ಬದಲಾಗುತ್ತಿರುವ ಸಮಾಜ ಮತ್ತು ಶಿಕ್ಷಣ

ಡಾ ಜಿ ಎಸ್ ಶಿವಪ್ರಸಾದ್

ಯುಕೆ ಕನ್ನಡ ಬಳಗದ ೪೦ನೇ ವಾರ್ಷಿಕೋತ್ಸವ ಸಮಾರಂಭದ ಅನಿವಾಸಿ ಆಶ್ರಯದಲ್ಲಿ ಶಿಕ್ಷಣ ವಿಷಯದ ಬಗ್ಗೆ  ನಡೆದ ಚರ್ಚಾಗೋಷ್ಠಿಯಲ್ಲಿ ಮಂಡಿಸಿದ  ನನ್ನ ಕೆಲವು ಅನಿಸಿಕೆಗಳನ್ನು ಆಧರಿಸಿ ಮುಂದಕ್ಕೆ ವಿಸ್ತರಿಸಿ ಬರೆದಿರುವ ಲೇಖನ. 'ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣ' ಕುರಿತಾದ ವಿಷಯಗಳು ಸಾಕಷ್ಟಿವೆ. ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದೇನೋ. ಹೀಗಾಗಿ ನನ್ನ ಅನಿಸಿಕೆಗಳನ್ನು  ತುಸು ದೀರ್ಘವಾಗಿಯೇ ದಾಖಲಿಸಿದ್ದೇನೆ. ಪುರುಸೊತ್ತಿನಲ್ಲಿ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ನನಗೆ ಈ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಅನಿವಾಸಿ ವೇದಿಕೆಗೆ, ಕಾರ್ಯಕ್ರಮವನ್ನು ನಿರ್ವಹಿಸಿದ ಡಾ. ಪ್ರೇಮಲತಾ ಅವರಿಗೆ  ಕೃತಜ್ಞತೆಗಳು

     -ಸಂಪಾದಕ

'ಪರಿವರ್ತನೆ ಜಗದ ನಿಯಮ'. ನಮ್ಮ ಬದುಕು, ನಮ್ಮ ಸಮಾಜ, ನಮ್ಮ ಪರಿಸರ ಬದಲಾಗುತ್ತಿದೆ. ಜಾಗತೀಕರಣದಿಂದಾಗಿ ತೀವ್ರ ಬದಲಾವಣೆಗಳಾಗಿವೆ. ಕೈಗಾರಿಕಾ ಮತ್ತು ವೈಜ್ಞಾನಿಕ ಕ್ರಾಂತಿಯ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ. ಕಳೆದ ಕೆಲವು ವರ್ಷಗಳ ಹಿಂದೆ ಆವರಿಸಿದ್ದ ಕರೋನ ಪಿಡುಗು ನಮ್ಮ ಬದುಕಿನ ರೀತಿ ನೀತಿಗಳನ್ನು ಬದಲಾಯಿಸಿದೆ. ಈ ಹಲವಾರು ಬದಲಾವಣೆಯಿಂದಾಗಿ ನಾವು ಸಾಕಷ್ಟು ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡು ಹೊಸ ಕಲಿಕೆಗಳನ್ನು ಪಡೆದಿದ್ದೇವೆ. ಈ ಹೊಸ ಅನುಭವಗಳನ್ನು ನಾವು  ಇಲ್ಲಿಯವರೆಗೆ ಗಳಿಸಿಕೊಂಡ ಹಳೆ ಅನುಭಗಳ ಜೊತೆ ತಳುಕು ಹಾಕಿಕೊಂಡು ಬದುಕಲು ಕಲಿಯಬೇಕಾಗಿದೆ. ಈ ಕಲಿಕೆಯೇ ಶಿಕ್ಷಣದ ಮೂಲ ಉದ್ದೇಶ. ಇಂದು ಕಲಿತ ಅನುಭವಗಳು, ಸಂಪಾದಿಸಿದ  ಜ್ಞಾನ ಕಾಲ ತರುವ ತೀವ್ರ ಬದಲಾವಣೆಗಳ ಹಿನ್ನೆಲೆಯಲ್ಲಿ ಕೆಲವೊಮ್ಮೆ ಅಪ್ರಸ್ತುತವಾಗಬಹುದು. ಕಾಲೇಜು ಶಿಕ್ಷಣದ ಕೊನೆಯಲ್ಲಿ ಪಡೆದ ಪದವಿ ಪತ್ರ ಕಲಿಕೆಯ ಮುಕ್ತಾಯವಲ್ಲ! ಬಹುಶಃ ಅದು ಬದುಕಿನುದ್ದಕ್ಕೂ ಕಲಿಯುವ ಅವಕಾಶಗಳಿಗೆ ಒಂದು ಬುನಾದಿ. ಶಿಕ್ಷಣದ ಗುರಿ ಎಂದರೆ ಒಂದು ಡಿಗ್ರಿ ಎಂಬ ದಾಖಲೆಯನ್ನು ವಿಶ್ವವಿದ್ಯಾಲಯದಲ್ಲಿ ಗಳಿಸಿ ಒಬ್ಬ ಉದ್ಯೋಗಿಯಾಗಿ ಹಣಗಳಿಸಿ ಜೀವನ ಮಾರ್ಗವನ್ನು ಕಂಡುಕೊಳ್ಳುವುದು ಎಂಬುದು ಸಾರ್ವತ್ರಿಕವಾದ  ಅಭಿಪ್ರಾಯ. ಇದು ಒಂದು ವೈಯುಕ್ತಿಕ ನೆಲೆಯಲ್ಲಿ ಅಗತ್ಯ. ಆದರೆ ಶಿಕ್ಷಣದ ಗುರಿ ಒಬ್ಬ ಉದ್ಯೋಗಿಯನ್ನಷ್ಟೇ ತಯಾರು ಮಾಡುವುದಲ್ಲ. ಆ ಉದ್ಯೋಗಿ ಸಮಜದಲ್ಲಿನ ಒಂದು ಘಟಕ. ಅವನು ಅಥವಾ ಅವಳು ಸಮಾಜಕ್ಕೆ ಸಲ್ಲುವಂಥವರಾಗಬೇಕು. ಹೀಗೆ ಸಾಮೂಹಿಕ ನೆಲೆಯಲ್ಲೂ ಒಂದು ಆರೋಗ್ಯಕರ ಸಮಾಜವನ್ನು ಕಟ್ಟಲು ಶಿಕ್ಷಣ ಅಗತ್ಯ. ಈ ಕಾರಣಗಳಿಂದ ನಮ್ಮ ಶಿಕ್ಷಣ, ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕು.


ಸಮಾಜ ಕ್ಷಿಪ್ರವಾದ ಬದಲಾವಣೆಗಳನ್ನು ಕಾಣುತ್ತಿದ್ದರೂ ಮನುಷ್ಯನ ಮೂಲಭೂತವಾದ ಕೆಲವು ಮಾನವೀಯ ಮೌಲ್ಯಗಳು ನಮಗೆ ಅಗತ್ಯ. ಅವು ನಮ್ಮ ಅಸ್ತಿತ್ವದೊಂದಿಗೆ ಬೆರೆತುಕೊಂಡಿದೆ. ಸಮಾಜ ಬದಲಾಗುತ್ತಿದ್ದರೂ ಈ ಮೌಲ್ಯಗಳನ್ನು ಉಳಿಸಿಕೊಳ್ಳುವ ಶಿಕ್ಷಣ ಬೇಕಾಗಿದೆ. ಅದು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ಶಿಕ್ಷಣ, ವ್ಯಕ್ತಿತ್ವ ವಿಕಾಸನಕ್ಕೆ ಕಾರಣವಾಗಬೇಕು. ವ್ಯಕ್ತಿ ವಿಕಾಸನವಾದಲ್ಲಿ ಸಮಾಜವು ವಿಕಾಸಗೊಳ್ಳುತ್ತದೆ. ಇದನ್ನೇ ಮೌಲ್ಯಾಧಾರಿತ ಶಿಕ್ಷಣ (Value based education) ಎಂದು ಕರೆಯ ಬಹುದು.  ಇದನ್ನು ಒಂದು ಸಣ್ಣ ಉದಾಹರಣೆಯೊಂದಿಗೆ ವಿವರಿಸುವುದು ಸೂಕ್ತ. ನಾನೊಬ್ಬ ವೈದ್ಯ. ನಮ್ಮ ವೈದ್ಯಕೀಯ ಕಾಲೇಜುಗಳು ಒಬ್ಬ ನುರಿತ, ನಿಪುಣ ವೈದ್ಯನನ್ನು ತಯಾರು ಮಾಡ ಬಹುದು. ಆದರೆ ಆ ವೈದ್ಯನಿಗೆ ಸೇವಾ ಮನೋಭಾವವಿಲ್ಲದೆ, ಅನುಕಂಪೆಯಿಲ್ಲದೆ, ಹಣಗಳಿಸುವ ನೆಪದಲ್ಲಿ ರೋಗಿಗಳನ್ನು ಶೋಷಿಸಲು ಮೊದಲಾದರೆ ಆ ಶಿಕ್ಷಣದಿಂದ ಸಮಾಜಕ್ಕೆ ಏನು ಪ್ರಯೋಜನ? ಆ ಶಿಕ್ಷಣ ಒಬ್ಬ ವ್ಯಕ್ತಿಗೆ ಲಾಭವನ್ನು ನೀಡುವುದೇ ಹೊರತು ಸಮಾಜಕ್ಕಲ್ಲ! ಒಬ್ಬ ನುರಿತ ಇಂಜಿನೀಯರ್ ಲಂಚಕೋರನಾಗಿ ಅವನು ಕಟ್ಟಿದ ಸೇತುವೆಗಳು, ಮನೆಗಳು ಕುಸಿದು ಬಿದ್ದಾಗ ಅವನು ಪಡೆದ ವೃತ್ತಿ ಶಿಕ್ಷಣ ಎಷ್ಟರ ಮಟ್ಟಿಗೆ ಮೌಲ್ಯಾಧಾರಿತವಾಗಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ.

