ಮಾರ್ಚ್ ಪಾಸ್ಟ್ — ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ

ಶ್ರಾವಣ ಮಾಸದ ಹಬ್ಬಗಳಲ್ಲಿ ರಾಷ್ಟ್ರಹಬ್ಬವಾದ ಭಾರತ ಸ್ವಾತಂತ್ರ್ಯೋತ್ಸವ ಶಾಲಾ ಮಕ್ಕಳಿಗೆ ಒಂದು ವಿಶೇಷವೇ ಸರಿ. UKಯಲ್ಲಿ ಶಾಲಾ ರಜೆ ಇರುವುದರಿಂದ ಹಾಗೂ ನಾವು ಈ ಬಾರಿ ಯಾವುದೇ ಪ್ರವಾಸದಲ್ಲಿಲ್ಲದ ಕಾರಣ, ಇಲ್ಲಿಯ ಸ್ಥಳೀಯ ಹಿಂದೂ ಸಂಘಟನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿತು!

ಇನ್ನು ಮುಂದಿನ ಕಥೆಯನ್ನು ಓದಿ ನಿಮ್ಮ ಅನುಭವ ಹಾಗೂ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

– ಸಂ

ಎರಡು ದಿನ.ಅಷ್ಟೇ ಸಮಯ ನಮ್ಮ ಕೈಯಲ್ಲಿತ್ತು.
ನಮ್ಮ ಸ್ಥಳೀಯ ಹಿಂದೂ ಸಂಘಟನೆಯೊಂದೇ ಪ್ರತಿ ವರುಷ ಭಾರತದ ಸ್ವತಂತ್ರ ದಿವಸವನ್ನು ಅತ್ಯಂತ ಭಾವುಕ ರೀತಿಯಲ್ಲಿ ಆಚರಿಸುತ್ತ ಬಂದಿದೆ. ಈ ಬಾರಿ ಈ ದಿನಾಚರಣೆಯಲ್ಲಿ ನಮ್ಮ ಮಕ್ಕಳನ್ನು ಯಾವುದಾರೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿಸೋಣ ಅಂತ ಅಂದುಕೊಂಡಿದ್ದಾದರೂ ಕೇವಲ ೨ ದಿನಗಲ್ಲಿ ಯಾವ ಹಾಡು ಅಥವಾ ಯಾವ ನೃತ್ಯ ಕಲಿಸಬಹುದು ಎಂಬ ಯೋಚನೆ ಹಾಗು ಕೇವಲ ಎರಡು ದಿನದಲ್ಲಿ ಮಕ್ಕಳು ಕಲಿಯಬಹುದಾ ಎಂಬ ಸಂದೇಹ.ಆಗ ಗುಂಪಿನಲ್ಲಿ ಒಬ್ಬರು ಧೈರ್ಯದಿಂದ ಮಕ್ಕಳಿಂದ ಮಾರ್ಚ್ ಪಾಸ್ಟ್‌ ಮಾಡಿಸೋಣ ಅಂದರು. ಸರಿ ಬಲು ಸುಲಭವಾದ ಆಯ್ಕೆ ಎಂದೆನಿಸಿತು.

ಸಾಮಾನ್ಯವಾಗಿ, ಮಾರ್ಚ್ ಪಾಸ್ಟ್ ಕಲಿಯೋಕೆ ಎರಡು ದಿನಗಳು ಸಾಕಷ್ಟು ಸಮಯ ಅಂದುಕೊಂಡೆವು. ಸರಿ ಎಲ್ಲಾ ಮಕ್ಕಳನ್ನು ಒಂದೆಡೆ ಸೇರಿಸಲು ನಿರ್ಧರಿಸಿದಿವಿ. ಒಂದು ಪಾರ್ಕ್ ನಲ್ಲಿ ಪ್ರಾಕ್ಟೀಸ್ ಮಾಡಿಸೋಣ ಅಂತ ಅಂದುಕೊಂಡಿವಿ. ಈ ಬಾರಿಯ ಬೇಸಿಗೆ ಬಿಜಾಪುರ್ ಬಾಗಲ್ಕೋಟಿಯ ನೆನಪು ತಂದಿತು. ಈ ಉರಿ ಬಿಸಿಲು ಹಾಗು ಶೆಕೆ ತಪ್ಪಿಸಿಕೊಳ್ಳಲು ನಾವು ಸಂಜೆ ಸೂರ್ಯಾಸ್ತದ ನಂತರ ಪಾರ್ಕ್ ಹಾಗು ವಾಕಿಂಗ್ ಅಂತ ಹೋಗುವ ಅಭ್ಯಾಸ ಮಾಡಿಕೊಂಡಿದ್ವಿ. ಆದರೆ ಸಂಜೆ ೪ ಘಂಟೆ ಎಂದರೆ ರಣರಣ ರಕರಕ. ಸ್ವತಂತ್ರ ದಿನಾಚರಣೆ ಎಂದರೆ ಇವೆಲ್ಲ ಲೆಕ್ಕಕ್ಕೆ ಬರೋಲ್ಲ ಬಿಡಿ.
ಸುಮಾರು ೧೦-೧೨ ಮಕ್ಕಳು ಐದು ವಯಸ್ಸಿಂದ ಹಿಡಿದು ೧೫ ವಯಸ್ಸಿನ ವರೆಗೆ ವಿವಿಧ ಗುಂಪಿನ ಮಕ್ಕಳು ಸೇರಿದ್ದರು. ಸಾಲಾಗಿ ನಿಲ್ಲಿಸಿ ಪೊಲೀಸ್ ಬ್ಯಾಂಡಿನ ಮ್ಯೂಸಿಕ್ ಹಾಕಿದಾಗ ಸಿನಿಮಾದಲ್ಲಿ ಫ್ಲಾಶ್ ಬ್ಯಾಕ್ ಹೋದಂತೆ ನಾನು ನನ್ನ ಶಾಲಾ ದಿನಗಳ ಸ್ವತಂತ್ರ ದಿನಾಚರಣೆಯ ಪರೇಡ್ ಡ್ಯಾನ್ಸು ಎಲ್ಲಾ ನೆನಪಾಯಿತು. ಈ ಹಿಂದೆ ಒಂದು ಲೇಖನವನ್ನು ಅನಿವಾಸಿಯಲ್ಲೇ ಪ್ರಕಟಿಸಿದ್ದೇನೆ.

ಮಕ್ಕಳು ಲೀಡರ್ ಹೇಳಿದಂತೆ ಎಲ್ಲರು ತಮ್ಮ ಎತ್ತರದ ಅನುಸಾರವಾಗಿ ಸಾಲಾಗಿ ನಿಂತರು. ಲೀಡರ್ ಹೇಗೆ ಮಾರ್ಚ್ ಮಾಡಬೆಂದು ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ಲೆಫ್ಟ್ ರೈಟ್ ಲೆಫ್ಟ್ ರೈಟ್ ಅಂತ ಕೂಗಿ ಎಂದು ತೋರಿಸಿ ಕೊಟ್ಟರು. ಮೊದಲಿಗೆ ಕೆಲ ಮಕ್ಕಳಲ್ಲಿ ಸ್ವಲ್ಪ ಕುತೂಹಲ ಕೆಲವರಿಗೆ ಸಂದೇಹ ಮತ್ತಿನಿತರರಿಗೆ ಏನೂ ಅರಿವೇ ಇಲ್ಲ. ಕೇವಲ ಅವರ ತಂದೆ ತಾಯಿಯ ಬಲವಂತಕ್ಕೆ ಅಲ್ಲಿ ನಿಂತಂತಿತ್ತು. ನನ್ನ ಮನಸ್ಸಿನಲ್ಲಿ ಒಂದು ಮಾತು ಕಾಡುತಿತ್ತು.

