ಕಳೆದ ವರ್ಷಅಟ್ಲಾಂಟಿಕ್ ಸಾಗರವನ್ನು ಏಕಾಕಿಯಾಗಿ ಹುಟ್ಟು ಹಾಕುತ್ತ ದಾಟಿ ಆಂಟಿಗದಲ್ಲಿ ಮುಕ್ತಾಯಗೊಳಿಸಿ ದಾಖಲು ಸ್ಥಾಪಿಸಿದ (ಮೇಲಿನ ಚಿತ್ರದಲ್ಲಿಯ) ಅನನ್ಯ ಪ್ರಸಾದ್ ಅವರ ಸಾಹಸಗಾಥೆಯನ್ನು ಆಕೆಯ ತಂದೆಯ ಪುಸ್ತಕದಲ್ಲಿ ಮನದಟ್ಟುವಂತೆ ತಮ್ಮ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಅದನ್ನೋದಿ ಡಾ ರಾಂಶರಣ್, ಡಾ ಶ್ರೀರಾಮುಲು, ಶ್ರೀ ರಾಮಮೂರ್ತಿ, ಸುಮಾ ಚಿಲ್ಲಾಳ, ಡಾ ರಾಜಶ್ರೀ ಪಾಟೀಲ, ಶಾಲಿನಿ ಜ್ಞಾನಸುಬ್ರಮಣಿಯನ್ ಮುಂತಾಗಿ ಅನೇಕರು ಈ ವಾರದ ಅನಿವಾಸಿಯಲ್ಲಿ ಎರಡನೆಯ ಕಂತಿನಲ್ಲಿ ಇನ್ನಿಷ್ಟು ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು (ಸ್ವೀಕರಿಸಿದ ಕಾಲಾನುಕ್ರಮದಲ್ಲಿ) ಪ್ರಕಟಿಸಲು ಸಂತೋಷವಾಗುತ್ತದೆ. ಪುಸ್ತಕದ ಲೇಖಕ ಶಿವಪ್ರಸಾದ್ ಅವರು ಪುಸ್ತಕವನ್ನು ಅರ್ಪಿಸಿದ ಅನನ್ಯಳ ದೋಣಿಯನ್ನು ನೆನೆದು, ಮತ್ತು ಶಾಲಿನಿಯವರು ನೆನಪಿಸುವಂತೆ ಕಾಕತಾಳಿಯವಾಗಿ ಇಂದೇ (ಜುಲೈ ೧೭) ಒಡಿಸ್ಸಿ (The Odyssey) ಎನ್ನುವ ಸಿನಿಮಾ ಬಿಡುಗಡೆಯಾಗಿದೆ!ಎರಡೂ ಸಂಚಿಕೆಯ ಬರಹಗಳ ಪ್ರತಿಕ್ರಿಯೆಗಳಿಗೆ ಇನ್ನೂ ಸ್ವಾಗತವಿದೆ. (ಸಂ)
ಸಾಗರದಲ್ಲಿ ಸಾಹಸಿ ಡಾರ್ಬಿಯಿಂದ ಡಾ ರಾಂ ಶರಣ್ ಬರೆಯುತಾರೆ. ತಂದೆ- ತಾಯಿ ದುಃಖ ತಪ್ತರಾಗಿ ಮನಸ್ಸಿಲ್ಲದ ಮನಸ್ಸಿನಿಂದ ಹರಸಿ ಹುಟ್ಟು ಹಿಡಿದ ಮಗಳನ್ನು ಬೀಳ್ಕೊಡುತ್ತಿದ್ದಾರೆ. ನಿಧಾನವಾಗಿ ಅವರ ವಂಶದ ಕುಡಿ ಕ್ಷಿತಿಜದಲ್ಲಿ ಕಣವಾಗಿ ಕಣ್ಮರೆಯಾಗುತ್ತದೆ. ತಿಂಗಳೊಪ್ಪತ್ತಿನಲ್ಲಿ ಅದೇ ಕಣ ಕ್ಷಣ ಕ್ಷಣಕ್ಕೂ ಉದ್ದೀಪವಾಗಿ ಸಾಗರದದಿಂದ ಹೊರ ಹೊಮ್ಮಿ ತಂದೆ-ತಾಯಿಯರ ಬಾಹುಗಳಲ್ಲೊಂದಾಗಿ ಆನಂದ ಭಾಷ್ಪ ಹೊಮ್ಮಿಸುತ್ತದೆ.
ಶಿವಪ್ರಸಾದ್ ಬರೆದಿರುವ ಅನನ್ಯಳ ಸಾಹಸಗಾಥೆಯ ಅನನ್ಯ ಕೃತಿ ನಿಮ್ಮ ಕಣ್ಣುಗಳಲ್ಲಿ ಈ ರೀತಿ ಮೂರ್ತವಾದರೆ ಆಶ್ಚರ್ಯವಿಲ್ಲ. ಮಹಾಸಾಗರವನ್ನು ಏಕಾಂಗಿಯಾಗಿ ಎಂದೂ ತನ್ನ ಜೀವನದಲ್ಲಿ ಪ್ರಯತ್ನಿಸದ ಪ್ರಕಾರದಲ್ಲಿ ಅನನ್ಯ ದಾಟಲು ಯೋಚಿಸಿದ್ದೇ ಒಂದು ಸೋಜಿಗ! ಋತುಮಾನ, ಹಾದಿಯನ್ನು ಯೋಜಿಸಿ, ಆಧುನಿಕ ಯಂತ್ರಗಳನ್ನು ಬಳಸಿದರೂ ಸಾಗರ ತಂದೊಡ್ಡುವ ಆಕಸ್ಮಿಕಗಳು ಅಗಾಧ. ಅವೆಲ್ಲವನ್ನು ಹಿಮ್ಮೆಟ್ಟಿಸಿ ಸಾವಿರಾರು ಮೈಲಿಗಳನ್ನು ಕ್ರಮಿಸಿ, ಪ್ರಕೃತಿಗೆ ತಲೆಬಾಗಿದ ಯಶೋಗಾಥೆ ಕೇವಲ ವರ್ಣೀಯರಿಗೆ, ಮಹಿಳೆಯರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಶಿವಪ್ರಸಾದ್ ಈ ಪುಸ್ತಕದಲ್ಲಿ ತಮ್ಮ ಏಕೈಕ ಪುತ್ರಿ ತನ್ನ ಮಹಾತ್ವಾಕಾಂಕ್ಷೆಯನ್ನು ಹಂಚಿಕೊಂಡಾಗ ಉಂಟಾದ ಮಾನಸಿಕ ತುಮುಲವನ್ನು ಉತ್ತಮವಾಗಿ ವರ್ಣಿಸಿದದ್ದಾರೆ. ಕಠಿಣವಾದ ಪ್ರಸಂಗಗಳು ಬದುಕಿನಲ್ಲಿ ಎದುರಾದಾಗ ಅದು ಅಸ್ತಿತ್ವದಲ್ಲಿಲ್ಲ ಎಂದೆನಿಸುವುದು ಮಾನವ ಸಹಜ ಪ್ರಥಮ ಪ್ರತಿಕ್ರಿಯೆ. ತದ ನಂತರ ಈ ಪರಿಸ್ಥಿತಿ ನನಗೇಕೆ ಬಂತು ಎಂದೆನಿಸುವುದು. ಸ್ವಲ್ಪ ಸಮಯಾನಂತರ ಈ ಸಂಧಿಗ್ದ ಪರಿಸ್ಥಿತಿ ದೂರವಾಗದು ಎಂಬ ನೈಜತೆ ಮನದಾಳಕ್ಕೆ ಇಳಿಯುತ್ತಿದ್ದಂತೆ ಇದನ್ನು ಪರಿಹರಿಸುವುದೋ, ಅದರೊಡನೆ ಸಹಬಾಳ್ವೆ ಮಾಡುವುದೋ ಎಂಬ ಹಾದಿಯಲ್ಲಿ ಮನಸ್ಸು ಯೋಚಿಸತೊಡಗುತ್ತದೆ. ಏರುಪೇರಿಲ್ಲದ ಹವಾಮಾನದಲ್ಲಿ ಬಿರುಗಾಳಿ ಮಳೆಗೆ ಗಿಡಮರಗಳುರುಳಿ, ಭೂಮಿ ತಂಪಾಗಿ, ಮಳೆ ನೀರು ಅಂತರಾಳಕ್ಕಿಳಿದ ನಂತರ ಹಸಿರುಕ್ಕುವಂತೆ. ಇವೆಲ್ಲ ಮಜಲುಗಳನ್ನು ದಾಟಿ, ಮಗಳ ಆಸೆಗೆ ಪೂರಕವಾಗಿ, ತನು-ಮನ-ಧನಗಳಿಂದ ಪ್ರೋತ್ಸಾಹ ಕೊಟ್ಟ ಪ್ರಸಾದ್ ದಂಪತಿಗಳದ್ದೂ ಸಾಹಸಗಾಥೆ ಇದು. ಪ್ರಸಾದ್ ಈ ಪುಸ್ತಕದಲ್ಲಿ ವಿವರಿಸುವ ಭಾರತೀಯರ ಮನೋಧರ್ಮ ಹಾಗೂ ಅವರಿಬ್ಬರೂ ಇತರರಿಂದ ಎದುರಿಸಿದ ಪ್ರಶ್ನೆಗಳನ್ನು ಅವಲೋಕಿಸಿದಾಗ ಕರಳುಬಳ್ಳಿಯನ್ನು ಈ ಸಾಹಸ ಕೈಗೊಳ್ಳಲು ಅವಕಾಶ ಮಾಡಿಕೊಟ್ಟ ಪ್ರಸಾದ್ ದಂಪತಿಗಳು ವಿಶೇಷ ಮನ್ನಣೆಗೆ ಪಾತ್ರರು ಎನ್ನಿಸುವುದು ಸಹಜ. ಯುರೋಪಿಯನ್ನರ ಸಾಹಸ ಪ್ರಿಯತೆ, ಅನ್ವೇಷಣಾ ಮನೋಭಾವ ಹಾಗೂ ಭಾರತೀಯರ ವಿಭಿನ್ನ ದೃಷ್ಟಿಕೋನಗಳಿಗೆ ಭಾರತದ ನೈಸರ್ಗಿಕ ಸಂಪನ್ಮೂಲದ ಹಿರಿಮೆ ಕಾರಣವೇ ಎಂದು ಪ್ರಸಾದ್ ಪ್ರಶ್ನಿಸುತ್ತಾರೆ. ಕೆಲವು ಮಟ್ಟಿಗೆ ಅದು ಕಾರಣವಾದರೂ ಇತಿಹಾಸವನ್ನು ಅವಲೋಕಿಸಿದಾಗ ನಮ್ಮಲ್ಲೂ ಸಾಹಸಿಗಳಿಗೆ, ಅನ್ವೇಷಕರಿಗೆ ಕೊರತೆ ಇರಲಿಲ್ಲ. ಆದರೆ ಕಳೆದೆರಡು ಮೂರು ಶತಮಾನಗಳಲ್ಲಿ ವಿದೇಶೀಯರ ಆಕ್ರಮಣಕ್ಕೆ ತುತ್ತಾದ ಭಾರತೀಯರಿಗೆ ದೈನಂದಿನ ಹೋರಾಟ ಹಾಗೂ ತದನಂತರ ದೇಶ ನಿರ್ಮಾಣದ ಒತ್ತಡದಲ್ಲಿ ಹೆಚ್ಚಿನ ಸಾಧನೆಗಳಿಗೆ ಸಂಪನ್ಮೂಲ, ಶಕ್ತಿ, ಸಮಯದ ಅವಕಾಶ ದುರ್ಲಭವಾಗಿತ್ತು. ಈ ಅಡೆತಡೆಗಳನ್ನು ದಾಟಿ ನಿಂತಿರುವ ಹೊಸ ಸಹಸ್ರಮಾನದ ಭಾರತೀಯರಿಂದು ನಿಧಾನವಾಗಿ ಸಾಹಸ ಜಗತ್ತಿನಲ್ಲಿ ತಮ್ಮ ಛಾಪನ್ನುತ್ತಲು ಪ್ರಾರಂಭಿಸಿದ್ದಾರೆ. ಈ ದಿಸೆಯಲ್ಲಿ ಅನನ್ಯಳದ್ದೂ ಒಂದು ಪ್ರಮುಖ ಮೈಲಿಗಲ್ಲು.
ಅನನ್ಯಳ ದೈಹಿಕ, ಆರ್ಥಿಕ ಹಾಗೂ ಮಾನಸಿಕ ಸಿದ್ಧತೆಗಳನ್ನು ಪ್ರಸಾದ್ ಈ ಪುಸ್ತಕದಲ್ಲಿ ವರ್ಣಿಸಿದ್ದಾರೆ. ಜಗತ್ತಿನ ಅತ್ಯಂತ ಕಠಿಣವಾದ ಸಾಗರ ದಾಟುವ ಪಂದ್ಯದ ಹುಟ್ಟು, ಅದರ ಧ್ಯೇಯೋದ್ದೇಶಗಳು, ಪ್ರಾಯೋಜಕರು ಪಂದ್ಯದಲ್ಲಿ ಭಾಗವಹಿಸುವವರಿಗೆ, ಅವರ ಪರಿವಾರದವರಿಗೆ ನೀಡುವ ಬೆಂಬಲ ಇವನ್ನೆಲ್ಲ ಚೆನ್ನಾಗಿ ವಿವರಿಸಿದ್ದಾರೆ. ಸಾಕಷ್ಟು ವಿಪುಲವಾಗೇ ಬರುವ ಮಾನಸಿಕ ಘರ್ಷಣೆ, ವೈಚಾರಿಕ ಚರ್ಚೆ, ವೈಯಕ್ತಿಕ ತುಮುಲಗಳು ಪುಸ್ತಕದ ವಿಷಯಕ್ಕೆ ಪೂರಕವಾಗಿವೆ. ಹೊರತಾಗಿ, ದೈನಂದಿನ ಜೀವನದಲ್ಲಿ ಬರುವ ಸವಾಲುಗಳಿಗೆ ಅನ್ವಯಿಸುತ್ತವೆ. ಅಲ್ಲಲ್ಲಿ ಬರುವ ಸಾಹಿತ್ಯಿಕ ವಿವರಣೆಗಳು, ಟಿಪ್ಪಣಿಗಳು ಈ ಪುಸ್ತಕವನ್ನು ಮಗಳ ಯಶಸ್ಸನ್ನು ವೈಭವೀಕರಿಸುವ ತಂದೆಯ ಪ್ರಯತ್ನಕ್ಕೂ ಮಿಗಿಲಾದ ಸಾಹಿತ್ಯಿಕ ಕೃತಿಯನ್ನಾಗಿಸುತ್ತದೆ ಎಂಬುದು ನನ್ನ ಅನಿಸಿಕೆ.
ಇನ್ನೂ ಹಲವು ವಿಚಾರಗಳು ಪುಸ್ತಕಕ್ಕೆ ಹೆಚ್ಚಿನ ಮೆರುಗು ನೀಡುತ್ತಿತ್ತೇನೋ ಎಂಬುದೂ ನನ್ನ ಅನಿಸಿಕೆ. ಸಮುದ್ರ ತೀರದಿಂದ ದೂರವೇ ಹುಟ್ಟಿ ಬೆಳೆದ ಅನನ್ಯಳನ್ನು ಸಾಗರದೆಡೆ ಎಳೆದ ಶಕ್ತಿ ಯಾವುದು ಎಂಬುದು ನನ್ನ ಕುತೂಹಲ. ಅನನ್ಯಳಿಗೆ ಸ್ಪೂರ್ತಿಯಾಗಿದ್ದು ಎಲೆನ್ ಮೆಕಾರ್ಥರೇ ? ಆಕೆ ವಿಶ್ವವನ್ನು ಏಕಾಂಗಿಯಾಗಿ ಅತಿ ವೇಗವಾಗಿ ಹಾಯಿ ದೋಣಿಯಲ್ಲಿ ಸುತ್ತಿದವಳು. ಇದನ್ನರಿಯಲು ಅನನ್ಯಳ ಪುಸ್ತಕಕ್ಕೆ ಕಾಯಬೇಕೇನೋ? ಅಂಟೀಗಾ ತಲುಪಿದ ಮೇಲೆ ಒಡಿಷಿಯಸ್ ದೋಣಿಯನ್ನು ವಾಪಸ್ ತರಲಾಯಿತೆ? ಅದು ಮತ್ತೆ ಅಂಟ್ಲಾಂಟಿಕ್ ಸಾಗರ ದಾಟಲು ಸಹಕಾರಿಯಾಯಿತೇ? ಓದುಗರಾಗಿ ನಮಗಿರುವ ಸವಾಲು ಅನನ್ಯ, ಪ್ರಸಾದ್ ಹಾಗೂ ಪೂರ್ಣಿಮಾ ಅವರ ಅನುಭವಗಳನ್ನು ಓದುವುದರಿಂದ ಅವರು ಎದುರಿಸಿದ ದುಗುಡ, ದುಮ್ಮಾನ, ಅನಿಶ್ಚಿತತೆ, ಎಲ್ಲವನ್ನೂ ಗೆದ್ದುಬಂದ ಆತ್ಮ ಸಂತೃಪ್ತಿಯನ್ನು ಸಂಪೂರ್ಣವಾಗಿ ಆಂತರೀಕರಿಸಿ ಅನುಭವಿಸುವುದು. ಇವೆಲ್ಲವನ್ನು ನಾವು ಪ್ರಸಾದ್ ಅವರ ಮಸೂರದಲ್ಲಿ ನೋಡುತ್ತೇವೆ. ಅಲ್ಲಲ್ಲಿ ಪೂರ್ಣಿಮಾ ಅವರ ಅನಿಸಿಕೆಗಳು ಪ್ರಸಾದ್ ಅವರ ಅನಿಸಿಕೆಯೊಡನೆ ಜೊತೆಯಾಗಿ ವ್ಯಕ್ತವಾಗಿದೆ. ಆದರೆ ತಾಯಿಯ ಭಾವನೆಗಳು ತಂದೆಗಿಂತಲೂ ವಿಭಿನ್ನವಾಗಿರುವುದು ಸಹಜ. ಪೂರ್ಣಿಮಾ ಅವರ ಅನಿಸಿಕೆಗಳು, ತುಮುಲಗಳು, ಜಿಜ್ಞಾಸೆಗಳನ್ನು ಅಳವಡಿಸಿದ್ದರೆ ಅನನ್ಯಳ ಸಾಹಸವನ್ನು ದುರ್ಬೀನಿನಿಂದ ನೋಡಿದ ಅನುಭವ ಪ್ರಾಪ್ತವಾಗುತ್ತಿತ್ತೆಂಬುವುದು ನನ್ನ ಅಭಿಪ್ರಾಯ.
