ಗೋವಾ ಎಕ್ಸ್ ಪ್ರೆಸ್

ಕನ್ನಡ ಕರಾವಳಿಯವರಿಗೆ ರೈಲು ಮಾರ್ಗ ಕನಸಿನ ಕೂಸೇ ಆಗಿತ್ತು. ಅದು ನನಸಾಗಿದ್ದು ೧೯೯೮ ರಲ್ಲಿ ಕೊಂಕಣ್ ರೈಲು ಹಾದಿಯಲ್ಲಿ ದಶಕಗಳ ಕಾಲದಿಂದಲೂ ಕಾತುರದಿಂದ ಕಾಯುತ್ತಿದ್ದ ರೈಲು ಮುಂಬಯಿಯಿಂದ ಮಂಗಳೂರಿನ ಮಾರ್ಗವಾಗಿ ನೇತ್ರಾವತಿ ಎಕ್ಸ್ಪ್ರೆಸ್ಸಿನ ರೂಪದಲ್ಲಿ ಹರಿದುಬಂದಾಗ. ಕರಾವಳಿಯಲ್ಲಿ ಅಲ್ಲಿಯವರೆಗೂ ಬಸ್ಸು , ಕಿಕ್ಕಿರಿದು ತುಂಬಿದ ಟ್ಯಾಕ್ಸಿ, ಟೆಂಪೋಗಳದ್ದೇ ಗಡದ್ದು ಕಾರುಬಾರು. ಮಂಗಳೂರನ್ನು ಬಿಟ್ಟರೆ ಬೇರೆ ವಿಮಾನ ನಿಲ್ದಾಣವೂ ಇಲ್ಲ. ಅಲ್ಲೇ ಹುಟ್ಟಿ ಬೆಳೆದವರು ಕೇವಲ ಪತ್ರಿಕೆಗಳಲ್ಲಿ / ಪುಸ್ತಕಗಳಲ್ಲಿನ ಚಿತ್ರದಲ್ಲಿ ಮಾತ್ರ ರೈಲನ್ನು ಕಂಡಿರಬಹುದು. ವಿಶೇಷವೆಂದರೆ ಕನ್ನಡದಲ್ಲಿ ರೈಲಿನ ಕುರಿತಾದ ಶಿಶುಗೀತೆಗಳೂ ಇರಲಿಲ್ಲ. ಈ ಹಿನ್ನಲೆಯಲ್ಲಿ ಬೆಳೆದು ಬಂದ ನನ್ನಂಥವನಿಗೆ ರೈಲು ಅದ್ಯಾವ ಮೋಡಿ ಹಾಕಿತ್ತೋ ಭಗವಂತನೇ ಬಲ್ಲ. ಕಾಲಮಾನಗಳ ನಂತರ ಬರಡಾದ ಮರುಭೂಮಿಯಲ್ಲಿ ಮಳೆ ಬಂದ ಮೇಲೆ ಹಸಿರೊಡೆಯುವಂತೆ, ಕಾಲೇಜಿನ ಕೊನೆಯ ದಿನಗಳಲ್ಲಿ ಮೊದಲ ಬಾರಿ ಮಾಡಿದ ಎರಡು ದಿನಗಳ ಕಾಲದ ರೈಲು ಯಾತ್ರೆಯಿಂದ ರೈಲಿನ ಆಕರ್ಷಣೆಯನ್ನು ನೂರ್ಪಟ್ಟು ಹಿಗ್ಗಿಸಿದೆ. ಈ ಯಾತ್ರೆಯ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಇದು .

೧೯೯೩ ರ ನವೆಂಬರ್, ದೆಹಲಿಯಿಂದ ಕೇಂದ್ರ ಲೋಕ ಸೇವಾ ಆಯೋಗದ ಸಂದರ್ಶನಕ್ಕೆ ಕರೆ ಬಂದಿತ್ತು. ನಮ್ಮ ಕ್ಲಾಸಿನ ನಾಲ್ಕು ವಿದ್ಯಾರ್ಥಿಗಳಿಗೆ ಸಿಕ್ಕಿದ ಅವಕಾಶವದು. ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಮಾಡಬೇಕೆಂದರೆ ರೈಲೇ ಅನುಕೂಲಕರ ಮಾರ್ಗವಾಗಿತ್ತು. ಆಗಿನ್ನೂ ಉತ್ತರ ಕರ್ನಾಟಕದಲ್ಲಿ ಬ್ರಾಡ್ ಗೇಜ್ ರೈಲು ಮಾರ್ಗವಿರಲಿಲ್ಲ. ಕರಾವಳಿಯಲ್ಲಿ ಹಳಿಯೇ ಹಾಕಿರಲಿಲ್ಲ, ಬೆಂಗಳೂರು ಬಿಟ್ಟರೆ ಕರ್ನಾಟಕದ ಕಡೆ ಬ್ರಾಡ್ ಗೇಜ್ ಹಣಕಿಯೂ ಹಾಕಿರಲಿಲ್ಲ. ಇದು ಅಂದಿನ ಕರ್ನಾಟಕದ ರೈಲಿನ ಪರಿಸ್ಥಿತಿ! ಹುಬ್ಬಳಿಯಿಂದ ರಾತ್ರೆ ಹೊರಟ ರೈಲು ಬೆಳಗಿನ ಜಾವ ಮಿರಜ್ ಜಂಕ್ಷನ್ ಸೇರುತ್ತಿತ್ತು. ಅಲ್ಲಿಂದ ರೈಲು ಬದಲಾಯಿಸಿದರೆ ಗಮ್ಯ ಸ್ಥಾನ ದೆಹಲಿಯ ಹಝರತ್ ನಿಜಾಮುದ್ದಿನ್ ನಿಲ್ದಾಣ ತಲುಪಲು ಅಧಿಕೃತವಾಗಿ ೪೨ ಘಂಟೆ ಬೇಕಿತ್ತು. ಹೈಸ್ಕೂಲಿನಲ್ಲಿರುವಾಗ ಅಳ್ನಾವರದಿಂದ ಗೋವಾಕ್ಕೆ ಎನ್.ಸಿ.ಸಿ ಕ್ಯಾಮ್ಪಿಗೆ ಹೋಗಿದ್ದೆ. ಅದು ಪಶ್ಚಿಮ ಘಟ್ಟವನ್ನು ಬಳಸಿ ದೂಧ್ ಸಾಗರ್ ಜಲಪಾತದ ತಪ್ಪಡಿಯಲ್ಲಿ ತೆವಳುತ್ತ ಸಾಗುವ ಅದ್ಭುತರಮ್ಯ ಹಾದಿ. ಕೆಲವೇ ಘಂಟೆಗಳ ಆ ಪ್ರಯಾಣ ನನಗೆ ರೈಲು ಪ್ರಯಾಣದ ಹುಚ್ಚು ಹಿಡಿಸಿತ್ತು. ಕಲ್ಲಿದ್ದಲಿನಿಂದ ಚಲಿಸುವ ಆ ಉಗಿಬಂಡಿಯಿಂದ ಇಳಿದಾಗ ಮುಖ, ಬಟ್ಟೆಯೆಲ್ಲ ಕಪ್ಪಾಗಿದ್ದರೂ ನನ್ನ ರೈಲು ಪ್ರಯಾಣದ ಉತ್ಸಾಹಕ್ಕೆ ಅದು ಬೂದಿ ಎರಚಲಿಲ್ಲ.

