ಅನಿವಾಸಿಗಳಾದ ನಮಗೆ ನಮ್ಮ ಜನ್ಮಭೂಮಿ ಭೇಟಿ ಮಾಡುವ ಅವಕಾಶ ಒದಗಿ, ಒಂದಷ್ಟು ದಿನ ತಾಯಿನೆಲದ ಗಾಳಿ ಬೆಳಕಿನಲ್ಲಿ ನಾವು ತೋಯ್ದು ಬರುವ ಗಳಿಗೆಗಳು ಒದಗಿ ಬಂದಾಗ ವ್ಯಕ್ತಪಡಿಸಲಾಗದ ಒಂದು ಖುಷಿ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಅದಕ್ಕೆ ನಾನು ಕೂಡ ಹೊರತಲ್ಲ. ನಾನು ಈ ಬಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದು ನಾಲ್ಕು ವರ್ಷ ಒಂಬತ್ತು ತಿಂಗಳುಗಳ ಧೀರ್ಘ ಅಂತರದ ನಂತರ. ಯುಕೆ ಗೆ ಬಂದ ನಂತರ ನಾನು ಭಾರತಕ್ಕೆ ಹೋಗಿದ್ದು ಮೂರೇ ಬಾರಿ ಹೋದಾಗಲೆಲ್ಲ ಕೆಲವು ಜವಾಬ್ದಾರಿಗಳನ್ನು ಹೊತ್ತುಕೊಂಡೇ ಹೋಗಿದ್ದೆ, ತಂಗಿ ಮದುವೆ, ಮಗನ ಉಪನಯನ, ಪುಟ್ಟ ಮಗಳನ್ನು ಎತ್ತಿಕೊಂಡು ಹೀಗೆ ಏನಾದರೊಂದು ಕಾರಣಗಳಿಂದ ನನಗೆ ಬೇಕಾದೆಡೆ ಬೇಕಾದಂತೆ ನನ್ನ ರಜಾ ಕಾಲವನ್ನು ಕಳೆಯುವುದು ಸಾಧ್ಯವಾಗಿರಲಿಲ್ಲ. ಜೊತೆಗೆ ಅದು ಅಗತ್ಯ ಅಂತ ಕೂಡ ಅನಿಸಿರಲಿಲ್ಲ. ಹೋದಾಗಲೆಲ್ಲ ಅಮ್ಮನ ಕಯ್ಯಡಿಗೆ ತಿಂದು. ಅತ್ತೆಮನೆಗೆ ಹೋದಾಗ ಏಕಮೇವ ಸೊಸೆಯಾದ ಕಾರಣ ಅವರ ಇಚ್ಛೆ, ಬಯಕೆಗಳಂತೆ ಸುತ್ತಮುತ್ತಲಿನ ದೇವಸ್ಥಾನ ಸುತ್ತಿ ,ಸಂಬಂಧಿಕರ ಮನೆಗೆ ಹೋಗಿ ಅವಕಾಶ ಆದರೆ ಯಾವುದೋ ಒಂದೆರಡು ಪೂಜೆಯಲ್ಲಿ ಆರತಿ ಹಾಡು ಹೇಳಿದರೆ ನನ್ನ ಭಾರತ ಪ್ರಯಾಣ ಮುಗಿದಿರುತ್ತಿತ್ತು. ಇದಕ್ಕಿಂತ ಭಿನ್ನವಾಗಿ ನಾನು ಕೂಡ ಎಂದೂ ಯೋಚಿಸಿಯೂ ಇರಲಿಲ್ಲ.
