ನಟಿಸದ ನಟನಿಗೆ ಅನಂತನಮನ – ಕೇಶವ ಕುಲಕರ್ಣಿ

ಅನಂತನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ (ಫಾಲ್ಕೆ ಎಂದು ಕನ್ನಡದಲ್ಲಿ ಬರೆಯುವುದು ರೂಢಿ, ಆದರೆ ಮರಾಠಿಯಲ್ಲಿ ಅದು ಪಾಳಕೆ ಎಂದು ಬರೆಯುತ್ತಾರೆ ಮತ್ತು ಪಾಳ್ಕೆ ಎಂದು ಉಚ್ಚರಿಸುತ್ತಾರೆ) ಪ್ರಶಸ್ತಿ ಬಂದಿದೆ ಎಂದು ಓದಿದಾಗ, ನನಗಾದ ಸಂತೋಷವನ್ನು, ಅವರ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳದೇ ಸುಮ್ಮನೇ ಇರಲಾಗದೇ ಈ ಲೇಖನವನ್ನು ಬರೆಯುತ್ತಿದ್ದೇನೆ. ಬರೀ ಸಂತೋಷವಷ್ಟೇ ಅಲ್ಲ, ಆಶ್ಚರ್ಯವೂ ಆಯಿತು. ಏಕೆಂದರೆ ಅವರು ಎಂದಿಗೂ ಪ್ರಶಸ್ತಿಗಳ ಹಿಂದೆ ಹೋದವರಲ್ಲವಲ್ಲ! ಯಾವು ಯಾವುದಕ್ಕೋ ಅರ್ಧಪತ್ರಿಕೆಯನ್ನು ಮೀಸಲಿಡುವ ಕನ್ನಡದಿನಪತ್ರಿಕೆಯೂ  ಕಾಲುಪುಟದಷ್ಟು ಮಾತ್ರ ಸುದ್ದಿಯನ್ನು ಕವರ್ ಮಾಡಿತ್ತು.  ನೋಡಿ ಬೇಜಾರಾಯಿತು. 

ಕನ್ನಡ ಚಿತ್ರರಂಗದಲ್ಲಿ  ರಾಜ್‌ಕುಮಾರ್ ನಂತರ ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಕೇವಲ ಎರಡನೆಯ ವ್ಯಕ್ತಿ ಅನಂತನಾಗ್ ಎಂದರೆ ಅನಂತನಾಗ್ ಅವರ ಪ್ರತಿಭೆಯ ಅಂದಾಜು ಕನ್ನಡಿಗರಿಗೆ ಸಿಗಬಹುದು. ಅರ್ಧ ಶತಮಾನದಿಂದ ಚಿತ್ರರಂಗದಲ್ಲಿ ೩೦೦ಕ್ಕೂ ಹೆಚ್ಚು ಚಿತ್ರಗಳು, ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಚಲನಚಿತ್ರಗಳು. ಕಲಾತ್ಮಕ ಚಿತ್ರ, ಮುಖ್ಯವಾಹಿನಿ ಸಿನಿಮಾ, ರಂಗಭೂಮಿ ಮತ್ತು ಟೆಲಿವಿಷನ್ ಯಾವುದಾದರೂ ಸರಿ. ಹಲವಾರು ರಾಜ್ಯಪ್ರಶಸ್ತಿಗಳು, ರಾಷ್ಟ್ರಮಟ್ಟದ ಚಲನಚಿತ್ರಗಳು, ಪದ್ಮಭೂಷಣ, ಈಗ ಫಾಲ್ಕೆ! ಎಂಥ ಅದ್ಭುತ ಮನುಷ್ಯ, ಎಷ್ಟು ವಿನೀತ, ಕನ್ನಡಿಗರು ಪುನೀತ!

ಭಾರತೀಯ ಚಿತ್ರರಂಗ ಕಂಡ ಅತ್ಯಂತ ಸುಂದರ ಪುರುಷರಲ್ಲಿ ಅವರೂ ಒಬ್ಬರು. ಕನ್ನಡದ ಅತ್ಯಂತ ಹ್ಯಾಂಡ್-ಸಮ್ ಹೀರೋ ಎಂದು ನಿರಾತಂಕವಾಗಿ ಹೇಳಬಹುದು (ಈ ಹೊಸ ಪ್ರಪಂಚದ ಕೆತ್ತಿದಂತಹ, ಜಿಮ್‌ನಲ್ಲಿ ಹುರಿಗೊಳಿಸಿದ ಅರ್ಥದಲ್ಲಿ ಅಲ್ಲ). ಅವರು ಮೀಸೆಯೊಂದಿಗೆ ಇರಲಿ, ಕ್ಲೀನ್-ಶೇವ್ ಮಾಡಿರಲಿ, ಯುವಕನಾಗಿರಲಿ ಅಥವಾ ಮಧ್ಯವಯಸ್ಕನಿರಲಿ, ಅವರದು ಸಹಜ ಸೌಂದರ್ಯ. ಈ ವಯಸ್ಸಿನಲ್ಲೂ ಅವರ ಸೌಂದರ್ಯ ಮಾಸಿಲ್ಲ!

ಅನಂತನಾಗ್ ಅವರ ಬಗ್ಗೆ ಯೋಚಿಸಿದಾಗ ನನಗೆ ಕಾಣುವುದು ಅವರ ಮುಗುಳುನಗೆ. ಅದು ಎಳ್ಳಷ್ಟೂ ಬದಲಾಗಿಲ್ಲ, ವಯಸ್ಸಾದಂತೆ ಸ್ವಲ್ಪ ಪಕ್ವವಾಗಿದೆ ಅಷ್ಟೆ. ಆ ಒಂದು ಸರಳ ಮುಗುಳುನಗೆಯಲ್ಲಿ ಆತ್ಮೀಯತೆ, ತುಂಟತನ, ಚೇಷ್ಟೆ, ವಿನೋದ ಮತ್ತು ನಾಚಿಕೆ ಎಲ್ಲವೂ ಅಡಗಿದೆ! ನಿಮಗಿಂತ ತನಗೆ ಸ್ವಲ್ಪ ಹೆಚ್ಚು ತಿಳಿದಿದೆ, ಆದರೆ ಅದನ್ನು ಹೇಳುವುದಿಲ್ಲ ಎಂದು ಸೂಕ್ಷ್ಮವಾಗಿ ಸೂಚಿಸುವಂತಹ ಮುಗುಳುನಗೆ! 

ಅವರ ಕನ್ನಡವನ್ನು ಕೇಳುವುದರಲ್ಲೇ ಆನಂದವಿದೆ: ಕೃತಕವಾಗಿ ಧ್ವನಿಸದ ಸ್ವಚ್ಛವಾದ ಉಚ್ಚಾರಣೆ ಮತ್ತು ನಿಖರವಾದ ಶಬ್ದಪ್ರಯೋಗ. ಬಹುಶಃ ಕೊಂಕಣಿ, ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಬಲ್ಲ ಸಹಜ ಬಹುಭಾಷಿಗರಾಗಿರುವುದೇ ಇದಕ್ಕೆ ಕಾರಣವಿರಬಹುದು.

ಅನಂತನಾಗ್ ‘ನಟಿಸದೆ’ ನಟಿಸುತ್ತಾರೆ. ಆದರೆ ಈ ಸಹಜ ನಟನೆ ಎನ್ನುವುದು ಅಗಾಧವಾದ ಅಭ್ಯಾಸದ ಫಲ. ಅವರು ಆಧುನಿಕ ರಂಗಭೂಮಿಯಿಂದ ಬಂದವರು, ಅನೇಕ ಭಾಷೆಗಳಲ್ಲಿ ಅಭಿನಯಿಸಿದವರು. ಸತ್ಯದೇವ್ ದುಬೆಯಂತಹವರ ಒಡನಾಟದಲ್ಲಿ ಕಲಿತವರು. ನಂತರ ಶ್ಯಾಮ್ ಬೆನೆಗಲ್ ಜೊತೆ ಸೇರಿ ಸಮಾಂತರ ಸಿನಿಮಾದಲ್ಲಿ ನಟಿಸಿದವರು. ಕನ್ನಡದ ನಾಯಕರಾಗುವ ಮೊದಲು ಅನಂತನಾಗ್ ಅಂಕುರ್, ನಿಶಾಂತ್, ಮಂಥನ್ ಮತ್ತು ಭೂಮಿಕಾದಂತಹ ಚಿತ್ರಗಳಲ್ಲಿ ನಟಿಸಿದ್ದರು.

ಕನ್ನಡದ ಮುಖ್ಯವಾಹಿನಿ ಚಿತ್ರರಂಗಕ್ಕೆ ಅನಂತನಾಗ್ ಅವರ ಅತಿದೊಡ್ಡ ಕೊಡುಗೆ ಎಂದರೆ, ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನನ್ನು ನಾಯಕನನ್ನಾಗಿ ಮಾಡಿದ್ದು. ಅವರು ಹತ್ತು ಖಳರನ್ನು ಒಂದೇ ಏಟಿಗೆ ಹೊಡೆಯಲಿಲ್ಲ, ನೃತ್ಯ ಕೂಡ ಮಾಡಲಿಲ್ಲ, ನಾಯಕನ ಆಗಮನವನ್ನು ಸಾರುವ ಪ್ರವೇಶ ದೃಶ್ಯವಿರಲಿಲ್ಲ. ಅವರು ಕೆಳ-ಮಧ್ಯಮ ವರ್ಗದ ಅಂತರ್ಮುಖಿ, ನಾಚಿಕೆ ಸ್ವಭಾವದ ಪ್ರಿಯಕರ, ಕಾಳಜಿ ವಹಿಸುವ ಪತಿ, ಕಡಿಮೆ ಆದಾಯದ ಗುಮಾಸ್ತ, ಸರ್ಕಾರಿ ಶಾಲಾ ಶಿಕ್ಷಕ, ಗೊಂದಲಕ್ಕೊಳಗಾದ ನೆರೆಯವನು, ಆಡಂಬರದ ಗೋಸುಂಬೆ, ಹಾಸ್ಯಾಸ್ಪದ ಸನ್ನಿವೇಶದಲ್ಲಿ ಸಿಕ್ಕಿಬಿದ್ದವನು, ಪ್ರಮಾದ ಮಾಡಿ ಪಾಪಪ್ರಜ್ಞೆಯಲ್ಲಿ ನರಳುವ ಪ್ರಾಮಾಣಿಕ, ಹೆಂಡತಿಯಿಂದ ಏನನ್ನೋ ಮುಚ್ಚಿಡಲು ಪ್ರಯತ್ನಿಸುವ ತುಂಟ, ಹೇಗೆ ವರ್ತಿಸಬೇಕೆಂದು ತಿಳಿಯದೆ ಪ್ರೀತಿಯಲ್ಲಿ ಬೀಳುವ ಯುವಕ… ಸರಳವಾಗಿ ಹೇಳಬೇಕೆಂದರೆ, ಅವರು ನಾವೇ ಆಗಿದ್ದರು.

ಅನಂತನಾಗ್ ಬಗ್ಗೆ ಯೋಚಿಸಿದಾಗಲೆಲ್ಲಾ, ಲಕ್ಷ್ಮಿ ನೆನಪಾಗುತ್ತಾರೆ. ಅನಂತನಾಗ್ ಮತ್ತು ಲಕ್ಷ್ಮಿ ಅವರನ್ನು ನೋಡಿದರೆ, ಅವರು ಒಂದು ದಶಕದಿಂದ ಪ್ರೀತಿಸಿ ನಂತರ ಮತ್ತೊಂದು ದಶಕ ದಾಂಪತ್ಯ ಜೀವನ ನಡೆಸುತ್ತಿದ್ದಾರೇನೋ ಎಂಬಂತೆ ಅನಿಸುತ್ತಿತ್ತು; ಅವರ ನಡುವಿನ ಕೆಮಿಸ್ಟ್ರಿ ಅಂಥದಿತ್ತು. ಒಬ್ಬರಿಗೊಬ್ಬರು ಸ್ಪರ್ಶಿಸದೆಯೇ ಪ್ರಣಯ ಮಾಡಬಲ್ಲವರಾಗಿದ್ದರು. ಕಿರಿಕಿರಿ, ವಾತ್ಸಲ್ಯ, ವಾದ, ವ್ಯಂಗ್ಯ, ನೆಮ್ಮದಿಗಳನ್ನು ನಮ್ಮ ನಿಮ್ಮ ಮನೆಗಳಲ್ಲಿ ನಡೆಯುವಂತೆ ಸಹಜವಾಗಿ ಪರದೆಯ ಮೇಲೆ ತೋರಿಸುತ್ತಿದ್ದರು. ಅವರಿಂದಾಗಿಯೇ ದೊರೈ-ಭಗವಾನ್ ಯುಗದ ಚಲನಚಿತ್ರಗಳು ಅಷ್ಟು ಯಶಸ್ವಿಯಾದವು, ರಾಜನ್-ನಾಗೇಂದ್ರ ಜೋಡಿಯು ಸಂಗೀತದ ಮಾಂತ್ರಿಕತೆಯನ್ನು ಸೃಷ್ಟಿಸಿತು. ಬಯಲು ದಾರಿ, ಚಂದನದ ಗೊಂಬೆ, ಬೆಂಕಿಯ ಬಲೆ ಮತ್ತು ಇತರ ಅನೇಕ ಚಿತ್ರಗಳು ನನ್ನ ನೆನಪಿನ ಭಾಗವಾಗಿವೆ.

