ಇಂಗ್ಲೆಂಡಿನಲ್ಲಿ ಯುಗಾದಿ: ವಸಂತನಾಗಮನದ ನಾಂದಿ

ಸಪ್ಟೆಂಬರ್ ತಿಂಗಳಿನಿಂದ ನಿರಂತರ ಮಳೆಯ ಆಘಾತಕ್ಕೆ ತುತ್ತಾಗಿರುವ ಇಂಗ್ಲೆಂಡಿನಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯ ಮಹಾಶಯ ಮೋಡಗಳ ಚಾದರದ ಮರೆಯಿಂದ ಹಣಕಿ ಹಾಕುತ್ತ ಕವಿದಿರುವ ಛಳಿಯ ಬಲೆಯನ್ನು ಹರಿದು ಬದಿಗೊಡ್ಡಲು ಪ್ರಯತ್ನಿಸುತ್ತಿದ್ದಾನೆ. ಅವನ ಕ್ಷೀಣ ಪ್ರಯತ್ನವನ್ನು ಹುರಿದುಂಬಿಸಲು ಒಣಗಿ ನಿಂತ ಗಿಡ ಮರಗಳು ಟಿಸಿಲೊಡೆಯುತ್ತ, ಮೈತುಂಬ ಬಣ್ಣ ಬಣ್ಣದ ಹೂಗಳನ್ನು ಹೊತ್ತು ಚಿಯರ್ ಚಿಣ್ಣರಂತೆ ಉತ್ಸಾಹದಿಂದ ತಲೆದೂಗುವುದ ಕಂಡಾಗ ವಸಂತ ಬಂದ ಎಂಬ ಉತ್ಸಾಹ ನಮ್ಮಲ್ಲೂ. ವಾತಾವರಣದಲ್ಲಿ ಕಾವು ಕೂಡುತ್ತಿದ್ದಂತೇ ಗೂಡುಗಳಿಂದ ಹೊರಬಿದ್ದು ಹೊಂಬಿಸಿಲ ಹೊಲದಲ್ಲಿ ಹೊರಳಾಡುವ ಹಂಬಲ ಹೊಮ್ಮುವುದು ಸಹಜ. ಇಂತಹ ಹಂಬಲಕ್ಕೆ ಇಂಬಾಗುವುದು ಯುಗಾದಿ. ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಬಳಗ ಯು.ಕೆ ಯುಗಾದಿ ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಏಪ್ರಿಲ್ ೧೩ರಂದು ಲೆಸ್ಟರ್ ನಗರದಲ್ಲಿ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀ ಭೂತರಲ್ಲಿ ಒಬ್ಬರಾದ, ಅನಿವಾಸಿ ಬಳಗದ ಸದಸ್ಯರೂ ಆದ ಡಾ. ರಾಜಶ್ರೀ ಪಾಟೀಲರು ತಮ್ಮ ಅನಿಸಿಕೆಗಳನ್ನು ಚಿತ್ರ ಸಮೇತ ಇಲ್ಲಿ ಉಣಬಡಿಸಿದ್ದಾರೆ. ಕಾರಣಾಂತರಗಳಿಂದ ಅಂದು ಬರಲಾಗದವರಿಗೆ, ವಿದೇಶಗಳಲ್ಲಿರುವ ನಮ್ಮ ಓದುಗರಿಗೆ ಈ ವರದಿ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ. ಪ್ರತೀ ಕನ್ನಡ ಬಳಗದ ದೀಪಾವಳಿ-ಯುಗಾದಿ ಕಾರ್ಯಕ್ರಮದಲ್ಲಿ ನಮ್ಮ ಅನಿವಾಸಿ ಬಳಗ ಸಮಾನಾಂತರವಾಗಿ ಸಾಹಿತ್ಯಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ರಂಗಕರ್ಮಿ ಶ್ರೀ. ಶ್ರೀನಿವಾಸ ಪ್ರಭು ಅವರೊಂದಿಗೆ ನಡೆಸಿದ ಸಂವಾದದ ಅನುಭವವನ್ನು ಉತ್ತರ ಐರ್ಲ್ಯಾನ್ಡ್ ನಿಂದ ಮೊದಲ ಬಾರಿಗೆ ಭಾಗವಹಿಸಿದ ಶ್ರೀಮತಿ ಅಮಿತ ರವಿಕಿರಣ್ ಮುಂದಿನ ವಾರ ವಿಶದವಾಗಿ ಹಂಚಿಕೊಳ್ಳಲಿದ್ದಾರೆ. (ಸಂ)

