ಶ್ರೀಮತಿ ಮೈದಾಸ – ಗೌರಿ ಪ್ರಸನ್ನ

ಐನೂರು ಆವೃತ್ತಿ ದಾಟಿದ ಅನಿವಾಸಿಯ ಬ್ಲಾಗಿಗೆ ಮತ್ತೊಮ್ಮೆ ನಿಮಗೆಲ್ಲ ಸ್ವಾಗತ, ನಮಸ್ಕಾರಗಳೊಂದಿಗೆ. ಇವತ್ತಿನ ಅಂಚೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಬರೆದ “ಶ್ರೀಮತಿ ಮೈದಾಸ” ಅನ್ನುವ ಕವನವಿದೆ. ಅವರೇ ಹೇಳಿರುವಂತೆ, ಇದು ಇಂಗ್ಲೀಷಿನ “Carol Ann Duffy ಯವರ Mrs Maidas ನಿಂದ ಪ್ರೇರಿತ. ಅದರ ಭಾಷಾಂತರವೋ, ಭಾವಾನುವಾದವೋ ಖಂಡಿತ ಅಲ್ಲ. A level ನಲ್ಲಿ English literature ಕಲಿಯುತ್ತಿರುವ ಮಗಳು ಅಕ್ಷತಾ ಕೆಲ ದಿನಗಳ ಹಿಂದೆ ತನ್ನ syllabus ನಲ್ಲಿರುವ ಈ ಹಾಡಿನ ಬಗ್ಗೆ ಮಾತಾಡಿದ್ದೇ ತಡ. Mrs.Maidas ಮನದಲ್ಲಿ ಗಟ್ಟಿಯಾಗಿ ನಿಂದು ತಲೆ ತಿನ್ನಲಾರಂಭಿಸಿದ್ದೇ ಈ ಪ್ರಯತ್ನದ ನಾಂದಿ.” ವ್ಯಾಲೆಂಟೈನ್ ದಿವಸ ಹತ್ತಿರ ಬಂದಂತೆ, ಸ್ವಲ್ಪ ಪ್ರೇಮಿಗಳ / ಪ್ರೇಮಕಾವ್ಯಗಳ ಹಾವಳಿ ಸಹಜವಾಗಿಯೇ ಹೆಚ್ಚಾಗುತ್ತದೆ. ಆದರೆ ಇಲ್ಲಿ, ಮುಟ್ಟಿದ್ದೆಲ್ಲ ಬಂಗಾರ ಮಾಡುವ ಇನಿಯನ ಪ್ರಿಯೆಯ ಕಷ್ಟಗಳ ಅಳಲಿದೆ, ಹತ್ತಿರವಿದ್ದೂ ಕೈಹಿಡಿಯಲಾಗದ ಪರಿಸ್ಥಿತಿಯ ಸಂಕಟವಿದೆ. ಬನ್ನಿ, ಓದೋಣ, ಓದಿ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).

ಜೂನ್ ತಿಂಗಳ ಮೊದಲ ಮುಂಗಾರು ಮಳೆ.. 
ಬಿದ್ದ ತಟಪಟ ಹನಿಗೆ ತೊಯ್ದು ತುಟಿದೆರೆದ ಇಳೆ..
ಬೆಳ್ಳನೆ ತಟ್ಟೆ ಇಡ್ಲಿಯ ನಸು ಬೆಚ್ಚನೆಯ ಹಬೆ, ಚಟ್ನಿಗೆಂದು ಕಾಸಿದ ಇಂಗು-ಕರಿಬೇವಿನೊಗ್ಗರಣೆಯ ಘಮ,ಕುದಿಯುತ್ತಿರುವ ಚಹಾದ ತುಸು ಕಹಿ ಒಗರು..ತಾಟು, ಬಟ್ಟಲು, ಚಮಚೆ,ಲೋಟ,ಕಪ್ ಗಳ, ಹೆಚ್ಚಿಟ್ಟ ಅರ್ಧ ನಿಂಬೆ, ಕರಿಬೇವ ಕಡ್ಡಿಗಳ.. ಸಂತೆಯ ಮಾಳ ನನ್ನ ಅಡುಗೆ ಕಟ್ಟೆ..
ತುಂಬು ಸಜೀವತೆಯ ಪ್ರತೀಕ..
ಪ್ರೀತಿ - ರೀತಿಗಳ ನಿತ್ಯಸತ್ಯ ಲೋಕ

