‘ಮಿಲನ’- ಡಾ.ಶಿವಪ್ರಸಾದ್ ಅವರ ಪ್ರೇಮ ಕವನ

 

ಪೀಠಿಕೆ: ಗಿರಿ-ಮುಗಿಲುಗಳು ಚುಂಬಿಸಿ ಮಳೆಯಾಗಿ,ಹರಿವ ಹೊಳೆಯಾಗಿ,ಚಿಗುರೊಡೆದು ಹಸಿರು ತುಂಬಿ ಗಿಡ ಮರಗಳಲ್ಲಿ ಜೀವ ಕಳೆ ನಲಿಯುತ್ತದೆ. ಪ್ರಕೃತಿಯ ಮಿಲನದಿಂದ ಭೂಮಿ ಸುಂದರವಾಗುವ ಹಾಗೆ, ಪರಸ್ಪರ ಕರುಣೆ, ಸಹನೆಗಳಿದ್ದಾಗ ಗಂಡು-ಹೆಣ್ಣುಗಳ ಮಿಲನದಿಂದ ಆದ ಸಂಸಾರಕ್ಕೆ ಒಂದು ಅರ್ಥವಿರುತ್ತದೆ, ಮನಸ್ಸುಗಳು ಹಗುರಾಗಿ ಜೀವನ ಸುಂದರವಾಗಿರುತ್ತದೆ ಎನ್ನುವ   ಡಾ.ಶಿವ ಪ್ರಸಾದ್ ಅವರ ಈ ಕವನವು ‘ಕೆ.ಎಸ್.ಎಸ್.ವಿ.ವಿ’ (ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ) ಹೊರತಂದಿರುವ ‘ಪ್ರೀತಿ ಎಂಬ ಚುಂಬಕ’ ಧ್ವನಿ ಮುದ್ರಿಕೆಯಲ್ಲಿ ಸುಶ್ರಾವ್ಯವಾಗಿ ಕೇಳಿಬಂದಿದೆ. ಈ ಕವನವನ್ನು ಓದಿ ಆನಂದಿಸಿ.

Sunshine-Love-

‘ಮಿಲನ’

ಸೇರಲಿ ಸೆಳೆಯುವ ಕಣ್ಣುಗಳು

ಒಲಿಯಲಿ ಕಾತರ ಮನಸುಗಳು

ಮಿಡಿಯಲಿ ಹೃದಯದ ತುಡಿತಗಳು

ಬಳಸಲಿ ಬಯಸುವ ತೋಳುಗಳು

 

ಮುತ್ತನಿಡಲಿ ಗಿರಿ ಮುಗಿಲುಗಳು

ಧರೆಗಿಳಿಯಲಿ ಮುತ್ತಿನ ಹನಿಗಳು

ತಣಿಯಲಿ ಉರಿಯುವ ಆಸೆಗಳು

ಬಳುಕಲಿ ಹಸುರಿನ ತೆನೆಗಳು

 

ಮೂಡಲಿ ಚೈತ್ರದ ಚಿಗುರುಗಳು

ಅರಳಲಿ ಮಿಲನದ ಮೊಗ್ಗುಗಳು

ಚಿಮ್ಮಲಿ ಪ್ರೀತಿಯ ಬುಗ್ಗೆಗಳು

ಹರಿಯಲಿ ಚೈತನ್ಯದ ಹೊಳೆಗಳು

 

ನನಸಾಗಲಿ ಪ್ರೇಮದ ಕನಸುಗಳು

ಕರುಣೆ ಸಹನೆ ಇರಲಿ ನಿಮ್ಮೆಡ ಬಲಗಳು

ಬರಲಿ ಶುಭ ಹಾರೈಕೆಗಳು

ಹಗುರಾಗಲಿ ನಿಮ್ಮಯ ಬದುಕುಗಳು

—————-ಡಾ.  ಜಿ. ಎಸ್. ಶಿವಪ್ರಸಾದ್

 

 

(ಚಿತ್ರ ಕೃಪೆ: ಗೂಗಲ್)