‘ಬೇವಿನಕಹಿ ಬಾಳಿನಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.’
ನಮ್ಮೆಲ್ಲರ ಜೀವನ ಜಂಜಾಟಗಳ ನಡುವೆ ಸಂಭ್ರಮದ ಕಳೆ ತರಲು ಯುಗಾದಿ ಸಂಭ್ರಮ ಮತ್ತೆ ಬಂದಿತ್ತು ೧೩/೦೪/೨೪ ಲೆಸ್ಟರ್ ಗೆ. ಲೆಸ್ಟರ್ ಕನ್ನಡಿಗರು ೨೦೧೬ ನಿಂದ ಸಾಂಪ್ರದಾಯಿಕವಾಗಿ ಯುಗಾದಿಯನ್ನ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ  ಆದರೆ ಈ ಬಾರಿ ಕನ್ನಡ ಬಳಗದ ಸಹಯೋಗ ಅದರ ಮೆರಗನ್ನ ಇನ್ನೂ ಹೆಚ್ಚಿಸಿತ್ತು. ದೇಶದ ಹಲವಾರು ಮೂಲೆಗಳಿಂದ  ೬೦೦ಕ್ಕೂ ಹೆಚ್ಚು ಜನರು ಯುಗಾದಿ ಸಂಭ್ರಮವನ್ನು  ಆಚರಿಸಲು ನೆರೆದಿದ್ದರು. ಅದೇ ದಿನದಂದು ಹಲವಾರು ಕಡೆ ಯುಗಾದಿ ಸಂಭ್ರಮಾಚರಣೆ ಇದ್ದರೂ ಲೆಸ್ಟರನಲ್ಲಿ ಇಷ್ಟೊಂದು ಜನ ಸೇರಿದ್ದು ಇನ್ನೂ ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ವಿಧಿವತ್ತಾಗಿ  ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಯೊಂದಿಗೆ ಮತ್ತು ಸ್ತುತಿಹಾಡಿನೊಂದಿಗೆ ಓಂಕಾರ ದೊರಕಿತು. ಲೆಸ್ಟರ್ ಕನ್ನಡಿಗರು ಮತ್ತು ಕನ್ನಡ ಬಳಗ ಯುಕೆ ತಂಡಗಳು ಭಾರತದಿಂದ ಆಗಮಿಸಿದ ಜನಪ್ರಿಯ ಗಣ್ಯ ಅತಿಥಿಗಳಾದ ಶ್ರೀಯುತ ಸಿಹಿ ಕಹಿ ಚಂದ್ರು, ಶ್ರೀನಿವಾಸ ಪ್ರಭು, ವಿಶ್ವೇಶ್ ಭಟ್ ಅವರನ್ನ ಮತ್ತೂ ದೇಶದ ಮೂಲೆ ಮೂಲೆಯಿಂದ ಬಂದ ಕನ್ನಡಿಗರನ್ನ ಹೃದಯ ಪೂರ್ವಕವಾಗಿ ಬೇವು ಬೆಲ್ಲವನ್ನ ಹಂಚುವದರೊಂದಿಗೆ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭಕೋರಿದರು.

