, ಸುಮ್ಮನೆ ಕೂರಲಾಗದೆ ಮನೆಯ ಮೂಲೆಯಲ್ಲಿ ಬಿದ್ದಿದ್ದ ಪುಟ್ಟ ಮರದ ತುಂಡಿನಲ್ಲಿ, ಕಲಾತ್ಮಕ ಚಮಚೆ/ಸೌಟೊಂದನ್ನು ತಯಾರಿಸಿದ. ಇದು ಬರಿಯ ಚಮಚೆ ಆಗಿರದೆ ಅತ್ಯಂತ ಸೂಕ್ಷ್ಮ ಕುಸುರಿ  ಕೆತ್ತನೆಗಳನ್ನು ಒಳಗೊಂಡ ಸುಂದರ ಕಲಾಕೃತಿಯಂತೆ ತಯಾರಿಸಲ್ಪಟ್ಟಿತ್ತು.

ತಾನು ತಯಾರಿಸಿದ ಈ ಚಮಚೆಯನ್ನು ತನ್ನ ಪ್ರೇಯಸಿಗೆ ಕಾಣಿಕೆಯ ರೂಪದಲ್ಲಿ ನೀಡಿ ಆಕೆ ಅವನ ಮನಸನ್ನು ಬಗೆದಷ್ಟೂ ಸಿಗುವ ಪ್ರೀತಿಯ ಅಗಾಧತೆಯನ್ನು ತಿಳಿಸಿದ. ಆಕೆಯನ್ನು ಮೆಚ್ಚಿಸಲು ರಮಿಸಲು ಮಾಡಿದ ಈ ಪ್ರಯತ್ನ ಯಶಸ್ವಿಯಾಗಿತ್ತು.

ತನಗಾಗಿ ಸಮಯ ಕೊಟ್ಟು ಪ್ರಿಯಕರ ತಯಾರಿಸಿದ ಈ ವಿಶಿಷ್ಟ ವಸ್ತುವನ್ನು ಕಂಡು ಅವನ ಪ್ರೇಯಸಿ ತುಂಬಾ ಖುಶಿಯಾಗಿ, ತನ್ನೆಲ್ಲ ಗೆಳತಿಯರ ಬಳಗಕ್ಕೂ ಇದನ್ನು ಹೆಮ್ಮೆಯಿಂದ ತೋರಿಸಿಕೊಂಡು ಬಂದಳು.

ಈ ಯುವಕ ಸಮಾಜದ ಇತರ ಯುವಕರಿಗೆ/ಪ್ರೇಮಿಗಳಿಗೆ ಮಾದರಿಯಾದ. ಅವನಂತೆ ಇತರರೂ ತಮ್ಮ ಈ ಚಳಿಗಾಲದ ಏಕತಾನತೆ ಕಳೆಯಲು ಈ love spoons ತಯಾರಿಕೆಯಲ್ಲಿ ನಿರತರಾದರು. ಜೊತೆಗೆ ಈ ಕಲಾಕೃತಿಗಳನ್ನು ತಮ್ಮ ಪ್ರೇಯಸಿಯರಿಗೆ ಕೊಡುವ ಹುಮ್ಮಸ್ಸಿನಲ್ಲಿ, ಹಲವು ಅಪರೂಪದ ವಿನ್ಯಾಸಗಳು, ಮಾದರಿಗಳು ಸೇರಿಕೊಂಡವು. ಅಲ್ಲಿನ ಪ್ರಸಿದ್ಧ ಪ್ರೇಮ ಕಥೆಯ ದ್ಯೋತಕದಂತೆ ಈ ಕೆತ್ತನೆಗಳು ಮೂಡಿಬಂದವು.
ಅಲ್ಲಿಂದ ಈ  'ಲವ್ ಸ್ಪೂನ್'  ಎಂಬ  ಕಾಷ್ಠ ಕಲೆ. ವೇಲ್ಸ್ ದೇಶದ ಜನಪದ ವೈಶಿಷ್ಟಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು.
ಪ್ರೇಯಸಿಗೆ ಕೊಡಲು ಮಾಡಿದ ಈ ಲವ್ ಸ್ಪೂನ್ ಕೆಲ ಸಮಯದ ನಂತರ ಪ್ರೀತಿ ಮತ್ತು ಸಾಮರಸ್ಯ, ಗೌರವ ಆದರ ಇರುವ ಎಲ್ಲ ಬಾಂಧವ್ಯಗಳಲ್ಲೂ. ಶುಭಕಾರ್ಯಗಳಲ್ಲಿ, ಸವಿಗಳಿಗೆಗಳಲ್ಲಿ ಪರಸ್ಪರ ಉಡುಗೊರೆಯಾಗಿ ನೀಡುವ ಕ್ರಮ ಶುರುವಾಯಿತು.

ಪ್ರತಿ ಸೌಟಿನಲ್ಲಿ ಇರುವ ಕೆತ್ತನೆಗೆ ಅದರದೇ ಆದ ಅರ್ಥ ಮತ್ತು ಪ್ರಾಮುಖ್ಯತೆ ಇದೆ.
ಉದಾಹರಣೆಗೆ;
• ಹೃದಯ - ಪ್ರೀತಿಯ ದ್ಯೋತಕ
• ಎರಡು ಬಟ್ಟಲ ವಿನ್ಯಾಸ - ಸಾಂಗತ್ಯ ಮತ್ತು ನಂಬಿಕೆ
• ಸರಪಳಿ ವಿನ್ಯಾಸ - ಪ್ರಾಮಾಣಿಕತೆ ಮತ್ತು ನಂಬಿಕೆ
• ವಜ್ರಾಕೃತಿ - ಸಮೃದ್ಧಿ ಮತ್ತು ಸುಗಮ ಜೀವನದ ಹಾರೈಕೆ
• ಬೀಗ ಮತ್ತು ಬೀಗದ ಕೈ - ಮನೆಯ ಸ್ವಾಸ್ಥ್ಯ, ಶಾಂತಿ ಮತ್ತು ಸಹಬಾಳ್ವೆ.
• ಚಕ್ರ - ಕೆಲಸ ಕಾರ್ಯದಲ್ಲಿ ಶ್ರದ್ಧೆ, ಉನ್ನತಿ

ಹೀಗೆ ಅಸಂಖ್ಯ ಸಾಂಕೇತಿಕ ಅರ್ಥಗಳನ್ನು ಬಿಂಬಿಸುವ ಈ ಕಲಾತ್ಮಕ ಚಮಚೆಗಳ ಜೊತೆಗೆ ವೇಲ್ಸ್ ದೇಶದ ಹಿರಿಮೆ ಬಿಂಬಿಸುವ ರಾಷ್ಟ್ರೀಯ ಚಿಹ್ನೆಗಳನ್ನು ಕೂಡ ಸೇರಿಸಲಾಯಿತು.
ನೀರಸ ಚಳಿಗಾಲ ಕಳೆದು, ವಸಂತಾಗಮನವನ್ನು ಸಾರುವ ಡಾಫುಡಿಲ್ಸ್ ಹೂವು. ಡ್ರಾಗನ್, ಕೆಲ್ಟಿಕ್ ಶೈಲಿಯ ಕೆತ್ತನೆಗಳು ಈ ಕಲೆಯನ್ನು ವೇಲ್ಸ್ ದೇಶದ ಕಲಾಭಿವ್ಯಕ್ತಿಯ ಪ್ರತೀಕವಾಗಿಸಿವೆ.

ಸುಮಾರು ಐದು ಶತಮಾನದ ಇತಿಹಾಸ ಇರುವ ಈ ವಿಶಿಷ್ಟ ಕಲೆಯನ್ನು ಇಲ್ಲಿನ ಆಸಕ್ತ ಕಲಾವಿದರು ಅಷ್ಟೇ ಅಸ್ಥೆಯಿಂದ ತಮ್ಮ ಹಿರಿಯರಿಂದ ಕಲಿತು ಮುಂದುವರಿಸಿಕೊಂಡು ಬಂದಿದ್ದಾರೆ.

ನಾನು ಒಂದು ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲು ವೇಲ್ಸ್ ದೇಶದ ಒಂದು ಹಳ್ಳಿಗೆ ಭೇಟಿ ಕೊಟ್ಟಾಗ ಅಲ್ಲಿ ಈ ಕಲೆಯ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇದ್ದವು. ಅಲ್ಲಿದ್ದ 70ರ ಹರೆಯದ ಲವ್ ಸ್ಪೂನ್ ತಯಾರಿಸುವ ಕಲಾವಿದನೊಬ್ಬ ನನಗೆ ಈ ಕಲೆ ಹುಟ್ಟಿ ಬೆಳೆದು ಬಂದ ಕಥೆಯನ್ನು ಹೇಳಿದ. ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಗಾದೆ ಮಾತೊಂದು ಆ ನಿಮಿಷದಲ್ಲಿ ನೆನಪಾಯಿತು:

ಕೆಲಸವಿಲ್ಲದ ಬಡಗಿ... ತನ್ನ ಪ್ರಿಯತಮೆಯ ಮುಖದಲ್ಲೊಂದು ನಗು ನೋಡಲು ದೇಶವೇ ಹೆಮ್ಮೆ ಪಡುವ ಅನನ್ಯ ಕಲೆಯೊಂದನ್ನು ತನಗೇ ಗೊತ್ತಿಲ್ಲದೆ ಶುರುಮಾಡಿದ.  ಅದು ಇಂದು ಅದೆಷ್ಟೋ ಜನರಿಗೆ ಕೆಲಸ ಕೊಟ್ಟು ಕಾಪಾಡಿದೆ.

ಅಮಿತಾ ರವಿಕಿರಣ್, ಬೆಲ್ಫಾಸ್ಟ್,ಯುಕೆ

ಚಿತ್ರ ಕೃಪೆ: ಪಾಲ್ ಕರ್ಟಿಸ್ ಅವರ ಜಾಲ ತಾಣ. (ಅವರ ವೈಯಕ್ತಿಕ ಅನುಮತಿಯೊಂದಿಗೆ.)
*ಕಬೀರ್ ದಾಸನ ಒಂದು ದೋಹಾ ಹೀಗಿದೆ:
पोथी पढ़ पढ़ जग मुआ, पंडित भया न कोय
ढाई अक्षर प्रेम का, पढ़े सो पंडित होय
(ಪುಸ್ತಕ ಓದಿ ಯಾರೂ ಪಂಡಿತರಾಗಿಲ್ಲ. ಪ್ರೇಮದ ಎರಡೂವರೆ ಅಕ್ಷರಗಳನ್ನು ಕಲಿತವನೇ ಪಂಡಿತ.)

ವಸುಧೇಂದ್ರ: ಕತೆಗಳಿಂದ ಕಾದಂಬರಿಗೆ

ಕತೆ

ನಾನು ಹತ್ತನೇ ಕ್ಲಾಸ್ ತನಕ ಕನ್ನಡ ಮಾಧ್ಯಮದಲ್ಲಿ ಓದಿದೆ. ನಮ್ಮೂರಲ್ಲಿ ಇಂಗ್ಲಿಷ್ ಮೀಡಿಯಂ ಕಾನ್ವೆಂಟ್ ಇತ್ತು, ಆದರೆ ಅಲ್ಲಿ ತಿಂಗಳಿಗೆ ಎಂಟು ರೂಪಾಯಿ ಫೀಸ್ ಇತ್ತು, ಅಷ್ಟು ಕೊಡಕ್ಕೆ ಆಗಲ್ಲ ಸರಕಾರಿ ಶಾಲೆಗೆ ಹೋಗು ಅಂತ ಕಳಿಸಿಬಿಟ್ರು. ಮಗು ಮುಂದೆ ಏನಾಗಬೇಕು ಏನು ಮಾಡಬೇಕು ಆ ಯೋಚನೆಗಳೇ ಇಲ್ಲ, ಸುಮ್ಮನೇ ಓದಬೇಕು, ಅಷ್ಟೇ.

ಮನೆಯಲ್ಲಿ ಸಾಹಿತ್ಯವನ್ನು ಓದುವಂತಹ ವಾತಾವರಣ, ನಮ್ಮ ತಾಯಿ ತುಂಬಾ ಓದೋರು, ಅವರು ಓದ್ತಾ ಇದ್ರೆ ನನಗೆ ಓದೋಕ್ಕೆ ಬಂತು. ನಮ್ಮ ಮನೆಯಲ್ಲಿ ದಿನಪತ್ರಿಕೆ ಕೂಡ ಸಾಧ್ಯವಿರಲಿಲ್ಲ, ಒಂಥರ ಬಡತನ. ಗ್ರಂಥಾಲಯದಿಂದ ತಂದು ಓದೋದು ಅಷ್ಟೇ.

ನಾನು ಲೇಖಕನಾಗುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ, ಸಾಫ್ಟ್ವೇರ್ನಲ್ಲಿ ಸೇರಿಕೊಂಡು ಮೂರು ವರ್ಷ ಆಗಿತ್ತು, ಏನು ಮಾಡ್ತಿಲ್ಲ, ಬರೀ ರೊಟೀನ್ ಮಾಡ್ತಾ ಇದ್ದೇನೆ ಅಂತ ಕಾಡೋಕೆ ಶುರುವಾಯಿತು. ಇದೇನು, ಬೆಳಿಗ್ಗೆ ಹೋಗೋದು, ರಾತ್ರಿ ಬರೋದು, ಹಿಂಗೆ ಆಗ್ತಿದೆಯಲ್ಲ, ನಂದೊಂದು ಐಡೆಂಟಿಟಿ ಬೇಕಲ್ಲ ಅಂತ ಹುಡುಕಾಟ ಶುರುವಾಯಿತು. ಐಡೆಂಟಿಟಿ ಕ್ರೈಸಿಸ್ ಅದು. ನನಗೆ ಏನ್ ಮಾಡಬಹುದು ನಾನು ಅಂದುಕೊಂಡಾಗ, ಬರೆಯಲು ಶುರು ಮಾಡಬೇಕು ಅನಿಸಿತು,

ಚಿಕ್ಕಂದಿನಲ್ಲಿ ಎಂಟೋ ಒಂಬತ್ತನೇ ಕ್ಲಾಸಲ್ಲಿ ಅಸೈನ್ಮೆಂಟ್-ಗೆ ಒಂದು ಕಥೆ ಬರೆದಿದ್ದೆ. ತುಂಬ ಚೆನ್ನಾಗಿದೆ ಎಂದು ಗುರುಗಳು ಹೇಳಿದ್ರು. ಅವಾಗ ಅದು ತರಂಗದಲ್ಲಿ ಪ್ರಕಟವಾಗಿತ್ತು. ಅದು ನನಗೆ ತಲೆಯಲ್ಲಿ ಇತ್ತು. ಕಥೆ ಬರೆಯೋಕೆ ಬರುತ್ತೆ, ಟ್ರೈ ಮಾಡೋಣ ಅಂತ ಮತ್ತೆ ಬರೆಯಲು ಶುರುಮಾಡಿದೆ.

ನನಗೆ ಯಾವ ಸಾಹಿತಿಗಳೂ ಗೊತ್ತಿರಲಿಲ್ಲ, ತರಂಗದಲ್ಲಿ ಅವಾಗ ಲೇಖಕರ ಅಡ್ರೆಸ್ ಹಾಕ್ತಾ ಇದ್ರು. ನನಗೆ ಯಾರು ಇಷ್ಟ ಆಗ್ತಾರೋ ಅವರಿಗೆ ಒಂದು ಲೆಟರ್ ಹಾಕಿ ನಾನು ಹಿಂಗೆ ಕಥೆ ಬರೆದಿದ್ದೀನಿ, ನೀವು ಓದ್ತೀರಾ, ಅಂದ್ರೆ, ಕಳಿಸಿಕೊಡಿ ಅಂದ್ರು, ಕಳಿಸಿಕೊಟ್ಟ ಮೇಲೆ, ಚೆನ್ನಾಗಿ ಬರೀತೀಯಾ, ಮುಂದುವರೆಸು ಅಂದರು. ಆ ಒಂದು ಭರವಸೆ ಸಿಕ್ಕ ತಕ್ಷಣ ನಾನು ಸಿಕ್ಕಾಪಟ್ಟೆ ಬರೆಯುತ್ತ ಹೋದೆ.

ಐಟಿನಲ್ಲಿ ೧೨ರಿಂದ ೧೪ ಗಂಟೆ ಕೆಲಸ ಮಾಡ್ತಿದ್ದರಿಂದ ಬರೆಯುವುದು ಕಷ್ಟ ಇತ್ತು. ನನಗೆ ಬರೆಯುವ ಸಮಯ ಸಿಕ್ಕಿದ್ದು ಇಂಗ್ಲೆಂಡ್ ನಲ್ಲಿ ಪೋಸ್ಟ್ ಮಾಡಿದಾಗ. ಇಂಗ್ಲಂಡಿನಲ್ಲಿ ಸರಿಯಾಗಿ ಐದುವರೆಗೆ ಕೆಲಸ ಮುಗಿಸಿಬಿಡ್ತಾರೆ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ಗಂಟೆ ಆದ್ರೆ ಮುಗಿದು ಹೋಗ್ಬಿಡ್ತು. ನನಗೆ ಎಷ್ಟು ಫ್ರೀ ಟೈಮ್ ಇರ್ತಿತ್ತು ಅಂತಂದ್ರೆ ನನ್ನ ಪ್ಯಾಶನ್ ಕಾಡೋಕೆ ಶುರುವಾಯಿತು. ಅವಾಗ ಅದೇ ಇಂಟರ್ನೆಟ್ ಬಂದಿತ್ತು ಇಲ್ಲಿಂದ ನಾನು ಬರೆದು ಕಳಿಸಿಕೊಡ್ತಾ ಇದ್ದೆ, ಆ ತರ ಶುರುವಾಯಿತು. ದೆನ್ ಐ ಬಿಕೇಮ್ ವೆರಿ ಸೀರಿಯಸ್. ನಾನು ಇಂಗ್ಲಂಡಿನಲ್ಲಿದ್ದ ಮೂರು ನಾಲ್ಕು ವರ್ಷ ತುಂಬಾ ಬರೆದುಬಿಟ್ಟೆ. ಸುಮಾರು ಒಂದು ಮೂರು ಪುಸ್ತಕ ಬರೆದುಬಿಟ್ಟೆ. ಭಾಷಾಂತರ ಮಾಡಿದೆ. ಕಾನ್ಫಿಡೆನ್ಸ್ ಬಂತು.

ಪ್ರಕಟ ಮಾಡಕ್ಕೆ ಯಾರು ಮುಂದೆ ಬರಲಿಲ್ವಲ್ಲ! ಇಂಗ್ಲಂಡಿಂದ ಹೋಗಿದ್ದೀನಿ, ಬೇಕಾದಷ್ಟು ಹಣ ಗಳಿಸಿದ್ದೆ, ಹಣಕ್ಕೆ ಸಮಸ್ಯೆನೇ ಇರಲಿಲ್ಲ. ನಾನೇ ಪ್ರಕಟಣೆ ಶುರು ಮಾಡ್ಕೊಂಡೆ. ಪ್ರಕಾಶನ ಗೊತ್ತಿರಲಿಲ್ಲ. ಪ್ರಕಾಶನ ಶುರು ಮಾಡ್ಕೊಂಡೆ. ಭಾರತಕ್ಕೆ ಹೋದ ಮೇಲೆ ತುಂಬಾ ಓದುಗರು ಇದ್ದಾರೆ ನನಗೆ ಅಂತ ಗೊತ್ತಾಯ್ತು. ನಾನು ಪ್ರಕಟ ಮಾಡಿದ ಪುಸ್ತಕಗಳು ಆರು ತಿಂಗಳಲ್ಲಿ ಮುಗಿದು ಹೋಗಿಬಿಡುತ್ತಿತ್ತು. ಅದು ತುಂಬಾ ಚೆನ್ನಾಗಿ ಕೆಲಸ ಮಾಡಿತು. ಆಮೇಲೆ ಬೇರೆಯವರದೆಲ್ಲ ಪ್ರಕಾಶನ ಮಾಡೋಕೆ ಶುರು ಮಾಡಿದೆ. ಪ್ರಕಾಶನದಿಂದ ಬದುಕಬಲ್ಲೆ ಅಂತ ಗೊತ್ತಾಯ್ತು. ಬುಕ್ ಅರ್ನಿಂಗ್ಸ್ ನನಗೆ ಬೇಕಾದಷ್ಟು ಆಗುತ್ತೆ.

ಈ ಕಾರ್ಪೊರೇಟ್ ಮೈಂಡ್ ಸೆಟ್ ಮತ್ತು ಈ ಕಥೆ ಬರೆಯುವ ಮೈಂಡ್ ಸೆಟ್ ಎರಡು ಬೇರೆ ವಿರುದ್ಧಗಳು. ಕಾರ್ಪೊರೇಟ್-ನಲ್ಲಿ ಹಣನೇ ಮುಖ್ಯ. ಸಾಹಿತ್ಯದಲ್ಲಿ ಹಣಕ್ಕೆ ಅಷ್ಟು ಬೆಲೆನೇ ಇರಲ್ಲ ಸಾಹಿತ್ಯದಲ್ಲಿ ನೈತಿಕತೆಯೇ ಬೇರೆ. ಎರಡೂ ಪ್ರಪಂಚಕ್ಕೆ ಕ್ಲಾಶ್ ಆಗ್ತಾ ಇದೆ ತುಂಬಾ ಅನಿಸ್ತು. ಕಳೆದ ೧೦ ವರ್ಷ ಪೂರ್ತಿ ಬರವಣಿಗೆ, ಓದು ಮತ್ತು ತಿರುಗಾಟ. ಬೇಕಾದಷ್ಟು ತಿರುಗುತ್ತೀನಿ.

ಕಾದಂಬರಿ

ಹಿಂದೊಮ್ಮೆ ಹರಿಚಿತ್ತ ಸತ್ಯ ಅಂತ ಕಾದಂಬರಿಯನ್ನು ಬರೆದಿದ್ದೆ. ಅದು ಒಂದು ೧೬೦ ಪುಟದಷ್ಟು ಚಿಕ್ಕ ಕಾದಂಬರಿ. ವಿವೇಕ್ ಶಾನುಭಾಗ ಆಗ ದೇಶಕಾಲ ಅಂತ ಮ್ಯಾಗಸಿನ್ ತರ್ತಿದ್ದರು. ಒಂದು ಸ್ಪೆಷಲ್ ಎಡಿಷನ್-ಗೆ ನೀನು ಒಂದು ಕಾದಂಬರಿ ಬರ್ಕೊಡು ಅಂದರು. ನಾನು ಅಲ್ಲಿಯತನಕ ಕಾದಂಬರಿಯನ್ನು ಬರೆದಿರಲಿಲ್ಲ. ಆಗ ನಾನು ಕ್ಲಿನಿಕಲ್ ಡಿಪ್ರೆಶನ್-ನಲ್ಲಿದ್ದೆ. ಆ ಡಿಪ್ರೆಶನ್-ನಿಂದ ಹೊರಗೆ ಬರೋದಕ್ಕೆ ನೀವು ಒಂದು ಕಾದಂಬರಿ ಬರಿ, ಡಿಪ್ರೆಶನ್-ನಿಂದ ಹೊರಬರಲು ಸಹಾಯ ಮಾಡಬಹುದು ಅಂತ ಒಂಥರ ಬಲವಂತ ಮಾಡಿದರು. ಡಿಪ್ರೆಶನ್-ನಲ್ಲಿ ಏನು ಮಾಡೋಕೂ ಇಷ್ಟ ಆಗಲ್ಲ. ನಮ್ಮ ಅಕ್ಕ ಬಿಜಾಪುರದಲ್ಲಿ (ಈಗ ವಿಜಯಪುರ) ಇದ್ರು. ಬಿಜಾಪುರಕ್ಕೆ ಹೋಗಿ ಕೂತ್ಕೊಂಡು ಬರೆದೆ. ಜನಕ್ಕೆ ಇಷ್ಟ ಆಯಿತು.

ಅದು ನಮ್ಮ ತಂದೆ ತಾಯಿಯ ಕಥೆ. ಅವರದು ವಿಚಿತ್ರ ಕಥೆ.

ನನ್ನ ತಾಯಿ ಬಳ್ಳಾರಿಯಲ್ಲಿ ೧೦ನೇ ತರಗತಿಯವರೆಗೆ ಓದಿದ್ರು. ನಮ್ಮಪ್ಪ ಇದ್ದಿದ್ದು ಸೊಂಡೂರಲ್ಲಿ. ಸೊಂಡೂರು ಅಂದ್ರೆ ಹಳ್ಳಿ, ಬಳ್ಳಾರಿ ಪಟ್ಟಣ. ನನ್ನ ತಾಯಿಗೆ ಸೊಂಡೂರಿನಲ್ಲಿ ಜೀವನ ಮಾಡಲು ಇಷ್ಟ ಇರಲಿಲ್ಲ. ಅಷ್ಟೇ ಅಲ್ಲ, ನಮ್ಮ ತಂದೆಗೆ ಚಿಕ್ಕಂದಿನಿಂದ ತಲೆ ತುಂಬಾ ಬಿಳಿ ಕೂದಲು. ನಮ್ಮಮ್ಮ ನಮ್ಮಪ್ಪನನ್ನು ರಿಜೆಕ್ಟ್ ಮಾಡ್ಬಿಟ್ರು.

ನನ್ನ ಅಪ್ಪ ಬೇರೆ ಮದುವೆ ಮಾಡ್ಕೊಂಡ್ರು. ಅವರಿಗೆ ನಾಲ್ಕು ಮಕ್ಕಳಾದವು. ಒಂದ್ಸಲ ಇಡೀ ಕುಟುಂಬ ಇನ್ನಷ್ಟು ಕುಟುಂಬಗಳ ಜೊತೆ ಸೇರಿ ಹಂಪಿಗೆ ಹೋಗ್ತಾರೆ. ಅಲ್ಲಿ ತೆಪ್ಪದಲ್ಲಿ ಕೂತು ಹೋಗಬೇಕು. ಆಗ ಗಂಡಸರು ಏನು ಮಾಡಿದ್ರು ಅಂದ್ರೆ, ಹೆಂಗಸರು ಮಕ್ಕಳು ಮೊದಲು ಹೋಗ್ಬಿಡ್ಲಿ, ಆಮೇಲೆ ಗಂಡಸರು ಹೋಗೋಣ, ಅಂತ ಎಲ್ಲಾ ಹೆಂಗಸರು ಮಕ್ಕಳನ್ನ ಕಳಿಸಿಬಿಟ್ಟಿದ್ದಾರೆ.

ತೆಪ್ಪದಲ್ಲಿ ಹೋಗಬೇಕಾದರೆ, ತೆಪ್ಪದಲ್ಲಿದ್ದ ಎಲ್ಲ ಹೆಂಗಸರೂ ಮಕ್ಕಳೂ ಮುಳುಗಿ ಹೋಗಿದ್ದಾರೆ. ಅದರಲ್ಲಿ ಮೂರು ಮಕ್ಕಳು ಮತ್ತು ಹೆಂಡತಿ ಇದ್ದರು. ಮುಳುಗಿದವರೆಲ್ಲರೂ ಹೋಗಿಬಿಟ್ರು. ಅಲ್ಲಿದ್ದ ಅಷ್ಟೂ ಕುಟುಂಬಗಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಸುಮಾರು ೨೫-೩೦ ಜನ ಹೋಗ್ಬಿಟ್ರು. ಇದು ನಡೆದದ್ದು ೧೯೬೫ರಲ್ಲಿ.

ಅಪ್ಪನ ಜೊತೆ ಇದ್ದ ಒಬ್ಬಳು ಮಗಳು ಮಾತ್ರ ಉಳಿದುಕೊಂಡಿದ್ದು. ಅದೇನೋ, ಆ ತನಕ ನಮ್ಮ ತಾಯಿ ಹಂಗೆ ಉಳಿದುಕೊಂಡಿದ್ರು, ಏನೋ ಕಾರಣಕ್ಕಾಗಿ ಮದುವೆನೇ ಆಗಿರಲಿಲ್ಲ. ಇಲ್ಲದಿದ್ರೆ ನಾನು ಹುಟ್ಟುತ್ತಾನೆ ಇರಲಿಲ್ಲ. ಎರಡನೇ ಮದುವೆ ಆದ್ಮೇಲೆ ಆಮೇಲೆ ನಾವೆಲ್ಲ ಹುಟ್ಟಿದ್ದು. ಇಬ್ಬರು ೨೫ ವರ್ಷಕ್ಕಿಂತ ಹೆಚ್ಚು ತುಂಬಾ ಚೆನ್ನಾಗಿ ಸಂಸಾರ ಮಾಡಿದ್ರು.

ನನಗೆ ಅದು ಒಂತರ ವಿಚಿತ್ರ ಕಥೆ ಅನ್ಸೋದು. ಅದನ್ನೆಲ್ಲ ಸೇರಿಸಿ ಒಂದಿಷ್ಟು ಫಿಕ್ಷನೈಸ್ ಮಾಡಿ ಆ ಕಾಲಘಟ್ಟ ತಗೊಂಡು ಬಂದು ಬರೆದೆ. ನಾನು ಆ ಕಾದಂಬರಿಯನ್ನು ಬರೆದಾಗ ನಮ್ಮ ತಂದೆ ಇರಲಿಲ್ಲ. ನಮ್ಮ ಅಕ್ಕಂದರಿಗೆಲ್ಲ ಗೊತ್ತು. ನಮ್ಮ ಇಡೀ ಕುಟುಂಬಕ್ಕೆ ಗೊತ್ತು. ಆ ತೆಪ್ಪದ ಅಫಘಾಥದಲ್ಲಿ ಇನ್ನೂ ಅಷ್ಟೊಂದು ಕುಟುಂಬಗಳೂ ಇದ್ದವು. ಆ ಕಾದಂಬರಿಯನ್ನು ಓದಿ ಆ ಅಪಘಾತದಲ್ಲಿ ಸಾಕ್ಷಿಯಾಗಿದ್ದವರು, ಅದರೊಳಗೆ ನಮ್ಮಮ್ಮನೂ ತೀರ್ಕೊಂಡ್ರು, ಅಂತೆಲ್ಲ ಅವರ ಕತೆಗಳನ್ನು ಹೇಳಿದರು. ಎಷ್ಟೊಂದು ಕುಟುಂಬಗಳಿಗೆ ನಾನು ಆ ಕಾದಂಬರಿಯಿಂದಾಗಿ ಹತ್ತಿರನಾದೆ. ಅದು ಒಂದು ಅನುಭವ!

ವಸುಧೇಂದ್ರ ಅಂದ್ರೆ ನಮಗೆಲ್ಲ ಇಷ್ಟ!

ಈ ವಾರದ ಪ್ರಸ್ತುತಿ ಅಪರೂಪದ ವಸುಧೇಂದ್ರ ಬಂಪರ್ ಸಂಚಿಕೆ! ಕಳೆದ ಮಾರ್ಚ್ ೧೫ನೆಯ ತಾರೀಕು (೨೦೨೫) ’ಅನಿವಾಸಿ’ಯ ಓದುಗರು, ಬರಹಗಾರರು ಮತ್ತು ಕನ್ನಡ ಸಾಹಿತ್ಯಾಸಕ್ತರು ಹಲವರು ಇಂಗ್ಲೆಂಡಿನ ಲಿಂಕನ್ ನಗರದ ಸಮೀಪದ ಸ್ಕೆಲ್ಲಿಂಗ್ಥಾರ್ಪ್ದಲ್ಲಿಯ ಸಾಹಿತಿ-ಬರಹಗಾರ್ತಿ ಡಾ ಪ್ರೇಮಲತ ಅವರ ಮನೆಯಲ್ಲಿ ವಸುಧೇಂದ್ರ ಅವರ ಭೇಟಿಗೆ ಉತ್ಸಾಹದಿಂದ ನೆರೆದಿದ್ದರು. ಅವರೊಡನೆ ನಾಲ್ಕು ತಾಸುಗಳಿಗಿಂತ ಹೆಚ್ಚು ಕಾಲ ಕಳೆದ ಸಮಯವನ್ನು ತಮ್ಮ ಜೀವನದ ಅವಿಸ್ಮರಣೀಯ ಘಳಿಗೆಗಳು ಅಂತ ತಿಳಿದುಕೊಂಡರು. ಇನ್ನುಳಿದವರಿಗೆ ಏನು ಮಿಸ್ಸಾಯಿತು ಎನ್ನುವದರ ಒಂದೆರಡು ಝಲಕ್ಕುಗಳನ್ನು ಅಲ್ಲಿ ನೆರೆದಿದ್ದವರಲ್ಲಿ ಕೆಲವರು ಕೆಳಗೆ ಹಂಚಿಕೊಂಡಿದ್ದಾರೆ.
ಮೊದಲನೆಯದಾಗಿ ಶ್ರೀವತ್ಸ ದೇಸಾಯಿಯವರು ಸಭೆಗೂ ಮುಂಚೆಯ ತಮ್ಮ ಅನುಭವದ ಬಗ್ಗೆ ಪೀಠಿಕೆಯ ರೂಪದಲ್ಲಿ ಬರೆದಿದ್ದಾರೆ. ಅದಾದ ಮೇಲೆ ಆ ಸಭೆಯ ಕಾರ್ಯಕಲಾಪಗಳ ಬಗ್ಗೆ ಶ್ರೀಮತಿ ಅನುರಾಧ ಜಗಲೂರು ಅವರ ಅನಿಸಿಕೆಗಳನ್ನು ಸುಂದರವಾಗಿ ಮತ್ತು ಸವಿಸ್ತಾರವಾಗಿ ಬರೆದಿದ್ದಾರೆ. ಡಾ ಪ್ರೇಮಲತಾ ಬಿ ಅವರು ತಮ್ಮ ಫೇಸ್ ಬುಕ್ ಲೇಖನವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆಮೇಲೆ ವಸುಧೆಂದ್ರ  ಅವರ ಪುಸ್ತಕದ ತಮ್ಮ ಕಾಪಿಯ ಮೇಲೆ ಹಸಹಿ ಗಿಟ್ಟಿಸಿದ ಖುಷಿಯಲ್ಲಿ ಒಂದು  ಚಿಕ್ಕ ಲೇಖನದಲ್ಲಿ ತಮ್ಮ ಅನಿಸಿಕೆಗಳನ್ನು ಮೊದಲ ಬಾರಿ ಬರೆದಿದ್ದಾರೆ ಲೆಮಿಂಗ್ಟನ್  ಸ್ಪಾದ  ಅಮಿತ್ ರಾಮ್. ಅವರ ಲೇಖನದಲ್ಲಿ ಕಟ್ಟ ಕಡೆಯ ವಿಡಿಯೋದ ಉಲ್ಲೇಖವಿದೆ. ಕೊನೆಯ ಲೇಖನ ತಮ್ಮ ಕೆಲಸ ಮುಗಿಸಿ  ಡಾರ್ಬಿಯಿಂದ ತಡವಾದರೂ ಬಂದು ಕೂಡಿದ ರಾಂಶರಣ್ ಅವರದು.. ಎಲ್ಲರ ಲೇಖನದಲ್ಲೂ ವಸುಧೇಂದ್ರ ಅವರ ಅತಿ ಸರಳ ವ್ಯಕ್ತಿತ್ವದ ಪರಿಚಯ, ಆತ್ಮೀಯತೆ ಇವುಗಳ ಉಲ್ಲೇಖವಿದೆ. ಅದು ಸಾಕಾಗದಿದ್ದರೆ ಕೊನೆಯಲ್ಲಿ ಕೊಟ್ಟ ಗ್ಯಾಲರಿ ಫೋಟೋಗಳನ್ನು ನೋಡಿ ಭೇಟಿಯಾಗಲು ಸಾಧ್ಯವಾಗದವರು ಸಮಾಧಾನ ಪಟ್ಟುಕೊಳ್ಳ ಬಹುದು. ಕೊನೆಯದಾಗಿ ನಿಮ್ಮ ಅನಿಸಿಕೆಗಳನ್ನು ಅನಿವಾಸಿಯಲ್ಲಿ ಹಂಚಿಕೊಂಡು ಉಪಕಾರ ಮಾಡಿರಿ!(ಸಂ)

1  ಸಭೆಗೂ ಮೊದಲು — ಶ್ರೀವತ್ಸ ದೇಸಾಯಿ ಬರೆಯುತ್ತಾರೆ:

"ಶನಿವಾರ ೧೨ ಗಂಟೆಗೇ ಬಂದುಬಿಡಿ," ಅಂತ ಪ್ರೇಮಲತಾ ಹೇಳಿದ್ದರಿಂದ ಶನಿವಾರ ೧೫ ನೆಯ ಮಾರ್ಚ್ ಲೆಸ್ಟರಿನಿಂದ ಬೇಗನೆ ಹೊರಟೆ.
ಮಧ್ಯದಲ್ಲಿ ನಿಂತು ಪುಷ್ಪ, ತೀರ್ಥ ( ಪ್ರೊಸೆಕ್ಕೋ) ಧೂಪ ಇಲ್ಲ(ಧೂಮ್ರಪಾನವರ್ಜ್ಯ!) ಚಾಕಲೇಟು ಕಾರಿನಲ್ಲಿ ಹೇರಿದ್ದಕ್ಕೆ ಸ್ವಲ್ಪ ತಡವಾದರೂ ಇನ್ ಟೈಮ್ ಅನ್ಕೋತ ಹೊರಟವನಿಗೆ ಎಚ್ಚರಿಕೆ ಬಂತು ಕಾರಿನಿಂದ: ಡ್ಯಾಶ್ ಬೋರ್ಡ್ ಮೇಲೆ 'ಪಿಂಗ್' ಆತು ಕಾರಿನ ಮೆಸೇಜ್ಜ್: ಚೆಕ್ ಟೈರ್ ಪ್ರೆಶರ್ ಅಂತ. ಬ್ಲಡ್ ಪ್ರೆಶರ್ ಇನ್ನಷ್ಟು ಏರಿದ್ದು ನನಗೇ! ಮೊನ್ನೆ ತಾನೇ ಇನ್ನೊಂದು ಟಯರಿಗೆ ಚುಚ್ಚಿದ್ದ ಮೊಳೆ ಕಿತ್ತಿಸಿ ರಿಪೇರ್ ಮಾಡಿಸಿದ್ದೆ. ಇದೇನಪ್ಪಾ ಮತ್ತೆ ಅಂತ ಫುಸ್ಸೆಂದು ಗಾಳಿ ಹೋದ ಫುಗ್ಗಾದಂತೆ ಇಳಿದುಬಿಟ್ಟೆ- wind out of my sail ತರ. ಕಂಠ(ಸ್ತ)ದಲ್ಲಿ ಪಂಪನಿರದಿದ್ದರೂ ಕಾರಿನಲ್ಲಿ ಇತ್ತೀಚಿಗೆ ಯಾವಾಗಲೂ ಇಟ್ಟಿದ್ದ ಪಂಪನಿಂದ ಟಯರ್ಗೆ ಗಾಳಿ ಹಾಕಿ ಬಚಾವಾದೆ. ಮುಂದೆ ಮತ್ತೆ ಲೀಕ್ ಕಾಣಿಸದೆ ಪ್ರೇಮಲತಾ ಅವರ ಮನೆಯನ್ನು ಸುರಕ್ಷಿತವಾಗಿ ಮುಟ್ಟಿದೆ.
ಒಳೆಗೆ ಪಾರ್ಕ್ ಮಾಡುತ್ತಿದ್ದಾಗ ನನ್ನದು ಬರೀ ಮೂರನೆಯ ಕಾರು ಮಾತ್ರ ಅಂತ ಆಶ್ಚರ್ಯ! ಇನ್ನಾರೂ ಬಂದೇ ಇಲ್ಲವೇ ಅನ್ನುವಷ್ಟರಲ್ಲಿ ಎಂದಿನಂತೆ ರಿಲೈಯಬಲ್ ಸ್ಮಿತಾ ಮತ್ತು ಗೋಪಾಲ್ ಒಳಗೆ ಇದ್ದದ್ದು ಗೊತ್ತಾಯಿತು. ಸೇವರಿ ಡೋ ನಟ್ (ವಡೆ) ತಿನ್ನಲು ಆಮಿಷ ತೋರಿಸಿದರೂ ಸಂಕೋಚದಿಂದ ಬರಿ ಟೀ ಸಾಕೆಂದೆ. ಕಾಲು ಗಂಟೆ ತಡವಾಗಿತ್ತು ಆಗಲೇ ಅಂತ. ಮಲ್ಟಿಟಾಸ್ಕಿಂಗ್ ಪ್ರವೀಣೆಯಾದರೂ ನನಗೇ ಚಹಾ ಮಾಡಿಕೊಳ್ಳಲು ಹಚ್ಚಿದರು ಪ್ರೇಮಲತಾ! ತಾವೆಂದೂ ಟೀ ಕಾಫಿ ಕುಡಿಯದ 'ಟೀ ಟೋಟಲ್ಲರ್ ' ಅನ್ನುವ ರಹಸ್ಯ ಬಿಟ್ಟು ಕೊಟ್ಟ ಮೇಲೆ ಅರ್ಥವಾಯಿತು. ಅತ್ತ ಗೋಪಾಲ್ ಕಾಫಿ ಮಶೀನಿಗೆ ಕೈಹಾಕಿದ್ದರು ಅವರು ಆಗಲೇ ವಡೆ ತಿಂದಿದ್ದರೆಂದು ಹೇಳುತ್ತ. ಸನ್ನತಾ ಸಹ ಡೈನಿಂಗ್ ಟೇಬಲ್ ಮೇಲೆ. ಕೊನೆಗೆ ಕೋಲ್ಡ್ ಕಾಫಿ ಗಿಟ್ಟಿಸಿ ಸಮಾಧಾನ ಪಟ್ಟರು ಅವರು. ಆಮೇಲೆ ಶಶಿಧರ ಅವರ ಅನುಪಸ್ಥಿತಿಯಲ್ಲಿಯೂ ಅವರಿಗೆ ಬಿಸಿ ಪೇಯ ಸಿಕ್ಕಿತು ಅನ್ನಿ. ಅವರು ವಸುಧೇಂದ್ರರನ್ನು ಕರೆದು ಕೊಂಡು ಎಲ್ಲರೂ ಬರುವ ಮೊದಲು ಊರು ತೋರಿಸಲು ಹೋಗಿದ್ದರು. ಆ "ಎಲ್ಲರೂ" ಕೊನೆಗೆ ಆದದ್ದು ಅನುರಾಧ ಮತ್ತು ಹರ್ಷ ದಂಪತಿಗಳಷ್ಟೇ, ಲೇಟ ಅರೈವಲ್ ಲೆಮಿಂಗ್ಟನ್ ತ್ರಿಮೂರ್ತಿಗಳನ್ನು ಬಿಟ್ಟರೆ- ಅಮಿತ್ ರಾವ್, ಸಾಗರ್ ದೇಸಾಯಿ ಮತ್ತು ಸುಬ್ರಹ್ಮಣ್ಯ. (ಕೆಲಸವಿತ್ತೆಂದು ಬರಲಾಗದೆ ಆರರ ನಂತರ ಲೇಟಾಗಿ ಬಂದ ರಾಂ ರಾತ್ರಿ ಹತ್ತರ ವರೆಗೆ ಇದ್ದರೆಂದು ಆಮೇಲೆ ವರದಿ ಬಂತು! ಅವರ ಲೇಖನವೂ ಕೆಳಗೆ ಇದೆ.)
ಅದೆಷ್ಟು ದಿನ ಪರಿಶ್ರಮ ಪಟ್ಟಿದ್ದರೋ, ಪ್ರೇಮಾ ಮತ್ತು ಶಶಿಧರ ಕಿಚನ್ ತುಂಬಾ ತಿಂಡಿ ಊಟ, ಸ್ನಾಕ್ಸ್ ಹರಡಿ ಬಿಟ್ಟಿದ್ದರು. ಬಿಬಿಬಿ (ಬಿಸಿ ಬೇಳೆ ಭಾತ್), ರಸಂ, ಅನ್ನ, ಮೊಸರನ್ನ, ಚಪಾತಿ, ವಡೆ,ಇಡ್ಲಿ, ತರತರದ ಚಟ್ನಿ , ಮಸಾಲೆ ಮಜ್ಜಿಗೆ ಹೀಗೆಯೇ ನನಗೆ ಗೊತ್ತಿರದ ಕೆಲವು, ಎಲ್ಲ ಬರದಂಥ ಅತಿಥಿಗಳಿಗಾಗಿ ಕಾಯುತ್ತ ಬಿಕೋ ಅಂತಿದ್ದವು. ಅನತಿ ಸಮಯದಲ್ಲೇ ಬಂದ ಜಗಳೂರು ದಂಪತಿಗಳು ಕಾಫಿ ವಡೆ ( ನಾನೂ ಸೇರಿಕೊಂಡೆ ಚಪ್ಪರಿಸುತ್ತ ). ಮಾತಾಡುತ್ತ ಅವರು ಚುಕ್ಕ್ಕಿ ಬಾಳೆಹಣ್ಣಿನ ಕಥೆಯನ್ನು ನೆನಪಿಸಿ ಹೇಳಿದರು. ನನಗೂ ಅದು ಮಿಸ್ಸಾಗಿತ್ತು. ( ಕೇಳಿ-ಓದಿರದಿದ್ದರೆ ಕೊನೆಗೆ ಕೊಟ್ಟಿದೆ!). ನಾವ್ಯಾರೂ ಅವರನ್ನು ಈ ಮೊದಲು ಭೇಟಿಯಾಗಿರಲಿಲ್ಲ ಅಂತ ನಾನು ತಿಳಿದಿದ್ದೆ. ಹಿಂದಿನ ದಿನವಷ್ಟೇ ಪ್ರೇಮಲತಾ ಮಾತ್ರ ಅವರೊಡನೆ "The Mouse trap” ನಾಟಕ ನೋಡಿದ್ದು ಬಿಟ್ಟರೆ. ನಮ್ಮೆಲ್ಲರ ಉತ್ಸಾಹ, ನಿರೀಕ್ಷೆ ಮೀರಿ ಯಶಸ್ವಿಯಾಗಲಿದೆ ಅನ್ನುವ ಕಲ್ಪನೆಯೇ ಇರಲಿಲ್ಲ ಆಗ. ನಾಲ್ಕು ತಾಸು ಅವರೊಡನೆ ಮಾತು,(ಅದರಲ್ಲಿ ಅವರದೇ ಸಿಂಹ ಪಾಲು) ಸಾಹಿತ್ಯ, ಚರ್ಚೆ, ಹರಟೆ, ನಗೆಚಾಟಿಕೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಈ ಭೇಟಿ ನನ್ನ ಊಹೆ ಮೀರಿ ನನಗೆ ತೃಪ್ತಿ ಕೊಟ್ಟಿತು. ಇಂದು ಇದನ್ನು ಬರೆಯುತ್ತಿರುವಾಗಲೂ ಮೂರು ದಿನ ಆದರೂ ಇನ್ನೂ ಅದೇ ಗುಂಗಿನಲ್ಲಿದ್ದೇನೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಬೇರೆಯಾಗಿ ಬರೆಯಲಿದ್ದಾರೆಂದು ( ಕೆಳಗೆ ನೋಡಿ) ಇದನ್ನು ಪೂರ್ವ ಪೀಠಿಕೆ ಅಂತ ಹಂಚಿಕೊಳ್ಳುತ್ತಿದ್ದೇನೆ.
KSSVV (ಅನಿವಾಸಿಯ ಹಿಂದಿನ ರೂಪದ) ದಶಮಾನೋತ್ಸವ ಮಾಡಿದ ಮೇಲೆಯೇ ಪ್ರಥಮ ಸಲ ಭೇಟಿಯಾಗಲಿದೆ ಅಂತ ಕಾತರದಿಂದ ಎದುರು ನೋಡಿದ್ದೆ. ನನಗೆ ಮೊದಲಿನಿಂದಲೂ ಇತಿಹಾಸ ಇಷ್ಟ. ತೇಜೋ ತುಂಗಭದ್ರಾ ಮತ್ತು ರೇಷ್ಮೆ ಬಟ್ಟೆ ಎರಡನ್ನೂ ಓದಿ ಮೆಚ್ಚಿದ್ದೇನೆ. ಅದರಲ್ಲಿಯ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಅವರು ಹೆಣೆದ ರೀತಿ ನೋಡಿ ಅಚ್ಚರಿ ಪಟ್ಟಿದ್ದೇನೆ. ಎರಡನ್ನೂ ಹೆಚ್ಚು ಸಮಯ ತೊಗೊಳ್ಳದೆ ಬರೆದದ್ದು ಊಹಿಸಲೂ ಕಷ್ಟ. ಅವರ ಓದುವ ಮತ್ತು ಬರೆಯುವ ವಿಧಾನವನ್ನು ತಿಳಿದುಕೊಳ್ಳಲು ಎದುರು ನೋಡುತ್ತಿದ್ದೆ. The Silk Road ಬಗ್ಗೆ ತಿಳಿದದ್ದು ದೊಡ್ಡವರಾದ ಮೇಲೆಯೇ. ಕಾಗದ ಮಾಡಲು ಯಾವಾಗಲೋ ಕಲಿತರು ಚೀನರು ಅಂತ 'ರೇಷ್ಮೆ ಬಟ್ಟೆ’ ಯಲ್ಲಿ ಓದಿದ್ದು ನನಗೆ ವಿಶೇಷವಾಗಿ ಆಕರ್ಷಣೆ. ಯಾಕೆಂದರೆ ಚಿಕ್ಕವನಿದ್ದಾಗಿನಿಂದ ನನ್ನ ಆರ್ಕಿಯಾಲಜಿಸ್ಟ್ ತಂದೆಯವರು ಶಿಲಾ ಶಾಸನಗಳಲ್ಲಿಯೇ ಮುಳುಗಿದ್ದುದನ್ನು ನೋಡಿದೇ ಕಾರಣವಾಗಿರ ಬೇಕು. ಅದರ ಬಗ್ಗೆ ಮತ್ತು ವೃತ್ತಿಯಲ್ಲಿ ಕಣ್ಣಿನ ಡಾಕ್ಟರಾಗಿ ನಾಲ್ಕು ದಶಕ ಕಳೆದದ್ದರಿಂದ ಒಂದೆರಡು ನಾಜೂಕಾದ ವಿಷಯಗಳ ಬಗ್ಗೆಯೂ ಪ್ರಶ್ನೆ ಕೇಳುವ ಉದ್ದೇಶವಿತ್ತು.
ಈ ವಾರ ವಸುಧೇಂದ್ರ ಅವರು ತಮ್ಮ ಮಾತಿನಲ್ಲಿ ಎರಡು ಸಲ "ಭಂಡತನ" ಎನ್ನುವ ಶಬ್ದ ಉಪಯೋಗಿಸಿದರು. ನಾವಿನ್ನೂ ಚಳಿ ಚಳಿ ಅಂತ ಇಂಗ್ಲೆಂಡಿನ ಹವಾಮಾನದ ಬಗ್ಗೆ ಮಾತಾಡುತ್ತಿದ್ದಾಗ ತಮ್ಮtop ಮೇಲೆ ಒಂದು ತೆಳ್ಳಗಿನ ಹೊದಿಕೆಯೊಂದನ್ನಷ್ಟೇ ಧರಿಸಿ ಮಾರ್ಚ ಚಳಿಯಲ್ಲಿ ಕಾರಿನಲ್ಲಿ ತಿರುಗಾಡಲು ಹೋದವರು ಒಳಗೆ ಬಂದರು ಶಶಿಧರ ಅವರ ಜೊತೆಗೆ. ಇಷ್ಟರ ಮೇಲೆಯೇ ಒಬ್ಬರೇ ಕಿಲಿಮಾಂಜಾರೋ ಸಹ ಹತ್ತಿದ್ದರಂತೆ! ನಮಗೆ ಆಶ್ಚರ್ಯ! ಅನೋರಾಕ್ ಇಲ್ಲದೆ ಎಲ್ಲೂ ಹೋಗದ ನಾನು ಅವರದು "ಭಂಡತನ" ಅಂದು ಕೊಂಡೆ! ಮೊದಲು ಗ್ರುಪ್ ಫೋಟೋ ತೆಗೆಸಿಕೊಂಡು ಕಾಫಿ- ಟೀ ಕುಡಿದು ಪರಸ್ಪರ ಪರಿಚಯ ಮಾಡಿಕೊಂಡು “ಸಭೆ” ಪ್ರಾರಂಭ ಮಾಡಿದೆವು.
ಪ್ರೇಮಲತಾ ಅವರ ಕೋರಿಕೆಯ ಮೇಲೆ ಸಭೆಗೆ ಇನ್ವೋಕೇಶನ್ ಹಾಡು ಅನುರಾಧ ಜಗಲೂರು ಅವರ ಕೊರಳಿಗೆ ಬಿತ್ತು.
ಆ ಸಭೆಯ ಕಾರ್ಯಕಲಾಪಗಳ ಬಗ್ಗೆ, ಮತ್ತು ತಮ್ಮ ಅನಿಸಿಕೆಗಳನ್ನು ಅವರು ಸುಂದರವಾಗಿ ಮತ್ತು ಸವಿಸ್ತಾರವಾಗಿ ಬರೆದ ಪ್ರಬುದ್ಧ ಲೇಖನವನ್ನು ಕೆಳಗೆ ಓದಿರಿ.