ಅಡರಿದ್ದ ಮಿಶ್ರ ಘಮಟು ಹೊರಹೋಗಲನುವಾಗಲೆಂದು
ತುಸುದೆರೆದ ಕಿಟಕಿಯ ಇನ್ನಷ್ಟು ತೆರೆದೆ..
ನಮ್ಮನೆ ಪುಟ್ಟ ಕೈ ತೋಟದಲಿ .. ಅದೋ .ನನ್ನ ಮೈದಾಸ,ಜೀವದ ಜೀವ.. ನನ್ನೊಲವು..
ನಾವೇ ನೆಟ್ಟ ಮಲ್ಲಿಗೆಯ ಬಳ್ಳಿಗೀಗ ಮೈತುಂಬ ಹೂವು..
ಟೊಂಗೆ ಟೊಂಗೆಯಲಿ ತೂಗುತಿದೆ ಗಿಣಿ ಕಡಿದ ಗಿಣಿಮೂತಿ ಮಾವು
ಗಿಡಗಂಟೆಗಳ ಕೊರಳಲ್ಲಿ ಗುಬ್ಬಚ್ಚಿ ಮರಿಯ ಚೀಂವ್ ಚೀಂವು..
ಅರೇ! ಇದೇನಿದು!!..

ಮಾವು ಕೀಳಲೆಂದು ಅವ ಬಗ್ಗಿಸಿದ ಟೊಂಗೆಯ ಎಲೆಯ ಹಸಿರೊಮ್ಮೆಗೇ ಪೀತ ವರ್ಣ.ಕಿತ್ತ ಬಿಳಿಯ ಮಲ್ಲಿಗೆಗೆ ಬಂಗಾರ ಬಣ್ಣ
‘ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ’ ಮಂತ್ರದನುರಣ

ಅರೇ,ಇದೇನಿದು ಅಂಗೈಲ್ಹಿಡಿದ ಮಾವಿಗೂ ನೂರು ಕ್ಯಾಂಡಲ್ ಬಲ್ಬ್ ಪ್ರಭೆ..
ಅನತಿ ದೂರದಿಂದಲೂ ಕಂಡ ಅವನ ವಿಜಯದ ನಗೆಗೆ ನಾನು ಅಪ್ರತಿಭ
ಪುಟ್ಟ ತೋಟದ ಕಟ್ಟಿಗೆಯ ಗೇಟು ದೂಡಿದನಷ್ಟೇ..ಅದೂ ಚಿನ್ನದಂತೆ ಥಳಥಳ..

ದಣಿದ ದೇಹ ಚೆಲ್ಲಿ ಅವ ಕೂತ ಹಾಲ್ ನ ಹಳೆಯ ಕಂದು ಈಸಿ ಚೇರ್ ಬಟ್ಟೆ .. ಕ್ಷಣ ಮಾತ್ರದಲಿ ಹೊಂಬಣ್ಣದ ಪಟ್ಟೆ.

ಮೆತ್ತಗಿನ ಮೃದು ಇಡ್ಲಿಗೆ ಅವನ ಕೈ ಸೋಕಿತಷ್ಟೇ..ಅದುವೂ ಇದೀಗ ಹಳದಿ ಲೋಹದ ಮುದ್ದೆ.

