ಅಭಿನವ ಅಭಿಮನ್ಯುಗಳು -ಡಾ. ಶ್ರೀವತ್ಸ ದೇಸಾಯಿ ಅವರ ಕವನ

ಅಭಿನವ ಅಭಿಮನ್ಯುಗಳು

(ಎರಡು-ಮೂರು ದಶಕಗಳ ನಂತರ ಅನಿವಾಸಿಗಳು ಒಮ್ಮೊಮ್ಮೆಯಾದರೂ ಈ ತರಹದ ವಿಚಾರಕ್ಕೆ ತುತ್ತಾಗಿರುತ್ತಾರೇನೋ!)

 

ಜೀವನ ಸಂಗ್ರಾಮದಲ್ಲಿ ಇಳಿದವರು ನಾವು
ತಾಯಿನಾಡು ಕನ್ನಡ ನಾಡು ಬಿಟ್ಟ ಪರದೇಶಿಗಳು
ಮಹತ್ವಾಕಾಂಕ್ಷೆಯ ಮೃಗಜಲದ ಬೆನ್ನು ಹತ್ತಿದವರು ಕೆಲವರು
ಲಕ್ಷ್ಮಿಯ ಕಟಾಕ್ಷೆಯ ಆಸೆಯಲ್ಲಿ ಹಲವರು
ಎಲ್ಲರೂ ಚಕ್ರವ್ಯೂಹದಲ್ಲಿ ಸಿಲುಕಿದ್ದೇವೆ
ಬಂಧು-ಬಳಗದ ಕರುಳಬಳ್ಳಿ ಕಡಿದಿದೆ
ಆರಾಮ-ಆಲಸ್ಯವುಂಡಿದೆ ದೇಹ
ಭಾರತದ ಭರಾಟೆಯ ಬದುಕಿನ ಗತ್ತು ಮರೆತಿದೆ
ಇಲ್ಲಿ ಹೊಟ್ಟೆಪಾಡಿನ ಕೆಲಸ
ಗಳಿಸಿದ ಕೆಲವೇ ಮಿತ್ರರ ಸಂಗ
ಇದೆಲ್ಲಕ್ಕಿಂತ ಹೆಚ್ಚಾಗಿ
ಮಕ್ಕಳ ಬಂಧನ
ಒಂದೇ ಎರಡೇ ಇವೆಲ್ಲ ಕೂಡಿ
೧೪ ಸುತ್ತಿನ ಪದ್ಮವ್ಯೂಹ ನಮ್ಮ ಪಾಲಿಗೆ
ಒಳಹೊಕ್ಕು ಸುತ್ತಿ ಸುತ್ತಿ ಸುಸ್ತಾಯಿತು
ಹೊರಬರುವ ದಾರಿ ಕಂಡಿಲ್ಲ
ಸೆಣಸಾಡಿಯೇ ಸಾಯಬೇಕಾದ
ಅಭಿನವ ಅಭಿಮನ್ಯುಗಳು ನಾವು!

 

