ವಿವಿಧ ಚಿತ್ತಸ್ಥಿತಿಗಳು: ವಿಜಯನಾರಸಿಂಹರ ಕವನಗಳು

ವಿಜಯನಾರಸಿಂಹ ನಿಮಗೆಲ್ಲ ಪರಿಚಯವಿರುವ ಕವಿ. ಅವರು ಭಾವನಾತ್ಮಕ ವ್ಯಕ್ತಿ. ಅದನ್ನಿಲ್ಲಿ ಅವರ ಕವನಗಳನ್ನೋದಿದಾಗ ಎದ್ದು ಕಾಣುವುದು. ಮೊದಲ ಕವನ “ನೆನಪು” ನಿಮ್ಮನ್ನು ಸಾಕಷ್ಟು ಕಾಡಬಹುದು. ಅದರ ಹಿನ್ನಲೆಯನ್ನು ಅವರ ಮಾತುಗಳಲ್ಲೇ ಓದಿ.
“ಬರಹದ ಸೋಜಿಗ” ಅವರಿಗೆ ಕಾವ್ಯ ಮಾಧ್ಯಮದ ಮೇಲೆ ಅವರಿಗಿರುವ ಹಿಡಿತವನ್ನು ಪ್ರದರ್ಶನಕ್ಕಿಡುತ್ತಿದೆ. ಅದರೊಂದಿಗೆ ಶಬ್ದಗಳ ಚಮತ್ಕಾರವನ್ನೂ ಕಾಣುತ್ತೀರಿ. ಕವನ ಸುಲಿದ ಬಾಳೆ ಹಣ್ಣಿನಂತಿರಬೇಕಂತೆ. ಈ ಕವನವೂ ಆ ಭಾವನೆಯನ್ನು ವ್ಯಕ್ತಿಸುತ್ತ ನಿಮ್ಮ ಮನವನ್ನು ಮುದಗೊಳಿಸುತ್ತಿದೆ.
“ಸದಾನುರಾಗಿ” ಮುತ್ತು ಪೋಣಿಸಿದಂತ ಪ್ರೇಮಕವನ. ಹನಿಗವನದ ಮಟ್ಟು ಇಲ್ಲಿದೆ. ಓದಿ ಮತ್ತೇರಿದರೆ ಆಶ್ಚರ್ಯವಿಲ್ಲ.
ಕರುಣಾರಸದಿಂದ ಪ್ರಾರಂಭವಾಗಿ ಶೃಂಗಾರ ರಸದಲ್ಲಿ ಮುಕ್ತಾಯವಾಗುವ ಈ ವಾರದ ಕಾವ್ಯ ಸರಣಿ ಕವಿಯ ಅನುಭವದ ಹರವನ್ನು ಹರಡಿಟ್ಟಿದೆ ನಿಮ್ಮೆದುರು. (ಸಂ)

 

ನೆನಪು

ಈ ಕವನ ಅತ್ಯಂತ ನೋವನ್ನುಂಡ ಮನಸಿನ ಅಳಲು ನನ್ನ ಆತ್ಮೀಯ ಸ್ನೇಹಿತರೂ , ಅಣ್ಣನ ಸಮಾನರೂ ಆದ ನನ್ನ ಸಹೋದ್ಯೋಗಿಯೊಬ್ಬರ 4ವರ್ಷದ ಬೊಗಸೆಗಣ್ಗಳ , ಅತ್ಯುತ್ಸಾಹದ , ಮುಗ್ಧ ಮನಸ್ಸಿನ ಮಗಳು cancer ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ಆ ನನ್ನ ಅಣ್ಣನ ಕಣ್ಣಲ್ಲಿ ಮಡುಗಟ್ಟಿದ ದುಃಖವನ್ನು ನೋಡಿದಾಗ ಬರೆದದ್ದು

 

ನಿನ್ನ ನೆನಪು ಅಡಿಗಡಿಗೆ ಕಾಡಿದೆ
ಮನದಲ್ಲಿ ದುಗುಡವು ಮನೆಮಾಡಿ ಕೂಡಿದೆ

ಹೆತ್ತಮ್ಮಳ ಒಡಲ ಕಡಲನ್ನು ಬರಿದು ಮಾಡಿದೆ ನೀನು
ಎತ್ತಾಡಿದ ತೋಳಿನ ತೆಕ್ಕೆಯಲಿ ಮತ್ತೆ ಬಾರೆಯೇ ನೀನು?

