ಯುರೋಪ್ ಮತ್ತು ಇಂಗ್ಲೆಂಡಿನಲ್ಲಿ ಹಲವಾರು ಚರ್ಚುಗಳನ್ನು ಕಂಡಿದ್ದ ನನ್ನ ಮನಸ್ಸಿನಲ್ಲಿ ಜೀಸಸ್ ಎಂದಾಕ್ಷಣ ಮೂಡುವ ಚಿತ್ರವೆಂದರೆ ಶಿಲುಬೆಗೆ ಏರಿ ಮುಳ್ಳಿನ ಕಿರೀಟ ಧರಿಸಿ, ಕೈ ಪಾದಗಳಿಂದ ರಕ್ತಸ್ರಾವವಾಗಿ, ಕ್ಷೀಣವಾಗಿ, ಯಾತನೆಯಿಂದ ನರಳುತ್ತಿರುವ ಅಸಹಾಯಕ ಮೂರ್ತಿ ಎನ್ನಬಹುದು. ಇದು ಭಕ್ತಿಗಿಂತ ಅನುಕಂಪ ಮತ್ತು ಮರುಕ ಹುಟ್ಟಿಸುವ ಚಿತ್ರ. ಆದರೆ ಅಂದು ನಾನು ಕಂಡ ಜೀಸಸ್ ತನ್ನ ಸಾಂಪ್ರದಾಯಕ ಸ್ವರೂಪವನ್ನು ತೊರೆದು ಇಲ್ಲಿ ಶಾಂತಿದೂತನಂತೆ ಕಾಣುತ್ತಾನೆ. ಇದು ಕೇವಲ ಕಲಾತ್ಮಕ ಆಕೃತಿ. ಹೀಗಾಗಿ ಇಲ್ಲಿ ಯಾವ ಪೂಜೆ ಪುನಸ್ಕಾರಗಳಿಲ್ಲ. ಆಧಾರ ಪೀಠದ ಕೆಳಗೆ ಒಂದು ಚಾಪಲ್ (ಪೂಜಾ ಮಂದಿರ) ಇದ್ದು ಇಲ್ಲಿ ಕಾಥೊಲಿಕ್ ಮದುವೆ ನಾಮಕರಣಗಳನ್ನು ಮಾಡುವುದಕ್ಕೆ ಅವಕಾಶವಿದೆ. ಈ ಮೂರ್ತಿಯನ್ನು ಕಡೆದ ಶಿಲ್ಪಿ ಫ್ರೆಂಚ್ ದೇಶದ ಮಾಕ್ಸಿಮಿಲಿಯಂ ಪಾಲ್ ಲ್ಯಾಂಡೊಸ್ಕಿಹಾಗೂ ಇದನ್ನು ನಿಲ್ಲಿಸಲು ಬೇಕಾದ ತಂತ್ರಜ್ಞಾನವನ್ನು ಒದಗಿಸಿದ ವ್ಯಕ್ತಿ ಹೈಟೂರ್ ಡಿ ಸಿಲ್ವ ಕೊಸ್ಟಾ ಎಂಬ ಬ್ರೆಜಿಲ್ ಎಂಜಿನೀಯರ್. ಮೂರ್ತಿಯ ಮುಖವನ್ನು ರೂಪಿಸಿದ್ದು ರೋನಿಯಾದ ಲಿಯಾನಿಡ್. ಜೀಸಸ್ನ ಹೊರಚಾಚಿದ ಕೈಗಳು 92 ಅಡಿ ಉದ್ದವಿದ್ದು ಒಟ್ಟಾರೆ 635ಮೆಟ್ರಿಕ್ ಟನ್ ತೂಕವಿದೆ. ಮೂರ್ತಿಯನ್ನು ಕಾಂಕ್ರೀಟ್ ಮತ್ತು ಸೋಪ್ಸ್ಟೋನ್ ಕಲ್ಲುಗಳಿಂದ ಕೆತ್ತಲಾಗಿದೆ. ಜೀಸಸ್ ಸ್ಮಾರಕವನ್ನು ಕಾರ್ಕೊವಾಡೊ ಬೆಟ್ಟದ ಮೇಲೆ ಕೂರಿಸುವ ಆಲೋಚನೆ 1850ರಲ್ಲಿ ಪ್ರಸ್ತಾಪಿತವಾಗಿದ್ದರೂ ಕೊನೆಗೆ 1920ರಲ್ಲಿ ಹಣ ಮತ್ತು ಅನುಮೋದನೆ ಸಹಿಗಳನ್ನು ಸಂಗ್ರಹಿಸಿ 1922ರಲ್ಲಿ ಕೆಲಸ ಆರಂಭವಾಯಿತು. ಮುಂದಿನ ಒಂಬತ್ತು ವರ್ಷದಲ್ಲಿ ಮೂರ್ತಿ ಸಿದ್ಧವಾಗಿ 12ನೇ ಅಕ್ಟೋಬರ್ 1931ರಲ್ಲಿ ಕ್ರೈಸ್ಟ್ ದಿ ರಿಡೀಮರ್ ಅನಾವರಣಗೊಂಡಿತು. 2008 ಫೆಬ್ರವರಿ ತಿಂಗಳಲ್ಲಿ ಸಿಡಿಲು ಬಡಿದು ಮೂರ್ತಿಯ ತಲೆ ಹುಬ್ಬು ಮತ್ತು ಕೈಗಳಿಗೆ ಹಾನಿ ಉಂಟಾಗಿ ದುರಸ್ತಿ ಮಾಡಲಾಯಿತು. ಸಿಡಿಲನ್ನು ಹೀರುವ ತಂತ್ರಜ್ಞಾನವನ್ನು ಮೂರ್ತಿಯೊಳಗೆ ಇಟ್ಟಿದ್ದರೂ ಆಗಾಗ್ಗೆ ಸಿಡಿಲಿನಿಂದ ಉಂಟಾಗುವ ಹಾನಿಯನ್ನು ರಿಪೇರಿ ಮಾಡಲಾಗುತ್ತಿದೆ. ಒಬ್ಬ ಕುತಂತ್ರಿ ಜೀಸಸ್ ಬಾಹುಗಳ ಮೇಲೆ ಪೇಂಟ್ ಸ್ಪ್ರೇ ಮಾಡಿ ವಿಕೃತಗೊಳಿಸಿ ಆಮೇಲೆ ಶರಣಾಗತನಾದ. ಪ್ಯಾರಿಸ್ ನಗರಕ್ಕೆ ಐಫೆಲ್ ಟವರ್, ಲಂಡನ್ಗೆ ಬಿಗ್ಬೆನ್ ಗಡಿಯಾರ ಸ್ತಂಭ ಮತ್ತು ನಮ್ಮ ಬೆಂಗಳೂರಿಗೆ ವಿಧಾನಸೌಧ ಹೇಗೊ ಹಾಗೆ ಕ್ರೈಸ್ಟ್ ದಿ ರಿಡೀಮರ್ ವಿಗ್ರಹ ರಿಯೊ ನಗರದ ಹೆಮ್ಮೆಯ ಕುರುಹು ಎನ್ನಬಹುದು. ಈ ಶಿಲಾಕೃತಿಯನ್ನು ಜುಲೈ 7ನೇ ತಾರೀಕು 2007ರಲ್ಲಿ ಪ್ರಪಂಚದಲ್ಲಿನ ಆಧುನಿಕ ಏಳು ವಿಸ್ಮಯಗಳಲ್ಲಿ ಒಂದು ಎಂದು ಪರಿಗಣಿಸ ಲಾಗಿದ್ದು ಇದರ ಪಟ್ಟಿಯಲ್ಲಿ ತಾಜ್ಮಹಲ್, ಮಾಚುಪೀಚು, ಪಿರಮಿಡ್ಗಳು, ಹಾಗೂ ಇತರ ಸ್ಥಳಗಳು ಸೇರಿವೆ.