ಇಂಗ್ಲೆಂಡ್‌ನಲ್ಲಿ ಹುಟ್ಟಿ ಬೆಳೆದ ಎಂಟು–ಒಂಬತ್ತು ವರ್ಷದ ಮಕ್ಕಳಿಗೆ, ಭಾರತದ ಧ್ವಜದ ಮುಂದೆ ಹೆಮ್ಮೆಯಿಂದ ಹೆಜ್ಜೆ ಹಾಕುವುದರ ಅರ್ಥವನ್ನು ಹೇಗೆ ತಿಳಿಸುವುದು? ಮೊದಲು ಮಾರ್ಚ್ ಮಾಡುವುದನ್ನು ಕಲಿಯಲಿ ಅಂತ ಅವರ ನಡಿಗೆ ಮೇಲೆ ಗಮನ ಹರಿಸಿದೆ.

ಪ್ರಾಕ್ಟೀಸ್ ನಂತರ ಮನೆಯ ಕಡೆ ನಡೆದವಿ. ಕಾರಿನಲ್ಲಿ ಕುಳಿತು ನಂತರ ಒಂದು ಮಗುವಿನ ಪ್ರಶ್ನೆ. What function is this ? We usually sing and dance for Deepavali ? I don’t understand why are we simply walking in a different way?
“ಹ್ಮ್ಮ್…” ಎಂದು ನಾನು ನಿಧಾನವಾಗಿ ನಿಟ್ಟುಸಿರು ಬಿಟ್ಟೆ.
ಬಹಳ ಹೊತ್ತಿನಿಂದ ನನ್ನ ಮನಸ್ಸಿನ ಒಂದು ಮೂಲೆಯಲ್ಲಿ ಮೌನವಾಗಿ ಕಾಡುತ್ತಿದ್ದ ಪ್ರಶ್ನೆಗೆ ಉತ್ತರಿಸುವ ಸಮಯ ಬಂದಿತೆಂದು ಅನಿಸಿತು.

ಅವರಿಗೆ ಭಾರತ ಗೊತ್ತು. ಖಂಡಿತ ಗೊತ್ತು.

ಆದರೆ ಅವರ ಭಾರತವೆಂದರೆ ನಕ್ಷೆಯ ಮೇಲಿರುವ ಒಂದು ದೇಶಕ್ಕಿಂತ ಹೆಚ್ಚು—ಅದು ನೆನಪುಗಳ ಬಣ್ಣಗಳಿಂದ ಚಿತ್ರಿಸಿದ ಒಂದು ಪುಟ್ಟ ಪ್ರಪಂಚ.

ಅವರಿಗೆ ಭಾರತ ಎಂದರೆ ಅಜ್ಜ–ಅಜ್ಜಿಯರ ಮಮತೆಯ ನೆರಳು.
ಬೇಸಿಗೆಯ ರಜೆಯಲ್ಲಿ ಕಾದಿರುವ ಬಿಸಿಲಿನ ಸ್ಪರ್ಶ.
ಗದ್ದಲದಿಂದ ತುಂಬಿರುವ ಕುಟುಂಬ ಸಮಾರಂಭಗಳು.
ಮಾವಿನ ಹಣ್ಣಿನ ಒಂದು ತುಂಡು ಬಾಯಿಗೆ ಹಾಕಿದಾಗ, “ಇದರ ರುಚಿ ಇಂಗ್ಲೆಂಡ್‌ನಲ್ಲಿ ಯಾಕೆ ಸಿಗುವುದಿಲ್ಲ?” ಎಂದು ಮನಸ್ಸೇ ಕೇಳಿಕೊಳ್ಳುವ ಕ್ಷಣ.
ಮದುವೆಗಳ ಸಂಭ್ರಮ, ಮೈದಾನದ ಕ್ರಿಕೆಟ್, ಮತ್ತು ವರ್ಷಕ್ಕೊಮ್ಮೆ ಕಂಡರೂ “ಅಯ್ಯೋ, ಎಷ್ಟು ಎತ್ತರ ಬೆಳೆದಿದ್ದೀಯಾ!” ಎಂದು ಅಚ್ಚರಿಪಡುವ ಬಂಧುಗಳ ಪ್ರೀತಿ.

ಮತ್ತು ಊಟ…

ಭಾರತೀಯ ಊಟವೆಂದರೆ ಅವರಿಗೆ ಕೇವಲ ಆಹಾರವಲ್ಲ; ಅದರೊಳಗೆ ಮನೆಯ ವಾಸನೆ ಇತ್ತು, ಅಮ್ಮನ ಕೈರುಚಿ ಇತ್ತು, ಅಜ್ಜಿಯ ಅಡುಗೆಮನೆಯ ನೆನಪು ಇತ್ತು—ಆ ರುಚಿಯನ್ನು ನಾಲಿಗೆಯಿಂದ ಮಾತ್ರವಲ್ಲ, ಮನಸ್ಸಿನಿಂದಲೂ ಸವಿಯಬಹುದಿತ್ತು.

ಅವರಿಗೆ ಭಾರತವೆಂದರೆ ಭೇಟಿ ನೀಡುವ ಒಂದು ದೇಶ.
ನಮಗೆ ಭಾರತವೆಂದರೆ ನೆನಪುಗಳಲ್ಲಿ ಬದುಕುವ, ರಕ್ತದಲ್ಲಿ ಹರಿಯುವ, ಹೃದಯದೊಳಗೆ ಬೇರು ಬಿಟ್ಟಿರುವ ಒಂದು ದೇಶ.

ಅವರಿಗೆ ಭಾರತ ಒಂದು ಸ್ಥಳ.ನಮಗೆ ಭಾರತ ಒಂದು ಭಾವನೆ.
ಅವರಿಗೆ ಅದು ರಜೆಯಲ್ಲಿ ಹೋಗಿ ಬರುವ ತಾಣ.
ನಮಗೆ ಅದು ಎಲ್ಲೇ ಇದ್ದರೂ ನಮ್ಮೊಳಗೇ ಜೊತೆಗಿರುವ ಮನೆ.
ಆದರೆ…
ಭಾರತದ ಸ್ವಾತಂತ್ರ್ಯ?
ಅದು ಇನ್ನೊಂದು ಕಥೆ.
ಅದು ಅವರಿಗೆ ಇನ್ನೂ ಪರಿಚಯವಾಗದ ಭಾರತದ ಒಂದು ಅಧ್ಯಾಯ.

