ಹಾಫ್ ಸರ್ಕಲ್+ಹಾಫ್ ಸರ್ಕಲ್ – ಪೂರ್ಣಿಮಾ ಭಟ್ಟ ಅವರು ಬರೆದ ಕಥೆ 

ಅನಿವಾಸಿ ಓದುಗರಿಗೆಲ್ಲ ನಮಸ್ಕಾರ,
ಈ ವಾರದ ಸಂಚಿಕೆಯಲ್ಲಿ ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರು ತಾವು ಬರೆದ ಕಥೆಯೊಂದನ್ನು  ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಾರೆ.ಪೂರ್ಣಿಮಾ ಅವರ ಹೊಸ  ಪುಸ್ತಕ ”ರಸಮಲಾಯಿ” ಇತ್ತೀಚಿಗೆ ಬಿಡುಗಡೆಯಾಗಿದೆ. ಅವರಿಗೆ ಹಾರ್ದಿಕ ಅಭಿನಂದನೆಗಳು.
ಜೊತೆಗೆ ಅವರ ಈ ಕಥೆಯನ್ನು ಓದುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು.ಈ ಕತೆ ಓದುವಾಗ ನಮ್ಮ ಸುತ್ತ ಮುತ್ತಲಿನ ಅದೆಷ್ಟೋ ಆಪ್ತ ಮುಖಗಳು, ಜಾಗಗಳು, ಸಂದರ್ಭಗಳು ಕಣ್ಣೆದುರು ಸುಳಿಯಬಹುದು. ಅದ್ಯಾರೋ ಒಮ್ಮೆಗೆ ನೆನಪಾಗಬಹುದು. ಎಲ್ಲೋ ಏನೋ ಕಳೆದು ಹೋದಂತೆ ಅನ್ನಿಸಿ, ಮತ್ತೆ ಸಿಕ್ಕಿತು ಅನ್ನಿಸಬಹುದು. ಕಾಡುವ ಕಥೆಯಿದು.ಕಥೆಯನ್ನು ಓದಿ ತಪ್ಪದೆ ತಮ್ಮ ಅನಿಸಿಕೆಗಳನ್ನು ತಿಳಿಸಿ.

– ಅಮಿತಾ

ಹಾಫ್‌ಸರ್ಕಲ್+ಹಾಫ್ ಸರ್ಕಲ್

  • ಪೂರ್ಣಿಮಾ ಭಟ್ಟ ಸಣ್ಣಕೇರಿ

‘ಹೇ ಪಾರೋ, ಹೇಗಿದ್ದೀಯೆ? ನಾನು ಬೆಂಗಳೂರಿನಲ್ಲಿದ್ದೇನೆ. ನಿಂಗೆ ಸಿಗಲೇಬೇಕು. ಯಾವಾಗ ಭೇಟಿಯಾಗೋಣ? ಡೇ, ಟೈಂ, ಪ್ಲೇಸ್ ಎಲ್ಲವೂ ಯುವರ್ ಛಾಯ್ಸ್’ ಎನ್ನುವ ಮೆಸೇಜು ಫೋನಿನ ಸ್ಕ್ರೀನಿನ ಮೇಲೆ ಬೆಳ್‌ಬೆಳಗ್ಗೆಯೇ ಕಂಡಾಗ ಪರಾಶರಿಗೆ ಅಚ್ಚರಿ, ಗಾಬರಿ, ಭಯ ಎಲ್ಲವೂ ಒಟ್ಟಿಗೇ ಆಯಿತು. ಇವಳು ಎಲ್ಲಿಂದ ಪ್ರತ್ಯಕ್ಷಳಾದಳಪ್ಪ ಎಂದುಕೊಳ್ಳುತ್ತಲೇ ಬಲ ಮಗ್ಗುಲಿಗೆ ಪೂರ್ತಿ ತಿರುಗಿ ಬಾತ್‌ರೂಂ ಕಡೆ ಹೆಜ್ಜೆ ಹಾಕಿದಳು. ಮೆಸೇಜ್ ಪೂರ್ತಿ ತೆರೆದು, ಅಲ್ಲಿರುವ ಅಕ್ಷರಕ್ಷವನ್ನೂ ನಿಧಾನವಾಗಿ ಅರಗಿಸಿಕೊಂಡು ಒಳಗೆಳೆದುಕೊಳ್ಳುವುದು ಒಂದು ಕಪ್ ಛಾ ಇಲ್ಲದೇ ಅಸಾಧ್ಯ ಎನ್ನಿಸಿತು. ಮೆಸೇಜನ್ನು ತೆರೆದೋದುವ ಒತ್ತಡದಿಂದಾಗಿ ಎರಡೂ ಕಿವಿ ಮತ್ತು ಮೆದುಳಿನ ನಡುವಿನ ಭಾಗ ಭುಗುಭುಗು ಎನ್ನುತ್ತಿದ್ದರೂ ಮಾಡಿದ ಛಾ, ಕಪ್ಪಿಗೆ ಬೀಳುವವರೆಗೆ ಆ ಮಿಡಿತವನ್ನು ಮನಸೋಇಚ್ಛೆ ಅನುಭವಿಸಿದಳು. ಈಗೊಂದು ಎಂಟ್ಹತ್ತು ವರ್ಷಗಳ ಕೆಳಗೆ ಪೂರ್ತಿ ತಪ್ಪಿಯೇ ಹೋದ ಲಿಂಕೊಂದು ಕುಣಿಕೆಯಾಗಿಯೋ, ಕೊಂಡಿಯಾಗಿಯೋ ಮತ್ತೊಮ್ಮೆ ಬೆಸೆಯಬಹುದೋ ಎನ್ನುತ್ತಲೇ ಮೊಬೈಲ್ ಅನ್‌ಲಾಕ್ ಮಾಡಿದಳು ಪರಾಶರಿ. ‘ಹೇ ಪಾರೋ’ ಎಂದು ಪ್ರೀತಿ ತೊಟ್ಟಿಕ್ಕುತ್ತಿರುವಂತೆ ಕರೆಯುವ ಹಕ್ಕು ಉಷೆಗೆ ಮಾತ್ರ ಇರುವಂಥದ್ದು. ಬೇಕಂತಲೇ ‘ಪಾರೋ’ ಎಂದು ಎಳೆದೆಳೆದು ಕರೆದು, ‘ದೇವದಾಸನ ಟೋನು ಬಂತೋ ಇಲ್ಲೋ’ ಅಂತ ಕೇಳಿ, ಹುಬ್ಬೇರಿಸಿ ಹಣೆಯ ಮೇಲೆ ನೆರಿಗೆಯ ಬಿಲ್ಲು ಮೂಡಿಸುವ ಉಷೆ. ಇಂಡಿಯನ್ ಸ್ಟೋರಿನಲ್ಲಿ ಸಿಕ್ಕ ವಾಪಿನ ಮಾವಿನಕಾಯಿಯ ಗೊಜ್ಜು ಮಾಡಿ, ಮಧ್ಯರಾತ್ರಿಯಲ್ಲಿ ಗಂಡನ್ನ ಹೊರಡಿಸಿಕೊಂಡು ನಮ್ಮನೆಗೆ ಬಂದು, ಅನ್ನದ ಜೊತೆ ಗೊಜ್ಜು ಕಲೆಸಿ ಈಗಿಂದೀಗ್ಲೇ ತಿನ್ನು ಎಂದು ತಾಕೀತು ಮಾಡಿದ ಉಷೆ. ಬರ್ಗರ್ ತಿನ್ನುವಾಗ ‘ಸುಟ್ ಹುಲ್ಲು, ತಂಬುಳಿ ಎಲೆಯನ್ನೆಲ್ಲ ತಿನ್ನೂಕೆ ಮೆಕ್‌ಡೊನಾಲ್ಡ್‌ಗೆ ಬರಬೇಕಾ’ ಎನ್ನುತ್ತಾ ಲೆಟ್ಟಸ್, ಸಲಾಡ್‌ಗಳನ್ನು ಪಕ್ಕಕ್ಕಿಟ್ಟ ಉಷೆ. ಪರದೇಶಿ ನೆಲದ ಪರಿಮಳ ನಮ್ಮೆಣಿಕೆಯಷ್ಟು ಘಮವಿಲ್ಲದಿದ್ದರೂ ದುರ್ನಾತವಂತೂ ಅಲ್ಲ ಎಂಬುದನ್ನು ಸಾದೃಶ್ಯವಾಗಿ ತೋರಿಸಿದ ಉಷೆ. ಎಷ್ಟೆಲ್ಲ ಅವತಾರದ ಉಷೆ, ಕಳೆದೇಹೋದಂತಿದ್ದಳು ಈ ಕೆಲವು ವರ್ಷಗಳು. ಅವಳ ಬಗ್ಗೆ ಧೇನಿಸುತ್ತಲೇ ಪರಾಶರಿ ಬೆಳಗಿನ ಕೆಲಸದ ಒತ್ತಡವನ್ನು ನಿಭಾಯಿಸಿದಳು. ಎಲ್ಲ ಚಾಕರಿಯಲ್ಲೂ ಕೈ ಕೂತು ಹೋಗಿದ್ದರಿಂದ ಮನಸ್ಸು ಇನ್ನೆಲ್ಲೋ ಇದ್ದರೂ ತೊಂದರೆಯಾಗುವಂತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪರಾಶರಿ ಬೇಕಂತಲೇ ಮನದ ಸುತ್ತ ಹಾಕಿಕೊಂಡಿರುವುದು ಮಾಯಕದ ಬೇಲಿ. ಬೇಲಿಯ ಕೀಲಿ ತೆಗೆಯುವ ಜಾದೂ ಅವಳಿಗೆ ಮಾತ್ರ ಗೊತ್ತು. ಪುಟಾಣಿ ಹಾಲಿನ ಜ್ಯೂಲಿಯೆಟ್ ಬಾಲ್ಕನಿಗಿರುವ ಗಾಜಿನ ಕಿಟಕಿಯೆಡೆಗೆ ಮುಖ ಮಾಡಿ ನಿಂತು ಇನ್ನೊಂದು ಬಾರಿ ಛಾ ಕುಡಿದಳು. ಜೇಪಿ ಆಫೀಸಿಗೆಂದು ರೆಡಿಯಾಗಿ ಬಂದು ಪಕ್ಕದಲ್ಲಿ ನಿಂತ. “ನೋಡು ಆ ಝೊಮೆಟೊ ಬೈಕ್‌ನ. ಕಳೆದ ಐದು ನಿಮಿಷದಲ್ಲಿ ನಾನು ನೋಡುತ್ತಿರುವ ಮೂರನೇ ಬೈಕಿದು. ಒಂದು ದಿನಕ್ಕೆ ಕನಿಷ್ಠ ನೂರು ಝೊಮೆಟೊ ಸ್ವಿಗ್ಗಿ ಡೆಲಿವರಿಗಳು ನಮ್ಮ ಅಪಾರ್ಟ್‌ಮೆಂಟಿಗೆ ಬರಬಹುದು ಅಲ್ವಾ? ತುಂಬಾ ವರೀಯಿಂಗ್ ಕಣೋ” ಕ್ಯಾಶುವಲ್ ಮಾತು ತೆಗೆದಳು, ಉಷೆಯ ಮೆಸೇಜಿನ ಬಗ್ಗೆ ಪೀಠಿಕೆ ಹೇಗೆ ಹಾಕಲಿ ಎಂದು ಲೆಕ್ಕಾಚಾರ ಹಾಕುತ್ತ. ಪರಾಶರಿಗೆ ಯಾವ ಬಗೆಯಲ್ಲಿ ದುವರೆಯಬೇಕೋ ಗೊತ್ತಾಗಲಿಲ್ಲ. ನಿನ್ನೆ ರಾತ್ರಿ ನಡೆದ ಗರಂ ಮಾತುಕತೆಯನ್ನು ಮರೆಸಲು ಈ ಯತ್ನವಾಗಿರಬಹುದು ಎಂಬ ವಿಚಾರ ಜೇಪಿಯ ಮನಸಲ್ಲಿ ಹೊಕ್ಕಿಬಿಟ್ಟರೆ ಎಂಬ ಭಾವನೆಯೂ ಸುಳಿದುಹೋಯಿತು.

ಸಣ್ಣಪುಟ್ಟ ಮನಸ್ತಾಪಗಳನ್ನು ವಾರಗಟ್ಟಲೆ ಎಳೆಯುವ ಹಂತವನ್ನು ಪರಾಶರಿ ಹಾಗೂ ಜೇಪಿ ಯಾವಾಗಲೋ ಮೀರಿಬಿಟ್ಟಿದ್ದಾರೆ. ಅರ್ಜೆಂಟಾಗಿ ತನ್ನ ಪೇಟಿಎಮ್ಮಿಗೆ ಹಣ ರವಾನಿಸುವಂತೆ ಎರಡು ಬಾರಿ ಹೇಳಿದ್ದರೂ ಜೇಪಿ ಕೆಲಸದ ಒತ್ತಡದಲ್ಲಿ ವಿಷಯವನ್ನೇ ಮರೆತಿದ್ದರಿಂದ ಹಿಂದಿನ ರಾತ್ರಿ ಇಬ್ಬರ ನಡುವೆ ಮಾತು ಬೆಳೆದಿತ್ತು. ನಿನ್ನೆಯ ಜಗಳವನ್ನು ಇಂದಿಗೆ ಮುಂದುವರಿಸುವ ಹುಕಿ, ಯೌವನ, ಜಿದ್ದು ಇಬ್ಬರಲ್ಲೂ ಇರಲಿಲ್ಲ. ಮನಸ್ತಾಪವನ್ನು ವೈಮನಸ್ಸನ್ನಾಗಿಸುವುದಕ್ಕಿಂತ ಅಲ್ಲಲ್ಲೇ ರಾಜೀ ಮಾಡಿಕೊಂಡು, ಮುಂದೊಂದು ದಿನ ಅವಕಾಶ ಸಿಕ್ಕಾಗ `ನೀನೊಮ್ಮೆ ಹೀಗೆ ಹೇಳಿದ್ದೆ. ಆಗ ನಾನು ಸುಧಾರಿಸಿಕೊಂಡಿದ್ದೆ. ಈಗ ನೀನೇನು ಮಾಡುವೆ ನೋಡು’
ಎನ್ನುವಂತಹ ಮಾತುಗಳು, ಕೃತಿಗಳು ಗಂಡಹೆಂಡಿರ ನಡುವೆ ಜಯದ ಭಾವವನ್ನು ಸ್ಥಾಯಿ ಮಾಡುವುವು ಎಂಬುದನ್ನು ಇಬ್ಬರೂ ಅರಿತಂತಿದ್ದರು. ತಿಳಿವಳಿಕೆ, ಸಮಾಧಾನ, ಮೆಚ್ಯೂರಿಟಿ ಇವೆಲ್ಲವೂ ನಲವತ್ತಾಗುತ್ತಿದ್ದಂತೆ ನಮಗೆ ಸಿಗುವ ಪರ್ಕ್ಸ್‌ ಎಂದು ಸಮಯ ಸಿಕ್ಕಾಗ ಇವರು ನಗುತ್ತಾರೆ.

ಜೇಪಿ ಆಫೀಸಿನ ಹಾದಿ ಹಿಡಿದ ಮೇಲೆ ಉಷೆಯ ಮೆಸೇಜನ್ನು ಪರಾಶರಿ ಮತ್ತೆ ತೆರೆದಳು. ಒಮ್ಮೆ ನಿಧಾನವಾಗಿ, ಮತ್ತೊಮ್ಮೆ ಜೋರಾಗಿ, ಇನ್ನೊಮ್ಮೆ ಒಳಬಾಯಿಯಲ್ಲಿ ಓದಿಕೊಂಡಳು. ಎರಡು ಶಬ್ದ ಬರೆಯುವುದು ಒರೆಸುವುದು ಮಾಡುತ್ತ ‘ಅರೇ, ಏನಿದು ಸರ್‌ಪ್ರೈಸ್?! ಖಂಡಿತ ಸಿಗುವ. ಸಂಜೆ ಫೋನ್ ಮಾಡಲೇ?’ ಎಂದು ರಿಪ್ಲೈ ಮಾಡಿದಳು. ಫೋನನ್ನು ಪಕ್ಕಕ್ಕಿಟ್ಟು ಕೌನ್ಸೆಲಿಂಗ್ ಸೆಂಟರಿಗೆ ಹೊರಡಲು ರೆಡಿಯಾದಳು.

ಈ ಹಂತದಲ್ಲಿ ಉಷೆ ಮತ್ತು ಪರಾಶರಿಯ ಪೂರ್ವಾಶ್ರಮದ ಕತೆಯನ್ನ ಹೇಳಲೇಬೇಕು. ಜೇಪಿಯನ್ನು ಮದುವೆಯಾಗಿ ಪರಾಶರಿ ಲಂಡನ್ನಿನ ಸಬ್‌ಅರ್ಬ್ ಊರೊಂದರಲ್ಲಿ ತಳ ಊರಿದ ಹೊಸತು. ಆ ಊರಲ್ಲಿನ ನೇಟಿವ್ ಇಂಗ್ಲಿಷರ ಮಧ್ಯೆ ಪರಾಶರಿಗೆ ಬೇಡವೆಂದರೂ ಕೀಳರಿಮೆ ಕಾಡುತ್ತಿತ್ತು. ಸಂವಹಿಸಲು ತೊಂದರೆ ಏನಿಲ್ಲದಿದ್ದರೂ ಚರ್ಮದ ಬಣ್ಣ ಕೂದಲಿನ ಮಾಟ ಮನಸಿಗೆ ಕಿರಿಕಿರಿ ಮಾಡುತ್ತಿತ್ತು. ಇಂತಹ ಒಂದು ಸಂಜೆಯೇ ಮನೆ ಹತ್ತಿರದ ದೊಡ್ಡ ಸೂಪರ್‌ಮಾರ್ಕೆಟ್ಟಿನಲ್ಲಿ ಉಷೆ ಸಿಕ್ಕಿದ್ದು. ಬಟ್ಟೆಗಳನ್ನು ಜೋಡಿಸಿಟ್ಟಿದ್ದ ಐಲಿನಲ್ಲಿ ನಿಧಾನಕ್ಕೆ ಓಡಾಡುತ್ತಿರುವಾಗ, ಅಚ್ಚಗನ್ನಡದ ಅದೂ ಊರ ಭಾಷೆಯಲ್ಲಿ ಫೋನಿನಲ್ಲಿ ಮಾತನಾಡುತ್ತಿರುವ ಉಷೆ ಕಾಣಸಿಕ್ಕಿದ್ದು. ಅವಳು ಫೋನಿನ ಸಂಭಾಷಣೆ ಮುಗಿಸುವವರೆಗೂ ಬಟ್ಟೆಯ ಹ್ಯಾಂಗರುಗಳನ್ನು ಸರಿಸುತ್ತ ನಿಂತಳು ಪರಾಶರಿ. ಮುಂದಾಗಿ ಮಾತನಾಡಿಸಿದಾಗ ಉಷೆ ಯಾವ ಬಡಿವಾರವನ್ನೂ ತೋರದೆ ಆತ್ಮೀಯತೆಯನ್ನು ಹರವಿಟ್ಟಳು. ಆಗ ಅಲ್ಲಿ ಹುಟ್ಟಿದ ಸ್ನೇಹದ ಬೆಳಕು ಲಂಡನ್ನಿನ ಮಬ್ಬು ಆಕಾಶವನ್ನು ಕೋರೈಸುವಂತೆ ಮಾಡಿತು. ಒಳ್ಳೆಯ ಎತ್ತರದ, ನೀಟುಪಾಟಾದ ಹೆಣ್ಣು ಉಷೆ. ಎಡಗಣ್ಣನ್ನು ಯಾವುದೋ ಒಂದು ಕೋನದಲ್ಲಿ ತುಸು ಕೋರೆ ಮಾಡಿ ನೋಡುವ ಉಷೆಯ ಆ ನೋಟವೇ ಅವಳ ಕೋಲು ಮುಖಕ್ಕೆ ವಿಶೇಷ ಕಳೆ ಕೊಡುತ್ತಿತ್ತು. ತಾನುಡುವ ಬಟ್ಟೆಬರೆಯ ಬಗ್ಗೆ ಎಷ್ಟು ಕಾಳಜಿ ಮಾಡುವಳೋ ಅದರ ದುಪ್ಪಟ್ಟು ಅಚ್ಚೆ ತನ್ನ ಸುತ್ತಮುತ್ತಲಿನವರ ಮೇಲೆ. ಬೆನ್ನ ಮಧ್ಯದವರೆಗಿರುವ ಒತ್ತಾದ ಗುಂಗುರು ಕೂದಲನ್ನ ಅಲ್ಲಿನ ಚಳಿಗೆ ತುಪ್ಪಳದಂತೆ ಬಳಸುತ್ತಿದ್ದಳು ಎಂದು ಈಗ ಎನ್ನಿಸುತ್ತಿದೆ.

