ಗಿರೀಶ್ ಕಾರ್ನಾಡರ ಜನ್ಮ ದಿನೋತ್ಸವ;  ಯಯಾತಿ, ಹಯವದನ ಒಂದು ನೆನಪು

ಚಿತ್ರ ಕೃಪೆ: ಗೂಗಲ್
ಮೇ ೧೯ ಗಿರೀಶ್ ಕಾರ್ನಾಡ್ ಅವರ ೮೪ ನೇ ಜನ್ಮ ದಿನೋತ್ಸವ. ಕಾರ್ನಾಡರು ಭಾರತದ ಒಬ್ಬ ಶ್ರೇಷ್ಠ ನಾಟಕಕಾರ, ಲೇಖಕ, ನಟ, ಚಿತ್ರ ನಿರ್ದೇಶಕ ಮತ್ತು ಸಮಾಜವಾದಿ. ೧೯೯೮ ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು. ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ ಮತ್ತು ಇನ್ನೂ ಅನೇಕ ಪ್ರಶಸ್ತಿಯನ್ನು ಪುರಸ್ಕಾರಗಳನ್ನು ಪಡೆದವರು. ಇಂಗ್ಲೆಂಡಿನ ಕೆಲವು ಅನಿವಾಸಿ ಕನ್ನಡಿಗರಿಗೆ ಕಾರ್ನಾಡರು ಲಂಡನ್ನಿನ ನೆಹರು ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿದ್ದಾಗ ಅವರ ಪರಿಚಯವಿರಬಹುದು. ಯಯಾತಿ, ತುಘಲಕ, ಹಯವದನ, ನಾಗಮಂಡಲ, ತಲೆದಂಡ ಹೀಗೆ ಇನ್ನು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅವರ ನಾಟಕಗಳು ಭಾರತದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಕಾರ್ನಾಡರಿಗೆ ತಮ್ಮ ಕಾಲೇಜ್ ದಿನಗಳಲ್ಲಿ ಒಬ್ಬ ಕವಿಯಾಗ ಬೇಕೆಂಬ ತೀವ್ರ ಹಂಬಲ ಇತ್ತು. ಅದೇ ವಿಚಾರವಾಗಿ ಅವರ ಆಡಾಡತ ಆಯುಷ್ಯ ಎಂಬ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ; "ನನಗೆ ನೆನಪಿದ್ದಾಗಿನಿಂದಲೂ ನಾನು ಬಯಸಿದ್ದು ಕವಿಯಾಗಬೇಕು ಎಂದು. ಕಾಲೇಜಿನಲ್ಲಿ ಕವಿತೆಗಳನ್ನು ಬರೆದೆ, ಓದಿದೆ, ಅನುಕರಿಸಿದೆ, ಕವಿಗಳನ್ನು ಕಂಡು ಅಸೂಯೆ ಪಟ್ಟೆ. ಆದರೆ ಈಗ ಹಿಂದಿರುಗಿ ನೋಡಿದಾಗ ನನ್ನ ವ್ಯಕ್ತಿತ್ವದ ವಿಕಾಸವಾದದ್ದೆಲ್ಲ ನಾಟಕಗಳಿಂದಾಗಿಯೇ ಎಂಬುದು ಅರಿವಾಗುತ್ತದೆ." ಬಹಳ ಎಳೆ ವಯಸ್ಸಿನಿಂದ ನಾಟಕ ಯಕ್ಷಗಾನ ನೋಡಿಕೊಂಡು ಬೆಳೆದ ಕಾರ್ನಾಡರಿಗೆ ತಾವು ನಾಟಕ ಬರೆಯುವವರೆಗೆ ಅವರ ಸಾಮರ್ಥ್ಯದ ಅರಿವು ಬಹುಶ ಇರಲಿಲ್ಲ. ಅವರ ಮೊದಲ ನಾಟಕ ಯಯಾತಿ ಬರೆದಾಗ ಅವರಿಗೆ ಕೇವಲ ೨೨ವರ್ಷ ವಯಸ್ಸಾಗಿತ್ತು. ಆ ನಾಟಕ ಬರೆಯುವ ಹೊತ್ತಿಗೆ ಗಿರೀಶ್ ಕಾರ್ನಾಡರು ಇಂಗ್ಲೆಂಡಿಗೆ ಹೊರಟು ನಿಂತಿದ್ದರು. ಅವರ ತಂದೆ ತಾಯಿ ಅವರಿಗೆ ಇಂಗ್ಲೆಂಡಿನಲ್ಲಿ ನೆಲೆಸಬಾರದು, ಅಲ್ಲಿ ಬಿಳಿ ಹೆಂಗಸೊಂದಿಗೆ ಮದುವೆ ಮಾಡಿಕೊಳ್ಳಬಾರದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದು ಈ ನಾಟಕ ಬರೆಯಲು ಪ್ರೇರಣೆ ನೀಡಿತು ಎಂಬುದಾಗಿ ತಿಳಿಸಿದ್ದಾರೆ. ಯಯಾತಿ ನಾಟಕದಲ್ಲಿ ತಂದೆಗಾಗಿ ಯೌವನ್ನವನ್ನು ತ್ಯಜಿಸುವ ಮಗ, ಮತ್ತು ತಂದೆ ತಾಯಿಯ ನಿರೀಕ್ಷೆ ನಿರ್ಬಂಧಗಳ ನಡುವೆ ತ್ಯಾಗ ಮನೋಭಾವದಿಂದ ಇಂಗ್ಲೆಂಡಿಗೆ ಹೋರಾಟ ಯುವಕ ಕಾರ್ನಾಡ್ ಈ ಎರಡು ಸನ್ನಿವೇಶದಲ್ಲಿ ಅವರು ಸಾದೃಶ್ಯವನ್ನು ಕಂಡುಕೊಳ್ಳುತ್ತಾರೆ. 'ಈ ನಾಟಕ ಬರೆಯುವ ವೇಳೆಗೆ ಯಾವುದೋ ಅಗೋಚರ ಶಕ್ತಿ ಮೈಮೇಲೆ ಬಂದು ಆವರಿಸಿಕೊಂಡಿತ್ತು. ಕಣ್ಣೆದುರೇ ಯಯಾತಿ, ಪುರು ಈ ಪಾತ್ರಗಳೆಲ್ಲ ಮಾತನಾಡಲು ಶುರು ಮಾಡಿತ್ತು. ನಾನು ಒಬ್ಬ ಗುಮಾಸ್ತನಂತೆ ಈ ಸಂಭಾಷಣೆಗಳನ್ನು ಬರೆಯುತ್ತಿದೆ' ಎಂದು ಹೇಳಿದ್ದಾರೆ.

