ಕವನ-ಭಾವಯಾನ

ಬರೆಯಬೇಕು!

ಬರೆಯಲೇಬೇಕು ಹಾಗೆಂದು ಮಾಡಿಟ್ಟುಕೊಂಡ ವಿಷಯಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಲೇ ಇದೆ ಆದರೆ ಬರೆಯಲು ಮಾತ್ರ
ಆಗುತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯಲ್ಲಿ ಇದ್ದ ಅಕ್ಕವರು ಇಂಥಹ ‘ಆಗಲ್ಲ ಆಗ್ತಿಲ್ಲ’ ಅನ್ನೋ ಪದಗಳನ್ನ ಕೇಳಿದಾಗ ಹೇಳುತ್ತಿದ್ದ
‘ಕಳ್ಳಂಗೊಂದು ಪಿಳ್ಳೆ ನೆವ’ ಅನ್ನೋ ಗಾದೆ ಇತ್ತೀಚಿಗೆ ಪದೇ ಪದೇ ನೆನಪಾಗುತ್ತದೆ.
ಸಮಯವೇ ಸಿಗ್ತಿಲ್ಲ ಎನು ಮಾಡಲಿ? ಅನ್ನುವ ಮಾತನ್ನು ಮನಸು ಬುದ್ಧಿಗೆ, ಬುದ್ಧಿ ಮನಸಿಗೆ ಆಗೀಗ ಹೇಳಿಕೊಳ್ಳುತ್ತಲೇ
ಪ್ರೌಡಶಾಲಾ ದಿನಗಳಲ್ಲಿ ಭೂಗೋಳ ಮತ್ತು ಕನ್ನಡ ಪಾಠ ಮಾಡುತ್ತಿದ್ದ ಲಕ್ಷ್ಮಣ್ ಸರ್ ‘ಸಮಯ ಯಾರಿಗೂ ಈ ತನಕ ಸಿಕ್ಕಿಲ್ಲ,
ಮಾಡ್ಕೋಬೇಕು, ಏನಾದ್ರೂ ಕಲೀಬೇಕು, ಸಾಧಿಸಬೇಕು, ಬೇಕು ಅಂದ್ರ!’ ಅಂತ ಹೇಳತಿದ್ದುದು ಕೂಡ ಇಂಥ ಸಂದರ್ಭದಲ್ಲಿ
ನೆನಪಾಗುತ್ತದೆ.
ಜೊತೆಗೆ ಈ ಸೋಶಿಯಲ್ ಮೀಡಿಯಾ ಅನ್ನುವ ವರರೂಪಿ ಶಾಪದ ಛಾಯೆಯಿಂದ ದೂರ ಉಳಿಯಬೇಕೆಂದರೂ ಆಗದು. ಅಲ್ಲೂ
ಕೆಲವರಂತೂ ಅದೆಷ್ಟು ಚಂದ ಬರೆಯುತ್ತಾರೆಂದರೆ, ಬರೀ ಎರಡೇ ಸಾಲುಗಳಲ್ಲಿ ಸೀದಾ ಮನದ ಬಾಗಿಲ ಕದ ತಟ್ಟಿಬಿಡುತ್ತಾರೆ. ಹೊಟ್ಟೆಕಿಚ್ಚು
ಹುಟ್ಟಿಸುತ್ತಾರೆ. ಮರೆತೇಹೋದಂತಿರುವ ಬರವಣಿಗೆಯ ಕಡೆಗೆ ಗಮನ ಕೊಡುವಂತೆ ಮಾಡುತ್ತಾರೆ. ಒಂದೂ ಮಾತಾಡದೆ ಸಾವಿರ
