ಕೈ ಹಿಡಿದು ನಡೆಸಿದ ಗುರುವಿನ ಕುರಿತು..

ಎಲ್ಲರಿಗೂ ನಮಸ್ಕಾರ,
ನಾನು ಇಂದು ಬರೆಯುತ್ತಿರುವುದು, ನನ್ನ ಪ್ರೀತಿಯ ಗುರುಗಳಾದ ಡಾ. ಶಾಲಿನಿ ರಘುನಾಥ್ ಅವರ ಕುರಿತು. ಡಾ. ಶಾಲಿನಿ ರಘುನಾಥ್ ಅವರು
ನಮ್ಮ ಕನ್ನಡ ನಾಡಿನ ಹೆಸರಾಂತ ಜಾನಪದ ವಿದ್ವಾಂಸರು. ಭಾಷಾ ವಿಜ್ಞಾನದಲ್ಲಿ ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.
ಜಾನಪದ ಸಂಶೋಧನೆ ಮತ್ತು ಸಂಗ್ರಹಕಾರ್ಯದಲ್ಲೂ ಅವರು ತಮ್ಮ ವಿಶೇಷ ಛಾಪು ಮೂಡಿಸಿದ್ದಾರೆ. ತಮ್ಮ ಉದ್ಯೋಗವನ್ನು ತಪಸ್ಸಿನಂತೆ
ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನದ ರುಚಿ ಹತ್ತಿಸಿದವರು. ಕಲಿತ ವಿದ್ಯೆಯನ್ನು ಬದುಕಿಗೆ ಅಳವಡಿಸಿಕೊಂಡು ನಿರಂತರವಾಗಿ ಚಿಂತನೆ ಮಾಡುವ ಹಾದಿಯಲ್ಲಿ ನನ್ನನು ಕೈಹಿಡಿದು ನಡೆಸಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ವಿದ್ಯಾರ್ಥಿಯಾಗಿ ನಾನು
ಕಳೆದ ಎರಡು ವರ್ಷಗಳು ಆ ನಂತರದ ಈ 14 ವರ್ಷಗಳೂ ನನ್ನನು ಅದೇ ಕಲಿಕೆಯ ಹಾದಿಯಲ್ಲಿಟ್ಟಿವೆ. ಅಂತಹ ಗುರುವಿನ ಜೊತೆಗೆ ನನ್ನ ಒಡನಾಟದ ಕುರಿತು ನನ್ನ ಈ ಲೇಖನ.
- ಅಮಿತಾ ರವಿಕಿರಣ್
ಚಿತ್ರಕೃಪೆ; ಗೂಗಲ್
ಪದವಿಯು ಮುಗಿದು ನಾಲ್ಕು ವರ್ಷಗಳ ಧೀರ್ಘ ಅಂತರದ ನಂತರ ಮತ್ತೆ ಕಾಲೇಜ್ ಸೇರಿಕೊಳ್ಳುವ ಸುಯೋಗ ಬಂದಿತ್ತು ಕಲಿಯಬೇಕೆಂಬ ಆಸೆ
ಇತ್ತಾದರೂ ಅದನ್ನು ಆಚರಣೆಗೆ ಹೇಗೆ ತರುವುದು ಎಂಬುದು ತಿಳಿದಿರಲಿಲ್ಲ. ಪದವಿ ಪಡೆದಿದ್ದು ಸಂಗೀತದಲ್ಲಿ ಆದರೆ ಸ್ನಾತಕೋತ್ತರ
ಅಧ್ಯಯನವನ್ನು ಸಂಗೀತದಲ್ಲೇ ಮುಂದುವರಿಸುವ ಮನಸ್ಸಿರಲಿಲ್ಲ ಸಂಗೀತ ಬಿಡುವ ಮನಸ್ಸು ಇರಲಿಲ್ಲ. ಈ ನಡುವೆ ಅತಿಯಾಗಿ ನನ್ನ ಮನಸನ್ನ
ಆವರಿಸಿದ್ದ ವಿಷಯ ಜಾನಪದ. ಆಗ ನನಗೆ ಜನಪದ ಜಾನಪದ ದ ನಡುವಿನ ವ್ಯತ್ಯಾಸವು ತಿಳಿದಿರಲಿಲ್ಲ.
ನನ್ನ ದನಿ ಕೇಳಿದ ಹಲವು ಮಂದಿ ಜನಪದ ಸಂಗೀತವನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳುತ್ತಿದ್ದರು ಮತ್ತು ಯಾವ
ಕಾರ್ಯಕ್ರಮಕ್ಕೆ ಹೋದರೂ ಜಾನಪದ ಗೀತೆಗಳನ್ನು ಹಾಡು ಎಂಬ ಅಪೇಕ್ಷೆ ಮುಂದಿಡುತ್ತಿದ್ದರು. ಆ ಒಂದು ಹಿನ್ನೆಲೆಯಲ್ಲಿ ಜನಪದ ಸಂಗೀತದ
ಬಗೆಗೆ ಏನಾದರು ಹೆಚ್ಚಿನದ್ದು ಕಲಿಯಬೇಕು ಎಂಬ ಸ್ಪಷ್ಟ ಉದ್ದೇಶದೊಂದಿಗೆ ನಾನು ಜಾನಪದ ಅಧ್ಯಯನ ಪೀಠದ ಹೊಸ್ತಿಲನ್ನು ತುಳಿದಿದ್ದೆ.

ಆ ದಿನ ನಮ್ಮ ಪ್ರವೇಶ ಪ್ರಕ್ರಿಯೆ ಆರಂಭವಾದ ದಿನ. ನಾನು ಮೊದಲ ಬಾರಿ ಶಾಲಿನಿ ಮೇಡಂ ಅವರನ್ನು ನೋಡಿದ್ದು ಹಸಿರು ಕೆಂಪಂಚಿನ
ಧಾರವಾಡ ಸೀರೆಯಲ್ಲಿ ನಗು ಮೊಗದಿಂದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿದ್ದರು. ಅದೆಷ್ಟು ಸರಳತೆಯಿಂದ ಅವರು ನಮ್ಮೊಂದಿಗೆ
ಮಾತನಾಡಿದ್ದರೆಂದರೆ, ಅವರು ಅಧ್ಯಯನ ಪೀಠದ ಅಧ್ಯಕ್ಷೆ ಎಂಬುದು ನನಗೆ ತಿಳಿಯಲೇ ಇಲ್ಲ.
ಅಡ್ಮಿಷನ್ ಆಗಿ ಮನೆಗೆ ಹೋದಾಗ ಅದೇ ತಿಂಗಳ ಕಸ್ತೂರಿ ಮಾಸಪತ್ರಿಕೆಯಲಿ ಭಾಷಾ ಶಾಸ್ತ್ರ ಕುರಿತಾದ ಒಂದು ಲೇಖನದಲ್ಲಿ ಅವರ ಹೆಸರು
ಉಲ್ಲೇಖಿಸಲಾಗಿತ್ತು. ಅವರಲ್ಲಿರುವ ಅಪರೂಪದ ಪುಸ್ತಕ ಸಂಗ್ರಹದ ಬಗ್ಗೆ ಲೇಖಕ ತುಂಬಾ ಚನ್ನಾಗಿ ಬರೆದಿದ್ದರು. ಅವರೇ ಇವರು ಎಂದು
ತಿಳಿದಾಗ ಮನಸ್ಸು ಸಂಭ್ರಮಿಸಿತ್ತು.

