ಸಾವಿರ ವರ್ಷಗಳ ಸಾವಿರದ ಆಟ – ಯೋಗೀಂದ್ರ ಮರವಂತೆ

ಸದ್ಯದಲ್ಲಿ ಬಿಡುಗಡೆ ಆಗಲಿರುವ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಕೋರಿಕೆಯ ಮೇಲೆ ಬರೆದ ಚೆಸ್ ಕುರಿತಾದ ಪುಸ್ತಕದ ಒಂದು ಅಧ್ಯಾಯ

ಚಿತ್ರ: ಏಐ (ಸೂಚನೆ: ಕೇಶವ)

ತಮ್ಮ ಮುಂದಿನ ನಡೆಯ ಬಗ್ಗೆ ಯೋಚಿಸುತ್ತ  ಬೋರ್ಡ್ ಮುಂದೆ  ಕೂತಿರುವ ಯಾರಾದರೂ ಪ್ರಸಿದ್ಧ  ಗ್ರಾಂಡ್  ಮಾಸ್ಟರ್ ಗ್ಯಾರಿ ಕಾಸ್ಪರೋವ್ ರ  “ಚೆಸ್ ಒಂದು ಮಾನಸಿಕ ಹಿಂಸೆ” ಎನ್ನುವ  ತಲ್ಲಣವನ್ನು  ಖಂಡಿತ ಒಪ್ಪುತ್ತಾರೆ. ಆದರೆ, ಚೆಸ್ ತನ್ನ ದೀರ್ಘ ಇತಿಹಾಸದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅಥವಾ ಎಲ್ಲರಿಗೆ ಎಲ್ಲವೂ  ಆಗಿದೆ: ಪ್ರತಿಭೆಯ ಕ್ರೂರ ಮಾಪಕ, ಮಾನವ ಅನುಭವದ ರೂಪಕ, ರಾಜಕೀಯ ಆಯುಧ, ಬುದ್ಧಿಮತ್ತೆಯ ಪ್ರದರ್ಶನ,  ಮೋಜಿನ ಸಣ್ಣ ಹವ್ಯಾಸ. ನೆಟ್‌ಫ್ಲಿಕ್ಸ್ ನಾಟಕ “ದಿ ಕ್ವೀನ್ಸ್ ಗ್ಯಾಂಬಿಟ್” ನ ಯಶಸ್ಸು ಆಟದಲ್ಲಿ ಸಾಮಾನ್ಯರ ಜನಪ್ರಿಯ ಆಸಕ್ತಿಗೆ  ಮರುಜೀವ ನೀಡಿದೆ , ಆದರೆ ನಾಗರಿಕತೆಯ ಬಟ್ಟೆಯಲ್ಲಿ ಚೆಸ್ ಅನ್ನು ಎಷ್ಟು ಸಮಯದಿಂದ ಹೆಣೆಯಲಾಗಿದೆ? ಇಂದಿಗೂ ಜೀವಂತವಾಗಿರುವ ಆಸಕ್ತಿ ಎಲ್ಲಿಂದ, ಯಾಕೆ, ಹೇಗೆ? ಹಾಗಾದರೆ ಚೆಸ್ ಬರೇ ಆಟವಾಗಿ ಬೆಳವಣಿಗೆ ಕಂಡುದು ಅಷ್ಟೆಯೇ?

ಭಾರತದ ಚದುರಂಗ ಕಾಲಾನಂತರದಲ್ಲಿ,  ಪರ್ಶಿಯಾದ ಶತರಂಜ್ ಆಗಿದ್ದು ನಂತರ  ಇರಾನ್‌ಗೆ  ವಲಸೆಯಾಗಿ  ಚತ್ರಂಗ್ ಎಂಬ ಹೊಸ ಆಟವಾಗಿ ವಿಕಸನಗೊಂಡಿತು, ಅದರ ನಿಯಮಗಳು ಆಧುನಿಕ ದಿನದ ಚೆಸ್ ಹತ್ತಿರವಾಗಿದ್ದವು. ರಾಜನನ್ನು ‘ಚೆಕ್’ ಮೂಲಕ ಎಚ್ಚರಿಸುವ ಕಲ್ಪನೆಯನ್ನು ಪರಿಚಯಿಸಿದವರು ಪರ್ಶಿಯನ್ನರು.

