ಲಂಡನ್ನಿನಲ್ಲಿ ಕನ್ನಡ ಡಿಂಡಿಮ – ಕನ್ನಡ ಬಳಗ ಯು ಕೆ-40 ರ ಸಂಭ್ರಮದ ಝಲಕ್ ಗಳು!

ಮಹಾರಾಜರು ತಮ್ಮ ಸಂದೇಶದಲ್ಲಿ ೧೯೩೯ರಲ್ಲಿ ಅಂದಿನ ಯುವರಾಜರು ಲಂಡನ್ನಿನಲ್ಲಿ ದಸರಾ ಹಬ್ಬವನ್ನು ಆಚರಿಸಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ನೆನೆದರು. ಕರ್ನಾಟಕದ ವೈಭವ, ಶ್ರೀಮಂತ ಸಂಸ್ಕೃತಿ, ಲೋಕಕ್ಕೆ ಎಂದೆಂದಿಗೂ ಮಾದರಿಯಾದ ಬಸವ ತತ್ವ, ಸೈದ್ಧಾಂತಿಕ, ವೇದಾಂತಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದರು. ಕನ್ನಡಿಗರು ಈ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇವುಗಳಿಂದ ಪ್ರೇರೇಪಿತರಾಗಿ ಬಾಳಿನ ಎಲ್ಲ ದಿಶೆಗಳಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆದು ಪ್ರಭಾವಶಾಲಿಗಳಾಗಬೇಕೆಂದು ಕರೆ ಕೊಟ್ಟರು. ತದನಂತರ ನಾಡಿನ ಪ್ರಮುಖ ಸಾಹಿತಿಗಳು, ಯು.ಕೆ. ಕನ್ನಡಿಗರು ಬರೆದ ಲೇಖನ, ಕವನಗಳ ಸ್ಮರಣ ಸಂಚಿಕೆ “ಸಂಭ್ರಮ”ವನ್ನು ಬಿಡುಗಡೆ ಮಾಡಿದರು.

ಸಂಭ್ರಮ: ಕನ್ನಡ ಬಳಗ (ಯು.ಕೆ) ಗೆ  ಮಾಣಿಕ್ಯ ಹುಟ್ಟಿದ ಹಬ್ಬ  
ಲೇಖಕರು: ರಾಮಶರಣ ಲಕ್ಷ್ಮೀನಾರಾಯಣ 

ಯುನೈಟೆಡ್ ಕಿಂಗ್ಡಮ್ ನ ಮೊದಲ ಕನ್ನಡ ಸಂಘ ಕನ್ನಡ ಬಳಗ (ಯು.ಕೆ). ೪೦ ವರ್ಷಗಳ ಹಿಂದೆ ಐವರು ದಂಪತಿಗಳು ದೀಪಾವಳಿಯ ಶುಭದಿನದಂದು ಕನ್ನಡ ಸಂಘವೊಂದರ ದೀಪ ಬೆಳೆಗಿದರು. ಅದು ಇಂದಿಗೂ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರ ಮನೆ-ಮನಗಳಲ್ಲಿ ಬೆಳಗುತ್ತಿದೆ. ಈ ವಾರಾಂತ್ಯ (ಸಪ್ಟೆಂಬರ್ ೩೦, ಅಕ್ಟೋಬರ್ ೧) ಕನ್ನಡ ಬಳಗ ತನ್ನ ಹುಟ್ಟುಹಬ್ಬ “ಸಂಭ್ರಮ”ವನ್ನು ವಿಜೃಂಭಣೆಯಿಂದ ಲಂಡನ್ ನಗರದಲ್ಲಿ ಸಂಸ್ಥಾಪಕ ಹಿರಿ ಜೀವಿಗಳೊಂದಿಗೆ, ನಾಡಿನ ಹಲವು ಮೂಲೆಗಳಿಂದ ಬಂದ ಎಲ್ಲ ವಯಸ್ಸಿನ ಕನ್ನಡಿಗರೊಂದಿಗೆ ಆಚರಿಸಿದ್ದು  ತನ್ನ ‘ಹಳೆ ಬೇರು, ಹೊಸ ಚಿಗುರು’ ಧ್ಯೇಯ ವಾಕ್ಯಕ್ಕೆ ತಕ್ಕುದಾಗಿತ್ತು. ಈ ಕಾರ್ಯಕ್ರಮವನ್ನು ಯಶಸ್ಸಿಗೆ ಕಾರಣೀಕರ್ತರು, ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್, ಖಜಾಂಚಿ ರಶ್ಮಿ ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ವ್ರತ ಚಿಗಟೇರಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಚಂದ್ರಪ್ಪ, ಆಶೀರ್ವಾದ ಮರ್ವೇ, ರಾಜೀವ ಮೇತ್ರಿ ಹಾಗೂ ಪ್ರವೀಣ್ ತ್ಯಾರಪ್ಪ. ಅಧ್ಯಕ್ಷೆ ಸುಮನಾ ಗಿರೀಶ್, ಗಣ್ಯ ಅತಿಥಿಗಳಾದ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊಫೆಸರ್ ಗುರುರಾಜ ಕರ್ಜಗಿ, ಪತ್ರಕರ್ತರಾದ ಶ್ರೀಯುತ ವಿಶ್ವೇಶ್ವರ ಭಟ್, ರವಿ ಹೆಗಡೆ ಹಾಗೂ ಸ್ವಾಮಿ ಜಪಾನಂದಜಿ ಹಾಗೂ ನೆರೆದ 1500 (ಎರಡು ದಿನಗಳಲ್ಲಿ ಸೇರಿ) ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದರು.  ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಮೃತ ಹಸ್ತದಿಂದ “ಸಂಭ್ರಮ” ಕಾರ್ಯಕ್ರಮವನ್ನು ಬೈರನ್ ಸಭಾಂಗಣದಲ್ಲಿ ಪ್ರಾರಂಭ ಮಾಡಿದರು. 

