ಅದೆಷ್ಟು ಹೆಸರುಗಳು!

ವಿಜಯನರಸಿಂಹ ಅನಿವಾಸಿಗೆ ಹೊಸಬರಲ್ಲ. ವ್ಯಾಸಂಗದಲ್ಲಿ ವ್ಯಸ್ತರಾಗಿರುವುದರಿಂದ ಅಪರೂಪವಾಗಿದ್ದಾರೆ. ನಾನು ಹೆಚ್ಚಾಗಿ ಅವರ ಪ್ರೇಮ ಕವನಗಳನ್ನೇ ಓದಿದ್ದೇನೆ. ಅವರ ಕವನಗಳಲ್ಲಿ ಭಾವ ನವಿರಾಗಿ ಹರಿಯುತ್ತದೆ. ಅವರ ಭಾವುಕತೆಗೆ ಈ ಕವನಗಳು ಸಾಕ್ಷಿ. ಈ ವಾರದ ಕವನವೂ ಇದಕ್ಕೆ ಹೊರತಲ್ಲ. ಬೇಂದ್ರೆಯವರ ‘ನಾನು ಬಡವಿ ಆತ ಬಡವ’ ದ ಛಾಯೆ ಇಲ್ಲಿದೆ. ಈ ಸಾನೆಟ್ ನಲ್ಲಿ ವಿಜಯ್ ಅವರು ಗಂಡು ಹೆಣ್ಣಿನ ಸಂಬಂಧಕಿರುವ ನಾಮಧೇಯಗಳನ್ನು ಅನ್ವೇಷಿಸುತ್ತ, ಆ ಸಂಬಂಧದ ಸಾರವನ್ನು ಭಟ್ಟಿ ಇಳಿಸಿದ್ದಾರೆ.

–ಸಂ

ನನ್ನ ನಿನ್ನ ಸಂಬಂಧಕೆ ಅದೆಷ್ಟು ಹೆಸರುಗಳು!

ಮೊದಲ ಸಲ ನಿನ್ನ ನೋಡಲು ಬಂದಾಗ ನಾವು ‘ಅಪರಿಚಿತರು’

ಮೊದಲ ಸಲ ನಿನ್ನ ಮಾತನಾಡಿಸಿದಾಗ ‘ನವ ಪರಿಚಿತರು’

ಪದೇ ಪದೇ ನಿನ್ನ ಮಾತನಾಡಿಸಲು ಮನಸಾದಾಗ ‘ಚಿರಪರಿಚಿತರು’

ದಿನೇ ದಿನೇ ತಾಸುಗಟ್ಟಲೆ ಹರಟೆ ಹೊಡೆಯುವಾಗ ‘ಗೆಳೆಯ-ಗೆಳತಿ’

ಒಬ್ಬರನ್ನೊಬ್ಬರು ಒಪ್ಪಿಕೊಂಡಾಗ ‘ವಿವಾಹ ನಿಶ್ಚಿತರು’

ಮದುವೆಯ ಹಸೆಮಣೆಯಲ್ಲಿ ‘ನವ ಜೋಡಿಗಳು’

ಮೊದಲ ರಾತ್ರಿಯಲ್ಲಿ ‘ಪ್ರಣಯ ಪಕ್ಷಿಗಳು’

ಮದುವೆಯ ಮಧುರ ದಿನದ ನಂತರ ‘ನವ ವಿವಾಹಿತರು’

ಸಂಸಾರ ರಥವನ್ನು ಎಳೆಯಲು ಮುಂದಾದಾಗ ‘ಜೋಡೆತ್ತುಗಳು’

ಕಾಲದ ಗತಿಯಲ್ಲಿ, ಜೀವನ ಪ್ರಗತಿಯಲ್ಲಿ ‘ಜೀವನ ಸಂಗಾತಿಗಳು’

ಮಕ್ಕಳನ್ನು ಹಡೆದು ಶುಶ್ರೂಷೆಯಲ್ಲಿ ನೀನು ತಾಯಿ, ಪೋಷಣೆಯಲ್ಲಿ ನಾನು ತಂದೆ

ನನ್ನ ನಿನ್ನ ಸಂಬಂಧಕೆ ಇನ್ನೆಷ್ಟು ಹೆಸರುಗಳನ್ನು ಹುಡುಕಿದರೂ

‘ನಿನಗೆ ನಾನು, ನನಗೆ ನೀನು’ ಅನ್ನುವ ಸಂಬಂಧವೇ ಅಂತಿಮವಲ್ಲವೇ ಗೆಳತಿ?