ಶ್ರೀ ವಸುಧೇಂದ್ರ ಅವರೊಡನೆ ಶ್ರೀಮತಿ ಅನುರಾಧ ಜಗಲೂರು
2 ಶ್ರೀ ವಸುಧೇಂದ್ರ ಅವರೊಡನೆ ಒಂದು ಅಪೂರ್ವ ಸಂಭಾಷಣೆ - ಶ್ರೀಮತಿ ಅನುರಾಧ ಜಗಲೂರು ಬರೆಯುತ್ತಾರೆ:
‘ಐದು ಪೈಸೆ ವರದಕ್ಷಿಣೆ’ ಎಂಬ ಲಲಿತ ಪ್ರಬಂಧಗಳ ಸಂಕಲನದ ಮೂಲಕ ನನಗೆ ಲೇಖಕ ಶ್ರೀ ವಸುಧೇಂದ್ರ ಅವರ ಪರಿಚಯವಾಯಿತು. ನಂತರ ಸ್ವಲ್ಪ ದಿನಗಳಲ್ಲೇ ‘ತೇಜೋ ತುಂಗಭದ್ರಾ’ ಕಾದಂಬರಿಯನ್ನು ಓದಿ ಬಹಳ ಸಂತೋಷಪಟ್ಟೆ. ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದೆಂದರೆ ಸುಲಭವೇ? ಅದೆಷ್ಟು ಸಂಶೋಧನೆ ನಡೆಸಬೇಕು! ಒಂದರಲ್ಲೊಂದು ಹೆಣೆದುಕೊಂಡಿರುವ ನಾನಾ ಎಳೆಗಳ ಹಲವಾರು ಕಥೆಗಳನ್ನು ಹುಟ್ಟುಹಾಕಬೇಕು. ಅವುಗಳ ಮಧ್ಯೆ ನಿಜವಾಗಿಯೂ ನಡೆದ ಐತಿಹಾಸಿಕ ಘಟನೆಗಳನ್ನು ಪೋಣಿಸಬೇಕು. ಕಥೆಯಲ್ಲಿ ಬರುವ ಭಾಷೆ, ಹೆಸರುಗಳು, ಸಾಮಾಜಿಕ ನೀತಿ ನಿಯಮಗಳು ಆ ಕಾಲಕ್ಕೆ ಸರಿಹೊಂದುತ್ತವೆಯೆಂದು ಖಚಿತಪಡಿಸಿಕೊಳ್ಳಬೇಕು. ಜೊತೆಗೆ, ಸಾರ್ವಕಾಲಿಕವಾದ ಮಾನವ ಸಹಜ ಭಾವನೆಗಳನ್ನೂ, ನಡುವಳಿಕೆಯನ್ನೂ ಕಥೆಯಲ್ಲಿ ಸೇರಿಸಿ, ಸಮಕಾಲೀನ ಓದುಗರ ಹೃದಯವನ್ನು ಸ್ಪಂದಿಸಬೇಕು. ಉಪಕಥೆಗಳನ್ನು ಅಲ್ಲಲ್ಲಿ ಚಿಮುಕಿಸಿ ಅಲಂಕರಿಸಬೇಕು, ಕಥೆಯನ್ನು ಪುಷ್ಟಿಗೊಳಿಸಬೇಕು. ‘ತೇಜೋ ತುಂಗಭದ್ರಾ’ ದಲ್ಲಿ ವಸುಧೇಂದ್ರ ಅವರು ಇವೆಲ್ಲವನ್ನೂ ಎಷ್ಟು ಯಶಸ್ವಿಯಾಗಿ ಮಾಡಿದ್ದಾರೆಂದರೆ, ನಾನು ಅವರ ಖಾಸಾ ಅಭಿಮಾನಿಯಾದೆ. ಅವರ ಮತ್ತೊಂದು ಐತಿಹಾಸಿಕ ಕಾದಂಬರಿ ‘ರೇಷ್ಮೆ ಬಟ್ಟೆ’ ಹೊರಬಂದಿದೆ ಎಂದು ಕೇಳಿ ಆದಷ್ಟು ಬೇಗ ಅದನ್ನು ತರಿಸಿಕೊಂಡು ಓದಿ ಆನಂದಿಸಿದೆ.

ಓದು ಮುಗಿಸಿದ ಕೆಲವೇ ದಿನಗಳಲ್ಲಿ, ವಸುಧೇಂದ್ರ ಅವರು ಇಂಗ್ಲೆಂಡಿಗೆ ಬರುತ್ತಿದ್ದಾರೆಂದು ತಿಳಿಯಿತು. ಲಂಡನ್ನಿನಲ್ಲಿ ನಾಲ್ಕು ದಿವಸವಿದ್ದು, ತಾವು ಬಂದ ಕೆಲಸವನ್ನು ಮುಗಿಸಿ, ಲಿಂಕನ್ನಿನಲ್ಲಿ ಶ್ರೀಮತಿ ಪ್ರೇಮಲತಾ ಶಶಿಧರ್ ಅವರ ಮನೆಯಲ್ಲಿ ಒಂದು ದಿವಸ ತಂಗುವುದಾಗಿಯೂ, ಅಲ್ಲಿ ಓದುಗರನ್ನು ಭೇಟಿಯಾಗಲು ಒಪ್ಪಿದ್ದಾರೆ ಎಂಬುದೂ ತಿಳಿದು ಬಂತು. ಇತ್ತೀಚೆಗಷ್ಟೇ ಪರಿಚಯವಾಗಿದ್ದ ಶ್ರೀಮತಿ ಪ್ರೇಮಲತಾ ಅವರು ನಮ್ಮನ್ನು ಬಹಳ ವಿಶ್ವಾಸದಿಂದ ಕಾರ್ಯಕ್ರಮಕ್ಕೆ ಆಮಂತ್ರಿಸಿದರು. ಮರುಯೋಚನೆಯಿಲ್ಲದೆ ಮೂರು ಘಂಟೆ ಪ್ರಯಾಣ ಮಾಡಿ ವಸುಧೇಂದ್ರ ಅವರನ್ನು ಭೇಟಿಯಾಗಲು ಮನೆಯವರೊಂದಿಗೆ ಹೊರಟೆ. ಪ್ರೇಮ ಅವರ ಮನೆಯಲ್ಲಿ ಅದೆಂತಹ ರಸದೌತಣ! ಹೊಟ್ಟೆಗೆ ಬಿದ್ದ ಬಿಸಿಬೇಳೆ ಭಾತ್, ಕ್ಯಾರಟ್ ಹಲ್ವಾ, ಇತ್ಯಾದಿ ಊಟದ ವಿಷಯವನ್ನಷ್ಟೇ ಹೇಳುತ್ತಿಲ್ಲ! ಹಲವೇ ಆಸಕ್ತರ ಆತ್ಮೀಯ ಸಭೆಯಲ್ಲಿ ಕುಳಿತು ನಾಲ್ಕು ಘಂಟೆಗಳ ಕಾಲ ವಸುಧೇಂದ್ರ ಅವರ ಮಾತನ್ನು ಕೇಳುತ್ತ, ಅವರೊಡನೆ ಸಂಭಾಷಣೆಯಲ್ಲಿ ತೊಡಗುವ ಅವಕಾಶ ಯಾರಿಗುಂಟು ಯಾರಿಗಿಲ್ಲ!
------------------------
ಎಲ್ಲರೂ ಸೇರಿದ ಮೇಲೆ, ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವಾಗಲೇ ವಸುಧೇಂದ್ರ ಅವರು ಎಂತಹ ಸರಳ ವ್ಯಕ್ತಿ ಎನ್ನುವ ಸೂಚನೆ ಸಿಕ್ಕಿತು. ಎಲ್ಲರೂ ಕುಳಿತ ಕೂಡಲೇ ಪ್ರಶ್ನೆಗಳ ಸುರಿಮಳೆಯಾಯಿತು. ಬರೆಯುವುದಕ್ಕೆ ಅವರಿಗೆ ಪ್ರೇರಣೆ ಎಲ್ಲಿಂದ ಬಂತು? ಯಾವಾಗಿನಿಂದ ಬರೆಯಲು ಪ್ರಾರಂಭಿಸಿದರು? ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಅವರಿಗೆ ಬರೆಯಲು ಸಮಯ ಹೇಗೆ ಸಿಗುತ್ತಿತ್ತು? ಇತ್ಯಾದಿ.

ಶಾಲೆಯಲ್ಲಿದ್ದಾಗ ವಸುಧೇಂದ್ರ ಅವರು ಒಂದು ಸಣ್ಣ ಕಥೆ ಬರೆದಿದ್ದು, ಅದು ನಿಯತಕಾಲಿಕವೊಂದರಲ್ಲಿ ಬೆಳಕು ಕಂಡಿತ್ತಂತೆ, ಅದರೆ ತಾನು ಲೇಖಕನಾಗಬೇಕೆಂಬ ಆಸೆಯೇನೂ ಅವರಿಗೆ ಹುಟ್ಟಿರಲಿಲ್ಲ. ಇಂಜಿನಿಯರಿಂಗ್ ಓದಿ, ಸುಮಾರು ೨೦ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಉದ್ಯೋಗ ಸ್ವಲ್ಪ ಬೇಸರ ತರಲು ಪ್ರಾರಂಭವಾದಾಗ, ಹಿಂದೆ ಕಥೆ ಬರೆದದ್ದು, ಮಾಸ್ತರೊಬ್ಬರು ಉತ್ತೇಜನ ನೀಡಿ ಹೊಗಳಿದ್ದು ನೆನಪಿಗೆ ಬಂತು. ಮತ್ತೆ ಏಕೆ ಬರೆಯಬಾರದು ಎಂಬ ಯೋಚನೆ ಹುಟ್ಟಿ, ಬರೆಯಲು ಪ್ರಾರಂಭಿಸಿದರು.

ಅಂದುಕೊಂಡ ಮಾತ್ರಕ್ಕೆ ಉದ್ಯೋಗವನ್ನು ಕಳಚಿ ಲೇಖಕನಾಗಲು ಸಾಧ್ಯವೇ? ಹೊಟ್ಟೆ ಪಾಡು ನೋಡಬೇಕಲ್ಲ? ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕೆಲಸ, ಜೀವವನ್ನು ಹಿಂಡಿ ತಿನ್ನುವಂತಹದ್ದು. ಸಮಯದ ತೀವ್ರ ಅಭಾವ. ಆದರೆ ಬರೆಯಲೇಬೇಕೆಂಬ ಹಠ. ಹೀಗಾಗಿ, ತಮ್ಮ ಕಾರಿಗೆ ಡ್ರೈವರ್ ಒಬ್ಬನನ್ನು ಗೊತ್ತುಪಡಿಸಿ, ಪ್ರತಿದಿನ ಬನ್ನೇರುಘಟ್ಟದ ತಮ್ಮ ಮನೆಯಿಂದ ವೈಟ್ ಫೀಲ್ಡ್ ಗೆ ಹೋಗುವಾಗ ಒಂದೂವರೆ ಘಂಟೆ, ಮತ್ತೆ ರಾತ್ರೆ ಮನೆಗೆ ಹಿಂದಿರುಗುವಾಗ ಒಂದೂವರೆ ಘಂಟೆ, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಲ್ಯಾಪ್ಟಾಪ್ ಮೇಲೆ ಕಥೆ ಬರೆಯುತ್ತಿದ್ದರು. ಮೊದಲಿಗೆ ಸಣ್ಣ ಕಥೆಗಳನ್ನು ಮತ್ತು ಲಘು ಪ್ರಬಂಧಗಳನ್ನು ಬರೆದರು. ವಿವೇಕ್ ಶಾನಭಾಗ್ ಅವರ ಪ್ರೇರಣೆಯಿಂದ ಮೊದಲ ಕಿರು ಕಾದಂಬರಿ ಹೊರಬಂತು. ತಮ್ಮ ಉದ್ಯೋಗವನ್ನು ಕೈ ಬಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ದೃಢವಾಗಿ ನಿಲ್ಲುವ ಧೈರ್ಯ ಬಂದಿತು.

ವಸುಧೇಂದ್ರ ಅವರು ಮೊದಮೊದಲು ಬರೆದದ್ದೆಲ್ಲ ತಮ್ಮ, ಮತ್ತು ತಮ್ಮ ಸುತ್ತಮುತ್ತಲಿನವರ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆಗಳು. ಅವುಗಳಿಂದ ಈಚೆ ಬಂದು, ಇತರ ವಿಷಯಗಳ ಬಗ್ಗೆ ಬರೆಯುವ ಹಂಬಲ ಹುಟ್ಟಿದಾಗ ಐತಿಹಾಸಿಕ ಕಾದಂಬರಿಯನ್ನು ಬರೆಯುವ ಯೋಚನೆ ಬಂತು. ಹುಟ್ಟಿದ ಊರಿಗೂ, ಅವರ ಹೃದಯಕ್ಕೂ, ಹತ್ತಿರವಾದ ಊರು ಹಂಪೆ. ಆದ್ದರಿಂದ ಸಹಜವಾಗಿಯೇ ವಿಜಯನಗರದ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ಕಾದಂಬರಿಯನ್ನು ಬರೆಯುವ ಯೋಜನೆ ಹಾಕಿಕೊಂಡರು. ಆದರೆ ಅಲ್ಲಿಯ ರಾಜ ರಾಣಿಯರ ಬಗ್ಗೆ ಅಲ್ಲ, ಆ ಸಮಯದ ಜನಸಾಮಾನ್ಯರ ಬಗ್ಗೆ. ನೌಕರಿ ಬಿಟ್ಟಾಗಿತ್ತು. ಈಗ ಸಮಯವೋ ಸಮಯ. ಹಗಲು ರಾತ್ರಿ ಮೂರು ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಬಗ್ಗೆ ಓದಿದರು. ಆ ಸಮಯದಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರ ಬಗ್ಗೆ ಕುತೂಹಲ ಉಂಟಾಗಿ ಅವರ ಬಗ್ಗೆ ತನಿಖೆ ಮಾಡಿದಾಗ ಅವರು ಬರೆದಿಟ್ಟ ದಾಖಲೆಗಳ ದೊಡ್ಡ ಆಸ್ತಿಯೇ ದೊರಕಿತು. ಅವುಗಳ ಮೂಲಕ, ವಿಜಯನಗರದ ಜನಸಾಮಾನ್ಯರ ದಿನನಿತ್ಯ ಜೀವನದ ಬಗ್ಗೆ ಹೇರಳವಾಗಿ ವಿಷಯ ಸಂಪಾದನೆಯಾಯಿತು. ಸಂಶೋಧನೆ ಎಲ್ಲಿಗೆ ನಿಲ್ಲಿಸಬೇಕು ಎನ್ನುವುದೇ ತೋರಲಿಲ್ಲ. ಆಗ ಅವರ ಮಿತ್ರರೊಬ್ಬರು ‘ನಿನಗೆ ಈಗ ತಿಳಿದಿರುವುದು ಬೇಕಾದಷ್ಟಿದೆ. ಇನ್ನು ಮುಂದೆ ಏನಿದ್ದರೂ ನಿನ್ನ ಕ್ರಿಯಾಶೀಲತೆಯಿಂದ ಹುಟ್ಟಬೇಕಾದದ್ದು.’ ಎಂದು ಹೇಳಿದಾಗ, ‘ತೇಜೋ ತುಂಗಭದ್ರಾ’ ಬರೆಯಲು ಸಾಧ್ಯವಾಯಿತು.

ಓದುಗರಿಗೆ ಚಾರಿತ್ರಿಕ ಕಾದಂಬರಿಗಳ ಹಸಿವು ಎಷ್ಟರಮಟ್ಟಿಗೆ ಇದೆ ಎನ್ನುವುದು ವಸುಧೇಂದ್ರ ಅವರಿಗೆ ‘ತೇಜೋ ತುಂಗಭಧ್ರಾ’ಗೆ ದೊರೆತ ಸ್ವಾಗತ ಮತ್ತು ಮನ್ನಣೆಯಿಂದ ತಿಳಿದುಬಂತು. ಮತ್ತೊಂದು ಅಂತಹುದೇ ಕಾದಂಬರಿಗೆ ಓದುಗರು ಕಾತುರರಾಗಿರುವುದನ್ನು ತಿಳಿದು ಅವರಿಗೆ ಸ್ವಲ್ಪ ಗಾಬರಿಯೇ ಆಯಿತಂತೆ. ಇದನ್ನು ಯಾಕೆ ಬರೆದೆನಪ್ಪಾ, ಎನ್ನಿಸುವಷ್ಟು!

ವಸುಧೇಂದ್ರ ಅವರು ಇತ್ತೀಚಿಗೆ, ತಮ್ಮದೇ ಕಥೆ, ಕಾದಂಬರಿಗಳನ್ನು ಬರೆಯುವುದಲ್ಲದೆ, ಬೇರೆ ಭಾಷೆಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ತಮ್ಮದೇ ಪುಸ್ತಕ ಪ್ರಕಾಶನವನ್ನು ಪ್ರಾರಂಭಿಸಿ ಅದರ ಮೂಲಕ ಹೊಸ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ.

ವಸುಧೇಂದ್ರ ಅವರು ನಿಗರ್ವಿ. ತಮ್ಮ ವಿಷಯ ಹೇಳಿಕೊಳ್ಳುತ್ತಿದ್ದಾಗ, ಯಾವುದೇ ಹೆಚ್ಚುಗಾರಿಕೆಯಾಗಲೀ, ಸ್ವಪ್ರಶಂಸೆಯಾಗಲಿ ಕಂಡುಬರುವುದಿಲ್ಲ. ಅಹಂ ಅನ್ನುವುದರ ಸುಳಿವೂ ಹತ್ತಿರ ಬರುವುದಿಲ್ಲ. ಅವರ ಸಾಧನೆಗಳ ಪ್ರಸ್ತಾಪ ನಾವು ತೆಗೆದಾಗ, ಅವರ ಪ್ರತಿಕ್ರಿಯೆಯನ್ನು ನೋಡಿದರೆ, ಅವರು ಅದನ್ನು ಸಾಧಿಸಿದ್ದು ಅವರಿಗೇ ವಿಸ್ಮಯದ ಸಂಗತಿ ಎನ್ನುವ ಭಾವನೆ ಬರುತ್ತದೆ. ಅವರ ಪುಸ್ತಕಗಳು ಈ ವ್ಯಾಪ್ತಿಯಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ಅವರಿಗೆ ಮಹದಾಶ್ಚರ್ಯ ಎನ್ನುವ ಭಾವನೆ ಉಂಟಾಗುತ್ತದೆ. ಯಶಸ್ವೀ ಲೇಖಕನಾಗಬೇಕಾದರೆ ಪ್ರತಿಭೆಯ ಅಗತ್ಯ ಇಲ್ಲವೆಂದಲ್ಲ, ಆದರೆ ಧೈರ್ಯದಿಂದ ಬರೆಯಲು ಧುಮುಕಬೇಕು, ನಂತರ, ಪಟ್ಟು ಹಿಡಿದು ಬರೆಯಬೇಕು, ಅದು ಮುಖ್ಯ, ಯಶಸ್ಸಿಗೆ ಕಾರಣ ಶೇಖಡ ೯೮ ರಷ್ಟು ಭಾಗ ಪಟ್ಟು ಹಿಡಿದು ಕೆಲಸ ಮಾಡುವುದೇ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕಷ್ಟಪಟ್ಟರೆ ತಾವೂ ಅವರಂತೆಯೇ ಬರೆದುಬಿಡಬಹುದು ಎಂದು ಕೇಳಿದವರಿಗೆ ಅನಿಸಬೇಕು, ಹಾಗೆ!

ವಸುಧೇಂದ್ರ ಅವರ ಸ್ವಾರಸ್ಯಕರವಾದ ಮಾತನ್ನು ಕೇಳುತ್ತ ಕುಳಿತ ನಮಗೆ ನಾಲ್ಕು ಘಂಟೆಗಳು ಕಳೆದದ್ದು ತಿಳಿಯಲೇ ಇಲ್ಲ. ಆ ಸಮಯದಲ್ಲಿ ಅವರ ಜೀವನ ಹಾಗೂ ಬರವಣಿಗೆಯ ಹಾದಿಯ ಬಗ್ಗೆ ನಮಗೆ ತಿಳಿದು ಬಂದದ್ದು ಮೇಲೆ ಹೇಳಿರುವ ಅಂಶಗಳಷ್ಟೇ. ಮುಖ್ಯವಾಗಿ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದು ತಮ್ಮ ಸಂಶೋಧನೆಯಿಂದ ತಿಳಿದುಬಂದ, ಅವರಿಗೆ ಬಹಳ ಕುತೂಹಲಕಾರಿ ಅಥವಾ ಆಕರ್ಷಕವೆನಿಸಿದ ನೂರೊಂದು ವಿಷಯಗಳು. ವಿಷಯಗಳ ವ್ಯಾಪ್ತಿಯ ಕುರುಹು ನೀಡಲು, ಅವುಗಳಲ್ಲಿ ಕೆಲವನ್ನು, ಅವರು ವ್ಯಕ್ತಪಡಿಸಿದ ಭಾವನೆಗಳು ಮತ್ತು ಅಭಿಪ್ರಾಯಗಳೊಡನೆ ಯಾವುದೇ ವಿಶೇಷ ಕ್ರಮವಿಲ್ಲದೆ ಕೆಳಗೆ ಪಟ್ಟಿ ಮಾಡಿದ್ದೇನೆ.

1. ಪೋರ್ಚುಗೀಸರು ವ್ಯಾಪಾರಕ್ಕಾಗಿ ನೌಕಾಪಡೆಯನ್ನು ಕಟ್ಟಿ ಇಡೀ ಪ್ರಪಂಚವನ್ನು ಅನ್ವೇಷಿಸಿದ್ದು. ಮಸಾಲೆ ಪದಾರ್ಥಗಳಿಗಾಗಿ ಯೂರೋಪಿನ ದೇಶಗಳ ಮಧ್ಯೆ ಪೈಪೋಟಿ.

2. ಚೀನೀಯರ ಆವಿಷ್ಕಾರಗಳು, ರೇಷ್ಮೆ ದಾರಿ, ಸರಕುಗಳು ಎಲ್ಲಿಂದೆಲ್ಲಿಗೆ ಪ್ರಯಾಣ ಮಾಡುತ್ತಿದ್ದವು.

3. ವಿಜಯನಗರ ಸಾಮ್ರಾಜ್ಯದ ಬಗ್ಗೆ ನಾವು ಮಾತನಾಡಲಿಚ್ಛಿಸುವುದು ಅದರ ವೈಭವ, ಮತ್ತು ಕೃಷ್ಣದೇವರಾಯನ ಉತ್ತಮ ಆಡಳಿತ. ಆದರೆ ಆಗಿನ ಕಾಲದಲ್ಲಿದ್ದ ಕೆಲವು ಸಾಮಾಜಿಕ ಆಚರಣೆಗಳ ಕ್ರೌರ್ಯ.

4. ಭಾಷೆಗಳು, ಭಾಷೆಗಳ ವಿಕಾಸ.
ಬದಲಾವಣೆ ಎನ್ನುವುದು ಅನಿವಾರ್ಯ, ಯಾವುದೇ ಹೊಸ ಬದಲಾವಣೆಯಾಗಲೀ, ಅವಿಷ್ಕಾರಗಳಾಗಲೀ ಅದನ್ನು ಜನರು ಮೊದಲು ವಿರೋಧಿಸುತ್ತಾರೆ, ಆದರೆ ನಂತರ ಸ್ವೀಕರಿಸುತ್ತಾರೆ.

5. ಪೂರ್ವಜರ ಆರಾಧನೆ ಪ್ರಪಂಚಾದ್ಯಂತ ಎಲ್ಲ ಸಮುದಾಯಗಳಲ್ಲೂ ಕಂಡುಬರುವ ಬಗ್ಗೆ. ಚಾರಿತ್ರಿಕ ಕಾದಂಬರಿಗಳೆಂದರೆ ಓದುಗರಿಗೆ ಪ್ರಿಯವಾಗಿರುವುದು ಈ ಕಾರಣದಿಂದಲೇ?

6. ಹಿಂದೂ ಧರ್ಮ ಬೆಳೆದು ಬಂದ ಹಾದಿ, ಅದರ ಮೇಲೆ ಜೈನ, ಬುದ್ಧ ಧರ್ಮಗಳ ಪ್ರಭಾವ, ಅದರಲ್ಲೂ ಸಸ್ಯಾಹಾರದ ಅಭ್ಯಾಸ ಹರಡಿದ್ದು. ನಮ್ಮ ನಿಲುವು ಏನೇ ಇರಲಿ ಅದನ್ನು ಇತರರ ಮೇಲೆ ಹೇರದಿರುವುದರ ಪ್ರಾಮುಖ್ಯತೆ.

7. ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯ, ಕುಮಾರವ್ಯಾಸ, ರಾಘವಾಂಕನ ಹರಿಶ್ಚಂದ್ರ ಕಾವ್ಯವು ಓದಲು ಎಷ್ಟು ಸೊಗಸಾಗಿದೆ ಎಂಬ ವಿಷಯ.

8. ಹಿಂದಿನ ರಾಜರುಗಳಾಗಲೀ, ಇಂದಿನ ಸರ್ಕಾರಗಳಾಗಲೀ ತಮ್ಮ ಅಧಿಪತ್ಯಕ್ಕೆ ಅನುಕೂಲವಾಗುವಂತೆ ಧರ್ಮವನ್ನು ಉಪಯೋಗಿಸಿಕೊಳ್ಳುವ ರೀತಿ. ಬಹುಮತೀಯರನ್ನು ಹಿಡಿದೆತ್ತಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು. ಮನುಷ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಅರ್ಥೈಸಿಕೊಳ್ಳುವುದು. ಧರ್ಮಗಳು ಸಮಯಕ್ಕೆ ತಕ್ಕಂತೆ ಬದಲಾಯಿಸದಿದ್ದರೆ, ಅವು ಅಳಿವಾಗುವ ಸಾಧ್ಯತೆ.

9. ಲೇಖಕರಾಗಲು ಇಚ್ಛೆಪಡುವವರಿಗೆ ಒಂದು ಕಿವಿಮಾತು. ಬೇರೆಯವರು ಮಾತನಾಡಿದಾಗ ಸೂಕ್ಷ್ಮವಾಗಿ ಕೇಳಿಸಿಕೊಳ್ಳುವುದನ್ನು ಕಲಿಯಬೇಕು. ಇತರರ ಬಗ್ಗೆ ನಿಮಗೆ ನಿಜವಾದ ಆಸಕ್ತಿ ಇಲ್ಲದಿದ್ದರೆ, ನೀವು ನಂಬಿಕಾರ್ಹರಲ್ಲದಿದ್ದರೆ ಅವರು ನಿಮ್ಮಲ್ಲಿ ಏನನ್ನೂ ಹಂಚಿಕೊಳ್ಳುವುದಿಲ್ಲ, ನೀವು ಏನನ್ನೂ ಕಲಿಯಲು ಸಾಧ್ಯವಿಲ್ಲ.

10. ಸಾಹಿತಿಗಳು ಬರೆಯುವ ಎಲ್ಲ ಕೃತಿಗಳೂ ಒಂದೇ ಗುಣಮಟ್ಟದ್ದಾಗಿರುತ್ತದೆ ಎಂದು ನಿರೀಕ್ಷಿಸುವುದು ಅನ್ಯಾಯ. ಬೇಂದ್ರೆ, ಕುವೆಂಪು ಅವರ ಕಾವ್ಯಗಳಲ್ಲಿ ಕೆಲವನ್ನು ಮಾತ್ರ ನಾವು ಈಗಲೂ ನೆನಪಿಸಿಕೊಳ್ಳುತ್ತೇವೆ. ಕುಮಾರವ್ಯಾಸ ಭಾರತದಲ್ಲೂ ಹಾಗೇ, ಪ್ರತಿಯೊಂದು ಪದ್ಯವೂ ಸುಂದರವಾಗಿದೆ ಎನ್ನಲಾಗುವುದೇ? ಆದರೆ ಕೆಲವನ್ನು ಓದಿದಾಗ ಮಾತ್ರ ರೋಮಾಂಚನವಾಗುತ್ತದೆ.
---------------

ಸಂಭಾಷಣೆ ಮುಂದುವರೆಯುತ್ತಲೇ ಇತ್ತು. ಕೊನೆಗೆ ವಸುಧೇಂದ್ರ ಅವರು ‘ನನಗೆ ಯಾರ ಮಾತನ್ನೂ ಮೂರು - ನಾಲ್ಕು ಘಂಟೆಗಳ ಕಾಲ ಕೇಳುವ ಸಹನೆ ಇಲ್ಲಪ್ಪ, ನಿಮ್ಮ ಸಹನೆಯನ್ನು ನಾನು ಮೆಚ್ಚುತ್ತೇನೆ, ಇಲ್ಲಿಗೆ ನನ್ನ ಮಾತನ್ನು ಮುಗಿಸುತ್ತೇನೆ’ ಎಂದು ಖಡಾಖಂಡಿತವಾಗಿ ಹೇಳಿ ಮಾತನ್ನು ಮುಗಿಸಿಬಿಟ್ಟರು. ಆದರೂ ನಾವು ಬಿಡಲಿಲ್ಲ, ‘ಒಂದೇ ಒಂದು ಪ್ರಶ್ನೆ’ ಎಂದು ಒತ್ತಾಯಿಸಿ, ಮತ್ತೊಂದೆರೆಡು ಪ್ರಶ್ನೆಗಳನ್ನು ಕೇಳಿದೆವು. ಪ್ರಪಂಚದ ಈಗಿನ ಪರಿಸ್ಥಿತಿಯ ಬಗ್ಗೆ ನಿಮಗೆ ಏನೆನಿಸುತ್ತದೆ ಎಂದು ಕೇಳಿದಾಗ, ಭಾರತದ ಪ್ರಸ್ತಾಪವನ್ನೆತ್ತಿ, ‘ನಾವೇ ಶ್ರೇಷ್ಟರು ಎಂಬ ಭಾವನೆ ನಮ್ಮಲ್ಲಿ ಹೆಚ್ಚಾಗುತ್ತಿದೆ, ಅದು ಚಿಂತಾಜನಕ’ ಎಂದು ಕಳಕಳಿ ವ್ಯಕ್ತಪಡಿಸಿದರು.

ತಿಂಡಿ, ಕಾಫಿ ಮುಗಿಸಿ ಅವರನ್ನು ಬೀಳ್ಕೊಂಡ ನಾವು ಆ ಮಧ್ಯಾಹ್ನದ ಸುಂದರ ಅನುಭವವನ್ನು ದಾರಿಯುದ್ದಕ್ಕೂ ಮೆಲಕು ಹಾಕುತ್ತ ಮನೆಗೆ ಹಿಂದುರುಗಿದೆವು.
3 ಡಾ ಪ್ರೇಮಲತ ಬಿ ಬರೆಯುತ್ತಾರೆ:
(ಅವರ ಫೇಸ್ ಬುಕ್ ಲೇಖನದಿಂದ, ಅವರ ಸಮ್ಮತಿಯೊಡನೆ)
ವಸುಧೇಂದ್ರ, ಡಾ ಪ್ರೇಮಲತ ಬಿ
"ವಸುಧೇಂದ್ರ ಅಂದ್ರೆ ನನಗೂ ಇಷ್ಟ” -- ಡಾ ಪ್ರೇಮಲತ ಬಿ

ಲಾಕ್ ಡೌನ್ ಸಮಯದಲ್ಲಿ ಅವರ ಸರಳ ಬರಹಗಳನ್ನು ಓದಿದ ನಂತರವೇ ನಾನು ಕಥೆಗಳನ್ನು ಬರೆಯಲು ಶುರುಮಾಡಿದ್ದು. ಕಾಕತಾಳೀಯ ಅಂದರೆ, ಚೊಚ್ಚಲ ಕಥಾಸಂಕಲನ ಛಂದ ಸ್ಪರ್ಧೆ ಯ ಅಂತಿಮ ಆರರ ಹಂತಕ್ಕೆ ತಲುಪಿತು. ಡಾ. ಹೆಚ್. ಗಿರಿಜಮ್ಮ ಪ್ರಶಸ್ತಿಯನ್ನೂ ಗಳಿಸಿತು.

ವಸುಧೇಂದ್ರ ಅವರು ಸಮಕಾಲೀನ ಬರಹಗಾರರು, ವೃತ್ತಿ ಪರರು, ನನ್ನಂತೆ ಅನಿವಾಸಿಯಾಗಿದ್ದವರು, ಯಾವ ಕೃಪಾ ಪೋಷಣೆಗಳೂ ಇಲ್ಲದೆ ತಮ್ಮ ಬರಹದ ಪ್ರತಿಭೆಯಿಂದಲೇ
ಹೆಸರು ಗಳಿಸಿದವರು. ತಾವು ಕ್ರಮಿಸಿದ ಶ್ರಮದ ಹಾದಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಹೇಳಿಕೊಂಡವರು. ಹೊಸ ಪ್ರತಿಭೆಗಳಿಗೆ ಮನ್ನಣೆ ನೀಡುವ ಛಂದ ಪುರಸ್ಕಾರ ಶುರುಮಾಡಿ ಹಲವರು ಹೆಸರು ಗಳಿಸಲು ಸಹಕರಿಸಿದವರು. ಅನುವಾದಗಳಿಗೆ ಪ್ರಾಮುಖ್ಯತೆ ನೀಡಿದವರು, ತಗಾದೆ ಗಳಿಂದ ದೂರವಿದ್ದು ಸಾಹಿತ್ಯದಲ್ಲಿ ಗಾಢವಾಗಿ ತೊಡಗಿಸಿಕೊಂಡವರು ಎಂಬೆಲ್ಲ ಕಾರಣಗಳಿಗಾಗಿ ನನಗೆ ಅವರ ಬಗ್ಗೆ ವೀಶೇಷ ಮೆಚ್ಚುಗೆಯಿತ್ತು.

ಬೆಂಗಳೂರಿಗೆ ಬಂದಾಗ ಹೋಗಿ ಭೇಟಿಯಾಗಿ ಬಂದಿದ್ದೆ. ಅವರು ಲಂಡನ್ನಿಗೆ ಬರುವುದು ತಿಳಿದಾಗ, ಅಲ್ಲಿಗೆ ಹೋಗಿ ಮನೆಗೂ ಕರೆತಂದೆ.

15/03/2025 ರಂದು Reading, Heathrow, Leamington Spa, Derby, Doncaster ನಗರಗಳಿಂದ ಹಲವಾರು ಸ್ನೇಹಿತರು ಅವರನ್ನು ನೋಡಲು ಬಂದರು. ಆಗಲೇ ನನಗೆ ಅವರು ಅದೆಷ್ಟು ಸೊಗಸಾಗಿ ಮಾತನಾಡಬಲ್ಲರು ಎಂದು ತಿಳಿದದ್ದು.
ಅವರು ಸರಳತೆಗೆ ಬೆರಗಾಗದೆ ಇರಲು ಸಾಧ್ಯವೇ ಇಲ್ಲ. ಅಂದು ಅವರನ್ನು ಭೇಟಿಯಾಗಲು ಸಾಧ್ಯವಾಗದೆ ಪರಿತಪಿಸಿದವರು ಬಹಳಷ್ಟು ಜನ.

ವಸುಧೇಂದ್ರರ ಜೊತೆ ಒಂದು ಉತ್ತಮ ಸಾಹಿತ್ಯ ಚರ್ಚೆಯಲ್ಲಿ ತೊಡಗಿದ ಖುಷಿಯಲ್ಲಿ ವಾರಾಂತ್ಯ ಕಳೆದದ್ದೇ ತಿಳಿಯಲಿಲ್ಲ. ಆದರೆ ಅವರಿಂದ ತಿಳಿಯುವುದು ಮತ್ತು ಕಲಿಯಬೇಕಾದ ವಿಚಾರಗಳು ಮುಗಿಯುವಂತವಲ್ಲ ಅನ್ನಿಸಿದ್ದು ಮಾತ್ರ ಸುಳ್ಳಲ್ಲ.
ಲಿಂಕನ್ನಿನಲ್ಲಿ ನೆರೆದ ಉತ್ಸಾಹಿ ಸಾಹಿತ್ಯಾಸಕ್ತರು
4 ಹೀಗೊಂದು ವೀಕೆಂಡ್! -ಅಮಿತ್ ರಾಮ್ ಮಂಡಗದ್ದೆ ವಾಸುದೇವ
ದಿನಾಂಕ ೧೪/೦೩/೨೦೨೫ ಶುಕ್ರವಾರ ಸಂಜೆ ನನ್ನ ಸ್ನೇಹಿತ ಸೂರ್ಯನ ಮಗಳ ೭ನೇ ಹುಟ್ಟುಹಬ್ಬವನ್ನು ಆಚರಿಸಲು ಹೊರುಡುತ್ತಿದ್ದಾಗ ಅನು ಅವರು ಶಾರ್ವರಿಗೆ ಕರೆ ಮಾಡಿ ನಾಳೆ ವಸುಧೇಂದ್ರ ಅವರನ್ನು ಲಿಂಕನ್ನಲ್ಲಿ ಭೇಟಿ ಮಾಡುವ ಅವಕಾಶ ಇದೆ ಬರುತ್ತಿರಾ ಎಂದು ಕೇಳಿದರು. ಅಲ್ಲಿಯ ವರೆಗೆ ಮನೆಗೆ ಬೇಗ ಬಂದು ಮಲಗಿ ಮಾರನೇ ದಿವಸ ಕೊವೆಂಟ್ರಿಯಲ್ಲಿ ನಡೆಯುವ ಅನುಭಂದ ಕ್ರಿಕೆಟ್ ಕಪ್ಗೇ ಹೋಗುವ ತಯಾರಿಯಲ್ಲಿ ಇದ್ದ ಮನಸ್ಸು ಧ್ವಂದ್ವಕ್ಕೆ ಬಿತ್ತು. ನೆಚ್ಚಿನ ಬರಹಗಾರರನ್ನು ಭೇಟಿ ಆಗುವುದೋ ಇಲ್ಲ ಸ್ನೇಹಿತರ ಜೊತೆಗೂಡಿ ಆಟ ಆಡುವುದೋ ಎಂದು. ಕೊನೆಗೂ ಗೆದ್ದಿದು ವಸುಧೇಂದ್ರ ಅವರನ್ನು ಬೇಟಿಯಾಗುವ ಆಸೆ. ಆ ಆಸೆಗೆ ನನಗೇ ಸಾತ್ ಕೊಟ್ಟಿದ್ದು ಸಾಗರ್ ಮತ್ತು ಸುಬ್ರಮಣ್ಯ.
ಶನಿವಾರ ಬೆಳಗ್ಗೆ ಕೊವೆಂಟ್ರಿಯಲ್ಲಿ ಸ್ನೇಹಿತರಿಗೆ ಮುಖ ತೋರಿಸುವ ಶಾಸ್ತ್ರ ಮಾಡಿ ಲಿಂಕನ್ ಕಡೆಗೆ ಹೊರೆಟೆವು ಮೂರು ಜನ. ರಸ್ತೆ ರೀಪೇರಿಯಿಂದ ಆದ ಟ್ರಾಫಿಕ್ ಜ್ಯಾಮ್ ಮತ್ತು ರೌಂಡ್ ಎಬ್ವ್ಟಾಗಳಲ್ಲಿ ಲೇನ್ ತಪ್ಪಿಸಿ ಬೇರೆ ಕಡೆ ಕರೆದು ಕೊಂಡು ಹೋಗುತ್ತಿದ್ದ ಸಾಗರ್ ಗೆ ಗೈಡ್ ಮಾಡಿಕೊಂಡು ಎಲ್ಲ ಅಡಚಣೆ ತಪ್ಪಿಸಿ ತಲುಪುವಾಗ ಮಧ್ಯಾಹ್ನ ಘಂಟೆ ೨:೨೦. ಅನು ಅವರ ಕಳುಹಿಸಿದ ಮೇಸೆಜ್ ಪ್ರಕಾರ ಕಾರ್ಯಕ್ರಮ ೧ ಘಂಟೆಗೇ ಸ್ಟಾರ್ಟ್ ಆಗುವುದಿತ್ತು. ನಾವುಗಳು ತಡವಾಗಿ ತಲುಪಿದೆವಲ್ಲ, ಅವರು ಒಳಗಡೆ ಸೇರಸ್ತಾರೋ ಇಲ್ವ ಎಂಬ ತಳಮಳ ಕಿಕ್ ಇನ್ ಆಯ್ತು. ಅನುಮಾನದಲ್ಲೆ ಬಾಗಿಲು ತಟ್ಟಿದ್ದೆ, ಬಾಗಿಲು ತೆಗೆದವರು ನಗು ಮೊಗದ ಶಶಿಧರ್, ಬನ್ನಿ ಬನ್ನಿ ಈಗ ಶುರುವಾಗಿದೆ, ನೀವು ಏನು ಮಿಸ್ ಮಾಡಿಕೊಂಡಿಲ್ಲ ಎಂದು ಬರಮಾಡಿಕೊಂಡಾಗ ಸ್ವಲ್ಪ ನಿರಮ್ಮಳವಾಯ್ತು. ಒಳಗೆ ಹೋದಾಗ ಪರಿಚಯಸ್ತರಾದ ಅನು, ಹರ್ಷ, ಸ್ಮಿತ ಮತ್ತು ಗೋಪಾಲ್ ರನ್ನು ನೊಡಿದಾಗ ಮನಸ್ಸಿಗೆ ಇನ್ನು ಖುಷಿ ಆಯ್ತು.
ವಸುಧೇಂದ್ರರವರು ಸತಿ ಸಹಗಮನದ ಬಗ್ಗೆ ಮಾತು ಶುರು ಮಾಡಿದ್ರು, ಆಮೇಲೆ ಅವರು ಪುಸ್ತಕಗಳನ್ನು ಹೇಗೆ ಬರಿತಾರೆ, ಹೇಗೆ ರಿಸರ್ಚ್ ಮಾಡ್ತಾರೆ ಅನ್ನುವುದರಿಂದ ಹಿಡಿದು ಚೀನದಲ್ಲಿ ಪೇಪರ್ ತಾಯಾರಿಕೆ ಹೇಗೆ ಶುರುವಾಯ್ತು, ಭಾರತಕ್ಕೆ ಮೆಣಸಿನಕಾಯಿ ಹೇಗೆ ಬಂತು, ಪೊರ್ಚುಗೀಸರು ಭಾರತಕ್ಕೆ ಹೇಗೆ ಬಂದರು ಮತ್ತು ಏನೇನು ಮಾಡಿದರು, ವಾಸ್ಕೋಡಿಗಾಮ, ಕೊಲಂಬಸ್, ಚೀನಿಯರು ಮತ್ತು ಸಂಸ್ಕೃತದಿಂದ ಎರವಲು ಪಡೆದ ೩೫,೦೦೦ ಪದಗಳು, ಮಲೆನಾಡಿನ ಒಕ್ಕಲಿಗರು ಮತ್ತು ಜೈನಧರ್ಮ, ಹೀಗೆ ಹಲವಾರು ವಿಷಯಗಳು ಬಗ್ಗೆ ನಿರರ್ಗಳವಾಗಿ ಮಾತಾನಾಡಿದರು. ಇವತ್ತಿಗೆ ಐದನೇ ದಿನ ಆದರೂ ಕಣ್ಣಿಗೇ ಕಟ್ಟಿದ ಹಾಗೇ ಇದೆ. ಇವರ ಮಾತಿಗೆ ಸರಿಯಾಗಿ ಅನು ಮತ್ತು ಹರ್ಷರವರ ತಾವು ಓದಿಕೊಂಡ ಇತಿಹಾಸದ ಬಗ್ಗೆ ಮಾತಾನಾಡುತ್ತಿದರೆ, ಆಕಡೆ ಗೋಪಾಲ್ ರವರು ಸೈನಿಕರನ್ನು ರಣಕಹಳೆ ಊದಿ ಪ್ರೋತ್ಸಾಹಿಸಿ ಯುದ್ದಕೆ ತಳ್ಳುತ್ತಿದ್ದ ವಿಷಯ ಬಂದಾಗ “ಮದುವೆ ಕೂಡ ಹಾಗೇ ಅಲ್ವ ಗಟ್ಟಿಮೇಳ ಊದಿ ತಾಳಿ ಕಟ್ಟಿಸಿ ಬಿಡ್ತಾರೆ” ಎಂದು ಹಾಸ್ಯ ಚಟಾಕಿ ಹಾರಿಸಿದರು ಶ್ರೀವತ್ಸ! (ವಿಡಿಯೋ ನೋಡಿರಿ - ಲೇಖನದ ಕೊನೆಯಲ್ಲಿ) ಅವರ ಜ್ಞಾನ ಮತ್ತು ಪ್ರೇಮಲತರವರ ಜೊತೆ ಊಟದ ಸಮಯದಲ್ಲಿ ಆದ ಶಶಿ ತರಿಕೆರೆ ಅವರು ಡುಮಿಂಗ ಪುಸ್ತಕದ ಚರ್ಚೆ ಕೂಡ ತುಂಬ ಚೆನ್ನಾಗಿತ್ತು. ಹಾಗು ಹೀಗು ಅನುರವರನ್ನ ಒಪ್ಪಿಸಿ ಅವರ ಪುಸ್ತಕದ ಮೇಲೆ ನನ್ನ ಹೆಸರು ಮತ್ತು ಲೇಖಕರ ಸಹಿ ಗಿಟ್ಟಿಸಿಕೊಂಡೆ.
ಆ ಒಂದು ದಿವಸದ ಬಗ್ಗೆ ಬರೆಯಲಿಕ್ಕೆ ತುಂಬ ಇದೆ. ಆದರೆ ಪದಗಳು ಸಾಕಾಗ್ತ ಇಲ್ಲ.
ನನ್ನ ನೆಚ್ಚಿನ ಲೇಖಕರನ್ನು ಭೇಟಿಯಾಗಲು ಚಾನ್ಸ್ ಕೊಡಿಸಿದ ಅನುರವರಿಗೂ ಮತ್ತು ಹಸಿದುಕೊಂಡಿದ್ದ ನಮಗೆ ಒಳ್ಳೆ ಊಟ ಉಣಬಡಿಸಿದ ಪ್ರೇಮಲತರವರಿಗೂ ನಾನು ಚಿರಋಣಿ.

