ಅನಿವಾಸಿ ಬಳಗದ ಯುಗಾದಿ ಸಂಭ್ರಮ

ಅನಿವಾಸಿ ಬಳಗದ 'ರಂಗ' ಯುಗಾದಿ  
- ಅಮಿತಾ ರವಿಕಿರಣ್

ಈ 'ಅನಿವಾಸಿ' ಎಂಬ ಪದ, ಕನ್ನಡ ಬಲ್ಲ ಸರ್ವರಿಗೂ ಅರ್ಥವಾಗುವ ರೀತಿ ಒಂದು ತೆರನಾದರೆ, ನನಗೆ ಅರ್ಥವಾಗುವ ರೀತಿಯೇ ಬೇರೆ. ಅನಿವಾಸಿ ಎಂಬುದು ದೇಶದಿಂದ ದೂರವಿರುವ ಅಥವಾ ಪ್ರಸ್ತುತ ತಾಯಿನೆಲದಲಿ, ಸ್ವದೇಶದಲ್ಲಿ ನೆಲೆಸದ ಅನ್ನುವ ಅರ್ಥವಿದ್ಯಾಗ್ಯೂ ನನಗೆ ಅನಿವಾಸಿ ಎಂಬ ಪದ ಕೇಳಿದೊಡನೆ ಆತ್ಮೀಯ, ಹತ್ತಿರದ, ಪ್ರೀತಿಯ, ಅಕ್ಕರೆಯ ಅಂತಃಕರಣದ, ನಾಡು ನುಡಿಗಳ ಕುರಿತು ಸದಾ ತುಡಿಯುವ ಮಿಡಿಯುವ ಮನಸುಗಳ, ನನ್ನದಲ್ಲದ ನೆಲದಲ್ಲಿ ನನ್ನ ತವರಿನಂತಿರುವ ಒಂದು ಸಹೃದಯಿ ಗುಂಪು ಎಂಬ ಚಿತ್ರ ಮನಃಪಟಲದಲ್ಲಿ ಮೂಡುತ್ತದೆ. ಸಾಹಿತ್ಯ ಸಂಗೀತಗಳಿಂದ ಆಂತರ್ಯವನ್ನು ಚೊಕ್ಕಟವಾಗಿಡಲು, ಸೃಜನಶೀಲತೆಯ ಸ್ಪುರಣದಂತಿರುವ ಅನಿವಾಸಿ ಬಳಗಕ್ಕೆ ಏಳುವರ್ಷಗಳ ಹಿಂದೆ ನನ್ನ ಪರಿಚಯಿಸಿದ್ದು ನಮ್ಮ ಕಥೆಗಾರ್ತಿ ಕವಯಿತ್ರಿ ಅದಮ್ಯ ಉತ್ಸಾಹದ ಚಿಲುಮೆಯಂತಿರುವ ಡಾ ಪ್ರೇಮಲತಾ.

ಅನಿವಾಸಿಯ ಪ್ರತಿಯೊಬ್ಬ ಸದಸ್ಯರ ಕುರಿತು ನನಗೆ ಗೌರವ, ಅಚ್ಚರಿ! ಎಲ್ಲರೂ ಒಂದಲ್ಲ ಕ್ಷೇತ್ರದಲ್ಲಿ ಸಾಧನೆಗೈದವರು, ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಹವ್ಯಾಸ ಆಸಕ್ತಿಗಳನ್ನು ಅಷ್ಟೇ ಆಸ್ಥೆಯಿಂದ ಬೆಳೆಸಿಕೊಂಡು ಅದರ ನಿರಂತರತೆಯನ್ನು ಕಾಪಾಡಿಕೊಂಡು ಬಂದವರು. ಇಲ್ಲಿ ಬರೆಯುವ ಎಲ್ಲರ ಘನವಾದ ಬರವಣಿಗೆಯ ಮುಂದೆ ನನಗೆ ನನ್ನ ಬರಹಗಳು ಆವತ್ತಿಗೂ, ಇವತ್ತಿಗೂ, ಯಾವತ್ತಿಗೂ ತರಗೆಲೆಯಂತೆ ಅನಿಸುತ್ತದೆ. ನನ್ನ ಜೀವನದಲ್ಲಿ ಅನಿವಾಸಿ ಈಗ ಬರೀ ಒಂದು ವಾಟ್ಸಾಪ್ ಗುಂಪು ಅಥವಾ ಬ್ಲಾಗ್ ಬರಹಗಳ ವೇದಿಕೆಗಿಂತ ಹೆಚ್ಚಿನದ್ದು. ನನಗೆ ಶಿಸ್ತು, ಬದ್ಧತೆಯನ್ನು ಮತ್ತೆ ಮತ್ತೆ ಕಲಿಸುವ ತಿಳಿಸುವ ಅನಿವಾಸಿ ಬಳಗವನ್ನು
ಒಮ್ಮೆಯಾದರೂ ಭೇಟಿ ಮಾಡಬೇಕು ಅನ್ನುವುದು ನನ್ನ ಬಹುಕಾಲದ ಕನಸಾಗಿತ್ತು.

