ನಮಸ್ಕಾರ ಅನಿವಾಸಿ ಬಳಗಕ್ಕೆ. ಮೇ ಮಾಸ( ತಿಂಗಳಿನ) ದಲ್ಲಿ ಕವೀಂದ್ರ ರವೀಂದ್ರರ ಜನುಮದಿನದ ಸಂಭ್ರಮಾಚರಣೆಯ ಜೊತೆಗೇ ಭಾರತದಲ್ಲಿ 'ತಾಯಂದಿರ ದಿನ' ದ ಸಡಗರವೂ. ಈ ಬಳಗದೆಲ್ಲ ತಾಯಂದಿರಿಗೂ, ತಾಯಂಥಕರಣದ ಎಲ್ಲ ಸಹೃದಯರಿಗೂ ಶುಭಾಶಯಗಳು. ಸುಜಲಾಂ ಸುಫಲಾಂ ವಂದೇ ಮಾತರಂ ಎಂದು ತಾಯ್ನಾಡಿಗೆ ವಂದಿಸುತ್ತ ' ಜಡೆಯಾಚೆ ಮೊಗದಿರುಹಿಯೂ' ಜಗವನ್ನೆಲ್ಲ ಪೊರೆಯುತ್ತಿರುವ ಜಗನ್ಮಾತೆಗೆ ಮಣಿಯುತ್ತ ನನ್ನದೊಂದು ಹಳೆಯ ಬರಹವನ್ನು ಹಂಚಿಕೊಳ್ಳುತ್ತಿರುವೆ..
~ ಸಂಪಾದಕಿ.
ಹೆರಳು – ಮಾರಿ.
ಏನಪಾ ಇದು ಅಂತ ನೀವು ತಲಿ ತುರಸಕೊಳ್ಳೂದರಾಗೇ ನಾನೇ ಹೇಳಿಬಿಡತೀನಿ. ನಮ್ಮ ಉತ್ತರ ಕರ್ನಾಟಕದ ಮಂದಿಗೆ ಈ ಪದ ಚಿರಪರಿಚಿತ. ಇನ್ನ ಉಳದವರಿಗೆ ಹೆರಳು ಗೊತ್ತಿರತದ. ಮಾರಿ ತಿಳೀಲಿಕ್ಕಿಲ್ಲ. ಆದ್ರೂ ಇಲ್ಲಿನ ಸದಸ್ಯರೆಲ್ಲ ಬೇಂದ್ರೆ ಅಜ್ಜನ ‘ ಮುಗಿಲ ಮಾರಿಗೆ ರಾಗರತಿಯ’ ಕೇಳೇ ಇರತೀರಿ. ಹೂಂ.. ನಾನೂ ಅದೇ ಮಾರಿ ಅಂದ್ರ ಮುಖದ ಬಗ್ಗೆನೇ ಹೇಳುತ್ತಿರುವುದು.
ಸಣ್ಣವರಿದ್ದಾಗ ಅಮ್ಮನೋ, ಮಾಮಿಯೋ, ಮಾಂಶಿಯೋ ಯಾರೋ ಒಬ್ಬರು ಜಿಪುಣತನ ಮಾಡದೇ ಛಂದಾಗಿ ಖೊಬ್ರಿ ಎಣ್ಣಿ ಹಚ್ಚಿ, ಹಣಗೀಲೇ ತೀಡಿ ತೀಡಿ ಹಿಕ್ಕಿ ಬಿಗತಾನ ಬಿಗದು ಎರಡು ಹೆರಳು ಹಾಕಿ ರಿಬ್ಬನ್ನು ಕಟ್ಟಿದರಂದ್ರ ಎಂಥ ಗಾಳಿಗೂ ಆ ಕೂದಲನ್ನ ಹಾರಾಡಿಸೋ ಶಕ್ತಿ ಇರತಿರಲಿಲ್ಲ. ಮುಂಗುರುಳು- ಪಿಂಗುರುಳು, ಪುಡಿಗೂದಲು ಎಲ್ಲ ಮಾಯ ಆಗಿಬಿಟ್ಟಿರತಿದ್ವು. ಎಷ್ಟೋ ಸಲ ಕುತಿಗಿ ಸೈತ ಅಲ್ಲಾಡಿಸಲಿಕ್ಕೆ ಬರತಿರಲಿಲ್ಲ. ಹಿಂತಲೆಯ ಕೂದಲು ಜಗ್ಗಿ ಗುಳ್ಳೆಗಳೆದ್ದು ಬಿಡಬೇಕು ಹಂಗ ಹೆರಳು ಹಾಕಿರತಿದ್ರು. “ ಮ್ಯಾಲ ಕಟ್ಟಬ್ಯಾಡ, ಕೆಳಗೇ ಬಿಡು, ರಿಬ್ಬನ್ ನಾಗ 4 ಅಲ್ಲ 6 ಹೂವು ಮಾಡು, ಅಷ್ಟ ಬಿಗಿ ಬ್ಯಾಡ ಸ್ವಲ್ಪ ಸಡಿಲ ಹಾಕು” ಅಂತೆಲ್ಲ ನಾವು ಏನು ಹೇಳಿದರೂ ‘ಹಾಂ ಹೂಂ’ ಸಹಿತ ಅನ್ನದೇ ತಮ್ಮದೇ ಮನಮಾನಿ ಮಾಡತಿದ್ರು. “ ನಿಮಗೇನ ತಿಳೀತದ? ನೀವು ಹೇಳಿದ್ಹಾಂಗ ಮಾಡಿದ್ರ ಮುಗೀತು. ತಲ್ಯಾಗ ಎರಡು ಕೂದಲ ಉಳ್ಯಂಗಿಲ್ಲ ಆಮ್ಯಾಲೆ” ಅಂತ ಹೆದರಸತಿದ್ರು. ಬಾಬ್ ಕಟ್, ಪೋನಿ ಟೇಲ್, ಸ್ಟೆಪ್ ಕಟ್ ಗಳಾಗಲಿ, ಶಾಂಪೂ ಮಾಡಿಕೊಂಡು ಸಿಲ್ಕಿ ಸಿಲ್ಕಿ ಕೂದಲಾ ಹಾರಾಡಿಸೂದಾಗಲಿ, ಬೆನ್ನಹಿಂದ ಕೂದಲ ಹರವಿಕೊಂಡು ಅಡ್ಡಾಡೂದಾಗಲಿ, ಮುಂಗುರುಳು ತೀಡಿಕೊಳ್ಳೂದಾಗಲಿ ಬಿಲ್ಕುಲ್ ಮಾಡೂಹಂಗಿರಲಿಲ್ರೀ. ಒಮ್ಮೆ ಯಾರೋ ತಿರುಪತಿಗೆ ಹೋಗಿದ್ವಿ ಅಂತ ಪ್ರಸಾದದ ಲಾಡು ಕೊಡ್ಲಿಕ್ಕೆ ಬಂದಿದ್ದರು. ಅವರು ಹಂಗs ಮಾತಾಡಕೋತ ಅವರ ಮನೆಯಾಗ ತಿರುಪತಿಗೆ ಹೋದರೆ ಹೆಣ್ಣು ಮಕ್ಕಳು ಗಂಡಸರು ಅನ್ನಲಾರದೆ ಎಲ್ಲಾರು ಮುಡಿ ಒಪ್ಪಿಸೋ ಪದ್ಧತಿ ಅದ ತಮ್ಮ ಮನ್ಯಾಗ ಅಂತ ಹೇಳುತ್ತಿದ್ದರು. ಅವರು ಹೋದಮೇಲೆ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ನನ್ನ ಮಗ “ ನೀನೋ! ನಿನ್ನ ವೆಂಕಪ್ಪನೋ!” ಎಂದು ನಗೆಯಾಡಿ “ ಏನೇ ಅನ್ನು ಅವನ ಲಡ್ಡು ಮಾತ್ರ ಮಸ್ತ ಇರ್ತಾವ” ಅಂತ ನನಗೆ ಅಣಕಿಸಿ ಉಂಡಿ ಮೆದ್ದು ಎದ್ದು ಹೋದ. ಆಮೇಲೆ ‘ಓ ಮೈ ಗಾಡ್’ ಸಿನಿಮಾದಾಗ ಇದೇ ಮುಡಿ ಕೊಡುವ ಪದ್ಧತಿಯ ಬಗ್ಗೆ ಪರೇಶ್ ರಾವಲ್ ‘ಮುಂಜಾನೆದ್ದು ಬಾಗಲ ತೆಗೆದು ಕೂಡಲೇ ರಾಶಿ ರಾಶಿ ಕೂದಲು ನಿಮ್ಮ ಮನೆ ಮುಂದೆ ಹರಡಿದ್ದರೆ ನಿಮಗೆ ಖುಷಿ ಅನಿಸುವುದೇ’ ಎಂಬರ್ಥ ಬರುವ ಮಾತಿನ ಮೂಲಕ ವ್ಯಂಗ್ಯವಾಡುವ ಸೀನ್ ಅದ. ಆಗಾಗ ಹೌದು, ಯಾಕಿರಬಹುದು ಇಂಥ ಪದ್ಧತಿ ಅಂತ ಯೋಚಿಸಿದಾಗಲೆಲ್ಲ ಅನ್ನಿಸುವುದಿಷ್ಟೇ. ಮನುಷ್ಯ ಅಥವಾ ಭಕ್ತ ಅಲ್ಲಿ ಮುಡಿ ಕೊಡುತ್ತಿರುವುದು ಬರಿ ತನ್ನ ಕೂದಲಿನ ರಾಶಿಯನ್ನಲ್ಲ, ತನ್ನ ರೂಪವನ್ನು.. ಸೌಂದರ್ಯವನ್ನು. ಒಂದರ್ಥದಾಗ ತನ್ನತನವನ್ನು, ತನ್ನ ಅಸ್ತಿತ್ವವನ್ನು ಅಂತ. ನೋಡಿ ಕೂದಲು ದೇಹದ ನಿರ್ಜೀವವಾದ ಒಂದು ಭಾಗ. ಆದರೆ ಅದು ನಮಗೆ ಕೊಡುವ ಖುಷಿ, ಆತ್ಮವಿಶ್ವಾಸ, ಹೆಮ್ಮೆಗಳು ಅಷ್ಟಿಷ್ಟಲ್ಲ. ಕನ್ನಡಿ ಮುಂದೆ ನಿಂತು ಕೂದಲು ತೀಡದ, ಮುಂಗುರುಳನ್ನು ಬೆರಳಲ್ಲಿ ಸುತ್ತದ ಒಂದೇ ಒಂದು ಮಾನವ ಜೀವಿಯನ್ನು ತೋರಿಸಿ ಬಿಡಿ ಸಾಕು. ಹುಡುಗಿಯರಿಗಂತೂ ಅವರ ಜಡೆ, ಕೂದಲು ಸರ್ವಸ್ವ. ಹಂಗಂತ ಹುಡುಗರೇನೂ ಕಮ್ಮಿ? ದಿನಕ್ಕ ನೂರು ಸಲ ಹೋಗುತ್ತಾ ಬರುತ್ತಾ ಕನ್ನಡಿ ಮುಂದೆ ನಿಂದ್ರೋದೇನು? ಒಮ್ಮೆ ಕೈಯಿಂದ, ಒಮ್ಮೆ ಬ್ರಷ್ ನಿಂದ, ಒಮ್ಮೆ ಪಾಕೆಟ್ ನ ಪುಟ್ಟ ಬಾಚಣಿಕೆಯಿಂದ ಕ್ರಾಪ್ ತೀಡಿದ್ದೇ ತೀಡಿದ್ದು. ಹಿಂಗ ಕೂದಲು ಸೌಂದರ್ಯದ ಪ್ರತೀಕ. ಅದನ್ನೇ ತೆಗೆದು ದೇವನಡಿ ಇಡುವುದು ನಾವು ನೀವು ಚ್ಯಾಷ್ಟಿ ಮಾಡಿ ನಕ್ಕಷ್ಟು ಸುಲಭದ ಕೆಲಸ ಏನಲ್ಲ.
