ಮಾರ್ಬಲ್ ಆರ್ಚ್ ಕೇವ್ಸ್

ಅಮಿತಾ ರವಿಕಿರಣ್ 

 ಮನುಷ್ಯನ ತಣಿಯದ ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ, ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ. ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ.  ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡೂ ಜೊತೆಗೆ ನಿಂತು ಮಾತನಾಡುವುದು ಅಪರೂಪಕ್ಕೆ ಕಾಣಸಿಗುವ ದೃಶ್ಯ. ಅಂಥದ್ದೊಂದ್ದು ನಿಸರ್ಗದ ವಿಸ್ಮಯ ಮತ್ತು ಮಾನವನು ಅತಿ ಜತನದಿಂದ ಅದರ ಮೂಲರೂಪಕ್ಕೆ ಧಕ್ಕೆ ಬಾರದಂತೆ ಕಾದುಕೊಂಡಿರುವ ಅಪರೂಪದ ಸ್ಥಳವೇ  ನಾರ್ದರ್ನ್ ಐರ್ಲ್ಯಾಂಡಿನಲ್ಲಿರುವ 'ಮಾರ್ಬಲ್ ಆರ್ಚ್ ಕೇವ್ಸ್'.  

 ಭೂಮಿಯ ಮೇಲ್ಪದರಿನಲ್ಲಿ ರೂಪುಕೊಳ್ಳುವ ಅನೇಕ ರೀತಿಯ ಗುಹೆಗಳನ್ನು ತಜ್ಞರು ಗುರುತಿಸುತ್ತಾರೆ ಮತ್ತು ಅವುಗಳು ರೂಪುಗೊಂಡಿರುವ ರೀತಿ, ವಿನ್ಯಾಸ, ಲಕ್ಷಣಗಳನ್ನ ಗಮನಿಸಿ ಈ ಗುಹೆಗಳನ್ನು ಈ ೫ ಪ್ರಕಾರವಾಗಿ  ವಿಂಗಡಿಸುತ್ತಾರೆ ಅವುಗಳಲ್ಲಿ ಕೆಲವು ಇಲ್ಲಿವೆ .
೧. ಸೊಲ್ಯುಶನ್ ಕೇವ್ಸ್(Solution caves)
ಸುಣ್ಣದ ಕಲ್ಲು ಮತ್ತು ನೀರಿನ ನಿರಂತರ ಸಹಚರ್ಯ ರೂಪಿಸುವ ಗುಹೆಗಳು. 

೨.ವೋಲ್ಕಾ ಕೇವ್ಸ್( volcanic caves) 
ಭೂಮಿಯೊಳಗಿಂದ ಉಕ್ಕುವ ಲಾವಾ , ಜ್ವಾಲಾಮುಖಿಗಳು ತಣಿದು ಹೋದಮೇಲೆ ಉಂಟಾದ ಗುಹೆಗಳು. ಹವಾಯಿಯನ್ ದ್ವೀಪದಲ್ಲಿ ಇರುವ Kazumara caves ಸುಮಾರು ೪೬ಮೈಲು ಗಳಷ್ಟು ಉದ್ದದ ಗುಹೆ ಆಗಿದ್ದು  ಜಗತ್ತಿನಲ್ಲಿ ಅತ್ಯಂತ ದೊಡ್ಡ ಜ್ವಾಲಾಮುಖಿ ಗುಹೆ ಎಂದು ಹೆಸರಾಗಿದೆ.   

೩.ತಲಸ್ ಕೇವ್ಸ್ (Talus caves)
ಎತ್ತರ ಪರ್ವತ ಪ್ರದೇಶದಿಂದ ನೈಸರ್ಗಿಕ ವೈಪರಿತ್ಯ ಗಳಿಂದ  ಕಲ್ಲುಗಳು ಉರುಳಿ ಪರ್ವತದ ಕೆಳಭಾಗದಲ್ಲಿ ಉಂಟುಮಾಡುವ ಗುಹೆಗಳು.

