ನಿರ್ಜನ ದ್ವೀಪಕ್ಕೆ ಎಂಟು ಮುದ್ರಿಕೆಗಳು (discs) – ರೇಡಿಯೋ ಕಾರ್ಯಕ್ರಮ

ನಾನು ಹೇಳುತ್ತಿರುವದು ಕಳೆದ ತಿಂಗಳಿನಲ್ಲಿ 81 ವರ್ಷ ಪೂರೈಸಿದ Desert island Discs ಎನ್ನುವ ಅತ್ಯಂತ ಜನಪ್ರಿಯ ಬಿಬಿಸಿ ರೇಡಿಯೋ ಕಾರ್ಯಕ್ರಮದ ಬಗ್ಗೆ. ಕಳೆದ ತಿಂಗಳಲ್ಲಿ ಎರಡು ಮಹತ್ವದ ರೇಡಿಯೋ ಕಾರ್ಯಕ್ರಮಗಳನ್ನು ನೆನೆಸಿಕೊಂಡಿದ್ದೇವೆ. ಒಂದನೆಯದು ಇದೇ ಫೆ. 13ನೆಯ ತಾರೀಕು ಜಾಗತಿಕ ರೇಡಿಯೋ ದಿವಸ (World Radio Day) ಇತ್ತು. ಎರಡನೆಯದು ಎಂಬತ್ತೊಂದು ವರ್ಷಗಳ ಹಿಂದೆ ಜನೇವರಿ 29 ರಂದು ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ)ಯ ’ಡೆಸರ್ಟ್ ಐಲಂಡ್ ಡಿಸ್ಕ್’ ಕಾರ್ಯಕ್ರಮವನ್ನು ಮೊದಲ ಬಾರಿ ಬಿತ್ತರಿಸಿದ ದಿನ. ಅದು ಇಲ್ಲಿಯವರೆಗೆ ತಪ್ಪದೆ ಪ್ರತಿ ವಾರ ಪ್ರಸರವಾಗುತ್ತಲೇ ಬಂದ ಜಗತ್ತಿನ ಎರಡನೆಯ ದೀರ್ಘಾಯುಷಿ ಪ್ರಸಾವಾಗಿದೆ. ಚಿಕ್ಕಂದಿನಲ್ಲಿ ಟಿ ವಿ, ಮೋಬೈಲ್ ಇಲ್ಲದೆ ರೇಡಿಯೋ ಜೊತೆಗೆನೇ ಬೆಳೆದೆ ಅಂತ ರೇಡಿಯೋಗೂ ನನಗೂ ದೀರ್ಘ ಕಾಲದ ನಂಟು ಉಂಟು! ಈಗಲೂ ಪ್ರತಿದಿನ BBC Radio-4 ್ದ ಯಾವುದಾದರೂ ಒಂದು ಕಾರ್ಯಕ್ರಮ ಕೇಳದೇ ಇರುವುದಿಲ್ಲ. ಅದರಲ್ಲಿ ಹಲವಾರು ನನ್ನ ಮೆಚ್ಚಿನವು. ಅಂಥದರಲ್ಲಿ ಒಂದರ ಬಗ್ಗೆ ಕೆಳಗೆ ಬರೆಯಲಿಚ್ಛಿಸುತ್ತೇನೆ. ಅದರ ಪರಿಚಯವಿರದಿದ್ದಲ್ಲಿ ಈಗ ಶುರು ಮಾಡ ಬಹುದು. ನಿಮ್ಮಲ್ಲಿ ಯಾರಾದರೂ ಈಗಾಗಲೇ ಅದನ್ನು ಕೇಳಿ ಅದರ ಭಕ್ತರಾಗಿದ್ದರೆ ಇನ್ನೂ ಖುಶಿ!

