ಲಹರಿ- ಕಾಡುವ ಘಮಗಳ ಗುಂಗಿನಲ್ಲಿ,

ಚಿತ್ರಕೃಪೆ; ಗೂಗಲ್
ಕಾಡುವ ಘಮಗಳು 

ಮನುಷ್ಯನಿಗೆ ದೇವರು ಕೊಟ್ಟ ಮಹತ್ತರ ಉಡುಗೊರೆ ಮೂಗು. ಅದಿಲ್ಲದೆ ನಾವು ಹೇಗೆ ಉಸಿರಾಡುತ್ತಿದ್ದೆವು ಅನ್ನುವ
ಮೂಲಭೂತ ಪ್ರಶ್ನೆಗೂ ಮೊದಲು, ಪ್ರಕೃತಿಯ ಅದೆಷ್ಟೋ ಸ್ವಾರಸ್ಯ ನಮ್ಮ ಅರಿವಿಗೆ ಬರುತ್ತಿರಲಿಲ್ಲವೇನೋ ಬಂದರೂ
ಅದು ದೀರ್ಘಕಾಲ ನೆನಪಲ್ಲಿ ಉಳಿಯುವುದು ಕಷ್ಟ ಇತ್ತೇನೋ ಅನ್ನುವ ಯೋಚನೆ ಒಮ್ಮೆಲೇ ಮಿಂಚಿಮಾಯವಾಗುತ್ತದೆ. ಅದಕ್ಕಂತಲೇ ದೇವರಿಗೆ Special thanks ಹೇಳಲೇ ಬೇಕು.
ನಮಗೆ ಉಸಿರಾಡಲು,ಆಘ್ರಾಣಿಸಲು,ಮುಖಕ್ಕೊಂದು ಮೂಗು ಕೊಟ್ಟಿರುವುದಕ್ಕೆ! ಮೂಗಿರುವುದರಿಂದಲೇ ಅಲ್ವೇ ಪ್ರತಿಯೊಂದು ಘಟನೆ
ಪ್ರತಿಯೊಬ್ಬ ವ್ಯಕ್ತಿ, ಹೂವು, ಪ್ರಾಣಿ ಸ್ಥಳಗಳು .ಕೆಲವೊಮ್ಮೆ ಘಟನೆಗಳು ಘಮಗಳೊಂದಿಗೆ ಬೆಸೆದು ಮನಸಿನಲ್ಲಿ ಅಳಿಸದ ಹಚ್ಚೆಯಂತೆ ಅಚ್ಚಾಗಿ
ಬಿಡುವುದು?

ಕೆಲವರಿಗೆ ಈ ಘಮ, ವಾಸನೆ, ಕಂಪು, ಪರಿಮಳಗಳು ಅಷ್ಟಾಗಿ ಕಾಡಿರಲಿಕ್ಕಿಲ್ಲ. ಅಥವಾ ಹಲವರು ಆ ಬಗ್ಗೆ ಯೋಚಿಸಿಯೇ ಇರಲಿಕ್ಕಿಲ್ಲ. ಆದರೆ ಭೂಮಿಯ ಮೇಲೆ ಒಂದಷ್ಟು ಜನ ನನ್ನಂಥವರೂ ಇರುತ್ತಾರೆ. ಘಮದ ಗುಂಗಿನಲ್ಲಿ ಬದುಕುವವರು.ಬುದ್ಧಿ ಕೊಟ್ಟನೋ ಇಲ್ವೋ ದೇವರು, ಮೂಗು ಮತ್ತು ಕಣ್ಣು ಮಾತ್ರ ಸಿಕ್ಕಾಪಟ್ಟೆ ಚುರುಕಾಗಿರಲಿ ಎಂದು ಹರಸಿಬಿಟ್ಟ.