ರಾತ್ರೆ ಹೊದೆಯಲೊಂದು ಚಾದರ, ಒಂದು ಸಣ್ಣ ಸೂಟ್ ಕೇಸಿನಲ್ಲಿ ನಾಲ್ಕೈದು ಬಟ್ಟೆಗಳನ್ನು ತುರುಕಿದ್ದಷ್ಟೇ ನನ್ನ ತಯ್ಯಾರಿ. ನಾವು ಸ್ಲೀಪರ್ ಕೋಚನ್ನು ರಿಸರ್ವ್ ಮಾಡಿದ್ದೆವು. ಹಿಂದಿನ ಪ್ರಯಾಣದಲ್ಲಿ ಗಾಂಧಿ ಕ್ಲಾಸಿನ ಒರಟು ಮರದ ಬೆಂಚಿನಲ್ಲೇ ಪ್ರಯಾಣ ಮಾಡಿದ್ದ ನನಗೆ, ಮೆತ್ತನೆಯ ಮಡಚುವ ಸೀಟುಗಳನ್ನ ಕಂಡು ಮನ ಪುಳಕಿತಗೊಂಡಿತು. ಮತ್ತೆ ಮತ್ತೆ ಒತ್ತಿ ನೋಡಿ ಖುಶಿ ಪಟ್ಟುಕೊಂಡೆ. ಸೂಟ್ ಕೇಸನ್ನು ಸೀಟಿನ ಅಡಿಗೆ ನೂಕಿ, ಯಾರೂ ಕದ್ದೊಯ್ಯಬಾರದೆಂದು ಸರಪಳಿಯಿಂದ ಬಿಗಿದು ಬೀಗ ಜಡಿದು, ಎಳೆದು ನೋಡಿ ತೃಪ್ತಿಯಾದ ಮೇಲೆ ಬೀಗದ ಕೈಯನ್ನು ಜತನವಾಗಿ ಪ್ಯಾಂಟಿನ ಜೇಬಿಗಿಳಿಸಿ ಮೆತ್ತನೆಯ ಸೀಟಿನ ಮೇಲೆ ಆಸೀನನಾಗಿ, ಮೇಲೆ ತಿರುಗುವ ಫ್ಯಾನನ್ನು ಅವಲೋಕಿಸುತ್ತ ಸೀಟನ್ನು ಸವರುತ್ತ ಒಂದು ಅಲೌಕಿಕ ಆನಂದವನ್ನು ಅನುಭವಿಸುತ್ತಿದ್ದಂತೆ ಗಾರ್ಡ್ ಸೀಟಿ ಊದಿದ್ದು ಕೇಳಿಸಿತು. ರೈಲಿನ ಚಕ್ರ ಮೆಲ್ಲನೆ ಕಬ್ಬಿಣದ ಹಳಿಯ ಮೇಲೆ ಜಾರುತ್ತ ತಿರುಗಲು ಶುರುವಾದಂತೆ ನಾವು ಬಾಗಿಲಿನ ಬಳಿ ಸಾಗಿ ದೇಹದ ಅರ್ಧಭಾಗವನ್ನ ರೈಲಿನ ಹೊರಗಿಟ್ಟು ಸಿನೆಮಾ ಹೀರೋಗಳಂತೆ ನಿಂತೆವು. ಹುಬ್ಬಳ್ಳಿ ಬಿಡುತ್ತಿದ್ದಂತೆ ಹಾದಿಯಲ್ಲಿ ಕೆ. ಎಂ. ಸಿ ಹಾಗೂ ನೃಪತುಂಗ ಬೆಟ್ಟದ ದರುಶನ ಮಾಡಲೇಬೇಕಲ್ಲ! ಇದು ಡೀಸಲ್ ರೈಲಾಗಿದ್ದರಿಂದ ಮೈ – ಮೊರೆ ಕಪ್ಪಾಗುವ ಹೆದರಿಕೆಯೂ ಇರಲಿಲ್ಲ. ಮುಖಕ್ಕೆ ಎರಚುವ ಗಾಳಿಯ ರಭಸವನ್ನು, ರೈಲಿನ ಶಿಳ್ಳೆಯ ಸಂಗೀತವನ್ನು ಅನುಭವಿಸುವ ಸುಖದ ಮತ್ತೇರುತ್ತಿದಂತೇ ಕಣ್ಣು ಕೂರಲು ಆರಂಭಿಸಿತು. ಸೀಸನ್ಡ್ ಯಾತ್ರಿಗಳು ಆಗಲೇ ಹಾಸಿಗೆ ತಯಾರಿ ಮಾಡಿ, ಮಂಕಿ ಕ್ಯಾಪ್ ಹಾಕಿ, ರಗ್ಗು ಹೊದ್ದು ಲಘುವಾದ ಗೊರಕೆ ಹೊಡೆಯುತ್ತಿದ್ದರು. ಬರ್ತ್ ಹತ್ತಿ ಪವಡಿಸಿದಂತೇ, ರೈಲಿನ ರೈಲು – ಹಳಿಗಳ ತಾಳಬದ್ಧವಾದ ಜುಗಲಬಂದಿಯ ಜೋಗುಳ ಗಾಯನಕ್ಕೆ ಜೋಮ್ಪು ಹತ್ತಿತ್ತು. ಮಧ್ಯರಾತ್ರಿಯಲ್ಲಿ ರೈಲು ಯಾವುದೊ ನಿಲ್ದಾಣದಲ್ಲಿ ನಿಂತ ಅರಿವಾಯಿತು. ಸುಮಾರು ಹೊತ್ತಾದರೂ ಅಲ್ಲಾಡದಿದ್ದರಿಂದ ರೈಲು ಹಾಳಾಗಿ ನಿಂತಿದೆಯೇ ಎಂಬ ಸಂದೇಹ ಬಂತು. ಕೇವಲ ಬಸ್ಸುಗಳಲ್ಲೇ ಪ್ರಯಾಣ ಮಾಡಿದವರಿಗೆ ಬಸ್ಸು ಅವಶ್ಯಕ್ಕಿಂತ ಜಾಸ್ತಿ ನಿಂತರೆ ಗಾಡಿ ಹಾಳಾಗಿದೆ ಎನ್ನುವ ಅನುಮಾನ ಬರುವುದು ಸಹಜ. ನಿಲ್ದಾಣವಾದರೂ ಯಾವುದು ಎಂಬ ಕುತೂಹಲದಿಂದ ಬಾಗಿಲಿನಿಂದ ಹಣಕಿ ಹಾಕಿದಾಗ ಲೋಂಡಾ ನಿಲ್ದಾಣವದು ಎಂಬ ಅರಿವಾಯಿತು. ಪಕ್ಕದಲ್ಲೇ ನಿಂತು ಬೀಡಿ ಸೇದುತ್ತಿದ್ದ ಮಹಾನುಭಾವರನ್ನು ಕೇಳಿದಾಗ ರೈಲು ಸುಮ್ಮನೆ ನಿಂತಿಲ್ಲ, ಗೋವಾದಿಂದ ಬರುವ ರೈಲಿಗೆ ಕಾಯುತ್ತಿದೆ ಎಂದು ತಿಳಿದು ಬಂತು. ಹುಬ್ಬಳ್ಳಿಯಿಂದ ಬರುವ ರೈಲು, ಗೋವಾದಿಂದ ಬರುವ ರೈಲಿಗೆ ಜೋಡಿಯಾಗಿ ಮೀರಜ್ ತಲುಪಿ, ಗೇಜ್ ಬದಲಾಯಿಸಿ, ಮತ್ತಷ್ಟು ಬೋಗಿಗಳನ್ನು ಅಂಟಿಸಿಕೊಂಡು ದೆಹಲಿಗೆ ಓಡುತ್ತಿತ್ತು. ಅದಕ್ಕಾಗೇ ನಾವು ಹೋಗುತ್ತಿರುವ ರೈಲಿನ ಹೆಸರು ಗೋವಾ ಎಕ್ಸ್ಪ್ರೆಸ್. ಬೇರೆ ಬೇರೆ ಮೂಲಗಳಿಂದ ಬಂದ ಹೊಳೆಗಳು ಕೂಡಿ ನದಿಯಾಗಿ ಮುಂದೆ ಸಾಗರ ಸೇರಿದಂತೆ. ವಾಸ್ಕೋದಿಂದ ಬಂದ ರೈಲಿಗೆ ನಮ್ಮ ಬೋಗಿಯನ್ನು ಅಂಟಿಸುವ ಕೈಂಕರ್ಯ ನೋಡಿ ಧನ್ಯನಾದೆ. ಆದರೆ ಮಧ್ಯದಲ್ಲಿದ್ದ ನಮ್ಮ ಬೋಗಿ ಈಗ ಹೊಸ ರೈಲಿನ ಕೊನೆಯಲ್ಲಿದೆಯಲ್ಲ ಎಂದು ಸ್ವಲ ಬೇಜಾರೂ ಆಯಿತು. ಕೊನೆಯಲ್ಲಿದ್ದರೂ ಬಸ್ಸಿನ ಹಿಂದಿನ ಸೀಟುಗಳು ಹಾರುವಂತೆ ರೈಲಿನಲ್ಲಾಗುವುದಿಲ್ಲ ಎಂಬುದೇ ಸಮಾಧಾನವಾಗಿತ್ತು.