ಉಷೆ ಮತ್ತು ಅವಳ ಗಂಡ ವಿನಯ ಪೈ, ಲಂಡನ್ನಿಗೆ ಪರಾಶರಿ ಜೇಪಿಯಷ್ಟು ಹೊಸಬರಾಗಿರಲಿಲ್ಲ. ಉಷೆಯಂತೂ ಆ ಊರನ್ನ ತನ್ನ ತವರುಮನೆ ಹಳದೀಪುರದಂತೆಯೇ ಪ್ರೀತಿಸುವವಳು ಮಾತ್ರವಲ್ಲ ಅದೇ ಭಾವನೆ ಎಲ್ಲರಲ್ಲೂ ಪ್ರತಿಫಲನವಾಗುವಂತೆ ಆಸ್ಥೆ ವಹಿಸುವವಳು. ಮುದುಡಬೇಕಾದಲ್ಲಿ ಮುದುಡಿ ಅರಳಬೇಕಾದಲ್ಲಿ ಕಂಪನ್ನೂ ಸೂಸಿ ಮೋಡಿ ಮಾಡುವ ಕಲೆ ಅವಳು ಬೇಕಂತ ಸಿದ್ಧಿಸಿಕೊಂಡದ್ದಲ್ಲ. ಅವಳ ಇರುವೇ ಹಾಗೆ. ಬಾಕಿ ಗಂಡಹೆಂಡಿರಂತೆ ಒಂದಷ್ಟು ಪ್ರೀತಿ ಒಂದಷ್ಟು ಮುನಿಸು ಎಲ್ಲವೂ ವಿನಯ ಉಷೆಯ ನಡುವಿತ್ತು. ಆದರೆ ಪ್ರತಿಯೊಂದನ್ನೂ ಸಮತೋಲನದಲ್ಲಿ ಇಡುವ ಹಿಡಿತ ಉಷೆಯ ಇರುವಿಕೆಗಿತ್ತು.

ವೀಕೆಂಡ್ ಷಾಪಿಂಗ್, ಫ್ರೈಡೇ ನೈಟ್ ಔಟ್, ಬ್ಯಾಂಕ್ ಹಾಲಿಡೇ ಸ್ಲೀಪ್ ಓವರ್ ಹೀಗೆ ಹೊಸ ಹೊಸ ಹೆಸರುಗಳನ್ನಿಟ್ಟುಕೊಂಡು ಭೇಟಿ ಮಾಡಿದ ಪರಾಶರಿ ಮತ್ತು ಉಷೆ ವರ್ಷವೆರಡು ಕಳೆಯುತ್ತಿದ್ದಂತೆ ಸಾಕಷ್ಟು ಹತ್ತಿರವಾದರು. ಸದಾ ಕುಟುಂಬ ಸಮೇತರಾಗಿ ಸಿಗಲು ಸಾಧ್ಯವಾಗದಿದ್ದರೂ ಇವರಿಬ್ಬರ ಭೇಟಿಗೆ ಎಂದೂ ತೊಂದರೆ ಮಾಡಿಕೊಳ್ಳುತ್ತಿರಲಿಲ್ಲ. ವಾರದ ಸುದ್ದಿಯನ್ನೆಲ್ಲ ಒಟ್ಟಾಕಿಟ್ಟುಕೊಂಡು ಲೇಕ್ ಸೈಡಿನ ವಾಕಿಂಗ್ ಪಾಥಿನಲ್ಲಿ ಈ ಜಗದ ಪರಿವೆಯಿಲ್ಲದವರಂತೆ ಹರಟುತ್ತಿದ್ದರು. ಸವಿತಾ ಭಾಭಿ ವೀಡಿಯೋಗಳು, ಶುಗರ್ ಡ್ಯಾಡಿ ಕತೆಗಳು ಪಬ್ಬಿನ ಮೂಲೆಯಲ್ಲಿ ಹಗುರವಾಗುತ್ತ ಕೂತ ಇವರಿಬ್ಬರ ಅನೇಕ ಸಂಜೆಗಳನ್ನು ರೋಚಕವಾಗಿಸುತ್ತಿತ್ತು. ಗಂಡಂದಿರಿಗೆ ಅಂಡೀಸ್ ಶಾಪಿಂಗ್ ಕೂಡ ತಾವೇ ಮಾಡಬೇಕಾದ ಬಗ್ಗೆ ಹೇಳುತ್ತ ತ್ಚ್ ತ್ಚ್ ಎನ್ನುವ ಇವರು, ಮರುಕ್ಷಣವೇ ಆ ಬಗ್ಗೆ ಬೀಗುತ್ತಿದ್ದರು. ‘ಪೈ ಮಾಮೀ, ಮೀನ್ ತಿನ್ನೂ ತಲೆ ಉಪ್ಯೋಗ್ಸಿ ಈ ಸುಡೊಕು ಬಿಡ್ಸು ನೋಡ್ವಾ’ ಎಂದು ತನ್ನ ಫೋನು ತೋರಿಸಿ ಪರಾಶರಿ ಸವಾಲು ಹಾಕಿದರೆ ‘ನಾನು ತಿನ್ನೂ ಮೀನ್ ಮೇಲೂ ಕಣ್ಣಾಕಬೇಡ್ವೆ ಪಾರೋ, ಮೀನಿಗ್ ಹೊಟ್ಟೆಲ್ಲಿ ಜೀವ ಬಂದ್ರೆ ನಂಗೆ ತ್ರಾಸು ಮಾರಾಯ್ತಿ’ ಎಂದು ಬಾಯೆಳೆಯುತ್ತಿದ್ದಳು ಉಷೆ. ಒಮ್ಮೆ ನಕ್ಕು, ಇನ್ನೊಮ್ಮೆ ಬೇಜಾರೆಂಬ ಆಲೆಒಲೆಯಂಥ ಉರಿಗೆ ಕೊಡಪಾನ ನೀರು ಸುರಿದು, ಮಗದೊಮ್ಮೆ ಜೀವನದರ್ಶನವಾದಂತೆ ಫಿಲಾಸಫಿ ಚಚ್ಚುತ್ತ ಆತ್ಮಸಖಿಯರೇ ಆಗಿಹೋದರು. ಸ್ವಾತಂತ್ರದ ಸ್ವಾಯತ್ತೆಯ ಸ್ವಂತಿಕೆಯ ಪರಿಭಾಷೆ ಇಬ್ಬರಿಗೂ ಅವರವರದೇ ರೀತಿಯಲ್ಲಿ ದಾಟುತ್ತ ಹೋಯಿತು.

ಚೆಂದವಾಗಿ ಸಾಗುತ್ತಿರುವ ದಿನಗಳನ್ನು ಇನ್ನಷ್ಟು ಚೆಂದವಾಗಿಸಲು ಉಷೆ ಮತ್ತು ವಿನಯ್ ಗುಡ್‌ನ್ಯೂಸ್ ಕೊಟ್ಟರು. ಒಂದು ಶುಕ್ರವಾರ ಸಂಜೆ ಅರ್ಧ ಕೇಜಿ ಜಿಲೇಬಿಯ ಪ್ಯಾಕನ್ನು ಹಿಡಿದು ತಂದ ಜೋಡಿ ತುಂಬ ಖುಶಿಯಾಗಿದ್ದರು. ಮೊದಲೇ ಚೆಲುವೆಯಾದ ಉಷೆಯ ಮುಖದ ಮೇಲೆ ಸಂತಸದ ಉಲ್ಕೆಗಳು ಹಾದಂತೆ
ಕಾಣುತ್ತಿದ್ದವು. ಪರಾಶರಿಯಂತೂ ತಾಯ್ತನವ ಮೈಮೇಲೆ ಆಹ್ವಾನಿಸಿಕೊಂಡಂತೆ ಉಷೆಯ ಸೇವೆಗೆ ನಿಂತಳು. ದೂರದೂರಿನಲ್ಲಿ ಸಖರೇ ಸಮೀಪದ ಸಂಸಾರ. ಸುಖಕ್ಕೂ ಅವರೇ, ದುಃಖಕ್ಕೂ ಅವರೇ. ಉಷೆ ಯಾವಾಗಲೂ ಹೇಳುವಂತೆ ‘ಹಾಫ್‌ಸರ್ಕಲ್ ವಿಲ್ ಬೀ ಅ ಫುಲ್‌ಸರ್ಕಲ್‍; ಫುಲ್ ವಿಲ್ ಬೀ ಅ ಹಾಫ್’. ಇಂಥ ಮಾತನ್ನು ಪರಾಶರಿ ಯಾವತ್ತೂ ನಿಮಿರಿದ ಕಿವಿಯಲ್ಲಿ ಕೇಳುತ್ತಿದ್ದಳು. ವಾರ, ತಿಂಗಳುಗಳುರುಳಿ ಉಷೆಯ ಹೊಟ್ಟೆ ದುಂಡಗಾಗುತ್ತ ಹೋಯಿತು. ಪರಾಶರಿ ಮತ್ತು ಜೇಪಿ ಜಂಟಿ ಕಾರ್ಯಾಚರಣೆಯನ್ನು ಗುಪ್ತವಾಗಿ ನಡೆಸಿ ಉಷೆಗೆ ಸರ್‌ಪ್ರೈಸ್ ಬೇಬಿಶವರ್ ಆಯೋಜಿಸಿದರು. ಹತ್ತಿರದ ಸ್ನೇಹಿತರು ಹುಟ್ಟಲಿರುವ ಮಗುವಿಗಾಗಿ ಉಡುಗೊರೆಗಳನ್ನೂ, ವುಡ್‌ಬೀ ತಂದೆತಾಯಿಗಾಗಿ ಫುಟ್ ಮಸಾಜ್ ವೌಚರ್‌ಗಳನ್ನೂ ಕೊಟ್ಟುಹೋದರು. ಎಂಟು ತಿಂಗಳು ಎಂಟು ದಿನಗಳಂತೆ ಕಳೆದುಹೋಗಿತ್ತು. ಇನ್ನೇನು ಉಷೆಯ ಹೆರಿಗೆಗೆ ಎರಡು ವಾರವಿರುವಾಗ ಅವಳ ತಾಯಿ ಹಳದೀಪುರದಿಂದ ಬಂದರು. ಅವರು ಬಾಣಂತಕಾಡಾದಿಂದ ಮೊದಲಾಗಿ ಜೀರಿಗೆ ಹಿಟ್ಟು, ಬಾಣಂತಿಯ ಸ್ನಾನಕ್ಕಾಗಿ ಎಣ್ಣೆಗಳು, ಮಗುವಿನ ಚರ್ಮಕ್ಕೆ ಹೊಂದಲು ಮನೆಯಲ್ಲೇ ಕುಟ್ಟಿದ ಅರಿಶಿಣ ಬೆರೆತ ಕಡಲೇಹಿಟ್ಟಿನ ಪುಡಿ, ಕುಂಚಿಗೆ, ಮಿದುವಾದ ಪಂಚೆ ಎಲ್ಲವನ್ನೂ ನೀಟಾಗಿ ಜೋಡಿಸಿ ತಂದಿದ್ದರು. ಪುಟ್ಟನೆಯ ಕಿಚನ್ನು ಹಾಗೂ ಎರಡೇ ಬೆಡ್‌ರೂಮಿದ್ದರೂ ಬೇಕಾದ್ದನ್ನು ಮಾತ್ರ ಒಪ್ಪವಾಗಿಟ್ಟ ಉಷೆಯ ಮನೆಯಲ್ಲಿ, ಊರಿಂದ ಬಂದ ಸಕಲ ಸಲಕರಣೆಗಳೂ ತಮ್ಮದೇ ಆಳ್ವಿಕೆಯ ಸ್ಥಳವೆಂಬಂತೆ ಕೂತವು, ಮಗುವಿನ ಬರುವನ್ನು ಕಾಯುತ್ತ.

ಪರಾಶರಿ ಹೆಚ್ಚುಕಡಿಮೆ ದಿನವೂ ಸಂಜೆ ಉಷೆಯ ಮನೆಗೆ ಬರುತ್ತಿದ್ದಳು. ಉಷೆಯ ತಾಯಿಯನ್ನು ಅವಳಂತೆಯೇ ‘ಆಯಿ’ ಎಂದಳೆ ಹೊರತಾಗಿ ‘ಆಂಟಿ’ ಎನ್ನಲಿಲ್ಲ. ತಾಯಿಯನ್ನು ಮನೆಯ ಸುತ್ತಮುತ್ತಲೇ ಅಡ್ಡಾಡಿಸುತ್ತ, ಉಷೆ ಮೆಟರ್ನಿಟಿ ರಜೆಯನ್ನು ಹಾಯಾಗಿ ಕಳೆಯುತ್ತಿದ್ದಳು. ಆವತ್ತು ಮಧ್ಯಾನ್ನದಿಂದ ಉಷೆಗೆ ಕಿಪ್ಪೊಟ್ಟೆಯಲ್ಲಿ ಸೆಳೆತ. ಅದು ಶುರುವಾದಾಗಲೇ ‘ಇದೇನೋ ಹೊಸ ನಮೂನೆ’ ಎಂದುಕೊಂಡಿದ್ದಳು. ಹಾಗೆಯೇ ತಡೆದುಕೊಂಡು ತಾಯಿಗೂ ಹೇಳದೆ, ಆಫೀಸಿಗೆ ಹೋದ ವಿನಯನಿಗೂ ಫೋನಿಸದೆ ಅಲ್ಲಿ ಇಲ್ಲಿ ತುಸು ಓಡಾಡಿ ನೋವು ಸಮಾಧಾನಿಸಲು ಪ್ರಯತ್ನಿಸಿದಳು. ಸಂಜೆ ಏಳು ಗಂಟೆಯ ಹೊತ್ತಿಗೆ ನೋವು ತಡೆಯಲಾಗಲಿಲ್ಲ. ಅದೇ ಸಮಯಕ್ಕೆ ಮನೆಗೆ ಬಂದ ವಿನಯ, ಉಷೆಯ ಮುಖ ನೋಡಿಯೇ ಆಸ್ಪತ್ರೆಗೆ ಹೊರಡೋಣವೆಂದ. ಆ ತರಾತುರಿಯಲ್ಲಿ ಪರಾಶರಿಯ ಮೊಬೈಲಿಗೊಂದು ಮೆಸೇಜು ಎಸೆದು ಮೂವರೂ ಆಸ್ಪತ್ರೆಗೆ ಬಂದರು. ಕಾರಿನಿಂದ ಇಳಿದ ಉಷೆ ನಡೆಯಲೂ ಆಗದೇ ವ್ಹೀಲ್ಚೇರಿನಲ್ಲಿ ಕೂತು ಲೇಬರ್ ರೂಮಿಗೆ ಬಂದಳು. ಹತ್ತಾರು ಟೆಸ್ಟುಗಳ ನಂತರ ಉಷೆಗೆ ಬಂದದ್ದು ಹೆರಿಗೆ ನೋವಲ್ಲವೆಂದೂ ಬೇರೆ ಯಾವುದೋ ಇನ್‌ಫೆಕ್ಷನ್ನಿನ, ಹೊಟ್ಟೆಯೊಳಗಿನ ಸೋಂಕಿನ ನೋವು ಎಂದು ಅಭಿಪ್ರಾಯಪಟ್ಟು ಇನ್ನೂ ಕೆಲವು ಟೆಸ್ಟ್‌ಗಳನ್ನು ಮಾಡಿದರು. ಒಂದು ಗಂಟೆಯ ಅಂತರದಲ್ಲಿ ನಾಟಕೀಯವೋ ಎಂಬಂತೆ ನಂತರದ ಘಟನೆಗಳು ನಡೆದುಹೋದವು.

ವಿನಯನ ಮೇಸೇಜು ನೋಡಿ ಅಂದು ಆಸ್ಪತ್ರೆಗೆ ದೌಡು ಬಂದ ಪರಾಶರಿಗೆ ಇಂದಿಗೂ ಅಲ್ಲಿ ನಡೆದ ಘಟನೆಗಳು ಕಣ್ಣಿಗೆ ಕಟ್ಟಿದಂತಿವೆ. ಯಾವ ಸಂಗತಿಯ ನಂತರ ಏನಾಯಿತು ಎಂಬುದನ್ನು ಪರಾಶರಿ ಇವತ್ತಿಗೂ ಆಕಾರ ಕಳೆದುಕೊಂಡ ಮುತ್ತುಗಳನ್ನು ಅರ್ಥವತ್ತಾಗಿ ಸಾಲಾಗಿ ಜೋಡಿಸಿಟ್ಟಂತೆ ಇಡಬಲ್ಲಳು. ರಾತ್ರಿ ಒಂಬತ್ತರ ಹೊತ್ತಿಗೆ ಅಂತೂ ಹತ್ತು ನಿಮಿಷಗಳ ದೀರ್ಘ ಪರೀಕ್ಷೆ ನಡೆಸಿದ ಗೈನಾಕಾಲಜಿಸ್ಟ್ ಹಾಗೂ ಪೀಡಿಯಾಟ್ರಿಕ್ ಡಾಕ್ಟರ್‌ಗಳಿಬ್ಬರೂ ಉಷೆಯನ್ನು ಆಸ್ಪತ್ರೆಯ ಮಂಚದ ಮೇಲೆ ಒರಗಲು ಹೇಳಿದರು. ವಿನಯನ ಕಡೆ ತಿರುಗಿ ‘ಮಿಸೆಸ್ ಅಂಡ್ ಮಿಸ್ಟರ್ ಪಾಯ್, ಪ್ಲೀಸ್ ಬೀ ಪ್ರಿಪೇರ್ಡ್ ಫಾರ್ ದಿಸ್ ನ್ಯೂಸ್. ವಿ ಡಿಕ್ಲೇರ್ ದಟ್ ದ ಬೇಬಿ ಇನ್‌ಸೈಡ್ – ಹ್ಯಾಸ್ ನೋ ಸೈನ್ ಆಫ್ ಲೈಫ್. ಗರ್ಭದೊಳಗಿನ ಮಗುವಿನ ಜೀವ ನಿಂತುಹೋಗಿದೆ.