ಸಾರಿನಲ್ಲಿ ಅಪ್ಪಿತಪ್ಪಿ ಜೀರಿಗೆ ಜೊತೆಗೆ ಎರಡು ಕಾಳು ಮೆಂತ್ಯೆ ಹವೀಜ ಬಿದ್ದರೂ ಸಾಕು ರುಚಿ ನೋಡುವ ಮೊದಲೇ ನಾ ಅಮ್ಮನಿಗೆ ಹೇಳಿ ಬಿಡುತ್ತಿದ್ದೆ. ಈ ವಿಷಯಕ್ಕೆ ಮಾತ್ರ ನನಗೂ ಅಮ್ಮನಿಗೂ ಆಗೀಗ ಜಗಳ ಆಗತಿತ್ತು. ಊಟಕ್ಕೆ ಕೂಡುವಾಗ ಉಪ್ಪಿನಕಾಯಿ ದಿಟ್ಟಿಸಿದೆ ಎಂದರೆ ಎಲ್ಲಿ ಊಟದ ನಡುವೆ ಹುಳ ಗಿಳ ಅಂದು ಬಿಡುವೆನೋ ಅಂತ ಆಕೆಗೆ ಆತಂಕವಾಗತಿತ್ತು. ಯಾರಿಗೂ ಕಾಣದ್ದು, ಯಾರ ಮೂಗಿಗೆ ನಿಲುಕದ್ದು ಅದು ಹೇಗೆ ನನಗೇ ಕಾಣಿಸುತ್ತಿತ್ತೋ, ನನ್ನ ಮೂಗಿಗೆ ಅಡರುತಿತ್ತೋ ಆ ದೇವರೇ ಬಲ್ಲ.

ಊಟದ ವಿಷಯ ಮಾತ್ರವಲ್ಲ ಈ ಘಮ ಮತ್ತು ಅದನ್ನು ನೆನಪಿಟ್ಟು ಆ ಜಾಗೆ, ವ್ಯಕ್ತಿ,ಘಟನೆಯೊಂದಿಗೆ ಚಂದದಲ್ಲಿ ಮಿದುಳಿನ ಅದ್ಯಾವ ಡ್ರೈವ್ ನಲ್ಲಿ save ಮಾಡಿ ಕೊಂಡಿದೆಯೋ ಈ ಮನಸು ಮೂಗು. ಕಣ್ಣು ಮುಚ್ಚಿ ಧ್ಯಾನಿಸಿದರೆ ಆ ಘಮ ತನ್ನಿಂತಾನೇ ಫೋಟೋ ಆಲ್ಬಂ ತರಹ ತೆರೆದುಕೊಳ್ಳುತ್ತದೆ. ಯಾವಾಗಲೋ ಇಂಥದ್ದೊಂದಿಷ್ಟು ನನ್ನ ಕಾಡುವ ಘಮಗಳನ್ನು ಪಟ್ಟಿ ಮಾಡಿಟ್ಟಿದ್ದೆ. ಅವನ್ನು ಇಲ್ಲಿ ಇಂದು ಬರೆಯೋಣ ಅನ್ನಿಸಿತು.