ಊರು ಸುಟ್ಟರೂ ಹಣಮಪ್ಪ ಹೊರಗೆ ಅನ್ನುವ ಗಾದೆ ಮಾತಿನಂತೆ, UK ಯಲ್ಲಿ ಇದ್ದಾಗ್ಯೂ ಈ ತನಕ ನನಗೆ ಕನ್ನಡ ಬಳಗ ಅಥವಾ ಅನಿವಾಸಿಯ ಯಾವ ಕಾರ್ಯಕ್ರಮದಲ್ಲೂ ಭಾಗಹಿಸಲು ಆಗಿಲ್ಲ, ಕಾರಣ ವಿಮಾನಯಾನ ಅಥವಾ ಜಲಯಾನ ಮಾಡಿ ಬರಬೇಕಾದ ಅನಿವಾರ್ಯತೆ ಒಂದುಕಡೆಯಾದರೆ, ಪುಟ್ಟ ಮಕ್ಕಳು ಇರುವ ಮನೆಯಲ್ಲಿ ಎಲ್ಲ ಜವಾಬ್ದಾರಿಗಳು ಜಯಮಾಲೆಯಂತೆ ಕೊರಳಿಗೆ ಬಂದು ತಾನೇ ತೂಗು ಹಾಕಿಕೊಂಡಿರುವ ಬಿಡಿಸಿಕೊಳ್ಳಲಾರದ ಜವಾಬ್ದಾರಿಗಳು ಮತ್ತೊಂದೆಡೆ.
ಅದು ಹೇಗೋ ಎಲ್ಲಾ ಗ್ರಹ ನಕ್ಷತ್ರ ಬಲ ಕೂಡಿ ಬಂತು; ನಾನೂ ಈ ಸಲದ ಕನ್ನಡ ಬಳಗ ಯುಕೆ ಮತ್ತು ಲೆಸ್ಟರ್ ಕನ್ನಡ ಬಳಗದ ಯುಗಾದಿ ಸಂಭ್ರಮದಲ್ಲಿ ಭಾಗವಹಿಸುವ ಯೋಗಾಯೋಗ ಒದಗಿ ಬಂತು.
ಈ ಯುಗಾದಿ ನಿಜಕ್ಕೂ, ನಾಡಿನಲ್ಲಿದ್ದು ಯುಗಾದಿ ಹಬ್ಬ ಆಚರಿಸಿದ್ದಕ್ಕಿಂತ ಹೆಚ್ಚು ಸಂಭ್ರಮದಲ್ಲಿ ಜರುಗಿತು.
ಪ್ರತಿಬಾರಿ ಅನಿವಾಸಿ ಬ್ಲಾಗ್ ಮತ್ತು ಗ್ರೂಪ್ ಫೋಟೋಗಳಲ್ಲಿ ನೋಡಿ ಖುಷಿ ಪಡುತ್ತಿದ್ದ ಅನಿವಾಸಿ ಸಾಹಿತಿಕ ಕಾರ್ಯಕ್ರಮದಲ್ಲಿ ನಾನೂ ಈ ಬಾರಿ ಭಾಗವಹಿಸಿದ್ದು ನನಗೆ ಹೆಮ್ಮೆಯ ಸಂಗತಿ.

