ಐದು ಕವನಗಳು – ಕೇಶವ ಕುಲಕರ್ಣಿ

ಅಜ್ಜಿ

ಅಜ್ಜಿಯ ಬೆನ್ನು ಬಾಗಿಬಿಟ್ಟಿದೆ
ಅನುಕ್ಷಣವೂ ಬಾಗಿ ಬಾಗಿ
ನಿಲ್ಲುವ ಭಂಗಿಯೇ ಮರೆತುಹೋಗಿದೆ

ಅಜ್ಜಿಯ ಕಣ್ಣು ಪೊರೆಗಟ್ಟಿದೆ
ಗಂಡ ಮಕ್ಕಳ ಮೊಮ್ಮಕ್ಕಳ ಆಡಿಸಿ
ನೋವನ್ನೆಲ್ಲ ನುಂಗಿ ಕುರುಡಾಗಿದೆ

ಧಗಧಗಿಸುವ ಒಲೆ ಹೊಗೆಯಾಡಿದೆ
ಉರಿಯ ಆರಿಸಲು ಹೋದ ಕಣ್ಣೀರು
ಕಣ್ಣನ್ನೇ ನುಂಗಿದೆ

ಅಜ್ಜಿಯ ಕೈ ಒರಟು ದೊಣ್ಣೆಯಾಗಿದೆ.
ತವಡು ಕುಟ್ಟಿ ಕುಟ್ಟಿ, ಕಳೆಯ ಕೆತ್ತಿ ಕೆತ್ತಿ
ಭಾಗ್ಯದ ಗೆರೆಗಳನ್ನು ಕೆತ್ತಿ ಕೆತ್ತಿ ಕೆರೆದಂತಿದೆ

ಅಜ್ಜಿಯ ಕಿವಿ ಕಿವುಡಾಗಿದೆ
ಸಂಚಿನ ಮಿಂಚಿನ ಹೊಡೆತಕೆ
ಹುರುಳಿಲ್ಲದ ಗುಡುಗಿನಬ್ಬರಕೆ ನಿಶ್ಚಿಂತವಾಗಿದೆ

ಮಾತು ಮೌನದಲಿ ಗೋರಿಯಾಗಿ
ಎದೆ ಗಟ್ಟಿಯಾಗಿ ದಣಿವರಿಯದೇ
ಬಡಿದುಕೊಳ್ಳುತಿದೆ

ಮಾತು ಮೌನದಲಿ ಗೋರಿಯಾಗಿ
ಎದೆ ಗಟ್ಟಿಯಾಗಿ ಬಡಿದುಕೊಳ್ಳುತಿದೆ
ದಣಿವರಿಯದೇ

ನಾನ್ಯಾವ ಸೀಮೆಯ ಕವಿ?

ಪಂಪನನ್ನು ಓದಲಿಲ್ಲ
ರನ್ನನನ್ನು ಕಲಿಯಲಿಲ್ಲ
ಕೇಳಲಿಲ್ಲ ನಾ ಕುಮಾರವ್ಯಾಸನನ್ನು
ಬಸವನನ್ನು ವಾಚಿಸಲಿಲ್ಲ
ಪುರಂದರನನು ಕೀರ್ತಿಸಲಿಲ್ಲ
ಹಾಡಲಿಲ್ಲ ನಾ ಜನಪದವನ್ನು

ಕುವೆಂಪುವಿನ ಕಂಪು ತಾಕಲೇ ಇಲ್ಲ
ಅಂಬಿಕಾತನದತ್ತ ಇತ್ತ ಹಾಯಲೇ ಇಲ್ಲ
ಅಡಿಗ ಮುಡಿಯಿಂದೊಳಗೆ ಇಳಿಯಲೇ ಇಲ್ಲ

ಕೆ ಎಸ್ ಎನ್ ಮಲ್ಲಿಗೆ ಮಿಡಿದರೂ
ಜಿ ಎಸ್ ಎಸ್ ಕಡಲನೇ ಕಡಿದರೂ
ಪುತಿನ ಗೋಕುಲವನೇ ಕಟ್ಟಿದರೂ
ಹೃದಯಕ್ಕಿಳಿದು ರಕ್ತವಾಗಲಿಲ್ಲ

ಮುಂದೆ ಬಂದವರ ಹೆಸರು ಲೆಕ್ಕ ಎರಡೂ ಸಿಗಲಿಲ್ಲ

ಯಾಕೆ ಯಾರಾದರೂ
ನನ್ನ ಕವನಗಳನ್ನು ಓದಿ
ಸಮಯವನ್ನು ಹಾಳು ಮಾಡಿಕೊಳ್ಳಬೇಕು?

