ಎರಡು ಕವನಗಳು

ರಾಮ ರಾಮ

ಈ ಭವ್ಯ ರಾಮ ಮಂದಿರ

ಬೇಕೆಂದನೆ ಆ ದಿವ್ಯ ರಾಮ ಚಂದಿರ

ಮನೆ ಮನೆಯಲ್ಲೂ ನಾನಿರುವೆನೆಂದ
ಮನ ಮನದಲ್ಲೂ ನಾ ನಗುವೆನೆಂದ
ಮನೆಗೊಂದು ಇಟ್ಟಿಗೆ ಕಂಭ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

ಅಮ್ಮ ನೊಂದ ಮಾತಿಗೆ ರಾಜ್ಯ ಕೊಟ್ಟ
ಅಗಸನೆಂದ ನೀತಿಗೆ ಹೆಂಡತಿ ಬಿಟ್ಟ
ರಹೀಮನಿಗೆಂದು ಬಿಟ್ಟ ಸ್ಥಾನ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

ಕಾವಿ ಕೇಸರಿ ದರ್ಪದಿ ಆವನೆಂದೂ ಉಡಲಿಲ್ಲ
ಭಸ್ಮ ಕುಂಕುಮಾದಿ ಹಣೆಯಲ್ಲಿ ಧರಿಸಿಲ್ಲ
ಈ ವೇಷ ಈ ರೋಷ ಅವ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

  • ಡಾ. ಗುರುಪ್ರಸಾದ್ ಪಟ್ವಾಲ್

——————————————————————————————————————–

ಆನಂದದ ಬೇನೆ

ನನ್ನ ಕಣ್ ಹೃನ್ಮನಗಳನು ಸೂಜಿಗಲ್ಲಿನಂತೆ ಸೆಳೆಯುವ ಸುಂದರ ಸುಮಗಳೇ

(ಚಿತ್ರಕೃಪೆ: ವಿಜಯನರಸಿಂಹ)

ನಿಮ್ಮನು ದಿನವೂ ನೋಡುತಿರುವಾಸೆ

ನಿಮ್ಮೊಂದಿಗೆ ದಿನವೂ ಮಾತಾಡುವಾಸೆ

ನನ್ನ ನಿತ್ಯದ ಆಗು ಹೋಗುಗಳನು ನಿಮಗೆ ಹೇಳುವಾಸೆ

ನನ್ನ ಇಷ್ಟ ಕಷ್ಟಗಳನು ನಿಮಗೆ ತಿಳಿಸುವಾಸೆ

ನನ್ನ ಸುಖ ದುಃಖಗಳನು ಹಂಚಿಕೊಳುವಾಸೆ

ನನ್ನ ಪ್ರತಿಯೊಂದು ನಿರ್ಧಾರದ ಪರಿಣಾಮಗಳನು ಕಡೆಯುವಾಸೆ

ನನ್ನ ಚಿಂತೆಗಳ ಕಾರಣಗಳನು ನಿಮ್ಮೊಂದಿಗೆ ಮಂಥಿಸುವಾಸೆ

ನನ್ನ ಸುತ್ತಲಿನ ಜಗದ ಜನರ ಕುಟಿಲತೆಯನ್ನು ಕುಟುಕುವಾಸೆ

ನನ್ನೊಳಗಿನ ಎಲ್ಲ ಭಾವಗಳನು ತಿಳಿನೀರಿನ ಕೊಳದ ರೀತಿ ನಿಮಗೆ ತೋರುವಾಸೆ

(ಚಿತ್ರಕೃಪೆ: ರಾಮ್)

ನನ್ನ ತಪ್ಪುಗಳನು ತಿದ್ದಿಕೊಳುವ ಬಗೆಗಳನು ನಿಮ್ಮಿಂದ ಕೇಳುವಾಸೆ

ನನ್ನ ಭೂತ, ವರ್ತಮಾನ, ಭವಿತವ್ಯಗಳನು ತೆರೆದಿಡುವಾಸೆ

ಆದರೆ ನಿಮ್ಮ ಸುಂದರ ನಗೆ ಮೊಗಗಳು ನನ್ನನ್ನು ಮೂಕನಾಗಿಸಿಬಿಡುತ್ತವೆ

ಆಗ ನೀವೂ ಮೂಕ , ನಾನೂ ಮೂಕ

ಇರಲಿ ಬಿಡಿ ಹೀಗೆ ನನ್ನ ನಿಮ್ಮ ನಡುವಿನ ಮೂಕ ಸಂವೇದನೆ

ಇದರ ಆನಂದವನು ನಾನು ಹೀಗೇ ಸವಿಯುವ ಬೇನೆ

🖋ವಿಜಯನರಸಿಂಹ

3 thoughts on “ಎರಡು ಕವನಗಳು

  1. ಗುರುಪ್ರಸಾದ್ ಅವರ ಚಿಕ್ಕ ಸರಳ ಲಘುವಿಡಂಬಣೆಯ ಕವನ ಸಹಜ ಅಂತ್ಯಪ್ರಾಸದಿಂದ ಇನ್ನೂ ಸುಂದರವಾಗಿ ಮೂಡಿಬಂದಿದೆ. ಪ್ರಶ್ನೆಗಳ ರೂಪದಲ್ಲಿ ಬರೆದಿರುವ ಕೇಳ್ದನೇ ನಕ್ಕನೇ ಸಾಲುಗಳು ಕವನದ ಶಕ್ತಿಯನ್ನು ಹೆಚ್ಚಿಸಿವೆ.