ಕಾಲೇಜ್ ಶುರುವಾದ ನಂತರ ನಾವು ಅವರನ್ನು ಭೇಟಿ ಮಾಡಲು ಅವರ ಚೇಂಬರ್ ಗೆ ಹೋದಾಗ ಅವರು ಮಾತನಾಡಿದ ಶೈಲಿ, ಅವರ
ಆತ್ಮೀಯತೆ ನನ್ನ ಶಿಕ್ಷಣ ಮುಂದುವರಿಸುವ ಕುರಿತು ಇದ್ದ ಹಲವು ದುಗುಡ ಕಡಿಮೆ ಮಾಡಿದ್ದವು. ಜೊತೆಗೆ ಅಷ್ಟೇ ಕಳಕಳಿಯಲ್ಲಿ ಹೇಳಿದ್ದರು.
ಜಾನಪದವನ್ನು ಸುಲಭ , ಡಿಗ್ರಿ ಮುಗಿಸಲು ಒಂದು ಸರಳ ವಿಷಯ ಎಂಬ ಭಾವನೆ ಸಾಮಾನ್ಯ. ಮತ್ತು ಅಧ್ಯಯನ ಪೀಠಕ್ಕೆ ಬರುವ ಹಲವರಲ್ಲಿ
ಈ ಆಲೋಚನೆಯೇ ಇರುತ್ತದೆ ಆದರೆ ನೀವು ಅದನ್ನು ನಿಜಕ್ಕೂ ಇಷ್ಟಪಟ್ಟು ಅಭ್ಯ್ಯಸಿಸಿ ಏನಾದರು ಹೊಸ ದಿಶೆಯಲ್ಲಿ ಆಲೋಚಿಸಬೇಕು. ಬರೀ
ಜಾಬ್ ಗಿಟ್ಟಿಸಲು ಒಂದು ಡಿಗ್ರಿ ಅಂದುಕೊಳ್ಳದೆ ಪ್ರೀತಿಯಿಂದ ಅಧ್ಯಯನ ಶುರು ಮಾಡಿ, ಎಲ್ಲಿ ನೋಡಿದರೂ ನಿಮಗೆ ಜನಪದವೇ ಕಾಣಬೇಕು. ಈ
ವಿಷಯವನ್ನು ಮನದಟ್ಟು ಮಾಡಿಕೊಂಡೆ ಕ್ಲಾಸಿಗೆ ಬನ್ನಿ ಮತ್ತು ತರಗತಿಗಳನ್ನು ತಪ್ಪಿಸಬೇಡಿ ಅಂದರು.

ಮೊದಲ ಸೆಮಿಸ್ಟರ್ ನಲ್ಲಿ ಜಗತ್ತಿನ ಜಾನಪದ ಇತಿಹಾಸ ಎಂಬ ವಿಷದೊಂದಿಗೆ ಮೇಡಂ ಮೊದಲಬಾರಿ ನಮ್ಮ ಮುಂದಿದ್ದರು , ಯುರೋಪ್
ಅಮೇರಿಕ ಮತ್ತು ರಷ್ಯ ಭಾರತದ ಜನಪದ ಇತಿಹಾಸವನ್ನು ಹೇಳುವುದರೊಂದಿಗೆ ಇತಿಹಾಸ ಓದುವುದು ನಮ್ಮ ವರ್ತಮಾನಕ್ಕೆ ಹೇಗೆ
ಉಪಯೋಗಕಾರಿ ? ಅನ್ನುವ ವಿಷಯವನ್ನು ಅದೆಷ್ಟೋ ಉದಾಹರಣೆಗಳೊಂದಿಗೆ ವಿವರಿಸಿದ್ದರು ಅದರಲ್ಲೂ ಎಂದೋ ಕಳೆದು ಹೋದ ಫಿನ್ಲ್ಯಾಂಡ್
ನ ಕಲೆವಾಲ್ ಎಂಬುವ ಕಥನಗೀತೆಯನ್ನು ಸಂಪಾದಿಸಿದ ರೀತಿ ಅದು ಅಲ್ಲಿನ ಜನಮಾನಸದ ಮೇಲೆ ಬೀರಿದ ಪರಿಣಾಮ. ಮತ್ತು ಅದೇ
ಕ್ರಮವನ್ನು ಬಳಸಿ ತುಳುನಾಡಿನ ಸಿರಿ ಪಾಡ್ದನಗಳನ್ನು ಸಂಗ್ರಹಿಸಿದ ಕ್ರಮವನ್ನು ಅದರ ಸುತ್ತಲಿನ ವಿಷಯವನ್ನು ಮನಮುಟ್ಟುವಂತೆ
ಅರ್ಥಮಾಡಿಸಿದ್ದರು.

ನಾನು ಎಂ ಎ ಸೇರಿಕೊಂಡ ವರುಷವೇ ಮೊದಲಬಾರಿ ವಿಶ್ವವಿದ್ಯಾಲಯ ಮುಕ್ತ ವಿಷಯೊಂದನ್ನು ಆಯ್ಕೆಮಾಡಿಕೊಳ್ಳುವ ಹೊಸ ವಿಧಾನವನ್ನು
ಪರಿಚಯಿಸಿತ್ತು. ಅದನ್ನು open elective subject ಎಂದು ಕರೆದಿದ್ದರು ನಾವು ಆಯ್ದುಕೊಂಡ ವಿಷಯದ ಜೊತೆಗೆ open elective ವಿಷಯದ
ತರಗತಿಯ ಹಾಜರಿ ಮತ್ತು ಅದರ ಅಂಕಗಳು ಮುಖ್ಯವಾಗಿದ್ದವು. ಆ ಹೊತ್ತಿನಲ್ಲಿ ನನ್ನ ಕರೆದು ಮೇಡಂ ಹೇಳಿದ್ದರು 'ಯಾವ ವಿಷಯ ತಗೋಬೇಕು ಅನ್ನುವುದರ ಬಗ್ಗೆ ನಿಮಗೆ ಪೂರ್ಣ ಸ್ವಾತಂತ್ರವಿದೆ ಆದರೆ ನಿಮಗೊಂದು ಸಲಹೆ ಕೊಡುತ್ತೇನೆ. ಯಾವುದಾದರು ವಿದೇಶಿ
ಭಾಷೆಯನ್ನು ಆಯ್ಕೆಮಾಡಿ. ಅದರಿಂದ ನಿಮ್ಮ ಕಲಿಕೆ ಇನ್ನು ಉತ್ತಮಗೊಳ್ಳುತ್ತದೆ, ಮತ್ತು ಜಾನಪದ ವಿಧ್ಯಾರ್ಥಿಗಳು ಆಂಗ್ಲ ಭಾಷೆ ಮತ್ತು ಇತರ
ಭಾಷೆಗಳನ್ನು ಕಲಿಯಬೇಕು ಅದರಿಂದ ಅಧ್ಯಯನದಲ್ಲಿ ಹೊಸತನ ಕಾಣ ಸಿಗುತ್ತದೆ ಎಂದರು. ಅವರ ಮಾತಿನ ಅರ್ಥ,ದೂರದರ್ಶಿತ್ವ ಆಗ ನನಗೆ ನಿಜಕ್ಕೂ ಅರ್ಥವಾಗಿರಲಿಲ್ಲ. ಆದರೆ ಅವರ ಮಾತನ್ನು ಮೀರದೆ ಅವರ ಸಲಹೆಯಂತೆ ನಾನು ಕ್ರಮವಾಗಿ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಆ ಭಾಷೆಗಳ ಪ್ರಾರಂಭಿಕ ಕಲಿಕೆ ಮಾಡಲು ಸಾಧ್ಯವಾಯಿತು ,