  • ವಿಜಯನರಸಿಂಹ

One thought on “ಅದೆಷ್ಟು ಹೆಸರುಗಳು!

  1. ವಿಜಯ್ ಅವರು ಈ ನಡುವೆ ಅಪರೂಪದ ಅತಿಥಿಗಳು, ಅವರ ಕವನ ನೋಡಿ ಖುಷಿಯಾಯಿತು, ಹಿಂದೆ ಸ್ಮರಣೀಯವಾದ ಉತ್ತಮ ಕವಿತೆಗಳನ್ನು ಅವರು ಅನಿವಾಸಿಗೆ ಕೊಟ್ಟಿದ್ದಾರೆ. ಇಬ್ಬರ ನಡುವಿನ ಸಂಬಂಧ ಹೇಗೆ ಹಂತ ಹಂತ ದಲ್ಲಿ ವಿಕಾಸಗೊಂಡು ಕೊನೆಗೆ ಒಬ್ಬರಿಗೊಬ್ಬರು ಆಸರೆಯಾಗಿ ಜೀವನ ಸಂಗಾತಿಗಳಾಗುತ್ತಾರೆ ಎನ್ನುವ ವಿಚಾರವನ್ನು ನವುರಾದ ಪದಗಳಲ್ಲಿ ವಿಜಯ್ ಪುನರವಲೋಕಿಸಿದ್ದಾರೆ. ಕೆಲವೊಮ್ಮೆ ಈ ಬಾಂಧ್ಯವಕ್ಕೆ ಹೆಸರು ಅನಗತ್ಯ. ಅದು ಬೇಕಿರುವುದು ಹೊರಗಿನಿಂದ ನೋಡುವವರಿಗೆ ಮಾತ್ರಾ! ವೈಯುಕ್ತಿಕ ನೆಲೆಯಲ್ಲಿ ಈ ಸಂಬಂಧ ಕಾಣದ, ಕೇಳದ, ಹೃದಯಗಳ ಮಿಡಿತ, ಸೆಳೆತ ಮತ್ತು ತುಡಿತ. ದೈಹಿಕ ಆಕರ್ಷಣೆ ಇಂದ್ರಿಯಗಳಿಗೆ ನಿಲುಕುವ ಆಯಾಮವಾಗಿದ್ದರೆ ಅದನ್ನೂ ಮೀರಿ ಭಾವನಾತ್ಮಕ ನೆಲೆಯಲ್ಲಿ ಎರಡು ಹೃದಯಗಳನ್ನು ಒಂದಾಗಿಸುವುದಕ್ಕೆ ಹೆಸರಿಲ್ಲ, ಸ್ವರೂಪವಿಲ್ಲ ಬಹುಶ ಅದು ವರ್ಣಿಸಲಾರದ ಆಧ್ಯಾತ್ಮಕ್ಕೆ ಹತ್ತಿರವೆನಿಸುವ “ಅನುಭಾವ” ಎಂದು ಪರಿಗಣಿಸಬಹುದು. ವಿಜಯ್ ಅವರ ಈ ಕವನ ಕುವೆಂಪು ಅವರ ಪ್ರಖ್ಯಾತ ‘ಜೇನಾಗುವ’ ಎಂಬ ಕವಿತೆಯನ್ನು ನೆನಪಿಗೆ ತಂದಿದೆ. ಸರಳ ಸುಂದರ ಕವನ. ಸರಳತೆಯಲ್ಲೂ ಘನತೆಯಿದೆ ಮತ್ತು ತೂಕವಿದೆ ಎಂಬುದನ್ನು ಮರೆಯುವಂತಿಲ್ಲ. ಸುತ್ತಿ ಬಳಸದೆ, ವಿಜೃಂಭಿಸದೇ, ಅನೇಕಾನೇಕ ರೂಪಕಗಳನ್ನು ಬಳಸದೆ, ಹೃದಯಕ್ಕೆ ತಟ್ಟುವ ವಿಚಾರವನ್ನು ಮತ್ತು ಕೆಲವೊಮ್ಮೆ ಗಹನವಾದ ವಿಚಾರಗಳನ್ನು ಕವನದಲ್ಲಿ ತಂದು ಸರಳವಾಗಿ ರಚಿಸುವುದೂ ಒಂದು ಕಲೆ.

    Like

Leave a comment

This site uses Akismet to reduce spam. Learn how your comment data is processed.