ಎಸ್‌ಪಿಬಿ (ಎ ಸ್ಪಿ ಬಾಲಸುಬ್ರಮಣ್ಯಂ)    ಅವರ ಬಗ್ಗೆ ಬರೆಯದಿದ್ದರೆ ಈ ಲೇಖನ ಅಪೂರ್ಣ ಅನಿಸುತ್ತದೆ. ಅನಂತನಾಗ್  ಲೇಖನದಲ್ಲಿ ಎಸ್‌ಪಿಬಿಗೆ ಏನು ಕೆಲಸ? ಅನಂತನಾಗ್ ಹೇಗೆ ಹಾಡಬಹುದು ಎಂಬುದು ಎಸ್‌ಪಿಬಿಗೆ ತಿಳಿದಿತ್ತು. ಗಮನವಿಟ್ಟು ಆಲಿಸಿ. ಅನಂತನಾಗ್ ಅವರಿಗಾಗಿ, ಎಸ್‌ಪಿಬಿ ಅವರು ಸ್ವಲ್ಪ ನಾಸಿಕ ಧ್ವನಿಯ ಛಾಯೆಯೊಂದಿಗೆ ಮೃದುವಾಗಿ ಹಾಡುತ್ತಿದ್ದರು (ನಿನ್ನ ನಗುವು ಹೂವಂತೆ ಹಾಡನ್ನು ನೋಡಿ ಮತ್ತು ಆಲಿಸಿ). ದಪ್ಪಧ್ವನಿಯಲ್ಲಿ ಹಾಡಿರುವ ಅಂಬರೀಷ್ ಹಾಡುಗಳೊಂದಿಗೆ ಅಥವಾ ಒರಟು ಧ್ವನಿಯಲ್ಲಿ ಹಾಡಿರುವ ಶಂಕರನಾಗ್ ಹಾಡುಗಳೊಂದಿಗೆ ಹೋಲಿಸಿ ನೋಡಿ, ಎಸ್‌ಪಿಬಿ ಅವರ ಅದ್ಭುತ ಸಾಮರ್ಥ್ಯದ ಅರಿವಾಗುತ್ತದೆ. ತಮ್ಮ ಶೈಲಿಯನ್ನು ಉಳಿಸಿಕೊಳ್ಳುತ್ತಲೇ ತೆರೆಯ ಮೇಲಿನ ವ್ಯಕ್ತಿಯ ವ್ಯಕ್ತಿತ್ವವನ್ನು ಸೂಚಿಸಬಲ್ಲವರಾಗಿದ್ದರು. ‘ನಿನ್ನ ನೀನು ಮರೆತರೇನು’, ‘ಎಲ್ಲಿರುವೆ ಮನವ ಕಾಡುವ ರೂಪಾಸಿಯೇ’, ‘ಕನಸಲು ನೀನೆ ಮನಸಲು ನೀನೆ’, ‘ಆಕಾಶದಿಂದ ಧರೆಗಿಳಿದ ರಂಭೆ’, ‘ನಾನು ನೀನು ಒಂದಾದ’, ‘ಬಿಸಿಲಾದರೇನು’, ‘ಒಲಿದ ಜೀವ ಜೊತೆಯಲಿರಲು’ – ಇವು ನಮ್ಮ ಮನೆಗಳಲ್ಲಿ, ಮಧ್ಯಾಹ್ನ ಮತ್ತು ಸಂಜೆಯ ಬಾನುಲಿಯಲ್ಲಿ ಮತ್ತು ಕ್ಯಾಸೆಟ್ಟುಗಳಲ್ಲಿ ತುಂಬಿದ್ದವು.

ಕಲಾತ್ಮಕ ಸಿನೆಮಾ ಪ್ರಿಯರಿಗೆ, ಅನಂತನಾಗ್ ಹಿಂದಿಯಲ್ಲಿ ನಟಿಸಿದ ಅಂಕುರ್, ನಿಶಾಂತ್, ಮಂಥನ್, ಭೋಮಿಕಾ, ಕಲಿಯುಗ್ ಸಿನೆಮಾಗಳು, ಕನ್ನಡದಲ್ಲಿ ನಟಿಸಿದ ಹಂಸಗೀತೆ, ಬರ, ಅವಸ್ಥೆ, ಅನ್ವೇಷಣೆ ಸಿನೆಮಾಗಳು ಇಷ್ಟವಾಗುತ್ತವೆ. ಕನ್ನಡದ ಹೆಂಗಸರಿಗೆ (ಈಗ ಅವರೆಲ್ಲ ಅರವತ್ತು ಎಪ್ಪತ್ತು ದಾಟಿದ್ದಾರೆ) ಬಯಲುದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಬಾಡದ ಹೂ, ಬೆಂಕಿಯ ಬಲೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಸುಖ ಸಂಸಾರಕ್ಕೆ ಹನ್ನೆರೆಡು ಸೂತ್ರಗಳು, ಒಲವು ಮೂಡಿದಾಗ, ಅರುಣರಾಗ, ಮನೆಯೇ ಮಂತ್ರಾಲಯ…ಸಾಲು ಸಾಲು ಸಿನೆಮಾಗಳು. ಅಲ್ಲಿಯೂ ಇಲ್ಲಿಯೂ ಸಲ್ಲುವ ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದು ಹೀಗೆ, ಆಕ್ಸಿಡೆಂಟ್, ಪರಮೇಶಿ ಪ್ರೇಮ ಪ್ರಸಂಗ ಸಿನೆಮಾಗಳೂ ಇವೆ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ನಾರದ ವಿಜಯ, ಹೆಂಡ್ತಿಗೆ ಹೇಳ್ಬೇಡಿ, ಗೋಲಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ಗೋಲ್-ಮಾಲ್, ಗೌರಿ ಗಣೇಶ, ಯಾರಿಗೂ ಹೇಳ್ಬೇಡಿ ಸಿನೆಮಾಗಳಿವೆ. ಅನನ್ಯವಾದ ಬೆಳದಿಂಗಳ ಬಾಲೆ ಇದೆ.

ಅನೇಕ ಚಲನಚಿತ್ರ ತಾರೆಯರು ವಯಸ್ಸಾಗಿರುವುದನ್ನು ಮುಚ್ಚಿಡಲು ಏನೆಲ್ಲ ಮಾಡುತ್ತಾರೆ ಅಥವಾ ತೆರೆಯಿಂದ ಮರೆಯಾಗುತ್ತಾರೆ! ಅನಂತನಾಗ್ ಅದಕ್ಕೆ ಹೊರತಾದರು. ‘ಮುಂಗಾರು ಮಳೆ’ಯಲ್ಲಿ ಅಪ್ಪನ ಪಾತ್ರ ಮಾಡಿ ನಗೆಗಡಲಿನಲ್ಲಿ ಮುಳುಗಿಸಿದರು. ಹಿರಿಯ ವ್ಯಕ್ತಿಯಾಗಿ, ಹಿರಿಯ ಶಿಕ್ಷಕನಾಗಿ, ನಿವೃತ್ತ ಅಧಿಕಾರಿಯಾಗಿ ಮತ್ತು ತಾತನಾಗಿ ನಟಿಸಿದರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ, ಅವರು ಅದನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು.