ಅಲ್ಲಿಂದ ಮುಂದಕ್ಕೆ ಕಾರ್ನಾಡರ ಯಯಾತಿಗೆ ಉತ್ತಮ ಪ್ರತಿಕ್ರಿಯೆಗಳ ಪ್ರವಾಹವೇ ಹರಿದುಬಂತು. ಇಂಗ್ಲೀಷಿನಲ್ಲಿ ಬರೆಯುವ ಮತ್ತು ಇಂಗ್ಲೆಂಡಿನಲ್ಲಿ ನೆಲೆಸುವ ತೀವ್ರ ಆಸೆ ಇದ್ದ ಕಾರ್ನಾಡರಿಗೆ ಭಾರತ ಬಿಟ್ಟು ವಿದೇಶದಲ್ಲಿ ನೆಲಸಬೇಕು ಎಂಬ ಯೋಚನೆ ನಿರರ್ಥಕ ಮಾತ್ರವ್ಲಲ ತಕ್ಕ ಮಟ್ಟಿಗೆ ಆತ್ಮಘಾತಕವೆಂಬಂತೆ ಮನದಟ್ಟಾಯಿತು. ಅವರಿಗೆ ಆಕ್ಸ್ ಫೋರ್ಡ್ ಮುಗಿಸಿ ಭಾರತಕ್ಕೆ ಮರಳುವುದು ಎಂಬ ನಿರ್ಧಾರ ಮಾಡುವುದು ಸುಲಭವಾಯಿತು. (ಆಡಾಡತಾ ಆಯುಷ್ಯ ಪುಟ ೧೨೦) ಯಯಾತಿ ನಾಟಕ ಕಾರ್ನಾಡರ ಲೇಖನಿಯಿಂದ ಬಂದದ್ದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು, ಒಬ್ಬ ಶ್ರೇಷ್ಠ ಲೇಖಕನ ಪ್ರತಿಭೆ ಅನಾವರಣ ಗೊಂಡಿತು, ಕನ್ನಡ ಸಾಹಿತ್ಯಲೋಕ ಹಾಗೂ ರಂಗಭೂಮಿ ಶ್ರೀಮಂತಗೊಂಡಿತು. ಸಾಹಿತ್ಯ, ರಂಗಭೂಮಿ, ಚಿತ್ರಕಲೆ ಈ ಕ್ಷೇತ್ರಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಮಾನವತಾವಾದಿ, ಬಾಲಿವುಡ್ಡಿನ ಗ್ಲಾಮರ್ ತಾರೆಗಳ ನಡುವೆ ಹೆಸರು ಮಾಡಿದ್ದ ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಕಾರ್ನಾಡರು ಸಾವಿನಲ್ಲಿ ಯಾವುದೇ ಆಡಂಬರ, ಅಲಂಕಾರ, ಮೆರವಣಿಗೆ, ಗಣ್ಯರ ಶ್ರದ್ಧಾಂಜಲಿ ಇವೆಲ್ಲವನ್ನು ತಿರಸ್ಕರಿಸಿ ಸದ್ದಿಲ್ಲದೆ ಮುಳುಗುವ ಸೂರ್ಯನಂತೆ ಜಾರಿಕೊಂಡದ್ದು ಅವರ ವಿನಯ ಶೀಲ ಬದುಕಿಗೆ ಸಾಕ್ಷಿಯಾಗಿತ್ತು.