ಹಲವು ಪದಗಳ ಬೆಸೆದು
ಕೆಲವು ಸಾಲುಗಳಲ್ಲಿ
ಕ್ಲೀಷೆಯಾದ ಪ್ರತಿಮೆಗಳನ್ನು ಹೊಸೆಯುವ
ನನ್ನನ್ನು ಕವಿ ಎಂದಾದರೂ ಏಕೆ ಕರೆಯಬೇಕು?

ಕವಿತೆ

ಗರ್ಭ ಧರಿಸುವ ಮೊದಲೇ
ಸುರಿದು ಹೋದ ಕವನಗಳ
ಲೆಕ್ಕ ಇಟ್ಟವರಾರು?

ಗರ್ಭ ಕಟ್ಟಿದ್ದರೂ ಅರಿವಾಗುವ
ಮುನ್ನ ಬಿರಿದ ಭ್ರೂಣಗಳ
ನೆನಪಿಟ್ಟುಕೊಳ್ಳುವುದಾದರೂ ಹೇಗೆ?

ಮೊದಲಾದರೆ ಹತ್ತಾರು ಮಕ್ಕಳು
ಒಂದಿಬ್ಬರಾದರೂ ನಾಕಾರು ಜನರ
ಮನದಲ್ಲಿ ಹೆಸರು ಮಾಡುತ್ತಿದ್ದರು

ಈಗ ಹಡೆಯುವುದೇ ಒಂದೋ
ಎರಡೋ, ಗೂಡು ಬಿಡುವವರೆಗೆ
ತಿದ್ದಿ ತೀಡುತ್ತಲೇ ಇರಬೇಕು

ಹೊಟ್ಟೆಯಲ್ಲಿರುವ ಮಗು

ಭ್ರೂಣವಿದೆ
ಭ್ರೂಣದ ಎದೆಯೂ ಮಿಡಿಯುತ್ತಿದೆ’
ಎಂದು ಕಪ್ಪು ಬಿಳುಪಿನ ಚಿಕ್ಕ ಆಕೃತಿಯನ್ನು
ಸ್ಕ್ಯಾನಿನ ಸ್ಕ್ರೀನಿನ ಮೇಲೆ ತೋರಿಸುತ್ತಿದ್ದೆ.
‘ಕರೆಯಿರಿ ಅವರನ್ನು,’ ಎಂದು ಕಿರುಚಿದಳಾಕೆ.
ಸ್ಖ್ಯಾನ್ ಮಾಡುತ್ತಿದ್ದ ನನಗೆ ಗಾಬರಿಯಾಗಿ,
‘ಯಾರನ್ನು? ಗಂಡನನ್ನಾ?’
‘ಇಲ್ಲ, ನನ್ನ ಅತ್ತೆಯನ್ನು,
ಹತ್ತು ವರ್ಷದಿಂದ ಬಂಜೆ ಬಂಜೆ ಎಂದು ಹಂಗಿಸುತ್ತಿದ್ದಾಳೆ,’
ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು

‘ಇದು ಕಣ್ಣು
ಇದು ಮೂಗು
ಇದು ಬಾಯಿ
ಇದು ಕೈ
ಇದು ಕಾಲು,’
ಎಂದು ಸ್ಕ್ಯಾನ್ ಮಾಡುತ್ತ ತೋರಿಸುತ್ತಿದ್ದೆ

‘ಮೂಗು ನನ್ನಂತೆ
ಕಣ್ಣು ನನ್ನ ಅಪ್ಪನಂತೆ
ಬಾಯಿ ನನ್ನ ಅಜ್ಜಿಯಂತೆ,’ ಎಂದಳು

‘ಇಲ್ಲವೇ,
ಕಣ್ಣು ನನ್ನಂತೆ
ಮೂಗು ನನ್ನ ಅಮ್ಮನಂತೆ
ಬಾಯಿ ಮಾತ್ರ ನಿನ್ನಂತೆ,’ ಎಂದ

ಇಬ್ಬರೂ ಅಲ್ಲೇ ಸರಸದ ಜಗಳ ಶುರು ಮಾಡಿದರು
ಸ್ಕ್ಯಾನಿನಲ್ಲಿ ಕೈಕಾಲಾಡಿಸುತ್ತಿರುವ ಮಗು ನಕ್ಕಂತಾಯಿತು

ಹೀಗೊಬ್ಬ ಮುದುಕ

ಹೀಗೊಂದು ಸಾಂಸೃತಿಕ ಸಮಾರಂಭವೊಂದರಲ್ಲಿ
ಡ್ರಿಂಕ್ಸ್ ಕೊಳ್ಳುತ್ತಿದ್ದೆ; ಅಪರಿಚಿತ ಮುದುಕನೊಬ್ಬ
ನನಗೊಂದು ಡ್ರಿಂಕ್ಸ್ ಕೊಡಿಸಬಹುದೇ ಎಂದು ಕೇಳಿದ.
ಅದಕ್ಕೇನಂತೆ, ಎಂದು ಒಂದು ಡ್ರಿಂಕ್ಸ್ ತಂದುಕೊಟ್ಟು
ಚಿಯರ್ಸ್ ಹೇಳಿ ಪರಸ್ಪರ ಪರಿಚಯ ಮಾಡಿಕೊಂಡೆವು