7 thoughts on “ಅಭಿನವ ಅಭಿಮನ್ಯುಗಳು -ಡಾ. ಶ್ರೀವತ್ಸ ದೇಸಾಯಿ ಅವರ ಕವನ

 1. ಶೀವತ್ಸದೇಸಾಯಿಯವರೆ,
  ನಿಮ್ಮ ಆಧುನಿಕ ಅಭಿಮನ್ಯು ಪದ್ಯವನ್ನು ಓದಿದೆ (ಒಂದು ತಿಂಗಳು ತಡವಾಗಿ). ನಿಮ್ಮ ತತ್ವಶಾಸ್ತ್ರದ ಅವಲೋಕನವು ಸರಿಯಾಗಿದೆ. ಅನಿವಾಸಿ ಕನ್ನಡಿಗರಲ್ಲದೆ ಎಲ್ಲಾ ವಲಸೆ ಬಂದ ಜನಾಂಗಗಳಿಗೂ ಅನ್ವಹಿಸುವುದು. ನನಗೆ ಹೀಗೂ ಅನಿಸುವುದು. ’ಮೊದಲು ಭಾರತದೇಶವನ್ನು ಬಿಡಬಾರದು, ಬಿಟ್ಟಮೇಲೆ ಭಾರತಕ್ಕೆ ಹಿಂತಿರುಗಬಾರದು, ಭಾರತಕ್ಕೆ ಹಿಂತಿರುಗಿದಮೇಲೆ ಹೊರದೇಶಕ್ಕೆ ಮತ್ತೆ ಬರಬಾರದು’. ನಾನು ಈ ಎಲ್ಲವನ್ನೂ ಮಾಡಿರುವೆ. ಚಕ್ರವ್ಯೂಹಕ್ಕೆ ಸಿಕ್ಕುವುದರ ಮೊದಲೇ ಅಂದರೆ ೨೫ ವರುಷಗಳ ಮೊದಲೇ ನಿಮ್ಮವೀಕ್ಷಣೆಯ ಹಾಗೆಯೇ ನನಗೂ ಅನಿಸಿ ’ವಿದೇಶೀ ಕನ್ನಡಿಗನ ಕೊರಗು’ ಎಂಬ ಒಂದು ಕವನವನ್ನು ಬರೆದು ನಮ್ಮ ಕನ್ನಡಬಳಗವು ಆಚರಿಸಿದ ಮೊದಲನೆಯ ವಿಶ್ವಕನ್ನಡಿಗರ ಸಮ್ಮೇಳನದಲ್ಲಿ ಓದಿದ್ದೆ. ಮತ್ತೆ ೨೦೦೮ರಲ್ಲಿ ಮತ್ತೊಂದುಸಲ ಓದಿದೆ. ಆದು ’ಅಪರಂಜಿ’ ಮಾಸಪತ್ರಿಕೆಯಲ್ಲೂ ಪ್ರಕಟವಾಯಿತು. ಈ ಪದ್ಯವು ಎಲ್ಲರಿಗೂ ತಿಳಿದಿರುವುದರಿಂದ ಅದನ್ನು ಇಲ್ಲಿ ಮತ್ತೆ ಬರೆಯುವುವುದು ಅನಿವಾರ್ಯ ಎಂದು ನಂಬಿರುವೆ.

  Like

 2. ಕವಿತೆ ಚೆನ್ನಾಗಿದೆ. ಪ್ರಾಸಬದ್ಧವಾಗಿರಬಹುದಿತ್ತೇನೋ! ನನಗೆ ಕವಿತೆಯ ಪ್ರಾಕಾರಗಳ ಜ್ಞಾನ ಇಲ್ಲ ಹಾಗಾಗಿ ಈ ಯೋಚನೆ ಬಂತು.

  ಚಕ್ರವ್ಯೂಹ ಎಲ್ಲೆಲ್ಲೂ. ಈ ಜಗತ್ತೇ ಒಂದು ಚಕ್ರವ್ಯೂಹ. ಅದರೊಳಗೆ ಹಲವು ಬಂಧನಗಳ ಚಕ್ರವ್ಯೂಹ, ಕಾರ್ಪೊರೇಟ್ ಚಕ್ರವ್ಯೂಹ, ಸರ್ಕಾರಗಳ ವ್ಯೂಹ, ಹೀಗೆ. ಭೇದಿಸುವುದು ಸಾಧ್ಯವಿದ್ದಾಗ್ಯೂ ಭೇದಿಸಲಾಗದ ಅಭಿಮನ್ಯುಗಳು ನಾವು, ಹೀಗಾಗಿ ಆಧುನಿಕ ಅಭಿಮನ್ಯುಗಳು ಎನ್ನುವ ಶೀರ್ಷಿಕೆ ಸಮಂಜಸವಾಗಿದೆ. ಎಲ್ಲ ಬಂಧನಗಳನ್ನೂ ಕಳಚಿಕೊಳ್ಲಬಹುದು ಆದರೆ ಆ ಎದೆಗಾರಿಕೆಯಾಗಲೀ, ಮನೋಧಾರ್ಢ್ಯತೆಯಾಗಲೀ ನಮಗಿಲ್ಲ,.ಅಲಸ್ಯ ಇರಬಹುದು, ಅನಾಸಕ್ತಿ ಇರಬಹುದು,ಆತಂಕ ಇರಬಹುದು.
  ರಾಮಶರಣ್ ಅಂದಂತೆ ಪೀಳಿಗೆಯ ಜೊತೆಗೆ ಭಾಷೆ- ಸಂಸ್ಕೃತಿ ಉಳಿಸಿದರೆ ಅದೇ ಅಭೇದ್ಯತೆಯನ್ನು ಭೇದಿಸಿದಂತೆ!!