ಶಂಕರನಾಗ್ ಅವರಿಂದ ಅನಂತನಾಗ್ ಅವರನ್ನು ಬೇರ್ಪಡಿಸುವುದು ಅಸಾಧ್ಯ. ಅನಂತನಾಗ್ ತಮ್ಮನ ಮೇಲೆ ಒಂದು ಪುಸ್ತಕವನ್ನೂ ಬರೆದಿದ್ದಾರೆ, ‘ನನ್ನ ತಮ್ಮ ಶಂಕರ’. ನಿರೂಪಣೆ ಸರಳವಾಗಿದೆ, ಅಣ್ಣನ ವಾತ್ಸಲ್ಯವೂ ಇದೆ. ಅಣ್ಣ ಅನಂತ ಶಾಂತ, ಸಂಯಮ ಮೂರ್ತಿ; ಶಂಕರ ಅಸಹನೆಯ ಮತ್ತು ಯಾವಾಗಲೂ ಹೊಸತೇನನ್ನಾದರೂ ಪ್ರಯತ್ನಿಸವ ಚಂಚಲ. ಶಂಕರನಾಗ್ ಅವರೊಂದಿಗಿನ ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರಗಳನ್ನು ಮರೆಯಲು ಸಾಧ್ಯವೆ? ಅಣ್ಣ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನೋಡಲು ತಮ್ಮ ಶಂಕರನಾಗ್ ಇಂದು ಇದ್ದಿದ್ದರೆ ಎಂದು ಅನಿಸದೇ ಇರದು. 

ಅನಂತನಾಗ್ ಸುತ್ತ ಅಭಿಮಾನಿ ಸಂಘ ಇರಲಿಲ್ಲ. ಸ್ಟಾರ್ ಎಂಬ ಘೋಷಣೆಗಳಿರಲಿಲ್ಲ. ತೆರೆಯ ಮೇಲಿರಲಿ ಅಥವಾ ಹೊರಗಿರಲಿ ಬಿರುದು-ಬಾವಲಿಗಳಿರಲಿಲ್ಲ. ಚಿತ್ರದ ಕ್ರೆಡಿಟ್‌ಗಳಲ್ಲಿ ಕೇವಲ ಅವರ ಹೆಸರು ಮಾತ್ರ, ಅದರ ಮುಂದೆ ಅಥವಾ ಹಿಂದೆ ಯಾವುದೇ ‘ಸ್ಟಾರ್’ ಇಲ್ಲ. ಪೋಸ್ಟರ್‌ಗಳಿಗೆ ಹಾಲು ಸುರಿಯುವ ಅಗತ್ಯವಿರಲಿಲ್ಲ. ಐವತ್ತು ಅಡಿ ಎತ್ತರದ ಕಟ್-ಔಟ್‌ಗಳಿರಲಿಲ್ಲ. ಆದರೂ ನನ್ನ ತಾಯಿಯ ಪೀಳಿಗೆಯ ಮಹಿಳೆಯರಿಂದಾಗಿ ಕರ್ನಾಟಕದ ಅತಿದೊಡ್ಡ (ಅನಧಿಕೃತ) ಅಭಿಮಾನಿ ಬಳಗವನ್ನು ಹೊಂದಿದವರು ಅನಂತನಾಗ್ ಎಂದು ಹೇಳಿದರೆ ಸುಳ್ಳಾಗಲಾರದು!

ಫಾಲ್ಕೆ ಪ್ರಶಸ್ತಿಯನ್ನು ಪಡೆದ ಇಬ್ಬರು ಕನ್ನಡಿಗರು ಕನ್ನಡ ಚಿತ್ರರಂಗದ ಎರಡು ವಿಭಿನ್ನ ಎಳೆಗಳನ್ನು ಪ್ರತಿನಿಧಿಸುತ್ತಾರೆ ಎನ್ನುವುದರಲ್ಲಿಯೇ ಅನನ್ಯತೆಯಿದೆ. ರಾಜ್‌ಕುಮಾರ್ ಸಾಂಪ್ರದಾಯಿಕ ರಂಗಭೂಮಿಯಿಂದ ಬಂದವರು, ಅನಂತನಾಗ್ ಆಧುನಿಕ ರಂಗಭೂಮಿಯಿಂದ  ಬಂದವರು. ಇಡೀ ಚಿತ್ರರಂಗಕ್ಕೆ ರಾಜ್ ಅಣ್ಣಾವ್ರು, ಅನಂತನಾಗ್ ಶಂಕರನಿಗೆ ಅಣ್ಣನಾಗಿದ್ದರೂ ಸಣ್ಣವನಂತೆ ಉಳಿದವರು. ಅವರು ದಂತಕತೆ, ಇವರು ನಮ್ಮ-ನಿಮ್ಮಂತೆ. ಅವರು ನೈತಿಕತೆಯ ಕಾವಲುಗಾರ, ಇವರು ತುಂಟಗಾರ. ಅವರು ಸಮೂಹದ ಸಮ್ಮೋಹನಿಯ ಸಂಕೇತ, ಇವರು ಮಧ್ಯಮ ವರ್ಗದ ಜನಸಾಮಾನ್ಯರ ಪ್ರತೀಕ. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶಿಪುವಾಗಿ ರಾಜ್‌ಕುಮಾರ್, ನಾರದನಾಗಿ ಅನಂತನಾಗ್. ರಾಜ್‌ಕುಮಾರ್ ಅವರ ಹಿರಣ್ಯಕಶಿಪು ಇಡೀ ದೃಶ್ಯವನ್ನು ತುಂಬುತ್ತಾರೆ, ತಲೆಯಿಂದ ಉಂಗುಷ್ಜದವರೆಗೆ ಗರ್ಜಿಸುತ್ತಾರೆ, ಹಿರಣ್ಯಕಶಿಪುವಿಗೆ ಏನು ಬೇಕಿತ್ತೋ ಹಾಗೆ, ವೃತ್ತಿ ರಂಗಭೂಮಿಯ ಕಲಾವಿದನಂತೆ. ನಾರದನಾಗಿ ಅನಂತನಾಗ್ ಸಾಮಾನ್ಯನಂತೆ ಮಾತನಾಡುತ್ತಾರೆ, ಸಹಜವಾಗಿ ನಡೆಯುತ್ತಾರೆ, ನಂತರ ಆ ‘ಅನಂತನಾಗ್’ ಮುಗುಳುನಗುವನ್ನು ಬೀರುತ್ತಾರೆ! ಕನ್ನಡ ಚಿತ್ರರಂಗ ನಮಗೆ ಇಬ್ಬರನ್ನೂ ಕೊಡುಗೆಯಾಗಿ ಕೊಟ್ಟಿತು, ಈ ಇಬ್ಬರಿಂದಾಗಿ ಕನ್ನಡ ಚಿತ್ರರಂಗದ ಸಂಸ್ಕೃತಿ ಇನ್ನಷ್ಟು ಶ್ರೀಮಂತವಾಯಿತು. 

