ಕಳೆದ ವರ್ಷಅಟ್ಲಾಂಟಿಕ್ ಸಾಗರವನ್ನು ಏಕಾಕಿಯಾಗಿ ಹುಟ್ಟು ಹಾಕುತ್ತ ದಾಟಿ ಆಂಟಿಗದಲ್ಲಿ ಮುಕ್ತಾಯಗೊಳಿಸಿ ದಾಖಲು ಸ್ಥಾಪಿಸಿದ (ಮೇಲಿನ ಚಿತ್ರದಲ್ಲಿಯ) ಅನನ್ಯ ಪ್ರಸಾದ್ ಅವರ ಸಾಹಸಗಾಥೆಯನ್ನು ಆಕೆಯ ತಂದೆಯ ಪುಸ್ತಕದಲ್ಲಿ ಮನದಟ್ಟುವಂತೆ ತಮ್ಮ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಅದನ್ನೋದಿ ಡಾ ರಾಂಶರಣ್, ಡಾ ಶ್ರೀರಾಮುಲು, ಶ್ರೀ ರಾಮಮೂರ್ತಿ, ಸುಮಾ ಚಿಲ್ಲಾಳ, ಡಾ ರಾಜಶ್ರೀ ಪಾಟೀಲ, ಶಾಲಿನಿ ಜ್ಞಾನಸುಬ್ರಮಣಿಯನ್ ಮುಂತಾಗಿ ಅನೇಕರು ಈ ವಾರದ ಅನಿವಾಸಿಯಲ್ಲಿ ಎರಡನೆಯ ಕಂತಿನಲ್ಲಿ ಇನ್ನಿಷ್ಟು ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು (ಸ್ವೀಕರಿಸಿದ ಕಾಲಾನುಕ್ರಮದಲ್ಲಿ) ಪ್ರಕಟಿಸಲು ಸಂತೋಷವಾಗುತ್ತದೆ. ಪುಸ್ತಕದ ಲೇಖಕ ಶಿವಪ್ರಸಾದ್ ಅವರು ಪುಸ್ತಕವನ್ನು ಅರ್ಪಿಸಿದ ಅನನ್ಯಳ ದೋಣಿಯನ್ನು ನೆನೆದು, ಮತ್ತು ಶಾಲಿನಿಯವರು ನೆನಪಿಸುವಂತೆ ಕಾಕತಾಳಿಯವಾಗಿ ಇಂದೇ (ಜುಲೈ ೧೭) ಒಡಿಸ್ಸಿ (The Odyssey) ಎನ್ನುವ ಸಿನಿಮಾ ಬಿಡುಗಡೆಯಾಗಿದೆ!ಎರಡೂ ಸಂಚಿಕೆಯ ಬರಹಗಳ ಪ್ರತಿಕ್ರಿಯೆಗಳಿಗೆ ಇನ್ನೂ ಸ್ವಾಗತವಿದೆ. (ಸಂ)
ಸಾಗರದಲ್ಲಿ ಸಾಹಸಿ ಡಾರ್ಬಿಯಿಂದ ಡಾ ರಾಂ ಶರಣ್ ಬರೆಯುತಾರೆ. ತಂದೆ- ತಾಯಿ ದುಃಖ ತಪ್ತರಾಗಿ ಮನಸ್ಸಿಲ್ಲದ ಮನಸ್ಸಿನಿಂದ ಹರಸಿ ಹುಟ್ಟು ಹಿಡಿದ ಮಗಳನ್ನು ಬೀಳ್ಕೊಡುತ್ತಿದ್ದಾರೆ. ನಿಧಾನವಾಗಿ ಅವರ ವಂಶದ ಕುಡಿ ಕ್ಷಿತಿಜದಲ್ಲಿ ಕಣವಾಗಿ ಕಣ್ಮರೆಯಾಗುತ್ತದೆ. ತಿಂಗಳೊಪ್ಪತ್ತಿನಲ್ಲಿ ಅದೇ ಕಣ ಕ್ಷಣ ಕ್ಷಣಕ್ಕೂ ಉದ್ದೀಪವಾಗಿ ಸಾಗರದದಿಂದ ಹೊರ ಹೊಮ್ಮಿ ತಂದೆ-ತಾಯಿಯರ ಬಾಹುಗಳಲ್ಲೊಂದಾಗಿ ಆನಂದ ಭಾಷ್ಪ ಹೊಮ್ಮಿಸುತ್ತದೆ.
ಶಿವಪ್ರಸಾದ್ ಬರೆದಿರುವ ಅನನ್ಯಳ ಸಾಹಸಗಾಥೆಯ ಅನನ್ಯ ಕೃತಿ ನಿಮ್ಮ ಕಣ್ಣುಗಳಲ್ಲಿ ಈ ರೀತಿ ಮೂರ್ತವಾದರೆ ಆಶ್ಚರ್ಯವಿಲ್ಲ. ಮಹಾಸಾಗರವನ್ನು ಏಕಾಂಗಿಯಾಗಿ ಎಂದೂ ತನ್ನ ಜೀವನದಲ್ಲಿ ಪ್ರಯತ್ನಿಸದ ಪ್ರಕಾರದಲ್ಲಿ ಅನನ್ಯ ದಾಟಲು ಯೋಚಿಸಿದ್ದೇ ಒಂದು ಸೋಜಿಗ! ಋತುಮಾನ, ಹಾದಿಯನ್ನು ಯೋಜಿಸಿ, ಆಧುನಿಕ ಯಂತ್ರಗಳನ್ನು ಬಳಸಿದರೂ ಸಾಗರ ತಂದೊಡ್ಡುವ ಆಕಸ್ಮಿಕಗಳು ಅಗಾಧ. ಅವೆಲ್ಲವನ್ನು ಹಿಮ್ಮೆಟ್ಟಿಸಿ ಸಾವಿರಾರು ಮೈಲಿಗಳನ್ನು ಕ್ರಮಿಸಿ, ಪ್ರಕೃತಿಗೆ ತಲೆಬಾಗಿದ ಯಶೋಗಾಥೆ ಕೇವಲ ವರ್ಣೀಯರಿಗೆ, ಮಹಿಳೆಯರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಶಿವಪ್ರಸಾದ್ ಈ ಪುಸ್ತಕದಲ್ಲಿ ತಮ್ಮ ಏಕೈಕ ಪುತ್ರಿ ತನ್ನ ಮಹಾತ್ವಾಕಾಂಕ್ಷೆಯನ್ನು ಹಂಚಿಕೊಂಡಾಗ ಉಂಟಾದ ಮಾನಸಿಕ ತುಮುಲವನ್ನು ಉತ್ತಮವಾಗಿ ವರ್ಣಿಸಿದದ್ದಾರೆ. ಕಠಿಣವಾದ ಪ್ರಸಂಗಗಳು ಬದುಕಿನಲ್ಲಿ ಎದುರಾದಾಗ ಅದು ಅಸ್ತಿತ್ವದಲ್ಲಿಲ್ಲ ಎಂದೆನಿಸುವುದು ಮಾನವ ಸಹಜ ಪ್ರಥಮ ಪ್ರತಿಕ್ರಿಯೆ. ತದ ನಂತರ ಈ ಪರಿಸ್ಥಿತಿ ನನಗೇಕೆ ಬಂತು ಎಂದೆನಿಸುವುದು. ಸ್ವಲ್ಪ ಸಮಯಾನಂತರ ಈ ಸಂಧಿಗ್ದ ಪರಿಸ್ಥಿತಿ ದೂರವಾಗದು ಎಂಬ ನೈಜತೆ ಮನದಾಳಕ್ಕೆ ಇಳಿಯುತ್ತಿದ್ದಂತೆ ಇದನ್ನು ಪರಿಹರಿಸುವುದೋ, ಅದರೊಡನೆ ಸಹಬಾಳ್ವೆ ಮಾಡುವುದೋ ಎಂಬ ಹಾದಿಯಲ್ಲಿ ಮನಸ್ಸು ಯೋಚಿಸತೊಡಗುತ್ತದೆ. ಏರುಪೇರಿಲ್ಲದ ಹವಾಮಾನದಲ್ಲಿ ಬಿರುಗಾಳಿ ಮಳೆಗೆ ಗಿಡಮರಗಳುರುಳಿ, ಭೂಮಿ ತಂಪಾಗಿ, ಮಳೆ ನೀರು ಅಂತರಾಳಕ್ಕಿಳಿದ ನಂತರ ಹಸಿರುಕ್ಕುವಂತೆ. ಇವೆಲ್ಲ ಮಜಲುಗಳನ್ನು ದಾಟಿ, ಮಗಳ ಆಸೆಗೆ ಪೂರಕವಾಗಿ, ತನು-ಮನ-ಧನಗಳಿಂದ ಪ್ರೋತ್ಸಾಹ ಕೊಟ್ಟ ಪ್ರಸಾದ್ ದಂಪತಿಗಳದ್ದೂ ಸಾಹಸಗಾಥೆ ಇದು. ಪ್ರಸಾದ್ ಈ ಪುಸ್ತಕದಲ್ಲಿ ವಿವರಿಸುವ ಭಾರತೀಯರ ಮನೋಧರ್ಮ ಹಾಗೂ ಅವರಿಬ್ಬರೂ ಇತರರಿಂದ ಎದುರಿಸಿದ ಪ್ರಶ್ನೆಗಳನ್ನು ಅವಲೋಕಿಸಿದಾಗ ಕರಳುಬಳ್ಳಿಯನ್ನು ಈ ಸಾಹಸ ಕೈಗೊಳ್ಳಲು ಅವಕಾಶ ಮಾಡಿಕೊಟ್ಟ ಪ್ರಸಾದ್ ದಂಪತಿಗಳು ವಿಶೇಷ ಮನ್ನಣೆಗೆ ಪಾತ್ರರು ಎನ್ನಿಸುವುದು ಸಹಜ. ಯುರೋಪಿಯನ್ನರ ಸಾಹಸ ಪ್ರಿಯತೆ, ಅನ್ವೇಷಣಾ ಮನೋಭಾವ ಹಾಗೂ ಭಾರತೀಯರ ವಿಭಿನ್ನ ದೃಷ್ಟಿಕೋನಗಳಿಗೆ ಭಾರತದ ನೈಸರ್ಗಿಕ ಸಂಪನ್ಮೂಲದ ಹಿರಿಮೆ ಕಾರಣವೇ ಎಂದು ಪ್ರಸಾದ್ ಪ್ರಶ್ನಿಸುತ್ತಾರೆ. ಕೆಲವು ಮಟ್ಟಿಗೆ ಅದು ಕಾರಣವಾದರೂ ಇತಿಹಾಸವನ್ನು ಅವಲೋಕಿಸಿದಾಗ ನಮ್ಮಲ್ಲೂ ಸಾಹಸಿಗಳಿಗೆ, ಅನ್ವೇಷಕರಿಗೆ ಕೊರತೆ ಇರಲಿಲ್ಲ. ಆದರೆ ಕಳೆದೆರಡು ಮೂರು ಶತಮಾನಗಳಲ್ಲಿ ವಿದೇಶೀಯರ ಆಕ್ರಮಣಕ್ಕೆ ತುತ್ತಾದ ಭಾರತೀಯರಿಗೆ ದೈನಂದಿನ ಹೋರಾಟ ಹಾಗೂ ತದನಂತರ ದೇಶ ನಿರ್ಮಾಣದ ಒತ್ತಡದಲ್ಲಿ ಹೆಚ್ಚಿನ ಸಾಧನೆಗಳಿಗೆ ಸಂಪನ್ಮೂಲ, ಶಕ್ತಿ, ಸಮಯದ ಅವಕಾಶ ದುರ್ಲಭವಾಗಿತ್ತು. ಈ ಅಡೆತಡೆಗಳನ್ನು ದಾಟಿ ನಿಂತಿರುವ ಹೊಸ ಸಹಸ್ರಮಾನದ ಭಾರತೀಯರಿಂದು ನಿಧಾನವಾಗಿ ಸಾಹಸ ಜಗತ್ತಿನಲ್ಲಿ ತಮ್ಮ ಛಾಪನ್ನುತ್ತಲು ಪ್ರಾರಂಭಿಸಿದ್ದಾರೆ. ಈ ದಿಸೆಯಲ್ಲಿ ಅನನ್ಯಳದ್ದೂ ಒಂದು ಪ್ರಮುಖ ಮೈಲಿಗಲ್ಲು.
ಅನನ್ಯಳ ದೈಹಿಕ, ಆರ್ಥಿಕ ಹಾಗೂ ಮಾನಸಿಕ ಸಿದ್ಧತೆಗಳನ್ನು ಪ್ರಸಾದ್ ಈ ಪುಸ್ತಕದಲ್ಲಿ ವರ್ಣಿಸಿದ್ದಾರೆ. ಜಗತ್ತಿನ ಅತ್ಯಂತ ಕಠಿಣವಾದ ಸಾಗರ ದಾಟುವ ಪಂದ್ಯದ ಹುಟ್ಟು, ಅದರ ಧ್ಯೇಯೋದ್ದೇಶಗಳು, ಪ್ರಾಯೋಜಕರು ಪಂದ್ಯದಲ್ಲಿ ಭಾಗವಹಿಸುವವರಿಗೆ, ಅವರ ಪರಿವಾರದವರಿಗೆ ನೀಡುವ ಬೆಂಬಲ ಇವನ್ನೆಲ್ಲ ಚೆನ್ನಾಗಿ ವಿವರಿಸಿದ್ದಾರೆ. ಸಾಕಷ್ಟು ವಿಪುಲವಾಗೇ ಬರುವ ಮಾನಸಿಕ ಘರ್ಷಣೆ, ವೈಚಾರಿಕ ಚರ್ಚೆ, ವೈಯಕ್ತಿಕ ತುಮುಲಗಳು ಪುಸ್ತಕದ ವಿಷಯಕ್ಕೆ ಪೂರಕವಾಗಿವೆ. ಹೊರತಾಗಿ, ದೈನಂದಿನ ಜೀವನದಲ್ಲಿ ಬರುವ ಸವಾಲುಗಳಿಗೆ ಅನ್ವಯಿಸುತ್ತವೆ. ಅಲ್ಲಲ್ಲಿ ಬರುವ ಸಾಹಿತ್ಯಿಕ ವಿವರಣೆಗಳು, ಟಿಪ್ಪಣಿಗಳು ಈ ಪುಸ್ತಕವನ್ನು ಮಗಳ ಯಶಸ್ಸನ್ನು ವೈಭವೀಕರಿಸುವ ತಂದೆಯ ಪ್ರಯತ್ನಕ್ಕೂ ಮಿಗಿಲಾದ ಸಾಹಿತ್ಯಿಕ ಕೃತಿಯನ್ನಾಗಿಸುತ್ತದೆ ಎಂಬುದು ನನ್ನ ಅನಿಸಿಕೆ.
ಇನ್ನೂ ಹಲವು ವಿಚಾರಗಳು ಪುಸ್ತಕಕ್ಕೆ ಹೆಚ್ಚಿನ ಮೆರುಗು ನೀಡುತ್ತಿತ್ತೇನೋ ಎಂಬುದೂ ನನ್ನ ಅನಿಸಿಕೆ. ಸಮುದ್ರ ತೀರದಿಂದ ದೂರವೇ ಹುಟ್ಟಿ ಬೆಳೆದ ಅನನ್ಯಳನ್ನು ಸಾಗರದೆಡೆ ಎಳೆದ ಶಕ್ತಿ ಯಾವುದು ಎಂಬುದು ನನ್ನ ಕುತೂಹಲ. ಅನನ್ಯಳಿಗೆ ಸ್ಪೂರ್ತಿಯಾಗಿದ್ದು ಎಲೆನ್ ಮೆಕಾರ್ಥರೇ ? ಆಕೆ ವಿಶ್ವವನ್ನು ಏಕಾಂಗಿಯಾಗಿ ಅತಿ ವೇಗವಾಗಿ ಹಾಯಿ ದೋಣಿಯಲ್ಲಿ ಸುತ್ತಿದವಳು. ಇದನ್ನರಿಯಲು ಅನನ್ಯಳ ಪುಸ್ತಕಕ್ಕೆ ಕಾಯಬೇಕೇನೋ? ಅಂಟೀಗಾ ತಲುಪಿದ ಮೇಲೆ ಒಡಿಷಿಯಸ್ ದೋಣಿಯನ್ನು ವಾಪಸ್ ತರಲಾಯಿತೆ? ಅದು ಮತ್ತೆ ಅಂಟ್ಲಾಂಟಿಕ್ ಸಾಗರ ದಾಟಲು ಸಹಕಾರಿಯಾಯಿತೇ? ಓದುಗರಾಗಿ ನಮಗಿರುವ ಸವಾಲು ಅನನ್ಯ, ಪ್ರಸಾದ್ ಹಾಗೂ ಪೂರ್ಣಿಮಾ ಅವರ ಅನುಭವಗಳನ್ನು ಓದುವುದರಿಂದ ಅವರು ಎದುರಿಸಿದ ದುಗುಡ, ದುಮ್ಮಾನ, ಅನಿಶ್ಚಿತತೆ, ಎಲ್ಲವನ್ನೂ ಗೆದ್ದುಬಂದ ಆತ್ಮ ಸಂತೃಪ್ತಿಯನ್ನು ಸಂಪೂರ್ಣವಾಗಿ ಆಂತರೀಕರಿಸಿ ಅನುಭವಿಸುವುದು. ಇವೆಲ್ಲವನ್ನು ನಾವು ಪ್ರಸಾದ್ ಅವರ ಮಸೂರದಲ್ಲಿ ನೋಡುತ್ತೇವೆ. ಅಲ್ಲಲ್ಲಿ ಪೂರ್ಣಿಮಾ ಅವರ ಅನಿಸಿಕೆಗಳು ಪ್ರಸಾದ್ ಅವರ ಅನಿಸಿಕೆಯೊಡನೆ ಜೊತೆಯಾಗಿ ವ್ಯಕ್ತವಾಗಿದೆ. ಆದರೆ ತಾಯಿಯ ಭಾವನೆಗಳು ತಂದೆಗಿಂತಲೂ ವಿಭಿನ್ನವಾಗಿರುವುದು ಸಹಜ. ಪೂರ್ಣಿಮಾ ಅವರ ಅನಿಸಿಕೆಗಳು, ತುಮುಲಗಳು, ಜಿಜ್ಞಾಸೆಗಳನ್ನು ಅಳವಡಿಸಿದ್ದರೆ ಅನನ್ಯಳ ಸಾಹಸವನ್ನು ದುರ್ಬೀನಿನಿಂದ ನೋಡಿದ ಅನುಭವ ಪ್ರಾಪ್ತವಾಗುತ್ತಿತ್ತೆಂಬುವುದು ನನ್ನ ಅಭಿಪ್ರಾಯ.