ನೀವು ನನ್ನ ಹಾಗೆ ನಲವತ್ತು ವರ್ಷಗಳಿಂದ ಕೇಳುತ್ತ ಬಂದ ಈ ಕಾರ್ಯಕ್ರಮ ’ಫ್ಯಾನ್’ದ (ಅಭಿಮಾನಿ) ಆಗಿರದಿದ್ದರೂ ಅದರ ಬಗ್ಗೆಯಾದರೂ ಕೇಳಿರಬಹುದು. 1941 ರಲ್ಲಿ ಒಂದು ನವೆಂಬರ್ ತಿಂಗಳದ ರಾತ್ರಿ ತಾನು ವಾಸಿಸುತ್ತಿದ್ದ ಗುಡಿಸಲಿನಲ್ಲಿ ಹಠಾತ್ತನೆ ಪವರ್ ಕಟ್ಟಾಗಿ ಚಳಿಯಲ್ಲಿ ಪಾಯಜಾಮ ಹಾಕಿಕೊಂಡು ಇನ್ನೇನು ಮಲಗುತ್ತೇನೆ ಅಂತ ಹೊರಟ ರಾಯ್ ಪ್ಲಮ್ಲಿಯ (Roy Plomley) (ಚಿತ್ರ: ಎಡಗಡೆ) ತಲೆಯಲ್ಲಿ ಒಂದು ರೇಡಿಯೋ ಕಾರ್ಯಕ್ರಮದ ಐಡಿಯಾ ಫ್ಲಾಶ್ ಆಯಿತಂತೆ. ಈಗಾಗಲೇ ಆತನಿಗೆ ರೇಡಿಯೋ ರಂಗದಲ್ಲಿ ಸಾಕಷ್ಟು ಅನುಭವವಿತ್ತು. ಆ ರಾತ್ರಿ ತಕ್ಷಣ ಎದ್ದು ಕುಳಿತು ಅದರ ರೂಪರೇಷೆಗಳನ್ನು ಬರೆದು ಕಳಿಸಿದಾಗ ಬಿ ಬಿ ಸಿ ಗೆ ಅದು ಇಷ್ಟವಾಗಿ ನಂತರದ ಎರಡೇ ತಿಂಗಳಲ್ಲಿ ಅದರ ಮೊದಲ ರೆಕಾರ್ಡಿಂಗ್ ಮತ್ತು ಪ್ರಸಾರ ಶುರುವಾಯಿತು. ಆ ಸರಣಿಯಲ್ಲಿ ಇಲ್ಲಿಯ ವರೆಗೆ ತಪ್ಪದೇ ಪ್ರತಿವಾರವಾರಕ್ಕೆರಡು ಸಾರಿ ಅದರ ಕಾರ್ಯಕ್ರಮ ರೇಡಿಯೋ ತರಂಗಗಳಲ್ಲಿ ಬಿತ್ತರಣೆಯಾಗುತ್ತ ಬಂದಿದೆ. ಇಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಈ ವಾರದ ವ್ಯಕ್ತಿಯ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಅವರು ನಿರ್ಜನ ದ್ವೀಪಕ್ಕೆ ಒಯ್ಯುವ ಎಂಟು ಹಾಡುಗಳು ಯಾವವು ಅಂತ ಅಂತ ತಿಳಿಯಲು ಅದರ ಎರಡೂವರೆ ಲಕ್ಷ ರೆಗುಲರ್ ಕೇಳುಗರಂತೆ ರೇಡಿಯೋ ಮುಂದೆ ನಾನೂ ಹಾಜರಾಗುವವನಿದ್ದೇನೆ! ಆ ಕಾರ್ಯಕ್ರಮ A great British Institution ಅನ್ನುವ ಖ್ಯಾತಿ ಗಳಿಸಿದೆಯಲ್ಲವೆ?

ಇದರ ಸ್ವರೂಪ (format) ಏನು?

