ಬಕಿಂಗ್ಹ್ಯಾಮ್ ಅರಮನೆಯಲ್ಲಿ ಗೌರವಿಸಲ್ಪಟ್ಟ ಕನ್ನಡಿಗ ಶುಶ್ರೂಷಕ -ಬಿ ಎಸ್ ತಿಪ್ಪೇಸ್ವಾಮಿ ಲೇಖನ

ಬಿ ಎಸ್ ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ ಅವರು ಮೂಲತಃ ಚನ್ನಗಿರಿ ತಾಲೂಕಿನ ಬಿಲ್ಲಹಳ್ಳಿಯವರು. ತಾವರೆಕೆರೆಯಲ್ಲಿ ತನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ ಮುಗಿಸಿ ಕುವೆಂಪು ವಿಶ್ವವಿದ್ಯಾಲಯದಿಂದ ನರ್ಸಿಂಗ್ ಪದವಿ ಗಳಿಸಿ ಭಾರತದಲ್ಲಿ ಹಲವು ವರ್ಷಗಳ ಶುಶ್ರೂಷಕರೆಂದು ಕೆಲಸ ಮಾಡಿ ಯುಕೆಗೆ ಬಂದು ಎರಡೂವರೆ ದಶಕಗಳಿಂದ ಯು ಕೆ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗ,  ರೆಸ್ಪಿರೇಟರಿ ಮತ್ತು ಟಿ. ಬಿ. ವಿಭಾಗಗಳಲ್ಲೂ ಅನೆಕ ವರ್ಷಗಳ ಅನುಭವವಿದೆ. ಅಲರ್ಜಿ ಶುಶ್ರೂಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಸದ್ಯ ಹಾಮರ್ಟನ್ NHS ಆಸ್ಪತ್ರೆಯಲ್ಲಿ ಸ್ಪೆಷ್ಯಾಲಿಸ್ಟ್ ಅಲರ್ಜಿ ಲೀಡ್ ನರ್ಸ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದವರು, ಕನ್ನಡ ಬಳಗ ಯು ಕೆ ದಲ್ಲೂ ಸೇವೆ ಸಲ್ಲಿಸಿದ ಉತ್ಸಾಹಿ ಕನ್ನಡಿಗರು ಇವರು. ಲಂಡನ್ನಿನ ಬಕಿಂಗ್ ಹ್ಯಾಮ್ ಪ್ಯಾಲಸ್ ವತಿಯಿಂದ ಬಾಲ್ರೂಮಿನಲ್ಲಿ ಔತಣಕೂಟಕ್ಕೆ ಆಮಂತ್ರಣ ಸಂಪಾದಿಸಿದ ಆಯ್ದ ಶುಶ್ರೂಷಕರುಗಳಲ್ಲಿ ಇವರು ಒಬ್ಬರು ಎನ್ನುವದು ಹೆಮ್ಮೆಯ ವಿಷಯ. (ಸಂ)