ಲೇಖಕ: ಅಮಿತ್ ರಾಮ್ ಮಂಡಗದ್ದೆ ವಾಸುದೇವ
ಹುಟ್ಟಿದ್ದು ಬೆಳೆದಿದ್ದು: ಶಿವಮ್ಮೊಗ
ಈಗ ಇರುವುದು: ಲೆಮಿಂಗ್ಟನ್ ಸ್ಪಾ

ಹಸ್ತಾಕ್ಷರ ಗಿಟ್ಟಿಸಿದ ಅಮಿತ್ ರಾಮ್ (ಹಳದಿ ಟಾಪ್)

5 ವಸುಧೇಂದ್ರರೊಡನೆ ತಾಸೆರಡು ತಾಸು -ರಾಂಶರಣ್( ಡಾರ್ಬಿ )

ವಸುಧೇಂದ್ರ ಅವರೊಡನೆ ದೇಸಾಯಿ (ಎಡಕ್ಕೆ) ಮತ್ತು ರಾಂಶರಣ್
ಕಥೆ, ಪ್ರಬಂಧ, ಕಾದಂಬರಿಗಳಿಂದ ವಸುಧೇಂದ್ರ ಪರಿಚಯ ನಮಗೆಲ್ಲ. ಅವರು ಮಾರ್ಚ್ ನಲ್ಲಿ ಲಂಡನ್ನಿಗೆ ಬಂದಾಗ ಭೇಟಿಯಾಗುವ ಅವಕಾಶ ಸಿಗಬಹುದೆಂದಾಗ ಆಶೆ ನಮ್ಮಲ್ಲಿ ಮೊಳಕೆಯೊಡೆದಿತ್ತು. ಪ್ರೇಮಲತಾ ತಮ್ಮ ಮನೆಗೆ ಅವರನ್ನು ಆಮಂತ್ರಿಸುವ ಸಾಧ್ಯತೆಯಿದೆ ಎಂದಾಗ ಮೊಳಕೆ ಮೈಮುರಿದು ಎಲೆ ಮೂಡಿತ್ತು. ಇಂಗ್ಲೆಂಡಿನ ಶರದೃತುವಿನಲ್ಲಿ ಆ ಎಲೆಗಳು ಮೈಬಿಚ್ಚಿ  ಸಸಿಯಾಗುವ ಯಾವ ಪ್ರಯತ್ನವನ್ನೂ ಮಾಡಡುವಂತೆ ಕಾಣುತ್ತಿರಲಿಲ್ಲ. ಆಮೇಲೆ ಒಂದು ದಿನ ಅವರು ತಮ್ಮ ಮನೆಗೆ ಮಾರ್ಚ್ ೧೫ರಂದು ಬರುತ್ತಾರೆ ಎಂಬ ಸಂದೇಶ ಅನಿವಾಸಿ ಅಂಗಳಕ್ಕೆ ಹಠಾತ್ತನೆ ಬಂತು ಪ್ರೇಮಲತಾ ಅವರಿಂದ. ಅದಾಗಲೇ ಹೆಚ್ಚಿನ ಕೆಲಸಕ್ಕೆ ಒಪ್ಪಿಕೊಂಡಿದ್ದರಿಂದ ಆ ಸುದ್ದಿ ಸಸಿಗೆ ಬೇಕಾದ ಬಿಸಿಲಿನ ಕೋಲಾಗದೇ, ಪೂರ್ವದಿಂದ ಅಮರಿಕೊಂಡ ಶೀತಲ ಗಾಳಿಯಾಗಿ ಚಿಗುರುಗಳೆಲ್ಲ ಕಮರತೊಡಗಿದವು; ಛೇ, ಬೆರುಳ್ತುದಿಗೆ ತಗಲಿದ್ದು ಕೈಗೆ ಸಿಗಲಿಲ್ಲವಲ್ಲ ಎಂಬ ಹತಾಶ ಭಾವನೆ. ಅವರು ರಾತ್ರೆ ತಮ್ಮ ಮನೆಯಲ್ಲೇ ತಂಗುವುದರಿಂದ, ಕೆಲಸ ಮುಗಿದ ಮೇಲೆಯೂ ಭೇಟಿಯಾಗುವ ಅವಕಾಶವಿದೆ ಎಂದು ಪ್ರೇಮಲತ ಆತ್ಮೀಯ ಆಮಂತ್ರಣವನ್ನು ವಿಸ್ತರಿಸಿದಾಗ ‘ಸಿಕ್ಕಿದಾಗ ಸೀರುಂಡೆ’ ಎಂದು ಗಬಕ್ಕನೆ ಅವಕಾಶವನ್ನು ಕಬಳಿಸಿದೆ. 
ನಾನು ತಲುಪಿದಾಗ ಅದಾಗಲೇ ಸೂರ್ಯ ಪಾಶ್ಚಿಮದಾಚೆಯ ನಾಡು ಸೇರಿದ್ದ. ಆದರೆ, ಮನೆಯೊಳಗೇ ಕಾಲಿಟ್ಟಾಗ ಎದುರಾಗಿದ್ದು ಪ್ರಕಾಶಮಾನವಾದ ವಸುಧೇಂದ್ರರ ನಗುಮುಖ. ಮಧ್ಯಾಹ್ನ ೧ ರಿಂದ ಸತತವಾಗಿ ನೆರೆದವರೆಲ್ಲರೊಂದಿಗೆ ಮಾತಾಡುತ್ತ, ತಮ್ಮ ಜ್ಞಾನದ ಭಂಡಾರವನ್ನೇ ತೆಗೆದು, ಮೊಗೆದು ಕೊಟ್ಟಿದ್ದರೂ, ಒಂದಿನಿತೂ ಪ್ರಯಾಸವನ್ನು ತೋರದೇ, ಆತ್ಮೀಯವಾಗಿ ಬರಮಾಡಿಕೊಂಡರು. ಕನ್ನಡಕದಲ್ಲಿ ಫ್ರೆಮ್ ಹಾಕಿಟ್ಟ ಬೆರಗುಗಣ್ಣುಗಳು, ನುಣ್ಣನೆಯ ಮಸ್ತಕ, ಸದಾ ನಗೆ ಸೂಸುವ ಬಾಯಿ; ಮೈಕ್ರೋಸಾಫ್ಟ್ ನ ಸತ್ಯ ನಾಡೆಲ್ಲನ ಹೋಲುವ ರೂಪ (ನಾಡೆಲ್ಲನ ಆತ್ಮ ಚರಿತ್ರೆ ಬರೆದಾತನೇ ಇದನ್ನು ಉದ್ಗರಿಸಿದ್ದನಂತೆ ಲಂಡನ್ನಿನ ಪುಸ್ತಕ ಜಾತ್ರೆಯಲ್ಲಿ). ಅವರೊಂದಿಗೆ ಕಳೆದ ಕೆಲವು ಗಂಟೆಗಳು ಕ್ಷಣಗಳಾಗಿದ್ದವು ಎಂಬುದು ಕ್ಲೀಷೆಯಾದರೂ ಅದಕ್ಕೆ ಹೊರತಾದ ಶಬ್ದಗಳು ನನ್ನಲ್ಲಿಲ್ಲ ಅನುಭವ ವರ್ಣಿಸಲು. ಆ ಕ್ಷಿಪ್ರ ಅವಧಿಯಲ್ಲೇ ಅವರ ಅಗಾಧ ಜ್ಞಾನದ ಅರಿವು ಮೂಡಿಸಿದರು. ವಿಷಯ ದೇಸಾಯಿಯವರ ತಂದೆ ಡಾ. ಪಿ.ಬಿ ದೇಸಾಯಿಯವರ ಐತಿಹಾಸಿಕ ಸಂಶೋಧನೆಗಳಿಂದ, ಜ್ಞಾನಪೀಠ ಪ್ರಶಸ್ತಿಯ ವಿಚಾರ, ಸಾಹಿತ್ಯ ಕ್ಷೇತ್ರದಲ್ಲಿ ಜಾತಿ-ಪಂಗಡಗಳ ಪ್ರಭಾವ, ಹೊಸ ತಲೆಮಾರಿನ ಕಥೆಗಾರರ ವಿಶಿಷ್ಟ ಕಥಾ ವಿಷಯಗಳು, ಕೃತಕ ಬುದ್ಧಿಮತ್ತೆಯ ವಿಶ್ಲೇಷಣೆ, ತನ್ನ ಇಂಜಿನಿಯರಿಂಗ್ ವೃತ್ತಿಯ ಕೆಲವು ಪ್ರಸಂಗಗಳು, ಬೌದ್ಧ ಧರ್ಮದ ಉನ್ನತಿ-ಅವನತಿ, ಪ್ರಾಚೀನ ಭಾರತದಲ್ಲಿ ಮೂರ್ತಿ ಪೂಜೆಯಿತ್ತೇ? ಗ್ರೀಕರ ಆಗಮನ ಮೂರ್ತಿ ಪೂಜೆಯನ್ನು ಹುಟ್ಟು ಹಾಕಿತೆ? ಆಂಗ್ಲ ಭಾಷೆಯ ನೈಪುಣ್ಯತೆ ಹೇಗೆ ಕನ್ನಡ ಲೇಖಕರ ಪ್ರಭಾವದ ಹರವಿಗೆ ನೆರವಾಗಬಹುದು? ಹೀಗೆ ಬಗೆ ಬಗೆಯ ವಿಷಯಗಳ ಚರ್ಚೆಯ ಬಫೆ, ಅಂದು ಪ್ರೇಮಲತಾ ಸಜ್ಜು ಮಾಡಿದ ಬಗೆ ಬಗೆಯ  ಭಕ್ಷ್ಯಗಳ ಬಫೆಗೆ ಸಡ್ಡು ಹೊಡೆಯುವಂತಿತ್ತು. 
ಮರುದಿನ ಅವರು ನಸುಕಿನಲ್ಲೇ ಹೊರಡುವವರಾಗಿದ್ದರು, ಹಿಂದಿನ ದಿನ ನಾಡು ರಾತ್ರಿಯವರೆಗೂ ಪ್ರಯಾಣ ಮಾಡಿ ಬಂದಿದ್ದರು. ಹಾಗಾಗಿ, ವಿಧಿಯಿಲ್ಲದೇ ಮನಸಿರದ ಮನಸಿನಿಂದ ಬಿಳ್ಕೊಟ್ಟು ಬಂದೆ. ಮೊದಲ ಬಾರಿ ನೋಡಿದ್ದರೂ, ಅವರು ತೋರಿದ ಆತ್ಮೀಯತೆ, ಸ್ನೇಹ ಪರತೆ, ಮಂದಹಾಸ ಮನದಲ್ಲಿ ಅಚ್ಚಾಗಿದೆ. ಯಾವುದೇ ಸಾಹಿತ್ಯಿಕ ಹಿನ್ನಲೆಯಿಲ್ಲದಿದ್ದರೂ, ಮನದಾಳದ ಸೆಳೆತಕ್ಕೆ ಒಳಗಾಗಿ, ವೃತ್ತಿಯನ್ನು ತೊರೆದು ಸಾಹಿತ್ಯ ಕೃಷಿಗೆ, ಸಾಹಿತ್ಯದ ಬೆಳವಣಿಗೆಗೆ ಸದಾ ಮುಡಿಪಾದ ವಸುಧೇಂದ್ರರನ್ನು ಭೇಟಿಯಾದಾಗ ನಾವು ಹತ್ತನೇ ತರಗತಿಯಲ್ಲಿ ಓದಿದ ಶಿಖರಗಾಮಿಗಳು ಪುಸ್ತಕದ ನೆನಪಾಗುತ್ತದೆ. ಅದರಲ್ಲಿ ತಮ್ಮ ವೃತ್ತಿಯನ್ನು ಬಿಟ್ಟು ಅಧ್ಯಾತ್ಮ ಶಿಖರವನ್ನೇರಿದ ಅರಬಿಂದೋ ಅವರಂತೆ ಇವರಲ್ಲವೇ?  

(ವಿಡಿಯೋ ಕೃಪೆ:ಶ್ರೀವತ್ಸ ದೇಸಾಯಿ)

ಫೋಟೋ ಕೃಪೆ : ಪ್ರೇಮಲತಾ ಬಿ, ಶಶಿಧರ, ಸ್ಮಿತಾ ಕದಡಿ, ಶ್ರೀವತ್ಸ ದೇಸಾಯಿ

ರಾತ್ರಿ ಪಾಳಿಯ ಚಾಲಕರು

ಯೋಗಿಂದ್ರ ಮರವಂತೆಯವರಿಗೆ ಪರಿಚಯ ಬೇಕಿಲ್ಲ. ಕನ್ನಡದಲ್ಲಿ ಹೆಸರು ಮಾಡಿದ, ಪುರಸ್ಕೃತರಾದ ಪ್ರಬಂಧಕಾರ. ದೈನಿಕಗಳಲ್ಲಿ , ಅಂತರ್ಜಾಲ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟಗೊಂಡಿವೆ . ಅಂಕಣಗಳನ್ನು, ಪ್ರಬಂಧಗಳನ್ನು ಪುಸ್ತಕವಾಗಿಯೂ ಪ್ರಕಟಿಸಿದ್ದಾರೆ. ಸಾಮಾನ್ಯವಾದ ವಿಷಯಗಳಿಗೆ ಮೂರ್ತ ರೂಪ ಕೊಡುವುದು ಅವರ ವಿಶಿಷ್ಟತೆ. ಇದನ್ನು ಅವರ “ಏರೋ ಪುರಾಣ” ಪುಸ್ತಕದ ಹಲವಾರು ಬರಹಗಳಲ್ಲಿ, ಬಹುಮಾನಿತ “ಕಿಟಕಿಗಳು” ಪ್ರಬಂಧದಲ್ಲಿ ಕಾಣಬಹುದು. ಬಹಳ ಕಾಲದ ನಂತರ ಅನಿವಾಸಿಗೆ ಮತ್ತೆ ಹೊಸ ಬರಹವನ್ನು ಈ ವಾರ ಕೊಟ್ಟಿದ್ದಾರೆ. ಅವರ ಬರಹದ ಲಾಲಿತ್ಯ, ಈ ಪ್ರಬಂಧದಲ್ಲಿ ಸೊಗಸಾಗಿ ಪ್ರದರ್ಶಿತವಾಗಿದೆ. ಅಮೂರ್ತವಾದ ‘ಕನಸು’ ರಾತ್ರಿ ಪಾಳಿಯ ಚಾಲಕನಾಗುತ್ತದೆ; ರಸ್ತೆಗಳಲ್ಲಿ ತಿರುಗುವ ಬೀಡಾಡಿ ಪ್ರಾಣಿಗಳು, ಬೇಕಾ ಬಿಟ್ಟಿ ಗಾಡಿ ಓಡಿಸುವವರು, ಯಾನವನ್ನು ಧ್ವಂಸ ಮಾಡುವವರಾಗುತ್ತಾರೆ. ಕತ್ತಲೆಯ ಹಾದಿಯಲ್ಲಿ ನಿಮ್ಮನ್ನು ನಡೆಸುತ್ತ, ಓಡಿಸುತ್ತ ಲೌಕಿಕ, ತಾತ್ವಿಕ, ಆಧ್ಯಾತ್ಮಿಕ ವಿಚಾರಗಳನ್ನೆಲ್ಲ ತಡಕಿ ಅಚ್ಚುಕಟ್ಟಾಗಿ ನಿಮ್ಮ ಮುಂದೆ ರಾತ್ರಿ ಪಾಳಿಯ ಚಾಲಕರ ವಿವಿಧ ಮುಖಗಳನ್ನು ಅನಾವರಣಗೊಳಿಸಿದ್ದಾರೆ.

“ಕನಸೆಂದರೆ ನಿದ್ರೆಯಲ್ಲಿ ನೋಡುವಂತಹದ್ದಲ್ಲ ; ನಿದ್ರೆ ಮಾಡಲು ಬಿಡದ್ದು” ಎನ್ನುತ್ತ  ನಿದ್ದೆಗೆಡಿಸಿದವರು ಅಬ್ದುಲ್ ಕಲಾಂ. ಇದು ಸೊಂಪಾದ ನಿದ್ದೆಯ ನಡುವಿನ ಸುಸ್ವಪ್ನವಲ್ಲ. ಬೆವರಿ ಬೆಚ್ಚುವ ದುಸ್ವಪ್ನವೂ ಅಲ್ಲ. ಒಡಲಿನೊಳಗೆ ಸಣ್ಣದಾಗಿ ಹುಟ್ಟಿ  ನಿತ್ಯವೂ ಬೇರೆಬೇರೆ ಆಕಾರ ತಾಳಿ ದೊಡ್ಡದಾಗಿ ಜ್ವಲಿಸಿ, ಮೈಮನಗಳನ್ನು ವ್ಯಾಪಿಸಿ ಮುನ್ನಡೆಸುವ ಸ್ವಯಂಸ್ಫೂರ್ತಿ. ನೆಲೆ  ಮುಟ್ಟದ ತನಕ ನಿಲ್ಲದ ನಡಿಗೆ, ಯಾವುದೊ ಲಕ್ಷ್ಯದ ಕಡೆಗಿನ ಅವಿರತ ನಿರಂತರ ಓಟ.  ಕನಸಿನ ಒಂದು ವ್ಯಾಖ್ಯಾನ ಹೀಗಾದರೆ,  ಕಾವ್ಯ ಸಾಹಿತ್ಯಗಳು ಕನಸನ್ನು ಕೆಲವೊಮ್ಮೆ ಬರೇ ಕನಸೆಂದು ಕರೆಯಲು ಬಯಸಬಹುದು. ನಿದ್ದೆಯನ್ನು ಕನಸೆಂದೋ, ಕನಸನ್ನು ನಿದ್ದೆಯೆಂದೋ ಅಥವಾ ಬದುಕನ್ನೇ ಕನಸು ಎಂದೋ  ಕಲ್ಪಿಸಲು ಪ್ರೇರೇಪಿಸಬಹುದು. ಕನಸೇ ಬದುಕಾಗುವುದರ ಬಗ್ಗೆ ಎಚ್ಚರಿಸಬಹುದು. ಕನಸಿನ ರಮ್ಯತೆಯನ್ನು ನಿಗೂಢತೆಯನ್ನು ಅಲ್ಲದಿದ್ದರೆ  ವಿಹ್ವಲತೆಯನ್ನೂ ಶಬ್ದಚಿತ್ರವಾಗಿ ವರ್ಣಿಸಬಹುದು. ಒಳ್ಳೆಯ ಕನಸು, ಕೆಟ್ಟ ಕನಸು ಎಂದು ಕರೆಯಲು ಅಲ್ಲದಿದ್ದರೆ ಮರೆಯಲು ಹೇಳಿಕೊಟ್ಟಿರಬಹುದು. ಅದು ಕಾವ್ಯದ ದೃಷ್ಟಿ, ಕವಿ ಕಲಾವಿದರ ಕಲ್ಪನೆಯ ಸೃಷ್ಟಿ.  ಆದರೆ ಕಲಾಂರು ಹೇಳಿದ್ದು  ಕನಸಿನ ಬೆನ್ನು ಹಿಡಿದವರು ನಿದ್ರಿಸುವುದಿಲ್ಲ ಎಂದು. ಇದು ನಿದ್ದೆ ಮಾಡಗೊಡದ ಒಂದು ಬಗೆಯ ಕನಸು. ಗುರಿ  ತಲುಪುವ ತನಕ ವಿರಮಿಸಲಾಗದ ವ್ಯಸನ, ನಿದ್ರೆಯೊಳಗಿನ ಎಚ್ಚರ.

ಒಬ್ಬರ ನಿದ್ರೆಯೊಳಗಿನ ಎಚ್ಚರ ಆಸುಪಾಸಿನಲ್ಲಿರುವವರ ನಿದ್ದೆಗೆಡಿಸುವುದೂ ಇದೆ; ರಾತ್ರಿ ಮನೆಯನ್ನು ಮುರಿಯುವ ಕಳ್ಳರಿಗೂ ಒಂದು ಎಚ್ಚರ ಇರುತ್ತದೆ.  ಮಲಗಬೇಕಾದವರು ಮಲಗುವುದನ್ನೇ ಕಾದು ತಮಗೆ ಬೇಕಾದ ಕೆಲಸ ಮುಗಿಸಿಕೊಳ್ಳುವ ಎಚ್ಚರ ಅದು. ಅಪರಾಧ ಜಗತ್ತಿನಲ್ಲಿ ಇಂತಹ ಸಂಚಿನ ಎಚ್ಚರಗಳು ಸಾಮಾನ್ಯ. ಇನ್ನು ತಮ್ಮ ಮನೆಗೆ ಹಾಗಾಗಬಹುದೆನ್ನುವ ಊಹೆ ಇರುವವರಿಗೆ  ಬೀಳಬಹುದಾದ ಕನ್ನ  ಅಥವಾ ಸದ್ಯದಲ್ಲೇ ಎರಗಬಹುದಾದ ಆಪತ್ತು, ತಳಮಳವಾಗಿ ಆಂತರಿಕ ಎಚ್ಚರವನ್ನು ಹುಟ್ಟಿಸುವುದಿದೆ. ಇವಕ್ಕೆಲ್ಲ  ವ್ಯತಿರಿಕ್ತವಾಗಿ ಯಾರದೋ ನಿದ್ದೆಯೊಳಗಿನ ಎಚ್ಚರ ಇನ್ಯಾರದೋ ಸುಖನಿದ್ರೆಗೂ ಕಾರಣ ಆಗಬಹುದು. ನಿತ್ಯ ದಿನಚರಿಯಲ್ಲಿ ಬಳಕೆಯಾಗುವ ಉಪಯುಕ್ತವಾಗುವ ಎಷ್ಟೋ ವಿಷಯ ವಸ್ತುಗಳು ಗೊತ್ತಿರುವವರೋ ಗೊತ್ತಿಲ್ಲದವರೋ ನಿದ್ದೆಬಿಟ್ಟು ದುಡಿದು, ದಣಿದು ನೀಡಿದ ಕೊಡುಗೆಯಾಗಿರಬಹುದು. ತಾವು ನಿದ್ದೆ ಬಿಟ್ಟು ಸುತ್ತಮುತ್ತಲಿನವರ ಎಚ್ಚರ ಕಾಯುವವರು ಮನೆಮನೆಯಲ್ಲೂ ಇರುತ್ತಾರೆ. ಆ ಮನೆಗೆ ಬೇಕಾಗಿ ಬಹಳವಾಗಿ ದುಡಿದು ಹಿತ  ಕಾಯವವರು. ಇನ್ನು ಮನೆಯನ್ನು ಮೀರಿ ಊರು ಸಮಾಜಕ್ಕೆ ಕೊಡುಗೆ ನೀಡುವವರೂ ಇರುತ್ತಾರಲ್ಲ. ಬಹಳ ವಿಶೇಷವಾದನ್ನು ಸಾಧಿಸಿ ಪ್ರಸಿದ್ಧರಾದವರು  ಇತಿಹಾಸದಲ್ಲಿ ವರ್ತನಮಾನದಲ್ಲಿ ದಾಖಲಾಗುತ್ತಾರೆ. ಅವರು ಕಲಾಂರಂತಹ ವಿಜ್ಞಾನಿಗಳೂ ಇರಬಹುದು. ದೊಡ್ಡ ಜನಸಮುದಾಯಕ್ಕೋ   ಜಗತ್ತಿಗೋ ನೆರವಾಗುವ ಸಂಶೋಧಕರು ಅನ್ವೇಷಕರು ಇರಬಹುದು. ಸಾಹಿತಿ, ಕ್ರೀಡಾಪಟು, ಸಮಾಜಸೇವಕ, ಸೃಜನಶೀಲ ಕಲಾವಿದ ಹೀಗೆ. ಅವರು  ಕಣ್ಣಿಗೆ ಕಾಣದ ದೂರದ ಅನಾಮಿಕ ಸಾಧಕರು ಆಗಿರಬಹುದು. ಅಷ್ಟು ದೊಡ್ಡ ಲೋಕದ ಸುದ್ದಿ ಬೇಡ ಅಂತಾದರೆ ಹತ್ತಿರದಲ್ಲೇ ಸಣ್ಣ ಚಾಕರಿ ಸಣ್ಣ ಸೇವೆಯಲ್ಲಿ ತೊಡಗಿದ ಮೌನವಾಗಿರುವ ದನಿಯೇ ಇಲ್ಲದ ವಿನಮ್ರ ಸೇವಕರೂ ಇರಬಹುದು. ಅವರು ಯಾರೇ ಇದ್ದರೂ ಅವರೆಲ್ಲರಿಗೂ ಸಾಮಾನ್ಯವಾದುದು ನಿದ್ದೆಯೊಳಗಿನ ಎಚ್ಚರ.

ಕತ್ತಲಲ್ಲಿ ಕಂಡ ಕನಸು ಬೆಳಕು ನೀಡಿದ ಸಣ್ಣ ಮಟ್ಟದ, ದೊಡ್ಡ ಪ್ರಮಾಣದ ಉದಾಹರಣೆಗಳು ಎಷ್ಟಿಲ್ಲ?  ಇವರೆನ್ನೆಲ್ಲ ನಾನು ಕರೆಯುವುದು ರಾತ್ರಿ ಪಾಳಿಯ ಚಾಲಕರೆಂದು; ತಾವು ಎಚ್ಚರವಿದ್ದು ಪ್ರಯಾಣಿಕರಿಗೆ ನಿದ್ರೆಯ ಜೊಂಪು ಹತ್ತಿಸಿ, ಅವರು ಕಣ್ಣು ಬಿಡುವಾಗ ಇನ್ನೊಂದು ಊರಿಗೆ ತಲುಪಿಸುವವರೆಂದು. ಯಾತ್ರಿಕರನ್ನು ಗುರಿ ತಲುಪಿಸುವುದರಲ್ಲೇ ತೃಪ್ತಿ ಕಂಡುಕೊಳ್ಳುವವವರು. ನಾವೆಲ್ಲರೂ ಇಂತಹ ರಾತ್ರಿ ಪಾಳಿಯ ಚಾಲಕರ ಸಹವಾಸ ಅನುಭವ ಪಡೆದವರೇ.

ಭಾವಾರ್ಥದಲ್ಲೂ, ಶಬ್ದಾರ್ಥದಲ್ಲೂ ರಾತ್ರಿ ಪ್ರಯಾಣದ ಚಾಲಕನೇ ಆದವನೊಡನಿನ  ನನ್ನ ಒಂದು ಅನುಭವ  ಇಂಜಿನೀಯರಿಂಗ್ ಓದಿನ  ದಿನಗಳದ್ದು. ಪದವಿಯ  ಕೊನೆಯ ವರ್ಷದಲ್ಲಿದ್ದಾಗ, ಉಷ್ಣ ವಿದ್ಯುತ್ ಸ್ಥಾವರದ ಶೈಕ್ಷಣಿಕ ಭೇಟಿಗೆ ನಾವು ಹೊರಟಿದ್ದೆವು. ನಾವೆಂದರೇನು ,ಆ ಕಾಲದ ಕರ್ನಾಟಕದ ಯಂತ್ರಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳುವುದೇ ರಾಯಚೂರಿನ ಬಿಸಿಲಿನ ಝಳದಲ್ಲಿ ಒಂದೆರಡು ದಿನಗಳ ಕಾಲ ಬೆಂದು ಬೆವರಿ ನೀರಾದ ಮೇಲೆ. ನಮ್ಮ ಮಟ್ಟಿಗೆ ಆಗ ರಾಯಚೂರಿಗೆ ಪ್ರವೇಶವೇ ಉಷ್ಣ ಸ್ಥಾವರವನ್ನು ಹೊಕ್ಕಂತೆ ಇತ್ತು. ಬೆಂಗಳೂರಿನಿಂದ ರಾಯಚೂರಿನವರೆಗಿನದು ಇಡೀರಾತ್ರಿಯ ಪ್ರಯಾಣ.  ಮೂರು ಖಾಸಗಿ ಬಸ್ಸುಗಳು ಕೇಕೆ ಹಾಕುವ ವಿದ್ಯಾರ್ಥಿಗಳ ಜೊತೆಗೆ ಪ್ರಾಧ್ಯಾಪಕರುನ್ನು  ತುಂಬಿಸಿಕೊಂಡು ಹೊರಟಿದ್ದವು. ಒಂದರ ಹಿಂದೆ ಒಂದು. ಒಂದು ಇನ್ನೊಂದನ್ನು ಹಿಂದೆ ಹಾಕುವುದು , ಮುಂದೆ ಸಾಗುವ ಬಸ್ಸಿನಿಂದ ಹರ್ಷೋದ್ಗಾರ ಚಪ್ಪಾಳೆ ಶಿಳ್ಳೆಗಳು ರಸ್ತೆಯನ್ನು ತುಂಬುವುದು, ಕತ್ತಲೆಯನ್ನು ಅನಾಗರಿಕವಾಗಿ ಬಡಿದು ಎಬ್ಬಿಸುವುದು ನಡೆಯುತ್ತಲೇ ಇತ್ತು. ಈ ನಡುವೆ ನಮ್ಮ ಬಸ್ಸಿನ ಚಾಲಕನಿಗೆ ತೀರ ನಿದ್ದೆ ಬರುತ್ತಿತ್ತು. ಬಸ್ಸು ಪ್ರಯಾಣದಲ್ಲಿ ನನ್ನ ಸೀಟು ಎಲ್ಲೇ ಇದ್ದರೂ ರಾತ್ರಿ ಚಾಲಕನ ಕ್ಯಾಬಿನ್ ಒಳಗೆ ಹೋಗಿ ಹತ್ತಿರ ಕುಳಿತು ಮಾತನಾಡುವುದು ನನಗೆ ಇಷ್ಟ. ಇಂಜಿನ್ನಿನ ಕರ್ಕಶ ಸದ್ದು, ಮುಖಕ್ಕೆ ಬಡಿಯುವ ತಂಪು ಗಾಳಿ, ಗಿಯರ್ ಲಿವರ್ ನ ಅಲುಗಾಟ, ಎದುರಿನಿಂದ ಬರುವ ನಾಲ್ಕಾರು ಪ್ರಖರ ಕಣ್ಣುಗಳ ವಾಹನಗಳು, ನಡುವೆ ಹಿಂದೆಂದೂ ಭೇಟಿಯಾಗಿರದ ಮುಂದೆಯೂ ಆಗದ ನನ್ನ ಚಾಲಕನ ನಡುವಿನ ಸುಪ್ರೇಮ ಸಲ್ಲಾಪ. ಈ ಕೆಲಸ ಯಾವಾಗಿನಿಂದ ಎಂದು ಆರಂಭವಾಗುವ ಮಾತುಕತೆ, ಇವತ್ತಿನ  ರೂಟ್, ಇದೆ ಹಾದಿಯಲ್ಲಿ ಹಿಂದಿನ ಅನುಭವ, ಸ್ವಲ್ಪದರಲ್ಲಿ ತಪ್ಪಿದ ಅಪಘಾತ, ಸಾವಿನ ದವಡೆಯಿಂದ ಪಾರಾದ ಬಸ್ಸು, ಅವನನ್ನು ಗೋಳುಹೊಯ್ದ ವಿಚಿತ್ರ ಪ್ರಯಾಣಿಕರು ಹೀಗೆ ಮುಂದೆ ಸಾಗಿ, ಹೆಂಡತಿ-ಮಕ್ಕಳು ಸಂಸಾರ ಶಾಲೆಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದವು, ಬಸ್ಸಿನ ಜೊತೆಜೊತೆಗೆ.  ಅಂದೂ ಚಾಲಕನ ಜೊತೆ ಉತ್ಸಾಹದಲ್ಲಿ ಮಾತುಕತೆ ಶುರು ಆಗಿದ್ದರೂ ನಮ್ಮ ಚಾಲಕನಿಗೆ  ವಿಪರೀತ ನಿದ್ದೆ ಬರುತ್ತಿತ್ತು.  ಆತ ಮಧ್ಯಮಧ್ಯ ಸೀಟಿನಿಂದ ಎದ್ದು ನಿಂತು ಬಸ್ಸು ಓಡಿಸುತ್ತಿದ್ದ.  ಹಿಂದಿನ ಆರೇಳು ದಿವಸಗಳಿಂದ ಹಗಲು ರಾತ್ರಿ ಸ್ವಲ್ಪವೂ ನಿದ್ರಿಸದೆ ಕೆಲಸ ಮಾಡಿದ್ದನಂತೆ. ನಮ್ಮ ತಿರುಗಾಟಕ್ಕೆ ಚಾಲಕನಾಗಿ ಬಂದಾಗ , ವಾಹನ ಚಲಾಯಿಸುತ್ತಿರುವಾಗ ತನ್ನ ಸೀಟಿನಲ್ಲಿ ಕುಳಿತರೆ ಸಾಕು, ನಿದ್ರಿಸುವ ಸ್ಥಿತಿಯಲ್ಲಿದ್ದ. ಬಿಡುವು ಇಲ್ಲದೆ ಕೆಲಸಕ್ಕೆ ಮಾಡಲು ಮಾಲಿಕರ ಒತ್ತಡ ಕಾರಣ ಇರಬಹುದು, ಬೇರೆ ಡ್ರೈವರ್ ಇಲ್ಲದಿರಬಹುದು, ಅಥವಾ ರಜೆ ಮಾಡಿ ಸಂಬಳ ಕಳೆದುಕೊಳ್ಳುವ ಸ್ಥಿತಿಯೂ ಆತನದಲ್ಲದಿರಬಹುದು.  ಇಷ್ಟು ತಿಳಿದ ಮೇಲೆ ನಾವು ಕೆಲವರು ಆತನ ಪಕ್ಕದಲ್ಲೇ ಬಂದು ಕೂತು ಮಾತನಾಡುತ್ತಿದ್ದೆವು. ಅವನದು ನಿದ್ದೆ ತಪ್ಪಿಸಿಕೊಂಡು ವಾಹನ ಓಡಿಸುವ ಪಾಳಿಯಾದರೆ, ನಮ್ಮದು ಅಂದಿನ ಮಟ್ಟಿಗೆ ಅವನನ್ನು ಎಚ್ಚರವಿಡುವ ಸರದಿ. ಇದೂ ಸಾಕಾಗುವುದಿಲ್ಲ ಎನಿಸಿದಾಗ ಮಧ್ಯಮಧ್ಯ ಬಸ್ಸು ನಿಲ್ಲಿಸಲು ಹೇಳಿ, ಅಲ್ಪ ಸ್ವಲ್ಪ ನಿದ್ರಿಸುವ ಅವಕಾಶ ನೀಡುತ್ತಾ ಪ್ರಯಾಣ ಬೆಳೆಸಿದವು. ಆದರೂ ನಿಂತುಕೊಂಡು ಬಸ್ಸು ಚಲಾಯಿಸುವ ಆತನ ಮುಖ ವ್ಯಗ್ರವಾಗುತ್ತಿತ್ತು, ಊದಿಕೊಂಡ ಕಣ್ಣು ಕೆಂಪಾಗಿ, ಕ್ಷಣಕ್ಕಾದರೂ ರೆಪ್ಪೆ ಮುಚ್ಚುತ್ತಿತ್ತು. ಪ್ರತಿ ಬಾರಿ ಚಾಲಕನ ಕಣ್ಣಿಗೆ ಅರೆಕ್ಷಣದ ಜೊಂಪು  ಹತ್ತಿದಾಗಲೂ ಕೈಯಲ್ಲಿ ಹಿಡಿದ ಸ್ಟೀಯರಿಂಗ್ ಚಕ್ರ ಗರಕ್ಕನೆ ಒಂದು ದಿಕ್ಕಿಗೆ ತಿರುಗುತ್ತಿತ್ತು, ಹಠಾತ್ ಬಸ್ಸು ಲಯ ತಪ್ಪಿದಂತೆ ಅನಿಸುತ್ತಿತ್ತು. ದಾರಿಯುದ್ದಕ್ಕೂ ಚಾಲಕ ಕಣ್ಣು ರೆಪ್ಪೆಗಳನ್ನು ತೆರೆದಿಡಲು ಹೋರಾಡುತ್ತ , ಎಚ್ಚರದಲ್ಲೇ ನಿದ್ರಿಸುತ್ತ ನಮ್ಮನ್ನು ರಾಯಚೂರು ತಲುಪಿಸಿದ್ದ. ಆ ಚಾಲಕನ ಬದುಕಿನ ಅತ್ಯಂತ ದೀರ್ಘ ರಾತ್ರಿ ಅದಾಗಿದ್ದಿರಬೇಕು. ಮತ್ತೆ ಅಂದು ಆ ಬಸ್ಸಿನಲ್ಲಿ ಪ್ರಯಾಣ ಮಾಡಿದವರ ಮಟ್ಟಿಗೆ ಜೀವನಪೂರ್ತಿ ನೆನಪಿಡುವ ಅತ್ಯಂತ ಕತ್ತಲೆ ನಿಶೆಯ ಪ್ರಯಾಣ.

ಇನ್ನು ನನ್ನ ಹುಟ್ಟೂರಿನ ಆಪ್ತ ಸ್ನೇಹಿತ, ಪ್ರಾಥಮಿಕ ಶಾಲೆಯ ಸಹಪಾಠಿಯೂ ಆಗಿದ್ದವನು ಈಗಲೂ ರಾತ್ರಿ ಪಾಳಿಯ ಬಸ್ ಚಾಲಕ. ವಿದ್ಯಾಭ್ಯಾಸ ಬೇಗ ನಿಲ್ಲಿಸಿ ಅವನ ಕನಸಿನ ಉದ್ಯೋಗವಾದ ಡ್ರೈವಿಂಗ್ ಅರಸಿ ಇನ್ನೊಂದು ಊರಿಗೆ ಹೋದವನು ಸ್ಥಳೀಯ ವ್ಯಾನ್ ಗಳಲ್ಲಿ ಕ್ಲೀನರ್ ಆಗಿ ನೌಕರಿ ಶುರು ಮಾಡಿ, ನೈಟ್ ಬಸ್ ಗಳ ಚಾಲಕನಾಗಿ ಬೆಳೆದು ತನ್ನ ಕನಸನ್ನು ಪೂರೈಸಿಕೊಂಡಿದ್ದ.  ನಾವಿಬ್ಬರು ಭೇಟಿಯಾದಾಗಲೆಲ್ಲ ರಾತ್ರಿ ಪ್ರಯಾಣದ ಲೋಕದ ಬಗ್ಗೆ ಚರ್ಚೆ ಆಗುತ್ತದೆ. ಎಲ್ಲವೂ ಸ್ಪಷ್ಟ ಎನಿಸುವ ಹಗಲಿನ  ಪ್ರಯಾಣವೇ ಸುಖ ಇರಬೇಕಲ್ಲ  ಎಂದು ನಾನು ಹೇಳಿದರೆ, ರಾತ್ರಿ ಪಾಳಿಯ ಚಾಲನೆಯಷ್ಟು ಸಲೀಸು ಇನ್ನೊಂದಿಲ್ಲ ಎಂದು ಆತ ವಾದಿಸುತ್ತಾನೆ. ಹಗಲಿನಲ್ಲಾದರೆ ಎಂತಹ  ಹೆದ್ದಾರಿ ರಸ್ತೆಯನ್ನೂ ವಾಚಾಮಗೋಚರವಾಗಿ  ಬಳಸಿ ಹಾಳುಗೆಡಹುವವರು, ಉದ್ದ ಸಾಗಬೇಕಾದಲ್ಲಿ ಅಡ್ಡ ಬರುವವರು, ಅಶಿಸ್ತಿನ ಮನುಷ್ಯರು  ಅನಧಿಕೃತ ಪ್ರವೇಶ ಮಾಡುವ ಪ್ರಾಣಿಗಳು ಎಲ್ಲವೂ ಸೇರಿದ ಗೋಜಲು ಗೊಂದಲವಾಗುತ್ತದೆ. ನಡುರಾತ್ರಿಯ ಕಗ್ಗತ್ತಲೆಯ ಹೊತ್ತಾದರೆ ಹಗಲಿನಲ್ಲಿ ರಸ್ತೆ ಯಾನವನ್ನು ಧ್ವಂಸ ಮಾಡಿಹೋದ ಆ ಎಲ್ಲರೂ ಮನೆ ಸೇರಿ ಸ್ವಚ್ಛಂದ ಮಲಗಿರುತ್ತಾರೆ.  ರಸ್ತೆಯನ್ನು ಬೆಳಗಿ ಹೊಳೆಯಿಸುವ  ಚಂದ್ರ, ಮಿಂಚಿ ಮಿನುಗುವ ನಕ್ಷತ್ರಗಳು ಅಲ್ಲದಿದ್ದರೆ ಇನ್ನಷ್ಟು ಮತ್ತಷ್ಟು ರಾತ್ರಿ ಪಾಳಿಯ ಬಸ್ಸು-ಲಾರಿ, ಮತ್ತೆ ಅವುಗಳ ಚಾಲಕರಿಗೆ ಬಿಟ್ಟುಕೊಟ್ಟಿರುತ್ತಾರೆ. ಅವನ ಪ್ರಕಾರ ರಾತ್ರಿಯ ಎಚ್ಚರವೂ ಒಂದು ಕಲೆ ಮತ್ತು ಸಿದ್ಧಿ. ನಿತ್ಯ ರಾತ್ರಿ ನಿದ್ದೆ ಬಿಡಬೇಕಾದರೆ ಹಗಲಿನಲ್ಲಿ ನಿದ್ದೆ ಹಿಡಿಯಬೇಕು. ಪ್ರಕೃತಿಗೆ ವಿರುದ್ಧವಾಗಿ ಹಗಲನ್ನು ರಾತ್ರಿ ಮಾಡಬೇಕು, ರಾತ್ರಿಯನ್ನು ಹಗಲಾಗಿಸಬೇಕು. ಸೂರ್ಯ ಮೂಡುವಾಗ ಕಣ್ಮುಚ್ಚಿ ಮುಸುಕು ಎಳೆಯಬೇಕು, ಚಂದ್ರ ಮೂಡುವ ಹೊತ್ತಿಗೆ ಹಲ್ಲುಜ್ಜಿ ಊಟ ಮಾಡಿ ಸ್ಟೀಯರಿಂಗ್ ಹಿಡಿದು ಏಕಾಗ್ರತೆಯಲ್ಲಿ ಕೂರಬೇಕು. ನಡುವೆ ಒಂದೆರಡು ಕಡೆ ಖಡಕ್ ಚಹಾ ಕುಡಿಯಬೇಕು. ಎದುರಿನಿಂದ ಕೋರೈಸುವ ಬಣ್ಣಬಣ್ಣದ ಬೆಳಕು ಬೀರುತ್ತಾ ವಾಹನ ಚಲಾಯಿಸುವವರನ್ನು ಸುಧಾರಿಸಿಕೊಂಡು ಮುಂದೆ ಸಾಗಬೇಕು. ರಾತ್ರಿಯ ಖಾಲಿ ರಸ್ತೆಯಲ್ಲೂ ಅನಾವಶ್ಯಕ ಹಾರ್ನ್ ಒತ್ತುವವರನ್ನು ನಿರ್ಲಕ್ಷಿಸಬೇಕು, ಮಿತಿಮೀರಿದ ವೇಗದಲ್ಲಿ ನುಗ್ಗುವ ಸಣ್ಣ ವಾಹನಗಳನ್ನು ಆಧರಿಸಿ ಪೊರೆಯಬೇಕು. ರಸ್ತೆ ಹಂಪುಗಳನ್ನು ನಿಧಾನಕ್ಕೆ ನಾಲಿಗೆ ಕಚ್ಚಿಕೊಂಡು ಹತ್ತಿ ಇಳಿಸಬೇಕು. ನಿದ್ದೆಯ ನಶೆಯಲ್ಲಿ  ತೇಲುತ್ತಿರುವ ಎಲ್ಲ ಪ್ರಯಾಣಿಕರ ತೊಟ್ಟಿಲು ತೂಗುತ್ತ, ತಲುಪುವಲ್ಲಿಗೆ ತಲುಪಿಸಿ, ಗಾಡಿ ನಿಲ್ಲಿಸಿ ಪ್ರಯಾಣಿಕರು ಒಬ್ಬೊಬ್ಬರಾಗಿ ಸರಂಜಾಮು ಸಮೇತ ಧನ್ಯವಾದವನ್ನೂ ಹೇಳದೇ ಕೆಲವೊಮ್ಮೆ ಕಾರಣಾಂತರದಿಂದ ತಡವಾಗಿದ್ದಕ್ಕೆ ಅಸಮಾಧಾನದಿಂದ ಇಳಿದು ಹೋದ ಮೇಲೆ, ಚಾವಿ ತೆಗೆದು  ಬಲಬದಿಯ ಅರ್ಧ ಬಾಗಿಲನ್ನು ದೂಡಿ ಮಣ್ಣು ನೆಲದ ಮೇಲೆ ಧೊಪ್ ಎಂದು ಹಾರಬೇಕು. ಹಣೆಯ ಮೇಲಿನ ಬೆವರು ಒರೆಸಬೇಕು. ಆದಷ್ಟು ಬೇಗ ತಿಂಡಿ ತಿಂದು, ಸರಿಯಾದ ಜಾಗ ಸಿಗದಿದ್ದರೆ, ಬಸ್ಸಿನ ಸೀಟು, ಯಾವುದೊ ಪೆಟ್ರೋಲ್ ಪಂಪಿನ ಚಾವಡಿ ನೋಡಿ ಧೂಳು ಹೊಡೆದು ನಿದ್ದೆ ಮಾಡಬೇಕು. ಮತ್ತೆ ಸಂಜೆಯ ಪಾಳಿಗೆ ತಯಾರಾಗಬೇಕು. ಇಂತಹ ಹಲವು ವರ್ಷಗಳ  ರಾತ್ರಿಚರಿಯನ್ನು, ತನ್ನ ಮಕ್ಕಳು ಶಿಕ್ಷಣ ಮುಗಿಸಿ ದುಡಿಯಲು ಶುರು ಮಾಡಿದ ಮೇಲೆ, ಮನೆ ಸಾಲ ತೀರಿದ ನಂತರ ಒಂದು ದಿನ ಪೂರ್ಣ ನಿಲ್ಲಿಸಿ ತಾನೂ ಚಾಲಕ ವೃತ್ತಿ ಬಿಟ್ಟು ನೆಮ್ಮದಿಯ ನಿದ್ದೆ ಮಾಡಬೇಕು.