ಸಾಂಪ್ರದಾಯಿಕ ಭರತನಾಟ್ಯ ನೃತ್ಯಗಳಿಂದ ಕಲಾಪ್ರದರ್ಶನ ಪ್ರಾರಂಭವಾಯಿತು. ಬಿಡುವಿಲ್ಲದೆ ಸತತ ೫ ಘಂಟೆಗಳ ಕಾಲ ಕಲಾಪ್ರದರ್ಶನ ಯುಕೆಯ ವಿವಿಧ ಪ್ರದೇಶಗಳಿಂದ ಬಂದ ಕಲಾವಿದರಿಂದ ನಡೆಯಿತು .  ಚಿಕ್ಕ ಪುಟಾಣಿಗಳು ‘ಸಿಂಡರೆಲ್ಲ’ ನೃತ್ಯರೂಪಕ , ಧಾರ್ಮಿಕ ಭಾವನೆಯನ್ನು ಪುಟಿಸಿದ, ನಾಟಕೀಯ ಕನ್ನಡ ಭಾಷೆಯಲ್ಲಿ ಮೂಡಿ ಬಂದ ‘ಸೀತಾ ಅಗ್ನಿಪ್ರವೇಶ’ ದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕರ್ನಾಟಕದ ಶ್ರೀಮಂತ ನೃತ್ಯ ವೈವಿದ್ಯತೆಯನ್ನ ಪ್ರದರ್ಶಿಸುವ ಕೋಲಾಟ , ಕಂಸಾಳೆ, ಡೊಳ್ಳು ಕುಣಿತ, ಕೊಡವ ನೃತ್ಯ ಮತ್ತು ಹುಲಿಕುಣಿತವನ್ನೊಳಗೊಂಡ ‘ಕರ್ನಾಟಕ ನೃತ್ಯದರ್ಶನ’, ಭಾರತದ ವಿವಿಧ ರಾಜ್ಯಗಳ ಮದುವೆ ಶೃಂಗಾರವನ್ನ ಬಿಂಬಿಸುವ ‘ಲಗ್ನ ಶೃಂಗಾರ’, ‘ಹಚ್ಚೇವು ಕನ್ನಡದ ದೀಪ’ ನೃತ್ಯ ರೂಪಕ, ಜನಪ್ರಿಯ ಗೀತೆಗಳನ್ನಾಧರಿಸಿದ ನೃತ್ಯಗಳು, ಹಾಡು, ವೀಣೆ ಹಾಗು ಗಿಟಾರ್ ವಾದನ ಕಾರ್ಯಕ್ರಮಗಳು ನೆರೆದವರ ಮನಸೆಳೆದವು.

ಈ ಎಲ್ಲ ಕಾರ್ಯಕ್ರಗಳು ಒಂದು ಕಡೆಯಾದರೆ, ಇನ್ನೊಂದೆಡೆ ಬಹು ಪ್ರಸಿದ್ದಿ ಪಡೆದಿರುವ ಲೆಸ್ಟರ್ ಬಾಳೆ ಎಲೆ ಭೋಜನ ಯುಗಾದಿ ಸಂಭ್ರಮಕ್ಕೆ ಸಾಂಪ್ರದಾಯಿಕ ಹೊಳಪನ್ನು ಕೊಟ್ಟಿತ್ತು. ಹೋಳಿಗೆ, ಪಾಯಸ, ಭಜಿ, ಪಲ್ಯಗಳು, ಪೂರಿ, ಚಿತ್ರಾನ್ನ, ಅನ್ನ, ಸಾರು, ಸಾಂಬಾರ್, ಉಪ್ಪಿನಕಾಯಿ, ಕೋಸಂಬ್ರಿ ಹೀಗೆ ಭಕ್ಷ್ಯಗಳ ಪಟ್ಟಿ ಎಷ್ಟು ದೊಡ್ಡದಿತ್ತೋ, ಊಟಮಾಡಿದವರಿಂದ ಊಟದ ಬಗೆಗಿನ ಹೊಗಳಿಕೆ ಪಟ್ಟಿನೂ ಅಷ್ಟೇ ದೊಡ್ಡದಾಗಿತ್ತು! ಲೆಸ್ಟರ್ ಆಯೋಜಕರೇ ಟೊಂಕಕಟ್ಟಿ ಈ ಭೂರಿ ಭೋಜನದ ಅಡುಗೆಯನ್ನು ಮಾಡಿ, ಬಡಿಸಿದ್ದು ಇನ್ನೂ ವಿಶೇಷವಾಗಿತ್ತು! ಊಟದ ವ್ಯವಸ್ಥೆ ಯಶಸ್ವಿಯಾಗಲು ಲೆಸ್ಟರ್ ಕನ್ನಡ ಕುಟುಂಬದೊಟ್ಟಿಗೆ ಹಲವಾರು ಸ್ವಯಂಸೇವಕರು ಕೆಲಸಮಾಡಿದ್ದರು. ಕರ್ನಾಟಕದಿಂದ ಬಂದ ಲೆಸ್ಟರ್ ಮತ್ತು ಡಿ ಮೊಂಟೊಫೋರ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು , ಶಿವಾಲಯ ಲೆಸ್ಟರ್ ಗುಂಪು ಮತ್ತು ಹೆಚ್ ಎಸ್ ಎಸ್ ಸ್ವಯಂಸೇವಕರು ನಗುಮುಖದಿಂದ ತಮ್ಮ ನಿಸ್ವಾರ್ಥ ಸಹಾಯ ಒದಗಿಸಿದರು.

