ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE)

ಡಾ. ಜಿ. ಎಸ್. ಶಿವಪ್ರಸಾದ್  

ಕಳೆದ ಕೆಲವು ವಾರಗಳ ಹಿಂದೆ ನಾನು ಸಂಯುಕ್ತ ಅರಬ್ ಸಂಸ್ಥಾನಗಳ ರಾಷ್ಟ್ರದಲ್ಲಿ (UAE) ಪ್ರವಾಸ ಕೈಗೊಂಡಿದ್ದು ಅದರ ಬಗ್ಗೆ ಬರೆದಿರುವ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದು ಪ್ರವಾಸ ಕಥನ ಅನ್ನುವುದಕ್ಕಿಂದಂತ ಒಂದು ವೈಚಾರಿಕ ಲೇಖನವೆಂದು ನಾನು ಭಾವಿಸುತ್ತೇನೆ. ನಾವು ವೀಕ್ಷಸಿದ ಜನಪ್ರೀಯ ಪ್ರೇಕ್ಷಣೀಯ ತಾಣಗಳನ್ನು, ಅಲ್ಲಿಯ ನಿಸರ್ಗ ಸೌಂದರ್ಯವನ್ನು ಮತ್ತು ಅಲ್ಲಿ ನಮಗಾದ ಅನುಭವಗಳನ್ನು ಚಿತ್ರಗಳ ಜೊತೆ ಓದುಗರೊಂದಿಗೆ ಬರಹದಲ್ಲಿ ಹಂಚಿಕೊಂಡಾಗ ಅದು ಪ್ರವಾಸ ಕಥನವಾಗುತ್ತದೆ.  ಆದರೆ ಈ ನನ್ನ ಬರಹದಲ್ಲಿ ಹೆಚ್ಚಾಗಿ ನಾನು ಪ್ರವಾಸ ಮಾಡಿದ ದೇಶದ ಇತಿಹಾಸ, ಜನ ಜೀವನ ಮತ್ತು ಸಂಸ್ಕೃತಿಗಳ ಬಗ್ಗೆ ಪರಿಚಯಮಾಡಿಕೊಟ್ಟು ಅದರೊಡನೆ ನನ್ನ ಸ್ವಂತ ಅನಿಸಿಕೆಗಳನ್ನು ಬೆರೆಸಿ ಆದಷ್ಟು ವಿಮರ್ಶಾತ್ಮಕವಾದ ಲೇಖನವಾಗಿ ಪ್ರಸ್ತುತಿ ಪಡಿಸುವುದು ನನ್ನ ಉದ್ದೇಶವಾಗಿದೆ. ಇಲ್ಲಿ ಸ್ವಲ್ಪಮಟ್ಟಿಗೆ ಪ್ರವಾಸ ಕಥನ ಸೇರಿಕೊಂಡಿರುವುದು ಅನಿವಾರ್ಯವಾಗಿದೆ. ಈ ಬರಹವು ಹಲವಾರು ವಿಚಾರವನ್ನು ಒಳಗೊಂಡು ದೀರ್ಘ ಬರಹವಾದದ್ದರಿಂದ ಇದನ್ನು ಎರಡು ಕಂತುಗಳಲ್ಲಿ ಪ್ರಕಟಪಡಿಸಲಾಗಿದೆ. 
'ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು ಭಾಗ ೧' ಎಂಬ ಈ ಬರಹವನ್ನು ಓದಿ ಮತ್ತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

- ಸಂ
ಮೂರು  ದಶಕಗಳ ಹಿಂದೆ ಅರಬ್ ಸಂಸ್ಥಾನಗಳೆಂದರೆ ಅಲ್ಲೇನಿದೆ ? ಬರೇ ಮರುಭೂಮಿ, ಒಂಟೆಗಳು ಮತ್ತು ನೆಲೆಯಿಲ್ಲದ ಅಲೆಮಾರಿ ಬೆಡೊವಿನ್ ಅರಬ್ಬರು ಎಂಬ ಕಲ್ಪನೆಗಳಿತ್ತು. ಅಲ್ಲಿಯ ಜನ ಜೀವನದ ಬಗ್ಗೆ, ಕಟುವಾದ ಕೈಕಾಲು ತುಂಡುಮಾಡುವ, ಚಾಟಿ ಏಟು ನೀಡುವ, ಕಲ್ಲಿನಲ್ಲಿ ಹೊಡೆದು ಸಾಯಿಸುವ ಟ್ರೈಬಲ್ ಶಿಕ್ಷೆಗಳ ಬಗ್ಗೆ ಅಂಜಿಕೆಗಳಿತ್ತು. ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ಇಂಡಿಯಾ ಎಂದರೆ ಭಿಕ್ಷುಕರು, ಬೀದಿಯಲ್ಲಿ ದನಗಳು, ಹಾವಾಡಿಗರು, ಧೂಳು, ಕೊಳಕು ಎಂಬ ಕಲ್ಪನೆಗಳು ಇದ್ದಂತೆ! ಹಿಂದೆ ಅರಬ್ ರಾಷ್ಟ್ರಗಳೆಂದರೆ ಯಾವಾಗಲು ಜಗಳವಾಡಿಕೊಂಡಿದ್ದ ಇರಾನ್, ಇರಾಕ್ ಅಥವಾ ಶ್ರೀಮಂತ ದೇಶವಾದ ಸೌದಿ ಅಷ್ಟೇ ನಮಗೆ ತಿಳಿದಿತ್ತು.  ದುಬೈ ಅಬುದಾಬಿ ಎಂಬ ನಗರಗಳನ್ನು ಕೇಳಿರಲಿಲ್ಲ. ನನ್ನ ಈ ಬರಹದಲ್ಲಿ ಮುಖ್ಯ ವಿಷಯ ವಸ್ತುವಾದ ಸಂಯುಕ್ತ ಅರಬ್ ಸಂಸ್ಥಾನಗಳ 
ಈ ರಾಷ್ಟ್ರದ (United Arab Emirates: UAE) ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ಏಕೆಂದರೆ ಈ ದೇಶವು ಅಸ್ತಿತ್ವಕ್ಕೆ ಬಂದದ್ದು ೧೯೭೧ ರಲ್ಲಿ. ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದಾಗ ಇದು ಇನ್ನು ಕಣ್ತೆರೆಯುತ್ತಿರುವ ರಾಷ್ಟ್ರ. ಹಿಂದೆ ಈ ಪ್ರದೇಶವು ಸ್ಥಳೀಯ ಸಣ್ಣ-ಪುಟ್ಟ ರಾಜಮನತನದ ಸ್ವಾಧೀನದಲ್ಲಿದ್ದು ಕಿಂಗ್ಡಮ್ ಅಥವಾ ಶೇಕ್ ಡಾಮ್ ಆಗಿತ್ತು. ಸುಮಾರು ೫೦೦ ವರ್ಷಗಳ ಹಿಂದೆ ಈ ಪ್ರದೇಶವು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿತ್ತು. ಹಿಂದೆ ಸಾಗರದಡಿಯ ಪರ್ಲ್(ಮುತ್ತು) ಟ್ರೇಡಿಂಗ್ ಇಲ್ಲಿಯ ಮುಖ್ಯ ವಾಣಿಜ್ಯ ವ್ಯಾಪಾರವಾಗಿ ಆದಾಯವನ್ನು ತರುತ್ತಿತ್ತು. ಪರ್ಷಿಯನ್ ಗಲ್ಫ್ ಅಂಚಿನ ಇಲ್ಲಿಯ ಜನರು, ವ್ಯಾಪಾರಿಗಳು, ಕಡಲ್ಗಳ್ಳರು ಆಗಾಗ್ಗೆ ಸಂಘರ್ಷಣೆಯಲ್ಲಿ ತೊಡಗಿದ್ದು ಅಶಾಂತಿ ನೆಲೆಸಿತ್ತು. ಪೋರ್ಚುಗೀಸರು ಇಲ್ಲಿಯ ಲಾಭದಾಯಕ ಅವಕಾಶವನ್ನು ಗ್ರಹಿಸಿ, ಆಕ್ರಮಿಸಿ ಕೋಟೆಗಳನ್ನು ಕಟ್ಟಿದರು, ದಬ್ಬಾಳಿಕೆಯಲ್ಲಿ ತೆರೆಗೆ ವಿಧಿಸಲು ಶುರುಮಾಡಿದರು. ನಂತರದ ಕೆಲವು ವರುಷಗಳಲ್ಲಿ ಅರಬ್ಬರ ಒಳಜಗಳವನ್ನು ಬಗೆಹರಿಸಲು ಮತ್ತು ಆಶ್ರಯ ನೀಡಲು ಬ್ರಿಟಿಷರು ಮುಂದಾದರು, ಕಾದಾಡುತ್ತಿರುವ ಅರಬ್ಬರಲ್ಲಿ ಶಾಂತಿಯ ಒಪ್ಪಂದಗಳನ್ನು ತಂದು ಈ ಪ್ರದೇಶಗಳಲ್ಲಿ ಸ್ಥಿರತೆಯನ್ನು ತಂದುಕೊಟ್ಟರು.