ಮೊದಲ ಮಳೆ
ಇದು ಎಲ್ಲರಿಗು ಆಗಿರೋ ಅನುಭವ. ಮೊದಲ ಮಳೆ ಬಂದಾಗ ಬರೊ ಹಸಿಮಣ್ಣ ವಾಸನೆ. ಎಲ್ಲರಿಗೂ ಈ ಘಮದೊಂದಿಗೆ ಅಪರೂಪದಲ್ಲಿ ಅಪರೂಪದ ನೆನಪುಗಳಿರಬಹುದು. ನನಗೆ ಈ ಕಂಪು ನೆನಸಿಕೊಂಡರೆ,ನಾವು ಸಿರಸಿ ರಸ್ತೆಯ ನಮ್ಮ ಆ ಹಳೇ ಮನೆಯಲ್ಲಿರುವಾಗ, ಸೋರುತ್ತಿದ್ದ ಮಾಡು ಮೇಲಿಂದ ಬೀಳುವ ನೀರ ಹನಿಗಳನ್ನು ನೇರವಾಗಿ ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದ ಅಲ್ಯೂಮಿನಿಯಂ ಪಾತ್ರೆಗಳು. ಅದೇ ಸಮಯಕ್ಕೆ ಅಮ್ಮ ಮಾಡಿ ಕೊಡುತ್ತಿದ್ದ ಸಬ್ಬಸಿಗೆ ಪಲ್ಯ, ಅಕ್ಕಿರೊಟ್ಟಿ. ಕೆರೆಮೀನಿನ ಸಾರು ಮಡಕೆಯಲ್ಲಿ ಕುದ್ದ ಘಮ. ಮಳೆ ನಿಂತ ಮೇಲೆ ಹಿತ್ತಲಲ್ಲಿ
ಬರುತ್ತಿದ್ದ ಕಂಚಿ ಹೂವಿನ ವಿಲಕ್ಷಣ ಘಮ ಉಪ್ಪುನೀರನಲ್ಲಿ ಹಾಕಿಟ್ಟ ಕಳಿಲೆ,ಹಲಸಿನ ತೊಳೆ,ಮಾವಿನಕಾಯಿ ,ಅಡಿಗೆಗಳು ಅದಕ್ಕೊಂದು ತೆಂಗಿನೆಣ್ಣೆ ಬೆಳ್ಳುಳ್ಳಿ ಒಗ್ಗರಣೆ.ಆಹ್ಹ್ ! ಆ ಮಳೆ ಘಮ ಹೀರದೆ ಅದೆಷ್ಟೋ ಕಾಲವಾಯಿತು.ಪ್ಯಾಟ್ರಿಕೋರ್ ಅನ್ನುವ ಮಳೆ ಮಣ್ಣಿನ ಘಮದ ಅತ್ತರು ಮಾರುಕಟ್ಟೆಗೆ ಬಂದಿದೆಯಂತೆ. ಅದನ್ನೊಮ್ಮೆ ಕೊಂಡು ತರಬೇಕು.

ದೇವಿಮನೆ ಘಟ್ಟ.
ಅದು ನೆನಪಾಗೋದೆ ಅದರ ಕಾಡು ಹೂಗಳ ಘಮದಿಂದ. ಶಿರಸಿ ಮತ್ತು ಕುಮಟೆ ಪೇಟೆ ಗಳನ್ನೂ ಸೇರಿಸುವ
ಈ ಘಟ್ಟದ ತಿರುವು ಮುರುವು ೬೬ ಕಿಲೋಮೀಟರ್ ಕಾಡಿನ ಹಾದಿ ಬರಿ ಹಸಿರು ನೋಡುತ್ತಾ, ಕಾಡು ಹೂಗಳ ಪೇರಳೆ,ಕಿತ್ತಳೆ ಹಣ್ಣುಗಳ ಘಮದ ಗುಂಗಿನಲ್ಲಿ ಕಳೆದು ಬಿಡುತ್ತಿದ್ದೆ. ಇನ್ನೇನು ಅಘನಾಶಿನಿ ಬಂದೆ ಬಿಡ್ತಾಳೆ. ಆಕೆಯ ಮತ್ತುಶರಾವತಿ ನದಿಯ ಹೆಸರನ್ನು ಕೇಳಿದ ಕೊಡಲೇ ನೆನಪಾಗೋದು ಹಸಿ.ತಾಜಾ ಮೀನಿನ ಘಮ.ಜೊತೆಗೆ ಕೆಂಪು ಮಣ್ಣು(ಮೀನುತಿನ್ನದವರಿಗೆ ಈ ಘಮದ ಭಾಗ್ಯ ಇಲ್ಲ ಮೂಗಿಗೆ ಕರವಸ್ತ್ರ). ಕುಮಟೆಯ ಬಸ್ಸ್ ನಿಲ್ದಾಣದಲ್ಲಿ ಮಾರಲು ಬರುತ್ತಿದ್ದ ಹಾಲಕ್ಕಿ ಒಕ್ಕಲತಿಯರ ಬಟ್ಟಿಯಲ್ಲಿದ್ದ ಜಾಜಿ,ಬಕುಲಾ,ಸುರಗಿ ಕಂಪು. ಜೀವ ಇರುವ ಒರೆಗೂ ಈ ನೆನಪ ಘಮ ಶಾಶ್ವತ.