ಆದರೆ ಈ ಬಾರಿ ಭಾರತ ಭೇಟಿ ನನ್ನ ಪಾಲಿಗೆ ಅತೀ ವಿಶೇಷ, ಕೋವಿಡ್,lockdown ಅಂತೆಲ್ಲ ಎರಡುಬಾರಿ ನನ್ನ ವಿಮಾನ ರದ್ದಾಗಿತ್ತು,ಮಕ್ಕಳ ಶಾಲೆ ,ಪತಿಯ ಉದ್ಯೋಗ ,ಇದೆಲ್ಲ ನನ್ನ ಮನಸಿಗೆ ಬಂದಾಗ ಟ್ರಿಪ್ ಪ್ಲಾನ್ ಮಾಡಲು ಸಹಕಾರಿಯಾಗಿರಲಿಲ್ಲ. ಹೀಗಾಗಿ ನಾಲ್ಕು ವರ್ಷ ಒಂಬತ್ತು ತಿಂಗಳ ನಂತರ ನಾನು ತಾಯ್ನೆಲವನ್ನು ನೋಡಲಿದ್ದೆ , ತನ್ನ ಪರಿವಾರ ಕುಟುಂಬವನ್ನು ಭೇಟಿಯಾಗಲಿದ್ದೆ. ಗೋವಿನ ಹಾಡು ಪೂರ್ಣ ಪಾಠವನ್ನ ರೆಕಾರ್ಡ್ ಮಾಡಬೇಕೆನ್ನುವ ಪೂರ್ವ ನಿಯೋಜನೆ ಬಿಟ್ಟರೆ ನಾನು ಬೇರೆ ಯಾವುದೇ ಪ್ಲಾನ್ಗಳನ್ನು ಮಾಡದೆ ಸುಮ್ಮನೆ ಹೋಗಿದ್ದೆ. ಸಮಷ್ಟಿ ತನ್ನಷ್ಟಕ್ಕೆ ತಾನೇ ನನ್ನ ೫೦ ದಿನಗಳನ್ನು ಅತ್ಯಂತ ಸುಂದರವಾಗಿ ಯೋಜಿಸಿ ಕೊಟ್ಟಿತ್ತು . ನಾನು ಖುಷಿಯನ್ನ ಆಸ್ವಾಧಿಸಲೋ ಸಮಷ್ಟಿಗೆ ಧನ್ಯವಾದ ಹೇಳಲೋ ತಿಳಿಯದಾಗಿತ್ತು . ಸಿಕ್ಕ ಗಳಿಗೆಗಳನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಫ್ರೀಜ್ ಮಾಡಿ ಇಡುವುದೊಂದೇ ನನಗಿದ್ದ ಆಯ್ಕೆ ಎಷ್ಟೋ ಬಾರಿ ಅದು ಕೂಡ ಆಗಲಿಲ್ಲ. ಅನಿವಾಸಿ ಗುಂಪು ನನ್ನ ಮಟ್ಟಿಗೆ ನನ್ನ ಯುಕೆಯ ತವರುಮನಿ ಇದ್ದಂತೆ, ನನ್ನ ಪುಟ್ಟ ಪುಟ್ಟ ಪ್ರಯತ್ನಗಳನ್ನು ಶ್ಲಾಘಿಸಿ ಮತ್ತಷ್ಟು ಸಾಧನೆಗೆ, ಓದಿಗೆ ಹಚ್ಚುವ ನನ್ನ ಅತ್ಯಾಪ್ತ ಬಳಗ, ನಿಮ್ಮೆಲ್ಲರೊಂದಿಗೆ ನನ್ನ ಭಾರತ ಭೇಟಿಯ ಅತ್ಯಂತ ಖುಷಿಯ ಕೆಲ ತಾಸುಗಳ ಅನುಭವ ಹಂಚಿಕೊಳ್ಳುವ ಇಚ್ಛೆ ನನ್ನದು.
ಊರಿಗೆ ಹೋದರೆ ಧಾರವಾಡಕ್ಕೆ ಹೋಗದಿದ್ದರೆ ನನ್ನ ಪ್ರವಾಸವೇ ಅಪೂರ್ಣ,ನನ್ನ ಊರಿಂದ ಧಾರವಾಡ ೭೦ಕಿಲೋಮೀಟರ ದೂರ, ಹೀಗೆ ಮನಸು ಬಂದಾಗಲೆಲ್ಲ ಹೋಗಿ ಬರಬಹುದು.ಮತ್ತು ಧಾರವಾಡ್ ಹೋಗಲು ಯಾವುದೇ ಕಾರಣ ನೆವಗಳು,ಬೇಡ ಇದೊಂದು ರೀತಿ ಮನಸು ಬಂದಾಗ ಗುಡಿಗೆ ಹೋಗುತ್ತೀವಲ್ಲ ಹಾಗೆ. ಆದರೆ ಈ ಸಲದ ಮೊದಲ ಧಾರವಾಡದ ಭೇಟಿ ಸಾಧ್ಯ ಆಗಿದ್ದು ಪ್ರಜಾವಾಣಿಯ ೭೫ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಏರ್ಪಡಿಸಿದ್ದ ಒಂದು ಚಂದದ ಕವಿಗೋಷ್ಠಿ, ಮತ್ತು ಸಂಗೀತ ವಿದ್ಯಾಲಯದ ಮಕ್ಕಳಿಂದ ವಿಶೇಷ ಗಾಯನ ಕಾರ್ಯಕ್ರಮ ಜೊತೆಗೆ ನನ್ನ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಿದ್ದರಿಂದ.