ವಾರದ ವ್ಯಕ್ತಿಯನ್ನು ಎಲ್ಲೋ ದೂರದ ತಿರುಗಿ ಬರಲಾಗದ ಕಾಲ್ಪನಿಕ ನಿರ್ಜನ ನಡುಗಡ್ಡೆಗೆ ಶಾಶ್ವತವಾಗಿ ಗಡಿಪಾರು ಮಾಡಲಾಗುತ್ತಿದೆ. ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯಾವುದೇ ಸಾಧನೆಗಳಿಲ್ಲ. ಬದುಕಲು ತನ್ನೆಲ್ಲ ಸರ್ವೈವಲ್ ನೈಪುಣ್ಯವನ್ನುಪಯೋಗಿಸಿ ಸ್ವಾವಲಂಬನದ ದಾರಿ ಹುಡುಕಿ ಬದುಕಿಕೊಳ್ಳಬೇಕು. ಆತನಿಗೆ ಅಥವಾ ಅವಳಿಗೆ ಒಯ್ಯಲು ಕೊಡುವುದು ತನ್ನ ಅಯ್ಕೆಯ ಎಂಟು ಹಾಡು ಅಥವಾ ಧ್ವನಿ ಮುದ್ರಿಕೆಗಳು, ಒಂದು ಬೈಬಲ್ ಮತ್ತು ಶೇಕ್ಸ್ಪಿಯರ್ ಬರೆದ ಸಮಗ್ರ ಸಾಹಿತ್ಯದ ಕಾಪಿ. ಸಾಮಾನ್ಯವಾಗಿ ಆ ವ್ಯಕ್ತಿ ಸೆಲೆಬ್ರಿಟಿಯಾಗಿರುತ್ತಾನೆ,ಅಥವಾ ಪ್ರಸಿದ್ಧ ವ್ಯಕ್ತಿ, ನಟ, ಆಟಗಾರ, ಸಂಗೀತ ಪಟು,ಉದ್ಯಮಿ, ರಾಜಕಾರಣಿ, ಪ್ರಧಾನ ಮಂತ್ರಿ (ಈಗಾಗಲೇ ಒಂಬತ್ತು ಪ್ರಧಾನಿಗಳು ಇದಕ್ಕೆ ’ಬಲಿ’ಯಾಗಿದ್ದಾರೆ! ) ಹೀಗೆ ಸಮಾಜದ ಯಾವದೇ ಸ್ತರದಿಂದಲೂ ಬಂದಿರಬಹುದು.ಅದಕ್ಕೇ ಈ ಕಾರ್ಯಕ್ರಮ ಒಂದು ನಾಡಿನ ಅಥವಾ ಆ ಪ್ರಕಾರದ Who’s Who ಇದ್ದಂತೆ. ಮೀನು ಹಿಡಿದೋ, ಸಿಕ್ಕಿದ್ದನ್ನು ಬೆಳೆದೋ ಹಣ್ಣು ಹಂಪಲಿನ ಗಿಡಗಳು ಕಂಡರೆ ಕಿತ್ತಿ ತಿನ್ನುತ್ತ, ತಮ್ಮ ಇಷ್ಟದ ಅವೇ ಎಂಟು ಹಾಡುಗಳನ್ನು ಕೇಳುತ್ತ (ಆ ಯಂತ್ರ ಎಲ್ಲಿಂದ ಬಂತು ಅದಕ್ಕೆ ಯಾವ ಪವರ್ ಅದೆಲ್ಲ ಕೇಳ ಬೇಡಿರಿ) ರಾಬಿನ್ಸನ್ ಕ್ರೂಸೋನಂತೆ ಬಾಳ್ವೆ ಮಾಡ ಬೇಕು! ಈ ನಿಯಮಗಳನ್ನು ಕೇಳಿದ ಒಂದಿಬ್ಬರು ಆತ್ಮಹತ್ಯೆಗೆ ಸಯಾನಾಯ್ಡ್ ಪಿಲ್ಸ್ ಬೇಡಿದ್ದೂ ಉಂಟು!   