ಮಂಗಳೂರು ಮಲ್ಲಿಗೆ.
ಈ ಘಮ ಎಂದಕೂಡಲೇ ನೆನೆಪಗೋದು ದಕ್ಷಿಣಕನ್ನಡ ಸೀಮೆಯ ಮದುವೆಗಳು. ದರ್ಶನ, ದೈವದಮನೆ,ಬೇಸಿಗೆಯ ಧಗೆಯಲ್ಲೂ ಬೆವರ ಧಾರೆ ಹರಿಸುತ್ತಲೇ, ಜಗಮಗಿಸುವ ಸೀರೆ ಉಟ್ಟು, ಚಿನ್ನ ಧರಿಸಿದ ಭಗಿನಿಯರೂ, ಬಸ್ಸಿಗೆ ಕಾದು ಜನ ಜಂಗುಳಿಯಲ್ಲಿ ಅಡೆಗೋ ನಿಲ್ಲಲು ಒಂದು ಜಾಗ ಸಿಕ್ಕಾಗ ನೂರಾರು ಪರ್ಫ್ಯೂಮ್ ಗಳು ಬಸ್ಸಿನಲ್ಲಿ ಮಾತಿಗಿಳಿದಿವೆಯೇನೋ ಅನ್ನಿಸುವ ಮರುಗಳಿಗೆ ಮದುವೆ ಹಾಲ್ ತಲುಪಿ,
ಭೋಜನ ಮುಗಿಸಿ ಊಟದ ಬಗ್ಗೆ ಸಾರಿಗೆ ಉಪ್ಪು ಕಮ್ಮಿ ಪಾಯಶಕ್ಕೆ ಬೆಲ್ಲ ಜಾಸ್ತಿ ಅಂದು ಕಾಮೆಂಟ್ ಒಗೆದು ಬರುವ ಆಮಂತ್ರಿತರು.
ಚಿಕ್ಕವರಿದ್ದಾಗ ತಲೆತುಂಬ ಮಲ್ಲಿಗೆ ಮುಡಿಸಿಕೊಂಡು ಕನ್ನಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದು ನೆನಪಾಗುತ್ತದೆ. ಒಣಗಿ ಹೋದರೂ ಘಮ ಬಿಡದ ಆ ಮಲ್ಲಿಗೆಯ ಗುಣಗಾನ ಮಾಡಿದಷ್ಟೂ ಕಡಿಮೆ.


ಊದಬತ್ತಿ (ಅಗರಬತ್ತಿ)
ಕೆಲವು ಅಗರಬತ್ತಿಗಳು ಎಷ್ಟು ಮರೆತರು ಆ ಘಟನೆ ಯೊಂದಿಗೆ ನೆನೆಪಿನಲ್ಲೇ ಘಮಘಮಿಸುತ್ತವೆ. ಚವತಿ ಹಬ್ಬದಂದು ಪಪ್ಪ ಅದ್ಯಾವುದೋ ಸಿಟ್ಟಿನಲ್ಲಿ ನನಗೂ ತಂಗಿಗೂ ಹೊಡೆದದ್ದು.ಪರೀಕ್ಷೆ ಹೊತ್ತಿಗೆ ಹುಷಾರುತಪ್ಪಿ ಆಸ್ಪತ್ರೆಯ ಅತಿಥಿ ಆಗಿದ್ದು. ಆ ಸಮಯದಲ್ಲಿ ಮನೆಯಲ್ಲಿ ಹೆಚ್ಚುತ್ತಿದ್ದ ಆ ಊದಬತ್ತಿಯ ಘಮ ಈಗ ಆಘ್ರಾಣಿಸಿದರೂ, ನೆನಪಿಸಿಕೊಂಡರೂ ಮತ್ತೆ ವಾಕರಿಕೆ ಬರುವುದಂತೂ ನಿಜ.