ಪರ್ಶಿಯಾದ ಸಂಸ್ಕೃತಿಗೆ ಚತ್ರಂಗ್‌ ಎಷ್ಟು ಮಹತ್ವದ್ದು ಎಂದು ತಿಳಿಯಬೇಕಿದ್ದರೆ ಅವರ ಮಹಾಕಾವ್ಯವಾದ ಶಹನಾಮೆಯನ್ನು ಓದಬೇಕು. ಇಂಗ್ಲೆಂಡಿನ   ಷೇಕ್ಸ್‌ಪಿಯರ್ ಅಥವಾ ಇಟಲಿಯ ಡಾಂಟೆಯಂತಹ ಮಹಾನ್ ಸಾಹಿತಿಗಳಿಗೆ ಸಮನಾಗಿದ್ದವನು  ಎಂದು ಇರಾನಿಗರು ವ್ಯಾಪಕವಾಗಿ ಪರಿಗಣಿಸುವ ಬರಹಗಾರ  ಫೆರ್ಡೋವ್ಸಿ ಬರೆದ ಶಹನಾಮೆ  ಒಂದು ರೀತಿಯಲ್ಲಿ ಚೆಸ್ ನ  ಮೂಲ ಕಥೆಯನ್ನು ತಿಳಿಸುತ್ತದೆ.   ಭಾರತದಿಂದ ಆಗಮಿಸಿದ್ದ  ರಾಯಭಾರಿಯೊಬ್ಬ  ಪರ್ಶಿಯನ್  ನ್ಯಾಯಾಲಯಕ್ಕೆ ಒಂದು ಲೇಖನವನ್ನು ತಂದಿರುತ್ತಾನೆ  ಜೊತೆಗೆ  ನಿಗೂಢ ಹಲಗೆ ಮತ್ತು ತುಣುಕುಗಳನ್ನು ಕೂಡ. ರಾಯಭಾರಿ ಹೇಳುತ್ತಾನೆ  ‘ಓ ಮಹಾನ್ ದೊರೆಯೇ , ನಿಮ್ಮ ನೆಲದ ಬುದ್ಧಿವಂತರನ್ನು ಕರೆತನ್ನಿ ಮತ್ತು ಈ ಆಟದ ರಹಸ್ಯಗಳನ್ನು ಅವರು ಪರಿಹರಿಸಲಿ. ಅವರು ಯಶಸ್ವಿಯಾದರೆ  , ನನ್ನೊಡೆಯ  ಹಿಂದ್‌ನ ರಾಜನು  ಕಪ್ಪಕಾಣಿಕೆ ಸಲ್ಲಿಸುತ್ತಾನೆ, ಆದರೆ ಅವರು ವಿಫಲವಾದರೆ ಪರ್ಶಿಯನ್ನರು  ಕಡಿಮೆ ಬುದ್ಧಿಶಕ್ತಿ ಇರುವವರು  ಎಂಬುದಕ್ಕೆ ಪುರಾವೆ ಸಿಕ್ಕಿದಂತಾಗುತ್ತದೆ  ಮತ್ತು ನಾವು ಇರಾನ್‌ನಿಂದ ಕಪ್ಪಕಾಣಿಕೆಯನ್ನು ಕೇಳುತ್ತೇವೆ”. ಹಿಂದ್ ಪ್ರಾಂತ್ಯದಿಂದ ಚದುರಂಗ ತಲುಪಿದ ರೀತಿಯನ್ನು ನಿರೂಪಿಸಲು ಮಹಾಕಾವ್ಯದ ಈ ಕೆಲವು ಸಾಲುಗಳೇ ಸಾಕು. ರಾಯಭಾರಿಯ ಲೇಖನ ಒಡ್ಡುವ ಸವಾಲು, ನಿಗೂಢ ಹಲಗೆ , ತುಣುಕುಗಳು ನೀಡುತ್ತಿರುವ ಆಹ್ವಾನ ಮತ್ತೆ ದೂರದೇಶದ ಹೊಸ ಆಟವೊಂದು ಪರ್ಶಿಯಾದ ಸಂಸ್ಕೃತಿಯಿಂದ ಕೊಟ್ಟು ತೆಗೆದುಕೊಂಡ ಬಗೆಗಳ ಕುರಿತು ಅದು ನಮ್ಮ ಕಲ್ಪನೆಯನ್ನು ಕದಡುತ್ತದೆ.

ಪರ್ಶಿಯನ್ನರ  ಅದೃಷ್ಟಕ್ಕೆ , ಅವರಲ್ಲಿ ಒಬ್ಬರಾದ ಬೊಜೋರ್ಗ್‌ಮೆಹರ್ ಎಂಬ ಬುದ್ಧಿವಂತ ವ್ಯಕ್ತಿ ಈ ಆಟವನ್ನು ಹೇಗೆ ಆಡಬೇಕೆಂದು ಎಂದು ಕಂಡುಕೊಳ್ಳುವಲ್ಲಿ  ಯಶಸ್ವಿಯಾದನಂತೆ.  ಭಾರತೀಯ ಆಟವನ್ನು ಪರ್ಶಿಯನ್  ಚತ್ರಂಗ್‌ನ  ಆಗಿ ಪರಿವರ್ತಿಸಲು ದಾರಿ ಮಾಡಿಕೊಟ್ಟ ಐತಿಹಾಸಿಕ ಕ್ಷಣ ಅದು. ಆಟದ ಈ ಮೂಲಪುರಾಣದಲ್ಲಿ ಎಷ್ಟು  ಸತ್ಯವಿದೆ ಅಥವಾ ಇಲ್ಲ, ಎಂಬುದನ್ನು ಖಡಾಖಂಡಿತವಾಗಿ ಹೇಳುವವರು ಇಲ್ಲ. ಆದರೆ ಚತ್ರಂಗ್‌ ಪರ್ಶಿಯಾದಲ್ಲಿ   ಖಂಡಿತವಾಗಿಯೂ ಜನಪ್ರಿಯ ಕಾಲಕ್ಷೇಪವಾಗಿತ್ತು ಮತ್ತು ಪರ್ಶಿಯವನ್ನು  ಮುಸ್ಲಿಂ ದೊರೆಗಳು ಆಕ್ರಮಿಸಿ ವಿಜಯ ಸಾಧಿಸಿದಾಗಲೂ ಅಲ್ಲೇ ಉಳಿಯಿತು. ವ್ಯಾಪಾರಿಗಳು ಮತ್ತು ಆಕ್ರಮಣಕಾರರು ಆಟವನ್ನು  ವ್ಯಾಪಕವಾಗಿ ಸ್ವೀಕರಿಸಿದಾಗ  ಆಟವು ಮುಸ್ಲಿಂ ಪ್ರಪಂಚದಾದ್ಯಂತ ಮತ್ತು ಅದರಾಚೆಗೂ ಹರಡಿತು.