ವಿಷಯಗಳ ಹಚ್ಚೆ ಹಾಕಿಬಿಡುತ್ತಾರೆ.
ಇತ್ತೀಚಿಗೆ ಅಂತಹುದೇ ಒಂದು ಫೇಸ್ಬುಕ್ ಖಾತೆಯ ಪೋಸ್ಟುಗಳ ಮಾಯೆಗೆ ನಾನು ಒಳಗಾಗಿರುವೆ. ಬೆಟ್ಟದ ಹೂವು ಎಂಬ ಹೆಸರಿನಿಂದ
ಬರೆಯುವ ಇವರು ಅವಳೋ/ ಅವನೋ ಗೊತ್ತಿಲ್ಲ. ಹಿಂದಿ, ಉರ್ದು ಪದ್ಯಗಳ ಸಾಲುಗಳನ್ನು ತುಂಬಾ ಸುಂದರವಾಗಿ
ಅನುವಾದಿಸುತ್ತಾರೆ.
ಒಮ್ಮೆ ಓದಿದರೆ ಆಯ್ತು, ಮತ್ತೆ ನಾವೇ ಹುಡುಕಿ ಹೋಗಿ ಓದುವಷ್ಟು ಬೆಚ್ಚಗಿರುತ್ತವೆ ಆ ಅನುವಾದಗಳು, ಜೊತೆಗೆ ಅವರೂ ಆಗೀಗ
ಅವರ ಸ್ವಂತದ ಕವಿತೆಗಳನ್ನೂ ಪೋಸ್ಟ್ ಮಾಡುತ್ತಾರೆ. ಕೆಲವೊಮ್ಮೆ ಹೇಳದೆ ಕೇಳದೆ ಫೇಸ್ಬುಕ್ ಗೆ ರಜೆ ಹಾಕಿ ನಾಪತ್ತೆಯಾಗುತ್ತಾರೆ.
ಇಂಥಹ ಹಲವು ಅನಾಮಿಕ, ಅನಾಮಧೇಯ ಅಕೌಂಟ್ ಗಳು ಚಂದದ ಪದ್ಯಗಳನ್ನು ಪೋಸ್ಟ್ ಮಾಡುತ್ತವೆ. ಆದರೆ ನನಗೆ ಬರೆಯಲು
ಹಚ್ಚಿದ್ದು ಮಾತ್ರ ಈ ಬೆಟ್ಟದ ಹೂವು.
ಅವರ ಪೋಸ್ಟ್ಗಳಿಂದಾಗಿ ನಾನು ಗುಲ್ಜಾರ್ ರನ್ನು ಓದಲು ಶುರು ಮಾಡಿದೆ, ಮತ್ತೆ ಆಗೊಮ್ಮೆ ಈಗೊಮ್ಮೆ ಅವರ ಕವಿತೆ, ನುಡಿ,
ಶಾಯರಿ, ಗಝಲ್ಗಳ ಭಾವಾನುವಾದ ಮಾಡಲು ಪ್ರಯತ್ನಿಸಿದೆ. ನಿಮ್ಮ ಓದಿಗೆ ಈ ಸಂಚಿಕೆಯಲ್ಲಿ ನಾನು ಅಂತರ್ಜಾಲದಲ್ಲಿ ಓದಿ
ಭಾವಾನುವಾದ ಮಾಡಿರುವ ಕೆಲವನ್ನು ಇಲ್ಲಿ ಲಗತ್ತಿಸಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ.
ನಿಮ್ಮ
ಅಮಿತಾ ರವಿಕಿರಣ್

