ಎರಡು ಕವನಗಳು – ಕೇಶವ ಕುಲಕರ್ಣಿ

ಕಿನ್ಸುಗಿ

ಹೇಳದೇ ಉಳಿದ ಮಾತು
ಧಡಕ್ಕನೇ ಹಾಕಿದ ಬಾಗಿಲು
ಕಣ್ಣಲ್ಲೇ ಉಳಿದ ಕಂಬನಿ
ಎದೆಯಲ್ಲೇ ಕುದಿವ ಅವಮಾನ
ತಲೆಯನ್ನು ತಿನ್ನುವ ಅನುಮಾನ

ಒಂದು ದಿನ ನಮ್ಮ ಬದುಕುಗಳು
ಅಕಾಲದಲ್ಲಿ ಚೆಲ್ಲಾಪಿಲ್ಲಿಯಾಗಿ
ಬಿದ್ದ ಪಾರಿಜಾತದ ಹೂಗಳಂತೆ
ನಿಶ್ಶಬ್ದವಾಗಿ ಪಚ್ಚೆಯಾಗಿ ಬಣ್ಣ ಒಣಗಿ ಬಿದ್ದುಕೊಂಡಿರುತ್ತವೆ
ಎತ್ತಿಕೊಳ್ಳಲು ಹೋದರೆ ನೆಲಕ್ಕೆ ಅಂಟಿಕೊಂಡು ನರಳುತ್ತವೆ
ಹಸಿ ಕೊಳಕು

ಡೈನಿಂಗ್ ಟೇಬಲ್ಲಿನ ಊಟಕ್ಕೆ ನಿಶ್ಶಬ್ದದ ರುಚಿ
ಸಾಂಬಾರಿಗೆ ಹಿಂದಿನ ದಿನದ ಸುಳ್ಳಿನ ವಾಸನೆ
ಸಾಮಾಜಿಕ ತಾಣಗಳು ಸಾವಿರ ಕಣ್ಣುಗಳಿಂದ
ದುರುಗುಟ್ಟಿ ನೋಡುತ್ತವೆ ಅಪ್-ಡೇಟಿಗೆ ಕಾಯುತ್ತ

ಮೂವ್ ಆನ್ ಅನ್ನುತ್ತಾನೆ ಥೆರಪಿಸ್ಟು
ದುಃಖ ಎನ್ನುವುದೇನು ನೇರ ದಾರಿಯೇ?
ಅದೊಂದು ಕಾಲುದಾರಿಯೂ ಇರದ ಬೆಟ್ಟ
ಪ್ರತಿಯೊಂದು ಹೆಜ್ಜೆಯೂ
ಸೋಲುಗಳನ್ನು ನೋವುಗಳನ್ನು ಅವಮಾನಗಳನ್ನು
ನೆನಪಿಸುತ್ತಲೇ ಇರುತ್ತದೆ
“ಏಕೆ, ಹೇಗೆ, ನನಗೇ ಯಾಕೆ, ನಾನೇನು ತಪ್ಪು ಮಾಡಿದೆ?”
ಎಂದು ಪ್ರತಿಧ್ವನಿಸುತ್ತವೆ

ಗಾಜಿನಂತೆ ಒಂದೇ ಸಲ ಚೂರು ಚೂರಾಗುವುದಿಲ್ಲ
ಮೊದಲು ನೆಗ್ಗುತ್ತೇವೆ
ಆಮೇಲೆ ನಿಧಾನವಾಗಿ ಸೀಳುತ್ತೇವೆ
ಬಿ ರು ಕು ಬಿಡುತ್ತೇವೆ
ತುಂಡಾ
ಗುತ್ತೇವೆ

ಜಪಾನೀಜರು ಬಿರುಕುಗಳನ್ನು
ಚಿನ್ನದಿಂದ ಕಿನ್ಸುಗಿ ಮಾಡುತ್ತಾರಂತೆ
ಬಿರುಕುಗಳು ಎದ್ದು ಕಾಣುವಂತೆ ಸುಂದರ
ಅಚ್ಚಹೊಸ ಬದುಕನ್ನು ಕಟ್ಟಲು
ಭೂತವನ್ನು ಅಳಿಸಬೇಕಾಗಿಲ್ಲ

ಬಹುಶಃ ಎಲ್ಲವನ್ನೂ
ಮೊದಲಿನಂತೆಯೇ ಜೋಡಿಸಬೇಕಾಗಿಲ್ಲ
ಹೊಸ ಆಕಾರದಲ್ಲೂ
ದೀಪವನ್ನು ಹಚ್ಚಬಹುದು
ಬಿರುಕುಗಳಲ್ಲಿಯೇ
ಪ್ರೀತಿ ಬೆಳಗಬಹುದಲ್ಲವೇ ಸಖಿ?

ಎತ್ತಿಕೊಳ್ಳಬಹುದಾದುದನ್ನು ಎತ್ತಿಕೊಳ್ಳೋಣ
ಒಂದು ನೆನಪಿನ ನಗು
ಕಾರಣವಿಲ್ಲದೆ ಹಿಡಿದ ಕೈ
ವಿನಾಕರಣ ನಗು
ಅಕಾರಣ ಪ್ರೀತಿ
ನಿಧಾನವಾಗಿ ಜೋಪಾನವಾಗಿ
ಒಂದೊಂದಾಗಿ ಒಟ್ಟುಗೂಡಿಸೋಣ

ಅನ್ನೋ ಜನರು

`ನಿನಗೆ ಹೇಗೆ ಬೇಕೋ ಹಾಗೆ ನಗು,
ಆದರೆ ಗಂಡಸರ ಮುಂದೆ ಅಷ್ಟು ಜೋರಾಗಿ ನಗಬೇಡ.

