”ಯೂರೋಪಿನ ಅತ್ಯಂತ ಸುಂದರ ದೇಶಗಳಲ್ಲೊಂದು’ ಎನ್ನುವ ಖ್ಯಾತಿಯ ಸ್ವಿಜ್ಜರ್ ಲ್ಯಾಂಡ್ ಒಮ್ಮೆಯಾದರೂ ಆಯುಷ್ಯದಲ್ಲಿ ನೋಡ ಬೇಕಾದ ಸ್ಠಳ ಅಂತ ಬಹಳ ಜನರ ಮತ. ವರ್ಣನೆಗೆ ನಿಲುಕದ ಪ್ರಕೃತಿ ಸೌಂದರ್ಯ, ಸ್ವಚ್ಛತೆ, ಸಮಯನಿಷ್ಠೆಗಳಿಗೆ ಹೆಸರುವಾಸಿಯಾದ ನಾಡು ಅದು. ಅದು ಬರೀ ಚಾಕಲೇಟು, ಗಡಿಯಾರಗಳು (ಕುಕ್ಕೂ ಕ್ಲಾಕ್ ಸಹ) ಮತ್ತು precision engineering ಗೆ ಅಷ್ಟೇ ಅದರ ಪ್ರಸಿದ್ಧಿ ಸೀಮಿತವಲ್ಲ. ಒಂದು ಕಾಲಕ್ಕೆ ’See Naples and Die' ಅನ್ನುವ ಉತ್ಪ್ರೇಕ್ಷೆಯಿತ್ತು. ಅದೇ ಪಟ್ಟಿಯಲ್ಲೇ ಆಲ್ಪ್ಸ್ ಮಡಿಲಲ್ಲಿ ಪವಡಿಸಿರುವ ಈ ದೇಶದ ಎಷ್ಟೋ ಸ್ಥಳಗಳಿಗಳಿಗೂ ಈ ಪಟ್ಟವನ್ನು ಕಟ್ಟಬಹುದೇನೋ. ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದ ರಾಧಿಕಾ ಜೋಶಿಯವರು ಈ ಚಿಕ್ಕ ಲೇಖನದಲ್ಲಿ ಮುಂದೆ ಬರಲಿರುವ ಪ್ರವಾಸ ಕಥನಕ್ಕೆ ಪೀಠಿಕೆಯೇನೊ ಅನ್ನುವಂತೆ ಬರಹ-ಕವಿತೆ-ಫೋಟೊಗಳ ಚಿತ್ತಾರವನ್ನು ಕೊಟ್ಟಿದ್ದಾರೆ. ಅವರು ’ಆಲ್ಪ್ಸ್ ನ ಎದುರಲ್ಲಿ ತಮ್ಮ ಅಲ್ಪತೆಯನ್ನು’ ಕಂಡವರು! ಅವರ ಬರಹದಲ್ಲಿ ಅವರ ರೈಲು ಪ್ರವಾಸದ ನಕ್ಷೆ ಸಹ ಇದೆ. ಅದರಲ್ಲಿ ಅಲ್ಲಿಯ ಸೌಂದರ್ಯಕ್ಕೆ ಮಾರುಹೋದದ್ದನ್ನು ಕಾಣಬಹುದು. ರಾಧಿಕಾ ಅವರು ’ಅನಿವಾಸಿ’ಗೆ ಹೊಸಬರಲ್ಲ. ಹಿಂದೆ ಅನೇಕ ಲೇಖನಗಳನ್ನು ಕೊಟ್ಟಿದ್ದಾರೆ. ಇಲ್ಲಿ ಕೆಲವರು ಹೊಸದಾಗಿ ಸೇರಿರಬಹುದೆಂದು ನನ್ನ ಸಲಹೆಯ ಮೇರೆಗೆ ಮತ್ತೆ ತಮ್ಮ ಕಿರುಪರಿಚಯದಿಂದ ಲೇಖನವನ್ನು ಪ್ರಾರಂಭ ಮಾಡಿದ್ದಾರೆ. ಅವರದು ತಮ್ಮದೇ ಒಂದು ಬ್ಲಾಗ್ ಸಹ ಇದ್ದು ಅದರಲ್ಲಿ ಆಗಾಗ ಬರೆಯುತ್ತಿರುತ್ತಾರೆ. (ಸಂಪಾದಕ)
ನನ್ನ ಪರಿಚಯ:ಮೂಲತಃ ಹುಬ್ಬಳ್ಳಿ ನನ್ನ ಊರಾದರು, ಮೈಸೂರಿನಲ್ಲಿ ನನ್ನ ಪ್ರಾಥಮಿಕ ಹಾಗು ಉನ್ನತ ವಿದ್ಯಾಭ್ಯಾಸ ಹೀಗಾಗಿ ಅದೇ ತವರು ಎಂಬ ಭಾವನೆ. ಸುಮಾರು 14 ವರ್ಷಗಳಿಂದ ಲಂಡನ್ ವಾಸಿ. ವೃತ್ತಿ ಇಂದ ಅಕೌಂಟೆಂಟ್ (ಸಿಎ). ಈಗ ಕೆಲವು ವರುಷಗಳಿಂದ
ರಾಧಿಕಾ ಜೋಶಿ
ಅಧ್ಯಾಪಕಿ ಆಗಿ ವೃತ್ತಿ ನಿರತಳಾಗಿದ್ದೇನೆ. ಪುಟ್ಟ ಕವನಗಳು ಬರೆಯುವುದು ನನ್ನ ಹವ್ಯಾಸ.