(ಚಿತ್ರ : ಜೆಮಿನಿ ಕೃತಕ ಬುದ್ಧಿಮತ್ತೆ)

ಬೆಳಕು ಹರಿಯುತ್ತಿದ್ದಂತೆ ಮೀರಜ್ ತಲುಪಿದೆವು. ಮೀಟರ್ ಗೇಜಿನ ಪ್ಲಾಟ್ಫಾರಂ ಅಸ್ಪ್ರಶ್ಯನಂತೆ ಮುಖ್ಯ ಪ್ಲಾಟಫಾರಂಗಳಿಂದ ಸ್ವಲ್ಪ ದೂರದಲ್ಲಿತ್ತು. ಲೋಂಡಾದಲ್ಲಿ ವಾಸ್ಕೋ ರೈಲು ತಡವಾಗಿ ಬಂದಿದ್ದರಿಂದ ಮುಂದಿನ ರೈಲು ತಪ್ಪೀತು ಎಂಬ ಅಳುಕಿತ್ತು; ಆದರೆ ರೈಲು ತಯಾರಾಗಿ ನಿಂತಿದ್ದನ್ನು ಕಂಡು ಸಮಾಧಾನವಾಯಿತು. ನಿಲ್ದಾಣದಲ್ಲಿ ಛಾ, ಕಾಫಿ ಮಾರಾಟಗಾರರು ತಾರಕ ಸ್ವರದಲ್ಲಿ ತಮ್ಮ ಅಸ್ತಿತ್ವವನ್ನು ಘೋಷಿಸುತ್ತ, ಬೋಗಿ ಬೋಗಿಗಳನ್ನು ಹೊಕ್ಕಿ, ಗಟ್ಟಿಯಾಗಿ ಅದುಮಿದರೆ ತಿರುಚಿ ಹೋಗುವಂಥ ಪ್ಲಾಸ್ಟಿಕ್ ಕಪ್ಪುಗಳಲ್ಲಿ ಬಿಸಿ ಬಿಸಿಯಾದ ಜೀವ ದ್ರವ್ಯವನ್ನು ವಿಲೇವಾರಿ ಮಾಡುವಲ್ಲಿ ವ್ಯಸ್ತವಾಗಿದ್ದರು. ಒಂದು ಗುಟುಕು ಚಹಾ ಒಳ ಸೇರಿದಂತೆ, ನಾಲಿಗೆ ಚುರುಕಾಗಿ, ಗಂಟಲಲ್ಲಿಳಿದು ದೇಹವೆಲ್ಲ ಬಿಸಿಯಾಗಿ ಮೂಲೆಯಲ್ಲಿ ಮುದುಡಿದ್ದ ನಿದ್ದೆಯನ್ನು ಒದ್ದೋಡಿಸಿತು. ನಮ್ಮ ಬರ್ತ್ ಗುರುತಿಸಿಕೊಂಡು, ಹಿಂದಿನ ರಾತ್ರೆಯಂತೇ ಸೂಟ್ ಕೇಸಿಗೆ ಲಂಗರು ಹಾಕಿ ನೆಲೆಯೂರಿದಂತೆ ವ್ಯಕ್ತವಾಗಿದ್ದು, ಈ ಜಾಗೆ ಕೆಲವೇ ಗಂಟೆಗಳಿಗೆ ಸೀಮಿತವಲ್ಲ, ಒಂದೂವರೆ ದಿನಗಳ ವರೆಗೂ ನಮ್ಮ ತಾಣ ಎಂಬ ಸತ್ಯ. ನಮ್ಮ ಜೊತೆಯಲ್ಲಿದ್ದವರು ಹಿಂದಿಯಂಥ ಭಾಷೆ ಮಾತಾಡುತ್ತಿದ್ದರು. ಪರಿಚಯವಾದ ಮೇಲೆ ಗೊತ್ತಾಯಿತು, ಅವರು ಹುಬ್ಬಳ್ಳಿಯಲ್ಲಿ ನೆಲೆಸಿರುವ ಮಾರವಾಡಿ ಹಲ್ವಾಯಿಗಳು ಎಂದು.

(ಚಿತ್ರ : ಜೆಮಿನಿ ಕೃತಕ ಬುದ್ಧಿಮತ್ತೆ )

