ರಸಋಷಿ ಸ್ಮರಣೆ ಹಾಗೂ ಪತ್ತೇದಾರಿ ಕಥೆ

ನಮಸ್ಕಾರ  ಅನಿವಾಸಿ ಬಂಧುಗಳೇ. ಇನ್ನೇನು ಈ ವರುಷದ ಅಂತಿಮ ಚರಣದಲ್ಲಿದ್ದೇವೆ. ಈ ಕಾಲಾವಧಿಯಲ್ಲಿ ನಮಗೆ ದಕ್ಕಿದ ಖುಷಿ-ಸಂತಸ- ನೆಮ್ಮದಿಯ ಕ್ಷಣಗಳಿಗೊಂದು ಹೃದಯಪೂರ್ವಕ  ನಮನಗಳನ್ನು ಸಲ್ಲಿಸೋಣ. ಕಷ್ಟ, ನೋವು, ದು:ಖಗಳು ನಮ್ಮನ್ನು ಮತ್ತಷ್ಟು ಗಟ್ಟಿ ಮಾಡಿದ್ದಕ್ಕಾಗಿಯೂ, ಕಲಿಸಿದ ಜೀವನಾನುಭವ ಪಾಠಕ್ಕಾಗಿಯೂ ವಿನೀತರಾಗಿರೋಣ. ಅಂತೆಯೇ ಬರುವ ಹೊಸ ವರುಷಕ್ಕಾಗಿ  ‘ ಹೊಸ ತಾನದ, ಹೊಸ ಗಾನದ ರಸಜೀವವ ತಾ ಅತಿಥಿ’ ಎಂದು ಮನದ ಮನೆಯನ್ನು ಹೊಸಬೆಳಕಿನ ಹೊಸಬಾಳಿಗಾಗಿ ತೆರೆದಿಡೋಣ. 


ಇಂದು ರಸಋಷಿ ಕುವೆಂಪು ಅವರ ಜನುಮದಿನ. ಕನ್ನಡದ ನಂದನವನದ ಕೋಗಿಲೆ ಈ ‘ಪರಪುಟ್ಟ’ನಿಗೆ ಕನ್ನಡಿಗರೆಲ್ಲರ ಭಾವನಮನಗಳು. ಇಂದಿನ ಅನಿವಾಸಿ ಸಂಚಿಕೆಯಲ್ಲಿ ಅವರ ‘ನೆನಪಿನ ದೋಣಿಯಲ್ಲಿ’ ಆತ್ಮಕಥನದಿಂದ ಆಯ್ದ ಒಂದೆರಡು ಭಾಗಗಳು ನಿಮ್ಮ ಓದಿಗಾಗಿ.

ಅಂತೆಯೇ ನಮ್ಮ ಅನಿವಾಸಿ ಕಥೆಗಾರ ಮೇಟಿಯವರಿಂದ ಒಂದು ಕುತೂಹಲಕಾರಿಯಾದ ಪತ್ತೇದಾರಿ ಕಥೆ ‘ಸಿ.ಐ.ಡಿ 999’. ನಿಲ್ಲದೇ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುತ್ತದೆ. ನೀವೂ ಓದಿ; ಓದಿನ ಖುಷಿ ಅನುಭವಿಸಿ. ಅನಿಸಿಕೆಗಳನ್ನು ಕಮೆಂಟಿಸಿ.

~ ಸಂಪಾದಕಿ

ನೆನಪಿನ ದೋಣಿಯಲ್ಲಿ

ಅವ್ವಗೆ ಹೆಮ್ಮೆ, ತನ್ನ ಮಗ ದೇವಂಗಿಗೌಡರ ಅಳಿಯ- ಇಂಗ್ಲೀಷ್ ಓದಿದ್ದ ಹೊಸಮನೆ ಮಂಜಪ್ಪಗೌಡರಂಥವರೂ ಹೊಗಳುವಂತೆ ಏನೇನೋ ಅದ್ಭುತವಾದದ್ದನ್ನು ಇಂಗ್ಲೀಷಿನಲ್ಲಿ ಬರೆಯುತ್ತಾನೆ ಎಂದು! ಒಂದು ದಿನ, ನಾನೊಬ್ಬನೇ ಅವರಿಗೆ ಮಾತಾಡಲು ಸಿಕ್ಕಿದ ಅಪೂರ್ವ ಸಂದರ್ಭದಲ್ಲಿ,(ಒಟ್ಟು ಕುಟುಂಬದ ಮಕ್ಕಳ ಬಾಳಿನಲ್ಲಿತಾಯಿಯೊಡನೆ ಮಾತಾಡಲು ಒಬ್ಬೊಬ್ಬರೇ ಸಿಗುವ ಏಕಾಂತ ಸಾಧ್ಯವೇ ಇಲ್ಲ!)  ಅವರು ತುಂಬ ಹಿಗ್ಗಿನಿಂದ , ಆದರೂ ಸಂಕೋಚದಿಂದ ಎಂಬಂತೆ ಕೇಳಿದರು.  ‘ ಪುಟ್ಟೂ, ನೀ ಇಂಗ್ಲೀಷಿನಲ್ಲಿ ಏನೇನೋ ಬರದೀಯಂತಲ್ಲಾ ದೇವಂಗಿ ಎಂಕ್ಟಯ್ಯಂಗೆ, ಅದೇನು ಬರೆದಿದ್ದೀಯಾ ಹೇಳೋ!’ ಅವರ ಪ್ರಶ್ನೆಯಲ್ಲಿ ತಮ್ಮ ಒಬ್ಬನೇ ಮಗನ ಮೇಲಿದ್ದ ಮುದ್ದೂ, ಹೆಮ್ಮೆಯೂ ಹೊಮ್ಮುವಂತಿತ್ತು ಆದರೆ ನನಗೆ ಅದು ಅತ್ಯಂತ ಅನಿರೀಕ್ಷಿತವಾಗಿತ್ತು. ಗೆಳೆಯರಿಗೆ ಬರೆದ ಕಾಗದ, ನಮ್ಮ ಸಾಹಿತ್ಯ ವಿಚಾರ, ನಮ್ಮ ತತ್ವಶಾಸ್ತ್ರದ ಓದು – ಇವೆಲ್ಲ ಅವ್ವನವರೆಗೆ ಹೋಗುವ ವಿಷಯವೇ ಆಗಿರಲಿಲ್ಲ. ನನ್ನ ಮನಸ್ಸಿಗೆ, ಅದೂ ಅ ಅಲ್ಲದೇ, ನನಗೇ ಬುದ್ಧಿ ಸ್ಪಷ್ಟವಿರದಿದ್ದ ಅದನ್ನು ಅವ್ವಗೆ ವಿವರಿಸುವುದು ಹೇಗೆ? ಹಸಿರು ಹುಲ್ಲಿನ ಮೇಲೆ ಇಬ್ಬನಿ ಎಳೆಬಿಸಿಲಲ್ಲಿ ಮಿರುಗುವ ಸಂಗತಿ, ಸಸಿನಟ್ಟಿ ಮಾಡಿ, ಕಳೆಕಿತ್ತು, ಗದ್ದೆಯಲ್ಲಿ ವರುಷವರುಷವೂ ತಿರುಗಾಡಿದ ಅನುಭವವಿರುವ ಅವ್ವಗೆ, ಹೆಕ್ಕಲು, ಗುಡ್ಡ, ಕಾಡುಗಳಲ್ಲಿ ಸಾವಿರಾರು ನೈಸರ್ಗಿಕ ದೈನಂದಿನ ವ್ಯಾಪಾರಗಳನ್ನು ಬೇಸರಬರುವಷ್ಟರಮಟ್ಟಿಗೆ ನೋಡುತ್ತಲೇ ಇರುವ ಅವ್ವನಿಗೆ ,ಯಾವ ದೊಡ್ಡ ವಿಷಯ ಎಂದು ಹೇಳುವುದು? ಅವ್ವನ ಸುತ್ತ ನನಗಿದ್ದ  ವಿಶಿಷ್ಟ ಭಾವನೆಯ ಪರಿವೇಷದ ವಿಫುಲೈಶ್ವರ್ಯದ ಇದಿರು ನಾನು ಕಾಗದದಲ್ಲಿ ಬರೆದಿದ್ದ ಸಂಗತಿ ತೀರ ಬಡಕಲಾಗಿ, ಅತ್ಯತಿ ಅಲ್ಪವಾಗಿ ತೋರಿತು. ನನಗೆ ಮುದುರಿಕೊಳ್ಳುವಷ್ಟು ನಾಚಿಕೆಯಾಯಿತು!! ನಾನೇನಾದರೂ ಹೇಳಲು ಹೊರಟರೆ ನನ್ನ ಪ್ರತಿಭೆಯ ವಿಚಾರವಾಗಿ ಅವರಿಗೆ ಉಂಟಾಗಿದ್ದ ‘ ಭ್ರಮಾ ಮಾಧುರ್ಯ’ ಸಂಪೂರ್ಣ ನಿರಸನವಾಗುತ್ತದೆಂದು ಭಾವಿಸಿ, ನಗುನಗುತ್ತ ‘ಎಂಥದೂ ಇಲ್ಲವ್ವಾ! ಎಂದು ಏನೇನೋ ಹೇಳಿ ನಾನೂ ನಕ್ಕು ಅವರನ್ನೂ ನಗಿಸಿಬಿಟ್ಟಿದ್ದೆ.