ಈ ಕೂದಲಿನ ರಗಳೆ ಇರಲಿಲ್ಲ ಅಂದರೆ 108 ತರದ ಹೇರ್ ಆಯಿಲ್ ಗಳು, ಸಾವಿರಾರು ತರದ ಶಾಂಪೂ, ಕಂಡಿಷನರ್, ಹೇರ್ ಜೆಲ್,ಹೇರ್ ಕ್ರೀಮ್, ಹೇರ್ ಡೈಗಳು ಇತ್ಯಾದಿಗಳನ್ನೆಲ್ಲ ಉತ್ಪಾದಿಸುವ ಕಾರ್ಖಾನೆಗಳು, ಅವುಗಳ ಮೂಲಕ ಅನ್ನ ಸಂಪಾದಿಸುವ ಲಕ್ಷಾಂತರ ಕುಟುಂಬಗಳ ಗತಿ ಏನಾಗುತ್ತಿತ್ತು? ಸಲೂನ್ ಗಳು, ಹೇರ್ ಹೆಡ್ ಮಸಾಜ್ ಸೆಂಟರ್ ಗಳು, ಹೇರ್ ಸ್ಪಾ, ಬ್ಯೂಟಿ ಪಾರ್ಲರ್ ಗಳು ಇವುಗಳೆಲ್ಲ ಬಾಗಿಲು ಬಂದ್ ಮಾಡಿಕೊಂಡು ಹೋಗಬೇಕಾಗುತ್ತಿತ್ತು. ನಾನಾ ತರದ ಹೂವುಗಳು, ಕಸ್ತೂರಿದವನಗಳು, ಕ್ಯಾದಿಗೆಗಳು, ಆಭರಣಗಳು, ನೂರಾರು ತರದ ಫ್ಯಾಶನೇಬಲ್ hair accessories, ಕ್ಲಿಪ್ಸ್, ರಬ್ಬರ್ ಬ್ಯಾಂಡ್, ಹೇರ್ ಪಿನ್ ಕೇಳುವವರಿಲ್ಲದೆ ಅನಾಥವಾಗುತ್ತಿದ್ದವು. ಕವಿಗಳಿಗೆ ಬರೆಯಲು ಮುಖ್ಯವಾದ ಒಂದು ವಿಷಯ ಕಮ್ಮಿಯಾಗುತ್ತಿತ್ತು. ನಲ್ಲ ಬಂದು ಹೂ ಮುಡಿಸಿ ನಲ್ಲೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲಾಗುತ್ತಿರಲಿಲ್ಲ. ಮೊಗ್ಗಿನ ಜಡೆ ಹೆಣೆಯುವವರ, ದಂಡೆ ಮಾಲೆ ಕಟ್ಟುವವರ ಕಸುಬಿಗೆ ಕಲ್ಲು ಬೀಳುತ್ತಿತ್ತು. ಎಲ್ಲೆರೇ ಊಟ ತಿನಿಸಿನಲ್ಲಿ ಒಂದೆಳೆ ಕೂದಲು ಕಂಡರೆ ಕಸಿವಿಸಿ ಪಡ್ತೀವಿ. ಆದರೆ ಕೂದಲವಿಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ. ಈ ಕೇಶದ ಮಹಿಮೆ, ಸಾಮರ್ಥ್ಯ ಅಗಾಧವಾದದ್ದು. ಪುರಾಣ, ಇತಿಹಾಸಗಳು ಇದಕ್ಕೆ ಸಾಕ್ಷಿಯಾಗಿವೆ. ಸುರಗಂಗೆ ಭೂಲೋಕಕ್ಕೆ ಅವತರಿಸಬೇಕಾದರೆ ಶಿವನ ಜಡೆಯೇ ಬೇಕಾಯಿತು. ರಭಸದಿಂದ ಧಮ್ಮಿಕ್ಕುವ ಅವಳನ್ನು ತಡೆಯಲು ಶಿವನ ಜಡೆ ಇರದಿದ್ದರೆ ಆ ಮಂದಾಕಿನಿಯ ರಭಸದ ಸೊಕ್ಕಿಗೆ ಜಗತ್ತೇ ದಿಕ್ಕೇಡಿಯಾಗುತ್ತಿತ್ತೇನೋ? ಪಕ್ಷಕ್ಕೊಮ್ಮೆ ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದ ಚಂದ್ರನಿಗೂ ಆಶ್ರಯ ಈ ಜಡೆಯೇ. ನಮ್ಮ ನಾಡಿನ ಅನೇಕ ಮನೆತನಗಳ ಕುಲದೈವವಾದ ವೀರಭದ್ರನೂ ಕೂಡ ಶಿವನ ಜಟೆಯಿಂದಲೇ ಹುಟ್ಟಿದವನೆಂಬ ಪ್ರತೀತಿ.
ಇನ್ನು ಮಹಾಭಾರತ ನಡೆದದ್ದೇ ದ್ರೌಪದಿಯ ಮುಡಿಯಿಂದ. ಅವಳು ಮುಡಿಬಿಚ್ಚಿದಾಗ ಭಾರತ ಆರಂಭವಾಯಿತು, ಕಟ್ಟಿದಾಗ ಮುಕ್ತಾಯವಾಯಿತೆಂಬ ಮಾತಿದೆ. ತನ್ನ ಕೂದಲಿಗೆ ಕೈ ಹಾಕಿ ಎಳೆದೊಯ್ದ ದುರುಳನ ಕರುಳ ಬಿಗಿದು ಅವನ ರಕ್ತದಿಂದ ಅದನ್ನುತೊಯ್ಯಿಸದೇ ತಾನು ಮುಡಿ ಕಟ್ಟಲಾರೆನೆಂಬ ದ್ರೌಪದಿಯ ಪ್ರತಿಜ್ಞೆಗೆ 18 ಅಕ್ಷೋಹಿಣಿ ಸೈನ್ಯದ ಭಾರತ ಯುದ್ಧವೇ ನಡೆಯಬೇಕಾಯಿತು. ಹೌದಲ್ಲವೇ? ದುಶ್ಯಾಸನ ಕೈ ಹಾಕಿದ್ದು ಬರೀ ಹೆಣ್ಣೋರ್ವಳ ತಲೆ ಕೂದಲಿಗೆ ಅಲ್ಲ, ಯುಗದ ಅಸ್ಮಿತೆಗೆ.. ಸ್ತ್ರೀತನದ ಗರಿಮೆಗೆ.. ಸಂಸ್ಕಾರ ಸಂಸ್ಕೃತಿಗಳ ಬುಡಕ್ಕೇ ಕೈ ಹಾಕಿದ್ದ. ಅದಕ್ಕೆಂದೇ ಅದಕ್ಕೆ ಸಾಕ್ಷಿಯಾದ, ನೇರವಾಗಿ ಪರೋಕ್ಷವಾಗಿ ಭಾಗಿಯಾದ ಎಲ್ಲರೂ ಅದಕ್ಕೆ ಬೆಲೆ ತೆರಲೇಬೇಕಾಯಿತು ಮಾಡಿದ್ದುಣ್ಣೋ ಮಹಾರಾಯ ಅನ್ನೋ ಹಂಗ.
ಧನನಂದನಿಂದ ಅಪಮಾನಕ್ಕೆ ಒಳಗಾದ ಆಚಾರ್ಯ ಚಾಣಕ್ಯನೂ ಸಹ ವೈರಿಯನ್ನು ಅಮೂಲಾಗ್ರವಾಗಿ ನಾಶ ಮಾಡದೆ ಶಿಖೆ ಕಟ್ಟಲಾರೆನೆಂದು ಪ್ರತಿಜ್ಞೆಗೈದು ಶಿಖೆಯ ಕೂದಲು ಬಿಟ್ಟದ್ದು. ಯಾವ ಅಸ್ತ್ರಗಳಿಗೂ ಇರದ ಮೊನಚನ್ನು ಅವನ ಶಿಖೆಯ ಕೇಶದಲ್ಲಿ ಕಂಡಿತು ಮನುಕುಲದ ಇತಿಹಾಸ. ಭಾರತದ ಇತಿಹಾಸಕ್ಕೆ ಚಂದ್ರಗುಪ್ತ ಮೌರ್ಯ, ಅಶೋಕರಂತಹ ಅರಸರ ಸುವರ್ಣ ಯುಗವನ್ನು ದಯಪಾಲಿಸಿದ್ದು ಇದೇ ಕೇಶ ಎಂದಾಯಿತಲ್ಲವೇ?
ಕೆಡುವ ಗಂಡರನ್ನು ತೊರೆದು ಚೆನ್ನಮಲ್ಲಿಕಾರ್ಜುನನತ್ತ ಮೊಗದಿರುಹಿ ಹೊರಟ ಅಕ್ಕಳನ್ನು ಸಂರಕ್ಷಿಸಿದ್ದೇ ಈ ಕೇಶ ರಾಶಿ. ಇನ್ನು ನಮ್ಮ ಸಾಹಿತ್ಯದಲ್ಲಿ ಈ ಜಡೆಯ, ಕೇಶರಾಶಿಯ, ಮುಂಗುರುಳಿನ ವರ್ಣನೆಗಳು ಹೇರಳವಾಗಿ ದೊರೆಯುತ್ತವೆ. ನೀಲವೇಣಿ, ನಾಗವೇಣಿ ಇತ್ಯಾದಿ ಹೆಸರುಗಳನ್ನು ಕೇಳಿದೊಡನೆ ತೊನೆದಾಡುವ ಜಡೆಗಳ ಚಿತ್ರ ಕಣ್ಮುಂದೆ ಬರುತ್ತದೆ. “ ಅವಳೊಮ್ಮೆ ಹರಳಕೆದರಿ ಕಪ್ಪು ಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ” ಎಂದು ಮನದನ್ನೆಯನ್ನು ವರ್ಣಿಸುವ ಕೆ ಎಸ್ ಎನ್ “ನಾಗರ ಕುಚ್ಚಿನ ನಿಡು ಜಡೆಯವಳು ಈಕೆಯು ಬಂದುದು ಎಲ್ಲಿಂದ” ಎಂದು ಅಚ್ಚರಿ ಪಡುತ್ತಾರೆ. “ ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ ಸಿಂಗಾರ ಕಾಣದ ಹೆರಳು “ ಎಂದು ಅಕ್ಕಿ ಆರಿಸುವಾಗ ಕವಿತೆಯಲ್ಲಿ ಬಣ್ಣಿಸುತ್ತಾರೆ.