ತುಟಿಗಳಾಡಿದ ಪದಗಳಾಗಿದ್ದರೆ
ತಪ್ಪು ಹುಡುಕಬಹುದಿತ್ತು ಆದರೆ
ಅದೆಲ್ಲ ಹೇಳಿದ್ದು ಆಕೆಯ ಕಣ್ಣಾಲಿಗಳು.


ಕಣ್ಣುಗಳಾಗಿದ್ದಕ್ಕೆ ಸತ್ಯ ಹೇಳಿಬಿಟ್ಟವು,
ತುಟಿ ಉಸುರಿದ ಮಾತುಗಳಿಗಾಗಿ
ದೇವರ ಆಣೆ ಇತ್ತ ಮೇಲೂ
ವಾದ ವಿವಾದ ನಡೆಯುತ್ತವೆ ಇಲ್ಲಿ..


ಹೂವಿನಂತೆ ನಿನ್ನ ತುಟಿ ಅರಳಿ,
ನಿನ್ನ ದನಿಯ ಕಂಪು ಘಮಘಮಿಸಲಿ


ಈ ಒಂಟಿತನ ಎಷ್ಟು ಹಿತವಾಗಿದೆ ಗೊತ್ತಾ,
ಸಾವಿರ ಪ್ರಶ್ನೆಗಳ ಕೇಳುತ್ತಾದರೂ
ಉತ್ತರ ಬೇಕೆಂಬ ಹಠ ಮಾಡುವುದಿಲ್ಲ.


ಈ ಜಗದ ಕಣ್ಣಗೆ ನಾನು ವಿಚಿತ್ರ,
ವಿಕ್ಷಿಪ್ತಳೂ ಹೌದು
ಕಾರಣ, ನನಗೆಲ್ಲವೂ ನೆನಪಿರುತ್ತದೆ.


ನಿನ್ನಾ ಎಷ್ಟು ನಂಬ್ತೀನಿ ಗೊತ್ತಾ?
ತುಟಿ ಉಸುರುವಾಗ,
ಮನದ ತುಂಬಾ, ಸಂಶಯದ ಬಿಳಿಲುಗಳಲ್ಲಿ
ಭಯ ಜೋಕಾಲಿಯಾಡುತ್ತಿರುತ್ತದೆ.


ಪ್ರೀತಿ ಎಂದರೇನು?
ಎಂಬುದಷ್ಟೇ ನನ್ನ ಪ್ರಶ್ನೆಯಾಗಿತ್ತು.
ಅಸಫಲ ಇಚ್ಛೆಯ ನಿಟ್ಟುಸಿರು ಅನ್ನುವ ಉತ್ತರ
ನೀ ತೊರೆದ ಗಳಿಗೆ ತಿಳಿಸಿತು.


ಏನಾದರೊಂದು
ಮಾತಾಡುತ್ತಲೇ ಇರು,
ನೀ ಸುಮ್ಮನಿದ್ದರೆ
ಜನ ಕೇಳುತ್ತಾರೆ!


ಫೋಟೋ ಕವನ ಸಂಚಿಕೆ ೨

ಹನಿಗಳು ಮತ್ತು ಹಾದಿಗಳು

ಕಾವ್ಯ ಕಟ್ಟುವ ಕೆಲಸ ಬಹಳ ಮೌಲಿಕವಾದದ್ದು. ಕವಿತೆಗಳು  ಏಕಾಂತದ ಕವಿತೆಗಳಾಗಿರಬಹುದು, ಲೋಕಾಂತದ ಕವಿತೆಗಳಾಗಿರಬಹುದು.  ಭಾವನಾತ್ಮಕ,  ಉತ್ಪ್ರೇಕ್ಷಿತ, ವೈಚಾರಿಕ, ವರ್ಣನಾತ್ಮಕ, ಪ್ರಾಮಾಣಿಕ ಯಾವುದೂ ಆಗಿರಬಹುದು. ಬಂಡಾಯ, ಖಂಡನೆ, ನೋವು, ವಿಡಂಬನೆ, ಹಾಸ್ಯ , ಶೃಂಗಾರ, ಪ್ರೀತಿ ವಿರಹ, ವಿದಾಯ, ವೇದನೆ, ಭಕ್ತಿ, ಬಿನ್ನಹದ ಕೇಂದ್ರಗಳನ್ನು ಹೊಂದಿರಬಹುದು. ಹೋಲಿಕೆ, ವೈರುಧ್ಯಗಳ ಹಾದಿಯನ್ನು ತುಳಿಯಬಹುದು. ಓದುಗರಿಗೆ ಲೌಕಿಕ, ಅಲೌಕಿದ ಅನುಭಗಳನ್ನು ನೀಡಬಲ್ಲದು.