ಕಾಫಿ ಘಮ
ಇವರೂಂದಿಗೆ ಹಸಿದ ಹೊಟ್ಟೆಯಲ್ಲಿ ಬೆಂಗಳೂರು, ಲಾಲಬಾಗ್ ಸುತ್ತಾಡಿ ಕೊನೆಯಲ್ಲಿ ನಾಚಿ ನಾಚಿ ಹಸಿದ ವಿಷಯ ಹೇಳಿ ಅಕ್ಕಿರೊಟ್ಟಿ ತಿಂದಿದ್ದು. ಎದೆತುಂಬಿ ಹಾಡುವೆನು,ಎಂದೂ ಮರೆಯದ ಹಾಡು,ಮನತುಂಬಿ ಹಾಡುವೆನು ಕಾರ್ಯಕ್ರಮಗಳ ಚಿತ್ರೀಕರಣ. ಅಲ್ಲಿ ಪುಟ್ಟ ಲೋಟದ ತುಂಬ ಕೊಡುತ್ತಿದ್ದ ಆ ಸಕ್ಕರೆಪಾಕದಂತಿದ್ದ ಕಾಫಿ ಘಮ.. ಕಾಫಿ ಎಂದರೇ ಬೆಂಗಳೂರು ಅನ್ನಿಸುವಂತೆ ಮಾಡಿದೆ. ಒಗ್ಗರಣೆ ಮಧ್ಯಾನ್ಹ ಹೊತ್ತು ಆಕಾಶವಾಣಿ ಬಿತ್ತರಿಸುವ ೮೦ ರ ದಶಕದ ಹಾಡುಗಳು.ಮತ್ತು ಕುಂದಾಪುರದ ಕೋಣಿಯಲ್ಲಿ ಅಜ್ಜಿ ಕೊದ್ದೆಲ್ ಮತ್ತು ಬಟಾಟೆ ಪದಾರ್ಥಕ್ಕೆ ಹಾಕುತ್ತಿದ್ದ ಬೆಳ್ಳುಳ್ಳಿ ಒಗ್ಗರಣೆ ಘಮ.ಈಗಲೂ ಆ ಹಾಡುಗಳನ್ನು ಕೇಳಿದಾಗ ಆ ಹಿತವಾದ ಘಮ ಅಜ್ಜಿ ಮನೆ ನನ್ನ ಮುದ್ದಿಸಿ ಅಟ್ಟಕ್ಕೇರಿಸಿ ಇಟ್ಟಿರುವ ಅಜ್ಜಿ ನೆನಪಾಗಿ ಬಿಡುತ್ತಾರೆ.

ದುಂಡುಮಲ್ಲಿಗೆ
ಅದು ಯಾವಕಾಲದಲ್ಲೂ ನನಗೆ ನೆನಪಾಗಿ ಕಾಡುವುದು. ಹಳೆಮನೆಯ ಹಿತ್ತಲಲ್ಲಿ ಹಬ್ಬಿದ್ದ ಹಂದರದಲ್ಲಿ ಬಿಳಿ ಚಿಕ್ಕೆಗಳಂತೆ ತಾಮುಂದು ನಾ ಮುಂದು ಎಂದು ಅರಳುತ್ತಿದ್ದವು ಅವು. ಬೇಸಿಗೆಯ ಬಿಸಿಗಾಳಿ ಅದರೊಂದಿಗೆ ದುಂಡುಮಲ್ಲಿಗೆಯ ಘಮ. ತುಳಸಿ ಕಟ್ಟೆಯಮೇಲೆ ಕುಳಿತು ಬೆಳದಿಂಗಳ ಬೆಳಕಲ್ಲಿ ನನ್ನ ಉದ್ದ ಕೂದಲ ನೆರಳು ನೋಡಿ ಖುಷಿ ಪಡುವ ಕ್ಷಣ. ಅಂಗಳದಲ್ಲಿ ಕೂತು ಬೆಳದಿಂಗಳೂಟ ಮಾಡುವ ಆ ಉಮೇದಿಯ ದಿನಗಳು. ಈಗ ಹಳೆ ಮನೆಯೂ ಇಲ್ಲ ಮಲ್ಲಿಗೆ ಹಂದರವೂ ಇಲ್ಲ. ಘಮ ಮಾತ್ರ ಹಾಗೆ ಉಳಿದು ಹೋಗಿದೆ.