೧೯೩೦ರಲ್ಲಿ ಈ ನಾಡಿನಲ್ಲಿ ಅನಿಲ ಮತ್ತು ತೈಲ ಸಂಪನ್ಮೂಲಗಳಿವೆಯೆಂದೇ ತಿಳಿದುಬಂತು. ಇದು ಅರಬ್ಬರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಅಂದಹಾಗೆ ಈ ಪ್ರದೇಶವು ಅನಾದಿಕಾಲದಿಂದಲೂ ಪೂರ್ವ ಮತ್ತು ಪಶ್ಚಿಮ ವಾಣಿಜ್ಯಗಳು ಸಂಧಿಸುವ ತಾಣವಾಗಿತ್ತು. ಭೌಗೋಳಿಕವಾಗಿ ವಾಣಿಜ್ಯ ದೃಷ್ಟಿಯಿಂದ ಅನುಕೂಲಕರವಾಗಿತ್ತು. ಬ್ರಿಟಿಷ್ ಸಂಸ್ಥೆಗಳಿಗೆ ಇಲ್ಲಿಯ ತೈಲ ಅನಿಲ ನಿರ್ವಾಹಣ ಪರ್ಮಿಟ್ ಗಳನ್ನು ಕೊಟ್ಟಿದ್ದು ೬೦ರ ದಶಕದಲ್ಲಿ ಅಮೇರಿಕ ಕಂಪನಿಗಳು ನಿಧಾನಕ್ಕೆ ಆ ಕಂಟ್ರಾಕ್ಟುಗಳನ್ನು ಪಡೆದವು. ೧೯೬೮ರ ಸಮಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಈ ಶೇಕ್ ರಾಜ್ಯಗಳಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸುವುದು ಕಷ್ಟವಾಗತೊಡಗಿತು. ತಾವು ನೀಡುತ್ತಿದ್ದ ಆಶ್ರಯವನ್ನು ರದ್ದುಪಡಿಸಿ, ಅಲ್ಲಿಯ ರಕ್ಷಣಾ ವ್ಯವಸ್ಥೆಯನ್ನು, ಒಪ್ಪಂದವನ್ನು ಕೊನೆಗಾಣಿಸುವ ನಿರ್ಧಾರವನ್ನು ಅಂದಿನ ಪ್ರಧಾನಿ ಹೆರಾಲ್ಡ್ ವಿಲ್ಸನ್ ಬಹಿರಂಗಪಡಿಸಿದರು. ಅನಿಲ ತೈಲ ಸಂಪನ್ಮೂಲಗಳನ್ನು ಹೊಂದಿರುವ ಈ ರಾಷ್ಟ್ರಗಳ ನಾಯಕರು ತಮ್ಮ ಮುಂದಿರುವ ಉಜ್ವಲ ಭವಿಷ್ಯವನ್ನು ಮತ್ತು ಸಾಧ್ಯತೆಗಳನ್ನು ಕಂಡುಕೊಂಡು ೧ನೇ ಡಿಸೆಂಬರ್ ೧೯೭೧ ರಲ್ಲಿ ಸಂಯುಕ್ತ ಅರಬ್ ಸಂಸ್ಥಾನಗಳಾದ ಈ ರಾಷ್ಟ್ರವನ್ನು (UAE) ಹುಟ್ಟುಹಾಕಿದರು. ಹಿಂದೆ ಈ ಒಕ್ಕೂಟವನ್ನು ಸೇರಬೇಕಾಗಿದ್ದ ಕತಾರ್ ಮತ್ತು ಬಹರೈನ್ ದೇಶಗಳು ತಮ್ಮದೇ ಆದ ಸ್ವಾತಂತ್ರ್ಯವನ್ನು ಪಡೆದುಕೊಂಡವು. ಈ ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರದಲ್ಲಿ ಅಬುದಾಬಿ, ದುಬೈ, ಶಾರ್ಜಾ, ಅಜ್ಮಾನ್, ಫುಜೈರ, ಉಮ್ ಅಲ ಕ್ಯೋವೆನ್, ಮತ್ತು ರಾಸ್ ಎಲ್ ಕೈಮ ಎಂಬ ಏಳು ರಾಜಮನೆತನಗಳು ಸೇರಿಕೊಂಡವು. ಅಬುದಾಬಿಯ ರಾಜರಾಗಿದ್ದ ಶೇಕ್ ಜಾಯೀದ್ ಬಿನ್ ಸುಲ್ತಾನ್ ಅಲ ನಹ್ಯಾನ್ ಅವರು ಈ ಸಂಯುಕ್ತ ಅರಬ್ ರಾಷ್ಟ್ರವನ್ನು ಹುಟ್ಟುಹಾಕುವಲ್ಲಿ ನೇತಾರರಾಗಿದ್ದು ಈ ರಾಷ್ಟ್ರದ ಮೊದಲ ಅಧ್ಯಕ್ಷರಾಗಿದ್ದರು. ದುಬೈ ಮತ್ತಿತರ ನಗರಗಳ ಮುಖ್ಯ ರಸ್ತೆಗಳಿಗೆ ಮತ್ತು ಅಬುದಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು ಗೌರವಿಸಲಾಗಿದೆ. ಹಿಂದೆ ಒಂದು ನೆಲೆಯಲ್ಲಿ ನಿಲ್ಲದೆ, ಅಲೆಮಾರಿ ಬುಡಕಟ್ಟಿನ ಜನಾಂಗದವರಾಗಿ, ಜಂಗಮರಾಗಿದ್ದ ಈ ಜನ ತಮ್ಮ ತೈಲ ಅನಿಲ ಸಂಪನ್ಮೂಲಗಳಿಂದ ಶ್ರೀಮಂತರಾಗಿ ಒಂದು ಮರುಭೂಮಿ ಪ್ರದೇಶವನ್ನು ಕಂಗೊಳಿಸುವ ನೂತನ ನಗರಗಳಾಗಿ, ಸಮುದ್ರದನೀರನ್ನು ಸಿಹಿನೀರಾಗಿ ಪರಿವರ್ತಿಸಿ ಹಸಿರುಮೂಡಿಸಿದ್ದಾರೆ. ಸಂಪನ್ಮೂಲಗಳಿಂದ ಬಂದ ಹಣದಲ್ಲಿ ರಸ್ತೆ, ಆಸ್ಪತ್ರೆ, ಶಾಲಾ ಕಾಲೇಜು ಮತ್ತು ಇತರ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಕಟ್ಟಿದ್ದಾರೆ. ತೈಲದಿಂದ ಬರುವ ಆದಾಯವನ್ನು ಹೊರತಾಗಿ ಮಲ್ಟಿ ನ್ಯಾಷನಲ್ ವಾಣಿಜ್ಯ ಸಂಸ್ಥೆಗಳಿಗೆ, ಖಾಸಗಿ ಉದ್ದಿಮೆದಾರರಿಗೆ ಕಂಪನಿಗಳನ್ನು ಹೂಡಲು ಅವಕಾಶವನ್ನು ಕಲ್ಪಿಸಿ ವಾಣಿಜ್ಯ ವ್ಯವಹಾರಗಳು ಸುಗಮವಾಗಿ ಸಾಗಿವೆ. ಇತ್ತೀಚಿನ ವರುಷಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿ ಅದರಿಂದ ಈ ದೇಶಕಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಇಲ್ಲಿ ಹಣಹೂಡಿದವರಿಗೆ ತೆರಿಗೆಯಿಂದ ಸ್ವಲ್ಪಮಟ್ಟಿಗೆ ಮುಕ್ತಿಯಿದೆ. ಹಣ, ಉದ್ಯೋಗ ಅವಕಾಶ, ರಾಜಕೀಯ ಸ್ಥಿರತೆ, ದೂರದೃಷ್ಟಿ, ಇಲ್ಲಿಯ ಸರ್ವತೋಮುಖ ಬೆಳವಣಿಗೆಗೆ, ಅಭಿವೃದ್ಧಿಗೆ ಕಾರಣವಾಗಿದೆ.

