ಆತ್ಮೀಯ ಓದುಗರೆಲ್ಲರಿಗೂ ನಮಸ್ಕಾರ, ಈ ವಾರದ ಅನಿವಾಸಿ ಸಂಚಿಕೆ ಬಲು ವಿಶೇಷ, ಯುಗಾದಿ ಹಬ್ಬ ಯಾವತ್ತಿಗೂ ತನ್ನೊಂದಿಗೆ ಹೊಸತನ್ನು ಹೊತ್ತು ತರುತ್ತದೆ, ಹಸಿರು,ಚಿಗುರು,ಹೂವು,ಹಣ್ಣು ನಿಸರ್ಗವೇ ಸಂಭ್ರಮ ಹೊದ್ದು ನಿಂತಂತೆ ಭಾಸವಾಗುತ್ತದೆ. ಹಬ್ಬ ತಪ್ಪಿದರೂ ಹೋಳಿಗೆ ತಪ್ಪದು ಎಂಬ ಗಾದೆ ಮಾತಿನಂತೆ ಅನಿವಾಸಿ ಈ ಸಂಚಿಕೆಯು ಹಬ್ಬದ ಎರಡು ದಿನಗಳ ನಂತರ ಪ್ರಕಟವಾಗುತ್ತಿದೆ, ಆದರೆ ಈ ಲೇಖನಗಳನ್ನ ಓದಿದರೆ ಮತ್ತೆ ನೀವು ಯುಗಾದಿಯ ಸಂಭ್ರಮವನ್ನ ಅನುಭವಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಸಂಚಿಕೆಯಲ್ಲಿ ಮೂರು ಹೊಸ ಲೇಖಕರು ಅನಿವಾಸಿಯಲ್ಲಿ ತಮ್ಮ ಯುಗಾದಿಯ ನೆನಪುಗಳನ್ನ, ಸಂಭ್ರಮ, ಹಬ್ಬದ ಜವಾಬ್ದಾರಿಗಳನ್ನ ಕುರಿತು ಬರೆದಿದ್ದಾರೆ. ಮೂವರು ಲೇಖಕರಿಗೂ ಅನಿವಾಸಿ ಬಳಗಕ್ಕೆ ಸ್ವಾಗತ ಕೋರುತ್ತೇನೆ.ಎಂದಿನಂತೆ ತಾವೆಲ್ಲರೂ ಓದಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ. ತಮಗೆಲ್ಲರಿಗೂ ಈ ಶೋಭಕೃತ್ ಸಂವತ್ಸರ ಶುಭಪ್ರದವಾಗಲಿ ಎಂಬ ಆಶಯದೊಂದಿಗೆ. -ಅಮಿತಾ ರವಿಕಿರಣ್ (ಸಂ)
ಹಬ್ಬದ ಜವಾಬ್ದಾರಿ - ಚೇತನ್ ಅತ್ನಿ
ಗಾಂಧಿವಾದಿ ಗೊರೂರರು ಗೊರೂರು ಮತ್ತು ಹೇಮಾವತಿಯ ದಂಡೆಯಲ್ಲಿರುವ ಇತರ ಹಳ್ಳಿಗಳನ್ನು ಸೀರೆಯ ಸೆರಗಿಗೆ ಹೋಲಿಸುತ್ತಾರೆ ಏಕೆಂದರೆ ಸೀರೆಯ ಸೌಂದರ್ಯವನ್ನು ಹೆಚ್ಚಿಸುವುದೇ ಸೆರಗಂತೆ ಹಾಗೆಯೆ ಗೊರೂರು ಮತ್ತು ಹೇಮಾವತಿಯ ದಂಡೆಯಲ್ಲಿರುವ ಇತರ ಹಳ್ಳಿಗಳು ಕೂಡ,ಅಲ್ಲೆಲ್ಲೋ ಮೂಡಗೆರೆಯಲ್ಲಿ ಹುಟ್ಟಿ ಪಶ್ಚಿಮ ಘಟ್ಟಗಳನ್ನು ಸುತ್ತಿ ಬರುವ ಹೇಮಾವತಿಯನ್ನು ಗೊರೂರಿನಲ್ಲಿ ತಡೆದು ನಮ್ಮ ಜನ ಹೊಳೆನರಸೀಪುರದ ಮೂಲಕ ಕಾವೇರಿಗೆ ಸೇರಿಸಿದ್ದಾರೆ ಅದಕ್ಕೆ ಏನೋ ಗೊರೂರರು ಈ ಹಳ್ಳಿಗಳನ್ನು ಸೀರೆಯ ಸೆರಗಿಗೆ ಹೋಲಿಸಿದ್ದು.