ಅನನ್ಯಳ ಸಾಹಸ ಹಲವು ಮಜಲುಗಳಲ್ಲಿ ಮಾಡಿದ ಪ್ರಯತ್ನದ ಫಲ. ಇದರ ಹಿಂದಿರುವ ಅನನ್ಯ ತ್ಯಾಗ, ಶ್ರಮಗಳೊಂದಿಗೆ ಅವಳ ಕುಟುಂಬದವರ, ಟ್ರೇನರ್, ಕೈಗೂಡಿಸಿದ ಸಂಸ್ಥೆಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾದ ತ್ಯಾಗ ಹಾಗೂ ಶ್ರಮ ಸೇರಿವೆ. ಈ ಸಂಪೂರ್ಣ ಗಾಥೆಯನ್ನು ಬಟ್ಟಲಲ್ಲಿ ಹಿಡಿದಿಡುವ ಪ್ರಯತ್ನ ತನ್ನದೇ ರೀತಿಯಲ್ಲಿ ಸಫಲವಾಗಿ ಪುಸ್ತಕರೂಪದಲ್ಲಿ ನಮ್ಮ ಕೈಯಲ್ಲಿದೆ.
ರಾಂ
ಡಾ ಶ್ರೀರಾಮುಲು ಬರೆಯುತಾರೆ ನಮಸ್ಕಾರ ಪ್ರಸಾದ್, ಮೊದಲಿಗೆ ನನ್ನ ತಡವಾದ ಪ್ರತಿಕ್ರಿಯೆಗಾಗಿ ಕ್ಷಮಾಪಣೆ. ನಿಮ್ಮ ಅಮೂಲ್ಯವಾದ ಪುಸ್ತಕ ತಲುಪಿದ ಮರುದಿನವೇ ಮುಗಿಸಿದೆ. ಮಿಷೆಲ್ಲಿನ್ ಸ್ಟಾರ್ರ್ಡ್ ಶೆಫ್ ಒಂದು ನವ್ಯ ಖಾದ್ಯವನ್ನು ತಯಾರಿಸಿದರೆ ಪಾಕ ಪ್ರವೀಣರು ಮತ್ತು ರಸಿಕ ಸಾರ್ವಜನಿಕರು ಮೊದಲಗಿಂತ ಉತ್ತಮವಾಗಿರುವಂತೆ ನಿರೀಕ್ಷಿಸುತ್ತಾರೆ. ಆ ಉಪಮೇಯ ನಿಮ್ಮ ಪುಸ್ತಕಕ್ಕೆ ಚೆನ್ನಾಗಿ ಅನ್ವಯಿಸುತ್ತದೆ! ಪುಸ್ತಕದಲ್ಲಿ ನೀವು ಅನನ್ಯಳ ’ಜಗತ್ತಿನ ಅತಿ ಕಠಿಣವಾದ ಯಾ”ವನ್ನು ಬಹು ಸುಂದರವಾಗಿ ಬರೆದಿದ್ದೀರಿ. ಓದುವರಿಗೆ ತಾವೇ ಸ್ವತಃ ಭಯಾನಕ ಮತ್ತು ಅಮೋಘವಾದ ಯಾನ ಅನುಭವಸಿದಂತೆ ಭಾವನೆ ಮೂಡಿ ಬರುತ್ತೆ . ಅದು ಹೊರತುಪಡಿಸಿ ತಂದೆ, ತಾಯಿಗಳ ಆತಂಕ, ಹೇಳಲಾಗದ ಮತ್ತು ವಿವರಿಸಲಾಗದ ಭಯವನ್ನು ಚೆನ್ನಾಗಿ ವಿವರಿಸಿದ್ದೀರ. ಅದರಲ್ಲೂ ಭಾರತೀಯ ಮೂಲದ ಪೋಷಕರು ತಮ್ಮ ಮಕ್ಕಳ ಬಗ್ಗೆ ಏನೇನೋ ಕನಸು ಕಂಡಿರುತ್ತಾರೆ, ಅವರ ನಿರೀಕ್ಷೆಯೇ ಬೇರೆ. ನಿಮ್ಮವಿಷಯದಲ್ಲಿ ಅನನ್ಯಳ ಕನಸಲ್ಲೂ ಊಹಿಸಲಾಗದ, ನೆನಸಲಾಗದ, ಸಾಗರದ ಸಾಹಸ, ನಿಜಕ್ಕೂ ಬಂಧು ಬಳಗ ಮತ್ತು ಮಿತ್ರರಿಗೂ ಬಹು ಹೆಮ್ಮೆಯ ವಿಷಯ.
ನಾನು cruise ಹೋಗಿದ್ದಾಗ ಹಡಗಿನ ತಲ್ಲಣ ಮಿತಿ ಮೀರಿದಾಗ ಸುರಕ್ಷತಾ barrier ಗಟ್ಟಿಯಾಗಿ ಹಿಡಕೊಂಡು ಓಡಾಡಿದ್ದು ಇನ್ನೂ ಜ್ಞಾಪಕದಲ್ಲಿದೆ. ಆ ಕರಾಳ ಕಗ್ಗತ್ತಿನಲ್ಲಿ, ಭಯಾನಕ ಅಲೆಗಳ ಮತ್ತು ತನು, ಮನ, ತಲ್ಲಣಿಸುವ ಹಡಗಿನ ಅಲುಗಾಟಗಳನ್ನು ಅನನ್ಯ ಒಬ್ಬಂಟಿಯಾಗಿ ಹೇಗೆ ನಿಭಾಯಸಿದರೋ ಅನಿಸುತ್ತೆ. ನಿಮ್ಮ ಈ ಕೃತಿಯನ್ನು ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿದರೆ (ತಾನೇ ಬರೆದರೆ ಇನ್ನೂ ಉತ್ತಮ!) ನಮ್ಮ ಮುಂದಿನ ಪೀಳಿಗೆ ಮತ್ತು ಕನ್ನಡ ಓದು ಬರದವರಿಗೂ ತಲುಪುತ್ತೆ ಮತ್ತು ಪ್ರೋತ್ಸಾಹಕರ ಅಂತ ನನ್ನ ಭಾವನೆ. ನಿಮ್ಮ ಬರಹದಲ್ಲಿ ಒಂದು ವೈಶಿಷ್ಟ್ಯವಿದೆ . ನಿಮ್ಮ ಈ ಪ್ರತಿಭೆ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಡಾ ಶ್ರೀರಾಮುಲು, (ಈಗ ಲಂಡನ್ ವಾಸಿ.)
ಕಾಂಗಲ್ ಟನ್ನಿಂದ ಶ್ರೀ ರಾಮಮೂರ್ತಿ ಬರೆಯುತ್ತಾರೆ:
“ಸಾಗರದಲ್ಲಿ ಸಾಹಸಿ” ಪುಸ್ತಕವನ್ನು ಓದಿದಾಗ, ಇಲ್ಲಿ ವರ್ಣಿಸಿರುವುದೆಲ್ಲವೂ ಕಣ್ಣಮುಂದೆ ಬರುತ್ತಿತ್ತು. ಅನನ್ಯ ತನ್ನ ನಿರ್ಧಾರವನ್ನು ತಿಳಿಸಿದಾಗ ಆದ ಆತಂಕ ಎಲ್ಲಾ ತಂದೆ-ತಾಯಿಯರಿಗೂ ಆಗುವುದು ಸಹಜ. ಆದರೆ ಅವಳ ನಿರ್ಧಾರದ ಬಗ್ಗೆ ಅವಳೊಂದಿಗೆ ಮಾತನಾಡಿ, ಎಲ್ಲಾ ವಿಷಯಗಳನ್ನು ತಿಳಿದು ಒಪ್ಪಿಗೆ ಕೊಟ್ಟಿದ್ದು ಬಹಳ ಶ್ಲಾಘನೀಯ. ನಂತರ ಸುಮಾರು ಮೂರು ವರ್ಷಗಳ ಸಿದ್ಧತೆ, ದೋಣಿಯನ್ನು ನಡೆಸುವ ಅಥವಾ ಹುಟ್ಟುಹಾಕುವ ವಿಧಾನ ಮಾತ್ರವಲ್ಲದೆ, ದೀರ್ಘ ಪ್ರಯಾಣಕ್ಕೆ ಬೇಕಾದ ಸಾಮಗ್ರಿಗಳು ಮತ್ತು ನೌಕಾಯಾನದ ತಾಂತ್ರಿಕ ಅಂಶಗಳು ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವಿವರವಾದ ವರ್ಣನೆ ಇಲ್ಲಿದೆ.
ಪ್ರಸಾದ್ ದಂಪತಿಗಳು ಭಾರತಕ್ಕೆ ಹೋದಾಗ ಅಲ್ಲಿ ಕೆಲವರು, "ಈ ‘ಹುಚ್ಚು’ ಸಾಹಸಕ್ಕೆ ಹೇಗೆ ಅನುಮತಿ ಕೊಟ್ಟರಿ?" ಎಂದು ಕೇಳಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಅಲ್ಲಿನ ಜನರ ಮನಸ್ಥಿತಿಯ (mindset) ಬದಲಾವಣೆಗೆ ಸಮಾಜ ಇನ್ನೂ ತಯಾರಾಗಿಲ್ಲವೇನೋ ಅನಿಸುತ್ತದೆ. ಕೆನೆರಿ ದ್ವೀಪದಿಂದ ಅನನ್ಯಳನ್ನು ಬೀಳ್ಕೊಟ್ಟ ವರ್ಣನೆ ಭಾವನಾತ್ಮಕವಾಗಿದೆ. ನಂತರ ಅವಳು ಎದುರಿಸಿದ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಂಡಿದ್ದು, ದೋಣಿಯ ಬುಡದಲ್ಲಿ ಈಜಿ ಅಂಟಿಕೊಂಡಿದ್ದ ಬಾರ್ನಕಲ್ಸ್ (barnacles) ಗಳನ್ನು ಬ್ರಷ್ನಿಂದ ಸ್ವಚ್ಛಗೊಳಿಸಿದ್ದು ಮತ್ತು ಇನ್ನೊಂದು ಸಂದರ್ಭದಲ್ಲಿ ದೋಣಿಯ ಹಿಂಭಾಗದ ಕೆಳಗಿದ್ದ ರಡ್ಡರ್ (rudder) ರಿಪೇರಿ ಮಾಡಿದ್ದನ್ನು ನೆನೆಸಿಕೊಂಡರೆ, ಅನನ್ಯ ಎಂತಹ ಸಾಹಸಗಾರ್ತಿ ಎನ್ನುವುದು ಗೊತ್ತಾಗುತ್ತದೆ. ಈ ವಿಷಯಗಳನ್ನು ಅನನ್ಯಳಿಂದ ತಿಳಿದುಕೊಂಡು ಪ್ರಸಾದ್ ಅವರು ಈ ಪುಸ್ತಕದಲ್ಲಿ ವಿವರವಾಗಿ ಮತ್ತು ಸರಳವಾಗಿ ಬರೆದಿರುವುದನ್ನು ಇಲ್ಲಿ ಗಮನಿಸಬಹುದು. ಅಲ್ಲಲ್ಲಿ ಹಲವಾರು ಇಂಗ್ಲಿಷ್ ಕವಿಗಳು ಬರೆದ ಪದ್ಯಗಳ ಬಳಕೆ ಸೂಕ್ತವಾಗಿದೆ. ಉದಾಹರಣೆಗೆ, ಭಯದ ಬಗ್ಗೆ (ಪುಟ ೫೧) ಖಲೀಲ್ ಗಿಬ್ರಾನ್ ರಚಿಸಿರುವ 'Fear' ಅನ್ನುವ ಕವಿತೆ. ಅಲ್ಲದೆ ಮಧ್ಯೆ ಮಧ್ಯೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಬರೆದ ಕವನಗಳ ಪ್ರಸ್ತುತತೆಯೂ ಇದೆ.
ಅನನ್ಯಳ ಐವತ್ತೆರಡು ದಿನಗಳ ಯಾತ್ರೆ ಮುಗಿದು ಆಂಟಿಗ ದ್ವೀಪವನ್ನು ಸೇರಿದಾಗ ಪ್ರಸಾದ್ ದಂಪತಿಗಳ, ವ್ಯವಸ್ಥಾಪಕರ ಮತ್ತು ಅಲ್ಲಿ ನೆಲೆಸಿರುವ ಕೆಲವು ಕನ್ನಡಿಗರ ಹಾಗೂ ಭಾರತೀಯರಿಂದ ಅದ್ಭುತವಾದ ಸ್ವಾಗತ ದೊರಕಿತು. ಈ ಸಾಹಸದ ಮುಖ್ಯ ಗುರಿ ಹಲವಾರು ಸಂಸ್ಥೆಗಳಿಗೆ ಧನಸಹಾಯ ಮಾಡುವುದಾಗಿದೆ. ಅವಳ ದೊಡ್ಡಪ್ಪ ನಡೆಸುತ್ತಿರುವ 'ದೀನಬಂಧು' ಸಂಸ್ಥೆಯೂ ಅದರಲ್ಲಿ ಒಂದು.
ಕೇವಲ ನೂರು ಪುಟಗಳಲ್ಲಿ ಈ ಸಾಹಸದ ಬಗ್ಗೆ ಬರೆದಿರುವ “ಸಾಗರದಲ್ಲಿ ಸಾಹಸಿ“ ಪುಸ್ತಕವನ್ನು ಎಲ್ಲಾ ಕನ್ನಡಿಗರೂ ಓದಲೇಬೇಕು.
ರಾಮಮೂರ್ತಿ, ಕಾಂಗಲ್ ಟನ್, ಚಶೈರ್
ಸುಮಾ ಚಿಲ್ಲಾಳ (ಡೋಂಕಾಸ್ಟರ್) ಬರೆಯುತ್ತಾರೆ: The book ಸಾಗರದಲಿ ಸಾಹಸಿ (’Sagaradalli Sahasi’) is an inspiring book about courage, strength and the willpower. It’s book about a beautiful bond between father, mother and daughter. I must say, I could experience the emotions the parents were going through the whole journey. How would you let your only daughter go on a 3000-mile solo row across the Atlantic Ocean. Not only that, but they also had to give Ananya the courage, strength, encouragement. The incident where the rudder was broken and Dr Prasad encouraged Ananya to replace the rudder, for me this was “the“moment and it was when my respect and admiration for the parents reached the zenith. Keeping aside their fear and anxiety, they provided unwavering support throughout the expedition. The book is a personal perspective about the anxieties, hopes and pride of a father and mother watching their daughter undertake the challenges. A proud character sketch of Ananya bring out childhood memories. Her determination, resilience, meticulous preparation, mental strength and at the same time her generosity. The book answered questions I had in my mind about drinking water, food etc and most importantly the communication difficulties, which is so important to keep in touch. Overall, ಸಾಗರದಲಿ ಸಾಹಸಿ is a heartfelt tribute to human endurance and parental support. A true story of adventure, resilience and the power of family I wish Ananya writes her story in English, for people like me who are unfamiliar with Kannada, or who are not comfortable reading in Kannada.