 ರಾತ್ರಿ ಪ್ರಯಾಣದ ವಾಹನಗಳ ಚಾಲಕರಿಂದ ಹಿಡಿದು ನಿದ್ದೆ ಮಾಡಗೊಡದ ದೊಡ್ಡ ಕನಸಿನ ಹಿಂದೆ ಹೊರಟವರು ಕೊಟ್ಟಕೊನೆಗೆ ಅರಸುವುದು  ಒಂದು ನಿರಾಳ ನಿದ್ದೆಯನ್ನೇ ಇರಬಹುದು. ಅನಿವಾರ್ಯ ದುಡಿಮೆ, ಯಶಸ್ಸಿನ ಹಸಿವು, ಮಹತ್ವಾಕಾಂಕ್ಷೆಗಳು ಒಂದಕ್ಕಿಂತ ಒಂದು ಭಿನ್ನವಾದರೂ ಬೇರೆ ಬೇರೆ ದಿಕ್ಕಿನಿಂದ ಒಂದು ಸಂಪೂರ್ಣ ಸಂತೃಪ್ತ ನಿದ್ದೆಯ ಹುಡುಕಾಟದಲ್ಲಿರಬಹುದು. ನಿದ್ದೆಯ ಎಚ್ಚರವೂ ಒಂದು ಆತ್ಯಂತಿಕ ಪ್ರಶಾಂತ ವಿಶ್ರಾಮದ ಅನ್ವೇಷಣೆಯಲ್ಲಿರಬಹುದು. ಅಂತಹ ಒಂದು ಹುಡುಕಾಟದ ಕತೆ ಅಲೆಕ್ಸಾಂಡರ್ ಚಕ್ರವರ್ತಿಯ ಬಗೆಗೂ ಇದೆ.

ಗ್ರೀಕ್ ದೊರೆ ಅಲೆಕ್ಸಾಂಡರ್  ದಂಡಯಾತ್ರೆಯನ್ನು ಮಾಡುತ್ತ , ಸಾಮ್ರಾಜ್ಯವನ್ನು ವಿಸ್ತರಿಸುತ್ತ ಇಂದಿನ ಭಾರತದ ಅಂದಿನ  ಭೂಪ್ರದೇಶಕ್ಕೂ ಬಂದಿದ್ದನಲ್ಲ.  ಹಾಗೆ ಅಲ್ಲಿ  ಸುತ್ತುತ್ತಿರುಗುವಾಗ , ಮರದ ನೆರಳಿನಲ್ಲಿ ಸೊಂಪಾಗಿ ಮಲಗಿದ್ದ ಸಾಧುವೊಬ್ಬನನ್ನು ಕಂಡನಂತೆ . ಕುಚೆಷ್ಟೆಯೋ , ಕುತೂಹಲವೋ ಎಬ್ಬಿಸಿ ಮಾತಿಗಿಳಿದನಂತೆ .
“ಈ ಯುದ್ಧಗಳಿಂದ ಏನು ಸಾಧಿಸುವೆ ?” ಎಂದು ಸಾಧು ಕೇಳಿದನಂತೆ
“ಒಂದೊಂದೆ ರಾಜ್ಯವನ್ನು , ರಾಜರನ್ನು ಗೆದ್ದು , ಎಲ್ಲದಕ್ಕೂ ನಾನೆ ಅರಸ , ಜಗತ್ತಿಗೆ ಚಕ್ರವರ್ತಿ ಎನಿಸಿಕೊಳ್ಳುತ್ತೇನೆ ” ಎಂದನಂತೆ ಅಲೆಕ್ಸಾಂಡರ್.
“ಚಕ್ರವರ್ತಿ ಎನಿಸಿಕೊಂಡ ನಂತರ ಏನು ಮಾಡುವೆ? “
“ಎಲ್ಲರನ್ನು ಎಲ್ಲವನ್ನು ಗೆದ್ದ ನಂತರ ಸುಖವಾಗಿ ನಿದ್ರಿಸುತ್ತೇನೆ” ಎಂದನಂತೆ  ಅಲೆಕ್ಸಾಂಡರ್.
ಆಗ ಸಾಧು ನಗುತ್ತ “ನಾನದನ್ನು ಈಗಾಗಲೇ ಮಾಡುತ್ತಿದ್ದೇನೆ , ಯಾರನ್ನೂ ಕೊಲ್ಲದೆ ಗೆಲ್ಲದೆ ” ಎಂದನಂತೆ.

ಸಾಧುವೊಬ್ಬನಿಗೆ ಸರಳ ಬದುಕಿನಲ್ಲಿ ಸುಲಭವಾಗಿ ದಕ್ಕಿದೆ ಎಂದೆನಿಸುವ ನಿದ್ರೆ, ಅಲೆಕ್ಸಾಂಡರನಿಗೆ ದಶಕದ ಕಾಲ ಕತ್ತಿಯನ್ನು ಝಳಪಿಸುತ್ತ , ಸಾವಿರಾರು ಮೈಲು ದೂರ ಕುದುರೆಗಳನ್ನು ಕಾಲಾಳುಗಳನ್ನು ದಣಿಸಿ, ರಕ್ತ ಕಣ್ಣೀರುಗಳ ಕಾಲುವೆ ಹರಿಸಿ, ನೂರಾರು ರಾಜರನ್ನು ಮಣಿಸುವುದರಲ್ಲಿ ಸಿಕ್ಕಿತ್ತೋ ಇಲ್ಲವೊ? ಗೊತ್ತಿಲ್ಲ. ತಾನು ಬಯಸಿದಂತೆ ಇಡೀ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ , ಆತನ ಕನಸಿನ ನಿದ್ರೆ ಅವನಿಗೆ ದೊರಕದೇ ಹೋಗಿರಬಹುದು; ಸಾಧು ಹೇಳಿದ ಅರ್ಥದಲ್ಲಿ ನಿರಾಳವಾದ ನಿದ್ರೆಯೇ ಬದುಕಿನ ಸರ್ವಸ್ವ ಎಂದು ನಂಬಿದರೆ ಅಲೆಕ್ಸಾಂಡರನಿಗೆ ತಾನೆಷ್ಟು  ದೌರ್ಭಾಗ್ಯವಂತ ಎಂದೂ ಅನಿಸಿರಬಹುದು. ಈ ಘಟನೆ ಕತೆಯೊ ಕಲ್ಪನೆಯೊ ಅಥವಾ ಅಲೆಕ್ಸಾಂಡರನ ಸ್ವಗತವೊ ಇರಬಹುದು. ಅಥವಾ ತೀವ್ರ ಮಹತ್ವಾಕಾಂಕ್ಷೆಯನ್ನು ವಿಮರ್ಶೆ ಮಾಡುವ ಒಂದು ತಾತ್ವಿಕ ಪ್ರಜ್ಞೆಯೂ ಇರಬಹುದು.

ನಿದ್ರೆಯ ಎಚ್ಚರದ ಬಗ್ಗೆ ನುಡಿದವರು, ನೆಮ್ಮದಿ ಸಾರ್ಥಕ್ಯ ಯಶಸ್ಸುಗಳನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಿ ಜಿಜ್ಞಾಸೆ ಹುಟ್ಟಿಸಿದವರು ಅಲೆಕ್ಸಾಂಡರನ ಕಾಲದ ಮೊದಲೂ ಆಮೇಲೆಯೂ ಸಿಗುತ್ತಾರೆ. ತಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ, ಹೊರಗಿನ ಉತ್ತರಗಳನ್ನು ಪ್ರಶ್ನಿಸುತ್ತ ಬದುಕಿದ ಬಾಳಿದ ಬುದ್ಧ, ಬಸವಣ್ಣ, ಗಾಂಧಿ ಮತ್ತೆ ಇನ್ನೂ ಅನೇಕರು ಹೀಗೆ ಎಚ್ಚರದಲ್ಲೇ ನಿದ್ರಿಸಿದವರ ಸಾಲಿಗೆ ಸೇರಿದವರು. ಮತ್ತೆ ನಿದ್ದೆಯೊಳಗಿನ ಜಾಗೃತಿಯಿಂದಲೇ  ಒಂದು ಸಾರ್ಥಕ ವಿರಾಮದ  ಹುಡುಕಾಟದಲ್ಲಿದ್ದವರು. ರಾತ್ರಿಯಿಡೀ ಕತ್ತಲೊಡನೆ ತರ್ಕಿಸುತ್ತಾ ನಿದ್ರೆಗೆಡುತ್ತ ಪ್ರಯಾಣಿಕರನ್ನು ಹೊಸ ನಿಲ್ದಾಣಕ್ಕೆ ತಲುಪಿಸುವ ರಾತ್ರಿ ಪಾಳಿಯ ಚಾಲಕರು.

  • ಯೋಗಿಂದ್ರ ಮರವಂತೆ

ಗಿಳಿಯು ಪಂಜರದೊಳಿಲ್ಲ

ಹಿಂದಿನ ಲೇಖನದಲ್ಲಿ ಪೌರಾಣಿಕ ಕಥೆಗಳಲ್ಲಿ ಬರುವ “ಅಮರತ್ವ” ವನ್ನು ಇಂದಿನ “ಆವಿಷ್ಕಾರಗಳಿಂದ” ಪಡೆಯುವ ಪ್ರಯತ್ನದ ಬಗ್ಗೆ ಬರೆದಿದ್ದೆ. ಈ ವಿಷಯದ ಬಗ್ಗೆ ವಿಚಾರಗಳು ಇನ್ನೂ ತಲೆಯಲ್ಲಿ ಓಡುತ್ತಿತ್ತು, ತಲೆಯಲ್ಲಿ ಹರಡಿದ ವಿಚಾರಗಳನ್ನು ಹೆಣೆದು, ಒಂದು ಲೇಖನ ಮಾಡುವ ಪ್ರಯತ್ನ ಇದು.

ಶನಿ ಮಹಾತ್ಮೆ ಕಥೆಯ ಒಂದು ಭಾಗ; ಸೂರ್ಯನ ಎರಡನೆಯ ಪತ್ನಿ ಛಾಯಾದೇವಿ. ಯಮ ಮೊದಲ ಹೆಂಡತಿಯ ಮಗ, ಅವನು ತಾಯಿ ಛಾಯಾದೇವಿ ಮಾಡುವ ಬೇಧಭಾವ ಬಗ್ಗೆ ಮಾತನಾಡಿದಾಗ, ಛಾಯಾದೇವಿಯು ಯಮನಿಗೆ “ಪ್ರೇತನಾಗು” ಎಂದು ಶಾಪ ಕೊಡುತ್ತಾಳೆ. ಸೂರ್ಯದೇವ ಇದನ್ನು ವರವನ್ನಾಗಿ ಪರಿವರ್ತಿಸಿ, ಯಮನನ್ನು ಪ್ರೇತಗಳ ರಾಜ – ನರಕದ ಒಡೆಯನನ್ನಾಗಿ ಮಾಡುತ್ತಾನೆ. ಈ ಯಮಧರ್ಮ ಜಗತ್ತಿನ ಎಲ್ಲ ಜನರಿಗೆ ಕೊನೆಯ ವರದಾನ “ಸಾವನ್ನು” ಕೊಡುತ್ತಾರೆ, ಜೋಗಿ ತಮ್ಮ ಪುಸ್ತಕ “ಸಾವು” ನಲ್ಲಿ ಹೇಳುವದು “ಅವನು ಕೊನೆಗೆ ಬರುತ್ತಾನೆ. ಹೊರಡು ಅನ್ನುತ್ತಾನೆ. ನಾವೆಲ್ಲ ಎದ್ದು ಹೊರಡುತ್ತೇವೆ, ಅಲ್ಲಿಗೆ ಆಟ ಮುಗಿಯುತ್ತದೆ. ಮುಂದೇನು ಅನ್ನುವುದು ಯಾರಿಗೂ ಗೊತ್ತಿಲ್ಲ. ನಾವು ಭೇಟಿಯಾಗುವ ಕೊನೆಯ ಗಿರಾಕಿ ಸಾವು. ನಮ್ಮ ಹುಟ್ಟಿನೊಂದಿಗೆ ನಮ್ಮೊಳಗೇ ಹುಟ್ಟುವ ಆತ್ಮಬಂಧು”. ಇಲ್ಲಿ ಸಾವನ್ನು ಆತ್ಮಬಂಧು ಎಂದು ಯಾಕೆ ಕರೆದಿರಬಹುದು ಎಂಬುದು ಮುಂದೆ ಚರ್ಚಿಸೋಣ.

ಸಾವಿನ ವಿಷಯ ಬಂದಾಗ ನೆನಪಾಗುವುದು ನನ್ನ ಬಾಲ್ಯದ ಗೆಳೆಯ “ಚಂದ್ರು”. ನನ್ನೊಡನೆ ಶಾಲೆಯಲ್ಲಿ ಓದಿದವನು, ಜಾಣ ಹುಡುಗ. ನಾವೆಲ್ಲರೂ ಶಾಲೆ ಮುಗಿದಮೇಲೆ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ, ಬೇರೆ ಸ್ಥಳಕ್ಕೆ ಹೋದೆವು. ಚಂದ್ರು ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜು ಸೇರಿಕೊಂಡು ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. ಅವನು “ಲೈಫ್ ಆಫ್ಟರ್ ಡೆತ್” ಪುಸ್ತಕ ಓದಿ, ಅದರಿಂದ ಪ್ರಭಾವಿತಗೊಂಡನು. ಒಂದು ದಿನ ವಿಷಯ ತಿಳಿಯಿತು, ಅವನು ಸಾವಿನ ನಂತರ ಏನಿದೆ ಎಂದು ನೋಡಲು ಹೋಗುತ್ತಿದ್ದೇನೆ ಎಂದು ಪತ್ರ ಬರೆದು ಇಟ್ಟು, ಸಾವನ್ನು ಅಪ್ಪಿಕೊಂಡಿದ್ದನು… ಈ ವಿಷಯ ಹಂಚಿಕೊಂಡ ಕಾರಣ, ಸಾವು ಕೆಲವರಿಗೆ ಹೆದರಿಕೆ ತಂದರೆ… ಕೆಲವರಿಗೆ ಕುತೂಹಲ ಮೂಡಿಸುತ್ತದೆ.

ಹಿಂದು ಧರ್ಮದಲ್ಲಿ ಸಾವು, ಅದರ ನಂತರದ ಬದುಕಿನ ಬಗ್ಗೆ ವಿಷಯಗಳು ಗರುಡ ಪುರಾಣದಲ್ಲಿ ಬರುತ್ತದೆ. ನಾವು ನಮ್ಮ ಕರ್ಮಗಳ ಅನುಸಾರವಾಗಿ ಸಾವಿನ ನಂತರದ ಬದುಕನ್ನು ಕಾಣುತ್ತೇವೆ. ಒಂದು ರೀತಿ ಅದು ನಿಜ, ಯಾಕೆಂದರೆ ನಾವು ಬದುಕಿದಾಗ ಮಾಡಿದ ಒಳ್ಳೆಯ ಕಾರ್ಯವನ್ನು ಜನ ನೆನಪಿಸಿಕೊಂಡು, ನಮ್ಮ ಸಾವಿನ ನಂತರವೂ ನಮ್ಮ ಉಳಿವು ಇಲ್ಲಿರುವಂತೆ ಮಾಡುತ್ತಾರೆ.

“ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ,
ಕೊನೆಗೆ ಉಳಿಯುವುದೇ ನಿನ್ನ ಒಳ್ಳೆತನ.
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ”
(“ಮಾಸ್ತಿ ಗುಡಿ” ಚಿತ್ರದ ಒಂದು ಹಾಡು)

ಸ್ವಾಮಿ ರಾಮ ಅವರ ಪುಸ್ತಕ “ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ” ಅವರು ವಿವಿಧ ಸಾಧಕರ ಪರಿಚಯ ಮಾಡಿಕೊಡುತ್ತಾರೆ. ಅದರಲ್ಲಿ ಸ್ವಾಮಿ ರಾಮ ತಮ್ಮ ಗುರುಗಳ ಶಿಷ್ಯಂದಿರಲ್ಲಿ ಒಬ್ಬರಾದ ಸಾಧಕರ ಬಗ್ಗೆ ಬರೆಯುತ್ತಾರೆ, ಆ ಸಾಧಕರನ್ನು ಭೇಟಿಯಾಗಲು ಗಂಗೋತ್ರಿ ಹತ್ತಿರದ ಒಂದು ಗವಿಗೆ ಹೋಗುತ್ತಾರೆ. ಆ ಸ್ವಾಮಿಗಳು ಸುಂದರವಾದ ದೃಢಕಾಯದವರು, ಅವರು ದೇಹದಿಂದ ತಮ್ಮನ್ನು ಬೇರ್ಪಡಿಸಿಕೊಂಡು ಹೋಗುವ ತಯಾರಿಯಲ್ಲಿ ಇದ್ದರು. ಅವರು ಹೇಳಿದ ದಿನ, ಕ್ಷಣ ತಮ್ಮ ದೇಹವನ್ನು ತ್ಯಾಗ ಮಾಡಿ ತಮ್ಮ ಆತ್ಮವನ್ನು ಬ್ರಹ್ಮರಂಧ್ರದಿಂದ ಬೇರ್ಪಡಿಸಿದರು. ಅವರ ಪ್ರಕಾರ ಇದು ಸಾವಲ್ಲ, ಅವರ ಆತ್ಮ ಅವರ ಹತೋಟಿಯಲ್ಲಿ ಇದೆ ಮತ್ತು ಅವರು ತಮ್ಮ ಇಚ್ಛಾನುಸಾರ ಅಮರರಾಗಿಯೇ ಉಳಿಯುತ್ತಾರೆ. ಇಲ್ಲಿ ನಾವು ಮೇಲೆ ನೋಡಿದ ಆತ್ಮಬಂಧು ಪದವನ್ನು ನೋಡೋಣ… ಆತ್ಮಬಂಧು, ಆತ್ಮಾಭಿಮಾನ, ಆತ್ಮನಿರ್ಭರತೆ, ಆತ್ಮಾವಲೋಕನ ಈ ಎಲ್ಲ ಪದಗಳಲ್ಲಿ ಆತ್ಮ ಎಂದು ಉಪಸರ್ಗ ಇದೆ. ಇಲ್ಲಿ ಅಥವಾ ಇಂತಹ ಸಂಬೋಧನೆಯಲ್ಲಿ ದೇಹ ಎಂದು ಇರುವದಿಲ್ಲ, ಯಾಕೆಂದರೆ ನಮ್ಮನ್ನು ಗುರುತಿಸುವುದು ಆತ್ಮ, ನಮ್ಮ ಆತ್ಮತೃಪ್ತಿಗಾಗಿ ಮಾಡುವ ಕಾರ್ಯಗಳೇ ನಮ್ಮನ್ನು ಇಲ್ಲಿ ಉಳಿಸುವುದು; ನಮ್ಮ ದೇಹವಲ್ಲ. ಮೇಲೆ ಕಂಡಂತಹ ಸಾಧಕರ ಪ್ರಕಾರ ದೇಹ ಬಾಹ್ಯ ವ್ಯಕ್ತಿತ್ವ.

ನನ್ನಗೂ, ನನ್ನ ಅಣ್ಣನಿಗೂ ಕೆಲವು ತಿಂಗಳು ಇಂತಹ ಒಬ್ಬ ಸಾಧಕರ ಜೊತೆ ಇದ್ದು, ಅವರ ಸೇವೆ ಮಾಡುವ ಅವಕಾಶ ಸಿಕ್ಕಿತು. ಸಾಧಕರು ಇದ್ದ ಸ್ಥಳ ಸಿದ್ದಾಪುರದ ಹತ್ತಿರದ ಶಿರಳಗಿ ಎಂಬ ಸಣ್ಣ ಗ್ರಾಮದಲ್ಲಿ. ಅವರು ಶ್ರೀ ರಾಮ ದೇವರೊಡನೆ ಮಾತನಾಡುತ್ತಾರೆ, ಹನುಮಂತ ದೇವರ ದರ್ಶನ ಪಡೆದಿದ್ದಾರೆ ಎಂದು ಸುತ್ತಲಿನ ಜನ ಅವರ ಹತ್ತಿರ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಬರುತ್ತಿದ್ದರು. ನಮಗೆ ಪ್ರತಿ ದಿನವೂ ಹೊಸ ಜನ, ಹೊಸ ವಿಷಯ ತಿಳಿಯುತ್ತಿತ್ತು, ಇನ್ನೊಂದು ಲೇಖನದಲ್ಲಿ ಅಲ್ಲಿ ಕಂಡ ವಿಷಯ, ಸಂಗತಿಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ. ಅವರ ಸರಳ ಜೀವನ, ಸದಾ ನಗು, ಯಾವುದೇ ಒಂದು ವಸ್ತು/ವಿಷಯದ ಮೇಲೆ ಅಸೆ ಇರದೇ ಜೀವಿಸುದು ನೋಡಿ ಒಂದು ದಿನ ತಡೆಯಲಾರದೆ ಕೇಳಿದೆ – “ನಿಮ್ಮ ಬಗ್ಗೆ, ನಿಮ್ಮ ವಿಚಾರ ಹೆಚ್ಚಿನ ಜನರಿಗೆ ತಲುಪಿಸಲು ನಿಮಗೆ ಇಚ್ಛೆ ಇಲ್ಲವೇ? ಆಶ್ರಮ ನೀವು ಇನ್ನೂ ಬೆಳಸಬಹುದಲ್ಲವೇ?”. ಅದಕ್ಕೆ ಅವರು ಅಂದದ್ದು, ನನಗೆ ಬಾಹ್ಯ ಜಗತ್ತು ಬೇಕಿಲ್ಲ, ನನ್ನ ಜಗತ್ತು ನನ್ನ ಅಂತರಾತ್ಮದಲ್ಲಿ ಇದೆ ಮತ್ತು ಅದರಲ್ಲಿ ನಾನು ಸಂತೋಷದಿಂದ ಇದ್ದೇನೆ. ನಿಜಕ್ಕೂ ಅವರಿಗೆ ಬಾಹ್ಯ ಕಾಣುತ್ತಿರಲಿಲ್ಲ, ಅಲ್ಲಿ ನನ್ನನ್ನು ಹೆದರಿಸುವ ಹಾವು, ಕತ್ತಲು, ನಿಶ್ಯಬ್ದ ಅವರಿಗೆ ಎಂದೂ ಕಾಣುತ್ತಿರಲಿಲ್ಲ.

ಇಷ್ಟೊಂದು ವಿಷಯ ಸಾವಿನ ಬಗ್ಗೆ ಬರೆದ ಕಾರಣ ಜನಕ್ಕೆ ಸಾವಿಲ್ಲದೆ ಬದುಕುವ, ಸಾವನ್ನು ಗೆಲ್ಲುವ ಹುಚ್ಚು… ಅವರ ಬಾಹ್ಯ ದೇಹ, ಹೆಸರು ಇಲ್ಲಿ ಶಾಶ್ವತವಾಗಿ ಉಳಿಸಲು ನಡೆಸುವ ಪ್ರಯತ್ನವೇ ಅಮರತ್ವ ಸಾಧನೆ ಅನಿಸುತ್ತದೆ. ನಾಲ್ಕು ಯುಗಗಳ ಬದುಕಿನ ಕೊನೆಯ ಯುಗ “ಕಲಿ” ಯುಗದಲ್ಲಿ ಎಲ್ಲವೂ ನಾಶವಾಗುವದರ ಬಗ್ಗೆ ಭವಿಷ್ಯದ ಹೇಳಿಕೆಗಳ ನಡುವೆ ಚಿರಂಜೀವಿ ಆಗಿರಲು ಸಾಧ್ಯವೇ? ನಮ್ಮ ಜೀವನದ ಶಿಲ್ಪಿ ನಾವೇ. ಸಾವು ಮತ್ತು ಜನನವು ಜೀವನದ ಎರಡು ಘಟನೆಗಳು ಮಾತ್ರ. ಭಕ್ತ ಕಂಬಾರ ಚಿತ್ರದ ಒಂದು ಗೀತೆಯಲ್ಲಿ ಹೇಳಿದಂತೆ

“ಉಸಿರಾಡುವ ತನಕ, ನಾನು ನನ್ನದೆಂಬ ಮಮಕಾರ,
ನಿಂತ ಮರುಘಳಿಗೆ, ಮಸಣವೇ ಸಂಸ್ಕಾರ,
ಮಣ್ಣಲಿ ಬೆರೆತು, ಮೆಲ್ಲಗೆ ಕೊಳೆತು,
ಮುಗಿಯುವ ದೇಹಕೆ ವ್ಯಾಮೋಹವೇಕೆ…”

ದೇವರ ಆಟ ಬಲ್ಲವರಾರೂ, ಎಂಬಂತೆ ಸಾವಿನ ಆಟವೂ ವಿಚಿತ್ರ… ಅಭಿಮನ್ಯು ಮತ್ತು ಉತ್ತರೆಯ ಮಗ ಪರೀಕ್ಷಿತ ರಾಜನ ಕಥೆ ಎಲ್ಲರಿಗೂ ಗೊತ್ತಿರಬಹುದು. ಮಹಾಭಾರತದ ಯುದ್ಧದ ಕೊನೆಯಲ್ಲಿ ಅಶ್ವಥಾಮ ಬ್ರಹ್ಮಾಸ್ತ್ರ ಬಿಟ್ಟು ಉತ್ತರೆಯ ಗರ್ಭ ಭೇದಿಸಿ, ಪಾಂಡವರ ವಂಶ ನಾಶ ಮಾಡಲು ಪ್ರಯತ್ನಿಸುತ್ತಾನೆ. ಬ್ರಹ್ಮಾಸ್ತ್ರ ತಡೆದು ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಶ್ರೀ ಕೃಷ್ಣ ಉಳಿಸುತ್ತಾನೆ… ಇಲ್ಲಿ ಪರೀಕ್ಷಿತ ಸಾವನ್ನು ಗೆಲ್ಲುತ್ತಾನೆ. ಮುಂದೆ ಋಷಿ ಶಮಿಕಾ ಅವರನ್ನು ಅವಮಾನಿಸಿ ಶಾಪಗ್ರಸ್ಥನಾಗುತ್ತಾನೆ, ಶಾಪದಿಂದ ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲ ಆಗುತ್ತದೆ, ಹಣ್ಣಿನ ನಡುವೆ ನುಸುಳಿ ಕುಳಿತ ತಕ್ಷಕ ಸರ್ಪ ಪರೀಕ್ಷಿತ ರಾಜನನ್ನು ಕಚ್ಚಿ ಅವನ ಸಾವಿಗೆ ಕಾರಣ ಆಗುತ್ತಾನೆ. ಹುಟ್ಟುವ ಮೊದಲು ಸಾವನ್ನು ಗೆದ್ದ ಪರೀಕ್ಷಿತ, ಮುಂದೆ ಪ್ರಯತ್ನ ಪಟ್ಟರೂ ಸಾವನ್ನು ಗೆಲ್ಲಲು ಸಾಧ್ಯ ಆಗುವದಿಲ್ಲ.

ಸಾವು ಜೀವನದ ಕೊನೆಯ ಆದೇಶ ಆದರೆ, ಚಿರಂಜೀವಿ ಪದಕ್ಕೆ ಅರ್ಥ ಇಲ್ಲವೇ?
ನಮ್ಮ ಪೌರಾಣಿಕ ವ್ಯಕ್ತಿಗಳಾದ ಅಶ್ವತ್ಥಾಮ, ಬಲಿ ಚಕ್ರವರ್ತಿ, ವೇದವ್ಯಾಸರು, ಹನುಮಾನ್, ವಿಭೀಷಣ, ಕೃಪಾಚಾರ್ಯರು, ಮಾರ್ಕಂಡೇಯ ಮತ್ತು ಪರಶುರಾಮ ಇವರನ್ನು ಅಷ್ಟ ಚಿರಂಜೀವಿಗಳು ಎಂದು ಕರೆಯುತ್ತಾರೆ. “Land of thousand names ” ಎಂದೇ ಪ್ರಸಿದ್ಧಿ ಪಡೆದ ಸ್ಥಳ ಶಂಬಾಲ , ಇದು ಹಿಮಾಲಯದಲ್ಲಿ ಇದೆ ಎಂದು ಹಿಂದು ಮತ್ತು ಬೌದ್ಧ ಧರ್ಮದ ನಂಬಿಕೆ. ಇದನ್ನು ಹುಡುಕಲು ವಿವಿಧ ದೇಶದ ಶೋಧಕರು ಪ್ರಯತ್ನ ಪಟ್ಟಿದ್ದಾರೆ. ನಮ್ಮ ಅಷ್ಟ ಚಿರಂಜೀವಿಗಳು ಶಂಬಾಲದಲ್ಲಿ ಇದ್ದಾರೆ ಮತ್ತು ವಿಷ್ಣುವಿನ ಹತ್ತನೇ ಅವತಾರ ಕಲ್ಕಿಯ ಆಗಮನಕ್ಕೆ ಕಾಯುತ್ತಿದ್ದಾರೆ ಎಂದು ಪ್ರತೀತಿ.

ಶಂಬಾಲ ಅಥವಾ ಸಹಸ್ರಾರ ಚಕ್ರ ಸಿದ್ದಿ ಸಾಧಕರು ಅನುಭವಿಸಬಲ್ಲರೇನೋ, ಅಂತಹ ಸಾಧಕರು ಚಿರಂಜೀವಿ ಆಗಬಹುದೇನೋ?
ಚಿರಂಜೀವಿ ಆಗಲು ಸಾಧ್ಯವಾಗದಿದ್ದರೆ; ಛಿ! ರಮ್ ಜೀವಿ ಆಗಬಹುದು…

ನನ್ನಂತಹ ಸಾಮಾನ್ಯರಿಗೆ ಸಾವನ್ನು ಸರಳವಾಗಿ ಹೇಳುವದಾದರೆ – “kicked the bucket “…ಪುರಂದರ ದಾಸರ ಕೀರ್ತನೆಯ ಸಾಲುಗಳೇ ಕೊನೆಯ ಅನುಭವ,

“ಒಂಬತ್ತು ಬಾಗಿಲ ಮನೆಯಲ್ಲಿ, ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಬ ಬಿದ್ದು, ಅಂಬರಕ್ಕೆ ಹಾರಿತಯ್ಯೋ
ರಾಮ, ರಾಮ
ಗಿಳಿಯು ಪಂಜರದೊಳಿಲ್ಲ”

ಎರಡು ಕವನಗಳು

ಪ್ರಸಾದ್ ನಂಜನಗೂಡು, ಮೂಲತಃ ಮೈಸೂರಿನವರಾದರೂ ಬೆಂಗಳೂರಿಗ. ಬೆಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಬಸವನಗುಡಿಯ ನ್ಯಾಷನಲ್ ಕಾಲೇಜು ಹಾಗೂ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಓದಿ ಮುಗಿಸಿದ ಮೇಲೆ ಪ್ರತಿಷ್ಠಿತ ಸಂಸ್ಥೆಯಾದ ಮದರಾಸಿನ ಐಐಟಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತದನಂತರ ಎಚ್ ಏ ಎಲ್, ಟಿಸಿಎಸ್ ಗಳಲ್ಲಿ ಕೆಲಸ ಮಾಡಿ, ಅಮೇರಿಕೆಯ ಹಾದಿಯಾಗಿ ಬ್ರಿಸ್ಟಲ್ ನಗರದಲ್ಲಿ ನೆಲೆಸಿದ್ದಾರೆ. ಅವರ ಪರಿಣತಿ ವಿಮಾನಗಳ ಕ್ಷೇತ್ರದಲ್ಲಿ. ಈಗ ರಕ್ಷಣಾ ಮಂತ್ರಾಲಯದ ಉದ್ಯೋಗಿ. ತಮ್ಮ ಅಭಿಯಂತ ವೃತ್ತಿಯಲ್ಲಿ ನಿರತರಾದರೂ ಸಾಹಿತ್ಯದ ಹಾಗೂ ಸಂಗೀತದ ಆಸಕ್ತಿಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಲಘುಬರಹ, ಕವನ, ವಿಮರ್ಶೆ ಇವರಿಗೆ ಇಷ್ಟವಾಗುವ ಪ್ರಕಾರಗಳು.

ಈ ವಾರ ಪ್ರಸಾದ್ ತಮ್ಮ ಎರಡು ಕವನಗಳನ್ನು ಅನಿವಾಸಿ ಓದುಗರೊಂದಿಗೆ ಹಂಚಿಕೊಡಿದ್ದಾರೆ. ಇವೆರಡೂ ವಿಭಿನ್ನ ವಿಷಯಗಳನ್ನು ಅವಲೋಕಿಸುತ್ತವೆ. ಇವುಗಳಲ್ಲಿ ಪ್ರಸಾದ್ ಅವರ ಆಲೋಚನೆಯ ಹರಿವನ್ನು ಕಾಣಬಹುದು . ಮೊದಲ ಕವನದಲ್ಲಿ ಪ್ರಸಾದ್ ಪ್ರೇಮವನ್ನು ದಿನಚರಿಯಾಗಿಸಿದ್ದಾರೆ. ಪ್ರೇಯಸಿಯ ಮೇಲಿನ ಪ್ರೀತಿಯನ್ನು ಮನದಾಳದಿಂದ ಬಿಚ್ಚಿಟ್ಟಿದ್ದಾರೆ. ಎರಡನೇ ಕವಿತೆಯಲ್ಲಿ ಇಂದಿಗೂ-ಎಂದಿಗೂ ಪ್ರಸ್ತುತವಾಗುವ ಮೊಂಡು ಬುದ್ಧಿಯ ವಿಶ್ಲೇಷಣೆಯನ್ನು ಕಾಣಬಹುದು. ಪ್ರಾಪಂಚಿಕ ವಿಷಯದಿಂದ ಈ ಮನೋಭಾವನೆಯನ್ನು ಆಧ್ಯಾತ್ಮಕ್ಕೆ ಕೊಂಡೊಯ್ಯುವ ಪ್ರಯತವನ್ನು ಮಾಡಿದ್ದಾರೆ. ಇದು ಪ್ರಸಾದ್ ಅವರಿಂದ ಅನಿವಾಸಿಗೆ ಚೊಚ್ಚಲ ಕೊಡುಗೆ. ನಿಯಮಿತವಾಗಿ ಅವರ ಕವನ, ಬರಹಗಳನ್ನು ಓದುವ ಅವಕಾಶ ನಮ್ಮದಾಗಲಿ ಎಂಬುದು ಹಾರೈಕೆ.

  • ಸಂಪಾದಕ

ದಿನಚರಿ

ನನ್ನೀ ದಿನಚರಿ ನಿನ್ನ ಒಲವ ಪರಿ

ಸಾಗುವೆ ಅದು ಕರೆದೊಯ್ದಲಿ

ಹಗಲೇ ಇರಲಿ ಇರುಳೇ ಬರಲಿ

ಇರುವೆನು ನಾ ಸನಿಹದಲಿ

ಬರೆಯುತ ಹೋದರೂ ಮುಗಿಯದು ಎಂದೂ

ದಣಿಯದು ಎಷ್ಟೇ ಬಣ್ಣಿಸಿಯೂ

ಆಡುವ ಮಾತೆಲ್ಲ ಕೇಳಿದರೂ

ತೀರದು ಆಡದ ಮಾತುಗಳು

ನೋಟವೇ ಸಾಕು ಮನ ತಿಳಿಯಲು

ನೋಡುತಲಿದ್ದರೂ ಮನ ತಣಿಯದು

ಅರಿಯುತಲಿದ್ದರೂ ಅನುದಿನವೂ

ಅರಿಯದೆ ಇರುವದು ಇನ್ನೆಷ್ಟೋ

ಜೀವದೊಡೆಯೇ ಜೀವವಾಗಿ

ಜೀವನವ ನಾವ್ ನಡೆಸಿಹೆವೂ

ಜಗಕೆ ನೀನೊಂದು ಜೀವವಾದರೂ

ಜಗವೇ ನೀನಾಗಿಹೆ ಈ ಜೀವಕೆ

ಮೂಗಿನ ನೇರಕೆ

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ

ಮೂಗಿನ ನೇರಕೆ ನಮ್ಮ ಮೂಗಿನ ನೇರಕೆ

ವೃಥಾ ಚಿಂತೆ ಯಾತಕೆ ಮಂಥನ ವೇತಕೆ

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ

ಯಾವುದು ಒಳಿತು ಯಾರಿಗೆ ಒಳಿತು

ಯಾರಲಿ ಯಾರು ಹೇಳ್ವವರು ಕುಳಿತು

ಸಾದರವಾವುದು ಹಾದರವಾವುದು

ಮೂಗಿನ ನೇರಕೆ ನಮ್ಮ ಮೂಗಿನ ನೇರಕೆ

ಸ್ವಾರ್ಥ ಯಾವುದು ತ್ಯಾಗ ಯಾವುದು

ಪುರಾಣವಾವುದು ಪುರಾತತ್ವವಾವುದು

ಆತ್ಮನದಾವುದು ಪರಮಾತ್ಮನದಾವುದು

ಮೂಗಿನ ನೇರಕೆ ಎಲ್ಲ ಮೂಗಿನ ನೇರಕೆ!

-ಪ್ರಸಾದ್ ನಂಜನಗೂಡು

ಬ್ರಿಟನಿನ್ನ ಇತಿಹಾಸಕ್ಕೂ ಮೀರಿದ ಪ್ರಧಾನ ಮಂತ್ರಿಯ ನಿವಾಸ

ಬ್ರಿಟನ್ ಒಂದು ಸಾಂಸ್ಕೃತಿಕ ದೇಶ ಎಂದರೆ ತಪ್ಪಾಗಲಾರದು. ಇಲ್ಲಿ ನೂರಾರು ವರ್ಷಗಳ ಇತಿಹಾಸವುಳ್ಳ ಬಹಳಷ್ಟು ಸ್ಮಾರಕಗಳು ಕಟ್ಟಡಗಳು ಇವೆ. ರಾಜ ಮಹಾರಾಜರು ಹಾಗು ಸಾಮ್ರಾಜ್ಞಿಯರು ವಾಸಿಸಿದ ಕೋಟೆ ಅರಮನೆಗೂ ಈ ದೇಶವನ್ನು ಅಲಂಕರಿಸಿವೆ. ಇಂತಹ ಒಂದು ವಿಕ್ಟೋರಿಯನ್ ಕಾಲದ ಭವ್ಯ ನಿವಾಸಕ್ಕೆ ಭೇಟಿ ಕೊಟ್ಟ ಪ್ರತಿಭಾ ರಾಮಚಂದ್ರ ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಇತಿಹಾಸ ಹಾಗು ಮಾಹಿತಿಯುಳ್ಳ ಲೇಖನ ಎರಡು ಕಂತಿನಲ್ಲಿ ನಿಮ್ಮೆಲ್ಲರಿಗಾಗಿ.

~ಸಂ

ನಮ್ಮ ಪಟ್ಟಣದ ಒಂದು ಐತಿಹಾಸಿಕ ಮನೆ: ಹುಹೆಂಡೆನ್ ಮ್ಯಾನರ್ – ಭಾಗ 1

ನಾವು ವಾಸವಿರಿವುದು ಬಕಿಂಗ್ಹ್ಯಾಮ್‌ಶೈರ್‌ ಕೌಂಟಿಯ ಹೈ ವಿಕಂಬ್ ಎಂಬ ಸಣ್ಣ ಪಟ್ಟಣದಲ್ಲಿ. ಕಳದೆ ವರ್ಷ ನನ್ನ ಮಗನ ಶಾಲೆಯಿಂದ ಒಂದು ಸ್ಪರ್ಧೆಯ ಬಗೆಗೆ ಈಮೇಲ್ ಬಂದಿತ್ತು. ನಮ್ಮ ಪಟ್ಟಣದಲ್ಲಿರುವ ಹುಹೆಂಡೆನ್ ಮ್ಯಾನರ್ ಎಂಬ ಐತಿಹಾಸಿಕ ಮನೆಯ ಟ್ರಸ್ಟ್ನವರು ಈಸ್ಟರ್ ಹಬ್ಬದ ಪ್ರಯುಕ್ತ ತಮ್ಮ ಸುತ್ತಮುತ್ತಲಿನಲ್ಲಿರುವ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಆಯೋಜಿಸಿದ ಸ್ಪರ್ಧೆ ಇದು. ಈ ಸ್ಪರ್ಧೆಯ ವಿಷಯ ಬಹಳ ವಿಭಿನ್ನ ಹಾಗು ವಿಶೇಷವಾಗಿತ್ತು — ಒಂದು ಕಾಲ್ಪನಿಕ ಜೀವಿಯನ್ನು (Mythical Creature) ವಿನ್ಯಾಸ ಮಾಡಿ ಆದರ ಬಗೆಗೆ ಸಂಕ್ಷಿಪ್ತ ವಿವರಣೆ ಕೊಡಬೇಕು ಎಂದು. ಪ್ರತಿ ಶಾಲೆಗೂ ನಿರ್ದಿಷ್ಟ ಬಗೆಯ Mythical Creature ವಿನ್ಯಾಸ ಮಾಡಲು ವಿಷಯ ಕೊಟ್ಟಿದ್ದರು. ನನ್ನ ಮಗನ ಶಾಲೆಯವರಿಗೆ ಒಂದು ಕಾಲ್ಪನಿಕ ಹಿಮ ಜೀವಿಯನ್ನು (Mythical Ice Creature) ವಿನ್ಯಾಸ ಮಾಡುವದಕ್ಕೆ ಹೇಳಿದ್ದರು. ಈ ಸ್ಪರ್ಧೆಯ ಬಹುಮಾನ ಕೂಡ ವಿಶೇಷವಾಗಿತ್ತು — ಪ್ರತಿ ಶಾಲೆಗೆ ಒಂದು ಚಿತ್ರವನ್ನು ಆಯ್ಕೆ ಮಾಡಲಾಗುವುದು ಹಾಗೂ ಆಯ್ಕೆಯಾದ ಚಿತ್ರವನ್ನು ಹೈ ವಿಕಂಬ್ ನ ನುರಿತ ಕಲಾವಿದರೊಬ್ಬರು ಲೈಫ್ ಸೈಜ್ ಆಕಾರದಲ್ಲಿ ಪುನರ್ ನಿರ್ಮಿಸುತ್ತಾರೆ ಮತ್ತು ಅದನ್ನು ಹುಹೆಂಡೆನ್ ಮ್ಯಾನರ್ ಗಾರ್ಡನ್ಸ್ ನಲ್ಲಿ ಈಸ್ಟರ್ ರಜೆ ವೇಳೆ 1 ತಿಂಗಳು  ಪ್ರದರ್ಶಿಸಲಾಗುವುದು, ಜೊತೆಗೆ ಸ್ಪರ್ಧೆಯಲ್ಲಿ ವಿಜೇತಾರಾದ ಮಕ್ಕಳ ಕುಟುಂಬದವರಿಗೆ ಹುಹೆಂಡೆನ್ ಮ್ಯಾನರ್ ಮತ್ತು ಗಾರ್ಡನ್ಸ್ ನ್ನು ನೋಡಲು complimentary ಟಿಕೆಟ್ ಕೊಡಲಾಗುವುದು ಎಂದು ಸಹ ತಿಳಿಸಿದ್ದರು. ನನ್ನ ಮಗನಿಗೆ ಡ್ರಾಯಿಂಗ್ ನಲ್ಲಿ ತುಂಬಾ ಆಸಕ್ತಿ, ಹಾಗಾಗಿ ಅತ್ಯಂತ ಉತ್ಸುಕತೆಯಿಂದ “Frozen Claw” ಅಂತ ಒಂದು ಕಾಲ್ಪನಿಕ ಹಿಮ ಜೀವಿಯನ್ನು ವಿನ್ಯಾಸ ಮಾಡಿ, ಅದರ ಚಿತ್ರ ಬಿಡಿಸಿ ಶಾಲೆಯವರಿಗೆ ಕೊಟ್ಟ. ಅವನ ಚಿತ್ರ ಚೆಂದವಿತ್ತು ಹಾಗು ಅನನ್ಯವಾಗಿಯೂ ಇತ್ತು, ಆದರೆ ಅವನು ಅದಕ್ಕೆ ತಕ್ಕ ವಿವರಣೆ ಕೊಟ್ಟಿರಲಿಲ್ಲ, ಬಹುಶಃ ಅದೇ ಕಾರಣಕ್ಕೆ ಅದು ಬಹುಮಾನಕ್ಕೆ ಆಯ್ಕೆಯಾಗಲಿಲ್ಲ, ಆದ್ದರಿಂದ ಅವನಿಗೆ ಸ್ವಲ್ಪ ನಿರಾಶೆಯಾಯಿತು. ಹೋಗಲಿ ಬಿಡು ಪುಟ್ಟ, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ಬಹುಮಾನ ಸಿಗುವುದಲ್ಲ ಎಂದು ಅವನಿಗೆ ಸಮಜಾಯಿಷಿ ಹೇಳಿ ಸುಮ್ಮನಾದೆ. ಅನಂತರ ಅವನು teacher ಇದನ್ನು ಕೊಟ್ಟರು ಎಂದು ಒಂದು envelope ಕೊಟ್ಟ, ಅದರಲ್ಲಿ  ಹುಹೆಂಡೆನ್ ಮ್ಯಾನರ್ ನ್ನು ನೋಡಲು complimentary ಫ್ಯಾಮಿಲಿ ಎಂಟ್ರಿ ಟಿಕೆಟ್ voucher ನ್ನು ಕೊಟ್ಟಿದ್ದರು. ಇದನ್ನು ನಾವು ನಿರೀಕ್ಷಿಸಿರಲಿಲ್ಲ, ಬಹುಶಃ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆಲ್ಲರಿಗೂ ಹುಹೆಂಡೆನ್ ಮ್ಯಾನರ್  ಹಾಗೂ ಆದರ ಗಾರ್ಡನ್ಸ್ ನಲ್ಲಿ ಪ್ರದರ್ಶನಕ್ಕೆ ಇಡಲಿರುವ ಈಸ್ಟರ್ special mythical ಜೀವಿಗಳ cut-out ಗಳನ್ನು ನೋಡಲು ಅವಕಾಶ ಸಿಗಲಿ ಎಂದು ಕೊಟ್ಟಿರಬೇಕು, ಅದಾದರೂ ಸಿಕ್ಕಿದೆಯಲ್ಲ ಎಂದು ಖುಷಿಯಾಯಿತು. ಆದರೆ ಆ voucher ಮುಂಬರುವ 2 ವಾರದ ಈಸ್ಟರ್ ಸ್ಕೂಲ್ ರಜೆಯಲ್ಲಿ ಕೇವಲ 3 ನಿರ್ದಿಷ್ಟ ದಿನಗಳಲ್ಲಿ ಮಾತ್ರ ಮಾನ್ಯವಾಗಿತ್ತು!! ಬ್ರಿಟನಿನ ಮಳೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೇ, ಒಮ್ಮೊಮ್ಮೆ storm ಬಂದರೆ ಎಡೆಬಿಡದೆ 3 ದಿನಗಳ ಕಾಲ ಗಾಳಿ-ಮಳೆ ಇರುತ್ತೆ. ಆ ತರಹ ಏನಾದರೂ ಆದರೆ ಗಾರ್ಡನ್ಸ್ ನೋಡಲು ಹೋಗುವದಕ್ಕೆ ಆಗೋದಿಲ್ಲ, ಹಾಗೆ ಆಗದಿರಲಿ ಎಂದು ಆಶಿಸೋಣ ಅಂತ ಮಗನಿಗೆ ಹೇಳಿದೆ. ಇದಾದ 1 ವಾರದ ಬಳಿಕ ಶಾಲೆಯ ಈಸ್ಟರ್ ರಜೆ ಶುರುವಾಯಿತು. ಮಾನ್ಯವಿದ್ದ 3 ನಿರ್ದಿಷ್ಟ ದಿನಗಳು ಸಮೀಪಿಸಿದಾಗ ಹವಾಮಾನ ಮುನ್ಸೂಚನೆ ನೋಡಿಕೊಂಡೆವು, 2 ದಿನ ಮಳೆಯ ಮುನ್ಸೂಚನೆ ಇತ್ತು, ಸದ್ಯ 3 ನೆ ದಿನಕ್ಕೆ ಮಳೆಯ ಮುನ್ಸೂಚನೆ ಇರಲಿಲ್ಲ , ಹಾಗಾದ್ರೆ ಆ ದಿನ ಹೋಗೋಣವೆಂದು ನಿರ್ಧರಿಸಿದೆವು.