(ಪುಟ ಸಂಖ್ಯೆ 184-85)

ನನ್ನ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಒಂದು ಮಹೋನ್ನತ ಶಿಖರವಾಗಿರುವ ಸಂಚಿಕೆಗೆ ನಾನು ಕೊಟ್ಟಿರುವ ಹೆಸರು ನೇರವಾಗಿ ನನ್ನ ಅವ್ವನಿಂದಲೇ ಬಂದುದಾಗಿದೆ. ಅವ್ವ, ಯಾವುದಾದರೂ ತನಗೊದಗಿದ ಕಷ್ಟದ ಸಮಯದಲ್ಲಿ ಬೇರೆ ಯಾರಾದರೂ ತನ್ನಿಂದ ಏನಾದರೂ ಆಗಬೇಕೆಂದು ಕೇಳಿದಾಗ ‘ ಅಯ್ಯೋ ನಾನೇ ಓ ಲಕ್ಷ್ಮಣಾ! ಅಂತಿದ್ದೀನಪ್ಪಾ!’ ಎಂದು ಹೇಳುತ್ತಿದ್ದುದನ್ನು ನಾನು ಎಷ್ಟೋ ಬಾರಿ ಕೇಳಿದ್ದೆ. ಹಾಗಾಗಿ ‘ ಓ ಲಕ್ಷ್ಮಣಾ!’ ಎಂಬುದು ಏನೋ ಒಂದು ಕಷ್ಟಕ್ಕೋ, ಗೋಳಿಗೋ, ದುರಂತಕ್ಕೋ ವಾಕ್ ಪ್ರತಿಮೆಯಾಗಿ ಬಿಟ್ಟಿತ್ತು ನನ್ನ ಅಂತ:ಪ್ರಜ್ಞೆಯಲ್ಲಿ. ಶ್ರೀರಾಮಾಯಣ ದರ್ಶನದಲ್ಲಿ ಆ ಸಂಚಿಕೆಗೆ ಕೊಟ್ಟ ಶೀರ್ಷಿಕೆ ‘ ಓ ಲಕ್ಷ್ಮಣಾ!’ ಮಾತ್ರವಲ್ಲದೇ ಸಂಚಿಕೆಯ ಉದ್ದಕ್ಕೂ ‘ ಓ ಲಕ್ಷ್ಮಣಾ’ ಗೋಳ್ದನಿ ಬೇರೆಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಧ್ವನಿ ಪ್ರತಿಮೆಯಾಗಿ ಹೊಮ್ಮಿ , ಮಹಾಗೋಳಿಗೆ ಒಂದು ಶಬ್ದ ಪ್ರತೀಕವಾಗಿಬಿಟ್ಟಿದೆ.

(ಪುಟ ಸಂಖ್ಯೆ 186)