ಭಾವನೆಯ ಸುಳಿಯಲ್ಲಿ ನನ್ನದೊಂದು ಪಯಣ -ಬಿ ಎಸ್ ತಿಪ್ಪೇಸ್ವಾಮಿ 

ಎಂದಿನಂತೆ ೧೧ನೇ ಅಕ್ಟೋಬರ್ ೨೦೨೩ರಂದು ಕ್ಲಿನಿಕ್ ಮುಗಿಸಿ ಸಂಜೆ ಸುಮಾರು ೪ ಘಂಟೆಗೆ ಕೆಲಸದ  ಇಮೇಲ್ ಪರಿಶೀಲಿಸುತ್ತಿರುವಾಗ   ರೂತ್ ಶಿವನೇಶನ್, ನಮ್ಮ  ಸಿಬ್ಬಂದಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಿಂದ ಒಂದು ಇಮೇಲ್ ಸಂದೇಶ ಕಂಡು ನನಗೆ ನಂಬಲಾಗಲಿಲ್ಲ. ನನ್ನ ಜೊತೆಗಿದ್ದ ಇಬ್ಬರು ಸಹೋದ್ಯೋಗಿಯರಿಂದ ಆ ಇಮೇಲ್ ಪುನರ್ ಪರಿಶೀಲಿಸಿ ಸಂದೇಶ ಖಚಿತವೆಂದು ಖಾತ್ರಿಯಾಯ್ತು. ರೂತ್ ನ ಇಮೇಲ್ ಪ್ರಕಾರ ನಾನು ೧೪ ನವೆಂಬರ್ ೨೦೨೩ರಂದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ದೇಶದ ರಾಜರಾದ ಗೌರವಾನ್ವಿತ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ರವರು  ಬ್ರಿಟನ್ನಲ್ಲಿ ನೆಲೆಸಿರುವ ಅಂತರರಾಷ್ಟ್ರೀಯ ಶುಶ್ರೂಷಕರಿಗೆ ಏರ್ಪಡಿಸಿದ್ದ ಔತಣಕೂಟದ ಆಮಂತ್ರಣವಾಗಿತ್ತು.  ನನಗೇಕೆ ಈ ಆಮಂತ್ರಣ? ಎಂದು ರುತ್ ಗೆ ಮರು ಪ್ರಶ್ನಿಸಿದೆ. ಅದಕ್ಕುತ್ತರಿಸಿದ ರುತ್, ಅಂತರರಾಷ್ಟ್ರೀಯ ಶುಶ್ರೂಷಕರಿಗೆ ನೀನು ಇದುವರೆವಿಗೂ ಸಲ್ಲಿಸಿರುವ ಸೇವೆಗೆ ಬ್ರಿಟನ್ ರಾಜರಿಂದ ಇದೊಂದು ವಿಶೇಷ ಕೊಡುಗೆ ಎಂದರು. ನನಗೆ ಆನಂದ ತಡೆಯಲಾಗದೆ ಕಣ್ಣೀರು ತಾನಾಗಿಯೇ ಹರಿಯತೊಡಗಿದವು. ನವೆಂಬರ್ ೧೪ರಂದು ದೀಪಾವಳಿ ಹಬ್ಬವಿದೆ, ನಮ್ಮ ಅಪ್ಪಾಜಿ ಅಗಲಿದ ನಂತರ ಇದು ಅವರ ಮೊದಲನೇ ಹಿರಿಯರ ಪೂಜೆ, ಅವರ ಪೂಜೆ ಮಾಡಲು ತಂದೆಯ ಶಿವಲಿಂಗ ಕರಡಿಗೆ ಧರಿಸಿದ್ದ ಹಿರಿಯ ಮಗನಾಗಿ ನಾನು ನಿರ್ಧರಿಸಿ ಕೇವಲ ೭ ದಿನಗಳ ಮುಂಚೆ ಲಂಡನ್ನಿಂದ ಬೆಂಗಳೂರಿಗೆ ನವೆಂಬರ್ ೧೦ರಂದು ಪ್ರಯಾಣಿಸಲು ವಿಮಾನದ ಟಿಕೆಟ್ ಖರೀದಿಸಿದ್ದೆ. ನಾ ಬರುವ ವಿಷಯ ಅಮ್ಮನಿಗೆ ಮುಂಚೆ ತಿಳಿಸಿರಲಿಲ್ಲವಾದರೂ ಅರಮನೆಯ ಆಮಂತ್ರಣ ಕಂಡೊಡನೆ ಅಮ್ಮ ಹಾಗೂ ತಮ್ಮನೊಂದಿಗೆ ಈ ವಿಷಯ ಹಂಚಿಕೊಂಡೆ. ಅವರಿಬ್ಬರೂ ಒಂದೇ ಉತ್ತರ ಕೊಟ್ಟು “ರಾಜ ಮನೆಯ ಆಮಂತ್ರಣ ಜೀವನದಲ್ಲಿ ಸಿಗುವ ಏಕೈಕ ಅವಕಾಶ”, ನಿನ್ನ ತಂದೆ ಇದ್ದಿದ್ದರೆ ಅವರು ಅದೆಷ್ಟೋ ಸಂತೋಷಗೊಳ್ಳುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜರನ್ನು ಭೇಟಿಯಾಗಿ ಬಾ, ಜೊತೆಗೆ ಶಿವಲಿಂಗ ಧರಿಸಿ ಹೋಗು. ಆಗ ನಿನ್ನ ತಂದೆ ನಿನ್ನೊಡನೆಯೇ ಇದ್ದಾರೆ ಎಂಬ ಅನುಭವದ ಜೊತೆಗೆ ಅವರ ಆತ್ಮಕ್ಕೆ ನೀನು ಸಲ್ಲಿಸುವ ಅತ್ಯಂತ ಶ್ರೇಷ್ಠ ಮಟ್ಟದ ಗೌರವ ಎಂದರು. ಅವರ ಮಾತು ಕೇಳಿ ನನ್ನ ಭಾವುಕತೆ ಇನ್ನೂಮಿಗಿಲೇರಿತು. ಸಂಜೆ ಸುಮಾರು ೬ ಘಂಟೆಯಾಗಿತ್ತು. ನನ್ನ ಆತ್ಮೀಯ ಗೆಳೆಯರಿಗೆ ಹಾಗೂ ಸಹೋದ್ಯೋಗಿಗಳೊಡನೆ ಈ ವಿಷಯವನ್ನು ಹಂಚಿಕೊಂಡೆ. ಅವರೆಲ್ಲರೂ ತುಂಬಾ ಸಂತೋಷದ ಜೊತೆಗೆ ನನ್ನ ೨೩ ವರ್ಷಗಳ ಕಾಲ ಬ್ರಿಟನ್ನಲ್ಲಿ ನೆಲೆಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶುಶ್ರೂಷಕರಿಗೆ, ಅಧಿಕೃತವಾಗಿ ಭಾರತದಲ್ಲಿ ನಾನು ಹಮ್ಮಿಕೊಂಡ ನನ್ನ ಹಲವಾರು ಕಾರ್ಯಕ್ರಮಗಳನ್ನು ಹೆಸರಿಡಿದು ಶ್ಲಾಘಿಸುತ್ತ “ಈ ಗೌರವಕ್ಕೆ ನೀನು ಅತ್ಯಂತ ಅರ್ಹತೆಯುಳ್ಳವನು” ಎಂದು ಪ್ರೋತ್ಸಾಹಿಸಿದರು.

ಬ್ರಿಟನ್ನಿನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಭಾರತದ ಶುಶ್ರೂಷಕರು (Nurses)

ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಸುಮಾರು ೭ ಲಕ್ಷಕ್ಕೂ ಹೆಚ್ಚು  ಶುಶ್ರೂಷಕರು ಪ್ರತಿ ವರ್ಷ ಪದವಿಗಳಿಸಿ, ಪ್ರಪಂಚದಲ್ಲೇ ಅತಿ ಹೆಚ್ಚು ಶುಶ್ರೂಷಕರು ಹೊರಹೊಮ್ಮುವ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯವಾದರೂ ಸಹ ಅವರಲ್ಲಿ ೧೦ಕ್ಕೆ ೮ ಜನರು ಹೊರರಾಷ್ಟ್ರಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಬ್ರಿಟನ್ನಷ್ಟೇ ಜನ ಸಂಖ್ಯೆ ಇದೆ. ೬ ಕೋಟಿ ಜನ ಸಂಖ್ಯೆ ಇರುವ ಕರ್ನಾಟಕದ ಸರ್ಕಾರೀ ಆಸ್ಪತ್ರೆಗಳಲ್ಲಿ ಹಾಲಿ ಸೇವೆ ಸಲ್ಲಿಸುವ ಶುಶ್ರೂಷಕರ ಸಂಖ್ಯೆ ೧೫ ಸಾವಿರವಾದರೆ ಅಷ್ಟೇ ಜನಸಂಖ್ಯೆ ಇರುವ ಬ್ರಿಟನ್ನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಸುಮಾರು ೬ ಲಕ್ಷಕ್ಕೂ ಅಧಿಕ ಶುಶ್ರೂಷಕರು ಕೆಲಸದಲ್ಲಿದ್ದಾರೆ. ಈ ೬ ಲಕ್ಷದಲ್ಲಿ ಶೇಕಡಾ ೧೫-೨೦ರಷ್ಟು ಶುಶ್ರೂಷಕರು ಭಾರತೀಯ ಮೂಲದವರು ಎಂಬುದು ಹೆಮ್ಮೆ ಎನಿಸದರೂ, ನಾಡಿನಲ್ಲಿ ಅವಕಾಶಗಳ ಕುಂದು ಕೊರತೆ, ಅತಿ ಕಡಿಮೆ ಸಂಬಳ, ಶುಶ್ರೂಷಕರಿಗೆ ಸಮಾಜದಲ್ಲಿರುವ ಕಳಪೆ ಮನ್ನಣೆ, ಸರಬರಾಜು ಹಾಗೂ ಸಲಕರಣೆಗಳ ಕೊರತೆ, ಪುರಾವೆ ಆಧಾರಿತ ಅಭ್ಯಾಸಗಳ ಕೊರತೆ, ವೈದ್ಯರ ಪ್ರಾಬಲ್ಯ ಹಾಗೂ ಶುಶ್ರೂಷಕರಿಗೆ ಆಸ್ಪ್ರತ್ರೆಗಳಲ್ಲಿ ಆಡಳಿತಾಧಿಕಾರಿಗಳಾಗುವ ಅವಕಾಶಗಳ ಕೊರತೆ ಇವೆಲ್ಲವೂ ಕೂಡ ಪ್ರತಿಯೊಬ್ಬ ಭಾರತೀಯ ಶುಶ್ರೂಷಕರು ಅನುಭವಿಸುವ ಸತ್ಯ ಸಂಗತಿ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಕಳೆದ ೨೦ ವರ್ಷಗಳಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಶುಶ್ರೂಷಕರಿಗೆ ಹಾಗೂ ಶುಶ್ರೂಷಕ ವಿದ್ಯಾರ್ಥಿಯರಿಗೆ ತಮ್ಮವೃತ್ತಿಪರ ಜೀವನವನ್ನು ಹೇಗೆ ಸುಧಾರಿಸುವುದು, ಪುರಾವೆ ಆಧಾರಿತ ಅಭ್ಯಾಸಗಳನ್ನು ಹೇಗೆ ಜಾರಿಗೆ ತರುವುದು, ವೃತ್ತಿಯಲ್ಲಿ ನಾಯಕತ್ವ ಅವಕಾಶಗಳನ್ನು ಹೇಗೆ ಕಲ್ಪಿಸಿಕೊಳ್ಳಬಹುದು, ಸಮಾಜದಲ್ಲಿ ಆರೋಗ್ಯದ ಸುಧಾರಣೆ ತರಲು ಶುಶ್ರೂಷಕರ ಪಾತ್ರವೇನೆಂಬುದನ್ನು ಕುರಿತು ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದೇನೆ. ಇದಕ್ಕೆ ನನ್ನಸ್ಥಳೀಯ ಹಾಗೂ ಭಾರತೀಯ ಮೂಲದ ಸಹೋದ್ಯೋಗಿಗಳೂ ಸಹ ಸಾಕಷ್ಟು ಸಹಕರಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಹೊಸದಾಗಿ ವೃತ್ತಿ ಆರಂಭಿಸುವ ಪ್ರತಿ ಅಂತರರಾಷ್ಟ್ರೀಯ ಶುಶ್ರೂಷಕರಿಗೂ ಸಹ ನನ್ನ ವೈಯುಕ್ತಿಕ ಮಟ್ಟದಲ್ಲಿ ಇಲ್ಲಿ ನೆಲೆಸಲು ಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ, ದೇಶದ ರೀತಿ ನೀತಿಗಳ ಬಗ್ಗೆ, ಆರೋಗ್ಯ ಹಾಗೂ ಸುರಕ್ಷತೆ ಬಗ್ಗೆ ಪ್ರತಿ ತಿಂಗಳೂ ಮುಖಾಮುಖಿ ಭೇಟಿಯಾಗಿ ತಿಳಿಸುತ್ತೇನೆ.  ಕೋವಿಡ್ ಅವಧಿಯಲ್ಲಿ, ಸ್ಥಳೀಯ ಹಾಗೂ ಭಾರತೀಯ ಸಹೋದ್ಯೋಗಿಗಳು ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ ಸುಮಾರು ನೂರಕ್ಕೂ ಹೆಚ್ಚು ಕೋವಿಡ್ ರೋಗಿಗಳನ್ನು ಮನೆಯಲ್ಲಿಯೇ ಚಿಕಿತ್ಸೆ ಕೊಟ್ಟು  ಗುಣಮುಖರಾಗುವವರೆಗೂ ದೂರವಾಣಿ ಕರೆಗಳ ಮೂಲಕ ಸಲಹೆ ನೀಡುವುದರ ಜೊತೆಗೆ ಅವರು ಸಾಂಕ್ರಾಮಿಕ ರೋಗದಿಂದಾದ ಮಾನಸಿಕ ಖಿನ್ನತೆಯಿಂದ ಹೊರಬರಲು  ಅತ್ಮಸ್ಥೈರ್ಯ ತುಂಬಿದ್ದೆವು.