ಮೂರು ಘಂಟೆಗಳ ಕಾಲ ಚಲನಚಿತ್ರಗಳ ಮಾಯಾಲೋಕದ ದೃಶ್ಯಗಳಲ್ಲಿ ನಾವು ಭಾಗಿಯಾಗಿ ನಮ್ಮನು ಅದರಲ್ಲಿ ಮುಳುಗಿಸಿ ಅದರಿಂದ ಹೊರಬಂದ ನಂತರ ಛೆ! ಅದೊಂದು ಸಿನಿಮಾ ಅಷ್ಟೇ ನಿಜ ಜೀವನದಲ್ಲಿ ಹೀಗೆಲ್ಲಾ ಇರುವುದಿಲ್ಲ ಅಂತ ಸಮಾಧಾನ ಮಾಡಿಕೊಳ್ಳುತ್ತೀವಿ.
ಆದರೆ ಪ್ರತಿಬಾರಿ ದೂರದರ್ಶನದ ರಂಗೋಲಿ ಅಥವಾ ಚಿತ್ರಹಾರ್ ನಲ್ಲಿ ಶಮ್ಮಿ ಕಪೂರ್ ''ಯಾಹೂ'' ಅಂತ ಹಿಮವದ್ ಪರ್ವತಗಳಲ್ಲಿ ಹಾಡಿ ಕುಣಿಯುವುದನ್ನು ನೋಡಿ ಆ ವಿಸ್ಮಯ ಪ್ರದೇಶಕ್ಕೆ ಹೋಗುವ ಆಸೆ ನಾನು ಬೆಳೆದು ದೊಡ್ಡವಳಾದರೂ ನನ್ನ ಆಶಾಪಟ್ಟಿಯ ಮೊದಲನೆಯ ಸ್ಥಾನದಲ್ಲಿ. ಕಾಶ್ಮೀರಕ್ಕೆ ಹೋಗುವುದು ಇನ್ನೂ ಕನಸಾದರು ತಕ್ಕ ಮಟ್ಟಿಗೆ ನನ್ನ ಕಾಶ್ಮೀರದ ಅದಮ್ಯ ಆಸೆ ನನಸಾಗಿಸುವ ಕಾಲು ಕೂಡಿಬಂತು. ಈ ಬಾರಿಯ ಕ್ರಿಸ್ಮಸ್ ರಜೆಯಲ್ಲಿ ಸ್ವಿಜ್ರ್ ಲ್ಯಾಂಡ್ ನ ಗ್ಲೇಸಿಯರ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣ ಮಾಡಿದರಾಯ್ತು . ಆದರೆ ಈ ಗ್ಲೇಸಿಯರ್ ಎಕ್ಸ್ಪ್ರೆಸ್ ನ ಟಿಕೆಟ್ ಸುಮಾರು ೬ ತಿಂಗಳು ಮುಂಚಿತವಾಗಿಯೇ ಖರೀದಿಸಬೇಕಂತೆ. ನಾವೆಲ್ಲಾ ಲಾಸ್ಟ ಮಿನಿಟ್ ಡಾಟ್ ಕಾಮ್ ನವರು. ಆದರೆ ನೋಡಲೇ ಬೇಕೆಂಬ ಆಸೆ ಅಂತ ನನ್ನ ಅಕ್ಕನಿಗೆ ಹೇಳಿದೆ. ಏನೋ ಖಟಪಟಿ ಮಾಡಿ ಅವಳು ರೆಟಿಷೆಬಾನ್ ಅನ್ನೋ ಮತ್ತೊಂದು ರೈಲಿನ ಬಗ್ಗೆ ವಿಚಾರಿಸಿ ಕಡೆಗೂ ನಾನು ''ಯಾಹೂ'' ಅಂತ ಜೋರಾಗಿ ಕಿರುಚುವ ಸಮಯ ಬಂತು. ಆದರೆ ನಾನು ಅಲ್ಲಿ ಕಾಲಿಟ್ಟ ಕ್ಷಣ ಜೋರಾಗಿ ''ಯಾಹೂ'' ಅಂತ ಅನ್ನೋಣ ಅಂದುಕೊಂಡ ಮೂಕಾಗಿ ಬೆಪ್ಪಾದೆ. ಆಲ್ಪ್ಸ್ ನ ಮಡಿಲಿನಲ್ಲಿ ೩ ದಿನಗಳು ಮರೆಯಲಾರದ ಅದ್ಭುತ ಕ್ಷಣಗಳು. ನನ್ನಲ್ಲಿ ಆಲ್ಪ್ಸ್ ಸೌಂದರ್ಯವನ್ನು ವ್ಯಕ್ತಪಡಿಸಲು ಪದಗಳು ಇಲ್ಲ. ನನ್ನ ಅಲ್ಪ ಭಾಷಾ ಜ್ಞಾನದಲ್ಲಿ ಹೊರಬಂದ ಕೆಲ ಸಾಲುಗಳು.
ಹಿಮಭರಿತ ಶೃಂಗ ಆಹಾ! ಇದೆ ಸ್ವರ್ಗ
ಇಂತಹ ಅದ್ಭುತ ದೃಶ್ಯ ನನ್ನ ಬಂಧಿಸಿ
ಕಣ್ಣ್ಮನ ಸೆಳೆದು ಎಲ್ಲವು ನಿಶಬ್ದವಾಗಿಸಿ
ಪರ್ವತ ಶ್ರೇಣಿಗಳ ಆ ರಮ್ಯ ದರ್ಶನ
ನಾನು ಮತ್ತು ನನ್ನ ಅಲ್ಪತೆಯ ನಿದರ್ಶನ
ಮಂತ್ರ ಮುಗ್ಧಳಾಗಿ ನಿಂದು
ಹಿಮದ ಸೊಬಗಿನಲ್ಲಿ ನಡೆದು
ಶೀತಲ ಹವೆಯು ಮೊದಲಬಾರಿಗೆ ಮನ ಸೆಳೆದು
ಹೃದಯ ಮಿಡಿತದ ಹೊರತು ಮತ್ತೇನು ಕೇಳದು
ಇದಕ್ಕಿಂತ ಇನ್ನೇನು ಪವಿತ್ರ ನಿಷ್ಕಲ್ಮಶ
ಉತ್ತುಂಗದ ವಜ್ರಕಾಯ ಸಾಹಸದ ವಿಸ್ಮಯ
ಸೂರ್ಯನ ಆ ತೀಕ್ಷ್ಣ ಕಿರಣ
ಎಲ್ಲವು ಮುತ್ತು ವಜ್ರಗಳ ಆಭರಣ
ಆ ಶಿಖರಗಳು ಪ್ರತಿಧ್ವನಿಸುವ ಭಯವು
ಅಲ್ಲೇ ಐಕ್ಯವಾದ ನನ್ನ ಮನವು
ಮರುಕಳಿಸಲಿ ಶಾಂತಿ ನೆಮ್ಮದಿಯ ಆ ನಿಮಿಷಗಳು
ಆಲ್ಪ್ಸ್ ನ ನಯನ ಮನೋಹರ ಆ ಕ್ಷಣಗಳು
ಹಿಮಭರಿತ ಶೃಂಗ ಆಹಾ! ಅದೇ ಸ್ವರ್ಗ
ರಾಧಿಕಾ ಜೋಶಿ
ಲೇಖನ ಮತ್ತು ಚಿತ್ರ ಕೃಪೆ: ಲೇಖಕಿ.
Radhika avare your poem is enchanting. It depicts your state of Kavi hrudaya.
ESP description of Peace and bliss experience in front of amazing scenery..
Bahala sundaravagi moodi bandede
LikeLike