ಬತ್ತಿಹುದು ಕೊರಳು ಕೊರಗಿ ನಿನ್ನ ಕರೆಯಲಾಗದು ಇನ್ನೆಂದೂ
ಹೊತ್ತಿಹುದು ಉರಿದು ಬೆಂಕಿ , ಆರಿಸಲು ಇನ್ನಾಗದು ಎಂದೂ

ಕಿತ್ತು ತಿಂದಿತೇ ವಿಧಿಯು ನೀ ಇರುವಷ್ಟು ಹೊತ್ತು
ಅತ್ತು ಎಷ್ಟು ಬೇಡಿಕೊಂಡರೂ ತುತ್ತು ಮುಗಿಸಿತ್ತು

ಸೂತಕದ ಛಾಯೆಯು ತಂದಿತು ಆಘಾತದ ನೋವು
ನೀನಿನ್ನು ಬರೀ ನೆನಪೇ ಎಂದು ಸೋತು ಹೋದೆವು ನಾವು

 

ಬರಹದ ಸೋಜಿಗ

 

 

ಬರೆಸುತಿರುವುದೊಂದು ಜ್ಞಾನ

ಬರೆಯುತಿರುವುದೊಂದು ಕೈ

ಪೋಣಿಸುತ ಅಕ್ಷರಕ್ಕೊಂದು ಅಕ್ಷರ

ಅಲ್ಲೊಂದು ಹ್ರಸ್ವ, ಇಲ್ಲೊಂದು ದೀರ್ಘ

ಅಲ್ಲೊಂದು ಅನುಸ್ವಾರ,ಇಲ್ಲೊಂದು ವಿಸರ್ಗ

ಸ್ವರ-ವ್ಯಂಜನಗಳ ಹೆಣೆದು

ಪುಷ್ಪಮಾಲೆಯ ತೆರದಿ

ಜನಿಸಿದ ಪದಗಳೆಷ್ಟು ?

ಕೂಡಿ ಆದ ಸಾಲುಗಳೆಷ್ಟು?

ತಿಳಿಯಲೆತ್ನಿಸಿದಂತೆಲ್ಲಾ ಕಾಡುವುದು ಕುತೂಹಲ

ಏನೀ ಸೋಜಿಗ ಲಿಪಿಯದೊ?

ಭಾಷೆಯದೊ? ಅರ್ಥವದೊ ?

 

ಸುಪ್ತ ಜ್ಞಾನಕೆ ಕವಿಯಾಗುವ ಭರ

ಜಾಗೃತ ಮನಕೆ ಭಾವದ ಭಾರ

ಸರಿದೂಗಿಸಲೆಳೆವ ಶಬ್ದ ಸಾಗರ

ಬರೆದುದೆಲ್ಲ ಗ್ರಂಥವಾಗಿಸುವ ಹಠವೇಕೆ ?

ಪದವಿಯೇಕೆ, ಪದಕವೇಕೆ?

ಸಾಲದೇನು ಒಂದು ಸರಳ ಭಾವಗೀತೆ

ಧಗೆಯ ತಣಿಸುವ ಸೋನೆ ಮಳೆಯಂತೆ

 

ಸದಾನುರಾಗಿ

 

ಕಲೆ: ಲಕ್ಷ್ಮೀನಾರಾಯಣ ಗುಡೂರ್

ನಾನು ಮನವಿ ಸಲ್ಲಿಸುವ ಮೊದಲೇ
ಆಹ್ವಾನವಿತ್ತೆಯಾ ನೀ ಕಣ್ಣಲ್ಲೇ

ನಿನ್ನೆದೆಯ ಅಂತಃಪುರದ ಒಡೆಯ ನಾನು
ಎಂದು ಸನ್ನೆಯಲ್ಲೇ ಬಿನ್ನಹಿಸಿಹೆ ನೀನು

ನನಗೆ ನೀ, ನಿನಗೆ ನಾ ಗೊತ್ತಾಗಿ
ಸಪ್ತಪದಿಯ ಸುತ್ತಾಗಿ
ಮಾತಾಗಿ, ಮುತ್ತಾಗಿ, ಮತ್ತಾಗಿ
ನಡೆದು ಜೊತೆ ಜೊತೆಯಾಗಿ
ನಮಗೆರಡು ಮಕ್ಕಳಾಗಿ
ಸರಿಸಿ ಎಷ್ಟೋ ವರುಷಗಳ ಸಲೀಸಾಗಿ