Suma Chillal, from Doncaster
ಅನನ್ಯ ಸಾಗರೋಲ್ಲಂಘನ : ಸಾಹಸ ಕಥನ ವಿಮರ್ಶೆ - ಡಾ ರಾಜಶ್ರೀ ಪಾಟೀಲ ಅವರಿಂದ
ಓಡಿಸ್ಸಿಯಸ್ ನಾಮವೆತ್ತ ಕೈದೋಣಿಯನ್ನೇ ಬರೋಬ್ಬರಿ 52 ದಿನ 5 ಗಂಟೆ ಮನೆಯಾಗಿಸಿಕೊಂಡು , ತೋಳ್ಬಲವನ್ನೇ ಆಸ್ತಿ ಮಾಡಿಕೊಂಡು, ಹಿಂದೆ ಮುಂದೆ ಕೈಚಾಚಿದರೆ ಸಹಾಯ ಮಾಡೋ ಕೈಗಳಿಲ್ಲವೆಂದರಿತೂ , ವ್ಯವಸ್ಥಾಪಕರ ಕಿರುನೆರವು , ಆಶ್ವಾಸನೆ ಮಾತುಗಳನ್ನೇ ನಂಬಿಕೆಯಾಗಿಟ್ಟುಕೊಂಡು , ಟೈಟಾನಿಕ್ ಅಂಥ ಬೃಹತ್ ಹಡಗೇನೋ ಅನ್ನುವಂತೆ ತನ್ನ ಪಾಲುಮಾಡಿಕೊಂಡಂತ ಅಟ್ಲಾಂಟಿಕ್ ಮಹಾಸಾಗರದ ನಿಲ್ದಾಣವಿಲ್ಲದ 3,000 ಮೈಲಿಯ ಒಂಟಿ ಪಯಣವನ್ನ ಮನೆಯ ಏಕೈಕ ಕುಡಿ ಮಾಡುವೆನೆಂದಾಗ, ಅತೀ ಕಾಳಜಿಯಿಂದ ಕಾಪಾಡಿದ ಏಕೈಕ ಮನೆಯ ದೀಪ ಇಂಥ ಸಾಹಸಕ್ಕೆ ಕೈ ಹಾಕುವೆನೆಂದಾಗ, ಹೆತ್ತವರ ಮನಸ್ಸಿನ ತಳಮಳ , ಆತಂಕ , ಮುಂಬರುವ ಅಪಾಯಗಳ ಬಗೆಗಿನ ಮನಸ್ಸ್ಸಿನ ಮಂಥನದ ವಿಶ್ಲೇಷಣೆ ಅತೀ ನೈಜವಾಗಿದ್ದು ಮತ್ತು ವಾಸ್ತವಿಕವಾಗಿದ್ದು. ಅಸ್ತಿತ್ವ ಕಳೆದುಕೊಳ್ಳುವ ಭಯವಿದ್ದರೂ ಸಾಗರ ಸೇರಿ ಸಾಗರವೇ ತಾನಾಗುವ ನದಿಯ ಉಪಮೇಯವನ್ನಿಟ್ಟುಕೊಂಡು ಗಿಬ್ರಾನ್ ಬರೆದ 'ಫಿಯರ್' (Fear) ಕವಿತೆಯ ವಿಸ್ತಾರವಾದ ರೂಪಕದ ಪ್ರಸ್ತಾವನೆ, ಈ ಸಾಹಸ ಸಾಧನೆ ಅವರ ಕುಟುಂಬದ ಮೇಲೆ ಮೂಡಿಸಿದ ಭಯದ ಛಾಯೆಯನ್ನ ಮತ್ತು ಅದನ್ನ ಮೀರಿ ಹೊರಬಂದ ಬಗೆಯನ್ನ ಬಿಂಬಿಸುತ್ತದೆ. ಪ್ರಸಾದವರು ತಮ್ಮ ಬರವಣಿಗೆಯಿಂದ ಓದುಗನನ್ನು ಅವರ ಮನದಲ್ಲಾದ ಅಲ್ಲೋಲ ಕಲ್ಲೋಲಗಳಲ್ಲಿ ಒಂದಾಗಿಸಿದ್ದಾರೆ .ಅವರ ಬರವಣಿಗೆಯ ಶೈಲಿ, ಓದುಗನೂ ಅನನ್ಯಳ ಅನನ್ಯ ಪಯಣದಲ್ಲಿ ಅವರ ಅಪ್ಪನ ಜೊತೆಯಲ್ಲಿಯೇ ಇದ್ದೆನೇನೋ ಅನ್ನುವಷ್ಟು ಹತ್ತಿರ ಮಾಡುವಂತಿದೆ .
ಇತ್ತ ಅಜ್ಜ ಜೆ ಎಸ್ಎಸ್ ಅವರ ಸುಂದರ ಪದಗಳಲ್ಲಿ ವರ್ಣಿತವಾದ ‘ಸುನೀಲ , ವಿಸ್ತರ , ತರಂಗ ಶೋಭಿತ ಗಂಭೀರಾಂಬುಧಿಯಲ್ಲಿ’ ಅಂತರಂಗದ ಅನ್ವೇಷಣೆ ಮತ್ತು ನಿಶ್ಶಬ್ದದ ನಡುವಿನ ಆಧ್ಯಾತ್ಮ ಪಯಣ ಮಾಡುವೆನೆನ್ನುವ ಮಗಳ ಮಾನಸಿಕ ಪ್ರಬುದ್ಧತೆ, ಅದಕ್ಕಾಗಿ ಸತತ ಮೂರು ವರ್ಷಗಳ ಕಾಲ ದೇಹ ಮತ್ತು ಮನಸ್ಸನ್ನ ಯಾವುದೇ ಸ್ವಂತವಾದ ಅಪೇಕ್ಷೆಯಿಲ್ಲದೆ ದುಡಿಸಿ ದಣಿಸಿ ತಯಾರಿ ನಡೆಸುವ ಮಗಳ ಹರಸಾಹಸ, ಭಾರತೀಯರ, ಕನ್ನಡಿಗರ, ವರ್ಣೀಯ ಜನಾಂಗದ ನೀರಿಕ್ಷೆಯನ್ನ ಹೊತ್ತು , ಹಲವಾರು ಪಾಶ್ಚಿಮಾತ್ಯ ದೇಶಗಳ ಭಾವುಟಗಳ ನಡುವೆ ಕೇಸರಿ ಬಿಳಿ ಹಸಿರು ಬಣ್ಣಗಳ ಪತಾಕೆ ಹೊತ್ತು ಸಾಗರದ ಒಂಟಿ ಪಯಣಕ್ಕೆ ಮಗಳು ಹೆಜ್ಜೆಯಿಟ್ಟು ಮುನ್ನಡೆದಾಗ, ಮಗಳು ಬೆಳೆದ ರೀತಿಯ ಬಗ್ಗೆ ಅಪ್ಪನ ಹೃದಯ ತುಂಬಿ ಬರುವ ಹೊಗಳಿಕೆಯ ಮಾತುಗಳು, ಎಲ್ಲೂ ಉತ್ಪ್ರೇಕ್ಷೆಯಾಗದೆ, ಕೆಲವೊಂದು ಬಾರಿ ಬರಹಗಾರ ಸ್ವಲ್ಪ ಉದಾರತೆಯನ್ನ ತೋರಬಹುದಿತ್ತೇನೋ ಅನ್ನಿಸುವಂತಿದೆ .
ಅಪ್ಪನ ಗಂಡುಮನಸ್ಸನ್ನ ಕರಗಿಸಿ ಗಳಗಳನೆ ಅಳಿಸಿ, ಅಪಾರ ಸಮುದ್ರದ ಅಂಚಿನಲ್ಲಿ ಹುಟ್ಟುದೋಣಿಯ ಜೊತೆಗೆ ಒಂದು ಸಣ್ಣ ಚುಕ್ಕಿಯಂತೆ ಮರೆಯಾಗಿ, ಮೊಬೈಲ್ ಕಳೆದರೇನು, ಡಿ ಸಲೈನೇಷನ್ ಯಂತ್ರ ಮುರಿದರೇನು , ದೋಣಿಯ ಚುಕ್ಕಾಣಿ ನೀರಲ್ಲಿ ಮುರಿದರೇನು, ಕೊನೆಗೆ ಹುಟ್ಟುದೋಣಿಯ ಹುಟ್ಟೇ ಮುರಿದರೇನು, ನನ್ನ ಪಯಣ, ಗುರಿ ಮುಟ್ಟದೆ ನಿಲ್ಲದೆಂದು ಪರಿಹಾರ ಹುಡುಕುತ್ತ ಸಾಗುವ ಅನನ್ಯಳ ಸಾಹಸ ಪಯಣ ಹೃದಯ ಸ್ತಂಭನಳಿಸುವಂತದು. ಅದನ್ನ ಓದುಗರ ಮನಕ್ಕೆ ಅತಿಯಾಗದೆ, ತೀರಾ ಮಿತವಾಗದೆ, ನಿಜಕ್ಕೆ ಹತ್ತಿರವಾಗಿ ವಿವರಣೆ ಮಾಡಿರುವ ಲೇಖಕರ ಪರಿ ಮೆಚ್ಚುಗೆಯಾಗುವಂತದ್ದು.
ಸಾಹಸ ಪ್ರಯಾಣ ಕೊನೆಯ ಹಂತ ತಲುಪುವ ಸುದ್ದಿ ತಿಳಿದು ಸ್ವಾಗತ ಮಾಡಲು ಅಂಟಿಗಕ್ಕೆ ಪ್ರಯಾಣ ಬೆಳೆಸಿ ಎತ್ತರದ ವಿಮಾನದಲ್ಲಿ ಕುಳಿತು ಮಹಾಸಾಗರದಲ್ಲಿ ಮಗಳ ಚುಕ್ಕಿ ದೋಣಿಯನ್ನ ಹುಡುಕುವ ಅಪ್ಪ ಅಮ್ಮನ ಮುಗ್ದತೆ ತುಂಬಿದ ಕಾತುರತೆ ಓದುಗನಲ್ಲಿ ಕಿರುನಗೆಯನ್ನ ಹೊರಹಾಕುವಂತಿದೆ.
ಚುಕ್ಕಿಯಂತೆ ಮರೆಯಾಗಿ ಅನನ್ಯ ಸಮುದ್ರ ಸಾಹಸವನ್ನು ಮುಗಿಸಿ, ಮಿನುಗುವ ನಕ್ಷತ್ರದಂತೆ ಧರೆಗೆ ಮರಳಿ ತನ್ನ ಮೊದಲ ಹೆಜ್ಜೆ ಇಟ್ಟಾಗ ಅಪ್ಪನ ಮನಸ್ಸಿನಲ್ಲಾಗುವ ಅಗಾಧ ನಿರಾಳ ಭಾವ, ಸಂಭ್ರಮ ಮತ್ತು ಹೆಮ್ಮೆ ಮನಮುಟ್ಟುವಂತಿದೆ. ಸಾಹಸ ಮತ್ತು ಸಾಹಸದ ತದನಂತರದ ಘಟನೆಗಳ ಭಿತ್ತಿಚಿತ್ರಣ ಆಯ್ಕೆ ಲೇಖಕರ ನಿಖರತೆಯನ್ನ ತಿಳಿಸುವಂತಿದೆ .
ಒಟ್ಟಾರೆ ಪುಸ್ತಕ ಓದುಗನಿಗೆ ತಾನು ಸಾಹಸಗಾಥೆಯ ಭಾಗವೇನೋ ಎನ್ನಿಸಿ ಸಾರ್ಥಕತೆಯ ಭಾವ ಮೂಡಿಸುವಂತಿದೆ. ಆದರೆ ನನಗಂತೂ ಅರ್ಥಗರ್ಭಿತ ಹೆಸರನ್ನ ನಾಮಕರಣ ಮಾಡಿ, ಸಂಪೂರ್ಣ ವೈಯಕ್ತಿಕ ಸ್ವಾತಂತ್ರ್ಯ ನೀಡಿ, ಮಗಳ ಕನಸನ್ನ ಇಚ್ಛೆಯ ಜೊತೆಗೆ ಆಯ್ಕೆಯನ್ನಾಗಿಸಿಕೊಂಡ ತಂದೆ ತಾಯಿಯನ್ನ ಪಡೆದ ಅನನ್ಯಳ ಬಗ್ಗೆ ತುಸು ಹೊಟ್ಟೆಕಿಚ್ಚು ಮೂಡಿದ್ದಂತೂ ಸತ್ಯ.
ಡಾ ರಾಜಶ್ರೀ ಪಾಟೀಲ, ಲೆಸ್ಟರ್, ಯು ಕೆ
ಶಾಲಿನಿ ಜ್ಞಾನಸುಬ್ರಮಣಿಯನ್ ಅವರ ಲೇಖನ:
ಒಡಿಸ್ಸಿ (ರಾಜಾ ಒಡಿಸ್ಸಿಯಸ್ ಕುರಿತು ನಿರ್ಮಿತವಾದ ಚಲನಚಿತ್ರ The Odessey ) ಇತ್ತೀಚೆಗೆ ಬಿಡುಗಡೆಯಾಗಿದೆ; ಅದೇ ಸಮಯದಲ್ಲಿ ಅನನ್ಯ ಪ್ರಸಾದ್ನ ಹಡಗನ್ನು (Atlantic Odyssey) row ಮಾಡಿದ ಅವಳ ಶೌರ್ಯವನ್ನು ವರ್ಣಿಸುವ ಪುಸ್ತಕ ‘ಸಾಗರದಲ್ಲಿ ಸಾಹಸಿ’ ಹೊರಬಂದಿದೆ. ಎರಡರ ಬಗ್ಗೆಯೂ ನನಗೆ ತುಂಬಾ ಉತ್ಸಾಹ. ಅನನ್ಯಳ ಕಥೆ ಓದಿದಾಗ, ಈ ಪೌರಾಣಿಕ* ಹೆಸರನ್ನು ವಾಸ್ತವಕ್ಕೆ ತಂದ ಧೈರ್ಯ, ದೃಢತೆ, ಮತ್ತು ಜ್ವಾಲೆಯ ಬಗ್ಗೆ ಅಪಾರವಾದ ಗೌರವ ನನ್ನೊಳಗೆ ಮೂಡಿತು. ಪುಸ್ತಕವನ್ನು ಆರಂಭದಿಂದ ಅಂತ್ಯವರೆಗೆ ಓದುವುದು ಸಂಪೂರ್ಣವಾಗಿ ಮನಸೂರೆಗೊಂಡ ಅನುಭವವಾಗಿತ್ತು; ಮೊದಲನೇ ಬಾರಿಗೆ ಇಷ್ಟು ಕಡಿಮೆ ಸಮಯದಲ್ಲಿ, ಎರಡು ದಿನಗಳಲ್ಲಿ ನಾನು ಓದಿ ಮುಗಿಸಿರುವ ಕನ್ನಡ ಪುಸ್ತಕ. (*ಸಂಸ್ಕೃತದ ಪುರಾ ಶಬ್ದದ ಅರ್ಥ ಬಹಳ ಹಳೆಯ ಕಾಲ ಅಂತ. ಆ ಅರ್ಥದಲ್ಲಿ ಇಲ್ಲಿ ’ಪೌರಾಣಿಕ’ ಪದವನ್ನುಶಾಲಿನಿ ಅವರು ಉಪಯೋಗಿಸಿದ್ದಾರೆ.-ಸಂ)
2025ರ ಫೆಬ್ರವರಿಯಲ್ಲಿ ಅನನ್ಯ ಬಗ್ಗೆ ಸುದ್ದಿಯಲ್ಲಿ ಓದಿದ್ದೆ; ಭಾರತೀಯ ಮೂಲದ, ಕನ್ನಡತಿ, ಮತ್ತು ನಮ್ಮ ಅತ್ಯಂತ ಪ್ರೀತಿಪಾತ್ರ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು — ಎಂತಹ ಹೆಮ್ಮೆಯ ವಿಷಯ! ಮತ್ತು ಆಕೆ ಯಾವುದೇ ಮಹಾಸಾಗರವನ್ನು ಏಕಾಂಗಿಯಾಗಿ ದಾಟಿದ ಮೊದಲ ವರ್ಣೀಯ ಮಹಿಳೆ ಎಂಬುದನ್ನು ತಿಳಿದಾಗ, ಅನೇಕ ಭಾವನೆಗಳು ನನ್ನೊಳಗೆ ಹರಿದುಬಂದವು. ಆ ದಿನ ನನ್ನ ಮನಸ್ಸಿನಲ್ಲಿ ಉದ್ಭವಿಸಿದ ಅನೇಕ ಪ್ರಶ್ನೆಗಳಿಗೆ, ಆಕೆಯ ತಂದೆ ಡಾ. ಜಿ.ಎಸ್. ಪ್ರಸಾದ್ ಅವರು ಬರೆದ ಈ ಅದ್ಭುತ ಪುಸ್ತಕ ಉತ್ತರ ನೀಡಿತು.