ರೈಲು ಪ್ರಯಾಣದ ಅವಿಭಾಜ್ಯ ಅಂಗ, ಒಂದು ರೀತಿಯಲ್ಲಿ ಮಹತ್ವ ಅಂಗ ಎಂದರೆ ಸದಾ ಎಲ್ಲ ದಿಕ್ಕಿನಿಂದಲೂ ಲಭ್ಯವಾಗುವ ತಿನಿಸುಗಳು. ನಮ್ಮ ರೈಲಿನಲ್ಲಿ ಅಡುಗೆ ಮನೆಯೂ ಇತ್ತು (ಪ್ಯಾಂಟ್ರಿ ಕಾರ್). ಹಿಂದಿನ ದಿನ ಹಾಸ್ಟೆಲ್ ನಲ್ಲಿ ಉಂಡು, ರಾತ್ರಿ ಮಲಗಿದ್ದರಿಂದ ಈ ತಿನಿಸುಗಳ ಸಾಮ್ರಾಜ್ಯದ ಪರಿಚಯವಾಗಿರಲಿಲ್ಲ; ಅಪರಾತ್ರಿಯಲ್ಲಿ ಯಾರೂ ಏನನ್ನೂ ಮಾರಲೂ ಬಂದಿರಲಿಲ್ಲ. ನಮ್ಮ ಬೆಳಗಿನ ಉಪಾಹಾರ ಸ್ಯಾಂಡ್ವಿಚ್. ಹೆಸರು ಕೇಳಿ ಮುಖ ತಿರುಚಬೇಡಿ, ಅದು ರುಚಿ ರಹಿತ ಬ್ರಿಟಿಷ್ ಸ್ಯಾಂಡ್ವಿಚ್ ಅಲ್ಲ. ಸಸ್ಯಾಹಾರಿಗಳಿಗೆ ವೆಜ್ ಕಟ್ಲೆಟ್ ಸ್ಯಾಂಡ್ವಿಚ್, ಅಲ್ಲದವರಿಗೆ ಆಮ್ಲೆಟ್ ಸ್ಯಾಂಡ್ವಿಚ್; ರುಚಿಯಾದ ಟೊಮ್ಯಾಟೋ ಕೆಚಪ್ ಜೊತೆಗೆ. ಆಹಾ, ಅದರ ರುಚಿ ವರ್ಣಿಲಸದಳ! ಇಂದಿಗೂ ನಾಲಿಗೆ ತುದಿಯಲ್ಲಿದೆ. ದಾರಿಗುಂಟ ರೈಲಿನೊಳಗೆ, ಪ್ಲಾಟಫಾರಂ ಮೇಲೆ ಸರಬರಾಜಾಗುವ, ದೊರೆಯಯುವ ಟೊಮ್ಯಾಟೋ ಸೂಪ್ (ಕ್ರೂಟೋನ್ ಜೊತೆ), ಭೇಲ್, ತರಹೇವಾರಿ ಹಣ್ಣುಗಳು, ವಡಾ ಪಾವ್ (ಮಹಾರಾಷ್ಟ್ರದ ಜನಪ್ರಿಯ ಬರ್ಗರ್ ಪರಿಚಯವಾಗಿದ್ದೇ ಈ ಯಾತ್ರೆಯಲ್ಲಿ), ಸಮೋಸಾ, ಪೂರಿ-ಆಲೂ ಸಬ್ಜಿ, ಕಬ್ಬಿನ ಹಾಲು, ದೇಶದ ವಿವಿಧ ಪ್ರದೇಶಗಳ ಆಹಾರ ಪದ್ಧತಿಯ ವೈವಿಧ್ಯವನ್ನು ಅನಾವರಣಗೊಳಿಸುತ್ತಾ ಹೋಯಿತು ನಮ್ಮ ರೈಲು. ಸ್ಟೀಲಿನ ಖಾನೆ – ಖಾನೇ ತಟ್ಟೆಗಳಲ್ಲಿ ಕೊಡುವ ಊಟಕ್ಕೂ ಒಂದು ವಿಶೇಷ ರುಚಿ. ರೈಲಿನ ಬೋಗಿಯಲ್ಲಿ ಮಹದಾದ ಪಾತ್ರೆಗಳಲ್ಲಿ ಮಾರುದ್ದದ ಸಾವುಟಗಳನ್ನು ತಿರುವುತ್ತ ವಿಶಿಷ್ಟ ಜಾದೂ ಮಾಡುತ್ತಿದ್ದರು ಆ ಬಾಣಸಿಗರು. ಜೊತೆಯಲ್ಲಿದ್ದ ಮಾರವಾಡಿಗಳು ಊಟದ ಸಮಯದಲ್ಲಿ ಹಿಂದೆಂದೂ ಕಂಡಿರದ ದೈತ್ಯಾಕಾರದ ಟಿಫಿನ್ ಬಾಕ್ಸ್ ನಲ್ಲಿ ತಂದಿದ್ದ ಮನೆ ಊಟವನ್ನು ಹರಡುತ್ತಿದರು. ವಾರೆಗಣ್ಣಿನಿಂದ ಈ ದೃಶ್ಯವನ್ನೇ ನಿಲುಕಿಸುತ್ತಿದ್ದ ನಮ್ಮೊಡನೆ ಹಂಚಿಕೊಂಡು ನಮ್ಮ ಜಿಹ್ವಾ ಚಾಪಲ್ಯ / ಕುತೂಹಲವನ್ನು ತಣಿಸುತ್ತಿದ್ದರು. ಆ ಯಾತ್ರೆಯಲ್ಲಿ ಆಸ್ವಾದಿಸಿದ ಅದೆಷ್ಟೋ ತಿನಿಸುಗಳು ಇಂದೂ ನೆನಪಿನ ಡಬ್ಬಿಯಲ್ಲಿ ಬೆಚ್ಚಗಾಗಿ ಕುಳಿತಿದೆ. ಇಂದಿನ ದಿನಗಳಲ್ಲಿ ಅದೆಷ್ಟೋ ರೆಸ್ಟೋರೆಂಟ್ ಗಳ ಮೆನು ಕಾರ್ಡಿನಲ್ಲಿ ರೇಲ್ವೆ ದಾಲ್, ಕಟ್ಲೆಟ್ ಎಂದೆಲ್ಲ ಓದಿದಾಗ, ಆ ನೆನಪುಗಳು ಮೂಲೆಯಿಂದ ರಗ್ಗನ್ನು ಕಿತ್ತೆಸೆದು ಮಸ್ತಕದ ವೇದಿಕೆಯಲ್ಲಿ ತಾಂಡವ ಆಡಿ, ಆ ಆವೇಶದ ಒತ್ತಡಕ್ಕೆ ಮಣಿದು ಆರ್ಡರ್ ಮಾಡಿದಾಗ ಇಂದಿನ ತಿನಿಸಿನ ರುಚಿ ಪೇಲವ ಎನಿಸಿದ್ದೇ ಜಾಸ್ತಿ. ಇಟಾರ್ಸಿ ಜಂಕ್ಷನ್ ನಲ್ಲಿ ನಾನು ಮೊತ್ತ ಮೊದಲು ಕಂಡಿದ್ದು ಕುಲ್ಹಡ್ ಚಹಾ. ಹಿಂದಿನ ಸ್ಟೇಶನಗಳಲ್ಲಿ ಕುಡಿದಾದ ಮೇಲೆ ಪ್ಲಾಸ್ಟಿಕ್ ಕಪ್ಪುಗಳನ್ನು ಯಾವ ಯೋಚನೆಯೂ ಇಲ್ಲದೇ ಎಲ್ಲರೂ ಹೊರಗೆಸೆಯುತ್ತಿದ್ದರು. ಅದೆಷ್ಟು ಟನ್ ಪ್ಲಾಸ್ಟಿಕ್ ಕಸವನ್ನು ರೈಲು ಪ್ರಯಾಣಿಕರು ಎಸೆದಿರಲಿಕ್ಕಿಲ್ಲ ಪ್ರತಿದಿನ! ಈ ಕುಲ್ಹಡ್ ದೇಶದ ಬೇರೆಡೆ ಯಾಕೆ ಪ್ರಚಲಿತವಾಗಿಲ್ಲ ಎಂದು ಅರ್ಥವಾಗಿಲ್ಲ.