ನಿನ್ನೊಲವಿನ ಒರತೆ ಹೊರತಾಗಿ
ಮತ್ತೇನೂ ಸೆಳೆಯದಾಗಿ
ಬಾಳು ಬಹಳ ಸರಳವಾಗಿ
ನಾನು ನಿನ್ನ ಸದಾನುರಾಗಿ
ಇರಬಹುದೇ ನಾ ಒಲವ್ ಹೆಚ್ಚಿದ ರೋಗಿ?

 

  • ವಿಜಯನಾರಸಿಂಹ

ತೋಳ -ಕುರಿ ನ್ಯಾಯ – ಸುದರ್ಶನ ಗುರುರಾಜರಾವ್ ಬರೆದ ಕವನ

ಸುದರ್ಶನ್ ಸಧ್ಯದವರೆಗೂ ಇಂಗ್ಲೆಂಡಿನಲ್ಲಿ ಅರಿವಳಿಕೆ ಶಾಸ್ತ್ರಜ್ಞರಾಗಿ ಕೆಲಸ ಮಾಡಿ ಕೆನಡಾಕ್ಕೆ ಹಾರಿದ್ದಾರೆ. ಅನಿವಾಸಿ ಬಳಗದವರಿಗೆಲ್ಲ ಚಿರಪರಿಚಿತ.  ಅವರ ನೀಳ್ಗವಿತೆಗಳು ಹಿಂದೆಯೂ ಅನಿವಾಸಿ ಅಂಗಳದಲ್ಲಿ ಬೆಳಕು ಕಂಡಿವೆ. ದೂರದೂರಿನಿಂದ ಸುದರ್ಶನ್ ಇಂದಿಗೂ ನಮ್ಮ ಜಾಲತಾಣವನ್ನು ಪ್ರೋತ್ಸಾಹಿಸುತ್ತಿರುವುದು ಅನುಕರಣೀಯ.

ದೇಶಗಳ ಮೇರೆ ಮೀರಿ ಇಂದಿನ ಸಾಮಾಜಿಕ- ರಾಜಕೀಯ ಪರಿಸ್ಥಿತಿಗಳನ್ನು ಪ್ರತಿಧ್ವನಿಸುವಲ್ಲಿ ಈ ಕವನ ಯಶಸ್ವಿಯಾಗಿದೆ. ಕವಿತೆಗೆ ಪೂರಕವಾಗಿ ಅನಿವಾಸಿಯ ‘ನಿವಾಸಿ’ ಕಲಾವಿದ ಲಕ್ಷ್ಮೀನಾರಾಯಣ ಗುಡೂರ್, ಸುಂದರವಾದ ಚಿತ್ರ ರಚಿಸಿದ್ದಾರೆ.

ತೋಳ -ಕುರಿ ನ್ಯಾಯ

ಕುರಿಯು ಒಂದು ನೀರು ಕುಡಿಯಲೆಂದು

ತೊರೆಯ ಬಳಿಗೆ  ಬಂದು

ಹರಿವ ತೊರೆಯ ನೀರಿನಲ್ಲಿ ಬಾಯಿಯಿಟ್ಟಿತು

 

ಹೊಟ್ಟೆ ತುಂಬಿದಂಥ ಕುರಿಯWolf & the Sheep

ದಾಹ ತಣಿಸುವಂಥ ತೊರೆಯ

ನೀರು ಕುಡಿಯೆ ಸ್ವರ್ಗ ಅಲ್ಲೆ ಸಿಕ್ಕಿಬಿಟ್ಟಿತು

 