ಅವರ ಈ ೮೪ ಹುಟ್ಟು ಹಬ್ಬದ ಸಂಧರ್ಭದಲ್ಲಿ ಯಯಾತಿ ನಾಟಕದ ಬಗ್ಗೆ ಕೇಶವ್ ಕುಲಕರ್ಣಿ ತಮ್ಮ ಒಂದೆರಡು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸ್ಮರಣೀಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
*

ಕಾರ್ನಾಡರ ಹಯವದನ ನಾಟಕದ ಗೀತೆ 'ಬಂದಾನೋ ಬಂದ ಸವಾರ' ಮತ್ತು 'ಗಜವದನ ಹೇ ರಂಭಾ' ಈ ರಂಗಗೀತೆಗಳನ್ನು ನಾಟಕದಲ್ಲಿ ಅಥವಾ ಬರಿ ಗೀತೆಯಾಗಿ ನೀವೆಲ್ಲಾ ಕೇಳಿರಬಹುದು. ಬಿವಿ ಕಾರಂತರ ಸಂಗೀತ ನಿರ್ದೇಶನದಲ್ಲಿ ಈ ಗೀತೆಗಳು ಅತ್ಯಂತ ಜನಪ್ರಿಯವಾಗಿವೆ. ಇಲ್ಲಿ ಅಳವಡಿಸಿರುವ ಜಾನಪದ ಶೈಲಿ ಮತ್ತು ಕೋರಸ್ ಬಹಳ ಪರಿಣಾಮಕಾರಿಯಾಗಿದೆ. ಖ್ಯಾತ ರಂಗ ನಟಿ, ಗಾಯಕಿ ಶ್ರೀಮತಿ ಬಿ ಜಯಶ್ರೀ ಅವರು 'ಗಜವದನ ಹೇ ರಂಭಾ' ಎಂಬ ಗೀತೆಯನ್ನು ಕನ್ನಡ ಬಳಗದ ಯುಗಾದಿ ಕಾರ್ಯಕ್ರಮವೊಂದರಲ್ಲಿ ಹಾಡಿದ್ದು ಹಲವರ ನೆನಪಿನಲ್ಲಿ ಉಳಿದಿರಬಹುದು. ಅಮಿತ ಅವರು ಇಂದಿನ ಕಾರ್ನಾಡರ ಜನ್ಮ ದಿನೋತ್ಸವ ಸಂಚಿಕೆಯಲ್ಲಿ 'ಬಂದಾನೋ ಬಂದ ಸವಾರ' ಗೀತೆಯನ್ನು ಪ್ರಸ್ತುತ ಪಡಿಸಿದ್ದಾರೆ. 
  - ಸಂಪಾದಕ 

**************************************************************************************

ಕಾರ್ನಾಡರ ಯಯಾತಿ - ಡಾ. ಕೇಶವ್ ಕುಲಕರ್ಣಿ 

ಪುರಾಣ, ಜನಪದ ಮತ್ತು ಇತಿಹಾಸದ ಪುಟಗಳಿಂದ ತಮಗೆಷ್ಟು ಬೇಕೋ ಅಷ್ಟನ್ನು ತೆಗೆದುಕೊಂಡು, ತಾವು ನಂಬಿಕೊಂಡಿರುವ ವಾದಗಳನ್ನು ಎತ್ತಿಕೊಂಡು, ಅವುಗಳನ್ನು ಆಧುನಿಕ ರಾಜಕೀಯ, ಸಾಮಾಜಿಕ ಮತ್ತು ಮಾನಸಿಕ ಕಾಲಕ್ಕೆ ಪ್ರಚಲಿತವನಿಸುವಂತೆ ಬರೆದು ಭಾರತದ, ಅದರಲ್ಲೂ ಕನ್ನಡದ, ಓದುಗರನ್ನು, ನಾಟಕದ ಪೇಕ್ಷಕರನ್ನು ಮತ್ತು ಒಂದು ಜನಾಂಗದ ರಂಗಕಲಾವಿದರನ್ನು ಬಡಿದೆಬ್ಬಿಸಿದರು ಕಾರ್ನಾಡರು.

ಅವರ ಮೊದಲ ನಾಟಕ, `ಯಯಾತಿ`; ಬರೆದದ್ದು ೧೯೬೧ ರಲ್ಲಿ, ಅದೂ ಇಂಗ್ಲೆಂಡಿನ ಆಕ್ಸ್-ಫರ್ಡ್-ನಲ್ಲಿ ವ್ಯಾಸಾಂಗ ಮಾಡುತ್ತಿರುವಾಗ. ವಿ.ಸ. ಖಾಂಡೇಕರ್ ಅವರು `ಯಯಾತಿ` ಕಾದಂಬರಿಯನ್ನು ಬರೆದದ್ದು ೧೯೫೯ರಲ್ಲಿ, ಕಾರ್ನಾಡ್ ಅವರಿಗೆ ಮರಾಠಿಯೂ ಬರುತ್ತಿತ್ತು. `ಯಯಾತಿ` ನಾಟಕವನ್ನು ಬರೆಯುವ ಮೊದಲು `ಯಯಾತಿ` ಕಾದಂಬರಿಯನ್ನು ಅವರು ಓದಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಕಾರ್ನಾಡರ `ಯಯಾತಿ`ಗೂ ಖಾಂಡೇಕರರ ‘ಯಯಾತಿ`ಗೂ ಸಾಕಷ್ಟು ಸಾಮ್ಯತೆಗಳಿವೆ. ಹಾಗೆಯೇ ಬೇಧಗಳೂ ಇವೆ. ಇದರ ಬಗ್ಗೆ ಯಾರಾದರೂ ಕನ್ನಡ ಅಥವಾ ಭಾರತದ ವಿಮರ್ಶಕರು ಬರೆದಿದ್ದಾರೆ ಎಂದುಕೊಂಡಿದ್ದೇನೆ. `ಯಯಾತಿ`ಯನ್ನು ಪ್ರಕಟಿಸಿದ್ದು ಧಾರವಾಡದ ಪ್ರಸಿದ್ಧ `ಮನೋಹರ ಗ್ರಂಥಮಾಲೆ` (ಅಲ್ಲಿಯೇ ನಾನು ಕಾರ್ನಾಡರನ್ನೂ ಭೀಟಿಯಾಗಿದ್ದೆ ಎನ್ನುವುದೂ ನನಗೆ ಮರೆಯಲಾಗದ ಅನುಭವ).

ನಾನು `ಯಯಾತಿ’ ನಾಟಕವನ್ನು ನೋಡುವ ಮೊದಲು ಓದಿರಲಿಲ್ಲ. ಆಗ ನನಗಿನ್ನೂ ಹದಿನಾರೋ ಹದಿನೇಳೋ ವಯಸ್ಸು. ವಿಚಿತ್ರವೆಂದರೆ ಅದೇ ಸಮಯದಲ್ಲಿ ಕನ್ನಡ ವಾರಪತ್ರಿಕೆಯಲ್ಲಿ (ತರಂಗ ಇರಬೇಕು) ಖಾಂಡೇಕರರ `ಯಯಾತಿ` ಧಾರಾವಾಹಿಯಾಗಿ ಬರುತ್ತಿತ್ತು ಅಥವಾ ಬಂದಿತ್ತು. ಈ ಎರಡೂ ಕೃತಿಗಳು ಬರೆದ ಸುಮಾರು ೨೫ ವರ್ಷಗಳಾದ ಮೇಲೆ ನಾನು ಅವುಗಳನ್ನು ನೋಡಿದ್ದು ಮತ್ತು ಓದಿದ್ದು. ಅದೇ ಹರೆಯಕ್ಕೆ ಕಾಲಿಡುತಿದ್ದ ನನ್ನ ಮೇಲೆ ಈ `ಯಯಾತಿಗಳು` ಮಾಡಿದ ಪ್ರಭಾವ ಅಪಾರ, ಅಲ್ಲೋಲಕಲ್ಲೋಲ ಅಗಾಧ.