೪.ಸೀ ಕೇವ್ಸ್ (Sea caves) 
ಸಮುದ್ರದ ನೀರು ಮತ್ತು ದಡ ದಲ್ಲಿರುವ ಕಲ್ಲುಬಂಡೆಗಳ ಘರ್ಷಣೆ ಮತ್ತು ಮರಳು ತೆರೆಯೊಂದಿಗೆ ಸ್ಥಳಾಂತರ ಗೊಳ್ಳುವಾಗ ಉಂಟಾಗುವ ಗುಹೆಗಳು. ಇಂಥಹ ಹಲವು ಗುಹೆಗಳನ್ನು ನಾವು ಯುಕೆ, ಫ್ರಾನ್ಸ, ಅಮೇರಿಕ ಮತ್ತು  ಹವಾಯಿಯನ್ ದ್ವೀಪಗಳಲ್ಲಿ ನೋಡಬಹುದು. 

೫ ಗ್ಲೇಸಿಯರ್  ಕೇವ್ಸ್ (Glacier caves)
ಗ್ಲೇಸಿಯರ್ ಹಿಮಬಂಡೆ ಗಳಿಂದ ಉಂಟಾಗುವ ಗುಹೆ , ಕಾಣಲು ಮಂಜಿನ ಮಹಲಿನಂತೆ ಕಂಡರೂ ವಾಸ್ತವದಲ್ಲಿ ಇದು ಸಶಕ್ತ ಗುಹೆಯಾಗಿರುತ್ತದೆ . ಇಂಥ ಗ್ಲೇಸಿಯರ್ ಹಿಮದ ನಡುವೆಯೇ ೪೦೦ ವರ್ಷಗಳ ಕಾಲ ನಮ್ಮ ಕೇದಾರನಾಥ್ ದೇವಸ್ತಾನ ಧ್ಯಾನ ಮಾಡುತಿತ್ತು  ಎಂಬುದು ತಜ್ಞರ ಅಂಬೋಣ. ಗ್ಲೇಸಿಯರ್ ಗುಹೆಗಳಿಂದಾಗಿ  ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಇನ್ನೊಂದು ದೇಶ Iceland 

ಮಾರ್ಬಲ್ ಆರ್ಚ್ ಕೇವ್ಸ್
ಉತ್ತರ ಐರ್ಲೆಂಡಿನ ಫರ್ಮಾನಾ ಕೌಂಟಿ ವ್ಯಾಪ್ತಿಯಲ್ಲಿ ಬರುವ ಮಾರ್ಬಲ್ ಆರ್ಚ್ ಕೇವ ಸಂಶೋಧಿಸಿದ್ದು ಫ್ರಾನ್ಸ್ ನ ಸ್ಪೆಲಿಯೋಲೋಜಿಸ್ಟ್ (speleology-study of caves and other karts) ಎಡ್ವರ್ಡ್ ಅಲ್ಫ್ರೆಡ್ ಮಾರ್ಟೆಲ್, ೧೮೯೫ರಲ್ಲಿ ಈತ ಮತ್ತು ಡಬ್ಲಿನ್ ವಾಸಿ ನಿಸರ್ಗ ತಜ್ಞ ಜೆಮೀ ಒಂದು ಕ್ಯಾನ್ವಾಸ್ ಬೋಟಿನಲ್ಲಿ ಆರಂಭ ದ್ವಾರದಿಂದ ಸುಮಾರು ೩೦೦ ಮೀಟರ್ ದೂರದ ಗುಹೆಯ ಮಾರ್ಗ ಕ್ರಮಿಸಿ ನಕ್ಷೆ ಮಾಡಿ ಇಟ್ಟರು. ನಂತರ ಕ್ರಮವಾಗಿ ಹಲವು ಆಸಕ್ತರು ಸೇರಿ ಸುಮಾರು ೪. ೫ ಕಿಲೋಮೀಟರ್ ಗಳಷ್ಟು ಉದ್ದದ ಈ ಗುಹೆಯನ್ನು ಎಲ್ಲರ ಗಮನಕ್ಕೆ ತಂದರು.  