ರೈಲು ಪ್ರಯಾಣದ ಇನ್ನೊಂದು ಪ್ರಮುಖ ಆಕರ್ಷಣೆ ಹೊರಗಿನ ನೋಟ. ಹುಬ್ಬಳ್ಳಿಯಿಂದ ಮೀರಜ್ ವರೆಗೆ ಕತ್ತಲೆ ಕಾಡಿನಲ್ಲಿ ಕಂಡಿದ್ದೇನಿಲ್ಲ. ಮೀರಜ್ ನಿಂದ ಪುಣೆ ದಾಟುವವರೆಗೂ ರೈಲು ದಖ್ಖನ್ ಪ್ರಸ್ತಭೂಮಿಯ ಪರ್ವತಗಳನ್ನು ಬಳಸುತ್ತ, ಪರ್ವತ ಗರ್ಭವನ್ನು ಸೀಳುವ ಸುರಂಗಗಳನ್ನು ಭೇದಿಸುತ್ತ ಸಾಗುತ್ತದೆ. ಈ ಪರ್ವತಗಳು ಕುರುಚಲು ಕಾಡು, ದಟ್ಟ ಹಸಿರು ಹುಲ್ಲನ್ನಷ್ಟೇ ಹೊದ್ದು ನಿಂತಿವೆ. ಸಹಸ್ರಾರು ವರ್ಷಗಳ ಕಾಲ ಪೇರಿಸಿಟ್ಟ ಪದರುಗಳನ್ನು ನೋಡುವುದೇ ಚಂದ. ಅದ್ಯಾವದೋ ಕಾಲದಲ್ಲಿ ಇದೆಲ್ಲ ಜ್ವಾಲಾಮುಖಿಯ ಬಾಯಿಂದ ಹೊರಬಂದ ಲಾವಾ. ಅಲ್ಲಲ್ಲಿ ದೂರದಲ್ಲಿ ಕಾಣುವ ಕೋಟೆ-ಕೊತ್ತಲಗಳು ಮರಾಠ ಸಾಮ್ರಾಜ್ಯದ ಕಥೆಗಳನ್ನು ಕಿವಿಯಲ್ಲಿ ಪಿಸುಗುಟ್ಟುತ್ತವೆ, ಅದಕ್ಕೆ ಸರಿಯಾಗಿ ರೈಲು ಶಿಳ್ಳೆ ಹಾಕಿ ಭಲೇ ಎಂದು ಉದ್ಗರಿಸುತ್ತದೆ. ಇತಿಹಾಸ, ಭೂಗೋಳ, ಭೂಗರ್ಭ ಶಾಸ್ತ್ರ ಇವೆಲ್ಲ ಒಮ್ಮೆಲೇ ರಿವಿಷನ್ ಆದೀತು. ಈ ಪ್ರಯಾಣದಲ್ಲಿ ಕಂಡ ಒಂದೆರಡು ದೃಶ್ಯಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ. ಮೊದಲ ದಿನ ಸಂಜೆ ಆಗುತ್ತಿದ್ದಂತೆ ಸೂರ್ಯ ಮೆಲ್ಲನೆ ಪಶ್ಚಿಮ ದಿಗಂತದಂಚಿಗೆ ಜರುಗುತ್ತಿದಂತೆ ನಮ್ಮ ಪ್ರಯಾಣಕ್ಕೆ ಶುಭಾಶಯ ಕೋರಲು ದೂರದಲ್ಲಿ ಯಾರೋ ಥಮ್ಸ್ ಅಪ್ ಮಾಡುವಂತೆ ಕಾಣುತ್ತಿತ್ತು. ಬಳಿ ಬಂದಂತೆ ಅದೊಂದು ಪರ್ವತದ ಮೇಲಿನ ಶೀಲಾ ರಚನೆ ಎಂಬ ಅರಿವಾಯಿತು. ಇದನ್ನು ಪ್ರವಾಸಿಗರು ಥಮ್ಸ್ ಅಪ್ ಗುಡ್ಡ ಎಂದೇ ಕರೆಯುತ್ತಾರೆ. ಮರಾಠಿಯಲ್ಲಿ ‘ಹಡ್ಬಿಚಿ ಶೇಂಡಿ’ (ಗೂನು ಬೆನ್ನಿನವನ ಜುಟ್ಟು) ಎಂದು ಕರೆಯುತ್ತಾರೆ. ಈ ಗುಡ್ಡವನ್ನು ಸುತ್ತುವರೆಯುತ್ತ ರೈಲು ಮನಮಾಡ್ ಜಂಕ್ಷನ್ ಸೇರುತ್ತದೆ, ರಾತ್ರೆಯ ಊಟಕ್ಕೆ ಆರ್ಡರ್ ಕೊಡುವ ಸಮಯಕ್ಕೆ ಸರಿಯಾಗಿ. ಈ ಸ್ಟೇಷನ್ ನಲ್ಲಿ ಉತ್ತಮ ವಡಾ-ಪಾವ್ ಚಹಾ ಸಿಗುವುದುದ್ ಒಂದು ಬೋನಸ್. ನೆತ್ತರು ಚಲ್ಲಿದ ಆಗಸದ ಹಿನ್ನಲೆಯಲ್ಲಿ ತಲೆಯೆತ್ತಿ ನನ್ನನ್ನು ಗೆದ್ದು ನೋಡು ಎಂಬ ಸವಾಲೆಸೆಯುವ ಹೆಬ್ಬೆರಳನ್ನು ಮರೆಯಲು ಸಾಧ್ಯವೇ? ಎರಡನೇ ದೃಶ್ಯ ಗ್ವಾಲಿಯರ್ ಕೋಟೆ. ಇಂದಿಗೂ ತನ್ನ ಗಾಂಭೀರ್ಯ, ಭವ್ಯತೆಯನ್ನು ಕಾದುಕೊಂಡಿದೆ. ಕೆಲವೇ ತಾಸುಗಳಲ್ಲಿ ರೈಲು ಉತ್ತರ ಪ್ರದೇಶವನ್ನು ಹೊಕ್ಕುತ್ತದೆ. ಮಧ್ಯಪ್ರದೇಶ – ಉತ್ತರ ಪ್ರದೇಶದ ಗಡಿಯಲ್ಲಿರುವುದೇ ಕುಖ್ಯಾತ ಚಂಬಲ್ ಕಣಿವೆ. ಪಶ್ಚಿಮ ಘಟ್ಟಗಳಲ್ಲಿ ಕಾನನ ಆವರಿಸಿದ ಬೆಟ್ಟಗಳ ನಡುವಿನ ಆಳವಾದ ಕಣಿವೆಗಳೇ ನಮ್ಮ ಮನಸ್ಸಿಲ್ಲಿತ್ತು ಚಂಬಲ್ ದರ್ಶನ ಆಗುವವರೆಗೆ. ಇವು ಕುರುಚಲು ಗಿಡ, ಬರಡು ಗುಡ್ಡಗಳ ನಡುವೆ ಮೇಜ್ಹ್ ನಂತೆ ಹರಡಿದ ಕಣಿವೆಗಳ ಸಂಕೀರ್ಣ. ರೈಲು ಈ ಕಣಿವೆಗಳ ಮೇಲೆ ಕಟ್ಟಿದ ಸೇತುವೆ (ವಯಾ ಡಕ್ಟ್) ಮೇಲೆ ಚಲಿಸುವಾಗ ಚಂಬಲ್ ನ ವಿಹಂಗಮ ನೋಟ ತೆರೆದುಕೊಳ್ಳುತ್ತದೆ. ಅದೆಲ್ಲಿಂದಲೋ ಹರಿದು ಬರುವ ನದಿ, ಅದರ ದಡದಲ್ಲೊಂದು ಮುರುಕು ದೇಗುಲ ಇವನ್ನೆಲ್ಲ ಕಂಡಾಗ ಹಿಂದಿ ಸಿನೆಮಾದ ದೃಶ್ಯದ ಮಧ್ಯದಲ್ಲಿ ನಿಂತ ರೋಮಾಂಚನ. ಆ ಪಾಳು ದೇಗುಲದಲ್ಲಿ ಕಾಳಿಗೆ ಢಾಕುಗಳು ಪೂಜೆ ಸಲ್ಲಿಸುತ್ತಿರಬಹುದೇ, ಅಂದಿನ ದಾಳಿಗೆ ಯೋಜನೆ ಹಾಕುತ್ತಿರಬಹುದೇ! ಹಿಂದೆಲ್ಲ ಈ ಭಾಗದಲ್ಲಿ ರೈಲನ್ನು ಅಡ್ಡ ಹಾಕಿ ದರೋಡೆ ಮಾಡುತ್ತಿದ್ದುದು ಸುಳ್ಳಲ್ಲ. ೯೦ ರ ದಶಕ ತಲುಪಿದಾಗ ಫೂಲನ್ ದೇವಿ ಕೋವಿಯ ಬಲ ತೊರೆದು ರಾಜಕೀಯ ಬಲವನ್ನು ಅಪ್ಪಿಕೊಂಡಾಗಿತ್ತಲ್ಲ! ಈ ಕಾಲದಲ್ಲಿ ನಮ್ಮ ರೈಲು ಸುರಕ್ಷಿತ ಎಂದು ನೆಮ್ಮದಿ ಎನಿಸಿತು. ಚಂಬಲ್ ಕಣಿವೆ, ಆಳದಲ್ಲಿ ಎಂದೆಂದೂ ಆರದ ರಕ್ತಸಿಕ್ತ ಇತಿಹಾಸ ಈ ಹಾದಿಯನ್ನು ಹಾದು ಹೋಗುವಾಗ ಕಾಡದೇ ಇರದು.