  Like

 3. ಪರದೇಸಿ ಭಾರತೀಯರನ್ನು `ಅಭಿನವ ಅಭಿಮನ್ಯುಗಳು` ಎಂದು ಹೊಸ ಪ್ರತಿಮೆಯನ್ನು ಕೆತ್ತಿದ್ದೀರಿ. ನಾನೂ ಈ ಹಿಂದೆ ನನ್ನದೊಂದು ಕವನದಲ್ಲಿ ನಮ್ಮ ಪರದೇಶದ ಇರುವಿಕೆಯನ್ನು ಚಕ್ರವ್ಯೂಹಕ್ಕೆ ಹೋಲಿಸಿದ್ದೆ. ಉತ್ತರಗಳಿಲ್ಲದ ಪ್ರಶ್ನೆಗಳನ್ನು ಕೆರಳಿಸುವುದೇ ಕವಿತೆಯ ಆಶಯವಲ್ಲವೇ?

  Like

  • ನಾನು ಪೀಠಿಕೆಯಲ್ಲಿ ಊಹಿಸಿದ್ದು ಸರಿಯೇ ತಾನೇ? ನಿಮಗೂ ಹಾಗೆ ಅನಿಸಿತ್ತೇ? ಕವಿಗಳೆಲ್ಲರ ದೃಷ್ಟಿಯೂ (ಚಕ್ರವ್ಯೂಹ) ಒಂದೇನಾ? ಮತ್ತೆ ಪ್ರಶ್ನೆಗಳು.
   ಶ್ರೀವತ್ಸ

   Like

 4. ನಮ್ಮ ಮನಸಿನ ಡೋಲಾಯಮಾನ ಸ್ಥಿತಿಯನ್ನು ಚೆನ್ನಾಗಿ ಚಿತ್ರಿಸಿದ್ದೀರಿ.

  ಇಂದಿನ ಜಗತ್ತು ಹಲವಾರು ಕಾರಣಗಳಿಂದ ಕುಗ್ಗಿ ಚಿಕ್ಕ ನಾಡಾಗಿದೆ. ಜಾಗತೀಕರಣದಿಂದ ಭಾರತೀಯರ ದೃಷ್ಟಿಕೋನ ಕೂಡ ಬದಲಾಗಿದೆ. ಎಲ್ಲ ಊರುಗಳ ಹೈ ಸ್ಟ್ರೀಟ್ ನಲ್ಲೂ ಒಂದೇ ತರನಾದ ಅಂಗಡಿಗಳಿರುವಂತೆ ತಾಯ್ನಾಡ ವಾಸಿಗಳ ವಿಚಾರದಲ್ಲೇನೂ ಮಹಾನ್ ವಿಭಿನ್ನತೆ ಕಾಣುತ್ತಿಲ್ಲ. ಹಿಂದೆಲ್ಲ ನಮ್ಮೂರಿನವರು ಉದ್ಯೋಗಕ್ಕೆ ಮುಂಬಯಿಗೆ ಹೋಗುತ್ತಿದ್ದರು. ಹಾಗೆಯೇ ನಾವೂ.
  ಎಲ್ಲಿದ್ದೆವೋ ಅಲ್ಲಿ ಅಚ್ಚುಕಟ್ಟಾಗಿ ಜೀವನ ಮಾಡಿ, ಯುವ ಜನಾಂಗವನ್ನು ಉತ್ತಮ ಮಾನವರನ್ನಾಗಿ ಬೆಳೆಸೋಣ ಬಿಡಿ. ಜೀವನ ಚಕ್ರವ್ಯೂಹದಿಂದ ಹೊರ ಬರಲು ಇಂಗ್ಲೆಂಡ್ ಅಥವಾ ಭಾರತದಲ್ಲಿದ್ದರೂ ಸಾಧ್ಯವಿಲ್ಲ.
  ದಯವಿಟ್ಟು ಉಪದೇಶ ಮಾಡುತ್ತಿದ್ದೇನೆಂದು ಭಾವಿಸಬೇಡಿ. ದೂರವಿದ್ದೆವೆಮ್ಬುವುದು ನಮ್ಮ ಮಾನಸಿಕ ಭಾವನೆ, ಭೌತಿಕವಲ್ಲ.
  ರಾಂ