    ವಿಜಯ ನಾರಸಿಂಹ ಅವರಿಗೆ ಅವರದೇ ಒಂದು ಶೈಲಿಯಿದೆ, ಅದೇ ಶೈಲಿಯಲ್ಲಿ ಬರೆದ ಭಾವಲಹರಿಯ ಕವನ, ನಾನು ಹಿಂದೆ ಬರೆದಂತೆ, ನವೋದಯದ ಕವಿತೆಗಳನ್ನು ನೆನಪಿಸುತ್ತವೆ.

    ಇವೆರಡಕ್ಕೂ ಚಂದದ ಪ್ರಸ್ತಾವನೆ ಮತ್ತು ಚಿತ್ರ ಹಾಕಿದ ಬರೆದ ರಾಂಗೆ ಧನ್ಯವಾದಗಳು.

    – ಕೇಶವ

    Like

  2. ಮೇಲಿನ ಎರಡೂ ಕವನಗಳಲ್ಲಿ ಮುಗುಳು ನಗೆಯ ಒಂದು ಸಾಮ್ಯತೆಯಿದೆಯಾದರೂ ಎರಡೂ ವಿಭಿನ್ನ. ಗುರುಪ್ರಸಾದ್ ಪಟವಾಲ್ ಅವರ ಕವನದಳ್ಳಿ ಬರುವ ರಾಮ್ ಲಲ್ಲಾ ನ ಹಸನ್ಮುಖ ಕರ್ನಾಟಕದ ಶಿಲ್ಪಿ ಸಾವಿರಾರು ಮಕ್ಕಳ ಮುಖಗಳನ್ನು ಪ್ರತ್ಯಕ್ಷ ಮತ್ತು ನೆಟ್ಟಿನಲ್ಲಿ ನೋಡಿ ಕಟೆದಿದ್ದು. ಸೂಕ್ಷ್ಮ ಸಂವೇದನೆಯ ಕವಿ ಅದರಲ್ಲಿ ಹಲವಾರು ಕಾರಣಗಳನ್ನು ಹುಡುಕುತ್ತಾರೆ. ಮನುಷ್ಯನ ಸಣ್ಣತನಕ್ಕೂ ಇರಬಹುದು . ಬರಿ ಹನ್ನೆರಡು ಸಾಲಗಳಾದರೂ ಅರ್ಥ ಗರ್ಭಿತ ಪದ್ಯ.

    ಎರಡನೆಯ ಕವನದಲ್ಲಿ ಕೈ ವಿಜಯನರಸಿಂಹ ಅವರು ದೇವರಿಗೆ ಸಮಾನವಾದ ಹೂಗಳೊಂದಿಗೆ ಮಾತಿನಲ್ಲಿ ತೊಡಗಿ ತಮ್ಮ ದಿನದ ಆಗುಹೋಗುಗಳ ಜೊತೆಗೆ ಮನುಷ್ಯನ ನ್ಯೂನತೆ ಮತ್ತು ಸಮಾಜದ ದೌರ್ಬಲ್ಯವನ್ನೂ ತೆರೆದಿಟ್ಟು ಸಲಹೆ ಕೇಳಲು ಉದ್ಯುಕ್ತರಾದರೂ ಅವುಗಳ ಮುಗ್ಧ ನಗು ಮೂಕನನ್ನಾಗಿ ಮಾಡಿ ಅದು ವಿಫಲವಾಗುತ್ತದೆ! ಆ ವೇದನೆಯಲ್ಲೂ ಒಂದು ಅನುಭೂತಿ ಉಂಟಾಗಿ (ಸತ್ ಚಿತ್ ) ಆನಂದಾನುಭವದಿಂದ ಆದ ಸಂತೋಷದಿಂದಲೇ ತೃಪ್ತರಾಗುತ್ತಾರೆ. ಅವರ ಮತ್ತು ಸಂಪಾದಕರ ಮರದಡಿಯ ಕ್ರೋಕಸ್ಸಿನ ಸುಂದರ ಚಿತ್ರಗಳು ಕವನಕ್ಕೆ ಪೂರಕವಾಗಿವೆ.