ಅನಂತನಾಗ್ ಎಂದಿಗೂ ಪ್ರಸಿದ್ಧಿಯ ಹಿಂದೆ ಓಡಲಿಲ್ಲ, ತಾರೆಯಾಗಿಯೇ ಉಳಿಯಲು ಬಯಸಲಿಲ್ಲ. ನಟಿಸುತ್ತಾ, ವಯಸ್ಸಿಗೆ ಹೊಂದಿಕೊಳ್ಳುತ್ತಾ ನಮ್ಮನ್ನು ಇನ್ನೂ ರಂಜಿಸುತ್ತಿದ್ದಾರೆ.  ತೆರೆಯ ಮೇಲೆ ಎಂದೂ ಅತಿದೊಡ್ಡದಾಗಿ (larger than life) ಕಾಣದ ನಟನ ಬಳಿಗೆ ಭಾರತೀಯ ಚಿತ್ರರಂಗದ ಅತಿದೊಡ್ಡ ಗೌರವವು ಹುಡುಕಿಕೊಂಡು ಬಂದಿದೆ. ಥ್ಯಾಂಕ್ಯೂ ಫಾಲ್ಕೆ ಪ್ರಶಸ್ತಿ!

ಎರಡನೇ ಮಹಾಯುದ್ಧದ ಬ್ರಿಟಿಷ್ ಗೂಢಚಾರಿಣಿ ನೂರ್ ಇನಾಯತ್ ಖಾನ್ (1914–1944) The Spy Princess -ರಾಮಮೂರ್ತಿ ಲೇಖನ.

ದೇಶಭಕ್ತಿ ಎಂದರೆ ಗಡಿಯಲ್ಲಿ ಶಸ್ತ್ರ ಹಿಡಿದು ಹೋರಾಡುವುದಕ್ಕೆ ಸೀಮಿತವಿಲ್ಲ; ಅಗತ್ಯ ಬಂದಾಗ ತನ್ನ ವೈಯಕ್ತಿಕ ಸುಖ–ಸೌಕರ್ಯ, ಭಯ, ಭವಿಷ್ಯ ಎಲ್ಲವನ್ನೂ ಬದಿಗಿಟ್ಟು ದೇಶಕ್ಕಾಗಿ ನಿಲ್ಲುವ ಧೈರ್ಯವೇ ನಿಜವಾದ ದೇಶಭಕ್ತಿ. ಇಂತಹ ಮೌನವಾದ, ಆದರೆ ಅಪಾರ ತ್ಯಾಗದಿಂದ ಕೂಡಿದ ದೇಶಭಕ್ತಿಯ ಪ್ರತೀಕವೇ ನೂರ್ ಇನಾಯತ್ ಖಾನ್.ಇತಿಹಾಸದ ಪುಟಗಳಲ್ಲಿ ಬಹಳಷ್ಟು ಬಾರಿ ಮಹಿಳೆಯರ ತ್ಯಾಗಗಳು ಅಂಚಿಗೆ ಸರಿದಿವೆ. ವಿಶೇಷವಾಗಿ ವಸಾಹತುಶಾಹಿಯ ಕಾಲಘಟ್ಟದಲ್ಲಿ ಭಾರತ ಮೂಲದ ಅನೇಕರು ನೀಡಿದ ಕೊಡುಗೆಗಳು ಸೂಕ್ತ ಗೌರವವನ್ನು ಪಡೆಯಲಿಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಗೂಢಚರ್ಯಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ನೂರ್ ಇನಾಯತ್ ಖಾನ್ ಅವರ ಜೀವನವು, ದೇಶಭಕ್ತಿಯ ಅರ್ಥಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಈ ಲೇಖನವು ನೂರ್ ಇನಾಯತ್ ಖಾನ್ ಅವರ ಜೀವನ ಕಥೆಯನ್ನು ಮಾತ್ರವಲ್ಲ, ದೇಶಭಕ್ತಿ ಎಂಬ ಮೌಲ್ಯವು ಜಾತಿ, ಧರ್ಮ, ಲಿಂಗ, ರಾಷ್ಟ್ರಗಳ ಗಡಿಗಳನ್ನು ಮೀರಿ ಮಾನವೀಯತೆಯೊಂದಿಗೆ ಬೆಸೆಯಲ್ಪಟ್ಟಿರುತ್ತದೆ ಎಂಬ ಸತ್ಯವನ್ನು ನಮ್ಮ ಮುಂದಿಡುತ್ತದೆ. ಇಂತಹ ಮರೆತುಹೋಗಿರುವ ವೀರಗಾಥೆಗಳು ಪುನಃ ಓದಿಗೆ ಬರುವುದೇ ನಮ್ಮ ಇತಿಹಾಸದ ಜವಾಬ್ದಾರಿ.ನೂರ್ ಇನಾಯತ್ ಖಾನ್ ಅವರ ಕಥೆ, ದೇಶಭಕ್ತಿ ಎಂದರೆ ಘೋಷಣೆ ಅಲ್ಲ; ಅದು ಮೌನ ತ್ಯಾಗ, ಅಚಲ ನಿಷ್ಠೆ ಮತ್ತು ಕೊನೆಯ ಉಸಿರಿನವರೆಗಿನ ಧೈರ್ಯ ಎಂಬುದನ್ನು ನಮಗೆ ನೆನಪಿಸುತ್ತದೆ.
ಇಂತಹ ಮೈಜುಮ್ಮೆನ್ನುವ ರೋಚಕ ಜೀವನ ಚರಿತ್ರೆಯನ್ನು ನಮ್ಮೊಂದಿದೆ ಹಂಚಿಕೊಂಡಿದ್ದಕ್ಕೆ ಈಗಾಗಲೇ ‘ಅನಿವಾಸಿ’ಗೆ ಅನೇಕ ಅಮೂಲ್ಯ ಇತಿಹಾಸ ಪ್ರಬಂಧಗಳನ್ನು ಕೊಟ್ಟು ಸುಪರಿಚಿತರಾದ ರಾಮಮೂರ್ತಿಯವರಿಗೆ ಧನ್ಯವಾದಗಳು.
~ ರಾಧಿಕಾ ಜೋಶಿ