ಅನಿವಾಸಿ ಕಾರ್ಯಕ್ರಮ

ಪ್ರತಿಬಾರಿಯಂತೆ, ಈ ಸಲವೂ ಕಾರ್ಯಕ್ರಮಕ್ಕೆ ಬರುವ ಅಥಿತಿಗಳ ವೈಶಿಷ್ಟತೆಗೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪುಗೊಳಿಸುವುದು ಎಂಬ ನಿರ್ಧಾರವಾದ ಕೆಲ ದಿನಗಳಲ್ಲೇ ರಂಗಭೂಮಿ, ನಟ ನಿರ್ದೇಶಕ, ಕಿರುತೆರೆ, ಬೆಳ್ಳಿತೆರೆಯ ಮೇಲೆ ತಮ್ಮ ವಿಶಿಷ್ಟ ಛಾಪು ಮೂಡಿಸಿ ನೆನಪಿನಲ್ಲಿ ಉಳಿಯುವಂಥ ಹಲವಾರು ಕ್ರೀಯಾಶೀಲ ಪ್ರಸ್ತುತಿಗಳನ್ನು ರಂಗದಮೇಲೆ ನಟಿಸಿ ನಿರ್ದೇಶಿಸಿದ ಅದ್ಭುತ ಕಲಾವಿದ ಶ್ರೀ ಶ್ರೀನಿವಾಸ ಪ್ರಭು ಅವರು ಅತಿಥಿಯಾಗಿ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಮರುಗಳಿಗೆಯಿಂದ ಅನಿವಾಸಿ ಅಂಗಳ ಮತ್ತಷ್ಟು ಕ್ರಿಯಾಶೀಲವಾಯಿತು .
ಎಲ್ಲ ಚರ್ಚೆಗಳು, zoom, ಗೂಗಲ್ ಮೀಟ್ ಗಳಲ್ಲಿ ವಿಚಾರ ವಿನಿಮಯದ ನಂತರ, ಅನಿವಾಸಿ ಬಳಗದ ಉತ್ಸಾಹಿ ದಂಪತಿಗಳಾದ ಅನ್ನಪೂರ್ಣ ಮತ್ತು ಆನಂದ ಅವರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತು, ಎಲ್ಲರ ಸಲಹಾ ಸೂಚನೆಗಳನ್ನು ಪರಾಂಬರಿಸಿ ರಂಗಭೂಮಿ ನಾಟಕ ಕುರಿತಾದ ಕಾರ್ಯಾಗಾರವನ್ನುಏರ್ಪಡಿಸುವ ಕುರಿತು ಅತಿಥಿಗಳೊಂದಿಗೆ ಮಾತನಾಡಿ ಕಾರ್ಯಕ್ರಮದ ರೂಪರೇಶೆ ತಯಾರಿಸಿದರು. ಜೊತೆಗೆ ಆಸಕ್ತರು ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಬೇಕು ಅಂತಿದ್ದರೆ ಮೊದಲೇ ಕಳುಹಿಸಬೇಕಾಗಿ ವಿನಂತಿಸಲಾಯಿತು.

ಕಾರ್ಯಕ್ರಮದ ದಿನಕ್ಕಿಂತ ಅದರ ಸಿದ್ಧತೆಗಳನ್ನು, ಪೂರ್ವ ತಯಾರಿಗಳನ್ನು ನೋಡುವುದು ಮತ್ತು ಆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದೇ ಒಂದು ಮಜಾ ಅನುಭವ. ನಾನು, ಡಾ ಶ್ರೀವತ್ಸ ದೇಸಾಯಿ ಅವರೊಂದಿಗೆ ಕಾರ್ಯಕ್ರಮದ ಮುನ್ನಾದಿನ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿ ಮತ್ತಿಬ್ಬರು volunteers ಜೊತೆಗೂಡಿ ಖುರ್ಚಿ, ಮೇಜು ಜೋಡಿಸಿ ಬ್ಯಾನರ್ ಹಾಕಿ, ಎಲ್ಲವನ್ನು ಸಿದ್ಧಮಾಡಿ ಬಂದೆವು.
ಆದರೆ ಮರುದಿನ ಅನಿವಾರ್ಯ ಕಾರಣಗಳಿಂದಾಗಿ ಆ ಜಾಗದಲ್ಲಿ ಅನಿವಾಸಿ ಕಾರ್ಯಕ್ರಮ ನಿಗದಿತ ಸಮಯಕ್ಕೆ ನಡೆಯದೆ ಸ್ವಲ್ಪ ನಿರಾಸೆ ಉಂಟುಮಾಡಿತು. ಆದರೆ ಇತ್ತ ಹಬ್ಬದಡಿಗೆಯ ಅದ್ಭುತ ರುಚಿಯ ಬಾಳೆಎಲೆ ಊಟ ಉಂಡು ಸಾಂಸ್ಕೃತಿಕ ಕಾರ್ಯಕ್ರಮ ನೋಡುತ್ತಾ ಕುಳಿತಿರುವಾಗ ಅನಿವಾಸಿ ಕಾರ್ಯಕ್ರಮ ನಾಲ್ಕು ಘಂಟೆಗೆ ನಿಗದಿಯಾಗಿದೆ ಎಂದು ಸಂಘಟಕರು ತಿಳಿಸಿದ್ದು ನಿಜಕ್ಕೂ ಮನಸನ್ನು ಪ್ರಫುಲ್ಲ ಗೊಳಿಸಿತು.