‘ಓಹ್! ದೇವರೇ’ ನಿಡುಸುಯ್ದ ಅವನ ಮೊಗದ ತುಂಬ ಕಳವಳ
‘ಇದೇನಾಗುತಿದೆ?’ ನನ್ನೆದೆಯ ಗೂಡಲ್ಲೂ ಭಯ, ಆತಂಕ,ತಳಮಳ
ಅಳುಕುತ್ತಲೇ ಮುಟ್ಟಿದ ಚೀನೀಮಣ್ಣಿನ ಕಪ್ ನ ಚಹಾ ತಾನಾಯಿತು
ಕ್ಷಣಾರ್ಧದಲೇ ಕನಕ ಭೂಷಿತ ಹಿಡಿಯ ಕಪ್ಪಿನ ಹಳದಿದ್ರವ

‘ನಿಲ್ಲು, ಹಿಂದೆ ಸರಿ. ಮುಟ್ಟದಿರು ನನ್ನ’- ಚೀರಿದ.
ನನ್ನ ಕೈಕಾಲೆಲ್ಲ ನಡುಕ, ಕಣ್ಣು ಕತ್ತಲೆ.. ಕುಸಿದೆ
‘ಮ್ಯಾಂವ್ ಎಂದು ಒಡೆಯನ ತೊಡೆಯೇರ ಬಂದ ಟಾಮಿಯ ಕಂಡೆ..ಧಡಕ್ಕನೆದ್ದೆ – ಕೊಠಡಿಯಲಿ ಕೂಡಿ ಕೊಂಡಿ ಜಡಿದೆ.

ಕೊಪ್ಪರಿಗೆಯೋ, ಕೊಳಗವೋ, ಕ್ವಿಂಟಲ್ಲೋ ಬೇಡಿದರಾಗುತ್ತಿರಲಿಲ್ಲವೇ?
ಬೇಡುವವ ಮೂರ್ಖನಾದರೇನಂತೆ ನೀಡುವವಗಾದರೂ ಬುದ್ಧಿ ಬೇಡವೇ?
‘ಮುಟ್ಟಿದ್ದೆಲ್ಲ ಚಿನ್ನ’ವಾಗಿಸುವ ದುರಾಸೆ ಏಕೆ ಬೇಕಿತ್ತು?
ಗೆರೆ ದಾಟಿದ ಮೇಲಷ್ಟೇ ಅರಿವಾಗುವುದಲ್ಲವೇ ಆಪತ್ತು?

‘ಅತ್ಯಾಸೆ ಗತಿಗೇಡೆಂದು ದೃಷ್ಟಾಂತ ಕೊಡುತ್ತದೆ ಜಗತ್ತು
ಇರಲಿಲ್ಲವೇನು ಹಲಕೆಲವು ಅನಿವಾರ್ಯತೆ – ಜರೂರತ್ತು
ಬಣ್ಣ ಬೇಡುವ ಗೋಡೆ, ಬಳಕೆಗೊಂದು ಗಾಡಿ, ದುರಸ್ತಿಗೆ ಬಂದ ಛತ್ತು
‘ನನ್ನದೇನೂ ತಪ್ಪಿಲ್ಲ’ – ಅನ್ನಲಾರೆ ಖಂಡಿತ.ಮದುವೆ ಛತ್ರದಲ್ಲೋ, ಹಬ್ಬ ಸಮಾರಂಭದಲೋ ಕಂಡು ಓರಗೆಯವರ ಸೀರೆ,ಒಡವೆ, ದೌಲತ್ತು..
ನಾನೂ ರಗಳೆ ಮಾಡಿ ಮಾಡಿ ಅವನ ಕಂಗೆಡಿಸಿದ್ದಿದೆ ಕಿಂಚಿತ್ತು

ಅವನಿಗೀಗ ಚಿನ್ನದ್ಹಾಸಿಗೆಯಲಿ ನಿದ್ದೆಯಿಲ್ಲದ ಹೊರಳಾಟ
ಇನಿಯನಪ್ಪುಗೆಯಿಲ್ಲದ ಸುಪ್ಪತ್ತಿಗೆಯಲ್ಲಿ ನನ್ನ ಗೋಳಾಟ
ನಲ್ಲನಪ್ಪುಗೆಗೆ ಕಾಡುವ ದೇಹ-ಮನ-ಆತ್ಮಗಳ ಸಂಭಾಳಿಸಲಾಗದೇ ಒದ್ದಾಡುತ್ತಿದ್ದೇನೆ.
ಶಾಪ, ಅಭಿಶಾಪಗಳಂತಿರಲಿ.. ವರವೂ ಹೀಗೆ ಶಾಪವಾಗುವ ಪರಿಗೆ ಕಂಗಾಲಾಗಿದ್ದೇನೆ.