ಮಾರ್ಬಲ್ ಆರ್ಚ್ ಕೇವ ಸುಣ್ಣದ ಕಲ್ಲುಗಳಿಂದ ಉಂಟಾದ ಗುಹೆ . ಈ ಗುಹೆಯ ಒಳಗೆ ಕ್ಲಾಡಾ ಮತ್ತು  ಒವೆನಬ್ರೀನ್  ಹೆಸರಿನ ನದಿಗಳ ಸಂಗಮವಾಗುತ್ತದೆ, ಮತ್ತು ಇಲ್ಲಿ ಉಂಟಾಗಿರುವ ಭೌಗೊಲಿಕ  ಬದಲಾವಣೆಗಳು ,ಕಲ್ಲು ಗಳ ಮೇಲಿನ ವಿನ್ಯಾಸಗಳು ಮಿಲಿಯನ  ವರ್ಷಗಳ ಕಾಲ ನದಿಗಳ ಏರಿಳಿತ ಮತ್ತು ಹರಿಯುವಿಕೆಯ ಪರಿಣಾಮಗಳೇ ಆಗಿವೆ. 

೨೦೦೮ರಲ್ಲಿ ಯುನೆಸ್ಕೋ  ಈ ಪ್ರದೇಶವನ್ನು 'ಗ್ಲೋಬಲ್ ಜಿಯೋ ಪಾರ್ಕ್' ಎಂದು ಘೋಷಿಸಿತು. ೧೯ನೇ  ಶತಮಾನದಿಂದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ ಈ ಸ್ಥಳ ೨೦೦೮ ರ ನಂತರ ಯೂರೋಪಿನ ಮುಖ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಬಂದಿತು.
ಐರ್ಲ್ಯಾಂಡ್ ಗೆ ಭೇಟಿ ಕೊಟ್ಟವರು ಇದನ್ನು ನೋಡದೆ ಮರಳಿದರೆ ಅವರ ಪ್ರವಾಸ ಅಪೂರ್ಣ ಎಂದೇ ಅರ್ಥ. 

ಸಾಂಪ್ರದಾಯಿಕ  ದ್ವಾರ ಹೊಕ್ಕಿದ ನಂತರ ೧೫೦ ಮೆಟ್ಟಿಲು ಮತ್ತು ಒಂದೂವರೆ ತಾಸಿನ ನಿರಂತರ ನಡಿಗೆ ,  ಗುಹೆಯೊಳಗೆ ಹರಿಯುವ ನದಿಯಲ್ಲಿ ೫ ನಿಮಿಷದ ದೋಣಿಯಾನ, ದೋಣಿಯಲ್ಲಿ ಕುಳಿತಾಗ ಕಲ್ಲಿನ ಕಮಾನುಗಳಿಂದ ಒಸರುವ ನೀರ ಒರತೆ , ಕಡಿದಾದ ಭಾಗದಲ್ಲಿ ನಡೆಯುತ್ತಿರುವಾಗ ಪಟ್ಟನೆ ಎದುರಾಗುವ ಬಂಡೆಗಳು. ಅದೇನೇನೋ ವಿನ್ಯಾಸಗಳು ಅಲ್ಲೇಲ್ಲೊ ಹಿಮ ತುಂಬಿ ಕೊಂಡಂತೆ , ಮತ್ತೊಂದೆಡೆ ಹೂಕೋಸು ಅರಳಿದಂತೆ, ಒಮ್ಮೆ ಆಕಳ ಕೆಚ್ಚಲು, ಮತ್ತೊಮ್ಮೆ ಪುಟ್ಟ ಕುಟೀರ, ಅದೋ ಆ ಕಲ್ಲು ಆಕಳ ಕಿವಿಯಂತಿದೆ ಅಂದು ಕೊಂಡು ಈಚೆ ತಿರುಗಿದರೆ ಭಯಂಕರ ರಾಕ್ಷಸ ಬಾಯಿ ತೆರೆದು ನಿಂತಂತೆ!  ಅದು ಭೂಮಿಯ ಒಳ ಪದರ ಅಮ್ಮನ ಮಡಿಲಿನಂತೆ ತಂಪು ತಂಪು. ನೆಲ ಕಾಣುವ ನೀರು ಹಿತ ನೀಡಿದರೆ ಕೆಲವೊಂದೆಡೆ  ಕಪ್ಪಗಿನ ಕಂದಕ ಭಯ ಹುಟ್ಟಿಸುತ್ತವೆ ಸಧ್ಯಕ್ಕೆ ಈ ಗುಹೆಯ ೧ ಭಾಗ ಮಾತ್ರ ಪ್ರವಾಸಿಗರು ನೋಡಬಹುದು ಉಳಿದ ೩ ಭಾಗದಲ್ಲಿ ನೀರು ತುಂಬಿಕೊಂಡಿದೆ. ಚಳಿಗಾಲದಲ್ಲಿ ಈ ಸ್ಥಳ ಪೂರ್ತಿಯಾಗಿ ಮುಚ್ಚಿರುತ್ತದೆ, ಜೊತೆಗೆ ತಾಪಮಾನ ಮತ್ತು ಏರಿಳಿತದ ದಾರಿಯ ಕಾರಣದಿಂದ ಉಸಿರಾಟದ ತೊಂದರೆ ಇರುವವರಿಗೆ ಈ ಗುಹೆಯಾ ಓಡಾಟ ಅಷ್ಟು ಸೂಕ್ತವಲ್ಲ ಎನ್ನುವುದು ಟಿಕೆಟ್ ಕೌಂಟರಿನಲ್ಲಿ ಕೊಟ್ಟ ಸೂಚನೆಯಾಗಿತ್ತು. ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗಲಿ, ಪ್ರಾಮ್ ಮೇಲೆ ಆಗಲಿ ಈ ಗುಹೆಯಲ್ಲಿ ಓಡಾಡುವುದು ಕಷ್ಟ. 