ಯಾವುದೋ ಸೋಂಕಿನಿಂದಾಗಿ ಈ ರೀತಿಯಾಗಿರಬಹುದೆಂಬುದು ನಮ್ಮ ಅನುಮಾನ. ವಿ ವಿಲ್ ಹ್ಯಾವ್ ಟು ಅರೇಂಜ್ ಫಾರ್ ಸ್ಟಿಲ್‌ಬರ್ಥ್ ಪ್ರೊಸೀಜರ್ ಆಸ್ ಸೂನ್ ಆಸ್ ಪಾಸಿಬಲ್. ವಿ ಆರ್ ಸಾರಿ ಅಗೇನ್’ ಎಂಬರ್ಥದ ಮಾತುಗಳನ್ನು ನಿಧಾನವಾಗಿ, ವಾಕ್ಯಗಳ ನಡುವೆ ಸಾಕಷ್ಟು ಅಂತರ ನೀಡಿ ಹೇಳಿದರು. ಈ ಅಂತರವು ವಿನಯನಿಗೆ ಕಿರಿಕಿರಿಯನ್ನೂ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಸ್ಪೇಸ್‌ಅನ್ನೂ, ಉಷೆಗೆ ಹತಾಶೆಯನ್ನೂ ಉಂಟುಮಾಡುತ್ತಿದ್ದುದು ಆ ರೂಮಿನಲ್ಲಿದ್ದವರಿಗೆ ಹೇಳದೆಯೇ ಸಂವಹನವಾಗುತ್ತಿತ್ತು.

ಗಂಡ ಹೆಂಡತಿ ಮಾತಾಡಿಕೊಳ್ಳಲು ಕೆಲ ಸಮಯ ಕೊಟ್ಟರು ಆಸ್ಪತ್ರೆಯವರು. ಇನ್‌ಫೆಕ್ಷನ್ ಹರಡುವ ಸಾಧ್ಯತೆ ಇದ್ದಿದ್ದರಿಂದ ತುಂಬ ಹೊತ್ತು ಕಾಯುವ ಹಾಗಿರಲಿಲ್ಲ. ಲೇಬರ್ ವಾರ್ಡಿನ ಹೊರಗಡೆಯೇ ಕಾಯುತ್ತ ಕುಳಿತಿದ್ದ ಪರಾಶರಿಗೆ ವಿಷಯ ತಿಳಿಸುವಂತೆ ಉಷೆಯ ತಾಯಿಯನ್ನು ಕಳುಹಿಸಿದ ವಿನಯ. ಹೊರಗೆ ಬಂದ ಅವರು ಅಳುವುದರ ಹೊರತಾಗಿ ಬೇರೇನೂ ಮಾಡಲಿಲ್ಲ. ಅವರ ಪಕ್ಕ ನಿಂತ ಆಸ್ಪತ್ರೆಯ ಸಿಬ್ಬಂದಿ ಆಯಿಯ ತೋಳನ್ನು ಭದ್ರವಾಗಿ ಹಿಡಿದಿದ್ದಳು. ಅವಳಿದ್ದ ಕಡುಗಪ್ಪು ಬಣ್ಣಕ್ಕೆ, ಗಡಸು ಸ್ವರಕ್ಕೆ, ಪ್ರತಿ ಉಚ್ಚಾರಣೆಯನ್ನೂ ವಿಚಾರ ಮಾಡಿ ಆಡುತ್ತಿದ್ದ ರೀತಿಗೆ ಹಾಗೂ ಅವಳು ಸಂವಹಿಸುತ್ತಿದ್ದ ಆರ್ದ್ರ ಭಾವಕ್ಕೆ ತಾಳಮೇಳವಿಲ್ಲದಿದ್ದರೂ ಅದನ್ನು ಲೆಕ್ಕ ಹಾಕುವ ಪರಿಸ್ಥಿತಿಯಲ್ಲಿ ಪರಾಶರಿ ಇರಲಿಲ್ಲ. ವಾರ್ಡಿನ ಒಂದಂಚಿನಲ್ಲಿ ಮರದ ಕ್ಯಾಬಿನೇಟಿನ ಆಚೆಬದಿ ಕುಳಿತ ಮಿಡ್‌ವೈಫಿಗೆ ಬಗೆಬಗೆಯಾಗಿ ತಿಳಿಸಿ ಹೇಳಿ, ತಾನು ಒಳಗೆ ಹೋಗಿ ಗೆಳತಿಯನ್ನು ನೋಡಲು ಅನುಮತಿ ಪಡೆಯುವವರೆಗೆ ಪರಾಶರಿ ಕಲಿತ ವಿದ್ಯೆಯೆಲ್ಲ ಖಾಲಿಯಾಗಿತ್ತು. ‘ಆಯಿ ಬಾ, ಒಳಗೆ ಹೋಗುವ’ ಎಂದು ಅವರ ಕಡೆ ನೋಡಿದರೆ ಆಯಿ, ಕೈ ಎತ್ತಿ ‘ನೀ ಹೋಗು’ ಎಂಬಂತೆ ಸನ್ನೆ ಮಾಡಿದರು. ಅವರ ಕೈ ಮಣಭಾರವಾದಂತಿತ್ತು.

ಪರಾಶರಿ ರೂಮಿನೊಳಗೆ ಕಾಲಿಡುತ್ತಿದ್ದಂತೆ ಸಶಬ್ದವಾಗಿ ಅಳುತ್ತಿದ್ದ ಉಷೆ ಒಮ್ಮೆಲೇ ಸುಮ್ಮನಾದಳು. ಕೆನ್ನೆಯ ಮೇಲೆ ಜಾರುತ್ತಿದ್ದ ಹನಿಗಳು ಗುರುತ್ವಾಕರ್ಷಣ ಶಕ್ತಿಗೂ ಸವಾಲು ಹಾಕುವಂತೆ ಅಲ್ಲೇ ಸರೋವರಗಟ್ಟುತ್ತಿದ್ದವು. ‘ಏನೆಲ್ಲ ಆಗಿಹೋಯ್ತು ನೋಡು’ ವಿನಯನ ಗಂಟಲು ಕಟ್ಟಿತು. ಪರಾಶರಿ ಉಷೆಯ ಮುಂಗುರುಳು ನೇವರಿಸಿ ಹೊಟ್ಟೆಯ ಮೇಲೆ ಕೈಯಿಟ್ಟಳು. ಉಷೆ ಈಗ ಕಂದಮ್ಮನಂತೆ ಎರಡೂ ಕೈ ಚಾಚಿ ಬಿಕ್ಕತೊಡಗಿದಳು. ಪರಾಶರಿ ತೆಕ್ಕೆಯನ್ನು ಅಗಲಮಾಡಿ ಅವಳನ್ನು ಒಳಗೆಳೆದುಕೊಂಡಳು. ಅದೆಷ್ಟು ಸಹಸ್ರ ಭಾವಗಳು ಸಂವಹನವಾದವೋ ಇಬ್ಬರ ನಡುವೆ. ಮುಂದಿನ ಅರ್ಧ ಗಂಟೆಯಲ್ಲಿ ಡಾಕ್ಟರ್‌ಗಳು ನರ್ಸ್ ಹಾಗೂ ಮಿಡ್‌ವೈಫ್‌ಗಳ ಜತೆ ರೂಮಿಗೆ ಬಂದು ನಡೆಯಲಿರುವ ಪ್ರೊಸೀಜರನ್ನು ಸಾದ್ಯಂತ ವಿವರಿಸಿದರು. ಲೇಬರ್ ಇಂಡ್ಯೂಸ್ ಮಾಡಿ ಆದಷ್ಟು ಬೇಗ ಮಗುವನ್ನು ಹೊರಬರುವಂತೆ ನೋಡಿಕೊಂಡು, ಒಳಗಡೆ ಸೋಂಕು ಹರಡದಂತೆ ಎಚ್ಚರವಹಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸ್ಟಿಲ್‌ಬರ್ತ್ ಮಾಡಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಅವಶ್ಯಕತೆ ಬಿದ್ದರೆ ಸಿಸೇರಿಯನ್ ಕೂಡಾ ಮಾಡಬೇಕಾಗಬಹುದು ಎಂದೆಲ್ಲ ತಿಳಿ ಹೇಳಿದರು. ಅಗತ್ಯವಿರುವ ಎಲ್ಲ ಕಾಗದಗಳಿಗೆ ಸಹಿ ಮಾಡಿಸಿಕೊಂಡರು. ವಿನಯನಂತೂ ಎಷ್ಟೋ ಬಾರಿ ಸಹಿ ಮರೆತಂತಿದ್ದ. ಡಾಕ್ಟರುಗಳ ಟೀಮಿನಲ್ಲಿದ್ದ ಸೈಕಾಲಾಜಿಸ್ಟ್, ಗಂಡಹೆಂಡತಿಯೊಂದಿಗೆ ಸಂವಾದ ನಡೆಸಿ ಉಷೆಯ ಜತೆ ಪ್ರತ್ಯೇಕವಾಗಿ ಸಮಯ ಕಳೆದರು. ಪರಾಶರಿ ಒಂದು ತ್ರಿಕೋನದಲ್ಲಿ ಪರಿಭ್ರಮಿಸಿದಂತೆ ಉಷೆ, ವಿನಯ ಹಾಗೂ ಆಯಿಯೊಂದಿಗೆ ಅವರ ಬೇಕುಬೇಡಗಳನ್ನು ವಿಚಾರಿಸುತ್ತ ಕುಳಿತಳು. ಫೋನಿನಲ್ಲಿ ವಿಷಯ ತಿಳಿದುಕೊಂಡ ಜೇಪಿ ಆಸ್ಪತ್ರೆಗೆ ಓಡಿಬಂದು ಲಾಬಿಯಲ್ಲಿ ಕಾಯುತ್ತ ಕುಳಿತ.

ಲೇಬರ್ ಇಂಡಕ್ಷನ್ ಶುರುವಾದ ಹಾಗೇ ಆ ರೂಮಿನ ವಾತಾವರಣವೇ ಬದಲಾಯಿತು. ನಾಲ್ವರಲ್ಲೂ ಒಂದು ಸಣ್ಣ ಆಶೆ. ಮಗು ಹುಟ್ಟಿದಾಗ ಅಳುತ್ತದೆ, ಅಮ್ಮನ ಮಡಿಲೊಳಗೆ ಆಡುತ್ತದೆ ಎಂದು. ಎದುರಿನ ಡಾಪ್ಲರ್ ಯಂತ್ರ ಬೇರೆಯೇ ಹೇಳಿದರೂ ಅವರೆಲ್ಲ ಅವರದೇ ಭ್ರಮೆಯಲ್ಲಿದ್ದರು. ಆ ಭ್ರಮೆ ಅವರನ್ನು ಹಿತವಾಗಿ ನೇವರಿಸುತ್ತಿತ್ತು ಕೂಡ. ಮತ್ತೆ ಬಂದ ಸೈಕಾಲಾಜಿಸ್ಟ್ ಹಾಗೂ ಡಾಕ್ಟರ್ ಎಲ್ಲರನ್ನೂ ಹೊರಗೆ ಕಳುಹಿಸಿದರು. ಉಷೆ ಮತ್ತು ವಿನಯರೊಟ್ಟಿಗೆ ಅರ್ಧ ಗಂಟೆ ಮಾತುಕತೆ ನಡೆಸಿ ರೂಮಿನಿಂದ ಹೊರನಡೆದರು. ಉಷೆಗೆ ಆಕ್ಟಿವ್ ಲೇಬರ್ ಶುರುವಾಗಿದೆಂದು ಹೊರಗಿದ್ದವರಿಗೆ ಸುದ್ದಿ ತಿಳಿಯಿತು. ಒಳಗಡೆಯೇ ಉಸಿರು ನಿಲ್ಲಿಸಿದ್ದ ಹೆಣ್ಣುಮಗು ಬೆಳಗಿಂಜಾವ ನಾಲ್ಕಕ್ಕೆ ಹೊರಗೆ ಬಂತು.

ಅದೆಷ್ಟು ಧೈರ್ಯವನ್ನು ಒಗ್ಗೂಡಿಸಿಕೊಂಡಿದ್ದರೂ ಪರಾಶರಿಯ ಕಾಲುಗಳು ರೂಮಿನೊಳಗೆ ಹೋಗಲು ಹಿಂಜರಿಯುತ್ತಿದ್ದವು. ಅಲ್ಲಿರುವ ಮೂವರ ಮುಖವನ್ನು ನೋಡುವ ಛಾತಿ ಇರಲೇಯಿಲ್ಲ. ಅವಳ ಮೈಗೂಡಲ್ಲಿ ವಾಕರಿಕೆ, ತಲೆಸುತ್ತು, ಅಳು, ಸಿಟ್ಟು, ಹತಾಶೆಗಳ ನಡುವೆ ಕಾಂಪಿಟಿಶನ್ ನಡೆದಂತೆ ಇತ್ತು. ರೂಮಿನ ಕಿಟಕಿಯ ಪಕ್ಕ ತಳ್ಳಲ್ಪಟ್ಟ ಮಂಚದ ಮೇಲೆ ಒರಗಿದಂತೆ ಕೂತ ಉಷೆ, ಕೈಯಲ್ಲಿನ ಮಣ್ಮುದ್ದೆಯಂಥ ಮಗುವನ್ನು ದಿಟ್ಟಿಸುತ್ತಿದ್ದಳು. ತುಸು ನೀಲಿಗಟ್ಟಿದ ತುಟಿಯನ್ನು ಬಿಟ್ಟರೆ ಕೂಸು ಮುದ್ದಿನರಗಿಳಿಯೇ. ಬಿಳಿ ನೀಲಿ ಗೆರೆಗಳಿರುವ ರಿಸೀವಿಂಗ್ ಬ್ಲಾಂಕೆಟ್‌ನಲ್ಲಿ ಸುತ್ತಿದ ಮಗುವಿಗೆ ಆ ಬಟ್ಟೆಯ ಮೃದುತನವೂ ನೋವು ಮಾಡುವಂತೆ ಕಾಣುತ್ತಿತ್ತು. ಉಷೆಯ ಮುಖದಲ್ಲಿ ವಿಷಣ್ಣತೆ ಇತ್ತಾದರೂ ಅದನ್ನೂ ಮೀರಿಸುವ ಕಾತುರ ಕಂಡುಬಂತು. ‘ಪಾರೋ, ನೀನಾದರೂ ಈ ಇಬ್ಬರಿಗೆ ತಿಳಿಸಿಹೇಳು’ ಎನ್ನುತ್ತಲೇ ಮಾತು ಶುರು ಮಾಡಿದಳು ಉಷೆ. ಆಯಿಯ ಕಾಲುಗಳು ಅವರ ಸ್ವಾಧೀನದಲ್ಲಿ ಇಲ್ಲದಂತೆ ಅವರನ್ನೂ ಹೊತ್ತು ಹೊರನಡೆದವು. ನನ್ನಿಂದ
ಏನಾಗಬೇಕು ಉಷೆ?” ಮೆತ್ತಗೆ ಕೇಳಿದಳು ಪರಾಶರಿ. ‘ನಾನು ಈ ಬಾಲೆಯನ್ನು ಮನೆಗೆ ಕರೆದೊಯ್ಯುವ ನಿರ್ಧಾರ ಮಾಡಿದ್ದೇನೆ. ಆಯಿಯಂತೂ ಆರ್ಭಟವನ್ನೇ ಮಾಡಿಬಿಟ್ಟಳು. ವಿನಯನಿಗಾದರೂ ನೀನು ತಿಳಿಹೇಳು’ ಎಂದಳು. ಪರಾಶರಿಗೆ ಕತ್ತಲ ಕೋಣೆಯಲ್ಲಿ ಕಣ್ಕಟ್ಟಿ ನಿಂತಂತ ಅನುಭವ. ಪಾದದ ಕಿರುಬೆರಳಿನಿಂದ ನೆತ್ತಿಯವರೆಗೆ ದೇಹ ಝುಂ ಅಂದಿತು. ವಿನಯ ಯಾರದೋ ಕರೆಬಂದ ರೀತಿಯಲ್ಲಿ ಹೊರನಡೆದ.

