ಸುಧಾ ಬರಗೂರ್ ಸಮ್ಮುಖದಲ್ಲಿ ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಚರ್ಚೆ – ಶ್ರೀನಿವಾಸ ಮಹೇಂದ್ರಕರ್ ಬರೆದ ವರದಿ

ಲೇಖಕರು: ಶ್ರೀನಿವಾಸ ಮಹೇಂದ್ರಕರ್

ಕಳೆದ ಹತ್ತು ವರುಷಳಿಂದ ನಾನು ಲಂಡನ್ನಿನಲ್ಲಿ ನೆಲೆಸಿ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತಿದ್ದೇನೆ. ಈ ಹತ್ತು ವರುಷಗಳಲ್ಲಿ ಹಲವಾರು ಕನ್ನಡ ಕಾರ್ಯಕ್ರಮಗಳಿಗೆ ಹಾಜರಾಗಿದ್ದೇನೆ ಮತ್ತು ಕೆಲವು ಕಾರ್ಯಕ್ರಮಗಳಲ್ಲಿ ಸಣ್ಣ ಪುಟ್ಟ ಹಾಸ್ಯನಾಟಕಗಳಲ್ಲಿ ಭಾಗಿಯೂ ಆಗಿದ್ದೇನೆ. ಇದೇ ಸಮಯಾಂತರ್ಯದಲ್ಲಿ ಹಲವಾರು ಬಾರಿ ಕನ್ನಡ ಬಳಗ ಯು.ಕೆ ಬಗ್ಗೆ ಅನೇಕ ಸ್ನೇಹಿತರಿಂದ ಕೇಳಿದ್ದೆ. ಆದರೆ ಬೇರೆ ಕನ್ನಡ ಸಂಘಗಳಿಂದ ಕನ್ನಡ ಕಾರ್ಯಕ್ರಮಗಳು ಲಂಡನ್ನಿನಲ್ಲಿ ಆಯೋಜನೆಗೊಳ್ಳುತ್ತಿದುದರಿಂದ ಮತ್ತು ಕನ್ನಡ ಬಳಗವು ಕಾರ್ಯಕ್ರಮಗಳನ್ನು ಹೆಚ್ಚಾಗಿ ಉತ್ತರ ಯು.ಕೆ ಅಥವಾ ಮಧ್ಯ ಯು.ಕೆಯಲ್ಲಿ ಆಯೋಜಿಸುತ್ತಿದ್ದುದ್ದರಿಂದ ನನಗೆ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.

ನನಗೆ ಕನ್ನಡ ಪುಸ್ತಕ ಓದುವದರಲ್ಲಿ ಅಲ್ಪ ಸ್ವಲ್ಪ ಆಸಕ್ತಿ ಇದೆ ಮತ್ತು ಆಗೊಮ್ಮೆ ಈಗೊಮ್ಮೆ ಕವನ ಗೀಚುವ ಗೀಳೂ ಕೂಡ ಇದೆ. ಇತ್ತೀಚೆಗಷ್ಟೇ ಗೆಳೆಯರಾದ ಡಾ. ವಿಶ್ವನಾಥ್ (ಆರ್ಪಿಂಗ್ಟಾನ್) ಅವರೊಡನೆ ಲೋಕಾಭಿರಾಮವಾಗಿ ಮಾತಾಡುತ್ತಿರುವಾಗ, ಅವರು ಕನ್ನಡ ಬಳಗದ ಸಾಹಿತ್ಯ ವೇದಿಕೆ (ಕೆ ಎಸ ಎಸ್ ವಿ ವಿ) ಬಗ್ಗೆ ಮತ್ತು ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಸಮಾನಾಂತರವಾಗಿ ನಡೆಸುವ ವಿಚಾರಗೋಷ್ಟಿಗಳ ಬಗ್ಗೆ ಮಾಹಿತಿ ಕೊಟ್ಟಿದ್ದರು. ಅಷ್ಟರಲ್ಲೇ ಒಂದು ದಿನ ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರು ಕರೆ ಮಾಡಿ ಈ ಬಾರಿ ದೀಪಾವಳಿ ಕಾರ್ಯಕ್ರಮ ಕೇಂಬ್ರಿಡ್ಜಿನಲ್ಲಿ ನಡೆಯುತ್ತಿದ್ದು, ಹಾಜರಾಗಲು ನೋಂದಾಯಿಸುವಂತೆ ಕೋರಿದರು. ನಾನು ಅವರಿಗೆ ಈ ಬಾರಿಯೂ ಕೂಡಾ ಸಾಹಿತ್ಯ ವಿಚಾರ ಗೋಷ್ಟಿ ನಡೆಯುತ್ತಿದೆಯೇ ಎಂದು ಕೇಳಿದೆ. ಹೌದು ಎಂಬ ಉತ್ತರ ಬಂತು. ನನ್ನ ಆಸಕ್ತಿ ಅರಿತ ತಿಪ್ಪೇಸ್ವಾಮಿ ಅವರು ಶ್ರೀವತ್ಸ ದೇಸಾಯಿಯವರಿಗೆ ನನ್ನನ್ನು ಪರಿಚಯುಸಿದರು. ನಂತರ ಶ್ರೀವತ್ಸ ದೇಸಾಯಿಯವರು ಮತ್ತು ಕೇಶವ ಕುಲಕರ್ಣಿಯವರು ಅನಿವಾಸಿ ಇ-ತಾಣವನ್ನು ಪರಿಚಯಿಸಿ ನನ್ನ ಎರೆಡು ಕವನಗಳನ್ನು ಕೂಡಾ ಆ ತಾಣದಲ್ಲಿ ಪ್ರಕಟಿಸಿದರು.

