ಆತ್ಮೀಯ ಓದುಗರೇ, ಈ ವಾರ ತಮ್ಮ ಓದಿಗೆ ಶ್ರೀಯುತ ವಿಜಯನರಸಿಂಹ ಅವರು ಶ್ರೀ ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರ ಕುರಿತು ಬರೆದ ಕವಿತೆ ''ಸಿದ್ಧ ಪುರುಷ''. ಮತ್ತು ಬದುಕು ಬದಲಿಸಿದ ಸರಣಿಗೆ ಅರ್ಪಿತಾ ಅಭಿರಾಮ ಅವರು ಇದೆ ಮೊದಲ ಬಾರಿಗೆ ಅನಿವಾಸಿಯಲ್ಲಿ ಬರೆದಿದ್ದಾರೆ. ಈವಾರದ ಎರಡೂ ಬರಹಗಳು ಚುಟುಕಾಗಿದ್ದರೂ ಚುರುಕಾಗಿವೆ. ಇದು ಅನಿವಾಸಿ ಸಂಪಾದಕಿಯಾಗಿ ನಾನು ನಿರೂಪಿಸುತ್ತಿರುವ ಕೊನೆಯ ಸಂಚಿಕೆ, ನನ್ನ ಸಂಪಾದಕತ್ವದ ಅವಧಿಯಲ್ಲಿ ಕಾಲಕಾಲಕ್ಕೆ ಅಕ್ಷರ ಬೊಕ್ಕಸಕ್ಕೆ ದೇಣಿಗೆ ಕಳಿಸಿ ಅಕ್ಷಯವಾಗಿಟ್ಟ ಎಲ್ಲ ಸಹೃದಯರಿಗೆ ಧನ್ಯವಾದಗಳು. ಮುಂದಿನ ವಾರದಿಂದ ಶ್ರೀಮತಿ ಗೌರಿ ಪ್ರಸನ್ನ ಅವರು ಅನಿವಾಸಿಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಆದರದ ಸ್ವಾಗತ. ಅವರ ಸಾರಥ್ಯದಲ್ಲಿ ಅನಿವಾಸಿಯ ಅಕ್ಷರತೇರು ಮೆರೆಯಲಿ ಎಂಬ ಸದಾಶಯದೊಂದಿಗೆ, ಈ ವಾರದ ಸಂಚಿಕೆಗೆ ತಮಗೆಲ್ಲ ಸ್ವಾಗತ. -ಸಂಪಾದಕಿ
ಸಿದ್ಧ ಪುರುಷ
-ವಿಜಯನರಸಿಂಹ
ಹೆತ್ತ ಮಕ್ಕಳ ಹಸಿವನು ನೀಗಿಸಲು ಕಷ್ಟ ಎಂದರು ಹೆತ್ತವರು ನಮ್ಮ ಬಳಿ ಕಳಿಸಿ, ಅನ್ನದ ಅಕ್ಷಯವಿದೆ ಎಂದು ಕೈಬೀಸಿ ಕರೆದರು ಅನ್ನಕ್ಕೆ ಸಾಕಾಗುತ್ತದೆ, ವಸನಕ್ಕೆ ಕಾಸಿಲ್ಲ ಮಕ್ಕಳ ಮೈ-ಮಾನವ ಮುಚ್ಚಲಾರೆವು ಎಂದರು ನಮ್ಮ ಬಳಿ ಕಳಿಸಿ ಮಾನಕ್ಕೆ ತಕ್ಕಂತೆ ಮಿತಿಗೆ ಮೀರದಂತೆ ಪವಿತ್ರದ ಸಮವಸ್ತ್ರವ ತೊಡಿಸಿ ನಿತ್ಯ ಮೈ ಮನಸು ಶುಚಿಯಾಗಲಿದೆ ಎಂದು ಮನಬಿಚ್ಚಿ ಕರೆದರು ಅಸನಕ್ಕೆ, ವಸನಕ್ಕೆ ಸಾಕಾದೀತಷ್ಟೆ, ವಿದ್ಯೆಗಿಲ್ಲ ನಮ್ಮಲ್ಲಿ ವ್ಯವಸ್ಥೆಯಿಲ್ಲ, ಕಲಿಸುವವರಿಲ್ಲ ಎಂದರು ನಮ್ಮ ಬಳಿ ಕಳಿಸಿ, ಜ್ಞಾನ ದೇಗುಲವು ಇಲ್ಲಿದೆ ಶಿಕ್ಷಣದಿಂದ ಬದುಕು ಹಸನಾಗಲಿದೆ ಎಂದು ಅಭಯಕೊಟ್ಟು ಕರೆದರು ಕಾಯಕದಲಿ ಕೈಲಾಸ ಕಂಡು ಅನ್ನ, ಅರಿವೆ, ಅಕ್ಷರದ ತ್ರಿದಾಸೋಹದ ಹರಿಕಾರನಾಗಿ ಸಿದ್ಧಗಂಗೆಯ ಸಿದ್ಧಪುರುಷನಾದ ಗುರುವೆ ಇದೊ ನಿಮಗೆ ಮನ ಬಾಗಿ ವಂದನೆ!