1914–1918 ಮತ್ತು 1939–1945ರಲ್ಲಿ ನಡೆದ ಈ ಎರಡು ಮಹಾಯುದ್ಧಗಳಲ್ಲಿ ಭಾರತದ ಸುಮಾರು ಇಪ್ಪತ್ತು ಲಕ್ಷ ಸೈನಿಕರು ಭಾಗವಹಿಸಿದ್ದರು. ಆದರೆ ಇವರ ತ್ಯಾಗವನ್ನು ನೆನಪಿಸಿಕೊಂಡು ನವೆಂಬರ್ ತಿಂಗಳಲ್ಲಿ ನಡೆಯುವ Remembrance Day ದಿನದಂದು Poppy Wreath ಇಡುವುದು ಅಪರೂಪವಾಗಿದೆ. ಈ ಯುದ್ಧಗಳಲ್ಲಿ ಅನೇಕ ಮಹಿಳೆಯರೂ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದ್ದರು. ಅವರಲ್ಲಿ ನೂರ್ ಇನಾಯತ್ ಖಾನ್ ಒಬ್ಬಳು. ಈ ಹೆಸರನ್ನು ನೀವು ಬಹುಶಃ ಕೇಳಿರಲಿಕ್ಕಿಲ್ಲ. 112 ವರ್ಷಗಳ ಹಿಂದೆ ಜನಿಸಿದ ಭಾರತ ಮೂಲದ ನೂರ್ ಇನಾಯತ್ ಖಾನ್ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದುದು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಅಂದಿನ ಪ್ರಧಾನಮಂತ್ರಿ ಸರ್ ವಿಂಸ್ಟನ್ ಚರ್ಚಿಲ್ ಸ್ಥಾಪಿಸಿದ Special Operations Executive (SOE) ವಿಭಾಗಕ್ಕೆ ಸೇರಿ, ಫ್ರಾನ್ಸ್ ದೇಶದಲ್ಲಿದ್ದು ಶತ್ರುಗಳ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಅತ್ಯಂತ ಗುಪ್ತವಾಗಿ ವೈರ್‌ಲೆಸ್ ಮೂಲಕ ಲಂಡನ್ ಕಚೇರಿಗೆ ಕಳುಹಿಸುವುದು ಅವಳ ಕೆಲಸವಾಗಿತ್ತು. ಆ ಸಮಯದಲ್ಲಿ ನಾಜಿ ಜರ್ಮನಿ ಫ್ರಾನ್ಸ್ ದೇಶವನ್ನು ಆಕ್ರಮಿಸಿಕೊಂಡಿತ್ತು. ಆದ್ದರಿಂದ ಬ್ರಿಟಿಷ್ ಗೂಢಚಾರಿಗಳು ಅತ್ಯಂತ ಸೂಕ್ಷ್ಮತೆ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿತ್ತು. ಸಿಕ್ಕಿಬಿದ್ದರೆ ಸಾವೇ ಶಿಕ್ಷೆ.

ಪ್ರತಿ ದಿನ ಒಂದು ಸುರಕ್ಷಿತ ಮನೆಯಿಂದ ಇನ್ನೊಂದು ಮನೆಗೆ ಗುಪ್ತವಾಗಿ ಸ್ಥಳಾಂತರಗೊಂಡು, ಅಟ್ಟದಲ್ಲೋ ಅಥವಾ ನೆಲಮಾಳಿಗೆಯಲ್ಲೋ ವೈರ್‌ಲೆಸ್ ಉಪಕರಣಗಳನ್ನು ಜೋಡಿಸಿ ಸಂದೇಶ ಕಳುಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಶತ್ರುಗಳಿಗೆ ಸುಳಿವು ಸಿಗದಂತೆ ಅವಳು ಅನೇಕ ಹೆಸರುಗಳನ್ನು ಬಳಸುತ್ತಿದ್ದಳು—ಮ್ಯಾಡಲೀನ್, ನೊರಾ ಇತ್ಯಾದಿ. ಆದರೆ ಕೊನೆಗೆ ಒಬ್ಬ ದ್ರೋಹಿಯ ಕಾರಣದಿಂದ ಶತ್ರುಗಳಿಗೆ ಸಿಕ್ಕಿಬಿದ್ದು, ಹಲವಾರು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿ ಭೀಕರ ಚಿತ್ರಹಿಂಸೆಯನ್ನು ಸಹಿಸಿದರೂ, ಒಂದು ಚೂರು ರಹಸ್ಯವನ್ನೂ ಬಿಟ್ಟು ಕೊಡದ ಧೈರ್ಯಕ್ಕಾಗಿ Dachau Concentration Camp ನಲ್ಲಿ Gestapo ಗುಂಡಿನಿಂದ ಹತ್ಯೆಗೊಳಗಾದಳು.

ಬಾಲ್ಯ ಜೀವನ ಮತ್ತು ಕುಟುಂಬ ಹಿನ್ನೆಲೆ

ತಂದೆ ಹಜರತ್ ಇನಾಯತ್ ಖಾನ್ ಬರೋಡಾ ನಗರದಲ್ಲಿ ಜನಿಸಿದರು. ತಾಯಿ ಕಡೆಯಿಂದ ಅವರು ಮೈಸೂರಿನ ಟಿಪ್ಪು ಸುಲ್ತಾನನ ವಂಶಸ್ಥರು(ಮರಿಮಗ). ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ 1799ರಲ್ಲಿ ಮರಣ ಹೊಂದಿದರು. ಹಜರತ್ ಇನಾಯತ್ ಖಾನ್ ಶಾಂತಿಪ್ರಿಯರಾಗಿದ್ದು, ಇಸ್ಲಾಂ ಧರ್ಮದ ಸೂಫಿ ಪರಂಪರೆಯನ್ನು ಅನುಸರಿಸಿ ಸಂಗೀತವನ್ನು ಕಲಿತವರು. ಈ ಸಂಪ್ರದಾಯವನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಪ್ರವಾಸ ಮಾಡಿದರು.

ತಾಯಿ ಅಮೆರಿಕಾದ ಪ್ರಜೆ ಒರಾ ರೇ ಬೇಕರ್; ನಂತರ ಇಸ್ಲಾಂ ಧರ್ಮ ಸ್ವೀಕರಿಸಿ ಅಮೀನಾ ಬೇಗಂ ಎಂದು ಹೆಸರು ಪಡೆದರು. ಯುರೋಪ್‌ನಲ್ಲಿ ಸಂಚರಿಸಿ ಕೆಲ ವರ್ಷಗಳು ಮಾಸ್ಕೋ ನಗರದಲ್ಲಿ ವಾಸಿಸಿ, 1914ರಲ್ಲಿ ಮೊದಲ ಮಹಾಯುದ್ಧ ಆರಂಭವಾಗುವ ಮೊದಲು ಕುಟುಂಬದೊಂದಿಗೆ ಲಂಡನ್‌ನ ಬ್ಲೂಮ್ಸ್‌ಬರಿ (Bloomsbury)ಯಲ್ಲಿ ನೆಲೆಸಿದರು. ನೂರ್ 01-01-1914ರಂದು ಮಾಸ್ಕೋ ನಗರದಲ್ಲಿ ಜನಿಸಿದರು.

ಮಹಾಯುದ್ಧ ಮುಗಿದ ನಂತರ 1920ರಲ್ಲಿ ಲಂಡನ್‌ನಿಂದ ಪ್ಯಾರಿಸ್‌ಗೆ ಬಂದು ನೆಲೆಸಿದರು. ಇನಾಯತ್ ಖಾನ್ ಸಂಗೀತ ಮತ್ತು ಸೂಫಿ ಧರ್ಮದ ಪ್ರಚಾರ ಆರಂಭಿಸಿದರು. ಆದರೆ 1927ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅನಾರೋಗ್ಯದಿಂದ ನಿಧನರಾದರು.