ಸಭಾಂಗಣದ ಪಕ್ಕದಲ್ಲಿ ಆಯೋಜಿಸಿದ ಕೆಲ ಜಾಹಿರಾತುದಾರರ ಅಂಗಡಿಗಗಳು ಜನರ ಆಕರ್ಷಣೆಗೆ ಒಳಗಾದವು . ಇವುಗಳ ಜೊತೆ ಮ್ಯಾಕ್ ಮಿಲನ್ ಚಾರಿಟಿಗೋಸ್ಕರ ೧೩ ವರ್ಷದ ಹುಡುಗಿ ಖುಷಿ ಪಾಟೀಲ್ ತನ್ನ ಕೈಯಾರೆ ಬೇಕ್ ಮಾಡಿದ ವಿವಿಧ ರೀತಿಯ ಕೇಕುಗಳು ಮತ್ತು ಬಿಸ್ಕತ್ಗಳನ್ನೊಳಗೊಂಡ ಅಂಗಡಿ ಚಿಕ್ಕ ಮಕ್ಕಳು ತಮ್ಮ ತಂದೆ ತಾಯಂದಿರನ್ನ ಅಲ್ಲಿಗೆ ಕರೆದೊಯ್ಯುವಂತೆ ಮಾಡಿತ್ತು. ನೆರೆದವರ ಧಾರಾಳ ಕಾಣಿಕೆ ಜಾಹಿರಾತಿನ ನೆರವಿಲ್ಲದೆ ಅವಳ ನೀರಿಕ್ಷೆಗೂ ಮೀರಿ ಹಣಕೂಡಿಸುವಲ್ಲಿ ಯಶಸ್ವಿಯಾಯಿತು. ಅನನ್ಯ ಪ್ರಸಾದ್ (ಡಾ ಜಿ ಎಸ್ ಶಿವಪ್ರಸಾದರವರ ಮಗಳು) ಈ ವರ್ಷಾಂತ್ಯದಲ್ಲಿ ತಾವು ಒಂಟಿಯಾಗಿ ದತ್ತಿ ಕಾರ್ಯಕ್ಕಾಗಿ ಅಟ್ಲಾಂಟಿಕ್ ಸಾಗರವನ್ನು ಹುಟ್ಟು ದೋಣಿಯಲ್ಲಿ ದಾಟುವ ಸಾಹಸದ ಮಾಹಿತಿಯನ್ನು ಹಂಚಿಕೊಂಡರು. ಸಂಗ್ರಹಿಸಲಿರುವ ಹಣವನ್ನು ಯು.ಕೆ ಯ ಮಾನಸಿಕ ಆರೋಗ್ಯ ದತ್ತಿ ಮತ್ತು ಭಾರತದ ದೀನಬಂಧು ಟ್ರಸ್ಟ್ ಗಳೊಂದಿಗೆ ಹಂಚುವ ಆಕಾಂಕ್ಷೆ ಅವರದ್ದು. ಅವರ ಈ ಪ್ರಯತ್ನ ಯಶಸ್ವಿಯಾದರೆ, ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ಹುಟ್ಟು ದೋಣಿಯಲ್ಲಿ ಕ್ರಮಿಸಿದ ಪ್ರಥಮ ಬಣ್ಣದ ಮಹಿಳೆಯಾಗಲಿದ್ದಾರೆ ಎಂಬುದು ಕನ್ನಡಿಗರಿಗೆ/ಭಾರತೀಯರಿಗೆ ಹೆಮ್ಮೆಯ ವಿಷಯ. ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಎಲ್ಲರೂ ಹಾರೈಸಿದರು.  ಇದರೊಟ್ಟಿಗೆ ಕನ್ನಡ ಬಳಗ ಯುಕೆ ತಂಡದ ವಾರ್ಷಿಕ ಸಾಮಾನ್ಯ ಸಭೆ (ಎಜಿಮ್) ಮತ್ತು ಅನಿವಾಸಿ ಬಳಗದ ಕಾರ್ಯಕ್ರಮ (ಇದರ ವಿಶೇಷ ವಿವರ ಮುಂದಿನ ವಾರ) ಸಮಾನಾಂತರವಾಗಿ ನಡೆದವು.