ಮುಂಗುರುಳು ದುಂಬಿಗಳಂತೆ ಅಂತಲೂ, ಯೆ ಜುಲ್ಫೆಹೈ ಜೈಸೆ ಕಾಂಧೋ ಪೆ ಬಾದಲ್ ಗಿರೆ ಹುವೆ’ ಅಂತಲೂ, ಉಡೆ ಜಬ್ ಜಬ್ ಜುಲ್ಫೆ ತೇರಿ ಎಂದೂ, ಯೆ ಗೇಸುವೋಂಕಿ ಘನಿ ಛಾವ್ ಹೈ ಮೇರೆ ಖಾತಿರ್ ಅಂತಲೂ ನೂರಾರು ಸಿನೆಮಾ ಹಾಡುಗಳು ಈಗಲೂ ರಸಿಕರ ಹೃದಯಕ್ಕ ಲಗ್ಗೆ ಹಾಕತಾವ. ಸರ್ ಜೋ ತೇರಾ ಚಕರಾಯೆ ಯಾ ದಿಲ್ ಡೂಬಾ ಜಾಯೆ ಆಜಾ ಪ್ಯಾರೆ ಪಾಸ್ ಹಮಾರೆ ಕಾಹೆ ಘಬರಾಯೆ ಅಂತ ಚಂಪಿ ( ಮಸಾಜ್) ಮಾಡತಾ ಹಾಡು ಹೇಳೋ ಜಾನಿ ವಾಕರ್ ನನ್ನು ಮೆಚ್ಚದವರೇ ಇಲ್ಲ.
ಅಣ್ಣ-ತಮ್ಮ, ಅಕ್ಕ ತಂಗಿಯರ ಜಗಳಕ್ಕ ಈ ಕೂದಲ ಬೇಕೇ ಬೇಕು ಅವರ ಜುಟ್ಟು ಇವರ ಕೈಯಾಗ ಇವರ ಜುಟ್ಟು ಅವರ ಕೈಯಾಗ ಅಂದಾಗನೇ ಅದು ಖರೇ ಸೋದರ ಪ್ರೇಮ. ಕೈ ಕೈ ಜಗಳಕ್ಕಿಂತ ಕೂದಲ ಕೂದಲ ಜಗಳಾನೇ ಬಹಳ ಆಗ್ಯಾವರಿ ನಾವು ಸಣ್ಣವರಿದ್ದಾಗ. ಈಗಲೂ ಅಷ್ಟೇ ಬಹಳ ಸಿಟ್ಟು ಬಂತಂದ್ರ ಮೈ ಹರಕೊಂಡು ಕೂದಲ ಕಿತ್ತುಕೊಳ್ಳುವಷ್ಟs ಸಂತಾಪ ಆಗುತದ್ರೀ.
ಇನ್ನೊಂದ ವಿಷಯ.. ಈ ಕೂದಲಾನ್ನ ಕತ್ತರಿಸೂದು ಅಂದ್ರ ಹೇರ್ ಕಟ್ ಎಲ್ಲಾ ಯಾವಾಗ ಬೇಕಂದ್ರ ಆವಾಗ ಮಾಡೂ ಹಂಗಿರಲಿಲ್ರೀ. ಹುಣ್ಣಿಮೆ, ಅಮವಾಸಿ, ಏಕಾದಶಿ, ದ್ವಾದಶಿ, ವೆಂಕಪ್ಪನ ಒಕ್ಕಲದವರಿದ್ರ ಶನಿವಾರ ಹೀಂಗ ದಿನಾ ನೋಡಿ ಸಲೂನ್ ಗೆ ಹೋಗಬೇಕಾಗಿತ್ತು. ಹೆಣ್ಣು ಮಕ್ಕಳಂತೂ ಕೂದಲಿಗೆ ಕತ್ತರಿನೇ ಹಚ್ಚೂ ಹಂಗಿರಲಿಲ್ರೀ. ಗಂಡಸರೂ ಸಹ ಹಜಾಮತಿ ಮಾಡಿಸಿಕೊಂಡು ಬಂದಮ್ಯಾಲೆ ಹಾಕಿದ್ದ ಬಟ್ಟೆ ಎಲ್ಲ ತೊಯ್ಯಿಸಿಟ್ಟು ಕೈಯಾಗ ಒಂದ ಹನಿ ಖೊಬ್ರಿ ಎಣ್ಣಿ ಹಾಕಿಸಿಕೊಂಡು ತಲಿಗೆ ಹಚಗೊಂಡು ಎರಡು ತಂಬಿಗೆ ಯಾರದರೇ ಕಡೆ ನೀರು ಹಾಕಿಸಿಕೊಂಡ ಮ್ಯಾಲೆನೇ ಗಂಗಾಳು – ತಂಬಿಗಿ ಮುಟ್ಟೂದು. ನಮ್ಮ ಮಕ್ಕಳಿಗೆ ಈಗ ಇವನ್ನೆಲ್ಲ ಹೇಳಿದ್ರ’ ಐಯ್’ ಅಂತ ಬಾಯಿ ತಕ್ಕೊಂಡು ನಂಬಲಾರದ ಕೂತಿರತಾರ ಕೇಳಕೋತ. ನಮಗೂ ಅಷ್ಟೇ. ತಲಿಗೆ ಹರಸಿ ಒಂದ್ಹನಿ ಎಣ್ಣಿ ಹಚಗೊಳ್ಳದ ತಲಿಸ್ನಾನ ಮಾಡೂ ಹಂಗಿರಲಿಲ್ಲ. ಒಣ ನೀರು ಹಾಕಿಕೊಳ್ಳೂದು ಅನಿಷ್ಟ ಅಂತ ನಂಬಿಕೆ. ದ್ವಾದಶಿ ಅಂತೂ ಅಪ್ಪಿ ತಪ್ಪಿನೂ ಎರಕೊಳ್ಳೂ ಹಂಗಿರಲಿಲ್ಲ. ಇವಕ್ಕೆಲ್ಲ ಕಾರಣಗಳೂ ಹಲವಾರು ಇದ್ದಾವು! ಹುಡುಕಿ ನೋಡಿದರೆ ಸಿಕ್ಕಾವು!!
ನಮ್ಮ ಬಲಕುಂದ್ಯಾಗ ಒಬ್ಬ ಮುತ್ಯಾ ಬರತಿದ್ದರೀ. ಬಾಂಬೆ ಮಿಠಾಯಿ, ಅಜ್ಜೀ ಕೂದಲಾ ( cotton candy )ಎಲ್ಲಾ ತಗೊಂಡು. ಅವನಿಗೆ ಹೋಗಿ ನಮ್ಮ ಉದುರಿದ ಕೂದಲನ್ನ ಕೊಟ್ರ ಆ ತಿಂಡಿ ತಿನಿಸುಗಳನ್ನೆಲ್ಲ ಪುಗಸೆಟ್ಟೆ ಕೊಡತಿದ್ದ. ಅದಕ್ಕಂತ ಹೆರಳ ಆದ ಕೂಡಲೇ ನಾವೆಲ್ಲ ಮಕ್ಕಳು ಹಣಿಗೆ ಒಳಗಿನ ಕೂದಲಾ ತೆಗೆದು ಸುರಳಿ ಸುತ್ತಿ ನಮ್ಮ ನಮ್ಮ ಕೂದಲನ್ನ ಬ್ಯಾರೆ ಬ್ಯಾರೆ ಮಾಡಿಕೊಂಡು ಮನಿ ಹಿಂದಿನ ಮಾಡದಾಗ ಒಯ್ದು ಇಡತಿದ್ದ ನೆನಪು. ಬಹುಶ: ಅವುಗಳಿಂದ ಚೌರಿ ಇತ್ಯಾದಿಗಳನ್ನು ಮಾಡುತ್ತಿದ್ದರೋ ಏನೋ? ತಿರುಪತಿ – ತಿರುಮಲಗಳಲ್ಲಂತೂ ಈ ಕೂದಲುಗಳದೇ ಕೋಟ್ಯಂತರ ರೂಪಾಯಿಗಳ ಆದಾಯ ಅದ ಅಂತ್ರೀ. ಅದರಿಂದಲೇ ತಿರುಪತಿ _ತಿರುಮಲ ದೇವಸ್ಥಾನದವರು ಅನೇಕ ಆಸ್ಪತ್ರೆ, ಶಾಲಾಕಾಲೇಜುಗಳು ಧರ್ಮಛತ್ರಗಳು, ಪುನರುಜ್ಜೀವನಗಳಂಥ ಚಾರಿಟಿ ಟ್ರಸ್ಟ್ ಗಳನ್ನು ನಡೆಸುತ್ತಾರೆಂದು ಎಲ್ಲೋ ಓದಿದ ನೆನಪು.
ನಾವು ಸಣ್ಣವರಿದ್ದಾಗ ಓದೂ ಚಂದಮಾಮಾ, ಬಾಲಮಿತ್ರ ಕಥಿ ಒಳಗ ಈ ಕೂದಲೆಳೆ ತಗೊಂಡು ಕಾಲಾ ಜಾದೂ, ಮಾಟಮಂತ್ರ, ಭಾನಾಮತಿ ಮಾಡಿದಂಥ ಕಥೆಗಳನ್ನೋದಿ ಮೈ ಜುಮ್ ಅನ್ನಿಸಿಕೊಂಡಿದ್ದೂ ನೆನಪಿದೆ. ಎಲ್ಲೆರೇ ನಮ್ಮ ಕೂದಲೆಳೆಯನ್ನೂ ಯಾರರೇ ತಗೊಂಡು ಕಾಲಾಜಾದೂ ಮಾಡಿದ್ರ ಅನಸತಿತ್ತು. ಆದ್ರ ಹಂಗಾಗಲಿಕ್ಕೆ ನಾವೇನು ರಾಜಕುಮಾರಿಯರೋ, ಶ್ರೀಮಂತ ವಣಿಕ್ ಪುತ್ರಿಯರೋ, ಸುರಸುಂದರಿಯರೋ ಇರಲಿಲ್ಲ ಅನ್ನೋದು ಅರ್ಥವಾಗದ ವಯಸ್ಸು ಅದು. ತಾಯ ಹೊಟ್ಟೆಯಲ್ಲಿ ಮಗುವಿದ್ದಾಗಲಿಂದಲೇ ಮಗುವಿನ ಕೂದಲಿನ ಅಂದಾಜು ನಡದಿರತದ್ರೀ. ನಮ್ಮ ಕಡೆಯೆಲ್ಲ 7-8 ತಿಂಗಳಿಗೆಲ್ಲ ಸ್ವಲ್ಪ ಎದೆ ಯುರಿ ಎಲ್ಲಾ ಬಂದ್ರ ‘ ಕೂಸಿಗೆ ಜಾವಳ ಭಾಳ ಇರಬೇಕು. ಅದಕ್ಕs ಎದಿ ಉರೀತದ ಅಂತಾರ ಮನ್ಯಾಗಿನ ಹಿರಿಯರು. ಕೂಸು ಹುಟ್ಟಿದ ಮ್ಯಾಲೆನೂ ಅಷ್ಟೇ. ಕೂಸು ಆರಾಂ ಅದನ? ಯಾರಂಗ ಅದ? ಜಾವಳ ಭೇಷ್ ಅವನ?ಅಂತಾನೇ ಎಲ್ಲರ ಪ್ರಶ್ನೆ. ಮುಂದ ಜಾವಳ, ಮುಂಜವಿ ಅಂತ ಈ ಕೂದಲಿಗೆ ಸಂಬಂಧಿಸಿದ ಕಾರ್ಯಕ್ರಮ ಗಳೇ. ಹೆಣ್ಣು ಮಗು ಇದ್ರ ದಿನಕ್ಕೊಂದು ಕೇಶಾಲಂಕಾರ.. ಹೂವು.. ಶೖಂಗಾರ.