ಈ ಮೌಲ್ಯಾಧಾರಿತ ಶಿಕ್ಷಣ ವ್ಯಕ್ತಿಗಳ ನಡುವೆ ಸ್ನೇಹ, ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಗೌರವ ಇವುಗಳನ್ನು ಉಂಟುಮಾಡುತ್ತದೆ. ನಾಗರೀಕ ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟಲು ನೆರವಾಗುತ್ತದೆ. ಕೆಲವು ಉದ್ಯೋಗಗಳಲ್ಲಿ ಒಬ್ಬ ವ್ಯಕ್ತಿ ಒಂದು ತಂಡದ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲಿ ಸಹೋದ್ಯೋಗಿಗಳ ಜೊತೆ ಕೆಲವು ನಿಯಮಗಳಿಗೆ ಬದ್ಧವಾಗಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಹಕಾರ, ವಿನಯ, ಇತರರೊಡನೆ ಹೊಂದಾಣಿಕೆ ಇವುಗಳು ಮುಖ್ಯವಾಗುತ್ತವೆ.  ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವೈದ್ಯಕೀಯ ಶಿಕ್ಷಣದಲ್ಲಿ ಒಬ್ಬ ವೈದ್ಯಕೀಯ ವಿದ್ಯಾರ್ಥಿಯ ಜ್ಞಾನದ ಅರಿವನ್ನು ಪರೀಕ್ಷಿಸುವುದರ ಜೊತೆ ಜೊತೆಗೆ ಅವನ ಸಮಯ ಪ್ರಜ್ಞೆ, ಸ್ನೇಹ, ವಿನಯಶೀಲತೆ, ಶ್ರದ್ಧೆ, ತಂಡದಲ್ಲಿ ಅವನ ಸಹಕಾರ ಇವುಗಳ ಬಗ್ಗೆ ಸಹಪಾಠಿಗಳು, ನರ್ಸ್ಗಳು, ಹಿರಿಯ ವೈದ್ಯರು ತಮ್ಮ ಅನಿಸಿಕೆಗಳನ್ನು ನೀಡಬೇಕು. ಈ ವರದಿ ಸಮಾಧಾನಕಾರವಾಗಿದ್ದಲ್ಲಿ ಮಾತ್ರ ಆ ವಿದ್ಯಾರ್ಥಿ ಮುಂದಿನ ಹಂತವನ್ನು ತಲುಪಲು ಸಾಧ್ಯ. ಈ ಮಾದರಿಯನ್ನು ಭಾರತೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳ ಬೇಕಾಗಿದೆ. ಈ ಮೌಲ್ಯಾಧಾರಿತ ಶಿಕ್ಷಣ ಪ್ರಾಥಮಿಕ ಶಿಕ್ಷಣದಿಂದಲೇ ಶುರುವಾಗಿ ಎಲ್ಲಾ ಹಂತದಲ್ಲೂ ದೊರೆಯುವಂತಾಗಬೇಕು.  

ಶಿಕ್ಷಣದ ಗುರಿ ಎಂದರೆ ಅದು ಒಬ್ಬ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡಬೇಕು, ಒಬ್ಬ ಅನಾಗರಿಕನನ್ನು ನಾಗರೀಕನನ್ನಾಗಿಸಬೇಕು. ಸಮಾಜದಲ್ಲಿ ನಾವು ಧರ್ಮ, ಜಾತಿ, ಆರ್ಥಿಕ ವರ್ಗ, ಎಡಪಂಥ, ಬಲಪಂಥ, ವರ್ಣ ಬೇಧ (ರೇಸಿಸಂ) ಎಂಬ ಗೋಡೆಗಳನ್ನು ಕಟ್ಟಿಕೊಂಡು ಅಲ್ಪಮಾನವರಾಗಿ ಬಿಡುತ್ತೇವೆ.  ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಆಲೋಚನಾ ಕ್ರಮದಿಂದಾಗಿ ದೇಶ ವಿಭಜನೆಯಾಗಿದೆ. ರಾಜಕೀಯ, ಧಾರ್ಮಿಕ ಪೂರ್ವೋದ್ದೇಶಗಳಿಂದ ನಮ್ಮ ಪಠ್ಯ ಪುಸ್ತಕದಲ್ಲಿನ ಮಾಹಿತಿಗಳನ್ನು ತಿದ್ದುವ ಪ್ರಯತ್ನ ನಡೆದಿದೆ. ಇತಿಹಾಸವನ್ನು ಮರುವ್ಯಾಖ್ಯಾನ ಮಾಡಿ ಮಕ್ಕಳ ಅರಿವನ್ನು ನಿಯಂತ್ರಿಸಲಾಗುತ್ತಿದೆ. ದ್ವೇಷವೆಂಬ ವಿಷದ ಬೀಜವನ್ನು ಬಿತ್ತುವ ಪ್ರಯತ್ನ ನಡೆಯುತ್ತಿದೆ. ಬದುಕಿನ ಪ್ರತಿಯೊಂದು ಮಜಲಿನಲ್ಲೂ ಶ್ರೇಷ್ಠ ನಿಕೃಷ್ಟ, 'ನಾವು ಮತ್ತು ಅವರು' ಎಂಬ ಭಾವನೆಗಳನ್ನು ಉಂಟುಮಾಡುವ ಶಿಕ್ಷಣದ ಕಡೆಗೆ ವಾಲುತ್ತಿದ್ದೇವೆ. ಬದುಕಿನಲ್ಲಿ ಸಹಭಾಗಿತ್ವ ಎಂಬ ಪರಿಕಲ್ಪನೆ ಸರಿದು ಎಲ್ಲ ಮಜಲುಗಳಲ್ಲಿ ಸ್ಪರ್ಧೆಯೇ ಮುಖ್ಯವಾಗಿದೆ. ಭಾರತದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಪರಿಷತ್ತುಗಳು ಹುಟ್ಟಿಕೊಂಡು ಅವುಗಳನ್ನು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಪ್ರಭಾವಕ್ಕೆ ಒಳಗಾಗುವ ಯುವಕ ಯುವತಿಯರು ಒಂದು ರಾಜಕೀಯ ಪಕ್ಷದ ಕಾಲಾಳುಗಳಾಗಿ ನಿಲ್ಲಲು ತಯಾರಾಗಿದ್ದಾರೆ. ಬರಿ ಬಲಪಂಥ ಎಡಪಂಥ ಸಮಸ್ಯೆಗಳಲ್ಲದೆ ಇಲ್ಲಿ ಧರ್ಮವನ್ನು ಬೆಸೆಯಲಾಗಿದೆ. ಇಲ್ಲಿ ಸಾಕಷ್ಟು ಹಿಂಸೆ ಮತ್ತು ಸಂಘರ್ಷಣೆಗಳು ಸಂಭವಿಸುತ್ತವೆ. ಇದು ಅಪಾಯಕಾರಿ ಬೆಳವಣಿಗೆ ಎನ್ನ ಬಹುದು. ಈ ಕಾರಣಗಳಿಂದಾಗಿ ನಮ್ಮ ಶಿಕ್ಷಣ, ಧರ್ಮ ಮತ್ತು ರಾಜಕೀಯ ಇವುಗಳ ಪ್ರಭಾವದಿಂದ ದೂರವಾಗಬೇಕು. ಒಬ್ಬ ವಿಶ್ವಮಾನವನನ್ನು ತಯಾರು ಮಾಡುವ ಶಿಕ್ಷಣದಿಂದಾಗಿ ಆ ವ್ಯಕ್ತಿ ಪ್ರಪಂಚದ ಎಲ್ಲ ಕಡೆ ಸಲ್ಲುವವನಾಗುತ್ತಾನೆ. ಜಾತಿ ಧರ್ಮವೆಂಬ ಸಂಕುಚಿತ ಕಟ್ಟಳೆಗಳನ್ನು ಮೀರಿ ನಿಲ್ಲಲ್ಲು ಸಮರ್ಥನಾಗುತ್ತಾನೆ.  