ಇಂತಿಪ್ಪ ಗೊರೂರಿನಿಂದ ಒಂದೆರಡು ಮೈಲಿಗಳಲ್ಲಿ ಇರುವ ನನ್ನ ಹಳ್ಳಿಯಲ್ಲಿ ಯುಗಾದಿಯ ನನ್ನ ನೆನಪುಗಳನ್ನು ಹಂಚಿಕೊಳ್ಳುವ ಪ್ರಯತ್ನವಷ್ಟೇ ಇದು, ಅದು ನೀವು ಸಹಿಸಿಕೊಂಡಷ್ಟು ಸಮಯ , ನನ್ನ ಹಳ್ಳಿಯು ಕೂಡ ಗೊರೂರರು ಹೋಲಿಸುವಂತೆ ಅಷ್ಟೇ ಸುಂದರವಾಗಿದೆ ಅದರಲ್ಲಿಯೂ ಹಬ್ಬಗಳ ಸಮಯದಲ್ಲಿ ಅದರ ಸೊಬಗು ಹೆಚ್ಚುವುದು ಸಹಜವೇ, ತರಹೇವಾರಿ ಸಿದ್ಧತೆ ಆಚರಣೆಗಳಿಗೆ ತರಹೇವಾರಿ ಜವಾಬ್ದಾರಿಗಳು,ಹಬ್ಬದ ಹಿಂದಿನ ದಿನ ರಾಸುಗಳ ಅಲಂಕಾರಕ್ಕಾಗಿ ನಮ್ಮ ಹಳ್ಳಿಯ ದಿಣ್ಣೆಯ ಮೇಲೆ ಸಿಗುವ ಕಣಿಗಲೆ ಹೂವುಗಳನ್ನು,ಹೊಳೆಯ ದಂಡೆಯಲ್ಲಿ ಸಿಗುವ ಮಾವಿನ ಸೊಪ್ಪು ಮತ್ತು ಊರ ಮುಂದಿನ ಅರಳಿಮರದ ಪಕ್ಕದಲ್ಲಿರುವ ಬೇವಿನ ಮರದಿಂದ ಸೊಪ್ಪು ಕಿತ್ತುತರಲು ಅಪ್ಪನ ಜೊತೆ ಹೋಗುವುದು ಮಕ್ಕಳಾದ ನಮ್ಮ ಜವಾಬ್ದಾರಿ ಅಂತೆಯೇ ಹಬ್ಬದ ಸಂಜೆ ಹಸುಗಳಿಗೆ ಮಜ್ಜನ,ಕೊಂಬುಗಳಿಗೆ ಕೆಮಣ್ಣಿನ ಚಿತ್ತಾರ,ಕೊರಳಿಗೆ ಕಣಿಗಲೆಯ ಹಾರ ಇವೆಲ್ಲ ತಯಾರಿ ಮಾಡುವ ಅಪ್ಪನ ಜೊತೆ ನಿಂತು ನೋಡುವ ಜವಾಬ್ದಾರಿಯು ಕೂಡ ಇದೆ ಮಕ್ಕಳದು..!!, ಇತ್ತಕಡೆ ಅಮ್ಮನನ್ನು ಬಿಟ್ಟಾರು ಈ ಮಕ್ಕಳು ಅಂದುಕೊಂಡಿರಾ? ಹಬ್ಬಕ್ಕೆ ಒಂದು ವಾರ ಮುಂಚೆಯೇ ಇವರಿಗೆ ಇನ್ನು ಸಾಕಷ್ಟು ಜವಾಬ್ದಾರಿಗಳಿರುತ್ತವೆ..!! ಮನೆಗೆ ಸುಣ್ಣ ಬಣ್ಣಗಳಾದ ನಂತರ ಮನೆಯ ಮುಂಬಾಗದ ಗೋಡೆಗಳ ಮೇಲೆ ಚಂದ್ರ ಮತ್ತು ಹಾಲಿನಿಂದ ತಯಾರಿಸಿದ ಮಿಶ್ರಣದಿಂದ ಹಂಚಿಕಡ್ಡಿಯಲ್ಲಿ ಹತ್ತು ಹಲವು ಚಿತ್ತಾರಗಳನ್ನು (ಕಾರ್ಣಿ) ಮೂಡಿಸುತಿದ್ದ ಅಮ್ಮನೊಂದಿಗೆ ನಿಂತು ಉಸ್ತುವಾರಿ ನೋಡಿಕೊಳ್ಳುವುದು ಕೂಡ ಮಕ್ಕಳ ಜವಾಬ್ದಾರಿ..!!
ಇಷ್ಟೆಲ್ಲಾ ತಯಾರಿಗಳ ನಡುವೆ ಬಾಯಿ ರುಚಿಗೆ ಒಳ್ಳೆಯ ಊಟ ಉಪಹಾರಗಳಿಲ್ಲದಿದ್ದರೆ ಸರಿಹೋಗುವುದೇ,ಅದು ನಮಗೆ ಹೆಚ್ಚು ಆಸಕ್ತಿ ಇರುವ ವಿಷಯವೇ ಅದು ಹಬ್ಬದ ಹಿಂದಿನ ದಿನ ಅಮ್ಮ ಮತ್ತು ಅಜ್ಜಿ ನಂತರದ ವರ್ಷಗಳಲ್ಲಿ ಅಮ್ಮ ಮತ್ತು ಅಪ್ಪ ಕುಳಿತು ತಯಾರಿಸುತ್ತಿದ್ದ ಒಬ್ಬಟ್ಟು, ಹಬ್ಬದ ದಿನದ ಉಪಹಾರಕ್ಕಾಗಿ ಸಿದ್ಧವಾಗುತ್ತಿದ್ದ ಇಡ್ಲಿ ಹಿಟ್ಟು ಇವೆಲ್ಲದರ ಸಿದ್ದತೆಯನ್ನು ಕುಳಿತು ನೋಡುವುದರ ಜೊತೆಗೆ ಒಂದಷ್ಟು ಹೂರಣವನ್ನು ಮೆಲ್ಲುವುದು ಕೂಡ ನಮ್ಮದೇ ಜವಾಬ್ದಾರಿ, ಇಷ್ಟೆಲ್ಲಾ ಜವಾಬ್ದಾರಿಗಳನ್ನು ಹೊತ್ತು ಹಬ್ಬದ ಸಿದ್ಧತೆಗಳನ್ನು ನಡಸಿದ ನಂತರವೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸದ್ದಿದ್ದರೆ ಆದೀತೇ ..?