ಅತ್ತರು
ಆಕೆಯ ಹೆಸರು ಡಯಾನಾ ಉತ್ತರಕನ್ನಡದ ಕೊಂಕಣಿಗರ ಸಂಸ್ಕೃತಿಯ ಬಗ್ಗೆ PhD ಅಧ್ಯಯನ ಮಾಡುತ್ತಿದ್ದಳು.ನಮ್ಮ
ಮನೆಗೆ ಸುಮಾರು ದಿನ ವಿಷಯ ಸಂಗ್ರಹಣೆ ಕ್ಷೇತ್ರಕಾರ್ಯ ಸಂದರ್ಶನಮಾಡಲು ಬಂದಿದ್ದಳು. ನಾನಿನ್ನೂ ಆಗ ೩ನೇ ತರಗತಿಯಲ್ಲಿದ್ದೆ. ಕಣ್ಣುಮುಚ್ಚಿಯೂ ಮನೆ ಬಾಗಿಲಿಗೆ ಬಂದವರು ಅವರೇ ಎಂದು ನಾನು ಹೇಳುತ್ತಿದ್ದೆ, ಕಣ್ಣಿಗಿಂತ ನನ್ನ ಮೂಗು ಆಕೆಯನ್ನು, ಆಕೆ ಹಾಕಿಕೊಳ್ಳುತ್ತಿದ್ದ
ಒಂದು ಸುಗಂಧದ್ರವ್ಯದಿಂದ ಇಂದಿಗೂ ನೆನಪಿಟ್ಟುಕೊಂಡಿದೆ.

ಮಗುವಿನ ಘಮ
ನನ್ನ ಬದುಕಲ್ಲಿ ಮೊದಲು ನೋಡಿದ ಮಗು ಅದು. ನನ್ನ ಸುಲೋಚನ ಅತ್ತೆಯ ಮೊದಲ ಮಗು. ಅದರ ಮುದ್ದು ಕೈಗಳು ಕೆಂಪುಗಟ್ಟಿದ ಕಾಲು,ಮಗು ಎಂದರೆ ಜೀವವಿರುವ ಗೊಂಬೆ ಅನಿಸಿತ್ತು. ಎಲ್ಲಕ್ಕಿಂತ ಹೆಚ್ಹಾಗಿ ಅದರ ಹತ್ತಿರ ಬರುತ್ತಿದ್ದ ಬೇಬಿ ಪೌಡರ್ ಘಮ,ಮೈಗೆ ಹಚ್ಹುವ ಕೆಂಪು ಬೇರಿನ ಎಣ್ಣೆಸ್ನಾನ ಮಾಡಿ ಬಂದ ನಂತರ ಹಾಕುವ ಲೋಭಾನ ಗಂಧದ ಸಾಣೆಯಲ್ಲಿ ತೇಯುವ ಬಜೆ ಬೇರಿನ ಪರಿಮಳ ಎಳೆಮಗು ನನಗೆ ನೆನಪಾಗೋದೆ ಆ ಘಮ.