ಆಹ್ವಾನಿತ ಅತಿಥಿಗಳು ಮತ್ತು ಸಂದರ್ಶಕರು

ವಾರದ ಅತಿಥಿ ಯಾವ ದೇಶದವರೂ ಆಗಿರಬಹುದು, ಆದರೆ ಇಲ್ಲಿಯವರೆಗೆ ಅದರಲ್ಲಿ ಭಾಗವಹಿಸಲು ಆಮಂತ್ರಿಸಿದವರೆಲ್ಲ (ಅಥವಾ ಅದಕ್ಕೆ ಕಾಯುತ್ತಿರುವವರು!) ಜನಸಾಮಾನ್ಯರಿಗೆ ಚಿರಪರಿಚಿತರಾಗಿರಬೇಕು ಎನ್ನುವದು ಅಲಿಖಿತ ನಿಯಮ. ಅವರು ಯಾರೂ ಇರಬಹುದು, ಗಂಡಸು, ಹೆಂಗಸು, ಹಿರಿಯರು, ಚಿಕ್ಕವರು, ಹೀಗೆ. ಒಬ್ಬರೇ ಅಥವಾ ಒಮ್ಮೊಮ್ಮೆ ಇಬ್ಬರು ಇರಬಹುದು. (ಉದಾ: ಮೋರ್ಕೋಮ್ಬ್ ಮತ್ತು ವೈಸ್, ಆಂಟನ್ ಮತ್ತು ಡೆಕ್). ಅವರೆಲ್ಲ ಬಿಬಿಸಿ ಸ್ಟುಡಿಯೋದ ಸಂದರ್ಶನದ ಕೋಣೆಯಲ್ಲಿ ಸಂದರ್ಶಕರೊಡನೆ ತಮ್ಮ ಸಾರ್ಥಕ ಜೀವನದ ಏರಿಳಿತ, ವೃತ್ತಿ ಸಾಫಲ್ಯ, ಸುಖ-ದುಃಖಗಳನ್ನು ಬಿಚ್ಚಿಟ್ಟು ಸಂವಾದದಲ್ಲಿ ಪಾಲುಗೊಳ್ಳಲು ತಯಾರಾಗಿರುತ್ತಾರೆ. ಕೇಳುಗರನ್ನು ಮನರಂಜಿಸುತ್ತಾರೆ, ನಗಿಸುತ್ತಾರೆ ಒಮ್ಮೊಮ್ಮೆ ತಾವೂ ಭಾವುಕರಾಗಿ ಅಳುತ್ತಾರೆ. ಅದಕ್ಕೆ ಹಾಲಿವುಡ್ ಸಿನಿಮಾ ನಟ ಟಾಮ್ ಹ್ಯಾಂಕ್ಸ್ ಒಂದು ಉದಾಹರಣೆ ! 1942 ರಲ್ಲಿ ಪ್ರಾರಂಭವಾದಾಗಿಂದಲೂ 1985 ರಲ್ಲಿ ತಾವು ಮರಣ ಹೊಂದುವ ತನಕ ರಾಯ್ ಪ್ಲಮ್ಲಿಯವರೇ ಆ ಸಂದರ್ಶನಗಳನ್ನು ನಡೆಸಿಕೊಟ್ಟರು. ಅವರ ನಂತರ ಮೈಕೆಲ್ ಪಾರ್ಕಿನ್ಸನ್, ಸೂ ಲಾಲಿ(18 ವರ್ಷ) ಕರ್ಸ್ಟಿ ಯಂಗ್ (12 ವರ್ಷಗಳ ವರೆಗೆ) ಇವರ ನಂತರ ಈಗ ನಾಲ್ಕನೆಯವಳಾಗಿ ಲಾರೆನ್ ಲೆವರ್ನ್ ಸಂದರ್ಶಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಕೆಲವು ಸಂದರ್ಶಕರು ರಾಜಕಾರಣಿಗಳ ನೀರಿಳಿಸುತ್ತ ಭೀಮ ಭಯಂಕರ ಎದುರಾಳಿಯಂತೆ ವರ್ತಿಸಿವುದು ಅಪರೂಪ. ಆದರೆ ರಾಯ್ ಪ್ಲಮ್ಲಿ ಮಹಾಶಯ ಅತ್ಯಂತ ಸೌಜನ್ಯದಿಂದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈಗಿನ ಕಾಲದ ಶೈಲಿಯಲ್ಲಿ ಸ್ವಲ್ಪವೇ ಬದಲಾವಣೆಯಾಗಿದೆಯಾದರೂ ಸಂದರ್ಶಕರೆಲ್ಲ ತಮ್ಮದೆ ಛಾಪು ಒತ್ತಲು ಪ್ರಯತ್ನಿಸುತ್ತಿರುವದು ಇಂದಿನ ಯುಗದಲ್ಲಿ ಅಚ್ಚರಿಯ ವಿಷಯವಲ್ಲ. ಕಾರ್ಯಕ್ರಮದ ಪ್ರಾರಂಭದಲ್ಲಿ ರೇಡಿಯೋ ಅಲೆಗಳಲ್ಲಿ ತೇಲಿ ಬರುವ ಸಿಗ್ನೇಚರ್ ಟ್ಯೂನ್ ನಿರ್ಜನ ದ್ವೀಪದ ಬೀಚನ್ನು ನೆನಪಿಸುತ್ತದೆ. ಅದು 1942 ರಿಂದಲೂ ಹಾಗೆಯೇ ಇದೆ – ಇತ್ತೀಚಿನ ವರ್ಷಗಳಲ್ಲಿ ಕಡಲು ಹಕ್ಕಿಯ ಕೂಗನ್ನೂ ಅದರಲ್ಲಿ ಬೆರಸಿ ಕಡಲು, ಅಲೆಗಳು ಇವನ್ನು ಕೂಡಿಸಿ ಒಂದು ರೋಮ್ಯಾಂಟಿಕ್ ಕಲ್ಪನಾವಿಲಾಸವನ್ನು ಸೃಷ್ಟಿಸಲಾಗುತ್ತದೆ.1951ರಲ್ಲಿ ಎರಡು ಮಾರ್ಪಾಡುಗಳಾದವು. ನಿಯಮಗಳನ್ನು ಸಡಿಲಿಸಿ ಇನ್ನೆರಡು ವಸ್ತುಗಳನ್ನು ಕೊಂಡೊಯ್ಯಲು ಅನುಮತಿ ಕೊಟ್ಟರು. ಒಂದನೆಯದಾಗಿ ನಡುಗಡ್ಡೆಯಲ್ಲಿ ಏಕಾಕಿಯಾಗಿ ಉಳಿಯುವವರ ಸಂಗಾತಿಯಾಗಿ ಅವರ ಐಚ್ಛಿಕ ಪುಸ್ತಕ. ಇನ್ನೊಂದು ಅವರ ನೆಚ್ಚಿನ ವಿಲಾಸದ ವಸ್ತು (Luxury item). ’ನಿಮ್ಮ ಐಚ್ಛಿಕ ಲಗ್ಶರಿ ಏನು’ ಎನ್ನುವ ಪ್ರಶ್ನೆಗೆ 1982ರಲ್ಲಿ  ’ಸೆಕ್ಸ್ ಕಿಟನ್’ ಅಂತ ಬಿರುದು ಗಳಿಸಿದ್ದ ಬ್ರಿಜಿಟ್ ಬಾರ್ಡೋ ಅಂದು ಒಂದು ಅವಾಚ್ಯ ಶಬ್ದವನ್ನು ಉಚ್ಚರಿಸಿದಾಗ ಜಂಟಲ್ಮನ್ ಪ್ಲಮ್ಲಿ ಬೆಚ್ಚಿ ಬಿದ್ದಿದ್ದರು! ಪಲಾಯನವಾದಿಗಳು ಇಬ್ಬರು ವಿಮುಕ್ತಿಗೆ ಸಾಯನಾಡ್ ಬೇಡಿದ್ದರು!

