ಮಗಳಿಗೆ – ಮುರಳಿ ಹತ್ವಾರರ ಕವನ

ಹೊಸ ಜೀವವ ಬರಮಾಡಿಕೊಳ್ಳುವ ಘಳಿಗೆ ಹೆತ್ತವರಿಗೆ ಅವಿಸ್ಮರಣೀಯ. ಮಕ್ಕಳ ಭವಿಷ್ಯ ಉಜ್ವಲವಾಗಲೆಂಬುದೇ ತಾಯಿ-ತಂದೆಯರ ಅವಿರತ ಹಂಬಲ. ಆದರೆ, ಜಗತ್ತು ಎಂದಿನಂತಿಲ್ಲ. ಜನಾಂಗೀಯ ದ್ವೇಷ, ಒಡೆದಾಳುವ ಪ್ರವೃತ್ತಿ, ಪರಿಸರ ವಿಷಮತೆ ಮನುಕುಲವನ್ನು ಎಲ್ಲಿಗೊಯ್ಯುತ್ತಿದೆ ಎಂಬರಿವಿಲ್ಲದ ಗೊಂದಲ  ನಮ್ಮನ್ನಾವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮುರಳಿ ಹತ್ವಾರರು ತಮ್ಮ ನವಜಾತ ಶಿಶುವಿಗೆ ಕೋರುವ ಹಾರೈಕೆ……..
ಮುದ್ದು ಮಗಳಿಗೆ,
ದಿನ ತುಂಬಿ ಒಂದಾಗಿತ್ತು,
ನಿನ್ನಮ್ಮನಿಗೆ ತಲೆಸುತ್ತು!
ಬರುವ ಅವಸರ ನಿನಗೆ, ಕಳಿಸುವ
ಆತುರ ಅವಳಿಗಿರಲಿಲ್ಲ!
ಬಗೆದು ಬರಮಾಡಿಕೊಂಡದ್ದಾಯಿತು.
ನಿನ್ನಳುವಿನ ನಗೆ, ನಿನ್ನಮ್ಮನ ನಗೆಯಳು
ನನ್ನ ಭಾವದ ಭಾಷೆಗೆ ನಿಲುಕದ್ದು; ಅರ್ಥ
ಹುಡುಕುವ ಧೈರ್ಯ ನನಗಿಲ್ಲ!
ಕಿಟಕಿಯಾಚೆ, ತೆಮ್ಸ್ ತಣ್ಣಗೆ ಹರಿಯುತಿತ್ತು.
ದಡದಾಚೆಯ ಪಾರ್ಲಿಮೆಂಟಿನೊಳಗೆ ಬ್ರೆಕ್ಸಿಟ್ಟಿನ
ಬೆಂಕಿ ಆರಿಸಲು ನೀರು ಹುಡುಕುತಿ್ತರಬೇಕು
ಮೇ ಮತ್ತವಳ ಬಿಳಿ ಹಿಂಡು! ಸೂರ್ಯ ಮುಳುಗುತ್ತಿದ್ದ
ಪಾರ್ಲಿಮೆಂಟಿನ ಹಿಂದೆ, ಎಂದಿನಂತೆ.
ರಿಪೇರಿಯ ಮೌನದಲಿತ್ತು ಬಿಗ್ ಬೆನ್ ಘಂಟೆ.
ತನ್ನ ಏರಿಳಿತದಾಟಕ್ಕೆ  ತೆಮ್ಸ್ ನೆಚ್ಚುವುದು
ಸೂರ್ಯ-ಚಂದ್ರರ ಮಾತ್ರ!
ನಿನ್ನಮ್ಮ-ಅಪ್ಪನ ತವರಿನಲ್ಲಿ, ಚಹಾ ಮಾರಿ ಬೆಳೆದು
ದೇಶದ ಚುಕ್ಕಾಣಿ ಹಿಡಿದ ಜನನಾಯಕನ
ಹುಟ್ಟು ದಿನದ ಸಂಭ್ರಮ! ನರ್ಮದೆಯ ಹರಿವು
ಬದಲಿಸುವ ಅಡ್ಡಗೋಡೆಯ ಮೇಲೆ ದೀಪ
ಬೆಳಗಿದ್ದು ಅವನಾಚರಣೆ. ಆ ಗೋಡೆಯ ಮೇಲೆ
ಅವನ ನಾಯಕನ ನೂರಾಳೆತ್ತರದ ಕಬ್ಬಿಣದ
ಗೊಂಬೆಯ ನಿಲ್ಲಿಸುವ ಆಸೆ ಅವನಿಗೆ.
ನರ್ಮದೆ ಕಿಲಕಿಲನೆ ನಕ್ಕಿರಬೇಕು!
ನಿನ್ನ ನಾಳಿನ ನೆಲೆ ಎಲ್ಲೋ? ಬಸವಳಿದ
ಧರೆಯೋ? ಬೆಳದಿಂಗಳ ದೊರೆಯೋ?
ಮಂಗಳನ ಅಂಗಳದ ಪೊರೆಯೋ?
ನಿನ್ನ ಹರಿವಿನ ಲಹರಿ, ಹಾರುವ ದಿಕ್ಕು ಬದಲಿಸುವ
ಹುಂಬತನ ನಮಗಿಲ್ಲ. ದಾರಿಯ ಒಪ್ಪ
ಗೊಳಿಸಿ, ದಡವ ಕಟ್ಟುತ ಸಂಕಲ್ಪಿಸವುದಿಷ್ಟೇ:
ನಡೆಸುವೆವು ಕೈ ಹಿಡಿದು ನೀ ನಡೆವೆಡೆಗೆ;
ನಿನ್ನರಿವಿನ ಗುರಿಯ ಸಾಗರ ನಿನಗೆ ಸಿಗುವರೆಗೆ.
–ಮುರಳಿ ಹತ್ವಾರ

