(ಮಲ್ಲಿಗೆ ಹೂ ಅಂದರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ, ಉದ್ದ ಜಡೆ ಇರುವವರು ಬೀಗು-ಜಂಭದಿಂದ ಮುಡಿಯುತ್ತಾರೆ.ಮೋಟ ಜಡೆಯವರು ಅದಕ್ಕೆ ತಕ್ಕಷ್ಟು ಸಣ್ಣದಾದ ಒಂದು ಮೊಳದಷ್ಡೋ ಅಥವಾ ಸ್ವಲ್ಪ ಜಾಸ್ತಿಯೋ ಮುಡಿದು ನಾವೇನೂ ಕಮ್ಮಿ ಇಲ್ಲ ಎಂದು ತೋರ್ಪಡಿಸುತ್ತಾರೆ. ಇದೆಲ್ಲವೂ ಹಬ್ಬದ ದಿನಗಳಂದೋ ಇಲ್ಲವೇ ಮದುವೆ ಸಮಾರಂಭದಂದೋ ನೋಡುವ ಸಾಮಾನ್ಯ ದೃಶ್ಯ.
ಅಂತಹ ಸ್ತ್ರೀ-ಜಟ ಸೌಂದರ್ಯವರ್ಧಕ ಮೇರುಸುಮವಾದ ಮಲ್ಲಿಗೆ ದಂಪತಿಗಳ ಬಾಳಿನಲ್ಲಿ ನವಿರು ಪ್ರೇಮ ಪರಿಮಳವನ್ನು ಸೂಸುವ ಸುರಸುಮವೂ ಹೌದು. ಇದಕ್ಕೆ ಸಾಕ್ಷಿ ನಮ್ಮೆಲ್ಲರ ಮೆಚ್ಚಿನ ಒಲವಿನ ಕವಿ ಎಂದೇ ಖ್ಯಾತರಾದ ಕೆ.ಎಸ್.ನರಸಿಂಹಸ್ವಾಮಿಯವರ ‘ಮೈಸುರು ಮಲ್ಲಿಗೆ’ ಕೃತಿ.
ಅಂತಹ ದಿವ್ಯ ಮಲ್ಲಿಗೆ ನಮ್ಮೆಲ್ಲರ ಬಾಳಲ್ಲೂ ಆನಂದವನ್ನು ತಂದಿರುತ್ತಾಳೆ. ಅಂತಹದೊಂದು ಪ್ರೇಮಾಂಕುರ ಸಂದರ್ಭದ ಕವಿತೆಯಿದು ‘ನೂರು ನಮನ’. ಇಲ್ಲಿ ಮಲ್ಲಿಗೆಯನ್ನು ಕಟ್ಟಿ ಮಾರವವಳಿಗೆ ನಮನ ಸಲ್ಲಿಸಲೇಬೇಕೆಂದು ಅನಿಸಿತು.)

ನೂರು ನಮನ
ಮಾಗಿ ಚಳಿಯ ಸಂಜೆಗೊಂದು
ಸಣ್ಣಗೆ ಸುರಿದ ಸೋನೆಯೊಂದು
ರಮ್ಯ ಭಾವಗಳೇಳುತ ಮನದಿ
ಗಮ್ಯ ಗಾಲಿಗಳು ಪಾದ ತಳದಿ
ನಲ್ಲೆಯ ನೋಡುವ ಕಾತರದ ಕಾಟ
ಮಲ್ಲೆಯ ಮಾರುವವಳತ್ತ ಓಟ
ಎಲೆಯಡಿಕೆ ಜಿಗಿವ ಕೆಂಪು ಬಾಯಿ
ಸರಸರನೆ ಆಡುವ ಅಳತೆಯ ಕೈ
ಚಿನ್ನದ ಮಲ್ಲೆಯ ಚೆಂದದ ಮಾಲೆ
ತಣ್ಣನೆ ಬಟ್ಟೆಯ ಹೊದಿಸಿ ಮೇಲೆ
ಬರುವವರು ನಿನ್ನ ಮಾಲೀಕರದಾರೊ
ಕೊಂಡು ನಿನ್ನ ಮುಡಿವರು ಯಾರೊ
ನೀನು ನನ್ನ ಬಾಳ ದೊಡ್ಡ ಮಲ್ಲಿಗೆ
ಬೆಳಗು ಅಲ್ಲೂ ಕರೆದೊಯ್ಯುವಲ್ಲಿಗೆ
ಪೋಣಿಸುವ ಕೈಗಳಿಗೆ ಜೀವನ
ಮುಡಿದ ಮುಡಿಯಲ್ಲಿ ಚೇತನ
ಸುಮವಯಸ್ಸು ನಿನಗೆರಡೇದಿನ
ಸಮಮನಸ್ಸು ನಿನ್ನದು ಅನುದಿನ
ಕೊಂಡವರೆದೆಗೆ ನೀನು ಸೇತುವೆ
ಪ್ರೀತಿ ಪರಿಮಳವೆರಡನೂ ಸೂಸುವೆ
ನನ್ನ ಮುದ್ದು ಮಲ್ಲಿಗೆ ಎಂದುದು
ಅವಳೆದೆಯ ಭಾವವಂತಹುದು
‘ಚೌಕಾಸಿಯೇನಮ್ಮ ನಿನ್ನಲ್ಲಿ
ನನಗೆರಡು ಮೊಳ ತಾ ಇಲ್ಲಿ’
ಎನುತ ಒಯ್ದೆ ಮನೆಗೆ ಹರುಷದಿ
ಘಮವದೆಂತು ಓಡಿತು ಕ್ಷಣದಿ?
‘ಮಲ್ಲಿಗೆ ತಂದರೇನು ರಾಯರಿಂದು?’
ಎಂದವಳ ಮಾತೇ ಮತ್ತು ತಂದು
ಮಲ್ಲಿಗೆ ಕೊಟ್ಟವಳ ನೆನದು ಮನ
ಸಲ್ಲಿಸಿತು ಇಲ್ಲಿಂದಲೇ ನೂರು ನಮನ
✍ವಿಜಯನರಸಿಂಹ
(Picture credits to Google & Dr.Srivatsa Desai)