ಮನಮಾಡದ ಥಮ್ಸ್ ಅಪ್ ಬೆಟ್ಟ (ಚಿತ್ರ : ಗೂಗಲ್ ಕೃಪೆ )

ಲಕ್ಷ್ಮೀಬಾಯಿಯ ಝಾನ್ಸಿ, ಆಗ್ರಾ ಬಂದಂತೆಲ್ಲ ನಮ್ಮ ಗಮ್ಯ ಸ್ಥಾನ ಹತ್ತಿರವಾಗುತ್ತಿದೆ ಎಂಬ ಭಾವನೆ ತೇಲುತ್ತ, ದಟ್ಟವಾಗುತ್ತ ಮನಸ್ಸನ್ನೆಲ್ಲ ಆವರಿಸುತ್ತದೆ. ಗೋವಾ ಎಕ್ಸ್ಪ್ರೆಸ್ ಆಗ್ರಾ ನಗರದೊಳಗೆ ನುಗ್ಗದೇ, ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರುತ್ತದೆ. ತಾಜ್ ಮಹಲ್ ಕಂಡಿತೇ ಎಂಬ ಕುತೂಹಲವಿದ್ದರೆ ಎದುರಾಗುವುದು ಬಿಸಿಲಲ್ಲಿ ಒಣಗುತ್ತಿರುವ ನಿರ್ಜನ ನಿಲ್ದಾಣ. ತಾಜಾ ಮಹಲಿನ ರಮ್ಯತೆಗೆ ವಿರೋಧಾಭಾಸವಾಗಿದೆ ಆಗ್ರಾ ದಂಡು ನಿಲ್ದಾಣ. ಆಗ್ರಾ ಎಂದರೆ ಏನೇನೋ ಕಲ್ಪಿಸಿಕೊಂಡ ನನಗೆ ಹಾಗೆನಿಸಿರಬಹದು ಬಿಡಿ. ಹಿಂದಿಯಲ್ಲಿ ಕಂಟೋನ್ಮೆಂಟಿಗೆ ಛಾವಣಿ ಎನ್ನುತ್ತಾರೆಂಬುದೂ ನನಗೆ ಅವತ್ತು ಗೊತ್ತಾಯಿತು, ನಿಲ್ದಾಣದ ಹೆಸರಿನ ಫಲಕವನ್ನು ಓದಿದಾಗ. ಹಿಂದಿನ ಕಾಲದಲ್ಲಿ ಸೈನ್ಯ ತಂಗಿದಲ್ಲೆಲ್ಲ ಹುಲ್ಲಿನ ಛಾವಣಿಯನ್ನು ಕಟ್ಟುತ್ತಿದ್ದರಿಂದ, ದಂಡು ಪ್ರದೇಶಕ್ಕೆ ಹಿಂದಿಯಲ್ಲಿ ಛಾವಣಿ ಎಂದು ಕರೆಯುತ್ತಾರಂತೆ. ಇಲ್ಲಿಂದ ಮುಂದೆ ಮಾತ್ರ ಇದು ಎಂದೂ ಮುಗಿಯದ ಹಾದಿ ಎಂದೆನಿಸಲು ಶುರುವಾಗುತ್ತದೆ. ಉತ್ತರ ಭಾರತದ ಸೆಖೆ, ಬಸವನ ಹುಳದಂದದ ವೇಗ, ದಾರಿಯ ಪಕ್ಕದಲ್ಲಿ ಹರಿಯುವ ಕೊಳೆತ ನಾಲೆಯ ದುರ್ನಾತದಿಂದ ರಸಭರಿತ ಸಿನೆಮಾ ನಿರಾಶಾದಾಯಕವಾಗಿ ಕೊನೆಯಾಗುತ್ತಿದೆಯಲ್ಲ ಎಂದು ದುಃಖವಾಯಿತು. ಮುಂದೆ ದೆಹಲಿಯಲ್ಲೇ ಸ್ವಲ್ಪ ಕಾಲ ಉದ್ಯೋಗ ಮಾಡುವ ಅವಕಾಶ ಸಿಕ್ಕು, ಇದೆ ಹಾದಿಯಲ್ಲಿ ವಿವಿಧ ಋತುಗಳಲ್ಲಿ ಪ್ರಯಾಣ ಮಾಡಿದ್ದೇನೆ. ಭಾರತದ ಇತಿಹಾಸದಲ್ಲಿ ತಮ್ಮ ಹೆಸರನ್ನು ಕೆತ್ತಿದ ಊರುಗಳು, ಅಲ್ಲಿನ ನಾಯಕರು – ಖಳನಾಯಕರು ಸಿನೆಮಾದ ರೀಲುಗಳಂತೆ ನನ್ನ ಕಣ್ಮುಂದೆ ಓಡಿದ್ದಾರೆ. ಮತ್ತೊಮ್ಮೆ ಈ ಹಾದಿಯಲ್ಲಿ ರೈಲಿನಲ್ಲೇ ಪ್ರಯಾಣ ಮಾಡುವ ಕನಸಿದೆ, ನವ ಭಾರತದ ನವ ರೈಲುಗಳಲ್ಲಿ. ಹೊಸತು ಕಂಡಿತೇ?

-ರಾಂ

ದಿನ ನಿತ್ಯ ಬದುಕುಳಿಯುವ ಕಥೆ

ಉಮೈರಾ ಅವರು ಅನಿವಾಸಿಗಳ ದಿನನಿತ್ಯದ ಗೋಳು ಮನಸ್ಸು ಬಿಚ್ಚಿ ನಮ್ಮೊಂದಿದೆ ಹಂಚಿಕೊಂಡಿದ್ದಾರೆ.

ಇದರಿಂಗ ಪ್ರೇರೇಪಿತಳಾದ ನಾನು ತ್ರಿಶಂಕುವಾದ ನನ್ನ ಆಫೀಸಿನ ಗೀಳನ್ನು ಕಾಫಿ ಟಾಕ್ ಸ್ (small talks) – ‘ಚಾ ಜೋಡಿ ಚೂಡಾ’ಅಲ್ಲ ರೀ, ಬರಿ ವಣ ವಣ ಬ್ರೆಡ್ ಗತೆ ಏನು ಸತ್ವವಿಲ್ಲದ, ಮನಸ್ಸು ಬಿಚ್ಚಿ ಮಾತನಾಡಲಾಗದ ದೈನಂದಿನ ದೃಶ್ಯ. ನಿಮ್ಮೆಲ್ಲರ ಅನುಭವಕ್ಕೆ ಈಗಾಗಲೇ ಬಂದಿರುವ ಸನ್ನಿವೇಶಗಳು.
ದಯವಿಟ್ಟು ಓದಿ ನಿಮ್ಮ ಅನುಭವ ಹಂಚಿಕೊಳ್ಳಿ
~ಸಂ

ಅಲ್ಲೊಂದು ಕೋಮು ಗಲಭೆಯಂತೆ
ಕೇಳಿ ಎದೆಯಲ್ಲೊಂದು,
ಬೆಂಕಿ ಇಟ್ಟಂತೆ ಭಾಸ ,
ಅಲ್ಲೊಬ್ಬ ಕೊಲೆಯಾದನಂತೆ,

ಪತ್ರಿಕೆಯೊಳಗೆ ಕಣ್ಣಾಯಿಸಿದೆ ,
ಕೊಲೆ ಮಾಡಿದವನ ಹೆಸರೇನು,
ಜಾತಿಯೇನು,
ಯಾವ ಊರಿನವನು,
ನಮ್ಮ ಜಾತಿಯವನೇ ಆದರೆ,
ಇನ್ನೂ ಚಿಂತೆ ಅಳುಕು

ವಿಧಿ ಸಾಗರದಾಚೆ
ನನ್ನ ಚಿಟಕ್ಕೆಂದು
ಎಳೆದು ತಂದಿತು,
ಈಗ ಹೊಸ ರೀತಿಯ ಗುಲ್ಲು,
ಬೇಲಿ ಹಿಡಿದಂತೆ ಜೀವದ ಮೇಲೆ

ಬೀದಿಯಲ್ಲೊಂದು ಫಲಕ:
“Immigrants, we
don’t need you here”

ಮತ್ತೆ ಕಾಡಿತು ಆ ಗೊಂದಲ,
ನಾನು ಎಲ್ಲಿ ಸಲ್ಲುವವಳು?