ಮಾವಿನಕಾಯಿ,
ನೆನಪು ಬಂತೆಂದರೆ ಸಾಲಾಗಿ ನೆನಪಾಗೋದು ವಾರ್ಷಿಕ ಪರೀಕ್ಷೆಗಳು,ಯುಗಾದಿ,ಆಲೀಕಲ್ಲ ಮಳೆ, ಗೆಳೆಯರೊಂದಿಗೆ ನೀರು
ಇಂಗುತ್ತಿರುವ ಹೊಂಡ ಕೆರೆಗಳಿಗೆ ಮೀನು ಹಿಡಿಯಲು ಹೋಗುವುದು ಕಪ್ಪೆಮರಿಗಳನ್ನ ತಂದು ಮನೆಯ ನೀರಿನ ತನಕ ನಲ್ಲಿ ಹಾಕುವುದು. ಮಾವಿನ ಸೊನೆ ಪುಟ್ಟ ಬಾಟಲಿಯಲ್ಲಿ ಸಂಗ್ರಹಿಸಿಟ್ಟು ಆಗೀಗ ಅದನ್ನು ತಂಬಳಿ ಮಾಡಲು ಬಳಸುವುದು ಜೊತೆಗೆ
ಆ ಸೀಜನ್ನಲ್ಲಿ ಪ್ರತಿದಿನ ಕಡ್ಡಾಯ ಎಂಬಂತೆ ಮಾಡುವ ಮಾವಿನಕಾಯಿ ಅಡುಗೆಗಳು.

ನನಗೆ ಈ ಕಾರಣಕ್ಕೆ ಹ್ಯಾರಿ ಪೊಟರ್ ಮತ್ತು Hogwarts School of Witchcraft and Wizardry ನಿಜವಾಗಿಯೂ ಇರಬಾರದಿತ್ತೆ? ಎಂದು ತೀವ್ರವಾಗಿ ಅನಿಸುವುದುಂಟು. ನನಗೆ ಹೆಚ್ಚೇನು ಬೇಡಿತ್ತು ಬೇಕೇನಿಸಿದಾಗೆಲ್ಲ ಈ ನನಪುಗಳನ್ನ, ಘಮಗಳನ್ನ ಫೋಟೋ ಆಲ್ಬಂ ನಂತೆ ಮತ್ತೆ ಮತ್ತೆ ಮುಟ್ಟಿ ತಟ್ಟಿ ನೋಡಿ ಮತ್ತೆ ಮತ್ತೆ ಆಘ್ರಾಣಿಸುವಂತೆ ಮಾಡುವ ಒಂದೆರಡು spells ಕಲಿಸಿಬಿಟ್ಟರೆ ಸಾಕಿತ್ತು.
ಈ ಘಮಗಳ ಕಥೆ ಮುಗಿಯುವಂಥದ್ದಲ್ಲ ಹೇಳಿದರೆ ಹೇಳುತ್ತಲೇ ಹೋಗಬಹುದು, ಮನೆಗೊಂದು ಘಮ. ಒಲಿದ ಮನಸಿಗೊಂದು ,ಮುನಿದ ಮನಸಿಗೆ ಮತ್ತೊಂದು ಘಮ. ಓಲೈಕೆಗೆ ಇನ್ನೊಂದು ಘಮ ಹೀಗೆ ಬದುಕೆಲ್ಲ ಘಮದ ಸೆರಗಲ್ಲಿನೆನಪಿನ ಘಮದಲ್ಲಿ.