ಅತಿಥಿಗಳ ಆಯ್ಕೆ

ಸಾಮಾನ್ಯವಾಗಿ ಒಮ್ಮೆಯಷ್ಟೇ ಬರುತ್ತಾರಾದರೂ ಕೆಲವರು ಎರಡು ಬಾರಿ, ಮೂರು ಬಾರಿ ಸಹ ಬಂದಿದ್ದಾರೆ ಡೇವಿಡ್ ಅಟನ್ಬರೋ ಒಬ್ಬರನ್ನೇ ಆ ಸಿಗ್ನೇಚರ್ ಟ್ಯೂನ್ ನುಡಿಸುತ್ತಿದ್ದಂತೆ ನಾಲ್ಕು ಬಾರಿ ಬರಮಾಡಿಕೊಂಡಿದ್ದಿದೆ. ಆತನ ಲಗ್ಜರಿ ಒಂದು ಪಿಯಾನೋ. ಅನೇಕರದು ಸಹ ಅದೇ ಆಗಿದೆ. ಕೆಲವರು ತಮ್ಮ ತಲೆದಿಂಬನ್ನು ಕೇಳಿದರೆ ಇನ್ನು ಕೆಲವರು ತಮ್ಮದೇ ಹಾಸಿಗೆಯನ್ನು. ಒಂದಿಬ್ಬರು ಆತ್ಮಹತ್ತೆಗೆ ವಿಷ (ಸಾಯನೈಡ್) ಬೇಕೆಂದಿದ್ದಾರೆ. ತಾವು ಒಯ್ಯುವ ಎಂಟು ಗಾನ ಮುದ್ರಿಕೆಗಳಲ್ಲಿ ಹೆಚ್ಚು ಜನಪ್ರಿಯವಾದವು ಹೆಚ್ಚಾಗಿ ಪಾಶಿಮಾತ್ಯ ಶಾಸ್ತ್ರೀಯ ಸಂಗೀತದ ರೆಕಾರ್ಡುಗಳೇ. ಪ್ರಿಯವಾದ ಸಂಗೀತ ಅವರವರ ವ್ಯಕ್ತಿತ್ವದ ಪ್ರತೀಕವಲ್ಲವೆ? ಮತ್ತು ಅತಿಥಿಗಳಾಗಿ ಬರುವವರು ಸಮಾಜದ ಯಾವ ವರ್ಗದವರು ಎನ್ನುವದರ ಮೇಲೆ  ಅದು ಅನ್ವಯಿಸುತ್ತದೆ ಅಂದ ಮೇಲೆ ಇಲ್ಲಿಯವರೆಗೆ ಪ್ರಸಾರವಾದ ಮೂರು ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳಲ್ಲಿ ಯೂರೋಪಿಯನ್ ಶಾಸ್ತ್ರೀಯ ಸಂಗೀತಗಾರರಾದ  ಹ್ಯಾಂಡಲ್ ಬೇಥೋವನ್,  ಮೋಝಾರ್ಟ್, ಬಾಖ್, ಸ್ಟ್ರಾಸ್, ಶೂಬರ್ಟ್ ಮುಂತಾದವರ ಕೃತಿಗಳ ಬೇಡಿಕೆಯೇ ಹೆಚ್ಚು. ಅತಿಥಿಗಳು ಪಾಪ್ (Pop songs) ಇಷ್ಟ ಪಟ್ಟಿದ್ದಲ್ಲಿ ಬೀಟಲ್ಸ್ ನಂತರ ಡೆವಿಡ್ ಬಾವಿ ಮತ್ತು ಫ್ರಾಂಕ್ ಸಿನಾಟ್ರಾ ಅವರ ಹೆಸರುಗಳು ಹೆಚ್ಚಾಗಿ ಕೇಳಿಬಂದುದರಲ್ಲಿ ಆಶ್ಚರ್ಯವಿಲ್ಲ. ಅತಿಥಿಗಳಲ್ಲಿ ಹೆಚ್ಚಿನವರು ಯು ಕೆ ದವರೆ ಆದರೂ ಅಮೆರಿಕನ್ನರು ಮತ್ತಿತರ ಇಂಗ್ಲಿಷ್ ಮಾತಾಡುವ ದೇಶದವರೆ ಹೆಚ್ಚಾಗಿ ಕಾಣಿಸಿಕೊಂಡಿದ್ದಲ್ಲೂ ಆಶ್ಚರ್ಯವಿಲ್ಲ.

