ಸಂಧ್ಯಾದೀಪಗಳ ದಾರಿಯಲ್ಲಿ

ಈ ವಾರದ ಸಂಚಿಕೆಯಲ್ಲಿ ಬೆಂಗಳೂರಿನ ನಿವೃತ್ತಿ-ನಂತರದ ಹಿರಿಯರ ಮನೆಯನ್ನು ಕುರಿತಾದ ನನ್ನ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿ ಕೆಲವು ಹಿರಿಯ ನಾಗರೀಕರು  ಬದುಕಿನ ಸಂಧ್ಯಾ ಕಾಲದಲ್ಲಿ ಸವಾಲುಗಳನ್ನು ಎದುರಿಸಿ ಹೇಗೆ ಪರಿಹಾರ ಕಂಡುಕೊಂಡಿದ್ದಾರೆ,  ಅವರು ಹೇಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದಾರೆ 
ಮತ್ತು ಅವರ ಮುಂದಿರುವ ಆಯ್ಕೆಗಳೇನು? ಎಂಬುದನ್ನು ವಿಶ್ಲೇಷಿಸಿದ್ದೇನೆ. ಇಲ್ಲಿ ಭಾರತ ಮತ್ತು ಬ್ರಿಟನ್ನಿನ್ನ ಹಿರಿಯರ ಬದುಕನ್ನು ಒಂದಕ್ಕೊಂದು ಪರ್ಯಾಯವಾಗಿ ಇಟ್ಟು ನೋಡುವ ಪ್ರಯತ್ನ ನನ್ನದಾಗಿದೆ. ಹಿಂದೆ ನಾನು ಬರೆದ "ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು' ಎಂಬ ಲೇಖನದ ಇನ್ನೊಂದು ಅಧ್ಯಾಯವೇ ಈ ಬರಹ ಎನ್ನಬಹುದು. ಬೆಂಗಳೂರಿನಲ್ಲಿ ನಾನು ಭೇಟಿನೀಡಿದ ‘ಪ್ರೈಮಸ್ ರಿಫ್ಲೆಕ್ಷನ್ಸ್’ ಎಂಬ ಹಿರಿಯರ ಮನೆಯ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಬೆಂಗಳೂರಿನ ಇನ್ನೊಂದು ಹಿರಿಯರ ಮನೆ ‘ಸಂಧ್ಯಾದೀಪ’ ಕುರಿತಾದ ನನ್ನ ಕವನವನ್ನು ಇಲ್ಲಿ ಪ್ರಕಟಿಸಲಾಗಿದೆ. ಯೌವನ ಮತ್ತು ವೃದ್ಧಾಪ್ಯ ಇವೆರಡರ ಕೆಲವು ಅಭಿಮುಖಗಳನ್ನು ಚಿತ್ರಿಸುವ "ಅಂದು-ಇಂದು" ಎಂಬ ಡಾ. ರಘುನಾಥರ ಕವನ ಇಲ್ಲಿದೆ. ಕೊನೆಯದಾಗಿ ಪ್ರೈಮಸ್ ಹಿರಿಯರ ಮನೆಯ ಸಾಹಿತ್ಯಾಸಕ್ತ ನಿವಾಸಿಯಾದ ಪುಷ್ಪ ಅವರು ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಏಕೀಕರಣದ ಹಿನ್ನೆಲೆಯನ್ನು ಕುರಿತು ಬರೆದ ಲೇಖನ ಇಲ್ಲಿದೆ. ಕನ್ನಡ ರಾಜ್ಯೋತ್ಸವವಾಗಿ ಕೆಲವು ದಿನಗಳಾಗಿವೆ, ನಾವೆಲ್ಲಾ ಇನ್ನು ಅದರ ನೆನಪಿನ ಪರವಶತೆಯಲ್ಲಿರುವಾಗ ಈ ಬರಹ ಸಮಯೋಚಿತವಾಗಿದೆ ಎಂದು ಭಾವಿಸಿ ಪ್ರಕಟಿಸಲಾಗಿದೆ.


-ಸಂ
ಫೋಟೋ ಕೃಪೆ ಗೂಗಲ್
ಸಂಧ್ಯಾ ದೀಪಗಳ ದಾರಿಯಲ್ಲಿ

ಡಾ. ಜಿ. ಎಸ್. ಶಿವಪ್ರಸಾದ್

ಪಾಶ್ಚಿಮಾತ್ಯ ದೇಶಗಳಲ್ಲಿ ನರ್ಸಿಂಗಹೋಮ್ ಎಂದರೆ ಅನಾರೋಗ್ಯದಿಂದಾಗಿ ತಮ್ಮ ಸ್ವಾವಲಂಬನೆಯನ್ನು ಕಳೆದುಕೊಂಡು ಇತರರನ್ನು ಅವಲಂಬಿಸಿ ಬದುಕುತ್ತಿರುವ ಹಿರಿಯರ ಮನೆ ಎನ್ನ ಬಹುದು. ಇದು ಖಾಸಗಿ ಅಥವಾ ಸರ್ಕಾರ ನಡೆಸುತ್ತಿರುವ ಸಂಸ್ಥೆಯಾಗಿರುತ್ತದೆ. ತಕ್ಕ ಮಟ್ಟಿಗೆ ಗಟ್ಟುಮುಟ್ಟಾಗಿರುವ ಹಿರಿಯರು ದಂಪತಿಗಳಾಗಿ ಅಥವಾ ಒಬ್ಬಂಟಿಗರಾಗಿ ತಮ್ಮ ತಮ್ಮ ಮನೆಗಳಲ್ಲಿ ವಾಸಮಾಡುವುದು ಸಾಮಾನ್ಯ. ಇನ್ನು ಕೆಲವು ಹಣವಂತರು ತಮ್ಮ ದೊಡ್ಡ ಮನೆಗಳನ್ನು ಮಾರಿಕೊಂಡು ಆಕರ್ಷಕವಾಗಿರುವ, ಸೆಕ್ಯೂರಿಟಿ ಒದಗಿಸುವ, ಹೊಟೇಲಿನಂತೆ ಹಲವಾರು ಸೌಲಭ್ಯಗಳು ಇರುವ ಬಹು ಅಂತಸ್ತಿನ ರಿಟೈರ್ಮೆಂಟ್ ಹೋಮ್ ಗಳಲ್ಲಿ ವಾಸಮಾಡುತ್ತಾರೆ.

ಭಾರತದಲ್ಲಿ ಕಳೆದ ದಶಕಗಳ ಹಿಂದೆ ಜಾಯಿಂಟ್ ಫ್ಯಾಮಲಿ ವ್ಯವಸ್ಥೆ ಇದ್ದು, ಮಕ್ಕಳು, ಮೊಮ್ಮಕಳು ಹಿರಿಯರನ್ನು ಆತ್ಮೀಯವಾಗಿ ಪ್ರೀತಿ ಗೌರವಗಳಿಂದ ನೋಡಿಕೊಳ್ಳುತ್ತಿದ್ದರು. ಅದು ಸಮಾಜದ ನಿರೀಕ್ಷೆಯಾಗಿತ್ತು, ವ್ಯವಸ್ಥೆಯ ಅಂಗವಾಗಿತ್ತು. ಹಿರಿಯರು ತಾವು ಹಿಂದೆ ಕಟ್ಟಿಸಿದ ಮನೆಗೆ ಭಾವನಾತ್ಮಕ ಕಾರಣಗಳಿಂದ ಜೋತು ಬಿದ್ದು ಸಾಯುವತನಕ ಕಷ್ಟವೋ ಸುಖವೋ ಮಕ್ಕಳ ಜೊತೆಗೇ ಬದುಕುತ್ತಿದ್ದರು. ಹೆತ್ತವರು ಆಳಿದ ಮೇಲೆ ಆ ಮನೆ, ಅಸ್ತಿ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೋಗುತ್ತಿತ್ತು. ವಿವಾಹ ವಿಚ್ಛೇದನವನ್ನು ಸಮಾಜ ಒಪ್ಪುತ್ತಿರಲಿಲ್ಲ. ಹೀಗಾಗಿ ಹಿಂದಿನ ಕಾಲದಲ್ಲಿ ಸಂಸಾರಗಳು ಅವಿಭಾಜ್ಯ ಕುಟುಂಬಗಳಾಗಿ ಜೀವನ ನಡೆಸುತ್ತಿದ್ದವು. ಆ ತಲೆಮಾರಿಗೆ ವೃದ್ಧಾಶ್ರಮದ ಅಗತ್ಯವಿರಲಿಲ್ಲ. ಈಗಲೂ ಕೆಲವು ಸಂಸಾರಗಳು ಜಾಯಿಂಟ್ ಫ್ಯಾಮಿಲಿ ವ್ಯವಸ್ಥೆಯಲ್ಲಿ ಬದುಕುತ್ತಿವೆ. ಆದರೆ ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ, ಬದಲಾಗುತ್ತಿರುವ ಭಾರತದಲ್ಲಿ, ಕಿರಿಯ ದಂಪತಿಗಳು ತಮ್ಮ ವೃತ್ತಿಯ ಒತ್ತಡದಿಂದಾಗಿ ಅಥವಾ ವಿದೇಶದಲ್ಲಿ ಇರಬೇಕಾದ ಪರಿಸ್ಥಿತಿಯಿಂದಾಗಿ ತಮ್ಮ ಹಿರಿಯ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೇ ಇರುವ ಸನ್ನಿವೇಶಗಳಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗಿವೆ.