`The dream begins with a teacher who believes in you ,who tugs and pushes and leads you to the next plateau sometimes poking you with a sharp stick' ಅನ್ನುವ ಮಾತು ಅದೆಷ್ಟು ಸತ್ಯ ನನ್ನಲ್ಲಿ ಅವರು ಕನಸುಗಳನ್ನು ಬಿತ್ತುತ್ತಿದ್ದರು ಸ್ನಾತಕೋತ್ತರ ಜಾನಪದ ಪದವಿ ಪಡೆದವರಿಗೆ ಲೆಕ್ಚರರಿಕೆ ಒಂದೇ ಆಯ್ಕೆ ಅಲ್ಲ! ಅದಲ್ಲದೆ ಹಲವಾರು ಕ್ರಿಯಾಶೀಲ ಕ್ಷೇತ್ರಗಳು ಕಾಯುತ್ತಿವೆ. ಆದರೆ ನಾವು ಅದರ ಬಗ್ಗೆ ಧೇನಿಸುತ್ತಿರಬೇಕು. ಸದಾಕಾಲ ಒಂದು ಎಚ್ಚರಿಕೆ ನಮ್ಮಲ್ಲಿರಬೇಕು. ಆ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ? ಯಾಕೆ ಹೀಗಲ್ಲದಿದ್ದರೆ ಹೇಗೆ ಆಗಬಹುದಿತ್ತು? ಅನ್ನುವ ಪ್ರಶ್ನೆಗಳನ್ನು ಪ್ರತಿ ವಿಷಯಕ್ಕೂ ನಮ್ಮನ್ನು ನಾವು ಕೇಳಿಕೊಳ್ಳಬೇಕು ಅದು ನಮ್ಮ ಆಲೋಚನೆಯನ್ನು ಮೊನಚು ಮಾಡುತ್ತದೆ ಎಂಬುದು ವಿದ್ಯಾರ್ಥಿಗಳಿಗೆಲ್ಲರಿಗೂ ಅವರು ಹೇಳುತ್ತಿದ್ದ ಕಿವಿಮಾತು.

ವಿರಾಮವಿರದ ಅವರ ದಿನಚರಿಯಲ್ಲೂ ಕ್ಲಾಸ್ ಗೆ ಒಮ್ಮೆಲೇ ಬಂದು ಯಾವುದಾದರೂ ವಿಷಯಗಳನ್ನು ಕೊಟ್ಟು ಅದರ ಬಗ್ಗೆ ಬರೆದು ತರಲು
ಹೇಳುತ್ತಿದ್ದರು ಮತ್ತು ಪ್ರತಿ ಬರಹವನ್ನು ಕೂಲಂಕಷವಾಗಿ ಪರಿಶಿಲಿಸಿ ತಿದ್ದುಪಡಿ ಹೇಳುತಿದ್ದರು.
ಆ ನಿಟ್ಟಿನಲ್ಲಿ ನಾನು ಹಲವು ಚಿಕ್ಕಪುಟ್ಟ ಲೇಖನ ಬರೆಯುತ್ತಿದ್ದೆ. ಅದರಲ್ಲಿ ಮುಖ್ಯವಾದದ್ದು ಚಿತ್ರರಂಗ ಮತ್ತು ಜಾನಪದ ಎಂಬ ವಿಷಯದ ಬಗ್ಗೆ
ವಿವರವಾಗಿ ಬರೆದ ನಿಬಂಧ. ಅದನ್ನು ನೆನೆಸಿಕೊಂಡರೆ ಈಗಲೂ ನನಗೆ ನಗು ಬರುತ್ತದೆ. ಸಾಕಷ್ಟು ವಿಷಯಗಳನ್ನು ಇಂಟರ್ನೆಟ್ ನಿಂದ
ಸಂಗ್ರಹಿಸಿದ್ದೆ. ಮೇಡಂ ಅವರಿಂದ ಸಾಕಷ್ಟು ಮೆಚ್ಚುಗೆಯನ್ನೂ ನಿರೀಕ್ಷಿಸಿದ್ದೆ. ಆದರೆ ಅವರು ಮಾತ್ರ 'ಸಂಗ್ರಹ ಚನ್ನಾಗಿದೆ ತುಂಬಾ ವಿಷಯ ಹುಡುಕಿದೀರಿ ಅನ್ನೋದನ್ನು ಬಿಟ್ಟು ಬೇರೇನೂ ಹೇಳಲೇ ಇಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು.
ಕೆಲವು ವಾರಗಳ ನಂತರ ನನ್ನ ಕರೆದು ಹೇಳಿದರು ‘ನೀವು ತುಂಬಾ ಶ್ರಮ ಪಡ್ತೀರಿ,ವಿಷಯ ಸಂಗ್ರಹಿಸ್ತೀರಿ ಬರೀತೀರಿ ಕೂಡ ಆದರೆ ಅದನ್ನು
ವ್ಯವಸ್ತಿತವಾಗಿ ಜೋಡಿಸುವುದರಲ್ಲಿ ಮುಗ್ಗರಿಸುತ್ತೀರಿ ಇದೊಂಥರ ಇಟ್ಟಿಗೆ ಸಿಮೆಂಟ್ ಕಲ್ಲು ಎಲ್ಲ ವನ್ನು ತಂದು ರಾಶಿ ಹಾಕಿ ಒಮ್ಮೆಲೇ ಮನೆ
ಕಟ್ಟುವ ಹುರುಪಿನಂತೆ. ಆದರೆ ಮನೆ ಕಟ್ಟಲು ಒಂದು ಕ್ರಮವಿದೆ ಅದನ್ನು ನೀವು ಕಲಿಬೇಕು ಅದಕ್ಕೆ ನೀವು ಬಹಳ ಓದಬೇಕು ಅಂದು ತಮ್ಮಲ್ಲಿದ್ದ
ಹಲವಾರು ಪುಸ್ತಕಗಳನ್ನು ನನಗೆ ಓದಲು ಕೊಟ್ಟಿದ್ದರು. ಬರವಣಿಗೆಯ ಮುನ್ನ ಸಂಗ್ರಹಿಸಿದ ವಿಷಯವನ್ನು ಹೇಗೆ ವಿಂಗಡಿಸುವುದು. ಕ್ರಮವಾಗಿ
ಜೋಡಿಸುವುದು ಮತ್ತು ನಿರೂಪಿಸುವುದು ಹೇಗೆ ಅನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದರು.