ಬೆಂಗಳೂರಿನಲ್ಲಿ ಸಿ ಐ ಡಿ ೯೯೯

1

ಡಾ. ವಿಕ್ರಂ ವೈದ್ಯನಾಗಿ ಪೊಲೀಸ್ ಆಫೀಸರ್ ಆಗಿದ್ದರೂ, ವೈದ್ಯಕೀಯ ಕಾಲೇಜಿನಲ್ಲಿ ಕಳೆದ ದಿನಗಳನ್ನು ಇನ್ನೂ ಮೆಲಕು ಹಾಕುತ್ತಿದ್ದನು. ವೈದ್ಯಕೀಯ ಗೆಳೆಯರಿಂದ ಇಪ್ಪತ್ತೈದು ವರುಷದ ಮರು ಮಿಲನದ ಆಹ್ವಾನ ಬಂದಾಗ ಥಟ್ಟನೆ ಒಪ್ಪಿಕೊಂಡಿದ್ದನು. ಮನೆಯವರ ಇಚ್ಛೆಯಂತೆ ವೈದ್ಯನಾದರೂ, ಪತ್ತೇದಾರಿಕೆ ವಿಷಯದಲ್ಲಿ ಮೊದಲಿನಿಂದಲೂ ಇದ್ದ ಆಸಕ್ತಿ, ಕೊನೆಗೂ ಅವನನ್ನು ಪೊಲೀಸ್ (ಕ್ರೈಂ ಬ್ರಾಂಚ್) ಇಲಾಖೆಗೆ ಕರೆದೊಯ್ದಿತ್ತು.
ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಆಯೋಜಿಸಿದ್ದ ಮರು ಮಿಲನಕ್ಕೆ ನಾಲ್ಕು ದಿನ ರಜೆ ಹಾಕಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದನು. ಪರದೇಶದಲ್ಲಿದ್ದ ಅವನ ಮೂರ್ನಾಲ್ಕು ಆತ್ಮೀಯ ಗೆಳೆಯರೂ ಸಹ ಬರಲು ಒಪ್ಪಿಕೊಂಡಿರುವ ವಿಷಯ ಇನ್ನೂ ಸಂತೋಷವನ್ನು ತಂದಿತ್ತು. ಮೊದಲ ದಿನದ ಕಾರ್ಯಕ್ರಮ ವೈದ್ಯಕೀಯ ಕಾಲೇಜಿನ ಆಡಿಟೋರಿಯಮ್ಮನಲ್ಲಿ ಇದ್ದರೆ, ಉಳಿದ ಎರಡು ದಿನಗಳನ್ನು ಊರ ಹೊರವಲಯದಲ್ಲಿ ಇದ್ದ ಐಷಾರಾಮಿ ಹೋಟೆಲಿನಲ್ಲಿ ಆಯೋಜಿಸಲಾಗಿತ್ತು.
ಡಾ. ವಿಕ್ರಂ ವೈದ್ಯಕೀಯ ಕಾಲೇಜನ್ನು ಸೇರಿದಾಗ ಬೆಳಗಿನ ಹತ್ತು ಗಂಟೆಯಾಗಿತ್ತು. ಮುಖ್ಯ ದ್ವಾರದ ಮೇಲೆ ಸುಂದರವಾದ ಸ್ವಾಗತ ಮಾಲೆ ತೂಗಾಡುತಲಿತ್ತು. ಅದರಲ್ಲಿದ್ದ ಒಂದೊಂದು ಪುಷ್ಪಗಳು ಅವನು ಕಾಲೇಜಿನಲ್ಲಿ ಕಳೆದ ದಿನಗಳ ಪ್ರತೀಕವಾಗಿ, ಇಡೀ ಪುಷ್ಪ ಹಾರವು ನೆನಪಿನ ಮಾಲೆಯಾಗಿ ಕಂಗೊಳಿಸಿತು. ಅನತಿ ದೂರದಲ್ಲಿ ಇವನಿಗಾಗಿಯೇ ಕಾಯುತ್ತ ನಿಂತಿದ್ದ ಅವನ ಜಿಗ್ರಿ ದೋಸ್ತರಾದ ಬಸು ಮತ್ತು ರವಿ 'ಹೋ' ಎಂದು ಓಡಿ ಬಂದು ಅಪ್ಪಿಕೊಂಡರು. ಆತ್ಮೀಯ ಗೆಳೆಯ ಬಸ್ಯಾ (ಬಸವರಾಜ) ತನ್ನ ಉತ್ತರ ಕರ್ನಾಟಕದ ಭಾಷೆಯಲ್ಲಿ "ಲೇ ನೀನು ಏನೂ ಉದ್ದೇಶ ಇಲ್ಲದೆ ಸುಮ್ಮನೆ ಬರಾವನಲ್ಲ, ನಾವೇನು ಕ್ರೈಂ ಮಾಡಿಲ್ಲ, ನಮ್ಮನ್ನ್ಯಾರನ್ನೂ ಅರೆಸ್ಟ್ ಮಾಡಾಕ ಬಂದಿಲ್ಲಲ್ಲ" ಎಂದು ಹಲ್ಲು ಕಿರಿದನು.
"ಯಪ್ಪಾ, ನೀವುಗಳೆಲ್ಲ ನನ್ನನ್ನ ಈ ಗೆಳೆತನದ ಕೊಂಡ್ಯಾಗ ಸಿಗಿಸಿ ಬಂಧಿಸಿ ಬಿಟ್ಟೀರಿ, ಇನ್ನ ನಾ ನಿಮ್ಮನ್ನ ಹ್ಯಾಂಗ ಅರೆಸ್ಟ್ ಮಾಡಲಿ. ನನ್ನ ಗೆಳೆತನ ಮಾಡಿದ್ದ ನಿಮ್ಮ ಕ್ರೈಂ. ಒಬ್ಬ ದೋಸ್ತ ಆಗಿ ನಿಮ್ಮನ್ನೆಲ್ಲ ಭೇಟಿ ಆಗಾಕ ಬಂದೀನಿ, ಪೊಲೀಸ್ ಆಫೀಸರ್ ಆಗಿ ಅಲ್ಲ” ಎಂದು ನಕ್ಕು ಮಾತು ಮುಗಿಸಿದ. ಅಷ್ಟರಲ್ಲಿಯೇ ರವ್ಯಾ(ರವಿ)
"ಕಾರ್ಯಕ್ರಮ ಚಾಲೂ ಆಗಾಕ ಇನ್ನೂ ಟೈಮ್ ಐತಿ, ಹಾಂಗ ಒಂದ ರೌಂಡ್ ಕಾಲೇಜಿನಾಗ ಸುತ್ತಾಡಕೊಂಡ ಬರಬಹುದಲ್ಲ?" ಅಂತ ಸಲಹೆ ಕೊಟ್ಟ. ಅವನ ಮಾತಿಗೆ ಎಲ್ಲರೂ ಒಪ್ಪಿಗೆ ಸೂಚಿಸಿ ಮುನ್ನೆಡೆದರು
ಹರಟೆಯ ಜಾಗವಾಗಿದ್ದ ಧ್ವಜದ ಕಟ್ಟೆ, ಓದುತ್ತಿದ್ದ ಲೈಬ್ರರಿ ಮತ್ತು ಲೆಕ್ಚರ್ ಹಾಲ್ ಗಳು ಎಲ್ಲವೂ ಬೇರೆ ಎನಿಸಿದವು. ಲೆಕ್ಚರ್ ಹಾಲ್ ನಲ್ಲಿದ್ದ ಆಧುನಿಕ ಡೆಸ್ಕಗಳನ್ನು ನೋಡಿ ಬಸ್ಯಾ ಅಂದನು "ಬೆಂಚುಗಳೇನೋ ಬದಲಿ ಆಗ್ಯಾವ ಆದರ ಜಾಗಾ ಮಾತ್ರ ಬದಲಿ ಆಗಿಲ್ಲ. ಆ, ಕಡೇ ಬೆಂಚುಗಳಾಗ ಇನ್ನೂ ನಮ್ಮಂತ ಉಡಾಳ ಹುಡುಗೋರ ಕುಂಡರತಾರ್ ಅಂತ ಅನ್ನಕೊಂಡೀನಿ" ಅಂತ ಹಳೆಯ ನೆನಪು ಮಾಡಿಕೊಂಡ.
"ಕಡೇ ಬೆಂಚುಗಳಾಗ ಕುಂಡ್ರುವ ಮಜಾನ ಬ್ಯಾರೆ. ಈಗ ನೋಡು, ಕಡೇ ಬೆಂಚುಗಳಾಗ ಕುಂಡ್ರುತ್ತಿದ್ದವರೆಲ್ಲ ತಲೆ ಓಡಿಸಿ ಕೋಟ್ಯಾಧಿಪತಿಗಳ ಆಗ್ಯಾರ, ಮುಂದಿನ ಬೆಂಚುಗಳಾಗ ಕುಂಡ್ರುತ್ತಿದ್ದವರೆಲ್ಲ ಹಗಲೂ ರಾತ್ರಿ ಓದಿ ಪ್ರೊಫೆಸ್ಸರ್ಸ್ ಆಗಿ, ಸರಕಾರಿ ಪಗಾರ ತಗೊಂದು, ಇನ್ನೂ ಕ್ವಾರ್ಟರ್ಸ್ ನಾಗ ಅದಾರ" ಅಂತೆಂದ ರವಿ.
"ಹಾಂಗೇನಿಲ್ಲಪ್ಪ, ಫೋರೆನ್ಸಿಕ್ ಮೆಡಿಸಿನ್ ಮುಖ್ಯಸ್ಥ ರಮೇಶನ ನೋಡು, ಹೆಣಾ ಕೊಯ್ಕೊಂತ ಎಷ್ಟ ಶ್ರೀಮಂತ ಆಗ್ಯಾನ್. ಮೆಡಿಸಿನ್ ಮುಖ್ಯಸ್ಥ ರಾಜೇಶನ ಜೊತೆಗೆ ಕೂಡಿ ಇಬ್ಬರೂ ಎರಡು ಐಷಾರಾಮ ಗೆಸ್ಟ್ ಹೌಸ್ ಮಾಡ್ಯಾರ. ಅದೇನೋ ಬಿಸಿನೆಸ್ ಮಾಡ್ತಾರ್ ಅಂತ ಸುದ್ದಿ. ವಿದ್ಯೆಯಿದ್ದರೂ ದುಡ್ಡು ಮಾಡಾಕ ಬುದ್ಧಿನೂ ಬೇಕನ್ನು" ಅಂತ ಬಸ್ಯಾ ಅವನ ಮಾತಿಗೆ ಎದುರು ಉತ್ತರ ಕೊಟ್ಟನು.
"ನೀವು ಹೇಳುವುದು ಖರೆ ಬಿಡು. ಈಗಿನ ಕಾಲದಾಗ ವೈದ್ಯಕೀಯ ವಿದ್ಯಾಭ್ಯಾಸ ಒಂದು ದೊಡ್ಡ ವ್ಯಾಪಾರನ ಆಗೈತಿ. ನಾಯಿಕೊಡೆಗಳಂಗ ಹುಟ್ಟಿಕೊಂಡ ಕಾಲೇಜುಗಳಾಗ ಸೀಟು ತಗೊಳ್ಳಾಕ ಕೋಟಿ ಗಂಟಲೇ ಖರ್ಚು ಮಾಡಿದ ಮ್ಯಾಗ, ರೊಕ್ಕಾ ಗಳಸಾಕ ಏನೇನೋ ಮಾಡಬೇಕಾಗತೈತಿ. ಎಲ್ಲಾ ದುರದೃಷ್ಟ" ಅಂತ ವಿಕ್ರಂ ವಿಷಾದ ವ್ಯಕ್ತಪಡಿಸಿದ. ಕೊನೆಯ ಬೆಂಚಿನ ವಿಷಯ ಎಲ್ಲೆಲ್ಲೋ ಹೋಗುತ್ತಿರುವದನ್ನು ನೋಡಿ .
“ಇರಲಿ ಬಿಡ್ರಪ್ಪಾ, ದುಡ್ಡು ಅಷ್ಟ ಜೀವನದಾಗ ಎಲ್ಲಾ ಅಲ್ಲ. ನೆಮ್ಮದಿ ಮುಖ್ಯ. ಕಡೇ ಬೆಂಚಿನ ಮಾತು ಎಲ್ಲೆಲ್ಲೋ ಹೋಗಿ ಬಿಟ್ಟತಿ ನೋಡ್ರಿ. ಮಜಾ ಮಾಡಾಕ ಬಂದಿವಿ, ನಡೀರಿ ಟೈಮ್ ಆತು, ಆಡಿಟೋರಿಯಂ ಕಡೆ ಹೋಗುನು" ಅಂತ ನಡೆದ ಚರ್ಚೆಗೆ ಅಂತ್ಯ ಹಾಕಿದ ರವಿ..
ಅವರೆಲ್ಲ ಆಡಿಟೋರಿಯಂ ಸೇರಿದಾಗ ಆಗಲೇ ಕಾರ್ಯಕ್ರಮ ಪ್ರಾರಂಭವಾಗಿತ್ತು. ಸ್ಟೇಜಿನ ಮೇಲೆ ಆಸನವಿದ್ದ, ಕೆಲವು ಪಾಠ ಕಲಿಸಿದ
ಗುರುಗಳಿಗೆ ಕಾಣಿಕೆಯನ್ನು ಕೊಡುತ್ತಿದ್ದರು ಸಹಪಾಠಿಗಳು. ಇಪ್ಪತ್ತೈದು ವರುಷವಾದರೂ ಯಾರೂ ಅಷ್ಟೊಂದು ಬದಲಾಗಿಲ್ಲ ಎಂದೆನಿಸಿತು ವಿಕ್ರಂನಿಗೆ. ಆದರೆ ಕೆಲವರು ಮಾತ್ರ ಗುರುತು ಸಿಗಲಿಲ್ಲ.
ಕೊನೆಯ ಸಾಲಿನಲ್ಲಿ ಕುಳಿತಿದ್ದವನತ್ತ ಕೈ ಮಾಡಿ ಪಿಸುಗುಟ್ಟಿದ ಬಸ್ಯಾ "ಅಲ್ಲಿ ನೋಡ್ರಪ್ಪಾ, ಚೋಪ್ರಾ ಎಷ್ಟು ಜೋರಾಗಿ ಬಂದಾನ ಮುಂಬೈಯಿಂದ, ಕೆಲವು ಸೀನಿಯರ್ಸ ಕೂಡ ಗಾಂಜಾ ಸೇದಕೋಂತ ಹಾಂಗ ಅಡ್ಡಾಡತಿದ್ದ. ಈಗ ನೋಡು ಮುಂಬೈಯಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್ ಅಂತ. ರಾಜಕೀಯದಲ್ಲೂ ಬಹಳ ಪ್ರಭಾವ ಐತಿ ಅಂತ. ಇನ್ನೇನು ಎಂ ಎಲ್ ಎ ಆದರೂ ಆಗಬಹುದಂತ ಸುದ್ದಿ. ನಾಳಿನ ಸಂಜೆಯ ಮನರಂಜನೆ ಕಾರ್ಯಕ್ರಮಕ್ಕ ಅವನದೇ ಸ್ಪಾನ್ಸರ್ ಅಂತ. ಅದ್ಯಾವದೋ ಸ್ಪೇಸಿಯಲ್ ಡಿಜೆ ಬ್ಯಾಂಡ್ ತರಸಾಕತ್ತಾನ ಅಂತ. ಅವನ ಹೆಸರಿನ್ಯಾಗ ನಾಳೆ ಎಲ್ಲಾರೂ ಮಸ್ತ್ ಡ್ಯಾನ್ಸ್ ಮಾಡಿ ಬಿಡೂನು” ಅಂತೆಂದ.
"ಲೇ ಯಪ್ಪಾ, ನೀ ಇನ್ನ ಎಂ ಬಿ ಬಿ ಎಸ್ ನಾಗಿನ ಚಾಳಿ ಬಿಟ್ಟಿಲ್ಲ ನೋಡು, ಹೆಂಗಸರಂಗ ಬರೀ ಬ್ಯಾರೆಯವರ ಬಗ್ಗೆನೇ ಗಾಸಿಪ್ ಮಾಡತಿರ್ತಿ" ಅಂತ ರವಿ ಅವನನ್ನು ಛೇಡಿಸಲು ಯತ್ನಿಸಿದ. ಕಾಲೇಜಿನಲ್ಲಿದ್ದ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರನ್ನೂ ನಗರದ ಹೊರವಲಯದಲ್ಲಿದ್ದ ಐಷಾರಾಮಿ ಹೋಟೆಲಗೆ ಕೊಂಡೊಯ್ಯಲು ಬಸ್ಸುಗಳು ತಯಾರಾಗಿದ್ದವು. ಮೇಲ್ವಿಚಾರಕರಾಗಿದ್ದ ರಮೇಶ್ ಮತ್ತು ರಾಜೇಶ್ ಇವರನ್ನು ಕಂಡು. "ಏನ್ರಪ್ಪ ತ್ರಿಮೂರ್ತಿಗಳಿರಾ ಹೇಗೆ ಇದ್ದೀರಾ? ನೀವು ಮೂವರಿಗೂ ಒಂದೇ ರೂಮ್ ಬುಕ್ ಮಾಡೀವಿ. ನಿಮ್ಮ ಹಾಸ್ಟೆಲಿನ ಜೀವನದ ನೆನಪು ಬರಲಿ ಅಂತ" ಎಂದೆಂದರು. ಅವರಿಗೆ ಧನ್ಯವಾದವನ್ನು ಹೇಳಿ ಬೇರೆಯವರೊಂದಿಗೆ ಹರಟೆ ಹೊಡೆಯುವಷ್ಟರಲ್ಲಿಯೇ ಬಸ್ಸುಗಳು ರೆಸಾರ್ಟನ್ನು ತಲುಪಿದ್ದವು.