ಬಲುಬಾರಿ ಅನ್ನಿಸುವುದುಂಟು.. ಏನಾದರಾಗಲಿ, ಒಮ್ಮೆ ಅವನ ಬಿಗಿದಪ್ಪಿ ಪುತ್ಥಳಿಯಾಗಿ ಕುಳಿತುಬಿಡಲೇ ಪಕ್ಕದಲೆ
ಎಲ್ಲ ತೊಳಲಾಟ, ನರಳಾಟ, ನೋವು, ಹಿಂಸೆಗಳಿಗೆ ಮಂಗಳ ಹಾಡಿಬಿಡಲೇ?

ಛೇ!ಛೇ!! ಈ ಆಪತ್ತಿನ ಸಮಯದಲಿ ಇಂಥ ಸ್ವಾರ್ಥಿಯಾಗಲಾರೆ.
ನಮ್ಮೊಲವ ಸಾಂಗತ್ಯ, ಸಿಹಿಕಹಿ ದಾಂಪತ್ಯ ತೊರೆಯಲಾರೆ
ಕಣ್ಣಿನಲೇ ಅವನ ಮುಟ್ಟಿ, ಮೈದಡವಿ ಸಂತೈಸದಿರಲಾರೆ
ಧರ್ಮೇಚ-ಅರ್ಥೇಚ-ಕಾಮೇಚ.. ಕೊಟ್ಟ ವಚನ ನಿಭಾಯಿಸದಿರಲಾರೆ.


- ಗೌರಿ ಪ್ರಸನ್ನ

*************************************

ದಿನನಿತ್ಯದ ತತ್ವಜ್ಞಾನ – ರವಿರಾಜ ಉಪ್ಪೂರರ ಕವನಗಳು

ಅನಿವಾಸಿಯ ಬಂಧುಗಳಿಗೆಲ್ಲ ನಮಸ್ಕಾರಗಳು. ಈ ಶುಕ್ರವಾರ ದಿಢೀರ್ ದೋಸೆಯಂತೆ ಕೊನೆಯ ಗಳಿಗೆಯಲ್ಲಿ ಬಡಿಸುತ್ತಿರುವ ಕವನಗಳು, ಡಾ. ರವಿರಾಜ್ ಉಪ್ಪೂರರ ಹಂಚಿನಲ್ಲಿ ತಯಾರಾದವು. ಮೂಲತಃ ಉಡುಪಿಯವರಾದ ರವಿರಾಜ್, ವೃತ್ತಿಯಲ್ಲಿ ಕ್ಷ-ಕಿರಣ ತಜ್ಞರು. 2010ರಿಂದ ಇಂಗ್ಲಂಡಿನಲ್ಲಿ ತಮ್ಮ ಪತ್ನಿ-ಪುತ್ರರೊಂದಿಗೆ ವಾಸವಾಗಿರುವ ರವಿರಾಜ್ ಕವನ ಗೀಚುವುದಲ್ಲದೇ (ಅವರದೇ ಮಾತಿನಲ್ಲಿ), ಯಕ್ಷಗಾನದಲ್ಲೂ ಆಸಕ್ತಿ ಉಳ್ಳವರು. ಬನ್ನಿ, ಏನು ಹೇಳುತ್ತಾರೋ ನೋಡೋಣ – ಲಕ್ಷ್ಮೀನಾರಾಯಣ ಗುಡೂರ, ಸಂಪಾದಕ (ಸಬ್ಸ್ಟಿಟ್ಯೂಟ್).