ಬಿಡುವಿಲ್ಲದೆ ದುಡಿದು,
ಕೆಲವೊಮ್ಮೆ ಊರ
ಸುಗಂಧ ಕಾಡಿದಾಗ,
ಊರಿಗೆ ಹೊರಟಾಗಲೆಲ್ಲ
ನಮ್ಮವರದೇ ಧ್ವನಿ ,
ಅವರೇನು ಮಾರಾಯ NRI ಗಳು,
ಎಲ್ಲಿ ಹೋದರೂ NRI quota

ಆಗೊಂದು ICICI ಗ್ರಾಹಕ
ಪ್ರತಿನಿಧಿಯ ಕರೆ ,
ನೀವು ನಮ್ಮ
ಪ್ರೀಮಿಯಂ ಗ್ರಾಹಕರು,
ನಿಮಗೆ ಲೋನ್ ಇದೆ,
ಸ್ಪೆಷಲ್ ಕ್ರೆಡಿಟ್ ಕಾರ್ಡ್ ಇದೆ,

ಎಲ್ಲೂ ಸಲ್ಲದಿದ್ದರೂ
ನಾನು,
ಇಲ್ಲಿ ಸಲ್ಲುವೆ ..

-ಉಮೈರ
Gloucester

Coffee with Karen (kitchen + Random office person)

ಬೆಳಿಗ್ಗೆ 9:07ಕ್ಕೆ ನಾನು ಒಂದು ದೊಡ್ಡ ತಪ್ಪು ಮಾಡಿದೆ.

ಆಫೀಸ್ ಕಿಚನ್‌ಗೆ ಹೋದೆ.

ಕೆಟಲ್ ಈಗಾಗಲೇ ಆನ್ ಆಗಿತ್ತು. ಒಳಗೆ ಇನ್ನೊಬ್ಬ ಸಹೋದ್ಯೋಗಿ ನಿಂತಿದ್ದರು.
ಅಷ್ಟೇ… ಏನೋ ದಿಗಿಲು.
ಯಾಕಂದ್ರೆ ಕೆಲಸದ ಜಾಗದ ಸ್ಮಾಲ್ ಟಾಕ್ ಅಂದರೆ ಸುಮ್ಮನೆ ಮಾತಾಡೋದು ಅಲ್ಲ.
ಅದು ಒಂದು ಕಲೆ. ಒಂದು ವಿಧಿ.
ಕೈಯಲ್ಲಿ ಕಾಫಿ ಮಗ್ಗು ಹಿಡಿದು ಮಾಡುವ ಸಾಮಾಜಿಕ ಪರೀಕ್ಷೆ.

“ಗುಡ್ ಮಾರ್ನಿಂಗ್,” ನಾನು ಹೇಳಿದೆ.

ನನ್ನ ಧ್ವನಿಯಲ್ಲಿದ್ದ ಆತ್ಮವಿಶ್ವಾಸ ಕೇಳಿ ನನಗೇ ಅನುಮಾನ ಬಂತು.

“ಗುಡ್ ಮಾರ್ನಿಂಗ್,” ಅವರು ಉತ್ತರಿಸಿದರು.
ನ್ಯೂಟ್ರಲ್. ಸೇಫ್.
ಇಬ್ಬರೂ ಮೊದಲ ಹಂತವನ್ನು ಯಶಸ್ವಿಯಾಗಿ ದಾಟಿದ್ದೆವು.
ಆಮೇಲೆ ಮೊದಲ ಪ್ರಶ್ನೆ ಬಂತು.
” Guess ! it ‘s a busy day today?

ಆಹಾ… ಸ್ಮಾಲ್ ಟಾಕ್‌ನ ಮೊದಲ ನಿಯಮ.

ಈ ಪ್ರಶ್ನೆಗೆ ಯಾರೂ ನಿಜವಾದ ಉತ್ತರ ಕೊಡುವುದಿಲ್ಲ.

“Yeah ! It has been busy off late ” ಎಂದು ನಾನು ತಲೆಯಾಡಿಸಿದೆ.

ನನಗೆ ಏನೂ ಗೊತ್ತಿಲ್ಲ.
ಅವರಿಗೆ ಏನೂ ಗೊತ್ತಿಲ್ಲ.
ಆದರೂ ಇಬ್ಬರೂ ಅರ್ಥ ಮಾಡಿಕೊಂಡಂತೆ ತಲೆ ಆಡಿಸಿದ್ದೇವೆ.

ಅಷ್ಟರಲ್ಲಿ ಕೆಟಲ್ “ಕ್ಲಿಕ್” ಅಂತ ಆಫ್ ಆಯ್ತು.
ತುಂಬಾ ಬೇಗ ನೀರು ಕುದಿಯಿತು ಅನಿಸಿತು.
ಮಾತುಕತೆ ಇನ್ನೂ ಮುಗಿದಿರಲಿಲ್ಲ.

ಮುಂದಿನ obvious ಪ್ರಶ್ನೆ “ಭಯಂಕರ ಶೆಕೆ?” ಅವರು ಕೇಳಿದರು.

ಅಯ್ಯೋ ಹೌದು ತಡೆಯಲಾರದಷ್ಟು ಬಿಸಿಲು ಧಗೆ ಅಂದೇ.

ಇಂಗ್ಲೆಂಡಿನಲ್ಲಿ ಹವಾಮಾನ ಅಂದ್ರೆ ಹವಾಮಾನ ಅಲ್ಲ.

ಅದು ಸಂಭಾಷಣೆ ಶುರು ಮಾಡುವ ಅಧಿಕೃತ ವಿಷಯ.

“ಹೌದು,” ನಾನು ಹೇಳಿದೆ.
“ನಿನ್ನೆ ಚಳಿ ಇತ್ತು. ಇವತ್ತು ಕೂಡ ಎಲ್ಲಿ ಚಳಿ ಆಗತ್ತೋ ಅಂತ ಇಂದು ತಪ್ಪು ಜಾಕೆಟ್ ಹಾಕಿಕೊಂಡು ಬಂದಿದ್ದೀನಿ.”

ಇದಂತೂ ಹಸಿ ಸುಳ್ಳು.

ನಾನು ಪ್ರತಿದಿನ ಅದೇ ಜಾಕೆಟ್ ಹಾಕುತ್ತೇನೆ.

ಆದರೆ ಸ್ಮಾಲ್ ಟಾಕ್‌ನಲ್ಲಿ ಸ್ವಲ್ಪ ಗೊಂದಲ ಇರಬೇಕು ಅನ್ನೋದು ನಿಯಮ.

ನಾವು ಇಬ್ಬರೂ ನಕ್ಕೆವು.

ಜೋರಾಗಿ ಅಲ್ಲ.