ಕಾವ್ಯ ಓದುಗರನ್ನು ಮುದಗೊಳಿಸಬಲ್ಲವು. ಚಿಂತನೆಗೆ ತಳ್ಳಬಹುದು. ಭಾವ ಪರವಶತೆಯ ಅನುಭವ
ನೀಡಬಲ್ಲವು, ಸುಖಿಸುವಂತೆ ಮಾಡಬಲ್ಲವು, ನಗಿಸಬಲ್ಲವು, ಅಳಿಸಬಲ್ಲವು, ಅಚ್ಚರಿಗೆ ತಳ್ಳಬಹುದು, ಎಚ್ಚರಿಕೆಯನ್ನು ನೀಡಬಲ್ಲವು. ಜೀವನ ಪ್ರೀತಿಯನ್ನು ಹೆಚ್ಚಿಸಬಲ್ಲವು. ಕಾವ್ಯಕ್ಕೆ ಇರುವ ಹರವು ವಿಸ್ತಾರವಾದದ್ದು.ಅವುಗಳು ಹುಟ್ಟುವ ಸಮಯವನ್ನು ಕವಿ ಸಮಯ ಎನ್ನುತ್ತಾರೆ.

ವಾರದ ಛಾಯಾಗ್ರಾಹಕ ರಾಮಶರಣ ಲಕ್ಷ್ಮೀನಾರಾಯಣ ಮತ್ತು ಕವಿ ಕೇಶವ ಕುಲಕರ್ಣಿ. ಕವಿತ್ವವನ್ನು ಉದ್ದೀಪನಗೊಳಿಸಿ ಒರೆಗೆ ಹಚ್ಚಿರುವುದು  ರಾಮಶರಣರ  ಕ್ಯಾಮರಾ ಹಿಂದಿನ ಕಣ್ಣುಗಳು.  ಕಣ್ಣಿಗೆ ಕಂಡದ್ದನ್ನು ಹೀಗೇ ಸೆರೆಹಿಡಿಯಬೇಕೆನ್ನುವುದು. ಫೋಟಾಗ್ರಫಿ ಪ್ರಿಯರ ಆಸೆ.  ಅಂತಹ ಕ್ಷಣವನ್ನು ಸೆರೆಹಿಡಿದಾಗಿನ ಅದ್ಭುತ  ರೋಮಾಂಚನ ಅವರಿಗೆ ಕಾವ್ಯವನ್ನು ಬರೆದಷ್ಟೇ ಸಂತೋಷ ನೀಡಬಲ್ಲುದು.  ನೋಡಿದಾಗೆಲ್ಲ ಮತ್ತೆ,ಮತ್ತೆ ಅವರಲ್ಲಿ ಸಂತಸವನ್ನು ಹೆಚ್ಚಿಸಿ, ಹೆಮ್ಮೆಯ ಭಾವವನ್ನು ಮೂಡಿಸಬಲ್ಲವು.

ಛಾಯಾಚಿತ್ರ ತೆಗೆಯುವವರು ಒಂದು ಚಿತ್ರದ ಮೂಲಕ ಕೇವಲ ಒಂದು ದೃಶ್ಯವನ್ನು ಒದಗಿಸಿದರು,
ಅದನ್ನು ಕವಿಗಳ ಮುಂದೆ ಹಿಡಿದಾಗ ಕವಿಗೆ ಕಾಣುವ ನೋಟಗಳು ಅನೇಕ. ವಾರದ ವಿಶೇಷ ಕೂಡ
ಅದೇ.

 ರಾಮಶರಣರ ಅಚ್ಚರಿ ತರುವ ನಿಖರತೆ, ನಿಚ್ಚಳತೆ,  ತಾಂತ್ರಿಕತೆ, ಸೌಂದರ್ಯ ಮತ್ತು ಭಾವಗಳನ್ನು ತುಂಬಿದ  ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅವೇ ಚಿತ್ರಗಳು ಕೇಶವರಿಗೆ ಕವಿ ಸಮಯವನ್ನು ಒದಗಿಸಿವೆ.  ಕೆಲವು ಚಿತ್ರಗಳಂತೂ ಕವಿ ಮನಸ್ಸಿನಲ್ಲಿ ಹಲವು ಭಾವಗಳನ್ನು ಹೊಮ್ಮಿಸಲು ಸಮರ್ಥವಾಗಿವೆ.