ಇನ್ನು ವಿದೇಶದಲ್ಲಿ ನೆಲೆಸಿರುವ ಭಾರತೀಯರು, ಕನ್ನಡಿಗರು ತಾವು ತಮ್ಮ ಸಂಧ್ಯಾ ಕಾಲದಲ್ಲಿ ಎಲ್ಲಿ ನೆಲೆಸುವುದು ಎಂಬ ದ್ವಂದದಲ್ಲಿ ಬದುಕುತ್ತಿದ್ದಾರೆ. ನಿವೃತ್ತಿ ಪಡೆದ ನಂತರ ಈ ವಿದೇಶದಲ್ಲಿ ಬದುಕುವ ಆಸಕ್ತಿ ಕೆಲವರಲ್ಲಿ ಕಡಿಮೆಯಾಗಿ ತಾಯ್ನಾಡಿನ ತುಡಿತ ಹೆಚ್ಚಾಗುವುದು ಸಹಜ. ಭಾಷೆ ಮತ್ತು ಸಾಂಸ್ಕೃತಿಕ ಪ್ರಜ್ಞೆ ಜಾಗೃತವಾಗಿರುವವರಿಗೆ ಇದು ಹೆಚ್ಚಿನ ಸಮಸ್ಯೆಯಾಗಬಹುದು. ಇಂಗ್ಲಿಷ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅಪ್ಪಿಕೊಂಡು ಬದುಕುತ್ತಿರುವವರಿಗೆ ಮತ್ತು ಬಲವಾದ ಸಾಂಸಾರಿಕ ನೆಂಟುಗಳು ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚಾಗಿರುವವರಿಗೆ ಭಾರತಕ್ಕೆ ಮರಳುವ ಹಂಬಲ ಕಡಿಮೆ ಎನ್ನಬಹುದು. ಈ ವಿಚಾರ ನಮ್ಮ ಮೊದಲನೇ ಪೀಳಿಗೆಯವರಿಗಷ್ಟೇ ಪ್ರಸ್ತುತ ಸಮಸ್ಯೆ.

ಭಾರತಕ್ಕೆ ಮರಳಿ ಬರುಲು ಇಚ್ಛಿಸುವ ಅನಿವಾಸಿಗಳು, ನಿವೃತ್ತಿಯಲ್ಲಿ ಸ್ವಲ್ಪ ಹಣ ಉಳಿಸಿಕೊಂಡವರು ಇಲ್ಲಿಯ ಚಳಿಗೆ ಬೇಸತ್ತು, ಇಳಿ ವಯಸ್ಸಿನಲ್ಲಿ ಭಾರತಕ್ಕೆ ಬಂದು ನೆಲಸ ಬಾರದೇಕೆ ಎಂದು ಆಲೋಚಿಸುತ್ತಿದ್ದಾರೆ. ಇನ್ನು ಇತ್ತೀಚಿಗೆ ನಿವೃತ್ತಿ ಪಡೆದು ಒಳ್ಳೆ ಆರೋಗ್ಯವನ್ನು ಕಾಪಾಡಿಕೊಂಡಿರುವವರು ಚಳಿಗಾಲದಲ್ಲಿ ಬ್ರಿಟನ್ನಿನ ಚಳಿಯನ್ನು ತಪ್ಪಿಸಿಕೊಂಡು ೪-೬ ತಿಂಗಳವರೆಗೆ ಭಾರತದಲ್ಲಿ ವಾಸಮಾಡುವ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ. ಅಲ್ಲೊಂದು ಫ್ಲ್ಯಾಟ್ ತೆಗೆದುಕೊಂಡು ಅಲ್ಲೂ-ಇಲ್ಲೂ ವಾಸವಾಗಿರುತ್ತಾ ‘ಬೆಸ್ಟ್ ಆಫ್ ಬೋತ್ ವರ್ಲ್ಡ್ಸ್’ ಎನ್ನುವ ಖುಷಿಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಒಂದು ವ್ಯವಸ್ಥೆ ಎಲ್ಲಿಯವರಗೆ ಎಂಬ ಪ್ರಶ್ನೆ ಮೂಡುತ್ತದೆ. ನನ್ನ ಅಂದಾಜಿನಲ್ಲಿ, ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಎನ್ನ ಬಹುದು. ಬ್ರಿಟನ್ನಿನಿಂದ ಭಾರತಕ್ಕೆ ಹಿಂದೆ ಮುಂದೆ ಪ್ರಯಾಣಿಸುವುದು ಚಿಕ್ಕ ವಯಸ್ಸಿನಲ್ಲಿ ಸರಾಗವಾದರೂ ಒಂದು ವಯಸ್ಸಾದ ಮೇಲೆ ಕಠಿಣವಾಗಬಹುದು. ಆರೋಗ್ಯ ಕೈಕೊಡಬಹುದು, ವಿಮಾನ ದರಗಳು ವರ್ಷ ವರ್ಷ ಹೆಚ್ಚಾಗುತ್ತಿದ್ದು ಒಂದು ಹಂತದಲ್ಲಿ ದುಬಾರಿ ಎನಿಸ ಬಹುದು. ಮುಂಬರುವ ಯಾವುದೋ ಒಂದು ಹಂತದಲ್ಲಿ ಈ ಹಿರಿಯರು ಎರಡು ಕಡೆ ವಾಸ ಮಾಡುವುದನ್ನು ಬಿಟ್ಟು ಒಂದೆಡೆ ನೆಲೆಸುವ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ.

ಹದಗೆಡುತ್ತಿರುವ ಅನಾರೋಗ್ಯದಿಂದ ತಮ್ಮ ದಿನ ನಿತ್ಯ ಬದುಕಿಗೆ ಇನ್ನೊಬ್ಬರನ್ನು ಅವಲಂಬಿಸಬೇಕಾದ ಸನ್ನಿವೇಶದಲ್ಲಿ, ಬ್ರಿಟನ್ನಿನಲ್ಲಿ ಸಾಕಷ್ಟು ಹಣ ತೆರಬೇಕಾಗುತ್ತದೆ. ನರ್ಸಿಂಗ್ ಹೋಂ ಸೇರಲು ತಮ್ಮ ತಮ್ಮ ಮನೆಗಳನ್ನು ಅಡವಿಡಬೇಕಾದ ಅನಿವಾರ್ಯವನ್ನು ಕಂಡಿದ್ದೇವೆ, ಕೇಳಿದ್ದೇವೆ. ಈ ನರ್ಸಿಂಗ್ ಹೋಮ್ ಅಥವಾ ರೆಸಿಡೆನ್ಶಿಯಲ್ ಹೋಂ ಗಳಲ್ಲಿ ಬ್ರಿಟಿಷ್ ಆಹಾರವನ್ನು ಸೇವಿಸುತ್ತಾ, ಗೊತ್ತು ಪರಿಚಯವಿಲ್ಲದ ಬೇರೊಂದು ಸಂಸ್ಕೃತಿಯ ಜನರೊಂದಿಗೆ ಬೆರೆಯುತ್ತಾ ಕೊನೆ ಘಳಿಗೆಯನ್ನು ಕಳೆಯುವುದು ಹೇಗೆ? ಎಂಬ ಚಿಂತೆ ಮೂಡುವುದು ಸಹಜವೇ. ತಮ್ಮ ತಮ್ಮ ಮನೆಗಳಲ್ಲೇ ಸಹಾಯಕ ಸಿಬಂದ್ಧಿಗಳನ್ನು ಇಟ್ಟುಕೊಂಡು ಬದುಕುವುದಕ್ಕೆ ಬಹಳ ಹಣ ಬೇಕು. ಈ ಹಿನ್ನೆಲೆಯಲ್ಲಿ ಇದರ ಅರ್ಧ ದುಡ್ಡಿಗೆ ಭಾರತದಲ್ಲಿ ಯಾವುದಾದರೂ ವೃದ್ಧಾಶ್ರಮದಲ್ಲಿ ಅಥವಾ ಫ್ಲ್ಯಾಟಿನಲ್ಲಿ ಸಹಾಯಕ ಸಿಬಂದ್ಧಿಯನ್ನು ಗೊತ್ತುಮಾಡಿಕೊಂಡು ಬದುಕಬಹುದು ಎಂಬ ಒಂದು ಆಯ್ಕೆ ನಮ್ಮ ಕಲ್ಪನೆಗೆ ಒದಗಿ ಬರುತ್ತಿದೆ. ಇದು ಸಾಧ್ಯ ಎಂದು ಕೆಲವು ಹಿರಿಯರು ತಮ್ಮ ಅನುಭವದಿಂದ ತಿಳಿಸಿದ್ದಾರೆ.