'A teacher is who gives you something to take home to Think about ,besides homework'
ಅವರು ಕಲಿಸುತ್ತಿದ್ದುದೆ ಹಾಗೆ, ಪಾಠಗಳು ನಿಮಿತ್ಯ ಮಾತ್ರ ಆದರೆ ನಿಜವಾದ ಪಾಠಶಾಲೆ ಸಮಾಜ, ಜನಪದವನ್ನು ನಾಲ್ಕು ಗೋಡೆಗಳ ಮಧ್ಯೆ
ಕುಳಿತು ಕಲಿಯಾಲಾಗದು, ನಿಮಗೆ ಅದರ ಗುಂಗು ಹಿಡಿಯಬೇಕು ಅನ್ನುತ್ತಿದ್ದರು ಮತ್ತು ಅದು ನನಗೆ ಹಿಡಿದೇ ಬಿಟ್ಟಿತು. ಕಾಲೇಜಿಗೆ ಹೋಗಲು
ನಾನು ದಿನ ಮುಂಡಗೊಡಿನಿಂದ ಧಾರವಾಡಕ್ಕೆ, ಮತ್ತೆ ವಾಪಸ್ ಮನೆಗೆ ಬರಲು ಬಸ್ನಲ್ಲಿ 150ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಆ
ಪಯಣದಲ್ಲಿ ದಿನದ ನಾಲ್ಕು ಘಂಟೆಗಳು ವ್ಯಯವಾಗುತಿದ್ದವು, ಅಷ್ಟು ಸಮಯ ನನ್ನ ಆಲೋಚನೆ ಓದು ಬರೀ ಜನಪದವೇ. ಕುರಿಮಂದೆಯ
ಹೆಣ್ಣುಮಗಳ ಕಿವಿಯಲ್ಲಿಯುವ ಬುಗುಡಿ ಯಿಂದ ಅದ್ಯಾರೊ ಹಿಡಿದು ಬಂದ ಕಸೂತಿ ಚೀಲದವರೆಗೆ. ಆಟೋ ರಿಕ್ಷಾ ಹಿಂಬದಿಯ ತಮಾಷೆ
ಬರಹಗಳಿಂದ ಹಿಡಿದು, ಜಗಳದಲ್ಲಿ ಬಳಸಲ್ಪಡುವ ಬೈಗುಳದಲ್ಲಿಯೂ, ಎಲ್ಲಿ ನೋಡಿದರಲ್ಲಿ ಜನಪದವೇ ಕಾಣುತಿತ್ತು.

ಮೇಡಂ ಅವರು ನನ್ನ ಮೇಲೆ ಅಷ್ಟು ಪರಿಣಾಮ ಬೀರಿದ್ದರು ಮಾತಿನಲ್ಲಿ, ಹಾಡಿನಲ್ಲಿ,ಕುಣಿತದಲ್ಲಿ ,ನಡೆಯಲ್ಲಿ ,ಹಿತ್ತಲ ಕಸದಲ್ಲೂ ಜನಪದೀಯ
ಅಂಶಗಳು ಕುಣಿದಾಡುತ್ತಿದ್ದವು. ಆಗ ನನ್ನ ಮನಸು ಬುದ್ದಿ ಅನುಭವಿಸಿದ ಆ ಖುಷಿ, ಆತ್ಮ ಸಂತೃಪ್ತಿಯನ್ನು ಬರಹದಲ್ಲಿ ಹಿಡಿದಿದಲಾಗದು. ಇಷ್ಟು
ವರ್ಷ ನಾನು ಹುಡುಕುತ್ತಿದ್ದುದು ಇದೆ ಏನೋ ಅನ್ನ್ನಿಸುವುದಕ್ಕೆ ಶುರುವಾಗಿದ್ದು ನನ್ನ ಎಲ್ಲ ಚಡಪಡಿಕೆಗಳಿಗೆ ಉತ್ತರ ಜಾನಪದ ಮಾತ್ರವೇ
ನೀಡಬಲ್ಲದು ಎಂಬ ಸತ್ಯ ಅರಿವಾಗಿತ್ತು.

ಇದೆ ಸಮಯದಲ್ಲಿ ಮೇಡಂ ಅವರ ಮತ್ತೊಂದು ಯೋಜನೆಯಿಂದ ನಾನು ಜಾನಪದದ ಮತ್ತೂಂದು ಮಗ್ಗಲು ನೋಡುವಂತಾಯಿತು. ಪ್ರವಾಸೋದ್ಯಮ ಮತ್ತು ಜಾನಪದ ಎಂಬ ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರ, ನನ್ನ ಸ್ನಾತಕೋತ್ತರ ಅಧ್ಯಯನದ ಇನ್ನೊಂದು ತಿರುವು ಅದು.
ಅಲ್ಲಿ ನಾ ತಿಳಿದ ,ನೋಡಿದ ,ಕಲಿತ ವಿಷಯ ಹಲವು ಅಲ್ಲಿಯ ತನಕ ಸಂಗೀತ ಮತ್ತು ಜಾನಪದವನ್ನು ಜೊತೆಮಾಡಿ ಅದನ್ನೇ ನನ್ನ ಮುಖ್ಯ
ಅಧ್ಯಯನದ ವಿಷಯವನ್ನಾಗಿ ಮಾಡಿಕೊಳ್ಳಬೇಕು, ಸಂಶೋಧನೆಗೆ ಅಣಿಯಾಗಬೇಕು ಅಂದುಕೊಂಡ ನನಗೆ ಜನಪದ ವೈದ್ಯದ ಮೇಲೆ ಪ್ರೀತಿ
ಹುಟ್ಟಿತು. ಅದಕ್ಕೆ ಕಾರಣವಾಗಿದ್ದು ಹೊನ್ನಾವರದ ಜನಪದ ತಜ್ಞೆ ಶ್ರೀಮತಿ ಶಾಂತಿ ನಾಯಕ್ .