ಅನನ್ಯಳ ಸಾಹಸ ಹಲವು ಮಜಲುಗಳಲ್ಲಿ ಮಾಡಿದ ಪ್ರಯತ್ನದ ಫಲ. ಇದರ ಹಿಂದಿರುವ ಅನನ್ಯ ತ್ಯಾಗ, ಶ್ರಮಗಳೊಂದಿಗೆ ಅವಳ ಕುಟುಂಬದವರ, ಟ್ರೇನರ್, ಕೈಗೂಡಿಸಿದ ಸಂಸ್ಥೆಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾದ ತ್ಯಾಗ ಹಾಗೂ ಶ್ರಮ ಸೇರಿವೆ. ಈ ಸಂಪೂರ್ಣ ಗಾಥೆಯನ್ನು ಬಟ್ಟಲಲ್ಲಿ ಹಿಡಿದಿಡುವ ಪ್ರಯತ್ನ ತನ್ನದೇ ರೀತಿಯಲ್ಲಿ ಸಫಲವಾಗಿ ಪುಸ್ತಕರೂಪದಲ್ಲಿ ನಮ್ಮ ಕೈಯಲ್ಲಿದೆ.
ರಾಂ
ಡಾ ಶ್ರೀರಾಮುಲು ಬರೆಯುತಾರೆ ನಮಸ್ಕಾರ ಪ್ರಸಾದ್, ಮೊದಲಿಗೆ ನನ್ನ ತಡವಾದ ಪ್ರತಿಕ್ರಿಯೆಗಾಗಿ ಕ್ಷಮಾಪಣೆ. ನಿಮ್ಮ ಅಮೂಲ್ಯವಾದ ಪುಸ್ತಕ ತಲುಪಿದ ಮರುದಿನವೇ ಮುಗಿಸಿದೆ. ಮಿಷೆಲ್ಲಿನ್ ಸ್ಟಾರ್ರ್ಡ್ ಶೆಫ್ ಒಂದು ನವ್ಯ ಖಾದ್ಯವನ್ನು ತಯಾರಿಸಿದರೆ ಪಾಕ ಪ್ರವೀಣರು ಮತ್ತು ರಸಿಕ ಸಾರ್ವಜನಿಕರು ಮೊದಲಗಿಂತ ಉತ್ತಮವಾಗಿರುವಂತೆ ನಿರೀಕ್ಷಿಸುತ್ತಾರೆ. ಆ ಉಪಮೇಯ ನಿಮ್ಮ ಪುಸ್ತಕಕ್ಕೆ ಚೆನ್ನಾಗಿ ಅನ್ವಯಿಸುತ್ತದೆ! ಪುಸ್ತಕದಲ್ಲಿ ನೀವು ಅನನ್ಯಳ ’ಜಗತ್ತಿನ ಅತಿ ಕಠಿಣವಾದ ಯಾ”ವನ್ನು ಬಹು ಸುಂದರವಾಗಿ ಬರೆದಿದ್ದೀರಿ. ಓದುವರಿಗೆ ತಾವೇ ಸ್ವತಃ ಭಯಾನಕ ಮತ್ತು ಅಮೋಘವಾದ ಯಾನ ಅನುಭವಸಿದಂತೆ ಭಾವನೆ ಮೂಡಿ ಬರುತ್ತೆ . ಅದು ಹೊರತುಪಡಿಸಿ ತಂದೆ, ತಾಯಿಗಳ ಆತಂಕ, ಹೇಳಲಾಗದ ಮತ್ತು ವಿವರಿಸಲಾಗದ ಭಯವನ್ನು ಚೆನ್ನಾಗಿ ವಿವರಿಸಿದ್ದೀರ. ಅದರಲ್ಲೂ ಭಾರತೀಯ ಮೂಲದ ಪೋಷಕರು ತಮ್ಮ ಮಕ್ಕಳ ಬಗ್ಗೆ ಏನೇನೋ ಕನಸು ಕಂಡಿರುತ್ತಾರೆ, ಅವರ ನಿರೀಕ್ಷೆಯೇ ಬೇರೆ. ನಿಮ್ಮವಿಷಯದಲ್ಲಿ ಅನನ್ಯಳ ಕನಸಲ್ಲೂ ಊಹಿಸಲಾಗದ, ನೆನಸಲಾಗದ, ಸಾಗರದ ಸಾಹಸ, ನಿಜಕ್ಕೂ ಬಂಧು ಬಳಗ ಮತ್ತು ಮಿತ್ರರಿಗೂ ಬಹು ಹೆಮ್ಮೆಯ ವಿಷಯ.
ನಾನು cruise ಹೋಗಿದ್ದಾಗ ಹಡಗಿನ ತಲ್ಲಣ ಮಿತಿ ಮೀರಿದಾಗ ಸುರಕ್ಷತಾ barrier ಗಟ್ಟಿಯಾಗಿ ಹಿಡಕೊಂಡು ಓಡಾಡಿದ್ದು ಇನ್ನೂ ಜ್ಞಾಪಕದಲ್ಲಿದೆ. ಆ ಕರಾಳ ಕಗ್ಗತ್ತಿನಲ್ಲಿ, ಭಯಾನಕ ಅಲೆಗಳ ಮತ್ತು ತನು, ಮನ, ತಲ್ಲಣಿಸುವ ಹಡಗಿನ ಅಲುಗಾಟಗಳನ್ನು ಅನನ್ಯ ಒಬ್ಬಂಟಿಯಾಗಿ ಹೇಗೆ ನಿಭಾಯಸಿದರೋ ಅನಿಸುತ್ತೆ. ನಿಮ್ಮ ಈ ಕೃತಿಯನ್ನು ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿದರೆ (ತಾನೇ ಬರೆದರೆ ಇನ್ನೂ ಉತ್ತಮ!) ನಮ್ಮ ಮುಂದಿನ ಪೀಳಿಗೆ ಮತ್ತು ಕನ್ನಡ ಓದು ಬರದವರಿಗೂ ತಲುಪುತ್ತೆ ಮತ್ತು ಪ್ರೋತ್ಸಾಹಕರ ಅಂತ ನನ್ನ ಭಾವನೆ. ನಿಮ್ಮ ಬರಹದಲ್ಲಿ ಒಂದು ವೈಶಿಷ್ಟ್ಯವಿದೆ . ನಿಮ್ಮ ಈ ಪ್ರತಿಭೆ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಡಾ ಶ್ರೀರಾಮುಲು, (ಈಗ ಲಂಡನ್ ವಾಸಿ.)
ಕಾಂಗಲ್ ಟನ್ನಿಂದ ಶ್ರೀ ರಾಮಮೂರ್ತಿ ಬರೆಯುತ್ತಾರೆ:
“ಸಾಗರದಲ್ಲಿ ಸಾಹಸಿ” ಪುಸ್ತಕವನ್ನು ಓದಿದಾಗ, ಇಲ್ಲಿ ವರ್ಣಿಸಿರುವುದೆಲ್ಲವೂ ಕಣ್ಣಮುಂದೆ ಬರುತ್ತಿತ್ತು. ಅನನ್ಯ ತನ್ನ ನಿರ್ಧಾರವನ್ನು ತಿಳಿಸಿದಾಗ ಆದ ಆತಂಕ ಎಲ್ಲಾ ತಂದೆ-ತಾಯಿಯರಿಗೂ ಆಗುವುದು ಸಹಜ. ಆದರೆ ಅವಳ ನಿರ್ಧಾರದ ಬಗ್ಗೆ ಅವಳೊಂದಿಗೆ ಮಾತನಾಡಿ, ಎಲ್ಲಾ ವಿಷಯಗಳನ್ನು ತಿಳಿದು ಒಪ್ಪಿಗೆ ಕೊಟ್ಟಿದ್ದು ಬಹಳ ಶ್ಲಾಘನೀಯ. ನಂತರ ಸುಮಾರು ಮೂರು ವರ್ಷಗಳ ಸಿದ್ಧತೆ, ದೋಣಿಯನ್ನು ನಡೆಸುವ ಅಥವಾ ಹುಟ್ಟುಹಾಕುವ ವಿಧಾನ ಮಾತ್ರವಲ್ಲದೆ, ದೀರ್ಘ ಪ್ರಯಾಣಕ್ಕೆ ಬೇಕಾದ ಸಾಮಗ್ರಿಗಳು ಮತ್ತು ನೌಕಾಯಾನದ ತಾಂತ್ರಿಕ ಅಂಶಗಳು ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವಿವರವಾದ ವರ್ಣನೆ ಇಲ್ಲಿದೆ.
ಪ್ರಸಾದ್ ದಂಪತಿಗಳು ಭಾರತಕ್ಕೆ ಹೋದಾಗ ಅಲ್ಲಿ ಕೆಲವರು, "ಈ ‘ಹುಚ್ಚು’ ಸಾಹಸಕ್ಕೆ ಹೇಗೆ ಅನುಮತಿ ಕೊಟ್ಟರಿ?" ಎಂದು ಕೇಳಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಅಲ್ಲಿನ ಜನರ ಮನಸ್ಥಿತಿಯ (mindset) ಬದಲಾವಣೆಗೆ ಸಮಾಜ ಇನ್ನೂ ತಯಾರಾಗಿಲ್ಲವೇನೋ ಅನಿಸುತ್ತದೆ. ಕೆನೆರಿ ದ್ವೀಪದಿಂದ ಅನನ್ಯಳನ್ನು ಬೀಳ್ಕೊಟ್ಟ ವರ್ಣನೆ ಭಾವನಾತ್ಮಕವಾಗಿದೆ. ನಂತರ ಅವಳು ಎದುರಿಸಿದ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಂಡಿದ್ದು, ದೋಣಿಯ ಬುಡದಲ್ಲಿ ಈಜಿ ಅಂಟಿಕೊಂಡಿದ್ದ ಬಾರ್ನಕಲ್ಸ್ (barnacles) ಗಳನ್ನು ಬ್ರಷ್ನಿಂದ ಸ್ವಚ್ಛಗೊಳಿಸಿದ್ದು ಮತ್ತು ಇನ್ನೊಂದು ಸಂದರ್ಭದಲ್ಲಿ ದೋಣಿಯ ಹಿಂಭಾಗದ ಕೆಳಗಿದ್ದ ರಡ್ಡರ್ (rudder) ರಿಪೇರಿ ಮಾಡಿದ್ದನ್ನು ನೆನೆಸಿಕೊಂಡರೆ, ಅನನ್ಯ ಎಂತಹ ಸಾಹಸಗಾರ್ತಿ ಎನ್ನುವುದು ಗೊತ್ತಾಗುತ್ತದೆ. ಈ ವಿಷಯಗಳನ್ನು ಅನನ್ಯಳಿಂದ ತಿಳಿದುಕೊಂಡು ಪ್ರಸಾದ್ ಅವರು ಈ ಪುಸ್ತಕದಲ್ಲಿ ವಿವರವಾಗಿ ಮತ್ತು ಸರಳವಾಗಿ ಬರೆದಿರುವುದನ್ನು ಇಲ್ಲಿ ಗಮನಿಸಬಹುದು. ಅಲ್ಲಲ್ಲಿ ಹಲವಾರು ಇಂಗ್ಲಿಷ್ ಕವಿಗಳು ಬರೆದ ಪದ್ಯಗಳ ಬಳಕೆ ಸೂಕ್ತವಾಗಿದೆ. ಉದಾಹರಣೆಗೆ, ಭಯದ ಬಗ್ಗೆ (ಪುಟ ೫೧) ಖಲೀಲ್ ಗಿಬ್ರಾನ್ ರಚಿಸಿರುವ 'Fear' ಅನ್ನುವ ಕವಿತೆ. ಅಲ್ಲದೆ ಮಧ್ಯೆ ಮಧ್ಯೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಬರೆದ ಕವನಗಳ ಪ್ರಸ್ತುತತೆಯೂ ಇದೆ.
ಅನನ್ಯಳ ಐವತ್ತೆರಡು ದಿನಗಳ ಯಾತ್ರೆ ಮುಗಿದು ಆಂಟಿಗ ದ್ವೀಪವನ್ನು ಸೇರಿದಾಗ ಪ್ರಸಾದ್ ದಂಪತಿಗಳ, ವ್ಯವಸ್ಥಾಪಕರ ಮತ್ತು ಅಲ್ಲಿ ನೆಲೆಸಿರುವ ಕೆಲವು ಕನ್ನಡಿಗರ ಹಾಗೂ ಭಾರತೀಯರಿಂದ ಅದ್ಭುತವಾದ ಸ್ವಾಗತ ದೊರಕಿತು. ಈ ಸಾಹಸದ ಮುಖ್ಯ ಗುರಿ ಹಲವಾರು ಸಂಸ್ಥೆಗಳಿಗೆ ಧನಸಹಾಯ ಮಾಡುವುದಾಗಿದೆ. ಅವಳ ದೊಡ್ಡಪ್ಪ ನಡೆಸುತ್ತಿರುವ 'ದೀನಬಂಧು' ಸಂಸ್ಥೆಯೂ ಅದರಲ್ಲಿ ಒಂದು.
ಕೇವಲ ನೂರು ಪುಟಗಳಲ್ಲಿ ಈ ಸಾಹಸದ ಬಗ್ಗೆ ಬರೆದಿರುವ “ಸಾಗರದಲ್ಲಿ ಸಾಹಸಿ“ ಪುಸ್ತಕವನ್ನು ಎಲ್ಲಾ ಕನ್ನಡಿಗರೂ ಓದಲೇಬೇಕು.
ರಾಮಮೂರ್ತಿ, ಕಾಂಗಲ್ ಟನ್, ಚಶೈರ್
ಸುಮಾ ಚಿಲ್ಲಾಳ (ಡೋಂಕಾಸ್ಟರ್) ಬರೆಯುತ್ತಾರೆ: The book ಸಾಗರದಲಿ ಸಾಹಸಿ (’Sagaradalli Sahasi’) is an inspiring book about courage, strength and the willpower. It’s book about a beautiful bond between father, mother and daughter. I must say, I could experience the emotions the parents were going through the whole journey. How would you let your only daughter go on a 3000-mile solo row across the Atlantic Ocean. Not only that, but they also had to give Ananya the courage, strength, encouragement. The incident where the rudder was broken and Dr Prasad encouraged Ananya to replace the rudder, for me this was “the“moment and it was when my respect and admiration for the parents reached the zenith. Keeping aside their fear and anxiety, they provided unwavering support throughout the expedition. The book is a personal perspective about the anxieties, hopes and pride of a father and mother watching their daughter undertake the challenges. A proud character sketch of Ananya bring out childhood memories. Her determination, resilience, meticulous preparation, mental strength and at the same time her generosity. The book answered questions I had in my mind about drinking water, food etc and most importantly the communication difficulties, which is so important to keep in touch. Overall, ಸಾಗರದಲಿ ಸಾಹಸಿ is a heartfelt tribute to human endurance and parental support. A true story of adventure, resilience and the power of family I wish Ananya writes her story in English, for people like me who are unfamiliar with Kannada, or who are not comfortable reading in Kannada.