ಇದೇ ಒಂದು ಸನ್ನಿವೇಶದಲ್ಲಿ ಸಿಲುಕಿದ್ದ ನಮ್ಮ ಕನ್ನಡ ಬಳಗದ ಹಿರಿಯ ಸದಸ್ಯರು ಮತ್ತು ದಂಪತಿಗಳಾದ ಡಾ.ಅಪ್ಪಾಜಿ ಗೌಡ ಮತ್ತು ಡಾ.ಭಾನುಮತಿ ಅವರು ಬೆಂಗಳೂರಿಗೆ ತೆರಳಿ ಅಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಇರುವ ಪ್ರೈ ಮುಸ್ ರಿಫ್ಲೆಕ್ಷನ್ಸ್ ಎಂಬ ಹಿರಿಯರ ಮನೆ ಅಥವಾ ಆಶ್ರಯ ಸಂಕೀರ್ಣ ( Residential complex) ಎನ್ನಬಹುದಾದ ಸಂಸ್ಥೆಯಲ್ಲಿ ವಾಸವಾಗಿದ್ದರು. ಡಾ ಅಪ್ಪಾಜಿ ಅವರ ಅನಾರೋಗ್ಯ ಉಲ್ಪಣಗೊಂಡಾಗ ತಕ್ಕ ಮಟ್ಟಿಗೆ ಆರೋಗ್ಯವಂತರಾದ ಭಾನುಮತಿ ಆ ನಿರ್ಧಾರವನ್ನು ತೆಗೆದುಕೊಂಡು ಅಪ್ಪಾಜಿ ಅವರ ನಿಧನದ ಮುಂಚಿತ
ಹಲವಾರು ವರ್ಷಗಳನ್ನು ಗುಣಾತ್ಮಕ ಬದುಕಿನಲ್ಲಿ ಕಳೆದು ನೆಮ್ಮದಿಯನ್ನು ಪಡೆದುಕೊಂಡರು. ಈಗ ಭಾರತದಲ್ಲಿ ಆರೋಗ್ಯ ಸೌಲಭ್ಯಗಳು ಎಂದಿಗಿಂತ ಇಂದು ಚೆನ್ನಾಗಿವೆ. ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಕುಂದು ಕೊರತೆಗಳು ಹಿರಿಯ ನಾಗರೀಕರಿಗೆ ಅಸಮಾಧಾನವನ್ನು ಮತ್ತು ಆತಂಕವನ್ನು ಉಂಟುಮಾಡುತ್ತಿದೆ. ಹೀಗಿರುವಾಗ ಭಾರತದಲ್ಲಿ, ನಮ್ಮದೇ ನಾಡಿನಲ್ಲಿ ನಮ್ಮ ಸಂಧ್ಯಾಕಾಲವನ್ನು ಕಳೆಯುವುದು ಸಾಧ್ಯ ಎಂಬ ಅರಿವು ಉಂಟಾಗುತ್ತಿದೆ. ಎಲ್ಲ ದೇಶಗಳಲ್ಲೂ ಅಲ್ಲಲ್ಲಿಯ ಸಮಸ್ಯೆಗಳು ಇರುತ್ತವೆ. ಒಬ್ಬರಿಗೆ ಒಂದು ಆಯ್ಕೆ ಸೂಕ್ತವಾಗಿದ್ದಲ್ಲಿ ಅದು ಇನ್ನೊಬ್ಬರಿಗೆ ಅನುಕೂಲವಾಗದಿರಬಹುದು. ಹೀಗಾಗಿ ಅನಿವಾಸಿ ಹಿರಿಯರು ತಮ್ಮ ವೃದ್ಧಾಪ್ಯದಲ್ಲಿ ಎಲ್ಲಿ ಖಾಯಂ ಆಗಿ ನೆಲಸಬೇಕು ಎಂಬ ವಿಚಾರವನ್ನು ಅವರವರ ವೈಯುಕ್ತಿಕ ಅರೋಗ್ಯ, ಸಾಂಸಾರಿಕ ನೆಂಟುಗಳು, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ನಿರ್ಧರಿಸುತ್ತವೆ.

ನಾನು ಕಂಡಿರುವ ಹಿರಿಯರ ಮನೆ ಸಮುಚ್ಛಯಗಳಲ್ಲಿ ಪ್ರೈಮಸ್ ಬಹಳ ಅನುಕೂಲವಾಗಿ ಉತ್ತಮ ಗುಣಮಟ್ಟದ್ದಾಗಿದೆ. ಇದು ಬೆಂಗಳೂರಿನ ಹೊರವಲಯದಲ್ಲಿದ್ದು ಪ್ರಶಾಂತವಾಗಿದೆ. ಕನಕಪುರ ರಸ್ತೆಯಲ್ಲಿರುವ ರವಿ ಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಸುಪಾಸಿನಲ್ಲಿದೆ. ಇಲ್ಲಿ ಒಟ್ಟಾರೆ ೧೬೩ ಫ್ಲ್ಯಾಟ್ಗಳಿವೆ. ಫ್ಲ್ಯಾಟ್ಗಳನ್ನು ಕೊಂಡು ಅಲ್ಲಿ ವಾಸವಾಗಿರಬಹುದು. ಕೆಳಹಂತದಲ್ಲಿರುವ ಭೋಜನ ಶಾಲೆಯಲ್ಲಿ ಊಟ, ಉಪಹಾರ
ಇವುಗಳ ವ್ಯವಸ್ಥೆ ಇದೆ. ಕಟ್ಟಡದ ಸುತ್ತು ವಿಹರಿಸಲು ಸಾಧ್ಯವಿದೆ, ಅಲ್ಲೇ ಒಂದು ಸಣ್ಣ ದೇವಸ್ಥಾನವಿದೆ, ಲೈಬ್ರರಿ ಇದೆ, ಈಜುಕೊಳವಿದೆ, ಮತ್ತು ಒಂದು ಸಾರ್ವಜನಿಕ ಸಭಾಂಗಣವಿದೆ. ಈ ಸಮುಚ್ಚಯದಲ್ಲೇ ಒಂದು ಸಣ್ಣ ಅರೋಗ್ಯ ಕೇಂದ್ರವಿದ್ದು, ಬೆಳಗಿನಿಂದ ಸಂಜೆಯವರೆಗೆ ಒಬ್ಬ ವೈದ್ಯರಿರುತ್ತಾರೆ, ಉಳಿದಂತೆ ಒಬ್ಬ ನಿವಾಸಿ ನರ್ಸ್ ಇರುತ್ತಾರೆ.
ಇಲ್ಲಿಯ ನಿವಾಸಿಯೊಬ್ಬರು ಆಸ್ಪತ್ರೆಗೆ ಸೇರುವ ಸಂದರ್ಭ ಉಂಟಾದಲ್ಲಿ ಈ ಸಂಸ್ಥೆಗೇ ಸೇರಿದ ಆಂಬುಲೆನ್ಸ್ ಸೌಲಭ್ಯವಿದೆ. ರೋಗಿಯನ್ನು ವರ್ಗಾಯಿಸಿ ಆಸ್ಪತ್ರೆಗೆ ನೋಂದಾಯಿಸುವ ತನಕ, ಸಂಸ್ಥೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಮಕ್ಕಳು ಅಥವಾ ಸಂಬಂಧಿಗಳು ಬರುವವರೆಗೆ ಕಾಯುವ ಅವಶ್ಯಕತೆ ಇಲ್ಲ.

ಇಲ್ಲಿ ದೀಪಾವಳಿ, ರಾಜ್ಯೋತ್ಸವ ಸಮಾರಂಭಗಳು, ಪ್ರವಚನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಳೆದ ವರ್ಷ ನನ್ನ ಪುಸ್ತಕದ ಬಗ್ಗೆ, ನನ್ನ ಸಮ್ಮುಖದಲ್ಲಿ ಒಂದು ಸಾಹಿತ್ಯ ಸಂವಾದವನ್ನು ಏರ್ಪಡಿಸಲಾಗಿತ್ತು ಎಂಬುದನ್ನು ಇಲ್ಲಿ ನೆನೆಯುತ್ತೇನೆ. ಈ ಹಿರಿಯರು ಸಂಗೀತ, ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರೂ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ವಿಶೇಷವಾದ ಸಂಗತಿ.