ಅನಿವಾಸಿಯ ಈ ಕಾರ್ಯಾಗಾರಕ್ಕೆಂದೇ ಕಟ್ಟಿದ್ದರೇನೋ ಅನ್ನುವಷ್ಟು ಅಚ್ಚುಕಟ್ಟಿನ ಪುಟ್ಟ ಸುಂದರ ಕೋಣೆಯಲ್ಲಿ ಆಸಕ್ತರು ಸೇರಿದ ಮೇಲೆ, ಕಾರ್ಯಕ್ರಮದ ಆರಂಭಕ್ಕೆ ಒಂದು ನಾಂದಿ ಗೀತೆ ಹಾಡುವ ಅವಕಾಶ ನನಗೆ ಒದಗಿ ಬಂತು. ಕಾರ್ಯಕ್ರಮವನ್ನು ಅನ್ನಪೂರ್ಣ ಅವರು ಈ ಮೊದಲೇ ಕಳಿಸಲಾಗಿದ್ದ ಪ್ರಶ್ನೆಗಳನ್ನು ಒಂದೊಂದಾಗಿ ಸ್ಪಷ್ಟತೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀನಿವಾಸ ಪ್ರಭು ಅವರಿಗೆ ಕೇಳುತ್ತ ಹೊದರು. ಶ್ರೀನಿವಾಸ ಪ್ರಭುಗಳು ಕೂಡ ಪ್ರತಿ ಪ್ರಶ್ನೆಗೂ ತಮ್ಮ ಅನುಭವದ ಬುತ್ತಿಯಿಂದ ರುಚಿಯಾದ ತುತ್ತುಗಳನ್ನೇ ನಮಗೆ ಉಣಬಡಿಸಿದರು.
ಒಂದು ನಾಟಕವನ್ನು ಪುಸ್ತಕದಿಂದ ರಂಗದ ಮೇಲೆ ತರುವಾಗ ಎದುರಾಗುವ ಸವಾಲುಗಳು, ಎಲ್ಲಿ ನಿಯಮಗಳನ್ನು ಸಡಿಲಿಸಬಹುದು , ಯಾವುದನ್ನು ಸಡಲಿಸಬಾರದು? ಹವ್ಯಾಸಿ ರಂಗಭೂಮಿ ನಟರಿಗೆ ಎದುರಾಗುವ ಸಮಸ್ಯೆಗಳು. ಕ್ರಿಯಾಶೀಲ ಜಗತ್ತಿನ ವಿಪರ್ಯಾಸಗಳ ಕುರಿತು ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು.
ಅವರ ಮಾತುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಳುಗರನ್ನು ಅದೆಷ್ಟು ತಾಕಿದವೆಂದರೆ, ಒಂದು ನಾಟಕದ ತಂಡವನ್ನೇ ಕಟ್ಟುವ ಹುರುಪಿನಲ್ಲಿ ಆಸಕ್ತರ ಪಟ್ಟಿಕೂಡಾ ಸಿದ್ಧವಾಯಿತು. ಇವೆಲ್ಲ ಖುಷಿಯ ವಿಷಯಗಳು ಜರುಗುವಾಗ ದೇಸಾಯಿಯವರು ಕಾರ್ಯಕ್ರಮಕ್ಕೆ ನಿಗದಿಯಾದ ಒಂದು ಘಂಟೆಯ ಕಾಲಾವಕಾಶ ಮುಗಿಯುತ್ತ ಬಂದಿದ್ದನ್ನು ನಿರ್ವಾಹಕ ಗಮನಕ್ಕೆ ತಂದು ನಮ್ಮನ್ನೆಲ್ಲ ಮತ್ತೆ ವಾಸ್ತವಕ್ಕೆ ಕರೆತಂದರು. ಛೇ ಇಷ್ಟು ಬೇಗ ಮುಗಿದೇ ಹೋಯಿತೇ ಅನ್ನುವಂಥ ಭಾವ ದಟ್ಟವಾಗುವ ಮುನ್ನವೇ, ಆನಂದ ಅವರು ವಂದನಾರ್ಪಣೆ ನಡೆಸಿಕೊಟ್ಟರು.
ಅತಿಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅನಿವಾಸಿ ಸದಸ್ಯರು ಗ್ರೂಪ್ ಫೋಟೋ ತೆಗೆಸಿಕೊಂಡ ನಂತರವೂ ಶ್ರೀನಿವಾಸ ಪ್ರಭುಗಳೊಂದಿಗೆ ಹಲವರು ನಾಟಕದ ಬಗ್ಗೆ ಚರ್ಚೆ ನಡೆಸುತ್ತಿದ್ದುದು ಕಾರ್ಯಕ್ರಮ ಸಾರ್ಥಕ್ಯ ಎಂದರೂ ಅತಿಶಯೋಕ್ತಿ ಅಲ್ಲ.