***********************************************************************

ಪಯಣವೆಲ್ಲಿಗೋ ತಿಳಿಯದೇ ಹೊರಟಿರುವೆ 
ಗಾಣದೆತ್ತಿನಂತೆ ತಿರುಗುತಿರುವೆ ಗುರಿ ಇಲ್ಲದೇ 
ಬಂದಿರುವುದು ಒಬ್ಬನೇ... ಹೋಗುವುದೂ ಒಬ್ಬನೇ 
ನಡುದಾರಿಯಲೊಂದಿಷ್ಟು ನಲಿಯಬಾರದೇ 
ಕಲೆಯಬಾರದೇ ಒಂದಿಷ್ಟು ನಿನ್ನಿಷ್ಟದ ಜೀವಗಳೊಡನೆ ?
ಯಾಕೀ ಬಿಗುಮಾನ ... ಇಲ್ಲಿಯದೇನೂ ನಿನ್ನದಲ್ಲ 
ಜೋಳಿಗೆಯ ಭರಿಸಿಕೋ ಪ್ರೀತಿ ಸ್ನೇಹದ ಭಂಡಾರವ
ನಿನ್ನೀ ಬಾಳಿಗೆ ಅದುವೇ ನಿನಗಾಧಾರವು

*******

ಮೊದಮೊದಲು ತೊದಲಿ ನಡೆಯುವಾಗ 
ಕೈ ಹಿಡಿದು ನಡೆಸಿದೆ ನೀನೆನ್ನ 
ಮಡದಿಯ ಕೈ ಹಿಡಿದೊಡೇ ಮರೆವೆನೇ 
ನೀನಿತ್ತ ಕೈಯ ಆಸರೆಯ?
ನಿನಗಾಗುವೆ ನಾನಾಸರೆ 
ಮುಪ್ಪಿನಲಿ ನಿನ್ನ ಕೈಗೋಲಾಗಿ ತಾಯೆ

*******

ಹಳೆಯ ನೆನಪುಗಳು 
ಸುರುಳಿ ಬಿಚ್ಚಿದರೆ 
ಉರುಳಿ ಹೋಗುವುದು 
ಮರಳಿ ಬಾರದ ಕಾಲದ 
ವಿರಳ ಕ್ಷಣಗಳು ಮನದಾಳದಲ್ಲಿ

*******

ಮಿನುಗುವ ನಕ್ಷತ್ರ ಕಂಡಾಗಲೆಲ್ಲ 
ಮಲಗುವ ಅನಿಸುತ್ತದೆ 
ಮನಸಿನ ತುಂಬೆಲ್ಲ ತುಂಬಿರುತ್ತೆ 
ತಾರೆಯರ ತಾರಾಗಣ 
ಎದ್ದು ನೋಡಿದರೆ ಇನ್ನೂ 
ಬೆಳಕೇ ಹರಿದಿಲ್ಲ .... ಬರೀ ಕನಸುಗಳು 
ರವಿಯ ಆಗಮನಕೆ ಮಾಯವಾಯಿತೆಲ್ಲಾ 
ಕನಸಿನ ತಾರಾಗಣ .... 
ಮರೆಯಾದವು ಎಲ್ಲಾ  ಅಸಂಖ್ಯ ಮಿನುಗುತಾರೆಗಳು 
ಉಳಿದದ್ದು ಬರೀಯ ನಿದ್ರೆಗೆಟ್ಟ ರಾತ್ರಿಯು,
ಹಗಲಿಡೀ ಕಾಯಬೇಕಲ್ಲ ಇನ್ನು 
ಮಿನುಗು ತಾರೆಯರ ನೋಡಲು ... 
ಕನಸಿನ ರಾತ್ರೆಯ ಕಳೆಯಲು

*******

ನೀಲಾಕಾಶ ಹೊಂಬಣ್ಣದ ರಾತ್ರಿಯುಡಿಗೆ ತೊಟ್ಟು 
ಕಾಯುತಿರುವಳು ಪ್ರಣಯಕ್ಕಾಗಿ ತಿಂಗಳೊಂದಿಗೆ 
ಬಾಗಿಲಲಿ ನಿಂತು ಇಣುಕಿ ನೋಡುತಿಹನು ಬೆಳಗಿನ ಗೆಳೆಯ ರವಿ 
ದಣಿವಾಗಿಹ ನಮಗೆಲ್ಲ ಇವರಿಬ್ಬರ ಪ್ರಣಯ ಪ್ರಸಂಗವೇ ಒಂದು ಮನೋರಂಜನೆ ..