“ ಹೆಣ್ಣು ಮಕ್ಕಳಿಗೆ ಕೂದಲು ಉದ್ದಾ ಇದ್ರೆ ನೋಡೋಕೇನೋ ಚಂದ. ಆದ್ರೆ ಆರೈಕೆ ಭಾಳ ಕಷ್ಟ” ಎನ್ನುತ್ತಾರೆ ನಮ್ಮ ಹೆಂಗರುಳ ಕವಿ ಎಚ್ಚೆಸ್ವಿ ತಮ್ಮ ‘ ಉರಿಯ ಉಯ್ಯಾಲೆ’ಯಲ್ಲಿ. “ ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ” ಎಂದು ಕರಡಿ ಕುಣಿತದಲ್ಲಿ ಹೇಳುತ್ತಾರೆ ನಮ್ಮ ವರಕವಿ. ಅಂದಹಂಗ ಜಿ. ಎಸ್. ಎಸ್. ರ ಜಡೆ ನಿಮಗೆಲ್ಲ ಗೊತ್ತಿರತದ. ಆದ್ರೂ ನನ್ನ ಖುಷಿಗೆ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿರುವೆ. “ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ ಅತ್ತಿತ್ತ ಹರಿದ ಜಡೆ ಚೇಳ್ ಕೊಂಡಿಯಂಥ ಜಡೆ ಮೋಟು ಜಡೆ, ಚೋಟು ಜಡೆ ಚಿಕ್ಕವರ ಚಿನ್ನ ಜಡೆ ಎಣ್ಣೆ ಕಾಣದೇ ಹಿಣಿಲು ಹಿಣಿಲಾಗಿ ಹೆಣೆದ ಜಡೆ ಬೆವರಿನಲಿ, ಧೂಳಿನಲಿ ನೆನೆದುಕೊಂಡಿರುವ ಗಂಟು ಜಡೆ ಅಕ್ಕತಂಗಿಯ ಮುಡಿಯ ಹಿಡಿದು ನಾನೆಳೆದಂಥ ಮಲ್ಲಿಗೆಯ ಕಂಪು ಜಡೆ ಮಾತೖಮಮತಾವೖಕ್ಷ ಬಿಟ್ಟ ಬಿಳಲಿನಂತೆ ಹರಿವ ತಾಯ್ ಜಡೆ ‘ ಕುರುಕುಲ ಜೀವಾಕರ್ಷಣ ಪರಿಣತ’ ಆ ಪಾಂಚಾಲಿಯ ಜಡೆ ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಪ್ಪು ಜಡೆ ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ ಒಮ್ಮೊಮ್ಮೆ ಮುಗಿಲಲ್ಲಿ ತೇಲುತ ಬರುವಂಥ ಬೆಳ್ಳಕ್ಕಿಗಳ ಜಡೆ ಕ್ರೌಂಚಗಳ ಜಡೆ ಮಾಮರದಿ ಬಳುಕುತಿಹ ಹೂ ಬಿಟ್ಟ ಬಳ್ಳಿ ಜಡೆ ಕಾಡು ಬಯಲಿನ ಹಸುರು ಹಸುರಲಿ ಹರಿ ಹರಿದು ಮುನ್ನಡೆವ ಹೊಳೆಯ ಜಡೆ ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ ಗಿರಿಶಿವನ ಶಿರದಿಂದ ಹಬ್ಬಿ ಪಸರಿಸಿದ ಕಾನನದ ಹಸುರು ಜಡೆ ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ ಹರಡಿರುವ ಮಳೆಯ ಜಡೆ ಚಂದ್ರಚೂಡನ ವ್ಯೋಮಕೇಶನ ವಿಶ್ವವನೇ ವ್ಯಾಪಿಸುತ ತುಂಬಿರುವ ಜಡೆ ಗಾನಗಳ, ಕಾವ್ಯಗಳ, ಶಿಲ್ಪಗಳ ಕಲೆಯ ಜಡೆ ಎಲ್ಲವೂ ರಮ್ಯವೆಲ್ಲ! ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ!!
ಒಟ್ಟಿನಾಗ ಈ ಹೆರಳು ಮಾರಿಯಿಂದ ಇಷ್ಟೆಲ್ಲ ಮಾತು ಆತು ನೋಡ್ರಿ. ಓದಿ ಹೆಂಗನ್ನಸ್ತು ಅಂತ ನಿಮ್ಮದೂ ಎರಡು ಮಾತು ಸೇರಸ್ರಿ.
ನಮಸ್ಕಾರ ಅನಿವಾಸಿ ಬಳಗಕ್ಕೆ. ಇನ್ನೇನು ಬಂದೇ ಬಿಡಲಿರುವ ಕ್ರಿಸ್ಮಸ್ ಹಬ್ಬದ ಹಾಗೂ ಹೊಸವರುಷದ ಹಾರ್ದಿಕ ಶುಭಾಶಯಗಳು.
ದೇಶ- ಕಾಲ ಯಾವುದಿದ್ದರೇನು? ಮಾನವ ಜೀವ - ಭಾವ ಜಗತ್ತು ಮಾತ್ರ ಸದಾ ಅದೇ ಅಲ್ಲವೇ? ಅದಕ್ಕೆಂದೇ ತ್ರೇತೆಯ ಸೀತೆ, ದ್ವಾಪರದ ರಾಧೆ ಈಗಲೂ ನಮ್ಮನ್ನು ಕಾಡುತ್ತಾರೆ. ನನ್ನ ಹಳ್ಳಿಯ ನನ್ನ ಪರಿಧಿಗೆ ಬಂದ ಎಲ್ಲ ಹೆಂಗಳೆಯರದೂ ಒಂದೊಂದು ಕಥೆ.. ವ್ಯಥೆ. ಅದನ್ನೇ ಇಲ್ಲಿನ ಕವನ ಹೇಳಲು ಪ್ರಯತ್ನಿಸುತ್ತಿದೆ. ಹಾಗೆಯೇ ಒಂದು ಲಘು ಹರಟೆಯೂ ಉಂಟು. ಒಪ್ಪಿಸಿಕೊಳ್ಳಿ.
~ ಸಂಪಾದಕಿ
ನಮ್ಮೂರ ರಾಧೆಯರು..
ನಮ್ಮೂರಲ್ಲಿ ಜುಳು ಜುಳು ಹರಿವ ತಂಪಾದ ನದಿಯಿಲ್ಲ. ಹಿಂಡಿದರೆ ದಂಡಿ ಹಾಲು ಕರೆವ ದನದ ಮಂದೆಗಳಿಲ್ಲ. ಒಣಬಿದಿರ ಕೊಳಲ ಮಾಡಿ ನುಡಿಸಿ ಕುಣಿಸುವ ಕೃಷ್ಣನೂ ಇಲ್ಲ. ನಮ್ಮೂರ ಹೆಸರಂತೂ ಗೋಕುಲ- ಬೃಂದಾವನ ಮೊದಲೇ ಅಲ್ಲ.
ಯಮುನೆ ಇರದಿದ್ದರೇನಂತೆ ಇಲ್ಲಿ ಕಾಳಿಂಗರಿಗೇನೂ ಕೊರತೆ ಇಲ್ಲ. ರಾಸ ರಚಿಸಲೆಂದೇ ರಸಿಕರು ಸುತ್ತಮುತ್ತ ಕಾಯ್ದುಕೊಂಡಿಹರಲ್ಲ?! ಪ್ರತಿಷ್ಠೆ, ಮರ್ಯಾದೆ, ರಕ್ಷಣೆಯ ಹೆಸರಲ್ಲಿ ಚೈತನ್ಯ ಹೋಮ ನಡೆವುದಲ್ಲ.. ದ್ವಾಪರವಲ್ಲವಾದ್ದರಿಂದ ನರಕಾಸುರ ಬಂಧನದಿಂದ ಈ ಗೋಪಿಕೆಯರಿಗೆ ಮುಕ್ತಿಯೇ ಇಲ್ಲ..
~ ಗೌರಿಪ್ರಸನ್ನ
ಕ್ಯಾಲೆಂಡರ್ ಪುರಾಣ
2025 ಅರಿವಿಲ್ಲದೇ ಉರುಳಿ ಇನ್ನೇನು ಹೊಸ ವರುಷದ ಹೊಸಿಲಲ್ಲಿದ್ದೇವೆ. ಇಷ್ಟಕ್ಕೂ ಈ ಹೊಸ ವರ್ಷ ಅನ್ನೋದು ಏನು? ಅದೇ ಹಗಲು ರಾತ್ರಿಗಳು, ಅದೇ ಸೂರ್ಯ ಚಂದ್ರರು, ಅವೇ ಗಿಡಮರ-ಉಪವನಗಳು, ಅವೇ ಮಾನವ ಮನದ ರಾಗ ದ್ವೇಷ ಭಾವವೇಗಗಳು, ಅದೇ ಹೊಡೆದಾಟ ಬಡೆದಾಟಗಳು,ಅವೇ ಚರ್ವಿತ ಚರ್ವಣ ರಾಜಕೀಯ ಸಾಮಾಜಿಕ ಸುದ್ದಿ ಸಮಾಚಾರಗಳು, ಅವೇ ಹೊಸ ವರ್ಷದ ಹಳೆಯ ರೆಸುಲ್ಯೂಷನ್ ಗಳು.. ಬರೀ ಬದಲಾಗುವ ಕ್ಯಾಲೆಂಡರ್ ಹೊರತುಪಡಿಸಿ ಉಳಿದಿದ್ದೆಲ್ಲಾ ಅದೇ ಹಿಂದಿನದೇ.