ಮತ್ತೆ ಸಾಯಂಕಾಲ ಸಭಿಕರೆಲ್ಲ ಕಾತುರದಿಂದ ಕಾಯುತ್ತಿದ್ದ ಗಣ್ಯರ ಕಾರ್ಯಕ್ರಮಗಳು ಶುರುವಾದವು. ಶ್ರೀಯುತ ಶ್ರೀನಿವಾಸ ಪ್ರಭು ತಮ್ಮ ವೃತ್ತಿ ಬದುಕಿನ ಅನುಭವಗಳನ್ನ ಹಂಚಿಕೊಂಡು ಜನರನ್ನ ರಂಜಿಸಿದರು. ಸಭಿಕರ ಕೋರಿಕೆಗೆ ಮಣಿದು, ರಣಧೀರ ಚಿತ್ರದಲ್ಲಿ ಅವರು ನಟ ರವಿಚಂದ್ರನ್ ಅವರಿಗೆ ಧ್ವನಿ ದಾನ ಮಾಡಿದ ಸಂಭಾಷಣೆಗಳನ್ನು ಸಾದರ ಪಡಿಸಿದರು. ಆದರೆ ಅವರು ತಮ್ಮ ಕಂಚಿನ ಕಂಠದಲ್ಲಿ ಪಠಿಸಿದ ಹ್ಯಾಮ್ಲೆಟ್ ನಾಟಕದ ನಾಯಕನ ಕೊನೆಯ ಸಂಭಾಷಣೆ ಅವರ ಭಾಷಣದ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀಯುತ  ಸಿಹಿಕಹಿ ಚಂದ್ರು ಅವರಂತೂ ತಮ್ಮ ಮಾತಿನ ಚಾಕಚಕ್ಯತೆಯಿಂದ ಸಭಿಕರನ್ನ ನಗೆಗಡಲಲ್ಲಿ ಮುಳುಗಿಸಿದರು. ಅವರು ಕಲಾಸಾಮ್ರಾಟ್ ರಾಜಕುಮಾರ ಅವರೊಂದಿಗೆ ಕಳೆದ ಕ್ಷಣಗಳು ಎಲ್ಲರ ಮನದಲ್ಲಿ ಮರೆಯದೆ  ಉಳಿಯುವಂತವು. ಅವರು ನಡೆಸಿ ಕೊಡುವ  ಅಡುಗೆ ಕಾರ್ಯಕ್ರಮಗಳು ಕರ್ನಾಟಕದ ಮನೆಮನೆಗಳಲ್ಲಿ ಮಾತಾಗಿವೆ. ಅವರ ಸಲಹೆಯಂತೆ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಿಗಳು ಮನೆಯಲ್ಲಿ ಮಾಡಿದ ಅಡುಗೆಗಳ ರುಚಿ ನೋಡಿ ಚಂದ್ರು ಅವರು ವಿಜೇತರನ್ನ ಆಯ್ಕೆಮಾಡಿದರು ಮತ್ತು ಅವರ ಹೆಸರಾಂತ ಜನುಮದ ಜೋಡಿ ಸ್ಪರ್ಧೆಯನ್ನೂ ನಡೆಸಿಕೊಟ್ಟರು.