ಇಷ್ಟೆಲ್ಲಾ ನಡೆಯುವಾಗ ನಾನು ಕೆ ಎಸ್ ಎಸ್ ವಿ ವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೀವ್ರ ಕುತೂಹಲದಿಂದ ಕಾಯುತ್ತಿದ್ದೆ. ಅಂದು ನವೆಂಬರ್ ೧೦, ಶನಿವಾರ ಬೆಳೆಗ್ಗೆ, ನನ್ನ ಕರಿ ಸುಂದರಿ ಲೆಕ್ಸಸ್- ನೊಳಗೆ ಕುಳಿತು, ಚುಕ್ಕಾಣಿ (ಸ್ಟೇರಿಂಗ್) ಹಿಡಿದು ಕೇಂಬ್ರಿಡ್ಜ್ ಕಡೆಗೆ ಪ್ರಯಾಣ ಹೊರಟೆ. ಕಾರಲ್ಲಿ ನಾನೊಬ್ಬನೇ ಇದ್ದೆ. ನನ್ನ ಹೆಂಡತಿ ಮತ್ತು ಮಕ್ಕಳು ಆರ್ಪಿಂಗ್ಟಾನ್-ನಲ್ಲೆ ನಡೆಯುತಿದ್ದ ಸ್ಥಳೀಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುತ್ತಿದ್ದುದರಿಂದ, ಅವರು ನನ್ನ ಜೊತೆ ಬರಲು ಸಾಧ್ಯವಾಗಿರಲಿಲ್ಲ. ಎಲ್ಲಾ ಅನಿವಾಸಿ ಭಾರತೀಯ ಗಂಡಂದಿರಂತೆ, ಪ್ರತೀ ಶನಿವಾರ ನನ್ನ ಮಗನನ್ನು ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಕರೆದುಕೊಂಡು ಹೋಗಲು ಚಾಲಕನ ಕೆಲಸ ಮಾಡುತಿದ್ದ ನನಗೆ, ಇಂದು ಕೇಂಬ್ರಿಡ್ಜ್-ಗೆ ಒಬ್ಬನೇ ಹೋಗುತ್ತಿರುವುದು, ಗೊತ್ತಿಲ್ಲದಂತೆ ಯಜಮಾನನ ಗತ್ತನ್ನು ನನ್ನೊಳು ಹೊಕ್ಕಿಸಿತ್ತು. ರಾತ್ರಿಯಲ್ಲ ಅಭೋ ಎಂದು ಸುರಿದ ಮಳೆಯಿಂದಾಗಿ ತೋಯ್ದು ಹೋಗಿದ್ದ ರಸ್ತೆಗಳು, ಆ ಸೂರ್ಯನ ಕಿರಣಗಳ ಸೊಬಗಿನಿಂದ, ಟೂತ್-ಪೇಸ್ಟ್ ಜಾಹಿರಾತಿನಲ್ಲಿ ನಟಿಸುವ ಬೆಡಗಿಯ ಹಲ್ಲುಗಳಂತೆ ಫಳಫಳನೆ ಹೊಳೆಯುತ್ತಿದ್ದವು. ಅದು ನನ್ನೊಳಗಾವರಿಸಿದ್ದ ಗತ್ತಿನ ಪ್ರತಿಫಲನವೋ ಅಥವಾ ಕ್ಷಣಿಕವಾಗಿ ಬೀಗುತ್ತಿದ್ದ ನನ್ನನ್ನು ಅವಹೇಳಿಸುವ ಪರಿಯೋ ಗೊತ್ತಾಗಲಿಲ್ಲ.

M25 ವರ್ತುಲ ಹೆದ್ದಾರಿಯನ್ನು ಸೇರುವ ದಾರಿಯಲ್ಲಿ ಶರತ್ಕಾಲದ ತಂಗಾಳಿಗೆ ಹಣ್ಣಾದ ಸಾಲು ಮರಗಳ ಮಂಜುಗೆಂಪು ಬಣ್ಣದ ಎಲೆಗಳು, ಸಿನೆಮಾಗಳಲ್ಲಿ ಕಾಣಸಿಗುವ ದೃಶ್ಯ ವೈಭವೀಕರಣ (visual effects) ದಂತೆ, ಸುತ್ತಲಿನ ದೃಶ್ಯಾವಳಿಗಳನ್ನು ಸಿಂಗರಿಸಿದ್ದವು. M25 ನಿಂದ M11 ಸೇರಿ, ಒಟ್ಟಾರೆ ಒಂದುವರೆ ಗಂಟೆ ಟ್ರಾಫಿಕ್ ಜಾಮ್ ಇಲ್ಲದ ನಿರಾಯಾಸ ಪ್ರಯಾಣದ ಬಳಿಕ ಸುಮಾರು ಹತ್ತು ಗಂಟೆಯ ಹೊತ್ತಿಗೆ ಕೇಂಬ್ರಿಡ್ಜ್-ನ ಕಂಬೇರ್-ಟೋನ್ ವಿಲೇಜ್ ಕಾಲೇಜ್ ತಲುಪಿದೆ. ಬಂದವರನ್ನು ಸ್ವಾಗತಿಸಿ, ಅವರ ನೋಂದಣಿಯನ್ನು ಪರಿಶೀಲಿಸುತ್ತಿದ್ದ ನಗುಮೊಗದ ವನಿತೆಯರಿಬ್ಬರು, ಉಪಹಾರವಿನ್ನೂ ಚಾಲ್ತಿಯಲ್ಲಿದೆ ಎಂದು ತಿಳಿಸಿದಾಗ, ತೆಳುವಾಗಿ ಮೂಗಿಗೆ ಬಡೆಯುತ್ತಿದ್ದ ತಿಂಡಿ ವಾಸನೆಯ ರಭಸ ಒಮ್ಮೆಲೇ ಜೋರಾಗಿ, ನನ್ನನ್ನು ಉಪಹಾರ ಕೋಣೆಯ ಕಡೆ ಸೆಳೆದೊಯ್ದಿತ್ತು. ತಡವಾಗಿ ಹೋದರೂ ನನ್ನ ಪಾಲಿನ ಬಿಸಿ ಬಿಸಿ ದೋಸೆ ಮತ್ತು ರುಚಿ ರುಚಿ ಪೊಂಗಲ್ ನನಗಾಗಿ ಕಾದಿತ್ತು. ಕಾರ್ಯಕ್ರಮ ಆಗಲೇ ಪ್ರಾರಂಭವಾಗಿರಬಹುದೇನೋ ಎಂದೆಣಿಸಿ, ಬೇಗ ಬೇಗನೆ ಉಪಹಾರ ಸೇವಿಸಿ, ಸ್ವಲ್ಪ ಕಾಫಿಗೂ ಕೂಡಾ ಪುರುಸೊತ್ತು ಮಾಡಿಕೊಂಡೆ.

ತರಾತುರಿಯಲ್ಲಿ ಕಾರ್ಯಕ್ರಮ ಜರುಗಬೇಕಾಗಿದ್ದ ಆಡಿಟೋರಿಯಂ ಕಡೆ ಧಾವಿಸಿದೆ. ಕಾರ್ಯಕ್ರಮ ಇನ್ನೂ ಪ್ರಾರಂಭವಾಗದಿರುವುದನ್ನು ಅರಿತು ಸಮಾಧಾನವಾದಾಗ, ಕಂಗಳು ವಿಶಾಲವಾದ, ಬಣ್ಣದ ಲಾಂಛನಗಳಿಂದ ಸಿಂಗಾರ ಗೊಂಡಿದ್ದ ವೇದಿಕೆಯ ಕಡೆ ಹರಿಯಿತು. ಕಡಿಮೆಯೆಂದರೂ ಅರುನೂರು ಜನರು ಕೂರಲು ಅವಕಾಶವಿದ್ದ ಆಡಿಟೋರಿಯಂ, ಮುಕ್ಕಾಲು ತುಂಬಿಹೋಗಿತ್ತು. ತಿಪ್ಪೇಸ್ವಾಮಿಯವರು ವೇದಿಕೆಗೆ ಆಗಮಿಸಿ, ಕಾರ್ಯಕ್ರಮದ ಕೇಂದ್ರಬಿಂದುಗಳಾಗಿದ್ದ ಸುಧಾ ಬರಗೂರ್ ಅವರನ್ನೂ, ಗಾಯಕ ಅಜಿತ್ ವಾರಿಯರ್ ಅವರನ್ನೂ, ಕನ್ನಡ ಬಳಗ ಯು.ಕೆಯ ಅಧ್ಯಕ್ಷರಾದ ವಿವೇಕ್ ತೋಂಟದಾರ್ಯ ಅವರನ್ನೂ ಹಾಗೂ ಉಪಾಧ್ಯಕ್ಷರಾದ ಪ್ರಜೋತಿ ಮಧುಸೂದನ್ ಅವರನ್ನೂ ವೇದಿಕೆಗೆ ಬರಮಾಡಿಕೊಂಡು, ಸಮಾರಂಭದ ಉದ್ಘಾಟನೆಗೆ ಚಾಲನೆ ನೀಡಿದರು. ಅಧ್ಯಕ್ಷರ ಭಾಷಣದ ನಂತರ, ಕನ್ನಡ ನಾಡಿನ ಹರಟೆಮಲ್ಲಿ ಸುಧಾ ಬರಗೂರ್ ಅವರು ತಮ್ಮ ಯು.ಕೆ ಪ್ರಯಾಣಕ್ಕೆ ಎದುರಾದ ತೊಡಕುಗಳನ್ನು ಅತ್ಯಂತ ಹಾಸ್ಯಮಯವಾಗಿ ನಿರೂಪಿಸುತ್ತ , ದೀಪಾವಳಿಯ ಮನೋರಂಜನೆಯನ್ನು ತಮ್ಮ ಹಾಸ್ಯ ಚಾಟಾಕಿಗೊಳಡನೆ ಪ್ರಾರಂಭಿಸಿಯೇ ಬಿಟ್ಟರು. ಅವರ ಭಾಷಣ ಕೇವಲ ಹತ್ತು ಹದಿನೈದು ನಿಮಿಷಗಳಿಗೆ ಸೀಮಿತವಾಗಿದ್ದು, ಸಂಜೆ ನಡೆಯಬೇಕಾಗಿದ್ದ ಹಾಸ್ಯವೋತ್ಸವದ ಒಂದು ಝಲಕ್ ನಂತಿತ್ತು.