ನಾವು ಪ್ರೀತಿಯಿಂದ ಪರಿಚಯಿಸಿಕೊಂಡಿದ್ದ ಭಾರತ, ಅವರ ಪಾಲಿಗೆ ಇನ್ನೂ ಪ್ರವಾಸದ ನೆನಪುಗಳ ಬಣ್ಣದಲ್ಲಿತ್ತು; ಆದರೆ ಆ ನೆನಪುಗಳ ಹಿಂದೆ ಎಷ್ಟು ಹೋರಾಟ, ಎಷ್ಟು ತ್ಯಾಗ, ಎಷ್ಟು ಕಣ್ಣೀರು ಮತ್ತು ಎಷ್ಟು ಕನಸುಗಳು ಅಡಗಿವೆ ಎಂಬುದು ಅವರಿಗೆ ಇನ್ನೂ ತಿಳಿದಿರಲಿಲ್ಲ.

ಆ ಕ್ಷಣದಲ್ಲಿ ನನಗೆ ಒಂದು ಸಂಗತಿ ಬಹಳ ಸ್ಪಷ್ಟವಾಗಿ ಅರಿವಾಯಿತು—

ನಾವು ಅವರಿಗೆ ಭಾರತವನ್ನು ತೋರಿಸಿದ್ದೇವೆ;
ಆದರೆ ಈಗ ಭಾರತವನ್ನು ಅರ್ಥಮಾಡಿಸುವ ಸರಿಯಾದ ಸಮಯವೇ ?

ಅದೇ ಕ್ಷಣದಲ್ಲಿ, ನನ್ನ ಮುಂದೆ ನಿಂತಿದ್ದ ಆ ಪುಟ್ಟ ಮಕ್ಕಳಿಗೂ, ನನ್ನೊಳಗೆ ಮೌನವಾಗಿ ಬದುಕುತ್ತಿದ್ದ ಭಾರತದ ನಡುವೆ ಇದ್ದ ದೂರ ಎಷ್ಟು ದೊಡ್ಡದು ಎಂಬುದು ನನಗೆ ಮೊದಲ ಬಾರಿಗೆ ಅರಿವಾಯಿತು.

ಹೇಗೆ ಬ್ರಿಟಿಷರು ಭಾರತವನ್ನು ಆಳಿದರು ಅವರ ಹಿಂಸೆ ಭಾರತೀಯರ ನೋವು ದೇಶದ ವಿಭಜನೆ. ಇವೆಲ್ಲಾ ಅತ್ಯಂತ ಕಠಿಣವಾದ ವಿಷಯಗಳು ಅಷ್ಟೇ ಅಲ್ಲ ೭-೮ ವರ್ಷದ ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸುವು ಒಂದು ಸವಾಲೇ ಆಯಿತು ಆ ಕ್ಷಣ. ಆದರೆ ಆ ಪುಟ್ಟ ಮಕ್ಕಳಿಗೆ ಭಾರತದ ಇತಿಹಾಸ ಕೇವಲ ಪದರು ಪದರುಗಳನ್ನೊಳಗೊಂಡಿಲ್ಲ . ಅದು ಒಂದು ನೂರಾರು ಗಂಟುಗಳಿಂದ ಸಿಕ್ಕಿಹಾಕಿಕೊಂಡ ಒಂದು ಉಣ್ಣೆಯ ಚೆಂಡು. ಒಂದೊಂದು ಗಂಟನ್ನು ಬಿಡಿಸಲು ಪ್ರಯತ್ನಿಸಿದರೆ ಮತ್ತಷ್ಟು ಗಂಟಾಗುವ ಭಯ. ಇಂತಹ ಕಥೆ ಹೇಳುವ ಧೈರ್ಯ ನನ್ನಲ್ಲಿರಲಿಲ್ಲ. ಅದಕ್ಕೆ ಕೇವಲ –

ಬ್ರಿಟಿಷರು ಭಾರತವನ್ನು ಆಳಿದರು ಎಂದೇ. ನಂತರ ಭಾರತೀಯರು ಅವರ ಆಳ್ವಿಕೆಯನ್ನು ನಿಲ್ಲಿಸಲು ಕೇಳಿದಾಗ ಬ್ರಿಟಿಷರು ಭಾರತ ಬಿಟ್ಟು ಹೋದರು ಎನ್ನುವಷ್ಟರಲ್ಲಿ.

ಮೊದಲ ಪ್ರಶ್ನೆ ಬಹಳ ಮುಗ್ಧವಾಗಿತ್ತು:

“ಅಮ್ಮ, ಇಂಗ್ಲೆಂಡ್ ಭಾರತವನ್ನು ಯಾಕೆ ಆಳಿತು?”

ನಾನು ಕ್ಷಣಕಾಲ ಸುಮ್ಮನಾದೆ.

ಮಕ್ಕಳ ಮಾರ್ಚ್ ಪಾಸ್ಟ್‌ಗೆ ಹಿಂದಿನ ರಾತ್ರಿ ಬ್ರಿಟಿಷ್ ವಸಾಹತುಶಾಹಿಯ ಇತಿಹಾಸದ ಪಾಠ ಹೇಳಬೇಕಾಗುತ್ತದೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ!

ನಾನು ಉತ್ತರಿಸುವ ಮುನ್ನವೇ ಮತ್ತೊಂದು ಪ್ರಶ್ನೆ ಬಂತು:

“ಅವರು ಭಾರತವನ್ನು ಬಿಟ್ಟು ಹೋಗಲು ಒಪ್ಪಿಕೊಂಡರಾ?”

ನನಗೆ ನಗು ಬಂತು.

ಮಕ್ಕಳಿಗೆ ಇತಿಹಾಸವನ್ನು ಎಷ್ಟು ಸರಳವಾಗಿ ನೋಡಲು ಸಾಧ್ಯವೋ ಅಷ್ಟು ಸರಳವಾಗಿ ಅವರು ನೋಡುತ್ತಾರೆ.

ಅವರ ಕಲ್ಪನೆಯಲ್ಲಿ ಬಹುಶಃ ಬ್ರಿಟನ್ ಭಾರತಕ್ಕೆ ಬಹಳ ವರ್ಷಗಳ ಕಾಲ ಬಂದು ಉಳಿದುಕೊಂಡಿತ್ತು. ಕೊನೆಗೆ ಯಾರೋ ಹೋಗಿ,

“ಸರಿ, ನೀವು ಇಲ್ಲಿ ಸಾಕಷ್ಟು ವರ್ಷ ಇದ್ದೀರಿ. ಈಗ ಮನೆಗೆ ಹೋಗುವ ಸಮಯ.”

ಎಂದು ಹೇಳಿರಬೇಕು!

ಅಯ್ಯೋ… ಇತಿಹಾಸ ಅಷ್ಟು ಸರಳವಾಗಿದ್ದರೆ ಎಷ್ಟು ಚೆನ್ನಾಗಿತ್ತು!

ಆದರೆ ಎಂಟು–ಒಂಬತ್ತು ವರ್ಷದ ಮಗುವಿಗೆ ವಸಾಹತುಶಾಹಿ ಎಂದರೇನು ಎಂದು ಹೇಗೆ ವಿವರಿಸುವುದು?