ಆಲೆನ್ ಟ್ಯೂರಿಂಗ್ ಸಂಸ್ಥೆ ಮತ್ತು ಹಾಡುಗಳ ಆಯ್ಕೆ

Desert Island Discs ಎಷ್ಟು ಜನಪ್ರಿಯ ಕಾರ್ಯಕ್ರಮ ಅಂದರೆ ಅದು ಬಿಬಿಸಿಯ ಟಚ್ ಸ್ಟೊನ್ (ಮಾನದಂಡ) ಅಂತ ಮನ್ನಿಸುತ್ತಾರೆ. ಅದು ಪ್ರತಿಯೊಂದು ಮೈಲಿಗಲ್ಲನ್ನು (50, 60, 70) ದಾಟಿದಂತೆ ಅದರ ಬಗ್ಗೆ ಬರೆದ ಲೇಖನಗಳಿಗೆ ಲೆಕ್ಕವಿಲ್ಲ. ರೇಡಿಯೋದ ಅತ್ಯಂತ ಉತ್ಕೃಷ್ಠ ಕಾರ್ಯಕ್ರಮ ಅಂತ ಮತ್ತೆ ಮತ್ತೆ ಜನಪ್ರಿಯತೆಯ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸುತ್ತಿದೆ. ಈ ಮೊದಲು ಹಳೆಯ ಕಾರ್ಯಕ್ರಮಗಳು ಮತ್ತೆ ಕೇಳಲು ಸಿಗುತ್ತಿರಲಿಲ್ಲ.ಇತ್ತೀಚೆಗೆಯಷ್ಟೇ ಬಿಬಿಸಿ ಅದರ ಹಕ್ಕುದಾರರೊಂದಿಗೆ ಒಪ್ಪಂದ ಮಾಡಿಕೊಂಡಾಗಿನಿಂದಷ್ಟೇ ಎಪ್ಪತ್ತು ವರ್ಷಗಳ ಎಲ್ಲ ರೆಕಾರ್ಡಿಂಗ್ ಗಳೂ ಬಿಬಿಸಿ ಸೌಂಡ್ಸ್ ನಲ್ಲಿ ಕೇಳಲು ಲಭ್ಯವಾಗಿ ಅದರ die hard fans ಗೆ ವರದಾನವಾಗಿದೆ. ಬರೀ ಹಾಡುಗಳ ಹೆಸರಷ್ಟೇ ಅಲ್ಲ ಪೂರ್ತಿ ಹಾಡುಗಳನ್ನೂ, ಅಥವಾ ಕೆಲವರದು ಅಪರೂಪದ ಧ್ವನಿಮುದ್ರಿಕೆಗಳಷ್ಟೇ ಇರಬಹುದು, ಅವೆಲ್ಲ ಲಭ್ಯವಾಗಿವೆ. ಎಪ್ಪತ್ತು ವರ್ಷಗಳ ಯಾದಿ ಇಂಟರ್ನೆಟ್ಟಿನಲ್ಲಿ ಸುಲಭವಾಗಿ ನೋಡಬಹುದು.