ನನಗೆ ಈ ಸಂಯುಕ್ತ ಅರಬ್ ರಾಷ್ಟ್ರದ ಪರಿಚಯವಾದದ್ದು ನಾನು ಇಂಗ್ಲೆಂಡಿನಿಂದ ಇಂಡಿಯಾಗೆ ಹೋಗಿ ಬರಲು ಬಳಸುತ್ತಿದ್ದ ಎಮಿರೇಟ್ಸ್, ಎತಿಹಾಡ್ ವಿಮಾನ ಕಂಪನಿಗಳಿಂದ. ಬೆಂಗಳೂರಿಗೆ ಹೋಗುವ ಮಾರ್ಗದಲ್ಲೇ ಅನಾಯಾಸವಾಗಿ ಮೂರು ದಿವಸಗಳ ಮಟ್ಟಿಗೆ ಪ್ರಯಾಣದಲ್ಲಿ ಬ್ರೇಕ್ ಪಡೆದು ಎರಡು ಬಾರಿ ದುಬೈ ನಗರವನ್ನು ವೀಕ್ಷಿಸಿ ಬೆರಗಾಗಿದ್ದೆ. ಅಷ್ಟೇ ಅಲ್ಲದೆ ಇಲ್ಲಿಯ ಅದ್ವಿತೀಯ ಮನುಷ್ಯ ಪ್ರಯತ್ನಗಳನ್ನು ಮೆಚ್ಚಿಕೊಂಡು ಮುಂದೊಮ್ಮೆ ಧೀರ್ಘ ಪ್ರವಾಸದಲ್ಲಿ ಇಲ್ಲಿಯ ಇತರ ನಗರಗಳನ್ನು ಒಳನಾಡ ಪ್ರದೇಶಗಳನ್ನು ವೀಕ್ಷಸಬೇಕೆಂಬ ಹಂಬಲ ಮೂಡಿಬಂತು. ಇದಕ್ಕೆ ಪೂರಕವಾಗಿ ಹಿಂದೆ ನಾವಿದ್ದ ಇಂಗ್ಲೆಂಡಿನ ವುಲ್ವರ್ಹ್ಯಾಂಪ್ಟಾನ್ ಎಂಬ ನಗರದಲ್ಲಿ ನಿವಾಸಿಗಳಾಗಿದ್ದು, ನಮ್ಮ ಮಿತ್ರರಾದ ಡಾ.ರಮೇಶ್ ಮತ್ತು ಅವರ ಪತ್ನಿ ಅನ್ನಪೂರ್ಣ ಅವರು ಈಗ ಅಬುದಾಬಿ ಪಕ್ಕದ ಅಲೈನ್ ನಗರದಲ್ಲಿ ವೃತ್ತಿಯಿಂದಾಗಿ ನೆಲೆಸಿದ್ದು ನಮಗೆ ಬರಲು ಆಹ್ವಾನವನ್ನು ನೀಡಿದರು. ೨೦೨೪ರ ಫೆಬ್ರುವರಿ ತಿಂಗಳ ಮೊದಲವಾರದಲ್ಲಿ ನಾನು ಮತ್ತು ನನ್ನ ಶ್ರೀಮತಿ ಡಾ. ಪೂರ್ಣಿಮಾ ಈ ದೇಶದಲ್ಲಿ ಹತ್ತು ದಿವಸಗಳ ಪ್ರವಾಸವನ್ನು ಕೈಗೊಂಡೆವು. ಪ್ರೇಕ್ಷಣೀಯ ತಾಣಗಳನ್ನು ನೋಡುವುದರ ಜೊತೆಗೆ ಇಲ್ಲಿಯ ದಿನ ನಿತ್ಯ ಬದುಕಿನ ಅನುಭವವನ್ನು ಸಾಧ್ಯವಾದಷ್ಟು ಹತ್ತಿರದಿಂದ ಕಾಣುವ ಕುತೂಹಲ ಮತ್ತು ಹಂಬಲ ನಮ್ಮದಾಗಿತ್ತು.