ಡಾ. ಭಾನುಮತಿಯವರು ಉತ್ತಮ ಸಂಘಟಕರು. ಹಿಂದೆ ಅವರು ಕನ್ನಡ ಬಳಗದ ಸಕ್ರಿಯ ಅಧ್ಯಕ್ಷರಾಗಿ ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳನ್ನು, ಮೈಲಿಗಲ್ಲು ಸಂಭ್ರಮಗಳನ್ನು ಆಯೋಜಿಸಿದ್ದಾರೆ, ಅವರು ಬಹಳ ಕ್ರಿಯಾಶೀಲರು. ಅವರು ಬೆಂಗಳೂರಿನ ಪ್ರೈಮಸ್ ಸಂಸ್ಥೆಯಲ್ಲಿ ಇದೇ ಕ್ರಿಯಾಶೀಲತೆಯನ್ನು ಇತರರೊಂದಿಗೆ ಹಂಚಿಕೊಂಡು ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಅವರ ನೇತೃತ್ವದಲ್ಲಿ ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಿರಿಯರೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿರಿಯರು ಬದುಕಿನ ಪ್ರೀತಿಯನ್ನು ಉಳಿಸಿಕೊಂಡು, ಜೀವನೋತ್ಸಾಹದಲ್ಲಿ ಬದುಕುತ್ತಿರುವುದು ಶ್ಲಾಘನೀಯ. ಜೀವನದ ಸಂಧ್ಯಾಕಾಲದಲ್ಲಿ ಮೂಡುವ ಜಿಗುಪ್ಸೆ, ವೈರಾಗ್ಯ, ಒಂಟಿತನ, ಖಿನ್ನತೆಯನ್ನು ತರಬಹುದು. ಆದರೆ ಈ ಹಿರಿಯರು ತಮ್ಮ ಕಷ್ಟಗಳನ್ನು ಹತ್ತಿಕ್ಕಿ ತಮ್ಮ ಬದುಕನ್ನು ತಮಗೆ ಬೇಕಾದಂತೆ ರೂಪಿಸಿಕೊಂಡು ಖುಷಿಯಾಗಿದ್ದಾರೆ. ಇದು ಮೆಚ್ಚಬೇಕಾದ ಸಂಗತಿ. ಈ ಹಿರಿಯರಲ್ಲಿ ಒಂದು ನೆಮ್ಮದಿ ಇದೆ, ಸಂತೃಪ್ತಿ ಇದೆ ಎಂಬುದು ನನ್ನ ಗ್ರಹಿಕೆ. ಇಲ್ಲಿ ಒಬ್ಬರಿಗಿನೊಬ್ಬರು ಆಸರೆಯಾಗಿದ್ದಾರೆ. ಇಲ್ಲಿ ಪರಸ್ಪರ ಸಂಪರ್ಕ, ಪ್ರೀತಿ, ಕಾಳಜಿ ಮತ್ತು ವಿಶ್ವಾಸಗಳಿವೆ. ಎಲ್ಲರಿಗೂ ಎಲ್ಲರ ಪರಿಚಯವಿದೆ. ಒಂದು ರೀತಿ ನಮ್ಮ ಯು.ಕೆ ಕನ್ನಡ ಬಳಗದ ಸಮುದಾಯವಿದ್ದಂತೆ ಎನ್ನ ಬಹುದು. ನಾನು ಇಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದೇನೆ ಮತ್ತು ಇವರ ಒಡನಾಟವನ್ನು ಕಂಡಿದ್ದೇನೆ. ಅಪ್ಪಾಜಿ ಅವರು ವೀಲ್ ಚೇರಿನಲ್ಲಿ ಒಮ್ಮೆ ಭೋಜನ ಶಾಲೆಗೆ ಬಂದಾಗ ಅಲ್ಲಿಯ ಇತರ ನಿವಾಸಿಗಳು ಬಂದು ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಆತ್ಮೀಯ ಕುಶಲೋಪರಿಯಲ್ಲಿ ತೊಡಗಿದ್ದು ನನಗೆ ಇಂದಿಗೂ ನೆನಪಿದೆ. ಇಲ್ಲಿ ಹಿರಿಯರಿಗೆ ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಅನುಭವ ದೊರೆಯುತ್ತಿದೆ. ಈ ರೀತಿಯ ಒಂದು ಗುಣಮಟ್ಟದ ಆತ್ಮೀಯ ಬದುಕನ್ನು ಬ್ರಿಟನ್ನಿನ ಯಾವುದೇ ನರ್ಸಿಂಗ್ ಹೋಮ್ ಗಳಲ್ಲಿ ನಿರೀಕ್ಷಿಸುವುದು ಸಾಧ್ಯವಿಲ್ಲ. ಎಲ್ಲ ಸೌಲಭ್ಯಗಳು ದೊರೆತರು ಆ ಸಾಂಸ್ಕೃತಿಕ ಕೊರತೆ ನೀಗುವುದಿಲ್ಲ ಎಂಬುದು ಸತ್ಯ.

ಬ್ರಿಟನ್ನಿನಲ್ಲಿ ಮುಂದಕ್ಕೆ ಕನ್ನಡ ಬಳಗವೇ ಒಂದು ಹಿರಿಯರ ಮನೆಯನ್ನು ಕಟ್ಟ ಬಹುದಲ್ಲವೇ? ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಹಾದುಹೋಗಿದೆ. ಅದರ ಬಗ್ಗೆ ಎಲ್ಲ ಅನಿವಾಸಿ ಹಿರಿಯರು ಚಿಂತಿಸಬೇಕಾಗಿದೆ. ನಮ್ಮ ಕನ್ನಡ ಬಳಗದ ಅದೆಷ್ಟೋ ಹಿರಿಯರಿಗೆ ಬೆಂಗಳೂರಿನಲ್ಲಿ ಹೋಗಿ ಖಾಯಂ ಆಗಿ ನೆಲೆಸುವ ಆಸೆ ಇದ್ದರೂ ಅಲ್ಲಿ ಹೋಗಿ ಬದುಕಬಲ್ಲೆವು ಎಂಬ ಆತ್ಮ ವಿಶ್ವಾಸ ಇಲ್ಲದಿರಬಹುದು ಮತ್ತು ಬ್ರಿಟನ್ನಿನಲ್ಲಿರುವ ತಮ್ಮ ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ತೊರೆದು ಹೋಗುವುದು ಕಷ್ಟವಿರಬಹುದು. ಈ ಒಂದು ಹಿನ್ನೆಲೆಯಲ್ಲಿ ಬ್ರಿಟನ್ನಿನಲ್ಲಿ ನೆಲೆಸಿರುವ ಭಾರತೀಯರೇ, ಭಾರತೀಯರಿಗಾಗಿ ನಡೆಸ ಬಹುದಾದ ನರ್ಸಿಂಗಹೋಮ್ ಗಳ, ಸಂಧ್ಯಾ ದೀಪಗಳ ಅಗತ್ಯವಿದೆ.

ನಾನು ಇಲ್ಲಿಯವರೆಗೆ 'ಸಂಧ್ಯಾದೀಪ' ಎಂಬ ಪದವನ್ನು ಹಿರಿಯರ ಮನೆ ಎಂಬುದನ್ನು ಸೂಚಿಸಲು ಒಂದು ರೂಪಕವಾಗಿ ಬಳೆಸಿದ್ದೇನೆ. ಇದಕ್ಕೆ ಇನ್ನೊಂದು ಕಾರಣವಿದೆ. ನನ್ನ ತಾಯಿ ರುದ್ರಾಣಿ ಅವರು ೩೦ ವರ್ಷಗಳ ಹಿಂದೆಯೇ ಸಂಧ್ಯಾದೀಪ ಎಂಬ ವೃದ್ಧಾ ಶ್ರಮವನ್ನು ಬೆಂಗಳೂರಿನಲ್ಲಿ ಹುಟ್ಟು ಹಾಕಿದ್ದು ಅದು ಇಂದಿಗೂ ವೃದ್ಧರಿಗೆ ಆಶ್ರಯ ನೀಡುತ್ತಾ ಬಂದಿದೆ. ಆ ಸಂಸ್ಥೆಗೆ ನಾನು ಪ್ರೀತಿಯಿಂದ ಬರೆದುಕೊಟ್ಟ ಕವನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಒಂದು ಬರಹಕ್ಕೆ ನನ್ನ ಈ ಕವಿತೆ ಹೊಂದುವಂತಿದೆ ಎಂದು ಭಾವಿಸುತ್ತೇನೆ.