 

                                                                         ಅನಿವಾಸಿ ತಂಡ (ಕೃಪೆ: ರಾಮಶರಣ)

ಸರಿಯಾಗಿ ಹನ್ನೊಂದುವರೆಗೆ, ಉಧ್ಘಾಟನಾ ಸಮಾರಂಭ ಸಂಪೂರ್ಣವಾಗಿ ಮುಗಿದು, ನಾನು ಎದುರು ನೋಡುತ್ತಿದ್ದ ಕೆ ಎಸ್ ಎಸ್ ವಿ ವಿ ಕಾರ್ಯಕ್ರಮ, ಸುಮಾರು ಮೂವತ್ತೈದು ಜನರು ಕೂರಬಲ್ಲ ಒಂದು ಕೋಣೆಯೊಳಗೆ ಆಯೋಜನೆ ಗೊಂಡಿತ್ತು. ಸುಧಾ ಬರಗೂರ್ ರವರು ಮತ್ತು ಡಾ|| ವತ್ಸಲಾ ರಾಮಮೂರ್ತಿಯವರು ಚಿಕ್ಕ ವೇದಿಕೆಯಲ್ಲಿ ಆಸೀನರಾಗಿದ್ದರು.

ವತ್ಸಲಾ ರಾಮಮೂರ್ತಿಯವರ ನೇತೃತ್ವದಲ್ಲಿ “ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಒಂದು ನೋಟ” ಎಂಬ ವಿಷಯವಾಗಿ ಸಭೆ ಚರ್ಚೆ ನಡೆಸಲು ಅಣಿಯಾಗಿತ್ತು. ಸುಧಾ ಬರಗೂರ್ ಅವರನ್ನು ಸ್ವಾಗತಿಸಿದ ವತ್ಸಲಾರವರು ಹಳೆಗನ್ನಡ, ನಡುಗನ್ನಡ ಮತ್ತು ಆಧುನಿಕ ಶತಮಾನಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಅನೇಕ ಮಹಿಳಾ ಲೇಖಕಿಯರ ಪರಿಚಯ ಮಾಡಿಕೊಡುವುದರ ಮೂಲಕ ಚರ್ಚೆಗೆ ಚಾಲನೆ ನೀಡಿದರು. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಹೇಗೆ ಅನೇಕ ಲೇಖಕಿಯರು ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾದರು ಹಾಗೂ ಆಯಾ ಕಾಲಘಟ್ಟಕ್ಕೆ ಹೊರಬಂದ ವಿಭಿನ್ನ ಕೃತಿಗಳು ಹಾಗು ಲೇಖಕಿಯರ ಬಗ್ಗೆ ವತ್ಸಲಾರವರು ತುಂಬಾ ಸೊಗಸಾಗಿ ಮನಮುಟ್ಟುವಂತೆ ವಿಶ್ಲೇಷಿಸಿದರು.

ನಂತರ ನಾನು ಸುಧಾ ಬರಗೂರ್ ಅವರನ್ನು ಪರಿಚಯಿಸುವ ಒಂದು ಪುಟ್ಟ ಕವನವನ್ನು ಸಭಿಕರೊಡನೆ ಹಂಚಿಕೊಂಡೆ.

ಹನ್ನೆರಡು ವರುಷದ ಹುಡುಗಿ ದೀಕ್ಷಾ ಬಿಲ್ಲಹಳ್ಳಿ, ತಾನೇ ಸೃಷ್ಟಿಸಿದ `ಸೃಷ್ಟಿ` ಎಂಬ ಕವನವನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಳು. ನಮ್ಮ ಮಕ್ಕಳು ಕನ್ನಡ ಮಾತನಾಡಿದರೆ ಸಾಕು ಎಂದೆಣಿಸುವ ಅನಿವಾಸಿ ತಂದೆ ತಾಯಂದಿರ ನಡುವೆ, ಕವನ ಬರೆಯಲು ಪ್ರೋತ್ಸಾಹಿಸಿದ ಅವಳ ತಂದೆ ತಾಯಿಯ ಬಗ್ಗೆ ಗೌರವವೆನಿಸಿತು. ನೆರೆದ ಸಹೃದಯರು ಚಪ್ಪಾಳೆಗಳೊಂದಿಗೆ ದೀಕ್ಷಾಳನ್ನು ಪ್ರೋತ್ಸಾಹಿಸಿದರು.

ಡಾ|| ಅರವಿಂದ ಕುಲಕರ್ಣಿಯವರು ಸುನಂದಾ ಬೆಳಗಾವಕರ್ ಅವರ ಬಗ್ಗೆ ಮಾತನಾಡುತ್ತಾ, ತಮ್ಮ ಕುಟುಂಬದವರಿಗೆ ಅವರೊಡನಿದ್ದ ಒಡನಾಟವನ್ನು ಬಿಚ್ಚಿಟ್ಟಾಗ, ಅಂಥವರ ಸಂಗ ದೊರೆತ ತಾವೇ ಧನ್ಯರು ಎಂದೆನಿಸುತ್ತಿತ್ತು.

ಡಾ|| ಕೇಶವ ಕುಲಕರ್ಣಿಯವರು ಪ್ರತಿಭಾ ನಂದಕುಮಾರ್ ಅವರ ಕೆಲವು ಹಾಸ್ಯಭರಿತ ಕವನಗಳನ್ನು ಪ್ರಸ್ತುತ ಪಡಿಸುವುದರ ಜೊತೆಗೆ, ಆ ಕವನಗಳ ವಿಶ್ಲೇಷಣೆಯಲ್ಲಿ ಸಿಡಿಸಿದ ಕೆಲವು ಹಾಸ್ಯ ಚಟಾಕಿಗಳು ನಮ್ಮೆಲ್ಲರ ದಂತ ಪಂಕ್ತಿಗಳು ಮತ್ತು ಮುಖದ ಮಾಂಸಖಂಡಗಳು ಸಡಿಲಗೊಳ್ಳುವಂತೆ ಮಾಡಿದ್ದವು.