2 thoughts on “ಅನಿವಾಸಿ ಬಳಗದ ಯುಗಾದಿ ಸಂಭ್ರಮ

  1. ಅನಿವಾಸಿ ಗುಂಪಿನ ಅತ್ಯಂತ ಸೃಜನಶೀಲರಲ್ಲಿ ಒಬ್ಬರಾದ ಅಮಿತಾ ಅವರು ದೂರದಿಂದ ಹಾರಿಕೊಂಡು ಬಂದು ನಾಂದಿಗೀತೆಯನ್ನು ಹಾಡಿದ್ದು ಅನಿವಾಸಿಯ ಬಳಗಕ್ಕೆ ತುಂಬ ಖುಷಿ. ಸಂಗೀತದಲ್ಲಿ, ಚಿತ್ರಕಲೆಯಲ್ಲಿ, ಫೋಟೋಗ್ರಾಫಿಯಲ್ಲಿ, ಬರವಣೀಗೆಯಲ್ಲಿ ಪರಿಣಿತರಾದ ಅಮಿತಾ ಅನಿವಾಸಿಗೆ ಬಂದಿದ್ದು ಅನಿವಾಸಿಯ ಪುಣ್ಯ. ಅದಕ್ಕೆ ಪ್ರೇಮಲತಾ ಅವರಿಗೆ ಋಣಿ.

    ಲೇಖನ ಅನಿವಾಸಿಯ ಕಾರ್ಯಕ್ರಮದ ಸಾರವನ್ನು ಹಿಡಿದಿಟ್ಟಿದೆ.

    ಇಲ್ಲಿಂದಲ್ಲಿ ಓಡಾಡಿ, ಪರಿಚಯದವರನ್ನು ನಾಕಾರು ನಿಮಿಷ ಮಾತನಾಡಿಸಿ, ಕುಟುಂಬದವನ್ನೂ ನೋಡಿಕೊಂಡು, ಎರಡೆರಡು ಊಟ ಮತ್ತು ಒಂದು ತಿಂಡಿ ಮಾಡುವಷ್ಟರಲ್ಲಿ ಸಮಯ ಕಳೆದೇ ಹೋಗುತ್ತದೆ. ಈ ಗದ್ದಲದಲ್ಲಿ ಅನಿವಾಸಿಯ ಬಳಗದವರೊಡನೆ ಒನ್-ಟು-ಒನ್ ಮಾತನಾಡಲು ಸಮಯವೇ ಸಿಗುವುದಿಲ್ಲ.

    • ಕೇಶವ

    Like

  2. ಬರೀ ಒಣ ಒಣ ಠಣ ಠಣ ಆಗದೆ ವೈಯಕ್ತಿಕ ಅನುಭವವನ್ನೂ ಬೆರೆಸಿ ಅನಿವಾಸಿ ಕಾರ್ಯಕ್ರಮದ ನಡಾವಳಿಯನ್ನು ಬರದಿದ್ದವರಿಗೆ ಚಿತ್ರಿಸಿ ( also rubbing it in?) ಸ್ವಾರಸ್ಯಕರವಾಗಿ ರೂಪಿಸಿದ್ದೀರಿ, ಅಮಿತಾ. ಅದಕ್ಕೆ ಅಭಿನಂದನೆಗಳು ಮತ್ತು ಹಿಂದಿನ ಸಂಜೆಯ ಸಹಾಯಕ್ಕೆ ಧನ್ಯವಾದಗಳು. ಸಮಯಾನುಭವದಿಂದ ಕಾರ್ಯಕ್ರಮದಲ್ಲಿ ನಾವು ಕಾಯುತ್ತಿದ್ದ ‘ವರ್ಕ್ಷಾಪ್’ ಗೆ ಕುತ್ತು ಬಂದದ್ದು ನಿರಾಶೆಯಾಯಿತು. ಇನ್ನು ಮೇಲೆ AGM ಇದ್ದಾಗ ಮಾಡಬಾರದೇನೋ!

    Like

Leave a comment

This site uses Akismet to reduce spam. Learn how your comment data is processed.