Suma Chillal, from Doncaster
ಅನನ್ಯ ಸಾಗರೋಲ್ಲಂಘನ : ಸಾಹಸ ಕಥನ ವಿಮರ್ಶೆ - ಡಾ ರಾಜಶ್ರೀ ಪಾಟೀಲ ಅವರಿಂದ
ಓಡಿಸ್ಸಿಯಸ್ ನಾಮವೆತ್ತ ಕೈದೋಣಿಯನ್ನೇ ಬರೋಬ್ಬರಿ 52 ದಿನ 5 ಗಂಟೆ ಮನೆಯಾಗಿಸಿಕೊಂಡು , ತೋಳ್ಬಲವನ್ನೇ ಆಸ್ತಿ ಮಾಡಿಕೊಂಡು, ಹಿಂದೆ ಮುಂದೆ ಕೈಚಾಚಿದರೆ ಸಹಾಯ ಮಾಡೋ ಕೈಗಳಿಲ್ಲವೆಂದರಿತೂ , ವ್ಯವಸ್ಥಾಪಕರ ಕಿರುನೆರವು , ಆಶ್ವಾಸನೆ ಮಾತುಗಳನ್ನೇ ನಂಬಿಕೆಯಾಗಿಟ್ಟುಕೊಂಡು , ಟೈಟಾನಿಕ್ ಅಂಥ ಬೃಹತ್ ಹಡಗೇನೋ ಅನ್ನುವಂತೆ ತನ್ನ ಪಾಲುಮಾಡಿಕೊಂಡಂತ ಅಟ್ಲಾಂಟಿಕ್ ಮಹಾಸಾಗರದ ನಿಲ್ದಾಣವಿಲ್ಲದ 3,000 ಮೈಲಿಯ ಒಂಟಿ ಪಯಣವನ್ನ ಮನೆಯ ಏಕೈಕ ಕುಡಿ ಮಾಡುವೆನೆಂದಾಗ, ಅತೀ ಕಾಳಜಿಯಿಂದ ಕಾಪಾಡಿದ ಏಕೈಕ ಮನೆಯ ದೀಪ ಇಂಥ ಸಾಹಸಕ್ಕೆ ಕೈ ಹಾಕುವೆನೆಂದಾಗ, ಹೆತ್ತವರ ಮನಸ್ಸಿನ ತಳಮಳ , ಆತಂಕ , ಮುಂಬರುವ ಅಪಾಯಗಳ ಬಗೆಗಿನ ಮನಸ್ಸ್ಸಿನ ಮಂಥನದ ವಿಶ್ಲೇಷಣೆ ಅತೀ ನೈಜವಾಗಿದ್ದು ಮತ್ತು ವಾಸ್ತವಿಕವಾಗಿದ್ದು. ಅಸ್ತಿತ್ವ ಕಳೆದುಕೊಳ್ಳುವ ಭಯವಿದ್ದರೂ ಸಾಗರ ಸೇರಿ ಸಾಗರವೇ ತಾನಾಗುವ ನದಿಯ ಉಪಮೇಯವನ್ನಿಟ್ಟುಕೊಂಡು ಗಿಬ್ರಾನ್ ಬರೆದ 'ಫಿಯರ್' (Fear) ಕವಿತೆಯ ವಿಸ್ತಾರವಾದ ರೂಪಕದ ಪ್ರಸ್ತಾವನೆ, ಈ ಸಾಹಸ ಸಾಧನೆ ಅವರ ಕುಟುಂಬದ ಮೇಲೆ ಮೂಡಿಸಿದ ಭಯದ ಛಾಯೆಯನ್ನ ಮತ್ತು ಅದನ್ನ ಮೀರಿ ಹೊರಬಂದ ಬಗೆಯನ್ನ ಬಿಂಬಿಸುತ್ತದೆ. ಪ್ರಸಾದವರು ತಮ್ಮ ಬರವಣಿಗೆಯಿಂದ ಓದುಗನನ್ನು ಅವರ ಮನದಲ್ಲಾದ ಅಲ್ಲೋಲ ಕಲ್ಲೋಲಗಳಲ್ಲಿ ಒಂದಾಗಿಸಿದ್ದಾರೆ .ಅವರ ಬರವಣಿಗೆಯ ಶೈಲಿ, ಓದುಗನೂ ಅನನ್ಯಳ ಅನನ್ಯ ಪಯಣದಲ್ಲಿ ಅವರ ಅಪ್ಪನ ಜೊತೆಯಲ್ಲಿಯೇ ಇದ್ದೆನೇನೋ ಅನ್ನುವಷ್ಟು ಹತ್ತಿರ ಮಾಡುವಂತಿದೆ .
ಇತ್ತ ಅಜ್ಜ ಜೆ ಎಸ್ಎಸ್ ಅವರ ಸುಂದರ ಪದಗಳಲ್ಲಿ ವರ್ಣಿತವಾದ ‘ಸುನೀಲ , ವಿಸ್ತರ , ತರಂಗ ಶೋಭಿತ ಗಂಭೀರಾಂಬುಧಿಯಲ್ಲಿ’ ಅಂತರಂಗದ ಅನ್ವೇಷಣೆ ಮತ್ತು ನಿಶ್ಶಬ್ದದ ನಡುವಿನ ಆಧ್ಯಾತ್ಮ ಪಯಣ ಮಾಡುವೆನೆನ್ನುವ ಮಗಳ ಮಾನಸಿಕ ಪ್ರಬುದ್ಧತೆ, ಅದಕ್ಕಾಗಿ ಸತತ ಮೂರು ವರ್ಷಗಳ ಕಾಲ ದೇಹ ಮತ್ತು ಮನಸ್ಸನ್ನ ಯಾವುದೇ ಸ್ವಂತವಾದ ಅಪೇಕ್ಷೆಯಿಲ್ಲದೆ ದುಡಿಸಿ ದಣಿಸಿ ತಯಾರಿ ನಡೆಸುವ ಮಗಳ ಹರಸಾಹಸ, ಭಾರತೀಯರ, ಕನ್ನಡಿಗರ, ವರ್ಣೀಯ ಜನಾಂಗದ ನೀರಿಕ್ಷೆಯನ್ನ ಹೊತ್ತು , ಹಲವಾರು ಪಾಶ್ಚಿಮಾತ್ಯ ದೇಶಗಳ ಭಾವುಟಗಳ ನಡುವೆ ಕೇಸರಿ ಬಿಳಿ ಹಸಿರು ಬಣ್ಣಗಳ ಪತಾಕೆ ಹೊತ್ತು ಸಾಗರದ ಒಂಟಿ ಪಯಣಕ್ಕೆ ಮಗಳು ಹೆಜ್ಜೆಯಿಟ್ಟು ಮುನ್ನಡೆದಾಗ, ಮಗಳು ಬೆಳೆದ ರೀತಿಯ ಬಗ್ಗೆ ಅಪ್ಪನ ಹೃದಯ ತುಂಬಿ ಬರುವ ಹೊಗಳಿಕೆಯ ಮಾತುಗಳು, ಎಲ್ಲೂ ಉತ್ಪ್ರೇಕ್ಷೆಯಾಗದೆ, ಕೆಲವೊಂದು ಬಾರಿ ಬರಹಗಾರ ಸ್ವಲ್ಪ ಉದಾರತೆಯನ್ನ ತೋರಬಹುದಿತ್ತೇನೋ ಅನ್ನಿಸುವಂತಿದೆ .
ಅಪ್ಪನ ಗಂಡುಮನಸ್ಸನ್ನ ಕರಗಿಸಿ ಗಳಗಳನೆ ಅಳಿಸಿ, ಅಪಾರ ಸಮುದ್ರದ ಅಂಚಿನಲ್ಲಿ ಹುಟ್ಟುದೋಣಿಯ ಜೊತೆಗೆ ಒಂದು ಸಣ್ಣ ಚುಕ್ಕಿಯಂತೆ ಮರೆಯಾಗಿ, ಮೊಬೈಲ್ ಕಳೆದರೇನು, ಡಿ ಸಲೈನೇಷನ್ ಯಂತ್ರ ಮುರಿದರೇನು , ದೋಣಿಯ ಚುಕ್ಕಾಣಿ ನೀರಲ್ಲಿ ಮುರಿದರೇನು, ಕೊನೆಗೆ ಹುಟ್ಟುದೋಣಿಯ ಹುಟ್ಟೇ ಮುರಿದರೇನು, ನನ್ನ ಪಯಣ, ಗುರಿ ಮುಟ್ಟದೆ ನಿಲ್ಲದೆಂದು ಪರಿಹಾರ ಹುಡುಕುತ್ತ ಸಾಗುವ ಅನನ್ಯಳ ಸಾಹಸ ಪಯಣ ಹೃದಯ ಸ್ತಂಭನಳಿಸುವಂತದು. ಅದನ್ನ ಓದುಗರ ಮನಕ್ಕೆ ಅತಿಯಾಗದೆ, ತೀರಾ ಮಿತವಾಗದೆ, ನಿಜಕ್ಕೆ ಹತ್ತಿರವಾಗಿ ವಿವರಣೆ ಮಾಡಿರುವ ಲೇಖಕರ ಪರಿ ಮೆಚ್ಚುಗೆಯಾಗುವಂತದ್ದು.
ಸಾಹಸ ಪ್ರಯಾಣ ಕೊನೆಯ ಹಂತ ತಲುಪುವ ಸುದ್ದಿ ತಿಳಿದು ಸ್ವಾಗತ ಮಾಡಲು ಅಂಟಿಗಕ್ಕೆ ಪ್ರಯಾಣ ಬೆಳೆಸಿ ಎತ್ತರದ ವಿಮಾನದಲ್ಲಿ ಕುಳಿತು ಮಹಾಸಾಗರದಲ್ಲಿ ಮಗಳ ಚುಕ್ಕಿ ದೋಣಿಯನ್ನ ಹುಡುಕುವ ಅಪ್ಪ ಅಮ್ಮನ ಮುಗ್ದತೆ ತುಂಬಿದ ಕಾತುರತೆ ಓದುಗನಲ್ಲಿ ಕಿರುನಗೆಯನ್ನ ಹೊರಹಾಕುವಂತಿದೆ.
ಚುಕ್ಕಿಯಂತೆ ಮರೆಯಾಗಿ ಅನನ್ಯ ಸಮುದ್ರ ಸಾಹಸವನ್ನು ಮುಗಿಸಿ, ಮಿನುಗುವ ನಕ್ಷತ್ರದಂತೆ ಧರೆಗೆ ಮರಳಿ ತನ್ನ ಮೊದಲ ಹೆಜ್ಜೆ ಇಟ್ಟಾಗ ಅಪ್ಪನ ಮನಸ್ಸಿನಲ್ಲಾಗುವ ಅಗಾಧ ನಿರಾಳ ಭಾವ, ಸಂಭ್ರಮ ಮತ್ತು ಹೆಮ್ಮೆ ಮನಮುಟ್ಟುವಂತಿದೆ. ಸಾಹಸ ಮತ್ತು ಸಾಹಸದ ತದನಂತರದ ಘಟನೆಗಳ ಭಿತ್ತಿಚಿತ್ರಣ ಆಯ್ಕೆ ಲೇಖಕರ ನಿಖರತೆಯನ್ನ ತಿಳಿಸುವಂತಿದೆ .
ಒಟ್ಟಾರೆ ಪುಸ್ತಕ ಓದುಗನಿಗೆ ತಾನು ಸಾಹಸಗಾಥೆಯ ಭಾಗವೇನೋ ಎನ್ನಿಸಿ ಸಾರ್ಥಕತೆಯ ಭಾವ ಮೂಡಿಸುವಂತಿದೆ. ಆದರೆ ನನಗಂತೂ ಅರ್ಥಗರ್ಭಿತ ಹೆಸರನ್ನ ನಾಮಕರಣ ಮಾಡಿ, ಸಂಪೂರ್ಣ ವೈಯಕ್ತಿಕ ಸ್ವಾತಂತ್ರ್ಯ ನೀಡಿ, ಮಗಳ ಕನಸನ್ನ ಇಚ್ಛೆಯ ಜೊತೆಗೆ ಆಯ್ಕೆಯನ್ನಾಗಿಸಿಕೊಂಡ ತಂದೆ ತಾಯಿಯನ್ನ ಪಡೆದ ಅನನ್ಯಳ ಬಗ್ಗೆ ತುಸು ಹೊಟ್ಟೆಕಿಚ್ಚು ಮೂಡಿದ್ದಂತೂ ಸತ್ಯ.
ಡಾ ರಾಜಶ್ರೀ ಪಾಟೀಲ, ಲೆಸ್ಟರ್, ಯು ಕೆ
ಶಾಲಿನಿ ಜ್ಞಾನಸುಬ್ರಮಣಿಯನ್ ಅವರ ಲೇಖನ:
ಒಡಿಸ್ಸಿ (ರಾಜಾ ಒಡಿಸ್ಸಿಯಸ್ ಕುರಿತು ನಿರ್ಮಿತವಾದ ಚಲನಚಿತ್ರ The Odessey ) ಇತ್ತೀಚೆಗೆ ಬಿಡುಗಡೆಯಾಗಿದೆ; ಅದೇ ಸಮಯದಲ್ಲಿ ಅನನ್ಯ ಪ್ರಸಾದ್ನ ಹಡಗನ್ನು (Atlantic Odyssey) row ಮಾಡಿದ ಅವಳ ಶೌರ್ಯವನ್ನು ವರ್ಣಿಸುವ ಪುಸ್ತಕ ‘ಸಾಗರದಲ್ಲಿ ಸಾಹಸಿ’ ಹೊರಬಂದಿದೆ. ಎರಡರ ಬಗ್ಗೆಯೂ ನನಗೆ ತುಂಬಾ ಉತ್ಸಾಹ. ಅನನ್ಯಳ ಕಥೆ ಓದಿದಾಗ, ಈ ಪೌರಾಣಿಕ* ಹೆಸರನ್ನು ವಾಸ್ತವಕ್ಕೆ ತಂದ ಧೈರ್ಯ, ದೃಢತೆ, ಮತ್ತು ಜ್ವಾಲೆಯ ಬಗ್ಗೆ ಅಪಾರವಾದ ಗೌರವ ನನ್ನೊಳಗೆ ಮೂಡಿತು. ಪುಸ್ತಕವನ್ನು ಆರಂಭದಿಂದ ಅಂತ್ಯವರೆಗೆ ಓದುವುದು ಸಂಪೂರ್ಣವಾಗಿ ಮನಸೂರೆಗೊಂಡ ಅನುಭವವಾಗಿತ್ತು; ಮೊದಲನೇ ಬಾರಿಗೆ ಇಷ್ಟು ಕಡಿಮೆ ಸಮಯದಲ್ಲಿ, ಎರಡು ದಿನಗಳಲ್ಲಿ ನಾನು ಓದಿ ಮುಗಿಸಿರುವ ಕನ್ನಡ ಪುಸ್ತಕ. (*ಸಂಸ್ಕೃತದ ಪುರಾ ಶಬ್ದದ ಅರ್ಥ ಬಹಳ ಹಳೆಯ ಕಾಲ ಅಂತ. ಆ ಅರ್ಥದಲ್ಲಿ ಇಲ್ಲಿ ’ಪೌರಾಣಿಕ’ ಪದವನ್ನುಶಾಲಿನಿ ಅವರು ಉಪಯೋಗಿಸಿದ್ದಾರೆ.-ಸಂ)
2025ರ ಫೆಬ್ರವರಿಯಲ್ಲಿ ಅನನ್ಯ ಬಗ್ಗೆ ಸುದ್ದಿಯಲ್ಲಿ ಓದಿದ್ದೆ; ಭಾರತೀಯ ಮೂಲದ, ಕನ್ನಡತಿ, ಮತ್ತು ನಮ್ಮ ಅತ್ಯಂತ ಪ್ರೀತಿಪಾತ್ರ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು — ಎಂತಹ ಹೆಮ್ಮೆಯ ವಿಷಯ! ಮತ್ತು ಆಕೆ ಯಾವುದೇ ಮಹಾಸಾಗರವನ್ನು ಏಕಾಂಗಿಯಾಗಿ ದಾಟಿದ ಮೊದಲ ವರ್ಣೀಯ ಮಹಿಳೆ ಎಂಬುದನ್ನು ತಿಳಿದಾಗ, ಅನೇಕ ಭಾವನೆಗಳು ನನ್ನೊಳಗೆ ಹರಿದುಬಂದವು. ಆ ದಿನ ನನ್ನ ಮನಸ್ಸಿನಲ್ಲಿ ಉದ್ಭವಿಸಿದ ಅನೇಕ ಪ್ರಶ್ನೆಗಳಿಗೆ, ಆಕೆಯ ತಂದೆ ಡಾ. ಜಿ.ಎಸ್. ಪ್ರಸಾದ್ ಅವರು ಬರೆದ ಈ ಅದ್ಭುತ ಪುಸ್ತಕ ಉತ್ತರ ನೀಡಿತು.