    Like

  3. ಈ ವಾರದ ಅನಿವಾಸಿಯಲ್ಲಿ ಪ್ರಕಟಗೊಂಡಿರುವ ಎರಡೂ ಕವಿತೆಗಳು ಹಲವಾರು ಚಿಂತನೆಗಳಿಗೆ ಅನುವುಮಾಡಿಕೊಟ್ಟಿದೆ. ಗುರು ಅವರ ರಾಮ ರಾಮ ಕವನದಲ್ಲಿ, ನೂತನ ಭವ್ಯ ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಉತ್ತಮ ಪುರುಷ ರಾಮನ ಕೆಲವು ಕಸಿವಿಸಿ ಅನಿಸಿಕೆಗಳು ಅರ್ಥಪೂರ್ಣವಾಗಿ ಅಭಿವ್ಯಕ್ತಿಗೊಂಡಿದೆ. ಅಲ್ಲಿ ರಾಮನ ಉದಾರತೆ ಮತ್ತು ಇತರ ಆದರ್ಶಗಳು ಮೂಡಿಬಂದಿವೆ. ಅಂದಹಾಗೆ ರಾಮನಿಗೆ ಹಿಂದೆ ಕಟ್ಟಿದ್ದ ಮಂದಿರ ಉರುಳಿಸಿ ತನ್ನ ಮಸೀದಿಯನ್ನು ಕಟ್ಟಿರುವ ಬಗ್ಗೆ ರಹೀಮನಿಗೂ ಅಸಮಾಧಾನವಿದ್ದಿರಬಹುದು. ರಾಮನ ಹಾಗೆ ರಹೀಮನೂ ಒಳಗೇ ನಕ್ಕಿರಬಹುದು. ರಾಮನಿಗೂ ರಹೀಮನಿಗೂ ಮಂದಿರ ಮಸೀದಿಗಳು ಬೇಕಿರಲಿಲ್ಲ ಎಂಬುದು ಕವಿಯ ಇಂಗಿತ. ಇಷ್ಟೊಂದು ಭವ್ಯ ಮಂದಿರ ನಿಜವಾಗಿ ಯಾರಿಗೆ ಬೇಕಿತ್ತು ಎನ್ನುವುದನ್ನು ಓದುಗರು ಊಹಿಸಬಹುದು. ೧೨ನೇ ಶತಮಾನದಲ್ಲಿ ಶರಣರು “ಎನ್ನ ಕಾಲೇ ಕಂಬವು ದೇಹವೇ ದೇಗುಲ” ಎನ್ನುತ್ತಾ ದೇವರನ್ನು ದೇವಸ್ಥಾನಗಳ ಹೊರಗೆ ತರುವ ಪ್ರಯತ್ನವನ್ನು ಮಾಡಿದ್ದರು. ಕುವೆಂಪು ಅವರ ” ಓ ಬನ್ನಿ ಸೋದರರೇ ಬೇಗಬನ್ನಿ, ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ, ಸಿಲುಕದಿರಿ ಮತವೆಂಬ ಮೋಹದ ಅಜ್ಞಾನಕ್ಕೆ , ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಸೇರಿರೈ ಮನುಜ ಮತಕೆ, ವಿಶ್ವಪಥಕೆ’ ಎಂಬ ಸಾಲುಗಳನ್ನು ಈ ಸಂದರ್ಭದಲ್ಲಿ ಮತ್ತೆ ಅವಲೋಕಿಸಬೇಕಾಗಿದೆ. ದೇವರು, ಧರ್ಮ, ನಂಬಿಕೆ ನಮ್ಮ ಭಾರತೀಯ ಸಂಸ್ಕೃತಿಯ ಹಾಸುಹೊಕ್ಕಾಗಿದೆ ನಿಜ. ಆದರೂ ವೈಚಾರಿಕ ನಿಲುವು, ನಾಸ್ತಿಕವಾದ ಮತ್ತು ಧರ್ಮನಿರಪೇಕ್ಷೆ ಕೂಡ ಒಂದು ಆಯ್ಕೆ ಆಗಬಹುದು, ಆಗಬೇಕು. ಅದಕ್ಕೂ ದನಿ ಬೇಕು. ಭಾವುಕತೆಯನ್ನು ಪಕ್ಕಕ್ಕೆ ಸರಿಸಿ ಹೊಸ ದೃಷ್ಟಿಯಿಂದ ವಿಚಾರಮಾಡಬೇಕು.

    ವಿಜಯ್ ನರಸಿಂಹ ಅವರ ಆನಂದದ ಬೇನೆ ನಮ್ಮೆಲ್ಲರ ಬೇನೆ ಕೂಡ ಆಗಿದೆ. ಕವಿಯ ಅಸೆ ಸಹಜ. ನಿಸರ್ಗದಲ್ಲಿ ಸೂರ್ಯೋದಯ, ಚಂದ್ರೋದಯ, ಮೊಗ್ಗು ಅರಳುವ ಸಮಯ ಎಲ್ಲ ಆ ನಿಶಬ್ದದಲ್ಲಿ ಸಂಭವಿಸುತ್ತದೆ. ಆ ಸಮಯದಲ್ಲಿ ತುಟಿ ಹೊಲಿಯೋ ಮಂಕುತಿಮ್ಮ ಎಂಬ ಡಿವಿಜಿ ಅವರ ಸೂಚನೆ ಸರಿಯಾಗಿದೆ. ಮೌನದಲ್ಲಿ ಒಂದು ಸೊಗಸಿದೆ, ಉಲ್ಲಾಸವಿದೆ. ಕವಿಮನಸ್ಸಿನ ಬೇನೆಯೂ ಇರಬಹುದು.

    Like

Leave a comment

This site uses Akismet to reduce spam. Learn how your comment data is processed.