ಅಬುದಾಬಿ ವಿಮಾನನಿಲ್ದಾಣದಲ್ಲಿ ಡಾ. ರಮೇಶ್ ಅವರು ಕಳುಹಿಸಿಕೊಟ್ಟ ಶಿಜೊ ಎಂಬ ಮಲೆಯಾಳಿ, ಸುಶೀಕ್ಷಿತ, ಸಜ್ಜನ್ ಡ್ರೈವರ್ ಬಂದು ವಿನಮ್ರವಾಗಿ ಸ್ವಾಗತಿಸಿ, ನಮ್ಮ ಲಗೇಜುಗಳನ್ನು ಕಾರಿಗೆ ವರ್ಗಾಯಿಸಲು ನೆರವು ನೀಡಿ, ತನ್ನ ಏಳು ಸೀಟಿನ ಭವ್ಯವಾದ ಟೊಯೋಟಾ ಕಾರಿನಲ್ಲಿ ನಮ್ಮನ್ನು ಕುಳ್ಳಿರಿಸಿಕೊಂಡು ಅಲೈನ್ ಹೆದ್ದಾರಿಯನ್ನು ಹಿಡಿದ. ಇಂಗ್ಲೆಂಡಿನಂತಹ ಪುಟ್ಟ ದೇಶದಲ್ಲಿನ ಪುಟ್ಟ ಪುಟ್ಟ ಕಾರುಗಳನ್ನು ಕಂಡಿರುವ ನಮಗೆ, ಪೆಟ್ರೋಲನ್ನು ಇನ್ನಿಲ್ಲದಂತೆ ಕುಡಿದು ಬಿಡುವ ಇಲ್ಲಿಯ ದೈತ್ಯಾಕಾರದ ಕಾರುಗಳು, ಆರು ಎಂಟು ಲೇನ್ ರಸ್ತೆಗಳು, ೧೬೦ ಕಿಮಿ ವೇಗದಲ್ಲಿ ಸಾಗುವ ವಾಹನಗಳು ಅಚ್ಚರಿಯೊಡನೆ ಸ್ವಲ್ಪ ಭಯವನ್ನೂ ಮೂಡಿಸಿತು. ಪೆಟ್ರೋಲ್ ಬೆಲೆ ಎಲ್ಲ ದೇಶಗಳಲ್ಲಿ ಹೆಚ್ಚಾಗಿರುವಾಗ ಇಲ್ಲಿ ಅದರ ಬೆಲೆ ಅಗ್ಗವಾಗಿದೆ. ಹೀಗಾಗಿ ಈ ದೇಶದಲ್ಲಿ ನೆಲೆಸಿರುವ ಜನಕ್ಕೆ ಅದರ ಬಗ್ಗೆ ಚಿಂತೆಯೇ ಇಲ್ಲ. 'ಘೋಡಾ ಹೈ ಮೈದಾನ್ ಹೈ' ಎಂಬ ಹಿಂದಿ ಉಕ್ತಿ ನೆನಪಿಗೆ ಬಂತು. ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಯೂರೋಪಿನ ಹಲವಾರು ದೇಶಗಳು ಈಗ ಚಿಕ್ಕ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿರುವಾಗ ಈ ಅರಬ್ಬರು ಮತ್ತು ಅಮೆರಿಕನ್ನರು ಭಾರೀಗಾತ್ರದ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ನಗರ-ನಗರಗಳನ್ನು ಜೋಡಿಸಿರುವ ಹೆದ್ದಾರಿಗಳಲ್ಲಿ ನೂರಾರು ಮೈಲಿ ಉದ್ದದವರೆಗೆ ಸಾಲು ವಿದ್ಯುತ್ ದೀಪಗಳನ್ನು ಇಡೀ ರಾತ್ರಿ ಹಚ್ಚುತ್ತಾರೆ. ಪ್ರಪಂಚದ ಸಂಪನ್ಮೂಲದ ಬಳಕೆಯ ಬಗ್ಗೆ, ಪರಿಸರದ ಬಗ್ಗೆ ಕಾಳಜಿ ಇವರಿಗಿದೆಯೇ ಎಂಬ ಅನುಮಾನ ಉಂಟಾಗುವುದು ಸಹಜ. ಇತ್ತೀಚಿನ ಜಾಗತಿಕ ತಾಪಮಾನದ ಬಗ್ಗೆ ಚರ್ಚಿಸುವ ಕಾಪ್ ೨೮ ಎಂಬ ೨೦೨೩ ವರ್ಷದ ಸಮಾವೇಶವನ್ನು ದುಬೈನಲ್ಲಿ ನಡೆಸಿದ್ದು ಅದನ್ನು ಹಲವಾರು ದೇಶಗಳು ಪ್ರಶ್ನಿಸಿವೆ. ಈ ಅರಬ್ ರಾಷ್ತ್ರ ೨೦೫೦ರ ಹೊತ್ತಿಗೆ ತಮ್ಮ ಫಾಸಿಲ್ ಇಂಧನದ ಉಪಯೋಗ ಅರ್ಧದಷ್ಟು ಕಡಿಮೆಮಾಡಿ ಪರಿಸರಕ್ಕೆ ಪೂರಕವಾಗುವ ಮತ್ತು ಕಾರ್ಬನ್ ಹೆಜ್ಜೆ ಗುರುತನ್ನು ಕಡಿಮೆಮಾಡುವ ನಿರ್ಧಾರವನ್ನು ಕೈಗೆತ್ತಿಕೊಂಡಿರುವುದು ಸಮಾಧಾನಕರವಾದ ವಿಚಾರ. ಈ ಆಲೋಚನಗಳ ನಡುವೆ ಪ್ರಯಾಣಮಾಡಿ ಒಂದು ಗಂಟೆಯ ಸಮಯದನಂತರ ಒಂದು ಚಿಕ್ಕ ಊರನ್ನು ಹೊಕ್ಕು ಅಲ್ಲಿರುವ ಅಂಗಡಿಸಾಲಿನಲ್ಲಿದ್ದ ಚಿಕ್ಕ ರೆಸ್ಟೋರಾಂಟಿನಲ್ಲಿ ಶಿಜೊ ನೀಡಿದ ಆದೇಶದ ಮೇಲೆ ಒಬ್ಬ ಮಲೆಯಾಳಿ ಹುಡುಗ ಮೂರು ಕಪ್ ಖಡಕ್ ಚಾ ವನ್ನು ಕಾರಿಗೇ ತಂದುಕೊಟ್ಟ. ಒಂದೆರಡು ಗುಟುಕು ಹೀರಿದಾಗ ಚಾ ಒಳಗಿನ ಏಲಕ್ಕಿ ಘಮಲು, ಸಿಹಿ ರುಚಿ, ಗಟ್ಟಿಯಾದ ಹಾಲು ನನ್ನನ್ನು ಕೂಡಲೇ ಕೇರಳದ ವೈನಾಡಿಗೆ ಒಯ್ದಿತ್ತು. ಪಟ್ಟ-ಪಟ್ಟಿ ಪಂಚೆಯ ಮಲಯಾಳಿ ಕಾಕಾಗಳು, ಹಸಿರು ಬೆಟ್ಟಗಳು, ಹೆಮ್ಮರಗಳು ಅದರ ನೆರಳಲ್ಲಿ ಬೆಳೆಯುವ, ಏಲಕ್ಕಿಗಿಡಗಳು ಅದರ ಉದ್ದದ ಹಸುರಿನ ತೆನೆಗಳು ಎಲ್ಲಾ ನನ್ನ ಸ್ಮೃತಿಯಲ್ಲಿ ಹಾದುಹೋದವು. ವಾಸ್ತವದಲ್ಲಿ ನೋಡಿದಾಗ ನನ್ನ ಸುತ್ತ ಮರುಭೂಮಿಯ ರಾಶಿರಾಶಿ ಮರಳು, ಮಸೀದಿಗಳು, ಮಿನಾರೆಟ್ಟುಗಳು, ಅರಬ್ ಜನರು! ಎಲ್ಲಿಯ ಖಡಕ್-ಏಲಕ್ಕಿ ಚಾ ಎಲ್ಲಿಯ ಮರಳುಗಾಡು! ಎತ್ತಣಿಂದೆತ್ತ ಸಂಬಂಧವಯ್ಯ?

ದಾರಿಯುದ್ದಕ್ಕೂ ಬಂಜರು ಭೂಮಿ. ಅಲೆ ಅಲೆಯಾಗಿ ಹಬ್ಬಿರುವ ಮರಳಿನ ದಿಣ್ಣೆಗಳು. ಮರಳಲ್ಲಿ ಗಾಳಿ ಕೆತ್ತಿದ ಚಿತ್ತಾರಗಳು, ಮಕ್ಕಳು ಸ್ಲೇಟಿನ ಮೇಲೆ ಹಳೆ ಚಿತ್ರಗಳನ್ನು ಅಳಿಸಿ ಮತ್ತೆ ಹೊಸ ಚಿತ್ರಗಳನ್ನು ಮೂಡಿಸುವಂತೆ ಗಾಳಿ ಮತ್ತು ಮರಳು ಆಟವಾಡುತ್ತಿದ್ದವು. ನಡುವೆ ನಿರ್ಜನ ಪ್ರದೇಶಗಳು, ಹತ್ತಾರು ಮೈಲಿಗೊಂದು ನಾಗರೀಕತೆಯ ಹತ್ತಿರ ನಾವಿದ್ದೇವೆಂದು ಖಾತ್ರಿಪಡಿಸುವ ಪುಟ್ಟ ತಲೆ, ಎರಡು ಕಾಲು ಮತ್ತು ಎರಡು ಕೈಯನ್ನು ಕೆಳಗೆ ಬಿಟ್ಟಂತಹ ಎಲೆಕ್ಟ್ರಿಕ್ ಪೈಲಾನ್ ಗಳು, ಅದರಿಂದ ತೂಗಿರುವ ವಿದ್ಯುತ್ ತಂತಿಗಳು ಇವು ಇಲ್ಲಿಯ ನೋಟ. ಕೆಲವೊಮ್ಮೆ ಸಮತಟ್ಟಾದ ಪ್ರದೇಶದಲ್ಲಿ ರಸ್ತೆ ಬದಿಯ ಬೇಲಿಯ ಆಚೆಗೆ ತೀವ್ರ ಗತಿಯಲ್ಲಿ ಸಾಗುವ ವಾಹನಗಳನ್ನು ನಿರ್ಲಕ್ಷಿಸಿ ಕೆಲವು ಒಂಟೆಗಳು ತಮ್ಮದೇ ಸಾವಧಾನದಲ್ಲಿ ಒಣಗಿದ್ದ ಕುರುಚಲು ಹುಲ್ಲನ್ನು ಮೇಯುತ್ತಾ, ಹುಲ್ಲನ್ನು ಈ ದವಡೆಯಿಂದ ಆ ದವಡೆಗೆ ವರ್ಗಾಯಿಸಿ, ನಮ್ಮ ಹಳ್ಳಿಯ ವೃದ್ದರು ಹೊಗೆಸೊಪ್ಪನ್ನು ಮೇಯುವಂತೆ ಜಗಿಯುತ್ತಾ ದಿವ್ಯ ಧ್ಯಾನ ಸ್ಥಿತಿಯಲ್ಲಿ ಮಗ್ನರಾಗಿದ್ದವು. ಒಂಟೆಗಳಿಗೆ ಅವಸರ ಎಂಬ ಪದ ಅದರ ಡಿಕ್ಷನರಿಯಲ್ಲಿ ಇಲ್ಲ ಎಂಬುದು ನನ್ನ ಅನಿಸಿಕೆ. ಇಂತಹ ಮಂದಗತಿಯ ಒಂಟೆಗಳನ್ನು ಹಿಡಿದು ಅರಬ್ಬರು ಹೇಗೆ ಕ್ಯಾಮಲ್ ರೇಸ್ ನಡೆಸುತ್ತಾರೋ ನಾ ತಿಳಿಯೆ. ಹಿಂದೆ ಶಿಶುಗಳನ್ನು ಒಂಟೆಯ ಹೊಟ್ಟೆಗೆ ಕಟ್ಟಿ ಕ್ಯಾಮಲ್ ರೇಸ್ ನಡೆಸುತ್ತಿದ್ದು ಈಗ ಆ ಪದ್ದತಿಯನ್ನು ಬಿಟ್ಟು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳೆಸುತ್ತಿದ್ದಾರೆ ಎಂದು ಕೇಳಿದ್ದೇನೆ. ಮಕ್ಕಳು ಹೆದರಿಕೆಯಿಂದ ಚೀರುತ್ತಿದ್ದಾಗ ಗಾಬರಿಗೊಂಡ ಒಂಟೆಗಳು ಜೋರಾಗಿ ಓಡುತ್ತಿದ್ದವು. ಆ ಕ್ರೂರ ಪದ್ಧತಿಯನ್ನು ಈಗ ಕೈ ಬಿಟ್ಟಿರುವುದು ಒಳ್ಳೆಯ ನಿರ್ಧಾರ.