ಅವರು ಹುಟ್ಟಿ ಬೆಳೆದ ದೇಶವೇ, ತಮ್ಮ ಕುಟುಂಬದ ಮೂಲದ ದೇಶವನ್ನು ಒಮ್ಮೆ ಆಳಿತ್ತು ಎಂಬುದನ್ನು ಹೇಗೆ ಹೇಳುವುದು?

ನಾನು ಕ್ಷಣಕಾಲ ಯೋಚಿಸಿ, ಅವರ ವಯಸ್ಸಿಗೆ ಅರ್ಥವಾಗುವಷ್ಟು ಸರಳವಾದರೂ, ಆ ಇತಿಹಾಸದ ಮಹತ್ವವನ್ನು ಕಡಿಮೆ ಮಾಡದಂತಹ ಪದಗಳನ್ನು ಹುಡುಕಿದೆ.

ಭಾರತ ಬಹಳ ದೀರ್ಘಕಾಲ ಬ್ರಿಟಿಷರ ಆಳ್ವಿಕೆಯಲ್ಲಿ ಇತ್ತು ಎಂದು ಹೇಳಿದೆ.

ಭಾರತೀಯರು ತಮ್ಮ ದೇಶವನ್ನು ತಾವೇ ಆಳಬೇಕು ಎಂಬ ಬಯಕೆ ಹೊಂದಿದ್ದರು ಎಂದು ತಿಳಿಸಿದೆ.
ಇದರ ಹಿಂದಿನ ಶ್ರಮ,ಜನರು ಪ್ರತಿಭಟನೆ, ಜೈಲಿಗೆ ಹೋಗಿದ್ದು,ತ್ಯಾಗ ಮಾಡಿದ್ದೂ ಮತ್ತು ಅನೇಕರು ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಅರ್ಪಿಸುವ ಸತ್ಯ ವಾಸ್ತವ್ಯ ಹೇಳಲು ತುಂಬಾ ಯೋಚಿಸಿದೆ.

ಗಾಂಧೀಜಿಯವರ ಬಗ್ಗೆ, ಅವರ ಅಹಿಂಸೆಯ ಮಾರ್ಗದ ಬಗ್ಗೆ ಹೇಳಿದೆ.

ಸ್ವಾತಂತ್ರ್ಯವೆಂದರೆ ಬ್ರಿಟನ್ ಒಂದು ಬೆಳಗ್ಗೆ ಎದ್ದು,

“ಸರಿ, ಇವತ್ತು ಭಾರತವನ್ನು ಸ್ವತಂತ್ರ ಮಾಡೋಣ.”

ಎಂದು ನಿರ್ಧರಿಸಿ ಕೊಟ್ಟದ್ದಲ್ಲ ಎಂದು ವಿವರಿಸಲು ಪ್ರಯತ್ನಿಸಿದೆ.

ಆಗ ಮತ್ತೊಂದು ಪ್ರಶ್ನೆ:

“ಆದರೆ ಭಾರತ ಸರಳವಾಗಿ ‘ನೀವು ಹೋಗಿ’ ಅಂತ ಹೇಳಬಹುದಿತ್ತಲ್ಲ?”

ಮತ್ತೆ ನನಗೆ ನಗು ಬಂತು.

ಶತಮಾನಗಳ ರಾಜಕೀಯ, ಅಧಿಕಾರ, ಹೋರಾಟ, ಆರ್ಥಿಕತೆ, ತ್ಯಾಗ ಮತ್ತು ಧೈರ್ಯವನ್ನು ಎಂಟು ವರ್ಷದ ಮಗುವಿಗೆ ಅರ್ಥವಾಗುವ ಒಂದೆರಡು ವಾಕ್ಯಗಳಲ್ಲಿ ಹೇಗೆ ಹೇಳುವುದು?

ನಾನು ಪ್ರಯತ್ನಿಸಿದೆ.

ಇತಿಹಾಸ ಯಾವಾಗಲೂ ನೇರವಾದ ರಸ್ತೆಯಲ್ಲ.

ಕೆಲವೊಮ್ಮೆ ಅದು ತಿರುವುಗಳಿಂದ ಕೂಡಿದ ದಾರಿ.

ಅದರಲ್ಲೂ ಹೋರಾಟಗಳಿರುತ್ತವೆ, ಸೋಲುಗಳಿರುತ್ತವೆ, ಅಡೆತಡೆಗಳಿರುತ್ತವೆ.

ಆದರೆ ಕೈಬಿಡದ ಜನರೂ ಇರುತ್ತಾರೆ.ಅವರು ಎಷ್ಟು ಅರ್ಥ ಮಾಡಿಕೊಂಡರೋ ನನಗೆ ಗೊತ್ತಿಲ್ಲ.

ಆದರೆ ಬಹುಶಃ ಆ ದಿನ ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕೆಂದೇನೂ ಇರಲಿಲ್ಲ.

ಬಹುಶಃ ಆ ಸಂಜೆ ನಾವು ಅವರ ಮನಸ್ಸಿನಲ್ಲಿ ಒಂದು ಸಣ್ಣ ಬೀಜವನ್ನು ಬಿತ್ತಿದ್ದೆವು.

ಕುತೂಹಲದ ಬೀಜ.ಸಂಬಂಧದ ಬೀಜ.ನಮ್ಮ ಬೇರುಗಳನ್ನು ತಿಳಿದುಕೊಳ್ಳುವ ಆಸೆಯ ಬೀಜ.

ಒಂದು ದಿನ ಆ ಬೀಜ ಮೊಳಕೆಯೊಡೆದು, ಅವರು ತಮ್ಮ ಕುಟುಂಬದ ಮೂಲದ ಬಗ್ಗೆ, ಭಾರತದ ಬಗ್ಗೆ ಮತ್ತು ಸ್ವಾತಂತ್ರ್ಯದ ಅರ್ಥದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.

ಮರುದಿನ…

ನಾವು ವಾಲ್ಲಿಂಗ್ಟನ್ ನ ಒಂದು ಮೈದಾನದಲ್ಲಿ ನಡೆಯಲಿದ್ದ ಸ್ವಾತಂತ್ರ್ಯ ದಿನಾಚರಣೆಗೆ ತಲುಪಿದೆವು.

ಹಿಂದಿನ ರಾತ್ರಿ ನಡೆದ ನಮ್ಮ ಮಾತುಕತೆಗಳು ಏಕಾಏಕಿ ಜೀವಂತವಾದಂತೆ ಅನಿಸಿತು.

ಎಲ್ಲೆಡೆ ಭಾರತದ ಧ್ವಜಗಳು.ಬ್ರಿಟನಿನ್ನ ಗಾಳಿಯಲ್ಲಿ ಹಾರಾಡುತ್ತಿದ್ದ ಆ ತ್ರಿವರ್ಣ ಧ್ವಜಗಳು, ಸಾವಿರಾರು ಮೈಲು ದೂರದ ಭಾರತದಿಂದ ಒಂದು ಪುಟ್ಟ ತುಂಡು ಲಂಡನ್‌ಗೆ ಬಂದು ಆ ದಿನವನ್ನು ನಮ್ಮೊಂದಿಗೆ ಆಚರಿಸುತ್ತಿರುವಂತೆ ಕಂಡವು.