“ನಾನು ಈ ಬಂಗಾರದ ಗೊಂಬೆಯ ಹೆಸರನ್ನು ಕೂಡಾ ನಿರ್ಧರಿಸಿಯಾಗಿದೆ. ಮಹೀ ಇವಳ ಹೆಸರು. ತನ್ನಂಶವನ್ನು ನನ್ನಲ್ಲಿ ಉಳಿಸಿ ಭೂಮಿಯಾದವಳು ಇವಳು. ಮಹೀ.. ಚೆಂದ ಇದೆ ಅಲ್ವೇನೆ ಹೆಸರು..?” ಉಷೆ ಔಷಧಗಳ ಮತ್ತಿನಲ್ಲಿ ಮಾತನಾಡುತ್ತಿದ್ದಾಳಾ ಎಂದುಕೊಂಡಳು ಪರಾಶರಿ. “ಡಾಕ್ಟರ್ ಜತೆಗೆ, ಆಸ್ಪತ್ರೆಯವರ ಜತೆಗೆ ಎಲ್ಲ ಡೀಟೇಲ್ ಆಗಿ ಮಾತಾಡಿದ್ದೇನೆ ಪಾರೋ. ನನ್ನ ಮಹೀ ಜತೆ ನನಗೆ ಇವತ್ತಿನ ದಿನವನ್ನು ಕಳೆಯಬೇಕು. ಇವಳನ್ನು ಮನೆಗೆ ಕರೆದೊಯ್ಯಲು ಯಾವುದೇ ತೊಂದರೆ ಇಲ್ಲವಂತೆ. ಕೆಲವು ಕಾಗದಪತ್ರಗಳಿಗೆ ಸಹಿ ಮಾಡಿಬಿಟ್ಟರೆ ಟೆಂಪರೇಚರ್ ತಣ್ಣಗಿರುವ ಕಾಟಿನೊಂದಿಗೆ ಮನೆಗೆ ಕಳುಹಿಸುವರಂತೆ. ನಂತರದ್ದು ನಂತರ ನೋಡಿದರಾಯಿತು ಅಲ್ಲವಾ? ಎಷ್ಟೆಲ್ಲ ಪೇರೆಂಟ್ಸ್ ಈ ಅವಕಾಶವನ್ನು ಬಳಸಿಕೊಳ್ಳುತ್ತಾರಂತೆ. ನಾನು ನಿರ್ಧಾರ ಮಾಡಿಯಾಗಿದೆ. ನನಗೆ ಹಗುರಾಗಲು ಇದೊಂದೇ ಮಾರ್ಗ. ನನ್ನೊಂದಿಗೆ ಮನೆಗೆ ಬರುತ್ತಾಳೆ ಮಹೀ”

ಕರಾರುವಕ್ಕಾಗಿ ಮಾಹಿತಿಗಳನ್ನು ಕೊಡುತ್ತಿರುವ ಉಷೆ ಔಷಧಗಳ ಮತ್ತಿನಲ್ಲಿ ಇಲ್ಲ ಎಂಬುದು ಗೊತ್ತಾಯಿತು. “ವಿನಯನಿಗೆ ನನ್ನ ಫೀಲಿಂಗ್ ಅರ್ಥವಾಗುತ್ತಿಲ್ಲ. ಅಥವಾ ನನಗೆ ಅರ್ಥಮಾಡಿಸಲು ಆಗುತ್ತಿಲ್ಲ. ಹಾಗಂತ ಅಂವ ಬೇಡ ಎನ್ನಲೂ ಇಲ್ಲ. ಸುಮ್ಮನಿದ್ದು ನನ್ನನ್ನು ಕೊಲ್ಲುತ್ತಿದ್ದಾನೆ ಪಾರೋ. ಇದೊಂದು ಹೆಲ್ಪ್ ಮಾಡು. ಅವನನ್ನು ಒಪ್ಪಿಸು ಪಾರೋ” ಉಷೆಯ ಗೋಗರೆತ ಪರಾಶರಿಯನ್ನು ಅಲ್ಲಾಡಿಸಿಬಿಟ್ಟಿತು. ವಿನಯನ ಜತೆ ಹಾಗೂ ಆಯಿಯೊಟ್ಟಿಗೆ ಪ್ರತ್ಯೇಕವಾಗಿ ಮಾತನಾಡಿದಳು ಪರಾಶರಿ.

ಒಂದಷ್ಟು ತಿಕ್ಕಾಟ, ಬೇಡದ ಮಾತುಗಳು, ಅಳು, ಕಿರುಚಾಟಗಳೆಲ್ಲವೂ ನಡೆದು ಉಷೆಯ ಬಿಗಿ ಹಿಡಿತಕ್ಕೆ ಎಲ್ಲರೂ ಸೋತರು. ಬೆಳಗ್ಗೆ ಏಳರ ನಂತರ ಮತ್ತೊಮ್ಮೆ ಸೈಕಾಲಾಜಿಸ್ಟ್ ಬಂದು ಹೋದರು. ಈ ಬಾರಿ ಭಾರತೀಯ ಮುಖದ ಛಾಪಿದ್ದ ಅಸಿಸ್ಟಂಟ್ ಜತೆ ಬಂದಿದ್ದರು. ಉಷೆ ಮಾತ್ರ ಮಗುವನ್ನು ತನ್ನ ಕೈತೊಟ್ಟಿಲಿನಿಂದ ಇಳಿಸಲೇ ಇಲ್ಲ. ಇಷ್ಟೆಲ್ಲ ಧಾರಣ ಶಕ್ತಿಯನ್ನು ತನ್ನ ಮೈಯಲ್ಲಿ ಎಲ್ಲಿ ಹುದುಗಿಸಿಟ್ಟುಕೊಂಡಿದ್ದಳು ಈ ಹುಡುಗಿ ಎಂದು ಮತ್ತೆಮತ್ತೆ ಪರಾಶರಿ ಯೋಚಿಸಿದಳು. ಕಾಗದಗಳ ಮೇಲೆ ಸಹಿಗಳೆಲ್ಲ ಆದ ಮೇಲೆ ಗೈನಾಕಾಲಜಿಸ್ಟ್ ಬಂದು ಉಷೆಯ ಆರೋಗ್ಯದ ಬಗ್ಗೆ ಓಕೆ ಕೊಟ್ಟರು. ಅಂತೂ ಹನ್ನೊಂದರ ಸುಮಾರಿಗೆ ಕಡಲೀ ಕೋಲ್ಡ್ ಕಾಟೆಂದು ಕರೆಯುವ ಶೈತ್ಯ ತೊಟ್ಟಿಲಿನೊಂದಿಗೆ ಎಲ್ಲರೂ ಮನೆಗೆ ಹೊರಟರು ಮಹೀ ಜತೆಗೂಡಿ. ಉಷೆಯ ತಾಯಿ, ಮಗುವಿನೊಂದಿಗೆ ಕಾರಿನಲ್ಲಿ ಕೂಡ್ರಲು ಒಪ್ಪಲೇಯಿಲ್ಲ. ಜೇಪಿ ತನ್ನ ಕಾರಿನಲ್ಲಿ ಅವರನ್ನು ಮಗಳು ಅಳಿಯನ ಮನೆಗೆ ಕರೆತಂದ. ಎಲ್ಲರಿಗಿಂತ ಮುಂಚೆ ಕಾರಿಳಿದ ಉಷೆ, ಮನೆಯ ಕೀಲಿ ತೆಗೆದು ಒಳಗಿನಿಂದ ಕುಂಕುಮದ ನೀರಿನ ಇಳಿ ತೆಗೆಯಲು ಪಾರೋಗೆ ಅಪ್ಪಣೆ ಮಾಡಿದಳು. ಮಗುವಿನ ಜತೆ ಇಳಿ ತೆಗೆಸಿಕೊಳ್ಳಲು ಉಷೆಯ ಪಕ್ಕ ನಿಲ್ಲದ ವಿನಯ ನಂತರದ ಕಾರ್ಯಗಳಿಗೆಲ್ಲ ಕಮಕ್ ಕಿಮಕ್ ಎನ್ನದೇ ಸಹಕರಿಸಿದ. ಕೊರೆಯುವ ಮಯ್ಯಿಯ ಮಹೀ ತಾಯ್ತನದ ಬಿಸುಪನ್ನು ಹೊತ್ತ ಉಷೆ ಇವರಿಬ್ಬರ ಜೋರು ಸ್ಪರ್ಧೆ ಪರಾಶರಿಗೆ ಮಾತ್ರ ಕಾಣುತ್ತಿತ್ತು.

ಸ್ನಾನ ಮಾಡಿ ಕೆಂಪನೆಯ ಚೂಡೀದಾರು ಹಾಕಿದ ಉಷೆ ವಿನಯನಿಗೂ ಸ್ನಾನ ಮಾಡೆಂದಳು. ಸ್ವಲ್ಪ ನಿಧಾನವಾದರೂ ತನ್ನ ಪಾಡಿಗೆ ತಾನೇ ಎಲ್ಲವನ್ನೂ ಹೊಂದಿಸಿಟ್ಟು, ಮಹೀಯನ್ನು ಮಹಡಿಯ ಮೇಲಿನ ಬಾತ್‌ರೂಮಿಗೆ ಕರೆದೊಯ್ದು, ಮಗುವಿನ ಕೂದಲೂ ಅಲುಗದಂತೆ ಆಸ್ಪತ್ರೆಯಲ್ಲಿ ಸುತ್ತಿದ ಬಟ್ಟೆ ಬಿಚ್ಚಿದಳು. ಗೋಡೆಗೆ ಬೆನ್ನು ಬಿಚ್ಚಿ ಕಾಲನ್ನು ಉದ್ದಕ್ಕೆ ನೀಡಿ ಮಗುವನ್ನು ತೊಡೆಯ ಮೇಲೆ ಹಾಕಿ, ಶ್ರದ್ಧೆಯಿಂದ ಎಣ್ಣೆ ನೀವಿದಳು. ನಂತರ ಪುಟಾಣಿ ಕಾಲ್ಮಣೆಯನ್ನು ಹಾಕಿ ಅದರಲ್ಲಿ ಕೂತು, ಬಿಸಿ ನೀರಿನ ಹದವನ್ನು ಎರಡೆರಡು ಬಾರಿ ಮುಟ್ಟಿ ನೋಡಿ ಮಗುವಿನ ಮೈಯನ್ನು ನೀರಿನಿಂದ ಒರೆಸಿದಳು. ಮೆತ್ತಗಿನ ಪಂಚೆಯಲ್ಲಿ ಮೈಯುದ್ದಿ ತಿಳಿನೀಲಿ ಒಡಲಿನಲ್ಲಿ ಅಚ್ಚನೀಲಿಯ ಹಕ್ಕಿಗಳಿದ್ದ ಕೈಕಾಲು ಪೂರ್ತಿ ಮುಚ್ಚುವಂಥ ಅಂಗಿಯನ್ನು ಮಗುವಿಗೆ ಹಾಕಿದಳು. ತೀರ ಕಣ್ಣಿರು ತಡೆಯಲಾಗದಾಗ ಬಾತ್‌ರೂಮಿನ ಹೊರಬಂದು ಕಣ್ಣೊರೆಸಿಕೊಂಡ ಪರಾಶರಿ, ಉಷೆಯ ಪಕ್ಕವನ್ನು ಬಿಟ್ಟು ಕದಲಲಿಲ್ಲ. ವಿನಯ ಕಿಟಕಿಗೆ ಆತುನಿಂತು ಎಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತಿದ್ದ. ಮಗುವನ್ನು ಎದೆಗಾನಿಸಿಕೊಂಡು ಅಡುಗೆಮನೆಗೆ ಬಂದು ಕಿಟಕಿಯಲ್ಲಿ ಸ್ಥಾಪಿತವಾಗಿದ್ದ ಗಣೇಶನ ಫೋಟೊದ ಎದುರು ಮಗುವನ್ನು ಮಲಗಿಸಿ ಕೈ ಮುಗಿದಳು. ವಿನಯ ಅವಳನ್ನು ಅನುಕರಿಸಿದ.

ಪರಿಸ್ಥಿತಿಯನ್ನು ನೋಡಿ ದಿಗ್ಮೂಢನಾಗಿದ್ದ ಜೇಪಿ ಪರಾಶರಿಗೆ ಕಣ್ಣಲ್ಲೇ ಸನ್ನೆ ಮಾಡಿ ಮನೆಗೆ ನಡೆದಿದ್ದ. ಉಷೆಯ ತಾಯಿ ಆಸ್ಪತ್ರೆಯಿಂದ ಬಂದವರು, ಗೆಸ್ಟ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಅವರು ಹೊರಗೆ ಬರಲೇಇಲ್ಲ. ಸೋಫಾದ ಒಂದು ತುದಿಯಲ್ಲಿ ಇಟ್ಟ ಕೋಲ್ಡ್ ಕಾಟಿನಲ್ಲಿ ಮಗುವನ್ನು ಮಲಗಿಸಿ ಅದರ ಪಕ್ಕವೇ ಉಷೆ ಕುಳಿತಳು. ಅವಳ ಭುಜಕ್ಕಾನಿಕೊಂಡು ವಿನಯನೂ ಕುಳಿತ. ಹೃದಯದಲ್ಲಿ ಮರಳು ಕರಕರಿಸಿಕೊಂಡೇ ಪರಾಶರಿ ಅನ್ನವನ್ನೂ, ಮೆಣಸಿನ ಸಾರನ್ನೂ ಮಾಡಿದ ಶಾಸ್ತ್ರ ಮಾಡಿದಳು. ಮಗುವಿನ ತೊಟ್ಟಿಲಿನಲ್ಲಿ ತನ್ನ ಎಡಗೈಯ್ಯನ್ನು ಇಳಿಬಿಟ್ಟಂತೆಯೇ ಮೂರು ತುತ್ತು ತಿಂದಳು ಉಷೆ. ಅವರ ಪಕ್ಕದಲ್ಲೇ ಕೂತು ಪರಾಶರಿ ಕೇಳಿ ಬಡಿಸಿದಳು. ತಟ್ಟೆಯ ಕಣಪಣ, ತುತ್ತು ಕಲೆಸಿದ ಸದ್ದು, ಬಾಯಿ ತೆಗೆವಾಗಿನ ಸದ್ದನ್ನು ಬಿಟ್ಟರೆ ಅಲ್ಲೊಂದು ಶಾಂತ ನಿರ್ವಾತವಿತ್ತು. ಊಟವಾದ ಮೇಲೆ ಉಷೆ, ಕಪಾಟಿನಲ್ಲಿದ್ದ ಡಿಜಿಟಲ್ ಕ್ಯಾಮರಾ ತೆಗೆದು ಕೆಲವು ಫೋಟೋ ಕ್ಲಿಕ್ಕಿಸಿದಳು. ಟೈಮರಿನ ಸಹಾಯದಿಂದ ತೆಗೆದ ಫೋಟೋಗಳಲ್ಲಿ ಎಲ್ಲರೂ ಫ್ರೇಮಿನೊಳಗೆ ಬಂಧಿತರಾದರು. ಫೋಟೋದಲ್ಲಿ ನಗುವಿತ್ತೋ ಇಲ್ಲವೋ ಪರಾಶರಿಗೆ ಗೊತ್ತಿಲ್ಲ; ಸಮಯವೇ ಉಡುಗೊರೆಯಂತೆ ಕೊಟ್ಟ ಸಹಜತೆಯಂತೂ ಅಲ್ಲಿತ್ತು.

ಸಂಜೆಯ ಮೇಲೆ ಕ್ರಿಮೆಟೋರಿಯಮ್ಮಿನ ಅಪಾಯಿಂಟ್ಮೆಂಟ್ ಪಡೆದು ಉಷೆ, ವಿನಯ ಹಾಗೂ ಪರಾಶರಿ ಹೋಗಿ ಉಳಿದ ಕೆಲಸ ಮುಗಿಸಿ ಬಂದರು. ಉಷೆ ನಿರೀಕ್ಷೆಗೂ ಮೀರಿ ಶಾಂತವಾಗಿದ್ದಳು. ವಿನಯ, ಭಾವನೆಗಳನ್ನು ಬಿಟ್ಟುಕೊಡಲಿಲ್ಲ. ಸರಿಯಾಗಿ ಎರಡು ವಾರ ಕಳೆಯುತ್ತಿದ್ದಂತೆಯೇ ಉಷೆಯ ತಾಯಿ ಹಳದೀಪುರಕ್ಕೆ ವಾಪಸ್ಸಾಗಿಬಿಟ್ಟರು. ನಿಯಮಿತವಾಗಿ ಮನೆಗೆ ಬರುತ್ತಿದ್ದ ಮಿಡ್‌ವೈಫ್‌ಗಳು, ಸೈಕಾಲಾಜಿಸ್ಟ್ ಅಪಾಯಿಂಟ್‌ಮೆಂಟುಗಳು ಇವೆಲ್ಲ ಕೆಲಕಾಲ ನಡೆದು ದಿನಮಾನ ಸುಮಾರು ಹಳಿ ಹತ್ತತೊಡಗಿತು. ಇದೆಲ್ಲ ನಡೆಯುವಾಗ ಉಷೆಯ ಹಾಗೂ ಪರಾಶರಿಯ ಭೇಟಿ, ಸಂವಹನ ಸ್ವಲ್ಪ ನಲುಗಿತು. ಅದಕ್ಕೆ ಸರಿಯಾಗಿ ಮುಂದಿನ ಎಂಟು ತಿಂಗಳಿನಲ್ಲಿ ಪರಾಶರಿ ಹಾಗೂ ಜೇಪಿ ಆಫೀಸಿನ ಕಾರ್ಯಕಾರಣ ಭಾರತಕ್ಕೆ ಮರಳಿಬಿಟ್ಟರು. ಹೊರಡುವ ಮೊದಲು ಒಂದು ಭರ್ಜರಿ ಪಾರ್ಟಿಯನ್ನು ಮಾಡಬೇಕು, ರಾತ್ರಿ ಪೂರ್ತಿ ಹರಟಬೇಕು ಎನ್ನುವ ಉಷೆಯ ಹಾಗೂ ಪರಾಶರಿಯ ಪ್ಲಾನು ಯಾವ್ಯಾವುದೋ ಕಾರಣಗಳಿಂದಾಗಿ ಕೈಗೂಡಲೇ ಇಲ್ಲ.

ಬೆಂಗಳೂರಿನಲ್ಲಿ ನೆಲೆನಿಂತ ಮೇಲೆ ಆಗೀಗ ಮೆಸೇಜುಗಳ ಕಾಲುಗಳ ವಿನಿಮಯವಾದರೂ ಕಾಣದ ತೆರೆಯಂತೂ ಇತ್ತು. ಅದೇ ಆತ್ಮೀಯತೆ ಅದೇ ಪ್ರೀತಿ ಮಾತುಗಳಲ್ಲಿ ಕಂಡರೂ ಭಾವಗಳು ತುಸು ಸೊರಗಿದ್ದವು. ಪಾಸಿಬಲ್ ಮೀಟಿಂಗ್ ಅಪಾಯಿಂಟ್‌ಮೆಂಟುಗಳು ಇಂಪಾಸಿಬಲ್ ಆಗುತ್ತಲೇ ನಡೆದವು. ಕೆಲವು ವರ್ಷ ಹೀಗೇ ಕುಂಟುತ್ತ ಸಾಗಿದ ಈ ಗೆಳೆತನ, ಪರಾಶರಿಯ ಫೋನಿನಲ್ಲಿ ‘ಪೈ ಮಾಮಿ – ಯುಕೆ’ ಅಂತಲೂ ಉಷೆಯ ಫೋನಿನಲ್ಲಿ ‘ಪಾರೋ – ಇಂಡಿಯಾ’ ಎಂತಲೂ ಹೆಸರುಗಳು ಸೇವ್ ಆಗಿ ಒಂದು ಹಂತವನ್ನು ತಲುಪಿತ್ತು. ನಾಲ್ಕು ವರ್ಷಗಳ ಕೆಳಗೆ ಉಷೆಗೆ ಮಗ ಹುಟ್ಟಿದ ವಿಷಯವೂ ಸೋಶಿಯಲ್ ಮೀಡಿಯಾದ ಕೃಪೆಯಿಂದ ಗೊತ್ತಾಗಿತ್ತು. ಆ ಫೋಟೋ ನೋಡಿದ ಪರಾಶರಿ, ಕಮೆಂಟಿನಲ್ಲಿ ಕಂಗ್ರಾಟ್ಸ್ ಎಂದು ಬರೆದು ಪಕ್ಕದಲ್ಲಿ ಹಾರ್ಟ್ ಇಮೋಜಿ ಹಾಕಿದ್ದಳು. ಉಷೆ ಎಷ್ಟೋ ವಾರಗಳ ನಂತರ ಅದೇ ಕಮೆಂಟಿಗೆ ಹೆಬ್ಬೆರೆಳೆತ್ತಿರುವ ಇಮೋಜಿ ಒತ್ತಿದ್ದಳು.