ಒಬ್ಬ ಪೋಷಕರಾಗಿ, ನನ್ನ ಮೊದಲ ಚಿಂತನೆ — ಅನನ್ಯಳ ಪೋಷಕರು ಹೇಗೆ ಆತಂಕ, ಅಸ್ಪಷ್ಟತೆ ಯನ್ನು ಎದುರಿಸಿದರು? ತಮ್ಮ ಮಗಳು ಅಟ್ಲಾಂಟಿಕ್ ಸಮುದ್ರವನ್ನು ಏಕಾಂಗಿಯಾಗಿ ದಾಟುತ್ತೇನೆಂದು ತಿಳಿಸಿದಾಗ ಅವರು ಹೇಗೆ ಭಾವನೆಗಳ ಸಮತೋಲನ ತಂದುಕೊಂಡರು ಎಂದು. ಈ ಪ್ರಶ್ನೆ ಎಷ್ಟೋ ಸಾರಿ ನಾನು ತಾಯಿಯಾಗಿ ಯೋಚಿಸುತ್ತೇನೆ. ಡಾ. ಪ್ರಸಾದ್ ಅವರು ಪುಸ್ತಕದ ಅನೇಕ ಭಾಗಗಳಲ್ಲಿ ಇದನ್ನು ಅತಿ ಸುಂದರವಾಗಿ ಮತ್ತು ಪ್ರಾಯೋಗಿಕವಾಗಿ ವಿವರಿಸಿದ್ದಾರೆ. ಹಂತ ಹಂತವಾಗಿ ಮಾಡಿದ ಯೋಜನೆ, ಪೋಷಕರು ನಡೆಸಿದ ಆರಂಭಿಕ ಸಂಶೋಧನೆ, ಮಗಳೊಂದಿಗೆ ನಡೆದ ಮಾತುಕತೆಗಳು, ನಿದ್ರಾಹೀನ ರಾತ್ರಿಗಳು, ಪೋಷಕರ ಅಂಜಿಕೆಗಳು, ಮಕ್ಕಳ ಕನಸುಗಳಿಗೆ , ಅಭಿವೃದ್ಧಿಗೆ ಅಸಾವಧಾನವಾಗಿ ಅಡ್ಡಿಯಾಗುವುದರ ಬಗ್ಗೆ ಜಾಗರೂಕರಿಗಿರುವುದು, ನೋಡಿಕೊಳ್ಳುವುದು, ಮಾನಸಿಕವಾಗಿ ತಾವು ಸಿದ್ಧರಾಗುವುದು, ಪೋಷಕರ ಪ್ರೋತ್ಸಾಹದ ನುಡಿಗಳು — ಇವೆಲ್ಲವೂ ನನಗೆ ಉತ್ತರಗಳಾಗಿದ್ದವು.
ಪುಸ್ತಕ ಅನೇಕ ಸ್ಥಳಗಳಲ್ಲಿ ರೋಮಾಂಚಕವಾಗಿದೆ. ವಿಶೇಷವಾಗಿ ಗರ್ಜಿಸುವ ಅಲೆಗಳ ನಡುವೆ ದೋಣಿಯ ಕೆಳಗೆ ಮುಳುಗಿ ಅನನ್ಯ ಅದನ್ನು ಸ್ವಚ್ಛಗೊಳಿಸಬೇಕಾದ ಮೊದಲ ಘಟನೆ. ಆ ಕಲ್ಪನೆಯೇ ಭಯ ಹುಟ್ಟಿಸುವುದು. ‘ಕೆಲಸವನ್ನು ತಡವಾಗಿ ಮಾಡುವುದಕ್ಕಿಂತ ಬೇಗ ಮುಗಿಸು’ ಎಂದು ಪೋಷಕರು ನೀಡಿದ ಪ್ರೋತ್ಸಾಹದ ಮಾತುಗಳು ಅವಳಿಗೆ ಭಯವನ್ನು ನಿಭಾಯಿಸಲು ಮಾಯದ ಮದ್ದುಗಳಂತೆ ಕೆಲಸ ಮಾಡಿದ್ದವು. ಆ ಭಾಗವನ್ನು ಓದುವಾಗ ನನಗೂ ಭಯದ ಅನುಭವವಾಗಿತ್ತು; ಆಕೆ ಮತ್ತೆ ದೋಣಿಯ ಮೇಲೆ ಏರುವ ಕ್ಷಣವನ್ನು ಓದಲು ಕಾತರವಾಗಿದ್ದೆ.
ಅನನ್ಯ ದೃಢಮನದ ಧೀರ ಹೃದಯಿ! ಮಾನವರನ್ನು ಇಷ್ಟು ಸಾಧಕರನ್ನಾಗಿ ಮಾಡಿಸುವುದು ಏನು? ಸಾಧಕರ ಗುಣಗಳೇನು ಎಂಬ ಪ್ರಶ್ನೆ ಇದ್ದಲ್ಲಿ ಅದಕ್ಕೆ ಉತ್ತರಗಳು ಈ ಪುಸ್ತಕದಲ್ಲಿ ದೊರಕುತ್ತದೆ. ಆಕಾಂಕ್ಷೆ, ಕನಸು, ದೃಢತೆ, ಇತರರು ಹೆಜ್ಜೆ ಇಟ್ಟಿರದ ಸ್ಥಳಕ್ಕೆ ಹೆಜ್ಜೆ ಇಡುವ ಮನೋಬಲ, ಬಿರುಗಾಳಿಯಲ್ಲಿಯೂ ಶಾಂತ ಚಿತ್ತ — ಅನನ್ಯಳ ಬಗ್ಗೆ ನಾನು ತಿಳಿದಿದ್ದು ಈ ಪುಸ್ತಕ ಮುಖಾಂತರ. ನನಗೆ ಭಗವದ್ಗೀತೆಯ ಈ ಶ್ಲೋಕ ನೆನಪಾಯಿತು: “ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ” BG 6.5
ಅನನ್ಯಳ ಕಥೆ, ಮನಸ್ಸಿನ ಶಕ್ತಿಯಿಂದ ಮತ್ತು ಸ್ವಪ್ರಯತ್ನದಿಂದ ತನ್ನನ್ನು ತಾನೇ ಎತ್ತಿಕೊಳ್ಳುವ ಅದ್ಭುತ ಉದಾಹರಣೆ. ಅವಳ ಪ್ರತಿಯೊಂದು ಚಿಂತನಾ ಮಾದರಿ, ಮಾನಸಿಕ ಅಭ್ಯಾಸ, ಕ್ರೀಡಾಸ್ಫೂರ್ತಿ — ಇವೆಲ್ಲವೂ ಆಕೆಯನ್ನು ಎತ್ತರಗೊಳಿಸುವ ಮಾರ್ಗದಲ್ಲಿ ಕರೆದೊಕೊಂಡು ಹೋಗಿವೆ ಎನ್ನಬಹುದು. ಮೊಬೈಲ್ ಫೋನ್ ನೀರಿಗೆ ಬಿದ್ದ ಪ್ರಸಂಗದಲ್ಲಿ ಆಕೆ ನಿರಾಶೆಯಾಗದೆ, ಉಪಗ್ರಹ ಫೋನ್ ಬಳಸಿ ಹೊಸ ಸಂಖ್ಯೆಯಿಂದ ಪರಿಹಾರ ಕಂಡುಕೊಂಡಳು — ಅದ್ಭುತ ಮನೋಸ್ಥಿತಿ ಅಲ್ಲವೇ ಅದು!
ನನಗೆ ರೋಯಿಂಗ್ ಬಗ್ಗೆ ತಿಳಿದಿರುವುದು ಅಲ್ಪ. ವರ್ಷಗಳ ಹಿಂದೆ ನನ್ನ ಕೆಲಸದ ಸ್ಥಳ ಥೇಮ್ಸ್ ನದಿಯ ತೀರದಲ್ಲಿತ್ತು; ಅದು ಒಲಿಂಪಿಕ್ಸ್ ರೋಯಿಂಗ್ ಮಾರ್ಗ ವಾಗಿತ್ತು. ಮಧ್ಯಾಹ್ನದ lunch ಸಮಯದಲ್ಲಿ ರೋಯರ್ಗಳ ಅಭ್ಯಾಸ ನೋಡುವುದು ನನ್ನ ಹವ್ಯಾಸವಾಗಿತ್ತು. 2012ರಲ್ಲಿ ಬ್ರಿಟಿಷ್ ಮಹಿಳೆಯರ ಜೋಡಿ ರೋಯಿಂಗ್ನಲ್ಲಿ ಮೊದಲ ಒಲಿಂಪಿಕ್ ಚಿನ್ನ ಗೆದ್ದ ಹೆಲೆನ್ ಗ್ರೋವರ್ (ನಂತರ ಹೆಲೆನ್ ಬ್ಯಾಕ್ಷಾಲ್) ಅವರ ಅಭಿಮಾನಿ. ಅನನ್ಯ ಪ್ರಸಾದ್ ಅವರ ಕಥೆ ವಿಶೇಷ — ಏಕೆಂದರೆ ಆಕೆ ನಮ್ಮ ಭಾರತೀಯ ಮೂಲದವಳು, ಜೊತೆಗೆ ಏಕಾಂಗಿಯಾಗಿ rowing ಸಾಧಿಸಿದ್ದಾಳೆ, ಅನೇಕ ವರ್ಣೀಯ ಮಕ್ಕಳಿಗೆ ಕನಸುಗಳನ್ನು ಬೆನ್ನಟ್ಟುವ ಪ್ರೇರಣೆಯನ್ನು ನೀಡುತ್ತಾ.
ಅನನ್ಯಳ ದಿನಚರಿ, 52 ದಿನಗಳು ದೋಣಿಯಲ್ಲಿ ಏಕಾಂಗಿಯಾಗಿ ಕಳೆದದ್ದು, ದಿನವನ್ನು ಯೋಜಿಸಿಕೊಂಡದ್ದು, ಲಭ್ಯವಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡದ್ದು, ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದದ್ದು — ಇವೆಲ್ಲವೂ ಓದಲು ಮನಮೋಹಕವಾಗಿತ್ತು. ಅವಳು ಆ ದೀರ್ಘ ರಾತ್ರಿಗಳನ್ನು ಭಯಪಡದೆ, ಸಾವಿರಾರು ನಕ್ಷತ್ರಗಳ ಶರಣಾರ್ಥಿ 3,000 ಮೈಲುಗಳ ಸಾಗರದ ಮೇಲಿನ ಪ್ರಯಾಣವನ್ನು ಆನಂದಿಸಿದ್ದಾಳೆ ಎಂಬುದು ಮನಸ್ಸಿಗೆ ಸ್ಪೂರ್ತಿ ನೀಡುತ್ತದೆ. ಎಂತಹ ಅದ್ಭುತ ಸಾಧನೆ! ಅವಳ ಜೀವನದ ಮೇಲೆ ಒಂದು ಚಲನಚಿತ್ರ ಬಂದರೆ ಅದ್ಭುತ. ಅನನ್ಯ ಭಾರತೀಯ ಧ್ವಜವನ್ನು ಬ್ರಿಟಿಷ್ ಧ್ವಜದ ಜೊತೆಗೆ ಹಾರಿಸಿದ ಕ್ಷಣ ಮತ್ತು ದೋಣಿಯ ಮೇಲೆ ಇದ್ದ ಕೃಷ್ಣಯ್ಯ ಚೆಟ್ಟಿ ಲೋಗೋ - ನನಗೆ ಮತ್ತಿಷ್ಟು ಹೆಮ್ಮೆಯನ್ನುಂಟು ಮಾಡಿತು. ಎಲ್ಲೆಡೆ Legacyಯ ಪ್ರತೀಕ ತುಂಬಿ ತುಳುಕುತ್ತಿದೆ ಅಂತ ಭಾವಿಸ್ತೀನಿ.
ಲೇಖಕ ಡಾ. ಪ್ರಸಾದ್ ಅವರ ಹಿತನುಡಿಯೊಂದಿಗೆ ಪುಸ್ತಕವನ್ನು ವ್ಯವಸ್ಥೆ ಮಾಡಿದ್ದಕ್ಕಾಗಿ ಡಾ. ಶ್ರೀವತ್ಸ ದೇಸಾಯಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಓದುವಂತಹ ಪುಸ್ತಕ. ಅನನ್ಯಳ ಭವಿಷ್ಯಕ್ಕೆ ಅನೇಕ ಶುಭಾಶಯಗಳನ್ನು ಈ ಬರಹ ಮೂಲಕ ಕಳಿಸುತ್ತೇನೆ.
ಶಾಲಿನಿ ಜ್ಞಾನಸುಬ್ರಮಣಿಯನ್, ಕಾರ್ಡಿಫ್, ವೇಲ್ಸ್, ಯು ಕೆ
ವಿಜಯ ನರಸಿಂಹ ಬರೆಯುತ್ತಾರೆ
'ಸಾಗರದಲ್ಲಿ ಸಾಹಸಿ' ಡಾ. ಜಿ.ಎಸ್. ಶಿವಪ್ರಸಾದ್ ಅವರ ವಿರಚಿತ ಈ ಕೃತಿ ತಮ್ಮ ಮಗಳ ಸಾಗರ ಯಾನದ ಸಾಹಸಗಾಥೆ ಎಂದೆನಿಸಿದರೂ , ಲೇಖಕರು ಮಾನವ ಜೀವನದ ಹಲವು ಮಜಲುಗಳನ್ನು ಓದುಗರಿಗೆ ಸುಲಭವಾಗಿ ತೆರದಿಟ್ಟಿದ್ದಾರೆ. 'World's Toughest Row' ಮಹಾ ಸಾಗರ ಯಾನದ ಸಾಹಸಕ್ಕೂ ಮತ್ತು ನಮ್ಮ ದಿನನಿತ್ಯದ ಜೀವನಕ್ಕೂ ಇರುವ ಸಾಮ್ಯತೆಗಳನ್ನು ಉಲ್ಲೇಖಿಸಿರುವ ಸಂದರ್ಭಗಳು ನನ್ನ ಮನಸ್ಸನ್ನು ಬಹಳವಾಗಿ ಸೆಳೆದವು. ಅನನ್ಯ ಅವರ ಸಾಧನೆ ನಿಜಕ್ಕೂ ಅನನ್ಯವಾದುದು. ಮೃದು ಸ್ವಭಾವ, ಮಿತಭಾಷಿ, ಅಂತರ್ಮುಖಿ ಗುಣಗಳನ್ನು ಹೊಂದಿರುವ ಮಗಳು ಅಸಾಧಾರಣ ಕೆಲಸವೊಂದಕ್ಕೆ ಅಣಿಯಾಗುವೆ ಎಂದಾಗ ಅದೆಂಥ ದಿಟ್ಟ ತಂದೆ-ತಾಯಿಯರಿಗೂ ಭಯ, ಗೊಂದಲ, ಅಧಿಕಾರಯುತ ನಿರಾಕರಣೆ, ಪ್ರತಿರೋಧ ಭಾವಗಳು ಒಮ್ಮೆಗೇ ಬರುವುದು ಸಹಜ. ಒಂದು ವೇಳೆ ತಂದೆ-ತಾಯಿಯರು ಒಪ್ಪಿಗೆ ಕೊಡದಿದ್ದರೂ ಅನನ್ಯ ಅವರು ಈ ಸಾಧನೆಯನ್ನು ಮಾಡಿಯೇ ತೀರುತ್ತಿದ್ದರು ಎನ್ನುವ ಭಾವ ನನ್ನದು, ಇದಕ್ಕೆ ಕಾರಣ ಅವರ ಈ ಮಹಾ ಯಾನದ ಹಿಂದಿರುವ ಉದ್ದಿಶ್ಯ. ಇನ್ನು ಈ ಸಾಹಸಗಾಥೆಗೆ ಬೇಕಾದ ಪೂರ್ವ ತಯಾರಿ, ದೇಹ ಮತ್ತು ಮನಸ್ಸುಗಳೆರಡನ್ನೂ ಕಠಿಣತೆಗೆ ಒರೆ ಹಚ್ಚಲು ಸಜ್ಜು ಮಾಡಿಕೊಂಡ ಎಲ್ಲ ವಿವರವನ್ನು , ಇದರ ಜೊತೆಗೆ ಸಾಗರ ಪರ್ಯಟನೆಯ ಇತಿಹಾಸ, ಹವಾಮಾನದ ಸೂಕ್ಷ್ಮ ವಿಚಾರಗಳು, ತಂತ್ರಜ್ಞಾನದ ಅವಶ್ಯಕತೆಗಳು ಮತ್ತು ಬಳಕೆಯ ತರಬೇತಿ , ಹೀಗೆ ಹಲವಾರು ವಿಚಾರಗಳನ್ನು ಲೇಖಕರು ಸಮರ್ಪಕವಾಗಿ ವಿವರಿಸಿದ್ದಾರೆ. ಜಿ.ಎಸ್.ಎಸ್ ಅವರ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಎನ್ನುವ ಕವಿತೆಯ ಆಂತರ್ಯವನ್ನು ಕವಿ ಖಲೀಲ ಗಿಬ್ರಾನ್ ಅವರ 'Fear' ಕವಿತೆಯ ಸಾಲುಗಳಿಗೆ ಇರುವ ಸಾಮ್ಯತೆಯನ್ನು ಪ್ರಸಾದ್ ಅವರು ಬಹಳ ಚೆನ್ನಾಗಿ ಸಾಂದರ್ಬಿಕವಾಗಿ ಕಟ್ಟಿಕೊಟ್ಟಿದ್ದಾರೆ. ಯಾನದ ನಡುವೆ ಅನನ್ಯ ಅವರು ಎದುರಿಸಬೇಕಾದ ನಿರೀಕ್ಷಿತ ಮತ್ತು ಅನಿರೀಕ್ಷಿತ ಸಮಸ್ಯೆಗಳು ಮತ್ತು ಅವುಗಳನ್ನು ದೋಣಿಯೊಳಗೆ ಮತ್ತೆ ಕೆಲವು ಸಲ ಸಾಗರದೊಳಗೆ ಧುಮುಕಿ ನಿವಾರಿಸಿದ ಬಗೆ ಎಲ್ಲವೂ ನಮಗೆ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದಾರೆ. ನಾವು ಜೀವನದಲ್ಲಿ ಸಮಸ್ಯೆಗಳನ್ನು ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಎದುರಿಸಬೇಕೇ ಹೊರೆತು ಸಮಸ್ಯೆ ನಮ್ಮನ್ನು ಹೆದರಿಸುವಂತಾಗಬಾರದು ಎನ್ನುವ ತತ್ವವನ್ನು ಪ್ರಸಾದ್ ಅವರು ತಿಳಿಸಿಕೊಟ್ಟಿದ್ದಾರೆ.