ಸಂಧ್ಯಾ ದೀಪ
ಡಾ. ಜಿ. ಎಸ್. ಶಿವಪ್ರಸಾದ್

ಪ್ರೀತಿ ವಾತ್ಸಲ್ಯದ ಸಂಧ್ಯಾದೀಪ
ಕರುಣೆಯ ಕುಡಿಯಲಿ ಉರಿಯುವ ದೀಪ
ಭರವಸೆ ನೀಡುವ ನಂದಾ ದೀಪ
ಕಾರ್ಮೋಡದ ಸಂಜೆಯ ದಾರಿಯ ದೀಪ

ಸವೆದಿಹ ಕೀಲಿಗೆ, ಮಬ್ಬಿನ ಕಣ್ಣಿಗೆ
ನಡುಗುವ ಕೈಯಿಗೆ, ಬಾಗಿದ ಬೆನ್ನಿಗೆ,
ಅಂದಿನ ತಪ್ಪಿಗೆ, ಇಂದಿನ ಮುಪ್ಪಿಗೆ
ಇನ್ನಿಲ್ಲ ಶಾಪ, ಪರಿತಾಪ

ಕಂಡರಿಯದ ಊರಿಗೆ ದೂರದ ಪಯಣ
ಬಸವಳಿದವರಿಗಿದು ಕೊನೆಯ ನಿಲ್ದಾಣ
ನಿರೀಕ್ಷೆಗೆ ಜಿಗುಪ್ಸೆಗೆ ವಿಶ್ರಾಂತಿಯ ತಾಣ
ಮಮತೆ ಆರೈಕೆಯ ಚಿಲುಮೆ ಇದು ಕಾಣ.
*
ವೃದ್ಧಾಪ್ಯದ ಬಗ್ಗೆ ಇನ್ನೊಂದು "ಅಂದು -ಇಂದು" ಎಂಬ ಪದ್ಯವನ್ನು ಇಲ್ಲಿ ಪ್ರಕಟಿಸಲಾಗಿದೆ. 

ಈ ಪದ್ಯವನ್ನು ಮೈಸೂರಿನಲ್ಲಿ ನೆಲೆಸಿರುವ ರೆಡಿಯಾಲಜಿಸ್ಟ್ ಡಾ. ರಘುನಾಥ್ ಅವರು ಅಂತರ್ಜಾಲದಲ್ಲಿ ಕಂಡ ಇಂಗ್ಲಿಷ್ ಪದ್ಯದಿಂದ ಪ್ರೇರಿತಗೊಂಡು ರಚಿಸಿದ್ದಾರೆ. ಇದನ್ನು ಹಂಚಿಕೊಂಡ ನಮ್ಮ ಬಳಗದ ಸದಸ್ಯರಾದ ಡಾ.ಮಂದಗೆರೆ ವಿಶ್ವನಾಥ್ ಅವರಿಗೆ ಕೃತಜ್ಞತೆಗಳು. ಪದ್ಯವು ಈ ಸಂದರ್ಭಕ್ಕೆ ಉಚಿತವಾಗಿದೆ ಎಂದು ಭಾವಿಸುತ್ತೇನೆ.

ಅಂದು – ಇಂದು
ಡಾ. ರಘುನಾಥ್

ಏಳುವುದೇ (ನಿದ್ದೆಯಿಂದ) ಕಷ್ಟ
ಈಗ ನಿದ್ದೆ ಮಾಡುವುದೇ ಕಷ್ಟ

ಆಗೆಲ್ಲ ಮೊಡವೆಯ ಯೋಚನೆ
ಈಗೆಲ್ಲ ಸುಕ್ಕಿನ ಯೋಚನೆ

ಅಂದು ಯಾರೂ ನಮಗೆ ಬೇಡ
ಇಂದು ಯಾರಾದರೂ ಇದ್ದರೆ ಸಾಕು

ಅಂದು ಯಾರ ಕೈ ಹಿಡಿಯಲೆಂದು
ಇಂದು ಯಾರಾದರೂ ಕೈ ಹಿಡಿದರೆ ಸಾಕೆಂದು

ಅಂದು ಸುಂದರತೆ ನೋಡುವ ತವಕಾಟ
ಇಂದು ನೋಡಿದರಲ್ಲಿ ಸುಂದರತೆ ಕಾಣುವ ಸೆಣಸಾಟ

ಅಂದು ನಾನೇ ಎಂದಿಗೂ
ಇಂದು ನನ್ನ ಸರದಿ ಎಂದಿಗೂ

ಅಂದು ಎಲ್ಲರ ಹೃದಯ ಮಿಡಿತ ನಾನೇ
ಇಂದು ಅದು ನಿಂತಿತೆಂಬ ಭಾವನೆ

*
ಕನ್ನಡ ರಾಜ್ಯೋತ್ಸವ; ಕೆಲವು ಐತಿಹಾಸಿಕ ಹಿನ್ನೆಲೆಗಳು

ಶ್ರೀಮತಿ ಪುಷ್ಪ , ಪ್ರೈಮಸ್ ಹಿರಿಯರ ಮನೆ

ಡಿ.ಎಲ್ ಪುಷ್ಪ ಅವರ ಪರಿಚಯ ಅವರ ಮಾತುಗಳಲ್ಲೇ ಹೀಗಿದೆ:
"ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ವೈದ್ಯರಾಗಿದ್ದ ನನ್ನ ತಂದೆಯವರಿಗಿದ್ದ ಕನ್ನಡ ಸಾಹಿತ್ಯದ ಆಳವಾದ ಅರಿವು ನನ್ನ ಮೇಲೆ ಪ್ರಭಾವ ಬೀರಿತು.ತಾಯಿಯವರಿಂದ ದೇವರನಾಮಗಳನ್ನು ಕಲಿತೆ. ಕನ್ನಡ ಮಾಧ್ಯಮ ದಲ್ಲಿ ಶಿಕ್ಷಣ ಪಡೆದ ನನಗೆ ಕನ್ನಡ ಕಾದಂಬರಿಗಳನ್ನು ಓದುವ ಹವ್ಯಾಸವಿತ್ತು. ಭಾವಗೀತೆಗಳನ್ನು ರೇಡಿಯೋದಲ್ಲಿ ಕೇಳಿ ಕಲಿಯುತ್ತಾ ಶ್ರೀಮತಿ ಎಚ್.ಆರ್.ಲೀಲಾವತಿಯವರ ಅಭಿಮಾನಿಯಾದೆ. ಸಂಗೀತ ಸ್ವಲ್ಪ ಗೊತ್ತು. ಮುಂದೆ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗಲೂ.ಕನ್ನಡದ ಪತ್ರಗಳಿಗೆ ಕನ್ನಡದಲ್ಲೇ ಉತ್ತರಿಸುತ್ತಿದ್ದೆ. ಈಗ ಸ್ವಲ್ಪ ಮಟ್ಟಿಗಾದರೂ ಕನ್ನಡ ಓದುವ ಭಾವಗೀತೆ ಕೇಳುವ ಹಾಡುವ ಹವ್ಯಾಸಗಳು ನನ್ನ ಬಾಳನ್ನು ಮುನ್ನಡೆಸುವ ಶಕ್ತಿಗಳಾಗಿವೆ"

***

ಕರ್ನಾಟಕ ರಾಜ್ಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಒಂದು ಸುಧೀರ್ಘ ಹೋರಾಟದ ಕಥೆ ಇದೆ. ಅಪಮಾನನವನ್ನು ಸಹಿಸಿದೇ ಸ್ವಾಭಿಮಾನವನ್ನು ಉಳಿಸಿಕೊಳ್ಳುವಲ್ಲಿ ಕನ್ನಡ ಸಂಸ್ಕೃತಿ ಉದಯವಾಗಿದೆ. ಪಲ್ಲವ ಕ್ಷತ್ರಿಯರಿಂದ ಆದ ಅಪಮಾನವನ್ನು ಸಹಸಿಕೊಳ್ಳದೇ ಸ್ವಾಭಿಮಾನದ ಕಿಚ್ಚಿನಿಂದ "ಶರ್ಮ" ಎಂಬ ಬ್ರಾಹ್ಮಣ ಸೂಚಿಕ ಪದವನ್ನು ತ್ಯಜಿಸಿ ಖಡ್ಗ ಹಿಡಿದು ಸೈನ್ಯ ಕಟ್ಟಿ ಹೋರಾಡಿ ಜಯಶೀಲನಾದವನೇ "ಮಯೂರ ವರ್ಮಾ", ಕನ್ನಡಿಗ ರಾಜವಂಶ ಕದಂಬರ ದೊರೆ. ಒಂದು ಸಂಸ್ಕೃತಿಯಂದರೆ ಆ ಜನಾಂಗದ ಜೀವನ ವಿಧಾನ, ಅದರ ಚರಿತ್ರೆ. ಸ್ವಾಭಿಮಾನ ಹಾಗೂ ಸಮದೃಷ್ಟಿಯುಳ್ಳವರಾಗಿದ್ದು, ಶೂರರು, ಉದಾರ ಹೃದಯಗಳೂ ಆಗಿದ್ದ ಚಾಲುಕ್ಯರು, ಹೊಯ್ಸಳರು ಮತ್ತು ರಾಷ್ಟ್ರಕೂಟ ದೊರೆಗಳ ಆಳ್ವಿಕೆಯಲ್ಲಿ ಸ್ವಂತಿಕೆಯನ್ನು ಮತ್ತು ಆತ್ಮವಿಶ್ವಾಸವನ್ನು ಬೆಳಸಿಕೊಂಡು ಕರ್ನಾಟಕ ಸಂಸ್ಕೃತಿ ರೂಪುಗೊಂಡಿತು. "ಮನುಷ್ಯ ಜಾತಿ ತಾನೊಂದೆ ವಲಂ" ಎಂಬುದು ಆದಿ ಕವಿ ಪಂಪನ ಮಾತು. ಮನುಷ್ಯವರ್ಗವೆಲ್ಲ ಒಂದು ಎಂಬ ತತ್ವವನ್ನು ತಮ್ಮ ಧರ್ಮದ ಚೌಕಟ್ಟಿನಲ್ಲೆ ಕನ್ನಡ ಜನ ಕಂಡಿದ್ದಾರೆ. ದಯೆಯೇ ಧರ್ಮದ ಮೂಲವೆಂದು ಬಸವಣ್ಣ ಹೇಳಿದ್ದರೆ, ಹೊಲಯ ಹೊರಗಿಹನೇ? ಊರೊಳಗಿಲ್ಲವೇ? ಎಂದು ಪುರಂದರದಾಸರು ಹೇಳಿದ್ದಾರೆ.