ಪರಾಶರಿಯ ಜೀವನವಂತೂ ಇತ್ತೀಚಿನ ವರ್ಷಗಳಲ್ಲಿ ಪೂರ್ತಿ ಯೂಟರ್ನ್ ತೆಗೆದುಕೊಂಡಿತ್ತು. ಮೊದಲು ಐದಾರು ವರ್ಷ ಮಕ್ಕಳಿಗಾಗಿ ಪ್ರಯತ್ನಿಸಿ ‘ಅದು ಆದಾಗ ಆಗಲಿ ಬಿಡು’ ಎಂದು ಗಂಡ ಹೆಂಡತಿ ನಿರ್ಧರಿಸಿದ್ದರು. ನಂತರ ‘ಇಬ್ಬರಿರುವುದೇ ಲೇಸು, ಮಕ್ಕಳಿದ್ದರೇ ತ್ರಾಸು’ ಎನ್ನುವ ಹಂತಕ್ಕೆ ಬಂದಿದ್ದರು. ನೋಡನೋಡುತ್ತಲೇ
ನಲವತ್ತರ ಗಡಿ ದಾಟಿಯಾಗಿತ್ತು. ‘ಚೆರಿ ಬ್ಲಾಸಂ – ಅರ್ಲಿ ಇಂಟರ್‌ವೆನ್ಶನ್’ ಎಂಬ ಆಟಿಸಂ ಹೆಲ್ಪ್‌ಸೆಂಟರಿನಲ್ಲಿ ಕೌನ್ಸಲರ್ ಆಗಿ ಕೆಲಸ ಮಾಡುತ್ತಿದ್ದ ಪರಾಶರಿಗೆ ಸದಾ ಹತ್ತಾರು ಮಕ್ಕಳು. ಅಣ್ಣನ ಮಕ್ಕಳು, ಬಾವನ ಮಗಳು ಇವರೆಲ್ಲ ಆಗಾಗ ಮನೆಗೆ ಬಂದು ಮನೆಮಕ್ಕಳಂತೆಯೇ ಇದ್ದು ಹೋಗುತ್ತಿದ್ದರಿಂದ ಅದೊಂದು ಕೊರತೆ ಎಂದು ಅನ್ನಿಸಿದ್ದೇ ಇಲ್ಲ ಇವರಿಗೆ. ಮಕ್ಕಳ ಜವಾಬ್ದಾರಿಯೇ ಹಿರಿದಾಗಿ ಕಕ್ಕುಲಾತಿಯ ಮೇಲೆ ಸವಾರಿ ಮಾಡತೊಡಗಿದರೆ ಅದೂ ಒಂದು ತಲೆನೋವಾದೀತು ಬಿಡು ಎಂದು ಇಬ್ಬರೂ ಮಾತನಾಡಿಕೊಂಡದ್ದು ಉಂಟು. ಇಷ್ಟೆಲ್ಲ ತಾರ್ಕಿಕತೆ ಹಾಗೂ ಧಾರಣ ಶಕ್ತಿಯನ್ನು ತನಗೆ ದಾಟಿಸಿದ್ದ್ಯಾರು ಎಂದು ಬಹಳ ಬಾರಿ ಪರಾಶರಿ ತಲೆ ಕೆಡಿಸಿಕೊಂಡದ್ದೂ ಉಂಟು.

ಕೆಲಸ, ಪ್ರವಾಸ, ಪರಾಶರಿಯ ತಬಲಾ ಕಲಿಕೆ, ಸಂಗೀತ ಕಾರ್ಯಕ್ರಮಗಳು, ಜೇಪಿಯ ಸೈಕ್ಲಿಂಗ್ ಹಾಬಿ, ಅದರ ಗ್ರೂಪುಗಳು ಇದೆಲ್ಲದರಿಂದ ಬಿಝಿಯಾಗಿ ಇತ್ಯಾದಿಗಳಿಗೆ ಸಮಯವಿಲ್ಲದಂತಾಗಿದೆ ಈಗ. ಇಂತಿಪ್ಪ ದಿನಗಳಲ್ಲಿ ಬಂದ ಉಷೆಯ ಮೆಸೇಜು, ಪರಾಶರಿಯ ದಿನಚರಿಯನ್ನು ಕಂಗಾಲಾಗಿಸಿತು. ‘ಸಂಜೆ ಫೋನ್ ಮಾಡಲೇ?’ ಎಂಬ ಮೆಸೇಜಿಗೆ ರಿಪ್ಲೈಯಿಸಿದ ಉಷೆ ‘ಪಾರೋ, ಇವತ್ತು ಸಂಜೆ ನಿಂಗೆ ಬಿಡುವಿದ್ದರೆ ಜಯನಗರದ ಮೂವತ್ತಾರನೇ ಕ್ರಾಸಿನ ಥರ್ಡ್ ವೇವ್ ಕಾಫೀನಲ್ಲಿ ಸಿಗೋಣವೇ’ ಎಂದು ಕೇಳಿದಳು. ಜೆಪಿನಗರದಲ್ಲಿರುವ ಚೆರಿ ಬ್ಲಾಸ್ಂನಿಂದ ಜಯನಗರಕ್ಕೆ ಇಪ್ಪತ್ತು ನಿಮಿಷದ ಹಾದಿ. ಐದು ಗಂಟೆಗೆ ಸೆಷನ್ ಮುಗಿಸಿದರೂ ಐದೂವರೆಗೆ ಅಲ್ಲಿರಬಹುದು ಎಂದು ಲೆಕ್ಕ ಹಾಕಿ ‘ಶ್ಯೂರ್. ಇವತ್ತು ಐದೂವರೆಗೆ ಸಿಗೋಣ. ಕಾಂಟ್ ವೇಯ್ಟ್ ಟು ಸೀ ಯೂ’ ಎಂದು ಉತ್ತರಿಸಿದಳು.

ಮಧ್ಯಾನ್ನದ ಬಿಡುವಿನ ಸಮಯದಲ್ಲಿ ಕೆ‌ಎಸ್‌ಐಸಿ ಅಂಗಡಿಗೆ ಹೋಗಿ ಕೆಂಪನೆ ಸೀರೆಯನ್ನು ಉಷೆಗಾಗಿ ಕೊಂಡಳು. ಈ ಬೆಂಗಳೂರು ಮೈಸೂರಿಗರು ಉಡುವ ಮೈಸೂರು ಸಿಲ್ಕ್ ಸ್ಯಾರಿ ಎಂದರೆ ಉಷೆಗೆ ಹುಚ್ಚು! ಐದಕ್ಕೆ ಸರಿಯಾಗಿ ಸೆಷನ್ ಮುಗಿಸಿ, ಸೆಂಟರಿನ ಉಳಿದ ಕೌನ್ಸಲರ್‌ಗಳಿಗೆ ಬಾಯ್ ಕೂಡಾ ಹೇಳದೆ ಕಾರ್‌ಪಾರ್ಕ್ ಕಡೆ ನಡೆದ ಪರಾಶರಿಯ ನಡಿಗೆಯಲ್ಲಿ ವಸಂತಾಗಮನದ ಲವಲವಿಕೆ. ಐದೂಇಪ್ಪತ್ತೈದಕ್ಕೇ ಥರ್ಡ್ ವೇವ್ ಕಾಫೀ ಸೇರಿದ ಪರಾಶರಿಯನ್ನು ಸ್ವಾಗತಿಸಲೇ ಕುಳಿತಂತಿದ್ದಳು ಉಷೆ. ಮುಂದಲೆಯಲ್ಲಿ ಒತ್ತಾಗಿ ಎದ್ದು ನಿಂತಿರುವ ಬಿಳಿ ಸುರುಳಿಗೂದಲನ್ನು ಹೊರತುಪಡಿಸಿದರೆ, ಉಷೆ ಒಂದು ಗ್ರಾಂ ಕೂಡಾ ಬದಲಾಗಿರಲಿಲ್ಲ. ಅದೇ ಪ್ರೀತಿಯಲ್ಲಿ ತೊಯ್ದ ನಗು, ಅದೇ ಒಳಗೊಳ್ಳುವಿಕೆ, ಅದೇ ಬೆಚ್ಚನೆಯ ಅಪ್ಪುಗೆ. ಅಪ್ಪುಗೆಯನ್ನು ಸಡಿಲಿಸಲು ಇಬ್ಬರೂ ತಯಾರಿಲ್ಲ. ಅಂತೂ ಒಂದೇ ಸೋಫಾದ ಮೇಲೆ ಒತ್ತಿಕೊಂಡಂತೆ ಕೂತಾಗ ಇಬ್ಬರಿಗೂ ಸಮಾಧಾನವಾದಂತಾಯ್ತು. ಗಂಡ, ಮನೆ, ಸಂಸಾರ, ಕೆಲಸವೆಂದೆಲ್ಲ ಒಂದು ಸುತ್ತು ಸುದ್ದಿ ಮುಗಿದಾಗ ಕೈಲಿದ್ದ ವೆನಿಲಾ ಫ್ರಾಪೆಯ ಕೊನೆಯ ಗುಟುಕೂ ಖಾಲಿಯಾಯಿತು.

ಆಗ ಪಕ್ಕದಲ್ಲಿದ್ದ ಆಳೆತ್ತರದ ಹೂವಿನಕುಂಡಕ್ಕೆ ಆನಿಸಿಟ್ಟ ತನ್ನ ಬ್ಯಾಗನ್ನು ಮಡಿಲಿಗೆಳೆದುಕೊಂಡಳು ಉಷೆ. “ಪಾರೋ, ನಾನೇನೋ ಕೊಡಬೇಕು ನಿನಗೆ. ಈ ನಡುವೆ ಈ ವಸ್ತುಗಳ ಭಾರವನ್ನ ನಾನು ತಲೆಯ ಮೇಲೆಯೇ ಹೊತ್ತು ತಿರುಗಿದಂತೆ ಇದೆ.” ಪೀಠಿಕೆ ಹಾಕಿದಳು. ಬ್ಯಾಗಿನಿಂದ ಬಿಳಿಯ ಕವರೊಂದನ್ನು ಹೊರಗೆಳೆದು “ಮಹೀ ಫೋಟೋಗಳು ಇವು. ನೆನಪಿದ್ಯಾ..? ಮೆಣಸಿನ ಸಾರನ್ನ ಊಟ ಮಾಡಿದ ಮೇಲೆ ತೆಗೆದ ಫೋಟೋಗಳು ಇವು. ಪ್ರಿಂಟ್ ಹಾಕಿಸಿ ಎಷ್ಟೋ ವರ್ಷಗಳೇ ಕಳೆದವು. ನಿನಗೆ ತಲುಪಿಸಲು ಧೈರ್ಯ ಸಾಕಾಗಿರಲಿಲ್ಲ. ಈಗೀಗ ಇಟ್ಟಿಟ್ಟಲ್ಲೇ ಭಾರ ಆಗಿಬಿಟ್ಟಿದೆ ಕಣೇ.. ಮಹೀ ಬೆಳೀತಿದ್ದಾಳೋ ಏನೋ..” ಎಂದು ತುಸು ಏರಿಕೆಯ ಸ್ವರದಲ್ಲಿ ಹೇಳಿ ತಕ್ಷಣ ನಿಲ್ಲಿಸಿದಳು. ಪರಾಶರಿಗೆ ಕಣ್ಣುತಪ್ಪಿಸಲು ಸಾಧ್ಯವಾಗಲಿಲ್ಲ.

“ಇನ್ನೂ ಇಟ್ಟರೆ ಎತ್ತಲೂ ಸಾಧ್ಯವಿಲ್ಲದಷ್ಟು ಭಾರ ಆದೀತು ಎಂದುಕೊಂಡು ಈ ಬಾರಿ ನಿನ್ನ ಭೇಟಿಯಾದೆ. ಹಾಂ! ಇಲ್ನೋಡು” ಇನ್ನೊಂದು ಪೊಟ್ಟಣ ತೆಗೆದಳು. ಅದು ಮೆತ್ತನೆಯ ಟಿಷ್ಯೂ ಪೇಪರಿನ ಪೊಟ್ಟಣ. “ನಾನು ಬಸಿರಿನಲ್ಲಿ ಇರಬೇಕಾದ್ರೆ ನೀನು ಹೇಳಿದ್ದೆ ಗೊತ್ತ? ಹೊಕ್ಕುಳಬಳ್ಳಿ ಹುಗಿದಲ್ಲಿ ಮಕ್ಕಳು ಮತ್ತೆ ಮತ್ತೆ ಬರುತ್ತಾರೆ ಅಂತ. ಮಹೀ ಹೊಕ್ಕುಳಬಳ್ಳಿ ಇದು. ನಿನಗೇ ಸಲ್ಲಬೇಕಾದ್ದು. ನನ್ನಲ್ಲಿ ದಿನವೂ ಉಸಿರಾಡುವ ಮಹೀ ನಿನ್ನಲ್ಲಿಗೆ ಬರಬೇಕಂದ್ರೆ, ನೀ ಈ ಹೊಕ್ಕುಳಬಳ್ಳಿಯನ್ನ ನಿನ್ನ ಮನೆಯಂಗಳದಲ್ಲಿ ಹುಗೀಬೇಕಲ್ಲ.. ಹಾಗಾದ್ರೂ ನಾನು ನಿನ್ನಲ್ಲಿಗೆ ಪದೇಪದೇ ಬರಬೇಕಲ್ಲ” ನಿಧಾನವಾಗಿ ಹೇಳಿದಳು ಉಷೆ. ಅಲ್ಲಿ ಮುಗ್ಧತೆ ಕೊಂಚ ಸೋಗಾಗಿದ್ದರೂ ಪರಾಶರಿಗೆ ಮಾರುಹೋಗದೇ ಇರಲಾಗಲಿಲ್ಲ. ಕೈಕಾಲು ಒಮ್ಮೆಲೇ ತಣ್ಣಗಾದಂತೆ ಅನ್ನಿಸಿ ಮತ್ತೆ ಅಲ್ಲೇ ಸುಧಾರಿಸಿಕೊಂಡು ಉಷೆಯನ್ನು ಬಿಗಿದು ಅಪ್ಪಿದಳು ಪರಾಶರಿ. “ಹೌದೇ!ಇವು ನನಗೇ ಸೇರಬೇಕಾದವು” ಕಷ್ಟಪಟ್ಟು ಮಾತು ಹೊರದೂಡಿದಳು.

ಮನೆಗೆ ಮರಳಿ ಮೇನುಡೋರಿನ ಕೀಲಿ ತಿರುಪುತ್ತಾ ‘ಮಹೀ ಫೋಟೋಗಳನ್ನು ಫ್ರಿಜ್ಜಿನ ಮೇಲೆ ಅಣ್ಣನ ಮಕ್ಕಳ, ಬಾವನ ಮಗಳ ಚಿತ್ರಗಳ ಸಾಲಿನಲ್ಲಿ ಇಡುವುದಾ..? ಅಥವಾ ಪಿತೃಗಳ ಸಾಲಿಗೆ ಸೇರಿರುವ ಅಪ್ಪಯ್ಯ, ಅಜ್ಜಿಯ ನೆನಪಿಗಾಗಿ ಕಪಾಟಿನ ನಾಗಂದಿಗೆಯ ಮೇಲೆ ಬೆಚ್ಚಗೆ ಎತ್ತಿಟ್ಟ ಅವರ ಬಟ್ಟೆಗಳ ಮಡಿಕೆಯಲ್ಲಿ ಇಡುವುದಾ..?’ ಎಂದು ಪರಾಶರಿ ಸಶಬ್ದವಾಗಿ ಹಲುಬಿದಳು. ಜಗದ ಎಲ್ಲ ಚರಾಚರ ವಸ್ತು ವಿಶೇಷ ಜೀವಭಾವಗಳಿಗೂ ತಮ್ಮ ಸ್ಥಾನವೆಂಬೋದು ಇರಲೇಬೇಕಲ್ಲ.



photo credit: Meta AI

ವಲಸೆ ಬಂದ ಹಕ್ಕಿಗಳು


ಪ್ರಿಯ ಓದುಗರಿಗೆ, ಈ ವಾರದ ಸಂಚಿಕೆಯಲ್ಲಿ ನನ್ನದೊಂದು ಕಥೆ. ಎರಡು ವರುಷಗಳ ಹಿಂದೆ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ “ಯುದ್ಧಗಳು” ಎಂಬ ನನ್ನ ಕಥೆಯ ಎರಡನೆಯ ಭಾಗವೆಂದು ಪರಿಗಣಿಸಬಹುದು. ಸಾಧ್ಯವಾದರೆ ಓದಿ ಅಭಿಪ್ರಾಯ ತಿಳಿಸಿ – ಇಂತಿ ಸಂಪಾದಕ