ಕಾರ್ನಾಡರ `ಯಯಾತಿ` ನಾಲ್ಕು ಅಂಕಗಳ ನಾಟಕ. ಯಯಾತಿಯ ಕತೆಯು ಎಲ್ಲರಿಗೂ ಗೊತ್ತಿರುವದರಿಂದ ಅದನ್ನು ಬರೆದು ಬೋರು ಹೊಡೆಸುವುದಲ್ಲ. ಆದರೆ ಈ ನಾಟಕದಲ್ಲಿ ಬರುವ ಕೆಲವು ಸಂಭಾಷಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ:

ಸೂತ್ರಧಾರ ಆರಂಭದಲ್ಲೇ, `ನಾವು ಕಟ್ಟಿದ ಅಜ್ಜಿಯ ಕತೆಯನ್ನು ನಾವೇ ಬಾಳಬೇಕು.` ಎಂದು ಸ್ವವಿಮರ್ಶೆಯೊಂದಿಗೇ ನಾಟಕವನ್ನು ಆರಂಭಿಸುತ್ತಾನೆ. 

ಯಯಾತಿಗೆ ಶರ್ಮಿಷ್ಠೆ ಹೇಳುತ್ತಾಳೆ,` ನೀವು ನನ್ನ ಕತೆಯನ್ನು ನಂಬಬೇಕೆಂದು ಹಟವಿಲ್ಲ. ದೇವಯಾನಿ ತನ್ನ ಕತೆಯನ್ನು ನಿಮಗೆ ಹೇಳಿರಬಹುದು. ಅದನ್ನು ನಂಬರಿ.`

ಇನ್ನೊಂದು ಸಲ ಶರ್ಮಿಷ್ಠೆ ಹೇಳುತ್ತಾಳೆ, `ಈಗ ದಾಸ್ಯ ನನಗೆ ಚಟವಾಗಿ ಬಿಟ್ಟಿದೆ. ದಾಸ್ಯದಲ್ಲಿ ಹೊಣೆಯ ಭಾರವಿಲ್ಲ. ಈಗ ನನಗೆ ಸ್ವಾತಂತ್ರ್ಯದಲ್ಲೇ ಶೃಂಖಲೆ ಕಾಣುತ್ತಿದೆ.`

ದೇವಯಾನಿ ಇನ್ನೊಂದು ಸಲ ಶರ್ಮಿಷ್ಠೆಗೆ ಹೇಳುತ್ತಾಳೆ, `ನಿನ್ನನ್ನು ದಾಸ್ಯದಿಂದ ಬಿಡಿಸಿದ್ದೇನೆ. ಬೇಕಿದ್ದರೆ ಈ ಸ್ವಾತಂತ್ರ್ಯದಿಂದ ಉರುಲು ಹಾಕಿಕೊ.`

ಪುರುವಿನ ಪತ್ನಿ ಚಿತ್ರಲೇಖೆ ಒಂದು ಕಡೆ ಹೇಳುತ್ತಾಳೆ, `ಹೇಡಿಗಳಿಗೆ ಮತ್ತು ಸುಳ್ಳು ಹೇಳುವವರಿಗೆ ತರ್ಕ ಅನಿವಾರ್ಯವಾಗುತ್ತದೆ.`

ಕಾರ್ನಾಡರು ಯಯಾತಿ ಮತ್ತು ಪುರು ಎನ್ನುವ ಎರಡು ಗಂಡು ಪಾತ್ರಗಳು ಮತ್ತು ಶರ್ಮಿಷ್ಠೆ, ದೇವಯಾನಿ, ಚಿತ್ರಲೇಖೆ ಮತ್ತು ದಾಸಿ ಎನ್ನುವ ಹೆಣ್ಣು ಪಾತ್ರಗಳ ಮೂಲಕ ಒಂದು ಸಂಕೀರ್ಣವಾದ ತೊಳಲಾಟವನ್ನು ನಮ್ಮೊಳಗೆ ಉರಿಯಲು ಬಿಟ್ಟು ನಾಟಕವನ್ನು ಮುಗಿಸುತ್ತಾರೆ.

