ಕವನ-ಭಾವಯಾನ

ಬರೆಯಬೇಕು!

ಬರೆಯಲೇಬೇಕು ಹಾಗೆಂದು ಮಾಡಿಟ್ಟುಕೊಂಡ ವಿಷಯಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಲೇ ಇದೆ ಆದರೆ ಬರೆಯಲು ಮಾತ್ರ
ಆಗುತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯಲ್ಲಿ ಇದ್ದ ಅಕ್ಕವರು ಇಂಥಹ ‘ಆಗಲ್ಲ ಆಗ್ತಿಲ್ಲ’ ಅನ್ನೋ ಪದಗಳನ್ನ ಕೇಳಿದಾಗ ಹೇಳುತ್ತಿದ್ದ
‘ಕಳ್ಳಂಗೊಂದು ಪಿಳ್ಳೆ ನೆವ’ ಅನ್ನೋ ಗಾದೆ ಇತ್ತೀಚಿಗೆ ಪದೇ ಪದೇ ನೆನಪಾಗುತ್ತದೆ.
ಸಮಯವೇ ಸಿಗ್ತಿಲ್ಲ ಎನು ಮಾಡಲಿ? ಅನ್ನುವ ಮಾತನ್ನು ಮನಸು ಬುದ್ಧಿಗೆ, ಬುದ್ಧಿ ಮನಸಿಗೆ ಆಗೀಗ ಹೇಳಿಕೊಳ್ಳುತ್ತಲೇ
ಪ್ರೌಡಶಾಲಾ ದಿನಗಳಲ್ಲಿ ಭೂಗೋಳ ಮತ್ತು ಕನ್ನಡ ಪಾಠ ಮಾಡುತ್ತಿದ್ದ ಲಕ್ಷ್ಮಣ್ ಸರ್ ‘ಸಮಯ ಯಾರಿಗೂ ಈ ತನಕ ಸಿಕ್ಕಿಲ್ಲ,
ಮಾಡ್ಕೋಬೇಕು, ಏನಾದ್ರೂ ಕಲೀಬೇಕು, ಸಾಧಿಸಬೇಕು, ಬೇಕು ಅಂದ್ರ!’ ಅಂತ ಹೇಳತಿದ್ದುದು ಕೂಡ ಇಂಥ ಸಂದರ್ಭದಲ್ಲಿ
ನೆನಪಾಗುತ್ತದೆ.
ಜೊತೆಗೆ ಈ ಸೋಶಿಯಲ್ ಮೀಡಿಯಾ ಅನ್ನುವ ವರರೂಪಿ ಶಾಪದ ಛಾಯೆಯಿಂದ ದೂರ ಉಳಿಯಬೇಕೆಂದರೂ ಆಗದು. ಅಲ್ಲೂ
ಕೆಲವರಂತೂ ಅದೆಷ್ಟು ಚಂದ ಬರೆಯುತ್ತಾರೆಂದರೆ, ಬರೀ ಎರಡೇ ಸಾಲುಗಳಲ್ಲಿ ಸೀದಾ ಮನದ ಬಾಗಿಲ ಕದ ತಟ್ಟಿಬಿಡುತ್ತಾರೆ. ಹೊಟ್ಟೆಕಿಚ್ಚು
ಹುಟ್ಟಿಸುತ್ತಾರೆ. ಮರೆತೇಹೋದಂತಿರುವ ಬರವಣಿಗೆಯ ಕಡೆಗೆ ಗಮನ ಕೊಡುವಂತೆ ಮಾಡುತ್ತಾರೆ. ಒಂದೂ ಮಾತಾಡದೆ ಸಾವಿರ