ಒಬ್ಬ ಪೋಷಕರಾಗಿ, ನನ್ನ ಮೊದಲ ಚಿಂತನೆ — ಅನನ್ಯಳ ಪೋಷಕರು ಹೇಗೆ ಆತಂಕ, ಅಸ್ಪಷ್ಟತೆ ಯನ್ನು ಎದುರಿಸಿದರು? ತಮ್ಮ ಮಗಳು ಅಟ್ಲಾಂಟಿಕ್ ಸಮುದ್ರವನ್ನು ಏಕಾಂಗಿಯಾಗಿ ದಾಟುತ್ತೇನೆಂದು ತಿಳಿಸಿದಾಗ ಅವರು ಹೇಗೆ ಭಾವನೆಗಳ ಸಮತೋಲನ ತಂದುಕೊಂಡರು ಎಂದು. ಈ ಪ್ರಶ್ನೆ ಎಷ್ಟೋ ಸಾರಿ ನಾನು ತಾಯಿಯಾಗಿ ಯೋಚಿಸುತ್ತೇನೆ. ಡಾ. ಪ್ರಸಾದ್ ಅವರು ಪುಸ್ತಕದ ಅನೇಕ ಭಾಗಗಳಲ್ಲಿ ಇದನ್ನು ಅತಿ ಸುಂದರವಾಗಿ ಮತ್ತು ಪ್ರಾಯೋಗಿಕವಾಗಿ ವಿವರಿಸಿದ್ದಾರೆ. ಹಂತ ಹಂತವಾಗಿ ಮಾಡಿದ ಯೋಜನೆ, ಪೋಷಕರು ನಡೆಸಿದ ಆರಂಭಿಕ ಸಂಶೋಧನೆ, ಮಗಳೊಂದಿಗೆ ನಡೆದ ಮಾತುಕತೆಗಳು, ನಿದ್ರಾಹೀನ ರಾತ್ರಿಗಳು, ಪೋಷಕರ ಅಂಜಿಕೆಗಳು, ಮಕ್ಕಳ ಕನಸುಗಳಿಗೆ , ಅಭಿವೃದ್ಧಿಗೆ ಅಸಾವಧಾನವಾಗಿ ಅಡ್ಡಿಯಾಗುವುದರ ಬಗ್ಗೆ ಜಾಗರೂಕರಿಗಿರುವುದು, ನೋಡಿಕೊಳ್ಳುವುದು, ಮಾನಸಿಕವಾಗಿ ತಾವು ಸಿದ್ಧರಾಗುವುದು, ಪೋಷಕರ ಪ್ರೋತ್ಸಾಹದ ನುಡಿಗಳು — ಇವೆಲ್ಲವೂ ನನಗೆ ಉತ್ತರಗಳಾಗಿದ್ದವು.
ಪುಸ್ತಕ ಅನೇಕ ಸ್ಥಳಗಳಲ್ಲಿ ರೋಮಾಂಚಕವಾಗಿದೆ. ವಿಶೇಷವಾಗಿ ಗರ್ಜಿಸುವ ಅಲೆಗಳ ನಡುವೆ ದೋಣಿಯ ಕೆಳಗೆ ಮುಳುಗಿ ಅನನ್ಯ ಅದನ್ನು ಸ್ವಚ್ಛಗೊಳಿಸಬೇಕಾದ ಮೊದಲ ಘಟನೆ. ಆ ಕಲ್ಪನೆಯೇ ಭಯ ಹುಟ್ಟಿಸುವುದು. ‘ಕೆಲಸವನ್ನು ತಡವಾಗಿ ಮಾಡುವುದಕ್ಕಿಂತ ಬೇಗ ಮುಗಿಸು’ ಎಂದು ಪೋಷಕರು ನೀಡಿದ ಪ್ರೋತ್ಸಾಹದ ಮಾತುಗಳು ಅವಳಿಗೆ ಭಯವನ್ನು ನಿಭಾಯಿಸಲು ಮಾಯದ ಮದ್ದುಗಳಂತೆ ಕೆಲಸ ಮಾಡಿದ್ದವು. ಆ ಭಾಗವನ್ನು ಓದುವಾಗ ನನಗೂ ಭಯದ ಅನುಭವವಾಗಿತ್ತು; ಆಕೆ ಮತ್ತೆ ದೋಣಿಯ ಮೇಲೆ ಏರುವ ಕ್ಷಣವನ್ನು ಓದಲು ಕಾತರವಾಗಿದ್ದೆ.
ಅನನ್ಯ ದೃಢಮನದ ಧೀರ ಹೃದಯಿ! ಮಾನವರನ್ನು ಇಷ್ಟು ಸಾಧಕರನ್ನಾಗಿ ಮಾಡಿಸುವುದು ಏನು? ಸಾಧಕರ ಗುಣಗಳೇನು ಎಂಬ ಪ್ರಶ್ನೆ ಇದ್ದಲ್ಲಿ ಅದಕ್ಕೆ ಉತ್ತರಗಳು ಈ ಪುಸ್ತಕದಲ್ಲಿ ದೊರಕುತ್ತದೆ. ಆಕಾಂಕ್ಷೆ, ಕನಸು, ದೃಢತೆ, ಇತರರು ಹೆಜ್ಜೆ ಇಟ್ಟಿರದ ಸ್ಥಳಕ್ಕೆ ಹೆಜ್ಜೆ ಇಡುವ ಮನೋಬಲ, ಬಿರುಗಾಳಿಯಲ್ಲಿಯೂ ಶಾಂತ ಚಿತ್ತ — ಅನನ್ಯಳ ಬಗ್ಗೆ ನಾನು ತಿಳಿದಿದ್ದು ಈ ಪುಸ್ತಕ ಮುಖಾಂತರ. ನನಗೆ ಭಗವದ್ಗೀತೆಯ ಈ ಶ್ಲೋಕ ನೆನಪಾಯಿತು: “ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ” BG 6.5
ಅನನ್ಯಳ ಕಥೆ, ಮನಸ್ಸಿನ ಶಕ್ತಿಯಿಂದ ಮತ್ತು ಸ್ವಪ್ರಯತ್ನದಿಂದ ತನ್ನನ್ನು ತಾನೇ ಎತ್ತಿಕೊಳ್ಳುವ ಅದ್ಭುತ ಉದಾಹರಣೆ. ಅವಳ ಪ್ರತಿಯೊಂದು ಚಿಂತನಾ ಮಾದರಿ, ಮಾನಸಿಕ ಅಭ್ಯಾಸ, ಕ್ರೀಡಾಸ್ಫೂರ್ತಿ — ಇವೆಲ್ಲವೂ ಆಕೆಯನ್ನು ಎತ್ತರಗೊಳಿಸುವ ಮಾರ್ಗದಲ್ಲಿ ಕರೆದೊಕೊಂಡು ಹೋಗಿವೆ ಎನ್ನಬಹುದು. ಮೊಬೈಲ್ ಫೋನ್ ನೀರಿಗೆ ಬಿದ್ದ ಪ್ರಸಂಗದಲ್ಲಿ ಆಕೆ ನಿರಾಶೆಯಾಗದೆ, ಉಪಗ್ರಹ ಫೋನ್ ಬಳಸಿ ಹೊಸ ಸಂಖ್ಯೆಯಿಂದ ಪರಿಹಾರ ಕಂಡುಕೊಂಡಳು — ಅದ್ಭುತ ಮನೋಸ್ಥಿತಿ ಅಲ್ಲವೇ ಅದು!
ನನಗೆ ರೋಯಿಂಗ್ ಬಗ್ಗೆ ತಿಳಿದಿರುವುದು ಅಲ್ಪ. ವರ್ಷಗಳ ಹಿಂದೆ ನನ್ನ ಕೆಲಸದ ಸ್ಥಳ ಥೇಮ್ಸ್ ನದಿಯ ತೀರದಲ್ಲಿತ್ತು; ಅದು ಒಲಿಂಪಿಕ್ಸ್ ರೋಯಿಂಗ್ ಮಾರ್ಗ ವಾಗಿತ್ತು. ಮಧ್ಯಾಹ್ನದ lunch ಸಮಯದಲ್ಲಿ ರೋಯರ್ಗಳ ಅಭ್ಯಾಸ ನೋಡುವುದು ನನ್ನ ಹವ್ಯಾಸವಾಗಿತ್ತು. 2012ರಲ್ಲಿ ಬ್ರಿಟಿಷ್ ಮಹಿಳೆಯರ ಜೋಡಿ ರೋಯಿಂಗ್ನಲ್ಲಿ ಮೊದಲ ಒಲಿಂಪಿಕ್ ಚಿನ್ನ ಗೆದ್ದ ಹೆಲೆನ್ ಗ್ರೋವರ್ (ನಂತರ ಹೆಲೆನ್ ಬ್ಯಾಕ್ಷಾಲ್) ಅವರ ಅಭಿಮಾನಿ. ಅನನ್ಯ ಪ್ರಸಾದ್ ಅವರ ಕಥೆ ವಿಶೇಷ — ಏಕೆಂದರೆ ಆಕೆ ನಮ್ಮ ಭಾರತೀಯ ಮೂಲದವಳು, ಜೊತೆಗೆ ಏಕಾಂಗಿಯಾಗಿ rowing ಸಾಧಿಸಿದ್ದಾಳೆ, ಅನೇಕ ವರ್ಣೀಯ ಮಕ್ಕಳಿಗೆ ಕನಸುಗಳನ್ನು ಬೆನ್ನಟ್ಟುವ ಪ್ರೇರಣೆಯನ್ನು ನೀಡುತ್ತಾ.
ಅನನ್ಯಳ ದಿನಚರಿ, 52 ದಿನಗಳು ದೋಣಿಯಲ್ಲಿ ಏಕಾಂಗಿಯಾಗಿ ಕಳೆದದ್ದು, ದಿನವನ್ನು ಯೋಜಿಸಿಕೊಂಡದ್ದು, ಲಭ್ಯವಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡದ್ದು, ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದದ್ದು — ಇವೆಲ್ಲವೂ ಓದಲು ಮನಮೋಹಕವಾಗಿತ್ತು. ಅವಳು ಆ ದೀರ್ಘ ರಾತ್ರಿಗಳನ್ನು ಭಯಪಡದೆ, ಸಾವಿರಾರು ನಕ್ಷತ್ರಗಳ ಶರಣಾರ್ಥಿ 3,000 ಮೈಲುಗಳ ಸಾಗರದ ಮೇಲಿನ ಪ್ರಯಾಣವನ್ನು ಆನಂದಿಸಿದ್ದಾಳೆ ಎಂಬುದು ಮನಸ್ಸಿಗೆ ಸ್ಪೂರ್ತಿ ನೀಡುತ್ತದೆ. ಎಂತಹ ಅದ್ಭುತ ಸಾಧನೆ! ಅವಳ ಜೀವನದ ಮೇಲೆ ಒಂದು ಚಲನಚಿತ್ರ ಬಂದರೆ ಅದ್ಭುತ. ಅನನ್ಯ ಭಾರತೀಯ ಧ್ವಜವನ್ನು ಬ್ರಿಟಿಷ್ ಧ್ವಜದ ಜೊತೆಗೆ ಹಾರಿಸಿದ ಕ್ಷಣ ಮತ್ತು ದೋಣಿಯ ಮೇಲೆ ಇದ್ದ ಕೃಷ್ಣಯ್ಯ ಚೆಟ್ಟಿ ಲೋಗೋ - ನನಗೆ ಮತ್ತಿಷ್ಟು ಹೆಮ್ಮೆಯನ್ನುಂಟು ಮಾಡಿತು. ಎಲ್ಲೆಡೆ Legacyಯ ಪ್ರತೀಕ ತುಂಬಿ ತುಳುಕುತ್ತಿದೆ ಅಂತ ಭಾವಿಸ್ತೀನಿ.
ಲೇಖಕ ಡಾ. ಪ್ರಸಾದ್ ಅವರ ಹಿತನುಡಿಯೊಂದಿಗೆ ಪುಸ್ತಕವನ್ನು ವ್ಯವಸ್ಥೆ ಮಾಡಿದ್ದಕ್ಕಾಗಿ ಡಾ. ಶ್ರೀವತ್ಸ ದೇಸಾಯಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಓದುವಂತಹ ಪುಸ್ತಕ. ಅನನ್ಯಳ ಭವಿಷ್ಯಕ್ಕೆ ಅನೇಕ ಶುಭಾಶಯಗಳನ್ನು ಈ ಬರಹ ಮೂಲಕ ಕಳಿಸುತ್ತೇನೆ.
ಶಾಲಿನಿ ಜ್ಞಾನಸುಬ್ರಮಣಿಯನ್, ಕಾರ್ಡಿಫ್, ವೇಲ್ಸ್, ಯು ಕೆ
ವಿಜಯ ನರಸಿಂಹ ಬರೆಯುತ್ತಾರೆ
'ಸಾಗರದಲ್ಲಿ ಸಾಹಸಿ' ಡಾ. ಜಿ.ಎಸ್. ಶಿವಪ್ರಸಾದ್ ಅವರ ವಿರಚಿತ ಈ ಕೃತಿ ತಮ್ಮ ಮಗಳ ಸಾಗರ ಯಾನದ ಸಾಹಸಗಾಥೆ ಎಂದೆನಿಸಿದರೂ , ಲೇಖಕರು ಮಾನವ ಜೀವನದ ಹಲವು ಮಜಲುಗಳನ್ನು ಓದುಗರಿಗೆ ಸುಲಭವಾಗಿ ತೆರದಿಟ್ಟಿದ್ದಾರೆ. 'World's Toughest Row' ಮಹಾ ಸಾಗರ ಯಾನದ ಸಾಹಸಕ್ಕೂ ಮತ್ತು ನಮ್ಮ ದಿನನಿತ್ಯದ ಜೀವನಕ್ಕೂ ಇರುವ ಸಾಮ್ಯತೆಗಳನ್ನು ಉಲ್ಲೇಖಿಸಿರುವ ಸಂದರ್ಭಗಳು ನನ್ನ ಮನಸ್ಸನ್ನು ಬಹಳವಾಗಿ ಸೆಳೆದವು. ಅನನ್ಯ ಅವರ ಸಾಧನೆ ನಿಜಕ್ಕೂ ಅನನ್ಯವಾದುದು. ಮೃದು ಸ್ವಭಾವ, ಮಿತಭಾಷಿ, ಅಂತರ್ಮುಖಿ ಗುಣಗಳನ್ನು ಹೊಂದಿರುವ ಮಗಳು ಅಸಾಧಾರಣ ಕೆಲಸವೊಂದಕ್ಕೆ ಅಣಿಯಾಗುವೆ ಎಂದಾಗ ಅದೆಂಥ ದಿಟ್ಟ ತಂದೆ-ತಾಯಿಯರಿಗೂ ಭಯ, ಗೊಂದಲ, ಅಧಿಕಾರಯುತ ನಿರಾಕರಣೆ, ಪ್ರತಿರೋಧ ಭಾವಗಳು ಒಮ್ಮೆಗೇ ಬರುವುದು ಸಹಜ. ಒಂದು ವೇಳೆ ತಂದೆ-ತಾಯಿಯರು ಒಪ್ಪಿಗೆ ಕೊಡದಿದ್ದರೂ ಅನನ್ಯ ಅವರು ಈ ಸಾಧನೆಯನ್ನು ಮಾಡಿಯೇ ತೀರುತ್ತಿದ್ದರು ಎನ್ನುವ ಭಾವ ನನ್ನದು, ಇದಕ್ಕೆ ಕಾರಣ ಅವರ ಈ ಮಹಾ ಯಾನದ ಹಿಂದಿರುವ ಉದ್ದಿಶ್ಯ. ಇನ್ನು ಈ ಸಾಹಸಗಾಥೆಗೆ ಬೇಕಾದ ಪೂರ್ವ ತಯಾರಿ, ದೇಹ ಮತ್ತು ಮನಸ್ಸುಗಳೆರಡನ್ನೂ ಕಠಿಣತೆಗೆ ಒರೆ ಹಚ್ಚಲು ಸಜ್ಜು ಮಾಡಿಕೊಂಡ ಎಲ್ಲ ವಿವರವನ್ನು , ಇದರ ಜೊತೆಗೆ ಸಾಗರ ಪರ್ಯಟನೆಯ ಇತಿಹಾಸ, ಹವಾಮಾನದ ಸೂಕ್ಷ್ಮ ವಿಚಾರಗಳು, ತಂತ್ರಜ್ಞಾನದ ಅವಶ್ಯಕತೆಗಳು ಮತ್ತು ಬಳಕೆಯ ತರಬೇತಿ , ಹೀಗೆ ಹಲವಾರು ವಿಚಾರಗಳನ್ನು ಲೇಖಕರು ಸಮರ್ಪಕವಾಗಿ ವಿವರಿಸಿದ್ದಾರೆ. ಜಿ.ಎಸ್.ಎಸ್ ಅವರ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಎನ್ನುವ ಕವಿತೆಯ ಆಂತರ್ಯವನ್ನು ಕವಿ ಖಲೀಲ ಗಿಬ್ರಾನ್ ಅವರ 'Fear' ಕವಿತೆಯ ಸಾಲುಗಳಿಗೆ ಇರುವ ಸಾಮ್ಯತೆಯನ್ನು ಪ್ರಸಾದ್ ಅವರು ಬಹಳ ಚೆನ್ನಾಗಿ ಸಾಂದರ್ಬಿಕವಾಗಿ ಕಟ್ಟಿಕೊಟ್ಟಿದ್ದಾರೆ. ಯಾನದ ನಡುವೆ ಅನನ್ಯ ಅವರು ಎದುರಿಸಬೇಕಾದ ನಿರೀಕ್ಷಿತ ಮತ್ತು ಅನಿರೀಕ್ಷಿತ ಸಮಸ್ಯೆಗಳು ಮತ್ತು ಅವುಗಳನ್ನು ದೋಣಿಯೊಳಗೆ ಮತ್ತೆ ಕೆಲವು ಸಲ ಸಾಗರದೊಳಗೆ ಧುಮುಕಿ ನಿವಾರಿಸಿದ ಬಗೆ ಎಲ್ಲವೂ ನಮಗೆ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದಾರೆ. ನಾವು ಜೀವನದಲ್ಲಿ ಸಮಸ್ಯೆಗಳನ್ನು ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಎದುರಿಸಬೇಕೇ ಹೊರೆತು ಸಮಸ್ಯೆ ನಮ್ಮನ್ನು ಹೆದರಿಸುವಂತಾಗಬಾರದು ಎನ್ನುವ ತತ್ವವನ್ನು ಪ್ರಸಾದ್ ಅವರು ತಿಳಿಸಿಕೊಟ್ಟಿದ್ದಾರೆ.