ಈ ಮಾಹಿತಿ ಸಿಕ್ಕ ಮೇಲೆ ಬ್ರಿಟಿಷ್ ಲೈಬ್ರರಿಯ Alan Turing Institution ವತಿಯಿಂದ ಅತಿಥಿಗಳ ಹಾಡುಗಳ ಆಯ್ಕೆ ಏನನ್ನು ಸೂಚಿಸುತ್ತದೆ ಎನ್ನುವದರ ಬಗ್ಗೆ ಕಂಪ್ಯೂಟರ್ ಸಹಾಯದಿಂದ ದೊಡ್ಡ ಪ್ರಮಾಣದ ಸಂಶೋಧನೆ ಹೊರಬರುತ್ತಿದೆ. ಯಾವ ಹಾಡುಗಳು ಅಂತ ಅತಿಯಾಗಿ ಯೋಚನೆ ಮಾಡಿ ಅದರಲ್ಲೇ ಮುಳುಗಿದ ಟಾಂ ಹ್ಯಾಂಕ್ಸ್ ನಂತೆಯೇ ಅನೇಕರೂ ಭಾವುಕರಾಗುತ್ತಾರೆ. ಸಂದರ್ಶಕಿಯ ಪ್ರಶ್ನೆಗಳಿಗೆ ಉತ್ತರ ಕೊಡುವದಕ್ಕಿಂತ ಹಾಡುಗಳ ಬಗ್ಗೆ ಲಕ್ಷ್ಯ ಕೇಂದ್ರೀಕರಿಸಿಬಿಡುತ್ತಾರೆ. ಕಂಠ ಬಿಗಿಯುತ್ತದೆ. ಅವರು ಸಾಮಾನ್ಯವಾಗಿ ಆರಿಸುವ ಹಾಡುಗಳು ತಮ್ಮ ಜೀವನದ ಮುಖ್ಯ ಘಟ್ಟದಲ್ಲಿ ಆದ ಅನುಭವಗಳಾದಾಗ, ’ಆತ್ಮ ಸಾಕ್ಷಾತ್ಕಾ’ವಾದಾಗ, ಅಥವಾ ಆಗ ಕೊಂಡ, ಅಥವಾ ಆಲಿಸಿದ ಹಾಡುಗಳು.

ಭಾರತೀಯರು?

ನನಗೆ ಗೊತ್ತಿದ್ದಂತೆ ಮೂವರೇ ಭಾರತೀಯ ಮೂಲದವರು ಈ ಪ್ರೋಗ್ರಾಂದಲ್ಲಿ ಕಾಣಿಸಿಕೊಂಡಿದ್ದಾರೆ: ಲೇಖಕ ಸಾಲ್ಮನ್ ರಶ್ದಿ (1988), ಕೋಬ್ರಾ ಬಿಯರ್ ಉದ್ದಿಮೆಯನ್ನು ಹುಟ್ಟುಹಾಕಿದ ಬ್ಯಾರನ್ ಕರಣ್ ಬಿಲಿಮೋರಿಯಾ (2004), ಮತ್ತು ಪ್ರಪ್ರಥಮ ಭಾರತೀಯಳು ಜೈಪೂರದ ರಾಜಮಾತಾ ಗಾಯತ್ರಿ ದೇವಿ (1982). ಪಾಕಿಸ್ತಾನದ ಕ್ರಿಕೆಟ್ ಪಟು ಮತ್ತು ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಹ ಅದರಲ್ಲಿ ಒಂದು ಬಾರಿಕಾಣಿಸಿಕೊಂಡಿದ್ದಾರೆ.

ಈ ರೇಡಿಯೋ ಕಾರ್ಯಕ್ರಮವನ್ನು ಪ್ರತಿವಾರ ನೀವೂ ಕೇಳಿ ಆನಂದಿಸುವಿರೆಂಬ ಭರವಸೆಯಿದೆ ನನಗೆ!

ಲೇಖಕರು: ಶ್ರೀವತ್ಸ ದೇಸಾಯಿ