13 ವರ್ಷದ ನೂರ್ ಮೇಲೆ ಕುಟುಂಬದ ಹೊಣೆಗಾರಿಕೆ ಬಿದ್ದರೂ, ಅವಳ ವಿದ್ಯಾಭ್ಯಾಸವನ್ನು ಮುಂದುವರೆಸಿ ಪ್ರಸಿದ್ಧ Sorbonne ವಿಶ್ವವಿದ್ಯಾಲಯದಲ್ಲಿ ಮಕ್ಕಳ ಮನೋವಿಜ್ಞಾನ (Child Psychology) ಪದವಿ ಪಡೆದಳು. ಸಂಗೀತದಲ್ಲೂ ಅವಳು ಪ್ರವೀಣಳಾಗಿದ್ದಳು. ನಂತರ ಮಕ್ಕಳ ಪುಸ್ತಕಗಳ ಲೇಖಕಿಯಾಗಿ, 1939ರಲ್ಲಿ ಬೌದ್ಧ ಧರ್ಮದಿಂದ ಪ್ರೇರಿತವಾದ “ಇಪ್ಪತ್ತು ಜಾತಕ ಕಥೆಗಳು” ಸೇರಿದಂತೆ ಹಲವು ಬರಹಗಳು ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದವು.

ಎರಡನೇ ಮಹಾಯುದ್ಧದಲ್ಲಿ ವೈರ್‌ಲೆಸ್ ಆಪರೇಟರ್

1939ರಲ್ಲಿ ನಾಜಿ ಜರ್ಮನಿ ಯುರೋಪ್ ಖಂಡವನ್ನು ಕಬಳಿಸುವ ಪ್ರಯತ್ನದಿಂದ ಯುದ್ಧ ಆರಂಭವಾಯಿತು. 1940ರಲ್ಲಿ ಫ್ರಾನ್ಸ್ ಜರ್ಮನಿಯ ವಶವಾಯಿತು. ಅಹಿಂಸಾವಾದಿಗಳಾದ ಈ ಕುಟುಂಬ Bordeaux ನಿಂದ ಸರಕು ಸಾಗಿಸುವ ಹಡಗಿನಲ್ಲಿ ಲಂಡನ್‌ಗೆ ಮರಳಿದರು.
ನೂರ್ ಮತ್ತು ಅವಳ ಸಹೋದರ ವಿಲಾಯತ್ ಅವರ ತಂದೆಯಂತೆ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ವಿಮುಕ್ತವಾಗಬೇಕೆಂದು ಕನಸು ಕಂಡಿದ್ದರು. ಆದರೆ ಈಗ ಜರ್ಮನಿ ಯುರೋಪ್ ಖಂಡವನ್ನೇ ಆಕ್ರಮಿಸುವ ಅಪಾಯ ಎದುರಾದ್ದರಿಂದ, ಇದನ್ನು ತಡೆಯಲು ತಮ್ಮ ಕೈಲಾದ ಸೇವೆ ಸಲ್ಲಿಸಲು ನಿರ್ಧರಿಸಿದರು.

ನೂರ್ ಆಗತಾನೆ ಆರಂಭವಾಗಿದ್ದ WAAF (Women’s Auxiliary Air Force) ಗೆ ಸೇರಿ Signals ಮತ್ತು Wireless ವಿಭಾಗದಲ್ಲಿ ತರಬೇತಿ ಪಡೆದು, ಜೂನ್ 1943ರಲ್ಲಿ ಫ್ರಾನ್ಸ್‌ನಲ್ಲಿ ಕೆಲಸ ಆರಂಭಿಸಿದಳು. Gestapo ಪ್ಯಾರಿಸ್‌ನಲ್ಲಿ ಅನೇಕ ಬ್ರಿಟಿಷ್ ಗೂಢಚಾರಿಗಳನ್ನು ಹಿಡಿದು ಕ್ರೂರ ಶಿಕ್ಷೆ ವಿಧಿಸುತ್ತಿತ್ತು. ಇಂತಹ ಅಪಾಯಕರ ಪರಿಸ್ಥಿತಿಯಲ್ಲೂ ನೂರ್ ವೇಷ ಬದಲಿಸಿ ಸುರಕ್ಷಿತ ಮನೆಗಳಿಂದ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಾ ತನ್ನ ಕೆಲಸ ಮುಂದುವರೆಸಿದಳು.

ಅವಳ ಫ್ರೆಂಚ್ ಭಾಷೆಯ ಉಚ್ಚಾರಣೆ ಸ್ಥಳೀಯರಂತೆಯೇ ಇದ್ದುದರಿಂದ ಅವಳ ಮೇಲೆ ಸಂಶಯ ಬಹಳ ಕಡಿಮೆ ಇತ್ತು. ಅವಳು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಿದ್ದ ಕೆಲಸ ಲಂಡನ್‌ನಲ್ಲೂ ಮೆಚ್ಚುಗೆ ಪಡೆದಿತ್ತು. ಆದರೂ ಅವಳ ಸುರಕ್ಷತೆ ಬಗ್ಗೆ ಆತಂಕವಿತ್ತು; ಹಲವು ಬಾರಿ ಅವಳನ್ನು ವಾಪಸ್ಸು ಬರಲು ಕರೆ ಮಾಡಲಾಯಿತು. ಆದರೆ ನೂರ್ ಅದನ್ನು ನಿರಾಕರಿಸಿ ಫ್ರಾನ್ಸ್‌ನಲ್ಲೇ ಕೆಲಸ ಮುಂದುವರೆಸಿದಳು.
ದುರದೃಷ್ಟವಶಾತ್, ಫ್ರಾನ್ಸ್‌ನ ಒಬ್ಬ Double Agent ದ್ರೋಹ ಮಾಡಿದ್ದರಿಂದ Gestapo ನೂರ್ ಅನ್ನು ಸೆರೆಹಿಡಿಯಲು ಸಾಧ್ಯವಾಯಿತು.

ಕೊನೆಯ ದಿನಗಳು

Gestapo ಕಾರಾಗೃಹದಲ್ಲಿ ಇಟ್ಟ ಮೊದಲ ದಿನವೇ ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಅವಳು ಪ್ರಯತ್ನಿಸಿದಳು. Gestapo ಎಷ್ಟೇ ಹಿಂಸೆ ನೀಡಿದರೂ ನೂರ್ ತನ್ನ Code Word ಸೇರಿದಂತೆ ಯಾವುದೇ ರಹಸ್ಯವನ್ನೂ ಬಿಟ್ಟು ಕೊಡಲಿಲ್ಲ. ಇತರ ಬಂಧಿಗಳೊಂದಿಗೆ ಸೆರೆಯ ಕಂಬಿಗಳನ್ನು ಮುರಿದು ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು.