- ಅಮಿತಾ ರವಿಕಿರಣ್

2 thoughts on “ಲಹರಿ- ಕಾಡುವ ಘಮಗಳ ಗುಂಗಿನಲ್ಲಿ,

  1. ಘಮಗಳ ಬಗ್ಗೆ ನಿರರ್ಗಳ ನೆನಪುಗಳನ್ನು ಹರಿಬಿಟ್ಟಿದ್ದಾರೆ, ಅಮಿತಾ ಈ ಸಲ. ಎಲ್ಲರಿಗೂ ಆಘ್ರಾಣ ವೈವಿಧ್ಯಮಯ ನೆನಪುಗಳನ್ನು ತರುವದು ಸಾಮಾನ್ಯವಾದರೂ ಎಲ್ಲರೂ ಇಂಥ ಚಂದದ ಅನುಭವಗಳಿಗೆ ಭಾಗಿಯಾಗಿರಲಾರರು. (ನಾನು ಮೂಗಿಗೆ ಕರ್ಚೀಫಿನವ!). ಅದಕ್ಕೆ ನಮ್ಮ ಮೆದುಳಿನ ಭಾಗಗಳು – ಘ್ರಾಣೇಂದ್ರಯಕ್ಕೆ ಸಂಬಂಧ ಪಟ್ಟವು, ನೆನಪು ಮತ್ತು ಭಾವನೆ ಇಮೋಷನ್ ಗೆ ಹತ್ತಿರದ ಸಂಬಂಧದ ಹಿಪ್ಪೋಕ್ಯಾಂಪಸ್ – ಅಮಿಗ್ಡಿಲಾಯ್ಡ ಕಾಂಪ್ಲೆಕ್ಸ್ ಹೊಂದಿಕೊಂಡಿರುವದೇ ಕಾರಣ ಅಂತ ವಿಜ್ಞಾನಿಗಳ ಮತ. ⬇️ https://news.harvard.edu/gazette/story/2020/02/how-scent-emotion-and-memory-are-intertwined-and-exploited/

    Like

  2. ಅದ್ಭುತವಾಗಿ ಪೀಠಿಕೆ ಹಾಕಿ, ನಾಸಿಕ ನಾಡಿಗೆ ನೆನಪಿನ ದೋಣಿಯಲ್ಲಿ ಹಾಯಿಸಿದ್ದೀರಿ. ವಿವಿಧ ಬಗೆಯ ವಾಸನೆ, ಪರಿಮಳಗಳ ದಾವತ್ ನಮ್ಮ ಮುಂದೆ ಅವತರಿಸಿದೆ. ನಿಮ್ಮ ಬರಹದಲ್ಲಿ ಆತ್ಮೀಯತೆ ಇದೆ.

    ಈ ದೇಶದಲ್ಲಿ ಮಳೆ ಬಂದಾಗ ಮಣ್ಣಿನ ವಾಸನೆ ಅತಿ ಅಪರೂಪ, ನೆಲ ಹದವಾಗಿ ಕಾಯುವುದೇ ಇಲ್ಲ, ಇಲ್ಲಿಯವರು ಅನ್ನ ಬೇಯಿಸಿದ ಹಾಗೇ. ಮಡಿಕೇರಿಯಲ್ಲಿ ಕೆಲವೊಮ್ಮೆ ಮುದಕೊಡದ ವಾಸನೆ ಆಘ್ರಾಣಿಸಿದ ಅನುಭವವಿದೆ.

    ನಿಮ್ಮ ಪ್ರಿಯ ಸುಗಂಧರಾಜದ ವಿವರ ಬಂದೀತೆಂದು ಕಾಯುತ್ತಿದ್ದೆ. ನಿಮ್ಮ ಹಿಂದಿನ ಲೇಖನವನ್ನೇ ನೆನಪಿನಲ್ಲಿ ನಂಜಿದೆ. ಕಾಫಿಯ ಪರಿಮಳ ಕಾಫಿ ನಾಡಿನಲ್ಲಿ ಕಾಫಿ ಮಿಲ್ಲುಗಳ ಗಲ್ಲಿಯಲ್ಲಿ ಅಪ್ರತಿಮ. ನೀವು ಮಡಿಕೇರಿಗೆ ಹೋದಾಗ ಒಮ್ಮೆ ಸಂದರ್ಶಿಸಿ.

    – ರಾಂ

    Liked by 1 person

Leave a comment

This site uses Akismet to reduce spam. Learn how your comment data is processed.