ಆನಂದಕಂದರು ಬರೆದ 'ನಲ್ವಾಡಗಳು' ಕವನ ಸಂಕಲನವನ್ನು ಕೆಲವರ್ಷಗಳಿಂದ ಹುಡುಕುತ್ತಿದ್ದೆ, ಎಲ್ಲಿ ಪ್ರಯತ್ನಿಸಿದರೂ ಸಿಗಲಿಲ್ಲ. ಫೇಸಬುಕ್ ನಿಂದ ಪರಿಚಿತರಾದ ರಾಜ್ ಕುಮಾರ್ ಮಡಿವಾಳರ್ ಅವರಿಗೆ ಬೆಲ್ಫಾಸ್ಟ್ ನಲ್ಲಿ ಇರುವಾಗಲೇ ಒಂದು ಮೆಸೇಜ್ ಮಾಡಿ ಕೇಳಿದ್ದೆ ನಿಮ್ಮಲ್ಲಿ ಅಪ್ಪಿತಪ್ಪಿ ನಲ್ವಾಡುಗಳು ಸಂಕಲನ ಇದ್ದರೇ ಅದರದೊಂದು copy ಸಿಗಬಹುದೇ ? ಎಂದು. ಬಂದಾಗ ಬರ್ರಿ ಐತಿ ಕೊಡ್ತೀನಿ ಅಂದ್ರು.
ಸಪ್ತಾಪುರದಲ್ಲಿ ಇರುವ ಅವರ ಅಂಗಡಿಗೆ ಹೋಗಿ ಪುಸ್ತಕ collect ಮಾಡಲು ಹೋದವಳು ಅವರು ಹೇಳುವ ಸಾಹಿತ್ಯ ಲೋಕದ ಚಂದದ ಕಥೆಗಳನ್ನ ಕೇಳುತ್ತ,ಹಾಡುಗಳ ಬಗ್ಗೆ ಮಾತಾಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅವರಿಗೆ ಎಂದು ತಂದುಕೊಂಡಿದ್ದ ಬುತ್ತಿಯಲ್ಲಿ ನನಗೊಂದು ಪಾಲು ಕೊಟ್ಟು ಅವರ ಶ್ರೀಮತಿ ಸುಮಾ ಮತ್ತು ರಾಜ್ಕುಮಾರ್ ಅವರು ನನ್ನ ಜೀವ ಬಂಧುಗಳೇ ಆಗಿದ್ದರು.
ಇನ್ನೇನು ಹೊರಡಬೇಕು ಅನ್ನುವಾಗ 'ಇಲ್ಲೇ ಹಳ್ಳಿಯೊಳಗ ಒಂದು ಕನ್ನಡ ಸಾಲಿ ಐತ್ರಿ ನಿಮಗ ಆಗತದ ಅಂದ್ರ ಒಂದೈದು ನಿಮಿಷ ಹೋಗಿ ಬರೋಣ,?' ಅಂದ್ರು ನನಗೆ ಇಲ್ಲ ಅನ್ನುವ ಮನಸು ಇಚ್ಛೆ ಎರಡು ಇರಲಿಲ್ಲ. ಅವರ ಕಾಕಾನ ಕಾರಿನಲ್ಲಿ ನಾನು ಹೊರಟಿದ್ದು ಧಾರವಾಡ ಹತ್ತಿರದ ಹಳ್ಳಿ ಮುಗಧ ಕ್ಕೆ. ಹೆಸರಿನಷ್ಟೇ ಚಂದ ಊರು ಅದು. 'ಬೇಂದ್ರೆಯವರು ಮೇಘದೂತ ಬರೆಯಲು ಶುರು ಮಾಡಿದ್ದು ಇದೆ ಊರಿನ ದೇವಿ ಗುಡಿಯ ಕಟ್ಟಿ ಮ್ಯಾಲೆ' ಅನ್ನುವ ಮಾತು ಕೇಳುತ್ತಲೇ ನನಗೆ ಮಾತೆ ಹೊರಡಲಿಲ್ಲ .ಒಂದುರೀತಿಯ ಖುಷಿಯ ಗುಂಗು.