ನನ್ನ ಪಯಣ

ಚಿಕ್ಕಂದಿನಿಂದಲೂ ಹಿರಿಮಗನಾಗಿ ನನ್ನ ತಂದೆ ಪಟ್ಟ ಪರಿಶ್ರಮಗಳು ಹಲವಾರು. ಕಡುಬಡತನದ ಕುಟುಂಬದಲ್ಲಿ ಬೆಳೆದ ನನ್ನ ತಂದೆ ಅವರ ಕುಟುಂಬದಲ್ಲಿಯೇ ಮೊದಲನೇ ಪದವೀಧರರಾಗಿ ಒಡಹುಟ್ಟಿದವರೆಲ್ಲರನ್ನು ಆರ್ಥಿಕವಾಗಿ ಪ್ರೋತ್ಸಾಹಿಸಿ ವೃತ್ತಿಪರರನ್ನಾಗಿ ಅಲ್ಲದೆ, ಅವರನ್ನು ಕೌಟುಂಬಿಕವಾಗಿ ನೆಲೆಸಲು ಪಟ್ಟ ಕಷ್ಟಗಳನ್ನು ನೋಡುತ್ತಲೇ ಕಳೆದಿತ್ತು ನನ್ನ ಬಾಲ್ಯ ಹಾಗೂ ಪ್ರೌಡಾವಸ್ಥೆ. ಚನ್ನಗಿರಿ ತಾಲೂಕು, ತಾವರೆಕೆರೆಯಲ್ಲಿ ನನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ. ಹಟ್ಟಿಕಸ, ಹಸು, ಎಮ್ಮೆ ಸೆಗಣಿ ಬಾಚಿ, ದನಕರುಗಳಿಗೆ ಹುಲ್ಲು ನೀರು ಕುಡಿಸಿ ನಂತರ ಶಾಲೆಗೆ ಹೋಗಿ ಬಂದು, ಸಂಜೆ ಅಮ್ಮ ಕಟ್ಟಿಟ್ಟ ಹುಲ್ಲಿನ ಪೆಂಡಿಯೊಂದಿಗೆ ಹಿಂದಿರುಗಿ, ಅಪ್ಪಾಜಿ ಬೆಳೆಸಿದ ತರಕಾರಿ ಗಿಡಗಳಿಗೆ ನೀರುಣಿಸಿ, ನನ್ನ ಪಠ್ಯೇತರ ಕಾರ್ಯಗಳನ್ನು ಮುಗಿಸಿ ರಾತ್ರಿ ಊಟ ಮುಗಿಸಿ, ಅಪ್ಪನ ಕಾಲೊತ್ತುತ್ತ ಅವರ ಕಥೆಗಳನ್ನು ಕೇಳುತ್ತ ಮಲಗುವುದು ನನಗೆ ಈಗಲೂ ಸವಿನೆನಪು.