ಅಷ್ಟರಲ್ಲೆ ಅಲ್ಲಿಗೊಂದು

ದುಷ್ಟತೋಳವೊಂದು ಬಂದು

ದೃಷ್ಟಿಯನ್ನು ಅತ್ತ ಇತ್ತ ಹಾಯ ಬಿಟ್ಟಿತು

 

ಉಂಡು ದುಂಡಗಿತ್ತು ಕುರಿಯು

ಕಂಡು ಕೆರಳಿ ಹೊಟ್ಟೆ ಉರಿಯು

ಭಂಡ ತೋಳ ತಿನ್ನಲದನು ಹೊಂಚು ಹಾಕಿತು

 

ಇಂದು ಕುರಿಯ ಮೇಲೆ ಹಾರಿ

ಕೊಂದು ರಕ್ತವನ್ನು ಹೀರಿ

ತಿಂದುಬಿಡಲು ಧೂರ್ತನೆಂದು ಹೆಸರು ಕೆಡುವುದು

 

ಹೆಸರು ನನ್ನದುಳಿಯಬೇಕು

ಕೆಸರು ಕುರಿಗೆ ಬಳಿಯಬೇಕು

ಹಸಿವು ನನಗೆ ಕಳೆಯ ಬೇಕು ಏನು ಮಾಳ್ಪುದು

 

ಅಲ್ಲೆ ಒಂದು ಹೊಂಚು ಹೊಸೆದು

ಕಾಲು ಕೆರೆದು ಜಗಳ ತೆಗೆದು

ಮೂಲ ದೋಷ ಕುರಿಯ ಮೇಲೆ ಹೇರ ತೊಡಗಿತು

 

ಎಲವೋ ಅಹಂಕಾರಿ ಕುರಿಯೆ

ನೆಲೆಯು ನಿನ್ನದೇನು ಅರಿಯೆ

ಜಲವನೆಲ್ಲ ಎಂಜಲೇಕೆ ಮಾಡುತಿರುವೆಯೊ?

 

ಕುರಿಯು ಹೆಜ್ಜೆ ಹಿಂದೆ ಹೋಗಿ

ಹಿರಿಯ ವೃಕಕೆ ತಲೆಯ ಬಾಗಿ

ಅರಿಕೆಯನ್ನು ವಿನಯದಿಂದ ತಾನು ಮಾಡಿತು

 

ದೈವ ಕರುಣೆ ಹರಿವ ನೀರು

ತಾವು ಅದನು ಕೇಳಲ್ಯಾರು

ನೀವು ನನ್ನ ಪಾಡಿಗೆನ್ನ ಬಿಡಿರಿ ಎಂದಿತು

 

ಇಷ್ಟು ತಿಳಿಯದೇನೊ ಕುರಿಯೆ

ಎಷ್ಟು ಸೊಕ್ಕು ನಿನಗೆ, ಸರಿಯೆ?

ಅಷ್ಟು ನೀರು ಎಂಜಲಾಗಿ ನನಗೆ ಬಂದಿದೆ

 

ನಿನ್ನ ಎಂಜಲುಣುವ ಜೀವಿ

ನಾನು ಅಲ್ಲ ಎನುವ ಠೀವಿ

ನಿನಗೆ ತಿಳಿಸಲೇನು ಎಂದು ಹುಯಿಲು ಮಾಡಿತು

 

ಕುರಿಯು ಕುಡಿದ ನೀರು ಮುಂದೆ

ಹರಿದು ಹೋಯಿತೆನ್ನ ತಂದೆ

ಹರಿದು ಈಗ ಬರುವ ಜಲವ ಕುಡಿಯಿರೆನ್ನಲು

 

ಕುರಿಯು ಬಾಯಿ ಇಟ್ಟರಾಯ್ತು

ನೀರು ಮಲಿನವಾಗಿ ಹೋಯ್ತು

ಹರಿದು ಕೆಳಗೆ ಬರುವ ನೀರ ಕುಡಿಯಲಾಗದು

 

ಭಂಡವಾದ ಹೂಡಿ ತೋಳ

ಮೊಂಡು ಹಟವ ಮಾಡಿ ಕೊರಳ

ಖಂಡಗಳನು ಉಬ್ಬಿಸುತ್ತ ಕೂಗಿ ಮೊರೆಯಿತು

 