ವಿಷಯಗಳ ಹಚ್ಚೆ ಹಾಕಿಬಿಡುತ್ತಾರೆ.
ಇತ್ತೀಚಿಗೆ ಅಂತಹುದೇ ಒಂದು ಫೇಸ್ಬುಕ್ ಖಾತೆಯ ಪೋಸ್ಟುಗಳ ಮಾಯೆಗೆ ನಾನು ಒಳಗಾಗಿರುವೆ. ಬೆಟ್ಟದ ಹೂವು ಎಂಬ ಹೆಸರಿನಿಂದ
ಬರೆಯುವ ಇವರು ಅವಳೋ/ ಅವನೋ ಗೊತ್ತಿಲ್ಲ. ಹಿಂದಿ, ಉರ್ದು ಪದ್ಯಗಳ ಸಾಲುಗಳನ್ನು ತುಂಬಾ ಸುಂದರವಾಗಿ
ಅನುವಾದಿಸುತ್ತಾರೆ.
ಒಮ್ಮೆ ಓದಿದರೆ ಆಯ್ತು, ಮತ್ತೆ ನಾವೇ ಹುಡುಕಿ ಹೋಗಿ ಓದುವಷ್ಟು ಬೆಚ್ಚಗಿರುತ್ತವೆ ಆ ಅನುವಾದಗಳು, ಜೊತೆಗೆ ಅವರೂ ಆಗೀಗ
ಅವರ ಸ್ವಂತದ ಕವಿತೆಗಳನ್ನೂ ಪೋಸ್ಟ್ ಮಾಡುತ್ತಾರೆ. ಕೆಲವೊಮ್ಮೆ ಹೇಳದೆ ಕೇಳದೆ ಫೇಸ್ಬುಕ್ ಗೆ ರಜೆ ಹಾಕಿ ನಾಪತ್ತೆಯಾಗುತ್ತಾರೆ.
ಇಂಥಹ ಹಲವು ಅನಾಮಿಕ, ಅನಾಮಧೇಯ ಅಕೌಂಟ್ ಗಳು ಚಂದದ ಪದ್ಯಗಳನ್ನು ಪೋಸ್ಟ್ ಮಾಡುತ್ತವೆ. ಆದರೆ ನನಗೆ ಬರೆಯಲು
ಹಚ್ಚಿದ್ದು ಮಾತ್ರ ಈ ಬೆಟ್ಟದ ಹೂವು.
ಅವರ ಪೋಸ್ಟ್ಗಳಿಂದಾಗಿ ನಾನು ಗುಲ್ಜಾರ್ ರನ್ನು ಓದಲು ಶುರು ಮಾಡಿದೆ, ಮತ್ತೆ ಆಗೊಮ್ಮೆ ಈಗೊಮ್ಮೆ ಅವರ ಕವಿತೆ, ನುಡಿ,
ಶಾಯರಿ, ಗಝಲ್ಗಳ ಭಾವಾನುವಾದ ಮಾಡಲು ಪ್ರಯತ್ನಿಸಿದೆ. ನಿಮ್ಮ ಓದಿಗೆ ಈ ಸಂಚಿಕೆಯಲ್ಲಿ ನಾನು ಅಂತರ್ಜಾಲದಲ್ಲಿ ಓದಿ
ಭಾವಾನುವಾದ ಮಾಡಿರುವ ಕೆಲವನ್ನು ಇಲ್ಲಿ ಲಗತ್ತಿಸಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ.
ನಿಮ್ಮ
ಅಮಿತಾ ರವಿಕಿರಣ್