ನಾವು ನಮ್ಮ ಧರ್ಮ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವುದು ತಪ್ಪಲ್ಲ, 
ಅದು ಅತ್ಯಗತ್ಯ. ನಮ್ಮ ಭಾರತೀಯ ಸಾಹಿತ್ಯ, ಕಲೆ, ಸಂಸ್ಕೃತಿ ಸಮೃದ್ಧವಾಗಿದ್ದು ಅದನ್ನು ಉಳಿಸಿಕೊಳ್ಳಬೇಕು. ಒಂದು ಶಿಕ್ಷಣ ಸಮಾಜಕ್ಕೆ ಹೊಂದುವಂತಾಗ ಬೇಕಿದ್ದಲ್ಲಿ ಅದು ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಗಟ್ಟಿಗೊಳಿಸಬೇಕು. ಅದು ಒಬ್ಬ ವ್ಯಕ್ತಿಯ ಪರಿಪೂರ್ಣತೆಗೆ ಬಹಳ ಮುಖ್ಯ. "ತನ್ನ ಬೇರುಗಳ ಶಾಶ್ವತ ನೆಲೆದ ನಂಟು ಒಂದು ಗಿಡಕ್ಕೆ ಅಥವಾ ಮರಕ್ಕೆ ಅತ್ಯಗತ್ಯ. ತಮ್ಮ ಸಾಂಸ್ಕೃತಿಕ ಅರಿವಿಲ್ಲದವರು, ತಮ್ಮ ಮೂಲ ಭಾಷೆ ನೆಲೆಗಳನ್ನು, ಅಸ್ಮಿತೆಗಳನ್ನು ಮರೆತವರು ನಿರ್ದಿಷ್ಟ ನೆಲೆಯಿಲ್ಲದೆ, ಸ್ಥಳಾಂತರಗೊಳ್ಳುವ ಕುಂಡಗಳಲ್ಲಿನ ಗಿಡ ಮರಗಳಂತೆ" ಎಂದು ಜಿ.ಎಸ್.ಎಸ್ ಒಮ್ಮೆ ಪ್ರಸ್ತಾಪಮಾಡಿದ್ದನು ಇಲ್ಲಿ ನೆನೆಯುವುದು ಸೂಕ್ತ. ಅವೈಚಾರಿಕತೆ ಮತ್ತು ಮೂಢನಂಬಿಕೆಗಳನ್ನು ಮೂಡಿಸುವ ಪಠ್ಯ ಕ್ರಮವನ್ನು ಕೈಬಿಡಬೇಕು. 

ಶಿಕ್ಷಣವನ್ನು ಸ್ಥಳೀಯ ಸಮುದಾಯಕ್ಕೆ ಹೊಂದುವ ಪರಿಸರ ಭಾಷೆಯಲ್ಲೇ ನೀಡಬೇಕು. ಕರ್ನಾಟಕದಲ್ಲಿ ಅದರಲ್ಲೂ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು. ಕಿರಿಯ ಮಕ್ಕಳು ತಮ್ಮ ಪರಿಸರವನ್ನು ಅರಿತುಕೊಳ್ಳುವುದು ಪರಿಸರ ಭಾಷೆಯಲ್ಲೇ. ಅವರ ಮಿದುಳಿನ ನರಮಂಡದಲ್ಲಿ ಉಂಟಾಗುವ ಕೆಲವು ಕಲ್ಪನೆಗಳು, ಮನಸ್ಸಿನಲ್ಲಿ ಅಚ್ಚಾಗುವ ಚಿತ್ತಾರಗಳು ಮನೆಯ ಮತ್ತು ಸುತ್ತಣ ಸಮಾಜ ತೊಡಗುವ ಭಾಷೆಯಲ್ಲೇ. ಹೀಗಿರುವಾಗ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಇಂಗ್ಲಿಷ್ ಮೀಡಿಯಂ ಸೇರಿಕೊಂಡು ಕಲಿಕೆಯನ್ನು ಪರಿಸರ ಭಾಷೆಯಲ್ಲದ ಇಂಗ್ಲೀಷಿನಲ್ಲಿ ಕಲಿಯುವ ಮಕ್ಕಳಿಗೆ ಸಾಕಷ್ಟು ಗೊಂದಲ ಉಂಟಾಗುವ ಬಗ್ಗೆ ಶಿಕ್ಷಣ ಮತ್ತು ಮಾನಸಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದು ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಬರುವುದಾಗಿ ಅಭಿಪ್ರಾಯ ನೀಡಿದ್ದಾರೆ. ಚಿಕ್ಕ ಮಕ್ಕಳಿಗೆ ಬೇರೆ ಬೇರೆ ಭಾಷೆ ಕಲಿಯುವುದು ಸರಾಗವಿರಬಹುದಾದರೂ ಅದು ಗೊಂದಲವನ್ನು ಉಂಟುಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಮಹಾತ್ಮ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ; “ತಮ್ಮ ಮಕ್ಕಳಿಗೆ ಆಲೋಚಿಸಲು ಮತ್ತು ವ್ಯವಹರಿಸಲು ಇಂಗ್ಲೀಷನ್ನೇ ಬಳಸಬೇಕೆನ್ನುವ ಭಾರತೀಯ ತಂದೆ ತಾಯಿಯರು ತಮ್ಮ ತಾಯ್ನಾಡಿಗೆ ದ್ರೋಹವನ್ನು ಬಗೆಯುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಭಾರತೀಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಯಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ" ಬ್ರಿಟಿಷರು ನಮ್ಮನ್ನು ನೂರಾರು ವರ್ಷಗಳು ಆಳಿ ಅವರ ಭಾಷೆ ಮತ್ತು ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಿರುವ ಪರಿಣಾಮವಿದು. ನಮ್ಮ ಶಿಕ್ಷಣ ನೀತಿಗಳು    ವಸಾಹತು ಬ್ರಿಟಿಷ್ ಮನಸ್ಥಿತಿಯಿಂದ ಮುಕ್ತವಾಗಬೇಕಾಗಿದೆ. ಇಲ್ಲಿ ಒಂದು ಸಣ್ಣ ಉದಾಹರಣೆ ನೀಡುವುದು ಸೂಕ್ತ. ಕರ್ನಾಟಕದ ಒಳನಾಡಿನ ಯಾವೊದೋ ಒಂದು ಸಣ್ಣ ಹಳ್ಳಿಯಲ್ಲಿ “London Bridge is falling down, falling down” ಎಂಬ ಶಿಶು ಗೀತೆಯನ್ನು ಹೇಳಿಕೊಟ್ಟಲ್ಲಿ, ಆ ಮಕ್ಕಳಿಗೆ ಲಂಡನ್ ಬ್ರಿಡ್ಜ್ ನಿಂತಿದರೆಷ್ಟು? ಬಿದ್ದರೆಷ್ಟು? ಅದರ ಬದಲಿಗೆ ‘ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ’ ಎಂಬ ಗೀತೆಯನ್ನು ಹೇಳಿ ಕೊಡ ಬಹುದಲ್ಲವೇ?  ಉನ್ನತ ಶಿಕ್ಷಣದಲ್ಲಿ ವಿಜ್ಞಾನ ವಿಷಯಗಳನ್ನು ಕಲಿಯಲು ಇಂಗ್ಲಿಷ್ ಬೇಕೇ ಬೇಕು ಎಂದು ವಾದಿಸುವವರು ಒಮ್ಮೆ ಇಂಗ್ಲೆಂಡಿನ ಪಕ್ಕದ ದೇಶಗಳಾದ ಫ್ರಾನ್ಸ್ ಜರ್ಮನಿ, ಪೂರ್ವ ಯೂರೋಪ್ ದೇಶಗಳ ಶಿಕ್ಷಣ ಕ್ರಮಗಳನ್ನು ಗಮಸಿಸಬೇಕಾಗಿದೆ. 