ಸಾಂಪ್ರದಾಯಿಕ ಭರತನಾಟ್ಯ, ಕೂಚಿಪುಡಿ ನೃತ್ಯಗಳಿಂದ ಯು.ಕೆ ಕನ್ನಡಿಗರ ಕಲಾಪ್ರದರ್ಶನ ಪ್ರಾರಂಭವಾಯಿತು. ‘ಬಾರಿಸು ಕನ್ನಡ ಡಿಂಡಿಮವ’ ಎಂಬ ವಿಶಿಷ್ಟ ನೃತ್ಯ ರೂಪಕ, ದರ್ಶಕರಿಗೆ ಶತಮಾನಗಳ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿಗಳನ್ನು ಮನಮೋಹಕವಾಗಿ ಬಣ್ಣಿಸಿತು. ಕನ್ನಡ ಬಳಗ ಚಿಣ್ಣರಲ್ಲಿ ಕನ್ನಡವನ್ನು ಕಲಿಸಿ, ಬೆಳೆಸುವ ಶ್ಲಾಘನೀಯ ಕೆಲಸವನ್ನು ‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಮಾಡುತ್ತಲೇ ಬಂದಿದೆ. ಈ ಮಕ್ಕಳು ಕಿರು ನಾಟಕ, ಹಾಡುಗಳ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದರು. ಪ್ರೊಫೆಸರ್ ಗುರುರಾಜ ಕರ್ಜಗಿಯವರು ಮಾನವನಿಗೆ ನಂಬಿಕೆ ಎಷ್ಟು ಮುಖ್ಯ, ಏಕೆ ಬೇಕು ಎಂಬ ಮನಮುಟ್ಟುವ ವಿವರಣೆಯಿಂದ , ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಈ ವಿದ್ವತ್ಪೂರ್ಣ ಭಾಷಣದ ನಂತರ ಖ್ಯಾತ ಗಾಯಕ ಶ್ರೀ ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನದಿಂದ ನೆರೆದವರ ಮನತಣಿಸಿ, ಸಭಿಕರೊಡನೆ ಹೆಜ್ಜೆ ಹಾಕಿ ಕುಣಿಸಿದರು.(ಇದರ ಬಗ್ಗೆ ರಮ್ಯ ಭಾದ್ರಿ ಬರೆದ ವಿಸ್ತೃತ ಲೇಖನ ಕೆಳಗೆ ಕೊಟ್ಟಿದೆ.)

ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್ ಶೈರ್ ಕನ್ನಡ ಬಳಗದ ಗಾಯಕ ವೃಂದ ಪ್ರಸ್ತುತ ಪಡಿಸಿದ ಚಿರನೂತನ ‘ನಿತ್ಯೋತ್ಸವ’, ನಾಡ ಭಕ್ತಿ ಉಕ್ಕಿಸುವ ‘ಅಪಾರ ಕೀರ್ತಿ’ ಚಿತ್ರಗೀತೆಗಳು ಸಭಿಕರನ್ನು ಕನ್ನಡತೆಯ ಭಾವನೆಯಲ್ಲಿ ತೇಲಿಸಿದವು. ಗುರುಪ್ರಸಾದ್ ಪಟ್ವಾಲ್ ಇಲ್ಲಿಯೇ ತರಬೇತಿ ಕೊಟ್ಟು ಬೆಳೆಸಿದ ತಂಡ ಪ್ರದರ್ಶಿಸಿದ ‘ಪಂಚವಟಿ’ ಯಕ್ಷಗಾನ ಕಿರು ಪ್ರಸಂಗ ಕನ್ನಡದ ಜಾನಪದ ಕಲೆಯ ವೈವಿಧ್ಯತೆಯ ಪ್ರದರ್ಶನದೊಂದಿಗೆ, ಯು.ಕೆ ಯಲ್ಲಿ ಈ ಪ್ರಕಾರವನ್ನು ಬೆಳೆಸಿ, ಪ್ರಚಲಿತಗೊಳಿಸುವ ಸಾಹಸದ ದ್ಯೋತಕವಾಗಿತ್ತು. ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಕನ್ನಡ ಬಳಗದ ಕಾರ್ಯವನ್ನು ಶ್ಲಾಘಿಸುತ್ತ, ಬಳಗ ನೂರ್ಕಾಲ ಬಾಳಲಿ, ಕನ್ನಡದ ಬಾವುಟವನ್ನು ವಿದೇಶಿ ನೆಲದಲ್ಲಿ ಹಾರಿಸಲಿ, ಸಾಂಕೇತಿಕವಾಗಿ ಕನ್ನಡದ ಸೀಮೆಯನ್ನು ಕರ್ನಾಟಕದಿಂದಾಚೆ ವಿಸ್ತರಿಸುತ್ತಿರಲಿ ಎಂದು ಆಶಿಸಿದರು. ವಿಶ್ವವಾಣಿಯ ಪ್ರವರ್ತಕರೂ, ಪ್ರಧಾನ ಸಂಪಾದಕರೂ ಆದ ಶ್ರೀ ವಿಶೇಶ್ವರ ಭಟ್ಟರು, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಅನಿವಾಸಿ ಕನ್ನಡಿಗ ಸಂಘಗಳ ಮಹತ್ವ, ಇತರ ಭಾಷಿಕರಿಂದ ನಾವು ಮಾತೃ ಭಾಷೆಯ ಉಳಿವಿಗೆ, ಪ್ರಸಾರಕ್ಕೆ ಕಲಿಯಬೇಕಾದ ವಿಷಯಗಳನ್ನು ಸುಂದರವಾಗಿ ವಿವರಿಸಿದರು. ಅನ್ಯ ದೇಶಗಳಲ್ಲಿರುವ ಕನ್ನಡ ಸಂಘಗಳ ಅನುಭವಗಳನ್ನು ಹೀರಿ ಕನ್ನಡ ಬಳಗ ಹೇಗೆ ಅಭಿವೃದ್ಧಿಯಾಗಬಹುದು ಎಂದು ವಿಸ್ತರಿಸಿದರು. ಸ್ವಾಮಿ ಜಪಾನಂದಜಿಯವರು ಕನ್ನಡ ಭಾಷೆ ನಶಿಸಬಾರದು, ಬಳಗ ಮಾಡುತ್ತಿರುವ ಕಾರ್ಯ ಈ ದಿಶೆಯಲ್ಲಿ ಮಹತ್ತರವಾಗಿದೆ; ಈ ಕಾರ್ಯಕ್ಕೆ ಕನ್ನಡಿಗರೆಲ್ಲರೂ ನೂರಾನೆಯ ಬಲ ಸೇರಿಸಿ ಎಂದು ನೆರೆದವರಲ್ಲಿ ಉತ್ಸಾಹ ತುಂಬಿದರು.(ಕೆಳಗೆ ಕೊಟ್ಟ ಶ್ರೀಮತಿ ಶ್ರೀರಂಜಿನಿ ಸಿಂಹ ಅವರ ಲೇಖನದಲ್ಲಿ ಇನ್ನಷ್ಟು ವಿವರಗಳಿವೆ.)  