ನಂತರ ನಾನು ಹಿಂದಿಯ ಪ್ರಖ್ಯಾತ ಕವಯತ್ರಿ ಸುಭದ್ರಾ ಕುಮಾರಿ ಚೌಹಾನ್ ಅವರ “ಮೇರಾ ನಯಾ ಬಚಪನ್ ” ಎಂಬ ಕವಿತೆಯ ಭಾವಾನುವಾದ “ನಮ್ಮೆಲ್ಲರ ಬಾಲ್ಯ” ಎಂಬ ಕವನವನ್ನು ಪ್ರಸ್ತುತ ಪಡಿಸಿದೆ.

ಪ್ರೇಕ್ಷಕರು (ಕೃಪೆ: ಶ್ರೀವತ್ಸ ದೇಸಾಯಿ)

ಡಾ|| ಪ್ರೇಮಲತಾ ಅವರು ಇತ್ತೀಚೆಗಷ್ಟೇ ನಮ್ಮನ್ನಗಲಿದ ಗೌರಿ ಲಂಕೇಶ್ ಅವರ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಅವರು ಬರೆದ “ದ ವೇ ಐ ಸೀ ಇಟ್” ಎಂಬ ಕೃತಿಯ ಬಗ್ಗೆ ಮಾತನಾಡುತ್ತಾ, ಅವರ ಕೊನೆಯ ದಿನಗಳಲ್ಲಿನ ಆರ್ಥಿಕ ಪರಿಸ್ಥಿತಿ, ಗೌರಿ ಅವರ ವೈಚಾರಿಕ ಶುದ್ಧತೆಯನ್ನು ತೋರುತ್ತದೆ ಎಂದು ವಿಶ್ಲೇಷಿಸಿದರು.

ಡಾ|| ರಾಮಶರಣ ಲಕ್ಷ್ಮೀನಾರಾಯಣ ಅವರು ಅನುಪಮಾ ನಿರಂಜನ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ವೆಂಕಟಲಕ್ಷ್ಮಿಯವರ ಬಗ್ಗೆ ಮಾತನಾಡಿದರು. ಆಗಿನ ದಿನಗಳಲ್ಲಿ ಅವರಿಗಿದ್ದ ಧೈರ್ಯ ಮತ್ತು ಸಮಾಜದ ಕಟ್ಟುಪಾಡುಗಳನ್ನು ಕಿತ್ತೊಗೆದು, ತಮ್ಮದೇ ರೀತಿಯಲ್ಲಿ ಬದುಕುವ ಆತ್ಮಸ್ಥೈರ್ಯದ ಬಗ್ಗೆ ವಿಶ್ಲೇಷಿಸಿದರು.

ವಿಜಯನಾರಸಿಂಹ ಅವರು ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ಸುಧಾಮೂರ್ತಿಯವರ ಸಾಹಿತ್ಯ ಆಸಕ್ತಿ ಮತ್ತು ಅವರು ಹೊರತಂದಿರುವ ಅನೇಕ ಕೃತಿಗಳ ಬಗ್ಗೆ ಮಾತನಾಡಿದರು.

ಅನಿವಾಸಿ ತಂಡದ ವಿನುತೆ ಶರ್ಮ (ಈಗ ಅವರು ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ) ಅವರ ಪರವಾಗಿ ರಾಮಶರಣ್ ಅವರು ಬ್ಯಾಟಿಂಗ್ ಮಾಡುತ್ತಾ, ನೇಮಿಚಂದ್ರರ ಬದುಕು ಮತ್ತು ಸಾಹಿತ್ಯದ ಬಗ್ಗೆ ಮಾತನಾಡಿದರು.

ಡಾ|| ವತ್ಸಲಾ ರಾಮಮೂರ್ತಿಯವರು ಭುವನೇಶ್ವರಿ ಹಗ್ಗಡೆಯವರ ಹಾಸ್ಯ ಬರಹಗಳು, ವಿಚಾರ ಧಾರೆಗಳು ಮತ್ತು ಹೊರತಂದ ಕೃತಿಗಳ ಬಗ್ಗೆ ಮಾತನಾಡಿದರು.

ಇಷ್ಟೆಲ್ಲಾ ನಡೆಯುತ್ತಿರುವಾಗ, ನನಗೆ ನಾನೆಲ್ಲೋ ಬೆಂಗಳೂರಿನ ಕನ್ನಡ ಭವನದಲ್ಲಿರುವೆನೇನೋ ಎಂಬಂತೆ ಭಾಸವಾಗುತ್ತಿತ್ತು. ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಟಿಕೆಟ್ ಇಲ್ಲದೇ ಬೆಂಗಳೂರಿಗೆ ಹೋಗಿ ಬಂದಂತಾಗುತಿತ್ತು.

ಸುಧಾ ಬರಗೂರ್ ಮಾತುಗಳ ತುಣುಕು (ಕೃಪೆ: ಶ್ರೀವತ್ಸ ದೇಸಾಯಿ)

ನಮ್ಮ ಪ್ರಮುಖ ಅತಿಥಿ ಸುಧಾ ಬರಗೂರ್ ಅವರು ಇದನ್ನೆಲ್ಲಾ ಆಲಿಸುತ್ತಾ, ಟಿಪ್ಪಣಿ ಮಾಡಿಕೊಳ್ಳುತ್ತ ಸಾವಧಾನವಾಗಿ ಕಾಯುತ್ತಾ ಕುಳಿತಿದ್ದರು. ಮಾತೇ ತಮ್ಮ ಬಂಡವಾಳ ಎಂದು ಹೇಳಿಕೊಳ್ಳುವ ಅವರ ಮೌನ, ಕೆ.ಎಸ್.ಎಸ್.ವಿ.ವಿ-ಯ ಈ ವಿಚಾರಗೋಷ್ಠಿಯ ವಿಚಾರಗಳ ಗಾಢತೆಗೆ ಕನ್ನಡಿ ಹಿಡಿದಂತಿತ್ತು. ಕೊನೆಗೂ ಮೈಕ್ ಹಿಡಿದ ಸುಧಾ ಬರಗೂರರು ತಮ್ಮ ಸಾಹಿತ್ಯ ಆಸಕ್ತಿ ಮತ್ತು ಕನ್ನಡ ಪುಸ್ತಕಗಳಿಂದ ಸಮೃದ್ಧವಾಗಿದ್ದ ತಮ್ಮ ಜೀವನದ ಬಗ್ಗೆ ಮಾತನಾಡಿದರು. ಇಂಗ್ಲೆಂಡಿನಲ್ಲಿ ನೆಲೆಯೂರಿ ಗರಿಗೆದರುತ್ತಿರುವ ಸಾಹಿತ್ಯಾಸಕ್ತಿಗೆ ಬೆರಗು ವ್ಯಕ್ತ ಪಡಿಸಿದರು. ಕೆ.ಎಸ್.ಎಸ್.ವಿ.ವಿ-ಯನ್ನು ಹುಟ್ಟು ಹಾಕಿ, ಪಾಲಿಸಿ ಪೋಷಿಸುತ್ತಿರುವ ಎಲ್ಲ ಹಿರಿಯರಿಗೂ ತಮ್ಮ ಧನ್ಯವಾದ ತಿಳಿಸಿದರು. ಹೀಗೆ ಸಾಹಿತ್ಯದ ಜಾತ್ರೆಗೆ ತೆರೆಬಿದ್ದು, ಮತ್ತೊಮ್ಮೆ ಹಬ್ಬದ ಊಟ ಮಾಡಲು ನಾವೆಲ್ಲರೂ ಭೋಜನ ಶಾಲೆಗೆ ತೆರಳಿದೆವು.