ಚೆಸ್‌ನ ಆರಂಭಿಕ ಮಾದರಿಗಳು ಶ್ರೀಮಂತರು, ಮಂದಿರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಪಾದ್ರಿಗಳಲ್ಲಿ ಜನಪ್ರಿಯವಾದವು. ವಿವಿಧ ಪ್ರದೇಶಗಳಲ್ಲಿ ಆಟದ ಜನಪ್ರಿಯತೆಯ ಬಗ್ಗೆ  ನೈತಿಕ ಭೀತಿಯೂ ಇತ್ತು , ಇದು ಸಮಕಾಲೀನ ಜಗತ್ತಿನಲ್ಲಿ ಮಕ್ಕಳ ಮನಸ್ಸನ್ನು ಆವರಿಸಿರುವ  ದೂರದರ್ಶನ ಅಥವಾ ವಿಡಿಯೋ ಗೇಮ್‌ಗಳ ಬಗ್ಗೆ ಇರುವ  ಚರ್ಚೆ , ಕಾಳಜಿಗಳಂತೆಯೇ ಇತ್ತು. ೧೦೦೫ರಲ್ಲಿ   ಈಜಿಪ್ಟ್‌ನಲ್ಲಿ ಚೆಸ್ ನ್ನು ನಿಷೇಧಿಸಲಾಯಿತು. ೧೦೬೧ ರಲ್ಲಿ ಚರ್ಚ್ ನ ಸಲಹೆಗಾರರು , ಪೋಪ್ ರಿಗೆ  ಅರ್ಚಕ ವೃತ್ತಿಯವರು  ಚೆಸ್ ಆಡುವಲ್ಲೇ  ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ದೂರು ನೀಡಿದರು. ಕೆಲವು ಶತಮಾನಗಳ ನಂತರ,   ೯ನೆಯ ಲೂಯಿಸ್ ಫ್ರಾನ್ಸ್‌ನಲ್ಲಿ ಚೆಸ್ ಅನ್ನು ನಿಷೇಧಿಸಿದ, ಈ ಆಟದಿಂದ  ಬರೇ ಸಮಯ ಹಾಳು ಎಂದ.

ಆದರೂ , ಆಟದ ಜನಪ್ರಿಯತೆ ಕಡಿಮೆಯಾಗಲಿಲ್ಲ, ಮತ್ತು ೧೫ನೆಯ ಶತಮಾನದ ವೇಳೆಗೆ ಆಟದ ನಿಯಮಗಳು ಮತ್ತಷ್ಟು ಬದಲಾದವು, ಇಂದು ನಾವು ಗುರುತಿಸುವ ಚೆಸ್ ಆಗಿ ಮಾರ್ಪಟ್ಟವು. ಗಮನಾರ್ಹವಾಗಿ, ಒಂದು ಕಾಲದಲ್ಲಿ “ವಜೀರ್” ಎಂದು ಕರೆಯಲ್ಪಡುತ್ತಿದ್ದ ತುಣುಕು, ಬೋರ್ಡ್‌ನಲ್ಲಿ ಸೀಮಿತ ವ್ಯಾಪ್ತಿಯನ್ನು ಹೊಂದಿತ್ತು, ಅದೇ ಮುಂದೆ  ಅಸಾಧಾರಣ ಶಕ್ತಿಯ ರಾಣಿಯಾಗಿ ವಿಕಸನಗೊಂಡಿತು. ಸ್ತ್ರೀವಾದಿ ಇತಿಹಾಸಕಾರ ಮರ್ಲಿನ್ ಯಾಲೋಮ್ ಸೇರಿದಂತೆ ಕೆಲವು ವಿದ್ವಾಂಸರು,  ಆ ಪರಿವರ್ತನೆ   ಕ್ರಿಸ್ಟೋಫರ್ ಕೊಲಂಬಸ್‌ನ ಹೊಸ ಜಗತ್ತಿನ ಅನ್ವೇಷಣೆಗಳನ್ನು  ಬೆಂಬಲಿಸಿದ್ದ ಫ್ರೆಂಚ್ ರಾಣಿ ಎಲೆನಾರ್  ಮತ್ತು  ಸ್ಪ್ಯಾನಿಷ್ ರಾಣಿ  ಇಸಾಬೆಲ್ಲರ  ನಿಜ ಜೀವನದಿಂದ ಪ್ರಭಾವಿತವಾಗಿದೆ ಎಂದಿದ್ದರು.