ಧಾರ್ಮಿಕ ಸಮನ್ವಯವಿದ್ದ ಕನ್ನಡನಾಡಿನಲ್ಲಿ ಶೈವ, ವೈಷ್ಣ , ಭೌದ್ಧ ,ಜೈನ ಮತಗಳ ಅಭಿವೃದ್ಧಿ ಹೊಂದಿದವು. ಅಪ್ರತಿಮ ಶಿಲ್ಪಕಲೆಯನ್ನೂಳಗೊಂಡ, ಬಾದಾಮಿ, ಐಹೊಳೆ ,ಪಟ್ಟದಕಲ್ಲು, ಬೇಲೂರು, ಹಳೇಬೀಡುಗಳ ದೇವಾಲಯಗಳು ನಿರ್ಮಾಣವಾದವು. ಪುರಂದರದಾಸರಂತ ವಾಗ್ಮಿಗಳಿಗೆ ಮತ್ತು ಪಂಪ, ರನ್ನ ಜನ್ನ , ನಾಗವರ್ಮ ಮತ್ತು ಕುಮಾರವ್ಯಾಸರಂಥ ಮಹಾ ಕವಿಗಳಿಗೆ ಜನ್ಮ ಕೊಟ್ಟ ನಾಡಿದು. ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಾಮಾನತೆಯನ್ನು ಸಾರಿದ ಬಸವಣ್ಣ, ಅಲ್ಲಮಪ್ರಭು ,ಅಕ್ಕಮಹಾದೇವಿಯವರನ್ನು ಹೇಗೆ ಮರೆಯಲಾದೀತು? ಹೀಗೆ ಎಲ್ಲ ರಂಗಗಳಲ್ಲಿಯೂ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕನ್ನಡ ಪ್ರದೇಶಗಳು ವಿಜಯನಗರ ಸಾಮ್ರಾಜ್ಯ ಪತನದ ನಂತರ ಕನ್ನಡಿಗರ ಕೈ ತಪ್ಪಿ ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತ್ಯಗಳಲ್ಲಿ ಹಂಚಿಹೋದವು. ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಾದರು. ಭೌಗೋಳಿಕವಾಗಿ ಒಂದಾಗಬೇಕಾದ ಅವಶ್ಯಕತೆ ಉಂಟಾಯಿತು. ಹೀಗಾಗಿ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾಜ್ಞರಾದವರು, ಸಾಹಿತಿಗಳು, ಕವಿಗಳು, ಕನ್ನಡ ಪತ್ರಿಕೆಗಳು, ಕನ್ನಡ ಸಂಘಟನೆಗಳು, ಕಲಾವಿದರು, ಕೃಷಿಕರು, ಸಾಮಾನ್ಯ ಜನರೆಲ್ಲರೂ ತಾವು ಒಂದುಗೂಡಬೇಕೆಂದು ಯೋಚಿಸಿ ಭಾವನಾತ್ಮಕವಾಗಿ ಹಾಗೂ ವೈಚಾರಿಕವಾಗಿ ಒಗ್ಗಟ್ಟಿನಿಂದ ಒಂದು ಚಳುವಳಿ ಪ್ರಾರಂಭಿಸಿದರು.

ಹೀಗೆ "ಕರ್ನಾಟಕ ಏಕೀಕರಣಕ್ಕಾಗಿ" ನಡೆದ ಚಳುವಳಿಯಲ್ಲಿನ ಕೆಲವು ಮುಜಲುಗಳನ್ನು ಗುರುತಿಸುವುದಾದರೆ ಭಾರತ ಸ್ವತಂತ್ರ ಹೋರಾಟದ ಜೊತೆ ಜೊತೆಗೆ ಸಮಾನಾಂತರವಾಗಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಯಿತು. ಅವು ಹೀಗಿವೆ;

೧)ಪ್ರಮುಖ ಸಾಹಿತಿಗಳಾದ ಆಲೂರು ವೆಂಕಟರಾವ್ (ಕನ್ನಡ ಕುಲ ಪುರೋಹಿತ ) ಅವರನ್ನು ಏಕೀಕರಣದ ಶಿಲ್ಪಿ ಎನ್ನಬಹುದು. ೧೯೦೭/೮ ರಲ್ಲಿ ಧಾರವಾಡದಲ್ಲಿ ಕನ್ನಡ ಲೇಖಕರ ಸಮ್ಮೇಳನ ನಡೆಸಿ ಲೇಖಕರು ತಮ್ಮ ಬರಹದ ಮೂಲಕ ಏಕೀಕರಣ ಚಳುವಳಿಯನ್ನು ಬೆಳಸುವಂತೆ ಕರೆ ನೀಡಿದರು. ಅವರ ಕಾದಂಬರಿ "ಕರ್ನಾಟಕ ಗಥ ವೈಭವ "ಏಕೀಕರಣದ ಬೈಬಲ್ " ಎಂದು ಹೇಳಲಾಗುತ್ತದೆ.

೨) ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರು ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಏಕೀಕರಣದ ಪರಿಕಲ್ಪನೆಗೆ ನಾಂದಿ ಹಾಡಿದರು.

೩) ೧೯೨೪ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಲುಗೊಳ ನಾರಾಯಣರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಗೀತೆಯನ್ನು ಪ್ರಾರ್ಥನೆಗೆ ಹಾಡಲಾಯಿತು. ಇದನ್ನೇ ಮುಂದೆ ಏಕೀಕರಣ ಗೀತೆಯಾಗಿ ಗುರುತಿಸಲಾಯಿತು.

೪)೧೯೨೬ರಲ್ಲಿ ಹಿಂದೂಸ್ತಾನ್ ಸೇವಾದಳದ ಎನ್. ಎಸ್ ಹರ್ಡಿಕರ್ ನೇತೃತ್ವದಲ್ಲಿ ಏಕೀಕರಣಕ್ಕೆ ಹಸ್ತಾಕ್ಷರ ಚಳುವಳಿ ನಡೆಯಿತು. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ ನವಂಬರ್ ೧ನೇ ದಿನಾಂಕದಂದು ನವಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಮುಂದೆ ಕೆಂಗಲ್ ಹನುಮಂತಯ್ಯನವರ ಮತ್ತು ಎಸ್. ನಿಜಲಿಂಗಪ್ಪನವರ ಪ್ರಯತ್ನದಿಂದ ೧೯೭೩ರ ನವಂಬರ್ ೧ನೇ ದಿನಾಂಕ "ಕರ್ನಾಟಕ " ವೆಂದು ನಾಡಿಗೆ ನಾಮಕರಣವಾಯಿತು. ಪ್ರತಿ ವರ್ಷ ಕರ್ನಾಟಕದ ಗತ ವೈಭವ ಮತ್ತು ಸಂಸ್ಕೃತಿಯನ್ನು ನೆನೆಪಿಸುವ ಸಲುವಾಗಿ ಮಾತ್ರವಲ್ಲದೆ ಕನ್ನಡಿಗರಿಗೆ ಒಂದು ಆಸ್ಮಿತೆಯನ್ನೂ, ಅಸ್ತಿತ್ವವನ್ನು ತಂದುಕೊಟ್ಟ ಎಲ್ಲ ಮಹನೀಯರ ಸ್ಮರಣೆಗಾಗಿ ಈ ರಾಜ್ಯೋತ್ಸವ ಆಚರಣೆ ಮುಖ್ಯವಾಗುತ್ತದೆ.