Advertisements

ಐತಿಹಾಸಿಕ ಬಸವನಗುಡಿ ಮತ್ತು ಗಾಂಧಿ ಬಜಾರ್: ರಾಮಮೂರ್ತಿ

Ramamurthy
ಲೇಖಕರು: ರಾಮಮೂರ್ತಿ

(ನೀವು ಬೆಂಗಳೂರಿನವರಾಗಿದ್ದರೆ ನಿಮಗೆ ಬಸವನಗುಡಿ ಮತ್ತು ಗಾಂಧಿಬಜಾರಿನ ಬಗ್ಗೆ ಎಷ್ಟು ಗೊತ್ತು ಎಂದು ಈ ಲೇಖನ ಓದಿದ ಮೇಲೆ ಕೇಳಿಕೊಳ್ಳಿ. ನೀವು ಬೆಂಗಳೂರಿನವರಾಗಿದ್ದರೂ ಆಗಿರದಿದ್ದರೂ ಬಸವನಗುಡಿ ಮತ್ತು ಗಾಂಧಿಬಜಾರಿನ ಬಗ್ಗೆ ಕೇಳದಿರುವ ಸಾಧ್ಯತೆ ತುಂಬ ಕಡಿಮೆ. ಈ ಲೇಖನ ಓದಿದ ಮೇಲೆ ನೀವು ಮತ್ತೊಮ್ಮೆ ಈ ಜಾಗಗಳಿಗೆ ಭೇಟಿಕೊಡಿ, ನೀವು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ನಮ್ಮ ಅನಿವಾಸಿ ಬಳಗದ ಹಿರಿಯ ಬರಹಗಾರ ರಾಮಮೂರ್ತಿ ತಮ್ಮ ನೆನಪಿನ ಕಣಜದಿಂದ ಒಂದು ಹಿಡಿ ಅನುಭವವನ್ನು ನಮ್ಮ ಮುಂದೆ ಹಾಸಿದ್ದಾರೆ. ಓದಿ, ಪ್ರತಿಕ್ರಿಯೆ ಬರೆಯಿರಿ, ಶೇರ್ ಮಾಡಿ – ಸಂ)

ನೀವು ಬೆಂಗಳೂರಿನಲ್ಲಿ ಬೆಳದೋ ಅಥವಾ ಹಿಂದೆ ವಾಸವಾಗಿದ್ದರೆ ಬಸವನಗುಡಿ ಗೊತ್ತಿರಬೇಕು, ಇಲ್ಲದೆ ಇದ್ದರೆ ನೀವು ಬೆಂಗಳೂರಿನವರಲ್ಲವೇ ಅಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲೆ.

ಹಿಂದಿನ ಕಾಲದಲ್ಲಿ ಇದು ಸುಕ್ಕೇನಹಳ್ಳಿ ಅಂತ ಒಂದು ಹಳ್ಳಿಯಾಗಿತ್ತು. ಒಂದು ದಂತಕಥೆಯ ಪ್ರಕಾರ ಇದು ಕಡಲೆಕಾಯಿ ಬೆಳೆಯುವ ಜಾಗವಾಗಿತ್ತಂತೆ. ಒಂದು ಗೂಳಿ ಬಂದು ರೈತರ ಬೆಳೆಯನ್ನು ಹಾಳುಮಾಡುತ್ತಿತ್ತಂತೆ. ಒಬ್ಬ ರೈತ ಕೋಪದಲ್ಲಿ ಕೋಲಿನಿಂದ ಹೊದೆದಾಗ, ಈ ಗೂಳಿ ಜ್ಞಾನ ತಪ್ಪಿ ಅಲ್ಲೇ ಬಿದ್ದಿದ್ದನ್ನು ನೋಡಿ ರೈತನಿಗೆ ತುಂಬಾ ನೋವಾಗಿ, ಹಳ್ಳಿಯಲ್ಲಿ ಅದರ ನೆನಪಿಗೆ ಒಂದು ಗುಡಿ ಕಟ್ಟಿದನಂತೆ. ಸುಕ್ಕೇನಹಳ್ಳಿ ಈಗ ಬಸವನಗುಡಿ; ಅಲ್ಲಿ ಪ್ರತಿವರ್ಷ ಕಡಲೆಕಾಯಿ ಪರಿಷ ಆಗುವುದು ಈ ಕಾರಣದಿಂದ.

೧೮೯೬ರಲ್ಲಿ ಬೆಂಗಳೂರಿನ ಕೆಲವು ಜಾಗದಲ್ಲಿ ಭಯಂಕರ ಪ್ಲೇಗ್ ಬಂದು ೩೦೦೦ ಜನರ ಮರಣ, ಅಂದಿನ ಡೆಪ್ಯುಟಿ ಕಮ್ಮಿಷನರ್ ಆಗಿದ್ದ ಮಾಧವ ರಾವ್ ಅವರು ಪ್ಲೇಗ್ ಬಂದ ಚಾಮರಾಜ್ ಪೇಟೆ ಮತ್ತು ಫೋರ್ಟ್ ಪ್ರದೇಶದಲ್ಲಿ ಉಳಿದವರನ್ನು “ಸ್ವಲ್ಪ ದೂರದ” ಬಸವನಗುಡಿ ಮತ್ತು ಮಲ್ಲೇಶ್ವರ ಕಡೆ ವಾಸಮಾಡಲು ಏರ್ಪಾಡು ಮಾಡಿದರು. ಆಗಿನ ಸರ್ಕಾರಕ್ಕೆ ಇವರ ಸಲಹೆಗೆ ಬೆಂಬಲ ಕೊಟ್ಟು ಈ ಹೊಸ ಜಾಗಗಳ ಬೆಳವಣಿಗೆ ಆಯಿತು. Town Planning ಇಲ್ಲೇ ಶುರು ವಾಗಿದ್ದು, ಮರಗಳ ವಿಶಾಲ ರಸ್ತೆಗಳು ಮತ್ತು ಅಂಗಡಿ ಬೀದಿಗಳು ಮತ್ತು ಜನರಿಗೆ ತಕ್ಕಂತೆ ಬೇಕಾದ ಮನೆಗಳು ಮತ್ತು ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಮಾಡಿದವರು ಮಾಧವರಾಯರು. ಹತ್ತಿರದಲ್ಲೇ ಲಾಲ್-ಬಾಗ್ ಸಹ ಶ್ರೀ ಕ್ರುಮ್ಬೆಗೋಲ್ ಅವರ ನೇತೃತ್ವದಲ್ಲಿ ಚೆನ್ನಾಗಿ ಅಭಿವೃದ್ಧಿ ಆಗುತಿತ್ತು. ಇಲ್ಲಿ ತಲತಲಾಂತರಿಂದ ಇರುವ ಕುಟುಂಬಗಳು ಅನೇಕರು, ಎಲ್ಲಾ ಮಧ್ಯಮವರ್ಗದವರು. ಆದರೆ ಈಚೆಗೆ ಹಳೇ ಮನೆಗಳು ಹೋಗಿ ಮೂರು ನಾಲ್ಕು ಅಂತಸ್ತಿನ ಮನೆಗಳು ಬಂದಿವೆ. ಗೋವಿಂದಪ್ಪ, ಸರ್ವೇಯರ್, ಹೆಚ್ ಬಿ ಸಮಾಜ ರಸ್ತೆ ಗಳು ನಾಗಸಂದ್ರ ರಸ್ತೆಯಿಂದ ಶುರುವಾಗಿ ಲಾಲ್-ಬಾಗಿನವರೆಗೆ ಬಹಳ ಉತ್ತಮ ದರ್ಜೆಯ ವಸತಿ ಪ್ರದೇಶಗಳು.