ಸಾಯಂಕಾಲದ ಲಘು ಉಪಾಹಾರ ಮತ್ತು ಚಹಾ ಜನರನ್ನ ಕೊನೆಯ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿತು. ಶ್ರೀಯುತ ವಿಶ್ವೇಶ್ ಭಟ್ ರವರು ಬಹುಮುಖ ಪ್ರತಿಭೆಯ ಅಭಿಯಂತರು. ಇವರು ವ್ಯಂಗಚಿತ್ರ ಮತ್ತು ಸಂಗೀತ ಲೋಕಗಳಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ಇವರ ತಮ್ಮ ವಿಭಿನ್ನ ರೀತಿಯ ಹಲವಾರು ಸಂಗೀತ ಪ್ರಕಾರಗಳನ್ನೊಳಗೊಂಡ ಪ್ರದರ್ಶನದಿಂದ  ಜನರನ್ನ ಮಂತ್ರ ಮುಗ್ಧರನ್ನಾಗಿಸಿದರು. ಇವರ ಹಾಡಿಗೆ ಜನ ಹೆಜ್ಜೆ ಹಾಕಿ ಸಂತೋಷ ವ್ಯಕ್ತ ಪಡಿಸಿದರು. ಕಾರ್ಯಕ್ರಮ ರಾತ್ರಿಯ ಭೋಜನ ಮತ್ತು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಒಟ್ಟಾರೆ ಇದು ಒಂದು ಪರಿಪೂರ್ಣವಾದ , ಪಕ್ವವಾದ, ಯುಗಾದಿ ಹಬ್ಬದ ಸಂಭ್ರಮವನ್ನೊಳಗೊಂಡ ಮತ್ತು  ಕರ್ನಾಟಕದ ಸಂಸ್ಕೃತಿಯ ವೈವಿಧ್ಯತೆಯನ್ನ ಎತ್ತಿಹಿಡಿಯುವ ಆಚರಣೆಯಾಗಿತ್ತು. ಹೀಗೆ ಹಲವಾರು ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ನಡೆದು ಅನಿವಾಸಿ ಕನ್ನಡಿಗರ ಮನದಲ್ಲಿ ಸದಾ ತಾಯ್ನುಡಿ ಮತ್ತು ತಾಯ್ನೆಲದ ವಾಸನೆಯನ್ನು ತುಡಿಯುತ್ತಿರಲಿ ಎಂದು ಹಾರೈಸೋಣ.

ಡಾ. ರಾಜಶ್ರೀ ಪಾಟೀಲ್

ಎರಡು ಕವನಗಳು

ರಾಮ ರಾಮ

ಈ ಭವ್ಯ ರಾಮ ಮಂದಿರ

ಬೇಕೆಂದನೆ ಆ ದಿವ್ಯ ರಾಮ ಚಂದಿರ

ಮನೆ ಮನೆಯಲ್ಲೂ ನಾನಿರುವೆನೆಂದ
ಮನ ಮನದಲ್ಲೂ ನಾ ನಗುವೆನೆಂದ
ಮನೆಗೊಂದು ಇಟ್ಟಿಗೆ ಕಂಭ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