ಈ ಬರಹದ ಹಸ್ತಪ್ರತಿಯನ್ನು ಟೈಪ್ ಮಾಡಿಕೊಟ್ಟ ಅನಿವಾಸಿ ಬಳಗದ ರಾಮಮೂರ್ತಿ ಅವರಿಗೆ ಕೃತಜ್ಞತೆಗಳು

*


10 thoughts on “ಸಂಧ್ಯಾದೀಪಗಳ ದಾರಿಯಲ್ಲಿ

  1. Very nice article, captures spirit of graceful aging in a very interesting way. Dr.Bhanumathi is a role model for graceful aging. Retirement homes in India is a budding area and this article beautifully explains the concept

    Like

  2. ಶಿವಪ್ರಸಾದ್ ಅವರ ಲೇಖನ ವಿಚಾರ ಮಂಥನಕ್ಕೆ ಉತ್ತಮ ಅನುವು ಮಾಡಿಕೊಟ್ಟಿದೆ. ಇಲ್ಲಿ ಬೆಂಗಳೂರಿನ ಎರಡು ಸಂಕೀರ್ಣಗಳ ಉತ್ತಮ ಗುಣಮಟ್ಟವನ್ನು ವಿವರಿಸಿದ್ದಾರೆ. ಇಂತಹ ಉದಾಹರಣೆಗಳು, ಇದಕ್ಕೆ ವ್ಯತಿರಿಕ್ತವಾದ ಜಾಗೆಗಳೂ ಇದ್ದಾವೆಂದು ಕೇಳಿ ಬಲ್ಲೆ. ಮುಂದೆ ನಮಗೆ ಇಂತಹ ವ್ಯವಸ್ಥೆಯ ಅವಶ್ಯಕತೆ ಬರಬಹುದೆಂಬುದರ ಚಿಂತನೆಯ ಜೊತೆಗೆ, ನಮ್ಮ ಪಾಲಕರಿಗೂ ಬೇಕಾಗಬಹುದೆಂಬ ವಿಚಾರದ ತೀವ್ರತೆಯೂ ಇದೆ. ಶಿವಪ್ರಸಾದ್ ಚರ್ಚಿಸುವ ಹಲವು ಸಾಧಕ ಬಾಧಕಗಳು ಸೂಕ್ತವಾದವು.

    ಲೇಖನಕ್ಕೆ ಪೂರಕವಾದ ಕವನಗಳೂ ಸುಂದರವಾಗಿವೆ.

    ಪುಷ್ಪ ಅವರು ಸುಂದರವಾಗಿ ಕರುನಾಡಿನ ಇತಿಹಾಸ, ನವ ಕರ್ನಾಟಕದ ಉದಯ ಹಾಗೂ ನಾಮಕರಣವನ್ನು ಅವಲೋಕಿಸಿದ್ದಾರೆ.
    Ram Sharan

    Like

  3. ಧನ್ಯವಾದಗಳು ಪ್ರೇಮಲತಾ. ಆಯ್ಕೆ ಯಾವಾಗಲೂ ಕಷ್ಟ. ಇರುವುದೆಲ್ಲವ ಬಿಟ್ಟು… ಎನ್ನುವಂತೆ ಮನಸ್ಸು ಹೊಸ ಸಾಧ್ಯತೆಗಳನ್ನು ಹುಡುಕುತ್ತಾ ಅಲೆಯುತ್ತದೆ. ಮುಂದಿನ ಕೆ ಬಿ ಸಮಾರಂಭದಲ್ಲಿ ಚರ್ಚೆ ಮಾಡೋಣ. ಮಿಡ್ಲ್ಯಾಂಡ್ಸ್ ನಲ್ಲಿ ಜಾಗ ತೆಗೆದುಕೊಂಡು
    ಹಿರಿಯರಾದ ವತ್ಸಲ ಮತ್ತು ರಾಮ ಮೂರ್ತಿ ಅವರ ಕೈಯಲ್ಲಿ ಒಂದು ಅಡಿಗಲ್ಲು ಹಾಕಿಸಿ ಶುಭಗಳಿಗೆ ಯಲ್ಲಿ ಶಂಕುಸ್ಥಾಪನೆ (laying the foundation stone) ಮಾಡಿಬಿಡೋಣ. ಶಿವಳ್ಳಿ ಅವರನ್ನು ಬುಕ್ ಮಾಡಿಕೊಂಡು ಬಿಡೋಣ😄
    Ram Sharan

    Like

  4. ಉತ್ತಮ ಆಲೋಚನೆಗಳಿರುವ ಲೇಖನ. ನೀವು ಈ ಲೇಖನಗಳನ್ನು (ಒಂದು ದಿನ ಪುಸ್ತಕ ಮಾಡುವ ದೃಷ್ಟಿಯಿಂದ) ಅಲ್ಲಿನವರಿಗೂ ಮತ್ತು ಇಲ್ಲಿನವರಿಗೂ ಹೊಂದುವಂತೆ ಬರೆಯುವುದು ಕಾಣುತ್ತದೆ.
    Retire ಆದಮೇಲೆ ಕೆಲಸಕ್ಕಾಗಿ ಇಂತಹ ಕಡೆ ನೆಲಸಬೇಕೆಂಬ ಹಂಗಿರುವುದಿಲ್ಲ. ಮಕ್ಕಳಿಗೆ ಹತ್ತಿರ…ಅನ್ನುವ ಸೆಳೆತ ಇದ್ದರೂ ಇಂತಹ‌ ಯೋಜನೆಗೆ midlands ಸೂಕ್ತ.
    ಒಂದು development ನ ಹಲವು ಅಥವಾ ಎಲ್ಲಾ ಮನೆಗಳನ್ನು ಕನ್ನಡಿಗರೇ ಕೊಳ್ಳಬಹುದು. ಆದರೆ, ಎಷ್ಟು ಜನ ಅವರ ಹಳೆಯ ಮನೆ ಮತ್ತು ನೆನಪುಗಳನ್ನು ತೊರೆದು, ಬೇರೆಡೆಗೆ ಬರಲು ಒಪ್ಪುತ್ತಾರೆ? ಗೊತ್ತಿಲ್ಲ.

    ಆದರೆ, ಇಲ್ಲಿನ ನರ್ಸಿಂಗ್ ಹೋಂ ಗಳನ್ನು ನೆನೆಸಿಕೊಂಡರೆ ಮೈ ನಡುಗುತ್ತದೆ. ಅಲ್ಲಿಂದ ನಮ್ಮಲ್ಲಿಗೆ ರೋಗಿಗಳನ್ನು ಕರೆತರುವ ಹಲವರಿಗೆ ಅವರ ಬಗ್ಗೆ ಏನೂ ತಿಳಿದಿರುವುದಿಲ್ಲ.

    ನಿಮ್ಮಲ್ಲಿ ಹಲವರು ಈಗಾಗಲೇ ಮತ್ತೊಂದು ಕಾಲನ್ನು ಇಂಡಿಯಾದಲ್ಲಿ ನೆಡಲು ತಯಾರಿ ನಡೆಸಿದ್ದೀರಿ. ಆದರೆ ಇಲ್ಲಿಯೆ ಅಂತಹ‌ comminity ಸಿಗುವುದಾದರೆ, ಅಂತಹ ಒಂದು ಮನೆಗೆ ಈಗಲೇ ಹಣ ಹೂಡಲು ನಾನು ತಯಾರು.. 😊

    Premalata

    Like

  5. ಸಂಧ್ಯಾದಾರಿಗಳ ದೀಪದಲ್ಲಿ`, ಪ್ರಸಾದ್ ಅವರ ಸಮತೋಲಿತ ಶೈಲಿಯಲ್ಲಿ ಇಂಗ್ಲೆಂಡಿನಲ್ಲಿ ನೆಲೆಸಿರುವ ನಿವೃತ್ತರ ಜೀವನದ ಬಗ್ಗೆ ಯೋಚಿಸಲು ತುಂಬ ಸಹಾಯಕವಾಗಿದೆ. ಈ ಲೇಖನದಲ್ಲಿ ಅವರು ಹೇಳಿರುವ ಸಲಹೆಗಳು, ಉಪಾಯಗಳು ಮತ್ತು ಆತಂಕಗಳು ಸಮಂಜಸವಾಗಿವೆ.

    ರಘುನಾಥರ ಕವನ ಸರಳ ಸುಂದರ.

    ಪುಷ್ಪಾ ಅವರ ಕರ್ನಾಟಕದ ಲೇಖನ ಸಂದರ್ಭೋಚಿತ.

    keshav Kulkarni

    Like

  6. ನಿವೃತ್ತ ಜೀವನಶೈಲಿಗಳ ಬಗ್ಗೆ ಅತ್ಯುತ್ತಮವಾದ, ಚಿಂತನೆಯನ್ನು ಪ್ರಚೋದಿಸುವ ಲೇಖನ. “ಭರವಸೆ” ಇದೆ ಎಂದು ಭಾವಿಸುತ್ತೇವೆ
    Rupa

    Like

  7. Prasad,s write up is wake up call for some of us. We are 1st generation settled from Karnataka. We came here for PG qualifications. We told our family we will be back in India in 5 years. 5 years stretched to 50 Yrs in my case. Worked and Retired. Our children grown up here and married have their own kids. They do not know my language or culture or have any bond to Karnataka. Grand kids are British,They have no connection with our motherland. At least my children keep in touch with their cousins. Grand kids don’t know anyone. In fact, they find it difficult to bond due to language and cultural differences.
    Then now we are old, in a way it is our bonus years. Our family is kind and supportive. They Suggest please come and live with us. I don’t think I would like it. although I love them. The next option is Granny Annexe or Flat. Big question who will manage cooking ,cleaning shopping, etc. Also, We get socially isolated as well. Our friends either they are dying or moving to different places to be near their children, or facing the same problems. I have no answer to the problem. But on balance may be we should go back where we feel comfortable or seriously consider senior living for Kannada community. I know gujarathis have their own senior citizens’ accommodation. Please share your thoughts

    Like

  8. ತಮ್ಮ ಬರಹ ಬಹಳ ಸ್ವಾರಸ್ಯಕರವಾಗಿದೆ.
    ಕವನವೂ ಸೂಕ್ತವಾಗಿದೆ.