ನಮ್ಮ ಹುಹೆಂಡೆನ್ ಮ್ಯಾನರ್ ಭೇಟಿಯ ಬಗೆಗೆ ಹೇಳುವ ಮುನ್ನ ಹೈ ವಿಕಂಬ್ ಮತ್ತು ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಕೊಡುತ್ತೇನೆ. ಇದನ್ನು ಸಾಮಾನ್ಯವಾಗಿ ವಿಕಂಬ್ ಎಂದು ಕರೆಯಲಾಗುತ್ತದೆ, ಇಲ್ಲಿಯ ಸಂಸದ್ ಸಭಾ ಕ್ಷೇತ್ರದ ಹೆಸರು ಕೂಡ ವಿಕಂಬ್ ಎಂದೇ ಇರೋದು. ಇದು ಇಂಗ್ಲೆಂಡ್‌ನ ಬಕಿಂಗ್ಹ್ಯಾಮ್‌ಶೈರ್‌ ಕೌಂಟಿಯಲ್ಲಿರುವ ಒಂದು ಮಾರುಕಟ್ಟೆ ಪಟ್ಟಣವಾಗಿದೆ. ಇದರ ದಕ್ಷಿಣದ ಕಡೆಗೆ ಸೆಂಟ್ರಲ್ ಲಂಡನ್ ಸುಮಾರು 29 ಮೈಲಿ ದೂರದಲ್ಲಿದೆ, ಹಾಗು 15 ಮೈಲಿ ಉತ್ತರಕ್ಕೆ ಪ್ರತಿಷ್ಟಿತ ವಿಶ್ವವಿದ್ಯಾನಿಲಯ ವಿರುವ ಆಕ್ಸ್‌ಫರ್ಡ್‌ ನಗರವಿದೆ. ಚಿಲ್ಟರ್ನ್ ಬೆಟ್ಟಗಳಿಂದ ಆವೃತಗೊಂಡ, ವೈ ನದಿಯ ಕಣಿವೆಯಲ್ಲಿರುವ ಈ ಪಟ್ಟಣವು ರಮಣೀಯ ಪ್ರಕೃತಿ ಸೌಂದರ್ಯಕ್ಕೂ ಹೆಸರುವಾಸಿಯಾಗಿದೆ, ಜೊತೆಗೆ ಶ್ರೀಮಂತ ಮತ್ತು ವೈವಿಧ್ಯಮಯ ಇತಿಹಾಸವನ್ನು ಕೂಡ ಹೊಂದಿದೆ. ಇಲ್ಲಿ ಪ್ರತಿ ವಾರ ಕಟ್ಟುವ ಮಾರುಕಟ್ಟೆಯು ಯುಕೆಯ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದು, ಸುಮಾರು 700 ವರ್ಷಗಳಿಂದ ಚಾಲನೆಯಲ್ಲಿ ಇದೆ ಎಂದು ಕೇಳಿದ್ದೇನೆ. ಪ್ರಸ್ತುತ, ವಾರದಲ್ಲಿ 3 ದಿನಗಳು (ಮಂಗಳವಾರ, ಶುಕ್ರವಾರ ಮತ್ತು ಶನಿವಾರ) ಮಾರುಕಟ್ಟೆ ನಡೆಯುತ್ತದೆ. 1800 ರ ದಶಕದಲ್ಲಿ ಈ ಊರು ಕುರ್ಚಿ ತಯಾರಿಕೆಗೆ ಅತ್ಯಂತ ಪ್ರಸಿದ್ಧಿವಾಗಿತ್ತು. ಸುತ್ತಮುತ್ತಲು ಚಿಲ್ಟರ್ನ್ ಬೆಟ್ಟಗಳಿರುವುದರಿಂದ ವಿಧ ವಿಧಾವಾದ ಮರದ ಪ್ರಕಾರಗಳು ಹೇರಳವಾಗಿದ್ದೆವು. ಹಾಗಾಗಿ ಆ ಮರವನ್ನು ಕುರ್ಚಿ ತಯಾರಿಕೆಗೆ ಬಳಸಲಾಗುತಿತ್ತು. ಇದೇ ಚಿಲ್ಟರ್ನ್ ಬೆಟ್ಟದ ಒಂದು ಭಾಗದಲ್ಲಿ ವಿಶಾಲವಾದ ಹುಹೆಂಡೆನ್ ಎಸ್ಟೇಟ್ ಇರೋದು. ಸುಮಾರು 135 ಎಕರೆಗಳಷ್ಟು ಇರುವ ಈ ಎಸ್ಟೇಟ್, ಯುರೋಪಿನ ಅತಿದೊಡ್ಡ ಸಂರಕ್ಷಣಾ ಚಾರಿಟಿ ಸಂಸ್ಥೆಯಾದ ನ್ಯಾಷನಲ್ ಟ್ರಸ್ಟ್ ನ ಸ್ವತ್ತಾಗಿದೆ. ಹುಹೆಂಡೆನ್ ಮ್ಯಾನರ್ ಮತ್ತು ಗಾರ್ಡನ್ಸ್ ಈ ಎಸ್ಟೇಟ್ನ ನೆತ್ತಿಯ ಮೇಲೆ ನಿಂತಿವೆ. ನ್ಯಾಷನಲ್ ಟ್ರಸ್ಟ್ ಸದಸ್ಯರಿಗೆ ಮ್ಯಾನರ್ ಮತ್ತು ಗಾರ್ಡನ್ಸ್ ನೋಡಲು ಉಚಿತ ಪ್ರವೇಶ ಸಿಗುತ್ತದೆ. ಹೈವಿಕಂಬ್ ನ ಬಗ್ಗೆ ಹೇಳುವ ಉತ್ಸುಕತೆಯಲ್ಲಿ ನನ್ನ ಬರಹದ ಮೂಲ ವಿಷಯದಿಂದ divert ಆಗೋದು ಬೇಡ, ಮತ್ತೊಮ್ಮೆ ನಮ್ಮ ಹುಹೆಂಡೆನ್ ಮ್ಯಾನರ್ ಭೇಟಿಯ ದಿನಕ್ಕೆ ಬರೋಣ. ನಾನು ಮೊದಲೇ ಹೇಳಿದಂತೆ ಮಳೆಯ ಮುನ್ಸೂಚನೆ ಇಲ್ಲದಿರುವ ದಿನದಂದು ಮಧ್ಯಾಹ್ನ ಊಟ ಮುಗಿಸಿ, ಹುಹೆಂಡೆನ್ ಮ್ಯಾನರ್ ನೋಡಲು ಹೊರಟೆವು. ನಮ್ಮ ಮನೆಯಿಂದ ಅಲ್ಲಿಗೆ ಕಾಲನಡಿಗೆಯಲ್ಲಿ ಕೂಡ ಹೊಗಬಹುದು, ಹುಹೆಂಡೆನ್ ಎಸ್ಟೇಟ್ ನ ಗಡಿರೇಖೆಯ ಒಂದು ತುದಿ ನಮಗೆ ಸುಮಾರು 1 ಮೈಲಿ ದೂರವಿದೆಯಷ್ಟೇ, ಹಾಗಾಗಿ ಎಸ್ಟೇಟ್ ನ ಸುತ್ತ-ಮುತ್ತ ಸ್ಪ್ರಿಂಗ್ ಮತ್ತು ಬೇಸಿಗೆ ಕಾಲದಲ್ಲಿ ಕೆಲವು ಬಾರಿ ವಾಕಿಂಗ್ ಹೋಗಿದ್ದೇವೆ, ಆಗ ಎಸ್ಟೇಟ್ ನ ಮತ್ತೊಂದು ತುದಿಯಲ್ಲಿರುವ ಮ್ಯಾನರನ್ನು ದೂರದಿಂದ ನೋಡಿದ್ದೇವೆ, ಆದರೆ ಎಂದೂ ಅದರರೊಳಗೆ ಹೋಗಿ ನೋಡುವ ವಿಶೇಷ ಆಸಕ್ತಿ ಬಂದಿರಲಿಲ್ಲ. ಕಡೆಗೂ ಇಂದು ಅದರೊಳಕ್ಕೆ ಹೋಗುವದಕ್ಕೆ ಕಾಲ ಕೂಡಿ ಬಂದಿತು! ಹವಾಮಾನ ಯಾವಾಗ ಬೇಕಾದರೂ ಬದಲಾಗುವ ಸಾಧ್ಯತೆ ಇರುವ ಕಾರಣ ಮಳೆ ಬಂದರೆ ಕಷ್ಟವಾಗುತ್ತದೆ ಎಂದು ಈ ಬಾರಿ ಕಾರಿನಲ್ಲಿಯೇ ಹೊರಟೆವು, 6-7 ನಿಮಿಷಗಳಲ್ಲೇ ಅಲ್ಲಿಗೆ ತಲುಪಿದೆವು, ಕಾರ್ ಪಾರ್ಕ್ ಮಾಡಿ ಟಿಕೆಟ್ ಕೌಂಟರ್ ಬಳಿ ಹೋಗಿ ನಮ್ಮ complimentary voucher ತೋರಿಸಿ ಮ್ಯಾನರ್ ಪ್ರವೇಶದ 3 ಟಿಕೆಟ್ಗಳನ್ನು ಪಡೆದವು. ನಂತರ ಅಲ್ಲೇ ಟಿಕೆಟ್ ಕೌಂಟರ್ ನಿಂದ ಸ್ವಲ್ಪ ದೂರ ನಡೆದು ಹೋಗುವಷ್ಟರಲ್ಲೇ ಏನೋ ಕಣ್ಣಿಗೆ ಬಿತ್ತು, ಒಂದು ಉದ್ದನೆಯ ಹಗ್ಗದ ಬೇಲಿಯ ಮೇಲೆ ಚಿತ್ರಗಳನ್ನು ನೇತಿ ಹಾಕಿದ್ದ ಹಾಗೆ ಕಂಡಿತು, ಹತ್ತಿರ ಹೋಗಿ ನೋಡಿದಾಗ ತುಂಬಾ ಆಶ್ಚರ್ಯ ಆಯ್ತು!! ಆ ಚಿತ್ರಗಳು ಏನು ಗೊತ್ತೇ? ಅವು Mythical Creature Designing ಸ್ಪರ್ಧೆಯಲ್ಲಿ ಭಾಗವಿಸಿದ ಮಕ್ಕಳೆಲ್ಲರ ಡ್ರಾಯಿಂಗ್ಗಳು, ಅವರಿಗೆ ಬಂದಿದ್ದ ಪ್ರತಿಯೊಂದು ಡ್ರಾಯಿಂಗ್ ನ್ನು ಪ್ರತ್ಯೇಕವಾಗಿ laminate ಮಾಡಿ ಗಾರ್ಡನಿನ ಆವರಣದ ಸುತ್ತ ನೇತುಹಾಕಿದ್ದರು. ಡ್ರಾಯಿಂಗ್ಗಳನ್ನು  ಒಂದೊಂದಾಗಿ ನೋಡುತ್ತಾ ಹೋದೆವು, ಸ್ವಲ್ಪ ಮುಂದೆ ಹೋಗುತ್ತಿದಂತೆಯೇ ನಮ್ಮ ಮಗನ ಡ್ರಾಯಿಂಗ್ ಸಿಕ್ಕಿತ್ತು, ಅದನ್ನು ನೋಡಿ ನಮ್ಮೆಲರಿಗೂ ಬಹಳ ಸಂತೋಷ ಆಯ್ತು. ಆದರ ಪಕ್ಕದಲ್ಲಿ ನಿಂತು ಫೋಟೋ ತೆಗೆದು ಕೊಂಡೆವು. ಅದೇ ಆವರಣದಲ್ಲಿ ಮೊದಲ Mythical Creature ನ cut out ಕೂಡ ಪ್ರದರ್ಶಿಸಲಾಗಿತ್ತು, ಅದು ಗ್ರೀಕ್ ಪುರಾಣದಲ್ಲಿರುವ Medusa (The Snake-haired Gorgon) ಎಂಬ ಕಾಲ್ಪನಿಕ ಜೀವಿ. ಅದನ್ನು ಮಕ್ಕಳು ಯಾರು ವಿನ್ಯಾಸ ಮಾಡಿದಲ್ಲಾ ಅನ್ನಿಸಿತು, ಏಕೆಂದರೆ ಆದರ ವಿವರಣೆಯಲ್ಲಿ ಅದನ್ನು ವಿನ್ಯಾಸ ಮಾಡಿದದವರ ಹೆಸರು ಹಾಕಿರಲಿಲ್ಲ. ಇದನ್ನು ನೋಡಿದ ನಂತರ ನೇರವಾಗಿ ಹುಹೆಂಡೆನ್ ಮ್ಯಾನರ್ ಕಡೆಗೆ ಹೊರಟ್ವಿ. ಮ್ಯಾನರ್ ನ ಆವರಣದಲ್ಲಿ ಮತ್ತಷ್ಟು Mythical Creature ಗಳ cut out ಗಳನ್ನು ಪ್ರದರ್ಶಿಸಿದ್ದರು. ನನ್ನ ಯಜಮಾನರಿಗೆ ಆವತ್ತು ರಾಜಾ ದಿನವಾಗಿರಲಿಲ್ಲ, ಇದನ್ನು ನೋಡೋ ಸಲುವಾಗಿ ಕೆಲಸದಿಂದ ಕೇವಲ 2 ಘಂಟೆ ಕಾಲದ ವಿರಾಮ ತಗೊಂಡು ಬಂದಿದದ್ದರು. ಆದ್ದರಿಂದ ಅವರು ನಾನು ಬರಿ ಆವರಣದಲ್ಲೇ ಇಷ್ಟು ಹೊತ್ತು ನೋಡ್ತಾ ನಿಂತರೆ, ಮ್ಯಾನರ್ ಮತ್ತು ಗಾರ್ಡನ್ ನೋಡಲು ಸಮಯ ಇರುವುದಿಲ್ಲ ಎಂದು ನನಗೆ ಜೋರು ಮಾಡಿ, ಮೊದಲು ಮ್ಯಾನರ್ ಒಳಗೆ ಹೋಗೋಣ ಅಂತ ಎಳೆದುಕೊಂಡು ಹೋದರು! 

ಮ್ಯಾನರ್ ನ ಪ್ರವೇಶದ್ವಾರದಲ್ಲಿ National Trust ನವರ ಒಂದು ಫಲಕ ಇತ್ತು. ಅದರಲ್ಲಿ ಈ ಕೆಳಗಿರುವ ಸ್ವಾಗತ ಸಂದೇಶವಿತ್ತು:-
Welcome to Hughenden Manor
Hughenden was the home of Victorian Prime Minister Benjamin Disraeli, and later a Second World-War map making operation, codenamed ‘Hillside’.

ಹುಹೆಂಡೆನ್ ಮ್ಯಾನರ್‌ಗೆ ಸುಸ್ವಾಗತ
ಹುಹೆಂಡೆನ್ ಮ್ಯಾನರ್ ವಿಕ್ಟೋರಿಯನ್ ಪ್ರಧಾನಿ ಬೆಂಜಮಿನ್ ಡಿಸ್ರೇಲಿ ಅವರು ವಾಸವಿದ್ದ ಮನೆ ಮತ್ತು ನಂತರ ಎರಡನೇ ವಿಶ್ವ-ಯುದ್ಧದ ವೇಳೆ “ಹಿಲ್ಸೈಡ್” ಎಂಬ ಸಂಕೇತನಾಮವಿದ್ದ ಗೌಪ್ಯ ನಕ್ಷೆ ತಯಾರಿಕೆ ಕಾರ್ಯಾಚರಣೆ ನಡೆದ ಸ್ಥಳ.

ಈ ಸಂದೇಶದ ಮೊದಲನೇ ಭಾಗದ ಬಗ್ಗೆ ನನಗೆ ಮಾಹಿತಿಯಿತ್ತು, ಆದರೆ ಎರಡನೇ ಭಾಗದ ಮಾಹಿತಿ ಇರಲಿಲ್ಲ, ಹಾಗಾಗಿ ಅದು ನನ್ನ ಕುತೂಹಲ ಕೆರಳಿಸಿತು! ನಾವು ಒಳಗೆ ಪ್ರವೇಶ ಮಾಡಿದ ತಕ್ಷಣ ಮ್ಯಾನರ್ ನ ಮೇಲ್ವಿಚಾರಕ ರೊಬ್ಬರು ನಮ್ಮನ್ನು ಸ್ವಾಗತಿಸಿದರು. ಹುಹೆಂಡೆನ್ ಮ್ಯಾನರ್ ಗೆ ಇದು ನಿಮ್ಮ ಮೊದಲ ಭೇಟಿಯೇ ಎಂದು ಕೇಳಿದರು, ಹೌದು ಎಂದೆವು. ಹಾಗಾದರೆ ಬನ್ನಿ ನಿಮಗೆ ಕೆಲವು ಕೊಠಡಿಗಳನ್ನು
ತೋರಿಸಿ ಅದರ ವಿವರಣೆ ಕೊಡುತ್ತೇನೆ ಎಂದು ನಮ್ಮನ್ನು ಅವರೊಟ್ಟಿಗೆ ಕರೆದೊಯ್ಯದರು. ಮೊದಲು ಸಿಕ್ಕಿದ್ದು ಬೆಂಜಮಿನ್ ಡಿಸ್ರೇಲಿ ಅವರ ದೊಡ್ಡ ಲೈಬ್ರರಿ – ಇದು ಮುಂಚೆ ಅವರ ಡ್ರಾಯಿಂಗ್ ರೂಮ್ ಆಗಿತ್ತು, ಅವರ ಸೋದರಳಿಯ Coningsby ಯವರು ಇದನ್ನು 1890 ರ ದಶಕದಲ್ಲಿ ಗ್ರಂಥಾಲಯವಾಗಿ ಪರಿವರ್ತಿಸಿದರು ಎಂದು ತಿಳಿಯಿತು. ಡಿಸ್ರೇಲಿಯವರು ಪುಸ್ತಕ ಪ್ರಿಯರಾಗಿದ್ದ ಕಾರಣ ಹೆಚ್ಚು ಸಮಯ ಲೈಬ್ರರಿಯಲ್ಲಿ ಕಳೆಯುತ್ತಿದ್ದರಂತೆ. ಲೈಬ್ರರಿಯ 4 ಗೋಡೆಗಳ ಸುತ್ತಲೂ ಪುಸ್ತಕಗಳಿಂದ ತುಂಬಿದ ಕಪಾಟುಗಳು, ಎಲ್ಲಾ ಸೇರಿ ಸುಮಾರು 3000 ಪುಸ್ತಕಗಳಿವೆಯಂತೆ. ಮಧ್ಯದ ಗೋಡೆಯಲ್ಲಿ ಒಂದು Fire place ಇತ್ತು, ಅದರ ಮೇಲೆ ಬೆಂಜಮಿನ್ ಡಿಸ್ರೇಲಿ ಅವರ ಒಂದು ದೊಡ್ಡ ಚಿತ್ರವಿತ್ತು. ಲೈಬ್ರರಿಯ ಒಂದು ತುದಿಯಲ್ಲಿ ಅವರ ವರ್ಕಿಂಗ್ ಡೆಸ್ಕ್ ಇತ್ತು, ಅದರ ಮೇಲೆ ಒಂದು ವಿಚಿತ್ರ ವಸ್ತು ಕಂಡಿತು, ಅದು ಮಾರ್ಬಲ್ನಲ್ಲಿ ಮಾಡಿದ್ದ ಒಂದು ಪಾದದ ಶಿಲ್ಪ, ಇದೇನು ಅಂತ ಮೇಲ್ವಿಚಾರಕನ್ನು ಕೇಳಿದೆ, ಅದು ಡಿಸ್ರೇಲಿಯವರ ಹೆಂಡತಿ Mary-Anne ರವರ ಪಾದದ ಶಿಲ್ಪ, ಅವರು ಅದನ್ನು Paperweight (ಕಾಗದದ ತೂಕವಾಗಿ) ಬಳಸತಿದ್ದರು ಎಂದರು – ಇದನ್ನು ಕೇಳಿ ಇದೆಂಥ ವಿಚಿತ್ರ ಅಂತ ಅನ್ಕೊಂಡು ಮುಂದಿನ ಕೊಠಡಿಯ ಕಡೆಗೆ ನಡೆದವು. ಈ ಕೊಠಡಿಯಲ್ಲಿ ಡ್ರಾಯಿಂಗ್ ರೂಮ್ ಅನ್ನು recreate ಮಾಡಿದ್ದರು, ಈ ರೂಮಿನ ಬಣ್ಣಗಳು ಮತ್ತು ಪೀಠೋಪಕರಣಗಳು ನನಗೆ ತುಂಬಾ ಇಷ್ಟವಾದವು. Fire place ಮೇಲೆ Mary-Anne ರವರ ಒಂದು ಸುಂದರವಾದ ಭಾವಚಿತ್ರ ಇತ್ತು. 1872 ರಲ್ಲಿ Mary-Anne ರವರ ದೇಹಾಂತವಾದ ನಂತರ ಡಿಸ್ರೇಲಿಯವರು ಈ ಭಾವಚಿತ್ರವನ್ನು ಮಾಡಿಸಿದ್ದರೆಂದು ಹಾಗು ಈ ಕೋಠಡಿಯು Mary-Anne ರವರ ರುಚಿಗೆ ತಕ್ಕ ಹಾಗೆ ವಿನ್ಯಾಸ ಮಾಡಲಾಗಿತ್ತು ಎಂದು ಅಲ್ಲಿ ಬರೆದಿದ್ದರು. ಮುಂದಿನ ಕೊಠಡಿ ಗಾರ್ಡನ್ Hall, ಇಲ್ಲಿಂದ ಗಾರ್ಡನ್ನಿನ terrace ಗೆ ತೆರೆದುಕೊಳ್ಳುವ ದ್ವಾರಗಳಿವೆ.

ಇದಾದ ನಂತರದ ಕೊಠಡಿಗಳು ಮಹಡಿ ಮೇಲೆ ಇರುವವು, ಮೊದಲಿಗಿರುವ ಕೊಠಡಿಯ ಹೆಸರು Boudoir ಎಂದು. ಈ ತರಹದ ಸಾಂಪ್ರದಾಯಿಕವಾದ ಮನೆಗಳಲ್ಲಿ, ಮಹಿಳೆಯರು ಕುಳಿತುಕೊಳ್ಳುವ ಖಾಸಗಿ ಕೋಣೆಗೆ Boudoir ಎಂದು ಕರೆಯುತ್ತಿದ್ದರಂತೆ. ಈ ಕೋಣೆಯ ಕಿಟಕಿಗಳಿಂದ ಇಡೀ ಗಾರ್ಡನ್ ಕಾಣುತ್ತದೆ, ಹಾಗಾಗಿ Mary-Anne ರವರು ಇಲ್ಲಿ ಕುಳಿತು ಗಾರ್ಡನಿನ ರೂಪಾಂತರವನ್ನು ಯೋಜಿಸುತ್ತಿದ್ದರಂತೆ ಹಾಗು ತಮ್ಮ ಮನೆಯ ಖಾತೆಗಳನ್ನು ಮಾಡಲು ಕೂಡ ಇದೇ ಕೋಣೆಯಲ್ಲಿ ಕೂರುತ್ತಿದ್ದರಂತೆ. ಅಲ್ಲೇ ಹತ್ತಿರದ ಮತ್ತೊಂದು ಕೋಣೆಯಲ್ಲಿ ಡಿಸ್ರೇಲಿಯವರು ಎಕ್ಸ್‌ಚೀಕರ್‌ನ ಕುಲಪತಿಯಾಗಿರುವಾಗ (Chancellor to the Exchequer) ಧರಿಸಿರುತ್ತಿದ್ದ ಕಪ್ಪು ರೇಷ್ಮೆ ನಿಲುವಂಗಿಯನ್ನು ಪ್ರದರ್ಶಿಸಿದ್ದಾರೆ, ಎಕ್ಸ್‌ಚೀಕರ್‌ನ ಕುಲಪತಿಯಾಗಿ ಅವರ ಅವಧಿ ಮುಗಿದ ಮೇಲೆಯೂ ಅವರು ಆ ನಿಲುವಂಗಿಯನ್ನು ಬಿಟ್ಟುಕೊಡಲು ನಿರಾಕರಿಸಿದ ಕಾರಣ, ಅದು ಅವರಲ್ಲಿಯೇ ಉಳಿಯಿತಂತೆ.

ಮುಂದಿನ ಕೊಠಡಿ ಬೆಡ್ರೂಮ್, ಈ ಕೋಣೆಯಲ್ಲಿ ಸುಂದರವಾದ ಮಂಚ ಮತ್ತು ಇತರೆ ಪೀಠೋಪಕರಣಗಳನ್ನು ಬಿಟ್ಟು ಗಮನ ಸೆಳೆಯುವ ವಸ್ತುಗಳೆಂದರೆ ಡಿಸ್ರೇಲಿಯವರ ಕಮೋಡ್ (ನಿಜವಾದ ವಿಕ್ಟೋರಿಯನ್ ಶೌಚಾಲಯ!) ಮತ್ತು Fire Place ನ ಗೋಡೆಯ ಮೇಲೆ ನೇತಾಡುತ್ತಿದ್ದ ಮಹಾರಾಣಿ ವಿಕ್ಟೋರಿಯಾ ಮತ್ತು ಅವರ ಪತಿ ಪ್ರಿನ್ಸ್ ಆಲ್ಬರ್ಟ್ ರವರ ಚಿತ್ರಗಳು. ಆ ಎರಡೂ ಚಿತ್ರಗಳನ್ನು ರಾಣಿ ವಿಕ್ಟೋರಿಯ ರವರೇ ಡಿಸ್ರೇಲಿಯವರಿಗೆ ಉಡುಗರೆಯಾಗಿ ಕೊಟ್ಟಿದ್ದಂತೆ, ಚಿತ್ರಗಳ ಕೆಳಗೆ ರಾಣಿ ಮತ್ತು ಪ್ರಿನ್ಸ್ ರ ಸಹಿಗಳಿವೆ. ಮುಂದಿನ ಕೊಠಡಿ ಸ್ಟಡಿ  ರೂಮ್, ಇದು ಡಿಸ್ರೇಲಿಯವರು ಕೆಲಸ ಮಾಡುತ್ತಿದ್ದ ಕೋಣೆಯಾಗಿತ್ತಂತೆ. ಈ ಕೋಣೆಯಲ್ಲಿ ಅವರ ಸ್ಟಡಿ ಟೇಬಲ್ ಮತ್ತು ಕುರ್ಚಿ ಅಲ್ಲದೆ ಪಕ್ಕದಲ್ಲಿ ಒಂದು ಪುಟ್ಟ ಟೇಬಲ್ ಮೇಲೆ ಒಂದು ಕೆಂಪು ಬಣ್ಣದ Parliamentary Dispatch box ಅನ್ನು ಕೂಡ ನೋಡಬಹುದು. ಇದನ್ನು ಡಿಸ್ರೇಲಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸರ್ಕಾರದ sensitive documents (ಸೂಕ್ಷ್ಮ ದಾಖಲೆಗಳನ್ನು) ಸಂಸದ್ ಸಧನಕ್ಕೆ ಸಾಗಿಸಲು  ಬಳಸುತ್ತಿದ್ದರಂತೆ.

ಮತ್ತೆ ಮಹಡಿ ಇಳಿದು ಕೆಳಗೆ ಬಂದಾಗ ಡೈನಿಂಗ್ ರೂಮ್ ಸಿಕ್ಕಿತು. ಈ ಕೊಠಡಿಗೆ ಪ್ರವೇಶವಾಗುತ್ತಿದಂತೆ ಎದ್ದು ಕಾಣುವ ವಸ್ತು ಎಂದರೆ ಎದುರಿನ ಗೋಡೆಯ ಮೇಲಿರುವ ಡಿಸ್ರೇಲಿಯವರ ದೊಡ್ಡ ಭಾವಚಿತ್ರ, ಇದು ಡಿಸ್ರೇಲಿಯವರು ಪ್ರಧಾನಿಯಾಗಿದ್ದ ಸಮಯದ ಚಿತ್ರವಂತೆ. ಕೋಣೆಯ ಬಲಭಾಗದಲ್ಲಿ ಮನೋಹರವಾದ fully laid ಡೈನಿಂಗ್ ಟೇಬಲ್ ಇದೆ. ಡಿಸ್ರೇಲಿಯವರು ಮಹಾರಾಣಿ ವಿಕ್ಟೋರಿಯರ ನೆಚ್ಚಿನ ಪ್ರಧಾನ ಮಂತ್ರಿಯಾಗಿದ್ದರಂತೆ, ಹಾಗಾಗಿ ಅವರು 1877 ರಲ್ಲಿ ಒಮ್ಮೆ ಹ್ಯೂಹೆಂಡೆನ್‌ಗೆ ಭೇಟಿ ನೀಡಿ ಇಲ್ಲಿ lunch ಕೂಡ ಮಾಡಿದ್ದರಂತೆ. ಆ ಸಂದರ್ಭದಲ್ಲಿ, ಮಹಾರಾಣಿ ವಿಕ್ಟೋರಿಯಾ ರವರು ಆರಾಮವಾಗಿ ಕುಳಿತುಕೊಳ್ಳಲು ಮತ್ತು ಅವರ ಪಾದಗಳು ಸುಲಭವಾಗಿ ನೆಲವನ್ನು ತಲುಪಲು ಅನುವಾಗುವಂತೆ ಡಿಸ್ರೇಲಿಯವರು ರಾಣಿಯ ಕುರ್ಚಿಯ ಪಾದವನ್ನು ಕತ್ತರಿಸಿ ಇಟ್ಟಿದ್ದರಂತೆ!! ಆ ಕುರ್ಚಿಯನ್ನು ಈಗಲೂ ಹಾಗೆ ಇಟ್ಟಿದ್ದಾರೆ. Dining ಟೇಬಲ್ ನ ಎದುರಿನ ಗೋಡೆಯ ಮೇಲೆ ಮಹಾರಾಣಿ ವಿಕ್ಟೋರಿಯ ರವರ ಭವ್ಯವಾದ ಭಾವಚಿತ್ರವೊಂದನ್ನು ನೋಡಬಹುದು, ಇದನ್ನು ಸ್ವತಃ ರಾಣಿ ವಿಕ್ಟೋರಿಯ ರವರೇ ಡಿಸ್ರೇಲಿಯವರಿಗೆ ಕೊಟ್ಟಿದ್ದಂತೆ. ಮತ್ತು ಈ ಕೋಣೆಯಲ್ಲಿ ಎರಡು ರಹಸ್ಯ ಬಾಗಿಲುಗಳು ಕಂಡವು, ಅವು ಅಡುಗೆಮನೆಗೆ ತೆರೆಯುತ್ತವೆ ಹಾಗು ಅವನ್ನು ಮನೆ ಕೆಲಸದವರು ಬಳಸುತ್ತಿದ್ದರು ಎಂದು ತಿಳಿಯಿತು. ಕೋಣೆಯ ಎಡ ಭಾಗದಲ್ಲಿ ಬೆಂಜಮಿನ್ ರ ತಂದೆ ಇಸಾಕ್ ಡಿಸ್ರೇಲಿಯವರ ಒಂದು ಭಾವಚಿತ್ರ ಕೂಡ ಇದೆ. ಕೆಳಗಿನ ಮಹಡಿಯಲ್ಲಿಯೇ Disraeli Room ಎಂಬ ಮತ್ತೊಂದು ಕೊಠಡಿಯಿದೆ, ಇಲ್ಲಿ ಗಮನ ಸೆಳೆಯುವ ವಸ್ತು – ಎತ್ತರದ ವೇದಿಕೆಯ ಮೇಲಿರುವ ಪಲ್ಲಕ್ಕಿ ಮಾದರಿಯ ಉದ್ದನೆಯ ಕೈಹಿಡಿಗಳುಳ್ಳ ಒಂದು ಕುರ್ಚಿ. ಈ ಕುರ್ಚಿಯನ್ನು ಡಿಸ್ರೇಲಿಯವರು ಮೊದಲ ಬಾರಿಗೆ ಸಂಸದ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ವಿಕಂಬಿನ ಪ್ರಖ್ಯಾತ furniture ಕಂಪನಿಯಾದ Ercol ನಿಂದ ಮಾಡಿಸಿದ್ದರಂತೆ. ಆ ಕಾಲದಲ್ಲಿ ಸಂಸದ್ ಚುನಾವಣೆಯಲ್ಲಿ ಯಾರಾದರೂ ವಿಜೇತಾರಾದಾಗ, ಅವರನ್ನು ಇಂತಹ ಪಲ್ಲಕ್ಕಿ ಮಾದರಿಯ ಕುರ್ಚಿಯ ಮೇಲೆ ಕೂರಿಸಿ, ಅವರ ಬೆಂಬಲಿಗರು ಅದನ್ನು ಹೊತ್ತುಕೊಂಡು ಊರಿನ ಮುಖ್ಯ ಬೀದಿಯಲ್ಲಿ ಮೆರವಣಿಗೆ ಹೋಗುವ ಪ್ರತೀತಿಯಿತ್ತಂತೆ, ಇದಕ್ಕೆ “Chairing” ಎಂದು ಕರೆಯುತ್ತಿದ್ದರಂತೆ. ಆದರೆ ಡಿಸ್ರೇಲಿಯವರು 3 ಬಾರಿ ಸಂಸದ್ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಒಮ್ಮೆಯೂ ವಿಜೇತಾರಾಗಲಿಲ್ಲವಾದ ಕಾರಣ ಅವರಿಗೆ “Chairing” ನ ಸೌಭಾಗ್ಯ ದೊರೆಯಲಿಲ್ಲ, ಹಾಗಾಗಿ ಈ ಖುರ್ಚಿಯನ್ನು ಉಪಯೋಗಿಸಲೇ ಇಲ್ಲವಂತೆ!! ಅದಕ್ಕೆ ಈ ಕುರ್ಚಿಗೆ “Spare Chair” ಎಂಬ ಹೆಸರು ಬಂದಿತು. ಈ ಕುರ್ಚಿಯನ್ನು ಬಿಟ್ಟು ಇಡೀ ಮ್ಯಾನರ್ ನ ಎಲ್ಲಾ ಕೊಠಡಿಗಳಲ್ಲಿಯೂ ವಿಕಂಬಿನಲ್ಲಿ ತಯಾರಾದ ವಿವಿಧ ಬಗೆಯ ಕುರ್ಚಿಗಳನ್ನು ಕೂಡ ನೋಡಬಹುದು. 

ಇದಿಷ್ಟು ಬ್ರಿಟನ್ನಿನ ಪೂರ್ವ ಪ್ರಧಾನ ಮಂತ್ರಿ ಬೆಂಜಮಿನ್ ಡಿಸ್ರೇಲಿ ಹಾಗು ಅವರ ಉತ್ತರಾಧಿಕಾರಿಯ ಕಾಲದಲ್ಲಿ ಹುಹೆಂಡೆನ್ ಮ್ಯಾನರ್ ಹೇಗಿತ್ತು ಅನ್ನೋ ಚಿತ್ರಣವನ್ನು ಕೊಡವ ಒಂದು ಸಣ್ಣ ಪ್ರಯತ್ನ. ಇಲ್ಲಿಗೆ ಈ ಭಾಗವನ್ನು ಮುಗಿಸಿ, ಮುಂದಿನ ಭಾಗದಲ್ಲಿ ಹುಹೆಂಡೆನ್ ಮ್ಯಾನರ್ ನ ಮತ್ತೊಂದು ಸ್ವಾರಸ್ಯಕರ ಕಥೆಯ ಬಗೆಗೆ ತಿಳಿಸುತ್ತೇನೆ, ನಿರೀಕ್ಷಿಸಿ

ಮತ್ತಷ್ಟು ರೋಚಕ ಮಾಹಿತಿಯೊಂದಿಗೆ ಭಾಗ -೨ ಸಧ್ಯದಲ್ಲೇ ನಿರೀಕ್ಷಿಸಿ

ಲೇಖನ- ಶ್ರೀಮತಿ ಪ್ರತಿಭಾ ರಾಮಚಂದ್ರ

ಬೆಂಗಳೂರಿನ ಕೆಲವು ಇಂಗ್ಲಿಷ್ ಹೆಸರಿನ ರಸ್ತೆ ಮತ್ತು ವಸತಿ ಪ್ರದೇಶಗಳ ಇತಿಹಾಸ : ರಾಮಮೂರ್ತಿ

ಈ ವಾರದ ಸಂಚಿಕೆಯಲ್ಲಿ ರಾಮಮೂರ್ತಿ ಅವರು ಬೆಂಗಳೂರು ನಗರದ ರಸ್ತೆಗಳ ಇತಿಹಾಸವನ್ನು ಕುರಿತು ಲೇಖನ ಬರೆದಿದ್ದಾರೆ. ಕೆಂಪೇಗೌಡರು ಹುಟ್ಟು ಹಾಕಿದ ನಗರವನ್ನು ನಂತರದಲ್ಲಿ ಆಳಿದ ಬ್ರಿಟಿಷರು ನಗರಕ್ಕೆ ತಮ್ಮದೇ ಆದ ಛಾಪನ್ನು ಮೂಡಿಸಿ ಇತಿಹಾಸವನ್ನು ಬದಲಿಸಿದರು. ಅದರ ಕುರುಹಾಗಿ ನಮ್ಮ ಹೆಮ್ಮೆಯ ನಗರದಲ್ಲಿ ಇರುವ ಹಲವಾರು ಪ್ರತಿಷ್ಠಿತ ರಸ್ತೆಗಳು ಬ್ರಿಟಿಷ್ ಅಧಿಕಾರಿ ಮತ್ತು ಗಣ್ಯರ ಹೆಸರನ್ನು ಹೊತ್ತಿದೆ. ಇತ್ತೀಚಿಗೆ ಆ ಹೆಸರುಗಳನ್ನು ಬದಲಿಸಲು ಕೆಲವರು ದೇಶ ಭಕ್ತರು ಒತ್ತಾಯ ಪಡಿಸುತ್ತಿದ್ದಾರೆ. ರಸ್ತೆಗಳ, ನಗರಗಳ ಹೆಸರು ಬದಲಾಯಿಸಿದ ತಕ್ಷಣ ಇತಿಹಾಸ ಸತ್ಯ ಬದಲಾಗುವುದೇ? ಯಾವ ಹೆಸರು ನೂರಾರು ವರ್ಷಗಳಿಂದ ಜನರ ನಾಲಿಗೆಯಲ್ಲಿ ಸ್ಮೃತಿಯಲ್ಲಿ ಜೀವಂತವಾಗಿದೆಯೋ, ಜನಪ್ರೀಯವಾಗಿದೆಯೋ ಅದನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಕೆಲವರ ಅನಿಸಿಕೆ. ಮುಂದಿನ ಪೀಳಿಗಿಗೆ ಇದರ ಅರಿವು ಬೇಕು. ಈ ವಿಚಾರ ಏನೇ ಇರಲಿ ರಾಮಮೂರ್ತಿ ಅವರು ಬ್ರಿಟಿಷ್ ರಾಜ್ ಆಳ್ವಿಕೆಯ ಕೆಲವು ಹಿನ್ನೆಲೆ ಮಾಹಿತಿಯನ್ನು ಇಲ್ಲಿ ಒದಗಿಸಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಓದುಗರಿಗೆ ಇದು ಪುಳಕ ನೀಡುವ ಬರಹ 
- ಸಂ.
***************************************
ಆಂಗ್ಲರ ಆಳ್ವಿಕೆ ಕಳೆದು ಸುಮಾರು ಎಂಟು ದಶಕಗಳೇ ಸಂದರೂ ಬೆಂಗಳೂರಿನಲ್ಲಿ ಅನೇಕ ಇಂಗ್ಲಿಷ್ ಹೆಸರಿನ ರಸ್ತೆಗಳು ಮತ್ತು ಪ್ರದೇಶಗಳು ಇನ್ನೂ ಉಳಿದಿವೆ. ಪ್ರತಿಯೊಂದು ಹೆಸರಿನ ಹಿಂದೆ ಹತ್ತೊಂಬತ್ತನೇ ಶತಮಾನದಲ್ಲಿದ್ದ ಒಬ್ಬ ಬ್ರಿಟಿಷ್ ಪುರುಷನ ಹಿನ್ನಲೆ ಅಥವಾ ಸಂಪರ್ಕ ಇರುವುದು ಕಂಡು ಬರುತ್ತೆ. ಸ್ವಾತಂತ್ರ್ಯ ಬಂದ ಮೇಲೆ, ಸ್ವಾಭಿಮಾನದಿಂದ ಕೆಲವು ಹೆಸರುಗಳು ಬದಲಾದವು. ಆದರೆ ಜನರು ಇನ್ನೂ ಹಲವನ್ನು ಹಳೆಯ ಹೆಸರಿಂದ ಕರೆಯುತ್ತಾರೆ. ಉದಾಹರಣೆಗೆ, ಬಸವನಗುಡಿಯ Surveyors Street, ಈಗ ಅಧಿಕೃತವಾಗಿ ಕೃಷ್ಣ ಶಾಸ್ತ್ರೀ ರಸ್ತೆ ಆಗಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಹಳೇ ಹೆಸರೇ ಉಳಿದಿದೆ! 

೧೮೦೪ ರಲ್ಲಿ ಬ್ರಿಟಿಷರು ಸ್ಥಾಪಿಸಿದ ಬೆಂಗಳೂರಿನ ದಂಡು (Cantonment), ದಕ್ಷಿಣ ಭಾರತದಲ್ಲಿಯೇ ದೊಡ್ಡ ಮಿಲಿಟರಿ  ಪ್ರದೇಶವಾಗಿತ್ತು. ಇದರಲ್ಲಿ ಮುಖ್ಯವಾದ ಜಾಗ ಪರೇಡ್ ಗ್ರೌಂಡ್ಸ್. ಇಲ್ಲಿ  ಬ್ರಿಟಿಷರ ಸೈನ್ಯ ತರಬೇತಿ ಪಡೆಯುತ್ತಿತ್ತು. ಈಗಲೂ ಜನವರಿ ೨೬ ರಂದು ಇಲ್ಲೇ ಗಣರಾಜ್ಯದ ಪರೇಡ್ ನಡೆಯುವುದು.  ಇದರ ಸಮೀಪದಲ್ಲಿ ಕಬ್ಬನ್ ಪಾರ್ಕ್ ನಿರ್ಮಾಣವಾಯಿತು. Cantonment ನ  ಸುತ್ತಮುತ್ತ ಇದ್ದ ಜಾಗದಲ್ಲಿ ಬ್ರಿಟಿಷ್  ಕುಟುಂಬದವರು ವಾಸ್ತವ್ಯ ಹೂಡಿದರು, ಈ ಪ್ರದೇಶಕ್ಕೆ ತಮ್ಮ ಹೆಸರುಗಳನ್ನೂ ಕೊಟ್ಟರು: White Field , Austin  Town, Fraser Town, Cooke Town ಇತ್ಯಾದಿ. ಇದು ಸುಮಾರು ೧೫೦ ವರ್ಷಗಳ ಹಿಂದಿನ ಮಾತು. ಈಗಲೂ ಈ ಹೆಸರುಗಳು ಉಳಿದಿವೆ. ಪೂರ್ವ ದಿಕ್ಕಿನಲ್ಲಿರುವ ಈಗಿನ Whitefield ಪ್ರದೇಶವು, ೧೮೮೨ ರಲ್ಲಿ ಚಾಮರಾಜ ಒಡೆಯರ್ ಮಹಾರಾಜರು Anglo Indian ಜನಾಂಗದವರು ವಾಸ ಮಾಡುವುದಕ್ಕೆ ಡೇವಿಡ್ ಇಮ್ಯಾನುಯಲ್ ವೈಟ್ ಅವರಿಗೆ ಕೊಟ್ಟ ೩೭೫೦ ಎಕರೆ ಜಮೀನು. ಈತ Anglo Indian ಸಂಘದ ಅಧ್ಯಕ್ಷನಾಗಿದ್ದ. ಅನೇಕರು ೫೦ ಕಿ.ಮೀ ದೂರದಲ್ಲಿದ್ದ KGF ಚಿನ್ನದ ಗಣಿ ಯಲ್ಲಿ ಕೆಲಸದಲ್ಲಿದ್ದರು. ಹತ್ತಿರದಲ್ಲೇ ಕಟ್ಟಿದ ರೈಲು ನಿಲ್ದಾಣದಿಂದ ಕೆಲಸಕ್ಕೆ ಹೋಗಬಹುದಾಗಿತ್ತು. ಈಗ ವೈಟ್ ಫೀಲ್ಡ್ ನಲ್ಲಿ ಬಹು ದೊಡ್ಡ IT ಸಂಸ್ಥೆಗಳಲ್ಲಿ  ಸಾವಿರಾರು ಜನರು ಕೆಲಸದಲ್ಲಿದ್ದಾರೆ. ಹೀಗೆ, ಪ್ರತಿಯೊಂದು ಪ್ರದೇಶಕ್ಕೂ ಒಂದು ಇತಿಹಾಸ ಇದೆ.  

ಈಗ ಕೆಲವು ರಸ್ತೆಗಳ ಇತಿಹಾಸವನ್ನು ನೋಡೋಣ. ಮುಖ್ಯವಾದ ರಸ್ತೆಗಳು, Avenue Road, Brigade Road, Cubbon Road , Cunningham Road, Millers Road, Krumbigal  Road, Lavelle  Road, Sankey Road, St. Marks Road  ಇತ್ಯಾದಿ. ಇದರಲ್ಲಿ ಅವೆನ್ಯೂ ರಸ್ತೆ ಬಹಳ ಹಳೇ ಮತ್ತು ಮುಖ್ಯವಾದ ರಸ್ತೆ. ದೊಡ್ಡ ಪೇಟೆ ಇದರ ಮುಂಚಿನ ಹೆಸರು. ಈಗಿನ Majestic ನಿಂದ  ಕೆಂಪೇಗೌಡರು ಕಟ್ಟಿದ ಕೋಟೆ ದಾಟಿ,  ಟಿಪ್ಪು ಅರಮನೆವರೆಗೆ ಇದ್ದ ರಸ್ತೆ. ಇದಕ್ಕೆ ರಾಜಬೀದಿ ಎಂದೂ ಹೆಸರಿತ್ತು. ೧೮೮೪ ನಲ್ಲಿ ಈ ರಸ್ತೆ Avenue Road ಆಯಿತು ಅನ್ನುವ ದಾಖಲೆ ಇದೆ. ಒಂದು ಕಾಲದಲ್ಲಿ ಸಾಲು ಮರಗಳು, ತೆಂಗಿನ ಮರಗಳು ಇದ್ದವು ಈ ರಸ್ತೆಯ ಉದ್ದಕ್ಕೂ ಇದ್ದವು.  ಈಗ ವ್ಯಾಪಾರದ ರಸ್ತೆ, ಇಲ್ಲಿ ಸಿಗದೇ ಇರುವ ಪದಾರ್ಥವೇ ಇಲ್ಲ ಅಂದರೆ ತಪ್ಪಲಾಗರಾದು.  
ಕನ್ನಿಂಗ್ ಹ್ಯಾಮ್ ನ

ಈಗಿನ ವಸಂತ ನಗರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಗೆ ಹೆಸರು ಬಂದಿದ್ದು ಸ್ಕಾಟ್ಲೆಂಡ್ ಮೂಲದ ಫ್ರಾಂಸಿಸ್ ಕನ್ನಿಂಗ್ ಹ್ಯಾಮ್ನಿಂದ (೧೮೨೦-೧೮೭೫). ಈಸ್ಟ್ ಇಂಡಿಯಾ ಕಂಪನಿಯ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದು ಮದ್ರಾಸ್ ರೆಜಿಮೆಂಟ್ ಗೆ ಸೇರಿ, ೧೮೫೦ರಲ್ಲಿ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ನವರ ಸಿಬ್ಬಂದಿಯಾಗಿ ಕೆಲಸ ಮಾಡಿ ಲಾಲ್ ಬಾಗ್ ತೋಟ ಮತ್ತು ಬೆಂಗಳೂರಿನ ಅನೇಕ ಪ್ರಮುಖ ಕಟ್ಟಡಗಳನ್ನು ಕಟ್ಟಿದವನು. ಇದರಲ್ಲಿ ಮುಖ್ಯವಾದದ್ದು, ಸರ್ಕಾರದ ಅತಿಥಿ ಗೃಹ “ಬಾಲಬ್ರೂಯಿ”. ಇವನ ಇಬ್ಬರು ಸಹೋದರರೂ ಸಹ ಭಾರತದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಇವನ ಅಣ್ಣ, ಜನರಲ್ ಅಲೆಕ್ಸಾಂಡರ್ Indian Archaeology ಸಂಸ್ಥೆಯನ್ನು ಸ್ಥಾಪಿಸಿದವನು ಮತ್ತು ತಮ್ಮ ಮೇಜರ್ ಜಾನ್ “History of the Sikhs ” ಬರೆದವನು. ಫ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಸಹ ದೊಡ್ಡ ಬರಹಗಾರನು. ನಿವೃತನಾದ ಮೇಲೆ ಮೈಸೂರು ಮಹಾರಾಜರಗೆ ಸಲಹೆಗಾರನಾಗಿ ಸೇರಿ ೧೮೭೧ರಲ್ಲಿ ಇಂಗ್ಲೆಂಡ್ ಗೆ ಮರಳಿದ ಮೇಲೆ ತನ್ನ ಸಾಹಿತ್ಯ ಚಟುವಟಿಕೆಯನ್ನು ಪುನರಾರಂಭಿಸಿದ. ಡಿಸೆಂಬರ್ ೧೮೭೫ ನಿಧನವಾದ. ಒಂದು ವಿಚಿತ್ರ ವಿಷಯ, ಇವನ ಭಾವ ಚಿತ್ರ ಎಲ್ಲೂ ಇಲ್ಲ , ಸ್ಕಾಟ್ ಲ್ಯಾಂಡ್ ನಲ್ಲಿ ಅಮೃತ ಶಿಲೆಯ ಪ್ರತಿಮೆ ಮಾತ್ರ ಇದೆ.

ಸರ್ ರಿಚರ್ಡ್ ಸ್ಯಾಂಕಿ (೧೮೨೯-೧೯೦೮) ಹುಟ್ಟಿದ್ದು ೨೨/೩/೧೮೨೯ ರಂದು ಐರ್ಲೆಂಡ್ನಲ್ಲಿ. ೧೮೪೫ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಶಾಲೆಯಲ್ಲಿ ತರಬೇತು ಪಡೆದು, ಮದ್ರಾಸ್ ರೆಜಿಮೆಂಟ್ ಗೆ ಸೇರಿ ಭಾರತದ ಅನೇಕ ಕಡೆ ಇಂಜಿನಿಯರ್ ಆಗಿ ಕೆಲಸ ಮಾಡಿ, ೧೮೬೧ ರಲ್ಲಿ ಮೈಸೂರು ಸಂಸ್ಥಾನದಲ್ಲಿ PWD (Public Works Department ) ಇಲಾಖೆ ಸೇರಿದ. ರಾಜ್ಯದ ನೀರಾವರಿ ಅಭಿವೃದ್ಧಿಯ ಯೋಜನೆ ಸ್ಯಾಂಕಿಯ ಕೊಡುಗೆ. ಬೆಂಗಳೂರಿನ ಕೆರೆ ಸ್ಯಾಂಕಿ ಟ್ಯಾಂಕ್ ಮತ್ತು ಸುತ್ತ ಮುತ್ತಿನ ಕೆರೆಗಳಿಗೆ ಆಣೆಕಟ್ಟು ಹಾಕಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಸುಧಾರಿಸಿದ್ದು ಈತನೇ. ಇದಲ್ಲದೆ, ಬೆಂಗಳೂರಿನ ಮ್ಯೂಸಿಯಂ(೧೮೭೭) ಈಗಿನ ಹೈಕೋರ್ಟ್ (ಅಠಾರ ಕಚೇರಿ – ೧೮೬೪), ಸೈನ್ಟ್ ಆಂಡ್ರೂ ಚರ್ಚ್ (೧೮೬೪), ಮೇಯೋ ಕಟ್ಟಡ (೧೮೭೦) ಇತ್ಯಾದಿ ಕಟ್ಟಡಗಳನ್ನು ಕಟ್ಟಿದ. ನಂತರ ಮದ್ರಾಸ್ ಪ್ರಾಂತ್ಯದಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡು ಮದ್ರಾಸ್ ಅಭಿವೃದ್ಧಿಗೆ ನೇರವಾದ. ಮರೀನಾ ಬೀಚ್ ಮತ್ತು ಅನೇಕ ಉದ್ಯಾನವನಗಳ ನಿರ್ಮಾಣ ಮಾಡಿದ. ಮದ್ರಾಸ್ ವಿಶ್ವವಿದ್ಯಾನಿಲಯದ Fellow ಆಗಿ ಆಯ್ಕೆಯಾಗಿ ಮದ್ರಾಸ್ ವಿಧಾನ ಪರಿಷತ್ತಿನಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಿದ. ೧೮೮೪ ನಲ್ಲಿ ನಿವೃತನಾದಮೇಲೆ ಐರ್ಲೆಂಡ್ ನಲ್ಲಿ Board of Works ನ ಅಧ್ಯಕ್ಷನಾಗಿ ಅನೇಕ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ. ನವಂಬರ್ ೧೯೦೮ ರಲ್ಲಿ ಲಂಡನ್ Grosvenor Place ನಲ್ಲಿ ನಿಧನವಾದ. ಇವನ ಸಮಾಧಿ Sussex ನಲ್ಲಿರುವ Hove ನಲ್ಲಿದೆ.

ಲಾವೆಲ್ ರಸ್ತೆಯ ಹೆಸರಿನ ಮೂಲ, ಐರ್ಲೆಂಡಿನ ಮೈಕಲ್ ಲಾವೆಲ್. ಸ್ಕಾಟಿಷ್ ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇರಿ ನ್ಯೂಜಿಲ್ಯಾಂಡ್ ನಲ್ಲಿ ಮಾವೋರಿ ಯುದ್ಧದಲ್ಲಿ ಭಾಗವಾಗಿ, ಅಲ್ಲಿನ ಗಣಿಗಳ ಅಧ್ಯನ ಮಾಡಿ ಭಾರತಕ್ಕೆ ಬಂದ. ಇಲ್ಲಿ ಚಿನ್ನದ ಗಣಿಗಳ ಬಗ್ಗೆ ಸಂಶೋಧನೆ ಮಾಡಿ , ಕೊನೆಗೆ ಕೋಲಾರ ಗಣಿಗಳನ್ನು ಅಗೆಯಲು ೧೮೭೩ ರಲ್ಲಿ ಬ್ರಿಟಿಷ್ ಸರ್ಕಾರದಿಂದ ಅನುಮತಿ ಪಡೆದು KGF (Kolar Gold Fields) ಸಂಸ್ಥೆಯನ್ನು ಸ್ಥಾಪಿಸಿದ. ಆದರೆ ಇದನ್ನು ನಡೆಸುವುದಕ್ಕೆ ಬೇಕಾದ ಬಂಡವಾಳ ಇವನಲ್ಲಿ ಇರಲಿಲ್ಲ. ಅನೇಕರ ಸಹಾಯದಿಂದ ಕೆಲವು ವರ್ಷ ನಡೆಸಿ ಕೊನೆಗೆ ತನ್ನ ಪಾಲನ್ನು ಮಾರಿ ಬೆಂಗಳೂರಿನಲ್ಲಿ ಒಂದು ಭವ್ಯವಾದ ಮನೆಯನ್ನು (Oorgaum House) ಕಟ್ಟಿದ. ಈ ರಸ್ತೆ ಈಗ ಲಾವೆಲ್ ರಸ್ತೆ. ಈ ಮನೆಯನ್ನು ಮೈಸೂರ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಪೀಟರ್ ಡಿಸೋಜಾ ಅನ್ನುವರಿಗೆ ಮಾರಿ ೧೯೧೮ ರಲ್ಲಿ ಇಂಗ್ಲೆಂಡಿಗೆ ಮರಳಿದ.

ರೆಸಿಡೆನ್ಸಿ ರಸ್ತೆ
ಈಗ ಇದು ಬಹಳ ದೊಡ್ಡ ರಸ್ತೆ. ಒಂದು ತುದಿಯಲ್ಲಿ ಪ್ರತಿಷ್ಠಿತ, ೧೯ನೇ ಶತಮಾನದಲ್ಲಿ ಶುರುವಾದ ಬೆಂಗಳೂರ್ ಕ್ಲಬ್, ಇನ್ನೊಂದು ತುದಿಯಲ್ಲಿ ಬೆಂಗಳೂರ್ ಮಾಲ್ . ಈ ರಸ್ತೆಯ ಹೆಸರು ಹೇಗೆ ಬಂತು ಅನ್ನುವುದನ್ನು ನೋಡೋಣ. ೧೭೯೯ ನ ಮೈಸೂರ್ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಪರಾಜಿತನಾದ ಮೇಲೆ, ಮೂರನೇ ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್ ಅವರನ್ನು ಬ್ರಿಟಿಷರು ಪಟ್ಟಕ್ಕೇರಿಸಿದರು. ಆದರೆ ರಾಜ್ಯದ ಆಡಳಿತ ಮಾತ್ರ ಒಬ್ಬ ಬ್ರಿಟಿಷ್ ರೆಸಿಡೆಂಟ್, ಸರ್ ಬ್ಯಾರಿ ಕ್ಲೋಸ್ ಎಂಬಾತನಲ್ಲಿತ್ತು. ತದನಂತರ ಟಿಪ್ಪುವಿನ ದಿವಾನ್ ಪೂರ್ಣಯ್ಯ ಪುನಃ ದಿವಾನರಾದರು. ಈ ರೆಸಿಡೆಂಟ್ ೧೮೦೪ ರಲ್ಲಿ ಬೆಂಗಳೂರಿಗೆ ಬಂದು ಈಗಿನ SBI ಇರುವ ಜಾಗದಲ್ಲಿ ವಾಸವಾಗಿದ್ದ. ೧೮೩೧ನಲ್ಲಿ ರೆಸಿಡೆಂಟ್ ವಾಸಕ್ಕೆ ಬೇರೆ ಮನೆ ಕಟ್ಟಿದರು. ಆಗ ರೆಸಿಡೆನ್ಸಿ ರಸ್ತೆ ಆಯಿತು. ಕೆಲವು ವರ್ಷದ ನಂತರ ಈಗಿನ ರಾಜ್ ಭವನ್ ಕಟ್ಟಡ ಕಟ್ಟಿ ಲಾರ್ಡ್ ಕಬ್ಬನ್ ಮುಂತಾದವರು ಇಲ್ಲಿ ವಾಸವಾಗಿದ್ದರು. ಈಗ ಇದು ರಾಜ್ಯಪಾಲರ ವಸತಿ ಗೃಹ.

ಕಬ್ಬನ್ ಪಾರ್ಕ್
೧೮೭೦ ರಲ್ಲಿ, ಈಗಿನ ಕಬ್ಬನ್ ಪಾರ್ಕ್ ಸರ್ ರಿಚರ್ಡ್ ಸ್ಯಾಂಕಿಯ ನೇತೃತ್ವದಲ್ಲಿ ಪ್ರಾರಂಭವಾಯಿತು. ಇದನ್ನು ಪೂರೈಸಿದ್ದು ಮೈಸೂರು ಪ್ರಾಂತ್ಯದ ಮುಖ್ಯ ಕಮಿಷನರ್ ಸರ್ ಜಾನ್ ಮೀಡ್. ಆಗ ಇದು ಮೀಡ್ಸ್ ಪಾರ್ಕ್ ಆಗಿತ್ತು. ನಂತರ ೧೮೭೩ರಲ್ಲಿ ಈತ ಬರೋಡಕ್ಕೆ ಹೊಸ ಹುದ್ದೆಗೆ ಹೋದಾಗ ಈ ಉದ್ಯಾನವನಕ್ಕೆ ಬಹಳ ವರ್ಷ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಸರ್ ಮಾರ್ಕ್ ಕಬ್ಬನ್ ನ ಹೆಸರು ಇಡಲಾಯಿತು. ಇಲ್ಲೇ ಅಠಾರ ಕಚೇರಿ, ಪುಸ್ತಕ ಭಂಡಾರ, ಸೆಂಚುರಿ ಕ್ಲಬ್ ಮುಂತಾದ ಕಟ್ಟಡಗಳು ಇರುವುದು. ೧೯೨೭ ನಲ್ಲಿ ಹೆಸರು ಬದಲಾವಣೆ ಆಗಿ ಚಾಮರಾಜ ಒಡೆಯರ್ ಪಾರ್ಕ್ ಆಗಿತ್ತು . ಆದರೆ ಈ ಹೆಸರು ಉಳಿಯಲಿಲ್ಲ.

ಕೊನೆಯದಾಗಿ, ಬೆಂಗಳೂರಿನ ಫ್ರೇಸರ್ ಟೌನ್ ಬಗ್ಗೆ ಎರಡು ಮಾತು. ಆಗಸ್ಟ್ ೧೯೧೦ ರಲ್ಲಿ ಈ ಪ್ರದೇಶದ ಶಂಕು ಸ್ಥಾಪನೆ ನಡೆಯುತು.  ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಬಹಳ ಚಿಕ್ಕ ವಯಸ್ಸಿನಲ್ಲಿ ಪಟ್ಟಕ್ಕೆ ಬಂದಿದ್ದರು. ಅವರ ವಿದ್ಯಾಭ್ಯಾಸ ಮೈಸೂರು ಅರಮನೆಯಲ್ಲಿ ಬ್ರಿಟಿಷ್ ICS ಅಧಿಕಾರಿ ಸರ್ ಸ್ಟೂವರ್ಟ್ ಫ್ರೇಸರ್ (೧೮೬೪-೧೯೬೩) ಅವರ ನೇತೃತ್ವದಲ್ಲಿ ಮುಂದುವರೆಯಿತು. ಇವರ ಹೆಸರನ್ನು ಮಹಾರಾಜರ ಸಲಹೆಯಂತೆ ಇಟ್ಟು ಫ್ರೇಸರ್ ಟೌನ್ ಆಯಿತು. ಈಗ ಇದನ್ನು ಪುಲಕೇಶಿನಗರ ಎಂದು BBMP ನಾಮಕರಣ ಮಾಡಿದೆ ಆದರೆ ಜನಗಳಿಗೆ ಇದು ಈಗಲೂ Fraser  Town! 

ಬೆಂಗಳೂರಿನಲ್ಲಿ ಇಂಗ್ಲಿಷ್ ಹೆಸರಿನ ರಸ್ತೆಗಳು ಅನೇಕ. Infantry Road ,Brigade Road, Cubbon Road, Residency Road, St. Marks Road ಇತ್ಯಾದಿ. ಇನ್ನೂ ಎಷ್ಟು ವರ್ಷಗಳು ಈ ಹೆಸರುಗಳು ಉಳಿಯುತ್ತವೆ ಎನ್ನುವುದು ಬಹುಶಃ ಮುಂದಿನ ಪೀಳಿಗೆಯ ಇತಿಹಾಸದ ಅರಿವಿಲ್ಲದ ರಾಜಕಾರಣಿಗಳು ನಿರ್ಧರಿಸುತ್ತಾರೆ .

- ರಾಮಮೂರ್ತಿ.
***************************************

ಇಂಗ್ಲೆಂಡಿನ ಪುರಾತನ ಪಬ್-ಗಳು  – ಬೇಸಿಗ್-ಸ್ಟೋಕ್ ರಾಮಮೂರ್ತಿ

ಇಂಗ್ಲೆಂಡಿನ ಪಬ್-ಗಳು ಪ್ರಪoಚದಾದ್ಯಂತ ಪ್ರಸಿದ್ದ. ಪಬ್-ಗಳು ಕೇವಲ ಬಿಯರ್ ಅಥವಾ ವೈನ್ ಕುಡಿಯುವ ಸ್ಥಳಗಳಲ್ಲ, ಇವು ಸಮುದಾಯವು ಸಾಮಾಜಿಕವಾಗಿ ಭೇಟಿಯಾಗುವ ಸ್ಥಳಗಳು. ಉದಾಹರಣೆಗೆ, ಅನೇಕ ಧರ್ಮಾರ್ಥಿಕ (Charity ) ಸಂಸ್ಥೆಗಳು ಇಲ್ಲಿ ಹಣ ಸಂಗ್ರಹಿಸುವದಾಗಲಿ, Quiz Team ಆಗಲಿ ಪಬ್-ಗಳಲ್ಲಿ ಸೇರುತ್ತಾರೆ. ಈ ಪಬ್-ಗಳ ಇತಿಹಾಸವನ್ನು ನೋಡೋಣ. ಇಂಗ್ಲೆಂಡಿನಲ್ಲಿ ಪಬ್-ಗಳಿಗೆ ಸುಮಾರು ಎರಡು ಸಾವಿರ ವರ್ಷಗಳ ಆಕರ್ಷಕ ಮತ್ತು ಆಸಕ್ತಿದಾಯಕವಾದ ಇತಿಹಾಸವಿದೆ.

ಇದರ ಮೂಲ ರೋಮನ್ ಕಾಲದಿಂದ ಬಂದಿದ್ದು. ರೋಮನ್ನರು ಬಂದು ಇಂಗ್ಲೆಂಡ್ ದೇಶವನ್ನು ಆಕ್ರಮಿಸಿಕೊಂಡಾಗ ಅವರು ತಯಾರಿಸುತ್ತಿದ್ದ ವೈನ್ (wine ), ಅವರ ಜನಕ್ಕೆ ಮತ್ತು ಸೈನ್ಯದವರಿಗೆ  ಮಾರಾಟಕ್ಕಿತ್ತು. ಇಂದಿನ ಪಬ್ (Public  House), ಆಗ ಅವರ ಭಾಷೆಯಲ್ಲಿ ಟೆಬರ್ನೆ (Tebernae), ಇದು ಕಡೆಯಲ್ಲಿ ಟ್ಯಾವರ್ನ್ಸ್ (Taverns) ಆಯಿತು. ಇವು ಪ್ರಯಾಣಿಕರ ಅನುಕೂಲಕ್ಕೆ ಪ್ರಾರಂಭಿಸಿದ ವ್ಯಾಪಾರ ಸಂಸ್ಥೆಗಳು.  ಸ್ಥಳೀಯ ಜನರಿಗೆ  ವೈನ್  ಮಾಡುವ ವಿಧಾನ ಅಥವಾ ದ್ರಾಕ್ಷಿ ಬೆಳೆಯುವ ತಿಳುವಳಿಕೆ ಇರಲಿಲ್ಲ. ಇಲ್ಲಿ ಏಲ್ (Ale), ಬಾರ್ಲಿ ಇಂದ ಭಟ್ಟಿ ಇಳಿಸಿ ತಯಾರಿಸಿದ ಮಾದಕದ ಅರಿವಿತ್ತು. ಇವುಗಳನ್ನು ನಡೆಸಿಕೊಂಡು ಬಂದಿದ್ದವರು ಮಹಿಳೆಯರು, ಮನೆಯಲ್ಲಿ ಭಟ್ಟಿ ಇಳಿಸಿ ಮದ್ಯದ  ಮಾರಾಟ ಮಾಡುತಿದ್ದರು. ಇವು ಹಳ್ಳಿಗಳಲ್ಲಿ ಅನೌಪಚಾರಿಕ ಮತ್ತು ಸಮುದಾಯ ಆಧಾರಿತವಾಗಿದ್ದರಿಂದ  ಜನಗಳ ಹೊಂದಾಣಿಕೆ ಮತ್ತು ಪರಸ್ಪರ ಪರಿಚಯಕ್ಕೆ ಅನುಕೂಲವಾಗುತ್ತಿತ್ತು. ಕ್ರಮೇಣ ಈ ಟೆಬರ್ನೆಗಳಲ್ಲಿ ವೈನ್ ಮಾರಾಟ ಕಡಿಮೆ ಆಗಿ, ಸ್ಥಳೀಯ ಏಲ್ ಹೆಚ್ಚಾಗಿ ಮಾರಾಟವಾಗುತಿತ್ತು. ಈ ಮದ್ಯದ ಅಂಗಡಿಗಳೂ ಮಿತಿ ಇಲ್ಲದೆ ಬೆಳೆಯುತ್ತಿದ್ದವು. ಈ ಕಾರಣಗಳಿಂದ, ಹತ್ತನೇ ಶತಮಾನದಲ್ಲಿ ಆಳಿದ ಎಡ್ಗರ್ ದೊರೆ ಇವುಗಳ ಸಂಖ್ಯೆಯನ್ನು ಮಿತಿಗೊಳಿಸಿದ. ಇವನ ಕಾಲದಲ್ಲೇ ಪೆಗ್ (Peg) ಅನ್ನುವ ಪದ ಮದ್ಯದ ಅಳತೆಗೆ ಜಾರಿಗೆ ಬಂದಿದ್ದು. ಮದ್ಯದ ಮಾರಾಟಕ್ಕೆ ಸಹ ಅನುಮತಿಬೇಕಾಗಿತ್ತು.  ಆದ್ದರಿಂದ ಮನೆಯಲ್ಲಿ ತಯಾರಿಸಿದ ಮದ್ಯದ ಮಾರಾಟಕ್ಕೆ ಅನುಮತಿ ಸಿಗುತ್ತಿರಲಿಲ್ಲ. 
 
ಟ್ಯಾವರ್ನ್-ಗಳು ಹೆಚ್ಚಾಗಿ ಮುಖ್ಯರಸ್ತೆ ಮತ್ತು ಹೆದ್ದಾರಿಗಳಲ್ಲಿ ಇದ್ದು ಪ್ರಯಾಣಿಕರಿಗೆ ಪಾನೀಯ ಮತ್ತು ಆಹಾರ ಸಿಗುತ್ತಿತ್ತು. ನಂತರ ಊರಿಂದ ಊರಿಗೆ ಕುದರೆಗಾಡಿಗಳ ಸಂಚಾರ ಶುರುವಾದಾಗ, ರಾತ್ರಿ ತಂಗುವುದಕ್ಕೆ ಇನ್ (Inn), ಅಂದರೆ ತಂಗುವ ಜಾಗ ಸಹ ಪ್ರಾರಂಭವಾಯಿತು. ಇಲ್ಲಿ ಕುದರೆಗಳ ವಿಶ್ರಾಂತಿಗೆ ಮತ್ತು ಆಹಾರಕ್ಕೆ ಸಾಕಷ್ಟು ವ್ಯೆವಸ್ಥೆಗಳಿದ್ದವು. 

ಲಂಡನ್-ನಿಂದ ವಿಂಚೆಸ್ಟರ್-ಗೆ (Winchester) ಹೋಗುವ ಎ೩೦ ಎನ್ನುವ ರಸ್ತೆ ಸುಮಾರು ೬೦ ಮೈಲಿ ಉದ್ದ. ಇಲ್ಲಿ ಈಗಲೂ ಈ ದಾರಿಯಲ್ಲಿ ಅನೇಕ ಪುರಾತನ ಪಬ್ ಅಥವಾ ಇನ್-ಗಳನ್ನೂ ನೋಡಬಹುದು. ಹಳೆಯ ಪಬ್-ಗಳಲ್ಲಿ ಸಲೂನ್ ಬಾರ್ (Saloon Bar) ಮತ್ತು ಪಬ್ಲಿಕ್ ಬಾರ್ (Public Bar) ಎನ್ನುವ ಫಲಕಗಳು (sign board) ಇರುತ್ತವೆ. ಇದರ ಹಿನ್ನಲೆ, ಈ ದೇಶದಲ್ಲಿದ್ದ ವರ್ಗವ್ಯತ್ಯಾಸ (Class distinction). ಕುದುರೆಗಾಡಿ ಪ್ರಯಾಣದಲ್ಲಿ ಎರಡು ತರ ಪ್ರಯಾಣಿಕರು, ಗಾಡಿ ಒಳಗೆ ಕೂರುವರು ಮತ್ತು ಗಾಡಿ ಹೊರಗೆ (ಬಹಳ ಕಡಿಮೆ ದರ ಕೊಟ್ಟು) ಕೂರುವರು. ಒಳಗಿದ್ದವರು ಶ್ರೀಮಂತರು, ಇವರಿಗೆ ಮರ್ಯಾದೆಯಿಂದ ಸಲೂನ್ ಬಾರ್-ನಲ್ಲಿ ಉಪಚಾರ. ಹೊರಗೆ ಕೂತವರಿಗೆ ಕೊಟ್ಟಿಗೆ ಹತ್ತಿರ ಜಾಗ, ಇಲ್ಲಿಇವರು ಪಬ್ಲಿಕ್ ಬಾರ್-ನಲ್ಲಿ ಕುಡಿಯುವುದು ಮತ್ತು ಊಟ ಮಾಡುವುದು. 

ಸುಮಾರು ಹದಿನಾರನೇ ಶತಮಾನದಲ್ಲಿ, ಟ್ಯಾವರ್ನ್ಸ್ ಮತ್ತು ಇನ್-ಗಳು ಒಂದಾಗಿ ಪಬ್ಲಿಕ್ ಹೌಸ್ (Public House) ಅಥವಾ ಪಬ್ (Pub) ಗಳಾದವು. ೧೫೫೨ರಲ್ಲಿ  ಬಂದ ಕಾಯಿದೆಯಿಂದ ಇದನ್ನು ನಡೆಸುವುದಕ್ಕೆ ಲೈಸನ್ಸ್ (License) ಬೇಕಾಗಿತ್ತು. ೧೬೦೦ ನಂತರ ಈ ದೇಶದಲ್ಲಿ ಹೊರದೇಶದಿಂದ ತರಿಸಿದ ಕಾಫಿ ಮತ್ತು ಟೀ ಕುಡಿಯುವುದು ಪ್ರಾರಂಭವಾಯಿತು. ಆದರೆ ಕೆಲವು ಪಬ್-ಗಳಲ್ಲಿ ಮಾತ್ರ ಇದು ಮಾರಾಟಕ್ಕಿತ್ತು; ಕಾರಣ, ಅತಿ ಹೆಚ್ಚಿನ ಬೆಲೆ. 

ಹದಿನೆಂಟನೇ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸ್ ದೇಶದಿಂದ ಬ್ರಾಂಡಿ (Brandy) ಮತ್ತು ಹಾಲೆಂಡ್-ನಿಂದ ಜಿನ್ (Gin) ಮಾದಕಗಳು ಬಂದು ಈ ದೇಶದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳು ಉಂಟಾದವು. ಇದನ್ನು ಪ್ರಸಿದ್ಧ ಚಿತ್ರಗಾರ ಹೊಗಾರ್ತ್ (Hogarth) ಜಿನ್ ಲೇನ್ (Gin lane) ಅನ್ನುವುದರಲ್ಲಿ ಚಿತ್ರೀಕರಣ ಮಾಡಿದ್ದಾನೆ.  ಅನೇಕ ಬಡ ಮತ್ತು ಶ್ರೀಮಂತರ ಜೀವನ ಈ ಕುಡಿತದಲ್ಲಿ ಹಾಳಾಗಿತ್ತು. ನಂತರ ಬಂದ ಜಿನ್ ಆಕ್ಟ್ (Gin Act) ಕಾಯಿದೆಯಿಂದ  (೧೭೩೬ ಮತ್ತು ೧೭೫೧ ) ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿತು. 

ಹೆದ್ದಾರಿಯಲ್ಲಿ ಇರುವ ಇನ್-ಗಳು ಸುಮಾರು ೧೮೪೦-೫೦ರವರೆಗೆ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈ ಸಮಯದಲ್ಲಿ ರೈಲ್ವೇ  ಸಂಪರ್ಕ ಉಂಟಾದ ಮೇಲೆ ಕುದುರೆಗಾಡಿಯಲ್ಲಿ ಸಂಚರಿಸುವುದು ಕ್ರಮೇಣ ಕಡಿಮೆಯಾಗಿ ಇವುಗಳ ವ್ಯಾಪಾರ ಕುಗ್ಗಿತು. 

ಪ್ರತಿಯೊಂದು ಪಬ್-ಗೆ ಒಂದು ಹೆಸರು ಇರತ್ತದೆ. ಹದಿನಾಲ್ಕನೇ ಶತಮಾದಲ್ಲಿ ಆಳಿದ ಎರಡೆನೆಯ ರಿಚರ್ಡ್ ಹೊರಡಿಸಿದ  ಆಜ್ಞೆಯಲ್ಲಿ ಪ್ರತಿಯೊಂದು ಇನ್-ಗೂ ಹೆಸರು ಇಡಬೇಕಾಗಿತ್ತು ಮತ್ತು ಈ ಹೆಸರು ಕಾಣಿಸುವಂತಲೂ ಇರಬೇಕಾಗಿತ್ತು. ಬಹುಷಃ, ರೆಡ್ ಲಯನ್ (Red Lion) ಹೆಸರಿನ ಪಬ್ ತುಂಬಾ ಸಾಮಾನ್ಯ. ಆದರೆ ವಿಚಿತ್ರ ಹೆಸರಿನ ಪಬ್-ಗಳನ್ನೂ ನೋಡಬಹುದು. ಉದಾಹರಣೆಗೆ, ದ ಬಕೆಟ್ ಆಫ್ ಬ್ಲಡ್ (The Bucket of Blood) ಅಥವಾ ದ ಕ್ಯಾಮಲ್ ಆಂಡ್ ದ ಆರ್ಟಿಚೋಕ್ ( The camel and The Artichoke). ಇವು ಅರ್ಥಹೀನವಾದ ಹೆಸರುಗಳು ಅನ್ನಿಸಿದರೂ, ನೂರಾರು ವರ್ಷದಗಳಿಂದ ಈ ಹೆಸರುಗಳು ಉಳಿದಿವೆ. 

ಪುರಾತನ ಪಬ್-ಗಳ ಬಗ್ಗೆ ಎರಡು ಮಾತು, ಇದರ ಬಗ್ಗೆ ಬಹಳ ಚರ್ಚೆ ನಡೆದಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ (Guinness Book of Records) ಪ್ರಕಾರ, ಇದು ಕ್ರಿ.ಶ ೯೪೭ ನ ಸ್ಟವ್-ಆನ್-ವೋಲ್ಡ್ (Stow -on -Wold)ನ ದ ಪಾರ್ಚ್ ಹೌಸ್ (The Porch House). ಎರಡನೆಯದು ಕ್ರಿ.ಶ ೧೧೮೯ರ ನಾಟಿಂಗ್-ಹ್ಯಾಮ್-ನಲ್ಲಿರುವ ಯೆ ಓಲ್ಡ್ ಟ್ರಿಪ್ ಟು ಜೆರುಸಲೆಮ್ (Ye Olde Trip To Jerusalem). ಪವಿತ್ರಸ್ಥಳವಾದ ಜೆರೂಸಲಂಗೆ ಹೋಗುವ ಪ್ರಯಾಣಿಕರು ಇಲ್ಲಿ ಕೆಲವು ರಾತ್ರಿ ತಂಗುತ್ತಿದ್ದರಂತೆ.  ಇದೆ ರೀತಿ  ನೂರಾರು ವರ್ಷದಿಂದ  ನಡೆದುಕೊಂಡು ಬಂದ  ಪಬ್-ಗಳು  ಅನೇಕ.

ಲಂಡನ್-ನಲ್ಲಿ ಹಲವಾರು ಪುರಾತನ ಪಬ್-ಗಳಿವೆ.  ಈಗ ಮೇ-ಫೇರ್ (Mayfair) ಲಂಡನ್ನಲ್ಲಿ ಅತಿ ಹೆಚ್ಚಿನ ದುಬಾರಿ ಪ್ರದೇಶ. ಆದರೆ ೧೪೨೩ರಲ್ಲಿ ಇಲ್ಲಿ ವಾಸವಾಗಿದ್ದವರು ಕಾರ್ಮಿಕ ವರ್ಗದವರು ಮಾತ್ರ. ಇವರು ಸೇರುತ್ತಿದ್ದು ದ ಗಿನಿ (The Guinea) ಅನ್ನುವ ಏಲ್ ಹೌಸ್-ನಲ್ಲಿ. 

ಕ್ರಿ.ಶ ೧೫೮೫ರ ದ ಸ್ಪೀನಿಯಾರ್ಡ್ಸ್ ಇನ್ (The Spaniards Inn) ಕತೆ ಆಸಕ್ತಿದಾಯಕದದ್ದು. ದಂತಕಥೆಯ ಪ್ರಕಾರ, ಒಮ್ಮೆ ಇದರ ಮಾಲೀಕ 
ಪ್ರಸಿದ್ಧ ದರೋಡೆಕಾರ ಡಿಕ್ ಟರ್ಪಿನ್ (Dick Turpin) ನ ತಂದೆ.  ಕವಿ ಜಾನ್ ಕೀಟ್ಸ್ ಇಲ್ಲಿ ಕೆಲವು ಕವಿತೆಗಳನ್ನು ಬರೆದನಂತೆ. ಚಾರ್ಲ್ಸ್ ಡಿಕ್ಕಿನ್ಸ್ (Charles Dickens) ಬರೆದ ದ ಪಿಕ್-ವಿಕ್ ಪೇಪರ್ಸ್ (The  Pickwick Papers) ನಲ್ಲಿ ಈ ಪಬ್-ನ ವಿಚಾರವಿದೆ. 
   
೧೬೬೬ರಲ್ಲಿ ಲಂಡನ್-ನಲ್ಲಿ ಅತಿ ದೊಡ್ಡ ಬೆಂಕಿ ಅನಾಹುತವಾಯಿತು,  ಪುಡ್ಡಿಂಗ್ ಲೇನ್ (Pudding Lane) ನಲ್ಲಿದ್ದ ಬೇಕರಿಯಲ್ಲಿ ಶುರುವಾಗಿದ್ದ ಬೆಂಕಿಯಿಂದ  ಸಾವಿರಾರು ಮನೆಗಳು ನಾಶವಾಗಿದ್ದವು. ನಂತರ ಈ ಪ್ರದೇಶದ ಪುನನಿರ್ಮಾಣ  ಪ್ರಾರಂಭ ವಾಯಿತು, ಈಗಿನ ಫ್ಲೀಟ್ ಸ್ಟ್ರೀಟ್ (Fleet Street) ನಲ್ಲಿರುವ ದ ಓಲ್ಡ್ ಬೆಲ್ (The Old  Bell) ೧೬೭೦ರಲ್ಲಿ ಪ್ರಸಿದ್ಧ ಆರ್ಕಿಟೆಕ್ಟ್  ಸರ್ ಕ್ರಿಸ್ಟೋಫರ್ ರೆನ್ (Christopher Wren) ರಚಿಸಿದ್ದ ಕಟ್ಟಡ. ಇದು ನಿರ್ಮಾಣದ ಕೆಲಸಗಾರರಿಗೆ ಕಟ್ಟಿದ ಏಲ್ ಹೌಸ್. ಕೆಲವು ವರ್ಷದ ಹಿಂದೆ ಫ್ಲೀಟ್ ಸ್ಟ್ರೀಟ್-ನಲ್ಲಿ ದಿನಪತ್ರಿಕೆಗಳನ್ನು ಇಲ್ಲಿಯೇ ಮುದ್ರಿಸುತ್ತಿದ್ದರು. ಈಗ ಇದು ಹಣಕಾಸಿನ ಕೇಂದ್ರವಾಗಿದೆ. 

ಮೇಲೆ ಉಲ್ಲೇಖಿಸಿದ ಸಂಗತಿಗಳಿಗೆ ಆಧಾರಗಳಿವೆ, ಆದರೆ ಕೆಲವು ಪಬ್-ನ ಕಥೆಗಳು ಬಿಯರ್ ಮಾರುವುದಕ್ಕೆ ಅನುಕೂಲವಾಗಲಿ ಎಂದು ಮಾಡಿದ ಸಂಶಯ ಬರುತ್ತದೆ. ಒಂದು ಉದಾಹರಣೆ ಕೊಡಬಲ್ಲೆ. ನನಗೆ ಹತ್ತಿರದಲ್ಲಿರುವ ಎ೩೪ ರಸ್ತೆಯಲ್ಲಿ ದ ಬ್ಲೀಡಿಂಗ್ ವೂಲ್ಫ್ (The Bleeding Wolf) ಎನ್ನುವ ಪಬ್ ಇದೆ. ಇಲ್ಲಿ ಈ ಪಬ್-ನ ಚರಿತ್ರೆ(?)ಯನ್ನು ಬರೆದಿದ್ದಾರೆ.

ಅದು ಹೀಗಿದೆ: ಬಹಳ ಹಿಂದೆ, ಕಿಂಗ್ ಜಾನ್, ಬೇಟೆಗಾಗಿ ತನ್ನ ಜೊತೆಗಾರರೊಂದಿಗೆ ಬಂದಾಗ, ದಾರಿ ತಪ್ಪಿ ಒಬ್ಬನೇ ದಟ್ಟ ಕಾಡಿಗೆ ಬಂದ, ಒಂದು ತೋಳ ಇವನ ಕುದುರೆಯ ಮೇಲೆ ಹಾರಿದಾಗ ಇವನು ಕೆಳಗೆ ಬಿದ್ದ. ಆದರೆ ಹತ್ತಿರದಲ್ಲೇ ಇದ್ದ ಒಬ್ಬ ಬೇಟೆಗಾರ ಇದನ್ನು ನೋಡಿ ತನ್ನ ಚಾಕುವನ್ನು ತೋಳದ ಕಡೆ ಎಸದಾಗ ತೋಳಕ್ಕೆ ಗಾಯವಾಗಿ ಓಡಿ ಹೋಯಿತು. ಬೇಟೆಗಾರ ಹತ್ತಿರ ಬಂದು ನೋಡಿದಾಗ ಇನ್ನಾರು ಅಲ್ಲ,ಸಾಕ್ಷಾತ್  ಕಿಂಗ್ ಜಾನ್. ಅಯ್ಯಾ, ನನ್ನ ಪ್ರಾಣ ಉಳಿಸಿದ್ದಿಯ, ನಿನಗೆ ಏನು ಬೇಕು ಕೇಳು, ಅಂದ ಕಿಂಗ್. ಇದೇ  ಸಮಯ ಅಂತ ಬೇಟೆಗಾರ, ನನಗೆ ಸಾಕಷ್ಟು  ಜಾಮೀನು ದಯಪಾಲಿಸಿ, ಅಂತ ಬೇಡಿದ. ಕಿಂಗ್ ಜಾನ್, ಸರಿ ಆಗಲಿ, ನಿನಗೆ ಇಲ್ಲಿಯ ಜಾಮೀನು ಇನಾಮು ಕೊಡುತ್ತೇನೆ, ಅಂದ.  ಈ  ಪಬ್ ಇರುವ ಜಾಗದಲ್ಲೇ ಈ ಘಟನೆ ನಡೆದದ್ದು!  ಇದನ್ನು ನಂಬುತ್ತಿರೋ ಇಲ್ಲವೋ ನಿಮಗೆ ಬಿಟ್ಟಿದ್ದು. ಕಿಂಗ್ ಜಾನ್ ಇಷ್ಟು ದೂರ ಬೇಟೆಗೆ ಏಕೆ ಬಂದ ಅಂತ ಕೇಳಬೇಡಿ.  ಈ ರೀತಿಯ ಕಥೆಗಳು ಅನೇಕ, ಕೆಲವು ನಿಜವಿರಬಹುದು, ಆದರೆ ಹೆಚ್ಚಾಗಿ ಕಾಲ್ಪನಿಕ.

ಇಲ್ಲಿಯ ಪಬ್-ಗಳ ಅನನ್ಯತೆ ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲ.  ಪುರಾತನ ಪಬ್-ಗಳು ಈಗಲೂ ಆ ವಾತಾವರಣವನ್ನು ಕಾಪಾಡಿಕೊಂಡು ಬಂದಿದೆ. ನನ್ನ ವೈಯಕ್ತಿಕ ಇಷ್ಟವಾದ ಪಬ್, ಬೆಸಿಂಗ್-ಸ್ಟೋಕ್-ನ ಹತ್ತಿರ ಇರುವ ಡಮ್ಮರ್ (Dummer) ಅನ್ನುವ ಸಣ್ಣ ಹಳ್ಳಿಯಲ್ಲಿ ಇರುವ ಕ್ವೀನ್ ಇನ್ (Queen inn),
೪೦೦ ವರ್ಷಗಳ ಹಳೆಯ ಪಬ್.  ಶತಮಾನಗಳಿಂದ  ಏನು ಬದಲಾಯಿಸಿಲ್ಲವೇನೋ ಅನ್ನುವ ಭಾವನೆ ಬರುತ್ತದೆ.  

ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಪಬ್-ಗಳ ಭವಿಷ್ಯ ಶೋಚಿನೀಯವಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ, ಸಮೀಕ್ಷೆಯ ಪ್ರಕಾರ ಪಬ್-ಗಳ ಸಂಖ್ಯೆ ಕಾಲು ಭಾಗ ಕಡಿಮೆ ಆಗಿದೆ . ಅನೇಕ ಕಾರಣಗಳನ್ನು ಇಲ್ಲಿ ಕೊಡಬಹುದು. ಪ್ರತಿವರ್ಷ, ಬಜೆಟ್-ನಲ್ಲಿ ಮದ್ಯಗಳಮೇಲೆ ತೆರಿಗೆ ಹೆಚ್ಚಾಗುವುದು, ಸೂಪರ್ ಮಾರ್ಕೆಟ್ಟಿನಲ್ಲಿ ಸಿಗುವ ಅಗ್ಗವಾದ ಪಾನೀಯಗಳು, ಆದರೆ ಒಂದು ಮುಖ್ಯವಾದ ಕಾರಣ, ತರುಣ ಜನಾಂಗದವರು, ಅಂದರೆ ೧೮-೩೦ ವರ್ಷದವರು, ಮದ್ಯ ಕುಡಿಯುವುದನ್ನು ಕಡಿಮೆ ಮಾಡಿರುವುದು ಅಥವಾ ತ್ಯಜಿಸಿರುವ ಸಂಖ್ಯೆ  ಹೆಚ್ಚಾಗಿರುವದಕ್ಕೆ ಪುರಾವೆ ಇದೆ. ಕಳೆದ ಕೋವಿಡ್ ಸಾಂಕ್ರಾಮಿಕ ನಂತರ ಜನರು ಅತ್ಯಂತ ಜಾಗರೂಕರಾಗಿದ್ದಾರೆ. ಇದು ಇಂಗ್ಲೆಂಡ್ ದೇಶದಲ್ಲಿ ಇರುವ ಪರಿಸ್ಥಿತಿ. 

ಪತ್ರಿಕೆಯ ವರದಿ ಪ್ರಕಾರ, ಭಾರತದಲ್ಲಿ ಮದ್ಯಪಾನದಿಂದ ಸತ್ತವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಗ್ರಾಮಗಳಲ್ಲಿ ಅಕ್ರಮವಾಗಿ ತಯಾರಿಸಿದ ಮದ್ಯಗಳಿಂದಲೂ ಈ ಸಾವು ಹೆಚ್ಚಾಗಿದೆ. ಸಾಲದ್ದಕ್ಕೆ ಕುಡಿದು ಓಡಿಸು (Drink Drive) ವುದರಿಂದ ಉಂಟಾಗುವ ಸಾವು ಸ್ವೀಕಾರಾರ್ಹವಲ್ಲ.

ಕನ್ನಡ ನಾಡು, ಭಾಷೆ, ಉತ್ಸವ, ಮತ್ತು ಹೊಸವರ್ಷ …..

ಅನಿವಾಸಿಯ ಬಳಗಕ್ಕೆ ನಮಸ್ಕಾರ. 2025ರ ಹೊಸವರ್ಷದಲ್ಲಿಯ ನನ್ನ ಮೊದಲ ಸಂಚಿಕೆಗೆ ನಿಮ್ಮೆಲ್ಲರ ಸ್ವಾಗತ.  ಅನಿವಾಸಿ ಬಳಗದ ಉತ್ಸಾಹ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಶಮಾನೋತ್ಸವ, ಹೊಸ ಸದಸ್ಯರುಗಳ ಆಗಮನ, ಬರವಣಿಗೆ ಇತ್ತ್ಯಾದಿಗಳೇ ಸಾಕ್ಷಿ.  ಇದರ ಜೊತೆಯಲ್ಲೇ, ಕೆಲವೇ ವಾರಗಳ ಹಿಂದೆ (ಕಳೆದ ವರ್ಷ ಅನ್ನಬಹುದಿತ್ತೇನೋ, ಆದರೆ ಎಷ್ಟೋ ದಿನ ಆದಂತೆ ಅನ್ನಿಸುವುದರಿಂದ ಬೇಡ ಅಂದುಕೊಂಡೆ) ಸಕ್ಕರೆಯ ನಾಡು, ಮಂಡ್ಯದಲ್ಲಿ ಹಿರಿಯ ಸಾಹಿತಿ ಶ್ರೀ ಗೋ ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 87ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ನಮ್ಮ ಅನಿವಾಸಿ ಬಳಗದ ಪ್ರತಿನಿಧಿಯಾಗಿ ತೆರಳಿದ್ದರು ನಮ್ಮ ನವೀನ್.  ಅವರು ಬರೆದ ವರದಿ ಇಲ್ಲಿ ಕೆಳಗಿದೆ.  ಅವರೇ ತೆಗೆದ ಹಲವು ಚಿತ್ರಗಳೂ ಜೊತೆಯಲ್ಲಿವೆ - ಅದರಲ್ಲಿ ಪರಿಚಿತ ಮುಖಗಳಿವೆ, ನೋಡಿ.

ಜೊತೆಯಲ್ಲಿ ನಮ್ಮ ಗೋಪಾಲಕೃಷ್ಣ ಹೆಗಡೆಯವರ ಒಂದು ಕವನವಿದೆ, ಹೊಸವರ್ಷದ ಆಶಯಗಳೊಂದಿಗೆ. ಅವರದ್ದೇ ಮಾತಿನಲ್ಲಿ ಕವನದ ಹುಟ್ಟಿನ ಪರಿಚಯವೂ ಇದೆ.

ಕೊನೆಯ ಕೊಸರಿನಂತೆ, ಹೆಗ್ಡೆಯವರದೊಂದು ಚಿತ್ರಕ್ಕೆ ನನ್ನದೊಂದು ಕಿರು ಕವನವನ್ನೂ ಹಾಕಿಬಿಟ್ಟಿದ್ದೇನೆ, ತಡೆಯಲಾರದೆ. ಕ್ಷಮೆಯಿರಲಿ.