ನಿನಗೇನು ಬೇಕೋ ಹಾಕಿಕೊ,
ಆದರೆ ಸ್ಕರ್ಟನ್ನು ಮೊಣಕಾಲ ಕೆಳಗೆ ಹಾಕಿಕೊ,
ಎದೆಯ ಸೀಳು ಮತ್ತು ಹೊಕ್ಕುಳ ಕಾಣದಂಥ ಟಾಪ್ ಹಾಕಿಕೊ,`

ಎಂದ ಅಮ್ಮನ ಮಾತಿಗೆ ಸುಮ್ಮನೆ ನಕ್ಕೆ.
ಪೇಪರ್ ಓದುತ್ತ ಕೂತ ಅಪ್ಪ ಸಮ್ಮತಿಸುತ್ತಿದ್ದ.

`ನಿನ್ನ ಗಂಡ ಏನೂ ಅನ್ನುವುದಿಲ್ಲವೇನೇ?
ಎಂದು ಮತ್ತೆ ಕೇಳಿದಳು.

`ಮಕ್ಕಳನ್ನೂ ಸಲಹಬಲ್ಲೆ,
ಮನೆಯನ್ನೂ ನಡೆಸಬಲ್ಲೆ,
ವಾಹನವನ್ನೂ ಓಡಿಸಬಲ್ಲೆ,
ಆಫೀಸನ್ನೂ ನಡೆಸಬಲ್ಲೆ,

ಮಣಭಾರದ ಸೀರೆಯುಟ್ಟು
ಕಲ್ಯಾಣಮಂಟಪದಲ್ಲಿ
ದಿನವಿಡೀ ಓಡಾಡಬಲ್ಲೆ,
ಹೈಹೀಲ್ಸ್ ಹಾಕಿಕೊಂಡು
ಕ್ಲಬ್ಬಿನಲ್ಲಿ ಪಾರ್ಟಿಯಲ್ಲಿ
ರಾತ್ರಿಯಿಡೀ ಕುಣಿಯಬಲ್ಲೆ.

ಎಲ್ಲರ ಮಾತು ಕೇಳುವಂತೆ
ನಿನ್ನ ಮಾತನ್ನೂ
ನನ್ನ ಗಂಡನ ಮಾತನ್ನೂ
ಕೇಳಿಸಿಕೊಳ್ಳುತ್ತೇನೆ
(ನನ್ನ ಗಂಡ ನಿನ್ನಂತೆ ನೇರ ಹೇಳುವುದಿಲ್ಲ, ಅಷ್ಟೇ)
ಅನ್ನೋ ಜನರು ಅನ್ನಲಿ ಬಿಡಿ, ಅಮ್ಮ.

One thought on “ಎರಡು ಕವನಗಳು – ಕೇಶವ ಕುಲಕರ್ಣಿ

  1. 500 ವರ್ಷ ಹಳೆಯ ಕಲೆಯಂತೆ ಕಿನ್ ಸುಗಿ ಎನ್ನುವ ಈ ಜಪಾನಿ ಕಲೆ- ಮುರಿದ ಪಿಂಗಾಣಿಗಳನ್ನು ಜೋಡಿಸಿ ಬಂಗಾರದ ಹುಡಿಯಿಂದ ಇನ್ನಷ್ಟು ಸುಂದರವಾಗಿ ಮಾಡುವುದು. ಹಳೆಯ ಕಲೆ ಮುರಿದ ಬದುಕುಗಳನ್ನು ರಿಪೇರಿ ಮಾಡುವ ಹೊಸ ಮೆಟಫರ್ ಆಗಿದೆ ಇಲ್ಲಿ. ಬಿರುಕುಗಳು ಹಾಗೆಯೇ ಉಳಿದರೂ ಒಳಗೆ ಹಚ್ಚಿದ ದೀಪದ ಬೆಳಕನ್ನು ನೋಡುವ ಆಶಾವಾದ ಇದೆ ಅನೇಕ ಗಟ್ಟಿ ಸಾಲುಗಳ, ಪ್ರತಿಮೆಗಳ ಈ ಕವನದಲ್ಲಿ . ಬಹಳ ಕಾಡಿದ ಕವನದಲ್ಲಿ!
    ಎರಡನೆಯ ಕವನದಲ್ಲಿ ಮಾಡರ್ನ್ ನಾಯಕಿ ಅನ್ನೋ ಜನರನ್ನು ಎದುರಿಸಿ ಆ ಘರ್ಷಣೆಯಲ್ಲೂ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಗಟ್ಟಿ ಹೆಂಗಸು. ಚಿತ್ರವೂ ಅಷ್ಟೇ ಬಲಶಾಲಿಯಾಗಿದೆ. Commissioned? ಗೊತ್ತಾಗಲಿಲ್ಲ. ಎರಡು ಉತ್ತಮ ಹೊಚ್ಚ ಹೊಸ ಕವನಗಳು, ಕೇಶವ!

    Like

Leave a comment