ಶಿಕ್ಷಣ ಎಲ್ಲರನ್ನು ಒಳಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಒಂದು ವಾಣಿಜ್ಯ ವಹಿವಾಟಾಗಿದೆ. ಖಾಸಗಿ ಶಾಲಾ ಕಾಲೇಜುಗಳು ಹೆಚ್ಚಾಗಿ ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗಿದೆ.  ಗುಣಮಟ್ಟದಲ್ಲಿ ಸರ್ಕಾರೀ ಮತ್ತು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಅಂತರವಿರಬಾದು. ಸಮಾಜದಲ್ಲಿ ಕೆಳಗಿನ ಸ್ಥರಗಳಲ್ಲಿರುವವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಉಳಿದು ಅವರಿಗೂ ಅವಕಾಶವಿರಬೇಕು. ಎಲ್ಲಿಯವರೆಗೆ ಎನ್ನುವುದು ಇನ್ನೊಂದು ಪ್ರಶ್ನೆ. ಸಮಾಜದ ಹಿತದೃಷ್ಟಿಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಆದ್ಯತೆಯಾಗಬೇಕು. ಅಭಿವೃದ್ಧಿ ಗೊಳ್ಳುತ್ತಿರುವ ದೇಶಗಳಲ್ಲಿ ಅದರ ಪರಿಣಾಮಗಳು ಹಲವಾರು. ನಮ್ಮ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳಲು ಹವಣಿಸುತ್ತಿದ್ದಾರೆ.  ವಿದೇಶಗಳಲ್ಲಿರುವ  ಲೈಂಗಿಕ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಾಗಿ ನಮ್ಮ ಯುವಕ ಯುವತಿಯರು ಹಾತೊರೆಯುತ್ತಿದ್ದಾರೆ. ತಮ್ಮ ಲೈಂಗಿಕ ಪ್ರವೃತ್ತಿಯನ್ನು, ತಾವು ಸಲಿಂಗ ಕಾಮಿಗಳು ಎಂಬ ವಿಚಾರವನ್ನು ಯುವಕರು ಮುಕ್ತವಾದ ಮನಸ್ಸಿನಿಂದ ಬಹಿರಂಗ ಪಡಿಸುತ್ತಿದ್ದಾರೆ. ಓಟಿಟಿ ಮತ್ತು ಇತರ ದೃಶ್ಯ ಮಾಧ್ಯಮಗಳಲ್ಲಿ ಲೈಂಗಿಕತೆ ಮತ್ತು ಲೈಂಗಿಕ ಉಲ್ಲೇಖವಿರುವ ಸಿನಿಮಾಗಳು ಧಾರಾವಾಹಿಗಳು ಈಗ ಯಥೇಚ್ಛವಾಗಿವೆ. ಲೈಂಗಿಕ ಗುಹ್ಯ ರೋಗಗಳು ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ ಇವುಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಬೇಕಾಗಿದೆ. ಈ ಒಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಶಿಕ್ಷಣದ ಯಾವ ಹಂತದಲ್ಲಿ? ಮತ್ತು ಹೇಗೆ ನೀಡಬೇಕು? ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ.

ಕರೋನ ಪಿಡುಗು ಬಂದು ನಮ್ಮ ಬದುಕಿನಲ್ಲಿ ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದೇವೆ. ತಂತ್ರಜ್ಞವನ್ನು ಬಳಸಿ ಮನೆಯಿಂದಲೇ ದುಡಿಯುವ ಮತ್ತು ಕಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದೇವೆ. ಜೋಮ (Zoom) ವೇದಿಕೆ ಅನೇಕ ಶಿಕ್ಷಣ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಹಿಂದೆ ನಮ್ಮ ಅನಿವಾಸಿ ಕನ್ನಡಿಗರು ಮಕ್ಕಳನ್ನು ಒಂದೆಡೆ ಕಲೆಹಾಕಿ 'ಕನ್ನಡ ಕಲಿ' ತರಗತಿಗಳನ್ನು ನಡೆಸಲು ಹೆಣಗುತ್ತಿದ್ದೆವು. ಈಗ ಜೋಮ ವೇದಿಕೆಯಿಂದಾಗಿ ಮಕ್ಕಳು ಮನೆಯಲ್ಲೇ ಕುಳಿತು ಕನ್ನಡವನ್ನು ಕಲಿಯುವ ಅವಕಾಶ ಒದಗಿ ಬಂದಿದೆ. ಅಂದ ಹಾಗೆ ಅದು ಸಫಲತೆಯನ್ನೂ ಕಂಡುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಹಲವಾರು ಕಲಿಕೆಗಳು ಆನ್ ಲೈನ್ ವೇದಿಕೆಗಳಲ್ಲಿ ಲಭ್ಯವಾಗಿವೆ, ಇವೆಲ್ಲಾ ತಂತ್ರಜ್ಞಾನದ ಸದುಪಯೋಗ ಎನ್ನಬಹುದು.

ಪರಿಸರ ವಿನಾಶದ ಮತ್ತು ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಬಗ್ಗೆ ಎಲ್ಲ ದೇಶಗಳಲ್ಲಿ ಎಚ್ಚರಿಕೆಯ ಕರೆಗಂಟೆ ಕೇಳಿ ಬರುತ್ತಿದೆ. ಪರಿಸರದ ಅಳಿವು ಉಳಿವಿನ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ, ನಿಸರ್ಗ ಸಂಪನ್ಮೂಲಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸುವುದರ ಪರಿಣಾಮ ಈ ವಿಚಾರಗಳ ಬಗ್ಗೆ ತ್ವರಿತವಾಗಿ ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ಈ ವಿಷಯಗಳನ್ನು ಮಕ್ಕಳ ಗ್ರಹಿಕೆಗೆ ನಿಲುಕುವಂತೆ ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಕಡ್ಡಾಯವಾಗಿ ಕಲಿಸಬೇಕು. ಇವುಗಳನ್ನು ತರಗತಿಯಲ್ಲಿ ಬೋಧಿಸಿದರಷ್ಟೇ ಸಾಲದು. ಮಕ್ಕಳನ್ನು ಅರಣ್ಯ ಪ್ರದೇಶಗಳಿಗೆ, ಹಾನಿಗೊಳಗಾದ ನಿಸರ್ಗ ತಾಣಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿ ಮಕ್ಕಳಿಗೆ ಪ್ರತ್ಯಕ್ಷ ಅನುಭವವನ್ನು ಒದಗಿಸಿದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲುದು. ಮಕ್ಕಳು ವಾಸಮಾಡುವ ಪರಿಸರದಲ್ಲಿ ಮರಗಳನ್ನು ನೆಡುವ, ಪೋಷಿಸುವ ಶೈಕ್ಷಣಿಕೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಕಾಲೇಜುಗಳ ಮಕ್ಕಳಿಂದ ಪರಿಸರ ವಿನಾಶದ ಕುರಿತಾಗಿ ಬೀದಿ ನಾಟಕಗಳನ್ನು ಆಡಿಸಿದರೆ ಅದು ಶೈಕ್ಷಣಿಕ ಕಾರ್ಯಕ್ರಮವಲ್ಲದೆ ಮನೋರಂಜನೆಯಾಗಿಯೂ ಕಿರಿಯರ-ಹಿರಿಯರ ಗಮನವನ್ನು ಸೆಳೆಯುತ್ತದೆ.  

ಶಿಕ್ಷಣ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಾಗಿದೆ. ಶಾಲೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ಕಲಿಕೆ ಸಾಧ್ಯ ಎಂಬ ಈ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಇದು ಮಕ್ಕಳಲ್ಲಿ ಒಂದು ಸಂಕುಚಿತ ಮನೋಭಾವವನ್ನು ಉಂಟುಮಾಡಬಹುದು. ಅನುಕೂಲಕರ ಉತ್ತಮ ಹವಾಮಾನವಿರುವ ದೇಶಗಳಲ್ಲಿ ಮುಕ್ತವಾದ ನಿಸರ್ಗದ ಮಧ್ಯೆ ಕಲಿಕೆಯ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು. ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನಡೆಯಬೇಕಾಗಿದೆ. ಎಲ್ಲರಿಗೂ ಒಂದೇ ಅಳತೆಗೋಲು ಹಿಡಿದು ಕಲಿಸುವ ಕ್ರಮವನ್ನು ಪರಿಶೀಲಿಸಿಬೇಕಾಗಿದೆ. ಕೆಲವೊಮ್ಮೆ ಪುಸ್ತಕಗಳನ್ನು ಪಕಕ್ಕೆ ಇಟ್ಟು ವಿಜ್ಞಾನದ ಪ್ರಯೋಗಗಳನ್ನು ಕೈಯಾರೆ ಮಾಡಿ ನಿತ್ಯ ಸತ್ಯಗಳನ್ನು ಮಕ್ಕಳೇ ಅನ್ವೇಷಣೆ ಮಾಡಿ ತಿಳಿದುಕೊಳ್ಳಬೇಕು. ಈ ರೀತಿಯ ಕಲಿಕೆ ಮಾನವ ಸಹಜ ಕುತೂಹಲವನ್ನು ಕೆರಳಿಸುವುದರ ಜೊತೆಗೆ ಅದು ಒಂದು ಉಲ್ಲಾಸಕರ ಚಟುವಟಿಕೆಯಾಗಬೇಕು. ಮಕ್ಕಳ ಮನಸ್ಸಿನಲ್ಲಿ ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರಚೋದಿಸುವ ಶಿಕ್ಷಣ ಕ್ರಮವನ್ನು ಅಳವಡಿಸಬೇಕಾಗಿದೆ. ಭಾರತ ಭೌಗೋಳಿಕ ಸಾಂಸ್ಕೃತಿಕ ನೈಸರ್ಗಿಕ ದೃಷ್ಠಿಯಿಂದ ವೈವಿಧ್ಯತೆಯುಳ್ಳ ದೊಡ್ಡ ದೇಶ. ಹೀಗಾಗಿ ಈ ವೈವಿಧ್ಯತೆಯನ್ನು ವಿಜೃಂಭಿಸುವ ಸಲುವಾಗಿ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಸಿಬಿಎಸ್ ಕೇಂದ್ರ ಪಠ್ಯಕ್ರಮವನ್ನು ಬೋಧಿಸುವ ರಾಷ್ಟೀಯ ಅಂತಾರಾಷ್ಟ್ರೀಯ ಶಾಲೆಗಳು ಈ ಪ್ರಾದೇಶಿಕತೆಯನ್ನು ಒದಗಿಸುವುದರ ಬಗ್ಗೆ ಸಂದೇಹವಿದೆ. ಹೆಚ್ಚಿನ ಅಂಕಗಳನ್ನು ನೀಡುವ ಹಿಂದಿ, ಸಂಸ್ಕೃತ ಭಾಷೆಗಳನ್ನು ಮಕ್ಕಳು ಆಯ್ಕೆಮಾಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಪೂರಕವಾಗುವ ಇಂಗ್ಲಿಷ್ ಪ್ರಧಾನವಾದ ಈ ಶಾಲೆಗಳಲ್ಲಿ ಅವರಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯವಾಗುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಬಿಳಿಗಿರಿ ರಂಗನ ಬೆಟ್ಟದ ಆದಿವಾಸಿ ಮಕ್ಕಳಿಗೆ ಅವರಿಗೆ ಪ್ರಸ್ತುತವಾಗದ ನಗರದ ವಿಷಯದ ಬದಲು ಅವರ ಪರಿಸರವಾಗಿರುವ ಅರಣ್ಯದ ಬಗ್ಗೆ ಪಠ್ಯಕ್ರಮ ಒತ್ತುನೀಡಬೇಕು. ಕಲಿಕೆ ಎಂಬುದು ಬದುಕಿಗೆ ಬೇಕಾದ ಸಾರ್ವತ್ರಿಕ ಅರಿವಿನ ಜೊತೆಗೆ ಹೆಚ್ಚು ವ್ಯಾಪಕವಾಗದೆ ಒಂದು ವಿಶೇಷ ಜ್ಞಾನವನ್ನು ಆಳವಾಗಿ ದೀರ್ಘವಾಗಿ ಅರಿಯಲು ಸಹಾಯಕವಾಗಬೇಕು. ವಿದ್ಯಾಥಿಗಳ ಕಲಿಕೆ ಅವರ ಬದುಕಿಗೆ ಎಷ್ಟು ಪ್ರಸ್ತುತವಾಗಿರಬೇಕು ಎಂಬುದು ಬಹಳ ಸಂಕೀರ್ಣವಾದದ್ದು. ಆರ್ಥಿಕ ಕಾರಣಗಳಿಂದ ವಲಸೆ ಹೋಗುತ್ತಿರುವಾಗ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಎಲ್ಲವೂ ಪ್ರಸ್ತುತವೆಂಬಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರ ದೊರಕುವುದು ಸುಲಭವಲ್ಲ. 