ನಾವು ಅಬುದಾಬಿಯಿಂದ ಅಲೈನ್ ವರಿಗೆ ಕ್ರಯಿಸಿದ ದಾರಿಯಲ್ಲಿ ನೂರಾರು ಕಿಲೋ ಮೀಟರ್ ರಸ್ತೆಯ ಎರಡು ಬದಿಯಲ್ಲಿ ಹಸಿರು ಮರಗಳ ಸಾಲು ಮತ್ತು ರಸ್ತೆ ಮಧ್ಯದ ಡಿವೈಡರ್ ಜಗದಲ್ಲಿ ಸಾಲಾಗಿ ನಿಂತ ಈಚಲು ಮರ ಜಾತಿಯ ಡೇಟ್ಸ್ ಮರಗಳನ್ನು ಕಂಡು ಸೋಜಿಗವಾಯಿತು. "ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ?" ಎಂಬ ದಾಸರ ಪದ ನೆನೆಪಿಗೆ ಬರುತ್ತಿದಂತೆ, ಶಿಜೊ "ಸಾರ್ ರಸ್ತೆ ಪಕ್ಕದಲ್ಲಿರುವ ಮರದ ಬುಡಗಳನ್ನು ಗಮನಿಸಿ, ಅಲ್ಲಿ ಇರುವ ಪೈಪ್ ಗಳನ್ನೂ ನೋಡಿ, ಅರಬ್ಬರು ನೂರಾರು ಮೈಲಿ ಪೈಪ್ಗಳನ್ನು ಎಳೆದು ಈ ಗಿಡಗಳಿಗೆ ಮರುಭೂಮಿಯಲ್ಲಿ ನೀರುಣಿಸುತ್ತಿದ್ದಾರೆ” ಎಂದು ನನ್ನ ಗಮನವನ್ನು ಸೆಳೆದ. ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದಾಗ ದೈವವನ್ನಷ್ಟೇ ನೆನೆಯುವ ನಮ್ಮ ಆಧ್ಯಾತ್ಮಿಕ ಪ್ರಜ್ಞೆಯಿಂದ ಹೊರಬಂದು ವಾಸ್ತವಬದುಕಿನ ಮುಂದಿರುವ ಮನುಷ್ಯ ಪ್ರಯತ್ನವನ್ನು ಕಂಡು ಬೆರಗಾದೆ. ಮನದಲ್ಲೇ ಭೇಷ್ ಎಂದು ಪ್ರಶಂಸಿದೆ. ಇಲ್ಲಿ ಮಳೆ ಹೆಚ್ಚಾಗಿ ಬರುವುದಿಲ್ಲ, ಇದು ಮರುಭೂಮಿ ಹೀಗಿದ್ದರೂ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ದೇಶದಲ್ಲಿ ನದಿಗಳಲ್ಲಿಲ್ಲ. ಹಾಜರ್ ಬೆಟ್ಟ ಹಾದುಹೋಗುವ ದಕ್ಷಿಣ ಪ್ರದೇಶದಲ್ಲಿ ಕೆಲವು ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ಶೇಖರಿಸಿದ್ದಾರೆ. ಬಹಳಷ್ಟು ವೇಸ್ಟ್ ನೀರನ್ನು ರಿಸೈಕಲ್ ಮಾಡಿ ಗಿಡ ಮರಗಳಿಗೆ ಬಳಸುತ್ತಾರೆ. ಉಳಿದಂತೆ ಇವರು ಸಮುದ್ರದ ನೀರನ್ನು ಆಧುನಿಕ ತಂತ್ರಜ್ಞಾನದಲ್ಲಿ ದೇಶದುದ್ದಕ್ಕೂ ಸುಮಾರು ೭೦ ಡೀಸಲಿನೇಷನ್ ಘಟಕಗಳನ್ನು ಸ್ಥಾಪಿಸಿ ಅದರಲ್ಲಿ ಸಿಹಿ ನೀರನ್ನು ಉತ್ಪತ್ತಿ ಮಾಡುತ್ತಾರೆ. ಪ್ರವಾಸಿತಾಣಗಳಲ್ಲಿ, ನಗರದ ಪ್ರಮುಖ ರಸ್ತೆಗಳಲ್ಲಿ ಹೂವಿನ ಗಿಡಗಳನ್ನು ನೆಟ್ಟು ಅಂದಗೊಳಿಸಿದ್ದಾರೆ. ದುಬೈನಲ್ಲಿರುವ ಮಿರಾಕಲ್ ಗಾರ್ಡನ್ ಎಂಬ ಅದ್ಭುತ ಹೂಗಳ ಉದ್ಯಾನ ಇವರ ನಿಸರ್ಗಪ್ರೀತಿಗೆ ಸಾಕ್ಷಿಯಾಗಿದೆ. ಇದು ದುಬೈಗೆ ಹೋಗುವ ಎಲ್ಲ ಪ್ರವಾಸಿಗಳು ನೋಡಲೇ ಬೇಕಾದ ಉದ್ಯಾನವನ.

ನಾವು ಅಲೈನ್ ನಗರವನ್ನು ಪ್ರವೇಶಿಸಿದಂತೆ ಅದು ಸಂಯುಕ್ತ ಅರಬ್ ರಾಷ್ಟ್ರದಲ್ಲಿನ ಅತ್ಯಂತ ಹಸಿರು ನಗರವೆಂದು ತಿಳಿಯುತ್ತದೆ. ನಮ್ಮ ಮಿತ್ರರಾದ ಡಾ.ರಮೇಶ್ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ತಜ್ಞ ವೈದ್ಯರಾಗಿದ್ದು ಅವರಿಗೆ ಅನುಕೂಲವಾದ ಮನೆಯನ್ನು ಸರ್ಕಾರ ಒದಗಿಸಿದೆ. ಇಲ್ಲಿ ಅನುಕೂಲವಾದ ಎಂಬ ಪದಕ್ಕೆ ವಿಶೇಷ ಅರ್ಥ ಇರಬಹುದು. ನಮ್ಮ ಈ ಅತಿಥಿಗಳ ಬಹು ಅಂತಸ್ತಿನ ಮನೆ ಸುಂದರವಾಗಿ, ಹಿರಿದಾಗಿ ಭವ್ಯವಾಗಿದೆ. ಅರಬ್ ಜನರು ತಮ್ಮ ವಾಸಕ್ಕೆಂದು ಕಟ್ಟಿಕೊಂಡಿದ್ದು ನಂತರದಲ್ಲಿ ಅದನ್ನು ಬಾಡಿಗೆ ಕೊಟ್ಟಂತೆ ಕಾಣುತ್ತದೆ. ಕುಟುಂಬವರ್ಗದವರಿಗೆ, ಹೆಂಗಸರಿಗೆ ಒಂದು ಪ್ರವೇಶ ದ್ವಾರ, ಕುಟುಂಬದ ಹೊರಗಿನ ಗಂಡಸರಿಗೆ ಇನ್ನೊಂದು ಪ್ರವೇಶದ್ವಾರ, ಕೆಲಸದವರು ಪ್ರವೇಶಿಸಲು ಬೇರೊಂದು ದ್ವಾರ! ಇನ್ನು ಮನೆಯೊಳಗೆ ಲೆಕ್ಕವಿಲ್ಲದಷ್ಟು ಕೋಣೆಗಳು ಎನ್ನಬಹುದು. ಇಲ್ಲಿ ಎಲ್ಲರ ಮನೆಯ ಕಾಂಪೌಂಡ್ ಗೋಡೆ ಎತ್ತರವನ್ನು ಗಮನಿಸಿದರೆ ಚಿತ್ರದುರ್ಗದ ಕೋಟೆ ಅಥವಾ ಬೆಂಗಳೂರಿನ ಸೆಂಟ್ರಲ್ ಜೈಲ್ ಜ್ಞಾಪಕಕ್ಕೆ ಬರುತ್ತದೆ. ಮನೆಯೊಳಗೇ ಯಾರಿದ್ದಾರೆ, ಮಕ್ಕಳಿದ್ದಾರೆಯೇ, ಗಿಡ ಮರಗಳು ಹೇಗಿವೆ ಇದರ ಸುಳಿವೇ ಸಿಗುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ಮಾತನಾಡಿಸುವುದಿರಲಿ ಕಾಣುವುದೂ ಕಷ್ಟ. ಇಡೀ ಮನೆ ತನಗೆ ತಾನೇ ಬುರುಕಾ ಹಾಕಿ ಕೂತಂತೆ ಭಾಸವಾಗುತ್ತದೆ.