ಎಂದಿನಂತೆ ಓದಿ, ತಮ್ಮೆಲ್ಲರ ಮನೋಭಿಪ್ರಾಯವನ್ನು ತಿಳಿಸುವುದನ್ನು ಮುಂದುವರೆಸಿ. ಹೊಸವರ್ಷದ ಶುಭಾಶಯಗಳು.
- ಲಕ್ಷ್ಮೀನಾರಾಯಣ ಗುಡೂರ
*******************************************
೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪, ಮಂಡ್ಯ

ಇತ್ತೀಚಿಗಷ್ಟೆ ೮೭ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಿತು. ಅದಕ್ಕಂತಲೇ ನಾನು ಭಾರತಕ್ಕೆ ಹೋಗಿದ್ದೆ. ಬಹಳ ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗಿಯಾಗುವ ತವಕವಿತ್ತು. ಆದರೆ ಆ ಸುಸಂದರ್ಭ ಈಗ ದೊರಕಿತು. ಬಹಳ ನಿರೀಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿದ್ದೆ. ಸಾಹಿತ್ಯ ಸಮಾರೋಪದಲ್ಲಿ ಸಾಕಷ್ಟು ಸಾಹಿತ್ಯದಬಗ್ಗೆ, ಕನ್ನಡ ಭಾಷೆ ಬಗ್ಗೆ ಕೇಳಿಬರುತ್ತದೆ, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಸಾಹಿತಿ, ಕವಿ, ಬರಹಗಾರರ ನಡುವೆ ನಡೆದಾಡಿ, ಅವರನ್ನು ಆಲಿಸಿ ಅವರಿಂದ ಪ್ರೇರಣೆ ಪಡೆಯುವುದಲ್ಲದೆ, ಕನ್ನಡ ಭಾಷಾಕ್ಷೇತ್ರದಲ್ಲಿ ಎಂಥಹ ಬೆಳವಣಿಗೆ ರೂಪಗೊಂಡಿದೆ ಎಂದು ಕಾಣುವ ಹಂಬಲ ಬೆಳಸಿಕೊಂಡಿದ್ದೆ. ಇದಕ್ಕನುಗುಣವಾಗಿ ಲೀಡ್ಸ್ನಲ್ಲಿ ಮಾಡುತಿದ್ದ ಕೆಲಸವನ್ನು ಮೊಟಕುಗೊಳಿಸಿ ಹತ್ತಿದೆ, ಯುನೈಟೆಡ್ ಕಿಂಗ್ಡಮ್ನ ರಾಯಭಾರಿಯಂತೆ ಭಾವಿಸಿ. ಯಾಕಂದರೆ ನನಗೆ ತಿಳಿದಿರಲಿಲ್ಲ ಬೆರ್ಯಾರಾದರು ಇಲ್ಲಿಂದ ಹೋಗುವರೇನೋ ಅಂತ. ಆದರೆ ಅಲ್ಲಿಗೆ ಹೋದಮೇಲೆ ಲಂಡನಿನಿಂದ ಬಂದಿದ್ದ ಇನ್ನಿಬ್ಬರನ್ನು ಭೇಟಿಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ಕೆಲವೇ ದಿನಗಳ ಹಿಂದೆ ಬಂದು ನಮ್ಮೆಲ್ಲರಿಗೂ ಆಮಂತ್ರಣ ಕೊಟ್ಟಿದ್ದರು. ನಮ್ಮ ದೇಶವಲ್ಲದೆ ಕನ್ನಡಿಗರಿರುವ ಹತ್ತಾರು ರಾಷ್ಟ್ರಗಳಿಗೂ ಹೋಗಿ ವೈಯಕ್ತಿಕವಾಗಿ ಅಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಾಹಿತ್ಯ ಸಮ್ಮೇಳನ ಬರೇ ಕರ್ನಾಟಕದ ಕನ್ನಡ ಜನರ ತಾಣವಲ್ಲ, ಅವು ಪ್ರಪಂಚದ ಎಲ್ಲೆಡೆ ನೆಲಸಿ ತಮ್ಮ ತಾಯ್ನಾಡನ್ನ ಮರೆಯದ ಜನಸಮುದಾಯದ ಸಂಸ್ಥೆಗಳು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಾನು ಗುರುವಾರ ೧೯ನೆ ತಾರೀಖಿನಂದೇ ಮಂಡ್ಯಕ್ಕೆ ಹೊರಟೆ. ವಿದೇಶದಿಂದ ಬರುವ ಎಲ್ಲ ಪ್ರತಿನಿಧಿಗಳಿಗೆಂದೇ ವಿಶೇಷ ವ್ಯವಸ್ಥೆ ಬಹಳ ದಿನಗಳಿಂದಲೇ ರೂಪಗೊಂಡಿತ್ತು. ಮೈಸೂರಿನ ಸಂದೇಶ್ ಪ್ರಿನ್ಸ್ನಲ್ಲಿ ನಮಗೆ ಉಳಿದುಕೊಳ್ಳುವ, ಅಲ್ಲಿಂದ ಪ್ರತಿದಿನ ಸಮ್ಮೇಳನ ನಡೆಯುವ ಮಂಡ್ಯಕ್ಕೆ ಹೋಗಿಬರುವ ಸಾರಿಗೆ ಏರ್ಪಾಟು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ನಿವೇದಿತಾ ಹೊನ್ನತ್ತಿಯವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತ ಮಾಡಲಾಗಿತ್ತು. ನನ್ನ ಭಾಷೆಯ ಸಮ್ಮೇಳನಕ್ಕೆ ನಾನೇ ಎಲ್ಲ ಖರ್ಚುಗಳನ್ನ ವಹಿಸಿಕೊಂಡು ಸರ್ಕಾರಕ್ಕಾಗಲಿ ಪರಿಷತ್ತಿಗಾಗಲಿ, ಸಮ್ಮೇಳನ ಸಂಚಾಲಕ ಇಲಾಖೆಗಾಗಲಿ ಋಣಿಯಾಗಬಾರದೆಂದಿದ್ದೆ. ಆದರೆ ನಮಗ್ಯಾವ ಕುಂದುಕೊರತೆಯಾಗದೆ, ಶುಲ್ಕವೂಯಿಲ್ಲದೆ ವಸತಿ, ಊಟ, ಜೊತೆಗೆ ಮನರಂಜನೆ, ಸಾಹಿತ್ಯ ರಸದೌತಣ ಉಣಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.

ಮಂಡ್ಯದಲ್ಲಿ ಅದೊಂದು ದೊಡ್ಡ ‘ಕುಂಭಮೇಳ’ ಅನ್ನಬೇಕು. ವಿಶಾಲ ಜಾಗ, ಲಕ್ಷಾಂತರ ಜನರು ಕೂರುವಂಥ ಸಭಾಂಗಣ, ಅದಕ್ಕೆ ತಕ್ಕಂಥ ಅದ್ದೂರಿ ಪ್ರವೇಶದ್ವಾರ, ದೃಷ್ಟಿಯಗಲಕ್ಕೂ ಮೀರಿದ ವೇದಿಕೆ, ಮಹಾಮಂಟಪ, ಅಲ್ಲಲ್ಲೇ ನೋಡಲನುಕೂಲವಾಗುವಂಥ ಕ್ಲೋಸ್ಡ್-ಸರ್ಕ್ಯೂಟ್ ಟಿವಿ, ಹೊರಗಿದ್ದರೂ ಕೇಳಿಸಿಕೊಳ್ಳುವಂಥ ಧ್ವನಿ ವ್ಯವಸ್ಥೆ, ಇವೆಲ್ಲ ದೊಡ್ಡ ಪ್ರಮಾಣದ ವಿನ್ಯಾಸವೆಂತಲೇ ಭಾವಿಸಬೇಕು.

ಸಮ್ಮೇಳನದ ವಿಶೇಷತೆ ಅದರ ಸಭಾಧ್ಯಕ್ಷರಾದ ನಾಡೋಜ ಗೊ ರು ಚನ್ನಬಸಪ್ಪನವರು. ೯೪ ವರ್ಷಗಳಾಗಿದ್ದರೂ ಅವರ ಮಾತಿನಲ್ಲಿದ್ದ ಸ್ಪಷ್ಟತೆ, ಶಬ್ದಭಂಡಾರ, ನಿರರ್ಗಳತೆ ಎಂತಹವರನ್ನೂ ಮೋಡಿ ಮಾಡುವಂಥದು. ನೇರವಾಗಿ ಸರ್ಕಾರಕ್ಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಕರೆ ಕೊಟ್ಟರು. ಕನ್ನಡ ಭಾಷೆ ಉಳಿಯಲು ಬೆಳೆಸಲು ಅವರಿಂದ ಯಾವ ತರಹದ ಉತ್ತೇಜನ ದೊರಕಬೇಕು, ಅದರಲ್ಲೂ ಆರ್ಥಿಕ ಹೊಣೆ ವಹಿಸಿಕೊಳ್ಳಬೇಕೆಂದು. ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ರಾಜಕೀಯ ಮುಖಂಡರಿಗೆ ಮನದಟ್ಟು ಮಾಡಿದರು. ಕನ್ನಡ ಪ್ರಾಚೀನ ಭಾಷೆಯಾಗಿದ್ದರೂ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು, ಎಲ್ಲರಿಗೂ, ಅದರಲ್ಲೂ ಪ್ರಚಲಿತ ಯುವಪೀಳಿಗೆಗೆ ತಟ್ಟುವಂಥ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು. ಇದರ ಜೊತೆಗೆ ಅವರು ಮತ್ತಿತರ ಮಹತ್ತರ ವಿಷಯಗಳನ್ನೂ ಚರ್ಚಿಸಿದರು. ಶಿಕ್ಷಣ ಮಾಧ್ಯಮ, ಅಂತರ-ರಾಜ್ಯ ಭಾಷಾವಿನಿಮಯ, ಕನ್ನಡ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ, ಧರ್ಮದ ದುರುಪಯೋಗ, ಮಹಿಳಾ ಸಮಾನತೆ ಹಾಗು ಸ್ವಾಯತ್ತತೆ, ಕನ್ನಡಿಗರ ಉದ್ಯೋಗ ಬದುಕು, ಪ್ರವಾಸೋದ್ಯಮ, ಮುಂತಾದ ವಿಚಾರಗಳನ್ನು ಎತ್ತಿ ತೋರಿಸಿ ಆ ದಿಕ್ಕಿನಲ್ಲಿ ಏನೆಲ್ಲಾ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ವಿವರಿಸಿದರು.

ಕೆಲವರ ಭಾಷಣಗಳು ತೀರ್ವವಾಗಿದ್ದವು. ಮುಖ್ಯಮಂತ್ರಿ ಚಂದ್ರುರವರು ಸಭಾಧ್ಯಕ್ಷರು ಉಲ್ಲೇಖಿಸಿದ ವಿಷಯಗಳಲ್ಲಿ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ನಿರ್ಲಕ್ಷರೀತ್ಯಕ್ರಮವನ್ನು ಕಟುವಾಗಿ ರಾಜಕೀಯ ಮುಖಂಡರ ಮುಂದೆಯೇ ಟೀಕಿಸಿದರು. ಪ್ರತಿ ಸಮ್ಮೇಳನದಲ್ಲೂ ದೊಡ್ಡ ದೊಡ್ಡ ಭಾಷಣಗಳು ಆಗುತ್ತವೆ, ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ನಿರ್ಣಯವೂ ಆಗುತ್ತೆ, ಆದರೆ ಸಮ್ಮೇಳನ ತದನಂತರ ಅವೆಲ್ಲ ಒಣಆಶ್ವಾಸನೆಗಳಾಗೆ ಉಳಿಯುತ್ತವೆ ಎಂದು ಆಕ್ಷೇಪಿಸಿದರು.

ಅನೇಕ ಕವಿಗೋಷ್ಠಿಗಳು, ಉಪನ್ಯಾಸಗಳು, ಸಮಾಲೋಚನೆಗಳು ಮೂರು ದಿನಗಳಲ್ಲೂ ಹಬ್ಬಿಕೊಂಡು ಕಿಕ್ಕಿರಿದು ತುಂಬಿದ ಮಂಡ್ಯ ಜನಸಮೂಹಕ್ಕೆ ಒಂದು ರೀತಿಯ ಜ್ಞಾನೋದಯ ಉಂಟುಮಾಡಿತು. ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾರ್ಯಕ್ರಮಗಳಾದ ಮೇಲೆ ಮನರಂಜನೆ ಸಾಗುತಿತ್ತು. ಒಂದು ದಿನ ಸಾಧು ಕೋಕಿಲ, ಮತ್ತೊಂದು ಸಂಜೆ ಅರ್ಜುನ ಜನ್ಯ ನೆರೆದಿದ್ದ ಯುವಕ ಯುವತಿಯರನ್ನು ಕುರ್ಚಿ ಮೇಲೆಯೇ ನಿಂತು ಕುಣಿದಾಡುವಂತೆ ಮಾಡಿದರು.

ಪುಸ್ತಕ ಮಳಿಗೆಗಳು ಮತ್ತೊಂದು ವೈಶಿಷ್ಟತೆ. ಕೊಂಡುಕೊಳ್ಳುವರಿಗಂತೂ ಅದೊಂದುಹಬ್ಬವೇ. ಬಹುಷಃ ಇಲ್ಲಿವರೆಗೆ ಪ್ರಕಟವಾಗಿರುವ ಎಲ್ಲ ಕಾದಂಬರಿಗಳು ನಾಟಕಗಳುಕಾವ್ಯಗಳು, ಇತರೆ ಅನೇಕ ಬರವಣಿಗಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಪ್ರಕಾಶಕರುಅಲ್ಲಿ ತಮ್ಮ ತಮ್ಮ ಪ್ರಕಟಣೆಗಳನ್ನು ಸಾಲು ಸಾಲು ಅಂಗಡಿಗಳಲ್ಲಿ ಬಿತ್ತರಿಸಿ ೫೦%ಗೂ ಮಿಗಿಲಾಗಿ ರಿಯಾಯಿತಿ ಕೊಟ್ಟು ಓದುಗರನ್ನು ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಪುಸ್ತಕಗಳು ಒಂದೇ ಜಾಗದಲ್ಲಿ ಪ್ರದರ್ಶನವಾದದನ್ನು ಬಹುಷಃ ನಾನು ನೋಡಿರಲಿಲ್ಲ.

ವಿದೇಶಿ ಕನ್ನಡಿಗರ ಸಂಘಟನೆ ಈ ಸಮ್ಮೇಳನದ ಮತ್ತೊಂದು ವೈಶಿಷ್ಟ್ಯಪೂರ್ಣಕಾರ್ಯಕ್ರಮ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಅನೇಕ ಏಷ್ಯಾರಾಷ್ಟ್ರಗಳ ಕನ್ನಡಿಗರು ನೆರೆದಿದ್ದರು. ಅವರೊಡನಾದ ಸ್ನೇಹ-ಪರಿಚಯ ಪರಸ್ಪರಕ್ರಿಯೆ ಬಹಳ ಕಾಲ ಉಳಿಯುವಂಥದು. ನಾನು ಬಹಳಷ್ಟು ವಿದೇಶಿ ಕನ್ನಡಿಗರನ್ನು ಪರಿಚಯಿಸಿಕೊಂಡು ಅವರ ದೇಶಗಳಲ್ಲಿ ಜರುಗುತ್ತಿರುವ ಕನ್ನಡ ಕಲಿಸುವಂಥ ಶಾಲೆಗಳ ಬಗ್ಗೆ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆ. ನಾವು ರಾಜ್ಯ ದೇಶ ಬಿಟ್ಟುಹೋಗಿದ್ದರೂ, ನಮ್ಮ ಕನ್ನಡ ನಮ್ಮೆಲ್ಲರನ್ನೂ ಒಂದುಗೂಡಿಸುತ್ತಿರುವ ಪರಿ ಎಲ್ಲರಿಗೂ ಅಗಾಧ ಸಂತಸ ತಂದಿರುವುದನ್ನ ಎಲ್ಲರಲ್ಲೂ ಕಂಡೆ. ಮುಂದೆ ನಾವೆಲ್ಲ ಸೇರಿ ಯಾವ ರೀತಿಯ ಕೊಡುಗೆ ಕೊಡಲು ಸಾಧ್ಯ ಅನ್ನುವುದನ್ನು ಕೂಲಂಕಶವಾಗಿ ಚರ್ಚಿಸಿ ಕಾರ್ಯಗತ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಕನ್ನಡ ಸಾಹಿತ್ಯ ಸಮ್ಮೇಳನ.

ಒಟ್ಟಿನಲ್ಲಿ ಈ ಸಮ್ಮೇಳನ ನನಗೊಂದು ಅಪೂರ್ವ ಅನುಭವ!

- ನವೀನ
*******************************************
ಆಕಾಶದ  ಆಶೆ -ಹೊಸ ವರುಷಕೆ!

(ಮುನ್ನುಡಿ: ಹೊಸವರ್ಷವೆಂದರೆ ನನಗೆ ಅದರಲ್ಲಿ ಕಂಡಿದ್ದು ಬರೇ ಅಂದಿನ ಮೈಮರೆತಂತ ಗಳಿಗೆಗಳಲ್ಲ; ಆದರೆ ಹಿಂದಿನ ದಿನಗಳ ನೋವು, ಮುಂದಿರುವ ಅನಿರ್ದಿಷ್ಟದ ಚಿಂತೆ. ಹಾಗೆಯೇ ಸಮತೋಲನದಲ್ಲಿ ಅವಲೋಕಿಸಿದಾಗ, ನನ್ನ ಮನಸ್ಸಿನಲ್ಲಿ ಆನಂದದಕ್ಕಾಗಿ ಆಕಾಶ ಬಯಸಿದ್ದೇನಿರಬಹುದೆಂಬ ಆ ಅವಲೋಕನದ ಚಿತ್ರಣ ಇಲ್ಲಿರಬಹುದು, ನೋಡಿ ತಿಳಿಸಿ; ಆದಿ-ಅಂತ್ಯಗಳ ನಡುವೆ ತುಂಬಿ ಸಂಬಂಧ ಕಲ್ಪಿಸಿದ್ದು ಅಂತರಂಗದ ಗಂಗೆ ಹರಿದು ಮಂದಹಾಸದಲ್ಲಿ ಮನೆಮಾಡಿದಂತಿತ್ತು, ಎನ್ನುವ ಭಾವವನ್ನು ಹಿಡಿಯಲು ಮಾಡಿದ ನನ್ನ ಕಿರು ಪ್ರಯತ್ನ, ನಿಮಗೆ ಹೇಗನ್ನಿಸಿತೋ ಕೇಳುವ ಕುತೂಹಲ! ಸಹನೆಯಿಂದ ಓದಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ – ಗೋಪಾಲಕೃಷ್ಣ ಹೆಗ್ಡೆ)

*****************************

ನೋವಿನಲ್ಲಿ ಕೂಡಿತ್ತೆ ೨೪ರ ಇತಿಹಾಸ?
ಮತ್ತೆ
ನಾಡೆಲ್ಲ ನೋಡಲಿಕ್ಕಿದೆ ೨೫ರ ಪರದೆ-
೨೬ಕ್ಕೆ ಮೊದಲು ಪರದಾಟ,
ನಂಬಲಾರದ ಸತ್ಯ
ಗೊತ್ತಿದ್ದರೂ
ಮೊದಲ ದಿವಸವೇ ಹೊಸವರುಷವನ್ನೆಲ್ಲ
ಬೊಗಸೆಯಲ್ಲಿ ಬಿಗಿದಿಟ್ಟ- ಒಂದನೇ ( ಒಂದೇ)
ದಿನದ ಇದು ಎಂಥಾ ವಿಪರ್ಯಾಸ-ಆಭಾಸ
ಸುಗ್ಗಿ ಕೋಲಾಟ !

ಯಾಕೋ ಈ ಮೌನದಲಿ
ಮೂಡಿದೆ ಮಂದಹಾಸ
- ಹಾರಿರುವೆ ಗರಿಬಿಚ್ಚಿ ಅರಳಿದ
ನೀ,
ನನ್ನ ನೀಲಿ ಆಕಾಶದ ಆಶೆ
ತೋರಿಸಿದೆ ದಿಗಂತ- ಅವಕಾಶ
ಮತ್ತೆ- ಮತ್ತೆ
ಹೀಗೆ
ಆಶಿಸಿಸಿದೆ ನೀಲಿತುಂಬಿರಲಿ - ಶುಭ್ರ
ಅಂತರಂಗ ಅದು
ನಿತ್ಯಾನಂದ, ಕಾವ್ಯಾನಂದದಂತಿರಲಿ
ಸದಾ ಈ ಬ್ರಹ್ಮಾಂಡ ಗುಂಡಿ
ಬಂಡಿ -
ಉಕ್ಕುತ್ತಿರಲಿ
ಸದಾ ಚೆಂದ ತಂದ ಅದು
ಬ್ರಹ್ಮಾನಂದ ಆಗಲಿ,
ಆದಿ - ಅಂತ್ಯಗಳ
ನಡುವೆ
ತುಂಬಿ ಈ,
ಅಂತರಂಗ - ಗಂಗೆ
ಹರಿಯಲಿ ಹರಿದ್ವಾರ
ವರ್ಷತುಂಬ 🙏💐🎊

- ಗೋಪಾಲಕೃಷ್ಣ ಹೆಗ್ಡೆ
*******************************************
ದೇವ - ದಾನವರಿಲ್ಲ, ಸಮುದ್ರಮಥನವೂ ಇಲ್ಲ;
ಹಾಲಾಹಲವಂತೂ ಮೊದಲೇ ಇಲ್ಲ.
ಲಕ್ಷ್ಮೀ ಚಂದ್ರರು ಇಲ್ಲ,
ಧನ್ವಂತರಿಯ ಸುಳಿವಿಲ್ಲ;
ಅಮೃತ ಕಲಶವದೊಂದೇ ಇರುವುದಲ್ಲ!
ಕೇಳು ಜನಮೇಜಯ, ಒಳ್ಳೆಯದ ಹೊರತರಲು ಉಳಿದೆಲ್ಲ ಬೇಕಿಲ್ಲ,
ಮನವದೊಂದಿದ್ದರೆ ಸಾಕಲ್ಲ!

- ಲಕ್ಷ್ಮೀನಾರಾಯಣ ಗುಡೂರ.
*******************************************

“ಅವನ ನಿಯಮ ಮೀರಿ ಇಲ್ಲೀ ಏನು ಸಾಗದು… ನಾವು ನೆನೆಸಿದ೦ತೆ ಬಾಳಲೇನು ನಡೆಯದು….”

“ಬಾನಿಗೊ೦ದು ಎಲ್ಲೆ ಎಲ್ಲಿದೇ? ನಿನ್ನಾಸೆಗೆಲ್ಲಿ ಕೊನೆಯಿದೇ?
ಏಕೆ ಕನಸು ಕಾಣುವೇ? ನಿಧಾನಿಸು.. ನಿಧಾನಿಸು..”

ಪ್ರೇಮದ ಕಾಣಿಕೆ ಚಿತ್ರದ ಹಾಡು ಎಲ್ಲರಿಗೂ ನೆನಪಿರಬಹುದು, ಚಿ. ಉದಯಶಂಕರ್ ಅವರ ಅದ್ಭುತ ರಚನೆಗೆ ಡಾ. ರಾಜಕುಮಾರ್ ಅವರು ಸುಂದರವಾಗಿ ಹಾಡಿದ್ದಾರೆ. ಪ್ರಸ್ತುತದಲ್ಲಿಯೂ ಈ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ, ಇಂದಿನ ಮನುಷ್ಯನ ಆಸೆ, ಆವಿಷ್ಕಾರಗಳಿಗೆ ಕೊನೆ ಎಲ್ಲಿದೆ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಹೊಸ ಆವಿಷ್ಕಾರಗಳು ತಪ್ಪಲ್ಲ, ವೈಜ್ಞಾನಿಕ ಆವಿಷ್ಕಾರಗಳು ಜೀವನ ಮತ್ತು ಪ್ರಗತಿಯನ್ನು ನಡೆಸುತ್ತವೆ. ಆದಾಗಿಯೂ, ಅದರಲ್ಲಿ ಕೆಲವು ದುಷ್ಪರಿಣಾಮಗಳು ಇವೆ.

ವೈಜ್ಞಾನಿಕ ಆವಿಷ್ಕಾರಗಳ ಮತ್ತು ದುಷ್ಪರಿಣಾಮಗಳ ಬಗ್ಗೆ ವಿಚಾರ ಬಂದಾಗ, ಐನ್ಸ್ಟೀನ್ ಅವರ ದ್ರವ್ಯ – ಶಕ್ತಿ ಸಮೀಕರಣ (E =mc2) ಉದಾಹರಣೆ ನೋಡಣ. ಐನ್ಸ್ಟೀನ್ ಅವರು ಈ ಸಮೀಕರಣ ಜಗತ್ತಿಗೆ ತಂದಾಗ ಅವರು ಪರಮಾಣು ಶಕ್ತಿ ಮತ್ತು ಔಷಧ ಕ್ಷೇತ್ರದಲ್ಲಿ ತರಬಹುದಾದ ಪ್ರಗತಿಗಳ ಬಗ್ಗೆ ಒತ್ತು ಕೊಟ್ಟರು. ಇದರ ದುಷ್ಪರಿಣಾಮ ಜಗತ್ತು ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿಯಲ್ಲಿ ಕಂಡಿತು. ಇನ್ನೊಂದು ಉದಾಹರಣೆ ಈಗ ನಮ್ಮ ಮುಂದಿದೆ, ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ) ಪ್ರಭಲತೆ ಜಗತ್ತಿಗೆ ಬಹು ಉಪಯುಕ್ತ ವ್ಯವಸ್ಥೆ ಕಲ್ಪಿಸಿತು. ದೇಶ ವಿದೇಶದ ವಿಷಯಗಳು ನಿಮ್ಮ ಬೆರಳು ತುದಿಯಲ್ಲಿ ಲಭ್ಯ. ಹತ್ತಿರದ ಆಸ್ಪತ್ರೆ, ಶಾಲೆ, ಮತ್ತಿತರ ಸೇವೆಗಳು ಮತ್ತು ಜನರ ಅಭಿಪ್ರಾಯ ಸರಳವಾಗಿ ಲಭ್ಯವಾಯಿತು. ಆದರೆ ಇದೆ ಸಾಮಾಜಿಕ ಮಾಧ್ಯಮ ಇರದ, ಕಂಡಿರದ ಮಾನಸಿಕ ರೋಗಗಳನ್ನು ಪರಿಚಯಿಸಿತು. ಪ್ರತಿ ಕ್ಷಣಕ್ಕೂ ಕಣ್ಣ ಮುಂದೆ ಬರುವ ಸುದ್ದಿ ಸತ್ಯವೋ, ಅಸತ್ಯವೋ ತಿಳಿಯದೆ ಜನರು ಅತಂತ್ರ ಪರಿಸ್ಥಿತಿ ಮುಟ್ಟುತ್ತಾರೆ, ರಾಷ್ಟ್ರದ ರಾಜಕೀಯ ಸಾಮಾಜಿಕ ತಾಣದಿಂದ ನಡೆಯುತ್ತೆ. ನೆಟ್ಫ್ಲಿಸ್ (Netflix) ನಲ್ಲಿ ಸಾಕ್ಷ್ಯಚಿತ್ರ “The Social Dilemma” ಸಾಮಾಜಿಕ ಮಾಧ್ಯಮದಿಂದ ಆಗುವ ದುಷ್ಪರಿಣಾಮಗಳು ಮನಮುಟ್ಟುವಂತೆ ಚಿತ್ರೀಕರಿಣಿಸಿದ್ದಾರೆ.

ಡಿಸೆಂಬರ್ ಮುಗಿದು ಹೊಸ ವರ್ಷ ಬಂತೆಂದರೆ ಎಲ್ಲರೊ ಒಂದೆಡೆ ಕಲೆತು ಸಂತೋಷ ಪಡುತ್ತಾರೆ, ಹೊಸವರ್ಷದ ನಿರ್ಣಯ (Resolution) ಮಾಡುತ್ತಾರೆ. ನಮ್ಮ ಸಂಶೋಧಕರೂ ಹೊಸ ವರ್ಷದ ಜೊತೆ, ತಮ್ಮ ಸಂಶೋಧನಾ ವಿವರಗಳನ್ನು ಸಿದ್ದ ಪಡಿಸಿಕೊಳ್ಳತ್ತಿರಬಹುದು, ಇತ್ತೀಚಿನ ಪ್ರತಿ ದಶಕ, ವರ್ಷ ಹೊಸ ಹೊಸ ಸಂಶೋಧನೆಗಳ ಅಗರ ಆಗಿದೆ. ಇಂತಹುದೇ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಈ ಲೇಖನ ಬರೆಯುವ ವಿಚಾರ ಮಾಡಿದೆ. ಇದನ್ನು ನಾವು ಕೇಳಿದ ಪೌರಾಣಿಕ ಸಾಹಿತ್ಯದೊಂದಿಗೆ ಹೊಂದಿಸಿ ಹಂಚಿಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ. ಈ ಒಂದು ಪ್ರಯತ್ನಕ್ಕೆ ಸ್ಫೂರ್ತಿ ಸದ್ಯೋಜಾತ ಭಟ್ಟ ಅವರು ಬರೆದ “ಕಾಲಯಾನ” ಪುಸ್ತಕ.

೧: ಸತ್ಯವ್ರತ ರಾಜ ಸಶರೀರದಿಂದ ದೇವಲೋಕ ಅಂದರೆ ಸ್ವರ್ಗಕ್ಕೆ ಹೋಗುವ ತನ್ನ ಇಚ್ಛೆ ವಸಿಷ್ಠ ಋಷಿಗಳೊಂದಿಗೆ ಹಂಚಿಕೊಳ್ಳುತ್ತಾನೆ. ಅವರು ಅದು ಸಾಧ್ಯವಾಗದ ವಿಚಾರ ಎಂದು ಸಹಾಯ ಮಾಡಲು ನಿರಾಕರಿಸುತ್ತಾರೆ. ಆಗ ಸತ್ಯವ್ರತ (ಶಾಪದಿಂದ ಚಾಂಡಾಲನಾಗಿ), ಮಹಾಋಷಿ ವಿಶ್ವಾಮಿತ್ರರಲ್ಲಿ ಈ ವಿಚಾರ ತಿಳಿಸಿ ಸಹಾಯ ಯಾಚಿಸುತ್ತಾನೆ. ವಿಶ್ವಾಮಿತ್ರರು ತಮ್ಮ ತಪೋಬಲದಿಂದ ಅವನನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ, ಆದರೆ ಇಂದ್ರ ಅವನನ್ನು ಒಳಗೆ ಸೇರಿಸದೆ ಕೆಳಕ್ಕೆ ನೂಕುತ್ತಾನೆ. ಕೆಳಗೆ ಬೀಳುವ ಸತ್ಯವ್ರತನನ್ನು ತಡೆದು ನಿಲ್ಲಿಸಿ ಅಲ್ಲಿ ಪ್ರತಿಸ್ವರ್ಗ ನಿರ್ಮಿಸುತ್ತಾರೆ. ಇದನ್ನೇ ತ್ರಿಶಂಕು ಸ್ವರ್ಗ ಎನ್ನುತ್ತಾರೆ.

ವೈಜ್ಞಾನಿಕ ಪ್ರಯೋಗಗಳಿಂದ ಈಗಾಗಲೇ ವಿಶ್ವಾಮಿತ್ರರು ನಿರ್ಮಿಸಿದಂತಹ ತಂಗುದಾಣ ಬಾಹ್ಯಾಕಾಶದಲ್ಲಿ ಬಂದಿವೆ. ೨೦೨೪ ಡಿಸೆಂಬರ್ ೩೦ಕ್ಕೆ ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಸ್ಪೇಸ್ ಡಾಕಿಂಗ್ (ಬಾಹ್ಯಾಕಾಶ ಬಂದರು ಅನ್ನಬಹುದೇ?) ಸಲುವಾಗಿ ಪ್ರಯೋಗ ಮಾಡಿದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ – ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ISS) ಪ್ರಸ್ತುತ ಅಂತರಿಕ್ಷದಲ್ಲಿ ಕಾರ್ಯ ನಿರತವಾಗಿದೆ. ಇದರಿಂದ ಬಾಹ್ಯಾಕಾಶ ಪ್ರಯೋಗಗಳಿಗೆ ಅಲ್ಲದೆ ಔಷಧಿ ತಯಾರಿಕೆ, ಸೂರ್ಯನ ಕಿರಣದ ಸಹಾಯದಿಂದ ಸುಸ್ಥಿರತೆ (ಸಸ್ಟೇನ್ಬಿಲಿಟಿ) ಪ್ರಯೋಗ ಮುಂತಾದವುಗಳು ಸಾಧ್ಯವಾಗಿವೆ. ಇದು ಇನ್ನೂ ಆರಂಭಿಕ ಹಂತದಲ್ಲಿರುವ ಕಾರಣ ಇದರ ಉಪಯೋಗ, ದುಷ್ಪರಿಣಾಮ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿಲ್ಲ. ಸದ್ಯದ ದುಷ್ಪರಿಣಾಮ ವಿಕಿರಣ, ಬಾಹ್ಯಾಕಾಶ ಕಸ, ಮಾನಸಿಕ ರೋಗಗಳು ಇತ್ಯಾದಿ.

೨: ಕಕುದ್ಮಿಗೆ ಮಹರಾಜನಿಗೆ ರೇವತಿ ಎಂಬ ಸುಂದರ ಮಗಳಿದ್ದಳು. ಅವಳಿಗೆ ಸರಿಯಾದ ವರನನ್ನು ಹುಡುಕಲು ಸ್ವಯಂವರ ಏರ್ಪಡಿಸಿದ, ಯಾವ ವರನು ಸರಿಯಾದ ಜೋಡಿ ಎನಿಸಲಿಲ್ಲ. ಕೊನೆಗೆ ಕಕುದ್ಮಿ ಮಗಳೊಂದಿಗೆ ಬ್ರಹ್ಮನನ್ನು ಕಾಣಲು ಬ್ರಹ್ಮಲೋಕಕ್ಕೆ ಪಯಣಿಸಿದನು. ಅಲ್ಲಿ ಬ್ರಹ್ಮ ದೇವರ ಸಭೆಯಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಸ್ವಲ್ಪ ಹೊತ್ತಿನನಂತರ ಬ್ರಹ್ಮ ದೇವರು ಕಕುದ್ಮಿ ಬಂದ ಕಾರಣ ಕೇಳಿದರು. ಆಗ ಕಕುದ್ಮಿ ತನ್ನ ಕಷ್ಟ ತಿಳಿಸಿ, ಮಗಳಿಗೆ ಸರಿಯಾದ ವರನನ್ನು ಆಯ್ಕೆ ಮಾಡಿಕೊಡಲು ಸಹಾಯ ಕೇಳುತ್ತಾನೆ. ಆಗ ಬ್ರಹ್ಮ ನಗುತ್ತ ಹೇಳುತ್ತಾನೆ, “ನೀನು ಇಲ್ಲಿಗೆ ಬಂದು ಕಳೆದ ಕ್ಷಣಗಳಲ್ಲಿ ಭೂಲೋಕದಲ್ಲಿ ೨-೩ ಯುಗಗಳು ಮುಗಿದು ಹೋಗಿವೆ, ಈಗ ನಿನ್ನ ಸಮಯದ ಯಾವ ರಾಜಕುಮಾರ ಬದುಕಿಲ್ಲ, ಅವರ ನಂತರದ ಸಂತತಿ ಅಲ್ಲಿ ಇರುವುದು…ಅವರ ಮರಿ ಮಕ್ಕಳು ಹುಟ್ಟಿದ್ದಾರೆ.”

ಸಮಯ ವಿಸ್ತರಣೆ, ಇದು ಐನ್ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತ ಇಂದ ಬಂದ ಪರಿಣಾಮ.
ಸಮಯ ವಿಸ್ತರಣೆ ಬಗ್ಗೆ ನಾನು ಕೆಲವು ಲೇಖನಗಳನ್ನು ಓದುತ್ತಿದ್ದೆ, ಆಗ ದೊರಕಿದ ಒಂದು ಲೇಖನ “ಡುಂಡಿರಾಮ್ಸ್ ಲಿಮರಿಕ್ಸ್” (ಕವಿಗಳಾದ ಡುಂಡಿರಾಜ್ ಮತ್ತು ಅಣಕವಾಡುಗಳ ಸರದಾರ ಎನ್. ರಾಮನಾಥ್ ಜಂಟಿಯಾಗಿ ರಚಿಸಿದ ಚುಟುಕುಗಳ ಸಂಕಲನ) ಪುಸ್ತಕ ಪರಿಚಯ, ಡಾ. ಬಿ ಜನಾರ್ಧನ್ ಭಟ್ ಅವರಿಂದ. ಈ ಲೇಖನದ ಒಂದು ಭಾಗ ನನ್ನ ಲೇಖನಕ್ಕೆ ಉಪಯುಕ್ತ, ಆದುದರಿಂದ ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
(vishvadhwani.com/2021/10/03/dumi-rams-limericks/)

“ಸಾಪೇಕ್ಷತಾ ಸಿದ್ಧಾಂತದ ಒಂದು ಪ್ರಮೇಯ, ಬೆಳಕಿನ ವೇಗಕ್ಕಿಂತ ವೇಗವಾಗಿ ಹೋದರೆ ಕಾಲವೂ ಸಾಪೇಕ್ಷವಾಗಿರುತ್ತದೆ ಎನ್ನುವುದು. ಉದಾಹರಣೆಗೆ ಯಾರಾದರೂ ಬೆಳಕಿನ ವೇಗಕ್ಕಿಂತ ವೇಗವಾಗಿ ಹೋಗುವ ರಾಕೆಟಿನಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಹಲವು ವರ್ಷಗಳ ನಂತರ ಭೂಮಿಗೆ ಹಿಂದಿರುಗಿದರೆ ಅವರ ವಯಸ್ಸು ಹೆಚ್ಚೇನೂ ಬದಲಾಗಿರುವುದಿಲ್ಲ; ಆದರೆ ಇಲ್ಲಿನ ಅವರ ಓರಗೆಯವರು ಮುದುಕರಾಗಿರುತ್ತಾರೆ! ಇಂತಹ ಸಿದ್ಧಾಂತ ಬಂದಾಗ ಹುಟ್ಟಿಕೊಂಡ ಲಿಮರಿಕ್ ಒಂದು ಇನ್ನೂ ಜಗತ್ತಿನಾದ್ಯಂತ ಪ್ರಸಿದ್ಧವಾಗಿ ಚಲಾವಣೆಯಲ್ಲಿದೆ!

1923 ರಲ್ಲಿ ಲಂಡನಿನ ಪ್ರಸಿದ್ಧ ಹಾಸ್ಯ ಪತ್ರಿಕೆ – ವ್ಯಂಗ್ಯ ಚಿತ್ರಗಳಿಗೂ ಅದು ಪ್ರಸಿದ್ಧ – ‘ಪಂಚ್’ನಲ್ಲಿ ಅದು ಮೊದಲು ಅನಾಮಧೇಯ ಕವಿಯ ಹೆಸರಿನಲ್ಲಿ ಪ್ರಕಟವಾಯಿತು. ಅದು ಹೀಗಿದೆ:

There was a young lady named Bright
Whose speed was much faster than light.
She set out one day
In a relative way
And returned (on) the previous night.

ಸುಮಾರಾಗಿ ಇದರ ಭಾವಾರ್ಥ ಹೀಗೆ (ಅನುವಾದ ಡಾ. ಬಿ ಜನಾರ್ಧನ್ ಭಟ್ ):

ಬ್ರೈಟ್ ಎಂಬ ಹೆಸರಿನವಳು ಇದ್ದಳೊಬ್ಬಳು
ಬೆಳಕಿಗಿಂತ ವೇಗವಾಗಿ ಚಲಿಸುವವಳು
ಒಂದುದಿನ ಹಗಲು ಸಾ-
ಪೇಕ್ಷ ರೀತಿಯಲ್ಲಿ ಹೊರಟು
ಹಿಂದಿನ ದಿನ ರಾತ್ರಿಯೇ ಹಿಂದಿರುಗಿದಳು.

ಸಮಯ ವಿಸ್ತರಣೆ ಸಿದ್ದಾಂತದ ಆಧಾರದ ಮೇಲೆ ಅಮರತ್ವ ಅಥವಾ ಸಾವನ್ನು ಮುಂದೂಡುವ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ವಿಚಾರ ಮಾಡುವ ಮುನ್ನ ನಚಿಕೇತನ ಬಗ್ಗೆ ತಿಳಿಯೋಣ.

೩. ಉದ್ಧಾಲಕ ಗೌತಮ ಗೋತ್ರದ ಋಷಿ, ಅವನು ಲೋಕದ ಕಲ್ಯಾಣಕ್ಕೆ “ವಿಶ್ವಜಿತ್” ಎನ್ನುವ ಯಾಗ ಮಾಡುತ್ತಾನೆ. ಈ ಯಾಗಕ್ಕೆ ದಾನ ಪ್ರಧಾನ ಆದುದರಿಂದ ಅವನು ತನ್ನೆಲ್ಲ ಸಂಪತ್ತನ್ನು ದಾನ ಮಾಡುತ್ತಾನೆ. ಅವನ ಮಗ ನಚಿಕೇತ, ಸಣ್ಣ ಹುಡುಗ ಅವನು. ಉದ್ಧಾಲಕ ದಾನ ಮಾಡುತ್ತ ಕೊನೆಗೆ ತನ್ನಲ್ಲಿ ಇರುವ ಗೋವುಗಳನ್ನು ದಾನ ಮಾಡುತ್ತಾನೆ. ಗೋವುಗಳು ಬಡಕಲು ಇದ್ದು ದಾನಕ್ಕೆ ಯೋಗ್ಯ ಅಲ್ಲ ಎಂದು ಅವನ ಮಗ ನಚಿಕೇತ ಅಪ್ಪನಿಗೆ ತಿಳಿಸುತ್ತಾನೆ. ಆಗ ಅಪ್ಪ ಹೇಳುತ್ತಾನೆ, “ನನ್ನಲ್ಲಿ ಇರುವದು ಇದೆ ಗೋವುಗಳು, ಇದನ್ನು ಬಿಟ್ಟರೆ ನೀನು ಉಳಿದಿದ್ದೀಯ”… ಆಗ ನಚಿಕೇತ ತನ್ನನ್ನು ದಾನ ಮಾಡಲು ಕೇಳುತ್ತಾನೆ, ಅದನ್ನು ಕೇಳಿ ಅಪ್ಪ ಕೋಪದಲ್ಲಿ ನಿನ್ನನ್ನು ಯಮನಿಗೆ ದಾನ ಮಾಡುತ್ತೇನೆ ಎನ್ನುತ್ತಾನೆ.
ನಚಿಕೇತನಿಗೆ ಒಂದು ಅಶರೀರವಾಣಿ ಕೇಳಿಸುತ್ತದೆ, ಅದು ಅವನಿಗೆ ಯಮ ಲೋಕಕ್ಕೆ ಹೋಗಲು ತಿಳಿಸುತ್ತದೆ. ನಚಿಕೇತ ಅಲ್ಲಿಗೆ ಹೋದಾಗ ಯಮನು ಇರುವದಿಲ್ಲ, ಆದುದರಿಂದ ಅವನು ಅಲ್ಲಿಯೇ ಯಮನಿಗಾಗಿ ಕಾಯುತ್ತ ಕುಳಿತುಕೊಳ್ಳುತ್ತಾನೆ. ಮೂರು ದಿನದ ನಂತರ ಯಮ ಬಂದು ಅಲ್ಲಿ ಕಾಯುತ್ತ ಕುಳಿತ ಬಾಲಕನನ್ನು ನೋಡಿ ಅವನಿಗೆ ಮೂರು ವರಗಳನ್ನು ಕೊಡುತ್ತಾನೆ. ನಚಿಕೇತ ತನ್ನ ಮೂರನೇ ವರದಲ್ಲಿ “ಮನುಷ್ಯ ಮೃತ್ಯುವನ್ನು ಜಯಿಸುವ ಉಪಾಯ ತಿಳಿಸಿಕೊಡು” ಎನುತ್ತಾನೆ. ಎರಡು ವರಗಳಿಗೆ ಅಸ್ತು ಅಂದಿದ್ದ ಯಮ, ಮೂರನೇ ವರ ನೀನು ಕೇಳಿದಂತೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾನೆ.

ಯಮನು ನಿರಾಕರಿಸಿದ ವರ “ಸಾವನ್ನು ಗೆಲ್ಲುವುದು” ಈಗ ಮನುಷ್ಯನ ಮಹತ್ತರ ಗುರಿ ಆಗಿದೆ. ವೈಜ್ಞಾನಿಕವಾಗಿ ದೀರ್ಘಾಯುಷ್ಯ ಪಡೆಯುವುದು, ಚಿರಂಜೀವಿ ಆಗುವ ಕನಸನ್ನು ಕಾಣುತ್ತಿದ್ದಾನೆ.

ಖ್ಯಾತ ಗಾಯಕ, ನೃತ್ಯಪಟು ಮೈಕಲ್ ಜ್ಯಾಕ್ಸನ್ ಹೇಳಿದ್ದು, “”I don’t want to die. I want to live forever”, ಅದಕ್ಕಾಗಿ ಅವನು ಬಹಳ ಪ್ರಯತ್ನಪಟ್ಟನು.

“ಹುಟ್ಟು ಸಾವು ಬದುಕಿನಲ್ಲಿ ಎರಡು ಕೊನೆಗಳು… ಬಯಸಿದಾಗ ಕಾಣದಿರುವ ಎರಡು ಮುಖಗಳು…”
ಹುಟ್ಟಿದ್ದು ಸಾಯಬೇಕು, there is nothing forever ಎಂಬುದು ಜಗದ ನಿಯಮ, ಇದನ್ನು ಅಳಿಸಲು ನೋಡಿದರೆ ನಿಸರ್ಗದ ತತ್ವ ಬದಲಿಸಿದಂತೆ. ಬಂದ ಕೆಲಸ ಮುಗಿದ ಮೇಲೆ ಸಂತೋಷದಿಂದ ಹೋಗಬೇಕು, ರಾಮ… ಕೃಷ್ಣರೇ ಇದಕ್ಕೆ ಹೊರತಲ್ಲ, ಭೀಷ್ಮ ಪೀತಾಮಹ ಇಚ್ಚಾ ಮರಣ ಇದಾಗ್ಯೂ ಅವರು ಸಿಕ್ಕ ವರದಿಂದ ಚಿರಂಜೀವಿ ಆಗಲು ಬಯಸದೆ ಸಂತೋಷದಿಂದ ಈ ಬದುಕಿನಿಂದ ನಿರ್ಗಮಿಸಿದರು. ಅಶ್ವಥಾಮ ಶಾಪದಿಂದ ಚಿರಂಜೀವಿ ಆಗಿರಬಹುದು ಆದರೆ ಪರಿಣಾಮ ಅತಿ ಭೀಕರ.

ಚೀನಾ ದಲ್ಲಿ ೨೧% ಕ್ಕೋ ಹೆಚ್ಚಿನ ಜನ ೬೦ ವರುಷ ಮೇಲ್ಪಟ್ಟವರು. ಇನ್ನು ಜಪಾನ್ ದೇಶದ ೩೦% ಕ್ಕೋ ಹೆಚ್ಚು ಜನ ವಯಸ್ಸಾದವರು. ಸಾವು ಗೆಲ್ಲುವ ಔಷದಿ ಸಿಕ್ಕರೆ (ಅಮೃತ) ಎಲ್ಲೆಲ್ಲಿಯೂ ಜನರೇ… ಅವರ ಅರೋಗ್ಯ, ಜೀವನ ಮುಂತಾದ ನೆರವು ಸರಕಾರದ ಜವಾಬ್ದಾರಿ… ಈ ಪರಿಸ್ಥಿತಿ ಬಂದರೆ ಸರಕಾರ ಇರಬಹುದೇ? ಅವರಿಗೆ ಜೀವಿಸಲು ನೈಸರ್ಗಿಕ ಸಂಪನ್ಮೂಲಗಳು ಉಳಿಯುವದೇ? ಭೂಮಿ ಬಿಟ್ಟು, ಮಂಗಳ… ನಂತರ ಚಂದ್ರ… ನಂತರ ಇನ್ನೊಂದು ಗ್ರಹ ಹುಡುಕುತ್ತ ಮನೆ ಖರೀದಿಸುವ ಪ್ರಮೇಯ ಬರಬಹುದು. ಈಗ ಸಾಮಾನ್ಯವಾಗಿ ಕೇಳಿಬರುವದು “ಸತ್ತ ಮೇಲೆ ಹಣ ತೆಗೆದುಕೊಂಡು ಹೋಗುತ್ತಾರೇನು?”… ಇನ್ನು ಅಮರತ್ವ ಸಿಕ್ಕರೆ ನಮಗೆ ಕೇಳಿ ಬರಬಹುದಾದ ವಾಕ್ಯ “ಹಣ ಇದ್ದರೆ ಸಾಕು, ಸಾವನ್ನು ದಾಟಿಕೊಂಡು ಹೋಗುತ್ತಾರೆ”.

“Don’t Die: The Man Who Wants to Live Forever” ಇತ್ತೀಚಿಗೆ ನೆಟ್ಫ್ಲಿಸ್ ನಲ್ಲಿ ಬಂದ ಸಾಕ್ಷ್ಯಚಿತ್ರ. ಕಟ್ಟುನಿಟ್ಟಾದ ಆಹಾರ, ಜೀವನಶೈಲಿ ಮತ್ತು ವೈದ್ಯಕೀಯ ಪ್ರಯೋಗಗಳ ಸಹಾಯದಿಂದ ಬ್ರಯಾನ್ ಜಾನ್ಸನ್ ತನ್ನ ವಯಸ್ಸನ್ನು ಕಡಿಮೆ ಮಾಡಿಕೊಂಡು, ಹೆಚ್ಚು ವರ್ಷ… ಅಥವಾ ಸಾವಿಲ್ಲದ ಸರದಾರ ಆಗುವ ಪ್ರಯತ್ನದಲ್ಲಿ ಇದ್ದಾನೆ.

“ನಮ್ಮ ಸಂಸಾರ, ಆನಂದ ಸಾಗರ… ಪ್ರೀತಿ ಎಂಬ ದೈವವೇ ನಮಗಾಧಾರ” ಎನ್ನುವ ಹಾಡು, “ನಮ್ಮ ಸಂಸಾರ, ಬೃಹತ್ ಸಾಗರ… ಸಾವಿಲ್ಲದ ಔಷಧಿಯೇ ನಮಗಾಧಾರ” ಎಂದು ಬದಲಾಗುತ್ತದೆ.

“ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ” ಹಾಡು, “”ಜಗವೇ ಒಂದು ರಣರಂಗ, ಸಾವೇ ಇರಲಿ ನಿನ್ನ ಸಂಗ” ಎನ್ನಬೇಕಾಗಬಹುದು…ಸಾವಿಲ್ಲದೆ ಜನ ಸಣ್ಣ ಸಣ್ಣ ಅವಶ್ಯಕತೆಗೂ ಹೋರಾಡಿ, ನೋವಿಗಿಂತ ಸಾವೇ ಖುಷಿ ಎನ್ನುವ ಪರಿಸ್ಥಿತಿ ತಲುಪುತ್ತಾರೆ.

ಆವಿಷ್ಕಾರದ ಅವಶ್ಯಕತೆ ಇದೆ, ಆದರೆ ಫಲಿತಾಂಶ/ ಪರಿಣಾಮ ವಿಚಾರ ಇರದೇ ಮಾಡಿದ ಆವಿಷ್ಕಾರ ತಿರುಗುಬಾಣ ಆಗಬಹುದು.

ಪ್ರೇಮಲತಾಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾಸಂಕಲನ – ಕೆಲವುಅನಿಸಿಕೆಗಳು

ಡಾ.ಜಿ.ಎಸ್.ಶಿವಪ್ರಸಾದ್

ಪ್ರೇಮಲತಾ ಅವರ 'ನಂಬಿಕೆಯೆಂಬ ಗಾಳಿಕೊಡೆ'  ಕಥಾ ಸಂಕಲನವನ್ನು ಇತ್ತೀಚಿಗೆ ಓದಿ ಮುಗಿಸಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಈ ಕೃತಿಯನ್ನು ಈಗಾಗಲೇ ಓದಿರುವವರಿಗೆ ಈ ನನ್ನ ಬರಹ ಹೊಸ ದೃಷ್ಟಿ ಕೋನಗಳನ್ನು ನೀಡಬಹುದು. ಇನ್ನು ಓದಬೇಕು ಎಂಬ ಆಕಾಂಕ್ಷೆ ಉಳ್ಳವರಿಗೆ ಈ ಲೇಖನ ಪ್ರವೇಶ ಪರಿಚಯವನ್ನು ಒದಗಿಸಬಹುದು. ಲೇಖಕ/ಲೇಖಕಿಯರಿಗೆ ತಾವು ಬರೆದ ಕೃತಿಯನ್ನು ಇತರರು ಓದಿದರೆ ಅದರಿಂದ ಉಂಟಾಗುವ ಸಂತಸ ತೃಪ್ತಿ ಒಂದು ಕಡೆಯಾದರೆ, ಆ ಕೃತಿಯನ್ನು ಓದಿ ಅದರ ಬಗ್ಗೆ ಚರ್ಚೆ ನಡೆದಲ್ಲಿ ಅವರಿಗೆ ಸಾರ್ಥಕತೆಯ ಭಾವ ಉಂಟಾಗಬಹುದು. ಒಂದು ಕೃತಿಯ ವಿಷಯ ವಸ್ತು, ಆಳ ಮತ್ತು ವಿಸ್ತಾರಗಳು ಈ ಅಂಶಗಳನ್ನು ನಿರ್ಧರಿಸಬಹುದು.  ಬರಹಗಾರರಿಗೆ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇರಲಾರದು. ಇನ್ನು ಕೆಲವು ಕರ್ತೃಗಳು "ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ" ಎಂಬ ನಿರ್ಲಿಪ್ತ ನಿಲುವಿನಲ್ಲಿ ತಮ್ಮ ಒಂದು ಆತ್ಮ ತೃಪ್ತಿಗೆ ಬರವಣಿಗೆಯನ್ನು ಮುಂದುವರಿಸಬಹುದು. ಅನಿವಾಸಿ ನೆಲದಲ್ಲಿ ಮೂಡಿ ಬರುವ ಕನ್ನಡ ಕೃತಿಗಳನ್ನು ಇಲ್ಲಿಯ ಓದುಗರು ಓದಿ ಉತ್ತೇಜಿಸುವುದು, ಸಾಧ್ಯವಾದಲ್ಲಿ ಚರ್ಚೆಗೆ ಒಳಪಡಿಸುವುದು ಅಗತ್ಯವಷ್ಟೇ ಅಲ್ಲ, ಅದು ಅನಿವಾಸಿ  ಕನ್ನಡಿಗರ ಜವಾಬ್ದಾರಿಯೂ ಹೌದು. ಇದನ್ನು ನಮ್ಮ ಅನಿವಾಸಿ ದಶಮಾನೋತ್ಸವ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಲಾಯಿತು. ಸಮಯೋಚಿತವಾಗಿ ವಾಟ್ಸ್ ಆಪಿನಲ್ಲೂ ಚರ್ಚೆ ಮಾಡುಕೊಳ್ಳುತ್ತ ಬಂದಿದ್ದೇವೆ. ನನ್ನ ಒಂದು ಸಣ್ಣ ಕಾಣಿಕೆ ಈ ಬರಹದ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಇಲ್ಲಿ ಸಣ್ಣಕಥೆಗಳ ಬಗ್ಗೆ ನನ್ನ ಕೆಲವು ಸಾರ್ವತ್ರಿಕ ಅನಿಸಿಕೆಗಳನ್ನು ಬೆಸೆಯಲಾಗಿದೆ. 

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಹೊಸ ವರ್ಷದಲ್ಲಿ ಇನ್ನೂ ಹೆಚ್ಚಿನ ಹೊಸ ಕೃತಿಗಳು ಹೊರಬಂದು ಸೃಜನಶೀಲತೆ ವಿಜೃಂಭಿಸಲಿ

-ಸಂ
ಪ್ರೇಮಲತಾ ಅವರು ದಶಕಗಳಿಂದ ಸಣ್ಣ ಕಥೆಗಳನ್ನು ಬರೆದು ಸುಧಾ, ಮಯೂರ ಮುಂತಾದ ಸಂಚಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಾಗೆ ಮೂರು ಕಥಾಸಂಕಲನಗಳನ್ನು ಈಗಾಗಲೇ ಪ್ರಕಟಿಸಿ ಖ್ಯಾತರಾಗಿದ್ದಾರೆ. ಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾ ಸಂಕಲನವು ವೀರಲೋಕ ಪ್ರಕಾಶನದಿಂದ ೨೦೨೩ರಲ್ಲಿ ಲೋಕಾರ್ಪಣೆಗೊಂಡಿದೆ. ಇಲ್ಲಿ ೧೦ ಸಣ್ಣ ಕಥೆಗಳಿವೆ. ಪುಸ್ತಕ ತರಿಸಿಕೊಂಡು ಹಲವಾರು ದಿನಗಳು ಕಳೆದಿದ್ದರೂ ಈಗ ಸಮಯ ಒದಗಿಬಂದು ಇತ್ತೀಚಿಗಷ್ಟೇ ಓದಿ ಮುಗಿಸಿ, ನನ್ನ ಕೆಲವು ಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಇದೊಂದು ವಿಮರ್ಶೆಯಾಗಿ ಮೂಡಿ ಬಂದಿದ್ದರೆ ಹಾಗೂ ಇರಲಿ. 

ಈ ಸಂಕಲನದ ಶೀರ್ಷಿಕೆ ಮತ್ತು ಮುಖಪುಟ ಇಲ್ಲಿಯ ಕಥೆಗಳ ರೂಪಕದಂತೆ ನಿಂತಿದೆ. ಸ್ವತಃ ಲೇಖಕಿ ತಮ್ಮ ಅರಿಕೆಯಲ್ಲಿ ಪ್ರಸ್ತಾಪಿಸಿರುವಂತೆ "ನಂಬಿಕೆಗಳೇ ಜೀವನಕ್ಕೆ ಆಧಾರ, ಬದುಕೇ ಒಂದು ನಂಬಿಕೆ" ಬದುಕಿನ ಹಲವಾರು ಸನ್ನಿವೇಶಗಳಲ್ಲಿ ಈ ನಂಬಿಕೆ ಎನ್ನುವುದು ಚುಕ್ಕಾಣಿಯಾಗಿ ನಮ್ಮ ದಿಕ್ಕು ದೆಸೆಗಳನ್ನು ಬದಲಾಯಿಸುತ್ತದೆ ಎಂಬ ವಿಚಾರ ಸೋಜಿಗವಾದದ್ದು. ಕ್ರಿಸ್ತ್ಮಸ್ ಸಮಯದಲ್ಲಿ ಒಬ್ಬ ಎಳೆ ಬಾಲಕ ರಾತ್ರಿ ತಾನು ಮಲಗಿದ್ದ ಸಮಯದಲ್ಲಿ ಸ್ಯಾಂಟಕ್ಲೌಸ್ ಬಂದು ತನಗೆ ಉಡುಗೊರೆಯನ್ನು ಕೊಡುತ್ತಾನೆ ಎನ್ನುವ ನಿರೀಕ್ಷೆ ಒಂದು ನಂಬಿಕೆಯಾದರೆ, ಬೆನ್ನಿಗೆ ಬಾಂಬು ಕಟ್ಟಿಕೊಂಡಿರುವ ತರುಣ ಭಯೋತ್ಪಾದಕ ತಾನು ಜಿಹಾದಿನಲ್ಲಿ ಮಡಿದರೆ ಪರಲೋಕದಲ್ಲಿ ಅಪ್ಸರೆಯನ್ನು ಕೂಡಬಹುದು ಎಂಬ ಅವನ ನಿರೀಕ್ಷೆಯೂ ನಂಬಿಕೆಯೇ. ಆದರೆ ಈ ರೀತಿಯ ನಂಬಿಕೆಗಳ ಪರಿಣಾಮಗಳೇನು ಎಂಬುದು ಮುಖ್ಯವಾದ ಪ್ರಶ್ನೆ. ನಂಬಿಕೆ ಮತ್ತು ತರ್ಕ, ವೈಚಾರಿಕತೆ, ವಿಜ್ಞಾನ ಇವುಗಳ ಮುಖ ಮುಖಿಯನ್ನು ಈಗಾಗಲೇ ಹಲವಾರು ಕಥೆ, ಕಾದಂಬರಿ ಮತ್ತು ಸಿನಿಮಾಗಳು ಶೋಧಿಸಿವೆ. ಪ್ರೇಮಲತಾ ಅವರೂ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಸಂಬಂಧಗಳನ್ನು ಬೆಸೆಯುವುದು ಈ ನಂಬಿಕೆಗಳೇ. ಒಬ್ಬ ಬರಹಗಾರನಿಗೂ ತನ್ನ ಬರಹ ಓದುಗರ ಗ್ರಹಿಕೆಗೆ, ನಿರೀಕ್ಷೆಗೆ ನಿಲುಕಬಹುದು ಎನ್ನುವ ಹಂಬಲವೂ ಈ ನಂಬಿಕೆಯನ್ನು ಆಧರಿಸಿರುತ್ತದೆ. ಈ ಸಂಕಲನದ ಹಲವಾರು ಕಥೆಗಳ ಭೂಮಿಕೆ ಒಂದಲ್ಲ ಒಂದು ರೀತಿ ಆ ನಂಬಿಕೆಗೆ ಸಂಬಂಧಿಸಿದ್ದು.

ಕಥೆ ಹುಟ್ಟುವುದೇ ಜೀವನದ ಅನುಭವಗಳ ಮೇಲೆ. ಅದು ಬರಹಗಾರನ ವೈಯುಕ್ತಿಕ ಜೀವನ ಅನುಭವವಾಗಿರಬಹುದು, ಇಲ್ಲವೇ ಬರಹಗಾರ ಕಂಡು ಕೇಳಿದ ಅನುಭವವಾಗಿರಬಹುದು. ಈ ಅನುಭವ ಸಾಮಾನ್ಯನಿಗೆ ಒಂದು ಸಾಧಾರಣ ಘಟನೆ, ಸನ್ನಿವೇಶದಂತೆ ಕಂಡರೂ ಸೃಜನಶೀಲ ಲೇಖಕ, ಲೇಖಕಿಯರು ತಮ್ಮ ಅಪ್ರತಿಮ ಕಲ್ಪನಾ ಶಕ್ತಿಯಿಂದ ಆ ಘಟನೆಯನ್ನು ಗ್ರಹಿಸಿ ಅದಕ್ಕೆ ರೆಕ್ಕೆ, ಪುಕ್ಕ, ಮಾಂಸ, ಎಲಬುಗಳನ್ನು ಜೋಡಿಸಿ ಒಂದು ಸುಂದರ ಕಲಾಕೃತಿಯನ್ನು ಕಡೆದು ನಿಲ್ಲಿಸುತ್ತಾರೆ. ಆ ಪ್ರತಿಭೆ ಪ್ರೇಮಲತಾ ಅವರಿಗೆ ನಿಜವಾಗಿಯೂ ಪ್ರಾಪ್ತವಾಗಿದೆ.

ಬದುಕಿನ ಪ್ರಸಂಗಗಳ ಚಿತ್ರವೇ ಸಣ್ಣ ಕಥೆಯ ಬುನಾದಿ, ಹೀಗಾಗಿ ಸಣ್ಣ ಕಥೆಗಳಲ್ಲಿ, ಕೆಲವೇ ಪುಟಗಳಲ್ಲಿ ಕಥೆಯನ್ನು ಹೇಳಿ ಮುಗಿಸಬೇಕಾದ ಒತ್ತಡ ಇರುವುದರಿಂದ ಇಲ್ಲಿ ಹೆಚ್ಚು ಪಾತ್ರಗಳನ್ನು ತರಲು ಅವಕಾಶವಿಲ್ಲ ಮತ್ತು ಇಲ್ಲಿ ಪಾತ್ರಗಳನ್ನು ಆಳವಾಗಿ ಪೋಷಿಸಲು ಸಾಧ್ಯವಿಲ್ಲ. ಕಾದಂಬರಿಯಲ್ಲಿ ಈ ನಿರ್ಬಂಧೆನೆಗಳು ಇರುವುದಿಲ್ಲ. ಕಾದಂಬರಿಗಳಲ್ಲಿ ಕಾಣುವ ಆಳ, ವಿಸ್ತಾರಗಳನ್ನು ಸಣ್ಣ ಕಥೆಗಳಲ್ಲಿ ತರಲು ಸಾಧ್ಯವಿಲ್ಲವಾದರೂ ಸಣ್ಣ ಕಥೆಗಳ ಅನುಕೂಲವೆಂದರೆ ಇಲ್ಲಿ ವಿವಿಧ ಸಾಮಾಜಿಕ ವಿಷಯಗಳನ್ನು ಕಥಾವಸ್ತುವಾಗಿ ಬಳಸ ಬಹುದು, ಹೆಚ್ಚು ವಿಚಾರಗಳನ್ನು ಚಿಂತನೆಗೆ ಒಳಪಡಿಸಬಹುದು. ಕಾದಂಬರಿ ಹರಿಯುವ ನದಿಯಾದರೆ, ಸಣ್ಣ ಕಥೆಗಳು ಕೆರೆಗಳಂತೆ.

ಸಣ್ಣ ಕಥೆಗಳು ಒಡ್ಡುವ ಎಲ್ಲ ಮಿತಿಯೊಳಗೂ ಕೂಡ ಪ್ರೇಮಲತಾ ಅವರು ಸನ್ನಿವೇಶಗಳ ಜೊತೆ ಜೊತೆಗೆ ತಮ್ಮ ಕಥಾ ನಾಯಕ ನಾಯಕಿಯರನ್ನು ಪೋಷಿಸಿದ್ದಾರೆ. ಈ ಸಂಕಲನದ "ತೆರವು' ಎಂಬ ಕಥೆಯಲ್ಲಿ ಕರ್ನಾಟಕದ ರಿಯಲ್ ಎಸ್ಟೇಟ್ ಅವ್ಯವಹಾರದಲ್ಲಿ ಸಿಕ್ಕಿಕೊಂಡಿರುವ ದಂಪತಿಗಳ ಸನ್ನಿವೇಶದಲ್ಲಿ ಏನನ್ನೂ ಸಾಧಿಸಲಾರದ ನಾಮರ್ದ ಗಂಡ ಮತ್ತು ಮನೆ-ಮಡದಿಯಾದರೂ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ದಿಟ್ಟತನದಿಂದ ಲ್ಯಾನ್ಡ್ ಮಾಫಿಯಾ ಗೂಂಡಾಗಳನ್ನು ನಿಭಾಯಿಸುವ ಗೀತಾಳ ಪಾತ್ರ ಇದಕ್ಕೆ ಸಾಕ್ಷಿಯಾಗಿದೆ. ತೇಜೇಸ್ವಿಯವರ 'ಕಿರಿಗೂರಿನ ಗೈಯಾಳಿಗಳು' ಕಥೆಯನ್ನು ನೆನಪಿಗೆ ತಂದಿದೆ.

ಅನಿವಾಸಿ ಲೇಖಕರು ತಮ್ಮ ಪರಿಸರದ ನೆಲೆಯಲ್ಲಿ ಘಟಿಸುವ ಕಥೆಗಳನ್ನು ದೂರದ ಕನ್ನಡ ನಾಡಿಗೆ ತಿಳಿಸ ಬೇಕೇ ಅಥವಾ ಅವರು ಎಲ್ಲಿದ್ದರೂ, ಎಂತಿದ್ದರೂ ಕನ್ನಡ ನೆಲೆದ ಕಥೆಗಳನ್ನಷ್ಟೇ ಬರೆಯ ಬೇಕೇ ಎಂಬ ಪ್ರಶ್ನೆ ಮೂಡುವುದು ಸಹಜವೇ. ಇಂಗ್ಲೆಂಡಿನಲ್ಲಿ ನಡೆದ ಕಥೆ ಕನ್ನಡ ಜನಕ್ಕೆ ಸಲ್ಲಬಹುದೇ ಎಂತೆಂಬ ಪ್ರಶ್ನೆ ಅನಿವಾಸಿ ಬರಹಗಾರರನ್ನು ಕಾಡುವುದು ಸಹಜ. ಒಬ್ಬ ಲೇಖಕ ಯಾವ ದೇಶ ಕಾಲಮಾನಗಳಲ್ಲಿದ್ದರೂ ಅದು ಮನುಷ್ಯ ಸಂಬಂಧ, ಸಹಜ ಸ್ವಭಾವಗಳ ವೈರುಧ್ಯ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದಲ್ಲಿ ಅದು ಎಲ್ಲಾ ದೇಶಕ್ಕೂ ಮತ್ತು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುತ್ತವೆ. ಈ ಕಾರಣಗಳಿಂದ ನಮಗೆ ರಷ್ಯಾದ ಟಾಲ್ಸ್ಟಾಯ್ ಮತ್ತು ಬಂಗಾಳದ ಟ್ಯಾಗೋರ್ ಬರೆದ ಕಥೆಗಳು ಹತ್ತಿರವಾಗುತ್ತವೆ. ಪ್ರೇಮಲತಾ ಅವರು ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡತಿ. ಅವರ ಪರಿಸರ ಇಂಗ್ಲೆಂಡಿನ ಆಂಗ್ಲ ಸಂಸ್ಕೃತಿಗೆ ಸಂಬಂಧಿಸಿದ್ದಾದರೂ ಅವರು ಬರೆಯುವ ಕಥೆಗಳು ನಮ್ಮ ಕನ್ನಡ ನೆಲದ ಕಥೆಗಳಾಗಿವೆ. ಇಲ್ಲಿ ಕರ್ನಾಟಕ ನಗರಗಳ, ಮಲೆನಾಡಿನ ದಟ್ಟ ಕಾಡುಗಳ, ಕಾರ್ಪೊರೇಟ್ ಕಂಪನಿಗಳ ಕಥೆ ಇವೆ. ಇದಕ್ಕೆ ಹೊರತಾಗಿ 'ದ್ರೋಹ' ಎಂಬ ಕಥೆ ಲಂಡನ್ ಮತ್ತು ಸಿರಿಯಾದಲ್ಲಿ ಸಂಭವಿಸುತ್ತದೆ.

ಇನ್ನೊಂದು ವಿಚಾರ; ಕಥೆ ಯಾವುದೇ ನೆಲದಲ್ಲಿ ಹುಟ್ಟಿಕೊಂಡರೂ ಆ ಕಥನ ಪ್ರಪಂಚದ ಬೇರೆಡೆ ಇನ್ನೊಬ್ಬರ ಕಥೆಯಾಗಿರಬಹುದು. ಮನುಷ್ಯನ ಮೂಲಭೂತ ಸ್ವಭಾವಗಳಿಗೆ ಬಣ್ಣ, ಸಂಸ್ಕೃತಿ, ಗಡಿ ರೇಖೆಗಳ ಹಂಗುಂಟೆ? ಈ ಸಂಕಲನದ ಶೀರ್ಷಿಕೆ ಕಥೆಯಾಗಿರುವ ‘ನಂಬಿಕೆಯೆಂಬ ಗಾಳಿಕೊಡೆ’ಯಲ್ಲಿ ಬೆಂಗಳೂರಿನ ಒಂದು ಖಾಸಗಿ ಆಫೀಸಿನ ಉದ್ಯೋಗಿಯ ಬೀಳ್ಕೊಡುಗೆ ಪಾರ್ಟಿಯಲ್ಲಿ ಲಕ್ಷ್ಮಿ ಎಂಬ ವಿವಾಹಿತ ಮಹಿಳೆಗೆ ಅವಳ ಪಾನೀಯದಲ್ಲಿ ಒಬ್ಬ ಕುಹಕಿ ಕದ್ದು ಮುಚ್ಚಿ ಮಾದಕವಸ್ತುವನ್ನು ಸೇರ್ಪಡಿಸಿ (ಸ್ಪೈಕ್ ಮಾಡಿ) ಅದರ ಪರಿಣಾಮವಾಗಿ ಲಕ್ಷ್ಮಿ ನಶೆಯಲ್ಲಿದ್ದಾಗ ಅವಳನ್ನು ಅತ್ಯಾಚಾರಕ್ಕೆ ಒಳಪಡಿಸುತ್ತಾನೆ. ಲಕ್ಷ್ಮಿಯ ಅತ್ಯಾಚಾರವನ್ನು ನಮ್ಮ ಸಮಾಜ ಹೇಗೆ ಗ್ರಹಿಸುತ್ತದೆ, ನಮ್ಮ ವ್ಯವಸ್ಥೆ ಹೇಗೆ ತನಿಖೆ ನಡೆಸುತ್ತವೆ ಮತ್ತು ನಂಬಿಕೆ ಆಧಾರದ ಮೇಲೆ ಜನರ ನಿರೀಕ್ಷೆ ಯಾವ ಯಾವ ರೂಪಗಳನ್ನು ತಳೆಯುತ್ತದೆ, ತನಗೆ ಅತ್ಯಾಚಾರವಾಗಿದೆ ಎಂದು ಲಕ್ಷ್ಮಿ ಬಹಿರಂಗವಾಗಿ ಒಪ್ಪಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಆ ವಿಚಾರವನ್ನು ಹಂಚಿಕೊಂಡದ್ದು ಸರಿಯೇ, ತಪ್ಪೇ? ಎಂಬ ವಿಚಾರಗಳ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಆಶ್ಚರ್ಯವೆಂದರೆ ಪ್ರೇಮಲತಾ ಈ ಕಥೆಯನ್ನು ಬರೆದು ನಾಲ್ಕು ವರುಷಗಳಾಗಿವೆ, ಬಹುಶಃ ಅದೇ ಸಮಯದಲ್ಲಿ, ಫ್ರಾನ್ಸ್ ದೇಶದಲ್ಲಿ, ಗೆಜೆಲ್ ಪೆಲಿಕೋ ಎಂಬ ಹಿರಿಯ ಮಹಿಳೆಯ ಸ್ವಂತ ಗಂಡನೇ ಅವಳಿಗೆ ಗೊತ್ತಾಗದಂತೆ ಡ್ರಗ್ಸ್ ಕೊಟ್ಟು ನಶೆಯಲ್ಲಿರುವಾಗ ಅವನು ತನ್ನ ಸ್ನೇಹಿತರನ್ನು ಕರೆದು ಅವಳೊಡನೆ ಸಂಭೋಗಿಸಲು ಉತ್ತೇಜಿಸಿದ. ಅದು ಗೆಜೆಲ್ ಮೇಲೆ ನಡೆದ ಅತ್ಯಾಚಾರವೆನ್ನಬಹುದು. ಅಷ್ಟೇ ಅಲ್ಲ ಈ ಅತ್ಯಾಚಾರವನ್ನು ಅವನು ವಿಡಿಯೋ ಮಾಡಿದ್ದು ಈ ವಿಚಾರ ಇತ್ತೀಚಿಗೆ ಬಹಿರಂಗಗೊಂಡು ಅದರ ತನಿಖೆ ನಡೆಯಿತು, ಈ ಸುದ್ದಿ ಬಿಬಿಸಿ ವಾರ್ತೆಯಲ್ಲಿ ಪ್ರಸಾರಗೊಂಡಿತು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಯಿತು. ನಂಬಿಕೆಯೆಂಬ ಗಾಳಿಕೋಡೆ ಕಥೆಯಲ್ಲೂ ಆಪಾದಿತ, ಲಕ್ಷ್ಮಿ ಮೇಲೆ ನಡೆಸಿದ ಅತ್ಯಾಚಾರವನ್ನು ವಿಡಿಯೋ ಮಾಡಿರುತ್ತಾನೆ. ಇದು ಎಷ್ಟು ಕಾಕತಾಳೀಯವಾಗಿದೆ! ಪ್ರಪಂಚದ ಯಾವುದೋ ಮೂಲೆಯಲ್ಲಿ ಒಬ್ಬ ಕನ್ನಡ ಲೇಖಕಿಯ ಕಲ್ಪನೆಗೆ ದೊರಕಿದ ಕಥೆ, ಇನ್ಯಾವುದೋ ಸಂಸ್ಕೃತಿಯಲ್ಲಿ, ದೇಶದಲ್ಲಿ ಸಂಭವಿಸಿದ ನೈಜ ಘಟನೆಯಾಗಿರುವುದು ಅಚ್ಚರಿಯನ್ನು ಉಂಟುಮಾಡುವಂಥದ್ದು.

ಪ್ರೇಮಲತಾ ಅವರು ಕೈಗೆತ್ತಿಕೊಳ್ಳುವ ಕಥಾವಸ್ತುಗಳು ನಮ್ಮ ನಿಮ್ಮ ಬದುಕಿಗೆ ಬಹಳ ಹತ್ತಿರವಾದದ್ದು. ಅವರ ಕಥೆಗಳಲ್ಲಿ ಪ್ರಾಮಾಣಿಕತೆ ಇದೆ, ಇಲ್ಲಿ ಅಥೆಂಟಿಸಿಟಿ ಇದೆ. ಅವರು ಸಾಮಾಜಿಕ ಸಮಸ್ಯೆಗಳನ್ನು ಅನೇಕ ಸೂಕ್ಷ್ಮ ದೃಷ್ಟಿ ಕೋನಗಳಿಂದ ವಿಶ್ಲೇಷಿಸಿದ್ದಾರೆ, ಇಲ್ಲಿಯ ಕಥೆಗಳು ಹಲವಾರು ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಇಲ್ಲಿ ಅತಿಯಾದ ಭಾವುಕತೆ ಇಲ್ಲ, ಎಲ್ಲ ಸನ್ನಿವೇಶಗಳನ್ನು ಹದವಾಗಿ ನಿರೂಪಿಸಲಾಗಿದೆ. ಇಲ್ಲಿ ಸ್ತ್ರೀ ಭಾವನೆಗಳಷ್ಟೇ ಅಲ್ಲದೆ ಪುರುಷರ ಭಾವನೆಗಳನ್ನು ನಿಭಾಯಿಸಲಾಗಿದೆ. ಇದರ ಉತ್ತಮ ಉದಾಹರಣೆಯನ್ನು 'ಗೊಡ್ಡು' ಎಂಬ ಕಥೆಯಲ್ಲಿ ಕಾಣಬಹುದು. ಸಾಮಾನ್ಯವಾಗಿ ಬಂಜೆತನವೆಂದರೆ ಅದು ಸ್ತ್ರೀಯರಿಗಷ್ಟೇ ಸಂಬಂಧಿಸಿರುವ ವಿಚಾರ ಎಂದು ಸಮಾಜ ನಂಬಿರುತ್ತದೆ. ಮಕ್ಕಳಾಗದ ದಾಂಪತ್ಯದಲ್ಲಿ ಬಹುಪಾಲು ಹೆಂಗಸೇ ಆಪಾದನೆಗೆ ಒಳಗಾಗುವುದನ್ನು ಕಾಣುತ್ತವೆ. ‘ಎಕ್ಸ್ ಎಕ್ಸ್ ವೈ’ (XXY) ಎಂಬ ಗಂಡಸಿನ ಬಂಜೆತನವನ್ನು ಕಥೆಯಲ್ಲಿ ತಂದು ಲೇಖಕಿ ಈ ನಂಬಿಕೆಯನ್ನು ಒಡೆಯುತ್ತಾರೆ. ಕಥಾ ನಾಯಕನಿಗೆ ತನ್ನ ಬಂಜೆ ತನದ ಅರಿವಾದಾಗ ಅವನಿಗೆ ಉಂಟಾಗುವ ಭಾವನೆಗಳ ಏರು ಪೆರುಗಳನ್ನು ಮತ್ತು ತಾನು ನಿಷ್ಪ್ರಯೋಜಕ ಎಂಬ ಮಾನಸಿಕ ತೊಳಲಾಟವನ್ನು ಅತ್ಯಂತ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಸಮಾಜ ತಾನು ನಂಬಿರುವ ಸಾಮಾಜಿಕ "ಸತ್ಯಗಳನ್ನು" ನಂಬಿಕೆಗಳನ್ನು ಒಡೆದು ತೋರಿಸಿದಾಗ ಉಂಟಾಗುವ ಆಘಾತ ಬಹಳ ಆಳವಾದದ್ದು. ಅದು ಸಮಾಜವನ್ನು ತಿದ್ದುವ ಪ್ರಯತ್ನವೂ ಹೌದು. ಈ ಕಾರಣಕ್ಕಾಗಿ ನಮಗೆ ಪ್ರೇಮಲತಾ ಅವರ ಕಥೆಗಳು ಪ್ರಸ್ತುತವಾಗುತ್ತವೆ.

ಸಣ್ಣ ಕಥೆಗಳು ಎಷ್ಟು ಉದ್ದವಾಗಿರಬೇಕು ಎಂಬುದಕ್ಕೆ ಯಾವುದೇ ಅಳತೆಗೋಲುಗಳಿಲ್ಲ. ಹೇಳಿದಷ್ಟೂ ಕಥೆಯೇ. ಪ್ರೇಮಲತಾ ಅವರ ಕಥೆಗಳು ಕೊಂಚ ದೀರ್ಘವೆನಿಸುತ್ತದೆ. ಇವುಗಳ ನಡುವೆ ‘ನಿರ್ವಾತ’ ಎಂಬ ಕಥೆ ನಿಜವಾಗಿಯೂ ಸಣ್ಣ ಕಥೆ ಎನ್ನಬಹುದು. ಕೆಲವೇ ಪುಟಗಳ ಈ ಕಥೆ 'ಇನ್ಸೆಸ್ಟ್' ಕುರಿತಾಗಿದೆ. ಕಥಾನಾಯಕಿಯ ತಂದೆಯೇ ತನ್ನ ಚಿಕ್ಕ ತಾತನಾಗಿರುವ ಕಥೆ ಪರಿಣಾಮಕಾರಿಯಾಗಿದೆ. ಕನ್ನಡದ ಹಿಂದಿನ ಲೇಖಕರು ಸಲಿಂಗಕಾಮ, ವಿಕೃತ ಕಾಮ, ಅತ್ಯಾಚಾರ ಈ ವಿಚಾರಗಳನ್ನು ಮಡಿವಂತಿಕೆಯಿಂದ ಆಯ್ಕೆ ಮಾಡುತ್ತಿರಲಿಲ್ಲ. ಇದು ಸಾಮಾಜಿಕವಾಗಿ ನಿಷಿದ್ಧವಾದ ವಿಷಯವಾಗಿತ್ತು. ಪ್ರೇಮಲತಾ ಅವರು ಈ ರೀತಿಯ ಬಾಹಿರವಾದ ವಿಚಾರಗಳನ್ನು ಮುನ್ನೆಲೆಗೆ ತಂದಿರುವುದು ಶ್ಲಾಘನೀಯ. ಈ ಪ್ರಯತ್ನವನ್ನು ಇತ್ತೀಚಿನ ಇತರ ಲೇಖಕರೂ ಮಾಡುತ್ತಿದ್ದಾರೆ. ಕಥೆ, ಕಾದಂಬರಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ರೀತಿ ವಿಷಯಗಳನ್ನು ತರುವುದರಿಂದ ಅದು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಆಗಬಹುದು, ಆಗದಿರಬಹುದು, ಆದರೆ ಅರಿವನ್ನು ಹೆಚ್ಚಿಸುವುದು ಲೇಖಕರ ಮತ್ತು ಸಿನಿಮಾ ನಿರ್ದೇಶಕರ ಜವಾಬ್ದಾರಿ.

ಪ್ರೇಮಲತಾ, ತಮ್ಮ ಕಥೆಯಲ್ಲಿ ತಂದಿರುವ ಅನೇಕ ಸ್ತ್ರೀ ಪಾತ್ರಗಳನ್ನು ಸಹಜವಾಗಿ ನಿರೂಪಿಸಿದ್ದಾರೆ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸ್ತ್ರೀ ಪಾತ್ರ ಪ್ರಧಾನವಾಗಿರುವಂತೆ ತೋರುತ್ತದೆ. ಇಲ್ಲಿ ಅವಳು ಸತ್ಯಕ್ಕಾಗಿ, ನ್ಯಾಯಕ್ಕಾಗಿ, ಪ್ರೀತಿಗಾಗಿ ಎದ್ದು ನಿಲ್ಲುತ್ತಾಳೆ. ಅತ್ಯಾಚಾರಕ್ಕೆ ಒಳಗಾಗಿ ಹಿಂಸೆಯನ್ನು ಅನುಭವಿಸಿ ತನ್ನ ಹೆಸರಿಗೆ ಒದಗಿದ ಕಳಂಕವನ್ನು ಮುಚ್ಚಿಡದೆ, ಇತರ ಸ್ತ್ರೀಯರ ರಕ್ಷಣೆಗಾಗಿ ತನ್ನ ಅತ್ಯಾಚಾರವನ್ನು ಬಹಿರಂಗಗೊಳಿಸುವ ಧೀಮಂತ ಹೆಣ್ಣಾಗಿ ನಿಲ್ಲುತ್ತಾಳೆ. ಗಂಡು ಮತ್ತು ಹೆಣ್ಣು ಉದ್ಯೋಗಿಗಳಿಗೆ ನೀಡುವ ವೇತನದಲ್ಲಿ ಉಂಟಾಗಿರುವ ತರತಮಗಳಿಗಾಗಿ ಹೋರಾಡಲು ನಿಲ್ಲುತ್ತಾಳೆ. ವಿಚ್ಛೇದನ ಪಡೆದ ಹೆಂಗಸಾದರೂ ತನ್ನ ಭಾವಿ ಪತಿಗೆ ಕ್ಯಾನ್ಸರ್ ರೋಗ ತಟ್ಟಿದ್ದಾಗ ಅವನನ್ನು ಬೆಂಬಲಿಸಿ ನಿಂತು ಸಾಂತ್ವನ ನೀಡುವಷ್ಟು ಉದಾರಿಯಾಗಿರುತ್ತಾಳೆ. ಸಾಂಪ್ರದಾಯ ದೃಷ್ಟಿಕೋನಗಳಲ್ಲಿ ಸ್ತ್ರೀ ಪುರುಷನ ಅಧೀನಳು, ಅಬಲೆ, ಗಂಡನ ನೆರಳಲ್ಲಿ ಜೀವಿಸುವವಳು ಎಂತೆಲ್ಲಾ ನಮ್ಮ ಹಿಂದಿನ ಕಥೆ, ಪುರಾಣ, ಕಾದಂಬರಿ ಮತ್ತು ಸಿನಿಮಾಗಳಲ್ಲಿ ಚಿತ್ರಿಸಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಸ್ತ್ರೀಗೆ ತನ್ನದೇ ಅಸ್ತಿತ್ವವಿದೆ, ಅವಳು ತನ್ನ ಸಮಾನ ಹಕ್ಕುಗಳಿಗೆ ನಿಲ್ಲಬಲ್ಲಳು ಎಂಬ ವಿಚಾರವನ್ನು ಇಲ್ಲಿಯ ಕಥೆಗಳಲ್ಲಿ ಕಾಣಬಹುದು. ಜೊತೆಗೆ ಸ್ತ್ರೀ ಒಂದು ಶಕ್ತಿ ಅಷ್ಟೇ ಅಲ್ಲ, ಸ್ನೇಹ, ಪ್ರೀತಿ, ಕರುಣೆ, ಸಹನೆ ಮತ್ತು ಅನುಕಂಪೆಯ ಪ್ರತಿಮೆಯಾಗಿಯೂ ನಿಲ್ಲುತ್ತಾಳೆ.

'ವರ್ತುಲ' ಎಂಬ ಕಥೆ ಬೇರೆ ಕಥೆಗಳಿಗಿಂತ ಭಿನ್ನವಾಗಿ ಎದ್ದು ನಿಲ್ಲುತ್ತದೆ. ಬದುಕೆಂಬ ಸ್ಪರ್ಧೆಯಲ್ಲಿ ನಾವು ಯಶಸ್ಸಿನ ಸಾಧನೆಯಲ್ಲಿ ಸಿಕ್ಕಿಕೊಂಡಿ "ಇರುವುದೆಲ್ಲವ ಬಿಟ್ಟು ಇರದುದರ ಕಡೆ ತುಡಿಯುವ" ನಾಗರೀಕತೆ ಎಂಬ ಖಾಯಿಲೆಯಲ್ಲಿ ನರಳುವವವರ ಚಿತ್ರ ಈ ಕಥೆಯಲ್ಲಿದೆ. ಇಲ್ಲಿ ಪರಿಸರ ನಾಶದ ಬಗ್ಗೆ ಕಾಳಜಿ ಇದೆ. ತೀವ್ರ ಗತಿಯಲ್ಲಿ ಬದಲಾಗಿ ನಿಬಿಡವಾಗಿರುವ ನಗರಗಳ ನಡುವೆ ನಿಡುಸುಯ್ಯುವ ಸ್ವರಗಳ ದನಿಯಿದೆ. "ಹೊಸತಿಗೆ -ಹಳತಿಗೂ, ಒಳ್ಳೆಯದಕ್ಕೂ-ಕೆಟ್ಟದಕ್ಕೂ, ವಿವೇಕಕ್ಕೂ-ಅವಿವೆಕ್ಕಕ್ಕೂ, ಭೂತ-ಭವಿಷ್ಯತ್ತಿಗೂ ಇರುವ ಪರದೆ ಅತಿ ತೆಳುವಾದದ್ದು" ಎಂಬ ಮಾತನ್ನು ಲೇಖಕಿ ಇಲ್ಲಿ ಪ್ರಸ್ತಾಪಿಸುತ್ತಾರೆ. ಈ ಮಾತುಗಳು ಎಲ್ಲರನ್ನು ಕಾಡುವ ವಿಚಾರ. ಹಿಂದೊಮ್ಮೆ ಹಳೆಯದೆಂದು ನಾವೇ ತಿರಸ್ಕರಿಸಿದ ಬದುಕಿನ ರೀತಿಗಳು, ದಿನ ನಿತ್ಯ ಬಳಕೆಯ ವಸ್ತುಗಳು, ಮಣ್ಣಿನ ವಾಸನೆ, ನಿಸರ್ಗದ ತಾಜಾತನ ಕಾಲದ ವರ್ತುಲದಲ್ಲಿ ಕಳೆದು ಹೋಗಿ ಮತ್ತೆ ನಮಗೆ ಅದೇ ಹಳೆತಿನ ಬಗ್ಗೆ ಹೊಸ ವ್ಯಾಮೋಹ ಹುಟ್ಟಿಕೊಳ್ಳುವ ಪರಿ ಸೋಜಿಗವಾದದ್ದು. ಈ ವರ್ತುಲದಲ್ಲಿ ಮೊದಲಾವುದು, ಕೊನೆಯಾವುದು ಎಂಬ ಪ್ರಶ್ನೆ ಕಾಡುತ್ತದೆ. ಪ್ರಗತಿಯ ನೆಪದಲ್ಲಿ ಎಲ್ಲವನ್ನೂ ಕಬಳಿಸುವ ನಮ್ಮ ದುರಾಸೆಯನ್ನು ಪ್ರೇಮಲತಾ ಅವರು "ಹಾವೊಂದು ತನ್ನ ಬಾಲದಿಂದ ಶುರು ಮಾಡಿ ತನ್ನನ್ನು ತಾನೇ ಕಬಳಿಸುವ" ದುರಂತ ಪ್ರಯತ್ನದ ರೂಪಕವನ್ನು ಇಲ್ಲಿ ಇಟ್ಟಿದ್ದು ಅದು ಬಹಳ ಅರ್ಥಪೂರ್ಣವಾಗಿದೆ.

ಈ ಕಥಾ ಸಂಕಲನದ ಕಥಾ ನಿರೂಪಣೆ ಕೆಲವೆಡೆ ಸರಳವಾಗಿರಬಹುದಿತ್ತು. ಹಿಂದು-ಮುಂದಿಲ್ಲದೆ ಏಕಾಏಕಿ ಇಬ್ಬರ ನಡುವಿನ ಸಂಭಾಷಣೆಯೊಂದಿಗೆ ಶುರುವಾಗುವ ಕಥೆ ಓದುಗನಲ್ಲಿ ಗೊಂದಲ ಉಂಟುಮಾಡಬಹುದು. ಸಾರ್ವತ್ರಿಕವಾಗಿ ಹೇಳುವುದಾದರೆ ಓದುಗನನ್ನು ಕಥೆಯ ಆವರಣದೊಳಗೆ ಬರಮಾಡಿಕೊಳ್ಳುವ ಬಗ್ಗೆ ಲೇಖಕರು ಎಚ್ಚರಿಕೆ ವಹಿಸಬೇಕು. ಹೀಗಾಗಿ ಕಥೆಯ ಪ್ರವೇಶ ಸರಾಗವಾಗಿದ್ದಾರೆ ಒಳಿತು. ಕಥೆಯ ನಿರೂಪಕರೇ ಕಥೆಗೆ ಒಂದಿಷ್ಟು ಹಿನ್ನೆಲೆಯನ್ನು ಕೊಟ್ಟು ಪಾತ್ರಗಳನ್ನು ಸಾವಧಾನವಾಗಿ ಪರಿಚಯಿಸಿದರೆ ನಂತರ ಸಂಭಾಷಣೆಯನ್ನು ಗ್ರಹಿಸುವುದಕ್ಕೆ ಸರಾಗವಾಗುತ್ತದೆ ಎಂಬುದು ನನ್ನ ಅನಿಸಿಕೆ. ನಾವೆಲ್ಲಾ ಹಿಂದೆ ಓದಿರುವ ಜನಪ್ರಿಯ ಕಥೆ ಕಾದಂಬರಿಯಲ್ಲಿ ಕಥಾ ವಸ್ತುವನ್ನು ಫ್ಲಾಶ್ ಬ್ಯಾಕ್ ಮಾದರಿಯಲ್ಲಿ ಹಿಂದು ಮುಂದೆ ಮಾಡುವ ತಂತ್ರವನ್ನು ನೋಡಿದ್ದೇವೆ. ಇದು ದೃಶ್ಯ ಮಾಧ್ಯಮಗಳಲ್ಲಿ ಗ್ರಹಿಸುವುದು ಸುಲಭ ಆದರೆ ಬರಹದಲ್ಲಿ ಬಳಸಿದಾಗ ಕಥೆಯನ್ನು ಗ್ರಹಿಸುವುದು ಕಷ್ಟದ ಕೆಲಸ. ಈ ತಂತ್ರ ಸಣ್ಣ ಕಥೆಗಳಲ್ಲಿ ಅಷ್ಟು ಪ್ರಯೋಜನಕ್ಕೆ ಬರದಿದ್ದರೂ ಅದನ್ನು ಕಾದಂಬರಿಗಳಲ್ಲಿ ಅಗತ್ಯವಿದ್ದಾಗ ತರಬಹುದು. ಅಂದಹಾಗೆ ಈ ಕೃತಿಯಲ್ಲಿ ಆ ಫ್ಲಾಶ್ ಬ್ಯಾಕ್ ಗಳಿಲ್ಲ.

ಪ್ರೇಮಲತಾ ಬಳೆಸಿರುವ ಭಾಷೆ ಬಹಳ ಉತ್ಕೃಷ್ಟವಾಗಿದೆ. ಅವರಿಗೆ ಕನ್ನಡ ಭಾಷೆಯ ಮೇಲಿರುವ ಹತೋಟಿ ಇಲ್ಲಿ ಎದ್ದು ತೋರುತ್ತದೆ. ಸಂಕೀರ್ಣವಾಗಿರುವ ವೈದ್ಯಕೀಯ ವಿಷಯಗಳನ್ನು ಸರಳಗೊಳಿಸಿ ಕಥೆ ಹೇಳುವ ಸಾಮರ್ಥ್ಯ ಅವರಿಗಿದೆ. ಸಂಬಂಧಗಳು ಎಂಬ ಕೊನೆ ಕಥೆಯಲ್ಲಿ ಮನುಷ್ಯ-ಮನುಷ್ಯ ಸಂಬಂಧಗಳನ್ನು ಕುರಿತಾದ ಕಥಾವಸ್ತು ಇದೆ. ಯಾರು ಯಾರಿಗೆ? ಹೇಗೆ? ಎಲ್ಲಿಯವರೆಗೆ? ಯಾವ ರೀತಿ? ಸಂಬಂಧಿ ಎನ್ನುವ ವಿಚಾರವನ್ನು ಆಳವಾಗಿ ಚಿಂತಿಸಲಾಗಿದೆ. ಸಾವು ಎಂಬ ವಿಷಯವನ್ನು ಅಂತ್ಯಂತ ಸೂಕ್ಷ್ಮವಾಗಿ ನಿಭಾಯಿಸಲಾಗಿದೆ. ಕ್ಯಾನ್ಸರ್ ಪೀಡಿತ ಕಥಾನಾಯಕ ಸಾವನ್ನು ಬರಮಾಡಿಕೊಳ್ಳುವ ಸನ್ನಿವೇಶವನ್ನು ನವುರಾದ ರೂಪಕದೊಂದಿಗೆ ಬಿತ್ತರಿಸಲಾಗಿದ್ದು ಈ ಹಂತದಲ್ಲಿ ಕಥೆ ಮತ್ತು ಕಥಾ ಸಂಕಲನ ಕೊನೆಗೊಳ್ಳುತ್ತದೆ. ಈ ರೀತಿಯ ಉಪಮೆಗಳ ಬಳಕೆ ಇಲ್ಲಿಯ ಕಥೆಗಳಿಗೆ ವಿಶೇಷ ಆಯಾಮಗಳನ್ನು ದೊರಕಿಸಿಕೊಟ್ಟಿದೆ.

ಕಥೆ, ಕಾದಂಬರಿಯನ್ನು ಓದುತ್ತಿರುವಾಗ ಕಥೆಯ ಓಘ, ದಿಕ್ಕು, ಬೆಳವಣಿಗೆ, ಕುತೂಹಲ ಇವುಗಳಲ್ಲಿ ಮಗ್ನರಾಗಿ ಮುಳುಗಿ ಮೇಲೇಳುತ್ತೇವೆ. ಓದು ಮುಗಿದ ನಂತರ ಕೆಲವು ಕಥೆಗಳು ಸರಳ ಕಥೆಗಳಾಗಿ ನೆನಪಿನಿಂದ ಉದುರುತ್ತವೆ. ಇನ್ನು ಕೆಲವು ಕಥೆಗಳು ಹಿನ್ನೋಟದಲ್ಲಿ ಹಲವಾರು ಚಿಂತನೆಗಳಿಗೆ ಅನುವುಮಾಡಿಕೊಡುತ್ತವೆ, ಹೊಸ ಹೊಳಹುಗಳನ್ನು ನೀಡುತ್ತವೆ ಮತ್ತು ನಮ್ಮ ಸ್ಮೃತಿಯಲ್ಲಿ ಧೀರ್ಘ ಕಾಲ ಉಳಿಯುತ್ತವೆ, ಅದರಲ್ಲಿ ಪ್ರೇಮಲತಾ ಅವರ ಈ ಕೃತಿಯೂ ಸೇರಿದೆ.