ಅಭಿವೃದ್ದಿಗೊಂಡಿರುವ ಇಂಗ್ಲೆಂಡಿನಂತಹ ದೇಶದಲ್ಲಿ ಕೆಲವು ಬಡ ಮಕ್ಕಳು ಮುಂಜಾನೆ ಶಾಲೆಗೆ ಹಸಿದ ಹೊಟ್ಟೆಯಲ್ಲಿ ಬರುತ್ತಿದ್ದಾರೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಬೆಳಗಿನ ಉಪಹಾರವನ್ನು ಶಾಲೆಯಲ್ಲಿ ಒದಗಿಸುತ್ತಿದೆ. ಹೀಗಿರುವಾಗ ಬಡತನ ಹಸಿವು ವ್ಯಾಪಕವಾಗಿರುವ ಭಾರತದಲ್ಲಿ ಅದೆಷ್ಟೋ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳಿಗೆ ಶಾಲೆಯಲ್ಲಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾನ್ಹ ಭೋಜನ ಒದಗಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಬೇಕು. ಹಸಿದ ಹೊಟ್ಟೆಯಲ್ಲಿ ಮಕ್ಕಳ ಏಕಾಗ್ರತೆ ಕುಗ್ಗಿ ಹೋಗುವುದನ್ನು ನಾನು ಒಬ್ಬ ವೈದ್ಯನಾಗಿ ಗಮನಿಸಿದ್ದೇನೆ. ಶಾಲೆಯಲ್ಲಿ ಸಿಗುವ ಆಹಾರದಲ್ಲಿ ಪೌಷ್ಠಿಕ ಅಂಶಗಳೂ ಇರಬೇಕು. ಈ ವ್ಯವಸ್ಥೆ ಹಸಿದ ಹೊಟ್ಟೆಗೆ ಅನ್ನವನ್ನು ನೀಡುವುದರ ಜೊತೆಗೆ ಮಕ್ಕಳ ತಂದೆ ತಾಯಿಗಳ ಮೇಲೆ ಇರುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಶಾಲೆಯಲ್ಲಿ ಹಾಜರಾಗಲು ಕಾರಣವೂ ಆಗುತ್ತದೆ.

ವಿದ್ಯಾರ್ಜನೆಯಲ್ಲಿ ಶಿಕ್ಷಕರ ಪಾತ್ರವು ಮಹತ್ವವಾದದ್ದು. ಶಿಕ್ಷಕರಿಗೆ ಉನ್ನತ ಶಿಕ್ಷಣದ ಅವಶ್ಯಕತೆ ಇರುವುದನ್ನು ಮರೆಯುವುದು ಸುಲಭ. ಅವರಿಗೂ ಶಿಕ್ಷಣ ವ್ಯವಸ್ಥೆಯಿಂದ ಬೆಂಬಲ ಬೇಕಾಗಿದೆ. ಶಿಕ್ಷಣವನ್ನು ಯಾವ ರೀತಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು, ಯಾವ ರೀತಿ ಒದಗಿಸಿದರೆ ಅದು ಪರಿಣಾಮಕಾರಿ ಎಂಬುದನ್ನು ಶಿಕ್ಷಣ ತಜ್ಞರು ಶಿಕ್ಷಕರಿಗೆ ತಿಳಿಸಬೇಕು. ನನಗೆ ತಿಳಿದಂತೆ ಕರ್ನಾಟಕದಲ್ಲಿ ಸರ್ಕಾರದ ಉನ್ನತ ಶಿಕ್ಷಣ ಅಕಾಡೆಮಿ ಈ ಕೆಲಸವನ್ನು ಮಾಡಿಕೊಂಡು ಬಂದಿದೆ. ಶಿಕ್ಷಕರಲ್ಲಿ ಒಂದು ಸೃಜನ ಶೀಲತೆ (creativity) ಇರಬೇಕು, ಸಂಬಳಕ್ಕಷ್ಟೇ ಕೆಲಸಮಾಡುತ್ತಾ ಹೇಳಿದ್ದನ್ನೇ ಹೇಳೊ ಕಿಸ ಬೈ ದಾಸ ಮೇಸ್ಟ್ರು ಗಳು ನಮ್ಮಲ್ಲಿ ಯಥೇಚ್ಛವಾಗಿದ್ದಾರೆ. ಅವರಲ್ಲಿ ಕ್ರಿಯಾಶೀಲತೆಯನ್ನು (Dynamisim) ಮತ್ತು  ಸೃಜನಶೀಲತೆ (creativity) ಉಂಟುಮಾಡಬೇಕಾಗಿದೆ.  ಹಿಂದೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಒಂದು ರೀತಿ ಭಯವಿತ್ತು. ಶಿಕ್ಷಣ ಕ್ರಮ ಕಠೋರವಾಗಿ ಮತ್ತು ಹಿಂಸಾತ್ಮಕವಾಗಿತ್ತು. (Learning by humiliation) ದಂಡನೆಯಿಲ್ಲದ ಶಿಕ್ಷಣವಿರಲಿಲ್ಲ. ಈಗ ಸಾಕಷ್ಟು ಸುಧಾರಣೆಗಳಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ವಿದ್ಯಾರ್ಥಿಗಳು ಅವರಿಂದ ಸ್ಫೂರ್ತಿಯನ್ನು ಪಡೆಯಬೇಕು. ಅವರಿಬ್ಬರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಗೌರವಗಳು ಮೂಡಿ ಬರಬೇಕು.