ನಾವು ಕ್ರೈಸ್ಟ್ ದಿ ರಿಡೀಮರ್ ತಲುಪುವ ವೇಳೆಗೆ ಸಾಕಷ್ಟು ಪ್ರವಾಸಿಗಳು ಆಗಮಿಸಿದ್ದರು. ಎಲ್ಲರಿಗೂ ಜೀಸಸ್ ಮೂರ್ತಿಯ ಮುಂದೆ ತಾವು ಕೈಚಾಚಿ ಫೋಟೋ ತೆಗೆಸಿಕೊಳ್ಳುವ ತವಕ. ಹೀಗಾಗಿ ಅಲ್ಲಿ ಚಾಚಿದ ಕೈಗಳ ಜನಜಾತ್ರೆ! ಒಬ್ಬರ ಕೈ ಇನ್ನೊಬ್ಬರ ಕೈ, ಗಲ್ಲ ಮತ್ತು ಕಿವಿಗಳನ್ನು ತಗುಲಿ ಕೆಲವರಿಗೆ ಮನಸ್ತಾಪ ಉಂಟಾಗಿತ್ತು. ಈ ಗಲಿಬಿಲಿಯಲ್ಲೇ ನಾವು ಕೂಡಾ ಕೈ ಚಾಚಿ ಫೋಟೋ ತೆಗೆಸಿಕೊಂಡು, ವಿಶಾಲ ಜಗುಲಿಯ ಮುಂದಿನ ಮೆಟ್ಟಿಲುಗಳು ಇಳಿದು ಇನ್ನೊಂದು ಕೆಳ ಜಗಲಿಯನ್ನು ತಲುಪಿದೆವು. ಇಲ್ಲಿ ನಿಂತು ಸಮುದ್ರದ ಕಡೆ ಕಣ್ಣು ಹಾಯಿಸಿದೆವು. ದೂರದಲ್ಲಿ ಪ್ರಶಾಂತವಾದ ನೀಲಿ ಸಮುದ್ರ, ಅದರ ಅಂಚಿನಲ್ಲಿ ಬಿಳಿ ಮರಳು, ಮುರಿಯುವ ತೆರೆಗಳ ನೊರೆ, ಕಾಲಡಿಯಲ್ಲಿ ಸುತ್ತ ಕಣಿವೆ, ಅದರಲ್ಲಿ ಕಣ್ತಣಿಯುವ ಹಸಿರು, ಮುಂದಿನ ಕಣಿವೆಗಳ ಏರುಪೇರಿನಲ್ಲಿ ಏರಿ ಇಳಿಯುವ ಮನೆಗಳು, ಫವೇಲಾಗಳು (ಸ್ಲಂ), ಸಹಸ್ರಾರು ಬಹು ಅಂತಸ್ತಿನ ಬಿಳಿ ಕಟ್ಟಡಗಳು ಹೀಗೆ ರಿಯೋ ನಗರದ ವಿಹಂಗಮ ನೋಟ ಕಾಣುತ್ತದೆ. ಬಲಗಡೆ ಕಣಿವೆಯಲ್ಲಿ ನಾವು ಕೆಳಗೆ ನೋಡಿದ ದೊಡ್ಡ ಸರೋವರ, ಅದರ ಹಿಂದೆ ಕೋಪಕಬಾನ ಮತ್ತು ಇಪನೀಮ ಬೀಚ್ ಕಾಣತೊಡಗಿದವು. ಎಡಕ್ಕೆ ನೋಡಿದಾಗ ನಗರದ ಉತ್ತರ ಭಾಗದ ಮಾರಕಾನಾ ಸ್ಟೇಡಿಯಂ ಮತ್ತು ಹೆದ್ದಾರಿ ಕಂಡವು. ನಮ್ಮ ನೇರ ದೃಷ್ಟಿಯಲ್ಲಿ ಸಮುದ್ರದ ನೀಲಿಯಿಂದ ಶಿವಲಿಂಗದಂತೆ ಉದ್ಭವಿಸಿದ ಶುಗರ್ ಲೋಫ್ ಬೋಳು ಬೆಟ್ಟ (Sugar loaf Mountain)ಬಹಳ ಮೋಹಕವಾಗಿ ಕಾಣುತ್ತಿತ್ತು. ಅದರ ಆಚೆ ಈಚೆ ಸಮುದ್ರದಿಂದ ನಡುಗಡ್ಡೆಗಳಂತೆ ಕಾಣುವ ಹಲವಾರು ಬೆಟ್ಟಗಳಿವೆ. ಈ ರೀತಿಯ ಸಾಗರ ಮತ್ತು ಎತ್ತರದ ಬೆಟ್ಟಗಳ ಸಮಾಗಮ ರಿಯೋ ನಗರಕ್ಕೆ ಅಪೂರ್ವ ಸೌಂದರ್ಯ ಮತ್ತು ವಿಶಿಷ್ಟತೆಯನ್ನು ಒದಗಿಸಿದೆ. ನಾನು ಇಲ್ಲಿ ಕಂಡ ಈ ಒಂದು ಸುಂದರ ದೃಶ್ಯ ನನ್ನಲ್ಲಿನ ಕಾವ್ಯ ಪ್ರಜ್ಞೆಯನ್ನು ಬಡಿದೆಬ್ಬಿಸಿ ಒಂದು ಕವನಕ್ಕೆ ಸ್ಫೂರ್ತಿಯನ್ನು ಒದಗಿಸಿತು. “ದೊಡ್ಡ ಬೆಟ್ಟದ ತುತ್ತ ತುದಿಯಲಿ ನಿಂತ ಏಸುವ ನೋಡಿರಿ’’ ಎಂಬ ಪದ್ಯದ ಸಾಲು ಮೂಡಿಬಂದು ಪದ್ಯ ಹೀಗೆ ರೂಪುಗೊಂಡಿತು. ಅದಕ್ಕೆ ರಿಯೋ ಡಿ ಜನೀರೊ ಸ್ಮರಣೆ ಎಂಬ ಶೀರ್ಷಿಕೆ ಕೊಟ್ಟಿದ್ದೇನೆ. ಆ ಪದ್ಯ ಹೀಗಿದೆ :
ದೊಡ್ಡ ಬೆಟ್ಟದ ತುತ್ತ ತುದಿಯಲಿ
ನಿಂತ ಯೇಸುವ ನೋಡಿರಿ
ಸುತ್ತ ಹಬ್ಬಿದ ಕಣಿವೆ ತಳದಲಿ
ಹಚ್ಚ ಹಸುರಿನ ವನಸಿರಿ
ಏಳು ಬೀಳುವ ನೀಲಿ ತೆರೆಗಳ
ಅಂಚಿನಲ್ಲಿ ನಲಿಯಿರಿ
ನಿತ್ಯ ನಡೆಯುವ ಪ್ರಕೃತಿ ಪೂಜೆಗೆ
ಭಾವದಿಂದಲಿ ತಣಿಯಿರಿ
ಸೋರುತಿರುವ ಸೂರಿನಡಿಯಲಿ
ಹಸಿದ ಹೊಟ್ಟೆಗೆ ಮರುಗಿರಿ
ಅಂದ ಚಂದದ ರಿಯೊ ನಗರವ
ಮನದೊಳಿಟ್ಟು ಸ್ಮರಿಸಿರಿ.
ನಿಸರ್ಗಪ್ರೇಮ ಮತ್ತು ಫೋಟೋ ತೆಗೆಯುವ ಖಯಾಲಿ ಇರುವ ನನ್ನಂತ “ಹುಚ್ಚು”’ ಜನಗಳಿಗೆ ಇಲ್ಲಿ ಇನ್ನಿಲ್ಲದ ಫೋಟೋ ಅವಕಾಶಗಳು! ಸಂತೃಪ್ತಿ ತರುವಷ್ಟು ಫೋಟೋ ವೀಡಿಯೊಗಳನ್ನು ತೆಗೆದುಕೊಂಡು ಇನ್ನೂ ಹೆಚ್ಚು ಹೊತ್ತು ಅಲ್ಲಿ ಕಾಲಕಳೆಯಬೇಕೆಂಬ ಆಸೆ ಇದ್ದರೂ ಮಾರ್ಗದರ್ಶಿಯ ಒತ್ತಡದಿಂದ ರೈಲ್ವೆ ನಿಲ್ದಾಣದ ಕಡೆ ನಡೆಯತೊಡಗಿದೆವು. ಹೆಲನ್ ತಿಳಿಸಿದ ಪ್ರಕಾರ ವಿಶೇಷ ದಿನಗಳ ರಾತ್ರಿಯಲ್ಲಿ ಮೂರ್ತಿಯನ್ನು ಬಣ್ಣ ಬಣ್ಣಗಳ ಫ್ಲಡ್ ಲೈಟ್ನಿಂದ ಅಲಂಕರಿಸುತ್ತಾರೆ. ಬ್ರೆಜಿಲ್ ಫುಟ್ಬಾಲ್ ವಲ್ರ್ಡ್ ಕಪ್ ಗೆದ್ದಾಗ ಬ್ರೆಜಿಲ್ ಬಾವುಟದ ಬಣ್ಣಗಳಿಂದ ಜೀಸಸ್ಗೆ ಅಲಂಕಾರ ಮಾಡಲಾಗುತ್ತದೆ. ಹಾಗೆ ಇತ್ತೀಚಿನ ದಿನಗಳಲ್ಲಿ ಪ್ಯಾರಿಸ್ ನಗರದ ಮೇಲೆ ಭಯೊತ್ಪಾದಕರು ಹಿಂಸಾಕೃತ್ಯಗಳನ್ನು ನಡೆಸಿದಾಗ ಫ್ರಾನ್ಸ್ ಬಾವುಟದ ಬಣ್ಣಗಳಾದ ನೀಲಿ, ಬಿಳಿ ಮತ್ತು ಕೆಂಪು ಬಣ್ಣಗಳ ಬೆಳಕನ್ನು ಜೀಸಸ್ ಮೇಲೆ ಚೆಲ್ಲಿ ಮೂರ್ತಿಗೆ `ಹೊದಿಸಿ’ದ ಫ್ರೆಂಚ್ ಬಾವುಟ ಅನುಕಂಪೆಯ ಸಂಕೇತವಾಗಿತ್ತು.
ನಾವು ಬೆಟ್ಟದಿಂದಿಳಿಯುವ ವೇಳೆಗೆ ಭೋಜನದ ಸಮಯವಾಗಿತ್ತು. ಅಂದು ಭಾನುವಾರ. ಅಂದು ಪೋರ್ಚುಗೀಸ್ ಜನರು ಬಹಳ ವಿರಾಮದ ಭೋಜನ ಪಾನೀಯ ಮಾಡುವುದು ಸಾಮಾನ್ಯ. ಸಂಡೆ ಲಂಚ್ ಅನುಭವವನ್ನು ನಮಗೆ ಒದಗಿಸುವ ಉದ್ದೇಶದಿಂದ ನಮ್ಮ ಎಂ.ಟಿ.ಆರ್ ಹೋಟೆಲ್ಗೆ ಹೊಲಿಸಬಹುದಾದ ಒಂದು ಸ್ಥಳೀಯ ಜನಪ್ರಿಯ ಪೋರ್ಚುಗೀಸ್ ರೆಸ್ಟೊರಾಂಟ್ನಲ್ಲಿ ನಮಗೆ ಸ್ಥಳ ಕಾದಿರಿಸಲಾಗಿತ್ತು. ಇಲ್ಲಿ ಸ್ಥಳೀಯರು ಅವರ ಸಂಸಾರದೊಡನೆ ಒಳ್ಳೆಯ ಉಡುಗೆ ತೊಡುಗೆಗಳನ್ನು ಧರಿಸಿ ನಮ್ಮ ಮದುವೆ ಮನೆಗಳಲ್ಲಿ ಕಾಣುವಂತೆ ಸಾಲಾಗಿ ಜೋಡಿಸಿದ ಮೇಜು ಕುರ್ಚಿಗಳಲ್ಲಿ ಕುಳಿತು ಹರಟುತ್ತ, ಬೀರ್ ವೈನ್ಗಳನ್ನು ಹೀರುತ್ತಾ ನಿಧಾನದಲ್ಲಿ ಊಟ ಶುರು ಮಾಡಿದ್ದರು. ಇವರು ಮುಖ್ಯವಾಗಿ ಮಾಂಸಾಹಾರಿಗಳಾದರೂ ಜೊತೆಗೆ ಬಹಳಷ್ಟು ಹಸಿರು ತರಕಾರಿ ಮತ್ತು ತರಾವರಿ ಬ್ರೆಡ್, ಆಲೂಗಡ್ಡೆ ಚಿಪ್ಸ್ ತಿನ್ನುವುದರಿಂದ ಸಸ್ಯಾಹಾರಿಗಳಾದ ನಮಗೆ ತೊಂದರೆಯಾಗಲಿಲ್ಲ. ಇಲ್ಲಿಯ ಸ್ಥಳೀಯ ಎಲೆ ತರಕಾರಿ, ಪೆಪ್ಪರ್, ಸೌತೆಕಾಯಿ, ಮತ್ತು ಟೊಮೇಟೊ ಇವುಗಳ ಜೊತೆ ಬಹಳ ಸುಂದರವಾಗಿ ಅಲಂಕರಿಸಿದ ಕೌಂಟರ್ಗೆ ತೆರಳಿ ನಮಗೆ ಬೇಕಾದ ಆಯ್ಕೆ ಮಾಡಿ ಕೊಂಡು ತಟ್ಟೆಗೆ ಹಾಕಿಕೊಳ್ಳುವ ಸೆಲ್ಫ್ ಸರ್ವೀಸ್ಗೆ ಅವಕಾಶವಿತ್ತು. ತರಾವರಿ ಆಲಿವ್, ತರಕಾರಿ, ಬ್ರೆಡ್ ಮತ್ತು ಬೆಣ್ಣೆಯನ್ನು ಸವಿದೆವು. ಇಲ್ಲಿನ ಹಸಿ ತರಕಾರಿಗೆ ಅದರದೆ ಒಂದು ತಾಜಾ ರುಚಿಯಿದೆ ಎಂದು ಹೇಳಬಹುದು. ವೈನ್ಗಳು ಸಿಹಿಯಾಗಿ ಹದವಾಗಿದ್ದವು. ಇಲ್ಲಿ ಗಮನಿಸಿದ ವಿಶೇಷವೆಂದರೆ 4-5 ಕೇಜಿ ಮಾಂಸದ ಭಾರಿ ತುಂಡುಗಳನ್ನು ಒಂದು 3 ಅಡಿ ಭರ್ಜಿಯಲ್ಲಿ ತಿವಿದು ಏರಿಸಿಕೊಂಡು ಸೂಟ್ ಮತ್ತು ಬೋ ಟೈ ಧರಿಸಿದ್ದ ಸಿಬ್ಬಂದಿಗಳು ಕೈಯಲ್ಲಿ ಹರಿತವಾದ ಖಡ್ಗದಂತೆ ಕಾಣುವ ಉದ್ದದ ಚಾಕು ಹಿಡಿದು ಮೇಲೆ ಕೆಳಗೆ ಓಡಾಡುತ್ತಿದ್ದರು. ಬೇಕಾದವರಿಗೆ ಎಡಗೈಯಲ್ಲಿ ಹಿಡಿದಿದ್ದ ಮಾಂಸವನ್ನು ಬಲಗೈಯಲ್ಲಿದ್ದ ಚಾಕುವಿನಿಂದ ತರಿದು ಪ್ಲೇಟ್ಗೆ ಬೀಳುವಂತೆ ನೋಡಿಕೊಳ್ಳುತ್ತಿದ್ದರು. ಇಲ್ಲಿ ಭೋಜನ ಮಾಡುತ್ತಿದ್ದವರಿಗೆ ಯಾವ ರೀತಿಯ ಅವಸರವಿರಲಿಲ್ಲ. ಸಾಮಾನ್ಯವಾಗಿ 2-3 ತಾಸಿನ ವಿರಾಮ ಭೋಜನಗಳನ್ನು ಮುಗಿಸಿ ಕೊನೆಗೆ ಸ್ವೀಟ್, ಕೇಕ್ ಮತ್ತು ಇತರ ತಿನಿಸುಗಳನ್ನು ತಿಂದು ಕೈಕುಲಕಿ, ಹೆಂಗಸರನ್ನು ಅಪ್ಪಿ, ಲಘುವಾಗಿ ಕೆನ್ನೆಗೆ ಕೆನ್ನೆ ತಗುಲಿಸಿ ಮುತ್ತಿಡುವ ಶಬ್ದವನ್ನು ಮಾಡಿ ವಿರಮಿಸುತ್ತಿದ್ದರು. ಇಷ್ಟು ವಿರಾಮವಾದ ಭೋಜನ ಮುಗಿಸುವ ವೇಳೆಗೆ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಜೋರು ಬಿಸಿಲು ಮತ್ತು ಧಗೆ ಇದ್ದುದರಿಂದ ಸಾಕಾಗಿ ಹೋಟೆಲ್ಗೆ ತೆರಳಿ ಮಲಗಿಬಿಟ್ಟೆವು.