*******

ಗೌತಮನಿಗಾಯಿತು ಜೀವನ್ಮರಣದ ಲೆಖ್ಖಾಚಾರ
ಅರಳೀಮರದಡಿಯಲ್ಲಿ 
ನನಗರಿವಾಯಿತು ಮುಂದಿನ ಜೀವನದ ಸಾಕ್ಷಾತ್ಕಾರ 
ಅಡುಗೆಮನೆಯ ಸಿಂಕಿನಲ್ಲಿ 
ಹತ್ತಾರು ಪಾತ್ರೆಗಳ ತಿಕ್ಕಾಟದೊಂದಿಗೆ 
ತಿಳಿದಿರಲಿ ನಿನಗೆ ಸಹಬಾಳ್ವೆಯ ಮರ್ಮ ಇದೆಂದು 
ಆಸೆಯೇ ದುಃಖ್ಖಕ್ಕೆ ಮೂಲ ಎಂಬುದೀಗರಿವಾಯ್ತು 
ಸಾವೇ ಇರದ  ಮನೆಯ ಸಾಸಿವೆಯಂತೆ
ನೀ ಆಸೆ ಪಡದಿರು ಜೀವನದಿ ಬರೀ ಸುಖವ 
ಅದುವೇ ಬುದ್ದನಿಗೆ ನೀ ನೀಡುವ ಗೌರವ

*******

ದಟ್ಟ ಕಾಡಿನಲಿ  ಮದ್ದಾನೆಯ ಮದಿಸಬಲ್ಲೆ 
ಇಟ್ಟ ಬಾಣದ ಗುರಿಯ ಬದಲಿಸಬಲ್ಲೆ 
ಕೊಟ್ಟ ಮಾತನೂ ಮುರಿಯಬಲ್ಲೆ 
ಮಾರುತತನುಜನ ಮುರಿದಿಕ್ಕಬಲ್ಲೆ 
ಆದರೆ ನನ್ನಾಕೆಯನು ಸೋಲಿಸಲಾರೆ, ಮಾತಿನ ಮಲ್ಲೆ 
ಏನಾದರೂ ಆಕೆಯೇ ನನ್ನ ನಲ್ಲೆ

*******

ನಿನ್ನ ಮಡಿಲಲ್ಲಿ ಮರೆಯಾಗಿಸಬಲ್ಲೆ ಪ್ರಖರ ರವಿಕಿರಣವನ್ನೇ 
ಕರಗಿ ನೀರಾಗಿ ಸುರಿಸುವೆ ನೀ ಮಳೆಯ ಬರೀ ವರ್ಷಋತುವಿನಲ್ಲಿ 
ನನ್ನಾಕೆಯೋ ... ಮರೆಯಾಗಿಸಬಲ್ಲಳು ನನ್ನಾಲೋಚನೆಗಳನು 
ತನ್ನ ಮಾತಿನ ಮೋಡಿಯಲ್ಲಿ 
ಮತ್ತೊ ... ಸುರಿಸಬಲ್ಲಳು ಕಣ್ಣೀರಿನ ಮಳೆಯ 
ಸರ್ವ ಋತುಗಳಲ್ಲೂ!

*******

ರೀ... ತರಕಾರಿಯ ತರಲು ಹೊರಟಿರೇ 
ನನ್ನವಳು ಅಡುಗೆಮನೆಯಿಂದಲೇ ಉಲಿದಳು 
ಚರ್ಚೆ ಮಾಡದೆ ತಂದರೆ 
ಸಿಡುಕುವಳು ನಿಮಗೇನೂ ಬಾರದು ಉಳಿಸಲು 
ಮತ್ತೆ ... ತಂದಿರುವ ತರಕಾರಿಗಳೋ ಬರೀ ಹುಳಗಳು !!!.

*******

ಕಾಳ್ಗಪ್ಪು ನಾನು ನಿಶೆ
ಎಂದವಳು ದುಃಖದಲಿ
ಕಣ್ಣೀರ ಸುರಿಸುತಿರೆ
ಅವಳಶ್ರು ಬಿಂದುಗಳು
ಬಾನ ಬಯಲಿನ ತುಂಬ
ನಗೆಯ ನಕ್ಷತ್ರ ಮಿನುಗಿದವು

*************************

- ರವಿರಾಜ್ ಉಪ್ಪೂರ್