ಮತ್ತೇಕೆ ಯುಗಾದಿ ಬರುತಿದೆ? – ಕೇಶವ ಕುಲಕರ್ಣಿ ಬರೆದ ಕವನ

ಯುಗ ಯುಗಾದಿ ಕಳೆದರೂ
ಮತ್ತೇಕೆ ಯುಗಾದಿ ಬರುತಿದೆ?

Photo by the author

ಹೊಸ ವರುಷ ನಮಗೆ ಜನೆವರಿ ಒಂದಾಗಿ
ಆಗಲೇ ಇದು ಎರಡನೇ ತಲೆಮಾರು.
ವಸಂತ ಮಾಸ ಯಾಕೆ ಯಾವಾಗಲೂ
ಮಾರ್ಚ್ ಯಾ ಎಪ್ರಿಲ್ ಒಂದನೇ ತಾರೀಖು
ಶುರುವಾಗಬಾರದು? ಎನ್ನುವ ಜನಾಂಗ ನಾವು.
ನಿಮ್ಮ ಈ ‘ಸಂವತ್ಸರ’
ಪ್ರನೌನ್ಸ್ ಮಾಡೋದೂ ಕಷ್ಟ ನೋಡಿ.

ಹೊಂಗೆ ಹೇಗಿರುತ್ತೇಂತ ನೋಡಿಲ್ಲ
ಭೃಂಗದಿಂದ ಕಚ್ಚಿಸಿಕೊಂಡಿದ್ದು ಮಾತ್ರ ಗೊತ್ತು.
ಬೇವಿನ ಮರ ಬಿಡಿ, ಜಾಲಿ ಮರಕ್ಕೂ
ಈ ನಗರಗಳಲ್ಲಿ ಜಾಗವಿಲ್ಲ.
ಅಷ್ಟಕ್ಕೂ ಬೇವಿನ ಮರ ಹೂ ಬಿಟ್ಟಿದೆ ಅಂದುಟ್ಟುಕೊಳ್ಳಿ!
ಅದಕ್ಕೇನು ವೆನಿಲಾದ ತರ ಬೇರೆ ದೇಶದಲ್ಲಿ ಬೆಲೆ ಇದೆಯೇ?

ಮಾವಿನ ಹಣ್ಣಿಗೆ ಈಗ ವಸಂತ ಬರಲು
ಕಾಯಬೇಕಾಗಿಲ್ಲ
ವರ್ಷದ ಹನ್ನೆರಡೂ ತಿಂಗಳೂ
ಫ್ರೂಟಿ ಲಭ್ಯ

ಹಾಗೆಂದು ನಮಗೆ ವಸಂತ, ಚೈತ್ರ
ಅಂದು ಕನ್ಫೂಸ್ ಮಾಡಬೇಡಿ
ಅವು ಹುಡುಗಿ ಹೆಸರು ಅಂದುಕೋತೀವಿ
ನಿಯತ್ತಾಗಿ ’ಸ್ಪ್ರಿಂಗ್’ ಎನ್ನಲು ಆಗೋದಿಲ್ಲವೇ ನಿಮಗೆ?

ಈ ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ
ಅದೆಲ್ಲ ಬೇಂದ್ರೆಯಲ್ಲೇ ಕಾಲವಾಯಿತು
ಈಗ ನಮಗೋ
ಯಾವಾಗ ಬೇಕೋ ಆವಾಗ ಹೊಸ ಜನ್ಮ
ಹೊಸ ಮುಖ ಹೊಸ ತಿಕ

ಅರವತ್ತರ ಮಡೋನಾ ಕೂಡ
ಕಾಸ್ಮೆಟಿಕ್ ಸರ್ಜರಿಯಲ್ಲಿ
ಮೂವತ್ತರ ಬೆಡಗಿ
ಮುದಿ ಯಯಾತಿಯ ಜೇಬಿನಲ್ಲಿ ವಯಾಗ್ರ
ಸಾವಿನ ಕಟೆಕಟೆಯಲ್ಲಿ ಕೂಡ
ನಮಗೆ ಸನತ್ಕುಮಾರ
ನೆನಪಾಗುವುದಿಲ್ಲ ಬಿಡಿ

ಇಷ್ಟೆಲ್ಲ ಆದ್ರೂ
ಮತ್ತೇಕೆ ಯುಗಾದಿ ಬರುತಿದೆ?