    ನಮ್ಮ Primus ನ ಜೀವನದ ಬಗ್ಗೆ ಅಷ್ಟು ತಿಳಿದುಕೊಂಡು ವರ್ಣಿಸಿರುವುದು ಶ್ಲಾಘನೀಯ.
    ಅಪ್ಪಾಜಿ ಮತ್ತು ನನ್ನ ಬಗ್ಗೆ ಬರೆದಿದ್ದಕ್ಕೆ ಧನ್ಯವಾದಗಳು.

    ಇಂಗ್ಲೆಂಡ್ ನಲ್ಲಿ ಈ ರೀತಿ ಮಾಡುವ ಯೋಜನೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ

    ಭಾನುಮತಿ

    Like

  9. ಪ್ರಸಾದ ಅವರ ಲೇಖನ ಗಹನವಾದ ಅನೇಕ ವಿಷಯಗಳನ್ನು ವಿಶ್ಲೇಷಿಸಿದೆ. Not too late, for some. ಅದಕ್ಕೇ ಅಭಿನಂದನೀಯ. ನೀವು ಹಿಂದೊಮ್ಮೆಯೂ ಈ ವಿಷಯ ಚರ್ಚಿಸಿದಾಗ ( ನೀವೇ ಉಲ್ಲೇಖಿಸಿದಂತೆ ಒಂದು ಹಳೆಯ ಲೇಖನದಲ್ಲಿ) ಹಿರಿಯ ಅನಿವಾಸಿಗಳು ಯೋಚಿಸುತ್ತಿರುವುದರ ಜಾಡು ಹಿಡಿದದ್ದನ್ನು ಕಂಡಿದ್ದೆ. “ಸಮಯ್ ಬಡಾ ಬಲವಾನ್ ಹೈ. ಕಾಲವನ್ನು ಮೆಟ್ಟಿ ಹಾಕಲು ಬರುವದಿಲ್ಲ ಭಾರತದಲ್ಲಿ ಹುಡುಗಿ ಮದುವೆಯ ಪೂರ್ವದಲ್ಲಿ ‘ನಿನಗೆ ಬ್ಯಾಗೇಜಿದೆಯಾ ?’ ಎಂದು ಕೇಳುವುದು ಅಪರೂಪವಲ್ಲ. (And vice versa). ಭಾರತದಲ್ಲಿ ಈ “ಸಂಧ್ಯಾದೀಪಗಳು” ಹತ್ತುತ್ತಿರುವದು ಸ್ವಾಗತದ ವಿಷಯ. ಭಾರತದಲ್ಲಿಯ ನನ್ನ ಆತ್ಮೀಯ ಗೆಳೆಯರು ಸಹ ತಮ್ಮ ಕೊನೆಯ ವಾಸಸ್ಥಳದ ಯೋಚನೆ ಮಾಡುತ್ತ ನನಗೆ ಕಳಕಳಿಯಿಂದಲೇ ಕರೆ ಕೊಟ್ಟಿದ್ದು ನಿಜ. ಈ ಬೆಳವಣಿಗೆ ಯಾವ ರೂಪ ತಲೆಯ ಬಹುದು.ನಮ್ಮರಂತೆಯೇ ಈ ‘ಸರೋಗೇಟ್ ‘ ಕುಟುಂಬದ ಆಯುಷ್ಯ, ಇತ್ಯಾದಿ ಸಹ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ವಾಕ್ಯ ಪೂರ್ತಿ ಸತ್ಯ: “ಎಲ್ಲಿ ಖಾಯಂ ಆಗಿ ನೆಲಸಬೇಕು ಎಂಬ ವಿಚಾರವನ್ನು ಅವರವರ ವೈಯುಕ್ತಿಕ ಅರೋಗ್ಯ, ಸಾಂಸಾರಿಕ ನೆಂಟುಗಳು, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ನಿರ್ಧರಿಸುತ್ತವೆ.” ನಿರ್ಧಾರ ಕಠಿಣ. Each has to bite his own bullet!
    ಎರಡೂ ಕವನಗಳು ಪ್ರಸ್ತುತ. ನಿಮ್ಮದರಲ್ಲಿ ಬಿಗಿತವಿದೆ. ಡಾಲ ರಘುನಾಥರದಲ್ಲಿ ವೈರುಧ್ಯಗಳ ಸರಳತೆ ಇದೆ. ಮೊಡಮೆಯ ಶಿಖರದಿಂದ ಸುಕ್ಕಿನ ಆಳಕ್ಕೆ ಜಿಗಿಯುವ ‘ಅವನತಿ?’ಮುದ ಕೊಟ್ಟಿತು! ಇಂಗ್ಲೀಷಿನ ಭಾವ, ಲಯ ತರುವದು ಕಷ್ಟವೇ. ನಿಮ್ಮ “ ಅಂದಿನ ತಪ್ಪಿಗೆ, ಇಂದಿನ ಮುಪ್ಪಿಗೆ
    ಇನ್ನಿಲ್ಲ ಶಾಪ, ಪರಿತಾಪ “ ಅರ್ಥ ಗರ್ಭಿತ. ಪುಷ್ಪ ಅವರ ಲೇಖನಕ್ಕೆ ಸ್ವಾಗತ. ಕರ್ನಾಟಕದ ನಾಮಕರಣದ ಮೈಲುಗಲ್ಲಿನ ವಿಶೇಷ ಬರಹ ಸಹ.
    ಇವೆಲ್ಲವುಗಳನ್ನು ಸಂಗ್ರಹಿಸಿ ಉಣಬಡಿಸಿದ್ದು “ಪೌಷ್ಟಿಕ”!

    Like

  10. ನಮಸ್ಕಾರ.ನನ್ನ ಲೇಖನವನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು.ನಿಮ್ಮ ಲೇಖನದಲ್ಲಿ
    ನಮ್ಮ ತಲೆಮಾರಿನ ‘ಹಿರಿಯರ’ ಸಂಧಿಗ್ಧತೆಯನ್ನು ವಸ್ತು ನಿಷ್ಠ ವಾಗಿ ವಿಶ್ಲೇಷಿಸಿ ರುವಿರಿ.ಇಂದಿನ ಸಂದರ್ಭದಲ್ಲಿ
    ವೃದ್ಧಾಶ್ರಮ ಅಥವಾ ,”ಹಿರಿಯರ ವಾಸ್ತವ್ಯ ಸಂಕೀರ್ಣ”ಗಳು ಅವಶ್ಯವೋ ಇಲ್ಲವೇ
    ಅನಿವಾರ್ಯವೋ ಆಗಿವೆ.
    ನಿಮ್ಮ ಕವನ ಹಾಗೂ ಡಾಕ್ಟರ್ ರಘುನಾಥ ಅವರ ಕವನ ತುಂಬಾ ಅರ್ಥ ಪೂರ್ಣ ವಾಗಿದೆ.
    “ಅಂಗೈ ಯೊಳಗೆ ಅನಂತ ಮಾಹಿತಿಯ ವಿಸ್ತಾರವಿದ್ದರೂ ಒಂದು ಸಣ್ಣ ಜೀವಂತ
    ಸಹವಾಸಕ್ಕೆ ಮನಸ್ಸು ಹಂಬಲಿಸುವುದು ಸಹಜ.ವಿದೇಶದಲ್ಲೂ ಭಾರತೀಯರು (ಕನ್ನಡಿಗರು)ಸೇರಿ ನಡೆಸಬಹುದಾದ
    ಹಿರಿಯರ ವಾಸ್ತವ್ಯ ಸಂಕೀರ್ಣ ದ ನಿಮ್ಮ
    ಪರಿಕಲ್ಪನೆ ಸಮಯೋಚಿತ.
    ಶುಭವಾಗಲಿ.

    ನಿಮ್ಮ ವಿಶ್ವಾಸಿ ಡಿ.ಎಲ್. ಪುಷ್ಪ

    Liked by 1 person

Leave a comment

This site uses Akismet to reduce spam. Learn how your comment data is processed.