ಸೆಮಿನಾರ್ ಮುಗಿಸಿ ಬಂದ ದಿನದಿಂದಲೇ ನಾನು ಮೇಡಂ ಅವರ ಬೆನ್ನು ಬಿದ್ದೆ. ಜನಪದ ವೈದ್ಯದ ಕುರಿತು ಅವರಲ್ಲಿದ್ದ ಅಪರೂಪದ ಪುಸ್ತಕಗಳು
,ಲೇಖನಗಳು, ಅವರಿಗೆ ತಿಳಿದಿದ್ದ ಹಲವಾರು ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಚರ್ಚಿಸುತ್ತಿದ್ದರು.ಮತ್ತು ಜನಪದ ವೈದ್ಯದ ಕುರಿತು
ಸಂಶೋಧನೆ ಅಥವಾ ಅಧ್ಯಯನ ಮಾಡುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಅವರು ನನಗೆ ಎಚ್ಚರಿಸಲು ಮರೆಯಲಿಲ್ಲ.
ಅವರ ಕಾರಣದಿಂದಲೇ ನಾನು ಶಾಂತಿ ನಾಯಕ್ ,ಏನ್ ಆರ್ ನಾಯಕ್, ಅರವಿಂದ್ ನಾವಡ, ಅಂಬಳಿಕೆ ಹಿರಿಯಣ್ಣ ,ಮತ್ತು ಜಾನಪದ ಲೋಕದ ಹಲವು ದಿಗ್ಗಜರನ್ನು ಭೇಟಿ ಮಾಡಿದೆ.
ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ ಎಂಬ ವಿಷಯದ ಬಗ್ಗೆ ವಿಚಾರ ಕಮ್ಮಟ ಏರ್ಪಡಿಸಿದಾಗ ಅಲ್ಲಿ ಚರ್ಚಿಸಬೇಕಾದ
ವಿಷಯಗಳನ್ನು ಮೇಡಂ ಅದೆಷ್ಟು ಚನ್ನಾಗಿ ಆಯ್ಕೆ ಮಾಡಿದ್ದಾರೆ ವಾಹ್ ಅನ್ನಿಸುತ್ತಿತ್ತು. ಪ್ರತಿಯೊಂದು ವಿಷಯವು ಅನನ್ಯ. ಟಿ ಎಸ ನಾಗಭರಣ
ಅವರನ್ನು ನೇರ ಸಂವಾದಕ್ಕೆ ಕರೆದು ಅದೆಷ್ಟು ಚಂದದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳ ಮುಂದೆ ಇಟ್ಟಿದ್ದರು ಮತ್ತು ಅದು ಅಷ್ಟೇ
ಉಪಯುಕ್ತವಾಗಿತ್ತು.
ಅಂಥದೇ ಇನ್ನೊಂದು ಅನನ್ಯ ಕಾರ್ಯಕ್ರಮ ಶಿರಸಿಯ ಅಜ್ಜಿಮನೆಯಲ್ಲಿ ನಡೆದ ಸ್ಥಳೀಯ ಪರಂಪರಾಗತ ಜ್ಞಾನ ಮತ್ತು ಆರೋಗ್ಯ. ಇಲ್ಲಿ
ಚರ್ಚಿತವಾದ ವಿಷಯಗಳೂ ಅಷ್ಟೇ ಈಗಲೂ ಹಸಿರು ಹಸಿರು ಕೆಲವೊಮ್ಮೆ ಶಿಬಿರದ ನಡುವೆ ಮೇಡಂ ನಮಗೆ ವಿಷಯ ಸಂಬಂಧಿ ಪ್ರಶ್ನೆ
ಕೇಳುತ್ತಿದ್ದರು, ಮತ್ತು ಸಂಪನ್ಮೂಲ ವ್ಯಕ್ತಿ ಮಾತನಾಡುತ್ತಿರುವ ವಿಷಯಕ್ಕೆ ನಾವು ಎಷ್ಟರ ಮಟ್ಟಿಗೆ ಕನೆಕ್ಟ್ ಆಗಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ
ಪರಿಶೀಲಿಸುತ್ತಿದ್ದರು , ಈ ದಿಸೆಯಲ್ಲಿ ನಾವು ಭೇಟಿಯಾದದ್ದು ಅಪರೂಪದ ವಿಜ್ಞಾನಿ ಪಲ್ಲತಡ್ಕ ಕೇಶವ ಭಟ್ಟ್ ಅವರನ್ನ , ಈ ರೀತಿಯ ಅನನ್ಯ
ವಿಚಾರ ಮತ್ತು ದೃಷ್ಟಿಕೋನ ಮತ್ತು ಸರಳತೆ ಮೇಡಂ ಅವರನ್ನು ಮತ್ತೂ ಹೆಚ್ಚು ಗೌರವಿಸುವಂತೆ ಮಾಡುತ್ತಿದ್ದವು ,

ಆ ವರೆಗೆ ಮೇಡಂ ಅಂದರೆ ನನಗೆ ನನ್ನ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆ ರೂಪದಲ್ಲೇ ಕಂಡಿದ್ದರು. ಅವರು ಯಾವತ್ತು ಸಿಟ್ಟು ಮಾಡಿದ್ದು,
ಜೋರಾಗಿ ಮಾತಾಡಿದ್ದು,ತಾಳ್ಮೆ ಕಳೆದುಕೊಂಡಿದ್ದು ನಾನು ನೋಡೇ ಇಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಅವರೊಂದು ಹೊಸ ವಿಚಾರ ಹುಡುಕಿ
ಅದನ್ನು ಹಿಂಬಾಲಿಸಲು ಹೊರಡುತ್ತಿರುವಂತೆ ನನಗೆ ಭಾಸವಾಗುತಿತ್ತು.
ಅದು ನನ್ನ ಕೊನೆ ಸೆಮಿಸ್ಟರ್. ನಾವು ಕ್ಷೇತ್ರ ಕಾರ್ಯ ಮಾಡಿ ನಿಬಂಧವಿ ಬರೆದು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಬೇಕಿತ್ತು. ನಾನು ಆಯ್ದು
ಕೊಂಡಿದ್ದು ಬಾಣಂತಿ, ನವಜಾತ ಶಿಶುವಿನ ಆರೈಕೆ ಮತ್ತು ಜನಪದ ವೈದ್ಯ ಪದ್ಧತಿ. ಆಗ ಮಾತ್ರ ಮೇಡಂ ಅವರ ಇನ್ನೊಂದು ರೂಪ ನೋಡಿದ್ದು.
ನಾನು ಅತಿ ಭಾವುಕಿ, ಸಿನಿಮ ಕಾದಂಬರಿ ಭಾವಗೀತೆ,ಗಝಲ್ ಹುಚ್ಚು ಇದ್ದಿದ್ದಕ್ಕೋ ಏನೋ ನನ್ನ ಬರವಣಿಗೆ ಒಂದು ವಿಚಿತ್ರ ಧಾಟಿಯಲ್ಲಿ
ಇರುತಿತ್ತು.