ಅತ್ತ ಮಗಳು ಒಂಟಿಯಾಗಿ ಪ್ರಕೃತಿಯ ಸವಾಲುಗಳನ್ನು ಎದುರಿಸುತ್ತಿರುವಾಗ ಇತ್ತ ತಂದೆ ತಾಯಿಯರು ಪಡುತ್ತಿದ್ದ ಆತಂಕ, ತಲ್ಲಣ, ಭಾವುಕತೆ, ಅಸಹಾಯಕ ಪರಿಸ್ಥಿತಿ ಎಲ್ಲವೂ ಅನುಭವಿಸಿದವರಿಗಷ್ಟೇ ಗೊತ್ತು.
ಅನನ್ಯ ಅವರ ಸಾಧನೆಗೆ ನನ್ನದೊಂದು ದೊಡ್ಡ ಸಲಾಂ ಮತ್ತು ಈ ಸಾಹಸಗಾಥೆಯ ಕೃತಿಗೆ ಪ್ರಸಾದ್ ಅವರಿಗೆ ನನ್ನ ಅಭಿನಂದನೆಗಳು.
✍️ವಿಜಯ ನರಸಿಂಹ, ಗ್ಲಾಸ್ಟರ್, ಯು ಕೆ
ಶ್ರೀಹರ್ಷ ನೀರಗುಂದ ನಾಗರಾಜ್ ಬರೆಯುತ್ತಾರೆ:
“ಸಾಗರದಲ್ಲಿ ಸಾಹಸಿ- ಬ್ರಿಲಿಯಂಟ್ ಅನುಭವ ನನಗೆ”
ಕೆಲವು ಪುಸ್ತಕಗಳು ಕೇವಲ ಕಥೆಯನ್ನು ಹೇಳುವುದಿಲ್ಲ; ಅವು ನಮ್ಮ ಮನಸ್ಸನ್ನು ತಟ್ಟುತ್ತವೆ, ನಮ್ಮ ಆಲೋಚನೆಗಳನ್ನು ಬದಲಿಸುತ್ತವೆ ಮತ್ತು ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತವೆ. ಅಂತಹ ಅಪರೂಪದ ಕೃತಿಗಳಲ್ಲಿ ಡಾ. ಜಿ. ಎಸ್. ಶಿವಪ್ರಸಾದ್ ಅವರು ರಚಿಸಿರುವ “ಸಾಗರದಲ್ಲಿ ಸಾಹಸಿ” ಒಂದು. ಈ ಪುಸ್ತಕವನ್ನು ಓದಿದ ನಂತರ ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆ ಒಂದೇ ಇದು ಕೇವಲ ಸಮುದ್ರಯಾನದ ಕಥೆಯಲ್ಲ, ಇದು ಮಾನವನ ಅಚಲ ಸಂಕಲ್ಪ, ಅಸಾಧ್ಯವನ್ನು ಸಾಧ್ಯವಾಗಿಸುವ ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದ ಜೀವಂತ ದಾಖಲೆಯಾಗಿದೆ.
ಈ ಪುಸ್ತಕದ ಅತ್ಯಂತ ವಿಶೇಷ ಅಂಶವೆಂದರೆ, ಲೇಖಕರು ತಮ್ಮ ಮಗಳ ಸಾಹಸಮಯ ಸಮುದ್ರಯಾನವನ್ನು ಕೇವಲ ಘಟನೆಗಳ ಸರಣಿಯಾಗಿ ಹೇಳದೆ, ಓದುಗನನ್ನು ಆ ಪಯಣದ ಸಹಯಾತ್ರಿಯನ್ನಾಗಿ ಮಾಡುತ್ತಾರೆ. ಪ್ರತಿಯೊಂದು ಅಧ್ಯಾಯದಲ್ಲೂ ಭಾವನೆ, ಉತ್ಸಾಹ, ಆತಂಕ, ನಿರೀಕ್ಷೆ ಮತ್ತು ವಿಜಯದ ಕ್ಷಣಗಳು ಅಷ್ಟು ಸಹಜವಾಗಿ ಮೂಡಿಬಂದಿವೆ ಎಂದು ಓದುತ್ತಿರುವಾಗ ನಾವೇ ಆ ಪುಟ್ಟ ದೋಣಿಯಲ್ಲಿ ಸಾಗರದ ಅಲೆಗಳೊಂದಿಗೆ ಹೋರಾಡುತ್ತಿರುವ ಅನುಭವವಾಗುತ್ತದೆ.
ಲೇಖಕರ ಬರವಣಿಗೆಯ ಶೈಲಿ ತುಂಬಾ ಸರಳ, ಸುಂದರ ಮತ್ತು ಹೃದಯಸ್ಪರ್ಶಿಯಾಗಿದೆ. ಅನಗತ್ಯ ಅಲಂಕಾರಿಕ ಭಾಷೆಯನ್ನು ಬಳಸದೆ, ನೇರವಾದ ಆದರೆ ಪರಿಣಾಮಕಾರಿಯಾದ ನಿರೂಪಣೆಯ ಮೂಲಕ ಅವರು ಓದುಗರ ಮನಸ್ಸನ್ನು ಗೆಲ್ಲುತ್ತಾರೆ. ಪ್ರತಿಯೊಂದು ಪುಟವೂ ಕುತೂಹಲವನ್ನು ಹೆಚ್ಚಿಸುತ್ತದೆ. ಮುಂದಿನ ಪುಟದಲ್ಲಿ ಏನಾಗುತ್ತದೆ ಎಂಬ ನಿರೀಕ್ಷೆಯಿಂದ ಪುಸ್ತಕವನ್ನು ಕೆಳಗಿಡಲು ಮನಸ್ಸೇ ಆಗುವುದಿಲ್ಲ. ಇದೇ ಒಬ್ಬ ಉತ್ತಮ ಲೇಖಕರ ಯಶಸ್ಸಿನ ಗುರುತು ಎಂದು ನಾನು ಭಾವಿಸುತ್ತೇನೆ.
ಈ ಕೃತಿಯಲ್ಲಿ ನನ್ನನ್ನು ಅತ್ಯಂತ ಹೆಚ್ಚು ಪ್ರಭಾವಿಸಿದ ವಿಷಯವೆಂದರೆ, ಒಂದು ಮಹತ್ತರ ಕನಸನ್ನು ನನಸಾಗಿಸಲು ಬೇಕಾದ ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ ಮತ್ತು ಭಾವನಾತ್ಮಕ ಸಮತೋಲನ. ಸಾವಿರಾರು ಕಿಲೋಮೀಟರ್‌ಗಳ ಸಮುದ್ರವನ್ನು ಒಬ್ಬರೇ ದಾಟುವುದು ಹೊರಗಿನಿಂದ ನೋಡಿದರೆ ಸಾಹಸವೆನಿಸುತ್ತದೆ. ಆದರೆ ಅದರ ಹಿಂದೆ ಅಡಗಿರುವ ಅನೇಕ ವರ್ಷಗಳ ಅಭ್ಯಾಸ, ಕಟ್ಟುನಿಟ್ಟಾದ ತರಬೇತಿ, ವೈಜ್ಞಾನಿಕ ಸಿದ್ಧತೆ, ಶಿಸ್ತು, ಸಮಯಪಾಲನೆ, ಆಹಾರ ಪದ್ಧತಿ ಮತ್ತು ಮನಸ್ಸಿನ ನಿಯಂತ್ರಣವನ್ನು ಈ ಪುಸ್ತಕ ಬಹಳ ಸುಂದರವಾಗಿ ವಿವರಿಸುತ್ತದೆ.
ಈ ಪುಸ್ತಕವನ್ನು ಓದುತ್ತಾ ಹೋದಂತೆ, ಯಾವುದೇ ಸಾಧನೆಗೆ ಅದೃಷ್ಟಕ್ಕಿಂತ ಹೆಚ್ಚು ಮುಖ್ಯವಾದುದು ನಿರಂತರ ಪರಿಶ್ರಮ ಮತ್ತು ಗುರಿಯ ಮೇಲಿನ ಅಚಲ ನಂಬಿಕೆ ಎಂಬ ಸತ್ಯ ಮತ್ತೆ ಮತ್ತೆ ಮನವರಿಕೆಯಾಗುತ್ತದೆ. ಪ್ರತಿಯೊಂದು ಯಶಸ್ಸಿನ ಹಿಂದೆ ಕಾಣದ ತ್ಯಾಗ, ಅನೇಕ ವಿಫಲ ಪ್ರಯತ್ನಗಳು, ಕಣ್ಣೀರು ಮತ್ತು ಆತ್ಮವಿಶ್ವಾಸ ಅಡಗಿರುತ್ತವೆ ಎಂಬುದನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ನನಗೆ ಇನ್ನೊಂದು ವಿಶೇಷವಾಗಿ ಇಷ್ಟವಾದ ಅಂಶವೆಂದರೆ, ಈ ಕಥೆಯಲ್ಲಿ ಕುಟುಂಬದ ಪಾತ್ರವನ್ನು ಲೇಖಕರು ಬಹಳ ನೈಜವಾಗಿ ಬಿಂಬಿಸಿದ್ದಾರೆ. ಮಗಳ ಕನಸಿನ ಹಿಂದೆ ನಿಂತಿರುವ ತಂದೆಯ ಪ್ರೋತ್ಸಾಹ, ಮಾರ್ಗದರ್ಶನ, ಕಾಳಜಿ ಮತ್ತು ನಂಬಿಕೆ ಪ್ರತಿಯೊಂದು ಪುಟದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಕನಸುಗಳಿಗೆ ರೆಕ್ಕೆಗಳನ್ನು ನೀಡಿದರೆ, ಮಕ್ಕಳು ಜಗತ್ತಿನ ಯಾವುದೇ ಶಿಖರವನ್ನು ತಲುಪಬಹುದು ಎಂಬ ಸಂದೇಶವನ್ನು ಈ ಪುಸ್ತಕ ಅತ್ಯಂತ ಸುಂದರವಾಗಿ ಸಾರುತ್ತದೆ.
ಸಮುದ್ರ ಎಂಬುದು ಕೇವಲ ನೀರಿನ ವಿಶಾಲ ಹರಡುವಿಕೆಯಲ್ಲ; ಅದು ಅನಿಶ್ಚಿತತೆ, ಭಯ, ಏಕಾಂತ ಮತ್ತು ಸವಾಲುಗಳ ಸಂಕೇತವಾಗಿದೆ. ಅಂತಹ ಸಾಗರವನ್ನು ಎದುರಿಸುತ್ತಾ ಪ್ರತಿಕ್ಷಣವೂ ಧೈರ್ಯದಿಂದ ಮುನ್ನಡೆಯುವ ವ್ಯಕ್ತಿಯ ಕಥೆಯನ್ನು ಓದುವುದು ನಿಜಕ್ಕೂ ರೋಮಾಂಚನಕಾರಿ ಅನುಭವ. ಪ್ರತಿಯೊಂದು ಅಲೆ, ಪ್ರತಿಯೊಂದು ಬಿರುಗಾಳಿ, ಪ್ರತಿಯೊಂದು ಕಠಿಣ ಕ್ಷಣವೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಪ್ರತೀಕವಾಗಿ ಕಾಣುತ್ತವೆ. ಅವುಗಳನ್ನು ಎದುರಿಸಿ ಗೆಲ್ಲುವ ಮನೋಬಲವೇ ನಿಜವಾದ ಯಶಸ್ಸಿನ ಗುಟ್ಟು ಎಂಬುದನ್ನು ಈ ಕೃತಿ ನಮಗೆ ತಿಳಿಸುತ್ತದೆ.
ಈ ಪುಸ್ತಕ ಕೇವಲ ಸಾಹಸಪ್ರಿಯರಿಗೆ ಮಾತ್ರವಲ್ಲ. ಜೀವನದಲ್ಲಿ ದೊಡ್ಡ ಕನಸು ಕಾಣುವ ಪ್ರತಿಯೊಬ್ಬ ವಿದ್ಯಾರ್ಥಿ, ಕ್ರೀಡಾಪಟು, ವೃತ್ತಿಪರ, ಉದ್ಯಮಿ, ನಾಯಕ ಮತ್ತು ಸಾಮಾನ್ಯ ಓದುಗರಿಗೂ ಇದು ಸಮಾನವಾಗಿ ಸ್ಫೂರ್ತಿ ನೀಡುತ್ತದೆ. ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಶಿಸ್ತು, ಸಹನೆ, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೂಲ ಎಂಬ ಸಂದೇಶವನ್ನು ಈ ಪುಸ್ತಕ ಸ್ಪಷ್ಟವಾಗಿ ನೀಡುತ್ತದೆ.
ನಾನು ಓದಿದ ಅನೇಕ ಪ್ರೇರಣಾದಾಯಕ ಪುಸ್ತಕಗಳಲ್ಲಿ “ಸಾಗರದಲ್ಲಿ ಸಾಹಸಿ” ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಪುಸ್ತಕದ ಕೊನೆಯ ಪುಟವನ್ನು ಓದಿದಾಗ ಕೇವಲ ಒಂದು ಸಾಹಸದ ಕಥೆಯನ್ನು ಮುಗಿಸಿದ ಅನುಭವವಾಗಲಿಲ್ಲ; ಬದಲಾಗಿ ಜೀವನವನ್ನು ಹೊಸ ದೃಷ್ಟಿಯಿಂದ ನೋಡುವ ಪ್ರೇರಣೆ ದೊರಕಿತು. ಈ ಪುಸ್ತಕ ನನ್ನಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಕನಸುಗಳ ಹಿಂದೆ ನಿರಂತರವಾಗಿ ಓಡಬೇಕೆಂಬ ಉತ್ಸಾಹವನ್ನು ಹೆಚ್ಚಿಸಿತು.