ಆದರೆ ಜಡ್ಡು ಕಟ್ಟಿದ ಮನಸ್ಸಿಗೆ ಯಾಂತ್ರಿಕವಾದ ಬದುಕಿಗೆ ಒಂದೆರಡು ಖುಷಿಯ ಕ್ಷಣಗಳು ಬೇಕು ಹಗುರಾಗಲು ಒಂದು ನೆಪಬೇಕು ಆ ನೆಪದಲ್ಲಿ ಆಪ್ತರೊಡನೆ, ಸ್ನೇಹಿತರೊಡನೆ ಬಂಧು ಬಾಂಧವರೊಡನೆ ಒಂದಷ್ಟು ಮಾತು, ಹರಟೆ, ನಗು, ಹಾಡು, ಕುಣಿತ, ತಿನ್ನುವುದು, ಕುಡಿಯುವುದು.. ಅವುಗಳ ಮೂಲಕ ಒಂದು ನಿರಾಳತೆಯನ್ನೂ, ಬಿಡುಗಡೆಯನ್ನೂ, ಸಾರ್ಥಕತೆಯ ಕ್ಷಣಗಳನ್ನೂ, ಹೊಸ ಭರವಸೆಯನ್ನೂ ಪಡೆಯಲು ಬಯಸುವುದಷ್ಟೇ ಅವುಗಳ ಆಚರಣೆಯ ಹಿಂದಿರುವ ಅರ್ಥ. ಬರೀ ಹೊಸ ವರ್ಷದ ಆಚರಣೆ ಅಲ್ಲ ಎಲ್ಲ ಹಬ್ಬ, ದಿನಗಳು, ಜಾತ್ರೆ, ಉತ್ಸವಗಳ ಉದ್ದೇಶವೂ ಅದುವೇ ಅಂಬೋದು ನನ್ನ ಅನಿಸಿಕೆ. ಇಷ್ಟಕ್ಕೂ ಅಖಂಡವಾದ ಅನಂತವಾದ ಕಾಲವನ್ನು ನಮ್ಮ ಅನುಕೂಲಕ್ಕಂತನೇ ತಾನೇ ನಾವು ವಿಭಾಗಿಸಿ ವರುಷ, ತಿಂಗಳು, ಮಾಸ, ತಿಥಿ, ವಾರ ಎಂದೆಲ್ಲ ಮಾಡಿಕೊಂಡಿದ್ದು.ನಿನ್ನೆಯಷ್ಟೇ ಎಲ್ಲಿಯೋ ಓದುತ್ತಿದ್ದೆ.. ಇಥಿಯೋಪಿಯಾ ದೇಶದ ಕ್ಯಾಲೆಂಡರ್, ಅಲ್ಲಿಯ ಹೊಸ ವರುಷ ಎಲ್ಲ ಬೇರೆಯೇ ಅಂತೆ. ಅಲ್ಲೀಗ 2018 ನಡೆದಿದೆಯಂತೆ. ಅದಕ್ಕೇ ಅಲ್ಲವೇ ‘ದೇಶ ಕಾಲ ವಿಭಾಗ ಮನದ ರಾಜ್ಯದೊಳಿರದು’ ಅಂತ ನಮ್ಮ ಗುಂಡಪ್ಪನವರು ಎಂದೋ ಹೇಳಿದ್ದು?!
ಹೊಸ ವರುಷ ಅಂದ ಮ್ಯಾಲೆ ಎಲ್ಲರ ಮನೆಯಾಗೂ ಹೊಸ ಕ್ಯಾಲೆಂಡರ್ ಹಾರಾಡಲಿಕ್ಕೇ ಬೇಕು . ಈ ಕ್ಯಾಲೆಂಡರ್ ನ ಇತಿಹಾಸ ಅಥವಾ ಕೆಲವು ಜನರ ಈ ಜನವರಿ ಫೆಬ್ರವರಿ ಅಥವಾ ಹಿಂದೂ ಪಂಚಾಂಗ ಚೈತ್ರ- ವೈಶಾಖಗಳ ದ್ವಂದ್ವ ಯುದ್ಧ ಇತ್ಯಾದಿಗಳ ಬಗ್ಗೆ ನಾ ಇಲ್ಲೇ ಮಾತನಾಡಲಿಕ್ಕೆ ಹೋಗೋದಿಲ್ಲ ಖರೇ ಹೇಳಬೇಕೆಂದರೆ ನಾವು ಸಣ್ಣವರಿದ್ದಾಗ ಅಂಕಲಪಿ ಹಿಂದೆ ಇದ್ದ ಚೈತ್ರ- ವೈಶಾಖ- ವಸಂತ ಋತು ಹಾಗೂ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಅಂತ ಎರಡನ್ನೂ. ಅಷ್ಟೇ ಶ್ರದ್ಧೆಯಿಂದ ಕಣ್ಮುಚ್ಚಿ ಕೈ ಕಟ್ಟಿ ನಿಂತು ಉರು ಹೊಡೆದಿದ್ದೆವು.. ಕೆಲವೊಮ್ಮೆ ಹಿಂದೆ ಮುಂದೆ ವಾಲಾಡುತ್ತಾ. ಜೋಡಿಗೆ ಆ ಜನವರಿ, ಫೆಬ್ರವರಿಗಳ ಸ್ಪೆಲಿಂಗ್ ಕಲಿಯಲಿಕ್ಕೂ ಪರಿಪಾಟಲು ಪಟ್ಟಿದ್ದು ಸುಳ್ಳಲ್ಲ. ಯಾಕೆಂದರೆ ಇಂಗ್ಲೀಷ್ ನಮ್ಮ ಕನ್ನಡದ್ಹಂಗ ಅಲ್ರಿ ಬಾಯಲ್ಲಿ ಅನ್ನೋದೇ ಬೇರೆ, ಅಲ್ಲಿ ಸ್ಪೆಲಿಂಗ್ ಬರೆಯುವುದೇ ಬೇರೆ. ಈಗ ಉದಾಹರಣೆಗೆ ನೋಡ್ರಿ ಜನವರಿಯನ್ನು ಬರೆಯುವುದು JANUARY ಅಂತ ಇಲ್ಲೇ U ಎಲ್ಲಿಂದ ಬಂತು ಅಂತ ತಲಿ ಕೆಡತಿತ್ತರೀ.. ಈಗಲೂ ಅಷ್ಟೇ ಎಷ್ಟೋ ಶಬ್ದಗಳನ್ನು ಉಚ್ಚಾರ ಮಾಡೂದ್ಹೆಂಗ ಅಂತ ಚಿಂತೀರಿ. ಏನs ಇರಲೀರಿ ನಮಗ ದಿನದ ಉಪಯೋಗಕ್ಕೆ ಸರಳ ಅನ್ನಸೂವು ಈ ಜನವರಿ ಫೆಬ್ರವರಿನೇ. ಚೈತ್ರ ವೈಶಾಖಗಳು ಸ್ವಲ್ಪ ಕಠಿಣ ಅನ್ನಿಸಿ ಬಿಡತಾವ್ರೀ. ವೈಶಾಖ ಶುದ್ಧ ದಶಮಿ, ಭಾದ್ರಪದ ಶುಕ್ಲ ಚೌತಿ, ಶ್ರಾವಣ ಬಹಳ ಅಷ್ಟಮಿ ಹಿಂಗೆಲ್ಲಾ. ಆ ಕೃಷ್ಣ ಪಕ್ಷ ಶುಕ್ಲ ಪಕ್ಷಗಳು, ಶುದ್ಧ ಬಹುಳಗಳು ಸ್ವಲ್ಪ ಕನ್ಫ್ಯೂಸ್ ಆಗಿಬಿಡತಾವ್ರಿ. ಅವು ಸುಮ್ಮ ಮದುವೆ ಮುಂಜವಿಗಳಿಗೆ, ಪೂಜಾ ಪುನಸ್ಕಾರಗಳಿಗೆ, ಲಗ್ನ ಮುಹೂರ್ತಕ್ಕಷ್ಟೇ ಸೀಮಿತವಾಗಿ ಬಿಟ್ಟಾವ. ಹಂಗ ನೋಡಿದ್ರ ಈ ಜನವರಿ ಫೆಬ್ರವರಿಗಳು ದಿನ ಊಟಕ್ಕೆ ಬಳಸುವ ಸ್ಟೀಲ್ ತಟ್ಟೆ ಲೋಟಗಳಾದ್ರ ಈ ಸಂವತ್ಸರೇ, ಅಯನೇ, ಮಾಸೌ, ಪಕ್ಷೇ, ತಿಥೇ, ವಾಸರೌ.. ಎಲ್ಲಾ ಯಾರರೆ ಅತಿಥಿ ಅಭ್ಯಾಗತರು ಬೀಗರು ಬಿಜ್ಜರು ಬಂದಾಗ ಮಾತ್ರ ಹೊರ ತೆಗೆದು ಅವರು ಹೋದ ನಂತರ ಮತ್ತೆ ಕಾಳಜಿಲೆ ಪ್ಯಾಕ್ ಮಾಡಿ ಸ್ವಸ್ಥಾನಕ್ಕೆ ಸೇರಿಸಿಬಿಡುವ ತುಟ್ಟಿ ಡಿನ್ನರ್ ಸೆಟ್ ಗಳ ಗತೆ ಅಂದ್ರ ತಪ್ಪಾಗಲಿಕ್ಕಿಲ್ಲ.
ಆದ್ರೆ ಕೆಲವು ಈ ನಮ್ಮ ಕ್ಯಾಲೆಂಡರ್ ಗಳು ಇರ್ತಾವಲ್ರೀ ‘ ಹೊಂಬಾಳಿ ಬಂಧುಗಳು’, ‘ ಮಹಾಲಕ್ಷ್ಮಿ ದಿನದರ್ಶಿಕೆ’, ‘ಕಾಲ ನಿರ್ಣಯ’ ಇತ್ಯಾದಿ.. ಇವುಗಳು ಮಾಡುವ ಕೆಲಸ ಅನನ್ಯ ನೋಡ್ರಿ ಇವುಗಳೊಳಗ ಜನವರಿ ಫೆಬ್ರವರಿ 1 ರಿಂದ 28,30,31 ದಿನಾಂಕಗಳ ಜೊತೆಗೆ ತಿಥಿ, ನಕ್ಷತ್ರ, ರಾಹುಕಾಲ, ಗುಳಿಕಕಾಲ ಎಲ್ಲಾನೂ ಕೊಟ್ಟಿರ್ತಾರ. ಏನು ಮಾಹಿತಿ ಬೇಕಂದ್ರೂ ತಟ್ಟಂತ ಸಿಕ್ಕಿಬಿಡುತ್ತದ. ಅಡುಗೆಮನೆ ಗ್ವಾಡಿಗೆ ಇಂಥದೊಂದು ಕ್ಯಾಲೆಂಡರ್ ಬೇಕೇ ಬೇಕು ನೋಡ್ರಿ. ರಥ, ಜಾತ್ರಿ, ತೇರು ಏಕಾದಶಿ- ದ್ವಾದಶಿಗಳು, ಹುಣ್ಣಿಮೆ- ಅಮಾವಾಸ್ಯೆಗಳು, ಹಬ್ಬ- ಹರಿದಿನಗಳು, ಆರಾಧನೆ- ವರ್ಧಂತಿಗಳು, ಸಂಕಷ್ಟಿ, ಚಂದ್ರೋದಯ- ಸೂರ್ಯೋದಯಗಳು ಇವುಗಳ ಮಾಹಿತಿ ಗೃಹಿಣಿ ಆದಾಕಿಗೆ ಅವಶ್ಯ ಇರಬೇಕಲ್ರಿ.ಅದಕ್ಕ ಅಡುಗೆಮನ್ಯಾಗೊಂದು ಕ್ಯಾಲೆಂಡರ್ ಇದ್ರ ಅದರ ಮೇಲೆ ಕಣ್ಣು ಹಾಯಕೋತ ಇರ್ತದ. ಇರಲಿಕ್ಕಂದ್ರ ಏಕಾದಶಿ ಮುಂಜಾನೆ ಘಂ ಅಂತ ಉಳ್ಳಾಗಡ್ಡಿ ಉಪ್ಪಿಟ್ಟು ತಯಾರಾಗಿ ಬಿಡುತದ. ಮರುದಿನದ ಹುಣ್ಣಿಮೆಗೆ ಕಾಯಿ ತರೋದು ಮರೆತು ಹೋಗ್ತದ. ಕುಲ ದೇವರ ತೇರು, ಮನೆಯ ಹೆಣ್ಣು ದೇವತೆಯ ಕಾರ್ತಿಕೋತ್ಸವ, ತೆಪ್ಪೋತ್ಸವ ಇವುಗಳೆಲ್ಲ ನೆನಪೇ ಉಳಿಯುವುದಿಲ್ಲ.