ಹಬ್ಬದ ದಿನಚರಿ ಆರಂಭಗೊಳ್ಳುವುದು ಆಟದಿಂದಲೇ, ಹಬ್ಬವಾದರೇನಂತೆ ನಮ್ಮ ಮೂಲಭೂತ ಜವಾಬ್ದಾರಿ ಮತ್ತು ಕರ್ತವ್ಯವಾದ ಆಟವನ್ನು ಬಿಡಲಾದೀತೇ ..!! ಎಂದಿನ ಶ್ರದ್ಧೆಯಂತೆ ಅಂದು ಕೂಡ ಆಟಕ್ಕೆ ಮೊದಲ ಪ್ರಾಶಸ್ತ್ಯ ಹಾಗೆಯೆ ನಮ್ಮನ್ನು ಹುಡುಕಿ ಮನೆಗೆಳೆದೊಯ್ಯುವುದು ನಮ್ಮಜ್ಜನ ಜವಾಬ್ದಾರಿ, ಮನೆ ತಲುಪಿದ ತಕ್ಷಣವೇ ಎಣ್ಣೆ ಸ್ನಾನ, ನನಗೆ ಇಂದು ಆಶ್ಚರ್ಯವಾಗುವುದು ಆ ೨೦,೩೦ ನಿಮಿಷಗಳ ಎಣ್ಣೆ ಸ್ನಾನಕ್ಕೆ ಯಾಕಷ್ಟು ಬಡಿದುಕೊಳ್ಳುತಿದ್ದೆವು ಎಂದು ಹಾಗಿರುತಿತ್ತು ನನ್ನಜ್ಜಿ ತಲೆ ತಿಕ್ಕುತಿದ್ದ ಪರಿ ಮತ್ತು ಕಾದ ನೀರಿನ ಚುರುಕು, ಈ ರಣ ರೋಚಕ ಸ್ನಾನದ ನಂತರ ಒಂದು ಸಣ್ಣ ಪೂಜೆ (ನಮಗೇನು ಅಂತಹ ಆಸಕ್ತಿ ಇರಲಿಲ್ಲ ಬಿಡಿ) ,ಈ ಪೂಜೆಯ ನಂತರವೇ ನಮ್ಮ ಮುಖ್ಯ ಜವಾಬ್ದಾರಿಗಳ ಸರಣಿ ಶುರುವಾಗುವುದು ಅದುವೇ ತ್ರೇತಾಯುಗದಲ್ಲಿ ರಾಮನಿಗಾಗಿ ಕಾದು ಕುಳಿತಂತೆ ಕಾದ ನಮ್ಮ ಹೊಟ್ಟೆಯ ಪೂಜೆ.
ನಾನು ಮತ್ತು ನನ್ನ ಅಣ್ಣ ಒಂದೂವರೆ ಡಜನ್ಗಿಂತ ಕಡಿಮೆ ಇಡ್ಲಿ ತಿಂದ ದಾಖಲೆಗಳೇ ಇಲ್ಲ ಅದು ಕಾಯಿ ಚಟ್ನಿ, ನಮ್ಮ್ ಮನೆ ಗೌರಿಯ ಹಾಲಿನಿಂದ ಮಾಡಿದ ಗಟ್ಟಿ ಮೊಸರು ಮತ್ತು ತುಪ್ಪದ ಜೊತೆ ಆದರೂ ನನ್ನ ಅಣ್ಣನ ದಾಖಲೆ ಮುರಿಯಲಾಗಲಿಲ್ಲವಲ್ಲ ಎನ್ನುವುದೊಂದೇ ನನ್ನ ಇಂದಿನ ಕೊರಗು, ಚಟ್ನಿ ಖಾಲಿಯಾಯಿತು ಎಂದು ಇಡ್ಲಿಯನ್ನು,ಇಡ್ಲಿ ಖಾಲಿಯಾಯಿತು ಎಂದು ಚಟ್ನಿಯನ್ನು ಒಂದರಮೇಲೆ ಒಂದನ್ನು ಹಾಕಿಸಿಕೊಂಡು ತಿನ್ನುವುದೇ ಅವನ ಸ್ಪೆಶಿಯಾಲಿಟಿ..!! ಅಷ್ಟರ ಹೊತ್ತಿಗೆ ನಮ್ಮೊರಿನ ಗ್ರಾಮದೇವತೆ ಅತ್ನಿಯಮ್ಮನಿಗೆ ಪೂಜೆ ಮಾಡಿಸಲು ಬರುವ ನಮ್ಮೂರ ಮತ್ತು ಅವರ ಪೂರ್ವಜರ ಕಾಲದಲ್ಲಿ ನಮ್ಮೊರಿನಲ್ಲಿದ್ದ ಜನಗಳಿಗೆ ಪೂಜೆ ಮಾಡಿಕೊಡುತ್ತಿದ್ದ ನಾಲ್ಕಾರು ತಾತ್ಕಾಲಿಕ ಪೂಜಾರಿಗಳಲ್ಲಿ ಒಬ್ಬರಾದ ನಮಪ್ಪ ಮನೆಗೆ ಬಂದಿರುತ್ತಿದ್ದರು ಅವರು ಹೊತ್ತು ತಂದ ತೆಂಗಿನಕಾಯಿ ಹೋಳುಗಳು , ಬಾಳೆಹಣ್ಣು ,ಚಿಲ್ಲರೆಗಳನ್ನು ಬೇರ್ಪಡಿಸುವುದು ನಮ್ಮ ಜವಾಬ್ದಾರಿ ,ಹಾಗೆಯೆ ಒಂದೆರಡು ನಾಕಣಿಯೋ, ಎಂಟಾಣಿಯನ್ನೋ ಚಡ್ಡಿಯ ಜೋಬಿಗೆ ಇಳಿಸುವುದು ಕೂಡ ಈ ಎಲ್ಲ ಕಾಯ ವಾಚ ತಪ್ಪದೆ ಮಾಡುತ್ತಿದ್ದೆವು ( ನಮ್ಮೂರ ಹೆಸರು ಅತ್ನಿ ,ಯಾವದೋ ಕಾಲದಲ್ಲಿ ಅತ್ರಿ ಮಹಾ ಋಷಿಗಳು ನಮ್ಮೂರ ಹೊಳೆಯ ದಂಡೆಯ ಮೇಲೆ ಕುಳಿತು ತಪಸ್ಸು ಮಾಡಿದ್ದರಂತೆ ಆ ಕಾರಣಕ್ಕಾಗಿ ಅತ್ನಿ ಈ ಕಥೆ ಹೇಳಲು ಯಾವುದೇ ಶಾಸನಗಳಿಲ್ಲ) .