2
ಒಂದೇ ರೂಮಿನಲ್ಲಿದ್ದು ಅಷ್ಟೊಂದು ಆತ್ಮೀಯವಾಗಿ ಮಾತನಾಡುತ್ತಿದ್ದರೂ, ಬಸ್ಯಾ ಮತ್ತು ರವಿಗೆ ವಿಕ್ರಂ ಏನೋ ಬಚ್ಚಿಡುತ್ತಿದ್ದಾನೆಂದು ಅನಿಸತೊಡಗಿತು. ಅರ್ಧ ಗಂಟೆಗೊಮ್ಮೆ ಫೊನನೆತ್ತಿಕೊಂಡು ಹೊರಗೆ ಹೋಗುತ್ತಿದ್ದ, ಒಳಗಡೆ ಬಂದು ಏನೋ ಬರೆದುಕೊಳ್ಳುತಿದ್ದ. ವಿಕ್ರಂ ಬಾತ್ ರೂಮಿನಲ್ಲಿದ್ದಾಗ ಅವನ ಫೋನು ಗುನಗುಟ್ಟತೊಡಗಿತ್ತು, ರವಿ ಫೋನಿನ ಸ್ಕ್ರಿನಿನತ್ತ ನೋಡಿದ, ಸಿ ಐ ಡಿ ಶಂಕರ್ ಅಂತ ಕಾಣಿಸತೊಡಗಿತ್ತು. ತರಾತುರಿಯಲ್ಲಿ ಬಂದು ವಿಕ್ರಂ ಫೊನನೆತ್ತಿಕೊಂಡು ಮತ್ತೆ ಹೊರಗೆ ಮಾಯವಾದ. ಕೊನೆಗೂ ಬಸ್ಯಾ ಅಂದ "ಏನಪ್ಪಾ ಫೋನಿನಲ್ಲಿ ಇಷ್ಟೊಂದು ಬುಸಿ ಆಗಿಬಿಟ್ಟಿ, ಸೈಲೆಂಟ್ ಮೋಡಿನಾಗ ಇಟ್ಟ ಬಿಡು, ಒಂದೆರಡು ಪೆಗ್ ಹಾಕಿ ಸಹಪಾಠಿಗಳ ರಸಮಂಜರಿ ಕಾರ್ಯಕ್ರಮದ ಸವಿ ಅನುಭವಿಸೋಣ " ಅಂತ.
"ಒಮ್ಮೊಮ್ಮೆ ಈ ಪೊಲೀಸ್ ನೌಕರಿನೂ ಡಾಕ್ಟರ್ ತರನ, ರಜಾ ಮ್ಯಾಲ ಇದ್ದರೂ ಸುಮ್ಮನ ಇರಾಕ ಬಿಡುಲ್ಲಾ. ಬಸ್ಯಾ ನಿನ್ನ ಐಡಿಯಾ ಚಲೋ ಐತಿ, ನಡೀರಿ” ಎಂತೆಂದ ವಿಕ್ರಂ. ಬಸುನ ವಿಚಾರಕ್ಕೆ ಸಮ್ಮತಿಸಿ ಅವರೆಲ್ಲಾ ಕೆಳಗೆ ಬಂದರು.
ರಸಮಂಜರಿ ಕಾರ್ಯಕ್ರಮ ಇನ್ನೇನು ಪ್ರಾರಂಭವಾಗುವ ತಯ್ಯಾರಿಯಲ್ಲಿತ್ತು, ಆಗಲೇ ಕೆಲವರು ಪೆಗ್ ಹಾಕಿ ಮುಂದಿನ ಪೆಗ್ ಗೆ 'ಚೀರ್ಸ್' ಅನ್ನುತ್ತಾ ಇದ್ದರು. ಪಕ್ಕದ ಹಾಲಿನಲ್ಲಿ ಇನ್ನೊಂದು ಕಾರ್ಯಕ್ರಮ ನಡೆದಿತ್ತು. ಬಹುಶ: ವೀಕ್ ಎಂಡ್ ಪಾರ್ಟಿ ಇರಬಹುದು. ತುಂಡು ಬಟ್ಟೆ ಹಾಕಿಕೊಂಡ ಹುಡುಗಿಯರು, ಹುಡುಗರ ಜೊತೆಗೆ ಒಳಗೆ ನುಗ್ಗುತ್ತಲಿದ್ದರು.
ಅದನ್ನೇ ವೀಕ್ಷಿಸುತ್ತ ರವಿ ಅಂದಾ "ದೇಶಾ ಬಾಳ ಬದಲಿ ಆಗಿ ಬಿಟ್ಟೈತಿ. ಈ ಹದಿ ಹರಿಯದ ಜನರು ‘ವೆಸ್ಟೆರ್ನ್ ಕಲ್ಚರ್’ ಕ್ಕಿಂತ ಎರಡು ಹೆಜ್ಜೆ ಮುಂದನ ಅದಾರ ನೋಡು"
"ಇಂಥಾ ಪಾರ್ಟಿಯೊಳಗ ಎಲ್ಲಾ ನಡಿತೈತಿ. ಡ್ರಗ್ಸ್ , ಮದ್ಯ ಇನ್ನೂ ಏನೇನೋ. ಆದರೂ ನಮ್ಮ ವಿಕ್ರಂ ನ ಡಿಪಾರ್ಟ್ಮೆಂಟ್ ಸುಮ್ಮನ ಕುಳತೈತಿ ನೋಡು" ಅಂತ ಬಸು ಅವನ ಕಾಲೆಳೆಯಲು ಪ್ರಯತ್ನಿಸಿದ
“ಇದು ಎಲ್ಲರಿಗೂ ಗೊತ್ತಿರುವ ಹಳೆಯ ವಿಷಯ, ಇದೊಂದು ದೊಡ್ಡ ಲಾಬಿ ಅಂತ ನಿನಗೂ ಗೊತ್ತು. ನನ್ನಂತ ನಿಯತ್ತಿನ ಆಫೀಸರ್ಸ್ ಏನಾದರು ಮಾಡಲಿಕ್ಕೆ ಹೋದರೆ ಏನ ಆಗತೈತಿ ಅಂತಾನೂ ಗೊತ್ತು”
ಅಷ್ಟರಲ್ಲಿಯೇ ರವಿ ಅಂದ "ಮೇಲಿನವರು ಏನೋ ಕಾರಣಾ ಹುಡುಕಿ ನಿಮ್ಮನ್ನ ಸಸ್ಪೆಂಡ್ ಮಾಡ್ತಾರ್ ಇಲ್ಲ ಅಂದ್ರ ನೀರ ಸಿಗದ ಜಾಗಕ್ಕ ವರ್ಗಾವಣೆ ಮಾಡ್ತಾರ್"
“ಹೌದಪ್ಪಾ, ಸಿಸ್ಟೆಮ್ ಬದಲಿ ಆಗಬೇಕು, ಬರೀ ಪೊಲೀಸ್ ಕ್ಷೇತ್ರದಲ್ಲಿ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ. ಆದರ ಯಾರು ಬದಲಿ ಮಾಡ್ತಾರ್?” ಅಂತ ತನ್ನ ಅಸಹಾಯಕತೆಯನ್ನು ತೋಡಿಕೊಂಡ ವಿಕ್ರಂ.
"ಇರಲಿ ಬಿಡಪ್ಪ, ಈಗ ನಮ್ಮನ್ನ ಬದಲಿ ಮಾಡಿಕೊಂಡ್ರ ಸಾಕು" ಅಂತ ರವಿ ಎಲ್ಲರಿಗೂ ಒಂದು ಪೆಗ್ ರೆಡಿ ಮಾಡಿದ. ಸ್ವಲ್ಪ ದೂರದಲ್ಲಿ
ಚೋಪ್ರಾ ಮತ್ತು ರಮೇಶ್ ಏರು ಧ್ವನಿಯಲ್ಲಿ ಜಗಳಾಡುತ್ತಿದ್ದದ್ದು ಅವರ ಗಮನಕ್ಕೆ ಬಾರದೆ ಇರಲಿಲ್ಲ. ಬಂದಾಗಿನಿಂದಲೂ ವಿಕ್ರಂ ಚೋಪ್ರಾನನ್ನು ತನ್ನ ಪತ್ತೇದಾರಿ ಕಣ್ಣುಗಳಿಂದ ಯಾಕೆ ವೀಕ್ಷಿಸುತ್ತಿರಬಹುದೆಂಬುವದು ಇವರಲ್ಲಿ ಕುತೂಹಲವನ್ನು ಹುಟ್ಟಿಸಿತ್ತು.