ರಜಾ ಅರ್ಜಿಯನ್ನೂ ಕವಿತೆಯಂತೆ ಬರೆಯುತ್ತಿದ್ದೆ. ನಿಬಂದ ಬರೆಯುವಾಗ ನನ್ನ ಅದೇ ಬರವಣಿಗೆ ಮುಂದುವರಿಯಿತು , ಮೇಡಂ ನಾಲ್ಕು ಬಾರಿ
ನನ್ನ ಕರಡು ಪ್ರತಿಯನ್ನು ಸರಿ ಇಲ್ಲ ಎಂದು ಮರಳಿಸಿ ಬಿಟ್ಟರು. ಅದು ಕೊನೆ ಹಂತ ನನ್ನಲ್ಲಿ ಸಾಕಷ್ಟು ಮಾಹಿತಿ ಇತ್ತು ಬರವಣಿಗೆ ಸಂಪೂರ್ಣ
ಗೊಂಡಿತ್ತು. ಯಾಕೆ ?ಏನು ತಪ್ಪು ಎಂಬುದು ಅರಿವಿಗೆ ಬರಲಿಲ್ಲ ,ಮತ್ತೆ ಕೊಟ್ಟೆ ಆಗ ಅಂದರು; ನಿಮ್ಮ ತಪ್ಪು ನಿಮಗೆ ಗೊತ್ತಾಗುತ್ತೆ ಅಂದುಕೊಂಡೆ.
ನೀವು ಅದನ್ನು ಗಮನಿಸಿಯೇ ಇಲ್ಲ ಆದಷ್ಟು ಸರಳ ವಾಕ್ಯಗಳನ್ನು ಬಳಸಿ. ನೇರ ವಿಷಯಗಳನ್ನು ಹೇಳುವಾಗ ಅಷ್ಟೇ ದೃಡವಾಗಿ ನೇರವಾಗಿ
ಹೇಳಬೇಕು ಮತ್ತು ಅದಕ್ಕೊಂದು ಚೌಕಟ್ಟಿರಬೇಕು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬರೆಯೋದಲ್ಲ ಅಂದು ಮತ್ತೆ ವಾಪಸ್ ಮಾಡಿದ್ದರು.
ಬಸ್ಸಿನಲ್ಲಿ ಕುಳಿತು ಮತ್ತೆ ಹಾಳೆಗಳನ್ನು ತಿರುವಿದೆ ಪ್ರತಿ ಪುಟದಲ್ಲೂ ಅವರ ಅಕ್ಷರಗಳು. ಅಷ್ಟೂ ಪುಟಗಳನ್ನು ಓದಿ ಮಾರ್ಕ್ ಮಾಡಿ ಕೊಟ್ಟಿದ್ದರು.
ಅದನ್ನು ಹೇಗೆ ಬರೆಯಬಹುದು ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದರು ಆಗಲೇ ಅನ್ನಿಸಿದ್ದು, ಕಾವ್ಯಾತ್ಮಕ ಬರವಣಿಗೆ ಮತ್ತು ನೇರ ಬರವಣಿಗೆ
ಅದೆಷ್ಟು ದೂರ ದೂರ. ಸ್ವಲ್ಪ ಆಯ ತಪ್ಪಿದರು ಅರ್ಥ ಅಪಾರ್ಥ ಆಗುವ ಸಂಭವ ಇರುತ್ತದೆ ಅಧ್ಯಯನ ಪ್ರಬಂಧ ಲಲಿತ ಪ್ರಬಂಧವಾಗುವ
ಸಾಧ್ಯತೆ ಇರುತ್ತದೆ. ಅದನ್ನು ಮೇಡಂ ನನಗೆ ಅದೆಷ್ಟು ಚನ್ನಾಗಿ ಅರ್ಥ ಮಾಡಿಸಿದ್ದರು.

ಜಾನಪದ ದ ಬಗ್ಗೆ ಮಾತಾಡುವ ಹಲವರು ಜನಪದ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಜನಪದ
ಉಳಿಸಿ ಬೆಳೆಸಿ ಅನ್ನುತ್ತಾ ಭಾಷಣ ಮಾಡಿ ಹಾರ ತುರಾಯಿ ಹಾಕಿಸಿಕೊಂಡು, ಕಾರಿಡಾರಿನಲ್ಲಿ ನಡೆಯುವಾಗ ಅದೇ ಮಗ್ಗುಲಲ್ಲಿ ಕುಳಿತ ಜನಪದ
ಕಲಾವಿದರಿಗೆ ನಕ್ಕು ನಮಸ್ಕರಿಸಿದ ದೊಡ್ಡ ವಿದ್ವಾಂಸರೂ ಈ ಕ್ಷೇತ್ರದಲ್ಲಿ ಇದ್ದಾರೆ.
ಅಂಥಹ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾಲಯಕ್ಕೆ ಜನಪದ ಕಲೆಗಳು ಪ್ರಾಯೋಗಿಕ ಪರೀಕ್ಷೆಗಳಿಗೆಂದು ಹಾಲಕ್ಕಿ ಸುಗ್ಗಿ, ಕೋಲಾಟ ಕಲಿಸಲು ಬಂದ ಕಲಾವಿದರನ್ನು ಅದೆಷ್ಟು ಆತ್ಮೀಯವಾಗಿ ಮಾತನಾಡಿಸಿ, ಅವರ ಯೋಗಕ್ಷೇಮ ವಿಚಾರಿಸಿ ,ಅವರೊಂದಿಗೆ ಅದೆಷ್ಟು ಸರಳತೆಯಿಂದ
ಸಜ್ಜನಿಕೆಯಿಂದ ವರ್ತಿಸುವ ಮೇಡಂ.ಅವರ ಊಟ ತಿಂಡಿ ವಸತಿ ಬಗೆಗೆ ಮನೆ ಮಂದಿಯ ಬಗ್ಗೆ ವಹಿಸುವ ಕಾಳಜಿಯನ್ನೇ ತೋರಿಸುವುದು
ನೋಡಿದಾಗ ಅವರು ತುಂಬಿದ ಕೊಡ ಅನಿಸಿದ್ದು ಅದೆಷ್ಟು ಸಲವೂ.

ಹಾಗೆ ಒಂದು ದಿನ ಅವರ ಆಫೀಸ್ ನಲ್ಲಿ ನಾನು ಯಾವುದೊ ವಿಷಯ ಅವರೊಂದಿಗೆ ಚರ್ಚಿಸುತ್ತಿದ್ದಾಗ ,ಆಗಷ್ಟೇ ಪಿ ಹೆಚ್ ಡಿ ಸೇರಿಕೊಂಡ ನನ್ನ
ಸಿನಿಯರ್ ಒಬ್ಬರಿಗೆ ಲಕೊಟೆ ಒಂದನ್ನು ಕೊಟ್ಟರು. ನಿಮ್ಮ ಸ್ಕಾಲರ್ಷಿಪ್ ಬರೋತನಕ ಸುಮಾರು ಕೆಲಸ ಮಾಡಲಿಕ್ಕೆ ಇರುತ್ತದೆ, ಮತ್ತು ಖರ್ಚು
ಆಗುತ್ತೆ ಇದು ನನ್ನ ಪುಟ್ಟ ಸಹಾಯ ನಿಮಗೆ.ಅಧ್ಯಯನ ಚೆನ್ನಾಗಿ ನಡೀಲಿ ಎಂದು ಆಶೀರ್ವದಿಸಿದರು. ಆ ವಿದ್ಯಾರ್ಥಿ ಹೊರಗೆ ಹೋದ ನಂತರ
ಪ್ರತಿ ವರ್ಷ ಯೋಗ್ಯ ಅನಿಸಿದ ಒಬ್ಬ ವಿದ್ಯಾರ್ಥಿಗೆ ನನ್ನ ಪತಿಯ ಸ್ಮರಣಾರ್ಥ ಒಂದಷ್ಟು ಸಹಾಯ ಮಾಡ್ತೇನೆ ನನ್ನ ಮನಸಿನ ನೆಮ್ಮದಿಗೆ ಅಂದರು ಆ ದಿನ ಅವರ ಮತ್ತೊಂದು ಅನನ್ಯತೆ ನನಗೆ ಕಾಣಿಸಿತ್ತು.