ನಂತರ ಅವಳನ್ನು ಏಕಾಂತ ಬಂಧನದಲ್ಲಿ ಇಟ್ಟರೂ ಯಾವುದೂ ಹೊರಬರಲಿಲ್ಲ. ಕೊನೆಗೆ ಅವಳನ್ನು ಸರಪಳಿಗಳಿಂದ ಕಟ್ಟಿ ಜರ್ಮನಿಯ ಕಠಿಣ Pforzheim ಕಾರಾಗೃಹಕ್ಕೆ ಕರೆದೊಯ್ದು ಅಮಾನವೀಯವಾಗಿ ಹಿಂಸೆ ನೀಡಿದರು. ಇದು ನವೆಂಬರ್ 1943. ಹತ್ತು ತಿಂಗಳುಗಳ ಕಾಲ ನಡೆದ ಹಿಂಸೆಯಲ್ಲಿಯೂ ಅವಳಿಂದ ಯಾವುದೇ ರಹಸ್ಯ ಬಯಲಾಗಲಿಲ್ಲ.
ಕೊನೆಗೆ ನೂರ್ ಮತ್ತು ಇನ್ನೂ ನಾಲ್ಕು ಬಂಧಿಗಳನ್ನು Dachau Concentration Camp ಗೆ ಕಳುಹಿಸಿ 13 ಸೆಪ್ಟೆಂಬರ್ 1944ರಂದು ಗುಂಡಿಟ್ಟು ಹತ್ಯೆಗೊಳಗಾದರು (ಇಲ್ಲಿ ಲಕ್ಷಾಂತರ ಯಹೂದಿಗಳನ್ನು ಗ್ಯಾಸ್ಚೇಂಬರ್‌ಗಳಲ್ಲಿ ಹತ್ಯೆ ಮಾಡಲಾಗಿತ್ತು).

ನೂರ್‌ನ ಕೊನೆಯ ಮಾತು ಅವಳ ತುಟಿಗಳಿಂದ ಹೊರಬಂದದ್ದು—“LIBERTÉ”, ಅಂದರೆ ಸ್ವಾತಂತ್ರ್ಯ. ಕೇವಲ 30 ವರ್ಷದ ಈ ಧೈರ್ಯಶಾಲಿ ಮಹಿಳೆ ತನ್ನ ಪ್ರಾಣವನ್ನು ಈ ದೇಶಕ್ಕೆ ಅರ್ಪಿಸಿದಳು.
ಮಹಾಯುದ್ಧ ಮುಗಿದ ನಂತರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಹೊರಡುವ ಯೋಚನೆ ಅವಳಿಗಿತ್ತು. WAAF ಸೇರಿದ್ದಾಗ ನೂರ್ ಇದನ್ನು ಕೆಲವರ ಮುಂದೆ ಹೇಳಿದ್ದಾಳೆ ಎಂಬುದು ತಿಳಿದುಬರುತ್ತದೆ.

Dachau ನಲ್ಲಿ ಕೊಲೆಯಾದವರ ಅಂತ್ಯಕ್ರಿಯೆ ಯಥೋಚಿತ ಗೌರವದಿಂದ ನಡೆಯುತ್ತಿರಲಿಲ್ಲ; ಇದು Gestapo ಯ ಅಮಾನವೀಯ ವರ್ತನೆಯ ಮತ್ತೊಂದು ಉದಾಹರಣೆ. ಹೀಗೆ ಮೃತರಾದವರ ಸಂಖ್ಯೆ ಅನೇಕ. ಬಹಳ ವರ್ಷಗಳ ನಂತರ ನೂರ್‌ನ ಕೊನೆಯ ದಿನಗಳ ವಿವರಗಳು National Archives ನಲ್ಲಿರುವ ಐತಿಹಾಸಿಕ ದಾಖಲೆಗಳಿಂದ ಬೆಳಕಿಗೆ ಬಂದವು.

ಭಾರತದ ಪತ್ರಕರ್ತೆಯಾದ ಶ್ರೀಮತಿ ಶ್ರಭಾನಿ ಬಸು ಅವರ ಸಂಶೋಧನೆಯಿಂದ ನೂರ್ ಕುರಿತ ಹೆಚ್ಚಿನ ವಿಷಯಗಳು ಬಹಿರಂಗವಾದವು. ನಂತರ “Spy Princess: The Life of Noor Khan” ಎಂಬ ಪುಸ್ತಕ ಪ್ರಕಟವಾಯಿತು.

ಮರಣೋತ್ತರ ಗೌರವಗಳು

ಯುದ್ಧದಲ್ಲಿ ಮೃತರಾದವರ ಸ್ಮಾರಕ Runnymede ನಲ್ಲಿ ಇದೆ; ಅಲ್ಲಿ ನೂರ್ ಹೆಸರನ್ನು ಕಾಣಬಹುದು. ಲಂಡನ್‌ನ ಅನೇಕ ಸ್ಥಳಗಳಲ್ಲಿ ನೂರ್ ಸ್ಮಾರಕಗಳಿವೆ ಮತ್ತು ಅವಳಿಗೆ ಹಲವಾರು ಮರಣೋತ್ತರ ಪ್ರಶಸ್ತಿಗಳು ದೊರೆತಿವೆ. ಮುಖ್ಯವಾದವುಗಳು George Cross ಹಾಗೂ ಫ್ರಾನ್ಸ್ ದೇಶದ Croix de Guerre.
08-11-2012ರಂದು ಅವಳ ಕಂಚಿನ ಪ್ರತಿಮೆಯನ್ನು Bloomsbury ಯ Gordon Square ನಲ್ಲಿ ಅನಾವರಣ ಮಾಡಲಾಯಿತು. ನೂರ್ ವಾಸವಾಗಿದ್ದ Taviton Street ಮನೆಯ ಮುಂದೆ 2020ರಲ್ಲಿ
English Heritage ಸಂಸ್ಥೆ Blue Plaque ಅನ್ನು ಅನಾವರಣ ಮಾಡಿತು. 25-03-2014ರಂದು ನೂರ್ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು.

2019ರ ಚಲನಚಿತ್ರ A Call to Spy ಯಲ್ಲಿ ರಾಧಿಕಾ ಆಪ್ಟೆ ನೂರ್ ಪಾತ್ರದಲ್ಲಿ ನಟಿಸಿದ್ದಾರೆ.
The Independent ಪತ್ರಿಕೆಯಲ್ಲಿ ನೂರ್ ಬಗ್ಗೆ ಹೀಗೆ ಬರೆಯಲಾಗಿದೆ:
She died with “freedom” on her lips. It was hers. And it was ours as well.

— ರಾಮಮೂರ್ತಿ
ಕಾಂಗಲ್ ಟನ್, ಚೆಶೈರ್

Acknowledgements

Images from Google

The Princess who became a Spy: Independent Fed 2016  National Archives National Archives