  ಡ್ಡ್ತ್ತಂ

  Like

  • ನೀವು ಹೇಳುವದೂ ಸರಿಯೇ. ಅಂತರ ಮಾನಸಿಕವೇ. ಅಂತಲೇ ಒಮ್ಮೊಮ್ಮೆ ಹತ್ತಿರವಿದ್ದರೂ ದೋರವಾಗಿರುತ್ತೇವೆ. ನಾನೂ ಮುಂಬಯಿಗೆ ಹೋಗಿ ಇಲ್ಲಿಗೆ ಬಂದೆ. ಆಗ ಈ ಭಾವನೆ ಇರಲಿಲ್ಲ. ಮದುವೆ ಮಕ್ಕಳು ಜವಾಬ್ದಾರಿ, ಬೇರೆ ವಾತಾವಾರಣ ಇವೇ ಕಾರಣವೋ. ಅಥವಾ ವಯಸ್ಸಿನ ಪರಿಣಾಮವೋ. ನಿಮ್ಮದು ಉಪದೇಶವಲ್ಲ. ನಿಮ್ಮ ಆಶಾವಾದಕ್ಕೆ ತಲೆದೂಗಿದೆ. ಮುಂದಿನ ಪೀಳಿಗೆಗೂ ಒಳ್ಳೆಯ ಭವಿತವ್ಯ. ನಮಗಾಗಿ ಬೇರೆ ಪ್ರತಿಮೆ ಹುಡುಕೋಣ!
   ಶ್ರೀವತ್ಸ

   Like

 5. ನಾವೆಲ್ಲಾ ಅಭಿನವ ಅಭಿಮನ್ಯುಗಳೇ ಸರಿ! ಕಾರಣ ಏನೇ ಇರಲಿ ಕಡೆಗೆ ನಮ್ಮ ಪರಿಸ್ಥಿತಿ ”ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು” ಎಂಬಂತೆ ಆಗುತ್ತದೆ. ನೀವು ಹೇಳಿರುವಂತೆ ಇಲ್ಲಿನ ಸುವಿಧತೆಗಳಿಗೆ ಒಗ್ಗಿಹೋದ ತನು-ಮನಗಳು, ನಮ್ಮ ತಾಯ್ನಾಡಿನಲ್ಲಿ ಬದಲಾಗಿರುವ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೆ ತೊಳಲುವ ಪರಿಸ್ಥಿತಿ ವಿಶ್ವಾಮಿತ್ರರ ”ತ್ರಿಶಂಕುವಿನ ಸ್ವರ್ಗದಂತೆ”. ಮನದಲ್ಲಿ ಹೊತ್ತು ತಂದ ಆಸೆ-ಆಕಾಂಕ್ಷೆಗಳಲ್ಲಿ ಹಲವಾದರೂ ಕೈಸೇರಿದರೆ ನಮ್ಮ ಜನ್ಮ ಧನ್ಯ ಅಷ್ಟೇ.
  ಉಮಾ ವೆಂಕಟೇಶ್

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.