ಮೊದಲ ಸಲ ನಾವು ಸ್ನೇಹಿತರೊಂದಿಗೆ ಇಲ್ಲಿಗೆ ಹೋದಾಗ, ನಗುವೆಂದರೇನು ಎಂಬುದರ ಪರಿಚಯವೇ ಇಲ್ಲದ ನಮ್ಮ ಗೈಡ್ ನಮ್ಮ ಟ್ರಿಪ್ಪಿನ ಮತ್ತೊಂದು ಆಕರ್ಷಣೆ ಆಗಿದ್ದ. ಭತ್ತ ಹಾಕಿದರೆ ಅರಳಾಗಿ ಬರುವಷ್ಟು ಸಿಡುಕನಾಗಿದ್ದ.  ಪ್ರಯಾಣದಲ್ಲಿ ಮೆಟ್ಟಿಲುಗಳನ್ನು ಕಂಡ ಕೂಡಲೇ ನನಗೆ ಆಗುತ್ತಿದ್ದ ತಳಮಳ !! ಒಂದೂವರೆ ತಾಸಿನ ಈ ಪಯಣದ ನಂತರ ಹಸಿವಿನಿಂದ ಹೈರಾಣಾಗಿ ಬಂದಾಗ ಮನೆಯಿಂದಲೇ ಮಾಡಿ ತಂದ ಬಿಸಿಬೇಳೆ ಭಾತ್ ಮತ್ತು ಸ್ಯಾಂಡ್ವಿಚ್ ನಮ್ಮ ಪಾಲಿಗೆ ಎಂದಿಗಿಂತ ರುಚಿಯಾಗಿದ್ದವು. ಟಿಕೆಟ್ ಕೌಂಟರ್ ಮತ್ತು ಸ್ವಾಗತ ಕಚೇರಿಯ ಜೊತೆಗೆ ಇಲ್ಲೊಂದು ಕೆಫೆಯೂ ಇದೆ. ಅವರು ಮಾಡಿಕೊಡುವ   
ವೆನಿಲ್ಲಾ ಐಸ್ಕ್ರೀಂ ಮತ್ತು ಬಿಸಿ ಬಿಸಿ ಬ್ರೌನಿ ಸವಿಯದಿದ್ದರೆ  ನಮ್ಮ ಪ್ರವಾಸದಲ್ಲಿ ಏನೋ ತಪ್ಪಿ ಹೋದಂತೆ ಅನಿಸುತ್ತದೆ. ಇವನ್ನು ಹೇಳಲೇಬೇಕು ಎನಿಸಿತು ಏಕೆಂದರೆ ಇದೆಲ್ಲ ಆಗಿದ್ದು ನಮ್ಮ ಈ ಗುಹೆಗಳಿಗೆ ಮೊದಲಬಾರಿ ಭೇಟಿ ಕೊಟ್ಟಾಗ. ಆ ನಂತರ ಅದೆಷ್ಟು ಸಲ ಹೋಗಿ ಬಂದಿದ್ದರೂ ಮತ್ತೆ ಮತ್ತೆ ಹೋಗಿ ಬರಬೇಕು ಎನ್ನುವಂತಹ ಜಾಗ ಇದು. 