ಈ ನಮ್ಮ ಇಡ್ಲಿಯ ತೀರಿಸುವ ಜವಾಬ್ದಾರಿ ಮುಗಿದ ನಂತರ ನಾವು ನೇರ ಹೋಗುತ್ತಿದದ್ದೇ ತೆಂಗಿನಕಾಯಿಗೆ ಕಲ್ಲು ಹೊಡೆಯುವ ಆಟ ನೋಡಲು ಅಲ್ಲಿ ಎಲ್ಲ ಭುಜಬಲ ಪರಾಕ್ರಮಿಗಳಿಗೆ ಕಲ್ಲುಗಳನ್ನು ಪೂರೈಸುವ ಜವಾಬ್ದಾರಿ ನಮ್ಮದು , ಅಂಗಡಿಯವರು ಒಂದು ತೆಂಗಿನಕಾಯನ್ನು ಒಂದು ಮೂವತ್ತೋ ನಲವತ್ತೋ ಮೀಟರ್ಗಳ ದೂರದಲ್ಲಿ ಇಡುತ್ತಿದ್ದರು , ಇಂತಿಪ್ಪ ತೆಂಗಿನಕಾಯಿಗೆ ಅಲ್ಲಿ ನೆರದಿದ್ದ ಭುಜಬಲ ಪರಾಕ್ರಮಿಗಳು ಹೊಡಯುವ ಪ್ರಯತ್ನ ಮಾಡುತಿದ್ದರು ಒಂದು ಕಲ್ಲಿಗೆ ನಾಕಾಣೆಯೋ ಎಂಟಾಣೆಯೋ ಇದ್ದಿರಬೇಕು ನನಗೆ ಶ್ರೀಲಂಕಾದ ಮಾಲಿಂಗನನ್ನು ನೋಡಿದಾಗ ತಕ್ಷಣ ಜ್ಞಾಪಕ್ಕೆ ಬರುವುದು ನಮ್ಮೂರಿನ ಈ ಭುಜಬಲ ಪರಾಕ್ರಮಿಗಳೇ , ಈ ಕಲ್ಲು ಹೊರುವ ಜವಾಬ್ದಾರಿ ಮುಗಿದ ನಂತರ ಮನೆಯಲ್ಲಿ ಹೋಳಿಗೆಯ ಊಟ , ಒಂದಷ್ಟು ಪಾಯಸ ಕೋಸಂಬಮರಿ ಮತ್ತು ಕೊನೆಯಲ್ಲಿ ಮಜ್ಜಿಗೆ.
ನಮ್ಮ ಊಟ ತೀರಿಸುವ ಹೊತ್ತಿಗೆ ನಮ್ಮೂರಿನ ರಾಸುಗಳು ಸರ್ವಾಲಂಕೃತ ಭೂಷಿತರಾಗಿ ಹೊನ್ನಾರಿನ ಮಹೂರ್ತಕ್ಕಾಗಿ ಕಾಯುತ್ತ ನಿಂತಿರುತಿದ್ದವು, ಈ ಮಹೂರ್ತ ಇಡುವ, ಪಂಚಾಂಗ ಶ್ರವಣ ಮಾಡುವ/ಕೇಳುವ ಜವಾಬ್ದಾರಿಗಳು ನಮ್ಮ ವ್ಯಾಪ್ತಿಯಿಂದ ಆಚೆ ಇದ್ದುದ್ದರಿಂದ ನಾವೇನು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ನಮ್ಮ ಜವಾಬ್ದಾರಿ ಇದದ್ದು ಈ ರಾಸುಗಳನ್ನು ಪ್ರೋತ್ಸಾಹಿಸುವುದಷ್ಟೇ..!! ಮತ್ತು ಹೊನ್ನರನ್ನು ನೋಡಿ ಖುಷಿ ಪಡುವುದು.
ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ರಾತ್ರಿ ಆಗಿರುತ್ತಿತ್ತು ಹಾಗೆಯೆ ನಮ್ಮ ಹೆಗಲಮೇಲಿದ್ದ ಜವಾಬ್ದಾರಿಗಳು ಅಷ್ಟೇ ಕಡಿಮೆ ಆಗಿರುತ್ತಿದ್ದವು, ಕಡಿಮೆ ಅನ್ನುವುದಕ್ಕಿಂತ್ತಾ ಮುಗಿದಿರುತ್ತಿದ್ದವು ಅನ್ನೋಣ , ಇಂತಿಪ್ಪ ಹಬ್ಬದ ಹಲವು ಜವಾಬ್ದಾರಿಗಳನ್ನು ಮುಗಿಸಿದ ಹೆಮ್ಮೆಯಿಂದ ನಮ್ಮಗಳ ಕಣ್ಣು ಎಳಯದಿದ್ದೀತೆ, ಹಾಗೆಯೆ ನಿದ್ದೆಗೆ ಜಾರಲಾಗದಿದ್ದೀತೆ ..?
ಚೇತನ್ ಅತ್ನಿ

( ಚೇತನ್ ಅತ್ನಿ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರು, ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಿಂದ ಬಿ.ಇ ಪದವಿ ಮುಗಿಸಿ ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದು ಸದ್ಯಕ್ಕೆ ಕಂಪನಿ ಕಡೆಯಿಂದ ಅವರನ್ನು ಲಂಡನ್ಗೆ ವರ್ಗಾಯಿಸಲಾಗಿದೆ. ಒಂದರಿಂದ ಹತ್ತನೇ ತರಗತಿಯವರೆಗೂ ಅವರು ಕನ್ನಡ ಮಾದ್ಯಮದಲ್ಲಿ ಒಂದಿದುದರಿಂದ ಕನ್ನಡ ಪುಸ್ತಕಗಳ ಓದಿನಲ್ಲಿ ಆಸಕ್ತಿ,ಅವರಿಗೆ ಈಗ ಬರಹದ ಪ್ರಯತ್ನಕ್ಕೆ ಹಚ್ಚಿದೆ.)