ತುಟಿಗಳಾಡಿದ ಪದಗಳಾಗಿದ್ದರೆ
ತಪ್ಪು ಹುಡುಕಬಹುದಿತ್ತು ಆದರೆ
ಅದೆಲ್ಲ ಹೇಳಿದ್ದು ಆಕೆಯ ಕಣ್ಣಾಲಿಗಳು.


ಕಣ್ಣುಗಳಾಗಿದ್ದಕ್ಕೆ ಸತ್ಯ ಹೇಳಿಬಿಟ್ಟವು,
ತುಟಿ ಉಸುರಿದ ಮಾತುಗಳಿಗಾಗಿ
ದೇವರ ಆಣೆ ಇತ್ತ ಮೇಲೂ
ವಾದ ವಿವಾದ ನಡೆಯುತ್ತವೆ ಇಲ್ಲಿ..


ಹೂವಿನಂತೆ ನಿನ್ನ ತುಟಿ ಅರಳಿ,
ನಿನ್ನ ದನಿಯ ಕಂಪು ಘಮಘಮಿಸಲಿ


ಈ ಒಂಟಿತನ ಎಷ್ಟು ಹಿತವಾಗಿದೆ ಗೊತ್ತಾ,
ಸಾವಿರ ಪ್ರಶ್ನೆಗಳ ಕೇಳುತ್ತಾದರೂ
ಉತ್ತರ ಬೇಕೆಂಬ ಹಠ ಮಾಡುವುದಿಲ್ಲ.


ಈ ಜಗದ ಕಣ್ಣಗೆ ನಾನು ವಿಚಿತ್ರ,
ವಿಕ್ಷಿಪ್ತಳೂ ಹೌದು
ಕಾರಣ, ನನಗೆಲ್ಲವೂ ನೆನಪಿರುತ್ತದೆ.


ನಿನ್ನಾ ಎಷ್ಟು ನಂಬ್ತೀನಿ ಗೊತ್ತಾ?
ತುಟಿ ಉಸುರುವಾಗ,
ಮನದ ತುಂಬಾ, ಸಂಶಯದ ಬಿಳಿಲುಗಳಲ್ಲಿ
ಭಯ ಜೋಕಾಲಿಯಾಡುತ್ತಿರುತ್ತದೆ.


ಪ್ರೀತಿ ಎಂದರೇನು?
ಎಂಬುದಷ್ಟೇ ನನ್ನ ಪ್ರಶ್ನೆಯಾಗಿತ್ತು.
ಅಸಫಲ ಇಚ್ಛೆಯ ನಿಟ್ಟುಸಿರು ಅನ್ನುವ ಉತ್ತರ
ನೀ ತೊರೆದ ಗಳಿಗೆ ತಿಳಿಸಿತು.


ಏನಾದರೊಂದು
ಮಾತಾಡುತ್ತಲೇ ಇರು,
ನೀ ಸುಮ್ಮನಿದ್ದರೆ
ಜನ ಕೇಳುತ್ತಾರೆ!


One thought on “ಕವನ-ಭಾವಯಾನ

  1. ಈ ವಾರದ ಅಂಕಣದ ಶೀರ್ಷಿಕೆ ಹೇಳುವಂತೆ ಭಾವ ಪೂರ್ಣ ಲಹರಿಗಳು ಅಮಿತ ಅವರು ಮಾರುಹೋದ ಮತ್ತು ಅವರೇ ಬರೆದ ಕವನಗಳು. ಕೊನೆಯಲ್ಲಿ ಕೊಟ್ಟ ಅವರದೇ ಸುಂದರ ಫೋಟೋದಲ್ಲಿಯ ‘ಕವಿತಾ’ ಳ ಸೆರಗಿನ ತುದಿಯಲ್ಲಿ ಎಳೆದುಕೊಂಡು ಹೋಗುತ್ತಿವೆ ಆ ಸಾಲುಗಳು. ಆಕೆಯ ಮರಳಲ್ಲಿ ಮೂಡಿಯೂ ಕಾಣಿಸದ ಹಗುರಾದ ಹೆಜ್ಜೆಯ ಗುರುತುಗಳಂತೆ ಮನದಲ್ಲಿ ಒತ್ತಿವೆ. ಎಲ್ಲವೂ ಸುಂದರ. ಮುಂದಿನ ಅಲೆಗಾಗಿ ಕಾಯುವೇ!

    Like

Leave a comment

This site uses Akismet to reduce spam. Learn how your comment data is processed.