ಡಾ. ರಮೇಶ್ ಮತ್ತು ಅನು ಅವರ ಮನೆಯಲ್ಲಿ ಆಕರ್ಷಕವಾಗಿರುವುದು ಮನೆಯ ಮುಂದಿನ ಹಸುರಿನ ಹಾಸು ಮತ್ತು ಗಿಡಗಳು, ಮರಗಳು, ಚಿಲಿಪಿಲಿ ಗುಟ್ಟುವ ತರಾವರಿ ಹಕ್ಕಿಗಳು. ಇಲ್ಲಿ ದಾಳಿಂಬೆ, ನಿಂಬೆ ಗಿಡ, ನುಗ್ಗೆಕಾಯಿ ಮರಗಳು, ದಾಸಿವಾಳ ಮತ್ತು ಕಣಗಲೆ ಗಿಡಗಳು ಇವೆ. ಅವರ ಕಾಂಪೌಂಡ್ ಒಳಗೆ ನಿಂತಾಗ ನಾವು ಒಂದು ಮರುಭೂಮಿಯಲ್ಲಿದ್ದೇವೆ ಎಂಬ ವಿಚಾರ ಮರೆತುಹೋಗುತ್ತದೆ. ಅಂದಹಾಗೆ ಈ ದೇಶದ ಒಳನಾಡಿನಲ್ಲಿ ನವೆಂಬರ್ ತಿಂಗಳಿಂದ ಮೇ ತಿಂಗಳಿನವರೆಗೆ ಹವಾಮಾನ ಒಂದು ಹದದಲ್ಲಿ ಇದ್ದು ಆಮೇಲೆ ಕಡು ಬೇಸಿಗೆ ಶುರುವಾಗುತ್ತದೆ. ಬೇಸಿಗೆಯಲ್ಲಿ ನೀರುಣಿಸಿದರೂ ಬಿಸಿಲಿನ ಝಳಕ್ಕೆ ಒಣಗಿದ ಮರ ಗಿಡಗಳು ಚಳಿಗಾಲಕ್ಕೆ ಮತ್ತೆ ಚಿಗುರುತ್ತವೆ ಎಂದು ಕೇಳಿದಾಗ ಖುಷಿಯಾಯಿತು. ನಾವು ಇಲ್ಲಿ ತಂಗಿದ್ದಾಗ ಅಲೈನ್ ನಗರದಲ್ಲಿ ಒಂದು ರಾತ್ರಿ ವಿಪರೀತ ಬಿರುಗಾಳಿ, ಗುಡುಗು ಸಿಡಿಲಿನೊಂದಿಗೆ ಹುಯ್ದ ಆಲಿಕಲ್ಲು ಮಳೆ ಗಾಬರಿಹುಟ್ಟಿಸಿತು. ಒಂದೊಂದು ಅಲಿ ಕಲ್ಲು ಒಂದು ಟೆನಿಸ್ ಬಾಲ್ ಅಳತೆಗಿಂತ ಹೆಚ್ಚಿದ್ದು ಕೆಲವು ಒಂದು ಇಟ್ಟಿಗೆ ಗಾತ್ರದ್ದಾಗಿದ್ದು ಬೀಸುವ ಬಿರುಗಾಳಿಯಲ್ಲಿ ರಮೇಶ್ ಅವರ ಮನೆಯ ಕೆಲವು ಸೆಕ್ಯೂರಿಟಿ ಕ್ಯಾಮರಾಗಳನ್ನು, ಹೂವಿನ ಕುಂಡಗಳನ್ನು ಒಡೆದು ಚೂರು ಮಾಡಿದವು. ಅಲೈನ್ ನಗರದಲ್ಲಿ ಮರುದಿನ ಜಜ್ಜಿ ಹೋದ ಕಾರುಗಳನ್ನು, ಪುಡಿಯಾದ ಗಾಜುಗಳನ್ನು ನೋಡಿ ಚಕಿತರಾದೆವು. ರಸ್ತೆಗಳಲ್ಲಿ ನೀರು ನಿಂತು, ಚರಂಡಿಗಳು ರಭಸದ ನದಿಗಳಾಗಿದ್ದವು. ಸರಕಾರದ ಆದೇಶದಂತೆ ಒಂದೆರಡು ದಿನ ಎಲ್ಲ ಮನೆಯಲ್ಲೇ ಉಳಿಯಬೇಕಾಯಿತು. ಈ ರೀತಿಯ ಅನಿರೀಕ್ಷಿತ ಮಳೆ, ಫ್ಲಾಶ್ ಫ್ಲಡ್ ಇಲ್ಲಿ ಆಗಾಗ್ಗೆ ಬರುವುದು ಉಂಟು. ನಾನು ವಾಟ್ಸಾಪಿನ ವಿಡಿಯೋ ಚಿತ್ರಗಳನ್ನು ಹಿಂದೆ ನೋಡಿದ್ದೆ. ರಮೇಶ್ ದಂಪತಿಗಳು ತಿಳಿಸಿದಂತೆ ಈ ರೀತಿಯ ಅತಿಯಾದ ಪ್ರಕೃತಿ ವಿಕೋಪ ವಿರಳ. ಅದರ ಮಧ್ಯೆ ನಾವಲ್ಲಿದ್ದು ಪಡೆದ ಅನುಭವ ನಮ್ಮ ಪಾಲಿಗೆ ವಿಶೇಷವಾಗಿತ್ತು. ಇಂಗ್ಲೆಂಡಿನಲ್ಲಿ ಸದಾ ಸುರಿಯುವ ಮಳೆಯನ್ನು ತಪ್ಪಿಸಿಕೊಂಡು ಮರುಭೂಮಿಗೆ ಹೋದರೂ ನಮ್ಮ ದುರಾದೃಷ್ಟಕ್ಕೆ ಅಲ್ಲೂ ಮಳೆ ಬರಬೇಕೆ? ಇನ್ನೊಂದು ಸ್ವಾರಸ್ಯಕರವಾದ ಸಂಗತಿ; ಈ ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ 'ಕ್ಲೌಡ್ ಸೀಡಿಂಗ್' ಎಂಬ ನೂತನ ತಂತ್ರಜ್ಞಾನದಲ್ಲಿ ವಿಶೇಷವಾದ ವಿಮಾನದಲ್ಲಿ ಮೇಲೇರಿ ತಮ್ಮ ಆಕಾಶದಲ್ಲಿ ಹಾದು ಹೋಗುತ್ತಿರುವ ದಟ್ಟ ಮೋಡಗಳ ಮೇಲೆ ಕೆಲವು ರಾಸಾಯನಿಕ ಲವಣೆಗಳನ್ನು ಉದುರಿಸಿ ಆವಿಗಟ್ಟಿರುವ ಮೋಡವನ್ನು ಕರಗಿಸಿ ಮಳೆಬೀಳುವಂತೆ ಮಾಡುತ್ತಾರೆ. ಈ ರೀತಿಯ ಕೃತಕ ಮಳೆ ಬರಿಸುವ ಪ್ರಯತ್ನವನ್ನು ಆಗಾಗ್ಗೆ ಮಾಡುತ್ತಾರೆ ಎಂದು ತಿಳಿದು ಅಚ್ಚರಿಗೊಂಡೆ. ಪ್ರಕೃತಿಗೆ ತನ್ನದೇ ಆದ ನಿಯಮಗಳಿವೆ, ಅದನ್ನು ಹತ್ತಿಕ್ಕಿ ಮನುಷ್ಯ ತನ್ನ ಅನುಕೂಲಕ್ಕೆ ಹಸ್ತಾಕ್ಷೇಪ ಮಾಡುವು ಸರಿಯೇ? ಅದರ ಪರಿಣಾಮಗಳೇನು? ಎಂಬ ನೈತಿಕ ಪ್ರಶ್ನೆಗಳು ನನ್ನನ್ನು ಕಾಡಿವೆ.