ಹಾಗಂತ  ಚೆಸ್ ಔಪಚಾರಿಕವಾಗಿ ರಚನಾತ್ಮಕ ಕ್ರೀಡೆಯಾಗಲು ಇನ್ನೂ ಸ್ವಲ್ಪ ಸಮಯ ಹಿಡಿಯಿತು . ೧೯ನೆಯ ಶತಮಾನದಲ್ಲಿ ಚೆಸ್ ಸಂಬಂಧಿ  ಪುಸ್ತಕಗಳು , ಸಮುದಾಯಗಳುಮತ್ತು ಸಂಸ್ಥೆಗಳು ಪ್ರವರ್ಧಮಾನಕ್ಕೆ ಬಂದವು.  ಮೊದಲ ಅಂತರರಾಷ್ಟ್ರೀಯ ಚೆಸ್ ಪಂದ್ಯ ೧೮೫೧ ರಲ್ಲಿ ಲಂಡನ್‌ನಲ್ಲಿ ನಡೆಯಿತು. ಇದನ್ನು  ಇಂಗ್ಲಿಷ್ ಆದ್ಯ ಆಟಗಾರ ಹೊವಾರ್ಡ್ ಸ್ಟೌಂಟನ್ ಆಯೋಜಿಸಿದ್ದು . ಇಂದಿಗೂ ಎಲ್ಲೆಡೆ ಬಳಸಲಾಗುವ ಪ್ರಮಾಣಿತ ಚೆಸ್ ಸೆಟ್ ಅನ್ನು ಆತನ ನೆನಪಲ್ಲಿ ಸ್ಟೌಂಟನ್ ಚೆಸ್ ಸೆಟ್ ಎಂದು ಕರೆಯಲಾಗುತ್ತದೆ . ಆ ಪಂದ್ಯಾವಳಿಯ ವಿಜೇತ  ಜರ್ಮನ್ ದೈತ್ಯ ಪ್ರತಿಭೆ  ಅಡಾಲ್ಫ್ ಆಂಡರ್ಸನ್. ಅವನ ಆಂದಿನ ಆಟ ೧೯ನೆಯ ಶತಮಾನದ ‘ರೊಮ್ಯಾಂಟಿಕ್’ ಶೈಲಿಗೆ ಸಾಕ್ಷಿಯಾಗಿತ್ತು. ಆಟದುದ್ದಕ್ಕೂ ಧೈರ್ಯಶಾಲಿ ಆಕ್ರಮಣಕಾರಿ ನಡೆಗಳು, ಉಳಿವಿಗಾಗಿ ನೀಡುವ ಬಲಿ ,  ಅನಿರೀಕ್ಷಿತ ತಿರುವುಗಳು ಕಂಡವು . ಇದು  ನಂತರ  ರೂಢಿಗೆ ಬಂದ   ಗುಪ್ತ ಯುದ್ಧತಂತ್ರ, ನಿಧಾನವಾಗಿ ಹತೋಟಿ ಪಡೆಯುವ  ವಿಧಾನಗಳಿಂದ  ತುಂಬ ಬೇರೆಯಾಗಿತ್ತು. ೧೮೫೧ರಲ್ಲಿ ಅಂಡರ್ಸ್ಸನ್  ಆಡಿದ ಇನ್ನೊಂದು ಪಂದ್ಯ ‘ಇಮ್ಮಾರ್ಟಲ್ ಗೇಮ್’ ಅಥವಾ  ಅಮರ್ತ್ಯ ಆಟ ಎನ್ನುವ ಹೆಸರಲ್ಲಿ ಚೆಸ್ ಇತಿಹಾಸದಲ್ಲಿ ದಾಖಲಾಗಿದೆ ಮತ್ತೆ ಇಂದಿಗೂ ಮೆಚ್ಚುಗೆಯನ್ನು ಪಡೆದಿದೆ, ಚೆಸ್ ವಿದ್ಯಾರ್ಥಿಗಳ ಅಧ್ಯಯನದ ವಿಷಯವಾಗಿದೆ.  ಅಗಾಧ ಧೈರ್ಯದಿಂದ, ಆಂಡರ್ಸನ್ ತನ್ನ ಎರಡೂ ರೂಕ್‌ಗಳನ್ನು, ಬಿಷಪ್ ಮತ್ತು  ರಾಣಿಯನ್ನು ತ್ಯಾಗ ಮಾಡಿಯೂ ಆಟವನ್ನು ಗೆದ್ದುದು ನಾಟಕೀಯ ಶೈಲಿಯ ಆಟದ ಉತ್ತಮ ಉದಾಹರಣೆಯಾಗಿದೆ.

೨೦ನೆಯ ಶತಮಾನದಲ್ಲಿ , ವಿಶೇಷವಾಗಿ ಯುಎಸ್ಎಸ್ಆರ್ ಸ್ಥಾಪನೆಯ ನಂತರ, ಚೆಸ್  ರಾಜಕೀಯ ಆಯಾಮವನ್ನು ಪಡೆಯಿತು. ಗ್ಯಾರಿ ಕಾಸ್ಪರೋವ್ ಒಂದೆಡೆ ಹೇಳಿದಂತೆ , ‘ಕುಸಿಯುತ್ತಿದ್ದ  ಪಶ್ಚಿಮದ  ಮೇಲೆ ಸೋವಿಯತ್ ಕಮ್ಯುನಿಸ್ಟ್ ಆಡಳಿತದ ಬೌದ್ಧಿಕ ಶ್ರೇಷ್ಠತೆಯನ್ನು ಪ್ರದರ್ಶಿಸಲು ಸೋವಿಯತ್ ಅಧಿಕಾರಿಗಳು ಚೆಸ್ ನ್ನು ಬಹಳ ಉಪಯುಕ್ತ ಸೈದ್ಧಾಂತಿಕ ಸಾಧನವಾಗಿ ಪರಿಗಣಿಸಿದರು”.  ಸೋವಿಯತ್ ಒಕ್ಕೂಟವು ಚೆಸ್ ತರಬೇತಿ ಮತ್ತು ಪ್ರತಿಭೆಯನ್ನು ಪೋಷಿಸುವಲ್ಲಿ ಹೊಂದಿದ್ದ ಅತಿರೇಕದ  ಆಸಕ್ತಿ  ದಶಕಗಳ ಕಾಲ ಆಟದ ಮೇಲೆ ಅದರ ಪ್ರಾಬಲ್ಯಕ್ಕೆ ಕಾರಣವಾಯಿತು. ಬ್ಯಾಲೆ ಮತ್ತು ಕವಿತೆಗಳ ಜೊತೆಗೆ ಚೆಸ್ ಕೂಡ ಸೋವಿಯೆತ್ ಸಮಾಜದ ಸಾಂಸ್ಕೃತಿಕ ಅಸ್ಮಿತೆಯಾಯಿತು. ಸೋವಿಯತ್ ಚಾಂಪಿಯನ್ ಬೋರಿಸ್ ಸ್ಪಾಸ್ಕಿ ಮತ್ತು  ಅಮೆರಿಕದ ವಿಶಿಷ್ಟ ಪ್ರತಿಭಾನ್ವಿತ  ಬಾಬಿ ಫಿಷರ್ ನಡುವಿನ ‘ಶತಮಾನದ ಆಟ ‘ ಎಂದು ಕರೆಯುವ ಪಂದ್ಯ  ೧೯೭೨ರಲ್ಲಿ ನಡೆಯಿತು. ಮತ್ತೆ ಆ ಪಂದ್ಯ  ಸೋವಿಯತ್ ಪ್ರಾಬಲ್ಯಕ್ಕೆ  ಸವಾಲೊಡ್ಡಿತು. ಅವರಿಬ್ಬರ ಮುಖಾಮುಖಿ ಅಮೆರಿಕ -ಸೋವಿಯೆತ್ ಗಳ ನಡುವಿನ  ಶೀತಲ ಸಮರವನ್ನು ಚೆಸ್ ಬೋರ್ಡಿಗೂ  ತಂದಿತು . ಇಡೀ ಪಂದ್ಯ, ಗೆಲುವಿಗಾಗಿ ಬಳಸಲಾಗುವ ರಹಸ್ಯ ಮತ್ತು ಅನುಚಿತ ತಂತ್ರಗಳಿಂದ , ಪರಸ್ಪರರ ಬಗೆಗಿನ  ಅವ್ಯಕ್ತ ಸಂಶಯಗಳಿಂದ ತುಂಬಿತ್ತು. ಸ್ವತಃ  ಚಂಚಲ ಮನಸ್ಥಿತಿಯ , ಹೋರಾಟದ ವ್ಯಕ್ತಿತ್ವದ  ಫಿಷರ್ , ತಾನೆಂದಿಗೂ ಈ ಪಂದ್ಯವನ್ನು ಆಡಲು  ಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ನಂತರ ಅಮೆರಿಕದ ರಾಯಭಾರಿ ಹೆನ್ರಿ ಕಿಸ್ಸಿಂಗರ್   ವಿಶೇಷ ಫೋನ್ ಕರೆ ಮಾಡಿ ಮನವೊಲಿಸಬೆಕಾಯಿತು.

ಫಿಷರ್ ಅಂದಿನ ಐತಿಹಾಸಿಕ ಪಂದ್ಯದಲ್ಲಿ ಸ್ಪಾಸ್ಕಿಯನ್ನು ಸೋಲಿಸಿದರು,  ‘ಸುಳ್ಳು, ಮೋಸ, ಬೂಟಾಟಿಕೆ’ಯ  ಸೋವಿಯತ್ ಚೆಸ್ ಯಂತ್ರದ ವಿರುದ್ಧ ‘ಸ್ವತಂತ್ರ ಜಗತ್ತು’  ಗೆಲುವು ಸಾಧಿಸಿತು ಎಂದು ಅಮೆರಿಕ ತಿಳಿಯಿತು. ಈ ಗೆಲುವು ಫಿಷರ್ ಗೆ , ಬಾಕ್ಸಿಂಗ್ ಜಗತ್ತಿನಲ್ಲಿ ಮುಹಮ್ಮದ್ ಅಲಿಗೆ ದೊರಕಿದ್ದ ರೀತಿಯ  ಜನಪ್ರಿಯತೆಯನ್ನು  ನೀಡಿತು. ಅಂದಿನಿಂದ ಇಂದಿನವರೆಗೂ  ಚೆಸ್ ಜಗತ್ತು ಹಲವು ಸಾರ್ವಕಾಲಿಕ ಅತ್ಯುತ್ತಮ ಆಟಗಾರರು ಎಂದು ಪರಿಗಣಿಸಬಹುದಾದವರನ್ನು ಕಂಡಿದೆ, ಕಾಣುತ್ತಿದೆ. ಇಂಟರ್ನೆಟ್‌ನ ಉದಯದಿಂದಾಗಿ ಈಗ ಎಂದಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ, ಇದು ಪ್ರಪಂಚದಾದ್ಯಂತ ಲಕ್ಷಾಂತರ  ಅಭಿಮಾನಿಗಳಿಗೆ ಚೆಸ್ ಬಗ್ಗೆ ಮಾತನಾಡಲು ಮತ್ತು ಆಡಲು ಅನುವು ಮಾಡಿಕೊಡುತ್ತಿದೆ ,  ಚೆಸ್ ಅಸ್ತಿತ್ವಕ್ಕೆ ಬಂದ ಒಂದೂವರೆ ಸಹಸ್ರಮಾನಕ್ಕೂ  ಹೆಚ್ಚಿನ  ಕಾಲದ ನಂತರವೂ   ಇತಿಹಾಸ ಬೆಳೆಯುತ್ತಿದೆ ಬದಲಾಗುತ್ತಲೇ ಇದೆ, ಮಾನವ  ಬೌದ್ಧಿಕ ರಾಜಕೀಯ ಸಾಂಸ್ಕೃತಿಕ ವಿಕಸನದಲ್ಲಿ ಸಾಧನವಾಗಿ ಸರಕಾಗಿ ವೇದಿಕೆಯಾಗಿ ಇಂದಿಗೂ ಉಳಿದಿದೆ, ಮುಂದೆಯೂ ಉಳಿಯಲಿದೆ.