ಸಂಗೀತ, ನೃತ್ಯ , ರಜೆಯೇ ಬಂದ ಅಜ್ಜ ಅಜ್ಜಿಯರ ಮುಖದಲ್ಲಿ ಏನೋ ಖುಷಿ.ಭಾರತೀಯ ಬಣ್ಣಗಳಲ್ಲಿ ಮಿಂಚುತ್ತಿದ್ದ ಮಕ್ಕಳು. ಎಲ್ಲೆಡೆ ಸಂಭ್ರಮ. ಹವೆಯಲ್ಲೇ ಒಂದು ಉತ್ಸಾಹ. ನಂತರ ಆ ಕ್ಷಣ ಬಂತು.

ಮಾರ್ಚ್ ಪಾಸ್ಟ್.

ಮಕ್ಕಳು ಸಾಲಾಗಿ ನಿಂತರು.ಪುಟ್ಟ ಕೈಗಳಲ್ಲಿ ಧ್ವಜಗಳು.
ಚಿಕ್ಕ ಹೆಗಲುಗಳು ನೇರವಾದವು.ಕೆಲವರ ಮುಖದಲ್ಲಿ ಗಂಭೀರತೆ.
ಕೆಲವರ ಮುಖದಲ್ಲಿ ಆತಂಕ. ಮತ್ತು, ಸಹಜವಾಗಿಯೇ, ಇನ್ನೂ ಕೆಲವರ ಮುಖದಲ್ಲಿ,

“ಊಟ ಯಾವಾಗ ಶುರುವಾಗುತ್ತೆ?”ಎಂಬ ಪ್ರಶ್ನೆ!
ಅವರು ಹೆಜ್ಜೆ ಹಾಕಲು ಆರಂಭಿಸಿದರು.ಒಂದೊಂದು ಹೆಜ್ಜೆ.
ಭಾರತದ ಧ್ವಜದ ಕಡೆಗೆ.
ನಾನು ಅವರನ್ನು ನೋಡುತ್ತಾ ನಿಂತಿದ್ದೆ.
ನನ್ನೊಳಗೆ ಏನೋ ಒಂದು ಸಂಭ್ರಮ ಮತ್ತು ದೇಶಭಕ್ತಿಯ ಭಾವನೆ.

ಕೇವಲ ಇಪ್ಪತ್ತನಾಲ್ಕು ಗಂಟೆಗಳ ಹಿಂದೆ ಅವರು ನನ್ನನ್ನು ಕೇಳಿದ್ದರು:

“ಅಮ್ಮ, ಇಂಗ್ಲೆಂಡ್ ಭಾರತವನ್ನು ಯಾಕೆ ಆಳಿತು?”

“ಅವರು ಹೋಗಲು ಒಪ್ಪಿಕೊಂಡರಾ?”

ಮತ್ತು ಈಗ…

ಇಂಗ್ಲೆಂಡ್‌ನಲ್ಲಿ ಹುಟ್ಟಿ, ಇಂಗ್ಲೆಂಡ್‌ನಲ್ಲಿ ಬೆಳೆದ ಆ ಮಕ್ಕಳು, ಲಂಡನ್‌ನಲ್ಲೇ ಭಾರತದ ತ್ರಿವರ್ಣ ಧ್ವಜದ ಮುಂದೆ ಹೆಮ್ಮೆಯಿಂದ ಮಾರ್ಚ್ ಮಾಡುತ್ತಿದ್ದರು.

ಇತಿಹಾಸ ಒಂದು ಪೂರ್ಣ ವೃತ್ತವನ್ನು ಸುತ್ತಿ ಮತ್ತೆ ನಮ್ಮ ಮುಂದೆ ನಿಂತಂತೆ ಅನಿಸಿತು.

ಅವರಿಗೆ ಆ ಕ್ಷಣದ ಸಂಪೂರ್ಣ ಗಾಂಭೀರ್ಯತೆ ಇನ್ನೂ ಅರ್ಥವಾಗದೇ ಇರಬಹುದು.

ತ್ರಿವರ್ಣ ಧ್ವಜದ ಹಿಂದೆ ಇರುವ ತ್ಯಾಗಗಳು ಅವರಿಗೆ ಇನ್ನೂ ತಿಳಿದಿರದೇ ಇರಬಹುದು.

ಸ್ವಾತಂತ್ರ್ಯವು ಲಕ್ಷಾಂತರ ಜನರಿಗೆ ಏನರ್ಥವಾಗಿತ್ತು ಎಂಬುದನ್ನೂ ಅವರು ಇನ್ನೂ ಅರಿತಿರಲಾರರು.

ಆದರೆ ಅವರು ಪ್ರಶ್ನೆ ಕೇಳಲು ಆರಂಭಿಸಿದ್ದಾರೆ.

ಬಹುಶಃ ಅದೇ ಮೊದಲ ಹೆಜ್ಜೆ. ಏಕೆಂದರೆ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಪ್ರತಿಯೊಂದು ಪ್ರಯಾಣವೂ ಒಂದು ಪ್ರಶ್ನೆಯಿಂದಲೇ ಆರಂಭವಾಗುತ್ತದೆ.

ಒಂದು ದಿನ ಅವರು ತಿಳಿದುಕೊಳ್ಳುತ್ತಾರೆ. ಸ್ವಾತಂತ್ರ್ಯವೆಂದರೆ ಕೇವಲ ಒಂದು ದೇಶ ಮತ್ತೊಂದು ದೇಶದಿಂದ ದೂರವಾದ ಕಥೆಯಲ್ಲ.

ಅದು ಗೌರವದ ಕಥೆ. ಅದು ಸ್ವಾತಂತ್ರ್ಯದ ಕಥೆ. ಅದು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಹಕ್ಕಿನ ಕಥೆ.

ಮತ್ತು ಬಹುಶಃ ಹಲವು ವರ್ಷಗಳ ನಂತರ, ಅವರು ಲಂಡನ್‌ನ ಆ ಪುಟ್ಟ ಮಾರ್ಚ್ ಪಾಸ್ಟ್ ಅನ್ನು ನೆನಪಿಸಿಕೊಳ್ಳಬಹುದು.ಅಂದು ಯಾರು ಭಾಷಣ ಮಾಡಿದರು ಎಂಬುದು ನೆನಪಿರಲಿಕ್ಕಿಲ್ಲ.ಯಾವ ಹಾಡುಗಳನ್ನು ಹಾಡಿದರು ಎಂಬುದು ನೆನಪಿರಲಿಕ್ಕಿಲ್ಲ. ಅಂದು ಏನು ತಿಂದರು ಎಂಬುದಂತೂ ಖಂಡಿತ ನೆನಪಿರಲಿಕ್ಕಿಲ್ಲ!