3
ಚೋಪ್ರಾನ ಮೇಲ್ವಿಚಾರಣೆಯಲ್ಲಿ ಎರಡನೆಯ ದಿನದ ಸಂಜೆಯ ಕಾರ್ಯಕ್ರಮಕ್ಕೆ ರಂಗು ಏರಿತ್ತು. ಬಣ್ಣ ಬಣ್ಣದ ಲೈಟುಗಳು ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಿದ್ದರೆ ಅಷ್ಟೇ ಭರ್ಜರಿಯಾಗಿದ್ದ ಸೌಂಡ್ ಸಿಸ್ಟಮ್, ಆಲಿಸುತ್ತಿದ್ದವರ ಹೃದಯವನ್ನೇ ನಡುಗಿಸುತಲಿತ್ತು. ಹದಿ ಹರೆಯದ ಕಲಾವಿದರು ಎಲ್ಲ ಭಾಷೆಯ ಹಾಡುಗಳನ್ನು ಅವುಗಳಿಗೆ ತಕ್ಕ ಡ್ಯಾನ್ಸನೊಂದಿಗೆ ವೀಕ್ಷಕರಿಗೆ ಅರ್ಪಿಸುತಲಿದ್ದರು. ಪ್ರಭಾವ ಎಷ್ಟಿತ್ತೆಂದರೆ, ಕೆಲವರು ಕುಳಿತಲ್ಲಿಯೇ ಡಾನ್ಸ್ ಮಾಡುತ್ತಿದ್ದರೆ ಇನ್ನು ಕೆಲವರು ವಯಸ್ಸಿನ ಅಂತರ ಮರೆತು ಹುಚ್ಚೆದ್ದು ಕುಣಿಯತೊಡಗಿದ್ದರು. ಚೋಪ್ರಾ ಆಗಾಗ್ಗೆ ಸ್ಟೇಜು ಏರಿ ಹುಡುಗಿಯರೊಂದಿಗೆ ತಾಳ ಹಾಕುತ್ತಿದ್ದನು ' ಕಮಾನ್' ಎಂದು ಅರಚುತ್ತಿದ್ದನು.
ರವಿ ಮತ್ತು ಬಸು ಡ್ಯಾನ್ಸಿನಲ್ಲಿ ಮುಳುಗಿದ್ದರೆ, ವಿಕ್ರಂ ಒಂದು ಮೂಲೆಯಲ್ಲಿ ನಿಂತು ಎಲ್ಲವನ್ನೂ ವೀಕ್ಷಿಸುತ್ತಿದ್ದನು. ಬ್ಯಾಂಡ್ ಹುಡುಗಿಯರ ಗುಂಪೊಂದು ಹಳೆಯ ಕನ್ನಡ ಹಾಡಿಗೆ ಡಾನ್ಸ್ ಮಾಡುತಲಿತ್ತು. ಜೋಕೆ --- ನಾನು ಕತ್ತಿಯ ಅಂಚು --- ಅವರ ವೇಷ ಭೂಷಣಗಳೇ ಭಯಾನಕವೆನಿಸುತ್ತಿದ್ದವು. ಕೈಯಲ್ಲಿ ಒಂದು ಚೂರಿ, ಸೊಂಟದಲ್ಲಿ ಪಿಸ್ತೂಲು, ಮೈತುಂಬ ಕರಿಯ ಬಟ್ಟೆ , ಕಣ್ಣುಗಳಿಗೆ ಎರಡು ರಂದ್ರವಿದ್ದ ಕರಿಯ ಮುಖವಾಡ. ಚೋಪ್ರಾ ಮತ್ತೆ ಸ್ಟೇಜ್ ಏರಿ ಡಾನ್ಸ್ ಮಾಡತೊಡಗಿದನು. ಸ್ವಲ್ಪ ಸಮಯದಲ್ಲಿಯೇ ಗುಂಪಿನಲ್ಲಿದ್ದ ಮುಖ್ಯ ಡ್ಯಾನ್ಸರ್ ಸೊಂಟದಲ್ಲಿದ್ದ ಪಿಸ್ತೂಲು ತಗೆದು ಚೋಪ್ರಾನತ್ತ ಒಂದೇ ಸಮನೆ ಗುಂಡು ಹಾರಿಸಿ ಮಿಂಚಿನಂತೆ ಮಾಯವಾದಳು. ಚೋಪ್ರಾ ಎದೆ ಹಿಡಿದುಕೊಂಡು ನೆಲಕ್ಕೆ ಕುಸಿದನು. ಅವನ ಎದೆ ಮತ್ತು ಹೊಟ್ಟೆಯಿಂದ ರಕ್ತ ಚಿಮ್ಮುತ್ತಲಿತ್ತು. ಕ್ಷಣದಲ್ಲಿಯೇ ಎಲ್ಲೆಡೆಯೂ ಹಾಹಾಕಾರ ತುಂಬಿತು. ಎಲ್ಲರೂ ಹಾಲಿನಿಂದ ಹೊರಗೆ ಓಡತೊಡಗಿದರು. ವಿಕ್ರಂ ಹುಡುಗಿಯನ್ನು ಬೆನ್ನಟ್ಟಲು ಪ್ರಯತ್ನಿಸಿದನು, ಅವಳು ಕತ್ತಲೆಯಲ್ಲಿ ಇನ್ನಾರದೋ ಬೈಕಿನಲ್ಲಿ ಮಾಯವಾದಳು. ಆದರೆ ಅವಳ ಕೈಯಲ್ಲಿದ್ದ ಪಿಸ್ತೂಲನ್ನು ಪಡೆಯುದರಲ್ಲಿ ಯಶಸ್ವಿಯಾಗಿದ್ದನು.
ವಿಕ್ರಂ ಮರಳಿ ಹಾಲಿಗೆ ಬಂದಾಗ, ರಮೇಶ್ ಮತ್ತು ರಾಜೇಶ್ ಚೋಪ್ರಾನ ಆರೈಕೆ ಮಾಡುತಲಿದ್ದರು , ಇನ್ನಾರೋ ಅಂಬ್ಯುಲನ್ಸಗೆ ಕರೆ ಮಾಡುತಲಿದ್ದರು, ಮತ್ತಾರೋ ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸುವ ಪ್ರಯತ್ನದಲ್ಲಿದ್ದರು ಆದರೆ ಬಹು ಜನರು (ರವಿ ಮತ್ತು ಬಸು ಸೇರಿ) ಅಲ್ಲಿಂದ ಪಲಾಯನ ಮಾಡಿದ್ದರು. ರಾಜೇಶ್ ಚೀರುತಲಿದ್ದನು "ಇನ್ನೂ ಬದುಕಿದ್ದಾನೆ , ಆಂಬುಲೆನ್ಸ್, ಬೇಗ ಆಂಬುಲೆನ್ಸ್" ಎಂದು. ಅಷ್ಟರಲ್ಲಿಯೇ ಆಂಬುಲೆನ್ಸ್ ಬಂದಾಗಿತ್ತು, ಚೋಪ್ರಾನನ್ನು ಅಂಬ್ಯುಲನ್ಸಗೆ ಶಿಫ್ಟ್ ಮಾಡಿ, ರಮೇಶ್ ಮತ್ತು ರಾಜೇಶ್ ಚೋಪ್ರಾನ ಜೊತೆಗೆ ಆಂಬುಲೆನ್ಸ್ ಏರಿದರು. ವಿಕ್ರಂ ಸೂಕ್ಷ್ಮವಾಗಿ ಚೋಪ್ರಾ ಕುಸಿದಿದ್ದ ಜಾಗವನ್ನು ವೀಕ್ಷಿಸುತ್ತಿದ್ದನು. ಯಾರಿಗೂ ಅರಿವಾಗದ ಹಾಗೆ ಅಲ್ಲಿ ಬಿದ್ದಿದ್ದ ಒಂದು ಬುಲೆಟ್ಟನ್ನು, ರಕ್ತದ ಸ್ಯಾಂಪಲ್ ಅನ್ನು ಸಂಗ್ರಹಿಸಿದ್ದನು.
ವಿಕ್ರಮನ ಸಹಾಯಕ ಅವನ ಸಲಹೆಯಂತೆ ಆವಾಗಲೇ ಕಾರನ್ನು ತಂದು ಹೊರಗಡೆ ಕಾಯುತಲಿದ್ದ. ಕಾರಿನಲ್ಲಿ ಕುಳಿತು ಸಂಗ್ರಹಿಸಿದ ಬುಲೆಟ್ಟನ್ನು ಒಮ್ಮೆ ಒತ್ತಿ ನೋಡಿದ ವಿಕ್ರಂ. ಅವನಿಗೆ ಆಶ್ಚರ್ಯವೆನಿಸಿತು, ಅದು ನಕಲಿ ಪ್ಲಾಸ್ಟಿಕ್ ಬುಲ್ಲೆಟ್ ಆಗಿತ್ತು. ತಕ್ಷಣವೇ ರಕ್ತದಲ್ಲಿ ತೊಯ್ಯಿಸಿದ್ದ ಕರವಸ್ತ್ರವನ್ನು ಮುಟ್ಟಿ ನೋಡಿದ, ಅದು ಮನುಷ್ಟನ ರಕ್ತವೆನಿಸಲಿಲ್ಲ. 'ನೋ, ಇದರಲ್ಲೇನೋ ಕುತಂತ್ರವಿದೆ, ಪ್ಲಾಸ್ಟಿಕ್ ಬುಲೆಟ್ಟಿನಿಂದ ಅವನು ಸಾಯಲಾರ ಹಾಗೆಯೆ ಸೋರಿದ್ದ ರಕ್ತ ಅವನದಲ್ಲಾ'
ತಕ್ಷಣವೇ ಬಸ್ಯಾಗೆ ಫೋನು ಮಾಡಿದ
"ಎಲ್ಲಿದ್ದೀರಪ್ಪ, ಅರ್ಜೆಂಟಾಗಿ ನಿಮ್ಮ ಸಹಾಯ ಬೇಕು"
"ನಾವು ಇಲ್ಲೇ ಇನ್ನ ರೆಸಾರ್ಟದಾಗ ಇದ್ದೀವಿ. ನೀನೆಲ್ಲಿ ಮಾಯವಾಗಿದಿಯಪ್ಪ. ಯಾಕೋ ಭಯಾ ಆಗಾಕತ್ತೈತಿ"
ಎಂತೆಂದ ರವಿ.
"ನಾ ಎಲ್ಲಿ ಅದೀನಿ ಅಂತ ಹೇಳಾಕ ಆಗುಲ್ಲಾ, ಅಂಜುವ ಅವಶ್ಯಕತೆ ಇಲ್ಲಾ. ನೀವು ಈ ತಕ್ಷಣ ಬಾಡಿಗಿ ಕಾರ್ ಮಾಡಕೊಂಡು ಬಿ ಎಂ ಸಿ ಕಾಲೇಜಿನ ಕ್ಯಾಜುವಲ್ಟಿಗೆ ಹೋಗಬೇಕು, ಚೋಪ್ರಾನಿಗೆ ಏನಾಯಿತೆಂದು ನನಗೆ ಮರಳಿ ಇತ್ತ ಫೋನ್ ಮಾಡಬೇಕು" ಎಂದು ಹೇಳಿ ಫೋನಿಟ್ಟ.
ಅವನ ಸಲಹೆಯಂತೆ ಅವರು ಕ್ಯಾಜುವಲ್ಟಿಯನ್ನು ಮುಟ್ಟಿದ್ದರು.