ಮುಗದದ ಶಾಲೆಯ ಅತೀ ಉತ್ಸಾಹಿ ,ಸಾಹಿತ್ಯಪ್ರೇಮಿ ಶಿಕ್ಷಕರು ನನ್ನನು ೧೦ ನೇ ತರಗತಿಯ ಮಕ್ಕಳೊಂದಿಗೆ ಮಾತಾಡಲು ತರಗತಿಗೆ ಕರೆದುಕೊಂಡು ಹೋದರು, ಮಕ್ಕಳು ಬೇಂದ್ರೆಯವರ ಎರಡು ಗೀತೆಗಳನ್ನು ಚಂದದ ರಾಗದಲ್ಲಿ ಹಾಡಿದರು. ಹಕ್ಕ್ಕಿಹಾರುತಿದೆ ನೋಡಿದಿರಾ? ಎಂಬ ಗೀತೆ ಕೇಳಿದ್ದ ನನಗೆ, ಮಕ್ಕಳು ಆ ಗೀತೆಯ ಹಿಂದೆಯೇ ಬೆಕ್ಕು ಹಾರುತಿದೆ ನೋಡಿದಿರಾ ಅಂತೇ ಅದೇ ರಾಗದಲ್ಲಿ ಹಾಡಿದಾಗ ಮತ್ತು ಈ ಗೀತೆಯು ಬೇಂದ್ರೆಯವರೇ ಬರೆದದ್ದು ಎಂದು ತಿಳಿದಾಗ ಅತೀವ ಆಶ್ಚರ್ಯವಾಯಿತು. ಮಕ್ಕಳಿಗೆ ನಾನೂ ಒಂದೆರಡು ಹಾಡು ಹೇಳಿಕೊಟ್ಟೆ. ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸುವಾಗ , ಕೆಲವೇ ವರ್ಷಗಳ ಹಿಂದೆ ನಾನುಕೂಡ ಈ ಮಕ್ಕಳಂತೆ ಇಂಥದೇ ಶಾಲೆಯಲ್ಲಿ ಹೀಗೆ ಖುಷಿ ಖುಷಿಯಾಗಿ ಹಾಡು ಹೇಳುತ್ತಾ ಕುಳಿತಿದ್ದಿದು ನೆನಪಾಯಿತು. ಆ ಶಾಲೆಯಿಂದ ವಾಪಸ್ ಧಾರವಾದ ತಲುಪುವ ಹೊತ್ತಿಗೆ ಮನಸೆಲ್ಲ ಬೇಂದ್ರೆ , ಮೇಘದೂತ , ರಾಜಕುಮಾರ್ ಅಣ್ಣ ಹೇಳಿದ ಬೇಂದ್ರೆ ಅಜ್ಜನ ಕಥೆಗಳು. ಇಷ್ಟು ಹತ್ತಿರ ಬಂದು ಬೇಂದ್ರೆಅಜ್ಜನ ಮನೆಯ ಆವರಣಕ್ಕೆ ಒಮ್ಮೆ ಹೋಗಿ ಬರದಿದ್ದರೆ ಅಂತ ಅನ್ನಿಸಿದ್ದರೂ ಆದಿನ ಸಮಯ ಮೀರಿ ಹೋಗಿತ್ತಾದ್ದರಿಂದ ಸುಮ್ಮನೆ ಮನೆಗೆ ಮರಳಿದೆ.