ಆದರೆ ಅವರು ಆ ಭಾವನೆಯನ್ನು ನೆನಪಿಟ್ಟುಕೊಳ್ಳಲಿ. ಆ ಪುಟ್ಟ ಧ್ವಜವನ್ನು ಕೈಯಲ್ಲಿ ಹಿಡಿದ ಭಾವನೆ. ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದ ಭಾವನೆ.

ಭಾರತದಿಂದ ಸಾವಿರಾರು ಮೈಲು ದೂರದಲ್ಲಿದ್ದರೂ, ಭಾರತದ ತ್ರಿವರ್ಣ ಧ್ವಜದ ಕೆಳಗೆ ನಿಂತ ಭಾವನೆ.

ಏಕೆಂದರೆ ಗುರುತು ಎಂಬುದು ಯಾವಾಗಲೂ ಪಾಸ್‌ಪೋರ್ಟ್‌ನೊಳಗೆ ಸೆರೆಯಾಗುವುದಿಲ್ಲ.

ಅದು ಒಂದು ದೇಶದಲ್ಲಿ ಹುಟ್ಟಿರಬಹುದು. ಆದರೆ ಮತ್ತೊಂದು ದೇಶದ ಇತಿಹಾಸದಲ್ಲಿ ಬೇರು ಬಿಟ್ಟಿರಬಹುದು.

ಇಂಗ್ಲೆಂಡ್ ಅವರು ಹುಟ್ಟಿದ ನೆಲ. ಭಾರತ ಅವರ ಪರಂಪರೆ.

ಮತ್ತು ಈ ಎರಡೂ ಸೇರಿ ಅವರು ಯಾರಾಗುತ್ತಾರೆ ಎಂಬುದನ್ನು ರೂಪಿಸಬಹುದು.

ಬಹುಶಃ ಎರಡು ಸಂಸ್ಕೃತಿಗಳ ನಡುವೆ ಬೆಳೆದುಬರುವುದರ ಸೌಂದರ್ಯವೇ ಇದು.

ಒಂದನ್ನು ಆಯ್ಕೆ ಮಾಡಬೇಕೆಂಬ ಅಗತ್ಯವಿಲ್ಲ.ಹುಟ್ಟಿನಿಂದ ಒಂದು ನೆಲಕ್ಕೆ ಸೇರಬಹುದು.

ಕುಟುಂಬ, ನೆನಪು, ಸಂಸ್ಕೃತಿ ಮತ್ತು ಇತಿಹಾಸದಿಂದ ಮತ್ತೊಂದು ನೆಲಕ್ಕೂ ಸೇರಬಹುದು.

ಅದೇ ಬಹುಶಃ ಆ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅವರಿಗೆ ನೀಡಿದ ಅರ್ಥ.

ಇನ್ನೂ ಸಂಪೂರ್ಣವಾಗಿ ಅರ್ಥವಾಗದ ಒಂದು ಪಾಠ.

ಆದರೆ ನಿಧಾನವಾಗಿ ತೆರೆದುಕೊಳ್ಳಲಾರಂಭಿಸಿದ ಒಂದು ಕಥೆ.

ಒಂದು ದಿನ ಎರಡು ಮುಗ್ಧ ಪ್ರಶ್ನೆಗಳಿಂದ ಆರಂಭವಾದ ಕಥೆ:

ನಂತರ ಬಂದ ಪ್ರಶ್ನೆ ಮಾತ್ರ ಅತ್ಯಂತ ಮುಖ್ಯವಾಗಿತ್ತು:

“ಅಮ್ಮ… ಸಮೋಸಾ ಇದೆಯಾ?”

ಅಷ್ಟಕ್ಕೆ ಸುಮಾರು ಎರಡು ನೂರು ವರ್ಷಗಳ ಇತಿಹಾಸದ ಪಾಠ ಮುಗಿಯಿತು.

ಕನಿಷ್ಠ ಮುಂದಿನ ಸ್ವಾತಂತ್ರ್ಯ ದಿನಾಚರಣೆಯವರೆಗಾದರೂ!

ಬೋಲೋ ಭಾರತ್ ಮಾತಾಕಿ ಜೈ ! ವOದೇ ಮಾತರಂ !


~ರಾಧಿಕಾ ಜೋಶಿ

ಜಯದೇವ ಜಯದೇವ ಶ್ರೀ ಗಣಪತಿರಾಯ

ನಮಸ್ಕಾರ. ಅನಿವಾಸಿ ಬಳಗಕ್ಕೆಲ್ಲ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಹರನರಸಿ ಸಿರಿಗೌರಿ ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ.
“ಗಜಮುಖನೇ ಗಣಪತಿಯೇ ನಿನಗೆ ವಂದನೆ. ನಂಬಿದವರ ಪಾಲಿನ ಕಲ್ಪತರು ನೀನೇ” ಹೊರಗೆ ಮೃಣ್ಮಯನಾದರೂ ಚಿನ್ಮಯನಾದ ಈ ಮಹಾಭಾರತದ ಲಿಪಿಕಾರ ನಮ್ಮೆಲ್ಲರ ಹಣೆಯ ಲಿಪಿಯನ್ನೂ ನೇರ್ಪಾಗಿಸಲಿ. ವಿಘ್ನಗಳ ತರಿದು ವಿದ್ಯೆ-ಬುದ್ಧಿ- ಸಿದ್ಧೀಯನ್ನೀಯಲಿ.

~ ಸಂಪಾದಕಿ

“ನಡೀತದೇಳ್ರಿ”

ಈ ಶ್ರಾವಣ -ಭಾದ್ರಪದ ಮಾಸಗಳು ಬಂದೂ ಅಂದ್ರ ದಿವಶಿಗೌರಿ, ಮಂಗಳಗೌರಿ, ಸಂಪತ್ ಶುಕ್ರವಾರದ ಗಡಗಿ ಗೌರಿ, ಸ್ವರ್ಣಗೌರಿ,  ಜೇಷ್ಠಾಗೌರಿಯರ ಜೋಡಿ ಸೋಳಾ ಸೋಮವಾರದ ಈಶಪ್ಪ, ಪಂಚಮಿಯ ನಾಗಪ್ಪ, ಗೋಕುಲಾಷ್ಟಮಿಯ ಕಿಟ್ಟಪ್ಪ, ಚೌತಿಯ ಗಣಪ್ಪ, ಕಡೀಕೆ ಅನಂತ ಪದ್ಮನಾಭ ( ಇಷ್ಟರ ನಡಬರಕ ನಮ್ಮ ಮಂಚಾಲಿ ರಾಯರು)  ಹೀಂಗ ಸಾಲುಸಾಲಾಗಿ ಹಿಂಡುದೈವದ ಹಾಗೂ ಹಿಂಡು ದೈವದ ಗಂಡ ಉದ್ಧಂಡನ ಪೂಜೆ- ಪುನಸ್ಕಾರ , ಅವರುಗಳ ಹೆಸರಲ್ಲಿ  ತಂಬಿಟ್ಟು, ಅಂಟಿನುಂಡೆ, ಕರದವಲಕ್ಕಿ,  ಹೋಳಿಗೆ-ಕಡಬು, ಪಾಯಸ -ಪರಮಾನ್ನ -ಚಿತ್ರಾನ್ನಗಳ ಥರಾವರಿ ಭಕ್ಷ್ಯಭೋಜನಗಳ ಸಮಾರಾಧನೆ. ಒಟ್ಟನಾಗ ನಮ್ಮಂಥ ಗೃಹಿಣಿಯರು  ಮಾಡಿ,ಉಂಡುಟ್ಟು ಉಸ್  ಎಂದು ದಣಿಯುವ ಮಾಸಗಳಿವು. 