ಅತ್ತ ಮಗಳು ಒಂಟಿಯಾಗಿ ಪ್ರಕೃತಿಯ ಸವಾಲುಗಳನ್ನು ಎದುರಿಸುತ್ತಿರುವಾಗ ಇತ್ತ ತಂದೆ ತಾಯಿಯರು ಪಡುತ್ತಿದ್ದ ಆತಂಕ, ತಲ್ಲಣ, ಭಾವುಕತೆ, ಅಸಹಾಯಕ ಪರಿಸ್ಥಿತಿ ಎಲ್ಲವೂ ಅನುಭವಿಸಿದವರಿಗಷ್ಟೇ ಗೊತ್ತು.
ಅನನ್ಯ ಅವರ ಸಾಧನೆಗೆ ನನ್ನದೊಂದು ದೊಡ್ಡ ಸಲಾಂ ಮತ್ತು ಈ ಸಾಹಸಗಾಥೆಯ ಕೃತಿಗೆ ಪ್ರಸಾದ್ ಅವರಿಗೆ ನನ್ನ ಅಭಿನಂದನೆಗಳು.
✍️ವಿಜಯ ನರಸಿಂಹ, ಗ್ಲಾಸ್ಟರ್, ಯು ಕೆ
ಶ್ರೀಹರ್ಷ ನೀರಗುಂದ ನಾಗರಾಜ್ ಬರೆಯುತ್ತಾರೆ:
“ಸಾಗರದಲ್ಲಿ ಸಾಹಸಿ- ಬ್ರಿಲಿಯಂಟ್ ಅನುಭವ ನನಗೆ”
ಕೆಲವು ಪುಸ್ತಕಗಳು ಕೇವಲ ಕಥೆಯನ್ನು ಹೇಳುವುದಿಲ್ಲ; ಅವು ನಮ್ಮ ಮನಸ್ಸನ್ನು ತಟ್ಟುತ್ತವೆ, ನಮ್ಮ ಆಲೋಚನೆಗಳನ್ನು ಬದಲಿಸುತ್ತವೆ ಮತ್ತು ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತವೆ. ಅಂತಹ ಅಪರೂಪದ ಕೃತಿಗಳಲ್ಲಿ ಡಾ. ಜಿ. ಎಸ್. ಶಿವಪ್ರಸಾದ್ ಅವರು ರಚಿಸಿರುವ “ಸಾಗರದಲ್ಲಿ ಸಾಹಸಿ” ಒಂದು. ಈ ಪುಸ್ತಕವನ್ನು ಓದಿದ ನಂತರ ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆ ಒಂದೇ ಇದು ಕೇವಲ ಸಮುದ್ರಯಾನದ ಕಥೆಯಲ್ಲ, ಇದು ಮಾನವನ ಅಚಲ ಸಂಕಲ್ಪ, ಅಸಾಧ್ಯವನ್ನು ಸಾಧ್ಯವಾಗಿಸುವ ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದ ಜೀವಂತ ದಾಖಲೆಯಾಗಿದೆ.
ಈ ಪುಸ್ತಕದ ಅತ್ಯಂತ ವಿಶೇಷ ಅಂಶವೆಂದರೆ, ಲೇಖಕರು ತಮ್ಮ ಮಗಳ ಸಾಹಸಮಯ ಸಮುದ್ರಯಾನವನ್ನು ಕೇವಲ ಘಟನೆಗಳ ಸರಣಿಯಾಗಿ ಹೇಳದೆ, ಓದುಗನನ್ನು ಆ ಪಯಣದ ಸಹಯಾತ್ರಿಯನ್ನಾಗಿ ಮಾಡುತ್ತಾರೆ. ಪ್ರತಿಯೊಂದು ಅಧ್ಯಾಯದಲ್ಲೂ ಭಾವನೆ, ಉತ್ಸಾಹ, ಆತಂಕ, ನಿರೀಕ್ಷೆ ಮತ್ತು ವಿಜಯದ ಕ್ಷಣಗಳು ಅಷ್ಟು ಸಹಜವಾಗಿ ಮೂಡಿಬಂದಿವೆ ಎಂದು ಓದುತ್ತಿರುವಾಗ ನಾವೇ ಆ ಪುಟ್ಟ ದೋಣಿಯಲ್ಲಿ ಸಾಗರದ ಅಲೆಗಳೊಂದಿಗೆ ಹೋರಾಡುತ್ತಿರುವ ಅನುಭವವಾಗುತ್ತದೆ.
ಲೇಖಕರ ಬರವಣಿಗೆಯ ಶೈಲಿ ತುಂಬಾ ಸರಳ, ಸುಂದರ ಮತ್ತು ಹೃದಯಸ್ಪರ್ಶಿಯಾಗಿದೆ. ಅನಗತ್ಯ ಅಲಂಕಾರಿಕ ಭಾಷೆಯನ್ನು ಬಳಸದೆ, ನೇರವಾದ ಆದರೆ ಪರಿಣಾಮಕಾರಿಯಾದ ನಿರೂಪಣೆಯ ಮೂಲಕ ಅವರು ಓದುಗರ ಮನಸ್ಸನ್ನು ಗೆಲ್ಲುತ್ತಾರೆ. ಪ್ರತಿಯೊಂದು ಪುಟವೂ ಕುತೂಹಲವನ್ನು ಹೆಚ್ಚಿಸುತ್ತದೆ. ಮುಂದಿನ ಪುಟದಲ್ಲಿ ಏನಾಗುತ್ತದೆ ಎಂಬ ನಿರೀಕ್ಷೆಯಿಂದ ಪುಸ್ತಕವನ್ನು ಕೆಳಗಿಡಲು ಮನಸ್ಸೇ ಆಗುವುದಿಲ್ಲ. ಇದೇ ಒಬ್ಬ ಉತ್ತಮ ಲೇಖಕರ ಯಶಸ್ಸಿನ ಗುರುತು ಎಂದು ನಾನು ಭಾವಿಸುತ್ತೇನೆ.
ಈ ಕೃತಿಯಲ್ಲಿ ನನ್ನನ್ನು ಅತ್ಯಂತ ಹೆಚ್ಚು ಪ್ರಭಾವಿಸಿದ ವಿಷಯವೆಂದರೆ, ಒಂದು ಮಹತ್ತರ ಕನಸನ್ನು ನನಸಾಗಿಸಲು ಬೇಕಾದ ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ ಮತ್ತು ಭಾವನಾತ್ಮಕ ಸಮತೋಲನ. ಸಾವಿರಾರು ಕಿಲೋಮೀಟರ್‌ಗಳ ಸಮುದ್ರವನ್ನು ಒಬ್ಬರೇ ದಾಟುವುದು ಹೊರಗಿನಿಂದ ನೋಡಿದರೆ ಸಾಹಸವೆನಿಸುತ್ತದೆ. ಆದರೆ ಅದರ ಹಿಂದೆ ಅಡಗಿರುವ ಅನೇಕ ವರ್ಷಗಳ ಅಭ್ಯಾಸ, ಕಟ್ಟುನಿಟ್ಟಾದ ತರಬೇತಿ, ವೈಜ್ಞಾನಿಕ ಸಿದ್ಧತೆ, ಶಿಸ್ತು, ಸಮಯಪಾಲನೆ, ಆಹಾರ ಪದ್ಧತಿ ಮತ್ತು ಮನಸ್ಸಿನ ನಿಯಂತ್ರಣವನ್ನು ಈ ಪುಸ್ತಕ ಬಹಳ ಸುಂದರವಾಗಿ ವಿವರಿಸುತ್ತದೆ.
ಈ ಪುಸ್ತಕವನ್ನು ಓದುತ್ತಾ ಹೋದಂತೆ, ಯಾವುದೇ ಸಾಧನೆಗೆ ಅದೃಷ್ಟಕ್ಕಿಂತ ಹೆಚ್ಚು ಮುಖ್ಯವಾದುದು ನಿರಂತರ ಪರಿಶ್ರಮ ಮತ್ತು ಗುರಿಯ ಮೇಲಿನ ಅಚಲ ನಂಬಿಕೆ ಎಂಬ ಸತ್ಯ ಮತ್ತೆ ಮತ್ತೆ ಮನವರಿಕೆಯಾಗುತ್ತದೆ. ಪ್ರತಿಯೊಂದು ಯಶಸ್ಸಿನ ಹಿಂದೆ ಕಾಣದ ತ್ಯಾಗ, ಅನೇಕ ವಿಫಲ ಪ್ರಯತ್ನಗಳು, ಕಣ್ಣೀರು ಮತ್ತು ಆತ್ಮವಿಶ್ವಾಸ ಅಡಗಿರುತ್ತವೆ ಎಂಬುದನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ನನಗೆ ಇನ್ನೊಂದು ವಿಶೇಷವಾಗಿ ಇಷ್ಟವಾದ ಅಂಶವೆಂದರೆ, ಈ ಕಥೆಯಲ್ಲಿ ಕುಟುಂಬದ ಪಾತ್ರವನ್ನು ಲೇಖಕರು ಬಹಳ ನೈಜವಾಗಿ ಬಿಂಬಿಸಿದ್ದಾರೆ. ಮಗಳ ಕನಸಿನ ಹಿಂದೆ ನಿಂತಿರುವ ತಂದೆಯ ಪ್ರೋತ್ಸಾಹ, ಮಾರ್ಗದರ್ಶನ, ಕಾಳಜಿ ಮತ್ತು ನಂಬಿಕೆ ಪ್ರತಿಯೊಂದು ಪುಟದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಕನಸುಗಳಿಗೆ ರೆಕ್ಕೆಗಳನ್ನು ನೀಡಿದರೆ, ಮಕ್ಕಳು ಜಗತ್ತಿನ ಯಾವುದೇ ಶಿಖರವನ್ನು ತಲುಪಬಹುದು ಎಂಬ ಸಂದೇಶವನ್ನು ಈ ಪುಸ್ತಕ ಅತ್ಯಂತ ಸುಂದರವಾಗಿ ಸಾರುತ್ತದೆ.
ಸಮುದ್ರ ಎಂಬುದು ಕೇವಲ ನೀರಿನ ವಿಶಾಲ ಹರಡುವಿಕೆಯಲ್ಲ; ಅದು ಅನಿಶ್ಚಿತತೆ, ಭಯ, ಏಕಾಂತ ಮತ್ತು ಸವಾಲುಗಳ ಸಂಕೇತವಾಗಿದೆ. ಅಂತಹ ಸಾಗರವನ್ನು ಎದುರಿಸುತ್ತಾ ಪ್ರತಿಕ್ಷಣವೂ ಧೈರ್ಯದಿಂದ ಮುನ್ನಡೆಯುವ ವ್ಯಕ್ತಿಯ ಕಥೆಯನ್ನು ಓದುವುದು ನಿಜಕ್ಕೂ ರೋಮಾಂಚನಕಾರಿ ಅನುಭವ. ಪ್ರತಿಯೊಂದು ಅಲೆ, ಪ್ರತಿಯೊಂದು ಬಿರುಗಾಳಿ, ಪ್ರತಿಯೊಂದು ಕಠಿಣ ಕ್ಷಣವೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಪ್ರತೀಕವಾಗಿ ಕಾಣುತ್ತವೆ. ಅವುಗಳನ್ನು ಎದುರಿಸಿ ಗೆಲ್ಲುವ ಮನೋಬಲವೇ ನಿಜವಾದ ಯಶಸ್ಸಿನ ಗುಟ್ಟು ಎಂಬುದನ್ನು ಈ ಕೃತಿ ನಮಗೆ ತಿಳಿಸುತ್ತದೆ.
ಈ ಪುಸ್ತಕ ಕೇವಲ ಸಾಹಸಪ್ರಿಯರಿಗೆ ಮಾತ್ರವಲ್ಲ. ಜೀವನದಲ್ಲಿ ದೊಡ್ಡ ಕನಸು ಕಾಣುವ ಪ್ರತಿಯೊಬ್ಬ ವಿದ್ಯಾರ್ಥಿ, ಕ್ರೀಡಾಪಟು, ವೃತ್ತಿಪರ, ಉದ್ಯಮಿ, ನಾಯಕ ಮತ್ತು ಸಾಮಾನ್ಯ ಓದುಗರಿಗೂ ಇದು ಸಮಾನವಾಗಿ ಸ್ಫೂರ್ತಿ ನೀಡುತ್ತದೆ. ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಶಿಸ್ತು, ಸಹನೆ, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೂಲ ಎಂಬ ಸಂದೇಶವನ್ನು ಈ ಪುಸ್ತಕ ಸ್ಪಷ್ಟವಾಗಿ ನೀಡುತ್ತದೆ.
ನಾನು ಓದಿದ ಅನೇಕ ಪ್ರೇರಣಾದಾಯಕ ಪುಸ್ತಕಗಳಲ್ಲಿ “ಸಾಗರದಲ್ಲಿ ಸಾಹಸಿ” ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಪುಸ್ತಕದ ಕೊನೆಯ ಪುಟವನ್ನು ಓದಿದಾಗ ಕೇವಲ ಒಂದು ಸಾಹಸದ ಕಥೆಯನ್ನು ಮುಗಿಸಿದ ಅನುಭವವಾಗಲಿಲ್ಲ; ಬದಲಾಗಿ ಜೀವನವನ್ನು ಹೊಸ ದೃಷ್ಟಿಯಿಂದ ನೋಡುವ ಪ್ರೇರಣೆ ದೊರಕಿತು. ಈ ಪುಸ್ತಕ ನನ್ನಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಕನಸುಗಳ ಹಿಂದೆ ನಿರಂತರವಾಗಿ ಓಡಬೇಕೆಂಬ ಉತ್ಸಾಹವನ್ನು ಹೆಚ್ಚಿಸಿತು.
ಡಾ. ಜಿ. ಎಸ್. ಶಿವಪ್ರಸಾದ್ ಅವರು ತಮ್ಮ ಮಗಳ ಸಾಧನೆಯನ್ನು ದಾಖಲಿಸುವುದರ ಜೊತೆಗೆ, ಇಡೀ ಸಮಾಜಕ್ಕೆ ಒಂದು ಪ್ರೇರಣಾದಾಯಕ ಸಂದೇಶವನ್ನು ನೀಡಿದ್ದಾರೆ. ಅವರ ಬರವಣಿಗೆಯಲ್ಲಿ ತಂದೆಯ ಹೆಮ್ಮೆ, ಮಗಳ ಮೇಲಿನ ಪ್ರೀತಿ ಮತ್ತು ಸಾಧನೆಯ ಮೇಲಿನ ಗೌರವ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅದೇ ಈ ಕೃತಿಯ ದೊಡ್ಡ ಶಕ್ತಿಯಾಗಿದೆ.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, “ಸಾಗರದಲ್ಲಿ ಸಾಹಸಿ” ಕೇವಲ ಒಂದು ಪುಸ್ತಕವಲ್ಲ; ಇದು ಧೈರ್ಯ, ಪರಿಶ್ರಮ, ಶಿಸ್ತು, ಸಂಕಲ್ಪ ಮತ್ತು ಆತ್ಮವಿಶ್ವಾಸದ ಪಾಠಶಾಲೆಯಾಗಿದೆ. ಈ ಕೃತಿ ಓದುಗರಲ್ಲಿ ದೊಡ್ಡ ಕನಸು ಕಾಣುವ ಧೈರ್ಯವನ್ನು ಹುಟ್ಟಿಸುತ್ತದೆ ಮತ್ತು ಆ ಕನಸುಗಳನ್ನು ನನಸಾಗಿಸಲು ಬೇಕಾದ ಮನೋಬಲವನ್ನು ನೀಡುತ್ತದೆ. ಇಂತಹ ಅತ್ಯುತ್ತಮ, ಹೃದಯಸ್ಪರ್ಶಿ ಮತ್ತು ಜೀವನಕ್ಕೆ ಹೊಸ ಪ್ರೇರಣೆ ನೀಡುವ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಡಾ. ಜಿ. ಎಸ್. ಶಿವಪ್ರಸಾದ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಈ ಪುಸ್ತಕವನ್ನು ಓದಿದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಹೊಸ ಕನಸನ್ನು ಕಾಣಲು ಪ್ರೇರೇಪಿತರಾಗುತ್ತಾರೆ ಎಂಬುದು ನನ್ನ ದೃಢ ನಂಬಿಕೆ. “ಸಾಗರದಲ್ಲಿ ಸಾಹಸಿ” ನಿಜಕ್ಕೂ ಒಂದು ಮರೆಯಲಾಗದ ಓದಿನ ಅನುಭವ, ಪ್ರೇರಣೆಯ ಮಹಾಯಾನ ಮತ್ತು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ಓದಲೇಬೇಕಾದ ಕೃತಿ.