ಬಾಯಲ್ಲಿ ಮಾತ್ರ ಕಾಣಿಸುವ, ಕಣ್ಣಿಗೆ ತಲುಪದ ನಗು.

ಆಮೇಲೆ ಅತ್ಯಂತ ಅಪಾಯಕಾರಿ ಪ್ರಶ್ನೆ.

“ವೀಕೆಂಡ್‌ಗೆ ಏನಾದರೂ ಪ್ಲ್ಯಾನ್ಸ್ ಇದೆಯಾ?”

ಈ ಪ್ರಶ್ನೆ ಒಂದು ಬಲೆ. ಸ್ವಲ್ಪ ಯೋಚಿಸಿ ಉತ್ತರ ಕೊಡಬೇಕು.

“ಏನೂ ಇಲ್ಲ” ಅಂದ್ರೆ ಬೋರ್.

“ಮನೆಲ್ಲೇ ರೆಸ್ಟ್ ಮಾಡ್ತೀನಿ” ಅಂದ್ರೆ ಸೋಮಾರಿ.

ತುಂಬಾ ಗ್ರ್ಯಾಂಡ್ ಪ್ಲ್ಯಾನ್ ಹೇಳಿದ್ರೆ ಶೋಆಫ್.

ಹಾಗಾಗಿ ನಾನು ಸುರಕ್ಷಿತ ಉತ್ತರ ಕೊಟ್ಟೆ.

“ಏನೋ… ಬ್ಯುಸಿಯಾಗೇ ಇರುತ್ತೀನಿ.”

(ಅಂದ್ರೆ ? ಅಂತ ಮಾತ್ರ ಕೇಳಬೇಡಿ. ಯಾಕಂದ್ರೆ ಯಾರಿಗೂ ಗೊತ್ತಿಲ್ಲ.

ಬಹುಶಃ ಮನೆ ಸ್ವಚ್ಛತಾ ಕಾರ್ಯಕ್ರಮ. ಲಾಂಡ್ರಿ, ದಿನಸಿ ಸಾಮಾನು ಶಾಪಿಂಗ್.

ಅಥವಾ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನೇ ಮರುಪರಿಶೀಲಿಸುತ್ತಿರಬಹುದು.)

ಅವರು ತಲೆಯಾಡಿಸಿದರು.

ಸರಿಯಾದ ಉತ್ತರ ಸಿಕ್ಕಂತಾಯಿತು.

ಮಗ್ಗಿಗೆ ಹಾಲು ಸುರಿಯಿತು.ಕಾಫಿ ತಯಾರಾಯಿತು.ಮಗ್ಗುಗಳು ತುಂಬಿದವು.

ಆದರೆ ಮೌನ ಮಾತ್ರ ಇನ್ನೂ ತುಂಬಲೇ ಇಲ್ಲ.ಹಾಗಾಗಿ ಕೊನೆಯ ಹಂತ ಶುರುವಾಯಿತು.

“ಈ ವರ್ಷ ಎಷ್ಟು ಬೇಗ ಹೋಗ್ತಿದೆ ಅಲ್ವಾ?”

ಹೌದು.

ಸಮಯ ಯಾವಾಗಲೂ ವೇಗವಾಗಿಯೇ ಹೋಗುತ್ತದೆ.

ಇದು ಎಲ್ಲರಿಗೂ ಗೊತ್ತಿರುವ ಸತ್ಯ.

“ನಂಬೋಕಾಗಲ್ಲ,” ಎಂದು ನಾನು ಉತ್ತರಿಸಿದೆ.

ಜನವರಿಯನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿದ್ದವನಂತೆ ಗಂಭೀರವಾಗಿ ತಲೆಯಾಡಿಸುತ್ತಾ.

ಕೊನೆಗೂ ಆ ಪವಿತ್ರ ವಾಕ್ಯ ಬಂತು.

“ಸರಿ… ಮತ್ತೆ ಕೆಲಸಕ್ಕೆ ಹೋಗ್ಬೇಕು.”

ಇದರ ಅರ್ಥ:

ಸಂಪ್ರದಾಯ ವಿಧಿವತ್ತಾಗಿ ಯಶಸ್ವಿಯಾಯಿತು.

(ಯಾರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹೇಳಲಿಲ್ಲ.ಯಾರೂ ಅಸಹಜ ಪರಿಸ್ಥಿತಿ ಸೃಷ್ಟಿಸಲಿಲ್ಲ.)

ನಾವು ಇಬ್ಬರೂ ಹೊರಗೆ ನಡೆದೆವು.

ಇನ್ನೂ 43 ನಿಮಿಷಗಳಲ್ಲಿ ಮತ್ತೆ ಇದೇ ಕಿಚನ್‌ನಲ್ಲಿ ಭೇಟಿಯಾಗುತ್ತೇವೆ ಅನ್ನೋದು ಗೊತ್ತಿದ್ದರೂ…

ಗೊತ್ತಿಲ್ಲ ಅನ್ನೋ ಹಾಗೆ ನಡೆದೆವು.ನಾಳೆಯೂ ಇದೇ ಕಾರ್ಯಕ್ರಮ.

ಮೊದಲು ಹವಾಮಾನ.

ಆಮೇಲೆ ಬ್ಯುಸಿ ಡೇ.

ನಂತರ ವೀಕೆಂಡ್ ಪ್ಲ್ಯಾನ್ಸ್.

ಕೊನೆಯಲ್ಲಿ…

“ಸರಿ… ಮತ್ತೆ ಕೆಲಸಕ್ಕೆ ಹೋಗ್ಬೇಕು.”

ಯಾಕಂದ್ರೆ ಕೆಲಸದ ಜಾಗದ ಸ್ಮಾಲ್ ಟಾಕ್‌ನ ಉದ್ದೇಶ ಸ್ನೇಹ ಮಾಡೋದು ಅಲ್ಲ.

ಅದರ ಉದ್ದೇಶ ಒಂದೇ:

ನೀವು ಸ್ನೇಹಪರ.ಆದರೆ ಅತಿಯಾಗಿ ಅಲ್ಲ.

ನೀವು ಮನುಷ್ಯ.ಆದರೆ ತುಂಬಾ ಭಾವನಾತ್ಮಕ ಅಲ್ಲ.

ನೀವು ಬದುಕಿದ್ದೀರಿ. ಆದರೆ ಅದನ್ನು ಬೊಬ್ಬಾಟ ಮಾಡುವುದಿಲ್ಲ.

ನಿಜ ಹೇಳಬೇಕಂದ್ರೆ…

ಇದು ಕೂಡ ಒಂದು ಕೌಶಲ್ಯ.

ಸರಿ, ನಾನು ಹೊರಡ್ತೀನಿ.

ನಾಳೆ ಕಿಚನ್‌ನಲ್ಲಿ ಹವಾಮಾನದ ಬಗ್ಗೆ ಹೊಸ ಅಭಿಪ್ರಾಯ ಹೇಳಲು ಈಗಿನಿಂದಲೇ ಅಭ್ಯಾಸ ಮಾಡ್ಬೇಕು.

ಒಂದುವೇಳೆ… ಹವಾಮಾನ ಬದಲಾಗಿದ್ರೆ!

ಒಂದು ಕಿವಿ ಮಾತು.. ನಿಮಗೆ ಇಷ್ಟವೋ ಕಷ್ಟವೋ ಫುಟ್ಬಾಲ್ ಬಗ್ಗೆ ಮಾತ್ರ ಸ್ವಲ್ಪ ಮಾಹಿತಿ ಇಟ್ಟುಕೊಳ್ಳಿ ನಿಮ್ಮ ಆಫೀಸಿನ ಜೀವನ ಸ್ವಲ್ಪ ಸರಾಗವಾಗಬಹುದೇನೋ.

~ರಾಧಿಕಾ