(ಅಂಡಜವಾಹನ ಅನಂತ ಮಹಿಮ
ಪುಂಡರಿಕಾಕ್ಷ ಶ್ರೀ ಪರಮ ಪಾವನ್ನ
ಹಿಂಡು ದೈವದ ಗಂಡ ಉದ್ಧಂಡ
ಪಾಂಡುರಂಗ ಶ್ರೀ ಪುರಂದರ ವಿಠ್ಠಲ)

‘ ಅದೆಲ್ಲ ಬರೋಬ್ಬರಿ..ಇದೇನೋ ‘ನಡೀತದೇಳ್ರಿ’ ನಡೀಯೂದೂ, ಏಳೂದು ಅಂದ್ರ ಏನು ಅಂತ ಹುಬ್ಬೇರಿಸಲಿಕ್ಹತ್ತೀರೇನು? ಹಾಂ ಅಂದಹಂಗ ಹತ್ತಿರೇನು ಅಂದಕೂಡಲೇ ನೆನಪಾತು, ನನ್ನ ಗೆಳತಿ ಒಬ್ಬಾಕಿ “ ಇದೇನವಾ ನಿಮ್ಮ ಉತ್ತರ ಕರ್ನಾಟಕದ ಭಾಷೆ ಇಳೀಲಿಕ್ಕೂ ಹತ್ತತಾರ, ಕೂಡಲಿಕ್ಕೂ ಹತ್ತತಾರ ,ಉಣಲಿಕ್ಕೆ, ಕುಡೀಲಿಕ್ಕೆ, ಓದಲಿಕ್ಕೆ, ಬರೀಲಿಕ್ಕೆ, ಮಲಗಲಿಕ್ಕೆ ಎಲ್ಲಕ್ಕೂ ಹತ್ತೂದೇ, ಏನರೇs ಹತ್ತತೀರಿ..ಎಷ್ಟರೇs ಹತ್ತತೀರಿ?” ಅಂತ ಕಾಲೆಳಿತಿರತಾಳ. ಈಗ ಇದೊಂದೇನೋ ಹೊಸಾದು ‘ನಡೀತದೇಳ್ರಿ’ ತಗೊಂಡು ಬಂದೀರಿ ಅಂತಿರೇನು ನೀವೂ? ತಡೀರಿ..ಅದನ್ನೇ ಹೇಳಲಿಕ್ಕೆ ಬರಲಿಕ್ಹತ್ತೀನಿ.

ಕಳೆದ ವಾರ ‘ ಬಪ್ಪಾ’ ನನ್ನು ಮನೆಗೆ ಕರೆತರಲು Wembley ಗೆ ಹೋಗಿದ್ವಿ. ಅಲ್ಲಿ ಅದೆಷ್ಟು ಥರಾವರಿ ಗಣಪತಿಗಳು, ಅದೇನು ಹೂ-ಹಣ್ಣು, ಪೂಜಾಸಾಮಗ್ರಿಗಳು, ಡೆಕಾರೇಶನ್ ಸಾಮಾನು, ಮಂಟಪ, ಲೈಟು..ಪ್ರತಿ ಅಂಗಡಿ ಕಿಕ್ಕಿರಿದು ತುಂಬಿತ್ತು. ಆಗ ನನ್ನ ತಲೆಯಲ್ಲಿ ಸುಳಿದಾಡಿದ ಭಾವಲಹರಿ ಏನೆಂದರೆ –‘ದೇವರೇ ಇಲ್ಲ’ ಅನ್ನೋ ವಾದದಸರಣಿಯಂತೆ ದೇವರು ಸುಳ್ಳಿರಬಹುದು ಆದರದನ್ನು ಆತುಕೊಂಡು ಬೆಳೆದು, ಹಬ್ಬಿದ ವೇದೋಪನಿಷತ್ತು, ರಾಮಾಯಣ-ಮಹಾಭಾರತ, ದಾಸ-ವಚನ ಸಾಹಿತ್ಯಗಳು, ಮಂತ್ರ-ತಂತ್ರ, ನಾಟ್ಯ-ಸಂಗೀತ- ಶಿಲ್ಪಕಲೆ, ಹಬ್ಬ-ಹರಿದಿನಗಳ ಆಚರಣೆ- ಸಡಗರ- ಸಂಭ್ರಮ ಇವೆಲ್ಲವುಗಳಂತೂ ಸತ್ಯಸ್ಯ ಸತ್ಯ. ಎಷ್ಟೆಲ್ಲ ಜನರಿಗೆ ಎಷ್ಟೆಲ್ಲ ರೀತಿಯ ಜೀವನೋಪಾಯಗಳು?! ‘ ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೆ?’
(ಇಲ್ಲಿ ದೇವರು ನಮ್ಮನ್ನು ಹುಟ್ಟಿಸಿದನೇ? ಅಥವಾ ನಾವು ಅವನನ್ನು ಹುಟ್ಟಿಸಿದೆವೇ ಎಂಬ ಮತ್ತೊಂದು ತರ್ಕಕ್ಕೂ ವಿಫುಲ ಅವಕಾಶವಿದೆಯಾದರೂ ಈಗದು ಬೇಡ.)