(Map of the journey is shown above. Credit: WTR) ಈ ಸಲದ ಅನಿವಾಸಿಯಲ್ಲಿ ಒಂದು ಪುಸ್ತಕದ ಬಗ್ಗೆ (ಸಾಗರದಲ್ಲಿ ಸಾಹಸಿ) ಡಾ ದಾಕ್ಷಾಯಿಣಿ ಮುಂತಾಗಿ ಅನೇಕರ ಅನಿಸಿಕೆಗಳ ಸಂಗ್ರಹವಿದೆ. ಸಂಸ್ಕೃತದಲ್ಲೊಂದು ನುಡಿಗಟ್ಟಿದೆ: ”ಪುತ್ರಾದಿಚ್ಛೇದ್ ಪರಾಜಯಂ.” (ಜಗತ್ತಿನಲ್ಲಿ ಉಳಿದ ಎಲ್ಲರನ್ನೂ ಗೆಲ್ಲ ಬೇಕು, ಆದರೆ ಮಕ್ಕಳಿಂದ ಪರಾಜಿತರಾದರೂ ಅಡ್ಡಿಯಿಲ್ಲ.) ಮಕ್ಕಳು ತಮ್ಮನ್ನೂ ಮೀರಿ ಬೆಳೆಯಬೇಕು, ಉನ್ನತಿ, ಮತ್ತು ಕೀರ್ತಿ ಪಡೆಯ ಬೇಕು ಎನ್ನುವ ಅಭಿಲಾಷೆ ತಂದೆತಾಯಂದಿರದು. (ಪು 11). ಅಂಥ ಒಂದು ಸಾಹಸವನ್ನು, ಅಪರೂಪದ ಸಮುದ್ರಯಾನವನ್ನು (World's Toughest Row -WTR ) ಮಾಡಿದವಳು ಯುಕೆಯ ಶೆಫ಼ೀಲ್ಡ್ ನಗರವಾಸಿ ಅನನ್ಯ ಪ್ರಸಾದ್. 130 ವರ್ಷಗಳಿಂದ ಹುಟ್ಟು ಹಾಕುತ್ತ ಅಟ್ಲಾಂಟಿಕ್ ದಾಟಿದ್ದಾನೆ ಮಾನವ. ಆದರೆ ಆಕೆ ಏಕಾಕಿಯಾಗಿ ಅಟ್ಲಾಂಟಿಕ್ ಸಾಗರವನ್ನು 3,000 ಮೈಲಿ ಹುಟ್ಟು ದೋಣಿಯಲ್ಲಿ ದಾಟಿ 2025 ಫೆ.1ರಂದು ದಡ ಸೇರಿ ಇನ್ನಿತರ ರೀತಿಯ ದಾಖಲೆ ಮಾಡಿದಳು. ಆ ಸುದ್ದಿ ಬರಿ ಯುಕೆ, ಯೂರೋಪಲ್ಲದೆ ಈಗಾಗಲೇ ಭಾರತ, ಕರ್ನಾಟಕದಲ್ಲೂ ಪ್ರಸಿದ್ಧಿ ಪಡೆದಿದೆ. ಅದರ ಹಿನ್ನೆಲೆಯ ಬಗ್ಗೆ, ’ಅಪ್ಪನ ಕಾತರ, ಭಯ, ಉದ್ವೇಗ, ಉತ್ಸಾಹ, ರೋಚಕತೆ, ಕೊನೆಗೆ ಸಂತೋಷ’ (ಹಿನ್ನುಡಿಯಿಂದ) ಇವೆಲ್ಲವುಗಳನ್ನು ಸವಿಸ್ತಾರವಾಗಿ ಮೂಡಿಸಿರುವ ಆಕೆಯ ತಂದೆ ಡಾ ಜಿ ಎಸ್ ಶಿವಪ್ರಸಾದ್ ಅವರ ಈ ಪುಸ್ತಕಕ್ಕಾಗಿ ನನ್ನಂತೆ ಬಹು ಜನರು ಕಾಯುತ್ತಿದ್ದರು. ಈ ಮೊದಲ ಕಂತಿನಲ್ಲಿ ಐದು ಬರಹಗಳಿವೆ - ಡಾ ದಾಕ್ಷಾಯಿಣಿ, ಶ್ರೀವತ್ಸ ದೇಸಾಯಿ, ಎಚ್. ಡುಂಡಿರಾಜ್, ಎಮ್ ಆರ್ ಕಮಲ, ದೀಪಾ ಸಣ್ಣಕ್ಕಿ. ಅವುಗಳನ್ನು ಸ್ವೀಕರಿಸಿದ ಕ್ರಮದಲ್ಲಿಯೇ ಪ್ರಕಟಿಸಿದ್ದೇವೆ. ಇನ್ನೂ ಹಲವಾರು ಜನರ ಬರಹಗಳೂ ಬಂದಿವೆ. ಮುಂದಿನ ವಾರ ಕೆಲವನ್ನು ಪ್ರಕಟಿಸುವ ಯೋಜನೆಯಿದೆ. ಚಿತ್ರಗಳು ಬಹುತೇಕವಾಗಿ ಎಲ್ಲವೂ WTR ಕೃಪೆಯಿಂದ. ಕೊನೆಯಲ್ಲಿ ಒಂದು ವಿಡಿಯೋದ ಕೊಂಡಿಯಿದೆ. ಅದು ನೇರವಾಗಿ ಫೇಸ್ ಬುಕ್ಕಿಗೆ (FB) ಒಯ್ಯುತ್ತದೆ ಎಂದು ಸ್ಪಷ್ಟಪಡಿಸುತ್ತೇನೆ. (ಸಂ)
ಡಾ ಜಿ .ಸ್. ಶಿವಪ್ರಸಾದ್ ರವರು ಬರೆದಿರುವ 'ಸಾಗರದಲ್ಲಿ ಸಾಹಸಿ' ಪುಸ್ತಕವನ್ನು ಇತ್ತೀಚೆಗೆ ಓದಿ ಮುಗಿಸಿದೆ. ಅನನ್ಯ ಪ್ರಸಾದಳ ''ಅಟ್ಲಾಂಟಿಕ್ ಒಡಿಸ್ಸಿ'' ಸಾಹಸದ ಬಗ್ಗೆ ಕೇಳಿದ್ದೆ; ಸಾಮಾಜಿಕ ಮಾಧ್ಯಮದಲ್ಲಿ ಅದರ ಬಗ್ಗೆ ಓದಿದ್ದೆ. ಪುಸ್ತಕವನ್ನು ಓದಿದಾಗ ನನಗೆ ತಿಳಿದಿದ್ದ ಮಾಹಿತಿ ಬಹು ಕಡಿಮೆಯೆಂದು ಅರಿವಾಯಿತು. ಬಹಳ ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕವಿದು. ಕಥೆಯೂ ಅಲ್ಲ, ಪ್ರಬಂಧವೂ ಅಲ್ಲದ ವಿಶಿಷ್ಟವಾದ ಬರಹವಿದು. ಪ್ರಸಾದ್ ರವರ ಬರವಣಿಗೆಯಲ್ಲಿ, ಬಹಳಷ್ಟು ಮಾಹಿತಿಯಿದೆ, ಭಾವುಕತನವಿದೆ, ಉತ್ಪ್ರೇಕ್ಷೆಯಿಲ್ಲದ, ಬಹು ಪ್ರಾಮಾಣಿಕ ದಾಖಲೆಯಿದೆ.
ಪ್ರಬಂಧದ ರೀತಿಯ ಬರವಣಿಗೆಯಿರಬಹುದೆಂದು, ಸ್ವಲ್ಪ ಅನ್ಯ ಮನಸ್ಕಳಾಗಿ ಓದಲು ಶುರುಮಾಡಿದ ನನಗೆ, ಪುಸ್ತಕ ಮುಗಿದಿದ್ದೇ ತಿಳಿಯಲಿಲ್ಲ. ತನ್ನದೇ ಕರುಳ ಕುಡಿ ಅಗಾಧವಾದ ಅಟ್ಲಾಂಟಿಕ್ ಸಾಗರದಲ್ಲಿ ಒಬ್ಬಳೇ ಸಣ್ಣ ದೋಣಿಯೊಂದರಲ್ಲಿ, ಸುತ್ತಮುತ್ತ ಯಾವುದೇ ರೀತಿಯ ಸಹಾಯ ಇಲ್ಲದೆ, ಮೂರು ಸಾವಿರ ಮೈಲಿಯನ್ನು ಹುಟ್ಟುಹಾಕುತ್ತ ಕ್ರಮಿಸುವೆನೆಂದು ನಿರ್ಧಾರ ಮಾಡಿದಾಗ, ಇಂತಹ ಒಂದು ಸಾಹಸದ ಬಗ್ಗೆ ಅರಿವಿರದ ಅನಿವಾಸಿ ವೈದ್ಯ ದಂಪತಿಗಳ ಆಂದೋಲನವನ್ನು ಊಹಿಸಲು ಸಹ ಅಸಾಧ್ಯ. ಅಪೂರ್ವವಾದ ಧೈರ್ಯ, ಉತ್ಸಾಹ, ಛಲ ಅದೆಲ್ಲಕ್ಕಿಂತ ಹೆಚ್ಚಾಗಿ ಅದಕ್ಕೆ ಬೇಕಾದ ದೈಹಿಕ ಶ್ರಮವನ್ನು ಪಡಲು ಹೊರಟಿರುವ ಮಗಳ ಅಕಾಂಕ್ಷೆಯನ್ನು ಗುರುತಿಸಿ ಹೆಮ್ಮೆ ಪಡುವುದೇ ಅಥವಾ ಇಂಥಾ ಸಾಧನೆಯ ಪಥ ಹಿಡಿಯುವುದು ಮೂರ್ಖತನವೇ ಎನ್ನುವ ಪ್ರಶ್ನೆ ಪ್ರತಿಯೊಬ್ಬ ತಂದೆ ತಾಯಿಯನ್ನು ಕಾಡುತ್ತದೆ. ಮಕ್ಕಳು ನಮಗೆ ತಿಳಿಯದಿರುವ ವಿದ್ಯಾಭ್ಯಾಸ ಮಾಡುತ್ತೀವಿ ಎಂದರೆಯೇ, ನಿದ್ದೆ ಕಳೆದುಕೊಳ್ಳುವ ಭಾರತೀಯ ಪೋಷಕರು ನಾವು. ಅಂತಹದರಲ್ಲಿ ಇಂತಹ ಬಹು ದೊಡ್ಡ ನಿರ್ಧಾರ ಎದುರಿಸಿರಬಹುದಾದ ಪ್ರಶ್ನೆಗಳು, ಸಂದೇಹಗಳು, ತಲ್ಲಣಗಳು, ಚರ್ಚೆ ಮತ್ತು ವಾಗ್ವಾದಗಳು ಮತ್ತು ನಿರ್ಧಾರಗಳನ್ನ ಹಿತೈಶಿಯಾಗಿ, ಮಾರ್ಗದರ್ಶಕನಾಗಿ ಎಲ್ಲಕಿಂತ ಹೆಚ್ಚಾಗಿ ತಂದೆಯಾಗಿ ಎದುರಿಸುವ ಪರಿಯನ್ನು ಸರಳವಾಗಿ ಈ ಪುಸ್ತಕ ನಮ್ಮ ಮುಂದಿಡುತ್ತದೆ .
ನಮ್ಮ ಮಕ್ಕಳು ನಮ್ಮಂತೆಯೇ ಇರಬೇಕೆನ್ನುವುದು, ಸುರಕ್ಷಿತವಾಗಿರಬೇಕೆನ್ನುವುದು, ಸಮಾಜದ ಕಟ್ಟುಪಾಡುಗಳಲ್ಲಿ ಬದುಕಬೇನ್ನುವುದು ಬಹಳಷ್ಟು ಭಾರತೀಯ ಪೋಷಕರ ಆಸೆ ಮತ್ತು ಕನಸೂ ಸಹ. ನಮ್ಮ ಮಕ್ಕಳು ಅವರದೇ ಆದ ವ್ಯಕ್ತಿತ್ಯವನ್ನು ಹೊಂದಿರುತ್ತಾರೆನ್ನುವುದನ್ನು ನಾವು ಮರೆತುಬಿಡುತ್ತೇವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳಿಗೆ ಅವರದೇ ಆದ ವ್ಯಕ್ತಿತ್ವವನ್ನು ಪೋಷಿಸಿಕೊಳ್ಳಲು ಅವಕಾಶ ಮತ್ತು ಉತ್ತೇಜನ ಜಾಸ್ತಿ. ಇದನ್ನು ನಾವು ಒಪ್ಪಿಕೊಳ್ಳುವ ರೀತಿ ಪ್ರತಿಯೊಂದು ಕುಟುಂಬದಲ್ಲಿಯೂ ವಿಭಿನ್ನ. ಮಕ್ಕಳ ನಿರ್ಧಾರಗಳನ್ನ, ಪ್ರತ್ಯೇಕ ಅಸ್ತಿತ್ವಗಳನ್ನ ಗುರುತಿಸುವ, ಅಂಗೀಕರಿಸುವ, ಆಂದೋಲನವನ್ನ, ಪ್ರಸಾದ್ ಬಹಳ ಸರಳವಾಗಿ, ಪರಿಣಾಮಕಾರಿಯಾಗಿ ಬರೆದಿದ್ದಾರೆ. ಈ ವಿಷಯಕ್ಕೆ ' ಸಾಗರದಲ್ಲಿ ಸಾಹಸಿ' ತನ್ನದೇ ರೀತಿಯಲ್ಲಿ ಎಲ್ಲಾ ಪೋಷಕರ ಮಾರ್ಗದರ್ಶಿಯಾಗಬಲ್ಲದು.
ಸಾಹಸಕ್ಕೆ ದೈಹಿಕ ಶ್ರಮದಷ್ಟೇ, ಮಾನಸಿಕ ಶ್ರಮವೂ ಮುಖ್ಯವೆಂದು ಹೇಳುತ್ತಾರೆ. ಮಧ್ಯಮ ವರ್ಗದ, ಯಾವ ರೀತಿಯ ಸಾಹಸದ ಹಿನ್ನೆಲೆಯಿಲ್ಲದ ಕುಟಂಬದಲ್ಲಿ ಜನಿಸಿದ ಮಕ್ಕಳು ಇಂತಹ ಸ್ಪರ್ಧೆಯ ಬಗ್ಗೆ ಯೋಚಿಸುವುದೇ ಅಪರೂಪ. ಸ್ಪರ್ಧಿಗಳ ಹಿನ್ನಲೆಯೇನಿರಬಹುದು, ಬೆಳೆದುಬಂದ ರೀತಿಯ ಪ್ರಭಾವವಿರಬಹುದೆ, ಹುಟ್ಟಿನಿಂದಲೆ/ gene ನಲ್ಲಿ ಬೆಳೆದು ಬಂದ ವ್ಯಕ್ತಿತ್ವವೆ ಅನ್ನುವ ಸಂದೇಹಗಳು, ದೂರದರ್ಶನದಲ್ಲಿ ಬಿಳಿಯ ಬಣ್ಣದ ಪಾಶ್ಚಿಮಾತ್ಯರನ್ನು ನೋಡಿದಾಗ ನನ್ನ ಮನಸ್ಸಿಗೆ ಬರುತ್ತಿದ್ದವು. ಈ ನನ್ನ ಪ್ರಶ್ನೆಗಳಿಗೆ, ಉತ್ತರ, ಅಂದರೆ ಅನ್ಯನ ಬೆಳೆದುಬಂದ ರೀತಿಯ, ಆಕೆಯ ವಕ್ತಿತ್ಯ್ವದ ಪರಿಚಯ, ತಂದೆಯಾಗಿ ಪ್ರಸಾದ್ ಮಾಡಿಕೊಟ್ಟಿದ್ದಾರೆ. ಕರ್ನಾಟಕದ, ಕನ್ನಡತಿ ಅನನ್ಯಾಳ ಈ ಸಾಧನೆ ಕನ್ನಡಿಗರಿಗೆ, ಭಾರತೀಯರಿಗೆ ಮಾತ್ರವಲ್ಲ, ಪ್ರಪಂಚದ ಎಲ್ಲಾ ಬಣ್ಣದ ಮಕ್ಕಳಿಗೆ ಸ್ಪೂರ್ತಿದಾಯಕ ಎಂದು ಮತ್ತೊಮ್ಮೆ ಹೇಳಿದರೆ ಅತಿಶಯೋಕ್ತಿಯೇನಲ್ಲ.