ಹೊಂಗೆಯ ಹೊಂಗನಸು -ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ
ಶಾಲಾ ದಿನದಿಂದಲೂ ನನಗೆ ಹಬ್ಬ ಅಂದ್ರೆ, ರಜಾದಿನ - ಮಜಾ ಮಾಡೋದು ಅಷ್ಟೇ. ಅದರಲ್ಲೂ ಯುಗಾದಿ ಅಂದರೆ ಎಣ್ಣೆ ನೀರಿನ ಸ್ನಾನ, ಹೊಸ ಬಟ್ಟೆ, ಒಬ್ಬಟ್ಟು-ಆಂಬೋಡೆ ಅಷ್ಟೇ . ಬೆಂಗ್ಳೂರಲ್ಲೇ ಹುಟ್ಟಿ ಬೆಳೆದ ನನಗೆ ಈ ಹರಳೆಣ್ಣೆ ಸ್ನಾನ ಅಂದ್ರೆ ಅಷ್ಟಕ್ಕಷ್ಟೇ . ಬರೀ ಬನಿಯನ್ ಚಡ್ಡಿ ಹಾಕಿ ಕೂರಿಸಿ ಮೈಯೆಲ್ಲ ಹರಳೆಣ್ಣೆ ಹಚ್ಚಿದ್ದೆ ಹಚ್ಚಿದು . ಸ್ವಲ್ಪ ರಾಮಾಚಾರಿ ಸಿನಿಮಾದ ಬುರುಡೆ ಬುರುಡೆ ಹಾಡು ಜ್ಞಾಪಿಸಿಕೊಳ್ಳಿ. ದೇಹಕ್ಕೆ ಹರಳೆಣ್ಣೆ ಇಳೀಬೇಕು ಅಂತ ಬಿಸಿಲಲ್ಲಿ ನಿಲ್ಲೋಕೆ ಹೇಳ್ತಿದ್ರು . ಮುಜುಗರ ಆಗತ್ತೆ ಅಂತ ಆಕ್ಷೇಪಿಸಿದರೆ, ಗಂಡು ಹುಡುಗ ನಿನಗೆಂಥದ್ದೋ ಅಂತ ಹೇಳಿ ಕಾಫಿ ಕೊಟ್ಟು ಸಮಾಧಾನಿಸ್ತಿದ್ರು . ಘಂಟೆಗಳ ನಂತರ ಕಣ್ ಉರಿನಮ್ಮ ಅಂತ ಎಷ್ಟೇ ಗೋಗರೆದರು ಬಿಡದೇ ನಮ್ಮಮ್ಮ ರಪ ರಪಾ ಅಂತ ಸೀಗೆಕಾಯಿ ಹಚ್ಚುತ್ತಿದ್ದರು. ಸೀಗೆಕಾಯಿ ಉಷ್ಣ ಆಗುತ್ತೆ ಅಂತ ಚಿಗರೆ ಪುಡಿ ಬೇರೆ ಮಿಕ್ಸ್ ಮಾಡೋರು - ಈ ಮಿಶ್ರಣ ಘಾಟನ್ನು ಇನ್ನು ಹೆಚ್ಚಾಗಿಸ್ತಿತ್ತು.
ಅಪ್ಪ ಪಂಚಾಂಗ ಶ್ರವಣ ಅಂತ ಮಾಡ್ತಿದ್ರೆ : ನನ್ನ ಗಮನ ಎಲ್ಲ ಮಿಥುನ ರಾಶಿಗೆ ಏನು ಫಲ ಅನ್ನೋದರ ಕಡೆಗೆ ಅಷ್ಟೇ. ಆಯ - ವ್ಯಯ ಅಂದರೆ ಗೊತ್ತಿರದ ದಿನಗಳವು. ಬೇವು ಬೆಲ್ಲ ಹಂಚೋವಾಗ - ಬೇವು ಬೇಡವೆಂದು ರಂಪಾಟ ಮಾಡ್ತಿದ್ದೆ. ಹೊಸ ಬಟ್ಟೆ ಹಾಕೊಂಡು ಬೀದಿಗಿಳಿದರೆ ಮನೆಯಲ್ಲಿ ಅಡುಗೆ ಆಗೋವರ್ಗು ಕಾಲ್ ಇಡ್ತಿರ್ಲಿಲ್ಲ .ಷಡ್ರಸಗಳಿಂದ ತುಂಬಿರೋ ಮಾವಿನಕಾಯಿ ಚಿತ್ರಾನ್ನ, ಶಾವಿಗೆ ಪಾಯಸ,ಹೆಸರುಬೇಳೆ ಸೌತೆಕಾಯಿ ಕೋಸಂಬರಿ, ಕಡಲೆ ಹುಸಲಿ, ಹೋಳಿಗೆ, ಆಂಬೋಡೆ ಮುಂತಾದವಗುಳನ್ನೆಲ್ಲಾ ಚೆನ್ನಾಗಿ ಬ್ಯಾಟಿಂಗ್ ಮಾಡಿದ ನಂತರ Cousins ಮನೆಗೆ ಕರ್ಕೊಂಡ್ ಹೋಗು, ಆಟ ಆಡಬೇಕು ಅಂತ ತಾಕೀತು ಮಾಡ್ತಿದ್ದೆ . ಸಂಜೆವರ್ಗು ಆಟ. ಸಂಜೆ ಮೇಲೆ Udaya TV ಲಿ ಒಂದು ಹೊಸ ಸಿನಿಮಾ ಇವಿಷ್ಟೇ .
ಬಹಳ ವಸಂತಗಳ ನಂತರ, ಪ್ರಾಯಶಃ ಗೃಹಸ್ಥನಾದಮೇಲೆ ಯುಗಾದಿ ಈಗ ಬದಲಾಗಿವೆ. ಪ್ರತಿ ವಿಷಯಗಳ ಮಹತ್ವ ಅರಿವಾದಂತೆ, ಸಂಪ್ರದಾಯಗಳು ಅರ್ಥಪೂರ್ಣ ಎಂದೆನಿಸಿದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ಛಳಿ - ಮಳೆಗಾಲದಿಂದ ಬಳಲಿ ತತ್ತರಿಸಿದ ಪ್ರಕೃತಿ ಮತ್ತೆ ಚಿಗುರಿ ಹೂ ಬಿಟ್ಟು ಹಸಿರಾಗಿ ನಳನಳಿಸುತ್ತದೆ. ಹೊಸ ವರ್ಷ, ಹೊಸ ಪ್ರಯತ್ನ , ಹೊಸ ಮನುಷ್ಯನಾಗು ಎಂಬ ಸೂಚನೆಯಂತೆ.