6 thoughts on “ಮತ್ತೇಕೆ ಯುಗಾದಿ ಬರುತಿದೆ? – ಕೇಶವ ಕುಲಕರ್ಣಿ ಬರೆದ ಕವನ

  1. ಪ್ರಕೃತಿಯ ಋತುಗಳು ಚಕ್ರಗತಿಯಲ್ಲಿ ಹಾಗು ಮನುಷ್ಯನ ಶಾರೀರಿಕ ಕ್ರಿಯೆಗಳು ಒಂದು ನಿಶ್ಚಿತ ಹಾದಿಯಲ್ಲಿ ಸಾಗಿರುವಾಗ ಅದನ್ನು ಮನುಷ್ಯ ನಿಯಂತ್ರಿಸಲು ಹೊರಟಾಗ ಆಗಬಹುದಾದ ವಿಫಲತೆಗಳನ್ನು ಚನ್ನಾಗಿ ಪರಿಗಣಿಸಿದ್ದಿರಿ. ಈ ವಿಫಲ ಪ್ರಯತ್ನಗಳು ಅನಾಹುತವಾಗಿ ಪರಿಣಮಿಸದ್ದಿದ್ದರೆ ಸಾಕು. ಶೈಲಿ ಇನ್ನೂ ಕಾವ್ಯಮಯವಾಗಿದ್ದರೆ ಹೆಚ್ಚಿನ ಸೊಗಸಿರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ.

    Like

  2. Ugaadi paadige ugaadi barutide sakala jeeva sankulakku.
    Maanava maatra mareta aadhunikateya jaalakke sikku.
    Chennagide. Bevigu venilaagu tanda sambandha. Ondu traditional innondu commercial. Ishta aaytu.

    Like

  3. ಯುಗಾದಿಯಂತೆ ನವಯುಗದ ಕವಿಯನ್ನೂ ಬರಮಾಡಿಕೊಳ್ಳುತ್ತಿದ್ದೇವೆ. A breath of fresh air! ಸಂಪ್ರದಾಯವನ್ನು ಕೆಣಕುವಂತೆ ಕಂಡರೂ ‘ಸೀರಿಯಸ್ಸಾ’ಗಿ ಬಂಡೇಳುತ್ತಿದ್ದಾರೆಯೋ ಸುಮ್ಮನೆ ತಿಕವನ್ನು ಚಿವುಟಿ ತಮಾಷೆ ನೋಡುತ್ತಿದ್ದಾರೆಯೋ ತಿಳಿಯಲಿಲ್ಲ. ಪಿಂಕ ಫ್ಲಾಯ್ಡ್ ನ ಹಾಡು (want no education )ನೆನಪಾಯಿತು. Images ಚೆನ್ನಾಗಿವೆ. ನಮ್ಮ ಹೊಸ ವೇದಿಕೆಗೆ ಹೊಸ ಹಾದಿಯ ನಾಂದಿ?

    Like

    • ಕೆಣಕುತ್ತಲೂ ಇಲ್ಲ, ಬಂಡೇಳುತ್ತಲೂ ಇಲ್ಲ, ತಮಾಷೆಯನ್ನೂ ಮಾಡುತ್ತಿಲ್ಲ. ವಿಷಾದ, ವಿಷಾದ.