ರಾಮಶರಣ್‌ ಒಂದೇ ವಿಷಯಕ್ಕೆ ಸಂಬಂಧಿಸಿದಂತ ಹಲವು ಚಿತ್ರಗಳನ್ನು ಒದಗಿಸಿ ಸರಣಿಗೆ ಒಂದು
ಶೀರ್ಷಿಕೆಯನ್ನು ನೀಡಿದ್ದರು. ಅದನ್ನೇ ಇಲ್ಲಿ ನೀಡಿದ್ದೇನೆ. ಕೇಶವ್‌ ಸರಣಿಯ ಒಂದು ಅಥವಾ ಹಲವು ಚಿತ್ರಗಳನ್ನು ಆಯ್ದು ಕವನಗಳನ್ನು ರಚಿಸಿದ್ದಾರೆ. ಇನ್ನೂ ವಿಶೇಷವೆಂದರೆ ತಾವೇ ಪೀಠಿಕೆಯ ಕಿರು ಗವನಗಳನ್ನು ಬರೆಯುತ್ತ ಒಂದು ಚಿತ್ರ ಹೇಗಿರಬೇಕೆಂದು ಹೇಳುತ್ತ ಜೊತೆಗೆ ಚಿತ್ರಕ್ಕೆ ಬರೆದ ಕವನದಲ್ಲಿ ಏನಿರಬಾರದೆಂದೂ ವಿವರಿಸಿದ್ದಾರೆ. ಅದು ಅವರ ಕುಶಲಮತಿ ಪ್ರತಿಭೆಗೆ ಸಾಕ್ಷಿಯಾಗಿದೆ.

ಓದಿರಿ. ಚಿತ್ರಗಳನ್ನು ಕೂಲಂಕುಶವಾಗಿ ಅವಲೋಕಿಸಿ. ಮತ್ತೆ ಓದರಿ. ಮರೆಯದೆ ಕಮೆಂಟಿಸಿ- ಸಂ


ಪೀಠಿಕೆಯ ಕಿರುಗವನಗಳು:

ಒಂದು ಹೈಕುವನ್ನಾದರೂ

ಬರೆಸಿಕೊಳ್ಳದ ಫೋಟೊ

ಫೋಟೋನೇ ಅಲ್ಲ

ಈ ಫೋಟೋದ ಸಂಯೋಜನೆ ಹೇಗೆ

ಎಷ್ಟು ISO

ಎಷ್ಟು ದ್ಯುತಿರಂಧ್ರ

ಎಷ್ಟು ನಾಭಿದೂರ

ಎಷ್ಟು ಸಂಸ್ಕರಣ

ಎಂದು ವಿವರಣೆ ಕೇಳಿದ ದಿನ

ಫೋಟೋದೊಳಗಿನ ಕವಿತೆ

ಸತ್ತುಹೋಗುತ್ತದೆ

ʼಹನಿಗಳು ಸರ್‌ ಹನಿಗಳುʼ ಸರಣಿ: `ಇಬ್ಬನಿಗಳು`

ಜಗದ ಕೊಳೆಯ
ತೊಳೆಯೆ
ಇಳೆಗೆ ಬಂದೇ ಏನೇ
ಇಬ್ಬನಿ?
ರಾತ್ರಿಯೆಲ್ಲ ಬಿಕ್ಕಳಿಸಿ
ಜಾರದೇ ಉಳಿದ ಕಂಬನಿ
ಇಬ್ಬನಿ
ರಾತ್ರಿಯೆಲ್ಲ
ಅಪ್ಪಿತಬ್ಬಿ
ಅಪ್ಪಿತಪ್ಪಿ
ಉಳಿದ ಮುತ್ತಿನ ಹನಿ
ಇಬ್ಬನಿ
ಮುಂಜಾವಿನ ಕೊರಳಿಗೆ
ವಜ್ರದ ಹರಳು
ಇಬ್ಬನಿ
ನೇಸರನ ಸ್ವಾಗತಕೆ
ಥಳಿ ಹೊಡೆದ ನೀರು
ಇಬ್ಬನಿ