ರಿಕ್ತವಾದ ಋಣಾನುಬಂಧ


ಅದೊಂದು ದಿನ ನಿನ್ನ ಪ್ರಭಾವದಿಂದ ಹೊರಬಂದು ನನ್ನ ನೆಲೆಯನ್ನು ಮತ್ತೆ ನಾ ಕಂಡುಕೊಂಡೇನು ಎಂಬ ಆಶಂಕೆಯಿಂದಲೇ
ಇಷ್ಟು ತಿಂಗಳುಗಳನ್ನು ತಳ್ಳಿಹೆನು. ನಿನ್ನ ಜೀವನದ ವಿಸ್ತಾರದಲ್ಲಿ ನನಗೆ ಸ್ಥಾನವಿಲ್ಲವೆಂದರಿತ ಮೇಲೂ ಮನಸು ನಿನ್ನ ಕುರಿತ
ಆಲೋಚನೆಯನ್ನು ಬಿಡಲೊಲ್ಲದು. ಅದೊಂದು ಸಮ್ಮಿಶ್ರ ಭಾವ… ಬಿಟ್ಟುಕೊಡಲು ಬಯಸದಂಥ ಸುಖದಾಯಕ ನೋವು. ಆ
ಭಾವವನ್ನು ನಾನೂ ಕೂಡ ವ್ಯತ್ಯಯಗೊಳಿಸಿದರೆ ನಮ್ಮಿಬ್ಬರ ನಡುವೆ ಮಿಡಿದ ತಂತಿ ಮೌನಸಿದ್ಧವಾಗುವುದಂತೂ ಸತ್ಯ. ಪದೇ
ಪದೇ ಮರುಕಳಿಸಿ ಆ ಕ್ಷಣಗಳನ್ನು ಮತ್ತೇ ಜೀವಿಸದಿದ್ದರೆ ಆ ಭಾವ ಶಾಶ್ವತವಾಗಿಯೇ ನಿಶ್ಚಲವಾಗಿ ಬಿಡುವುದು. ಸದ್ಯಕ್ಕೆ ಆ
ಭಾವದೀಪಕ್ಕೆ ನೆನಪುಗಳ ತೈಲವನೆರೆದು ಸಮಯದ ಬತ್ತಿಯನ್ನು ಸೂಡಿ ಬೆಳಗುತ್ತಿರುವೆನು. ನಿನ್ನಿಂದ ಏನೊಂದನ್ನುಅಪೇಕ್ಷಿಸಿಹೆನು. ಮೊದಮೊದಲು ನೀನು ನನ್ನ ಭಾವನೆಗಳಿಗೆ ತಿಳಿನೀರಿನ ಪ್ರತಿಬಿಂಬವಾಗಿ ತೋರಿದೆ. ನನ್ನ ಧ್ವನಿಗೆ ಪ್ರತಿಧ್ವನಿಯಾಗಿ ನುಡಿದೆ. ಒಲವಿನ ಹೊನ್ನೊಳೆ ನಮ್ಮಿಬ್ಬರ ಮನದಲ್ಲಿ ನಿರಂತರವಾಗಿ ಪ್ರವಹಿಸಿತ್ತು. ನಿನ್ನೊಡನೆಯ ಮಾತುಗಳು ಯಾರೊಂದಿಗೂ ಸಂಭಾಷಿಸಲಾಗದ, ನನ್ನನ್ನು ನಾನೇ ಅರಿಯದ ಯಾವುದೋ ಪ್ರಬುದ್ಧಲೋಕಕ್ಕೆ ಕರೆದೊಯ್ಯುತ್ತಿದ್ದವು. ಸ್ವಯಂಯೋಚನೆಯಿಂದ ಬಗೆಹರಿಯದ ಪ್ರಶ್ನೆಗಳು ನಿನ್ನೊಂದಿಗೆ ವಿವೇಚಿಸುತ್ತಲೇ ತಿಳಿಗೊಳ್ಳುತ್ತಿದ್ದವು. ಜೀವನದ ಎಂದೂ ಕಾಣದೇ ಇದ್ದ ಆಯಾಮಗಳು ನಿನ್ನ ಸನ್ನಿಧಿಯಲ್ಲಿ ಗೋಚರಿಸಿ ಮುಗುಳ್ನಗುತ್ತಿದ್ದವು. ಯಾರಿಗೂ ಅರ್ಥವಾಗದ ನನ್ನ ಕನಸುಗಳು ನಿನಗೆ ಅದ್ಭುತವೆಂದೆನಿಸುತ್ತಿದ್ದವು.ಲೌಕಿಕ ಲೋಕದ ಲಘುತನದಿಂದ ಮೇಲೆಮೇಲೇರಿ ಯಾರೊಂದಿಗೂ ಮೇಳೈಸದ ಆಪ್ತತೆಯನ್ನು ನಿನ್ನಲ್ಲಿ ಕಂಡುಕೊಂಡೆನು. ಜನ್ಮಜನ್ಮಾಂತರದಲ್ಲಿ ಎಲ್ಲೋ ಕಳೆದು ಹೋದ ನನ್ನ ಆತ್ಮದ ಚೂರೊಂದನ್ನು ನಿನ್ನಲ್ಲಿ ಗುರುತಿಸಿದೆನು.