ಈ ಕ್ಯಾಲೆಂಡರ್ಗಳ ಬಹುಪಯೋಗ ನಿಮಗೂ ಗೊತ್ತೇ ಇರುತದ್ರಿ. ಅವಸರಕ್ಕ ಬೇಕಂದಾಗ ದಾರದ ಸಮೇತ ಸೂಜಿ, ಟಾಚನಿಗಳು ಸಿಗುವುದು ಇದೇ ಕ್ಯಾಲೆಂಡರಿನಾಗೇರಿ. ತಿಂಗಳ ವರವಿ ಹಾಲು -ಮೊಸರಿನ ಲೆಕ್ಕ, ಇಸ್ತ್ರಿ ಅವನಿಗೆ ಕೊಟ್ಟ ಬಟ್ಟೆಗಳು, ಅವನು ವಾಪಸ್ ಕೊಡಬೇಕಾದ ಚಿಲ್ಲರೆಯ ಲೆಕ್ಕ, ಯಾವುದೋ ಬ್ಲಡ್ ಟೆಸ್ಟ್, ದಂತ ವೈದ್ಯರ ಅಪಾಯಿಂಟ್ಮೆಂಟ್ ದಿನಾಂಕ, ಮಕ್ಕಳ ಶಾಲೆಯ ಪೇರೆಂಟ್ -ಮೀಟಿಂಗ್, ಪಿಕ್ನಿಕ್- ಗ್ಯಾದರಿಂಗು ಇವುಗಳ ದಿನಾಂಕಗಳು, ಯಾರದೋ ಮನೆಯ ಮದುವೆಯ ರಿಸೆಪ್ಶನ್, ಬಂಧುಗಳೊಬ್ಬರ ಸೊಸೆಯ ಶ್ರೀಮಂತದೂಟಕ್ಕೆ ಹೋಗಬೇಕಾಗಿರುವ ದಿನಾಂಕಗಳು, ಕಿರಾಣಿ ಖರೀದಿಸಿದ ದಿನ ಮತ್ತು ಅದರ ಟೋಟಲ್ ರೊಕ್ಕ ( ಯಾಕಂದ್ರೆ ಯಜಮಾನರು ಯಾವಾಗ ಕಿರಾಣಿ ತರಲು ಕರೆದರೂ “ಮನ್ನೀನ ತಂದಿದ್ದೆಲ್ಲಾ 20,000 ಕಿರಾಣಿ ಅಂತಿರ್ತಾರ. ಅವರಿಗೆ ಸಾಕ್ಷಿ ಸಮೇತ ಆ ಹಿಂದಿನ ಡೇಟ್, ದುಡ್ಡು ತೋರಿಸಬೇಕಲ್ರೀ ಅದಕ್ಕ) ಇನ್ನ ಕೆಲಸದ ಗದ್ದಲದಾಗ ಮರೆತು ಬಿಡಬಾರದಂತ ಮನೆಯವರ ಆಫೀಸಿನ ಟೂರಿನ ದಿನಾಂಕ, ತಿಂಗಳ ಮೊದಲೇ ತಮ್ಮ ಆಗಮನದ ಡೇಟ್ ತಿಳಿಸಿದ ಅತಿಥಿಗಳ ಆಗಮನದ ದಿನಾಂಕ, ಅವರ ಟ್ರೈನು, ಬೋಗಿ ನಂಬರ್, ಫ್ಲೈಟು, arrival time, ಟರ್ಮಿನಲ್ ಇತ್ಯಾದಿಗಳ ದಾಖಲಾತಿ ಎಲ್ಲಾ ಇಲ್ಲೇ ಈ ತೂಗಾಡೋ ಕ್ಯಾಲೆಂಡರಿನಲ್ಲೇ. ನಾದಿನಿಯ ಗಂಡ, ತಮ್ಮನ ಹೆಂಡತಿ, ಅಕ್ಕನ ಗಂಡ ಹೀಗೆ ಬಹಳ ಪ್ರಮುಖರಾದವರ ಹುಟ್ಟುಹಬ್ಬ, ಆನಿವರ್ಸರಿ ಮರೆತು ಬಿಡಬಹುದಾದ ಸಾಧ್ಯತೆಗಳೇ ಹೆಚ್ಚು. ಆ ಪ್ರಮಾದಗಳು ಆಗದಂಗ ತಪ್ಪಿಸಲಿಕ್ಕೆ ಈ ಕ್ಯಾಲೆಂಡರ್ ನಾಗ ಮಾರ್ಕ್ ಮಾಡಿ ಇಟ್ಟುಬಿಟ್ಟರ ಆಯ್ತ್ರಿ . ಇನ್ನ ಮನೆ ಕೆಲಸದಕಿ ತಗೊಂಡ ರಜಾ ದಿನಗಳು, ಅಕಿ ಅಡ್ವಾನ್ಸ್ ಆಗಿ ಇಸ್ಕೊಳ್ಳೋ ನೂರು ಇನ್ನೂರು ರೂಪಾಯಿಗಳ ಲೆಕ್ಕಕ್ಕೂ ಈ ಕ್ಯಾಲೆಂಡರ್ ಬೇಕ್ರಿ. ಇಲ್ಲ ಅಂದ್ರ ತಿಂಗಳದಾಗ ನಾಲ್ಕು ದಿನ ರಜಾ ಮಾಡಿ ಅಂತ ನಾನು, ಇಲ್ಲ ಎರಡೇ ದಿನ ಅಂತ ಅಕಿ ಹಾಕ್ಯಾಡೋದು ನಡೀತಿತ್ರೀ. ಆದ್ರ ಯಾವಾಗ ಈ ಕ್ಯಾಲೆಂಡರ್ನಾಗ ಅವೆಲ್ಲ ದಾಖಲಾಗಲಿಕ್ಕೆ ಶುರು ಆಯ್ತೋ ಆಗ ಇಂಥ ಪ್ರಸಂಗಗಳು ಕಡಿಮೆ ಆದ್ವು ಅನ್ರಿ. ಅಷ್ಟೇ ಅಲ್ರಿ ನಾನಂತೂ ಕೆಲವೊಂದು ಅರ್ಜೆಂಟ್, ಎಮರ್ಜೆನ್ಸಿ ಫೋನ್ ನಂಬರ್ ಗಳನ್ನು ಅದರ ಮೇಲೇ ಗೀಚಿರತೀನ್ರಿ. ಫೆಸಿಲಿಟಿ ಆಫೀಸ್, ಗ್ಯಾಸ್ ಸಿಲಿಂಡರ್ ಏಜೆನ್ಸಿ, ಮಿಕ್ಸಿ ರಿಪೇರಿಯವ, ರದ್ದಿ ಪೇಪರಿನವ, ಹೋಂ ಡೆಲಿವರಿ ಮಾಡುವ ಹತ್ತಿರದ ಕಿರಾಣಿ ಅಂಗಡಿಯವ, ಅರ್ಜಂಟಿಗೊದಗುವ ಆಟೋ ಚಾಲಕ, ಡ್ರೈಕ್ಲೀನಿನವ, ಟೇಲರ್, ಬ್ಯೂಟಿ ಪಾರ್ಲರ್ ದಕಿ.. ಹೀಂಗs ನೂರಾ ಎಂಟು ನಂಬರ್.. ಯಾಕ ನಗಲಿಕ್ಹತ್ತೀರೇನು? ಏಯ್ ನಿಮಗೇನ ಗೊತ್ತರೀ ಯಾವ ಟೈ ಮಿನಾಗ ಯಾರಾರ ನಂಬರ್ ಹರಕತ್ ಆಗಿಬಿಡತಾವ ಅಂತ. ಮೊಬೈಲ್ ನಾಗ ಸೇವ್ ಮಾಡಕೋಬಹುದಲಾ ಅಂತೀರೇನು ಅದರ ಕಥಿನೂ ಹೇಳತೀನಿ ತಡೀರಿ. ಮೊಬೈಲ್ ನಾಗ ನಮಗ ಬೇಕಂದಾಗ ಕೆಂಪು ಗೆರಿನೇ.. ಚಾರ್ಜೇ ಇರಂಗಿಲ್ಲ. ನೂರೆಂಟು ಗೇಮ್ಸ್ ಡೌನ್ಲೋಡ್ ಮಾಡಿಕೊಂಡು ಆಡಿ, U tube, google ಜನ್ಮವನ್ನೆಲ್ಲ ಜಾಲಾಡಿ ಬ್ಯಾಟರಿ ಲೋ ಅಂತ ತೋರಿಸಿದ ಕೂಡಲೇ ಎಲ್ಲಿ ಕೂತಿರತಾರೋ ಅಲ್ಲೇ ಅದನ್ನಿಟ್ಟು ಎದ್ದು ಮತ್ತೊಂದು ಅಪ್ಪನದೋ, ಅಜ್ಜನದೋ ಮೊಬೈಲ್ ಅನ್ವೇಷಣೆಗೆ ಹೊರಡೂದು ನಮ್ಮ ಮಕ್ಕಳ ಹುಟ್ಟು ಗುಣಾರೀ. ಎಷ್ಟರ ಬಯ್ಯರಿ, ತಿಳಿಸಿ ಹೇಳ್ರಿ ಏನು ಉಪಯೋಗ ಇಲ್ಲ ರೀ. ಹಿಂಗಾಗಿ ಮೊದಲು ಮೊಬೈಲ್ ಹುಡುಕುವ ಕೆಲಸ ಶುರು ಮಾಡಬೇಕ್ರಿ. ಸೋಫಾ ಸಂದ್ಯಾಗ, ಡೈನಿಂಗ್ ಟೇಬಲ್ ಚೇರ್ ಮ್ಯಾಲೋ, ಮಡಚಿಡಬೇಕು ಎಂದು ಗುಡ್ಡೆ ಹಾಕಿದ ಒಗೆದ ಬಟ್ಟೆಗಳ ರಾಶಿಯಲ್ಲೋ, ರಜಾಯಿಯ ಸುರುಳಿ, ತಲೆದಿಂಬಿನ ಕವರ್ ನಲ್ಲೋ, ಬಚ್ಚಲು ಮನೆಯ ಸಿಂಕಿನ ಬಳಿಯೋ ಎಲ್ಲಿ ಬೇಕಾದರೂ ಪರದೇಶಿಗತೆ ಅದು ಬಿದ್ದಿರಬಹುದಾದ ಸಾಧ್ಯತೆಗಳು ಹೆಚ್ಚರೀ. ಯಾರನ್ನೇ ಕೇಳ್ರಿ ‘ನಾ ನೋಡಿಲ್ಲ.. ಚಿನ್ನು ತಗೊಂಡಿದ್ಲು’, ‘ನಂಗೊತ್ತಿಲ್ಲ.. ಅಣ್ಣಾ ಪಬ್ಜಿ ಆಡಲಿ ಕ್ಹತ್ತಿದ್ದ’, ‘ಇಲ್ಲೇ ಚಾರ್ಜಿಗಿತ್ತು.. ಆಗಳೇ ನೋಡಿದ್ದೆ.’