ಅವಿಭಕ್ತ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ  ತಂದೆಯವರು, ಶ್ರೇಷ್ಠ ಕೌಟುಂಬಿಕ ಹಾಗೂ ವೃತ್ತಿಪರ ಮೌಲ್ಯಗಳ ಜೊತೆಗೆ, ಒಳ್ಳೆಯ ಸಾಮಾಜಿಕ ನಿಲುವು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸಾಕಷ್ಟು ಶ್ರಮಿಸಿದ್ದರು. ಮಕ್ಕಳಿಗೆ ಆಸ್ತಿ ಬೇಡ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಎನ್ನುವ ತತ್ವವನ್ನ ಕಾರ್ಯರೂಪಕ್ಕೆ ತಂದ ನಮ್ಮ ತಂದೆ “ಸಫಾರಿ ಸಿದ್ದರಾಮಣ್ಣ” ಎಂದೇ ಹೆಸರುವಾಸಿಯಾಗಿದ್ದರು.. ಈ ಎಲ್ಲಾ ಪೀಠಿಕೆ ಏಕೆಂದರೆ, ತಂದೆಯವರ ಮಾತು ವೇದ ವಾಕ್ಯವೆಂದು ಅವರ ಹೇಳಿದ ದಾರಿಯಲ್ಲೇ ನಡೆದು ಬಂದೆ. ಅವರ ಹಾಗೂ ಅವರ ಪೂಜ್ಯ ಗುರುಗಳಾದ ದಿವಂಗತ ಶ್ರೀ ಬಿ ಜಿ ನಾಗರಾಜ್ ರವರ ಸಲಹೆಯಂತೆ ನನ್ನ ಶುಶ್ರೂಷಕ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ೧೯೯೮ ನೇ ಸಾಲಿನಲ್ಲಿ ಗಳಿಸಿದೆ. ನನ್ನ ವೃತ್ತಿಪರ ಶಿಕ್ಷಣ ಕರ್ನಾಟಕ ಶುಶ್ರೂಷಕ ಪರಿಷತ್ತಿನಲ್ಲಿ ನೋಂದಣಿಯಾದ ದಿನವೇ ನನಗೆ ಕೆಲಸದ ಪ್ರಸ್ತಾಪ ಪತ್ರದ ಜೊತೆಗೆ ೧೦ ದಿನಗಳ ಮುಂಗಡ ಸಂಬಳವನ್ನು ಒಂದು ಶುಶ್ರೂಷಕ ವಿದ್ಯಾಸಂಸ್ಥೆಯ ಅಧ್ಯಕ್ಷರು ನನ್ನ ತಂದೆಯ ಮುಂದೆಯೇ ನೀಡಿದಾಗ ನನಗಿಂತ ನನ್ನ ತಂದೆಯವರ ಆನಂದಕ್ಕೆ ಪಾರವೇ ಇಲ್ಲವಾಗಿತ್ತು. ಕೇವಲ ೬ ತಿಂಗಳು ಅನುಭವವಿದ್ದರೂ ಕೂಡ, ೨೦೦೦  ಇಸವಿಯಲ್ಲಿ ಒರಿಸ್ಸಾದಲ್ಲಿ ನಡೆದ ಚಂಡಮಾರುತ ದುರಂತದಲ್ಲಿ ವೈದ್ಯಕೀಯ ನೆರವು ನೀಡಲು ರಚಿಸಿದ ಮಣಿಪಾಲ ಆಸ್ಪತ್ರೆ  ವೈದ್ಯಕೀಯ ವಿಪತ್ತು ನಿರ್ವಹಣಾ ತಂಡದಲ್ಲಿ ನನ್ನನ್ನು ಆಯ್ಕೆ ಮಾಡಿದ್ದರು. ಆಗಲೂ ಸಹ ನಾನು ಮೇಲೆ ರೂತ್ ನ ಪ್ರಶ್ನಿಸಿದಂತೆ, ಮಣಿಪಾಲ ಆಸ್ಪತ್ರೆ, ಬೆಂಗಳೂರಿನ ನರ್ಸಿಂಗ್ ಡೈರೆಕ್ಟರ್ ಆಗಿದ್ದ ಶ್ರೀಮತಿ ಶ್ರೀದೇವಿ ವಾರಿಯರ್ ಅವರನ್ನು ಪ್ರಶ್ನಿಸಿದೆ “ನನಗಿಂತಲೂ ಹತ್ತಾರು ವರ್ಷ ಅನುಭವವಿರುವ ಹಿರಿಯ ಶುಶ್ರೂಷಕರಿರುವಾಗ ನನ್ನನ್ನೇಕೆ ಆಯ್ಕೆ ಮಾಡಿದ್ದೀರಿ?” ಎಂದೆ. ಅದುಕ್ಕುತ್ತರಿಸಿದ ಅವರು, ನಿನ್ನಲ್ಲಿರುವ ಅನುಭವಕ್ಕಿಂತ ನಿನಗಿರುವ ಅನುಕಂಪ  ಹಾಗೂ ವೃತ್ತಿಪರತೆ ನಿನಗೆ ಈ ಅವಕಾಶ ನೀಡಿದೆ ಎಂದರು. ಅವರ ಆ ಮಾತು ನನಗೆ ಹತ್ತಾನೆ ಬಲವನ್ನು ಅನುಗ್ರಹಿಸಿದಂತಾಯಿತು. ಒರಿಸ್ಸಾದ ೧೦ ದಿನಗಳ ಸೇವೆ ಇಂದಿಗೂ ಅವಿಸ್ಮರಣೀಯ. ನಮ್ಮೊಂದಿಗೆ ಭಾರತೀಯ ಸೇನೆಯ ಮುಖ್ಯಸ್ಥರು, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳು, ಒರಿಸ್ಸಾ ಆರೋಗ್ಯ ಸಚಿವರು ಹಾಗೂ ಅವರ ಕಾರ್ಯದರ್ಶಿಗಳು ಇಂತಹ ಮಹಾ ಗಣ್ಯವಕ್ತಿಗಳೊಡನೆ ದೈನಂದಿನ ಚಟುವಟಿಕೆಗಳ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರೊಡನೆ ಅದೇ ಸೇನಾ ಅತಿಥಿ ಗೃಹದಲ್ಲಿ ವಾಸ್ತವಿಸಿದ ನೆನಪು ಅಜರಾಮರ. ಅದೃಷ್ಟವೆಂದರೆ, ನಮಗೆ ಬೇಕಾದ ಎಲ್ಲಾ ಸಹಾಯ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ನೀಡಿದ್ದರಿಂದ  ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಗರಿಷ್ಟ ಸಂಖ್ಯೆಯಷ್ಟು ರೋಗಿಗಳನ್ನು ಚಿಕಿತ್ಸಿದ್ದಲ್ಲದೆ, ಅವರ ಕುಟುಂಬಗಳಿಗೆ ಬೇಕಾಗುವ ಊಟ ಹಾಗೂ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಮಾಡುವ ಸದಾವಕಾಶ ನಮಗೆ ದೊರಕಿತು. ಅಲ್ಲಿಂದ ಹಿಂದಿರುಗಿದಾಗ ನಮ್ಮ ತಂಡದ ಎಲ್ಲರನ್ನು ಸ್ವಾಗತಿಸುತ್ತಿರುವ ಒಂದು ಬ್ಯಾನರ್ ಮಣಿಪಾಲ ಆಸ್ಪತ್ರೆಯ ಮುಂದೆ ಪ್ರದರ್ಶಿಸಿಲಾಗಿತ್ತು.  ಅಲ್ಲಿನ ಸಾವು ನೋವಿನ ಘಟನೆಗಳನ್ನು ಹಾಗೂ ನಮ್ಮ ಅನುಭವವನ್ನು ಹಂಚಿಕೊಳ್ಳಲು ಸ್ವತಃ ಒರಿಸ್ಸಾದ ಆರೋಗ್ಯ ಸಚಿವರು ಬೆಂಗಳೂರಿಗೆ ಭೇಟಿ ನೀಡಿ ನಮ್ಮೆಲ್ಲರನ್ನೂ ಅವರ ಅತಿಥಿ ಗೃಹಕ್ಕೆ ಆಹ್ವಾನಿಸಿ, ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ನಮ್ಮೆಲ್ಲರ ಕರ್ತವ್ಯ  ನಿಷ್ಠೆಯನ್ನು ಶ್ಲಾಘಿಸಿದ್ದರು.