ಇನ್ನೇನು ಸೂಟಿ ಮುಗೀತು ಮತ್ತ ಗಂಟುಮೂಟಿ ಕಟಗೊಂಡು ವಾಪಸ್ ಕರ್ಮಭೂಮಿಗೆ ಹೊರಡ್ಲಿಕ್ಕೆ ಬರೀ ಐದ ದಿನ ಉಳದಾವು ಅನ್ನೋ ಹೊತ್ತಿನಲ್ಲಿ ಮತ್ತೊಮ್ಮೆ ಧಾರವಾಡ ಹೋಗುವ ಗಳಿಗೆ ಕೂಡಿ ಬಂತು., ದೂರದಿಂದ ಬಂದ ಸ್ನೇಹಿತರೊಬ್ಬರಿಗೆ ಬೇಂದ್ರೆಯವರ ಮನೆ ನೋಡಬೇಕಿತ್ತು, ಬೇಂದ್ರೆ ಭವನದಲ್ಲಿ ಇದ್ದ ಸಿಬ್ಬಂದಿಯನ್ನು ಮನೆಯ ಗೇಟಿನೊಳಕ್ಕೆ ಹೋಗಲು ಅನುಮತಿ ಕೇಳಿದೆವು, ಆರಂ ಆಗಿ ಹೋಗಿ ಬರ್ರಿ , ನೀವು ಒಳಗೂ ಹೋಗಬಹುದು. ಅಲ್ಲೇ ಬೇಂದ್ರೆಯವರು ಬಳಸಿದ ವಸ್ತುಗಳು ಅದಾವು ಅದನ್ನೂ ನೋಡಿ ಬರ್ರಿ, ಆಮೇಲೆ ಅವರ ಭಾವಚಿತ್ರಗಳ ಸಂಗ್ರಹ ನೋಡ್ಲಿಕ್ಕೆ ಇಲ್ಲಿ ಬರ್ರಿ ಎಂದರು.
ನಾವು ಗೇಟಿನೊಳಗೆ ಕಾಲು ಇಟ್ಟಾಗ ಚಂದದ ಬೆಳಗು ಹಳದಿ ಗೋಡೆಯ ಮನೆಯನ್ನು ಇನ್ನೂ ಚಂದ ಮಾಡಿತ್ತು, ಅವರ ಮೊಮ್ಮೊಗಳು ಮತ್ತವರ ಪತಿ ತುಂಬಾ ಆತ್ಮೀಯವಾಗಿ ಮಾತನಾಡಿದರು, ನಾನು ಮೆತ್ತಗೆ 'ನಾನು ಹುಟ್ಟಿದ್ದು ಬೇಂದ್ರೆಯವರ ಜನ್ಮದಿನದಂದು' ಅಂದೆ. ಹಂಗಾದ್ರ ನೀವೂ ಬರೀತೀರಿ? ಅಂದ್ರು, ನಾನು `ಇಲ್ಲ ರೀ ಹಾಡ್ತೀನಿ` ಅಂದೇ, ಅದು ಹೆಂಗ ಸಾಧ್ಯ ? ಅವರ ಹುಟ್ಟಿದ ದಿನ ಹುಟ್ಟಿ ಬರೆಯಲ್ಲ ಅಂದ್ರ ? ಅಂದು ನಕ್ಕರು. ಫೋಟೋ ವಿಡಿಯೋಗ್ರಫಿ ಹುಚ್ಚು ಇರುವ, ಅದಕ್ಕಿಂತ ಹೆಚ್ಚು ಬೇಂದ್ರೆ ಅವರನ್ನು ಪ್ರೀತಿಸುವ ನನ್ನ ಸ್ನೇಹಿತರು `ನಾವು ಕೆಲ ಹಾಡುಗಳನ್ನ ರೆಕಾರ್ಡ್ ಮಾಡ್ಕೊಬಹುದಾ? ಎಂದು ಕೇಳಿದಾಗ ಬೇಂದ್ರೆ ಅಜ್ಜನ ಮೊಮ್ಮಗಳು ಅರ್ರೆ ,ಅದ್ಯಾಕ್ ಕೇಳ್ತೀರಿ ಮಾಡ್ಕೋರಿ ಅಂತ ಖುಷಿಯಿಂದ ಒಪ್ಪಿಕೊಂಡರು.