`ಯಯಾತಿ` ನಾಟಕವು ಮೊದಲ ಬಿಡುಗಡೆ ಆದಾಗ, ಮೊದಲ ಸಲ ರಂಗಪ್ರಯೋಗವಾದಾಗ ರಂಗಭೂಮಿಯಲ್ಲಿ ಸಂಚಲನವನ್ನೇ ಉಂಟುಮಾಡಿತ್ತು ಎಂದು ಓದಿದ್ದೇನೆ. ಬಹುಭಾಷಾ ಕೋವಿದರೂ ಆಗಿದ್ದ ಕಾರ್ನಾಡರು ತಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ, ತಮ್ಮ ಅಕಾಡೆಮಿಕ್ ಹಿನ್ನೆಲೆಯ ಮೂಲಕ ಪ್ಯಾನ್-ಇಂಡಿಯನ್ ನಾಟಕಕಾರರಾದರು. `ಯಯಾತಿ` ಹಿಂದಿಯ ರಂಗಭೂಮಿಯಲ್ಲೂ ಅಗಾಧವಾದ ಪ್ರಭಾವವನ್ನು ಬೀರಿತು. ನಾಟಕವನ್ನು ಕನ್ನಡದಲ್ಲಿ ಬರೆದರೂ ಮೊದಲ ನಾಟಕದಲ್ಲೇ ಕಾರ್ನಾಡ್ ಇಡೀ ಭಾರತವನ್ನು ಆವರಿಸಿದರು. ಮುಂದೆ ಆದದ್ದು ಈಗ ಇತಿಹಾಸ. ಹಿಂದಿಯ ಮೋಹನ್ ರಾಕೇಶ್, ಮರಾಠಿಯ ವಿಜಯ್ ತೆಂಡೂಲ್ಕರ್ ಅವರಿಗೆ ಸರಿಸಮಾನರಾಗಿ ಕಾರ್ನಾಡ್ ಭಾರತದ ರಂಗಭೂಮಿಯನ್ನು ಬೆಳೆಸಿ ಭಾರತದ ರಂಗಭೂಮಿಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಪಡೆದರು. ಈಗ ಈ `ಯಯಾತಿ` ನಾಟಕ ಎಷ್ಟರ ಮಟ್ಟಿಗೆ ಪಸ್ತುತ ಎನ್ನುವುದನ್ನು ಈಗಿನ ಓದಗ ಮತ್ತು ಪ್ರೇಕ್ಷಕ ನಿರ್ಧರಿಸಬೇಕು. 