ಚೈತ್ರ ಪಾಡ್ಯದ ಹಬ್ಬಕ್ಕೋಸ್ಕರ ಇವತ್ತು ನಾನು ಮನೆಯನ್ನ Deep ಕ್ಲೀನ್ ಮಾಡಿ, ಮಾವಿನ ಸೊಪ್ಪು ಸಂಗ್ರಹಿಸಿ, ಕಡ್ಡಿ ಚುಚ್ಚಿ ತೋರಣ ಕಟ್ಟುತ್ತೇನೆ. ಸ್ನಾನ -ಸಂಧ್ಯಾವಂದನೆ ಮುಗಿಸಿ , ಒಂಟಿಕೊಪ್ಪಲ್ ಪಂಚಾಂಗ ತಂದು ಸವಿವರವಾಗಿ ವಾರ್ಷಿಕ ಮುನ್ನೋಟ ತಿಳಿಯುವುದು. ಬದುಕಿನ ದ್ಯೋತಕವಾಗಿರುವ ಬೇವು - ಬೆಲ್ಲದ ಸಮ್ಮಿಶ್ರಣ ಮನಸಾರೆ ಸ್ವೀಕರಿಸುವುದು. ಅಡುಗೆ ಮನೆಯ ಕೆಲಸಗಳಲ್ಲಿ ಶ್ರೀಮತಿಗೆ ನೆರವಿಗೆ ಬರೋದಾದ್ರೆ ತೆಂಗಿನಕಾಯಿ ಕೊರೆಯುವುದು, ಮಾವಿನಕಾಯಿ ತುರಿಯುವುದು, ಹೂರ್ಣದ ಉಂಡೆ ಕಟ್ಟುವುದು ಮುಂತಾದವು. ತದನಂತರದಲ್ಲಿ ಬಿದಿಗೆ ದಿನ ಚಂದ್ರ ದರ್ಶನ ಮಾಡಿ, ಹಾಯಾದ ಹೊಂಗೆಯ ಹೊಂಗನಸೊಂದನ್ನು ಕಂಡರೆ ಅಲ್ಲಿಗೆ ಯುಗಾದಿ ಸಂಪನ್ನ.
ಚಿಕ್ಕವನಿದ್ದಾಗ ಎಲ್ಲೊ ಕೇಳಿದ್ದ ಈ ಹಾಡು, ಈಗ ಬಾಳ ಗೆಳತಿ ಭಾವನಾಳೊಂದಿಗೆ ಗುನುಗೋವಾಗ ಆಪ್ಯಾಯಮಾನ ಎನಿಸುತ್ತದೆ.
``ಚಿಂತೆ ನೋವು ಹಗುರಾಯಿತು, ಸುಗ್ಗಿ ಸಿರಿಯ ಮಳೆಯಾಯ್ತು
ಮನದ ತುಂಬ ಹರುಷದ ಹೂರಣ ಆಹಾ ಮೂಡಿತು...
ಎಲ್ಲೆಲ್ಲೂ ಜೀವಕಳೆ, ಜೀವಕಿದು ಹೂವಕಳೆ
ಎಲ್ಲೆಲ್ಲೂ ಜೀವಕಳೆ, ಜೀವಕಿದು ಹೂವಕಳೆ
ಹಳೆಯ ಕೊಳೆಯ ತೊಳೆಯ ಬಂತು ರಂಗಿನ ಯುಗಾದಿ
``
ಅನಿವಾಸಿ ಬಳಗದ ಸರ್ವರಿಗೂ ಯುಗಾದಿಯ ಶುಭಾಶಯಗಳು.
---ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ

(ಪ್ರಮೋದ್ ಹುಟ್ಟಿ ಬೆಳೆದದ್ದು ಓದಿದ್ದು ಜೀವನ ರೂಪಿಸಿಕೊಂಡಿದ್ದು ಬೆಂಗಳೂರಿನಲ್ಲಿ . ಪ್ರಸ್ತುತ ಕೆಲಸದ ನಿಮಿತ್ತ ಉತ್ತರ ಐರ್ಲೆಂಡ್ನ ಬೆಲ್ಫಾಸ್ಟ್ ನಗರದಲ್ಲಿ ನೆಲೆಸಿದ್ದಾರೆ. ಸಿಟಿ ಬ್ಯಾಂಕ್ ನಲ್ಲಿ ಬಿಸಿನೆಸ್ ಅನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್ ಅವರಿಗೆ ಚಾರಣ ಸಿನಿಮಾಗಳು ಅಂದರೆ ಪಂಚಪ್ರಾಣ .ಜೊತೆಗೆ ಫಿಲ್ಟರ್ ಕಾಫಿ, ಬಾಳೆಎಲೆ ಭೋಜನ ಪ್ರಿಯ. ಓದು, ಹಾಡುವುದು, ಬರವಣಿಗೆ ಮೆಚ್ಚಿನ ಹವ್ಯಾಸಗಳು.)
ನನ್ನ ಬಾಲ್ಯದ ಯುಗಾದಿ- ಪ್ರತಿಭಾ ರಾಮಚಂದ್ರ
ನಮ್ಮ ಬಾಲ್ಯದ ದಿನಗಳ ಯುಗಾದಿ ಹಬ್ಬದಲ್ಲಿ ಇರುತ್ತಿದ್ದ ಸಡಗರ-ಸಂಭ್ರಮ ಈಗಿನ ದಿನಗಳಲ್ಲಿ ಇಲ್ಲಾ ಅನ್ನೋದನ್ನ ಎಷ್ಟು ಜನರು ಒಪ್ಪುತ್ತೀರಾ? ಅದರಲ್ಲೂ ನನ್ನ ಹಾಗೆ ಮದುವೆ ಆದ ಮೇಲೆ ಹೊರ ದೇಶದಲ್ಲಿ ನೆಲೆಸಿರುವರಿಗಂತೂ ಆ ಅನುಭವ ಸಿಗೋದು ಬಹಳ ವಿರಳ!
ಈ ವರ್ಷದ ಯುಗಾದಿಯಂದು ವಾಟ್ಸಾಪ್ ಗ್ರೂಪೊಂದರಲ್ಲಿ ಶುಭಾಶಯದ ಜೊತೆ ಒಂದು ಸುಂದರವಾದ ಚಿತ್ರ ಬಂದಿತ್ತು. ಆ ಚಿತ್ರ ನೋಡಿ ನನ್ನ ಬಾಲ್ಯದ ಯುಗಾದಿ ಕಣ್ಮುಂದೆ ಬಂದ ಹಾಗೆ ಆಯಿತು ಮತ್ತು ಅದರ ಬಗ್ಗೆ ಬರಿಯೋಣ ಅಂತ ಅನ್ನಿಸಿತು.