ಮಾರ್ಬಲ್ ಆರ್ಚ್ ಕೇವ್ಸ್ ಬೆಲ್ಫಾಸ್ಟ್ ನಗರದಿಂದ ೯೧ಮೈಲಿ ದೂರದಲ್ಲಿದೆ. ಹತ್ತಿರದ Enniskillen, Florence court, ಮತ್ತು ಹಲವು ದ್ವೀಪಗಳನ್ನೂ, ಫರ್ಮಾನಾ ಊರಿನ ಹತ್ತಿರ ಇರುವ ಚಂದದ ಜಲಪಾತಗಳನ್ನೂ ನೋಡಬಹುದು. ಇಲ್ಲಿ ಅಕ್ಕ ಪಕ್ಕದ ಹಳ್ಳಿಗಳಲ್ಲಿ  ಒಳ್ಳೆಯ cottage ವಸತಿ ಸೌಲಭ್ಯ ಲಭ್ಯವಿದೆ. ನೀವು ಮೊದಲೇ ಈ ಗುಹೆಯ ಸ್ವಾಗತ ಕಚೇರಿಗೆ ಕರೆ ಮಾಡಿ opening hours ಬಗ್ಗೆ ಪಕ್ಕ ಮಾಹಿತಿ ಪಡೆದು ಹೋಗುವುದು ಒಳ್ಳೆಯದು. ಜೋರಾಗಿ ಮಳೆ ಗಾಳಿ ಇದ್ದ ಹೊತ್ತಲ್ಲಿ ಇದನ್ನು ಯಾವುದೇ ಮೂನ್ಸೂಚನೆ ಇಲ್ಲದೆಯೂ ಮುಚ್ಚಲಾಗುತ್ತದೆ. ಈ ನಿರಾಸೆ ನಮಗೂ ಒಮ್ಮೆ ಆಗಿದ್ದಕ್ಕೆ ಮೊದಲೇ ಪೂರ್ಣ ಮಾಹಿತಿ ತೆಗೆದುಕೊಂಡು ಹೋಗುವುದು ಒಳಿತು.   

ಅಲ್ಲಿ ನಾನು ಫೋಟೋ ಕ್ಲಿಕ್ಕಿಸಲು ಪರದಾಡಿದ್ದು ಮತ್ತೊಂದು ಕತೆ , ನನ್ನ ಕಣ್ಣಿಗೆ ಕಂಡಷ್ಟು ನನ್ನ ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ. ಅದಕ್ಕೆ ಅಂತರ್ಜಾಲದಲ್ಲಿ ಸಿಕ್ಕ ಚಿತ್ರಗಳನ್ನೇ ಇಲ್ಲಿ ಹಾಕುತ್ತಿದ್ದೇನೆ. 
ನೀವು ಬೆಲ್ಫಾಸ್ಟ್ ಅಥವಾ ಐರ್ಲೆಂಡ್ ಗೆ ಭೇಟಿ ಕೊಟ್ಟರೆ ಮಾರ್ಬಲ್ ಆರ್ಚ್ ಕೇವ್ಸ್ ಗೆ ಮರೆಯದೆ ಭೇಟಿ ಕೊಡಿ. 
Photo credits: The Fermanagh Herald and Wikipedia 