Vidyarthi Bhavan 1943
ವಿದ್ಯಾರ್ಥಿಭವನ: ೧೯೪೩ಯಲ್ಲಿ

ಗಾಂಧಿಬಜಾರ್ ಬಸವನಗುಡಿಯ ಪ್ರಮುಖ ಬೀದಿ, ಇದು ರಾಮಕೃಷ್ಣ ಆಶ್ರಮದಿಂದ ಶುರುವಾಗಿ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ. ಇಲ್ಲಿ ಅನೇಕ ಅಂಗಡಿಗಳು ಮತ್ತು ಜಾಗಗಳು ಬಹಳ ವರ್ಷದಿಂದ ಇವೆ. ಜಾಸ್ತಿ ಬದಲಾವಣಿಗೆ ಕಂಡಿಲ್ಲ. ಗರಿ ಗರಿ ಮಸಾಲೆ ದೋಸೆ ಬೇಕಾದರೆ ವಿದ್ಯಾರ್ಥಿಭವನಕ್ಕೆ ಹೋಗಿ. ಈ ಹೋಟೆಲ್ ಅಂದರೆ ಕೆಫೆ ಪ್ರಾರಂಭವಾದದ್ದು ೧೯೪೩ರಲ್ಲಿ. ಹತ್ತಿರ ಇರುವ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆರಂಭದೊಂಡಿತ್ತು. ಅಕ್ಟೋಬರ್ ೨೦೧೮ ರಲ್ಲಿ ೭೫ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಇದೆ. ಇದರ ವೈಶಿಷ್ಟವೇ ಬಹಳ. ಜಾಗ ಚಿಕ್ಕದು, ಒಳಗೆ ಸರಳವಾದ ವಾತಾವರಣ, ಗೋಡೆಗಳ ಮೇಲೆ

ಕರ್ನಾಟಕದ ಪ್ರಸಿದ್ಧ ಕವಿಗಳು ಮತ್ತು ಲೇಖಕರ ಭಾವ ಚಿತ್ರಗಳು (ಅನ್ಯಾಯ: ಇಬ್ಬರು ಮೂವರು ರಾಜಕಾರಣಿಗಳದ್ದು ಸಹ ಇವೆ!). ಇಲ್ಲಿ ಮಾಡುವುದು ಕೆಲವೇ ತಿಂಡಿಗಳು, ಊಟ ಇಲ್ಲ, ದೋಸೆ ಮತ್ತು ರವೇ ಇಡ್ಲಿ ಪ್ರಮುಖವಾದ ತಿಂಡಿಗಳು. ಪಂಚೆ ಉಟ್ಟ ಮಾಣಿಗಳು ಒಟ್ಟಿಗೆ ೨೦ ದೋಸೆ ತಟ್ಟೆಗಳನ್ನು ತರುತ್ತಾರೆ, ಚಟ್ನಿ ಒಂದು ಪಾತ್ರೆಯಲ್ಲಿ ತಂದು ಬಡಿಸುತ್ತಾರೆ. ಕೈ ಒರಿಸಿಕೊಳ್ಳಲು ಹಿಂದೆ ಕನ್ನಡ ದಿನಪತ್ರಿಕೆಗಳನ್ನ ಹರಿದು ಕೊಡುತ್ತಿದ್ದರು, ಆದರೆ ಈಗ ಪರವಾಗಿಲ್ಲ ಸರಿಯಾದ ಟಿಶ್ಯೂಗಳು ಇವೆ. ರುಚಿಯಾದ ಕಾಫಿ ಎರಡು ಬಟ್ಟಲಿನಲ್ಲಿ. ಹೊರಗೆ ಜನಗಳು ಮುತ್ತಿಗೆ ಹಾಕಿರುತ್ತಾರೆ. ಆದ್ದರಿಂದ ನಿಮಗೆ ಅಲ್ಲಿ ವಿರಾಮವಾಗಿ ಕೂರುವುದಕ್ಕೆ ಅವಕಾಶವಿಲ್ಲ. ಆದರೆ ಇಲ್ಲಿ ತಿನ್ನದೇ ಹೋದರೆ ಬೆಂಗಳೂರಿಗೆ ಬಂದಹಾಗಿಲ್ಲ.

ಬಸವನಗುಡಿ ಕೋ-ಆಪರೇಟಿವ್ ಬಹಳ ಹಳೆಯ ಸಂಸ್ಥೆ, ಸರ್ ಎಂವಿ ದಿವಾನರಾಗಿದ್ದಾಗ ಶುರು ಮಾಡಿದ್ದು, ಈಗ ಈ ಕಟ್ಟಡ ಇಲ್ಲ, ಆದರೆ ಸಂಸ್ಥೆ ಇದೆ. ಇದರ ಮುಂದೆ ಅನೇಕ ಹೂವಿನ ಮತ್ತು ಹಣ್ಣುಗಳ ಪೂಜೆ ಸಾಮಾನುಗಳ ಅಂಗಡಿಗಳು ಫುಟ್-ಪಾತಿನ ಮೇಲೆ. ಹಬ್ಬದ ದಿನಗಳ ಹಿಂದೆ ಇಲ್ಲಿ ಕಾಲು ಇಡೋಕ್ಕೂ ಜಾಗ ಇರುವುದಿಲ್ಲ, ಅಷ್ಟು ಜನ! ಈಚೆಗೆ ಇಲ್ಲಿ ಜನರು ಮನೆಯಲ್ಲಿ ಹಬ್ಬದ ದಿನ ಹೋಳಿಗೆ, ಲಾಡು ಇತ್ಯಾದಿ ಮನೆಯಲ್ಲಿ ಮಾಡುವುದಿಲ್ಲವಂತೆ, ಗಾಂಧಿಬಜಾರಿನಲ್ಲಿ ಎಲ್ಲ ಸಿಗುತ್ತೆ. ಸಂಕ್ರಾಂತಿ ಸಮಯದಲ್ಲಿ ನಿಮಗೆ ಎಳ್ಳು, ಸಕ್ಕರೆ ಅಚ್ಚು, ಕಬ್ಬು ಮುಂತಾದವು ಸಿಗುತ್ತವೆ. ಗಾಂಧಿ ಬಜಾರ್ one stop for all your needs.