ಹಾಡುವ ಯಾವುದೇ ತಯಾರಿ ಮಾಡಿಕೊಳ್ಳದ ನಾನು ಅವರು ಹಾಡು ಅಂದ ತಕ್ಷಣ ನೆನಪಿಗೆ ಬಂದಿದ್ದು - ಇನ್ನು ಯಾಕ ಬರಲಿಲ್ಲವ್ವ ... ಕವಿತೆಯ ಸಾಲುಗಳು.
ವಾಹನಗಳ ಸದ್ದಿನ ನಡುವೆ ನಾನು ಹಾಡಿದ್ದು ಅದೆಷ್ಟು ಸರಿಯಾಗಿದೆಯೋ ಗೊತ್ತಿಲ್ಲ ,ಆದರೆ ಕನ್ನಡದ ಇಬ್ಬರು ಮೇರು ಕವಿಗಳು ವಾಸಿಸಿದ, ಓಡಾಡಿದ ಸ್ಥಳದಲ್ಲಿ ನನಗೆ ಅವರ ಹಾಡುಗಳನ್ನು ಹಾಡುವ ಅವಕಾಶ, ಅದೃಷ್ಟ ಭಗವಂತ ಒದಗಿಸಿಕೊಟ್ಟಿದ್ದಕ್ಕೆ ನಾ ಅವನಿಗೆ ಋಣಿ. (ಇಲ್ಲಿಗೆ ಬರುವ ಮೊದಲು ಮೈಸೂರಲ್ಲಿ ಕುವೆಂಪು ಅವರ ಮನೆಯ ಆವರಣದಲ್ಲಿ ಕೂತು ಸಹ ಅವರ ಒಂದು ಕವನವನ್ನು ಹಾಡಿದ್ದೆ.)
ಆತ್ಮೀಯ ಓದುಗರೇ,
ಈ ವಾರ ತಮ್ಮ ಓದಿಗೆ ಶ್ರೀಯುತ ವಿಜಯನರಸಿಂಹ ಅವರು ಶ್ರೀ ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರ ಕುರಿತು ಬರೆದ ಕವಿತೆ ''ಸಿದ್ಧ ಪುರುಷ''.
ಮತ್ತು ಬದುಕು ಬದಲಿಸಿದ ಸರಣಿಗೆ ಅರ್ಪಿತಾ ಅಭಿರಾಮ ಅವರು ಇದೆ ಮೊದಲ ಬಾರಿಗೆ ಅನಿವಾಸಿಯಲ್ಲಿ ಬರೆದಿದ್ದಾರೆ.
ಈವಾರದ ಎರಡೂ ಬರಹಗಳು ಚುಟುಕಾಗಿದ್ದರೂ ಚುರುಕಾಗಿವೆ.
ಇದು ಅನಿವಾಸಿ ಸಂಪಾದಕಿಯಾಗಿ ನಾನು ನಿರೂಪಿಸುತ್ತಿರುವ ಕೊನೆಯ ಸಂಚಿಕೆ, ನನ್ನ ಸಂಪಾದಕತ್ವದ ಅವಧಿಯಲ್ಲಿ ಕಾಲಕಾಲಕ್ಕೆ ಅಕ್ಷರ ಬೊಕ್ಕಸಕ್ಕೆ ದೇಣಿಗೆ ಕಳಿಸಿ ಅಕ್ಷಯವಾಗಿಟ್ಟ ಎಲ್ಲ ಸಹೃದಯರಿಗೆ ಧನ್ಯವಾದಗಳು. ಮುಂದಿನ ವಾರದಿಂದ ಶ್ರೀಮತಿ ಗೌರಿ ಪ್ರಸನ್ನ ಅವರು ಅನಿವಾಸಿಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಆದರದ ಸ್ವಾಗತ. ಅವರ ಸಾರಥ್ಯದಲ್ಲಿ ಅನಿವಾಸಿಯ ಅಕ್ಷರತೇರು ಮೆರೆಯಲಿ ಎಂಬ ಸದಾಶಯದೊಂದಿಗೆ, ಈ ವಾರದ ಸಂಚಿಕೆಗೆ ತಮಗೆಲ್ಲ ಸ್ವಾಗತ.