ನಿನ್ನೊಂದಿಗೆ ನಾನು ಭಾವನಾತ್ಮಕ ಲೋಕದಲ್ಲಿ ಬೆರೆತು ಪರಿಪೂರ್ಣಳಾದೆನು, ಸಂಪೂರ್ಣಳಾದೆನು. ನಿನ್ನ ಜೀವನದೆಡೆಗಿನ
ಅಪಾರ ಪ್ರೀತಿ, ನನ್ನ ಸುಪ್ತವ್ಯಕ್ತಿತ್ವವನ್ನೇ ಕೆಣಕಿ ಹೊಡೆದೆಬ್ಬಿಸಿತು. ನಿನ್ನ ಲವಲವಿಕೆ ನನ್ನ ಅಂತರಾಳದ ಕೋಣೆ ಕೋಣೆಗಳನ್ನು
ಶೋಧಿಸುವಂತೆ ಮಾಡಿತು. ನಿನ್ನ ಬ್ರಹ್ಮಾಂಡಸದೃಶವಾದ ವ್ಯಕ್ತಿತ್ವ, ನಾನು ನನ್ನ ಪರಿಧಿಗಳನ್ನು ಉಲ್ಲಂಘಿಸಿ ವಿಶ್ವವಿಸ್ತಾರಗೊಳ್ಳಲು
ಪ್ರೇರೇಪಿಸಿತು. ಪ್ರೀತಿಪ್ರೇಮಪ್ರಣಯಗಳ ಕ್ಷಣಿಕ ಭಾವಗಳಲ್ಲಿ ಎಂದೂ ನಿನ್ನನ್ನು ತುಲನೆ ಮಾಡದೆಯೇ ನನ್ನೊಳಗಿನ
ಸತ್ಯಾನ್ವೇಷಣೆಗೆ ಜೊತೆಗೂಡಾದ ಆತ್ಮಸಂಗಾತಿಯೆಂದೇ ನಿನ್ನನ್ನು ಸಂಕೇತಿಸಿದ್ದೇನೆ. ಅದರ ಸುಳಿವು ಮತ್ತು ಅರಿವು ನಿನಗೆ
ಚೆನ್ನಾಗಿಯೇ ಇರುವುದೆಂದು ನಾನು ಬಲ್ಲೆನು. ಬರೀ ಮಾಂಸಖಂಡಗಳ ಜಡತ್ವದಿಂದ ಸುಚೇತನೆಯಾಗಿ ನಾನು ಮಾರ್ಪಾಡುಗೊಳ್ಳುತ್ತಿರುವ ಭರದಲ್ಲಿ ನೀನಿಟ್ಟ ಹಿನ್ನಡೆಯ ಹೆಜ್ಜೆಯನ್ನು ನಾನು ಗುರುತಿಸದೆಯೇ ಮುಂದುವರೆದ್ದದ್ದೇ ಈ ಪ್ರಸಂಗದ ಅತಿ ದೊಡ್ಡ ಅವಿವೇಕದ ಮತ್ತು ವಿಪರ್ಯಾಸದ ಸಂಗತಿ! ನಿನ್ನ ಪರೋಕ್ಷವಾದ ಇರುವನ್ನು ನನ್ನ ಜೀವನದ ಪ್ರತಿ ನೂಲಿನೊಂದಿಗೆ ನೇಯುತ್ತಲೇ ಹೋದೆ, ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಯಲ್ಲೂ ನಿನ್ನಯ ಕಂಪನವನ್ನು ಗುರುತಿಸಿದೆ. ನಿನಗೆ ಪ್ರಾಣಪ್ರಿಯವಾದ ಪ್ರಕೃತಿಯ ಪ್ರತಿ ಸೋಜಿಗದಲ್ಲೂ ನಿನ್ನ ಉಸಿರನ್ನು ಗ್ರಹಿಸಿದೆ. ದಿನನಿತ್ಯದ ಗೋಜಲಿನ ವ್ಯಾಪಾರದಲ್ಲಿ ನಿನಗೆ ಸಹಜವಾದ ಸಕಾರಾತ್ಮಕವನ್ನೇ ಪ್ರಯೋಗಿಸಿ ಸಫಲಳಾದೆ. ನಿನ್ನ ಸಾಂಗತ್ಯದಿಂದ ಒಸರಿದ ಭಾವೋನ್ಮಾದಕ್ಕೆ ಸೃಜನಶೀಲತೆಗೆ ಪದಗುಚ್ಚ್ಛಗಳ ಆಕಾರ ನೀಡಿದೆ.