11 thoughts on “ಮಗಳಿಗೆ – ಮುರಳಿ ಹತ್ವಾರರ ಕವನ

  1. ಹೊಸ ತಂದೆಯ , ಹೊಸ ಸಂಭ್ರಮದ ಭಾವಗಳ ಮೂಟೆ ಹೊತ್ತು ತಂದ ಸುಂದರ ಕವನ.ರಾಜಕೀಯ ದಳ್ಳುರಿ ಇರಲಿ, ಕಾಲನಿಂತಿರಲಿ, ಹುಟ್ಟು ಹಬ್ಬದ ಸಂಭ್ರಮಾಚರಣೆ ಇರಲಿ ಸೂರ್ಯ ಚಂದ್ರರ ನೆರಳಡಿಯಲ್ಲಿತಣ್ಣಗೆ ಹರಿವ ನದಿಯಂತೆ ಭಾವನೆ ಗಳಿಗೆ ತನ್ನದೇ ಓಟ ಎಂಬುದನ್ನು ಬಲು ಸುಂದರ ವಾಗಿದೆ ವರ್ಣಿಸಿದ್ದಾರೆ ಕವಿ.ರಾಮಚಂದ್ರ ಅಂದುಬೇಡಿದ ತಾರೆ ಚಂದ್ರರ ತರಲು ಕೌಸಲ್ಯೆ ತರುವೆ ತಾಳು ಮಗನೇ ಅನ್ನು ವಂತೆ ಇಲ್ಲಿ ಈ ತಂದೆ ಮಗಳಿಗಾಗಿ ಚಂದ್ರ, ಮಂಗಳರ ನೆಲೆಯನ್ನೇ ಅವಳದಾಗಿಸ ಹೊರಟಿದ್ದಾರೆ, ಮಗುವಿನ ಅಳು ,ತಾಯಿಯ ನಗುವಿನ ಅರ್ಥ ಹುಡುಕಲೆಳೆಸುತ್ತ.ಇದಕ್ಕಿಂತ ಬೇರೆ ಶಬ್ದ ಬೇಕೆ ತಂದೆ ತಾಯಿಯ ಹೊಸ ಹರುಷದ ,ರಾಗದ , ಭರವಸೆಯ , ಧ್ವನಿಯಾಗಲು,ಮಗಳಿಗಾಗಿ , ಮಗುವಿಗಾಗಿ ಏನೂ ಮಾಡಬಲ್ಲೆ ಎಂದು ಹೇಳಲು, !!? ತುಂಬಾ ಸುಂದರ ಕವನ ಮುರಳಿ ಯವರೇ.ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Like