ನಾನು ಸುಮಾರು ೮-೯ ವಯಸ್ಸಿನವಳಿದ್ದಾಗಿನ ಯುಗಾದಿ ಹಬ್ಬದ ಅನುಭವ ಇದು. ನಾನು ಚಿಕ್ಕಂದಿನಿಂದ ಬೆಳದಿದ್ದು, ಶಾಲಾ-ಕಾಲೇಜಿಗೆ ಹೋಗಿದ್ದೆಲ್ಲಾ ಬೆಂಗಳೂರಿನಲ್ಲಿ. ನಮ್ಮ ಮನೇಲಿ ಯುಗಾದಿ ಹಬ್ಬ ಬಹಳ ಮುಖ್ಯವಾಗಿ ಆಚರಿಸೋ ಹಬ್ಬಗಳಲ್ಲಿ ಒಂದು. ಆಗ ಮಾತ್ರ ಅಪ್ಪ ತಪ್ಪದೇ ಎಲ್ಲರಿಗೂ ಹೊಸ ಬಟ್ಟೆ ಕೊಡಿಸುತ್ತಿದ್ದರು. ಹೊಸ ಬಟ್ಟೆ ಹಾಕೊಂಡು ಮಿಂಚೋಕೆ ಬಲು ಕಾತುರದಿಂದ ಕಾಯ್ತಾ ಇರ್ತಿದ್ದೆ ನಾನು!
ಹಬ್ಬದ ದಿನ, ನನ್ನ ಬೆಳಿಗ್ಗೆ ಶುರು ಆಗ್ತಾ ಇದ್ದಿದ್ದು ರೇಡಿಯೊ ಅಥವಾ ಟಿ.ವಿ ಲೀ ಈ ಜನಪ್ರಿಯ ಹಾಡನ್ನು ಕೇಳ್ತಾ - "ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷ ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹೊಸತು ಹೊಸತು ತರುತಿದೆ". ಅಷ್ಟು ಹೊತ್ತಿಗಾಗಲೆ ಅಮ್ಮ- ಅಪ್ಪ ಎದ್ದು ಹಬ್ಬದ ಕೆಲಸಗಳನ್ನು ಶುರು ಮಾಡಿಕೊಂಡಿರುತ್ತಿದ್ದರು. ಅಮ್ಮ ಮನೆ ಮುಂದೆ ಚೆಂದವಾದ ಯುಗಾದಿ ರಂಗೋಲಿ ಹಾಕಿರುತ್ತಿದ್ರು . ತಡ ಮಾಡದೆ ನಾನು ಕೂಡ ಬೇಗನೆ ಸ್ನಾನ ಮುಗಿಸಿ, ಹೊಸ ಬಟ್ಟೆ ಹಾಕೊಂಡು ರೆಡಿಯಾಗ್ತಿದ್ದೆ. ಮತ್ತು ಅವತ್ತು ಹೂವು ಮುಡಿಯೋಕೆ ಸಿಗ್ತಿತ್ತು ಅನ್ನೋದು ನನಗೆ ಬಹಳ ಖುಷಿ!
ಇನ್ನು ಅಪ್ಪನ ಕೆಲಸ, ಬಾಗಿಲಿಗೆ ಮಾವು-ಬೇವು-ಹೂವಿನ ತೋರಣ ಹಾಕೋದು. ಆ ಕೆಲಸದಲ್ಲಿ ಅಪ್ಪನಿಗೆ ತುಂಬಾ ಉತ್ಸಾಹದಿಂದ ಸಹಾಯ ಮಾಡ್ತಿದ್ದವಳು ನಾನೇ. ಎಲ್ಲಾ ಮಾವಿನ ಎಲೆಗಳು ಆದಷ್ಟು ಸಮವಾಗಿ ಇರಬೇಕು ಅಂತ, ಅಳತೆ ಪ್ರಕಾರ ಸಮವಾಗಿ ಇರೋ ಎಲೆಗಳನ್ನು ಆರಿಸಿ ಕೊಡುತ್ತಿದ್ದೆ . ಆ ಸಮಯದಲ್ಲಿ ಅಮ್ಮ ಪೂಜೆ ಹಾಗು ಬೆಳಿಗ್ಗೆ ತಿಂಡಿ ತಯಾರಿಯಲ್ಲಿ ತೊಡಗಿರುತ್ತಿದ್ದರು. ತೋರಣಗಳನ್ನು ಹಾಕುವ ಕೆಲಸ ಮುಗಿದ ಮೇಲೆ ಪೂಜೆಗಾಗಿ ಅಮ್ಮ ಕರೆಯೋ ತನಕ ಕೆಲವು ಇತರೆ ಸಣ್ಣ-ಪುಟ್ಟ ಕೆಲಸಗಳನ್ನು ಅಪ್ಪ ಮುಗಿಸೋರು. ಇನ್ನು ಪೂಜೆಗೆ ಬನ್ನಿ ಅಂತ ಅಮ್ಮನ ಕರೆ ಬರುತ್ತಿತ್ತು. ಪೂಜೆ ಮುಗಿದ ಮೇಲೆ ಬೇವು-ಬೆಲ್ಲ ತಿನ್ನುವ ಸಮಯ - ಯಾರು ಹೆಚ್ಚು ಬೇವನ್ನು ತಿಂತಾರೋ ಅವರಿಗೆ ವರ್ಷವಿಡೀ ಹೆಚ್ಚು ಖುಷಿ ಸಿಗುತ್ತೆ ಅಂತ ಅಮ್ಮ ಹೇಳೋರು, ಹಾಗಾದ್ರೂ ಬೇವು ತಿನ್ನಲೀ ಅನ್ನೊ ಪ್ಲಾನ್ ಅವರದು. ಯಾರು ಏನು ಹೇಳಿದ್ರು ನಾನು ಮಾತ್ರ ಎಲ್ಲರಿಗಿಂತ ಕಡಿಮೆ ಬೇವು ತಿಂತಿದ್ದೆ! 😉
ಪೂಜೆ ನಂತರ ಏನಾದ್ರು ಸಿಂಪಲ್ ತಿಂಡಿ ಅವತ್ತು. ಮಧ್ಯಾಹ್ನಕ್ಕೆ ಭರ್ಜರಿ ಊಟ ಇರೋದಲ್ವಾ, ಅದಕ್ಕೆ!!