ನಮ್ಮ ಗೆಳೆಯರಾದ ರಮೇಶ್ ದಂಪತಿಗಳು ತಮ್ಮ ಹಸಿರಾದ ಅಲೈನ್ ನಗರವನ್ನು ಕೂಲಂಕುಷವಾಗಿ ನಮಗೆ
ಪರಿಚಯಿಸಿದರು. ಅಲೈನ್ ಮೈಸೂರು ಮತ್ತು ಧಾರವಾಡದ ರೀತಿಯಲ್ಲಿ ಸಾಂಸ್ಕೃತಿಕ ಕೇಂದ್ರ. ಇಲ್ಲಿ ಸ್ಥಳೀಯ ಎಮಿರಾಟಿಗಳೇ ಹೆಚ್ಚು. ದುಬೈ ಅಬುದಾಬಿ ನಗರದಷ್ಟು ದಟ್ಟವಾಗಿಲ್ಲ ಬದಲಾಗಿ ಮೈಸೂರಿನಂತೆ ವಿಶಾಲವಾಗಿ ಹಬ್ಬಿಕೊಂಡಿದೆ. ಈ ಊರ ಸರಹದ್ದಿನ ಒಳಗೇ ಇರುವ ಮೂರು ಸಾವಿರ ಅಡಿ ಎತ್ತರದ ಝಬೀಲ್ ಹಫೀತ್ ಎಂಬ ಬೆಟ್ಟ ಮೈಸೂರಿನ ಚಾಮುಂಡಿಬೆಟ್ಟವನ್ನು ನೆನಪಿಗೆ ತರುವಂತಿದೆ. ಇಲ್ಲಿ ಯಾವುದೇ ಕಟ್ಟಡವನ್ನು ಮೂರು ಅಂತಸ್ತಿನ ಮೇಲೆ ಕಟ್ಟುವಂತಿಲ್ಲ. ಎಲ್ಲ ಕಟ್ಟಡಗಳ ವಿನ್ಯಾಸ ಸ್ಥಳೀಯ ಅರಬ್ ಶೈಲಿಯಲ್ಲಿ ಕಟ್ಟಲಾಗಿದ್ದು ಸುಂದರವಾಗಿದೆ. ನಗರದ ಬಹುಪಾಲು ರಸ್ತೆಗಳು ವಿಶಾಲವಾದ ಶುಭ್ರವಾದ ಜೋಡಿರಸ್ತೆಗಳು. ರಸ್ತೆಗಳ ಬದಿಯಲ್ಲಿ ಸಾಲು ಮರಗಳು ಮತ್ತು ಸಾಕಷ್ಟು ಹೂವಿನ ಗಿಡಗಳು ಇದ್ದು ಸುಂದರವಾಗಿದೆ. ದುಬೈನಲ್ಲಿ ಕಾಣುವ ಆಧುನಿಕ ಗ್ಲಾಸ್ ಮತ್ತು ಸ್ಟೀಲ್ ಬಳಸಿ ಕಟ್ಟಿರುವ ಸ್ಕೈ ಸ್ಕ್ರೇಪರ್ ಕಟ್ಟಡಗಳು ಇಲ್ಲಿ ಕಾಣುವುದಿಲ್ಲ. ಅರಬ್ ದೊರೆಗಳು ತಮ್ಮ ಎರಡನೇ ಮನೆಯನ್ನು, ನಿವೃತ್ತ ಪ್ರತಿಷ್ಠಿತರು ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿ ಎಲ್ಲ ವಾಹನ ಚಾಲಕರು ನಿಯಮವನ್ನು ಪಾಲಿಸುತ್ತಾರೆ, ಬೆಂಗಳೂರಿನ ರಸ್ತೆಯಲ್ಲಿ ಕಾಣುವ ಅಸಹನೆ, ನುಗ್ಗಾಟ, ಕರ್ಕಶಗಳಿಲ್ಲ. ವಾಹನ ಓಡಿಸುವವರು ನಮ್ಮ ಇಂಡಿಯಾ ಪಾಕಿಸ್ತಾನದ ಡ್ರೈವರ್ಗಳೇ, ಇವರೆಲ್ಲ ಅಂತಹ ಸುಶಿಕ್ಷಿತರಲ್ಲ. ನಮ್ಮ ಡ್ರೈವಿಂಗ್ ಶೈಲಿ, ಸ್ವಭಾವ ಅಲ್ಲಿಗೂ ಇಲ್ಲಿಗೂ ಹೇಗೆ ಬದಲಾಗಿದೆ ಎಂಬ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಮೂಡಿದವು. ವ್ಯತಾಸ ಇಷ್ಟೇ; ಇಂಡಿಯದಲ್ಲಿ ಲಂಚಕೋರತನವಿದೆ, ಶಿಕ್ಷೆ ವಿಧಿಸಲು ಸಾಧ್ಯವಿಲ್ಲ, ವಿಪರೀತ ಜನಸಂದಣಿ, ನಮ್ಮ ಮಹಾ ನಗರಗಳು ತೀವ್ರ ಗತಿಯಲ್ಲಿ ಹತೋಟಿ ತಪ್ಪಿ ಬೆಳೆಯುತ್ತಿವೆ, ರಸ್ತೆಯನ್ನು ಹಿಗ್ಗಿಸಲು ಸಾಧ್ಯವಿಲ್ಲ, ಹಿಗ್ಗಿಸಿದರೆ ಇನ್ನು ಹೆಚ್ಚು ವಾಹನಗಳು ಬಂದು ಸೇರಿಕೊಳ್ಳುತ್ತವೆ. ಮೋಟಾರ್ ಬೈಕುಗಳು, ಆಟೋ ರಿಕ್ಷಾಗಳು, ಕಾರುಗಳು, ಓಲಾ ಊಬರ್ ಟ್ಯಾಕ್ಸಿಗಳು, ಬಸ್ಸುಗಳು, ಲಾರಿಗಳು ಹೀಗೆ ರಸ್ತೆಯಲ್ಲಿ ತರಾವರಿ ವಾಹನಗಳಿವೆ. ಎಲ್ಲರಿಗೂ ಅವಸರ, ಶಿಸ್ತಿನ ಬಗ್ಗೆ ತಿಳುವಳಿಕೆ ಇಲ್ಲ, ಇದ್ದರೂ ಪಾಲಿಸುವುದಿಲ್ಲ. ಒಟ್ಟಾರೆ ಅವ್ಯವಸ್ಥೆಯನ್ನು ಒಪ್ಪಿಕೊಂಡು ಬದುಕುತ್ತಿದ್ದೇವೆ. ಬೆಂಗಳೂರಿನಲ್ಲೇ ಎಲ್ಲಾ ಬೆಳೆವಣಿಗೆಯನ್ನು ಉತ್ತೇಜಿಸುವ ಬದಲು ಡಿಸ್ಟ್ರಿಕ್ಟ್ ಕೇಂದ್ರಿತ ಬೆಳವಣಿಗೆ ನಡೆಯಬೇಕಾಗಿದೆ. ಆಯೋಜಕರಿಗೆ ದೂರ ದೃಷ್ಟಿ ಬೇಕಾಗಿದೆ. ಭಾರತ ಆರ್ಥಿಕ ಪ್ರಗತಿಯನ್ನು ದಾಖಲಿಸಿದ್ದರೂ ಅದು ಇನ್ನೂ ಅಭಿವೃದ್ದಿಗೊಳ್ಳಬೇಕಾದ ದೇಶ.