`ಬಹಳಷ್ಟು ಸಲ
ನಾನಿನ್ನು ಬದುಕಿರುವುದು ವೇಸ್ಟು
ಸತ್ತಿರಬೇಕಿತ್ತು ಎನಿಸುತ್ತೆ, ಏಕೆಂದರೆ
ಈ ಒಂಟಿತನ, ಈ ಸುಸ್ತು, ಈ ಕಾಯಿಲೆಗಳು, ಈ ಔಷಧಿಗಳು,
ಆಸ್ಪತ್ರೆಗಳ ಎಡತಾಕುಗಳು
ಬದುಕಿದ್ದೂ ಸತ್ತ ಹೆಣಗಳ ತರಹ,

ಆದರೆ ಇಂಥ ಪಾರ್ಟಿಗಳಲ್ಲಿ
ನಿಮ್ಮಂಥ ಯಂಗ್ ಪೀಪಲ್ ಸಿಕ್ಕಿದಾಗ
ನನ್ನಂತೆ ವಯಸ್ಸಾಗಿರುವ ಸಿಂಗಲ್ ಮಾಲ್ಟ್ ಕುಡಿದಾಗ
ಮೈಯೆಲ್ಲ ಘಮ್ಮೆನಿಸುವ ಬಿಸಿಬಿಸಿ ಬಿರಿಯಾನಿಯ ತಿಂದಾಗ
ಚಿಕ್ಕ ಮಕ್ಕಳು ಇತ್ತಿಂದತ್ತ ಅತ್ತಿಂದಿತ್ತ ಓಡಾಡುತ್ತಿರುವಾಗ
ಶೃಂಗಾರಭೂಷಿತೆಯರಾದ ಆ ಮಕ್ಕಳ ತಾಯಂದಿರು ಕಿಲಕಿಲ ನಗುತ್ತಿರುವಾಗ
ಸಾಯದಿರುವುದಕ್ಕಿಂತ ಬದುಕುವುದೇ ವಾಸಿ ಎನಿಸುತ್ತದೆ,`

ಎಂದು, ತನ್ನ ಗ್ಲಾಸನ್ನೂ ನನ್ನ ಕೈಗೆ ಕೊಟ್ಟು
ನನ್ನ `ಅಪ್ಪಣೆ` ಪಡೆದಂತೆ ಮಾಡಿ
ನನ್ನ ಹೆಂಡತಿಯ ಜೊತೆ
ಡಾನ್ಸ್-ಫ್ಲೋರಿಗಿಳಿದ

4 thoughts on “ಐದು ಕವನಗಳು – ಕೇಶವ ಕುಲಕರ್ಣಿ

  1. Liked Yava seemeya Kavi nanu
    Thumba neejavada mathu Adare nimagu kooda meaningful agi beriyuva talent eruvudarinda you are a Kavi. Please write more poems. Vathsala Ramamurthy

    Like

  2. ಸರಳವೆನಿಸಿದರೂ, ಅರ್ಥ ಪೂರ್ಣವಾದ ಕವನಗಳು. ಚಿಕ್ಕವು ಆದರೂ ಗಹನವಾದವು. ನಮ್ಮ ಸುತ್ತಲೂ ಇರುವ, ಪ್ರತಿದಿನ ನಡೆಯುವ ಪ್ರಸಂಗಗಳು ಥಟ್ಟನೇ ಆಳವಾದ ಯೋಚನೆಗೆ ತೊಡಗಿಸುತ್ತವೆ; ಕಾಡುತ್ತವೆ.

    – ರಾಂ

    Like

  3. ಸರಳ, ಸುಂದರ ಕವನಗಳು. ನಾನಾವ ಕವಿ ಮತ್ತು ಕವಿತೆ ಇವೆರಡೂ ನನಗೆ ಸರಿಯಾಗಿ ಒಪ್ಪುತ್ತವೆ! ಅಜ್ಜಿ ಮತ್ತು ಸ್ಕ್ಯಾನಿಂಗ್ ಕವಿತೆಗಳೆರಡೂ ನಮ್ಮ ಸಮಾಜದಲ್ಲಿನ ಜನರ behaviour ನಾಣ್ಯದ ಎರಡು ಮುಖಗಳು. ಚೆನ್ನಾಗಿವೆ.

    Like

Leave a comment

This site uses Akismet to reduce spam. Learn how your comment data is processed.