. ಇಂಥವೇ ಉತ್ತರಗಳು. ರಿಂಗ್ ಮಾಡಿದ್ರೆ ಪಾಪ ಗುಟುಕು ಜೀವ ಹಿಡಿದ ಅದಕ್ಕ ರಿಂಗ್ ಆಗುವ ತಾಕತ್ತೂ ಇರುವುದಿಲ್ಲ. ಕೆಲವೊಮ್ಮೆ ಅಂತೂ ನಾನು ಗೇಮ್ ಆಡಿದ್ರ ಬೈತೀನಿ ಅಂತ ಸೈಲೆಂಟ್ ಬೇರೆ ಮಾಡಿರತಾರ. ಹಿಂಗಂತ ಪಾಸ್ವರ್ಡ್ ಹಾಕಿಟ್ರೆ ಆ ನಂಬರು ಪ್ಯಾಟರ್ನ್ ಏನಿತ್ತು ಅಂತ ನಂಗs ನೆನಪಿರುವುದಿಲ್ಲರೀ. ಇನ್ನ ಯಾವುದರ ಡೈರಿನಾಗ ಬರೆದಿಟ್ಟುಕೊಂಡಿದ್ದರೂ ಆ ಡೈರಿ ಹುಡುಕಲಿಕ್ಕೆ ತಾಸು ಬೇಕು. ಯಾಕಂದ್ರ ಮಗಳು ಒಮ್ಮೆ ಅದನ್ನ ತನ್ನ rough note book ಮಾಡಿಕೊಂಡಿರತಾಳ. ಇನ್ನೊಮ್ಮೆ ಮಗ ರಾಯ ಯಾವುದೋ ಹಾಳಿನಾಗ ಯಾರಿಗೋ ಅಡ್ರೆಸ್ ಬರೀಲಿಕ್ಕೆ ಅಂತ ಅದನ್ನ ಪೇಪರ್ ಪ್ಯಾಡ್ ಗತೆ use ಮಾಡಿ ಎಲ್ಲೋ ಸೇರಿ ಸಿಟ್ಟು ಹೋಗಿರುತ್ತಾನೆ. ವೀಕೆಂಡ್ಗೆ ಮನೆಗೆ ಬಂದಿದ್ದ ನಾದಿನಿ ಮಗಳು ಅದನ್ನು ಡ್ರಾಯಿಂಗ್ ಬುಕ್ ಮಾಡಿಕೊಂಡು ಚಿತ್ರ ಗೀಚಿರತಾಳ. ಟೀಪಾಯ್ ಮೇಲಿದ್ರ ಯಾರೋ ಅದನ್ನು ಬಿಸಿ ಚಹಾ ಕಪ್ ಇಡಲಿಕ್ಕೆ ಕೋಸ್ಟರ್ ಗತೆ ಸಹ ಬಳಸಿರತಾರ. ಹೀಂಗಾಗಿ ಇವ್ಯಾವುದರ ಉಸಾಬರಿನೇ ಬ್ಯಾಡ ಅಂತ ‘ಅನ್ಯಥಾ ಶರಣಂ ನಾಸ್ತಿ.. ತ್ವಮೇವ ಶರಣಂ ಮಮ’ ಅಂತ ಈ ಕ್ಯಾಲೆಂಡರಿನ ಮೊರೆ ಹೋಗುವುದೊಂದೇ ದಾರಿ. ನಂಬಿದವರ ಕೈಬಿಡಲಾರದ ದೊಡ್ಡ ಗುಣ ಈ ನಮ್ಮ ಅಡಗಿಮನಿ ಕ್ಯಾಲೆಂಡರಿಗೆ ಅದರೀ.
ಡಿಸೆಂಬರ್ ತಿಂಗಳು ಬಂತಂದ್ರ ಈ ಕ್ಯಾಲೆಂಡರುಗಳ ವ್ಯಾಪಾರದ ಭರಾಟೆ ನೋಡಬೇಕ್ರಿ. ಎಲ್ಲಾ ಸ್ಟೇಷನರಿ ಹಾಗೂ ಪುಸ್ತಕ ಅಂಗಡಿಗಳೊಳಗ ನಾನಾ ನಮೂನಿ ಹೊಚ್ಚ ಹೊಸ ಕ್ಯಾಲೆಂಡರುಗಳು ಮನೆಮನೆಯ ಗೋಡೆಯನ್ನಲಂಕರಿಸಲು ಸಜ್ಜಾಗಿ ಕೂತಿರತಾವ. ವೆಂಕಪ್ಪ, ಹನುಮಪ್ಪ, ಶಿವ, ನರಸಿಂಹ, ಲಕ್ಷ್ಮಿ ಇತ್ಯಾದಿ ದೇವತೆಗಳ ಚಂದದ ಕ್ಯಾಲೆಂಡರ್ ಗಳು. ನಮ್ಮ ಬಾಲ್ಯಕಾಲದ ಎಲ್ಲಾ ಮನೆಯ ಪಡಸಾಲೆಗಳಲ್ಲಿ ಎಲ್ಲಾ ಪ್ರಮುಖ ದೇವತೆ ದೇವತೆಗಳು ಹಿಂಗ ಕ್ಯಾಲೆಂಡರಿನಾಗ ಜೋಕಾಲಿ ಆಡುತ್ತಿದ್ದರು. ನಾವು ಹೊರಹೋಗಲು ಚಪ್ಪಲಿ ಮೆಟ್ಟುವುದಕ್ಕಿಂತ ಮೊದಲು ತಪ್ಪದೇ ಈ ಜೀಕುವ ದೇವರಿಗೆ ಕೈಮುಗಿದೇ ಹೋಗುತ್ತಿದ್ವಿ. ಕೈ ಮುಗಿದೀದ್ದರೂ ಕಡೀಕೆ ಕಣ್ರೆಪ್ಪೆ ಮುಚ್ಚಿ ತೆಗೆದಾದರೂ ಸಾಂಕೇತಿಕ ನಮಸ್ಕಾರ ಸಲ್ಲಿಸಿಯೇ ಹೊರಗಡಿ ಇಡುತ್ತಿದ್ದು. ಎಲ್ಲ ದೇವಾನುದೇವತೆಗಳ ರೂಪ, ಮೈಬಣ್ಣ, ಅವರ ಆರು-ಮೂರು- ನಾಲ್ಕು ತಲೆಗಳು, ಚತುರ್ ಷಡ್ ಭುಜಗಳು,ಶಂಖ- ಚಕ್ರ- ಗದಾ- ತ್ರಿಶೂಲಾದಿ ಆಯುಧಗಳು, ಗರುಡ -ನಂದಿ- ನವಿಲು -ಇಲಿ ಇತ್ಯಾದಿ ಅವರ ಸ್ಪೆಸಿಫಿಕ್ ಆದ ವಾಹನಗಳು, ಅವರು ನುಡಿಸುವ ಕೊಳಲು, ವೀಣೆ ಇತ್ಯಾದಿ ವಾದ್ಯಗಳು,ಆಭರಣಗಳು, ಉಡುಗೆತೊಡುಗೆಗಳು ನಮ್ಮ ಅರಿವಿನ ವಲಯಕ್ಕೆ ತಲುಪಿದ್ದೇ ಈ ಕ್ಯಾಲೆಂಡರುಗಳಿಂದ. ಒಂದರ್ಥದಲ್ಲಿ ದೇವ ದರುಶನ ಮಾಡಿಸಿದ ಗುರು ಸ್ಥಾನ ಸಲ್ಲಬೇಕಿವಕ್ಕೆ. ಎಷ್ಟೋ ಚೆಂದದ ಕ್ಯಾಲೆಂಡರ್ ಗಳು ಕಟ್ ಹಾಕಿಸಿಕೊಂಡು ದೇವರ ಫೋಟೋ ಆಗಿ ಸೀದಾ ದೇವರ ಮನೆಗೆ ಬಡ್ತಿ ಪಡೆಯುತ್ತಿದ್ದವು. ಈಗಲೂ ನನ್ನ ಅಡುಗೆ ಮನೆಯಲ್ಲಿ ವಿರಾಜಮಾನವಾಗಿರುವ 2014ನೇ ಇಸ್ವಿಯ, ಬರ್ಮೀಂಗ್ ಹ್ಯಾಮಿನ ದೇವಸ್ಥಾನದ ಕ್ಯಾಲೆಂಡರಿನ ವೆಂಕಪ್ಪನ ಪಾದಸ್ಪರ್ಶದಿಂದಲೇ ನಮ್ಮ ದಿನಚರಿ ಆರಂಭ ಆಗುತ್ತದೆ. ಯಾಕಂದ್ರ ನಮ್ಮ ಕುಲದೈವರೀ ವೆಂಕಪ್ಪ. ನಾವೂ ಅವನ ಒಕ್ಕಲದವರೇ.. ಅಷ್ಟೇ ಅಲ್ಲ ಬಹಳಷ್ಟು ಸಾಮ್ಯ ಅವರೀ ನಮಗೂ ಅವಗೂ. ನಾವು ಎಲ್ಲರs ಹೊರಗೆ ಹೊಂಟ್ರ ಅವನ ಹಂಗ ಸಿರಿ -ಗರುಡ- ಶೇಷ- ವಾಯು- ಬ್ರಹ್ಮಾದಿಗಳ ಸುರವರ ಪರಿವಾರ ಸಮೇತ ಹೊಂಡಿತೀವ್ರಿ. ಕನಿಷ್ಠ ಪಕ್ಷ ಎಂಟು 10 ಮಂದಿ ಅಂತೂ ಇರಬೇಕು. ಹಿಂಗಾಗಿ ಖರೆ ಹೇಳ್ತಿನ್ರಿ ಮಂದಿ ನಮ್ಮನ್ನು ತಮ್ಮ ಮನೆಗೆ ಛಾಕ್ಕ ಸಹಿತ ಕರೀಲಿಕ್ಕೆ ಅಂಜತಾರ್ರೀ. ಮತ್ತ ಹತ್ತಾರು ಮೂಲಗಳಿಂದ ಸಾಕಷ್ಟು ಬೇಕಾದಷ್ಟು ಆದಾಯ ಇದ್ದರೂ ವೆಂಕಪ್ಪ ಸದಾ ಸಾಲಗಾರನೇ. ನಾವೂ ಹಂಗs ಆದಾಯದ ಸ್ರೋತ್ರಗಳೆಷ್ಟೇ ಇರಲಿ ನಮ್ಮ ಕ್ರೆಡಿಟ್ ಮುಗಿಯೋದೇ ಇಲ್ರೀ , ಹೋಂ ಲೋನ್, ಕಾರ್ ಲೋನ್, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಲೋನ್ ಎಷ್ಟೆಷ್ಟು ಪ್ರಕಾರದ ಲೋನ್ ಗಳು ಅವನೋ ಅಷ್ಟೆಲ್ಲಾ ತರ ಲೋನ್ಗಾರರು ನಾವು. ಇರಲಿ ಬಿಡ್ರಿ ವಿಷಯ ಎಲ್ಲಿಂದೆಲ್ಲೋ ಹೊಂಟತು ಕ್ಯಾಲೆಂಡರ್ ಬಿಟ್ಟು.