ನನ್ನ ಜೀವನದ ಸೆಲೆ ಭೋರ್ಗರೆದು ನಾನು ಉತ್ತುಂಗಕ್ಕೆ ಏರುತ್ತಿದ್ದ ಸರಿಸಮಯದಲ್ಲಿಯೇ ನೀನು ತಣ್ಣಗೆ ನಿರ್ಲಿಪ್ತನಾಗಿದ್ದು ಯಾಕೆ
ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದ ಪ್ರಶ್ನೆಯಾಗಿದೆ. ಈ ಪ್ರಶ್ನೆ ಸಾವಿರ ಕಾಳಿಂಗಸರ್ಪದ ರೂಪದಾಳಿ ತಲೆಯೊಳು
ಹೆಡೆಯೆತ್ತಿ ಉತ್ತರ ದೊರಕದೇ ಸೋತು ನಿಸ್ತೇಜವಾಗುತ್ತದೆ. ವಸಂತದ ಸಂಭ್ರಮದಲ್ಲಿದ್ದ ಜಗತ್ತು ತಕ್ಷಣವೇ ನಿಃವರ್ಣವಾಗಿ
ತೋರಲಾರಂಭಿಸುತ್ತದೆ. ಒಡನಾಡಿದ ಮಾತುಗಳು ಮತ್ತೇ ಮತ್ತೇ ಮನಸಿನಲ್ಲಿ ಅನುರಣಿಸುತ್ತವೆ. ನಮ್ಮಿಬ್ಬರ ಸಮೀಕರಣವು
ಎಲ್ಲಿ ಮುಗ್ಗರಿಸಿತು ಎಂದು ಪದೇಪದೇ ಮನವು ಶೋಧಿಸುತ್ತದೆ. ಆದರೆ ಇದೆಲ್ಲ ಪರಿತಾಪಕ್ಕೆ ನಿರುತ್ತರವೇ ನಿನ್ನ ಮಾರುತ್ತರ. ಪ್ರತಿ
ಸನ್ನಿವೇಶದಲ್ಲಿ ರಂಗವೈಭವವನ್ನು ಮೆರೆಯುತ್ತಿದ್ದ ನಿನ್ನ ಮನಸಿನ ಪರದೆ ಈಗ ಬರೀ ಶ್ವೇತಪತ್ರವಾಗಿ “ಏನು ಬೇಕಾದರೂ
ಉತ್ತರ ಬರೆದುಕೋ” ಎಂದು ಅಣಕಿಸುತ್ತದೆ. ಕಳೆದ ಹಲವಾರು ತಿಂಗಳುಗಳಿಂದ ಈ ದಿನಚರಿಯೂ ಒಗ್ಗಿಹೋಗಿದೆ. ಹಿನ್ನೋಟ ಹರಿಸಿ ನೋಡಿದಾಗ ಈ ಅಸಂಬದ್ಧತೆಯಲ್ಲೂ, ಅನಿಶ್ಚಿತತೆಯಲ್ಲೂ ಅಸ್ಪಷ್ಟ ಸಂಕಲ್ಪವೊಂದು ಮಸುಕು ಮಸುಕಾಗಿ ಗೋಚರಿಸುವುದು. ಸುಲಭಕ್ಕೆ ಅರ್ಥವಾಗದೇ ನನ್ನನ್ನು ಹಣ್ಣುಹಣ್ಣಾಗಿಸಿಹುದು.


ಪರುಷಮಣಿಯ ಸ್ಪರ್ಷಮಹಿಮೆದಂತೆ ನಿನ್ನ ಸಾಂಗತ್ಯ, ನನ್ನಯ ಅತ್ಯುತ್ತಮ ಆವೃತ್ತಿಯನ್ನು ಹೊರಡಿಸಲೋಸುಗ ನನ್ನ ನೆಲೆಯಲ್ಲಿ ತತ್ಕಾಲಕ್ಕೆ ನೀನು ಬಂದು ಅಂಕುರಿಸರಬೇಕು.‌ ಇಲ್ಲವೇ, ಇದೆಲ್ಲ ನಾನಾಗಿಯೇ ಕಟ್ಟಿಕೊಂಡ ಭ್ರಮಾಲೋಕದಲ್ಲಿ ನೀನೊಬ್ಬ ಪಾತ್ರಧಾರಿಯಷ್ಟೇ, ಇವನಿಗೂ ನಿಜ ಜೀವನದ ನಿನಗೂ ಎಳ್ಳು ಮಾತ್ರದಷ್ಟೂ ಸಂಬಂಧವಿರಲಿಕ್ಕಿಲ್ಲ. ನನ್ನ ಭಾವಭರಿತ ಒಳದೃಷ್ಟಿಗೆ ಮಹನೀಯನಂತೆ ತೋರುವ ನೀನು, ಅಸಲಿನಲ್ಲಿ ನನ್ನ ಹಾಗೆ ಯಕಶ್ಚಿತ್ ಒಬ್ಬ ಸಾಧುಮನುಷ್ಯನೇ ಆಗಿರಬಹುದು. ಹಾಗೆ ಸುಮ್ಮನೆ ತನ್ನ ಪಾಡಿಗೆ ಹರಿದು ಹೋಗೊ ನೀರಿಗೆ, ಗಾಳಿಗೆ, ಮೋಡಕ್ಕೆ ಆಕಾರ ಮತ್ತೂಉದ್ದೇಶ ನೀಡಿ ಸಂಭ್ರಮಿಸುವ ನನ್ನ ಮುಗ್ಧಮನಸಿನ ಕವಿಯ ಹಂಬಲಿಕೆಯೇ ನೀನಾಗಿರಬಹುದು. ಅಥವಾ ಮುಂದೊಂದು ದಿನ ಸಂಭವಿಸಲಿರುವ ಮಹತ್ಕಾರ್ಯಕ್ಕೆ ನಮ್ಮಿಬ್ಬರ ತೀರದೇ ಉಳಿದ ಋಣಾನುಬಂಧವೇ ಮೊಟ್ಟ ಮೊದಲನೆಯ ಸೋಪಾನವಾಗಿರಬಹುದು, ಯಾರು ಬಲ್ಲರು? ಬಾಳಿನ ಪ್ರತಿ ಘಟಿತಗಳೆಲ್ಲವೂ ಸಂಕ್ಷಿಪ್ತ ವಿವರಣೆಯೊಂದಿಗೆ ಪ್ರಕಟಿತವಾಗುತ್ತಿದ್ದರೆ ಜೀವನ ಸುಲಭವಾದೀತೆ ಅಥವಾ ನೀರಸವೋದೀತೆ?
ಉತ್ತರ ಅವರವರು ಕಂಡಂತೆ!

———- ದೀವಿ (ದೀಪಾ ಸಣ್ಣಕ್ಕಿ)