ಮಾಂಚೆಸ್ಟರ್ ನಲ್ಲಿ ವಿಜೃಂಭಣೆಯಿಂದ ಆಚರಿಸಿದ ‘ಕನ್ನಡ ವೈಭವ’ ಸಮಾರಂಭ – ವೈಶಾಲಿ ದಾಮ್ಲೆ ಲೇಖನ

ಬೆಳಗ್ಗಿನ ಕಾರ್ಯಕ್ರಮವು ಪೂಜೆ ಮತ್ತು ಪ್ರಾರ್ಥನೆಗಳೊಂದಿಗೆ ಪ್ರಾರಂಭವಾಯಿತು. ದೀಪ ಬೆಳಗಿ ಸಭಾ ಕಾರ್ಯಕ್ರಮದ ಉದ್ಘಾಟನೆ ಆದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು. ಚಿಣ್ಣರ ತೊದಲು ನುಡಿಯ ಹಾಡುಗಳು, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಛದ್ಮವೇಷ ಮುಂತಾದ ಹಲವಾರು ಕಾರ್ಯಕ್ರಮಗಳು ನೆರೆದವರ ಮನಸೂರೆಗೊಂಡವು. UK ಯಲ್ಲಿ ಹುಟ್ಟಿ-ಬೆಳೆಯುತ್ತಿರುವ ಮಕ್ಕಳ ಕನ್ನಡ ಪ್ರೀತಿ ಮತ್ತು ಅವರ ಉತ್ಸಾಹ ಹಿರಿಯರಿಗೂ ಮಾದರಿಯಾಗುವಂತಿತ್ತು. 
ಮಧ್ಯಾಹ್ನದ ಸಮಯದಲ್ಲಿ ಕರ್ನಾಟಕ ಶೈಲಿಯ ಭೂರಿ-ಭೋಜನವನ್ನು ಸವಿಯುತ್ತಾ ಬಂದವರೆಲ್ಲಾ ತಮ್ಮ ಸ್ನೇಹಿತರೊಂದಿಗೆ ವಿಚಾರ-ವಿನಿಮಯ ಮಾಡುತ್ತಿರುವ ರೀತಿ ನಮ್ಮ ತವರಿನ  ಹಬ್ಬದ ವಾತಾವರಣವನ್ನು ನೆನಪಿಸಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶಿತವಾದ ನೃತ್ಯ ರೂಪಕ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸಮೂಹ ನೃತ್ಯ ಮುಂತಾದುವು ನೆರೆದವರ ಮನರಂಜಿಸಿದುವು. ಆತಿಥೇಯರಾದ ಮಾಂಚೆಸ್ಟರ್ ತಂಡದವರು ಸ್ತ್ರೀ-ಶಕ್ತಿ ಮತ್ತು ಕನ್ನಡ ವೈಭವದ ಪರಿಕಲ್ಪನೆಯ ಮೇಲೆ ಪ್ರಸ್ತುತಪಡಿಸಿದ ಕಾರ್ಯಕ್ರಮವು ಎಲ್ಲರ ಮೆಚ್ಚುಗೆ ಗಳಿಸಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ| ಗುರುರಾಜ ಕರ್ಜಗಿ ಅವರು ತಮ್ಮ  ಭಾಷಣದಲ್ಲಿ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳುವ ಬಗ್ಗೆ ಮಾತನಾಡಿದರು. ಹೇಗೆ ಒಂದು ಕಿರುನಗೆ, ಒಂದು ಪ್ರೇರಣಾತ್ಮಕವಾದ ಮಾತು ಕೂಡಾ ಕಷ್ಟದಲ್ಲಿರುವವರಿಗೆ ಆಸರೆಯಾಗಬಲ್ಲದು, ಅವರ ಜೀವನದ ದಿಕ್ಕನ್ನೇ ಬದಲಿಸಬಲ್ಲುದು ಎಂಬುದನ್ನು ತಮ್ಮ ಜೀವನಾನುಭವ  ಹಾಗೂ ಅನೇಕ ಕಥೆಗಳ ಮೂಲಕ ಮನಮುಟ್ಟುವಂತೆ ವಿವರಿಸಿದರು. ತಂದೆತಾಯಿಗಳು ಸಂಸ್ಕಾರವಂತರಾದಾಗ ಮಾತ್ರ ಅವರು ತಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಲು ಸಾಧ್ಯ, ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಯಾವುದೇ ಕಾರ್ಯವೂ, ಕೊಡುವ ಯಾವುದೇ ವಸ್ತುವೂ ದಾನವಾಗುತ್ತದೆ, ಪ್ರತಿಫಲಾಪೇಕ್ಷೆ ಇಲ್ಲದೆ ಒಳ್ಳೆಯದನ್ನು ಮಾಡುವ ಮೌಲ್ಯವನ್ನು ನಾವೆಲ್ಲಾ ರೂಢಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದ ಇನ್ನೊಬ್ಬ ಆಹ್ವಾನಿತ ಅತಿಥಿಯಾಗಿ ಆಗಮಿಸಿದ್ದ Zee ಸರೆಗಮಪ ಖ್ಯಾತಿಯ ಅನುರಾಧಾ ಭಟ್ ಅವರ ಸಂಗೀತ ಸಂಜೆ ಆಹ್ಲಾದಕರವಾಗಿತ್ತು. ಕನ್ನಡದ ಹಿರಿಯ ಗಾಯಕಿ ಎಸ್, ಜಾನಕಿಯವರಿಗೆ ಗೌರವಾರ್ಥವಾಗಿ ಸಮರ್ಪಿಸಿದ ಹಾಡುಗಳು ಸಂಗೀತ ರಸಿಕರ ಮೆಚ್ಚುಗೆಗೆ ಪಾತ್ರವಾದುವು. ಕಾರ್ಯಕ್ರಮದ ಉತ್ತರಾರ್ಧದಲ್ಲಿ ಹಾಡಿದ ಫಾಸ್ಟ್ ಹಾಡುಗಳಿಗೆ ನೆರೆದವರೆಲ್ಲ ಹೆಜ್ಜೆ ಹಾಕಿ ಮಜಾ ಮಾಡಿದರು. 
ರುಚಿಯಾದ ನಾರ್ತ್ ಇಂಡಿಯನ್ ಊಟದೊಂದಿಗೆ ಕಾರ್ಯಕ್ರಮದ ಸಮಾಪ್ತಿಯಾಯಿತು