‘ನಿರ್ದಯಿ’- ಶ್ರೀವತ್ಸ ದೇಸಾಯಿಯವರ ಭಾವಗೀತೆ

ಪೀಠಿಕೆ:
ನವರಸಗಳಲ್ಲಿ ಒಂದು ಶೃಂಗಾರ. ಅದರ ಒಂದು ಪ್ರಕಾರ ವಿರಹ ಎನ್ನುತ್ತಾರೆ ಕೆಲವರು.
ಪ್ರೇಮ-ಪ್ರಣಯ ಇದ್ದಲ್ಲಿ ವಿರಹ ಇರಲೇ ಬೇಕಲ್ಲವೆ?
ಇಂಗ್ಲಿಷಿನಲ್ಲಿ ಒಂದು ಮಾತು ಇದೆ: Absence makes the heart grow fonder.
ಅಗಲುವಿಕೆಯಿಂದ ಎದೆ ಇನ್ನೂ ತುಂಬಿ ಬರುತ್ತದೆ, ಅಂತ.

ಈ ಹಾಡಿನ ಸನ್ನಿವೇಶ ಹೀಗಿದೆ:
ಇಲ್ಲಿ ಪ್ರೇಮಿಗಳು ಅಗಲಿದ್ದಾರೆ. ಆಕೆ ದೂರ ಸರಿದಿದ್ದಾಳೆ; ಬಲು ದೂರ. ಆಕೆ ಯಾವ ಊರಿಗೆ ಹೋಗಿರಬಹುದು?
ಆತ ದೂರುತ್ತ ಪ್ರಶ್ನಿಸುತ್ತಾನೆ: ನೀನಲ್ಲವೇ ನಿರ್ದಯಿ?

(ಕನ್ನಡ ಬಳಗ, ಯು.ಕೆ ದ ಯುಗಾದಿ ಸಂಭ್ರಮದಲ್ಲಿ ಬಿಡುಗಡೆಯಾದ ‘ಪ್ರೀತಿಯೆಂಬ ಚುಂಬಕ’ ಧ್ವನಿಮುದ್ರಿಕೆ (CD) ಯಲ್ಲಿ ಕೆಳಗಿನ ಕವನ ಸೇರ್ಪಡೆಯಾಗಿದೆ)

                               -ಶ್ರೀವತ್ಸ ದೇಸಾಯಿ

nirdayi-1

ನಿರ್ದಯಿ

ನಾನಲ್ಲ, ನೀನಲ್ಲವೆ ನಿರ್ದಯಿ?
ನನ್ನನ್ನೇ ನಿನಗಿತ್ತೆ ನನ್ನವಳೆಂದೆಣಿಸಿ
ನನ್ನಲ್ಲೀಗ ಬರೀ ನೆನಪುಗಳ ರಾಶಿ
ನನ್ನ ತಪ್ಪಿದ್ದರೆ ಮರಳಿ ಬಾ ಕ್ಷಮಿಸಿ

ನಿಮ್ಮೂರಲ್ಲಿ ಹುಟ್ಟು-ಸಾವಿಲ್ಲಂತೆ
ಎಲ್ಲೆಲ್ಲೂ ಹಸಿರಂತೆ, ಅದು ನಂದನವಂತೆ
ಅದಕ್ಕೆ ತಾನೆ ನೀನು ನನ್ನನ್ನು ಮರೆತೆ?
ನನ್ನ ಬಳಿಯಿಲ್ಲ ಸತ್ತ ಕನಸುಗಳಿಗೆ ಕೊರತೆ!

ಕೇಳುತಿದೆ ಇಡದ ಹೆಜ್ಜೆಗಳ ಸದ್ದು
ಕಾಡುತಿವೆ ಸತತ ನೆನಪುಗಳು ಎದ್ದು
ಕಳಿಸಿಲ್ವೆ ಹೋದಾಗ ಕೊಟ್ಟು ಮುತ್ತು
ನನ್ನನ್ನಳಿಸಿದ ನೀನಲ್ಲವೆ ನಿರ್ದಯಿ?

-ಶ್ರೀವತ್ಸ ದೇಸಾಯಿ