ಲಂಡನ್ನಿಗೆ ಹೊರಟ ಕನ್ನಡದ ಶುಶ್ರೂಷಕ

ಒರಿಸ್ಸಾದ ಅನುಭವ ಇನ್ನೂ ಹಸಿಯಿರುವಾಗಲೇ ಲಂಡನ್ ನಗರದಲ್ಲಿರುವ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಸಂದರ್ಶನಕ್ಕೆ ಆಮಂತ್ರಣ ಬಂದಿತ್ತು. ಅಂದು ಬೆಳಿಗ್ಗೆ ಯುಗಾದಿ ಹಬ್ಬದ ಸಲುವಾಗಿ, ನನ್ನ ವೇತನದಲ್ಲುಳಿಸಿದ  ೧೦,೦೦೦ ರೂಪಾಯಿಗಳನ್ನು ನನ್ನ ತಂದೆತಾಯಿಯರ ಕೈಲಿತ್ತು ನಮಸ್ಕರಿಸಿ ಹಬ್ಬದ ಆಚರಣೆಯಲ್ಲಿದ್ದಾಗ ಬೆಂಗಳೂರಿಂದ ದೆಹಲಿಗೆ ಹೊರಡಲು ಕರೆ ಬಂತು. ಕೇವಲ ೮ ತಿಂಗಳ ಅನುಭವದ     ನಾನು, ದೆಹಲಿಯ ಲೀ ಮೆರಿಡಿಯನ್ ಹೋಟೆಲ್ನಲ್ಲಿ ಸಂದರ್ಶನಕ್ಕೆ  ಎಂದು ಬಂದಿದ್ದ ೩,೫೦೦ ಶುಶ್ರೂಷಕರಲ್ಲಿ ಅತ್ಯಂತ ಕಡಿಮೆ ಅನುಭವಿಯಾಗಿದ್ದರೂ ಕೂಡ, ಬ್ರಿಟನ್ ದೇಶದಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷಿಯಾಗಿದ್ದೆ. ೩ ದಿನದ ಸಂದರ್ಶನದಲ್ಲಿ ೮೦ ಜನರ ಆಯ್ಕೆ ಮಾಡುವುದಾಗಿ ETI ಕಂಪನಿ ಡೈರೆಕ್ಟರ್ ಜಾನಿ ಭಂಡಾರಿಯವರು ತಿಳಿಸಿದ್ದರು. ಆದರೆ ಕೊನೆಗೆ ಅವರು ಆಯ್ಕೆ ಮಾಡಿದ್ದು ೮ ಜನ. ಅದರಲ್ಲಿ ನಾನು ಮೊದಲನೆಯವನು ಎಂದು ಹೋಟೆಲ್ ಸಭಾಂಗಣದಲ್ಲಿ ಎಲ್ಲರ ಮುಂದೆ ಧೃಡಪಡಿಸಿದರು ಜಾನಿ ಭಂಡಾರಿ. ಮತ್ತೊಮ್ಮೆ ಅದೇ ಪ್ರಶ್ನೆ, ನಾನೇ ಏಕೆ? ಜಾನಿ ಉತ್ತರಿಸಿದ್ದು “ನಿನ್ನಲ್ಲಿರುವ ಕೆಲಸದ ಬಗೆಗಿನ ಉತ್ಸಾಹ ಹಾಗೂ ಅದನ್ನು ಸಂದರ್ಶನದಲ್ಲಿ ಉದಾಹರಣೆಗಳೊಂದಿಗೆ ವಿವರಿಸಿದ ಬಗೆ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ವೆಂಡಿ ಹಿಕ್ಕಿ ಅವರಿಗೆ ತುಂಬಾ ಹಿಡಿಸಿದೆ. ನೀನು ನಿನ್ನೆಲ್ಲ ಸಹೋದ್ಯೋಗಿಗಳಿಗೆ ಸಂದರ್ಶನದಲ್ಲಿ ಹೇಗೆ ಉತ್ತರಿಸಬೇಕು ಎನ್ನುವುದಕ್ಕೆ ಮಾದರಿ” ಎಂದು ಎಲ್ಲರೆದುರು ಹಂಚಿಕೊಂಡರು.