-ಸಂಪಾದಕಿ
ಸಿದ್ಧ ಪುರುಷ
-ವಿಜಯನರಸಿಂಹ
ಹೆತ್ತ ಮಕ್ಕಳ ಹಸಿವನು ನೀಗಿಸಲು ಕಷ್ಟ
ಎಂದರು ಹೆತ್ತವರು
ನಮ್ಮ ಬಳಿ ಕಳಿಸಿ, ಅನ್ನದ ಅಕ್ಷಯವಿದೆ
ಎಂದು ಕೈಬೀಸಿ ಕರೆದರು
ಅನ್ನಕ್ಕೆ ಸಾಕಾಗುತ್ತದೆ, ವಸನಕ್ಕೆ ಕಾಸಿಲ್ಲ
ಮಕ್ಕಳ ಮೈ-ಮಾನವ ಮುಚ್ಚಲಾರೆವು ಎಂದರು
ನಮ್ಮ ಬಳಿ ಕಳಿಸಿ ಮಾನಕ್ಕೆ ತಕ್ಕಂತೆ
ಮಿತಿಗೆ ಮೀರದಂತೆ ಪವಿತ್ರದ ಸಮವಸ್ತ್ರವ ತೊಡಿಸಿ
ನಿತ್ಯ ಮೈ ಮನಸು ಶುಚಿಯಾಗಲಿದೆ ಎಂದು
ಮನಬಿಚ್ಚಿ ಕರೆದರು
ಅಸನಕ್ಕೆ, ವಸನಕ್ಕೆ ಸಾಕಾದೀತಷ್ಟೆ, ವಿದ್ಯೆಗಿಲ್ಲ
ನಮ್ಮಲ್ಲಿ ವ್ಯವಸ್ಥೆಯಿಲ್ಲ, ಕಲಿಸುವವರಿಲ್ಲ ಎಂದರು
ನಮ್ಮ ಬಳಿ ಕಳಿಸಿ, ಜ್ಞಾನ ದೇಗುಲವು ಇಲ್ಲಿದೆ
ಶಿಕ್ಷಣದಿಂದ ಬದುಕು ಹಸನಾಗಲಿದೆ ಎಂದು
ಅಭಯಕೊಟ್ಟು ಕರೆದರು
ಕಾಯಕದಲಿ ಕೈಲಾಸ ಕಂಡು
ಅನ್ನ, ಅರಿವೆ, ಅಕ್ಷರದ ತ್ರಿದಾಸೋಹದ
ಹರಿಕಾರನಾಗಿ ಸಿದ್ಧಗಂಗೆಯ ಸಿದ್ಧಪುರುಷನಾದ
ಗುರುವೆ ಇದೊ ನಿಮಗೆ ಮನ ಬಾಗಿ ವಂದನೆ!
ಬದುಕು ಬದಲಿಸಿದ ಪುಸ್ತಕ
-ಶ್ರೀಮತಿ ಅರ್ಪಿತಾ ಅಭಿರಾಮ್
(ಅರ್ಪಿತಾ ಮೂಲತಃ ಶಿವಮೊಗ್ಗೆಯವರು, ಎಂ. ಟೆಕ್ ಪದವೀಧರೆಯಾದ ಇವರು ಪ್ರಸ್ತುತ ಬೆಲ್ಫಾಸ್ಟ್ ನಗರದಲ್ಲಿ ಪತಿ ಅಭಿರಾಮ್ ಮತ್ತು ಮಗಳು ಆರಭಿಯೊಂದಿಗೆ ವಾಸವಾಗಿದ್ದಾರೆ. ಮಧುರ ಕಂಠದ ಗಾಯಕಿ, ಸಾಹಿತ್ಯ ಪ್ರೇಮಿ.–ಸಂ)
ನನ್ನ ಬದುಕಿನ ಮೇಲೆ ಗಾಢ ಪರಿಣಾಮ ಬೀರಿದ ಒಂದೇ ಒಂದು ಪುಸ್ತಕವನ್ನು ಆಯ್ಕೆ ಮಾಡಬೇಕೆಂದರೆ ಅದು ಬಹಳ ಕಷ್ಟ ಏಕೆಂದೆರೆ ನನ್ನ ಬದುಕನ್ನ ರೂಪಿಸಿದ ಪುಸ್ತಕಗಳು ಅನೇಕ. ಅವಗಳಲ್ಲಿ ಒಂದನ್ನು ಹೇಳಲೇಬೇಕು ಅಂದರೆ ಅದು'ಯೋಗಿಯ ಆತ್ಮಕಥೆ'.