ಇತ್ತೀಚಿಗೆ ಪಾಶ್ಚಿಮಾತ್ಯ ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಲ್ಲಿ ನ್ಯೂರೋ ಡೈವರ್ಸಿಟಿ ಇರುವುದನ್ನು ಗುರುತಿಸಲಾಗುತ್ತಿದೆ. ಅದು ಮಕ್ಕಳ ಮಾನಸಿಕ ಬೆಳವಣಿಗೆಯ ನ್ಯೂನತೆ ಎಂದು ಹೇಳಬಹುದು. ಎಲ್ಲರ ಗ್ರಹಿಕೆ ಒಂದೇ ರೀತಿ ಇರುವುದಿಲ್ಲ. ಈ ನ್ಯೂನತೆ ಇರುವ ಮಕ್ಕಳ ಗ್ರಹಿಕೆಯಲ್ಲಿ ಕೆಲವು ಕುಂದು ಕೊರತೆಗಳಿರುತ್ತವೆ. ಕೆಲವು ವಿಷಯಗಳನ್ನು ಸಫಲವಾಗಿ ಗ್ರಹಿಸಿದರೂ ಇನ್ನು ಕೆಲವು ಗ್ರಹಿಕೆಯಲ್ಲಿ ತೊಂದರೆ ಇರುತ್ತದೆ. ಹೆತ್ತವರಿಗೆ ಮನೆಯಲ್ಲಿ ಕಾಣದ ಕೆಲವು ಮಾನಸಿಕ ತೊಂದರೆಗಳು ಶಾಲೆಯ ಒತ್ತಡ ವಾತಾವರಣದಲ್ಲಿ ಅಭಿವ್ಯಕ್ತಗೊಳ್ಳುತ್ತವೆ.  ಈ ಒಂದು ಸನ್ನಿವೇಶದಲ್ಲಿ ಒಬ್ಬ ವಿದ್ಯಾರ್ಥಿ ಧಡ್ಡನೆಂದು ಅದು ಅವನ ಹಣೆಬರಹವೆಂದು ಕೈಬಿಡುವುದು ಸರಿಯಲ್ಲ. ಈ ರೀತಿ ತೊಂದರೆ ಇರುವ ಮಕ್ಕಳಿಗೆ ಮನಶಾಸ್ತ್ರ ತಜ್ಞರ ಸಹಾಯ ಸಲಹೆ ಬೇಕಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಶಿಕ್ಷಕರ ಮತ್ತು ಸಹಪಾಠಿಗಳ ಅನುಕಂಪೆ, ಸಹಕಾರ ಬಹಳ ಮುಖ್ಯ. ಈ ರೀತಿಯ ಮಕ್ಕಳಿಗೆ ವಿಶೇಷ ಪಠ್ಯ ಕ್ರಮ ಮತ್ತು ಪರೀಕ್ಷಾಕ್ರಮ ಬೇಕಾಗುತ್ತದೆ. ಇವರಿಗೆ ಕಲಿಸಲು ಹೆಚ್ಚಿನ ಸೌಲಭ್ಯ ಮತ್ತು ಸಂಪನ್ಮೂಲಗಳು ಬೇಕಾಗುತ್ತದೆ. 

ನಮ್ಮ ಪರೀಕ್ಷಾಕ್ರಮದಲ್ಲಿ ಬಹಳ ವರ್ಷಗಳಿಂದ ವರ್ಷಕ್ಕೆ ಒಂದೇ ಪರೀಕ್ಷೆ ನಡೆಸಿ ಆ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣನಾಗಲು ಅರ್ಹನೇ ಎಂಬುದನ್ನು ನಿರ್ಧರಿಸಲಾಗುತ್ತಿದೆ. ವರ್ಷವಿಡೀ ಕಲಿತ ಒಂದೊಂದು ವಿಷಯವನ್ನು  ಕೇವಲ ಮೂರು ಗಂಟೆಗಳ ಪರೀಕ್ಷೆಯಲ್ಲಿ ನಿರ್ಧರಿಸುವುದು ಒಂದು ವಿಕೃತ ಪದ್ಧತಿ. ಈ ಒಂದು ವ್ಯವಸ್ಥೆಯಲ್ಲಿ ಪರೀಕ್ಷೆ ಎಂಬುದು ವಿದ್ಯಾರ್ಥಿಯ ಅರಿವಿಗಿಂತ ಅವನ
 /ಅವಳ ಜ್ಞಾಪಕ ಶಕ್ತಿಯನ್ನು ಅಳೆಯುವ ಸಾಧನವಾಗುತ್ತದೆ. ಒಂದು ಅಂತಿಮ ಪರೀಕ್ಷೆಯ ಬದಲು ವರ್ಷದುದ್ದಕ್ಕೂ ಹಲವಾರು ಘಟ್ಟಗಳಲ್ಲಿ  ಮಾಡುವುದು ಲೇಸು. ಪರೀಕ್ಷೆ ಎನ್ನುವುದು ಒಂದು ರಣರಂಗವಾಗಿ ಇಲ್ಲಿ ಸ್ಪರ್ಧೆಗೆ ಹೆಚ್ಚು ಪ್ರಾಮುಖ್ಯತೆ. ಸ್ಪರ್ಧೆ ಕೆಲವು ಮಕ್ಕಳ ಆತ್ಮ ವಿಶ್ವಾಸಕ್ಕೆ ಅಗತ್ಯ ಇರಬಹುದು, ಇರಲಿ ಆದರೆ ಅದನ್ನು ವಿಪರೀತವಾಗಿ ವಿಜೃಂಭಿಸುವುದನ್ನು ಕೈಬಿಡಬೇಕು. ಸಾಧಾರಣ ಮತ್ತು ಅಸಾಧಾರಣ ಪ್ರತಿಭೆ ಎಂದು ಶ್ರೇಣೀಕರಿಸಿದರೆ ಸಾಲದೇ? ಹೆತ್ತವರು ತಮ್ಮ ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸಿ ಹಲುಬುವುದುನ್ನು ಖಂಡಿಸಬೇಕು. ಹೆತ್ತವರ, ಪೋಷಕರ ಹೆಚ್ಚಿನ ನಿರೀಕ್ಷೆ ಹಲವಾರು ವಿದ್ಯಾರ್ಥಿಗಳಿಗೆ ಮಾನಸಿಕ ತೊಂದರೆ ನೀಡಿ ಅವರು ಕಿರುಕುಳ ಮತ್ತು ಆತ್ಮಹತ್ಯಗೆ ಗುರಿಯಾಗುತ್ತಿದ್ದಾರೆ. ಈ ಒಂದು ವ್ಯವಸ್ಥೆ ಬದಲಾಗಬೇಕು.

ಒಟ್ಟಾರೆ ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕಾದರೆ ನಮ್ಮ ಪಠ್ಯ ಕ್ರಮದಲ್ಲಿ, ಶಿಕ್ಷಣ ನೀಡುವ ಕ್ರಮದಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ, ಅವರ ತಂದೆ ತಾಯಿಯರ ನಿರೀಕ್ಷೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು. ಇಪ್ಪತ್ತೊಂದನೇ ಶತಮಾನದಲ್ಲಿ ಹಲವಾರು ವೈಜ್ಞಾನಿಕ ಸಾಧನೆಗಳಾಗಿ ಬಾಹ್ಯಾಕಾಶ ಮತ್ತು ಗ್ರಹಗಳಲ್ಲಿ ವಸಾಹತು ಮಾಡುವ ಆಲೋಚನೆ ಮನುಜಕುಲಕ್ಕೆ ಮೂಡುತ್ತಿದೆ. ಕರೋನ ರೀತಿಯ ಭಯಂಕರ ಪಿಡುಗನ್ನು ಹತೋಟಿಯಲ್ಲಿಡಲು ಲಸಿಕೆಗಳನ್ನು ಕಂಡುಹಿಡಿದ್ದೇವೆ. ಸೋಶಿಯಲ್ ಮೀಡಿಯಾ ಎಂಬ ತಾಂತ್ರಿಕ ಅದ್ಭುತವನ್ನು ಕಂಡುಕೊಂಡಿದ್ದೇವೆ. ಹಿರಿದಾದ ಆಲೋಚನೆಗಳು ನಮ್ಮ ಕಲ್ಪನೆಗೆ ದೊರೆಯುತ್ತಿವೆ. ಆದರೆ ವಾಸ್ತವವಾಗಿ ನಮ್ಮ-ನಿಮ್ಮ ನಡುವೆ ಹಸಿವು, ಬಡತನ, ಪ್ರಕೃತಿ ವಿಕೋಪ, ಧರ್ಮಯುದ್ಧ, ವಲಸೆ, ಮೂಲಭೂತವಾದ, ಭಯೋತ್ಪಾದನೆ, ಸರ್ವಾಧಿಕಾರ, ಕ್ಷೀಣವಾಗುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳು, ಮತಬೇಧ, ವರ್ಣಬೇಧ ಎಂಬ ಆತಂಕಕಾರಿ ಸನ್ನಿವೇಶಗಳ ಮಧ್ಯೆ ಬದುಕ ಬೇಕಾಗಿದೆ. ಹಸಿವನ್ನು ನೀಗಿಸುವ, ಮಾನವೀಯ ಮೌಲ್ಯಗಳನ್ನು, ಸಹಿಷ್ಣುತೆಯನ್ನು ಎತ್ತಿಹಿಡಿಯಬೇಕಾದ ಶಿಕ್ಷಣವನ್ನು ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ತುರ್ತಾಗಿ ನೀಡಬೇಕಾಗಿದೆ. ಉತ್ತಮ ಶಿಕ್ಷಣ ನೀತಿ ಒಂದು ಸಮಾಜದ ನೈತಿಕ ಕನ್ನಡಿಯಾಗಿರಬೇಕು. ಗಾಂಧೀಜಿ ಹೇಳಿದಂತೆ ಅದು ದೇಹ, ಮನಸ್ಸು, ಹೃದಯ ಮತ್ತು ಆತ್ಮದ ವಿಕಾಸಕ್ಕೆ ಕಾರಣವಾಗಬೇಕು. ಸ್ವನಿಯಂತ್ರಣ ಮತ್ತು ಆತ್ಮಶೋಧನೆಗಳನ್ನು ಕಲಿಸಬೇಕು. ಸತ್ಯ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಹಾದಿಯಲ್ಲಿ ವಿಶ್ವಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹರಡಲು ಕಾರಣವಾಗಬೇಕು.