೩ನೇ ಜುಲೈ ೨೦೦೦ ದಂದು ನನ್ನ ಶುಶ್ರೂಷಕ ವೃತ್ತಿ ಬ್ರಿಟನ್ನಲ್ಲಿ ಆರಂಭಿಸಿತ್ತು. ಭಾರತೀಯ ಹಾಗೂ ಫಿಲಿಫೈನ್ಸ್ ದೇಶದ ಶುಶ್ರೂಷಕರು ಸಾಕಷ್ಟು ಸಂಖ್ಯೆಯಲ್ಲಿ ಬ್ರಿಟನ್ಗೆ ಆಗಮಿಸಿದರು. ಮುಂದಿನ ೧೨ ತಿಂಗಳಲ್ಲಿ ನನ್ನ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ೭೦೦ ಶುಶ್ರೂಷಕರಲ್ಲಿ ೪೫೦ ಮಂದಿ ಮಣಿಪಾಲ ಆಸ್ಪತ್ರೆಯಿಂದ ಬ್ರಿಟನ್ಗೆ ಬಂದು ನೆಲೆಸಿದರು.  ಕಂಡರಿಯದ ನಾಡಿನಲ್ಲಿ, ಓದುವುದಕ್ಕಷ್ಟೇ ಸೀಮಿತವಾಗಿದ್ದ ಇಂಗ್ಲಿಷ್ ಭಾಷೆಯನ್ನು ಈಗ ಆಡು ಭಾಷೆಯಾಗಿ ಅರಗಿಸಿಕೊಳ್ಳಲು ಹರಸಾಹಸ ಪಡುವುದರ ಜೊತೆಗೆ, ಬ್ರಿಟನ್ನಿನ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಹೊಂದಿಕೊಳ್ಳಲು ಸಹಾಯಿಸಿದ ನನ್ನ ಇಲ್ಲಿನ ಸಹೋದ್ಯೋಗಿಗಳಿಗೆ ಎಂದಿಂದಿಗೂ ಚಿರಋಣಿ. ಅದೇ ರೀತಿ, ನಮ್ಮ್ಮೆಲ್ಲರ ಅನುಭವಗಳನ್ನು ಆಧಾರವಾಗಿರಿಸಿಕೊಂಡು, ಇಲ್ಲಿನ ನ್ಯಾಷನಲ್ ಹೆಲ್ತ್ ಸರ್ವಿಸ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಶ್ರಮಿಸಿದೆವು. ನಮ್ಮ  ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವ ಸಮಯದಲ್ಲಿ  ಸುಧಾರಣೆ, ವಾರ್ಡ್ನಲ್ಲಿ ಶುಶ್ರೂಷಕರ ನಿರ್ವಹಣೆಯಲ್ಲಿ ಸ್ವಾಯತ್ತತೆ, ನುರಿತ ಶುಶ್ರೂಷಕರು ತಮ್ಮ ಪದವಿ ಹಾಗೂ ಅನುಭವದ ಆಧಾರದ ಮೇಲೆ ಸ್ಪೆಷಲಿಸ್ಟ್ ನರ್ಸಿಂಗ್ ಹಾಗೂ ನರ್ಸ್ ಪ್ರಾಕ್ಟಿಷನರ್ ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಬೇಕಾಗುವ ಅರ್ಹತೆಗಳು ಹಾಗೂ ಅನುಭವಗಳನ್ನು ನಾನು ಹಲವಾರು ಸಹೋದ್ಯೋಗಿಗಳೊಂದಿಗೆ ಸ್ಥಳೀಯವಾಗಿ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಂಡಿದ್ದೇನೆ.

ಅರಸನ ಕೈ ಕುಲುಕಿಸಿದ ಸೆಗಣಿ ಬಾಚಿದ ಕೈಗಳು!

ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವನೆ ನನ್ನ ತಂದೆ ತಾಯಿಯಿಂದ  ಬಳುವಳಿಯಾಗಿ ಬಂದಿದೆ ಎಂಬುದು ನನ್ನ ಭಾವನೆ. ಆದ್ದರಿಂದ, ರಾಜರ ಅರಮನೆಯ ಆಮಂತ್ರಣ ನನಗೆ ಬಯಸದೆ ಬಂದ ಭಾಗ್ಯವಾದರೂ ಅದು ನನ್ನ ಗೌರವಯುತ ತಂದೆಗೆ ಅವರು ದಿವಂಗತರಾದ ನಂತರ ಅವರ ಪಾದಾರವಿಂದಗಳಿಗೆ ಅರ್ಪಿಸುವ ವಿಶೇಷ ಕೊಡುಗೆ. ಅಂದು ಅರಸರನ್ನು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಎರಡು ಬಾರಿ ಭೇಟಿಯಾಗಿ ಅವರ ಹ್ಯಾಂಡ್ ಶೇಕ್ ಮಾಡಿದ  ಕ್ಷಣ ನೆನೆದೊಡನೆ ನನ್ನೀ ಸೆಗಣಿ ಬಾಚಿದ ಕೈಗಳು ಅರಸನ ಕೈ ಕುಲುಕಿಸುವ ಮಟ್ಟಕ್ಕೆ ಮುಟ್ಟಿದ್ದು ಈ ಜೀವನದಲ್ಲಿ ನನಗೆ ಸಂಪೂರ್ಣ ಸಾರ್ಥಕತೆಯನ್ನು ಕಲ್ಪಿಸಿದೆ. ಅರಸರಿಗೆ ಹುಟ್ಟು ಹಬ್ಬದ ಶುಭಾಷಯಗಳನ್ನು ಹಾರೈಸಿ,  ಅರಸರಿಂದ “ನಿಮ್ಮ ಸೇವೆಗೆ ನನ್ನ ನಮನ” ಎಂಬ ನುಡಿಮುತ್ತುಗಳು ಅವರ ಬಾಯಿಂದ ಹೊಮ್ಮಿದಾಗ, ನನಗೆ ಅನಿಸಿದ್ದು ಅದು ಬರೀ ನನ್ನ ಭಾವನೆಗಳಷ್ಟೇ ಅಲ್ಲ ಅದು ಪ್ರತಿಯೊಬ್ಬ ಭಾರತೀಯ ಮೂಲದ ಶುಶ್ರೂಷಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಲ್ಲಿಸುವ ಸೇವೆಯ ಹೆಗ್ಗಳಿಕೆ ಹಾಗೂ ಹಿರಿಮೆ.