ಒಟ್ಟಿನಲ್ಲಿ ಇದು ಸಾಹಿತ್ಯ, ಸಂಗೀತ, ನೃತ್ಯ, ರೂಪಕ, ಉಪನ್ಯಾಸ, ರುಚಿಕರ ಊಟ, ಸ್ನೇಹಿತರ ಒಡನಾಟ ಎಲ್ಲವನ್ನೂ ಒಳಗೊಂಡ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿ ಮೂಡಿಬಂತು. ನೆರೆದವರೆಲ್ಲರೂ ಇನ್ನೂ ಬಹಳ ದಿನಗಳ ಕಾಲ ನೆನೆದು ಮೆಲುಕು ಹಾಕುವಂಥ, ಕನ್ನಡದ ಸಮಾರಂಭಗಳೆಂದರೆ ಹೀಗಿರಬೇಕು ಎಂದು ಎಲ್ಲರೂ ಉದಾಹರಿಸಬಹುದಾದಂಥ ಉತ್ಕೃಷ್ಟ ಕಾರ್ಯಕ್ರಮವಾಗಿ ಎಲ್ಲರ ಮೆಚ್ಚುಗೆ ಗಳಿಸಿತು.

–ಡಾ. ವೈಶಾಲಿ ದಾಮ್ಲೆ, ಬೋಲ್ಟನ್, ಯುಕೆ