ಇವರನ್ನು ಕಂಡು ರಾಜೇಶ್ ಅಂದ "ದುರದೃಷ್ಟವಶಾತ್ ಬದುಕಲಿಲ್ಲ, ಚೋಪ್ರಾ ಇನ್ನಿಲ್ಲ" ಅಂದ. ಪಕ್ಕದಲ್ಲಿಯೇ ಅವನ ಹೆಂಡತಿ ಕಣ್ಣೀರು ಸುರಿಸುತ್ತ ಕುಳಿತಿದ್ದಳು.
ಬಸ್ಯಾ ಮರಳಿ ವಿಕ್ರಮನಿಗೆ ಫೋನು ಮಾಡಿ
" ವಿಕ್ರಂ, ಹಿ ಇಸ್ ಡೆಡ್" ಎಂದು ಮಾತು ಮುಗಿಸಿದ.
"ನೀವೆಲ್ಲೂ ಹೋಗಕೂಡದು, ದಯವಿಟ್ಟು ನಾನು ಹೇಳಿದ್ದನ್ನು ಕೇಳ್ತಾ ಇರಿ. ನನಗೆ ನಿಮ್ಮ ಸಹಾಯ ಬೇಕು. ಮುಂದೇನಾಗುತ್ತೆ ಅಂತ ಅಲ್ಲೇ ಕಾಯ್ತಾ ಇರಿ. ನಾನು ಮತ್ತೆ ಕರೆ ಮಾಡ್ತೀನಿ" ಅಂತ ಫೋನ್ ಇಟ್ಟ.
ವಿಕ್ರಂ ರೆಸಾರ್ಟಿನ ಹೊರಗಡೆ,ಕಾರಿನಲ್ಲಿಯೇ ಕುಳಿತು ಎಲ್ಲವನ್ನೂ ವೀಕ್ಷಿಸುತಲಿದ್ದ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಜೀಪು ಬಂದಿತ್ತು. ಅದರಲ್ಲಿಂದ ಇನ್ಸ್ಪೆಕ್ಟರ್ ನಾಯಕ ತನ್ನ ಪಡೆಗಳೊಂದಿಗೆ ಕೆಳಗೆ ಇಳದಿದ್ದ. ಒಳಗಡೆ ಹೋಗಿ ಒಂದರ್ಧ ಗಂಟೆಯಲ್ಲಿ ಹೊರಗೆ ಬಂದು ಮತ್ತೆ ಜೀಪು ಹತ್ತಿದ. ವಿಕ್ರಮನಿಗೆ ಗೊತ್ತಿತ್ತು ಅವನೆಲ್ಲಿ ಹೊರಟಿರುವನೆಂದು. ತನ್ನ ಕಾರಿನೊಂದಿಗೆ ಅವನ ಜೀಪನ್ನು ಹಿಂಬಾಲಿಸತೊಡಗಿದನು.
ಜೀಪು ಕ್ಯಾಜುವಲ್ಟಿ ಮುಂದೆ ನಿಂತು ಕೊಂಡಿತು. ಅನತಿ ದೂರದಲ್ಲಿ ಕತ್ತಲಲ್ಲಿ ವಿಕ್ರಂ ಕಾರು ನಿಲ್ಲಿಸಿದ್ದ. ಅವನಿಗೆ ಅನಿಸತೊಡಗಿತು ಬಹುಶ ಇನ್ಸ್ಪೆಕ್ಟರ್ ನಾಯಕನೇ ಇನ್ವೆಸ್ಟಿಗೇಟಿಂಗ್ ಆಫೀಸರ್ ಇರಬಹುದೆಂದು. ಸ್ವಲ್ಪ ಸಮಯದ ನಂತರ ರವಿಗೆ ಮತ್ತೆ ಕರೆ ಮಾಡಿದ
"ಈಗ ಏನ ಆಗಾಕತ್ತೈತಿ?"
"ರಮೇಶ್ ಮತ್ತು ಇನ್ಸ್ಪೆಕ್ಟರ್ ಏನೋ ಮಾತಾಡಿಕೊಂಡರು, ಬಹುಶ ದೇಹವನ್ನು ಅರ್ಜೆಂಟ್ ಪೋಸ್ಟ್ ಮಾರ್ಟಮ್ ಗೆ ಒಯ್ಯಬಹುದು. ರಮೇಶ್ ಆಗಲೇ ಪೋಸ್ಟ್ ಮಾರ್ಟಮ್ ಕೋಣೆ ಕಡೆ ಹೊಂಟಾನು" ಎಂತೆಂದ ರವಿ. ಏನೂ ಮರು ಉತ್ತರ ಕೊಡದೇ ವಿಕ್ರಂ ಫೋನ್ ಇಟ್ಟ.
ನಡು ರಾತ್ರಿಯಲ್ಲೇಕೆ ಅರ್ಜೆಂಟ್ ಪೋಸ್ಟ್ ಮಾರ್ಟಮ್? ಕ್ರೈಂ ಬ್ರಾಂಚಿನ ಮಾರ್ಗಸೂಚಿಗಳನ್ನು ಅರಿತಿದ್ದ ವಿಕ್ರಮನಿಗೆ ತನ್ನ ಅನುಮಾನ ನಿಜವೆನಿಸತೊಡಗಿತು. ಕಾರನ್ನು ಇಳಿದು ಯಾರಿಗೂ ಗೊತ್ತಾಗದ ಹಾಗೆ ಪೋಸ್ಟ್ ಮಾರ್ಟಮ್ ಕೋಣೆಯತ್ತ ನಡೆದು ಸ್ವಲ್ಪ ದೂರದಲ್ಲಿ ಅಡಗಿ ಕುಳಿತ. ಸ್ವಲ್ಪ ಸಮಯದಲ್ಲಿಯೇ ಚೋಪ್ರಾನ ದೇಹವನ್ನು ತರಲಾಗಿತ್ತು. ಇನ್ಸ್ಪೆಕ್ಟರ್ ನಾಯಕ ಹೊರಗಡೆ ನಿಂತುಕೊಂಡ, ರಮೇಶ್ ದೇಹದೊಂದಿಗೆ ತನ್ನ ಸಹಾಯಕನ ಜೊತೆಗೆ ಒಳಗೆ ಹೋದ. ಒಂದು ಗಂಟೆಯ ನಂತರ ರಮೇಶ್ ಹೊರಗಡೆ ಬಂದ. ಜೊತೆಗೆ ಇನ್ನೊಬ್ಬ ಕಾಫಿನ್ನನ್ನು ಟ್ರಾಲಿಯ ಮೇಲೆ ದಬ್ಬುತ್ತ ಹೊರಗೆ ಬಂದ. ಅಷ್ಟರಲ್ಲಿಯೇ ಅಲ್ಲೊಂದು ದೊಡ್ಡ ಕಾರು ಬಂದು ನಿಂತಿತು. ಎಲ್ಲರೂ ಸೇರಿ ಕಾಫಿನ್ನನ್ನು ಕಾರಿನಲ್ಲಿ ಹಾಕಿದರು.
ವಿಕ್ರಂ ಸೂಕ್ಷ್ಮವಾಗಿ ಗಮಿನಿಸಿದ. ರಮೇಶ್ ಇಬ್ಬರೊಂದಿಗೆ ಹೊರಗಡೆ ಬಂದ. ಅವನು ಒಳಗೆ ಹೋಗಿದ್ದು ಒಬ್ಬನ ಜೊತೆಗೆ ಆದರೆ ಹೊರಗೆ ಬಂದಿದ್ದು ಇಬ್ಬರೊಂದಿಗೆ. ಹಾಗಾದರೆ ಈ ಎರಡನೆಯ ವ್ಯಕ್ತಿ ಯಾರು?? ಆ ಕಾಫಿನ್ನ ಕೋಣೆಯಲ್ಲಿ ಮೊದಲೇ ಹೇಗೆ ಬಂದು ಸೇರಿತ್ತು?
ಅವನಿಗೆ ಉತ್ತರ ಆಗಲೇ ಸಿಕ್ಕಿತ್ತು
ತಕ್ಷಣವೇ ಯಾರಿಗೂ ಕಾಣದ ಹಾಗೆ ತನ್ನ ಕಾರಿಗೆ ಮರಳಿ, ಬಸ್ಯಾ ಮತ್ತು ರವಿಗೆ ತನ್ನ ಕಾರಿನತ್ತ ಬರಲು ಹೇಳಿದ.
ಕಾರಿನಲ್ಲಿ ಕುಳಿತ ಬಸು ಮತ್ತು ರವಿ ಕೇಳಿದರು " ಅಲ್ಲಪ್ಪ , ನಮ್ಮನ್ನೆಲ್ಲಿ ಕರಕೊಂಡು ಹೊಂಟಿದಿ, ಏನ್ ನಡಿಯಾಕತ್ತೈತಿ ಅಂತ ಒಂದೂ ಗೊತ್ತಾಗವಾಲ್ದು ನಮಗ"
"ಎನೂ ಹೆದರಿಕೊಳ್ಳಬ್ಯಾಡರಿ. ನಿಮ್ಮನ್ನ ಈ ಕೇಸಿನಾಗ ತರುದಿಲ್ಲ. ನಿಮಗ ಒಂದು ವಿಚಿತ್ರ ತೋರಿಸಿ ಬಿಟ್ಟ ಬಿಡತೀನಿ"
"ಅದೇನಪ್ಪ ವಿಚಿತ್ರ?" ಅಂತ ಕೇಳಿದ ರವಿ
"ಚೋಪ್ರಾ ಸತ್ತಿಲ್ಲ, ಇನ್ನು ಜೀವಂತ ಅದಾನ ಇಷ್ಟರಲ್ಲಿಯೇ ಕಾಣಸತಾನ"ಅಂತೆಂದ.
"ವಾಟ್?" ಅಂತ ಇಬ್ಬರೂ ಉದ್ಗಾರ ಎಳೆದರು.
"ಈಗ ಎಲ್ಲಾ ಕಥೆ ಹೇಳ್ತಿನಿ ಕೇಳರಿ" ಅಂತಂದ ವಿಕ್ರಂ.
"ನನಗೇನೂ ಈ ಕಾರ್ಯಕ್ರಮಕ್ಕೆ ಬರುವ ಆಶೆ ಇರಲಿಲ್ಲ ಆದರೆ ಒಂದು ಕಾರ್ಯಾಚಾರಣೆಯ ಮೇಲೆ ಬಂದಿದ್ದೆ. ಮುಂಬೈ ಕ್ರೈಂ ಬ್ರಾಂಚಿನ ಆದೇಶದ ಮೇರೆಗೆ. ಚೋಪ್ರಾ ವೈದ್ಯಕೀಯ ಶಿಕ್ಷಣ ಮುಗಿದ ಮೇಲೆ ಒಬ್ಬ ದೊಡ್ಡ ಡ್ರಗ್ ಕಳ್ಳ ಸಾಗಾಣಿಕೆಕಾರನಾಗಿದ್ದ. ಅವನ ವ್ಯವಹಾರ ಕೇಂದ್ರಗಳು ದೇಶದಲ್ಲೆಲ್ಲ ಹಬ್ಬಿಕೊಂಡಿವೆ. ಅವನ ವಾರ್ಷಿಕ ಆದಾಯ ನೂರಾರು ಕೋಟಿಗಳು. ಬೆಂಗಳೂರಿನಲ್ಲಿ ರಮೇಶ್ ಮತ್ತು ರಾಜೇಶ್ ಅವನ ಪಾರ್ಟ್ನರ್ಸ್. ರಾಜಕೀಯದಲ್ಲಿ ಅವನು ಪ್ರಭಾವಿತ ವ್ಯಕ್ತಿ. ದುರದೃಷ್ಟವಶಾತ್ ಅವನು ಬೆಂಬಲಿಸುತ್ತಿದ್ದ ರಾಜಕೀಯ ಪಕ್ಷ ಕೆಲವು ತಿಂಗಳಗಳ ಹಿಂದೆ ಚುನಾವಣೆಯಲ್ಲಿ ಸೋತು ಹೋಯಿತು.