ಕನ್ನಡ ಬಳಗ ವಿಶೇಷವಾಗಿ ಕನ್ನಡ ಸಾಹಿತ್ಯವನ್ನು ಬೆಂಬಲಿಸುತ್ತ ಬಂದಿದೆ. ಕನ್ನಡ ಬಳಗದ ಸಾಹಿತ್ಯಾಸಕ್ತ ಸದಸ್ಯರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರ ವೇದಿಕೆ ತನ್ನ ಅನಿವಾಸಿ (anivaasi.com) ಜಾಲತಾಣದಲ್ಲಿ ವಾರಕ್ಕೊಮ್ಮೆ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಹಾಗೆಯೇ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ಬರುವ ಸಾಹಿತ್ಯಾಸಕ್ತರನ್ನು ಒತ್ತಟ್ಟಿಗೆ ತಂದು ಸಮಾನಾಂತರ ಸಭೆಗಳನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಈ ಬಾರಿ ಕನ್ನಡದ ಮೂರು ಪ್ರಮುಖ ಆಹ್ವಾನಿತರು ಅನಿವಾಸಿ ಸಭೆಯಲ್ಲಿ ಸಕ್ರಿಯವಾಗಿ ಪಾಲುಗೊಂಡರು. ಶಿಕ್ಷಣ ನೀತಿ, ಮಾಧ್ಯಮಗಳ ಪ್ರಬಲತೆ-ಪ್ರಭಾವ ಎಂಬ ಎರಡು ವಿಷಯಗಳು ಅತಿಥಿಗಳಾದ ಪ್ರೊಫೆಸರ್ ಕರ್ಜಗಿ, ಶ್ರೀಯುತ ರವಿ ಹೆಗಡೆ ಹಾಗೂ ವಿಶ್ವೇಶ್ವರ ಭಟ್ಟರ ಸಮ್ಮುಖದಲ್ಲಿ ಚರ್ಚಿಸಲ್ಪಟ್ಟವು. ಸದಸ್ಯರ ಚರ್ಚೆಯ ನಂತರ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಸಭಿಕರಿಗೆ ಸುದೀರ್ಘವಾಗಿ ತಿಳಿಸಿದ್ದಲ್ಲದೆ, ಆಧುನಿಕ ತಂತ್ರಜ್ಞಾನ ಕಲಿಕೆ, ಮಾಧ್ಯಮ ಹಾಗು ಭಾಷೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಿದರು. ಸಭಿಕರೊಡನೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಮೇಲಿನ ಪ್ರಶ್ಳಿಗಳಿಗೆ ಪಾಂಡಿತ್ಯಪೂರ್ಣ ಉತ್ತರಗಳನ್ನು ನೀಡಿ, ಸಭಿಕರೊಡನೆ ಬೆರೆತು ಸಂಭಾಷಿಸಿದರು. (ಇದರ ಪ್ರತ್ಯೇಕ ವರದಿಯನ್ನು ಕಳೆದ ವಾರದ ’ಅನಿವಾಸಿ’ ಸಂಚಿಕೆಯಲ್ಲಿ ನೋಡಿರಿ)  https://anivaasi.com/2023/10/06/%e0%b2%85%e0%b2%a8%e0%b2%bf%e0%b2%b5%e0%b2%be%e0%b2%b8%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b9%e0%b2%b3/

ಕನ್ನಡ ಬಳಗ ದತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯು.ಕೆ ಹಾಗೂ ಕರ್ನಾಟಕದಲ್ಲಿ ಹಲವಾರು ಸಂಘ-ಸಂಸ್ಥೆಗಳೊಡನೆ ಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಈ ಉದಾತ್ತ ಕಾರ್ಯ,  ಕಾರ್ಯಕ್ರಮದುದ್ದಕ್ಕೂ ಹಲವು ಮಾಧ್ಯಮಗಳಲ್ಲಿ ಬಿತ್ತರವಾಯಿತು. ಎರಡು ದಿನಗಳ ರಂಜಿತ ಕಾರ್ಯಕ್ರಮ ಎಲ್ಲ ವಯೋಧರ್ಮಗಳಿಗೆ ಪೂರಕವಾಗಿದ್ದಲ್ಲದೆ, ಕಲೆತ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದಲ್ಲಿ ಸಂದೇಹವಿಲ್ಲ.  
ಮಹಾರಾಜರಿಗೆ ಸನ್ಮಾನ
ಬಾರಿಸು ಕನ್ನಡ ದಿಂಡಿಮವ’ ನೃತ್ಯ ನಾಟಕದ ಒಂದು ದೃಶ್ಯ

1. 2.ಸುಮಧುರ ಸಂಜೆ ರಾಜೇಶ್ ಕೃಷ್ಣನ್ ನೊಂದಿಗೆ …

ಮಾಣಿಕ್ಯ ಸಂಭ್ರಮ ಗೀತೆ (RTP) 
– ಯೂ ಟ್ಯೂಬ್ ರೆಕಾರ್ಡಿಂಗ್ ಕೃಪೆ: ಆಂಚಲ್ ಅರುಣ್
Photoes: Kannada Balaga UK (except where credited)

3 thoughts on “ಲಂಡನ್ನಿನಲ್ಲಿ ಕನ್ನಡ ಡಿಂಡಿಮ – ಕನ್ನಡ ಬಳಗ ಯು ಕೆ-40 ರ ಸಂಭ್ರಮದ ಝಲಕ್ ಗಳು!