ರಾತ್ರಿಯ ಸೆಕೆಗೆ
ಮೂಡಿದ ಬೆವರು
ಇಬ್ಬನಿ
ಪ್ರೇಮಿಯ ಕೂದಲಿನ
ಅಂಚಿಗೆ ಉಳಿದ ಹನಿ
ಇಬ್ಬನಿ
ಕಣ್ಣು ಬಿಟ್ಟ ಮಗು
ಅಮ್ಮನನ್ನು ಕಂಡ ಖುಷಿಯಲ್ಲಿ
ಮೂಡಿದ ಕಣ್ಣಂಚಿನ ಪಸೆ
ಇಬ್ಬನಿ
ಮುಂಜಾವಿನೆದೆಯಿಂದ
    ದು
  ರಿ
ಬೀಳುವ ಹನಿ
ಇಬ್ಬನಿ
೧೦
ಮತ್ತೆ ಬೆಳಗಾಯಿತು
ಮತ್ತೆ ಹೊಸಜೀವ ಬಂದಿತು
ನಿಸರ್ಗದ ಆನಂದ ಬಾಷ್ಪ
ಇಬ್ಬನಿ

೧೧
ರಾತ್ರಿ ಹೊತ್ತು
ಯಾವುದೋ ಕೀಟ ಮಾಡಿದ ಗಾಯಕ್ಕೆ
ಎಲೆ ಮೇಲೆ ಮೂಡಿದ ಗುಳ್ಳೆ
ಇಬ್ಬನಿ
೧೨
ಅನಂತದಲಿ ಬಿಂದು
ಬಿಂದುವಿನಲಿ ಅನಂತ
ಒಂದು ಮಂಜಿನ ಹನಿ
ಯೊಳಗೊಂದು ಬ್ರಹ್ಮಾಂಡ
೧೩
ಎಲೆಯ ಮೇಲೆ
ಮುಂಜಾವಿನ
ಮುತ್ತಿನ ಗುರುತು
ಸ್ವಲ್ಪ ಹೊತ್ತು
ಹಾಗೇ ಇರಲಿ ಬಿಡು
೧೪
ಪದಗಳಲ್ಲಿ
ಹುಡುಕಿದರೂ ಸಿಗದ ಕವಿತೆ
ಪುಟ್ಟ ಹುಲ್ಲಿನೆಳೆಯ ಮೇಲೆ
ಮುಂಜಾವಿನ ಮಂಜಿನೊಳಗೆ
ನಗುತ್ತ ಕಣ್ಬಿಡುತ್ತಿತ್ತು

*****

ʼಹೋದಲೆಲ್ಲ ಹಾದಿ ʼ ಸರಣಿ: 