ಆಡಳಿತಾರೂಢ ಪಕ್ಷ ಅವನನ್ನು ಸಧ್ಯದರಲ್ಲಿಯೇ ಬಂಧಿಸುವ ತಯ್ಯಾರಿ ನಡೆಸಿತ್ತು. ಅವನಿಗೆ ವಿಷಯ ಹೇಗೋ ಗೊತ್ತಾಯಿತು. ಕೆಲವೇ ವಾರಗಳ ಹಿಂದೆ ತನ್ನೆಲ್ಲ ಆಸ್ತಿಯನ್ನು ಹೆಂಡತಿ ಹೆಸರಲ್ಲಿ ಬರೆದು ಬಿಟ್ಟ. ಇಷ್ಟರಲ್ಲಿಯೇ ದೇಶವನ್ನು ಬಿಟ್ಟು ದುಬೈಗೆ ಹಾರುವ ಯೋಚನೆಯನ್ನು ಮಾಡಿದ್ದ. ಮುಂಬೈ ಕ್ರೈಂ ಬ್ರಾಂಚ್ ಅವನೆಲ್ಲ ಚಲನವಲನಗಳನ್ನು ಆಲಿಸಿ ನನಗೆ ವರದಿಯನ್ನು ಕೊಡುತ್ತಲಿದ್ದರು. ಅವನ ವಿಮಾನ ಟಿಕೆಟ್ ಬುಕಿಂಗ್ ಗನ್ನು ಗುರುತಿಸಿದ್ದರು. ಅವನು ಬೆಂಗಳೂರಿಗೆ ಒಂದೇ ಕಡೆಯ ಟಿಕೆಟ್ ಬುಕ್ ಮಾಡಿದ್ದ, ಈಗ ಇಲ್ಲಿಂದ ಇನ್ನೇನು ಐದು ತಾಸುಗಳಲ್ಲಿ ಹಾರಲಿರುವ ದುಬೈ ವಿಮಾನಕ್ಕೂ ಒಂದೇ ಕಡೆಯ ಟಿಕೆಟನ್ನು ಬುಕ್ ಮಾಡಿದ್ದಾನೆ. ಅಂದರೆ ಅವನಿಗೆ ಮರಳಿ ಮುಂಬೈ ಗೆ ಹೋಗುವ ವಿಚಾರವಿಲ್ಲ. ಅದಕ್ಕೆ ತಕ್ಕಂತೆ ರಮೇಶ್ ಮತ್ತು ರಾಜೇಶ್ ಅವನಿಗೆ ಒಳ್ಳೆಯ ಉಪಾಯವನ್ನು ತಯ್ಯಾರು ಮಾಡಿದ್ದರು"
ಕಿವಿ ನಿಮರಿಸಿ ಕುತೂಹಲದಿಂದ ಇದನ್ನೆಲ್ಲಾ ಕೇಳುತ್ತಿದ್ದ ಅವರೆಂದರು
"ಅದೇನಪ್ಪ, ಅಂತ ಉಪಾಯ?" ಎಂದು
"ಉಪಾಯ ಬಹಳ ಸರಳವಾಗಿತ್ತು. ಮರು ಮಿಲನದ ಕಾರ್ಯಕ್ರಮವನ್ನು ತಮ್ಮ ಕಾರ್ಯಾಚರಣೆಯ ವೇದಿಕೆಯನ್ನಾಗಿ ಉಪಯೋಗಿಸುವದು. ಅವನು ರಕ್ತದಂತ ದ್ರವವನ್ನು ತಿಳುವಾದ ಪ್ಲಾಸ್ಟಿಕ್ ಲೆಯರಿನಲ್ಲಿ ತುಂಬಿ ತನ್ನ ಎದೆ ಮತ್ತು ಹೊಟ್ಟೆಗೆ ಕಟ್ಟಿಕೊಂಡು ಸ್ಟೇಜಿನ ಮೇಲೆ ಡ್ಯಾನ್ಸಿಗೆ ಬರುವದು, ಬೇರೆ ಡ್ಯಾನ್ಸರ್ ಅವನಿಗೆ ಹುಸಿಗುಂಡು ಹಾರಿಸಿ ಲೆಯರನ್ನು ಪಂಕ್ಚರ್ ಮಾಡುವದು, ಚೋಪ್ರಾ ನೆಲಕ್ಕೆ ಕುಸಿಯುವದು, ರಕ್ತದಂತ ದ್ರವ ಅವನ ಎದೆ ಮತ್ತು ಹೊಟ್ಟೆಯಿಂದ ಸೋರುವದು, ನೆರೆದ ಜನರ ಮುಂದೆ ಅವನ ಮೇಲೆ ಗುಂಡಿನ ದಾಳಿ ಆಯಿತೆಂದು ತೋರಿಸುವದು, ಕ್ಯಾಜುವಲ್ಟಿ ಆಫೀಸರ್ ಅವನು ಸತ್ತಿರವನೆಂದು ದೃಢಪಡಿಸುವದು, ಇನ್ವೆಸ್ಟಿಗೇಟಿಂಗ್ ಆಫೀಸರ್ ಅರ್ಜೆಂಟ್ ಪೋಸ್ಟ್ ಮಾರ್ಟಮ್ ಗೆ ಅನುಮತಿ ಕೊಡುವದು, ಪೋಸ್ಟ್ ಮಾರ್ಟಮ್ ನಾಟಕವಾಡಿ ಯಾವುದೊ ಅನಾಥ ಹೆಣವನ್ನು ಕಾಫಿನ್ನನಲ್ಲಿ ತುಂಬಿ ಚೋಪ್ರಾನನ್ನು ಹೊರ ಕಳಿಸುವದು, ಚೋಪ್ರಾ ಸುದ್ದಿಯು ಇನ್ನೂ ಟಿ ವಿ ಗಳಲ್ಲಿ ಹಬ್ಬುವದಕ್ಕಿಂತ ಮುಂಚೆಯೇ ವಿಮಾನ ನಿಲ್ದಾಣವನ್ನು ಸೇರಿ ದುಬೈಗೆ ಹಾರುವದು" ಎಂದು ಹೇಳಿ ಒಮ್ಮೆ ಅವರತ್ತ ನೋಡಿದ.
“ಎಷ್ಟು ಸರಳ ಉಪಾಯ, ಹಾಗೆಯೇ ಭಾಗಿಯಾದವರು ಬಹಳೇ ಕಡಿಮೆ ಜನ. ಇಬ್ವರು ವ್ಯವಹಾರದ ಪಾರ್ಟರ್ಸ್, ಒಬ್ಬ ಪೊಲೀಸ್ ಇನ್ಸ್ಪೆಕ್ಟರ್, ಒಬ್ಬ ಕ್ಯಾಜುವಲ್ಟಿ ಆಫೀಸರ್ ಮತ್ತು ಡಿ ಗ್ರೇಡ್ ಕೆಲಸುಗಾರ. ತೆರೆ ಮರೆಯಲ್ಲಿ ಯಾವುದೋ ರಾಜಕೀಯ ವ್ಯಕ್ತಿಯೂ ಇರಬಹುದು. ಇವರಿಗೆಲ್ಲ ಲಂಚ ಸುರಿಯಲು ಅವನಿಗೆ ಹಣದ ಕೊರತೆಯೇನು ಇರಲಿಲ್ಲ. ಹಾಗೆಯೇ ಎಲ್ಲ ನಡೆದಿದ್ದು ಮದ್ಯ ರಾತ್ರಿಯಲ್ಲಿ , ಪರ್ಫೆಕ್ಟ್ ಟೈಮಿಂಗ್"
ಆಶ್ಚರ್ಯಚಕಿತನಾಗಿ ಬಸು ಕೇಳಿದ "ಇದೆಲ್ಲಾ ನಿನಗ ಹ್ಯಾಂಗ್ ಗೊತ್ತಾಯಿತು" ಎಂದು.
"ಬಸ್ಯಾ, ನಾನು ಪತ್ತೇದಾರ. ಅಪರಾಧಿ ಎಷ್ಟೇ ಚಾಣಾಕ್ಷನಾಗಿದ್ದರೂ, ಪತ್ತೇದಾರನಿಗೆ ಸಹಾಯವಾಗುವ ಕೆಲವು ಸುಳಿವುಗಳನ್ನು ಬಿಟ್ಟು ಹೋಗಿರುತ್ತಾರೆ. ಡ್ಯಾನ್ಸರ್ ನಿಂದ ಸಿಕ್ಕ ನಕಲಿ ಪಿಸ್ತೂಲು, ಚೋಪ್ರಾನ ಹತ್ತಿರ ಬಿದ್ದಿದ್ದ ಪ್ಲಾಸ್ಟಿಕ್ ಬುಲ್ಲೆಟ್ ಮತ್ತು ಕರವಸ್ತ್ರದಲ್ಲಿ ಸಂಗ್ರಹಿಸಿದ ರಕ್ತದಂತ ದ್ರವ ಇವುಗಳೆಲ್ಲ ಸಾಕಾಗಿದ್ದವು ಅವನು ಸತ್ತಿಲ್ಲವೆಂದು ತಿಳಿಯಲು. ಹಾಗೆಯೇ ಮುಂದೇನಾಯಿತು ಅಂತ ನಿಮಗೆಲ್ಲ ಗೊತ್ತಲ್ಲ" ಅಂತೆಂದ
ಅಷ್ಟರಲ್ಲಿಯೇ ಅವನ ಕಾರು ವಿಮಾನ ನಿಲ್ದಾಣವನ್ನು ತಲುಪಿತ್ತು. ಅವನು ಕ್ರೈಂ ಬ್ರಾಂಚ್ ಐ ಡಿ ಹಿಡಿದುಕೊಂಡು ಚೆಕ್ ಇನ್ ಕೌಂಟರ್ ನತ್ತ ಧಾವಿಸುತ್ತಿದ್ದ. ಇವರಿಬ್ಬರೂ ಕುತೂಹಲದಿಂದ ಅವನನ್ನು ಹಿಂಬಾಲಿಸುತ್ತಿದ್ದರು. ಅವನೆಂದಂತೆ ಕೆಲವೇ ನಿಮಿಷಗಳಲ್ಲಿ ಸೂಟ್ಕೇಸ್ ನೊಂದಿಗೆ ಚೋಪ್ರಾ ಹಾಜರಾದ. ವಿಕ್ರಂ ನನ್ನು ಕಂಡು ಗಾಬರಿಯಾಗಿ ಓಡಲು ಪ್ರಯತ್ನಿಸಿದ. ಆದರೆ ವಿಕ್ರಂ ಅವನನ್ನು ತನ್ನ ಬಲಿಷ್ಠ ಕೈಯಲ್ಲಿ ಹಿಡಿದುಕೊಂಡು ಅಂದ "ಚೋಪ್ರಾ ನಿನ್ನ ಉಪಾಯವೇನೋ ಚನ್ನಾಗಿತ್ತು ಆದರೆ ನಿನ್ನ ಗ್ರಹಚಾರ ಸರಿಯಿರಲಿಲ್ಲ" ಎಂದು. ಬಸು ಮತ್ತು ರವಿ ಅನತಿ ದೂರದಲ್ಲಿ ನಿಂತು ಮೂಕರಾಗಿ ನೋಡುತ್ತಿದ್ದರು. ಅಷ್ಟರಲ್ಲಿಯೇ ಪೊಲೀಸ್ ಗುಂಪು ರಭಸದಿಂದ ಓಡಿ ಬರುತ್ತಲಿತ್ತು.