ಡಾ. ಜಿ. ಎಸ್. ಶಿವಪ್ರಸಾದ್ ಅವರು ತಮ್ಮ ಮಗಳ ಸಾಧನೆಯನ್ನು ದಾಖಲಿಸುವುದರ ಜೊತೆಗೆ, ಇಡೀ ಸಮಾಜಕ್ಕೆ ಒಂದು ಪ್ರೇರಣಾದಾಯಕ ಸಂದೇಶವನ್ನು ನೀಡಿದ್ದಾರೆ. ಅವರ ಬರವಣಿಗೆಯಲ್ಲಿ ತಂದೆಯ ಹೆಮ್ಮೆ, ಮಗಳ ಮೇಲಿನ ಪ್ರೀತಿ ಮತ್ತು ಸಾಧನೆಯ ಮೇಲಿನ ಗೌರವ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅದೇ ಈ ಕೃತಿಯ ದೊಡ್ಡ ಶಕ್ತಿಯಾಗಿದೆ.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, “ಸಾಗರದಲ್ಲಿ ಸಾಹಸಿ” ಕೇವಲ ಒಂದು ಪುಸ್ತಕವಲ್ಲ; ಇದು ಧೈರ್ಯ, ಪರಿಶ್ರಮ, ಶಿಸ್ತು, ಸಂಕಲ್ಪ ಮತ್ತು ಆತ್ಮವಿಶ್ವಾಸದ ಪಾಠಶಾಲೆಯಾಗಿದೆ. ಈ ಕೃತಿ ಓದುಗರಲ್ಲಿ ದೊಡ್ಡ ಕನಸು ಕಾಣುವ ಧೈರ್ಯವನ್ನು ಹುಟ್ಟಿಸುತ್ತದೆ ಮತ್ತು ಆ ಕನಸುಗಳನ್ನು ನನಸಾಗಿಸಲು ಬೇಕಾದ ಮನೋಬಲವನ್ನು ನೀಡುತ್ತದೆ. ಇಂತಹ ಅತ್ಯುತ್ತಮ, ಹೃದಯಸ್ಪರ್ಶಿ ಮತ್ತು ಜೀವನಕ್ಕೆ ಹೊಸ ಪ್ರೇರಣೆ ನೀಡುವ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಡಾ. ಜಿ. ಎಸ್. ಶಿವಪ್ರಸಾದ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಈ ಪುಸ್ತಕವನ್ನು ಓದಿದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಹೊಸ ಕನಸನ್ನು ಕಾಣಲು ಪ್ರೇರೇಪಿತರಾಗುತ್ತಾರೆ ಎಂಬುದು ನನ್ನ ದೃಢ ನಂಬಿಕೆ. “ಸಾಗರದಲ್ಲಿ ಸಾಹಸಿ” ನಿಜಕ್ಕೂ ಒಂದು ಮರೆಯಲಾಗದ ಓದಿನ ಅನುಭವ, ಪ್ರೇರಣೆಯ ಮಹಾಯಾನ ಮತ್ತು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ಓದಲೇಬೇಕಾದ ಕೃತಿ.
ಪ್ರಿಯರೇ, ಬಹಳಷ್ಟು ಭಾರತೀಯರ ರಕ್ತದಲ್ಲಿ ಕ್ರಿಕೆಟ್ಟಿನ ಪ್ರೀತಿ ಕಬ್ಬಿಣದ ಅಂಶಕ್ಕಿಂತ ಹೆಚ್ಚಿರಬೇಕು ಅಂದರೆ ತಪ್ಪಾಗಲಿಕ್ಕಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳಂತೂ ಸರಿಯೇ, ದೇಶದೊಳಗಿನ ಐಪಿಎಲ್ ಸಹ ನಮ್ಮ ಕ್ರಿಕೆಟ್ ಹುಚ್ಚಿಗೆ ಸಾಲುವುದಿಲ್ಲ. ಈಗ ಟೀವಿ, ಇಂಟರ್ನೆಟ್ಟು, ಸ್ಟ್ರೀಮಿಂಗು ಇತ್ಯಾದಿಗಳಿಂದಾಗಿ ಪಂದ್ಯಾವಳಿಗಳು ಬಂದವೆಂದರೆ ಸಾಕು, ಎಲ್ಲರ ಮುಖವೂ ಮನವೂ ಅದರಲ್ಲೇ! ಈ ಆಟದ ಮತ್ತು ಈಚೆಗಿನದೇನೂ ಅಲ್ಲವಲ್ಲ, ಇದಕ್ಕೂ ಮೊದಲೇ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಇತ್ಯಾದಿಗಳು ಇದ್ದವಲ್ಲ. ಆದರೆ ಈಗಿನಷ್ಟು ಅಕ್ಸೆಸಿಬಿಲಿಟಿ ಇರಲಿಲ್ಲವೆನ್ನಬಹುದು. ಈಗಿನಂತೆ ಆಗೂ ಸುಪರ್ ಸ್ಟಾರುಗಳು ಇದ್ದರು – ಡಬ್ಲೂ ಜಿ ಗ್ರೇಸ್, ಡಾನ್ ಬ್ರಾಡ್ಮನ್ ಇತ್ಯಾದಿ ಘಟಾನುಘಟಿಗಳು ಆಗಿಹೋಗಿದ್ದಾರೆ. ಅಂಥವರಲ್ಲಿ ಎದ್ದು ಕಾಣುವ ಒಬ್ಬ ಆಟಗಾರ, ಇಂಗ್ಲಿಷ್ ಕೌಂಟಿ ಮತ್ತು ಇಂಗ್ಲಂಡ್ ದೇಶದ ತಂಡದ ಪರವಾಗಿ ಆಡಿದ ’ರಾಜಕುಮಾರ’ ರಣಜಿತ್ ಸಿಂಹಜಿ, ಮೊತ್ತಮೊದಲ ಭಾರತೀಯ ಸಂಜಾತ ಆಟಗಾರ. ರಣಜಿ ಕಪ್ಪಿನಿಂದಾಗಿ ಭಾರತದಲ್ಲಿ ಅಮರನಾಗಿರುವ ಈ ಆಟಗಾರನ ಜೀವ ಇಂಗ್ಲಂಡಿನ ಕ್ರಿಕೆಟ್ಟಿನಲ್ಲಿ ಇತ್ತಂತೆ – ಈ ಬಗ್ಗೆ ಬರೆದಿರುವ ನಮ್ಮ ಅನಿವಾಸಿ ಗುಂಪಿನ ಬೇಸಿಂಗ್‍ಸ್ಟೋಕ್ ರಾಮಮೂರ್ತಿ ಅವರ ಲೇಖನ ಇಲ್ಲಿದೆ. ಈಗ ಅವರು ಬೇಸಿಂಗ್‍ಸ್ಟೋಕ್ ಬಿಟ್ಟು ಬೇರೆಡೆ ಬಂದಿದ್ದರೂ, (ಪುಟ್ಟಪ್ಪನವರ ಕುಪ್ಪಳಿಯಂತೆ) ಬೇಸಿಂಗ್‍ಸ್ಟೋಕ್ ಅವರನ್ನು ಬಿಡಲಿಕ್ಕಿಲ್ಲ. ಎಂದಿನಂತೆ ಓದಿ, ಪ್ರತಿಕ್ರಯಿಸಿ. ಧನ್ಯವಾದಗಳು – ಲಕ್ಷ್ಮೀನಾರಾಯಣ ಗುಡೂರ (ವಾರದ ’non-ಲೇಖಕ’ ಸಂಪಾದಕ).
ಸರ್ ಕೆ. ಎಸ್. ರಣಜಿತ್ ಸಿಂಹಜಿ (ರಣಜಿ)
ಭಾರತದಲ್ಲಿ ಈಗಿನ IPL ಮುಂಚೆ ರಣಜಿ ಟ್ರೋಫಿ ಅತ್ಯಂತ ಪ್ರಮುಖವಾದ ಕ್ರಿಕೆಟ್ ಪಂದ್ಯವಾಗಿತ್ತು. ೧೯ನೇ ಶತಮಾನದಲ್ಲಿ ಈಗಿನ ಮುಂಬೈ ನಗರದಲ್ಲಿ ಪಾರ್ಸಿ ಪಂಗಡದವರು ಮಾತ್ರ ಕ್ರಿಕೆಟ್ ಆಡುತ್ತಿದ್ದರು. ನಂತರ ಇತರ ಪ್ರಾಂತ್ಯಗಳಲ್ಲೂ ಪ್ರಾರಂಭವಾಗಿ ೧೯೩೪ರಲ್ಲಿ ಅಂದಿನ ಕ್ರಿಕೆಟ್ ಸಂಸ್ಥೆಯ ಮುಖಂಡರಾಗಿದ್ದ ಅಂಥೋನಿ ಡಿ ಮೆಲ್ಲೋ ಅಂತರರಾಜ್ಯ ಸ್ಪರ್ಧೆ ನಡೆಸುವುದಕ್ಕೆ ಸಲಹೆ ಕೊಟ್ಟರು. ಅದು Cricket Championship of India ಹೆಸರಿನಿಂದ ಶುರುವಾಗಿ ಪಟಿಯಾಲಾ ಮಹಾರಾಜರು ಟ್ರೋಫಿಯನ್ನು ಕಾಣಿಕೆಯಾಗಿ ಕೊಟ್ಟ ನಂತರ ಈ ಪಂದ್ಯ “ರಣಜಿ ಟ್ರೋಫಿ” ಪಂದ್ಯ ಎಂದಾಯಿತು. ಮೊದಲ ಸ್ಪರ್ಧೆ, ೪/೧೧/೧೯೩೪, ಮೈಸೂರ್ ಮತ್ತು ಮದ್ರಾಸ್ ರಾಜ್ಯದ ತಂಡದವರ ಮಧ್ಯೆ ನಡೆಯಿತು; ಅದರಲ್ಲಿ ಮದ್ರಾಸ್ ಗೆ ಜಯ ದೊರೆತಿತ್ತು.
ಅನೇಕ ವರ್ಷ ಕೇಂಬ್ರಿಡ್ಜ್, ಸಸೆಕ್ಸ್ ಮತ್ತು ಇಂಗ್ಲೆಂಡ್ ದೇಶಕ್ಕೆ ಆಡಿದ ರಣಜಿತ್ ಸಿಂಹ ಭಾರತಕ್ಕೆ ಅಕ್ಟೊಬರ್ ೧೯೦೪ರಲ್ಲಿ ಹಿಂತಿರುಗಿದಾಗ ಕ್ರಿಕೆಟನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡಲಿಲ್ಲ, ಮತ್ತು ಅವರಿಗೆ ಈ ವಿಷಯದಲ್ಲಿ ಯಾವ ಆಸಕ್ತಿ ಸಹ ಇರಲಿಲ್ಲ. ಕೆಲವರು ಇದರ ವಿಚಾರವನ್ನು ಪ್ರಸ್ತಾಪಿಸಿದಾಗ "ನಾನು ಇಂಗ್ಲೆಂಡ್ ದೇಶಕ್ಕೆ ಆಡಿದವನು ಮಾತ್ರ" ಎಂಬ ಉದಾಸೀನದ ಉತ್ತರ ಕೊಟ್ಟನಂತೆ. ಈ ಕಾರಣದಿಂದ ಅನೇಕರು, ರಣಜಿಯನ್ನು "Father of Indian Cricket " ಅನ್ನುವುದು ಸರಿಯಲ್ಲ ಅನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಕ್ರಿಕೆಟ್‍ನಲ್ಲಿ ಬಹಳ ದೊಡ್ಡ ಹೆಸರು ಗಳಿಸಿದ್ದ. ಇಂಗ್ಲೆಂಡ್ ನಲ್ಲಿ ರಣಜಿಯ ಹೆಸರು ಮನೆಮಾತಾಗಿತ್ತು ಮತ್ತು ಅವನು ಆಡುತ್ತಿದ್ದರೆ ಜನರು ಕಿಕ್ಕಿರಿದು ಸೇರುತ್ತಿದ್ದರು. ಇಂಗ್ಲಂಡ್ ದೇಶದ ತಂಡದಲ್ಲಿ ರಣಜಿ ಮೊಟ್ಟಮೊದಲ ಭಾರತೀಯ ಮೂಲದ ಆಟಗಾರನಾಗಿದ್ದ.
೧೮೮೮ರಲ್ಲಿ ಹದಿನಾರು ವಯಸ್ಸಿನ ಹುಡುಗ, ರಾಜಕೋಟನ ಶಾಲೆಯಲ್ಲಿ ಕ್ರಿಕೆಟ್ ಆಡಿದ ಅನುಭವ ಮಾತ್ರ ಇದ್ದು, ಓದುವುದಕ್ಕೆ ಕೇಂಬ್ರಿಡ್ಜ್ ವಿಶ್ಯವಿದ್ಯಾಲಯಕ್ಕೆ ಬಂದು ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಗಳಿಸಿದ್ದು ಆಶ್ಚರ್ಯದ ವಿಚಾರವೇ ಸರಿ. ಇಲ್ಲಿ ಅವನ ವರ್ಣರಂಜಿತ ಜೀವನ ಚರಿತ್ರೆಯ ಸಂಕ್ಷಿಪ್ತ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ.
ಇಂಗ್ಲೆಂಡ್ ನಲ್ಲಿ ರಣಜಿ, ರಾಜಕುಮಾರ (Prince) ಎಂದು ಹೇಳಿಕೊಂಡಿದ್ದರೂ, ಈತ ರಾಜಕುಮಾರನಾಗಿರಲಿಲ್ಲ, ಅಥವಾ ಯಾವ ಅರಮನೆಯಲ್ಲೊ ಬೆಳೆಯಲಿಲ್ಲ. ಹುಟ್ಟಿದ್ದು ೧೦/೦೯/೧೮೭೨ರಲ್ಲಿ ಪಶ್ಚಿಮ ಭಾರತದ ನವಾನಗರ ಪ್ರಾಂತ್ಯದ ಸದೋದಾರ್ ಎಂಬ ಸಣ್ಣ ಊರಿನಲ್ಲಿ. ತಂದೆ ಜೀವನ್ ಸಿಂಹಜಿ, ಅಲ್ಲಿನ ರಾಜ ವಿಭಾಜಿಗೆ ದೂರದ ಸಂಬಂಧ. ರಾಜನ ಮಗ ಕಲೋಭ ಈ ರಾಜ್ಯಕ್ಕೆ ಉತ್ತರಾಧಿಕಾರಿಯಾಗಬೇಕಾಗಿತ್ತು ಆದರೆ ಅವನ ನಡವಳಿಕೆ ಮತ್ತು ದುಷ್ಟತನದಿಂದ ಅವನನ್ನು ದೂರ ಮಾಡಿ, ಹತ್ತಿರ ಸಂಬಂಧವರ ಮನೆಯಿಂದ ಒಂದು ಗಂಡು ಮಗುವನ್ನು ಆಯ್ಕೆ ಮಾಡಿದರು. ಆದರೆ, ಅಂದಿನ ವದಂತಿಗಳ ಪ್ರಕಾರ, ಈ ಮಗು ಜ್ವರದಿಂದಲೋ ಅಥವಾ ವಿಷಪ್ರಯೋಗದಿಂದಲೋ ಕೆಲವೇ ತಿಂಗಳಲ್ಲಿ ತೀರಿಹೋಯಿತು. ಎರಡನೇ ಆಯ್ಕೆ ಜೀವನ್ ಸಿಂಹಜಿಯ ಎರಡನೇ ಮಗ ರಂಜಿತ್ ಸಿಂಹಜಿ. ಬ್ರಿಟಿಷ್ ಅಧಿಕಾರಿಗಳ ಒಪ್ಪಿಗೆ ಪಡೆದು ರಾಜಕೋಟೆಯಲ್ಲಿ ಇರುವ ರಾಜಕುಮಾರ್ ಕಾಲೇಜ್ ನಲ್ಲಿ ಇವನ ವಿದ್ಯಾಭ್ಯಾಸ ಮುಂದೆವರೆಯಿತು ಆದರೆ ಜೀವನ್ ಸಿಂಹಜಿ ಮನೆಯವರ ನಡವಳಿಕೆ ಮತ್ತು ದುರಾಸೆಗಳಿಂದ ರಣಜಿಯನ್ನು ಅಧಿಕೃತವಾಗಿ ದತ್ತು ಪುತ್ರನಾಗಿ ಮಾಡಲಿಲ್ಲ. ಆದರೂ ರಾಜನಿಂದ ಆರ್ಥಿಕ ಸಹಾಯ ಮತ್ತು ನೆರವು ಇತ್ತು. ಕೆಲವು ವರ್ಷಗಳ ನಂತರ ರಾಜನ ಪರಿವಾರದಲ್ಲಿದ್ದ ಒಬ್ಬಳಿಗೆ ಒಂದು ಗಂಡು ಮಗು ಹುಟ್ಟಿ ಅವನನ್ನು ಉತ್ತರಾಧಿಕಾರಿ ಎಂದು ಘೋಷಿಸಿದರು. ಈ ವಿಚಾರ ಬಹಳ ವಿವಾದಾತ್ಮಕವಾಗಿತ್ತು, ಕಾರಣ ಈ ಮಗುವಿನ ತಾಯಿ ರಾಜನ ರಾಣಿಯಾಗಿರಲಿಲ್ಲ; ಆಕೆ ವೇಶ್ಯೆ ಮತ್ತು ಮುಸಲ್ಮಾನ ಪಂಗಡಕ್ಕೆ ಸೇರಿದವಳು ಅನ್ನುವ ವದಂತಿಗಳು ಅನೇಕವಾಗಿತ್ತು.