ಚದುರಿದ್ದ ಸಣ್ಣ ಬಿಳಿ ಮೋಡಗಳು ಮೆಲ್ಲನೆ ಒಟ್ಟಿಗೆ ಸೇರಿ, ಬ್ರಹದಾಕಾರದ ಕರಿಮೋಡಾಗಿ, ನಸು ನಗುತ್ತಿದ್ದ ಸೂರ್ಯನನ್ನು
ಮರೆಮಾಚಿ ಮಳೆ ಸುರಿಸುವ ಸೂಚನೆಯನ್ನು ಸೂಸುತ್ತಿದ್ದವು. ಶನಿವಾರದ ಮಧ್ಯಾಹ್ನದ ವೇಳೆಗೆ, ಸ್ಕಾಟ್ಲೆಂಡಿನ ಗ್ಲಾಸ್ಗೋ ಪಟ್ಟಣದ ಮೂಲೆ ಮೂಲೆಯಿಂದ, ಗುಂಪು ಗುಂಪಾಗಿ, ಹರಿದು ಬಂದ ಜನ, ಜಾರ್ಜ್ಬೀದಿಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿ, ಮುಗುಲಿನಲ್ಲಿದ್ದ ಮೋಡಗಳನ್ನು ಮುಟ್ಟುವಂತೆ ಕೂಗುತ್ತಲಿದ್ದರು ” ನಿರಾಶ್ರಿತರಿಗೆ ನೆಲೆ ಬೇಡಾ, ನಮ್ಮ ದೇಶ ನಮಗೆ, ನೋ ಟು ಇಮಿಗ್ರೇಷನ್, ಗಡೀಪಾರು ಮಾಡಿ, ದೇಶ ಉಳಿಸಿ”
ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮರಿಯಾಳಿಗೆ ಆ ಘೋಷಣೆಗಳೆಲ್ಲವೂ ಹರಿತವಾದ ಚೂರಿಗಳಂತೆನಿಸಿ ಎದೆಯನ್ನು
ಇರಿದಂತೆ ಭಾಸವಾಯಿತು. ಒಂದು ಕ್ಷಣ ಮೈಯಲ್ಲಿ ನಡುಕು ಹುಟ್ಟಿ, ಕಾಲುಗಳು ನಡುಗಿ, ಬೆವರಾಡಿ, ಕಣ್ಣಿಗೆ ಕತ್ತಲೆ
ಕಟ್ಟಿದಂತಾದರೂ, ಸಾವರಿಸಿಕೊಂಡು ಮುಂದೆ ಹೆಜ್ಜೆ ಹಾಕತೊಡಗಿದಳು. ದಿನಾಲೂ ಕೆಲಸಕ್ಕೆ ಹೋಗುವಾಗ ಆ ಬೀದಿಯಲ್ಲಿ
ನೂರಾರು ಹಸನ್ಮುಖಗಳನ್ನು ಕಾಣುತ್ತಿದ್ದ ಅವಳಿಗೆ, ಈ ಹೊತ್ತು ನೆರೆದಿದ್ದ ಬ್ರಹತ್ ಗುಂಪು ಮತ್ತು ಅವರ ಘೋಷಣೆಗಳು ವಿಚಿತ್ರವೆನಿಸಿ, ಮನದಲ್ಲಿ ತಲ್ಲಣವನ್ನುಂಟು ಮಾಡಿದ್ದವು. ಹೇಗೋ ಅಲ್ಲಿಂದ ಮರೆಯಾಗಿ ಮನೆಯತ್ತ ದಾಪುಗಾಲು ಹಾಕತೊಡಗಿದಳು. ಮೂರು ವರ್ಷಗಳ ಹಿಂದೆ ಯುದ್ಧವೆಂಬ ಪಿಶಾಚಿಗೆ ಬಲಿಯಾಗಿ, ಪ್ರಾಣಭಯದಿಂದ ಉಕ್ರೈನಿನ ಕಾರ್ಕಿವಿನಿಂದ ಪಲಾಯನಗೈದು ಇಲ್ಲಿಗೆ ಆಗಮಿಸಿದಾಗ, ಆದರದಿಂದ ಬರಮಾಡಿಕೊಂಡವರು ಇವರೇ ಏನು? ಹಾಗಾದರೆ, ಈ ಅಲ್ಪಸಮಯದಲ್ಲಿ ಇವರಿಗೇನಾಯಿತು? ಇವರ ಮನಸಿನಲ್ಲಿ ಯಾವ ವಿಷಜಂತು ತಿರಸ್ಕಾರದ ವಿಷವನ್ನು ಬಿತ್ತಿತು? ಯಾಕೆ ಈ ಆಕ್ರೋಶದ ಹೊಗೆ ಎದ್ದಿತು? ಮನದಲ್ಲಿ ಭುಗಿಲೆದ್ದ ಪ್ರಶ್ನೆಗಳಿಗೆ ತನ್ನಲ್ಲಿ ಉತ್ತರವಿಲ್ಲವೆಂದು ಗೊತ್ತಾಗುವಷ್ಟರಲ್ಲಿಯೇ ಮರಿಯಾ,
ತಾನಿದ್ದ ಪೇಯಿಂಗ್ ಗೆಸ್ಟ್ ಮನೆಯ ಬಾಗಿಲವನ್ನು ತಟ್ಟಿದ್ದಳು. ಬಾಗಿಲವನ್ನು ತೆರೆದು ಬರಮಾಡಿಕೊಂಡ ಮನೆಯ ಒಡತಿ ಸಿಸ್ಟೆರ್
ಲೂಸಿ, ಅವಳ ಚಿಂತಾಕ್ರಾಂತವಾದ ಮುಖವನ್ನು ಕಂಡು,
“ಪ್ರತಿಭಟನೆ ಇದೆ, ಬೇಡವೆಂದರೂ ರಾತ್ರಿಯ ಕೆಲಸಕ್ಕೆ ಹೋಗಿದ್ದೆ, ಎಲ್ಲವೂ ಸರಿ ತಾನೆ?” ಎಂತೆಂದರು.
ಮೈಮೇಲಿದ್ದ ಭಾರವಾದ ಕೋಟನ್ನು ಕಳಚುತ್ತ ಮರಿಯಾ,
” ಎಲ್ಲವೂ ಸರಿ ಇರದಿದ್ದರೂ, ಸರಿಯಾಗಿದೆ ಎಂದುಕೊಂಡು ಬದುಕಬೇಕಲ್ಲಾ ಸಿಸ್ಟೆರ್”
ಅವಳ ಮನದಾಳವನ್ನು ಅರಿತುಕೊಂಡ ಸಿಸ್ಟೆರ್ ಲೂಸಿ,
“ಲಂಚ್ ತಯ್ಯಾರಾಗಿದೆ ಮರಿಯಾ, ಫ್ರೆಶ್ ಆಗಿ ಬಂದು ಬಿಡು, ಊಟ ಮಾಡುತ್ತಾ ಮಾತಾಡೋಣ” ಎಂದು ತಟ್ಟೆಗಳನ್ನು
ಟೇಬಲ್ಮೇಲೆ ಇಡತೊಡಗಿದರು. ಕ್ವೀನ್ ಎಲಿಜಬೆತ್ ಆಸ್ಪತ್ರೆಯ ಪ್ರಸೂತಿ ವಿಭಾಗದಲ್ಲಿ ಹೆಡ್ ಸಿಸ್ಟೆರ್ ಆಗಿ ಕೆಲಸ ಮಾಡುತ್ತಿದ್ದ
ಸಿಸ್ಟೆರ್ ಲೂಸಿ ನಿವೃತ್ತಿ ಜೀವನಕ್ಕೆ ಇಳಿದು ಎರಡು ವರ್ಷಗಳು ಕಳೆದಿದ್ದವು. ಮಕ್ಕಳಿಲ್ಲದ ಸಿಸ್ಟೆರ್ ಲೂಸಿ ತಮ್ಮ ನಿವೃತ್ತಿ
ಜೀವನವನ್ನು, ನಿರಾಶ್ರಿತರಿಗೆ ಸಹಾಯ ಮಾಡುವ ಚಾರಿಟಿ ಸಂಘಟನೆಗೆ ಮುಡಿಪಾಗಿರಿಸಿಕೊಂಡಿದ್ದರು.
ಯುದ್ಧವೆಂಬ ಪೈಶಾಚಿಕತೆಯಲ್ಲಿ, ಸೈನಿಕರ ಅಮಾನವೀಯ ಅಟ್ಟಹಾಸದಲ್ಲಿ, ಅಮಾಯಕ ಮಹಿಳೆಯರ ಮೇಲೆ ನಡೆದ
ಅತ್ಯಾಚಾರದಲ್ಲಿ ಬಲಿಪಶುವಾಗಿ, ಪ್ರಾಣಭಯದಿಂದ ನಿರಾಶ್ರಿತೆಯಾಗಿ ಪಲಾಯನಗೈದು ಆಸ್ಪತ್ರೆಯಲ್ಲಿ ನೋಂದಣಿಯಾದಾಗ, ತನ್ನ ಮೇಲೆ ನಡೆದಿದ್ದ ಹೀನಾಯ ಕೃತ್ಯದಿಂದ ಗರ್ಭವತಿಯಾಗಿರುವೆನೆಂದು ತಿಳಿದು, ಪಾಪದ ಪಿಂಡವನ್ನು ತೆಗೆದು ಬೀಸಾಕಿರೆಂದು ಗೋಗರಿಯುತ್ತಿದ್ದ ಮರಿಯಾಳನ್ನು ಸಂತೈಸಿ, ಬದುಕುವ ಹಾದಿಯನ್ನು ತೋರಿಸಿಕೊಟ್ಟಿದ್ದರು ಆಗ ಆಸ್ಪತ್ರೆಯ ಕೆಲಸದಲ್ಲಿದ್ದ ಸಿಸ್ಟರ್ ಲೂಸಿ.
ಟೆಸ್ಕೋ ಎಂಬ ದೊಡ್ಡ ಆಹಾರ ಮತ್ತು ದಿನಸಿ ಮಳಿಗೆಯಲ್ಲಿ ಕೆಲಸ ದೊರೆತ ಮೇಲೆ, ನಿರಾಶ್ರಿತರ ಆಶ್ರಯ ಸ್ಥಾನದಿಂದ ಬಿಡುಗಡೆ
ಹೊಂದಿ, ಅತ್ಯಾಚಾರದಿಂದ ಜನ್ಮವೆತ್ತಿದ ಮಗುವನ್ನು ಅಪ್ಪಿಕೊಂಡು, ಬೆಳೆಸಿ ಪೋಷಿಸುತ್ತೇನೆ ಎಂಬ ಗಟ್ಟಿ ನಿರ್ಧಾರದಿಂದ
ಪೇಯಿಂಗ್ ಗೆಸ್ಟ್ ಆಗಿ, ಎರಡು ವರ್ಷಗಳ ಹಿಂದೆ ಸಿಸ್ಟೆರ್ ಲೂಸಿಯ ಮನೆಗೆ ತೆರಳಿದ್ದಳು ಮರಿಯಾ. ಹಲ್ಲುಜ್ಜಿ, ಮುಖತೊಳೆದು ಫ್ರೆಶ್ ಆಗಿ ಬಂದ ಮರಿಯಾಗೆ ತನ್ನ ಮಗನ ಮುಖವು ಕಾಣಿಸದೆ ಇದ್ದಾಗ,
“ಸಿಸ್ಟೆರ್, ಪೆಟ್ರೋ ಎಲ್ಲಿ ಕಾಣಿಸ್ತಾನೆೇ ಇಲ್ಲ?”
“ಅವನೆಲ್ಲಿ ಹೋಗುತ್ತಾನೆ? ಬ್ರೇಕ್ಫಾಸ್ಟ್ ತಿಂದು ಮೇಲಿನ ಕೋಣೆಯಲ್ಲಿ ಪಕ್ಕದ ಮನೆಯ ಇವಾನನ ಜೊತೆಗೆ ಬ್ಯುಸಿ ಆಗಿದ್ದಾನೆ.
ಅವನ ಪ್ರೀತಿಯ ಹಾವು ಏಣಿ ಆಟದಲ್ಲಿ ಮೈಮರೆತಿರಬಹುದು. ಇಷ್ಟೊಂದು ಸಣ್ಣ ವಯಸ್ಸಿನಲ್ಲಿಯೇ ಆಟದಲ್ಲಿ ಎಷ್ಟೊಂದು ಆಸಕ್ತಿ”
ಎಂದು ಮೆಚ್ಚಿಗೆಯ ವರದಿಯನ್ನು ಒಪ್ಪಿಸಿದರು ಲೂಸಿ.
“ಪೆಟ್ರೋ…. ಲಂಚ್ ರೆಡಿ .. ” ಜೋರಾಗಿ ಕೂಗಿದಳು ಮರಿಯಾ.
ಅಮ್ಮನ ಕರೆಯನ್ನು ಕೇಳಿ ಓಡುತ್ತ ಬಂದ ಪೆಟ್ರೋ ಗಟ್ಟಿಯಾಗಿ ಅವಳನ್ನು ಅಪ್ಪಿಕೊಂಡನು. ಪೆಟ್ರೋನ ಮುಖವು ತನ್ನ ಬಾಳನ್ನೇ
ಹಾಳುಮಾಡಿದ ಆ ಪಿಶಾಚಿ ಸೈನಿಕನ ತದ್ರೂಪವೆನಿಸಿ ಮನದಲ್ಲಿ ಎಷ್ಟೋ ಸಲ ತಾತ್ಸಾರ ಮೂಡಿದ್ದರೂ, ಕಂದನ ಬಿಸಿ
ಅಪ್ಪಿಗೆಯಲ್ಲಿ ತಾಯ್ತನದ ಮಮಕಾರವರಳಿ ಜಗತ್ತನ್ನೇ ಮರೆತು ಬಿಡುತ್ತಿದ್ದಳು ಮರಿಯಾ. ಯುದ್ಧದ ಕಠೋರತೆಯಲ್ಲಿ ತನ್ನ ಶೀಲ ಮತ್ತು ಭವಿಷ್ಯದ ಕನಸುಗಳನ್ನೆಲ್ಲ ಕಳೆದುಕೊಂಡು, ಎಲ್ಲವೂ ಹಾಳಾಗಿ ಹೋಗಿ ಜೀವನದಲ್ಲಿ ಏನಿದೆ ಎಂದು ಯೋಚಿಸಿ, ಇಷ್ಟವಿರದಿದ್ದರೂ ಬೇರೆ ಯಾವ ಆಯ್ಕೆಯಿಲ್ಲದೆ ಜನ್ಮಕೊಟ್ಟು, ಅನಾಥಾಶ್ರಮಕ್ಕೆ ಇವನನ್ನು ಸೇರಿಸಿ ಮರೆಯಾಗಿ ಬಿಡೋಣವೆಂದು ಒದ್ದಾಡುತ್ತಿದ್ದಾಗ, ತಾಯ್ತನದ ಅಂಕುರವನ್ನು ಮೂಡಿಸಿ ಬದುಕಬೇಕೆಂಬ ಆಸೆಯ ಚಿಗುರನ್ನು ಹುಟ್ಟಿಸಿದವನು ಪೆಟ್ರೋ ತಾನೇ? ಅವನ ದೇಹದಲ್ಲಿ ಹರಿಯುತ್ತಿರುವುದು ತನ್ನ ರಕ್ತ ತಾನೇ? ಅವನ ಬಾಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವುದು ತನ್ನ ಕರ್ತವ್ವ್ಯ ತಾನೇ? ಎಂದು ಯೋಚಿಸಿ ನೆಮ್ಮದಿಯ ಉಸಿರಿನೊಂದಿಗೆ ಬಾಳ ಬಂಡಿಯನ್ನು ಎಳೆಯುತ್ತಲಿದ್ದ ಮರಿಯಾಗೆ, ಈ ದಿನ ಬೀದಿಯಲ್ಲಿ ಕಂಡ ಮತ್ತು ಇತ್ತೀಚಿಗೆ ಬೇರೆಡೆಯಲ್ಲಿ ನಡೆಯುತ್ತಲಿರುವ ಇಂತ ಘಟನೆಗಳು ದೊಡ್ಡ ಆಘಾತವನ್ನೇ ಮೂಡಿಸಿದ್ದವು.
ಅಮ್ಮನ ಅಪ್ಪುಗೆಯಿಂದ ಬಿಡಿಸಿಕೊಂಡು, ಟೇಬಲ್ ಮೇಲಿದ್ದ ಸಲಾಡ್ ಬನ್ನನ್ನು ಎತ್ತಿಕೊಳ್ಳುತ್ತ ಪೆಟ್ರೋ,
“ಅಮ್ಮ, ಹಾವು ಏಣಿಯಾಟದಲ್ಲಿ ಇವಾನನ್ನು ಸೋಲಿಸಿಬಿಟ್ಟೆ” ಎಂದು ಗರ್ವದಿಂದ ಹೇಳಿದನು.
“ಮಗು, ಜೀವನದ ಏಣಿಯನ್ನು ಏರುವುದೂ ಅಷ್ಟೇ ಕಷ್ಟ. ಪ್ರತಿಯೊಂದು ಮೆಟ್ಟಲಿನಲ್ಲಿಯೂ, ಕಷ್ಟವೆಂಬ ಕಾಣದ ಹಾವುಗಳು ಕಚ್ಚಲು ಕಾತೊರೆದು ಕುಳಿತ್ತಿರುತ್ತವೆ”
ಮುಗ್ದ ಮನಸಿಗೆ ಅಮ್ಮನ ಮಾತಿನ ಪದಗಳ ಅರ್ಥವಾಗದಿದ್ದರೂ, ತಲೆಯನ್ನಾಲಿಡಿಸುತ್ತ, ಕೈಯಲ್ಲಿ ಗೆಳೆಯ ಇವಾನಿಗೊಂದು
ಬನ್ನನ್ನು ಹಿಡಿದುಕೊಂಡು, ಆಟವನ್ನು ಮುಂದುವರೆಸಲು ಮೇಲಿನ ಕೋಣೆಗೆ ಓಡಿಹೋದನು ಪೆಟ್ರೋ.