ಸರಿ, ಈಗ ಹಕೀಕತ್ತಿಗೆ ಬರತೀನಿ. ಅಲ್ಲಿದ್ದ ನೂರಾರು ಗಣಪತಿಗಳಲ್ಲಿ ಯಾವುದು ತರುವುದು ಎಂಬ ಸಮಸ್ಯೆ. Options ಹೆಚ್ಚಾದಷ್ಟೂ ಆಯ್ಕೆ ಕಷ್ಟ.’ಇದು ಬ್ಯಾಡ. ಮಡಿ-ಶಲ್ಯ ಮ್ಯಾಚಿಂಗ್ ಆಗವಲ್ತು’ ನನ್ನ ಅವಳಿಯ ರಾಗ. ‘ ಇದರಾಗ ಗಣಪ್ಪನ ಸೊಂಡಿ, ಇಲಿ ಅಪ್ಪಚ್ಚಿಯಾದ್ಹಂಗದ’ ಜವಳಿಯ ತಗಾದೆ. ‘ಇವಂಗ ಜನಿವಾರನೇ ಇಲ್ಲಲs’ ಅತ್ತೆಯವರ ಉವಾಚ. ‘ ಇವಾ ಬರಿಗೈಯಾಗಿದ್ದಾನ. ಕೈಯಾಗ ಆಯುಧ, ಮೋದಕ ಯಾವುದೂ ಇಲ್ಲ’ ಮಾವನವರ ಉದ್ಗಾರ , ‘ ಹೊಟ್ಟಿಗೆ ಹಾವೇ ಇಲ್ಲಲಾ, ಈಬತ್ತಿ ಬ್ಯಾರೆ ಹಚಗೊಂಡಾನ’ , ಒಬ್ಬ ಗಣಪ್ಪ ಮುಂದ ಬಾಗ್ಯಾನ, ಇನ್ನೊಬ್ಬ ಭಾಳ ಹಿಂದ ಒರಗ್ಯಾನ..ನೂರು ತಕರಾರು.ಅಂತೂ ಪೌಂಡ್ ಗಟ್ಟಲೇ ದುಡ್ಡು ಸುರಿದರೂ ಬೇಕಾದ ಗಣಪ್ಪ ಸಿಗವಲ್ಲ. ಇವರೆಲ್ಲರ ನಡುವ “ ಏಯ್ ಮ್ಯಾಚಿಂಗ್ ಇರದಿದ್ರೇನಾತು? ಚಂದೇ ಕಾಣಸತದ ನಡೀತದೇಳು, ಜನಿವಾರ ಇರದಿದ್ರೇನಾತು? ಹೆಂಗೂ ಪೂಜಾ ಟೈಮಿಗೆ ಹಾಕತೀವಲಾ ನಡೀತದೇಳ್ರಿ, clay ಲೇ ಒಂದ ಸಣ್ಣ ಮೋದಕಾ ಮಾಡಿ ಕೈಯಾಗಿಟ್ರಾತು, ನಡೀತದೇಳ್ರಿ , ಕಡಬು, ಮೋದಕಾ ತಿಂದು ಸ್ವಲ್ಪ ಹಿಂದ ಒರಗ್ಯಾನ ನಡೀತದೇಳ್ರಿ” ಅಂತ ನಾನು.

‘ಛಾ ಪುಡಿ ಇಲ್ಲ, ಕಾಫಿ ಮಾಡ್ಲಿ?’ ‘ನಡೀತದೇಳ್ರಿ’

‘ಸಾರು ಸ್ವಲ್ಪ ನೀರಾಗೇದ’ ‘ ನಡೀತದೇಳ್ರಿ’

‘ಪಲ್ಯ ಚೂರು ಉಪ್ಪಾಗೇದ.’ ‘ಸಪ್ಪಗಿನ ಅನ್ನ – ಚಪಾತಿ ಜೋಡಿ ನಡೀತದೇಳ್ರಿ.’

‘ ಹುಡುಗ ಚೂರು ಸಾದಗಪ್ಪ ಇದ್ದಾನ’ ‘ ಬಣ್ಣ ಏನಮಾಡತೀರಿ? ಸಂಸ್ಕಾರಿ ಇದ್ದಾನಲಾ ನಡೀತದೇಳ್ರಿ’

‘ ಹುಡಗಿಗೆ ಅಡಗಿ ಬರಂಗಿಲ್ಲ’ ‘ ಇವತ್ತ ನಾಳೆ ಅದೇನ ಮಹಾ? ಬೇಕಂದ್ರ ಯೂಟ್ಯೂಬ್ ನೋಡಿ ಕಲಿತಾಳ. ನಡೀತದೇಳ್ರಿ’

‘ ಬ್ಲೌಜ್ ಮೈಯಾಗ ಲೂಸ್ ಆಗೇದ’ ‘ ಸಧ್ಯಕ್ಕ ಒಂದ safety pin ಹಚಗೊಂಡ್ರಾತು. ನಡೀತದೇಳು’

‘ ಸೀರಿಗೆ ಕಲೆ ಹತ್ತೇದ’ ‘ ನಿರಿಗ್ಯಾಗ ಮುಚ್ಚಿಹೋಗತದ. ನಡೀತದೇಳು.’

‘ ಅಲ್ಲೆ ಮೂಲ್ಯಾಗೊಂಚೂರು ಕಸಾ ಅದ.’ ‘ ಮುಂಜಾನೆ ಬಳಿಯೂಣಂತ. ನಡೀತದೇಳ್ರಿ’

‘ ಮಳಿ ಬರೂ ಹಂಗ ಅದ’ ‘ ಛತ್ರಿ ತಗೊಂಡ ಹೋದ್ರಾತು. ನಡೀತದೇಳ್ರಿ’

‘ ಬಸ್ ಮಿಸ್ ಆತು.’ ‘ನಡೀತದೇಳ್ರಿ. ಶೇರಿಂಗ್ ಆಟೊ ಹತ್ತಿದ್ರಾತು.’

‘ ಮಗಗ ಮಾರ್ಕ್ಸ್ ಕಮ್ಮಿ ಬಂದಾವ.’ ‘ ನಡೀತದೇಳ್ರಿ ಮುಂದಿನ ಸಲಾ ಮೆಹನತ್ ಮಾಡತಾನ.’

‘ ಇವತ್ತ ಕೆಲಸದಕಿ ಬರಂಗಿಲ್ಲಂತ’ ‘ ನಡೀತದೇಳು.ಎಷ್ಟ ಬೇಕ ಅಷ್ಟ ಭಾಂಡಿ ತೊಳಕೊಂಡ್ರಾತು’

ಒಟ್ಟಿನಾಗ ಸಾರಾಂಶ ಏನಂದ್ರ ಈ ‘ನಡೀತದೇಳ್ರಿ’ ಬದುಕನ್ನು
ಸರಳವಾಗಿಸುವ, ಸಹ್ಯವಾಗಿಸುವ ದಿವ್ಯ ಮಂತ್ರ.
ಎತ್ತಿನಾಗೂ ಸೈ..ಕತ್ಯಾಗೂ (ಕತ್ತೆ) ಸೈ ಅಂತಾರಲಾ . ನಾ ಅಂಥಾ ಜಾತಿಯಕಿ ಅನಕೋರಿ. ಹೀಂಗೇ ಆಗಬೇಕು, ಹಂಗೇ ಆಗಬೇಕು ಅನ್ನದs ‘ ನಡೀತದೇಳ್ರಿ’ ಅಂತ ಕೆಲಸ ಸಾಗಿಸುವ ಗುಣ ಅಷ್ಟೇನೂ ಸರಳಲ್ಲ. ಅದಕ್ಕೂ ‘ ಸಾಧನಾ’ (ಸಿನೆಮಾ ತಾರೆ ಅಲ್ಲ ಮತ್ತ) ಬೇಕಾಗತದ ಅಂಬೂದು ನನ್ನ ಅಂಬೋಣ.
ಇನ್ನ ನೀವು ಇದನ್ನೋದಿ ಕಾಮೆಂಟ್ ಮಾಡದಿದ್ರೂ ‘ ನಡೀತದೇಳ್ರಿ’ ಅಂತ ಅನಕೊಂಡ ಬಿಡಬ್ಯಾಡ್ರಿ. ಯಾಕಂದ್ರ ನೀವು ಓದೂದು, ಬರಿಯೂದು , ಅನಿವಾಸಿಯನ್ನ ಬೆಳಸೂದು, ಬೆಳಗಸೂದು ಭಾಳ ಮಹತ್ವದ್ದ ಅದ. ಏನಂತೀರಿ?