ಕಾಲ ಮಿಂಚಿ ತಪ್ಪು ಆಯ್ತು

ಮೇಲಕೇರಿ ಕುಡಿದರಾಯ್ತು

ನೀವು ಕುಡಿದು ಬಿಟ್ಟ ನೀರ ನಾವು ಕುಡಿವೆವು

 

ನಿನ್ನದೊಂದೆ ಎಂಜಲಲ್ಲ

ನಿನ್ನ ತಂದೆ ತಾತರೆಲ್ಲ

ಮುನ್ನ ತೊರೆಯ ತುಂಬ ಎಂಜಲಾಗಿಸಿರುವರು

 

ನಿಮ್ಮ ವಾದ ಬಹಳ ಜಟಿಲ

ಮೂಲಧ್ಯೇಯವಂತು ಕುಟಿಲ

ಜಲವನರಸಿ ತೊರೆಗೆ ಮುಂದೆ ಬಾರೆನೆನ್ನಲು

 

ಅನ್ನಕಾಗಿ ಹಸಿದ ತೋಳ

ತಿನ್ನಲೆಂದು ರಸದ ಕವಳ

ಇನ್ನು ರೋಷದಿಂದ ಜೋರು ಮಾಡಿ ಕೂಗಿತು

 

ಭಿಕ್ಷೆ ಏನು ಬೇಡ ನನಗೆ

ಶಿಕ್ಷೆಯಾಗಬೇಕು ನಿನಗೆ

ವಕ್ಷವನ್ನು ಸೀಳಿ ನಿನಗೆ ಪಾಠ ಕಲಿಸುವೆ

 

ಕುರಿಯ ಮೇಲೆ ಹೊರಿಸಿ ಲೋಪ

ದುರುಳತನಕೆ ಸುಳ್ಳ ಲೇಪ

ಮರುಳುಗೊಳಿಸಿ ಲೋಕಕೆಲ್ಲ ಮಂಕು ಎರಚುವೆ

 

ನನ್ನ ಆಗ ಎಲ್ಲ ಹೊಗಳಿ

ಕುರಿಯ ಬುದ್ಢಿಯನ್ನು ತೆಗಳಿ

ಎನ್ನ ಘನತೆ ಲೋಕದಲ್ಲಿ ವೃದ್ದ್ಧಿಗೊಳಿಸುವೆ

 

ಮಿಂಚಿನಂತೆ ಮೇಲೆ ನೆಗೆದು

ಹೊಂಚಿ ಕುರಿಯ ಪ್ರಾಣ ತೆಗೆದು

ಕಂಚು ಕಂಠದಿಂದ ಜಗಕೆ ಕೂಗಿ ಹೇಳಿತು

 

ಹಾಳು ಕುರಿಯೆ ದುಷ್ಟ ದುರುಳ

ತೋಳ ನೀನು ಬಹಳ ಸರಳ

ಕೊಳಕು ತೊಳೆದ ನ್ಯಾಯ ವಾದಿ ನೀನೆ ಎನ್ನುತ

 

ಅಂಧರಂತೆ ಲೋಕವೆಲ್ಲ

ತೋಳ ಸ್ತುತಿಯ ಮಾಡಿತಲ್ಲ

ಒಳಗೆ ಮೆರೆದು ಮದಿಸುತಿತ್ತು ತೋಳ ಹಿಗ್ಗುತ

 

ಶಕ್ತರೆಂದು ಲೋಕದಲ್ಲಿ

ಯುಕ್ತ ಮಂಕು ಬೂದಿಚೆಲ್ಲಿ

ಮುಕ್ತವಾಗಿ ತಮ್ಮ ಬೇಳೆ ಬೇಯ್ಸಿಕೊಳುತಿರೆ

 

ದೀನರೆಲ್ಲ ಕುರಿಗಳಾಗಿ

ಕಾಯ್ವ ಜನರು ತೋಳವಾಗಿ

ನೀತಿ ನಿಯಮ ತೋಳಕಾಗಿ ಜಗವು ನಡೆದಿರೆ!!!

 

-ಡಾ. ಸುದರ್ಶನ ಗುರುರಾಜರಾವ್