******************************************************************************

ಹಯವದನ ನಾಟಕದ ಗೀತೆ ಬಂದಾನೋ ಬಂದ ಸವಾರ - ಅಮಿತಾ ರವಿಕಿರಣ 

******************************************************************************

ಕಲಿಯಬೇಕಿದೆ…

ಬದುಕಿನ ಪ್ರತಿ ಕ್ಷಣದಲ್ಲೂ ಕಲಿಕೆಯ ಅವಕಾಶವಿದೆ. ನಮ್ಮ ಹಲವಾರು ಕಲಿಕೆಗಳು ಇತರರ ಸಜ್ಜನಿಕೆಯಿಂದ, ಆದರ್ಶದಿಂದ, ಸರಳ ಬದುಕಿನ ರೀತಿ ನೀತಿಗಳಿಂದ ಉಂಟಾಗುತ್ತವೆ. ಈ ರೀತಿಯ ಕಲಿಕೆ ಸಾಮಾನ್ಯವಾಗಿ ನಾವು ಕಿರಿಯರಾಗಿದ್ದಾಗ ನಮ್ಮ ವಿವೇಚನಾ ಶಕ್ತಿಯನ್ನು ಬೆಳಸಿಕೊಳ್ಳಲು ಗುರು-ಹಿರಿಯರ ಮಾರ್ಗದರ್ಶನದಿಂದ ನಮಗೆ ಒದಗಿಬರುತ್ತದೆ. ಇದು ಗುಣಾತ್ಮಕ ಕಲಿಕೆ. ನಮ್ಮ ಬಾಲ್ಯಾವಸ್ಥೆಯಿಂದ ಆಚೆ ಬೆಳೆದಾಗ ನಮ್ಮ ಸಮಾಜದಲ್ಲಿ ಇತರರ ದುಷ್ಟತನ, ಅಹಂಕಾರ, ಸ್ವಾರ್ಥ, ದ್ವೇಷ ಈ ಲಕ್ಷಣಗಳನ್ನು ಗುರುತಿಸಲು ಸಮರ್ಥರಾಗಿರುತ್ತೇವೆ. ಬದುಕಿನ ಹಲವಾರು ಸನ್ನಿವೇಶಗಳನ್ನು ಭಾವನೆಗಳನ್ನು ನಮ್ಮ ಒಳ ಮನಸ್ಸಿನ ಸೂಕ್ಷ್ಮ ತೀಕ್ಷ್ಣ ತಕ್ಕಡಿಯಲ್ಲಿ ಇಟ್ಟು ಅಳೆಯಲು ಪ್ರಾರಂಭಿಸುತ್ತೇವೆ. ಹಲವಾರು ನಕಾರಾತ್ಮಕ ಅನುಭವಗಳು ನಮಗೆ ಪಾಠ ಕಲಿಸುತ್ತವೆ. ಹೀಗೆ ಪರಿಪಕ್ವವಾದ ಮನಸ್ಸು ತನ್ನ ವಿವೇಚನಾ ಶಕ್ತಿಯನ್ನು ರೂಢಿಸಿಕೊಳ್ಳುತ್ತದೆ. ಇದನ್ನು ಮನೋವಿಕಾಸ ಎಂದು ಕರೆಯಬಹುದು. ಇಲ್ಲಿ ಒಂದು ನೈತಿಕ ಜವಾಬ್ದಾರಿ ಉಂಟಾಗಿರುತ್ತದೆ. ಒಬ್ಬ ಹಿರಿಯ ಕವಿ ಹೇಳಿದ ಹಾಗೆ "ದೇವ ದಾನವ ಗುಣದ ಮಿಲನದಿ ಮೂಡಿ ಬಂದನೋ ಮಾನವ" ಕೆಲವೊಮ್ಮೆ ಆ ಮಾನವನ ದೈವತ್ವವು ಹಿಮ್ಮೆಟ್ಟಿ ಕ್ಷುದ್ರ ಸ್ವಾರ್ಥದ ದಾನವನಾಗುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಆ ನೈತಿಕ ಮೌಲ್ಯಗಳನ್ನು ಪ್ರಜ್ಞಾ ಪೂರ್ವಕವಾಗಿ ಗಾಳಿಗೆ ತೂರುತ್ತಾನೆ. ಒಂದು ವೈಯುಕ್ತಿಕ ನೆಲೆಯಲ್ಲಿ ಶುರುವಾಗುವ ಈ ಅಹಂಕಾರ, ಸ್ವಾರ್ಥ ಒಂದು ಸಂಸಾರವನ್ನು, ಒಂದು ಸಮುದಾಯವನ್ನೂ ಆವರಿಸಿಕೊಳ್ಳಬಹುದು. ಒಬ್ಬರು ಇನ್ನೊಬ್ಬರನ್ನು ವಂಚನೆ, ಸುಲಿಗೆ ಇವುಗಳ ನೆಪದಲ್ಲಿ ಶೋಷಿಸಿದಾಗ ಶೋಷಿಸುವವನು ಜಾಣನೆಂದು ಶೋಷಿತಗೊಂಡವನು ಪೆದ್ದನೆಂದು ಪರಿಗಣಿಸುತ್ತೇವೆ. ಕೆಲವೊಮ್ಮೆ ಪರಿಸ್ಥಿತಿಯ ಪರಿಣಾಮಗಳಿಂದಾಗಿ, ಸಂಕೀರ್ಣತೆಯಿಂದಾಗಿ ನಾವು ಸಹನೆಯಿಂದ ವರ್ತಿಸಬೇಕಾಗುತ್ತದೆ. ಇನ್ನೊಬ್ಬರ ಸಣ್ಣತನದ ಬಗ್ಗೆ ಆಕ್ರೋಶಕ್ಕಿಂತ ವ್ಯಥೆ ಮತ್ತು ಕನಿಕರದ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾಗುತ್ತದೆ.ಅರಿವಿನಲ್ಲೂ ಮುಗ್ಧತೆ ಎಂಬ ಮುಖವಾಡವನ್ನು ಧರಿಸಬೇಕಾಗುತ್ತದೆ. 

ಈ ಹಿನ್ನೆಲೆಯಲ್ಲಿ ಅಮಿತ ಅವರ 'ಕಲಿಯಬೇಕಿದೆ' ಎಂಬ ಕವನವನ್ನು ನಾವು ಓದುವುದು ಉಚಿತ. ಬದುಕಿನ ಹಲವಾರು ಸನ್ನಿವೇಶಗಳ ಮೂಲಕ ಈ ಮೇಲಿನ ಅಂಶಗಳನ್ನು ಪರಿಣಾಮಕಾರಿಯಾಗಿ ಕವನದಲ್ಲಿ ಕಟ್ಟುಕೊಟ್ಟಿದ್ದಾರೆ. 