ಅನನ್ಯ ಛಲಬಿಡದ ತ್ರಿವಿಕ್ರಮನಂತೆ "ಪ್ರಪಂಚದ ಕಠಿನ ಸಮುದ್ರಯಾನ"( ) ಎನ್ನುವ ಅಂತರರಾಷ್ಟ್ರೀಯ ಸಂಸ್ಥೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ೩೦೦೦ ಮೈಲಿಯನ್ನು, ಏಕಾಂಗಿಯಾಗಿ ಹುಟ್ಟು ಹಾಕಿ, ಕೇವಲ ೫೨ ದಿನಗಳಲ್ಲಿ ಕ್ರಮಿಸಿ ದಾಖಲೆ ಸಾಧಿಸಿರುವುದು ಭಾರತೀಯರಿಗೆಲ್ಲ, ಅದರಲ್ಲೂ ಕನ್ನಡಿಗರಿಗೆಲ್ಲ ಬಹು ಹೆಮ್ಮೆಯ ವಿಷಯ. ಇಂತಹ ಅಪೂರ್ವ ಯಶಸ್ಸನ್ನ ಕಂಡ ಅನನ್ಯ ವಿಶ್ವದ ಪ್ರಪ್ರಥಮ ವರ್ಣೀಯ ಮಹಿಳೆ. ಅಗಾಧವಾದ ಅಲೆಯ ಅಪ್ಪಳಕ್ಕೆ ಮೊಬೈಲ್ ಫೋನ್ ಕಳೆದುಕೊಂಡಿದ್ದು, ದೋಣಿಯ ಚುಕ್ಕಾಣಿಯನ್ನು ಆಳವಾದ ಸಾಗರದಲ್ಲಿ ಇಳಿದು ತಾನೇ ರಿಪೇರಿ ಮಾಡಿದ್ದು, ಹುಟ್ಟು ಮುರಿದು ಹೋಗಿದ್ದು ಇನ್ನಿತರ ಸಂಧರ್ಭಗಳಲ್ಲದೆ, ಪ್ರಶಾಂತ, ನೀರವ ರಾತ್ರಿಗಳಲ್ಲಿ ಸಾಗರದ ಅಂದವನ್ನು ಆಸ್ವಾದಿಸಿದ ಘಳಿಗೆಗಳ ವಿವರವಿದೆ. ಇದನ್ನು ಓದಿಯೇ ಸವಿಯಲು ಸಾಧ್ಯ.
ಸಾಗರದಲ್ಲಿ ಸಾವಿರಾರು ಮೈಲಿ ಹುಟ್ಟುಹಾಕಿ ಪಯಣಿಸಿದ್ದು ಮಗಳು, ಆಕೆಯೊಡನೆ ಆತಂಕ ಆನಂದಗಳ ಭಾವಸಮುದ್ರದಲ್ಲಿ ಈಜಿದ್ದು ತಂದೆ ಮತ್ತು ತಾಯಿ. ಈ ಏರಡು ಪ್ರಯಾಣಗಳ ನಡುವಿನ ಪ್ರಯಾಣಿಕ ಓದುಗ. ಕಠಿಣವಾದ ಸಮುದ್ರಯಾನವನ್ನು, ಯಶಸ್ವಿಯಾಗಿ ನೆಲಮುಟ್ಟಿದ ಮಗಳ ತಂದೆಯಾಗಿ ಅವಳನ್ನು ನೋಡುವ ಕಾತುರ, ಅವಳ ಆರೋಗ್ಯದ ಬಗೆಗಿನ ಆತಂಕ ಎಲ್ಲಕ್ಕಿಂತ ನೋಡಿದಾಗ ಉಕ್ಕಿಬಂದ ಸಂಭ್ರಮ ಸಂತೋಷಗಳ ಅನುಭವ ಭಾವಪೂರ್ಣವಾಗಿ ಓದುಗರಿಗೆ ಮುಟ್ಟಿಸುವಲ್ಲಿ ಈ ಪುಸ್ತಕ ಸಫಲವಾಗಿದೆ. ಇಂತಹದೊಂದು, ಸಾಧನೆಯ ಹಿಂದಿನ ಪ್ರೇರಣೆಯ, ಅದಕ್ಕೆ ಬೇಕಾದ ಸಿದ್ಧತೆಯ, ಸಂಶೋಧನೆಯ, ಕಿರುಪರಿಚಯನ್ನು ಈ ಪುಸ್ತಕ ಮಾಡಿಕೊಡುತ್ತದೆ. ಓದುಗಳಾಗಿ ನನಗೆ ಅಚ್ಚರಿ ತಂದ ಇನ್ನೊಂದು ವಿಷಯವೆಂದರೆ ಈ ಪುಸ್ತಕ ಬರೆಯುವ ಮೊದಲು ಪ್ರಸಾದ್ ರವರು ಎಷ್ಟೊಂದು ಸಂಶೋಧನೆ ಅಟ್ಲಾಂಟಿಕ್ ಸಾಗರದ ಬಗೆಗೆ, ಇದರ ಚರಿತ್ರೆಯ ಬಗೆಗೆ, ಸ್ಪರ್ಧೆಯ ಬಗ್ಗೆ ಮಾಡಿದ್ದಾರೆನ್ನುವುದು!!! ಖಲೀಲ್ ಗಿಬ್ರಾನ್ ನ ಕವನ, ಮತ್ತು ಕನ್ನಡ ಕವಿಗಳಾದ ಬಿ ಆರ್ ಲಕ್ಷ್ಮಣರಾವ್, ರಾಷ್ಟ್ರಕವಿ ಜಿ .ಎಸ್. ಎಸ್ ರವರ ಕವಿತೆಗಳನ್ನು ಸೂಕ್ತ ಸಂಧರ್ಭಗಳಲ್ಲಿ, ಅಳವಡಿಸಿಕೊಂಡಿರುವುದು ಊಟದ ಜೊತೆಗೆ ಉಪ್ಪಿನಕಾಯಿಯಂತೆ ಪುಸ್ತಕದ ಸ್ವಾದವನ್ನು ಹೆಚ್ಚಿಸುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ "ಸಾಗರದಲ್ಲಿ ಸಾಹಸಿ" ಬಹು ಪ್ರಾಮಾಣಿಕ, ವಾಸ್ತವಿಕ, ಆಪ್ತ ಬರಹ. ಪೋಷಕಳಾಗಿ, ಅನನ್ಯಳ ಅದ್ಭುತ ಸಾಹಸದ ಅಭಿಮಾನಿಯಾಗಿ ನಾನು ಈ ಕಥನವನ್ನು ಓದಿ ಆನಂದಿಸಿದೆ.
ಇನ್ನೂ ಬಹಳಷ್ಟು ಬರೆದರೆ, ನೀವಾಗಿ ಓದಿ ಅನುಭವಿಸುವ ಆನಂದವನ್ನು ಕಡಿಮೆ ಮಾಡಿಬಿಡಬಹುದೆನ್ನುವ ಆತಂಕದಿಂದ ನನ್ನ ಈ ಪುಟ್ಟ ಪ್ರಯತ್ನವನ್ನು ಮುಗಿಸುತ್ತೇನೆ.
ಡಾ. ದಾಕ್ಷಾಯಿಣಿ ಗೌಡ ವಿನ್ಯಾರ್ಡ (Wynyard. Co Durham)
"ಸಾಗರದಲ್ಲಿ ಸಾಹಸಿ" ನನ್ನ ಅನಿಸಿಕೆಗಳು --ಡಾ ಶ್ರೀವತ್ಸ ದೇಸಾಯಿ, ಲೆಸ್ಟರ್ UK
ಬರೀ ನೂರೇ ಪುಟಗಳ ಈ ಕಿರುಪುಸ್ತಕ ನನ್ನ ನಿಮ್ಮ ಮನದಲ್ಲಿ ಮತ್ತು ಸಾಹಿತ್ಯ ವಲಯದಲ್ಲಿ ಅಲೆಗಳನ್ನೆಬ್ಬಿಸುವದು ಖಚಿತ. ಇಂಥ ಬರವಣಿಗೆ ಓದುವ ಅವಕಾಶ ಸಿಗುವದು ಅಪರೂಪ. ಇದು ಅದ್ವಿತೀಯ ಸಾಹಸ ಅಂದ ಮೇಲೆ! ಇದನ್ನುಬರೆದ ಯು ಕೆ ವಾಸಿ ಡಾ ಪ್ರಸಾದ್ ಅವರ ಕುಟುಂಬದವರನ್ನು, ಮುಖ್ಯವಾಗಿ ಇದರ ಯುವ ನಾಯಕಿ (34) ಅನನ್ಯಳನ್ನು ನಾವು ಯು.ಕೆ.ದ ಯಾರ್ಕ್ ಶೈರಿನಲ್ಲಿ ವಾಸಿಸುವ ಹಲವಾರು ಕನ್ನಡಿಗರು ಚೆನ್ನಾಗಿ ಬಲ್ಲವರಾಗಿದ್ದೆವು. ಆಕೆಯ ಅಟ್ಲಾಂಟಿಕ್ ಸಾಹಸವನ್ನು ಮೊದಲಿಂದ ಕೊನೆಯ ವರೆಗೆ ಟಿವಿ, ಸ್ಮಾರ್ಟ ಫೋನಿನ ಆಪ್ ಮೇಲೆ ಐವತ್ತೆರಡೂ ದಿನಗಳನ್ನು ಅನುಸರಿಸಿದ್ದೆವು. ಆದುದರಿಂದ ಆ ಯಶಸ್ವಿ ಯಾನದ ಹಿನ್ನೆಲೆ, ಆಕೆಯ ನಿರ್ಧಾರದ ಗುಟ್ಟು ಮತ್ತು ಸಮುದ್ರಯಾನದ ಅನುಭವದ ವಿವರಗಳನ್ನು ಓದಲು ಕಾತುರದಿಂದ ಎದುರು ನೋಡುತ್ತಿದ್ದೆವು. ನಮ್ಮನ್ನು ಕಾಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರ ಸಿಕ್ಕಿವೆ. ಕ್ರಿಕೆಟ್ ಮ್ಯಾಚಿನ ಬಾಲ್ -ಬೈ -ಬಾಲ್ ಕಾಮೆಂಟರಿ ತರಹ ಪ್ರತಿ ಘಟ್ಟದಲ್ಲಾದ ವಿವರಗಳು ಇಲ್ಲಿವೆ. ಅವು ಓದುಗನಲ್ಲಿ ವಿಸ್ಮಯ, ಆತಂಕ, ಕಳವಳ, ಅಂಜಿಕೆ, ಈ ತರದ ಭಾವನೆಗಳೆಬ್ಬಿಸಿದರೆ ಆಶ್ಚರ್ಯವಿಲ್ಲ! ಕೊನೆಯ ಭಾಗದಲ್ಲಿ (ಇದರ ಆರನೆಯ ಅಧ್ಯಾಯದಲ್ಲಿ) ಅನನ್ಯ World’s Toughest Row ಮುಗಿಸಿ 52ದಿನ 5 ತಾಸು 44 ನಿಮಿಷಗಳ ನಂತರ ಕೈಯಲ್ಲಿ ದೀವಟಿಗೆ ಹಿಡಿದು victory lap ಮಾಡಿದ ನಂತರವೂ ಸ್ವಲ್ಪವೂ ಓಲಾಡದೆ ಭೂಮಿಯ ಮೇಲೆ ಮೊದಲ ಹೆಜ್ಜೆಯನ್ನಿಟ್ಟಾಗ ಕರತಾಡನ ಮಾಡುತ್ತ ನೆರೆದ ಜನಸಮುದಾಯದ ಮುಂಚೂಣಿಯಲ್ಲಿ ಆನಂದ ಬಾಷ್ಪ ಸುರಿಸುತ್ತ ನಿಂತ ತಂದೆತಾಯಿಯವರ ಸಂತೋಷವನ್ನು ಅನುಭವಿಸುವದಲ್ಲಿ ಸಂದೇಹವಿಲ್ಲ. (ವಿಡಿಯೋವನ್ನು ನೋಡಿರಿ- ಕೊಂಡಿ ಕೊನೆಯಲ್ಲಿ) ಈ ಸಾಹಸ ಬಗ್ಗೆ ಯೋಚಿಸುತ್ತಿದ್ದಾಗ ನನಗೆ ನೆನಪಾದದ್ದು ತಮಿಳಿನ ತಿರುವಳ್ಳುವರ್ ಮುನಿ ತಿರುಕ್ಕುರಳ್ (#70) ದಲ್ಲಿ ಹೇಳುವಮಾತು: ಜನ್ಮ ಕೊಟ್ಟ ತಂದೆಗೆ ಮಗನು (ಅಥವಾ ಮಗಳು) ಮಾಡಬಹುದಾದ ಪ್ರತ್ಯುಪಕಾರವೇನು? ಎಂದು ಚರ್ಚಿಸುತ್ತ: "ಈತನನ್ನುಪಡೆಯಲು ತಂದೆ (ಹಡೆದ ತಂದೆತಾಯಿಗಳು) ಎಂಥ ತಪಸ್ಸು ಮಾಡಿರಬಹುದು ಎಂದು ಜನರು ಕೊಂಡಾಡುವುದು." ಅನನ್ಯಳ ಧೃಡನಿರ್ಧಾರ, ಅದರ ಬಗ್ಗೆ ಆದ ಚರ್ಚೆ, ತಂದೆತಾಯಿಗಳ ಆತಂಕ, ಅವರ ಒಪ್ಪಿಗೆ, ಆಕೆಯ ೩ ವರ್ಷಗಳ ಪೂರ್ವಸಿದ್ಧತೆ, ಇವುಗಳುಮೊದಲ ೪ ಅಧ್ಯಾಯಗಳ ೩೦ ಪುಟಗಳಲ್ಲಿ, ನಂತರದ ಸುದೀರ್ಘ ಭಾಗದಲ್ಲಿ "ದೈತ್ಯ ಅಲೆಗಳ ನಡುವೆ ಅನನ್ಯ" ಎದುರಿಸಿದ ಯಾನದ ಸಾಹಸದ ವಿವಿಧ ಹಂತ ಒಡ್ಡಿದ ಸಮಸ್ಯೆಗಳು, ಕಳಕೊಂಡ ಮೊಬೈಲ್, ಅಲೆಗಳು ದೋಣಿಯನ್ನು ಮಗುಚಿಹಾಕಿದ ಪ್ರಸಂಗ, ಮುರಿದ ಚುಕ್ಕಾಣೆ, ಮತ್ತು ಹುಟ್ಟು, ಅವುಗಳ ರಿಪೇರಿ, ಬೋಟಿ (boat)ನಿಂದ ಹೊರಗಿಳಿದು ಬಾರ್ನಕಲ್ಲುಗಳನ್ನು (barnacles) ಸವರಿ ಅದರ ಹೊರಮೈಯನ್ನು ಸ್ವಚ್ಛಗೊಳಿಸಿದ ಕಷ್ಟ, ಇವೆಲ್ಲವನ್ನೂ ಓದುವಾಗ ಮೈನವಿರೇಳುತ್ತದೆ. ಡಿಸೇಂಬರ್ 11, 2024 ರಂದು ಕ್ಯಾನರಿ ದ್ವೀಪದ ಲಾ ಗೋಮೆರೋ ಬಂದರದಿಂದ ಭಾವಪೂರಿತ ಬಿಳ್ಕೊಡುಕೆವಿಕೆಯ ನಂತರ 3,000 ಮೈಲು ಏಕಾಕಿಯಾಗಿ ಹುಟ್ಟು ಹಾಕುತ್ತ 52 ದಿನಗಳ ಕೊನೆಯಲ್ಲಿ ಕೆರಿಬಿಯನ್ ದ್ವೀಪ ಆಂಟಿಗಾವನ್ನು ಸೇರುವ ವಿಜೃಂಭಣೆಯ ವರ್ಣನೆಯಂತೂ ಬಹಳ ಹೃದಯಸ್ಪರ್ಶಿ! ಒಬ್ಬ ಕವಿಯ ಪುತ್ರ, ಮತ್ತು ಸ್ವತಃ ಕವಿಯಾದ ಡಾ ಪ್ರಸಾದ್ ಅವರ ಬರವಣಿಗೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಿಕ ಉಲ್ಲೇಖಗಳು, ಅಲ್ಲಲ್ಲಿ ಪುಟ್ಟ ಪುಟ್ಟ ಸುಂದರ ವಾಕ್ಯಗಳುಂಟು: ಕನಸಿಗೆ ಕಡಿವಾಣವಿಲ್ಲ(ಪು 18); ಈ ಯಾನದ ಹಾದಿಯಲ್ಲಿ ನಿಲುಗಡೆ ತಾಣ ಅಥವಾ ದ್ವೀಪಗಳಿಲ್ಲ; ನಡುನೀರಿಗೆ ಇಳಿದವರು ಈಜಲೇಬೇಕಲ್ಲವೆ? (ಪು 36) (ಇಲ್ಲಿ ಹುಟ್ಟು ಹಾಕಲೇ ಬೇಕಲ್ಲವೇ?); ಕಳ್ಳರು ಗೊಜ್ಜವಲಕ್ಕಿ, ಕೋಡುಬಳೆಯನ್ನಷ್ಟೇ ಅವಳಿಂದ ಕದಿಯ ಬಹುದಿತ್ತು (ಪು 67 ). ಈ ಸಮುದ್ರ ಸಾಹಸ ಹಿನ್ನೆಲೆಯಲ್ಲಿ ಹೆಚ್ಚು ಮಾಹಿತಿಈ ಮೊದಲೇ ಗೊತ್ತಿರದ ವಿದೇಶಿ ಓದುಗರಿಗೆ ಅಂಕಿ ಸಂಖ್ಯೆಗಳುಂಟು. ಅನನ್ಯಳ ಪೂರ್ವ ನಿರ್ಧಾರ, ಕೊನೆಗೆ ಯುವಪೀಳಿಗೆಗೆ ಆಕೆಯ ಸಂದೇಶ ಮನತಟ್ಟುವಂತಿದೆ. ಅಟ್ಲಾಂಟಿಕ್ ಸಾಗರವನ್ನು ಈ ರೀತಿ ಹುಟ್ಟುಹಡಗಿನಲ್ಲಿ ದಾಟಿ ದಾಖಲೆ ಮಾಡಿದ ಪ್ರಪ್ರಥಮ ವರ್ಣೀಯ (non-white) ಮಹಿಳೆ ಕನ್ನಡಿತಿ ಎನ್ನುವ ಮಾತು ನಮಗೆಲ್ಲ ಹೆಮ್ಮೆ ಅಲ್ಲವೇ? ಯಾನದ ವಿವರದ ಓದಿಗೆ ಅಡ್ಡಬರದಂತೆ ಸಂಬಂಧಿಸಿದ ೨೦ (B& W) ಕಪ್ಪು ಬಿಳುಪು ಚಿತ್ರಗಳನ್ನುಕೊನೆಯಲ್ಲಿ ಕೊಟ್ಟಿದ್ದಾರೆ.