ಬದುಕು ಬದಲಿಸಿದ ಪುಸ್ತಕ
-ಶ್ರೀಮತಿ ಅರ್ಪಿತಾ ಅಭಿರಾಮ್

ನನ್ನ ಬದುಕಿನ ಮೇಲೆ ಗಾಢ ಪರಿಣಾಮ ಬೀರಿದ ಒಂದೇ ಒಂದು ಪುಸ್ತಕವನ್ನು ಆಯ್ಕೆ ಮಾಡಬೇಕೆಂದರೆ ಅದು ಬಹಳ ಕಷ್ಟ ಏಕೆಂದೆರೆ ನನ್ನ ಬದುಕನ್ನ ರೂಪಿಸಿದ ಪುಸ್ತಕಗಳು ಅನೇಕ. ಅವಗಳಲ್ಲಿ ಒಂದನ್ನು ಹೇಳಲೇಬೇಕು ಅಂದರೆ ಅದು'ಯೋಗಿಯ ಆತ್ಮಕಥೆ'. ಬಹುಶಃ ನಾನು ಹತ್ತು ವರ್ಷದವಳಿರುವಾಗ ಆ ಪುಸ್ತಕದ ಕೆಲವು ಪುಟಗಳನ್ನ ನನ್ನ ಮಾವನ ಮನೆಯಲ್ಲಿ ಓದಿದ್ದೆ. ಆಗಲೇ ಅದು ನನ್ನ ಮನದ ಮೇಲೆ ವಿಶೇಷವಾದ ಛಾಪನ್ನು ಬಿಟ್ಟಿತ್ತು. ನಂತರ ನಾನು ಓದು ಮುಗಿಸಿ ಕೆಲಸಕ್ಕೆ ಹೋಗಲು ಶುರು ಮಾಡಿದಾಗ ಒಂದಷ್ಟು ಸಮಯ ಖಿನ್ನತೆಗೆ ಒಳಗಾಗಿದ್ದೆ. ಜೀವನ ನಿರರ್ಥಕ ನೀರಸ ಎನಿಸುತ್ತಿತ್ತು. ಉಣ್ಣು, ತಿನ್ನು, ಮಲಗು ಮತ್ತೆ ಕೆಲಸಕ್ಕೆ ಹೋಗು ಬರೀ ಇಷ್ಟೇನಾ ಜೀವನ ಎಂದೆನಿಸುತ್ತಿತ್ತು. ಎಲ್ಲ ಕಡೆ ಸಿಕ್ಕು ಸುಳಿಗಳು ಬಂಧನಗಳೇ ಕಾಣುತ್ತಿದ್ದವು. ಒಂದುಕಡೆ ಏನೋ ಸಂತೋಷ ಸಿಕ್ಕಿತು ಅನ್ನುವಷ್ಟರಲ್ಲಿ ಅದು ಮಾಯ. ಯಾವುದೂ ಶಾಶ್ವತವಲ್ಲ ಎಂಬ ಖಾಲಿ ಭಾವ ಆವರಿಸುತ್ತಿತ್ತು. ಆ ಸಮಯದಲ್ಲಿ 'ಯೋಗಿಯ ಆತ್ಮಕಥೆ' ಹಾಗೂ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೂ ಓದಲು ಶುರುಮಾಡಿದೆ. ಆ ಓದು ನಾನು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತು. ಜೀವನದ ಹಲವು ಆಯಾಮಗಳನ್ನೂ ಕೆಲವು ನಿತ್ಯ,ನಿರಂತರ ಅಭ್ಯಾಸಗಳಿಂದ ಪರಿಶೋಧಿಸಬಹುದು ಎಂಬುದನ್ನ ತೋರಿಸಿಕೊಟ್ಟಿತು. ಅಂದು ಪ್ರಾರಂಭಿಸಿದ ಆ ಅಭ್ಯಾಸ, ಸಾಧನಾ ಪಥ ಇಂದಿಗೂ ನನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಒಳ್ಳೆಯ ಪರಿಣಾಮ ಬೀರುತ್ತಲೇ ಬಂದಿದೆ. ಇಂದಿಗೂ ಯಾವುದೇ ಗೊಂದಲದಲ್ಲಿದ್ದಾಗ ಆ ಪುಸ್ತಕದ ಪುಟವೊಂದನ್ನು ತೆರೆಯುತ್ತೇನೆ, ಪ್ರತಿಬಾರಿಯೂ ಮನಸಿಗೆ ಚೈತನ್ಯವನ್ನು ತುಂಬಿ ಸಮಸ್ಯೆ ಎದುರಿಸುವ ಉತ್ಸಾಹ ಧೈರ್ಯ ಆ ಪುಸ್ತಕ ತುಂಬುತ್ತದೆ.