ನನಗನಿಸಿದ ಪ್ರಕಾರ ಅವರ ಸೃಜನ ಶೀಲತೆ ,ಮತ್ತು ನವೀನ ಆಲೋಚನೆಗಳು ಅವುಗಳನ್ನು ಕಾರ್ಯಗತ ಮಾಡುವಲ್ಲಿ ಹಲವಾರು ಬಾರಿ
ಪೂರಕ ವಾತಾವರಣ ಇರುತ್ತಿರಲಿಲ್ಲ ಸಿಬ್ಬಂದಿ ಸಹಕಾರ ,ಕೆಲವೊಮ್ಮೆ ವಿದ್ಯಾರ್ಥಿಗಳ ನಿರಾಸಕ್ತಿ ಅವರಿಗೆ ಬೇಸರ ತರುತ್ತಿತ್ತು, ಆದರೆ ಎಂದು ಆ
ಕಾರಣ ಕೊಟ್ಟು ಯಾವುದೇ ಯೋಜನೆಯನ್ನು ಅವರು ಕೈಬಿಟ್ಟಿಲ್ಲ. ಜನಪದ ಸಂಗ್ರಹಾಲಯ ಮತ್ತು ಅದಕ್ಕೆ ವಸ್ತುಗಳನ್ನು ಪೇರಿಸುವ ಕೆಲಸದಲ್ಲಿ
ಅವರು ತೋರಿಸುತ್ತಿದ್ದ ಆಸಕ್ತಿ ಪುಟ್ಟ ಮಗು ಹೊಸ ವಿಷಯಕ್ಕೆ ತೋರುವ ಉತ್ಸಾಹದಂಥದ್ದು.

ಒಮ್ಮೆ ನನಗೆ ರಂಗಗೀತೆ ಗಳ ಬಗ್ಗೆ ಸ್ವಲ್ಪ ವಿವರಣೆಗಳು ಬೇಕಿದ್ದವು. ನಾನು ಅವರನ್ನು ಆ ಬಗ್ಗೆ ಕೇಳಿದ್ದೆ ಮತ್ತು ಅದನ್ನು ಮರೆತು ಬಿಟ್ಟಿದ್ದೆ. ಆದರೆ
ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕ ಹುಡುಕಿ ಮತ್ತೆ ಸಂಜೆ ನನಗೆ ಫೋನ್ ಮಾಡಿದ್ದರು ನಾಳೆ ಪುಸ್ತಕ ತಗೊಂಡ್ ಹೋಗು ಅದು ಸಿಕ್ಕಿದೆ ಎಂದಾಗ ಅವರು ಆಸಕ್ತ ವಿದ್ಯಾರ್ಥಿಗಳಿಗಾಗಿ ಕೊಡುತ್ತಿದ್ದ ಸಮಯ ಮತ್ತು ಪ್ರಾಮುಖ್ಯತೆ ಅರಿವಿಗೆ ಬಂದಿತ್ತು.
ಕಲಿಯುವ ಮನಸ್ಸಿರುವ ವಿದ್ಯಾರ್ಥಿಗೆ ಇಂಥ ಒಬ್ಬ ಗುರು ದಕ್ಕಿದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲ ವಾದಂತೆಯೇ. ಕಲಿಯುವ ಪಾಠ
ಪಾಠವಾಗಿರದೆ ಅದು ಬದುಕಿಗೆ ಇಂಬುಕೊಡುವ ವಿದ್ಯೆಯಾಗಿತ್ತದೆ.

ನನ್ನ ನೆರವೇರದ ಆಸೆ ಎಂದರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಬೇಕು ಎಂಬುದು. ಸ್ನಾತಕೋತ್ತರ ಅಧ್ಯಯನ ಮುಗಿದ ನಂತರ ನಾನು ಬೆಲ್ಫಾಸ್ಟ್ ಬಂದು ಸೇರಿದೆ. ವಿಶ್ವವಿದ್ಯಾಲಯದ ಕೆಲವು ನಿಯಮಗಳು ಕಲಿಯುವ ತುಡಿತವಿರುವ ವಿದ್ಯಾರ್ಥಿಗಳಿಗೆ ಬೇಲಿ ಹಾಕಿಬಿಡುತ್ತವೆ.
ಆದರೂ ಇಂದಿಗೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವೆ. ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ಜನಪದ ನನ್ನ ಕೈಹಿಡಿದು
ಮುನ್ನಡೆಸಿದೆ ಈಗಲೂ ನಾ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರೆ ಅದೇ ಆತ್ಮೀಯತೆ ಅಷ್ಟೇ ಆಪ್ಯಾಯತೆ ಅಕ್ಕರೆ. “ಶಾನಭಾಗ್ ಊರಿಗೆ
ಬಂದೀರ?” ಎನ್ನುತ್ತಲೇ ಮಾತು ಶುರುಮಾಡಿ ಅದೆಷ್ಟು ವಿಷಯ, ಉಲ್ಲೇಖ, ನೆನಪು ಹಂಚಿಕೊಳ್ತಾರೆ. ನನ್ನ ಬಾಲಿಶ ಪ್ರಶ್ನೆಗಳಿಗೆ ತಾಳ್ಮೆಯಿಂದ
ಉತ್ತರಿಸುತ್ತಾರೆ , ಅವರ ಶಿಷ್ಯೆ ಅವರ ವಿದ್ಯಾರ್ಥಿನಿ ಅನ್ನಲು ನನಗೆ ಯಾವತ್ತಿಗೂ ಹೆಮ್ಮೆ.

3 thoughts on “ಕೈ ಹಿಡಿದು ನಡೆಸಿದ ಗುರುವಿನ ಕುರಿತು..

  1. ಅಮಿತಾ ಅವರ ಬರಹಗಳನ್ನು ಓದುವುದೆಂದರೇ ಒಂದು ಹಿಗ್ಗು! ಅವರ ಬರಹದಲ್ಲಿ ಆತ್ಮೀಯತೆ ಎನ್ನುವುದು ಮಂದ್ರವಾಗಿ ಹಿನ್ನೆಲೆಯ ತಂಬೂರಿಯ ತಾನದಂತೆ ಹರಿಯುತ್ತಿರುತ್ತದೆ. ತಮ್ಮ ಗುರುವಿನ ಬಗ್ಗೆ ಬರೆದ ಬರಹದಲ್ಲಿ ಅದು ಒಂದು ಚಿಟಿಕೆ ಜಾಸ್ತಿಯೇ ಇದೆ! ಈ ಲೇಖನದಲ್ಲಿ ಅವರು ಬೇಕೆಂದೇ ಕಾವ್ಯಾತ್ಮಕ ಗುಣಗಳನ್ನು ಕಡಿಮೆ ಮಾಡಿದ್ದಾರೆ ಅನಿಸುತ್ತದೆ. ಜನಪದ ಮತ್ತು ಸಂಗೀತ, ಜೊತೆಗೆ ಫೋಟೋಗ್ರಾಫಿ ಮತೂ ಪೇಂಟಿಂಗ್, ಹೀಗೆ ಹಲವಾರು ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಅಮಿತಾ ಅವರ ಈ ಲೇಖನ ಅನಿವಾಸಿಯಲ್ಲಿ ಮೂಡಿಬಂದಿದ್ದು ಅನಿವಾಸಿಯ ಭಾಗ್ಯ! – ಕೇಶವ