ರಣಜಿ, ರಾಜಕುಮಾರ್ ಕಾಲೇಜ್ ನಲ್ಲಿ ಕ್ರಿಕೆಟ್ ಕಲಿತು ೧೮೮೪ರಲ್ಲಿ ಕಾಲೇಜ್ ನಾಯಕ ಆಗಿಯೂ ಆಯ್ಕೆ ಆದ. ಆ ಶಾಲೆಯ ಹೆಡ್ ಮಾಸ್ಟರ್ ಮಿ. ಮೆಕ್ನಾಟನ್ (Mr Macnaghten) ರಣಜಿ ಮತ್ತು ಇನ್ನಿಬ್ಬರನ್ನು ೧೮೮೮ರಲ್ಲಿ ಇಂಗ್ಲೆಂಡಿಗೆ ಕರೆದುಕೊಂಡು ಹೋಗಿ, ಕೇಂಬ್ರಿಡ್ಜ್ ನಲ್ಲಿ ಓದುವ ಉದ್ದೇಶದಿಂದ ಟ್ರಿನಿಟಿ ಕಾಲೇಜಿನ Chaplin ಅಥವಾ ಪಾದ್ರಿ ಆಗಿದ್ದ ರೆವ್. ಲೂಯಿ ಬೊರಿಸೊ (Rev Louis Borrisow) ಅನ್ನುವವರ ಮನೆಯಲ್ಲಿ ವಾಸವಾಗಿ ಇರುವುದಕ್ಕೆ ಏರ್ಪಾಡು ಮಾಡಿ ರಾಜೆಕೋಟೆಗೆ ಹಿಂತಿರಿಗಿದರು. ಇಂಗ್ಲೆಂಡ್‍ನ ವಾತಾವರಣ ರಣಜಿಗೆ ಹಿಡಿಸಲಿಲ್ಲ. ಆದರೂ ಕ್ರಿಕೆಟ್ ಆಡುವ ಮತ್ತು ಕೇಂಬ್ರಿಡ್ಜ್ ನಲ್ಲಿ ಓದುವ ಆಸೆ ಇತ್ತು. ಆದರೆ, ಕಾಲೇಜ್ ಪ್ರವೇಶಕ್ಕೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾಗಿತ್ತು. ಇದು ಸಾಧ್ಯವಾಗಲಿಲ್ಲ, ಆದರೂ ಇವನನ್ನು "ಸ್ಥಾನದ ಯುವಕ" ಅಂದರೆ, Youth of Position, ಎಂದು ಪರಿಗಣಿಸಿದ್ದರಿಂದ ಕಾಲೇಜಿಗೆ ಸೇರಲು ಸಾಧ್ಯವಾಯಿತು. ರಣಜಿ ಶಿಕ್ಷಣ ಬಗ್ಗೆ ಸಾಕಷ್ಟು ಗಮನ ಕೊಡಲಿಲ್ಲ, ಕ್ರಿಕೆಟ್ ಆಡುವುದರಲ್ಲಿ ಮಾತ್ರ ತೊಡಗಿಸಿಕೊಂಡ. ೧೮೯೨ರಲ್ಲಿ ಪ್ರತ್ಯೇಕ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ಮನೋರಂಜನೆಗೆ ಅದ್ದೂರಿಯಾಗಿ ಖರ್ಚು ಮಾಡಿ ತಾನು ರಾಜಮನೆತದವನು ಅನ್ನುವ ಭಾವನೆ ಕಲ್ಪಿಸಿದ. ಆದರೆ ಹಣ ಮಾತ್ರ ಸಾಲದಿಂದ!
ಇಂಗ್ಲೆಂಡ್ ಬಾರ್ ಪರೀಕ್ಷೆಗೆ ಇನ್ನಷ್ಟು ಹಣಸಹಾಯ ಬೇಕೆಂದು ವಿಭಾಜಿ ರಾಜನಿಗೆ ಮನವಿ ಮಾಡಿದಾಗ, ರಾಜ ಹಣ ಕಳಿಸಲು ಬಾರ್ ಪರೀಕ್ಷೆ ಮುಗಿದಂತೆ ಭಾರತಕ್ಕೆ ಹಿಂತಿರಿಗಬೇಕು ಅನ್ನುವ ಷರತ್ತು ಹಾಕಿದ. ಆದರೆ ರಣಜಿ ಈ ಪರೀಕ್ಷೆಯಲ್ಲಿ ಭಾಗವಹಿಸಲಿಲ್ಲ ಮತ್ತು ಹಣಕಾಸಿನ ಸಮಸ್ಯೆ ಬಗೆಹರಿಯಲಿಲ್ಲ.
೧೮೯೨/೩ ರಲ್ಲಿ ಕೇಂಬ್ರಿಡ್ಜ್ ತಂಡಕ್ಕೆ ಆಯ್ಕೆ ಆಗಿ ಹೆಸರುಮಾಡಿಕೊಂಡ. ನಂತರ ಕೇಂಬ್ರಿಡ್ಜ್ Blue ಪ್ರಶಸ್ತಿ ಸಹ ದೊರಕಿತು. ಭಾರತಕ್ಕೆ ಹಿಂತಿರುಗಲಿಲ್ಲವಾದ ಕಾರಣದಿಂದ ವಿಭಾಜಿ ಹಣ ಸಹಾಯವನ್ನು ನಿಲ್ಲಿಸಬೇಕಾಯಿತು. ರಣಜಿ, ಹಲವಾರು ಬ್ರಿಟಿಷ್ ಅಧಿಕಾರಿಗಳ ಶಿಫಾರಸಿನಿಂದ ಇನ್ನಷ್ಟು ಹಣವನ್ನು ಸಾಲದ ರೂಪದಲ್ಲಿ ವಿಭಾಜಿ ಕೊಟ್ಟದ್ದು ಸ್ವಲ್ಪ ಸಮಾಧಾನವಾಯಿತು.
ಕೇಂಬ್ರಿಡ್ಜ್ ತಂಡಕ್ಕೆ (೧೮೯೦-೧೮೯೩) ಆಡಿದ ನಂತರ ರಣಜಿ ಸಸೆಕ್ಸ್ (Sussex) ಕೌಂಟಿಗೆ ೧೮೯೫-೧೯೧೨ ವರೆಗೆ ಆಡಿ, ೧೮೯೯-೧೯೦೩ರಲ್ಲಿ ಕಾಪ್ಟನ್ ಸಹ ಆಗಿದ್ದ. ಒಟ್ಟು ೩೦೦೦ ರನ್ನುಗಳನ್ನು ೧೮೯೯ ಮತ್ತು ೧೯೦೦ರ ಅವಧಿಯಲ್ಲಿ ಹೊಡದಿದ್ದ.
ಆಸ್ಟ್ರೇಲಿಯಾ ತಂಡ ೧೮೯೬ ನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತು (Ashes Series). ಅನೇಕರು, ಲಾರ್ಡ್ಸ ಮೈದಾನದಲ್ಲಿ ನಡೆದ ಮೊದಲನೆಯ ಟೆಸ್ಟ್ ತಂಡದಲ್ಲಿ ರಣಜಿ ಅಡುತ್ತಾನೆ ಎಂದು ಊಹಿಸಿದ್ದರು. ಆದರೆ MCC ಯ ಅಧ್ಯಕ್ಷ ಲಾರ್ಡ್ ಹ್ಯಾರಿಸ್ ಇದಕ್ಕೆ ಒಪ್ಪಲಿಲ್ಲ; ಕಾರಣ, ಜನಾಂಗೀಯ ತಾರತಮ್ಯ (Racial discrimination). ಆದರೆ ಓಲ್ಡ್ ಟ್ರಾಫರ್ಡ್ (Old Trafford) ನಲ್ಲಿ ನಡೆದ ಎರಡನೆಯ ಟೆಸ್ಟ್ ನಲ್ಲಿ ರಣಜಿ ತಂಡದಲ್ಲಿ ಸೇರಿದ್ದ. ಇದಕ್ಕೆ ಮುಂಚೆ ರಣಜಿ ಆಡುವುದಕ್ಕೆ ಆಸ್ಟ್ರೇಲಿಯದ ಕ್ಯಾಪ್ಟನ್ ತನ್ನ ಅಭ್ಯಂತರ ಇಲ್ಲ ಎಂದ ಮೇಲೆ ರಣಜಿಯ ಆಯ್ಕೆ ಆಯಿತಂತೆ! ಮೊಟ್ಟಮೊದಲನೆಯ ಬಾರಿಗೆ ಒಬ್ಬ ಭಾರತೀಯ ಪ್ರಜೆ ೧೬/೦೭/೧೮೯೬ ರಂದು ಇಂಗ್ಲೆಂಡ್ ದೇಶದ ತಂಡದಲ್ಲಿ ಭಾಗವಹಿಸಿದ್ದು.
ರಣಜಿ, ಮೊದಲನೆಯ ಇನ್ನಿಂಗ್ಸ್ ನಲ್ಲಿ ೬೨ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ೧೫೪ ಅಜೇಯ (not out) ರನ್ನುಗಳನ್ನು ಮಾಡಿ ಇಂಗ್ಲೆಂಡ್ ತಂಡಕ್ಕೆ ಶಾಶ್ವತ ಆಟಗಾರನಾಗಿ ಸೇರಿದ.
೧೮೯೬ರಲ್ಲಿ ರಣಜಿ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ಈ ಸಮಯದಲ್ಲಿ, ಕ್ರಿಕೆಟ್ ಆಟದ ತನ್ನ ಅನುಭವ ಮತ್ತು ಆಡುವ ರೀತಿ ಬಗ್ಗೆ ಬರೆಯುವ ಯೋಚನೆ ಬಂತು. ಅವನ ಸ್ನೇಹಿತರಾಗಿದ್ದ ಚಾರ್ಲ್ಸ್ ಫ್ರೈ ಮತ್ತು ಡಾಕ್ಟರ್ ಬಟ್ಲರ್ ನೆರವಿನಿಂದ ತನ್ನ Jubilee Book of Cricket ಪುಸ್ತಕ ಪ್ರಕಟಿಸಿದ. ಇದೇ ವರ್ಷ ವಿಕ್ಟೋರಿಯಾ ರಾಣಿಯ ರಾಜ್ಯಭಾರದ ೨೫ನೇ ವರ್ಷದ (ರಜತ ಮಹೋತ್ಸವ, silver jubilee) ಮಹೋತ್ಸವ ಆದ್ದರಿಂದ ರಣಜಿಯ ಪುಸ್ತಕಕ್ಕೆ Jubilee ಹೆಸರು ಬಂದಿದ್ದು.
೧೮೯೭-೯೮ ನಲ್ಲಿ ಆಸ್ಟ್ರೇಲಿಯ ಪ್ರವಾಸಕ್ಕೆ ಹೋದ ಇಂಗ್ಲೆಂಡ್ ಪಂಗಡದಲ್ಲಿ ರಣಜಿ ಸಹ ಸೇರಿದ್ದ. ಮೊದಲನೆಯ ಟೆಸ್ಟ್ ನಲ್ಲಿ ಮಾಡಿದ ೧೭೫ ರನ್ನುಗಳು ಸೇರಿ ಒಟ್ಟು ೧೧೫೭ ರನ್ನುಗಳನ್ನು ಹೊಡೆದು ಆ ದೇಶದಲೂ ಜನಪ್ರಿಯನಾದ. ರಣಜಿಯ ನೆಚ್ಚಿನ "leg glance" ವಿಧಾನ (technique) ಎಲ್ಲರ ಮೆಚ್ಚಿಗೆಯನ್ನು ಪಡೆಯಿತು.
ಆಸ್ಟ್ರೇಲಿಯಾ ಪ್ರವಾಸ ಮುಗಿದಮೇಲೆ, ಇಂಗ್ಲೆಂಡ್ ತಂಡ ಕೊಲಂಬೊ ಮೂಲಕ ಬಂದಾಗ ರಣಜಿ ಅಲ್ಲೇ ಇಳಿದು ಭಾರತಕ್ಕೆ ಬಂದ. ೧೮೯೬ ರಲ್ಲಿ ರಾಜ ವಿಭಾಜಿಯ ನಿಧನವಾದ ಮೇಲೆ ಉತ್ತರಾಧಿಕಾರಿಯಾಗಿದ್ದ ಹನ್ನೆರಡು ವರ್ಷದ ಜಸವಂತ್ ಸಿಂಹಜಿ ನವಾನಗರದ ಪಟ್ಟಕ್ಕೆ ಬಂದ. ರಣಜಿಗೆ ತಾನು ರಾಜ್ಯವನ್ನು ಆಳುವ ಅವಕಾಶ ಕಳೆಯಿತು ಎನ್ನಿಸಿ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ನಲ್ಲಿಯೇ ಇನ್ನೂ ಹೆಸರು ಮಾಡುವ ನಿರ್ಧಾರಕ್ಕೆ ಬಂದಿದ್ದರೂ, ಜಸವಂತ್ ಸಿಂಹಜಿಯ ಉತ್ತರಾಧಿಕಾರದ ಮೇಲೆ ಸವಾಲನ್ನು ಹಾಕಿದ. ಆದರೆ ಇದು ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲದೆ ವಿಭಾಜಿ ಇದ್ದಾಗ ಹಣ ಸಹಾಯವಿತ್ತು, ಈಗ ಅದೂ ನಿಲ್ಲುವಂತಿತ್ತು.
ಅಧೃಷ್ಟಕ್ಕೆ ಪಾಟಿಯಾಲಾದ ಮಹಾರಾಜ ಮತ್ತು ಕ್ರಿಕೆಟ್ ಪ್ರೇಮಿ ರಾಜಿಂದರ್ ಸಿಂಗ್ ಅವರು ರಣಜಿಯ ನೆರವಿಗೆ ನಿಂತು ಹಣ ಸಹಾಯ ಮಾಡಿದ ನಂತರ ರಣಜಿ ಇಂಗ್ಲೆಂಡ್ ಗೆ ಹಿಂತಿರುಗಿ ಸಸೆಕ್ಸ್‌ನ ಕ್ಯಾಪ್ಟನ್ ಆದ ಮತ್ತು ಇಂಗ್ಲೆಂಡ್ ತಂಡಕ್ಕೂ ಸೇರಿದ. ಆದರೆ ೧೯೦೦ ರಲ್ಲಿ ರಾಜಿಂದರ್ ಸಿಂಗರ ನಿಧನವಾದನಂತರ ರಣಜಿಯ ಆದಾಯ ಕುಸಿದು ದಿವಾಳಿತನವನ್ನು ಎದುರಿಸಬೇಕಾಯಿತು (bankruptcy). ಇದನ್ನು ಪರಿಹರಿಸಲು ೧೯೦೧ ಡಿಸೆಂಬರ್ ನಲ್ಲಿ ಭಾರತಕ್ಕೆ ಹಿಂತಿರುಗಿ ಅನೇಕರನ್ನು ಭೇಟಿಮಾಡಿದ ಮೇಲೆ ಸ್ವಲ್ಪ ಮಟ್ಟಿಗೆ ರಣಜಿಯ ಆರ್ಥಿಕ ಸ್ಥಿತಿ ಕುದುರಿತು. ೧೯೦೨ರಲ್ಲಿ ಇಂಗ್ಲೆಂಡ್ ನಲ್ಲಿ ಪುನಃ ಸಸೆಕ್ಸ್ ತಂಡದ ಕ್ಯಾಪ್ಟನ್ ಆದರೂ ಇವನ ಆಡುವ ರೀತಿ ಬದಲಾಗಿ ಆಟದ ಶೈಲಿಯಿಂದ ಅನೇಕರಿಗೆ ನಿರಾಶೆಯಾಯಿತು. ರಣಜಿಯ ಜೀವನಚರಿತ್ರಗಾರ (biographer) ಸೈಮನ್ ವೈಲ್ಡನ ಊಹೆಯ ಪ್ರಕಾರ ಇದಕ್ಕೆ ಮುಖ್ಯ ಕಾರಣ ರಣಜಿತ್ ಸಿಂಹನ ಕಠಿಣ ಆರ್ಥಿಕ ಪರಿಸ್ಥಿತಿ.
ನವಾನಗರವನ್ನು ಆಳುವ ಇನ್ನೂ ಆಸೆ ಇಟ್ಟಿಕೊಂಡು ೧೯೦೪ರಲ್ಲಿ ಸ್ನೇಹಿತ ಆರ್ಚಿ ಮೆಕ್‍ಲಾರೆನ್ ಜೊತೆ ಭಾರತಕ್ಕೆ ಬಂದು, ಬ್ರಿಟಿಷ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ರಣಜಿಗೆ ಹೆಚ್ಚು ಬೆಂಬಲ ಸಿಗಲಿಲ್ಲ. ಅದೂ ಅಲ್ಲದೆ ಮನ್ಸೂರ್ ಕುಚರ್ ಅನ್ನುವವನು ಕೊಟ್ಟ ಸಾಲ ಹಿಂತಿರುಗಿ ಪಡೆಯಲು ಬಾಂಬೆ ಹೈಕೋರ್ಟ್ ನಲ್ಲಿ ಮೊಕದ್ದಮೆ ಸಹ ಹಾಕಿದ್ದರಿಂದ ೧೯೦೬ರ ವರೆಗೆ ಇಂಗ್ಲೆಂಡ್ ಗೆ ಹಿಂತಿರುಗುವುದು ಸಾಧ್ಯವಾಗಲಿಲ್ಲ.