      Like

  4. ಮಾನವ ನಿಸರ್ಗವನ್ನು ಎಷ್ಟು ತಿರುಚಲು ಯತ್ನಿಸಿದರೂ ಕೋಗಿಲೆ ಚಳಿಗಾಲದಲ್ಲಿ ಹಾಡುವುದಿಲ್ಲ, ಮಾವು ಶರದ್ ಋತುವಿನಲ್ಲಿ ಚಿಗುರೊಡೆಯುವುದಿಲ್ಲ. ಯುಗಾದಿ ವಸಂತದ ಸಂಭ್ರಮದ ದ್ಯೊತಕವಷ್ಟೇ. ಈ ಕವನದಲ್ಲಿ ನಮ್ಮ ಇಂದಿನ ವ್ಯಾವಹಾರಿಕ ಜೀವನದ ಉತ್ತಮ ಚಿತ್ರಣವಿದೆ. ಹೂವಿಂದ ಹೂವಿಗೆ ಹಾರುವ ದುಂಬಿಯಂತೆ ಕ್ಷಣ ಕ್ಷಣಕ್ಕೂ ಹೊಸ ಸುಖಕ್ಕಾಗಿ ಹಂಬಲಿಸಿ ತೊಳಲಾಡುವ ಬದುಕು ಸೊಗಸಾಗಿ ಹೊಮ್ಮಿದೆ.

    Like

  5. ಕೇಶವ್ ನೀವು ಹೇಳಿರುವ ಪಾಯಿಂಟುಗಳೆಲ್ಲಾ ಸರಿಯೇ, ಮಾವು, ಬೇವು, ವಸಂತ ಎಲ್ಲವೂ ಈ ದೇಶದಲ್ಲಿ ತಮ್ಮ ಮಹತ್ವವನ್ನು ಕಳೆದುಕೊಂಡಿದೆ, ಆದರೂ ನಮ್ಮ ಮನಗಳಲ್ಲಿ ಅದರಲ್ಲೂ ನಮ್ಮ ಪೀಳಿಗೆಯ ಜನಗಳ ಮನಸ್ಸಿನಲ್ಲಿ ಯುಗಾದಿಯ ಹಬ್ಬದ ಬಗ್ಗೆ ಒಂದು ರೀತಿಯ ಸವಿ ಭಾವನೆ ಇದೆ ಇನ್ನಿಸುತ್ತದೆ. ಆಕಾಶವಾಣಿಯಲ್ಲಿ ಎಸ್.ಜಾನಕಿಯ ಸುಮಧುರ ಧ್ವನಿಯಲ್ಲಿ ”ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಹಾಡನ್ನು ಕೇಳದಿದ್ದರೂ, ಮಾವಿನ ಚಿಗುರು, ಬೇವಿನ ಒಗರು, ಕೋಗಿಲೆ ಧ್ವನಿ ಇಂಚರವನ್ನು ಕೇಳಲು ಲಭ್ಯವಿಲ್ಲದಿದ್ದರೂ ಸಹಾ, ಹಿಂದೆ ನಮ್ಮ ತಾರುಣ್ಯದ ಆದಿಯಲ್ಲಿ ಕೇಳಿ ಸವಿದ ಭಾವನೆಗಳಿನ್ನೂ ಬೆಚ್ಚಗೆ ಕುಳಿತಿದೆ ಅಲ್ಲವೇ? ನೀವು ಹೆಸರಿಸಿರುವ ಫ಼್ರೂಟಿ, ಮತ್ತಿತರ ವಸ್ತುಗಳೆಲ್ಲಾ ಕೃತಕಮಯವಾದದ್ದು ಅದರಲ್ಲಿ ಅಸಲೀ ಬೆಲೆಯಿಲ್ಲ ಎನ್ನುವುದನ್ನೂ ಮರೆಯ ಬಾರದಲ್ಲವೇ?
    ನಿಮ್ಮ ಕುಟುಂಬಕ್ಕೆಲ್ಲಾ ಜಯ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು!
    ಉಮಾ

    Like

Leave a Reply to sudarshanarao Cancel reply

Your email address will not be published. Required fields are marked *