ಈ ರಸ್ತೆ ಕೊನೆಯಲ್ಲಿ ಬಸವನಗುಡಿ ಕ್ಲಬ್. ಎರಡು ಕಡೆ ಸಾಲುಮರಗಳು. ಮಾಸ್ತಿ ಅವರು ಈ ಕ್ಲಬ್ಬಿಗೆ ಸಾಯಂಕಾಲ ಹೋಗುವಾಗ ಛತ್ರಿ ಹಿಡಿದು ಹೋಗುತ್ತಿದ್ದರಂತೆ, ಯಾಕೆ ಅಂತ ಗೊತ್ತಲ್ಲ? ಕಾಗೆಗಳ ಕಾಟ! ಈಗ ಕಾಗೆಗಳು ಪತ್ತೆ ಇಲ್ಲ, ಯಾವ ಹಕ್ಕಿಗಳೂ ಇಲ್ಲ.

Gandhibazaar flowers
ಹೂವಿನಂಗಡಿಗಳು

ದೊಡ್ಡ ಗಣೇಶನ ದೇವಸ್ಥಾನ ಹತ್ತಿರದಲ್ಲೇ ನಂದಿ ಗುಡಿ. ಇದು ೧೫೩೭ ಕೆಂಪೇಗೌಡರು ಕಟ್ಟಿಸ್ಸಿದ್ದು, ಇದರ ವಾಸ್ತುಶಿಲ್ಪಿ ವಿಜಯನಗರದ ಶೈಲಿ. ನಂದಿಯ ವಿಗ್ರಹ ೧೫ ಅಡಿ ಎತ್ತರ ಮತ್ತು ೨೦ ಅಡಿ ಅಗಲ. ಈ ಎರಡು ದೇವಸ್ಥಾನಗಳು ಬ್ಯುಗಲ್-ರಾಕ್ ಅನ್ನುವ ಬಂಡೆಗಳ ಮತ್ತು ಮರಗಳ ಮಧ್ಯ ಇದೆ. ಹಿಂದಿನ ಕಾಲದಲ್ಲಿ ಜನಗಳಿಗೆ ಎಚ್ಚರಿಕೆಯ ಸುದ್ದಿ ಕೊಡುವ ಮುಂಚೆ ಗುಡ್ದದ ಮೇಲಿಂದ ಕಹಳೆ ಊದತ್ತಿದ್ದರು, ಇದು ಈಗ ಬ್ಯುಗಲ್ ರಾಕ್.

ಬುಲ್ ಟೆಂಪಲ್ ರಸ್ತೆಯಲ್ಲಿ ಸ್ವಲ್ಪ ಮೇಲೆ ಹೋದರೆ ಡಿವಿಜಿ ಅವರು ಶುರುಮಾಡಿದ್ದ ಗೋಖಲೆ ಸಂಸ್ಥಾನ ಇದೆ. ೧೯೧೫ರಲ್ಲಿ ಮಹಾತ್ಮಾ ಗಾಂಧಿಯವರು ಇಲ್ಲಿಗೆ ಭೇಟಿ ಕೊಟ್ಟಿದ್ದರು, ಆಗ ಡಿವಿಜಿ ಇವರನ್ನು ಭೇಟಿ ಮಾಡಿದ್ದರು.

ಡಿವಿಜಿ ಅವರ ಮನೆ ಗಾಂಧಿಬಜಾರಿಗೆ ಹತ್ತಿರವಿತ್ತು, ಈಗ ಈ ರಸ್ತೆ ಡಿವಿಜಿ ರಸ್ತೆ. ಆದರೆ ಇವರ ಮನೆ ಈಗ ಇಲ್ಲ ಇದನ್ನು ಕೆಡವಿ ಅಂಗಡಿಗಳು ಬಂದಿವೆ. ನೋಡಿ , ಇಂಗ್ಲೆಂಡ್ ನಲ್ಲಿ ಇಂಥಹ ಹೆಸರಾಂತ ವ್ಯಕ್ತಿ ಗಳ ಮನೆಗಳನ್ನು ಸಂರಕ್ಷಿತ್ತಾರೆ. ಹೀಗೆ ಕೈಲಾಸಂ ಬೆಳೆದಿದ್ದ ಮನೆ White House ಕೂಡ ಈಗ ಇಲ್ಲ. ಸದ್ಯ ಮಾಸ್ತಿಯವರ ಮನೆ ಇಲ್ಲೇ ಹತ್ತಿರದಲ್ಲಿ ಈಗ ಒಂದು ಮ್ಯೂಸಿಯಂ, ಅವರ ಮೊಮ್ಮಗಳು ಇದಕ್ಕೆ ಕಾರಣ. .

Subbammana angadi
ಸುಬ್ಬಮ್ಮನ ಅಂಗಡಿ

ಈ ರಸ್ತೆಯಲ್ಲಿ ಕೆಲವು ಅಂಗಡಿಗಳು ಬಹಳ ವರ್ಷದಿಂದ ಇದೆ. ಮಲ್ನಾಡ್ ಸ್ಟೋರ್ಸ್-ನಲ್ಲಿ ಒಳ್ಳೆ ಅಡಿಕೆ ಮತ್ತು ಇತರ ಮಲೆನಾಡಿನ ಪಧಾರ್ಥಗಳು, ಶ್ರೀನಿವಾಸ ಬ್ರಾಹ್ಮಣರ ಬೇಕರಿಯಲ್ಲಿ ಅನೇಕ ತಿಂಡಿಗಳು, ಕುರುಕುಲು ಮತ್ತು ಬ್ರೆಡ್ ಮಾರಾಟ. ಇಲ್ಲಿಯ “ಕಾಂಗ್ರೆಸ್ ಕಡ್ಲೆಬೀಜ” ಬಹಳ ಪ್ರಸಿದ್ಧ, ಈ ಹೆಸರು ಹೇಗೆ ಬಂತು ಅನ್ನುವುದು ಗೊತ್ತಿಲ್ಲ! ನ್ಯಾಷನಲ್ ಕಾಲೇಜವೃತ್ತದಲ್ಲಿ ಸುಮಾರು ವರ್ಷಗಳ ಹಿಂದೆ ಗೋಖಲೆ ಅನ್ನುವರು ಈ ಕಡ್ಲೇಬೀಜವನ್ನು ಮಾರುತಿದ್ದುದು ನನಗೆ ಜ್ಞಾಪಕ ಇದೆ, ಆ ವೃತ್ತಕ್ಕೆ ಕಾಂಗ್ರೆಸ್ ಅಂತ ನಾಮಕರಣ ಇತ್ತು. ಅಂದ ಹಾಗೆ ಈಗ ಈ ವೃತ್ತ ಇಲ್ಲ ಫ್ಲೈ ಓವರ್ ಕಟ್ಟಿ ಹಾಳುಮಾಡಿದ್ದಾರೆ. ಇಲ್ಲೇ ಹತ್ತಿರದಲ್ಲಿ ಸುಬ್ಬಮ್ಮನ ಅಂಗಡಿ, ಇದು ಇವತ್ತಿಗೂ ಸಣ್ಣ ಸ್ಥಳ. ಈಕೆ ಸುಮಾರು ೭೦ ವರ್ಷದ ಹಿಂದೆ ಬಾಲವಿಧವೆಯಾಗಿ ಬೆಂಗಳೂರಿನಲ್ಲಿ ಅಡಿಗೆ ಕೆಲಸ ಶುರು ಮಾಡಿ ಕೊನೆಗೆ ಒಂದು ಸಣ್ಣ ಅಂಗಡಿ ತೆರೆದರು. ಹಪ್ಪಳ ಸಂಡಿಗೆ ಹುರಿಗಾಳು ಇತ್ಯಾದಿ ಮಾರಾಟ. ಅವರ ಮನೆಯವರು ಅದೇ ಆಂಗಡಿಯಲ್ಲಿ ಇನ್ನೂ ವ್ಯಾಪಾರ ನಡೆಸುತ್ತಿದ್ದಾರೆ.