***

ಮುಂದುವರೆಯುವುದು…. ಈ ಬರಹದ ೨ನೇ ಭಾಗವನ್ನು ಮುಂದಿನ ಶುಕ್ರವಾರ ನಿರೀಕ್ಷಿಸಿ

3 thoughts on “ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE)

  1. ಪ್ರಸಾದ್ ನಿಮ್ಮ ಪ್ರವಾಸ ಕಥನ/ದೇಶ ವಿಶ್ಲೇಷಣೆ ಕೇವಲ ಝಗಮಗಿಸುವ ದುಬೈ- ಅಬುಧಾಬಿಗಳಷ್ಟನ್ನೇ ತಿಳಿದ ನಮ್ಮಂಥವರಿಗೆ ಅಲ್ ಐನ್ ಎಂಬ ಅಪರೂಪದ ಸ್ಥಳದೊಂದಿಗೆ ಶುರುವಾಗಿದ್ದು ವಿಶೇಷ.

    ಕರಾವಳಿಯವರಿಗೆ ದುಬೈ ಚಿಕ್ಕಂದಿನಿಂದಲೂ ಕೇಳಿದ್ದು ಸಹಜ. ನೀವು ನೋಡಿದಂತೆ ಮಲೆಯಾಳಿ ಕೆಲಸಗಾರರಂತೇ ಕರ್ನಾಟಕದ ಕರಾವಳಿಯವರು ಅದರಲ್ಲೂ ದಕ್ಷಿಣ ಕನ್ನಡದವರು ದುಬೈಯಲ್ಲಿ ದುಡಿದು ಸಮುದ್ರ ತೀರದುದ್ದಕ್ಕೂ ಅರಮನೆಗಳನ್ನು ಕಟ್ಟಿದ್ದನ್ನು ಕಾಣಬಹುದು. ಅಲ್ಲಿಂದ ಕಳ್ಳಸಾಗಣಿಕೆ ಮಾಡಿತಂದ ಪ್ಯಾನಾಸೋನಿಕ್ 2 in 1 ಗಳು ಹೇರಳವಾಗಿ ನಮ್ಮ ಊರುಗಳಲ್ಲಿ ಕಂಡು ಬರುತ್ತಿದ್ದವು.

    ನಿಮ್ಮ ಲೇಖನದ ಮುಂದಿನ ಕಂತಿನಲ್ಲಿ ಇನ್ನೇನು ಹೊಸದನ್ನು ತೋರಿಸುವಿರಿ ಎಂಬ ಕುತೂಹಲವಿದೆ.

    -ರಾಂ

    Like

  2. ಲೇಖನ ಸುಂದರವಾಗಿದೆ. ಶಿವಪ್ರಸಾದ ಅವರು ತಮ್ಮ ಜೊತೆಗೆ ಇಂಗ್ಲೆಂಡಿನ ಮಳೆಯನ್ನೂ ಅಲ್ಲಿಗೆ ಹೋದ ಹಾಗೆ ಕಾಣುತ್ತದೆ. ಅಲ್ಲಿ ವಾಹನ ಚಾಲಕರು ಹೆಚ್ಚಿನವರು ಭಾರತೀಯ ಉಪಖಂಡದಿಂದ ಬಂದವರು. ಅಲ್ಲಿ ನಿಯಮಗಳನ್ನು ಪಾಲಿಸುತ್ತಾರೆ ಆದರೆ ಭಾರತದಲ್ಲಿ ಪಾಲಿಸುವದಿಲ್ಲ. ಅದಕ್ಕೆ ಕಾರಣ ಅಲ್ಲಿ ನಿಯಮ ಪಾಲಿಸದಿದ್ದರೆ ಭಾರಿ ದಂಡ ಹಾಗೂ ಪರವಾನಿಗೆ ಕಳೆದುಕೊಳ್ಳುವ ಭಯ. ಭ್ಹಾರಾಟದಲ್ಲಿಯೂ ನಿಯಮ ಪಾಲಿಸದವರಿಗೆ ದಂಡ ವಿಧಿಸಿದರೆ ಇಲ್ಲಿಯೂ ನಿಯಮ ಪಾಲಿಸುವರು. ಆದರೆ ಸಾರಿಗೆ ಅಧಿಕಾರಿಗಳೇ ನಿಯಮ ಪಾಲಿಸದಿರುವದು ನಿಜಕ್ಕೂ ಶೋಚನೀಯ

    Like

  3. ಪ್ರಸಾದ್ ಅವರೇ ನಿಮ್ಮ ಲೇಖನ ಹಿಡಿಸಿತು. ಅದರ ಶೈಲಿ, ಅದರೊಳಗಿನ ಮಾಹಿತಿ ಜೊತೆಗೆ ನೀವು ಪೀಠಿಕೆಯಲ್ಲಿ ಹೇಳಿದಂತೆ ಆ ‘ಹೊಸ’ದೇಶವನ್ನು ಕಂಡು ಬೆರಗಾಗಿ, ಸಂತಸ ವಿಸ್ಮಯ ಪಟ್ಟು ಕವಿಹೃದಯದಾಳದಿಂದ ಹೊರಹೊಮ್ಮಿದ ಸಾಲುಗಳೊಂದಿಗೆ ಅಧ್ಯಾತ್ಮದ ಚಿಂತನ, ಆ ಗುಂಗನ್ನು ಗಾಜಿನಂತೆ ಚೂರು ಮಾಡುವ ಧುತ್ತೆಂದು ಬಂದೆರಗಿದ ಅಕಾಲ ಆಲಿಕಲ್ಲಿನ ಸುರಿಮಳೆಯ ವರ್ಣನೆ, ಪೆಟ್ರೋಲ್ ‘ದುಂದಿನ’ ಬಗ್ಗೆ ಖೇದ, ೨೦೫೦ ರ ಗುರಿಯ ಸಮಾಧಾನ — ಹೀಗೆ ವಿವಿಧ ವಿಚಾರಗಳ ಎಳೆಗಳಿಂದ ಹೆಣೆದ ಪರ್ಷಿಯನ್ (!) ಕಾರ್ಪೆಟ್ಟನ್ನು ಚಿತ್ರಿಸಿದ್ದೀರಿ. ದವಡೆ-ದವಡೆಗೆ ದಾಟಿಸಿ ಕವಳದ ಹುಲ್ಲನ್ನು ‘ಜಗಿಯುವ’ ಒಂಟೆಯನ್ನು ತಂಬಾಕು ಚರ್ವಣಕ್ಕೆ ಹೋಲಿಸಿದ ಪ್ರತಿಮೆ ಮರುಭೂಮಿಯಲ್ಲಿ ಓಯಸಿಸ್ಸು ಕಂಡಂತೆ! ಆಡು ಮುಟ್ಟದ ಸೊಪ್ಪಿಲ್ಲದಂತೆ ಎಲ್ಲ ದೇಶಗಳಲ್ಲಿ ಪಸರಿಸಿದ ಅನಿವಾಸಿಯರಿಲ್ಲದ ಮೂಲೆಯಿಲ್ಲ.ಅಲ್ಲಿಯಾ ದೃಶ್ಯ ನೋಡಿ ನಮ್ಮೂರನ್ನು ನೆನೆದು ಬರೆದ ಸಾಲುಗಳಲ್ಲಿ ಇನ್ನೊಂದು ಕವನದ (ಇಂಗ್ಲೆಂಡಿನಲ್ಲಿ ಭಾರತೀಯನ) ಛಾಯೆಯಿದೆ. ಲೇಖನದ ಕೊನೆಯಲ್ಲಿ ಭಾರತವನ್ನು still developing nation ಸಾಲಿನಲ್ಲಿ ಸೇರಿಸಿರುವದು ನಿಗೂಢ ಆದರೆ ಸತ್ಯ! 

    Liked by 1 person

Leave a comment

This site uses Akismet to reduce spam. Learn how your comment data is processed.