  2. ಮುರಳಿಯವರೆ,
    ಹೊಸದಾಗಿ ತಂದೆಯಾಗುವ ಗಳಿಗೆಯಲ್ಲಿ ನೈಜವಾಗಿ ನಿಮ್ಮ ಭಾವನೆಗಳನ್ನು ಹಾಗೆಯೇ ಹಿಡಿದಿಟ್ಟಂತ ಕವನ. ಈ ಕವನದ ಸಾರ್ಥಕತೆ ಇರುವುದು ನಿಮ್ಮ ಅಭಿವ್ಯಕ್ತಿಯ ಪ್ರಾಮಾಣಿಕತೆಯಲ್ಲಿ !
    ಹೊಟ್ಟೆ ಬಗೆಸಿಕೊಂಡು ಮಗು ಹೊರಬಂದರೂ, ಮುಗುಳುನಗುವ ಹೆಂಡತಿಯ ಭಾವನೆಗಳನ್ನು ಅರಿಯೆ ಎನ್ನುತ್ತಲೇ, ಪ್ರಪಂಚದ ವರ್ತಮಾನಗಳನ್ನೆಲ್ಲ ಮಗಳ ಹುಟ್ಟಿನ ತಳುಕಿನಲ್ಲಿ ಕಾಣುತ್ತಲೇ ತಂದೆಯಾಗುವ ಸಂಭ್ರಮವನ್ನು ಅನುಭವಿಸುವ ಮಿಲಿಯನ್ನುಗಟ್ಟಲೆ ತಂದೆಯರಿಗೆ ನಿಮ್ಮ ಕವನ ದನಿಯಾಗಬಲ್ಲದು. ವಿನೂತನ ರೀತಿಯಾದರೂ ಪ್ರಾಮಾಣಿಕತೆಯನ್ನು ಸೂಸುವ ಕವನ.

    Like

  3. ಮುರಳಿಯವರೇ,

    ಬಹುಷಃ ಅಡಿಗರು ಇಂಗ್ಲಂಡಿನಲ್ಲಿ ಕೆಲ ವರುಷ ಇದ್ದಿದ್ದರೆ ಹೀಗೇ ಬರೆಯುತ್ತಿದ್ದರೋ ಏನೋ!

    ನಿಮ್ಮ ಕವನವನ್ನು ಬಿಡಿಸಿ ಹೇಳಿದರೆ ವ್ಯಾಚ್ಯವಗಿಬಿಡುವ ಹೆದರಿಕೆ.

    ಕವನ ಓದಿದ ಮೇಲೆ ಅದರ ಸಂಕೀರ್ಣತೆ ಮನಸನ್ನು ಸುತ್ತಿಕೊಳ್ಳುವ ರೀತಿಯಿದೆಯಲ್ಲ, ಅದರಲ್ಲೇ ಕವನ್ ಸಾರ್ಥಕವಾಗುತ್ತದೆ.

    ಹುಟ್ಟಿದ ಮಗುವಿನ ಬೇಕಾದಷ್ಟು ರಮ್ಯ ಕವನಗಳಿವೆ, ಇಂಥ ಆಧುನಿಕ-ನವ್ಯ ಕವನ ಓದಿದ್ದು ನಾನು ಇದೇ ಮೊದಲು.

    ನಿಮ್ಮ ಕವನ `ಅನಿವಾಸಿ`ಗಳ ಹೆಮ್ಮೆ.