೧೪/೦೮/೧೯೦೬ ರಂದು ನವಾನಗರದ ರಾಜನಾಗಿದ್ದ ಜಸವಂತ್ ಸಿಂಹಜಿ ಜ್ವರ ಬಂದ ಕಾರಣದಿಂದ ನಿಧನನಾದ ಸುದ್ದಿ ಬಂತು. ಜಸವಂತ್ ಸಿಂಹಜಿಯ ಆರೋಗ್ಯಕ್ಕೆ ಯಾವ ಸಮಸ್ಯೆ ಇರಲಿಲ್ಲ; ಅಂದಿನ ವದಂತಿಗಳ ಪ್ರಕಾರ ಈ ಸಾವು ವಿಷಪ್ರಯೋಗದಿಂದ ಉಂಟಾಯಿತು ಅನ್ನುವುದು ಅನೇಕರ ನಂಬಿಕೆ. ಅದಾಗಿ ಆರು ತಿಂಗಳವರೆಗೆ ಬ್ರಿಟಿಷ್ ಅಧಿಕಾರಿಗಳು ಈ ರಾಜ್ಯದ ಹೊಸ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿಲ್ಲ. ನಾಲ್ಕು ಪ್ರಾತಿನಿಧ್ಯರು - ರಣಜಿ, ವಿಭಾಜಿಯ ಮೊಮ್ಮಗ ಲಕೋಭ ಮತ್ತು ಜಸವಂತ್ ಸಿಂಹಜಿಯ ತಾಯಿ, ಸರ್ಕಾರಕ್ಕೆ ಮನವಿ ಮಾಡಿದರು. ಕೊನೆಗೆ ಬ್ರಿಟಿಷ್ ಅಧಿಕಾರಿಗಳು, ರಣಜಿಯ ಹಿನ್ನಲೆ ನೋಡಿ ಅವನನ್ನು ಆಯ್ಕೆ ಮಾಡಿದರು. ಹಲವಾರು ತಿಂಗಳ ನಂತರ, ೧೧/೦೩/೧೯೦೭ ರಂದು ರಣಜಿ Colonel His Highness Sir Ranjitsinhaji Vibhaji, Jam Sahib of Nawanagar ಆಗಿ ಪಟ್ಟಕ್ಕೆ ಬಂದ. ಈ ಸ್ಥಾನಕ್ಕೆ ಬಂದಮೇಲೆ ಬಾಂಬೆ ಹೈ ಕೋರ್ಟ ನಲ್ಲಿದ್ದ ಮೊಕದ್ದಮೆಯನ್ನು ವಾಪಸ್ಸು ಪಡೆಯುವುದು ಸಾಧ್ಯವಾಯಿತು.
ಇವನ ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲದಿಂದ ಜನರ ಪರಿಸ್ಥಿತಿ ಗಂಭೀರವಾಗಿತ್ತು, ಪರಿಹಾರ ಕೊಡುವುದಕ್ಕೆ ರಾಜ್ಯದ ಒಡವೆಗಳನ್ನು ಮಾರಬೇಕಾಯಿತು. ಮತ್ತು ಇತರ ರಾಜ್ಯಗಳಿಂದ ಸಹಾಯ ಪಡೆದು ರಾಜ್ಯಕ್ಕೆ ಸೇರಿದ ಸಲಾಯ ಎಂಬ ಸಮುದ್ರ ತೀರದಲ್ಲಿ ಬಂದರು ಕಟ್ಟಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಮಾಡುವುದು ಮತ್ತು ಇತರ ಕಾಮಗಾರಿಕೆ ಕೆಲಸಗಳು ಪ್ರಾರಂಭ ವಾಯಿತು. ಆದರೆ ರಣಜಿಗೆ ಆಡಳಿತದ ಅನುಭವ ಇರಲಿಲ್ಲವಾದ್ದರಿಂದ ಈ ಸುಧಾರಣೆಗಳನ್ನು ಜಾರಿಗೆ ತರುವುದು ಕಷ್ಟ ವಾಯಿತು. ಇವನ ಆರೋಗ್ಯ ಬೇರೆ ಹದಗೆಟ್ಟಿತು ಮತ್ತು ಟೈಫಾಯಿಡ್ ಜ್ವರದಿಂದ ಕೆಲವು ತಿಂಗಳು ಹಾಸಿಗೆ ಹಿಡಿದಿದ್ದ. ವೈದ್ಯರ ಸಲಹೆ ಮೇಲೆ ವಿಶ್ರಾಂತಿಗೆ ಇಂಗ್ಲೆಂಡ್ ನಲ್ಲಿ ಕೆಲವು ತಿಂಗಳು ಕಳೆಯಲು ಹಿಂತಿರಿಗಿ ಗ್ರಾಮಾಂತರದಲ್ಲಿ ದೊಡ್ಡ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಹಲವಾರು ತಿಂಗಳು ಕಳೆದ. ಆದರೆ ಸಾಲಗಾಲರ ಕಾಟ ಮಾತ್ರ ತಪ್ಪಲಿಲ್ಲ, ಅನೇಕ ತಿಂಗಳು ಈ ಮನೆ ಬಾಡಿಗೆ ಕೊಡದೆ ಇದ್ದರಿಂದ, ಮಾಲೀಕ ಇಂಡಿಯಾ ಕಚೇರಿಗೆ ದೂರು ಸಹ ಕೊಟ್ಟ. ತನ್ನ ರಾಜ್ಯದಿಂದ ದುಡ್ಡು ಬರುವ ಸಾದ್ಯೆತೆ ಇರಲಿಲ್ಲ, ಅಲ್ಲಿಯ ಬೊಕ್ಕಸ ಖಾಲಿಯಾಗಿತ್ತಲ್ಲ! ೧೯೦೮ರಲ್ಲಿ ಪುನಃ ಕ್ರಿಕೆಟ್ ಆಡುವುದಕ್ಕೆ ಪ್ರಾರಂಭಿಸಿದ. ಸಮಯ ಸಿಕ್ಕಾಗ ರೆವ್. ಬೊರಿಸೊ ಅವರ ಮನೆಯಲ್ಲಿ ಇದ್ದು ಅವರ ಮಗಳು ಈಡಿತ್ ಅನ್ನು ಮದುವೆಯಾಗುವ ಪ್ರಯತ್ನ ಪಟ್ಟ. ಆದರೆ ಅಂದಿನ ಸಮಾಜದ ನಿರ್ಬಂಧನೆಗಳಿಂದ ಇದು ಸಾಧ್ಯವಾಗಲಿಲ್ಲ ಮತ್ತು ಅವಳ ತಂದೆ ಈ ಸಂಬಂಧವನ್ನು ನಿರಾಕರಿಸಿದರಂತೆ. ಕೊನೆಗೆ ೧೯೦೮ರಲ್ಲಿ ಭಾರತಕ್ಕೆ ಹಿಂತಿರುಗಿ ತನ್ನ ರಾಜ್ಯವನ್ನು ಆಳುವ ಪ್ರಯತ್ನ ಮಾಡಿದ. ರಾಜ್ಯದ ಪರಿಸ್ಥಿತಿ ಇನ್ನೂ ಸುಧಾರಿಸಿರಲಿಲ್ಲ, ಬರಗಾಲ ಮತ್ತು ಕ್ಷಾಮ ಜನರನ್ನು ಕಾಡುತಿತ್ತು. ತನ್ನ ಆದಾಯವನ್ನು ಹೆಚ್ಚುಮಾಡುವ ಸಮಯ ಅಲ್ಲದಿದ್ದರೂ, ಹೊಸ ತೆರಿಗೆಯನ್ನು ವಿಧಿಸಲು ಪ್ರಯತ್ನ ಪಟ್ಟ. ಆದರೆ ಅಂದಿನ ಬ್ರಿಟಿಷ್ ಅಧಿಕಾರಿಗಳು ಇದನ್ನು ತಡೆದು ರಣಜಿ ಜೊತೆ ಚರ್ಚೆ ನಡಿಸಿ, ೩-೪ ವರ್ಷ ನವಾನಗರದಲ್ಲೇ ಇದ್ದು ರಾಜ್ಯವನ್ನು ಆಳುವುದಕ್ಕೆ ಸಲಹೆ ಕೊಟ್ಟರು, ಆದರೆ ೧೯೧೨ರಲ್ಲಿ ರಣಜಿ ಪುನಃ ಇಂಗ್ಲೆಂಡ್ ಗೆ ಹಿಂತಿರುಗಿ ಸಸೆಕ್ಸ್ ಕ್ರಿಕೆಟ್ ತಂಡಕ್ಕೆ ಸೇರಿದ. ಅನೇಕರಲ್ಲಿ ಮಾಡಿದ ಸಾಲದಿಂದ ತಪ್ಪಿಸಿಕೊಳ್ಳುವುದಕ್ಕೆ ಕಷ್ಟವಾಯಿತು. ಕೆಲವರು ಇವನ ಮೇಲೆ ಮೊಕದ್ದಮೆ ಹಾಕಿದ್ದರೂ, ರಣಜಿ ಭಾರತದ ಒಬ್ಬ ರಾಜಮನೆತನದವನು ಆದ್ದರಿಂದ ಇಂಗ್ಲೆಂಡ್ ನ್ಯಾಯಾಲಯಕ್ಕೆ ಇವನ ಮೇಲೆ ಯಾವ ಹಿಡಿತ ಇಲ್ಲ ಎಂದು ಅವನ ವಕೀಲರು ವಾದ ಮಂಡಿಸಿದರು! ಕೊನೆಗೆ ಹಾಗೂ ಹೀಗೂ ಮಾಡಿ ಕೆಲವರಿಗೆ ಸಾಲವನ್ನು ಹಿಂತಿರುಗಿಸಿ ೧೯೧೩ರಲ್ಲಿ ನವಾನಗರಕ್ಕೆ ಬಂದು ಆಳುವ ಪ್ರಯತ್ನ ಮಾಡಿದ. ರಣಜಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವುದರಲ್ಲಿ ಕಾಲ ಕಳೆಯುತ್ತಿದ್ದಾಗ ನವಾನಗರದ ಅಭಿವೃದ್ಧಿಯನ್ನು ಬ್ರಿಟಿಷ್ ಅಧಿಕಾರಿಗಳು ಕೈಗೆತ್ತಿಕೊಂಡು ರಾಜ್ಯದಲ್ಲಿ ಬೇಕಾಗಿದ್ದ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು.
೧೯೧೪ರಲ್ಲಿ ಮೊದಲನೆಯ ಮಹಾ ಯುದ್ಧ ಪ್ರಾರಂಭವಾದಾಗ ರಣಜಿ ತನ್ನ ರಾಜ್ಯದ ಸಂಪೂರ್ಣ ಬೆಂಬಲ ನೀಡಿ, ಇಂಗ್ಲೆಂಡಿನ ತನ್ನ ಮನೆಯನ್ನು ಆಸ್ಪತ್ರೆಯಾಗಿ ಉಪಯೋಗಿಸುವುದಕ್ಕೆ ಅನುಮತಿ ನೀಡಿದ. ಇದಲ್ಲದೆ ೧೯೧೪ರಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸೇರಿ ಗೌರವಾನ್ವಿತ ಮೇಜರ್ ಹುದ್ದೆಗೆ ಅರ್ಹನಾದ. ಆದರೆ ಭಾರತೀಯ ರಾಜಮನೆತವರು ಯುದ್ಧದಲ್ಲಿ ಭಾಗವಹಿವುದಕ್ಕೆ ಅನುಮತಿ ಇರಲಿಲ್ಲ. ಅಲ್ಲದೇ ಫ್ರಾನ್ಸ್ ದೇಶದ ಚಳಿ ತಡೆಯಲಾರದೆ ಇಂಗ್ಲೆಂಡ್ ನಲ್ಲಿ ಹಲವಾರು ತಿಂಗಳು ಕಳೆದು ೧೯೧೫ರಲ್ಲಿ ಭಾರತಕ್ಕೆ ಹಿಂತಿರುಗಿದ.
ರಣಜಿ ೧೯೨೦ರಲ್ಲಿ ಕ್ರಿಕೆಟ್‍ನಿಂದ ನಿವೃತ್ತನಾದ. ಸ್ನೇಹಿತರ ಜೊತೆಯಲ್ಲಿ ಬೇಟೆಗೆ ಹೋದಾಗ ಆದ ಅಪಘಾತದಿಂದ ಒಂದು ಕಣ್ಣು ಕಳೆದುಕೊಡಿದ್ದೂ ಒಂದು ಕಾರಣ. ರಣಜಿ ಕ್ರಿಕೆಟ್ ಆಡಿದ ಅವಧಿಯಲ್ಲಿ ಒಟ್ಟು ೨೪೬೯೨ ರನ್ನುಗಳನ್ನು ಗಳಿಸಿದ, ಸರಾವರಿ ಮೊತ್ತ (batting average) ೫೬.೩೭ರೊಂದಿಗೆ. ಬಹಳ ವರ್ಷದ ನಂತರ ಸರ್ ಜೆಫ್ರಿ ಬಾಯ್ಕಾಟ್ ಈ ದಾಖಲೆಯನ್ನು ಮುರಿದರು (ಸರಾಸರಿ ೫೬.೮೩!)
ರಣಜಿಗೆ ತನ್ನಂತೆ ಇರುವ ಇತರ ರಾಜಮನೆತನದವರ ಹಿತಾಸಕ್ತಿಗಳನ್ನು ಬೆಂಬಲಿವುದು ಮಾತ್ರ ಗುರಿಯಾಗಿತ್ತು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಏನೂ ಆಸಕ್ತಿ ಇರಲಿಲ್ಲ. ದೇಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಇವನಿಂದ ಯಾರಿಗೂ ಉತ್ತೇಜನ ಸಿಗಲಿಲ್ಲ. ಇವನ ಜೀವನ ಚರಿತ್ರೆ ಬರೆದ ಸೈಮನ್ ವಾಲ್ಡ್ ಅಭಿಪ್ರಾಯದಲ್ಲಿ ರಣಜಿಯ ಮನಸ್ಸು ನವಾನಗರದ ಬದಲು ಇಂಗ್ಲೆಂಡ್ ಮೇಲಿತ್ತು, (.. "he was more at home in England with his friends"). ಮಾಹೀರ್ ಬೋಸ್ ಬರೆದಿರುವ History of Indian cricket ಪುಸ್ತಕದಲ್ಲಿ, ರಣಜಿ ಭಾರತದ ಕ್ರಿಕೆಟ್ ಪಿತಾಮಹ ಅನ್ನುವುದು ಮೂರ್ಖತನ ಎಂದು ಟೀಕಿಸಿದ್ದಾರೆ.
ರಣಜಿ ಜೀವನದಲ್ಲಿ ಬಹು ಭಾಗ, ಕ್ರಿಕೆಟ್ ಆಡುವುದು ಮತ್ತು ಸಾಲಗಾರರಿಂದ ತಪ್ಪಿಸಿಕೊಳ್ಳುವುದು ಇದರಲ್ಲೇ ಕಳೆಯಿತು ಅಂದರೆ ತಪ್ಪಲಾಗರದು. ಕೊನೆ ಕೊನೆಗೆ ಇವನಿಗೂ ಮತ್ತು ಬ್ರಿಟಿಷ್ ಅಧಿಕಾರಿಗಳಿಗೂ ಅನೇಕ ಭಿನ್ನಾಭಿಪ್ರಾಯಗಳಿದ್ದವು.
ಇವನಿಗೆ ಮದುವೆ ಆದ ಯಾವ ದಾಖಲೆಗಳಿಲ್ಲ; ಆದರೆ ಇವನ ಹತ್ತಿರ ಸಂಬಂಧದವರ ಮಕ್ಕಳು ಇವನ ಆಶ್ರಯದಲ್ಲೇ ಬೆಳದರು. ಅವರಲ್ಲೊಬ್ಬ ದುಲೀಪ್ ಸಿಂಹಜಿ ರಣಜಿಯ ಹಾಗೆ ಇಂಗ್ಲೆಂಡ್ ದೇಶದ ತಂಡದೊಂದಿಗೆ ಕ್ರಿಕೆಟ್ ಆಡಿದ.
0೨/೦೪/೧೯೩೩ ರಂದು ರಣಜಿ ಹೃದಯಾಘಾತದಿಂದ ನಿಧನನಾದ. ರಣಜಿ ಟ್ರೋಫಿಯಿಂದ ಇವನ ಹೆಸರು ಇನ್ನೂ ಉಳಿದಿದೆಯಾದರೂ, ರಣಜಿತ್ ಸಿಂಹನಿಂದ ಆ ಕಾಲದಲ್ಲಿ ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿಯೇನೂ ಆಗಲಿಲ್ಲ.
- ರಾಮಮೂರ್ತಿ
ಕಾಂಗಲ್ಟನ್, ಚೆಶೈರ್
Further reading:
• Simon Wilde: Ranji, The strange Genius
• Mohir Bose: History of Indian cricket
• Wisden Cricketer's Almanack
Photos: Wikimedia Commons
***********************************************************************************