-ಸಂಪಾದಕ


ನಾನು ಕಲಿಯಬೇಕಿದೆ,ಇಂಥವರ ನಡುವೆ 
ಬೆಳೆಯಲು ಬೆಳಗಲು 
ಮುಂದೆ ನಗುತ್ತಲೇ ಇರುವುದು 
ಅವರು ತೆರಳಿದ ಬೆನ್ನಿಗೆ 
ಉಫ್ಫ್!! ಎಂದು ಉಸಿರುಬಿಟ್ಟು,
ಚಾಡಿ ಮಾತಾಡಿ ಅದರಲ್ಲೇ ಊಟ ,
ನಿದ್ದೆಯ ಸುಖ ಪಡೆಯುವುದನ್ನ.
ನಾನು ಕಲಿಯಬೇಕಿದೆ 
ಗೊತ್ತಿಲ್ಲದ್ದನ್ನು ಗೊತ್ತಿದೆ …
ಎಲ್ಲಾ ನನಗೇ ಗೊತ್ತಿದೆ 
ಮತ್ತೆ ನನಗಲ್ಲದೆ ಇದು ಯಾರಿಗೂ ಗೊತ್ತಿರಲು 
ಸಾಧ್ಯವೇ ಇಲ್ಲ ಎಂದು ವಾದಿಸುವ ಕಲೆಯನ್ನ....
ಕಲಿಯಬೇಕಿದೆ 
ಸುಳ್ಳುಗಳ ಮೂಟೆಯಲ್ಲಿ ಸತ್ಯ ಹುಡುಕುವ 
ವ್ಯರ್ಥ ಪ್ರಯತ್ನ ಮಾಡುವುದನ್ನ 
ಮಿಥ್ಯದ ಕನ್ನಡಿಯಲ್ಲಿ ಸತ್ಯ ತೋರಲು ಒದ್ದಾಡಿ,
ಇಲ್ಲದ್ದನ್ನು ಇದೆ ಎಂದು ತೋರುವ ವಿದ್ಯೆಯನ್ನ 
ಕಲಿಯಬೇಕಿದೆ 
ಏಳಿಗೆ ಆದರೆ ಅದು ನನ್ನದೇ ಆಗಬೇಕು,
ಜಗದಲ್ಲಿ ನನ್ನ ಹೊರತು ಏಳಿಗೆಗೆ ಅರ್ಹರ್ಯಾರು?
ಎಂದು ಬೀಗುವುದನ್ನ...
ರೋಗವನ್ನುಆರೋಗ್ಯ ಎನ್ನುವುದನ್ನ 
ಕಾಗೆ ಬಂಗಾರವನ್ನು ಚಿನ್ನ ಎನ್ನುವುದನ್ನ 
ಮತ್ಯಾರಿಗಾದರೂ ಸಿಕ್ಕೀತು ದಕ್ಕಿಬಿಟ್ಟೀತು 
ಎನ್ನುವ ಹಪಹಪಿಯಲ್ಲಿ 
ಹಳಸಿದ್ದನ್ನು ಉಣ್ಣುವ ತೆವಲನ್ನ 

ಕಲಿಯಬೇಕಿದೆ,
ದುರ್ಗಂಧವನ್ನು ಸೌಗಂಧಿಕೆ ಎನ್ನುವ 
ಅನಿವಾರ್ಯತೆಯನ್ನ 
ನೀನೆ, ನೀನೆ, ನೀನೆ 
ಎಂಬ ಹೊಗಳಿಕೆಯ ನುಡಿಯನ್ನ 
ಕಲಿಯಬೇಕಿದೆ 
ಬೆಳೆಯಲು- ಬೆಳಗಲು 
ಆದರೆ ಇಷ್ಟೆಲ್ಲ ಕಲಿತ ದಿನ ನಾ 
ಬೆಳೆಯುವೆನೆ?ಬೆಳಗುವೆನೆ?
ಕೊನೆಗೆ ನನ್ನ ನಾನು
ಗುರುತಿಸಬಲ್ಲೆನೇ?
ಬಿಡು, ಹೀಗೆ ಇದ್ದು ಬಿಡುವೆ
ಪೆದ್ದು ಪೆದ್ದಾಗಿ. 
- ಅಮಿತ ರವಿಕಿರಣ್