ಡಾ ಶ್ರೀವತ್ಸ ದೇಸಾಯಿ, ಲೆಸ್ಟರ್ UK
ಈ ಪುಸ್ತಕವನ್ನು ಬೆಂಗಳೂರಿನ ವೀರಲೋಕ ಪ್ರಕಾಶನದವರು ಪ್ರಕಟಿಸಿದ್ದಾರೆ--(ರೂ 140)
FREE USE: TODAY at 10:42 local time, UK/India solo ATLANTIC ODYSSEY completed the WORLD’S TOUGHEST ROW – ATLANTIC 2024. Ananya Prasad is the all time second fastest solo woman to have completed this gruelling 3,000 mile race and crossed the finish line into English Harbour in Antigua in 52 days, 5 hours, and 44 minutes. Credit: World’s Toughest Row
ಎಚ್. ಡುಂಡಿರಾಜ್ ಬರೆಯುತ್ತಾರೆ: ಪ್ರಿಯ ಶಿವಪ್ರಸಾದ್, ಸಾಗರದಲ್ಲಿ ಸಾಹಸ ಚೆನ್ನಾಗಿ ಓದಿಸಿಕೊಂಡು ಹೋಯಿತು. ಮಗಳ ಮಹತ್ವಾಕಾಂಕ್ಷೆಯ ಸಾಹಸ , ಹೆತ್ತವರ ಆತಂಕ, ಉದ್ದಕ್ಕೂ ಜೊತೆಯಾಗಿ ಸಾಗುವ ಪರಿ ಕುತೂಹಲಕಾರಿ. ಅನನ್ಯಳ ಛಲದಷ್ಟೆ , ಸಾಹಸದಷ್ಟೆ, ನಿಮ್ಮಿಬ್ಬರ ನಿರ್ಧಾರವೂ ಪ್ರಶಂಸನೀಯ. ತಾಂತ್ರಿಕ ವಿವರಗಳನ್ನೂ ಓದುಗರಿಗೆ ಜಟಿಲವಾಗದಂತೆ ವಿವರಿಸಿದ್ದೀರಿ. ನೀವು ಉಲ್ಲೇಖಿಸಿದ ಕವನದ ಸಾಲುಗಳು ಅತ್ಯಂತ ಸೂಕ್ತವಾಗಿವೆ. ಒಟ್ಟಿನಲ್ಲಿ ಅನನ್ಯಳ ಸಾಹಸದಂತೆ ಈ ಪುಸ್ತಕವೂ ಕನ್ನಡದ ಓದುಗರಿಗೆ ನಿಮ್ಮ ಅಪೂರ್ವ ಕೊಡುಗೆ. ನೀವು ಮಾತ್ರ ಬರೆಯಬಹುದಾದ ಉತ್ತಮ ಪುಸ್ತಕ. ಅನನ್ಯಳಿಗೆ, ನಿಮಗೆ ಹಾಗೂ ಪೂರ್ಣಿಮಾ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. -ಎಚ್. ಡುಂಡಿರಾಜ್, ಪ್ರಸಿದ್ಧ ಕವಿ, ಸಾಹಿತಿ, ಬೆಂಗಳೂರು
ಎಮ್ ಆರ್ ಕಮಲಪ್ರಸಿದ್ಧ ಸಾಹಿತಿ, ಕವಯಿತ್ರಿ, ಅನುವಾದಕಿ, ಬೆಂಗಳೂರು
'ಸಾಗರದಲ್ಲಿ ಸಾಹಸಿ’ ಓದಿದೆ. ಒಂಟಿಯಾಗಿ ಸಮುದ್ರದಲ್ಲಿ ಯಾನ ಮಾಡುವುದನ್ನು ಕನಸುವುದಕ್ಕೂ ಆತಂಕ ಪಡುವ ನಮ್ಮಂಥವರಿಗೆ ಅನನ್ಯಳ ಈ 'ಅನನ್ಯ' ಸಾಹಸ ಅಸಾಧಾರಣ ಅನ್ನಿಸಿದ್ದು ಸುಳ್ಳಲ್ಲ. ಇಂತಹ ಸಾಹಸಕ್ಕೆ ಮಗಳು ಕೈ ಹಾಕಿದಾಗ ಅದನ್ನು ಅರಗಿಸಿಕೊಳ್ಳುವುದು ಅದೆಷ್ಟು ಕಷ್ಟವಾಗಿತ್ತು ಎಂಬುದನ್ನು ನಿಮ್ಮ ಬರಹ ಎದೆಗಿಳಿಸುತ್ತದೆ. ಅದು ನನ್ನನ್ನು ತಟ್ಟಿದ್ದಕ್ಕೆ ಕಾರಣವೂ ಇದೆ. ನನ್ನ ಮಗಳು ಮೈಕ್ರೊ ಬಯಾಲಜಿ ಎಂಎಸ್ಸಿ ಮಾಡಿದ ನಂತರ ಸಂಶೋಧನೆಗೆ ಹೋಗುತ್ತಾಳೆಂದು ಭಾವಿಸಿದ್ದೆ. ಇದ್ದಕ್ಕಿದ್ದಂತೆ ಅವಳು ಉಳಿದವರು ಅಷ್ಟಾಗಿ ಆರಿಸಿಕೊಳ್ಳದ ಕಂಠದಾನ, ಹಾಡು ಎಂದೆಲ್ಲ ಹೊರಟಾಗ ಕೊಂಚ ಆತಂಕವಾಗಿದ್ದು ನಿಜ. ಒಪ್ಪಿಕೊಳ್ಳುವುದು ಸಲೀಸಾಗಿರಲಿಲ್ಲ. ಆದರೆ ಅನನ್ಯ ಆರಿಸಿಕೊಂಡದ್ದು ಜೀವವನ್ನೇ ಪಣಕ್ಕಿಡುವ ಸಾಗರ ಯಾನ. ಬಹುಶಃ ತಂದೆ ತಾಯಿಯರನ್ನು ಅಲುಗಾಡಿಸುವ ನಿರ್ಧಾರ. ಆದರೂ ನೀವಿಬ್ಬರೂ ಬೆಂಬಲವಾಗಿ, ಅವಳ ಕನಸುಗಳಿಗೆ ಬಣ್ಣ ತುಂಬಲು ಮಾಡಿದ ಪ್ರಯತ್ನ ಅವಳ ಸಾಗರ ಯಾತ್ರೆಯಷ್ಟೇ ಅನುಪಮ ಅನ್ನಿಸಿತು.
ಸಾಗರ ಯಾನದ ಇತಿಹಾಸ, ಸಾಧಕ ಬಾಧಕ ವಿಚಾರಗಳು, ಯಾನಕ್ಕೆ ಬೇಕಾದ ಸಿದ್ಧತೆ ಇತ್ಯಾದಿಗಳ ಮಹತ್ವಪೂರ್ಣ ಮಾಹಿತಿಗಳನ್ನು ಒದಗಿಸಿರುವುದರಿಂದ ಪುಸ್ತಕಕ್ಕೆ ತಾನಾಗಿಯೇ ಮಹತ್ವ ಬಂದಿದೆ. ಅಲ್ಲಲ್ಲಿ ಕವಿತೆ, ಕಾದಂಬರಿಗಳ ವಿಷಯವನ್ನು ಪೂರಕವಾಗಿ ಬಳಸಿಕೊಂಡಿರುವುದು ವಿಶೇಷ. (Old man and the sea ನನಗೆ ಎಂ.ಎ. ನಲ್ಲಿ ಪಠ್ಯವಾಗಿತ್ತು.) ಅನನ್ಯಳ ಯಾನದ ವಿವರಗಳಂತೂ ನಾವೇ ಅವಳೊಂದಿಗೆ ಈ ಸಾಹಸದಲ್ಲಿ ಪಾಲ್ಗೊಳ್ಳುತ್ತಿದ್ದೇವೇನೋ ಎಂಬ ಭಾವ ಮೂಡಿಸಿತು. ಮೊಬೈಲ್ ಕಳೆದುಕೊಂಡಾಗ, ಚುಕ್ಕಾಣಿಯ ಸಮಸ್ಯೆಯಾದಾಗ ಅವಳ ಆತಂಕ ನಮ್ಮದೇ ಆತಂಕವಾದ ಕಾರಣ ನಿಮ್ಮ ಅಂತಃಕರಣದ ನಿರೂಪಣೆ. ಮತ್ತೊಬ್ಬರ ಅನುಭವವನ್ನು ಹಿಡಿದಿಡುವುದು ಸುಲಭವೇ ಅಲ್ಲ. ಅಂತಹ ಸಾಹಸವನ್ನು ನೀವೂ ಮಾಡಿದ್ದೀರಿ. 'ಅನನ್ಯ' ನಮ್ಮೆಲ್ಲರ ಹೆಮ್ಮೆ ಎಂಬ ಭಾವದೊಂದಿಗೆ ಪುಸ್ತಕವನ್ನು ಕೆಳಗಿಟ್ಟೆ. ಇದೊಂದು ಭಾವದಲೆಯ ಮೇಲಿನ ಜೀವಯಾನ ... ಅನನ್ಯಳಿಗೆ, ಮುಖ್ಯವಾಗಿ, ಪ್ರೋತ್ಸಾಹಿಸಿದ ತಂದೆತಾಯಿಗಳಿಗೆ ಅಭಿನಂದನೆಗಳು. ಈ ಪುಸ್ತಕ ಕಳಿಸಿದ್ದಕ್ಕೆ ಧನ್ಯವಾದ. ಎಮ್ ಆರ್ ಕಮಲ
FREE USE: TODAY at 10:42 local time, UK/India solo ATLANTIC ODYSSEY completed the WORLD’S TOUGHEST ROW – ATLANTIC 2024. Ananya Prasad is the all time second fastest solo woman to have completed this gruelling 3,000 mile race and crossed the finish line into English Harbour in Antigua in 52 days, 5 hours, and 44 minutes. Credit: World’s Toughest Row
ದೀಪಾ ಸಣ್ಣಕ್ಕಿ ಬರೆಯುತ್ತಾರೆ "ಸಾಗರದಲ್ಲಿ ಸಾಹಸಿ " ಬರೀ ಅನನ್ಯರವರ ಸಾಹಸಕಥನಕ್ಕೆ ಮತ್ತು ಅವರ ತಂದೆಯ ಸ್ವಾನುಭವದ ಗಾಥೆಗಷ್ಟೇ ಸೀಮಿತವಾದ ಪುಸ್ತಕವಲ್ಲ. ಇಲ್ಲಿ, ಬದುಕಿನ ಹಲವಾರು ಮಗ್ಗಲುಗಳನ್ನು ನೋಡಿದ ಅನುಭವಿಯ ಜೀವನಪಾಠಗಳಿವೆ. ಪರಿಸ್ಥಿತಿಯನ್ನು ಸಮಚಿತ್ತದಿಂದ ನಿಭಾಯಿಸಿದ ಸಂಯಮಿಯ ಮಾತುಗಳಿವೆ. ಕಾಲಘಟ್ಟದಲ್ಲಿ ಹಿಂದೆ ಸರಿಯುತ್ತಿರುವ ಹಿರಿ ಜೀವಗಳ ಬಗ್ಗೆ ತುಂಬುಗೌರವವಿದೆ. ಜೊತೆಗೆ ಮುಂಬರುವ ಸಂತಾನಗಳ ಭದ್ರ ಬುನಾದಿಯ ಬಗೆಗೆ ಕಳಕಳಿಯಿದೆ. ಜೀವಿತದ ಪರಿಧಿಯೊಂದಿಗೆ ಮನೋವೈಶಾಲ್ಯವನ್ನು ವಿಸ್ತರಿಸಿಕೊಳ್ಳಬೇಕಾದ ಹಿತವಚನವಿದೆ. ಇವೆಲ್ಲವುಗಳನ್ನು ಮೀರಿ ವಿಶ್ವಮಾನವತೆಯ ಪ್ರಜ್ಞೆಗೆ ನೀಡಿದ ಕರೆ, ಪುಸ್ತಕಕ್ಕೆ ಕಲಶಪ್ರಾಯವಾಗಿದೆ. ಬರಹ, ಕಡಲಯಾನದ ಓಡಿಷಿಯಸ್ಸ್ ದೋಣಿಯಂತೆ ಗತಿಗೆಟ್ಟು ಓಲಾಡದೇ ಸಮಸ್ಥಿತಿಯಲ್ಲಿ ನಿರಂತರವಾಗಿ ಓದಿಸಿಕೊಂಡು ಹೋಗುತ್ತದೆ. ವಿಷಯಸಂಬಂಧಿತ ಅಂಕಿ ಸಂಖ್ಯೆಗಳ ಮಾಹಿತಿಯಾಗಲಿ, ಮಗಳ ಬಗೆಗಿನ ಸಮತೋಲಿತ ಹೆಮ್ಮೆ ಪ್ರಶಂಸೆಗಳಾಗಲಿ, ಕುಟುಂಬಕ್ಕೆ ದಕ್ಕಿದ ಆಂತರಿಕ ತುಮುಲಗಳಾಗಲಿ ಅಥವಾ ಸಾಹಸದ ಬಗೆಗಿರುವ ಸ್ವಂತ ದೃಷ್ಟಿಕೋನವಾಗಲಿ ಯಾವುದೂ ಓದುಗನಿಗೆ ಭಾರವೆಂದೆನಿಸುವುದಿಲ್ಲ. ಇಲ್ಲಿ ಭಾವಗಳು ಕೂಡ ವಾಸ್ತವಾಂಶಗಳಷ್ಟೇ ಪ್ರಾಮಾಣಿಕವಾಗಿವೆ ಮತ್ತು ನೈಜಶೀಲವಾಗಿವೆ."ಸಾಗರದಲ್ಲಿ ಸಾಹಸಿ"ಯನ್ನು ಓದಿದ ಒಂದೇ ಒಂದು ಜೀವ, ಸ್ವಯಂ ವಿಧಿತ ನಿರ್ಭಂಧಗಳನ್ನು ತೊಡೆದು ಜೀವನೋತ್ಸಾಹದಿಂದ ಕೊನೆಗಲ್ಲನ್ನು ಮುಟ್ಟಿದರೆ ಪುಸ್ತಕದ ಗರಿಮೆಯ ಪ್ರತಿಮೆಗೆ ಹೂವು ಸಲ್ಲಿಸಿದಂತೆಯೇ ಸರಿ!
ದೀಪಾ ಸಣ್ಣಕ್ಕಿ, ಯು ಕೆ
Video of Successful Completion: Connects to Facebook