  1. ಪ್ರತಿಕ್ರಿಯೆ ಬರೆದ ಕೇಶವ ಮತ್ತು ಪ್ರಸಾದ ಅವರಿಗೆ ಧನ್ಯವಾದಗಳು. ದುಂಬಾಲೇ ಬೀಳಲಿ, ಗೆದ್ದೆತ್ತಿನ ಬಾಲವೇ ಹಿಡಿಯಲಿ ( ಅಥವಾ ಟ್ವಿಸ್ಟ್ ಮಾಡಲಿ!) ಫಲಿಸುವದು ಕೊಡುವವರ ಮರ್ಜಿಗೆ ಬಿಟ್ಟದ್ದು! ನೀವೂ ಸಹ ಭಾಗವಸಿದ್ದರಿಂದ ಗೊತ್ತೇ ಆದಂತೆ, ಅದೊಂದು ಸಾಮೂಹಿಕ ಪ್ರಯತ್ನ.ಯಶಸ್ವಿಯಾದದ್ದು ಭುವನೇಶ್ವರಿಯ ಕೃಪೆಯಿಂದ, ಆಕೆಯ ಸ್ತುತಿಯನ್ನೂ ಆ RTP ಯಲ್ಲಿ ಪಾಾಡಿದ್ದಾರಲ್ಲವೆ? ಶ್ರೀವತ್ಸ

    Like

  2. ದೇಸಾಯಿಯವರದ್ದು ನಿಜವಾಗಿಯೂ ಸಂಪಾದಕರ ಕೆಲಸ. ಅದೂ ದುಂಬಾಲು ಬಿದ್ದು, ಸಮಯದ ಗಡುವಿನಲ್ಲಿ ಬರೆಸಿ, ಕಾಗುಣಿತ ದೋಷಗಳನ್ನು ತಿದ್ದಿ, ಈ ವಾರದ `ಅನಿವಾಸಿ` ಕನ್ನಡ ಬಳಗದ ಕಾರ್ಯಕ್ರಮಗಳನ್ನು ವಿವರವಾಗಿ ಮೂಡಿಸಿದೆ. ಬಹಳಷ್ಟು ಕಾರ್ಯಕ್ರಮಗಳನ್ನು ನೋಡಲಾಗದ ನನಗೆ ಈ ಲೇಖನಮಾಲೆ ತುಂಬ ಉಪಯುಕ್ತ.

    – ಕೇಶವ

    Like

  3. ಕನ್ನಡ ಬಳಗದ ಎರಡು ದಿನದ ಕಾರ್ಯಕ್ರಮಗಳ ತುಣುಕುಗಳನ್ನು ಜೋಡಿಸಿ ಸಮಗ್ರವಾದ ವರದಿಯನ್ನು ಚೆಂದದ ಚಿತ್ರ ಮತ್ತು ವಿಡಿಯೊದೊಂದಿಗೆ ಜೋಡಿಸಿದ ಅನಿವಾಸಿ ಬಳಗಕ್ಕೆ ಅಭಿನಂದನೆಗಳು. ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮದ ಎರಡೂ ಅಂಗಗಳನ್ನು ಯಥಾವತ್ತಾಗಿ ಅಲ್ಲದೆ ಸ್ವಾರಸ್ಯಕರವಾಗಿಸಿ ಎಲ್ಲ ಬರಹಗಾರರು ದಾಖಲಿಸಿದ್ದಾರೆ. ಇದರ ಹಿಂದೆ ನಿಂತು, ಎಲ್ಲರನ್ನು ಹುರಿದುಂಬಿಸಿ ರೂವಾರಿಯಾಗಿರುವ ಡಾ ದೇಸಾಯಿ ಅವರ ನೇತೃತ್ವ ಶ್ಲಾಘನೀಯವಾದದ್ದು.

    Like

Leave a comment

This site uses Akismet to reduce spam. Learn how your comment data is processed.