5 thoughts on “ಮಾರ್ಬಲ್ ಆರ್ಚ್ ಕೇವ್ಸ್

  1. ಅಮಿತಾ ಅವರ ಲೇಖನ ಬೆಲ್ಫಾಸ್ಟ್ ಸಂದರ್ಶನಕ್ಕೆ ಒತ್ತಾಯ ಮಾಡುವ ಲೇಖನ. ಸ್ಪಿಲಿಯಾಲಜಿ ಯ ಪರಿಚಯದಿಂದ ಪ್ರಾರಂಭ ಮಾಡಿ ತಮ್ಮ ವೈಯಕ್ತಿಕ ಅನುಭವವನ್ನು ಬೆರೆಸಿ ಭೂಗರ್ಭದಲ್ಲಡಗಿದ ನಿಸರ್ಗ ವೈಭವವನ್ನು ವರ್ಣಿಸಿ ಅಲ್ಲಿಗೆ ಭೆಟ್ಟಿಕೊಡುವ ಕನಸನ್ನು ಹುಟ್ಟಿಸಿದ್ದಾರೆ. ಇಂಗ್ಲೆಂಡಿನ ನೈಋತ್ಯ ಭಾಗದಲ್ಲಿಯ ಚೆಡ್ಡರ್ ಷೋ ಕೇವ್ಸ್ ಗೆ ಎರಡು ಮೂರು ಸಲ ಹೋಗಿ ಆ ಮಾಯಾನಗರಿಯನ್ನು ನೋಡಿದ ಅನುಭವ ಮರುಕಳಿಸಿತು. ಒಳಗೆ ನೀರಿನ ಹನಿ ತೊಟಕುತ್ತಿದ್ದಂತೆ ಕಡಿದಾದ ಪಥದಲ್ಲಿ ಹೋಗಿ ಕಣ್ಣು ತುಂಬಿಸಿಕೊಳ್ಳುವ ದೃಶ್ಯಗಳನ್ನು ಕಂಡರೆ ಅದು ಅಪರೂಪದ ಅನುಭವ. ನಿಮ್ಮ ಲೇಖನದಿಂದ ಮಾರ್ಬಲ್ ಆರ್ಚ್ ಕೇವ್ಸ್ ಈಗ ನನ್ನ ಬೆಳೆಯುತ್ತಿರುವ ಬಕೆಟ್ ಲಿಸ್ಟ್ ಗೆ ಸೇರಿತು! ಕಣ್ಣಿಗೆ ಸಿಕ್ಕಿದ್ದು ಕ್ಯಾಮರಾಗೆ ಸಿಗದ ನಿರಾಶೆಯ ಅನುಭವವನ್ನು ನಾನೂ ಬಲ್ಲೆ. ಅಂತೂ ಇಂಟರ್ನೆಟ್ ಚಿತ್ರಗಳನ್ನು ಕೊಟ್ಟು ಉಪಕಾರ ಮಾಡಿದಿರಿ. ಮುಂದಿನ ಪ್ರವಾಸ ಎಲ್ಲಿಗೆ?

    Like

  2. ನೀವು ಕೊಟ್ಟ ವಿವರಗಳಿಂದ ನೋಡುವ ಆಸೆ ಉಕ್ಕುತಿದೆ. ನಿಮ್ಮ ಊರಿನೆಡೆ ಬಂದಾಗ ಸಂದರ್ಶಿಸಲೇ ಬೇಕಾದ ಸ್ಥಳವೆಂದು ಬರೆದಿಟ್ಟುಕೊಳ್ಳುವೆ.
    – ರಾಂ

    Liked by 1 person

Leave a comment

This site uses Akismet to reduce spam. Learn how your comment data is processed.