 ***




ಲಂಡನ್ನಿನಲ್ಲಿ ಕನ್ನಡ ಡಿಂಡಿಮ – ಕನ್ನಡ ಬಳಗ ಯು ಕೆ-40 ರ ಸಂಭ್ರಮದ ಝಲಕ್ ಗಳು!

ಮಹಾರಾಜರು ತಮ್ಮ ಸಂದೇಶದಲ್ಲಿ ೧೯೩೯ರಲ್ಲಿ ಅಂದಿನ ಯುವರಾಜರು ಲಂಡನ್ನಿನಲ್ಲಿ ದಸರಾ ಹಬ್ಬವನ್ನು ಆಚರಿಸಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ನೆನೆದರು. ಕರ್ನಾಟಕದ ವೈಭವ, ಶ್ರೀಮಂತ ಸಂಸ್ಕೃತಿ, ಲೋಕಕ್ಕೆ ಎಂದೆಂದಿಗೂ ಮಾದರಿಯಾದ ಬಸವ ತತ್ವ, ಸೈದ್ಧಾಂತಿಕ, ವೇದಾಂತಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದರು. ಕನ್ನಡಿಗರು ಈ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇವುಗಳಿಂದ ಪ್ರೇರೇಪಿತರಾಗಿ ಬಾಳಿನ ಎಲ್ಲ ದಿಶೆಗಳಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆದು ಪ್ರಭಾವಶಾಲಿಗಳಾಗಬೇಕೆಂದು ಕರೆ ಕೊಟ್ಟರು. ತದನಂತರ ನಾಡಿನ ಪ್ರಮುಖ ಸಾಹಿತಿಗಳು, ಯು.ಕೆ. ಕನ್ನಡಿಗರು ಬರೆದ ಲೇಖನ, ಕವನಗಳ ಸ್ಮರಣ ಸಂಚಿಕೆ “ಸಂಭ್ರಮ”ವನ್ನು ಬಿಡುಗಡೆ ಮಾಡಿದರು.

ಸಂಭ್ರಮ: ಕನ್ನಡ ಬಳಗ (ಯು.ಕೆ) ಗೆ  ಮಾಣಿಕ್ಯ ಹುಟ್ಟಿದ ಹಬ್ಬ  
ಲೇಖಕರು: ರಾಮಶರಣ ಲಕ್ಷ್ಮೀನಾರಾಯಣ 

ಯುನೈಟೆಡ್ ಕಿಂಗ್ಡಮ್ ನ ಮೊದಲ ಕನ್ನಡ ಸಂಘ ಕನ್ನಡ ಬಳಗ (ಯು.ಕೆ). ೪೦ ವರ್ಷಗಳ ಹಿಂದೆ ಐವರು ದಂಪತಿಗಳು ದೀಪಾವಳಿಯ ಶುಭದಿನದಂದು ಕನ್ನಡ ಸಂಘವೊಂದರ ದೀಪ ಬೆಳೆಗಿದರು. ಅದು ಇಂದಿಗೂ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರ ಮನೆ-ಮನಗಳಲ್ಲಿ ಬೆಳಗುತ್ತಿದೆ. ಈ ವಾರಾಂತ್ಯ (ಸಪ್ಟೆಂಬರ್ ೩೦, ಅಕ್ಟೋಬರ್ ೧) ಕನ್ನಡ ಬಳಗ ತನ್ನ ಹುಟ್ಟುಹಬ್ಬ “ಸಂಭ್ರಮ”ವನ್ನು ವಿಜೃಂಭಣೆಯಿಂದ ಲಂಡನ್ ನಗರದಲ್ಲಿ ಸಂಸ್ಥಾಪಕ ಹಿರಿ ಜೀವಿಗಳೊಂದಿಗೆ, ನಾಡಿನ ಹಲವು ಮೂಲೆಗಳಿಂದ ಬಂದ ಎಲ್ಲ ವಯಸ್ಸಿನ ಕನ್ನಡಿಗರೊಂದಿಗೆ ಆಚರಿಸಿದ್ದು  ತನ್ನ ‘ಹಳೆ ಬೇರು, ಹೊಸ ಚಿಗುರು’ ಧ್ಯೇಯ ವಾಕ್ಯಕ್ಕೆ ತಕ್ಕುದಾಗಿತ್ತು. ಈ ಕಾರ್ಯಕ್ರಮವನ್ನು ಯಶಸ್ಸಿಗೆ ಕಾರಣೀಕರ್ತರು, ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್, ಖಜಾಂಚಿ ರಶ್ಮಿ ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ವ್ರತ ಚಿಗಟೇರಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಚಂದ್ರಪ್ಪ, ಆಶೀರ್ವಾದ ಮರ್ವೇ, ರಾಜೀವ ಮೇತ್ರಿ ಹಾಗೂ ಪ್ರವೀಣ್ ತ್ಯಾರಪ್ಪ. ಅಧ್ಯಕ್ಷೆ ಸುಮನಾ ಗಿರೀಶ್, ಗಣ್ಯ ಅತಿಥಿಗಳಾದ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊಫೆಸರ್ ಗುರುರಾಜ ಕರ್ಜಗಿ, ಪತ್ರಕರ್ತರಾದ ಶ್ರೀಯುತ ವಿಶ್ವೇಶ್ವರ ಭಟ್, ರವಿ ಹೆಗಡೆ ಹಾಗೂ ಸ್ವಾಮಿ ಜಪಾನಂದಜಿ ಹಾಗೂ ನೆರೆದ 1500 (ಎರಡು ದಿನಗಳಲ್ಲಿ ಸೇರಿ) ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದರು.  ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಮೃತ ಹಸ್ತದಿಂದ “ಸಂಭ್ರಮ” ಕಾರ್ಯಕ್ರಮವನ್ನು ಬೈರನ್ ಸಭಾಂಗಣದಲ್ಲಿ ಪ್ರಾರಂಭ ಮಾಡಿದರು. 

ಸಾಂಪ್ರದಾಯಿಕ ಭರತನಾಟ್ಯ, ಕೂಚಿಪುಡಿ ನೃತ್ಯಗಳಿಂದ ಯು.ಕೆ ಕನ್ನಡಿಗರ ಕಲಾಪ್ರದರ್ಶನ ಪ್ರಾರಂಭವಾಯಿತು. ‘ಬಾರಿಸು ಕನ್ನಡ ಡಿಂಡಿಮವ’ ಎಂಬ ವಿಶಿಷ್ಟ ನೃತ್ಯ ರೂಪಕ, ದರ್ಶಕರಿಗೆ ಶತಮಾನಗಳ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿಗಳನ್ನು ಮನಮೋಹಕವಾಗಿ ಬಣ್ಣಿಸಿತು. ಕನ್ನಡ ಬಳಗ ಚಿಣ್ಣರಲ್ಲಿ ಕನ್ನಡವನ್ನು ಕಲಿಸಿ, ಬೆಳೆಸುವ ಶ್ಲಾಘನೀಯ ಕೆಲಸವನ್ನು ‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಮಾಡುತ್ತಲೇ ಬಂದಿದೆ. ಈ ಮಕ್ಕಳು ಕಿರು ನಾಟಕ, ಹಾಡುಗಳ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದರು. ಪ್ರೊಫೆಸರ್ ಗುರುರಾಜ ಕರ್ಜಗಿಯವರು ಮಾನವನಿಗೆ ನಂಬಿಕೆ ಎಷ್ಟು ಮುಖ್ಯ, ಏಕೆ ಬೇಕು ಎಂಬ ಮನಮುಟ್ಟುವ ವಿವರಣೆಯಿಂದ , ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಈ ವಿದ್ವತ್ಪೂರ್ಣ ಭಾಷಣದ ನಂತರ ಖ್ಯಾತ ಗಾಯಕ ಶ್ರೀ ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನದಿಂದ ನೆರೆದವರ ಮನತಣಿಸಿ, ಸಭಿಕರೊಡನೆ ಹೆಜ್ಜೆ ಹಾಕಿ ಕುಣಿಸಿದರು.(ಇದರ ಬಗ್ಗೆ ರಮ್ಯ ಭಾದ್ರಿ ಬರೆದ ವಿಸ್ತೃತ ಲೇಖನ ಕೆಳಗೆ ಕೊಟ್ಟಿದೆ.)

ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್ ಶೈರ್ ಕನ್ನಡ ಬಳಗದ ಗಾಯಕ ವೃಂದ ಪ್ರಸ್ತುತ ಪಡಿಸಿದ ಚಿರನೂತನ ‘ನಿತ್ಯೋತ್ಸವ’, ನಾಡ ಭಕ್ತಿ ಉಕ್ಕಿಸುವ ‘ಅಪಾರ ಕೀರ್ತಿ’ ಚಿತ್ರಗೀತೆಗಳು ಸಭಿಕರನ್ನು ಕನ್ನಡತೆಯ ಭಾವನೆಯಲ್ಲಿ ತೇಲಿಸಿದವು. ಗುರುಪ್ರಸಾದ್ ಪಟ್ವಾಲ್ ಇಲ್ಲಿಯೇ ತರಬೇತಿ ಕೊಟ್ಟು ಬೆಳೆಸಿದ ತಂಡ ಪ್ರದರ್ಶಿಸಿದ ‘ಪಂಚವಟಿ’ ಯಕ್ಷಗಾನ ಕಿರು ಪ್ರಸಂಗ ಕನ್ನಡದ ಜಾನಪದ ಕಲೆಯ ವೈವಿಧ್ಯತೆಯ ಪ್ರದರ್ಶನದೊಂದಿಗೆ, ಯು.ಕೆ ಯಲ್ಲಿ ಈ ಪ್ರಕಾರವನ್ನು ಬೆಳೆಸಿ, ಪ್ರಚಲಿತಗೊಳಿಸುವ ಸಾಹಸದ ದ್ಯೋತಕವಾಗಿತ್ತು. ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಕನ್ನಡ ಬಳಗದ ಕಾರ್ಯವನ್ನು ಶ್ಲಾಘಿಸುತ್ತ, ಬಳಗ ನೂರ್ಕಾಲ ಬಾಳಲಿ, ಕನ್ನಡದ ಬಾವುಟವನ್ನು ವಿದೇಶಿ ನೆಲದಲ್ಲಿ ಹಾರಿಸಲಿ, ಸಾಂಕೇತಿಕವಾಗಿ ಕನ್ನಡದ ಸೀಮೆಯನ್ನು ಕರ್ನಾಟಕದಿಂದಾಚೆ ವಿಸ್ತರಿಸುತ್ತಿರಲಿ ಎಂದು ಆಶಿಸಿದರು. ವಿಶ್ವವಾಣಿಯ ಪ್ರವರ್ತಕರೂ, ಪ್ರಧಾನ ಸಂಪಾದಕರೂ ಆದ ಶ್ರೀ ವಿಶೇಶ್ವರ ಭಟ್ಟರು, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಅನಿವಾಸಿ ಕನ್ನಡಿಗ ಸಂಘಗಳ ಮಹತ್ವ, ಇತರ ಭಾಷಿಕರಿಂದ ನಾವು ಮಾತೃ ಭಾಷೆಯ ಉಳಿವಿಗೆ, ಪ್ರಸಾರಕ್ಕೆ ಕಲಿಯಬೇಕಾದ ವಿಷಯಗಳನ್ನು ಸುಂದರವಾಗಿ ವಿವರಿಸಿದರು. ಅನ್ಯ ದೇಶಗಳಲ್ಲಿರುವ ಕನ್ನಡ ಸಂಘಗಳ ಅನುಭವಗಳನ್ನು ಹೀರಿ ಕನ್ನಡ ಬಳಗ ಹೇಗೆ ಅಭಿವೃದ್ಧಿಯಾಗಬಹುದು ಎಂದು ವಿಸ್ತರಿಸಿದರು. ಸ್ವಾಮಿ ಜಪಾನಂದಜಿಯವರು ಕನ್ನಡ ಭಾಷೆ ನಶಿಸಬಾರದು, ಬಳಗ ಮಾಡುತ್ತಿರುವ ಕಾರ್ಯ ಈ ದಿಶೆಯಲ್ಲಿ ಮಹತ್ತರವಾಗಿದೆ; ಈ ಕಾರ್ಯಕ್ಕೆ ಕನ್ನಡಿಗರೆಲ್ಲರೂ ನೂರಾನೆಯ ಬಲ ಸೇರಿಸಿ ಎಂದು ನೆರೆದವರಲ್ಲಿ ಉತ್ಸಾಹ ತುಂಬಿದರು.(ಕೆಳಗೆ ಕೊಟ್ಟ ಶ್ರೀಮತಿ ಶ್ರೀರಂಜಿನಿ ಸಿಂಹ ಅವರ ಲೇಖನದಲ್ಲಿ ಇನ್ನಷ್ಟು ವಿವರಗಳಿವೆ.)  

ಕನ್ನಡ ಬಳಗ ವಿಶೇಷವಾಗಿ ಕನ್ನಡ ಸಾಹಿತ್ಯವನ್ನು ಬೆಂಬಲಿಸುತ್ತ ಬಂದಿದೆ. ಕನ್ನಡ ಬಳಗದ ಸಾಹಿತ್ಯಾಸಕ್ತ ಸದಸ್ಯರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರ ವೇದಿಕೆ ತನ್ನ ಅನಿವಾಸಿ (anivaasi.com) ಜಾಲತಾಣದಲ್ಲಿ ವಾರಕ್ಕೊಮ್ಮೆ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಹಾಗೆಯೇ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ಬರುವ ಸಾಹಿತ್ಯಾಸಕ್ತರನ್ನು ಒತ್ತಟ್ಟಿಗೆ ತಂದು ಸಮಾನಾಂತರ ಸಭೆಗಳನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಈ ಬಾರಿ ಕನ್ನಡದ ಮೂರು ಪ್ರಮುಖ ಆಹ್ವಾನಿತರು ಅನಿವಾಸಿ ಸಭೆಯಲ್ಲಿ ಸಕ್ರಿಯವಾಗಿ ಪಾಲುಗೊಂಡರು. ಶಿಕ್ಷಣ ನೀತಿ, ಮಾಧ್ಯಮಗಳ ಪ್ರಬಲತೆ-ಪ್ರಭಾವ ಎಂಬ ಎರಡು ವಿಷಯಗಳು ಅತಿಥಿಗಳಾದ ಪ್ರೊಫೆಸರ್ ಕರ್ಜಗಿ, ಶ್ರೀಯುತ ರವಿ ಹೆಗಡೆ ಹಾಗೂ ವಿಶ್ವೇಶ್ವರ ಭಟ್ಟರ ಸಮ್ಮುಖದಲ್ಲಿ ಚರ್ಚಿಸಲ್ಪಟ್ಟವು. ಸದಸ್ಯರ ಚರ್ಚೆಯ ನಂತರ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಸಭಿಕರಿಗೆ ಸುದೀರ್ಘವಾಗಿ ತಿಳಿಸಿದ್ದಲ್ಲದೆ, ಆಧುನಿಕ ತಂತ್ರಜ್ಞಾನ ಕಲಿಕೆ, ಮಾಧ್ಯಮ ಹಾಗು ಭಾಷೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಿದರು. ಸಭಿಕರೊಡನೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಮೇಲಿನ ಪ್ರಶ್ಳಿಗಳಿಗೆ ಪಾಂಡಿತ್ಯಪೂರ್ಣ ಉತ್ತರಗಳನ್ನು ನೀಡಿ, ಸಭಿಕರೊಡನೆ ಬೆರೆತು ಸಂಭಾಷಿಸಿದರು. (ಇದರ ಪ್ರತ್ಯೇಕ ವರದಿಯನ್ನು ಕಳೆದ ವಾರದ ’ಅನಿವಾಸಿ’ ಸಂಚಿಕೆಯಲ್ಲಿ ನೋಡಿರಿ)  https://anivaasi.com/2023/10/06/%e0%b2%85%e0%b2%a8%e0%b2%bf%e0%b2%b5%e0%b2%be%e0%b2%b8%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b9%e0%b2%b3/

ಕನ್ನಡ ಬಳಗ ದತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯು.ಕೆ ಹಾಗೂ ಕರ್ನಾಟಕದಲ್ಲಿ ಹಲವಾರು ಸಂಘ-ಸಂಸ್ಥೆಗಳೊಡನೆ ಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಈ ಉದಾತ್ತ ಕಾರ್ಯ,  ಕಾರ್ಯಕ್ರಮದುದ್ದಕ್ಕೂ ಹಲವು ಮಾಧ್ಯಮಗಳಲ್ಲಿ ಬಿತ್ತರವಾಯಿತು. ಎರಡು ದಿನಗಳ ರಂಜಿತ ಕಾರ್ಯಕ್ರಮ ಎಲ್ಲ ವಯೋಧರ್ಮಗಳಿಗೆ ಪೂರಕವಾಗಿದ್ದಲ್ಲದೆ, ಕಲೆತ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದಲ್ಲಿ ಸಂದೇಹವಿಲ್ಲ.  
ಮಹಾರಾಜರಿಗೆ ಸನ್ಮಾನ
ಬಾರಿಸು ಕನ್ನಡ ದಿಂಡಿಮವ’ ನೃತ್ಯ ನಾಟಕದ ಒಂದು ದೃಶ್ಯ

1. 2.ಸುಮಧುರ ಸಂಜೆ ರಾಜೇಶ್ ಕೃಷ್ಣನ್ ನೊಂದಿಗೆ …

ಮಾಣಿಕ್ಯ ಸಂಭ್ರಮ ಗೀತೆ (RTP) 
– ಯೂ ಟ್ಯೂಬ್ ರೆಕಾರ್ಡಿಂಗ್ ಕೃಪೆ: ಆಂಚಲ್ ಅರುಣ್
Photoes: Kannada Balaga UK (except where credited)