    Like

  2. ನಾನು ಹೇಳಬೇಕೆಂದು ಅಂದು ಕೊಂಡದ್ದನ್ನು ಈಗಾಗಲೇ ಹೇಳಿಯಾಗಿದೆ, ರಾಜಶ್ರೀ ಮತ್ತು ಪ್ರಸಾದವರ quotes ಗೆ ಇನ್ನೊಂದನ್ನು ಜೋಡಿಸುವೆ: Telling is not teaching and told is not taught. ಈ ಸಂದರ್ಭದಲ್ಲಿ ನನ್ನ ನಾಡಗೀರ್ ಮಾಸ್ತರನ್ನು ಉಲ್ಲೇಖಿಸದೆ ಇರಲಾರೆ. ಅವರ ೯೦ನೆಯ ಹುಟ್ಟುಹಬ್ಬದಲ್ಲಿ ಗುರುವಂದನೆಯಲ್ಲಿ ನಾನು ಬರೆದ ಇನ್ನೊಂದು ವಾಕ್ಯವನ್ನು ಅವರು ಮೆಚ್ಚಿದ್ದರು: He continues to educate even when he’s not there. ಈಗ ಅವರಿಲ್ಲ. ಅಮಿತಾ ಅವರೇ, ನಿಮ್ಮ ಶಾಲಿನಿ ಟೀಚರಂತೆ ಅವರನ್ನು ನೆನೆಯದ ದಿನವಿಲ್ಲ. ನಿಮ್ಮದು ಸುಂದರ ವ್ಯಕ್ತಿಚಿತ್ರಣ ಮತ್ತು ಗುರುವಂದನೆ. ಇನ್ನೊಬ್ಬ ಪ್ರಸಿದ್ಧ ಬರಹಗಾರರು ಬರೆದಂತೆ ಮಣ್ಣಿನ ಮುದ್ದೆಯಾಗಿದ್ದ ‘ನನ್ನನ್ನು’ ಕಟೆದ ಶಿಲ್ಪಿ ನೀವು ಅನ್ನುವಂತೆ ನಿಮ್ಮ ಬರಹ, ಕಲಾಬದುಕು, ನಿಮ್ಮ ಜಾನಪದ ಉಸಿರು! ಮುಂದುವರೆಸಿರಿ ಈ ಪಯಣವನ್ನು. ನಿಮ್ಮೊಳಗಿನ ಈ ಸ್ಫೂರ್ತಿ ಹೀಗೆಯೇ ಸ್ಫುರಿಸುತ್ತಿರಲಿ!

    Like

  3. ಅಮಿತ ನಿಮ್ಮ ಬರಹ ಓದುತ್ತಿದಂತೆ ನನಗೆ ಈ ಕೆಳಗಿನ ಸಾಲುಗಳು ನೆನೆಪಿಗೆ ಬಂದವು;
    “A mediocre teacher tells, The good teacher explains, the superior teacher demonstrates, the great teacher inspires”
    ನಿಮ್ಮ ಶಾಲಿನಿ ಮೇಡಂ ಅವರನ್ನು ಕೊನೆಗುಂಪಿಗೆ ಸೇರಿಸಬಹುದು. ನಮ್ಮೆಲ್ಲರ ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಆಲೋಚನಾ ಕ್ರಮವನ್ನು, ಬದುಕಿನ ದಿಕ್ಕನ್ನು ಬದಲಾಯಿಸುವ ಮೇಸ್ಟ್ರು ಮತ್ತು ಮೇಡಂ ಬಂದು ಹೋಗಿರುತ್ತಾರೆ. ಬರಿಯ ಸಂಬಳಕ್ಕೆ ಅಷ್ಟೇ ಕೆಲಸ ಮಾಡುವ, ಹೇಳಿದ್ದನ್ನೇ ಹೇಳುವ ಕಿಸಬೈದಾಸ ಮೀಡಿಯೋಕರ್ ಮೇಸ್ಟ್ರು ಮತ್ತು ಮೇಡಂಗಳು ಬೇಕಾದಷ್ಟಿರಬಹುದು. ನಮ್ಮ ಶಿಕ್ಷಣದಲ್ಲಿ ಶಾಲಿನಿ ರೀತಿಯ ಮೇಡಂಗಳು ಬೇಕಿದ್ದಾರೆ. ಟೀಚರ್ಸ್ ಟ್ರೇನಿಂಗ ಎಂಬ ವಿಷಯದಲ್ಲಿ ಧಾರವಾಡದ ‘ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಅಕೆಡೆಮಿ’ ಸಾಕಷ್ಟು ಕೆಲಸ ಮಾಡುತ್ತಿದೆ. ನಿಮಗೆ ಜಾನಪದ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಮತ್ತು ಆಳವಾದ ಪ್ರೀತಿ ಇರುವುದು ನಿಮ್ಮ ಬರಹದಲ್ಲಿ ಎದ್ದುಕಾಣುತ್ತದೆ. ನೀವು ಬೆಲ್ಫಾಸ್ಟ್ ವಿಶ್ವವಿದ್ಯಾಲಯದಲ್ಲಿ ಈ ವಿಷಯದಲ್ಲಿ ಡಾಕ್ಟರೇಟ್ ಮಾಡಬಾರದೇಕೆ ಎಂದೆನಿಸುತ್ತಿದೆ, ಪರಿಗಣಿಸಿ. ಅಂದಹಾಗೆ ಡಾ. ಪುರುಷೋತ್ತಮ ಬಿಳಿಮಲೆ ಎಂಬ ಖ್ಯಾತ ವಿದ್ವಾಂಸರು ಮತ್ತು ತಜ್ಞರು ದೆಹಲಿಯ ಜೆಎನ್ಯು ಕನ್ನಡ ಪೀಠದಲ್ಲಿ ಪ್ರಾಧ್ಯಾಪಕರಾಗಿದ್ದು ಅವರು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಮತ್ತು ಕೆಲಸವನ್ನು ಮಾಡಿದ್ದಾರೆ ಎಂದು ತಿಳಿದಿದ್ದೇನೆ. ನಿಮ್ಮ ಬರಹ ಆತ್ಮೀಯವಾಗಿದ್ದು ನಿಮ್ಮ ಗುರುಗಳಿಗೆ ಸಲ್ಲಿಸಬಹುದಾದ ಪ್ರೀತಿಯ ಮತ್ತು ಗೌರವದ ಸಮರ್ಪಣೆ.

    Like

Leave a comment

This site uses Akismet to reduce spam. Learn how your comment data is processed.