ಚಂದ ಚಂದ ನೆಯ ನೀಲಿ ಆಗಸ, ನೀಲಿ ಕಡಲು, ಬೆಟ್ಟ,ಹಸಿರು ವನಗಳು, ಬಣ್ಣಬಣ್ಣದ ಹೂಗಳಂಥ ನಿಸರ್ಗ ಸೌಂದರ್ಯದ ಕ್ಯಾಲೆಂಡರ್ ಗಳು, ಪ್ರಾಣಿ-ಪಕ್ಷಿಗಳ ಕ್ಯಾಲೆಂಡರ್ ಗಳು, ಮುದ್ದು ಮುದ್ದಾದ ಪುಟ್ಟ ಮಕ್ಕಳ ಕ್ಯಾಲೆಂಡರ್ ಗಳು, ರವಿವರ್ಮನ ಪೇಂಟಿಂಗ್ ಗಳ ಚಿತ್ರವಿರುವ ಕ್ಯಾಲೆಂಡರ್ ಗಳು, ಮೈಸೂರ ಅರಮನೆ, ತಾಜ್ಮಹಲ್, ಗೋಲ್ ಗುಂಬಜ್, ಹಂಪಿಯ ಕಲ್ಲಿನ ರಥವಿರುವಂತಹ ಐತಿಹಾಸಿಕ ಸ್ಮಾರಕಗಳ ಕ್ಯಾಲೆಂಡರ್ ಗಳು, ಸ್ವಾತಂತ್ರ್ಯ ಯೋಧರ, ಸಾಹಿತಿಗಳ, ಕವಿಗಳ ಕ್ಯಾಲೆಂಡರ್ ಗಳು, ಸಿನಿಮಾ ನಟ- ನಟಿಯರ ಕ್ಯಾಲೆಂಡರ್ ಗಳು, ತುಂಡುಡುಗೆಯಲ್ಲಿ ದೇಹಸಿರಿ ಪ್ರದರ್ಶಿಸುವ ರೂಪದರ್ಶಿಗಳ ಮಾದಕ ಕ್ಯಾಲೆಂಡರ್ ಗಳು ಓಹ್! ಎಷ್ಟೆಲ್ಲಾ ವೈವಿಧ್ಯಮಯ.. ಎಷ್ಟೋ ನಮಗೆ ಪ್ರಿಯವಾದ ನಟ ನಟಿಯರ, ಧೀಮಂತ ವ್ಯಕ್ತಿಗಳ, ನಿಸರ್ಗ ಚಿತ್ರಗಳ ಕ್ಯಾಲೆಂಡರ್ ಅನ್ನು ಪುಸ್ತಕ- ನೋಟ್ಬುಕ್ಕುಗಳಿಗೆ ಕವರ್ ಹಾಕಲು ಉಪಯೋಗಿಸಿದ್ದಿದೆ. ಬರೀ ಗೋಡೆಗೆ ತೂಗು ಹಾಕುವ ಕ್ಯಾಲೆಂಡರ್ಗಳಷ್ಟೇ ಅಲ್ಲ ಟೇಬಲ್ ಮೇಲೆ ಇಡಬಹುದಾದ ಕ್ಯಾಲೆಂಡರ್ ಗಳು ಇರ್ತಾವ. ಎಷ್ಟೋ ಬ್ಯಾಂಕು, ಎಲ್ಐಸಿ, ಪ್ರೈವೇಟ್ ಕಂಪನಿಗಳು ತಮ್ಮದೇ ಲೇಬಲ್ ನಡಿಯಲ್ಲಿ ಕ್ಯಾಲೆಂಡರ್ ಮಾಡಿಸುವುದು ಸರ್ವೇಸಾಮಾನ್ಯ. ಇನ್ನು ಕೆಲವೊಬ್ಬ ಸ್ಥಿತಿವಂತರು ತಮ್ಮ ಮದುವೆಯ, ಮಕ್ಕಳ ಚಿತ್ರಗಳನ್ನು ಒಳಗೊಂಡ ತಮ್ಮದೇ ಆದ ಕ್ಯಾಲೆಂಡರ್ ಮಾಡಿಸಿಕೊಂಡು ತಮ್ಮ ಬಂಗಲೆ ಅಂಥ ಮನೆಯ ಲಿವಿಂಗ್ ರೂಮ್ನಲ್ಲೋ, ಬೆಡ್ರೂಮ್ ನಲ್ಲೋ ಹಾಕಿರತಾರ.
ಮಜಾ ಅಂದ್ರ ಕ್ಯಾಲೆಂಡರಿನ ಮುಂಭಾಗದಷ್ಟೇ ಹಿಂಭಾಗವೂ ಅತ್ಯಂತ ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿರುತದ ಅನ್ನೋದು ನಿಮಗೂ ಗೊತ್ತೇ ಇರುತ್ತದ. ರಾಶಿ ಭವಿಷ್ಯ, ತಲೆನೋವಿನಿಂದ ಮೂಲವ್ಯಾಧಿ ತನಕ ಎಲ್ಲಾ ಜಡ್ಡುಗಳಿಗೂ ಮನೆಮದ್ದುಗಳು, ಗೋದಿ- ಜೋಳದಾಗ ನುಶಿ ಆದ್ರ, ಬ್ಯಾಳಿ- ಕಾಳಿನಾಗ ಬುರಬುರಿ, ಹಾರೋ ಹುಳ, ರವಾದಾಗ ಬಾಲ ಹುಳ ಆದರೆ ಏನು ಮಾಡಬೇಕು, ತಲ್ಯಾಗ ಹೇನು ಆದ್ರ ಏನು ಮಾಡಬೇಕು, ಮನ್ಯಾಗ ಜೊಂಡಿಗ್ಯಾ,ಹಲ್ಲಿ ಹಾವಳಿಯಾದ್ರ ಏನು ಮಾಡಬೇಕು, ಹೊಲದಾಗಿನ ಯಾವ ಬೆಳೀಗೆ ಯಾವ ಗೊಬ್ಬರ ಹಾಕಬೇಕು, ಮುಖದ ಮೇಲೆ ಮೊಡವಿಗಳಾದ್ರ.. ತಲೆ ಕೂದಲು ಉದುರಿದರ..ತ್ವಚೆ ಕಾಂತಿಹೀನವಾದ್ರಏನೇನೆಲ್ಲ ಮಾಡಬೇಕು?, ಗ್ರಹಣವಾದಾಗ ಏನು ತಿನ್ನಬೇಕು, ಯಾವಾಗ ತಿನ್ನಬೇಕು, ಏನೇನು ದಾನ ಕೊಡಬೇಕು ಎಲ್ಲದರ ವಿವರಣೆ ಇರತದ. ಹಲ್ಲಿ ಮೈಮೇಲೆ ಬಿದ್ರ, ಬೆಕ್ಕು ಅಡ್ಡ ಹೋದ್ರಾ , ನಾಯಿ ಊಳಿಟ್ಟರ, ಮನೆ ಮುಂದೆ ಆಕಳು ಸಗಣಿ ಹಾಕಿ ಹೋಗಿದ್ರ, ಬಲಗಣ್ಣು ಅದುರಿದ್ರ, ಎಡಗಾಲು ತುರಿಸಿದ್ರ.. ಹಿಂಗ ಹತ್ತು ಹಲವಾರು ಶಕುನ ಫಲಗಳು.. ಕನಸಿನಾಗ ತುಂಬಿದ ಕೊಡ ಬಂದ್ರ, ಹಾವು ಬಂದ್ರ, ದೇವರು ಬಂದ್ರ, ಸತ್ತ್ರ, ಎದ್ರ, ಬಿದ್ರ ಅಂತೆಲ್ಲ 108 ಸ್ವಪ್ನ ಫಲಗಳು.. ಮುಂಗಾರು ಹಿಂಗಾರು ಮಳೆ, ನಕ್ಷತ್ರಗಳ ವಿವರಣೆ, ಮಳೆಯ ಸಂಭವನೀಯತೆಗಳು.. ಕೃಷ್ಣಾರ್ಘ್ಯ ಮಂತ್ರ, ಕಾರ್ತಿಕ ಸ್ನಾನದ ಮಂತ್ರ, ನಷ್ಟವಸ್ತು ಸಿಗುವ ಕಾರ್ತವೀರ್ಯಾರ್ಜುನ ಮಂತ್ರ, ಲಗ್ನ ಮುಹೂರ್ತಗಳು, ಪ್ರಯಾಣಕ್ಕೆ ಶುಭ ತಿಥಿ, ಶುಭ ನಕ್ಷತ್ರಗಳ ವಿವರಣೆ , ವಾಸ್ತು ಪುರುಷ ತೇಜಿ ಮಂದಿ ಏನುಂಟು ಏನಿಲ್ಲ ನನಗಂತೂ ಹೊಸ ಕ್ಯಾಲೆಂಡರ್ ಬಂದೊಡನೆ ಅದರ ಹಿಂಪುಟಗಳನ್ನು ತಿರುಗಿಸಿ ನೋಡುವುದೇ ಅಲ್ಲಲ್ಲ ಓದುವುದೇ ಕೆಲಸ. ಈಗೀಗ ಮೊಬೈಲ್ನಾಗೂ ಆಯಾ ವರ್ಷದ ಕ್ಯಾಲೆಂಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ಬಟ್ಟೊತ್ತಿದರೆ ಸಾಕು ಎಲ್ಲ ಮಾಹಿತಿ ಪಡೆಯಬಹುದು. ಆದರೆ ಗ್ವಾಡಿಗೆ ಮಳಿ ಹೊಡೆದು ತೂಗು ಹಾಕಿದ ಆ ಕ್ಯಾಲೆಂಡರ್ ನ ಮಜಾ ಖಂಡಿತ ಅದರಾಗಿಲ್ಲ. ಯಾಕಂದ್ರ ನಾ ಈ ಹಿಂದೆ ಹೇಳಿದ ಸೂಜಿ ಚುಚ್ಚುವುದೇ ಮುಂತಾದ ಯಾವ ಬಹುಪಯೋಗಿ ಕೆಲಸಕ್ಕೂ ಅದು ಬರಂಗಿಲ್ಲ.
ಒಟ್ಟಿನಾಗ ಕ್ಯಾಲೆಂಡರ್ ನಮ್ಮ ನಿಮ್ಮೆಲ್ಲರ ಜೀವನದ ಒಂದು ಅವಿಭಾಜ್ಯ ಅಂಗ ಅನ್ನೂದರಾಗ ಎರಡು ಮಾತಿಲ್ಲ ಕಾಲ ದೇಶ ಯಾವುದರ ಇರಲಿ ಗ್ವಾಡಿ ಮೇಲೆ ಕ್ಯಾಲೆಂಡರ್ ಇರಲಿ ಅಂತ ಹೇಳುತ್ತಾ ನನ್ನ ಹರಟಿಗೆ ಮಂಗಳ ಹಾಡುತೀನಿ.