ಅವಳ ಮಾತಿನ ಅರ್ಥವನ್ನು ಗ್ರಹಿಸಿ, ಅವಳ ತಲೆಯಲ್ಲಿ ಏನು ತುಮುಲು ನಡೆದಿದೆ ಎಂಬುವುದನ್ನು ಅರ್ಥೈಸಿಕೊಂಡು, ತಟ್ಟೆಯಲ್ಲಿ ಆಹಾರವನ್ನು ಹಾಕಿಕೊಳ್ಳುತ್ತಾ ಪಕ್ಕದಲ್ಲಿಯೇ ಕುಳಿತಿದ್ದ ಮರಿಯಾಗೆ,
“ನಿನ್ನ ಮನಸಿನ ದುಗುಡು ಅರ್ಥವಾಗುತ್ತಿದೆ. ಎಲ್ಲವೂ ಸರಿಯಾಗುತ್ತದೆ ಬಿಡು” ಎಂದು ಅವಳ ತಟ್ಟೆಗೂ ಆಹಾರವನ್ನು ಬಡಿಸಿದರು
ಲೂಸಿ.
“ಉದ್ಭವಿಸಿರುವ ಈ ದ್ವೇಷದ ಜ್ವಾಲೆ ಅಷ್ಟೊಂದು ಸುಲಭವಾಗಿ ಶಮನವಾಗುವದಿಲ್ಲವೆಂದು ಅನಿಸುತ್ತಿದೆ. ಹಿಂದಿನ ವಾರ ಲಂಡನ್
… ಈ ವಾರ ಗ್ಲ್ಯಾಸ್ಗೋ … ಮುಂದಿನ ವಾರ ಸ್ಟಾರ್ಲಿಂಗ್ … ಹಾಗೆಯೇ ಪಟ್ಟಿ ಉದ್ದವಾಗುತ್ತಲೇ ಹೋಗುತ್ತಿದೆ. ಭಾಗವಹಿಸುತ್ತಿರುವವರ ಸಂಖ್ಯೆ ಲಕ್ಷಗಂಟೆಲೆ ಬೆಳೆಯುತ್ತಲೇ ಇದೆ. ಇದು ನನ್ನಂತ ವಲಸಿಗರಿಗೆ ಚಿಂತೆಯ ವಿಷಯವಲ್ಲವೇ
ಸಿಸ್ಟೆರ್?” ಎಂತೆಂದಳು ಮರಿಯಾ.
“ನಿನಗೊಬ್ಬಳಿಗೇಕೆ? ನನ್ನಂತ ಸಾಮಾನ್ಯ ಜೀವಿಗೂ ಇದು ಚಿಂತೆಯ ವಿಷಯವಲ್ಲವೇ? ಇದಷ್ಟೇ ಏಕೆ? ಈಗ ಜಗತ್ತಿನಲ್ಲಿ
ನಡೆಯುತ್ತಿರುವ ವಿದ್ಯಮಾನವೆಲ್ಲವೂ ಚಿಂತೆಯ ಹಂದರವಲ್ಲವೇ? ಜಾತಿ, ಧರ್ಮ, ಪಂಗಡ, ಬಣ್ಣ ಎಲ್ಲದರಲ್ಲೂ ಪರದಾಟ
ಬಡಿದಾಟ. ಎಲ್ಲೆಲ್ಲಿಯೂ ಪ್ರಚೋದನೆ, ಪ್ರತಿರೋಧ, ಪ್ರತೀಕಾರ. ಯುದ್ಧ, ಕ್ರಾಂತಿ, ಕೊಲೆ, ಕಡಿ ಬಡಿ ಎಂಬ ಅಂಧಃಕಾರದ ಕೇಕೆ.
ಮಾನವೀತೆಯ ಹರಣ, ಬರೀ ಮಾರಣಹೋಮ. ಮನಸುಗಳನ್ನರಿಯದೆ ಉಕ್ಕುತ್ತಿರುವ ಮತ್ಸರ, ತಾರಕಕ್ಕೇರುತ್ತಿರುವ
ತಾತ್ಸಾರದ ಅಪಸ್ವರ. ಯಾರು ಕಾರಣ? ರೂಢಿಯಾಗುತ್ತಿರುವ ವ್ಯವಸ್ಥೆಯೇ? ಮೃಗವಾಗುತ್ತಿರುವ ಮಾನವನೇ?”
ಭಾವುಕರಾಗಿ ಮನದ ಭಾವನೆಗಳನ್ನೆಲ್ಲಾ ಹೊರ ಹಾಕಿ, ಗಟ ಗಟನೆ ಒಂದು ಲೋಟ ನೀರನ್ನು ಕುಡಿದು ಕ್ಷಣಕಾಲ ತಟಸ್ಥರಾದರು
ಸಿಸ್ಟೆರ್ ಲೂಸಿ.
ಕ್ಷಣಕಾಲ ಆವರಿಸಿದ ಮೌನವನ್ನು ಮುರಿದು, ತಾನೂ ಒಂದು ಗುಟುಕು ನೀರು ನುಂಗಿ ಮರಿಯಾ,
“ಕಾರಣ ಹುಡುಕುವುದು ಎಷ್ಟು ಕಷ್ಟವೋ, ಹಾಗೆಯೇ ಅದರಿಂದಾಗುವ ಯಾತನೆಯನ್ನು ಅನುಭವಿಸುವುದು ಇನ್ನೂ ಕಷ್ಟವಲ್ಲವೇ ಸಿಸ್ಟರ್? ಯಾರು ಕಾರಣರೆಂದು ಯಾರಿಗೆ ಗೊತ್ತು?”
ಟೇಬಲ್ ಮೇಲಿದ್ದ ಬುಟ್ಟಿಯತ್ತ ಕಣ್ಣಾಡಿಸಿ,
“ಸಿಸ್ಟರ್! ಕೊಳೆತ ಒಂದು ಹಣ್ಣು ಸಾಕಲ್ಲವೇ ಆ ಬುಟ್ಟಿಯಲ್ಲಿರುವ ಹಣ್ಣುಗಳನ್ನೆಲ್ಲಾ ಹಾಳುಮಾಡಲಿಕ್ಕೆ ಹಾಗೆಯೇ, ಯಾರದೋ
ತಾತ್ಸಾರದ ಒಂದು ಕೂಗು ಸಾಕಲ್ಲವೇ ತಿರಸ್ಕಾರದ ಹೊಗೆಯನ್ನು ಹಬ್ಬಿಸಲಿಕ್ಕೆ”
ಸಿಸ್ಟರ್ ಲೂಸಿಯ ಪ್ಲೇಟಿನಲ್ಲಿದ್ದ ಖಾಲಿ ಲೋಟಕ್ಕೆ ಟೊಮ್ಯಾಟೋ ಸೂಪ್ ಸುರಿಯುತ್ತ ಮತ್ತೆ ಮಾತು ಮುಂದುವರೆಸಿದಳು,
“ನುಸುಳಿ ನುಗ್ಗುವ ನಿರಾಶ್ರಿತರು, ಹಾರಿ ಹರಿದು ಬರುವ ವಲಸಿಗರೆಲ್ಲರೂ ಒಳ್ಳೆಯವರೆಂದು ನಾನು ಹೇಳಲಾರೆ. ನಿಜವಾದ
ಆಶ್ರಯದ ಅವಶ್ಯಕತೆಯಿದ್ದವರು ಎಷ್ಟು ಜನ? ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುವವರು ಇನ್ನೆಷ್ಟು ಜನ? ಮೈ ಮುರಿದು ಬೆವರು ಸುರಿಸಿ ಬದುಕುವವರು ಎಷ್ಟು ಜನ? ದೊರಕುವ ಸಹಾಯದಿಂದ ಸೋಮಾರಿ ಕಟ್ಟೆಯಲ್ಲಿ ಕುಳಿತು ಬೀಡಿ ಸಿಗರೇಟ್ಸೇ ದುವವರು ಇನ್ನೆಷ್ಟು ಜನ? ಈ ನೆಲದಲ್ಲಿ ಹುಟ್ಟಿದ ನನಗೇನೇ ಎಲ್ಲ ಸ್ವಾತಂತ್ರ್ಯ ಎಂದು ಬೀಗುವವರು
ಮತ್ತೆಷ್ಟು ಜನ? ಪರಕೀಯಳಾಗಿ ಕಷ್ಟಪಟ್ಟು ದುಡಿದು ಬದಕುತ್ತಿದ್ದರೂ, ಇವರ ಆಕ್ರೋಶಕ್ಕೆ ಬಲಿಯಾಗುವ ನನ್ನಂತವರು ಇನ್ನೆಷ್ಟೋ ಜನ? ಎಲ್ಲಾ ನನ್ನ ಹಣೆಬರಹವಲ್ಲವೇ?” ಮಾತು ಮುಗಿಸಿ ಉದಾಸೀನತೆಯ ಉಸಿರನ್ನೆಳೆದಳು ಮರಿಯಾ.

” ರಾತ್ರಿ ಕೆಲಸ ಮಾಡಿ ಬಳಲಿರುವೆ ಹೋಗಿ ಮಲಗಿಕೊ. ಸಾಯಂಕಾಲ ಮಾತಾಡೋಣ” ಎಂತೆಂದು ತಮ್ಮ ಕೋಣೆಯತ್ತ ನಡೆದರು ಲೂಸಿ. ಬೆಳಿಗ್ಗೆ ಮುಸುಕಿದ್ದ ಮೋಡಗಳು ತೆರವಾಗಿ, ಆಕಾಶದಲ್ಲಿ ಸೂರ್ಯನು ಮತ್ತೆ ಪ್ರಜ್ವಲಿಸತೊಡಗಿದ್ದನು. ಸಂಜೆ ಆರು ಗಂಟೆಯಾಗಿದ್ದರೂ ನಿಖರವಾದ ಬೆಳಕು ಹಿತ್ತಲಿನಲ್ಲಿ ಇನ್ನೂ ನಗುತ್ತಲಿತ್ತು. ಮಾಡಿದ್ದ ಕಾಫಿಯನ್ನು ಕಪ್ಪಿಗೆ ಸುರುವುತ್ತ,
“ಸಿಸ್ಟರ್ ಕಾಫಿ ರೆಡಿ … ಪ್ಲೀಸ್ ಕಮ್” ಎಂದು ಮರಿಯಾ ಕೂಗುತ್ತಲಿದ್ದಳು.
ಕೋಣೆಯಿಂದ ಹೊರಬಂದ ಲೂಸಿ,
“ಓಹ್! ಎಷ್ಟೊಂದು ಸುಂದರವಾದ ಸಂಜೆ. ಕಮಾನ್ … ಗಾರ್ಡನ್ನಲ್ಲಿ ಕುಳಿತು ಕಾಫಿ ಹೀರೋಣ”
ಎಂದು ಇಬ್ಬರೂ ಹೊರ ನಡೆದರು. ಕುಕ್ಕೂ … ಕುಕ್ಕೂ … ಎಂದು ದೂರದಿಂದ ಕೇಳಿಬರುತ್ತಿದ್ದ ಪಕ್ಷಿಯ ಕೂಗನ್ನು ಅನುಕರಣೆ
ಮಾಡುತ್ತಾ ಪೆಟ್ರೋ ಕೂಡ ಗಾರ್ಡನ್ನನಲ್ಲಿ ಜಿಗಿದು ಆಟವಾಡತೊಡಗಿದನು.
“ಸಿಸ್ಟರ್! ಆ ಪಕ್ಷಿ ಎಷ್ಟೊಂದು ಚನ್ನಾಗಿ ಹಾಡುತ್ತಿದೆಯಲ್ಲ, ಬಹುಷಃ ದುಃಖವನ್ನೆಲ್ಲ ಮರೆತು”
ಕಾಫಿಯ ಗುಟುಕನ್ನು ಹೀರುತ್ತಾ ಲೂಸಿ ಅಂದರು,
“ಹೌದು, ಕುಕ್ಕು ಹಕ್ಕಿ, ಬಹಳ ಇಂಪಾಗಿ ಹಾಡುತ್ತೆ … ಬೇಸಿಗೆಯ ಮೂರು ತಿಂಗಳು ಇಲ್ಲಿ ಕಾಣಿಸಿಕೊಳ್ಳುತ್ತೆ … ಬಹುಷಃ
ಇನ್ನೊಂದಷ್ಟು ದಿನಗಳು … ಆ ಮೇಲೆ ಹಾರಿಹೋಗುತ್ತೆ”
ಮರಿಯಾ ಪ್ರಶ್ನಾರ್ತಿತವಾಗಿ ಅವರ ಮುಖವನ್ನು ನೋಡಿದಳು.
“ಹೌದು ಮರಿಯಾ ಇದು ವಲಸೆ ಹಕ್ಕಿ. ಇದಕ್ಕೆ ತನ್ನದೇ ಆದ ದೇಶವಿಲ್ಲ. ಅನಾನುಕೂಲವಾದ ಜಾಗದಿಂದ ಅನುಕೂಲವಾದ ಜಾಗಕ್ಕೆ ಆಗಾಗ್ಗೆ ಹಾರುತ್ತಲೇ ಇರುತ್ತದೆ. ಹೊಸ ಜಾಗ ತನ್ನದೇ ಎಂದು ಭಾವಿಸಿ ಅದರ ಸವಿಯೊಂದಿಗೆ ಸಂತೋಷವಾಗಿ ಹಾಡುತ್ತ ಕಾಲ ಕಳೆಯುತ್ತೆ. ತನ್ನದೇ ಆದ ಗೂಡು ಇರದಿದ್ದರೂ, ಬೇರೆಯವರ ಗೂಡಿನಲ್ಲಿ ಮರಿ ಹುಟ್ಟಿಸಿ, ಪ್ರತಿಕೂಲವಾದ ಸಮಯ ಎದುರಾಗುವ ಮುನ್ನವೇ ಜಾಗವನ್ನು ಖಾಲಿ ಮಾಡುತ್ತೆ” ಎಂದು ಕುಕ್ಕುವಿನ ಬಗ್ಗೆ ತಮಗೆ ತಿಳಿದಿದ್ದ ವಿಷಯವನ್ನು ಹರಿಬಿಟ್ಟರು ಲೂಸಿ.
“ಓಹ್! ಇದು ನನಗೆ ಗೊತ್ತೇ ಇರಲಿಲ್ಲ. ಇಂಪಾಗಿ ಹಾಡಿದರೂ ಇದೆಂತ ಸ್ವಾರ್ಥ ಕಪಟ ಹಕ್ಕಿ” ಎಂದು ಉದ್ಘಾರ ತೆಗೆದಳು
ಮರಿಯಾ.

“ನೋ! ಅದು ಕಪಟ ಹಕ್ಕಿ ಅಲ್ಲಾ, ಬದುಕುವುದು ಹೇಗೆಂದು ಚನ್ನಾಗಿ ಅರಿತಿರುವ ಜಾಣ ಹಕ್ಕಿ. ಜಾಣರೂ ಸಹ ಸಮಯಕ್ಕೆ ತಕ್ಕಂತೆ
ಸ್ವಾರ್ಥಿಗಳು ಎಂಬುವದನ್ನು ಮರೆಯಬೇಡ ಮರಿಯಾ. ಕಾಫಿ ಆರಿ ಹೋಗುತ್ತೆ ಕುಡಿದು ಬಿಡು” ಎಂದು ಕಪ್ಪನ್ನು ಅವಳತ್ತ ಸರಿಸಿದರು ಲೂಸಿ.

ಇನ್ನೂ ಜೋರಾಗಿ ಕೇಳಿಬರುತ್ತಲಿದ್ದ ಆ ಹಕ್ಕಿಯ ಕುಕ್ಕು ಹಾಡನ್ನು ಆಲಿಸುತ್ತ ಕಾಫಿಯನ್ನು ಮುಗಿಸಿದಳು ಮರಿಯಾ.
“ನಿನಗೊಂದು ಹೊಸ ಸುದ್ಧಿ. ನನ್ನ ಸಂಘಟನೆಯಿಂದ ಕರೆ ಬಂದಿತ್ತು. ಮುಂದಿನ ಶನಿವಾರ ಈ ದಿನ ನಡೆದ ಪ್ರತಿಭಟನೆಗೆ
ಪ್ರತಿಕಾರವಾಗಿ ನಮ್ಮಂತ ಎಲ್ಲ ಸಂಘಟನೆಯವರಿಂದ ಪ್ಪ್ರತಿಭಟನೆ ಇದೆ. ಕೆಲಸಕ್ಕೆ ಚಕ್ಕರ್ ಹೊಡೆದು ಬಂದು ಬಿಡು. ನಮ್ಮ
ಭಲವೂ ಬಲಿಷ್ಠವಿದೆ ಎಂದು ತೋರಿಸಬೇಕಾಗಿದೆ” ಎಂತೆಂದರು ಲೂಸಿ.
“ಈ ನಾಡಿನಲ್ಲಿ ಹುಟ್ಟಿದವರ ಚಿಂತನೆಗಳ ಜೊತೆಗೆ ಪ್ರತಿರೋಧ ವ್ಯಕ್ತ ಪಡಿಸುವ ಹಕ್ಕು, ಎಲ್ಲಿಂದಲೋ ಬಂದಿರುವ ನಮಗೂ
ಇದೆಯೇ ಸಿಸ್ಟರ್”
“ಹುಟ್ಟಿದ ಜೀವಿಗಳಿಗೆಲ್ಲವೂ ಭೂಮಿಯ ಮೇಲೆ ಬದುಕುವ ಹಕ್ಕು ಇದೆ ಎಂಬುವುದನ್ನು ಮರೆಯಬೇಡ ಮರಿಯಾ.
ಕತ್ತಲಾಗತೊಡಗಿದೆ ಒಳ್ಳೆಯ ಡಿನ್ನರ್ ಮಾಡೋಣ ಬಾ”ಎಂದು ಮೇಲೆದ್ದರು ಸಿಸ್ಟರ್ ಲೂಸಿ.
ಸಿಸ್ಟರ್ ಹೇಳಿದ ಮಾತು ಸರಿಯೆನಿಸಿದರೂ, ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿ ವಾರವು ಉರುಳಿ ಹೋಗಿದ್ದು
ಮರಿಯಾಗೆ ಗೊತ್ತೇ ಆಗಿರಲಿಲ್ಲ. ಇನ್ನೊಂದು ಶನಿವಾರದ ಮುಂಜಾನೆ … ಅದೇ ಸ್ಥಳ, ಅದೇ ಬೀದಿ, ಜನರು ಬೇರೆ,
ಘೋಷಣೆಗಳು ಬೇರೆ, ಉದ್ದೇಶ ಬೇರೆ. ಪ್ರತಿಭಟನೆಕಾರಕ್ಕಿಂತ ಪೊಲೀಸರ ಸಂಖ್ಯೆಯೇ ಜಾಸ್ತಿ ಎನಿಸಿತು ಮರಿಯಾಗೆ. ‘ಕಳೆದ
ವಾರ ಸೇರಿದ ಜನಸಾಗರವೆಲ್ಲಿ? ಈಹೊತ್ತಿನ ಗುಂಪೆಲ್ಲಿ? ಆದರೂ ಮನಸುಗಳನ್ನರಿತು ಮಾನವೀತೆಯನ್ನು ಮೆರೆಯುವ
ಇಷ್ಟಾದರೂ ಜನರಿದ್ದಾರಲ್ಲ’ ಎಂದು ಮನದಲ್ಲಿಯೇ ನೆಮ್ಮದಿಯ ಉಸಿರನ್ನೆಳೆದಳು ಮರಿಯಾ. ಶಾಂತಿಯುತವಾಗಿ ನಡೆದ
ಪ್ರತಿಭಟನೆ ಇಳಿ ಸಂಜೆಹೊತ್ತಿಗೆ ಮುಗಿದು ಹೋಗಿತ್ತು. ಮನೆಗೆ ಮರಳೋಣವೆಂದು ಯೋಚಿಸುತ್ತಿದ್ದ ಮರಿಯಾಗೆ,
“ವಾಟ್ ಎ ಲವ್ಲೀ ಡೇ, ಹತ್ತಿರವಿರುವ ಕ್ಲೈಡ್ ನದಿಯ ದಂಡೆಯಲ್ಲಿ ಸ್ವಲ್ಪ ಹೊತ್ತು ಸುತ್ತಾಡಿಕೊಂಡು ಹೋಗೋಣವೆ?” ಎಂತೆಂದರು ಲೂಸಿ.
“ಅವಶ್ಯವಾಗಿ ಸಿಸ್ಟರ್! ಆ ನದಿಯ ದಂಡೆಯನ್ನು, ಅಲ್ಲಿ ತಂಗಿದ್ದ ಆ ಹಡಗನ್ನು ಜೀವನದಲ್ಲಿ ಮರೆಯಲು ಸಾಧ್ಯವೇ?” ಎಂದು
ಅವರನ್ನು ಹಿಂಬಾಲಿಸಿದಳು ಮರಿಯಾ. ಮೂರು ವರ್ಷಗಳ ಹಿಂದೆ ಉಕ್ರೈನಿನಿಂದ ಬಂದ ನಿರಾಶ್ರಿತರಿಗೆ, ಕ್ಲೈಡ್ ನದಿಯ
ದಂಡೆಯಲ್ಲಿ ಸ್ಕಾಟ್ಲೆಂಡ್ ಸರಕಾರವು ‘ಎಂ ಎಸ್ ಅಂಬಿಷನ್’ ಎಂಬ ದೊಡ್ಡ ಪ್ರವಾಸಿ ಹಡಗವನ್ನು ಕಟ್ಟಿ ಹಾಕಿ, ತಾತ್ಕಾಲಿಕ
ನೆಲೆಯನ್ನು ಒದಗಿಸಿದ್ದೂ, ವರ್ಷ ಕಾಲ ಪೆಟ್ರೋನೊಂದಿಗೆ ಅದೇ ಹಡಗಿನಲ್ಲಿ ಜೀವನ ಕಳೆದಿದ್ದೂ ಅವಳ ಮನಸಿನಲ್ಲಿ ಇನ್ನೂ ಹಚ್ಚು ಹಸಿರಾಗಿ ಉಳಿದಿತ್ತು. ನದಿಯತ್ತ ಒಮ್ಮೆ ಕಣ್ಣಾಡಿಸಿ ಮರಿಯಾ,
“ಸಿಸ್ಟರ್! ಅವೇ ಅಲೆಗಳು, ಅದೇ ದಂಡೆ, ಅದೇ ಓಡಾಡುವ ಜನರು ಆದರೆ, ಕಟ್ಟಿ ಹಾಕಿದ್ದ ಹಡಗು ಮಾತ್ತ್ರ ಕಾಣೆಯಾಗಿದೆ.
ಸೆರೆಯಿಂದ ಬಿಡುಗಡೆಯಾಗಿ ಸಂತೋಷದಿಂದ ಸಾಗರದಲ್ಲಿ ತೇಲುತ್ತಿರಬಹುದಲ್ಲವೇ?”