ರಾಜರ ಭೇಟಿ, ನನ್ನ ಬದುಕಿನಲ್ಲಿ “ಸಾರ್ಥಕತೆಯ ಕಾರ್ತಿಕೋತ್ಸವದಷ್ಟೇ” ಸಂತಸ ತಂದಿದೆ. ನನ್ನೀ ಯಶಸ್ಸಿನ ಕೀರ್ತಿಯನ್ನು ಈ ಜಗತ್ತಿಗೆ ಪರಿಚಯಿಸಿದ ನನ್ನ ತಂದೆತಾಯಿಯರಿಗೆ ಅರ್ಪಿಸುತ್ತ ನನ್ನ ಪೂಜ್ಯ ತಂದೆ ಸಫಾರಿ ಸಿದ್ದರಾಮಪ್ಪನವರಿಗೆ ಮತ್ತೊಮ್ಮೆ ನನ್ನ ನುಡಿನಮನಗಳೊಂದಿಗೆ….

ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ

ಮೂರನೆಯ ಸಾಲಿನಲ್ಲಿ ಲೇಖಕರು!

ಲಿಂಕ್ ಗಳು

ಬಕಿಂಗ್ ಹ್ಯಾಮ್ ಪ್ಯಾಲೇಸ್ ಅರಸರ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಿತಗೊಂಡ ಕೆಲವು ಲಿಂಕ್ ಈ ಕೆಳಗಿವೆ:

King’s birthday coverage: 

https://intranet.homerton.nhs.uk/news/allergy-lead-nurse-thippeswamy-represents-global-nursing-to-the-king-8514

2 thoughts on “ಬಕಿಂಗ್ಹ್ಯಾಮ್ ಅರಮನೆಯಲ್ಲಿ ಗೌರವಿಸಲ್ಪಟ್ಟ ಕನ್ನಡಿಗ ಶುಶ್ರೂಷಕ -ಬಿ ಎಸ್ ತಿಪ್ಪೇಸ್ವಾಮಿ ಲೇಖನ

  1. ತಿಪ್ಪೇಸ್ವಾಮಿಯವರು ತಮ್ಮ ಭಾವಪೂರ್ಣ ಲೇಖನದಲ್ಲಿ ತಮ್ಮ ‘ಸಾರ್ಥಕ್ಯದ ಸಾಧನೆಯಷ್ಟೇ’ ಅಲ್ಲ, ಅಲ್ಲಿಯ ವರೆಗೆ ತಲುಪಿದ ಪಯಣವನ್ನು ಸಹ ವಿವರಿಸಿ ತನ್ನನ್ನು ‘ಕಟೆದ ಶಿಲ್ಪಿ’ ತೀರ್ಥರೂಪರನ್ನು ನೆನೆದು ಶ್ರದ್ಧಾಂಜಲಿ ಅರ್ಪಿಸಿದ್ದು ಓದಿ ಎಲ್ಲ ಕನ್ನಡಿಗರಿಗೂ ಹೆಮ್ಮೆಯಾಗದೆ ಇಲ್ಲ. ಅದರಲ್ಲಿ ಪ್ರಾಮಾಣಿಕತೆ ಮತ್ತು ವಿನಮ್ರತೆ ಎದ್ದು ಕಾಣುತ್ತದೆ (ರುಥ್ ಮೇಗೆ ನನಗೇ ಏಕೆ ಆಮಂತ್ರಿಸಿದ್ದು? ಅಂತ ಕೇಳಿದ್ದು.) ತಮ್ಮ ಅನುಭವದೊಂದಿಗೆ ನರ್ಸಿಂಗ ವಿಷಯದ ಸ್ವಲ್ಪ ಅಂಕಿ ಸಂಖ್ಯೆಗಳನ್ನೂ ಕೊಟ್ಟು ನಮ್ಮ ತಿಳುವಳಿಕೆ ಹೆಚ್ಚಿಸಿದ್ದಾರೆ. ಅವರು ಇನ್ನೂ ಉತ್ತುಂಗಕ್ಕೆ ಏರಬೇಕೆಂದು ಹಾರೈಸುವೆ. ಸಾರ್ಥಕ್ಯದ ಕಾರ್ತೀಕೋತ್ಸವ ಇನ್ನೂ ಬಾಕಿ ಇದೆ; ಮುಂದೂ ಇದೆ ಅನ್ನುತ್ತಾ ತಮ್ಮ ಕಾಯಕವನ್ನು ಮುಂದುವರಿಸಲಿ. ಅಲ್ಪ ಸಮಯದಲ್ಲೇ ಬರೆದು ಕೊಟ್ಟದ್ದಕ್ಕೆ ಧನ್ಯವಾದಗಳು.

    Like

  2. ತಮ್ಮ ವೃತ್ತಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ರಾಜ ಮರ್ಯಾದೆ ಗಳಿಸಿದ ತಿಪ್ಪೇಸ್ವಾಮಿಯವರಿಗೆ ಹಾರ್ದಿಕ ಅಭಿನಂದನೆಗಳು.

    ಲೇಖನದಲ್ಲಿ ಅವರ ಪಿತೃ ಗೌರವ, ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮನೋಧರ್ಮ, ಕಾಯಕ ಶೃದ್ಧೆಗಳ ಫಲವನ್ನು ಸುಂದರವಾಗಿ ಮೂಡಿಸಿದ್ದಾರೆ.

    ಅವರ ಕಾರ್ಯತತ್ಪರತೆಗೆ ಸಮನಾಗಿ ಅವರಿಗೆ ಸಿಕ್ಕ ಪ್ರೋತ್ಸಾಹವನ್ನು ಕೂಡ ಅವರು ಎತ್ತಿ ತೋರಿದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲೆಂಬುದು ನನ್ನ ಹಾರೈಕೆ

    – ರಾಂ

    Like

Leave a comment

This site uses Akismet to reduce spam. Learn how your comment data is processed.