ಅಮ್ಮ ನೊಂದ ಮಾತಿಗೆ ರಾಜ್ಯ ಕೊಟ್ಟ
ಅಗಸನೆಂದ ನೀತಿಗೆ ಹೆಂಡತಿ ಬಿಟ್ಟ
ರಹೀಮನಿಗೆಂದು ಬಿಟ್ಟ ಸ್ಥಾನ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

ಕಾವಿ ಕೇಸರಿ ದರ್ಪದಿ ಆವನೆಂದೂ ಉಡಲಿಲ್ಲ
ಭಸ್ಮ ಕುಂಕುಮಾದಿ ಹಣೆಯಲ್ಲಿ ಧರಿಸಿಲ್ಲ
ಈ ವೇಷ ಈ ರೋಷ ಅವ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

  • ಡಾ. ಗುರುಪ್ರಸಾದ್ ಪಟ್ವಾಲ್

——————————————————————————————————————–

ಆನಂದದ ಬೇನೆ

ನನ್ನ ಕಣ್ ಹೃನ್ಮನಗಳನು ಸೂಜಿಗಲ್ಲಿನಂತೆ ಸೆಳೆಯುವ ಸುಂದರ ಸುಮಗಳೇ

(ಚಿತ್ರಕೃಪೆ: ವಿಜಯನರಸಿಂಹ)

ನಿಮ್ಮನು ದಿನವೂ ನೋಡುತಿರುವಾಸೆ

ನಿಮ್ಮೊಂದಿಗೆ ದಿನವೂ ಮಾತಾಡುವಾಸೆ

ನನ್ನ ನಿತ್ಯದ ಆಗು ಹೋಗುಗಳನು ನಿಮಗೆ ಹೇಳುವಾಸೆ

ನನ್ನ ಇಷ್ಟ ಕಷ್ಟಗಳನು ನಿಮಗೆ ತಿಳಿಸುವಾಸೆ

ನನ್ನ ಸುಖ ದುಃಖಗಳನು ಹಂಚಿಕೊಳುವಾಸೆ

ನನ್ನ ಪ್ರತಿಯೊಂದು ನಿರ್ಧಾರದ ಪರಿಣಾಮಗಳನು ಕಡೆಯುವಾಸೆ

ನನ್ನ ಚಿಂತೆಗಳ ಕಾರಣಗಳನು ನಿಮ್ಮೊಂದಿಗೆ ಮಂಥಿಸುವಾಸೆ

ನನ್ನ ಸುತ್ತಲಿನ ಜಗದ ಜನರ ಕುಟಿಲತೆಯನ್ನು ಕುಟುಕುವಾಸೆ

ನನ್ನೊಳಗಿನ ಎಲ್ಲ ಭಾವಗಳನು ತಿಳಿನೀರಿನ ಕೊಳದ ರೀತಿ ನಿಮಗೆ ತೋರುವಾಸೆ

(ಚಿತ್ರಕೃಪೆ: ರಾಮ್)

ನನ್ನ ತಪ್ಪುಗಳನು ತಿದ್ದಿಕೊಳುವ ಬಗೆಗಳನು ನಿಮ್ಮಿಂದ ಕೇಳುವಾಸೆ

ನನ್ನ ಭೂತ, ವರ್ತಮಾನ, ಭವಿತವ್ಯಗಳನು ತೆರೆದಿಡುವಾಸೆ

ಆದರೆ ನಿಮ್ಮ ಸುಂದರ ನಗೆ ಮೊಗಗಳು ನನ್ನನ್ನು ಮೂಕನಾಗಿಸಿಬಿಡುತ್ತವೆ

ಆಗ ನೀವೂ ಮೂಕ , ನಾನೂ ಮೂಕ

ಇರಲಿ ಬಿಡಿ ಹೀಗೆ ನನ್ನ ನಿಮ್ಮ ನಡುವಿನ ಮೂಕ ಸಂವೇದನೆ

ಇದರ ಆನಂದವನು ನಾನು ಹೀಗೇ ಸವಿಯುವ ಬೇನೆ

🖋ವಿಜಯನರಸಿಂಹ