    – ಕೇಶವ

    Liked by 1 person

    • ಕೇಶವ ಕುಲಕರ್ಣಿಯವರೇ,
      ಧನ್ಯವಾದ. ಧನ್ಯವಾದ. ಧನ್ಯವಾದ

      Like

  4. ಹುಟ್ಟು ಸಾವುಗಳ ಆಸುಪಾಸಿನಲ್ಲಿ ಆಗುವ ಘಟನೆಗಳನ್ನು ಸಂಸಾರದವರು ನೆನಪಿಟ್ಟುಕೊಳ್ಳುವುದು ಸಾಮಾನ್ಯ.
    ಮಗು ಹುಟ್ಟಿದ ಸಂದರ್ಭದಲ್ಲಿ ಸೂರ್ಯ ಮುಳುಗಿದ್ದು, ಬಿಗ್ ಬೆನ್ ಗಡಿಯಾರ ದುರಸ್ತಿಯಲ್ಲಿರುವುದು, ಬ್ರೆಕ್ಸಿಟ್ ಆಗುಹೋಗುಗಳು
    ಹಾಗೆಯೆ ಸಾವಿರಾರು ಮೈಲಿಗಳಾಚೆ ಅಪ್ಪ- ಅಮ್ಮನ ತವರಿನಲ್ಲಿ ಹಿಂದೆ ಚಾ ಮಾರುತ್ತಿದ್ದ ಸದರಿ ಜನನಾಯಕನ ಹುಟ್ಟು ಹಬ್ಬದ ಸಡಗರ ಇವುಗಳ ಮಧ್ಯೆ ಹುಟ್ಟಿದ ತಮ್ಮ ಮಗುವನ್ನು ಮುರಳಿ ಅವರು ಸ್ವಾಗತಿಸಿರುವುದು ಸಹಜವಾಗಿದೆ. ಹಾಗೆ ಆ ಸಂದರ್ಭದ ಚಿತ್ರಣ ಸುಂದರವಾಗಿದೆ.
    ಒಂದು ದೊಡ್ಡ ನದಿಯ ಗತಿಯನ್ನು ಬದಲಿಸಿ ಅದರಿಂದ ಆಗುವ ಪರಿಣಾಮಗಳನ್ನು ಹಾಗೆ ಮಗುವಿನ ಭವಿಷ್ಯವನ್ನು ರೂಪಿಸಲು ತವಕಿಸುವ ತಂದೆ ತಾಯಿಗೆ ಇರುವ ಹೋಲಿಕೆ, ಅಲ್ಲಿರುವ ಹುಂಬುತನ ಹಾಗೆಯೇ ‘ನಡೆಸುವೆವು ಕೈ ಹಿಡಿದು ನೀ ನಡೆವೆಡೆಗೆ’ ಎಂಬ ಯಥಾರ್ಥ ಮೌಲ್ಯವನ್ನು ಕವನದಲ್ಲಿ ತಂದಿದ್ದಾರೆ. ಈ ಗಹನ ವಿಚಾರಗಳ ನಡುವೆ ಕಾವ್ಯ ತನ್ನ ಸ್ವರೂಪವನ್ನು ಉಳಿಸಿಕೊಂಡಿರುವುದು ವಿಶೇಷ
    ಇತ್ತೀಚಿಗೆ ನಾನು ಓದಿದ ಉತ್ತಮ ಕವನಗಳಲ್ಲಿ ಇದು ಒಂದು
    ಮುರಳಿ ಅವರಿಗೆ ಅಭಿನಂದನೆಗಳು

    Liked by 1 person

    • ಧನ್ಯವಾದ, ಪ್ರಸಾದರೇ. ನಿಮ್ಮ ಭಾವಪೂರ್ಣ ಅಭಿನ೦ದನೆಗಳು ಮನತು೦ಬಿತು.

      Like

  5. ಮಗಳು ಹುಟ್ಟಿದ ಸಂಭ್ರಮದಲ್ಲಿ, ಹೊಸ ಜೀವವನ್ನು ಸ್ವಾಗತಿಸುವ ತಂದೆಗೆ ಭವಿಷ್ಯದ ಬಗೆಗೂ ಯೋಚನೆಯಾಗುವದು ಸ್ವಾಭಾವಿಕವೇ. ಆದರೆ ಇದು ಎಲ್ಲ ತಂದೆ ತಾಯಂದಿರೂ ಅನುಭವಿಸಿದ್ದೇ. ತಮ್ಮ ಕರ್ತವ್ಯ ಮಾಡುತ್ತ ”ದಾರಿಯ ಒಪ್ಪಗೊಳಿಸಿ, ದಡವ ಕಟ್ಟುತ” ಆಶಾವಾದದಿಂದ ಮಗುವಿನ ಬೆಳವಣಿಗೆಯಲ್ಲಿ ಸಂತಸ ಪಡುವದೇ ಜೀವನ. ಸುಂದರವಾದ ಕವನ, ಮುರಳಿಯವರೆ. ಅನಿವಾಸಿಗೆ ಬರೆಯುತಾ ಇರಿ!

    Like

    • ಧನ್ಯವಾದ, ದೇಸಾಯಿಗಳೇ. ಯುಕೆಯ ಕನ್ನಡದನಿವಾಸಿಗಳ ಅಕ್ಷರದ ಹರಿವನು ಕಟಿ್ಟಟು್ಟ ಹ೦ಚಲನುವಾಗಿಸಲು, ಇ-ನಿಕೇತನ ಕಟಿ್ಟ ಬೆಳೆಸುತಿ್ತರುವ ನಿಮ್ಮ ತ೦ಡಕೆ್ಕ ಅಭಿನ೦ದನೆಗಳು.

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.