ಬಹುಶಃ ನಾನು ಹತ್ತು ವರ್ಷದವಳಿರುವಾಗ ಆ ಪುಸ್ತಕದ ಕೆಲವು ಪುಟಗಳನ್ನ ನನ್ನ ಮಾವನ ಮನೆಯಲ್ಲಿ ಓದಿದ್ದೆ. ಆಗಲೇ ಅದು ನನ್ನ ಮನದ ಮೇಲೆ ವಿಶೇಷವಾದ ಛಾಪನ್ನು ಬಿಟ್ಟಿತ್ತು.
ನಂತರ ನಾನು ಓದು ಮುಗಿಸಿ ಕೆಲಸಕ್ಕೆ ಹೋಗಲು ಶುರು ಮಾಡಿದಾಗ ಒಂದಷ್ಟು ಸಮಯ ಖಿನ್ನತೆಗೆ ಒಳಗಾಗಿದ್ದೆ. ಜೀವನ ನಿರರ್ಥಕ ನೀರಸ ಎನಿಸುತ್ತಿತ್ತು. ಉಣ್ಣು, ತಿನ್ನು, ಮಲಗು ಮತ್ತೆ ಕೆಲಸಕ್ಕೆ ಹೋಗು ಬರೀ ಇಷ್ಟೇನಾ ಜೀವನ ಎಂದೆನಿಸುತ್ತಿತ್ತು. ಎಲ್ಲ ಕಡೆ ಸಿಕ್ಕು ಸುಳಿಗಳು ಬಂಧನಗಳೇ ಕಾಣುತ್ತಿದ್ದವು. ಒಂದುಕಡೆ ಏನೋ ಸಂತೋಷ ಸಿಕ್ಕಿತು ಅನ್ನುವಷ್ಟರಲ್ಲಿ ಅದು ಮಾಯ. ಯಾವುದೂ ಶಾಶ್ವತವಲ್ಲ ಎಂಬ ಖಾಲಿ ಭಾವ ಆವರಿಸುತ್ತಿತ್ತು.
ಆ ಸಮಯದಲ್ಲಿ 'ಯೋಗಿಯ ಆತ್ಮಕಥೆ' ಹಾಗೂ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೂ ಓದಲು ಶುರುಮಾಡಿದೆ. ಆ ಓದು ನಾನು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತು. ಜೀವನದ ಹಲವು ಆಯಾಮಗಳನ್ನೂ ಕೆಲವು ನಿತ್ಯ,ನಿರಂತರ ಅಭ್ಯಾಸಗಳಿಂದ ಪರಿಶೋಧಿಸಬಹುದು ಎಂಬುದನ್ನ ತೋರಿಸಿಕೊಟ್ಟಿತು.
ಅಂದು ಪ್ರಾರಂಭಿಸಿದ ಆ ಅಭ್ಯಾಸ, ಸಾಧನಾ ಪಥ ಇಂದಿಗೂ ನನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಒಳ್ಳೆಯ ಪರಿಣಾಮ ಬೀರುತ್ತಲೇ ಬಂದಿದೆ.
ಇಂದಿಗೂ ಯಾವುದೇ ಗೊಂದಲದಲ್ಲಿದ್ದಾಗ ಆ ಪುಸ್ತಕದ ಪುಟವೊಂದನ್ನು ತೆರೆಯುತ್ತೇನೆ, ಪ್ರತಿಬಾರಿಯೂ ಮನಸಿಗೆ ಚೈತನ್ಯವನ್ನು ತುಂಬಿ ಸಮಸ್ಯೆ ಎದುರಿಸುವ ಉತ್ಸಾಹ ಧೈರ್ಯ ಆ ಪುಸ್ತಕ ತುಂಬುತ್ತದೆ.