“ಜೀವನವೂ ಹಾಗೇಯಲ್ಲವೇ ಮರಿಯಾ! ನಿಂತ ನೀರಾಗಬಾರದು, ಹರಿಯಿತ್ತುರುವ ನದಿಯಾಗಬೇಕು, ತೇಲುತ್ತಿರುವ
ನೌಕೆಯಾಗಿ, ಬೇಕಿದ್ದ ದಡವನ್ನು ಸೇರಲೇಬೇಕು. ಸರಿ! ಸಂಜೆಯಾಗುತ್ತಿದೆ, ಪೆಟ್ರೋ ಇವಾನನ ಮನೆಯಲ್ಲಿ ಕಾಯುತ್ತಿರುವನು
ಮತ್ತೆ ಇನ್ನೊಂದು ದಿನ ಬರೋಣ” ಎಂದು ಸಿಸ್ಟರ್ ಲೂಸಿ ಕಾರಿನತ್ತ ನಡೆದರು.
ರಾತ್ರಿಯ ಹೊತ್ತಿನಲ್ಲಿ ಸಿಸ್ಟರ್ ಲೂಸಿಯ ಮನೆಯ ಬಾಗಿಲಿಗೆ ಯಾರೋ ಮೊಟ್ಟೆಗಳನ್ನೆಸೆದು ‘ಬೀ ಕೇರ್ಫುಲ್’ ಎಂದು ಗೋಡೆಯ
ಮೇಲೆ ಬರೆದು ಹೋಗಿದ್ದರು. ಇದನ್ನು ಕಂಡು ಮರಿಯಾ ದಂಗಾಗಿ ಹೋಗಿದ್ದಳು. ಸಿಸ್ಟರ್ ಲೂಸಿ ಜೋರಾಗಿ ಕಿರುಚಾಡುತ್ತಿದ್ದರು,
“ಈ ಕಿತಾಪತಿಯೆಲ್ಲವೂ ಆ ಕೌನ್ಸಿಲ್ ಹೌಸಿನ ಮಕ್ಕಳದೇ. ಕುಳಿತು ಪುಕಸಟ್ಟೆ ತಿನ್ನಲು ಗೊತ್ತು. ಸಂಸ್ಕಾರವಿಲ್ಲಾ, ಸಂಸ್ಕೃತಿಯಿಲ್ಲ.
ನಾನೇನು ಸುಮ್ಮನೆ ಬಿಡುವುದಿಲ್ಲ. ಪೊಲೀಸರಿಗೆ ಫೋನು ಮಾಡುತ್ತೇನೆ. ಅವರಿಗೆ ತಕ್ಕ ಪಾಠ ಕಲಿಸುತ್ತೇನೆ” ಏನಾಗಿದೆ ಎಂಬ
ಅರಿವಾಗದಿದ್ದರೂ, ಲೂಸಿಯ ಇಂತ ಕಿರುಚಾಟವನ್ನು ಎಂದೂ ಕಾಣದಿದ್ದ ಪೆಟ್ರೋ ಭಯಭೀತನಾಗಿ ಮೂಲೆಯಲ್ಲಿ ನಿಂತು
ಅವರನ್ನೇ ನೋಡುತ್ತಲಿದ್ದನು. ಪೆಟ್ರೋನ ತಲೆಯನ್ನು ಸವರುತ್ತ ಮರಿಯಾ,
“ಸಿಸ್ಟರ್! ಸಾರೀ, ನನ್ನಿಂದ ನಿಮಗೆ ಇಷ್ಟೊಂದು ತೊಂದರೆಯಾಗುತ್ತಿದೆ. ನಾನೇ ಬೇರೆ ಕಡೆಗೆ ಹೋದರೆ ಹೇಗೆ ಎಂದು
ಯೋಚಿಸುತ್ತಿರುವೆ”
“ಬೇರೆಕಡೆಯಲ್ಲಿ ಇಂತವರು ಇರುವದಿಲ್ಲ ಎಂದು ಅಂದುಕೊಂಡಿರುವೆಯಾ? ಇಂತ ಕಿತಾಪತಿಗಳಿಗೆ ಎಲ್ಲಿಯಾದರೂ ಕೊರತೆ
ಏನು? ನೀನೇನು ಹೆದರಿಕೊಳ್ಳಬೇಡ. ಇಂತವರನ್ನು ಜೀವನದಲ್ಲಿ ಎಷ್ಟೋ ಕಂಡಿರುವೆ. ನೀನು ಧೈರ್ಯದಿಂದಿರು, ನಾನು ಎಲ್ಲ ಸರಿ
ಮಾಡುತ್ತೇನೆ” ಎಂತೆಂದು ಪೆಟ್ರೋನ ಕೆನ್ನೆಯನ್ನು ಸವರಿದರು ಲೂಸಿ.


ದೇಶದ ವಿವಿದೆಡೆಯಲ್ಲಿ, ಪಕ್ಕದ ದೇಶಗಳಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ವಿವರಗಳು ಟಿವಿ ಯಲ್ಲಿ, ಅಂತರ್ಜಾಲದಲ್ಲಿ
ದಿನಾಲೂ ಹರಿದಾಡತೊಡಗಿದ್ದವು. ಮರಿಯಾಗೆ ನಿರಾಳವಾಗಿ ಅಡ್ಡಾಡಲೂ ಕೂಡಾ ಭಯವಾಗತೊಡಗಿತ್ತು. ಯುದ್ಧ ನಿರಾಶ್ರಿತರ
ಬಗ್ಗೆ ಮೊದಲಿದ್ದ ಜನರ ಕನಿಕರ ಕಾಲ ಕಳೆದಂತೆ ಮರೆಯಾಗುತ್ತಿದೆ ಎಂಬ ವಿಷಯ ಅವಳಿಗೆ ಮನದಟ್ಟಾಗತೊಡಗಿತ್ತು.
ಆಕ್ರೋಶದೊಂದಿಗೆ ಅಸಮಾಧಾನದ ಹೊಗೆಯನ್ನು ಹೊರಹಾಕುತ್ತಿರುವವರು ಹದಿ ಹರೆಯದ ಭಾವಿ ನಾಗರೀಕರೆಂಬುವುದು
ಅವಳ ಸೂಕ್ಷ್ಮ ಮನಕ್ಕೆ ಆಗಲೇ ಅರಿವಾಗಿತ್ತು. ಅವರಾದರೂ ಎಷ್ಟು ದಿನವೆಂದು ಸಹಿಸಿಕೊಂಡಾರು?
ಹಾಗಾದರೆ, ನನ್ನಂತ ನಿರಾಶ್ರಿತ ವಲೆಸಿಗರ ಭವಿಷ್ಯವೇನು? ಮನುಷ್ಯನೇ ರೂಪಿಸಿರುವ ಈ ಮಾನವೀಯ ಭಿಕ್ಕಟ್ಟಿಗೆ
ಪರಿಹಾರವೇನು? ಭವಿಷ್ಯವನ್ನು ನಾನೇ ರೂಪಿಸಿಕೊಳ್ಳಬೇಕು, ಪರಿಹಾರವನ್ನು ನಾನೇ ಕಂಡುಕೊಳ್ಳಬೇಕು ತಾನೇ?
ಯಾವುದೇ ಕಾರಣವಿರಲಿ, ಬಂದಿದ್ದು ನನ್ನ ತಪ್ಪಲ್ಲವೇ? ನನಗೂ ಸ್ವಾಭಿಮಾನ, ಸ್ವಂತ ಕಾಲಮೇಲೆ ನಿಂತು ಬದುಕುವ ಸಾಮರ್ಥ್ಯ
ಇದೆಯಲ್ಲವೇ? ಬದಲಾವಣೆ ಪ್ರಕೃತಿಯ ನಿಯಮ, ಅದರ ಜೊತೆಗೆ ತಾನೂ ಬದಲಾಗಬೇಕಲ್ಲವೇ? ಸಿಸ್ಟರ್ ಹೇಳಿದಂತೆ
ಜೀವನವು ನಿಂತ ನೀರಾಗಬಾರದಲ್ಲವೇ? ಅವಳ ಮನಸಿನಲ್ಲಿ ಇಂತ ಸಾವಿರಾರು ಆಲೋಚನೆಗಳು ಸುತ್ತತೊಡಗಿದ್ದವು.
ಅದೊಂದು ಸಂಜೆ ಮನೆಯ ಗಾರ್ಡನ್ನಲ್ಲಿ ಸಿಸ್ಟರ್ ಲೂಸಿ ಜೊತೆಗೂಡಿ ಕಾಫಿ ಕುಡಿಯುತ್ತಿದ್ದಾಗ ಮರಿಯಾ ಮಾತೆತ್ತಿದಳು ,

“ಸಿಸ್ಟರ್! ನಿಮ್ಮ ಸಹಾಯಕ್ಕೆ ನಾನು ಚಿರಋಣಿ. ಮನಸ್ಸನ್ನು ಉಕ್ರೈನಿನಲ್ಲಿ ಬಿಟ್ಟು, ದೇಹವನ್ನು ಸ್ಕಾಟ್ಲೆಂಡಿನಲ್ಲಿ ಇಟ್ಟು, ಇಲ್ಲಿಯೇ
ಬದುಕು ಕಟ್ಟಿಕೊಳ್ಳೋಣವೆಂದು ಬಯಸಿದ್ದೆ. ಆದರೆ ಇತ್ತೀಚಿನ ಘಟನೆಗಳಿಂದ, ಪರಕೀಯರ ಮೇಲೆ ಅಲ್ಲಲ್ಲಿ ನಡೆಯುತ್ತಿರುವ
ಹಲ್ಲೆಗಳನ್ನು ಕಂಡು, ಯಾಕೋ ಬೀದಿಯಲ್ಲಿ ನಡೆಯುತ್ತಿದ್ದರೆ ಎಲ್ಲರೂ ತನ್ನನ್ನೇ ನೋಡುತ್ತಿರಬಹುದೇನೋ, ಕೆಲಸದಲ್ಲಿ ಇದ್ದರೆ ಸಹದ್ಯೋಗಿಗಳೆಲ್ಲ ತನ್ನ ಬಗ್ಗೆನೇ ಮಾತನಾಡಬಹುತ್ತಿರುವರೇನೋ , ಪೆಟ್ರೋನನ್ನು ಯಾರಾದರೂ ಎತ್ತಿಕೊಂಡುಹೋಗಬಹುದೇನೋ, ಯಾರೋ ಅಸಡ್ಡೆ ಹುಡುಗರು ತನ್ನ ಮೇಲೆ ಹಲ್ಲೆಮಾಡಬಹುದೇನೋ ಎಂದೆನಿಸುತ್ತಿದೆ. ಇಂತಹ ಮಾನಸಿಕ ವೇದನೆಯಲ್ಲಿ ಹೀಗೆಯೇ ಎಷ್ಟೊಂದು ದಿನ ಬದುಕುವುದು? ಇಂತಹ ವಾತಾವರಣದಲ್ಲಿ ಪೆಟ್ರೋನನ್ನು ಹೇಗೆ ಬೆಳಸುವುದು? ಎಂದು ದಿನಾಲೂ ಯೋಚಿಸಿ ಸಾಕಾಗಿಹೋಗಿದೆ”
ಲೂಸಿ ಅವಳ ಮುಖವನ್ನೇ ನೋಡುತ್ತಾ,
“ಮರಿಯಾ ನೀನು ಧೈರ್ಯವಂತೆ ಎಂದು ಅಂದುಕೊಂಡಿದ್ದೆ”
“ಸಿಸ್ಟರ್! ಭೀತಿಯಿಂದ ನನ್ನ ದೇಶವನ್ನು ಬಿಟ್ಟು ಪಲಾಯನಗೈಯುವಾಗ ಹೇಡಿಯಾಗಿದ್ದೆ. ಯುದ್ಧದಲ್ಲಿ ಧುಮುಕುತ್ತಿರುವ ಸಾವಿರ
ಹೆಂಗಳೆಯರಂತೆ, ನಾನೂ ಸಹ ಸೈನ್ಯವನ್ನು ಸೇರಿ ವೈರಿಗಳನ್ನು ಎದುರಿಸುವದನ್ನು ಬಿಟ್ಟು ಓಡಿ ಬಂದಿದ್ದಕ್ಕೆ ನಾಚಿಕೆಯಾಗುತ್ತಿದೆ.
ಈ ಮೂರು ವರ್ಷದಲ್ಲಿ ಜೀವನವು ಸಾಕಷ್ಟು ಪಾಠವನ್ನು ಕಲಿಸಿದೆ, ಈಗ ಧೈರ್ಯವಂತೆಯಾಗಿರುವೆ. ಅನಿಶ್ಚಿತತೆಯಲ್ಲಿ ಪೆಟ್ರೋನ
ಬಾಳನ್ನು ರೂಪಿಸಲು ಮನಸಿಲ್ಲ. ಅದಕ್ಕೆ, ಧೈರ್ಯದಿಂದ ಉಕ್ರೈನ್ನಗೆ ಮರಳಿ ಹೋಗಬೇಕೆಂದು ನಿರ್ಧರಿಸಿರುವೆ”
“ಅನಿಶ್ಚಿತತೆ ಅಲ್ಲಿ ಇಲ್ಲ ಎಂದು ಅಂದುಕೊಂಡಿರುವೆಯಾ?” ಎಂತೆಂದರು ಲೂಸಿ.
ಅನಿಶ್ಚಿತತೆ ಎಲ್ಲ ಕಡೆಯಲ್ಲಿಯೂ ಹಬ್ಬಿಕೊಂಡಿದೆ ಸಿಸ್ಟರ್! ಆದರೆ,
ಏನೇ ಆದರೂ ಅದು ನನ್ನ ದೇಶ ತಾನೇ? ನನಗೆ ಅಲ್ಲಿ ಹೊರಗೆ ಹೋಗು ಅನ್ನುವವರು ಯಾರು? ಇಂತ ಮಾನಸಿಕ ಅಸ್ಥಿರತೆಯಲ್ಲಿ
ಇಲ್ಲಿ ಬಾಳುವುದಕ್ಕಿಂತ, ಗಂಜಿಯನ್ನಾದರೂ ಕುಡಿದು ನನ್ನ ಸ್ವಂತ ದೇಶದಲ್ಲಿ ಬಾಳುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಿರುವೆ”
“ನಿರ್ಧಾರ ತೆಗೆದುಕೊಳ್ಳಲು ನೀನು ಸ್ವತಂತ್ರೆ. ನೀನು ಏನೇ ನಿರ್ಧಾರ ತೆಗೆದುಕೊಂಡರೂ ಯೋಚಿಸಿ ತೆಗೆದುಕೊಂಡಿರುವೆ ಎಂದು
ನಂಬಿರುವೆ. ಆದರೆ, ಮತ್ತೊಮ್ಮೆ ಯೋಚಿಸು ಎಂಬುವುದೇ ನನ್ನ ಸಲಹೆ”
“ಸಿಸ್ಟರ್! ಬಹಳೇ ಯೋಚಿಸಿ ಈ ನಿರ್ಧಾರಕ್ಕೆ ಬಂದಿರುವೆ”
ಮರಿಯಾಳ ಮುಖದಲ್ಲಿ ಕಾಣುತ್ತಿರುವ ಗಟ್ಟಿತನವನ್ನು ಕಂಡು ಲೂಸಿ,
“ಹಾಗಾದರೆ ನನ್ನನ್ನು, ಈ ದೇಶವನ್ನು ಮರೆತು ಬಿಡುವೆಯಾ?”
“ಸಿಸ್ಟರ್! ಕತ್ತಲೆಯಾಗಿದ್ದ ನನ್ನ ಬಾಳಿನಲ್ಲಿ ಆಶಾಕಿರಣವಾಗಿ ಬಂದವರು ನೀವು ಮತ್ತು ಈ ದೇಶಾ. ಏಳೇಳು ಜನುಮದಲ್ಲಿಯೂ
ನಿಮ್ಮನ್ನು ಮರೆಯಲು ಸಾಧ್ಯವೇ? ನಾನು ಮತ್ತು ಪೆಟ್ರೋ ಬದುಕಿರುವುದೇ ನಿಮ್ಮಿಂದ. ದಿನಾಲೂ ನಿಮ್ಮ ಹೆಸರನ್ನು ನೆನೆದು
ನಾವಿಬ್ಬರೂ ಜೀವನ ಮಾಡುತ್ತೇವೆ. ಖಂಡಿತ ನಿಮ್ಮನ್ನು ನೋಡಲು ಬರುತ್ತೇವೆ ಆದರೆ, ನಿರಾಶ್ರಿತರಾಗಿಯಲ್ಲ ಪ್ರವಾಸಿಕರಾಗಿ”
ಅಷ್ಟರಲ್ಲಿಯೇ ಸಪ್ಪೆ ಮುಖಹಾಕಿಕೊಂಡು ಬಂದ ಪೆಟ್ರೋ,
“ಅಮ್ಮಾ, ಯಾಕೋ ಕುಕ್ಕು ಹಕ್ಕಿ ಹಾಡ್ತಾ ಇಲ್ಲಾ” ಎಂದು ಬೇಸರವ್ಯಕ್ತಪಡಿಸಿದನು. ಅವನ ಮುಗ್ದ ಮೊಗವನ್ನೇ ನೋಡುತ್ತಾ
ಮರಿಯಾ,

“ಮಗು, ಕೇಳದೇ ಬಂದಿದ್ದ ಕುಕ್ಕು ಹಕ್ಕಿ, ಪ್ರತಿಕೂಲತೆ ಉದ್ಭವಿಸುವ ಮುನ್ನವೇ, ಯಾರಿಗೂ ಹೇಳದೆಯೇ ಹಾರಿ ಹೋಗಿದೆ” ಎಂದು
ಆಕಾಶದತ್ತ ನೋಡಿದಳು. ಅಮ್ಮನ ಮಾತಿನ ಅರ್ಥವಾಗದ ಪೆಟ್ರೋ ಲೂಸಿಯವರ ಮುಖವನ್ನೇ ನೋಡುತ್ತಾ ನಿಂತನು.

———– ಡಾ. ಶಿವಶಂಕರ್ ಮೇಟಿ