~ ಶಿವಶಂಕರ ಮೇಟಿ

2 thoughts on “ರಸಋಷಿ ಸ್ಮರಣೆ ಹಾಗೂ ಪತ್ತೇದಾರಿ ಕಥೆ

  1. ಯಶಸ್ವಿ ಪತ್ತೆದಾರಿ ಕಥೆಗೆ ಉತ್ತಮ ಹಿನ್ನೆಲೆ, ವಿಷಯ ಜ್ಞಾನ, ಕಥೆಯ ಓಘದ ಮೇಲೆ ಹಿಡಿತ ಇವೆಲ್ಲ ಅವಶ್ಯ. ಮೇಟಿಯವರು ಇವೆಲ್ಲವನ್ನೂ ಚಿಕ್ಕ ಕಥೆಯಲ್ಲಿ ಸಾಧಿಸಿದ್ದಾರೆ. ಜೊತೆಗೆ ನಸುಹಾಸ್ಯ, ಸಮಕಾಲೀನತೆ, ವಾಸ್ತವತೆಗಳನ್ನೂ ಸೇರಿಸಿ ಬಿಸಿ ಚಹಾದ ಜೊತೆಗೆ ತಕ್ಕುದಾದ ಹದವಾದ ಗಿರ್ಮಿಟ್ ತಯಾರಿಸಿ ನಮ್ಮೆದುರಿಟ್ಟಿದ್ದಾರೆ.

    ಇನ್ಸ್ಪೆಕ್ಟರ್ ವಿಕ್ರಂ ನ ಮುಂದಿನ ಸಾಹಸಕ್ಕೆ ಕಾಯುತ್ತಿದ್ದೇನೆ.

    – ರಾಂ

    Like

  2. ಇಂದಿನ ಅನಿವಾಸಿ ಸಂಚಿಕೆ ರಸಋಷಿಯ ಜನ್ಮದಿನದಂದು ಪ್ರಕಟವಾಗಿ ಸಮಯೋಚಿತವಾದ ಎರಡು ನೆನಪಿನ ರಸಗವಳಗಳನ್ನು ಹೊತ್ತು ತಂದಿದೆ. ‘ತಾಯಿಕರುಳಿನ’ ಗೌರಿಯವರು ಸಂಪಾದಕಿ ಅಂದ ಮೇಲೆ ಅವೆರಡನ್ನು ಆಯ್ದದ್ದರಲ್ಲಿ ಆಶ್ಚರ್ಯವಿಲ್ಲ. ನನಗೆ ಎರಡೂ ಹೊಸತು. ಹೊಸ ವರ್ಷಕ್ಕೆ ನಾಂದಿ ಬೇರೆ ಹಾಡಿದ್ದಾರೆ!

    ಕವಿಯ ಅವ್ವನ ಪದಗಳನ್ನೇ ಉಪಯೋಗಿಸಿ “ಓ ಲಕ್ಷ್ಮಣಾ!” ಚೋಪ್ರಾ ಅಂತ ಉದ್ಗಾರ ತೆಗೆದೆ ನಾನು ಮೇಟಿಯವರ ಅತ್ಯಂತ ಕುತೂಹಲಕಾರಿ ಪತ್ತೇದಾರಿ ಕಥೆಯನ್ನು ಓದಿ! ‘ಅಲುಮ್ನೈ’ ಕೂಟದ ನೆಪದಲ್ಲಿ ಛದ್ಮವೇಷದಲ್ಲಿ ಬಂದು ಡ್ಯೂಟಿ ಮಾಡಿದ ಡಾಕ್ಟರ್- ಪತ್ತೇದಾರ ಪುರುಷೋತ್ತಮನ ಮುಂದಿನ ಸಾಹಸ ಓದಲು ಕುತೂಹಲದಿಂದ ಕಾಯುತ್ತಿರುತ್ತೇನೆ. (ಉಳಿದ ಓದುಗರಿಗೆ ರಹಸ್ಯ ಬಿಟ್ಟುಕೊಡದೆ ಹೇಳುವದೆಂದರೆ) ನಕಲಿ ರಕ್ತವಾಗಿರದೆ ಅದು ಸಾಚಾ ಆಗಿರಲಿ. HbA1c ಟೆಸ್ಟ್ ಮಾಡುವೆ!
    ಈ ಕ್ರಿಸ್ಮಸ್ ದಲ್ಲಿ ಕ್ರೈಮ್- ಪತ್ತೇದಾರಿ ಕಥೆಯ ಶೋಗಳು ಟೆಲಿವಿಜನ್ ದಲ್ಲಷ್ಟೇ ಅಲ್ಲ, ಅನಿವಾಸಿಯಲ್ಲೂ ದಾಖಲಾದದ್ದು ಹಳೆಯ ಗೆಳೆಯರ ರೀಯೂನಿನ್ನನ್ನಷ್ಟೇ ಕಾಕತಾಳೀಯ! ಬರೆದ- ಬರೆಸಿದ ಇಬ್ಬರಿಗೂ ಮೆಡಲ್ ಈ ಸಲ! ಶ್ರೀವತ್ಸ ದೇಸಾಯಿ

    Like

Leave a comment

This site uses Akismet to reduce spam. Learn how your comment data is processed.