೧. ಬೆಂಚಿನ ಸ್ವಗತ

ಮುಂಜಾವಿನ ಬಾಗಿಲು ಅದೇ ತೆರೆದಿತ್ತು
ಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆ
ಬಂದು ನನ್ನ ಮೇಲೆ ಕೂತರು ಇಬ್ಬರು
ವಯಸ್ಸು ಎಪ್ಪತ್ತೋ ಎಂಬತ್ತೋ
ಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನು
ಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ
‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.
ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು
ಕಾಲೇಜಿಗೆ ಚಕ್ಕರ್
ನನ್ನ ಮೇಲೆ ಹಾಜರ್
ಕಿಲಿಕಿಲಿ ನಗು
ಚಿಲಿಪಿಲಿ ಮಾತು
ಕದ್ದು ಕದ್ದು ಮುತ್ತು
ಹುಸಿಮುನಿಸು
ಅಳುನಟನೆ
ತುಂಟನಗು
‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು
‘ಈ ಬೆಂಚು ಇಲ್ಲಿರುವವರೆಗೂ,’ ಎಂದ
ಅವನ ಕೆನ್ನೆಗೊಂದು ಮುತ್ತು ಸಿಕ್ಕಿತು
ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದು
ಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನು
ಇವನ ಡಬ್ಬ ಅವಳು ಹಂಚಿಕೊಂಡರು
ಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳು
ಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ
‘ನಮ್ಮ ಬದುಕು ಈ ಬೆಂಚಿನಂತೆ
ಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರು
ಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು
ಈಗ ರಾತ್ರಿಯ ನೀರವಮೌನದಲ್ಲಿ
ಬೀದಿದೀಪಗಳ ಮಬ್ಬುಬೆಳಕಲ್ಲಿ
ಒಂಟಿಯಾಗಿ
ದಿನದ ನೂರಾರು ಕತೆಗಳ ನೆನೆಯುತ್ತ
ದಿನದ ಸಾವಿರಾರು ಕವನಗಳ ಕನವರಿಸುತ್ತ
ನಿದ್ದೆ ಬರದೇ
ಕೂತೇ ಇದ್ದೇನೆ

೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ

ಕಲ್ಲು ಮುಳ್ಳಿನ ಹಾದಿಯ
ನೆನಪುಗಳು ಕಳೆದಿಲ್ಲ
ಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳು
ಚುಚ್ಚಿಸಿಕೊಂಡ ಅಪಮಾನಗಳು

ಇಲ್ಲಿ ಎಲ್ಲ ಒಳ್ಳೆಯವರು
ಎಂಬ ನಂಬಿಕೆಯಲ್ಲಿ
ಹಲ್ಲು ಕೊರೆದ ಹಾದಿಯಲ್ಲಿ
ಜೊತೆಗೆ ಬಂದವರು
ನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರು

ಹೂವಿನ ದಾರಿಯ ಮೇಲೆ
ನಡೆಸುವೆ ಎಂದು ಭರವಸೆ ಕೊಟ್ಟವರು
ಹೂವಿನ ಜೊತೆ ಮುಳ್ಳೂ ಇರುತ್ತದೆ
ಎಂದು ಹೇಳುವುದನ್ನು ಮರೆತರು
ನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲ

ಅಲ್ಲಿಯೂ ಸಲ್ಲಲಿಲ್ಲ
ಇಲ್ಲಿಗೂ ಒಗ್ಗಿಕೊಳ್ಳಲಿಲ್ಲ
ದೇಶಬಿಟ್ಟ ಪರದೇಸಿ
ಕಲ್ಲಿಗಿಂತ ಕಲ್ಲಾಗಿ
ಪರಸಿಕಲ್ಲಿನ ಹಾದಿಯ ಮೇಲೆ
ಅಂಗಡಿ ಅಂಗಡಿಗಳಲ್ಲಿ
ನಡೆವ ಜನರ ಮುಖಗಳಲ್ಲಿ
ಸುಖ ಸಂತೋಷ ಹುಡುಕುತ್ತೇನೆ
ಹಾದಿಹೋಕ ನಾನು
ಹಾದಿಹೋಕನಾಗಿಯೇ ಉಳಿದಿದ್ದೇನೆ

ವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆ
ಹುಲ್ಲುಹಾಸಿನ ಹಾದಿಯ
ಫೋಟೋ ತೆಗೆದು
ಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆ

ಹೈವೇಯ ಸೈನ್-ಬೋರ್ಡುಗಳು
ಈಗ ನನ್ನ ಮಿತ್ರರು
ನನ್ನ ಕಾರಿನ ದಾರಿ ಹೇಳಿಕೊಡುವವರು
ಹಗಲು ಸಂಜೆ ಅದೇ ಹಾದಿ
ಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ
*
ಕಾಲ ಮಾಗುತಿದೆ
ದಾರಿ ಸವೆಯುತಿದೆ
ತಾಣದ ಮರೀಚಿಕೆ
ಹಾಗೇ ಉಳಿದಿದೆ
ಹಾಗೇ ಉಳಿದರೇ ಬದುಕೆ?