ನಂತರ , ಅಮ್ಮ-ಅಪ್ಪ ಮಧ್ಯಾಹ್ನದ ಅಡುಗೆ ತಯಾರಿ ಕಡೆ ಹೋಗೋರು. ಮತ್ತೆ ಆಗಿನ್ನೂ ನಮ್ಮ ವಾರ್ಷಿಕ ಪರೀಕ್ಷೆಗಳು ಮುಗಿದಿರುತ್ತಿರಲಿಲ್ಲ, ಹಾಗಾಗಿ ಅಣ್ಣನೂ-ನಾನು ಸ್ವಲ್ಪ ಹೊತ್ತು ಪಠ್ಯಾಭ್ಯಾಸ ಮಾಡುತ್ತಿದ್ದವು. ಹೋಳಿಗೆ ಸುವಾಸನೆ ಬಂದಾಗ, ಊಟ ಇನ್ನೇನು ರೆಡಿ ಅಂತ ಸೂಚನೆ, ಹೊಟ್ಟೆ ತಾಳ ಹಾಕಕ್ಕೆ ಶುರು ಮಾಡ್ತಾಯಿತ್ತು! ಯುಗಾದಿ ಹಬ್ಬದ ಊಟ ಮಾತ್ರ ಯಾವಾಗಲೂ ಬಾಳೆ ಎಲೆ ಮೇಲೆ ಮಾಡ್ತಿದ್ವಿ. ಮೆನು ಹೀಗೆ ಇರ್ತಿತ್ತು - ಕೋಸಂಬರಿ, ಹುರುಳಿಕಾಯಿ ಪಲ್ಯ, ಹೀರೇಕಾಯಿ ಬಜ್ಜಿ, ಮಾವಿನಕಾಯಿ ಚಿತ್ರಾನ್ನ, ಅನ್ನ- ಹೋಳಿಗೆ ಸಾರು, ಯುಗಾದಿಯ ಮುಖ್ಯ ಭಕ್ಷ್ಯವಾದ ತೊಗರಿ ಬೇಳೆ ಹೋಳಿಗೆ ಮತ್ತು ಅದರ ಜೊತೆ ನೆಂಚಿಕೊಂಡು ತಿನ್ನಲು ಅಮ್ಮ ಒಂದು ಸ್ಪೆಷಲ್ ಗೊಜ್ಜು ಮಾಡ್ತಿದ್ರು (ಕಡಲೆ ಕಾಳು, ಬಟಾಣಿ, ಬದನೆಕಾಯಿ, ಆಲೂಗಡ್ಡೆ ಹಾಕಿ). ತುಪ್ಪ ಹಾಗೂ ಹಾಲು ಕೂಡ ಇರ್ತಿತ್ತು, ಆದರೆ ನನಗೆ ಮತ್ತು ಅಣ್ಣನಿಗೆ ಮಾತ್ರ ಹೋಳಿಗೆ ಜೊತೆ ಬೆಸ್ಟ್ ಕಾಂಬಿನೇಷನ್ ಕಾಳು ಗೊಜ್ಜು. ನನಿಗಂತೂ ಬರೀ ಹೋಳಿಗೇನೇ ಅರ್ಧ ಹೊಟ್ಟೆ ತುಂಬ್ತಾಯಿತ್ತು, ಬೇರೆಲ್ಲಾ ಸ್ವಲ್ಪೇ ಸ್ವಲ್ಪ ತಿಂತಿದ್ದೆ ಅಷ್ಟೇ. ಇಂತಹ ಸ್ವಾದಿಷ್ಟ ಭೋಜನದ ಬಗ್ಗೆ ಕೇವಲ ಬರಿಯವಾಗಲೇ ನನ್ನ ಬಾಯಲ್ಲಿ ನೀರು ಬರುತ್ತದೆ !! ಇಷ್ಟು ಗಡತ್ತಾದ ಊಟದ ನಂತರ ಎಲ್ಲ ಒಂದು ಒಳ್ಳೆ ನಿದ್ರೆ ಮಾಡ್ತಿದ್ವಿ. ಈ ಎಲ್ಲಾ ಅಡುಗೆ ಸುಮಾರು ಉಳಿದಿರುತ್ತಿತ್ತು, ಹಾಗಾಗಿ ಅಮ್ಮನಿಗೆ ರಾತ್ರಿ ಮತ್ತೆ ಅಡುಗೆ ಮಾಡೋ ಗೋಜು ಇರ್ತ ಇರ್ಲಿಲ್ಲ . ಹೋಳಿಗೆ ಸಾರಂತೂ ಮುಂದಿನ ೨ ದಿನಗಳಿಗೂ ಆಗ್ತಿತ್ತು. ಅದನ್ನು ಜಾಸ್ತಿನೇ ಮಾಡ್ತಿದ್ರು ಏಕಂದರೆ ಆ ಸಾರಿನ ವಿಷೇಷನೇ ಅದು, ಹಳೆಯದಾದಷ್ಟೂ ರುಚಿ ಹೆಚ್ಚು, ಮತ್ತೆ ಯಾರೂ ಹಳೇ ಸಾರು ಬೋರ್ ಆಯ್ತು ಅಂತ ಕಂಪ್ಲೇನ್ ಮಾಡ್ತಿರ್ಲಿಲ್ಲಾ!
ಈ ಯುಗಾದಿ ಹಬ್ಬದ ಸಡಗರ ನೆನಪಿನ ಜಾತ್ರೆಯನ್ನೇ ನನ್ನ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ.
ಪ್ರತಿಭಾ ರಾಮಚಂದ್ರ

(ಪ್ರತಿಭಾ ರಾಮಚಂದ್ರ ಮೂಲತಃ ಬೆಂಗಳೂರಿನವರು, ಸುಮಾರು ೧೨ ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ಪ್ರತಿಭಾ ಒಬ್ಬ ಐಟಿ ಗ್ರ್ಯಾಜುಯೇಟ್ ಹಾಗು ಕನ್ನಡ ಶಿಕ್ಷಕಿ. ಒಬ್ಬ ಮುದ್ದು ಮಗನ ತಾಯಿ ಕೂಡ.ಜೊತೆಗೆ ರೇಡಿಯೋ ಕಾರ್ಯಕ್ರಮಗಳನ್ನೂ ಕೊಡುತ್ತಾರೆ.)