ಬಸವನಗುಡಿಯಲ್ಲಿ ನಾಷನಲ್ ಕಾಲೇಜ್ ಬಹಳ ಹಳೆ ಸಂಸ್ಥೆ. ೧೯೧೭ ರಲ್ಲಿ ಹೈಸ್ಕೂಲ್ ಶುರುವಾಗಿ ೧೯೪೫ರಲ್ಲಿ ಕಾಲೇಜ್ ಸಹ ಬಂತು. ಇದೇ ಶಾಲೆಯಲ್ಲಿ ಓದಿ ಅಲ್ಲೇ ವಾಸಮಾಡಿ ಕೊನೆಗೆ ಪ್ರಿನ್ಸಿಪಾಲ್ ಆಗಿದ್ದವರು ಡಾ ನರಸಿಮಯ್ಯ. ಪ್ರೀತಿ ಇಂದ ಎಲ್ಲಾರಿಗೂ ಎಚ್ಚೆನ್. ಇವರ ಸರಳತೆ ಮತ್ತು ಗಾಂಭೀರ್ಯ ಅಪಾರ. ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿ ಆಗಿದ್ದರೂ ಕಾಲೇಜ್ ಹಾಸ್ಟೇಲಿನಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ವಾಸವಾಗಿದ್ದರು, ಯಾವಾಗಲೂ ಖಾದಿ ಪಂಚೆ, ಜುಬ್ಬಾ ಮತ್ತು ಟೋಪಿ, ನಿಜವಾದ ಗಾಂಧಿ ಅಂದರೆ ಇವರೇ.

ಇದೆ ರಸ್ತೆಯಲ್ಲಿ ಬಿಎಂಎಸ್ ಕಾಲೇಜು, ಪ್ರಸಿದ್ದವಾದ ಬಹಳ ಹಳೆಯ ಇಂಜಿನೀರಿಂಗ್ ಕಾಲೇಜು. ೧೯೪೬ರಲ್ಲಿ ಸ್ಥಾಪನೆಯದ ಭಾರತದ ಮೊದಲನೆಯ ಖಾಸಗಿ ಇಂಜನೀರಿಂಗ್ ಕಾಲೇಜು.

ಪ್ರೊ. ನಿಸಾರ್ ಅಹ್ಮದ್ ಅವರ ಪ್ರೀತಿಯ ರಸ್ತೆ ಗಾಂಧಿಬಜಾರ್. ೨೦೦೮ರಲ್ಲಿ ನಮ್ಮ ಕನ್ನಡ ಬಳಗದ ಮುಖ್ಯ ಅಥಿತಿಯಾಗಿ ಬಂದವರು ನಮ್ಮ ಮನೆಯಲ್ಲಿ ಮೂರು ವಾರ ಇದ್ದರು. ಒಂದು ಸಂಜೆ ಕೆಲವು ಮಿತ್ರರ ಜೊತೆ ಮಾತನಾಡಿದಾಗ ದಿವಂಗತ ಶ್ರೀರಾಜಾರಾಮ್ ಕಾವಳೆ ಅವರನ್ನು `ಮುಂದಿನ ಜನ್ಮದಲ್ಲಿ ಹುಟ್ಟಿದರೆ, ಅದು ಎಲ್ಲಿ ಸಾರ್?` ಅಂತ ಕೇಳಿದರು. ನಿಸಾರ್ ಅವರ ಉತ್ತರ ಹೀಗಿತ್ತು, “ನೋಡಿ, ನನಗೆ ಮುಂದಿನ ಜನ್ಮ ಬಗ್ಗೆ ನಂಬಿಕೆ ಇಲ್ಲ, ಆದರೆ ನಾನು ಪುನಃ ಹುಟ್ಟಿದರೆ ಅದು ಭಾರತದಲ್ಲೇ, ಕರ್ನಾಟಕದಲ್ಲೇ, ಬೆಂಗಳೂರಿನಲ್ಲೇ ಮತ್ತು ಗಾಂಧಿಬಜಾರ್ ಹತ್ತಿರ!” ಬಹುಷಃ ಮಾಸ್ತಿ ಮತ್ತು ಡಿವಿಜಿ ಅವರೂ ಇದೇ ಉತ್ತರ ಕೊಡುತ್ತಿದ್ದರು ಅಂತ ಕಾಣತ್ತೆ.

ಕೊನೆಯದಾಗಿ ಒಂದು ವಿಷಾದಕರ ಸಂಗತಿ: ಗಾಂಧಿಬಜಾರ್ ಅಷ್ಟು ಖ್ಯಾತವಾದ ಮತ್ತು ಐತಿಹಾಸಿಕ. ಆದರೆ ಈಚೆಗೆ ಎಲ್ಲೆಲ್ಲಿ ನೋಡಿದರು ಕಸ. ಫುಟ್ಪಾತ್ ಕೂಡ ಸರಿಯಾಗಿಲ್ಲ, ರಸ್ತೆ ತುಂಬಾ ತೂತುಗಳು. ನೋಡಿದರೆ ತುಂಬಾ ಬೇಜಾರಾಗುತ್ತೆ. ಇಲ್ಲಿ ಬಡತನ ಇಲ್ಲ, ಮಧ್ಯಮ ಮತ್ತು ಉತ್ತಮವರ್ಗದ ಜನರ ವಾಸ ಆದರೂ ಈ ಸ್ಥಿತಿ ಏಕೆ ಅನ್ನುವುದು ದೊಡ್ಡ ಸಂಶಯ.

ನೀವು ಬೆಂಗಳೂರಿಗೆ ಹೋದರೆ ಗಾಂಧಿಬಜಾರಿಗೂ ಹೋಗಿ, ಇತಿಹಾಸವನ್ನು ಮೆಲುಕು ಹಾಕಿ, ವಿದ್ಯಾರ್ಥಿಭವನಲ್ಲಿ ದೋಸೆ ತಿನ್ನಿ. ನಂತರ ಗಾಂಧಿ ಬಜಾರನ್ನು ಮತ್ತೆ ಹೊಟ್ಟೆ ಹಸಿಯುವವರೆಗೆ ಸುತ್ತಿ. ಆಮೇಲೆ ಕಾಮತ್ ಬ್ಯುಗಲ್-ರಾಕ್ ಹೋಟೆಲಿನಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿಯ ಸೊಗಸಾದ ಊಟ ಕಾದಿರುತ್ತೆ!